[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2007ರಲ್ಲಿ ಡಾ.ಹಿ.ಚಿ.ಬೋರಲಿಂಗಯ್ಯ  ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘‘ಅಭಿವೃದ್ದಿ ಪಥ’ ಎನ್ನುವ ಕೃತಿಯಿಂದ ಶ್ರೀಮತಿ ಉಷಾ ರಮೇಶನಾಯಕ್ ಅವರ ಈ  ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಒಪ್ಪಿಗೆ ನೀಡಿದ ಸಂಪಾದಕರಿಗೆ ಹಾಗೂ ಲೇಖಕರಿಗೆ ಕೃತಜ್ಞತೆಗಳು -ಸಂ.]

ಬಹಳ ಹಿಂದಿನಿಂದಲೂ ಬಂಡವಾಳಶಾಹಿಗಳು ಕಾರ್ಮಿಕರಿಂದ ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದರು. ವಿಶೇಷವಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಪ್ರತಿದಿನ 12ರಿಂದ 14 ಗಂಟೆಗಳವರೆಗೆ ದುಡಿಯಲೇಬೇಕಿತ್ತು. ತಮ್ಮ ಜೀವಿತದ ಅವಧಿಯ ಮುಕ್ಕಾಲು ಭಾಗ ಅವರು ದುಡಿತಕ್ಕೆ ಮೀಸಲಿಡಬೇಕಾದ ಅನಿವಾರ್ಯತೆ ಇತ್ತು. ಅಲ್ಲದೆ ಕಾರ್ಮಿಕರಿಗೆ ದೊರಕಬೇಕಾದಂಥ ಕನಿಷ್ಠ ಸೌಲಭ್ಯಗಳು ಇರದಂತಹ ಪರಿಸರ, ಕಲುಷಿತ ವಾತಾವರಣದಲ್ಲಿ ಚಕಾರವೆತ್ತದೆ ದುಡಿಯಬೇಕಿತ್ತು. ಕಠಿಣ ಕೆಲಸ ಮಾಡುವಾಗ ಅಥವಾ ಯಂತ್ರಗಳ ಚಾಲನೆಯಿಂದ ಅನಾಹುತವಾದಾಗಲೂ ಅವರ ಜೀವನದ ಭದ್ರತೆಗಾಗಿ ಯಾವ ಸವಲತ್ತುಗಳು ಇರಲಿಲ್ಲ. ಅಂತಹ ಒಂದು ಸನ್ನಿವೇಶದಲ್ಲಿ 1771ರಲ್ಲಿ ಫಿಲಿಡೆಲ್ಪಿಯಾ ಬಡಗಿಗಳು, 1810ರಲ್ಲಿ ಇಂಗ್ಲೆಂಡ್ ಕಾರ್ಮಿಕರು ಹಾಗೂ ಮುಂದೆ ಪ್ರಪಂಚದ ಬೇರೆ ಬೇರೆ ದೇಶಗಳ ಕಾರ್ಮಿಕರು ಸಂಘಟಿತರಾಗಿ ತಮ್ಮ ಹಕ್ಕುಗಳಿಗಾಗಿ ಹೋರಾಟ ಆರಂಭಿಸಿದರು.

ಪ್ರಸ್ತುತದ ಕಾರ್ಮಿಕ ಸಂಘ ಚಳವಳಿ 18ನೇ ಶತಮಾನದ ಕೈಗಾರಿಕಾ ಕ್ರಾಂತಿಯ ಶಿಶು ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದ್ದು, ಅದು ಬಹುಕಾಲದ ಸಾಮಾಜಿಕ ಹೋರಾಟದ ಹಿನ್ನೆಲೆಯನ್ನು ಹೊಂದಿದೆ. ಕಾರ್ಮಿಕರನ್ನು ನಿರ್ದಯವಾಗಿ ಶೋಷಣೆ ಮಾಡುತ್ತಿದ್ದರು. ಕಾರ್ಮಿಕರ ಒಕ್ಕೂಟಗಳನ್ನು ನ್ಯಾಯಬಾಹಿರ ಎಂದು ಪರಿಗಣಿಸಲಾಗಿತ್ತು. ಕಾರ್ಮಿಕ ಸಂಘಟನೆ ಕೈಗೊಳ್ಳುತ್ತಿದ್ದವರನ್ನು ಕ್ರೂರವಾಗಿ ಶಿಕ್ಷಿಸಲಾಗುತ್ತಿತ್ತು. ಕಾರ್ಮಿಕ ಸಂಘಟನೆಗಳು ಕ್ರಾಂತಿಯ ದಾರಿ ತುಳಿಯಬಹುದೆಂಬ ಹಿನ್ನೆಲೆಯಲ್ಲಿ ದೇಶದ ಪಾರ್ಲಿಮೆಂಟು ಸಹ ಕಾರ್ಮಿಕರ ಪಾಲಿಗೆ ಕ್ರೂರವಾಗಿ ವರ್ತಿಸುತ್ತಿದ್ದುದುಂಟು. ಕಾರ್ಮಿಕರು ಕಾರ್ಖಾನೆಯ ವ್ಯವಸ್ಥಾಪಕ ರೊಡನೆ ಬಹಿರಂಗವಾಗಿ ತಮ್ಮ ಸಮಸ್ಯೆಗಳನ್ನು ಚರ್ಚಿಸುವಂತಿರಲಿಲ್ಲ. ಅಲ್ಲದೆ ಸಮಾಲೋಚನೆಗಾಗಲಿ ಅಥವಾ ಶಾಂತಿಯುತ ಮಾತುಕತೆಗಳಿಗೂ ಅವಕಾಶ ವಿರಲಿಲ್ಲ.

ಇಂಗ್ಲೆಂಡ್ ದೇಶವು ಕಾರ್ಮಿಕ ಚಳವಳಿಗೆ ಮಾತೃಭೂಮಿಯಾಗಿದ್ದು, 1789ರ ಫ್ರಾನ್ಸ್ನ ಮಹಾಕ್ರಾಂತಿಯು ಕಾರ್ಮಿಕರ ಆಲೋಚನಾಕ್ರಮದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಂದಿತು.

ಭಾರತದ ಕಾರ್ಮಿಕ ಚಳವಳಿಗೆ ಒಂದು ಶತಮಾನಕ್ಕಿಂತಲೂ ಹೆಚ್ಚಿನ ವರ್ಷಗಳ ಸುದೀರ್ಘ ಇತಿಹಾಸವಿದೆ. 1850ರಷ್ಟು ಹಿಂದೆಯೇ 8 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮುಗ್ಧ ಮಕ್ಕಳಿಂದ ದುಡಿಸಿಕೊಳ್ಳುತ್ತಿದ್ದರು. ಇದನ್ನು ಹತ್ತಿರದಿಂದ ನೋಡಿದ್ದ ಮಿಸ್ಟರ್ ಮೋರ್ ಮತ್ತು ಮಿಸ್ಟರ್ ರೆಡ್ರೆವ್ ಅವರು 1874ರಲ್ಲಿ ಬ್ರಿಟಿಷ್ ಸರ್ಕಾರಕ್ಕೆ ಕಾರ್ಮಿಕರ ಪರವಾದ ಕಾನೂನು ಮಾಡುವಂತೆ ಕೋರಿದ್ದರಲ್ಲದೆ, ಆಗ ಕಾರ್ಮಿಕರು ಹಾಗೂ ಹೆಣ್ಣುಮಕ್ಕಳು ಅನುಭವಿಸುತ್ತಿದ್ದ ಶೋಷಣೆ, ಕಷ್ಟಗಳ ಪಟ್ಟಿಯನ್ನೇ ನೀಡಿದ್ದರು.

ಮಹಾರಾಷ್ಟ್ರದ ಸೊಹ್ರಾಬ್ಜಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುವುದರ ಮೂಲಕ 1875ರಲ್ಲಿ ಭಾರತದಲ್ಲಿ ಆಧುನಿಕ ಕಾರ್ಮಿಕ ಚಳವಳಿಯ ಉದಯವಾಯಿತು. ಹಾಗೇ 1890ರಲ್ಲಿ ಬಾಂಬೆ ಗಿರಣಿ ಕಾರ್ಮಿಕರ ಸಂಘ ಸ್ಥಾಪನೆಯಾಗುವುದರ ಮೂಲಕ ಭಾರತದಲ್ಲಿ ಮೊದಲ ಕಾರ್ಮಿಕ ಸಂಘ ಅಸ್ತಿತ್ವಕ್ಕೆ ಬಂದಿತು. 1926ರಲ್ಲಿ ಆಂಗ್ಲ ಸರ್ಕಾರ ತಂದ ಟ್ರೇಡ್ ಯೂನಿಯನ್ ಆಕ್ಟ್ ಕಾರ್ಮಿಕ ಸಂಘಗಳಿಗೆ ಸಾಂವಿಧಾನಿಕ ಮಾನ್ಯತೆಯನ್ನು ನೀಡಿತು. 1935ರಲ್ಲಿ ಭಾರತ ಸರ್ಕಾರ ಕಾಯಿದೆಯ ಮೂಲಕ ಶಾಸನ ಸಭೆಗಳಿಗೆ ಕಾರ್ಮಿಕರ ಪ್ರತಿನಿಧಿಗಳು ಚುನಾಯಿತರಾಗುವುದನ್ನು ಅಂಗೀಕರಿಸಿತು. ಮುಂದೆ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ಕಿದ ನಂತರ 1948ರಲ್ಲಿ 1926ರ ಕಾಯ್ದೆಯ ತಿದ್ದುಪಡಿ ಮಾಡಲಾಯಿತು.

ಕರ್ನಾಟಕದಲ್ಲಿ ಮುಖ್ಯವಾಗಿ ಕಾರ್ಮಿಕ ಸಂಘಗಳನ್ನು ಎರಡು ವಿಶ್ವ ಸಮರಗಳ ನಡುವಿನ ಸಮಯದಲ್ಲಿ ತಮ್ಮ ಕಾರ್ಮಿಕ ಸದಸ್ಯರುಗಳ ಆರ್ಥಿಕ ಸ್ಥಿತಿಗತಿಗಳನ್ನು ಉತ್ತಮಪಡಿಸುವ ಸಲುವಾಗಿ ಹಾಗೂ ತಮ್ಮ ಸಂಘಗಳಿಗೆ ಕಾನೂನಿನ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕಾಗಿ ಚಳವಳಿಗಳ ರೂಪದಲ್ಲಿ ಹುಟ್ಟುಹಾಕಲಾಯಿತು. ಜೊತೆಗೆ ಅದು ಆಗಿನ ಸ್ವಾತಂತ್ರ್ಯ ಚಳವಳಿಯೊಂದಿಗೂ ಸಂಯೋಜನೆಗೊಂಡಿತ್ತು. ಭಾರತದಲ್ಲಿ ಇದುವರೆಗೆ ಕಾರ್ಮಿಕರ ಕಲ್ಯಾಣಕ್ಕಾಗಿ ಸುಮಾರು 125 ಕಾನೂನುಗಳನ್ನು ಜಾರಿಗೊಳಿಸಿದ್ದು ಅವು ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತವೆ.

ಕಾರ್ಮಿಕರ ಸಂಘವನ್ನು ಸರಳವಾಗಿ ಅರ್ಥೈಸುವುದಾದರೆ ಕೂಲಿಕಾರ ಅಥವಾ ಸಂಬಳಗಾರರ ಸಂಘವೆಂದು ಹೇಳಬಹುದು. ಔದ್ಯೋಗಿಕ ಹಿತಸಾಧನೆ ಅಥವಾ ರಕ್ಷಣೆಗಾಗಿ ಸಾಮೂಹಿಕ ಪ್ರಯತ್ನ ಮಾಡುವುದೇ ಇದರ ಮುಖ್ಯ ಉದ್ದೇಶ. ಕೈಗಾರಿಕೆ ಯಲ್ಲಿ ಅಭಿವೃದ್ದಿ ಹೊಂದಿದ ಹಾಗೂ ಅಭಿವೃದ್ದಿ ಹೊಂದುತ್ತಿರುವ ಎಲ್ಲ ದೇಶಗಳಲ್ಲಿ ವಿವಿಧ ಕೈಗಾರಿಕೆಗಳಿಗೆ ಸಂಬಂಧಿಸಿದ ಕಾರ್ಮಿಕ ಸಂಘಗಳಿರುತ್ತವೆ. ಕಾರ್ಮಿಕ ಸಂಘಗಳು ಮುಖ್ಯವಾಗಿ ಸಾಮಾಜಿಕ‑ಆರ್ಥಿಕ ಸಂಘಟನೆಗಳಾಗಿರುತ್ತವೆ.

ಉದ್ಯೋಗದಾತರ ಅಥವಾ ಕೈಗಾರಿಕೆ ಸ್ಥಾಪಕರ ನಿರಂಕುಶ ಪ್ರಭುತ್ವದ ವಿರುದ್ಧ ಸೆಣಸಿ ಕೈಗಾರಿಕಾ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ಮೂಲಕ ಕಾರ್ಮಿಕರ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿ ಕಾರ್ಮಿಕರಿಗೆ ಸಮಾಜದಲ್ಲಿ ಸ್ಥಾನಮಾನಗಳನ್ನು ದೊರಕಿಸಿ ಕೊಡು ವಲ್ಲಿ ಕಾರ್ಮಿಕ ಸಂಘಗಳ ಪಾತ್ರ ಮಹತ್ವದ್ದು. ಯಾವುದೇ ರಾಷ್ಟ್ರೀಯ ಕೇಂದ್ರ ಕಾರ್ಮಿಕ ಸಂಘಗಳೊಂದಿಗೆ ಗುರುತಿಸಿಕೊಳ್ಳುವ ಹಾಗೂ ಯಾವುದೇ ರಾಷ್ಟ್ರೀಯ ಕೇಂದ್ರ ಸಂಘಟನೆಯೊಂದಿಗೆ ತಮ್ಮನ್ನು ಗುರುತಿಸಿ ಕೊಳ್ಳದಿರುವ ಕಾರ್ಮಿಕ ಸಂಘಗಳ ಉದ್ದೇಶಗಳು ಒಂದೇ ಆಗಿರುತ್ತವೆ. ಸಾಮಾನ್ಯವಾಗಿ ಚಳವಳಿ/ಮುಷ್ಕರ, ಬಹಿಷ್ಕಾರ, ಸಾಮೂಹಿಕ ಚೌಕಾಸಿ, ಸಮಾಲೋಚನೆ, ಮಧ್ಯಸ್ಥಿಕೆ ಮುಂತಾದುವುಗಳ ಮೂಲಕ ಕಾರ್ಮಿಕ ವರ್ಗಕ್ಕೆ ಯೋಗ್ಯ ರೀತಿಯಲ್ಲಿ ಕೂಲಿ ದೊರಕಿಸಿ ಕೊಳ್ಳಲು, ಕಾರ್ಮಿಕರು ಕೆಲಸ ಮಾಡುವ ಜಾಗದಲ್ಲಿ ಉತ್ತಮ ವಾತಾವರಣವನ್ನು ಉದ್ಯೋಗದಾತರು ಕಲ್ಪಿಸಿಕೊಡುವಂತೆ ಮಾಡುವಲ್ಲಿ ಹಾಗೂ ಕಾರ್ಮಿಕರಿಗೆ ನಿರ್ದಿಷ್ಟವಾದ ದುಡಿತದ ಕಾಲವನ್ನು ನಿಗದಿಪಡಿಸುವಲ್ಲಿ ಕಾರ್ಮಿಕ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಪ್ರಸ್ತುತ ಕಾರ್ಮಿಕ ಸಂಘಗಳೇ ಕಾರ್ಮಿಕ ಸಂಘಟನೆಗಳಾಗಿವೆ.

ಪ್ರಸ್ತುತ, ನಾವು ಪ್ರಪಂಚಾದ್ಯಂತ ವಿವಿಧ ಸಂಘಟನೆಗಳಿಗೆ ಸೇರಿದ ಹಾಗೂ ವಿವಿಧ ನೌಕರಿಗಳಿಗೆ ಸಂಬಂಧಿಸಿದ ಕಾರ್ಮಿಕ ಸಂಘಗಳನ್ನು ಕಾಣುತ್ತೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕಾರ್ಮಿಕ ಒಕ್ಕೂಟ 1918ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಹಾಗೂ ಅಂತಾರಾಷ್ಟ್ರೀಯ ಕಾರ್ಮಿಕ ನ್ಯಾಯಾಲಯವನ್ನು ಹೊಂದಿದ್ದೇವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಂದು ಪ್ರಮುಖ ಕಾರ್ಮಿಕ ಕಾನೂನುಗಳು ಗುರುತಿಸಲ್ಪಟ್ಟಿದ್ದು ಅದರಂತೆ ಎಲ್ಲ ದೇಶಗಳು ತಮ್ಮ ಕಾರ್ಮಿಕ ಕಾನೂನು‑ಕಟ್ಟಳೆಗಳಲ್ಲಿ ಅವುಗಳನ್ನು ಅವಶ್ಯವಾಗಿ ಅಳವಡಿಸಿಕೊಂಡು ಆ ಮೂಲಕ ಕಾರ್ಮಿಕ ವರ್ಗಕ್ಕೆ ದುಡಿಯಲು ಸುಮಧುರವಾದ ವಾತಾವರಣವನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತದೆ. ಹೀಗೆ ಕಾರ್ಮಿಕ ಸಂಘಟಣೆ ಹಾಗೂ ಚಳವಳಿಗೆ ಒಂದು ಶತಮಾನದಷ್ಟು ಸುದೀರ್ಘ ಕಾಲದ ಇತಿಹಾಸವಿದೆ.

ವಿವಿಧ ಕೇಂದ್ರ ಹಾಗೂ ರಾಜ್ಯ ಕಾರ್ಮಿಕ ಸಂಘಟನೆಗಳು

ಭಾರತದಲ್ಲಿ ಕಾರ್ಮಿಕ ಸಂಘಗಳು ಹಾಗೂ ಅವುಗಳ ಸದಸ್ಯತ್ವ ಸ್ವಾತಂತ್ರ್ಯಾನಂತರ ಬೆಳೆಯುತ್ತಿದೆ. ಪ್ರಸ್ತುತ ಅನೇಕ ರಾಷ್ಟ್ರೀಯ ಕಾರ್ಮಿಕ ಸಂಘಗಳು ಹಾಗೂ ಅದರಡಿಯಲ್ಲಿ ಅವುಗಳ ರಾಜ್ಯ ಸಂಘಟನೆಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಮುಖ್ಯವಾದವುಗಳು,

1. ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ಟಿಯುಸಿ ಅಥವಾ ಇಂಟಕ್)

2. ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ)

3. ಹಿಂದ್ ಮಜ್ದೂರ್ ಸಭಾ (ಎಚ್ಎಂಎಸ್)

4. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್)

5. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು ಅಥವಾ ಸಿಟು)‑

6. ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಯುಟಿಯುಸಿ)

7. ಹಿಂದ್ ಮಜ್ದೂರ್ ಕಿಸಾನ್ ಪಂಚಾಯತ್ (ಹೆಚ್ಎಂಕೆಪಿ)

8. ಕರ್ನಾಟಕ ಟ್ರೇಡ್ ಯೂನಿಯನ್ ಸೆಂಟರ್ (ಕೆಟಿಯುಸಿ)

9. ಪ್ರೊಫೆಷನಲ್ ವರ್ಕರ್ಸ್ಸ್ ಸೆಂಟರ್ ಆಫ್ ಇಂಡಿಯಾ (ಪಿಡಬ್ಲ್ಯೂಟಿಯುಸಿ)

ಏಕೀಕರಣಪೂರ್ವ

ಏಕೀಕರಣಪೂರ್ವ ಕರ್ನಾಟಕದ ಕಾರ್ಮಿಕ ಚಳವಳಿಯನ್ನು ನಾವು ಅವಶ್ಯವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಈ ಲೇಖನ ಅಡಿಪಾಯವಿಲ್ಲದ ಕಟ್ಟಡದಂತೆ ಆಗುತ್ತದೆ. ಕರ್ನಾಟಕವು ಒಂದು ರಾಜಕೀಯ ಆಡಳಿತದ ಒಕ್ಕೂಟವಾಗಿ ಹೊರ ಹೊಮ್ಮಿರಲಿಲ್ಲ. ಅದು ಮೈಸೂರು, ಮದರಾಸು, ಬೊಂಬಾಯಿ ಹಾಗೂ ಹೈದರಾಬಾದ್ ಕರ್ನಾಟಕ ಸಂಸ್ಥಾನಗಳಡಿಯಲ್ಲಿ ಹರಿದು ಹಂಚಿ ಹೋಗಿತ್ತು.

ಮೈಸೂರು ಸಂಸ್ಥಾನದಡಿಯಲ್ಲಿ ಪ್ರಸ್ತುತದ ಕರ್ನಾಟಕದ ಹೆಚ್ಚಿನ ಭಾಗಗಳಿದ್ದವು. ಬ್ರಿಟಿಷರ ಆಗಮನದಿಂದಾಗಿ ಭಾರತದ ನಾನಾ ಭಾಗಗಳಲ್ಲಿ ಆಧುನಿಕ ಉದ್ಯಮಗಳು ಜನ್ಮತಾಳಿದಂತೆ ಮೈಸೂರು ಸಂಸ್ಥಾನದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೇಂದ್ರ ಸರಕಾರದ ಅನೇಕ ಉದ್ಯಮಗಳು ಪ್ರಾರಂಭಗೊಂಡವಲ್ಲದೆ ಕೋಲಾರದ ಚಿನ್ನದ ಗಣಿ, ಭದ್ರಾವತಿಯಲ್ಲಿ ಕಾಗದ, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ದಾವಣಗೆರೆಯಲ್ಲಿ ಬಟ್ಟೆ ಗಿರಣಿಗಳು ಸ್ಥಾಪನೆಗೊಂಡವು. ಇತರೆ ಉದ್ಯಮಗಳು ಸೇರಿದಂತೆ 1944ರ ವೇಳೆಗೆ ಮೈಸೂರು ಸಂಸ್ಥಾನದಲ್ಲಿ 605 ಕಾರ್ಖಾನೆಗಳಿದ್ದು ಸುಮಾರು 80,000 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು.

ಮೈಸೂರು ಸಂಸ್ಥಾನ ತನ್ನ ಮಾದರಿ ಆಡಳಿತಕ್ಕಾಗಿ ಪ್ರಸಿದ್ದಿಯಾಗಿತ್ತು. ಆದರೆ ಕಾರ್ಮಿಕ ಚಳವಳಿಯ ಬಗ್ಗೆ ಒಂದು ರೀತಿಯ ನಿರ್ಲಕ್ಷ್ಯವನ್ನೇ ಪ್ರದರ್ಶಿಸುತ್ತ ಬಂದಿತ್ತು. ಕೇಂದ್ರದಲ್ಲಿ ಆಗ ಅಸ್ತಿತ್ವದಲ್ಲಿದ್ದ ಬ್ರಿಟಿಷ್ ಭಾರತ ಸರ್ಕಾರವು 1926ರಷ್ಟು ಹಿಂದೆಯೇ ಕಾರ್ಮಿಕ ಸಂಘಗಳಿಗೆ ಮಾನ್ಯತೆ ಹಾಗೂ ವಿವಾದಗಳಿಗೆ ಸಂಬಂಧಪಟ್ಟಂತೆ ‘ಅಖಿಲಭಾರತ ಕಾರ್ಮಿಕ ಸಂಘಗಳ ಕಾಯಿದೆ’ಯನ್ನು ಜಾರಿ ಮಾಡಿತ್ತು. ಆದರೆ ಮೈಸೂರು ಸಂಸ್ಥಾನದ ಆಡಳಿತಗಾರರು ಆ ಕಾನೂನನ್ನು ಜಾರಿಗೊಳಿಸಲು ಇಲ್ಲಿ ಅಥವಾ ಅದಕ್ಕೆ ಪರ್ಯಾಯವಾಗಿ ಕಾನೂನು ಒಂದನ್ನು ರಚಿಸಲಿಲ್ಲ.

ಮೈಸೂರು ಸಂಸ್ಥಾನದ ಕಾರ್ಮಿಕರು ಅಂತಹ ಒಂದು ಶಾಸನಕ್ಕಾಗಿ ಹಾಗೂ ಹೆಚ್ಚು ವೇತನ ಬೋನಸ್ಗಳಿಗಾಗಿ ನಿರಂತರ ಚಳವಳಿಗಳನ್ನು ನಡೆಸಬೇಕಾಯಿತು. ಅಂತಹ ಚಳವಳಿಗಳಲ್ಲಿ 1941 ಜನವರಿ 20ರಿಂದ ಫೆಬ್ರವರಿ 14ರವರೆಗೆ ನಡೆದ ಬೆಂಗಳೂರಿನ ಬಿನ್ನಿ ಮಿಲ್ ಕಾರ್ಮಿಕರ ಮುಷ್ಕರ ಪ್ರಮುಖವಾಯಿತು. ಆಗ ಮೈಸೂರು ಸರ್ಕಾರ ಈ ನಿಟ್ಟಿನಲ್ಲಿ ಕಾನೂನು ಕಟ್ಟಳೆಗಳನ್ನು ರಚಿಸುವಂತೆ ಒಂದು ಸಮಿತಿಯನ್ನು ರಚಿಸಿತು. ಅದರಂತೆ 1941 ಅಕ್ಟೋಬರ್ನಲ್ಲಿ ಮೈಸೂರು ಕಾರ್ಮಿಕ ತುರ್ತು ಶಾಸನವು ಜಾರಿಯಾಗಿದ್ದು 1942ರಲ್ಲಿ ಅದು ಕಾರ್ಮಿಕ ಕಾಯಿದೆಯಾಯಿತು. 1942ರ ವೇಳೆಗೆ ಈ ಕಾಯಿದೆಯನ್ವಯ 42 ಕಾರ್ಮಿಕ ಸಂಘಗಳು ನೋಂದಾವಣಿ ಯಾದವು. ಮುಖ್ಯವಾಗಿ ಈ ಅವಧಿಯಲ್ಲಿ ಭದ್ರಾವತಿ, ಬೆಂಗಳೂರು, ಮೈಸೂರು, ದಾವಣಗೆರೆ, ಹರಿಹರದಲ್ಲಿ ಕಾರ್ಮಿಕರು, ಚರ್ಮ ಹದಮಾಡುವ ಟ್ಯಾನರಿಗಳ ಕಾರ್ಮಿಕರು, ವಿದ್ಯುತ್ ಇಲಾಖೆಯ ನೌಕರರು ಸೇರ್ಪಡೆಯಾದರು. ಹಾಗೆ ಕಾರ್ಮಿಕ ಸಂಘಗಳು ನಿರ್ದಿಷ್ಟ ರಾಜಕೀಯ ಪಕ್ಷಗಳತ್ತ ತಮ್ಮ ಬಲವನ್ನು ಬೆಳೆಸಿಕೊಂಡವು. ಹೀಗೆ ಕಾರ್ಮಿಕ ಸಂಘಟನೆ ಕಾರ್ಮಿಕರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಯಿತಲ್ಲದೆ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಿತು. ಆಗ ನಡೆದಂತಹ ಗೋಲಿಬಾರುಗಳಲ್ಲಿ ಕಾರ್ಮಿಕರು ಪ್ರಾಣ ತೆತ್ತರು. ಹಾಗೆ 1947ರ ನಂತರ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿಯುತ ಸರ್ಕಾರದ ಸ್ಥಾಪನೆಗಾಗಿಯೂ ಕಾರ್ಮಿಕರು ಸ್ಮರಣೀಯ ಹೋರಾಟ ನಡೆಸಿದರು. 1947‑ 56ರ ನಡುವೆಯೂ ಹಲವು ಕಾರ್ಮಿಕ ಸಂಘಗಳು ಸ್ಥಾಪನೆಗೊಂಡವಲ್ಲದೆ ಕಾರ್ಮಿಕ ಚಳವಳಿಗಳೂ ನಡೆದವು.

1952ರಲ್ಲಿ 1942ರ ಕಾರ್ಮಿಕ ಕಾಯಿದೆಯನ್ನು ರದ್ದುಗೊಳಿಸಿ ‘ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಆಕ್ಟ್’ ಅನ್ನು ಮೈಸೂರು ಸಂಸ್ಥಾನದಲ್ಲಿಯೂ ಜಾರಿಗೊಳಿಸ ಲಾಯಿತು. ಮದರಾಸ್ ಕರ್ನಾಟಕ ಪ್ರಾಂತ್ಯದಲ್ಲಿದ್ದ ಕನ್ನಡ ಪ್ರದೇಶಗಳೆಂದರೆ ದಕ್ಷಿಣ ಕನ್ನಡ, ಬಳ್ಳಾರಿ ಜಿಲ್ಲೆಗಳು ಹಾಗೂ ಕೊಳ್ಳೆಗಾಲ ತಾಲ್ಲೂಕು ಮಾತ್ರ. ಇವು ಸಹ ಒಂದಕ್ಕೊಂದು ಕೂಡಿಕೊಂಡಿರಲಿಲ್ಲ. ಏಕೀಕರಣಪೂರ್ವದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್ ಉದ್ಯಮ ಬೃಹತ್ ಉದ್ಯಮವಾಗಿ ಅಭಿವೃದ್ದಿಗೊಂಡಿತ್ತಾದರೂ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಿರಲಿಲ್ಲ. ಆದರೆ 1931ರಷ್ಟು ಹಿಂದೆಯೇ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯರು ‘ದಕ್ಷಿಣ ಕನ್ನಡ ಕಾರ್ಮಿಕ ಸಂಘ’ವನ್ನು ಸ್ಥಾಪಿಸಿದರು. ಜೊತೆಗೆ ಗೋಡಂಬಿ, ಬೀಡಿ ಹಾಗೂ ಹೆಂಚು ಕಾರ್ಮಿಕರು ಸಂಘಟಿತರಾದರು. ಇಲ್ಲಿನ ಕಾರ್ಮಿಕ ಚಳವಳಿಯನ್ನು ಸ್ಥಳೀಯ ಉದ್ಯಮಗಳ ಹಾಗೂ ಸ್ಥಳೀಯ ಕಾರ್ಮಿಕರ ನಡುವಿನ ಸೆಣಸಾಟ ಎಂದು ಹೇಳಬಹುದು.

ಬಳ್ಳಾರಿ ಜಿಲ್ಲೆಯಲ್ಲಿ ಕೈಮಗ್ಗದ ಕಾರ್ಖಾನೆಗಳು, ಬೀಡಿ ಕಾರ್ಖಾನೆಗಳು ಹಾಗೂ ಕಬ್ಬಿಣ ಮತ್ತು ಮ್ಯಾಂಗನೀಸ್ ಗಣಿಗಳಿದ್ದರೂ ಸಹ ಗಣನೀಯವಾಗಿ ಕಾರ್ಮಿಕ ಸಂಘಟನೆ ಬೆಳೆಯಲಿಲ್ಲ. ದಾಸ್ ಹಾಗೂ ಆರ್.ಆರ್.ನಿಪ್ಪಾಣಿ ಎಂಬ ಕಾರ್ಮಿಕ ನಾಯಕರು ಕಾರ್ಮಿಕ ಸಂಘಟನೆಯನ್ನು ಕೈಗೊಂಡಿದ್ದರು. ಮುಂಬಯಿ ಕರ್ನಾಟಕ ಪ್ರಾಂತ್ಯದಲ್ಲಿ ಮುಖ್ಯವಾಗಿ ಹುಬ್ಬಳ್ಳಿ, ಬೆಳಗಾವಿ, ಬಿಜಾಪುರ ಜಿಲ್ಲೆಗಳು ಇದ್ದು ಹೆಚ್ಚಾಗಿ ಹತ್ತಿ ನೂಲಿನ ಗಿರಣಿಗಳಿದ್ದವು. ಜೊತೆಗೆ ಹುಬ್ಬಳ್ಳಿಯಲ್ಲಿ ರೈಲ್ವೆ ವರ್ಕ್ಷಾಪ್ ಇತ್ತು. ಎನ್.ಕೆ.ಉಪಾಧ್ಯಾಯ ಹಾಗೂ ನಬೀ ಸಾಹೆಬ್, ಬಾಲಸಿಂಗ್ ಮಾಸ್ತರ್ ಎಂಬುವರು ಈ ಪ್ರದೇಶದ ಕಾರ್ಮಿಕ ಸಂಘಟನೆಯನ್ನು ಮಾಡಿದರಲ್ಲದೆ, ಇವರ ನೇತೃತ್ವದಲ್ಲಿ ವಿಶಿಷ್ಟ ಕಾರ್ಮಿಕ ಚಳುವಳಿಗಳು ಯಶಸ್ವಿಯಾಗಿ ನಡೆದದ್ದು ಮುಂಬಯಿ ಕರ್ನಾಟಕದ ಹಲವು ನಗರಗಳಲ್ಲಿ ಹೋಟೆಲ್ ಕಾರ್ಮಿಕರು ಸಂಘಟಿತರಾಗಲು ಕಾರಣರಾದರು. ಹೈದರಾಬಾದ್ ಕರ್ನಾಟಕ ಪ್ರಾಂತ್ಯದಡಿಯಲ್ಲಿ ಮುಖ್ಯವಾಗಿ ರಾಯಚೂರು, ಬೀದರ್, ಗುಲ್ಬರ್ಗಾ ಜಿಲ್ಲೆಗಳ ಪ್ರದೇಶಗಳಿದ್ದು, ಅಂತಹ ಆಧುನಿಕ ಉದ್ಯಮಗಳು ನಿಜಾಮರ ಕಾಲದಲ್ಲಿ ಇರಲಿಲ್ಲ. ಆದರೆ ಹೈದರಾಬಾದ್ ಸಂಸ್ಥಾನವು ಬ್ರಿಟಿಷ್ ಭಾರತದಲ್ಲಿದ್ದ ಕಾರ್ಮಿಕ ಕಾಯಿದೆಗಳನ್ನೇ ಜಾರಿ ಮಾಡಿತ್ತು ಎಂಬುದು ಗಮನಿಸುವಂತ ಅಂಶ. ಮುಖ್ಯವಾಗಿ ಶ್ರೀನಿವಾಸ ಗುಡಿ, ರಾಜ ಬಹದ್ದೂರ್ ಗೌರ್, ಗುಲಾಂ ನಬಿ ಆಜಾದ್ ಮುಂತಾದವರು ಅಲ್ಲಿ ಕಾರ್ಮಿಕ ಚಳವಳಿಯನ್ನು ಸಂಘಟಿಸಿದರು.

ಏಕೀಕರಣ ನಂತರ ಕರ್ನಾಟಕದ ಕಾರ್ಮಿಕ ಚಳವಳಿ

1956ರ ಹೊತ್ತಿಗೆ ಕರ್ನಾಟಕ ಕಾರ್ಮಿಕರಿಗೆಲ್ಲಾ ಅನ್ವಯಿಸುವ ರೀತಿಯಲ್ಲಿ ಕೇಂದ್ರ ಸಂಸ್ಥೆ ಎ.ಐ.ಟಿ. ಯು.ಸಿ. ಪ್ರಾಂತ ಸಂಘಟನೆಯನ್ನು ಕೈಗೊಂಡಿದ್ದು 1956ರ ಅಕ್ಟೋಬರ್ 27 ಹಾಗೂ 28ರಂದು ಕೋಲಾರದಲ್ಲಿ ನಡೆದ ‘ಮೈಸೂರು ಸಂಸ್ಥಾನ ಟ್ರೇಡ್ ಯೂನಿಯನ್ ಕೌನ್ಸಿಲ್’ನ ಪ್ರಥಮ ಸಮ್ಮೇಳನದಲ್ಲಿ ‘ಕರ್ನಾಟಕ ಪ್ರಾಂತ ಟ್ರೇಡ್ ಯೂನಿಯನ್ ಕಾಂಗ್ರೆಸ್’ (ಕೆಪಿಟಿಯುಸಿ) ಎಂಬ ಕಾರ್ಮಿಕ ಒಕ್ಕೂಟವನ್ನು ರಚಿಸಿಕೊಳ್ಳಲಾಯಿತು.

ಇದು ಸರ್ಕಾರಕ್ಕೆ 1‑11‑1956ರಿಂದ ಎಲ್ಲ ಕನ್ನಡ ಪ್ರದೇಶಗಳು ಒಗ್ಗೂಡಿ ವಿಶಾಲ ಮೈಸೂರು ರಾಜ್ಯವಾಗುತ್ತಿದ್ದುದರಿಂದ ಕಾರ್ಮಿಕರಿಗೆ ಸಂಬಂಧಿಸಿದಂತೆ ಉದ್ಭವಿಸುವ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಹಾಗೂ ಕರ್ನಾಟಕದ ಎಲ್ಲಾ ಕಾರ್ಮಿಕರಿಗೂ ಮಧ್ಯಮ ವರ್ಗದ ನೌಕರರಿಗೂ ಏಕರೀತಿಯ ಶಾಸನಗಳು, ವೇತನಗಳು ಅನ್ವಯಿಸಬೇಕೆಂದು ಕರೆ ನೀಡಿತು. 1956-2006ರ ಅವಧಿಯಲ್ಲಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರ ಏನೇ ಕಾನೂನು ಜಾರಿ ಮಾಡಿದರೂ ಕಾರ್ಖಾನೆಗಳ ಆಡಳಿತ ವರ್ಗ ಹಾಗೂ ಕಾರ್ಮಿಕರ ನಡುವೆ ತಿಕ್ಕಾಟ ಹಾಗೂ ಸಂಘರ್ಷಗಳು ನಡೆಯುತ್ತಿದ್ದವು. ಮುಖ್ಯವಾಗಿ ಕೇಂದ್ರ ಸರ್ಕಾರದ ಹಲವು ಸಾರ್ವಜನಿಕ ಉದ್ದಿಮೆಗಳು ನೆಲೆಯೂರಿದ್ದ ಬೆಂಗಳೂರು ಏಕೀಕರಣ ನಂತರದ ದಶಕಗಳಲ್ಲಿ ಹಲವು ಸುಪ್ರಸಿದ್ಧ ಕಾರ್ಮಿಕ ಚಳುವಳಿಗಳಿಗೆ ಸಾಕ್ಷಿಯಾಗಿತ್ತು. ಮುಖ್ಯವಾಗಿ 1965ರ ರಾಮ್ಕುಮಾರ್ ಮಿಲ್ ಹೋರಾಟ, 1967ರ ಐತಿಹಾಸಿಕ ಹೋಟೆಲ್ ಕಾರ್ಮಿಕರ ಹೋರಾಟ, 1979ರಲ್ಲಿ ಬೆಂಗಳೂರನ್ನೇ ನಡುಗಿಸಿದಂತೆ ಮೈಕೋ ಕಾರ್ಮಿಕರ ಹೋರಾಟ, 1980ರ ಐಟಿಸಿ ಕಾರ್ಮಿಕರ ಹೋರಾಟ, 1981ರ ಬೆಂಗಳೂರು ಸಾರ್ವಜನಿಕ ವಲಯದ ಕಾರ್ಮಿಕರ 2 ತಿಂಗಳಿಗೂ ಹೆಚ್ಚು ಕಾಲ ನಡೆದ ಐತಿಹಾಸಿಕ ಮುಷ್ಕರ, 1991ರ ಎಸ್ಕಾರ್ಟ್ಸ್ ಕಾರ್ಮಿಕರ ಹೋರಾಟ, ನಂತರ 3 ತಿಂಗಳ ಕಾಲ ನಡೆದ ಎಲ್ ಎಂಡ್ ಟಿ ಕಾರ್ಮಿಕರ ಹೋರಾಟಗಳು ಮುಖ್ಯವಾದವು. ಹಾಗೆ ರಾಜ್ಯದ ಪ್ರಮುಖ ಕಾರ್ಖಾನೆಗಳಿದ್ದ ಹರಿಹರ, ಭದ್ರಾವತಿ, ಮೈಸೂರು, ದಾವಣಗೆರೆ, ನಂಜನಗೂಡು, ಕೋಲಾರ, ಕುದುರೆಮುಖ, ಬಳ್ಳಾರಿಗಳಲ್ಲಿ ಪ್ರಮುಖ ಕಾರ್ಮಿಕ ಹೋರಾಟವು ನಡೆದವು.

70 ಹಾಗೂ 80ರ ದಶಕದಲ್ಲಿ ವಿಶೇಷವಾಗಿ ರಾಜ್ಯದ ಹೆಚ್ಚಿನ ಕೈಗಾರಿಕೆಗಳಲ್ಲಿನ ಕಾರ್ಮಿಕರ ಜೀವನ ತೀರಾ ಕಡಿಮೆ ಸಂಬಳ ಹಾಗೂ ಅಭದ್ರತೆಯಿಂದ ಕೂಡಿತ್ತಲ್ಲದೆ ದುಡಿತಕ್ಕೆ ಮಿತಿಯೇ ಇರಲಿಲ್ಲ. ಚಳವಳಿ ನಡೆಸಿದಲ್ಲಿ ಗೂಂಡಾಗಳ ತೀವ್ರ ದಾಳಿಗೂ ತುತ್ತಾಗಬೇಕಿತ್ತು. ಹಲವು ಕಾರ್ಮಿಕ ನಾಯಕರ ಸ್ವಪ್ರೇರಣೆಯಿಂದಾಗಿ ಕಾರ್ಮಿಕ ಚಳುವಳಿಗಳೂ ವಿಸ್ತೃತಗೊಂಡು ಕಾರ್ಮಿಕರು ಹಾಗೂ ಕಾರ್ಮಿಕ ನಾಯಕರು ನಡೆಸಿದ ಕೆಚ್ಚೆದೆಯ ಚಳವಳಿಗಳಿಂದಾಗಿ ಪ್ರಸ್ತುತ ರಾಜ್ಯದ ಕಾರ್ಮಿಕರ ಕುಟುಂಬಗಳ ಬದುಕಿನಲ್ಲಿ ನಾವು ಮಹತ್ವದ ಬದಲಾವಣೆಗಳನ್ನು ನೋಡುತ್ತೇವೆ. ಸಂಬಳ ಹೆಚ್ಚಿದ್ದರಿಂದ ಕಾರ್ಮಿಕ ಜೀವನಮಟ್ಟದಲ್ಲಿ ಏರಿಕೆ ಹಾಗೂ ಅವರ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರೆಯುವಂತಾಯಿತು. 70ರ ದಶಕದಲ್ಲಿ ಕಾರ್ಮಿಕರ ಬೋನಸ್ ಕನಿಷ್ಠ 8 ಶೇ.8.33ರಿಂದ ಶೇ.4ಕ್ಕೆ ಇಳಿಸಲಾಯಿತು. ಕಾರ್ಮಿಕರ ಸಂಬಳದಲ್ಲಾಗುವ ಹೆಚ್ಚಳವನ್ನು ಕಡ್ಡಾಯ ಠೇವಣಿಗೆ ಒಳಪಡಿಸಲಾಗಿತ್ತು. ಒಪ್ಪಂದಗಳನ್ನು ಗಾಳಿಗೆ ತೂರಲಾಯಿತು. ಕೊನೆಗೆ 25‑6‑1975ರಂದು ಇಡೀ ದೇಶಾದ್ಯಂತ ಕರಾಳ ತುರ್ತು ಪರಿಸ್ಥಿತಿ ಹೇರಲ್ಪಟ್ಟಿದ್ದು ಆಂತರಿಕ ಭದ್ರತಾ ಶಾಸನ (ಮೀಸಾ) ಅಡಿಯಲ್ಲಿ ಹಲವು ಕಾರ್ಮಿಕ ಮುಖಂಡರನ್ನು ದೀರ್ಘಕಾಲದವರೆಗೆ ಬಂಧಿಸಿಟ್ಟು ತೀವ್ರ ಶಿಕ್ಷೆ ನೀಡಲಾಯಿತು.

19562006ರ ನಡುವೆ ನಡೆದ ರಾಜ್ಯದ ಕೆಲವು ಪ್ರಮುಖ ಕಾರ್ಮಿಕ ಚಳವಳಿಗಳು

ಸಿಲ್ಕ್ ಕಾರ್ಖಾನೆಗಳ ಕಾರ್ಮಿಕರ ಹೋರಾಟೊ (1957)

1957 ಬೆಂಗಳೂರಿನಲ್ಲಿ ಸಿಲ್ಕ್ ಕಾರ್ಖಾನೆಗಳ ಕಾರ್ಮಿಕರು ಮುಷ್ಕರ ಕೈಗೊಂಡಿದ್ದು, ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು, ಕಾರಣವಿಲ್ಲದೆ ವಜಾ ಮಾಡಲ್ಪಟ್ಟ ಕಾರ್ಮಿಕರಿಗೆ ಪುನಃ ನೌಕರಿ ನೀಡಬೇಕೆಂದು ಹಾಗೂ ಕನಿಷ್ಠ ಕೂಲಿಯನ್ನು ಪಡೆಯಲು ಕಾರ್ಮಿಕರು ನಿರಂತರವಾಗಿ ಹೋರಾಟಗಳನ್ನು ನಡೆಸಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು. ಹಾಗೇ ಟಿ.ಆರ್.ಮಿಲ್ನಲ್ಲೂ ಕಾರ್ಮಿಕರ ಹಕ್ಕುಗಳಿಗಾಗಿ ಸೂರ್ಯನಾರಾಯಣರಾವ್ ಅವರ ಅಧ್ಯಕ್ಷತೆಯಲ್ಲಿ ಅನೇಕ ಹೋರಾಟಗಳನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ರೌಡಿಗಳು ರೇಜರ್ ಬ್ಲೇಡ್, ಬಂದೂಕುಗಳಿಂದ ದೌರ್ಜನ್ಯವೆಸಗಿದ್ದುಂಟು. ಈ ಕಾರ್ಮಿಕ ವಿರೋಧಿ ಗೂಂಡಾಗಳ ವಿರುದ್ಧ ಕಾರ್ಖಾನೆಯಲ್ಲಿ ಒಂದು ತಿಂಗಳು ಸತತ ಹೋರಾಟ ನಡೆಯಿತು.

ರಾಜ್ಯದ ಟೆಕ್ಸ್ಟೈಲ್ ಕಾರ್ಮಿಕರ ಹೋರಾಟ (196465)

1964‑65ರ ಸುಮಾರು ದೇಶದ ಟೆಕ್ಸ್ಟೈಲ್ ಕಾರ್ಮಿಕರ ಪಾಲಿಗೆ ಅತ್ಯಂತ ಸಂಕಷ್ಟದ ದಿನಗಳು. ಕೇಂದ್ರ ಸರ್ಕಾರದ ಆರ್ಥಿಕ ನೀತಿ ಮತ್ತು ಆಧುನೀಕರಣದ ಕಾರಣದಿಂದಾಗಿ ಬೆಂಗಳೂರು ನಗರದ ಹತ್ತಿ ಗಿರಣಿಗಳ ಬುಡವನ್ನೇ ಅಲುಗಾಡಿಸಿತು. ಇದರಿಂದಾಗಿ ಮಾಲೀಕರು ಸಂಕಷ್ಟದ ದಿನಗಳನ್ನು ಎದುರಿಸಬೇಕಾಯಿತು, ಜೊತೆಗೆ ಬೆಂಗಳೂರಿನ ರಾಮ್ಕುಮಾರ್ ಮಿಲ್, ಬಿನ್ನಿ ಮಿಲ್, ಮಿನರ್ವ ಮಿಲ್ ಮುಂತಾದ ಕಾರ್ಖಾನೆಗಳ ಕಾರ್ಮಿಕರು ಕೆಲಸ ಕಳೆದುಕೊಂಡು ಮುಷ್ಕರಕ್ಕಿಳಿಯಬೇಕಾಯಿತು. ವಿಶೇಷವಾಗಿ ಕಾಂ.ಸೂರಿ ಎಂದೇ ಗುರುತಿಸಲ್ಪಟ್ಟಿದ್ದ ಸೂರ್ಯನಾರಾಯಣ ನೇತ್ವತ್ವದಲ್ಲಿ ಬೆಂಗಳೂರಿನ ಹತ್ತಿ ಗಿರಣಿ ಕಾರ್ಮಿಕರ ಧೀರೋದಾತ್ತ ಹೋರಾಟಗಳು ನಡೆದು ಯಶಸ್ವಿಯಾದವು. ಜೊತೆಗೆ ಅವರು ಹರಿಹರ ಮತ್ತು ದಾವಣಗೆರೆಯಲ್ಲೂ ಬೃಹತ್ ಎಂಜಿನಿಯರಿಂಗ್ ಮತ್ತು ಹತ್ತಿ ಗಿರಣಿ ಕಾರ್ಮಿಕರ ಸಂಘಟನೆಯನ್ನು ಕಟ್ಟಿ ಬೆಳೆಸಿದರು. ಅವರು ಬೆಂಗಳೂರು‑ಹರಿಹರ‑ದಾವಣಗೆರೆಯ ಎಲ್ಲಾ ಟೆಕ್ಸ್ಟೈಲ್ ಕಾರ್ಖಾನೆ ಸಂಘಟನೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವುದು ಸ್ಮರಣೀಯವಾದುದು. ಹಾಗೆ ಅವರು ಅಸಂಘಟಿತ ಕಾರ್ಮಿಕರ ಕನಿಷ್ಠ ವೇತನ ಪುನರ್ವಿಮರ್ಶೆ ಮಾಡುವಂತೆ 1985‑86ರಲ್ಲಿ ಚಳವಳಿಯನ್ನು ಹುಟ್ಟುಹಾಕಿ ಅದನ್ನು ಬೆಳೆಸುವ ನಿಟ್ಟಿನಲ್ಲಿ ಮೆರವಣಿಗೆ, ಮುಷ್ಕರ, ಉಪವಾಸ, ಸತ್ಯಾಗ್ರಹ, ಪಿಕೆಟಿಂಗ್ ಇತ್ಯಾದಿಗಳಲ್ಲಿ ನೇರವಾಗಿ ಪಾಲ್ಗೊಳ್ಳುತ್ತಿದ್ದರು. ಅವರ ನಿರಂತರ ಹೋರಾಟದಿಂದಾಗಿ ಸರ್ಕಾರ ಈ ದಿಕ್ಕಿನಲ್ಲಿ ನಿರ್ಧಾರ ಕೈಗೊಳ್ಳುವಂತಾಯಿತು.

ಹಾಗೆ ಬೆಂಗಳೂರಿನಲ್ಲಿ ಅಸಂಘಟಿತರಾದ ಹೋಟೆಲ್ ಕಾರ್ಮಿಕರ ಸಂಘಟನೆಯನ್ನು ಮೊಟ್ಟಮೊದಲ ಬಾರಿಗೆ 1963‑64ರಷ್ಟು ಹಿಂದೆಯೇ ಕಟ್ಟಿದವರು ಸೂರಿಯವರು. ಆ ಸಮಯದಲ್ಲಿ ಪ್ರಪ್ರಥಮ ಬಾರಿಗೆ ಹೋಟೆಲ್ ಕಾರ್ಮಿಕರ ಮುಷ್ಕರ ನಡೆದಿದ್ದು ಸಾವಿರಾರು ಹೋಟೆಲ್ ಕಾರ್ಮಿಕರು ಭಾಗವಹಿಸಿದ್ದರು. ಕೆಲವೊಂದು ಕಾರಣಗಳಿಂದಾಗಿ ಸರ್ಕಾರ ಪೊಲೀಸರ ಮೂಲಕ ಹೋಟೆಲ್ ಕಾರ್ಮಿಕರ ಚಳವಳಿಯನ್ನು ದಮನ ಮಾಡಲು ಪ್ರಯತ್ನಿಸಿತು. ಆ ಸಂದರ್ಭದಲ್ಲಿ ನಡೆದ ಪೊಲೀಸ್ ಲಾಠಿ ಚಾರ್ಜ್ನಲ್ಲಿ ಹಲವಾರು ಮಂದಿ ಕೈಕಾಲು ಮುರಿದುಕೊಂಡಿದ್ದರು. ಕಾಂ. ಸೂರಿಯವರ ಕೈ ಮುರಿದಿತ್ತು. ಜೊತೆಗೆ ಅವರು 1974ರಷ್ಟು ಹಿಂದೆಯೇ ಬೆಂಗಳೂರಿನಲ್ಲಿ 12,000ಕ್ಕೂ ಅಧಿಕ ಆಟೋ ಚಾಲಕರನ್ನು ಯಶಸ್ವಿಯಾಗಿ ಸಂಘಟಿಸಿದ್ದರು.

ತಾತಗುಣಿ ಎಸ್ಟೇಟ್ ಹೋರಾಟ (1975)

ತಾತಗುಣಿ ಎಸ್ಟೇಟ್ ಹೋರಾಟವು ಹಲವು ರೀತಿಯಲ್ಲಿ ಚಾರಿತ್ರಿಕ ಮಹತ್ವವನ್ನು ಹೊಂದಿದೆ. ಈ ಹೋರಾಟ ನಡೆದಿದ್ದು ಆಗಿನ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯ ಕುಟುಂಬದ ಆಪ್ತರಾಗಿದ್ದ ದೇವಿಕಾರಾಣಿ ಅವರ ಎಸ್ಟೇಟ್ನಲ್ಲಿ. ದೇವಿಕಾರಾಣಿ  ಖ್ಯಾತ ಕವಿ ರವೀಂದ್ರನಾಥ ಠಾಗೋರ್ ಮೊಮ್ಮಗಳು, ಭಾರತೀಯ ಚಿತ್ರರಂಗದ ಪ್ರಥಮ ನಾಯಕಿ, ಆಗರ್ಭ ಶ್ರೀಮಂತೆ ಹಾಗೂ ರಷ್ಯಾದ ಪ್ರಸಿದ್ಧ ಚಿತ್ರ ಕಲಾವಿದ ರೋರಿಕ್ರವರನ್ನು ಮದುವೆಯಾದವರು. ತಾತಗುಣಿ ಎಸ್ಟೇಟ್ ಬೆಂಗಳೂರಿನಿಂದ 10 ಕಿ.ಮೀ. ದೂರದಲ್ಲಿದ್ದು, ಕನಕಪುರ ರಸ್ತೆಯಲ್ಲಿ ಸುಮಾರು 800 ಎಕರೆಗೂ ಮೀರಿರುವ ಸುಗಂಧಭರಿತ ಕಾಡು. 1975ರಲ್ಲಿ ಅಲ್ಲಿ 125 ಕುಟುಂಬಗಳಿದ್ದು, ಸುಮಾರು 150 ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದರು. ಅವರಿಗೆ ಸಿಗುತ್ತಿದ್ದ ಕೂಲಿ ದಿನಕ್ಕೆ 1‑10ರಿಂದ 3 ರೂ. ಮಾತ್ರ.

ತಾತಗುಣಿ ಎಸ್ಟೇಟ್ನಲ್ಲಿ ಲಿಮೋನಿಯಾ ಎಂಬ ಗಿಡದ ಬೀಜಗಳಿಂದ ಎಣ್ಣೆ ತಯಾರಿಸಿ ವಿವಿಧ ಕಂಪೆನಿಗಳಿಗೆ ಮಾರಲಾಗುತ್ತಿದ್ದು, ತಿಂಗಳಿಗೆ ಇದರಿಂದ ರೋರಿಕ್ ದಂಪತಿಗಳಿಗೆ 40‑50 ಲಕ್ಷ ರೂ. ಬರುತ್ತಿತ್ತು. ಆದರೆ ಹೃದಯಹೀನರಾಗಿದ್ದ ಅವರು ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ಕೊಡದೆ, ಜೀತದಾಳುಗಳಂತೆ ದುಡಿಸಿಕೊಳ್ಳುತ್ತಿದ್ದರು. ಜೊತೆಗೆ ಅವರಿಗೆ ಯಾವುದೇ ರಜೆಗಳಾಗಲಿ, ಹೆಂಗಸರಿಗೆ ಹೆರಿಗೆ ಭತ್ಯೆ ಅಥವಾ ಇನ್ಯಾವುದೇ ಸವಲತ್ತುಗಳಾಗಲಿ ಇರಲಿಲ್ಲ. ಕಾಂ.ಸೂರಿ ಮತ್ತು ಜಗನ್ನಾಥ ಅವರ ನೇತೃತ್ವದಡಿಯಲ್ಲಿ ತಾತಗುಣಿ ಎಸ್ಟೇಟ್ ಕಾರ್ಮಿಕರು ಸಂಘ ರಚಿಸಿಕೊಂಡರು. ಇದರಿಂದ ಕುಪಿತರಾದ ದೇವಿಕಾರಾಣಿ 11 ಜನ ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡಿದರು. ಕಾರ್ಮಿಕರು ಈ ಎಸ್ಟೇಟನ್ನು ‘ಪ್ಲಾಂಟೇಷನ್ ಆಕ್ಟ್’ಗೆ ಸೇರಿಸಬೇಕೆಂದು, ಕನಿಷ್ಠ ಕೂಲಿ ಹಾಗೂ ಇತರ ಸವಲತ್ತುಗಳನ್ನು ನೀಡಬೇಕೆಂದು ಆಗ್ರಹಿಸಿದರು. ಅಲ್ಲದೆ ಇವುಗಳನ್ನು ಜಾರಿಗೆ ತರದಿದ್ದಲ್ಲಿ ಹೋರಾಟಕ್ಕಿಳಿಯುವುದಾಗಿ ಕಾರ್ಮಿಕ ಮಂತ್ರಿಗಳಿಗೆ ಹಾಗೂ ದೇವಿಕಾರಾಣಿಗೆ ತಿಳಿಸಿದರು. ಆದರೆ ಆ ಮನವಿಯನ್ನು ಸಾರಾಸಗಟಾಗಿ ತಿರಸ್ಕರಿಸಲಾಯಿತು. ಕಾರ್ಮಿಕರು ಹೋರಾಟಕ್ಕಿಳಿದಾಗ ದೇವರಾಜು ಅರಸು ಸರ್ಕಾರ ಎಸ್ಟೇಟ್ಗೆ ಬಾರಿ ಭದ್ರತೆ ನೀಡಿತಲ್ಲದೆ, ಕಾರ್ಮಿಕ ನಾಯಕರಾದ ಕಾಂ. ಸೂರಿ ಹಾಗೂ ಜಗನ್ನಾಥರನ್ನು ಜೈಲಿಗೆ ಅಟ್ಟಿತು.

1977ರಲ್ಲಿ ತುರ್ತುಪರಿಸ್ಥಿತಿ ತೆರವುಗೊಂಡ ನಂತರ ಪುನಃ ಜೈಲಿನಿಂದ ಹೊರಬಂದಿದ್ದ ಸೂರಿ ಹಾಗೂ ಜಗನ್ನಾಥರು ‘ತಾತಗುಣಿ ಎಸ್ಟೇಟ್ ಮುಂದೆಯೇ ಧರಣಿ ಆರಂಭಿಸಿದ್ದು 155 ದಿನಗಳು ನಡೆಯಿತು. ಕಾರ್ಮಿಕರಿಗೆ ಬೆಂಬಲ ಸೂಚಿಸಿ ಇತರೆ ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು, ವಿದ್ಯಾರ್ಥಿ ಯುವಜನ ಸಂಘಟನೆ ಮತ್ತು ದಲಿತ ಸಂಘಟನೆಗಳು ಪ್ರತಿದಿನ ಭಾಗವಹಿಸಿದವು.

ಏನೇ ಹೋರಾಟ ನಡೆಯುತ್ತಿದ್ದರೂ ಸರ್ಕಾರವಾಗಲಿ, ದೇವಿಕಾರಾಣಿಯಾಗಲಿ ತಲೆಕೆಡಿಸಿಕೊಳ್ಳಲಿಲ್ಲ. ಸೂರಿ ಹೋರಾಟವನ್ನು 1979ರಲ್ಲಿ ವಿಧಾನಸೌಧದ ಮುಂದಕ್ಕೆ ಒಯ್ದರು. ಅದೇ ಸಂದರ್ಭದಲ್ಲಿ ಸೂರಿಯವರ ನೇತೃತ್ವದಲ್ಲಿ ಮೈಕೋ ಕಾರ್ಮಿಕರ ಹೋರಾಟವು ತೀವ್ರಗೊಂಡಿತ್ತು. ಈ ಸಂದರ್ಭದಲ್ಲಿ ಗುಂಡೂರಾವ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ವಿಧಾನಸೌಧದ ಮುಂದಿನ ಕಬ್ಬನ್ ಪಾರ್ಕ್ನಲ್ಲಿ ಕಾರ್ಮಿಕರು ಧರಣಿ ಕುಳಿತರು. ಹೋರಾಟ ಮಟ್ಟಹಾಕಲೆಂದು ಕಬ್ಬನ್ ಪಾರ್ಕ್ನಲ್ಲಿ ಧರಣಿ ಕೂರುವುದನ್ನು ಸರ್ಕಾರ ನಿಷೇಧಿಸಿತು. ಆದರೆ ಈ ಬೆದರಿಕೆಗೆ ಜಗ್ಗದ ಕಾರ್ಮಿಕರು ಹೋರಾಟ ಮುಂದುವರೆಸಿದರು. ರಾಜ್ಯಾದ್ಯಂತ ಕಾರ್ಮಿಕರ ಹೋರಾಟಕ್ಕೆ ಬೆಂಬಲದ ಮಹಾಪೂರವೇ ಹರಿದುಬಂದಿತು. ಆದರೂ ಒಂದು ವರ್ಷಕ್ಕೂ ಹೆಚ್ಚುಕಾಲ ಧರಣಿ ಕುಳಿತ ಕಾರ್ಮಿಕರನ್ನು ದೇವಿಕಾರಾಣಿ ಲೆಕ್ಕಿಸಲಿಲ್ಲ.

ಈ ನಡುವೆ 1983ರ ಚುನಾವಣೆಯಲ್ಲಿ ಗುಂಡೂರಾವ್ ಸರ್ಕಾರ ಸೋತಿದ್ದು, ರಾಮಕೃಷ್ಣ ಹೆಗಡೆ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಸೂರಿಯವರು ಶಾಸಕರಾಗಿ ಆರಿಸಿ ಬಂದಿದ್ದರು. ಸರ್ಕಾರ ಕಾರ್ಮಿಕರ ಸಮಸ್ಯೆಯಡಿ ಗಮನ ಹರಿಸಿದ್ದು, ಅವರಿಗೆ ಕನಿಷ್ಠ ಕೂಲಿ ಹಾಗೂ ಇತರೆ ಸೌಲಭ್ಯಗಳನ್ನು ನೀಡುವಂತೆ ದೇವಿಕಾರಾಣಿಗೆ ಮನವಿ ಸಲ್ಲಿಸಿತು. ಸರ್ಕಾರದ ತೀರ್ಮಾನಕ್ಕೂ ಆಕೆ ಕಿವಿಗೊಡಲಿಲ್ಲ. ಕಾರ್ಮಿಕರ ಹೋರಾಟ ಮುಂದುವರೆದಿದ್ದು, ವ್ಯಾಜ್ಯ ಕೋರ್ಟಿಗೂ ಹೋಯಿತು. ಕೋರ್ಟು ಕಾರ್ಮಿಕರ ಪರವಾಗಿ ತೀರ್ಪಿತ್ತಿತು. ಸೂರಿಯವರು ಕಾರ್ಮಿಕರ ಹೋರಾಟ ಹಿಂತೆಗೆದುಕೊಂಡು, ಕಬ್ಬನ್ ಪಾರ್ಕಿನಲ್ಲಿ ಧರಣಿಯನ್ನು ನಿಲ್ಲಿಸಿದರು. ಆದರೆ ದೇವಿಕಾರಾಣಿ ‑ಎಸ್ಟೇಟ್ ಉತ್ಪನ್ನ ನಿಲ್ಲಿಸಿ, ಕಾರ್ಮಿಕ ಹೋರಾಟವನ್ನು ಸಂಪೂರ್ಣ ಚಿವುಟಿ ಹಾಕಿದರು. ನಂತರ ಬೀದಿಗೆ ಬಿದ್ದ ಕಾರ್ಮಿಕರು ಸರ್ಕಾರಿ ಜಮೀನಿನಲ್ಲಿ ಬಗರ್ಹುಕುಂ ಸಾಗುವಳಿ ಮಾಡಲು ಆರಂಭಿಸಿದರು.

ವಿಕ್ರಾಂತ್ ಟೈರ್ಸ್ ಕಾರ್ಮಿಕರ ಹೋರಾಟ (2000)

ಆಡಳಿತ ವರ್ಗದ ಶೋಷಣೆ, ದಾಳಿ ದಬ್ಬಾಳಿಕೆ, ಕುತಂತ್ರಗಳ ವಿರುದ್ಧ ಕಾರ್ಮಿಕವರ್ಗ ಹೋರಾಟದ ಅಸ್ತ್ರವನ್ನು ಹೇಗೆ ಬಳಸಿತು ಎಂಬುದಕ್ಕೆ ಮೈಸೂರಿನ ವಿಕ್ರಾಂತ್ ಟೈರ್ಸ್ನ ಕಾರ್ಮಿಕರ ಹೋರಾಟ ಒಳ್ಳೆಯ ಉದಾಹರಣೆಯಾಗಿದೆ. 1980ರಲ್ಲಿ ಸಾರ್ವಜನಿಕ ಸಂಸ್ಥೆಯಡಿ ವಿಕ್ರಾಂತ್ ಟೈರ್ಸ್ ಉತ್ಪಾದನೆ ಆರಂಭಿಸಿದ್ದು 26‑11‑1980ರಂದು ಅಲ್ಲಿಯ ಕಾರ್ಮಿಕರು ಸಂಘವನ್ನು ರಚಿಸಿಕೊಂಡರು. ಕಾರ್ಮಿಕರ ಸಂಘಟನೆಯನ್ನು ಒಡೆಯಲೆಂದೇ ಸರ್ಕಾರ 1983ರಲ್ಲಿ ಭಾಗಶಃ ಬೀಗಮುದ್ರೆಯನ್ನು ಘೋಷಿಸಿತು. 1987ರಲ್ಲಿ ಆಡಳಿತ ವರ್ಗವು ಕಾರ್ಮಿಕರ ಬಗ್ಗೆ ಸಲ್ಲದ ಆರೋಪಗಳನ್ನು ಹೊರಿಸಿ ಬೀಗಮುದ್ರೆಯನ್ನು ಘೋಷಿಸಿತು. ಕಾರ್ಮಿಕ ಮಂತ್ರಿಗಳ ಮಧ್ಯಪ್ರವೇಶದಿಂದಾಗಿ ಬೀಗಮುದ್ರೆ ತೆರವಾಯಿತು. ಆಡಳಿತ ಮಂಡಳಿ ಮುಂದೆ ಒಬ್ಬ ಕಾರ್ಮಿಕನ ಮೇಲೆ ಆರೋಪಗಳನ್ನು ಹೊರಿಸಿ(1987), ಅಮಾನತ್ತು ಮಾಡಿ ವಿಚಾರಣೆ ಮಾಡಲು ತೀರ್ಮಾನಿಸಿದ್ದು, ಕಾರ್ಮಿಕರನ್ನು ಕೆರಳಿಸಿತು. ಅವರು 15 ದಿನಗಳ ಕಾಲ ಕೆಲಸ ಸ್ಥಗಿತ ಚಳವಳಿ ನಡೆಸಿದರು. ಸೂರಿ ಮಧ್ಯ ಪ್ರವೇಶಿಸಿ ಕೆಲಸ ಪುನರಾರಂಭವಾಗುವಂತೆ ನೋಡಿಕೊಂಡರು.

1991 ಜೂನ್ ತಿಂಗಳಿನಲ್ಲಿ ಕಾರ್ಮಿಕರು ಕೆಲಸದಲ್ಲಿರುವಾಗಲೇ ಅವರಿಗೆ ವೇತನ ಜಾಸ್ತಿಯಾಗುವ ರೀತಿಯಲ್ಲಿ ಹಾಗೂ ಶ್ರೇಣಿಗಳು ಬದಲಾಗಿ ಹೊಸ ಶ್ರೇಣಿ ಸಿಗುವ ರೀತಿಯಲ್ಲಿ ಒಪ್ಪಂದ ಜಾರಿಗೆ ಬಂದಿದ್ದು, ಇಂದಿಗೂ ಈ ಒಪ್ಪಂದ ಹೊಸ ರೀತಿಯ ನಮೂನೆಯಾಗಿರುತ್ತದೆ.ೊ1993ರಿಂದ ಕಾರ್ಖಾನೆ ತೀವ್ರ ನಷ್ಟಕ್ಕೆ ಒಳಗಾಗಿದ್ದು, 1996ರಲ್ಲಿ ಅಧಿಕಾರಿಗಳು, ಕಾರ್ಖಾನೆಯನ್ನು ನಡೆಸಬೇಕೆಂದರೆ 30 ಕೋಟಿ ರೂ. ಬಂಡವಾಳ ಬೇಕೆಂದು ಸಾಧ್ಯವಾಗದಿದ್ದಲ್ಲಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲೇಬೇಕೆಂದು ಸ್ಪಷ್ಟಪಡಿಸಿದರು. ಆದರೆ ಕಾರ್ಮಿಕರು ಖಾಸಗೀಕರಣವನ್ನು ವಿರೋಧಿಸಿ, ಬಂದ್ ಮುಷ್ಕರ ಮಾಡಿದರು. ಕಾರ್ಮಿಕ ವಿರೋಧದ ನಡುವೆಯೂ ಸರ್ಕಾರ 1997 ಜನವರಿ ತಿಂಗಳಿನಲ್ಲಿ ಜೆ.ಕೆ. ಇಂಡಸ್ಟ್ರೀಸ್ನವರಿಗೆ ಕಾರ್ಖಾನೆಯನ್ನು ಮಾರಾಟ ಮಾಡಿತು.

ಕಾರ್ಖಾನೆಯನ್ನು ನಡೆಸಲು ಪ್ರಾರಂಭಿಸಿದ ಮೇಲೆ ಕಾರ್ಮಿಕರ ಬಲಿಷ್ಠ ಸಂಘವನ್ನು ಒಡೆಯಲು ಜೆ.ಕೆ.ಐ. ಆಡಳಿತ ವರ್ಗವು ತಂತ್ರ ರೂಪಿಸಿತು. ಇದರಿಂದಾಗಿ 10‑9‑1997ರಿಂದ 25-9‑1997ರವರೆಗೆ ಕಾರ್ಖಾನೆಯ ಒಳಗಡೆಯೇ ಕೆಲಸ ಸ್ಥಗಿತ ಮುಷ್ಕರ ಪ್ರಾರಂಭವಾಗಿದ್ದು, ಅದು ಒಪ್ಪಂದದೊಂದಿಗೆ ಪರಿಹಾರವಾಯಿತು. ಮುಂದೆ 1999ರಲ್ಲಿ ಆಡಳಿತ ವರ್ಗ ಕೆಲವೊಂದು ವಿಭಾಗಗಳಲ್ಲಿ ಸೇವಾ ನಿಯಮಗಳನ್ನು ಬದಲಾಯಿಸಿದಾಗ ಪುನಃ ಕೈಗಾರಿಕಾ ಬಿಕ್ಕಟ್ಟು ಆರಂಭವಾಯಿತು. ಮಂತ್ರಿಗಳ ಮಧ್ಯಸ್ಥಿಕೆಯಿಂದ ಮರಳಿ ಕಾರ್ಖಾನೆ ಉತ್ಪಾದನೆ ಆರಂಭವಾಯಿತು(18‑2‑1999). ಆಡಳಿತ ವರ್ಗ ಕಾರ್ಮಿಕ ವರ್ಗವನ್ನು ಒಡೆಯುವ ತನ್ನ ಕುತಂತ್ರವನ್ನು ಮುಂದು ವರೆಸಿತಲ್ಲದೆ 15-7-1999ರಿಂದ 30‑8‑1999ರವರೆಗೆ ಕಾರ್ಮಿಕರಿಗೆ ಕೆಲಸವನ್ನು ನೀಡಲಿಲ್ಲ. ಕೊನೆಗೆ ಆಡಳಿತ ವರ್ಗ ನ್ಯಾಯಾಲಯಕ್ಕೂ ಹೋಗಿ, ಬದಲಿ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಅವಕಾಶವನ್ನು ಪಡೆಯಿತು. ಕಾರ್ಮಿಕ ಸಂಘವು ಆಡಳಿತ ವರ್ಗದೊಡನೆ ಮಾತುಕತೆ ನಡೆಸಿತಾದರೂ ಪ್ರಯೋಜನವಾಗಲಿಲ್ಲ. 9‑12‑2000ರಲ್ಲಿ ಕಾರ್ಮಿಕ ಸಂಘವು ಅನಿರ್ದಿಷ್ಟ ಕಾಲದ ಮುಷ್ಕರದ ನಿರ್ಧಾರ ಕೈಗೊಂಡಿತಲ್ಲದೆ ಸೂರಿಯವರ ಮಾರ್ಗದರ್ಶನದಂತೆ ಒಂದು ಹೋರಾಟ ಸಮಿತಿಯನ್ನು ರಚಿಸಿಕೊಂಡಿತು. ಹಾಗೆ ಮೈಸೂರಿನ ನಾಗರಿಕರ ಒಂದು ಲಕ್ಷದಷ್ಟು ಸಹಿ ಸಂಗ್ರಹ ಮಾಡಿ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಟ್ಟಿತು. ಇಷ್ಟೆಲ್ಲ ಆದರೂ ಜೆ.ಕೆ.ಐ ಆಡಳಿತ ಒಪ್ಪಂದಕ್ಕೆ ಬರಲಿಲ್ಲ. ಅನಿವಾರ್ಯವಾಗಿ ಕಾರ್ಮಿಕರು 11‑1‑2001ರಿಂದ ಮುಷ್ಕರ ಪ್ರಾರಂಭಿಸಿದರು.

ಕಾರ್ಮಿಕರಿಗೆ ಬೆಂಬಲ ಸೂಚಿಸಿ ಎಲ್ಲ ರಾಜಕೀಯ ಪಕ್ಷಗಳು ಕರೆ ನೀಡಿದ 12-3-2001ರ ಮೈಸೂರು ಬಂದ್ ಯಶಸ್ವಿಯಾಯಿತು. ಅದೇ ದಿನ ಸರ್ಕಾರ ವಿಧಾನ ಸಭೆ ಯಲ್ಲಿ ಹೇಳಿಕೆ ನೀಡಿ, ಕಾರ್ಮಿಕರಿಗೆ ಮಧ್ಯಂತರ ಪರಿಹಾರವಾಗಿ 700 ರೂ.ಗಳನ್ನು ಕೊಡಬೇಕೆಂದು ಮುಷ್ಕರವನ್ನು ನಿಲ್ಲಿಸಿ, ಕಾರ್ಮಿಕರು ಕೆಲಸಕ್ಕೆ  ಹಾಜರಾಗಬೇಕೆಂದು ಕರೆ ನೀಡಿತಲ್ಲದೆ ಈ ವಿವಾದವನ್ನು ನ್ಯಾಯ ನಿರ್ಣಯಕ್ಕಾಗಿ ‘ಟ್ರಿಬ್ಯುನಲ್’ಗೆ ವರ್ಗಾಯಿಸಿದ್ದಾಗಿ ತಿಳಿಸಿತು. ಆಡಳಿತ ವರ್ಗ ಸರ್ಕಾರದ ಆದೇಶದಂತೆ ಕೇವಲ 6 ತಿಂಗಳ ಕಾಲ ಕೇವಲ 70 ರೂ. ನೀಡಿ, ನಂತರ ನಿಲ್ಲಿಸಿತು. ಕಾರ್ಮಿಕರು ಟ್ರಿಬ್ಯುನಲ್ಗೆ ಅರ್ಜಿ ಸಲ್ಲಿಸಿದ್ದು, ತಮ್ಮ ಪರವಾಗಿ ಆದೇಶವನ್ನು ಪಡೆದರು. ಆದರೆ ಅದರ ವಿರುದ್ಧ ಆಡಳಿತ ವರ್ಗ ಹೈಕೋರ್ಟ್ಗೆ ಮನವಿ ಸಲ್ಲಿಸಿತು.

ಇದರ ನಡುವೆ ಜೆ.ಕೆ.ಐ. ಆಡಳಿತ ವರ್ಗವು ಕಾರ್ಮಿಕ ಸಂಘಕ್ಕೆ ಹಾಗೂ ಸರ್ಕಾರಕ್ಕೆ 27‑7‑2001ರಂದು ಪತ್ರ ಬರೆದು ಕಾರ್ಖಾನೆಯನ್ನು ಮುಚ್ಚಲು ಅನುಮತಿಯನ್ನು ಕೋರಿತು. ಆದರೆ ಮೈಸೂರಿನ ಕಾರ್ಮಿಕರು ಹಾಗೂ ನಾಗರಿಕರು ಸರ್ಕಾರಕ್ಕೆ ಕಾರ್ಖಾನೆಯನ್ನು ಮುಚ್ಚದಂತೆ ಒತ್ತಾಯ ಹೇರಿದರು. ಹೀಗಾಗಿ ಸರ್ಕಾರವು 16‑9‑2001ರಂದು ಕಾರ್ಖಾನೆಯನ್ನು ಮುಚ್ಚಲು ಕೇಳಿದ್ದ ಅನುಮತಿಯನ್ನು ವಜಾ ಮಾಡಿತು. ಕೊನೆಗೆ 14‑2‑2002ರಂದು ಕಾ.ಸೂರಿಯವರ ನೇತೃತ್ವದಲ್ಲಿ ಕಾರ್ಮಿಕರು ಹಾಗೂ ಜೆ.ಕೆ.ಐ. ಆಡಳಿತ ವರ್ಗಕ್ಕೂ ಅಂತಿಮ ಒಪ್ಪಂದವಾಯಿತು.

ಐತಿಹಾಸಿಕ ಮಹತ್ವದ ಮೈಕೋ ಕಾರ್ಮಿಕರ ಚಳವಳಿ (1979)

ಮೈಕೋ ಕಾರ್ಮಿಕರ ಚಳವಳಿ ಕರ್ನಾಟಕದ ತುರ್ತು ಪರಿಸ್ಥಿತಿ ನಂತರದ ಸಮರಶೀಲ ಕಾರ್ಮಿಕರ ಹೋರಾಟ ಮತ್ತು ಪ್ರಜಾಸತ್ತಾತ್ಮಕ ಚಳವಳಿಯ ಅಲೆಯಲ್ಲಿ ಬರೆದ ಉಜ್ವಲ ಅಧ್ಯಾಯ.ೊಮೈಕೋ ಜರ್ಮನ್ ಬಹುರಾಷ್ಟ್ರೀಯ ಕಂಪೆನಿಯಾದ ಬೋಶ್ ಒಂದು ಘಟಕ ಕಂಪೆನಿಯಾಗಿ 1951ರಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. 1957ರಷ್ಟು ಹಿಂದೆಯೇ ಅಲ್ಲಿನ ಕಾರ್ಮಿಕರು ಸಂಘಟಿತರಾದರು. ಕಾರ್ಮಿಕ ಸ್ಥಿತಿ ಚಿಂತಾಜನಕವಾಗಿತ್ತು. 1957‑1978ರ ಅವಧಿಯನ್ನು ಮೈಕೋ ಕಾರ್ಮಿಕರ ದಬ್ಬಾಳಿಕೆಯ ಅವಧಿ ಎಂದೇ ಕರೆದಿದ್ದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಾರಕಕ್ಕೇರಿತ್ತು.

ಆ ಸಮಯದಲ್ಲಿ ಕಾರ್ಮಿಕರ ಪರಿಸ್ಥಿತಿ ಅತ್ಯಂತ ದುರ್ಬರವಾಗಿದ್ದು, ನಿರ್ದಯವಾಗಿ ಅವರಿಂದ ದುಡಿಸಿಕೊಳ್ಳಲಾಗುತ್ತಿತ್ತು. ಅಲ್ಲಿಯ ಕೆಲಸದ ಒತ್ತಡವನ್ನು ತಾಳಲಾರದೆ ಎಷ್ಟೋ ಕಾರ್ಮಿಕರು ಕೆಲಸ ಬಿಟ್ಟು, ಓಡಿಹೋಗಿದ್ದರು. ಮೈಕೋದಲ್ಲಿ ಕೆಲಸಕ್ಕೆ ಸೇರಲು ಹೆದರುತ್ತಿದ್ದರು. ಆಗ ಮೈಕೋದಲ್ಲಿದ್ದ ಅತ್ಯಂತ ಅಧಿಕಾರಶಾಹಿ ಮ್ಯಾನೇಜ್ಮೆಂಟ್ ಒಂದು ನಿಮಿಷ ತಡವಾದರೂ ಕಾರ್ಮಿಕರಿಗೆ ಚಾರ್ಜ್ಶೀಟ್ ಷೋಕಾಸ್ ನೋಟಿಸ್ ನೀಡುತ್ತಿತ್ತು. ಇಂತಹ ಕೆಲವು ನೋಟಿಸ್ ಪಡೆದವರನ್ನು ಸಸ್ಪೆಂಡ್ ಮಾಡಲಾಗುತ್ತಿತ್ತು. ಕಾಯಿಲೆ, ಅಪಘಾತ ಕಾರಣಗಳಿಗಾಗಿ ಜಾಸ್ತಿ ರಜೆ ಹಾಕಿದಲ್ಲಿ ವಾರ್ಷಿಕ ಬಡ್ತಿಯನ್ನು ರದ್ದುಗೊಳಿಸಲಾಗುತ್ತಿತ್ತು. ಸಂಬಂಧಿಕರ ಸಾವಿನ ಸಮಯದಲ್ಲಿ ರಜೆ ಹಾಕಿದಲ್ಲಿ ಸತ್ತವರ ಸಾವಿನ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕಿತ್ತು. ಅರ್ಧಕ್ಕೂ ಹೆಚ್ಚು ಕಾರ್ಮಿಕರು ಇಂತಹ ಕಾರಣಗಳಿಗಾಗಿ ಸಸ್ಪೆಂಡ್ ಆಗಿದ್ದರು. ಇವರಿಗೆ ವಿಚಾರಣೆಯ ಅವಧಿಯಲ್ಲಿ ಕಾನೂನು ಪ್ರಕಾರ ನೀಡಬೇಕಿದ್ದ ಭಾಗಶಃ ವೇತನದ ಸವಲತ್ತುಗಳನ್ನು ಕೊಡುತ್ತಿರಲಿಲ್ಲ. 1956ರ ಒಂದು ಒಪ್ಪಂದದ ಪ್ರಕಾರ ಮೈಕೋದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಕಾರ್ಮಿಕರು ಮದುವೆಯಾದರೆ ಅವರ ಕೆಲಸವನ್ನು ನಿರಾಕರಿಸಲಾಗುತ್ತಿತ್ತು.

ಕಾಂ.ಸೂರಿ 1979ರಲ್ಲಿ ಮೈಕೋ ಸಂಘದ ಅಧ್ಯಕ್ಷರಾಗುತ್ತಲೇ ಕಾರ್ಮಿಕರ ಹೋರಾಟದ ಅಮೋಘ ಅಧ್ಯಾಯ ಆರಂಭವಾಯಿತು. ಅಧಿಕಾರಿಯೊಬ್ಬ ಸಂಘದ ಪದಾಧಿಕಾರಿಗಳನ್ನು, ಮುಖಂಡರನ್ನು ‘ದಕ್ಷಿಣ ಭಾರತದ ನಾಯಿಗಳು’ ಎಂದು ಕರೆದದ್ದು ಕಾರ್ಮಿಕರ ಹೋರಾಟಕ್ಕೆ ಎಡೆ ಮಾಡಿಕೊಟ್ಟದ್ದರಿಂದ ಕಾರ್ಮಿಕರು ಮುಷ್ಕರಕ್ಕಿಳಿದರು. ಅಂದೇ ಕಾರ್ಖಾನೆಗೆ ಲಾಕ್ಔಟ್ ಘೋಷಿಸಲಾಯಿತು. ಮೈಕೋ ಹೋರಾಟದ ಬೆಂಬಲಕ್ಕೆ ಸಿಐಟಿಯು ಇಡೀ ಕಾರ್ಮಿಕ ವರ್ಗವನ್ನು ಸನ್ನದ್ದುಗೊಳಿಸಿತು. ಗುಂಡೂರಾವ್ ಅವರ ರಾಜ್ಯ ಸರ್ಕಾರ, ಮೈಕೋ ಮ್ಯಾನೇಜ್ಮೆಂಟ್ನ ತೀವ್ರ ದಾಳಿ‑ದಬ್ಬಾಳಿಕೆಗಳನ್ನು ಎದುರಿಸಿ ಕಾರ್ಮಿಕರು ದಿಟ್ಟ ಹೋರಾಟ ನಡೆಸಿ, 1984ರ ಹೊತ್ತಿಗೆ ಎಲ್ಲಾ ವಿರೋಧಗಳನ್ನು ಹೋಲಿಸುವುದರಲ್ಲಿ ಯಶಸ್ವಿಯಾಯಿತು. ಈ ಹೋರಾಟದ ಅವಧಿ (1974‑1984) ಮೈಕೋ ಕಾರ್ಮಿಕರಿಗೆ ವರ್ಗ ಜಾಗೃತಿ, ವರ್ಗ‑ರಾಜಕೀಯ, ವರ್ಗ ಸೌಹಾರ್ದತೆ ಮತ್ತು ರೈತ‑ಕಾರ್ಮಿಕ ಸಖ್ಯತೆಯ ಬಗ್ಗೆಯೂ ಅರಿವನ್ನು ಮೂಡಿಸಿದ್ದು ವಿಶೇಷವಾಗಿತ್ತು. ಆ ಸಮಯದಲ್ಲಿ ನಡೆದಂಥ ಪ್ರಮುಖ ಕಾರ್ಮಿಕರ ಮುಷ್ಕರಗಳು, ರೈತ ಹೋರಾಟಗಳು, ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಂಬಲವನ್ನು ಮೈಕೋ ಕಾರ್ಮಿಕರು ನೀಡಿದರು.

ನರಗುಂದ‑ನವಲಗುಂದದಿಂದ ಬೆಂಗಳೂರಿಗೆ ಬಂದ ರೈತ ಹೋರಾಟಗಾರರಿಗೆ (1981) ಆಹಾರ ಒದಗಿಸುವಲ್ಲಿನ ಪಾತ್ರ ಅತ್ಯಂತ ಸ್ಮರಣೀಯವಾದದ್ದು. ಕಾಂ. ಸೂರಿಯವರ ನಾಯಕತ್ವದಲ್ಲಿ ನಡೆದ ಐಟಿಸಿ ಕಾರ್ಮಿಕರ ಹೋರಾಟಕ್ಕೂ ಅದು ಬೆಂಬಲವಾಗಿ ನಿಂತಿತು. 1983ರ ಚುನಾವಣೆಯಲ್ಲಿ ಜನತಾ ಎಡಪಕ್ಷಗಳ ಮೈತ್ರಿಕೂಟದ ಜಯಕ್ಕಾಗಿ ಮೈಕೋ ಕಾರ್ಮಿಕರು ಅಹರ್ನಿಶಿ ದುಡಿದರು. ಇದರಿಂದಾಗಿ ಇಂದಿರಾ‑ ಕಾಂಗ್ರೆಸ್ ಬೆಂಗಳೂರಿನಲ್ಲಿ ಒಂದು ಸೀಟನ್ನು ಗೆಲ್ಲಲಿಲ್ಲ. 1984‑1996ರ ಅವಧಿ ಮೈಕೋ ಕಾರ್ಮಿಕರ ಪಾಲಿಗೆ ಸುವರ್ಣ ಅವಧಿಯೇ ಆಗಿತ್ತು. ಈ ಸಮಯದಲ್ಲಿ ಅವರು ಹಲವು ಸವಲತ್ತುಗಳನ್ನು ಪಡೆದುಕೊಂಡರು. ಹಾಗೆ ಮೈಕೋ ಮ್ಯಾನೇಜ್ಮೆಂಟ್ ಸಹ ಕಾರ್ಮಿಕರೊಂದಿಗೆ ಸಹಕಾರ ಮನೋಭಾವದಿಂದ ವ್ಯವಹರಿಸಿದಾಗ ಮಾತ್ರ ಕಾರ್ಖಾನೆ ಬದುಕಲು, ಬೆಳೆಯಲು ಸಾಧ್ಯ ಎಂಬುದನ್ನು ಅರಿಯಿತು.

1979‑2002ರ ಅವಧಿಯಲ್ಲಿ ಮೈಕೋ ಕಾರ್ಮಿಕರ ಸರಾಸರಿ ವೇತನ ಸುಮಾರು ರೂ.700ರಿಂದ 15,000ರೂ.ಗೆ ಏರಿದ್ದು, ಇದು ನಾವು ಗಮನಿಸಬೇಕಾದಂತಹ ಅಂಶ. ಹಾಗೆ ಜಗತ್ತಿನಾದ್ಯಂತ 170ಕ್ಕೂ ಹೆಚ್ಚು ಕಾರ್ಖಾನೆ ಹಲವು ಉತ್ಪನ್ನಗಳಲ್ಲಿ ಏಕಸ್ವಾಮ್ಯ ಬಲ ಇರುವ ಬೋಶ್ ಬಹುರಾಷ್ಟ್ರೀಯ ಕಂಪೆನಿಯ ಭಾಗವಾದ ಮೈಕೋ ಮ್ಯಾನೇಜ್ಮೆಂಟನ್ನು ಮಣಿಸಿದ್ದು ಸಾಮಾನ್ಯ ಮಾತಲ್ಲ. ಕಾಂ.ಸೂರಿಯವರು 22 ವರ್ಷಗಳಷ್ಟು ಸುದೀರ್ಘ ಕಾಲ ಕಾರ್ಮಿಕ ನಾಯಕತ್ವವನ್ನು ವಹಿಸಿಕೊಂಡು ಕಾರ್ಮಿಕರಿಗೆ ಅತ್ಯಂತ ಉತ್ತಮ ಜೀವನಮಟ್ಟ ಒದಗಿಸಿದ್ದು ಬಹುದೊಡ್ಡ ಸಾಧನೆಯೇ ಆಗಿದೆ.

90ರ ದಶಕದ ಆರಂಭದಿಂದ ಜಾಗತೀಕರಣದ ಹೆಸರಿನಲ್ಲಿ ದೇಶದಾದ್ಯಂತ ತೀವ್ರ ಆರ್ಥಿಕ ಬದಲಾವಣೆಗಳಾಗಿದ್ದು ಮೈಕೋವನ್ನು ತಟ್ಟಿತು. ಈ ಹಿನ್ನೆಲೆಯಲ್ಲಿ ಮೈಕೋ ಮ್ಯಾನೇಜ್ಮೆಂಟ್ ನಿಧಾನವಾಗಿ ಹಕ್ಕುಗಳು, ಸವಲತ್ತುಗಳು, ವೇತನ ಶ್ರೇಣಿ ಕೊಡುವುದರಲ್ಲಿ ಹಿಂದೆ ತಾನು ಹೊಂದಿದ್ದ ಧೋರಣೆ ಬದಲಾಯಿಸಿ, ಬಿಗುವನ್ನು ತೋರಲು ಆರಂಭಿಸಿತು. ಜೊತೆಗೆ, ಕಾರ್ಮಿಕರ ಐಕ್ಯತೆ ಮುರಿಯುವ, ಕಾರ್ಮಿಕರ ಒಂದು ವಿಭಾಗವನ್ನು ಎತ್ತಿಕಟ್ಟುವ ಕೆಲಸವನ್ನು ಅದು ಮಾಡಲಾರಂಭಿಸಿತು. ಇದಕ್ಕಾಗಿ ಅದು ವಿಶೇಷವಾಗಿ ಯುವ‑ಕಾರ್ಮಿಕರನ್ನು ಬಳಸಿತು. ಇದರಿಂದಾಗಿ ಪುನಃ 1996ರಿಂದ ಹೊಸ ಹೋರಾಟ ಪ್ರಾರಂಭವಾಗಿದೆ.

6. ಮೈಸೂರು ಪೇಪರ್ಮಿಲ್ ಹೋರಾಟ (1989)

ಘಿಣರಾ ಇತ್ತೀಚಿನವರೆಗೂ (1989) ಭದ್ರಾವತಿಯ ಎಂ.ಪಿ.ಎಂ. ಕಾರ್ಖಾನೆಯ ಕಾರ್ಮಿಕರಿಗೆ ತೀರಾ ಕಡಿಮೆ ಸಂಬಳವಾಗಿತ್ತು(ರೂ.750 ರಿಂದ ರೂ. 2,500 ಮಾತ್ರ). ಮ್ಯಾನೇಜ್ಮೆಂಟ್ ಪರವಿದ್ದ ಕಾರ್ಮಿಕ ಸಂಘ ಕಾರ್ಮಿಕರ ಬವಣೆಗಳಿಗೆ ಸ್ಪಂದಿಸುತ್ತಿರಲಿಲ್ಲ. ಅಲ್ಲದೆ ಅದು ಕಾರ್ಮಿಕರ ಪರವಲ್ಲದ ಬೇಡಿಕೆಗಳನ್ನು ಇಟ್ಟಿತ್ತು. ಇದರಿಂದ ಬೇಸತ್ತ ಕಾರ್ಮಿಕರು ತಮ್ಮದೇ ಆದ ‘ಸಂಯುಕ್ತ ಹೋರಾಟ ರಂಗ’ ರಚಿಸಿ ಹೊಸ ಬೇಡಿಕೆಗಳೊಂದಿಗೆ ಹೋರಾಟಕ್ಕಿಳಿದರು. ಈ ಮಧ್ಯೆ ಮ್ಯಾನೇಜ್ಮೆಂಟ್ ಲಾಕ್ಔಟ್ ಘೋಷಿಸಿತ್ತು. ಆಡಳಿತ ಮಂಡಳಿ ಪರವಾಗಿದ್ದ ಕಾರ್ಮಿಕ ಸಂಘ ತನ್ನನ್ನು ಮಾತುಕತೆಗೆ ಕರೆಯಬೇಕೆಂದು ಪಟ್ಟುಹಿಡಿದಿದ್ದು ಹೈಕೋರ್ಟ್ಗೆ ವಿವಾದ ಹೋಯಿತು. ಮುಖಂಡರ ಮನವಿಯ ಮೇರೆಗೆ ವಿವಾದವು ದಿನವು ನಡೆದು ತಿಂಗಳೊಳಗೆ ತೀರ್ಮಾನವಾಗಿದ್ದು, ತೀರ್ಪಿನಂತೆ ಆಡಳಿತ ಮಂಡಳಿಯೊಂದಿಗೆ ಒಪ್ಪಂದವಾಗಿ ವಿ.ಐ.ಎಸ್.ಎಲ್.ನ ಸಮಾನ ವೇತನ ಪಡೆಯುವಂತಾಗಿದ್ದು ಕಾರ್ಮಿಕರ ಶಕ್ತಿಯನ್ನು ಬಿಂಬಿಸುತ್ತದೆ.

ಕೋಲಾರ ಚಿನ್ನದ ಗಣಿ ಕಾರ್ಮಿಕರ ಹೋರಾಟ (1975)

ನಮ್ಮ ರಾಜ್ಯದ ದುಡಿಯುವ ವರ್ಗದ ಚಳವಳಿಯ ಪ್ರಬಲ ಕೇಂದ್ರವೆಂದೇ ಕೋಲಾರ ಮತ್ತು ಅಲ್ಲಿನ ಚಿನ್ನದ ಗಣಿ ಪ್ರದೇಶ ಪರಿಗಣಿಸಲ್ಪಟ್ಟಿದೆ. ಅದು ರಾಜ್ಯದಲ್ಲೇ ಅತ್ಯಂತ ದೀರ್ಘ ಕೈಗಾರಿಕಾ ಚಟುವಟಿಕೆಯ ಚರಿತ್ರೆಯನ್ನು ಹೊಂದಿದ್ದು ವಿಶ್ವವಿಖ್ಯಾತ ಚಿನ್ನದ ಗಣಿ ಎನ್ನಿಸಿದೆ. ಕಳೆದ ಒಂದು ಕಾಲು ಶತಮಾನದಿಂದ ಹಗಲೂ ರಾತ್ರಿ ಮೂರು ಪಾಳಿಗಳಲ್ಲಿ ನಿರಂತರವಾಗಿ ಚಟುವಟಿಕೆಯ ಗೂಡಾಗಿದ್ದ ಅದು ಇಂದು ಚಿರನಿದ್ರೆಯಲ್ಲಿದೆ. ಬ್ರಿಟನ್ನಿನ ಜಾನ್ ಟೇಲರ್ ಅಂಡ್ ಕಂಪೆನಿಯ ಮಾಲೀಕತ್ವದ ಚಿನ್ನದ ಗಣಿಯಲ್ಲಿ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರಾಗಿ ಕೈಗಳಿಗೆ ಗುರುತಿನ ಪಟ್ಟಿಗಳನ್ನು ಕಟ್ಟಿಕೊಂಡು ಪ್ರಾಣದ ಹಂಗು ತೊರೆದು ಸಾವಿರಾರು ಮಂದಿ ಕಾರ್ಮಿಕರು ಗುಲಾಮರಂತೆ ದುಡಿಯುತ್ತಿದ್ದರು.

1941ರಲ್ಲಿ ಪ್ರಪ್ರಥಮ ಬಾರಿಗೆ ಕೆಂಬಾವುಟದ ಅಡಿಯಲ್ಲಿ (ಸಿಪಿಎಂ) ಸಂಘಟಿತರಾಗಿ ಸಮರಶೀಲ ಹೋರಾಟಗಳನ್ನು ನಡೆಸಿ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನ ನಡೆಸಿದರು. ಪ್ರಾರಂಭದಲ್ಲಿ ತಮಿಳುನಾಡಿನ ಕಮ್ಯೂನಿಸ್ಟ್ ಪಕ್ಷ ಮತ್ತು ಡಿಪಿಟಿಯುಸಿ ಮುಖಂಡರು ಇವರಿಗೆ ಮಾರ್ಗದರ್ಶಕರಾಗಿದ್ದರು. ಆಗಿನ ಮೈಸೂರು ರಾಜ್ಯದಲ್ಲಿ ಮೊತ್ತ ಮೊದಲು ನೋಂದಾಯಿಸಲ್ಪಟ್ಟ ಸಂಘಗಳು ಇಲ್ಲಿದ್ದವು. ಮುಖ್ಯವಾಗಿ ಕಾಂ. ಪಿ. ರಾಮಮೂರ್ತಿ, ಕಾಂ. ವಾಸನ್, ಕಾಂ. ಸೂರಿ ಮತ್ತು ಗೋವಿಂದ ಕಾರ್ಮಿಕ ಚಳವಳಿಯ ಜನಪ್ರಿಯ ಮುಖಂಡರು. 1962ರಲ್ಲಿ ಕೆಂಬಾವುಟದ ಕಾರ್ಮಿಕ ಸಂಘದ ಕಾರ್ಯಕರ್ತರ ಮೇಲೆ ತೀವ್ರ ದಾಳಿ ನಡೆಸಲಾಯಿತು. ಆಗ ಕಾಂ. ಸೂರಿಯವರ ನೇತ್ವತ್ವದಲ್ಲಿ ಕಾರ್ಮಿಕರು ಸಂಘಟಿತರಾದರು. 1975ರ ಆರಂಭದಲ್ಲಿ ಬಿಇಎಂಎಲ್ನ 18,000 ಮಂದಿ ಕಾರ್ಮಿಕರು ವೇತನ ಪರಿಷ್ಕರಣಕ್ಕಾಗಿ 48 ದಿನಗಳ ಮುಷ್ಕರ ನಡೆಸಿದರು. ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಸುಮಾರು 2,000 ಮಂದಿ ಕಾರ್ಮಿಕರು ಕಾಲ್ನಡಿಗೆಯ ಮೂಲಕ ಬೆಂಗಳೂರಿಗೆ ಜಾಥಾ ಹೋಗಿ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಭೇಟಿಯಾಗಿದ್ದರು.

1980ರಲ್ಲಿ ಕೆಜಿಎಫ್ನ ಬೇರೆ ಬೇರೆ ಗಣಿಗಳಲ್ಲಿದ್ದ 3‑4 ಸಂಘಗಳ ಬದಲು ಇಡೀ ಚಿನ್ನದ ಗಣಿಗೆ ಒಂದೇ ಅಂಗೀಕೃತ ಸಂಘ ಚುನಾವಣೆಯ ಮೂಲಕ ಅಸ್ತಿತ್ವಕ್ಕೆ ಬಂದಿತು.  ಮುಂದೆ ಚಿನ್ನದ ಗಣಿಯ ಶತಮಾನೋತ್ಸವ ಸಮಾರಂಭದ ಸಂದರ್ಭದಲ್ಲಿ ಕಾರ್ಮಿಕರಿಗೆ ಬಹುಮಾನ ರೂಪದಲ್ಲಿ ಗೌರವ ಮೊತ್ತವನ್ನು ನೀಡಬೇಕೆಂದು ಕಾರ್ಮಿಕ ಸಂಘ ಬೇಡಿಕೆಯನ್ನಿಟ್ಟಿದ್ದು, ಆಡಳಿತ ವರ್ಗ ಅದನ್ನು ಸಮ್ಮತಿಸಲಿಲ್ಲ. ಬೇಡಿಕೆಯನ್ನು ಈಡೇರಿಸದಿದ್ದರೆ ಸಮಾರಂಭಕ್ಕೆ ಆಗಮಿಸುವವರಿದ್ದ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ ಹೆಲಿಕ್ಯಾಪ್ಟರ್ ಕೆಜಿಎಫ್ನಲ್ಲಿ ಇಳಿಯಲು ಬಿಡುವುದಿಲ್ಲ ಎಂದು ಕಾರ್ಮಿಕರು ಪಟ್ಟು ಹಿಡಿದಿದ್ದು ಸ್ವತಃ ಪ್ರಧಾನಮಂತ್ರಿಯವರ ಮಧ್ಯಸ್ಥಿಕೆಯಿಂದಾಗಿ ಎಲ್ಲಾ ಕಾರ್ಮಿಕರಿಗೂ ರೂ. 500 ದೊರೆಯಿತು.

ಹಾಗೆ ಆ ಸಮಯದಲ್ಲಿ ನಡೆದ ವೇತನ ಪರಿಷ್ಕರಣದ ಒಪ್ಪಂದದಿಂದಾಗಿ ಕಾರ್ಮಿಕರಿಗೆ ಹಲವು ಸೌಲಭ್ಯಗಳು ದೊರೆತವು. ಮುಖ್ಯವಾಗಿ ರಜಾಪ್ರಯಾಣ ರಿಯಾಯಿತಿ(ಎಲ್ಟಿಸಿ) ಹೆಚ್ಚುವರಿ ದುಡಿಮೆಗೆ ವೇತನ(ಇನ್ಸೆಂಟಿವ್), ಶೇ.15ರಷ್ಟು ಭೂಮಿಯ ಒಳಗೆ ಕೆಲಸ ಮಾಡುವ ಕಾರ್ಮಿಕರಿಗೆ ಅಂಡರ್ಗ್ರೌಂಡ್ ಅಲೋಯೆನ್ಸ್, ತಟ್ಟಿಗಳ ಮನೆಗಳ ಬದಲು ಕಾಂಕ್ರೀಟ್ ಮನೆಗಳು, ಹಿರಿಯ ಮತ್ತು ಕಿರಿಯ ಕಾರ್ಮಿಕರ ನಡುವೆ ಇದ್ದ ಅಪಘಾತ ಸಮಯದ ವೇತನದಲ್ಲಿನ ತಾರತಮ್ಯ ತೆಗೆದುಹಾಕಲಾಯಿತು. ಹೀಗೆ ಕಾರ್ಮಿಕರ ಸಂಘಟನೆ ಭವಿಷ್ಯದಲ್ಲಿ ಅವರ ಸರ್ವಾಂಗೀಣ ಅಭಿವೃದ್ದಿಗೆ ಕಾರಣವಾಯಿತಲ್ಲದೆ ಮುಂದೆ ಸುಮಾರು 3,500 ಮಂದಿಗೆ ಹೊಸದಾಗಿ ಉದ್ಯೋಗವನ್ನು ಕಲ್ಪಿಸಲಾಯಿತು.

ಬೆಂಗಳೂರು ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಹೋರಾಟ (1980)

ಸ್ವತಂತ್ರ ಭಾರತದ ಎರಡನೆಯ ಪಂಚವಾರ್ಷಿಕ ಯೋಜನೆಯ ವೇಳೆಗೆ (1956) ಸಾರ್ವಜನಿಕ ವಲಯ ರೂಪ ತಾಳಿದ್ದು, ಬೆಂಗಳೂರು ಸಾರ್ವಜನಿಕ ವಲಯದ ಉದ್ದಿಮೆಗಳ ಒಂದು ಪ್ರಮುಖ ಕೇಂದ್ರವಾಗಿ ಮೂಡಿಬಂದಿತು. ಹಾಗೇ ಇಲ್ಲಿನ ಸಾರ್ವಜನಿಕ ವಲಯದ ಉದ್ದಿಮೆಗಳು ನಗರದ, ರಾಜ್ಯದ ಸಾಮಾಜಿಕ‑ಆರ್ಥಿಕ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. 26‑12‑1980ರಿಂದ 12‑3‑1981ರವರೆಗೆ ಹಾಗೂ 6‑5‑1981ರಿಂದ ಸುಮಾರು 28 ದಿನಗಳ ಕಾಲ ನಡೆದ ಸಾರ್ವಜನಿಕ ಉದ್ದಿಮೆಗಳ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರ ಧೀರ ಹೋರಾಟ ಹಾಗೂ ಅದು ಆ ಸಮಯದಲ್ಲಿ ರಾಜ್ಯದ ರಾಜಕೀಯ ಬದಲಾವಣೆಯಲ್ಲಿ ವಹಿಸಿದ ಪಾತ್ರ ಐತಿಹಾಸಿಕವಾದದ್ದು. ಜೊತೆಗೆ, ಈ ಧೀರೋದಾತ್ತ ಹೋರಾಟ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಆಂದೋಲನದ ದೌರ್ಬಲ್ಯಗಳನ್ನು, ಆಗಿನ ಮುಖಂಡತ್ವದ ಸಮಯಸಾಧಕತನ ವನ್ನು ಎತ್ತಿತೋರಿಸಿತು ಎಂಬುದನ್ನು ನಾವು ಗಮನಿಸಬೇಕು.

ಕಾರ್ಮಿಕರ ಈ ಐತಿಹಾಸಿಕ ಮುಷ್ಕರ ಆರಂಭಗೊಂಡಿದ್ದು ಪ್ರಮುಖ ಸಾರ್ವಜನಿಕ ಉದ್ದಿಮೆಯಾಗಿದ್ದ ಬಿಹೆಚ್ಇಎಲ್ನಲ್ಲಿ, ಅದು ಅಖಿಲ ಭಾರತ ಮಟ್ಟದಲ್ಲಿ ನೀಡುತ್ತಿದ್ದ ವೇತನ ಮಟ್ಟಕ್ಕೆ ಸರಿ ಸಮಾನವಾದ ವೇತನವನ್ನು ಪಡೆಯುವುದಕ್ಕೆಂದು ನಾವು ತಿಳಿಯಬೇಕು. 1977ರಲ್ಲೇ ದೇಶಾದ್ಯಂತವಿದ್ದ ಸಾರ್ವಜನಿಕ ವಲಯದ ಕಾರ್ಮಿಕರ ವೇತನ ಪರಿಷ್ಕರಣೆಯಾಗಬೇಕಿತ್ತು. 1975ರಲ್ಲಿ ತುರ್ತುಪರಿಸ್ಥಿತಿಯನ್ನು ಹೇರುವ ಮೂಲಕ ಶ್ರೀಮತಿ ಇಂದಿರಾಗಾಂಧಿ ನೇತ್ವತ್ವದ ಕೇಂದ್ರ ಸರ್ಕಾರ ಅದನ್ನು ತಡೆಹಿಡಿದಿತ್ತು. ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಜನತಾಪಾರ್ಟಿ ಸರ್ಕಾರವು ಈ ದಿಸೆಯಲ್ಲಿ ಕ್ರಮ ಕೈಗೊಳ್ಳದೆ ಸಾರ್ವಜನಿಕ ವಲಯದ ಕಾರ್ಮಿಕರು ಹೆಚ್ಚು ಸಂಬಳ ವೇತನ ಪಡೆಯುತ್ತಿದ್ದು, ವೇತನ ಹೆಚ್ಚಳದ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿತು.

ಜೊತೆಗೆ ಈ ಕುರಿತು ‘ಭೂತಲಿಂಗಂ ಸಮಿತಿ’(1977)ಯನ್ನು ನೇಮಿಸಿತಲ್ಲದೆ ಸಮಿತಿ ವರದಿ ನೀಡುವವರೆಗೆ ಯಾವುದೇ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ವೇತನ ಮಾತುಕತೆ ನಡೆಯಬಾರದೆಂದು ‘ಬ್ಯೂರೋ ಆಫ್ ಪಬ್ಲಿಕ್ ಎಂಟರ್ಪ್ರೈಸಸ್’ (ಬಿ.ಪಿ.ಇ) ಮೂಲಕ ಆದೇಶ ಹೊರಡಿಸಿತು. ಇದರಿಂದ ಕುಪಿತಗೊಂಡ ಕಾರ್ಮಿಕ ವರ್ಗದಿಂದ ದೇಶಾದ್ಯಂತ ಈ ‘ಬಿ.ಪಿ.ಇ ನಿರ್ದೇಶನಗಳು’ ಮತ್ತು ಭೂತಲಿಂಗಂ ಸಮಿತಿಗೆ ವ್ಯಾಪಕ ವಿರೋಧ ವ್ಯಕ್ತವಾಯಿತು.

1978‑ಜನವರಿಯಲ್ಲಿ ಈ ಸಂಬಂಧ ಒಂದು ದಿನದ ಸಾಂಕೇತಿಕ ಮುಷ್ಕರ ನಡೆಯಿತು. ನಂತರ ಕೇಂದ್ರ ಸರ್ಕಾರ ವೇತನ ಮಾತುಕತೆಗಳು ನಡೆಯಬಹುದು ಎಂದಿತಾದರೂ ಕನಿಷ್ಟ ವೇತನ ಹೆಚ್ಚಿಸಬಾರದು, ತುಟ್ಟಿಭತ್ಯದ ಹೊಂದಾಣಿಕೆ ಅಂಶವನ್ನು ಹೆಚ್ಚಿಸಬಾರದೆಂಬ ಮಿತಿಯನ್ನು ಹೇರಿತು. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಬದಲಾಯಿಸಬೇಕೆಂದು ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಮಿಕರು ಅಖಿಲ ಭಾರತ ಮಟ್ಟದ ಹೋರಾಟದ ಅಗತ್ಯವನ್ನು ಮನಗಂಡು 15‑5‑1978ರಂದು ದೆಹಲಿಯಲ್ಲಿ ಕಾರ್ಮಿಕ ಸಂಘಗಳ ಸಭೆ ನಡೆಸಿದರು.

ಈ ಮಧ್ಯೆ ಕೇಂದ್ರ ಸರ್ಕಾರವು ವಿವಿಧ ಘಟಕಗಳಲ್ಲಿ ಸ್ವತಂತ್ರವಾಗಿ ಚೌಕಾಶಿ ನಡೆದಲ್ಲಿ ತಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿತು. ಇದೇ ಹಿನ್ನೆಲೆಯಲ್ಲಿ ಬಿ.ಹೆಚ್.ಇ.ಎಲ್.ನಲ್ಲಿ ಜನವರಿ 8-9-1980ರಂದು ಮಾತುಕತೆಗಳು ನಡೆದ ಪರಿಣಾಮ ಕನಿಷ್ಠ ವೇತನವನ್ನು 500ರೂ. ಮಾಡುವ ಒಪ್ಪಂದಕ್ಕೆ ಬರಲಾಯಿತು. ಬೆಂಗಳೂರಿನ ಇತರೆ ಸಾರ್ವಜನಿಕ ವಲಯದ ಸಂಘಗಳು ಮಾಡಿಕೊಂಡ 1978ರ ಒಪ್ಪಂದದಲ್ಲಿ 400 ರೂ. ಕನಿಷ್ಠ ವೇತನವಿದ್ದಿತು. ಜೊತೆಗೆ ಆ ಒಪ್ಪಂದದಲ್ಲಿ ಬೇರೆ ಸಾರ್ವಜನಿಕ ವಲಯದ ಉದ್ದಿಮೆಯಲ್ಲಿ ವೇತನ ಹೆಚ್ಚಳವಾದರೆ ಬೆಂಗಳೂರಿನಲ್ಲೂ ಅದನ್ನು ಅನ್ವಯಿಸಬೇಕೆನ್ನುವ ಒಂದು ಅಂಶವು ಇತ್ತು. ಬಿ.ಇ.ಎಲ್. ಕಾರ್ಖಾನೆಯ ಸಿಐಟಿಯು ಬೆಂಬಲಿಗಳು ಈ ಒಪ್ಪಂದದ ಸಂಪೂರ್ಣ ಮಾಹಿತಿಯನ್ನು 27‑7‑1980ರ ಸುತ್ತೋಲೆ ಮೂಲಕ ಕಾರ್ಮಿಕರ ಮುಂದಿಟ್ಟಿತಲ್ಲದೆ ರೂ.78ರ ವ್ಯತ್ಯಾಸ ಇರುವುದನ್ನು ಕೊಡಬೇಕೆಂದು ಒತ್ತಾಯವನ್ನು ಮುಂದಿಟ್ಟಿತು.

ಕಾರ್ಮಿಕರಿಂದ ಇದಕ್ಕೆ ವ್ಯಕ್ತವಾದ ಬೆಂಬಲದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕ ಸಂಘಟನೆಗಳ ‘ಜಂಟಿ ಕ್ರಿಯಾ ರಂಗ’  ಬಿ.ಹೆಚ್.ಇ.ಎಲ್.ನೊಡನೆ ಸಮಾನ ವೇತನದ ಬೇಡಿಕೆಯನ್ನು ಮುಂದಿಟ್ಟಿತು. ಹಾಗೂ ಅದು ಕೇಳಿದ ವ್ಯತ್ಯಾಸ ರೂ.35 ಮಾತ್ರ. ಆದರೆ ಆಡಳಿತ ವರ್ಗಗಳು ಇದನ್ನು ನೀಡಲೂ ನಿರಾಕರಿಸಿದ್ದು 26‑12‑1980ರಿಂದ ಐತಿಹಾಸಿಕ ಕಾರ್ಮಿಕರ ಮುಷ್ಕರ ಆರಂಭವಾಯಿತು. 6‑1‑1981ರಂದು ಬೆಂಗಳೂರಿನಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳು ಸೇರಿ ಒಂದು ಸೌಹಾರ್ದ ಸಮಿತಿಯನ್ನು ರಚಿಸಿಕೊಂಡಿದ್ದು, 21‑1‑1981ರಂದು ಬೆಂಗಳೂರು ಬಂದ್ ನಡೆಸಿತು. ಸರ್ಕಾರ ಅಂದು 3 ಜೀವಗಳ ಬಲಿಯನ್ನು ತೆಗೆದುಕೊಂಡಿತು.

ಆದರೂ ಹೋರಾಟ ನಿಲ್ಲಲಿಲ್ಲ. ಸೌಹಾರ್ದ ಸಭೆಗಳು, ಪಿಕೆಟಿಂಗ್ಗಳು ಮುಂದು ವರೆದವು. 11‑3‑1981ರಂದು ಬೆಂಗಳೂರಿನ ಸಾರ್ವಜನಿಕ ವಲಯದ ಕಾರ್ಮಿಕರಿಗೆ ಬೆಂಬಲವಾಗಿ ಅಖಿಲ ಭಾರತ ಮುಷ್ಕರವು ನಡೆಯಿತು. ಜೆಎಎಫ್ 12‑1‑1981ರಂದು ಮುಷ್ಕರವನ್ನು ಹಿಂತೆಗೆದುಕೊಂಡಿತಾದರೂ ಕಾರ್ಮಿಕರ ಅಸಮಾಧಾನ ಮುಂದುವರೆಯಿತು. ಮುಂದೆ 6‑5‑1981ರಂದು ಬೆಂಗಳೂರಿನ ಸಾರ್ವಜನಿಕ ವಲಯದ ಉದ್ದಿಮೆಗಳ ಆಡಳಿತ ವರ್ಗಗಳು ಹಿಂಸಾಚಾರದ ನೆಪವೊಡ್ಡಿ ಲಾಕ್ಔಟ್ ಘೋಷಿಸಿದವು. ಇದರಿಂದ ಪುನಃ ಕಾರ್ಮಿಕ ಮುಷ್ಕರ 28 ದಿನಗಳ ಕಾಲ ಮುಂದುವರೆಯಿತು. ಕೊನೆಗೂ ಆಡಳಿತ ವರ್ಗಗಳು ಕನಿಷ್ಠ ವೇತನವನ್ನು 500 ರೂ.ಗೇರಿಸುವ ಒಪ್ಪಂದದೊಂದಿಗೆ ಲಾಕ್ಔಟ್ ತೆರವಾಯಿತು. ಈ ಮುಷ್ಕರದಿಂದಾಗಿ ಮುಂದೆ ಬಿ.ಇ.ಎಲ್.ನಲ್ಲಿ ಕಾರ್ಮಿಕ ಚಳವಳಿಯಲ್ಲಿ ಒಂದು ಹೊಸ ಅಧ್ಯಾಯವೇ ಆರಂಭವಾಯಿತು. ಅದುವರೆಗೆ ಬಿ.ಇ.ಎಲ್. ಆಡಳಿತ ವರ್ಗ ಮಾತುಕತೆಗೆ ಅರ್ಹವೆನಿಸುವ ಸಂಘವನ್ನು ಯಾವುದೇ ಮಾರ್ಗಸೂಚಿಗಳನ್ನು ಇಟ್ಟುಕೊಳ್ಳದೇ ತನಗೆ ಬೇಕಾದ ರೀತಿಯಲ್ಲಿ ಆಹ್ವಾನಿಸುತ್ತಿತ್ತು. ಕಾರ್ಮಿಕರು ಇದನ್ನು ಒಪ್ಪದೆ ಗುಪ್ತ ಮತದಾನದಿಂದ ಆರಿಸಬೇಕೆಂದು ಬೇಡಿಕೆಯನ್ನಿತ್ತು ಅದು ತಿರಸ್ಕಾರಗೊಂಡಾಗ ಆಮರಣಾಂತ ಉಪವಾಸ ಸತ್ಯಾಗ್ರಹಗಳನ್ನು ಕೈಗೊಂಡರು(1987).

ಕೊನೆಗೆ ಕೇಂದ್ರ ಕಾರ್ಮಿಕ ಮಂತ್ರಿಗಳು ಹಾಗೂ ಕೇಂದ್ರ ಲೇಬರ್ ಕಮಿಷನರ್ ಅವರ ಮದ್ಯಸ್ಥಿಕೆಯಿಂದ ಗುಪ್ತ ಮತದಾನದಿಂದ ಆಯ್ಕೆಯಾದ ಸಂಘವನ್ನು ಮಾತುಕತೆಗೆ ಆಹ್ವಾನಿಸಬೇಕೆನ್ನುವ ಪದ್ಧತಿ ಆಚರಣೆಗೆ ಬಂದಿತು. 1986‑87ರಲ್ಲಿ ಬಿ.ಇ.ಎಲ್.ನ್ನು 3 ಪ್ರತ್ಯೇಕ ಘಟಕಗಳಾಗಿ ಒಡೆಯುವ ಯೋಜನೆಯನ್ನು ಕೈಬಿಡುವಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದು. ಹಾಗೇ ಅವರ 1995ರ ವೇತನ ಒಪ್ಪಂದದಲ್ಲಿ ಅಭೂತಪೂರ್ವ ಹೆಚ್ಚಳವನ್ನು ಪಡೆದರಲ್ಲದೆ ಇತರೆ ಸೌಲಭ್ಯಗಳನ್ನು ಹೊಂದಿದರು. ಮುಂದೆ ಬೆಂಗಳೂರಿನ ಇತರೆ ಸಾರ್ವಜನಿಕ ಉದ್ದಿಮೆಗಳಲ್ಲೂ ಇವುಗಳನ್ನು ಅಳವಡಿಸಿಕೊಳ್ಳಲಾಯಿತು.  ಬಿ.ಹೆಚ್.ಇ.ಎಲ್. ಕಾರ್ಮಿಕರು ಇತ್ತೀಚೆಗೆ ಶೇ.25 ಮನೆ ಬಾಡಿಗೆ ಭತ್ಯೆ ಪಡೆದಿದ್ದು ಇದು ಬಹುದೊಡ್ಡ ಸಾಧನೆಯಾಗಿದೆ. ಪ್ರಸ್ತುತವೂ ಬೆಂಗಳೂರು ಸಾರ್ವಜನಿಕ ವಲಯದ ಉದ್ದಿಮೆಗಳ ಒಂದು ಪ್ರಮುಖ ಕೇಂದ್ರವಾಗಿದ್ದು, ಇಲ್ಲಿ ಸಾರ್ವಜನಿಕ ವಲಯ ಕಾರ್ಮಿಕ ಸಂಘಗಳ ಸಮಿತಿಯ(ಸಿ.ಪಿ.ಎಸ್.ಟಿ.ಯು 1981) ಚಟುವಟಿಕೆಗಳು ತಪ್ಪದೆ ನಡೆಯುತ್ತವೆ. ಇದರಲ್ಲಿ ಬೆಂಗಳೂರಿನ ಜೆ.ಎ.ಎಫ್. ಸಕ್ರಿಯ ಪಾತ್ರ ವಹಿಸುತ್ತದೆ. ಅದರ ಕರೆಗನುಗುಣ ವಾಗಿಯೇ ಬೆಂಗಳೂರಿನಲ್ಲಿ ಕಾರ್ಮಿಕರನ್ನು ಉತ್ತೇಜಿಸಲಾಗುತ್ತದೆ.

ಕರ್ನಾಟಕ ರಾಜ್ಯ ಪ್ಲಾಂಟೇಷನ್ ಕಾರ್ಮಿಕರ ಚಳವಳಿ ಮತ್ತು ಸಂಘಟನೆ

ಭಾರತ ಸ್ವಾತಂತ್ರ್ಯವಾದ ನಂತರ ಕರ್ನಾಟಕದಲ್ಲಿದ್ದ ಹೆಚ್ಚಿನ ಆಂಗ್ಲ ಪ್ಲಾಂಟರುಗಳು ತಮ್ಮ ತಾಯ್ನಡು ಇಂಗ್ಲೆಂಡಿಗೆ ಮರಳಿದ್ದರು. ಅವರ ಸ್ಥಾನವನ್ನು ಸ್ವದೇಶಿ ಪ್ಲಾಂಟರುಗಳು ಆಕ್ರಮಿಸಿದರು. ಆದರೆ ಪ್ಲಾಂಟೇಷನ್ಗಳ ಒಡೆತನದ ಬದಲಾವಣೆಯಾದರೂ ತೋಟ‑ ಕಾರ್ಮಿಕರ ಜೀವನ ಮತ್ತು ಕೆಲಸದ ಸ್ಥಿತಿ‑ಗತಿಗಳಲ್ಲಿ ಯಾವ ಗಣನೀಯ ಬದಲಾವಣೆ ಗಳಿರದೇ ಕಾರ್ಮಿಕರ ಜೀವನ ದುರ್ಬರವಾಗಿತ್ತು. ಹಾಗೇ ಹೆಚ್ಚಿನ ಪ್ಲಾಂಟೇಷನ್ ಕಾರ್ಮಿಕರು ಶತಮಾನಗಳಿಂದ ತುಳಿತ, ಸಮಾಜದ ಕ್ರೂರ ದಬ್ಬಾಳಿಕೆ ಹಾಗೂ ಆರ್ಥಿಕ ಶೋಷಣೆಗೆ ಒಳಗಾಗಿದ್ದಂತಹ ಸಮಾಜದ ಅತಿ ಕೆಳ ಜಾತಿಗೆ ಸೇರಿದವರಾಗಿದ್ದು ಅವರು ಮುಖ್ಯವಾಗಿ ಕೇರಳ, ತಮಿಳುನಾಡು ರಾಜ್ಯದಿಂದ ಬಂದವರಾಗಿದ್ದರು. ಆಗಿನ ಸಮಯದಲ್ಲಿ ಪ್ಲಾಂಟರುಗಳು ಕಾರ್ಮಿಕರ ರಕ್ತವನ್ನು ಹೀರಿ, ತೋಟಗಳನ್ನು ಅಭಿವೃದ್ದಿ ಮಾಡಿಕೊಂಡರೆಂಬುದು ನಂಬಲು ಕಷ್ಟವಾದರೂ ಸತ್ಯವಾದ ಸಂಗತಿ. ಒಂದು ರೀತಿಯಲ್ಲಿ ಗುಲಾಮಗಿರಿಯೇ ಆಚರಣೆಯಲ್ಲಿತ್ತು.

ಏಕೀಕರಣ ಪೂರ್ವದಲ್ಲಿ ಕರ್ನಾಟಕದ ಪ್ಲಾಂಟರುಗಳು ತಮ್ಮ ಕಾಫಿ, ಟೀ ತೋಟಗಳ ಕಾರ್ಮಿಕರನ್ನು ‘ಕಂಗಾಣಿ’ ಪದ್ಧತಿಯ ಮೂಲಕ ನೇಮಿಸಿಕೊಳ್ಳುತ್ತಿದ್ದರು. ಅಂದರೆ ತೋಟದ ಮೇಸ್ತ್ರಿಗಳ ಅಥವಾ ದಲ್ಲಾಳಿಗಳ ಮೂಲಕ ಕಾರ್ಮಿಕರನ್ನು ನೇಮಿಸಿಕೊಳ್ಳುತ್ತಿದ್ದು ಅದಕ್ಕಾಗಿ ದಲ್ಲಾಳಿಗಳು ಅಥವಾ ಮೇಸ್ತ್ರಿಗಳು ತಮ್ಮ ಸಂಬಳದ ಜೊತೆ ಕಾರ್ಮಿಕರನ್ನು ಸರಬರಾಜು ಮಾಡಿದ್ದಕ್ಕೆ ಕಮೀಷನ್ ಪಡೆಯುತ್ತಿದ್ದರು. ಜೊತೆಗೆ ಒಬ್ಬ ಕೆಲಸಗಾರನಿಗೆ ಒಂದು ರೂ.ನಂತೆ ‘ಭಕ್ಷೀಸು’ ಸಿಗುತ್ತಿತ್ತು. ಈ ಪದ್ಧತಿಯಲ್ಲಿ ಪ್ಲಾಂಟರ್ ಹಾಗೂ ಕಾರ್ಮಿಕರ ನಡುವೆ ನೇರ ಸಂಬಂಧ ಅಥವಾ ಸಂಪರ್ಕವಿರುತ್ತಿರಲಿಲ್ಲ. ಕಾರ್ಮಿಕರನ್ನು ಕರೆದು ತರುವ ಹಾಗೂ ಅವರಿಂದ ಹೇಗೆ ಬೇಕಾದರೂ ದುಡಿಸಿಕೊಳ್ಳುವ ಕೆಲಸ ಕಂಗಾಣಿಯದೇ ಆಗಿರುತ್ತಿತ್ತು. ಈ ಪದ್ಧತಿಯನ್ನು ತೆಗೆದುಹಾಕುವ ಸಲುವಾಗಿ 1951ರಲ್ಲಿಯೇ ಭಾರತ ಸರ್ಕಾರ ಕಾನೂನು ಮಾಡಿತ್ತಾದರೂ ಹಲವು ವರ್ಷಗಳವರೆಗೆ ಅದು ರಾಜ್ಯದಲ್ಲಿ ಕಾರ್ಯಗತವಾಗಲಿಲ್ಲ. ಹಾಗೇ ಕಾರ್ಮಿಕರಿಗೆ ಅಂದಿನ ದಿನಗಳಲ್ಲಿ ನೀಡುತ್ತಿದ್ದುದು ಅತೀ ಕಡಿಮೆ ಸಂಬಳ. ಕಾಫಿ ತೋಟಗಳಿದ್ದ ಮಲೆನಾಡಿನಲ್ಲಿ ಮಲೇರಿಯ ಜ್ವರದ ತೀವ್ರತೆ ಹೆಚ್ತಿದ್ದು, ಅದರಿಂದ ಸತ್ತ ತೋಟ ಕಾರ್ಮಿಕರ ಲೆಕ್ಕವಿಲ್ಲ. ಸಾರಿಗೆ ಸಂಪರ್ಕಗಳೇ ಇಲ್ಲದಂತಹ ಸ್ಥಿತಿ. ಓದು-ಬರಹ ಕಲಿಯುವ ಅವಕಾಶಗಳು ಕಾರ್ಮಿಕರಿಗಾಗಲಿ ಅವರ ಮಕ್ಕಳಿಗಾಗಲಿ ಇರಲೇ ಇಲ್ಲ. ಮನರಂಜನಾ ಸಾಧನಗಳೂ ಇರಲಿಲ್ಲ. ಬೋನಸ್ ಅಥವಾ ಗ್ರಾಚ್ಯುಟಿಯಂತಹ ಸೌಲಭ್ಯ ಗಳು ಕನಸಿನ ಮಾತಾಗಿದ್ದವು. ಒಂದು ರೀತಿಯಲ್ಲಿ ಕಾರ್ಮಿಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದ್ದುದಲ್ಲದೆ, ಸಣ್ಣಪುಟ್ಟ ತಪ್ಪುಗಳಿಗಾಗಿ ಹೀನಾಯವಾಗಿ ಥಳಿಸಲಾಗುತ್ತಿತ್ತು.

ಇಂತಹ ಸನ್ನಿವೇಶದಲ್ಲಿ ಕೆಂಪು ಬಾವುಟದಡಿಯಲ್ಲಿ (ಸಿ.ಪಿ.ಐ.) ತೋಟ ಕಾರ್ಮಿಕರ ಸಂಘಟನೆ ಹೆಚ್ಚು ಕಾಫಿ ತೋಟಗಳಿದ್ದ ಕೊಡಗಿನಲ್ಲಿ 1946ರಲ್ಲಿ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ 1956ರಲ್ಲಿ ಆರಂಭವಾಯಿತು. ಆಗ ಹಾಸನದ ಕಾಡಮನೆ ಟೀ ತೋಟ ಕರ್ನಾಟಕದ ಪ್ಲಾಂಟೇಷನ್ಗಳಲ್ಲೇ ಅತಿ ದೊಡ್ಡ ತೋಟವಾಗಿದ್ದು, ಅಲ್ಲಿ ಸುಮಾರು 2,000 ಕಾರ್ಮಿಕರು ದುಡಿಯುತ್ತಿದ್ದರು. ಅಲ್ಲಿನ ಕೆಲವು ತಮಿಳು ಕಾರ್ಮಿಕರಿಗೆ ತಮ್ಮದೇ ಆದ ಸಂಘವನ್ನು ಹೊಂದಬೇಕೆನಿಸಿದ್ದು, ಮೈಸೂರು ವಿಧಾನ ಸಭೆಯಲ್ಲಿ ಕಮ್ಯುನಿಸ್ಟ್ ಶಾಸಕರಾಗಿದ್ದ ಕೋಲಾರದ ಕೆ. ಎಸ್. ವಾಸನ್ರ ಸಲಹೆಯನ್ನು ಪಡೆದರು. ಆ ಚಿಂತನೆಯ ಫಲವಾಗಿಯೇ ‘ಕರ್ನಾಟಕ ಪ್ರೊವಿನ್ಷಿಯಲ್  ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್’ ಅಸ್ತಿತ್ವಕ್ಕೆ ಬಂದಿದ್ದು, ಕೆ.ಎಸ್.ವಾಸನ್ ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಈ ಕಾರ್ಮಿಕ ಸಂಘವು 17‑5‑1956ರಂದು ರಿಜಿಸ್ಟರ್ ಆಯಿತು. 1951ರಷ್ಟು ಹಿಂದೆಯೇ ಭಾರತ ಸರ್ಕಾರ ‘ಪ್ಲಾಂಟೇಷನ್ ಲೇಬರ್ ಆ್ಯಕ್ಟ್’ ಎಂಬ ಕಾಯಿದೆಯನ್ನು ಜಾರಿಗೆ ತಂದಿದ್ದು ಅದರಂತೆ ರಾಜ್ಯ ಸರ್ಕಾರಗಳು ನಿಯಮಗಳನ್ನು ರಚಿಸಬೇಕಿದ್ದಿತು. ರಾಜ್ಯ ಸರ್ಕಾರ ನಿಯಮಗಳನ್ನು ರಚಿಸಿದರೆ ಮಾತ್ರ ಕಾಯಿದೆಯ ಪ್ರಕಾರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಮಂಡಿಸಬಹುದಾಗಿತ್ತು. 1956ರವರೆಗೆ ನಮ್ಮ ರಾಜ್ಯ ಸರ್ಕಾರ ಆ ಬಗ್ಗೆ ಯೋಚಿಸಲೇ ಇಲ್ಲ. ಕೇಂದ್ರ ಸರ್ಕಾರ ಕಾಯಿದೆ ಜಾರಿ ಮಾಡಿ 5 ವರ್ಷಗಳಾಗಿದ್ದರೂ ಮೈಸೂರು ರಾಜ್ಯ ಸರ್ಕಾರ ನಿಯಮಗಳನ್ನು ರಚಿಸದೇ ಇದ್ದುದು ವಿಪರ್ಯಾಸವೇ ಆಗಿದೆ. ಕೆಂಬಾವುಟದ (ಸಿಪಿಎಂ) ಪ್ರೊವಿನ್ಷಿಯಲ್ ಪ್ಲಾಂಟೇಷನ್ ವರ್ಕ್ರ್ಸ್ ಯೂನಿಯನ್ ಅಸ್ತಿತ್ವಕ್ಕೆ ಬಂದ ಅಲ್ಪ ಕಾಲದಲ್ಲೇ ಮೈಸೂರು ಸರ್ಕಾರ ನಿಯಮಗಳನ್ನು ರಚಿಸಿದ್ದು ‘ಮೈಸೂರು ಪ್ಲಾಂಟೇಷನ್ ಲೇಬರ್ ರೂಲ್ಸ್‑1956’ ಜಾರಿಗೆ ಬಂದಿತು. ಇದು ನಾವು ಪ್ರಮುಖವಾಗಿ ಗಮನಿಸಬೇಕಾದಂತಹ ಅಂಶ.

ನಂತರ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪ್ರಖ್ಯಾತ ಕಾರೈಕುರ್ಚಿಲ್ ಎಸ್ಟೇಟ್ ಕಾರ್ಮಿಕರ ಹೋರಾಟ (1956) ಒಂದು ತಿಂಗಳಿಗಿಂತಲೂ ಹೆಚ್ಚು ಕಾಲ ನಡೆದಿದ್ದು, ಇದು ಒಂದು ಚಾರಿತ್ರಿಕ ಮುಷ್ಕರವಾಗಿದೆ. ಆ ಸಂದರ್ಭದಲ್ಲಿ ತಮ್ಮ ನ್ಯಾಯಬದ್ಧ ಹಕ್ಕಿಗಾಗಿ ಹಾಗೂ ಹೆಚ್ಚಿನ ಕೂಲಿಗಾಗಿ ಹೋರಾಡುತ್ತಿದ್ದ ತೋಟ ಕಾರ್ಮಿಕರಿಗೂ ಪ್ಲಾಂಟರ್ ಹಿತರಕ್ಷಣೆ ಮಾಡಲು ಬಂದಿದ್ದ ಪೊಲೀಸರ ನಡುವೆ ನಿರಂತರ ಘರ್ಷಣೆಗಳಾಗುತ್ತಿದ್ದು, ಪೊಲೀಸರು ಕಾರ್ಮಿಕರನ್ನು ಕ್ರೂರವಾಗಿ ಶಿಕ್ಷಿಸಿದರು. ಮುಂದೆ ಕಾರ್ಮಿಕರಿಗೆ ಜಯವಾಗಿ ಕೂಲಿಯ ಹೆಚ್ಚಳವಾಯಿತಲ್ಲದೆ, ಈ ಹೋರಾಟ ರಾಜ್ಯದ ಎಲ್ಲಾ ತೋಟ ಕಾರ್ಮಿಕರ ನಡುವೆ ಸಂಚಲನ ಉಂಟುಮಾಡಿದ್ದು ಕರ್ನಾಟಕ ಪ್ರೊವಿನ್ಷಿಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ (ಕೆ.ಪಿ.ಪಿ.ಡಬ್ಲ್ಯು.ಯು) ಸದಸ್ಯತ್ವದಲ್ಲೂ ಏರಿಕೆ ಕಂಡಿತು. ಹಾಗೇ ಕಾರೈಕುರ್ಚಿಲ್ ಹೋರಾಟ ನಡೆಯುವವರೆಗೆ ಕರ್ನಾಟಕ ರಾಜ್ಯದಲ್ಲಿ ತೋಟ ಕೈಗಾರಿಕೆಯಲ್ಲಿ ಕಾರ್ಮಿಕರ ಕೂಲಿಯ ವಿಚಾರದಲ್ಲಾಗಲಿ ಅಥವಾ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ಲಭ್ಯವಾಗಬೇಕಿದ್ದ ಯಾವುದೇ ಸೌಲಭ್ಯದ ವಿಷಯದಲ್ಲಿ ಕೈಗಾರಿಕಾವಾರು ಮಾತುಕತೆಯಾಗಲಿ, ಒಪ್ಪಂದವಾಗಲಿ ಆಗುತ್ತಿರಲಿಲ್ಲ ಎಂಬುದನ್ನು ನಾವು ಗಮನಿಸುವಂಥದ್ದು.

1956ರ ಏಕೀಕರಣ ಸಂದರ್ಭದಲ್ಲಿಯೇ ಪ್ಲಾಂಟರುಗಳು ‘ಮೈಸೂರು ಸ್ಟೇಟ್ ಪ್ಲಾಂಟರ್ಸ್ ಅಸೋಸಿಯೇಷನ್’ (ಎಂ.ಎಸ್.ಪಿ.ಎ) ಎಂಬ ಒಂದು ರಾಜ್ಯಮಟ್ಟದ ಸಂಘವನ್ನು ರಚಿಸಿಕೊಂಡಿದ್ದು, ಅದರ ಕೇಂದ್ರ ಕಚೇರಿ ಚಿಕ್ಕಮಗಳೂರಿನಲ್ಲಿತ್ತು. ಕರ್ನಾಟಕ ಪ್ರೊವಿನ್ಷಿಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ನಿನ ರಿಜಿಸ್ಟರ್ಡ್ ಕಚೇರಿಯೂ ಚಿಕ್ಕಮಗಳೂರಿನಲ್ಲಿ ಸ್ಥಾಪಿತವಾಯಿತು. ಮುಂದೆ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯು ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳನ್ನು ಒಂದು ಪ್ಲಾಂಟೇಷನ್ ಡಿವಿಜನ್ ಎಂದು ಗುರುತಿಸಿ, ಕಚೇರಿಯನ್ನು ಚಿಕ್ಕಮಗಳೂರಿನಲ್ಲಿ ಸ್ಥಾಪಿಸಿ ಅದರ ಮುಖ್ಯಸ್ಥರನ್ನಾಗಿ ಅಸಿಸ್ಟೆಂಟ್ ಲೇಬರ್ ಕಮೀಷನರ್ನ್ನು ನೇಮಿಸಿತು.

ಕೆ.ಪಿ.ಪಿ.ಡಬ್ಲ್ಯು.ಯು. ಸ್ಥಾಪನೆಯ ನಂತರ ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ತೋಟ ಕಾರ್ಮಿಕರ ಹೋರಾಟ, ಚಳವಳಿಗಳು ಪ್ರತಿಯೊಂದು ತೋಟದಲ್ಲೂ ಅವಿರತವಾಗಿ ನಡೆದವು. ಆ ಕಾಲದಲ್ಲಿ ಪ್ಲಾಂಟರುಗಳಲ್ಲಿ ಕಾರ್ಮಿಕರೆಂದರೆ ಕೀಳುಮಟ್ಟದ ಮನುಷ್ಯರು ಎಂಬ ಭಾವನೆ ಮೇರೆ ಮೀರಿತ್ತು. ಕೆ.ಪಿ.ಪಿ.ಡಬ್ಲ್ಯು.ಯು.ನ ನೇತೃತ್ವದಲ್ಲಿ ಬೋನಸ್ಸಿಗಾಗಿ 1959ರಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ವ್ಯಾಪಕವಾದ ಚಳವಳಿ ನಡೆದಿದ್ದು 1962ರಲ್ಲಿ ಮೈಸೂರಿನ ಅಸಿಸ್ಟೆಂಟ್ ಲೇಬರ್ ಕಮಿಷನರ್ ಸಲಹೆಯ ಮೇರೆಗೆ ಒಂದು ಬೋನಸ್ ಒಪ್ಪಂದವಾಗಿ ತೋಟ ಕಾರ್ಮಿಕರಿಗೆ ಬೋನಸ್ ಸಿಗಲಾರಂಭಿಸಿತು. 1963ರ ಹೊತ್ತಿಗೆ ತೋಟ ಕಾರ್ಮಿಕರ ನಾಲ್ಕು ಸಂಘಗಳಿದ್ದು ಈ ನಾಲ್ಕು ಸಂಘಗಳು ಆ ಸಮಯದಲ್ಲಿ ತಮ್ಮನ್ನು ಸಕ್ರಿಯವಾಗಿ ಚಳವಳಿಯಲ್ಲಿ ತೊಡಗಿಸಿ ಕೊಂಡಿದ್ದವು. 1956ರಿಂದ ಅವಿರತವಾಗಿ ನಡೆಯುತ್ತಿದ್ದ ತೋಟ ಕಾರ್ಮಿಕರ ಚಳವಳಿ ವಿಶೇಷವಾಗಿ ಪ್ಲಾಂಟರುಗಳ ಮೇಲೆ ಪ್ರಭಾವ ಬೀರಿದ್ದು, ಕಾರ್ಮಿಕರ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಪ್ಲಾಂಟರುಗಳೇ ತೆರೆಮರೆಯಲ್ಲಿದ್ದು ಕೂಲಿ, ಬೋನಸ್ ಇತ್ಯಾದಿಗಳನ್ನು ಕೊಡಿಸುವ ತೋಟ ಕಾರ್ಮಿಕರ ಸಂಘಗಳನ್ನು ಹುಟ್ಟು ಹಾಕಿದರು. ಈ ಸಂಘಗಳ ಮೂಲಕ ಕೆ.ಪಿ.ಪಿ.ಡಬ್ಲ್ಯು.ಯು.ನ್ನು ಒಡೆಯುವ ಯತ್ನ ಮಾಡಿದರು. ಈ ಕೆಲಸಕ್ಕಾಗಿ ತಮಿಳು ಕಾರ್ಮಿಕರನ್ನು ವಿಶೇಷವಾಗಿ ಬಳಸಿಕೊಳ್ಳಲಾಯಿತು. ಮುಂದೆ 1964ರಲ್ಲಿ ಒಂದು ಕೈಗಾರಿಕಾವಾರು ಒಪ್ಪಂದವಾಗಿದ್ದು, ಆ ಪ್ರಕಾರ 7 ವರ್ಷ ಸೇವೆ ಸಲ್ಲಿಸಿದ ಕಾರ್ಮಿಕರು ಕೆಲಸಕ್ಕೆ ರಾಜೀನಾಮೆ ಕೊಟ್ಟು ತೋಟ ಬಿಟ್ಟು ಹೋಗುವುದಾದರೆ ಅವರಿಗೆ ಗ್ರಾಚ್ಯುಟಿ ನೀಡಬೇಕೆಂದಾಯಿತು. 1970ರ ಮೇನಲ್ಲಿ ಎಲ್ಲ ಕಾರ್ಮಿಕ ವರ್ಗವನ್ನು ಒಗ್ಗೂಡಿಸುವ ಸಲುವಾಗಿ ‘ಸಿಐಟಿಯು’ ಅಸ್ತಿತ್ವಕ್ಕೆ ಬಂದಿದ್ದು ಕೆ.ಪಿ.ಪಿ.ಡಬ್ಲ್ಯು.ಯು ಯೊಂದಿಗೆ ಸಂಯೋಜಿತವಾಯಿತು.

1972ರ ನವೆಂಬರ್ನಲ್ಲಿ ಡಾರ್ಜಿಲಿಂಗ್ನಲ್ಲಿ ‘ಅಖಿಲ ಭಾರತ ಪ್ಲಾಂಟೇಷನ್ ಕಾರ್ಮಿಕರ ಸಮ್ಮೇಳನ’ ನಡೆದಿದ್ದು, ಆ ಸಂದರ್ಭದಲ್ಲಿ ‘ಅಖಿಲ ಭಾರತ ಪ್ಲಾಂಟೇಷನ್ ಕಾರ್ಮಿಕರ ಫೆಡರೇಷನ್’ ಅಸ್ತಿತ್ವಕ್ಕೆ ಬಂದಿತು. ಕೆ.ಪಿ.ಪಿ.ಡಬ್ಲ್ಯು.ಯು.ನ ಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ. 1972ರಲ್ಲಿ ತೋಟ ಕಾರ್ಮಿಕರು ಕೂಲಿ ಹೆಚ್ಚಳಕ್ಕಾಗಿ ಹೋರಾಟ ನಡೆಸಿದ್ದು ಕಾರ್ಮಿಕ ಸಂಘದ ತೀರ್ಮಾನಕ್ಕೆ ವಿರುದ್ಧವಾಗಿ ಸಂಘದ ಉಪಾಧ್ಯಕ್ಷರು ಹಾಗೂ ಸಿಐಟಿಯು ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ 20‑9‑1972 ರಂದು ಕೈಗಾರಿಕಾವಾರು ಕೂಲಿ ಹೆಚ್ಚಳದ ಒಪ್ಪಂದಕ್ಕೆ ರುಜು ಹಾಕಿದರು. ಇದರಿಂದಾಗಿ ತೋಟದ ಕಾರ್ಮಿಕರ ಚಳವಳಿಗೆ ಮತ್ತು ಸಂಘಟಣೆಗೆ ತೀವ್ರ ಧಕ್ಕೆಯಾಯಿತು. 27‑12‑1973ರಂದು ತೋಟ ಕಾರ್ಮಿಕರು ಕೂಲಿಯನ್ನು ಪುನರ್ವಿಮರ್ಶೆ ಮಾಡಿ ಕೂಲಿ ಹೆಚ್ಚಿಸುವಂತೆಯೂ ಹಾಗೂ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟ ರಾಜ್ಯ ಪ್ಲಾಂಟೇಷನ್ ಇತಿಹಾಸದಲ್ಲಿ ಚಾರಿತ್ರಿಕವಾದಂತಹ ಮುಷ್ಕರ ಹಾಗೂ ಸಮಾವೇಶವನ್ನು ನಡೆಸಿದರು. ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಕಾಫಿ, ಟೀ ತೋಟಗಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ತೋಟಗಳ ಸುಮಾರು 48,000 ಕಾರ್ಮಿಕರು ಈ ಚಳವಳಿಯಲ್ಲಿ ಭಾಗವಹಿಸಿದ್ದರು. ಹಾಗೇ 28‑12‑1973 ಮತ್ತು 29‑12‑1973ರಂದು ಜಯಪುರದಲ್ಲಿ (ಚಿಕ್ಕಮಗಳೂರು) ಜಿಲ್ಲೆ ನಡೆದ ಸಮಾವೇಶದಲ್ಲಿ 422 ಪ್ರತಿನಿಧಿಗಳು ಭಾಗವಹಿಸಿದ್ದು, ಅಖಿಲ ಭಾರತ ಪ್ಲಾಂಟೇಷನ್ ಕಾರ್ಮಿಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯರಾಗಿದ್ದ ಮನೋರಂಜನ್ ರಾಯ್ ಸಮಾವೇಶದ ಮುಖ್ಯ ಅತಿಥಿಯಾಗಿದ್ದರು.

ಈ ಮುಷ್ಕರ 31‑12‑1974ರವರೆಗೆ ಇದ್ದ ಹಿಂದಿನ ಒಪ್ಪಂದವನ್ನು ಗಾಳಿಗೆ ತೂರಿತು. ಸರ್ಕಾರದೊಂದಿಗೆ ಹಲವು ಸುತ್ತು ಮಾತುಕತೆ ನಡೆದು 28‑6‑1974ರಂದು ಹೊಸ ಒಪ್ಪಂದವಾಗಿದ್ದು ಕೂಲಿ ಹೆಚ್ಚಳವಾಯಿತು. 25‑5‑74ರಿಂದ 31‑5‑1974ರವರೆಗೆ ತೋಟ ಕಾರ್ಮಿಕರು ಅಖಿಲ ಭಾರತ ಪ್ಲಾಂಟೇಷನ್ ಕಾರ್ಮಿಕರ ಫೆಡರೇಷನ್ನಿನ ಕರೆಯಂತೆ ಬೇಡಿಕೆಗಳ ವಾರವನ್ನಾಗಿ ಆಚರಿಸಿದ್ದು ಪ್ಲಾಂಟೇಷನ್ ಲೇಬರ್ ಹಕ್ಕಿನಲ್ಲಿರುವ ಎಲ್ಲಾ ಸೌಲಭ್ಯಗಳನ್ನು ತೋಟ ಕಾರ್ಮಿಕರಿಗೆ ನೀಡಬೇಕೆಂದು ಹಕ್ಕೊತ್ತಾಯ ಮಾಡಿ ಸಂಸತ್ತಿಗೆ ಅರ್ಪಿಸಬೇಕಾದ ಸಾಮೂಹಿಕ ಮನವಿಗೆ ಸಹಿ ಸಂಗ್ರಹ ಮಾಡಿದರು. 26‑8‑1974ರಂದು ಸಹಿ ಸಂಗ್ರಹ ಪಟ್ಟಿಯನ್ನು ಸಂಸತ್ತಿಗೆ ಅರ್ಪಿಸಲಾಯಿತು. ಕೇಂದ್ರದಲ್ಲಿದ್ದ ಇಂದಿರಾ ಗಾಂಧಿಯವರ ಸರ್ಕಾರ 6‑7‑1974ರಂದು ಕಾರ್ಮಿಕರ ಕೂಲಿ ಸಂಬಂಧ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿತು. ಅದರ ವಿರುದ್ಧವಾಗಿ ಕಾರ್ಮಿಕರ ಸಮಾವೇಶವೊಂದು ನವದೆಹಲಿಯಲ್ಲಿ 30‑8‑1974 ಹಾಗೂ 31‑8‑1974ರಂದು ನಡೆದವು. ಇದೇ ರೀತಿ ವಿರೋಧಿ ಪ್ರಾದೇಶಿಕ ಮಟ್ಟದ ಸಮಾವೇಶವೊಂದು ಚಿಕ್ಕಮಗಳೂರಿನಲ್ಲಿ 10‑11‑74 ಹಾಗೂ 11‑11‑74ರಂದು ನಡೆದವು. ಈ ಸಮಾವೇಶವನ್ನು ಜಂಟಿಯಾಗಿ ಸಿಐಟಿಯು ಜೊತೆ ಬ್ಯಾಂಕ್, ಜೀವವಿಮೆ, ಅಂಚೆ‑ತಂತಿ, ಪೌರ ಕಾರ್ಮಿಕರು, ರಾಜ್ಯ ಸರ್ಕಾರಿ ನೌಕರರು ಸಂಘಟಿಸಿದ್ದರು.

ಆ ಸಮಯದಲ್ಲಿ ನಡೆದಿದ್ದ ಚಾರಿತ್ರಿಕ ರೈಲ್ವೆ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸಿ ಕೆ.ಪಿ.ಪಿ.ಡಬ್ಲ್ಯು.ಯು.ನ ಸದಸ್ಯರು 15‑5‑74ರಂದು ಮುಷ್ಕರ ಹೂಡಿದ್ದರು. ಹೀಗೆ, ಈ ಸಂಘವು ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದರೊಂದಿಗೆ ಇತರ ನ್ಯಾಯಬದ್ಧ ಹೋರಾಟಗಳಿಗೆ ಬೆಂಬಲ ಕೊಡುವ, ಸರ್ಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ಕಾನೂನುಗಳ ವಿರುದ್ಧ ಹೋರಾಡುವ ಪ್ರವೃತ್ತಿಯನ್ನು ತೋಟ ಕಾರ್ಮಿಕರಲ್ಲಿ ಬೆಳೆಸಿದ್ದು ಗಮನಾರ್ಹ ಅಂಶವಾಗಿದೆ. ಚಿಕ್ಕಮಗಳೂರಿನ ಸಂಸ್ಥೆ ಟೀ ಪ್ಲಾಂಟೇಷನ್ನ 600 ಕಾರ್ಮಿಕರು ಕೆಲಸದಿಂದ ವಜಾ ಮಾಡಿದ್ದ 4 ಜನ ಕಾರ್ಮಿಕರನ್ನು ಪುನರ್ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ 60 ದಿನಗಳ ಮುಷ್ಕರ ನಡೆಸಿದರು. ಇದು ಆರ್ಥಿಕ ಬೇಡಿಕೆಗಾಗಿ ಮಾಡಿದ ಹೋರಾಟವಾಗಿರದೆ ವಿಕ್ಟಿಮೈಸೇಷನ್ ವಿರುದ್ಧ ಹಾಗೂ ಕೆಲಸದ ಭದ್ರತೆಗಾಗಿ ನಡೆಸಿದ ಹೋರಾಟವಾಗಿದ್ದು ಇದು ರಾಜ್ಯದ ಪ್ಲಾಂಟೇಷನ್ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ನಡೆದ ಅತ್ಯಂತ ದೀರ್ಘಕಾಲದ ಮುಷ್ಕರವಾಗಿದೆ.

ಆಂತರಿಕ ತುರ್ತು ಪರಿಸ್ಥಿತಿಯ ನಂತರ ಐಕ್ಯ ಹೋರಾಟಗಳನ್ನು ಸಂಘಟಿಸುವುದು ಕಷ್ಟವಾಯಿತು. 1980ರ ಕೊನೆಗೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ಎಲ್ಲಾ ಕಾರ್ಮಿಕ ಸಂಘಗಳೂ ಒಂದೇ ನಿಲುವನ್ನು ತಳೆಯಲು ಸಾಧ್ಯವಾಗಿದ್ದು, ಆ ಸಮಯ ಚಾಲ್ತಿಯಲ್ಲಿದ್ದ ಒಪ್ಪಂದವನ್ನು ರದ್ದು ಮಾಡಿ ವೇತನ ಹೆಚ್ಚಳದ ಬೇಡಿಕೆಗಳನ್ನಿಟ್ಟು ತೋಟ ಕಾರ್ಮಿಕರು 20‑1‑1981ರಂದು ಮುಷ್ಕರ ನಡೆಸಿದರು. ಮುಖ್ಯವಾಗಿ ಸಿಐಟಿಯು, ಐಎನ್ಟಿಯುಸಿ, ಎಐಟಿಯುಸಿ, ಎಡಿಎಂಕೆ ಮತ್ತು ಸ್ವತಂತ್ರ ಕಾರ್ಮಿಕ ಸಂಘಗಳು ಜಂಟಿಯಾಗಿ ಈ ಮುಷ್ಕರಕ್ಕೆ ಕರೆ ನೀಡಿದ್ದು ಹೆಚ್ಚಿನ ಪ್ರಮಾಣದ ಕಾರ್ಮಿಕರ ಐಕ್ಯತೆಯನ್ನು ಸಾಧಿಸಲು ಸಾಧ್ಯವಾಯಿತು. ಈ ಮುಷ್ಕರದಲ್ಲಿ 80,000 ಕಾರ್ಮಿಕರು ಭಾಗವಹಿಸಿದ್ದುದು ವಿಶೇಷವಾಗಿತ್ತು.

1982ರಲ್ಲೂ ತೋಟ ಕಾರ್ಮಿಕರ ಮುಷ್ಕರ, ಸಭೆಗಳು ವೇತನ ಹೆಚ್ಚಳಕ್ಕಾಗಿ ನಡೆದಿದ್ದು 11‑12‑1982ರಂದು ಒಂದು ತಾತ್ಕಾಲಿಕ ಒಪ್ಪಂದವಾಯಿತು. ಆದರೆ ಹೆಚ್ಚಿನ ತೋಟ ಕಾರ್ಮಿಕರಿಗೆ ಈ ಒಪ್ಪಂದ ಒಪ್ಪಿಗೆಯಾಗಲಿಲ್ಲ. ಇದರಿಂದ ಆಗಿದ್ದ ಗುಂಡೂರಾವ್ ಸರ್ಕಾರದ ವಿರುದ್ಧ ತೋಟ ಕಾರ್ಮಿಕರು ಆಕ್ರೋಶಗೊಂಡರಲ್ಲದೆ, ರಾಜ್ಯ ವಿಧಾನಸಭೆಗೆ 6‑1‑1983 ರಂದು ನಡೆದ ಚುನಾವಣೆಯಲ್ಲಿ ಕಾಂಗೈ ಸರ್ಕಾರವನ್ನು ಸೋಲಿಸಿದರು. ಸೋಮವಾರ ಪೇಟೆಯಲ್ಲಿ ಸ್ವತಃ ಗುಂಡೂರಾವ್ ಸೋತರು. ಈ ಚುನಾವಣೆಯಲ್ಲಿ ಕೆ.ಪಿ.ಪಿ.ಡಬ್ಲ್ಯು.ಯು. ಮಹತ್ವವಾದ ಪಾತ್ರವಹಿಸಿತು. 1983ರಲ್ಲಿ ರಾಜ್ಯದಲ್ಲಿ ಜನತಾ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಚಳವಳಿ ಗಳು ಮುಂದುವರೆದವು. ಪ್ಲಾಂಟೇಷನ್ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ‘ಒಪ್ಪಂದ ಕೂಲಿ’ಯ ಏರಿಕೆಗಾಗಿ 9‑4‑1984ರಿಂದ 18‑1‑1984 ರವರೆಗೆ ವಿವಿಧ ಸ್ವರೂಪದ ಚಳವಳಿ ಮತ್ತು 19‑1‑1984ರಿಂದ ಅನಿರ್ದಿಷ್ಟ ಕಾಲದ ಮುಷ್ಕರಕ್ಕೆ ಕರೆ ನೀಡಿತ್ತು.

19‑1‑1984ರಿಂದ ನಡೆದ ಐಕ್ಯ ಮುಷ್ಕರದಲ್ಲಿ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸುಮಾರು 75,000 ತೋಟ ಕಾರ್ಮಿಕರು ಭಾಗವಹಿಸಿದ್ದು ಒಂದು ದಾಖಲೆಯ ಮುಷ್ಕರವಾಗಿದೆ. ಈ ಮುಷ್ಕರದಿಂದಾಗಿ ತೋಟ ಕಾರ್ಮಿಕರಿಗೆ ತುಟ್ಟಿ ಭತ್ಯ ಸಿಕ್ಕಿತಲ್ಲದೆ ಕೂಲಿಯಲ್ಲಿ ಹೆಚ್ಚಳವಾಯಿತು.

1985ರ ನಂತರದಲ್ಲಿ ನಾವು ತೋಟ ಕಾರ್ಮಿಕರ ಚಳವಳಿಯಲ್ಲಿ ಅಂತಹ ಬಿರುಸುತನವನ್ನು ಕಾಣುವುದಿಲ್ಲ. ಹೀಗೆ ಏಕೀಕರಣದ ನಂತರ ತೋಟದ ಕಾರ್ಮಿಕರ ಚಳವಳಿ ಮತ್ತು ಸಂಘಟನೆಯಲ್ಲಿ ಕೆ.ಪಿ.ಪಿ.ಡಬ್ಲ್ಯು.ಯು.ನ ಪಾತ್ರ ಮಹತ್ವದ್ದಾಗಿದೆ. ಹಾಗೆ ತೋಟ ಕಾರ್ಮಿಕರ ಚಳವಳಿ ಹಾಗೂ ಸಂಘಟನೆಯನ್ನು ಕೈಗೊಳ್ಳುವ ಸಂಘಟಕರಿಗೆ ಕಾರ್ಯಕರ್ತರಿಗೆ ಅವಶ್ಯವಾಗಿ ಕಷ್ಟಸಹಿಷ್ಣುತೆ, ಎದೆಗಾರಿಕೆ, ತಾಳ್ಮೆ ಹಾಗೂ ಅಚಲವಾದ ಆಶಾವಾದಗಳ ಜೊತೆಗೆ ಸೇವಾ ಮನೋಭಾವ ಮತ್ತು ಜೀವನದಲ್ಲಿ ನಿರ್ದಿಷ್ಟ ಗುರಿ ಇರಲೇಬೇಕು ಎಂಬುದನ್ನು ಮನಗಾಣುತ್ತೇವೆ.

2000ರ ನಂತರ ಮಾರುಕಟ್ಟೆಯಲ್ಲಿ ಕಾಫಿಯ ಬೆಲೆ ತೀವ್ರ ಕುಸಿತ ಕಂಡಿದ್ದು, ಕಾಫಿ ಉದ್ದಿಮೆ ತತ್ತರಿಸಿ ಹೋಗಿದೆ. ಬೆಳೆಗಾರರು ಹಾಗೂ ಕಾರ್ಮಿಕರು ಇದರಿಂದಾಗಿ ತೀವ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಕಾರ್ಮಿಕರು ಕಡಿಮೆ ಸಂಬಳದಿಂದ ಹಾಗೂ ಕೆಲಸದ ಕೊರತೆಯಿಂದಾಗಿ ಜೀವನ ನಿರ್ವಹಣೆ ಹೇಗೆಂದು ಚಿಂತಿಸುವಂತಾಗಿದೆ. 2000ದ ಹೊತ್ತಿಗೆ ಕಾಫಿ ಉದ್ದಿಮೆಯ ವಿವಿಧ ಸ್ತರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. ಕಾಫಿಗೆ ಗರಿಷ್ಠ ಬೆಲೆಯಿದ್ದಾಗ ಕಾರ್ಮಿಕರಿಗೂ ಯಥೇಚ್ಛ ಕೆಲಸ ಲಭ್ಯವಿದ್ದು ಶ್ರಮಕ್ಕೆ ತಕ್ಕಂತೆ ಕೈತುಂಬ ಹಣ ಕಾರ್ಮಿಕರಿಗೂ ಸಿಗುತ್ತಿತ್ತು. ನಂತರದ ದಿನಗಳಲ್ಲಿ ವಾರದಲ್ಲಿ ಮೂರು ದಿನಗಳ ಕೂಲಿ ಸಿಗುವುದು ಕಷ್ಟವಾಗಿದೆ. ಹಿಂದೆ 100ರಿಂದ 150 ರೂ. ದಿನಗೂಲಿ ಪಡೆಯುತ್ತಿದ್ದ ಕಾರ್ಮಿಕ ಕೇವಲ 30ರಿಂದ 50 ರೂ.ಗಳಿಗೆ ಕೆಲಸ ಮಾಡ ಬೇಕಾಯಿತು. ಜೊತೆಗೆ ಕೂಲಿ ಕೆಲಸವನ್ನು ಅರಸುತ್ತ ವಿಶೇಷವಾಗಿ ರಾಜ್ಯದ ಒಣ ಪ್ರದೇಶದಿಂದ ಕಾಫಿ ಬೆಳೆಯುವ ಜಿಲ್ಲೆಗಳಿಗೆ ಕಾರ್ಮಿಕರು ಬರುತ್ತಿದ್ದರು. ಅದು ಸಹ ಈಗ ಇಳಿಮುಖ ಕಂಡಿದ್ದು ಕಾರ್ಮಿಕರು ನಗರಗಳತ್ತ ವಲಸೆ ಹೋಗುವಂತಾಗಿದೆ. ವಿಷಾದದ ಸಂಗತಿಯೆಂದರೆ ಭಾರತದ ಅಥವಾ ಕರ್ನಾಟಕದ ಸಂಘಟಿತ ಕಾರ್ಮಿಕ ಚಳವಳಿಯು ಅಸಂಘಟಿತ ಕಾರ್ಮಿಕರಿಗಾಗಿ, ರೈತರಿಗಾಗಿ, ಕೃಷಿ ಕೂಲಿ ಕಾರ್ಮಿಕರಿಗಾಗಿ ಅಂತಹ ಹೋರಾಟವನ್ನೇನು ಮಾಡಿಲ್ಲ. ಅಲ್ಲೊಂದು ಇಲ್ಲೊಂದು ಚಳವಳಿಗಳು ಇದಕ್ಕೆ ಅಪವಾದ ಇರಬಹುದು.

ದೇಶದ ಕಾರ್ಮಿಕ ವರ್ಗದಲ್ಲಿ ಅಸಂಘಟಿತ ವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಗ್ರಾಮೀಣ ಪ್ರದೇಶದಲ್ಲಿ ನೆಲೆಸಿದೆ. ಗ್ರಾಮೀಣ ಭಾರತದ ಕೃಷಿ ಕಾರ್ಮಿಕರು ಹಾಗೂ ರೈತರು ತೀವ್ರವಾದ ಶೋಷಣೆ ಹಾಗೂ ದಬ್ಬಾಳಿಕೆಗೆ ಗುರಿಯಾಗಿದ್ದು, ಇವರಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಬಡತನದ ರೇಖೆಗಿಂತ ಕೆಳಗಿದ್ದಾರೆ. ಹಾಗೆ ಕೃಷಿ ‑ಕಾರ್ಮಿಕರ ಮೇಲೆ ಹಲ್ಲೆ ನಡೆದಾಗಲೂ ಅವರ ನೆರವಿಗೆ ಕಾರ್ಮಿಕ ಸಂಘಗಳು ಹೋಗುವುದು ಅಪರೂಪ. ಮೊತ್ತ ಮೊದಲ ಬಾರಿಗೆ 4‑6‑1981ರಂದು ಮುಂಬಯಿಯಲ್ಲಿ ನಡೆದ ಅಖಿಲ ಭಾರತ ಕಾರ್ಮಿಕ ಸಂಘಗಳ ಸಮಾವೇಶವು ರೈತರ ಮತ್ತು ಕೃಷಿ ಕೂಲಿಕಾರರ ಬೇಡಿಕೆಗಳನ್ನು ಕಾರ್ಮಿಕ ಸಂಘಗಳ ಬೇಡಿಕೆಯಲ್ಲಿ ಸೇರಿಸಿದ್ದು, ಆ ಬೇಡಿಕೆಗಳಿಗಾಗಿ ಅದೇ ನವೆಂಬರ್ನಲ್ಲಿ 1981 ಪಾರ್ಲಿಮೆಂಟಿನ ಮುಂದೆ ಬೃಹತ್ ಕಾರ್ಮಿಕ ಪ್ರದರ್ಶನ ನಡೆಸಿತು.

ಜೀತದಾಳು ಪದ್ಧತಿ ರದ್ಧತಿ (1975)

ಜೀತದಾಳು ಪದ್ಧತಿಯ ಹೆಸರಿನಲ್ಲಿ ವಿಶೇಷವಾಗಿ ಕೃಷಿ ಕಾರ್ಮಿಕರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ದೈಹಿಕವಾಗಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ತಲತಲಾಂತರದಿಂದ ಶೋಷಣೆ ಮಾಡಲಾಗುತ್ತಿತ್ತು. ಜೀತದಾಳುಗಳು ಹಾಗೂ ಅವರ ಕುಟುಂಬದವರು ವಿಶೇಷವಾಗಿ ಭೂ ಮಾಲೀಕರಲ್ಲಿ (ದಣಿಗಳಲ್ಲಿ) ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸದಾ ಆಜ್ಞಾಧಾರಕರಾಗಿ ಕೆಲಸ ಮಾಡಬೇಕಾಗಿತ್ತು. ಅವರ ದುಡಿಮೆಗೆ ತಕ್ಕನಾದ ಸಂಬಳವಾಗಲಿ ಅಥವಾ ಸೌಲಭ್ಯಗಳನ್ನಾಗಲಿ ಅವರು ಪಡೆಯುತ್ತಿರಲಿಲ್ಲ. ಅವರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನೋಡಲಾಗುತ್ತಿತ್ತು. ಇಂತಹ ಒಂದು ಅನಿಷ್ಠ ಪದ್ಧತಿಯನ್ನು ನಿಷೇಧಿಸುವ ಸಲುವಾಗಿ ಭಾರತ ಸರ್ಕಾರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮಹತ್ವದ ಕಾನೂನನ್ನು ಜಾರಿಗೊಳಿಸಿದ್ದು (25‑10‑1975) ರಾಜ್ಯಾದ್ಯಂತ ಲಕ್ಷಾಂತರ ಜೀತದಾಳುಗಳು ಭೂಮಾಲೀಕರ ಜೀತದಾಳುಗಳು ಶೋಷಣೆಯಿಂದ ಮುಕ್ತರಾದರು. ಹಾಗೂ ಅವರು ಭೂಮಾಲೀಕರಿಗೆ ನೀಡಬೇಕಿದ್ದ ಸಾಲವನ್ನು ಹಿಂದಿರುಗಿಸಬೇಕಾಗಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿತ್ತು.

