ಮೊದಲ ದಿನಗಳು

ಕರ್ನಾಟಕದಲ್ಲಿ ಕಾರ್ಮಿಕ ಚಳವಳಿ ಶುರುವಾಗುವ ಮೊದಲೇ ದೇಶದ ಹಲವು ಭಾಗಗಳಲ್ಲಿ ಅಷ್ಟು ಹೊತ್ತಿಗಾಗಲೆ ಕಾರ್ಮಿಕ ಚಳವಳಿ ಒಂದಷ್ಟು ಪ್ರಗತಿ ಸಾಧಿಸಿದ್ದರೂ 1920ರ ವರೆಗೆ ಕರ್ನಾಟಕದಲ್ಲಿ ಅದರ ಸೊಲ್ಲು ಕೂಡ ಕೇಳಿಬರಲಿಲ್ಲ. ಕರ್ನಾಟಕದಲ್ಲಿ ಕೈಗಾರಿಕೀಕರಣ ಪ್ರಕ್ರಿಯೆ ಪ್ರಾರಂಭವಾಗಿದ್ದೇ ತಡವಾಗಿ ಅನ್ನುವುದು ಅದಕ್ಕೆ ಒಂದು ಕಾರಣ. 1884ರಲ್ಲಿ ಬೆಂಗಳೂರಿನಲ್ಲಿ ಪ್ರಾರಂಭವಾದ ಬಟ್ಟೆ ಗಿರಣಿ ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಆಧುನಿಕ ಕಾರ್ಖಾನೆ. ಕಾರ್ಖಾನೆಯ ಕಾರ್ಮಿಕರು ತಮ್ಮ ಉದ್ಯೋಗ ಪರಿಸರದ ಹಾಗೂ ಉದ್ಯೋಗ ವ್ಯವಸ್ಥೆಯಲ್ಲಿನ ಶೋಷಣೆಯ ಸ್ವರೂಪವನ್ನು ಗುರುತಿಸಿ ಒಗ್ಗಟ್ಟಾಗಿ ಹೋರಾಟಕ್ಕಿಳಿಯುವುದಕ್ಕೆ ಒಂದಷ್ಟು ಸಮಯ ಹಿಡಿಯಿತು. 1920ರಲ್ಲಿ ಕೇಳಿಬಂದ ಪ್ರತಿರೋಧದ ದನಿಗಳು ಸಂಘಟಿತ ರೂಪ ಪಡೆಯುವುದಕ್ಕೆ ಇನ್ನಷ್ಟು ಸಮಯ ಬೇಕಾಯಿತು. ಕಾರ್ಮಿಕ ಸಂಘಟನೆಗಳು ಅಧಿಕೃತವಾಗಿ ಹುಟ್ಟಿದ ನಂತರವೂ ಈ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುವುದಕ್ಕೆ ಇನ್ನೂ ಒಂದಷ್ಟು ಸಮಯ ಹಿಡಿಯಿತು. ಇದಕ್ಕೆ ಕಾರಣಗಳು ಹಲವಾರು ಕಾರ್ಮಿಕರ ಕೊರತೆಯಿಂದಾಗಿ ಆಡಳಿತ ವರ್ಗಗಳು ಕಾರ್ಮಿಕರ ಬೇಡಿಕೆಗಳನ್ನು ಬಹಳಷ್ಟು ಮಟ್ಟಿಗೆ ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ, ಅಸಂಘಟಿತವಾಗಿಯೇ ಉಳಿದಿದ್ದ ಕಾರ್ಮಿಕ ವರ್ಗ, ಕಾರ್ಮಿಕರ ಹಕ್ಕುಗಳ ಬಗ್ಗೆ ಯಾವುದೇ ಕಾಯಿದೆ-ಕಾನೂನುಗಳು ಇಲ್ಲದಂಥ ಪರಿಸರ ಇತ್ಯಾದಿ. 1926ರಲ್ಲಿ ಕೇಂದ್ರದಲ್ಲಿ ಜಾರಿಗೆ ಬಂದ ಕಾರ್ಮಿಕ ಸಂಘಟನೆಗಳ ಕಾಯಿದೆ 1941ರವರೆಗೆ ಮೈಸೂರು ರಾಜ್ಯಕ್ಕೆ ಅನ್ವಯವಾಗಿರಲಿಲ್ಲ. ಅಲ್ಲಿಯವರೆಗೆ ಕಾರ್ಮಿಕ ಸಂಘಟನೆಗಳು ಸೇವಾಸಂಸ್ಥೆಗಳಾಗಿ ನೋಂದಣಿಯಾಗಬೇಕಾಗಿತ್ತು. ಕಾರ್ಮಿಕ ಸಂಘಟನೆಗಳ ಮುಖಂಡರಿಗೆ ಪೊಲೀಸು ಹಾಗೂ ಮಾಲೀಕರ ಕಿರುಕುಳದ ವಿರುದ್ಧ ಯಾವುದೇ ರಕ್ಷಣೆ ಇರಲಿಲ್ಲ. ಆದ್ದರಿಂದ ಈ ಶತಮಾನದ ಮೊದಲ ವರ್ಷಗಳಲ್ಲಿ ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅಪಾಯಕಾರಿ ಹಾಗೂ ದುಸ್ತರ ಕೆಲಸವಾಗಿತ್ತು.

ಎರಡು ಮಹಾಯುದ್ಧಗಳ ನಡುವಿನ ಅವದಿಯಲ್ಲಿ ನಡೆದ ಕಾರ್ಮಿಕ ಚಟುವಟಿಕೆಗಳ ಮೂಲ ಉದ್ದೇಶ ಕಾರ್ಮಿಕರ ಸಂಬಳ ಹೆಚ್ಚಳಕ್ಕಾಗಿ ಹೋರಾಡುವುದು ಹಾಗೂ ಕಾರ್ಮಿಕ ಸಂಘಟನೆಗಳಿಗೆ ಕಾನೂನು ಮಾನ್ಯತೆ ಪಡೆಯುವುದಾಗಿತ್ತು. ಕಾರ್ಮಿಕರಿಗೆ ತಮ್ಮ ವೇತನದ ಬಗ್ಗೆ ಇದ್ದ ಅಸಮಾಧಾನವೇ ಸಂಘಟನೆಗಳಿಗೆ ಚಾಲನೆ ನೀಡಿತು. ಮೊದಲನೆಯ ಮಹಾಯುದ್ಧದ ಸಂದರ್ಭದಲ್ಲಿ ಕಾರ್ಖಾನೆಗಳಿಗೆ ಒಳ್ಳೆಯ ಲಾಭ ದೊರೆಯಿತು. ಕೆಲವು ಮಾಲೀಕರು ಈ ಸಂದರ್ಭದಲ್ಲಿ ಬೋನಸ್ ಪದ್ಧತಿಯನ್ನು ಜಾರಿಗೆ ತಂದರಾದರೂ, ವೇತನ ಏರಿಕೆ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. ಮಹಾಯುದ್ಧದ ನಂತರ ಲಾಭದ ಪ್ರಮಾಣ ಇಳಿಮುಖವಾದಾಗ ಬೋನಸ್ ಪದ್ಧತಿ ಕೂಡ ನಿಂತುಹೋಯಿತು. ಇದರಿಂದ ಹುಟ್ಟಿದ ಅಸಮಾಧಾನ ಮುಂದಿನ ವರ್ಷಗಳಲ್ಲಿ ಅನೇಕ ಕಾರ್ಮಿಕ ಸಂಘಟನೆ ಗಳನ್ನು, ಚಳವಳಿಗಳನ್ನು ಹುಟ್ಟುಹಾಕಿತು. ರಾಜ್ಯದ ಮೊಟ್ಟಮೊದಲ ಕಾರ್ಮಿಕ ಮುಷ್ಕರ 1920ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮುಖಂಡ ಕೆ.ಟಿ.ಭಾಷ್ಯಂ ಅವರ ನೇತೃತ್ವದಲ್ಲಿ ಬೋನಸ್ ಸಮಸ್ಯೆಯ ಕಾರಣದಿಂದಲೇ ನಡೆಯಿತು. ಈ ಮುಷ್ಕರಕ್ಕೆ ದೊರೆತ ಜಯ ಕಾರ್ಮಿಕ ಸಂಘಟನೆಗಳ ಬಗ್ಗೆ ಕಾರ್ಮಿಕರಲ್ಲಿ ನಂಬಿಕೆ ಹುಟ್ಟಿಸಿತು. 1920ರಲ್ಲಿ ಬಿನ್ನಿಮಿಲ್ ವರ್ಕರ್ಸ್ ಕೌನ್ಸಿಲ್ ಪ್ರಾರಂಭವಾಯಿತು. ನಂತರ ಇದೇ ಮಾದರಿಯ ಸಂಘಟನೆಗಳು ಮಿನರ್ವ ಮಿಲ್ ಹಾಗೂ ಕೃಷ್ಣ ಮಿಲ್ಸ್ಗಳಲ್ಲಿ ಕೂಡ ಪ್ರಾರಂಭವಾದವು.

1926ರ ನಂತರ ಕೈಗಾರಿಕೋದ್ಯಮಗಳ ಪರಿಸ್ಥಿತಿ ಇಳಿಮುಖವಾದಾಗ ಬಹಳಷ್ಟು ಜನರನ್ನು ಕೆಲಸಗಳಿಂದ ವಜಾ ಮಾಡಲಾಯಿತು. ಈ ಬಿಕ್ಕಟ್ಟಿನ ಪರಿಸ್ಥಿತಿ ಅನೇಕ ಮುಷ್ಕರಗಳಿಗೆ ಎಡೆಮಾಡಿ ಕೊಟ್ಟಿತ್ತಾದರೂ ಇವುಗಳಲ್ಲಿ ಬಹಳಷ್ಟು ಮುಷ್ಕರಗಳು ಜಯ ಕಾಣಲಿಲ್ಲ. ಆಡಳಿತ ವರ್ಗಗಳು ಕಾರ್ಮಿಕರ ಬೇಡಿಕೆಗಳನ್ನು ಒಪ್ಪಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ತಮ್ಮ ಬೇಡಿಕೆಗಳು ಈಡೇರುವವರೆಗೆ ಮುಷ್ಕರವನ್ನು ಮುಂದುವರೆಸಲು ಬೇಕಾದ ಆರ್ಥಿಕ ಭದ್ರತೆ ಕಾರ್ಮಿಕ ವರ್ಗದಲ್ಲಿಯೂ ಇರಲಿಲ್ಲ. ವಿವಿಧ ಕೈಗಾರಿಕೋದ್ದಿಮೆ ಗಳ ಕಾರ್ಮಿಕರೆಲ್ಲ ಒಟ್ಟುಗೂಡಿ ಕಾರ್ಮಿಕ ಸಂಘಟನೆಗಳ ಒಕ್ಕೂಟವೊಂದನ್ನು ಹುಟ್ಟಹಾಕುವ ಅಗತ್ಯವನ್ನು ಈ ಸೋಲಿನ ನಂತರ ಕಾರ್ಮಿಕ ಮುಖಂಡರು ಮನಗಂಡರು. ಈ ಆಲೋಚನೆಯ ಫಲವಾಗಿ 1929ರಲ್ಲಿ ಬೆಂಗಳೂರು ಟೆಕ್ಸ್ಟೈಲ್ಸ್ ಟ್ರೇಡ್ ಯೂನಿಯನ್ನಿನ ಜನನವಾಯಿತು. ಈ ಸಂಘಟನೆ ಕಾಲಾನುಕ್ರಮದಲ್ಲಿ ತುಂಬ ಪ್ರಬಲವಾಗಿ ಬೆಳೆಯಿತು. 1938ರಲ್ಲಿ ಬಿನ್ನಿಮಿಲ್ಲಿನಲ್ಲಿ ನಡೆದ ಮುಷ್ಕರದಲ್ಲಿ ಕಾರ್ಮಿಕ ಮುಖಂಡರನ್ನು ಸರ್ಕಾರವು ಬಂಧಿಸಿದಾಗ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿ ನೆರೆದು ಪ್ರತಿಭಟನೆ ನಡೆಸಿದರು. ಕೊನೆಗೆ ಕಾರ್ಖಾನೆಯ ಆಡಳಿತ ವರ್ಗವೇ ಬಂಧಿತರಾದ ಮುಖಂಡರನ್ನು ಬಿಟ್ಟುಬಿಡುವಂತೆ ಸರ್ಕಾರವನ್ನು ಕೋರಬೇಕಾದ ಪರಿಸ್ಥಿತಿ ಏರ್ಪಟ್ಟಿತು! ಅದೇ ವರ್ಷ ಬಹಳಷ್ಟು ಜನರನ್ನು ಕೆಲಸದಿಂದ ವಜಾ ಮಾಡಿದ ಸಂದರ್ಭದಲ್ಲಿ ಮಿನರ್ವ ಮಿಲ್ಲಿನಲ್ಲಿಯೂ ಮುಷ್ಕರ ನಡೆಯಿತು. ಬೇರೆ ಮಿಲ್ಲುಗಳ ಕಾರ್ಮಿಕರೂ ಈ ಸುದೀರ್ಘ ಮುಷ್ಕರದಲ್ಲಿ ಭಾಗವಹಿಸಿದರು. ಕೊನೆಗೆ ಒಪ್ಪಂದ ಕಾರ್ಮಿಕರ ಪರವಾಗಿಯೇ ಆಯಿತು. ಸಂಘಟನೆಯಲ್ಲಿರುವ ಶಕ್ತಿಯನ್ನು ಈ ಮುಷ್ಕರ ಸಾಬೀತುಗೊಳಿಸಿತು. ಬೆಂಗಳೂರಿನ ಗಿರಣಿ ಕಾರ್ಮಿಕರೆಲ್ಲ ಒಂದಾಗಿದ್ದರಿಂದ ಈ ಜಯ ಸಾಧ್ಯವಾಯಿತು. 1940ರ ದಶಕ ದಲ್ಲಿ ಕಾರ್ಮಿಕರು ಒಗ್ಗಟ್ಟಿನಿಂದ ತಮ್ಮ ಹಕ್ಕೊತ್ತಾಯಗಳಿಗಾಗಿ ಬಹಳಷ್ಟು ಹೋರಾಟ ಗಳನ್ನು ನಡೆಸಿದರು.

1940ರಲ್ಲಿ ಬಿನ್ನಿಮಿಲ್ಲಿನಲ್ಲಿ ಮುಷ್ಕರ ನಡೆದಾಗ ಒಪ್ಪಂದಕ್ಕೆ ಅನುಕೂಲವಾಗುವಂತೆ ಸಮಿತಿಯೊಂದನ್ನು ಸರ್ಕಾರ ರಚಿಸಿತು. ಕೈಗಾರಿಕಾ ಸಂಕೀರ್ಣಗಳಲ್ಲಿ ಶಾಂತಿ ಕಾಯ್ದುಕೊಂಡು ಬರಲು ಅನುಕೂಲವಾಗುವಂತೆ ಸೂತ್ರವೊಂದನ್ನು ರಚಿಸುವ ಹೊಣೆಯನ್ನು ಈ ಸಮಿತಿಗೆ ಒಪ್ಪಿಸಲಾಯಿತು. ಈ ಸಮಿತಿ ನೀಡಿದ ಸಲಹೆಗಳ ಆಧಾರದ ಮೇಲೆ ವಿವಾದ ಪರಿಹಾರ ಹಾಗೂ ಒಪ್ಪಂದದ ವಿಧಿಗಳನ್ನೊಳಗೊಂಡ ಮೈಸೂರು ಕಾರ್ಮಿಕ (ತುರ್ತುಸ್ಥಿತಿ) ಕಾಯಿದೆಯನ್ನು ಸರ್ಕಾರ 1941ರಲ್ಲಿ ಜಾರಿಗೊಳಿಸಿತು. ಈ ಕಾಯಿದೆ ಮೊಟ್ಟಮೊದಲ ಬಾರಿಗೆ ಕಾರ್ಮಿಕ ಸಂಘಟನೆಗಳಿಗೆ ಕಾನೂನು ಮಾನ್ಯತೆ ನೀಡಿದ್ದೇ ಅಲ್ಲದೇ ಅವುಗಳಿಗೆ ನೋಂದಣಿಯ ಹಕ್ಕನ್ನೂ ನೀಡಿತು. ಪೊಲೀಸು ಅಥವಾ ಆಡಳಿತ ವರ್ಗಗಳ ಶೋಷಣೆಯ ಭಯವಿಲ್ಲದೆ ನ್ಯಾಯಯುತ ಹೋರಾಟ ನಡೆಸುವ ಅವಕಾಶವನ್ನು ಈ ಕಾಯಿದೆಯು ಕಾರ್ಮಿಕರಿಗೆ ಮಾಡಿಕೊಟ್ಟಿತು.

ಸ್ವಾತಂತ್ರ್ಯದ ನಂತರ

ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ಕರ್ನಾಟಕದ ಕಾರ್ಮಿಕ ಸಂಘಟನೆಗಳಲ್ಲಿ ವಿಶೇಷ ಬದಲಾವಣೆ ಕಂಡುಬರಲಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಸಂಘಟನೆಯಲ್ಲಿ ಕಂಡುಬಂದ ಬಿರುಕು ರಾಜ್ಯದ ಸಂಘಟನೆಯಲ್ಲೂ ಕೆಲಮಟ್ಟಿಗೆ ಪ್ರತಿಫಲನಗೊಂಡಿತು. 50ರ ದಶಕದಲ್ಲಿ ಕೈಗಾರಿಕೋದ್ಯಮಗಳಲ್ಲಿ ಬಹುಮಟ್ಟಿಗೆ ಶಾಂತಿ ನೆಲೆಸಿತ್ತು. ಆಗೀಗ ತಲೆದೋರುವ ತಗಾದೆಗಳನ್ನು ಕೈಗಾರಿಕಾ ನ್ಯಾಯಾಲಯಗಳು ಪರಿಹರಿಸುತ್ತಿದ್ದವು. ಆದರೆ 60ರ ದಶಕದಲ್ಲಿ ಪರಿಸ್ಥಿತಿ ಬಹಳಷ್ಟು ಬದಲಾಯಿತು. ಭಾರತ-ಚೈನಾ ಯುದ್ಧದ ನಂತರ ಕಾರ್ಮಿಕ ಸಂಘಟನೆ ಎರಡು ಹೋಳಾಯಿತು. ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನಿಂದ (ಐಟಕ್) ಹೊರಬಂದವರು ಸೆಂಟರ್ ಪಾರ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಸೀಟು) ಸ್ಥಾಪಿಸಿದರು. ಅಷ್ಟರಲ್ಲಿ ಎರಡನೇ ತಲೆಮಾರಿನ ಕಾರ್ಮಿಕ ಮುಖಂಡರೂ ತಯಾರಾಗಿದ್ದರು. ಇದೇ ಸಮಯದಲ್ಲಿ ಭಾಷೆಯ ಆಧಾರದ ಮೇಲೆ ಸಂಘಟನೆಗಳಲ್ಲಿ ಒಡಕುಗಳು ಕಂಡುಬರತೊಡಗಿದವು. ಹಣದುಬ್ಬರದಿಂದ ಕಾರ್ಮಿಕ ವರ್ಗಗಳ ನೈಜ ಕೂಲಿ ದರದಲ್ಲಿ ಬಹಳಷ್ಟು ಕಡಿತ ಉಂಟಾಗಿ ಕೆಲವು ಕಾರ್ಮಿಕ ಚಳವಳಿಗಳು ಉಗ್ರರೂಪ ತಾಳಿದವು. ಮುಷ್ಕರಗಳು ಹೆಚ್ಚಾದವು. ಅವುಗಳಲ್ಲಿ ಅನೇಕವು ಹೊಡೆದು ಹಿಂದೋಡುವ ತಂತ್ರವನ್ನು ಬಳಸಿದವು. ಈ ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕೆಂಬುದು ಆಡಳಿತ ವರ್ಗಗಳಿಗೂ ತಿಳಿದಿರಲಿಲ್ಲ. ಕೈಗಾರಿಕಾ ವಾತಾವರಣ ಬಹಳಷ್ಟು ಬಿಗಡಾಯಿಸಿತು. ಆದರೆ ಕೆಲವೇ ಸಮಯದಲ್ಲಿ ಒಪ್ಪಂದಗಳು ಏರ್ಪಟ್ಟು ಪ್ರಬುದ್ಧ ಕೈಗಾರಿಕಾ ವಾತಾವರಣ ಏರ್ಪಟ್ಟಿತು.

ಆದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮತ್ತೆ ಪರಿಸ್ಥಿತಿ ಹದಗೆಟ್ಟಿತು. ಕೇಂದ್ರ ಸರ್ಕಾರ ಹಣದುಬ್ಬರ ತಡೆಹಿಡಿಯಲಿಕ್ಕೆ ಹೇರಿದ ಕಡ್ಡಾಯ ಠೇವಣಿ ಯೋಜನೆ, ‘‘ಮೇಲ್ದರ್ಜೆ ವೇತನ ದ್ವೀಪ’’ಗಳೆಂದು ಕರೆಯಲಾದ ಕೇಂದ್ರ ಸರ್ಕಾರಿ ಸಾರ್ವಜನಿಕ ಉದ್ದಿಮೆಗಳ ಮೇಲೆ ನೀಡಲಾದ ಹೆಚ್ಚುವರಿ ಒತ್ತು ಹಾಗೂ ವೇತನದ ವಿಷಯದಲ್ಲಿ ಭೂತಲಿಂಗಂ ಸಮಿತಿ ನೀಡಿದ ಸಲಹೆಗಳು ಬಹಳಷ್ಟು ವಿವಾದಗಳಿಗೆ ಎಡೆಮಾಡಿಕೊಟ್ಟವು. ಕಾರ್ಮಿಕರ ಮೇಲಿನ ಈ ಎಲ್ಲ ‘ಸರ್ಕಾರಿ ನಿಯೋಜಿತ’ ದಬ್ಬಾಳಿಕೆಯ ವಿರುದ್ಧ ಹೋರಾಡಲು ದುಡಿಯುವ ವರ್ಗಗಳು ಕಾರ್ಮಿಕ ಐಕ್ಯತೆಗಾಗಿ ಶ್ರಮಿಸಿದವು. ಐಟಕ್ ಹಾಗೂ ಸೀಟು ಜೊತೆಗೂಡಿ ಕಾರ್ಮಿಕ ಐಕ್ಯತಾ ಒಕ್ಕೂಟವೊಂದನ್ನು ಸ್ಥಾಪಿಸಿದವು.

ಕಾರ್ಮಿಕರ ಒಗ್ಗಟ್ಟನ್ನು ಮತ್ತಷ್ಟು ಬಲಗೊಳಿಸಿದ ಇನ್ನೊಂದು ಘಟನೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಯೊಂದರಲ್ಲಿ ವೇತನ ಸಮಾನತೆ ಕುರಿತು ನಡೆದ ಚಳವಳಿ. ಬಿ.ಹೆಚ್.ಇ.ಎಲ್. ಸಂಸ್ಥೆ ಬೇರೆ ಎಲ್ಲ ಸಾರ್ವಜನಿಕ ಉದ್ದಿಮೆಗಳಿಗಿಂತ ಹೆಚ್ಚಿನ ವೇತನ ಶ್ರೇಣಿಯನ್ನು ನಿಗದಿಪಡಿಸಿತ್ತು. ಇದೇ ವೇತನ ಸೂತ್ರವನ್ನು ಕಾಲಾನುಕ್ರಮದಲ್ಲಿ ಇತರ ಸಾರ್ವಜನಿಕ ಉದ್ದಿಮೆಗಳೂ ಅನುಸರಿಸಬೇಕೆಂದು ಒಪ್ಪಂದವಾಗಿತ್ತು. ಈ ಒಪ್ಪಂದವನ್ನು ಸರ್ಕಾರ ಆದರಿಸಲು ನಿರಾಕರಿಸಿದಾಗ ಅಸಮಾಧಾನ ಹೊಗೆಯಾಡತೊಡಗಿತು. ಈ ಸಂದರ್ಭದಲ್ಲಿ ವೇತನ ತಾರತಮ್ಯ ನಿವಾರಣೆಯ ಏಕೈಕ ಧ್ಯೇಯವುಳ್ಳ ವಿವಿಧ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟವೊಂದು ಸ್ಥಾಪಿತವಾಯಿತು. ಎಡಪಂಥೀಯ ಹಾಗೂ ಇತರ ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಜಾಯಿಂಟ್ ಆ್ಯಕ್ಷನ್ ಫೋರಮ್ (ಜೆ.ಎ.ಎಫ್)ನ್ನು ಸ್ಥಾಪಿಸಿ ಒಟ್ಟುಗೂಡಿ ಕೆಲಸ ಮಾಡುವುದಕ್ಕೆ ಅನುಕೂಲವಾಗುವಂತೆ ಪ್ರಣಾಳಿಕೆಯೊಂದನ್ನು ರೂಪಿಸಿದವು. ಬೆಂಗಳೂರಿನ ಎಲ್ಲ ಸಾರ್ವಜನಿಕ ಉದ್ದಿಮೆಗಳ ಸುಮಾರು 80,000 ಕಾರ್ಮಿಕರು ಒಂದೇ ಸಂಘಟನೆಯ ಅಡಿಯಲ್ಲಿ ಒಗ್ಗಟ್ಟಾಗಿ ನಿಂತು ವೇತನ ತಾರತಮ್ಯಗಳನ್ನು ನಿವಾರಿಸುವಂತೆ ಆಡಳಿತ ವರ್ಗಗಳ ಮೇಲೆ ಒತ್ತಾಯ ತರಬೇಕೆಂದು ಕೋರಿ ಪ್ರಧಾನಮಂತ್ರಿ ಇಂದಿರಾ ಗಾಂಧಿಗೆ ವೈಯಕ್ತಿಕ ಪತ್ರಗಳನ್ನು ಬರೆದರು. ಈ ತಂತ್ರ ಫಲ ನೀಡದೆ ಹೋದಾಗ ಮೂರು ತಿಂಗಳುಗಳ ಮುಷ್ಕರ ನಡೆಯಿತು. ಕೊನೆಯ ಹಂತದಲ್ಲಿ ಈ ಮುಷ್ಕರ ಹಿಂಸಾತ್ಮಕ ರೂಪ ತಾಳಿ ಜೀವಹಾನಿ ಹಾಗೂ ಆಸ್ತಿಪಾಸ್ತಿ ಹಾನಿಗೆ ಕಾರಣವಾಯಿತು. ಅಷ್ಟೊಂದು ಮಂದಿ ಕಾರ್ಮಿಕರನ್ನು ಒಂದು ವೇದಿಕೆಯಡಿ ಒಗ್ಗೂಡಿಸುವುದರಲ್ಲಿ ಸಫಲರಾಗಿದ್ದ ಮುಖಂಡರು ಈ ಬೃಹತ್ ಕಾರ್ಮಿಕ ಸಮೂಹದ ಮುಂದಾಳತ್ವ ವಹಿಸುವುದರಲ್ಲಿ ವಿಫಲವಾಗಿದ್ದರು. ಮುಷ್ಕರ ವಿಫಲವಾಯಿತು. ಇಂಟಕ್ ಕಾರ್ಮಿಕ ಸಂಘಟನೆಯ ಅಸಹಕಾರ, ಜನ ಸಾಮಾನ್ಯರ ಅಸಹಾನುಭೂತಿ, ಸರ್ಕಾರದ ಕಠೋರ ನಿಲುವು ಇತ್ಯಾದಿ ಅಂಶಗಳು ಈ ವಿಫಲತೆಗೆ ಕಾರಣಗಳಿರಬಹುದು.

ಕರ್ನಾಟಕದ ಕಾರ್ಮಿಕ ಚಳವಳಿಯ ಚರಿತ್ರೆಯಲ್ಲಿ ಈ ಸಾರ್ವಜನಿಕ ಉದ್ದಿಮೆಗಳ ಮುಷ್ಕರ ಒಂದು ಮಹತ್ವದ ಮೈಲಿಗಲ್ಲು. ನಂತರದ ದಿನಗಳಲ್ಲಿ ಮುಷ್ಕರಗಳು ಕಡಿಮೆಯಾದವು. ನಡೆದ ಮುಷ್ಕರಗಳು ಹೆಚ್ಚಿನ ಕಾಲಾವಧಿಯವುಗಳಲ್ಲ. ಜೆ.ಎ.ಎಫ್. ನಂತಹ ಬೃಹತ್ ಸಂಘಟನೆಯಡಿ ನಡೆದ ಮುಷ್ಕರವೇ ವಿಫಲವಾದಾಗ ರಾಜಕೀಯ ಶಕ್ತಿ ಇಲ್ಲದ ಸಣ್ಣಪುಟ್ಟ ಸಂಘಟನೆಗಳ ಮುಷ್ಕರಗಳು ಹೇಗೆ ಸಫಲವಾಗಲಿಕ್ಕೆ ಸಾಧ್ಯ ಎನ್ನುವ ಅತಿ ನಿರಾಶೆಯ ಛಾಯೆ ಕಾರ್ಮಿಕರಲ್ಲಿ ಮನೆ ಮಾಡಿತ್ತು. ಸಾರ್ವಜನಿಕ ಉದ್ದಿಮೆಗಳಲ್ಲಿ ಇಳಿಮುಖವಾಗುತ್ತಿದ್ದ ಕೆಲಸಗಳ ಸಂಖ್ಯೆ, ಕೆಲಸದ ಅಭದ್ರತೆಯ ಬಗ್ಗೆ ಕಾರ್ಮಿಕರಲ್ಲಿ ಮೂಡಿದ್ದ ಕಳವಳ ಇತ್ಯಾದಿ ಕಾರಣಗಳಿಂದಾಗಿ ಕಾರ್ಮಿಕರು ಒಗ್ಗಟ್ಟಾಗಿ ಮುಷ್ಕರ ಹೂಡುವ ಸಾಧ್ಯತೆಗಳು ಕ್ಷೀಣಿಸತೊಡಗಿದವು. ಯಾವುದೇ ಜವಾಬ್ದಾರಿ ಹೊರಲು ತಯಾರಿಲ್ಲದೆ ಎಲ್ಲಾ ಸವಲತ್ತುಗಳನ್ನು ಮುಖಂಡರೇ ತನಗೆ ಒದಗಿಸಿಕೊಡಬೇಕೆಂದು ಈಗಿನ ಕಾರ್ಮಿಕರು ಬಯಸುತ್ತಾರೆ ಎನ್ನುವ ಆಪಾದನೆ ಇದೆ. ಒಬ್ಬ ಮುಖಂಡನ ನೇತೃತ್ವದಿಂದ ಇನ್ನೊಬ್ಬನ ನೇತೃತ್ವದ ನೆರಳಿಗೆ ಜಿಗಿಯುವ ಕಾರ್ಮಿಕರ ಪ್ರವೃತ್ತಿಗೂ ಇದೇ ಕಾರಣ.

ಹೊಸ ಆರ್ಥಿಕ ನೀತಿ

ಭಾರತವು ಜುಲೈ 1991ರಲ್ಲಿ ಹೊಸ ಆರ್ಥಿಕ ನೀತಿಯನ್ನು ಒಪ್ಪಿಕೊಂಡ ನಂತರ ಕಾರ್ಮಿಕ ಚಳವಳಿಗಳು ಹೊಸ ಸ್ವರೂಪವನ್ನು ಪಡೆದಿವೆ. ಉದಾರೀಕರಣ, ಜಾಗತೀಕರಣ, ಖಾಸಗೀಕರಣದ ಮೇಲೆ ಒತ್ತು ನೀಡುವ ಹೊಸ ಆರ್ಥಿಕ ನೀತಿ ಸಂಪೂರ್ಣ ಮಾರುಕಟ್ಟೆ- ಪರ ನಿಲುವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ಪರ್ಧಾತ್ಮಕತೆಯನ್ನು ಕಾರ್ಯ ಸಮರ್ಥತೆಯನ್ನು ಸಾಧಿಸಲು ಪ್ರಯತ್ನಿಸುತ್ತದೆ. ಈ ಎಲ್ಲ ನಿಲುವುಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಕಾರ್ಮಿಕರನ್ನು ಕೆಲಸದಿಂದ ಹೊರತೆಗೆಯುವ ನೀತಿಯ ಬಗ್ಗೆ ಕಾರ್ಮಿಕ ವರ್ಗಕ್ಕೆ ಅತ್ಯಂತ ಅಸಮಾಧಾನವಿದೆ. ಖಾಸಗೀಕರಣ ಹಾಗೂ ಮಾರುಕಟ್ಟೆ ಪರ ಧೋರಣೆಗಳಿಂದ ಉಂಟಾಗುವ ಉದ್ಯೋಗ ಅವಕಾಶಗಳಲ್ಲಿನ ಕಡಿತ ಹಾಗೂ ಉದ್ಯೋಗದ ಅಭದ್ರತೆ ಕಾರ್ಮಿಕರಲ್ಲಿ ಭೀತಿ ಹುಟ್ಟಿಸಿದೆ. ಈ ಕಾಲಘಟ್ಟದಲ್ಲಿ ಕಾರ್ಮಿಕ ಐಕ್ಯತೆಯ ತುರ್ತು ಅಗತ್ಯವನ್ನು ಕಾರ್ಮಿಕ ಸಂಘಟನೆಗಳು ಮನಗಂಡಿವೆ. ಈ ಐಕ್ಯತೆಯ ಕನಸು ಇನ್ನೂ ಕನಸಾಗಿಯೇ ಉಳಿದಿದ್ದರೂ ಈಗ ಕಾರ್ಮಿಕ ಸಂಘಟನೆಗಳು ಬಹಳಷ್ಟು ಭಿನ್ನಾಭಿಪ್ರಾಯಗಳನ್ನು ತೊರೆದಿವೆ. ಸಂಘಟನೆಗಳ ನಡುವೆ ಇದ್ದ ಸ್ಪರ್ಧಾತ್ಮಕ ಮನೋಭಾವ ದೂರವಾಗಿ ಒಟ್ಟುಗೂಡಿ ಕೆಲಸ ಮಾಡುವ ವಾತಾವರಣ ಸೃಷ್ಟಿಯಾಗುತ್ತಿದೆ. ಹೊಸ ಆರ್ಥಿಕ ನೀತಿಯ ವಿರುದ್ಧ ಅನೇಕ ಮೆರವಣಿಗೆಗಳು, ಪ್ರತಿಭಟನಾ ಚಳವಳಿಗಳು ನಡೆದಿವೆ. ಇವೆಲ್ಲದರ ಫಲವಾಗಿ ಬ್ಯಾಂಕ್ಗಳಂಥ ರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಖಾಸಗೀಕರಣ, ಸಾರ್ವಜನಿಕ ಉದ್ದಿಮೆಗಳ ಮುಚ್ಚುವಿಕೆ, ಉದ್ಯೋಗ ನೀತಿಯಲ್ಲಿ ಬದಲಾವಣೆ, ವೇತನ ನಿಲುಗಡೆ ಇತ್ಯಾದಿ ವಿಷಯಗಳಲ್ಲಿ ಸರ್ಕಾರ ಅತುರ ತೋರುತ್ತಿಲ್ಲ. ಆದರೂ, ಹೊಸ ಆರ್ಥಿಕ ನೀತಿಯನ್ನು ಪೂರ್ತಿಯಾಗಿ ಹಿಂತೆಗೆದುಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ತರುವುದು ಅಸಾಧ್ಯವೆಂಬುದನ್ನು ಕಾರ್ಮಿಕ ಸಂಘಟನೆಗಳು ಮನಗಂಡಿವೆ. ಆದ್ದರಿಂದ ಈ ನೀತಿಯನ್ನು ಸಾರಾಸಗಟಾಗಿ ವಿರೋಧಿಸುವ ಬದಲು ಈ ನೀತಿಯಿಂದ ಕಾರ್ಮಿಕರ ಮೇಲಾಗುವ ದುಷ್ಪರಿಣಾಮಗಳನ್ನು ಒಂದಷ್ಟು ಕಡಿಮೆ ಮಾಡುವತ್ತ ಪ್ರಯತ್ನಗಳನ್ನು ಸಂಘಟನೆಗಳು ಮಾಡುತ್ತಿವೆ.

ಕಾರ್ಮಿಕ ಸಂಘಟನೆಗಳ ಸದಸ್ಯತ್ವ ಹಾಗೂ ಆರ್ಥಿಕ ಪರಿಸ್ಥಿತಿ

ವರ್ಷದಿಂದ ವರ್ಷಕ್ಕೆ ಕಾರ್ಮಿಕ ಸಂಘಟನೆಗಳ ಸಂಖ್ಯೆ ಹಾಗೂ ಈ ಸಂಘಟನೆಗಳಲ್ಲಿ ಸದಸ್ಯತ್ವದ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. 1956ರ ನವೆಂಬರ್ 1ರಂದು ಕರ್ನಾಟಕ ಏಕೀಕರಣವಾದ ನಂತರದ ಕಾರ್ಮಿಕ ಸಂಘಟನೆಗಳ ಅಂಕಿ ಅಂಶಗಳನ್ನು ಗಮನಿಸಿದಾಗ ಸಂಘಟನೆಗಳ ಸಂಖ್ಯೆ ಹತ್ತು ಪಟ್ಟಿಗಿಂತ ಮೀರಿ ಬೆಳೆದಿರುವುದನ್ನು ನೋಡುತ್ತೇವೆ. ಆದರೆ ನೋಂದಣಿಯಾದ ಎಲ್ಲ ಸಂಘಟನೆಗಳೂ ವಾರ್ಷಿಕ ಹಣಕಾಸು ವರದಿಯನ್ನು ಒಪ್ಪಿಸುವಂಥವುಗಳಲ್ಲ. 1956-57ರಲ್ಲಿ ನೋಂದಣಿಯಾದ 339 ಸಂಘಟನೆಗಳಲ್ಲಿ 223 ಸಂಘಟನೆಗಳು ವಾರ್ಷಿಕ ವರದಿಯನ್ನು ಒಪ್ಪಿಸಿದ್ದವು. 1994ರಲ್ಲಿ ನೋಂದಣಿಯಾದ 3,806 ಸಂಘಟನೆಗಳಲ್ಲಿ ಕೇವಲ 620 ಸಂಘಟನೆಗಳು ವರದಿ ಒಪ್ಪಿಸಿದ್ದವು. ನೋಂದಣಿಗಳ ಸಂಖ್ಯೆ ಹೆಚ್ಚಾದಂತೆ ವಾರ್ಷಿಕ ವರದಿ ಒಪ್ಪಿಸುವ ಸಂಘಟನೆಗಳ ಸಂಖ್ಯೆಯು ಇಳಿಮುಖವಾಗುತ್ತಿರುವುದು ಕಳವಳಕಾರಿಯಾದ ಬೆಳವಣಿಗೆ. ಹಳೆಯ ಹಾಗೂ ದೊಡ್ಡ ಸಂಘಟನೆಗಳು ಸಾಮಾನ್ಯವಾಗಿ ಹಣಕಾಸು ವರದಿಯನ್ನು ಒಪ್ಪಿಸುವ ಪರಿಪಾಠ ಇಟ್ಟುಕೊಂಡಿರುವುದರಿಂದ ನೋಂದಣಿಯಾದ ಅನೇಕ ಹೊಸ ಸಂಘಟನೆಗಳು ಸಣ್ಣ ಪ್ರಮಾಣದವು ಹಾಗೂ ಅವುಗಳಲ್ಲಿ ಅನೇಕವು ಕೇವಲ ಹೆಸರಿಗೆ ಮಾತ್ರ ಇರುವಂಥವು ಎಂದು ತೀರ್ಮಾನಿಸಬಹುದು. ಇತ್ತೀಚಿನ ದಿನಗಳಲ್ಲಿ ನೋಂದಣಿಯಾದ ಹಾಗೂ ವಾರ್ಷಿಕ ವರದಿ ಒಪ್ಪಿಸುವ ಕಾರ್ಮಿಕ ಸಂಘಟನೆಗಳಲ್ಲಿಯೂ ಸರಾಸರಿ ಸದಸ್ಯರ ಸಂಖ್ಯೆ ಕೇವಲ 600 ಇರುವುದು ಕರ್ನಾಟಕದ ಒಟ್ಟು ಕಾರ್ಮಿಕ ಸಂಘಟನೆ ಸಣ್ಣ ಪ್ರಮಾಣದ್ದು ಎಂಬುದನ್ನು ತೋರಿಸುತ್ತದೆ.

ಕಾರ್ಖಾನೆಗಳ ಮಟ್ಟದ ಕಾರ್ಮಿಕ ಸಂಘಟನೆಗಳು ಹೆಚ್ಚಿರುವುದು ಸರಾಸರಿ ಸದಸ್ಯತ್ವ ಕಡಿಮೆ ಇರುವುದಕ್ಕೆ ಒಂದು ಕಾರಣವಿರಬಹುದು. ಸಣ್ಣ ಪ್ರಮಾಣದ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳು ಹೆಚ್ಚು ಸಂಖ್ಯೆಯಲ್ಲಿ ಬೆಳೆದಿರುವುದು ಇದಕ್ಕೆ ಇನ್ನೊಂದು ಕಾರಣವಿರಬಹುದು. ಕೈಗಾರಿಕೋದ್ಯಮಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಂಖ್ಯೆಯ ಬಗ್ಗೆ ಸರಿಯಾದ ವರ್ಷಾವಧಿ ಅಂಕಿ ಅಂಶಗಳು ನಮಗೆ ಲಭ್ಯವಿಲ್ಲದೆ ಇರುವುದರಿಂದ ಸಂಘಟನೆಗಳ ಬೆಳವಣಿಗೆ ಹಾಗೂ ಸ್ವರೂಪದ ಬಗ್ಗೆ ಖಚಿತವಾಗಿ ಹೇಳುವುದು ಕಷ್ಟ.

ಕಾರ್ಮಿಕ ಸಂಘಟನೆಗಳ ಆರ್ಥಿಕ ಸ್ಥಿತಿಗತಿಯ ಆಧಾರ ಮೇಲೆ ಕೂಡ ಅವುಗಳ ಶಕ್ತಿಯ ಮಾಪನ ಸಾಧ್ಯ. ಕರ್ನಾಟಕದ ಸಂಘಟನೆಗಳ ವಾರ್ಷಿಕ ಸರಾಸರಿ ಆದಾಯ 1956-57ರಲ್ಲಿದ್ದ 2.766 ರೂ.ಗಳಿಂದ ಏರಿ 1989-90ರಲ್ಲಿ 1,17,720 ರೂ.ಗಳನ್ನು ಮುಟ್ಟಿದ್ದನ್ನೂ ಕೋಷ್ಟಕ-1 ತೋರಿಸುತ್ತದೆ. ಹಣದುಬ್ಬರವನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಸಂಘಟನೆಗಳ ಹಣಕಾಸು ಪರಿಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆ ಆಗಿರುವುದು ಸ್ಪಷ್ಟ. ಸಂಘಟನೆಗಳ ಸರಾಸರಿ ಸದಸ್ಯತ್ವದಲ್ಲಿ ಹೆಚ್ಚು ಏರಿಕೆ ಆಗದಿದ್ದರೂ (ಈಗಿನ ಏರಿಕೆಯ ಪ್ರಮಾಣ 1956-57ರಲ್ಲಿದ್ದ ಕಾಲು ಭಾಗ ಮಾತ್ರ) ಸಂಘಟನೆಗಳ ಆರ್ಥಿಕ ಪರಿಸ್ಥಿತಿ ಬಹಳಷ್ಟು ಸುಧಾರಿಸುವುದು ಒಂದಷ್ಟು ಸಮಾಧಾನ ನೀಡುವ ವಿಷಯ.

ಕಾರ್ಮಿಕ ಮುಖಂಡರು

1940ರ ದಶಕದವರೆಗೆ ಕಾರ್ಮಿಕ ಸಂಘಟನೆಗಳು ಬಟ್ಟೆ ಗಿರಣಿಗಳಿಗೆ ಮಾತ್ರ ಸೀಮಿತವಾಗಿದ್ದವು. ಭದ್ರಾವತಿಯ ಮೈಸೂರು ಐರನ್ ಅಂಡ್ ಸ್ಟೀಲ್ ವರ್ಕ್ಸ್ ಹಾಗೂ ಕೋಲಾರ್ ಗೋಲ್ಡ್ ಮೈನಿಂಗ್ ಅಂಡರ್ ಟೇಕಿಂಗ್ಸ್ ಬಿಟ್ಟರೆ ಎರಡನೇ ಮಹಾಯುದ್ಧದ ಅಂತ್ಯದವರೆಗೆ ಬಟ್ಟೆ ಗಿರಣಿಗಳಲ್ಲದೆ ಇನ್ನಾವ ಕೈಗಾರಿಕೆಗಳಲ್ಲೂ ಕಾರ್ಮಿಕರು ಸಂಘಟಿತ ರಾಗಿರಲಿಲ್ಲ. ಕರ್ನಾಟಕದ ಅತಿ ದೊಡ್ಡ ಕೈಗಾರಿಕೋದ್ಯಮದ ಇಂಜಿನಿಯರಿಂಗ್ ಉದ್ಯಮ ಶುರುವಾದದ್ದೇ ಎರಡನೇ ಮಹಾಯುದ್ಧದ ನಂತರದ ದಿನಗಳಲ್ಲಿ. ಬಟ್ಟೆ ಗಿರಣಿಗಳಲ್ಲಿ ಹೊರಗಿನ ಮುಖಂಡರು ಕಾರ್ಮಿಕ ಸಂಘಟನೆಗಳನ್ನು ಹುಟ್ಟು ಹಾಕಿದರೆ, ಇಂಜಿನಿಯರಿಂಗ್ ಉದ್ದಿಮೆಗಳಲ್ಲಿ ಕಾರ್ಮಿಕರ ಸ್ವಯಂಪ್ರೇರಣೆಯಿಂದಲೇ ಸಂಘಟನೆಗಳು ಹುಟ್ಟಿಕೊಂಡವು. ಮೊದಲು ಕೆಲವು ವರ್ಷಗಳಲ್ಲಿ ಇಂಜಿನಿಯರಿಂಗ್ ಉದ್ದಿಮೆಗಳಲ್ಲಿ ಸಂಘಟನೆಗಳನ್ನು ಪೂರ್ತಿಯಾಗಿ ನಿರ್ವಹಿಸಿದವರು ಕಾರ್ಮಿಕರೇ. ಬೇರೆ ಎಲ್ಲ ಉದ್ದಿಮೆಗಳಿಗಿಂತ ಇಂಜಿನಿಯರಿಂಗ್ ಉದ್ದಿಮೆಯಲ್ಲಿ ಕೆಲಸಗಾರರ ವಿದ್ಯಾಭ್ಯಾಸದ ಮಟ್ಟ ಹೆಚ್ಚಿನದಾಗಿತ್ತು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಇವರಲ್ಲಿ ಅನೇಕರಿಗೆ ಇಂಗ್ಲಿಷ್ ಭಾಷೆಯ ಬಳಕೆ ಇದ್ದುದರಿಂದ ಕಾರ್ಮಿಕ ಕಾನೂನು ಕಾಯಿದೆಗಳ ಪರಿಚಯ ಕೂಡ ಇವರಿಗೆ ತಕ್ಕ ಮಟ್ಟಿಗೆ ಇತ್ತು. ಕಾಲಾನುಕ್ರಮದಲ್ಲಿ ಕಾರ್ಖಾನೆಯ ಕೆಲಸಗಾರರೇ ಆದ ಮುಖಂಡರಿಗೆ ಮಾಲೀಕರು ಕಿರುಕುಳ ಕೊಡಲಾರಂಭಿಸಿದಾಗ ಹೊರಗಿನ ಕಾರ್ಮಿಕ ವುುಖಂಡರ ಪ್ರವೇಶವಾಯಿತು. 1951ರಲ್ಲಿ ಎಚ್.ಎ.ಎಲ್. ಕಾರ್ಮಿಕರು ಸಂಘಟನೆ ಕಟ್ಟಿದಾಗ ಸಂಘಟನಾ ಮುಖಂಡರನ್ನು ಅಮಾನತ್ತುಗೊಳಿಸಲಾಯಿತು. 1954ರವರೆಗೆ ಈ ಸಂಘಟನೆಯನ್ನು ಮುರಿಯುವ ಪ್ರಯತ್ನಗಳು ಸತತವಾಗಿ ನಡೆದವು. 1954ರ ನಂತರ ಹೊರಗಿನ ಮುಖಂಡರು ಈ ಸಂಘಟನೆಗೆ ಪುನರ್ಜೀವ ನೀಡಿದರು. ಅನೇಕ ಇಂಜಿನಿಯರಿಂಗ್ ಉದ್ದಿಮೆಗಳಲ್ಲೂ ಇದೇ ರೀತಿಯ ಬೆಳವಣಿಗಳಾದವು. ಇದೇ ಸಮಯದಲ್ಲಿ ಕೆಲವು ‘ಒಳಹೊರಗಿನ’ ಮುಖಂಡರೂ ಹುಟ್ಟಿಕೊಂಡರು. ಕಾರ್ಖಾನೆಯ ಕೆಲಸಗಾರರೇ ಆದ ಈ ಮುಖಂಡರು ಆಡಳಿತ ವರ್ಗದ ಕಿರುಕುಳದಿಂದಾಗಿಯೋ, ರಾಜಕೀಯ ಆಕಾಂಕ್ಷೆಯಿಂದಾಗಿಯೋ ಅಥವಾ ಕಾರ್ಮಿಕ ವರ್ಗಕ್ಕಾಗಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂಬ ಉದ್ದೇಶದಿಂದಲೋ ಕಾರ್ಖಾನೆಯ ಕೆಲಸ ಬಿಟ್ಟು ಹೊರಬಂದು ಕಾರ್ಮಿಕ ಮುಖಂಡರಾಗಿ ಮುಂದುವರೆದರು.

 

ರಾಜಕೀಯ ಪಕ್ಷಗಳ ಬೆಂಬಲ ಹೊಂದಿದ ಕಾರ್ಮಿಕ ಸಂಯುಕ್ತ ಸಂಘಗಳ ಸ್ಥಾಪನೆ ಕೂಡ ಹೊರಗಿನ ಮುಖಂಡರು ಕಾರ್ಖಾನೆಗಳನ್ನು ಪ್ರವೇಶಿಸುವುದಕ್ಕೆ ಇನ್ನೊಂದು ಕಾರಣ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಕಾರ್ಮಿಕ ವರ್ಗವನ್ನು ದೊಡ್ಡ ರಾಜಕೀಯ ಶಕ್ತಿಯಾಗಿ ಕಂಡ ಹೋರಾಟಗಾರರು ಅವರನ್ನು ಸಂಘಟಿಸುವ ಕೆಲಸವನ್ನು ಪ್ರಾರಂಭಿಸಿದರು. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷವು ಆಲ್ ಇಂಡಿಯ ಟ್ರೇಡ್ ಯೂನಿಯನ್ ಕಾಂಗ್ರೆಸ್(ಐಟಕ್) ಅನ್ನು ಬೆಳೆಸಿತು. ಸ್ವಾತಂತ್ರ್ಯದ ನಂತರ ಪಕ್ಷದೊಳಗೆ ಬಿರುಕುಗಳು ತಲೆದೋರಿ ಇದರ ಪರಿಣಾಮವು ಕಾರ್ಮಿಕ ಸಂಘಟನೆಯ ಮೇಲೂ ಆಯಿತು. ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್(ಇಂಟಕ್), ಹಿಂದೂ ಮಜ್ ದೂರ್ ಸಭಾ (ಎಚ್.ಎಮ್.ಎಸ್.), ಭಾರತೀಯ ಮಜ್ದೂರ್ ಸಂಘ, ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸೀಟು) ಇತ್ಯಾದಿ ಅನೇಕ ಸಂಯುಕ್ತ ಸಂಘಟನೆಗಳು ಹುಟ್ಟಿಕೊಂಡವು. ರಾಷ್ಟ್ರಮಟ್ಟದ ಈ ವಿದ್ಯಮಾನಗಳು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳ ಕಾರ್ಮಿಕ ಸಂಘಟನೆಗಳ ಮೇಲೆಯೂ ಪರಿಣಾಮ ಬೀರಿದವು. ಈ ಎಲ್ಲ ಸಂಯುಕ್ತ ಸಂಘಟನೆಗಳ ಮುಖಂಡರು ರಾಜಕೀಯ ವ್ಯಕ್ತಿಗಳೇ ಆಗಿದ್ದರಿಂದ ಕೆಲವು ಹೊರಗಿನಿಂದ ಬಂದ ವ್ಯಕ್ತಿಗಳು ಕೈಗಾರಿಕಾ ಕಾರ್ಮಿಕ ಮುಖಂಡರೂ ಆದರು.

ಹೊರಗಿನವರು ಮುಖಂಡರಾಗುವುದಲ್ಲಿ ಅನೇಕ ಲಾಭಗಳಿದ್ದವು. ಈ ಮುಖಂಡರಿಗೆ ಆಡಳಿತ ವರ್ಗಗಳು ಕಿರುಕುಳ ಕೊಡುವಂತಿರಲಿಲ್ಲ. ಅದಲ್ಲದೆ ಈ ಮುಖಂಡರಿಗೆ ಕಾರ್ಮಿಕ ಸಂಬಂಧೀ ಕಾಯಿದೆ-ಕಾನೂನುಗಳ ಪರಿಜ್ಞಾನ ಚೆನ್ನಾಗಿ ಇರುತ್ತಿತ್ತು. ಮಾಲೀಕರ ಜೊತೆ ಮಾತುಕತೆ, ಒಪ್ಪಂದ ನಡೆಸುವುದರಲ್ಲಿಯೂ ಇವರು ನಿಪುಣರಾಗಿರುತ್ತಿದ್ದರು. ಇಂದಿಗೂ ಹೊರಗಿನ ನಾಯಕರು ಅನೇಕ ಕಾರ್ಮಿಕ ಸಂಘಟನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಸ್ವಾತಂತ್ರ್ಯಾನಂತರದ ಮೊದಲ ಪೀಳಿಗೆಯ ಮುಖಂಡರ ಬಗ್ಗೆ ಕಾರ್ಮಿಕರಿಗೆ ಅಪಾರ ಗೌರವವಿತ್ತು. ಹಿರಿಯ ಮುಖಂಡ ಕೆ.ಟಿ.ಭಾಷ್ಯಂ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ ನಂತರ ಕಾರ್ಮಿಕ ಮಂತ್ರಿಯಾಗಿಯೂ ಕೆಲಸ ಮಾಡಿದರು. ಪುಟ್ಟಸ್ವಾಮಿ, ಶ್ರೀರಾಮುಲು, ಎಸ್.ಕೆ.ಕಾಂತ ಕೂಡ ಮುಖಂಡರಾಗಿದ್ದು ನಂತರ ಮಂತ್ರಿ ಗಳಾದವರು. ಶರ್ಮ, ಹುಚ್ಚುಮಾಸ್ತಿ ಗೌಡ, ಡಿ.ವೆಂಕಟೇಶ್, ಕಣ್ಣನ್, ಎಂ.ಸಿ. ನರಸಿಂಹನ್, ಎಂ.ಎನ್.ಕೃಷ್ಣನ್, ವಾಸನ್, ಭೈರಗೌಡ, ಕೆ.ಬಿ.ತಿಮ್ಮಯ್ಯ, ಎನ್. ಕೇಶವ, ಎಸ್. ಸೂರ್ಯನಾರಾಯಣ ರಾವ್, ಅಲ್ಲಂಪಳ್ಳಿ ವೆಂಕಟರಾಮನ್, ಕೆ.ಸುಬ್ಬರಾವ್, ಬಿ.ರಾಜಗೋಪಾಲ್, ವೆಂಕಟರಾಮ್, ಮೈಕೆಲ್ ಫರ್ನಾಂಡಿಸ್ ಮುಂತಾದವರೂ ಕಾರ್ಮಿಕರ ಪ್ರೀತಿ, ಗೌರವಕ್ಕೆ ಪಾತ್ರರಾದ ಮುಖಂಡರು.

ಆದರೆ ಇತ್ತೀಚಿನ ವರ್ಷಗಳಲ್ಲಿ ಮುಖಂಡರು ಬಹಳ ಬೇಗ ಬೇಗನೆ ಬದಲಾಗುತ್ತಾ ಹೋಗುತ್ತಾರೆ. ಒಮ್ಮೆ ಗೌರವಾನ್ವಿತರಾಗಿದ್ದ ಮುಖಂಡರೂ ಕೂಡ ಸದ್ದಿಲ್ಲದೆ ಸ್ಥಾನ ದಿಂದ ಇಳಿಯಬೇಕಾಗಿ ಬರುತ್ತಿದೆ. ಇಂದಿನ ಕಾರ್ಮಿಕರ ಮನಃಸ್ಥಿತಿ ಹಾಗೂ ಅಪೇಕ್ಷೆಗಳಲ್ಲಿ ಬಹಳಷ್ಟು ವ್ಯತ್ಯಾಸಗಳಿರುವುದು ಇದಕ್ಕೆ ಕಾರಣವಿರಬಹುದು. ಇಂದಿನ ಕಾರ್ಮಿಕರ ಶಿಕ್ಷಣ ಮಟ್ಟ ಹೆಚ್ಚು. ಹೆಚ್ಚಿನ ಸಂಬಳ, ಬೇಗ ಬಡ್ತಿ ಇತ್ಯಾದಿ ಸವಲತ್ತುಗಳನ್ನು ಅಪೇಕ್ಷಿಸುವ ಕಾರ್ಮಿಕನು, ಮುಷ್ಕರ, ಆಡಳಿತ ವರ್ಗದ ಜೊತೆ ಮಾತುಕತೆ ಇತ್ಯಾದಿ ಸುದೀರ್ಘ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರ ಬಗ್ಗೆ ಉತ್ಸಾಹ ತೋರುವುದಿಲ್ಲ. ಸವಲತ್ತುಗಳನ್ನು ಗಳಿಸಿಕೊಡುವ ಭಾರವನ್ನು ಪೂರ್ತಿಯಾಗಿ ಮುಖಂಡರ ಮೇಲೆ ಹೇರುವ ಇವರು ಯಾವುದೇ ಜವಾಬ್ದಾರಿ ಹೊರುವುದಕ್ಕೆ ತಯಾರಿರುವುದಿಲ್ಲ. ಭಿನ್ನಾಭಿಪ್ರಾಯ ತಲೆದೋರಿದ ಕೂಡಲೆ ಯಾವುದೇ ಎಗ್ಗಿಲ್ಲದೆ ನಾಯಕರನ್ನು ಬದಲಾಯಿ ಸಲು ಕಾರ್ಮಿಕರು ಮುಂದಾಗುತ್ತಾರೆ. ಇಂತಹ ಪ್ರಕರಣಗಳು ಕಾರ್ ಮೊಬೈಲ್ಸ್ ಲಿಮಿಟೆಡ್, ವೀಡಿಯಾ, ಲಾರ್ಸ್ನ್ ಅಂಡ್ ಟೂಬ್ರೋಗಳಲ್ಲಿ ನಡೆದಿವೆ.

ರಾಜಕೀಯ ಪಕ್ಷಗಳ ಜೊತೆಗಿನ ಸಂಬಂಧ

ಕಾರ್ಮಿಕರ ಸಂಯಕ್ತ ಸಂಘಟನೆ ಒಡೆದು ಬೇರೆ ಬೇರೆ ಘಟಕಗಳಾದಂತೆ ಕರ್ನಾಟಕ ಕಾರ್ಮಿಕ ಚಳವಳಿಯ ಚಹರೆ ಬದಲಾಗತೊಡಗಿತು. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ಬಹಳಷ್ಟು ಸಂಘಟನೆಗಳು ಕಾಂಗ್ರೆಸ್ಸಿನ ಮುಖವಾಣಿಯಾದ ಇಂಟಕ್ನ ಆಶ್ರಯದಲ್ಲಿ ಇದ್ದವು. ಕರ್ನಾಟಕದ ಬಟ್ಟೆ ಗಿರಣಿ ಉದ್ದಿಮೆಗಳಲ್ಲಿದ್ದ ಸಂಘಟನೆಗಳು ಹಾಗೂ ರಾಸಾಯನಿಕ, ಇಂಜಿನಿಯರಿಂಗ್ ಹಾಗೂ ಕಬ್ಬಿಣದ ಉದ್ದಿಮೆಗಳಲ್ಲಿದ್ದ ಬಹಳಷ್ಟು ಸಂಘಟನೆಗಳು ಇಂಟಕ್ ಆಶ್ರಯದಲ್ಲಿದ್ದವು. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳು ಬಹಳಷ್ಟು ವಿವಾದ ಪರಿಹಾರಗಳು ತ್ರಿಪಕ್ಷೀಯ ಮಾತುಕತೆಗಳ ಮೂಲಕ ನಡೆಯುತ್ತಿದ್ದವು. ಈ ಮಾತುಕತೆಗಳಲ್ಲಿ ವೇತನ ಮಂಡಳಿಗಳು ಹಾಗೂ ಕೈಗಾರಿಕಾ ನ್ಯಾಯಾಲಯಗಳು ಮುಖ್ಯ ಪಾತ್ರ ವಹಿಸುತ್ತಿದ್ದವು. ಕಾರ್ಮಿಕ ಹಾಗೂ ಆಡಳಿತ ವರ್ಗಗಳ ನಡುವೆ ದ್ವಿಪಕ್ಷೀಯ ಮಾತುಕತೆಯ ಪರಿಪಾಟ ಆಗಿನ್ನೂ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಆಳುವ ಪಕ್ಷದ ಬೆಂಬಲ ಸಹಾಯಕಾರಿಯಾಗುತ್ತಿದ್ದುದರಿಂದ ಕಾಂಗ್ರೆಸ್ ಪಕ್ಷದ ಬೆಂಬಲವಿದ್ದ ಸಂಘಟನೆಗಳಿಗೆ ಲಾಭವಾಗುತ್ತಿತ್ತು. ಆ ವರ್ಷಗಳಲ್ಲಿ ಇಂಟಕ್ನ ಪ್ರಾಬಲ್ಯಕ್ಕೆ ಇದೂ ಒಂದು ಕಾರಣ.

ಆದರೆ 70ರ ದಶಕದಲ್ಲಿ ಹಣದುಬ್ಬರ ಹೆಚ್ಚಿದಂತೆ ಪರಿಸ್ಥಿತಿ ಬದಲಾಗತೊಡಗಿತು. ಕಾರ್ಮಿಕರು ಹಣದುಬ್ಬರಕ್ಕೆ ಸರಿದೂಗುವ ವೇತನ ಏರಿಕೆಯ ಬೇಡಿಕೆಯನ್ನು ಮುಂದಿಟ್ಟರು. ತ್ರಿಪಕ್ಷೀಯ ಪರಿಹಾರ ಸೂತ್ರದಡಿಯಲ್ಲಿ ಉದ್ದಿಮೆಯ ಆರ್ಥಿಕ ಸ್ಥಿತಿಯ ಆಧಾರದ ಮೇಲೆ ವೇತನ ಹೆಚ್ಚಳವನ್ನು ನಿರ್ಧರಿಸುವ ಪರಿಪಾಟೊಇದ್ದುದರಿಂದ ಕಾರ್ಮಿಕರ ಒಗ್ಗಟ್ಟಿನ ಹಾಗೂ ಒತ್ತಾಯ ಹೇರುವ ಶಕ್ತಿಯ ಮೇಲೆಯೇ ಆಧಾರಪಡುವ ದ್ವಿಪಕ್ಷೀಯ ಮಾತುಕತೆ ಒಪ್ಪಂದ ಹೆಚ್ಚು ಲಾಭದಾಯಕವೆಂದು ಸಂಘಟನೆಗಳು ಮನಗಂಡವು. ಸರ್ಕಾರ ಕೂಡ ದ್ವಿಪಕ್ಷೀಯ ಮಾತುಕತೆಯೇ ಕೈಗಾರಿಕಾ ವಿವಾದಗಳು ಪರಿಹಾರಕ್ಕೆ ಹೆಚ್ಚು ಸೂಕ್ತವಾದ ಸೂತ್ರ ಎಂಬ ತೀರ್ಮಾನಕ್ಕೆ ಬಂದಿತು. ಇದು ಕಾರ್ಮಿಕ ತಜ್ಞರ ಅಭಿಪ್ರಾಯ ಕೂಡ ಆಗಿತ್ತು. ಹೀಗೆ ದ್ವಿಪಕ್ಷೀಯ ಚರ್ಚೆ ಮಾತುಕತೆಗಳು ಕೈಗಾರಿಕಾ ಕ್ಷೇತ್ರದಲ್ಲೂ ಹೆಚ್ಚು ಪ್ರಚಲಿತವಾದವು.

ದ್ವಿಪಕ್ಷೀಯ ಮಾತುಕತೆಗಳು ಹೆಚ್ಚು ವ್ಯಾಪಕವಾದಂತೆ ಕಾರ್ಮಿಕ ಸಂಘಟನೆಗಳ ರೂಪುರೇಷೆ ಕೂಡ ಬದಲಾಗತೊಡಗಿತು. ಅದಾಗಲೆ ಹೆಚ್ಚು ವಿದ್ಯಾವಂತ ಕಾರ್ಮಿಕರಿದ್ದ ಇಂಜಿನಿಯರಿಂಗ್ ಕೈಗಾರಿಕೆಯಲ್ಲಿ ಒಂದಷ್ಟು ಪ್ರಭಾವ ಗಳಿಸಿಕೊಂಡಿದ್ದ ಎಡಪಂಥೀಯ ಸಂಘಟನೆಗಳು ಬೇರೆ ಕೈಗಾರಿಕೆಗಳಿಗೂ ಹರಡತೊಡಗಿದವು. ನಂತರದ ವರ್ಷಗಳಲ್ಲಿ ಆಡಳಿತ ವರ್ಗ ಹಾಗೂ ಕೊಳ್ಳುಗರ ಪರವಾಗಿರುವ ನೀತಿಗಳನ್ನು ಸರ್ಕಾರ ಹೆಚ್ಚು ಹೆಚ್ಚು ಅಳವಡಿಸಿಕೊಳ್ಳತೊಡಗಿದಾಗ ವರ್ಗಗಳಲ್ಲಿ ಅಸಮಾಧಾನ ಹುಟ್ಟಿತು. 60ರ ದಶಕದಲ್ಲಿ ಪಶ್ಚಿಮ ಬಂಗಾಳದಲ್ಲಿ ಉಂಟಾದಂಥ ಹಿಂಸಾತ್ಮಕ ಕೈಗಾರಿಕಾ ಅಶಾಂತಿಯ ಪರಿಸ್ಥಿತಿ ಮತ್ತೆ ಉಂಟಾದೀತೆಂಬ ಅನುಮಾನದಿಂದ ಸರ್ಕಾರ ಕೈಗಾರಿಕಾ ಶಾಂತಿ ಕಾಪಾಡಲು ಹೆಚ್ಚು ಪೊಲೀಸರನ್ನು ಬಳಸತೊಡಗಿತು. ಅನೇಕ ಬಾರಿ ಕಾರ್ಮಿಕರು ಲಾಠಿ ಪ್ರಹಾರ, ಗೋಲಿಬಾರುಗಳನ್ನು ಎದುರಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಇಂಟಕ್ ನಾಯಕತ್ವ ತೀರ ನಮ್ರ ಹಾಗೂ ರಾಜೀಪರ ಎಂದು ಕಾರ್ಮಿಕರಿಗೆ ಅನ್ನಿಸತೊಡಗಿತು. ಈ ಸಂದರ್ಭದಲ್ಲಿ ಎಡಪಂಥೀಯ ಸಂಘಟನೆಗಳು ಕಾರ್ಮಿಕರನ್ನು ಆಕರ್ಷಿಸಿದವು. ಐಟಕ್ ಹಾಗೂ ಸೀಟು ಆಶ್ರಯದಲ್ಲಿ ಸಂಘಟಿತವಾದ ಕಾರ್ಮಿಕ ಚಳವಳಿಗಳ ಹೊಸ ಯುಗ ಕರ್ನಾಟಕದಲ್ಲಿ ಆರಂಭವಾಯಿತು. ದಕ್ಷಿಣ ಕನ್ನಡದಲ್ಲಿ ಬೀಡಿ, ಅಗರ್ಬತ್ತಿ, ಹೋಟೆಲ್, ಥಿಯೇಟರ್ ಹಾಗೂ ರೇಷ್ಮೆ ಕೈಗಾರಿಕೆಗಳ ಕಾರ್ಮಿಕರನ್ನು ಸಂಘಟಿಸುವ ಮೂಲಕ 50ರ ದಶಕದಲ್ಲಿ ಕಾರ್ಯ ಚಟುವಟಿಕೆ ಶುರುಮಾಡಿದ್ದ ಬಿ.ಎಂ.ಎಸ್.ಕೂಡ ತನ್ನ ಕಾರ್ಯವ್ಯಾಪ್ತಿಯನ್ನು ಸಂಘಟಿತ ಉದ್ದಿಮೆ ಗಳಿಗೂ ವಿಸ್ತರಿಸಲಾರಂಭಿಸತೊಡಗಿತು. ಔಷಧಿ ಉದ್ದಿಮೆಯನ್ನು ಮೊದಲು ಪ್ರವೇಶಿಸಿದ ಈ ಸಂಘಟನೆ ಮುಂದೆ ಇಂಜಿನಿಯರಿಂಗ್, ಬಟ್ಟೆ ಗಿರಣಿ, ಸಕ್ಕರೆ ಹಾಗೂ ಕಾಗದ ಉದ್ದಿಮೆಗಳನ್ನೂ ಪ್ರವೇಶಿಸಿತು. ಕಳೆದ 40 ವರ್ಷಗಳಲ್ಲಿ ಬಿ.ಎಂ.ಎಸ್.ನಲ್ಲಿ ಯಾವುದೇ ಒಡಕು ಬಾರದೇ ಇರುವುದು ಈ ಸಂಘಟನೆಯ ವೈಶಿಷ್ಟ್ಯ. ಸಂಘಟನೆಯ ಈ ಒಗ್ಗಟ್ಟು ಕರ್ನಾಟಕದ ಕಾರ್ಮಿಕ ವರ್ಗದ ಒಂದು ಭಾಗವನ್ನು ಆಕರ್ಷಿಸುವುದರಲ್ಲಿ ಸಫಲವಾಗಿದೆ.

ಹೊಸ ಆದರ್ಶಗಳು

ತಾತ್ವಿಕ ಭಿನ್ನಾಭಿಪ್ರಾಯಗಳ ಆಧಾರದ ಮೇಲೆ ಸಂಘಟನೆಗಳು ಒಡೆಯುವುದು ಸಹಜ. ಆದರೆ ಕರ್ನಾಟಕದಲ್ಲಿ ಜಾತಿ, ಧರ್ಮ, ಭಾಷೆಗಳ ಆಧಾರದ ಮೇಲೆ ಕಾರ್ಮಿಕ ಸಂಘಟನೆಗಳು ಒಡೆದು ಹೋಗುತ್ತಿರುವುದು ಆತಂಕಕಾರಿಯಾದ ಬೆಳವಣಿಗೆ. ಬಹಳಷ್ಟು ಕಾರ್ಖಾನೆಗಳಲ್ಲಿ ಅನೇಕ ಜಾತಿ ಗುಂಪುಗಳು, ಪರಿಶಿಷ್ಟ ಜಾತಿ/ಪಂಗಡಗಳ ಗುಂಪುಗಳ, ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರ ಗುಂಪುಗಳು ಹುಟ್ಟಿಕೊಂಡಿವೆ. ಸಾಂಸ್ಕೃತಿಕ ಸಂಘಟನೆಗಳಾಗಿ ಹಬ್ಬ ಹರಿದಿನಗಳನ್ನು, ತಮ್ಮ ನಾಯಕರ ಹುಟ್ಟುಹಬ್ಬಗಳನ್ನು ಆಚರಿಸುವ ಮೂಲಕ ಹುಟ್ಟಿದರೂ ನಂತರ ಇವುಗಳ ವ್ಯಾಪ್ತಿ ಬೆಳೆಯುತ್ತಾ ಹೋಗುತ್ತದೆ. ಕಾರ್ಮಿಕ ಸಂಘಟನೆಗಳ ಚುನಾವಣೆಗಳ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಚುರುಕಾಗುವ ಈ ಸಾಂಸ್ಕೃತಿಕ ಸಂಘಟನೆಗಳ ಸದಸ್ಯರು ತಮ್ಮ ಮಂದಿ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕಾರಿ ಸಮಿತಿಯಲ್ಲಿ ಇರಬೇಕೆಂದು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ತಮ್ಮ ಜಾತಿ/ಮತ/ಭಾಷಾ ಪಂಗಡದ ಜನರಿಗೆ ಉದ್ಯೋಗ ಭರ್ತಿ ಮಾಡುವಾಗ ಹಾಗೂ ಬಡ್ತಿ ನೀಡುವಾಗ ಆದ್ಯತೆ ಕೊಡಬೇಕೆಂದು ಆಡಳಿತ ವರ್ಗದ ಮೇಲೆ ಒತ್ತಾಯ ತರುತ್ತಾರೆ. ಈ ಬೆಳವಣಿಗೆಗಳು ಕಾರ್ಮಿಕ ಚಳವಳಿಯ ಒಗ್ಗಟ್ಟಿನ ಹಾಗೂ ಜಾತ್ಯತೀತತೆಯ ಮೂಲ ಆಶಯಕ್ಕೆ ವಿರೋಧವಾದವು.

ಈ ಬೆಳವಣಿಗೆಯ ಹಿಂದಿನ ಕಾರಣದ ಬಗ್ಗೆ ಎರಡು ಅಭಿಪ್ರಾಯಗಳಿವೆ. ಜಾತಿ ಆಧಾರಿತ ರಾಜಕಾರಣ ತುಂಬ ವ್ಯಾಪಕವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆಗಳು ಈ ಬೆಳವಣಿಗೆಯಿಂದ ದೂರ ಇರುವುದು ಅಸಾಧ್ಯ ಎನ್ನುವುದು ಒಂದು ವಾದ. ಆದರೆ ಕಾರ್ಮಿಕ ಸಂಘಟನೆಗಳ ನಾಯಕರು ಈ ಬೆಳವಣಿಗೆಗೆ ಸರ್ಕಾರದ ತಂತ್ರಗಳೇ ಕಾರಣ ಎನ್ನುತ್ತಾರೆ. ಓಟುಗಳ ಮೇಲೆ ಕಣ್ಣಿಡುವ ರಾಜಕೀಯ ಪಕ್ಷಗಳು ಜಾತಿ/ಮತ/ಭಾಷೆ ಸಂಘಟನೆಗಳನ್ನು ಓಲೈಸುತ್ತವೆ ಎನ್ನುವುದು ಇವರ ವಾದ. ಕಾಲಾನುಕ್ರಮದಲ್ಲಿ ಈ ಶಕ್ತಿಗಳು ಗಟ್ಟಿಯಾಗಿ ತಳವೂರಿ ಜಾತ್ಯತೀತ ಆಶಯಗಳನ್ನು ಸೋಲಿಸುತ್ತವೆ ಎಂದರೆ ತಪ್ಪಾಗಲಾರದು. ಕಾರಣಗಳೇನೇ ಇರಲಿ ಕಾರ್ಮಿಕರ ಚಳವಳಿಯ ಒಗ್ಗಟ್ಟಿನಲ್ಲಿ ಬಿರುಕುಗಳು ಬಂದಿರು ವುದಂತೂ ನಿಜ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಕರ್ನಾಟಕ ಕೈಗಾರಿಕೀಕರಣ ಗೊಂಡ ಮೊದಲು ವರ್ಷಗಳಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಮುಂದೆ ಬಂದ ಕನ್ನಡಿಗರ ಸಂಖ್ಯೆ ಕಡಿಮೆ. ಕರ್ನಾಟಕದ ಮೊದಲ ಗಣಿ ಹಾಗೂ ಕಾರ್ಖಾನೆಗಳ ಕಾರ್ಮಿಕರು ತಮಿಳರು, ತೆಲುಗರು ಹಾಗೂ ಮಲೆಯಾಳಿಗಳಾಗಿದ್ದರು. ಆದರೆ ಕರ್ನಾಟಕ ದಲ್ಲೂ ಕೃಷಿ ಭೂಮಿಯ ಮೇಲಿನ ಒತ್ತಡ ಹೆಚ್ಚಾದಂತೆ ಹೆಚ್ಚು ಹೆಚ್ಚು ಮಂದಿ ಕಾರ್ಖಾನೆಗಳಿಗೆ ಕೆಲಸ ಅರಸಿ ಬರತೊಡಗಿದರು. ಆದರೆ ಅಷ್ಟು ಹೊತ್ತಿಗಾಗಲೆ ಬಹಳಷ್ಟು ಉದ್ಯೋಗಗಳು ಭರ್ತಿಯಾಗಿದ್ದವು. ಈ ಸಂದರ್ಭದಲ್ಲಿ ಕೆಲವು ಸ್ಥಳೀಯ ನಾಯಕರು ಸ್ಥಳೀಯರಿಗೆ ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ನೀಡಬೇಕೆಂದು ಒತ್ತಾಯ ತರತೊಡಗಿದರು. ಎಚ್.ಎಂ.ಟಿ. ಹಾಗು ಬಿ.ಇ.ಎಲ್. ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ಚಳವಳಿ ಪ್ರಬಲವಾಗಿತ್ತು. ಹೊರಗಿನಿಂದ ಬಂದ ಕಾರ್ಮಿಕರು ಸ್ಥಳೀಯ ಕಾರ್ಮಿಕರಿಗೆ ಸ್ಪರ್ಧಿಗಳಾಗಿ ಕಾಣತೊಡಗಿದರು. ತಮ್ಮ ಉದ್ಯೋಗಾವಕಾಶಗಳಿಗೆ ಕುತ್ತು ಬಂದೀತೆಂಬ ಭಯದಿಂದ ಕೆಲವು ಭಾಷಾ ಸಂಘಟನೆಗಳು ಹುಟ್ಟಿಕೊಂಡವು. ಇದೇ ಮಾರ್ಗ ಅನುಸರಿಸಿ ಜಾತಿ/ಧರ್ಮ ಸಂಘಟನೆಗಳು ಹುಟ್ಟಿಕೊಂಡವು. ಈ ರೀತಿಯ ಬೆಳವಣಿಗೆಗಳು ಕಾರ್ಮಿಕ ಐಕ್ಯತೆಯ ಮೂಲತತ್ವಕ್ಕೆ ಮಾರಕವಾಗಿವೆ.

ಅಸಂಘಟಿತ ಉದ್ಯಮಗಳಲ್ಲಿ ಕಾರ್ಮಿಕ ಚಳವಳಿ

ಕೈಗಾರಿಕಾ ಕಾರ್ಮಿಕರು ಸಂಘಟನೆಗಳನ್ನು ಕಟ್ಟಿ ನೋಂದಣಿ ಪಡೆದು ವೇತನ ಏರಿಕೆ, ಬೋನಸ್ ಇತ್ಯಾದಿ ಸವಲತ್ತುಗಳನ್ನು ಪಡೆದ ಬಹಳ ವರ್ಷಗಳ ನಂತರವೂ ಕೃಷಿ ಹಾಗೂ ಕೃಷಿಯೇತರ ಅಸಂಘಟಿತ ವಲಯಗಳಲ್ಲಿ ಕಾರ್ಮಿಕ ಸಂಘಟನೆಗಳು ಹುಟ್ಟಿಕೊಂಡಿರಲಿಲ್ಲ. ಆದ್ದರಿಂದ ಈ ಕಾರ್ಮಿಕರ ಉದ್ಯೋಗ ವಾತಾವರಣದಲ್ಲಿ ಯಾವುದೇ ಅಭಿವೃದ್ದಿ ಕಂಡುಬಂದಿರಲಿಲ್ಲ. ಅಸಂಘಟಿತ ವಲಯಗಳಲ್ಲಿ ಕಾರ್ಮಿಕ ಸಂಘಟನೆಗಳು ಬೆಳೆಯದೆ ಇರುವುದಕ್ಕೆ ಅನೇಕ ಕಾರಣಗಳಿದ್ದವು. ಈ ಕಾರ್ಮಿಕರು ಒಬ್ಬ ಮಾಲೀಕನ ಒಂದು ಕಾರ್ಖಾನೆಯ ಸೂರಿನಡಿ ಕೆಲಸ ಮಾಡುವವರಲ್ಲ. ಈ ವಲಯದ ಕಾರ್ಮಿಕರಲ್ಲಿ ಅನಕ್ಷರತೆ ಹಾಗು ಪರಿಸ್ಥಿತಿಯನ್ನು ‘ಹಣೆಬರಹ’ ಎಂದು ಒಪ್ಪಿಕೊಂಡುಬಿಡುವ ಮನೋಭಾವ ಹೆಚ್ಚು. ಇವರಲ್ಲಿ ಪ್ರಬಲ ಮುಖಂಡರೂ ಇರಲಿಲ್ಲ. ಬೇರೆ ಬೇರೆ ಕಡೆ ಕೆಲಸ ಮಾಡುವ ಜನರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಎದುರಿಸಬೇಕಾದ ಕಷ್ಟನಷ್ಟಗಳ ಅರಿವಿದ್ದ ಹೊರಗಿನ ನಾಯಕರು ಇವರನ್ನು ಸಂಘಟಿಸುವ ಕಾರ್ಯಕ್ಕೆ ಕೈಹಾಕುವಲ್ಲಿ ಹಿಂಜರಿದರು.

