ಮರದ ಹನಿಗಳು

ಕರ್ನಾಟಕದ ಪರಿಸ್ಥಿತಿಯು ‘‘ಮಳೆ ಹನಿ ನಿಂತರೂ, ಮರದ ಹನಿ ನಿಲ್ಲಲಿಲ್ಲ’’ ಎಂಬಂತಾಯಿತು. 1947ರ ಆಗಸ್ಟ್ 15ಕ್ಕೆ ಮುನ್ನವೇ ಮೈಸೂರು ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಗಿತ್ತು. ಆದರೆ ಜವಾಬ್ದಾರಿ ಸರ್ಕಾರವು ಸ್ಥಾಪನೆಯಾಗಲಿಲ್ಲ. ಆಗ ಮೈಸೂರು ಸಂಸ್ಥಾನ ಕಾಂಗ್ರೆಸ್ 1947ರ ಸೆಪ್ಟೆಂಬರ್ 1ರಂದು ‘‘ಮೈಸೂರು ಚಲೋ’’ ಚಳವಳಿಯನ್ನು ಹೂಡಿತು. ಆಗಿನ ಮೈಸೂರು ರೈಲ್ವೇ ಕಾರ್ಮಿಕರೂ ಮುಷ್ಕರ ಹೂಡಿದರು. ಅಕ್ಟೋಬರ್ ತಿಂಗಳಿನಲ್ಲಿ ಚಳವಳಿ ಪ್ರಬಲವಾಯಿತು. ಸೆರೆಮನೆಗಳು ಕಿಕ್ಕಿರಿದು ತುಂಬಿದವು. ಅಕ್ಟೋಬರ್ 9ರಂದು ಮಾತುಕತೆಗಳು ಪ್ರಾರಂಭವಾಗಿ ಅದೇ ತಿಂಗಳ 24ರಂದು ವಿಜಯದಶಮಿಯ ದಿನ ಸಂಸ್ಥಾನದಲ್ಲಿ ಪ್ರಜಾ ಸರ್ಕಾರವು ಅಧಿಕಾರಕ್ಕೆ ಬಂದಿತು.

ಹೈದರಾಬಾದ್ ಭಾರತ ಒಕ್ಕೂಟವನ್ನು ಸೇರಲು ನಿರಾಕರಿಸಿ ತಾನೇ ಸ್ವತಂತ್ರವಾದ ದೇಶವಾಗಿರುವ ಇಚ್ಛೆಯನ್ನು ಪ್ರಕಟಿಸಿತು. 1947ರ ಜೂನ್ 16ರಂದು ಸಂಸ್ಥಾನ ಕಾಂಗ್ರೆಸ್ ಭಾರಿ ಸಭೆಯೊಂದನ್ನು ಜರುಗಿಸಿ ಒಕ್ಕೂಟದಿಂದ ಹೊರಗೆ ಉಳಿಯುವ ಯಾವುದೇ ಪ್ರಯತ್ನವನ್ನು ಎದುರಿಸಲು ನಿರ್ಧರಿಸಿತು. ಜುಲೈ 17ರಿಂದ ಅಸಹಕಾರ ಚಳವಳಿ ಆರಂಭವಾಯಿತು. ಸರ್ಕಾರವು ಇತ್ತೇಹಾದ್-ಉಲ್-ಮುಸ್ಲಿಂಮೀನ್ ನೆರವಿನಿಂದ ಚಳವಳಿಯನ್ನು ಮುರಿಯಲು ಸನ್ನದ್ಧವಾಯಿತು.