 

ಬಾಲ ಕಾರ್ಮಿಕರ ಪದ್ಧತಿರದ್ದತಿ (1986)

ರಾಜ್ಯದಲ್ಲಿ 2001ರ ಜನಗಣತಿಯ ಪ್ರಕಾರ 10 ಲಕ್ಷ (6ರಿಂದ 14 ವರ್ಷ) ಬಾಲ ಕಾರ್ಮಿಕರಿದ್ದಾರೆಂದು ತಿಳಿದುಬಂದಿದೆ. ಬಡತನ, ಸಾಮಾಜಿಕ ಪರಿಸ್ಥಿತಿ ಮತ್ತಿತರ ಹಲವಾರು ಕಾರಣಗಳಿಂದ ಮಕ್ಕಳು ಬಾಲಕಾರ್ಮಿಕರಾಗುತ್ತಿದ್ದಾರೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಇತ್ತೀಚೆಗೆ ಕಟ್ಟುನಿಟ್ಟಿನ ಕಾಯ್ದೆ ಕಾನೂನುಗಳನ್ನು ಮಾಡಿದ್ದು, ಇದೇ 10‑10‑2006ರಿಂದ ಜಾರಿಗೆ ಬಂದಿದೆ. ಈ ಕಾನೂನಿನ ಪ್ರಕಾರ ಬಾಲಕಾರ್ಮಿಕರನ್ನು ಹೊಂದಿರುವವರು ಜೈಲುವಾಸವನ್ನು ಅನುಭವಿಸಬೇಕಾಗುತ್ತದೆ.

ಕರ್ನಾಟಕದ ಪ್ರಮುಖ ಕಾರ್ಮಿಕ ನೇತಾರರು

ಕೆ.ಟಿ.ಬಾಷ್ಯಂ, ರಾಮಶರ್ಮ, ಎಂ.ಎಸ್.ರಾಮರಾವ್, ಎನ್.ಡಿ.ಶಂಕರ್, ಕಮಲಾದೇವಿ ಚಟ್ಟೋಪಾಧ್ಯಾಯ, ಎಂ.ಎಸ್.ಕೃಷ್ಣನ್, ಎಲ್.ಎನ್.ಉಪಾಧ್ಯಾಯ, ಬಿ.ವಿ.ಕಕ್ಕಿಲ್ಲಾಯ, ಎಸ್.ಸೂರ್ಯನಾರಾಯಣರಾವ್ (ಕಾಂ.ಸೂರಿ), ಜಿ.ಎನ್.ನಾಗರಾಜ್, ಬಿ.ಕೆ.ಸುಂದರೇಶ್, ಮೈಕೇಲ್ ಫರ್ನಾಂಡೀಸ್, ಸಿ.ನಂಜುಂಡಪ್ಪ, ಎಂ.ಸಿ.ನರಸಿಂಹನ್, ಎಂ.ಎನ್.ಅಡ್ಯಂತಾಯ, ಎಚ್.ವಿ.ಅನಂತಸುಬ್ಬರಾವ್, ಪಂಪಾಪತಿ, ಶ್ರೀರಾಮಲು, ವಾಸನ್, ವಿ.ಜಿ.ಕೆ.ನಾಯರ್, ಡಾ.ಕೆ.ರಾಧಾಕೃಷ್ಣ, ಜಾರ್ಜ್ ಫರ್ನಾಂಡೀಸ್, ಬಿ.ಆರ್.ವಿ.ರಾಜನ್ ಹಾಗೂ ಇತರರು.

ಕಾರ್ಮಿಕರ ಕಲ್ಯಾಣ

ಕಾರ್ಮಿಕರ ಚಳವಳಿ ಹಾಗೂ ಸಂಘಟನೆಯಿಂದಾಗಿ ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು, ಕಾನೂನುಗಳನ್ನು ಕಾಲಕಾಲಕ್ಕೆ ಜಾರಿಗೊಳಿಸಿವೆ. ಕರ್ನಾಟಕದಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬದವರ ಅಭಿವೃದ್ದಿಗಾಗಿ ರಾಜ್ಯಾದ್ಯಂತ 36 ಕಲ್ಯಾಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆದರೆ ಭಾರತದಲ್ಲಿ ಪ್ರಸ್ತುತ ಒಟ್ಟು 42 ಕೋಟಿಯಷ್ಟು ಕಾರ್ಮಿಕ ಶಕ್ತಿಯಿದ್ದು, ಇದರಲ್ಲಿ ಶೇ. 93ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇದ್ದಾರೆ. ಇದರಿಂದ ಕೇವಲ ಶೇ.7ರಷ್ಟು ಕಾರ್ಮಿಕರು ಮಾತ್ರ ಸಂಘಟಿತ ವಲಯದಲ್ಲಿ ಇರುವುದಾಗಿ ತಿಳಿದುಬರುತ್ತದೆ (14‑8‑2006 ವಿ.ಕ.) ಇದರಿಂದ ಅವಶ್ಯಕವಾಗಿ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ಅಸಂಘಟಿತ ಕಾರ್ಮಿಕವಲಯದಲ್ಲಿ ಎಂಬುದು ನಾವು ಗಮನಿಸಬೇಕಾದ ಅಂಶ.

ಕಾರ್ಮಿಕ ಚಳುವಳಿ ಕ್ಷೀಣಿಸುತ್ತಿದೆಯೇ? ಏಕೆ?

ಪ್ರಸ್ತುತ ಕಾರ್ಮಿಕ ಚಳವಳಿ ತನ್ನ ಬಿರುಸುತನವನ್ನು ಕಳೆದುಕೊಂಡು ದುರ್ಬಲ ಗೊಳ್ಳುತ್ತಿರುವುದಾಗಿ ಕಂಡುಬರುತ್ತದೆ. ಇದಕ್ಕೆ ನಾವು ಹಲವಾರು ಕಾರಣಗಳನ್ನು ಕೊಡಬಹುದು. ವಿಶೇಷವಾಗಿ 1991ರಲ್ಲಿ ಸೋವಿಯತ್ ರಷ್ಯಾ ವಿಭಜನೆಗೊಂಡಾಗಿನಿಂದ ಕಾರ್ಮಿಕ ಶಕ್ತಿ ಕುಂದುತ್ತಾ ಹೋಯಿತು. ಕಮ್ಯೂನಿಸ್ಟರ ಪ್ರಬಲ ಶಕ್ತಿ ಕೇಂದ್ರವು ಇದರೊಂದಿಗೆ ನೀರಸವಾಯಿತು. ಜೊತೆಗೆ ಕಮ್ಯೂನಿಸ್ಟರು ಕಾರ್ಮಿಕ ವರ್ಗದಲ್ಲಿ ತಮ್ಮ ಶಕ್ತಿಯನ್ನು ಕಂಡುಕೊಂಡಿದ್ದರು. ಆ ಹಂತದಲ್ಲಿ ಹುಟ್ಟಿಕೊಂಡಿದ್ದೇ ಜಾಗತೀಕರಣ (ಗ್ಲೋಬಲೈಜೇಷನ್). ಜಾಗತೀಕರಣ ಶ್ರೀಮಂತ ದೇಶಗಳಿಗೆ ಉದಾರವಾದವಾಗಿ, ಬಡದೇಶಗಳಿಗೆ ನಿಯಂತ್ರಣವಾದವಾಗಿ ಬೆಳೆಯಿತು. ಈ ಬದಲಾವಣೆಯ ಹಂತದಲ್ಲಿ ವಿಶ್ವ ಆರ್ಥಿಕ ವ್ಯವಸ್ಥೆ ಹಾಗೂ ದೇಶದ ಆರ್ಥಿಕ ವ್ಯವಸ್ಥೆಯಲ್ಲಿಯೂ ಮಹತ್ವದ ಬದಲಾವಣೆಗಳಾಗುತ್ತಿವೆ. ಇದರಿಂದ ಕರ್ನಾಟಕವೂ ಹೊರತಾಗಿಲ್ಲ. ಈ ಬದಲಾದ ಆರ್ಥಿಕ ವ್ಯವಸ್ಥೆಯಲ್ಲಿ ಕೈಗಾರಿಕಾ ರಂಗ ಮಹತ್ವ ಕಳೆದುಕೊಂಡು ಕಾರ್ಪೊರೇಟ್ ವ್ಯವಸ್ಥೆ ಪ್ರಧಾನ ಸ್ಥಾನ ಪಡೆಯುತ್ತಿರುವುದನ್ನು ಎಲ್ಲರೂ ಗಮನಿಸುವಂತಹ ಅಂಶ. ನಾವು ಆಳವಾಗಿ ಈ ವ್ಯವಸ್ಥೆಯನ್ನು ಅವಲೋಕಿಸಿದಲ್ಲಿ ಕಾರ್ಪೊರೇಟ್ ವ್ಯವಸ್ಥೆಯಲ್ಲಿ ಕಾರ್ಮಿಕ ಚಳವಳಿಗಳು ದುರ್ಬಲಗೊಳ್ಳುತ್ತಿರುವುದು ಕಂಡುಬರುತ್ತದೆ. ಕಾರಣ ಕೈಗಾರಿಕಾ ರಂಗದಲ್ಲಿ ಕಾರ್ಮಿಕ ಚಳವಳಿಯಲ್ಲಿ ಇರುವಂತಹ ಹಿನ್ನೆಲೆ ಕಾರ್ಪೊರೇಟ್ ರಂಗದಲ್ಲಿ ಇಲ್ಲ. ಅಲ್ಲದೆ ಕಾರ್ಪೊರೇಟ್ ರಂಗವು ಮುಖ್ಯವಾಗಿ ಬೌದ್ದಿಕ ಶ್ರಮವನ್ನು ಅಪೇಕ್ಷಿಸುತ್ತದೆ ಹಾಗೂ ಇಲ್ಲಿ ಕಾರ್ಮಿಕರು ಕೇವಲ ನಿರ್ದಿಷ್ಟ ಉದ್ದೇಶಗಳಿಗಾಗಿಯೇ ಸಂಘಟಿತರಾಗುತ್ತಾರೆ.

1990ರ ದಶಕದ ಆರಂಭದಿಂದ ವಿಶೇಷವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಖಾಸಗೀಕರಣ ತನ್ನ ಬೇರುಗಳನ್ನು ವಿಸ್ತರಿಸುತ್ತಿದ್ದು ‘ಸಾಮಾಜಿಕ ನ್ಯಾಯ’ದ ಸ್ಥಾನವನ್ನು ‘ಲಾಭ’ ಆಕ್ರಮಿಸಿಕೊಂಡಿದ್ದು ಸಹಜವಾಗಿ ಕಾರ್ಪೊರೇಟ್ ರಂಗದ ಕಾರ್ಮಿಕರು ತಮ್ಮ ಬೌದ್ದಿಕ ಶ್ರಮಕ್ಕೆ ಹೆಚ್ಚಿನ ಲಾಭಾಂಶದ ರೂಪದಲ್ಲಿ ಹೆಚ್ಚಿನ ಸಂಬಳ, ವ್ಯವಸ್ಥೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಹೊಂದಲು ಶಕ್ತರಿದ್ದಾರೆ. ಸಹಜವಾಗಿ ಇದು ಕಾರ್ಮಿಕ ಚಳವಳಿಯನ್ನು ದುರ್ಬಲಗೊಳಿಸುತ್ತದೆ ಎಂದರೆ ತಪ್ಪಿಲ್ಲ. ಹಾಗೆ ಹಿಂದೆ ಕೈಗಾರಿಕಾ ರಂಗದಲ್ಲಿದ್ದಂತಹ ಔದ್ಯೋಗಿಕ ವಾತಾವರಣವೇ ಕಾರ್ಮಿಕರಲ್ಲಿ ಸಮೂಹಪ್ರಜ್ಞೆಯನ್ನು ಹುಟ್ಟುಹಾಕುತ್ತಿತ್ತು. ಅದರ ಪ್ರಸ್ತುತದ ಕಾರ್ಪೊರೇಟ್ ವ್ಯವಸ್ಥೆ ಸಮೂಹಪ್ರಜ್ಞೆಯನ್ನೇ ಕಾರ್ಮಿಕರಲ್ಲಿ ಬೆಳೆಸುವುದಿಲ್ಲ.

ಕಾರ್ಮಿಕ ಚಳವಳಿಯ ಬಲವರ್ಧನೆಗೆ ಕಾರ್ಮಿಕಪರವಾದ ರಾಜಕೀಯ ಶಕ್ತಿ ಅತ್ಯವಶ್ಯಕ ಎಂಬುದನ್ನು ನಾವು ಹಿಂದಿನಿಂದಲೂ ಕಂಡುಕೊಂಡ ಅಂಶ. ಹಾಗೆ ಕಾರ್ಮಿಕ ಚಳವಳಿಯ ಹಿಂದಿನ ರಾಜಕೀಯ ಶಕ್ತಿ ಕುಂದುತ್ತಲೇ ಚಳವಳಿಯೂ ದುರ್ಬಲವಾಗುತ್ತದೆ. ಇದು ಜಾಗತಿಕ ಮಟ್ಟದಲ್ಲೂ ಹಾಗೂ ರಾಜ್ಯಮಟ್ಟದಲ್ಲಿಯೂ ಅನ್ವಯವಾಗುತ್ತದೆ. ಅಂತಹ ಸಂದರ್ಭದಲ್ಲಿ ‘ಕಾರ್ಮಿಕ ಹಿತ’ವೇ ಮೂಲತತ್ವ ಆಗಿರದ, ಆದರೆ ತಮ್ಮ ರಾಜಕೀಯ ಹಿತಕ್ಕೋಸ್ಕರ‑ಉನ್ನತಿಗೋಸ್ಕರ ಕಾರ್ಮಿಕ ಪರ ಕೆಲಸ ಮಾಡುತ್ತಿದ್ದ ರಾಜಕೀಯ ಪಕ್ಷಗಳಿಗೆ ಕಾರ್ಮಿಕರ ಹಿತ ಕಾಯಬೇಕಾದಂತಹ ಅನಿವಾರ್ಯತೆಯೂ ಉದ್ಭವಿಸುವುದಿಲ್ಲ.ೊಈಗ ಆಗುತ್ತಿರುವುದೂ ಅದೆ. ಹೇಳಬೇಕೆಂದರೆ ಭಾರತದ ರಾಜಕೀಯ ಪಕ್ಷಗಳು ರಾಜಕೀಯ ಅಧಿಕಾರವನ್ನು ಪ್ರಧಾನವಾಗಿಟ್ಟುಕೊಂಡು ಕಾರ್ಮಿಕರ ಹಿತವನ್ನು ಒಂದು ತಂತ್ರವನ್ನಾಗಿ ಇಟ್ಟುಕೊಂಡಿದ್ದೇವೆಯೇ ಹೊರತು ತತ್ವವನ್ನಾಗಿ ಅಲ್ಲ.

ಕೆಲವೊಂದು ಸನ್ನಿವೇಶದಲ್ಲಿ ಕಾರ್ಮಿಕ ಚಳವಳಿಯ ಹಿನ್ನೆಡೆಗೆ ಸ್ವತಃ ಕಾರ್ಮಿಕರೇ ಕಾರಣರಾಗಿದ್ದಾರೆ. ಬಹುತೇಕ ಚಳವಳಿಗಳ ಸಂದರ್ಭಗಳಲ್ಲಿ ಕಾರ್ಮಿಕ ನಾಯಕರುಗಳೇ ಸರ್ಕಾರದ ಅಥವಾ ಕೆಲಸ ತೆಗೆದುಕೊಳ್ಳುವ ಆಡಳಿತ ಮಂಡಳಿಗಳು ನೀಡುವ ಆಮಿಷಗಳಿಗೆ ಒಳಗಾಗಿ ಕಾರ್ಮಿಕ ಶಕ್ತಿಯನ್ನು ಒಡೆಯುವ ಕೆಲಸ ಮಾಡುತ್ತಾರೆ. ಇದು ಸಹಜವಾಗಿ ಕಾರ್ಮಿಕ ಚಳವಳಿಯ ಹಿನ್ನಡೆಗೆ ಕಾರಣವಾಗುತ್ತದೆ. ಹಾಗೇ ನಮ್ಮ ದೇಶದ ಮಾಲೀಕ ವರ್ಗವು ಮೊದಲು ಕಾರ್ಮಿಕ ನಾಯಕರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಪ್ರಯತ್ನಿಸುವುದಲ್ಲದೆ, ಶೇ. 90 ಅದು ಯಶಸ್ವಿಯಾಗುತ್ತದೆಂದು ನಿಸ್ಸಂಶಯವಾಗಿ ಹೇಳಬಹುದು. ಒಂದು ಪಕ್ಷ ಕಾರ್ಮಿಕ ನಾಯಕರು ಆಮಿಷಕ್ಕೊಳಗಾಗದೆ ಮುಷ್ಕರವನ್ನು ಮುಂದುವರೆಸಿದರೆ ಮಾಲೀಕವರ್ಗ ತಕ್ಷಣದಲ್ಲಿ ಮಾತುಕತೆಗೆ ಮುಂದಾಗು ವುದಿಲ್ಲ. ಏಕೆಂದರೆ ಅವರಿಗೆ ನಮ್ಮ ದೇಶದ ಕಾರ್ಮಿಕ ಶಕ್ತಿ ಏನೆಂದು ತಿಳಿದಿದೆ. ಕಾರ್ಮಿಕರು ಜಾಸ್ತಿಯೆಂದರೆ 15 ದಿನ ಮುಷ್ಕರ ನಡೆಸಬಹುದು. ನಂತರ ಅವರು ಆರ್ಥಿಕ ಸಮಸ್ಯೆಗಳಿಂದಾಗಿ ಮುಷ್ಕರವನ್ನು ಮುಂದುವರೆಸಲು ಶಕ್ತರಿರುವುದಿಲ್ಲ. ಈ ರೀತಿ ಕಾರ್ಮಿಕ ಚಳವಳಿಗಳು ಮಾಲೀಕವರ್ಗದ ಮುಷ್ಟಿಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಶಕ್ತಿಯ ಅವಶ್ಯಕತೆ ಬಹುಮಟ್ಟಿನದಾಗಿರುತ್ತದೆ. ಹಾಗೆ ರಾಜಕೀಯ ಶಕ್ತಿಗಳು ಜೊತೆಗೆ ಇರುವ ತನಕ ಕಾರ್ಮಿಕ ಚಳವಳಿಗಳು ಯಶಸ್ವಿಯಾಗುತ್ತವೆ.

ಪ್ರಸ್ತುತ ಸಂಘಟಿತ ವಲಯದ ಕಾರ್ಮಿಕರಲ್ಲಿ ಕಾರ್ಮಿಕ ಚಳವಳಿಗಳನ್ನು ಬೆಳೆಸಬೇಕೆಂಬ ಮನೋಭಾವವು ಇಲ್ಲದಿರುವುದು ಚಳವಳಿಯ ಹಿನ್ನೆಡೆಗೆ ಕಾರಣವಾಗಿದೆಯೆಂದರೆ ತಪ್ಪಲ್ಲ. ಖಾಯಂ ಉದ್ಯೋಗ ಹೊಂದಿರುವ ಕಾರ್ಮಿಕರು ಆರ್ಥಿಕವಾಗಿ ಬಲಾಢ್ಯರಿದ್ದು ಒಂದು ರೀತಿಯಲ್ಲಿ ಮಾಲೀಕರ ಗುಣಸ್ವಭಾವಗಳನ್ನು ಹೊಂದಿರುತ್ತಾರೆ. ಅಂತಹ ಸಂದರ್ಭದಲ್ಲಿ ನಾವು ಅವರಿಂದ ಕಾರ್ಮಿಕ ಚಳವಳಿಯನ್ನು ನಿರೀಕ್ಷಿಸಲಾಗುವುದಿಲ್ಲ. ಪ್ರಸ್ತುತ ಚಳವಳಿ ವಿಶೇಷವಾಗಿ ಅಗತ್ಯವಾಗಿರುವುದು ಅಸಂಘಟಿತ ವಲಯದ ಕಾರ್ಮಿಕರಿಗೆ ಮಾತ್ರ. ಅಸಂಘಟಿತರು ಸಂಘಟಿತರಾಗಿ ಕಾರ್ಮಿಕ ಚಳವಳಿಯನ್ನು ಬೆಳೆಸದೆ ಉಳಿಸದೆ ಹೋದರೆ ಕಾಲಾನುಕ್ರಮದಲ್ಲಿ ತಾವೇ ದುರ್ಬಲರಾಗಿ ಹಂತಹಂತವಾಗಿ ಶೋಚನೀಯ ಪರಿಸ್ಥಿತಿಯನ್ನು ತಂದುಕೊಳ್ಳುತ್ತೇವೆ ಎಂಬುದು ತಿಳಿದಿದ್ದಲ್ಲಿ ಮಾತ್ರ ಕಾರ್ಮಿಕ ಚಳವಳಿ ಭವಿಷ್ಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಲವನ್ನು ಪ್ರದರ್ಶಿಸಬಹುದಾಗಿದೆ. ನಮ್ಮ ದೇಶದ ಕಾರ್ಮಿಕ ಕಾನೂನುಗಳು ಎಂಟು ದಶಕಗಳಷ್ಟು ಹಿಂದಿನ ಆರ್ಥಿಕ, ಸಾಮಾಜಿಕ, ರಾಜಕೀಯ ತಾಂತ್ರಿಕ ಪರಿಸ್ಥಿತಿಗಳಿಗೆ ಅನುಗುಣವಾಗಿದ್ದು, ಅವುಗಳನ್ನು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೊಳ್ಳುವ ಹಾಗೇ ಮಾನವೀಯ ರೀತಿಯಲ್ಲಿ ಮಾರ್ಪಾಡು ಮಾಡಬೇಕಿದೆ.

ಸಾಧಿಸಲಾಗದ ಕಾರ್ಮಿಕ ಐಕ್ಯ

ಭಾರತದಲ್ಲಿ ಅಥವಾ ಕರ್ನಾಟಕ ರಾಜ್ಯದಲ್ಲಿ ಹಲವಾರು ಕಾರ್ಮಿಕರ ಸಂಘಟನೆ ಗಳಿದ್ದರೂ ಅವರಲ್ಲಿನ ಒಡಕುಗಳಿಂದಾಗಿ ಕಾರ್ಮಿಕರ ಕಲ್ಯಾಣದಲ್ಲಿ ಹೆಚ್ಚಿನದನ್ನು ಸಾಧಿಸಲಾಗಿಲ್ಲ. ಈ ಕುರಿತು 1969ರಷ್ಟು ಹಿಂದೆಯೇ ನ್ಯಾಯಮೂರ್ತಿ ಶ್ರೀ ಪಿ.ಬಿ. ಗಜೇಂದ್ರಗಡಕ ಅವರ ಅಧ್ಯಕ್ಷತೆಯಲ್ಲಿ ನೇಮಕಗೊಂಡಿದ್ದ ರಾಷ್ಟ್ರೀಯ ಕಾರ್ಮಿಕ ಆಯೋಗವು ತನ್ನ ವರದಿಯಲ್ಲಿ ಕಾರ್ಮಿಕ ಸಂಘಟನೆಗಳ ಒಡಕನ್ನು ಕುರಿತು ಈ ರೀತಿ ಹೇಳಿದೆ:

ಸ್ವಾತಂತ್ರ್ಯಾನಂತರ ಯೂನಿಯನ್ಗಳೊಳಗೆ ರಾಜಕೀಯ ಆಧಾರಿತ ಮತಭೇದಗಳು ತೀವ್ರಗೊಂಡವು. ಇದ್ದ ಯೂನಿನ್ಗಳು ವಿಭಜಿತ ಗೊಳ್ಳುವುದು, ರಾಜಕೀಯ ಪಕ್ಷಗಳ ವಿಚಾರಗಳಿಗೆ ಸಹಾನುಭೂತಿಯುಳ್ಳ ಹೊಸ ಯೂನಿಯನ್ಗಳು ತಲೆ ಎತ್ತುವುದು ಎಲ್ಲ ಹಂತಗಳಲ್ಲಿ ಆಳವಾಗಿ ಬೇರುಬಿಟ್ಟಿದೆ. ಸೇವಾ ಭಾವನೆಯಿಂದ ಸಾರ್ವಜನಿಕ ಕ್ಷೇತ್ರದಲ್ಲಿ ಪ್ರವೇಶಿಸುವ ವ್ಯಕ್ತಿಆತನಿಗೆ ರಾಜಕೀಯ ಒಲವು ಇರಲಿ, ಇಲ್ಲದಿರಲಿ, ಯೂನಿಯನ್ಗಳನ್ನು ಸಾಮಾನ್ಯ ಕಾರ್ಮಿಕ ಸಂಪರ್ಕಕ್ಕೆ ತರಬಲ್ಲ. ಸೇವಾ ಭಾವನೆಯ ಕಲ್ಪನೆಯಲ್ಲೇ ವ್ಯತ್ಯಾಸ ಉಂಟಾದಾಗ ಈ ಕ್ಷೇತ್ರದಲ್ಲಿ ಪರಸ್ಪರ ವೈಮನಸ್ಯ ತಲೆದೋರುತ್ತದೆ (ಸ್ವಾತಂತ್ರ್ಯ ಸ್ವರ್ಣ ರೇಖೆ, ಪ್ರ.ಸಂ., ಕೆ.ಅನಂತರಾಮರಾವ್ ವಿದ್ಯಾ ಪಬ್ಲಿಷಿಂಗ್ ಹೌಸ್, ಮಂಗಳೂರು, ಪು. 107).

ಜೊತೆಗೆ ಕಾರ್ಮಿಕರಲ್ಲಿ ಒಗ್ಗಟ್ಟನ್ನು ತರಲು ಯೂನಿಯನ್ಗಳಲ್ಲಿ ಆಂತರಿಕ ನೇತೃತ್ವ ವನ್ನು ಬೆಳೆಸಿ, ಪಕ್ಷ ರಾಜಕಾರಣ ಹಾಗೂ ಹೊರಗಿನವರ ಪ್ರಭಾವದಿಂದ ಯೂನಿಯನ್ಗಳನ್ನು ದೂರವಿಡಬೇಕೆಂದು ಸಲಹೆ ನೀಡಿತು. ಆದರೆ ಇದು ಸಾಧಿಸಲಾಗದ ಮಾತು. ಆದರೂ ಅಭಿಯಾನ ಸಮಿತಿಯ ರೂಪದಲ್ಲಿ ಆದಷ್ಟು ಸಂಘಟನೆಗಳನ್ನು ಒಂದೇ ವೇದಿಕೆಯ ಮೇಲೆ ತರಬೇಕೆನ್ನುವವರ ಪ್ರಯತ್ನದಿಂದಾಗಿ ‘ನ್ಯಾಷನಲ್ ಕೆಂಪೇನ್ ಕಮಿಟಿ’ ಎಂಬ ವೇದಿಕೆ ಅಸ್ತಿತ್ವಕ್ಕೆ ಬಂದಿತು. ಆದರೆ ಇಲ್ಲಿಯೂ ಪಕ್ಷ ರಾಜಕಾರಣ ನುಸುಳಿದ್ದ ರಿಂದ 1990ರಲ್ಲಿ ಇದು ಸಹ ಅವಸಾನಗೊಂಡಿತು.

ಹಾಗೆ 1994‑95ರಲ್ಲಿ ಹೊಸದಿಲ್ಲಿಯಲ್ಲಿ ಹೊಸ ಆರ್ಥಿಕ‑ಕೈಗಾರಿಕಾ ನೀತಿ ಕುರಿತಾದ ಒಂದು ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ್ದ ಐಟಕ್ನ ಅಧ್ಯಕ್ಷರಾಗಿದ್ದ ಭಾರತ ಕಮ್ಯೂನಿಸ್ಟ್ ಪಕ್ಷದ ನಾಯಕರು ಹೀಗೆ ಕರೆ ನೀಡಿದರು:

ಭಾರತ ಟ್ರೇಡ್ ಯೂನಿಯನ್ ಚಳವಳಿಯು ಎರಡು ಕಂಬಿಗಳ ಮೇಲೆ ನಿಲ್ಲುವುದಗತ್ಯ. ಮೊದಲನೆಯದು ಈ ಹಿಂದಿನಂತೆ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವುದು.  ಎರಡನೆಯದು ಬಹು ರಾಷ್ಟ್ರೀಯ ಕಂಪೆನಿಗಳ ಆಕ್ರಮಣದಿಂದ ನಮ್ಮ ದುರ್ಬಲ ಕೈಗಾರಿಕೆಗಳನ್ನು ರಕ್ಷಿಸಲು ಮುಂದಾಗುವುದು.

