ವಸಾಹತು ಭಾರತದ ಅರ್ಥವ್ಯವಸ್ಥೆಯು ಕೆಲವೇ ಸೀಮಿತ ಪ್ರದೇಶಗಳಲ್ಲಿ ವ್ಯವಸ್ಥಿತವಾದ ಬಂಡವಾಳಶಾಹಿ ಕೈಗಾರಿಕೆಯ ಬೆಳವಣಿಗೆಗೆ ಆಸ್ಪದ ನೀಡಿತು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ ವೇಳೆಗೆ ಮುಖ್ಯವಾಗಿ ತೋಟದ ಉದ್ಯಮ ಹಾಗೂ ಅಗೆದು ತೆಗೆಯುವ (ಗಣಿಗಳಂತಹ) ಉದ್ಯಮಗಳಿಗೆ ಪ್ರೋದೊರಕಿತು. ಪಶ್ಚಿಮ ಭಾರತದ ಮುಂಬಯಿ ಮತ್ತು ಅಹಮದಾಬಾದುಗಳಲ್ಲಿನ ಕೆಲವು ಬಂಡವಾಳಗಾರರು ಬಹಳ ಪರಿಶ್ರಮದಿಂದ ಭಾರತದ ಮೊತ್ತಮೊದಲನೆಯ ಟೆಕ್ಸ್ಟೈಲ್ (ಹತ್ತಿ) ಕಾರ್ಖಾನೆಯನ್ನು ಸ್ಥಾಪಿಸಿದರು. ಹೀಗೆ ಇಪ್ಪತ್ತನೆಯ ಶತಮಾನವು ಕಾಲಿಡುವ ವೇಳೆಗೆ ಕೆಲವು ಬಿಡಿ ಪ್ರದೇಶಗಳು ತಕ್ಕಮಟ್ಟಿಗೆ ಚೆನ್ನಾಗಿ ಅಭಿವೃದ್ದಿ ಹೊಂದಿದ್ದವು. ಅಸ್ಸಾಮಿನ ಪ್ಲಾಂಟೇಷನ್ಗಳು, ಬಂಗಾಳದ ಸೆಣಬು ಗಿರಣಿಗಳು, ಬಂಗಾಳದ ಕಲ್ಲಿದ್ದಲು ಗಣಿಗಳು, ಅಹಮದಾಬಾದ್ ಮತ್ತು ಮುಂಬಯಿಯ ಬಟ್ಟೆ ಗಿರಣಿಗಳು ಗಣನೀಯವಾಗಿ ಬೆಳೆದಿದ್ದವು. ಆದರೆ ಭಾರತದ ವಿಶಾಲ ಗ್ರಾಮಾಂತರ ಪ್ರದೇಶಗಳು ನಿರುದ್ಯುಮೀಕರಣದ  ಅನುಭವದಿಂದ ಇನ್ನೂ ಚೇತರಿಸಿಕೊಳ್ಳಬೇಕಾಗಿತ್ತು. ಬ್ರಿಟಿಷ್ ಇಂಡಿಯದ ಪರಿಸ್ಥಿತಿಯೇ ಹೀಗಿದ್ದರೆ ಮೈಸೂರಿನಂತಹ ಸಂಸ್ಥಾನಗಳಲ್ಲಿ ಅದು ಇನ್ನೂ ನಿರುತ್ಸಾಹಕರವಾಗಿತ್ತು. ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ, ಮೈಸೂರಿನಲ್ಲಿ ಮೂರು ಸ್ಥಳಗಳಿಗೆ ಸೀಮಿತವಾಗಿತ್ತು. ಪಶ್ಚಿಮ ಮೈಸೂರಿನ ಕಾಫಿ ಮತ್ತು ಅಡಕೆ ತೋಟಗಳು, ಕೋಲಾರದ ಚಿನ್ನದ ಗಣಿಗಳು ಹಾಗೂ ಬೆಂಗಳೂರಿನ ವಿವಿಧ ಮಿಲ್ಲುಗಳು, ಗಿರಣಿಗಳು, ಕಾರ್ಖಾನೆಗಳು. ಇವುಗಳಲ್ಲಿ ತೋಟದ ಉದ್ಯಮವು ವರ್ಷದ ಕೆಲಸಮಯ ಬೃಹತ್ ಸಂಖ್ಯೆಯಲ್ಲಿ ಗಂಡಸು-ಹೆಂಗಸರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಿತು. ಬೆಂಗಳೂರಿನಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳಬಹುದಾಗಿದ್ದ ಎರಡು ಬಟ್ಟೆ ಕಾರ್ಖಾನೆ ಗಳಿದ್ದುವು. ಒಂದು, ಬೆಂಗಳೂರು ಉಲನ್ ಕಾಟನ್ ಎಂಡ್ ಸಿಲ್ಕ್ಮಿಲ್(ಮುಂದೆ ಇದೇ ಬಿನ್ನೀಸ್ ಆಯಿತು), ಇನ್ನೊಂದು ಮಹಾರಾಜಾ ಮಿಲ್ಲು. ಇವು ಒಂದೊಂದರಲ್ಲೂ 1000ಕ್ಕಿಂತಲೂ ಕಡಿಮೆ ಜನ ಕೆಲಸಗಾರರಿದ್ದರು. ಕಾರ್ಖಾನೆಗಳು ಬದುಕಿ ಉಳಿಯಲು ಬಹಳ ಕಷ್ಟಪಡುತ್ತಿದ್ದುವು. ಆದರೂ ಕೈಮಗ್ಗದ ಹತ್ತಿ ಮತ್ತು ರೇಷ್ಮೆ ನೇಯ್ಗೆ ಉದ್ಯಮವು ಬೆಂಗಳೂರಿನ ಪೇಟೆ ಪ್ರದೇಶದ ಮಧ್ಯೆ ಇನ್ನೂ ಉಳಿದುಕೊಂಡಿತ್ತು.

ಕೈಗಾರಿಕೆಯ ಈ ಮಂಕಾದ ಚಿತ್ರಕ್ಕೆ ಹೋಲಿಸಿದರೆ, ಚಿನ್ನದ ಗಣಿಗಾರಿಕೆಯ ಉದ್ಯಮವು ಉಜ್ವಲವಾಗಿ ಯಶಸ್ಸನ್ನು ಪಡೆದಿತ್ತು. ಬೆಂಗಳೂರಿನಿಂದ 100 ಕಿ.ಮೀ. ಗಿಂತಲೂ ಕಡಿಮೆ ದೂರದಲ್ಲಿ ಬ್ರಿಟಿಷ್ ಗಣಿಗಾರಿಕೆ ಕಂಪೆನಿಯಾದ ಜಾನ್ ಟೇಲರ್ ಸನ್ಸ್ ಅದನ್ನು ನಡೆಸುತ್ತಿತ್ತು. 1905 ಅತಿ ಹೆಚ್ಚು ಉತ್ಪಾದನೆಯಾದ ವರ್ಷ, ಗಣಿಯು 35000ಕ್ಕಿಂತಲೂ ಹೆಚ್ಚುಸಂಖ್ಯೆಯ ಕಾರ್ಮಿಕರನ್ನು ನೇಮಿಸಿಕೊಂಡಿದ್ದಿತು, 500,000 ಜಾನ್ಸ್ (ಸು. 140,000 ಕೆ.ಜಿ.)ಗಿಂತಲೂ ಹೆಚ್ಚು ಚಿನ್ನವನ್ನು ಅದು ಆ ವರ್ಷ ಉತ್ಪಾದಿಸಿತು. ಆದರೆ ಕೆ.ಜಿ.ಎಫ್.ನಲ್ಲಿ ಉತ್ಪಾದನೆ ಇಪ್ಪತ್ತನೆಯ ಶತಮಾನದಲ್ಲಿ ಒಂದೇ ಸಮನೆ ಇಳಿದು ಉದ್ಯೋಗಾವಕಾಶವು ಕಡಿಮೆಯಾಗಿ ಹೋಯಿತು. ಇಂದು ಅದನ್ನು ಲಾಭಕರವಲ್ಲದ ಗಣಿ ಎಂದು ಘೋಷಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಬೆಂಗಳೂರಿನ ನಿರುತ್ಸಾಹಕರ ಕೈಗಾರಿಕಾ ಚಿತ್ರಕ್ಕೆ ಮೊದಲನೆಯ ಮಹಾಯುದ್ಧವಾದ ಮೇಲೆ ಹೆಚ್ಚಿನ ಚಾಲನೆ ದೊರಕಿತು. ಹೊಸ ಹತ್ತಿ ಮತ್ತು ಉಣ್ಣೆ ಗಿರಣಿಗಳು ಪ್ರಾರಂಭವಾದವು. ಆಗಲೆ ಇದ್ದವುಗಳ ಕಾರ್ಯಸಾಮರ್ಥ್ಯವನ್ನು ವಿಸ್ತರಿಸಲಾಯಿತು. 1920 ಮತ್ತು 1930ರ ದಶಕಗಳಲ್ಲಿ ಸರಕಾರವು ಆಯೋಜಿಸಿದ ಹಲವು ಕೈಗಾರಿಕೆಗಳು, ಜಾಯಿಂಟ್ ಸ್ಟಾಕ್ ಕಂಪೆನಿಗಳು ಮತ್ತು 1940ನೆಯ ವರ್ಷಗಳಲ್ಲಿಹಲವು ಸಾರ್ವಜನಿಕ ವಲಯದ ಉದ್ಯಮಗಳು ಬೆಂಗಳೂರಿನಲ್ಲಿ ಸ್ಥಾಪನೆಗೊಂಡವು. ಇಂದಿಗೂ ಬೆಂಗಳೂರು ಖಾಸಗಿ ಬಂಡವಾಳ ಹೂಡಿಕೆಯನ್ನು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸುತ್ತಿದೆ. ಆದರೆ 1920-30ರ ಈ ಸಮಯದಲ್ಲಿ ಮೈಸೂರು ರಾಜ್ಯದ ಇತರ ಕೇಂದ್ರಗಳೂ ಕೈಗಾರಿಕಾ ನಕ್ಷೆಯಲ್ಲಿ ಸ್ಥಾನ ಪಡೆದವು. ಭದ್ರಾವತಿಯ ಹೆಮ್ಮೆಯ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಮೈಸೂರು ಷುಗರ್ ಮಿಲ್ಸ್, ಮೈಸೂರು ಕಾಗದ ಕಾರ್ಖಾನೆ ಇವು ನೆಲೆಗೊಂಡುವು. ಮೈಸೂರು ನಗರದಲ್ಲಿ ರೈಲ್ವೆ ವರ್ಕ್ಶಾಪ್ ಹಾಗೂ ಶ್ರೀಕೃಷ್ಣರಾಜೇಂದ್ರ ಮಿಲ್ಸ್ ಸ್ಥಾಪಿತವಾದವು.

ಸಹಜವಾಗಿಯೇ ಉತ್ತಮ ಕಾರ್ಯಪರಿಸ್ಥಿತಿಗಳಿಗಾಗಿ, ಕೆಲಸ ಮಾಡುವಾಗ ತಮಗೆ ಉಂಟಾಗುತ್ತಿರುವ ಅಪಮಾನಗಳ ಹಾಗೂ ಅತಿಯಾದ ಕೆಲಸದ ಹೊರೆಯನ್ನು ಪ್ರತಿಭಟಿಸುವ ಸಲುವಾಗಿ ಕಾರ್ಮಿಕರ ಹೋರಾಟವು ಬೇರು ಬಿಟ್ಟಿದ್ದು ಮೊದಲು ಈ ಕೇಂದ್ರಗಳಲ್ಲಿ. ಆಮೇಲೆ ಅದೇ ಕಾರ್ಮಿಕ ಚಳವಳಿಯಾಗಿ ಗುರುತಿಸುವ ಮಟ್ಟಕ್ಕೆ ಬೆಳೆಯಿತು. ಕಾರ್ಮಿಕ ವರ್ಗದ ಹೊರಗಿನಿಂದಲೂ ನಾಯಕರ ಗಮನವನ್ನು ಸೆಳೆಯಿತು. ಇಪ್ಪತ್ತನೆಯ ಶತಮಾನದ ಮೊದಲರ್ಧದಲ್ಲಿ ಮೈಸೂರಿನಲ್ಲಿ ನಡೆದ ಕಾರ್ಮಿಕ ಚಳವಳಿಯೊಂದರ ಬೆಳವಣಿಗೆಯ ಮುಖ್ಯ ಹಂತಗಳನ್ನು ಗುರುತಿಸಲು ಪ್ರಸ್ತುತ ಲೇಖನವು ಪ್ರಯತ್ನಿಸಿದೆ. ಮುಖ್ಯವಾಗಿ ಇಲ್ಲಿ ಗಮನಿಸಿರುವುದು ಬೆಂಗಳೂರು ಮತ್ತು ಕೆ.ಜಿ.ಎಫ್ ಈ ಎರಡು ಕೇಂದ್ರಗಳನ್ನು. ಏಕೆಂದರೆ ಕಾರ್ಮಿಕ ವರ್ಗದ ಚಟುವಟಿಕೆ ಚೆನ್ನಾಗಿ ಕಂಡುಬರುತ್ತಿದ್ದುದು ಇಲ್ಲಿ. ಹಾಗೆಯೇ ಮೈಸೂರು ಮತ್ತು ಭದ್ರಾವತಿಗಳನ್ನೂ ಉಲ್ಲೇಖಿಸಲಾಗುತ್ತದೆ. ಗಣನೀಯ ಸಂಖ್ಯೆಯಲ್ಲಿ ಗಂಡಸರನ್ನು ಹೆಂಗಸರನ್ನೂ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದ್ದ ಪ್ಲಾಂಟೇಷನ್ ಉದ್ಯಮವು ಒಂದು ಬಲವಾದ ವ್ಯವಸ್ಥಿತ ಕಾರ್ಮಿಕ ಚಳವಳಿಯಾಗಿ ಬೆಳೆಯಲಿಲ್ಲ. ಅದಕ್ಕೆ ಕಾರಣಗಳನ್ನು ಊಹಿಸಬೇಕು ಅಷ್ಟೆ. ಹೆಂಗಸರೇ, ಹೆಚ್ಚಾಗಿದ್ದುದು, ಕೆಲಸದ ಋತು ಸಂಬಂಧ ಸೀಮಿತತೆ, ಮತ್ತು ಬಹುತೇಕ ಕಾರ್ಮಿಕರನ್ನು ದೂರದ ಊರುಗಳಿಂದ ಕರೆದು ತರುತ್ತಿದ್ದುದು. ಇವೆಲ್ಲ ಸೇರಿ ಉದ್ಯೋಗವನ್ನು ಅನಿಶ್ಚಿತ ವನ್ನಾಗಿ ಮಾಡುತ್ತಿದ್ದವು. ಅಲ್ಲದೆ ವ್ಯಾಪಕ ರಾಜಕೀಯ ಕಾರ್ಯಕ್ರಮಗಳಿದ್ದ ಕಾರ್ಮಿಕ ನಾಯಕರನ್ನು ಈ ಕಾರ್ಮಿಕ ಸಮೂಹವು ಆಕರ್ಷಿಸಲಿಲ್ಲ. ಕಾರ್ಮಿಕರ ಬದುಕು ಬಂಡವಾಳಶಾಹಿಯ ಅನುಭವವು ರೂಪಿಸಿದ ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಕ್ರಿಯೆ ಗಳಿಗಿಂತಲೂ ಮಿಗಿಲಾಗಿ ವಸ್ತು ವಿಷಯ ಸಂಬಂಧಿಯಾದ ನಿರೂಪಣೆಯನ್ನು ಕೊಡಲು ಪ್ರಸ್ತುತ ಲೇಖನವು ಪ್ರಯತ್ನಿಸುತ್ತದೆ.

ಸಂಸ್ಥಾನದಲ್ಲಿ ಅಧಿಕಾರ

ಮೈಸೂರು ನಾಮಮಾತ್ರಕ್ಕೆ ವಸಾಹತುಶಾಹಿ ಆಳ್ವಿಕೆಯಿಂದ ಹೊರಗಾಗಿ ‘ಸ್ವತಂತ್ರ’ ವಾಗಿತ್ತು. ಆದರೂ ವಸಾಹತು ಸರಕಾರದ ಪರಮೋನ್ನತ ಪ್ರಭುತ್ವವು ಅದರ ಆರ್ಥಿಕಾಭಿವೃದ್ದಿಗೆ ಪರಿಣಾಮಕಾರಿಯಾದ ತಡೆಗಳನ್ನು ಹಾಕಿತ್ತು. ಎಂ.ವಿಶ್ವೇಶ್ವರಯ್ಯ, ಆಲ್ಫ್ರೆಡ್ ಚಾಟರ್ಟನ್ ಅಥವಾ ಮಿರ್ಜಾ ಇಸ್ಮಾಯಿಲ್ ಅಂತಹ ದಕ್ಷ ಆಡಳಿತಗಾರರ ಪ್ರತಿಭಾ ಸಂಪನ್ನ ದೂರದೃಷ್ಟಿಯ ಕ್ರಮಗಳಿದ್ದರೂ, ಪ್ರಭುತ್ವವು ಒಡ್ಡಿದ ತಡೆ ಪರಿಣಾಮಕಾರಿಯಾಗಿತ್ತು. ಆದರೆ ರಾಜಾಡಳಿತವಿದ್ದ ಸಂಸ್ಥಾನವೊಂದರಲ್ಲಿ ಅಧಿಕಾರದ ವ್ಯವಸ್ಥೆ ಬ್ರಿಟಿಷ್ ಇಂಡಿಯದ ವ್ಯವಸ್ಥೆಗಿಂತ ಕೆಲವು ಅಂಶಗಳಲ್ಲಿ ಬೇರೆಯಾಗಿತ್ತು. ಹಾಗಾಗಿ ಕಾರ್ಖಾನೆಗಳಲ್ಲಿ ಕೆಲಸದ ಗಂಟೆಗಳಿಗೆ ಸಂಬಂಧಿಸಿದಂತೆ ಕಾನೂನನ್ನು ಬ್ರಿಟಿಷ್ ಇಂಡಿಯಾದಲ್ಲಿ ಜಾರಿಗೆ ತಂದ ಕೆಲವು ವರ್ಷಗಳ ನಂತರ ಮೈಸೂರಿನಂತಹ ಸಂಸ್ಥಾನವು ಜಾರಿಗೆ ತರಬಹುದಾಗಿತ್ತು. ಅದೂ ಕಡ್ಡಾಯವೇನು ಆಗಿರಲಿಲ್ಲ. 1892ರ ಮೈಸೂರು ಕಾರ್ಖಾನೆಗಳ ಕಾನೂನಿಗೆ(ಮೈಸೂರ್ ಫ್ಯಾಕ್ಟರ್ಸಿ ಆಯಕ್ಟ್, 1892) 1914ರಲ್ಲಿ ತಿದ್ದುಪಡಿ ಮಾಡಿ ದಿನಕ್ಕೆ 11 ಗಂಟೆಗಳ ಕಾಲದ ದುಡಿಮೆಯನ್ನು ಜಾರಿಗೊಳಿಸಲಾಯಿತು, ಆಮೇಲೆ ಮತ್ತೆ 1925ರಲ್ಲಿ ಅದಕ್ಕೆ ತಿದ್ದುಪಡಿಯಾಗಿ ವಾರಕ್ಕೆ 60 ಗಂಟೆಗಳ ಕಾಲ ಎಂದಾಯಿತು. 1936ರಲ್ಲಿ ದಿನಕ್ಕೆ ಒಂಬತ್ತು ಗಂಟೆ ಕೆಲಸ ಜಾರಿಗೆ ಬಂದಿತು. ಆದರೆ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಮುಂಚೆ ಬ್ರಿಟಿಷ್ ಇಂಡಿಯದಲ್ಲಿ ಜಾರಿಗೆ ಬಂದ ದಿನಕ್ಕೆ ಎಂಟು ಗಂಟೆಯ ದುಡಿಮೆಯ ಕಾನೂನು ಮೈಸೂರಿನಲ್ಲಿ ಕಾರ್ಯಗತವಾಗಲೇ ಇಲ್ಲ.

ತುಂಬಾ ಮುಖ್ಯವಾದ ಅಂಶ ಇದು. ಬ್ರಿಟಿಷ್ ಇಂಡಿಯದಲ್ಲಿ ನಡೆದ ಕಾರ್ಮಿಕ ಹೋರಾಟಗಳಿಂದ, 1926ರ ಟ್ರೇಡ್ ಯೂನಿಯನ್ ಆಕ್ಟ್ ಬರುವಂತಾಯಿತು. ಅದು ಕಾರ್ಮಿಕ ಸಂಘಗಳ(ಯೂನಿಯನ್ನುಗಳ) ಸ್ಥಾಪನೆಗೆ ಅನುಮತಿ ನೀಡಿ, ಚಳವಳಿಗಳು ನ್ಯಾಯಬದ್ಧವೆಂದು ಹೇಳಿತು. ಆದರೆ ಮೈಸೂರು 1941ರವರೆಗೂ ಅಂಥದೊಂದು ಶಾಸನವನ್ನು ಜಾರಿಗೆ ತರಲು ಬಲವಾಗಿ ನಿರಾಕರಿಸಿತು. ಆದರೆ ಯುದ್ಧ ಸಂದರ್ಭದಲ್ಲಿ ಉತ್ಪಾದನೆಯು ಶಿಖರಾವಸ್ಥೆಯಲ್ಲಿರುವಾಗ ಬೆಂಗಳೂರು, ಕೆ.ಜಿ.ಎಫ್ ಮತ್ತು ಭದ್ರಾವತಿಗಳಲ್ಲಿ ಪದೇ ಪದೇ ಉಂಟಾದ ಕೆಲಸದ ಅಸ್ತವ್ಯಸ್ತತೆಗಳಿಂದಾಗಿ ಇನ್ನು ಅದನ್ನು ಅಲಕ್ಷಿಸುವುದು ಸಾಧ್ಯವಾಗಲಿಲ್ಲ. 1941ರಲ್ಲಿ ಮೈಸೂರು ಸರಕಾರವು ತನ್ನ ಹಟವನ್ನು ಸಡಿಲಿಸಿತು. ತುರ್ತು ಕ್ರಮವಾಗಿ ಮೈಸೂರು ಟ್ರೇಡ್ ಯೂನಿಯನ್ ಆಕ್ಟ್ ಅನ್ನು ಅಂಗೀಕರಿಸಿತು.

ಟ್ರೇಡ್ ಯೂನಿಯನ್ನುಗಳಿಗೆ ಮೈಸೂರು ತೋರಿಸಿದ ಪ್ರತಿರೋಧಕ್ಕೆ ಎರಡು ಪರಿಗಣನೆಗಳು ಕಾರಣವಾಗಿದ್ದುವು. ಇಲ್ಲಿ ಯೂನಿಯನ್ನುಗಳ ರಚನೆಯನ್ನು ಕೋರುವಷ್ಟೇ ಪ್ರಮಾಣದಲ್ಲಿ ಕಾರ್ಖಾನೆಗಳಾಗಲಿ ಉದ್ಯಮಗಳಾಗಲಿ ಇಲ್ಲ ಎನ್ನುವುದು ಒಂದು ವಾದವಾಗಿತ್ತು. ಹೇಗೂ 1920ರ ವೇಳೆಗೆ ಸರಕಾರವೇ ಬೇಕಾದಷ್ಟು ಉದ್ಯಮಗಳನ್ನು ನಡೆಸುತ್ತಿತ್ತು. ರಾಷ್ಟ್ರೀಯ ಚಳವಳಿಯು ಮೈಸೂರಿನಲ್ಲಿ ಚುರುಕಾಗುತ್ತಿದ್ದಾಗ ಯೂನಿಯನ್ ಚಟುವಟಿಕೆಗಳು ಸುಲಭವಾಗಿ ಸರಕಾರ ವಿರೋಧಿ ಚಟುವಟಿಕೆಯಾಗಿ ತಿರುಗುವ ಸಂಭವ ವಿತ್ತು. ದಿವಾನರು ಪದೇ ಪದೇ ಕಾರ್ಮಿಕರಿಗೂ ನಿರ್ವಾಹಕ ಮಂಡಳಿಗೂ ನಡುವೆ ಏಳುತ್ತಿದ್ದ ವ್ಯಾಜ್ಯಗಳಲ್ಲಿ ತೀರ್ಮಾನ ಕೊಡುವ ಲೇಬರ್ ಕಮೀಶನರ್ ಆಗಿಯೂ ವರ್ತಿಸುತ್ತಿದ್ದರು. ಕೆಲವೊಮ್ಮೊಇದು ಕಾರ್ಮಿಕರಿಗೆ ಅನುಕೂಲಕರವಾಗಿರುತ್ತಿತ್ತು, 1930ರ ಕೆ.ಜಿ.ಎಫ್ ಚಳವಳಿಯ ಸಮಯದಲ್ಲಾದಂತೆ. ಆದ್ದರಿಂದ ಕಾರ್ಮಿಕರ ಹೆಸರಿನಲ್ಲಿ ನಡೆಸಬಹುದಾದ, ಕಾರ್ಮಿಕರೇ ನಡೆಸಬಹುದಾದ ಚಟುವಟಿಕೆಗಳಿಗೆ ತುಂಬಾ ಮಿತಿಗಳಿದ್ದುವು. ಒಂದು ಟ್ರೇಡ್ ಯೂನಿಯನ್ ಶಾಸನವು ಇದದ್ದು 1920 ಮತ್ತು 1930ರ ವರ್ಷ ಗಳುದ್ದಕ್ಕೂ ಆಗಾಗ ಕಾರ್ಮಿಕರು ಮುಷ್ಕರ ಮಾಡುವುದನ್ನೇನೂ ತಡೆಯಲಿಲ್ಲ. ರಾಷ್ಟ್ರೀಯತೆ, ಕಮ್ಯೂನಿಸಂ, ವಿಚಾರವಾದ ಅಥವಾ ಇನ್ನೂ ಕೆಳಮಟ್ಟದ ಜಾತಿಪರಿಗಣನೆ ಇವು ಯಾವುದೇ ಆಗಿರಲಿ, ಹೊರಗಿನ ರಾಜಕೀಯ ಆದರ್ಶಗಳ ಪ್ರಭಾವವನ್ನು ಅಡ್ಡಿಪಡಿಸಲಿಲ್ಲ ಅಥವಾ ಕಡಿಮೆ ಮಾಡಲಿಲ್ಲ.

ಪ್ರಾದೇಶಿಕ, ಐತಿಹಾಸಿಕ ಮತ್ತು ರಾಜಕೀಯ ಬೆಳವಣಿಗೆಗಳು

ಬೇರೆ ಬೇರೆ ಸಮಯಗಳಲ್ಲಿ ಬೇರೆೊಬೇರೆ ಸ್ಥಳಗಳಲ್ಲಿ ನಡೆದ ಕಾರ್ಮಿಕ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಕೈಗಾರಿಕೆಯ ನಿರ್ದಿಷ್ಟ ಲಕ್ಷಣಗಳು, ನೇಮಕಾತಿಯ ಬಗೆಗೆ ರೂಢಿಯಲ್ಲಿದ್ದ ಕ್ರಮಗಳು ಹಾಗೂ ಕಾರ್ಮಿಕ ಶಕ್ತಿಯ ರಚನೆ ಇವುಗಳ ಪರಿಜ್ಞಾನ ಅತ್ಯಂತ ಅವಶ್ಯಕ. ಇದು ಮೈಸೂರಿನ ಕಾರ್ಮಿಕರಿಗೆ ಪ್ರಿಯವಾಗುವ ಮತ್ತು ಬೇರು ಬಿಡಬಹುದಾಗಿದ್ದ ರಾಜಕೀಯ ಸಿದ್ಧಾಂತಗಳ ಬಗೆಗೆ ನಮಗೆ ಕೆಲವು ಸುಳಿವುಗಳನ್ನು ಕೊಡುತ್ತದೆ.

ನಿದರ್ಶನಕ್ಕೆ, ಬೆಂಗಳೂರು ಟೀಪುವಿನ ಕಾಲದಲ್ಲಿಯೇ ಬಟ್ಟೆಗಳನ್ನೂ ಯುದ್ಧೋಪಕರಣ ಗಳನ್ನೂ ತಯಾರಿಸುವ ಕೇಂದ್ರವಾಗಿತ್ತು. ಅದರ ನಂತರ 19ನೆಯ ಶತಮಾನದಲ್ಲಿ ಸುದೀರ್ಘ ಕಾಲದ ನಿರುದ್ಯಮೀಕರಣಕ್ಕೆ ತುತ್ತಾಯಿತು. 1880ರ ಕೊನೆಗೆ ಬಟ್ಟೆ ಗಿರಣಿಗಳನ್ನು ಸ್ಥಾಪಿಸಲು ಪ್ರಯತ್ನಗಳು ನಡೆದುವು. ಆಗ ಪ್ರಾರಂಭವಾದ ಬಿನ್ನೀಸ್ ಮತ್ತು ಮಹಾರಾಜ ಮಿಲ್ಲುಗಳು; ಮೈಸೂರು ಸರಕಾರದ ಉದಾರ ನೆರವಿನಿಂದಲೂ ನಿರ್ವಾಹಕರ ದಕ್ಷತೆಯಿಂದಲೂ 20ನೆಯ ಶತಮಾನದಲ್ಲಿ ಉಳಿದುಕೊಂಡು ಬಂದುವು. 1920ರ ಮಧ್ಯದ ವೇಳೆಗೆ ಬೆಂಗಳೂರು ಒಂದು ಬಗೆಯ ಮಿಶ್ರ ಕೈಗಾರಿಕಾ ಚಿತ್ರವನ್ನು ಬೆಳೆಸಿಕೊಂಡಿತು. ಮೊದಲನೆಯ ಮಹಾಯುದ್ಧದ ಗತಿಯಿಂದಾಗಿ, ಹಲವು ಸಣ್ಣ ಪ್ರಮಾಣದ ಬಟ್ಟೆ ಗಿರಣಿಗಳು, ತಂಬಾಕು ಕಾರ್ಖಾನೆಗಳು, ಚರ್ಮ ಹದಗೊಳಿಸುವ ಘಟಕಗಳು, ಮುದ್ರಣಾಲಯಗಳು, ಕೂಡುವಲಯದ ಉದ್ಯಮಗಳು ವಿದ್ಯುತ್ ಪರಿವರ್ತಕ ಗಳಿಂದ ಸಾಬೂನುಗಳವರೆಗೆ ವಿಧವಿಧವಾದ ವಸ್ತುಗಳನ್ನು ಉತ್ಪಾದಿಸ ತೊಡಗಿದುವು. ಎರಡನೆಯ ಮಹಾಯುದ್ಧವು ಕೈಗಾರಿಕಾ ಚಟುವಟಿಕೆಗಳಿಗೆ ಇನ್ನೂ ಹೆಚ್ಚಿನ ಚಾಲನೆಯನ್ನು ಒದಗಿಸಿತು. ಇದ್ದ ಕೈಗಾರಿಕಾ ಘಟಕಗಳ ಕಾರ್ಯ ಸಾಮರ್ಥ್ಯವನ್ನು ಗಣನೀಯವಾಗಿ ವಿಸ್ತರಿಸಲಾಯಿತು, ಹೊಸ ಹೊಸ ಘಟಕಗಳನ್ನು ತೆರೆಯಲಾಯಿತು. ಇವುಗಳ ಜೊತೆಗೆ ಕೂಡುವಲಯದ ಉದ್ಯಮಗಳ ಯಶಸ್ಸು, ಕೈಗಾರಿಕೆಗಳಿಗೆ ಸರಕಾರವು ನೀಡುವ ನೆರವಿಗೆ ಸಂಬಂಧಿಸಿದ ನೀತಿ ಇವುಗಳಿಂದಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲ್ಯಾಬೊರೇಟರಿ ಯಂತಹ ಭಾರೀ ಪ್ರಮಾಣದ ಘಟಕಗಳು 1940ರ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದವು.

ಕೆ.ಜಿ.ಎಫ್.ನ ಬೆಳವಣಿಗೆ ಸ್ಪಷ್ಟವಾಗಿಯೇ ಭಿನ್ನವಾಗಿತ್ತು. ಮೊದಲನೆಯ ಶೋಧನ ಕಾರ್ಯವು ನಡೆದದ್ದು 1873ರಲ್ಲಿ. ಅದು ಯಶಸ್ವಿಯಾಗಲಿಲ್ಲ. ಚಾಂಪಿಯನ್ ಲೋಡ್ ಅನ್ನು ಶೋಧಿಸುವರೆಗೆ ಚಿತ್ರವು ಹಾಗೆಯೇ ಇತ್ತು, ಆದರೆ ಅದಾದ ನಂತರ ಬಂಜರು ಪ್ರದೇಶವು ಬಹುಜಾಗ್ರತೆಗಾಗಿ ಗಿಜಿಗಟ್ಟುವ ಗಣಿಗಾರಿಕೆಯ ಕೇಂದ್ರವಾಗಿ ಪರಿವರ್ತಿತ ವಾಯಿತು. ಎರಡು ವಸತಿಗಳು ರಾಬರ್ಟ್ಸನ್ ಪೇಟೆ ಮತ್ತು ಆ್ಯಂಡರ್ಸನ್ ಪೇಟೆ, ಅಸ್ತಿತ್ವಕ್ಕೆ ಬಂದುದಲ್ಲದೆ, ಕಂಪೆನಿಯೂ ಕಟ್ಟಿಸಿದ ಹಲವು ಗುಡಿಸಲ ಸಾಲುಗಳು ಅಥವಾ ‘‘ಕೂಲಿಲೈನು’’ಗಳು ತಲೆಯೆತ್ತಿದುವು. ಕೆ.ಜಿ.ಎಫ್.ಪಟ್ಟಣವೇ ಈ ಕೈಗಾರಿಕೆಯ ಸೃಷ್ಟಿ. ಅದು ಸ್ವಯಂಪೂರ್ಣವಾದ, ಗಣಿಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮಾತ್ರವೇ ನಿರತರಾದವರನ್ನು ಒಳಗೊಂಡ ಪಟ್ಟಣವಾಯಿತು.

ಆಳದಲ್ಲಿ ಕೆಲಸ ಮಾಡುವುದರ ಅಪಾಯಗಳು

ಗಣಿಗಳು 8000 ಅಡಿ ಆಳವನ್ನು ಮುಟ್ಟಿದ್ದುವು. ಉರಿಗಾಂ, ನಂದಿದುರ್ಗ, ಮೈಸೂರು, ಪಾಲ್ಫಾಟ್ ಮತ್ತು ಚಾಂಪಿಯನ್ ರೀಫ್-ಈ ಐದು ಕಾರ್ಯತತ್ಪರವಾಗಿದ್ದ ಗಣಿಗಳಲ್ಲಿ ಕೆಲಸ ಮಾಡುವವರನ್ನು ಕಟ್ಟೆಚ್ಚರಿಕೆಯಿಂದ ಉಸ್ತುವಾರಿ ನೋಡುತ್ತಿದ್ದುದು ಆ ಕಾಲದ ಮೈಸೂರು ರಾಜ್ಯದ ಬೇರೆ ಯಾವುದೇ ಕೈಗಾರಿಕೆಯ ಪರಿಸ್ಥಿತಿಗಿಂತ ಬೇರೆಯೇ ಆಗಿತ್ತು. ಅಷ್ಟೇಕೆ, ಭಾರತದಲ್ಲೇ ಬೇರೊಂದು ಉದ್ಯಮದ ಪರಿಸ್ಥಿತಿಗಿಂತ ಅದು ಬೇರೆಯಾಗಿತ್ತು. ಬೆಂಗಳೂರು ತಂಬಾಕು ಕಾರ್ಖಾನೆಯಲ್ಲಾಗಲಿ, ಬಟ್ಟೆ ಗಿರಣಿಗಳಲ್ಲಾಗಲಿ ಅಷ್ಟೇ ಕಡಿಮೆ ಪ್ರಮಾಣದ ವೇತನ ಕೊಡುತ್ತಿದ್ದರಾದರೂ ಅಂತಹ ಯಾವುದೇ ಉದ್ಯಮದಲ್ಲೂ ಚಿನ್ನದ ಗಣಿಗಾರನು ಗಟ್ಟಿ ಬಂಡೆಯನ್ನು ಒಡೆದು ಕೆಲಸ ಮಾಡುವ ಅತೀವ ಶ್ರಮವಾಗಲಿ ಅಪಾಯವಾಗಲೀ ಇರಲಿಲ್ಲ. ಉತ್ಪಾದನೆ ಚಿನ್ನದ ಸ್ವರೂಪದಿಂದಾಗಿ ಭಾರತದ ಎಲ್ಲಾ ಕಡೆಗಳಿಂದ ಬಂದ ಕಾರ್ಮಿಕರೂ 1907ರ ಮೈಸೂರು ಗಣಿಗಾರಿಕೆ ನಿಯಮಗಳಿಗೆ(ಮೈಸೂರ್ ಮೈನಿಂಗ್ ರೂಲ್ಸ್) ಒಳಪಟ್ಟಿದ್ದರು. ಅವರ ಅನ್ವಯ ಕೆಲಸಗಾರರನ್ನು ‘ಗಣಿಯಿಂದ ಹೊರಹಾಕ’ಬಹುದಾಗಿತ್ತು, ರಾಜ್ಯದಿಂದ ಹೊರಕ್ಕೆ ಕಳಿಸಬಹುದಾಗಿತ್ತು. ಗಣಿಗಾರಿಕೆಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಕೊನೆಗೊಂಡು ಮೇಣದ ಬತ್ತಿಯನ್ನು ಸಹ- ಇಟ್ಟುಕೊಂಡಿದ್ದರೆ ಅಂಥವನಿಗೆ ಜುಲ್ಮಾನೆ ವಿಧಿಸಬಹುದಾಗಿತ್ತು ಮತ್ತು ಜೈಲಿಗೆ ಹಾಕಬಹುದಾಗಿತ್ತು. ‘ಕೂಲಿಗಳ ವ್ಯವಸ್ಥೆಯನ್ನು ಕೆಡಿಸುತ್ತಿದ್ದಾನೆ’ ಎಂಬು ಶಂಕೆಯುಂಟಾದರೆ ಅಂತಹವನನ್ನೂ ಈ ಕಾನೂನಿನನ್ವಯ ಶಿಕ್ಷೆಗೊಳಪಡಿಸಬಹುದಾಗಿತ್ತು. ಈ ಪ್ರದೇಶದಲ್ಲಿ ಕಂಪೆನಿಯು ಎಷ್ಟು ಶಿಕ್ಷೆಗೊಳಪಡಿಸ ಬಹುದಾಗಿತ್ತು, ಈ ಪ್ರದೇಶದಲ್ಲಿ ಕಂಪೆನಿಯು ಎಷ್ಟು ಬಲವಾಗಿದ್ದಿತೆಂದರೆ ಅದು ತಾನೇ ಒಂದು ಮಿನಿ ‘ಸರ್ಕಾರ’ದಂತೆ ಕೆಲಸ ಮಾಡುತ್ತಿತ್ತು.

ಹೀಗೆ ಕೇಂದ್ರೀಕೃತವಾದ ಕಾರ್ಮಿಕ ವರ್ಗದ ನೆಲೆಗೆ ವಿರುದ್ಧವಾದ ರೀತಿಯಲ್ಲಿ ಬೆಂಗಳೂರಿನ ಕಾರ್ಮಿಕರು ನಗರದಾದ್ಯಂತ ಸಣ್ಣ ಸಣ್ಣ ತಂಡಗಳಾಗಿ ಹರಡಿಹೋಗಿದ್ದರು. ಅಂದರೆ ಅರ್ಧ ಕಾರ್ಮಿಕರನ್ನು ಸಂಘಟಿಸುವುದಕ್ಕೆ ನೆರೆ ಹೊರೆಯ ಪ್ರದೇಶಕ್ಕಿಂತ ಕೆಲಸದ ಸ್ಥಳವೇ ಹೆಚ್ಚು ಸಂಭವನೀಯ ಪ್ರದೇಶವಾಗಿತ್ತು ಎಂದು. ಆದ್ದರಿಂದ ಚಳವಳಿಗಳು ಎಲ್ಲಾ ಘಟಕಗಳಲ್ಲೂ ಕ್ಷಿಪ್ರವಾಗಿ ಹರಡುವ ಅವಕಾಶಗಳು ಗಣಿಗಳಿಗಿಂತ ಕಡಿಮೆ ಯಾಗಿದ್ದುವು. ಅಲ್ಲಾದರೆ ಗಣಿಪಾಳೆಯದಲ್ಲಿ ಒಂದು ಚಳವಳಿಯು ಕಾಡುಗಿಚ್ಚಿನಂತೆ ವೇಗವಾಗಿ ಹರಡುತ್ತದೆ. ಕೆ.ಜಿ.ಎಫ್.ನಲ್ಲಿ ಎಂಜಿನಿಯರುಗಳು ಮತ್ತು ನಿರ್ವಾಹಕ ಸಿಬ್ಬಂದಿ ಸಾಮಾನ್ಯ ಕಾರ್ಮಿಕರಿಗಿಂತ ಅತಿ ಹೆಚ್ಚು ವೇತನ ಪಡೆದು ಬೇರೆಯೇ ವರ್ಗವಾಗಿಬಿಟ್ಟಿದ್ದುದು ಮಾತ್ರವಲ್ಲ, ಜನಾಂಗದಿಂದಲೂ ಅವರು ಬೇರೆಯಾಗಿದ್ದರು. ಏಕೆಂದರೆ ಮೇಲಧಿಕಾರಿಗಳೆಲ್ಲರೂ ಯುರೋಪಿಯನ್ನರೇ ಆಗಿದ್ದರು. ಕಾರ್ಮಿಕರು ಸಂಪೂರ್ಣವಾಗಿ ಭಾರತೀಯರು. ಅಲ್ಲದೆ ಒಂದೇ ಬಗೆಯ ಕೆಲಸವನ್ನು (ಉದಾಹರಣೆಗೆ ಎಂಜಿನ್ ಚಾಲಕ) ಮಾಡುವ ಯೂರೋಪಿಯನ್ನನು ಭಾರತಿಯ ಎಂಜಿನ್ ಚಾಲಕನಿಗಿಂತ 15ರಿಂದ 20 ಪಟ್ಟು ಹೆಚ್ಚು ವೇತನವನ್ನು ಪಡೆಯುತ್ತಿದ್ದನು. ಇದಕ್ಕೆ ವಿರುದ್ದವಾಗಿ ಬೆಂಗಳೂರು ಮತ್ತು ಭದ್ರಾವತಿಯಂತಹ ಸ್ಥಳಗಳಲ್ಲಿ ಜನಾಂಗ ಪಕ್ಷಪಾತವು ಎಂದೂ ಅಷ್ಟು ತೀವ್ರವಾಗಿರಲಿಲ್ಲ.

ಕಾರ್ಮಿಕ ವರ್ಗದ ರಚನೆ

ಕೆ.ಜಿ.ಎಫ್ ಮತ್ತು ಬೆಂಗಳೂರುಗಳೆರಡರಲ್ಲೂ ಇದ್ದ ಹೆಚ್ಚು ಸಂಖ್ಯೆಯ ಕೆಲಸಗಾರರು ನೆರೆಯ ಮದರಾಸ್ ಪ್ರೆಸಿಡೆನ್ಸಿಯಿಂದ ಬಂದು ನೆಲೆಸಿದವರು. ಹಾಗೆಯೇ ಬೆಂಗಳೂರಿನ ಬಟ್ಟೆ ಗಿರಣಿ, ತಂಬಾಕು ಕಾರ್ಖಾನೆಗಳ ಬಹುತೇಕ ಕೆಲಸಗಾರರೂ ಸೇಲಂ, ಚಿತ್ತೂರು, ಅನಂತಪುರ, ಉತ್ತರ ಆರ್ಕಾಟ್ ಮೊದಲಾದ, ಮದರಾಸ್ ಪ್ರೆಸಿಡೆನ್ಸಿಯ ಜಿಲ್ಲೆಗಳಿಂದ ಬಂದವರು. ಅಲ್ಲಿದ್ದ ಮೈಸೂರು ರಾಜ್ಯದ ಕೆಲಸಗಾರರು ಕಡಿಮೆ. ಬೆಂಗಳೂರಿನ ಕಾರ್ಮಿಕರು ಮಧ್ಯಮ ಮತ್ತು ಕೆಳ ಜಾತಿಗಳಿಂದ ಬಂದವರೇ ಹೆಚ್ಚಾಗಿದ್ದರೆ, ಕೆ.ಜಿ.ಎಫ್. ಕೆಲಸಗಾರರು ಮುಖ್ಯವಾಗಿ ಮದರಾಸ್ ಪ್ರೆಸಿಡೆನ್ಸಿಯ ಆದಿದ್ರಾವಿಡ (ಪರಯ) ಜಾತಿಗಳಿಂದ ಬಂದವರು. 1930ರಲ್ಲಿ ಕೆ.ಜಿ.ಎಫ್.ಕೆಲಸಗಾರರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪರಯರು. ಮೈಸೂರು ರಾಜ್ಯದ ಕೈಗಾರಿಕೆಗಳಲ್ಲಿ ತಮಿಳು ಮಾತನಾಡುವವರ ಪ್ರಾಧಾನ್ಯವಿದ್ದರೂ ಇಲ್ಲಿ ಪರಿಶೀಲನೆಯಲ್ಲಿರುವ ಕಾಲಾವಧಿಯಲ್ಲಿ ಭಾಷಾ ಆಧಾರದ ಮೇಲೆ ಚಲನೆಯು ಹೆಚ್ಚು ಕಡಿಮೆ ಇರಲೇ ಇಲ್ಲವೆಂದು ಹೇಳಬೇಕು.

ಕೆ.ಜಿ.ಎಫ್.ನಲ್ಲಿ ಜಾತಿ/ವರ್ಗ ಪರಿಗಣನೆಗಳು ಒಂದರ ಮೇಲೊಂದು ಬಿದ್ದು, ರಾಜಕೀಯ ಚಳವಳಿಗಳ ಯಶಸ್ವಿಗೆ ತಕ್ಕ ಪರಿಸ್ಥಿತಿಯನ್ನು ರೂಪಿಸಿದುವು. ಬೆಂಗಳೂರಿನ ಕಾರ್ಮಿಕರಲ್ಲಿ ಗಣನೀಯವಾಗಿ ವ್ಯಕ್ತವಾದ ರಾಷ್ಟ್ರೀಯತಾ ಹೋರಾಟದ ಆಕರ್ಷಣೆ ಕೆ.ಜಿ.ಎಫ್.ನಲ್ಲಿ ಹೆಚ್ಚು ಕಡಿಮೆ ಇರಲೇ ಇಲ್ಲ. ಏಕೆಂದರೆ ಜಾತಿ ಮತ್ತು ವರ್ಗ ಈ ಎರಡೂ ದಬ್ಬಾಳಿಕೆಗಳಿಗೆ ತುತ್ತಾದ ಆದಿದ್ರಾವಿಡರಿಗೆ ರಾಷ್ಟ್ರೀಯ ಮನೋಧರ್ಮವು ಮುಖ್ಯ ಕಾಳಜಿಯಾಗಲಿಲ್ಲ. ಅಲ್ಲಿ ಕಮ್ಯೂನಿಸ್ಟರೇ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದರು. ಆದರೆ, ಜಾತಿಯ ಪ್ರಶ್ನೆಗೆ ಕುರುಡಾದ ಚಳವಳಿಯು ಪರಿಶಿಷ್ಟ ಜಾತಿಗಳ ಒಕ್ಕೂಟಕ್ಕೂ ಕಮ್ಯೂನಿಸ್ಟರಿಗೂ ನಡುವೆ 1946ರಲ್ಲಿ ಉಗ್ರ ಘರ್ಷಣೆಗಳಿಗೆ ದಾರಿ ಮಾಡಿಕೊಟ್ಟಿತು.

