ಇಂದಿನ ಕರ್ನಾಟಕ ರಾಜ್ಯವು ಒಂದು ಘಟಕವಾಗಿ ದಿಢೀರನೆ ತನಗೆ ತಾನೆ ಅಸ್ತಿತ್ವಕ್ಕೆ ಬಂದುಬಿಡಲಿಲ್ಲ ಎಂಬುದನ್ನು ಹಿಂದಿನಿಂದ ಬಂದಿರುವ ಸಾಕ್ಷ್ಯಾಧಾರಗಳು ತೋರಿಸುತ್ತವೆ. ಅದಕ್ಕಾಗಿ ಅನೇಕ ಬಗೆಯಾಗಿ ಕಷ್ಟಪಡಬೇಕಾಯಿತು. ಅನೇಕರು ತಮ್ಮ ಕಾಲವನ್ನೂ, ಹಣವನ್ನೂ ಪ್ರಾಣವನ್ನೂ ತೆತ್ತರು. ಆಲೂರು ವೆಂಕಟರಾಯರ ಕೃತಿ ಕರ್ಣಾಟಕ ಗತವೈಭ(1917)ದಲ್ಲಿ ಇದರ ವರ್ಣನೆಯಿದೆ. ಕರ್ನಾಟಕದ ಏಕೀಕರಣ ಚಳವಳಿಯ ಪ್ರಾರಂಭಿಕ ಕುರುಹುಗಳನ್ನು 19ನೆಯ ಶತಮಾನದ ಮೊದಲ ಭಾಗದಷ್ಟು ಹಿಂದೆಯೇ ಗುರುತಿಸಬಹುದು. ಸ್ವಾತಂತ್ರ್ಯಕ್ಕಾಗಿ ಹೋರಾಟ ಮತ್ತು ಏಕೀಕರಣ ಚಳವಳಿಗಳು ಜೊತೆ ಜೊತೆಯಾಗಿಯೇ ಸಾಗಿದ್ದರೂ ಏಕೀಕರಣ ಚಳವಳಿಗೆ ಹೆಚ್ಚಿನ ಬೆಂಬಲ ದೊರಕಿತ್ತು.  ಪ್ರಾರಂಭದಲ್ಲಿ ಸ್ವಾತಂತ್ರ್ಯ ಚಳವಳಿಗೆ ವಿರೋಧವಾಗಿದ್ದ ಶಕ್ತಿಗಳೂ ಏಕೀಕರಣವನ್ನು ಹೃತ್ಪೂರ್ವಕವಾಗಿ ಬೆಂಬಲಿಸಿದವು. ಮೊದಲನೇ ಏಕೀಕರಣ ಸಮ್ಮೇಳನವನ್ನು ಬೆಳಗಾವಿ ಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ನಲವತ್ತನೆಯ ಅಧಿವೇಶನ(1924) ನಡೆದ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಯಿತು. ಅದಕ್ಕೆ ಸಿದ್ದಪ್ಪ ಕಂಬಳಿಯವರು ಅಧ್ಯಕ್ಷರಾಗಿದ್ದರು. ಅವರಿಗೆ ಕರ್ನಾಟಕ ಏಕೀಕರಣವು ಸ್ವಾತಂತ್ರ್ಯದ ಸಹಜ ಪರಿಣಾಮವಾಗಿತ್ತು.

ವಾಸ್ತವವಾಗಿ ಭಾಷಾವಾರು ಪ್ರಾಂತ್ಯಗಳಿಗಾಗಿ ಚಳುವಳಿಯು ಕರ್ನಾಟಕದಲ್ಲಿ ಕಂಡು ಬಂದ ಪುನರುಜ್ಜೀವನದ ಫಲ.

ಪಶ್ಚಿಮದೊಂದಿಗೂ ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಬೃಹತ್ ರಾಷ್ಟ್ರೀಯ ಆಂದೋಲನದೊಂದಿಗೂ ಉಂಟಾದ ಸಂಪರ್ಕದಿಂದ ಮೂಡಿದ ನೂತನ ಪ್ರಗತಿಶೀಲ ಭಾವನೆ, ಉದಾರ ಮನೋಧರ್ಮ ಮತ್ತು ಸ್ವಾತಂತ್ರ್ಯ ಪ್ರೇಮ ಇವು ಜನರಲ್ಲಿ ಒಂದು ಪ್ರತ್ಯೇಕವಾದ ಭಾಷಾ ಆಧಾರಿತ ಪ್ರಾಂತದ ರಚನೆಯನ್ನು ಒತ್ತಾಯಿಸುವಂತೆ ಪ್ರೇರೇಪಿಸಿದುವು

ಎಂದು ಏಕೀಕೃತ ಕರ್ನಾಟಕವನ್ನು ಕುರಿತ ಮೆಮರಾಂಡಂ ಹೇಳುತ್ತದೆ. ಇದನ್ನು ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಒಪ್ಪಿಸ ಲಾಯಿತು. ಏಕೀಕರಣ ಚಳವಳಿಯು ಪ್ರಾರಂಭದಲ್ಲಿ ಮೂಲತಃ ಬುದ್ದಿಜೀವಿಗಳ ಚಳವಳಿಯಾಗಿತ್ತು. ಅದನ್ನು ಕವಿಗಳು, ಬರಹಗಾರರು ಮತ್ತು ಪತ್ರಿಕೋದ್ಯಮಿಗಳು ಪೋಷಿಸಿದರು. ರಾಜಕಾರಣಿಗಳೂ ಅದನ್ನು ಒಪ್ಪಿಕೊಂಡರು. ಏಕೆಂದರೆ, ಅದು ಸ್ವಾತಂತ್ರ್ಯಕ್ಕೆ ಭಾವಾತ್ಮಕ ಪ್ರಚೋದನೆಯನ್ನೂ ಒದಗಿಸಿತು. ಅಕ್ಕಪಕ್ಕದ ಇತರ ಭಾಷೆಗಳ ಬೆಲೆ ತೆತ್ತು ತನ್ನ ಮಾತೃಭಾಷೆಯನ್ನು ಅಲಕ್ಷಿಸುವುದಕ್ಕೆ ಕಾರಣ ಬ್ರಿಟಿಷ್ ಸರಕಾರವೇ ಎಂದು ಜನರು ಭಾವಿಸಿದರು. ಬ್ರಿಟಿಷರು ತಮ್ಮ ಆಡಳಿತೀಯ ಅನುಕೂಲಕ್ಕೆ ಸರಿಹೊಂದುವಂತೆ, ತಮ್ಮ ಹಿತಾಸಕ್ತಿಗಳಿಗೆ ಹೊಂದುವಂತೆ ಭಾರತೀಯರು ಹಿತವನ್ನು ಅಲಕ್ಷಿಸಿ ಆಡಳಿತೀಯ ಘಟಕಗಳನ್ನು ರಚಿಸಿದ್ದರು. ಹಾಗಾಗಿ ಕನ್ನಡವೂ ಕನ್ನಡಿಗರೂ ಕಷ್ಟಪಡಬೇಕಾಯಿತು. ಇದು ಬ್ರಿಟಿಷರ ‘ಒಡೆದು ಆಳುವ’ ನೀತಿಯ ಭಾಗ ಎಂದು ಭಾವಿಸಲಾಯಿತು.

19ನೆಯ ಶತಮಾನದ ಮಧ್ಯಭಾಗದಲ್ಲಿ ಪ್ರಾರಂಭಗೊಂಡ ಕನ್ನಡ ಪುನರುಜ್ಜೀವನ ಚಳವಳಿಯು ಏಕೀಕರಣ ಆಂದೋಲನದಲ್ಲಿ ಶಿಖರವನ್ನು ಮುಟ್ಟಿತು. ಬ್ರಿಟಿಷರ ಕಾಲದಲ್ಲಿ ಕನ್ನಡ ಮಾತನಾಡುವ ಜನರು 20 ಆಡಳಿತೀಯ ಘಟಕಗಳಿಗೆ ಸೇರಿಹೋಗಿದ್ದರು. ಅವು ಹೀಗಿದ್ದುವು.

1. ಮೈಸೂರು ಸಂಸ್ಥಾನ.

2. ಮದರಾಸು ಪ್ರೆಸಿಡೆನ್ಸಿ: ನೀಲಗಿರಿ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ, ಕೊಳ್ಳೇಗಾಲ, ಕೃಷ್ಣಗಿರಿ, ಹೊಸೂರು ಮತ್ತು ಮಡಕಶಿರಾ ತಾಲೂಕುಗಳು ಸೇರಿದಂತೆ.

3. ಮುಂಬಯಿ ಪ್ರೆಸಿಡೆನ್ಸಿ: ಕನ್ನಡ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಧಾರವಾಡ,  ಬಿಜಾಪುರ ಹಾಗೂ ದಕ್ಷಿಣ ಮತ್ತು ಉತ್ತರ ಶೋಲಾಪುರ, ಮಂಗಳವೇಡೆ ತಾಲೂಕು ಗಳು ಮತ್ತು ನೆರೆಯ ಕನ್ನಡ ಪ್ರದೇಶಗಳು.

4. ಕೊಡಗು ಪ್ರದೇಶ (ಚೀಫ್ ಕಮೀಶಷನರನ ಆಳಿಕೆಯಲ್ಲಿತ್ತು).

5. ಹೈದರಾಬಾದ್ ರಾಜ್ಯ: ಇದಕ್ಕೆ ಕನ್ನಡ ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ರಾಯಚೂರು ಹಾಗೂ ಕೊಪ್ಪಳಗಳು ಸೇರಿದ್ದವು.

6. ಕೊಲ್ಹಾಪುರ ರಾಜ್ಯದಲ್ಲಿ ರಾಯಬಾಗ್, ಕಟಿಕೋಳ, ತೊರಗತ, ಮತ್ತಿತರ ಕನ್ನಡ ಪ್ರದೇಶಗಳು.

7. ಸಾಂಗ್ಲಿರಾಜ್ಯಕ್ಕೆ ತೇರರಾಜ್ಯ, ಶಹಾಪುರ, ದೊಡವಾಡ ಮತ್ತು ಶಿರಹಟ್ಟಿ ಸೇರಿದ್ದುವು.

8. ಮೀರಜ್ ರಾಜ್ಯ, ಲಕ್ಷ್ಮೇಶ್ವರದಂತಹ ಭಾಗಗಳು ಸೇರಿ.

9. ಕಿರಿಯ ಮೀರಜ್ (ಬುಧಗಾಂವ್), ಗುಡಗೇರಿ ಮೊದಲಾದ ಪ್ರದೇಶಗಳೊಂದಿಗೆ.

10. ಹಿರಿಯ ಕುರುಂದವಾಡ.

11. ಕಿರಿಯ ಕುರುಂದವಾಡ ಅಥವಾ ವಡಗಾಂತ.

12. ಕುಂದಗೆರಾಜ್ಯಾ ಮತ್ತು ಚಿಪುಲಕಟ್ಟಿ ಇತ್ಯಾದಿಗಳೊಂದಿಗೆ ಜಮಖಂಡಿ ರಾಜ್ಯ.

13. ಮುಧೋಳ ರಾಜ್ಯ.

14. ಜತ್ತಿ ರಾಜ್ಯ

15. ಅಕ್ಕಲಕೋಟೆ ರಾಜ್ಯ

16. ಗುಂಧ್ ರಾಜ್ಯಕ್ಕೆ ಸೇರಿದ ಗುಣದಾಳ ಗುಂಪಿನ ಹಳ್ಳಿಗಳು.

17. ರಾಮದುರ್ಗ ರಾಜ್ಯ.

18. ಸಂಡೂರು ರಾಜ್ಯ

19. ಸವಣೂರು ರಾಜ್ಯ

20. ಕೇಂದ್ರ ಸರಕಾರದ ಸ್ವಾಧೀನದಲ್ಲಿ ಬೆಳಗಾವಿ, ಬೆಂಗಳೂರು ಮತ್ತು ಬಳ್ಳಾರಿಯ ದಂಡು ಪ್ರದೇಶಗಳು.