ಆಗಸ್ಟ್ 15ರಂದು ಹೈದರಾಬಾದ್ ಸಂಸ್ಥಾನದಲ್ಲಿ ರಾಷ್ಟ್ರಧ್ವಜ ಅಧಿಕೃತವಾಗಿ ಹಾರಾಡಲಿಲ್ಲ, ನಿಜಾಮರಿಗೆ ಪ್ರತಿಭಟನೆ ಸೂಚಿಸಿ ಹಾರಾಡಿತು. ಸಂಸ್ಥಾನದ ತೆಲುಗು ಭಾಷಾ ಪ್ರದೇಶಗಳಲ್ಲಿ ಕಮ್ಯುನಿಷ್ಟರು ತೆಲಂಗಾಣ ಚಳವಳಿಯನ್ನು ನಡೆಸಿದರಾದರೆ, ಕನ್ನಡ ಪ್ರದೇಶಗಳಲ್ಲಿ ಕಾಂಗ್ರೆಸ್ ಎರಡು ರೀತಿಗಳಲ್ಲಿ ಹೋರಾಡಿತು. ಸಂಸ್ಥಾನದ ಒಳಗೆ ಕಾಯಿದೆ ಭಂಗ ಚಳವಳಿ, ಸಂಸ್ಥಾನದ ಹೊರಗೆ ಗಡಿಯಾಚೆ ಶಿಬಿರಗಳನ್ನು ನಡೆಸುತ್ತ ವಿಧ್ವಂಸಕ ಕಾರ್ಯಗಳನ್ನು ನಡೆಸಲು ಕಾರ್ಯಕರ್ತರನ್ನು ಸಂಸ್ಥಾನದ ಒಳಕ್ಕೆ ಕಳುಹಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿತ್ತು. ಕನ್ನಡ ಪ್ರದೇಶಗಳ ಈ ಸಂಬಂಧವಾದ ಮುಖ್ಯ ಕಚೇರಿ ಗದುಗಿನಲ್ಲಿತ್ತು. ಈ ಎರಡು ಕಾರ್ಯಗಳ ಸಮನ್ವಯದಿಂದ ಚಳವಳಿಯು ರಜಾಕಾರರ ದಬ್ಬಾಳಿಕೆಯನ್ನು ಎದುರಿಸಿ ನಿಲ್ಲಲು ಅನುವಾಯಿತು. ಒಂದು ಹಂತದಲ್ಲಿ ಧಾರವಾಡ ಜಿಲ್ಲೆಗೆ ಚಾಚಿ ಕೊಂಡಂತಿರುವ ರಾಯಚೂರು ಜಿಲ್ಲೆಯ ಹದಿಮೂರು ಹಳ್ಳಿಗಳ ಜನರು ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು.

ಹೀಗೆ ಹೊರಗಿನ ಒತ್ತಡ, ಒಳಗಿನ ಚಳವಳಿ ಪ್ರಬಲಗೊಂಡ ಹಾಗೆ ರಜಕಾರರ ದೌರ್ಜನ್ಯಗಳೂ ಮಿತಿಮೀರತೊಡಗಿದವು. ಆಗ ಭಾರತ ಸರ್ಕಾರವು 1948ರ ಸೆಪ್ಟೆಂಬರ್ 13ರಂದು ಪ್ರಸಿದ್ಧವಾದ ತನ್ನ ‘‘ಪೊಲೀಸ್ ಕಾರ್ಯಾಚರಣೆ’’ಯನ್ನು ಪ್ರಾರಂಭಿಸಿ, ಸಂಸ್ಥಾನದ ಒಳಕ್ಕೆ ತನ್ನ ಸೇನಾಪಡೆಗಳನ್ನು ನುಗ್ಗಿಸಿತು. ಸೆಪ್ಟೆಂಬರ್ 18ರಂದು ನಿಜಾಮರು ಶರಣಾಗಿ, ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಯಿತು. ಅಂದಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟವು ಮುಕ್ತಾಯವಾಯಿತು ಎನ್ನಬಹುದು.

ಐವತ್ತು ವರ್ಷಗಳ ನಂತರ ನಮ್ಮ ಸ್ವಾತಂತ್ರ್ಯ ಹೋರಾಟದತ್ತ ಒಂದು ನೋಟ ಬೀರಿದಾಗ ಅದು ನಿರಂತರವಾದ ಚೈತನ್ಯದ ಚಿಲುಮೆಯಾಗಬಲ್ಲ ಒಂದು ಸ್ಮರಣೆ ಮತ್ತು ನಮ್ಮ ದೇಶಭಕ್ತಿಯನ್ನು ಉಚ್ಚರಿಸುವ ಒಂದು ದಿವ್ಯವಾಣಿ ಎಂಬುದು ನಮ್ಮ ಅರಿವಿಗೆ ಬರುತ್ತದೆ.

 

ಪರಾಮರ್ಶನ ಗ್ರಂಥಗಳು

1. ಸೂರ್ಯನಾಥ ಕಾಮತ್, 1974, 1977, 1980. ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, 3 ಸಂಪುಟಗಳು, ಮೈಸೂರು: ಗೀತಾ ಬುಕ್ ಹೌಸ್.

2. ಶಂಕರನಾರಾಯಣೊರಾವ್ ಎನ್.ಪಿ., 1991. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ.