ಒಂದು ಜನಾಂಗದ ಜೀವನ ಪದ್ಧತಿ, ನಂಬಿಕೆ, ನಡವಳಿಕೆಗಳನ್ನು ಅರಿಯಲು ಗಾದೆಗಳು ಇತರ ಆಧಾರಗಳಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗಾದೆ ಮುಟ್ಟದ ಬದುಕಿನ ಭಾಗವಿಲ್ಲ; ಮುಟ್ಟದ ವಸ್ತುವಿಲ್ಲ; ತಟ್ಟೆಬ್ಬಿಸದ ಭಾವವಿಲ್ಲ.”

[1] ಆದ್ದರಿಂದ ಜಾತಿ ಅಥವಾ ಬುಡಕಟ್ಟಿಗೆ ಸೇರಿದ ಯಾವುದೇ ಜನಾಂಗವಿರಲಿ ಅವರ ಪೂರ್ವದ ಇತಿಹಾಸವನ್ನು ಪ್ರಮಾಣಬದ್ಧವಾದ ರೀತಿಯಲ್ಲಿ ಅರಿಯಲು ಗಾದೆಗಳು ಸಹಾಯ ಮಾಡುತ್ತವೆ. ಬಾಯಿಂದ ಬಾಯಿಗೆ ಸೊಗಸಾಗಿ ಬಂದಿರುವ ಗಾದೆಗಳು ಆಯಾ ಜನರ ಬದುಕಿನ ಹಲವು ಮಗ್ಗಲುಗಳನ್ನು ತಿಳಿಸುತ್ತವೆ. ಇಲ್ಲಿಯವರೆಗೆ ನೋಡಿದ ಶಿಷ್ಟ ಮತ್ತು ಜಾನಪದ ಸಾಹಿತ್ಯದಲ್ಲಿ ಕಂಡು ಬಂದ ಕೊರವಂಜಿಯ – ಕೊರಮರ ಪರಿಚಯ ಬದುಕಿನ ಒಂದು ಮುಖವಾದರೆ ಗಾದೆಗಳಲ್ಲಿ ಕಾಣುವುದು ಅವರ ವೈಯಕ್ತಿಕ ಬದುಕಿನ ಮತ್ತೊಂದು ಮುಖ.

12) ಗಾದೆಗಳು ವೇದಕ್ಕೆ ಸಮ ಎಂಬ ಗಾದೆಯೇ ಇದೆ. ಗಾದೆಗಳು ಎಂದೂ ಸುಳ್ಳನ್ನು ಹೇಳುವುದಿಲ್ಲ. ಪ್ರತಿಯೊಂದು ಜನಾಂಗದ ಬಗ್ಗೆಯೂ ಗಾದೆಗಳು ರೂಪುಗೊಂಡಿವೆ. ಅವು ಆಯಾ ಜನಾಂಗದ ಸ್ವಭಾವ, ಕಟ್ಟುಪಾಡು, ಜೀವನ ರೀತಿಗಳ ಬಗೆಗೆ ದಾಖಲೆಗಳನ್ನೊದಗಿಸುವ ಅಲಿಖಿತ ಶಾಸನಗಳಂತೆ ತೋರುತ್ತದೆ. ಮತ್ತು ಚಿಂತನಕಾರರನ್ನು ಸತ್ಯದ ಸಮೀಪಕ್ಕೆ ಕರೆದೊಯ್ಯುತ್ತವೆ. ಈ ನಿಟ್ಟಿನಲ್ಲಿ ಕೊರಮರ ಬಗ್ಗೆ ಹುಟ್ಟಿಕೊಂಡಿರುವ ಗಾದೆಗಳು ಅವರು ಈ ಸಾವಿರಾರು ವರ್ಷಗಳಲ್ಲಿ  ಸಾಗಿ ಬಂದಿರುವ ರೀತಿಯ ಕೆಲವು ಅಂಶಗಳನ್ನು ಪರಿಚಯಿಸುತ್ತವೆ. ನಾಗರಿಕತೆಯ ಪ್ರಭಾವದಿಂದಾಗಿ ಪರಂಪರಾಗತ ಸಂಪ್ರದಾಯ, ಜೀವನ ವ್ಯವಸ್ಥೆಗಳು ಮರೆಯಾದಾಗ ಅವುಗಳನ್ನು ಅರಿಯುವುದು ಸುಲಭದ ಮಾತೇನಲ್ಲ. ಇಂಥ ಸಂದರ್ಭಗಳಲ್ಲಿ ಗಾದೆಗಳು ಸಹಾಯ ಮಾಡುತ್ತವೆ.

“ಕೊರಮಗೊಂದೂರಲ್ಲ ಕೊಕ್ರೆಗೊಂದು ಕರೆಯಲ್ಲ” ಇದರ ಇನ್ನೊಂದು ರೂಪ “ಕೊಕ್ರೆಗೊಂದು ಕರೆಯಲ್ಲ ಕೊರಮಶೆಟ್ಟಿಗೊಂದೂರಲ್ಲ”. ಅಲೆಮಾಡಿಗಳನ್ನು ಕುರಿತು ಜನ ಸಾಮಾನ್ಯವಾಗಿ “ಇದ್ದತಾವ ಇರ್ಲಿಲ್ಲ ಬಿಡ್ಡ ಗೋಡೆ ಕಟ್ಟಿಲ್ಲ” ಎಂಬ ಗಾದೆಯನ್ನು ಹೇಳುತ್ತಾರೆ. ಅದು ಅಲೆಮಾಡಿಗಳೆಲ್ಲರನ್ನು ಕುರಿತು ಹೇಳಿದ ಮಾತಾಯಿತು. ಆದರೆ ಈ ಮೇಲಿನ ಗಾದೆ ನಿರ್ದಿಷ್ಟವಾಗಿ ಕೊರಮರ ನಿರಂತರ ಸಂಚಾರದ ಚಿತ್ರವನ್ನು ಸೊಗಸಾಗಿ ಸೆರೆ ಹಿಡಿದಿದೆ. ಕೊರಮ ಒಂದೇ ಊರಿನಲ್ಲಿದ್ದರೆ ತಾವು ಮಾಡುವ ವೃತ್ತಿಯಿಂದ ಹೊಟ್ಟೆ ತುಂಬಿಸಿಕೊಳ್ಳುವುದು ಕಷ್ಟ, ಆದ್ದರಿಂದ ಇವರಿಗೆ ಅಲೆಮಾರಿತನ ಅನಿವಾರ್ಯ. ಅಂತೆಯೇ ಕೊಕ್ರೆ (ಬೆಳ್ಳಕ್ಕಿ)ಯೂ ಆಹಾರನ್ವೇಷಣೆಗಾಗಿ ಕೆರೆಯಿಂದ ಕೆರೆಗೆ ಹಾರಿ ಹೋಗುವುದು ಅನಿವಾರ್ಯವೇ. ಇಲ್ಲಿನ ಹೋಲಿಕೆ ಅತ್ಯಂತ ಅರ್ಥಪೂರ್ಣವಾಗಿದೆ.

“ಕೊರಮನಿಗ್ಯಾಕೆ ಕೋಲು ಕುಕ್ಕೆ ಎಣೆಯೋದ್ಮೇಲು | ”

