ಕರ್ನಾಟಕದ ದಲಿತ ಸಂಘರ್ಷ ಸಮಿತಿಗೆ ಮೂರು ದಶಕಗಳ ಇತಿಹಾಸವಿದೆ. 1970ರ ದಶಕದ ಮಧ್ಯದಲ್ಲಿ ಹುಟ್ಟಿದ ಡಿ.ಎಸ್.ಎಸ್.ಗೆ ತಕ್ಷಣದ ಕಾರಣಗಳಿಗಿಂತಲೂ ಹೆಚ್ಚಾಗಿ ನಿರಂತರವಾದ ಚಾರಿತ್ರಿಕ ಪ್ರಕ್ರಿಯೆಯಲ್ಲಿ ಕ್ರಿಯಾಶೀಲವಾಗಿರುವ ರಾಜಕೀಯ ಮತ್ತು ಆರ್ಥಿಕ ವೈರುಧ್ಯಗಳೇ ಪ್ರಧಾನ ಕಾರಣಗಳು. ಯಾವುದೋ ಒಂದು ಘಟನೆಯಿಂದಲೋ, ಯಾರೋ ಒಬ್ಬ ವ್ಯಕ್ತಿಯಿಂದಲೋ ಡಿ.ಎಸ್.ಎಸ್. ಹುಟ್ಟಿತು ಎಂದು ಪರಿಭಾವಿಸುವುದು ಒಟ್ಟಾರೆ ಸಾಮಾಜಿಕ ಪ್ರಕ್ರಿಯೆಯನ್ನು ಸರಳೀಕರಿಸಿದಂತಾಗುತ್ತದೆ. ಹಾಗಾಗಿ ಡಿ.ಎಸ್.ಎಸ್.ನ ಮೂಲಬೀಜ ಹುಸಿ ಪ್ರಜಾಪ್ರಭುತ್ವ, ಸರ್ಕಾರ ಸೌಲಭ್ಯಗಳ ಸೋಗಲಾಡಿತನ, ಭೂಮಾಲಿಕ ವರ್ಗದ ನಿರಂತರ ಕೌರ್ಯ ಮತ್ತು ಶಿಕ್ಷಣ ಪಡೆದ ಸ್ವಾಭಿಮಾನಿ ಪ್ರಜಾಸತ್ತಾತ್ಮಕ ದಲಿತರ ಕಾಳಜಿ ಇವುಗಳಲ್ಲಿ ಅಡಗಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಇದುವರೆಗಿನ ದಲಿತ ಚಳವಳಿಯ ಇತಿಹಾಸವನ್ನು ಗಮನಿಸಿದರೆ ಪ್ರಧಾನವಾಗಿ ಮೂರು ಘಟ್ಟಗಳನ್ನು ಗುರುತಿಸಬಹುದು.

1. ಆರಂಭಿಕ ಹಂತದ ಉತ್ಸಾಹದ ಕಾಲ

2. ವಿಘಟನೆಯ ಕಾಲ

3. ಅಧಃಪತನದ ಕಾಲ

1. ಆರಂಭಿಕ ಹಂತದ ಉತ್ಸಾಹದ ಕಾಲ

ಈ ಅವಧಿಯನ್ನು ಡಿ.ಎಸ್.ಎಸ್. ಹುಟ್ಟಿದಾಗಿನಿಂದ ಅದು ಚುನಾವಣೆಗೆ ಇಳಿದ ಕಾಲದ(1984)ವರೆಗೆ ಗುರುತಿಸಿಕೊಳ್ಳಬಹುದು. ಈ ಅವಧಿಯಲ್ಲಿ ಡಿ.ಎಸ್.ಎಸ್. ರಾಜ್ಯದಾದ್ಯಂತ ಗರಿಗೆದರಿ ಬೆಳೆದ ಪ್ರಚ್ಛನ್ನ ಚೈತನ್ಯದ ಕಾಲ. ರಾಜ್ಯದ ವಿವಿಧ ಭಾಗಗಳಲ್ಲಿ, ಶಿಕ್ಷಣ ಪಡೆದ ಮತ್ತು ನೌಕರಿಯಲ್ಲಿದ್ದ ಹಲವಾರು ದಲಿತ ಜನರು ಇದರ ಮುಂಚೂಣಿಯಲ್ಲಿದ್ದರು. ರಾಜ್ಯದ ವಿವಿಧ ಭಾಗಗಳಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೇಜು ಹಾಸ್ಟೆಲಿನ ವಿದ್ಯಾರ್ಥಿ ಸಮೂಹವೇ ಡಿ.ಎಸ್.ಎಸ್.ಗೆ ಪ್ರಧಾನವಾದ ಭೌತಿಕ ಶಕ್ತಿಯಾಗಿತ್ತು. ಉಳಿದಂತೆ ಡಿ.ಎಸ್.ಎಸ್.ರೂಪಿಸುತ್ತಿದ್ದ ಕಾರ್ಯಕ್ರಮಗಳಿಗೆ ಅನುಗುಣವಾಗಿ ಆಯಾ ಭಾಗದಲ್ಲಿ ನಗರವಾಸಿ ಇಲ್ಲವೆ ಗ್ರಾಮಾಂತರ ದಲಿತರು ಭೌತಿಕ ಶಕ್ತಿಗಳಾಗಿದ್ದರು. ಮುಂಚೂಣಿಯಲ್ಲಿದ್ದ ನಾಯಕರು ಬಹುತೇಕ ನೌಕರಿಯಲ್ಲಿದ್ದವರು, ಹಳ್ಳಿಗಳಲ್ಲಿ ಹುಟ್ಟಿದ್ದರೂ ಪಟ್ಟಣ ಅಥವಾ ನಗರಗಳಲ್ಲಿ ವಾಸಿಸುತ್ತಿದ್ದರು. ಹಾಗಾಗಿ ಅವರಿಗೆ ಹಳ್ಳಿಗಳ ದಾರುಣ ಸ್ಥಿತಿಗತಿಗಿಂತಲೂ ಹೆಚ್ಚಾಗಿ ತಮ್ಮ ವೈಯಕ್ತಿಕ ಪರಿಸರದ ಸಮಸ್ಯೆಗಳು ಮುಖ್ಯವಾಗತೊಡಗಿದವು. ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಮುಳ್ಳೂರು ನಾಗರಾಜ್ ಮುಂತಾದವರು ಸಾಹಿತ್ಯದಲ್ಲಿ ಕೃಷಿ ಆರಂಭಿಸಿದ್ದರು. ಕನ್ನಡ ಸಾಹಿತ್ಯದಲ್ಲಿ ಆಗ ನವ್ಯ ಸಾಹಿತ್ಯದ ವಿರುದ್ಧ ಅಭಿಪ್ರಾಯ ರೂಪಿತವಾಗುತ್ತಿತ್ತು. ಅದು ಬ್ರಾಹ್ಮಣರ ವಿರುದ್ಧ ಶೂದ್ರ ಸಾಹಿತಿಗಳು ಒಂದಾಗುತ್ತಿದ್ದ ಕಾಲ. ಅವರೆಲ್ಲರೂ ಬ್ರಾಹ್ಮಣರನ್ನು ಶತ್ರು ಸ್ಥಾನದಲ್ಲಿರಿಸಿ ವಿಚಾರ ವಿಮರ್ಶೆ ನಡೆಸುತ್ತಿದ್ದರು. ಇದರ ದಟ್ಟ ಪ್ರಭಾವ ಡಿ.ಎಸ್.ಎಸ್.ನ ಮುಂಚೂಣಿ ನಾಯಕರ ಮೇಲಾಯಿತು. ಈ ವೈಚಾರಿಕತೆಯನ್ನು ದಲಿತರು ಮೈಗೂಡಿಸಿಕೊಂಡರು. ಜೊತೆಗೆ ಇದೇ ಶೂದ್ರರು ಶಿಕ್ಷಣ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಬ್ರಾಹ್ಮಣರ ವಿರುದ್ಧ ತೀವ್ರ ಸ್ಪರ್ಧೆ ನಡೆಸುತ್ತಿದ್ದರು. ಈ ಸ್ಪರ್ಧೆಯು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯದ ಮೇಲೆ ಪರಿಣಾಮವನ್ನು ಬೀರಿತು. ಫಲವಾಗಿ ಬ್ರಾಹ್ಮಣರ ವಿರುದ್ಧ ಶೂದ್ರ ವಲಯದ ಅನೇಕರು ಕೆಂಡ ಕಾರ ತೊಡಗಿದರು. ಬ್ರಾಹ್ಮಣರಿಗಿಂತ ತಾವು ಅವಕಾಶ ವಂಚಿತರು ಎಂಬ ಅಭಿಪ್ರಾಯವನ್ನು ಸಾಮಾಜಿಕವಾಗಿ ಬಲವಾಗಿ ರೂಪಿಸುವ ವಿವಿಧ ಪ್ರಯತ್ನಗಳನ್ನು ಇವರು ಮಾಡಿದರು ಮತ್ತು ಈ ಚೌಕಟ್ಟಿಗೆ ದಲಿತರನ್ನೂ ಎಳೆದುಕೊಂಡರು. ಬ್ರಾಹ್ಮಣೇತರ ಭೂಮಾಲಿಕ ವರ್ಗದವರು ಮಾತನಾಡುತ್ತಿದ್ದ ರೀತಿಯಲ್ಲೇ ದಲಿತರೂ ಲೆಕ್ಕಾಚಾರ ಹಾಕತೊಡಗಿದರು. ಫಲವಾಗಿ ಬ್ರಾಹ್ಮಣ ವಿರೋಧಿ ವೈಚಾರಿಕತೆಯೊಂದು ದಲಿತರಿಗೆ ಅನಾಯಾಸವಾಗಿ ಬಂದಿತು. ಮೂಲಭೂತವಾಗಿ ಇದು ಮುಂದುವರಿದ ಬ್ರಾಹ್ಮಣರು ಮತ್ತು ಜಮೀನ್ದಾರರ ನಡುವಿನ ಸಂಘರ್ಷದಲ್ಲಿ ಹುಟ್ಟಿದ್ದು. ದುರಂತವೆಂದರೆ ದಲಿತರು ಇದನ್ನು ತಮ್ಮದೆಂದೇ ಭಾವಿಸಿದರು. ಭೂಮಾಲೀಕ ವರ್ಗದವರಿಗೆ ಇದು ಒಂದು ವರವಾಯಿತು. ಅವರು ಇದನ್ನು ಸದೃಢವಾಗಿ ಮಂಡಿಸಲಾರಂಭಿಸಿದರು. ಹಾಗಾಗಿ ಅಂದಿನಿಂದ ಇಂದಿನವರೆಗೆ ಡಿ.ಎಸ್.ಎಸ್.ನ ಸೈ್ಧಾಂತಿಕ ತಿಳಿವಳಿಕೆಯ ಸ್ವರೂಪ ಬ್ರಾಹ್ಮಣ ವಿರೋಧಿ ನಿಲುವಿನದಾಗಿದೆ.