ಬೆಂಗಳೂರಿನಂಥ ನಗರಗಳಲ್ಲಿ ರಾಷ್ಟ್ರೀಯವಾದಿಗಳು ಸಫಲರಾಗಿದ್ದರು. ಏಕೆಂದರೆ ಅಲ್ಲಿ ಕಾಂಗ್ರೆಸ್ ನಾಯಕತ್ವದಲ್ಲಿ ಮಧ್ಯಮವರ್ಗದ ಜನರನ್ನು ಒಂದೆಡೆ ತರುವಂತಹ ಕೆಲಸ ಸಾಧ್ಯವಾಗಿತ್ತು. ಬೆಂಗಳೂರಿನ ಕಾರ್ಮಿಕರು ಒಂದು ಜಾತಿಗಾಗಲಿ, ಪ್ರದೇಶಕ್ಕಾಗಲಿ, ಕುಲಕ್ಕಾಗಲಿ ಅಷ್ಟು ನಿಕಟವಾಗಿ ಸೇರಿದವರಾಗಿರಲಿಲ್ಲ. ಆದ್ದರಿಂದ ಅವರನ್ನು ರಾಷ್ಟ್ರದ ಸ್ವಾತಂತ್ರಕ್ಕಾಗಿ ಹೋರಾಡುವ ಐತಿಹಾಸಿಕ ರಾಷ್ಟ್ರೀಯತೆಯ ಕರೆಯನ್ನು ಕುರಿತು ಅಲಕ್ಷ್ಯದಿಂದಿದ್ದರು. ಅವರನ್ನು ಇತಿಹಾಸಕಾರರು ‘‘ರಾಷ್ಟ್ರೀಯತಾ ವಿರೋಧಿ’’ಗಳೆಂದೇ ಕರೆದಿರುವುದೂ ಉಂಟು.

ಇದು, ರಾಜಕೀಯ ರಾಷ್ಟ್ರೀಯತೆಯ ನಿರ್ದೇಶನಗಳಿಗನುಸಾರವಾಗಿ ಆರ್ಥಿಕ ವಿಚಾರಗಳು ಮತ್ತು ಬೇಡಿಕೆಗಳಿಗೆ ಕಾರ್ಮಿಕ ಚಳವಳಿಯು ಅಧೀನವಾಗಿತ್ತು ಎಂದು ಸೂಚಿಸಬೇಕಾಗಿಲ್ಲ. ನೌಕರಿಗೆ ಅಪಾಯವನ್ನು ತರುವಂತಿದ್ದ ತಾಂತ್ರಿಕ ಬದಲಾವಣೆಗಳನ್ನೂ ಕೆಲಸದ ವೇಗ ಅಥವಾ ಉತ್ಕಟತೆಯನ್ನೂ ಪ್ರತಿಭಟಿಸಲು, ಯಾವಾಗಲೂ ಯಶಸ್ವಿಯಾಗದೆ ಹೋದರೂ ಪ್ರಯತ್ನ ಮಾಡಿ, ಮುಂದಾದವರು ಬೆಂಗಳೂರಿನ ಕಾರ್ಮಿಕರು. 1936ರಲ್ಲಿ ನಡೆದ ತಂಬಾಕು ಕಾರ್ಖಾನೆಯ ಮುಷ್ಕರದಲ್ಲಿ ಇದು ಕಂಡುಬಂದಿತು. 1910 ಮತ್ತು 1940ರ ನಡುವಣ ಕಾಲಾವಧಿಯಲ್ಲಿ ಸಾಮಾನ್ಯವಾಗಿ ನಾಯಕರಿಲ್ಲದ ಕಾರ್ಮಿಕರು ಬಂಡವಾಳಶಾಹಿ ಕಾರ್ಯಕ್ಷೇತ್ರದ ನಿಯಮ ನಿಬಂಧನೆಗಳ ವಿರುದ್ಧವಾಗಿಯೂ ವೃತ್ತಿಗೌರವ ಹಾಗೂ ಉತ್ತಮತರ ಪರಿಸ್ಥಿತಿಗಳಿಗಾಗಿಯೂ ಹೋರಾಡಿದುದು ಕಂಡುಬಂದಿತು. ಹೋರಾಟಗಳಿಗೆ ಯಾವಾಗಲೂ ಗೆಲುವಾಗುತ್ತಿರಲಿಲ್ಲ. ಆದರೆ ಸಾಮ್ರಾಜ್ಯಶಾಹಿಯ ವಿರುದ್ಧವಾದ ಬೃಹತ್ ಆಂದೋಲನದಲ್ಲಿ ತಮ್ಮ ಮಿತ್ರಪಕ್ಷವನ್ನು ಬಲಗೊಳಿಸಲು ಆಸಕ್ತರಾದವರ ಗಮನವನ್ನು ಅವು ಸೆಳೆದವು. ಈ ಕಾಲಾವಧಿಯಲ್ಲಿ ಕಾರ್ಮಿಕರ ಹೋರಾಟಗಳು ಪಡೆದುಕೊಂಡ ರೂಪಗಳ ಸಂಕ್ಷಿಪ್ತ ವಿಶ್ಲೇಷಣೆಯಿಂದ ನಾವು ಮೈಸೂರು ರಾಜ್ಯದಲ್ಲಿ ಟ್ರೇಡ್ ಯೂನಿಯನ್ ತತ್ವವು ವಿಜಯ ಸಾಧಿಸಿದ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಕಾರ್ಮಿಕ ಪ್ರತಿಭಟನೆಯ ರೂಪಗಳು

ಬಂಡವಾಳಶಾಹಿಯ ಕಾರ್ಯಕ್ಷೇತ್ರದಲ್ಲಿ ಕೆಲಸದ ಪರಿಸ್ಥಿತಿಗಳ ವಿರುದ್ಧವಾಗಿ ಪ್ರತಿಭಟನೆಯೆನ್ನುವುದು ಬಂಡವಾಳಶಾಹಿಯಷ್ಟೇ ಹಳೆಯದು. ಕೆ.ಜಿ.ಎಫ್. ಮತ್ತು ಬೆಂಗಳೂರುಗಳೆರಡರಲ್ಲೂ ಸುವ್ಯಕ್ತವಾದ ನಾಯಕತ್ವವೊಂದು ರೂಪುಗೊಳ್ಳುವುದಕ್ಕೆ ಮುಂಚಿತವಾಗಿಯೇ ಈ ಹೋರಾಟಗಳು ಯಾರಿಗೂ ಊಹಿಸಲು ಕೂಡ ಸಾಧ್ಯವಿದ್ದಿರದಷ್ಟು ಫಲಗಳನ್ನು ನೀಡಿದ್ದವು. ಎಲ್ಲಕ್ಕಿಂತ ಮುಖ್ಯವಾಗಿ ಕಾರ್ಮಿಕರು ತಮ್ಮ ಜೀವನ ಜಗತ್ತನ್ನು ವಿಶ್ಲೇಷಣೆ ಮಾಡತೊಡಗಿದುದಕ್ಕೂ, ಕೆ.ಟಿ.ಭಾಷ್ಯಂ, ಎಸ್.ಡಿ.ಶಂಕರ್ ಅಥವಾ ಪಿ.ಆರ್.ಕೆ.ಶರ್ಮ ಇಂತಹ 1920ರ ಸುಮಾರಿನಲ್ಲಿ ಕಾರ್ಮಿಕರನ್ನೇ ಸಂಘಟಿಸಲು ಉದ್ಯುಕ್ತರಾದ ಮಧ್ಯಮವರ್ಗದ ಕಾರ್ಮಿಕ ನಾಯಕರ ವಿಚಾರಗಳಿಗೂ ಸಂಬಂಧ ಕಡ್ಡಾಯವಾಗಿ ಉಂಟಾಗಿರಲಿಲ್ಲ. ಸ್ಥೂಲವಾಗಿ ಹೇಳುವುದಾದರೆ ಟ್ರೇಡ್ ಯೂನಿಯನ್ ಚೌಕಟ್ಟಿನೊಳಗೆ ಅಥವಾ ಅದರ ಹೊರಗೆ ವ್ಯಕ್ತವಾದ ಕಾರ್ಮಿಕರ ಪ್ರತಿಭಟನೆಗಳು ಐದು ಬೇರೆ ಬೇರೆ ಬಗೆಗಳಾಗಿದ್ದುವು. ಇವು ಒಂದೊಂದನ್ನು ಪ್ರತ್ಯೇಕವಾಗಿ ಚರ್ಚಿಸಬೇಕು. ಏನೇ ಇರಲಿ, ಒಂದು ಬಗೆಯ ಸಾಮೂಹಿಕ ಕ್ರಿಯೆಯನ್ನು ಕೆಲಸಗಾರರಲ್ಲಿ ಪ್ರಚೋದಿಸಿದ ಅಂಶಗಳು ಬಿಡಿಬಿಡಿಯಾಗಿ ಸಂಬಂಧರಹಿತವಾಗಿರಲಿಲ್ಲ. ಅನೇಕ ವೇಳೆ ಅನೇಕ ಬೇಡಿಕೆಗಳನ್ನು ಮುಂದಿಡಲು, ಆಡಳಿತ ವರ್ಗದ ವಿರುದ್ಧವಾಗಿ ಅಡಗಿಟ್ಟುಕೊಂಡಿದ್ದ ದೂರುಗಳನ್ನು ಎತ್ತಿ ತೋರಿಸಲು, ಅವರ ಶಕ್ತಿಯ ಎದುರಾಗಿ ಕಾರ್ಮಿಕರ ಐಕ್ಯತೆಯ ಶಕಿ್ತ ಎಷ್ಟಿದೆಯೆಂಬುದನ್ನು ತೋರಿಸಿಕೊಡಲು ಈ ಮುಷ್ಕರಗಳು ಸರಿಯಾದ ಸಂದರ್ಭ ಗಳಾಗುತ್ತಿದ್ದುವು.

ಕೆಲಸದ ಪುನರ್ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗಳು

ಕೆಲಸದ ಸ್ಥಳದಲ್ಲಿ ನಡೆಯುವ ತಾಂತ್ರಿಕ ಬದಲಾವಣೆಗಳು ಅನೇಕ ವೇಳೆ ಕೆಲಸವನ್ನು ಒತ್ತಡಗೊಳಿಸುತ್ತಿದ್ದವು. ಆದರೆ ಅದಕ್ಕೆ ತಕ್ಕಂತೆ ಕೂಲಿ ಹೆಚ್ಚುತ್ತಿರಲಿಲ್ಲ. ಹಲವರನ್ನು ಅನಗತ್ಯವೆಂದು ಕೆಲಸದಿಂದ ವಜಾ ಮಾಡುತ್ತಿದ್ದುದೂ ಉಂಟು. ನಿದರ್ಶನಕ್ಕೆ, 1920ರ ಮಧ್ಯಭಾಗದಲ್ಲಿ ಹತ್ತಿ ಗಿರಣಿಗಳಲ್ಲಿ ಡಾಬಿ ಮಗ್ಗಗಳನ್ನು ಅಳವಡಿಸಲಾಯಿತು, ಜೊತೆಗೇ ದಿನಕ್ಕೆ ಹತ್ತುಗಂಟೆ ಕೆಲಸದ ಕ್ರಮವೂ ಜಾರಿಗೆ ಬಂದಿತು. ಇದರಿಂದ ನೇಕಾರರಿಗೆ ಅಪಾರವಾದ ಕಷ್ಟಗಳುಂಟಾದವು. ಅವರು ಇನ್ನೂ ಹೆಚ್ಚು ಕಷ್ಟಪಟ್ಟು ದುಡಿಯಬೇಕಾಯಿತು. ತುಂಡು ಉದ್ಯೋಗದವರಾಗಿ ಅವರ ಉತ್ಪಾದನೆ ಕಡಿಮೆಯಾಗಿ ಸಿಕ್ಕುವ ವೇತನವೂ ಕಡಿಮೆಯಾಯಿತು. ಕೆಲವು ಸಂದರ್ಭಗಳಲ್ಲಿ ಮಾಡಿಮುಗಿಸಿದ ಎತ್ತಿಗೆಗಳ ದಾಖಲೆ ಮಾಡುವ ಗಡಿಯಾರಗಳಲ್ಲಿ ಸಣ್ಣಪುಟ್ಟ ಹೊಂದಾಣಿಕೆ ಮಾಡಿ ಹೆಚ್ಚಾಗಿ ಸಂಪಾದಿಸುವ ಹಾಗೆ ಅಥವಾ ಬರುತ್ತಿರುವುದು ಕಡಿಮೆಯಾಗದ ಹಾಗೆ ಮಾಡಿಕೊಂಡರು. ಈ ರೀತಿಯಾಗಿ ಅವರು ಮೊದಲು 60 ಗಂಟೆಗಳ ವಾರದಲ್ಲಿ 70,000 ಎತ್ತಿಗೆ(Picks)ಗಳನ್ನು ದಾಖಲಿಡಬೇಕಾಗಿದ್ದಾಗ, 54 ಗಂಟೆಗಳ ವಾರದಲ್ಲಿ 75,000 ಎತ್ತಿಗೆಗಳ ಬೇಡಿಕೆಯನ್ನು ದಾಖಲೆಯಲ್ಲಿ ಪೂರೈಸಿದರು.

ಇತರ ಕೆಲಸ ಸಂದರ್ಭಗಳಲ್ಲಿ ಕೆಲಸಗಾರನು ತಮ್ಮ ಜೀವನೋಪಾಯದ ಮೇಲೆ ಹಾನಿಯನ್ನು ಉಂಟು ಮಾಡುತ್ತಿದ್ದ ತಾಂತ್ರಿಕತೆಗಳ ವಿರುದ್ಧವಾಗಿ ಬಹಿರಂಗವಾಗಿಯೇ ಪ್ರತಿಭಟಿಸಿದರು. ಉದಾಹರಣೆಗೆ 1936ರಲ್ಲಿ ಎಂಪೇರಿಯಲ್ ತಂಬಾಕು ಕಾರ್ಖಾನೆಯು ನೂತನ ತಂತ್ರಜ್ಞಾನವನ್ನು ಅಳವಡಿಸಿತು. ಇದರಿಂದಾಗಿ ಕೆಲವು ನೌಕರರನ್ನು ಕೆಲಸದಿಂದ ತೆಗೆಯಬೇಕಾಯಿತು. ಹೆಚ್ಚು ಕಡಿಮೆ ಎಲ್ಲಾ ಕೆಲಸಗಾರರ ದುಡಿಮೆಯ ಸಾಮರ್ಥ್ಯವನ್ನು ತಗ್ಗಿಸಲಾಯಿತು. ನೂತನ ಯಂತ್ರೋಪಕರಣಗಳಿಂದಾಗಿ ಮೊದಲು ಹಾನಿಗೀಡಾದವರು ಟಿಂಕರುಗಳು. ಅವರೇ ಮೊದಲು ಮುಷ್ಕರ ಹೂಡಿದುದರಲ್ಲಿ ಆಶ್ಚರ್ಯವಿಲ್ಲ. ಪ್ಯಾಕಿಂಗ್ ವಿಭಾಗದಲ್ಲಿ ಕೆಲಸ ಮಾಡುವ ಹೆಂಗಸರು ಕ್ಷಿಪ್ರದಲ್ಲೇ ಅವರಿಗೆ ಬೆಂಬಲ ನೀಡಿದರು.

1946 ಮೇ ಕೊನೆಯ ವೇಳೆಗೆ ಮುಷ್ಕರವು ಪೂರ್ಣ ಪ್ರಮಾಣದಲ್ಲಿತ್ತು ಅಲ್ಲಲ್ಲಿ ಲೂಟಿಯೂ ಪ್ರಾರಂಭವಾಗಿತ್ತು. ಇಬ್ಬರು ವಾಮಪಂಥೀಯ ಕಾಂಗ್ರೆಸಿಗರಾದ ಎಸ್.ಎಸ್. ಚಂಡೂರ ಮತ್ತು ಎಸ್. ರಂಗಸ್ವಾಮಿ, ಕಾರ್ಮಿಕರು ವ್ಯವಸ್ಥಿತ ರೀತಿಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಲು ಅವಕಾಶವಾಗುವಂತೆ ಒಂದು ಯೂನಿಯನ್ ಸ್ಥಾಪಿಸಿಕೊಳ್ಳ ಬೇಕೆಂದು ಪ್ರೋಚಳವಳಿ ಸಮಿತಿಯೊಂದು ರಚಿತವಾಯಿತು. ಬೇಡಿಕೆಗಳ ಪಟ್ಟಿಗೆ ವೇತನಸಹಿತ ರಜೆ, ಬಡ್ತಿಗಳು, ಹೆರಿಗೆ ಸೌಲಭ್ಯಗಳು (ಕಾರ್ಮಿಕರ ಪೈಕಿ ಶೇ.30 ರಷ್ಟು ಮಹಿಳೆಯರಿದ್ದುದರಿಂದ ಇದು ಅತಿಮುಖ್ಯವಾದ ಬೇಡಿಕೆಯಾಗಿತ್ತು), ವೇತನಸಹಿತ ಅನಾರೋಗ್ಯ ರಜೆ, ಇವುಗಳ ಜೊತೆಗೆ ಚಳವಳಿ ಮಾಡಿದುದಕ್ಕಾಗಿ ಕಾರ್ಮಿಕರ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಭರವಸೆ ಇವೂ ಸೇರಿಕೊಂಡುವು.

ಈ ಮಧ್ಯೆ ಯೂನಿಯನ್ನೊಂದಿಗೆ ಮಾತುಕತೆ ನಡೆಸಲು ಮ್ಯಾನೇಜ್ಮೆಂಟ್ ನಿರಾಕರಿಸಿತು. ಯೂನಿಯನ್ ನ್ಯಾಯಬಾಹಿರವೆಂದು ಸಾರಿತು. ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಕೇವಲ ಮೂರಕ್ಕೆ ಇಳಿಸಬೇಕಾಯಿತು. ಶಿಕ್ಷೆ ಮಾಡದಿರುವುದು, ಕೆಲಸದಿಂದ ವಜಾ ಮಾಡದಿರುವುದು ಮತ್ತು ಹೆರಿಗೆ ಸೌಲಭ್ಯಗಳ ಮಂಜೂರಾತಿ ಈ ಸೀಮಿತ ಬೇಡಿಕೆಗಳನ್ನು ಒಪ್ಪುವುದೂ ಕಷ್ಟವೆಂದು ಕಂಪೆನಿ ಭಾವಿಸಿತು. ಆದ್ದರಿಂದ ಕಾರ್ಮಿಕರು ಎರಡು ತಿಂಗಳು ಕೆಲಸವಿಲ್ಲದೆ ಕಳೆಯಬೇಕಾಯಿತು. ಆದರೆ ಸ್ವಲ್ಪ ಜನರ (1100 ಜನ ಕಾರ್ಮಿಕರು) ಕಾರ್ಯತಂಡವನ್ನು ನೇಮಿಸಿಕೊಂಡು ಕಾರ್ಖಾನೆಯನ್ನು ನಡೆಸಿದರು. ಮುಷ್ಕರವು ಸೋತಿತು, ಆದರೆ ಅದು ಕೆಲಸದಿಂದ ವಜಾ ಮಾಡುವುದರ ವಿರುದ್ಧವಾಗಿ ಮಾತ್ರವಲ್ಲ, ಉತ್ತಮ ಪರಿಸ್ಥಿತಿಗಳನ್ನು ಗಳಿಸುವುದಕ್ಕಾಗಿ ಮಾಡಿದ ಹೋರಾಟವಾಗಿತ್ತು. ಕಾರ್ಮಿಕರು ಅಪೂರ್ವವಾದ ಧೈರ್ಯಯುತ ಏಕತೆಯನ್ನು ಪ್ರದರ್ಶಿ ಸಿದರು. ಮಾಂಘೀರ್, ಸಹರಾನ್ಪುರ ಮತ್ತು ಕಲ್ಕತ್ತಾಗಳಲ್ಲಿನ ಇತರ ತಂಬಾಕು ಕಾರ್ಖಾನೆಗಳ ನೆರವನ್ನು ಪಡೆದರು.

ಅಪಮಾನಗಳ ವಿರುದ್ಧ ಪ್ರತಿಭಟನೆಗಳು

ಗಣಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ಕಾರ್ಮಿಕರು ಪದೇ ಪದೇ ಕೆಲಸವನ್ನು ನಿಲ್ಲಿಸಿ, ಕೆಲಸದ ಸ್ಥಳಗಳಲ್ಲಿ ತಮಗಾಗುತ್ತಿದ್ದ ಅಪಮಾನಗಳ ವಿರುದ್ಧ ಪ್ರತಿಭಟಿಸಿದರು. ಇಂತಹ ಮುಷ್ಕರಗಳು ಸ್ವಯಂಪ್ರೇರಿತವಾಗಿರುತ್ತಿದ್ದುವು, ಅಲ್ಪಕಾಲಿಕವಾಗಿರುತ್ತಿದ್ದುವು. ಕೆಲವೊಮ್ಮೆ ಹಿಂಸಾರೂಪಕ್ಕೆ ತಿರುಗಿದರೂ, ಕೆಲಸದಲ್ಲಿ ಕನಿಷ್ಟ ಪ್ರಮಾಣದ ಘನತೆಯನ್ನು ಕಾಪಾಡುವುದು ಅಗತ್ಯ ಎಂದು ಒತ್ತಾಯಿಸುವುದರಲ್ಲಿ ಅವರು ಯಶಸ್ವಿಯಾದರು. ಹೀಗೆ ಗೌರವಕ್ಕಾಗಿ ನಡೆದ ಕಾರ್ಮಿಕ ಹೋರಾಟದ ಉದಾಹರಣೆಯು ಕೆ.ಜಿ.ಎಫ್. ಕಾರ್ಯಕ್ಷೇತ್ರದಲ್ಲಿ ವ್ಯಕ್ತವಾಯಿತು. ಇದು ಒಟ್ಟಾರೆ ಆಶ್ಚರ್ಯಕರವೇನಲ್ಲ. ಏಕೆಂದರೆ, ಕಾರ್ಮಿಕರ ವಿವಿಧ ವ್ಯಕ್ತಿತ್ವಗಳು ವರ್ಗ, ಜಾತಿ ಮತ್ತು ಜನಾಂಗ- ಸಮಾನವಾಗಿ ಮುಖ್ಯವಾಗಿದ್ದುದು, ಅನೇಕ ವೇಳೆ ಪ್ರಶ್ನಾರ್ಹವಾಗುತ್ತಿದ್ದುದು ಇಲ್ಲಿಯೇ.

1934ರಲ್ಲಿ ಚಿನ್ನದ ಗಣಿಯ ಭಾರತೀಯ ಕಾರ್ಮಿಕನೊಬ್ಬನ ಮೇಲೆ ಯುರೋಪಿಯನ್ ನೌಕರನೊಬ್ಬನು ಹಲ್ಲೆ ಮಾಡಿದನು. ಆ ಕಾರ್ಮಿಕನು ಆತ್ಮರಕ್ಷಣೆ ಮಾಡಿಕೊಂಡು, ತಾನೂ ಯುರೋಪಿಯನ್ನನ ಮೇಲೆ ಬಿದ್ದನು. ಯೂರೋಪಿಯನ್ ನೌಕರನನ್ನು ಅಮಾನತ್ತಿನಲ್ಲಿರಿಸಲಾಯಿತು, ಆದರೆ ಭಾರತೀಯ ನೌಕರನನ್ನು ತಕ್ಷಣವೇ ಕೆಲಸದಿಂದ ವಜಾ ಮಾಡಲಾಯಿತು. 1934 ಸೆಪ್ಟೆಂಬರ್ 1 ರಂದು ನಂದಿದುರ್ಗ ಗಣಿಯ ಸುಮಾರು 100 ಜನ ಗಣಿಗಾರರು ತಮಗಾಗುತ್ತಿರುವ ತೀವ್ರ ಅನ್ಯಾಯವನ್ನು ಪ್ರತಿಭಟಿಸಿ ಕೆಲಸ ವನ್ನು ನಿಲ್ಲಿಸಿದರು, ಆದರೆ ಮರುದಿನವೇ ಕೆಲಸಕ್ಕೆ ಹಿಂದಿರುಗಿದರು. ಇಂತಹ ಮಿಂಚಿನ ಮುಷ್ಕರಗಳು ಐದು ದಶಕಗಳಿಂದ ಅಸ್ತಿತ್ವದಲ್ಲಿದ್ದು, ಈಗ ಅಸಹನೀಯವೆನಿಸಿದ್ದು ಒಂದು ವ್ಯವಸ್ಥೆಯ ವಿರುದ್ಧವಾಗಿ ಸಾಮೂಹಿಕ ಅಸಮಾಧಾನದ ಅಭಿವ್ಯಕ್ತಿಗಳಾಗಿದ್ದವು.

1941ರ ವೇಳೆಗೆ ದೌರ್ಜನ್ಯಕ್ಕೀಡಾದ ಕಾರ್ಮಿಕರ ರಕ್ಷಣೆಗಾಗಿ, ಅಧಿಕಾರದ ದುರುಪಯೋಗದ ವಿರುದ್ಧವಾಗಿ ವ್ಯವಸ್ಥೆಗೊಳ್ಳುತ್ತಿದ್ದ ಮುಷ್ಕರಗಳು ಒಂದು ಗಣಿಗೆ ಸೀಮಿತವಾಗಿ ಉಳಿಯಲಿಲ್ಲ. ಯುರೋಪಿಯನ್ನೊಬ್ಬನು ಭಾರತೀಯ ಗಣಿಗಾರನೊಬ್ಬನ ಮೇಲೆ ಹಲ್ಲೆ ಮಾಡಿದಾಗ, ಅವನಿಗೆ ಕೇವಲ 20 ರೂಪಾಯಿ ಜುಲ್ಮಾನೆ ವಿಧಿಸಿ ಸಸ್ಪೆಂಡ್ ಮಾಡಲಾಯಿತು. ಇದನ್ನು ಪ್ರತಿಭಟಿಸಿ ಮೈಸೂರು ಮೈನ್ಸ್ನಲ್ಲಿ ನೆಲದಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರು 1941 ಮೇ 12ರಿಂದ ಕೆಲಸವನ್ನು ನಿಲ್ಲಿಸಿದರು. ಆ ಯುರೋಪಿಯನ್ನನನ್ನು ಕೆಲಸದಿಂದ ವಜಾ ಮಾಡಬೇಕೆಂದು ಪಟ್ಟುಹಿಡಿದರು. ಮಾರನೆಯ ದಿನದ ವೇಳೆಗೆ ಮುಷ್ಕರವು ಹರಡಿ, ಮೈಸೂರು ಮೈನ್ಸ್ನ ಎಲ್ಲಾ 8000 ಕಾರ್ಮಿಕರೂ ಸೇರಿಕೊಂಡರು. ನೆಲದಡಿ ಕೆಲಸದ ಸಹಾಯಕ ಅಧಿಕಾರಿಯ ಒಬ್ಬ ಯುರೋಪಿಯನ್ ಪ್ರತಿನಿಧಿ ತಮ್ಮ ಸಹೋದ್ಯೋಗಿಯನ್ನು ಒದ್ದನೆಂಬ ಕಾರಣದಿಂದ ಚಾಂಪಿಯನ್ ರೀಫ್ ಕಾರ್ಮಿಕರೂ ಚಳವಳಿಗೆ ಸೇರಿಕೊಂಡರು. ಈ 13,000 ಜನ ಕೆಲಸಗಾರರು ಮತ್ತೆ ಕೆಲಸವನ್ನು ಪ್ರಾರಂಭಿಸಿದ್ದು, ಅವರನ್ನು ಸೂಕ್ತವಾಗಿ ಸಮಾಧಾನಪಡಿಸಿ ಹಾಜರಾತಿ ಬೋನಸ್ ಕೊಡುವ ಭರವಸೆಯನ್ನು ಕೊಟ್ಟ ಮೇಲೆಯೇ.

ಅಲ್ಪಾವಧಿ ಮುಷ್ಕರಗಳು ಕಾರ್ಮಿಕನು ಗಾಸಿಗೊಂಡ ತನ್ನ ಅಭಿಮಾನವನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನಗಳಾಗಿದ್ದವು. ಇವು ಎಲ್ಲೋ ಕೆಲವು ಸಾರಿ ಯಶಸ್ವಿಯಾಗುತ್ತಿದ್ದುವು. 1940ರಲ್ಲಿ ಬೆಂಗಳೂರಿನ ಖೋಡೆ ಈಶ್ವರ್ ಸಾ ಕಾರ್ಖಾನೆಯ ರಾತ್ರಿಪಾಳಿಯ ನೌಕರರು ‘ಸ್ಥಳದಲ್ಲೇ ಮಲಗಬೇಕು’ ಎಂದು ಮೇಸ್ತ್ರಿಗಳು ಅಪ್ಪಣೆ ಮಾಡಿದರು. ರಾತ್ರಿ ಯಾರಿಗೂ ತಿಳಿಯದಂತೆ ಕಾರ್ಖಾನೆಯ ವಸ್ತುಗಳನ್ನು ಕದ್ದು ಸಾಗಿಸುತ್ತಾರೆ ಎಂಬ ಹೆದರಿಕೆಯಿಂದ ತಮ್ಮ ಮೇಲೆ ಹೀಗೆ ಕಾವಲು ಹಾಕುವುದನ್ನು ಕೆಲಸಗಾರರು ಪ್ರತಿಭಟಿಸಿದರು. ಕೆಲಸ ಮುಗಿದೊಡನೆ ಮನೆಗೆ ಹೋಗಬಹುದು ಎಂದು ಮತ್ತೆ ಆದೇಶವಾಗುವವರೆಗೂ ಮುಷ್ಕರವನ್ನು ನಿಲ್ಲಿಸಲಿಲ್ಲ.

ಆದರೆ ಆತ್ಮಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ಅತ್ಯಂತ ನಾಟಕೀಯವಾದ ಒಂದು ಮುಷ್ಕರವು 1930ರ ಏಪ್ರಿಲ್ನಲ್ಲಿ ಕೆ.ಜಿ.ಎಫ್.ನಲ್ಲಿ ನಡೆಯಿತು. 1930ರ ಜನವರಿಯಲ್ಲಿ ಕೆ.ಜಿ.ಎಫ್ ವ್ಯವಸ್ಥಾಪಕರಾದ ಜಾನ್ ಟೇಲರ್ ಆ್ಯಂಡ್ ಸನ್ಸ್, ಹೊಸದಾಗಿ ಸ್ಥಾಪಸಿದ್ದ ಸೆಂಟ್ರಲ್ ಲೇಬರ್ ರಿಜಿಸ್ಟ್ರಿಯಲ್ಲಿ ಎಲ್ಲಾ ಕೆಲಸಗಾರರ ಕೈಬೆರಳ ಗುರುತುಗಳನ್ನು ಸಂಗ್ರಹಿಸತೊಡಗಿತು. 1929 ಜನವರಿಯಲ್ಲಿ ಮೈಸೂರು ಸರ್ಕಾರವು ಜಾರಿಗೆ ತಂದ ಕಾರ್ಮಿಕರ ಪರಿಹಾರ ಶಾಸನದನ್ವಯ ಬೇಡಿಕೆಗಳನ್ನು ಸೂಕ್ತ ಕಾರ್ಯ ವಿಧಾನಕ್ಕೊಳಪಡಿಸಲು ಅದು ಅಗತ್ಯವಾಗಿತ್ತು. ಕೆಲವೇ ದಿನಗಳಲ್ಲಿ ಐದು ಗಣಿಗಳಿಗೆ ಸೇರಿದ 18,000 ಗಣಿಗಾರರು ಸಂಪೂರ್ಣ ಮುಷ್ಕರ ಹೂಡಿದರು. ಬೆರಳ ಗುರುತು ಸಂಗ್ರಹಿಸುವುದನ್ನೂ ಸೆಂಟ್ರಲ್ ಲೇಬರ್ ರಿಜಿಸ್ಟ್ರಿಯನ್ನೂ ರದ್ದುಪಡಿಸಬೇಕೆನ್ನುವುದು ಅವರ ಬೇಡಿಕೆಯಾಗಿತ್ತು.

ಕಾರ್ಮಿಕರು ಬೆರಳ ಗುರುತು ಸಂಗ್ರಹವನ್ನು ಅಷ್ಟು ಬಲವಾಗಿ ಏಕೆ ವಿರೋಧಿಸಿದರು? ಭಾಗಶಃ ಅದಕ್ಕೆ ಕಾರಣ ಕೈಬೆರಳ ಗುರುತು ಹಾಗೂ ದಾಸ್ಯಗಳಿಗಿದ್ದ ಸಂಬಂಧ. ಕಾಲದಿಂದ ಬಹುತೇಕ ಜನ ಕೆ.ಜಿ.ಎಫ್. ಗಣಿಗಾರರು ಮಾರವಾಡಿ ಸಾಹುಕಾರರಿಗೆ ಸಾಲಿಗರಾಗಿರು ತ್ತಿದ್ದರು. ಅಂತಹ ಬೇಕಾದಷ್ಟು ಜನ ಸಾಹುಕಾರರು ಆ ಇಡೀ ಪ್ರದೇಶದಲ್ಲಿ ತುಂಬಿದ್ದರು. ನಿರಕ್ಷರಸ್ಥರಾದ ಕಾರ್ಮಿಕರ ಕೈಬೆರಳ ಗುರುತು ಪಡೆದುಕೊಂಡು, ಎಷ್ಟೋ ವೇಳೆ ಖಾಲಿ ಪ್ರಾಮಿಸರಿ ನೋಟುಗಳ ಮೇಲೆ ಪಡೆದುಕೊಂಡು, ಆಮೇಲೆ ಅವುಗಳನ್ನು ಕೋರ್ಟಿಗೆ ಹಾಜರುಪಡಿಸಿ ತಮಗೆ ಬರಬೇಕಾಗಿದ್ದ ಹಣಕ್ಕಾಗಿ ಅವರ ವೇತನವನ್ನು ಹಿಡಿದುಕೊಳ್ಳಲು ಆಜ್ಞೆ ಮಾಡಿಸುತ್ತಿದ್ದರು. ಇದರಿಂದ ಅನೇಕ ವೇಳೆ ಕಾರ್ಮಿಕರಿಗೆ ಮಾಸಿಕ ವೇತನವೂ ಇಲ್ಲದೆ, ಅವರಲ್ಲಿ ಎಷ್ಟೊ ಜನರು ಆ ಪ್ರದೇಶವನ್ನು ತೊರೆದೇ ಹೋಗಿ ಬಿಡಬೇಕಾಯಿತು. ಇಷ್ಟು ಸಾಲದೆಂಬಂತೆ ಬೆರಳ ಗುರುತು ಅಪರಾಧಗಳಿಗೆ ಸಂಬಂಧಪಡುತ್ತಿದ್ದಿತು. ಆ ಪ್ರದೇಶದ ವಡ್ಡರು ಮತ್ತು ಹಂದಿ ಜೋಗಿಗಳೇ ಮೊದಲಾದ ಆದಿವಾಸಿ ಬುಡಕಟ್ಟು ಜನರನ್ನು ಸರಕಾರವು ಅಪರಾಧಿಗಳೆಂದೇ ಗುರುತಿಸಿ ಸದಾ ಅವರ ಮೇಲೆ ಕಾವಲು ಹಾಕುತ್ತಿದ್ದಿತು. ಬೆರಳ ಗುರುತುಗಳಿಂದ ಅವರನ್ನು ಸಾಮಾನ್ಯವಾಗಿ ಗುರುತಿಸಲಾಗುತ್ತಿತ್ತು. ಹಾಗಾಗಿ 1930ರಲ್ಲಿ ಆಡಳಿತ ಮಂಡಳಿಯು ಬೆರಳ ಗುರುತು ಸಂಗ್ರಹಿಸತೊಡಗಿದುದು ಸಾಹುಕಾರರ ಸರಕಾರದ ವರ್ತನೆಗಳನ್ನು ಹೋಲುತ್ತಿದ್ದುದರಿಂದ ಕಾರ್ಮಿಕರು ಅದನ್ನು ವಿರೋಧಿಸಿದರು. ಹೀಗೆ ನ್ಯಾಯಾಲಯವೋ ಪೊಲೀಸ್ ದಳವೋ ನಿರಂತರ ಕಾವಲು ಹಾಕಿದ ತಮ್ಮ ಆತ್ಮಗೌರವ ಮತ್ತು ಘನತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ, ಈ ಮುಷ್ಕರವು ಒಂದು ಪ್ರಯತ್ನವಾಯಿತು.

ಮುಷ್ಕರವು 18 ದಿನಗಳ ಕಾಲ ನಡೆಯಿತು. ಕೆಲಸಗಾರರು ಸಂಧಾನಕ್ಕೆ ಇಚ್ಛಿಸಲಿಲ್ಲ. ಅದಕ್ಕೆ ಬದಲು ಅವರು ಆ ಪ್ರದೇಶವನ್ನೇ ತೊರೆದು ಹೋಗಲು ಬಯಸಿದರು. ಇನ್ನೊಂದು ಮುಖ್ಯವಾದ ಅಂಶವೆಂದರೆ, ಈ ಮುಷ್ಕರದಲ್ಲಿ ಗುರುತಿಸಬಹುದಾದ ನಾಯಕರು ಯಾರೂ ಇರಲಿಲ್ಲ. ಆದರೂ ಕಾರ್ಮಿಕರಲ್ಲಿ ಉದ್ದಕ್ಕೂ ಏಕತಾಮನೋಭಾವ, ಒಗ್ಗಟ್ಟು ಉಳಿದಿತ್ತು. ಕೊನೆಗೆ ದಿವಾನ್ ಮಿರ್ಜಾ ಇಸ್ಮಾಯಿಲ್, ಬೆರಳ ಗುರುತು ತೆಗೆದು ಕೊಳ್ಳುವ ಕ್ರಮವನ್ನು ವ್ಯವಸ್ಥಾಪಕ ಮಂಡಳಿಯು ನಿಲ್ಲಿಸುವಂತೆ ಮಾಡಿದ ಮೇಲೆಯೇ ಕಾರ್ಮಿಕರು ಕೆಲಸಕ್ಕೆ ಹಿಂದಿರುಗಿದ್ದು. ಅನಕ್ಷರಸ್ಥರಾದ ನಾಯಕರಿಲ್ಲದ ಕಾರ್ಮಿಕರು ಪ್ರಬಲವಾದ ಕಂಪೆನಿಯ/ಸರಕಾರದ ಮೇಲೆ ಮಹತ್ವಪೂರ್ಣವಾದ ವಿಜಯವನ್ನು ಗಳಿಸಿದಂತಾಯಿತು.

ಉತ್ತಮ ಕೂಲಿ ಹಾಗೂ ಕಾರ್ಯ ಪರಿಸ್ಥಿತಿಗಳಿಗಾಗಿ ಮುಷ್ಕರಗಳು

ಒಟ್ಟಾರೆ ನೋಡಿದಾಗ, ಅತ್ಯಂತ ವ್ಯವಸ್ಥಿತ ರೀತಿಯ ಮುಷ್ಕರಗಳು, ಉತ್ತಮ ವೇತನ ಮತ್ತು ಉತ್ತಮ ಕಾರ್ಯಪರಿಸ್ಥಿತಿಗಳಿಗಾಗಿ ನಡೆಸಿದ ಕೆಲವು ಹೋರಾಟಗಳಾಗಿದ್ದುವು. ವಿಶೇಷವಾಗಿ ಬಿನ್ನಿಮಿಲ್ಲಿನಲ್ಲಿ ಬೋನಸ್ ನೀಡಿಕೆಯ ವಿಷಯದಲ್ಲಿ 1926, 1930, 1931 ಮತ್ತೆ 1940, 1941ನೆಯ ವರ್ಷಗಳಲ್ಲಿ ಮುಷ್ಕರಗಳಾದುವು. ಆರು ತಿಂಗಳಿ ಗೊಮ್ಮೆ ಕೊಡುವ ಬೋನಸನ್ನು ಆಗಾಗ ಕೊಡುವ ಹೆಚ್ಚಿನ ಹಣ ಎಂದು ಪರಿಗಣಿಸದೆ, ಕಾರ್ಮಿಕನ ಕೂಲಿಯ ಭಾಗವಾಗಿಯೇ ಭಾವಿಸಲಾಗುತ್ತಿತ್ತು. ವ್ಯಾಪಾರದಲ್ಲಿ ಕುಸಿತವುಂಟಾಗಿ, ಲಾಭಕ್ಕೆ ಧಕ್ಕೆಯುಂಟಾಗಿರುವುದರಿಂದ ಬೋನಸ್ ಕೊಡಲು ಸಾಧ್ಯವಿಲ್ಲ ಎಂದು ವ್ಯವಸ್ಥಾಪಕರು ಹೇಳಿದಾಗ ಕಾರ್ಮಿಕರು ಮುಷ್ಕರ ಹೂಡಿ ಒತ್ತಡವನ್ನು ಹೇರಿದರು. ಅವರಿಗೂ ಬೋನಸ್ ಎನ್ನುವುದು ಬಹುಕಾಲದಿಂದ ನಿರೀಕ್ಷಿಸುವ ಮೊತ್ತವಾಗಿತ್ತು. ಸಾಂದರ್ಭಿಕವಾದ ಹೆಚ್ಚಿನ ವೆಚ್ಚಗಳನ್ನು ತೂಗಿಸಿಕೊಳ್ಳಲು ಅದು ಒದಗಿಬರುತ್ತಿತ್ತು.

ಅದಕ್ಕಿಂತಲೂ ಹೆಚ್ಚು ಸಾಮಾನ್ಯವಾಗಿದ್ದದ್ದು ಕಳಪೆಯಾದ ಕಾರ್ಯಪರಿಸರದ ಕಡೆಗೆ ಗಮನ ಸೆಳೆಯುವ ಮಾರ್ಗಗಳಾಗಿ ಮುಷ್ಕರಗಳನ್ನು ಹೂಡುತ್ತಿದ್ದುದು. 1920-21ರಲ್ಲಿ ಬೆಂಗಳೂರಿನ ಸರಕಾರಿ ಮುದ್ರಣಾಲಯದ ಅಚ್ಚುಮೊಳೆ ಜೋಡಿಸುವವರು ಹಲವು ಮುಷ್ಕರಗಳನ್ನು ನಡೆಸಿದರು. ಆಗ ಕೊಡುತ್ತಿದ್ದ ತುಂಡುಕೆಲಸ ಕೂಲಿಗೆ ಬದಲಾಗಿ ಗಂಟೆಯ ಕೆಲಸಕ್ಕೆ ಇಷ್ಟೆಂದು ಕೂಲಿ ಕೊಡಿ ಎಂದು ಒತ್ತಾಯಪಡಿಸಿದರು. ಆ ಹಣದಿಂದ ಪೈ ಹುಡುಗರು ಎಂಬ ಇನ್ನೊಂದು ವರ್ಗದ ನೌಕರರಿಗೆ ಕೂಲಿಯನ್ನು ಪಾವತಿ ಮಾಡಲಾಗುತ್ತಿತ್ತು. ಎರಡು ವರ್ಷಗಳಲ್ಲಿ ಕಾರ್ಮಿಕರು ಸಾಕಷ್ಟು ಗೆದ್ದರು. ಸಾಕಷ್ಟು ಸೋಲನ್ನು ಉಂಡರು. ಆದರೆ ಮುಂದುವರಿಯುತ್ತಿದ್ದ ಮುಷ್ಕರಗಳು ಕೆಲಸಗಾರರಿಗೂ ಮೇಲ್ವಿಚಾರಕರಿಗೂ ನಡುವೆ ಇರುವ ಸಂಬಂಧವನ್ನು ಮರಳಿ ರೂಪಿಸಬೇಕಾದ ಅಗತ್ಯವನ್ನು ಪೂರೈಸಿದವು. ಎಲ್ಲಕ್ಕಿಂತಲೂ ಮಿಗಿಲಾಗಿ ಬೆಂಗಳೂರು ನಗರದಲ್ಲಿ ನಡೆದ ಅತ್ಯಂತ ಪ್ರಾಚೀನ ಮುಷ್ಕರಗಳಲ್ಲಿ ಒಂದಾದ ಇದು, ಒಂದು ಯೂನಿಯನ್ ಸ್ಥಾಪಿಸಿ ಕೊಳ್ಳಲು ಕಾರ್ಮಿಕರಿಗಿರುವ ಹಕ್ಕನ್ನು ಕುರಿತಾದುದು. ಕೊನೆಗೂ ಅದನ್ನು ಒಪ್ಪಲಿಲ್ಲವಾದರೂ ಅಷ್ಟು ಹಿಂದೆಯೇ ಅದಕ್ಕಾಗಿ ದನಿ ಎತ್ತಿದ್ದು ಗಮನಾರ್ಹವಾಗಿದೆ. ಮುಂದೆ, ವಿಶೇಷವಾಗಿ 1930ರ ವೇಳೆಗೆ ಯೂನಿಯನ್ ಸ್ಥಾಪಿಸಿಕೊಳ್ಳುವ ಹಕ್ಕಿಗಾಗಿ ಒತ್ತಾಯಪಡಿಸುವ ಮುಷ್ಕರಗಳು ಸಾಮಾನ್ಯವಾದುವು.

1930ರ ಕೊನೆಯ ವರ್ಷಗಳಲ್ಲಿ ಕಾರ್ಮಿಕ ಅಶಾಂತಿ ಹೆಚ್ಚಿತ್ತು. ಸುಮಾರು 800 ಜನ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಟಿ.ಆರ್.ಮಿಲ್ನಲ್ಲಿ 1939 ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಒಂದಾದ ಮೇಲೊಂದರಂತೆ ಮೂರು ಮುಷ್ಕರಗಳು ನಡೆದುವು. ಪೊಂಗಲ್ ಆಚರಣೆಗಾಗಿ ವೇತನವನ್ನು ಮುಂಗಡವಾಗಿ ಪಡೆಯಲು, ಒಬ್ಬ ವೀರರನ್ನು ಮತ್ತೆ ಕೆಲಸಕ್ಕೆ ನೇಮಿಸಿಕೊಳ್ಳಲು, ಇನ್ನೆರಡು ವಜಾ ಸಂದರ್ಭಗಳನ್ನು ಪುನರ್ ಪರಿಶೀಲನೆಗೆ ಎತ್ತಿಕೊಳ್ಳುವಂತೆ ಮಾಡಲು ಕಾರ್ಮಿಕರು ಹೋರಾಡಿ ಗೆದ್ದರು. ಸರಕಾರಿ ಉದ್ಯಮಗಳಲ್ಲೂ ಮುಷ್ಕರಗಳು ಸಂಭವಿಸತೊಡಗಿದವು. ಪೋರ್ಸಿಲೇನ್ ಫ್ಯಾಕ್ಟರಿ ಅಂಥದೊಂದು ಕಾರ್ಖಾನೆ, ಅಶಿಸ್ತಿನ ಕಾರಣಕ್ಕಾಗಿಯೇ, ಕೆಲಸವನ್ನು ಸರಿಯಾಗಿ ಮಾಡಲಿಲ್ಲವೆಂದೋ ವಜಾ ಮಾಡಿದ್ದನ್ನು ಪ್ರತಿಭಟಿಸಿ ಅನೇಕ ಕಾರ್ಖಾನೆಗಳಲ್ಲಿ ಪ್ರತಿಭಟನೆಗಳಾದವು.

1940ರ ವೇಳೆಗೆ ಯುದ್ಧಭತ್ಯವನ್ನು ಕೊಡುವುದು ಹಾಗೂ ಯೂನಿಯನ್ನಿಗೆ ಮನ್ನಣೆ ಕೊಡುವುದು ಈ ಬೇಡಿಕೆಗಳಿಗಾಗಿ ಕೆ.ಜಿ.ಎಫ್.ನಲ್ಲಿ ಸಂಪೂರ್ಣ ಮುಷ್ಕರ ನಡೆಯಿತು. ಭದ್ರಾವತಿಯ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ಕೆಲವು ದಿನಗೂಲಿ ಕೆಲಸಗಾರರನ್ನು ವಜಾ ಮಾಡಿದ್ದನ್ನು ಪ್ರತಿಭಟಿಸಿ ಮುಷ್ಕರ ನಡೆಯಿತು. 1941 ಜನವರಿಯಲ್ಲಿ ಬೋನಸ್ ಪ್ರಶ್ನೆಯನ್ನು ಕುರಿತು ಬಿನ್ನಿಮಿಲ್ಲು ಮುಷ್ಕರ ನಿರತವಾಯಿತು. ಅದೇ ಸಮಯಕ್ಕೆ ಮೈಸೂರು ಮತ್ತು ಮಿನರ್ವಾ ಮಿಲ್ಲುಗಳಲ್ಲಿನ ಕೆಲಸಗಾರರೂ ವೇತನ ಹೆಚ್ಚಳ, ವರ್ಷಕ್ಕೆ 15 ದಿನಗಳ ವೇತನಸಹಿತ ರಜೆ, ಎರಡು ವರ್ಷ ಕೆಲಸ ಮಾಡಿದ ಎಲ್ಲರನ್ನೂ ಖಾಯಂಗೊಳಿಸುವಿಕೆ ಮತ್ತು ಅನಾರೋಗ್ಯ ರಜೆ-ಈ ಬೇಡಿಕೆಗಳಿಗಾಗಿ ಮುಷ್ಕರ ನಡೆಸಿದರು. ಇಂಪೀರಿಯಲ್ ಟೊಬ್ಯಾಕೊ ಕಂಪೆನಿಯ ಕಾರ್ಮಿಕರನ್ನು ಮಾಂಘೀರ್ ಮತ್ತು ಸಹದಾನ್ಪುರ ಘಟಕಗಳ ಕಾರ್ಮಿಕರು ಸಂಧಿಸಿ ತಮ್ಮ ಪರವಾಗಿ ಸಹಾನುಭೂತಿ ಪ್ರದರ್ಶಿಸುವ ಮುಷ್ಕರ ನಡೆಸಬೇಕೆಂದು ಕೋರಿದರು. ಈ ವೇಳೆಗೆ ಅನೇಕ ಜನ ಕಾಂಗ್ರೆಸ್ ಮುಖಂಡರು ಗಮನಾರ್ಹವಾಗಿ ಬೆಂಗಳೂರಿನಲ್ಲಿ ಕೆ.ಟಿ.ಭಾಷ್ಯಂ, ಕೆ.ಜಿ.ಎಫ್.ನಲ್ಲಿ ಕೆ.ಸಿ.ರೆಡ್ಡಿ, ಕೆಲವು ಕಿರಿಯ ವಾಮಪಂಥೀಯ ಕಾಂಗ್ರೆಸ್ ಮುಖಂಡರಾದ ಎಸ್.ಡಿ.ಶಂಕರ್, ಎಂ.ಎಸ್.ರಾಮದಾಸ್, ಸಿ.ಬಿ.ಬೊನ್ನಯ್ಯ, ಮತ್ತು ಎಸ್. ರಾಮಸ್ವಾಮಿ ಸಕ್ರಿಯವಾಗಿ ಕಾರ್ಮಿಕ ಚಳವಳಿಗಳಲ್ಲಿ ಪಾತ್ರ ವಹಿಸಿದ್ದರು. ವಿಶೇಷವಾಗಿ ಟ್ರೇಡ್ ಯೂನಿಯನ್ಗಳನ್ನು ಶಾಸನಬದ್ಧಗೊಳಿಸುವ ದಿಸೆಯಲ್ಲಿ ಇರುವ ಹೋರಾಟ ನಡೆಸಿದರು. ಅವರು ರಂಗಪ್ರವೇಶ ಮಾಡಿದ್ದು ಕೆಲಸಗಾರರು ತಮ್ಮ ಬೇಡಿಕೆಗಳನ್ನು ಬಹಿರಂಗಪಡಿಸಲು ತೊಡಗಿದ ಮೇಲೆ ಮಾತ್ರವೇ ಆದರೂ, ಬಹುಬೇಗ ಆ ಮುಷ್ಕರಗಳ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಿದರು, ತುಂಬಾ ಅಗತ್ಯವಾಗಿದ್ದ ಹೊರಗಿನವರ ಮಧ್ಯಪ್ರವೇಶವನ್ನು ಪೂರೈಸಿದರು.

ಸಂಘಸ್ಥಾಪನೆಯ ಹಕ್ಕುಗಳಿಗಾಗಿ ಮುಷ್ಕರಗಳು

ಅಸಹಕಾರ ಚಳವಳಿಯ ಸಮಯದಲ್ಲಿ ಮದರಾಸ್ ಪ್ರೆಸಿಡೆನ್ಸಿಯಿಂದ ಬಂದ ಕಾರ್ಮಿಕ ನಾಯಕರ ಚಟುವಟಿಕೆಗಳು 1921ರ ಕೊನೆಗೆ ಸ್ಥಗಿತಗೊಂಡವು. ಇದಕ್ಕೆ ಭಾಗಶಃ ಮೈಸೂರು ಸರಕಾರವು ಅಂತಹ ಹೊರಗಿನ ನಾಯಕರನ್ನು ದೂರವಿಡಲು ಕೈಗೊಂಡ ಕ್ರಮಗಳು ಮಾತ್ರ ಇನ್ನೂ ಸ್ವಲ್ಪ ಮಟ್ಟಿಗೆ ಅಸಹಕಾರ ಚಳವಳಿಯು ಒದಗಿಸಿದ ವೇಗವು ದಿಢೀರನೆ ಕ್ಷೀಣವಾದುದು ಕಾರಣಗಳಾದವು. ಮುಂಬಯಿಯ ಲೇಬರ್ ಕಚೇರಿಯಂತೆಯೇ ಮೈಸೂರಿಗೂ ಒಂದು ಲೇಬರ್ ಕಚೇರಿ ಇರಬೇಕೆಂಬುದನ್ನುೊಮೈಸೂರು ಸರಕಾರವು 1921ರಲ್ಲಿ ತಿರಸ್ಕರಿಸಿತು. ಬ್ರಿಟಿಷ್ ಇಂಡಿಯಾದಲ್ಲಿ ಈಚೆಗೆ ಜಾರಿಗೆ ಬಂದ ಮಸೂದೆಯಂತಹ ಮಸೂದೆಯನ್ನು ಅಂಗೀಕರಿಸುವುದನ್ನು ಟ್ರೇಡ್ ಯೂನಿಯನ್ಗಳನ್ನು ಮಾನ್ಯ ಮಾಡುವುದನ್ನು ನಿವಾರಿಸಿತು. ಅಷ್ಟು ಮಾತ್ರವಲ್ಲ, ಅಧಿಕೃತ ಯೂನಿಯನ್ಗಳನ್ನು, ಬಿನ್ನಿಮಿಲ್ಲಿನಲ್ಲಿರುವಂಥದನ್ನು ಪ್ರೋಇಷ್ಟೆಲ್ಲ ಮಾಡಿದ್ದಕ್ಕೆ ಆಧಾರ, ಮೈಸೂರಿನಲ್ಲಿ ಕೈಗಾರಿಕೆಗಳ ಸಂಖ್ಯೆ ಕಡಿಮೆ ಎಂಬ ನಂಬಿಕೆ. ಹಲವು ಉದ್ಯಮಗಳಲ್ಲಿ ಸರಕಾರವು ಪಾಲುಗೊಂಡಿದ್ದುದರಿಂದ ಕಾರ್ಮಿಕರ ಅಶಾಂತಿಯನ್ನು ಅಡಗಿಸಲು ಬದಲಿ ಕ್ರಮಗಳನ್ನು ಸುಲಭವಾಗಿ ಕಲ್ಪಿಸಬಹುದಾಗಿತ್ತು. ತಮ್ಮ ಕಡೆಯ ಯೂನಿಯನ್ಗಳಿಗೆ ಪ್ರೋನೀಡುವುದೆಂದಾದರೂ ಸರಿಯೆ. 1930ರಲ್ಲಿ ಭಾರತದ ಕಾರ್ಮಿಕರನ್ನು ಕುರಿತ ರಾಯಲ್ ಕಮೀಶನ್, ವ್ಹಿಟ್ಲೇಯ ನೇತೃತ್ವದಲ್ಲಿ ಭಾತದ ಎಲ್ಲಾ ಕಡೆಯೂ ಸಂಚಾರ ಮಾಡಿ ಕೈಗಾರಿಕಾ ಕೇಂದ್ರಗಳನ್ನು ಪರಿಶೀಲಿಸಿತು. ಆದರೆ ಆಯೋಗಕ್ಕೆ ಮೈಸೂರಿನಲ್ಲಿ ಸ್ವಾಗತ ದೊರೆಯಲಿಲ್ಲ. ಕೆ.ಜಿ.ಎಫ್.ನಲ್ಲಿದ್ದ ಅಗಾಧ ಕಾರ್ಮಿಕ ಸಮುದಾಯವನ್ನೂ, ಸಾವಿರಗಟ್ಟಲೆ ಕಾರ್ಮಿಕರು ಬೇರೆ ಬೇರೆ ಮಿಲ್ಲುಗಳಲ್ಲಿ, ಕಾರ್ಖಾನೆ ಗಳಲ್ಲಿ ಹಾಗೂ ಮುದ್ರಣಾಲಯಗಳಲ್ಲಿ ಕೆಲಸ ಮಾಡುತ್ತಿದ್ದುದನ್ನು ಗಮನಕ್ಕೆ ತಂದುಕೊಳ್ಳದೆ ಸರ್ಕಾರವು ಕುರುಡಾಗಿತ್ತು.

ಜಗತ್ತಿನ ಎಲ್ಲಾ ಭಾಗಗಳ ಕಾರ್ಮಿಕರಂತೆಯೇ ಮೈಸೂರಿನ ಕಾರ್ಮಿಕರೂ, ಟ್ರೇಡ್ ಯೂನಿಯನ್ ಶಾಸನವೊಂದು ಇಲ್ಲದುದು ಕಾರ್ಮಿಕ ಚಳವಳಿಗಳಿಗೆ ಎದುರಾದ ಭರವಸೆಯಲ್ಲ ಎಂಬುದನ್ನು ಸಮರ್ಥಿಸಿದರು. 1926ರಲ್ಲಿ ಭಿನ್ನಿಮಿಲ್ಲಿನ ಬೋನಸ್ ನೀಡಿಕೆಯನ್ನು ಕುರಿತಾದ ಮುಷ್ಕರವು ಹಿಂಸಾಚಾರದಲ್ಲಿ ಮುಗಿಯಿತು. ಅದರಲ್ಲಿ ಪೊಲೀಸರ ಗುಂಡಿಗೆ ನಾಲ್ಕು ಜನ ಕಾರ್ಮಿಕರು ಬಲಿಯಾದರು. ಅದಾದ ನಂತರ ಕೆಲವು ಕಾರ್ಮಿಕರು ತಮ್ಮ ಬೇಡಿಕೆಗಳನ್ನು ವ್ಯವಸ್ಥಿತ ರೀತಿಯಲ್ಲಿ ಅಭಿವ್ಯಕ್ತಿಸಲು ಒಂದು ಸಂಘದ ಅವಶ್ಯಕತೆಯಿದೆ ಎಂದು ಮನವಿ ಮಾಡಿಕೊಂಡರು. ಮಿತ ಮಾಲೀಕನಾಗಿದ್ದ ರಾಮಚಂದ್ರರಾವ್ ಸಿಂಧಿಯಾ, ನ್ಯಾಷನಲ್ ಹೈಸ್ಕೂಲಿನಲ್ಲಿ ಉಪಾಧ್ಯಾಯನಾಗಿದ್ದ ನೀಲಗಿರಿ ಸಂಜೀವಯ್ಯ ಇವರು ಕಾರ್ಮಿಕರ ಹಂಬಲಕ್ಕೆ ಸಂವೇದಿಸಿದರು. ಬೆಂಗಳೂರು ಟೆಕ್ಸ್ಟೈಲ್ಸ್ ಲೇಬರ್ ಯೂನಿಯನ್ ಸ್ಥಾಪಿಸಿದರು. ಇದನ್ನು ಮೈಸೂರು ರಾಜ್ಯದ ಅಧಿಕಾರಿಗಳು ಸ್ವಾಗತಿಸಿದರು.

ಅನತಿ ಕಾಲದಲ್ಲೇ ಜಿ.ಟಿ.ಎಲ್.ಯು ನಾಯಕತ್ವವು ಕೆ.ಟಿ.ಭಾಷ್ಯಂ ಮತ್ತು ಪಿ.ಎಂ. ರಾಮಶರ್ಮ ಇಂತಹ ನಾಯಕರ ಕೈಗೆ ಸಿಕ್ಕಿತು. ಮೈಸೂರು ಸರಕಾರವು ಇವರಿಬ್ಬರನ್ನು ‘ಅಪಾಯಕಾರಿ’ಗಳೆಂದು ಪರಿಗಣಿಸಿದ್ದಿತು. 1930ರ ಮೊದಲ ವರ್ಷಗಳಲ್ಲಿ ಈ ಕಾಂಗ್ರೆಸಿಗರಿಗೆ ಉತ್ಸಾಹಭರಿತನಾದ ವಾಮಪಂಥೀಯರಾದ ಎಸ್.ಡಿ.ಶಂಕರ್, ಕೆ.ಎಸ್. ಕುಮಾರನ್, ಸಿ.ಬಿ.ಮೊನ್ನಯ್ಯ, ಮತ್ತು ಎಂ.ಎಸ್.ರಾಮದಾಸ್ ಇಂತಹವರ ಬೆಂಬಲವು ದೊರಕಿತು. ಇವರು ಕಾರ್ಮಿಕರ ಹಿತವನ್ನು ಹೆಚ್ಚು ಗಂಭೀರವಾಗಿ ಕೈಗೆತ್ತಿಕೊಂಡರು.

ಈ ಕಾಲಾವಧಿಯುದ್ದಕ್ಕೂ ಟ್ರೇಡ್ ಯೂನಿಯನ್ ಅನ್ನು ಒಂದು ಧಾರ್ಮಿಕ ಸಂಸ್ಥೆಯಾಗಿ ನೋಂದಾಯಿಸಲಾಗುತ್ತಿತ್ತು. ಸರಕಾರದ ಸಕ್ರಿಯ ನೆರವನ್ನು ಪಡೆದೊನಿರ್ವಾಹಕ ಮಂಡಳಿಗಳು ಈ ಯೂನಿಯನ್ಗಳ ಜೊತೆ ಸಂಧಾನೊನಡೆಸಲು ನಿರಾಕರಿಸಬಹುದಾಗಿತ್ತು. ಅವುಗಳಿಗೆ ಹೊರಗಿನವರ ಅನಗತ್ಯ ಪ್ರಭಾವವಿದೆ ಎಂಬ ಕಾರಣದಿಂದ. ಆದರೆ ಬಹುಬೇಗ ವ್ಯಕ್ತವಾದಂತೆ, ಕಾರ್ಮಿಕರ ಪ್ರಾತಿನಿಧಿಕ ಸಮೂಹವೊಂದಕ್ಕಿಂತಲೂ ಕಾರ್ಮಿಕರ ಬೃಹತ್ ಸಮೂಹವು ಆಡಳಿತ ಮಂಡಳಿಗಳನ್ನು ದಿಗಿಲುಗೊಳಿಸುತ್ತಿತ್ತು. 1930ರ ಕೆ.ಜಿ.ಎಫ್. ಮುಷ್ಕರದಲ್ಲಿ ಕಂಪೆನಿಯು/ಸರಕಾರವು ಪ್ರಾತಿನಿಧಿಕೊಅಂಗವೊಂದರ ಜರೂರು ಅಗತ್ಯವನ್ನು ಮನಗಂಡಿತು. ಬೃಹದಾಕಾರದ ಅನಾಮಿಕ ಆದರೆ ಪೂರ್ಣವಾಗಿ ಐಕಮತ್ಯವುಳ್ಳ ಕಾರ್ಮಿಕ ಪಡೆಯನ್ನು ಎದುರಿಸಿ ವ್ಯವಹರಿಸುವುದು ತನಗೆ ಸಾಧ್ಯವಿಲ್ಲ ಎಂದು ಸರಕಾರಕ್ಕೆ ಮನವರಿಕೆಯಾಯಿತು. 1931ರಲ್ಲಿ ಬೋನಸ್ ಸಾಕಾರವನ್ನು ಕುರಿತು ಮತ್ತೆ ಸುವ್ಯವಸ್ಥಿತವಾದ, ಆದರೆ ಇಂಥವರು ನಾಯಕರೆಂದು ಹೇಳಲಾಗದ ಮತ್ತೊಂದು ಮುಷ್ಕರವು ನಡೆಯಿತು. ಆಗ ಒಂದು ಅಧಿಕೃತವೂ ಒಂದು ಅನಧಿಕೃತವೂ ಆದ ಯೂನಿಯನ್ಗಳಿದ್ದರೂ ಮುಷ್ಕರವನ್ನು ವ್ಯವಸ್ಥೆಗೊಳಿಸಿದ್ದಲ್ಲಿ ತಮ್ಮ ಪಾತ್ರವಿಲ್ಲವೆಂದು ಹೇಳಿದವು. ಸಂಕ್ಷಿಪ್ತಾವಧಿಯ ಧರಣಿ ಮುಷ್ಕರವು ನಾಲ್ವರು ಕಾರ್ಮಿಕರ ಮರಣದಲ್ಲಿ ಕೊನೆಗೊಂಡಿತು. ‘‘ನಾಯಕನಿಲ್ಲದ ಮುಷ್ಕರ’’ವು ರಾಜ್ಯದ ಅಧಿಕಾರಿಗಳು ಮತ್ತು ನಿರ್ವಾಹಕ ಮಂಡಳಿಗಳ ಕಾಳಜಿ ಮಾತ್ರವಾಗಿರದೆ ಕಾಂಗ್ರೆಸ್ ನಾಯಕತ್ವಕ್ಕೂ ಸಂಬಂಧಪಟ್ಟಿತು. ನಗರದ ಕಾಂಗ್ರೆಸ್ ನಾಯಕರು ನಡೆಸಿದ ಅನಧಿಕೃತ ವಿಚಾರಣೆಯಿಂದ ಈ ಅಂಶವು ಸ್ಪಷ್ಟವಾಯಿತು. ಕಾರ್ಮಿಕರು ಕೆಲಸಕ್ಕೆ ಬರದೆ ದೂರ ಉಳಿಯುವಂತೆ ಮಾಡುವುದರಲ್ಲಿ ಮೇಸ್ತ್ರಿಗಳು ಅತಿಮುಖ್ಯವಾದ ಪಾತ್ರವನ್ನು ವಹಿಸಿದ್ದರು. ಆ ಬಗೆಯ ಅನಿರೀಕ್ಷಿತ ಸಂಘರ್ಷಗಳನ್ನು ನಿವಾರಿಸುವ, ಮನ್ನಣೆ ಪಡೆದ ಯೂನಿಯನ್ಗಳ ಬೇಡಿಕೆಯನ್ನು ಮತ್ತೆ ಮುಂದಿಡಲಾಯಿತು.

ತಂಬಾಕು ಕಾರ್ಖಾನೆಯಲ್ಲಿ ನಡೆದ 1936ರ ಚಳವಳಿಯು ಮತ್ತೆ ಕಾರ್ಮಿಕರ ಸಂಘವೊಂದರ ಅಗತ್ಯವನ್ನು ಬೆಟ್ಟು ಮಾಡಿ ತೋರಿಸಿತು. ಆದರೆ ಆಡಳಿತ ಮಂಡಳಿಯು ಬೆಂಗಳೂರು ಕಂಟೋನ್ಮೆಂಟಿನ ವಿಶಿಷ್ಟ ಸ್ಥಾನಮಾನವನ್ನು ಉಲ್ಲೇಖಿಸಿ, (ನೇರವಾಗಿ ಅದು ವಸಾಹತು ಅಧಿಕಾರಗಳ ಆಳ್ವಿಕೆಗೆ ಒಳಪಟ್ಟಿದ್ದು, ಮೈಸೂರು ಸರಕಾರದ ಭಾಗವಾಗಿಲ್ಲ. ಮಿಕ್ಕ ಬ್ರಿಟಿಷ್ ಇಂಡಿಯಾದಿಂದಲೂ ಅದು ಬೇರೆಯಾಗಿದೆ ಎಂದು ವಾದಿಸಿ) ಕಾರ್ಮಿಕರಿಗೆ ಯೂನಿಯನ್ ರಚಿಸಿಕೊಳ್ಳುವ ಹಕ್ಕಿಲ್ಲ ಎಂದು ವಾದಿಸಿತು. 1939ರಲ್ಲಿ ಮೈಸೂರು(ನಗರ) ರೈಲ್ವೆ ವರ್ಕ್ಷಾಪಿನ ಕೆಲಸಗಾರರು ಒಂದು ಯೂನಿಯನ್ ರಚಿಸಿಕೊಂಡರು. ವಾಮಪಂಥೀಯ ಕಾಂಗ್ರೆಸಿನ ಎಸ್.ರಾಮಸ್ವಾಮಿ ಅವರ ನಾಯಕತ್ವವನ್ನು ವಹಿಸಿದ್ದರು. ಅವರನ್ನು ನಗರದಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದಕ್ಕಾಗಿ 1939 ಮೇ ತಿಂಗಳು ಬಂಧಿಸಲಾಯಿತು. ಅವರ ವಿಚರಣೆಯನ್ನು ನೋಡಲು ಸಾವಿರಾರು ಜನ ರೈಲ್ವೆ ಕಾರ್ಮಿಕರು ನ್ಯಾಯಾಲಯಕ್ಕೆ ನುಗ್ಗಿದರು. ಅವರ ಒಗ್ಗಟ್ಟಿನ ಬಲವು ದಿಗಿಲುಗೊಳಿಸು ವಂತಿತ್ತು.