ಈ ಗಾದೆ ಕೊರಮರು ವಂಶಪಾರಂಪರಯ್ವಾಗಿ ಕುಕ್ಕೆ (ಬುಟ್ಟೆ) ಗಳನ್ನು ಹೆಣೆಯುವ ವೃತ್ತಿಯನ್ನು ಅನುಸರಿಸಿಕೊಂಡು ಬಂದಿರುವುದನ್ನು ಸೂಚಿಸುತ್ತದೆ. ತನ್ನ ಕುಲಕಸುಬನ್ನು ಬಿಟ್ಟು. ಬೇರೆ ವೃತ್ತಿಯನ್ನು ಅನುಸರಿಸಿ ಅಷ್ಟು ಸುಲಭವಾಗಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಬುಟ್ಟಿ ಹಣೆಯುವುದನ್ನು ಬಿಟ್ಟು ಇತರೆಯವರಂತೆ ಬೇಸಾಯ ಮಾಡಲು ಬಾರುಕೋಲು, ಕುಂಟೆಕೋಲು ಹಿಡಿದರೆ ಬೆಳೆ ಬೆಳೆದು ಮನೆಗೆ ದವಸ ತಂದಂತಾಗುವುದಿಲ್ಲ. ಕೊರಮನಿಗೆ ಸಮಾಜವನ್ನು ರಕ್ಷಿಸುವ ಕೊಲ್‌ಕಾರ ಕೆಲಸವೂ ಸರಿಯಲ್ಲ ಎಂಬ ಧ್ವನಿಯೂ ಇಲ್ಲಿದೆ. ಇಂಥ ಕೊರಮನೊಬ್ಬನ ಪರಿಪಾಟಲನ್ನು ನೋಡಿದ ಜನ ಈ ಗಾದೆಯನ್ನು ಕಟ್ಟಿರಬಹುದು. ಹದನೋಡಿ ಹರಗು, ಬೆದೆ ನೋಡಿ ಬಿತ್ತು ಎನ್ನವು ಗಾದೆಯೇ ಇದೆ. ಇದನ್ನರಿಯದ ಈತ ಬುಟ್ಟಿ ಹಣೆಯವುದುರಲ್ಲಿಯೇ ತನ್ನನ್ನು ತೊಡಗಿಸಿಕೊಳ್ಳಬೇಕೇ ಹೊರತು ರೈತಾಪಿ ಕೆಲಸದಲ್ಲಲ್ಲ. ಒಟ್ಟಿನಲ್ಲಿ ಈ ಗಾದೆ ಕೊರಮರ ಪರಂಪರೆಯಿಂದ ಬಂದ ವೃತ್ತಿ ಬುಟ್ಟಿ ಹೆಣೆದು ಜೀವನ ಸಾಗಿಸುತ್ತಿದ್ದುದನ್ನು ತಿಳಿಸುವ ಒಂದು ಜಾನಪದ ದಾಖಲೆಯಾಗಿದೆ.

“ಕೊರಮನಿಗೆ ಕಟ್ಟಿಲ್ಲ ; ನಾಯಿಗೆ ಹಿಟ್ಟಿಲ್ಲ”

ಜೀವನಕ್ಕೆ ಎರವಾಗುವ ಕಟ್ಟು ಪಾಡುಗಳಿಗೆ ಒಳಗಾಗಿ ಬದುಕುವುದು ಕೊರಮರಿಗೆ ಸಾಧ್ಯವಿಲ್ಲ. ಊರಿಂದೂರಿಗೆ ಅಲೆಯುವ, ಬದುಕಿಗೆ ಯಾವ ಸ್ಥಿರತೆಯೂ ಇಲ್ಲದ ಈ ಜನ ಸಮಾಜದ ಕಟ್ಟು ಕಟ್ಟಳೆಗಳಿಗೆ ಬದ್ಧವಾದರೆ ಉಪವಾಸ ಬೀಳಬೇಕಾಗುತ್ತಿತ್ತು. ಬೀದಿ ನಾಯಿಗೆ ಹೊಟ್ಟೆಗೆ ಹಾಕುವವರಾರು ? ಆದ್ದರಿಂದ ಕೊರಮರು ಹೊಟ್ಟೆ ಹೊರೆಯಲು ಊರಿಂದೂರಿಗೆ ಹೋಗಿ ಅಲ್ಲಿಯ ಕಟ್ಟುಗಳಿಗೆ ಒಳಗಾಗದೆ ಬದುಕುತ್ತಿದ್ದರು ಎಂಬುದು ತಿಳಿಯುತ್ತದೆ. ಇದಲ್ಲದೆ ತಮ್ಮ ಸಮಾಜದ ಕಟ್ಟುಪಾಡುಗಳೂ ಅವರಿಗೆ ಅಷ್ಟೊಂದು ನಿರ್ಬಂಧವನ್ನು ಒಡ್ಡುತ್ತಿರಲಿಲ್ಲವೆಂದು ಭಾವಿಸಬಹುದು.

“ಕೊರಮ ಕೂಡಿ ಕೆಟ್ಟ, ದೊಂಬ ಅಗಲಿ ಕೆಟ್ಟ”

ಈ ಗಾದೆ ಕೊರಮರ ಅಸಂಸ್ಕೃತಿಯನ್ನು ಹೇಳುತ್ತದೆ. ಇವರು ನಾಲ್ಕು ಜನರ ಹಾಗೆ ಗೌರವದಿಂದ ಬದುಕಬೇಕೆನ್ನುವ ತಿಳುವಳಿಕೆಯನ್ನು ತಂದುಕೊಂಡವರಲ್ಲ. ಅಂಥ ತಿಳುವಳಿಕೆ ಇದ್ದುದೇ ಆಗಿದ್ದರೆ ಒಂದು ಕಡೆ ನೆಲೆಯೂರಿ ಬದುಕಿಗೊಂದು ಆಧಾರ ಕಲ್ಪಿಸಿಕೊಳ್ಳುತ್ತಿದ್ದರು. ಮದ್ಯಪಾನ ಪ್ರಿಯರಾದ ಈ ಜನ ಸಣ್ಣಪುಟ್ಟ ಕಾರಣಗಳಿಗೂ ಹೊಡೆದಾಟ ಬಡಿದಾಟ ಮಾಡಿಕೊಂಡು ತಮ್ಮ ಪಂಚಾಯಿತಿ ಕಟ್ಟೆಯಲ್ಲಿ ಸಂಪಾದಿಸಿದ ನಾಲ್ಕು ಕಾಸನ್ನೂ ಕರಿಗಿಸಿಕೊಳ್ಳುತ್ತಿದ್ದರು. ಇವರ ನಾಲ್ಕಾರು ಕುಟುಂಬಗಳು ಒಂದು ಕಡೆ ಸೇರಿದರೆ ಜಗಳ ಸಾಮಾನ್ಯವೇ ಆಗಿತ್ತು. ಸಾಮಾಜಿಕ ಪ್ರಜ್ಞೆ ಇಲ್ಲದ ಈ ಜನರ ಬದುಕಿನ ರೀತಿಯನ್ನು ಈ ಗಾದೆ ಸೂಚಿಸುತ್ತದೆ.

ಆದರೆ ದೊಂಬರಿಗೆ ಹಾಗಲ್ಲ. ಅವರ ಆಟ ನಡೆಯಲು ಗುಂಪು ಅಗತ್ಯ. ಅಂತೆಯೇ ನಾಲ್ಕಾರು ಮಂದಿಯಾದರೂ ತಮ್ಮ ಆಟ ತೋರಿಸಲು ಬೇಕಾಗುತ್ತದೆ. ಆ ಗುಂಪು ಚದುರಿದರೆ ಜೀವನವೇ ಕಷ್ಟ. ಈ ಗಾದೆ ಎರಡು ಜನಾಂಗಗಳ ಒಂದು ಕಾಲದ ಬದುಕಿನ ಸತ್ಯವನ್ನು ಸೊಗಸಾಗಿ ಚಿತ್ರಿಸುತ್ತದೆ. ಕಾರಣ ಜನಪದ ಗಾದೆಯ ಮಾತು ಆಯಾ ಜನರ ಜೀವನ ಪದ್ಧತಿ ವೈಶಿಷ್ಟ್ಯಗಳನ್ನು ಸೂಚಿಸುತ್ತದೆ ಎಂದು ಭಾವಿಸುವುದು ತಪ್ಪಲ್ಲ.

“ಜಂಗಮನಿಗೆ ಜೋಳಿಗೆ ತಪ್ಪಿಲ್ಲ, ಕೊರವಂಜಿಗೆ ಗೂಡೆ ತಪ್ಪಿಲ್ಲ”

