ಇಪ್ಪತ್ತೊಂದನೆಯ ಶತಮಾನದ ಕನ್ನಡ ಸಂದರ್ಭದಲ್ಲಿ ಇರುವ ಕನ್ನಡಿಗರು ಕಳೆದ ಶತಮಾನವನ್ನೊಮ್ಮೆ ಪರಿಶೀಲಿಸುವ ಜರೂರು ಇದೆ. ಏಕೆಂದರೆ ಹೊಸ ಶತಮಾನದ ಆಶೋತ್ತರಗಳು, ಅಭಿವೃದ್ದಿ ಚಿಂತನೆ, ಸಾಂಸ್ಕೃತಿಕ ಒಳನೋಟಗಳು ಪಕ್ವಗೊಳ್ಳುವುದು ಹಿಂದಿನ ಈ ಕುರಿತ ಅರಿವು, ಅಧ್ಯಯನಗಳನ್ನು ಪುನರ್ ವ್ಯಾಖ್ಯಾನಕ್ಕೆ ಒಳಪಡಿಸುವ ಪ್ರಕ್ರಿಯೆಗಳಿಂದ. ಈ ಪ್ರಕ್ರಿಯೆಗಳು ನಾಡಿನ ಎಲ್ಲಾ ರೀತಿಯ ಭವಿಷ್ಯವನ್ನು ನಿರ್ಧರಿಸಲಿವೆ. ಈ ಮಾತು ಕನ್ನಡ, ಕನ್ನಡಿಗ, ಕರ್ನಾಟಕದಂಥ ಪರಿಕಲ್ಪನೆಗಳಿಗೂ ಅನ್ವಯವಾಗುವಂಥದ್ದು. ಕಳೆದ ಶತಮಾನದಲ್ಲಿ ಈ ಪರಿಕಲ್ಪನೆಗಳನ್ನು ಕುರಿತ ಚಿಂತನೆ, ಚಟುವಟಿಕೆಗಳು ಸಾಂಸ್ಕೃತಿಕವಾಗಿ ತನ್ನದೇ ಆದ ಮಹತ್ವವನ್ನು ಪಡೆದಿವೆ. ಕನ್ನಡದ ಸಂದರ್ಭಕ್ಕೆ ಮಾತ್ರ ಪರಿಮಿತಿಗಳನ್ನು ಗುರುತಿಸಿಕೊಂಡು ನೋಡಿದ್ದೇ ಆದರೆ ಎಲ್ಲಾ ಪ್ರಯತ್ನಗಳು ಈ ಮೂರು ಪರಿಕಲ್ಪನೆಗಳನ್ನೇ ಕೇಂದ್ರವನ್ನಾಗಿಸುತ್ತವೆ. ಈ ಕುರಿತು ಅಧ್ಯಯನ, ಚಿಂತನೆ, ಒಳನೋಟಗಳು ವ್ಯಾಪಕವಾದುವು. ಪ್ರಸ್ತುತ ಕಳೆದ ಶತಮಾನವನ್ನು ಅಧ್ಯಯನದ ಅನುಕೂಲಕ್ಕಾಗಿ ಎರಡು ಪ್ರಮುಖ ಘಟ್ಟಗಳಲ್ಲಿ ಪರಿಶೀಲಿಸುವ ಪ್ರಯತ್ನವನ್ನು ಮಾಡಲಾಗಿದೆ. ಅದರಲ್ಲೂ ಎರಡನೆಯ ಹಂತವೇ ಈ ಪ್ರಬಂಧದ ಪ್ರಧಾನ ತಿರುಳು.

ಕನ್ನಡ-ಕನ್ನಡಿಗ-ಕರ್ನಾಟಕ ಈ ಮೂರು ಪರಿಕಲ್ಪನೆಗಳ ದೃಷ್ಟಿಯಿಂದ ಕಳೆದ ಶತಮಾನವನ್ನು ಏಕೀಕರಣಪೂರ್ವ ಹಾಗೂ ಏಕೀಕರಣೋತ್ತರ ಕರ್ನಾಟಕಗಳೆಂದು ಎರಡು ಘಟ್ಟಗಳನ್ನಾಗಿ ವಿಭಜಿಸಲಾಗಿದೆ. ಛಿದ್ರಗೊಂಡ ಕನ್ನಡ ಮಾತನಾಡುವ ಭೂ ಪ್ರದೇಶಗಳು ಹಾಗೂ ಜನರು ಒಂದೇ ಆಡಳಿತ ಪರಿಧಿಗೆ ಬರಲು ಹಾತೊರೆದದ್ದು ಮೊದಲನೆಯ ಘಟ್ಟ. ಇದನ್ನು ಕರ್ನಾಟಕದ ಏಕೀಕರಣದ ಪ್ರಕ್ರಿಯೆಗಳಲ್ಲಿ ಸೇರಿಸಬಹುದು. ನಿರ್ದಿಷ್ಟ ಭೂ ಪ್ರದೇಶದಲ್ಲಿ ವಾಸಿಸುವ ಜನರು ತಾವು ಮಾತನಾಡುವ ‘ಭಾಷೆ’ಯ ಮುಖೇನ ಒಂದುಗೂಡಲು ಪ್ರಯತ್ನಿಸಿದ ಪ್ರಕ್ರಿಯೆಯೇ ಏಕೀಕರಣ. ಇದು 1956ರ ನವೆಂಬರ್ 1ರಂದು ಪರಿಪೂರ್ಣವಾಗುವ (ಆಡಳಿತಾತ್ಮಕವಾಗಿ) ಪ್ರಕ್ರಿಯೆ. ಆದರೆ ಎರಡನೆಯ ಘಟ್ಟ ಏಕೀಕರಣೋತ್ತರ ಕರ್ನಾಟಕಕ್ಕೆ ಸಂಬಂಧಿಸಿದ್ದು. ಇದು ಈ ಹೊತ್ತಿನ ಸಂದರ್ಭವನ್ನು ಒಳಗು ಮಾಡಿಕೊಂಡು ಮುಂದುವರೆಯುತ್ತಿರುವ ಪ್ರಕ್ರಿಯೆ.

ಏಕೀಕರಣೋತ್ತರ ಕರ್ನಾಟಕವನ್ನು ಪ್ರಗತಿಪರವಾಗಿ ರೂಪಿಸಲು ಬೌದ್ದಿಕ ಹಾಗೂ ಭೌತಿಕ ಈ ಎರಡು ನೆಲೆಗಳಲ್ಲೂ ಪ್ರಯತ್ನಗಳು ನಡೆದಿವೆ. ಬೌದ್ದಿಕವಾಗಿ ಅಥವಾ ಸೈದ್ಧಾಂತಿಕವಾಗಿ ಕರ್ನಾಟಕವನ್ನು ರೂಪಿಸಲು ಛಿದ್ರಗೊಂಡಿದ್ದ ಕನ್ನಡ ಪ್ರದೇಶಗಳಲ್ಲಿನ ಸೃಜನಶೀಲರ ಸಾಹಿತ್ಯಿಕ ಸೃಷ್ಟಿ ಪ್ರಧಾನವಾದುದು. ಇದು ಕನ್ನಡದ ಸಂವೇದನೆಯನ್ನು ಕಾಯ್ದುಕೊಂಡು ಬಂದ ಸಾಂಸ್ಕೃತಿಕ ಪ್ರಕ್ರಿಯೆ. ಈ ಪ್ರಕ್ರಿಯೆಯು ಕವಿರಾಜ ಮಾರ್ಗಕಾರನಿಂದ ಮೊದಲ್ಗೊಂಡು ಬೇಂದ್ರೆ-ಕುವೆಂಪು ಅವರ ಸಾಹಿತ್ಯ ಸೃಷ್ಟಿಯವರೆಗೂ ಮುಂದುವರೆ ಯುವಂಥದ್ದು. ಅಂದರೆ ನಾಡು, ನುಡಿ, ಕನ್ನಡಿಗರನ್ನು ಕುರಿತಂತೆ ಸಂಸ್ಕೃತ, ಇಂಗ್ಲಿಷ್ ಇನ್ನಿತರ ಭಾಷೆಗಳನ್ನು ಎದುರುಗೊಳ್ಳುವುದರೊಂದಿಗೆ ಕನ್ನಡದ ಅನನ್ಯತೆಯನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನ. 12ನೆಯ ಶತಮಾನದ ಎಲ್ಲ ವರ್ಗಗಳ ವಚನಕಾರರು ಕನ್ನಡ ಸಂವೇದನೆಯನ್ನು ಮೆರೆದದ್ದು ಮಹತ್ವಪೂರ್ಣವಾದುದು. ಎಲ್ಲ ರೀತಿಯ ಸಂವಹನ, ಅನುಸಂಧಾನಗಳಿಗೆ ‘ಕನ್ನಡ’ ಭಾಷೆಯೊಂದನ್ನೇ ಮಾಧ್ಯಮವನ್ನಾಗಿಸಿದ್ದು ವಚನಗಳ-ವಚನಕಾರರ ಹೆಗ್ಗಳಿಕೆ. ಈ ದಿಸೆಯಲ್ಲಿ ವಚನಕಾರರನ್ನು ಮೊದಲ ಭಾಷಿಕ(ಕನ್ನಡ) ಹರಿಕಾರರು ಎಂದರೆ ತಪ್ಪಾಗಲಾರದು. ನಂತರದ ನವೋದಯ, ಪ್ರಗತಿಶೀಲರ ಸಾಹಿತ್ಯ ಸೃಷ್ಟಿ ಆಧುನಿಕವಾದ ಸ್ವಾತಂತ್ರ್ಯ, ಏಕೀಕರಣದ ಪ್ರಕ್ರಿಯೆಗಳಿಗೆ ಪ್ರೇರಣೆಯಾಗಿದ್ದುದು ಗಮನಾರ್ಹ. ಇಂಥ ಪ್ರೇರಣೆ, ಪ್ರಯತ್ನಗಳಿಂದ ವಸಾಹತು ಕಾಲದಲ್ಲಿ ತುಂಡಾಗಿದ್ದ ಕನ್ನಡದ ಭೂಪ್ರದೇಶಗಳು ಒಂದುಗೂಡಿದವು. ಹೀಗೆ ಒಂದುಗೂಡಿದ್ದು ‘ಕನ್ನಡದ ಚಳವಳಿ’ಯೇ. ಆದರೂ ಭಿನ್ನ ಸ್ವರೂಪದ ಚಳವಳಿಯ ಪ್ರಕ್ರಿಯೆಗಳು ಕಾಣಿಸಿಕೊಂಡದ್ದು ಏಕೀಕರಣದ ಅನಂತರವೆ.

ಸಾಂಸ್ಕೃತಿಕವಾಗಿ ದತ್ತವಾದ ಕನ್ನಡದ ಸಂವೇದನೆಗಳನ್ನು ತನ್ನದಾಗಿಸಿಕೊಂಡಿದ್ದ ರಾಜಕಾರಣವು ಸೋಲನ್ನು ಅನುಭವಿಸಲು ಆರಂಭಿಸಿದ್ದು, ಏಕೀಕರಣದ ಅನಂತರವೆ. ಏಕೆಂದರೆ ಆಡಳಿತದ ದೃಷ್ಟಿಯಿಂದ ಒಂದುಗೂಡಿದ ವಿಭಿನ್ನ ಪ್ರದೇಶಗಳ ಕನ್ನಡಿಗರ ಅಭಿರುಚಿ, ಸಂಸ್ಕೃತಿಗಳನ್ನು ಬಗೆಹರಿಸಲು ರಾಜಕಾರಣಿಗಳು ಸೋತರು. ಇದರ ಪರಿಣಾಮದಿಂದಾಗಿಯೇ ‘ಕನ್ನಡ ಚಳವಳಿ’ ಭಿನ್ನ ರೀತಿಯಲ್ಲಿ ಕಾಣಿಸಿಕೊಂಡದ್ದು. 1960ರ ದಶಕದಲ್ಲಿ ಕನ್ನಡ ಕನ್ನಡಿಗ ಕರ್ನಾಟಕದ ಆಶೋತ್ತರಗಳ ಈಡೇರಿಕೆಗಾಗಿ ಕನ್ನಡಿಗರು ಮತ್ತೆ ಸಂಘಟಿತರಾಗುವ ಅನಿವಾರ್ಯತೆ ಹುಟ್ಟಿಕೊಂಡಿತು. ಏಕೀಕೃತ ಕರ್ನಾಟಕವು ಸಮಗ್ರವಾಗಿ ಎಲ್ಲ ಕನ್ನಡ ಪ್ರದೇಶಗಳನ್ನು ಒಂದೇ ಆಡಳಿತದ ತೆಕ್ಕೆಗೆ ಆಲೂರು, ಆದವಾನಿ, ರಾಯದುರ್ಗ, ಮಡಕಶಿರ, ಪಾವಗಡ, ಗೂಳ್ಯಂ, ಪೆದಹರಿವಾಣ, ಕೌತಾಳ್, ಬದನೆಹಾಳ್, ನದಿಚಾಗಿ, ಹೊಸೂರು, ತಾಳವಾಡಿ, ನೀಲಗಿರಿ ಮೊದಲಾದವು ಕನ್ನಡಮಯವಾಗಲಿಲ್ಲ. ಬದಲಾಗಿ ತೆಲುಗು, ತಮಿಳು ಮಲೆಯಾಳ, ಮರಾಠಿ ಮೊದಲಾದ ಭಾಷಿಕರೊಂದಿಗೆ, ಆಯಾ ರಾಜ್ಯ ಸರ್ಕಾರಗಳ ಒತ್ತಡಗಳಿಗೆ ಮಣಿಯುವಂತೆ ಆಗಿತ್ತು. ಏಕೀಕರಣವು ಸ್ಥಳೀಯ ಗಡಿಭಾಗಗಳ ಕನ್ನಡಿಗರನ್ನು ಭಾಷಿಕ ಅತ್ಯಾಚಾರಗಳಿಗೆ ಒಳಗಾಗುವಂತೆ ಮಾಡಿತು. ಈ ಕುರಿತ ಸಮಸ್ಯೆಗಳು ಕರ್ನಾಟಕ ಸರ್ಕಾರದ ಆಡಳಿತ ನೀತಿಗೆ ಸವಾಲಾಗಿ ಪರಿಣಮಿಸಿದವು. ನಾಡಿನ ರಾಜಧಾನಿಯೂ, ಆಡಳಿತ ಯಂತ್ರದ ಕೇಂದ್ರ ತಾಣವೂ ಆಗಿದ್ದ ಬೆಂಗಳೂರು ನಗರ ಕನ್ನಡೇತರರ ಪ್ರಾಬಲ್ಯದ ಕೇಂದ್ರವಾಗಿತ್ತು. ಹಳೆಯ ಮೈಸೂರು, ಮುಂಬಯಿ, ಹೈದರಾಬಾದ್, ಮದ್ರಾಸ್ ಹಾಗೂ ಕೊಡಗು ಪ್ರದೇಶಗಳಲ್ಲಿನ ಕನ್ನಡಿಗರ ಮನೋಚಿಂತನೆಗಳನ್ನು ಅರಿಯುವಲ್ಲಿ ರಾಜಕಾರಣವು ವಿಫಲವಾಯಿತು. ಸಾಂಸ್ಕೃತಿಕವಾಗಿ ಒಪ್ಪುತ್ತಿದ್ದ ‘ಕರ್ನಾಟಕ’ ಎಂಬ ಹೆಸರಿಗೆ ಬದಲಾಗಿ ‘ವಿಶಾಲ ಮೈಸೂರು’ ರಾಜ್ಯವೆಂದು ನಾಮಕರಣ ಮಾಡಿದ್ದು (1956ರಲ್ಲಿ) ಕನ್ನಡಿಗರಲ್ಲಿ ಆಘಾತವನ್ನುಂಟು ಮಾಡಿತ್ತು. ಇದಕ್ಕೆ ಮುಂಬಯಿ ಕರ್ನಾಟಕ(ಉತ್ತರದ)ದ ಕನ್ನಡಿಗರು ತೀವ್ರವಾಗಿ ಪ್ರತಿಕ್ರಿಯಿಸಿದ್ದೂ ಉಂಟು. ಇಂಥ ಹಲವು ಹತ್ತು ಕಾರಣಗಳು ನಾಡಿನ ಏಕೀಕರಣವನ್ನು ಸಮಾಧಾನಕರವಾಗಿ ಒಪ್ಪುವಂತೆ ಮಾಡಿರಲಿಲ್ಲ. ಇದರ ಪರಿಣಾಮವೇ ಬೆಂಗಳೂರಿನ ಪರಿಸರದಲ್ಲಿ ‘ಕನ್ನಡ ಚಳವಳಿ’ಯು ಸಂಘಟಿತ ರೂಪವನ್ನು ಪಡೆದುಕೊಂಡದ್ದು. ನಾಡಿನ ಉಳಿದೆಡೆಗಳಿಗೆ ಅದು ಕ್ರಮೇಣ ಪಸರಿಸಿತು. ಆದರೆ ಬೆಂಗಳೂರು ಕೇಂದ್ರಿತ ಕನ್ನಡ ಚಳವಳಿಗಳ ಪಾಲು ದೊಡ್ಡದು.

