ಭಾರತೀಯ ಸಂಸ್ಕೃತಿಯ ವೈವಿಧ್ಯತೆಗೆ ತಮ್ಮದೇ ಆದ ಕಾಣಿಕೆಗಳನ್ನು ಸಲ್ಲಿಸುತ್ತಾ ಉಪ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬಂದಿರುವ ಕೊರಮ ಜನಾಂಗ, ಇತರರಿಗಿಂತ ಭಿನ್ನವಾಗಿ ಈ ಸಾವಿರಾರು ವರ್ಷಗಳ ಬದುಕಿನಲ್ಲಿ ಸಾಗಿ ಬಂದಿದೆ. ಇಲ್ಲಿಯ ನೆಲದ ಭಾವನಾತ್ಮಕ ಸಂಬಂಧವನ್ನು ಹೊಂದಿ ವರ್ಣನಾತ್ಮಕ ಜೀವನವನ್ನು ನಡೆಸಿಕೊಂಡು ಬಂದಿರುವ ಕೊರಮರು ಶಿಷ್ಟ ಸಾಹಿತ್ಯದಂತೆ, ಜನಪದ ಸಾಹಿತ್ಯದಲ್ಲಿ ವಿಶೇಷವಾಗಿ ಕಾಣಸಿಗುತ್ತಾರೆ. ಇಲ್ಲಿಯ ಪುರಾವೆ, ಸಂಗತಿಗಳನ್ನು ಅವಲೋಕಿಸಿದಾಗ ಆಯಾ ನಾಡಿನ ಸಾಮಾಜಿಕ ಸಾಂಸ್ಕೃತಿಕ ಬದುಕಿನಲ್ಲಿ ಇವರು ನಿರ್ವಹಿಸುವ ಪಾತ್ರದ ಅರಿವಾಗುತ್ತದೆ. ಆಯಾ ಸಂದರ್ಭಗಳಲ್ಲಿ ಬಳಸಿರುವ ತಂತ್ರ, ತೋರಿರುವ ಜಾಣ್ಮೆ, ಬದುಕಿದ ರೀತಿ ವ್ಯಕ್ತವಾಗುತ್ತದೆ.

ಈಗಾಗಲೇ ಗ್ರಹೀತವಾಗಿರುವ ಹಾಗೆ ತಮಿಳುನಾಡಿನ ಮೂಲದಿಂದ ಚದರಿದ ಕೊರಮರು ಕರ್ನಾಟಕ್ಕೆ ಬಂದು ಇಲ್ಲಿಯ ಜನ ಜೀವನದಲ್ಲಿ ತಾದಾತ್ಮ್ಯದಿಂದ ಕೂಡಿ, ಅನ್ಯತೆಯನ್ನು ಮರೆತು ಜನಪದರ ಬಾಯಲ್ಲಿ, ತಾವು ಮಾಡಿರುವ ಕಾರ್ಯಗಳಿಗೆ ಅನುಸಾರವಾಗಿ ಹೊಗಳಿಸಿಕೊಂಡು ಬದುಕಿದ್ದಾರೆ. ಸಾಮಾಜಿಕವಾಗಿ ಕೆಳಸ್ತರದಲ್ಲಿಯೇ ಬದುಕಿದ ಕೊರಮರ ಮೂಲ ಮತ್ತು ಪ್ರಾಚೀನತೆಯನ್ನರಿಯಲು ಕನ್ನಡಕ್ಕಿಂತ ಮೊದಲು ಕ್ರಿಸ್ತಾರಂಭದಲ್ಲಿ ರಚಿತವಾದ ಶಿವಪ್ಪದಿಕಾರಮ್ ಆಧಾರವನ್ನು ಒದಗಿಸುತ್ತದೆ. ಅಲೆಮಾರಿ ಸ್ತ್ರೀಯೊಬ್ಬಳು ಕಣಿ ಹೇಳುವ ಸಲುವಾಗಿ ರಾಜ- ರಾಣಿಯರಲ್ಲಿಗೆ ಬರುವ ವಿಷಯ ಈ ಕೃತಿಯಲ್ಲಿ ಬಂದಿರುವುದನನು ನೋಡಿದರೆ ಆ ಕಾಲಕ್ಕಾಗಲೀ ಈ ಜನ ಬುಡಕಟ್ಟಿನವರಾದರೂ ಬರೀ ಕಾಡನ್ನೆ ನಂಬಿರದೆ ನಾಡಿನ ದೊರೆಗಳವರೆಗೂ ಸಂಪರ್ಕ ಸಾಧಿಸಿಕೊಂಡಿದ್ದುದು ಗೋಚರಿಸುತ್ತದೆ. ಸಂಪರ್ಕಕ್ಕೆ ಬೇಕಾದ ಕಲಾ ನೈಪುಣ್ಯತೆಯನ್ನು ರೂಢಿಸಿಕೊಂಡು ಸಾಮಾಜಿಕವಾಗಿ ಪಡೆದಿದ್ದ ಗೌರವದ ಅರಿವೂ ಇದರಿಂದಾಗುತ್ತದೆ. ತಂಜಾವೂರು ಭಾಗದಲ್ಲಿ ಇಂದಿಗೂ ಜನಪ್ರಿಯವಾಗಿರುವುದಾಗಿ ಹೇಳುವ ಕೊರವಂಜಿ ನೃತ್ಯ ಇವರ ಪ್ರಸಿದ್ಧಿಗೊಂದು ಸಾಕ್ಷಿ. ತಮಿಳು ಸಾಹಿತ್ಯದಲ್ಲಿ ಅದರಲ್ಲಿಯೂ ನಾಟಕದಲ್ಲಿ

[1] ಕುರಟ್ಟಿಯ ಪಾತ್ರ ಪ್ರಮುಖವಾದುದು. ಇಂಥ ನಾಟಕಗಳಿಗೆ ಕುರವಂಜಿಗಳು ಎಂಬ ಹೆಸರು ಬಂದಿದೆ.[2] ಇಂಥ ಒಟ್ಟು 36 ಕುರವಂಜಿಗಳಿರುವುದಾಗಿ ಅವುಗಳಲ್ಲಿ 1) ಅಜಗರ್ ಕುರವಂಜಿಯನ್ನು ಕವಿ ಕುಂಜರ (1810-1896) ರಚಿಸಿದನು. 2) ಕುಟ್ಟಿಲ ಕುರವಂಜಿ; ಹದಿನೆಂಟನೇ ಶತಮಾನದಲ್ಲಿ ತಿರಿಕೂಟ ರಾಜಪ್ಪರ್ ಕವಿಯಾರ್ ಇವರಿಂದ ರಚಿಸಲಾಗಿದೆ. 3) ಸರಬೇಂದ್ರ ಭೂಪಾಲ ಕುರವಂಜಿ; ತಂಜಾವೂರಿನ ರಾಜರಸ ಬೋಜಿಯನ್ನು ಸ್ತುತಿಸಿ ಕೊಟ್ಟಿಯಾರ್ ಸಿವಕೊಜುಂಡು ದೇಸಿಕಾರ್ ಹದಿನೆಂಟನೇ ಶತಮಾನದ ಪೂರ್ವದಲ್ಲಿ ರಚಸಿದನು. 4) ಕುಂಭೇಸ್ವರ ಕುರವಂಜಿ; ಹದಿನೆಂಟನೇ ಶತಮಾನದಲ್ಲಿ ಪಾಪನಾಶ ಮೊದಲಿಯಾರ್ ಬರೆದನು. 5) ಸಿತ್ರಂಬಲ ಕುರವಂಜಿ; ಇತ್ತೀಚೆಗೆ  ಕೆ.ಎನ್.ದಂಡಯುಧ ಪಾಣಿ ಪಿಳ್ಳೆಯವರು ರಚಿಸಿದ್ದಾರೆ. 6) ತ್ಯಾಗೇಸರ್ ಕುರವಂಜಿ; ಶಹಾಜಿ ಮಹಾರಾಜ್ (1684-1710) ಕಾಲದಲ್ಲಿ ರಚಿತವಾದುದು. 7) ರಜರಾಜ ಕುರವಂಜಿ; ರಾಜ ರಾಜ ಜೋಳನ (10ನೇ ಶತಮಾನ) ಕಾಲದಲ್ಲಿ ಪ್ರದರ್ಶಿತಗೊಂಡಿದೆ ಎಂಬುದರ ಉಲ್ಲೇಖ ತಂಜಾವೂರಿನ ಬೃಹದೇಶ್ವರ ದೇವಾಲಯದಲ್ಲಿದೆ. 8) ಯದುಕುಲದವರು ಹಾಡಿದ ರಾಗಕ್ಕೆ ಯರುಕುಲ ಕಾಂಬೋಜಿಯಾಗಿದೆ ಎಂದು ವಿದ್ವಾನ್ ಟಿ.ಎಚ್.ಶಿವರಾಮಯ್ಯ ಅವರು ಉಲ್ಲೇಖಿಸಿದ್ದಾರೆ.[3] ಜನಪದರಂತೂ ಕೊರವಂಜಿಯನ್ನು ಹಲವು ಮುಖಗಳಲ್ಲಿ ನೋಡಿ ಆನಂದಿಸಿದ್ದಾರೆ. ಅಷ್ಟೇ ಅಲ್ಲದೆ ದೇವ ದೇವತೆಗಳಿಗೂ ಕೊರವಂಜಿ ವೇಷ ತೊಡಿಸಿ ಹಾಡಿ ಹೊಗಳಿದ್ದಾರೆ.

ಕೊರಮರಲ್ಲಿ ಸ್ತ್ರೀಯೇ ಹೆಚ್ಚಾಗಿ ಎಲ್ಲ ಸಂದರ್ಭಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಪುರುಷ ಕೊರಮನ ಪಾತ್ರ ಎಲ್ಲೋ ಒಮ್ಮೆ ಬಂದು ಸರಿದು ಹೋಗುತ್ತದೆ. ಸಾಮಾಜಿಕವಾಗಿ ಹೆಚ್ಚು ಕಂಡು ಬರುತ್ತಿದ್ದವಳು ಕೊರವಂಜಿಯೇ. ಈ ಕೊರವಂಜಿಯರು ಹಳ್ಳಿಯ ಗರತಿಯರೊಡನೆ ಬೆರೆತು ಜಾಣ್ಮೆಯಿಂದ ಕೆಲವರು ಹೊಟ್ಟೆ ತುಂಬಿಸಿಕೊಂಡರೆ ಮತ್ತೆ ಕೆಲವರು ಬೇಡುವಿಕೆಯಿಂದಲೂ ತುಂಬಿಸಿಕೊಂಡಿದ್ದಾರೆ. ಅದು ಏನೇ ಇದ್ದರೂ ಕೊರವಂಜಿಯ ಪಾತ್ರ ಜನಪದರಲ್ಲಿ ವಿಶೇಷವಾಗಿ ಬೆಳೆಯಿತು. ಮೊದಮೊದಲು ಅಲೆಮಾರಿಗಳಾದ ಕೊರಮರು, ಗೌರವದ ಬದುಕನ್ನು ಬದುಕಿರಬೇಕು. ಇಲ್ಲದಿದ್ದರೆ, ರಾಜ- ರಾಣಿಯರಲ್ಲಿಗೆ ಇವರಿಗೆ ಪ್ರವೇಶವಾಗಲಿ ದೇವ  ದೇವತೆಗಳಿಗೆ ಕೊರವಂಜಿಯ ವೇಷ ತೊಡಿಸಿ ನೋಡುವ ಜನಪದರ ಅಪೇಕ್ಷೆಯಾಗಲಿ ಉಂಟಾಗುತ್ತಿರಲಿಲ್ಲ. ನಂತರದಲ್ಲಿ ಇವರ ಆರ್ಥಿಕ ಸ್ಥಿತಿಗರಿ ಕ್ಷೀಣಿಸಿ ಮೊದಲಿನ ಗೌರವದ ಸ್ಥಾನಮಾನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೆ ಹೋಗಿರಬಹುದು.

ಈ ಕೊರವಂಜಿಯರು ಹಿಂದೆ ಹಳ್ಳಿಹಳ್ಳಿಗಳಲ್ಲಿ ಕಾಣ ಸಿಗುತ್ತಿದ್ದರು. ಹಳ್ಳಿಗಳಲ್ಲಿಯೂ ಚಿಕ್ಕ ಚಿಕ್ಕ ಊರುಗಳಲ್ಲಿಯೂ ಕಣಿಯನ್ನು ಹೇಳುವ ಹೆಂಗಸರು ಕೊರವಂಜಿ ಎಂಬ ಹಾಡುಗಳನ್ನು ಹಾಡುತ್ತ ಬರುವುದುಂಟು. ಈ ಹಾಡುಗಳಲ್ಲಿ ಪ್ರಾಯಶಃ ಒಬ್ಬ ಪುರುಷನು ಸ್ತ್ರೀ ವೇಷವನ್ನು ಹಾಕಿಕೊಂಡು ತನ್ನ ಪ್ರಿಯೆಗೆ ಕಣಿ ಹೇಳುವ ನೆಪದಿಂದ ಅವಳ ಅನುರಾಗವನ್ನು ಸಂಪಾದಿಸುವ ಕಥೆಯು ಹೇಳಲ್ಪಡುತ್ತದೆ.[4] ಎಂದು ದೇವುಡು ಅವರು ಹೇಳಿದರೆ, “ಅಲೆಮಾರಿ ಜನಗಳಲ್ಲಿ ಒಂದು ಪಂಗಡದವರನ್ನು ಈ ಹೆಸರಿನಿಂದ ಕರೆಯುತ್ತಾರೆ. ಒಂದು ಕಾಲಕ್ಕೆ ಈ ಕೊರವಂಜಿ ಎಂಬ ಹೆಸರು ದಕ್ಷಿಣ ಭಾರತದಲ್ಲೆಲ್ಲ ಚಿರಪರಿಚಿತವಾಗಿತ್ತು. ಹೊಟ್ಟೆಯ ಪಾಡಿಗಾಗಿ ಮನೆಯ ಬಾಗಿಲಿಗೆ ಬರುವ ಕೊರವಂಜಿ ತನ್ನ ವೇಷಭೂಷಣಗಳಿಂದಲೂ, ಭವಿಷ್ಯವನ್ನು ಹೇಳುವ ಕಾಯಕದಿಂದಲೂ ವಿಶಿಷ್ಟವಾದ ಹಾಡಿನ ವೈಖರಿಯಿಂದಲೂ ಎಲ್ಲರ ಮನಸ್ಸನ್ನು ಬಹು ಹಿಂದಿನಿಂದಲೂ ಆಕರ್ಷಿಸುತ್ತಾ ಬಂದಿದ್ದಾಳೆ”[5] ಎಂದು ಡಾ.ಜಿ.ವರದರಾಜರಾವ್ ಅವರು ಹೇಳುತ್ತಾರೆ. “ಹಚ್ಚೆ ಹೊಯ್ಯುವವರೆಲ್ಲ ಸಾಮಾನ್ಯವಾಗಿ ಹೆಂಗಸರು; ಕಣಿ ಹೇಳು ಭಿಕ್ಷೆ ಎತ್ತುತ್ತ ಊರೂರು ತಿರುಗುವ ಕೊರವಂಜಿಯವರು”[6] ಎಂದು ಎಲ್‌.ಗುಂಡಪ್ಪ ಅವರು ಹೇಳಿದರೆ, ಬಿ.ವಿ.ಮಲ್ಲಾಪೂರ ಅವರು “ಕೊರವಂಜಿಯಗಳು ದಕ್ಷಿಣ ಭಾರತದ ಅಲೆಮಾರಿ ಜನಾಂಗಗಳಲ್ಲಿ ಒಂದಾದ ಕೊರವರ ಬುಡಕಟ್ಟಿಗೆ ಸೇರಿದ. ಕಣಿ ಹೇಳುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಸ್ತ್ರೀಯರು”[7] ಎಂದಿದ್ದಾರೆ. ಇದು ಏನೇ ಇರಲಿ ಈ ಕೊರವಂಜಿಯರು ಬಹು ಹಿಂದಿನಿಂದಲೂ ಹೊಟ್ಟೆ ಪಾಡಿಗಾಗಿ ಹಳ್ಳಿಗಳಿಗೆ ಹೋಗಿ ತಟ್ಟೆ ಬುಟ್ಟಿ ಮಾಡಿ, ಹಚ್ಚೆ ಹಾಕಿ, ಜನರನ್ನು ಆಕರ್ಷಿಸಿ ಕಣಿ ಹೇಳಿ, ಕೆಲವೊಮ್ಮೆ ಬೇಡಿಯೂ ಜೀವನ ನಡೆಸಿಕೊಂಡು ಬಂದಿದ್ದಾರೆ. ಹಳ್ಳಿಯ ಹೆಣ್ಣುಮಕ್ಕಳ ನಡುವೆ ಸರಾಗವಾಗಿ ವ್ಯವಹರಿಸುತ್ತಿದ್ದ ಇವರು ಕಣಿ ಹೇಳುತ್ತಿದ್ದುದು ಇವರ ಆಕರ್ಷಣೆಗೆ ಒಂದು ಬಲವಾದ ಕಾರಣವಾಗಿರಬೇಕು. ಈ ಆಕರ್ಷಣೆಯೇ ಕೊರವಂಜಿಗೆ ಸಾಹಿತ್ಯದಲ್ಲಿಯೂ ಅವಕಾಶವೊದಗಿಸಿತು. ಆದ್ದರಿಂದಲೇ ಆಕೆ ಜಾನಪದ ಮತ್ತು ಶಿಷ್ಟ ಸಾಹಿತ್ಯದ ಅನೇಕ ಸಂದರ್ಭಗಳಲ್ಲಿ ಗೋಚರಿಸುತ್ತಾಳೆ.

ಕನ್ನಡ ಸಾಹಿತ್ಯದಲ್ಲಿ ಅತ್ಯಂತ ವೈವಿಧ್ಯಪೂರ್ಣವಾಗಿ ಕೊರವಂಜಿ ಪಾರ ಬೆಳೆದು ಬಂದಿದೆ. ಜಾನಪದ ಸಾಹಿತ್ಯದಲ್ಲಿಯಂತೂ ಈಕೆ ಅನೇಕ ಕಡೆ ಗೋಚರಿಸುತ್ತಾಳೆ. ಪುರಾಣ ಮೂಲದ ಕಥೆಗಳಲ್ಲಿಯೂ ಕೊರವಂಜಿ ಸಂದರ್ಭೋಚಿತವಾಗಿ ಪ್ರಕಟಗೊಂಡಿದ್ದಾಳೆ. ಕೊರವಂಜಿಯ ವೇಷ ಭೂಷಣವೂ ಆಕರ್ಷಕವಾಗಿದ್ದ ಬಗ್ಗೆ ಅಲ್ಲಲ್ಲಿ ವಿವರಣೆಗಳು ದೊರೆಯುತ್ತವೆ.

1) ಜಾನಪದರು ಬಯಲು ಸೀಮೆಯ ಹಳ್ಳಿ ಹಳ್ಳಿಗಳಲ್ಲಿ ಗೋಕುಲಾಷ್ಟಮಿಯ‌ದಿನ ಬೆಳದಿಂಗಳಲ್ಲಿ ಕೋಲು ಹೊಯ್ದುಕೊಂಡು ಹಾಡುವ ಕೃಷ್ಣ ಕೊರವಂಜಿ ಎಂಬ ಜನಪದ ಗೀತೆಯಲ್ಲಿ”[8] ಶ್ರೀಕೃಷ್ಣನು ಕೊರವಂಜಿಯ ವೇಷ ಧರಿಸಿ ಮಾಯದ ಮಗುವನ್ನು ಬೆನ್ನಿಗೆ ಬಿಗಿದು ಅಪರೂಪದ ಕೊರವಂಜಿಯಾಗಿ ಬೀದಿ ಬೀದಿಗಳಲ್ಲಿ ಸುತ್ತತ್ತಾ ಬರುತ್ತಾನೆ. ಕೊರವಂಜಿ ಬಂದ ಸುದ್ದಿ ರುಕ್ಮಿಣಿಗೆ ತಿಳಿದು ಆಕೆಯನ್ನು ಕರೆತರಲು ದಾಸಿಯರನ್ನು ಅಟ್ಟುತ್ತಾಳೆ. ಅರಮನೆಗೆ ಬಂದ ಕೊರವಂಜಿಯನ್ನು ರುಕ್ಮಿಣಿ ನಿನ್ನದು ಯಾವ ಊರು, ಯಾವ ಸೀಮೆ, ಎಲ್ಲಿಂದ ಬಂದೆ ಎಂದು ಕೇಳುತ್ತಾಳೆ. ಇಲ್ಲಿ ಕೊರವಂಜಿ ಕೊಡುವ ದೈವಸಂಬಂಧಿ ಉತ್ತರ ಆಕೆಯ ಪ್ರೌಢಿಮೆಯನ್ನು ಸೂಚಿಸುತ್ತದೆ.

ಕಣಿ ಹೇಳು, ನಿನಗೆ ಮುತ್ತು, ರತ್ನ, ಮಾಣಿಕ್ಯ, ನವರತ್ನಗಳನ್ನು ಕೊಡುತ್ತೇನೆ ಎಂದು ರುಕ್ಮಿಣಿ ಹೇಳಿದರೆ, ಯಾವ ಸಾಮಾನ್ಯ ಕೊರವಂಜಿಯೂ ಬಿಡುತ್ತಿರಲಿಲ್ಲ. ಲಕ್ಷ್ಮೀಪತಿಯಾದ ಆತನಿಗೆ ಅವುಗಳ ಅಗತ್ಯವಿಲ್ಲ. ಇಲ್ಲಿಯ ರುಕ್ಮಿಣಿ-ಕೊರವಂಜಿಯರ ಸಂಭಾಷಣೆ ಮೋಹಕವಾಗಿದೆ. “ಏನು ಕೊಟ್ಟೆನೆಂದಾರು ಒಲ್ಲೆನೆಂದೀಯ, ಏನು ಬೇಕು? ಎಂಬುದಕ್ಕೆ ಕೊರವಂಜಿ ನಿನ್ನ ಮನಸ್ಸಿನ ಬಯಕೆಯನ್ನು ಹೇಳಿದರೆ, ಕೃಷ್ಣ ಬರುವ ವಿಷಯವನ್ನು ತಿಳಿಸಿದರೆ ಏನು ಕೊಡುವೆ ಎನ್ನುತ್ತಾಳೆ. ಅದಕ್ಕೆ ರುಕ್ಮಣಿ,ಮಗುವಿಗೆ ಒಡವೆ, ಬೆಳ್ಳಿ ಬೆತ್ತದ ಕೋಲು, ಕೈತುಂಬಾ ಅಪರಂಜಿ ಬಳೆ, ಪಟ್ಟೆ ಸೀರೆ ಕೊಡಿಸುತ್ತೇನೆಂದುದಕ್ಕೆ ಕೊರವಂಜಿ ಒಪ್ಪಿಕೊಳ್ಳುತ್ತಾಳೆ. ಮಂಗಳವಾರ ಮನೆ ಸಾರಿಸಿ ಶುಚಿರ್ಭೂತಳಾಗಿ ಸಿಂಗಾರಿಸಿಕೊಂಡು ನಿನ್ನ ದೇವರನ್ನು ಭಕ್ತಿಯಿಂದ ಪೂಜಿಸಿ, ಕೈತಾ ಎಂದು ಆಕೆಯ ಕೈಯನ್ನು ಹಿಡಿದು, ಎಂಟು ಮಂದಿಯು ನಿನಗೆ ನಂಟರು ನಿನ್ನನ್ನು ನಂಬಿದ್ದಾರೆ. ನೀನಾದರೂ ಸುಂಟರ ಗಾಳಿಯಲ್ಲಿ ತಿರುಗುತ್ತಿರುವೆ ಎನ್ನುತ್ತಾಳೆ. ಆ ಎಂಟು ಮಂದಿ ನಂಟರು ಮನುಷ್ಯ ಸಹಜವಾದ ಆಸೆ-ಆಕಾಂಕ್ಷೆಗಳು ಅವುಗಳ ದಾಳಿಗೆ ಸಿಕ್ಕಿ ರುಕ್ಮಿಣಿ ಸುಂಟರ ಗಾಳಿಯಾಗಿರುವುದು ಆಶ್ಚರ್ಯವೇನಲ್ಲ. ಎಂಥ ಸೊಗಸಾದ ವರ್ಣನೆ. ಕೃಷ್ಣನ ನೆನಪಿನಲ್ಲೆ ಆತನ ಆಗಮನಕ್ಕಾಗಿ ಕಾಯುತ್ತಿದ್ದ ರುಕ್ಮಿಣಿಯ ಮನಃಸ್ಥಿತಿಯನ್ನು ಈ ಸುದೀರ್ಘವಾದ ಗೀತೆಯಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಅಲ್ಲದೆ ವ್ಯಕ್ತಿಯ ಮುಖಭಾವದಿಂದಲೇ ಅವರ ಅಂತರಂಗವನ್ನರಿಯುವ ಶಕ್ತಿ ಕೊರವಂಜಿಗಿದ್ದುದೂ ಗೋಚರಿಸುತ್ತದೆ. ಮನದನ್ನೊಡನೆ ಮದುವೆಯಾಗುತ್ತದೆ ಎಂಬ ವಿಷಯ ಕೇಳಿ ಸಂತೋಷದಲ್ಲಿರುವ ರುಕ್ಮಿಣಿ ಒಳಗೆ ಓಡುತ್ತಾಳೆ ನಾಚಿಕೆ ಸ್ತ್ರೀಗೊದು ಆಭರಣವಲ್ಲವೆ?

ಇಂಥ ಸಂದರ್ಭಗಳಿಗೆ ಕೊರವಂಜಿಯ ಪಾತ್ರ ಅದ್ಭುತವಾಗಿ ಒಪ್ಪುತ್ತದೆ. ಔಚಿತ್ಯಪೂರ್ಣವಾಗಿ ಶೋಭಿಸುತ್ತದೆ. ಈ ಗೀತೆಯಲ್ಲಿ ತೊಟ್ಟು ಗೊಡೆಯ ತಂದು ನಾಮರೋಳಲ್ಲಾ, ಹೊಟ್ಟೆಗೆ ಹಿಟ್ಟಿಗೆ ಬಂದ ಹೆಣ್ಣು ನಾನಲ್ಲ ಎಂದು ಕೃಷ್ಣ ಕೊರವಂಜಿಯ ವೇಷದಲ್ಲಿ ಹೇಳುವುದನ್ನು ನೋಡಿದರೆ, ನಿಜದ ಕೊರವಂಜಿ ಹಳ್ಳಿಗಳ  ಮೇಲೆ ತಾವು ಮಾಡಿದ ಹೆಡಿಗೆ ಬುಟ್ಟಿಗಳನ್ನು ಮಾರಲು, ಕಣಿ ಹೇಳಿ, ಹೊಟ್ಟೆ ತುಂಬಿಸಿಕೊಳ್ಳಲು ಊರೂರು ತಿರುಗುತ್ತಿದ್ದರು ಎಂಬುದು ವ್ಯಕ್ತವಾಗುತ್ತದೆ. ಕೊರಮರ ಬದುಕಿನ ಒಂದು ಮುಖವನ್ನು ಈ ಗೀತೆ ಸಹಜವಾಗಿಯೇ ಪ್ರಕಟಿಸುತ್ತದೆ. ಜನಪದ ಸಾಹಿತ್ಯ ಜನಜೀವನದ ಪ್ರತಿಬಿಂಬ ಎನ್ನುವುದಕ್ಕೆ ಇದು ಸರಿಯಾದ ಉದಾಹರಣೆ.

2) ಬರಿಯ ಪ್ರಣಯ ಸನ್ನಿವೇಶಗಳಿಗಷ್ಟೇ ಅಲ್ಲದೆ ಬದುಕಿನ ಇತರ ಸಂದರ್ಭಗಳಲ್ಲಿಯೂ ಕೊರವಂಜಿ ಪ್ರವೇಶಿಸಿ ಅಲ್ಲಿಯ ಕಷ್ಟವನ್ನೋ, ಸಮಸ್ಯೆಯನ್ನೋ, ಗ್ರಹಿಸಿ, ಆಯಾ ಸಂದರ್ಭಕ್ಕೆ ಸಮಾಧಾನ ಅಥವಾ ಪರಿಹಾರವನ್ನೊದಗಿಸಿ ಪಕ್ಕಾ ಭವಿಷ್ಯಗಾರ್ತಿಯಾಗಿ ಮನಃಶಾಸ್ತ್ರಜ್ಞೆಯಾಗಿ ತೋರುವ ಅನೇಕ ಸನ್ನಿವೇಶಗಳೂ ಜನಪದ ಸಾಹಿತ್ಯದಲ್ಲಿ ತೋರಿ ಬರುತ್ತವೆ. ಅಂಥವುಗಳಲ್ಲೊಂದು “ಇದ್ದಳು ಅಲ್ಲೊಬ್ಬ ಸತ್ಯಭಾಮೆ”[9]ಜನಪದರು ಕೊರವಂಜಿಯ ಬಗೆಗೆ ಇಟ್ಟುಕೊಂಡಿದ್ದ ನಂಬಿಕೆಯನುಗುಣವಾಗಿ ಇಲ್ಲಿ ವ್ಯವಹರಿಸಿದ್ದಾಳೆ. ಸತ್ತಿಭಾಮೆ ತಿಪ್ಪೆಯ ಮೇಲೆ ಕೆಕ್ಕರಿಸಿ ಮೇಯುತ್ತಿದ್ದ ಕೋಳಿಯೊಂದರ ಚೆಂಡು ಮುರಿದು ಅಂಗಡಿಯಿಂದ ಸಾಮಾನು ತಂದು ಹದವಾಗಿ ಅಡಿಗೆ ಮಾಡಿ ಗಂಡ, ಮಕ್ಕಳಿಗೂ ಉಣಬಡಿಸಿ ತಾನೂ ಸಂತೃಪ್ತಿಯಾಗಿ ಉಂಡು ಮಲಗಿದ ಮೇಲೆ ಹೊಟ್ಟೆ ನೋವು ಏಳುತ್ತದೆ. ಹೆಂಡತಿಯ ತಪ್ಪಿಗೆ ಸಿಟ್ಟು ಬಂದರೂ ಮರ್ಯಾದೆಯ ಸಲುವಾಗಿ ಮೌನವಾಗಿದ್ದ ಗಂಡನಿಗೆ ಸಿಟ್ಟು ಕೆರಳಿ ಬಡಿಯುತ್ತಾನೆ. ಆಕೆಗೆ ಇವನು ಸಹಮತವಿದ್ದರೆ ಹೀಗಾಗುತ್ತಿರಲಿಲ್ಲ. ಇನ್ನು ಗತ್ಯಂತರವಿಲ್ಲದೆ ಸತ್ತಿಭಾಮೆ ಕೊರಮಿಯ ಮನೆಗೆ ಓಡುತ್ತಾಳೆ. ಅಲ್ಲಿ “ದುಡ್ಡುವ ಇಕ್ಯಾಳೆ ದೂಪಾದ ಇಕ್ಯಾಳೆ ಅಡ್ಡಡ್ಡ ಬಿದ್ದು ಬೇಡುತ್ತಾಳೆ” ಇಂಥ ಕಷ್ಟಗಳಿಗೆಲ್ಲ ಕೊರವಂಜಿಯಲ್ಲಿ ಪರಿಹಾರವಿದೆ ಎಂಬ ಜನಪದರ ನಂಬಿಕೆ ಈ ಮಾತುಗಳಲ್ಲಿ ಅಡಕವಾಗಿದೆ. ಆದರೆ ಇಲ್ಲಿ ಕೊರವಂಜಿ ಪಾತ್ರ ಯಾವ ಪೂರ್ವಸೂಚನೆಯೂ ಇಲ್ಲಿದೆ “ದೇವರ ಕಾಟವಲ್ಲ ದಿಂಡರ ಕಾಟವಲ್ಲ ಕಳಗೋಳಿ ತಿಂತ ಕಿರುಬ್ಯಾನೆ” ಎಂದು ಹೇಳುತ್ತಾಳೆ. ಇಲ್ಲಿ ಯಾವ ದೇವ ದೇವತೆಯೂ ವೇಷ ಧರಿಸಿ ಬಂದಿಲ್ಲ. ಈ ನಿಜವಾದ ಕೊರವಂಜಿಯ ಬಾಯಲ್ಲಿ ಬಂದಿರುವ ಸತ್ಯದ ಮಾತುಗಳನ್ನು ನೋಡಿದರೆ ಇಂಥ ದಿವ್ಯಶಕ್ತಿ ಈಕೆಯಲ್ಲಿತ್ತೇ?ಎಂದು ಜನಪದರಿಗೆ ಆಶ್ಚರ್ಯವಾಗುತ್ತದೆ. ಆಕೆ ಸೂಚಿಸುವ ಪರಿಹಾರವೂ ಕೂಡ ನ್ಯಾಯಯುತವಾದದ್ದು. “ಒಂದ್ಕೋಳಿಗೆರಡ ಕೊಡಹೋಗೆ” ಎನ್ನುತ್ತಾಳೆ. ಹೊಟ್ಟೆ ತುಂಬಿಕೊಳ್ಳುವ ಸಲುವಾಗಿ ನ್ಯಾಯವನ್ನು ಮರೆಮಾಚುವ ಪ್ರವೃತ್ತಿ ಇಲ್ಲಿ ಕಂಡು ಬರುವುದಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ದೊರೆತ ಗೀತೆ ಸಹಜವಾಗಿಯೇ ಕೊರವಂಜಿಯ ಪಾತ್ರದ ಮೇಲೆ ಬೆಳಕು ಚೆಲ್ಲುವ ಒಂದು ಅಂಶವಾಗಿ ನಿಲ್ಲುತ್ತದೆ.