ಕೆ.ಟಿ.ಭಾಷ್ಯಂ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಮತ್ತೆ ಯೂನಿಯನ್ಗಳನ್ನು ಶಾಸನಬದ್ಧಗೊಳಿಸುವ ಅಗತ್ಯವನ್ನು ಒತ್ತಾಯಪಡಿಸಲು ಯತ್ನಿಸಿತು. ಕಾರ್ಮಿಕ ವಿಚಾರಗಳಿಗೆ ಸಂಬಂಧಿಸಿದಂತೆ ಸ್ವಲ್ಪ ಹೆಚ್ಚು ಉಗ್ರರೂಪವನ್ನು ತಳೆಯಲು ಎಡಪಂಥದ ಕಾಂಗ್ರೆಸಿಗರ ಒತ್ತಾಯವೂ ಇದ್ದಿತು. 1940ರಲ್ಲಿ ಇದಕ್ಕೊಂದು ಮೂರ್ತರೂಪ ದೊರಕಿತು. ಬಿನ್ನಿಮಿಲ್ಲಿನ ಕಾರ್ಮಿಕರು ಬೋನಸ್ ನೀಡಿಕೆಯನ್ನು ಕುರಿತು ಮುಷ್ಕರ ಹೂಡಿ ಕೆ.ಟಿ.ಭಾಷ್ಯಂ ಅವರ ನೆರವು ಕೋರಿದರು. ಆದರೆ ಭಾಷ್ಯಂ ಮುಷ್ಕರವನ್ನು ನಿಲ್ಲಿಸಲು ಕಾರ್ಮಿಕರಿಗೆ ಕರೆ ನೀಡಿದರು. 1941 ಜನವರಿಯ ವೇಳೆಗೆ ಆಡಳಿತ ಮಂಡಳಿ ಮತ್ತೊಮ್ಮೆ ಬೋನಸ್ಸನ್ನು ಡಿವಿಡೆಂಡ್ಗಳಿಗೆ ಸಂಬಂಧಗೊಳಿಸಲು ನಿರ್ಧರಿಸಿದಾಗ ಕಾರ್ಮಿಕರು ಮುಷ್ಕರ ಹೂಡಲು ನಿರ್ಧರಿಸಿದರು. ಈ ಸಾರಿ ತಮಗೆ ಮುಂದಾಳಾಗಿರಲು ಎಸ್.ಡಿ.ಶಂಕರ್, ಕೆ.ಎಸ್.ಕುಮಾರನ್ ಮತ್ತು ಎಂ.ಎಸ್.ರಾಮರಾವ್ ಅವರನ್ನು ಆಹ್ವಾನಿಸಿದರು. ಈ ವಾಮಪಂಥೀಯರು ಸಂತೋಷವಾಗಿ ನಾಯಕತ್ವ ವಹಿಸಿಕೊಂಡರು. ಒಂದು ಚಳವಳಿ ಸಮಿತಿಯನ್ನು ರಚಿಸಿ, ಕಾರ್ಮಿಕರು ಹಿಂದೆಂದೂ ಪಡೆದಿರದ ಒಂದು ಅನುಭವವನ್ನು ಪಡೆಯಲು ನೆರವಾದರು. ಇದರಿಂದ ತನ್ನ ಮುಖಂಡತ್ವಕ್ಕೆ ಅಪಾಯವಿರುವುದನ್ನು ಗ್ರಹಿಸಿದ ಭಾಷ್ಯಂ ಮುಷ್ಕರವನ್ನು ಹಿಂತೆಗೆದುಕೊಳ್ಳುವಂತೆ ನೂತನ ನಾಯಕತ್ವವನ್ನು ಒಲಿಸಲು ಶಕ್ತಿಮೀರಿ ಪ್ರಯತ್ನಿಸಿದರು. ಸದ್ಯದಲ್ಲೇ ಯೂನಿಯನ್ಗಳನ್ನು ಶಾಸನಬದ್ಧಗೊಳಿಸುವ ಒಂದು ಲೇಬರ್ ಶಾಸನವು ಸದ್ಯದಲ್ಲೇ ಅಂಗೀಕೃತವಾಗಲಿದೆ ಎಂದು ಭರವಸೆ ನೀಡಿದರು. ಆದರೆ ಈ ಮುಷ್ಕರವನ್ನು ಕೊನೆ ಗೊಳಿಸಲು ಸಾಧ್ಯವಾದದ್ದು ಮೈಸೂರು ಸರಕಾರಕ್ಕೆ ಮಾತ್ರವೇ. ಎಂಥದೇ ಪರಿಸ್ಥಿತಿಯಲ್ಲೂ ಯುದ್ಧದ ಕೆಲಸವು ನಿಲ್ಲದೆ ಮುಂದುವರಿಯತಕ್ಕದ್ದು ಎಂದು ಭಾರತ ಸರಕಾರವು ಆದೇಶಿಸಿದುದರಿಂದ ಮೈಸೂರು ಸರಕಾರವು ಮೂವರು ನಾಯಕರನ್ನು ಹಲವು ಕಾರ್ಮಿ ಕರನ್ನು ಬಂಧಿಸಿತು. ಅನೇಕರನ್ನು ಆಡಳಿತ ಮಂಡಳಿಯು ಸಸ್ಪೆಂಡ್ ಮಾಡಿತು. ಬೆಂಗಳೂರಿನಿಂದ ಹೊರಕಳಿಸಿದ ಎಸ್.ಡಿ.ಶಂಕರ್ ಅವರನ್ನು ಭದ್ರಾವತಿಯಲ್ಲಿ ಕಾಗದ ಕಾರ್ಖಾನೆ ಮತ್ತು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳಲ್ಲಿ ಯೂನಿಯನ್ ಪ್ರಾರಂಭಿಸಲು ಆಹ್ವಾನಿಸಲಾಯಿತು. ಅಲ್ಲೂ ಬೇಗನೆಯೇ ಅವರನ್ನು ಬಂಧನಕ್ಕೆ ಒಳಪಡಿಸಲಾಯಿತು.

ಈ ಮಧ್ಯೆ ಕೆ.ಜಿ.ಎಫ್.ನಲ್ಲಿ ಯುದ್ಧಭತ್ಯಗಳು ಮತ್ತು ಗ್ರಾಚ್ಯುಟಿ ವ್ಯವಸ್ಥೆಯಲ್ಲಿ ‘ಸುಧಾರಣೆ’ಗಳನ್ನು ಕುರಿತ ವಿವಾದಯುತ ಅಂಶಗಳು 1940ರ ಜುಲೈ ತಿಂಗಳಲ್ಲಿ ಮತ್ತೆ ಸಾರ್ವತ್ರಿಕ ಮುಷ್ಕರಕ್ಕೆ ಎಡೆಗೊಟ್ಟವು. ಮತ್ತೊಮ್ಮೆ ಕೆಲಸಗಾರರು ಅನೇಕ ಬೇಡಿಕೆಗಳನ್ನು ಮಂಡಿಸಿದರು. ಅವುಗಳಲ್ಲಿ ಆ ಪ್ರದೇಶದಲ್ಲಿ ಶಾಸನಬದ್ಧ ಯೂನಿಯನ್ ಸ್ಥಾಪನೆಯೂ ಒಂದು. 28 ದಿನಗಳ ಈ ಮುಷ್ಕರವು 1940 ಆಗಸ್ಟ್ ತಿಂಗಳಲ್ಲಿ ಮುಗಿಯಿತು. ಸಾಮಾನ್ಯ ವೇತನ ಹೆಚ್ಚಳವನ್ನು ಕುರಿತು ಭರವಸೆ ನೀಡಲಾಯಿತು. ಆದರೆ ಮುಷ್ಕರದ ಸ್ಥಳೀಯ ಮುಂದಾಳುಗಳಾಗಿದ್ದ ಕೆ.ಸಿ.ಫಿಲಿಪ್ ಮತ್ತು ಸುಬ್ರಮಣಿಯಂ ಅನ್ನು ಬಂಧಿಸಿ, ಮೈಸೂರು ಪಬ್ಲಿಕ್ ಸೆಕ್ಯೂರಿಟಿ ಆ್ಯಕ್ಟ್ ಪ್ರಕಾರ 1940 ಸೆಪ್ಟೆಂಬರ್ನಲ್ಲಿ ನಗರದಿಂದ ಹೊರಗಟ್ಟಲಾಯಿತು. ಮದರಾಸು ಪ್ರೆಸಿಡೆನ್ಸಿಯ ಗಡಿಯಲ್ಲಿದ್ದ ಕುಪ್ಪಂ ಎಂಬ ಸ್ಥಳವು ಯೂನಿಯನ್ನಿನ ಕೇಂದ್ರ ಸ್ಥಾನವಾಯಿತು. ಕೆ.ಜಿ.ಎಫ್. ಹೊರಗಡೆ ರಾಳ್ಲಮಿದುಗೂರು ಎಂಬಲ್ಲಿ ‘ಸ್ವಾತಂತ್ರ್ಯ ವೃಕ್ಷ’ದ ಕೆಳಗೆ ವ್ಯವಸ್ಥಿತವಾಗಿ ಸಭೆಗಳು ನಡೆದವು. ವಿ.ವಿ.ಗಿರಿ ಮತ್ತು ಅವರ ಸಹಾಯಕ ಪಿ.ಆರ್.ಕೆ. ಶರ್ಮ ಮೊದಲಾದ ಮದರಾಸಿನಿಂದ ಬಂದ ನಾಯಕರೂ ಕೂಡ ಕೆ.ಜಿ.ಎಫ್.ನಲ್ಲಿ ಒಂದು ಯೂನಿಯನ್ ಸ್ಥಾಪಿಸಲು ನಡೆಯುತ್ತಿದ್ದ ಹೋರಾಟದಲ್ಲಿ ಸೇರಿಕೊಂಡರು.

1941ರಲ್ಲಿ ಯುದ್ಧ ಕಾಲದ ಉತ್ಪಾದನೆಗಳು ಶಿಖರಾವಸ್ಥೆಯಲ್ಲಿದ್ದಾಗ, ಬೆಂಗಳೂರು, ಕೆ.ಜಿ.ಎಫ್., ಮೈಸೂರು ಮತ್ತು ಭದ್ರಾವತಿಗಳಲ್ಲಿ ಹಲವು ಕಾರ್ಖಾನೆಗಳು ಪೂರ್ವ ಸೂಚನೆಯಿಲ್ಲದೆ ಮುಷ್ಕರ ನಡೆಸುತ್ತಿದ್ದುವು. ಶಾಸನಬದ್ಧ ಟ್ರೈಡ್ ಯೂನಿಯನ್ ಸ್ಥಾಪಿಸಲು ಅವಕಾಶ ನೀಡಿ ಅದರೊಂದಿಗೆ ಸರಕಾರವೂ, ನಿರ್ವಾಹಕ ಮಂಡಳಿಯೂ ವ್ಯವಹಾರ ಮಾಡುವುದು ಉತ್ತಮ ಮತ್ತು ಅಪೇಕ್ಷಣೀಯ ಎಂಬುದು ಮೈಸೂರು ಸರಕಾರಕ್ಕೆ ಸ್ಪಷ್ಟವಾಗಿತ್ತು. 1941 ಆಗಸ್ಟ್ 26ರ ಒಂದು ಅಸಾಧಾರಣ ಗೆಜೆಟ್  ಮೈಸೂರು ಟ್ರೇಡ್ ಯೂನಿಯನ್ ಬಿಲ್ ಅನ್ನು ಕಾರ್ಯಗತಗೊಳಿಸಿತು. ಅಂತಿಮವಾಗಿ ಡಿಸೆಂಬರ್ ತಿಂಗಳಲ್ಲಿ ಅದು ಶಾಸನವಾಯಿತು. ಈ ಮಸೂದೆಯ ಮುಖ್ಯ ಉದ್ದೇಶ ‘ಸಾಧ್ಯವಾದಷ್ಟು ಮಟ್ಟಿಗೆ ಮುಷ್ಕರಗಳನ್ನು,ೊವಾಕೌಟುಗಳನ್ನು ನಿವಾರಿಸುವುದು. ಮಾತುಕತೆ ಮತ್ತು ಮಧ್ಯಸ್ಥಿಕೆಗಳ ಮೂಲಕ ಎಲ್ಲಾ ಕೈಗಾರಿಕಾ ವಿವಾದಗಳನ್ನು ಬಗೆಹರಿಸುವುದು’ ಆಗಿತ್ತು. 1942ರ ವೇಳೆಗೆ ಮೈಸೂರು ರಾಜ್ಯದ ಕಾರ್ಮಿಕರು ತಮ್ಮ ಯೂನಿಯನ್ಗಳನ್ನು ಚುನಾಯಿಸಿಕೊಳ್ಳುವ ಹಕ್ಕನ್ನು ಪಡೆದರು. ಬ್ರಿಟಿಷ್ ಇಂಡಿಯದಲ್ಲಿದ್ದ ಅವರ ಸೋದರ ಕಾರ್ಮಿಕರು 16 ವರ್ಷಗಳಿಗೂ ಹೆಚ್ಚು ಕಾಲದಿಂದ ಪಡೆದಿದ್ದ ಹಕ್ಕನ್ನು ಈಗ ಅವರು ಪಡೆದುಕೊಂಡರು.

ದೇಶದ ಸ್ವಾತಂತ್ರ್ಯಕ್ಕಾಗಿ ಚಳವಳಿ

1920ರ ವರ್ಷಗಳಿಂದ ಮೈಸೂರಿನಲ್ಲಿ ಕಾಂಗ್ರೆಸ್ ಚಳವಳಿಯು ಗರಿಗಟ್ಟಿಕೊಳ್ಳುತ್ತಿತ್ತು. ವಸಾಹತುಶಾಹಿ ಆಡಳಿತದ ವಿರುದ್ಧವಾಗಿ ವಿವಿಧ ಸಾಮಾಜಿಕ ವರ್ಗಗಳನ್ನು ತೊಡಗಿಸಿ ಕೊಳ್ಳುವ ರಾಷ್ಟ್ರೀಯ ಕಾರ್ಯಕ್ರಮದನ್ವಯ ಇಲ್ಲಿನ ಕಾರ್ಮಿಕ ವಿಚಾರಗಳನ್ನು ತನ್ನ ಕಕ್ಷೆಯೊಳಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಯಿತು. ಇದು ಸುಲಭದ ಕೆಲಸವೇನಾಗಿರಲಿಲ್ಲ. ಬೆಂಗಳೂರಿನಲ್ಲಿ ಕೆ.ಟಿ.ಭಾಷ್ಯಂ, ಕೆ.ಜಿ.ಎಫ್.ನಲ್ಲಿ ಕೆ.ಸಿ.ರೆಡ್ಡಿ ಅಂತಹ ಕಾಂಗ್ರೆಸಿಗರು ಕಾರ್ಮಿಕರನ್ನು ಕ್ರಿಯೋನ್ಮುಖಗೊಳಿಸಬೇಕಾಯಿತು. ಅದೇ ಸಮಯಕ್ಕೆ ಹದ್ದುಮೀರಿ ಹೋಗದ ಹಾಗೆ ಸುರಕ್ಷಣಾ ಮಟ್ಟದಲ್ಲಿ ತಡೆದಿಟ್ಟುಕೊಳ್ಳಬೇಕಾಗಿತ್ತು. ಕಾಂಗ್ರೆಸಿನೊಳಗೆಯೇ ಕಾಂಗ್ರೆಸ್ ಸೋಷಲಿಸ್ಟರ ಒಂದು ಉಗ್ರಗಾಮಿ ಪಂಥ ಹುಟ್ಟಿಕೊಂಡಿತು. ಎಸ್.ಡಿ.ಶಂಕರ್, ಕೆ.ಎಸ್.ಕುಮಾರನ್, ಸಿ.ಬಿ.ಮೊಣ್ಣಯ್ಯ ಮತ್ತು ಎಂ.ಎಸ್.ರಾಮರಾವ್ ಇವರು ಅಥವಾ ಕೆ.ಸಿ.ಫಿಲಿಪ್ ಅಂತಹ ಸ್ವತಂತ್ರರು ಈ ಗುಂಪಿನವರು. ಇವರು ಕಾರ್ಮಿಕ ವಲಯದಲ್ಲಿ ತಮ್ಮ ತೀವ್ರಗಾಮಿತ್ವದಿಂದ ಜನಪ್ರಿಯತೆ ಗಳಿಸಿದರು. ಅವರು ಕಾರ್ಮಿಕರ ಪ್ರತಿಭಟನೆಗಳನ್ನು ನಿಯಂತ್ರಿಸಿ ರೂಪಿಸುವುದಕ್ಕಿಂತ ಮಿಗಿಲಾಗಿ ಅವರ ಬೇಡಿಕೆಗಳಿಗೆ ಸಂವೇದಿಸಿದರು.

ಆದ್ದರಿಂದ ಮೈಸೂರಿನ ಕಾರ್ಮಿಕ ವಲಯದಲ್ಲಿ ರಾಷ್ಟ್ರೀಯತಾ ಭಾವನೆಯನ್ನು ಬೆಳೆಸುವುದು ಸುಲಭದ ಕೆಲಸವಾಗಿರಲಿಲ್ಲ. ಬೆಂಗಳೂರಿನಂತಹ ಪ್ರದೇಶಗಳಲ್ಲಿ ಅದು ಯಶಸ್ವಿಯಾಗುತ್ತಿತ್ತು. ಏಕೆಂದರೆ ಅಲ್ಲಿ ಮಧ್ಯಮವರ್ಗದ ಬುದ್ದಿಜೀವಿಗಳು ಹಾಗೂ ವಿದ್ಯಾರ್ಥಿಗಳು ಮೊದಲಾದ ಪ್ರೇರಿತ ವರ್ಗಗಳಿದ್ದು, ಅವರು ರಾಷ್ಟ್ರೀಯ ಆಂದೋಲ ನದಲ್ಲೂ ಭಾಗವಹಿಸುವಂತೆ ಕಾರ್ಮಿಕರನ್ನು ಪ್ರಚೋದಿಸುತ್ತಿದ್ದರು. ಇದಕ್ಕೆ ವಿರುದ್ದವಾಗಿ ಕೆ.ಜಿ.ಎಫ್.ನಲ್ಲಿ ರಾಷ್ಟ್ರೀಯತಾ ಭಾವನೆಯು ಕಾರ್ಮಿಕರ ಮನಸ್ಸಿಗೆ ತಟ್ಟಲೇ ಇಲ್ಲ. ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣ, ಗಣಿ ಪ್ರದೇಶದಲ್ಲಿ ಮದರಾಸಿನಿಂದ ಬಂದ ಆತ್ಮ ಗೌರವದ ಜನ ಪ್ರಧಾನವಾಗಿದ್ದದ್ದು. ಅವರು ಕಾಂಗ್ರೆಸ್ ರಾಜಕೀಯದ ರೀತಿ ನೀತಿಗಳನ್ನು ಟೀಕಿಸುತ್ತಿದ್ದರು. ಈ ಮನೋಧರ್ಮವೇ ಅಲ್ಲಿ ಜನಪ್ರಿಯವಾಗಿತ್ತು. ಪೂನಾ ಒಪ್ಪಂದದ ನಂತರ ಎರಡೂ ಕೆ.ಜಿ.ಎಫ್.ನಲ್ಲಿದ್ದ ಪರಿಶಿಷ್ಟ ಜಾತಿಗಳ ಜನರು ಗಾಂಧಿ ರಾಜಕೀಯವನ್ನು ದೂರವಿಟ್ಟರು, ಅದು ತಮ್ಮ ಹಿತವನ್ನು ರಕ್ಷಿಸಲಿಲ್ಲ ಎಂದೇ ಅವರು ಭಾವಿಸಿದ್ದರು.

ರಾಷ್ಟ್ರೀಯತೆಯ ಪ್ರಶ್ನೆಯನ್ನು ಕುರಿತು ಬೆಂಗಳೂರು ಮತ್ತು ಕೆ.ಜಿ.ಎಫ್. ಕಾರ್ಮಿಕರ ನಡುವೆ ಇದ್ದ ವ್ಯತ್ಯಾಸ 1942ರ ಆಗಸ್ಟ್ನಲ್ಲಿ ಕ್ವಿಟ್ ಇಂಡಿಯಾ ಚಳವಳಿ ನಡೆದಾಗ ಅತ್ಯಂತ ಸ್ಪಷ್ಟವಾಗಿ ವ್ಯಕ್ತವಾಯಿತು. ಬೆಂಗಳೂರಿನ ಹೆಚ್ಚು ಕಡಿಮೆ ಪ್ರತಿಯೊಂದು ಸ್ಥಾವರವೂ ಸರಕಾರವು ನಡೆಸುತ್ತಿದ್ದ ಹಿಂದೂಸ್ತಾನ್ ಏರೋನಾಟಿಕಲ್ ಲ್ಯಾಬೊರೇಟರಿ, ಬಿನ್ನಿಮಿಲ್ಸ್ , ಮಿನರ್ವ ಮಿಲ್ಸ್ ಮತ್ತು ಟೋಬ್ಯಾಕೋ ಕಂಪೆನಿಗಳಿಂದ ಮೊದಲುಗೊಂಡು ಆಮ್ಕೋ ಬ್ಯಾಟರೀಸ್ ಘಟಕ, ಸೂರ್ಯೋದಯ ಮತ್ತು ಟಿ.ಆರ್.ಮಿಲ್, ಬ್ಯಾಟರೀಸ್ ಘಟಕ, ಅಸಂಖ್ಯಾತ ಸಣ್ಣಪ್ರಮಾಣದ ಟೆಕ್ಸ್ ಟೈಲ್ಸ್ ಘಟಕಗಳು ಮತ್ತು ಹೆಂಚು ಕಾರ್ಖಾನೆಗಳವರೆಗೆ ಎಲ್ಲವುಗಳ ಕಾರ್ಮಿಕರು ಆಗಸ್ಟ್ 6ರಿಂದ ಆಗಸ್ಟ್ 22(1942) ನಡುವೆ ಹೊರಬಂದು ಚಳವಳಿ ನಡೆಸಿದರು. ಬಂಧಿತರಾದ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಪಡಿಸಿದರು. ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸರ್ಕಾರಿ ವ್ಯವಸ್ಥೆಯನ್ನು ವಿಧ್ವಂಸಗೊಳಿಸುವುದರಲ್ಲಿ, ಉಗ್ರಾಣಗಳನ್ನು ಲೂಟಿ ಮಾಡುವುದರಲ್ಲಿ, ಸಂಪರ್ಕ ವ್ಯವಸ್ಥೆಯನ್ನು ನಾಶಮಾಡುವುದರಲ್ಲಿ ಒಂದು ಗೂಡಿದರು. ಈ ಬಗೆಯ ಮುಷ್ಕರಗಳ ಸರಣಿ ಹೆಚ್ಚು ಕಾಲ ಇರಲಿಲ್ಲವಾದರೂ 1942 ಸೆಪ್ಟೆಂಬರಿನಲ್ಲಿ ಬೆಂಗಳೂರಿನ ಹತ್ತಿಬಟ್ಟೆಯ ಗಿರಣಿಗಳಲ್ಲಿ ಹೊಸತೊಂದು ಬಗೆಯ ಮುಷ್ಕರ ಪ್ರಾರಂಭವಾಯಿತು. ಈಗ ಕಾಂಗ್ರೆಸಿಗರ ಬಂಧನವನ್ನು ಕುರಿತು ಚಳವಳಿ ನಡೆಸುವುದು ಬೇಡವೆಂದು ನಾಯಕರು ಎಷ್ಟೇ ಮನವಿ ಮಾಡಿಕೊಂಡರೂ ಲೆಕ್ಕಿಸದೆ ಕಾರ್ಮಿಕರೇ ಮುಷ್ಕರಗಳನ್ನು ವ್ಯವಸ್ಥೆಗೊಳಿಸಿಕೊಂಡರು. ಮುಷ್ಕರಗಳ ಈ ಎರಡನೆಯ ಅಲೆಯ ಫಲವಾಗಿ ಅನೇಕರು ಕೆಲಸವನ್ನು ಕಳೆದುಕೊಂಡರು, ಯುದ್ಧಕಾಲ ಉತ್ಪಾದನೆಯು ಕುಂಠಿತವಾಯಿತು, ಆದರೆ ಆರ್ಥಿಕ ವಿಚಾರಗಳ ಹಾಗೆಯೇ ರಾಜಕೀಯ ವಿಚಾರಗಳಲ್ಲಿಯೂ ಸಂಘಟಿತರಾಗಲು ತಮಗೆ ಶಕ್ತಿಯಿದೆ ಎಂಬುದನ್ನು ಕಾರ್ಮಿಕರು ಸ್ಪಷ್ಟವಾಗಿ ಪ್ರದರ್ಶಿಸಿದ್ದರು.

ಇದಕ್ಕೆ ತೀರಾ ವಿರುದ್ದವಾಗಿ, 1942 ಆಗಸ್ಟ್ ತಿಂಗಳ ಬಿರುಗಾಳಿಯ ದಿನಗಳಲ್ಲಿ ಕೂಡ ಕೆ.ಜಿ.ಎಫ್.ಗಣಿ ಪ್ರದೇಶಗಳಲ್ಲಿ ಯಾವ ಗಲಭೆಯೂ ಆಗಲಿಲ್ಲ. ಎಲ್ಲವೂ ನೀರವವಾಗಿತ್ತು. ಚಾಂಪಿಯನ್ ರೀಫ್ ಗಣಿಯಲ್ಲಿ ಮಾತ್ರ ಕೆ.ಸಿ.ರೆಡ್ಡಿ ಅವರ ನೇತೃತ್ವ ದಲ್ಲಿ ಕಾರ್ಮಿಕರು, ಒಂದಾಗಿ ತುಟ್ಟಿಭತ್ಯೆಯು ಸಾಲದೆಂದು ಮುಷ್ಕರ ನಡೆಸಿದರು. ಆದರೆ ಅದನ್ನು ಬಂಧಿತರಾದ ಮೈಸೂರು ನಾಯಕರ ಪರವಾಗಿ ನಡೆಸಿದ ಮುಷ್ಕರವೆಂದು ಪರಿಗಣಿಸಲಾಯಿತು. ಆ ಪ್ರದೇಶದಲ್ಲಿದ್ದ ಆದಿದ್ರಾವಿಡ ಸಂಘಗಳಿಗೂ ಕಾಂಗ್ರೆಸಿಗೂ ನಡುವೆ ಬದ್ಧವೈಮನಸ್ಯವಿದ್ದಿತು. 1942 ಏಪ್ರಿಲ್ನಲ್ಲಿ ಉಗ್ರರೂಪದ ಘರ್ಷಣೆಗಳಾದವು. ಬ್ರಿಟಿಷ್ ವಿರೋಧಿ ನೆಲೆಗಟ್ಟಿನ ಮೇಲೆ ಕಾರ್ಮಿಕರನ್ನು ಚಳವಳಿಗೆಳೆಯಬಹುದು ಎಂಬ ಕಾಂಗ್ರೆಸಿನ ಆಸೆ ಅಲ್ಲಿ ಕೈಗೂಡದಾಯಿತು. ವೇತನ ಮತ್ತು ಕಾರ್ಯ ಪರಿಸ್ಥಿತಿಗಳ ಪ್ರಶ್ನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಲು ಅಸಮರ್ಥವಾದುದರಿಂದ ಕಾರ್ಮಿಕರು ಕಾಂಗ್ರೆಸನ್ನು ಪ್ರತಿಭಟಿಸಿದರು. ಅಷ್ಟೇ ಅಲ್ಲ, ಜಾತಿ ಅಸಮಾನತೆಗಳ ಪ್ರಶ್ನೆಗೆ ಕಾಂಗ್ರೆಸಿನ ಪ್ರತಿಕ್ರಿಯೆ ತೀರಾ ನಿರಾಶಾದಾಯಕವಾಗಿದ್ದುದೂ ಆ ವಿರೋಧಕ್ಕೆ ಕಾರಣವಾಗಿತ್ತು. ಕೆ.ಜಿ.ಎಫ್.ನಲ್ಲಿದ್ದ ಕಮ್ಯೂನಿಸ್ಟರೂ ಗಣಿಗಾರರ ಬೆಂಬಲವನ್ನು ಗಳಿಸುವುದರಲ್ಲಿ ತಕ್ಕಮಟ್ಟಿಗೆ ಯಶಸ್ಸು ಪಡೆದುದನ್ನು ನೋಡುತ್ತೇವೆ. ಆರ್ಥಿಕ ಬೇಡಿಕೆಗಳನ್ನು ಕುರಿತಂತೆ ಅವರು ಹೆಚ್ಚು ತೀವ್ರವಾದಿಗಳಾಗಿದ್ದರು, ಆದರೆ ಜಾತಿ ಪ್ರಶ್ನೆಯನ್ನು ಕುರಿತು ಕಮ್ಯೂನಿಸ್ಟರ ಪ್ರತಿಕ್ರಿಯೆ ಕಾಂಗ್ರೆಸಿನಂಥದೇ ಆಗಿತ್ತು. ಆ ಕಾರಣದಿಂದಾಗಿ ಪ್ರದೇಶದ ಕಮ್ಯೂನಿಸ್ಟರಿಗೂ ಆದಿದ್ರಾವಿಡ ಮುಖಂಡರಿಗೂ ನಡುವೆ ತೀವ್ರರೂಪದ ಕಲಹಗಳಾಗು ತ್ತಿದ್ದುವು.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕೆಲವು ಬಗೆಯ ರಾಜಕೀಯ ವಿಚಾರಗಳ ಯಶಸ್ಸು ಅನೇಕ ಅಂಶಗಳನ್ನು ಅವಲಂಬಿಸಿದ್ದಿತು. ಕೈಗಾರಿಕೆಯ ಸ್ವರೂಪ, ಕಾರ್ಮಿಕ ವರ್ಗದ ರಚನಾಸ್ವರೂಪ, ಅದಿರುವ ಸ್ಥಳ ಮುಖ್ಯವಾದ ಅಂಶಗಳಾಗಿದ್ದುವು. ಎಲ್ಲಿ ಕಾರ್ಮಿಕರು ಬೃಹತ್ ಸಮುದಾಯವೊಂದರ ಭಾಗವಾಗಿದ್ದರೋ ಅಲ್ಲಿ ರಾಷ್ಟ್ರೀಯತೆಯು ಸ್ವಲ್ಪಮಟ್ಟಿಗೆ ಯಶಸ್ವಿಯಾಗುತ್ತಿತ್ತು. ಏಕೆಂದರೆ ಅಲ್ಲಿ ‘ರಾಷ್ಟ್ರ’ ಎಂಬ ಮಾತಿಗೆ ಅರ್ಥ ದೊರಕುತ್ತಿದ್ದಿತು. ಮಾಲೀಕ ಮತ್ತು ನೌಕರರ ನಡುವಣ ಜನಾಂಗಿಕ ವ್ಯತ್ಯಾಸವು ಕೆ.ಜಿ.ಎಫ್.ನಲ್ಲಿೊಕಣ್ಣು ಕುಕ್ಕುವಂತಿದ್ದಿತು. ಗಣಿಗಳಲ್ಲಿ ಮೇಲುವರ್ಗದವರಿಗೂ ಗಣಿಗಾರರ ಬೃಹತ್ ಸಮುದಾಯಕ್ಕೂ ನಡುವೆ ಅಗಾಧವಾದ ತೆರಪು ಇದ್ದಿತು. ಹಾಗೆ ನೋಡಿದರೆ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಪ್ರತಿಭಟನೆ ಕೆ.ಜಿ.ಎಫ್.ಕಾರ್ಮಿಕನ ಪಾಲಿಗೆ ಹೆಚ್ಚು ಅರ್ಥಪೂರ್ಣವಾಗಿರಬೇಕಾಗಿತ್ತು. ಆದರೆ ನಾವು ನೋಡಿರುವಂತೆ ಹಾಗಾಗಲಿಲ್ಲ. ಕೆ.ಜಿ.ಎಫ್ ಗಣಿಗಾರನಿಗೆ ಜಾತಿಯೇ ಮೊದಲಾದ ಆರ್ಥಿಕ ಮತ್ತು ಸಾಮಾಜಿಕ ವಿಚಾರಗಳು ಬಹುಮುಖ್ಯವಾದುವು, ಯಾವುದೇ ರಾಜಕೀಯ ವಿಚಾರ ಅವರನ್ನುೊತಟ್ಟಲಿಲ್ಲ, ಅದಕ್ಕೆ ವಿರುದ್ಧವಾಗಿ, ಹಿಂದೂ ವರ್ಣೀಯ ಸಮಾಜವು ಕೊಟ್ಟಿರದಿದ್ದ ಅವಕಾಶಗಳನ್ನು ಆತ್ಮಗೌರವಗಳನ್ನು ಕೊಟ್ಟಿದ್ದಕ್ಕಾಗಿ ಪರಿಶಿಷ್ಟ ವರ್ಗದ ಗಣಿಗಾರರು ಗಣಿಗಳ ವ್ಯವಸ್ಥಾಪಕರಿಗೂ ವಸಾಹತು ಸರಕಾರಕ್ಕೂ ಕೃತಜ್ಞತೆ ಅರ್ಪಿಸಿದರು.

ಕಾರ್ಮಿಕರ ರಾಜಕೀಯ ಪ್ರಪಂಚ

ಮೈಸೂರಿನಲ್ಲಿ ಕಾರ್ಮಿಕ ಚಳವಳಿಯನ್ನು ತಾನು ಪ್ರಾರಂಭಿಸಿದುದಾಗಿ ಕಾಂಗ್ರೆಸ್ ಪಕ್ಷವು ಸಾಮಾನ್ಯವಾಗಿ ಹೇಳುತ್ತದೆ. ಇತಿಹಾಸಕಾರರೂ ಆ ಮಾತನ್ನು ವಿಮರ್ಶೆ ಮಾಡದೆ ಎತ್ತಿ ಹಿಡಿದಿದ್ದಾರೆ. ವಾಸ್ತವವಾಗಿ ಆ ರೀತಿ ಹೇಳಿಕೊಳ್ಳುವುದು ಸಾಧ್ಯವಿಲ್ಲ ಎನ್ನುವುದನ್ನು ನಾವು ನೋಡಿದ್ದೇವೆ. ಗಣನೀಯ ಸಂಖ್ಯೆಯ ಕೆಲಸಗಾರರಿರುವ ಸ್ಥಳಗಳಲ್ಲಿ ಒಂದೊಂದ ರಲ್ಲೂ ರಾಜಕೀಯ ಸಿದ್ಧಾಂತಗಳು ಪರಸ್ಪರ ತಾಕಲಾಡಿದುವು, ಅವುಗಳ ಯಶಸ್ಸು ಅಥವಾ ವೈಫಲ್ಯವು ಸ್ಥಳೀಯ ಶಕ್ತಿಗಳ ಆಧಾರದ ಮೇಲೆ ನಿಲ್ಲಬೇಕಾಗಿತ್ತು. ಆದ್ದರಿಂದ ಮೈಸೂರಿನಲ್ಲಿ ಟ್ರೇಡ್ ಯೂನಿಯನ್ ವಿಜಯೊಗಳಿಸಿದ್ದು ಯಾವುದೇ ಒಂದು ರಾಜಕೀಯ ಪಕ್ಷದ ಸಾಧನೆ ಎಂದು ಹೇಳಲು ಬರುವುದಿಲ್ಲ. ಅಲ್ಲದೆ ಕಾರ್ಮಿಕರು ತಮ್ಮದೇ ಅನುಭವದಿಂದ, ತಮ್ಮ ನೆರೆಹೊರೆಯ ಹಾಗೂ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಅನುಭವದಿಂದ ರೂಪಿಸಿಕೊಂಡ ಜಾಗತಿಕ ಕಲ್ಪನೆಯ ಪ್ರಾಮುಖ್ಯವನ್ನು ಕಾಂಗ್ರೆಸ್ ಕೆಳಗೆಳೆಯುವಂತಾಯಿತು.

ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾದ ಮೂರು ಬಗೆಯ ರಾಜಕೀಯ ಪ್ರಭಾವಗಳಿದ್ದುವು. ಕಾಂಗ್ರೆಸ್ ಪಕ್ಷವು ಬೆಳೆಸಿದ, ಆಮೇಲೆ ಕೆ.ಸಿ.ಫಿಲಿಪ್, ಪಿ.ಎಸ್.ರಾಮಶರ್ಮ ಮೊದಲಾದ ಕಾರ್ಮಿಕ ಧುರೀಣರು ಸಮರ್ಥಿಸಿದ ರಾಷ್ಟ್ರೀಯತಾ ಸಿದ್ಧಾಂತ; ಮೊದಲು ಕಾಂಗ್ರೆಸಿನಲ್ಲೇ ಕಾಂಗ್ರೆಸ್ ಸಮಾಜವಾದಿಗಳು ಮೊದಲು ಬೆಳೆಸಿದ ಕಮ್ಯೂನಿಸ್ಟ್ ಸಿದ್ಧಾಂತ, ಇದೇ 1942ರ ನಂತರ ಹೊಸದಾಗಿ ರೂಪುಗೊಂಡ ಕಮ್ಯೂನಿಸ್ಟ್ ಪಕ್ಷವಾಯಿತು. ಕೊನೆಯದಾಗಿ, ಸಾಮಾಜಿಕ ಚಳವಳಿಗಳು, ಆತ್ಮಗೌರವದ ಪ್ರಶ್ನೆ, ಆದಿದ್ರಾವಿಡ ಸಂಘಗಳು ಇತ್ಯಾದಿ. ಇವು 1942ರ ನಂತರ ಪರಿಶಿಷ್ಟ ಜಾತಿ ಒಕ್ಕೂಟವೆನಿಸಿಕೊಂಡಿತು. ಬೆಂಗಳೂರಿನಂತಹ ನಗರದಲ್ಲಿ ಅಸ್ತಿತ್ವದಲ್ಲಿದ್ದು ಕೆ.ಜಿ.ಎಫ್. ನಲ್ಲಿ ಬಹುಕಾಲ ಉಳಿಯುವ ಪ್ರಭಾವ ಬೀರಿತು.

ರಾಷ್ಟ್ರ, ವರ್ಗ ಮತ್ತು ಜಾತಿ

ಬೆಂಗಳೂರಿನಲ್ಲಿದ್ದ ದೀನ ಸೇವಾ ಸಂಘದಂತಹ ರಾಷ್ಟ್ರೀಯ ಮನೋಧರ್ಮವಿದ್ದ ಸುಧಾರಕರು, ಕಾರ್ಮಿಕರಲ್ಲಿ ನೈರ್ಮಲ್ಯದ ಅರಿವನ್ನು ಶಿಸ್ತಿನ ಪ್ರಜ್ಞೆಯನ್ನು ಮೂಡಿಸು ವುದರಲ್ಲಿ ಸರಕಾರದೊಂದಿಗೆ ಮತ್ತು ಕಾರ್ಖಾನೆಯ ನಿರ್ವಾಹಕರೊಂದಿಗೆ ಸಕ್ರಿಯವಾಗಿ ಸಹಕರಿಸಿದರು. ಆದರೆ ಸರಕಾರದ ಅಥವಾ ಕಾರ್ಖಾನೆಯ ಪ್ರಭುತ್ವವನ್ನು ವಿರೋಧಿಸುವ ರಾಷ್ಟ್ರೀಯತಾವಾದಿಗಳೂ ಇದ್ದರು. ನೆರೆಯ ಮದರಾಸ್ ಪ್ರೆಸಿಡೆನ್ಸಿಯ ಕಾರ್ಮಿಕ ಮುಖಂಡರು ಕೆ.ಜಿ.ಎಫ್.ನಲ್ಲೂ ಬೆಂಗಳೂರಿನಲ್ಲೂ 1920ರ ಪ್ರಾರಂಭದ ವರ್ಷಗಳಲ್ಲಿ ಸಭೆಗಳನ್ನು ನಡೆಸಿದರು. ಆದರೆ ಅವರನ್ನು ಸರಕಾರವು ಬಹಳ ಒರಟಾಗಿ ಹೊರಕಳಿಸಿದ್ದಿತು. ಮೈಸೂರಿನ ಸಭೆಗಳಲ್ಲಿ ಭಾಷಣ ಮಾಡಿದವರಲ್ಲಿ ಮುಖ್ಯರಾದವರು ಚಕ್ಕರೈ ಚೆಟ್ಟಿಯಾರ್, ಇ.ಎಲ್.ಅಯ್ಯರ್, ಎಸ್.ಎಸ್. ರಾಮಸ್ವಾಮಿ ಅಯ್ಯಂಗಾರ್, ಕುಮಾರಸ್ವಾಮೊನಾಯಕರ್ ಮತ್ತು ಸುಬ್ರಮ್ಮಣ್ಯ ಅಯ್ಯರ್ ‘ಟ್ರೂತ್’ ಎಂಬ ನಿಯತಕಾಲಿಕದ ಸಂಪಾದಕರಾಗಿದ್ದ ಕೆ.ಎಸ್.ನಾರಾಯಣಸ್ವಾಮಿ ಅಯ್ಯರ್ 1921ರಷ್ಟು ಮೊದಲೇ ಬೆಂಗಳೂರಿನ ಸರಕಾರಿ ಮುದ್ರಣಾಲಯದ ಕೆಲಸಗಾರರು ಒಂದು ಯೂನಿಯನ್ ಸ್ಥಾಪಿಸಿಕೊಳ್ಳಲು ನೆರವು ನೀಡಿದ್ದರು. ಅವರ ಈ ಪಾತ್ರವನ್ನು ಸರಕಾರವು ಮಾನ್ಯ ಮಾಡಲಿಲ್ಲ. ಅದು ಬೇರೆ ವಿಷಯ.

1920ರ ವರ್ಷಗಳಲ್ಲಿ, ಕೆ.ಟಿ.ಭಾಷ್ಯಂ, ಪಿ.ಎಂ.ರಾಮಶರ್ಮ ಮತ್ತು ಕೆ.ಸಿ.ರೆಡ್ಡಿ ಇಂತಹ ನಾಯಕರು ಮುಂದೆ ಬಂದು, ಮೈಸೂರಿನಲ್ಲಿ ಕಾರ್ಮಿಕರನ್ನು ಸಂಘಟಿಸುವುದರಲ್ಲಿ ರಾಷ್ಟ್ರೀಯ ಆಸಕ್ತಿ ಸುಸ್ಪಷ್ಟವಾಯಿತು. 1972ರ ನಂತರ ಭಾಷ್ಯಂ ಮತ್ತು ರಾಮಶರ್ಮ ಬೆಂಗಳೂರು ಟೆಕ್ಸ್ಟೈಲ್ಸ್ ಲೇಬರ್ ಯೂನಿಯನ್ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಆಗಿ ಎಲ್ಲಾ ಟೆಕ್ಸ್ಟೈಲ್ಸ್ ಮಿಲ್ಲುಗಳ ಕಾರ್ಮಿಕರು ಈ ಯೂನಿಯನ್ನಿನ ಸದಸ್ಯರಾಗುವಂತೆ ಮಾಡಲು ಬಹುವಾಗಿ ಶ್ರಮಿಸಿದರು. ಕಾಂಗ್ರೆಸ್ ನಾಯಕರು ಬಿನ್ನೀಸ್, ಮಹಾರಾಜ ಮಿಲ್ ಅಥವಾ ಮಿನರ್ವ ಮಿಲ್ ಇಂತಹ ದೊಡ್ಡ ಸ್ಥಾವರಗಳ ಪರವಾಗಿದ್ದರೇ ಹೊರತು ಸಣ್ಣ ಪ್ರಮಾಣದ ಮಿಲ್ಲುಗಳ ಕಡೆಗೆ ಅಷ್ಟಾಗಿ ಲಕ್ಷ್ಯ ಕೊಡಲಿಲ್ಲ. ಅವುಗಳಲ್ಲಿ ಹಲವನ್ನು ಕಾಂಗ್ರೆಸ್ ಸದಸ್ಯರೇ ನಡೆಸುತ್ತಿದ್ದರು. ಸರಕಾರಿ ಸ್ವಾಮ್ಯದ ಘಟಕಗಳು ಟೊಬ್ಯಾಕೋ ಕಾರ್ಖಾನೆಯ ಕೆಲಸಗಾರರನ್ನು ಸಂಘಟಿಸಲು ಪ್ರಯತ್ನ ಮಾಡಿದರು.

ಟ್ರೇಡ್ ಯೂನಿಯನ್ಗಳನ್ನು ಧರ್ಮ ಸಂಸ್ಥೆಗಳನ್ನಾಗಿ ನೊಂದಾಯಿಸುವುದನ್ನು ಬೆಂಗಳೂರಿನಲ್ಲಿ ಸಹಿಸಿಕೊಳ್ಳಲಾಯಿತು. ಆದರೆ 1907ರ ಮೈಸೂರು ಮೈನಿಂಗ್ ರೆಗ್ಯುಲೇಷನ್ ಕಾಯಿದೆಯ ಅವಕಾಶಗಳ ಕಟ್ಟುನಿಟ್ಟಾದ ಹಿಡಿತದಲ್ಲಿದ್ದ ಕೆ.ಜಿ.ಎಫ್. ಪ್ರದೇಶದಲ್ಲಿ ಲೇಬರ್ ಯೂನಿಯನ್ಗಳಿಗೆ ಅವಕಾಶವೇ ಇರಲಿಲ್ಲ. ಅದಕ್ಕೆ ಬದಲು ಗಣಿ ಪಂಚಾಯಿತಿಗಳಿದ್ದುವು. ಅದಕ್ಕೆ ಗಣಿ ನಿರ್ವಾಹಕ ಮಂಡಳಿಯೇ ಕಾರ್ಮಿಕರನ್ನು ನೇಮಕ ಮಾಡುತ್ತಿದ್ದಿತು. 1930ರ ಮುಷ್ಕರವು ವ್ಯವಸ್ಥಾಪಕರಿಗೂ ಮತ್ತು ಸರಕಾರಕ್ಕೂ ದಿಗಿಲು ಹುಟ್ಟಿಸುವುದಾಗಿತ್ತು. ಏಕೆಂದರೆ ನಾಯಕನೆಂಬ ಒಬ್ಬನಿಲ್ಲದೆ ಆ ಮುಷ್ಕರವು ಅಜ್ಞಾತ ಕರ್ತೃಕವಾಗಿತ್ತು.