ಈ ವಿವಿಧ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಜನರ ಪರಿಸ್ಥಿತಿ ಶೋಚನೀಯವಾಗಿತ್ತು. ಮುಂಬಯಿ ಪ್ರೆಸಿಡೆನ್ಸಿಯಲ್ಲಿ ಶಾಲೆಯ ಶಿಕ್ಷಣ ಮಾಧ್ಯಮವೂ ಸ್ಥಳೀಯ ಆಡಳಿತದ ಭಾಷೆಯೂ ಕೇವಲ ಮರಾಠಿ ಆಗಿತ್ತು. ಡೆಪ್ಯೂಟಿ ಚನ್ನಬಸಪ್ಪ ಮೊದಲಾದ ಶಿಕ್ಷಣತಜ್ಞರು ಆ ಪ್ರದೇಶದ ಶಾಲೆಗಳಲ್ಲಿ ಕನ್ನಡ ಮಾಧ್ಯಮ ವನ್ನು ಪ್ರಾರಂಭಿಸಲು ಚಳವಳಿ ನಡೆಸಬೇಕಾಯಿತು. ವರ್ತಕರು ಲೆಕ್ಕಗಳನ್ನು ಆ ಪ್ರದೇಶ ಗಳಲ್ಲಿ ಮರಾಠಿಗೆ ಬದಲು ಕನ್ನಡದಲ್ಲಿ ಬರೆಯಬೇಕೆಂದೂ ಅವರು ಒತ್ತಾಯಪಡಿಸಿದರು. ಜತ್ತಿ, ಅಕ್ಕಲಕೋಟೆ, ಸಾಂಗ್ಲಿ ಮೊದಲಾದ ಪ್ರದೇಶಗಳಲ್ಲಿೊಮರಾಠಿ ರಾಜರ ಆಳ್ವಿಕೆಯ ಫಲವಾಗಿ 1940ರ ವೇಳೆಗೆ ಕನ್ನಡವು ಹೆಚ್ಚು ಕಡಿಮೆ ಮಾಯವೇ ಆಗಿಬಿಟ್ಟಿತು. ಪ್ರಾದೇಶಿಕ ಭಾಷೆಯಾದ ಕನ್ನಡವು ಭಾರೀ ಅಪಾಯವನ್ನು ಎದುರಿಸುತ್ತಿತ್ತು. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಏಕೀಕೃತ ಕರ್ನಾಟಕ ರಾಜ್ಯಕ್ಕಾಗಿ ಬೇಡಿಕೆ(1954)ಯು ಹೀಗೆ ಹೇಳಿತು:

ಕನ್ನಡವು ಮುಂಬಯಿ, ಮದರಾಸು, ಹೈದರಾಬಾದ್ ಮತ್ತು ಆಂಧ್ರ ರಾಜ್ಯಗಳಲ್ಲಿ ಒಂದು ಅಲ್ಪಸಂಖ್ಯಾತ ಭಾಷೆಯಾಗಿದೆ. ಇದರ ಪರಿಣಾಮ ವಾಗಿ ಉನ್ನತಾಧಿಕಾರಿಗಳಲ್ಲಿ ಹೆಚ್ಚಿನವರು ಕನ್ನಡೇತರರಾದ್ದರಿಂದ, ಕನ್ನಡಿಗರು ಆಡಳಿತ ವಿಚಾರಗಳಲ್ಲಿ ಅನನುಕೂಲಕ್ಕೆ ತುತ್ತಾಗಿದ್ದಾರೆ

ಎಂಬ ಮಹತ್ವದ ಹೇಳಿಕೆಯನ್ನು ನೀಡಿತು.