3) ಪ್ರೇಮ ಪ್ರಕರಣ ಅಥವಾ ಕಷ್ಟ ಪರಿಹಾರದ ಸಂದರ್ಭಗಳಷ್ಷೇ ಅಲ್ಲದೆ ದುಷ್ಟರನ್ನು ಶಿಕ್ಷಿಸುವಲ್ಲಿ, ಅಂತೆಯೇ ಶಿಷ್ಟರನ್ನು ರಕ್ಷಿಸುವ ಸಮಯದಲ್ಲಿಯೂ ಕೊರವಂಜಿಯ ಪಾತ್ರ ಹೇಗೆ ಬಳಕೆಯಾಗಿದ ಎಂಬುದಕ್ಕೆ ಎಲ್ಲಮ್ಮ ಕಥೆಯ ಕೊರವಂಜಿ ಒಂದು ನಿದರ್ಶನ. “ಕರುಣಿ ಕಣ್ಣು ತೆರೆಯೆ” ಎನ್ನುವ ಈ ಗೀತೆಯಲ್ಲಿ ಎಲ್ಲಮ್ಮದೇವಿ ಓರೆಗಲ್ಲು ರಾಯನ ಅಹಂಕಾರಕ್ಕೆ ಮುನಿದು ಅವನಿಗ ಇಲ್ಲದ ಕಷ್ಟಗಳನ್ನುಂಟು ಮಾಡಿ ಕೊರವಂಜಿ ಧರಿಸಿ ಅವನಲ್ಲಿಗೆ ಕಣಿ ಹೇಳಿ ಸರಿದಾರಿಗೆ ತಂದು ಕಷ್ಟ ಪರಿಹರಿಸುತ್ತಾಳೆ.

ಅರವತ್ತು ವರ್ಷದ ಮುದುಕೆಯಾಗಿ ಓರೆಂಗಲ್ಲು (ಕರುಂಗಲ್ಲು) ರಾಜನ ಪಟ್ಟಣಕ್ಕೆ ಬರುವ ಕೊರವಂಜಿ ವೇಷದ ಎಲ್ಲಮ್ಮನ ರೂಪು –

“ಜೋಲು ಬಿದ್ದಾವೆ ಕಿವಿ ಮೂಗು ಮಾತಾಯ್ಗೆ
ನೇತ್ರ ಹೊಡೆದಂಥ ಕಣ್ಣು
ಮಾಯಾದ ಅವತಾರ ಧರಿಸುವಳೆ
ಕೈಯಲ್ಲಿ ಗಗ್ಗುರವ ಹಿಡಿದು
ಕೊರವಂಜಿ ಪೆಟ್ಟಿಗೆ ತೆಗೆದು
ಕೊರವಂಜಿ ತಲೆ ಮೇಲೆ ಧರಿಸಿ
ಇವಳು ಕೊರವಂಜಿ ಅವತಾರದಲ್ಲಿ”[10]

ಮುಂತಾಗಿ ಬಂದಿದೆ.ದೇವತೆಗಳಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದ ಅಹಂಕಾರಿ ಒರೆಗಲ್ಲು ರಾಜ ಈ ” ಈ ಭಾದೆ ಬಂಧಾನ ತಡೆಯಲಾರ, ಕಷ್ಟ ರೊಗದ ಕೀವು ರಕ್ತ ಕಣಿಯ ಹೇಳು ಕಣಿಯ ಹೇಳವ್ವ” ಎಂದಗ ಆಕೆ ಕೇಳಯ್ಯ ದೊರೆಯೇ, ನೀನು ಯಾರಿಂದಲೂ ಸಾವಿಲ್ಲದಂತೆ ವರದ ಪಡೆದಿದ್ದ, ನಿನ್ನ ಹುಣ್ಣು ಮುಂತಾದುದಕ್ಕೆ ಬೇಲೆ ಕಾರಣವು ಇದೆ. ಉತ್ತರ ದೇಶದ ದೇವಿಯನ್ನು ನೀನು ಮೋಹಿಸಿ ಅವಳನ್ನು ಎಳೆತನ್ನಿ ಎಂದು ಹೇಳಿದ್ದೆಯಲ್ಲ ಎಂದು ಹೇಳುತ್ತಿರುವಾಗ “ಅದಕ್ಕೇನು ಪರಿಹಾರ ಹೇಳಮ್ಮ” ನಿನ್ನ ಶತಕೋಟಿ ಲಿಂಗವನ್ನು ತೆಗೆಯಬೇಕು ಮುಂದೆ ನೀನು ಲಿಂಗಧಾರಣೆ ಮಾಡಬೇಡ, ಮಂಗಳವಾರ ಭಿಕ್ಷೆ ಮಾಡಬೇಕು, ಸುರಿಗಡಿಗೆ ತೆಲೆಯ ಮೇಲ್ಹೊರಬೇಕು, ಭಕ್ತರು ಕೊಟ್ಟ ಪದಾರ್ಥ ನೈವೇದ್ಯ ಮಾಡಬೇಕು. ನಿನ್ನ ಉರಿಯಲ್ಲ ಶಮನವಾಗುತ್ತದೆ ಎಂದು ರಾಜನ ಉರಿ ಬಂದಾನಕ್ಕೆ ಸಾಧು ಬಂಡಾಯವೆನ್ನಸೆಯುತ್ತಾಳೆ – ರಾಜನ ಮೇಲೆ, ಆತನ ಮೊದಲಿನ ಹಾಗೆಯೇ ಸುಂದರನಾಗುತ್ತಾನೆ. ಏಳು ಕೋಟಿ ಉಧೋ ಉಧೋ ಎಂದು ಮಂತ್ರ ಹೇಳುತ್ತಾನೆ. ಹೀಗೆ ಕಥೆ ಮುಂದುರಿಯುತ್ತದೆ.

ಒಬ್ಬ ಅಹಂಕಾರಿಗೆ ಕಷ್ಟಕೊಟ್ಟು ಸಂಕಟಕ್ಕೀಡು ಮಾಡಿ ಅವನನ್ನು ಸರಿದಾರಿಗೆ ತರುವ ಸಂದರ್ಭದಲ್ಲಿಯೂ ಕೊರವಂಜಿ ಪ್ರವೇಶವಾಗಿರುವುದು ಜನಪದರ ಅಪೇಕ್ಷೆಯ ದ್ಯೋತಕ. ಈ ಗೀತೆಯಲ್ಲಿಯೂ ಕೊರವಿ ಅಡವಿಡೆಂಕಣದೇಶ ನನ್ನದು ಎನ್ನುವ ಮಾತು ದಕ್ಷಿಣದ ಅವಳ ಮೂಲದ ಕಡೆಗೆ ಬೆಳಕು ಚೆಲ್ಲುತ್ತದೆ.

4) ಕೊರವಂಜಿಯರು ಅನುಸರಿಸುತ್ತಿದ್ದ ವಿವಿಧ ವೃತ್ತಿಗಳನ್ನು ತಿಳಿಯಪಡಿಸುವ ಈ ಜನಪದಗೀತೆ ಅವರ ಸಾಮಾಜಿಕ ಬದುಕಿನ ಕಡೆಗೂ ಬೆಳಕು ಚೆಲ್ಲುತ್ತದೆ.

