ಏಕೀಕರಣ ಎಂಬ ಪದಕ್ಕೆ ನಿಘಂಟು ಒಂದುಗೂಡಿಸುವುದು ಎಂಬ ಅರ್ಥವನ್ನು ಕೊಡುತ್ತದೆ. ದೇಶದ ಕೆಲವು ಭಾಗಗಳನ್ನು ಆಡಳಿತೀಯ ಮತ್ತು ರಾಜಕೀಯ ಉದ್ದೇಶಗಳಿಗಾಗಿ ಒತ್ತಟ್ಟಿಗೆ ತರುವುದನ್ನು ಇಲ್ಲಿ ಅದು ಸೂಚಿಸುತ್ತದೆ. ದೇಶದ ಇತರ ರಾಜ್ಯಗಳಂತಲ್ಲದೆ ಭಾಷೆಯ ಆಧಾರದ ಮೇಲೆ 1956ರಲ್ಲಿ ಕರ್ನಾಟಕದ ಏಕೀಕರಣವಾಯಿತು. ಭಾರತದ ರಾಜ್ಯಗಳು ಎರಡು ಹಂತಗಳಲ್ಲಿ ರೂಪುಗೊಂಡವು. ಒಂದು ಹಂತ 1948ಲ್ಲಿ ರಾಜ್ಯಗಳು ಸಂಯೋಜನೆಗೊಂಡ ಸಂದರ್ಭ. ಎರಡನೆಯದು, ಮೇಲೆ ಹೇಳಿದಂತೆ 1956ರಲ್ಲಿ ಭಾಷೆಯ ಆಧಾರದ ಮೇಲೆ ಪುನಾರಚನೆಗೊಂಡ ಸಂದರ್ಭ. ವಸಾಹತುಶಾಹಿಯ ಇತಿಹಾಸವನ್ನು ಓದಿದರೆ, ಭಾರತ ಭೂಪ್ರದೇಶದ ಮೂರನೆಯ ಒಂದು ಭಾಗದಷ್ಟು ನೆಲವು ಬ್ರಿಟಿಷರ ನೇರ ಆಡಳಿತ ಹತೋಟಿಗೆ ಹೊರತಾಗಿ ದೇಶೀಯ ರಾಜಮಹಾರಾಜರ ಕೈಗಳಲ್ಲಿದ್ದಿತು ಎಂಬುದು ವ್ಯಕ್ತವಾಗುತ್ತದೆ. ಈ ಸಂಸ್ಥಾನಗಳಲ್ಲಿಯೂ ಬ್ರಿಟಿಷರ ಪರೋಕ್ಷ ಅಧಿಕಾರವಿದ್ದರೂ, ರಾಜ್ಯಗಳು (ಸುಮಾರು 600ರಷ್ಟು) ಅನೇಕ ವಿಧಗಳಲ್ಲಿ ವ್ಯಾಪಕ ವ್ಯತ್ಯಾಸಗಳನ್ನು ಹೊಂದಿದ್ದುವು. ಈ ರಾಜ್ಯಗಳ ಆಡಳಿತ ರಚನೆಯೂ ಬೇರೆ ಬೇರೆಯಾಗಿತ್ತು. 60 ರಾಜ್ಯಗಳಲ್ಲಿ ಮಾತ್ರ ಏನೋ ಒಂದು ಬಗೆಯ ಶಾಸಕಾಂಗ ಎನಿಸಿಕೊಳ್ಳುವುದು ಇದ್ದಿತು; ಮಿಕ್ಕಂತೆ ಅವೆಲ್ಲ ಏಕವ್ಯಕ್ತಿಯ ಆಳ್ವಿಕೆಗೆ ಒಳಪಟ್ಟಿದ್ದುವು. ಹಿಂದಿನ ಮೈಸೂರು ಸಂಸ್ಥಾನವೂ ಅಂಥದೊಂದು. ಭಾರತದ ರಾಜ್ಯಗಳು ಬಹುತೇಕ ಆಡಳಿತೀಯ ಪರಿಗಣನೆಗಳ ಮೇಲೆ ವ್ಯವಸ್ಥೆಗೊಂಡಿದ್ದುವು. 1947ಕ್ಕೆ ಮುಂಚೆ ಅವು ಹೊಂದಿದ್ದ ಸ್ಥಾನಮಾನವೂ ಅದಕ್ಕೆ ಆಧಾರವಾಗಿದ್ದಿತು. ಇದರಿಂದಾಗಿ, ಭಾಷಾವಾರು ಪ್ರಾಂತಗಳ ಬೇಡಿಕೆಯ ರೂಪದಲ್ಲಿ ವಿವಿಧ ರಾಷ್ಟ್ರ ಮೂಲದ ಗುಂಪುಗಳು ಮೇಲೆದ್ದು ಒತ್ತಾಯಪಡಿಸತೊಡಗಿದವು. ಅಂತಿಮವಾಗಿ ನಾಯಕತ್ವವು ರಾಜ್ಯಗಳ ಪುನರ್ವಿಂಗಡಣೆಗೆ ಒಪ್ಪಬೇಕಾಯಿತು. 1953ರಲ್ಲಿ ರಾಜ್ಯ ಪುನರ್ವಿಂಗಡಣಾ ಆಯೋಗವೊಂದು ನೇಮಿತವಾಯಿತು. 1956ರ ಪರಿಸ್ಥಿತಿಯನ್ನು ಹೆಚ್ಚು ಕಡಿಮೆ ಭಾಷಾ ಪ್ರದೇಶಗಳಿಗೆ ಹೊಂದಿಕೊಳ್ಳುವಂತೆ ರೂಪಿಸಲಾಯಿತು. ವಿವಿಧ ಭಾಷೆಗಳು ಮತ್ತು ಸಾಂಸ್ಕೃತಿಕ ತಂಡಗಳು ಪಾಲುಗೊಳ್ಳುವಂತೆ, ಅವರಿಗೆ ತೃಪ್ತಿಯ ಭಾವನೆಯುಂಟಾಗುವಂತೆ ಕೆಲವು ರಾಜ್ಯಗಳಿಂದ ಘಟಕಗಳನ್ನು ಕಿತ್ತು ಬೇರೆಯದಕ್ಕೆ ಜೋಡಿಸಲಾಯಿತು.

110-310 ಮತ್ತು 180-450 ಉತ್ತರ ಅಕ್ಷಾಂಶಗಳ ನಡುವೆ; 740-120 ಮತ್ತು 780-400 ಪೂರ್ವ ರೇಖಾಂಶಗಳ ನಡುವೆ; ಉತ್ತರ-ದಕ್ಷಿಣ ಸುಮಾರು 700 ಕಿ.ಮೀ. ಗರಿಷ್ಠ ಉದ್ದ, ಪೂರ್ವ-ಪಶ್ಚಿಮ ಸುಮಾರು 400 ಕಿ.ಮೀ ಇರುವ ಕರ್ನಾಟಕ  ಉತ್ತರದಲ್ಲಿ ಮಹಾರಾಷ್ಟ್ರ ರಾಜ್ಯ, ವಾಯುವ್ಯದಲ್ಲಿ ಗೋವಾ, ಪೂರ್ವದಲ್ಲಿ ಆಂಧ್ರ ಪ್ರದೇಶ, ದಕ್ಷಿಣ ಮತ್ತು ಆಗ್ನೇಯಗಳಲ್ಲಿ ತಮಿಳುನಾಡು, ನೈರುತ್ಯದಲ್ಲಿ ಕೇರಳ ಹಾಗೂ ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರಗಳನ್ನು ತನ್ನ ಮೇರೆಗಾಳನ್ನಾಗಿ ಹೊಂದಿದೆ. ಭಾರತ ಪರ್ಯಾಯ ದ್ವೀಪದ ಪಶ್ಚಿಮ-ಮಧ್ಯ ಭಾಗದಲ್ಲಿರುವ ಈ ಪ್ರದೇಶದಲ್ಲಿ ಮುಖ್ಯವಾಗಿ ಕನ್ನಡ ಮಾತನಾಡುವ ಜನರಿದ್ದಾರೆ. ರಾಜ್ಯದಲ್ಲಿ ಅರೇಬಿಯನ್ ಸಮುದ್ರಕ್ಕೂ ಪಶ್ಚಿಮ ಘಟ್ಟಗಳಿಗೂ ನಡುವೆ ಕಿರಿದಾದ ಸುಮಾರು 400 ಕಿ.ಮೀ. ಉದ್ದವಾದ ಅತ್ಯಂತ ಮನೋಹರವಾದ ಕರಾವಳಿಯಿದೆ; ಅಪೂರ್ವ ನೈಸರ್ಗಿಕ ದೃಶ್ಯಗಳಿಂದಲೂ, ನಿತ್ಯ ಹರಿದ್ವರ್ಣ ಕಾಡುಗಳಿಂದಲೂ ಕೂಡ ಭವ್ಯವಾದ ಬೆಟ್ಟಸಾಲುಗಳ ಪಶ್ಚಿಮ ಘಟ್ಟಗಳಿವೆ; ದಕ್ಷಿಣದಲ್ಲಿ ಅಗಲವಾದ ಏರು ಇಳಿವುಗಳಿಂದ ಕೂಡಿದ ಭೂಭಾಗವಿದೆ; ಹಿಂದಿನ ಮೈಸೂರು ಸಂಸ್ಥಾನದ ಮುಖ್ಯ ಭಾಗವಾದ ತೊಟ್ಟಿಯಾಕಾರದ ಪ್ರದೇಶವಿದೆ; ಉತ್ತರದಲ್ಲಿ ಅಷ್ಟಾಗಿ ಏರು ಇಳಿವು ಇಲ್ಲದ, ಒಂದೇ ಬಗೆಯ, ಕಪ್ಪನೆಯ ಹತ್ತಿ ಮಣ್ಣಿನ ಹಾಗೂ ಮರಗಳಿಲ್ಲದ ವಿಶಾಲ ಬಯಲುಗಳ ಪ್ರದೇಶವಿದೆ.

ಹೆಸರಿಗೆ ಸಂಬಂಧಿಸಿದಂತೆ, ಹಲವು ಬೇರೆ ಬೇರೆ ಸಿದ್ಧಾಂತಗಳಿವೆ. ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ನೋಡಬಹುದು. ಕರ್ನಾಟಕ, ಕರ್ನಾಟ ಮತ್ತ ಕನ್ನಡ ಎಂಬ ಪದಗಳು ಪ್ರದೇಶವನ್ನೂ ಭಾಷೆಯನ್ನೂ ಉಲ್ಲೇಖಿಸುವಂತೆ ತೋರುತ್ತದೆ. ಚಕ್ರವರ್ತಿ ಅಮೋಘವರ್ಷ ನೃಪತುಂಗನೆಂದು (ಆಸ್ಥಾನದ ವಿದ್ವಾಂಸರಾದ ಶ್ರೀವಿಜಯ ಇದರ ಕರ್ತೃ ಎಂದು ಹೇಳಲಾಗುತ್ತಿದೆ) ಹೇಳಲಾದ ಕವಿರಾಜಮಾರ್ಗ ಮತ್ತು ಆಂಡಯ್ಯನ ಕಬ್ಬಿಗರ ಕಾವ್ಯಗಳಲ್ಲಿ ಕನ್ನಡ ಎಂಬ ಪದವು ಭೂಪ್ರದೇಶವನ್ನು ಸೂಚಿಸುವಂತೆ ಉಲ್ಲೇಖಿತವಾಗಿದೆ. ಚನ್ನಬಸವೇಶ್ವರ ಮತ್ತು ನಿಜಗುಣಶಿವಯೋಗಿಗಳ ಕೃತಿಗಳಲ್ಲಿ ಅದು ಒಂದು ಜಾತಿಯನ್ನೂ ಸೂಚಿಸುತ್ತದೆ. ಅಂತೂ ಮೂಲತಃ ಈ ಪದವು ಒಂದು ಭೂಪ್ರದೇಶವನ್ನೂ ಒಂದು ಭಾಷೆಯನ್ನೂ ಸೂಚಿಸಲು ಬಳಕೆಯಾಗುತ್ತಿತ್ತು. ಕರ್ನಾಟಕವು ಕಣ್ ಅಥವಾ ಕಲ್ ಎಂಬುದರಿಂದ ಬಂದಿದೆ. ಅವರು ಇಂದಿನ ಮಹಾರಾಷ್ಟ್ರದ ಖಾಂದೇಶ್ ಪ್ರದೇಶದಲ್ಲಿ ನೆಲೆಸಿದ್ದ ಗೋವಳಿಗ ಬುಡಕಟ್ಟಿನ ಜನರು, ಅವರಿಂದಾಗಿ ಈ ಪ್ರದೇಶಕ್ಕೆ ಕಣ್ಣದೇಶ ಎಂಬ ಹೆಸರು ಬಂದಿತು ಎಂಬುದಾಗಿ ಶಂಬಾ ಜೋಶಿ ಅಭಿಪ್ರಾಯ ಪಡುತ್ತಾರೆ. ಆದರೆ ಖಾಂದೇಶವನ್ನು ಮೊದಲು ಕಣ್ಣದೇಶವೆಂದು ಕರೆಯುತ್ತಿದ್ದರೆನ್ನುವುದಕ್ಕೂ ಕಣ್ಣ ಅಥವಾ ಕಲ್ಲ ಜನರಿಂದ ಅದಕ್ಕೆ ಆ ಹೆಸರು ಬಂದಿತು ಎಂಬುದಕ್ಕೂ ನಿರ್ಣಾಯಕವಾದ ಆಧಾರಗಳನ್ನು ಒದಗಿಸಿಲ್ಲ. ಇನ್ನೊಂದು ಸಿದ್ಧಾಂತ ಕರ್ನಾಟಕ ಎಂಬ ಹೆಸರು ಕರ-ನಾಡು, ಕಪ್ಪು ಮಣ್ಣಿನ ನೆಲ ಎಂಬುದರಿಂದ ಬಂದಿದೆ ಎನ್ನುವುದು. ಕರ್ನಾಟಕದ ಹೆಚ್ಚಿನ ಭಾಗಗಳು ದಖನ್ ಪ್ರಸ್ತಭೂಮಿಯಲ್ಲಿದ್ದು ಕಪ್ಪುಮಣ್ಣಿನಿಂದ ತುಂಬಿವೆ ಎನ್ನುವ ವಿವರಣೆ ಒಪ್ಪಿಗೆಯಾಗುವಂಥದಾಗಿದೆ. ಆದರೆ ಹೆಸರಿನ ಮೂಲವು ಕರುನಾಡು ಎಂಬ ಇನ್ನೊಂದು ವಾದಕ್ಕೆ ಇನ್ನೂ ಬಲವಾದ ಆಧಾರವಿದೆ. ತಮಿಳಿನ ಪ್ರಾಚೀನ ಕೃತಿಗಳಾದ ಶಿಲಪ್ಪಧಿಕಾರಂ ಮತ್ತು ತೋಳ್ಗಾಪ್ಪಿಯಂಗಳಲ್ಲಿ ಈ ಭೂಪ್ರದೇಶವನ್ನು ಕರುನಾಟ ಎಂದು ಕರೆದಿದೆ. ತಮಿಳರು ಈ ಸೂಕ್ತವಾದ ಹೆಸರನ್ನು ಕೊಟ್ಟರು. ಪೂರ್ವ ಘಟ್ಟಗಳ ಆಚೆಗೆ ಪ್ರಸ್ಥಭೂಮಿಯಲ್ಲಿರುವ ಎತ್ತರವಾದ ಭೂಮಿ ಎಂಬುದು ಅವರ ಅರ್ಥವಾಗಿತ್ತು. ಕರುನಾಡ ಅಥವಾ ಎತ್ತರದ ಭೂಮಿ ಎನ್ನುವುದು ಸಂಸ್ಕೃತದಲ್ಲೂ ಕೇಳಿಬರುತ್ತದೆ. ಬಾದಾಮಿ ಚಾಲುಕ್ಯರ ಸೈನ್ಯವನ್ನು ಕರ್ಣಾಟಕಬಲ ಎಂದು ಕರೆಯಲಾಗಿತ್ತು. 12ನೆಯ ಶತಮಾನದ ಚಾವಾದ ಒಂದು ಶಾಸನವೂ ಕರ್ನಾಟಕವನ್ನು ಉಲ್ಲೇಖಿಸುತ್ತದೆ.

1956ಕ್ಕೆ ಹಿಂದಿನ ಮೈಸೂರು ರಾಜ್ಯಕ್ಕೆ ಹೋಲಿಸಿದರೆ, ಇಂದಿನ ಕರ್ನಾಟಕದಲ್ಲಿ, ಮೈಸೂರು ರಾಜರು ಆಳುತ್ತಿದ್ದ ಸಂಸ್ಥಾನವೂ ಮುಂಬಯಿ ಪ್ರೆಸಿಡೆನ್ಸಿ, ಮದರಾಸು ಪ್ರೆಸಿಡೆನ್ಸಿ, ಹೈದರಾಬಾದು ಮತ್ತು ಕೊಡಗುಗಳ ಕೆಲವು ಪ್ರದೇಶಗಳೂ ಸೇರಿವೆ. ಕರ್ನಾಟಕವು ಬಹು ಪ್ರಾಚೀನತೆಯುಳ್ಳ ಪ್ರದೇಶ. ಕೊನೆಯ ಪಕ್ಷ 2000 ವರ್ಷಗಳ ಹಿಂದೆಯೇ ಹಾಗೆ ಸಂಬೋಧಿತವಾಗಿತ್ತು. ಮೊದಲ ಬಾರಿಗೆ ಕರ್ನಾಟಕ ಬಾದಾಮಿ ಚಾಲುಕ್ಯ ಅರಸ ಎರಡನೆಯ ಪುಲಿಕೇಶಿಯ(610-642) ಕಾಲದಲ್ಲಿ ಏಕೀಕೃತವಾಯಿತು. ಎರಡನೆಯ ಪುಲಿಕೇಶಿಯು ಸ್ಥಾಪಿಸಿದ ಸಾಮ್ರಾಜ್ಯವು ಕಾವೇರಿಯಿಂದ ನರ್ಮದೆಯವರೆಗೆ ವ್ಯಾಪಿಸಿತ್ತು. ರಾಜವಂಶಗಳು ಬದಲಾದರೂ (ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಕಲ್ಯಾಣ ಚಾಲುಕ್ಯರು) ಸಾಮ್ರಾಜ್ಯವು ಮಾತ್ರ ಸುಮಾರು ಐದು ಶತಮಾನಗಳ ಕಾಲ ಸುಭದ್ರವಾಗಿ ಉಳಿಯಿತು. ಭಾರತ ಉಪಖಂಡದ ಕೇಂದ್ರ ಭಾಗದಲ್ಲಿದ್ದು ಕರ್ನಾಟಕದ ಆಧಾರಿತ ಸಾಮ್ರಾಜ್ಯವು ಒಂದಕ್ಕಿಂತ ಹೆಚ್ಚು ರೀತಿಗಳಲ್ಲಿ ಭಾರತಿಯ ಇತಿಹಾಸ ಮತ್ತು ಸಂಸ್ಕೃತಿಗಳ ಮೇಲೆ ಪ್ರಭಾವ ಬೀರಿತು. ಪುಲಿಕೇಶಿಯ ವಂಶದ ಸೈನ್ಯವನ್ನು ಕರ್ನಾಟಕ ಬಲ ಎಂದು ಕರೆದು ‘‘ಅಜೇಯವಾದದ್ದು’’ ಎಂದು ವರ್ಣಿಸಲಾಯಿತು. ಅರಬ್ ಸಂದರ್ಶಕ ಸುಲೇಮಾನ್ (ಕ್ರಿ.ಶ.851) ಈ ಸಾಮ್ರಾಜ್ಯವನ್ನು ಜಗತ್ತಿನ ನಾಲ್ಕು ಬೃಹತ್ ಸಾಮ್ರಾಜ್ಯಗಳಲ್ಲಿ ಒಂದು ಎಂದು ಹೇಳುತ್ತಾನೆ. ತಾನು ‘ಕಣಾಣು’ ಎಂದು ಹೇಳಿಕೊಳ್ಳಲು ವೈಯಕ್ತಿಕ ಹೆಮ್ಮೆಪಡಬೇಕಾದ ಕಾಲ ಅದಾಗಿತ್ತು. ಬಂಗಾಳದ ಸೇನರು ತಮ್ಮನ್ನು ‘‘ಕರ್ಣಾಟ ಕ್ಷತ್ರಿಯ’’ರೆಂದು ಹೇಳಿಕೊಂಡರು. ಬಿಹಾರದ ಮಿಥಿಲೆಯಲ್ಲಿ ಸ್ಥಾಪಿತವಾದ ಒಂದು ರಾಜವಂಶವು ತನ್ನನ್ನು ‘‘ಕರ್ಣಾಟ ವಂಶ’’ವೆಂದು ಕರೆದುಕೊಂಡಿತು. ದೂರದ ಕಾಶ್ಮೀರದ ಕವಿ ಬಿಲ್ಹಣನು, ಸೂಕ್ತ ಪೋಷಕನನ್ನು ಹುಡುಕಿಕೊಂಡು ಕರ್ನಾಟಕದ ರಾಜಧಾನಿ ಕಲ್ಯಾಣಕ್ಕೆ ಬಂದನು. ಕರ್ನಾಟಕವು ಹಿಂದೂ ದೇವತೆಗಳಿಗಾಗಿ, ಬೌದ್ಧ ಮತ್ತು ಜೈನರನ್ನು ಅನುಕರಿಸಿದ ಕಲ್ಲಿನಲ್ಲಿ ಕೊರೆದ ಗುಹಾಂತರ ದೇವಾಲಯಗಳಲ್ಲಿ ನಿರ್ಮಿಸಿತು. ಈ ಪ್ರಯತ್ನವು ಶಿಖರವನ್ನು ಮುಟ್ಟುವುದು ಈಗ ಮಹಾರಾಷ್ಟ್ರಕ್ಕೆ ಸೇರಿರುವ ಎಲ್ಲೋರದ ಕೈಲಾಸ ದೇವಾಲಯದಲ್ಲಿ. ದೇವಾಲಯ ವಾಸ್ತುಶಿಲ್ಪದಲ್ಲಿ ಐಹೊಳೆಯಲ್ಲಿ ಬಾದಾಮಿ ಚಾಲುಕ್ಯರು ನಡೆಸಿದ ಪ್ರಯೋಗಗಳನ್ನು ಪರ್ಸಿಬ್ರೌನ್, ‘‘ದೇವಾಲಯ ವಾಸ್ತುಶಿಲ್ಪದ ತೊಟ್ಟಿಲುಗಳಲ್ಲಿ ಒಂದು’’ ಎಂದು ವರ್ಣಿಸಿದ್ದಾನೆ. ಅದು ಆಂಧ್ರ, ಮಹಾರಾಷ್ಟ್ರ, ಗುಜರಾತ್, ಒರಿಸ್ಸಾ ಮತ್ತು ಮಧ್ಯಭಾರತದ ದೇವಾಲಯಗಳ ಮೇಲೆ ಪ್ರಭಾವ ಬೀರಿತು. ಕರ್ನಾಟಕವು ತನ್ನ ಸಂಯೋಜಿತ ಸಂಸ್ಕೃತಿಗೆ ಕೂಡ ಪ್ರಸಿದ್ಧವಾಗಿದೆ. ಕಲೆಯಲ್ಲಿ ಇಂಡೋ-ಸಾರ್ಸೆನಿಕ್ ಕಲೆಯ ವಿಶೇಷ ಪಂಥಗಳು ಗುಲ್ಬರ್ಗ, ಬೀದರ್ ಮತ್ತು ಬಿಜಾಪುರಗಳಲ್ಲಿ ವ್ಯಕ್ತವಾದುವು. ಕರ್ನಾಟಕ ಸಂಗೀತದಲ್ಲಿ, ಪರ್ಷಿಯನ್ ಪಲುಕುಗಳು ಕಸಿಗೊಂಡು ದರ್ಬಾರ, ಕಲ್ಯಾಣ ಮೊದಲಾದ ಹೊಸರಾಗಗಳನ್ನು ಪುರಂದರ ಮೊದಲಾದ ಸಂತರು ವಿಕಾಸಗೊಳಿಸಿದರು. ಬಿಜಾಪುರದ ಅರಸ ಎರಡನೆಯ ಇಬ್ರಾಹಿಂ ಹಿಂದೂ ಸಂಗೀತವನ್ನು ಮುಸ್ಲಿಮರಿಗೆ ಪರಿಚಯ ಮಾಡುವ ಸಲುವಾಗಿ ಕಿತಾಬ್-ಎ-ನವರಸ್ ಎಂಬ ಕೃತಿಯನ್ನು ರಚಿಸಿದನು. ಈ ಪುಸ್ತಕದ ಪ್ರಾರಂಭದಲ್ಲಿ ಗಣಪತಿ ಮತ್ತು ಸರಸ್ವತಿಯರ ಪ್ರಾರ್ಥನೆಗಳಿವೆ. ಖ್ವಾಜಾ ಬಂದೇ ನವಾಜ್ ಮತ್ತು ಬಾಬಾಬುಡನ್ ತಮ್ಮ ಕಾಲದಲ್ಲಿ ಅಪಾರ ಜನಪ್ರಿಯರಾಗಿದ್ದುದಲ್ಲದೆ ಈಗಲೂ ಜನರು ಅವರನ್ನು ಭಕ್ತಿಯಿಂದ ಗೌರವಿಸುತ್ತಾರೆ.