ಕರ್ನಾಟಕದ ಪುನರುಜ್ಜೀವನವು ಭಾರತದ ಬೇರೆ ಕಡೆಗಳಲ್ಲಿನಂತೆಯೇ ಗಣ್ಯ ಜನರಲ್ಲಿ ವ್ಯಾಪಕವಾದ ಜಾಗೃತಿಯನ್ನು ಉಂಟುಮಾಡಿತ್ತು. 1903ರಷ್ಟು ಹಿಂದೆಯೇ ಬೆನಗಲ್ ರಾಮರಾವ್ ಅವರು ಧಾರವಾಡದಲ್ಲಿ ಭಾಷಣ ಮಾಡುತ್ತ ಕನ್ನಡ ಮಾತನಾಡುವ ಪ್ರದೇಶಗಳ ಏಕೀಕರಣವಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಬೆಂಗಳೂರಿನ ನ್ಯಾಯಮೂರ್ತಿ ಎಸ್.ಎಸ್.ಸೆಟ್ಟೂರ್ ಅವರೂ 1906ರಲ್ಲಿ ಅದೇ ಬಗೆಯ ಭಾಷಣ ವನ್ನು ಧಾರಾವಾಡದಲ್ಲಿ ಮಾಡಿದರು. ಬಂಗಾಳ ವಿಭಜನೆಯ ವಿರುದ್ಧ ಅತ್ಯುಗ್ರವಾಗಿ ಪ್ರತಿಭಟಿಸಿದ ಬಂಗಾಳಿಗಳ ನಿದರ್ಶನದಿಂದ ಸ್ಫೂರ್ತಿಗೊಂಡು ಆಲೂರು ವೆಂಕಟರಾಯರು 1907ರಲ್ಲಿ ಕರ್ನಾಟಕ ಏಕೀಕರಣವನ್ನು ಒತ್ತಾಯಪಡಿಸಿ ವಾಗ್ಭೂಷಣ ಪತ್ರಿಕೆಯಲ್ಲಿ ಒಂದು ಲೇಖನವನ್ನು ಬರೆದರು. ಧಾರವಾಡದಲ್ಲಿ 1907 ಮತ್ತು 1908ರಲ್ಲಿ ನಡೆಸಿದ ಅಖಿಲ ಕರ್ನಾಟಕ ಲೇಖಕರ ಸಮ್ಮೇಳನವು ಬೇಡಿಕೆಯನ್ನು ಬಲಪಡಿಸಿತು. 1915ರಲ್ಲಿ ಮೈಸೂರು ಅರಸರ ಪೋಷಣೆಯಲ್ಲಿ ಸ್ಥಾಪನೆಗೊಂಡ ಕರ್ಣಾಟಕ ಸಾಹಿತ್ಯ ಪರಿಷತ್ತು ಈ ಚಳವಳಿಯು ವೇಗವನ್ನು ಪಡೆದುಕೊಳ್ಳಲು ಸಹಾಯ ಮಾಡಿತು. ಪರಿಷತ್ತು ವಾರ್ಷಿಕ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿತು. ಇದರಲ್ಲಿ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವನ್ನು ಪ್ರತಿನಿಧಿಸುವ ಬುದ್ದಿಜೀವಿಗಳು ಭಾಗವಹಿಸುತ್ತಿದ್ದರು. ಇವರು ಏಕೀಕರಣ ಚಳವಳಿಯು ಚುರುಕಾಗಲು ನೆರವಾದರು. ಆಲೂರು ವೆಂಕಟರಾಯರು ಈ ಚಳವಳಿಗೆ ನೀಡಿದ ಉತ್ತೇಜನಕ್ಕಾಗಿ ಅವರನ್ನು ಕರ್ಣಾಟಕದ ‘‘ಕುಲಪುರೋಹಿತ’’ರೆಂದು ಕೊಂಡಾಡಲಾಯಿತು. ಅವರ ಪ್ರಯತ್ನಗಳಿಂದಾಗಿ ಧಾರವಾಡದಲ್ಲಿ ಏಕೀಕರಣವನ್ನು ಉದ್ದೇಶವಾಗುಳ್ಳ ಕರ್ನಾಟಕ ಏಕೀಕರಣ ಸಭಾ ಪ್ರಾರಂಭವಾಯಿತು (1916). ಧಾರವಾಡದಲ್ಲಿ 1920ರಲ್ಲಿ ನಡೆದ ಕರ್ನಾಟಕ ರಾಜ್ಯ ರಾಜಕೀಯ ಸಮ್ಮೇಳನವು ಒಂದು ಮುಖ್ಯ ಘಟನೆಯಾಗಿತ್ತು. ವಿ.