“ಲಗು ಬೀರಣ್ಣಾ ಲಗು ಬೀರಾ ಚಲ್‌
ಲಘಾಟಿ ಕೊರಮರು ಬರುತಾರೆ
ಘವೀ ಶೀಂಗೀ ಲಘುವೀಯೆ
ಲಘವೀ ಶೀಂಗೀ ಮಗುವೆಲ್ಲೇ
ನೀನು ಮಗುವ ಸಾಕೋದ್ನಿಜವೇನೆ
ಕಳ್ಳಕೊರಮಣ್ಣ ಬರುತಾನೆ ಚೋರ ಕೊರಮಣ್ಣ ಬರುತಾನೆ”

ಎನ್ನುವ ಈ ಸಾಲುಗಳಲ್ಲಿ ಕೊರಮರು ಮಾಡುತ್ತಿ‌ದ್ದ ಬಗ್ಗೆ ತಿಳಿಯುತ್ತದೆಯಾದರೂ, ಮಕ್ಕಳನ್ನು ಕದಿಯುತ್ತಿದ್ದರೆ ಎಂಬುದು ಸಂದೇಹವಲ್ಲ. ಕೊರಮರಲ್ಲಿ ಬ್ಯಾರಗಾಯಿ ಕೊರಮರು ಎನ್ನುವ ವರ್ಗ ಕಳ್ಳತನ ಮಾಡುತ್ತಿದ್ದರು. ಇವರು ಮನೆಯಲ್ಲಿ ಇದ್ದದೆನ್ನೆಲ್ಲ ದೋಚಿಕೊಂಡು ಹೋದರೆ ಮುಂದೆ ಮಕ್ಕಳಿಗೆ ಗತಿಯೇನು, ಇದ್ದುದನ್ನು ಬಚ್ಚಿಟ್ಟುಕೊಂಡು ಕಾಲ ಹಾಕಬೇಕೆನ್ನುವ ಧೋರಣೆ ಮೇಲಿನ ಸಾಲುಗಳಲ್ಲಿ ಅಡಕವಾದಂತಿದೆ.

ಏರಿಯ ಕೆಳಗೆ ಹೋದಳು ಕೊರವಂಜಿ
ಹಾರಿಸಿ ಹುಲ್ಲಾ ಹೆಣೆದಳು ಕೊರವಂಜಿ
ಆರೂರಕಾಲಿನ ನೆಲುವ ಹೆಣೆದಳು ಕೊರವಂಜಿ
ಗೌಡಗೋಳ ಬೀದಿಗೆ ಹೋದಾಳು ಕೊರವಂಜಿ
ಹಣವೀಗೊಂದೂ ನೆಲುವ ಮಾರ್ಯಾಳು ಕೊರವಂಜಿ

ಕೊರಮರು ನಜೆ ಹುಲ್ಲಿನಿಂದ ನೆಲವು, ಕಸಬರಿಗೆ ಮಾಡಿ ಮಾರುವುದು ಸಹಜವೇ, ಅವಳು ಕೇರಿ ಕೇರಿಗಳಿಗೆ ಹೋಗಿ ಮಾರುತ್ತಿದ್ದ ವಿಷಯ ಇಲ್ಲಿಯ ಸಾಲುಗಳಲ್ಲಿ, ಚಿತ್ರವತ್ತಾಗಿ ಬಂದಿದೆ.

ಹಾರುವ್ರು ಕೇರೀಗೆ ಹೋರಟಾಳು ಕೊರವಂಜಿ
ಬೀದಿಬೀದಿಯ ಮೇಲೆ ಹೋದಾಳು ಕೊರವಂಜಿ
ಕೇರಿಕೇರಿಯ ಮೇಲೆ ಹೋದಾಳು ಕೊರವಂಜಿ
ಕಣಿಯು ಕಣಿಯೂ ಎಂದು ಸಾರ್ಯಾಳು ಕೊರವಂಜಿ
ಬಾರೆ ಕೊರವಂಜಿ ಬಾರೆ ನಮ್ಮನೆಗೆ……….

ಕೇರಿ ಕೇರಿ ಬೀದಿ ಬೀದಿಗಳಲ್ಲಿ ಕಣಿ ಹೇಳಲು ತಿರುಗುತ್ತಿದ್ದ ಕೊರವಂಜಿಯ ಚಿತ್ರ ಇಲ್ಲಿ ಗೋಚರಿಸುತ್ತದೆ. ಅಲ್ಲದೆ ಆಕೆಯನ್ನು ಜಜ ಬಾರೆ ಕೊರವಂಜೀ ಬಾರೆ ನಮ್ಮನೆಗೆ ಎಂದು ಕರೆಯುತ್ತಿದ್ದುದನ್ನು ನೋಡಿದೆ ಕೊರವಂಜಿಯ ಜನಪ್ರಿಯತೆ ಅರ್ಥವಾಗುತ್ತದೆ.

“ಕೈತಾರೆ ಕೈತಾರೆ ಕೈತಾರೆ ದುಂಡಿ
ಕೈ ನೋಡಿ ಕಣಿಯ ಹೇಳ್ತಿನಿ ಮಗಳೆ
ನೀ ಬಡ್ಗಾಲ ಸೀಮಿಗೆ ಹೋಗಿದ್ದೆ ಮಗಳೆ
ಬಾಳೆಯ ಮರದಾಡಿ ಮುಲಗಿದ್ದೆ ಮಗಳೆ
ಬ್ಯಾಡೆ ಗಾಳಿ ನಿಂಗ್ಹಿಡ್ದಿದೆ ಮಗಳೆ
ಭಾರಿಯ ಪೂಜೆಯ ಹಾಕಲು ಬೇಕು
ನೀ ಮೂಡಲ ಸೀಮೆಗೆ ಹೋಗಿದ್ದೆ ಮಗಳೆ
ಮುತ್ತುಗದ ಮರದಾಡಿ ಮಲಗಿದ್ದೆ ಮಗಳೆ
ತುರಕಾರಗಾಳಿ ಹಿಡಿದಾದೆ ನಿನಗೇ
ಭಾರಿಯಂತ್ರವ ಕಟ್ಟಿಸಲೂ ಬೇಕು”[11]

ಕೊರವಂಜಿ ಕಣಿ ಹೇಳವಾಗ ಅನುಸರಿಸುತ್ತಿದ್ದ ಜನಪದದ ಧಾಟಿ ಮತ್ತು ತಂತ್ರ ಈ ಗೀತೆಯಲ್ಲಿ ಮೂಡಿ ಬಂದಿದೆ. ಕಣಿ ಹೇಳುವ ವ್ಯಕ್ತಿಯ ಮನಸ್ಸಿನ ಮೇಲೆ ಅಂಜಿಕೆಯ ಭಾರಹಾಕಿ, ಇಲ್ಲದ ಭಯ ಹುಟ್ಟಿಸಿ, ವಿಶೇಷ ಪೂಜೆ ಮಾಡಿ ಶಾಂತಿ ಮಾಡಿಕೊಳ್ಳಬೇಕು ಎಂದೆಲ್ಲ ಹೇಳಿ ಹೆಚ್ಚು ದುಡ್ಡು ಕೇಳುತ್ತಿದ್ದುದು ಸಾಮಾನ್ಯವಾಗಿತ್ತು. ಆದ್ದರಿಂದಲೇ ಆಕೆ

“ಮಂಗಳವಾರ ದಿವಸ ಮನೆ ಸಾರಿಸಬೇಕು
ರಂಗೋಲಿ ಪುಡಿ ಮಾಡಿ ಬರೆಯಲೂ ಬೇಕು
ಹಣ್ಣು ಕಾಯಿ ಎರಡೂವೆ ಮೊದಲಾಗಬೇಕು
ಕರ್ಪೂರ ಸಾಂಬ್ರಾಣಿ ಉದೀನಕಡ್ಡಿ
ನಿಂಬೆಯಣ್ಣು ಮೊದಲಾಗಬೇಕು
ಕಣ್ಣಿಗೆ ಬೇಕಾದ ಹೂವಾಗಬೇಕು
ಕೊರವಂಜಿ ದಿಟ್ಟಾ ನೀ ನೋಡಬೇಕು
ನಾನು ಮೂಲೆಗೂ ನಾಕು ಹಣವಾಗಬೇಕು
ನಟ್ಟುನಡುವಿಗೆ ಒಂದು ವರಹವಾದರೂ ಬೇಕು
ಬಿಳೇದು ಒಂದು ಹುಂಜಾಗಬೇಕು
ಮುಂದಾ ಬರೊದೊಂದು ಟಗರಾಗಬೇಕು”