ಜಂಗಮರು ಗುರು ಕೊಟ್ಟ ಜೋಳಿಗೆ ಹಾಕಿಕೊಂಡು, ನಾಲ್ಕು ಮನೆಯ ಮುಂದೆ ನಿಂತು ಗುರು ಕೋರ್ಯಾಣ ಭಿಕ್ಷೆ ಪಡೆಯುವುದು ಪರಂಪರೆಯಿಂದ ಬಂದಿದೆ. ಆದ್ದರಿಂದ ಜಂಗಮರಿಗೆ ಜೋಳಿಗೆ ಅನಿವಾರ್ಯ. ಅದನ್ನು ಬಿಡುವಂತಿಲ್ಲ. ಅಂತೆಯೇ ಗೂಡೆಯೂ ಕೊರವಂಜಿಯ ಬದುಕಿಗೆ ಆಧಾರವಾದದ್ದು. ಗೂಡೆ ಅವಳಿಗೆ ಕಿರೀಟಪ್ರಾಯ. ಆ ಗೂಡೆಯಾದರೂ ಕಣಿ ಹೇಳಲು ಪಾರ್ವತಿಯಿಂದ ಪಡೆದದ್ದು ಎನ್ನುವ ನಂಬಿಕೆ. ಕೊರವಂಜಿ ಕಣಿ ಹೇಳಲು ಹೊರಟಾಗ ಅವಳ ಕೈಯಲ್ಲಿ ಒಂದು ಗೂಡೆ, ಮಂತ್ರದ ಕೋಲು ಇರುತ್ತಿದ್ದುದು ಸಾಮಾನ್ಯ. ಆ ಗೂಡೆಯಲ್ಲಿ ತನ್ನ ಮನದೇವರ ಗದ್ದುಗೆ ಇರುತ್ತಿತ್ತು. ಸಾಮಾಜಿಕವಾಗಿಯೂ ಆ ಗೂಡೆ ಆಕೆಗೆ ಒಂದು ಸ್ಥಾನ ಕಲ್ಪಿಸುತ್ತಿತ್ತು. ಕೊರವಂಜಿ ಗೂಡೆ ಅಷ್ಟೇ ಅಲ್ಲದೆ, ಗೂಡೆಗಳನ್ನು ಹಳ್ಳಿಗಳ ಮೇಲೆ ಮಾರುತ್ತಿದ್ದರು. ಬುಟ್ಟಿ ಮಾಡಿ ಮಾರುವುದು ಅವರ ವೃತ್ತಿ. ಆ ಗಾದೆ ಎರಡು ವರ್ಗಗಳು ಅನುಸರಿಸುತ್ತಿದ್ದ ವೃತ್ತಿಯನ್ನು ನಿರ್ದೇಶಿಸುತ್ತದೆ. ಜಂಗಮ ಜೋಳಿಗೆ ಮತ್ತು ಬೆತ್ತ ಹಿಡಿದಿರುವಂತೆ ಕೊರವಂಜಿ ಏನಿಲ್ಲದಿದ್ದರೂ ಮುಖ್ಯವಾಗಿ ಒಂದು ಗೂಡೆ ಮತ್ತು ಮಂತ್ರೆದಂಡವನ್ನಾದರೂ ಹಿಡಿದಿರುತ್ತಾಳೆ ಎಂಬುದು ಇಲ್ಲಿನ ಹೋಲಿಕೆಯಲ್ಲಿ ತೋರುವ ಅರ್ಥಪೂರ್ಣತೆ.

“ಕೊರಮನಿಗೆ ದಾರಿಕೇಳೊ ಹೊತ್ತಿಗೆ ಹಳ್ಗುಂಟು ಹೋಗು ಅಂದ್ನಂತೆ” ಈ ಗಾದೆ ಕೊರಮರ ಮೋಸ, ವಂಚನೆಯನ್ನು ಧ್ವನಿಸುತ್ತದೆ. ದಾರಿಕೇಳಿದ ದಾರಿಕಾರನಿಗೆ ಈ ಕೊರಮ ದಾರಿ ತಪ್ಪಿಸಿ ಹಳ್ಳಕ್ಕೆ ಕಳಿಸುತ್ತಿದ್ದಾನೆ. ಹಿಂದಿನಿಂದ ಅವನ ಬೆನ್ನ ಹತ್ತುತ್ತಾನೆ ಎಂದು ಆಲೋಚಿಸಬಹುದು. ಆತನ ಬಗ್ಗೆ ಒಳ್ಳೆಯ ಭಾವನೆಯಿಂದ ವಿಚಾರ ಮಾಡಿದಾಗ, ಅಲೆಮಾರಿಯಾದ ಕೊರಮನಿಗೆ ಸರಿಯಾದ ದಾರಿ ಗೊತ್ತಿಲ್ಲದೆ ಇರಬಹುದು. ಹಳ್ಳ ನೀರು ಹರಿಯುವ ಜಾಗ, ಅದರ ದಂಡೆಯಲ್ಲಿಯೇ ಹೋದರೆ. ಊರುಕೇರಿ ಅಥವಾ ಜನ ಸಿಕ್ಕೇ ಸಿಕ್ಕುತ್ತಾರೆ. ಅವರು ಸರಿದಾರಿಯನ್ನು ತೋರಿಸಬಹುದು ಎಂದು ಹಳ್ಳದ ದಾರಿಯನ್ನು ತೋರಿಸಿರಬಹುದು. ಹಾಗಲ್ಲದೆ, ಜನಪದರ ಬಳಕೆಯಾದ ಹಳ್ಳ ಹಿಡಿಸು ಹೊಳೆ ತೋರಿಸು ಎನ್ನುವ ಮಾತಿನ ಧ್ವನಿ ಕಷ್ಟಕ್ಕೆ ಗುರಿ ಮಾಡು, ಸಾವು ತೋರಿಸು ಎಂದು ಅರ್ಥ ಇದೆ.

ಆದರೆ ಇವರು ಕಳ್ಳತನ ಮಾಡುತ್ತಿದ್ದ ಬಗ್ಗೆ ತಿಳಿಯುವುದರಿಂದ ವಂಚನೆ ಅಥವಾ ಕಳ್ಳತನವೇ ಇವರ ಗುರಿಯಾಗಿತ್ತು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಈ ಗಾದೆಯಿಂದ ಆ ಜನರ ವ್ಯಕ್ತಿತ್ವವನ್ನು ಅರಿಯಲು ಸಾಧ್ಯವಾಗುತ್ತದೆ.

“ಕೊರಮ ಜಾಲ ಮನೆಗೆ ಮೂಲ”

ಜೀವನಾಧಾರವಿಲ್ಲದ ಕೊರಮರು ದುಡಿದೇ ಹೊಟ್ಟೆ ತುಂಬಿಕೊಳ್ಳಬೇಕು. ಸೋಮಾರಿತನದಿಂದ ಜೀವನಾಧಾರವಿಲ್ಲದ ಕೊರಮರು ಎಂದು ಸೋಗು ಹಾಕಿ ರೋಗಿಷ್ಟನಂತೆ ಮೂಲೆ ಹಿಡಿದರೆ, ಕೆಲಸ ತಪ್ಪಿಸುವ ಸಂಚನ್ನು ಹೂಡಿದರೆ ಆ ಮನೆಯ ಉಳಿದ ಜನ ನಾಲ್ಕಾರು ದಿನ ನೋಡಿ ಆತನ ಕಳ್ಳಾಟ ತಿಳಿದು ಸಿಟ್ಟಿಗೇಳುತ್ತಿದ್ದರು. ಸೋಗು ಹಾಕಿದವನು ಸರಿ ಹೋಗದಿದ್ದರೆ, ತಾವು ಬೇರೆ ಬೇರಯಾಗುತ್ತಿದ್ದರು. ಮನೆ ಒಡೆದು ಹೋಗುತ್ತಿತ್ತು. ಬೇರೆ ಜನಾಂಗಗಳಲ್ಲಾದರೆ ತಿಳುವಳಿಕೆಯಿದ್ದ ಜನ ಬೇರೆ ರೀತಿಯಲ್ಲಿ ನಿಭಾಯಿಸುತ್ತಿದ್ದರು. ಅಂದರೆ ಕಳ್ಳಾಟ ಮಾಡುವವನಿಗೆ ತಿಳಿಹೇಳಿ, ಹೇಳಿಸಿ ಅದಕ್ಕೂ ಆತ ಬಗ್ಗದಿದ್ದರೆ ಮನೆಯಿಂದ ಹೊರಗೆ ಹಾಕುತ್ತಿದ್ದರು. ಕೊರಮರಲ್ಲಾದರೆ ನಗ – ನಾಣ್ಯ, ಆಸ್ತಿ – ಪಾಸ್ತಿಯಿಲ್ಲದ ಜನ ಸುಲಭವಾಗಿ ಬೇರೆಯಾಗುತ್ತಿದ್ದರು. ಮನೆಯೇ ಮುರಿದು ಹೋಗುತ್ತಿತ್ತು. ಈ ಗಾದೆ ಈ ಜನಾಂಗದ ತಿಳುವಳಿಕೆ ಮತ್ತು ಬೌದ್ಧಿಕ ಮಟ್ಟವನ್ನು ಸೂಚಿಸುತ್ತದೆ.

“ಕೊರಮರ ನ್ಯಾಯಕ್ಕೂ ಕುಂಚಿಗರ ಮದುವೆಗೂ
ನರಿ ನನ್ ತುಣ್ಣೆನೋ (ಶ್ಯಾಟಾನೂ) ಹೋಗಲ್ಲ ಅಂತಂತೆ ”

ಈ ಗಾದೆ ತೋರಿಕೆಗೆ ಅಶ್ಲೀಲವಾಗಿ ಕಂಡರೂ ಎರಡು ಜನಾಂಗಗಳ ಅಸಂಸ್ಕೃತ ಬದುಕನ್ನು ಅವರ ಪಂಚಾಯಿತಿ ವ್ಯವಸ್ಥೆಯನ್ನು ಸಹಜವಾಗಿಯೇ ಚಿತ್ರಸುತ್ತದೆ. ಕೂಡಿದ್ದಲ್ಲಿ ಜಗಳಾಡುವ ಈ ಜನರ ಪಂಚಾಯಿತಿ ಎರಡು – ಮೂರು ದಿನಗಳಾದರೂ ಬಗೆಹರಿಯುತ್ತಿರಲಿಲ್ಲ. ಪಂಚಾಯಿತಿ ಮಾಡಲು ಸೇರಿದ ತಮ್ಮ ಜನಾಂಗದವರಿಗೆ ( ಇಲ್ಲಿ ಬೇರೆ ಜನಾಂಗದವರಿಗೆ ಪ್ರವೇಶವಿಲ್ಲ) ಹೆಂಡದ, ಊಟದ, ಎಲೆ- ಅಡಿಕೆಯ ಎಲ್ಲ ವ್ಯವಸ್ಥೆಯ ಖರ್ಚನ್ನು ಅಪರಾಧಿಯಾದವನು ಕೊಡಬೇಕಾಗುತ್ತಿತ್ತು. ಹಾಗಾಗಿ ಪಂಚಾಯಿತಿ ಮುಗಿಯುತ್ತಲೇ ಇರಲಿಲ್ಲ. ಬುದ್ಧಿವಂತ ಪ್ರಾಣಿಯಾದ ನರಿಯೇ ಕೊರಮರ ಪಂಚಾಯತಿಗೆ ಬಹಿಷ್ಕಾರ ಹಾಕಿದ ಮೇಲೆ ಒಳ್ಳೆಯವರು ಯಾರು ತಾನೆ ಇವರ ನ್ಯಾಯ ಹರಿಸಲು ಹೋಗಿಯಾರು ? ಅದರಂತೆಯೇ ಕುಂಚಿಗರ ಮದುವೆಯೂ ಗೊಂದಲ ಗಲಾಟೆಯಿಂದ ಕೂಡಿರುತ್ತಿತ್ತೇನೋ ? ಅಂತೂ ಈ ಗಾದೆ ಮೇಲೆ ಹೇಳಿದ ಎರಡು ವರ್ಗದವರ ಬದುಕಿನ ಮೇಲೆ ಕಿರುಬೆಳಕನ್ನು ಬೀರುತ್ತದೆ.

“ನರಮನುಷ್ಯರಲ್ಲೆಲ್ಲ ಕೊರಮ ಚಾಂಡಾಲ
ಹಕ್ಕಿಪಕ್ಷಿಲೆಲ್ಲ ಕಾಗೆ ಚಾಂಡಾಲ”

ಚಾಂಡಾಲರು ಮಾನವ ಜನಾಂಗದಲ್ಲಿಯೇ ಕೆಳಸ್ತರದವರು. ಬ್ರಾಹ್ಮಣ ಸ್ತ್ರೀಗೆ ಕೀಳುಕುಲದ ಪುರುಷನಿಂದ ಹುಟ್ಟಿದವರು ಎನ್ನುವ ಅರ್ಥವಿದ್ದರೂ ಚಾಂಡಾಲರೆಂದರೆ ಕೀಲು ಭಾವನೆ ಸಾಮಾಜಿಕವಾಗಿ ಇದೆ. ಕೊರಮರ ಈಗ ದೊರೆತಿರುವ ಸಾವಿರಾರು ವರ್ಷಗಳ ಬದುಕಿನ ವಿವರಗಳನ್ನು ಅವಲೋಕಿಸಿದರೆ ಸಮಾಜದ ಅತಿ ಕೆಳಸ್ತರದವರಾಗಿ ಇವರು ಕಂಡು ಬರುವುದಿಲ್ಲ. ಕೊರಮರ ರೀತಿ – ನೀತಿ, ನಂಬಿಕೆ-ನಡವಳಿಕೆ, ಅಸಂಬದ್ಧತೆ- ಅಸಂಸ್ಕಾರ ನೋಡಿ ಈ ಗಾದೆಯನ್ನು ಕಟ್ಟಿರಬಹುದು. ಹಾಗೆ ನೋಡಿದರೆ ಕೊರಗರು ಅತಿ ಕೆಳಸ್ತರದವರಾಗಿ ಕಂಡು ಬರುತ್ತಾರೆ; ಆದ್ದರಿಂದ ನರಮನುಷ್ಯರಲ್ಲೆಲ್ಲ ಕೊರಗ ಚಾಂಡಾಲ; ಹಕ್ಕಿಪಕ್ಷಿಗಳಲ್ಲೆಲ್ಲ ಕಾಗೆ ಚಾಂಡಾಲ ಎಂದಿದ್ದುದು ಮುಂದೆ ಗ ಕಾರದ ಬದಲು ವ ಕಾರವೋ ಮ ಕಾರವೋ ಬಂದು ಕೊರವ, ಕೊರಮ ಆಗಿರಬಹುದೇ ಎಂಬ ಅನುಮಾನ ಬಂದರೂ ಹಿಂದುಳಿದ ಜನಾಂಗವೊಂದರ ಪರಿಚಯ ಈ ಗಾದೆಯಿಂದಾಗುತ್ತದೆ.

ಈ ಮೇಲೆ ನೋಡಿದ ಗಾದೆಗಳು ಕೊರಮರನ್ನು ಸಾಹಿತ್ಯಿಕ ತೆಕ್ಕೆಯಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ, ಅವರ ಜೀವನ ವ್ಯವಸ್ಥೆ, ರೂಢಿಸಿಕೊಂಡ ವೃತ್ತಿ. ಆಧಾರವಿಲ್ಲದ ಬದುಕು, ಅನಾಗರಿಕತೆ ಮುಂತಾದವುಗಳನ್ನು ಸಹಜವಾಗಿಯೇ ಪರಿಚಯಿಸುತ್ತವೆ. ಜನಪದ ಗೀತೆಗಳಲ್ಲಿ ಅವರ ಬುದ್ಧಿವಂತಿಕೆ, ಚಮತ್ಕಾರ, ಸಾಮಾಜಿಕ ವ್ಯವಹಾರ ಕಂಡರೆ ಗಾದೆಗಳಲ್ಲಿ ಅವರ ವೈಯಕ್ತಿಕ ಬದುಕಿನ ವಿವರಗಳನ್ನು ಕಾಣುತ್ತೇವೆ. ಜನಾಂಗೀಯ ಅಧ್ಯಯನದಲ್ಲಿ ಇಲ್ಲಿಯ ಗಾದೆಗಳು ಮಹತ್ವದ ಪಾತ್ರ ವಹಿಸುತ್ತವೆ. ದಾಖಲೆಗಳೇ ವಿರಳವಾಗಿರುವ ಈ ಅಲೆಮಾರಿ ಜನಾಂಗದ ಬಗೆಗೆ, ಜಾನಪದರ ನುಡಿಗಳಲ್ಲಿ ದೊರೆತ ಈ ದಾಖಲೆಗಳಿಗೆ ವಿಶೇಷ ಮಹತ್ವವಿದೆ. ಆ ಜನಾಂಗದ ಒಳಮರ್ಮ, ವ್ಯಕ್ತಿಗಳ ರೀತಿ-ನೀತಿ, ಸಮಾಜದಲ್ಲಿನ ಸ್ಥಾನ- ಮಾನಗಳನ್ನು ಸೂಚಿಸುವ ದಾಖಲೆಗಳು ಇವಾಗಿವೆ. ಜನಪದ ಸಾಹಿತ್ಯ ಇಂಥ ಅದೆಷ್ಟೋ ಅಪತ್ರಿಕಾ ವಾರ್ತೆಯ ಜನಾಂಗದ ವಿಶೇಷತೆಯನ್ನು ದಾಖಲಿಸಿರುವುದು ಮನನೀಯವಾದ ವಿಚಾರ.[1]       ಸುಧಾಕರ ನಮ್ಮ ಸುತ್ತಿನ ಗಾದೆಗಳು. ಪುಟ – 11