ಬೆಂಗಳೂರಿನ ಕನ್ನಡ ಪರಿಸರ

ಬೆಂಗಳೂರು, ಮೈಸೂರು ಸಂಸ್ಥಾನದಲ್ಲಿಯೇ ಅಭಿವೃದ್ದಿ ಹಾದಿಯಲ್ಲಿದ್ದ ನಗರವಾಗಿತ್ತು. ಏಕೀಕರಣದ ಅನಂತರ ನಾಡಿನ ರಾಜಧಾನಿಯಾಗಿಯೂ ಹೆಸರು ಪಡೆದದ್ದು ಹೆಚ್ಚಿನ ಪ್ರಗತಿಯನ್ನು ಕಾಣಲು ಸಾಧ್ಯವಾಯಿತು. ಆದರೆ ನಾಡು, ನುಡಿ, ಸಂಸ್ಕೃತಿಗಳ ಕೇಂದ್ರಸ್ಥಾನವಾಗಿ ಗುರುತಿಸಿಕೊಳ್ಳಲಿಲ್ಲ. ಕನ್ನಡಿಗರಿಗೆ ಭರವಸೆ ಮೂಡಿಸುವ ಹಾಗೂ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಬೆಂಗಳೂರು ವಿಫಲವಾಯಿತು. ಇದಕ್ಕೆ ಕಾರಣ ಬೆಂಗಳೂರಿನಲ್ಲಿ ನೆಲೆಸಿದ್ದ ಕನ್ನಡೇತರರ ಪ್ರಾಬಲ್ಯಗಳು. ಹಿಂದಿನ ಕಮೀಷನರು-ದಿವಾನರುಗಳ ಆಡಳಿತವು ಶಿಕ್ಷಣ, ಉದ್ಯೋಗಗಳನ್ನರಸಿ ಬರುವ ಕನ್ನಡೇತರರಿಗೆ ಪ್ರೇರಣೆ ನೀಡಿತ್ತು. ಇಲ್ಲಿನ ಅನುಕೂಲಕರ ಸ್ಥಿತಿ ಗತಿಗಳು ಸ್ವಾತಂತ್ರ್ಯ, ಏಕೀಕರಣದ ನಂತರವೂ ಅನೇಕ ಉದ್ದಿಮೆ-ಕಾರ್ಖಾನೆಗಳನ್ನು ನೆಲೆ ನಿಲ್ಲುವಂತೆ ಮಾಡಿದ್ದವು. ಇವುಗಳಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಬಹುಪಾಲು ಪಕ್ಕದ ತಮಿಳುನಾಡಿನ ತಮಿಳು ಭಾಷಿಕರೇ ಆಗಿದ್ದರು. ಕೇಂದ್ರ ಸರ್ಕಾರಿ ಉದ್ಯಮಗಳಲ್ಲೂ ಇವರ ಪಾಲೇ ಹೆಚ್ಚಿನದು. ಬೆಂಗಳೂರಿನಲ್ಲಿದ್ದ ಐ.ಟಿ.ಐ., ಬಿ.ಇ.ಎಲ್., ಎಚ್.ಎಂ.ಟಿ., ಮೈಕೋ ಮೊದಲಾದ ಕಾರ್ಖಾನೆಗಳಲ್ಲಿ ಕನ್ನಡಿಗರ ಸಂಖ್ಯೆ ತೀರ ಕಡಿಮೆ. ಸ್ಥಳೀಯ ಕನ್ನಡಿಗರಿಗೆ ಶೇಕಡ 50ರಷ್ಟು ಪ್ರಾತಿನಿಧ್ಯ ಕೊಡಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರಿ ಸಂಘ-ಸಂಸ್ಥೆಗಳು ಮುರಿದಿದ್ದವು. ಅಂಚೆ, ತಂತಿ, ರೈಲ್ವೆ ಮೊದಲಾದ ಇಲಾಖೆಗಳಲ್ಲಿ ಕನ್ನಡ ಮಾತನಾಡುವವರೇ ಇರಲಿಲ್ಲ. ಸಾರಿಗೆ-ಪೊಲೀಸು ಇಲಾಖೆಗಳಂಥ ಸರ್ಕಾರಿ ನೌಕರಿಗಳಲ್ಲೂ ತಮಿಳರು ಉದ್ಯೋಗಗಳನ್ನು ಪಡೆದಿದ್ದರು.

ಬೆಂಗಳೂರಿನ ಜನನಿಬಿಡ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ (ಇಂದಿನ ಮೆಜೆಸ್ಟಿಕ್ ಪ್ರದೇಶ), ಗಾಂಧಿನಗರ ಮೊದಲಾದ ಕಡೆಗಳಲ್ಲಿ ತಮಿಳು ಮಾತನಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕನ್ನಡದ ನಾಮಫಲಕಗಳು ಕಾಣುತ್ತಿರಲಿಲ್ಲ. ಬದಲಾಗಿ ತಮಿಳು ಹಾಗೂ ಇಂಗ್ಲೀಷಿನವೇ ಹೆಚ್ಚು. ಕನ್ನಡಿಗರನ್ನು ಸ್ವಾಗತಿಸುತ್ತಿದ್ದ ಕೂಲಿ ಆಳುಗಳು, ರಿಕ್ಷಾ ಚಾಲಕರು ತಮಿಳರೇ ಆಗಿದ್ದರು. ಇಂಥ ವಾತಾವರಣದಲ್ಲಿ ತೆಲುಗು, ಮಲೆಯಾಳ, ಹಿಂದಿ, ಮರಾಠಿ ಭಾಷೆಗಳನ್ನು ಆಡುವವರನ್ನು ನೋಡಬಹುದಿತ್ತು. ಆದರೆ ಕನ್ನಡಿಗರ ಸಂಖ್ಯೆ ಕಡಿಮೆ. ದೂರದ ಊರುಗಳಿಂದ ಬೆಂಗಳೂರಿಗೆ ಬಂದು ಕನ್ನಡೇತರರಿಂದ ಅವಮಾನ, ಕೀಟಲೆಗಳನ್ನು ಅನುಭವಿಸುತ್ತಿದ್ದ ಕನ್ನಡಿಗರು ಅಭಿಮಾನಶೂನ್ಯರಾಗಿ ತೆರಳುತ್ತಿದ್ದುದೇ ಹೆಚ್ಚು. ಪ್ರತಿಭಟಿಸುವ ಧೈರ್ಯ, ಸಾಹಸಗಳನ್ನು ಮಾಡಲು ಯಾವುದೇ ಸಂಘಟಿತ ರೂಪಗಳು ಕನ್ನಡಿಗರಿಗೆ ಇರಲಿಲ್ಲ. ಇಂಥ ವೇದಿಕೆಗಳನ್ನು ನಿರ್ಮಿಸಿಕೊಂಡು ಕನ್ನಡತನವನ್ನು ಮೂಡಿಸಲು ಮುಂದೆ ಬಂದವರು ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲಿ ಕೋಣಂದೂರು ಲಿಂಗಪ್ಪ, ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ಮೈ.ಸು.ನಟರಾಜ, ಮೈ.ಸು.ಶೇಷಗಿರಿರಾವ್, ಕರ್ಲಮಂಗಲಂ ಶ್ರೀಕಂಠಯ್ಯ, ಬೆ.ನಿ. ಈಶ್ವರಪ್ಪ, ತಿ.ತಾ.ಶರ್ಮ ಮೊದಲಾದವರು ಪ್ರಮುಖರು. ಇವರೇ 1960ರ ದಶಕದ ಆರಂಭಿಕ ವರುಷಗಳಲ್ಲಿ ಕನ್ನಡದ ಚಳವಳಿಗಾಗಿ ತೊಡಗಿಸಿಕೊಂಡವರು. ಆದರೆ ಇವರನ್ನು ಒಂದು ವೆೀದಿಕೆಯಡಿಗೆ ತಂದ ಕೋಣಂದೂರು ಲಿಂಗಪ್ಪ ಮತ್ತು ಅವರ ಪ್ರಯತ್ನಗಳು ಮುಖ್ಯವಾದವು. ಕನ್ನಡ ಚಳವಳಿಗೆ ಆರಂಭಿಕ ನೆಲೆಗಟ್ಟನ್ನು ಹಾಕಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.

ಚಳವಳಿಯ ಮೊದಲ ಹಂತ

ರಾಮಮನೋಹರ ಲೋಹಿಯಾ ಅವರ ಭಾಷಿಕ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದ ಶಾಂತವೇರಿ ಗೋಪಾಲಗೌಡರು ತಮ್ಮದೇ ಆದ ರೀತಿಯಲ್ಲಿ ಕನ್ನಡಕ್ಕಾಗಿ ಚಿಂತನೆ ನಡೆಸಿದ್ದರು. ರಾಜಕಾರಣದಲ್ಲಿ ಇವರು ನಡೆಸಿದ್ದ ಪ್ರಯತ್ನಗಳಂತೆಯೇ ಸಾಹಿತ್ಯಿಕವಾಗಿಯೂ ಕುವೆಂಪು ಮೊದಲಾದವರು ಚಿಂತನೆ ನಡೆಸಿದ್ದರು. ಪ್ರಗತಿಶೀಲರ ವಲಯದಲ್ಲಿ ಅ.ನ.ಕೃ ಅವರಾದಿಯಾಗಿ ಅನೇಕರು ಗಮನಾರ್ಹ. ಶಾಂತವೇರಿಯವರ ಶಿಷ್ಯರಾಗಿದ್ದ ಕೋಣಂದೂರು ಲಿಂಗಪ್ಪ ಬೆಂಗಳೂರಿಗೆ (ವಿದ್ಯಾರ್ಥಿ ದೆಸೆಯಲ್ಲಿ) ಬಂದಾಗ ತಮಿಳರಿಂದ ಅಪಮಾನಕ್ಕೆ ಒಳಗಾದರು. ಈ ಅಪಮಾನದ ಪರಿಣಾಮವಾಗಿ ಅವರು ‘ಕರ್ನಾಟಕ ಯುವಜನ ಸಭಾ’ವನ್ನು ಹುಟ್ಟುಹಾಕುವಂತೆ ಮಾಡಿತು. 1957ರ ವೇಳೆಗೆ ಲೋಹಿಯಾ ಕರೆಯನ್ನು ಅನುಸರಿಸಿ ‘ಅಂಗ್ರೇಜಿ ಇಂಗ್ಲೀಷ್ ಹಠಾವೋ’ ಚಳವಳಿ ಆರಂಭಗೊಂಡಿತು. ಮೈಸೂರಿನಲ್ಲಿ ಕುವೆಂಪು ಅವರು ಸಹ ಈ ಕರೆಗೆ ಸ್ಪಂದಿಸಿದ್ದರು. ಇಂಗ್ಲಿಷ್ ಪ್ರಾಧ್ಯಾಪಕರ ರಾಷ್ಟ್ರೀಯ ಸಭೆಯೊಂದು ಮೈಸೂರಿನಲ್ಲಿ ನಡೆಯಿತು. ಇದಕ್ಕೆ ಪ್ರತಿಕ್ರಿಯಿಸಲು ಕೋಣಂದೂರು ಲಿಂಗಪ್ಪ, ತೇಜಸ್ವಿ, ಕೆ.ಎಚ್.ೊಶ್ರೀನಿವಾಸ, ಕಡಿದಾಳ ಶಾಮಣ್ಣ ಮೊದಲಾದ ವಿದ್ಯಾರ್ಥಿಗಳಿಗೆ ಕುವೆಂಪು ಪ್ರೇರಣೆ ನೀಡಿದ್ದರು. ಈ ಪ್ರತಿಕ್ರಿಯೆಗೆ ಇಂಗ್ಲಿಷಿನಲ್ಲಿಯೆ ಪ್ರತಿಭಟನಾ ಕರಪತ್ರಗಳನ್ನು ರಚಿಸುವುದು ಅನಿವಾರ್ಯವಾಯಿತು. ಇಂಗ್ಲಿಷಿನ ವಿರುದ್ಧ ಇಂಗ್ಲಿಷಿನ ಕರಪತ್ರವೊಂದನ್ನು ಬರೆದುಕೊಟ್ಟವರು ಯು.ಆರ್.ಅನಂತಮೂರ್ತಿ. ಇಂಗ್ಲಿಷ್ ಪ್ರಾಧ್ಯಾಪಕರ ಸಭೆಯಲ್ಲಿ ಕನ್ನಡದ ಯುವಕರು ಈ ಕರಪತ್ರಗಳನ್ನು ಹಂಚುವುದರ ಮೂಲಕ ಕನ್ನಡದ ಪ್ರಾಶಸ್ತ್ಯವನ್ನು ಕುರಿತು ಗಮನ ಸೆಳೆದಿದ್ದರು. ಇಂಥ ಚಟುವಟಿಕೆಗಳನ್ನು ಹುಟ್ಟುಹಾಕಿದ ಮೊಟ್ಟ ಮೊದಲ ಯುವಕರ ಸಂಘಟನೆಯೇ ‘ಕನ್ನಡ ಯುವಜನ ಸಭಾ’ ಇದು ಮೈಸೂರಿನ ಇಂದಿನ ದಾಸ್ ಪ್ರಕಾಶ್ ಹೊಟೇಲ್ ಬಳಿ ಮೊದಲ ಸಭೆ ಸೇರಿ ಕನ್ನಡದ ಅಳಿವು-ಉಳಿವಿನ ಬಗ್ಗೆ ಚಿಂತನೆ ನಡೆಸಿತ್ತು. ಇದು ಕನ್ನಡ ಚಳವಳಿ ಚರಿತ್ರೆಯಲ್ಲಿಯೇ ಮೊದಲ ಸಂಘಟನೆಯಾಗಿದೆ. ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಲಿಂಗಪ್ಪ ಮೊದಲಾದ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಕನ್ನಡತನವನ್ನು ಮೂಡಿಸುವುದಕ್ಕೆ ‘ಸಭಾ’ದ ವೇದಿಕೆಯನ್ನು ಬಳಸಿಕೊಂಡರು. ಬೆಂಗಳೂರಿನಲ್ಲಿ ಚಳವಳಿ ಹೂಡುವುದಕ್ಕೆ ಮೊದಲು ನಾಡಿನ ಇತರೆ ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಮಾಡಿ 120ಕ್ಕೂ ಹೆಚ್ಚಿನ ‘ಸಭಾ’ದ ಶಾಖೆಗಳನ್ನು ತೆರೆದು ಸಂಘಟಿಸಿದ್ದು ಗಮನಾರ್ಹ ಸಂಗತಿ. 1959ರ ವೇಳೆಗೆ ಕನ್ನಡದ ಸ್ಥಿತಿಗತಿಗಳ ಸುಧಾರಣೆಗಾಗಿ ಕನ್ನಡಿಗರು ಸಂಘಟಿತರಾಗುವುದು ಅನಿವಾರ್ಯ ಎಂಬ ವಾತಾವರಣವನ್ನು ಮೂಡಿಸಲಾಗಿತ್ತು. ಇದಕ್ಕೆ ಸಾಹಿತಿ ಅ.ನ.ಕೃ ಅವರ ಪ್ರಯತ್ನ, ಪ್ರವಾಸ ಕಾರ್ಯಕ್ರಮಗಳು ಹೆಚ್ಚಿನ ಹುರುಪನ್ನು ತಂದಿದ್ದವು. ಏಕೆಂದರೆ ಅ.ನ.ಕೃ ಅವರನ್ನು ಮುಂದಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೆಂದು ಪರಿಷತ್ತು (ಕ.ಸಾ.ಪ) ಘೋಷಿಸಿತ್ತು. ಅ.ನ.ಕೃ ಅವರು ತಮ್ಮ ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ (ಮಣಿಪಾಲ, 1960) ‘ಕನ್ನಡದ ಭಂಟರ’ ಅವಶ್ಯಕತೆಯನ್ನು ಒತ್ತಿ ಹೇಳಿದ್ದು, ‘ಸಭಾ’ದ ಯುವಕರನ್ನು ಪಾಲ್ಗೊಳ್ಳುವಂತೆ ಮಾಡಿತ್ತು. ಸಮ್ಮೇಳನದಲ್ಲಿದ್ದ ಈ ಯುವಕರು ‘ಕನ್ನಡ ಯುವಜನ ಸಭೆ’ಯನ್ನು ವರಕವಿ ಬೇಂದ್ರೆ ಅವರಿಂದ ವಿಧ್ಯುಕ್ತವಾಗಿ ಉದ್ಘಾಟಿಸಿದ್ದು, (28.12.1960) ದಾಖಲಾರ್ಹ. ಅಲ್ಲದೆ ಲಿಂಗಪ್ಪ ‘ಸಭಾ’ದ ಸಂಚಾಲಕರಾಗಿ ನಾಡಿನ ವಿವಿಧ ಕಡೆಗಳಲ್ಲಿ ಅ.ನ.ಕೃ ಅವರಿಂದ ಭಾಷಣ ಮಾಡಿಸಿ ಜಾಗೃತಿ ಮಾಡಿಸಿದರು. ಮುಂದೆ ಬೆಂಗಳೂರಿನಲ್ಲಿ ಸಭೆ ಸೇರಿ (‘ಸಾಹಿತ್ಯ ಕುಟೀರ’ ದಡಿಯಲ್ಲಿ) ಕನ್ನಡದ ಕೆಲಸಗಳಿಗಾಗಿ ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ಇದರಲ್ಲಿ ಬಹುಪಾಲು ಹಿರಿಯ ಸಾಹಿತಿ, ಕಲಾವಿದರು ಭಾಗವಹಿಸಿ ದ್ದರು. ‘ಸಭಾ’ದವರು ಹಿರಿಯರ ಸಹಕಾರ ಪಡೆದು ಆಲೂರ ವೆಂಕಟರಾಯರ ಕಡೆಗೆ ಓಗೊಟ್ಟು ನವೆಂಬರ್ ತಿಂಗಳಿನಲ್ಲಿ ರಾಜ್ಯೋತ್ಸವ(1961)ವನ್ನು ಆಚರಿಸಿದ್ದು ಗಮನಾರ್ಹ. ಅಲ್ಲದೆ ಬೆಂಗಳೂರಿನಲ್ಲಿ ಕನ್ನಡಿಗರನ್ನು ಸಂಘಟಿಸಿ ಪ್ರತಿಕ್ರಿಯಿಸುವಂತೆ ಮಾಡಲು ಸಭಾದ ಯುವಕರು ‘ಕನ್ನಡ ದಿನ’ವನ್ನು ಆಚರಿಸಲು ಕರೆ ಕೊಟ್ಟರು. ಅದರಂತೆ 23-11-1961 ರಂದು ನಾಡು-ನುಡಿಗಳ ಬಗ್ಗೆ ಎಚ್ಚರಿಸಲಾಯಿತು. ಇದಾದ ನಂತರ ದಾವಣಗೆರೆಯಲ್ಲಿ ಸಭೆ ಕರೆದು ‘ಸಭಾ’ದ ಬೃಹತ್ ಸಮಾವೇಶವೊಂದನ್ನು ನಡೆಸಲು ಸಿದ್ಧತೆಗಳನ್ನು ಮಾಡಲಾಯಿತು. ಇದರ ಪರಿಣಾಮವೇ ಬೆಂಗಳೂರಿನಲ್ಲಿ ನಡೆದ ಸಭಾದ ಮೊದಲ ಬೃಹತ್ ಅಧಿವೇಶನ.

ಕನ್ನಡ ಯುವಜನ ಸಭಾದ ಮೊದಲ ಅಧಿವೇಶನ

ಕನ್ನಡ ಭುವನೇಶ್ವರಿ ಬಾವುಟವನ್ನು ಹಾರಿಸುವುದರೊಂದಿಗೆ (4.12.1962ರಂದು) ಉದ್ಘಾಟನೆಗೊಂಡ ಈ ಬೃಹತ್ ಅಧಿವೇಶನ ಕನ್ನಡ ಚಳವಳಿಯ ಚರಿತ್ರೆಯಲ್ಲಿ ಮುಖ್ಯ ವಾದುದು. ಇಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕಗಳಿಗೆ ಸಂಬಂಧಿಸಿದಂತೆ 15 ನಿರ್ಣಯಗಳನ್ನು ಮಂಡಿಸಿ ಪಾಸು ಮಾಡಲಾಯಿತು. ಅವುಗಳಲ್ಲಿ ನಾಡಿನ ಗಡಿಗಳ, ರೈಲ್ವೆ, ಪ್ರಶಸ್ತಿ, ಕನ್ನಡ ಟೈಪ್ ರೈಟರ್, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಮಾಧ್ಯಮ,  ಕನ್ನಡ ಕಲಾವಿದರಿಗೆ ಆದ್ಯತೆ, ಕನ್ನಡ ಚಲನಚಿತ್ರಗಳಿಗೆ ಪ್ರೋಆರ್ಥಿಕ ಅಭಿವೃದ್ದಿ ಮೊದಲಾದ ಎಲ್ಲ ವಿಚಾರಗಳೂ ಸೇರಿದ್ದವು. ಈ ನಿರ್ಣಯಗಳನ್ನು ನಾಡಿನ ಎಲ್ಲ ಕನ್ನಡ ಪರವಾದ ಸಂಘಟನೆಗಳಿಗೂ ಕಳುಹಿಸಿಕೊಡಲಾಯಿತು. ಆದರೆ ಬೆಂಗಳೂರಿನ ಚಾಮರಾಜ ಪೇಟೆಯ ರಾಮಸೇವಾ ಮಂಡಲಿಯವರು ಕನ್ನಡ ಕಲಾವಿದರನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕರೆಸದೆ ಸಭೆಯ ನಿರ್ಣಯಗಳನ್ನು ಮುರಿದು ಹಾಕಿದರು. ಮದ್ರಾಸಿನಿಂದ  ಎಂ.ಎಸ್. ಸುಬ್ಬಲಕ್ಷ್ಮಿಯವರನ್ನು ಕರೆಸಿ ಸಂಗೀತ ಕಛೇರಿಯನ್ನು ನಡೆಸಿದ್ದು ಕನ್ನಡ ಕಾರ್ಯಕರ್ತರ ಪ್ರತಿಭಟನೆಗೆ ಗುರಿಯಾಗುವಂತಾಯಿತು. ಶಾಂತ ರೀತಿಯಲ್ಲಿ ಕನ್ನಡದ ಕಳಕಳಿಯನ್ನು ಪ್ರದರ್ಶಿಸಲು ಹಾತೊರೆಯುತ್ತಿದ್ದ ಕಾರ್ಯಕರ್ತರನ್ನು ಕಿಡಿಗೇಡಿಗಳು ಕೆಣಕಿದರು. ಪರಿಸ್ಥಿತಿಯು ಹಿಂಸಾತ್ಮಕ ರೂಪ ಪಡೆದು ಪೊಲೀಸರಿಂದ ಲಾಠಿ ಚಾರ್ಜು ಆಯಿತು. ತಮಿಳು ಪತ್ರಿಕೆಗಳು ‘ಭಾಷಿಕ ದ್ವೇಷ’ವನ್ನಾಗಿ ತಿರುಚಿ ಬರೆದವು. ಕನ್ನಡಿಗರಿಗೆ ‘ಸಂಕುಚಿತ’ ರೆಂಬ ಪಟ್ಟ ಕಟ್ಟಲು ಪ್ರಯತ್ನಿಸಿದ ಈ ಘಟನೆ ಕನ್ನಡ ಚಳವಳಿಯನ್ನು ಭಿನ್ನ ಸ್ವರೂಪದಲ್ಲಿ ಗ್ರಹಿಸಲು ಎಡೆಮಾಡಿಕೊಟ್ಟಿತು.

ಕನ್ನಡ ಜಾಗೃತ ಪರಿಷತ್ ಮತ್ತು ಸಂಯುಕ್ತ ರಂಗ

ಬೆಂಗಳೂರಿನಲ್ಲಿ ಅ.ನ.ಕೃ, ಮ.ರಾಮಮೂರ್ತಿ ಮೊದಲಾದ ಚಳವಳಿ ನಾಯಕರು ಕನ್ನಡ ಪರವಾದ ಸಂಘ-ಸಂಸ್ಥೆಗಳನ್ನು ಕಟ್ಟಿಕೊಳ್ಳಲು ಕರೆ ನೀಡಿದ್ದರು. ಏಕೆಂದರೆ ತಮಿಳರ ಸಂಘಟನೆಗಳು ವಿಪರೀತವಾಗತೊಡಗಿದ್ದವು. ಅದರಲ್ಲೂ ಡಿ.ಎಂ.ಕೆ (ದ್ರಾವಿಡ  ಮುನ್ನೇಟ್ರ ಕಳಗಂ) ಪಕ್ಷದವರ ಕಪ್ಪು ಮತ್ತು ಕೆಂಪು ಬಣ್ಣದ ಬಾವುಟಗಳ ಹಾರಾಟ ಅವರು ವಾಸಿಸುವ ಕಡೆಗಳಲ್ಲಿ ಹೆಚ್ಚಾಯಿತು. ಕನ್ನಡಿಗರಿಗೆ ನಿರ್ದಿಷ್ಟ ‘ಕನ್ನಡ ಬಾವುಟ’ ವೆಂಬುದಿರಲಿಲ್ಲ. ಬದಲಾಗಿ ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡಭೇರುಂಡ ಚಿತ್ರಗಳಿರುವ ಬಾವುಟಗಳನ್ನೇ ಬಳಸುತ್ತಿದ್ದರು. ಹೀಗಾಗಿ ಕನ್ನಡದ ಈ ಸಂಘಟನೆಗಳು ಬಾವುಟದ ಕೊರತೆಯನ್ನು ಮನಗಂಡು ಕ್ರಿಯಾಶೀಲವಾಗಿದ್ದವು. ಕನ್ನಡಿಗರಲ್ಲಿ ಸಂಘ-ಸಂಸ್ಥೆಗಳಲ್ಲಿ ಅಭಿಮಾನವನ್ನು ಮೂಡಿಸಲು ‘ಕನ್ನಡ ಜಾಗೃತ ಪರಿಷತ್’ ಎಂಬ ಸಂಘಟನೆ ಹುಟ್ಟಿಕೊಂಡಿತು. ಕನ್ನಡಾಭಿಮಾನಕ್ಕಾಗಿ, ಚಳವಳಿಯ ರೂಪುರೇಷೆಗಳಿಗಾಗಿ ಈ ಸಂಘಟನೆ ಹೊರಡಿಸಿದ ಪತ್ರಿಕೆಯೇ ‘ಕನ್ನಡ ಜಾಗೃತ ಪತ್ರ’. ಇದು ತ್ರೈಮಾಸಿಕವಾಗಿತ್ತು. ಕೆಲವೇ ದಿನಗಳಲ್ಲಿ ಇದೇ ಆಶಯಕ್ಕಾಗಿ ‘ಧ್ರುವ’ ಎಂಬ ಮಾಸಿಕವು ಹೊರಬಂದಿತು. ಇವೆರಡರ ಸಂಪಾದಕರಾಗಿದ್ದ ಎಂ.ನಾಗರಾಜ್ ಅವರು ಕನ್ನಡಿಗರಿಂದ ಸರಿಯಾದ ಪ್ರೋದೊರೆಯದೆ ಸಾಲಗಾರರಾಗಿದ್ದೂ ಉಂಟು. ಕೊನೆಗೆ ಆತ್ಮಹತ್ಯೆಯನ್ನು ಮಾಡಿಕೊಂಡರು. ಈ ಬೆಳವಣಿಗೆ ‘ಕನ್ನಡ ಯುವಜನ ಸಭಾ’ದವರಿಗೆ ಮತ್ತಷ್ಟು ಕೆಚ್ಚು ಹುಮ್ಮಸ್ಸುಗಳನ್ನು ತಂದಿತು. ‘ಸಭಾ’ದವರು ಚಳವಳಿಗಾಗಿಯೇ ‘ಕನ್ನಡ ಯುವಜನ’ ಎಂಬ ಪತ್ರಿಕೆಯನ್ನು ಹೊರಡಿಸಲಾರಂಭಿಸಿದರು. ಇದರ ಸಂಪಾದಕರಾಗಿದ್ದವರು ಚಳವಳಿಗಾರ ಮ.ರಾಮಮೂರ್ತಿ. ಅ.ನ.ಕೃ ಮತ್ತು ಮ.ರಾಮಮೂರ್ತಿ ಅವರುಗಳು ಕರೆದೆಡೆಗೆ ಹೋಗಿ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಸಂಘಟಿಸತೊಡಗಿದರು. ಇದರ ಪರಿಣಾಮವಾಗಿ ‘ಕರ್ನಾಟಕ ಸಂಯುಕ್ತ ರಂಗ’ವೆಂಬ ಹೊಸ ಸಂಘಟನೆಯೊಂದು ಹುಟ್ಟಿಕೊಂಡಿತು. ಇದರ ಆಶಯ ಕನ್ನಡದ ಎಲ್ಲ ಸಂಸ್ಥೆಗಳನ್ನು ಒಂದೇ ವೇದಿಕೆಯಡಿಗೆ ತರುವುದು. 1962ರಲ್ಲಿ ಅಸ್ತಿತ್ವಕ್ಕೆ ಬಂದ ಈ ‘ರಂಗ’ದ ಅಧ್ಯಕ್ಷರು ಅ.ನ.ಕೃ, ಕಾರ್ಯದರ್ಶಿ ಮ.ರಾಮಮೂರ್ತಿ. ಇದರೊಂದಿಗೆ ತ.ರಾ.ಸು., ಅ.ನ.ಸುಬ್ಬರಾವ್, ಬೀಚಿ, ವೀರಕೇಸರಿ ಸೀತಾರಾಮಶಾಸ್ತ್ರಿ, ನಾ.ಕೃ. ಸತ್ಯನಾರಾಯಣ, ಭಾರತೀಂದ್ರಸ್ವಾಮಿ ಮೊದಲಾದವರು ಸೇರಿಕೊಂಡಿದ್ದರು. ‘ಸಭಾ’ವು ‘ಸಂಯುಕ್ತರಂಗ’ದಿಂದಾಗಿ ಪ್ರಧಾನ ಧಾರೆಗೆ ಬರಲಾಗದಿದ್ದರೂ ತನ್ನದೇ ಆದ ಮಿತಿಗಳಲ್ಲಿಯೇ ಕನ್ನಡದ ಚಟುವಟಿಕೆಗಳನ್ನು ಚಾಲ್ತಿಯಲ್ಲಿ ಇಟ್ಟಿತ್ತು.

ನಾಡು ಏಕೀಕೃತವಾಗಿ 1963ರ ವೇಳೆಗೆ ಏಳು ವರುಷಗಳಾಗಿದ್ದವು. ಆದರೆ ಕನ್ನಡಿಗರ ಆಶಯಗಳು ಈಡೇರಿರಲಿಲ್ಲ. ಈ ಕುರಿತು ಜಾಗೃತಿ ಮೂಡಿಸಲು ನವೆಂಬರ್ ಒಂದರಂದು ಸ್ವಾತಂತ್ರೋತ್ಸವದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಿಸಲು ಸಂಯುಕ್ತರಂಗ ಯೋಜಿಸಿತು. ಅದರಲ್ಲೂ ಮ.ರಾಮಮೂರ್ತಿ ಅವರು 1963ರ ನವೆಂಬರ್ ಒಂದನ್ನು ರಾಜ್ಯೋತ್ಸವದ ದಿನವನ್ನಾಗಿ ಅದ್ದೂರಿಯಾಗಿ ಆಚರಿಸಿದ್ದು ಗಮನಿಸಬೇಕಾದ ಸಂಗತಿ. ನಾಡಿನ ಎಲ್ಲ ಸಂಘಟನೆಗಳನ್ನು ಬೆಂಗಳೂರಿನ ಧರ್ಮಾಂಬುಧಿ ಕೆರೆಯ (ಸುಭಾಶ್ ನಗರ) ಮೈದಾನದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ ಸೇರುವಂತೆ ಮಾಡಿದ್ದು ಗಮನಾರ್ಹ. ಚಳವಳಿ ಚರಿತ್ರೆಯಲ್ಲಿ ಇದೇ ಮೊದಲ ರಾಜ್ಯೋತ್ಸವ. ಅನಂತರ ಪ್ರತಿ ವರ್ಷವೂ ಈ ಆಚರಣೆ ಜಾರಿಗೆ ಬಂದಿತು. ಕನ್ನಡಕ್ಕಾಗಿ ರಾಮಮೂರ್ತಿ ಅವರು ಆರ್ಥಿಕವಾಗಿ ಬಡವಾದರು. ಆದರೆ ಉತ್ಸಾಹ, ಅಭಿಮಾನಗಳಲ್ಲಿ ಶ್ರೀಮಂತರಾಗಿದ್ದ ಅವರನ್ನು ‘ಕನ್ನಡ ಸೇನಾನಿ’ ಎಂದು ಕರೆಯಲಾಯಿತು. ಏಕೆಂದರೆ ಕನ್ನಡ ಕಾರ್ಯಕರ್ತರ ಮೊಕದ್ದಮೆಗಳಿಗೆ ಇವರೇ ಜಾಮೀನುದಾರರು. ಅಲ್ಲದೆ ತಮ್ಮ ಮೇಲೂ ಅನೇಕ ಮೊಕದ್ದಮೆಗಳನ್ನು ಹಾಕಿಸಿಕೊಂಡು ಕನ್ನಡ, ಕನ್ನಡಿಗ, ಕರ್ನಾಟಕಗಳಿಗಾಗಿ ಕೋರ್ಟಿಗೆ ಅಲೆಯಬೇಕಾಗಿತ್ತು. ಇದನ್ನು ತಮ್ಮ ಕರ್ತವ್ಯವೆಂದು ತಿಳಿದಿದ್ದ ರಾಮಮೂರ್ತಿಗಳು ಕನ್ನಡೇತರರ ಪಾಲಿಗೆ ದೊಡ್ಡ ಚಳವಳಿಗಾರರಾಗಿ ಕಂಡದ್ದೂ ಉಂಟು.

ಕನ್ನಡ ಚಲನಚಿತ್ರ ಮತ್ತು ಕನ್ನಡ ಚಳವಳಿ

ಈ ವೇಳೆಗಾಗಲೇ ಕನ್ನಡ ಚಲನಚಿತ್ರ ರಂಗವು ತನ್ನ ಕನ್ನಡತನವನ್ನು ಕಳೆದುಕೊಂಡಿತ್ತು. ಕನ್ನಡ ಕಲಾವಿದರಿಗೆ, ನಿರ್ಮಾಪಕ, ನಿರ್ದೇಶಕರಿಗೆ ಕನ್ನಡನಾಡಿನಲ್ಲಿ ಪ್ರಾತಿನಿಧ್ಯವಿರಲಿಲ್ಲ. ಬೆಂಗಳೂರಿನ ಸಿನಿಮಾ ಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳೂ ಎರಡನೆಯ, ಮೂರನೆಯ ದರ್ಜೆಯವಾಗಿ ಪ್ರದರ್ಶಿತವಾಗುತ್ತಿದ್ದವು. ಕನ್ನಡದ ಕಲಾವಿದರಲ್ಲಿ ಕೆಲವರು ಅನ್ಯಭಾಷೆಗಳಲ್ಲಿ ನೆಲೆ ನಿಂತು ಅಭಿಮಾನಶೂನ್ಯರಾಗಿದ್ದರು. ಕನ್ನಡಿಗರಿಗೆ ಥಿಯೇಟರ್, ಸ್ಟುಡಿಯೋ ಸಮಸ್ಯೆಗಳ ಜೊತೆಗೆ ‘ಡಬ್ಬಿಂಗ್’ ಹಾವಳಿಯೂ ಆವರಿಸಿಕೊಂಡಿತ್ತು. ಬೇರೆ ಭಾಷೆಗಳಲ್ಲಿನ ಚಿತ್ರಗಳು ‘ಡಬ್’ ಆಗಿ ಕನ್ನಡತನವಿಲ್ಲದಂತೆ ಮಾಡಿದ್ದವು. ಕರ್ನಾಟಕ ಸರ್ಕಾರವೇ ಕನ್ನಡ ಚಲನಚಿತ್ರೋದ್ಯಮಕ್ಕೆ ಆದ್ಯತೆ ನೀಡಿರಲಿಲ್ಲ. ಈ ಸಮಸ್ಯೆಗಳನ್ನು ಕನ್ನಡ ಚಳವಳಿಕಾರರು ಕೈಗೆತ್ತಿಕೊಂಡದ್ದು ಗಮನಾರ್ಹ. ಮ.ರಾಮಮೂರ್ತಿ, ಅ.ನ.ಕೃ ಮೊದಲಾದವರು ಪ್ರತಿಭಟನೆಯ ಹಾದಿ ಹಿಡಿದರು. ಈ ಸಂದರ್ಭದಲ್ಲಿ ವಾಟಾಳ್ ನಾಗರಾಜರಂಥ ಯುವಕರು ಚಳವಳಿಗೆ ದುಮುಕಿದರು. ಕನ್ನಡದ ಮೇರುನಟ ರಾಜಕುಮಾರ್ ಅವರನ್ನು ಒಳಗೊಂಡಂತೆ ಜಿ.ವಿ.ಅಯ್ಯರ್, ಬಾಲಕೃಷ್ಣ, ನರಸಿಂಹರಾಜು ‘ಕನ್ನಡ ಚಲನಚಿತ್ರ ಕಲಾವಿದ ಸಂಘ’ವನ್ನು ರಚಿಸಿದ್ದೂ ಇದೆ. ಈ ಸಂಘದಡಿಯಲ್ಲಿ ಅನೇಕ ಚಿತ್ರಗಳನ್ನು ತೆಗೆಯುವ ಪ್ರಯತ್ನಗಳು ನಡೆದವು. ಇಂಥ ಚಿತ್ರಗಳನ್ನು ಥಿಯೇಟರ್ ಮಾಲೀಕರು ಕಡ್ಡಾಯವಾಗಿ ಪ್ರದರ್ಶಿಸಲು ಒತ್ತಾಯಿಸಲಾಯಿತು. ಅನೇಕ ಹೋಟೆಲು, ಖಾಸಗಿ ಉದ್ಯಮಗಳು, ಖಾಸಗಿ ಸಂಘ-ಸಂಸ್ಥೆಗಳ ಯುವಕರು ಈ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ ಕನ್ನಡದ ನಿರ್ಮಾಪಕರುಗಳಿಗೆ ಭರವಸೆಯ ವಾತಾವರಣ ಮೂಡುವಂತಾಯಿತು. ಕೇವಲ ತಮಿಳು, ತೆಲುಗು, ಹಿಂದಿ ಮೊದಲಾದ ಭಾಷೆಗಳ ಚಲನಚಿತ್ರಗಳೇ ಪ್ರದರ್ಶಿತವಾಗುತ್ತಿದ್ದ ವಾತಾವರಣ ಬದಲಾಯಿತು.

ಮದರಾಸಿನಲ್ಲಿ ಚಲನಚಿತ್ರದ ಉದ್ಯಮ ಪ್ರಗತಿಕರವಾಗಿತ್ತು. ಇದಕ್ಕೆ ಅಲ್ಲಿನ ಕಲಾವಿದರ, ರಾಜಕಾರಣಿಗಳ ಭಾಷಿಕ ಪ್ರೇಮವೇ ಕಾರಣ. ಅಂದು ಎಂ.ಜಿ.ಆರ್ (ಎಂ.ಜಿ.ರಾಮಚಂದ್ರನ್), ಎಂ.ಕರುಣಾನಿಧಿ ಅವರುಗಳು ನೀಡಿದ ಪ್ರೋದೊಡ್ಡದು. ಬೆಂಗಳೂರಿನ ಡಿ.ಎಂ.ಕೆ.ಪಕ್ಷದ ಕಾರ್ಯಕರ್ತರು ಇತರೆ ತಮಿಳು ಸಂಘಟನೆಯೊಂದಿಗೆ ಸೇರಿಕೊಂಡು ತಮಿಳು ಚಲನಚಿತ್ರಗಳಿಗೆ ಅತಿಯಾಗಿ ಪ್ರೋಇದು ಕನ್ನಡಿಗರನ್ನು ಕೆರಳಿಸುವಂತೆ ಮಾಡಿತ್ತು. 1964ರ ವೇಳೆಗೆ ಎಂ.ಜಿ.ಆರ್ . ಚಲನಚಿತ್ರಗಳು ಬೆಂಗಳೂರಿನ ತಮಿಳರನ್ನು ಅತಿಯಾಗಿ ವರ್ತಿಸುವಂತೆ ಮಾಡಿದ್ದವು. ಇದರ ಪರಿಣಾಮವಾಗಿ ‘ಕಾಂಚಿ ತಲೈವನ್’ ಚಲನಚಿತ್ರದ ವಿರುದ್ಧ ಕನ್ನಡ ಚಳವಳಿಯು ತೀವ್ರ ಸ್ವರೂಪ ಪಡೆದದ್ದೂ ಇದೆ.

‘ಕಾಂಚಿ ತಲೈವನ್’ ಚಲನಚಿತ್ರವು (1964) ಕಂಚಿಯ ಪಲ್ಲವರ ದೊರೆ 1ನೆಯ ನರಸಿಂಹವರ್ಮನು ಬಾದಾಮಿ ಚಾಲುಕ್ಯರ ದೊರೆ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿದ ಕಥೆಯನ್ನೊಳಗೊಂಡಿದೆ. ಕನ್ನಡಿಗರನ್ನು ಅವಮಾನಿಸಲೋ ಎಂಬಂತೆ ತಮಿಳು ದೊರೆ ಕರ್ನಾಟಕದ ಬಾವುಟವನ್ನು ಕಾಲಿನಲ್ಲಿ ತುಳಿಯುವ ದೃಶ್ಯಗಳನ್ನು ಚಿತ್ರೀಕರಿಸಲಾಗಿತ್ತು. ಚರಿತ್ರೆಯ ಸೂಕ್ಷ್ಮ ಸಂಗತಿಗಳನ್ನು ಭಾಷಿಕ ನೆಲೆಗಳಲ್ಲಿ, ವೈಯಕ್ತಿಕವಾಗಿ ತೆಗೆದುಕೊಂಡ ಸಂದರ್ಭ ಇದಾಗಿತ್ತು. ತಮಿಳರ ಈ ವರ್ತನೆ ಕನ್ನಡಿಗರನ್ನೂ ಕೆರಳಿಸದೆ ಬಿಡಲಿಲ್ಲ. ಚಳವಳಿಗಾರರು, ಇತಿಹಾಸತಜ್ಞರು, ವಿದ್ವಾಂಸರು ಚಲನಚಿತ್ರದ ಕೆಲವು ಭಾಗಗಳನ್ನು ತೆಗೆದುಹಾಕಲು ಶಿಫಾರಸ್ಸು ಮಾಡಿದರು. ‘ನ್ಯೂಸಿಟಿ’ ಚಿತ್ರಮಂದಿರದಲ್ಲಿ ಕನ್ನಡ ಕಾರ್ಯ ಕರ್ತರು ಕಲ್ಲುಗಳನ್ನು ತೂರಿ ಪ್ರತಿಭಟಿಸಿದ್ದು ಮರುಕಳಿಸದಂತೆ ನೋಡಿಕೊಳ್ಳಲು ಎಚ್ಚರಿಸಲಾಯಿತು. ಆದರೂ ಎರಡನೆಯ ಬಾರಿ ಚಿತ್ರವು ‘ಮಿನರ್ವ’ ಚಿತ್ರಮಂದಿರದಲ್ಲಿ ಬಿಡುಗಡೆಯಾದಾಗ ಆಕ್ಷೇಪಾರ್ಹ ಭಾಗಗಳನ್ನು ತೆಗೆದಿರಲಿಲ್ಲ. ಇದರಿಂದ ಕುಪಿತರಾದ ಕನ್ನಡಿಗರು ಪರಿಸ್ಥಿತಿಯನ್ನು ಹಿಂಸಾತ್ಮಕ ರೂಪಕ್ಕೆ ತೆಗೆದುಕೊಂಡು ಹೋದರು. ಅ.ನ.ಕೃ ಅವರಿಗೆ ಕಾರ್ಯಕರ್ತರು ಈ ರೀತಿಯಲ್ಲಿ ನಡೆದುಕೊಂಡದ್ದು ಸರಿ ಕಾಣಲಿಲ್ಲ. ಆದರೆ ಇದು ರಾಮಮೂರ್ತಿ ಅವರಿಗೆ ‘ಭಾವೋದ್ವೇಗದ ಅನಿವಾರ್ಯತೆ’ಯೆಂದು ಸಮರ್ಥಿಸಿ ಕೊಳ್ಳುವಂತೆ ಮಾಡಿತ್ತು. ಈ ಇಬ್ಬರ ನಡುವಿನ ತಾತ್ವಿಕ ಭಿನ್ನಾಭಿಪ್ರಾಯಗಳು (ಚಳವಳಿಗೆ ಸಂಬಂಧಿಸಿದಂತೆ) ಹಾಗೂ ಅ.ನ.ಕೃ ವಿರುದ್ಧ ನಡೆಯುತ್ತಿದ್ದ ರಾಜಕಾರಣಿಗಳ ಪಿತೂರಿಗಳು ಅತಿಯಾದವು. ಹೀಗಾಗಿ ಅ.ನ.ಕೃ ಕನ್ನಡ ಚಳವಳಿಯಿಂದ ಹಿಂದಕ್ಕೆ ಸರಿದರು. ಆದರೆ ಮ. ರಾಮಮೂರ್ತಿ ನಾಡಿನ ಬೇರೆಡೆಗಳಲ್ಲೂ ಈ ಚಲನಚಿತ್ರ ಪ್ರದರ್ಶಿತವಾಗದಂತೆ ಚಳವಳಿ ಹೂಡಿದರು. ಭದ್ರಾವತಿ ಮೊದಲಾದೆಡೆಗಳಲ್ಲಿ ಪರಿಸ್ಥಿತಿಗಳು ವಿಕೋಪಕ್ಕೆ ಹೋಗಿ ಚಳವಳಿಗಾರರ ಮೇಲೆ ಪೊಲೀಸರು ಮೊಕದ್ದಮೆಗಳನ್ನು ದಾಖಲು ಮಾಡಿದ್ದೂ ಇದೆ. ಇವೆಲ್ಲ ಕಾರಣಗಳಿಂದ ತಮಿಳರ ಹಾಗೂ ಕನ್ನಡಿಗರ ಮಧ್ಯೆ ಭಾಷಿಕ ವೈಷಮ್ಯಗಳು ದಿನೇ ದಿನೇ ಹೆಚ್ಚಾದವು. ಚಳವಳಿಗಾರರ ಸಹಕಾರ ಪ್ರತಿಭಟನೆಗಳಿಂದಾಗಿ ಕ್ರಮೇಣ ಕನ್ನಡ ಚಲನಚಿತ್ರರಂಗ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಬರುವಂತಾಯಿತು.

.ರಾಮಮೂರ್ತಿ ಮತ್ತು ಕನ್ನಡ ಚಳವಳಿ

ಮ.ರಾಮಮೂರ್ತಿ ಅವರು ‘ಸಂಯುಕ್ತ ರಂಗ’ವನ್ನು ಅ.ನ.ಕೃ ಇಲ್ಲದಿದ್ದರೂ ಮುನ್ನಡೆಸಿದರು. ತಮಿಳರು ಡಿ.ಎಂ.ಕೆ. ಪಕ್ಷದವರ ಸಹಕಾರದಿಂದ ತಮಿಳು ಬಾವುಟಗಳನ್ನು (ಕಪ್ಪು ಮತ್ತು ಕೆಂಪು ಬಣ್ಣದ್ದು) ತಾವು ವಾಸಿಸುವ ಕಡೆಗಳಲ್ಲಿ ಹಾರಾಡಿಸಿದರು. ಇದು ಕನ್ನಡ ಕಾರ್ಯಕರ್ತರಿಗೆ ಪ್ರತಿಭಟಿಸಲು ಪ್ರೇರಣೆ ನೀಡಿತು. ಕನ್ನಡದ ಪ್ರದೇಶಗಳಲ್ಲಿ ಕನ್ನಡದ ಬಾವುಟಕ್ಕೆ ಪ್ರಾಶಸ್ತ್ಯವೆಂದು ರಾಮಮೂರ್ತಿ ಚಳವಳಿ ಹೂಡಿದರು. ಇದರ ಪರಿಣಾಮವಾಗಿ ಹಿಂಸೆಗಳೂ ಆಗದಿರಲಿಲ್ಲ. ತಮಿಳರ ಸಂಖ್ಯೆ ಹೆಚ್ಚಿದ್ದ ಕಡೆಗಳಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಮೇಲೆ ದೌರ್ಜನ್ಯಗಳು ನಡೆದವು. ಬೆಂಗಳೂರಿನ ಕನ್ನಡೇತರರಲ್ಲಿ ಇಡೀ ನಾಡಿನಾದ್ಯಂತ ವ್ಯಾಪಾರ-ವಾಣಿಜ್ಯ ರಂಗಗಳಲ್ಲಿ ಆರ್ಥಿಕವಾಗಿ ಪ್ರಾಬಲ್ಯ ಹೊಂದಿದ್ದ ಮಾರವಾಡಿಗಳು ಪ್ರಮುಖರು. ಇವರು ರಾಜಾಸ್ತಾನದಿಂದ ಬಂದ ವಲಸಿಗರು. ಇವರು ತಮಿಳರಷ್ಟು ಅಭಿವ್ಯಕ್ತಗೊಳ್ಳಲೇ ಇಲ್ಲ. ಬೆಂಗಳೂರಿನಲ್ಲಿ ಕಾಕ್ಸ್ ಟೌನ್, ಫ್ರೆಜರ್ ಟೌನ್, ದಂಡು ಪ್ರದೇಶ ಮೊದಲಾದ ಕಡೆಗಳಲ್ಲಿ ಕನ್ನಡ ಚಳವಳಿಕಾರರು ಹಾಗೂ ರಾಮಮೂರ್ತಿ ಅವರು ಓಡಾಡಿ ಕನ್ನಡಿಗರನ್ನು ಸಂಘಟಿಸಿದರು. ಈ ಕೆಲಸಗಳಿಗೆ ತಮಿಳರ ಪ್ರತಿಕ್ರಿಯೆ ಭಿನ್ನವಾಗಿತ್ತು. ಇವರುಗಳು ಕೆಲವು ಕಾರ್ಖಾನೆಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದುದರಿಂದ ಅಲ್ಲಿನ ಕನ್ನಡ ಕಾರ್ಮಿಕರನ್ನು ಹಿಂಸಿಸಲಾರಂಭಿಸಿದರು. ಕನ್ನಡ ಸಂಘಗಳಲ್ಲಿನ ಕಾರ್ಮಿಕರ ಮೇಲೆ ‘ಗೂಂಡಾಗಿರಿ’ ಮಾಡಲಾರಂಭಿಸಿದ್ದೂ ಇದೆ. ಇದಕ್ಕೆ ಡಿ.ಎಂ.ಕೆ.ಯಂಥ ರಾಜಕೀಯ ಪಕ್ಷದ ಬೆಂಬಲವೂ ಇತ್ತು. ಜೊತೆಗೆ ‘‘ತಮಿಳರ ಮೇಲೆ ಕನ್ನಡಿಗರ ದೌರ್ಜನ್ಯ’’ವೆಂದು ತಮ್ಮ ತಮಿಳು ಪತ್ರಿಕೆಗಳಲ್ಲಿ ಬರೆಸುತ್ತಿದ್ದುದೂ ಉಂಟು.

ಸ್ಥಳೀಯ ಕಾರ್ಪೋರೇಷನ್ ಸಂಸ್ಥೆಗಳಿಗೆ ನಡೆಯುತ್ತಿದ್ದ ಚುನಾವಣೆಗಳಿಗೆ ತಮಿಳರು ಸ್ಪರ್ಧಿಸುವ ಮಟ್ಟಿಗೆ ಬಲಾಢ್ಯರಾದರು. ಅಂತೆಯೇ ಗೆದ್ದು ಬರುತ್ತಿದ್ದುದೂ ಉಂಟು. ಹಿರಿಯೂರಿನಲ್ಲಿ ತಮಿಳರೇ ಹೆಚ್ಚು ಸಂಖ್ಯೆಯಲ್ಲಿ ಇದ್ದರು. ಅಣೆಕಟ್ಟು ಕೆಲಸಗಳಿಗಾಗಿ ಬಂದ ಕಾರ್ಮಿಕರು ಇಲ್ಲಿಯೆ ನೆಲೆಸಿ ಬಹುಸಂಖ್ಯಾತರಾಗಿದ್ದರು. ಇವರು ತಮ್ಮ ಕ್ಷೇತ್ರದಲ್ಲಿ ಡಿ.ಎಂ.ಕೆ. ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರೊಂದಿಗೆ ಪ್ರಾತಿನಿಧ್ಯ ಪಡೆದದ್ದು ಗಮನಾರ್ಹ ಸಂಗತಿ. ಹಿರಿಯೂರಿನ ಸರ್ಕಲ್ಲಿನಲ್ಲಿ ಡಿ.ಎಂ.ಕೆ. ಪಕ್ಷದ ಬಾವುಟವನ್ನೂ ಪ್ರದರ್ಶಿಸಲಾಗಿತ್ತು. ಇದಕ್ಕೆ ಸ್ಥಳೀಯ ಕನ್ನಡಿಗರು ಪ್ರತಿಭಟಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಸರ್ಕಾರ ಪೊಲೀಸರು ಸಹ ಸೋತದ್ದು ಉಂಟು. ಕೊನೆಗೆ ರಾಮಮೂರ್ತಿ ಅವರು ತಮ್ಮ ಕಾರ್ಯಕರ್ತರೊಂದಿಗೆ ಖುದ್ದಾಗಿ ಬಂದು ಡಿ.ಎಂ.ಕೆ.ಬಾವುಟವನ್ನು ತೆಗೆಸಿ ಕನ್ನಡಿಗರನ್ನು ಹುರಿದುಂಬಿಸಿದರು. ಈ ಎಲ್ಲ ಪ್ರಯತ್ನಗಳು ಕನ್ನಡಿಗರನ್ನು ಸಂಘಟಿಸುವುದರ ಜೊತೆಗೆ ತಮಗೆ ನಿರ್ದಿಷ್ಟ ಬಾವುಟ ಅಥವಾ ರಾಜಕಾರಣದ ಬೆಂಬಲಗಳು ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದವು. ಈ ಕೊರತೆಗಳನ್ನು ನೀಗಿಸಿಕೊಳ್ಳುವಲ್ಲಿ ಚಳವಳಿಗಾರರು ಪ್ರಯತ್ನಗಳನ್ನು ಮಾಡದೆ ಇರಲಿಲ್ಲ. ಇದರ ಪರಿಣಾಮವಾಗಿ ಚಳವಳಿಯಲ್ಲಿ ಜಾತೀಯತೆ, ರಾಜಕಾರಣದ ಸ್ವಾರ್ಥ ಚಿಂತನೆಗಳು ನುಸುಳುವಂತೆ ಆಯಿತು.

ಕನ್ನಡೇತರ ಮತಗಳನ್ನು ತಮ್ಮ ದೃಷ್ಟಿಯಲ್ಲಿ ಇಟ್ಟುಕೊಂಡಿದ್ದ ರಾಷ್ಟ್ರೀಯ ಪಕ್ಷಗಳು (ಕಾಂಗ್ರೆಸ್ ಇತ್ಯಾದಿ) ಕನ್ನಡಿಗರ ಸಮಸ್ಯೆಗಳಿಗೆ, ಹಿಂಸೆಗಳಿಗೆ ಸ್ಪಂದಿಸಲು ಹಿಂಜರಿದವು. ಹೀಗಾಗಿ ಕನ್ನಡಿಗರ ಅಶೋತ್ತರಗಳಿಗಾಗಿ ಪ್ರಾದೇಶಿಕವಾದ ರಾಜಕೀಯ ಪಕ್ಷವೊಂದರ ಅಗತ್ಯತೆ ಕಾರ್ಯಕರ್ತರನ್ನು ಕಾಡಿತು. ಈ ನಿಟ್ಟಿನಲ್ಲಿ ಆಲೋಚಿಸುವುದಕ್ಕೆ ಮೊದಲೇ ಕನ್ನಡ ಚಳವಳಿಯಲ್ಲಿ ಜಾತೀಯವಾದ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರರೆಂಬ ಎರಡು ಗುಂಪುಗಳು ಹುಟ್ಟಿಕೊಂಡವು. ಸಂಯುಕ್ತ ರಂಗದ ಚಳವಳಿ ನಾಯಕರನ್ನು (ರಾಮಮೂರ್ತಿ ಅವರನ್ನೂ ಒಳಗೊಂಡಂತೆ) ಬ್ರಾಹ್ಮಣರ ಗುಂಪಿಗೆ ಸೇರಿಸಲಾಗಿತ್ತು. ಚಳವಳಿಯನ್ನು ಭಿನ್ನ ರೀತಿಯಾಗಿ ನಡೆಸುವಲ್ಲಿ ಉತ್ಸಾಹ ತೋರಿದ್ದ ವಾಟಾಳ್ ನಾಗರಾಜರ ನೇತೃತ್ವದ ಗುಂಪು ಬ್ರಾಹ್ಮಣೇತರರಾಗಿ ಗುರುತಿಸಿಕೊಂಡಿತ್ತು. ಇದರಲ್ಲಿ ಅ.ಸಂಜೀವಪ್ಪ, ಸಾ.ಕೃ.ಸಂಪಂಗಿ, ಜಿ.ನಾರಾಯಣ ಕುಮಾರ್ ಮೊದಲಾದವರು ಇದ್ದರು. ಇವೆಲ್ಲದರ ಜೊತೆಗೆ ಡಿ.ಎಂ.ಕೆ. ಬಾವುಟಗಳನ್ನು ಪ್ರತಿಭಟಿಸುತ್ತಿದ್ದ ಕನ್ನಡ ಕಾರ್ಯಕರ್ತರಿಗೆ ನಿಗದಿತವಾದ ‘ಕನ್ನಡ ಬಾವುಟ’ವೊಂದನ್ನು ಪರಿಚಯಿಸುವ ಹೊಣೆಯೂ ಈ ಎರಡೂ ಗುಂಪಿನವರ ಜವಾಬ್ದಾರಿಯಾಗಿತ್ತು. ಸೈದ್ಧಾಂತಿಕ ಒಡಕಿನಿಂದಾಗಿ ವಾಟಾಳ್ ನಾಗರಾಜರ ನೇತೃತ್ವದ ಕಾರ್ಯಕರ್ತರು ಸಂಯುಕ್ತ ರಂಗದಿಂದ ಹೊರಬಂದಿದ್ದರು. ವಾಟಾಳರು ಆಟೋ ಚಾಲಕರು, ಹೋಟೆಲ್ ಕಾರ್ಮಿಕರು, ಸಾರಿಗೆ ಸಿಬ್ಬಂದಿ ಮೊದಲಾದವರಿಂದ ಕನ್ನಡ ಚಳವಳಿಯನ್ನು ತೀವ್ರ ಸ್ವರೂಪದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದೂ ಇದೆ. ಇಲ್ಲಿ ಸಾಹಿತಿ ಕಲಾವಿದರಿಗಿಂತ ಜನಸಾಮಾನ್ಯ ಕನ್ನಡಿಗರ ಸಂಖ್ಯೆಯೇ ಹೆಚ್ಚು ಇತ್ತು. ಈ ಘಟ್ಟದಿಂದ ಕನ್ನಡ ಚಳವಳಿ ಛಿದ್ರವಾಗುತ್ತಾ ಹೋಯಿತು.

ಮಹಾಜನ್ ಆಯೋಗ ಮತ್ತು ಚಳವಳಿಕಾರರು

1964ರ ವೇಳೆಗೆ ರಾಜ್ಯೋತ್ಸವವನ್ನು ಎರಡು ಸ್ಥಳಗಳಲ್ಲಿ ನಡೆಸಲು ಕಾರಣವಾಯಿತು. ಮ.ರಾಮಮೂರ್ತಿ ಹಾಗೂ ವಾಟಾಳರು ಒಂದೆಡೆ ಸೇರಲು ಸಾಧ್ಯವಾಗಲಿಲ್ಲ. ಆದರೆ ಕನ್ನಡ ಬಾವುಟದ ವಿಚಾರಕ್ಕಾಗಿ ಒಂದೆಡೆ ಸಭೆ ಸೇರಿದ್ದು ಗಮನಾರ್ಹ. ಅಲ್ಲದೆ ಈ ವೇಳೆಗಾಗಲೇ (1966) ಮರಾಠಿಗರ ಆಕ್ರಮಣಕಾರಿ ಪ್ರವೃತ್ತಿಗಳು ಹೆಚ್ಚಾಗತೊಡಗಿದ್ದವು. ‘ಶಿವಸೇನೆ’ಯ ಬಾಳಠಾಕ್ರೆ ಮೊದಲಾದವರು ಕನ್ನಡಿಗರ ಮೇಲೆ (ಮುಂಬಯಿಯಲ್ಲಿ) ದೌರ್ಜನ್ಯಗಳನ್ನು ಎಸಗುವಲ್ಲಿ ನಿರತರಾಗಿದ್ದರು. ಅಲ್ಲದೆ ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದ ಗಡಿಗಳಿಗೆ ಸಂಬಂಧಿಸಿದ ವಿವಾದಗಳ ಇತ್ಯರ್ಥಕ್ಕೆ ಮಹಾಜನ್ ಆಯೋಗವು ನೇಮಕ ಆಗಿತ್ತು. ಈ ಆಯೋಗದ ಮೇಲೆ ಹಾಗೂ ಕೇಂದ್ರ ಸರ್ಕಾರದ ಮೇಲೆ ಮರಾಠಿಗರು ಒತ್ತಡ ಹೇರಿ ಅನುಕೂಲಗಳನ್ನು ಮಾಡಿಕೊಳ್ಳಲು ಪ್ರಯತ್ನಿಸತೊಡಗಿದ್ದರು. ಇದಕ್ಕೆ ಕನ್ನಡಿಗರಿಂದ ಎಲ್ಲೆಡೆ ಪ್ರತಿರೋಧಗಳು ಕಾಣಿಸಿಕೊಂಡವು. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗವೆಂಬುದನ್ನು ಸಾಬೀತುಪಡಿಸುವುದು ಚಳವಳಿಗಾರರ ಆಶಯವಾಗಿತ್ತು. ಈ ನಿಟ್ಟಿನಲ್ಲಿ ‘ಸಭಾ’ದವರು 29-7-1966ರಂದು ನಡೆಸಿದ ‘ಸಂಪೂರ್ಣ ಕರ್ನಾಟಕ ಸರ್ವಪಕ್ಷ ಸಮ್ಮೇಳನ’ವು ಪ್ರಧಾನವಾದುದು. ಹೀಗಾಗಿ ನಾಡಿನ ಎಲ್ಲೆಡೆ ಮಹಾಜನ್ ಅಯೋಗದ ವಿರುದ್ಧ ತೀವ್ರವಾದ ಪ್ರತಿಭಟನೆಗಳು ನಡೆದವು. ರಸ್ತೆ ತಡೆ, ರೈಲು ತಡೆ, ಮೆರವಣಿಗೆ, ಪ್ರದರ್ಶನಗಳು, ಬಂದ್ ಆಚರಣೆ ಇತ್ಯಾದಿಗಳು ಚಳವಳಿಕಾರರನ್ನು ಇನ್ನಷ್ಟು ಹುರಿದುಂಬಿಸಿದ್ದವು. ಮಹಾಜನ್ ಆಯೋಗದ ವರದಿಯು ಜತ್, ಅಕ್ಕಲಕೋಟೆ, ಕಾಸರಗೋಡುಗಳನ್ನು ಕರ್ನಾಟಕಕ್ಕೂ, ನಿಪ್ಪಾಣಿ, ಖಾನಾಪುರ, ಹಳಿಯಾಳಗಳನ್ನು ಮಹಾರಾಷ್ಟ್ರಕ್ಕೂ ಸೇರಿಸಿತ್ತು. ಅಲ್ಲದೆ ಕನ್ನಡ ನೆಲವಾದ ಬೆಳಗಾವಿಯನ್ನು ಕರ್ನಾಟಕದಲ್ಲಿಯೇ ಉಳಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಈ ಆಯೋಗದ ವರದಿಗೆ ಒಪ್ಪಿಕೊಳ್ಳುವುದಾಗಿ ಹೇಳಿದ್ದ ಮರಾಠಿಗಳು ಮತ್ತೆ ಮಾತು ಮುರಿದು ಪ್ರತಿಕ್ರಿಯಿಸಿದರು. ಇದು 1970ರಲ್ಲಿ ದೆಹಲಿಯ ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಚರ್ಚೆಗೆ ಬರುವವರೆಗೂ ಹೋಯಿತು. ಮರಾಠಿಗರು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾರಂಭಿಸಿದ್ದರು. ಇದರಿಂದ ಕನ್ನಡಿಗರ ಪ್ರತಿಭಟನೆಗಳು ತೀವ್ರ ಸ್ವರೂಪವನ್ನು ಪಡೆದವು. ಈ ಘಟ್ಟದಲ್ಲಿ ಐದು ಕನ್ನಡ ಚಳವಳಿಗಾರರು ‘ಕರ್ನಾಟಕ ಎಕ್ಸ್‌ಪ್ರೆಸ್’ ರೈಲನ್ನು ತಡೆಯಲು ಮುಂದಾದರು. ಆದರೆ ಅವರಲ್ಲಿ ಮು.ಗೋವಿಂದರಾಜು ಎಂಬ ಕಾರ್ಯಕರ್ತ ತನ್ನ ಪ್ರಾಣವನ್ನೇ ಕಳೆದುಕೊಂಡದ್ದು ದಾಖಲಾರ್ಹ. ಈ ಘಟನೆ (13-12-1970)ಯು ತಾತ್ಕಾಲಿಕವಾಗಿ ಮಹಾಜನ್ ವರದಿಯನ್ನು ಅನುಷ್ಠಾನಗೊಳಿಸದಂತೆ ಮಾಡಿತು. ಅಲ್ಲದೆ ಈ ಹೊತ್ತಿನವರೆಗೂ ಮರಾಠಿಗರ ಹಠಮಾರಿತನದಿಂದ ಕನ್ನಡದ ಭೂ ಪ್ರದೇಶಗಳು ಕರ್ನಾಟಕಕ್ಕೆ ಸೇರದೆ ಹೊರಗೇ ಉಳಿಯುವಂತೆ ಆಗಿದೆ.

