7)  ಹಣಮಂತ ಕೊರವಂಜಿಯ ವೇಷ ಧರಿಸಿ ರಾವಣನ ಅಶೋಕ ವನದಲ್ಲಿ ಬಂದಿಯಾಗಿದ್ದ ಸೀತೆಯಲ್ಲಿಗೆ ದೂತಿಯಾಗಿ ಹೋಗಿ ಆಕೆಯ ಮನದ ದುಗುಡವನ್ನು ಪರಿಹರಿಸಿ ಸಂತೋಷವನ್ನುಂಟು ಮಾಡುವ ವಿಷಯ ಅತ್ಯಂತ ವಿನೂತನವಾಗಿದೆ. ಶಿಷ್ಟ ಕಾವ್ಯ ಪರಂಪರೆಯಲ್ಲಿ ಹನುಮಂತ ಯಾವ ವೇಷವನ್ನೂ ಧರಿಸದೆ ನೇರವಾಗಿ ಲಂಕೆಗೆ ಹೋಗಿ ಸೀತೆಯನ್ನು ಕಂಡು ರಾಮನ ಸಂದೇಶವನ್ನು ತಿಳಿಸಿ ಬರುವುದು ಸರಿಯಷ್ಟೇ. ಅದೇ ವಿಷಯವನ್ನು ಜನಪದ ಕವಿಯೊಬ್ಬ ಕಲ್ಪಿಸಿರುವ ರೀತಿ ಅದ್ಭುತವಾಗಿದೆ.

“ಎಣ್ಣೆ ಮಜ್ಜನವನ್ನೇ ಮಾಡಿ ಮುದದಿಂದಾ
ತಾ ಕಣ್ಣಿಗಂಜನ ಹಚ್ಚೀ | ಕಸ್ತೂರಿನಿಟ್ಟು ||೧||

ತನ್ನ ನಿಡಿಗುರುಳಾ ತಾಬಾಚಿ ತುರುಬಿಟ್ಟು
ತಾ ಸಣ್ಣ ಗಲಗಂಜೀ ದಂಡೆಗಳ ರಂಜಿಸಿದಾ ||೨||

ಮೂರು ಮುತ್ತನೆ ಕಟ್ಟಿ ಭುಜ ಕೀರ್ತಿನಿಟ್ಟು
ತೋಳ್ ಪವಳಾ ಸರವನೆ ಕಟ್ಟೀ | ಕಡಗಾವನಿಟ್ಟು  ||೩||

ಕಡಗ ಕಾಲ್ಗೆಜ್ಜೆ ಕಾಲ್ಸರಗಾಳ ನಿಟ್ಟು |
ಕಾಲ್‌ಕಿರುಪಿಲ್ಲಿ ಮಂಟಗೆರೆ ಮುದ್ರಿಕೆನಿಟ್ಟು ||೪||

ಬರಹಾದ ಸೀರೆಯ ನೆರಿ ಹಿಡಿದಿಟ್ಟು |
ತಾ ತರಿಸಿ ಕನ್ನಡಿಯ ತನ್ನ ಮುಖ ನೋಡಿದನು ||೫||

ಹೀಗೆ ಅಂದವಾಗಿ ಆಲಂಕರಿಸಿಕೊಂಡ ಹನುಮಂತ ಕೊರವಂಜಿಯಾಗಿ ಹೊರಡುವಲ್ಲಿ ಬೆನ್ನಿಗೆ ಬಾಲನ ಬಿಗಿಯುವುದನ್ನು ಮರೆಯಲಿಲ್ಲ.

“ಚಲುವಾಬಾಲನ ಬೇಗಾ | ಬೆನ್ನಿನೋಳ್ ಕಟ್ಟೀ
ತಾ ಕೊರವಿ ಗೂಡೆಯನ್ನೊತ್ತು | ಸೆಳೆಗೋಲು ಪಿಡಿದಾ ||೬||

ಕಾಮನ ಮದದಾನೆಯಂತೆ ಅಡಿಯಿತು ತಾ |
ತಾನಡೆ ತಂದಾಳೆ ಕೊರವಿ ವನಕೆ
ಕೋಗಿಲೆ ಧ್ವನಿಯಂತೆ ಸ್ವರಗೈವ ಕೊರವೀ |
ತಾ ಲೋಕಲೋಚನೆಯ ಕಂಡೂ ಕರಿಯೇ
ಬೇಗಾನೆ ಬಂದಾಳು ಕೊರವಿ ವನಕೆ ”

ಡಾ.ಜಿ.ವರದರಾಜರಾವ್ ಅವರು ಹೇಳುವಂತೆ ಅಶೋಕವನ ಪ್ರವೇಶಕ್ಕೆ ಈ ಸ್ತ್ರಿರೂಪವೇ ಸಮಯೋಚಿತ ಎಂದು ಕವಿಗೆ ತೋರಿರಬೇಕು. ಅಲ್ಲದೆ ತಾವು ಎಷ್ಟೇ ಬಲಶಾಲಿಗಳಾದರೂ ಶತ್ರುವಿನ ಬಲ ತಿಳಿಯದೆ ತನ್ನ ಬಲ ಪ್ರದರ್ಶಿಸುವುದು ಸರಿಯಲ್ಲಿ ಎಂದು ಮನಗಂಡು ಉಪಾಯಾಂತರವಾಗಿಯೇ ಸೀತೆಯಲ್ಲಿಗೆ ಬಂದು ಹೋಗುವ ತಂತ್ರ ರೂಪಿಸಿರುವು ಮುಚ್ಚುವಂಥದ್ದೇ, ಕೊರವಂಜಿಯ ಕೋಗಿಲೆಯಂಥ ದನಿಯನ್ನಾಲಿಸಿದ ಸೀತೆ ಅದೂ ಕೊರವಂಜಿ ಎಂದು ತಿಳಿದ ಮೇಲೆ ಕರೆಯದೆ ಬಿಟ್ಟಾಳೆ. ಕರೆದು ಅವಳ ಪೂರ್ವಾಪರವನ್ನು ವಿಚಾರಿಸುತ್ತಾಳೆ. ಅದಕ್ಕೆ ಕೊರವಂಜಿ ಕೊಡಗು ಕೊಂಕಣ ತೆಲಗು ಮಳಿಯಾಳ ಪಡುವ ಉತ್ತರ ಪೂರ್ವ ದಕ್ಷಿಣ ತಿಗಳು ಕರ್ನಾಟಕ ದೇಶವು ರಮಣಿ ಕೇಳೆ ಎಂದು ಹೇಳುವಲ್ಲಿ ಆಕೆಯ ಅಲೆಮಾರಿತನದ ಬದುಕು ತಿಳಿಯುತ್ತದೆ. ಆಕೆ ತನ್ನ ಇಷ್ಟದೈವವನ್ನು ಶಿಖಿರದ ಗಂಗಾಧರಾ ಇಂದಿರೆ ರಮಣಾ ಶ್ರೀ ಹರಿಯ ಕೃಪೆಯಿಂದ | ಒಂದು ಸೊಲ್ಲನ್ನು ಹೇಳೇನು ಬಾರೆ ಅಮ್ಮಯ್ಯಾ ಎಂದು ಪ್ರಾರ್ಥಿಸಿ ಸೀತಾದೇವಿಗೆ ಕಣಿ ಹೇಳಲು ಪ್ರಾರಂಭಿಸುತ್ತಾಳೆ. ಈ ಕೊರವಂಜಿಗೆ ಹರಿಹರರಲ್ಲಿ ಭೇದವೆಲ್ಲಿ? ಆದರೂ ಇವರಲ್ಲಿ ಶಿವಕೊರವಂಜಿ ಮತ್ತು ವಿಷ್ಣು ಕೊರವಂಜಿ ಎಂಬ ಎರಡು ಗುಂಪುಗಳಿದ್ದುದು ತಿಳಿಯುತ್ತದೆ. ಇವರಾರೂ ಹರಿಹರದಲ್ಲಿ ಭೇದ ಎಣಿಸುವವರಲ್ಲ ಎಂಬುದೂ ಅನೇಕ ಸಂದರ್ಭಗಳಲ್ಲಿ ಕಂಡುಬರುತ್ತದೆ.

” ಕನ್ನಡಿ ಕದಪಿನ ಕಮಲಾಕ್ಷಿ ನೀ ಕೇಳೆ |
ಚಿನ್ನ ರಾಮನು ನಿನ್ನೊಲಭನೇ |
ಹೊಂಬೃಗ ತರಲೆಂದು ಶ್ರೀರಾಮನು ಪೋದರು |
ನಿನ್ನ ರಾವಣನು ಕದ್ದೊಯದ್ದು ಕಣೇ |
ನಾರಿ ಜಾನಕೆ | ನಿನ್ನ ಮನದಾ ಚಿಂತೆಯ ಬಿಡೆ |
ಶ್ರೀ ರಾಮರಾಯರು ಬಹರಂಜಿದಿರೆ |
ಸಾಧಿಸಿ ದಶಶಿರಗಳ ಚೆಂಡಾಡಿ |
ದೇವ ವಿಭೂಷಣಗೆ ಲಂಕೆಯನಿತ್ತು |
ದೇವ ನಿನ್ನೊಡಗೂಡಿ | ಅಯೋಧ್ಯೆಗೆ ಪೋಗಿ |
ಸ್ವಾಮಿ ಪಟ್ಟವನಾಳುವನು ಕಣೇ |”

ಎಂದು ಕೊರವಿ ಹೇಳಿದ ಕಣಿಯನ್ನು ಕೇಳಿ, ದುಃಖದ ಕೋಟೆಯಂತಿದ್ದ ಅಶೋಕವನದಲ್ಲಿ ಬಂಧಿಯಾಗಿದ್ದ ಸೀತೆಗೆ ಆದ ಸಂತೋಷ ಅಷ್ಟಿಷ್ಟಲ್ಲ. ಕೊರವಂಜಿಯ ಮಾತಿನಲ್ಲಿ ರಾಮಾಯಣದ ಮುಂದಿನ ಎಲ್ಲಾ ಭಾಗವು ಸೂಚಿತವಾಗಿರುವುದನ್ನು ನೋಡಿದರೆ, ಅವರು ಹೇಳುತ್ತಿದ್ದ ಕಣಿ ನಿಖರ ಎಂದೇ ಜನ ಭಾವಿಸುತ್ತಿದ್ದರು. ಸೀತೆ ತನಗಾದ ಸಂತೋಷದ ಭರದಲ್ಲಿ.

“ಕೊರವಿ ನಿನ್ಹೇಳಿದ ನುಡಿ ನಿಜವಾದರೆ
ಕೊಡಿಗೆ ಮಾನಾವನಾಕಿಸಿ ಕೊಡುವೆ
ಬಿರುದಿನ ಕಡಗವ ನಿನಗೆ ಮಾಡಿಸಿ ಕೊಡುವೆ
ಕೊರವೀ ನೀ ಹೋಗಿ ಬಾರೆಂದಳಾಗ “

[1]

ಸೀತೆಯಿಂದ ಬೀಳ್ಗೊಂಡ ಕೊರವಂಜಿ ರಾವಣದ ಆಸ್ಥಾನಕ್ಕೂ ಹೋಗಿ, ಪಟ್ಟಾಭಿ ರಾಮ ಬಂದು ನಿನ್ನನ್ನು ಕೊಲ್ಲುವನೆಂದು ಒತ್ತ ಕಣಿಯನ್ಹೇಳಿ ಹೋಗುತ್ತಾಳೆ. ಸತ್ಯ ಎಷ್ಟೇ ಕಠೋರವಾಗಿದ್ದರೂ ಕೊರವಂಜಿ ಅದನ್ನು ಹೇಳಲು ಹಿಂಜರಿಯುತ್ತಿರಲಿಲ್ಲ. ಆದ್ದರಿಂದ ರಾವಣನಂಥವನೂ ಕೂಡ ಕೊರವಂಜಿಯನ್ನು ತಡೆಯದೆ ಹೋದ. ಇಲ್ಲಿ ಹನುಮಂತನೂ ಕೊರವಂಜಿ ವೇಷವನ್ನು ಬಯಲು ಮಾಡದೆ ಹೋಗುವುದು ಸ್ವಾರಸ್ಯಕರವಾಗಿದೆ. ಅಷ್ಟೇ ಅಲ್ಲದೆ ಅಂದಿನ ಜನ ಕೊರವಂಜಿಯ ಬಗೆಗೆ ಇಟ್ಟಿದ್ದ ನಂಬಿಕೆಯೂ ತಿಳಿಯುತ್ತದೆ. ಕೊರವಂಜಿ, ಭೂ ಲೋಕದ ನಾರದೆಯಂತೆ ಸರ್ವಾಂತರ್ಯಾಮಿ ಯಾಗಿದ್ದಾಳೆ ಎಂಬುದನ್ನು ಈ ಜಾನಪದ ಹಾಡುಗಳು ದಾಖಲಿಸುತ್ತವೆ.

8)  ದೊಡ್ಡೆಲ್ಲೆ ಗೌಡನ ಅಹಂಕಾರಕ್ಕೆ ಮುನಿದ ಎಲ್ಲಮ್ಮದೇವಿ ಆತನಿಗೆ ಅನೇಕ ರೀತಿಯ ರೋಗ-ರುಜಿನ, ಕಷ್ಟ-ನಷ್ಟ ಕೊಟ್ಟು ಹಿಂಸಿಸುತ್ತಾಳೆ. ಆ ಹಿಂಸೆಯನ್ನು ಸಹಿಸಲಾರದೆ ಗೌಡ ನಾನು ಕೆರೆಬಾವಿ ಪಾಲೆ ಆದೇನೆ ಎಂದು ಬಂದಾನ ಪಡುತ್ತಿರುವಾಗ ಅವನ ಅಹಂಕಾರವನ್ನಿಳಿಸಲು ಕೊರವಂಜಿಯಾಗಿ ಪಟ್ಟುಗೋಡೆ ಹಿಡಿದು ಕಣಿ ಶಾಸ್ತ್ರಕ್ಕೆ ಬರುತ್ತಾಳೆ.

“ಕಣಿಯ ಕೇಳಿ ಕಣಿಯ ಕೇಳಿರೆ
ಶಿವನ ಮಣಿಗಳನ್ನಿಟ್ಟು ನಾನೆ ಬಂದೆ
ಕಣಿಯ ಕೇಳಿ ಕಣಿಯ ಕೇಳಿರೆ
ಯವ್ವ ದುಡ್ಡು ಕೊಡಬೇಡಿ ದೂಪ ಕೊಡಬೇಡಿ
ಕಡ್ಡಿ ಕರ್ಪೂರ ಕೊಟ್ಟು ಮುಂಭಾಗದಲಿ ನಿಂತುಕೊಂಡರೆ
ಸ್ವಲ್ಪಮಾತ್ರ ಹೊಟ್ಟಿಗೆ ಕೊಡಿ”[2]

ಎಂದು ಬೇಡುತ್ತಾಳೆ. ಇದು ಎಲ್ಲಮ್ಮ ಬೇಡಿದ್ದಲ್ಲ. ಕೊರವಂಜಿ ಬೇಡುತ್ತಿದ್ದಳು ಎಂಬುದಕ್ಕೊಂದು ನಿದರ್ಶನ ಅಷ್ಟೆ. ಆಕೆ ಶಿವನ ಮಣಿಗಳನ್ನಿಟ್ಟು ನಾನೆ ಬಂದೆ ಎಂದು ಹೇಳುವಲ್ಲಿ ಶಿವ ಪಾರ್ವತಿಯರ ಸಂಬಂಧದ ಧಾರ್ಮಿಕ ನಂಬಿಕೆಯ ಕಡೆಗೆ ಈ ಅಂಶ ಕೈಮಾಡುವಂತಿದೆ. ಕೊರವಂಜಿ ಕಣಿ ಹೇಳುತ್ತಾ ಗೌಡನಿಗೆ ಯಾವ ಕಾರಣಕ್ಕಾಗಿ ಕಷ್ಟ ಬಂದಿದೆ ಇದಕ್ಕೆ ಪರಿಹಾರವೇನು ಎಂಬುದನ್ನು ಸೂಚಿಸುತ್ತಾಳೆ. ಆದರೆ ಇಲ್ಲಿ ತನ್ನ ನಿಜ ಸ್ವರೂಪವನ್ನು ತೋರಿಸದೆ ಬರುತ್ತಾಳೆ.

ದೈವವಿರೋಧಿಯಾದವನ ಸೊಕ್ಕವನ್ನಿಳಿಸಲು ದೇವಿ ಎಲ್ಲಮ್ಮ ಕೊರವಂಜಿಯಾಗಿ ಹೋಗಿ ಕಣಿ ಹೇಳುವ ರೂಪದಲ್ಲಿ ತಿಳಿ ಹೇಳುವುದು ಸೊಗಸಾಗಿದೆ. ಈ ಸಂದರ್ಭಕ್ಕೆ ಕೊರವಂಜಿಯ ಪಾತ್ರವನ್ನು ಬಳಸಿಕೊಂಡಿರುವ ಜಾನಪದ ಕವಿಯ ಜಾಣ್ಮೆಯನ್ನು ಮೆಚ್ಚಲೇಬೇಕು.

9)  ಶಿವ ಕೊರವಂಜಿ[3] ಎಂಬ ಕೋಲು ಪದದಲ್ಲಿ ಕೊರವಂಜಿಯ ಇನ್ನು ಹೆಚ್ಚಿನ ವಿವರಗಳು ದೊರೆಯುತ್ತವೆ. ಕಿವಿಗೇಕಕರಣ ಕೈಯಾಗ ಬೆಳ್ಳಿಬೆತ್ತ ಓಂ ನಾಮ ಶಿವಾಯ ಕೊರವ್ಯಾಗಿ ಆರು ವರ್ಣದ ಸೀರೆಯನ್ನುಟ್ಟು ಸಾರುತ ಬರುತ್ತಾನೆ.

ಅರುವರುಣ ಸೀರಿ ವಾರ್ಯಾಣದಲಿಟಗೊಂಡು ಹಾರೊರಗೇರಿ ಒಳಗೆಲ್ಲ ಕೊ ಗನ್ನವ್ವ ಬಾಲರತಕ್ಕ ಹೊಸಗಿಲಿಗಂಜಿ ಕೊ ಅವ್ವ ನಿಮ್ಮ ಹಾಲಿನತಕ್ಕ ಹೊಸ ನೆಲುವ ಕೊ ಎಂದು ಬೀದಿ ಬೀದಿಗಳಲ್ಲಿ ಸಾರುತ್ತ ಬರುತ್ತಾಳೆ. ಚಿಕ್ಕ ಮಕ್ಕಳಿಗೆ, ಗಿಲಿಕೆ, ಹಾಲಿನ ಪಾತ್ರೆಯನ್ನಿಡಲು ನೆಲುವುಗಳನ್ನು ಇವರು ತಂದು ಮಾರುತ್ತಿದ್ದರು. ಅಲ್ಲಿಂದ ನೇರವಾಗಿ

ಹತ್ತು ವರುಣ ಸೀರಿ ಒಪ್ಪದಲಿ ಇಟಗೊಂಡು
ಒಕ್ಕಲಗೇರಿ ಒಳಗೆಲ್ಲ | ಕೊ | ಗನ್ನವ್ವ
ಪುತ್ರೇರತಕ್ಕ ಗುಳಪುಟ್ಟಿ | ಕೊ | ಅವ್ವ ನಿಮ್ಮ
ತುಪ್ಪದ ತಕ್ಕ ಹೊಸ ನೆಲುವ || ಕೋ ||

ಒಕ್ಕಲ (ರೈತರ) ಕೇರಿಗೆ ಬಂದು ಆಡುವ ಹೆಣ್ಣು ಮಕ್ಕಳಿಗೆ ಬೇಕಾದ ಗುಳಪುಟ್ಟ ( ಬೊಗಸೆಯಗಲಿದ ಬಿದಿರಿನ ಪುಟ್ಟಿ) ಮತ್ತು ಬೆಕ್ಕು ನಾಯಿಗಳಿಂದ ತುಪ್ಪನ್ನು ರಕ್ಷಿಸಲು ಒಳಗೆ ಸೂರಿನ ಗಳಕ್ಕೆ ಕಟ್ಟಿ ತೂಗು ಹಾಕಲು ಬೇಕಾದ ನೆಲವುಗಳನ್ನು ಮಾರುವ ವಿಷಯವೂ ಇಲ್ಲಿ ತಿಳಿಯುತ್ತದೆ.

ಕೊರವಿ ಬಂದಾಳೆಂತ ಸಿರಿಗೌಡಿ ಕೇಳ್ಯಾಳ
ಆಡು ಮಕ್ಕಳನ ಕಳುವ್ಯಾಳ || ಕೋ ||

“ಏನವ್ವ ಕೊರವಂಜಿ ಮನೆಯಲ್ಲಿ ನಮ್ಮವ್ವ ಕರೆಯುತ್ತಿದ್ದಾಳೆ. ಬಾ ಎಂದು ಕರೆದಾಗ ಆಕೆ ಬರುತ್ತಾಳೆ,  ಬಂದ ಕೊರವಂಜಿ ಸಿರಿಗೌರಿ ಗಿಂಡಿಯಲ್ಲಿ ನೀರು ಕೊಟ್ಟು ಅವಳಿಗೆ ಕುಳಿತುಕೊಳ್ಳುವಂತೆ ಹೇಳಿ ಕಣಿ ಕೇಳುತ್ತಾಳೆ, ಕೊರವಂಜಿ-

ಭೂತ ಬಿಡಿಬಲ್ಲೆ ಬೇತಾಳ ನಾಬಲ್ಲೆ
ನಾಥರಿಗೆ ಮೋಡಿ ಇಡಬಲ್ಲೇ || ಕೋ ||
ಅಂಗೈಯ ಗೆರಿ ನೋಡಿ ಮುಂಗೈಯ ಸುಳಿನೋಡಿ |
ಗಂಗವ್ವನೆಂಬ ಸವತೀಯ || ಕೋ || ಸಿರಿಗೌರಿ
ಗಣಪರಿಯೆಂಬು ಗಣ ಮಗನ || ಕೋ ||

ತನ್ನ ಸಾಮರ್ಥ್ಯವನ್ನೆಲ್ಲ ಹೇಳಿಕೊಂಡು ಆಮೇಲೆ ಸಿರಿಗೌರಿಯ ಕೈಯಲ್ಲಿ ನೋಡಿ ಇದ್ದ ವಿಷಯವನ್ನು ಇದ್ದ ಹಾಗೆಯೇ ಹೇಳುತ್ತಾಳೆ. ಗಂಗೆ – ಗೌಡಿಯರ ನಡುವಿನ ಸವತಿ ಮಾತ್ಸರ್ಯ ಪ್ರಕಟವಾದರೂ, ಕೊರವಂಜಿ ಇಲ್ಲಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇಲ್ಲಿ ಬಂದಿರುವ ಕೊರವಿಯಾದರೂ ಸಾಮನ್ಯಳು, ದೇವತೆಗಳು ವೇಷಧರಿಸಿ ಬಂದಿದ್ದರೆ ಆ ಸಂದರ್ಭ ಬೇರೆಯಾಗುತ್ತಿತ್ತು.

ಕೊರವಂಜಿ ತನ್ನ ಮನಸ್ಸಿನಲ್ಲಿರುವ ವಿಷಯವನ್ನು ಸರಿಯಾಗಿ ಹೇಳಿದ ಮೇಲೆ ಸಿರಿಗೌರಿ ಈಕೆಯನ್ನು ಉಳಿಸಿಕೊಂಡು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳಲು ಯೋಚಿಸಿರಬೇಕು. ಅದಕ್ಕಾಗಿಯೇ ಆಕೆ ಹೀಗೆ ಹೇಳಿರಬೇಕು.

” ಇಂದ ಹೋಗ ಕೊರವಿ ನಾಳಿಗ್ಹೋಗುವಿಯಂತೆ
ಇಂದರ ನಮ್ಮ ಪುರದಲ್ಲಿ | ಕೋ | ನಾನಿವಗ
ಬಿಂದಿಗಿ ಹೊನ್ನ ಕೊಡತೇನ || ಕೋ ||

ನಾರಿ ಬಿಂದಿಗಿ ಹೊನ್ನ ಕೊಡುತ್ತೇನೆನ್ನುವುದು ನೋಡಿದರೆ, ನೀನು

“ನಾಳಿಗ್ಹೋಗು ಕೊರವಿ ನಾಡದಾದರ್ಹೋಗವ್ವ
ನಾಳಿರ ನಮ್ಮ ಪುರದಲ್ಲಿ || ಕೋ || ಕೊರವಂಜಿ
ಜಾಳಿಗೆ ಹೊನ್ನ ಕೊಡುವೇನ || ಕೋ ||

ಜಾಳಿಗೆ ಹೊನ್ನು ಕೊಡುತ್ತೇನೆ ನಾಡಿದ್ದು ಹೋಗು ನಮ್ಮ ಪುರದಲ್ಲಿ ಇರು ಎಂಬುದು ಗೌರಿಯ ಮನಸ್ಸಿನಲ್ಲಿರುವ, ಕೊರವಂಜಿಯಿಂದಾಗಬೇಕಾದ ಯಾವುದೋ ಕೆಲಸವನ್ನು ಕುರಿತು ಹೇಳುತ್ತದೆ. ಆದರೆ ಕೊರವಿ ಇರಬೇಕಲ್ಲ. ಆಕೆ

ಇಂದು ಹೋಗುವ ಕೊರವಿ ನಾಳೆ ನಾ ಹೋದರ
ನಾಡಿಗೆ ಹೀನ ನಮ ಕೊರವ | ಕೋ | ಕೇಳಿದರ
ಹರಿವ ಹಾವ ಕೈಲೆ ಹಿಡಿಶ್ಯಾನ || ಕೋ ||

ನನ್ನ ಕೊರವ (ಯಜಮಾನ) ನಾಡಿನಲ್ಲಿಯೇ ಕೆಟ್ಟವನು, ನಾಳೆ ಹೋದರೆ ನನ್ನ ಶೀಲದ ಬಗ್ಗೆ ಶಂಕೆಗೊಂಡು ಹರಿವ ಹಾವನ್ನೇ ಕೈಯಲ್ಲಿ ಹಿಡಿಸಿ ಪರೀಕ್ಷೆಗೆ ಒಡ್ಡುತ್ತಾನೆ. ಅಷ್ಟೇ ಅಲ್ಲ,

ನಾಳಿಗ್ಹೋಗ ಕೊರವಿ ನಾಡೆದುನಾ ಹೋದಾರ
ದಿಕ್ಕಿಗೆ ನಮ ಕೊರವ | ಕೋ | ಕೇಳಿದರೆ
ಕೆಂಡಕೆ ಕೈಯ ಹಿಡಿಶ್ಯಾನ || ಕೋ ||

ನಾನು ನಾಡಿದ್ದು ಹೋದರೆ ಕೈಮೇಲೆ ಬೆಂಕಿಯನ್ನೇ ಸುರಿದು ಶೀಲದ ಪರೀಕ್ಷೆ ಮಾಡುತ್ತಾನೆ. ಕೊರವಂಜಿ ಸಂಪಾದನೆಯ ಸಲುವಾಗಿ ಹಳ್ಳಿಗಳಿಗೆ ಹೋದಾ, ಒಬ್ಬಂಟಿಗಳಾಗಿ ಉಳಿಯುತ್ತಿರಲಿಲ್ಲ, ಎಷ್ಟೊತ್ತಾದರೂ ಮನೆಗೆ ಸೇರಿಕೊಳ್ಳಲೇಬೇಕು. ಹೊರಗೆ ಉಳಿದರೆ ಮನೆಯವರಿಗೂ ನಿಷ್ಠುರ, ಗಂಡನಿಗೂ ಅನುಮಾನ. ಅವರಲ್ಲಿ ಶೀಲಕ್ಕೆ ಹೆಚ್ಚಿನ ಮಹತ್ವ ತೋರುತ್ತದೆ. ಅದಕ್ಕಾಗಿಯೇ ಇಲ್ಲಿ ಕೊರವಂಜಿ ಹೊನ್ನು ಕೊಡುತ್ತೇನೆಂದರೂ ಉಳಿಯಲು ಮುಂದಾಗುವುದಿಲ್ಲ. ಕೊರಮನ ಬಗ್ಗೆ ಇಷ್ಟೆಲ್ಲ ಕೇಳಿದ ಗೌರಿ,

ಕೊರ ಕೊರವಂತ ಕೊರವಿ ಬಾಳ್ವೇಳತಿ
ಯಾರಂಗ ತೋರ ಅವನಿರುವ || ಕೋ || ಎಂಬುದಕ್ಕೆ
ಗ್ವಾಡೀಯ ನೆಳ್ಳೀಲೆ ದಾಗಡಿ ಬಳ್ಳಿ ಹೆಣಿಯಾನ
ನಾಡ ಧೂಳವನ ಮಾರಿ ಮ್ಯಾಲೆ || ಕೋ || ಬಿದ್ದರ
ಸೆರೆಗೀಲಿ ಒರಸಿ ಇರುವೇನ | ಕೋ |
ಕಟ್ಟೀಯ ನೆಳ್ಳೀಲಿ ಬುಟ್ಟಿಯ ಹೆಣೆಯಾನ
ದಿಕ್ಕಿನ ಧೂಳ ಎದಿಮ್ಯಾಗ | ಕೋ | ಬಿದ್ದಿರ
ನಿರಗಿಲ ಒರಸಿ ಇರುವೇನ || ಕೋ ||

ಅಲೆಮಾರಿಗಳಾದ ಈ ಜನ ತಾವು ಉಳಿದ ಉರುಗಳಲ್ಲಿ ಕೆಲಸ ಮಾಡುವಾಗ ಮನೆಯ ಮಾಡುಗಳ ನೆರಳಿನಲ್ಲಿ, ಕಟ್ಟೆಯ ಮರೆಯಲ್ಲಿ ಕುಳಿತು ಕೆಲಸ ಮಾಡುವ ಅಂದರೆ ಬುಟ್ಟಿ ಹೆಣೆಯುವುದನ್ನು ಈ ಸಾಲುಗಳು ಚಿತ್ರಿಸುತ್ತವೆ. ಹೀಗೆ ಬೀದಿಯಲ್ಲಿ ಕುಳಿತು ಬುಟ್ಟಿ ಹೆಣೆಯುವಾಗ ಬೀದಿಯ ಧೂಳು ಗಾಳಿಯಿಂದ ಮೈಮೇಲೆ ಬಿದ್ದರೂ ತಮ್ಮ ಕೆಲಸ ಮಾತ್ರ ನಿಲ್ಲುವುದಿಲ್ಲ. ಅದಕ್ಕಿಂತ ಹೆಚ್ಚಾಗಿ, ಕೊರವಿ ತನ್ನ ಗಂಡನ ಬೆಗೆ ತೋರಿಸುವ ಆದರ, ಅಭಿಮಾನ ಇಲ್ಲಿ ವ್ಯಕ್ತವಾಗಿದೆ. ಸೆರಗಿನಿಂದ ಅವನ ಮುಖದ ಧೂಳನ್ನು ಒರೆಸುವ, ಸೀರೆಯ ನಿರಿಗೆಯಿಂದ ಶುಚಿಮಾಡುವ ತನ್ನ ರಸಿಕ ಬದುಕನ್ನು, ಅತ್ಯಂತ ಸಹಜವಾಗಿ ಚಿತ್ರಿಸಿರುವುದು ಕಾಣುತ್ತದೆ. ಸಹಜ ಪ್ರಣಯ ಎಂದರೆ ಇದೆ ಅಲ್ಲವೇ ? ರಸಿಕಳಾದ ಕೊರವಿಯ ಸರಸ ಜೀವನದ ಚಿತ್ರಣ ಇಲ್ಲಿದೆ. ದುಡಿವ ಕೊರವನ ಚಿತ್ರವೂ ತುಂಬಾ ಚಂದವಾಗಿ ಮೂಡಿದೆ. ಈ ಜಾನಪದ ಹಾಡಿನಲ್ಲಿ, ಕೊರವರ ಕೌಟುಂಬಿಕ ಜೀವನವೂ ವರ್ಣಿತವಾಗಿದೆ. ಉಪಸಂಸ್ಕೃತಿಯ ಸಂಶೋಧನೆಗೆ ಇವೇ ಅಲ್ಲವೆ, ಖಚಿತ ದಾಖಲೆಗಳು ?

ದೊಂಬಿದಾಸರು ಹಾಡುವ ಕೃಷ್ಣ ಕೊರವಂಜಿ[4] ಗೀತೆಯ ಬಗೆಗೆ ಡಾ.ಎಲ್‌.ಆರ್.ಹೆಗಡೆಯವರು ಸೂಚಿಸುವುದರ ಜೊತೆಗೆ ವೆಂಕಟಗಿರಿನಾಥ ಸಿರಿ ವೆಂಕಟೇಶ ತಾವು ನೆಚ್ಚಿನ ನಲ್ಲೆ ಅಲಮೇಲು ಮಗಳನ್ನು ಮದುವೆಯಾಗುವ ಆಕಾಂಕ್ಷೆಯಿಂದ ಕೊರವಂಜಿ (ಎರಕ ಸೀಮೆ) ವೇಷ ತೊಟ್ಟು ತನ್ನ ಪ್ರಿಯತಮೆಯನ್ನು ಮಾರುವೇಷದಿಂದ ಸಂಧಿಸಿ ತನ್ನಲಿ ಪ್ರೇಮಾಂಕುರವಾಗುವಂತೆ ಮಾಡುತ್ತಾನೆ. ವೆಂಕಟಗಿರಿ ಮತ್ತು ಅಲಮೇಲು ಮಗಳ ಪ್ರೇಮಾಂಕುರ ಅಧ್ಯಾಯವನ್ನು ಚಿಂತಾಮಣಿ ನಾಗನಾಥೇಶ್ವರಿ ಗುಡಿ ಹಿಂಬಾಗದಲ್ಲಿ ವಾಸಿಸುವ ಕೊರವಂಜಿ (ಎರಕಲು ಸಿಂಗಿಗೆದ್ದೆ ಹೇಳುವಂತೆ) ಒಣಕುವ ದನಿಯಲ್ಲೂ ಜೀವ ತುಂಬಿ ಕೇಳುಗರನ್ನು ಮುಗ್ಧಳಾಗಿಸುತ್ತಾಳೆ ಎಂದು ಈ ಸಂದರ್ಭವನ್ನು ವಿವರಿಸಿ ಸಹಾಯ ಮಾಡಿದ್ದಾರೆ.[5] ಕೊರವಂಜಿಯ ಸನ್ನಿವೇಶ ತೆಲಗು ಸೀಮೆಯಲ್ಲಿ ವಿಫುಲವಾಗಿ ಬೆಳೆದಿರುವುದರ ಬೆಗೆಗೆ ವಿವರಗಳು ಅಲ್ಲಲ್ಲಿ ದೊರೆಯುತ್ತವೆ.

10)  ಕೊರವಂಜಿಯ ಉಪಯೋಗವನ್ನು ಜನಪದರು ಅತ್ಯಂತ ಸೂಕ್ಷ್ಮವಾದ ಸಮಯದಲ್ಲಿ ಬಳಸಿಕೊಂಡಿದ್ದಾರೆ. ಅದು ಪೌರಾಣಿಕ ಸನ್ನಿವೇಶವಿರಲಿ, ಸಾಮಾಜಿಕ ಸಂದರ್ಭವಿರಲಿ, ಆಕೆಯ ಪಾತ್ರವನ್ನು ಬುಡಕಟ್ಟು ಮಹಿಳೆ ಎಂದಷ್ಟೇ ತಿಳಿಯದೆ, ಒಂದು ತಂತ್ರವಾಗಿ ಬಳಸಿಕೊಳ್ಳುವಲ್ಲಿ ನಮ್ಮ ಜನ ಹಿಂದೆ ಬಿದ್ದಿಲ್ಲ. ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳೊಂದಿಗೆ ಸಂಸಾರ ಸಾಗಿಸುವ ಜನ ಹಿಂದೆಯೂ ಇದ್ದರು. ಒಡೆದ ಸಂಸಾರವನ್ನು ಒಂದುಗೂಡಿಸುವ ಸಂಧಾನ ಮತ್ತು ಕೆಟ್ಟಮೇಲೆ ಬುದ್ಧಿ ಬಂದು ಅವರೆ ಒಂದಾಗುವ ಸ್ಥಿತಿ ಕಾಣಬರುವುದಾದರೂ, ಬಿಟ್ಟ ಗಂಡನನ್ನು ಒಲಿಸಿ ಮನೆಗೆ ಕರೆತರಲು ಆ ಗರತಿಯನ್ನೇ ಕೊರವಂಜಿಯನ್ನಾಗಿಸಿ ಕಾರ್ಯ ಸಾಧಿಸಿರುವ ಜಾನಪದ ಕವಿಯ ಜಾಣ್ಮೆ ಕೊರವಂಜಿ ಹಾಡು[6]ವಿನಲ್ಲಿ ಮರೆದಿದೆ.

ಗಂಡನ ಅವಕೃಪೆಗೆ ಒಳಗಾದ ಇಲ್ಲಿಯ ಗರತಿ ಕೊರವಂಜಿಯಾಗಿ ಹೋಗಿ ಬರುವೆನು ಎಂದು ಎರಡ್ಹೋನ್ನ ಕೊಟ್ಟು (ಕೊರವಂಜಿ) ಬುಟ್ಟಿಕೊಂಡು, ಕುಡತ್ತಿ, ಗಂಡ್ಯಾನ ನೋಡಿ ಬರುವೆ, ಗಂಡನ ರಂಡೀಯ ನೋಡಿ ಬರುವೆ ಎನ್ನುತ್ತಾಳೆ. ಸೊಸೆಯ ಮಾತು ಅತ್ತೆಗೂ ಸಂತೋಷನ್ನೇ ತಂದಿತು. ಮಗ ಮನೆಗೆ ಬಂದರೆ ಸಾಕು ಎಂದು.

“ಒಂದ ಮೈ ಮುತ್ತ ಹಚ್ಚಿ ಒಂದ ಮೈ ಮಾಣಿಕ ಹಚ್ಚಿ
ಕೆತ್ತು ಮಾಣಿಕ ಬುಟ್ಟಿ ತಂದಿಟ್ಟಾಳತ್ತವ |
ಆ ಕ್ಷಣಕ ತಂದಿಟ್ಟಾಳತ್ತವ್ವ”

ಕೊರವಂಜಿ ಅ ಕಾಲಕ್ಕೆ ಜನಪ್ರಿಯಳಾಗಿ, ನಿರ್ಭೀತಳಾಗಿ. ಓಡಾಡುತ್ತಿದ್ದುದರಿಂದ ಸೊಸೆಯೊಬ್ಬಳನ್ನೇ ಕಳಿಸಲು ಅತ್ತೆ ಹಿಂದೆ ಮುಂದೆ ನೋಡಲಿಲ್ಲ. ಸೊಸೆ ಆ ಬುಟ್ಟಿಯನ್ನು ತೆಗೆದುಕೊಂಡು –

ಚಪ್ಪುಲಿ ಮೆಟ್ಟಿದ್ದಾಳ ಎನ್ನಮ್ಮ
ಚೆಪ್ಪುಲಿ ಮೆಟ್ಟಿದಾಳ ಎನ್ನಮ್ಮ, | ಚಪ್ಪಲಿ ಮೆಟ್ಟಿದಾಳ |
ರಾಯರ ಇರುವುದು ರಾಜಪಟ್ಟಣದ್ಹಾದಿ, ದಾವದೊಂದ್ಹೇಳಿ ಕೂಡಿರಿ

ಎಂದು ಕೇಳುತ್ತಾ ಹೊರಡುತ್ತಾಳೆ. ಹೀಗೆ ಕೊರವಂಜಿಯಾಗಿ ಹೋಗುವ ಗರತಿಯ ವೇಷ ಭೂಷಣಗಳು ಜನಪದ ಕವಿಯ ಮನಸ್ಸನ್ನು ಆಕರ್ಷಿಸದೆ ಹೋಗಲಿಲ್ಲ.

ಹಸುರೊಂದ ಉಟ್ಟಿದ್ದಾಳ ಎನ್ನಮ್ಮ
ಹಸುರೊಂದ ಉಟ್ಟಿದ್ದಾಳ ಎನ್ನಮ್ಮ, | ಹಸರೊಂದು ತೊಟ್ಟಿದಾಳ |
ಹಸರೊಂದ ಸೆರಗಾ ಮರೆಮಾಡಿ  ತನ್ನಂಥಾ ಹರದ್ಯಾರನ ಬಲಿಗೊಂಡಾಳ |
ಕೆಂಪೊಂದ ಉಟ್ಟಿದ್ದಾಳ ಎನ್ನಮ್ಮ|
ಕೆಂಪೊಂದ ಉಟ್ಟಿದ್ದಾಳ ಎನ್ನಮ್ಮ,| ಕೆಂಪೊಂದು ತೊಟ್ಟಿದ್ದಾಳ|
ಕೆಂಪೊಂದು ಸೆರಗಾ ಮರಿಮಾಡಿ ತನ್ನಂಥ ಬಾಲ್ಯಾರನ ಬಲಿಗೊಂಡಾಳ ”

ಹೀಗೆ ಅಲಂಕರಿಸಿಕೊಂಡು ಹೊರಟಿರುವ ಅಕೆ ಸಾಮಾನ್ಯರ ಮನೆಯ ಹೆಣ್ಣಲ್ಲ. ಆನೆಯ ಏರೂವ ಚೆದರ ಮನ್ನೆರ ಮಗಳು, ಒಂಟೀಯ ಏರೂವ ಭಂಟ ಮನ್ನೇರ ಮಗಳು, ಹೊರಟಾಳ ರಾಜ ಬೀದಿಗೆ, || ಆಕೆ ಧರಿಸಿರುವ ಆಭರಣಗಳು-

“ಕಾಲ ಕಂಚಿನಪಿಲ್ಲಿ, ಕಿವಿಯಾಗ್ಹಿತ್ತಾಳಿವಾಲಿ
ಸರಪಳಿ ಘಂಟಿ ಸರದ್ಯಾಳೆವ್ವ ನೀ
ಯಾ ನಾಡದ ಕೊರಿವೇ, | ಜಾಣೆ ನೀ |
ಯಾ ನಾಡದ ಕೊರಿವೇ |

ಎಂದು ಕಣ್ಮನ ಸೆಳೆಯುವ ಕೊರವಂಜಿಯನ್ನು ಕುರಿತು ಆಕೆಯ ಗಂಡನೇ ಕೇಳುತ್ತಾನೆ. ಈ ಕೊರವಂಜಿ ಹಾಕಿಕೊಂಡಿರುವ ಒಡವೆಗಳು ಒಂದು ಕಾಲಕ್ಕೆ ಕೊರಮರು ಹಾಕಿಕೊಳ್ಳುತ್ತಿದ್ದ ಒಡವೆಗಳೇ ಆಗಿವೆ. ಮುಂಗೈನಿಂದ ಮೊಣಕೈವರೆಗೂ ಹಿತ್ತಾಳೆ ಬಳೆಗಳನ್ನು ತೊಟ್ಟುಕೊಳ್ಳುವರು. ಹಿತ್ತಾಳೆ, ಸೀಸ ಮತ್ತು ಬೆಳ್ಳಿಯ ಒರಟಾದ ಉಂಗುರಗಳನ್ನು ತಮ್ಮ ಮಧ್ಯದ ಬೆರಳಿನ ಹೊರತು ಉಳಿದೆಲ್ಲ ಬೆರಳುಗಳಿಗೂ ಹಾಕಿಕೊಳ್ಳುವರು.[7] ಎಂಬ ಮಲ್ಲೆಯವರ ಮಾತು ಈ ಮೇಲಿನ ಅಂಶಕ್ಕೆ ಒತ್ತು ಕೊಡುತ್ತದೆ. ಅಲ್ಲದೆ ಆಕೆಯ ಉಡುಗೆಯ ಬಗ್ಗೆಯೂ ಅಲ್ಲಲ್ಲಿ ವಿವರಗಳು ದೊರೆಯುತ್ತವೆ. ತನ್ನ ಗಂಡನನ್ನು ಕಂಡು ಸಂತೋಷಗೊಂಡ ಆಕೆ ಅದನ್ನು ತೋರ್ಪಡಿಸಿಕೊಳ್ಳದೆ –

“ಆ ನಾಡದ ಕೊರವ್ಯಲ್ಲ ಈ ನಾಡದ ಕೊರವ್ಯಲ್ಲ |
ದೇವಲೋಕದ ಕೊರವಿದ್ದೂ ಜಾಣ ನಾ |
ದ್ಯಾವರೇಳತೇನೋ ಸೂಳ್ಯಾರು |
ಮಾಡೀರೆ ಹೊಡಿತಾರೋ-

ಎಂದು ಮಾರ್ಮಿಕವಾಗಿ, ನೀನು ಸೂಳೆ ಮನೆಯಲ್ಲಿದ್ದಿಯಾ ಎಂಬುದನ್ನು ಸೂಚಿಸುತ್ತಾಳೆ. ಸೂಳೆಯ ಕಾಲಿಗೆ ಕೆರವಾದ ಆತ ಅಲ್ಲಿರಲು ಸಾಧ್ಯವಾಗದೆ, ಮನೆಗೆ ಬರಲು ಮಾನವಿಲ್ಲದೆ ತೊಳಲುತ್ತಿರುವವನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಅದಕ್ಕಾಗಿಯೇ ಆತ ಕೊರವಂಜಿಯ ಮುಂದೆ –

“ನನ್ನ ಮಡದೀನ ಬಿಟ್ಟ, ಹನ್ನೆರಡು ವರುಷಾಯ್ತು
ಮದದೀನ ನನಗೆ ಕೊಡಿಸ ಕೊರವಂಜಿ”
ಕೈಯಾರ ಜೋಡುಸ್ತೇನ | ನಾ ನಿನ್ನ | ಕಾಲಾರೆ ಬೀಳ್ತೇನೆ

ಎಂದು ಪರಿತಪಿಸುತ್ತಾನೆ. ತನ್ನ ಉದ್ದೇಶ ಸಫಲವಾದುದರ ಬಗ್ಗೆ ಬಹಳ ಸಂತೋಷವಾಗಿದೆ. ತನ್ನ ಜಾಣ ನುಡಿಗಳಿಂದ ಆಕೆ

“ನನಕಾಲ ಬೀಳಲಿಕ ನನ್ನ ಕೈ ಜೋಡಿಸಲಿಕ
ಯಾರೀಗಿ ಯೇನು ಮಾಡೀದಿ | ಮಾರಾಯಾ |
ಹೋಗೋನು ನಡೀರಿ | ಮಾರಾಯಾ | ಹೋಗೋನು ನಡೀರಿ |

ಎಂದು ತನ್ನನ್ನು ಪರಿಚಯಿಸಿಕೊಳ್ಳುತ್ತಾಳೆ. ಹನ್ನೆರಡು ವರ್ಷಗಳ ಆಗಲಿಕೆ ಅರೆಕ್ಷಣದಲ್ಲಿ ದೂರಾಗಿ ನಗುನಗುತ್ತಾ ಹೊರಡುತ್ತಾರೆ.

ಗಂಡ ಹೆಂಡಿರವರು ಗರದೀಲಿ ಬರುವಾಗ
ಕತ್ತೆಂತ ರಂಡೀ ಬೆನ್ಹತ್ತಿ ಬರುತಾಳ
ಹೊಡೆದ್ಹಾಕ್ಹಿಂದಕ | ಆಕೆ ನನ್ನ
ಹೊಡೆಮಳಿ ಹೊಳ್ಳದಾಂಗ

ಆದರೆ ಬೆನ್ನ ಹತ್ತಿದ ಬೇತಾಳದಂತೆ ಬರುತ್ತಿರುವ ವೇಶ್ಯೆಯನ್ನು ತಿರಸ್ಕರಿಸಿ ಮನೆಯ ಬಾಗಿಲಿಗೆ ಬಂದು

“ಆರುವರುಷಾ ತಿರುಗಿ ಅರಸನವರ ತಂದೀವ
ಅತ್ತಿ ಬಾ ಹೊರೆಯಾಕ, | ನಿನ ಮಗನ |
ಕರಕೋಳಿಯಾಕೆ”

ಎಂದು ಸಂತೋಷವನ್ನು, ಸಂಭ್ರಮವನ್ನು ವ್ಯಕ್ತಪಡಿಸುತ್ತಾಳೆ. ಅಂಥ ಗಂಡನನ್ನು ಅರಸನನ್ನಾಗಿ ಸ್ವೀಕರಿಸಿದ್ದು ನಮ್ಮ ಗರತಿಯರ ಹಿರಿಮೆಯನ್ನು ಸೂಚಿಸುತ್ತಿದೆಯಲ್ಲವೇ?

ಕೊರವಂಜಿ ಯಾವುದೇ ಕೆಲಸದಲ್ಲೂ ಸೋತವಳಲ್ಲ – ಬಿಟ್ಟ ಗಂಡಾನ ಒಲಿಸಬಲ್ಲೆ ಎನ್ನುವ ಮಾರು ಅಕ್ಷರಶಃ ಇಲ್ಲಿ ನಿಜವಾಗಿದೆ. ಇಲ್ಲಿ ಕವಿ ಕೊರವಂಜಿಯ ಬಳಿ ಗೂಡೆಯಂದಿರುತ್ತಿತ್ತು. ಅದು ಅಲಂಕಾರಯುತವಾಗಿರುತ್ತಿತ್ತು ಎಂಬುದರ ಜೊತೆಗೆ ಅವರ ಉಡುಗೆ ತೊಡುಗೆಗಳ ಬಗ್ಗೆಯೂ ಗಮನ ಸೆಳೆದಿದ್ದಾನೆ. ಕೊರವಂಜಿಯ ಅಲಂಕಾರಗಳು ಅವಳ ಮಾನಸಿಕ ಸ್ಥಿತಿ, ಹಾಗೂ ಉದಾತ್ತ ನಡತೆ ಇಲ್ಲಿ ವ್ಯಕ್ತವಾಗಿದೆ. ಕೊರವಂಜಿ ಪಾತ್ರ ಧರಿಸಿದ ಗರತಿಯ ಮಾತುಗಳಲ್ಲಿ ಕೊರವಂಜಿಯ ಗಟ್ಟಿ ಗರತಿತನವೂ ವರ್ಣಿತವಾಗಿದೆ. ಜನಪದರ ಕಾರ್ಯಾನುಗುಣಕ್ಕೆ ಒಳ್ಳೆಯ ಉದಾಹರಣೆ ಇದಾಗಿದೆ. ಕೊರವಂಜಿಯ ಇಲ್ಲಿ ಜೀವಂತವಾಗಿ ಮೂಡಿ ನಿಂತಿರುವಳು.

11)  ಕೊರವಂಜಿಯರು ಎಲ್ಲ ವಯೋಮಾನದವರಿಗೂ ಅವರ ಮನಸ್ಥಿತಿಯನ್ನುರಿತು ಕಣಿ ಹೇಳುತ್ತಾರೆ. ಜನಪದರಿಗೆ ಈಕೆ ದೇವಲೋಕದಿಂದ ಬಂದ ಕೊರವಿ ಎಂಬ ನಂಬಿಕೆ ಬೇರೆ ಇದೆ.

ಭೂತಬಾಧೆಯೆಂದು ನಂಬಿ ಚಿಂತೆಗೀಡಾದ ಹಳ್ಳಿಯ ಯುವಕನಿಗೆ –

“ಕಣಿಯ ಹೇಳಲು ಬಂದೆ ಕೇಳಯ್ಯಾ|
ಮಾಟಮಂತ್ರವ ಬಲ್ಲೆ ಕೊರವಿ ನಾನಯ್ಯ|
ಭೂತ ಬಾಧೆ ಕಳೆಯಬಲ್ಲೆ|
ಬುದ್ಧಿ ಮಾತ ಹೇಳಬಲ್ಲೆ|
ದುಡ್ಡು ಕಾಸು ಕೇಳಲೊಲ್ಲೆ |
ದೊಡ್ಡ ಮಾತ ಹೇಳಲೊಲ್ಲೆ |
ಶುದ್ಧ ಮಾತಿದು ನನ ಮಗನೆ |
ಕೆಟ್ಟ ಮೋಹಿನಿ ಕಾಡುವಳಂತೆ |
ಮೋಹಿನಿ ಮಾಡಿದ ಸಂತೆ |
ಕಣಿಯ ಹೇಳಿ ಬಿಡಸಬಲ್ಲೆ |
ನನ್ನುಡಿಯಾಲಿಸೋ ನನ್ನಯ್ಯಾ ”

ಎಂದು ಹೇಳಿರುವ ಮಾತುಗಳಲ್ಲಿ ಕೊರವಂಜಿ ತನ್ನಲ್ಲಿರುವ ಶಕ್ತಿಯನ್ನು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ; ಇಂಥ ಕೊರವಿ ಮುಂದಿರುವಾಗ ಯಾರು ತಾನೆ ಕಷ್ಟ ಕಳೆದುಕೊಳ್ಳಲು ಮುಂದಾಗಲಾರರು? ಇಷ್ಟು ಪ್ರಭಾವಯುತವಾಗಿ ತೋರಿದ್ದರಿಂದಲೇ, ಆಕೆ ಸಾಮಾಜಿಕವಾಗಿ ಮನ್ನಣೆ ಪಡೆಯಲು ಸಾಧ್ಯವಾಯಿತು. ಮಹಿಳೆಯರಿಗೆ, ಅತ್ತೆ ಮಾವರಿಗಂಜಿ ನಡೆಯಬೇಕಮ್ಮ, ದಡ್ಡ ಗಂಡನಾದರೂ ನೀನು ಶ್ರದ್ಧಾ ಮನದಿ ಸೇವಿಸಬೇಕು ಎಂದು ಉಪದೇಶ ಮಾಡುವ ಮೂಲಕ ಸಮಾಜದ ಧರ್ಮ ಕಾಯುವ ಕೆಲಸ ಮಾಡಿದ್ದಾಳೆ. ಮದುವೆಯ ಚಿಂತೆಯಲ್ಲಿರುವವರಿಗೆ

“ಚೆಲುವ ನಿನಗೆ ಸಿಗುವನೇಳೆ |
ಕಂಕಣ ಬಲ ಬಂದೈತಿ ಸನಿಯಾಕ |
ನೀ ಖುಷಿ ಇಡಲಾಕ ಮುರಿಬ್ಯಾಡ ಸಕುನಕ

ಎಂದು ಹೇಳಿ ಮನಸ್ಸಿನ ಚಿಂತೆಯನ್ನು ದೂರಮಾಡಿ ಅವರನ್ನು ಖುಷಿಮಾಡಿ, ತಾನೂ ದಕ್ಷಿಣಿ ಪಡೆದು ಖುಷಿಯಾಗುತ್ತಾಳೆ. ಹೀಗೆ ಜನಪದರ ಬದುಕಿನಲ್ಲಿ ಕಂಡುಬರುವ ಆಯಾ ಸಂದರ್ಭವನ್ನು ಅರಿತು ಮಾನಸಿಕ ಚಿಕಿತ್ಸೆ ನೀಡಿ ಮುದಗೊಳಿಸುವ ಕೊರವಂಜಿ ಸಾಮಾನ್ಯ ಹೆಣ್ಣಾದರೆ ಜನಪದರ ದೃಷ್ಟಿಯಲ್ಲಿ ಅವಳಲ್ಲಿರುವ ಅದ್ಭುತ ಶಕ್ತಿ ಸಾಮಾನ್ಯವಾದುದಲ್ಲ.[1]       ಜಾನಪದ – 2. ಕರ್ನಾಟಕ ಜಾನಪದ ಪರಿತಷತ್ತು. ಮಾ. ಗಂಗೋತ್ರಿ – 6. ಸಂಪುಟ – 1, ಸಂಚಿಕೆ- 2. ಜುಲೈ – 1969. ಪುಟ – 14 – 15.

[2]      ಸಂ.ಡಾ.ಜಿ.ಶಂ.ಪ. ಕರುಣಿ ಕಣ್ಣ ತೆರೆಯೆ. ಪುಟ – 110

[3]      ಬಿ.ಎಸ್‌.ಗದ್ದಗೀಮಠ. ಲೋಕ ಗೀತೆಗಳು. ಪುಟ – 155.

[4]      ಡಾ. ಜಿ.ಶಂ.ಪ ನಾಲ್ಕು ಜನಪದ ವೇಷಗಳು. ಪುಟ -9.

[5]      ಉತ್ತನೂರು ರಾಜಮ್ಮ ಪಿ.ಶೆಟ್ಟಿ. ಜಾನಪದ ಗಂಗೋತ್ರಿ ಜುಲೈ 1992. ಸಂಪುಟ -5. ಸಂಚಿಕೆ – 1. ಪುಟ – 57.

[6]      ಸಂ. ಕಾಪಸೆ ರೇವಪ್ಪನವರು. ಮಲ್ಲಿಗೆ ದಂಡೆ. ಪು – 16.

[7]      ಕನ್ನಡ ಜಾನಪದ ವಿಶ್ವಕೋಶ. ಪುಟ – 539.