ಪಿ. ಮಾಧವರಾವ್ ಅಧ್ಯಕ್ಷತೆ ವಹಿಸಿದ್ದರು. ಏಕೀಕರಣವನ್ನು ಒತ್ತಾಯಿಸುವ ಅವಿರೋಧ ನಿರ್ಣಯವನ್ನು ಅಲ್ಲಿ ಅಂಗೀಕರಿಸಲಾಯಿತು. ಡಿಸೆಂಬರ್ ತಿಂಗಳಲ್ಲಿ ನಾಗಪುರದಲ್ಲಿ ನಡೆಯಲಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಕನ್ನಡ ಜನರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಬೇಕೆಂದೂ ಕರೆ ಕೊಡಲಾಯಿತು. ಕಡಪ ರಾಘವೇಂದ್ರರಾವ್ ಅದರಲ್ಲಿ ಭಾಗವಹಿಸಿದ್ದರು. ಕರ್ನಾಟಕದಿಂದ ಆ ಸಮ್ಮೇಳನಕ್ಕೆ ಸುಮಾರು 800 ಜನ ಪ್ರತಿನಿಧಿಗಳು ಹೋಗಿದ್ದರು. ಕರ್ನಾಟಕಕ್ಕಾಗಿಯೇ ಒಂದು ಪ್ರತ್ಯೇಕ ಕಾಂಗ್ರೆಸ್ ಸಮಿತಿಯನ್ನು ರಚಿಸಲು 1920ರಲ್ಲಿ ನಾಗಪುರ ಕಾಂಗ್ರೆಸ್ ಒಪ್ಪಿತು. ಏಕೀಕರಣದ ಸಾಧನೆಯಲ್ಲಿ ಇದೊಂದು ಮಹತ್ವದ ಮೈಲುಗಲ್ಲು. ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯು ಸ್ಥಾಪನೆಯಾದ ಮೇಲೆ ಖಾದಿ, ಆಯುರ್ವೇದ, ಇತಿಹಾಸ, ಕೈಗಾರಿಕೆ, ವಾಣಿಜ್ಯ ಮೊದಲಾದ ವಿಷಯಗಳಲ್ಲಿ ಅಖಿಲ ಕರ್ನಾಟಕ ವ್ಯಾಪ್ತಿಯ ವಾರ್ಷಿಕ ಸಮ್ಮೇಳನಗಳ ಸರಣಿಯೇ ಜರುಗಿತು. ಇವು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ರಚನೆಯ ಪ್ರಾಮುಖ್ಯವನ್ನು ಒತ್ತಾಯಿಸಿದವು. ವಾಸ್ತವವಾಗಿ ಧಾರವಾಡವು ಏಕೀಕರಣ ಚಳವಳಿಯ ಕೇಂದ್ರಸ್ಥಾನವಾಯಿತು. ‘‘ಗೆಳೆಯರ ಗುಂಪು’’ ಎಂಬ ಒಂದು ಸಾಹಿತ್ಯಕ ಬಳಗವು ಅದಕ್ಕೆ ಅಗತ್ಯವಾದ ಸ್ಫೂರ್ತಿಯನ್ನು ಒದಗಿಸಿತು. ಧಾರವಾಡದ ಎರಡು ಪತ್ರಿಕೆಗಳಾದ ಕರ್ಮವೀರ ಮತ್ತು ಜಯಕರ್ನಾಟಕಗಳು ಏಕೀಕರಣದ ದಾರಿದೀಪಗಳಾದವು. ಈ ಮನೋಧರ್ಮವನ್ನು ಪೋಷಿಸಲು ಪ್ರತಿವರ್ಷ ದಸರೆಯ ಸಮಯದಲ್ಲಿ ನಾಡಹಬ್ಬವನ್ನು ಆಚರಿಸತೊಡಗಿದರು.