ಈ ಅವಧಿಯಲ್ಲಿ ಡಿ.ಎಸ್.ಎಸ್. ರಾಜ್ಯದಾದ್ಯಂತ ವಿಸ್ತರಿಸಿಕೊಂಡು ಬೆಳೆಯಿತು. ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ, ಹೋಬಳಿ ಸಮಿತಿಗಳು, ಗ್ರಾಮ ಸಮಿತಿಗಳು ಅಸ್ತಿತ್ವಕ್ಕೆ ಬಂದವು. ನಿಯತವಾಗಿ ಸಭೆಗಳು ನಡೆಯುತ್ತಿದ್ದವು. ರಾಜ್ಯದಲ್ಲಿ ದಲಿತರ ಮೇಲೆ ಅಕ್ರಮ, ಅನ್ಯಾಯ, ಹಲ್ಲೆಗಳು ಎಲ್ಲೆ ನಡೆದರೂ ತಕ್ಷಣ ಡಿ.ಎಸ್.ಎಸ್. ಪ್ರತಿಭಟಿಸುತ್ತಿತ್ತು. ಇದರಿಂದಾಗಿ ದಲಿತರಿಗೆ ಒಂದು ಬಗೆಯ ಆತ್ಮವಿಶ್ವಾಸವನ್ನು ತುಂಬಿತು. ಸ್ವಾಭಿಮಾನವನ್ನು ಬೆಳೆಸಿತು. ಸಂಘಟನೆ ಮತ್ತು ಹೋರಾಟದಿಂದ ದಲಿತರ ವಿಮೋಚನೆ ಸಾಧ್ಯ ಎಂಬ ಸಾಮಾನ್ಯ ತಿಳಿವಳಿಕೆಯನ್ನು ನೀಡಿತು.

ಅದುವರೆಗೆ ದಲಿತರಿಗೆ ಅಪರಿಚಿತರಾಗಿದ್ದ ಅಂಬೇಡ್ಕರರನ್ನು ಪರಿಚಯಿಸಿತು. ಅಂಬೇಡ್ಕರರ ಜನ್ಮದಿನಾಚರಣೆ ಮತ್ತು ಸ್ಮರಣ ದಿನಗಳನ್ನು ಆಚರಿಸಲಾಯಿತು. ಇದರಿಂದಾಗಿ ಬುದ್ದಿಜೀವಿ ದಲಿತರು ಶೈಕ್ಷಣಿಕವಾಗಿ ಸ್ಫೂರ್ತಿ ಪಡೆದರು. ಉಳಿದವರು ಅಂಬೇಡ್ಕರರ ಬಗ್ಗೆ ವ್ಯಕ್ತಿಗತ ಅಭಿಮಾನವನ್ನು ಬೆಳೆಸಿಕೊಂಡರು. ಅಂಬೇಡ್ಕರರ ಜೀವನ ಸಾಧನೆಗಳನ್ನು ದಲಿತರಿಗೆ ಸೀಮಿತ ಮಾಡಿ ಅರ್ಥೈಸಿಕೊಳ್ಳಲಾಯಿತು. ಜೊತೆಗೆ ಡಿ.ಎಸ್. ಎಸ್.ನ ಹಿತಾಸಕ್ತಿ ಕೇವಲ ದಲಿತರ ಪರವಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಆಳ್ವಿಕೆ ಮುಂದುವರಿದಿತ್ತು. ಅದರ ವಿರುದ್ಧ ಜನಾಭಿಪ್ರಾಯ ಸಹಜವಾಗಿತ್ತು. ಅದೇ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರದ ಆಳ್ವಿಕೆ ಇತ್ತು. ಜನಾಭಿಪ್ರಾಯ ಇದರ ವಿರುದ್ಧವೂ ಇತ್ತು. ಎಡವಾದಿಗಳು, ಪ್ರಗತಿಪರರು, ಕಾಂಗ್ರೆಸ್ಸೇತರ ಸರ್ಕಾರ ಆಡಳಿತಕ್ಕೆ ಬರಲಿ ಎಂಬ ಭಾವನೆಯನ್ನು ಹೊಂದಿದ್ದರು. ಕಾಂಗ್ರೇಸ್ಸೇತರ ಪಕ್ಷಗಳನ್ನು ಬೆಂಬಲಿಸುವುದೇ ಪ್ರಗತಿಪರ ರಾಜಕೀಯ ಕಾಳಜಿ ಎಂಬ ಧೋರಣೆ ಉಂಟಾಗಿತ್ತು. ಡಿ.ಎಸ್.ಎಸ್. ತಾನು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಸಂಸದೀಯ ಚುನಾವಣಾ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿತ್ತು ಮತ್ತು ಡಿ.ಎಸ್.ಎಸ್. ಅನ್ನು ಒಂದು ರಾಜಕೀಯೇತರ ಸಂಘಟನೆಯನ್ನಾಗಿ ಬೆಳೆಸುವ ಗುರಿಯನ್ನು ಹೊಂದಿತ್ತು.

1984ರ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ರಾಜಕೀಯ ಪಕ್ಷವಾದ ಜನತಾ ಪಕ್ಷವು ಚುನಾವಣೆಗೆ ಸ್ಪರ್ಧಿಸಿತು. ಈ ಪಕ್ಷಕ್ಕೆ ತಾನು ಗೆಲ್ಲಲು ದಲಿತರ ಓಟುಗಳ ಮೇಲೆ ಕಣ್ಣು ಬಿತ್ತು. ಅದುವರೆಗೆ ಚುನಾವಣೆಗಳನ್ನೇ ಬಹಿಷ್ಕರಿಸುತ್ತಿದ್ದ ಡಿ.ಎಸ್.ಎಸ್. ಅನ್ನು ಮನವೊಲಿಸಿಕೊಳ್ಳುವುದು ಅನಿವಾರ್ಯವಾಯಿತು. ಅದಕ್ಕಾಗಿ ನಿರಂತರ ಪಿತೂರಿಗಳು ನಡೆದವು. ಡಿ.ಎಸ್.ಎಸ್. ನಾಯಕರಿಗೆ ಕೆಲವು ಆಮಿಷಗಳನ್ನು ಒಡ್ಡಲಾಯಿತು. ಈ ಬಗೆಯ ರಾಜಕಾರಣವು ಮುಂದಿನ ದಿನಗಳಲ್ಲಿ ಬಲವಾಯಿತು. ಇದ್ದಕ್ಕಿದ್ದಂತೆ ಡಿ.ಎಸ್.ಎಸ್. ಚುನಾವಣೆಗೆ ಧುಮುಕಿತು.

2. ವಿಘಟನೆಯ ಕಾಲ

ಈ ಅವಧಿಯನ್ನು ಡಿ.ಎಸ್.ಎಸ್. 1984ರಲ್ಲಿ ಚುನಾವಣೆಗೆ ಧುಮುಕಿದಲ್ಲಿಂದ 1996-97ರವರೆಗೆ ಇಟ್ಟುಕೊಳ್ಳಬಹುದು. ಆರಂಭಿಕ ಹಂತದಿಂದಲೂ ಡಿ.ಎಸ್.ಎಸ್. ರಾಜಕಾರಣಿಗಳ ಬಗ್ಗೆ, ಅಧಿಕಾರಿಗಳ ಬಗ್ಗೆ, ಚುನಾವಣೆಗಳ ಬಗ್ಗೆ ತನ್ನ ಕಾರ್ಯಕರ್ತರಿಗೆ ವಿರೋಧಿ ಅಭಿಪ್ರಾಯವನ್ನು ರೂಪಿಸಿತ್ತು. ಆದರೆ 1984ರ ಚುನಾವಣೆಯಲ್ಲಿ ಡಿ.ಎಸ್. ಎಸ್. ತಾನೇ ಮುಂದಾಗಿ ಚುನಾವಣೆಯಲ್ಲಿ ದುಮುಕಿದ್ದರಿಂದ ಡಿ.ಎಸ್.ಎಸ್. ಅನ್ನು ನಂಬಿದ್ದ ಸಾವಿರಾರು ಕಾರ್ಯಕರ್ತರು ಮತ್ತು ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಕಾರ್ಯಕರ್ತರು ದಂಗುಬಡಿದು ಹೋದರು. ಡಿ.ಎಸ್.ಎಸ್. ತಾನು ಚುನಾವಣೆಗೆ ಹೋಗುವ ನಿರ್ಧಾರವನ್ನು ಕನಿಷ್ಟ ಸಂಘಟನಾತ್ಮಕ ಶಿಸ್ತಿನಲ್ಲಿ ಸ್ವೀಕರಿಸಲಿಲ್ಲ. ಅಂದರೆ ಮೊದಲು ರಾಜ್ಯ ಸಮಿತಿಯಲ್ಲಿ ಚರ್ಚಿಸಿ ಅದನ್ನು ಕೆಳಹಂತದ ಕಮಿಟಿಗಳಿಗೆ ಪ್ರತಿಕ್ರಿಯೆಗಾಗಿ ಕಳಿಸಲಿಲ್ಲ. ರಾಜ್ಯ ಸಮಿತಿ ಒಂದೇ ಏಕಾಏಕಿ ನಿರ್ಧಾರವನ್ನು ತೆಗೆದು ಕೊಂಡಿತು. ಡಿ.ಎಸ್.ಎಸ್.ನ ರಾಜ್ಯ ಸಮಿತಿಯ ಈ ಕ್ರಮದ ಬಗ್ಗೆಯೇ ಕೆಳಹಂತದ ಕಮಿಟಿಗಳಲ್ಲಿ ಭಿನ್ನಾಭಿಪ್ರಾಯ ಮೂಡಿತು. ಜೊತೆಗೆ ಚುನಾವಣೆಗೆ ಹೋಗುವುದನ್ನು ಕೆಳಹಂತದ ಬಹುತೇಕ ಕಮಿಟಿಗಳು ವಿರೋಧಿಸಿದವು. ಆದರೂ ಇವುಗಳ ವಿರೋಧ ರಾಜ್ಯ ಸಮಿತಿಯ ನಿಲುವನ್ನು ಬದಲಾಯಿಸಲಾಗಲಿಲ್ಲ.

ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ಡಿ.ಎಸ್. ಎಸ್. ಒಂದೇ ಒಂದು ಸ್ಥಾನವನ್ನೂ ಪಡೆಯಲಾಗಲಿಲ್ಲ. ಡಿ.ಎಸ್.ಎಸ್.ನ ಇತಿಹಾಸದಲ್ಲಿ ಇದು ಮತ್ತೆಂದೂ ಸರಿಗಟ್ಟಲಾರದ ಬಹುದೊಡ್ಡ ಆಘಾತವಾಯಿತು. ಇದು ವ್ಯಾಪಕವಾಗಿ ಸಂಘಟನೆಯ ಮೇಲೆ ಮತ್ತು ಡಿ.ಎಸ್.ಎಸ್.ನ ರಾಜಕೀಯ ಚಿಂತನೆಯ ಮೇಲೆ ತೀವ್ರತರವಾದ ದುಷ್ಟರಿಣಾಮವನ್ನು ಬೀರಿತು. ಹಲವಾರು ವರ್ಷ ಗಳವರೆಗೆ ಡಿ.ಎಸ್.ಎಸ್. ದಲಿತರನ್ನು ರಕ್ಷಿಸುವ ಏಕೈಕ ಶಕ್ತಿ ಎಂತಲೂ, ನಾಯಕರನ್ನು ಸ್ವಾಭಿಮಾನಿ ಶುದ್ಧಹಸ್ತರೆಂದು ನಂಬಿದ್ದ ಕಾರ್ಯಕರ್ತರಿಗೆ ಈ ಎರಡರ ಮೇಲೂ ಅನುಮಾನಗಳು ಮೂಡಲಾರಂಭಿಸಿದವು. ಯಾಕೆಂದರೆ, ರಾಜಕಾರಣಿಗಳನ್ನು ಭ್ರಷ್ಟರೆಂದು ಡಿ.ಎಸ್.ಎಸ್. ಸಾರಿ ಸಾರಿ ಹೇಳುತ್ತಿತ್ತು. ಹೀಗೆ ಹೇಳುತ್ತಿದ್ದ ಈ ನಾಯಕರೇ ಈಗ ರಾಜಕಾರಣಿಗಳಾಗ ಹೊರಟಿದ್ದು ಕಾರ್ಯಕರ್ತರ ಹಂತದಲ್ಲಿ ಅಸಹ್ಯ ಭಾವನೆಯನ್ನು ಉಂಟುಮಾಡಿತು. ಮುಂದೆಂದೂ ನಾಯಕರು ಕಾರ್ಯಕರ್ತರ ಸದಭಿಪ್ರಾಯಕ್ಕೆ ಒಳಗಾಗಲು ಸಾಧ್ಯವಾಗದಂತಹ ವಾತಾವರಣ ಸಂಘಟನೆಯೊಳಗೆ ನಿರಂತರವಾಗಿ ನಡೆಯತೊಡಗಿದವು. ಇದು ಪ್ರಾಮಾಣಿಕ ಕಾರ್ಯಕರ್ತರಿಗೆ ಬೇಸರ ಮತ್ತು ಜಿಗುಪ್ಸೆಯನ್ನು ಉಂಟುಮಾಡಿತು. ಫಲವಾಗಿ ವಿವಿಧ ಹಂತಗಳಲ್ಲಿ ಹೆಂಡತಿ-ಮಕ್ಕಳು-ಸಂಸಾರಗಳನ್ನು ಲೆಕ್ಕಿಸದೆ ಹಗಲು ರಾತ್ರಿ ಸಂಘಟನೆಗಾಗಿ ದುಡಿದ ಅನೇಕ ಕಾರ್ಯಕರ್ತರು ತಟಸ್ಥರಾದರು ಇಲ್ಲವೇ ಅವರನ್ನು ಮೂಲೆಗುಂಪು ಮಾಡಲಾಯಿತು.

1987ರ ಜಿಲ್ಲಾ ಪರಿಷತ್ತು ಮತ್ತು ಮಂಡಲ ಪಂಚಾಯತ್ ಚುನಾವಣೆಯಲ್ಲಿ ಡಿ.ಎಸ್.ಎಸ್.ನಲ್ಲಿ ಆ ಹಿಂದೆ ಕಾರ್ಯಕರ್ತರಾಗಿದ್ದವರು ತಮಗೆ ಅನುಕೂಲ ಸಿಕ್ಕಿದ ಪಕ್ಷಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದರು. ಆ ಹೊತ್ತಿಗೆ ಡಿ.ಎಸ್.ಎಸ್.ಗೆ ರಾಜ್ಯದಲ್ಲಿ ಕಾರ್ಯಕರ್ತರನ್ನೊಳಗೊಂಡ ಒಂದು ಭೌತಿಕ ಅಸ್ತಿತ್ವವಿರಲಿಲ್ಲ. ರಾಜ್ಯ ಸಮಿತಿಯೊಳಗೇ ಸಂಭವಿಸಿದ ನಾಯಕರ ಸ್ವಹಿತಾಶಕ್ತಿಯು ಕೆಳಹಂತಗಳಿಗೆ ಅನಾಯಾಸವಾಗಿ ಬಂದಿತು. ಹಾಗಾಗಿ ಕಾರ್ಯಕರ್ತರೆಲ್ಲರೂ ಸ್ಥಳೀಯ ಹಿತಾಸಕ್ತಿಗಳಿಗೆ ನೇರವಾಗಿ ಬಲಿಯಾಗಿ ಹೋದರು. ಆಗ ರಾಜ್ಯದಲ್ಲಿ ಡಿ.ಎಸ್.ಎಸ್.ಕೇವಲ ಲೆಟರ್ ಪ್ಯಾಡಿನಲ್ಲಿ ಉಳಿಯು ವಂತಾಯಿತು. ಅದರ ರಾಜ್ಯ ಸಮಿತಿ ಮತ್ತು ಉಳಿದ ಕೆಳಹಂತದ ಕಮಿಟಿಗಳು ಸಂಘಟನೆ-ಹೋರಾಟ ಮುಂತಾದವುಗಳ ತೀವ್ರತೆಯನ್ನು ಕಳೆದುಕೊಂಡು ಯಾಂತ್ರಿಕವಾಗಿ ಹೋದವು.

ಡಿ.ಎಸ್.ಎಸ್. 1984ರಲ್ಲಿ ಚುನಾವಣೆಗೆ ದುಮುಕಿದಾಗ ಡಿ.ಎಸ್.ಎಸ್.ನ ಒಳಗೇ ಇದ್ದ ಒಂದು ಗುಂಪಿನವರು ಚುನಾವಣೆಗೆ ಹೋಗುವುದನ್ನು ವಿರೋಧಿಸಿದರು. ಡಿ.ಎಸ್.ಎಸ್. ಅನ್ನು ಒಂದು ರಾಜಕೀಯೇತರ ಸಂಘಟನೆಯನ್ನಾಗಿ ಬೆಳೆಸಬೇಕೆಂಬ ಒತ್ತಾಯವನ್ನು ಮುಂದಿಟ್ಟರು. ಆದರೆ ರಾಜ್ಯ ಸಮಿತಿ ಇದಕ್ಕೆ ಒಪ್ಪದೇ ಹೋಯಿತು. ಆದರೆ ಈ ಗುಂಪಿನವರು ರಾಜ್ಯ ಸಮಿತಿಯ ನಿಲುವಿಗೆ ಬಲಿಯಾಗುವ ಅಪಾಯಕ್ಕೆ ಒಳಗಾಗಲಿಲ್ಲ. ಚುನಾವಣೆಯನ್ನು ವಿರೋಧಿಸುವಂತಹ ಮತ್ತು ಯಾವತ್ತೂ ದಲಿತರ ಏಳಿಗೆಗಾಗಿ ನಿರಂತರ ಹೋರಾಡಲು ಸಂಘಟನೆಯನ್ನು ಮುಂದುವರಿಸುವ ಆಲೋಚನೆ ಮಾಡಿದರು. ಇದರ ಫಲವಾಗಿ ಈ ಗುಂಪಿನವರು ತಮ್ಮ ಸಂಘಟನೆಯನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಸಲುವಾಗಿ ದಲಿತ ಸಂಘರ್ಷ ಸಮಿತಿ ಸಂಯೋಜಕ ಎಂಬ ಹೆಸರಿಟ್ಟುಕೊಂಡರು. ಚುನಾವಣೆಗೆ ಹೋದ ಸಂಘಟನೆಯ ಬಣವನ್ನು ದಲಿತ ಸಂಘರ್ಷ ಸಮಿತಿ ಸಂಚಾಲಕ ಎಂದು ಹೆಸರಿಸಲಾಯಿತು. 1990ರ ದಶಕದ ಆರಂಭದಲ್ಲೇ ಈ ಎರಡೂ ಸಂಘಟನೆಗಳು ಪ್ರತ್ಯೇಕ ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದವು. ಇದರಿಂದಾಗಿ 1990ರ ದಶಕದ ಆರಂಭದಲ್ಲಿ ಡಿ.ಎಸ್.ಎಸ್. ಎಂದರೆ ಅರ್ಥವಾಗದ ವಾತಾವರಣವಿತ್ತು ಮತ್ತು ಸಂಚಾಲಕ ಸಮಿತಿ, ಸಂಯೋಜಕ ಸಮಿತಿ ಎಂದರೆ ಮಾತ್ರ ಅರ್ಥವಾಗುವ ಸ್ಥಿತಿ ಇತ್ತು.

ಸಂಯೋಜಕ ಸಮಿತಿಯು ಡಿ.ಎಸ್.ಎಸ್.ನ ಆರಂಭಿಕ ಹಂತದಿಂದ ನಡೆದು ಬಂದಿದ್ದ ರಾಜಿರಹಿತ ಹೋರಾಟವನ್ನು ಮುಂದುವರಿಸಿತು. 1990ರ ದಶಕದಲ್ಲಿ ಆರ್ಥಿಕ, ರಾಜಕೀಯ ಮತ್ತಿತರ ಕ್ಷೇತ್ರಗಳಲ್ಲಿ ತೀವ್ರಗತಿಯ ಬದಲಾವಣೆಗಳನ್ನು ಕುರಿತು ಅಧ್ಯಯನ, ಚಿಂತನೆ ಆರಂಭಿಸಿತು. ಹೊಸ ಕಾಲದ ಸವಾಲುಗಳನ್ನು ಎದುರಿಸಲು ಸಂಘಟನೆಯನ್ನು ಸೈದ್ಧಾಂತಿಕವಾಗಿ ಮತ್ತು ಭೌತಿಕವಾಗಿ ಬಲಗೊಳಿಸುವ ಗಂಭೀರ ಹೆಜ್ಜೆಗಳನ್ನು ಇಡತೊಡಗಿತು. ತನ್ನ ಚಟುವಟಿಕೆಗಳನ್ನು ಕೇವಲ ದಲಿತರಿಗೆ ಮಾತ್ರ ಸೀಮಿತಗೊಳಿಸಲಿಲ್ಲ. ಹೋರಾಟವನ್ನು ಕೇವಲ ಸರ್ಕಾರಿ ಸೌಲಭ್ಯ ಮತ್ತು ಮೀಸಲಾತಿ ಕೇಳಲು ಸಂಕುಚಿತಗೊಳಿಸಲಿಲ್ಲ. ಅಂಬೇಡ್ಕರ್ ಅವರ ಜನ್ಮದಿನಾಚರಣೆ ಹಾಗು ಸ್ಮರಣ ದಿನಗಳನ್ನು ಆಚರಿಸುವ ವ್ಯಕ್ತಿಪೂಜೆಯ ಪರಂಪರೆಗೆ ವಿದಾಯ ಹೇಳಿತು. ಸಂಚಾಲಕ ಸಮಿತಿಯವರಿಗೆ ಇವರ ಚಟುವಟಿಕೆಗಳು ಸರಿಯಾಗಿ ಕಾಣಲಿಲ್ಲ. ಯಾಕೆಂದರೆ ಅವರು ತಮ್ಮ ಜಾತಿನಿಷ್ಠ ದೃಷ್ಟಿಕೋನವನ್ನು ಪುನರ್ ನವೀಕರಿಸಿಕೊಳ್ಳಲು ಸಿದ್ಧರಿರಲಿಲ್ಲ. 1990ರ ದಶಕದಲ್ಲಿ ನಡೆದ ಜಾಗತಿಕ ಮಟ್ಟದ ರಾಜಕೀಯ ವಿದ್ಯಮಾನಗಳನ್ನು ಗ್ರಹಿಸುವ ಕನಿಷ್ಠ ಶೈಕ್ಷಣಿಕ ಆಸಕ್ತಿಯನ್ನೂ ತೋರಿಸಲಿಲ್ಲ. ಅದು ಐ.ಎಮ್.ಎಫ್. ಸಾಲ ಇರಬಹುದು, ಕೊಲ್ಲಿ ಯುದ್ಧ ಇರಬಹುದು ಇಲ್ಲವೆ ಖಾಸಗೀಕರಣ, ಜಾಗತೀಕರಣಗಳೇ ಇರಬಹುದು.

ಸಂಯೋಜಕ ಸಮಿತಿಯು ದಲಿತೇತರ ವಲಯಕ್ಕೂ ಸಂಘಟನೆಯನ್ನು ವಿಸ್ತರಿಸುವ ಪ್ರಕ್ರಿಯೆಯನ್ನು ಶುರು ಮಾಡಿತು. ದಲಿತ ಸಮಸ್ಯೆಯ ಜೊತೆಗೆ ರೈತರ ಸಮಸ್ಯೆ, ಕಾರ್ಮಿಕರ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲಾರಂಭಿಸಿತು. ಹೋರಾಟವನ್ನು ಹೆಚ್ಚು ತೀವ್ರ ಗೊಳಿಸಲಾಯಿತು. ಇದರ ಜೊತೆಯಲ್ಲಿ ಕ್ರಿಯಾಶೀಲರಾಗದ ಕೆಲವರು ಇದರಿಂದ ಹೊರಹೋಗುವ ಆಲೋಚನೆ ಮಾಡಿದರು. ಫಲವಾಗಿ ಭದ್ರಾವತಿಯಲ್ಲಿ ಜನ ವಿಮೋಚನಾ ಚಳವಳಿ ಎಂಬ ಹೆಸರಿನಲ್ಲಿ ಈ ಗುಂಪಿನವರು 1992ರಲ್ಲಿ ಪ್ರತ್ಯೇಕವಾದರು. ಅನಂತರ ಪ್ರಜಾ ವಿಮೋಚನಾ ಚಳವಳಿ ಎಂಬುದಾಗಿ ಹೆಸರನ್ನು ಬದಲಿಸಿಕೊಂಡರು.

ಸರಿಸುಮಾರು ಇದೇ ಅವಧಿಯಲ್ಲಿ ಸಂಚಾಲಕ ಸಮಿತಿಯ ನಾಯಕರ ಸಂಘಟನಾತ್ಮಕ ದೌರ್ಬಲ್ಯಗಳಿಂದ ಬೇಸತ್ತ ಕೆಲವರು ಕರ್ನಾಟಕ ಸಮತಾ ಸೈನಿಕ ದಳ ಎಂಬ ಹೆಸರಿನಲ್ಲಿ ಸಂಘಟಿತರಾದರು. ಸಂಚಾಲಕ ಸಮಿತಿಯು ಪ್ರಗತಿಪರ ಜಾತಿವಾದಿ ಸಂಘಟನೆ, ಕರ್ನಾಟಕ ‘ಸಮತಾ ಸೈನಿಕ ದಳ’ ಇದರಿಂದ ಹೇಗೆ ಭಿನ್ನ ಎಂದರೆ ಇದು ಜಾತಿವಾದಿ ಪ್ರಗತಿಪರ ಸಂಘಟನೆಯಂತೆ ಕಂಡರೂ, ಒಂದು ಮೂಲಭೂತವಾದಿ ಜಾತಿ ಸಂಘಟನೆ. ‘ಜಾತಿಬಿಟ್ಟು ದೇಶಕಟ್ಟು’ ಎಂಬುದು ಸಂಚಾಲಕ ಸಮಿತಿಯ ಧ್ಯೇಯವಾಕ್ಯವಾದರೆ, ‘ದೇಶಬಿಟ್ಟು ಜಾತಿಕಟ್ಟು’ ಎಂಬುದು ‘ಕರ್ನಾಟಕ ಸಮತಾ ಸೈನಿಕ ದಳ’ದ ಧ್ಯೇಯ ವಾಕ್ಯ. ಇವರ ಪ್ರಕಾರ ದಲಿತರೆಂದರೆ ಹೊಲೆಮಾದಿಗರು ಮಾತ್ರ.

ಸಂಚಾಲಕ ಸಮಿತಿ, ಪ್ರಜಾ ವಿಮೋಚನಾ ಚಳವಳಿ(ಪಿ.ವಿ.ಸಿ) ಮತ್ತು ಕರ್ನಾಟಕ ಸಮತಾ ಸೈನಿಕ ದಳ (ಎಸ್.ಎಸ್.ಡಿ) ಹೆಸರಿಗೆ ಮಾತ್ರ ಪ್ರತ್ಯೇಕ ಪ್ರತ್ಯೇಕವಾಗಿ ಕಂಡರೂ, ಸೈದ್ಧಾಂತಿಕತೆಯಲ್ಲಿ ಮತ್ತು ಆಚರಣೆಯಲ್ಲಿ ಗುರುತಿಸುವಂತಹ ತಾತ್ವಿಕ ಭಿನ್ನಾಭಿಪ್ರಾಯ ಗಳಿರಲಿಲ್ಲ.ೊಆದರೆ ಭಿನ್ನಾಭಿಪ್ರಾಯಗಳು ಯಾವಾಗ ಸೃಷ್ಟಿಯಾಗುತ್ತಿದ್ದುವೆಂದರೆ ಚುನಾವಣೆ ಬಂದಾಗ ಮಾತ್ರ. ಹಾಗಾಗಿ ಯಾವುದೇ ಚುನಾವಣೆ ಬಂದಾಗ ಯಾವ ಪಕ್ಷವನ್ನು ಬೆಂಬಲಿಸಿದ ಗುಣಪಾಠ ಡಿ.ಎಸ್.ಎಸ್.ನ ಮುಂದಿತ್ತು. ಅದರಿಂದ ಸಕಾರಾತ್ಮಕ ಅನುಭವ ಪಡೆಯದೆ ಪುನಃ 1992ರಲ್ಲಿ ಜನತಾದಳವನ್ನು ಸಂಚಾಲಕ ಸಮಿತಿ ಬೆಂಬಲಿ ಸಿತು. ಅಲ್ಲಿಯೂ ನಿರೀಕ್ಷಿತ ಪ್ರಮಾಣದ ಫಲಿತಾಂಶ ಬರಲಿಲ್ಲ. ಮುಂದಿನ ದಾರಿ ಸ್ಪಷ್ಟವಿರಲಿಲ್ಲ.