ಇದು ಕಾರ್ಮಿಕ ಸಂಘಟನೆ ಹಾಗೂ ಚಳವಳಿಯು ಪರಿವರ್ತನಾಶೀಲ ವಾಗಿರುವುದರ ಜೊತೆಗೆ ರಾಷ್ಟ್ರದ ಹಿತಾಸಕ್ತಿಯನ್ನು ಕಾಪಾಡಬೇಕೆಂಬುದನ್ನು ಪ್ರತಿಪಾದಿಸುತ್ತದೆ (ಸ್ವಾತಂತ್ರ್ಯ-ಸ್ವರ್ಣರೇಖೆ, ಪ್ರ.ಸಂ., ಕೆ.ಅನಂತರಾಮರಾವ್, ವಿದ್ಯಾ ಪಬ್ಲಿಷಿಂಗ್ ಹೌಸ್, ಮಂಗಳೂರು, ಪು. 112).

ಕರ್ನಾಟಕ ರಾಜ್ಯದಲ್ಲಿ ಕಾರ್ಮಿಕ ಸಂಘ ಚಳವಳಿ ಪ್ರಗತಿ ಸಾಧಿಸಿದೆಯಾದರೂ ಮಹಾರಾಷ್ಟ್ರ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ ರಾಜ್ಯಗಳಿಗೆ ಹೋಲಿಸಿದಲ್ಲಿ ಅದು ಹೆಚ್ಚಿನ ಮಟ್ಟದಲ್ಲಿ ಬೆಳೆದಿಲ್ಲ ಎಂದು ತಿಳಿದುಬರುತ್ತದೆ. ಎಲ್ಲಾ ಕೈಗಾರಿಕೆಗಳಲ್ಲಿ ಅಥವಾ ಎಲ್ಲ ಜಿಲ್ಲೆಗಳಲ್ಲೂ ಕಾರ್ಮಿಕ ಸಂಘಗಳು ಒಂದೇ ರೀತಿಯಲ್ಲಿ ಬೆಳೆದಿಲ್ಲ. ಹಾಗೆ ಅಸ್ತಿತ್ವದಲ್ಲಿರುವ ಕಾರ್ಮಿಕ ಸಂಘಗಳಲ್ಲಿ ಎಲ್ಲಾ ಕಾರ್ಮಿಕರು ಸದಸ್ಯರಾಗಿಲ್ಲ ಹಾಗೂ ಅವು ಆರ್ಥಿಕವಾಗಿಯೂ ಸದೃಢವಾಗಿಲ್ಲ. ವಾಸ್ತವವಾಗಿ ಹೇಳಬೇಕೆಂದರೆ ಪ್ರಸ್ತುತ ಹಿಂದೆಂದಿಗಿಂತಲೂ ಕಾರ್ಮಿಕ ಸಂಘಟನೆ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಸ್ತುತದ ಉದಾರೀಕರಣ, ಜಾಗತೀಕರಣ, ಖಾಸಗೀಕರಣ ಕ್ರಿಯೆಗಳಲ್ಲಿ ಕಾರ್ಮಿಕರ ಹಿತರಕ್ಷಣೆಗೆ ಏನೂ ಮಹತ್ವವಿಲ್ಲ. ಮುಕ್ತ ಆರ್ಥಿಕ ನೀತಿಯನ್ನು ಪ್ರತಿಪಾದಿಸುತ್ತಿರುವ ಈ ಸಂದರ್ಭದಲ್ಲಿ ಪರಿಪೂರ್ಣ ಪೈಪೋಟಿಯ ಹೆಸರಿನಲ್ಲಿ ಕಾರ್ಮಿಕರ ಹಿತಾಸಕ್ತಿಯನ್ನು ಬದಿಗೊತ್ತಲಾಗಿದೆ. ಈ ಕಾರಣಕ್ಕಾಗಿ ಕಳೆದ 10‑15 ವರ್ಷಗಳಿಂದ ಸಾರ್ವಜನಿಕ ವಲಯದ ಉದ್ದಿಮೆಗಳ ಕಾರ್ಮಿಕ ಸಂಘಗಳು ಬಹುರಾಷ್ಟ್ರೀಯ ಕಂಪೆನಿಗಳ ಮುಕ್ತ ಪ್ರವೇಶ ಕುರಿತು ತಾತ್ವಿಕ ವಿರೋಧ ಪ್ರತಿಭಟನೆ ವ್ಯಕ್ತಪಡಿಸುತ್ತಿರುವುದು ಗಮನಾರ್ಹ ವಿಷಯವಾಗಿದೆ.

ಕರ್ನಾಟಕದಲ್ಲಿನ ಕಾರ್ಮಿಕ ಚಳವಳಿ ಕುರಿತಂತೆ ಅಂಕಿಅಂಶಗಳು ಏನು ಹೇಳುತ್ತವೆ?

ಕರ್ನಾಟಕವು ಕೈಗಾರಿಕಾ ರಂಗದಲ್ಲಿ ಧರಣಿ, ಪ್ರತಿಭಟನೆ, ಹೋರಾಟ, ಮುಷ್ಕರಗಳಿಂದ ಮುಕ್ತವಾಗಿಲ್ಲವಾದರೂ ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಅವುಗಳ ಪ್ರಮಾಣ ಇಲ್ಲಿ ಬಹಳ ಕಡಿಮೆಯೆಂದು ಅಂಕಿ-ಅಂಶಗಳು ತಿಳಿಸುತ್ತವೆ. ಕರ್ನಾಟಕದ ಕಾರ್ಮಿಕ ಇಲಾಖೆ 1997ರಲ್ಲಿ ನೀಡಿದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಕೇವಲ 17 ಹೋರಾಟಗಳು ನಡೆದಿದ್ದು, ಕೇವಲ 9 ಬೀಗಮುದ್ರೆ ಪ್ರಕರಣಗಳು ಮಾತ್ರ ದಾಖಲಾಗಿವೆ. ಅದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ‑208, ಗುಜರಾತ್ನಲ್ಲಿ‑127 ಮತ್ತು ಆಂಧ್ರ ಪ್ರದೇಶದಲ್ಲಿ‑119 ಮುಷ್ಕರಗಳು ನಡೆದಿವೆ. ಅಲ್ಲದೆ ಆಂಧ್ರ ಪ್ರದೇಶದಲ್ಲಿ‑256 ಹಾಗೂ ಪಶ್ಚಿಮ ಬಂಗಾಳದಲ್ಲಿ‑98 ಲಾಕ್ಔಟ್ ಪ್ರಕರಣಗಳು ದಾಖಲಾಗಿವೆ (11‑1‑ 2006 ವಿ.ಕ. ಮಾಹಿತಿ).

ಇತ್ತೀಚಿನ ಮುಷ್ಕರ ಹೋರಾಟಗಳನ್ನು ಅವಲೋಕಿಸಿದಲ್ಲಿ ಉದ್ಯಮ ವಲಯದ ವ್ಯಾಜ್ಯಗಳ ಸಂಖ್ಯೆ ಅಧಿಕಗೊಳ್ಳುತ್ತಿವೆ. 1998ರವರೆಗೆ ರಾಜ್ಯದಲ್ಲಿ 2600 ಕೈಗಾರಿಕಾ ವ್ಯಾಜ್ಯಗಳು ದಾಖಲಾಗಿದ್ದು, ಅವುಗಳಲ್ಲಿ 1216 ನ್ಯಾಯಾಲಯದಲ್ಲಿವೆ. ಹಾಗೆ 365 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು 190 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿದೆ(11‑1‑2006 ವಿ.ಕ.ಮಾಹಿತಿ). ಇಲ್ಲಿ ಒಂದಲ್ಲ ಒಂದು ಕಾರಣಕ್ಕೆ ಹೆಚ್ಚಿನ ಕೈಗಾರಿಕೆಗಳು ಮುಚ್ಚುತ್ತಿದ್ದು (ಕ್ಲೋಷರ್) ಕಾರ್ಮಿಕರು ಮುಷ್ಕರಕ್ಕಿಳಿಯುತ್ತಿದ್ದಾರೆ. ಇತ್ತೀಚೆಗೆ ಟೀಮ್ಲೀಸ್ ಸಂಸ್ಥೆ ಕಾರ್ಮಿಕರ ಸ್ಥಿತಿಗತಿಗಳ ಕುರಿತು ದೇಶಾದ್ಯಂತ ವಿಸ್ತೃತ ಸಮೀಕ್ಷೆಯನ್ನು ಕೈಗೊಂಡಿದ್ದು, ಬೇರೆ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಅತ್ಯುತ್ತಮ ಕಾರ್ಮಿಕಸ್ನೇಹಿ ವಾತಾವರಣವಿದೆ ಎಂದು ಪ್ರಸ್ತುತಪಡಿಸಿದೆ. ಜೊತೆಗೆ ಕರ್ನಾಟಕವು ಕಾರ್ಮಿಕ ಕಾನೂನುಗಳ ಅನುಷ್ಠಾನದಲ್ಲಿಯೂ ಅಗ್ರಸ್ಥಾನದಲ್ಲಿದೆ ಎಂದು ತಿಳಿಸಿದೆ(14‑8‑2006, ವಿ.ಕ.ಮಾಹಿತಿ). ಹಾಗೇ ಪ್ರಸ್ತುತದ ಕಾರ್ಮಿಕ ಕಾನೂನುಗಳಲ್ಲೂ ಬದಲಾವಣೆ ತರಬೇಕೆಂದು ಹೇಳಿರುವ ಅದು ಕಾರ್ಮಿಕ ವ್ಯವಹಾರಗಳಲ್ಲಿ ಕೇಂದ್ರ ಸರ್ಕಾರದ ಹಿಡಿತವನ್ನು ಆದಷ್ಟು ಕಡಿಮೆಗೊಳಿಸಿ ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ನೀಡ ಬೇಕೆಂದು ಸಲಹೆ ಕೊಟ್ಟಿದೆ.

ಪ್ರಸ್ತುತ ಕರ್ನಾಟಕದ ಬೃಹತ್ ಕೈಗಾರಿಕೆಗಳ ಪರಿಸ್ಥಿತಿಯಾದರೂ ಹೇಗಿದೆ?

ಒಟ್ಟಾರೆ ಇಡೀ ದೇಶದ ಕೈಗಾರಿಕಾ ಮತ್ತು ಉದ್ಯೋಗ ರಂಗದ ಸ್ಥಿತಿಯೇ ನಿರಾಶಾದಾಯಕವಾಗಿದೆ. ಕರ್ನಾಟಕದ ಅನೇಕ ಪ್ರಸಿದ್ಧ ಕೈಗಾರಿಕೆಗಳು ಮತ್ತು ಉದ್ದಿಮೆಗಳು ಅವಸಾನ ಕಂಡಿದ್ದು ಇಡೀ ಕೈಗಾರಿಕಾ ವಾತಾವರಣವೇ ಮಸುಕಾಗಿದೆ. ಕೆಲವು ಬೃಹತ್ ಉದ್ದಿಮೆಗಳಂತೂ ಅನ್ಯಾಯದ ಸಾವನ್ನೇ ಕಂಡಿವೆ. ಇದರಿಂದಾಗಿ ಕಾರ್ಮಿಕ ವರ್ಗದ ಮೇಲೆ ಆಗುವ ಪರಿಣಾಮಗಳನ್ನು ಊಹಿಸಲು ಅಸಾಧ್ಯ.

ರಾಷ್ಟ್ರೀಯ ಯೋಜನಾ ಆಯೋಗದ ಮಾಜಿ ಸದಸ್ಯರಾಗಿದ್ದ ಎಲ್.ಸಿ.ಜೈನ್ ಈ ಕುರಿತು ಹೀಗೆ ಹೇಳಿದ್ದಾರೆ:

ಒಂದು ಕೈಗಾರಿಕೆ ಮುಚ್ಚಿದಾಗ ಅವುಗಳ ಮಾಲೀಕರಿಗೆ ಹಣ ಹೂಡಿದವರಿಗೆ ಯಾವ ನಷ್ಟವೂ ಆಗುವುದಿಲ್ಲ. ಲಗುಬಗೆಯಿಂದ ಅವರೆಲ್ಲ ತಮ್ಮ ಬಂಡವಾಳ ವಾಪಸ್ ಪಡೆದು ಬೇರೆ ಕಡೆ ತೊಡಗಿಸಿಕೊಳ್ಳುತ್ತಾರೆ. ಆದರೆ ಬಡ ಕಾರ್ಮಿಕನಿಗೆ ಮಾತ್ರ ಇದು ಅತ್ಯಂತ ಕ್ರೂರವಾಗಿ ಪರಿಣಮಿಸುತ್ತದೆ. ಸಂಸಾರ ಬೀದಿಗೆ ಬರುತ್ತದೆ. ಫ್ಯಾಕ್ಟರಿ ಮುಚ್ಚುವ ಹಿಂದಿನ ದಿನವೂ ವಿಷಯ ತಿಳಿಯದೆ ಅಂಧಕಾರದಲ್ಲಿದ್ದು ಹತಾಶೆ, ಅವಮಾನ ಅನುಭವಿಸಬೇಕಾಗುತ್ತದೆ.

ಬಹುತೇಕ ಪ್ರಕರಣಗಳಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಸರಿಯಾಗಿ ನಿಭಾಯಿಸಲಾಗದೆ ಮುಳುಗಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ. ಬೀದಿಗೆ ಬಿದ್ದ ಕಾರ್ಮಿಕರನ್ನು ಚೇತರಿಸಿ ನಿಲ್ಲಿಸಲು ಸಹ ಸರಕಾರ ವಿಫಲಗೊಂಡಿದೆ. ಆರ್ಥಿಕ ಸುಧಾರಣೆಗಳು, ಉದಾರೀಕರಣ ಮತ್ತು ಜಾಗತೀಕರಣಗಳಾಗಿ ಹತ್ತು ವರ್ಷ ಕಳೆದರೂ ಉದ್ಯೋಗ ಸೃಷ್ಟಿ ಮಾತ್ರ ಶೂನ್ಯ ಸ್ಥಿತಿ ತಲುಪಿದೆ. ಯೋಜನಾ ಆಯೋಗದ 1991‑2001 ಅವಧಿಯ ಪ್ರಗತಿ, ಸುಧಾರಣೆಗಳನ್ನು ವಿಮರ್ಶಿಸಿದಾಗ ಕಂಡುಬಂದ ಕಹಿಸತ್ಯ ಇದು. ಉದ್ಯೋಗ ನೀಡಿಕೆ’ಯ ಜವಾಬ್ದಾರಿ ಅದರ ಮೇಲಿದ್ದರೂ ಸರಕಾರ ಕೈಚೆಲ್ಲಿ ‘ಎಕ್ಸಿಟ್ ಪಾಲಿಸಿ’ಯತ್ತ ಧ್ಯಾನ ಮೂಡಿಸಿದೆ. ದೇಶದ ಆರ್ಥಿಕ ಸ್ಥಿತಿ ಬಂಡವಾಳ ಹೂಡಿಕೆಯನ್ನು ಬೇಡುತ್ತಿರುವಾಗ ಅದು ಬಂಡವಾಳ ಹಿಂತೆಗೆದತ್ತ ಮುಖ ಮಾಡಿದೆ ಎನ್ನುವುದೂ ಸನ್ನಿವೇಶದ ದೊಡ್ಡ ವ್ಯಂಗ್ಯ(ವಿ. ಕ., 1‑8‑2004).

ಪ್ರಸ್ತುತ ರಾಜ್ಯದಲ್ಲಿ 92 ಸಾರ್ವಜನಿಕ ಉದ್ದಿಮೆಗಳು ಕಾರ್ಯ ನಿರ್ವಹಿಸುತ್ತಿದ್ದು ಲಾಭ ಮಾಡಿರುವ ಉದ್ದಿಮೆಗಳು 45, ನಷ್ಟದ ಉದ್ದಿಮೆಗಳ ಸಂಖ್ಯೆ 35, ಲಾಭ ನಷ್ಟವಿಲ್ಲದ ಉದ್ದಿಮೆಗಳು 8, ಲಾಭ ಹೆಚ್ಚಳ 18, ಕಡಿಮೆ ಲಾಭ 16, ನಷ್ಟದ ಬಳಿಕ ಲಾಭ 10, ನಷ್ಟ ಹೆಚ್ಚಳ 15, ನಷ್ಟ ಕಡಿಮೆ 14, ಲಾಭದ ಬಳಿಕ ನಷ್ಟದತ್ತ ಸಾಗಿರುವ ಉದ್ದಿಮೆಗಳು 6(2‑2‑2006, ವಿ.ಕ.). ರಾಜ್ಯದಲ್ಲಿ ಪ್ರಸ್ತುತ ವಿಶೇಷವಾಗಿ ಮಾಹಿತಿ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ನೀಡಲಾ ಗುತ್ತಿದ್ದು, ಬೃಹತ್ ಕೈಗಾರಿಕೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಉದಾಹರಣೆಗೆ ಬೆಂಗಳೂರಿನಲ್ಲಿ ಪ್ರಸ್ತುತ 1,500ಕ್ಕೂ ಹೆಚ್ಚು ಐ.ಟಿ. ಕಂಪೆನಿಗಳಿದ್ದು 2,85 ಲಕ್ಷ ಜನರು ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ವಾರಕ್ಕೆ 4 ಹೊಸ ಐ.ಟಿ. ಕಂಪೆನಿಗಳು ಪ್ರಾರಂಭವಾಗುತ್ತಿದೆ. 2,00,000ಕ್ಕೂ ಹೆಚ್ಚು ಜೈವಿಕ ತಂತ್ರಜ್ಞಾನದ ಕೆಲಸಗಾರರಿದ್ದಾರೆ. ವಾರ್ಷಿಕ ಬೆಳವಣಿಗೆಯ ದರ ಶೇ.30ರಷ್ಟು ಇದೆ(ವಿ.ಕ., 6‑11‑2005).

ಹುಬ್ಬಳ್ಳಿ, ಧಾರವಾಡದಲ್ಲಿ 20 ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಿವೆ ಎಂದು 2001ರ ಸಮೀಕ್ಷೆ ತಿಳಿಸುತ್ತಿದ್ದರೂ ಒಂದು ಕಾಲಕ್ಕೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಖಾನೆಗಳು ಪ್ರಸ್ತುತ ಕೇವಲ ಕಾಗದದ ಮೇಲೆ ಅಸ್ತಿತ್ವದಲ್ಲಿವೆ ಎಂಬುದನ್ನು ಗಮನಿಸಬೇಕು. ಸುವರ್ಣ ಯುಗವನ್ನು ಆಚರಿಸಿದ್ದ ಮಂಗಳೂರು ಹೆಂಚು ಉದ್ಯಮ ಪ್ರಸ್ತುತ ಜೀವನ್ಮರಣ ಹೋರಾಟ ನಡೆಸಿದೆ. ಈಗ ಮಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಹೆಂಚು ಕಾರ್ಖಾನೆಗಳಿವೆ. 70ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 43 ಹೆಂಚಿನ ಕಾರ್ಖಾನೆಗಳಿದ್ದು ಸಾವಿರಾರು ಕಾರ್ಮಿಕರಿಗೆ ಆಸರೆ ನೀಡಿದ್ದವು. ಆದರೆ ಅಲ್ಲಿ ಕೇವಲ 5 ಕಾರ್ಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಕಚ್ಚಾ ವಸ್ತುಗಳ ಮಾರುಕಟ್ಟೆಯ ಸಮಸ್ಯೆಯೂ ಇದೆ.

ಎಣ್ಣೆ ಉತ್ಪಾದನೆಗೆ ಪ್ರಸಿದ್ಧವಾಗಿದ್ದ ವಿಜಾಪುರದ ಎಣ್ಣೆ ಗಿರಣಿಗಳು ಜಾಗತೀಕರಣ ದಿಂದಾಗಿ ತತ್ತರಿಸಿಹೋಗಿವೆ. 1990ರವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಎಣ್ಣೆ ಉದ್ಯಮ ವಿದೇಶಿ ಎಣ್ಣೆ ಉತ್ಪನ್ನಗಳು ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ ಕಾರಣ ನಲುಗಿತು. ರಾಜ್ಯ ಸರ್ಕಾರದ ಪ್ರತಿಷ್ಠಿತ ಉದ್ದಿಮೆಯಾಗಿದ್ದ ಎನ್.ಜಿ.ಇ.ಎಫ್. ಸಾವಿನ ಅಂಚನ್ನೇ ಕಂಡಿದೆ. (2002) ಅಲ್ಲಿ ಒಂದು ಸಮಯದಲ್ಲಿ 7000 ಕಾರ್ಮಿಕರಿದ್ದರು. ರಾಜ್ಯದಲ್ಲಿರುವ 40 ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ 8 ಕಾರ್ಖಾನೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು, 7 ಕಾರ್ಖಾನೆಗಳು ಕಬ್ಬು ಅರೆಯದೆ ಸ್ಥಗಿತಗೊಂಡಿದೆ.

ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಂಡು (2005) ಸುಮಾರು 2000 ಸಾವಿರ ಕಾರ್ಮಿಕರು ಅತಂತ್ರ ಪರಿಸ್ಥಿತಿ ಎದುರಿಸಬೇಕಾಗಿದೆ. ಕೆಜಿಎಫ್ನಲ್ಲಿ ಗಣಿ ಆರಂಭವಾದ ದಿನಗಳಲ್ಲಿ ಸುಮಾರು 1 ಲಕ್ಷ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು. 2001ರ ಮಾರ್ಚ್ನಲ್ಲಿ ಗಣಿ ಮುಚ್ಚಿದಾಗ ಇದ್ದ ಕಾರ್ಮಿಕರ ಸಂಖ್ಯೆ ಕೇವಲ 4,000 1941ರಷ್ಟು ಹಿಂದೆಯೇ ಸಣ್ಣ ಪಟ್ಟಣ ಹರಿಹರದಲ್ಲಿ ಖಾಸಗಿಯಾಗಿ ಮೈಸೂರು ಕಿರ್ಲೋಸ್ಕರ್ ಕಂಪೆನಿ ಪ್ರಾರಂಭಿಸಿದ್ದು ವಿಶ್ವದಾದ್ಯಂತ ಹೆಸರು ಗಳಿಸಿತ್ತು. ಅದು ಮುಚ್ಚಿದ ವೇಳೆ(2001) 1,500 ಕಾರ್ಮಿಕರಿದ್ದರು.

ಹೀಗೆ ಆಧುನಿಕ ಕೈಗಾರಿಕಾ ಬೆಳವಣಿಗೆಯ ಹೊಸ ಸೃಷ್ಟಿಯಲ್ಲೇ ಕಾರ್ಮಿಕ ವರ್ಗದ ಶೋಷಣೆ ಅಂತರ್ಗತವಾಗಿದ್ದು, ಆಳುವವರ್ಗ ಹಾಗೂ ಬಂಡವಾಳಶಾಹಿಗಳ ದಮನ ಕಾಂಡದ ಎದುರು ಸೆಟೆದು ನಿಂತು ನ್ಯಾಯ, ಸಮಾನತೆ, ಬಿಡುಗಡೆ ಹಾಗೂ ಜೀವನ ಮಟ್ಟದ ಸುಧಾರಣೆಗಾಗಿ ಕಾರ್ಮಿಕ ವರ್ಗ ನಡೆಸಿದ ಚರಿತ್ರಾರ್ಹ ಹೋರಾಟಗಳು ಹಾಗೂ ಅವುಗಳು ತಂದ ಆರ್ಥಿಕ, ಸಾಮಾಜಿಕ ಬೆಳವಣಿಗೆಗಳನ್ನು ಯಾರು ನಿರಾಕರಿಸುವಂತಿಲ್ಲ ಹಾಗೂ ನಿರ್ಲಕ್ಷಿಸುವಂತಿಲ್ಲ.

ಪರಾಮರ್ಶನ ಗ್ರಂಥಗಳು ಹಾಗೂ ಲೇಖನಗಳು

1. ಕನ್ನಡ ವಿಷಯ ವಿಶ್ವಕೋಶ – ಮೈಸೂರು: ಪ್ರಸಾರಾಂಗ,ಮೈಸೂರು ವಿಶ್ವವಿದ್ಯಾಲಯ,.

2. ಚಂದ್ರಶೇಖರ್ ಎಸ್.(ಸಂ), ಕರ್ನಾಟಕ ಚರಿತ್ರೆ-ಸಂ.7, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

3. ನಂಜುಂಡಪ್ಪ ಸಿ., ಕಾರ್ಮಿಕ ಚಳವಳಿಯ ಕುರಿತು

4. ಸಮತಾ ಬಿ., ದೇಶಮಾನೆ ಬಿ., ಜಾಗೃತಿ ಬಿ.ದೇಶಮಾನೆ, ಅಂಬೇಡ್ಕರ್ ದೃಷ್ಟಿಯಲ್ಲಿ ಕಾರ್ಮಿಕರು ಮತ್ತು ಮಹಿಳೆಯರು.

5. ಅನಂತರಾಮರಾವ್ (ಪ್ರ.ಸಂ.), ಸ್ವರ್ಣರೇಖೆ (19471997), ಮಂಗಳೂರು: ವಿದ್ಯಾ ಪಬ್ಲಿಷಿಂಗ್ ಹೌಸ್.

6. ಉಪಾಧ್ಯಾಯ ಎನ್.ಕೆ, ನಾನು ನಡೆದು ಬಂದ ದಾರಿ, ಬೆಂಗಳೂರು: ಕ್ರಿಯಾ ಪ್ರಕಾಶನ.

7. ಶಿವಚಿತ್ತಪ್ಪ ಕೆ., ಕಾರ್ಮಿಕ ಅರ್ಥಶಾಸ್ತ್ರ, ಮೈಸೂರು: ಭಾರತಿ ಪ್ರಕಾಶನ

8. ಸಿಐಟಿಯು ಪ್ರಕಟಣೆ, ಕಾರ್ಮಿಕರ ಕುರಿತಲ್ಲ ಕಾರ್ಮಿಕರ ವಿರುದ್ಧ, ಬೆಂಗಳೂರು: ಕರ್ನಾಟಕ ರಾಜ್ಯ ಸಮಿತಿ.

9. ಶಂಕರನಾರಾಯಣ, ‘ಕಾರ್ಮಿಕ ಚಳವಳಿ’, ಎಸ್.ನಿಜಲಿಂಗಪ್ಪ ಶತಮಾನೋತ್ಸವ ಸಂಸ್ಮರಣೆ ಗ್ರಂಥ,

10. ಐಕ್ಯರಂಗ ವಾರಪತ್ರಿಕೆ, ‘ಕೆಂಪು ಸೂರಿ’ಯ ‑ ಕಾಮ್ರೆಡ್ ಸೂರಿ ಶ್ರದ್ಧಾಂಜಲಿಯ ವಿಶೇಷ ಸಂಚಿಕೆ -ಸಂ.24

11. ಎ ಹ್ಯಾಂಡ್ ಬುಕ್ ಆನ್ ಲೇಬರ್ ಲಾಸ್ 2000, ಡಿರ್ಪಾಮೆಂಟ್ ಆಫ್ ಲೇಬರ್, ಬೆಂಗಳೂರು: ಗೌರ್ನಮೆಂಟ್ ಆಫ್ ಕರ್ನಾಟಕ.

12. ಕರ್ನಾಟಕ ಇಯರ್ ಬುಕ್, 1987-88.

12. ಕರ್ನಾಟಕ ರಾಜ್ಯ ಗೆಜೆಟಿಯರ್, ಭಾಗ-3, 1986

13. ಕಾರ್ಮಿಕರ ಅಗ್ರಗಣ್ಯ ಕಾರ್ಮಿಕ ನಾಯಕರುಗಳಾದ ಶ್ರೀ ವಿ.ಜಿ.ಕೆ.ನಾಯರ್ (ಸೀಟು), ಜಿ.ಎನ್.ನಾಗರಾಜ್-ಪ್ರಧಾನ ಕಾರ್ಯದರ್ಶಿ(ಸಿ.ಪಿ.ಎಂ.), ಮೈಕೇಲ್ ಫರ್ನಾಂಡೀಸ್ (ಹೆಚ್ಎಂಕೆಪಿ) ಹಾಗೂ ಇತರ ಕಾರ್ಮಿಕ ನಾಯಕರುಗಳೊಡನೆ ವೈಯಕ್ತಿಕವಾಗಿ ಚರ್ಚಿಸಿ ಮಾಹಿತಿ ಪಡೆದದ್ದು