1924ರಲ್ಲಿ ಮಹಾತ್ಮಾಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನವೂ ಆ ದಿಕ್ಕಿನಲ್ಲಿ ಇರಿಸಿದ ಒಂದು ಮುಖ್ಯವಾದ ಹೆಜ್ಜೆಯಾಯಿತು. ಅಧಿವೇಶನದ ಸ್ಥಳವನ್ನು ವಿಜಯನಗರ ಎಂದು ಕರೆಯಲಾಗಿತ್ತು. ಕರ್ನಾಟಕದ ಇತಿಹಾಸವನ್ನೂ ಸಂಸ್ಕೃತಿಯನ್ನೂ ಸಮ್ಮೇಳನದಲ್ಲಿ ಅಭಿವ್ಯಕ್ತಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಯಿತು. ಕನ್ನಡಿಗರಿಗೆ ತಮ್ಮ ನಾಯಕರನ್ನು ತಿಳಿದುಕೊಳ್ಳಲು, ತಮ್ಮ ಹಿಂದಿನ ವೈಭವವನ್ನು ನೆನಪು ಮಾಡಿಕೊಳ್ಳಲು ಅದೊಂದು ದೊಡ್ಡ ಅವಕಾಶವಾಯಿತು. ಹುಯಿಲಗೋಳ ನಾರಾಯಣರಾಯರು ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡಿದರು. ಅವರು ಈ ಗೀತೆಯನ್ನು ಬೆಳಗಾಂ ಅಧಿವೇಶನದ ಸಮಯದಲ್ಲಿ ವಿಶೇಷವಾಗಿ ರಚಿಸಿದ್ದರು. ಅದೇ ಸ್ಥಳದಲ್ಲೇ ಮೊದಲನೆಯ ಕರ್ನಾಟಕ ಏಕೀಕರಣ ಸಮ್ಮೇಳನವು ಸರ್.ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಏಕೀಕರಣ ಸಭಾ ಮುಂದೆ ಕರ್ನಾಟಕ ಏಕೀಕರಣ ಸಂಘ ಎಂಬ ಹೆಸರನ್ನು ಪಡೆಯಿತು. ಅದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯೊಂದಿಗೆ ಸಹಕರಿಸಿ ಕೆಲಸ ಮಾಡಿತು. 1923ರಲ್ಲಿ ಡಾ.ನಾ.ಸು.ಹರ್ಡೀಕರರು ಸ್ಥಾಪಿಸಿದ ಹಿಂದೂಸ್ಥಾನೀ ಸೇವಾದಳವು ಏಕೀಕರಣದ ಪರವಾಗಿ ಒಂದು ಸಹಿ ಸಂಗ್ರಹಣ ಚಳವಳಿ ನಡೆಸಿ 36,000 ಸಹಿಗಳನ್ನು ಸಂಗ್ರಹಿಸಿತು. 1928ರಲ್ಲಿ ನೆಹರೂ ಕಮಿಟಿಯು ಕರ್ನಾಟಕವನ್ನು ಒಂದು ಪ್ರತ್ಯೇಕ ಪ್ರಾಂತ್ಯ ವನ್ನಾಗಿ ರಚಿಸಬೇಕೆಂದು ಬಲವಾಗಿ ಶಿಪಾರಸ್ಸು ಮಾಡಿತು. ‘ಏಕೀಕರಣವಾಗಬೇಕೆನ್ನು ವುದು ಮೇಲುನೋಟದಲ್ಲೇ ಅತ್ಯಂತ ಸ್ಪಷ್ಟವಾಗಿದೆ’ ಎಂದು ಸಮಿತಿಯು ಹೇಳಿತು. ಕರ್ನಾಟಕವು ಆರ್ಥಿಕ ದೃಷ್ಟಿಯಿಂದಲೂ ಪ್ರಬಲವಾದ ಪ್ರಾಂತ್ಯವಾಗಬಲ್ಲುದು ಎಂದೂ ಅದು ಹೇಳಿತು.

ಬೇಂದ್ರೆ, ಗೋಕಾಕ್, ಶಿವರಾಮ ಕಾರಂತ, ಕುವೆಂಪು ಮೊದಲಾದ ಸಾಹಿತಿಗಳೂ ಅಗತ್ಯವಾದ ಬೌದ್ದಿಕ ಮತ್ತು ಭಾವನಾತ್ಮಕ ಪ್ರೇರಣೆಯನ್ನು ಒದಗಿಸಿ ಏಕೀಕರಣ ಚಳವಳಿಯನ್ನು ಬಲಪಡಿಸಿದರು. ವೃತ್ತಪತ್ರಿಕೆಗಳು ಅದನ್ನು ಹೃತ್ಪೂರ್ವಕವಾಗಿ ಬೆಂಬಲಿಸಿದವು. ಕಾಲೇಜುಗಳಲ್ಲೂ, ಕರ್ನಾಟಕದ ಮೂಲೆ ಮೊಡಕುಗಳಲ್ಲೂ ಸ್ಥಾಪಿತವಾದ ಕರ್ನಾಟಕ ಸಂಘಗಳು ಏಕೀಕರಣ ವಿಚಾರವನ್ನು ಘೋಷಿಸಲು ಸಹಾಯ ಮಾಡಿದುವು. ಈ ಸಂದರ್ಭದಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲೂ ಶಿವಮೊಗ್ಗ ಮತ್ತು ರಾಯಚೂರುಗಳಲ್ಲೂ ಸ್ಥಾಪಿಸಿದ್ದ ಕರ್ನಾಟಕ ಸಂಘಗಳನ್ನು ವಿಶೇಷವಾಗಿ ಉಲ್ಲೇಖಿಸಬೇಕು. ಹಂಪಿಯಲ್ಲಿ ಏರ್ಪಡಿಸಿದ ವಿಜಯನಗರದ ಆರನೆಯ ಶತಮಾನೋತ್ಸವವು (1936) ಬದುಕಿನ ಎಲ್ಲ ಕ್ಷೇತ್ರಗಳ ಜನರನ್ನು ಒಟ್ಟಿಗೆ ಕಲೆ ಹಾಕಿ ಒಂದು ಭವ್ಯ ವಿಜಯನಗರವಿದ್ದಂತೆ ಒಂದು ಅಖಂಡ ಕರ್ನಾಟಕವಿರಬೇಕಾದ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟಿತು.

1946ರ ಕೊನೆಯ ವೇಳೆಗೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದು ಹೆಚ್ಚು ಕಡಿಮೆ ಖಚಿತವಾಗಿತ್ತು. 1946 ಡಿಸೆಂಬರ್ ತಿಂಗಳಲ್ಲಿ ರಾಜ್ಯವ್ಯವಸ್ಥೆ ಸಭೆಯು ದೆಹಲಿ ಯಲ್ಲಿ ಸೇರಿತು. ಇದನ್ನು ಗಮನದಲ್ಲಿಟ್ಟುಕೊಂಡು ಮುಂಬಯಿಯಲ್ಲಿ ಸೇರಿದ ಕರ್ನಾಟಕ ಏಕೀಕರಣ ಸಮಿತಿಯು ಏಕೀಕರಣದ ಬೇಡಿಕೆಯನ್ನು ಒತ್ತಾಯಿಸಿತು. ಅಷ್ಟು ಮಾತ್ರವಲ್ಲದೆ, ಮುಂಬಯಿಯ ರೆವಿನ್ಯೂ ಮಂತ್ರಿ ಎಂ.ಪಿ.ಪಾಟೀಲ್ ಅವರ ಅಧ್ಯಕ್ಷತೆ ಯಲ್ಲಿ ಅಖಿಲ ಕರ್ನಾಟಕ ಸಮ್ಮೇಳನವು ನಡೆಯಿತು. ಈ ಎರಡೂ ಸಭೆಗಳು ಕರ್ನಾಟಕವನ್ನು ಒಂದು ಪ್ರತ್ಯೇಕ ಪ್ರಾಂತವನ್ನಾಗಿ ಒಂದುಗೂಡಿಸಲು ಒಡನೆಯೇ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ವ್ಯವಸ್ಥಾ ಸಭೆಯನ್ನು ಒತ್ತಾಯಿಸಿದುವು. 1947ರ ಡಿಸೆಂಬರ್ ತಿಂಗಳಲ್ಲಿ ಕಾಸರಗೋಡಿನಲ್ಲೂ ಒಂದು ಏಕೀಕರಣ ಸಮ್ಮೇಳನವು ಜರುಗಿತು.

ಆದರೆ ಕೇಂದ್ರ ಸರಕಾರವು ನೇಮಿಸಿದ ಧರ್ ಆಯೋಗವು ಭಾಷಾವಾರು ಪ್ರಾಂತಗಳ ರಚನೆಯ ಪರವಾಗಿರಲಿಲ್ಲ. 1948ರ ಜೈಪುರ ಕಾಂಗ್ರೆಸ್ ಅಧಿವೇಶನವು ಈ ಸಮಿತಿಯನ್ನು ತೀವ್ರವಾಗಿ ಖಂಡಿಸಿತು. ಜೈಪುರದಲ್ಲಿ ನೆಹರೂ, ವಲ್ಲಭಬಾಯಿ ಪಟೇಲ್ ಮತ್ತು ಪಟ್ಟಾಭಿಸೀತಾರಾಮಯ್ಯನವರನ್ನೊಳಗೊಂಡ ‘ಜೆವಿಪಿ’ ಸಮಿತಿಯೊಂದನ್ನು ಈ ಸಮಸ್ಯೆಯ ಪರಿಶೀಲನೆಗಾಗಿ ನೇಮಿಸಲಾಯಿತು. ಮೈಸೂರಿನ ರಾಜ್ಯ ವ್ಯವಸ್ಥಾ ಸಭೆಯೂ ನೆರೆಯ ಕನ್ನಡ ಪ್ರದೇಶಗಳನ್ನು ಮೈಸೂರಿಗೆ ಸೇರಿಸಬೇಕೆಂದು 1948ರಲ್ಲಿ ಒಂದು ನಿರ್ಣಯವನ್ನು ಅಂಗೀಕರಿಸಿತು. 1949ರ ಜನವರಿಯಲ್ಲಿ ಹರಿಹರದಲ್ಲಿ ಎಸ್. ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯು ಕರ್ನಾಟಕದ ರಚನೆಯ ಪರವಾಗಿ, ಮೈಸೂರಿನ ರಾಜ ಪ್ರಮುಖರನ್ನು ಅದರ ಗವರ್ನರ್ ಆಗಿ ನೇಮಿಸುವ ಪರವಾಗಿ ಒಂದು ನಿರ್ಣಯವನ್ನು ಅಂಗೀಕರಿಸಿತು. ಇಷ್ಟೆಲ್ಲ ಪ್ರಯತ್ನಗಳಾದರೂ ಗುರಿೊಸಾಧನೆಯ ಖಚಿತವಾದ ಕುರುಹುಗಳು ಕಾಣಿಸಲಿಲ್ಲ. ಶಂಕರಗೌಡ ಪಾಟೀಲರೆಂಬ ಕಾಂಗ್ರೆಸಿಗರು ಆಮರಣಾಂತ ಉಪವಾಸವನ್ನು ಪ್ರಾರಂಭಿಸಿದರು. ಕೊನೆಗೆ ಕೇಂದ್ರಸರಕಾರವು 1953 ಡಿಸೆಂಬರ್‌ನಲ್ಲಿ ಫಜಲ್ ಅಲಿಯವರ ನೇತೃತ್ವದಲ್ಲಿ ಒಂದು ಉನ್ನತಾಧಿಕಾರವುಳ್ಳ ರಾಜ್ಯ ಪುನರ್ವಿಂಗಡಣಾ ಆಯೋಗವನ್ನು ನೇಮಕ ಮಾಡಿತು. ಈ ಆಯೋಗವು ಆಧಾರಗಳನ್ನು ಸಂಗ್ರಹಿಸುತ್ತಿದ್ದಾಗ, ಮೈಸೂರು ಪ್ರಾಂತದಲ್ಲಿ ಏಕೀಕರಣದ ವಿರುದ್ಧ ಒಂದು ಬಲವಾದ ವಿರೋಧವೂ ವ್ಯಕ್ತವಾಯಿತು.  1956ನೆಯ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದಂತೆ ಈ ಶಾಸನದನ್ವಯ ಕರ್ನಾಟಕ ರಾಜ್ಯವು ಈ ಪ್ರದೇಶಗಳನ್ನು ಒಳಗೊಂಡಿತು.

1. 1956ಕ್ಕೆ ಹಿಂದಿನ ಭಾಗ-8 ಮೈಸೂರು ರಾಜ್ಯ(ಬಳ್ಳಾರಿ ಜಿಲ್ಲೆಯೂ ಸೇರಿ)

2. ಬೆಳಗಾವಿ ಜಿಲ್ಲೆ(ಚಂದಗೋಡ್ ತಾಲೂಕು ಹೊರತು), ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು-ಹಿಂದಿನ ಮುಂಬಯಿ ರಾಜ್ಯದಿಂದ.