ಉತ್ತರ ಪ್ರದೇಶದಲ್ಲಿ ಕಾನ್ಷಿರಾಮ್ ನೇತೃತ್ವದ ಬಹುಜನ ಸಮಾಜ ಪಾರ್ಟಿ (ಬಿ.ಎಸ್.ಪಿ) ಅಸ್ತಿತ್ವದಲ್ಲಿತ್ತು. ಸಂಚಾಲಕ ಸಮಿತಿ ಅದರ ಪ್ರಭಾವಕ್ಕೆ ಒಳಗಾಗಿ ಒಂದು ಗುಂಪು ‘ಬಹುಜನ ಸಮಾಜ ಪಾರ್ಟಿ’ (ಬಿ.ಎಸ್.ಪಿ)ಯನ್ನು ಬೆಂಬಲಿಸಿತು; ಮತ್ತೊಂದು ಗುಂಪು ಜನತಾ ದಳವನ್ನು ಬೆಂಬಲಿಸಿತು. ಈ ಪ್ರಕ್ರಿಯೆಯನ್ನು ಬಿ.ಎಸ್.ಪಿ.ಯನ್ನು ಬೆಂಬಲಿಸುತ್ತಿದ್ದ ಬಣದವರು ಡಿ.ಎಸ್.ಎಸ್. ಅನ್ನು ಒಂದು ರಾಜಕೀಯ ಸಂಘಟನೆ ಯನ್ನಾಗಿ, ರಾಜಕೀಯ ಪಕ್ಷವನ್ನಾಗಿ ಬೆಳೆಸುವ ದಾರಿ ಹಿಡಿದರು. ಕರ್ನಾಟಕದಲ್ಲಿ ಇದಕ್ಕೆ ಮಿಶ್ರ ಪ್ರತಿಕ್ರಯೆ ಬಂದಿತು. ಬಿ.ಕೃಷ್ಣಪ್ಪನವರು ಇದರ ನಾಯಕತ್ವವನ್ನು ವಹಿಸಿದರು. ಡಿ.ಎಸ್.ಎಸ್. ಸಂಚಾಲಕ ಸಮಿತಿಯ ಒಂದು ರಾಜಕೀಯೇತರ ಸಂಘಟನೆಯಾಗಿದ್ದಾಗಲೂ ನಾಯಕರಲ್ಲಾಗಲಿ, ಕಾರ್ಯಕರ್ತರಲ್ಲಾಗಲಿ ಕನಿಷ್ಟ ರಾಜಕೀಯ ತಿಳುವಳಿಕೆ, ಅಭಿವೃದ್ದಿ ಗೊಂಡಿರಲಿಲ್ಲ. ಕನಿಷ್ಠ ಸಂಘಟನಾತ್ಮಕ ಬದ್ಧತೆಯ ವ್ಯಕ್ತಿತ್ವ ರೂಪುಗೊಂಡಿರಲಿಲ್ಲ. ಈ ಬಗೆಯ ಅರಾಜಕೀಯ ವಾತಾವರಣವೇ ಬಿ.ಎಸ್.ಪಿ.ಯಾಗಿ ಬದಲಾದಾಗಲೂ ಮುಂದುವರಿಯಿತು. ಪರಿಣಾಮವಾಗಿ ಬಿ.ಎಸ್.ಪಿ. ಚುನಾವಣೆಗೆ ಸ್ಥಾನ ಹೊಂದಾಣಿಕೆಯಲ್ಲೇ ಸ್ಪರ್ಧಿಸಲಿ, ಸ್ವತಂತ್ರವಾಗಿಯೇ ಸ್ಪರ್ಧಿಸಲಿ ಅಭ್ಯರ್ಥಿಗಳು ಗೆಲ್ಲುವುದಿರಲಿ, ಬೇರೆ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸದಿರುವಂತಹ ಸನ್ನಿವೇಶ ಸಾಮಾನ್ಯವಾಗಿತ್ತು. ಇತರೆ ಸಂಸದೀಯ ಪಕ್ಷಗಳ ಸ್ವರೂಪಕ್ಕಿಂತ ಬಿ.ಎಸ್.ಪಿ. ತಾನು ಹೇಗೆ ಭಿನ್ನವಾಗಿ ರೂಪುಗೊಳ್ಳಬೇಕು ಎಂಬುದರ ಬಗ್ಗೆ ಇದರೊಳಗೆ ಗಂಭೀರವಾದ ಚಿಂತನ ಮಂಥನಗಳು ನಡೆಯಲಿಲ್ಲ. ಡಿ.ಎಸ್.ಎಸ್.ನ ನಾಯಕರ ಹಳೆಯ ಪ್ರವೃತ್ತಿಗಳು ಇಲ್ಲಿಯೂ ಮುಂದುವರಿದವು. ಪರಿಣಾಮವಾಗಿ ಬಿ.ಎಸ್.ಪಿ.ಯಿಂದ ಸ್ಪರ್ಧಿಸಿದ ಅನೇಕ ನಾಯಕರು ಭ್ರಷ್ಟಾಚಾರದ ಆರೋಪಗಳಿಗೆ ತೀರಾ ಸಹಜವಾಗಿ ಗುರಿಯಾದರು. ಅವರ ಫಲಿತಾಂಶವೇ ಇದನ್ನು ಎತ್ತಿ ತೋರಿಸುತ್ತಿತ್ತು. ಇದುವರೆಗೂ ಬಿ.ಎಸ್.ಪಿ.ಯನ್ನು ಒಂದು ಸ್ವತಂತ್ರ ದಲಿತರ ರಾಜಕೀಯ ಪಕ್ಷವನ್ನಾಗಿ ರೂಪಿಸಲಾಗಿಲ್ಲ. ನಾಯಕರ ಅತ್ಯಂತ ಹಿಂದುಳಿದ ರಾಜಕೀಯ ತಿಳುವಳಿಕೆ, ಇಂಡಿಯಾದ ಮತ್ತು ಜಾಗತಿಕ ಮಟ್ಟದ ರಾಜಕೀಯಾರ್ಥಿಕ ಬೆಳವಣಿಗೆಗಳನ್ನು ಗ್ರಹಿಸಲಾರದ ಸ್ಥಿತಿ, ನಾಯಕರ ವೈಯಕ್ತಿಕ ಭ್ರಷ್ಟಾಚಾರದ ಆರೋಪಗಳು, ದಲಿತರಿಗೆ ಸೌಲಭ್ಯ ಕೊಡಿಸುವಾಗ ಸಾಮಾನ್ಯವಾಗಿ ಇರುವ ಮಧ್ಯವರ್ತಿತನ ಗುಣ, ದಲಿತರ ಸಮಗ್ರ ವಿಮೋಚನೆೆಗಾಗಿ ನಿಸ್ವಾರ್ಥ ಸೇವೆಯ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕಾದ ನಿರ್ಧಾರದ ಕೊರತೆ, ದಲಿತ ನಾಯಕರು ದಲಿತ ಸಮೂಹದೊಳಗೆ ತಮ್ಮ ನಾಯಕತ್ವದ ಎಲ್ಲಾ ಬಗೆಯ ವರ್ಚಸ್ಸನ್ನು ಕಳೆದುಕೊಂಡಿರುವುದು ಇವೇ ಮುಂತಾದ ಕಾರಣಗಳಿಂದಾಗಿ ಬಿ.ಎಸ್.ಪಿ. ಒಂದು ಸದೃಢ ರಾಜಕೀಯ ಶಕ್ತಿಯಾಗಿ ಅರಳಲಾಗಿಲ್ಲ.

ಇತ್ತ ಸಂಯೋಜಕ ಸಮಿತಿಯು 1992ರಲ್ಲಿ ಕರ್ನಾಟಕದ ಕೆಲವು ಭಾಗಗಳಲ್ಲಿ ಭೂ ಹೋರಾಟಗಳನ್ನು ಕೈಗೆತ್ತಿಕೊಂಡಿತು. ಈ ಹೋರಾಟಗಳನ್ನು ಫಲಪ್ರದವಾಗಿ ಅಭಿವೃದ್ದಿಪಡಿಸಲು ಅವರೆಗಿನ ಡಿ.ಎಸ್.ಎಸ್.ನ ರಾಜಕೀಯ ಚಿಂತನೆ ಕಿಂಚಿತ್ತೂ ಉಪಯೋಗಕ್ಕೆ ಬಾರದಾಯಿತು. ಇದರಿಂದಾಗಿ ಈ ಬಣವು ಬೇರೊಂದು ರಾಜಕೀಯ ಚಿಂತನೆಗಾಗಿ ಹುಡುಕಾಟ ನಡೆಸುವುದು ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಸಂಯೋಜಕ ಸಮಿತಿಯು ಸಿ.ಪಿ.ಐ.(ಎಂ.ಎಲ್) ರೆಡ್ ಫ್ಲಾಗ್ನೊಂದಿಗೆ ಸೈದ್ಧಾಂತಿಕ ಚರ್ಚೆಗಿಳಿಯಿತು. ಮುಂದೆ ಆ ಮಾದರಿಯ ಸಂಘಟನೆಯನ್ನು ಕರ್ನಾಟಕದಲ್ಲಿ ಕಟ್ಟುವ ಮಹತ್ತರ ಸ್ಫೂರ್ತಿಯನ್ನು ಒಂದು ರಾಜಕೀಯ ಸವಾಲಾಗಿ ಸ್ವೀಕರಿಸಿತು. ಇದರಿಂದಾಗಿ 1992ರ ಹೊತ್ತಿಗೆ ಕರ್ನಾಟಕದಲ್ಲಿ ಸಿ.ಪಿ.ಐ(ಎಂ.ಎಲ್) ರೆಡ್ ಫ್ಲಾಗ್ನ ರಾಜ್ಯ ಸಮಿತಿ ರಚನೆಯಾಯಿತು. ಎಂ.ಎಲ್.ಚಳವಳಿಯ ಪರಿಚಯ ಮತ್ತು ಅನುಭವ ಇವರಿಗೆ ಹೊಸದಾಗಿತ್ತು. ಆದರೂ ಕೂಡ ಎಂ.ಎಲ್.(ಮಾರ್ಕ್ಸಿಸ್ಟ್-ಲೆನಿನಿಸ್ಟ್) ಚಳವಳಿಗಳ ಸಾಮಾನ್ಯ ಸ್ವರೂಪದಂತೆ, ಪಾರ್ಟಿ ಕಮಿಟಿ ಮತ್ತು ವರ್ಗ ಸಮೂಹ ಸಮಿತಿಗಳು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದವು. ಸಮಾಜದ ವಿಭಿನ್ನ ವಲಯಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಲೀಡ್ ಮಾಡುವುದು ವರ್ಗ ಸಮೂಹ ಸಮಿತಿಗಳ ಕರ್ತವ್ಯವಾದರೆ, ಆ ಎಲ್ಲವನ್ನೂ ಸಂಯುಕ್ತವಾಗಿ ಲೀಡ್ ಮಾಡುವುದು ಪಾರ್ಟಿ ಕಮಿಟಿಯ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ವರ್ಗ ಸಮೂಹ ಸಂಘಟನೆಗಳಾಗಿ ಐರ್.ವೈ.ಎಫ್. (ಕ್ರಾಂತಿಕಾರಿ ಯುವಜನ ರಂಗ), ಆರ್.ಸಿ.ಎಸ್.ಎಸ್.(ರೈತ ಕೂಲಿ ಸಂಗ್ರಾಮ ಸಮಿತಿ), ಆರ್.ಎಸ್.ಎಫ್.(ಕ್ರಾಂತಿಕಾರಿ ವಿದ್ಯಾರ್ಥಿ ಒಕ್ಕೂಟ), ಟಿ.ಯು.ಸಿ.ಐ(ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯ), ಮತ್ತು ಜೆ.ಎಸ್.ಎಸ್. (ಜನ ಸಾಂಸ್ಕೃತಿಕ ಸಂಘ) ಇವು ಅಸ್ತಿತ್ವಕ್ಕೆ ಬಂದವು. ಕರ್ನಾಟಕದ ರಾಯಚೂರು, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕೋಲಾರ ಮತ್ತು ಬೆಂಗಳೂರು ಜಿಲ್ಲೆಗಳ ಪಾರ್ಟಿ ಕಮಿಟಿಗಳು ಮತ್ತು ರಾಜ್ಯ ಸಮಿತಿಗಳು ಅಸ್ತಿತ್ವಕ್ಕೆ ಬಂದವು.

ಸಂಯೋಜಕ ಸಮಿತಿಯು ಎಂ.ಎಲ್. ಚಳವಳಿಯ ಸಂಪರ್ಕಕ್ಕೆ ಬಂದದ್ದೇ ತಡ ಇದರೊಳಗಿದ್ದ ಯುವಕರ ಒಂದು ಪಡೆ ಅತಿ ಉತ್ಸಾಹಕ್ಕೆ ಬಿದ್ದಿತು. ಸಮಾಜದ ಒಡಲಲ್ಲಿ ಮಡುಗಟ್ಟಿರುವ ಅತೃಪ್ತಿ ಅಸಮಾಧಾನ ಆಕ್ರೋಶಗಳು ಒಟ್ಟಾಗಿ ಈ ಯುವಕರ ಪಡೆಯವರಲ್ಲಿ ಮುಪ್ಪುರಿಗೊಂಡು ವ್ಯಕ್ತವಾಗತೊಡಗಿದವು. ಇಂಡಿಯಾದಲ್ಲಿ ಎಂ.ಎಲ್. ಚಳವಳಿಗಳದೇ ಒಂದು ಬಹುದೊಡ್ಡ ಜಗತ್ತಿದೆ. ಬೇರೆ ಬೇರೆ ಹಲವಾರು ಸಂಘಟನೆಗಳಿವೆ. ಕ್ರಾಂತಿಯ ಬಗ್ಗೆ, ಸಶಸ್ತ್ರ ಹೋರಾಟದ ಬಗ್ಗೆ ಮಹತ್ವದ ನಂಬಿಕೆಯಿಟ್ಟುಕೊಂಡು ಮುನ್ನುಗ್ಗುತ್ತಿರುವ ಸಂಘಟನೆಯ ಮಾರ್ಗ ಈ ಪಡೆಯನ್ನು ಸಹಜವಾಗಿ ಆಕರ್ಷಿಸಿತು. ಇದರ ಧೋರಣೆ ಕೆಲವು ರಾಜ್ಯ ಸಮಿತಿ ಸಭೆಗಳಲ್ಲೂ ಬಹಿರಂಗವಾಗಿ ವ್ಯಕ್ತಗೊಂಡಿತ್ತು. ಕ್ರಾಂತಿಯ ಬಗ್ಗೆ ಅತಿ ಉತ್ಸಾಹ ಹೊಂದಿರುವ ಮತ್ತು ಕ್ರಾಂತಿಯನ್ನು ಹಳೆಯ ಮಾದರಿಯಲ್ಲಿ ಮಿತ ಅಂದಾಜು ಮಾಡುವ, ಯಾಂತ್ರಿಕ ಮಾದರಿಯೊಂದು ಎಂ.ಎಲ್. ಚಳವಳಿಯೊಳಗೇ ಇದೆ. ಆ ದಾರಿಯನ್ನು ಈ ಪಡೆಯವರು ಹಿಡಿದರು.

ಈ ಬೆಳವಣಿಗೆಯಿಂದಾಗಿ ಈ ಪಡೆಯವರು ಸಿ.ಪಿ.ಐ.(ಎಂ.ಎಲ್.) ನಕ್ಸಲ್ ಬರಿ ಎಂಬ ಸಂಘಟನೆಯನ್ನು 1998ರ ಅಕ್ಟೋಬರ್ನಲ್ಲಿ ಕಟ್ಟಿಕೊಂಡರು. ಸಂಯೋಜಕ ಸಮಿತಿಯು ತಾನು ಎಂ.ಎಲ್. ಚಳವಳಿಯಾಗಿ ಅಭಿವೃದ್ದಿಗೊಂಡು, ಶೋಷಿತ ಜನರ ಕ್ರಾಂತಿಕಾರಿ ವಿಮೋಚನೆಯಲ್ಲಿ ತನ್ನ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದ ಸಂದರ್ಭದಲ್ಲೇ ಈ ವಿಘಟನೆ ಸಂಭವಿಸಿದ್ದು, ಎರಡೂ ಬಣದವರಿಗೆ (ನಕ್ಸಲ್ ಬರಿ ಮತ್ತು ರೆಡ್ ಫ್ಲಾಗ್)  ಲಾಭದ ಸಂಗತಿಯಾಗಲಿಲ್ಲ. ಈಗ ಈ ಎರಡೂ ಸಂಘಟನೆಗಳು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿವೆ. ಜಾಗತಿಕ ಮಟ್ಟದಲ್ಲಿ ಮತ್ತು ಇಂಡಿಯಾದಲ್ಲಿ ಎಂ.ಎಲ್. ಚಳವಳಿಗಳ ಪ್ರಧಾನ ವಿಚಾರಧಾರೆಯಲ್ಲಿ ಸಹಜವಾಗಿರುವ ಎರಡು ಪಂಥಗಳ ಸಂಘರ್ಷ ಮುಂದುವರಿದಿದೆ. ರೆಡ್ಫ್ಲಾಗ್ ಸಾಮ್ರಾಜ್ಯಶಾಹಿಯನ್ನು(ಭೂಮಾಲೀಕ ವರ್ಗ ಅದರೊಂದಿಗೆ ಸಂಪೂರ್ಣ ಕೈಜೋಡಿಸಿ ಅದೂ ಬಿಕ್ಕಟ್ಟಿನಲ್ಲಿದೆ) ಪ್ರಧಾನ ಶತ್ರುವೆಂದು ಗುರುತಿಸಿದರೆ, ನಕ್ಸಲ್ ಬರಿಯವರು ಊಳಿಗಮಾನ್ಯಶಾಹಿಯನ್ನು ಪ್ರಧಾನ ಶತ್ರುವೆಂದು ಗುರುತಿಸಿದ್ದಾರೆ. ಕರ್ನಾಟಕದಲ್ಲಿ ಎಂ.ಎಲ್. ಚಳವಳಿಗೆ ಇದೊಂದು ಭಾರೀ ಹಿನ್ನಡೆಯಾಗಿದೆ. ಆದರೂ ಎರಡು ಸಂಘಟನೆಯವರೂ ಮಹತ್ವದ ಭರವಸೆಗಳೊಂದಿಗೆ ಮುಂದುವರಿದಿದ್ದಾರೆ.

ಇಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಬಗೆಹರಿಸಿಕೊಳ್ಳಬೇಕು. ಅದೇನೆಂದರೆೊಕರ್ನಾಟಕದ ದಲಿತ ಚಳವಳಿ ಇತಿಹಾಸವನ್ನು ಕುರಿತು ಬರೆಯುವಾಗ, ಎಂ.ಎಲ್. ಚಳವಳಿಯ ಪ್ರಸ್ತಾಪ ಯಾಕೆ ಬಂತು ಎಂಬುದು. ಅಥವಾ ದಲಿತ ಚಳವಳಿ ಮತ್ತು ಎಂ.ಎಲ್. ಚಳವಳಿ ಒಂದೇನಾ ಅಥವಾ ಬೇರೆ ಬೇರೆಯಾ ಎಂಬುದು. ನಿಸ್ಸಂಶಯವಾಗಿ ಇವೆರಡೂ ಬೇರೆ ಬೇರೆ. ಆದರೂ ಎಂ.ಎಲ್. ಚಳವಳಿಯ ಪ್ರಸ್ತಾಪ ಯಾಕೆ ಬಂತೆಂದರೆ, ದಲಿತ ಚಳವಳಿಯ ಎಲ್ಲಾ ಬಗೆಯ ದೌರ್ಬಲ್ಯಗಳು ಮತ್ತು ಹಿನ್ನಡೆಗಳೇ ಕರ್ನಾಟಕದಲ್ಲಿ ಎಂ.ಎಲ್. ಚಳವಳಿಗೆ ಒಂದು ಅನಿವಾರ್ಯತೆಯನ್ನು ನೇರವಾಗಿ ಮತ್ತು ಸಹಜವಾಗಿ ಒದಗಿಸಿದುದು ಒಂದು ಕಾರಣ. ಮತ್ತೊಂದು ಕಾರಣವೆಂದರೆ, ಕರ್ನಾಟಕದಲ್ಲಿೊಎಂ.ಎಲ್. ಚಳವಳಿಯನ್ನು ಕಟ್ಟಲು ಶ್ರಮಿಸುತ್ತಿರುವವರೆಲ್ಲರೂ ದಲಿತರೇ ಅಥವಾ ಒಂದು ಕಾಲದಲ್ಲಿ ದಲಿತ ಚಳವಳಿಯಲ್ಲಿ ನಾಯಕರ ಹಂತದಲ್ಲಿ ಮತ್ತು ಕಾರ್ಯಕರ್ತರ ಹಂತದಲ್ಲಿ ಕ್ರಿಯಾಶೀಲರಾದವರೇ ಇಂದು ಎಂ.ಎಲ್. ಚಳವಳಿಯಲ್ಲಿ ಇರುವುದರಿಂದ ಇದು ಐತಿಹಾಸಿಕ ಬೆಳವಣಿಗೆಯನ್ನು ಗುರುತಿಸುವಾಗ ಅನಿವಾರ್ಯವಾಯಿತು. ಹಾಗಾಗಿ ಓದುಗರು ದಲಿತ ಚಳವಳಿ ಮತ್ತು ಎಂ.ಎಲ್. ಚಳವಳಿಯನ್ನು ಯಾವುದೇ ಕಾರಣಕ್ಕೂ ಒಂದು ಎಂದು ಭಾವಿಸಬಾರದಾದು. ಸೈದ್ಧಾಂತಿಕವಾಗಿ ಮತ್ತು ಆಚರಣಾತ್ಮಕವಾಗಿ ದಲಿತ ಚಳವಳಿಯೊಂದು ಏಕಕಾಲಕ್ಕೆ ಎಂ.ಎಲ್. ಚಳವಳಿಯಾಗಲು ಸಾಧ್ಯವಿಲ್ಲ. ಅದೇ ರೀತಿ ಎಂ.ಎಲ್. ಚಳವಳಿಯೊಂದು ಏಕಕಾಲಕ್ಕೆ ದಲಿತ ಚಳವಳಿಯಾಗಲು ಸಾಧ್ಯವಿಲ್ಲ.

3. ಅಧಃಪತನದ ಕಾಲ

ಈ ಅಧಃಪತನ ಎಂಬುದು ಈಗಾಗಲೇ ಚರ್ಚಿಸಿದ ಎಂ.ಎಲ್.ೊಚಳವಳಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಬಿ.ಎಸ್.ಪಿ.ನೇತೃತ್ವದ ಮತ್ತು ಇತರೆ ಉಳಿದೆಲ್ಲ ದಲಿತ ಚಳವಳಿಗಳಿಗೆ ಅನ್ವಯಿಸುತ್ತದೆ. ದಲಿತ ಚಳವಳಿ ಹುಟ್ಟಿದಾಗಿನಿಂದ ಸರ್ಕಾರದ ಮೀಸಲಾತಿ ಸೌಲಭ್ಯಗಳಿಗಾಗಿ ಹೋರಾಡುವುದನ್ನೇ ಪ್ರಧಾನ ಆಚರಣೆಯನ್ನಾಗಿ ಹೊಂದಿತ್ತು. ಹಾಗಾಗಿ ದಲಿತ ಸಂಘಟನೆಯ ನಾಯಕ ಕಾರ್ಯವ್ಯಾಪ್ತಿ ಮತ್ತು ಕಾರ್ಯಕ್ಷೇತ್ರ ತೀರಾ ಸಂಕುಚಿತಗೊಂಡು ಅದು ಕೇವಲ ಸರ್ಕಾರಿ ಕಛೇರಿಗಳಿಗೆ ಮಾತ್ರ ಸೀಮಿತಗೊಂಡಿದೆ. ಇದರ ಅತಿ ಎಲ್ಲಿಗೆ ಹೋಗಿದೆ ಎಂದರೆ ಮೀಸಲಾತಿ ಸೌಲಭ್ಯಗಳನ್ನು ಪಡೆಯುವುದರಿಂದ ಮಾತ್ರ ದಲಿತರ ಏಳಿಗೆ ಸಾಧ್ಯ ಎಂಬ ಸೀಮಿತ ಆಶಯ ಪ್ರಾಪ್ತವಾಗಿ ಹೋಗಿದೆ. ಹಾಗಾಗಿ ಈ ಧೋರಣೆಯು ದಲಿತರ ವಿಮೋಚನೆಗೆ ಇರಬಹುದಾದ ಇತರ ಸಾಧ್ಯತೆಗಳ ಕುರಿತು ಆಲೋಚಿಸದಂತೆ ಮಾಡಿತು. ಹಾಗಾಗಿಯೇ ಕರ್ನಾಟಕದಲ್ಲಿ ದಲಿತ ಚಳವಳಿ ಭೂ ಹೋರಾಟವನ್ನು ಒಂದು ಪ್ರಧಾನ ಹೋರಾಟವನ್ನಾಗಿ ಸ್ವೀಕರಿಸಲೇ ಇಲ್ಲ.

ಮೀಸಲಾತಿ ಸೌಲಭ್ಯಗಳಿಗೆ ಮಾತ್ರ ತನ್ನನ್ನು ಸೀಮಿತ ಮಾಡಿಕೊಂಡ ದಲಿತ ಸಂಘಟನೆಗಳು ಸಾಮಾಜಿಕವಾಗಿ ಜಾತಿವಾರು ಮೀಸಲಾತಿಯನ್ನು ಕರಾರುವಕ್ಕಾಗಿ ಲೆಕ್ಕಾಚಾರ ಮಾಡುವುದನ್ನು ಉಸಿರಾಟದಷ್ಟು ಸಹಜವಾಗಿ ಮೈಗೂಡಿಸಿಕೊಂಡವು. ಜಾತಿವಾರು ಶ್ರೇಣೀಕರಣದಲ್ಲಿ ಬ್ರಾಹ್ಮಣರು ಮೇಲಿದ್ದರೆ ದಲಿತರು ಕೆಳಗಿದ್ದಾರೆ. ಶಿಕ್ಷಣದಲ್ಲಿ, ನೌಕರಿಯಲ್ಲಿ, ರಾಜಕೀಯದಲ್ಲಿ ಈ ಸಾಮಾಜಿಕ ಶ್ರೇಣೀಕರಣದ ಮೇಲ್ತುದಿ ಯಲ್ಲಿ ಬ್ರಾಹ್ಮಣರೇ ಹೆಚ್ಚಾಗಿದ್ದಾರೆ. ಈ ಅಂಶವು ಪ್ರಧಾನವಾಗಿ ಕಾಡಿದ್ದು ಕರ್ನಾಟಕದಲ್ಲಿ ಬ್ರಾಹ್ಮಣರಿಗೆ ಸಮೀಪ ಸ್ಪರ್ಧಿಗಳಾದ ಮತ್ತು ಭೂಮಾಲಿಕ ವರ್ಗದವರಾದ ಲಿಂಗಾಯಿತರು ಮತ್ತು ಒಕ್ಕಲಿಗರಿಗೆ. ಇವರು ಬ್ರಾಹ್ಮಣರನ್ನು ಪ್ರಧಾನ ಶತ್ರುವೆಂದು ಪರಿಗಣಿಸಿದರು. ಸ್ವಂತ ಆಲೋಚನೆ ಮಾಡದೆ ದಲಿತ ನಾಯಕರು ಈ ಲೆಕ್ಕಾಚಾರ ತಮಗೂ ಅನ್ವಯಿ ಸುತ್ತದೆ ಎಂದು ನಂಬಿದರು. ಹಾಗಾಗಿ ಇವರೂ ಕೂಡ ಬ್ರಾಹ್ಮಣರ ವಿರುದ್ಧ ಕಿಡಿಕಾರತೊಡಗಿದರು. ಭಾರತದಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆ ಇದೆ. ಅವರು ಗಿಟ್ಟಿಸಿರುವ ಸ್ಥಾನಮಾನಗಳು, ಪಡೆದಿರುವ ಸರ್ಕಾರಿ ಸವಲತ್ತುಗಳು ಅಧಿಕವಾಗಿವೆ ಎಂದು ಯಾಂತ್ರಿಕ ಲೆಕ್ಕಾಚಾರ ದಲಿತ ನಾಯಕರಿಗೆ ರಕ್ತಗತ ಕಂಠಪಾಠವಾಗಿ ಹೋಯಿತು. ಇಂದಿಗೂ ಅವರು ಇದನ್ನು ಮರುವಿಮರ್ಶಿಸುವ ಗೋಜಿಗೆ ಹೋಗಲಿಲ್ಲ.