ಕನ್ನಡ ಬಾವುಟ

ಇಂದಿನ ಕನ್ನಡ ಬಾವುಟಕ್ಕೆ ತನ್ನದೇ ಆದ ಚರಿತ್ರೆ ಇದೆ. 1966ರವರೆಗೂ ಕನ್ನಡದ ಕಾರ್ಯಕರ್ತರಿಗೆ ಯಾವುದೇ ನಿರ್ದಿಷ್ಟ ಕನ್ನಡದ ಬಾವುಟವೆಂಬುದು ಇರಲಿಲ್ಲ. ಭುವನೇಶ್ವರಿ, ಕರ್ನಾಟಕ ಭೂಪಟ, ಗಂಡಭೇರುಂಡ ಚಿತ್ರಗಳಿದ್ದ ಬಾವುಟಗಳನ್ನೇ ಬಳಸುತ್ತಿದ್ದರು ಎನ್ನಲಾಗಿದೆ. ಆದರೆ ತಮಿಳರಿಗೆ ಕಪ್ಪು ಮತ್ತು ಕೆಂಪು ಬಣ್ಣದ (ಡಿ.ಎಂ.ಕೆ ಪಕ್ಷ) ಬಾವುಟ ಇತ್ತು. ಈ ಕೊರತೆಯನ್ನು ನೀಗಲು ರಾಮಮೂರ್ತಿ ಹಾಗೂ ವಾಟಾಳರು ಬೆಂಗಳೂರಿನ ‘ವಾಣಿಜ್ಯ ಭವನ’ದಲ್ಲಿ ಸಭೆ ಸೇರಿದರು. ತಾತ್ವಿಕವಾಗಿ ಭಿನ್ನಾಭಿಪ್ರಾಯ ಗಳಿದ್ದರೂ ಹಲವು ಚಳವಳಿಗಾರರು ಈ ಸಂದರ್ಭದಲ್ಲಿ ಕನ್ನಡ ಬಾವುಟವೊಂದನ್ನು ಒಪ್ಪಿಕೊಂಡದ್ದು ಗಮನಾರ್ಹ. ಇಲ್ಲಿ ಪರಿಚಯಿಸಿದ ಬಾವುಟವು ಎರಡು ಮೂಲೆಗಳನ್ನು ಪಡೆದಿದ್ದು, ಮಧ್ಯೆ ಕರ್ನಾಟಕದ ನಕಾಶೆಯನ್ನು ಹೊಂದಿತ್ತು. ನಕಾಶೆಯಲ್ಲಿ (ಮಧ್ಯೆ) ಬೆಳೆಯುತ್ತಿರುವ ಪೈರಿನ ಚಿತ್ರಣವಿತ್ತು. ಇದು ಕರ್ನಾಟಕಕ್ಕೆ ಸೇರಬೇಕಾದ ಗಡಿಭಾಗಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಎಲ್ಲರೂ ಒಪ್ಪಿದ್ದ ಈ ಬಾವುಟವನ್ನು ಮ.ರಾಮಮೂರ್ತಿ ಪರಿಚಯಿಸಿದ್ದರು. ಆದರೆ ಅವರೇ ಅದೇ ವರ್ಷದ ಕೊನೆಗೆ (ನವೆಂಬರ್ 1969) ಬಾವುಟವನ್ನು ಬದಲಾಯಿಸಿದ್ದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿತು.

ಬಾವುಟದ ಬದಲಾವಣೆಯ ಪ್ರಕ್ರಿಯೆಗೆ ಅಂದಿನ ರಾಜಕಾರಣವೆ ಪ್ರಮುಖ ಕಾರಣ. ಏಕೆಂದರೆ ಮ.ರಾಮಮೂರ್ತಿ ಹಾಗೂ ವಾಟಾಳರು ಪ್ರಾದೇಶಿಕ ರಾಜಕೀಯ ಪಕ್ಷವೊಂದನ್ನು ಕಟ್ಟಲು ಅಸಮರ್ಥರಾದದ್ದು. ಬದಲಾಗಿ ಇವರಿಬ್ಬರ ತಾತ್ವಿಕ ಭಿನ್ನಾಭಿಪ್ರಾಯಗಳು ಎರಡು ಪ್ರಾದೇಶಿಕ ಪಕ್ಷಗಳ ಹುಟ್ಟಿಗೆ ಕಾರಣವಾದವು. ಅವೇ ‘ಕನ್ನಡ ಪಕ್ಷ’ ಹಾಗೂ ‘ಕನ್ನಡ ಚಳವಳಿ ಪಕ್ಷ’. ರಾಮಮೂರ್ತಿ ಅವರ ಕನ್ನಡ ಪಕ್ಷವು 1966ರ ನಗರಸಭಾ ಹಾಗೂ 1967ರ ವಿಧಾನಸಭಾ ಚುನಾವಣೆಗಳಲ್ಲಿ ಅಂಥ ಪ್ರಾತಿನಿಧ್ಯವನ್ನೇನೂ ಪಡೆಯಲಿಲ್ಲ. ಆದರೆ ವಾಟಾಳರ ‘ಚಳವಳಿ ಪಕ್ಷ’ ರಾಜಕೀಯವಾದ ಶಕ್ತಿಯನ್ನು ಪಡೆಯಿತು. ಅಷ್ಟೇ ಅಲ್ಲ, ಬ್ರಾಹ್ಮಣೇತರ ಚಳವಳಿಗಾರರ ಗುಂಪಾಗಿ ಗುರುತಿಸಿಕೊಂಡಿತ್ತು. ಇವರು ತಮ್ಮ ಪಕ್ಷದ ಬಾವುಟವನ್ನಾಗಿ ನಕಾಶೆಯಿರುವ ಬಾವುಟವನ್ನೇ ಬಳಸಿದ್ದರು. ಇದರಿಂದ ರಾಮಮೂರ್ತಿ ಅವರು ತಮ್ಮ ‘ಕನ್ನಡ ಪಕ್ಷ’ಕ್ಕಾಗಿ ಹೊಸ ಬಾವುಟವನ್ನು ಪರಿಚಯಿಸುವುದು ಅನಿವಾರ್ಯವಾಯಿತು.

ಮ.ರಾಮಮೂರ್ತಿ 1968ರ ವೇಳೆಗೆ ಸಂಯುಕ್ತ ರಂಗದ ಕಾರ್ಯಕರ್ತರನ್ನು ಸಭೆ ಕರೆದು ಹೊಸ ಬಾವುಟವನ್ನು ಪರಿಚಯಿಸಿದರು. ‘ಕರ್ನಾಟಕ ಮಿತ್ರ ಮಂಡಲಿ’ಯ ಬೆ.ನಿ. ಈಶ್ವರಪ್ಪನವರು ಸೂಚಿಸಿದ ಬಾವುಟವನ್ನು ರಾಮಮೂರ್ತಿ ಒಪ್ಪಿದ್ದರು. ಕಾಟನ್ ಪೇಟೆಯಲ್ಲಿ ನಡೆದ ಸಭೆಯಲ್ಲಿ ನಾಲ್ಕು ಮೂಲೆಗಳನ್ನು ಹಳದಿ-ಕೆಂಪು ಬಣ್ಣಗಳಿದ್ದ ಬಾವುಟವನ್ನು ಎಲ್ಲರೂ ಒಪ್ಪಿಕೊಳ್ಳುವಂತೆ ಆಯಿತು. ಇದರಲ್ಲಿ ಕರ್ನಾಟಕದ ನಕಾಶೆ ಇರಲಿಲ್ಲ. ಬದಲಾಗಿ ಹಳದಿ-ಕೆಂಪು ಬಣ್ಣಗಳನ್ನು ಶಾಂತಿ, ಸಹನೆ, ಕ್ರಾಂತಿಗಳ ಸಂಕೇತವೆಂದೂ, ಮುತ್ತೈದೆತನದ ಅರಸಿನ-ಕುಂಕುಮಗಳ ಸಂಕೇತವೆಂದೂ ವಿವರಣೆ ನೀಡಿದ್ದು ಉಲ್ಲೇಖನೀಯ. ಮ.ರಾಮಮೂರ್ತಿ ಅವರು ಕನ್ನಡ, ಕನ್ನಡಿಗ, ಕರ್ನಾಟಕಗಳನ್ನು ಪ್ರತಿನಿಧಿಸುವ ಯಾವುದೇ ಸಭೆ, ಸಮಾರಂಭಗಳಿಗೆ ಈ ಹೊಸ ಬಾವುಟವನ್ನೇ ಬಳಸಲು ಕರೆಯಿತ್ತರು. ತಮ್ಮ ‘ಕನ್ನಡ ಪಕ್ಷ’ಕ್ಕೂ ಇದೇ ಬಾವುಟವನ್ನೇ ಬಳಸಿದ್ದೂ ಇದೆ. ಹೀಗಾಗಿ ಇಂದಿಗೂ ಹಳದಿ-ಕೆಂಪು ಬಣ್ಣದ ಬಾವುಟಗಳು ಕನ್ನಡದ ಸಂಕೇತವಾಗಿ ಬಳಕೆ ಆಗುತ್ತಿವೆ.

ವಾಟಾಳ್ ನಾಗರಾಜ್ ಮತ್ತು ಕನ್ನಡ ಚಳವಳಿ

1970ರ ದಶಕವು ಬಹುಪಾಲು ವಾಟಾಳ್ ನೇತೃತ್ವದ ಕನ್ನಡ ಚಳವಳಿಯಾಗಿ ಪರಿಣಮಿಸಿತು. ಏಕೆಂದರೆ 25-12-1967ರಲ್ಲಿಯೇ ‘ಸಂಯಕ್ತ ರಂಗ’ದ ಅಧ್ಯಕ್ಷರಾಗಿದ್ದ ರಾಮಮೂರ್ತಿ ಅವರು ಆಕಸ್ಮಿಕ ಮರಣವನ್ನಪ್ಪಿದರು. ‘ಕನ್ನಡ ಪಕ್ಷ’ವನ್ನು ತ.ರಾ.ಸು. ಅವರೇ ವಹಿಸಿಕೊಂಡಿದ್ದರು. ಆದರೆ ವಾಟಾಳ್‌ರ ಜನಪ್ರಿಯತೆಗಳ ಮುಂದೆ ಇನ್ನಾವುದೇ ನಾಯಕ ಚಳವಳಿಯ ನೇತಾರನಾಗಲಿಲ್ಲ. ಇದಕ್ಕೆ ವಾಟಾಳರ ಹಿಂದಿದ್ದ ಅ.ಸಂಜೀವಪ್ಪ, ಸಾ.ಕೃ.ಸಂಪಂಗಿ, ಜಿ.ನಾರಾಯಣ ಕುಮಾರ್, ಪ್ರಭಾಕರ್ ರೆಡ್ಡಿ ಮೊದಲಾದ ಚಳವಳಿಗಾರರ ಪಡೆಯೂ ಮುಖ್ಯ. ಇವರೆಲ್ಲರ ಬೆಂಬಲದಿಂದ ‘ಕನ್ನಡ ಚಳವಳಿ’ ಪಕ್ಷವು ರಾಜಕಾರಣದ ಬಲವನ್ನೂ ಪಡೆದಿತ್ತು. ಕನ್ನಡಿಗರ ಸಮಸ್ಯೆಗಳಿಗೆ ಇಂತಹ ಪ್ರಾದೇಶಿಕ ಪಕ್ಷವೊಂದು ಸ್ಪಂದಿಸುವುದು ಎಲ್ಲರ ಗಮನ ಸೆಳೆಯಿತು. ಆದರೆ ವಾಟಾಳರ ಒಡನಾಡಿಗಳು ಭಿನ್ನಾಭಿಪ್ರಾಯಗಳನ್ನು ತಳೆದದ್ದು, ಮತ್ತೆ ಕನ್ನಡ ಚಳವಳಿಯಲ್ಲಿ ಬಿರುಕನ್ನು ಉಂಟು ಮಾಡಿತು. 1980ರಲ್ಲಿ ‘ಕನ್ನಡ ಚಳವಳಿ ವಾಟಾಳ್ ಪಕ್ಷ’ ಎಂದು ಮರು ಹೆಸರು ಪಡೆಯುವವರೆಗೂ ವಾಟಾಳರು ನಾಡಿನ ಸಮಸ್ಯೆಗಳನ್ನು ಕುರಿತಂತೆ ಚಳವಳಿಗಳನ್ನು ಹೂಡುತ್ತಲೇ ಇದ್ದರು. ಅಂಥವುಗಳಲ್ಲಿ ‘ತಾಳವಾಡಿ ಮುತ್ತಿಗೆ’ (1967) ಚಳವಳಿಯೂ ಒಂದು. ನಮಗೆ ಸೇರಬೇಕಿದ್ದ ಹೊಸೂರು, ತಾಳವಾಡಿಗಳನ್ನು ತಮಿಳುನಾಡಿಗೆ ಸೇರಿಸಲಾಗಿತ್ತು. ಇವುಗಳನ್ನು ಪಡೆಯಲು ‘ತಾಳವಾಡಿ ಮುತ್ತಿಗೆ’ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಯಿತು. ಇದರಲ್ಲಿ ಭಾಗವಹಿಸಿದ್ದ ವಾಟಾಳರನ್ನು ಅಂದಿನ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಬಂಧಿಸಲು ಆದೇಶಿಸಿದ್ದರು. ಬಂಧನಕ್ಕೊಳಗಾದ ವಾಟಾಳರ ಬಿಡುಗಡೆಗಾಗಿ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ, ಹಿಂಸಾಚಾರಗಳು ನಡೆದವು. ತಮಿಳರ ವಿರುದ್ಧ ಕನ್ನಡಿಗರು ತಮ್ಮ ಪ್ರತಿಭಟನೆಗಳನ್ನು ಸಾರಿದ್ದು ಉಗ್ರರೂಪದಲ್ಲಿತ್ತು. ಕನ್ನಡೇತರ ಓಟುಗಳಿಗಾಗಿ ಕಾದಿದ್ದ ಕನ್ನಡ ರಾಜಕಾರಣಿಗಳು ಈ ಘಟನೆಗೆ ಸ್ಪಂದಿಸದೆ ಇದ್ದದ್ದು ಕನ್ನಡಿಗರನ್ನು ಕೆರಳಿಸದಿರಲಿಲ್ಲ. ಅದೇ ರೀತಿ 1968ರಲ್ಲಿ ಸಿ. ರಾಜಗೋಪಾಲಾಚಾರ್(ರಾಜಾಜಿ) ಅವರು ಕನ್ನಡಕ್ಕೆ ಅಪಮಾನದ ಮಾತುಗಳನ್ನು ಆಡಿದಾಗ ವಾಟಾಳ್ ನಾಗರಾಜರಂಥ ಚಳವಳಿಗಾರರು ಪ್ರತಿಕ್ರಿಯಿಸಿರಲಿಲ್ಲ. ಅಂತೆಯೇ ಕನ್ನಡ ಸಾಹಿತ್ಯ ಪರಿಷತ್ತು ಸಹ. ಇಂಥ ವಿರೋಧಾಭಾಸಗಳೂ ಕನ್ನಡ ಚಳವಳಿ ಚರಿತ್ರೆ ಯಲ್ಲಿವೆ. ಒಟ್ಟಾರೆ 1980ರವರೆಗೂ ನಾಡಿನ ಅನೇಕ ಕನ್ನಡ ಪರವಾದ ಸಂಘಟನೆಗಳು, ವಾಟಾಳ್ ಮೊದಲಾದ ಚಳವಳಿಗಾರರು ಕನ್ನಡ, ಕನ್ನಡಿಗ, ಕರ್ನಾಟಕಗಳಿಗೆ ಸ್ಪಂದಿಸು ತ್ತಿದ್ದುದು ಕಂಡುಬರುತ್ತದೆ. ಹಲವು ಬಿರುಕುಗಳ ನಡುವೆ ರಾಜಕಾರಣ, ಜಾತೀಯತೆ, ಸ್ವಾರ್ಥ, ಪ್ರತಿಷ್ಠೆಗಳ ನಡುವೆ ಕನ್ನಡಕ್ಕಾಗಿ ಒಂದಷ್ಟು ಕ್ರಿಯಾತ್ಮಕವಾದ ಚಳುವಟಿಕೆಗಳು ನಡೆದವು. ಆದರೆ 1980ರ ನಂತರದ ಕನ್ನಡ ಚಳವಳಿಯ ಬೆಳವಣಿಗೆಗಳು ಭಿನ್ನವಾಗಿ ಗುರುತಿಸಿಕೊಂಡಿವೆ.