3. ಗುಲ್ಬರ್ಗಾ ಜಿಲ್ಲೆ(ಕೊಡಂಗತ ಮತ್ತು ತಂಡೂರಿ ತಾಲೂಕುಗಳ ಹೊರತು), ರಾಯಚೂರು ಜಿಲ್ಲೆ(ಆಲಂಪುರ ಮತ್ತು ಗದ್ವಾಲ ತಾಲೂಕುಗಳ ಹೊರತು), ಬೀದರ್ ಜಿಲ್ಲೆ (ಅಹಮದ್ ನಗರ, ನಿಲಂಗೆ ಮತ್ತು ಉದನೀರ್ ತಾಲೂಕುಗಳ ಹೊರತು)-ಹಿಂದಿನ ಹೈದರಾಬಾದ್ ರಾಜ್ಯದಿಂದ.

4. ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲೂಕು ಮತ್ತು ಅಮೀಸದಿಲಿ ದ್ವೀಪಗಳ ಹೊರತು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲೂಕು – ಹಿಂದಿನ ಮದರಾಸ್ ರಾಜ್ಯದಿಂದ.

5. ಸಿ.ವಿಭಾಗದ ಕೊಡಗು ರಾಜ್ಯ.

1956ರಲ್ಲಿ ರೂಪುಗೊಂಡ ಏಕೀಕೃತ ಕರ್ನಾಟಕದ ಅಖಂಡತೆಯನ್ನು ಸಂರಕ್ಷಿಸುವ ಸಲುವಾಗಿ, ರಾಜ್ಯ ಸರಕಾರವು ಅನೇಕ ಕ್ರಮಗಳನ್ನು ಕೈಗೊಂಡಿತು. ಅವುಗಳಲ್ಲಿ ಕೆಲವನ್ನು ಉದಾಹರಿಸಬಹುದು. ನೂತನ ರಾಜ್ಯವು ಅಸ್ತಿತ್ವಕ್ಕೆ ಬಂದಾಗ ಸ್ಥಳೀಯ ಸಂಸ್ಥೆಗಳು (ಮುನಿಸಿಪಲ್ ಕಾರ್ಪೋರೇಷನ್, ಮುನಿಸಿಪಾಲಿಟಿಗಳು, ಪಂಚಾಯಿತಿಗಳು ಇತ್ಯಾದಿ) ಬೇರೆ ಬೇರೆ ಶಾಸನಗಳಿಗೆ ಒಳಪಟ್ಟಿದ್ದುವು. ಒಂದು ಏಕರೂಪತೆ ಅವುಗಳಲ್ಲಿ ಕಂಡುಬರದೆ ಏಕೀಕರಣಕ್ಕೆ ಸ್ವಲ್ಪಮಟ್ಟಿಗೆ ವಿರೋಧಿಯೂ ಆಗಿದ್ದಂತೆ ತೋರುತ್ತಿದ್ದುವು. ಆದ್ದರಿಂದ ಕರ್ನಾಟಕ ಸರಕಾರವು ಎರಡು ಪ್ರಮುಖ ಕಾಯಿದೆಗಳನ್ನು ಜಾರಿಗೆ ತಂದಿತು. 1. ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಆಯಕ್ಟ್ 1976 ಮತ್ತು 2. ಕರ್ನಾಟಕ ಮುನಿಸಿಪಾಲಿಟೀಸ್ ಆಯಕ್ಟ್ 1964. ಈ ಕಾಯಿದೆಗಳು ಜಾರಿಗೆ ಬಂದಂತೆ, ಎಲ್ಲ ಸ್ಥಳೀಯ ಸಂಸ್ಥೆಗಳು ಒಂದು ನಿಜವಾದ ಏಕರೂಪತೆಗೆ ಒಳಪಟ್ಟಿವೆ. ಐಕ್ಯಕರ್ನಾಟಕವನ್ನು ಬಲಪಡಿಸಿವೆ. ಹಾಗೆಯೇ ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದಂತೆಯೂ ಒಂದು ಸಮಾನ ಶಾಸನವು ಜಾರಿಗೆ ಬಂದಿದೆ. ಅದೇ ಕರ್ನಾಟಕ ಯೂನಿವರ್ಸಿಟೀಸ್ ಆಯಕ್ಟ್  1976. ರಾಜ್ಯದ ಐಕ್ಯತೆಯನ್ನು ಕಾಪಾಡುವ ಸಲುವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳಲಾಗಿದೆ. ಕೇಂದ್ರ ರಸ್ತೆ ಸಾರಿಗೆ ನಿಗಮದ ಅವಕಾಶಗಳ ಪ್ರಕಾರ ರಾಜ್ಯವೂ ರಸ್ತೆ ಸಾರಿಗೆ ನಿಗಮವನ್ನು ಸ್ಥಾಪಿಸಿದೆ. ಹಾಗೆಯೇ ಕರ್ನಾಟಕ ಲೋಕ ಸೇವಾ ಆಯೋಗದ ರಚನೆಯೂ ಅದೇ ಉದ್ದೇಶವನ್ನು ಹೊಂದಿದೆ ಎಂದು ತೋರುತ್ತದೆ.