ಆದರೆ ಕರ್ನಾಟಕದಲ್ಲಿ ಅಸಂಘಟಿತ ವಲಯದ ಕಾರ್ಮಿಕರನ್ನು ಒಗ್ಗೂಡಿಸುವ ಮೊದಲ ಪ್ರಯತ್ನ 1930ರಲ್ಲೇ ಪ್ರಾರಂಭವಾಗಿತ್ತು. ದಕ್ಷಿಣ ಕನ್ನಡದ ಬೀಡಿ ಕಾರ್ಮಿಕರನ್ನು ಒಗ್ಗೂಡಿಸುವುದು ಈ ನಿಟ್ಟಿನ ಪ್ರಥಮ ಪ್ರಯತ್ನವಾಗಿತ್ತು. ಆದರೆ ಮಾಲೀಕರು ಬೀಡಿ ಕಟ್ಟುವ ಕೆಲಸವನ್ನು ಗ್ರಾಮೀಣ ಪ್ರದೇಶಗಳಿಗೆ ವರ್ಗಾಯಿಸಿ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಿಕೊಳ್ಳುವ ಪರಿಪಾಠ ಪ್ರಾರಂಭಿಸುವ ಮೂಲಕ ಈ ಚಳವಳಿಗೆ ಭಾರಿ ಪೆಟ್ಟುಕೊಟ್ಟರು. ಆದರೂ ಬೀಡಿ ಉದ್ಯಮದಲ್ಲಿ ಚಳವಳಿ ಮುಂದುವರೆಯಿತು. ಬಿಜಾಪುರದ ಕಮ್ಯೂನಿಸ್ಟ್ ಮುಖಂಡರ ಶಕ್ತ ಮುಂದಾಳತ್ವದಲ್ಲಿ ನಡೆದ ಬೀಡಿ ಕಾರ್ಮಿಕರ ಚಳವಳಿ ಒಂದಷ್ಟು ಮಟ್ಟಿಗೆ ವೇತನ ಏರಿಕೆ ಪಡೆಯುವುದರಲ್ಲಿ ಸಫಲವಾಯಿತು(ಉಪಾಧ್ಯಾಯ).

ಗುತ್ತಿಗೆ ಪದ್ಧತಿಯಿಂದ ಕಾರ್ಮಿಕ ವರ್ಗಕ್ಕೆ ಆಗುತ್ತಿದ್ದ ಅನ್ಯಾಯವನ್ನು ಮನಗಂಡ ಐಟಕ್ ಹಾಗೂ ಸೀಟು ಸಂಘಟನೆಗಳು ಈ ವ್ಯವಸ್ಥೆಯನ್ನು ರದ್ದುಗೊಳಿಸಿ, ಕಾರ್ಖಾನೆ ಮಾಲೀಕರು ನೇರವಾಗಿ ಕಚ್ಚಾವಸ್ತುಗಳನ್ನು ಕಾರ್ಮಿಕರಿಗೆ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟವು. ಮಾಲೀಕರು ಈ ಬೇಡಿಕೆಯನ್ನು ತೀವ್ರವಾಗಿ ವಿರೋಧಿಸಿದರು. ಕಾರ್ಮಿಕ ಸಂಘಟನೆಗಳು ಸೂಚಿಸಿದ ವ್ಯವಸ್ಥೆಯ ಸಾಧ್ಯಾಸಾಧ್ಯತೆಗಳನ್ನು ಅಧ್ಯಯನ ಮಾಡಲು ಸರ್ಕಾರ ನೇಮಿಸಿದ ಸಮಿತಿ ಈ ವ್ಯವಸ್ಥೆ ಕಾರ್ಯಸಾಧುವಲ್ಲ ಎಂಬ ತೀರ್ಮಾನ ನೀಡಿತು. ಕಾರ್ಮಿಕ ಮುಖಂಡರು ಅವ್ಯವಹಾರ ನಡೆಸುವ ಗುತ್ತಿಗೆದಾರರನ್ನು ಬಯಲಿಗೆಳೆಯಬೇಕೆಂದೂ, ಗುತ್ತಿಗೆದಾರಿಕೆಗೆ ಬದಲಿ ವ್ಯವಸ್ಥೆಯಾಗಿ ಸಹಕಾರಿ ಸಂಘಟನೆಗಳನ್ನು ಕಟ್ಟಬೇಕೆಂದೂ ಈ ಸಮಿತಿ ಸೂಚಿಸಿತು. ಸಹಕಾರಿ ಸಂಘಟನೆಗಳನ್ನು ಕಟ್ಟುವ ಕೆಲಸ ಸಫಲವಾಗಲಿಲ್ಲವಾದ್ದರಿಂದ ಗುತ್ತಿಗೆ ಪದ್ಧತಿ ಮುಂದುವರೆಯಿತು. ಅಗರಬತ್ತಿ ಉದ್ದಿಮೆಯಲ್ಲಿ ನಡೆದ ಸಂಘಟನೆಯ ಪ್ರಯತ್ನಗಳೂ ಕೂಡ ಫಲಪ್ರದವಾಗಲಿಲ್ಲ. ನಗರಗಳಲ್ಲಿ ನಗರಪಾಲಿಕೆಗಳ ಸಫಾಯಿ ಕರ್ಮಚಾರಿಗಳನ್ನು ಸಂಘಟಿಸುವ ಕೆಲಸ ಕೆಲಮಟ್ಟಿಗೆ ಸಫಲವಾಗಿದೆ. ಸ್ವಾತಂತ್ರ್ಯಪೂರ್ವದ ವರ್ಷಗಳಲ್ಲಿ ಬಿಜಾಪುರ ಜಿಲ್ಲೆಯ ಕಮ್ಯೂನಿಸ್ಟ್ ಮುಖಂಡರು ಅಸಂಘಟಿತ ವಲಯದ ಕಾರ್ಮಿಕರನ್ನು ಸಂಘಟಿಸಲು ಮಾಡಿದ ಪ್ರಯತ್ನಗಳು ವಲುದ ಕಾರ್ಮಿಕರನ್ನು ಸಂಘಟಿಸಲು ಮಾಡಿದ ಪ್ರಯತ್ನಗಳು ಗಮನಾರ್ಹವಾದವು. ಈ ಕಾರ್ಯಕರ್ತರು ನಗರದ ಟಾಂಗಾ ಚಾಲಕರನ್ನು ಪೋಲಿಸರ ದೌರ್ಜನ್ಯದ ವಿರುದ್ಧ ಸಂಘಟಿಸುವಲ್ಲಿ ಯಶಸ್ವಿಯಾದರು. ಇತ್ತೀಚಿನ ದಿನಗಳಲ್ಲಿ ಆಟೋರಿಕ್ಷಾ ಚಾಲಕರನ್ನೂ ಕೂಡ ಇವರು ಸಂಘಟಿಸಿದ್ದಾರೆ. 70ನೆಯ ದಶಕದ ದ್ವಿತೀಯಾರ್ಧದಲ್ಲಿ ಸೀಟು ಬೆಂಗಳೂರಿನ ಹೋಟೆಲ್ ಕೆಲಸಗಾರರನ್ನು ಸಂಘಟಿಸಿತು. ಬೀಡಿ, ಅಗರಬತ್ತಿ, ಸಿದ್ಧ ಉಡುಪು, ಮಗ್ಗ ಹಾಗೂ ಪ್ಲಾಂಟೇಶನ್ ಕಾರ್ಮಿಕರನ್ನು ಸಂಘಟಿಸುವ ಪ್ರಯತ್ನ ಕೂಡ ನಡೆದಿದೆ. ಅಸಂಘಟಿತ ಕಾರ್ಮಿಕ ಚಳವಳಿಗಳು ಎಂಟು ಗಂಟೆಯ ನಿಗದಿತ ಕೆಲಸದ ವೇಳೆಯ ಅನುಷ್ಠಾನ, ಕನಿಷ್ಠ ವೇತನ ಇತ್ಯಾದಿ ಮೂಲಭೂತ ಹಕ್ಕುಗಳನ್ನು ಜಾರಿಗೊಳಿಸುವ ಬಗ್ಗೆ ಹೆಚ್ಚು ಒತ್ತು ನೀಡಿವೆ.

ಕೃಷಿ ಕ್ಷೇತ್ರದ ಚಳವಳಿಗಳಲ್ಲಿ 40ರ ದಶಕದ ಬಿಜಾಪುರ ಜಿಲ್ಲೆಯ ಕಾರ್ಮಿಕರ ಚಳವಳಿ, 50ರ ದಶಕದ ಕಾಗೋಡು ಚಳವಳಿ ಹಾಗು 80ರ ದಶಕದ ನರಗುಂದ-ನವಲಗುಂದ ಚಳವಳಿಗಳು ಗಮನಾರ್ಹವಾದವು. ಈ ಚಳವಳಿಗಳು ಭೂಮಾಲೀಕರ ಹಾಗೂ ಭೂಮಾಲೀಕರ ಆಸಕ್ತಿಗಳ ಪರವಾಗಿದ್ದ ಸರ್ಕಾರದ ವಿರುದ್ಧ ಹೂಡಿದ ಚಳವಳಿಗಳಾಗಿದ್ದವು. ನರಗುಂದ-ನವಲಗುಂದ ಚಳವಳಿಯ ಸಂದರ್ಭದಲ್ಲಿ ಪಟ್ಟಣದ ಕೈಗಾರಿಕಾ ಕಾರ್ಮಿಕರು ಹಾಗೂ ಹಳ್ಳಿಯ ರೈತರು ಜೊತೆಗೂಡಿ ಬೆಂಗಳೂರಿನಲ್ಲಿ ಜಾಥಾ ನಡೆಸಿದ್ದು ವಿಶೇಷವಾದ ಸಂಗತಿ. ಆದರೆ ಈ ಅಪರೂಪದ ಕಾರ್ಮಿಕ-ರೈತ ಒಗ್ಗಟ್ಟು ಬಹಳ ದಿನ ನಿಲ್ಲಲಿಲ್ಲ.