ಗೋಕಾಕ್ ಚಳವಳಿ

ಹಿಂದಿನ ಅವೈಜ್ಞಾನಿಕ ಶಿಕ್ಷಣ ನೀತಿಯೊಂದು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ತೊಡಕಾಗಿ ಪರಿಣಮಿಸಿತ್ತು. ಇದನ್ನು ಸರಿಪಡಿಸಲು ವ್ಯಾಪಕವಾದ ಭಾಷಿಕ ಚಳವಳಿಯನ್ನೇ ಕನ್ನಡಿಗರು ಹೂಡಿದ್ದು ಗಮನಾರ್ಹ ಸಂಗತಿ. ಸಂಸ್ಕೃತ ಭಾಷೆಯನ್ನು ಮಾತೃಭಾಷೆಗೆ ಸರಿಸಮವೆಂದು ಕರ್ನಾಟಕ ಸರ್ಕಾರದ ಶಿಕ್ಷಣ ನೀತಿ ಪರಿಗಣಿಸಿದ್ದು ಚಳವಳಿಗೆ ಕಾರಣ ವಾಗಿತ್ತು. ಅಂದರೆ ಕೇವಲ ಪ್ರೌಢಶಾಲೆಯಲ್ಲಿ ಓದಲು ಆರಂಭಿಸುವ ಸಂಸ್ಕೃತವು ಹಿಂದಿನ ಏಳು ವರ್ಷಗಳಲ್ಲಿ ಓದಿದ ಭಾಷೆಯೊಂದಕ್ಕೆ ಸಮ. ಸಂಸ್ಕೃತ ಅಧ್ಯಾಪಕರ ಉದಾರ ಪ್ರೋಹೆಚ್ಚು ಅಂಕ ನೀಡುವ ಪ್ರವೃತ್ತಿಯಿಂದ ಕನ್ನಡದ ವಿದ್ಯಾರ್ಥಿಗಳು ಸಹ ಸಂಸ್ಕೃತ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಓದಲು ಆರಂಭಿಸಿದ್ದರು. ಇದರಿಂದ ರ್ಯಾಂಕ್‌ಗಳಿಗೆ ಸುಲಭವಾಗಿತ್ತು. ಇಲ್ಲಿ ಇನ್ನೊಂದು ಅನುಕೂಲವೂ ಇತ್ತು. ಅದು ಈ ಭಾಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಅಥವಾ ಇಂಗ್ಲಿಷಿನಲ್ಲಿ ಉತ್ತರಿಸುವಂಥದ್ದು. ಈ ಬಗೆಯ ನೀತಿಯಿಂದ ಕನ್ನಡಕ್ಕೆ ಹೆಚ್ಚಿನ ಪ್ರಾಧಾನ್ಯತೆ ದಕ್ಕಿರಲಿಲ್ಲ. ಹೀಗಾಗಿ ಸಂಸ್ಕೃತವನ್ನು ಪ್ರಥಮ ಭಾಷೆಗಳ ಪಟ್ಟಿಯಿಂದ ತೆಗೆದು ಮೂರನೆ ಸ್ಥಾನಕ್ಕೆ ಇಳಿಸುವ ಸರ್ಕಾರದ ಆಜ್ಞೆಗೆ (1979ರ ಅಕ್ಟೋಬರ್) ಸಂಸ್ಕೃತವಾದಿಗಳಿಂದ ವಿರೋಧಗಳು ವ್ಯಕ್ತವಾದವು. ಇದಕ್ಕೆ ವಿರುದ್ಧವಾಗಿ ಕನ್ನಡಪರ ವಾದಿಗಳು ಸಹ ವಿರೋಧಿಸಲಾರಂಭಿಸಿದ್ದರು. ಕೊನೆಗೆ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗದೆ ಸರ್ಕಾರವು ಭಾಷಾತಜ್ಞರ ಸಮಿತಿಯೊಂದನ್ನು ರಚಿಸಿತು(1980). ಅದೇ ಡಾ.ವಿ.ಕೃ.ಗೋಕಾಕ್ ಅಧ್ಯಕ್ಷತೆಯ ಸಮಿತಿ. ಈ ಸಮಿತಿಯಲ್ಲಿದ್ದ ಬಹುಪಾಲು ಸದಸ್ಯರು ಸಹ ಸಂಸ್ಕೃತಪರವಾದಿಗಳೆಂದೇ ಕನ್ನಡಪರ ವಾದಿಗಳು ಶಂಕಿಸಿದ್ದರು. ಹೀಗಾಗಿ ಸಮಿತಿಯ ವಿರುದ್ಧವೇ ಮೊದಲ ಪ್ರತಿಭಟನೆಗಳು ಆರಂಭಗೊಂಡವು. ಈ ಸಮಿತಿಯು ವರದಿ ಸಿದ್ಧತೆಗೆ ನಾಡಿನಾದ್ಯಂತ ಕೈಗೊಂಡ ಪ್ರವಾಸಕ್ಕೆ ಪ್ರತಿರೋಧಗಳು ಕಂಡುಬಂದವು. ಅಂತೆಯೇ ವರದಿಯನ್ನು ಅನುಷ್ಠಾನಗೊಳಿಸುವಲ್ಲಿಯೂ ಚಳವಳಿಗಾರರು ತೀವ್ರತರವಾದ ಹೋರಾಟಕ್ಕೆ ಇಳಿದಿದ್ದರು. ಗೋಕಾಕ್ ವರದಿ ಕುರಿತು ನಡೆದ ಚಳವಳಿಯು ಕನ್ನಡ ಚಳವಳಿಯೇ ಆಗಿದ್ದು, ‘ಗೋಕಾಕ್ ಚಳವಳಿ’ ಎಂದೇ ಪ್ರಚಾರಕ್ಕೆ ಬಂದಿತು.

ಗೋಕಾಕ್ ಚಳವಳಿಗೆ ಧಾರವಾಡದಿಂದ ಆರಂಭಿಕ ಚಾಲನೆ ದೊರೆತಿತ್ತು. ‘ಗೋಕಾಕ್ ಗೋ ಬ್ಯಾಕ್’ ಎಂಬ ಘೋಷಣೆಗಳಿಂದ ಹಿಡಿದು ಹಿಂಸಾತ್ಮಕ ರೂಪಗಳನ್ನು ತಳೆಯು ವವರೆಗೆ ನಾಡಿನಾದ್ಯಂತ ವಿಭಿನ್ನ ಘಟ್ಟಗಳಲ್ಲಿ ಈ ಚಳವಳಿ ನಡೆದಿದೆ. ಚಂದ್ರಶೇಖರ ಪಾಟೀಲ, ಎಂ.ಎಂ.ಕಲಬುರ್ಗಿ, ಬಸವರಾಜ ಕಟ್ಟೀಮನಿ, ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಮೊದಲಾದ ಸಾಹಿತಿಗಳು, ಕಲಾವಿದರು, ಮಠಾಧೀಶರು ಉತ್ತರ ಕರ್ನಾಟಕದಲ್ಲಿ ಪ್ರತಿಕ್ರಿಯಿಸಲಾರಂಭಿಸಿದರು. ಅಂತೆಯೇ ಹಳೆಯ ಮೈಸೂರಿನ ಜಿಲ್ಲೆಗಳಿಂದ, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಚಳವಳಿ ಆರಂಭಗೊಂಡಿತ್ತು. ಇದರಲ್ಲಿ ಪಿ.ಲಂಕೇಶ್, ಜಿ.ಎಸ್. ಶಿವರುದ್ರಪ್ಪ, ಗೊರೂರು, ಸಿದ್ಧಯ್ಯ ಪುರಾಣಿಕ್, ಎಂ.ಚಿದಾನಂದಮೂರ್ತಿ, ಕೋಚೆ, ಮಳಗಿ, ತ.ರಾ.ಸು. ಸತ್ಯು, ತೇಜಸ್ವಿ ಮೊದಲಾದ ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ‘ಸಾಹಿತಿಗಳ, ಕಲಾವಿದರ ಬಳಗ’ ಹುಟ್ಟಿಕೊಂಡದ್ದು ಇದೇ ಸಂದರ್ಭ ದಲ್ಲಿಯೇ. ಚಳವಳಿಗಾರ ರಹಮಾನ್ ಖಾನ್, ಜಿ.ನಾರಾಯಣ ಕುಮಾರ್, ಕೆ.ಪ್ರಭಾಕರ ರೆಡ್ಡಿ ಮೊದಲಾದವರು ತೀವ್ರವಾಗಿ ಪ್ರತಿಕ್ರಿಯಿಸಿದರು. ಈ ಚಳವಳಿಗೆ ಕೇಂದ್ರ ಹಾಗೂ ಸ್ಥಳೀಯ ಕನ್ನಡ ಕ್ರಿಯಾ ಸಮಿತಿಗಳು, ಕನ್ನಡ ಸಂರಕ್ಷಣಾ ಸಮಿತಿ, ಕನ್ನಡ ಸಂಘರ್ಷ ಸಮಿತಿ, ಕನ್ನಡ ಪಕ್ಷ ಮೊದಲಾದ ಸಂಘಟನೆಗಳು ತಮ್ಮನ್ನು ತೊಡಗಿಸಿಕೊಂಡಿದ್ದವು. ಸರ್ಕಾರವು ಗೋಕಾಕ್ ಭಾಷಾ ಸೂತ್ರವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೆ ತರಲು ಹಿಂದೇಟು ಹಾಕಿದಾಗ ಚಳವಳಿ ವ್ಯಾಪಕವೂ, ಹಿಂಸಾತ್ಮಕವೂ ಆಯಿತು. ಖ್ಯಾತ ನಟ ಡಾ.ರಾಜ್‌ಕುಮಾರ್ ಅವರು ಜಾಥಾದ ಮುಂದಾಳತ್ವವನ್ನು ವಹಿಸಿದ ಮೇಲೆ ಅನೇಕ ಚಲನಚಿತ್ರ ನಟರು, ಚಳವಳಿಗಾರರು ಇನ್ನಷ್ಟು ಚುರುಕುತನವನ್ನು ಚಳವಳಿಗೆ ನೀಡಿದ್ದು ಗಮನಾರ್ಹ. ಮೆರೆವಣಿಗೆ, ಬಂದ್, ರಸ್ತೆ-ರೈಲು ತಡೆ, ಜೈಲು ತುಂಬುವ ಚಳವಳಿಗಳು, ಪೊಲೀಸರ ಗೋಲಿಬಾರ್ ದೃಶ್ಯಗಳು ಸಾಮಾನ್ಯವಾದವು. ಅರಸಪ್ಪ ಎಂಬ ಸಾಮಾನ್ಯ ಕಾರ್ಯಕರ್ತನು ಪೊಲೀಸರ ಗುಂಡಿಗೆ ಬಲಿಯಾದದ್ದು ಇದೆ. ಪರಿಸ್ಥಿತಿಗಳಿಗೆ ಮಣಿದ ಸರ್ಕಾರ ಸರ್ವಸಮ್ಮತ ಭಾಷಾಸೂತ್ರವನ್ನು ಪ್ರಕಟಿಸಿತು. ನಾಲ್ಕು ತಿಂಗಳ ಕಾಲ ನಡೆದ ಚಳವಳಿ ಅಂತ್ಯಗೊಂಡಿತು. ಆದರೆ ಕನ್ನಡೇತರರು, ಸಂಸ್ಕೃತಪರವಾದಿಗಳು, ಅಲ್ಪಸಂಖ್ಯಾತರು ಕೋರ್ಟಿನಲ್ಲಿ ರಿಟ್‌ಗಳನ್ನು ಹಾಕಿದ್ದರಿಂದ ವರದಿ ಜಾರಿಗೆ ಬರಲಿಲ್ಲ. 1984ರ ಜನವರಿ 24ರಂದು ಸರ್ಕಾರವು ರಿಟ್‌ಗಳನ್ನು ವಿಲೇವಾರಿ ಮಾಡಿ ಭಾಷಾಸೂತ್ರವನ್ನು ಜಾರಿಗೆ ತಂದಿತು. ಆದರೆ ವರದಿಯ ಸಂಪೂರ್ಣ ಅನುಷ್ಠಾನದ ಬಗ್ಗೆ ಇನ್ನೂ ಯಾವುದೇ ರೀತಿಯ ನಿರೀಕ್ಷಿತ ಫಲಿತಾಂಶ ಕಾಣದಿರುವುದು ಶೋಚನೀಯ.

ಕನ್ನಡ ದೇಶ ಮತ್ತು ಕರ್ನಾಟಕ ಪ್ರಗತಿರಂಗ

ಗೋಕಾಕ್ ಚಳವಳಿಯು ಅಂತ್ಯವಾಗುವ ವೇಳೆಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತವು ಕೊನೆಗೊಂಡಿತು(1983). ರೈತ, ದಲಿತ ಹಾಗೂ ಭಾಷಾ ಚಳವಳಿಗಳ ಆಶೋತ್ತರಗಳನ್ನು ಈಡೇರಿಸುವ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದದ್ದೇ ‘ಜನತಾ ಪಕ್ಷ’ದ ಸರ್ಕಾರ. ಆದರೆ ಬಹಳ ಬೇಗನೆ ಈ ಸರ್ಕಾರವು ಕನ್ನಡಿಗರ ಅಸಹನೆಗೆ ಗುರಿಯಾಯಿತು. ಈ ಸಂದರ್ಭದಲ್ಲಿ ಸ್ಥಳೀಯವಾದ ರಾಜ್ಯಪಕ್ಷವೊಂದರ ಅಗತ್ಯತೆ ಕಂಡುಬಂದಿತು. ಏಕೆಂದರೆ ರಾಷ್ಟ್ರೀಯ ಪಕ್ಷಗಳು ಸೈದ್ಧಾಂತಿಕವಾಗಿ ಮಾತನಾಡಿದರೂ ಬಡತನ, ನಿರುದ್ಯೋಗ, ಅಸಮಾನತೆ, ಭ್ರಷ್ಟಾಚಾರ, ಭಾಷಿಕ ತಾರತಮ್ಯಗಳನ್ನು ಹೆಚ್ಚು ಮಾಡಿದ್ದವು. ಜನತಾ ಸರ್ಕಾರವು ಕಾಂಗ್ರೆಸ್ಸಿಗಿಂತ ಭಿನ್ನವಾಗಿಯೇನು ಗುರುತಿಸಿಕೊಂಡಿರಲಿಲ್ಲ. ಇವೆರಡನ್ನು ಹೊರತುಪಡಿಸಿದ ರಾಜಕೀಯ ಪಕ್ಷವೊಂದರ ತುರ್ತು ಕನ್ನಡಿಗರಲ್ಲಿ ಕಾಣಿಸಿಕೊಂಡಿತು. ಇದರ ಪರಿಣಾಮವಾಗಿ ಹುಟ್ಟಿಕೊಂಡದ್ದೇ ‘ಕನ್ನಡ ದೇಶ’ ಹಾಗೂ ‘ಕರ್ನಾಟಕ ಪ್ರಗತಿರಂಗ’ ಪಕ್ಷಗಳು.

ವಾಟಾಳರ ಚಳವಳಿ ಪಕ್ಷವು ಪ್ರಾದೇಶಿಕವಾಗಿ ಗುರುತಿಸಿಕೊಂಡಿದ್ದರೂ ಅದು ರಾಜ್ಯವ್ಯಾಪ್ತಿ ಪಕ್ಷವಾಗಿ ವಿಸ್ತೃತಗೊಂಡಿರಲಿಲ್ಲ. ಹೀಗಾಗಿ 1987ರಲ್ಲಿ ‘ಕನ್ನಡ ದೇಶ’ ಪಕ್ಷವು ಕವಿ ಕುವೆಂಪು ಅವರ ಪ್ರೇರಣೆಯಿಂದ ಅಸ್ತಿತ್ವಕ್ಕೆ ಬಂದಿತು. ಈ ಪಕ್ಷದ ನೇತೃತ್ವವನ್ನು ವಹಿಸಿದ್ದವರು ‘ರೈತ ಸಂಘ’ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು. ‘ಕನ್ನಡ ದೇಶ’ ಪಕ್ಷವು ಕನ್ನಡಿಗರ ಆಶೋತ್ತರಗಳ ಈಡೇರಿಕೆಗೆ ದುಡಿಯುವ ಮುನ್ನವೆ ಸೋಲನ್ನು ಕಂಡಿತು.

ಪ್ರಗತಿಪರವಾದ ಮನಸ್ಸುಳ್ಳ ವ್ಯಕ್ತಿಗಳು ಅದುವರೆಗಿನ ಎಲ್ಲ ಕೊರತೆಗಳನ್ನು ಪರಿಶೀಲಿಸಿ 1988ರಲ್ಲಿ ‘ಕರ್ನಾಟಕ ಪ್ರಗತಿರಂಗ’ ಎಂಬ ರಾಜಕೀಯ ಪಕ್ಷವನ್ನು ನಿರ್ಮಿಸಿದರು. ಈ ‘ರಂಗ’ಕ್ಕೆ ‘ಲಂಕೇಶ್ ಪತ್ರಿಕೆ’ಯ ಮೂಲಕ ರೂಪಿಸಿದ ಹಿನ್ನೆಲೆ, ಸಿದ್ಧಾಂತಗಳಿದ್ದವು. ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗೆ ಪರ್ಯಾಯವಾಗಿ ಹುಟ್ಟಿ ಕೊಂಡದ್ದೇ ಈ ‘ಕರ್ನಾಟಕ ಪ್ರಗತಿ ರಂಗ’. ಇದರ ನೇತೃತ್ವ ಪಿ.ಲಂಕೇಶ್ ಅವರದು. ಕನ್ನಡ, ಕನ್ನಡಿಗ, ಕರ್ನಾಟಕಗಳ ಬಗೆಗೆ ರಚನೆಗೊಂಡ ಈ ಪಕ್ಷಕ್ಕೆ ಕನ್ನಡಿಗರಿಂದ ನಿರೀಕ್ಷಿಸಿದ ಬೆಂಬಲ, ಪ್ರೋದೊರೆಯಲಿಲ್ಲ. ಬದಲಾಗಿ ಎಂದಿನ ನಿರ್ಲಕ್ಷ್ಯ, ಅಸಡ್ಡೆತನಗಳಿಂದ ಈ ಪಕ್ಷವು ಅಧಿಕಾರಕ್ಕೆ ಬರದಂತಾಯಿತು. ಕನ್ನಡ ಚಳವಳಿಯ ಚರಿತ್ರೆಯಲ್ಲಿ ಈ ರಾಜಕೀಯ ಪಕ್ಷಗಳಿಗೆ ದೊರೆಯದೆ ಹೋದ ಬೆಂಬಲಗಳು ಕನ್ನಡಿಗರಿಂದ ಮತ್ತೆ ರಾಷ್ಟ್ರೀಯ ಪಕ್ಷಗಳಿಗೆ ದೊರೆತದ್ದು ವಿರೋಧಾಭಾಸವೇ ಸರಿ.