ಕೊನೆಯದಾಗಿ, ಸಮಕಾಲೀನ ಕರ್ನಾಟಕವು ಇನ್ನೊಂದು ಸಣ್ಣ ಸಮಸ್ಯೆಯ ಅಂಕುರ ವನ್ನು ಕಾಣುತ್ತಿದೆ. ಈಗೇನೂ ಅದು ಗಂಭೀರವಾಗಿಲ್ಲ. ಆದರೆ ಅಲಕ್ಷಿಸಿದರೆ ಅದೇ ನಿಜವಾದ ಸಮಸ್ಯೆಯಾಗಿ ಬೆಳೆದು ರಾಜ್ಯದ ಐಕ್ಯತೆಗೆ ಬೆದರಿಕೆಯೊಡ್ಡಬಹುದು. ಅಭಿವೃದ್ದಿ ಎನ್ನುವುದು ಅನೇಕ ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಹಾಗೂ ಜನಸಂಖ್ಯಾ ಕಾರಣಗಳಿಂದಾಗಿ ಕೆಲವು ಪ್ರದೇಶಗಳಲ್ಲಿ ಮತ್ತು ಉಪಪ್ರದೇಶಗಳಲ್ಲಿ ಕೇಂದ್ರೀಕೃತವಾಗುವ ಪ್ರವೃತ್ತಿಯನ್ನು ಹೊಂದಿರುತ್ತದೆ. ಒಂದು ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಅದು ಏಕಕಾಲದಲ್ಲಿ ವ್ಯಕ್ತವಾಗುವುದಿಲ್ಲ. ಕೆಲವೊಮ್ಮೆ ಈ ಅಭಿವೃದ್ದಿ ಯಲ್ಲಿನ ವ್ಯತ್ಯಾಸವು ಎಷ್ಟು ಸಂದಿಗ್ಧವನ್ನು ಉಂಟುಮಾಡುತ್ತದೆಂದರೆ, ರಾಜ್ಯದ ದೀರ್ಘಕಾಲೀನ ಅಸ್ತಿತ್ವಕ್ಕೇ ಅಪಾಯದ ಭೀತಿಯನ್ನು ಉಂಟುಮಾಡುತ್ತದೆ. ಇಂದು ಅಂತಹ ಒಂದು ಪರಿಸ್ಥಿತಿಯು ಕರ್ನಾಟಕದಲ್ಲಿ ಚುರುಕುಗೊಳ್ಳುತ್ತಿದೆ. ಅಭಿವೃದ್ದಿಯ ವ್ಯತ್ಯಾಸವನ್ನು ಕುರಿತು ವಾದಿಸುವ ಸಲುವಾಗಿ ರಾಜ್ಯವನ್ನು ಎರಡು ಹೋಳಾಗಿ ಮಾಡಿಕೊಳ್ಳುತ್ತಿದ್ದಾರೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಎಂಬುದಾಗಿ ಮೊದಲನೆಯದು ಬೆಂಗಳೂರು ಮತ್ತು ಮೈಸೂರು ಕಂದಾಯ ವ್ಯಾಪ್ತಿ ವಿಭಾಗಗಳಿಗೆ ಸೇರಿದ ಹನ್ನೆರಡು ಜಿಲ್ಲೆಗಳನ್ನು ಒಳಗೊಂಡಿದ್ದರೆ, ಎರಡನೆಯದರಲ್ಲಿ ಬೆಳಗಾಂ ಮತ್ತು ಗುಲ್ಬರ್ಗ ವಿಭಾಗಗಳಿಗೆ ಸೇರಿದ ಎಂಟು ಜಿಲ್ಲೆಗಳಿವೆ. ಸಾಕ್ಷರತೆಯ ವೇಗ, ಆರೋಗ್ಯ ಸೌಲಭ್ಯಗಳು, ಕೈಗಾರಿಕೆಯ ಅಭಿವೃದ್ದಿ ಹೀಗೆ ಹಲವು ಮಾನಕಗಳನ್ನು