1930ರ ಪ್ರಾರಂಭ ವರ್ಷಗಳ ವೇಳೆಗೆ ಸ್ವಲ್ಪ ಮಟ್ಟಿಗೆ ಸತ್ಯಾಗ್ರಹ ಚಳವಳಿಯ ಪ್ರಭಾವದಿಂದಾಗಿ, ಹಲವಾರು ತೀವ್ರಗಾಮಿ ಮನೋಭಾವದ ಕಾರ್ಮಿಕರು ಹಾಗೂ   ಹೋರಾಟಗಾರರು ಮುಂಬಯಿ ಕರ್ನಾಟಕದ ಜೈಲುಗಳಲ್ಲಿ ಬಂಧಿತರಾಗಿದ್ದರು. ಅಲ್ಲಿ ವಾಮಪಂಥೀಯ ಸಾಹಿತ್ಯದ ಪರಿಚಯ ಅವರಿಗಾಯಿತು. ಎಸ್.ಡಿ.ಶಂಕರ್, ಸಿ.ಬಿ. ಮೊನ್ನಯ್ಯ, ಕೆ.ಎಸ್.ಕುಮಾರನ್, ಎಂ.ಎಸ್.ರಾಮರಾವ್, ಎಸ್.ಎಸ್.ಚಂಡೂರ್ ಮತ್ತು ಸವಾಯಿ ಅಶ್ವತ್ಥರಾವ್ ಇಂತಹ ಕೆಲವು ತರುಣರು ವಿದ್ಯಾರ್ಥಿಗಳನ್ನೂ, ಕಾರ್ಮಿಕರನ್ನೂ, ತರುಣರನ್ನೂ ಸಂಘಗಳಾಗಿ ಸಂಘಟಿಸಿ ಸಮಗ್ರವಾಗಿ ಸಮಾಜವನ್ನೇ ಪರಿವರ್ತಿಸಲು ಉತ್ಸುಕರಾಗಿದ್ದರು. ಹಾಗೆ ಪ್ರಾರಂಭವಾದ ಅತ್ಯಂತ ಮುಖ್ಯವಾದ ಸಂಸ್ಥೆ ಬೆಂಗಳೂರಿನಲ್ಲಿ 1937ರಲ್ಲಿ ಸ್ಥಾಪನೆಗೊಂಡ ಜನಜಾಗೃತಿ ಸಂಘ. ಮೈಸೂರಿನಲ್ಲಿ ಒಂದು ಕಾಂಗ್ರೆಸ್ ಸೋಷಲಿಸ್ಟ್ ಪಕ್ಷವನ್ನು ಪ್ರಾರಂಭಿಸಲು ಸಾಧ್ಯವಿರಲಿಲ್ಲವಾದ್ದರಿಂದ ಈ ತರುಣರು ಕಾಂಗ್ರೆಸ್ ಕಕ್ಷೆಯೊಳಗೆಯೇ ಕೆಲಸ ಮಾಡಲು ತೊಡಗಿದರು.

ಜನಜಾಗೃತಿ ಸಂಘವು ಸಂಖ್ಯೆಗಿಂತ ಅತ್ಯಧಿಕ ಪ್ರಮಾಣದ ಪ್ರಭಾವವನ್ನು ಬೀರಿತು. ಎಲ್ಲಕ್ಕಿಂತ ಮಿಗಿಲಾಗಿ ವಾಮಪಂಥೀಯ ಕಾಂಗ್ರೆಸಿಗರು, ಕಾರ್ಮಿಕರ ಸಮಸ್ಯೆಗಳನ್ನು ಕುರಿತ ಕಾಂಗ್ರೆಸ್ ಧೋರಣೆ ಪ್ರಜಾಸತ್ತಾತ್ಮಕವಲ್ಲದ ರೀತಿಯ ಅದರ ವರ್ತನೆ, ರಾಜಕೀಯ ಲಾಭಗಳು ತುಂಬಾ ಅಲ್ಪವಾಗಿದ್ದಾಗ ಸ್ಥಳೀಯ ಕಾಂಗ್ರೆಸಿಗರು ಕಾರ್ಮಿಕ ಹೋರಾಟಗಳಿಂದ ಹೊರಬರುತ್ತಿದ್ದ ರೀತಿ -ಇವುಗಳ ಬಗೆಗೆ ಪ್ರಶ್ನೆಗಳನ್ನು ಎತ್ತಿದರು. ನಿದರ್ಶನಕ್ಕೆ, ತಂಬಾಕು ಕಾರ್ಖಾನೆಯ ಕಾರ್ಮಿಕರನ್ನು ಸಂಘಟಿಸಲು ಪ್ರಯತ್ನಿಸಿದಾಗ ಬೆಂಗಳೂರಿನ ಕಾಂಗ್ರೆಸಿಗರು ಚೆಂಡೂರ್ ಅವರಿಗೆ ಬೆಂಬಲ ನೀಡಿದರು; ಆದರೆ ಪ್ರಶ್ನೆಗೆ ಜಾಗ್ರತೆಯಾಗಿ ಅಥವಾ ಸುಲಭವಾಗಿ ಪರಿಹಾರ ದೊರಕುವುದಿಲ್ಲ ಎಂದು ತೋರಿದಾಗ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡರು. ಅಲ್ಲದೆ, 1930ರ ವರ್ಷಗಳಲ್ಲಿ ಪೂರ್ತಿಯಾಗಿ ಬೆಂಗಳೂರು ಮುನಿಸಿಪಾಲಿಟಿಯು ಕಾಂಗ್ರೆಸ್ ನಿಯಂತ್ರಣದಲ್ಲಿದ್ದಾಗ, ಕಾರ್ಮಿಕರ ಮನೆಗಳಿಗೆ ಬಾಡಿಗೆಯನ್ನು ತಗ್ಗಿಸುವುದಕ್ಕಾಗಲಿ, ಮುನಿಸಿಪಲ್ ಜಾಡಮಾಲಿಗಳ ಅಗತ್ಯಗಳಿಗೆ ಗಮನ ಕೊಡುವುದಕ್ಕಾಗಲಿ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ಹೆಚ್ಚು ಪ್ರಜಾಸತ್ತಾತ್ಮಕವಾದ ರೀತಿಯಲ್ಲಿ ಮುಷ್ಕರಗಳನ್ನು ವ್ಯವಸ್ಥೆ ಮಾಡಿದವರು, ಬಿಕ್ಕಟ್ಟಿನ ಸಮಯಗಳಲ್ಲಿ ಕಾರ್ಮಿಕರ ನೈತಿಕ ಸಾಮರ್ಥ್ಯವನ್ನು ಉಳಿಸಿದವರು ಎಡಪಂಥೀಯ ಕಾಂಗ್ರೆಸಿಗರು. 1942ರಲ್ಲಿ ಮೊದಲು ಎಸ್.ಡಿ.ಶಂಕರ್ ಅವರನ್ನು ಆಮೇಲೆ ಎಸ್.ಎಚ್. ಉಪಾಧ್ಯಾಯ ಅವರನ್ನು ಮೈಸೂರು ಕಮ್ಯೂನಿಸ್ಟ್ ಪಕ್ಷವನ್ನು ಸ್ಥಾಪನೆ ಮಾಡುವುದಕ್ಕಾಗಿ ಮುಂಬಯಿಯಿಂದ ಕಳಿಸಿಕೊಟ್ಟದ್ದು ಸುಮ್ಮನೆ ಅಲ್ಲ. ಕಾರ್ಮಿಕ ವಿಚಾರಗಳನ್ನು ಕಾಂಗ್ರೆಸ್ ಹೆಚ್ಚು ಗಂಭೀರವಾಗಿ ಕೈಗೆತ್ತಿಕೊಳ್ಳುವಂತೆ ಮಾಡಿದ್ದು ವಾಮಪಂಥೀಯರೇ ಎಂದು ಹೇಳಿದರೆ ಅದು ಪೊಳ್ಳು ಗರ್ವವಲ್ಲ. ಖಂಡಿತವಾಗಿಯೂ, ಬೆಂಗಳೂರು ಮತ್ತು ಕೆ.ಜಿ.ಎಫ್.ಗಳಲ್ಲಿ (1940-41ರ) ಮುಷ್ಕರಗಳ ಅವಧಿಯಲ್ಲಿ ವಾಮಪಂಥೀಯ ನಾಯಕರನ್ನು ಹುಡುಕಿ ಕರೆತರಲಾಯಿತು. ಏಕೆಂದರೆ ಅವರು ಕಾರ್ಮಿಕರಿಗಾಗಿರುವ ಅನ್ಯಾಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು. ಅವರ ಬೇಡಿಕೆಗಳಿಗೆ ಸರಿಯಾದ ರೂಪವನ್ನು ಕೊಡುತ್ತಿದ್ದರು. ಕಾಂಗ್ರೆಸ್ ಮಾಡುತ್ತಿದ್ದಂತೆ ಅವರನ್ನು ನಿಯಂತ್ರಿಸಲಿಲ್ಲ. ಅಥವಾ ಅಡಗಿಸಲು ಯತ್ನಿಸಲಿಲ್ಲ. ವಾಸ್ತವವಾಗಿ ಬೆಂಗಳೂರಿನಲ್ಲಿ 1942ರಲ್ಲಿ ಸಂಭವಿಸಿದ ಮುಷ್ಕರಗಳ ಎರಡನೆಯ ಅಲೆಗೆ, ಕಾರ್ಮಿಕರು ವಾಮಪಂಥಿ ನಾಯಕರಿಂದ ಕಲಿತಿದ್ದ ಅಮೂಲ್ಯವಾದ ಪಾಠಗಳೇ ಕಾರಣ.

1940ರ ವರ್ಷಗಳಲ್ಲಿ ಕಂಟೋನ್ಮೆಂಟಿನಲ್ಲಿ ತಂಬಾಕು ಕಾರ್ಖಾನೆಯ ಕಾರ್ಮಿಕರ ಹಿತವನ್ನು ಕೈಗೆತ್ತಿಕೊಂಡವರು ಕಮ್ಯೂನಿಸ್ಟರು ಮಾತ್ರ. ಎ.ಎಸ್.ಸಿಂಗ್, ಕಣ್ಣನ್ ಮತ್ತು ರೋಸ್ಮೇರಿ ಇಂತಹ ಕಮ್ಯೂನಿಸ್ಟರು, ಕಾಂಗ್ರೆಸ್ ಅಲಕ್ಷಿಸಿದ್ದ ಹೋಟೆಲ್ ಕೆಲಸಗಾರರು, ಚರ್ಮ ಹದಮಾಡುವ ಟ್ಯಾನರಿ ಕೆಲಸಗಾರರು ಮೊದಲಾದವರ ಹಿತವನ್ನು ಕೈಗೆತ್ತಿಕೊಂಡು ಅದಕ್ಕಾಗಿ ಶ್ರಮಿಸಿದರು. 1942ರಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ತೆಗೆದಾಗ, ಕಾರ್ಮಿಕ ಸಂಘಟನೆಯ ಕ್ಷೇತ್ರದಲ್ಲಿ ಸಕ್ರಿಯರಾಗಲು ವಾಮಪಂಥೀಯರಿಗೆ ಉತ್ತಮ ಅವಕಾಶ ದೊರಕಿತು. ಎಸ್.ಎಲ್.ಉಪಾಧ್ಯಾಯ, ಶ್ರೀಕಾಂತ ಕಂಠಿ ಮತ್ತು ಶ್ರೀಮತಿ ಕಂಠಿ, ಎ.ಎಸ್.ಸಿಂಗ್ ಮತ್ತು ಕಣ್ಣನ್, ಆಮೇಲೆ ಮೊನ್ನಯ್ಯ ಇವರು ಮೈಸೂರಿನ ಬೇರೆ ಬೇರೆ ಭಾಗಗಳಲ್ಲಿ, ಬೇಕಾದಷ್ಟು ಪ್ರಚಾರ ಕಾರ್ಯ ಮಾಡಿದರು. ಕೆ.ಜಿ.ಎಫ್.ನಲ್ಲಿ ಎಸ್.ವಾಸನ್ ಮತ್ತು ವಿ.ಎಂ.ಗೋವಿಂದನ್ ಅಂತಹ ಕಮ್ಯೂನಿಸ್ಟರು ಗಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮಾತ್ರವಲ್ಲದೆ, ಯುರೋಪಿಯನ್ನರ ಮನೆಗಳಲ್ಲಿ ದುಡಿಯುತ್ತಿದ್ದ ನೌಕರರನ್ನೂ ಸಂಘಟಿಸುವುದರಲ್ಲಿ ಕ್ರಿಯೋನ್ಮುಖರಾಗಿದ್ದರು. ಇದರಲ್ಲಿ ಮದರಾಸ್ ಪ್ರೆಸಿಡೆನ್ಸಿಯ ಪಿ.ಶ್ರೀನಿವಾಸನ್ ಅಂತಹ ಕಮ್ಯೂನಿಸ್ಟರ ನೆರವು ದೊರಕಿತು.

ಕೆ.ಜಿ.ಎಫ್.ನಲ್ಲಿ ಕಮ್ಯೂನಿಸ್ಟರಿಗೆ ಅದ್ಭುತವಾದ ಗೆಲುವು ದೊರಕಿತು. ಉತ್ತಮ ವೇತನಗಳಿಗಾಗಿ, ಗುತ್ತಿಗೆದಾರ ಪದ್ಧತಿಯನ್ನು ಕೊನೆಗೊಳಿಸುವ ಸಲುವಾಗಿ, ಉತ್ತಮ ಕಾರ್ಯ ಪರಿಸ್ಥಿತಿಗಳಿಗಾಗಿ 1945 ಮತ್ತು 1946ರಲ್ಲಿ ದೀರ್ಘಕಾಲಿಕ ಮುಷ್ಕರಗಳು ಅವರಿಗೆ ಗೆಲುವು ಕೊಟ್ಟವು. ಬಹುಮಟ್ಟಿಗೆ ಕಮ್ಯೂನಿಸ್ಟರ ಪ್ರಯತ್ನಗಳಿಂದಾಗಿಯೇ, ಅತ್ಯಂತ ಅಹಿಂಸಾತ್ಮಕವೂ, ಶಾಸನಬದ್ಧವೂ ಆದ ಮುಷ್ಕರಗಳು ನಡೆದವು ಎಂದು ಗಣಿ ನಿರ್ವಾಹಕ ಮಂಡಳಿಗಳೂ ಸರಕಾರದ ಅಧಿಕಾರಿಗಳೂ ಒಪ್ಪಿಕೊಂಡರು.

ಮೈಸೂರಿನ ಕಾರ್ಮಿಕರಲ್ಲಿ ಕಾಂಗ್ರೆಸ್ ಕಾರ್ಯಸೂಚಿಯು ಮುಗ್ಗರಿಸಿದ್ದಕ್ಕೆ ಕಾರಣ, ಅದು ಗಣಿಗಳ, ಕಾರ್ಖಾನೆಗಳ ಮತ್ತು ಮಿಲ್ಲುಗಳ ವ್ಯವಸ್ಥಾಪಕರನ್ನು ಬಹಿರಂಗವಾಗಿ ವಿರೋಧಿಸಲು ಇಚ್ಛಿಸದಿದ್ದುದೇ ಆಗಿತ್ತು. ಕಾರ್ಮಿಕರ ನಿರ್ದಿಷ್ಟ ಬೇಡಿಕೆಗಳನ್ನು ಲಕ್ಷಿಸದೆ, ‘‘ರಾಷ್ಟ್ರ’’ದ ಧ್ಯೇಯವನ್ನು ಮುಂದೊಡ್ಡಿದುದೇ ಆಗಿತ್ತು. ಕಮ್ಯೂನಿಸ್ಟರೂ ಕೂಡ, ಕಾರ್ಮಿಕರ ಅಗತ್ಯಗಳಿಗೆ, ಕಾಳಜಿಗಳಿಗೆ ಗಮನಕೊಡದೆ ಹೋದಾಗ ಸೋತುದಂಟು. ಇಂತಹ ಕಾಳಜಿಗಳು ಪದೇ ಪದೇ ವ್ಯಕ್ತವಾದದ್ದು ಕೆ.ಜಿ.ಎಫ್ ಪ್ರದೇಶದಲ್ಲಿ. ಅಲ್ಲಿದ್ದ 25000 ಜನ ಕಾರ್ಮಿಕರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಪರಿಶಿಷ್ಟ ಜಾತಿಗಳಿಗೆ ಸೇರಿದವರು. ಬಹುಕಾಲ ಆತ್ಮಗೌರವ ಚಳವಳಿಯಿಂದ ಪ್ರಭಾವಿತರಾದವರು. ದಕ್ಷಿಣ ಭಾರತೀಯ ಬೌದ್ಧ ಸಂಘದ ಪ್ರಭಾವಕ್ಕೂ ಒಳಗಾಗಿದ್ದವವು. ಕೆ.ಜಿ.ಎಫ್. ಪ್ರದೇಶದ ಕಾರ್ಮಿಕರಿಗೆ ಆತ್ಮಗೌರವದ ಭಾವನೆ ತೀವ್ರವಾಗಿತ್ತು. ಹಿಂದೂ ಸಮಾಜದ ಒಳಗೆ, ಮತ್ತು ಹೊರಗೆ ಕೂಡ ತಮ್ಮ ಸಾಮಾಜಿಕ ಪ್ರಗತಿಯು ಆರ್ಥಿಕ ಪ್ರಗತಿಯನ್ನು ಅವಲಂಬಿಸಿದೆಯೆಂಬುದನ್ನು ಅರಿತಿದ್ದರು. ಕಮ್ಯೂನಿಸ್ಟ್ ಸಿದ್ಧಾಂತಗಳಿಗೆ ಆ ದೃಷ್ಟಿಯಲ್ಲಿ ಎಡೆಯೇ ಇರಲಿಲ್ಲ. ಕಾಂಗ್ರೆಸಿಗೂ ಆದಿದ್ರಾವಿಡ ಸಂಘಗಳಿಗೂ 1940ರ ಪ್ರಾರಂಭ ವರ್ಷಗಳಲ್ಲಿ ಹಲವು ಕಹಿಯಾದ ಘರ್ಷಣೆಗಳಾಗಿದ್ದುವು. ಹಾಗಾಗಿ 1940ರ ಮಧ್ಯವರ್ಷಗಳಲ್ಲಿ ಕಮ್ಯೂನಿಸ್ಟರು ಪ್ರವರ್ಧಮಾನಕ್ಕೆ ಬಂದಾಗ ಜಾತೀಯತೆಯ ವಾಸ್ತವ ಚಿತ್ರದ ಕಡೆಗೆ ಕಣ್ಣು ತೆರೆಯಲೇಬೇಕಾಯಿತು. ಏಕೆಂದರೆ 1946ರಲ್ಲಿ ಶಕ್ತಿ ಪ್ರದರ್ಶನ ವಾದೊಡನೆ 78 ದಿನಗಳ ಕಾಲದ ಒಂದು ಮುಷ್ಕರ ನಡೆಯಿತು. ಕಮ್ಯೂನಿಸ್ಟರು ವ್ಯವಸ್ಥೆ ಮಾಡಿದ್ದ ಅದರಲ್ಲಿ ಕೆ.ಜಿ.ಎಫ್. ಪ್ರದೇಶವು ಕಮ್ಯೂನಿಸ್ಟರಿಗೂ ಆದಿದ್ರಾವಿಡರಿಗೂ ನಡುವೆ ನಡೆದ ರಕ್ತಕಲಹವನ್ನು ಕಾಣಬೇಕಾಯಿತು. ಪೊಲೀಸ್ ಗೋಲೀಬಾರಿಗೆ ಸಿಕ್ಕಿ ಐದು ಜನರು ಅಸುನೀಗಿದರು.

ಒಟ್ಟಿನಲ್ಲಿ, ಹಳೆಯ ಮೈಸೂರು ಪ್ರದೇಶದಲ್ಲಿ ಕಾರ್ಮಿಕ ಚಳವಳಿಯು ಏಕಮುಖ ಚಳವಳಿಯಾಗಿರಲಿಲ್ಲ. ಇಲ್ಲಿ ಯಾವುದೇ ಒಂದು ಪಕ್ಷವಾಗಲಿ ಸಿದ್ಧಾಂತವಾಗಲಿ ಮಿಕ್ಕವುಗಳಿಗಿಂತ ಪ್ರಧಾನವಾಗಿ ನಿಲ್ಲಲಿಲ್ಲ. ಇಲ್ಲಿ ಜಾತಿ, ವರ್ಗ ಅಥವಾ ರಾಷ್ಟ್ರ ಧ್ಯೇಯಗಳ ನಡುವೆ ಸಂಬಂಧವು ಸ್ಥಿರವಾಗಿದ್ದಿರದೆ, ಬದಲಾವಣೆಯಾಗುತ್ತಲೇ ಇದ್ದಿತು. ಕಾರ್ಮಿಕ ನಾಯಕರ ಚರಿತ್ರೆಗಳನ್ನು ಬರೆದವರು ಹೇಳಿದರೆ ಮುಷ್ಕರಗಳ ಫಲಿತಾಂಶವನ್ನು ಹೀಗೆಯೇ ಎಂದು ಮುಂದಾಗಿ ಊಹಿಸಲು ಸಾಧ್ಯವಿರಲಿಲ್ಲ ಅಥವಾ ಬದಲಿಸಲು ಅವಕಾಶವಿರಲಿಲ್ಲ. ಅದು ಇಂತಹ ಶಕ್ತಿಗಳ ಕ್ಷೇತ್ರವಾಗಿದ್ದಿತೆಂದರೆ ಅಲ್ಲಿ ಕಾರ್ಮಿಕರೇ ಪ್ರಧಾನ ಅಂಗವಾಗಿದ್ದರು, ಬೇರೆ ನಾಯಕರಾಗಲಿ ಪಕ್ಷವಾಗಲಿ ಅಲ್ಲ.

ಟಿಪ್ಪಣಿ

ಈ ಪ್ರಬಂಧಕ್ಕೆ ವಸ್ತುವನ್ನು ನನ್ನ ಮುಂದೆ ಬರಲಿರುವ ‘‘ಹಳೆಯ ಮೈಸೂರಿನಲ್ಲಿ ಕಾರ್ಮಿಕ ಸಂಸ್ಕೃತಿ ಮತ್ತು ರಾಜಕೀಯ’’ (ವರ್ಕ್ ಕಲ್ಚರ್ ಎಂಡ್ ಪಾಲಿಟಿಕ್ಸ್ ಇನ್ ಓಲ್ಡ್ ಮೈಸೂರು) ಎಂಬ ಕೃತಿಯಿಂದ ತೆಗೆದುಕೊಳ್ಳಲಾಗಿದೆ. ನನಗೆ ತಿಳಿದಮಟ್ಟಿಗೆ, ಮೈಸೂರಿನ ಕಾರ್ಮಿಕ ಚಳವಳಿಗಳ ಇತಿಹಾಸವನ್ನು ಕುರಿತು, ನನ್ನದಲ್ಲದೆ ಬೇರೆ ಯಾವುದೇ ಬರವಣಿಗೆ ಪ್ರಕಟವಾಗಿರುವಂತೆ ತೋರುವುದಿಲ್ಲ. ಈ ಕೃತಿಯ ರಚನೆಯಲ್ಲಿ ಬೆಂಗಳೂರು, ಮೈಸೂರು, ಕೆ.ಜಿ.ಎಫ್, ದೆಹಲಿ ಮತ್ತು ಲಂಡನ್ಗಳ ಪತ್ರಾಗಾರಗಳನ್ನು ವ್ಯಾಪಕವಾಗಿ ಉಪಯೋಗಿಸಿಕೊಂಡಿದ್ದೇನೆ. ಈ ನಗರಗಳ ವೃತ್ತಪತ್ರಿಕೆಗಳ ಸಂಗ್ರಹಗಳನ್ನು ಗ್ರಂಥಾಲಯಗಳನ್ನು ಬಳಸಿಕೊಂಡಿದ್ದೇನೆ. ಹಾಗೆಯೇ 1989-90 ಮತ್ತು 1995ರಲ್ಲಿ ಕ್ರಮವಾಗಿ ಬೆಂಗಳೂರು ಮತ್ತು ಕೆ.ಜಿ.ಎಫ್.ಗಳಲ್ಲಿ ಹಲವು ಸಂದರ್ಶನಗಳನ್ನು ನಡೆಸಿ ಅವುಗಳಿಂದ ದೊರೆತ ಮಾಹಿತಿಯನ್ನು ಉಪಯೋಗಿಸಿಕೊಂಡಿದ್ದೇನೆ.