ಗೋಕಾಕ್ ಚಳವಳಿಯ ನಂತರ ರಾಜಕೀಯವಾದ ಬದಲಾವಣೆಗಳು ‘ಕನ್ನಡ ಚಳವಳಿ’ಯನ್ನು ‘ಚಳವಳಿಗಳ’ ಹಂತಕ್ಕೆ ಕೊಂಡೊಯ್ದಿದ್ದವು. ಚಳವಳಿಯ ಸ್ವರೂಪ ಬಹುಮುಖಿ ನೆಲೆಗಳನ್ನು ಕಂಡುಕೊಂಡಿತು. ಇದಕ್ಕೆ ವಿಭಿನ್ನ ರೀತಿಯ ಚಳವಳಿಗಾರರ ಸೇರ್ಪಡೆ, ಸಂಘಟನೆಗಳ ಹುಟ್ಟು, ಸ್ವಾರ್ಥ, ಪ್ರಾತಿನಿಧ್ಯ, ಆಮಿಷ, ಅಗ್ಗದ ಪ್ರಚಾರ ಪ್ರಿಯತೆ, ಕನ್ನಡದ ಹೆಸರಿನಲ್ಲಿ ಲೂಟಿ, ಹಿಂಸೆಗಳು, ಜಾತಿ ಮುಖಂಡರ, ರಾಜಕಾರಣಿಗಳ ಭ್ರಷ್ಟಾಚಾರಗಳು ಎಲ್ಲವೂ ಕಾರಣವಾಗುತ್ತವೆ. 1980 ಹಾಗೂ 1990ರ ದಶಕದಲ್ಲಾದ ಈ ವೈಪರೀತ್ಯಗಳು ಕನ್ನಡ ಚಳವಳಿಯನ್ನು ಭಿನ್ನ ರೀತಿಯಲ್ಲಿ ಗ್ರಹಿಸಲು ಎಡೆಮಾಡಿಕೊಟ್ಟವು. ಆದರೆ ಇವೆಲ್ಲವುಗಳನ್ನು ಹೊರತುಪಡಿಸಿ ಒಂದಷ್ಟು ನಾಡು, ನುಡಿ, ಸಂಸ್ಕೃತಿ ನೆಲೆಗಳಲ್ಲಿ ಕಾರ್ಯ ನಿರ್ವಹಿಸಿದ ನಿಸ್ವಾರ್ಥ ಕನ್ನಡ ಚಳವಳಿಗಾರರನ್ನು, ಸಂಘಟನೆಗಳನ್ನು ಪ್ರಸ್ತಾಪಿ ಸದಿರಲು ಸಾಧ್ಯವಿಲ್ಲ.

ಕನ್ನಡ ಶಕ್ತಿ ಕೇಂದ್ರ ಮತ್ತು ಇತರೆ ಸಂಘಟನೆಗಳು

ಚಳವಳಿಗಳಿಗೆ ಸಂಬಂಧಿಸಿದ ಮಾರ್ಗದರ್ಶನಗಳನ್ನು ನೀಡಿ ನಡೆಸಿಕೊಂಡು ಹೋಗಲು ‘ಸಾಹಿತಿಗಳ, ಕಲಾವಿದರ ಬಳಗ’ವು ಹುಟ್ಟುಹಾಕಿದ ಸಂಸ್ಥೆಯೇ ‘ಕನ್ನಡ ಶಕ್ತಿ ಕೇಂದ್ರ’. 1988ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕೇಂದ್ರವು ಡಾ.ಎಂ.ಚಿದಾನಂದಮೂರ್ತಿಯವರ ನೇತೃತ್ವದಲ್ಲಿ ಮುನ್ನಡೆದಿದೆ. ಇದು ಗೋಕಾಕ್ ಚಳವಳಿಯ ಅನಂತರ ಅದೇ ಕನ್ನಡದ ಕಾವನ್ನು ಇತರೆ ಸಮಸ್ಯೆಗಳ ಕಡೆಗೂ ಕೇಂದ್ರೀಕರಿಸುವಂತೆ ಮಾಡಿತು.

ಕನ್ನಡ ಶಕ್ತಿ ಕೇಂದ್ರವು ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಡಾ. ಸರೋಜಿನಿ ಮಹಿಷಿ ವರದಿಯ ಅನುಷ್ಠಾನಕ್ಕಾಗಿ ಒತ್ತಾಯಿಸಿತು. ಅಲ್ಲದೆ ಈ ಹೊತ್ತಿನ ಹುಬ್ಬಳ್ಳಿ, ನೈರುತ್ಯ ರೈಲ್ವೆ ವಲಯದ ಕೇಂದ್ರವನ್ನು ಸ್ಥಾಪಿಸುವವರೆಗೂ ಅನೇಕ ರೀತಿಯಲ್ಲಿ ಕನ್ನಡ, ಕನ್ನಡಿಗರ, ಕರ್ನಾಟಕಗಳಿಗೆ ಸ್ಪಂದಿಸುತ್ತಿದೆ. ಅವುಗಳಲ್ಲಿ ರಾಜ್ಯ ಲೋಕಸೇವಾ ಆಯೋಗದಲ್ಲಿ ಕನ್ನಡಕ್ಕೆ ಆದ್ಯತೆ, ದೂರದರ್ಶನದ ಕನ್ನಡೀಕರಣ, ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ, ಉರ್ದು ವಾರ್ತಾಪ್ರಸಾರ ತಡೆ, ಕಾವೇರಿ ಜಲವಿವಾದಕ್ಕೆ ಚಳವಳಿ, ಕನ್ನಡ ಅಭಿವೃದ್ದಿ ಪ್ರಾಧಿಕಾರ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರಗಳ ಸ್ಥಾಪನೆ, ಬೆಳಗಾವಿಯಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆ ಇತ್ಯಾದಿ ಕನ್ನಡ ಪರವಾದ ಸಾಧನೆಗಳನ್ನು ಉಲ್ಲೇಖಿಸಬಹುದು. ಕೆ.ಜಿ.ಎಫ್.ನಲ್ಲಿ ತಮಿಳರ ದೌರ್ಜನ್ಯ, ಬೀದರ್‌ನಲ್ಲಿ ಸಿಖ್ಖರಿಂದ ಆಗುತ್ತಿರುವ ಅತ್ಯಾಚಾರಗಳು, ಹಂಪಿ-ಗೋಕರ್ಣಗಳಲ್ಲಿನ ಹಿಪ್ಪಿಗಳ ಸ್ವೇಚ್ಛಾಚಾರ, ಎಂ.ಇ.ಎಸ್ (ಬೆಳಗಾವಿಯಲ್ಲಿ) ಪಕ್ಷದವರ ಕನ್ನಡ ವಿರೋಧಿ ಕಾರ್ಯಕ್ರಮಗಳ ವಿರುದ್ಧವೂ ಕನ್ನಡ ಶಕ್ತಿ ಕೇಂದ್ರ ಸ್ಪಂದಿಸಿದೆ. ವಲಸಿಗರ ತಡೆ, ಅಂಚೆ, ತಂತಿ, ರೈಲ್ವೆ, ಆಡಿಟರ್ ಕಛೇರಿಗಳಲ್ಲಿ ಕನ್ನಡೇತರರ ನೇಮಕಗಳ ಬಗೆಗೂ ಕನ್ನಡಪರವಾದ ಸಂಘಟನೆಗಳು ಪ್ರತಿಕ್ರಿಯಿಸುತ್ತಿರುವುದನ್ನು ಇಂದಿಗೂ ಗಮನಿಸಬಹುದು. ಈ ನಿಟ್ಟಿನಲ್ಲಿ ಶಕ್ತಿ ಕೇಂದ್ರದ ಜೊತೆಗೆ ಕನ್ನಡ ಸಂಘರ್ಷ ಸಮಿತಿ, ಕನ್ನಡ ಸೇನೆ, ಕನ್ನಡ ರಕ್ಷಣಾ ವೇದಿಕೆ, ಕಾವೇರಿ ಕನ್ನಡ ಬಳಗ, ಕಟ್ಟೆ ಬಳಗ, ಕನ್ನಡ ರಣಧೀರರ ಪಡೆ, ಪುಲಿಕೇಶಿ ಕನ್ನಡ ಸಂಘ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ಸಂರಕ್ಷಣಾ ವೇದಿಕೆ ಮೊದಲಾದ ಸಂಘಟನೆಗಳು ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಸಾರಿಗೆ, ಹೋಟೆಲು, ಥಿಯೇಟರು, ಆಟೋರಿಕ್ಷಾ, ಬ್ಯಾಂಕುಗಳು, ಉದ್ಯಮಗಳು ಮೊದಲಾದ ಸರ್ಕಾರಿ,ೊಅರೆ-ಸರ್ಕಾರಿ, ಖಾಸಗಿ ಸಂಘ-ಸಂಸ್ಥೆಗಳಲ್ಲಿನ ಕನ್ನಡ ಸಂಘಟನೆಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಂತೆಯೇ ಕರ್ನಾಟಕ ಕ್ಯಾಥೊಲಿಕ್ ಕ್ರೈಸ್ತರ ಕನ್ನಡ ಸಂಘಗಳನ್ನು ಸಹ.

ಕನ್ನಡ ಚಳವಳಿಗಳು ‘ಕನ್ನಡ ಹೋರಾಟ’ಗಳಾಗಿದ್ದು, 1990ರ ದಶಕದಿಂದೀಚೆಗೆ, ಕರ್ನಾಟಕದಲ್ಲೂ ರಾಜಕಾರಣಿಗಳ ಆಸೆ ಆಮಿಷಗಳಿಂದಾಗಿ ಕೋಮುವಾದಿ ಬೀಜಗಳು ಬಿತ್ತನೆ ಆದವು. ಭ್ರಷ್ಟಾಚಾರ ಮನೋವೃತ್ತಿಯ ರಾಜಕಾರಣಿಗಳು ಜನಸಾಮಾನ್ಯರನ್ನು ಶೋಷಿಸಲು ‘ಕನ್ನಡ ಚಳವಳಿ’ಗಳಿಗೆ ಹಿಂಸಾತ್ಮಕ ರೂಪವನ್ನು ಕೊಟ್ಟರು. ಕನ್ನಡಿಗರ ಕ್ಷಣಿಕವಾದ ಭಾಷಿಕ ಭಾವೋದ್ವೇಗಗಳು ಜಾತಿ, ಧರ್ಮ, ಕೋಮು, ಜನಾಂಗ, ಪ್ರದೇಶ, ನೀರು ಮೊದಲಾದ ಸೂಕ್ಷ್ಮ ಸಂವೇದನೆಗಳಿಂದ ಬಂಡವಾಳವಾಗುವಂತೆ ಆಯಿತು. ಇವುಗಳನ್ನು ಬಳಸಿಕೊಂಡಿದ್ದರಿಂದಲೇ ಉರ್ದು ಗಲಾಟೆ, ಕಾವೇರಿ ಜಲವಿವಾದಗಳು ಹಿಂಸಾತ್ಮಕವಾದದ್ದು. ‘ಕನ್ನಡ’ದ ಹೆಸರಿನಲ್ಲಿ ಕಿಡಿಗೇಡಿಗಳು ತಮಿಳು, ಮುಸ್ಲಿಮ್ ಸಹೋದರರ ಜೊತೆಗೆ ಕನ್ನಡಿಗರ ಪ್ರಾಣಗಳನ್ನೂ ತೆರುವಂತೆ ಮಾಡಿದರು. ಇಂತ ಸನ್ನಿವೇಶಗಳಲ್ಲಿಯೇ ಕನ್ನಡ ಚಳವಳಿಗಳು ‘ಕನ್ನಡ ಹೋರಾಟ’ಗಳು ಎಂಬ ಭಿತ್ತಿಯನ್ನು ಅನಾವರಣಗೊಳಿಸಿದ್ದು.

ಕೇಂದ್ರ ಸರ್ಕಾರದ ಸಾಮ್ರಾಜ್ಯಶಾಹಿ ಧೋರಣೆಗಳಿಂದಾಗಿ ಕರ್ನಾಟಕದಂಥ ರಾಜ್ಯಗಳು ತಮ್ಮ ಸಂಪನ್ಮೂಲಗಳನ್ನು ಬರಿದು ಮಾಡಿಕೊಳ್ಳುತ್ತಿವೆ. ಜಪಾನ್ ಕೈಗಾರಿಕಾ ವಸಾಹತು, ಸಿಂಗಪೂರ್ ಟೌನ್‌ಷಿಪ್, ಗ್ಯಾಟ್ ಒಪ್ಪಂದಗಳು, ಗಂಗಡಿಕಲ್ಲು ಅದಿರು ಯೋಜನೆ ತುಂಗಾ ಮೂಲ ನಾಶ, ಪರಿಸರ ಮಾಲಿನ್ಯ ಮೊದಲಾದ ರೀತಿಗಳಲ್ಲಿ ಕನ್ನಡಿಗರು ಶೋಷಿತರಾಗುತ್ತಿದ್ದುದನ್ನು ಕನ್ನಡ ಚಳವಳಿಗಾರರು ಪ್ರತಿಭಟಿಸಿದ್ದು ಗಮನಾರ್ಹ. ಈ ನಿಟ್ಟಿನಲ್ಲಿ ಕರ್ನಾಟಕ ವಿಮೋಚನಾರಂಗ, ಪ್ರಜಾತಾಂತ್ರಿಕ ಜನರ ವೇದಿಕೆಗಳಂಥ ಸಂಘಟನೆಗಳ ಹಾಗೂ ಆಯಕ್ಟಿವಿಸ್ಟ್‌ಗಳ ಪಾತ್ರ ದೊಡ್ಡದು.

ಒಟ್ಟಾರೆ ಕನ್ನಡ ಚಳವಳಿಗಳ ಕಳೆದ ಎರಡು ದಶಕಗಳ ಚರಿತ್ರೆಯನ್ನು ಪರಿಶೀಲಿಸಿದರೆ ರಾಜಕಾರಣದ ಆಮಿಷ, ಪ್ರಚಾರಪ್ರಿಯತೆ, ಅಸಂಖ್ಯ ಪೋಷಿತ ಹಾಗೂ ಘೋಷಿತ ನಾಯಕ, ಸಂಘಟನೆಗಳು ಹಾದುಹೋಗುತ್ತವೆ. ಕನ್ನಡದ ರಾಜಕಾರಣಿಗಳು ಕನ್ನಡೇತರ ರಾಜಕೀಯ ಪಕ್ಷಗಳೊಂದಿಗೆ (ಡಿ.ಎಂ.ಕೆ, ಅಣ್ಣಾ ಡಿ.ಎಂ.ಕೆ ಇತ್ಯಾದಿ) ಹೊಂದಾಣಿಕೆ ಮಾಡಿಕೊಂದು ಸ್ಪರ್ಧಿಸುತ್ತಿದ್ದಾರೆ. ಇದು ಕನ್ನಡ, ಕನ್ನಡಿಗ, ಕರ್ನಾಟಕ ಪರವಾದ ರಾಜಕೀಯ ಪಕ್ಷವೊಂದನ್ನು ರಚಿಸಿ ಅಧಿಕಾರಕ್ಕೆ ತರಲಾಗದ ಕನ್ನಡಿಗರ ಅಸಹಾಯಕತೆಯ ಸ್ಥಿತಿಯನ್ನು ಸಂಕೇತಿಸುತ್ತದೆ. ಸಂಕುಚಿತ, ಭಾಷಿಕ ಭಾವೋದ್ವೇಗಗಳಿಂದ, ಅತಿರೇಕದ ಭಾಷಾಭಿಮಾನದಿಂದ ಕನ್ನಡ ಚಳವಳಿ, ಚಿಂತನೆಗಳು ಸೋತಿವೆ. ಆದ್ದರಿಂದಲೇ ಈ ಹೊತ್ತಿಗೂ ಶಿಕ್ಷಣ ರಂಗದಲ್ಲಿ ಕನ್ನಡ ಮಾಧ್ಯಮವಾಗಲಿ, ಸರೋಜಿನಿ ಮಹಿಷಿ ವರದಿ ಅನುಷ್ಠಾನವಾಗಲಿ, ಆಡಳಿತ ಭಾಷೆ ಕನ್ನಡವಾಗಲಿ ಆಗದೇ ಇರುವುದು. ಇವುಗಳ ಜಾರಿಗಾಗಿ ಸರ್ಕಾರಕ್ಕೆ ಬೇಕಿರುವುದು ಸಮಚಿತ್ತದ ಕನ್ನಡದ ಪ್ರೀತಿ, ಮುಂದಾಲೋಚಿತ ಕಾರ್ಯಕ್ರಮಗಳು. ಆಗ ಮಾತ್ರ ಭಾವಾವೇಶದ ಕರ್ನಾಟಕಕ್ಕಿಂತ ಸ್ವಾಭಿಮಾನ ಪ್ರಗತಿದಾಯಕ ಕರ್ನಾಟಕವನ್ನು ನೋಡಲು ಸಾಧ್ಯ.

ಪರಾಮರ್ಶನ ಗ್ರಂಥಗಳು

1. ಗೋವಿಂದರಾಜು ಸಿ.ಆರ್., 1999. ಕನ್ನಡ ಚಳವಳಿಗಳು, ಹಂಪಿ:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

2. ಗೋವಿಂದರಾಜು ಸಿ.ಆರ್., 2004. ಮ.ರಾಮಮೂರ್ತಿ, ಹಂಪಿ:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.