ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಸರ್ಕಾರದ ಕಾರ್ಯಕ್ರಮಗಳಲ್ಲಿ ಭೂ ಸುಧಾರಣೆಗಳು ಮುಖ್ಯ ಅಂಶಗಳಾಗಿವೆ. ಆದರೂ, ಪ್ರತಿ ರಾಜ್ಯದಲ್ಲೂ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿ ಇದನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಕರ್ನಾಟಕದಲ್ಲಿ ಭೂಸುಧಾರಣೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದು ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿ. ಭೂಸುಧಾರಣಾ ಕಾರ್ಯಕ್ರಮದಲ್ಲಿ ಅಪೂರ್ವ ಯಶಸ್ಸನ್ನು ಗಳಿಸಲು ಅನುಸರಿಸಿದ ಕಾರ್ಯತಂತ್ರಗಳನ್ನು ವಿವರಿಸುವ ಪ್ರಯತ್ನವೇ ಈ ಲೇಖನ.
ಭಾರತದಲ್ಲಿ ಕೃಷಿಕ್ಷೇತ್ರದ ಆಮೂಲಾಗ್ರ ಪರಿವರ್ತನೆ ಮುಖ್ಯ ಕಾರ್ಯಕ್ರಮವಾದದ್ದು, ಭಾರತೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ಸಾಮಾಜಿಕ ತಳಹದಿಯನ್ನು ಕಲ್ಪಿಸಿಕೊಟ್ಟ ರೈತ ಚಳವಳಿಗಳಿಂದ. ಈ ರೈತ ಚಳವಳಿಗಳು ಕಾಲಕಾಲಕ್ಕೆ ದನಿಯೆತ್ತುತ್ತ ಕಿಸಾನ್ ಸಭಾದ ಸ್ಥಾಪನೆಯೊಂದಿಗೆ ಒಂದು ಸಂಘಟಿತ ಚಳವಳಿಯಾಗಿ ರಾಷ್ಟ್ರವ್ಯಾಪಿ ಅಸ್ತಿತ್ವವನ್ನು ಪಡೆದುಕೊಂಡವು. ಆದರೂ ಇವುಗಳಿಗಿದ್ದ ಬೆಂಬಲ ಒಂದೇ ರೂಪದ್ದಾಗಿರದೆ, ಬೇರೆ ಬೇರೆ ಕೃಷಿವರ್ಗಗಳಿಂದ ವಿಭಿನ್ನ ಪ್ರತಿಕ್ರಿಯೆಗಳು ಬಂದವು. ಕೃಷಿ ಕ್ಷೇತ್ರದ ಪರಿವರ್ತನೆಯ ವಿಷಯದ ಬಗ್ಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಪಾತ್ರ ಬಹಳ ಸಂಕೀರ್ಣವೂ ಹಾಗೂ ದ್ವಂದ್ವದಿಂದಲೂ ಕೂಡಿತ್ತು. ಅದು ಬೇರೆ ಬೇರೆ ಸಂದರ್ಭಗಳಲ್ಲಿ ಕೃಷಿ ಪರಿವರ್ತನೆಯನ್ನು ಬೆಂಬಲಿಸಿದರೂ, ಭಾರತದ ಕೃಷಿ ಸಂಬಂಧಗಳ ವಿಷಯಗಳ ಸಂಕೀರ್ಣತೆ ಹಾಗೂ ವಿಭಿನ್ನತೆಗಳ ಹಿನ್ನೆಲೆಯಲ್ಲಿ ಅವರ ಮುಖ್ಯ ವಾದವನ್ನು ತಪ್ಪಾಗಿ ವ್ಯಾಖ್ಯಾನಿಸಲಾಯಿತು. ಅದು ಕೆಲವೊಮ್ಮೆ ಕೃಷಿ ಕ್ಷೇತ್ರದ ಪರಿವರ್ತನೆಯ ವಿಷಯವನ್ನು ಆದ್ಯತೆಯ ಕಾರ್ಯಕ್ರಮವೆಂದರೆ, ಇನ್ನೊಮ್ಮೆ ಪೂರ್ಣ ಆದ್ಯತೆಯ ಕ್ರಮ ಎಂದು ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿತ್ತು. ಕೆಲವು ಕಡೆ ಕಾಂಗ್ರೆಸ್ಸಿಗರು ಇದನ್ನು ವಿರೋಧಿಸಿದರು. ಕಮ್ಯೂನಿಸ್ಟರು ಎಂದಿನಂತೆ ಕೃಷಿ ಪರಿವರ್ತನೆಯನ್ನು ಸಾಮಾಜಿಕ ಪರಿವರ್ತನೆಯ ಅವಿಭಾಜ್ಯ ಅಂಗವನ್ನಾಗಿ ಪರಿಗಣಿಸಿದರು.
ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ನಾಯಕರು ಭೂಸುಧಾರಣೆಯ ಬಗ್ಗೆ ತಮಗಿರುವ ಬದ್ಧತೆಯನ್ನು ಘೋಷಿಸಿದರೆ ವಿನಾ ಅದನ್ನು ಕಾರ್ಯರೂಪಕ್ಕೆ ತರಲಿಲ್ಲ. ಅಂಥ ಪ್ರಯತ್ನ ನಡೆದರೂ ಅದು ಅಷ್ಟಿಷ್ಟು ಪ್ರಮಾಣದಲ್ಲಿ ಮಾತ್ರ. ಇದನ್ನು ಕಮ್ಯುನಿಸ್ಟರು ‘‘ವಂಚನೆ’’ ಎಂದು ಕೂಗುತ್ತಾ ತಮ್ಮ ಪಕ್ಷ ಸೂಚಿಸುವ ಪರ್ಯಾಯ ಮಾರ್ಗವನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದರು. ಸಮಾಜವಾದಿಗಳು ಬಹಳ ಕಡೆ ಕೃಷಿ ಹೋರಾಟಗಳಲ್ಲಿ ತೀವ್ರವಾಗಿ ಭಾಗಿಯಾದರು. ಆದರೆ ಎಲ್ಲೆಲ್ಲಿ ಕೃಷಿ ವಿಷಯಗಳ ಬಗ್ಗೆ ಕ್ಷೋಭೆ ಉಂಟಾಯಿತೋ ಅಲ್ಲೆಲ್ಲ ಸರ್ಕಾರವು ಅದನ್ನು ನಿವಾರಿಸಲು ಪ್ರಯತ್ನಿಸಿತು.

ಭೂ ಸುಧಾರಣೆಗಳು
ಭೂಸುಧಾರಣೆಗಳು ಭಾರತ ಸರ್ಕಾರದ ಪ್ರಮುಖ ಕಾಳಜಿಗಳಲ್ಲಿ ಒಂದಾಗಿ ಮುಂದುವರಿದವು. ಕೊನೆಯ ಪಕ್ಷ ಸಾರ್ವಜನಿಕ ಘೋಷಣೆಗಳ ಮಟ್ಟಿಗೆ, ಯೋಜನಾ ದಾಖಲೆಗಳ ಮಟ್ಟಿಗೆ ಮತ್ತು ಇವತ್ತಿಗೂ ಆಳುವ ವರ್ಗಗಳ ಜನರ ಕಾರ್ಯಕ್ರಮಗಳಲ್ಲಿ ಭೂಸುಧಾರಣೆಗಳು ಪ್ರಾಮುಖ್ಯತೆ ಪಡೆದೇ ಇವೆ. ಅಧಿಕೃತ ಅಂಕಿ ಅಂಶಗಳು ನಿಗದಿತ ಗುರಿಯನ್ನು ಮುಟ್ಟಿಲ್ಲವೆಂಬ ಕೊರಗನ್ನು ತೋರಿಸಿದ್ದರೂ, ಸಾಧಿಸಿರುವುದನ್ನು ಅಲಕ್ಷಿಸುವಂತಿಲ್ಲ. ದೇಶದ ಶೇ.20 ಭಾಗದಲ್ಲಿದ್ದ ಜಮೀನ್ದಾರಿಗಳು, ಜಹಗೀರುಗಳು ಹಾಗೂ ಇನಾಮ್ಗಳನ್ನು ರದ್ದುಪಡಿಸಿ ಮತ್ತು 20 ಮಿಲಿಯನ್ ರೈತರನ್ನು ನೇರವಾಗಿ ಸರ್ಕಾರದ ಹಿಡಿತಕ್ಕೆ ತರಲಾಗಿದೆ. 6 ಮಿಲಿಯನ್ ಹೆಕ್ಟೇರ್ ಉಳುಮೆ ಮಾಡದೆ ಬಿಟ್ಟ ಗೋಮಾಳವನ್ನು ಉಳಲು ಯೋಗ್ಯವನ್ನಾಗಿಸಿ ಅದರ ಬಹಳಷ್ಟು ಭಾಗವನ್ನು ಮರುಹಂಚಿಕೆ ಮಾಡಲಾಗಿದೆ. ಬಹಳಷ್ಟು ರಾಜ್ಯಗಳು ಗೇಣಿದಾರರಿಗೆ ಮಾಲೀಕತ್ವದ ಹಕ್ಕುಗಳನ್ನು ಕೊಟ್ಟ ಪರಿಣಾಮವಾಗಿ 7.72 ಮಿಲಿಯನ್ ಗೇಣಿದಾರರು 5.6 ಮಿಲಿಯನ್ ಹೆಕ್ಟೇರ್ ಪ್ರದೇಶದಷ್ಟು ಭೂಮಿಯ ಮಾಲಿಕತ್ವವನ್ನು ಪಡೆದಿದ್ದಾರೆ. ಮಾಲೀಕತ್ವದ ಹಕ್ಕುಗಳನ್ನು ನೀಡದ ಬಹಳಷ್ಟು ರಾಜ್ಯಗಳು ಗೇಣಿ ಭದ್ರತೆಯನ್ನು ಎತ್ತಿಹಿಡಿದಿವೆೆ ಮತ್ತು ಜಮ್ಮು ಕಾಶ್ಮೀರ, ಕೇರಳ, ಕರ್ನಾಟಕ, ಉತ್ತರ ಪ್ರದೇಶ ಹಾಗೂ ದೆಹಲಿ ರಾಜ್ಯಗಳಲ್ಲಿ ಗುತ್ತಿಗೆಯನ್ನು ನಿರ್ಬಂಧಿಸಲಾಗಿದೆ. ಮುಂದೆ ಗುತಿ್ತಗೆಗೆ ಕೊಡಬಹುದಾದ ಭೂಮಿಯನ್ನು ಗೇಣಿದಾರರಿಗೆ ಕೊಡುವಂತೆ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಹರಿಯಾಣ ಮತ್ತು ಪಂಜಾಬ್ನಂಥ ಕೆಲವು ರಾಜ್ಯಗಳಲ್ಲಿ ಅಧಿಕಾರ ನೀಡಲಾಗಿದೆ.
1950 ಹಾಗೂ 1960ರ ದಶಕಗಳಲ್ಲಿ ಗರಿಷ್ಠ ಮಿತಿಯನ್ನು ನಿಗದಿಪಡಿಸಿದ್ದರಿಂದ ಹೆಚ್ಚುವರಿಯೆಂದು ಘೋಷಿತವಾದ 11.70 ಲಕ್ಷ ಹೆಕ್ಟೇರ್ ಭೂಮಿಯಲ್ಲಿ 10.91 ಲಕ್ಷ ಹೆಕ್ಟೇರ್ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. 8.48 ಲಕ್ಷ ಹೆಕ್ಟೇರ್ ಭೂಮಿಯನ್ನು 18.45 ಲಕ್ಷ ಫಲಾನುಭವಿಗಳಿಗೆ, ಅದರಲ್ಲಿ ಶೇ.ೊ54.8 ಜನರು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಸೇರಿದವರಿಗೆ ಹಂಚಿಕೆ ಮಾಡಲಾಗಿದೆ. ಗರಿಷ್ಠ ಮಿತಿಯನ್ನು ಇನ್ನೂ ಹೆಚ್ಚು ಬಿಗಿಗೊಳಿಸಲು 1972ರಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಲಾಯಿತು. ಇದರಂತೆ 17.70 ಲಕ್ಷ ಹೆಕ್ಟೇರ್ ಭೂಮಿಯನ್ನು ಹೆಚ್ಚುವರಿಯೆಂದು ಘೋಷಿಸಲಾಯಿತು. ಇದರಲ್ಲಿ 12.24 ಲಕ್ಷ ಹೆಕ್ಟೇರನ್ನು ವಶಪಡಿಸಿಕೊಂಡು, 9.06 ಲಕ್ಷ ಹೆಕ್ಟೇರನ್ನು ಶೇ.55 ಪರಿಶಿಷ್ಟ ಜಾತಿ ಹಾಗೂ ವರ್ಗದ ಜನಗಳಿರುವ 17.31 ಲಕ್ಷ ಕೃಷಿ ಕೂಲಿಕಾರರ ಕುಟುಂಬಗಳಲ್ಲಿ ಹಂಚಲಾಗಿದೆ. ಗರಿಷ್ಠ ಮಿತಿಯನ್ನು ಜಾರಿಗೊಳಿಸಿದಾಗಿನಿಂದ ಒಟ್ಟು 29.40 ಲಕ್ಷ ಹೆಕ್ಟೇರನ್ನು ಗರಿಷ್ಠ ಮಿತಿ ಕಾನೂನಿನಡಿ ಹೆಚ್ಚುವರಿಯೆಂದು ಘೋಷಿಸಲಾಗಿದೆ. ಇದರಲ್ಲಿ 23.15 ಹೆಕ್ಟೇರನ್ನು ವಶಪಡಿಸಿಕೊಂಡು, 17.52 ಲಕ್ಷ ಹೆಕ್ಟೇರನ್ನು 33.76 ಲಕ್ಷ ಜನಗಳಿಗೆ ಹಂಚಲಾಗಿದೆ. ಅಂದರೆ, ಹೆಚ್ಚುವರಿ ಭೂಮಿಯೆಂದು ಘೋಷಿತವಾದ ಶೇ.78.8 ಭೂಮಿಯನ್ನು ವಶಕ್ಕೆ ತೆಗೆದುಕೊಂಡು ಶೇ.59.6 ಭೂಮಿಯನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಶೇ.48 ಅನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳಿಗೆ ನೀಡಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ ಶೇ.54.70 ಭಾಗ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಜನರು ಸೇರಿದ್ದಾರೆ. ಒಟ್ಟು 11.88 ಲಕ್ಷ ಹಂಚಿಕೆಯಾಗದ ಹೆಚ್ಚುವರಿ ಭೂಮಿಯಲ್ಲಿ 6.87 ಲಕ್ಷ ಹೆಕ್ಟೇರು ಭೂಮಿಯು ವ್ಯಾಜ್ಯದಲ್ಲಿದ್ದು, 3.01 ಲಕ್ಷ ಹೆಕ್ಟೇರನ್ನು ಉಳಲು ಯೋಗವಲ್ಲವೆಂದು ಇಲ್ಲವೆ ಕಾಡು ಬೆಳೆಸುವ ಕಾರ್ಯಕ್ಕೆಂದು ಅಥವಾ ಸಾರ್ವಜನಿಕ ಉದ್ದೇಶಗಳಿಗೆಂದು ಇರಿಸಲಾಗಿದೆ. 6ನೇ ಯೋಜನೆಯಡಿ ಇರುವ ಸ್ಥಿತಿ ಸಂಕ್ಷಿಪ್ತವಾಗಿ ಹೀಗಿದೆ.

ನ್ಯಾಷನಲ್ ಸ್ಯಾಂಪಲ್ ಸರ್ವೇ ಹಾಗೂ ಕೃಷಿಗಣತಿಯು ಮಾಡಿದ ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ ಹಾಗೂ ಪ್ರತಿ ರಾಜ್ಯದ ಸರಾಸರಿ ಗರಿಷ್ಠ ಮಿತಿಯ ಲೆಕ್ಕಾಚಾರದ ಪ್ರಕಾರ ಹೆಚ್ಚುವರಿ ಭೂಮಿಯ ಪೂರ್ಣ ವಿವರ ಇಂತಿದೆ.

ಇಂಥ ಪ್ರಮಾಣವೊಂದು ಜಾರಿಯಲ್ಲಿದ್ದರೂ, ಹೆಚ್ಚುವರಿಯೆಂದು ಘೋಷಿತವಾಗಿರುವ ಪ್ರದೇಶವು ಅಂದಾಜು ಮಾಡಿದ ಹೆಚ್ಚುವರಿ ಪ್ರದೇಶಕ್ಕಿಂತ ಬಹಳ ಕಡಿಮೆ ಇದೆ.

ಸ್ವಾತಂತ್ರ್ಯಕ್ಕಿಂತ ಮೊದಲು ಬ್ರಿಟಿಷ್ ಹಾಗೂ ದೇಶಿಯ ರಾಜ ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ರಾಜಕೀಯ ಹಾಗೂ ಆಡಳಿತಾತ್ಮಕ ಅಂಶಗಳನ್ನು, ಒಂದೇ ಒಂದು ರಾಜಕೀಯ ಅಂಗದ ಅಡಿಯಲ್ಲಿ ತರುವ ಉದ್ದೇಶದಿಂದ ಕರ್ನಾಟಕ ರಾಜ್ಯವನ್ನು ಪುನಾರಚಿಸಲಾಯಿತು. ಕೃಷಿ ರಚನೆಗಳು ಹಾಗೂ ಆಗ ಬಳಕೆಯಲ್ಲಿದ್ದ ಕೃಷಿ ಸಂಬಂಧಗಳು ಆಗ ಒಂದಕ್ಕೊಂದು ಬಹಳ ಭಿನ್ನವಾಗಿದ್ದವು. ಕೃಷಿ ನಿಯಮಗಳೂ ಇದಕ್ಕಿಂತ ಬೇರೆಯಾಗಿರಲಿಲ್ಲ. ಇವೆರಡರ ನಡುವೆ ಹುಟ್ಟಿದ ರೈತ ಚಳವಳಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ವಿಚಾರಗಳನ್ನು ಹುಟ್ಟು ಹಾಕಿದವು. ಬಾಂಬೆ ಪ್ರಾಂತ್ಯದಲ್ಲಿದ್ದ ಉತ್ತರ ಕನ್ನಡದಂಥ ಕೆಲವು ಜಿಲ್ಲೆಗಳಲ್ಲಿ ಹಾಗೂ ಮದ್ರಾಸ್ ಪ್ರಾಂತ್ಯದಲ್ಲಿದ್ದ ದಕ್ಷಿಣ ಕನ್ನಡಗಳಲ್ಲಿ ಗೇಣಿ ಭೂಮಿಗೆ ಬಾಡಿಗೆ ನಿಯಂತ್ರಣಕ್ಕಾಗಿ ಹಾಗೂ ಉಳುವವನಿಗೆ ಭೂಮಿ ನೀಡಬೇಕು ಎಂಬುದಕ್ಕಾಗಿ ಹೋರಾಟ ನಡೆದರೆ, ಮೈಸೂರು ರಾಜ ಸಂಸ್ಥಾನದ ಕೆಲವು ಪ್ರದೇಶಗಳಲ್ಲಿ ಇನಾಮ್ ಹಿಡುವಳಿ ಜಮೀನಿನ ವಿರುದ್ಧ ಹೋರಾಟಗಳು ಬಲವಾಗಿ ನಡೆಯುತ್ತಿದ್ದವು.

ಸ್ವಾತಂತ್ರ್ಯದ ನಂತರ ಸರ್ಕಾರದಿಂದ ಜಾರಿಗೆ ತರಲಾದ ಬಹಳ ಮುಖ್ಯ ಕಾಯ್ದೆಗಳಲ್ಲಿ, ಮೈಸೂರು ರಾಜ್ಯದಲ್ಲಿ ಜಾರಿಗೆ ತಂದ 1954ರ ಇನಾಮ್ ರದ್ದತಿ ಕಾಯ್ದೆಯು ಬಹಳ ಮುಖ್ಯವಾದುದು. ಈ ಇನಾಮ್ಗಳು ಬೇರೆ ಬೇರೆ ರಾಜರಿಂದ ವಿಭಿನ್ನ ಕಾರಣಗಳಿಗಾಗಿ ಕಾಣಿಕೆಯಾಗಿ ನೀಡಲಾದ ಭೂಮಿಗಳಾಗಿದ್ದವು. ಬಾಂಬೆ ಪ್ರೆಸಿಡೆನ್ಸಿಯ ಮೈಸೂರಿನಲ್ಲಿ ಹಾಗೂ ಮೈಸೂರಿನ ಒಡೆಯರ ಕಾಲದಲ್ಲಿ ಇನಾಮ್ ಹಿಡುವಳಿ ಜಮೀನುಗಳ ಅಸ್ತವ್ಯಸ್ತ ಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಪ್ರಯತ್ನ ನಡೆಯಿತು. ಜಮೀನ್ದಾರಿಯ ರದ್ಧತಿಗಾಗಿ ಹೋರಾಟ ಆರಂಭವಾಗುತ್ತಿದ್ದಂತೆ ಇನಾಂದಾರಿಯನ್ನು ರದ್ದು ಮಾಡಬೇಕೆಂಬ ಕೂಗು ಎದ್ದಿತು. ಇದರ ಜೊತೆಗೆ ಹಿಂದಿನ ಮೈಸೂರು ರಾಜ್ಯದಲ್ಲಿ ಇನಾಂ ಹಕ್ಕುಗಳನ್ನು ರದ್ದುಗೊಳಿಸಬೇಕೆಂದು ಬಲವಾದ ಚಳವಳಿ ನಡೆಯಿತು. 1947ರಲ್ಲೇ ಇಂಥ ಹಕ್ಕು ಗಳನ್ನು ರದ್ದುಗೊಳಿಸುವ ಕಾನೂನು ಪ್ರಕ್ರಿಯೆ ಆರಂಭವಾಯಿತಾದರೂ, ಅಧಿಕಾರಶಾಹಿಯ ನೂರಾರು ಅಡೆತಡೆಗಳಿಂದ ಅದು ನಿಧಾನಗೊಂಡಿತು. ಇನಾಮ್ ಹಿಡುವಳಿಗಳಿಂದ ಲಾಭ ಪಡೆಯುತ್ತಿದ್ದ ಅಧಿಕಾರಶಾಹಿಯು ಈ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಆಸಕ್ತಿ ತೋರಲಿಲ್ಲವೆಂದು ಹೇಳಲಾಗುತ್ತದೆ. ಈ ಕಾಯ್ದೆಯನ್ನು ಜಾರಿಗೆ ತರಲು ವಿಶೇಷವಾದ ಆಡಳಿತ ವ್ಯವಸ್ಥೆಯನ್ನು ಮಾಡಲಿಲ್ಲ. ಯಾವ ಗೇಣಿದಾರ ತನ್ನ ಮಾಲೀಕತ್ವವನ್ನು ಸ್ಥಾಪಿಸಬೇಕಾಗಿದ್ದರೆ ಅವನು ನ್ಯಾಯಾಲಯಕ್ಕೆ ಹೋಗಬೇಕಾಗಿತ್ತು. ಇದಲ್ಲದೆ, 1495ರ ಕಾಯ್ದೆಯ ಕೆಲವು ನಿರ್ದಿಷ್ಟ ಬಗೆಯ ಇನಾಂಗಳನ್ನು ಮಾತ್ರ ರದ್ದುಪಡಿಸಿತು.
ಆದರೆ 1947ರಲ್ಲಿ ಕರ್ನಾಟಕ ಭೂಸುಧಾರಣಾ (ಘಿ;್ಜ‘್ದಪಡಿ) ಕಾಯ್ದೆಯು ಜಾರಿಗೆ ಬಂದ ನಂತರವೂ ಕೆಲವು ಬಗೆಯ ಇನಾಂಗಳು ರದ್ದಾಗಿರಲಿಲ್ಲ. ಇದಕ್ಕಾಗಿ ಕರ್ನಾಟಕದ ಕೆಲವು ಇನಾಂ ರದ್ದತಿ ಕಾಯ್ದೆ 1977ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯು ಎಲ್ಲಾ ಇನಾಂ ವಿವಾದಗಳನ್ನು ಮಧ್ಯಸ್ಥಿಕೆಗಾಗಿ ಲ್ಯಾಂಡ್ ಟ್ರಿಬ್ಯೂನಲ್ಗೆ ವರ್ಗಾಯಿಸಿತು. ಇನಾಂ ರದ್ದತಿ ಕಾಯ್ದೆಯ ಪ್ರಗತಿಯು 1986ರ ಡಿಸೆಂಬರ್ರವರಗೆ ಹೀಗಿದೆ.

ಆಧಾರ : ರೆವಿನ್ಯೂ ಸಚಿವಾಲಯ ಕರ್ನಾಟಕ ಸರ್ಕಾರದ ಖಾಸಗಿ ಪ್ರಸರಣ.

ಇನಾಂ ರದ್ಧತಿಯ ಅಪೂರ್ಣ ಕಾರ್ಯವು ಗೇಣಿ ಸುಧಾರಣೆಯ ಹಾಗೆ ಇನ್ನೂ ಸಾರ್ವಜನಿಕ ಚರ್ಚೆಯ ವಸ್ತುವಾಗದೆ ಇರುವುದು ಕರ್ನಾಟಕದ ಕೃಷಿ ಸುಧಾರಣೆಗಳ ಮೇಲೆ ಮಾಡಿದ ಟಿಪ್ಪಣಿಯಂತಿದೆ.
1956ರಲ್ಲಿ ಕರ್ನಾಟಕ ರಾಜ್ಯದ ಪುನಾರಚನೆಯೊಂದಿಗೆ, ರಾಜ್ಯ ಪುನರ್ ನಿರ್ಮಾಣ ಆಯೋಗದ ಶಿಫಾರಸಿನಂತೆ ಅದು ವಿಭಿನ್ನ ಕೃಷಿ ರಚನೆಗಳು ಹಾಗೂ ರೂಢಿಯಲ್ಲಿದ್ದ ಸಂಬಂಧಗಳನ್ನು ಹೊಂದಿದ್ದ ಭಾಗಗಳನ್ನು ಪಡೆದುಕೊಂಡಿತು. ಇದರೊಂದಿಗೆ ಈ ವಿಭಾಗಗಳಲ್ಲಿ ಭೂ ಕಾಯಿದೆಯು ಬೇರೆ ಬೇರೆ ರೂಪದ್ದಾಗಿತ್ತು. ಈ ವಿಭಾಗಗಳಲ್ಲಿ ನಿರ್ದಿಷ್ಟ ಸಮಸ್ಯೆಗಳನ್ನು ಎತ್ತಿ ಹಿಡಿಯುವ ಸಂಘಟಿತ ರೈತ ಚಳವಳಿಗಳಿದ್ದವು. ಉದಾಹರಣೆಗೆ, ಉತ್ತರ ಕನ್ನಡದಲ್ಲಿ ಬಹಳ ತೀವ್ರವಾಗಿ ಹಾಗೂ ವಿಭಿನ್ನವಾಗಿ ಬಹಳ ದೀರ್ಘ ಕಾಲದವರೆಗೆ ನಡೆದ ರೈತ ಚಳವಳಿಯು ಆ ಕಾಲದಲ್ಲಿಯೇ ಅತ್ಯಂತ ಸುಧಾರಿತ ಭೂ ಕಾಯ್ದೆಗಳನ್ನು ಜಾರಿಗೆ ತರುವಲ್ಲಿ ಸಫಲವಾಗಿತ್ತು.
ರಾಜ್ಯದ ಪುನಾರಚನೆಯೊಂದಿಗೆ ಸರ್ಕಾರವು ರಾಜ್ಯದಲ್ಲೆಲ್ಲಾ ಅಸ್ತಿತ್ವದಲ್ಲಿರುವ ಎಲ್ಲಾ ಕಾನೂನು ಹಾಗೂ ಪದ್ಧತಿಗಳಿಗೆ ಒಂದು ಸರಿಯಾದ ರೂಪ ಕೊಡುವ ಉದ್ದೇಶದಿಂದ ಕೃಷಿ ಸಂಬಂಧಿ ವಿಷಯಗಳ ಮೇಲೆ ಒಂದು ವ್ಯವಸ್ಥಿತ ನಿಯಂತ್ರಣವನ್ನು ತರಲು ಯೋಚಿಸಿತು. ಇದರೊಂದಿಗೆ ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳು, ಯೋಜನಾ ಆಯೋಗ ಹಾಗೂ ಕಾಂಗ್ರೆಸ್ ಪಕ್ಷದ ನಿರ್ಣಯಗಳು ಮಧ್ಯಸ್ಥಿಕೆಯ ರದ್ದತಿಗೆ ಹಾಗೂ ಗರಿಷ್ಠ ಭೂಮಿತಿಯನ್ನು ಜಾರಿಗೆ ತರಲು ಒತ್ತಾಯಿಸಿದವು. 50ರ ದಶಕದ ಸಮಾಜವಾದಿಗಳು ಹಾಗೂ ಕಮ್ಯುನಿಷ್ಟರ ನೇತೃತ್ವದಲ್ಲಿ ಕರ್ನಾಟಕದ ಹಲವಾರು ರೈತ ಚಳವಳಿಗಳು – ಅವುಗಳಲ್ಲಿ ಮುಖ್ಯವಾದದ್ದು ಕಾಗೋಡು ಸತ್ಯಾಗ್ರಹ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯ ಕಹಳೆ ಊದಿದವು. ಸರ್ಕಾರವು ಇಂಥ ಸಾಮೂಹಿಕ ಒತ್ತಾಯಕ್ಕೆ ಮಣಿದು ‘ಮೈಸೂರು ಗೇಣಿ ಪದ್ಧತಿ ಹಾಗೂ ಕೃಷಿ ಭೂಮಿ ಕಾನೂನು ಸಮಿತಿ’ ಎಂಬ ಉನ್ನತ ಸಮಿತಿಯನ್ನು 1957ರಲ್ಲಿ ಬಿ.ಡಿ.ಜತ್ತಿಯವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಿತು. ಈ ಸಮಿತಿಯ ಶಿಫಾರಸ್ಸಿನಂತೆ ವಿಧಾನಸಭೆಯಲ್ಲಿ ಒಂದು ಮಸೂದೆಯನ್ನು 1961ರಲ್ಲಿ ಜಾರಿಗೆ ತರಲಾಯಿತು. ಅದು 1962ರಲ್ಲಿ ರಾಷ್ಟ್ರಪತಿಯವರ ಅಂಗೀಕಾರವನ್ನು ಪಡೆಯಿತಾದರೂ, 1965ರಲ್ಲಿ ಅದು ಕಾರ್ಯರೂಪಕ್ಕೆ ಬಂದಿತು.
ಹಿಂದಿರುಗಿ ನೋಡಿದಾಗ, ಭೂೊಸುಧಾರಣೆಯ ಕೆಲವು ಪರಿಕಲ್ಪನೆ ಹಾಗೂ ಅಂಶಗಳನ್ನು ಪರಿಷ್ಕೃತಗೊಳಿಸಿ, ಅದರ ಮೂಲಕ ಕೃಷಿ ಸಂಬಂಧಿ ವಿಷಯಗಳನ್ನು ಯೋಜನೆಗೆ ಹಾಗೂ ಕಾರ್ಯರೂಪಕ್ಕೆ ಅನುಕೂಲಕರವಾಗುವಂತೆ ಮಾಡಿದ್ದು, ಜತ್ತಿ ಆಯೋಗದ ಪ್ರಮುಖ ಸಾಧನೆಯಾಗಿದೆ. ಆಯೋಗದ ಮೇಲಿನ ಅಂಶಗಳ ಖಚಿತತೆ ಹಾಗೂ ಸ್ಪಷ್ಟತೆ ಮುಂದೆ ಬಹಳ ಪ್ರಯೋಜನಕಾರಿಯಾಗಿ ಪರಿಣಮಿಸಿತು. ಈ ಆಯೋಗದ ಬಹಳ ಮಹತ್ವದ ಶಿಫಾರಸ್ಸುಗಳೆಂದರೆ ಕೆಲವು ಸುಧಾರಣೆಗಳೊಂದಿಗೆ ಜಾರಿಗೆ ತಂದ ಶಾಶ್ವತ ಗೇಣಿ ಪದ್ಧತಿ ಹಾಗೂ ಬಾಡಿಗೆಯ ಕಡಿತ ಹಾಗೂ ಉನ್ನತೀಕರಣ. ಅದು ಕೆಲವು ಬಗೆಯ ಭೂಮಿಯ ಗೇಣಿದಾರರಿಗೆ ಮಾಲೀಕತ್ವದ ಹಕ್ಕುಗಳನ್ನು ನೀಡಿ, ಅದಕ್ಕೊಂದು ನಿಯಮಾವಳಿಯನ್ನು ಸಹ ರೂಪಿಸಿತು. ಅದು ಗರಿಷ್ಠ ಮಿತಿಯನ್ನು 27 ಎಕರೆಗೆ ಸೀಮಿತಗೊಳಿಸಿತು. ಈ ವಿಷಯಗಳನ್ನು ಕಾರ್ಯರೂಪಕ್ಕೆ ತಂದಿದ್ದು ಬರಿ ಹಾಳೆಯ ಮೇಲೆ ಮಾತ್ರ. ಇವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಆಡಳಿತ ಯಂತ್ರದ ಅಸಮರ್ಥತೆ ಹಾಗೂ ಇಚ್ಛಾಶಕ್ತಿಯ ಕೊರತೆ. ಇಂಥ ದೋಷಗಳಿಂದ ಗೇಣಿದಾರರಿಗೆ ನಷ್ಟವೇ ಆಯಿತು. ಭೂಮಿಯನ್ನು ಹಿಂದಕ್ಕೆ ಪಡೆಯುವ ಕೆಲವು ಅಂಶಗಳ ಸಹಾಯದಿಂದ ದೊಡ್ಡ ಪ್ರಮಾಣದಲ್ಲಿ ಗೇಣಿದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮತ್ತೆ ಮತ್ತೆ ನಡೆಯಿತು. ಗೇಣಿದಾರರಿಗೆ ಭದ್ರತೆ ನೀಡಿದ ಭೂಮಾಲೀಕರನ್ನು ಕಾನೂನು ಹೆದರಿಸಿತ್ತು. ಗೇಣಿದಾರರಿಗೆ ಯಥಾಸ್ಥಿತಿ ಯನ್ನು ಕಾಪಾಡಿಕೊಳ್ಳುವುದು ರಾಜ್ಯದ ಕೆಲವು ಭಾಗಗಳಲ್ಲಿ ಮಾತ್ರ ಇದ್ದ ರೈತ ಸಂಘಟನೆಗಳಿಂದ ಮಾತ್ರ ಸಾಧ್ಯವಿತ್ತು.
1961ರ ಕಾಯ್ದೆಯು ರೈತರ ಬೇಡಿಕೆಗಳಿಗೆ ತೃಪ್ತಿಕರ ಉತ್ತರ ನೀಡಲಿಲ್ಲ. ಎಲ್ಲೆಲ್ಲಿ ಇದಕ್ಕೆ ವಿರುದ್ಧವಾಗಿ ಸಂಘಟಿತ ರೂಪದ ರೈತ ಪ್ರತಿಭಟನೆ ಕಂಡುಬಂದಿತೋ, ಅಲ್ಲಿ ಅದನ್ನು ಕಾಂಗ್ರೆಸ್ ವಿರುದ್ಧದ ಚುನಾವಣಾ ಶಕ್ತಿಯಾಗಿ ಬಳಸಿಕೊಳ್ಳಲಾಯಿತು. ಉದಾಹರಣೆಗೆ ಪಿ.ಎಸ್.ಪಿ 1967ರ ಚುನಾವಣೆಯಲ್ಲಿ ಈ ಕಾಯ್ದೆಯನ್ನು ಪ್ರಮುಖ ಅಸ್ತ್ರವಾಗಿ ಬಳಸಿಕೊಂಡಿತು. ರೈತರನ್ನು ಸಂಘಟಿಸುವಲ್ಲಿ ಸಮಾಜವಾದಿಗಳು ಮುಖ್ಯ ಪಾತ್ರ ವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪಿ.ಎಸ್.ಪಿ ಮತ್ತು ಮೂರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತು ಮತ್ತು ಅದು ಬೆಂಬಲಿಸಿದ ಇಬ್ಬರು ಅಭ್ಯರ್ಥಿಗಳು ವಿಧಾನಸಭೆಗೆ ಆರಿಸಿ ಬಂದರು. ಇನ್ನೊಂದು ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ನಾಲ್ಕು ಪಿ.ಎಸ್.ಪಿ ಅಭ್ಯರ್ಥಿಗಳು ಆರಿಸಿ ಬಂದರು. ಗೇಣಿದಾರರ ವಿಷಯವನ್ನು ಪ್ರತಿಪಾದಿಸಿದ ಕಮ್ಯೂನಿಸ್ಟ್ ಪಾರ್ಟಿಯೂ ಸಹ ಚುನಾವಣೆಗಳಲ್ಲಿ ಹೆಚ್ಚಿನ ಸಾಧನೆ ಮಾಡಲಿಲ್ಲ. ಸಿಪಿಐ ಹಾಗೂ ಸಿಪಿಐ(ಮಾರ್ಕ್ಸಿಸ್ಟ್)ಗಳೆಂಬ ಎರಡು ಬಣಗಳಲ್ಲಿ ಹಂಚಿ ಹೋದ ಕಮ್ಯೂನಿಸ್ಟ್ ಪಕ್ಷಕ್ಕೆ ರೈತ ಚಳವಳಿಯನ್ನು ಮುಂದೊಯ್ಯಲು ಸಾಧ್ಯವಾಗಲಿಲ್ಲ.
ಬಹುಪಾಲು ಹಿಡುವಳಿ ಜಮೀನು ಗೇಣಿದಾರರ ಹಿಡಿತದಲ್ಲಿದ್ದ ಕಡೆಯಲ್ಲೆಲ್ಲ ರೈತರ ಅಸಂತೃಪ್ತಿಯು ದಟ್ಟವಾಗಿದ್ದರೂ, ಅದು ಸಂಘಟಿತವಾಗಿರಲಿಲ್ಲ ಹಾಗೂ ಅದು ರಾಜಕೀಯವಾಗಿಯೂ ಶಿಥಿಲ ರೂಪದಲ್ಲಿತ್ತು. ಆದ್ದರಿಂದ ಅದಕ್ಕೆ ಕಾಯ್ದೆಯನ್ನು ಸುಧಾರಿಸುವಂತೆ ಒತ್ತಾಯ ಹಾಕುವ ಶಕ್ತಿ ಇರಲಿಲ್ಲ. ಆದರೂ ಅದು ರೈತರ ಬೇಡಿಕೆ ಗಳನ್ನು ಈಡೇರಿಸುವದರ ರಾಜಕೀಯ ಲಾಭಗಳನ್ನು ತೋರಿಸಿಕೊಟ್ಟಿತು. ಹಾಗೆಯೇ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಆಗುವ ಅನಾಹುತಗಳ ಮುನ್ನೆಚ್ಚರಿಕೆಯನ್ನು ನೀಡಿತು.
ಕರ್ನಾಟಕದಲ್ಲಿ ಭೂಸುಧಾರಣೆ ಭಾರತದ ರಾಜಕೀಯದಲ್ಲಿ ಆದ ಬೆಳವಣಿಗೆಗಳ ಜೊತೆಯಲ್ಲಿಯೇ ರೂಪುಗೊಂಡಿತು. 1967ರ ಚುನಾವಣೆಗಳು ಕಾಂಗ್ರೆಸ್ನ ಕುಗ್ಗಿದ ಜನಪ್ರಿಯತೆಯನ್ನು ತೋರಿಸಿಕೊಟ್ಟವು. 1969ರಲ್ಲಿ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್(ಓ) ಹಾಗೂ ಕಾಂಗ್ರೆಸ್(ಆರ್) ಎಂಬ ಎರಡು ಭಾಗಗಳಾಗಿ, ಕಾಂಗ್ರೆಸ್(ಆರ್) ಜನಪ್ರಿಯ ಕಾರ್ಯಕ್ರಮಗಳನ್ನು ಆರಂಭಿಸಿತು. ಹಾಗಾಗಿ ಅದು ಭೂ ಸುಧಾರಣೆಗಳನ್ನು ತೀವ್ರಗೊಳಿಸು ವಂತೆ ಕರೆ ನೀಡಿತು. ಕರ್ನಾಟಕದ ಶಾಸನ ಸಭೆಯ ಬಹುಮತ ಕಾಂಗ್ರೆಸ್(ಓ)ನ ಕೈಯಲ್ಲಿದ್ದರೂ, ದೇವರಾಜ ಅರಸು ಅವರ ನೇತೃತ್ವದಲ್ಲಿದ್ದ ಕಾಂಗ್ರೆಸ್(ಆರ್) ಭೂ ಸುಧಾರಣೆಗೆ ನೀಡಬೇಕಾಗಿದ್ದ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲಿಲ್ಲ ಮತ್ತು 1967ರಲ್ಲಿ ಉದ್ಭವಗೊಂಡ ನಕ್ಸಲ್ ಬಾರಿ ಚಳವಳಿ ಹಾಗೂ ಸಿಪಿಐ (ಎಮ್.ಎಲ್)ಯು 1969ರಲ್ಲಿ ಸಶಸ್ತ್ರ ಹೋರಾಟದ ಮೂಲಕ ಕೃಷಿ ಕ್ರಾಂತಿಗೆ ನೀಡಿದ ಕರೆ ಇವುಗಳು ಕೃಷಿ ಸಂಬಂಧಿ ವಿಷಯಗಳನ್ನು ದಿವ್ಯ ನಿರ್ಲಕ್ಷ್ಯದಿಂದ ನಿಭಾಯಿಸುತ್ತಿದ್ದ ಆಳುವ ವರ್ಗಗಳಿಗೆ ದಿಗ್ಭ್ರಾಂತಿ ಉಂಟುಮಾಡಿದವು. ಇದಕ್ಕೆ ಜೊತೆಯಾಗಿ, ರಾಷ್ಟ್ರೀಯ ನಾಯಕರು ಹಾಗೂ ಯೋಜನಾ ಆಯೋಗಗಳು ಭೂೊಸುಧಾರಣೆಗಳನ್ನು ಹಾಡಿ ಹೊಗಳಿದ್ದೇ ಅಲ್ಲದೆ, ಕೇಂದ್ರ ಗೃಹಖಾತೆಯು ಭೂೊಸುಧಾರಣೆಗಳ ಮೂಲಕ ರೈತವರ್ಗವನ್ನು ಆಮೂಲಾಗ್ರವಾಗಿ ಬದಲಾಯಿಸಬಹುದೆಂಬ ಅಂಶವನ್ನು ಮನಗಂಡು ಅದನ್ನು ಜಾರಿಗೊಳಿಸಲು ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತು. 1972ರಲ್ಲಿ ಕೇಂದ್ರ ಸರ್ಕಾರವೂ ಸಹ ಭೂಸುಧಾರಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ದೇಶನ ನೀಡಿತು.
ಹೀಗೆ ಕೇಂದ್ರವು ಕಾಳಜಿ ತೋರಿಸಿದ ತಕ್ಷಣ ರಾಜ್ಯದ ಕಾಂಗ್ರೆಸ್(ಆರ್)ನ ಎಲ್ಲ ಘಟಕಗಳು ಹಾಗೂ ಎಲ್ಲ ಮುಖ್ಯಮಂತ್ರಿಗಳು ಭೂಸುಧಾರಣೆಗಳನ್ನು ಜಾರಿಗೊಳಿಸಲು ಮುಂದಾಗಲಿಲ್ಲ ಮತ್ತು ಕಾಂಗ್ರೆಸ್ ನಾಯಕತ್ವವು ಭೂಸುಧಾರಣೆಗಳ ವಿಷಯದಲ್ಲಿ ಎಷ್ಟು ಆಸಕ್ತಿ ತೋರಿಸಿತು ಎಂಬುದು ವಿವಾದಾಸ್ಪದ ಅಂಶ. ಇದಕ್ಕಿಂತ ಮುಖ್ಯ ವಾದದ್ದೇನೆಂದರೆ, ಮೇಲ್ವರ್ಗದ ಭೂಮಾಲೀಕರ ಬೆಂಬಲ ಪಡೆದಿದ್ದ ಕಾಂಗ್ರೆಸ್ (ಓ)ನೊಂದಿಗೆ ರಾಜಕೀಯ ಸೆಣೆಸಾಟದಲ್ಲಿ ತೊಡಗಿದ್ದ ಕಾಂಗ್ರೆಸ್(ಆರ್)ಗೆ ಪ್ರತ್ಯೇಕ ರಾಜಕೀಯ ಶಕ್ತಿಯಾಗಿ ಬೆಳೆಯಲು ಗ್ರಾಮೀಣ ಜನತೆಯ ಬೆಂಬಲ ಗಳಿಸಿಕೊಳ್ಳುವುದು ಅಗತ್ಯವಾಗಿತ್ತು. ಕರ್ನಾಟಕದ ಅಸಂತೃಪ್ತಿಯನ್ನು ಗ್ರಹಿಸಿ ಅದನ್ನು ಭೂಸುಧಾರಣೆಗಳ ಮೂಲಕ ಶಮನಗೊಳಿಸಲು ಯತ್ನಿಸಿದ ದೇವರಾಜ ಅರಸು ಅವರ ರಾಜಕೀಯ ಚಾಣಾಕ್ಷತನವನ್ನು ಇದರಿಂದ ಅರ್ಥ ಮಾಡಿಕೊಳ್ಳಬಹುದು. ಈ ರಾಜಕೀಯ ಸಂದಿಗ್ಧತೆಯನ್ನು ಅರ್ಥ ಮಾಡಿಕೊಂಡರೆ ಅರಸು ಅವರ ಕಾಲದಲ್ಲಿ ಜಾರಿಗೆ ಬಂದ ಭೂ ಸುಧಾರಣೆಗಳ ಮಿತಿ ಹಾಗೂ ಸಾಧ್ಯತೆಗಳು ಗೊತ್ತಾಗುತ್ತವೆ.

ಕರ್ನಾಟಕ ಭೂಸುಧಾರಣಾ (ತಿದ್ದುಪಡಿ) ಕಾಯಿದೆ 1974
1961ರ ಕಾಯಿದೆಗೆ ಹೋಲಿಸಿದರೆ 1974ರ ಭೂ ಸುಧಾರಣಾ ಕಾಯ್ದೆಯು ಭಾರತದ ಬೇರೆಲ್ಲ ಭೂಕಾಯಿದೆಗಳ ಅಸ್ಪಷ್ಟತೆ ಹಾಗೂ ಕೊರತೆಗಳಿಂದ ದೂರವಾಗಿತ್ತು. ಅದರ ಮುಖ್ಯ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.
1. ಅದು ಎಲ್ಲ ರೀತಿಯ ಗೇಣಿಯನ್ನು ಒಂದೇ ಬಾರಿಗೆ ರದ್ದುಗೊಳಿಸಿತು. ಸೈನಿಕರಿಗೆ ಹಾಗೂ ನಾವಿಕರಿಗೆ ಇದರಿಂದ ವಿನಾಯಿತಿ ನೀಡಿ, ಕೆಲವು ನಿಬಂಧನೆಗಳ ಮೇಲೆ ಭೂಮಿಯನ್ನು ಗುತ್ತಿಗೆ ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಖಾಸಗಿ ಕೃಷಿಯನ್ನು ಸ್ವಂತ ಕೂಲಿಕಾರರಿಂದ ಅಂದರೆ ಕುಟುಂಬದ ಸದಸ್ಯರು ಅಥವಾ ಬಾಡಿಗೆ ಕೂಲಿಕಾರರ ಸಹಾಯದಿಂದ ಸ್ವಯಂ ಮಾರ್ಗದರ್ಶನದಲ್ಲಿ ನಡೆಸಬಹುದಾಗಿತ್ತು. ಇನ್ನೊಂದು ಅರ್ಥದಲ್ಲಿ ಬಂಡವಾಳಶಾಹಿ ಯುಗಕ್ಕಿಂತ ಮುಂಚಿನ ಎಲ್ಲಾ ಕೃಷಿ ಸಂಬಂಧಗಳನ್ನು ಕಾನೂನು ರೀತ್ಯಾ ರದ್ದುಗೊಳಿಸಲಾಯಿತು.
2. ಎಲ್ಲಾ ಗೇಣಿಯನ್ನು, ಉಪಗೇಣಿಯನ್ನು ಒಳಗೊಂಡಂತೆ, ಒಂದೇ ಗುಂಪಿಗೆ ಸೇರಿಸ ಲಾಯಿತು ಮತ್ತು ಎಲ್ಲದರ ಮೇಲೂ ಸಹ ಹಕ್ಕುಗಳನ್ನು ಪಡೆಯುವ ರೀತಿ ಒಂದೇ ಆಗಿತ್ತು.
3. ಕಾಯ್ದೆಯ ವಿಶೇಷ ಸೆಕ್ಷನ್ 1.1.1979ರ ಪ್ರಕಾರ ತನ್ನದಲ್ಲದ ಭೂಮಿಯ ಮೇಲೆ ವಾಸ ಮಾಡುತ್ತಿದ್ದ ಮನೆಯ ಕೃಷಿ ಕಾರ್ಮಿಕನೊಬ್ಬ ಆ ಮನೆಯ ಮೇಲೆ ತನ್ನ ಹಕ್ಕನ್ನು ಸ್ಥಾಪಿಸಬಹುದಾಗಿತ್ತು.
4. ಪುನರ್ ಸ್ವಾಧೀನದ ಅವಕಾಶವನ್ನು ಸೈನಿಕರಿಗೆ ಹಾಗೂ ನಾವಿಕರಿಗೆ, ಕೆಲವು ನಿರ್ದಿಷ್ಟ ನಿರ್ಬಂಧನೆಗಳ ಮೇಲೆ ನೀಡಲಾಗಿತ್ತು. ಮತ್ತೆ ಗುತ್ತಿಗೆ ನೀಡುವುದನ್ನು ನಿಷೇಧಿಸ ಲಾಗಿತ್ತು. ಹಾಗೊಮ್ಮೆ ಗುತ್ತಿಗೆ ನೀಡಿದಲ್ಲಿ ಆ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಹುದಾಗಿತ್ತು.
5. ಕಾಯ್ದೆಯ ಪ್ರಕಾರ ಗೇಣಿಯ ಎಲ್ಲ ಭೂಮಿಯೂ ಸರ್ಕಾರದ ಸ್ವಾಧೀನಕ್ಕೆ ಸೇರಿದ್ದಾಗಿತ್ತು. ಭೂಮಿಯ ಮೇಲೆ ಹಕ್ಕನ್ನು ಪಡೆಯಬಯಸುವವರು ಹಾಗೂ ಪರಿಹಾರ ಪಡೆಯಬೇಕಾದವರು ಟ್ರಿಬ್ಯುನಲ್ಗಳ ಮೂಲಕ ಅರ್ಜಿ ಹಾಕಬೇಕಿತ್ತು.
6. ಮಧ್ಯಸ್ಥಿಕೆ ನಿರ್ಣಯ ಹಾಗೂ ವಿವಾದಗಳ ಪರಿಹಾರಕ್ಕಾಗಿ ರಚಿಸಲಾದ ಟ್ರಿಬ್ಯುನಲ್ ಗಳು ಭೂಮಿಯು ಗೇಣಿಗೆ ನೀಡಲಾಗಿತ್ತೆ, ಗೇಣಿದಾರನಿಗೆ ಸ್ವಾಧೀನದ ಹಕ್ಕು ನೀಡಬೇಕೆ ಎಂಬ ವಿಷಯಗಳನ್ನು ನಿರ್ಧರಿಸಬೇಕಿತ್ತು. ಹಾಗೆಯೇ ಅವು ಪರಿಹಾರದ ಮೊತ್ತವನ್ನೂ ನಿಗದಿಪಡಿಸಬೇಕಿತ್ತು.
7. ಟ್ರಿಬ್ಯುನಲ್ಗಳ ನಿರ್ಧಾರ ಅಂತಿಮವಾಗಿತ್ತು. ಯಾವುದೇ ಸಿವಿಲ್ ಕೋರ್ಟ್ ಈ ವಿಷಯಗಳ ಮೇಲೆ ತಮ್ಮ ವ್ಯಾಪ್ತಿಯನ್ನು ಹೊಂದಿರಲಿಲ್ಲ. ಯಾರಿಗಾದರೂ ಆ ನಿರ್ಧಾರ ಅಸಮರ್ಪಕ ಎನಿಸಿದರೆ ಸಂವಿಧಾನದ ವಿಧಿ 226 ಅಥವಾ 227ರ ಪ್ರಕಾರ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಹಾಕಬಹುದಾಗಿತ್ತು.
8. ಈ ಕಾಯ್ದೆಯ ಅಡಿಯಲ್ಲಿ ಅಧಿಕಾರಶಾಹಿಯನ್ನು ಹೊರತುಪಡಿಸಿ, ಈ ಟ್ರಿಬ್ಯುನಲ್ ಗಳನ್ನು ಸ್ಥಾಪಿಸಲಾಯಿತು. ಅವುಗಳನ್ನು ಅಸಿಸ್ಟೆಂಟ್ ಕಲೆಕ್ಟರ್ನ ಶ್ರೇಣಿಯ ಅಧಿಕಾರಿ ಯೊಬ್ಬ ಕಾರ್ಯ ನಿರ್ವಹಿಸಬೇಕಿತ್ತು. ಟ್ರಿಬ್ಯೂನಲ್ನ ಇತರ ಸದಸ್ಯರು ಸರ್ಕಾರಿ ಅಧಿಕಾರಗಳಲ್ಲದವರಾಗಿದ್ದು ಅವರನ್ನು ಸರ್ಕಾರವು ಸದಸ್ಯರಿಗಿರುವ ಕೃಷಿ ತಿಳುವಳಿಕೆಯ ಆಧಾರದ ಮೇಲೆ ನೇಮಿಸುತ್ತಿತ್ತು. ಸದಸ್ಯರಲ್ಲಿ ಒಬ್ಬರು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದವರಾಗಿರಬೇಕಿತ್ತು. ಕಕ್ಷಿದಾರರ ಪರವಾಗಿ ವಕೀಲರು ಟ್ರಿಬ್ಯುನಲ್ನ ಕಲಾಪಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿತ್ತು. ಟ್ರಿಬ್ಯುನಲ್ಗಳು ತಮ್ಮ ಕಾರ್ಯವಿಧಾನ ಹಾಗೂ ಘೋಷಣೆಗಳನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಬೇಕಾಗಿತ್ತು. ಅವುಗಳಿಗೆ ಮಧ್ಯಂತರ ಆದೇಶಗಳನ್ನು ನೀಡುವ, ತಾತ್ಕಾಲಿಕ ಆಜ್ಞೆಗಳನ್ನು ಹೊರಡಿಸುವ ಅಧಿಕಾರ ನೀಡಲಾಗಿತ್ತು.

 

9. ಉಚ್ಚ ನ್ಯಾಯಾಲಯಗಳಿಗೆ ಯಾರಾದರೂ ರಿಟ್ ಅರ್ಜಿ ಹಾಕಿದಾಗ, ಸರ್ಕಾರವು ಬಡ ಗೇಣಿದಾರರ ಸಹಾಯಕ್ಕಾಗಿ ಲೀಗಲ್ ಏಡ್ ಸೆಲ್ಗಳನ್ನು ರಚಿಸುತ್ತಿತ್ತು.

10. ಭೂಮಿಯ ವಾರ್ಷಿಕ ಆದಾಯದ ಮೇಲೆ ಬಾಡಿಗೆಯನ್ನು ನಿರ್ಧರಿಸಲಾಗುತ್ತಿತ್ತು. ಈ ಬಾಡಿಗೆಯು ಆದಾಯದ 10 ಪಟ್ಟು ಆಗಿರುತ್ತಿದ್ದು, ಅದಕ್ಕೆ ನೀರಿನ ದರವನ್ನೂ ಕೆಲವೊಮ್ಮೆ ಸೇರಿಸಲಾಗಿತ್ತು. ಕಾಲಮಾನದ ಏರುಪೇರುಗಳಿಗೆ ಅನುಗುಣವಾಗಿ ಬದಲಾಗದೆ ಇರಲೆಂದು ಬಾಡಿಗೆಯನ್ನು ನಿಗದಿಪಡಿಸಲಾಗಿತ್ತು.

11. ಭೂ ಮಾಲೀಕರಿಗೆ ನೀಡಲಾಗುತ್ತಿದ್ದ ಪರಿಹಾರವು ಮಾರುಕಟ್ಟೆ ದರಕ್ಕೆ ಅನುಗುಣ ವಾದದ್ದಾಗಿರಲಿಲ್ಲ. ಬದಲಾಗಿ ಅದು ಬಾಡಿಗೆ ದರಕ್ಕೆ ಅನುಗುಣವಾಗಿದ್ದು, ಒಣ ಭೂಮಿಗೆ ಬಾಡಿಗೆ ದರದ 20 ಪಟ್ಟು ಪರಿಹಾರ ನೀಡಿದರೆ, ನೀರಾವರಿ ಭೂಮಿಗೆ ಬಾಡಿಗೆ ದರದ 15 ಪಟ್ಟು ಪರಿಹಾರ ನೀಡಲಾಗುತ್ತಿತ್ತು. ಗೇಣಿ ಭೂಮಿಯಲ್ಲಿ ಭೂ ಮಾಲೀಕರು ಯಾವುದೇ ಕಟ್ಟಡಗಳನ್ನು ಕಟ್ಟಿದ್ದರೆ ಅವುಗಳ ಪರಿಹಾರದ ಮೊತ್ತವನ್ನು ಟ್ರಿಬ್ಯುನಲ್ ನಿರ್ಧರಿಸಬೇಕಾಗಿತ್ತು. ಪರಿಹಾರದ ಪಾವತಿಯ ವಿಧಾನವು ಬೇರೆ ಬೇರೆ ಗುಂಪಿನ ಭೂ ಮಾಲೀಕರಿಗೆ ಬೇರೆ ಬೇರೆ ರೂಪದ್ದಾಗಿತ್ತು. ಗೇಣಿದಾರನು ಪರಿಹಾರದ ಮೊತ್ತವನ್ನು ಒಮ್ಮೆಗೆ ಅಥವಾ ತಕ್ಷಣ ಆಂಶಿಕ ಮೊತ್ತವೊಂದನ್ನು ನೀಡಿ, ಉಳಿದದ್ದನ್ನು 20 ವರ್ಷಗಳ ಅವಧಿಯಲ್ಲಿ ವಾರ್ಷಿಕ ಕಂತುಗಳ ರೂಪದಲ್ಲಿ ನೀಡಬಹುದಾಗಿತ್ತು. ಇದಕ್ಕೆ ಹಣವನ್ನು ರಾಜ್ಯದ ಭೂ ಅಭಿವೃದ್ದಿ ಬ್ಯಾಂಕ್ಗಳ ಮೂಲಕ ಸಾಲ ಪಡೆಯಬಹುದಾಗಿತ್ತು. ನಂತರ ಕೆಲವು ತಿದ್ದುಪಡಿಗಳ ಮೂಲಕ ಸಣ್ಣ ಗುತ್ತಿಗೆಯ ಗೇಣಿದಾರರಿಂದ ಪರಿಹಾರದ ಮೊತ್ತವನ್ನು ಪಡೆಯುವುದನ್ನು ಮನ್ನಾ ಮಾಡಲಾಯಿತು.ೊಆ ಮೊತ್ತವನ್ನು ಸರ್ಕಾರವೇ ಭೂಮಾಲೀಕರಿಗೆ ಪಾವತಿ ಮಾಡುತ್ತಿತ್ತು. ಸಾಮಾನ್ಯವಾಗಿ ಪರಿಹಾರದ ಮೊತ್ತ ಕಡಿಮೆ ಆಗಿರುತ್ತಿತ್ತು.
12. ಕಾಯ್ದೆಯು ಬೇರೆ ಬೇರೆ ರೀತಿಯ ಭೂಮಿಗಳಿಗೆ ಅನುಗುಣವಾಗಿ ಗರಿಷ್ಠ ಮಿತಿಯನ್ನು ನಿಗದಿ ಮಾಡಿತ್ತು. ಐದು ಜನ ಸದಸ್ಯರಿರುವ ಯಾವುದೇ ಕುಟುಂಬಕ್ಕೆ ಇರಬೇಕಾಗಿದ್ದ ಭೂಮಿಯ ಗರಿಷ್ಠ ವಿಸ್ತೀರ್ಣ ಹತ್ತು ಯೂನಿಟ್ ಆಗಿತ್ತು. ಕುಟುಂಬವು ತಂದೆ ತಾಯಿ, ಚಿಕ್ಕ ಮಕ್ಕಳು, ಹಾಗೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಒಳಗೊಂಡಿರಬೇಕಿತ್ತು. ಬೆಳೆದ ವಯಸ್ಸಿನ ಗಂಡು ಮಕ್ಕಳನ್ನು ಪ್ರತ್ಯೇಕ ಕುಟುಂಬಕ್ಕೆ ಸೇರಿಸಲಾಗುತ್ತಿತ್ತು. ಕುಟುಂಬದಲ್ಲಿ ಇನ್ನೂ ಹೆಚ್ಚು ಸದಸ್ಯರಿದ್ದರೆ, ಅವರಿಗೆ ಇನ್ನೂ ಎರಡು ಯೂನಿಟ್ಗಳು ಹೆಚ್ಚು ಸಿಗುತ್ತಿದ್ದವು. ಆದರೆ ಗರಿಷ್ಠ ಹಿಡುವಳಿಯು ಒಂದು ಕುಟುಂಬಕ್ಕೆ 20 ಯೂನಿಟ್ ಮಾತ್ರ ಆಗಿತ್ತು.
13. ಭೂಮಿಯನ್ನು ಅದರ ಗುಣಮಟ್ಟ ಹಾಗೂ ನೀರಾವರಿಯ ಸಾಧ್ಯತೆ ಇವುಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತಿತ್ತು. ಈ ಆಧಾರದ ಮೇಲೆ ಭೂಮಿಯನ್ನು ಶ್ರೇಷ್ಠ ಅಥವಾ ಕನಿಷ್ಠ ಎಂದು ನಾಲ್ಕು ವಿಧದಲ್ಲಿ ವಿಂಗಡಿಸಲಾಗಿತ್ತು. ಒಂದು ಕುಟುಂಬವು 10 ಎಕರೆ ಒಳ್ಳೆಯ ಭೂಮಿಯಿಂದ ಹಿಡಿದು (ಸರ್ಕಾರದ ನೀರಾವರಿ ಸಂಪನ್ಮೂಲಗಳೊಂದಿಗೆ) 54 ಎಕರೆ ಕನಿಷ್ಠ ಗುಣಮಟ್ಟದ ಭೂಮಿಯವರೆಗೆ ಹೊಂದಬಹುದಾಗಿತ್ತು.
14. ಯಾವ ಭೂಮಾಲೀಕರ ಹಿಡುವಳಿಗಳು ಗರಿಷ್ಠ ಮಿತಿಗೆ ತೀರ ಹತ್ತಿರವಾಗಿದ್ದು ಅಥವಾ ಹೆಚ್ಚಿಗೆ ಇದ್ದರೆ (1961 ರಿಂದ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದರಿಂದ), ಅವರು ಟ್ರಿಬ್ಯುನಲ್ನ ಮುಂದೆ ಈ ವಿಷಯವನ್ನು ಘೋಷಿಸಿಕೊಳ್ಳಬೇಕಾಗಿತ್ತು. ಹೀಗೆ ಘೋಷಿಸಿಕೊಳ್ಳದೆ ಇದ್ದಲ್ಲಿ ಅವರು ಹೆಚ್ಚುವರಿ ಭೂಮಿಯನ್ನು ಸರ್ಕಾರವು ಯಾವುದೇ ಪರಿಹಾರ ನೀಡದೆ ಸ್ವಾಧೀನಪಡಿಸಿಕೊಳ್ಳಬಹುದಾಗಿತ್ತು.
15. ಟ್ರಿಬ್ಯುನಲ್ಗಳು ತಹಸೀಲ್ದಾರರ ಪರಿಶೀಲನೆಯ ಆಧಾರದ ಮೇಲೆ ಹೆಚ್ಚುವರಿ ಭೂಮಿಯನ್ನು ನಿರ್ಧರಿಸುತ್ತಿದ್ದವು. ಇದಕ್ಕೆ ನೀಡಬೇಕಾದ ಪರಿಹಾರವನ್ನು ಗೇಣಿಭೂಮಿಗೆ ನೀಡಿದ ರೀತಿಯಲ್ಲಿಯೇ ನೀಡಲಾಗುತ್ತಿತ್ತು.
16. ಶೈಕ್ಷಣಿಕ ಹಾಗೂ ಇತರ ಉದಾರ ಸಂಘಸಂಸ್ಥೆಗಳು 20 ಯೂನಿಟ್ಗಳವರೆಗೆ ಭೂಮಿಯನ್ನು ಹೊಂದಬಹುದಾಗಿತ್ತು. ಇದು ವ್ಯಕ್ತಿಯೊಬ್ಬ ಹೊಂದುವ ಭೂಮಿಗಿಂತ ಎರಡು ಪಟ್ಟು ಹೆಚ್ಚಿನದಾಗಿತ್ತು. ಹಾಗೆಯೇ ಸಕ್ಕರೆ ಕಾರ್ಖಾನೆಗಳು 50 ಯೂನಿಟ್ ಭೂಮಿಯನ್ನು ತಮ್ಮ ಅಗತ್ಯಕ್ಕೆ ಉಳಿಸಿಕೊಳ್ಳಬಹುದಾಗಿತ್ತು. ಆದರೆ ಎಲ್ಲ ಸರ್ಕಾರಿ ಭೂಮಿ, ಹಳೆಯ ಕುದುರೆ ಫಾರ್ಮ್ಗಳು, ಕೋಕೋ, ಕಾಫಿ, ಮೆಣಸು, ರಬ್ಬರ್ ಹಾಗೂ ಟೀ ಪ್ಲಾಂಟೇಶನ್ಗಳಿಗೆ ಗರಿಷ್ಠ ಮಿತಿ ಇರಲಿಲ್ಲ. ಗರಿಷ್ಟ ಮಿತಿಯನ್ನು ನಿಗದಿಪಡಿಸದೆ ಇದ್ದದ್ದನ್ನು ಉತ್ಪಾದಕತೆ, ವಿದೇಶಿ ವಿನಿಮಯ ಇತ್ಯಾದಿಗಳ ಆಧಾರದ ಮೇಲೆ ಸರ್ಕಾರವು ಸಮರ್ಥಿಸಿಕೊಂಡಿತು.
17. ಕಾಯ್ದೆಯ ಪ್ರಕಾರ ಭೂಮಿಯನ್ನು ಪಡೆದುಕೊಂಡ ಗೇಣಿದಾರರು ನಂತರದ 15 ವರ್ಷಗಳವರೆಗೆ ಮಾರುವಂತಿರಲಿಲ್ಲ ಮತ್ತು ಕೃಷಿಯೇತರ ಮೂಲಗಳಿಂದ 12,000 ಕ್ಕಿಂತ ಹೆಚ್ಚು ಆದಾಯವಿರುವ ವ್ಯಕ್ತಿಯೊಬ್ಬ ಭೂಮಿಯನ್ನು ಕೊಳ್ಳುವುದಾಗಲಿ, ಕೊಡುಗೆ ಅಥವಾ ಇತರ ಲೇವಾದೇವಿಯ ಮೂಲಕ ಹೊಂದುವಂತಿರಲಿಲ್ಲ. ಈ ಎರಡು ಅಂಶಗಳು ಗ್ರಾಮೀಣ ಬಡವರ್ಗಗಳನ್ನು ಭೂಮಿಯಿಂದ ದೂರ ಮಾಡುವ ಪ್ರಯತ್ನಗಳಿಂದ ರಕ್ಷಿಸಲು ಸಹಾಯಕವಾಗಿದ್ದವು.
18.ೊಕಾಯ್ದೆಯ ಪ್ರಕಾರ ಎಲ್ಲಾ ಹೆಚ್ಚುವರಿ ಭೂಮಿಯು ಟ್ರಿಬ್ಯುನಲ್ನ ಸ್ವಾಧೀನ ದಲ್ಲಿರುತ್ತಿತ್ತು. ನಂತರ ಈ ಜವಾಬ್ದಾರಿಯನ್ನು ಸಂಬಂಧಪಟ್ಟ ಜಿಲ್ಲಾಧಿಕಾರಿಗೆ ವಹಿಸಲಾಯಿತು. ಈ ಭೂಮಿಯನ್ನು ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಬೇಕಾಗಿತ್ತು. ಈ ಭೂಮಿಯ ಶೇ.50 ಭಾಗವನ್ನು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಮೀಸಲಾಗಿಡಲಾಗಿತ್ತು.
ಮೇಲಿನ ಅಂಶಗಳನ್ನು ಗಮನಿಸಿದರೆ, ಅದರಲ್ಲೂ ಮುಖ್ಯವಾಗಿ ಗೇಣಿ ಪದ್ಧತಿಯ ರದ್ದತಿ, ಟ್ರಿಬ್ಯೂನಲ್ಗಳ ರಚನೆ, ಅವುಗಳ ಕಾರ್ಯವಿಧಾನ, ಇತ್ಯಾದಿಗಳನ್ನು ಗಮನಿಸಿದರೆ, ಈ ಕಾಯ್ದೆಯ ವಿಶಿಷ್ಟತೆ ಅರ್ಥವಾಗುತ್ತದೆ. ಗರಿಷ್ಟ ಮಿತಿಗೆ ಸಂಬಂಧಿಸಿದಂತೆ ಬೆಳೆದ ಗಂಡುಮಕ್ಕಳಿಗೆ, ದೊಡ್ಡ ಕುಟುಂಬಗಳಿಗೆ, ಶೈಕ್ಷಣಿಕ ಹಾಗೂ ಉದಾರ ಸಂಘ ಸಂಸ್ಥೆಗಳು, ಸಕ್ಕರೆ ಕಾರ್ಖಾನೆಗಳು, ಪ್ಲಾಂಟೇಶನ್ಗಳು ಇತ್ಯಾದಿಗಳಿಗೆ ಹಲವಾರು ರಿಯಾಯಿತಿಗಳನ್ನು ನೀಡಲಾಯಿತಾದರೂ ಅವುಗಳು 1972ರ ಕೇಂದ್ರದ ಮಾರ್ಗದರ್ಶಿ ಸೂತ್ರಗಳಿಗೆ ಅನುಗುಣವಾಗಿದ್ದವು.
ಹಲವಾರು ಒಳ್ಳೆಯ ಕಾಯಿದೆಗಳು ಕಾರ್ಯರೂಪಕ್ಕೆ ಬರುವ ಸಂದರ್ಭದಲ್ಲಿ ಸೋಲನ್ನನುಭವಿಸಿರುವ ಉದಾಹರಣೆಗಳು ಸಾಕಷ್ಟು ಇರುವಾಗ ಈ ಕಾಯಿದೆಯು ಯಶಸ್ವಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಉಂಟಾಗುವುದು ಸಹಜವೇ ಆಗಿದೆ.
ರಾಜ್ಯ ಸರ್ಕಾರವು ಜನಗಳಿಗೆ, ಅದರಲ್ಲೂ ಮುಖ್ಯವಾಗಿ ಗೇಣಿದಾರರಿಗೆ ಕಾಯ್ದೆಯ ಅಂಶಗಳು ಮನವರಿಕೆಯಾಗಲೆಂದು ದೊಡ್ಡ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿತು. ಸ್ವತಃ ಮುಖ್ಯಮಂತ್ರಿಗಳೇ ತಮ್ಮ ಎಲ್ಲ ಘನತೆಯನ್ನು ಬದಿಗೊತ್ತಿ ಕಾಯ್ದೆ ಯನ್ನು ಜನಪ್ರಿಯಗೊಳಿಸಲು ಯತ್ನಿಸಿದರು. ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯದ ದಕ್ಷ ಅಧಿಕಾರಿಗಳನ್ನು ನೇಮಿಸಲಾಯಿತು. ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೇರಳವಾಗಿ ನೀಡಲಾಯಿತು. ಟ್ರಿಬ್ಯುನಲ್ನ ಸದಸ್ಯರಾಗಿ ದಕ್ಷರನ್ನು ನೇಮಿಸಲಾಗಿತ್ತು. ಬಹಳಷ್ಟು ಸದಸ್ಯರು ಆಳುವ ಪಕ್ಷದವರೇ ಆಗಿದ್ದರೂ, ಉಳಿದವರು ಬೇರೆ ಪಕ್ಷಗಳಿಂದ ನೇಮಿಸಲ್ಪಟ್ಟವರಾಗಿದ್ದು ಅವರಿಗೆ ರೈತ ಚಳವಳಿಯೊಂದಿಗೆ ಗಟ್ಟಿಯಾದ ಸಂಬಂಧವಿತ್ತು. ಇದರಿಂದ ಆಳುವ ಪಕ್ಷಕ್ಕೆ ತಳಮಟ್ಟದವರೆಗೆ ರಾಜಕೀಯ ಸಂಪರ್ಕ ಸಾಧಿಸಲು ಸಾಧ್ಯವಾಯಿತು.

ಆಧಾರ : ಕರ್ನಾಟಕ ಕೃಷಿ ಗುತ್ತಿಗೆಯ ಗಣತಿ 1970-71(1974)

ಕಾಯ್ದೆಯು ಹೇಗೆ ಕಾರ್ಯರೂಪಕ್ಕೆ ಬಂತು ಎಂಬುದನ್ನು ಅರಿಯಲು ಆಗ ಕರ್ನಾಟಕದಲ್ಲಿ ಚಾಲ್ತಿಯಲ್ಲಿದ್ದ ಗೇಣಿ ಹಾಗೂ ಹೆಚ್ಚುವರಿ ಗುತ್ತಿಗೆಯ ಪ್ರಮಾಣವನ್ನು ಅರಿಯಬೇಕಾಗುತ್ತದೆ.
ಕರ್ನಾಟಕದ ಕೃಷಿ ಗುತ್ತಿಗೆಯ ಗಣತಿ 1970-71 (1974)ರ ಪ್ರಕಾರ ಕಾಯ್ದೆಯು ಜಾರಿಗೆ ಬರುವ ಮುನ್ನ ಗೇಣಿಪದ್ಧತಿಯಡಿ ಇದ್ದ ಒಟ್ಟು ಕೃಷಿ ಗುತ್ತಿಗೆಯ ಪ್ರಮಾಣವು ರಾಜ್ಯದ ಒಟ್ಟು ಗುತ್ತಿಗೆಯ ಶೇ. 11.2.ರಷ್ಟಿತ್ತು. ಅದು ಸಾಗುವಳಿ ಭೂಮಿಯ ಶೇ.7.4.ರಷ್ಟಿತ್ತು. ಕರಾವಳಿ ಪ್ರದೇಶಗಳಾದ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡಗಳಲ್ಲಿ ಗೇಣಿಯ ಪ್ರಮಾಣ ಬಹಳ ಹೆಚ್ಚಾಗಿತ್ತು. ಇನ್ನುಳಿದಂತೆ ಬೇರೆ ಜಿಲ್ಲೆಗಳಲ್ಲಿ ಗೇಣಿಯ ಉದಾಹರಣೆಗಳು ಕಡಿಮೆಯಾಗಿದ್ದವು. ಒಟ್ಟು 10 ಜಿಲ್ಲೆಗಳಲ್ಲಿ ಅದು ಶೇ.3.ಗಿಂತ ಕಡಿಮೆ ಇತ್ತು. ಒಟ್ಟು 3.97 ಲಕ್ಷ ಗೇಣಿದಾರರಲ್ಲಿ 1.64 ಲಕ್ಷ ಗೇಣೀದಾರರು ಆಂಶಿಕವಾಗಿ ಭೂಮಿಯ ಒಡೆತನ ಹೊಂದಿದ ಹಾಗೂ ಆಂಶಿಕವಾಗಿ ಗೇಣಿದಾರರಾಗಿದ್ದರು. ಗೇಣಿದಾರರ ಕೈಯಲ್ಲಿದ್ದ ಭೂಮಿಯು 8.35 ಅಥವಾ 20.88 ಲಕ್ಷ ಹೆಕ್ಟೇರುಗಳಾಗಿತ್ತು. ಮೇಲೆ ನೀಡಿರುವ ಕೋಷ್ಟಕ-1ರಲ್ಲಿ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗಿಂತ ಗೇಣಿ ಭೂಮಿಯ ವಿವರಗಳು ಸಿಕ್ಕುತ್ತವೆ. ಭಾರತದ ಬೇರೆಲ್ಲ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಭೂಮಿಯ ಒಡೆತನದ ಉದಾಹರಣೆಗಳು ಬಹಳಷ್ಟಿದ್ದರೂ, ದೊಡ್ಡ ಗುತ್ತಿಗೆಯ ಪ್ರಮಾಣವನ್ನು ಪರಿಶೀಲಿಸಿದರೆ ಅದು ಬೇರೆಲ್ಲ ರಾಜ್ಯಗಳಿಂತ ಕರ್ನಾಟಕದಲ್ಲಿ ಕಡಿಮೆಯಾಗಿತ್ತು. ಕೋಷ್ಟಕ 2 ಕರ್ನಾಟಕದಲ್ಲಿ ಭೂಮಿಯ ಒಡೆತನ ಹೇಗೆ ಕೇಂದ್ರೀಕೃತವಾಗಿತ್ತು ಎಂಬ ವಿವರಗಳನ್ನು ನೀಡುತ್ತದೆ.
ಗ್ರಾಮೀಣ ಅಭಿವೃದ್ದಿ ಖಾತೆಯ ಮಾಜಿ ಕಾರ್ಯದರ್ಶಿ ಡಿ. ಬಂದೋಪಾಧ್ಯಾಯ ಅವರು ಹೇಳುವಂತೆ ಕೃಷಿ ಗಣತಿಯ ಅಂಕಿಂಶಗಳ ಆಧಾರದ ಮೇಲೆ, 1974ರ ಭೂ ಸುಧಾರಣಾ ಕಾಯಿದೆಯ ಹಿನ್ನೆಲೆಯಲ್ಲಿ ಕರ್ನಾಟಕದ ಹೆಚ್ಚುವರಿ ಭೂಮಿಯ ಪ್ರಮಾಣವು 1970-71ರಲ್ಲಿ 7.03ಲಕ್ಷ ಹೆಕ್ಟೇರುಗಳು ಮತ್ತು 1976-77ರಲ್ಲಿ 6.77 ಲಕ್ಷ ಹೆಕ್ಟೇರುಗಳಾಗಬೇಕಿತ್ತು. ಕೋಷ್ಟಕ-3ರಲ್ಲಿನ ಅಂಕಿ ಅಂಶಗಳು ಗೇಣಿ ಅರ್ಜಿಗಳ ವಿಶ್ಲೇಷಣೆ ಹಾಗೂ ಅವುಗಳ ವಿಲೇವಾರಿಯ ಚಿತ್ರಣ ನೀಡುತ್ತವೆ. ಹಾಗೆ ಅವುಗಳನ್ನು 1971ರ ಕೃಷಿ ಗಣತಿಯ ಅಂಕಿ ಅಂಶಗಳೊಂದಿಗೆ ಹೋಲಿಕೆ ಮಾಡಲು ಸಾಧ್ಯವಾಗುತ್ತದೆ ಮತ್ತು ಅವುಗಳಿಂದ ಶೇ.60 ರಷ್ಟು ಗೇಣಿದಾರರು ತಮ್ಮ ಹಕ್ಕುಗಳನ್ನು ಪಡೆಯುವಲ್ಲಿ ಸಫಲರಾದರು ಎಂಬುದು ತಿಳಿದುಬರುತ್ತದೆ.

ಗರಿಷ್ಠ ಮಿತಿಯನ್ನು ಕಾರ್ಯರೂಪಕ್ಕೆ ತಂದ ರೀತಿ
ಈಗಾಗಲೆ ಭೂಸುಧಾರಣಾ ಕಾಯ್ದೆಯ ಹಿನ್ನೆಲೆಯಲ್ಲಿ ಕರ್ನಾಟಕದ ಹೆಚ್ಚುವರಿ ಭೂಮಿಯ ಪ್ರಮಾಣವು 1970-71ರಲ್ಲಿ 7.03 ಹೆಕ್ಟೇರುಗಳು ಅಂದರೆ ಸರಾಸರಿ 17.6 ಲಕ್ಷ ಹೆಕ್ಟೇರುಗಳಾಗಿತ್ತು ಎಂದು ಹೇಳಲಾಗಿದೆ.
ಕೋಷ್ಟಕ-ನಾಲ್ಕರಲ್ಲಿ 31.12.1986ರವರೆಗೆ ಈ ಕಾಯಿದೆಯ ಅಡಿಯಲ್ಲಿ ಹೆಚ್ಚುವರಿ ಭೂಮಿಯನ್ನು ನಿರ್ಧರಿಸಿದ ರೀತಿಯ ಬಗ್ಗೆ ವಿವರಗಳು ದೊರೆಯುತ್ತವೆ. ಅದು ಹೆಚ್ಚುವರಿ ಪ್ರಮಾಣವನ್ನು 2.96 ಲಕ್ಷ ಎಕರೆಗಳು ಎಂದು, ಅಂದರೆ ಅದು ಇರುವ ಹೆಚ್ಚುವರಿ ಭೂಮಿಯ ಶೇ.16.8ರಷ್ಟನ್ನು ಮಾತ್ರ ಸೂಚಿಸುತ್ತದೆ. ಇಷ್ಟು ಕಡಿಮೆ ಪ್ರಮಾಣದಲ್ಲಿ ಹೆಚ್ಚುವರಿ ಭೂಮಿಯನ್ನು ಹೊಂದಲು ಬೇರೆ ಬೇರೆ ಕಾರಣಗಳನ್ನು ನೀಡಬಹುದು. ಕಠಿಣ ಶಿಕ್ಷೆಯ ಭಯವನ್ನು ಕಾನೂನು ತೋರಿದ್ದರೂ ಬಹಳಷ್ಟು ಭೂ ಮಾಲೀಕರು ಹೆಚ್ಚುವರಿ ಭೂಮಿಯನ್ನು ಹೊಂದಿರುವುದನ್ನು ಘೋಷಿಸಿಕೊಳ್ಳದೆ ಇರಬಹುದು. ಇಂಥವರನ್ನು ಪತ್ತೆ ಮಾಡಬೇಕಾದ್ದು ಅಧಿಕಾರಿಗಳ ಕೆಲಸವಾಗಿತ್ತು. ಕೆಲವೊಮ್ಮೆ ಕೆಲವು ಅಧಿಕಗಳು ಕೆಲವು ಕುಟುಂಬಗಳಿಗೆ ಹೆಚ್ಚು ಯೂನಿಟ್ಗಳನ್ನು ಹೊಂದಲು ಅನುಮತಿ ನೀಡಿರುವ ಸಾಧ್ಯತೆ ಇಲ್ಲದಿಲ್ಲ. ಬೇನಾಮಿ ಹೆಸರಿನಲ್ಲಿ ಗುತ್ತಿಗೆಯನ್ನು ನಿರ್ವಹಿಸುವ ಸಾಧ್ಯತೆ ಸಹ ಇಲ್ಲದೇ ಇಲ್ಲ ಅಥವಾ ಸರಿಯಾದ ರೀತಿ ಯಲ್ಲಿ ಭೂಮಿಯ ಮಾಪನ ಆಗಿಲ್ಲದೆ ಇರಬಹುದು. ಇದರ ಜೊತೆಗೆ ಗೇಣಿದಾರನ ಹಕ್ಕುಗಳನ್ನು ಪಡೆಯುವಾಗ ಜನ ಕೋರ್ಟು ಕಛೇರಿಗಳಿಗೆ ಅಲೆಯಲು ತಯಾರಾಗಿರು ತ್ತಿದ್ದರು. ಆದರೆ ಹೆಚ್ಚುವರಿ ಭೂಮಿಯ ಪ್ರಶ್ನೆ ಬಂದಾಗ, ಅದು ಕೈಬಿಟ್ಟು ಹೋಗುವುದು ಖಚಿತವಾಗಿದ್ದರಿಂದ ಜನ ಅದರ ಬಗ್ಗೆ ಹೆಚ್ಚು ಗಮನಕೊಡದೆ ಇರಬಹುದು. ಗೇಣಿ ರದ್ದತಿಯ ಹಾಗೆ ಗರಿಷ್ಠ ಮಿತಿಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರವು ಬಹಳ ಕಾಳಜಿ ತೋರಿಸಿತು ಎಂದು ಹೇಳುವುದು ಕಷ್ಟ. ಯಾಕೆಂದರೆ ಬಲಿಷ್ಠರಾಗಿದ್ದ ಗ್ರಾಮೀಣ ಭೂ ಮಾಲಿಕ ವರ್ಗವನ್ನು ಎದುರು ಹಾಕಿಕೊಳ್ಳುವುದು ರಾಜಕೀಯವಾಗಿ ಲಾಭದಾಯಕವಾದ ವಿಷಯವಾಗಿರಲಿಲ್ಲ. ಆದರೆ ಗೇಣಿ ರದ್ದತಿಯ ಕಾರಣದಿಂದ ಬಹಳಷ್ಟು ರಾಜಕೀಯ ಲಾಭ ಸಿಗುವ ಸಾಧ್ಯತೆಗಳಿದ್ದವು. ಅಲ್ಲಿ ಕಳೆದುಕೊಳ್ಳುವಂಥದ್ದು ಬಹಳ ಕಡಿಮೆ ಇತ್ತು.
ಒಟ್ಟು ಹೆಚ್ಚುವರಿಯೆಂದು ಅಂದಾಜು ಮಾಡಿದ ಭೂಮಿಯಲ್ಲಿ ಹೆಚ್ಚುವರಿಯೆಂದು ನಿಗದಿಪಡಿಸಿದ ಭೂಮಿಯ ಪ್ರಮಾಣ ಅತಿ ಕಡಿಮೆ. ಅದರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಪ್ರಮಾಣವು ಹೆಚ್ಚುವರಿಯೆಂದು ನಿಗದಿಪಡಿಸಿದ ಭೂಮಿಯ ಶೇ.51.8 ಮಾತ್ರ ಆಗಿತ್ತು. 1986ರವರೆಗೆ ಹೆಚ್ಚುವರಿಯೆಂದು ನಿಗದಿಪಡಿಸಿದ ಭೂಮಿಯ ಶೇ.38.65ನ್ನು 26.381 ಫಲಾನುಭವಿಗಳಿಗೆ ಹಂಚಲಾಯಿತು. ಶೇ.10 ಭೂಮಿಯನ್ನು ಸರ್ಕಾರಿ ಇಲಾಖೆಗಳಿಗೆ, ಸಂಸ್ಥೆಗಳಿಗೆ ಅಥವಾ ಸಂಘಗಳಿಗೆ ಹಂಚಲಾಯಿತು. ಭೂಮಿಯನ್ನು ಭೂಮಿ ಇಲ್ಲದ ಕೂಲಿಕಾರ್ಮಿಕರಿಗೆ(ಭೂರಹಿತ ಕೂಲಿಕಾರ್ಮಿಕರು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿದವರು ಎಂಬ ಅಂಶವನ್ನು ಇಲ್ಲಿ ಗಮನಿಸಬೇಕು) ನೀಡಲಾಯಿತು ಎಂದು ಭಾವಿಸಿದರೂ, ಕೇವಲ ಶೇ. 1ರಷ್ಟು ಭೂರಹಿತ ಕೂಲಿಕಾರ್ಮಿಕರು ಈ ಕಾಯಿದೆಯಿಂದ ಲಾಭ ಪಡೆಯಲು ಸಾಧ್ಯವಾಯಿತು.
ಕರ್ನಾಟಕದ ಕೃಷಿ ಕೂಲಿಕಾರರ ಅಂಕಿ ಅಂಶಗಳನ್ನು ಕೋಷ್ಟಕ-5 ನೀಡುತ್ತದೆ. ಹಾಗೆಯೇ ಅದು ಕಾಯಿದೆಯ 28ನೇ ಸೆಕ್ಷನ್ನಿಂದ ಲಾಭ ಪಡೆದ ಕೃಷಿ ಕೂಲಿಕಾರರ ಅಂಕಿ ಅಂಶಗಳನ್ನು ಸಹ ನೀಡುತ್ತದೆ. 1929ರಲ್ಲಿ ಕಾಯ್ದೆಗೆ ಸೇರ್ಪಡೆಯಾದ ಈ ಸೆಕ್ಷನ್ನ ಪ್ರಕಾರ ತನ್ನದಲ್ಲದ ಭೂಮಿಯ ಮೇಲೆ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ ಯಾವನೇ ಕೃಷಿ ಕಾರ್ಮಿಕನು, ಆ ಭೂಮಿಯ ಮೇಲಿನ ಹಕ್ಕಿಗಾಗಿ ಟ್ರಿಬ್ಯುನಲ್ಗೆ ಅರ್ಜಿ ಹಾಕಬಹುದಾಗಿತ್ತು. ಈ ಸೆಕ್ಷನ್ನ ಸಹಾಯದಿಂದ 11,323 ಕೃಷಿ ಕೂಲಿಕಾರರು ತಮ್ಮ ವಾಸ ಸ್ಥಳಗಳ ಮೇಲೆ ಹಕ್ಕನ್ನು ಪಡೆದುಕೊಂಡರು. ಅವರ ಪ್ರಮಾಣವು ರಾಜ್ಯದ ಭೂ ರಹಿತ ಕೃಷಿ ಕಾರ್ಮಿಕರ ಶೇ.0.4 ರಷ್ಟಿತ್ತು. ಕಾಯ್ದೆಯ ಈ ಕಾಲಮಿನಡಿ 23, 169 ಅರ್ಜಿಗಳು ಬಂದಿದ್ದವು. ಯಶಸ್ವಿಯಾದ ಅರ್ಜಿದಾರರ ಪ್ರಮಾಣವು ಶೇ.49 ಆಗಿತ್ತು. ಅಂದರೆ ಇದರರ್ಥ ಇವರನ್ನು ಬಿಟ್ಟು ಉಳಿದ ಎಲ್ಲಾ ಕೃಷಿ ಕೂಲಿಕಾರರು ತಮ್ಮ ವಾಸಸ್ಥಳಗಳ ಮೇಲೆ ಹಕ್ಕುಗಳನ್ನು ಹೊಂದಿದ್ದರು ಎಂದಲ್ಲ.
ಈ ಮುಂದಿನ ಅಂಕಿ ಅಂಶಗಳು ಕೃಷಿ ಕಾರ್ಮಿಕರ ಶೆ.1/2 ರಷ್ಟು ಜನ ಹೆಚ್ಚುವರಿ ಭೂಮಿಯ ಹಂಚಿಕೆಯಿಂದ ಲಾಭ ಪಡೆದವರು ಎಂಬುದು ತಿಳಿದುಬರುತ್ತದೆ. ಕೃಷಿ ಕಾರ್ಮಿಕರ ಉಳಿದ ಶೇ.98.5ರಷ್ಟು ಜನರು ಈ ಕಾಯಿದೆಯಿಂದ ಲಾಭ ಪಡೆಯಲಾಗಲಿಲ್ಲ. ಅಂದರೆ 1971ರ ಕೃಷಿ ಜನಸಂಖ್ಯೆಯ ಶೇ.40 ಭಾಗದಷ್ಟು ಜನರಿಗೆ ಈ ಕಾಯಿದೆಯಿಂದ ಯಾವ ಲಾಭವೂ ಆಗಲಿಲ್ಲ.

ಭೂಸುಧಾರಣೆಯ ಪರಿಣಾಮಗಳು
ಕೃಷಿ ಗಣತಿಯ ಪ್ರಕಾರ 1971ರಲ್ಲಿ ಕರ್ನಾಟಕದ ಒಟ್ಟು 35,51,230 ಕೃಷಿ ಗುತ್ತಿಗೆಗಳಲ್ಲಿ, 4,85,446 ಗೇಣಿದಾರರು 1974ರ ಭೂಸುಧಾರಣಾ ಕಾಯಿದೆಯ ಸಹಾಯದಿಂದ ಭೂಮಿಯ ಹಕ್ಕುಗಳನ್ನು ಪಡೆಯಲು ಸಾಧ್ಯವಾಯಿತು. ಕೃಷಿ ಗಣತಿಯ ನಂತರ ಹಾಗೂ ಗೇಣಿ ರದ್ಧತಿಯ ಘೋಷಣೆಗೂ ಮುಂಚೆ ಗುತ್ತಿಗೆಗಳ ಪ್ರಮಾಣ ಹೆಚ್ಚಾಗಿರಬಹುದಾದರೂ ಗ್ರಾಮೀಣ ಜನರಲ್ಲಿ ಕಾಯಿದೆಯು ಬಹಳಷ್ಟು ಪ್ರಭಾವ ಬೀರಿತು. ಇದರೊಂದಿಗೆ ಹೆಚ್ಚುವರಿ ಭೂಮಿಯ ಹಂಚಿಕೆಯಿಂದ ಲಾಭ ಪಡೆದ ಶೇ.1. 1/2ರಷ್ಟು ಗ್ರಾಮೀಣ ಜನರನ್ನು ಸೇರಿಸಿದರೆ ಶೇ.15ರಷ್ಟು ಗ್ರಾಮೀಣ ಜನತೆಗೆ ಈ ಕಾಯಿದೆಯಿಂದ ಲಾಭ ಆಯಿತು. ಇದರಿಂದ ಅವರಿಗೆ ತಕ್ಷಣ ಆರ್ಥಿಕ ಪ್ರಯೋಜನಗಳು ಉಂಟಾಗದೆ ಇರಬಹುದು. ಆದರೂ ಭೂಮಿಯನ್ನು ಪಡೆದ ಕಾರಣದಿಂದ ಹಳ್ಳಿಗಾಡಿನ ಜನರಿಗೆ ಅತೀವ ತೃಪ್ತಿ ಉಂಟಾಯಿತು ಮತ್ತು ಹಾಗೆಯೇ ಅದರಿಂದ ರಾಜಕೀಯವಾಗಿ ಆಳುವ ಪಕ್ಷಕ್ಕೆ ವಿಶೇಷ ಬಲ ಬಂತು.
ದೇವರಾಜ ಅರಸು ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಭೂಸುಧಾರಣೆಗಳ ಜೊತೆಗೆ ಜಾರಿಗೆ ತಂದ ಹಿಂದುಳಿದ ವರ್ಗಗಳಿಗೆ ಮೀಸಲಾತಿ, ಸಾಲ ಮನ್ನಾ ಇತ್ಯಾದಿ ಯೋಜನೆಗಳು, ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳಲ್ಲಿ ಮತ್ತು ಇತರ ಗ್ರಾಮೀಣ ಜನಗಳಲ್ಲಿ ವಿಶೇಷ ಬೆಂಬಲವನ್ನು ದೊರಕಿಸಿಕೊಟ್ಟವು.
ಭೂ ಸುಧಾರಣೆಯ ಯೋಜನೆಯು ಕರ್ನಾಟಕದ ರಾಜಕೀಯ ಪಕ್ಷಗಳ ಮಟ್ಟಿಗೆ ವಿಶೇಷ ಪ್ರಭಾವ ಬೀರಿತು. ಸಮಾಜವಾದಿಗಳು ಹಾಗೂ ಕಮ್ಯುನಿಸ್ಟರು 40ರ ದಶಕದಲ್ಲಿ ರೈತರನ್ನು ಸಂಘಟಿಸುವ ದೃಷ್ಟಿಯಿಂದ ‘‘ಉಳುವವನಿಗೆ ಭೂಮಿ’’ ಎಂಬ ಘೋಷಣೆಯನ್ನು ಹೊರಡಿಸಿದ್ದರು. ಇದು ಗೇಣಿ ಪದ್ಧತಿಯು ದಟ್ಟವಾಗಿದ್ದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕೆಲವು ಭಾಗಗಳಲ್ಲಿ ಬಹಳ ಪರಿಣಾಮ ಬೀರಿತು. ಇದರಿಂದ ಅವರಿಗೆ ಅಲ್ಲಿ ರಾಜಕೀಯವಾಗಿ ಭದ್ರನೆಲೆ ಸಿಕ್ಕಿತು. ಗೇಣಿ ರದ್ದತಿ ಗರಿಷ್ಠ ಮಿತಿಯನ್ನು ಕಾರ್ಯ ರೂಪಕ್ಕೆ ತಂದಿದ್ದು, ಇತ್ಯಾದಿಗಳಿಂದ ಅವರ ರಾಜಕೀಯ ತಳಹದಿಗೆ ಧಕ್ಕೆ ಉಂಟಾಗು ವಂತಿತ್ತು. ಇಂಥ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಭೂಸುಧಾರಣೆಗಳನ್ನು ಜಾರಿಗೆ ತಂದಾಗ, ಉಳಿದ ಪಕ್ಷಗಳು ಮೂಕಪ್ರೇಕ್ಷಕರಂತೆ ನಿಂತು ನೋಡುತ್ತಿದ್ದವು. ಕಮ್ಯುನಿಸ್ಟರಿಗೆ ತಾವು ನಿಂತ ನೆಲ ಕುಸಿದಂತಾಯಿತು. ಸಮಾಜವಾದಿಗಳು ಕಾಂಗ್ರೆಸ್ ಪಕ್ಷದ ಬಾಗಿಲನ್ನು ತಟ್ಟಹತ್ತಿದರು. ಆಳುವ ಪಕ್ಷವಾಗಿದ್ದ ಕಾಂಗ್ರೆಸ್ ಪಕ್ಷ ಇಬ್ಭಾಗವಾದ ನಂತರ ನಿಶ್ಯಕ್ತವಾಗಿದ್ದರೂ ಇವರನ್ನು ಸೇರಿಸಿಕೊಳ್ಳುವುದರ ಮೂಲಕ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳುವ ಪ್ರಯತ್ನ ನಡೆಸಿತು. ಬಹಳಷ್ಟು ಜನ ಹಳೆಯ ಸಮಾಜವಾದಿಗಳಿಗೆ ಕಾಂಗ್ರೆಸ್ನಲ್ಲಿ ಹಾಗೂ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳು ಸಿಕ್ಕಿದವು.
ತಳಮಟ್ಟದ ಕಾರ್ಯಕರ್ತರಿಗೆ ಟ್ರಿಬ್ಯೂನಲ್ಗಳಲ್ಲಿ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ದೊರಕಿದ್ದು ಪಕ್ಷದ ಸಂಘಟನೆ ಬಲಗೊಳ್ಳಲು ಕಾರಣವಾಯಿತು.
ಗರಿಷ್ಠ ಮಿತಿಯ ಅಡಿಯಲ್ಲಿ ಪಡೆಯಲಾದ ಭೂಮಿಯು ಎಂತಹದು ಎಂಬ ಬಗ್ಗೆ ಹೊಸ ಅಧ್ಯಯನಗಳು ಆಗಬೇಕಿದೆ. ದೊಡ್ಡ ದೊಡ್ಡ ಭೂಮಾಲೀಕರಿಗೆ ಸ್ಥಳೀಯ ಅಧಿಕಾರ ವರ್ಗದವರ ಮೇಲೆ ಭೂಮಿಯನ್ನು ಹಂಚಿರುವ ಸಾಧ್ಯತೆ ಇದೆ. ಜೊತೆಗೆ ಗರಿಷ್ಠ ಮಿತಿಯ ಕಾನೂನಡಿಯಲ್ಲಿ ಇದ್ದ ಹೆಚ್ಚುವರಿ ಭೂಮಿಯಲ್ಲಿ ಬಹಳ ಕಡಿಮೆ ಪ್ರಮಾಣದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಯಿತು. ದೊಡ್ಡ ದೊಡ್ಡ ರೈತರಿಗೆ ಈ ಕಾಯಿದೆಯಿಂದಾಗಿ ಹೆಚ್ಚಿನ ನಷ್ಟವೇನೂ ಆಗಲಿಲ್ಲ. ಇದರೊಂದಿಗೆ ಐದು ಜನರಿರುವ ಕುಟುಂಬಗಳಿಗೆ ಹೆಚ್ಚುವರಿ ಯೂನಿಟ್ಗಳನ್ನು ನೀಡಿದ್ದು ಹಾಗೂ ಬೆಳೆದ ವಯಸ್ಸಿನ ಗಂಡು ಮಕ್ಕಳನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿದ್ದು ಅವರಿಗೆ ಹಸ್ತಕ್ಷೇಪ ಮಾಡಲು ಬಹಳ ಅವಕಾಶ ಮಾಡಿಕೊಟ್ಟಿತು. ಇನ್ನೊಂದು ಮುಖ್ಯ ಅಂಶವೆಂದರೆ, ಕರ್ನಾಟಕದ ವಾಣಿಜ್ಯ ಕೃಷಿಗೆ ಆಧಾರವಾದ ಪ್ಲಾಂಟೇಶನ್ಗಳಿಗೆ ಗರಿಷ್ಠ ಮಿತಿಯ ಕಾರಣದಿಂದ ತೊಂದರೆ ಆಗಲಿಲ್ಲ. ವಾಸ್ತವವಾಗಿ ಕೂಲಿಯಾಳುಗಳನ್ನಿಟ್ಟು ವ್ಯವಸಾಯ ನಡೆಸುತ್ತಿದ್ದ ದೊಡ್ಡ ರೈತವರ್ಗಗಳಿಗೆ ಇವೆಲ್ಲವುಗಳಿಂದ ಹಾನಿಯೇ ಆಗಲಿಲ್ಲ. ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆ ಇಲ್ಲದೆ ಇದ್ದುದರಿಂದ, ಅವರಿಗೆ ಗರಿಷ್ಠ ಮಿತಿಗಿಂತ ಹೆಚ್ಚಿನ ಭೂಮಿ ಇದ್ದರೂ ಬೇರೆ ಯಾವ ಸಮಸ್ಯೆಗಳು ಎದುರಾಗಲಿಲ್ಲ. ನಿಖರವಾಗಿ ಹೇಳುವುದಾದರೆ ಕರ್ನಾಟಕದ ಬಂಡವಾಳಶಾಹಿ ಕೃಷಿಕ ವರ್ಗ ಎಂದಿನಂತೆಯೇ ಇತ್ತು.
ದೊಡ್ಡ ರೈತ ವರ್ಗದವರು, ಬ್ರಾಹ್ಮಣರಾಗಿರದೆ ಕರ್ನಾಟಕದಲ್ಲಿ ಬಲಿಷ್ಠ ಗುಂಪುಗಳಾಗಿರುವ ಲಿಂಗಾಯಿತ ಹಾಗೂ ಒಕ್ಕಲಿಗ ಜನಾಂಗಕ್ಕೆ ಸೇರಿದವರಾಗಿದ್ದರು. ಅರಸು ಅವರು ಈ ಗುಂಪುಗಳ ರಾಜಕೀಯ ಶಕ್ತಿಯನ್ನು ಕುಂಠಿತಗೊಳಿಸಿ ಎಲ್ಲರಿಗೂ ಪ್ರಾತಿನಿಧ್ಯ ದೊರಕುವಂತೆ ಮಾಡಿದರೂ, ಅವರ ಆರ್ಥಿಕ ಸ್ಥಿತಿ ಇದರಿಂದ ಬಲಹೀನವಾಗಲಿಲ್ಲ. ಆದ್ದರಿಂದ ಈ ವರ್ಗಗಳಿಗೆ ಅರಸು ಅವರ ಬಗ್ಗೆ ರಾಜಕೀಯವಾಗಿ ದೂರುಗಳಿದ್ದವೇ ಹೊರತು ಆರ್ಥಿಕವಾಗಿ ಅಲ್ಲ.
ಭೂಸುಧಾರಣೆಗಳ ಕಾರಣದಿಂದ ಹಳ್ಳಿಗಾಡಿನ ಕಡೆಗಳಲ್ಲಿ ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳು ಕಾಲಿಡಲು ಸಾಧ್ಯವಾಯಿತು. ಪಟ್ಟಣಗಳು, ಕೈಗಾರಿಕೆಗಳು ಮತ್ತು ಸಾಲದ ವ್ಯವಹಾರಗಳು ರೈತರ ಜನಜೀವನಕ್ಕೆ ಸೇರ್ಪಡೆಯಾಗತೊಡಗಿದವು.
ಹೀಗಾಗಿ ಕರ್ನಾಟಕದ ಭೂಸುಧಾರಣೆಗಳು ಬಂಡವಾಳದ ವಹಿವಾಟಿಗೆ ಬಹಳ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿಕೊಡುವುದರ ಜೊತೆಗೆ, ಕೆಳವರ್ಗದ ಜನರಿಗೆ ಕೆಲವು ಲಾಭಗಳನ್ನು ದೊರಕಿಸಿಕೊಟ್ಟವು. ಕೆಳವರ್ಗದ ಜನರಿಗೆ ದೊರಕಿಸಿದ ಕೆಲವು ಲಾಭಗಳು ಸರ್ಕಾರಕ್ಕೆ ಬೆಂಬಲ ಹೆಚ್ಚಿಸುವ ಉದ್ದೇಶದಿಂದ ಬಹಳ ಮುಖ್ಯವಾಗಿದ್ದವು. ಈ ಸುಧಾರಣೆಗಳನ್ನು ಸರ್ಕಾರವು ರೈತರು ಯಾವುದೇ ರೀತಿಯಲ್ಲಿ ಸಂಘಟಿತ ಒತ್ತಾಯ ಮಾಡದೇ ಇದ್ದರೂ ಕೈಗೊಂಡಿತ್ತು. ಇದರಿಂದ ಕೃಷಿ ಸಮಾಜದಲ್ಲಿ ಬೆಳೆಯಬಹುದಾದ ವರ್ಗ ಸಂಬಂಧಗಳು ಸಡಿಲಗೊಂಡವು. ಕಾಯಿದೆಯಿಂದ ಸಮಾಜದ ಬಲಿಷ್ಠ ವರ್ಗಗಳ ಅಸ್ತಿತ್ವಕ್ಕೆ ಧಕ್ಕೆ ಬರದಿದ್ದರೂ, ಒಂದು ಸಣ್ಣ ಆಘಾತವಂತೂ ಆಯಿತು. ಮೇಲಾಗಿ ಈ ಸುಧಾರಣೆಗಳು ಮೇಲಿನಿಂದ ಜಾರಿಯಾಗಿದ್ದವು.
ಕರ್ನಾಟಕದ ರೈತ ಸಂಘಟನೆಯ ಇತಿಹಾಸದಲ್ಲಿ ಭೂಸುಧಾರಣೆಗಳು ಬಹಳ ಪ್ರಮುಖವಾದ ಪಾತ್ರ ವಹಿಸಿವೆ. ಅಲ್ಲಿಯವರೆಗೆ ರೈತೊಸಂಘಟನೆಯ ಮುಖ್ಯ ವಿಷಯಗಳು ಗುತ್ತಿಗೆ ನಿಯಂತ್ರಣ, ಉಳುವವನಿಗೆ ಭೂಮಿ ದೊರೆಯಬೇಕು ಇತ್ಯಾದಿ ಮಾತ್ರ ಆಗಿದ್ದವು. ಇದರ ನಂತರ ರೈತಾಪಿ ವರ್ಗದ ಕೆಳಸ್ತರದ ಜನಗಳು, ದೊಡ್ಡ ರೈತ ವರ್ಗಗಳಿಗಿಂತ ಭಿನ್ನವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ತಮ್ಮ ಕಾಳಜಿಗಳನ್ನು ವ್ಯಕ್ತಪಡಿಸಿಲ್ಲ.

 

ಆಧಾರ  : ಕರ್ನಾಟಕದ ಕೃಷಿಗುತ್ತಿಗೆಯ ಗಣತಿ ೧೯೭೦-೭೧(೧೯೭೪),

 

ಕೋಷ್ಟಕ: ೪

ಕೋಷ್ಟಕ: ೪a

ಕೋಷ್ಟಕ ೫
ಕರ್ನಾಟಕದಲ್ಲಿ ಭೂರಹಿತ ಕೃಷಿಕಾರ್ಮಿಕರು

ಆಧಾರ ೧: ಕರ್ನಾಟಕದ ಕೃಷಿಗುತ್ತಿಗೆಯ ಗಣತಿ ೧೯೭೦-೭೧(೧೯೭೪(, ೨.ರೆವಿನ್ಯೂ ಸಚಿವಾಲಯ, ಕರ್ನಾಟಕ ಸರ್ಕಾರ

 

ಪರಾಮರ್ಶನ ಗ್ರಂಥಗಳು

1. ಜೋಶಿ ಪಿ.ಸಿ., 1975. ಲ್ಯಾಂಡ್ ರಿಫಾರ್ಮ್ಸ್ ಇನ್ ಇಂಡಿಯಾ : ಟ್ರೆಂಡ್ಸ್ ಅಂಡ್ ಪರ್ ಸ್ಪೆಕ್ಟಿವ್ಸ್, ಡೆಲ್ಲಿ: ಅಲೈಡ್ ಪಬ್ಲಿಷರ್ಸ್.
2. ತಿಮಯ್ಯ ಜಿ. ಮತ್ತು ಅಬ್ದುಲ್ ಅಜೀಜ್, 1984. ಪೊಲಿಟಿಕಲ್ ಎಕಾನಮಿ ಆಫ್ ಲ್ಯಾಂಡ್ ರಿಫಾರ್ಮ್ಸ್, ನ್ಯೂಡೆಲ್ಲಿ : ಆಶಿಸ್ ಪಬ್ಲಿಷಿಂಗ್ ಹೌಸ್.
3. ಅರವಿಂದ ನಾರಾಯಣದಾಸ್, 1983. ಅಗ್ರೇರಿಯನ್ ಅನ್ರೆಸ್ಟ್ ಆಯಂಡ್ ಸೋಶಿಯೊ ಎಕನಾಮಿಕ್ ಚೇಂಜ್ 1900-1980, ನ್ಯೂಡೆಲ್ಲಿ : ಮನೋಹರ್.
4. ಜೋಶಿ ಜಿ.ವಿ., 1983. ‘‘ಟೆನೆಂಟ್ಸ್ ಮೂವ್ಮೆಂಟ್ ಆಯಂಡ್ ಲೆಜಿಸ್ಲೇಶನ್ ಆಯಂಡ್ ಅಗ್ರೇರಿಯನ್ ಚೇಂಜ್ : ಎ ಕೇಸ್ ಆಫ್ ಉತ್ತರ ಕನ್ನಡ’’, ಸೋಶಿಯಲ್ ಪ್ರೋ ವಾಲ್ಯುಂ 2.
5. ರಾಜಶೇಖರ ಜಿ., 1982. ಕಾಗೋಡು ಸತ್ಯಾಗ್ರಹ, ಸಾಗರ: ಅಕ್ಷರ ಪ್ರಕಾಶನ,