ಕರ್ನಾಟಕವು ಬಹಳ ಹಿಂದಿನಿಂದಲೂ ಆರ್ಥಿಕ ಚಟುವಟಿಕೆಗಳಿಗೆ ಪ್ರಸಿದ್ಧವಾಗಿದೆ. ಅರಸರು ವ್ಯಾಪಕವಾಗಿ ನೀರಾವರಿ ಕಾರ್ಯಗಳನ್ನು ಕೈಗೊಂಡರು. ವಿವಿಧ ಕಸುಬುಗಳ ಮತ್ತು ವಣಿಕ ಸಂಘಗಳನ್ನು ಪ್ರೊತ್ಸಾಹಿಸಿ ಕೈಗಾರಿಕೆಯನ್ನೂ ವಾಣಿಜ್ಯವನ್ನೂ ಪೋಷಿಸಿದರು. ಪ್ರಸಿದ್ಧ ವಣಿಕ ಸಂಘವಾಗಿದ್ದ ಅಯ್ಯವಳೆ(ಐಹೊಳೆ) 600 ಎನ್ನುವುದು ಒಂದು ಬಗೆಯ ವ್ಯಾಪಾರೀ ಗಿಲ್ಡುಗಳ ಒಕ್ಕೂಟ. ಅದು ದಕ್ಷಿಣ ಭಾರತ ಪೂರ್ತಿಯಾಗಿ ಮಾತ್ರವಲ್ಲ ಆಗ್ನೇಯ ಏಷ್ಯದಲ್ಲೂ ತನ್ನ ಪ್ರಭಾವವನ್ನು ವಿಸ್ತರಿಸಿತ್ತು. ಮಂಗಳೂರು ಮಸ್ಕತ್‌ನಲ್ಲಿ ತುಂಬಾ ಬೇಡಿಕೆಯಿದ್ದಿತು. ಕರ್ನಾಟಕದ ಸಂಬಾರ ವಸ್ತುಗಳಿಗೆ ಮಲೆನಾಡು ಪ್ರದೇಶಗಳಿಂದ ಬರುತ್ತಿದ್ದ ಮೆಣಸು ಜಗತ್ತಿನ ಬೇರೆ ಯಾವುದೇ ಭಾಗದ ಮೆಣಸಿಗಿಂತಲೂ ಮೇಲು ಮಟ್ಟದ್ದಾಗಿದ್ದಿತೆಂದು ವರ್ಣಿಸಲಾಗಿದೆ. ಕರ್ನಾಟಕದ ಶ್ರೀಗಂಧವು ಪೂರ್ವ ಪಶ್ಚಿಮ ಗಳೆರಡರಲ್ಲೂ ಅಪಾರವಾದ ಬೇಡಿಕೆಯನ್ನು ಹೊಂದಿತ್ತು. ಈಗಲೂ ಇದೆ. ಟೀಪು ಸುಲ್ತಾನ್ ಪ್ರವೇಶಗೊಳಿಸಿದ ರೇಷ್ಮೆ ಬೇಸಾಯದಿಂದ ಕರ್ನಾಟಕವು ಭಾರತದಲ್ಲಿ ಪ್ರಮುಖ ರೇಷ್ಮೆ ಉತ್ಪಾದಕ ರಾಜ್ಯವಾಯಿತು. ಭಾರತಕ್ಕೆ ವಿದೇಶದಿಂದ ತಂದ, ಕರ್ನಾಟಕಕ್ಕೆ ವಿಶೇಷವಾಗಿ ಬಾಬಾಬುಡನ್ ಎಂಬ ಸೂಫಿ ಸಂತನು ತಂದ ಕಾಫಿ ಇಂದು ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ಅಪಾರವಾದ ಬೇಡಿಕೆಯಿರುವ ವಸ್ತುವಾಗಿದೆ. ಹಾಗೆಯೇ ಏಲಕ್ಕಿ, ಅಡಕೆ ಮೊದಲಾದ ವಾಣಿಜ್ಯ ಬೆಳೆಗಳಿಗೂ ಕರ್ನಾಟಕವು ಪ್ರಸಿದ್ಧ ವಾಗಿದೆ.

ಧರ್ಮದ ದೃಷ್ಟಿಯಿಂದ ಹೇಳುವುದಾದರೆ, ಹೆಚ್ಚು ಕಡಿಮೆ ಎಲ್ಲ ಧಾರ್ಮಿಕ ಪಂಥಗಳೂ ಅಭಿವೃದ್ದಿ ಹೊಂದಿದವು, ಪ್ರತಿಯೊಂದು ಪಂಥವೂ ಪ್ರಸಿದ್ಧ ವ್ಯಕ್ತಿಗಳನ್ನು ಸೃಷ್ಟಿಸಿತು. ಇಸ್ಲಾಂ ಅಭಿವೃದ್ದಿ ಹೊಂದಿತು. ಇಲ್ಲಿನ ಅನೇಕ ದರ್ಗಗಳಿಗೆ ಮುಸ್ಲಿಮರು ಮಾತ್ರವಲ್ಲದೆ ಇತರ ಧರ್ಮಗಳ ಜನರೂ ಹೋಗುತ್ತಾರೆ. ಉಜ್ವಲವಾದ ಖ್ವಾಜಾ ಬಂದೇ ನವಾಜ್ ದರ್ಗ ಇದಕ್ಕೆ ಉದಾಹರಣೆ. ಮಂಗಳೂರಿನ ಬಳಿಯ ಧರ್ಮಸ್ಥಳದ ಮಂಜುನಾಥ ದೇಶದ ಎಲ್ಲ ಭಾಗಗಳಿಂದಲೂ ಭಕ್ತರನ್ನು ಆಕರ್ಷಿಸುತ್ತಿರುವ ದೈವ. ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯು ಜೈನರಿಗೆ ಮಾತ್ರವಲ್ಲ, ಇತರರಿಗೂ ಪ್ರಸಿದ್ಧವಾದ ಯಾತ್ರ  ಸ್ಥಳವಾಗಿದೆ. ಹಾಗೆಯೇ ಹೊಯ್ಸಳರ ಕಾಲದಲ್ಲಿ ನಿರ್ಮಿತವಾದ ಬೇಲೂರು ಮತ್ತು ಹಳೆಬೀಡುಗಳಲ್ಲಿನ ಜಗತ್‌ಪ್ರಸಿದ್ಧ ದೇವಾಲಯಗಳು, ಕ್ರೈಸ್ತಧರ್ಮವೂ ಇಲ್ಲಿ ಬೆಳೆಯಿತು. ಕರ್ನಾಟಕವು ಅನೇಕ ಚರ್ಚುಗಳಿಗಾಗಿ ಹೆಮ್ಮಪಡಬಹುದು. ವೈದಿಕ ದರ್ಶನವನ್ನು ಕುರಿತು ಹೇಳುವುದಾದರೆ, ಅದು ಬಂದದ್ದು ಉತ್ತರದಿಂದಾದರೆ, ಅದರ ಮೇಲಿನ ವ್ಯಾಖ್ಯಾನಕಾರರು, ಭಾಷ್ಯಕಾರರು ಬಂದದ್ದು ದಕ್ಷಿಣದಿಂದ. ಕರ್ನಾಟಕವು ಈ ದಿಸೆಯಲ್ಲಿ ಮಧ್ವ ಮತ್ತು ಬಸವರನ್ನು ಕೊಡುಗೆಯಾಗಿ ನೀಡಿತು. ಮಧ್ವರು ಭಕ್ತಿಪಂಥವನ್ನು ಪ್ರವರ್ತಿಸಿದರೆ, ಬಸವಣ್ಣನವರು ಶಕ್ತಿ ವಿಶಿಷ್ಟಾದ್ವೈತವನ್ನು ಪ್ರತಿಪಾದಿಸಿದರು ಮತ್ತು ಕ್ರಾಂತಿಕಾರಕವಾದ ಸಾಮಾಜಿಕ ದರ್ಶನವೊಂದನ್ನು ಪ್ರವರ್ತಿಸಿದರು. ಶಂಕರ ಮತ್ತು ರಾಮಾನುಜರು ಕರ್ನಾಟಕದಲ್ಲಿ ತಂಗಿದ್ದರು. ಶಂಕರರ ಚಟುವಟಿಕೆಯ ಮುಖ್ಯ ಕೇಂದ್ರಗಳಲ್ಲಿ ಒಂದಾದ ಶೃಂಗೇರಿ ಕರ್ನಾಟಕದಲ್ಲಿದೆ. ಹಾಗೆಯೇ ರಾಮಾನುಜರ ಕಾರ್ಯ ಸ್ಥಾನದ ಮುಖ್ಯ ಕೇಂದ್ರಗಳಲ್ಲೊಂದು ಮೇಲುಕೋಟೆಯಾಗಿದೆ. ಪ್ರತಿಯೊಂದು ಧರ್ಮವೂ ಮೌಲ್ಯವನ್ನು ಎತ್ತಿ ಹಿಡಿದು ಕರ್ನಾಟಕದ ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿತು. ಪ್ರತಿಯೊಂದು ಧರ್ಮವೂ ಕಲೆ, ಸಂಗೀತ, ಸಾಹಿತ್ಯ ಮೊದಲಾದ ಕ್ಷೇತ್ರಗಳಿಗೆ ತನ್ನ ವಿಶಿಷ್ಟ ಕೊಡುಗೆಯನ್ನು ನೀಡಿ ಕರ್ನಾಟಕದ ಸಾಂಸ್ಕೃತಿಕ ಜೀವನವನ್ನು ಸಮೃದ್ಧಗೊಳಿಸಿತು.