ಪರಿಗಣಿಸಿ, ಉತ್ತರ ಕರ್ನಾಟಕವು ದಕ್ಷಿಣ ಕರ್ನಾಟಕಕ್ಕೆ ಸಮಸಮನಾಗಿ ಅಭಿವೃದ್ದಿ ಹೊಂದಿಲ್ಲ ಎಂದು ವಾದಿಸುತ್ತಾರೆ. ಇದಕ್ಕೆ ರಾಜ್ಯ ಸರಕಾರವು ಉತ್ತರ ಕರ್ನಾಟಕದ ಬಗೆಗೆ ತೋರಿಸುತ್ತಿರುವ ಮಲತಾಯಿ ಧೋರಣೆಯೇ ಕಾರಣ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ ಈ ಸಮಸ್ಯೆಗೆ ಇರುವ ಏಕೈಕ ಪರಿಹಾರ ಉತ್ತರ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕವಾದ ರಾಜ್ಯದ ಸ್ಥಾನವನ್ನು ಕೊಡುವುದು. ಅಭಿೃದ್ದಿಯ ಅಂತರದ ಆಧಾರದ ಮೇಲೆ ಪ್ರತ್ಯೇಕ ರಾಜ್ಯವನ್ನು ಕೇಳುವುದು ಉತ್ತಮವಾದ ರಾಜಕೀಯವೂ ಅಲ್ಲ, ಉತ್ತಮವಾದ ಆರ್ಥಿಕ ವಿಚಾರವೂ ಅಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಹಿಂದೆ ಬಿದ್ದಿರುವ ಪ್ರದೇಶಗಳಿಗೆ ವಿಶೇಷ ಗಮನ ನೀಡಿ, ಸ್ವಲ್ಪ ಕಾಲಾನಂತರ ಅವರೂ ದಕ್ಷಿಣ ಕರ್ನಾಟಕ ಪ್ರದೇಶದ ಮಟ್ಟಕ್ಕೆ ಬರುವ ಹಾಗೆ ಮಾಡುವಂತೆ ಸರಕಾರದ ಮೇಲೆ ಹಾಗೂ ಚುನಾಯಿತ ಪ್ರತಿನಿಧಿಗಳ ಮೇಲೆ ಒತ್ತಡ ತರಲು ಚಳವಳಿ ತೊಡಗುವುದರಲ್ಲಿ ವಿವೇಕವಿದೆ.

 

ಪರಾಮರ್ಶನ ಗ್ರಂಥಗಳು

1. ಗೋಪಾಲ್ ಎಂ.ಎಚ್., 1972. ‘ಟೀಪು ಸುಲ್ತಾನ್ಸ್ ಮೈಸೂರ್’, ಎಕನಾಮಿಕ್ ಸ್ಟಡಿಸ್, ಮುಂಬಯಿ.

2. ಗ್ರೋವಕ ವೆರಿಂಡರ್(ಸಂ), 1989. ಪೊಲಿಟಿಕಲ್ ಸಿಸ್ಟಮ್ ಇನ್ ಇಂಡಿಯಾ, ನವದೆಹಲಿ: ದೀಪ್ ಎಂಡ್ ದೀಪ್.

3. ರಾಮಯ್ಯ, ಪಿ.ಆರ್., 1961. ಮೈಸೂರ್ಸ್ ಪೊಲಿಟಿಕಲ್ ಎವಲ್ಯೂಷನ್, ಬೆಂಗಳೂರು.

4. ಕೃಷ್ಣರಾವ್ ಎಂ.ವಿ., 1975. ಕರ್ನಾಟಕ, ನವದೆಹಲಿ: ಭಾರತ ಸರಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ.