ಕೊರಮ ಜನಾಂಗ ಎಂದಿಗೂ ತನ್ನ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬಂದಿದೆ. ಶಿಷ್ಟಪದ ಸಾಹಿತ್ಯದಲ್ಲಿ ಅವರ ಬಗೆಗೆ ಬರುವ ವಿಚಾರಗಳು ಕ್ವಚಿತ್ತಾಗಿ ತೋರುತ್ತದೆ. ಅಲ್ಲಿ ಕೊರಮ ಜನಾಂಗದ ಸಮಸ್ತಾಂಶಗಳನ್ನು ಕಾಣಲಾರೆವು. ಆದರೆ ಜಾನಪದ ಸಾಹಿತ್ಯದಲ್ಲಿ ವಿಶೇಷವಾಗಿ, ಶಿಷ್ಟಪದ ಸಾಹಿತ್ಯದಲ್ಲಿ ಅದಕ್ಕೂ ವಿರಳವಾಗಿ ಕೊರಮರನ್ನು ಕುರಿತ ಸಂಗತಿಗಳು ದಾಖಲಾಗಿವೆ. ಕೊರಮ ಜನಾಂಗದ ಪ್ರತಿನಿಧಿ ಈ ಕೊರವಂಜಿ. ಈಕೆ ಸಾಹಿತ್ಯ ಪ್ರಕಾರಗಳಾದ ಕಾವ್ಯಗಳಲ್ಲಿ ಅಂತೆಯೇ ನಾಟಕಗಳಲ್ಲಿ ಸಂದರ್ಭೋಚಿತವಾಗಿ ಕಾಣಿಸಿಕೊಂಡಿದ್ದಾಳೆ. ತನ್ಮೂಲಕ ಕೊರಮ ಬುಡಕಟ್ಟಿನ ವಿಷಯಗಳು ಪ್ರಸ್ತಾಪಗೊಂಡಿವೆ. ಕನ್ನಡ ಸಾಹಿತ್ಯದಲ್ಲಿ ಕೊರವಂಜಿಯ ವಿಚಾರ ಬಂದಿರುವುದು ಹನ್ನೆರಡನೆಯ ಶತಮಾನದ ಪೂರ್ವಾರ್ಧದ ನೇಮಿನಾಥ ಪುರಾಣದಲ್ಲಿ. ಕಾಡಿನ ಒಂದು ಜನಾಂಗ ನಾಡಿನ ಸಂಪರ್ಕ ಹೊಂದಿ ಆ ಸಮಾಜದ ಗಮನ ತನ್ನ ಕಡೆಗೆ ಸೆಳೆದುಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. “ವ್ಯಕ್ತಿ ಬೆಳೆದರೆ ಮಾತ್ರ ಸಮಾಜ ಬೆಳೆಯುತ್ತದೆ.ಜೀವನದ ಎದುರು ನಿಂತಿರುವ ಅನೇಕ ಪ್ರಶ್ನೆಗಳನ್ನು ಇದಿರಿಸಲು ಮಾನವನ ವ್ಯಕ್ತಿತ್ವ ಬೆಳೆಯಬೇಕಾದುದು ಅನಿವಾರ್ಯ”

[1] ಅಂಥ ಬೆಳವಣಿಗೆಯಿಂದಾಗಿಯೇ 22ನೆಯ ತೀರ್ಥಂಕರ ನೇಮಿನಾಥನ ಚರಿತವಾದ ಈ ಪುರಾಣದಲ್ಲಿ ಜೈನಕವಿಯೊಬ್ಬ ತನ್ನ ಉದ್ದೇಶ ಸಾಧಿಸಿಕೊಳ್ಳಲು, ಆ ಸಂದರ್ಭಕ್ಕೆ ಅತಿ ಸೂಕ್ತವಾಗಿ ಕಂಡು ಬಂದ ಕೊರವಿಯನ್ನು ಬಳಸಿಕೊಂಡಿದ್ದಾನೆ. ಇದು ಶಿಷ್ಟ ಸಾಹಿತ್ಯದ ಪ್ರಥಮ ದಾಖಲೆಯಾಗಿ ಕಂಡು ಬಂದರೂ, ಜಾನಪದದಲ್ಲಿ ಇದು ಮುಂಚೆಯೇ ತೋರಿರಬಹುದು. ಆ ಕಾಲಕ್ಕಾಗಲೇ ಕೊರವಂಜಿಯ ಪ್ರಭಾವಯುತವಾದ ವರ್ಚಸ್ಸು ಅಂದರೆ ಸುಮಾರು 1115ಕ್ಕೆ ಕಂಡು ಬರುತ್ತಿದ್ದುದರಿಂದಲೇ ಕರ್ಣಪಾರ್ಯನು ಕೊರವಂಜಿಯನ್ನು ಬಳಸಿಕೊಂಡಿದ್ದಾನೆ. ಮನ್ಮಥನು ರುಗ್ಮಿಣನ ಆಸ್ಥಾನಕ್ಕೆ –

“ಕೊರವಿಯರ ರೂಪಿನಿಂದವ
ರರಿ ತಂ ಪೇಳಂಪೆವೆನುತ್ತುಮೆಳ್ತಿರೆ ಕಂಡಾ
ಪರಮೆಯ ವೊಲೆಸೆವ ಕುಂತಳೆ
ಯುಱುಗಜ್ಜುಂ ಪೇಳ್ಗುಮೆಂದು ಕರೆಯಿಸೆ ಬಂದರ್.

ವ |      ಅಂತು ಬರಲವರೇ ಕಾಂತಕ್ಕಾಕಾಂತೆಯೊಯ್ದು ಮನದ ಕಾರ್ಯಮಂ ಪೇಳಿ ಮೆನಲವರಿಂತೆಂದರ್.

ಮ ||    ಬಗೆದೈ ಗಂಡನಾಗಿಯುಂ ತರುಣಂ ಮುಂ ಬಂದ ಮಾದಿಂಗರೊಳ್‌ |
ಸೂಗಯಿಪೊರ್ವನ ನೆಂದೊಡಲ್ತು ಪುಸಿದೈಪೇಳೆಂದು ನಕ್ಕಳ್ಗೆ ಪೇಱ್
ಮೃಗಶಾ ಬೇಕ್ಷಣೆ ಪೇಳ್ದುತಪ್ಪೆ ನನಗೇಂ ನೀಂ ಮುಚ್ಚುವೈ ಸ್ವೇಚ್ಛೆಯಾ
ಗೆಗೆ ಪೇಳ್ವೆಂ ನಿಜಕಾರ್ಯ ಸಿದ್ಧಿಯನೆನಲ್ ಕೇಳ್ದಾಕೆ ಪೇಳೆಂಬುದುಂ.

ಕಂ||     ಅದು ನಿನಗಾದಪ್ಪುದು ಸ |
ಮ್ಮದದಿಂದಿರು ದೇವಿ ದೇವಿಯಾಣೆ ವಿಷಾದಾ
ಸ್ಪದೆ ಯಾಗದಿರೆನೆ ಮನ್ನಿಸೆ
ಸುದತಿ ಸಮುತ್ಸವದಿನಿರ್ದು ಕೊರವಿಯರಾಗಳ್

ವ ||     ಪೋಗಿ ತದ್ರೂಪಮನುಪಸಂಹರಿಸಿ”[2]

ಎಂಬುದರಿಂದ ಕೊರವಂಜಿಯರು ರಾಜಾಸ್ತಾನಕ್ಕೆ ಬಂದು, ರಾಣಿಯರ ಏಕಾಂತ ಸ್ಥಳಕ್ಕೂ ಹೋಗಿ ಕಣಿ ಹೇಳುತ್ತಿದ್ದುದು ತಿಳಿಯುತ್ತದೆ. ಇದರಿಂದ ಅಂದಿನ ಆಕೆಯ ಸ್ಥಾನ-ಮಾನದ ಪರಿಚಯವೂ ಆಗುತ್ತದೆ. ಹೀಗೆ ಸಮಾಜದಲ್ಲಿ ಪ್ರಭಾವಯುತವಾಗಿ ತೋರುತ್ತಿದ್ದ ಕೊರವಂಜಿಯ ಶಿಷ್ಟಕವಿಗಳ ಗಮನವನ್ನು ಸೆಳೆಯುವಷ್ಟು ಸಾಮಾಜಿಕವಾಗಿ ಬೆಳೆದಿದ್ದಳು ಎಂಬುದನ್ನು ಈ ಮೇಲಿನ ಅಂಶದಿಂದ ತಿಳಿಯಬಹುದು. ಶಿಷ್ಟಕಾವ್ಯಗಳಲ್ಲಿರುವ ಇಂಥ ಪ್ರಸ್ತಾಪ ಅವಳ ಜನಪ್ರಿಯತೆಯನ್ನು ಸೂಚಿಸುತ್ತದೆ. ಕೊರವಂಜಿ ಇಲ್ಲಿ ಕಣಿ ಹೇಳುವ ತನ್ನ ಮೂಲ ವೃತ್ತಿಯೊಂದಿಗೆ ಪರಿಚಯವಾಗುತ್ತಾಳೆ.

ಕಣಿ ಹೇಳುವ ವರ್ಣಮಯ ವ್ಯಕ್ತಿತ್ವದ ಕೊರವಂಜಿ ಬರಹಗಳಲ್ಲಿಯೂ, ಹಾಡುಗಳಲ್ಲಿಯೂ ಕಾಣಸಿಗುತ್ತಾಳೆ. “ಕೊರವಂಜಿ ಕಥೆಗಳು ನಮ್ಮಲ್ಲಿ ತಮಿಳುನಾಡಿನಿಂದ ರಾಮಾನುಜಾಚಾರ್ಯರೊಡನೆಯೇ ಪ್ರವೇಶಿಸಿದಂತೆ ತೋರುತ್ತದೆ. 17ನೆಯ ಶತಮಾನದ ಚಿಕ್ಕದೇವರಾಯ ಕಾಲದ ಶ್ರೀ ವೈಷ್ಣವ ಸಾಹಿತ್ಯ ಪ್ರಕಾರದಿಂದಲೇ ಇಂಥ ಕಥೆಗಳ ಉಗಮವಾಗಿವೆ. ವಿಜಯನಗರ ಕಾಲಕ್ಕೆ ತೆಲುಗರೊಡನೆ ಹೊಕ್ಕು ಬಳಕೆ ಹೆಚ್ಚಾದ್ದರಿಂದ ತೆಲುಗಿನಲ್ಲಿ ಜನಪ್ರಿಯವಾದ ಭಾಮಾಕಲಾಪ (ಕೊಚಿಪುಡಿ)ಗಳು ಕನ್ನಡ ನಾಡಿಗೆ ವಲಸೆ ಬಂದವು. ಕೊರವಂಜಿ ಪಾತ್ರಸೃಷ್ಟಿ ಕನ್ನಡ ನೆಲದ್ದಲ್ಲ. ಆಂಧ್ರ ಮತ್ತು ತಮಿಳು ನಾಡಿನಿಂದಲೇ ನಮ್ಮಲ್ಲಿಗೆ ಬಂದು ಪ್ರಸಿದ್ಧಿ ಪಡೆಯಿತು”[3] ಎಂಬ ಅಭಿಪ್ರಾಯ ಸರಿಯಲ್ಲ. 9-10 ನೇ ಶತಮಾನಕ್ಕಾಗಲೀ ಕೊರವಂಜಿ ಕನ್ನಡಿಗರ ಜನ ಜೀವನದಲ್ಲಿ ಬೆರೆತು ಕಾವ್ಯದಲ್ಲಿ ತೋರುತ್ತಿರುವುದರಿಂದ ಮೇಲಿನ ಹೇಳಿಕೆಯನ್ನು ಸುಧಾರಿಸಿಕೊಳ್ಳಬೇಕಾಗಿದೆ. ಕೃ.ಶ. 1115ರಲ್ಲಿದ್ದ ಕರ್ಣಪಾರ್ಯನ ನೇಮಿನಾಥ ಪುರಾಣವೇ ಇದಕ್ಕೆ ಸಾಕ್ಷಿ. ಕರ್ಣಪಾರ್ಯನರ ಪೂರ್ವದ ಜೈನಕವಿಗಳು ಕೊರವಂಜಿ ಅಥವಾ ನಾಟಕಗಳ ಬಗೆಗೆ ಹೆಚ್ಚು ಪ್ರಸ್ತಾಪ ಮಾಡದಿರುವುದಕ್ಕೆ ಆ ಜೈನ ಕವಿಗಳ ಧಾರ್ಮಿಕ ನಂಬಿಕೆಯೇ ಕಾರಣವಾಗಿದೆಯೆಂದು ಊಹಿಸಬಹುದು. ಅಹಿಂಸಾವಾದಿಗಳಾದ ಜೈನರು ರಾತ್ರಿಯಲ್ಲಿ ಪ್ರದರ್ಶಿತವಾಗುವ ನಾಟಕಗಳ ಬಗೆಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ ಎಂಬುದು ಸ್ವಯಂವೇದ್ಯ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೀರಶೈವರು ಭಕ್ತಿ ಮಾರ್ಗದಲ್ಲಿ ಮುಂದುವರೆದು ಸಮಾಜದ ಲೋಪ-ದೋಷಗಳನ್ನು ತಿದ್ದುವುದರ ಜೊತೆಗೆ ಭಾರತೀಯ ಸಾಹಿತ್ಯಕ್ಕೆ ವಿಶೇಷವಾದ ಭಕ್ತಿ ಸಾಹಿತ್ಯದ ಅಥವಾ ವಚನ ಸಾಹಿತ್ಯದ ಕೊಡುಗೆ ನೀಡಿ ವಿಶ್ವಸಾಹಿತ್ಯದ ಮಟ್ಟಕ್ಕೆ ತಮ್ಮ ವಿಚಾರಗಳನ್ನು ಬೆಳೆಸಿರುವರು. ಶರಣರ ವಚನ ಸಾಹಿತ್ಯ ಸಮಕಾಲೀನ ಸಮಾಜದ ಸಮಗ್ರ ಚಿತ್ರವನ್ನು ನೀಡುತ್ತದೆ. ಸಮಾಜವನ್ನು ತಿದ್ದಿದ ಅವರು ಅದರ ಎಲ್ಲ ವೈವಿಧ್ಯತೆಗಳನ್ನು ಗುರುತಿಸಿರುವರು. ಇಂಥ ಅನೇಕ ಸಂಗತಿಗಳಲ್ಲಿ ಕೊರವಂಜಿ ಪಾತ್ರವೂ ಒಂದು. ಹನ್ನೆರಡನೆ ಶತಮಾನಕ್ಕಾಗಲೇ ಕೊರವಂಜಿ ಹೆಚ್ಚು ಜನಾನುರಾಗಿಯಾಗಿದ್ದರಿದಂದಲೇ ಅವಳು ಕಣಿ ಹೇಳಲು ಅನುಸರಿಸುತ್ತಿದ್ದ ದಾಟಿ ತಮ್ಮ ಉಪದೇಶಕ್ಕೂ ಅನುಕೂಲವಾಗುತ್ತದೆಂದು ಅದನ್ನು ಶರಣರು ಅಳವಡಿಸಿಕೊಂಡಂತೆ ತೋರುತ್ತದೆ. ಇದಕ್ಕೆ ತಮ್ಮ ಆರಾಧ್ಯ ದೈವವಾದ ಶಿವಪಾರ್ವತಿಯರು ಕೊರವ-ಕೊರವಂಜಿ ವೇಷದಿಂದ ಜನರಿಗೆ ಕಾಣಿಸಿಕೊಳ್ಳುವ ಚಿತ್ರವೂ ಪ್ರೇರಣೆ ನೀಡಿರಬಹುದು.

ಪಾರ್ವತಿ ಕೊರವಂಜಿಯಾಗಿ ಕೌಸಲ್ಯೆಗೆ ಕಣಿ ಹೇಳಿದ ಕಥೆ ಅಲ್ಲದೆ ಪುರಾಣಗಳಲ್ಲಿ ಕಂಡು ಬರುವ ಧಾರ್ಮರಾಜನನ್ನು ವರಿಸಿದ ಕೊರವಂಜಿ ಹೆಣ್ಣೊಬ್ಬಳ ಕಥೆ ಪ್ರಧಾನವಾಗಿದೆ. ಹದಿನಾರರ ಹರೆಯದ ಗಿರಿಜೆ ಶಿವನನ್ನು ಮೆಚ್ಚಿಸಲು ಅತ್ಯುಗ್ರ ತಪಸ್ಸನ್ನಾಚರಿಸುತ್ತಿದ್ದಾಗ ಆಕೆಯನ್ನು ಪರೀಕ್ಷಿಸಲು ಈಶ್ವರ ಹಲವಾರು ವೇಷ ಧರಿಸುತ್ತಾನೆ. ಅಂಥ “ಹಲವಾರು ಪಾತ್ರಗಳಲ್ಲಿ ಕೊರವಂಜಿಯ ಪಾತ್ರವೂ ಒಂದು”[4] “ಅರ್ಜುನನ ತಪಸ್ಸು ಪಕ್ವಗೊಂಡಾಗ ಪರೀಕ್ಷಿಸಲು ಶಿವನು ಕಿರಾತನಾದನು. ಶಿವೆಯು ಕಿರಾತೆಯಾಗುವಳು ಆ ಕಿರಾತೆಯೇ ಕೊರವಿ ಎಂದು ಹೇಳುವರು.”[5] “ಪುರಾಣಗಳಲ್ಲಿ ನಾರದ ಪಾತ್ರವಿದ್ದಂತೆ ಜನಪದ ಸಾಹಿತ್ಯದಲ್ಲಿ ಕೊರವಂಜಿ ಪಾತ್ರವಿದೆ. ಕೊರವಂಜಿ ಇಲ್ಲದೆ ಜಾನಪದ ಸಾಹಿತ್ಯದ ಯಾವ ಕಥೆಯೂ ಕೊನೆ ಕಾಣುವುದಿಲ್ಲ. ಕೊರವ-ಕೊರವಿಯರು ಕನ್ನಡದ ನಾರದ-ನಾರದೆಯರು”[6] (ಶಿಷ್ಟ ಸಾಹಿತ್ಯದಲ್ಲಿ “ನಾರದ”ನ ಪಾತ್ರ ಹೇಗೋ ಹಾಗೆ ವಚನ ಹಾಗೂ ಜನಪದ ಸಾಹಿತ್ಯದಲ್ಲಿ ಕೊರವಂಜಿಯ ಪಾತ್ರ ಮೂಡಿ ಬಂದಿದೆ.)

ವಚನಕಾರರಲ್ಲಿ ಕಾಣಿಕಾರರು ಒಬ್ಬರಲ್ಲ, ಇಬ್ಬರಲ್ಲ ಇಪ್ಪತ್ತಾರು ಜನರಿದ್ದಾರೆ. ಇವರಲ್ಲಿ “ಮಹಾದೇವಿಯಕ್ಕ, ಅಲ್ಲಮಪ್ರಭು, ಭೋಳೇಶ, ಶಾಂತಮಲ್ಲೇಶ, ನಾಗಿನಾಥ ಇವರುಗಳು ಗಮನಾರ್ಹರಾಗಿದ್ದಾರೆ. ಈ ಎಂಟು ಒಂಭತ್ತು ಜನರಲ್ಲಿ ಅಕ್ಕನಿಗೆ ಮಾತ್ರ ಅಗ್ರಸ್ಥಾನ ಮೀಸಲಾಗಿದೆ”[7]

ಮಹಾದೇವಿಯಕ್ಕ ಕೊರವಂಜಿಯ ಕುಣಿಯ ದಾಟಿಯನ್ನು ಅನುಸರಿಸಿ, ಹೇಳುವ “ಕೈ ತೋರೆದುಂಡಿ”[8] ಎಂಬ ಗೀತ ವಚನವಂತೂ ಕೊರವಂಜಿಯ ಪ್ರತಿಭೆಯನ್ನು ಸಾಕ್ಷಾತ್ಕರಿಸುತ್ತಿದೆ.

“ಕೈತೋರೆ ಕೈತೋರೆ ದುಂಡಿ – ನಿನ್ನ
ಮೈಯೊಳಗಿರ್ದ ವಸ್ತುವನು ಪೇಳುವೆನು”

ಎನ್ನುವ ಈ ಪಲ್ಲವಿ ಜನಪದ ದಾಟಿಯ ಕಣಿಯ ಶೈಲಿಯನ್ನು ತಿಳಿಸುತ್ತದೆ. ನಾನು ಸುಳ್ಳು ಹೇಳುವುದಿಲ್ಲ “ನಂಬು ನಂಬೆಯಮ್ಮ ಅರಿವಿನ ಬಗೆಯ ಹೇಳುವೆ, ಚೆಲುವೆತ್ತ ಬಾಳಿನಿರುವ ಹೇಳುವೆ, ಭಾವದ ಲಕ್ಷಣವ ಹೇಳುವೆ, ತೋರೆಯಮ್ಮ ನಿನ್ನ ಕೈಯ ಕನ್ನಡಿಯ ತೋರೆಯಮ್ಮ” ಎಂಬುದು ಸಾಮಾನ್ಯ ಕೊರವಂಜಿಯೊಬ್ಬಳು ತನ್ನ ಕಣಿಯನ್ನು ನಂಬು ಎಂದು ನಂಬಿಸುತ್ತಿದ್ದ ರೀತಿ ಇದರಿಂದ ವ್ಯಕ್ತವಾಗುತ್ತದೆ. ಮಹಾದೇವಿಯಕ್ಕನ ಕೊರವಂಜಿ ವಚನದಲ್ಲಿ ಕಣಿಯ ನೈಜ ಚಿತ್ರಣದ ಜೊತೆಗೆ ಧ್ವನಿಪೂರ್ಣವಾಗಿ ತನ್ನನ್ನಾವರಿಸುವ ಮಾಯೆಯನ್ನು ತಿಳಿಸಿ ಭಕ್ತಿಯ ಮೂಲಕ ಅದನ್ನು ಪರಿಹರಿಸಿಕೊಳ್ಳುತ್ತಾ ಪರಮೇಶ್ವರನೆಡೆಗೆ ಸಾಗುವ ಅಂಶಗಳನ್ನು ವಿವರಿಸುವುದು ಗೋಚರಿಸುತ್ತದೆ. ವೈರಾಗ್ಯನಿಧಿಯಾದ ಅಕ್ಕ “ಒಡಲ ಕಿಚ್ಚಿನ ಕೊರವಂಜಿ ನಾನಲ್ಲ ತಾಯಿ” ಎಂದು ಹೇಳಿದರೂ ಸಾಮಾನ್ಯ ಕೊರವಂಜಿ ಹೊಟ್ಟೆಯ ಸಲುವಾಗಿಯೇ ಈ ವೃತ್ತಿಯನ್ನು ಅನುಸರಿಸುತ್ತಿದ್ದಳು ಎಂಬುದು ಮೇಲೆಯೇ ತಿಳಿಯುತ್ತದೆ.

“ಕಣಿಯ ಹೇಳಬಂದೆ ನಾನು ಕೇಳೆ ಹೆಣ್ಣೆ ನೀನು
ಕ್ಷಣದಿ ನಿನ್ನ ದೇಹ ಜಡವ ಹಣಿದ ಮಾಡಿ ಓಡಿಸುವೆನು”

ಎಂದು ಹೇಳುವ ಇನ್ನೊಂದು ಗೀತ ವಚನದಲ್ಲಿಯೂ[9] ಕೊರವಂಜಿ ಇನ್ನೊಬ್ಬರ ಮನಸ್ಸನ್ನು ಅರಿತು, ಅವರಿಗೊದಗುವ ಕಷ್ಟವನ್ನು ತಿಳಿದು ಅದನ್ನು ಪರಿಹರಿಸುವ ಶಕ್ತಿ ಇದ್ದವಳು ಎಂಬ ಅಂಶ ಗೋಚರಿಸುತ್ತದೆ. ಇಲ್ಲಿ ಮಹಾದೇವಿಯಕ್ಕನ ಭಕ್ತಿಯ ಹಿರಿಮೆ ಜ್ಞಾನದ ಮಹತ್ವದ ಜೊತೆಗೆ ಆಕೆಯ ಉದ್ದೇಶದ ಅರಿವು ನಮಗಾಗುತ್ತದೆ. ಆ ಕಾಲದ ಕೊರವಂಜಿಯ ತಂತ್ರವನ್ನು ಬಳಸಿಕೊಂಡು, ತಮ್ಮ ಉದ್ದೇಶವನ್ನು ಸಾಧಿಸಿಕೊಂಡಿರುವುದು ಮಾತ್ರ ಅಪರೂಪವಾಗಿ ತೋರುತ್ತದೆ. ಇಲ್ಲಿ ಮಹಾದೇವಿಯಕ್ಕ ಹೇಳುವ “ಭೂತದ ವಿಷಯ ಬೇರೆಯಾದರೂ, ಕೊರವಂಜಿಯರು ಮಂತ್ರ ಹೇಳಿ, ಯಂತ್ರ ಕಟ್ಟಿ, ಬಿದ್ದ ಬೀಳು, ಸೋಂಕು, ದೆವ್ವ ಭೂತ ಮುಂತಾದ ಜನಪದದ ಅಂಜಿಕೆಗಳನ್ನು ಓಡಿಸುತ್ತಿದ್ದುದು ಇದರಿಂದ ಮತ್ತಷ್ಟು ಸ್ಪಷ್ಟವಾಗುತ್ತದೆ. ಕೊರಮ ಜನಾಂಗದ ಪ್ರಾಚೀನತೆಯ ಕಡೆಗೂ ಬೆಳಕು ಬೀರುತ್ತದೆ.

ಮಹಾದೇವಿಯಕ್ಕನ ಈ ಗೀತ ವಚನಕ್ಕೆ ನೇರವಾಗಿ ಜನಪದವೇ ಮೂಲ ಆಕರ ಎಂಬುದನ್ನು ಈ ಕೆಳಗಿನ ಜನಪದಗೀತೆ ಸ್ಪಷ್ಟಗೊಳಿಸುತ್ತದೆ.

“ಎಂಟು ಮಂದಿಯು ನಂಟರು ನಿನಗಮ್ಮ
ಉಂಟಾದ ಹತ್ತು ದಿಕ್ಕಿನ ಬಳಗವಮ್ಮ
ಗಂಟಲ ಮೆಟ್ಟಿ ಕೊಂಡೈದಾರೆ ಅಮ್ಮ
ಸುಂಟರಗಾಳಿಯಾಗಿ ತಿರುಗುವೆಯಮ್ಮ – ನೀಲ
ಕಂಠನಂಘ್ರಿಯನು ಬಿಡದಿರು ಪಿಡಿಯಮ್ಮ”[10]

ಎಂಬ ಅಕ್ಕನ ವಚನಕ್ಕೆ –

“ಎಂಟು ಮಂದಿಯು ನಿನ್ನ ನಂಟರು ಕಾಣೆ
ನೆಂಟರು ನಿನ್ನ ನೆಚ್ಚಿಕೊಂಡು ಇದ್ದರು
ನಿನ್ನ ಸುಂಟರ ಗಾಳೀಲಿ ತಿರುಗೊವೆಯಲ್ಲೆ”[11]

ಎಂಬ ಜಾನಪದ ಗೀತೆಯ ಸಾಲುಗಳಲ್ಲಿ ಈ ಮೇಲಿನ ಅಕ್ಕನ ವಚನಗಳಲ್ಲಿ ಕಂಡುಬರುವ ಸಾಮೀಪ್ಯವನ್ನು ಗುರುತಿಸಬಹುದು. ಅಕ್ಕನ ಕೊರವಂಜಿ ತನ್ನ ಊರು ವೈಪುರವೆಂದರೆ, ಜನಪದ ಗೀತೆಯಲ್ಲಿ ವೈಯಾರಿಪುರವೆಂದಿದೆ. “ಹೊಟ್ಟೆಗೆ ಹಿಟ್ಟಿಗೆ ಬಂದ ಹೆಣ್ಣು ನಾನಲ್ಲ, ತೊಟ್ಟು, ಗೂಡೆಯ ತಂದು ನಾಮಾರೋಳಲ್ಲ” ಎಂಬ ನುಡಿ ಅಕ್ಕನದಲ್ಲಿ ಬಂದರೆ, “ಒಡಲ ಕಿಚ್ಚಿನ ಕೊರವಂಜಿ ನಾನಲ್ಲ ತಾಯಿ” ಎಂಬ ಸಾಲು ಜನಪದ ಗೀತೆಯಲ್ಲಿ ಬಂದಿದೆ. ಜಾನಪದ, ಶರಣರಿಗೆ ಪ್ರೇರಣೆ ನೀಡಿರುವುದು ಈ ಮೇಲಿನ ಅಂಶಗಳಿಂದ ತಿಳಿಯುತ್ತದೆ. ಹೀಗೆ ವಚನ ಸಾಹಿತ್ಯ ತನ್ನ ಕೊರವಂಜಿ ಹಾಡುಗಳಲ್ಲಿ ಕೊರಮರ ಜೀವನದ ಸಕೃದ್ದರ್ಶನ ಮೂಡಿಸುತ್ತದೆ.

ಮಹಾದೇವಿಯಕ್ಕನಷ್ಟೇ ಅಲ್ಲದೆ ಚೆನ್ನಬಸವಣ್ಣನವರೂ ಕೊರವಂಜಿಯ ಬಗೆಗೆ ತಮ್ಮ ವಚನಗಳಲ್ಲಿ ಪ್ರಸ್ತಾಪ ಮಾಡಿದ್ದಾರೆ. “ಕುಂಕಳಲ್ಲಿ ಬಿದಿರು ಬುಟ್ಟಿ ಇಟ್ಟುಕೊಂಡು, ಕೈಯಲ್ಲಿ ಚೋಟುದ್ದ ಕಣಿ ಕಡ್ಡಿ ಹಿಡಿದು, ಜನರ ಅಂಗೈ ನೋಡಿ ಭವಿಷ್ಯ ನುಡಿಯುವವಳೇ ಕೊರವಂಜಿ” ಕಣಿ ಅಥವಾ ಭವಿಷ್ಯ ಹೇಳುವುದನ್ನೇ ಉಪಜೀವನ ವೃತ್ತಿ ಮಾಡಿಕೊಂಡಿದ್ದಾರೆ. ಮಕ್ಕಳಿಗೆ “ಈರಲುಗಾಳಿ” ಭೂತ ಸೋಂಕಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು “ಕಣಿಯರನ್ನು ಕೇಳುತ್ತಿದ್ದ ಸೂಚನೆಯೊಂದು ಚನ್ನಬಸವಣ್ಣನಲ್ಲಿದೆ”[12] “ಕಳ್ಳನ ತಾಯಿ ಕಣಿಯ ಕೇಳಹೋದಂತೆ”[13] ಎನ್ನುವ ಈ ವಚನದಲ್ಲಿ ಕಣಿ ಹೇಳುತ್ತಿದ್ದ ಮತ್ತು ಕಣಿ ಕೇಳುತ್ತಿದ್ದ ಜನಪದರ ಸಂಪ್ರದಾಯ ಆ ಕಾಲಕ್ಕೆ ಎಷ್ಟು ಪ್ರಚಾರದಲ್ಲಿತ್ತು ಎಂಬುದು ತಿಳಿಯುತ್ತದೆ. ಅಲ್ಲದೆ ಕಣಿ ಹೇಳುವವರು, ಆಯಾ ಸಂದರ್ಭಕ್ಕೆ ತಕ್ಕಂತೆ ಹಿಂದಿನ ಮತ್ತು ಮುಂದಿನ ಅಂಶಗಳ ಸತ್ಯವನ್ನು ಹೇಳಿ, ಅಲ್ಲಿಯ ಕಷ್ಟಗಳಿಗೆ ಪರಿಹಾರಗಳನ್ನು ಸೂಚಿಸುತ್ತಿದ್ದರು. ಇಂಥ ಅಂಶಗಳು ಜಾನಪದ ಸಾಹಿತ್ಯದಲ್ಲಿಯೂ ದೊರೆಯುತ್ತವೆ.[14] ಜನಪದರಿಗೆ ಆ ಕಾಲಕ್ಕೆ ತಮ್ಮ ಮನದ ಶಂಕೆಯನ್ನು ಪರಿಹರಿಸಿಕೊಳ್ಳಲು ಸುಲಭವಾಗಿ ದೊರೆಯುತ್ತಿದ್ದವರೆಂದರೆ ಕೊರವಂಜಿಯರು ಗಂಡಸರಾದರೆ ಭವಿಷ್ಯ ಹೇಳುವವರಲ್ಲಿಗೆ, ಶಾಸ್ತ್ರ ಹೇಳುವವರಲ್ಲಿಗೆ ಹೋಗಿ ತಮ್ಮ ಕಷ್ಟಕ್ಕೆ ಪರಿಹಾರ ಕಂಡುಕೊಳ್ಳುತ್ತಿದ್ದರಾದರೂ, ಹೆಂಗಸರು ಅಂಥ ಕಡೆ ಹೋಗುತ್ತಿದ್ದುದು ಕಡಿಮೆಯೇ. ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಅತಿ ಸಲುಗೆಯಿಂದ ತನ್ನಂತೆಯೇ ಹೆಣ್ಣಾದ ಕೊರವಂಜಿಯಲ್ಲಿ ಮನಬಿಚ್ಚಿ ವರ್ತಿಸುವುದು ಸ್ವಾಭಾವಿಕವೇ ಆಗಿತ್ತು. ಇದಕ್ಕೆ ಕೊರವಂಜಿಯರು ಮನಃಶಾಸ್ತ್ರಜ್ಞರಂತೆ ಕಣಿ ಕೇಳುಗರ ಬಗೆಗೆ ಬೆಳೆದುಕೊಂಡು ಬಂದಿದ್ದ ನಂಬಿಕೆ ಮತ್ತೊಂದು ಕಾರಣವಾಗಿತ್ತು. “ಕಣಿ ಕೇಳುವವ ಅಂಗೈಮೇಲೆ ತನ್ನ ಕೋಲತುದಿಯಿಟ್ಟು ನಡೆದು ಹೋದುದನ್ನು, ನಡೆದುದನ್ನು, ನಡೆಯಬಹುದಾದುದನ್ನು ನಂಬಿಕೆ ಬರುವಂತೆ ಹೇಳಿ ಕೊರವಂಜಿಯು –

“ದಾನ ಮಾಡು ಕಯ್ಯ : ಧರುಮ ಮಾಡು ಕಯ್ಯ
ಬಾಗೇದ ಕಯ್ಯ : ಬಲಗಯ್ಯ
ಬಾಗೇದ ಕಯ್ಯ ಬಲಗಯ್ಯ : ಮನಿಯವ್ವ
ಧರುಮ ಮಾಡವ್ವ ಕೈಯ ತುಂಬ….”

ಎಂಬ ಗದ್ಯಪದ್ಯ ಮಿಶ್ರ ಗೀತವನ್ನು ಎಳೆದೆಳೆದು ಮಾತನಾಡಿ, ಅವರಿಂದ ದುಡ್ಡು, ಕಾಳುಕಡಿ ಪಡೆಯುವಳು. ಒಮ್ಮೊಮ್ಮೆ ಭವಿಷ್ಯ ಕೇಳಿದವರಿಂದ ಮೊರ ತುಂಬ ಧಾನ್ಯವನ್ನು ಕಾಡಿಬೇಡಿ ಪಡೆಯುವಳು. ಈ ಮೇಲಿನಂಥ ಗೀತರೂಪದ ಮಾತುಗಳನ್ನಾಡುತ್ತಾ, ಕೊರವಂಜಿಗಳು ಮನೆಮನೆಗೆ ಅಲೆದು ಭಿಕ್ಷೆ ಬೇಡುವುದೂ ಉಂಟು….[15] ಇದರಿಂದ ಕೊರವಂಜಿಯ ಬದುಕಿನ ಒಂದು ಚಿತ್ರ ತೋರುತ್ತದೆ.

“ಕಣಿ” ಎಂಬ ಶಬ್ದಕ್ಕೆ ಸಮಾನಾಂತರವಾಗಿ ಭವಿಷ್ಯ, ಶಾಸ್ತ್ರ, ಶಕುನ, ಕುರುಹು ಮುಂತಾದ ಶಬ್ದಗಳು ಬಳಕೆಯಾಗುತ್ತವೆ. ಒಂದೊಂದು ವರ್ಗದವರು ಹೇಳುವ ಭವಿಷ್ಯಕ್ಕೆ ಒಂದೊಂದು ರೀತಿಯ ಹೆಸರುಂಟು. ಕೊರವಂಜಿ ಹೇಳುವ ಭವಿಷ್ಯವನ್ನು “ಕಣಿ” ಎಂದು ಕರೆಯುತ್ತಾರೆ. ಇದನ್ನು ಶಾಸ್ತ್ರ, ಶಕುನ, ಕುರುಹು, ಭವಿಷ್ಯ ಮುಂತಾದ ಶಬ್ದಗಳಿಂದ ಗುರುತಿಸುವುದಿಲ್ಲ. ಎಲ್ಲ ಕಾಲಕ್ಕೂ ಕಣಿ ಬಂದಲ್ಲೆಲ್ಲ ಕೊರವಂಜಿ ಅದರ ಹಿಂದೆ ಬಂದೇ ಬರುತ್ತಾಳೆ.

ಚನ್ನಬಸವಣ್ಣನವರು ತಮ್ಮ ಕಾಲದ ಕೊರವಂಜಿಯನ್ನು ಕುರಿತು –

“ಹುಸಿಯ ಹಸರವನಿಕ್ಕಿ ವಚನವನರ್ಪಿಸುವರಲ್ಲಿ,
ಆನು ಬಲ್ಲೆನೆಂಬರಿವಿನ ಕೊರವಂಜಿಯಂತೆ ಜಗಕ್ಕೆ ಹೇಳುವರಲ್ಲ,
ಘನಕ್ಕೆ ಘನ ಮಹಾಘನವಾದ ಕಾರಣ,
ಕೂಡಲ ಚನ್ನಸಂಗನ ಶರಣರು ಕುಟಿಲ ಕುಹಕದೊಳಗೆ ವರ್ತಿಸುವರಲ್ಲ”[16]

ಎಂದು ಹೇಳಿರುವ ಈ ವಚನದಲ್ಲಿ ಕೊರವಂಜಿಯ ಪ್ರಸ್ತಾಪ ಬಂದಿದೆ. ಕೊರವಂಜಿ ತನಗೆ ಎಲ್ಲ ಗೊತ್ತಿದೆ ಎಂಬ ಅರಿವಿನಿಂದ ಸಮಾಜವನ್ನು ನಂಬಿಸುತ್ತಿದ್ದಳು. ಅದರಲ್ಲಿ ಹುರುಳು ಇರಲಿಲ್ಲವೆಂಬುದು ಚನ್ನಬಸವಣ್ಣನ ಇಂಗಿತವಾದರೂ ಆಕೆ ಶರಣರ ಗಮನವನ್ನು ಸೆಳೆಯುವಷ್ಟು ಬೆಳೆದಿರುವುದು ಸುಳ್ಳಲ್ಲ.

ಹೀಗೆ ಮಧ್ಯಕಾಲೀನ ಯುಗದಲ್ಲಿ ಒಂದಲ್ಲ ಒಂದು ಕಾರಣದಿಂದ ಜನರ ಕಣ್ಣಿಗೆ ಬೀಳುತ್ತಾ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತಾ ಸಾಗಿ ಬಂದಿರುವ ಕೊರವಂಜಿ, ಹೆಚ್ಚು ಜನಾದರಣೀಯವಾಗಿ ತೋರುವುದು ಜಾನಪದ ಸಾಹಿತ್ಯದಲ್ಲಿ ಮುಖ್ಯವಾಗಿ ಶ್ರೀಕೃಷ್ಣ ಪಾರಿಜಾತದಲ್ಲಿ “ಕೃಷ್ಣ ಪಾರಿಜಾತದ ಕರ್ತೃ ಯಾರೆಂದು ತಿಳಿದು ಬಂದಿಲ್ಲ. ಯಾವುದೇ ಜಾನಪದ ಆಟಕ್ಕೆ ಇಂಥವರೇ-ಇವರೊಬ್ಬರೇ ಅದರ ಕರ್ತೃ ಎಂದು ಹೇಳುವುದು ಕಠಿಣ ಸಾಧ್ಯ”[17] ಕೃಷ್ಣ ಪಾರಿಜಾತದಂಥ ಜನಾನುರಾಗಿ ಆಟವನ್ನು ಗಮನಿಸಿದ ಆಧುನಿಕರು ತಮ್ಮ ದೃಷ್ಟಿಗನುಗುಣವಾಗಿ ಶಿಷ್ಟವನ್ನಾಗಿಸಿರುವುದು ಸೋಜಿಗವೇನಲ್ಲ. ಸುಮಾರು 18ನೇ ಶತಮಾನಕ್ಕೆ ಸೇರಿದ ಅಪರಾಳ ತಮ್ಮಣ್ಣ ಶ್ರೀಕೃಷ್ಣ ಪಾರಿಜಾತದ ಜನಪ್ರಿಯತೆಯನ್ನರಿತು ನಾಟಕವನ್ನಾಗಿಸಿದ್ದಾರೆ. “ಪಾರಿಜಾತದಷ್ಟು ಲೋಕಪ್ರಿಯತೆಯನ್ನು ಗಳಿಸಿದ ಜನನಾಟಕ ಕನ್ನಡದಲ್ಲಿಯೇ ಇಲ್ಲವೆಂದು ಹೇಳಿದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಉತ್ತರ ಕರ್ನಾಟಕದಲ್ಲಿಯಂತೂ ಅದು ಗ್ರಾಮೀಣ ರಸಿಕರ ಹೃದಯದ ಮೇಲೆ ಏಕಾಧಿಪತ್ಯವನ್ನು ಸ್ಥಾಪಿಸಿದೆ.”[18] ಇಂಥ ವಿಶಿಷ್ಟವಾದ ನಾಟಕದಲ್ಲಿ ಕಾಣಬರುವ ಕೊರವಂಜಿ ಪಾತ್ರವೂ ಲೋಕಪ್ರಿಯವಾಗಿದೆ. ದೇವಾನುದೇವತೆಗಳು ಸಮಯಕ್ಕೆ, ಸಂದರ್ಭಕ್ಕೆ ಅಳವಡಿಸಿಕೊಳ್ಳಲು ಅಪೇಕ್ಷಪಡುವ ಈ ಪಾತ್ರ ನಮ್ಮ ಜನಪದರಿಗಾಗಲಿ, ಶಿಷ್ಟರಿಗಾಗಲಿ ಅನ್ಯವಾಗಿ ಅಥವಾ ಸಾಮಾನ್ಯವಾಗಿ ತೋರಲಿಲ್ಲ. ತಮ್ಮದೇ ಆಗಿ ಭಾಸವಾಯಿತು.

“ಜನಮನವನ್ನು ರಂಜಿಸುವಲ್ಲಿ ತನ್ನ ಪ್ರತಿಭೆ ನೈಪುಣ್ಯ ತೋರಿ ಜನಮೆಚ್ಚುಗೆಯನ್ನು ಪಡೆಯುವಲ್ಲಿ ಕೊರವಂಜಿಯ ಪಾತ್ರ ಪ್ರಸಿದ್ಧವಾಗಿತ್ತು”[19] ಅಪರಾಳ ತಮ್ಮಣ್ಣನ ಶ್ರೀ ಕೃಷ್ಣ ಪಾರಿಜಾತದಲ್ಲಿ ಕೃಷ್ಣ ಕೊರವಂಜಿಯಾಗಿ ಸತ್ಯಭಾಮೆಯಲ್ಲಿಗೆ ಬರುವ ಸನ್ನಿವೇಶ ಎಲ್ಲಾ ಪಾರಿಜಾತಗಳಲ್ಲಿ ಸಾಮಾನ್ಯವೇ ಆಗಿದೆ. ಆದರೆ ಇದು ಆಯಾ ಕವಿಯ ಅಪೇಕ್ಷೆಗನುಗುಣವಾಗಿ, ಬೇರೆ ಬೇರೆ ರೀತಿಯಾಗಿ ರೂಪುಗೊಂಡಿದೆ. “ತೂಗಿರೆ ರಂಗನ ತೂಗಿರೆ ಕೃಷ್ಣನ” ಎಂಬ ಪುರಂದರದಾಸರ ಹಾಡನ್ನು ಕೊರವಂಜಿಯ ಬಾಯಲ್ಲಿ ಆಡಿಸಿರುವುದು ಇದಕ್ಕೊಂದು ಉದಾಹರಣೆ. ಕೆಲವೆಡೆ ಆಕೆ ಮನರಂಜನೆಯ ಸಾಧನವಾದರೆ, ಕೆಲವು ಕಡೆ ಮನಃಶಾಸ್ತ್ರಜ್ಞಳಾಗಿ, ದೈವದ ಪ್ರತೀಕವಾಗಿ, ಮಹಾಮೇಧಾವಿಯಾಗಿ ಕಂಡು ಬರುತ್ತಾಳೆ. ಈ ಕೊರವಂಜಿ ಜನಪದ ಬದುಕಿನ ಒಳಹೊರಗೆಲ್ಲ ಓಡಾಡಬಲ್ಲವಳಾಗಿದ್ದಳೆಂಬುದು ಗೋಚರಿಸುತ್ತದೆ. ಕೊರವಂಜಿ ಪದದ ನಿಷ್ಪತ್ತಿ ವಿಚಾರ ಪುಟ 12 ರಿಂದ 13ರಲ್ಲಿ ಮಾಡಲಾಗಿದೆ.

ಶ್ರೀಕೃಷ್ಣ ಪಾರಿಜಾತದ ಕಥೆ, ನಾರದರು ದೇವಲೋಕದಿಂದ ಪಾರಿಜಾತ ಪುಷ್ಟವನ್ನು ತಂದು ಕೃಷ್ಣನಿಗೆ ಅರ್ಪಿಸುತ್ತಾರೆ. ಅದನ್ನು ಕೃಷ್ಣನು ಅಲ್ಲಿಯೇ ಇದ್ದ ರುಕ್ಮಿಣಿಯ ಮುಡಿಗಿಡುತ್ತಾನೆ. ನಾರದನು ಈ ವಿಷಯವನ್ನು ಸತ್ಯಭಾಮೆಯಲ್ಲಿಗೆ ಬಂದು ತಿಳಿಸಿ, ಸವತಿ ಮಾತ್ಸರ್ಯದ ಬೆಂಕಿಗೆ ಮತ್ತಷ್ಟು ತುಪ್ಪ ಎರೆಯುತ್ತಾನೆ. ಸತ್ಯಭಾಮೆ ತನ್ನ ದೂತಿಯನ್ನು ಕಳಿಸಿದ್ದಲ್ಲದೆ ತಾನೂ ಕೃಷ್ಣನನ್ನು ಕರೆಯಲು ಹೋಗಿ ರುಕ್ಷಿಣಿಯಿಂದ ಅವಮಾನಿತಳಾಗುವ ದೃಶ್ಯ ಇಲ್ಲಿದೆ. ಸತ್ಯಭಾಮೆ ಶಕ್ತಿಯನ್ನು ಆರಾಧಿಸಿ ಶ್ರೀಕೃಷ್ಣನು ತನ್ನ ಕಡೆ ಒಲಿಯುವಂತೆ ಮಾಡಲು ಬೇಡುತ್ತಾಳೆ. ಜಗದಂಬೆಯ ಮಹಿಮೆಯಿಂದ ಕೃಷ್ಣನ ಮನಸ್ಸು ಸತ್ಯಭಾಮೆಯ ಕಡೆ ಒಲಿದು ಕೊರವಂಜಿ ವೇಷ ಧರಿಸಿ ಬಂದು ಆಕೆಯನ್ನು ಸಂತೈಸಿ, ಇಂದು ರಾತ್ರಿ ನಿನ್ನ ನಲ್ಲ ಬಂದೇ ಬರುತ್ತಾನೆಂದು ಕಣಿ ಹೇಳಿ ಹೋಗುತ್ತಾನೆ. ಅದರಂತೆ ಆ ರಾತ್ರಿ ಬಂದು ಸತ್ಯಭಾಮೆಯನ್ನು ಸಂತೋಷ ಪಡಿಸಿ, ಮುಂದೆ ಪಾರಿಜಾತ ವೃಕ್ಷವನ್ನೇ ತಂದು ಅವಳ ಮನೆಯ ಅಂಗಳದಲ್ಲಿ ನೆಡುತ್ತಾನೆ.

ಈ ಕಥೆಯಲ್ಲಿ ಕೃಷ್ಣನೇ ಸಮಯೋಚಿತವಾಗಿ ಸತ್ಯಭಾಮೆಯಲ್ಲಿಗೆ ಕೊರವಂಜಿಯಾಗಿ ಬರುವ ಸಂದರ್ಭ ಸೊಗಸಾಗಿದೆ. ಇಲ್ಲಿ ಕೊರವಂಜಿಯಲ್ಲದೆ ಮತ್ತಾವುದೇ ಪಾತ್ರದ ಆಗಮನವಾಗಿದ್ದಿದ್ದರೆ ಅಷ್ಟು ಸಮಂಜಸವಾಗುತ್ತಿರಲಿಲ್ಲ. ಕೊರವಂಜಿ ಸುಲಭವಾಗಿ ಹಳ್ಳಿಯ ಹೆಂಗಸರೊಂದಿಗೆ ಬೆರೆತು ತನ್ನ ಕಾರ್ಯ ಸಾಧಿಸಿಕೊಳ್ಳುವವಳು. ಅವಳ ಬಗೆಗೆ ಯಾರಿಗೂ ಅಷ್ಟು ಅನುಮಾನ ಮೂಡುವುದಿಲ್ಲ. ಕಣಿ ಹೇಳುವ ಹೆಂಗಸೊಬ್ಬಳು, ಮತ್ತೊಬ್ಬಳ ಅಂತರಂಗವನ್ನರಿಯುವುದು, ಮನಬಿಚ್ಚಿ ಮಾತನಾಡುವುದು ಸಹಜವಾಗಿಯೇ ತೋರುತ್ತದೆ. ಇಂಥ ಸಹಜತೆಗಾಗಿಯೇ ಕೊರವಂಜಿ ಜನಪ್ರಿಯಳಾಗಿದ್ದಾಳೆ ಎಂಬುದರಲ್ಲಿ ಸಂದೇಹವಿಲ್ಲ.

ಹೀಗೆ ಜನ ಮನ್ನಣೆಯನ್ನು ಪಡೆದ ಪಾರಿಜಾತದ ಕಥೆ ಮುಂದೆ ಶಿಷ್ಟರ ಕೈಯಲ್ಲಿ ವಿಫುಲವಾಗಿ ಬೆಳೆಯಿತು. ವೈವಿಧ್ಯತೆಯಿಂದ ಮೆರೆಯಿತು. ಹೀಗೆ ಬೆಳೆದ ಪಾರಿಜಾತದಲ್ಲಿ ಕೊರವಂಜಿ ಪಾತ್ರವೂ ವರ್ಣರಂಜಿತವಾಗಿ ಬಳಕೆಯಾಗಿ ಜನಮಾಸವನ್ನು ತಣಿಸಿದೆ. ಕೊರಮರಿಗೆ ಸಾಮಾಜಿಕವಾಗಿ ಒಂದು ಸ್ಥಾನವನ್ನು ಕಲ್ಪಿಸಿದೆ.

“ಬಯಲಾಟ ದ್ರಾವಿಡರ ಬಳುವಳಿ”[20] ದ್ರಾವಿಡ ಮೂಲದ ಕೊರವಂಜಿ ಬಯಲಾಟದ ಮೂಲಕ ಮತ್ತಷ್ಟು ಪ್ರಚಾರ ಪಡೆದಿದ್ದಾಳೆ. “ಅಪರಾಳ ತಮ್ಮಣ್ಣನಿಗೆ ಸ್ಫೂರ್ತಿ ನೀಡಿದೆ ಎಂದು ಹೇಳಲಾದ ಪ್ರಸನ್ನವೆಂಕಟದಾಸರ (1680-1752) ಶ್ರೀಕೃಷ್ಣ ಪಾರಿಜಾತ ಅಥವಾ ಸತ್ಯಭಾಮಾವಿಲಾಸವು ಒಂದು ಲಘುಗೀತ ನಾಟಕವಾಗಿದೆ. ನಾರದ ಕೊರವಂಜಿ ಎಂಬ ಇವರ ಇನ್ನೊಂದು ಕೃತಿಯೂ ಗೀತನಾಟಕವಾಗಿದೆ. ಹೆಳವನ ಕಟ್ಟೆ ಗಿರಿಯಮ್ಮನ (ಸು. 1750) ಬ್ರಹ್ಮಕೊರವಂಜಿ ಮುಮ್ಮಡಿ ಕೃಷ್ಣರಾಜರ (1794-1868) ಭಾಮಾಕಥೆ ಅಥವಾ ಪಾರಿಜಾತಾ ಪಹರಣದ ಕತೆ ಮತ್ತು ಪ್ರಸನ್ನ ಕೃಷ್ಣ ಕೊರವಂಜಿಯ ಕಥೆ ಯಕ್ಷಗಾನಗಳು, ಚಂದ್ರಸಾಗರ ವರ್ಣಿಯ (1775-1870) ಮನ್ಮಥ ಕೊರವಂಜಿ, ವಸುದೇವ ಪಾರಿಜಾತಗಳು, ರಾಯಣ್ಣನ (ಸು 1720) ಪದ್ಮಾವತಿ ಕೊರವಂಜಿ ಯಕ್ಷಗಾನ, ಸಾಮಕವಿ (ಸು. 1750)ಯ ಬಿಳಿಯಕಲ್ಲ ರಂಗಸ್ವಾಮಿಯ ಪಾರಿಜಾತ ಯಕ್ಷಗಾನ, ವೆಂಕನ (ಸು. 1800)ರ ಪ್ರಸನ್ನ ಕೃಷ್ಣಕೊರವಂಜಿ ಅಥವಾ ನವಪಾರಿಜಾತ ಯಕ್ಷಗಾನ (ಸು. 1830)ರ ಅಮ್ಮಣ್ಣ ಪಾರಿಜಾತ ಯಕ್ಷಗಾನ ಮುಂತಾದ ಪ್ರತಿಗಳೆಲ್ಲವು ಅಪರಾಳ ತಮ್ಮಣ್ಣನ ಕೃತಿ (1830) ಗಿಂತಲೂ ಮೊದಲೇ ರಚಿತವಾಗಿವೆ. ಅವನಿಗಿಂತ ಪೂರ್ವದಲ್ಲಿ ಸುಮಾರು ಒಂದುನೂರು ವರ್ಷದ ಪರಂಪರೆ ಇದೆ.[21]

ಈ ಪರಂಪರೆಗೆ ಜನಪದರಲ್ಲಿ ಅಂದು ಇದ್ದ ಪ್ರಭಾವವೇ ಕಾರಣವಾಗಿದೆ. ಮೇಲೆ ಹೇಳಿದ ಎಲ್ಲ ಅಂಶಗಳು ಕೊರವಂಜಿ ಯಕ್ಷಗಾನಕ್ಕೆ ಪ್ರವೇಶ ಪಡೆದ ಸಂದರ್ಭದಲ್ಲಿ ಹೇಳುತ್ತಿವೆಯೇ ಹೊರತು ಕೊರವಂಜಿ ಕನ್ನಡ ನೆಲದಲ್ಲಿ ಕಾಣಿಸಿಕೊಂಡ ಬಗ್ಗೆ ಅಲ್ಲ. ಒಟ್ಟಿನ ಮೇಲೆ ಕನ್ನಡ ಸಾಹಿತ್ಯದಲ್ಲಿ ಪಾರಿಜಾತ, ಕೊರವಂಜಿ, ಸತ್ಯಭಾಮಾ ಸಂಬಂಧ ಹೊಂದಿದ ಹಿರಿಯ ಮೊತ್ತದ ಸಾಹಿತ್ಯ ಸೃಷ್ಟಿಯಾಗಿದೆ. (ಸು. 1700 ರಿಂದ 1950ರವರೆಗೆ) ಇನ್ನೂರ ಇನ್ನೂರೈವತ್ತು ವರ್ಷಗಳ ಅವಧಿಯಲ್ಲಿ 25ಕ್ಕಿಂತಲೂ ಹೆಚ್ಚು ಕೃತಿಗಳು ಹುಟ್ಟಿವೆ.[22]

ಶ್ರೀ ಎಂ.ಟಿ. ದೂಪದ ಅವರ ಕೃತಿಯಲ್ಲಿ ಕೊರವಂಜಿಯ ಪಾತ್ರ ಘನತೆಗೆ ತಕ್ಕಂತೆ ಸ್ಫುಟವಾಗಿದೆ. ಸತ್ಯಭಾಮೆಯಲ್ಲಿಗೆ ಬರುವ ಕೊರವಿಯನ್ನು ಕುರಿತು ಭಾಗವತ “ಬರೆ ಶಕುನ ಹೇಳುವುದು ಆಟ ಬರುತ್ತ, ಮತ್ತೇನರ ಬರತ್ತೈತೆ?” ಎಂದು ಕೇಳಿದ್ದಕ್ಕೆ ಅವಳು –

“ಭೂತ ಬಿಡಿಸಬಲ್ಲೆ | ಬೇತಾಳ ವಿದ್ಯೆಯ ಬಲ್ಲೆ
ಮಾತಾಡದ ಮೂರ್ಖರ ಮಾತಾಡಿಸಬಲ್ಲೆ
ಕೂತು ಕೇಳಿದರೊಂದು ಮಾತು ಹೇಳಲುಬಲ್ಲೆ ||”

ಎನ್ನುತ್ತಾಳೆ. ಜನಪದ ಗೀತೆಗಳಲ್ಲಿ ಕೊರವಂಜಿ ಇಂಥ ಮಾತುಗಳನ್ನಾಡಿರುವುದು ಸಾಮಾನ್ಯವೇ ಆಗಿದೆ. ಅವಳ ಕಸುಬೇ ಅದು. ಹಾಗಾಗಿಯೇ ಜನ ಭವಿಷ್ಯವನ್ನು ತಿಳಿಯಲು, ತೊಂದರೆಗಳನ್ನು ನಿವಾರಿಸಿಕೊಳ್ಳಲು ಕೊರವಂಜಿಯ ಮೊರೆ ಹೋಗುತ್ತಾರೆ. ಇಲ್ಲಿ ಕೃಷ್ಣನೇ ಕೊರವಂಜಿಯಾಗಿ ಬಂದು ಕಣಿ ಹೇಳುತ್ತಿದ್ದರೂ ಕೂಡಾ, ಕೊರವಂಜಿಗೆ ಅಂಗೈ ನೋಡಿ ಅಂತರಾಳವನ್ನು ಅರಿಯುವ ಶಕ್ತಿ ಇತ್ತು ಎಂಬುದು ತಿಳಿಯುತ್ತದೆ. ವಾಸ್ತವಿಕ ನೆಲೆಯಲ್ಲಿ ಯೋಚಿಸಿದರೆ ಕಣಿ ಹೇಳುವುದು ಆಕೆಯ ಚಮತ್ಕಾರ, ಜಾಣ್ಮೆಯೇ ಹೊರತು ಮತ್ತೇನಲ್ಲ. ಆದರೂ ಕೊರವಂಜಿಯಲ್ಲಿ ದೈವೀಶಕ್ತಿ ಇದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಸತ್ಯಭಾಮೆಯ ಕೈಯನ್ನು ನೋಡಿದ ಕೊರವಂಜಿ –

“ತೋರುವುದು ಕೈಯಲ್ಲಿ ಚಾರುಚಕ್ರ
ಸಾರು ಮತ್ಸದ ರೇಖೆ ಅತಿ ಸುಂದರ
ತೋರುವುದು ಧನರೇಖೆ, ಪಾರ್ಶ್ವತೆ ಅನ್ನದರೇಖೆ
ತೋರುವುದು ಮಂಗಳಾಕಾರ, ಚಾರುದಂಪತಿ ರೇಖಾ ಚಿಹ್ನೆ”

ಎನ್ನುವ ಸಾಲುಗಳಲ್ಲಿ ಕಣಿ ಹೇಳುವ ವ್ಯಕ್ತಿಯ ಮನಸ್ಸಿಗೆ ಸಂತೋಷವನ್ನುಂಟು ಮಾಡುವ ಅಂಶಗಳೇ ತುಂಬಿವೆ. ಇಂಥ ವರ್ಣನೆಯ ಜೊತೆಗೆ ರಾತ್ರಿಯೇ ಪರಮಾತ್ಮ ಬರುತ್ತಾನೆ ಎಂದು ಅವಳ ಮನದ ಇಂಗಿತದ ಕುರಿತು ಕಣಿ ಹೇಳಿ, ಮುತ್ತಿನ ಹಾರ ಪಡೆದು ಹೋಗುತ್ತಾನೆ. ಇಲ್ಲಿ ಭಜನೆಯ ಶಬ್ದಕ್ಕೆ ಕೊಡುವ ಅರ್ಥ ಅವಳ ಪಾರಮಾರ್ಥಿಕ ಜ್ಞಾನಕ್ಕೆ ಒಂದು ನಿದರ್ಶನ. ನಾಟಕಕಾರ ಹೇಳುವಂತೆ “ಕೃಷ್ಣ ಪಾರಿಜಾತದಲ್ಲಿ ಕೊರವಂಜಿಯ ಸ್ಥಾನ ಅಮೋಘವಾದುದು. ಸುಮಾರು ಸರಿರಾತ್ರಿಯ ನಂತರ ಈ ಪಾತ್ರ ರಂಗಭೂಮಿಯಲ್ಲಿ ಕಾಣಿಸಿಕೊಂಡಾಗ ಅಪೂರ್ವ ಉತ್ಸಾಹ ಪ್ರೇಕ್ಷಕರಲ್ಲಿ”[23] ಕೊರವಂಜಿ ಕಣಿ ಹೇಳುತ್ತಿದ್ದುದು ಹೊಟ್ಟೆ ತುಂಬಿಕೊಳ್ಳುವುದಕ್ಕಾಗಿ. ಆದರೆ ಈಗ ಮಾತ್ರ ಕಾವ್ಯಮಟ್ಟಕ್ಕೆ ಏರಿ ಮನರಂಜನೆ, ಪರಿಹಾರ ನೀಡುವ ಪಾತ್ರವಾಯಿತು. “ಸತ್ಯಭಾಮೆಯ ಸಂತಪ್ತ ಹೃದಯವನ್ನು ತಣಿಸುವ ಉದ್ದೇಶದಿಂದ ಶ್ರೀಕೃಷ್ಣನು ಕೊರವಂಜಿಯ ವೇಷ ಧರಿಸಿ ಸತ್ಯಭಾವೆಯ ಮಂದಿರಕ್ಕೆ ಹೋಗಿ ಪತಿಯ ಆಗಮನದ ಶುಭ ಶಕುನವನ್ನು ಹೇಳುವವನಲ್ಲದೆ ಪೌರಾಣಿಕ, ಭೂಗೋಲ ವಿವರಗಳನ್ನು, ಹರಿವಂಶದ ವಿಸ್ತಾರವನ್ನೂ ಹೇಳಿ ಕೊರವಂಜಿಗೆ ಸಲ್ಲಬೇಕಾದ ಅನೇಕ ಕಾಣಿಕೆಗಳನ್ನು ಪಡೆದು ಹೋಗುವನು.”[24] ಇಲ್ಲಿಯ ಕೊರವಂಜಿ ಸಾಮಾನ್ಯ ಕೊರವಂಜಿಯಲ್ಲ. ಸಾಮಾನ್ಯ ಕೊರವಂಜಿಗೆ ಇಲ್ಲದ ಜ್ಞಾನ, ಲೌಕಿಕದ-ಅಲೌಕಿಕದ ಅರಿವನ್ನೆಲ್ಲ ಕೊರವಂಜಿಯಲ್ಲಿ ತೋರಿಸಿ ಆಕೆಯನ್ನು ವೈಭವೀಕರಿಸಲು ಮಾಡಿರುವ ಒಂದು ಪ್ರಯತ್ನವೇ ಹೊರತು ಇದು ವಾಸ್ತವವಲ್ಲ. ಅವಳಿಗೆ ಸಾಮಾಜಿಕ ಜ್ಞಾನ ವಿಶೇಷವಾಗಿತ್ತು ಎಂಬುದು ಮಾತ್ರ ಸುಳ್ಳಲ್ಲ. ಜನಪದರೊಡನೆ ಬೆರೆತು ಅವರ ಸುಖ-ದುಃಖಗಳನ್ನು ತನ್ನ ಸಾಮಾನ್ಯ ಜ್ಞಾನದಿಂದ ಅರಿತು ಮನ್ನಣೆಯನ್ನು ಪಡೆದದ್ದು ಕೊರವಂಜಿಯಾದರೂ ಅದು ಕೊರಮ ಜನಾಂಗದ ಸಾಮಾಜಿಕ ಸ್ಥಾನ-ಮಾನದ ಪ್ರತೀಕ. ಕೆಲವು ವೇಳೆ ಇಂಥ ಕೊರವಂಜಿಯನ್ನು ಪ್ರಶ್ನೆ ಕೇಳಿ ಕೆಲವರು ಕಾಡಿಸುತ್ತಿದ್ದುದೂ ಇತ್ತು. ಅಂಥ ಕೇಳುಗರ ಪ್ರಶ್ನೆಗಳಿಗೆ ಸರಳವೂ, ನೇರವೂ, ಪ್ರೌಢವೂ ಆದ ಉತ್ತರಗಳನ್ನು ಕೊಟ್ಟು ತನ್ನ ಪ್ರೌಢಿಮೆಯನ್ನು ಮರೆದಿರುವುದೂ ಗೋಚರಿಸುತ್ತದೆ. ಒಂದು ಸಲ ರಸಿಕರೊಬ್ಬರು ಕೊರವಂಜಿ ಭಗವಂತನ ಮುಖ ಯಾವ ದಿಕ್ಕಿಗಿದೆ? ಎಂದು ಪ್ರಶ್ನಿಸಿದರು. ಇತರ ಪ್ರಸಂಗಗಳಾಗಿದ್ದರೆ ಅಧಿಕ ಪ್ರಸಂಗಿ ಎಂದು ಮುಂದುವರೆಯಬಹುದಿತ್ತು. ಆದರೆ ಇಲ್ಲಿ ಸಾಧ್ಯವಿಲ್ಲ. ಕೊರವಂಜಿ ಗಾಬರಿಸಲಿಲ್ಲ. ಇಷ್ಟು ತಿಳಿಯದೇ! ಭಗವಂತನ ಮುಖವು ಎಣ್ಣೆ ದೀಪವು ಯಾವ ದಿಕ್ಕನ್ನು ತೋರಿಸುತ್ತದೆಯೋ ಆ ದಿಕ್ಕಿನತ್ತ ಎಂದು ಉತ್ತರಿಸಿ ಬಾಯಿ ಮುಚ್ಚಿಸಿದ್ದಾಳೆ.[25]

ಹೀಗೆ ಅನೇಕ ರೀತಿಯಲ್ಲಿ ತನ್ನ ಪ್ರೌಢಿಮೆಯನ್ನು ಮೆರೆದು ಜನ ಮನ್ನಣೆ ಗಳಿಸಿದ್ದಾಳೆ.

ಕೊರಮರು ತಮ್ಮ ಜಾತಿ ಹುಟ್ಟಿನ ಬಗೆಗೆ ಹೇಳುವ ಮತ್ತು ಪಾರ್ವತಿ ಕೊರವಂಜಿಯಾಗಿ ಕೌಸಲ್ಯದೇವಿಗೆ ಪುತ್ರ ಸಂತಾನದ ಬಗ್ಗೆ ಕಣಿ ಹೇಳಿದ ಕಥೆಯ ವಿಷಯವನ್ನು ಆಧರಿಸಿ, ಮಳೆಯ ಕೋಟಿಯ ತಿರುಮಲೈಯ್ಯನ ಕುಮಾರ ಗೋವಿಂದ ವೆಂಕಟಕವಿಯು “ಪಾರ್ವತಿ ಕೊರವಂಜಿ”[26] ಎಂಬ ಯಕ್ಷಗಾನ ಕೃತಿಯನ್ನು ರಚಿಸಿದ್ದಾನೆ. “ಅರ್ಜುನ ಕೊರವಂಜಿ” “ಕೃಷ್ಣ ಕೊರವಂಜಿ”ಗಳೇನೋ ನಾಯಕನು ನಾಯಿಕೆಯ ಅನುರಾಗ ಸಂಪಾದನಾರ್ಥವಾಗಿ ವೇಷಧಾರಿಯಾಗಿ ಹೋದ ಕಥೆಗಳನ್ನು ಹೇಳುವವುಗಳೇ ಅಹುದು. ಆದರೆ ಪಾರ್ವತಿಯ ಕೊರವಂಜಿಯ ಕಥೆ (ಕಟ್ಲೆ?) ಯು ಹಾಗಲ್ಲವೆಂದು ಉದಾಹರಿಸುವ ಭಾಗದಿಂದಲೇ ಸ್ಪಷ್ಟವಾಗುವುದು.”[27] ಪಾರ್ವತಿಯು ದಶರಥನ ಮನದ ದುಃಖವನ್ನರಿತು ಅದರ ನಿವಾರಣೆಗಾಗಿ ಕೊರವಂಜಿಯಾಗಿ ಬರುವ ಸಂದರ್ಭ ಸೊಗಸಾಗಿದೆ.

ದಶರಥ ತನ್ನ ಹೆಂಡತಿಯರ ಸಂಗಡ ತಮಗೆ ಮಕ್ಕಳಿಲ್ಲದಿರುವುದರಿಂದ ದುಃಖಿಸುತ್ತಿರುವ ಸಮಯಕ್ಕೆ ನಾರದರು ಬಂದು ಚಿಂತೆ ಯಾತಕೆ ನಿನ್ನ ಗರ್ಭದಿ ಕಂತುವನು ಪಡೆದಾತ ಬರುವನು. ಮುಂತೆ ರಾಮಾವತಾರದ ನಿನಗುದಯಿಸುವ ಮುದದಿ. ಆದ್ದರಿಂದ ಕಾಮೇಷ್ಟಿಯನ್ನು ಮಾಡು ಎಂದು ಹೇಳಿ ಹೋಗುತ್ತಾರೆ. ದಶರಥ ಅದರಂತೆಯೇ ಮಾಡಲು ಪತ್ನಿಯರು ಗರ್ಭಧರಿಸುತ್ತಾರೆ. ಇಷ್ಟಾದ ಮೇಲೂ ಕವಿ ಮತ್ತೆ ಕೊರವಂಜಿಯ ಪ್ರವೇಶ ಮಾಡಿ ಅವರಿಗೆ ಮತ್ತೆ ಕಣಿ ಹೇಳಿಸಿ, ತನ್ನ ಕೃತಿಯಲ್ಲಿ ಆಕೆಗೆ ಹೆಚ್ಚು ಭಾಗ ಮೀಸಲಿರಿಸಿದ್ದಾನೆ.

ಪರಮೇಶ್ವರನ ಅಪ್ಪಣೆಯಂತೆ ಪಾರ್ವತಿ ವಿನಾಯಕನನ್ನು ಮಗುವನ್ನಾಗಿ ಮಾಡಿ ಬೆನ್ನಿಗೆ ಬಿಗಿದು, ಅನೇಕ ರೀತಿಯ ಹೂಗಳನ್ನು ಮುಡಿದು ಕೊರವಿಯಾಗಿ ಒಂದು ಕೇರಿಯೊಳು ಸುಳಿದಾಗ ಕೌಸಲ್ಯೆ ಆಕೆಯನ್ನು ಕಂಡು ದಾಸಿಯರಿಂದ ಕರೆಸುತ್ತಾಳೆ. ಕೊರವಂಜಿಗೆ ಉಪಚಾರ ಮಾಡಿಸಿ ಕಣಿ ಕೇಳಲು ಕುಳಿತಾಗ ಕೌಸಲ್ಯೆಗೆ ಆಕೆಯನ್ನು ನೋಡಿ ಆಶ್ಚರ್ಯವಾಗುತ್ತದೆ. ಇವಳೆ ಹೀಗಿರುವಾಗ ಈಕೆಯ ಗಂಡ ಹೇಗಿರಬಹುದೆಂದು ವಿಚಾರಿಸುತ್ತಾಳೆ. ಇಲ್ಲಿ ಕೊರವಿ ಪರಶಿವನನ್ನು ಮಾರ್ಮಿಕವಾಗಿ ಪರಿಚಯಿಸುತ್ತಾಳೆ. ನಾಲ್ಕು ದಿಕ್ಕುಗಳ ದೇವತೆಗಳನ್ನು ಸ್ಮರಿಸುತ್ತಾಳೆ. ಇದರಿಂದಲೇ ಆಕೆಯ ಸಂಚಾರದ ಬದುಕನ್ನು ಗ್ರಹಿಸಬಹುದು.

“ಒಂದು ಲೇಸ ನೆನೆದೆಯಮ್ಮ ವನಿತೆ ನಿನ್ನ ಗರ್ಭದಲ್ಲಿ
ಮಂದರಾಧರನು ಜನಿಶ್ಯಾನೆ ಕೌಸಲ್ಯಾದೇವಿ ಕಂದನಾಗೀ ವಿಷ್ಣು ರೂಪದಲಿ”

ಎಂದು ಕಣಿ ಹೇಳಿ ಕೌಸಲ್ಯೆಯ ಮನದ ಸಂಶಯ ನೀಗಲು “ದೈತ್ಯಭೀತರಾದ ದೇವತೆಗಳಿಗೆ ವಿಷ್ಣುವು ವರಪ್ರಧಾನಮಾಡಿರುವ ಕಥೆಯನ್ನು ಹೇಳಿ, ನಂಬಿಸುವಳು” ಕೌಸಲ್ಯೆ ಸಂತುಷ್ಟಳಾಗಿ “ಮದನನೈಯನುಯೆನ್ನು ಮಗನಾದುದುಂಟಾಗೆ ವರದಿಯಾನೇ ನಿನಗಿದಿರೆದ್ದು ನಾನಿಷ್ಟದೈವವೆಂದು ಕಾಂಬೆನು” ಎಂದು ಗೌರವ ಸಲ್ಲಿಸುತ್ತಾಳೆ. ಕೊರವಂಜಿ ಕಂದ, ತಂದ, ಕೊಂದ ಎಂಬ ಮೂರು ನುಡಿಗಳಲ್ಲಿ ರಾಮಾಯಣದ ಕಥೆಯನ್ನು ಹೇಳಿ ನಂಬಿಸುತ್ತಾಳೆ. ಅಷ್ಟರಲ್ಲಿ ಯರಕುಲಸಿಂಗನು ಬಂದನು.

“ಒಲ್ಲೇ ನಾಮ ಫಣಿಯೊಳಿಟ್ಟು ಜಲ್ಲಿ ಕೊಕ್ಕರಿ ಗರಿಯ ಸುತ್ತಿ
ಯಲ್ಲಿ ದಿಕ್ಕು ನೋಡಿ ನಗುತಾಲೀ ವೋಸಿಂಗಿಯೆನುತಾ
ಜೊಲ್ಲು ವೀಳ್ಯವು ಸೋರುತ ಬಾಯೊಳು     || 1 ||

ಕಂಕುಳೊಳಗೆ ವಂದು ಬುಟ್ಟಿ ಕೈಯಲ್ಲಿ ಕಪಿ ಹಾವುಗಳನೂ
ಡೊಂಕುನಡುವಿಗೊಂದು ಕುಡಗೋಲು ವೋಸಿಂಗಿಯೆನುತಾ
ಶಂಕೆಯಿಲ್ಲದೆ ಬಂದಾಸಿಂಗನು                || 2 ||

ಹಕ್ಕಿಗಳ ಕಾಲಾಹುರಿಯು ಸೆಕ್ಕಿದೊಂದು ಕಂಬಳಿಯು
ದಿಕ್ಕು ದಿಕ್ಕು ನೋಡಿ ನಗುತಾಲಿ ವೋ ಸಿಂಗಿಯೆನುತಾ
ಚೊಕ್ಕ ಕೊರಚಿಯ ಕಾಣಿರೆನುತಾಲೀ

ಬಿದಿರ ದಬ್ಬೆ ಹೆಗಲ ಮೇಲೆ ಯದಿರಾ ಬಂದಾರ ನೋಡಿ
ಬೆದು ಕೊರಚಿಯ ಕಾಣೀರೆನುತಾಲಿ
ವೋ ಸಿಂಗಿಯೆನುತಾ
ವದಗಿ ಬೇಗಾ ಬಂದಾ ಸಿಂಗಾನೂ ||

ಇಲ್ಲಿ ಕೊರಮನೊಬ್ಬನ ಚಿತ್ರ ಸೊಗಸಾಗಿ ಮೂಡಿಬಂದಿದೆ. ಅವನ ವೇಷ-ಭೂಷಣ ಅವನು ಮಾಡುವ ವಿವಿಧ ವೃತ್ತಿಗಳೆಲ್ಲವುಗಳ ಪರಿಚಯ ಇಲ್ಲಿದೆ. ಇಂಥ ಕೊರವನು ಬರುವಷ್ಟರಲ್ಲಿ, ಕೊರವಂಜಿ ತನ್ನ ಕೆಲಸ ಮುಗಿಸಿ ಮುತ್ತು ರತ್ನ ತುಂಬಿಕೊಂಡು, ಮಗುವಿಗೆ ಹಾಲು ತುಪ್ಪ ಕುಡಿಸಿ, ವಸ್ತ್ರಾಭರಣಗಳನ್ನು ಪಡೆದು ಹೊರಟಳು. ಈ ದಂಪತಿಗಳು ಊರ ಜನರಿಗೆ ಆಶ್ಚರ್ಯವಾಗಿ ತೋರಿದರು.

“ಚಿಕ್ಕಪ್ರಾಯದ ಕೊರಚಿ, ಮುಪ್ಪಿನ ಕೊರಮನಿವ
ಅಕ್ಕಯ್ಯ ನೋಡಿರೆ ಚೋದ್ಯಗಳನು”[28]

ಎಂದು ಸೋಜಿಗಪಟ್ಟರು. ಈ ಯಕ್ಷಗಾನ ಕೃತಿಯಲ್ಲಿ ಕೊರವಂಜಿಯ ಪಾತ್ರ ಮಹತ್ವದ್ದಾಗಿ ತೋರುತ್ತದೆ. ಕೊರವಂಜಿಯ ಕಣಿಯ ಚಮತ್ಕಾರ ಸ್ಫುಟಗೊಂಡಿದೆ. ಕೊರವಂಜಿಯ ಕೊರಮನ ಪಾತ್ರ ವಿವರಣೆ ನೈಜವಾಗಿದೆ. ಡಾ|| ಎಲ್.ಆರ್. ಹೆಗಡೆ ಅವರು “ಬ್ರಹ್ಮನು ಕೊರವಂಜಿ ವೇಷದಿಂದ ದೇವಕಿಗೆ, ಕೃಷ್ಣಜನ್ಮ ಸೂಚನೆ ಕೊಡುವುದಕ್ಕೆ ಬರುವ ಕಥಾಭಾಗ – ಬ್ರಹ್ಮ ಕೊರವಂಜಿಯಲ್ಲಿರುವುದರ ಬಗೆಗೆ ಸೂಚನೆ ಕೊಟ್ಟಿರುವರು. ಇಲ್ಲಿಯೂ ಕೂಡ[29] ಬ್ರಹ್ಮನೇ ಕೊರವಂಜಿಯಾಗಿ ಬಂದಿರುವುದನ್ನು ವಿಚಾರ ಮಾಡಿದರೆ ಈ ಸಂದರ್ಭಕ್ಕೆ ಕೊರವಂಜಿಯ ಪಾತ್ರ ಎಷ್ಟು ಔಚಿತ್ಯಪೂರ್ಣವಾಗಿ ಒಪ್ಪುತ್ತದೆ ಎಂಬುದರ ಅರಿವಾಗುತ್ತದೆ. ಇಲ್ಲದಿದ್ದರೆ ಸಾಮಾನ್ಯ ಬುಡಕಟ್ಟಿನ ಹೆಣ್ಣೊಬ್ಬಳ ಚಿತ್ರಪ್ರೌಢ ಸಾಹಿತ್ಯದಲ್ಲಿ ಕಂಡು ಬರಲು ಸಾಧ್ಯವಾಗುತ್ತಿರಲಿಲ್ಲ.

ಕೆ. ವೆಂಕಟಕೃಷ್ಣಯ್ಯ ಅವರ ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗಗಳು ಎಂಬ ಕೃತಿಯಲ್ಲಿನ “ಕೃಷ್ಣಚರಿತೆ”[30]ಯಲ್ಲಿ ಸೆರೆಮನೆಯಲ್ಲಿರುವ ದೇವಕಿಗೆ “ಹರಿಯ ಜನನದ ಪರಿಯ ದೇವಕಿಗೊರೆಯಲೋಸುಗ ಸರಸಿಜೋದ್ಭವನು ಮಾಯಾಕೊರವಿಯಾದ” ನಂತರ ಮಧುರಾ ಪಟ್ಟಣಕ್ಕೆ ಬಂದು “ಹಿಂದಾದುದ ಮುಂದಹುದ ಪೇಳ್ವೆನೆಂದಳು” ಈ ಕೊರವಿಯ ಸದ್ದು ಕೇಳಿದ ದೇವಕಿ ತನ್ನ ಸೇವಕಿಯಿಂದ ಆಕೆಯನ್ನು ಕರೆಸಿ ಕಣಿಕೇಳುತ್ತಾಳೆ. “ಅಮ್ಮ ಕೇಳಡಿಯಮ್ಮ ಸಂದೋಪಮಾಯಲ್ ಪೊರೆಂದು, ಕಣಿಯನ್ ಚೊಲ್ವೋನ್ ನಾನ್, ಯೋಚನೈವೆಂಡಾಮ್ ನೀನ್ ನಿನಚ್ಚುಕಾರ್ಯ ಮೆಲ್ಲಾಂ ಕೈಗೊಂಡಂ ತಿರುನಾರಾಯಣ್ ಕೃಪೆಯಾನೇ” ಎಂದು ಕಣಿ ಹೇಳುತ್ತಾಳೆ. ಇಲ್ಲಿಯ ಭಾಷೆಯಿಂದಲೂ ಕೊರವಿ ಈ ನೆಲದವಳಲ್ಲ ಎಂಬುದನ್ನು ಅರಿಯಬಹುದು. ಈ ಕವಿಗೆ ಕೊರವಿಯ ಪೂರ್ವೇತಿಹಾಸ ತಿಳಿದಿದ್ದರಿಂದಲೇ ಈ ಸತ್ಯವನ್ನು ಹಾಗೆಯೇ ಉಳಿಸಿಕೊಳ್ಳಲು ಸಾಧ್ಯವಾಗಿದೆ.

ಇಲ್ಲಿ ಆಕೆ ತನ್ನ ಅಲೆಮಾರಿ ಬದುಕನ್ನು ವಿವರಿಸುತ್ತಾ ತನ್ನ ಕಾರ್ಯವನ್ನು ಹೇಳುತ್ತಾಳೆ. ದೇವಕಿಯೂ ಕೂಡ ಆತ್ಮೀಯತೆಯಿಂದ ತನ್ನ ವ್ಯೆಥೆಯನ್ನು ಕೊರವಂಜಿಗೆ ತಿಳಿಸುತ್ತಾಳೆ. ಆ ಕಾಲಕ್ಕೆ ಜನಪದರ ಮತ್ತು ಕೊರವಂಜಿಯ ನಡುವೆ ಇಂಥ ಆತ್ಮೀಯತೆ ಇದ್ದುದರಿಂದಲೇ ಕೊರವಂಜಿ ಕಾವ್ಯದ ಮಟ್ಟಕ್ಕೂ ಏರಲು ಕಾರಣವಾಯಿತು. ಕೊರವಂಜಿ ದೇವಕಿಯ ಕಥೆಯನ್ನು ಕೇಳಿ “ಕೈ ತೋರೆ ನಾರಿಯಮ ಮೌಕ್ತಿಕವೆ ಎನ್ನುತ್ತಾ –

“ಪೂರ್ವ ಜನ್ಮದಲಿ ನೀ ಮಾಡಿದ ತಪ್ಪ
ಸರ್ವ ಲೋಕೇಶನೊಳು ಬೇಡದಿವರವ
ಸರ್ವಥಾ ಮಗನಾಗಲೆಂದು ಕಾರಣವ
ಗರ್ವೆ ನಿನ್ನುದರದೊಳೀಗ ಜೀವಿಸುವೆ”

ಮೊದಲೆರಡಂತ್ರ ಪುಟ್ಟಿದನು ಗೋವಿಂದ
ಇದುವೆ ಮೂರನೆಯ ಪ್ರಾರಂಭದೊಳಾದ ಕಂದ
ಬೆದರ ಬೇಡಿನ್ನು ಕಾರ್ಯಗಳೆಲ್ಲ ಚೆಂದ
ಮುದದಿಂದ ನಂಬು ತಪ್ಪದೆ ಮಾತಿದೊಂದ.
ಶಿಶುಪಾಲ ದಂತ ವಕ್ರರ ಕೊಲ್ವ ಬಗೆಗೆ

ವಸುಧೆಯೊಳವರಿಸುವ ನಮ್ಮ ನಿಮಗೆ
ಅಸುರ ಕಂಸನ ಕಳಿಹಿಸುತೆಮನೆಡೆಗೆ
ವಸುಧೆ ಪಟ್ಟವನೀವನುಗ್ರಸೇನನಿಗೆ
ಪಾಂಡು ನಂದನರೊಳಗೆ ಬೆಳೆಸುತ್ತ ನಂಟೂ
ಹಿಂಡು ಕೌರವರ ಕೊಲ್ಲಿಸುವ ನಿಘಂಟು
ಕಂಡು ಹದಿನಾರು ಸಾವಿರದ ನೂರೆಂಟು
ಹೆಂಡಿರ ನೊಲಿಸುತಾಳುವ ಯೋಗವುಂಟು”

ಎಂದು ಪುತ್ರಸಂತಾನ ಬಗೆಗೂ ಮತ್ತು ಭವಿಷ್ಯದಲ್ಲಿನ ಶುಭ ಸೂಚನೆಯ ಬಗೆಗೂ ತಿಳಿಸುತ್ತಾಳೆ.

ಇದಕ್ಕೆ ದೇವಕಿ ಕೆಟ್ಟು ಕಾವಲ ಕಂಸನ ಸೆರೆಮನೆಯಲ್ಲಿ ಕೃಷ್ಣ ತನ್ನ ಹೊಟ್ಟೆಯಲ್ಲಿ ಹುಟ್ಟಿ, ಕಂಸನನ್ನು ಕೊಲ್ಲುವನೆಂಬುದನ್ನು ಮನ ಒಪ್ಪುತ್ತಿಲ್ಲವೆನ್ನಲು, ಕೊರವಿ-ಹೊನ್ನಿನಾಸೆಗೆ ಬಂದುದಿಲ್ಲವು ಹಸ್ತಿ ಗಮನೆ ನಿನ್ನಯ ಪುಣ್ಯವನು ನಿನಗೊರೆಯಲೋಸುಗ ಬಂದು ನಮ್ಮ ನಾನು ಜಾಲ ಮಾತಿನ ಕೊರವಿಯಲ್ಲ. ಲೋಕದ ಸೃಷ್ಟಿಯಧಿಪತಿತನಕೆಯೋಗ್ಯಳಾದ ಕೊರವಿಯಮ್ಮ – ಎಂದು ನಂಬಿಕೆ ಹುಟ್ಟಿಸುತ್ತಾಳೆ. ಈ ಮಾತುಗಳಿಂದಲೇ ಕೊರವಂಜಿಯ ವ್ಯಕ್ತಿತ್ವ ಅರ್ಥವಾಗುತ್ತದೆ. ಸೀತೆ, ನಳ ಮುಂತಾದವರ ಕಥೆಯನ್ನು, ಹರಿಶ್ಚಂದ್ರ ಚಕ್ರವರ್ತಿಯ ಕಷ್ಟವನ್ನು ತಿಳಿಸಿ ವಿಧಿಯನ್ನು ಮೀರಲು ಸಾಧ್ಯವಿಲ್ಲವೆಂದು ಸಮಾಧಾನಪಡಿಸುತ್ತಾಳೆ. “ಪರಮ ಮಂಗಳ ಕಾರವ ಪೇಳ್ದಾ ಕೊರವಂಜಿಗಾ ತರುಣಿ ತಾ ಸಕಲ ವಸ್ತುವನಿತ್ತು ಬೀಳುಕೊಡಲರವಿಂದ ಭವನೈದಿದಂ ತನ್ನ ನಿಜ ಲೋಕದತ್ತ.”[31]

ಜೈಲಿನಲ್ಲಿದ್ದ ದೇವಕಿಯಲ್ಲಿಗೆ ಬೇರೆ ಯಾವ ಪಾತ್ರವೂ ಇಷ್ಟು ಸಲೀಸಾಗಿ, ನಿರ್ಭಿಡೆಯಿಂದ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಕೊರವಂಜಿ ಪಾತ್ರದಿಂದ ಮಾತ್ರ ತನ್ನ ಉದ್ದೇಶ ಸಾಧಿತವಾಗುತ್ತದೆಂದರಿತ ಕೃತಿಕಾರ ಈ ಪಾತ್ರವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾನೆ. ಇದು ಬರಿ ನಾಟಕಕಾರನ ಕಲ್ಪನೆಯಲ್ಲ. ಕವಿಗಳು ಊಹೆಯಲ್ಲಿ, ನಿಜ ಜೀವನದಲ್ಲಿ ಇಂದಿಗೂ ಕೊರವಂಜಿಯ ಕಣಿ ಹೇಳುವ ಗತ್ತಿನಲ್ಲಿ ಇದು ಸ್ಪಷ್ಟವಾಗಿ ತೋರುತ್ತದೆ. ಇದ್ದ ಸಂಗತಿಯನ್ನು ಕವಿಗಳು ಹಿಗ್ಗಿಸುವ ಸಾಧ್ಯತೆಗಳಿವೆ.

ಕೊರವಂಜಿಯ ಅಲಂಕಾರವರ್ಣನೆ ಶಿಲಪ್ಪದಿಗಾರಂ ನಲ್ಲಿಯೇ ತೋರುತ್ತದೆ. “ಆ ನಾರಿಗೆ ಮುಖದ ತುಂಬೆಲ್ಲ ಸುಂದರವಾದ ಬಣ್ಣದ ಚುಕ್ಕೆಗಳು”[32] ಕೊರವಂಜಿ ಜಡೆ ಬಿಚ್ಚಿ ಬೆನ್ನಮೇಲೆಲ್ಲ ಹರಡಿಕೊಂಡು, ಕರಿಯ ಸೀರೆ ಉಟ್ಟು ತಲೆಯ ಮೇಲೆ ಕೊರವಂಜಿ ಬುಟ್ಟಿ, ಕಂಕುಳಲ್ಲಿ ಮಗುವಿನ ಗೊಂಬೆಯೊಂದನ್ನು ಹಿಡಿದುಕೊಂಡು ಬರುತ್ತಾಳೆ”[33] ಅದು ನಾಟಕದಲ್ಲಾದರೆ, ನಿಜವಾಗಿ ಜನಪದ ಗೀತೆಗಳಲ್ಲಿ, ಮತ್ತು ಯಕ್ಷಗಾನದಲ್ಲಿ ತೋರುವ ಹಾಗೆ ನಿಜವಾದ ಮಗು ಅವಳ ಬೆನ್ನಿಗಿರುತ್ತಿತ್ತು. “ಹಸುರೊಂದ ಉಟ್ಟಿದ್ದಾಳ ಎನ್ನಮ್ಮ, ಕೆಂಪೊಂದ ಉಟ್ಟಿದ್ದಾಳ ಎನ್ನಮ್ಮ”[34] ಎನ್ನುವಲ್ಲಿಯೂ ಕೂಡ ಜನಪದರು ಅವಳ ಆ ಕಾಲದ ವೇಷವನ್ನು ವರ್ಣಿಸಿದ್ದಾರೆ. ಹಿರಿಯರು ವರ್ಣಿಸಿರುವ ಆ ಕಾಡು ಸ್ತ್ರೀಯ ವೇಷ ಭೂಷಣದಿಂದ ಅಂದಿನ ಕೊರವಂಜಿ ನೋಡಲು ಪ್ರಭಾವಯುತವಾಗಿ ತೋರಿಬರುತ್ತಿತ್ತು. ಆದರೆ ಚಲನಚಿತ್ರದ ಹಾವಳಿಯಿಂದ, ಅದರಲ್ಲಿನ ವೇಷ-ಭೂಷಣಗಳನ್ನು ಆದರ್ಶವೆಂದು ಅನುಕರಿಸುವ ಇಂದಿನ ಕೊರವಂಜಿ”[35] ಬೇರೆಯಾಗಿಯೇ ತೋರುತ್ತಾಳೆ. ಕೊರವಂಜಿ ಸಹಜವಾಗಿಯೇ ಕಾವ್ಯಮಟ್ಟಕ್ಕೆ ಏರಿದ್ದಾಳೆ. ಆಯಾ ಸಂದರ್ಭದಲ್ಲಿ ಅವಳನ್ನು ಬಲವಂತದಿಂದ ಹಿಡಿದು ತಂದದ್ದಲ್ಲ. ಕಾವ್ಯ ನಾಟಕಗಳಲ್ಲಿ ಪಾತ್ರ ಹಾಕಿಸಿದ್ದಲ್ಲ. ಹೀಗೆ ಮೇಲೇರಿದ ಪಾತ್ರ ಅಂದಿನ ಸಮಾಜದ ಭಯ-ಭೀತಿ, ಅಂಕೆ-ಶಂಕೆಗಳನ್ನು ನಿವಾರಿಸುತ್ತಾ ಬದುಕಿಗೆ ತೀರ ಹತ್ತಿರವಾದಳು. ತನ್ನ ಬದುಕಿನ ವಿವರಗಳನ್ನು ದಾಖಲಿಸಿದಳು. ಹಾಗೆ ನೋಡಿದರೆ ಈ ಭಾಗ್ಯ ಇಂಥ ಎಷ್ಟೋ ಬುಡಕಟ್ಟುಗಳಿಗೆ ಬರಲಿಲ್ಲ. ಈ ಭಾಗ್ಯದಿಂದಾಗಿಯೇ ಶ್ರೀ ಜ.ಚ.ನಿ. ಅವರು ಇವರನ್ನು ಕನ್ನಡದ ನಾರದ-ನಾರದೆಯರು ಎಂದಿದ್ದಾರೆ.[36]

ಹೀಗೆ ಅನೇಕ ರೀತಿಯಲ್ಲಿ ಈ ಸಾವಿರಾರು ವರ್ಷಗಳಲ್ಲಿ ಸಾಗಿ ಬಂದಿರುವ ಕೊರಮರನ್ನು ಸಾಹಿತ್ಯಕವಾಗಿಯೂ ಅರಿಯಬಹುದು. ಕೊರವರು ಮೊದಲು ಕಾಡಿನಲ್ಲಿದ್ದವರು. ಅಂದಿನ ಸಾಮಾಜಿಕ ಸ್ಥಿತಿಗತಿಗನುಗುಣವಾಗಿ ನಾಡನ್ನು ಆಶ್ರಯಿಸಿ ಆಯಾ ಕಾಲಕ್ಕೆ ತಕ್ಕ ಹಾಗೆ ಅನೇಕ ಬಗೆಯ ವೃತ್ತಿಗಳನ್ನು ರೂಢಿಸಿಕೊಂಡು ಜೀವನ ಸಾಗಿಸುವುದರ ಮೂಲಕ ತಮ್ಮ ಅಸ್ಥಿತ್ವವನ್ನು ದಾಖಲಿಸಿದ್ದಾರೆ.[1]        ಶಿವರಾಮ ಕಾರಂತ ಕಲೆಯ ದರ್ಶನ – ಪುಟ – 13

[2]      ಕರ್ಣಪಾರ್ಯನ ನೇಮಿನಾಥ ಪುರಾಣಂ. ಪುಟ – 249 – 250

[3]      ಜಾನಪದ ಸಾಹಿತ್ಯ ದರ್ಶನ – 3 – ಪುಟ – 61

[4]      ಶ್ರೀ ಜ.ಚ.ನಿ.ಕೊರವಂಜಿ ಸಾಹಿತ್ಯ ಪುಟ – 34

[5]      ಅದೇ ಪುಟ – 34

[6]      ಅದೇ ಪುಟ – 34

[7]      ಅದೇ ಪುಟ – 37

[8]      ಅದೇ ಪುಟ – 4

[9]      ಶ್ರೀ ಜ.ಚ.ನಿ.ಕೊರವಂಜಿ ಸಾಹಿತ್ಯ ಪುಟ – 14

[10]      ಅದೇ ಪುಟ – 5

[11]      ಕ.ರಾ.ಕೃ. ಜನಪದ ಕಥನ ಗೀತೆಗಳು ಪುಟ  – 14

[12]      ಡಾ. ಸಿ.ಕೆ.ನಾವಲಗಿ, ವಚನ ಸಾಹಿತ್ಯದಲ್ಲಿ ಜನಪದ ಅಂಶಗಳು ಪುಟ  – 401

[13]      ಕರುಳ ಕೇತಯ್ಯಗಳ ವಚನ – 5 ಪುಟ – 70,  ಉದಾ: ಅದೇ ಪುಟ 401.

[14]      ಜಾನಪದ ಜಗತ್ತು. ಸಂಪುಟ – 2 .  ಸಂಚಿಕೆ – 3  ಪುಟ 35

[15]      ಡಾ.ಸಿ.ಕೆ.ನಾವಲಗಿ, ವಚನ ಸಾಹಿತ್ಯದಲ್ಲಿ ಜನಪದ ಅಂಶಗಳು ಪುಟ  – 401

[16]      ಸಂ. ಪಂಡಿತ ನಾಗಭೂಷಣ ಶಾಸ್ತ್ರಿಗಳು. ಚನ್ನಬಸವಣ್ಣ ವಚನ ಸಂಗ್ರಹ ಪುಟ – 91

[17]      ಎಂ.ಟಿ.ದೂಪದ. ಕರ್ನಾಟಕ ಜಾನಪದ ರಂಗಭೂಮಿ ಪುಟ – 401

[18]      ಸಂ.ಜೀ.ಶಂ. ಪ  ಕಬ್ಬಿನಹಾಲು, ಪುಟ – 270

[19]      ಅದೇ ಪುಟ – 5

[20]     ಡಾ.ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕ ಬಯಲಾಟ ಪರಂಪರೆ ಪುಟ – 11

[21]      ಜಾನಪದ ಸಾಹಿತ್ಯ ದರ್ಶನ – 3,   ಪುಟ – 61 – 63

[22]     ಅದೇ ಪುಟ – 63

[23]     ಎಂ.ಟಿ.ದೂಪದ. ಶ್ರೀ ಕೃಷ್ಣ ಪಾರಿಜಾತ ಜಾನಪದ ಶೈಲಿ. ಭಾಮಾಕಲಾಪಮು ಕಚಿಪುಟಿ ಶೈಲಿ. ಪುಟ – 78.

[24]     ಡಾ.ಬೇಟಗೇರಿ ಕೃಷ್ಣಶರ್ಮ, ಕನ್ನಡ ಜಾನಪದ ಸಾಹಿತ್ಯ, ಪುಟ – 95.

[25]     ಎಂ.ಟಿ.ದೂಪದ. ಕರ್ನಾಟಕ ಜಾನಪದ ರಂಗಭೂಮಿ ಪುಟ – 231

[26]     ಪೂವಿಂದ ವೆಂಕಟಯ್ಯ. ಪಾರ್ವತಿ ಕೊರವಂಜಿ.

[27]     ದೇವುಡು. ಕರ್ನಾಟಕ ಸಂಸ್ಕೃತಿ ಪುಟ – 76

[28]     ಪೂವಿಂದ ವೆಂಕಟಯ್ಯ. ಪಾರ್ವತಿ ಕೊರವಂಜಿ. ಪುಟ – 16

[29]     ಕೃಷ್ಣಭಟ್ಟ. ಕೃಷ್ಣ ಚರಿತೆ ಪುಟ – 471 – 473.

[30]     ಸಂ.ಕೆ.ವೆಂಕಟ ಕೃಷ್ಣಯ್ಯ ( ಕೃಷ್ಣ ಚರಿತೆ) ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು.

[31]      ವೆಂಕಟ ಕೃಷ್ಣಯ್ಯ ಪಾರ್ತಿಸುಬ್ಬ ಕವಿಯ ಯಕ್ಷಗಾನ ಪ್ರಸಂಗಗಳು. ಪು – 270

[32]     ಎಂ.ಟಿ.ದೂಪದ. ಕರ್ನಾಟಕ ಜಾನಪದ ರಂಗಭೂಮಿ ಪುಟ – 227

[33]     ಡಾ.ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕ ಬಯಲಾಟ ಪರಂಪರೆ ಪುಟ –

[34]     ಸಂ. ಕಾಪಸೆ ರೇವಪ್ಪನವರು. ಮಲ್ಲಿಗೆ ದಂಡೆ. ಪು – 16.

[35]     ಎಂ.ಟಿ.ದೂಪದ. ಕರ್ನಾಟಕ ಜಾನಪದ ರಂಗಭೂಮಿ ಪುಟ – 232

[36]     ಅದೇ ಪುಟ – 231