ರೈತರು ರಾಜ್ಯಾದ್ಯಂತ ನಡೆಯುತ್ತಿದ್ದ ಕಾರ್ಮಿಕ ಚಳವಳಿಗಳಿಂದ ಪ್ರಭಾವಿತರಾಗಿದ್ದು ಬಹಳ ಕಡಿಮೆ. ಮಾರ್ಕ್ಸ್ವಾದಿ ಕಾರ್ಯಕರ್ತರು ಕೇರಳದ ಚಳವಳಿಯ ರೂಪುರೇಷೆಗಳ ಆಧಾರದ ಮೇಲೆ ದಕ್ಷಿಣ ಕನ್ನಡದ ರೈತರನ್ನು ಸಂಘಟಿಸುವ ಪ್ರಯತ್ನವನ್ನು ಮಾಡಿದ್ದರು. ಈ ಕಾರ್ಯಕರ್ತರು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರ ಜೊತೆಗೂಡಿ ಚಿಕ್ಕಮಗಳೂರು ಜಿಲ್ಲೆಯ ಪರಿಶಿಷ್ಟ ಜಾತಿ/ ವರ್ಗಗಳಿಗೆ ಮೀಸಲಾದ ಭೂಮಿಯನ್ನು ಬೇರೆಯವರು ಒತ್ತುವರಿ ಮಾಡಿಕೊಳ್ಳುವುದನ್ನು ತಡೆದದ್ದೇ ಅಲ್ಲದೆ ಸಣ್ಣ ಹಾಗೂ ಅತಿ ಸಣ್ಣ ರೈತರು ಉಳುತ್ತಿದ್ದ ಸರ್ಕಾರಿ ಭೂಮಿಯನ್ನು ಸರ್ಕಾರ ಅವರಿಗೆ ನೀಡಬೇಕೆಂದು ಹಕ್ಕೊತ್ತಾಯ ಮಾಡಿದರು. ದೆಹಲಿಯ ನ್ಯಾಷನಲ್ ಲೇಬರ್ ಇನ್ಸ್ಟಿಟ್ಯೂಟ್ 1978ರಲ್ಲಿ ಕೃಷಿ ಕಾರ್ಮಿಕ ಸಂಘಟನೆಗಳ ಸ್ಥಾಪನೆಯ ಬಗ್ಗೆ ಕ್ಯಾಂಪುಗಳನ್ನು ನಡೆಸಿತು. ಆದರೆ ಈ ಎಲ್ಲ ಪ್ರಯತ್ನಗಳು ಹೆಚ್ಚು ಫಲದಾಯಕವಾಗಲಿಲ್ಲ. ಕೇರಳದ ಕುಟ್ಟನಾಡು ಪ್ರಾಂತ್ಯದಲ್ಲಿರುವಂತೆ ಬಲವಾದ ಕೃಷಿ ಕಾರ್ಮಿಕ ಸಂಘಟನೆಗಳನ್ನು ಕರ್ನಾಟಕದಲ್ಲಿ ಕಟ್ಟಲಾಗಲಿಲ್ಲ. ಕುಟ್ಟನಾಡು ಪ್ರಾಂತ್ಯದ ಪರಿಸ್ಥಿತಿಯೇ ಬೇರೆಯಾಗಿತ್ತು. ಕುಟ್ಟನಾಡಿನ ವಸ್ತುಸ್ಥಿತಿಯ ಬಗ್ಗೆ ನಡೆಸಿದ ಎರಡು ಅಧ್ಯಯನಗಳು, ಅಲ್ಲಿನ ಸಂಘಟನೆ ಸಫಲವಾಗುವುದರ ಹೊರಗಿನ ಕಾರಣಗಳನ್ನು ಹೀಗೆಂದು ವಿವರಿಸುತ್ತವೆ : ಸಂಘಟಿತ ಹಾಗೂ ಅಸಂಘಟಿತ ಉದ್ದಿಮೆಗಳ ನಡುವೆ ವೇತನ ಹಾಗೂ ಕೆಲಸದ ವಾತಾವರಣದಲ್ಲಿ ಇದ್ದ ಅಸಮಾನತೆ ರೈತರಲ್ಲಿ ಹುಟ್ಟಹಾಕಿದ ಅಸಮಾಧಾನ ಹಾಗೂ ರಾಜಕೀಯ ಸಂಘಟನೆಗಳು ರೈತರಲ್ಲಿ ಮೂಡಿಸಿದ ವರ್ಗ ಜಾಗೃತಿ. ಆದರೆ ಕರ್ನಾಟಕದ ಮಾರ್ಕ್ಸ್ವಾದಿ ಕಾರ್ಯಕರ್ತರು ಅನೇಕ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಬೇಕಾಯಿತು. ಇವರು ಸಂಘಟನೆಯ ಕೆಲಸ ಮಾಡುತ್ತಿದ್ದ ಸ್ಥಳಗಳಲ್ಲಿ ತಾಳೆ ಹಾಕಿ ನೋಡಲು ಅನುಕೂಲವಾಗುವಂಥ ಕಾರ್ಖಾನೆಗಳಾಗಲಿ, ಕಾರ್ಮಿಕ ಸಂಘಟನೆಗಳಾಗಲಿ ಇರಲಿಲ್ಲ. ಸಣ್ಣ ಹಾಗೂ ಅತಿ ಸಣ್ಣ ರೈತರು ಕೆಲವು ಸಂದರ್ಭಗಳಲ್ಲಿ ಕೃಷಿ ಕೂಲಿಕಾರರಾಗಿಯೂ ಇನ್ನೂ ಕೆಲವು ಸಂದರ್ಭಗಳಲ್ಲಿ ಕೆಲಸ ನೀಡುವ ಧಣಿಗಳಾಗಿಯೂ ಇರುತ್ತಿದ್ದುದರಿಂದ ಈ ವರ್ಗದ ಆಸಕ್ತಿಗಳಲ್ಲಿ ವಿರೋಧಾಭಾಸಗಳಿದ್ದವು. ಕೃಷಿ ಕಾರ್ಮಿಕರಲ್ಲಿ ಬಹಳಷ್ಟು ಜನ ದಲಿತ ವರ್ಗದವರಾಗಿದ್ದರಿಂದ ಅವರನ್ನು ಸಂಘಟಿಸುವ ಪ್ರಯತ್ನವನ್ನು ಮೇಲ್ಜಾತಿಯ ಭೂಮಾಲೀಕರು ಸಾಮಾಜಿಕ ದಂಗೆ ಎಂಬ ದೃಷ್ಟಿಯಿಂದ ತೀವ್ರವಾಗಿ ವಿರೋಧಿಸಿದರು. ಈ ಎಲ್ಲ ಕಾರಣಗಳಿಂದ ಕರ್ನಾಟಕದ ರೈತ ಸಂಘಟನೆಯ ಪ್ರಯತ್ನಗಳು ಬಹಳಷ್ಟು ಮಟ್ಟಿಗೆ ವಿಫಲವಾದವು.

ಟಿಪ್ಪಣಿ

ಕರ್ನಾಟಕದ ಕಾರ್ಮಿಕ ಚಳವಳಿಯ ಚರಿತ್ರೆಯನ್ನು ಸ್ಥೂಲವಾಗಿ ಹೀಗೆ ಹೇಳಬಹುದು; ಮೊದಲ ಕೆಲವು ವರ್ಷಗಳಲ್ಲಿ ಕಾರ್ಮಿಕ ಸಂಘಟನೆಗಳು ಕಾನೂನು ಮಾನ್ಯತೆ ಪಡೆಯಲಿಕ್ಕಾಗಿ ಬಹಳಷ್ಟು ಶ್ರಮಿಸಬೇಕಾಯಿತು. ಮಾನ್ಯತೆ ಪಡೆದ ನಂತರ ಬಹಳಷ್ಟು ವರ್ಷಗಳು ಉದ್ಯೋಗ ವಾತಾವರಣ ಸುಧಾರಣೆಗಾಗಿ ದುಡಿಯಬೇಕಾಯಿತು. ನಂತರದ ವರ್ಷಗಳಲ್ಲಿ ವೇತನ ಮಂಡಳಿಗಳು ಹಾಗೂ ಕೈಗಾರಿಕಾ ನ್ಯಾಯಾಲಯಗಳ ಸ್ಥಾಪನೆ ಕಾರ್ಮಿಕರ ಹಕ್ಕೊತ್ತಾಯಗಳಿಗೆ ಬುನಾದಿಯಾಯಿತು. ಅದಾಗಲೇ ಸಂಘಟನೆಗಳಲ್ಲಿ ಬಿರುಕುಗಳು ಉಂಟಾಗಿ ಸರ್ಕಾರಿ ಆಡಳಿತ ಯಂತ್ರ ಹಾಗೂ ಶಕ್ತಿಯುತವಾದ ಮಾಲೀಕ ವರ್ಗದ ವಿರುದ್ಧ ಹೋರಾಡುವ ಶಕ್ತಿಯನ್ನು ಅವು ಬಹುಮಟ್ಟಿಗೆ ಕಳೆದುಕೊಂಡದ್ದರಿಂದ ಕೈಗಾರಿಕಾ ನ್ಯಾಯಾಲಯಗಳು ಹಾಗೂ ವೇತನ ಮಂಡಳಿಗಳು ಕಾರ್ಮಿಕ ವರ್ಗಕ್ಕೆ ವಿಶೇಷ ಶಕ್ತಿ ಒದಗಿಸಿದವು. ಎಡಪಂಥೀಯ ಕಾರ್ಮಿಕ ಸಂಘಟನೆಗಳು ಶಕ್ತಿಯುತವಾಗಿ ಬೆಳೆದಂತೆ ಉಗ್ರ ಕಾರ್ಮಿಕ ಚಳವಳಿಗಳ ಯುಗ ಪ್ರಾರಂಭವಾಯಿತು. ದ್ವಿಪಕ್ಷೀಯ ಮಾತುಕತೆಗಳ ಸಂಪ್ರದಾಯ ಪ್ರಾರಂಭವಾಗಿ ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವಿನ ವಿವಾದದ ಪರಿಹಾರದಲ್ಲಿ ಸರ್ಕಾರದ ಪಾತ್ರ ಕಡಿಮೆಯಾಯಿತು. ಕಾರ್ಮಿಕ ಸಂಘಟನೆಗಳಿಗೆ ಹೊರಗಿನ ಮುಖಂಡರ ಪ್ರವೇಶವಾಯಿತು. ಇದೇ ಸುಮಾರಿಗೆ ಜಾತಿ/ಮತ/ಭಾಷೆ ಆಧಾರಿತ ಸಂಘಟನೆಗಳು ಹುಟ್ಟಿ ಕಾರ್ಮಿಕ ಐಕ್ಯತೆಗೆ ಧಕ್ಕೆ ಉಂಟಾಯಿತು. ಅಸಂಘಟಿತ ಉದ್ದಿಮೆಗಳಲ್ಲಿ ಸಂಘಟನೆಯ ಪ್ರಯತ್ನಗಳು ಬಹುಮಟ್ಟಿಗೆ ಅಸಫಲವಾದವು. ಇಷ್ಟರಲ್ಲಿ ಕಾರ್ಮಿಕರ ನಿರೀಕ್ಷೆಗಳಲ್ಲೂ ಬಹಳಷ್ಟು ವ್ಯತ್ಯಾಸಗಳಾಗಿದ್ದವು. ವೇತನ ಕಡಿತ, ಮಾಲೀಕರು ಕಾರ್ಮಿಕರ ವಿರುದ್ಧ ನಡೆಸುವ ಶಿಸ್ತಿನ ಕ್ರಮ ಇತ್ಯಾದಿ. ಯಾವುದೇ ವೈಯಕ್ತಿಕ ಆಪತ್ತುಗಳನ್ನು ಎದುರಿಸಲು ತಯಾರಿಲ್ಲದ ಕಾರ್ಮಿಕರು ಕೇವಲ ಸವಲತ್ತುಗಳನ್ನು ಮಾತ್ರ ತನ್ನ ನಾಯಕರು ತನಗೆ ಗಳಿಸಿಕೊಡಬೇಕೆಂದು ಬಯಸುತ್ತಾರೆ.

ಕಾರ್ಮಿಕ ವರ್ಗದಲ್ಲಿ ಒಡಕು, ಕಾರ್ಮಿಕ ಸಂಘಟನೆಗಳ ನಡುವೆ ವೈಮನಸ್ಸು ಹಾಗೂ ಸ್ಪರ್ಧಾತ್ಮಕ ಮನೋಭಾವ ಕರ್ನಾಟಕದ ಚಳವಳಿಗಳ ಭಾಗವಾಗಿವೆ. ಆದರೂ ಕೆಲವು ಸಂದರ್ಭಗಳಲ್ಲಿ ಸಂಘಟನೆಗಳು ಒಟ್ಟುಗೂಡಿ ಕೆಲಸ ಮಾಡಿವೆ. ಹೊಸ ಆರ್ಥಿಕ ನೀತಿಯನ್ನು ಭರದಿಂದ ಭಾರತ ಬರಮಾಡಿಕೊಳ್ಳುತ್ತಿರುವ ಈ ಸಂದರ್ಭ ಕಾರ್ಮಿಕರು ಒಗ್ಗಟ್ಟಾಗಿ ಕೆಲಸ ಮಾಡುವುದಕ್ಕೆ ತುರ್ತು ಕಾರಣವನ್ನು ಒದಗಿಸಿದೆ. ಈ ಒಗ್ಗಟ್ಟು ಸಾಧ್ಯವಾಗುತ್ತದೆಯೇ ಎನ್ನುವುದು ವಿವಿಧ ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಕೆಲಸ ಮಾಡುವುದರಲ್ಲಿ ಸಫಲವಾಗುತ್ತವೆಯೇ ಎನ್ನುವುದರ ಮೇಲೆ ಆಧಾರಪಡುತ್ತದೆ. ಅಲ್ಲದೆ ಸಂಘಟನೆಗಳು ಹೊಸ ಆರ್ಥಿಕ ನೀತಿಯ ವಿರುದ್ಧ ನಕಾರಾತ್ಮಕ ಧೋರಣೆಯ ಮೂಲಕ ಮಾತ್ರವೇ ವಿಜಯ ಸಾಧಿಸುವುದು ಇಂದಿನ ಸಂದರ್ಭದಲ್ಲಿ ಅಸಾಧ್ಯ. ಪ್ರಪಂಚದ ಎಲ್ಲ ದೇಶಗಳು ಅದರಲ್ಲೂ ಏಷ್ಯಾದ ದೇಶಗಳು ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಹೊಸ ಆರ್ಥಿಕ ನೀತಿಗೆ ಸಂಪೂರ್ಣ ವಿರೋಧದ ನಿಲುವು ತಾಳುವುದು ದುಡಿಯುವ ವರ್ಗದ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ಸಫಲವಾಗದೆ ಹೋಗಬಹುದು. ಸಹಕಾರಿ ಮನೋಭಾವ, ಆಡಳಿತದಲ್ಲಿ ಸಕ್ರಿಯ ಪಾತ್ರ, ಆರೋಗ್ಯಕರ ಉದ್ಯೋಗ ವಾತಾವರಣದ ನಿರ್ಮಾಣ ಹಾಗೂ ಶಿಸ್ತಿನ ಮೂಲಕ ಉತ್ಪನ್ನತೆಯನ್ನು ಹೆಚ್ಚಿಸುವುದು ಇಂದಿನ ಅವಶ್ಯಕತೆಗಳು. ಇಲ್ಲದಿದ್ದರೆ ಮಾರುಕಟ್ಟೆಯ ಶಕ್ತಿಗಳು ದುಡಿಯುವ ವರ್ಗಗಳ ಹೋರಾಟದ ಮುಂದೆ ನಿರುದ್ಯೋಗ ಹಾಗೂ ವೇತನ ಕಡಿತದ ಸವಾಲನ್ನೊಡ್ಡಿ ಸೋಲಿಸುವ ಸಾಧ್ಯತೆಗಳಿವೆ.

ಪರಾಮರ್ಶನ ಗ್ರಂಥಗಳು

1. ಸೂರ್ಯನಾಥ ಕಾಮತ್(ಸಂ), 1995. ಸ್ವತಂತ್ರ್ಯ ಸಂಗ್ರಾಮದ ಸ್ಮೃತಿಗಳು, ಬೆಂಗಳೂರು.

2. ಸಮತ ವಿ.ದೇಶಮಾನೆ, 1999. ಅಂಬೇಡ್ಕರ್ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆಯರು, ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

3. ಚಂದ್ರಶೇಖರ ಎಸ್.(ಸಂ), 1997. ಕರ್ನಾಟಕ ಚರಿತ್ರೆ, ಸಂಪುಟ 7,  ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ಹಂಪಿ.

4. ಸೂರ್ಯನಾಥ ಕಾಮತ್(ಸಂ), 1986.ೊಕರ್ನಾಟಕ ರಾಜ್ಯ ಗ್ಯಾಸೆಟಿಯರ್, ಭಾಗ 3, ಬೆಂಗಳೂರು