ಮೇಲೆ ಪ್ರಸ್ತಾಪಿಸಿದ ವಿನ್ಯಾಸದಲ್ಲೇ ಸರ್ಕಾರಿ ಸವಲತ್ತುಗಳನ್ನು ಪಡೆದವರ ಸಂಖ್ಯೆಯನ್ನು ಆಯಾ ಜಾತಿವಾರು ಸಂಖ್ಯೆಯೊಂದಿಗೆ ಹೋಲಿಸಿ ನೋಡುವ ಲೆಕ್ಕಾಚಾರವು ಇಂದು ದಲಿತರಿಗೇ ಶಾಪವಾಗಿ ಪರಿಣಮಿಸಿದೆ. ದಲಿತರ ಒಳಗೇ ಮಾದಿಗರ ಹಿತಾಸಕ್ತಿಯ ಗುಂಪೊಂದು ಸಂಘಟನೆಯಾಗಿದೆ. ಅದು ಮಾದಿಗ ದಂಡೋರ ಸಂಘಟನೆ. ಈ ಸಂಘಟನೆಯ ಹೋರಾಟದ ಉದ್ದೇಶ ಮಾದಿಗರಿಗೆ ಮೀಸಲಾತಿ ಮೂಲಕ ಸರ್ಕಾರಿ ಸೌಲಭ್ಯಗಳನ್ನು ನ್ಯಾಯಯುತವಾಗಿ ಒದಗಿಸಿಕೊಡುವುದಾಗಿದೆ.

ಇದರ ಸ್ವರೂಪ ಹೀಗಿದೆ. ಪರಿಶಿಷ್ಟ ಜಾತಿಯ ಜನಸಂಖ್ಯೆಯ ಪ್ರಮಾಣದಲ್ಲಿ ಮಾದಿಗರು ಹೆಚ್ಚು ಸಂಖ್ಯೆ ಉಳ್ಳವರು. ಆದರೆ ಅವರಿಗೆ ಸಿಕ್ಕಿರುವ ಮೀಸಲಾತಿಯ ಪ್ರಮಾಣ ಅತಿ ಕಡಿಮೆ. ಅವರು ಕೊಡುವ ಅಂಕಿ ಅಂಶಗಳು ಈ ಮುಂದಿನಂತಿವೆ. ದಕ್ಷಿಣ ಭಾರತದಲ್ಲಿ ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಸಂಖ್ಯೆ ಶೇ.50. ಕರ್ನಾಟಕದಲ್ಲಿ ಮಾದಿಗರ ಸಂಖ್ಯೆ ಶೇ.57ರಷ್ಟು. ಕರ್ನಾಟಕದಲ್ಲಿರುವ ಮಾದಿಗರ ಜನಸಂಖ್ಯೆ 85 ಲಕ್ಷ. ಪರಿಶಿಷ್ಟ ಜಾತಿಯವರ ಒಟ್ಟು ಪ್ರಮಾಣ 1.35 ಕೋಟಿ. ಸರ್ಕಾರಿ ಹುದ್ದೆಗಳಲ್ಲಿ, ಮಂತ್ರಿ ಶಾಸಕರಲ್ಲಿ ಮಾದಿಗರ ಸಂಖ್ಯೆ ಕಡಿಮೆ ಇದೆ. ಇವರಿಗೆ ಸಿಗಬೇಕಿದ್ದ ಮೀಸಲಾತಿಯನ್ನು ಹೊಲೆಯರು ಪಡೆದಿದ್ದಾರೆ. ಹಾಗಾಗಿ ಮಾದಿಗರು ತಮ್ಮ ಸಂಖ್ಯಾ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಪಡೆಯಬೇಕಾಗಿದೆ. ಅದಕ್ಕಾಗಿ ಮಾದಿಗರು ಪ್ರತ್ಯೇಕ ಹೋರಾಟ ಮಾಡಲು ಪ್ರತ್ಯೇಕ ಸಂಘಟನೆಗಳು ಈಗಾಗಲೇ ಅಸ್ತಿತ್ವಕ್ಕೆ ಬಂದಿವೆ. ಅವುಗಳೆಂದರೆ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ (ಬೆಂಗಳೂರು), ಅಖಿಲ ಕರ್ನಾಟಕ ಆದಿ ಜಾಂಬವ ಸಂಘ(ಬೆಂಗಳೂರು), ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿ (ಬಳ್ಳಾರಿ) ಮುಂತಾದವು.

ಅಂದರೆ ಈ ಮೊದಲು ದಲಿತ ಚಳವಳಿಯ ನೇತಾರರು ಬ್ರಾಹ್ಮಣರನ್ನು ಹೇಗೆ ಲೆಕ್ಕಾಚಾರ ಮಾಡುತ್ತಿದ್ದರೋ ಅದೇ ರೀತಿಯ ಲೆಕ್ಕಾಚಾರಕ್ಕೆ ಇಂದು ಹೊಲೆಯರು ಸಿಕ್ಕಿದ್ದಾರೆ. ಹೊಲೆಯರ ಬಗ್ಗೆ ಮಾದಿಗರಿಗೆ ಅಸಮಾಧಾನ ಅತೃಪ್ತಿಗಳು ಕ್ರಿಯಾಶೀಲ ವಾಗತೊಡಗಿವೆ. ಮುಂದಿನ ದಿನಗಳಲ್ಲಿ ಇದು ಪಡೆಯಬಹುದಾದ ಸ್ವರೂಪ ಒಟ್ಟಾರೆ ದಲಿತರ ಬದುಕಿಗೆ ಪೂರಕವಾಗಿಯೇನೂ ಇರುವುದಿಲ್ಲ. ಇದರ ಬದಲು ಮಾದಿಗರು ಪರಿಶಿಷ್ಟ ಜಾತಿಯವರಲ್ಲೇ ಮೀಸಲಾತಿ ಪ್ರಮಾಣವನ್ನು ಲೆಕ್ಕಾಚಾರ ಮಾಡುವುದಕ್ಕಿಂತ ಇಡೀ ದೇಶದ ಸಂಪತ್ತಿನ ಪ್ರಮಾಣ ಎಷ್ಟಿದೆ? ಅದು ಯಾರು ಯಾರಲ್ಲಿ ಹೇಗೆ ಹೇಗೆ ಎಷ್ಟು ಎಷ್ಟು ಹಂಚಿ ಹೋಗಿದೆ? ಎಂಬ ಮಾದರಿಯ ಆಲೋಚನೆಯಲ್ಲಿ ತೊಡಗುವುದು ಮುಖ್ಯವಾಗುತ್ತದೆ. ಆಗ ಮಾತ್ರವೇ ಇಡಿಯಾಗಿ ದಲಿತ ವಿಮೋಚನೆಗೆ ಒಂದು ಸಮಗ್ರ ಮಾರ್ಗ ಸಿಗುತ್ತದೆ. ಇಲ್ಲವಾದರೆ ಮಿತ್ರ ವಲಯದಲ್ಲೇ ಶತ್ರುವನ್ನು ಗುರುತಿಸುವ ವಿಧಾನವು ವಿನಾಶದ ಕಡೆಗೆ ಕರೆದುಕೊಂಡು ಹೋಗುತ್ತದೆ. ಮಾದಿಗರು ತಮ್ಮ ಶತ್ರುವನ್ನು ಹೊಲೆಯರೆಂದು ಗುರುತಿಸದೆ ಭಾರೀ ಭೂಮಾಲೀಕ, ಬಂಡವಾಳಶಾಹಿ ಮತ್ತು ಬಹು ರಾಷ್ಟ್ರೀಯ ಕಂಪನಿಗಳನ್ನು ಪರಿಗಣಿಸಬೇಕಾಗಿದೆ. ಈಗ ಸದ್ಯ ಈ ಬಗೆಯ ಆಲೋಚನೆ ಹೊಲೆಯರಿಗಾಗಲಿ, ಮಾದಿಗರಿಗಾಗಲಿ ಇಲ್ಲದೇ ಇರುವುದರಿಂದ ಇದು ಅಧಃಪತನದ ಕಾಲ.

ಪರಾಮರ್ಶನ ಗ್ರಂಥಗಳು

1. ಗಂಗಾರಾಂ ಚಾಂಡಾಳ, 1992. ಕರ್ನಾಟಕ ದಲಿತ ಚಳವಳಿ ಮತ್ತು ಡಾ.ಬಿ.ಆರ್. ಅಂಬೇಡ್ಕರ್, ಚಿಕ್ಕತಿರುಪತಿ: ಚೈತ್ರ ಪ್ರಕಾಶನ,

2. ಮುನಿವೆಂಕಟಪ್ಪ ವಿ., 1998. ದಲಿತ ಚಳವಳಿ : ಒಂದು ಅವಲೋಕನ, ಮೈಸೂರು: ವಿಚಾರವಾದಿ        ಪ್ರಕಾಶನ

3. ಲಕ್ಷ್ಮಣ್ ತೆಲಗಾವಿ, 1999. ಹಿಂದುಳಿದ ಮತ್ತು ದಲಿತ ಚಳವಳಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ

4. ಪುಟ್ಟಯ್ಯ ಬಿ.ಎಂ., 1997. ಕನ್ನಡ ದಲಿತ ಸಾಹಿತ್ಯ ಮತ್ತು ಪ್ರತಿಸಂಸ್ಕೃತಿ (ಪಿಎಚ್.ಡಿ. ಮಹಾಪ್ರಬಂಧ), ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