ಎಂದು ಪೂಜೆಯ ಸಾಮಾನಿನ ಪಟ್ಟಿಯನ್ನೇ ಬೆಳೆಸುತ್ತಿದ್ದಳು. ದಕ್ಷಿಣೆಯ ಜತೆಗೆ ಹುಂಜ ಮತ್ತು ಕೊಡುವಂಥವರಿದ್ದರೆ ಟಗರು ಮುಂತಾದ್ದೆಲ್ಲವನ್ನು ಕೇಳುತ್ತಿದ್ದಳು. ಹೆದರಿಕೆ ಇದ್ದ ಜನ ಕಷ್ಟ ದೂರಾದರೆ ಸಾಕೆಂದು ಅಷ್ಟನ್ನು ಕೊಟ್ಟು ಶಾಂತಿ ಪೂಜೆ ಮಾಡಿಸಿ ಸಮಾಧಾನ ಪಟ್ಟುಕೊಳ್ಳುತ್ತಿದ್ದರು. ಇದು ಸಾಮಾನ್ಯ ಕೊರವಿಯೊಬ್ಬಳು ಕಣಿ ಹೇಳುವಾಗ ಅನುಸರಿಸುತ್ತಿದ್ದ ರೀತಿ. ದೇವ-ದೇವತೆಗಳು ಕೊರವಂಜಿ ವೇಷ ಧರಿಸಿದಾಗಿನ ರೀತಿ ಬೇರೆ. ಸಾಮಾನ್ಯ ಕೊರವಂಜಿಗೆ ಹೊಟ್ಟೆ ತುಂಬಿಕೊಳ್ಳುವ ಹಂಬಲವಾದರೆ, ದೇವತೆಗಳಿಗೆ ಇದು ವಿನೋದವಷ್ಟೇ. ಕೈತಾರೆ ಕೈತಾರೆ ಕೈತಾರೆ ದುಂಡಿ ಎಂಬುದು ಮಹಾದೇವಿಯಕ್ಕನ ಕೊರವಂಜಿಯ ಗೀತ ವಚನದಲ್ಲಿ ಬಂದರೆ ಕೈತೋರೆ ಕೈತೋರೆ ದುಂಡಿ ಎಂದು ಜನಪದ ಗೀತವೊಂದರಲ್ಲಿ ಬಂದಿದೆ. ಇದನ್ನು ನೋಡಿದರೆ, ಈ ಪರಸ್ಪರರಲ್ಲಿರುವ ಪ್ರೇರಣೆ ಪ್ರಭಾವದ ಅರಿವಾಗುತ್ತದೆ. ಜನಪದದಿಂದ ಶಿಷ್ಟಪದರು ಎತ್ತಿಕೊಂಡಿರುವ ಬಗೆ ಇಲ್ಲಿ ಕಾಣುತ್ತದೆ.

5) ಚಾಮುಂಡಿ ದೇವೀರಿ ನಂಜುಂಡ[12] ಎನ್ನುವ ಇನ್ನೊಂದು ಗೀತೆಯಲ್ಲಿಯೂ ಕೊರವಂಜಿಯ ಪ್ರಸ್ತಾಪ ಬರುತ್ತದೆ. ಇಲ್ಲಿ ನಂಜುಂಡ ಜಂಗಮನ ವೇಷದಲ್ಲಿ ಚಾಮುಂಡೀ ಮನೆಗೆ ಬಂದು ಕದ ತೆಗೆಯಲು ಕೇಳಿದಾಗ ಆಕೆ ಬಂದವನು ಯಾರೆಂದು ಅರಿತು ಅವನ ಉಡುದಾರ ಮತ್ತು ಕರಡಿಕೆಯನ್ನು ಬಿಚ್ಚಿಸಿ ಕೈಮುಗಿದು ಸ್ವಾಗತಿಸುತ್ತಾಳೆ. ಈ ಸುದ್ದಿಯನ್ನು ಚನ್ನಬಸವಯ್ಯ ದೇವೀರೀಗೆ ಮುಟ್ಟಿಸುತ್ತಾನೆ. ಅಷ್ಟರಲ್ಲಿ ನಂಜುಂಡನೂ ಅಲ್ಲಿಗೆ ಬರುತ್ತಾನೆ. ಸವತಿ ಮತ್ಸರದಿಂದ ಕೋಪಿಸಿಕೊಂಡಿದ್ದ ದೇವೀರಿ ಅವನು ಹಾಕಿದ ಆಣೆ ಭಾಷೆಗಳನ್ನು ನಂಬಿದ ನೀನು ಕೋಳೀಯ ತಿನ್ನೋ ಕೂರ್ಮಾರಿಗೆ ಮನೆಗ್ಹೋಗೀ ಕಂದಣ್ಣನಾಣೆ ಇರಬಹುದೇ ಎಂದು ಹಂಗಿಸುತ್ತಾನೆ. ಕೋಳಿ ಕೂರ್ಮೂರಿಗೆ ಕೊಟ್ಟವ್ಳೆ ಕಡೆಯ ಮನೆಯಲ್ಲಿ ವರಗೀರಿ ಎಂದು ನಿಂದಿಸುತ್ತಾಳೆ. ಕೀಳು ಕುಲದ ಕೊರವಿತಿಯ ಸಹವಾಸ ಮಾಡಿರುವುದು ದೇವೀರಿ ಕೋಪ ತಂದಿದೆ. ಅದಕ್ಕಾಗಿಯೇ ನಂಜುಂಡನನ್ನು ಅಂತೆಯೇ ಕೊರಮೀತಿಯನ್ನು ಹಂಗಿಸಿ ಜರೆಯುತ್ತಾಳೆ.

ಕೊರಮರು ಎಷ್ಟೇ ಜನಾನುರಾಗಿಯಾಗಿದ್ದರೂ ಅವರ ಜಾತಿ ಕೀಳು, ಸಾಮಾಜಿಕವಾಗಿ ಇವರಿಗೆ ಹೆಚ್ಚಿನ ಸ್ಥಾನ ಇರಲಿಲ್ಲ ಎನ್ನುವುದು ಮೇಲಿನ ಹಾಡಿನಲ್ಲಿ ವ್ಯಕ್ತವಾಗುತ್ತದೆ. ಕೃಷ್ಣ, ರುಕ್ಮಿಣಿ, ಸತ್ಯಭಾಮಾರ ಪ್ರಸಂಗದಂತಹ ನಂಜುಂಡ-ದೇವೀರಿಯರ ಪ್ರಸಂಗಗಳಲ್ಲಿಯೂ ಕೊರವಿತಿ ಮೈದೋರಿದ್ದಾಳೆ. ಜನಪದರ ಭಾವನೆಗಳ ಸಮೀಕರಣ, ತಾರತಮ್ಯವಿಲ್ಲದ ದೃಷ್ಟಿ ಈ ಹಾಡಿನಲ್ಲಿ ಗೋಚರವಾಗುತ್ತದೆ.

6) ಬಿ.ಎಸ್.ಗದ್ದಗೀಮಠ ಅವರು ಸಂಗ್ರಹಿಸಿರುವ ಈ ಗೀತೆಯಲ್ಲಿಯೂ ಕೊರವಂಜಿಯು ಹಳ್ಳಿಗಳಲ್ಲಿ ಮಾಡುತ್ತಿದ್ದ ಕೆಲಸಗಳು ಚೆನ್ನಾಗಿ ವರ್ಣಿತವಾಗಿವೆ. ಗಿರಿಯಿಂದ ನಾರಾಯಣನ ಪುರಕೆ ಬಂದಾಳ ನಾರಿ ಪುರದ ಬಾಗಿಲ ಕಿಲ್ಲೆ ಶರಧಿ ದಾಟಿದಳು ಎಂಬಲ್ಲಿ ಇವರು ಬೆಟ್ಟ ಗುಡ್ಡಗಳಲ್ಲಿ ಬದುಕುತ್ತಿದ್ದ ಬಗ್ಗೆ ತಿಳಿಯುತ್ತದೆ. ತಟ್ಟಿ ಬುಟ್ಟಿಗಳನ್ನು ಹೆಣೆಯಲು ಬಿದಿರು-ಬೆತ್ತವಾಗಲಿ, ಬಳ್ಳಿಯಾಗಲಿ ಕಾಡಿನಲ್ಲಿಯೇ ದೊರೆಯುತ್ತಿದ್ದವು. ಇವರು ಬೇಟೆಯ ಪ್ರವೃತ್ತಿಯವರಾಗಿದ್ದರಿಂದ ಬೇಟೆಗೂ ಅನುಕೂಲವಾಗುತ್ತಿತ್ತು. ಅಲ್ಲದೆ ಹೊರಗಿನ ಜನರ ಕಾಟವೂ ತಪ್ಪುತ್ತಿತ್ತು. ಈ ಕಾರಣಕ್ಕಾಗಿಯೇ ಅವರು ಕಾಡಿನಲ್ಲಿ ಉಳಿಯುತ್ತಿದ್ದರು. ಕಾಡು-ನಾಡುಗಳ ಜೀವನದ ನಡುವಿನ ಕೊಂಡಿಯಾಗಿದ್ದರು. ಇದಕ್ಕೆಶಿಲಪ್ಪದಿಕಾರಂ ಕಾವ್ಯದಲ್ಲಿ ಬಂದಿರುವ ಅಂಶಗಳು ನೆರವಾಗುತ್ತವೆ.[13] ನಾರಾಯಣ ಪುರದ ಕಿಲ್ಲೆ ದಾಟಿದ ಕೊರಚಿ ಕೇರಿ ಕೇರಿಗಳಲ್ಲಿ, ಮನೆಮನೆಯ ಮುಂದೆ ದನಿಯ ತೋರುತ್ತ, ಬೇಡುತ್ತ ಬರುತ್ತಿದ್ದಾಳೆ. ಅವಳು ಹೇಳುವ ಮಾತುಗಳಲ್ಲಿ ಆಕೆಯ ಕೆಲಸ ಮತ್ತು ಸಾಮರ್ಥ್ಯಗಳೆರಡೂ ಗೋಚರಿಸುತ್ತವೆ.

ಹಸನಾಗಿ ಕೇಳಿಸುವ ಕುಶಲ ವಾಣಿಯ ನಾರಿ
ಹುಸಿಯಲ್ಲ ಇದು ನಮ್ಮಹಸುಗೂಸಿನಾಣೆ

ತನ್ನ ಬೆನ್ನಿಗೆ ಕಟ್ಟಿದ ಮಗುವಿನ ಮೇಲೆ ಆಣೆಯಿಟ್ಟು ಆಕೆ, ನಾನು ಹೇಳುವುದು ಸುಳ್ಳಲ್ಲ.

“ಕೆಟ್ಟ ಸವತಿಯ ಬಾಯಿ ಕಟ್ಟಲು ನಾಬಲ್ಲೆ
ಬಿಟ್ಟಂತ ಗಂಡನ್ನ ಒಲಿಸಲು ನಾಬಲ್ಲೆ
ಭೂತ ಬಿಡಿಸಬಲ್ಲೆ ಬೇತಾಳ ನಾಬಲ್ಲೆ
ಮಾತನಾಡದ ಮೂಕರ ಮಾತಾಡಿಸಬಲ್ಲೆ
ಸಾಮವೇದವ ಬಲ್ಲೆ ಸಾಮುದ್ರಿಕೆಯ ಬಲ್ಲೆ
ಹೇಮಾದ್ರಿ ಜರಸಂಧ ಬಾನ ಬಸಿಯಲು ಬಲ್ಲೆ[14]

ಎನ್ನುತ್ತಾಳೆ. ಈಕೆ ಕೇವಲ ಕಣಿ ಹೇಳಿ ಪ್ರಣಯಿಗಳನ್ನು ಕೂಡಿಸಲು ಮಾತ್ರ ಸೀಮಿತಳಾಗಿರಲಿಲ್ಲ. ಸವತಿಯ ಬಾಯನ್ನು ಮುಚ್ಚಿಸುವ ಮಂತ್ರವಾದಿನಿಯಂತೆ, ವೇದ ಶಾಸ್ತ್ರಗಳನ್ನು ಬಲ್ಲ ಪಂಡಿತೆಯಂತೆ, ರಾಕ್ಷಸರ ಸೊಕ್ಕನ್ನು ಮುರಿದು ಕೊಲ್ಲುವ ಅಸಾಮಾನ್ಯ ಶಕ್ತಿಯ ಧೀಮಂತೆಯಂತೆ ತೋರುತ್ತಾಳೆ. ಅನ್ಯರಿಂದ ಈಕೆ ರಕ್ಷಿಸಿಕೊಳ್ಳಲು ಈ ಮಾತುಗಳೂ, ಜತೆಗೆ ಜನಪದ ನಂಬಿಕೆಯೂ ಕಾರಣವಾಗಿರಬೇಕು. ಇಲ್ಲದಿದ್ದರೆ ಅಲೆಮಾರಿಗಳಾದ ಇವರು ಎಲ್ಲ ಸಂದರ್ಭಗಳಲ್ಲಿ ಹಳ್ಳಿಗಳಲ್ಲಿ ತಿರುಗುವುದು ಕಷ್ಟವಾಗುತ್ತಿತ್ತೇನೋ? ಅದೇನೇ ಇದ್ದರೂ ಈ ಗೀತೆ ಕೊರವಂಜಿಯನ್ನು ಸರಿಯಾಗಿಯೇ ಪರಿಚಯಿಸುತ್ತದೆ. ಅವಳ ರೀತಿ-ನೀತಿ, ಮಾತಿನ ಧಾಟಿಗಳ ಪರಿಚಯ ಇಲ್ಲಿ ಆಗುತ್ತದೆ. ಕೊರವ ಜನಾಂಗದ ವಸತಿ, ವೃತ್ತಿಗಳೂ ಇಲ್ಲಿ ಕಾಣಸಿಗುತ್ತವೆ.[1]       ಅದೇ ಪುಟ – 228

[2]      souvenir, July 1983. Akila Karanatka Koramara Sangha p-13.

[3]      ಅದೇ ಪುಟ – 15

[4]      ದೇವುಡು ಕರ್ನಾಟಕ ಸಂಸ್ಕೃತಿ. ಪುಟ – 76.

[5]      ಸಂ. ಡಾ.ಜಿ.ವರದರಾಜರಾವ್‌. ವಿಶ್ವಕೋಶ. ಸಂ. 5;

[6]      ಎಲ್‌.ಗುಂಡಪ್ಪ, ನಾಡಪದಗಳು. ಪುಟ – 131

[7]      ಬಿ.ವಿ.ಮಲ್ಲಾಪೂರ. ಜಾನಪದ ಸಾಹಿತ್ಯ ದರ್ಶನ ಭಾಗ – 6.

[8]      ಸಂ.ಕ.ರಾ.ಕೃ. ಜಾನಪದ ಕಥನ ಗೀತೆಗಳು ಪುಟ – 287.

[9]      ಜಾನಪದ ಜಗತ್ತು. ಸಂಪುಟ – 2, ಸಂಚಿಕೆ -3, ಮೇ.1981. ಪುಟ- 35

[10]      ಸಂ.ಜಿ.ಶಂ.ಪ. ಕರುಣಿ ಕಣ್ಣ ತೆರೆಯೆ.  ಪುಟ- 55

[11]      ಅರ್ಚಕ ಬಿ.ರಂಗಸ್ವಾಮಿ. ಹುಟ್ಟಿದ ಹಳ್ಳಿ. ಪುಟ – 46.

[12]      ಅರ್ಚಕ ಬಿ.ರಂಗಸ್ವಾಮಿ. ಹುಟ್ಟಿದ ಹಳ್ಳಿ. ಪುಟ – 104.

[13]      ಎಂ.ಟಿ.ದೂಪದ. ಕರ್ನಾಟಕ ಜಾನಪದ ರಂಗಭೂಮಿ ಪುಟ – 127

[14]      ಬಿ.ಎಸ್‌.ಗದ್ದಗೀಮಠ. ಲೋಕಗೀತೆಗಳು. ಪುಟ – 185.