ಕರ್ನಾಟಕವು ಗತಕಾಲದ ಬಿಸಿಲಿನಲ್ಲಿ ಬೆಚ್ಚಗೆ ಮೈಕಾಯಿಸಿಕೊಳ್ಳುತ್ತ ಕುಳಿತಿಲ್ಲ. ವರ್ತಮಾನ ಕಾಲದಲ್ಲೂ ಬೇಕಾದಷ್ಟು ಸಾಧನೆಗಳನ್ನು ಮಾಡಿದೆ. ಇಲ್ಲಿರುವ ನೀರಾವರಿ ಸೌಲಭ್ಯ 20%ಕ್ಕಿಂತ ಹೆಚ್ಚಿಲ್ಲ, ಇದು ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಅತ್ಯಂತ ಕಡಿಮೆಯಾದದ್ದು. ಆದರೂ ಆಹಾರದ ಸ್ವಯಂಪೂರ್ಣತೆಯನ್ನು ಸಾಧಿಸಿದೆ. ಎಲೆಕ್ಟ್ರಾನಿಕ್ ಉದ್ದಿಮೆಯಲ್ಲಿ ಇದು ಮುಂಚೂಣಿಯಲ್ಲಿರುವ ರಾಜ್ಯವಾಗಿದೆ. ಇಲ್ಲಿಯ ಸೊಗಸಾದ ಮೂಲಭೂತ ವ್ಯವಸ್ಥೆಯು ಅನೇಕ ಪ್ರಮುಖ ಕೇಂದ್ರ ಉದ್ಯಮಗಳನ್ನು ಆಕರ್ಷಿಸಿದೆ. ವಿಮಾನಗಳು, ಮೋಟಾರು ವಾಹನಗಳು, ರೈಲುಗಾಡಿಗಳು, ಅತ್ಯಂತ ಸೂಕ್ಷ್ಮವಾದ ವಿದ್ಯುತ್ ಹಾಗೂ ವಿದ್ಯುನ್ಮಾನ ಸಲಕರಣೆಗಳು, ಟೆಲಿಫೋನುಗಳು, ಟೆಲಿವಿಜನ್ನುಗಳು ಮೊದಲಾದ ವೈವಿಧ್ಯಮಯವಾದ ವಸ್ತುಗಳನ್ನು ರಾಜ್ಯವು ಉತ್ಪಾದಿಸುತ್ತಿದೆ. ರಾಜ್ಯದ ರಾಜಧಾನಿಯಾದ ಬೆಂಗಳೂರು ಆದರ್ಶಪ್ರಾಯವಾದ ಸ್ಥಳದಲ್ಲಿದೆ, ಆದ್ದರಿಂದ ಅನೇಕ ಸರಕಾರಿ ಮತ್ತು ಖಾಸಗಿ ಉದ್ಯಮಗಳು ಇಲ್ಲಿ ನೆಲೆಗೊಂಡಿವೆ. ವಾಸ್ತವವಾಗಿ ಬೆಂಗಳೂರು ದೇಶದಲ್ಲಿ ಮಾತ್ರವಲ್ಲ, ಏಷ್ಯಾ ಖಂಡದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಗಂಧದಮರ, ಬೀಟೆ ಮರ, ದಂತ ಮೊದಲಾದ ಕೆತ್ತನೆ ವಸ್ತುಗಳು ಮತ್ತು ಬಿದರಿ ವಸ್ತುಗಳಿಗೆ ವಿಶ್ವಾದ್ಯಂತ ಮಾರುಕಟ್ಟೆಯಿರುವುದನ್ನು ವಿಶೇಷವಾಗಿ ಉಲ್ಲೇಖಿಸಬೇಕು.

ಮೊದಲೇ ಹೇಳಿದಂತೆ ಕರ್ನಾಟಕದ ಹಿಂದಿನ ಪ್ರದೇಶ ವ್ಯಾಪ್ತಿಯಲ್ಲಿ(1956ಕ್ಕೆ ಮೊದಲು) ಹಲವಾರು ವ್ಯತ್ಯಾಸಗಳಾದವು. ಬಹುತೇಕ ಭಾಗಗಳು ಮುಂಬಯಿ ಮತ್ತು ಮದರಾಸು ಪ್ರಾಂತಗಳ ಹಾಗೂ ಹೈದರಾಬಾದ್ ಮೊದಲಾದ ರಾಜ್ಯಗಳ ಭಾಗವಾಗಿದ್ದುವು. ಆ ಭಾಗಗಳಲ್ಲಿ ಕನ್ನಡ ಮಾತನಾಡುವ ಜನರು ಅಲ್ಪಸಂಖ್ಯಾತರಾಗಿದ್ದರು. ಅವರಿರುವ ಪ್ರದೇಶವನ್ನು ಅಲಕ್ಷಿಸಲಾಗಿತ್ತು, ಅವು ಹಿಂದುಳಿದಿದ್ದವು. ಎಲ್ಲ ಕನ್ನಡಿಗರನ್ನೂ ಭಾಷೆಯ ಆಧಾರದ ಮೇಲೆ ಒಂದು ಘಟಕವಾಗಿ ಕೂಡಿಸಲು ಮಾಡಿದ ಪ್ರಯತ್ನಕ್ಕೆ (1956ರ ಪ್ರಾಂತ ಪುನರ್ವಿಂಗಡಣಾ ತತ್ವ ಇದೇ ಆಗಿತ್ತು). ಮೈಸೂರಿನಂತಹ ಅಭಿವೃದ್ದಿ ಪ್ರದೇಶಗಳಿಂದ ವಿರೋಧವೂ ಬಂದಿತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಹ ಉದಾರಿ ಅರಸರಿಂದಾಗಿ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್‌ರಂತಹ ಸಮರ್ಥ ಆಡಳಿತಗಾರರಿಂದಾಗಿ ಮೈಸೂರು ಸಂಸ್ಥಾನವು ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ್ದಿತು. ಇದರಿಂದ ಮೈಸೂರಿನ ಕೆಲವು ಜನರು ತಮ್ಮ ಜೊತೆಗೆ ಸೇರಿಕೊಳ್ಳುವ ಹಿಂದುಳಿದ ಬಡಪಾಯಿ ಸೋದರರು ತಮಗೆ ಹೊರೆಯಾಗುತ್ತಾರೆ ಎಂದು ಭಾವಿಸಿದರು. ಆದರೆ ಕರ್ನಾಟಕವು ಆ ಹಂತಗಳನ್ನು ದಾಟಿ ಬಂದಿದೆ. ಹಿಂದುಳಿದ ಪ್ರದೇಶಗಳು ಎನಿಸಿಕೊಂಡ ಭಾಗಗಳು ಸಂಪನ್ಮೂಲಗಳಲ್ಲಿ ಸಮೃದ್ಧವಾಗಿವೆ. ಅವುಗಳನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ. ಅರಣ್ಯಗಳು, ಜಲಪಾತ ಗಳು, ಖನಿಜ ಸಂಪತ್ತು, ನದಿಯ ನೀರು ಮಾನವ ಶಕ್ತಿ ಎಲ್ಲವನ್ನು ವ್ಯವಸ್ಥಿತವಾಗಿ ಬಳಸಿ ಕೊಳ್ಳಲಾಗುತ್ತಿದೆ. ಅಸಮಾನತೆಗಳು ನಿಧಾನವಾಗಿ ಮಾಯವಾಗುತ್ತಿವೆ. ವೃತ್ತಪತ್ರಿಕೆಗಳು, ವಿದ್ಯುನ್ಮಾನ ಮಾಧ್ಯಮ, ಸಾಕ್ಷರತೆ, ರಸ್ತೆಗಳು, ರೈಲು ಹಾದಿಗಳು ಇವುಗಳ ಮೂಲಕ ಪ್ರೀತಿ ವಿಶ್ವಾಸಗಳು ವಿನಿಮಯವಾಗುತ್ತಿವೆ. ಕೃಷ್ಣ ಕಾವೇರಿ ಮತ್ತು ಕಾಳಿ ನದಿಗಳು ಹತ್ತಿರಕ್ಕೆ ಬಂದಿವೆ. ಆದರೆ ಈಗ ಇನ್ನೊಂದು ವಿವಾದ ಹುಟ್ಟಿಕೊಂಡು ರಾಜ್ಯದ ಅಖಂಡತೆಗೆ ಬೆದರಿಕೆಯನ್ನೊಡ್ಡುತ್ತಿದೆ. ಈ ಉತ್ತರ-ದಕ್ಷಿಣ ವಿವಾದದ ವಿಷಯವನ್ನು ಪ್ರಸ್ತುತ ಲೇಖನದ ಕೊನೆಯ ಭಾಗದಲ್ಲಿ ಪರಿಶೀಲಿಸಲಾಗುತ್ತದೆ.

ಹಿಂದಿನ ಮೈಸೂರು ರಾಜ್ಯವು ಟಿಪ್ಪುಸುಲ್ತಾನನ ಪತನದ ಅನಂತರ ಕ್ರಿ.ಶ.1799ರಲ್ಲಿ ಅಸ್ತಿತ್ವಕ್ಕೆ ಬಂದಿತು. 1881ರಲ್ಲಿ ರಾಜ್ಯದಲ್ಲಿ ಏಳು ಜಿಲ್ಲೆಗಳು ಮಾತ್ರ ಇದ್ದುವು. ಅವು ಬೆಂಗಳೂರು, ಮೈಸೂರು, ಕೋಲಾರ, ಕಡೂರು, ತುಮಕೂರು, ಚಿತ್ರದುರ್ಗ ಮತ್ತು ಶಿವಮೊಗ್ಗ. 1886ರಲ್ಲಿ ಹಾಸನವನ್ನು ಎಂಟನೆಯ ಜಿಲ್ಲೆಯನ್ನಾಗಿಯೂ 1939ರಲ್ಲಿ ಮಂಡ್ಯವನ್ನು ಒಂಬತ್ತನೆಯ ಜಿಲ್ಲೆಯನ್ನಾಗಿಯೂ ರೂಪಿಸಲಾಯಿತು. 1950ರಲ್ಲಿ ಹಳೆಯ ಮೈಸೂರು ರಾಜ್ಯ ಹಾಗೂ ಆಗಿನ ಮದರಾಸು ಪ್ರಾಂತಗಳ ನಡುವೆ, 1950ರ ಪ್ರಾಂತಗಳು ಮತ್ತು ರಾಜ್ಯ (ಸುತ್ತುಗಟ್ಟಿದ ಪ್ರದೇಶಗಳ ವಿಲೀನ) ಕಾನೂನು ಪ್ರಕಾರವಾಗಿ ಕೆಲವು ಪ್ರದೇಶಗಳ ವಿನಿಮಯಗಳಾದವು. ಈ ವಿನಿಮಯದಿಂದಾಗಿ, ರಾಜ್ಯದ ಭೂಪ್ರದೇಶವು ವಿಸ್ತಾರಗೊಂಡಿತು. ಆಮೇಲೆ 1953ರ ಅಕ್ಟೋಬರ್‌ನಲ್ಲಿ ಮುಂದಿನ ವಿಸ್ತರಣವು ಸಂಭವಿಸಿತು. ಆಂಧ್ರಪ್ರದೇಶ ರಾಜ್ಯವನ್ನು ರಚಿಸಿದಾಗ ಮದರಾಸು ರಾಜ್ಯದ ಬಳ್ಳಾರಿ ಜಿಲ್ಲೆಯು ಆದೋನಿ, ಅಲೂರು ಮತ್ತು ರಾಯದುರ್ಗ ತಾಲೂಕುಗಳ ಹೊರತು, ಮೈಸೂರು ರಾಜ್ಯಕ್ಕೆ ಸೇರಿತು. ರಾಜ್ಯದ ಗಡಿಗಳಲ್ಲಾದ ಇತ್ತೀಚಿನ ವ್ಯತ್ಯಾಸಗಳೆಂದರೆ, 1956ರ ರಾಜ್ಯ ಪುನರ್ವಿಂಗಡಣಾ ಶಾಸನದನ್ವಯ ಆದವು.