ಬಂಡವಾಳ ಕೇಂದ್ರಿತ ಅರ್ಥವ್ಯವಸ್ಥೆ ಜಾಗತಿಕ ಮಟ್ಟದಲ್ಲಿ ನಿಯಂತ್ರಣ ಸಾಧಿಸಲು ಆರಂಭಿಸಿದಂದಿನಿಂದ ಪರಿಸರ ಒಂದಲ್ಲ ಒಂದು ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಚರ್ಚೆಯ ವಸ್ತುವಾಗಿ ಕಾಣಿಸಿಕೊಳ್ಳಲಾರಂಭಿಸಿತು. ಅಭಿವೃದ್ದಿಯ ಕಾರಣಕ್ಕಾಗಿ ಪರಿಸರ ದೊಡ್ಡ ಪ್ರಮಾಣದಲ್ಲಿ ಬಳಕೆಗೊಳ್ಳಲು ಆರಂಭವಾದಾಗ ಪರಿಸರ ಕುರಿತ ಚಿಂತನೆಗಳು, ಸಂಘಟನೆಗಳು ಹಾಗೂ ಹೋರಾಟಗಳು ಕಾಣಿಸಿಕೊಳ್ಳಲಾರಂಭಿಸಿದವು. ಇವುಗಳನ್ನು ಯಾವುದೇ ಒಂದು ಪ್ರದೇಶಕ್ಕೆ ಸೀಮಿತಗೊಳಿಸಿ ಅಧ್ಯಯನ ನಡೆಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಇವುಗಳ ವ್ಯಾಪ್ತಿ ಆ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಪರಿಸರ ಕುರಿತಾದ ಹೇಳಿಕೆಗಳು ಬಹುಕಾಲದಿಂದಲೇ ಕೇಳಿಬರುತ್ತಿದ್ದರೂ ಅದೊಂದು ಸಮಸ್ಯೆಯಾಗಿ ಕಂಡುಬಂದಿರುವುದು ಇತ್ತೀಚಿನ ವರ್ಷಗಳಲ್ಲಿ. ಈ ಸಮಸ್ಯೆಗಳು ಚಳವಳಿಯಾಗಿ ಪರಿರ್ವತನೆಗೊಂಡ ನಂತರ ಪರಿಸರ ಕೇವಲ ಪರಿಸರವಾಗಿ ಮಾತ್ರ ಉಳಿದಿಲ್ಲ. ಪರಿಸರದೊಂದಿಗೆ ಮಾನವ ನಿರ್ಮಿತ ಧೋರಣೆಗಳೂ ಸೇರಿಕೊಂಡವು. ಇವು ಪರಿಸರ ಚಳವಳಿಯನ್ನು ಜಟಿಲ ಹಾಗೂ ಗೊಂದಲಮಯವನ್ನಾಗಿ ಮಾಡಿದವು. ಅದೇ ರೀತಿ ಪರಿಸರ ಚರ್ಚೆಯನ್ನು ಜಾಗತಿಕವನ್ನಾಗಿಸಿ ಪರಿಸರ ಬಿಕ್ಕಟ್ಟು ತಲೆದೋರುವಂತೆಯೂ ಮಾಡಿದವು. ಸರಕಾರದ ಹೊಸ ಆರ್ಥಿಕ ನೀತಿ ಹಾಗೂ ಅದರ ಅನುಬಂಧಗಳು ಬಹುದೊಡ್ಡ ಸಂಖ್ಯೆಯ ಜನರ ಬದುಕನ್ನು ಪರಿಗಣನೆಗೆ ತೆಗೆದುಕೊಳ್ಳದೆ ಆಧುನೀಕರಣವನ್ನು ಮುಂದುವರಿಸಿದವು. ಇದು ಬಹುಸಂಖ್ಯಾತ ಜನವರ್ಗದ ಬದುಕನ್ನು ಸೀಮಿತವರ್ಗ ಬಂಡವಾಳದೊಂದಿಗೆ ನಿರ್ಧರಿಸುವ ಪ್ರಯತ್ನವೂ ಆಗಿದೆ. ಕೆಳವರ್ಗದವರನ್ನು ಆಧುನಿಕತೆಯ ಲಾಭಗಳಿಂದ ವಂಚಿಸುವ ಉದ್ದೇಶವೂ ಇದರಲ್ಲಿ ಕಂಡುಬರುತ್ತದೆ. ಇದರೊಡನೆ ಸಂಪ್ರದಾಯ ಮತ್ತು ಆಧುನಿಕತೆಗಳನ್ನು ವಿಷಯವನ್ನಾಗಿ ಇಟ್ಟುಕೊಂಡು ಮೇಲ್ವರ್ಗವು ನಡೆಸುತ್ತಿರುವ ಸಾಂಸ್ಕೃತಿಕ ರಾಜಕೀಯವೂ ಸೇರಿಕೊಂಡಿದೆ.
ಪ್ರಸ್ತುತ ಲೇಖನದಲ್ಲಿ ಪರಿಸರ ಕುರಿತಾದ ಹಳೆಯ ಗ್ರಹಿಕೆಯನ್ನು ಮರುಪರಿಶೀಲನೆಗೆ ಒಡ್ಡುವ ಪ್ರಯತ್ನವನ್ನು ಮಾಡಲಾಗಿದೆ. ಪರಿಸರ ಪದದ ಅರ್ಥ ಇಂದು ವಿಸ್ತಾರವಾಗಿದೆ. ಪರಿಸರವೆಂದರೆ ಹಸಿರಾಗಿರುವ ಗಿಡಮರಗಳುಳ್ಳ ಅರಣ್ಯಗಳು ಎಂಬ ಅರ್ಥ ರೂಢಿಯಲ್ಲಿತ್ತು. ಆದರೆ ಇಂದು ಪರಿಸರ ಪರಿಕಲ್ಪನೆ ಜೀವ-ನಿರ್ಜೀವ, ಭೌತ-ಅಭೌತ, ನಿರ್ಮಿತ-ಸ್ವಾಭಾವಿಕವಾದ ಎಲ್ಲ ವಸ್ತು-ಸಂದರ್ಭ-ಸ್ಥಿತಿಗತಿಗಳನ್ನು ಒಳಗೊಂಡಿದೆ. ಪರಿಸರ ಅಧ್ಯಯನವನ್ನು ಯಾವುದೇ ಒಂದು ಶಿಸ್ತಿಗೆ ಸಂಬಂಧಿಸಿದ್ದು ಎಂದು ವ್ಯಾಖ್ಯಾನಿಸಲು ಸಾಧ್ಯವಾಗುವುದಿಲ್ಲ. ವಿಜ್ಞಾನ, ಸಮಾಜ ವಿಜ್ಞಾನ, ಸಾಹಿತ್ಯ, ಕಲೆ ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ಪ್ರತಿನಿಧಿಸುತ್ತಿರುತ್ತವೆ. ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳ ಮತ್ತು ಚಳವಳಿಗಳ ವಿವಿಧ ಮುಖಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವ ಆವಶ್ಯಕತೆ ಇದೆ. ಈ ಸಮಸ್ಯೆಗೆ ಹಿನ್ನೆಲೆಯಾಗಿ ಅರ್ಥಪೂರ್ಣ ಮಾಹಿತಿಗಳನ್ನು ಮತ್ತು ತಾತ್ವಿಕ ಪ್ರತಿಫಲಗಳನ್ನು ನೀಡುವುದೂ ಪ್ರಾಮುಖ್ಯವೆನಿಸುತ್ತದೆ. ಇಲ್ಲಿ ನಾವು ಗಮನದಲ್ಲಿಟ್ಟುಕೊಳ್ಳಬೇಕಾದ ಸಂಗತಿಯೆಂದರೆ ಮಾನವ ನಿರ್ಮಿತ ಸಮಾಜ ಪರಿಸರದ ಧೋರಣೆಗಳು. ಈ ಧೋರಣೆಗಳು ಪರಿಸರ ಚಳವಳಿಯನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತವೆ ಎನ್ನುವುದನ್ನು ಉದಾಹರಣೆಸಹಿತ ವಿಶ್ಲೇಷಿಸುವ ಪ್ರಯತ್ನವನ್ನಿಲ್ಲಿ ಮಾಡಲಾಗಿದೆ.
ಏಕೀಕರಣೋತ್ತರ ಕರ್ನಾಟಕದ ಪರಿಸರ ಚಳವಳಿಗಳನ್ನು ಇಲ್ಲಿ ಅಧ್ಯಯನ ನಡೆಸಲಾಗಿದೆ. ಇವುಗಳನ್ನು ಹಿನ್ನೆಲೆ, ಸ್ವರೂಪ ಮತ್ತು ಸೈದ್ಧಾಂತಿಕ ನೆಲೆಗಳು ಹಾಗೂ ಪ್ರಮುಖ ಪರಿಸರ ಚಳವಳಿಗಳು ಎಂಬ ಎರಡು ಭಾಗಗಳಲ್ಲಿ ಚರ್ಚಿಸಲಾಗಿದೆ.

ಹಿನ್ನೆಲೆ, ಸ್ವರೂಪ ಮತ್ತು ಸೈದ್ಧಾಂತಿಕ ನೆಲೆಗಳು
ಪರಿಸರ ಚಳವಳಿಗಳ ಅಧ್ಯಯನ ನಡೆಸುವಾಗ ಚಳವಳಿಗಳ ಚರಿತ್ರೆಯ ಪರಿಚಯವೂ ಅಗತ್ಯವೆನಿಸುತ್ತದೆ. ಇಲ್ಲಿ ಯುರೋಪಿಯನ್ನರ ವಸಾಹತುಶಾಹಿ ಧೋರಣೆ ಹಾಗೂ ಅದರ ಮುಂದಿನ ಭಾಗಗಳು ಚರ್ಚೆಯೊಳಗೆ ಸೇರುತ್ತವೆ. ಪರಿಸರದ ಮೇಲೆ ಮಾನವ ಅಧಿಕ ಪ್ರಮಾಣದಲ್ಲಿ ಪ್ರಭುತ್ವವನ್ನು ಸ್ಥಾಪಿಸಲು ಹೊರಟಿದ್ದು ವಸಾಹತು ಆಳ್ವಿಕೆಯ ನಂತರದ ದಿನಗಳಲ್ಲಿ. ವಸಾಹತು ಆಳ್ವಿಕೆ ರೂಪಿಸಿದ ಔದ್ಯಮಿಕ, ಆರ್ಥಿಕ ನೀತಿ ವಸಾಹತೋತ್ತರ ಘಟ್ಟದಲ್ಲಿಯೂ ಬೆಳೆಯುತ್ತಾ ಹೋಯಿತು. ನವವಸಾಹತುಶಾಹಿ ನೀತಿಯ ಸಂದರ್ಭದಲ್ಲಿ ನಡೆದ ವಿದ್ಯಮಾನಗಳ ವಿಶ್ಲೇಷಣೆ ನಡೆಸಿದರೆ ಮಾತ್ರ ಪರಿಸರ ಚಳವಳಿಗಳ ವ್ಯಾಪ್ತಿ ಮತ್ತು ಸ್ವರೂಪವನ್ನು ಅರ್ಥೈಸಿಕೊಳ್ಳಲು ಸಾಧ್ಯ. ನವವಸಾಹತುಶಾಹಿ ಘಟ್ಟದಲ್ಲಿ ಬೃಹತ್ ಉದ್ದಿಮೆಗಳು ಹೊಸ ಆರ್ಥಿಕ ನೀತಿಯೊಂದಿಗೆ ಅಸ್ತಿತ್ವಕ್ಕೆ ಬಂದವು. ಗ್ಯಾಟ್, ಡಂಕೆಲ್ ನಂಥ ಒಪ್ಪಂದಗಳು ಏರ್ಪಟ್ಟು ಬಂಡವಾಳಶಾಹಿ ರಾಷ್ಟ್ರಗಳು ನಿರ್ಧಾರಕ ಶಕ್ತಿಗಳಾದವು. ಇದರಿಂದಾಗಿ ಏಕೀಕರಣೋತ್ತರ ಕರ್ನಾಟಕದಲ್ಲಿ ನಡೆದ ಪರಿಸರ ಚಳವಳಿಗಳು ಬಂಡವಾಳಶಾಹಿ ನಿರ್ಮಿಸಿದ ವ್ಯೆಹದೊಳಗೇ ಕಾರ್ಯ ನಿರ್ವಹಿಸುತ್ತಿರುವಂತೆ ಕಂಡು ಬರುತ್ತದೆ. ಬಂಡವಾಳಶಾಹಿಯ ಪ್ರತ್ಯಕ್ಷ ಅಥವಾ ಪರೋಕ್ಷ ಪ್ರಭಾವ ವಲಯದಲ್ಲಿರುವ ರಾಜಕೀಯ ಧುರೀಣರು ಜನಸಾಮಾನ್ಯರ ಒಳಿತನ್ನು ಸಾಧಿಸುವುದರಲ್ಲಿ ಉದ್ಯುಕ್ತರಾಗಿರು ವುದಿಲ್ಲ. ಬಂಡವಾಳಿಗರ ಹಿತಾಸಕ್ತಿಗಳೇ ಇಲ್ಲಿ ರಕ್ಷಣೆಗೊಳ್ಳುತ್ತಿರುತ್ತವೆ.
ಪರಿಸರ ಚಳವಳಿಗಳು ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಬದಲು ಗೊತ್ತಾದ ಕೆಲವೇ ಬಂಡವಾಳಿಗರ ವಿರುದ್ಧ ನಡೆಯುತ್ತಿರುತ್ತದೆ. ಇಡೀ ವ್ಯವಸ್ಥೆಯನ್ನು ಪ್ರಶ್ನಿಸುವ ಹಂತಕ್ಕೆ ಬರುವ ಮೊದಲೇ ಚಳವಳಿಯನ್ನು ಹಿಮ್ಮೆಟ್ಟಿಸಲಾಗುತ್ತದೆ. ಇಲ್ಲಿ ಹಿಮ್ಮೆಟ್ಟಿಸುವ ಶಕ್ತಿಗಳು ಯಾವುವು ಎಂಬ ಪ್ರಶ್ನೆಯನ್ನು ಹಾಕಿಕೊಂಡಾಗ ಎರಡು ರೀತಿಯ ನಿಯಂತ್ರಣ ವ್ಯವಸ್ಥೆ ಕಂಡುಬರುತ್ತದೆ. ಅವುಗಳೆಂದರೆ, ವಸಾಹತುಶಾಹಿಯ ಕಾಲದಿಂದ ಬಂದ ಸರಕಾರಿ ನಿಯಂತ್ರಣ ಮತ್ತು ಸ್ಥಳೀಯ ಸಾಮಾಜಿಕ ನಿಯಂತ್ರಣ. ಈ ಎರಡೂ ನಿಯಂತ್ರಣ ವ್ಯವಸ್ಥೆಗಳು ಸಡಿಲಗೊಳ್ಳಬೇಕಾದರೆ ಆರ್ಥಿಕ ಸ್ವಾವಲಂಬನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಆಗಬೇಕಾಗಿದೆ. ಆದರೆ ಉತ್ಪಾದನಾ ಸಾಧನಗಳ ಒಡೆಯರಾದ ಬಂಡವಾಳಶಾಹಿಗಳು ತಮಗೆ ಸರಿ ಕಂಡ ರೀತಿಯಲ್ಲಿ ಉತ್ಪಾದನಾ ಸಾಧನಗಳನ್ನು ದುಡಿಸಿಕೊಳ್ಳುತ್ತಿರುವುದು ಈ ಪ್ರಯತ್ನಗಳಿಗೆ ಅಡ್ಡಿಯಾಗಿದೆ. ಉತ್ಪಾದನಾ ಸಾಧನಗಳ ಮಾಲೀಕರು ಮತ್ತು ದುಡಿಯುವ ವರ್ಗಗಳ ಹಿತಾಸಕ್ತಿಗಳು ಪರಸ್ಪರ ವಿರುದ್ಧವಾಗಿವೆ. ಸಾಮುದಾಯಿಕ ಸಹಕಾರದಿಂದ ಉತ್ಪಾದನೆ ಸಾಧ್ಯವಾದರೆ ಮಾಲೀಕತ್ವ ಪಡೆಯುವುದು ಬಂಡವಾಳಶಾಹಿ ಮಾತ್ರ. ಸಾಮುದಾಯಿಕ ಉತ್ಪಾದನೆ ಹಾಗೂ ವೈಯಕ್ತಿಕ ಮಾಲಿಕತ್ವಗಳ ನಡುವಿನ ತಿಕ್ಕಾಟ ಪರಿಸರ ಚಳವಳಿಗಳ ನಿರ್ಧಾರಕ ಅಂಶವೂ ಆಗಿದೆ. ಇಲ್ಲಿ ಚಳವಳಿಗಳು ನಡೆದರೂ ಬಂಡವಾಳಶಾಹಿ ವ್ಯವಸ್ಥೆ ಕ್ಷೀಣಿಸುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಸಂಪನ್ಮೂಲಗಳ ಹಂಚಿಕೆಯಲ್ಲಾದ ಏರು-ಪೇರುಗಳು. ಇದರಿಂದಾಗಿ ಬಂಡವಾಳಶಾಹಿ ವ್ಯವಸ್ಥೆ ಪರಿಸರ ಮತ್ತು ಅಭಿವೃದ್ದಿಯ ನಡುವೆ ತಾತ್ಕಾಲಿಕವಾದ ಸಮನ್ವಯವನ್ನು ಸಾಧಿಸಿ ಬಿಡುತ್ತದೆ. ಈ ಸಮನ್ವಯವು ಪರಿಸರ ಚಳವಳಿಗಳ ಸ್ವರೂಪವನ್ನು ಬದಲಾಯಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.
ಕರ್ನಾಟಕದ ಪರಿಸರ ಚಳವಳಿಗಳನ್ನು ‘ಶ್ರೀಮಂತ ವರ್ಗದ ಸಾಂಸ್ಕೃತಿಕ ರಾಜಕೀಯ’ ಎಂಬ ಹೆಸರಿನಿಂದಲೂ ಕರೆಯಬಹುದಾಗಿದೆ. ಆದರೆ ಮೇಲ್ನೋಟಕ್ಕೆ ಪರಿಸರ ಚಳವಳಿಗಳು ಈ ರೀತಿ ಕಂಡುಬರುವುದಿಲ್ಲ. ಗ್ರಾಮೀಣ ಅಥವಾ ನಗರ ಪ್ರದೇಶದ ಜನರು ಒಟ್ಟಾಗಿ ಹೊಸ ಉದ್ದಿಮೆಗಳನ್ನು ಅಥವಾ ಆಧುನಿಕ ಕೃಷಿಯನ್ನು ವಿರೋಧಿಸುತ್ತಿರುವುದು ಎಲ್ಲೆಡೆ ಕಂಡುಬರುತ್ತಿದೆ. ಇದರರ್ಥ ಎಲ್ಲರೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಒಂದಾಗಿದ್ದಾರೆ ಎಂದಲ್ಲ. ಇದನ್ನೇ ಇಲ್ಲಿ ‘ಸಾಂಸ್ಕೃತಿಕ ರಾಜಕೀಯ’ ಎಂಬ ಹೆಸರಿನಿಂದ ಕರೆಯಲಾಗಿದೆ. ಶ್ರೀಮಂತವರ್ಗ ಉದ್ದಿಮೆಗಳ ಸ್ಥಾಪನೆಗೆ ಅಪಾರವಾದ ಬಂಡವಾಳವನ್ನು ಹೂಡುವಂತೆ ಪರಿಸರ ಚಳವಳಿಗಳನ್ನು ಸಂಘಟಿಸುವಲ್ಲೂ ಬಂಡವಾಳವನ್ನು ಹೂಡುತ್ತಿದೆ. ಇದು ಶ್ರೀಮಂತವರ್ಗದ ದ್ವಂದ್ವಾತ್ಮಕ ನೀತಿಯಾಗಿದ್ದು ಪರಿಸರ ಬಿಕ್ಕಟ್ಟು ತಲೆದೋರುವಂತೆ ಮಾಡಿದೆ. ಈ ಬಿಕ್ಕಟ್ಟಿನಿಂದ ತಲೆದೋರಬಹುದಾದ ಸಮಸ್ಯೆಗಳು ಸಮಾಜದ ಕೆಳವರ್ಗಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಇಂಥ ಅನೇಕ ಸಂದರ್ಭಗಳಲ್ಲಿ ಮಧ್ಯಮವರ್ಗ ಅಸಹಾಯಕ ಸ್ಥಿತಿಯಲ್ಲಿರುತ್ತದೆ. ಆಧುನೀಕರಣದ ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡ ಜನವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರದೇಶದಲ್ಲಿಯೇ ಪರಿಸರ ಚಳವಳಿಗಳೂ ಹೆಚ್ಚಾಗಿ ನಡೆಯುತ್ತವೆ. ಇವು ಜಾತಿ ಆಧಾರಿತ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗಿ ಇರುತ್ತವೆ. ಮೇಲ್ವರ್ಗದ ಜನರು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ ಪರಿಸರವನ್ನು ವಸ್ತುವನ್ನಾಗಿ ಬಳಸಿಕೊಂಡಿರುತ್ತಾರೆ. ಇಲ್ಲಿ ಪರಿಸರ, ಪರಿಸರವಾದಿ ಮತ್ತು ಪರಿಸರವಾದ ಎನ್ನುವ ಪದಗಳು ಅರ್ಥವನ್ನು ಕಳೆದುಕೊಂಡು ಬಿಡುತ್ತವೆ. ಆಧುನಿಕತೆಯ ಎಲ್ಲ ಸೌಲಭ್ಯ ಮತ್ತು ಸವಲತ್ತುಗಳನ್ನು ತನ್ನಲ್ಲೇ ಕೇಂದ್ರೀಕರಿಸಿಕೊಳ್ಳುವುದು ಮತ್ತು ಕೆಳವರ್ಗ ಇದರಿಂದ ವಂಚಿತವಾಗುವಂತೆ ನೋಡಿಕೊಳ್ಳುವ ಉದ್ದೇಶವೂ ಇದರಲ್ಲಿ ಸೇರಿಕೊಂಡಿದೆ. ಶ್ರೀಮಂತ ಬಂಡವಾಳಶಾಹಿಯ ಪ್ರವೇಶವಾದರೆ ತಾವು ಸ್ಪರ್ಧೆ ನೀಡಲಾರೆವೇನೋ ಎನ್ನುವ ಭಯದಿಂದಲೂ ಶ್ರೀಮಂತ ವರ್ಗ ಹೊಸ ಯೋಜನೆಗಳನ್ನು ವಿರೋಧಿಸಲು ಪ್ರಾರಂಭಿಸಿತು. ಇದಕ್ಕಾಗಿ ಪರಿಸರ ಚಳವಳಿಗಳನ್ನು ನಡೆಸುವ ಅಗತ್ಯವಿತ್ತು. ಹೊಸ ಯೋಜನೆಗಳಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವ ಪರಿಸರಪರ ಕಾಳಜಿ ತೋರಿಸಿ ಸ್ಥಳೀಯ ಜನರು ಉದ್ದಿಮೆಗಳನ್ನು ವಿರೋಧಿಸುವಂತೆ ಪ್ರಚೋದನೆ ನೀಡಲಾಯಿತು. ಇದು ಕೇವಲ ಸಾಂಸ್ಕೃತಿಕ ರಾಜಕೀಯವೇ ಹೊರತು ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಪ್ರಯತ್ನವಲ್ಲ.
ಕರ್ನಾಟಕದ ಪರಿಸರ ಚಳವಳಿಗಳ ಅಧ್ಯಯನ ನಡೆಸುವಾಗ ಪಟಭದ್ರ ಹಿತಾಶಕ್ತಿಗಳ ನಾಯಕತ್ವವೇ ಎದ್ದು ಕಾಣುತ್ತದೆ. ಒಟ್ಟು ಆಶಯವನ್ನು ನಾಯಕತ್ವ ವಹಿಸಿದವರ ವರ್ಗ ಹಿನ್ನೆಲೆ ನಿಯಂತ್ರಿಸುತ್ತಿರುವುದನ್ನು ಕಾಣಬಹುದಾಗಿದೆ. ಆದರೆ ಇದೇ ಸಂದರ್ಭದಲ್ಲಿ ಎಲ್ಲ ಜನವರ್ಗಗಳು ಜಾತಿ, ವರ್ಗ ಭೇದವಿಲ್ಲದೆ ಚಳವಳಿಯಲ್ಲಿ ಭಾಗವಹಿಸಿದವು ಎನ್ನುವ ತಪ್ಪು ವರದಿಯೂ ದಾಖಲುಗೊಳ್ಳುತ್ತಿರುತ್ತದೆ. ಪರಿಸರ ಚಳವಳಿಗಳು ಹೊರನೋಟಕ್ಕೆ ಕೃಷಿ ಅಥವಾ ಉದ್ದಿಮೆಗಳಿಂದಾಗುವ ಪರಿಸರ ಮಾಲಿನ್ಯದ ವಿರುದ್ಧ ನಡೆಯುತ್ತಿರುವ ಹಾಗೆ ಕಂಡುಬಂದರೂ ತಮ್ಮ ಒಡಲಲ್ಲಿ ಜಾತಿ ವಿಭಜಿತ ಸಮಾಜದ ಲಕ್ಷಣಗಳನ್ನು ಹೊಂದಿವೆ. ಇಂಥ ಚಳವಳಿಗಳ ಮೂಲಕ ಮೂಲಭೂತ ಬದಲಾವಣೆಯನ್ನು ಸಾಧಿಸುವ ಪ್ರಮೇಯವೂ ಕಡಿಮೆ. ಆದ್ದರಿಂದಲೇ ಇಲ್ಲಿ ಘಟಿಸಿದ ಹೆಚ್ಚಿನ ಪರಿಸರ ಚಳವಳಿಗಳು ನೆಲಕಚ್ಚಿವೆ. ಆದರೂ ಚಳವಳಿಗಳು ನಡೆಯಲೇಬೇಕು ಎನ್ನುವ ಕಾರಣಕ್ಕಾಗಿ ನಡೆಯುತ್ತಿವೆ. ಇದು ಸಮಾಜದ ಮೇಲ್ರಚನೆಯ ಮತ್ತು ಕೆಳರಚನೆಯ ರಾಜಕೀಯ ವಾಗಿದ್ದು, ಪುರೋಗಾಮಿ ಅಥವಾ ಪ್ರತಿಗಾಮಿ ಸ್ವರೂಪವನ್ನು ಹೊಂದಿದೆ. ಈ ದ್ವಂದ್ವಗಳು ಪರಿಸರ ಚಳವಳಿಯ ಚರಿತ್ರೆಯುದ್ದಕ್ಕೂ ಕಂಡುಬರುತ್ತವೆ. ಸಮಾಜದ ಬದಲಾವಣೆಯ ಸ್ಪಷ್ಟ ಉದ್ದೇಶವಿರಿಸಿ ಕೊಂಡು ಆರ್ಥಿಕ, ರಾಜಕೀಯ ಆಯಾಮಗಳನ್ನು ಹೊಂದಿದ್ದರೆ ಮಾತ್ರ ಚಳವಳಿಗಳು ತಮ್ಮ ನಿಶ್ಚಿತ ಗುರಿಯನ್ನು ಹೊಂದಲು ಸಾಧ್ಯ. ಆದರೆ ಬೂರ್ಶ್ವಾವರ್ಗ ಈ ಯಾವ ಉದ್ದೇಶವನ್ನೂ ಇಟ್ಟುಕೊಂಡಂತೆ ಕಂಡುಬರುವುದಿಲ್ಲ. ಬೂರ್ಶ್ವಾವರ್ಗ ನಡೆಸುವ ಹೋರಾಟ, ಜನರಲ್ಲಿ ಮೂಡಿಸುವ ಪರಿಸರ ಪ್ರಜ್ಞೆಯ ಸ್ವರೂಪ ಇವೆಲ್ಲವೂ ನಿರ್ಧಾರವಾಗಬೇಕಾಗಿದೆ.
ಯಾವುದೇ ಚಳವಳಿಯ ಯಶಸ್ವಿಗೆ ಮಧ್ಯಮ ವರ್ಗದ ಪ್ರವೇಶ ಬಹುಮುಖ್ಯ ವಾದದ್ದಾಗಿದೆ. ಯೂರೋಪಿನಲ್ಲಾದ ಬಹುತೇಕ ಕ್ರಾಂತಿಗಳು ಮಧ್ಯಮ ವರ್ಗದ ಭಾಗವಹಿಸುವಿಕೆಯಿಂದಾಗಿ ಯಶಸ್ವಿಯಾಗಿರುವುದನ್ನು ಚರಿತ್ರೆಯಿಂದ ಕಾಣಬಹುದಾಗಿದೆ. ಮಧ್ಯಮ ವರ್ಗ ಅಸ್ತಿತ್ವದಲ್ಲಿರದ ಸಮಾಜ ಊಳಿಗಮಾನ್ಯ ವ್ಯವಸ್ಥೆಯಲ್ಲೇ ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ಮಧ್ಯಮವರ್ಗ ರೂಪುಗೊಳ್ಳುವುದು ಶ್ರೀಮಂತ ವರ್ಗ ತನ್ನ ಅಧಿಕಾರ ಮತ್ತು ಸವಲತ್ತುಗಳ ಕುರಿತು ಮರು ಆಲೋಚಿಸುವಂತೆ ಮಾಡುತ್ತದೆ. ಆದರೆ ಮಧ್ಯಮೊವರ್ಗ ರೂಪುಗೊಂಡರೆ ಕೆಳವರ್ಗದ ಜನರಿಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆಯೇನೂ ಇಲ್ಲ. ಮಧ್ಯಮ ವರ್ಗ ತನ್ನದೇ ಆದ ರಾಜಕೀಯ ಸಿದ್ಧಾಂತವನ್ನು ಹೊಂದಿದೆ. ಅಧಿಕಾರ ಮತ್ತು ಸವಲತ್ತುಗಳನ್ನು ಪಡೆಯಲು ಇದು ಬಡಜನರ ಸಹಾಯವನ್ನು ಯಾಚಿಸುತ್ತದೆ. ಇವರೆಡನ್ನೂ ಗಳಿಸಿಕೊಂಡ ಬಳಿಕ ಶ್ರೀಮಂತ ವರ್ಗಕ್ಕೂ ಮಧ್ಯಮ ವರ್ಗಕ್ಕೂ ಹೆಚ್ಚಿನ ವ್ಯತ್ಯಾಸಗಳು ಕಂಡುಬರುವುದಿಲ್ಲ. ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ದುಡಿಯುವ ವರ್ಗ ಮತ್ತು ದುಡಿಸುವ ವರ್ಗ ಮಾತ್ರ ಇದ್ದು ಪ್ರಶ್ನಿಸುವ ಮಧ್ಯಮವರ್ಗ ರೂಪುಗೊಂಡಿಲ್ಲ. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಕೊರತೆ ಎದ್ದು ಕಾಣುತ್ತದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು ಮುಂತಾದ ಜಿಲ್ಲೆಗಳಲ್ಲಿ ಮಧ್ಯಮ ವರ್ಗವು ಅನೇಕ ಪರಿಸರ ಚಳವಳಿಗಳನ್ನು ಹುಟ್ಟುಹಾಕಿದೆ. ಉದಾಹರಣೆಗೆ ಕೈಗಾ, ಪಾಲಿಫೈಬರ್, ಕೊಜೆಂಟ್ರಿಕ್ಸ್, ಎಂ.ಆರ್.ಪಿ.ಎಲ್., ಗಣಿಗಾರಿಕೆ ಮುಂತಾದ ಯೋಜನೆಗಳ ವಿರುದ್ಧ ನಡೆಯುತ್ತಿರುವ ಚಳವಳಿಗಳು. ಚಳವಳಿಗಳಲ್ಲಿ ಶ್ರೀಮಂತ ವರ್ಗದ ಭಾಗವಹಿಸುವಿಕೆ ಇಲ್ಲ ಎಂದಲ್ಲ, ಅದೂ ನೇರವಾಗಿ ಭಾಗವಹಿಸಿದೆ.
ಪರಿಸರವೂ ಮಾಲಿನ್ಯಕ್ಕೊಳಗಾಗಬಾರದು ಹಾಗೂ ಅಭಿವೃದ್ದಿಯೂ ನಿರಂತರವಾಗಿ ನಡೆಯುತ್ತಿರಬೇಕು ಎನ್ನುವ ಸಿದ್ಧಾಂತ ಸರಿಯಲ್ಲ. ಪರಿಸರ ಮಾಲಿನ್ಯವಿಲ್ಲದೆ ಅಭಿವೃದ್ದಿಯನ್ನು ನಡೆಸುವುದು ಕಷ್ಟದ ಕೆಲಸ. ಪರಿಸರ ಸಂಬಂಧಿತ ನಿಯಮಗಳನ್ನು ಜಾರಿಗೆ ತಂದು ಅದರ ಪ್ರಕಾರ ಅಭಿವೃದ್ದಿಯನ್ನು ನಡೆಸಿದರೆ ಮಾಲಿನ್ಯದ ಪ್ರಮಾಣ ಖಂಡಿತವಾಗಿಯೂ ಕಡಿಮೆಯಾಗುತ್ತದೆ. ಅಭಿವೃದ್ದಿ ಪರಿಕಲ್ಪನೆಯೂ ಸೀಮಿತಾರ್ಥದಲ್ಲಿ ಬಳಕೆಯಾಗಿದೆ. ಇದನ್ನು ಆಧುನಿಕತೆ ಮತ್ತು ಸಂಪ್ರದಾಯಗಳ ನಡುವಿನ ತಿಕ್ಕಾಟವಾಗಿ ಉದ್ದೇಶಪೂರ್ವಕವಾಗಿ ಪರಿವರ್ತಿಸಲಾಗಿದೆ. ಆಧುನಿಕತೆ ಅಪಾಯಕಾರಿ ಎನ್ನುವ ವಾದ ಮಾಡುತ್ತಿರುವವರು ನವಸಂಪ್ರದಾಯವಾದಿಗಳು. ಇವರಿಗೆ ಈ ಪ್ರಶ್ನೆ ಯಜಮಾನಿಕೆಯ, ಸಾಮಾಜಿಕ ಪ್ರತಿಷ್ಠೆ, ಗೌರವದ ದೃಷ್ಟಿಯಿಂದ ಪ್ರಾಮುಖ್ಯವೆನಿಸುತ್ತದೆ. ಇವರ್ಯಾರೂ ಆಧುನಿಕತೆಯನ್ನು ಆರಂಭಿಕ ಹಂತದಲ್ಲಿ ವಿರೋಧಿಸಲಿಲ್ಲ. ಬದಲಾಗಿ ಅದರ ಸಂಪೂರ್ಣ ಲಾಭ ಪಡೆದುಕೊಂಡರು. ಸಮಾಜದ ಕೆಳಸ್ತರದ ಜನರಿಗೆ ಆಧುನಿಕತೆಯಿಂದ ಲಾಭವಾಗು ವುದನ್ನು ಇವರು ಸಹಿಸುವುದಿಲ್ಲ. ಉತ್ಪಾದನಾ ವ್ಯವಸ್ಥೆ ಹಿಂದಿನಂತೆಯೇ ಬೆಳೆದುಕೊಂಡು ಹೋಗಬೇಕೆನ್ನುವುದೇ ಇಲ್ಲಿನ ಉದ್ದೇಶ. ಈ ರೀತಿಯ ಸಿದ್ಧಾಂತಗಳು ಹದಿನೆಂಟನೆಯ ಶತಮಾನದ ಯೂರೋಪಿನಲ್ಲಿಯೇ ಕಾಣಿಸಿಕೊಂಡಿದ್ದವು. ಇವು ಇಡೀ ವ್ಯವಸ್ಥೆಯನ್ನು ಪ್ರತಿನಿಧಿಸುವ ಬದಲು ಸೀಮಿತ ವಲಯದಲ್ಲಿ ಹೆಣೆದುಕೊಂಡಿದ್ದವು. ಪರಿಸರ ಮತ್ತು ಅಭಿವೃದ್ದಿಯ ಕುರಿತಾದ ಕಲ್ಪನೆಗಳನ್ನು ಜಟಿಲಗೊಳಿಸಿದ್ದೇ ಅಲ್ಲದೆ ದ್ವಂದ್ವಾತ್ಮಕ ನಿಲುವುಗಳು ರೂಪುಗೊಳ್ಳುವಂತೆಯೂ ಮಾಡಿದವು. ಇದರಿಂದಾಗಿ ಮಾನವ ಮತ್ತು ಪರಿಸರದ ಸಂಬಂಧಗಳು ಅಸ್ಪಷ್ಟಗೊಳ್ಳಲಾರಂಭಿಸಿದವು. ಪರಿಸರ ಮತ್ತು ಅಭಿವೃದ್ದಿಯ ನಡುವೆ ಹೊಂದಾಣಿಕೆ ಏರ್ಪಡಿಸಿಕೊಳ್ಳುವುದು ಇದಕ್ಕಿರುವ ಮಾರ್ಗೋಪಾಯವಾದರೂ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯಲ್ಲಿ ಇದರ ಸಾಧ್ಯತೆ ತುಂಬಾ ಕಡಿಮೆ. ಪರಿಸರ ಮತ್ತು ಅಭಿವೃದ್ದಿಗಳೆರಡೂ ಪುನರ್ ವ್ಯಾಖ್ಯಾನಗೊಳ್ಳಬೇಕಾಗಿದೆ. ಇವೆರಡನ್ನೂ ಜಾಗತಿಕ ವನ್ನಾಗಿಸಿ ನೋಡುವುದಕ್ಕೂ ಸ್ಥಳೀಯವಾಗಿ ನೋಡುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಯಾವುದೇ ಒಂದು ಯೋಜನೆಯನ್ನು ಅದರ ಅಂತಾರಾಷ್ಟ್ರೀಯ ಅಥವಾ ರಾಷ್ಟ್ರೀಯ ಲಾಭದ ಹಿನ್ನೆಲೆಯಿಂದಷ್ಟೇ ನೋಡದೆ ಸ್ಥಳೀಯ ನಷ್ಟದ ಅಥವಾ ಸಮಸ್ಯೆಯ ಹಿನ್ನೆಲೆಯಿಂದಲೂ ನೋಡಬೇಕಾಗುತ್ತದೆ.
ಪರಿಸರ ನಾಶದ ಕಡೆಗೆ ಗಮನ ಕೊಡದೆ ಉದ್ದಿಮೆಗಳನ್ನು ಸ್ಥಾಪಿಸುವುದು ಒಂದು ವಿಧಾನ. ಇದರಲ್ಲಿ ಉದ್ದಿಮೆಗಾರರಿಗೆ ಲಾಭವೇ ಹೆಚ್ಚು. ಏಕೆಂದರೆ ಹೆಚ್ಚು ಬಂಡವಾಳವನ್ನು ಇಲ್ಲಿ ವಿನಿಯೋಗಿಸುವ ಅಗತ್ಯವಿರುವುದಿಲ್ಲ. ಪರಿಸರವನ್ನು ಅಂದರೆ ನದಿ, ಪರ್ವತ, ಖನಿಜಗಳು ಮುಂತಾದವುಗಳನ್ನು ತಮಗೆ ಅನುಕೂಲವಾಗುವಂತೆ ಬಳಸಿಕೊಳ್ಳಬಹುದು. ಪ್ರಪಂಚದ ಎಲ್ಲ ಭಾಗಗಳಲ್ಲಿಯೂ ಆರಂಭದ ಹಂತದಲ್ಲಿ ಇದೇ ರೀತಿಯ ಬೆಳವಣಿಗೆ ಕಂಡುಬಂತು. ಇದನ್ನು ವಿರೋಧಿಸುವ ಧೋರಣೆಯೂ ಆ ದಿನಗಳಲ್ಲೇ ಕಾಣಿಸಿಕೊಂಡವು. ಇದು ಪರಿಸರ ಚರ್ಚೆಗೆ ಒಳಗಾದ ಪ್ರಥಮ ಹಂತ. ಆದರೆ ಅನೇಕ ದೇಶಗಳು ಈ ಸ್ಥಿತಿಯನ್ನು ಈಗ ಎದುರಿಸುತ್ತಿವೆ. ಮುಂದುವರಿದ ರಾಷ್ಟ್ರಗಳು ಇದನ್ನೇ ಬಂಡವಾಳವನ್ನಾಗಿಸಿ ತಮ್ಮ ಬಂಡವಾಳ ಶೇಖರಣೆಯ ಗೀಳನ್ನು ಪೂರೈಸಿಕೊಳ್ಳುತ್ತಿವೆ. ಮುಂದುವರಿದ ರಾಷ್ಟ್ರಗಳು ಈಗ ಎಲ್ಲ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಉದ್ದಿಮೆಗಳನ್ನು ಸ್ಥಾಪಿಸುತ್ತಿರುವುದರಿಂದಾಗಿ ಪರಿಸರ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಕಡಿಮೆಗೊಳಿಸುವ ಪ್ರಯತ್ನದಲ್ಲಿವೆ. ಆದರೆ ತಾವು ಬಂಡವಾಳ ಹೂಡುತ್ತಿರುವ ಬಡರಾಷ್ಟ್ರಗಳಲ್ಲೂ ಮುನ್ನೆಚ್ಚರಿಕೆಯ ಕ್ರಮಗಳನ್ನು ಜಾರಿಗೊಳಿಸುವ ಯಾವ ಪ್ರಯತ್ನವನ್ನೂ ಮಾಡುತ್ತಿಲ್ಲ. ಇದರ ಬದಲಾಗಿ ಇಂದಿನ ಬದಲಾದ ಆರ್ಥಿಕ ನೀತಿಯಲ್ಲಿ ಪರಿಸರ ರಕ್ಷಣೆಯ ಕುರಿತು ವಿವೇಚಿಸುವುದು ತಪ್ಪು ಎನ್ನುವ ವಾದವನ್ನು ಮುಂದಿಟ್ಟಿವೆ. ಏಕೆಂದರೆ ಬಹುರಾಷ್ಟ್ರೀಯ ಕಂಪೆನಿಗಳು ಪರಿಸರಕ್ಕೆ ಧಕ್ಕೆ ಉಂಟುಮಾಡುವ ಉದ್ದಿಮೆಗಳನ್ನು ಹೊರೊರಾಷ್ಟ್ರಗಳಲ್ಲಿ ಸ್ಥಾಪಿಸಿ ಲಾಭವನ್ನು ಮಾತ್ರ ಪಡೆಯುವ ಉದ್ದೇಶವನ್ನು ಹೊಂದಿವೆ. ಇಲ್ಲಿ ಪರಿಸರ ನಾಶವಾದರೆ ಬಹುರಾಷ್ಟ್ರೀಯ ಕಂಪೆನಿಗಳಿಗೇನೂ ನಷ್ಟವಿಲ್ಲ. ಸ್ಥಳೀಯ ಉದ್ದಿಮೆದಾರರೂ ಸ್ಪರ್ಧೆಯನ್ನು ನೀಡುವುದಕ್ಕಾಗಿ ಇದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಪರಿಸರ ಚಳವಳಿಗಳು ಈ ಸೂಕ್ಷ್ಮಗಳನ್ನು ಅರಿತುಕೊಂಡಂತೆ ಕಂಡುಬರುವುದಿಲ್ಲ.
ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣ ಗಳು ಪರಿಸರ ಬಿಕ್ಕಟ್ಟಿಗೆ ಮೂಲ ಕಾರಣಗಳು ಎಂಬಂತೆ ಕಂಡುಬಂದವು. ಇನ್ನೂ ಅನೇಕ ಕಾರಣಗಳಿದ್ದರೂ ಅವು ಒಂದಲ್ಲ ಒಂದು ರೀತಿಯಲ್ಲಿ ಇವೆರಡರೊಡನೆ ಬೆಸೆದುಕೊಂಡಿವೆ. ಗಣಿಗಾರಿಕೆ, ಜಲವಿದ್ಯುತ್ ಯೋಜನೆ, ಅಣುವಿದ್ಯುತ್ ಯೋಜನೆ ಹಾಗೂ ಇನ್ನಿತರ ಯೋಜನೆಗಳ ಹೆಸರಿನಲ್ಲಿ ದಟ್ಟ ಅರಣ್ಯಗಳು ಜಲಾಶಯಗಳಾಗಿಯೋ ಇಲ್ಲವೇ ಕಾಂಕ್ರಿಟ್ ಕಾಡುಗಳಾಗಿಯೋ, ಅಣು ರಿಯಾಕ್ಟರ್ಗಳಾಗಿಯೋ ರೂಪ ತಳೆದಿವೆ. ಅದೇ ರೀತಿ ಬೃಹತ್ ಕೈಗಾರಿಕಾ ನಗರಗಳು ಸ್ಥಾಪನೆಗೊಂಡು ನಗರೀಕರಣ ಪ್ರಕ್ರಿಯೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಗಳನ್ನು ಉಂಟುಮಾಡಿವೆ. ಒಂದೇ ಸಮನೆ ಬೆಳೆಯುತ್ತಿರುವ ನಗರ ಜನಸಂಖ್ಯೆ, ವಾಹನಗಳ ದಟ್ಟಣೆ, ಬೃಹತ್ ಕಾರ್ಖಾನೆಗಳು, ಕೊಳೆಗೇರಿಗಳ ಸೃಷ್ಟಿ ಇವೆಲ್ಲಾ ನಗರ ಜೀವನವನ್ನು ಸಂಕೀರ್ಣಗೊಳಿಸಿವೆ. ಆರಂಭಿಕ ಹಂತದಲ್ಲಿ ಪ್ರಕೃತಿಯ ಮೇಲೆ ಅತಿಯಾದ ಭರವಸೆಯನ್ನು ಹೊಂದಿದ್ದೇ ಇಂದಿನ ಪರಿಸರ ಬಿಕ್ಕಟ್ಟಿಗೆ ಮೂಲಕಾರಣವಾಗಿ ಕಂಡುಬರುತ್ತದೆ. ಸ್ಥಳೀಯ ನಿವಾಸಿಗಳು ಹೋರಾಟ ನಡೆಸಿದರೂ ಅದು ಬೇರೆ ಬೇರೆ ಉದ್ದೇಶಗಳಿಗೆ ವೇದಿಕೆಯಾಯಿತು. ಅಧಿಕಾರಶಾಹಿ, ಸರಕಾರ ಮತ್ತು ಉದ್ಯಮಪತಿಗಳ ಕೂಡುವಿಕೆಯಿಂದಾಗಿ ಚಳವಳಿಗಳ ಸ್ವರೂಪವೇ ಬದಲಾಯಿತು. ಶ್ರೀಮಂತವರ್ಗ ತನ್ನ ಅನುಕೂಲಕ್ಕೆ ತಕ್ಕಂತೆ ಚಳವಳಿಯಲ್ಲಿ ಮಾರ್ಪಾಡು ಮಾಡಿಕೊಂಡಿತು. ಈ ಕಾರಣಗಳಿಂದಾಗಿ ಪರಿಸರ ಚಳವಳಿಗಳನ್ನು ಕೆಳಕಂಡಂತೆ ವರ್ಗೀಕರಿಸಬಹುದಾಗಿದೆ.
1. ಯಾವುದೋ ಒಂದು ಘಟನೆಯನ್ನು ವಿರೋಧಿಸಿ ನಡೆಯುವ ಚಳವಳಿ. ಇದು ತನ್ನ ಉದ್ದೇಶ ಈಡೇರಿದ ಬಳಿಕ ಸುಮ್ಮನಾಗುತ್ತದೆ. ಪರಿಸರ ಜಾಗತಿಕ ನೆಲೆಯಲ್ಲಿ ಚರ್ಚೆಗೊಳ್ಳುತ್ತಿರುವ ವಸ್ತು ಎನ್ನುವುದು ಇಲ್ಲಿ ಅಪ್ರಸ್ತುತ. ಸ್ವಂತ ಹಿತಾಸಕ್ತಿಗಳೇ ಇಲ್ಲಿ ಪರಿಸರ ಚಳವಳಿ ನಡೆಸುವಂತೆ ಪ್ರೇರೇಪಿಸುತ್ತಿರುತ್ತವೆ.
2. ನಮ್ಮ ಪ್ರದೇಶದಲ್ಲಿ(ಒಂದು ಭೌಗೋಳಿಕ ಪ್ರದೇಶಕ್ಕೆ ಸೀಮಿತಗೊಂಡಂತೆ) ಉದ್ದಿಮೆ ಗಳು ಸ್ಥಾಪನೆಗೊಳ್ಳುವುದು ಬೇಡ ಎನ್ನುವ ಸಂಕುಚಿತ ಮನೋಭಾವದ ಚಳವಳಿಗಳು. ಇದು ಉದ್ದಿಮೆಗಳನ್ನು ಸ್ಥಳಾಂತರಿಸುವ ಕೆಲಸವನ್ನಷ್ಟೇ ಮಾಡಲು ಸಾಧ್ಯ.
3. ಪರಿಸರವನ್ನೇ ವಸ್ತುವನ್ನಾಗಿರಿಸಿಕೊಂಡು ನಡೆಯುವ ನಿರಂತರ ಹೋರಾಟಗಳು. ಇವು ಅನೇಕ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗಿ ಬರುತ್ತವೆ. ಇವರಲ್ಲೂ ಅನೇಕ ಪ್ರಚಾರಪ್ರಿಯರಿರುತ್ತಾರೆ. ಇನ್ನು ಕೆಲವರು ಲೇಖನ, ಪುಸ್ತಕಗಳನ್ನು ಬರೆಯುತ್ತಾ ವಿಚಾರಸಂಕಿರಣಗಳನ್ನು ಹಮ್ಮಿಕೊಂಡು ಪರಿಸರವಾದಿಗಳಾಗಿ ಬಿಡುತ್ತಾರೆ. ಪರಿಸರ ಮಾಲಿನ್ಯದ ಹೆಸರಿನಲ್ಲಿ ಬೇರೆ ಬೇರೆ ಮೂಲಗಳಿಂದ ಹಣ ಸಂಗ್ರಹಿಸುವ ವರ್ಗವೂ ಇಲ್ಲಿದೆ. ಇವರಿಗೆ ಪರಿಸರ ಚಳವಳಿಗಳು ನಿರಂತರವಾಗಿ ನಡೆಯುತ್ತಲೇ ಇರಬೇಕು. ಆದರೆ ಖಚಿತವಾದ ಸೈದ್ಧಾಂತಿಕ ನಿಲುವುಗಳನ್ನು ಹೊಂದಿರುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.
ಮಾನವ ಮತ್ತು ಪ್ರಕೃತಿಯ ನಡುವಿನ ಸಂಬಂಧ ಚಳವಳಿಗಳ ವಸ್ತುವಾಗಿಲ್ಲ ಎನ್ನುವುದು ಮೇಲಿನ ವಿವರಣೆಯಿಂದ ಸಾಬೀತುಗೊಳ್ಳುತ್ತದೆ. ಈ ಸಂಬಂಧವನ್ನು ಸಂಕೀರ್ಣಗೊಳಿಸುವ ಶಕ್ತಿಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಇವುಗಳಲ್ಲಿ ಸ್ಥಳೀಯ ಶ್ರೀಮಂತವರ್ಗ, ಉದ್ಯಮಿಗಳು, ರಾಜಕೀಯ ಪಕ್ಷಗಳು ಹಾಗೂ ಸರಕಾರ ಪ್ರಮುಖವಾದವು. ಇವು ಪರಿಸರ ಚಳವಳಿಗಳು ಪರಿಸರವನ್ನೇ ಮರೆತು ಬಿಡುವಂತೆ ಮಾಡುತ್ತವೆ. ಇಂಥ ಸಂದರ್ಭಗಳಲ್ಲಿ ಪ್ರಕೃತಿ ಒಂದು ನೆಪವಾಗಿ ಮಾತ್ರ ಕಾಣಿಸಿಕೊಳ್ಳುತ್ತದೆ. ಪ್ರಕೃತಿಯನ್ನು ನಂಬಿ ದುಡಿಯುತ್ತಿರುವ ದುಡಿಯುವ ವರ್ಗ ಪರಿಸರ ಶಿಕ್ಷಣದಿಂದ ವಂಚಿತವಾಗುವಂತೆ ಆಳುವ ವರ್ಗ ಮಾಡುತ್ತದೆ. ಆಳುವ ವರ್ಗದಿಂದ ಎಳೆಯಲ್ಪಟ್ಟ ಸೀಮಾರೇಖೆಯನ್ನು ದಾಟುವ ಸಾಮರ್ಥ್ಯ ದುಡಿಯುವ ವರ್ಗಕ್ಕಿರುವುದಿಲ್ಲ. ಪರಿಸರ ಪ್ರಜ್ಞೆಯನ್ನು ಜನಸಮುದಾಯದಲ್ಲಿ ಬೆಳೆಸುವ ಉದ್ದೇಶದಿಂದ ಕರ್ನಾಟಕ ಸರಕಾರ ಪರಿಸರ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿತು. ಆದರೆ ಈ ಯೋಜನೆಗಳು ಮೇಲೆ ವಿವರಿಸಿದಂತೆ ನಿರೀಕ್ಷಿತ ಯಶಸ್ಸನ್ನು ಕಾಣುವಲ್ಲಿ ವಿಫಲವಾದವು. ಆದರೂ ಇಂದು ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಪರಿಸರ ಸಮಸ್ಯೆಯ ಪರಿಚಯವನ್ನು ಮಾಡಿಕೊಡುವ, ಪರಿಣಾಮಗಳನ್ನು ಎತ್ತಿ ತೋರಿಸುವ ಮತ್ತು ಪರಿಹಾರದ ಮಾರ್ಗಗಳನ್ನು ಸೂಚಿಸುವ ಕೆಲಸವನ್ನು ಮಾಡುತ್ತಿವೆ. ಪರಿಸರ ಶಿಕ್ಷಣ ಯಶಸ್ಸನ್ನು ಕಾಣಬೇಕಾದರೆ ಅದು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಗಡಿಯನ್ನು ದಾಟಿ ನಿಂತು ಪರಿಸರವನ್ನು ನೋಡುವ, ಅಭ್ಯಸಿಸುವ ಕೆಲಸವನ್ನು ಮಾಡಬೇಕು. ಆಧುನಿಕ ಸಂದರ್ಭದಲ್ಲೂ ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ನುಸುಳಿಕೊಂಡಿರುವುದಕ್ಕೆ ಸಾವಯವ ಕೃಷಿಯ ಪ್ರಚಾರವೇ ಉತ್ತಮ ಉದಾಹರಣೆ. ಸಾವಯವ ಕೃಷಿ ಸಂಪ್ರದಾಯಸ್ಥರಿಂದಾಗಿ ವೇದ-ಶಾಸ್ತ್ರಗಳ ಹಿನ್ನೆಲೆಯಿಂದ ವಿಶ್ಲೇಷಣೆ ಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಸಾವಯವ ಕೃಷಿಯೂ ವೈಜ್ಞಾನಿಕವಾದದ್ದು ಎನ್ನುವ ನಂಬಿಕೆಯನ್ನು ರೈತರಲ್ಲಿ ಮೂಡಿಸಬೇಕು.
ನೈಸರ್ಗಿಕ ಕೃಷಿಯ ಕುರಿತು ನೈಸರ್ಗಿಕ ಕೃಷಿತಜ್ಞ ಎಂದೇ ಪ್ರಸಿದ್ದಿ ಪಡೆದಿರುವ ಸುಭಾಷ್ ಪಾಳೇಕರ್ ಅವರು ದೊಡ್ಡ ಆಂದೋಲನವನ್ನೇ ಮಾಡಿದ್ದಾರೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಕುರಿತು ಇವರು ಉಪನ್ಯಾಸಗಳನ್ನು ನೀಡಿ ರೈತರಲ್ಲಿ ಭರವಸೆ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ಭೂಮಿಯ ಫಲವತ್ತತೆಯನ್ನು ಕೃಷಿ ತ್ಯಾಜ್ಯ ವಸ್ತುಗಳಿಂದಲೇ ರಕ್ಷಿಸಬೇಕು ಹಾಗೂ ರೈತರು ರಾಸಾಯನಿಕ ಕ್ರಿಮಿ-ಕೀಟನಾಶಕಗಳ ಮೊರೆ ಹೋಗಬಾರದು ಎನ್ನುವುದು ಪಾಳೇಕರ್ ಅವರು ರೈತರಿಗೆ ನೀಡಿದ ಸಲಹೆ. ಶೂನ್ಯ ಬಂಡವಾಳದ ಈ ನೈಸರ್ಗಿಕ ಕೃಷಿ ಪದ್ಧತಿಯಿಂದ ರೈತರ ಹಣ ಅವರಲ್ಲಿಯೇ ಉಳಿಯುತ್ತದೆ ಹಾಗೂ ಲಾಭದಾಯಕ ಕೃಷಿಯನ್ನು ಮಾಡಬಹುದೆಂದು ತಿಳಿಸಿದ್ದಾರೆ. ಸ್ಥಳೀಯ ಬೀಜಗಳ ಮಹತ್ವವನ್ನು ಪ್ರತಿಪಾದಿಸಿರುವ ಪಾಳೇಕರ್ ಅವರು ಬಿತ್ತನೆಗೆ ಸ್ಥಳೀಯ ಅಥವಾ ದೇಸೀ ತಳಿಯ ಬೀಜಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು, ಹೈಬ್ರಿಡ್ ಬೀಜಗಳನ್ನು ಖರೀದಿಸಿದರೆ ಅದರ ಜತೆ ರೋಗ ಆಹ್ವಾನಿಸಿದಂತಾಗುತ್ತದೆ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ. ರೈತ ಸ್ನೇಹಿಯಾದ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಅನೇಕ ರೈತರು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಾರಂಭಿಸಿದ್ದಾರೆ. ನೈಸರ್ಗಿಕ ಕೃಷಿ ಕಾರ್ಯಾಗಾರಗಳು ಕರ್ನಾಟಕದಾದ್ಯಂತ ನಡೆಯುತ್ತಿರುವುದರಿಂದಾಗಿ ರೈತರು ಇದರ ಮಹತ್ವವನ್ನು ಅರಿತು ಶೋಷಣೆ ಮುಕ್ತ ಕೃಷಿ ಪದ್ಧತಿಯೆಡೆಗೆ ಹೆಜ್ಜೆ ಹಾಕುತ್ತಿರುವುದು ಸಂತೋಷದ ಸಂಗತಿ. ಆದರೆ ರಾಸಾಯನಿಕ ಕ್ರಿಮಿ-ಕೀಟ ನಾಶಕಗಳು, ಹೈಬ್ರಿಡ್ ಬೀಜಗಳು ಹಾಗೂ ಇವುಗಳನ್ನು ಪ್ರಚಾರ ಮಾಡುತ್ತಿರುವ ಕಂಪನಿಗಳ ಹಿಡಿತದಿಂದ ತಪ್ಪಿಸಿಕೊಂಡು ನೈಸರ್ಗಿಕ ಕೃಷಿಯತ್ತ ಮುಖ ಮಾಡುವುದು ಕೃಷಿಕರಿಗೆ ಸ್ವಲ್ಪ ಕಷ್ಟದ ಕೆಲಸವಾದರೂ ಅಸಾಧ್ಯವಾದದ್ದೇನಲ್ಲ.
ಪರಿಸರ ಸಮಸ್ಯೆಗೆ ಸಂಬಂಧಪಟ್ಟಂತೆ ಜಾಗತಿಕ ಮಟ್ಟದಲ್ಲಿ ವಿಚಾರಸಂಕಿರಣಗಳು, ಸಮ್ಮೇಳನಗಳು ನಡೆದಿವೆ. 1972ರಲ್ಲಿ ಸ್ವೀಡನ್ನ ಸ್ಟಾಕ್ಹೋಮ್ನಲ್ಲಿ ಪರಿಸರ ಕುರಿತ ಪ್ರಥಮ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. ಅಲ್ಲಿ ವಾಯುಮಾಲಿನ್ಯ, ಜಲಮಾಲಿನ್ಯ, ಸಮಸ್ತ ಪ್ರಾಣಿ ಹಾಗೂ ಸಸ್ಯವರ್ಗಗಳ ನಾಶ ಮುಂತಾದ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಯಿತು. ಇದರ ಪ್ರಭಾವದಿಂದಾಗಿ ಪ್ರಪಂಚದ ಅನೇಕ ಭಾಗಗಳಲ್ಲಿ ಪರಿಸರ ಸಂಘಟನೆಗಳು, ಸಮ್ಮೇಳನಗಳು ಕಾಣಿಸಿಕೊಂಡವು. ಇನ್ನೊಂದು ಮಹತ್ವದ ಸಮ್ಮೇಳನ 1992ರ ಜೂನ್ನಲ್ಲಿ ಬ್ರೆಜಿಲ್ನ ಪೂರ್ವ ಕರಾವಳಿಯ ರಿಯೋ ನಗರದಲ್ಲಿ ನಡೆಯಿತು. ಇದರಲ್ಲಿ ನೂರಕ್ಕಿಂತಲೂ ಹೆಚ್ಚು ದೇಶಗಳ ಸುಮಾರು ಹನ್ನೆರಡು ಸಾವಿರ ಪ್ರತಿನಿಧಿಗಳು ಭಾಗವಹಿಸಿದರು. ಇದೊಂದು ಪರಿಸರ ಸಮಸ್ಯೆಗೆ ಜಾಗತಿಕ ಪರಿಹಾರ ಕಂಡುಹಿಡಿಯುವ ಪ್ರಯತ್ನ. ಆದರೆ ಸಮ್ಮೇಳನದಲ್ಲಿ ಬಂಡವಾಳಶಾಹಿ ರಾಷ್ಟ್ರಗಳು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಂಡವು. ಬಡರಾಷ್ಟ್ರಗಳಿಗೆ ಸಾಂತ್ವನವಷ್ಟೇ ದೊರಕಿತು. 1997ರಲ್ಲಿ ನ್ಯೂಯಾರ್ಕ್ನಲ್ಲಿ ಮತ್ತೊಮ್ಮೆ ಸಭೆ ಸೇರಲಾಯಿತು. ಇದು ಕೇವಲ ಪ್ರತಿನಿಧಿಗಳ ಭಾಷಣಗಳಿಗಷ್ಟೇ ಸೀಮಿತವಾಯಿತು. ಪಂಚತಾರಾ ಹೋಟೆಲ್ಗಳಲ್ಲಿ ಸಭೆ ನಡೆದು ಬಂಡವಾಳಶಾಹಿ ರಾಷ್ಟ್ರಗಳು ಮತ್ತೊಮ್ಮೆ ತಮ್ಮ ನೀತಿಯನ್ನು ಪುನಾರಚಿಸಿಕೊಂಡವು. ಶಕಿ್ತಶಾಲಿ ರಾಷ್ಟ್ರಗಳಿಗೆ ಶಕ್ತಿಹೀನ ರಾಷ್ಟ್ರಗಳು ನೈಸರ್ಗಿಕ ಸಂಪನ್ಮೂಲಗಳನ್ನು ಕೊಡುವ ಭರವಸೆಯಿತ್ತು ಆರ್ಥಿಕ ಸಹಾಯವನ್ನು ಯಾಚಿಸಿದವು. ಇದು ಅಂತಾರಾಷ್ಟ್ರೀಯ ಪರಿಸರ ಸಮ್ಮೇಳನಗಳ ಒಟ್ಟು ಫಲಿತಾಂಶ ಮತ್ತು ಪರಿಣಾಮ. ಕರ್ನಾಟಕದಲ್ಲೂ 1972ರ ಈಚೆಗೆ ನಿರ್ದಿಷ್ಟವಾಗಿ ಪರಿಸರದ ಹಣೆಪಟ್ಟಿ ಹೊತ್ತ ಲೇಖನಗಳು, ಗ್ರಂಥಗಳು ಬರಲಾರಂಭಿಸಿದವು. 1978ರ ಚಿಪ್ರೋಚಳವಳಿ, 1980ರ ಬೇಡ್ತಿ ಕುರಿತ ವಿಚಾರ ಸಂಕಿರಣಗಳಿಂದ ಪರಿಸರ ಸಂರಕ್ಷಣೆಯ ಕಾಳಜಿ ಮತ್ತು ಬರಹಗಳು ಹೆಚ್ಚಲು ಪ್ರಾರಂಭವಾಯಿತು. ಇವುಗಳ ಸ್ವರೂಪ ಕುರಿತು ಈಗಾಗಲೇ ಚರ್ಚಿಸಲಾಗಿದೆ. ಕರ್ನಾಟಕದಾದ್ಯಂತ ಪರಿಸರ ಸಂಘಟನೆಗಳು ಹುಟ್ಟಿಕೊಂಡವು. ಸರಕಾರ ಅನೇಕ ಪರಿಸರ ಶಾಸನಗಳನ್ನು ಜಾರಿಗೆ ತಂದಿತು. ಮಾಲಿನ್ಯ ನಿಯಂತ್ರಣವನ್ನು ನಿರ್ವಹಿಸಲು ಪ್ರಾದೇಶಿಕ ಕಛೇರಿಗಳನ್ನು ಪ್ರಮುಖ ನಗರಗಳಲ್ಲಿ ತೆರೆಯಲಾಯಿತು. ಇದರರ್ಥ ಪರಿಸರ ಸಮಸ್ಯೆಗಳು ಬಗೆಹರಿದವು ಎಂದಲ್ಲ. ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಜನರ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆಯಾಗದೆ ಪರಿಸರದ ಬಗ್ಗೆ ಏನನ್ನೂ ನಿರೀಕ್ಷಿಸುವಂತಿಲ್ಲ. ಇದು ಉತ್ಪಾದನಾ ವಿಧಾನ ಮತ್ತು ಹಂಚಿಕೆಯಲ್ಲಿನ ಬದಲಾವಣೆಗಳನ್ನು ಅವಲಂಬಿಸಿಕೊಂಡಿದೆ. ಪರಿಸರ ಚಳವಳಿಗಳಲ್ಲಿ ಉತ್ಪಾದಕ ಮತ್ತು ಅನುತ್ಪಾದಕ ವರ್ಗಗಳ ನಡುವಿನ ಸಂಬಂಧ, ಯಜಮಾನಿಕೆಯ ಸಂಕೇತಗಳಾದ ರಾಜಕೀಯ ಮತ್ತು ಅಧಿಕಾರದ ಪ್ರಶ್ನೆಗಳು ಸೇರಿಕೊಂಡಿರಬೇಕು. ಈ ಕಾರಣಗಳಿಂದಾಗಿ ಪರಿಸರ ಮತ್ತು ಪರಿಸರ ಚಳವಳಿಗಳೊಕುರಿತು ಈಗಾಗಲೇ ಒಪ್ಪಿದ ವ್ಯಾಖ್ಯಾನ ಪುನರ್ವಿಮರ್ಶೆಗೆ ಒಳಗಾಗಬೇಕಾಗಿದೆ.

ಪ್ರಮುಖ ಪರಿಸರ ಚಳವಳಿಗಳು
ಕರ್ನಾಟಕದ ಪ್ರಮುಖ ಪರಿಸರ ಚಳವಳಿಗಳನ್ನು ಅವುಗಳು ನಡೆದ ಪ್ರದೇಶ, ಸಂದರ್ಭ, ಭೌಗೋಳಿಕತೆ ಮತ್ತು ಕಾಲಕ್ಕನುಗುಣವಾಗಿ ಈ ಭಾಗದಲ್ಲಿ ಚರ್ಚಿಸಲಾಗಿದೆ. ಕರ್ನಾಟಕ ಏಕೀಕರಣಗೊಂಡ ನಂತರದ ಎರಡು ದಶಕಗಳಲ್ಲಿ ಪರಿಸರಕ್ಕೆ ಸಂಬಂಧಪಟ್ಟ ಚಳವಳಿಗಳು ಅಷ್ಟಾಗಿ ಕಂಡುಬರಲಿಲ್ಲ. ಇದ್ದರೂ ಅವು ಚಳವಳಿಯ ಸ್ವರೂಪವನ್ನು ಪಡೆದುಕೊಂಡಿ ರಲಿಲ್ಲ. ಎಲ್ಲ ಹೋರಾಟಗಳನ್ನು ಚಳವಳಿಗಳೆಂದು ಪರಿಗಣಿಸಲು ಸಾಧ್ಯ ವಾಗುವುದಿಲ್ಲ. ಸುಮಾರು ಎಪ್ಪತ್ತರ ದಶಕದಿಂದೀಚೆಗೆ ಪರಿಸರ ಜಾಗತಿಕ ನೆಲೆಯಲ್ಲಿ ಚರ್ಚೆಯ ವಸ್ತುವಾಗಿ ರೂಪುಗೊಂಡು ವಿಭಿನ್ನ ಸ್ವರೂಪದ ಪರಿಸರ ಚಳವಳಿಗಳು ಕಾಣಸಿಕೊಳ್ಳಲಾರಂಭಿಸಿದವು. ಅವುಗಳಿಗೆ ಇಲ್ಲಿನ ನದಿ, ಉದ್ದಿಮೆ, ಬೆಟ್ಟಗುಡ್ಡಗಳು, ಕೃಷಿ, ನಗರಕೇಂದ್ರಗಳು, ಉದ್ಯಾನ ಗಳು, ಕೆರೆಗಳು ಮತ್ತು ಸಮುದ್ರಗಳು ವಸ್ತುಗಳಾದವು. ಕರ್ನಾಟಕದಾದ್ಯಂತ ಏಕರೂಪದ ಪರಿಸರ ಚಳಿವಳಿ ನಡೆದಿಲ್ಲ. ಕರ್ನಾಟಕದ ಪ್ರಾಕೃತಿಕ ವಿಭಾಗಗಳಾದ ಪಶ್ಚಿಮದ ಕರಾವಳಿ, ಪಶ್ಚಿಮಘಟ್ಟಗಳು, ದಕ್ಷಿಣದ ಬಯಲುಸೀಮೆ ಹಾಗೂ ಉತ್ತರದ ಬಯಲುಸೀಮೆಗಳಲ್ಲಿನ ಪರಿಸರ ಚಳವಳಿಗಳು ಪರಸ್ಪರ ಭಿನ್ನವಾಗಿವೆ. ಈ ಭಿನ್ನತೆಗೆ ಆಯಾ ಪ್ರದೇಶದ ಭೌಗೋಳಿಕತೆ, ಸಾಮಾಜಿಕ ರಚನೆ ಹಾಗೂ ಸಂಪತ್ತಿನ ಹಂಚಿಕೆಯಲ್ಲಾದ ಏರುಪೇರುಗಳೇ ಮೂಲಕಾರಣವಾಗಿ ಕಂಡುಬರುತ್ತದೆ. ಉತ್ತರ ಕರ್ನಾಟಕದಲ್ಲಿ ಸಂಪಘ್ತಿನ ಹಂಚಿಕೆ ಸಮನಾಗಿಲ್ಲ ಎನ್ನುವುದು ವಾಸ್ತವ ಸಂಗತಿ. ಆಧುನಿಕತೆಯ ಎಲ್ಲ ಸೌಲಭ್ಯ, ಸವಲತ್ತುಗಳನ್ನು ಪಡೆದುಕೊಂಡ ಶ್ರೀಮಂತ ವರ್ಗ ಸಮಾಜದ ಮೇಲ್ತುದಿಯಲ್ಲಿದ್ದರೆ, ಎಲ್ಲ ಸೌಲಭ್ಯಗಳಿಂದಲೂ ವಂಚಿತರಾಗಿರುವ ಬಡವರ್ಗ ಸಮಾಜದ ಕೆಳತುದಿಯಲ್ಲಿದೆ. ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ಪ್ರಶ್ನಿಸುವ ಮಧ್ಯಮವರ್ಗ ಇನ್ನೂ ರೂಪುಗೊಂಡಿಲ್ಲ. ಕರಾವಳಿ ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಧ್ಯಮವರ್ಗ ಚುರುಕಾಗಿದ್ದರೂ ಬಂಡವಾಳಶಾಹಿ ಮತ್ತು ಅಧಿಕಾರಶಾಹಿಗಳೂ ಅಷ್ಟೇ ಚುರುಕಾಗಿವೆೆ. ಜಾತಿ ರಾಜಕೀಯ ಹಾಗೂ ಸಾಮಾಜಿಕ ಪ್ರತಿಷ್ಠೆಗಳು ಚಳವಳಿಗಳಲ್ಲಿ ನುಸುಳಿಕೊಂಡಿವೆ. ಇದರಿಂದಾಗಿ ಕರ್ನಾಟಕದ ಪರಿಸರ ಚಳವಳಿಗೆ ಏಕರೂಪದ ವ್ಯಾಖ್ಯಾನವನ್ನು ನೀಡಲು ಸಾಧ್ಯವಾಗುವುದಿಲ್ಲ. ಪ್ರತಿಯೊಂದು ಚಳವಳಿಯೂ ಆಯಾ ಸಂದರ್ಭದ ಸಾಮಾಜಿಕ ಮತ್ತು ಆರ್ಥಿಕ ರಚನೆಯ ಪ್ರತಿಬಿಂಬವೇ ಆಗಿದ್ದು, ಅಲ್ಲಿನ ಉತ್ಪಾದನಾ ವಿಧಾನಗಳ ಪ್ರಮುಖ ಲಕ್ಷಣಗಳನ್ನು ಸೂಚಿಸುತ್ತಿರುವುದು ಕಂಡುಬರುತ್ತದೆ. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿನ ಪರಿಸರ ಚಳವಳಿಗಳ ವಿವರಣಾತ್ಮಕ ಮತ್ತು ವಿಶ್ಲೇಷಣಾತ್ಮಕ ಅಧ್ಯಯನವನ್ನು ಮಾಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

ಗಣಿಗಾರಿಕೆ
ಕರ್ನಾಟಕದ ಪರಿಸರ ಚಳವಳಿಗಳ ಅಧ್ಯಯನ ನಡೆಸುವಾಗ ಗಣಿಗಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಚಳವಳಿಗಳು ವಿಶಿಷ್ಟ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬಳ್ಳಾರಿ ಈ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮತ್ತು ಇನ್ನೂ ಅನೇಕ ಪ್ರದೇಶಗಳಲ್ಲಿ ಗಣಿಗಾರಿಕೆ ವ್ಯಾಪಕವಾಗಿ ಹರಡಿಕೊಂಡಿದೆ. ಕರ್ನಾಟಕದ ಬೆಟ್ಟಗಳಲ್ಲಿ ಸಿಗುವ ಚಿನ್ನ, ಬೆಳ್ಳಿ, ಕಬ್ಬಿಣ, ಮ್ಯಾಂಗನೀಸ್, ಗ್ರಾನೈಟ್, ಸುಣ್ಣ, ಬಾಕ್ಸೈಟ್, ತಾಮ್ರ ಮುಂತಾದ ಖನಿಜ ಸಂಪತ್ತುಗಳೇ ಗಣಿಗಾರಿಕೆಗೆ ಆಸ್ತಿಗಳಾಗಿವೆ. ಕರ್ನಾಟಕದಲ್ಲಿ ಗಣಿಗಾರಿಕೆ ಎರಡು ರೀತಿಯಲ್ಲಿ ನಡೆಯುತ್ತಿದೆ. ಅವುಗಳೆಂದರೆ ಸರಕಾರಿ ಸ್ವಾಮ್ಯದ ಸಂಸ್ಥೆಗಳು ನಡೆಸುವ ಗಣಿಗಾರಿಕೆ ಮತ್ತು ಖಾಸಗಿ ಸಂಸ್ಥೆಗಳು ನಡೆಸುತ್ತಿರುವ ಗಣಿಗಾರಿಕೆ. ರಾಜ್ಯದ ಅಭಿವೃದ್ದಿಯ ದೃಷ್ಟಿಯಿಂದ ಗಣಿಗಾರಿಕೆ ಅನಿವಾರ್ಯವಾದರೂ ಅದು ನಡೆಯುತ್ತಿರುವ ರೀತಿ ಅಭಿವೃದ್ದಿಗೆ ಪೂರಕವಾಗಿಲ್ಲ. ಅಂದರೆ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದ ಅಭಿವೃದ್ದಿಗೆ ಪೂರಕವಾಗಿಲ್ಲ ಎಂದೇ ಅರ್ಥ. ಗಣಿಗಾರಿಕೆಯಲ್ಲಿ ತೊಡಗಿರುವ ಸಂಸ್ಥೆಗಳ ದೃಷ್ಟಿ ಮುಖ್ಯವಾಗಿ ಕೇಂದ್ರೀಕೃತವಾಗಿರುವುದು ಕೆಳಕಂಡ ಮೂರು ವಿಷಯಗಳ ಮೇಲೆ.
1. ಸಂಬಂಧಪಟ್ಟ ಇಲಾಖೆಗಳಿಂದ ಹೇಗಾದರೂ ಮಾಡಿ ಲೈಸನ್ಸ್ ಪಡೆಯುವುದು.
2. ಆದಷ್ಟು ಬೇಗ ಅದಿರನ್ನು ಸಂಗ್ರಹಿಸುವುದು.
3. ಕಳಪೆ ಅದಿರನ್ನು ಅಲ್ಲಲ್ಲೇ ಎಸೆದು ಸಮೃದ್ಧ ಅದಿರನ್ನು ಮಾತ್ರ ಸಾಗಿಸಿ ಹೆಚ್ಚಿನ ಲಾಭ ಗಳಿಸುವುದು.
ಈ ಮೂರು ವಿಷಯಗಳನ್ನು ಬಿಟ್ಟರೆ ಲೈಸನ್ಸ್ ನೀಡುವ ಮೊದಲು ಇಂಡಿಯನ್ ಬ್ಯೂರೋ ಆಫ್ ಮೈನ್ಸ್ ಹಾಕಿದ ಷರತ್ತುಗಳಾಗಲಿ, ಪರಿಸರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳ ನಿಯಮವಾಗಲಿ ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ಇದರಿಂದಾಗಿ ಹಸಿರಾಗಿದ್ದ ಪ್ರದೇಶಗಳಲ್ಲಿ ಅನುಪಯುಕ್ತ ಅದಿರಿನ ರಾಶಿ, ಆಳವಾದ ಕಂದಕಗಳು, ಕೊಚ್ಚಿಹೋಗುತ್ತಿರುವ ಕಣಿವೆಗಳ ನೋಟ ಸರ್ವೇಸಾಮಾನ್ಯವಾಗಿಬಿಟ್ಟಿದೆ.
ಗಣಿಗಾರಿಕೆ ನಡೆಯುತ್ತಿರುವ ಪ್ರತಿಯೊಂದು ಜಿಲ್ಲೆಯಲ್ಲಿಯೂ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಇದರಲ್ಲಿ ‘ಸಹ್ಯಾದ್ರಿ ಗಣಿ ವಿರೋಧಿ ವೇದಿಕೆ’ ಪ್ರಮುಖವಾದದ್ದು. ಈ ವೇದಿಕೆ ಸಾಗರದಲ್ಲಿದ್ದು ಮಲೆನಾಡಿನಲ್ಲಿ ಗಣಿಗಾರಿಕೆಯನ್ನು ನಿಲ್ಲಿಸುವುದೇ ಇದರ ಉದ್ದೇಶವಾಗಿದೆ. ಈ ವೇದಿಕೆ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣವೆಂದರೆ ಶಿವಮೊಗ್ಗ, ಭದ್ರಾವತಿ, ಸಾಗರ, ಶೃಂಗೇರಿ, ಹೊಸನಗರ, ಸಿರಸಿ, ಸಿದ್ಧಾಪುರ, ಹೊನ್ನಾಳಿ, ಸೊರಬ, ಹೊನ್ನಾವರ, ಚನ್ನಗಿರಿ ತಾಲೂಕಿನುದ್ದಕ್ಕೂ ಮಲೆನಾಡಿನ ಸುಮಾರು ಇಪ್ಪತ್ತು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ಕೋರಿ ಸುಮಾರು ಮೂವತ್ತೈದು ದೇಶಿ ಹಾಗೂ ವಿದೇಶಿ ಗಣಿಗಾರಿಕೆ ಕಂಪೆನಿಗಳು ಅರ್ಜಿ ಹಾಕಿರುವುದು. ಕರ್ನಾಟಕದ ಯಾವುದೇ ಗಣಿ ಯೋಜನಾ ಪ್ರದೇಶದಲ್ಲಿ ನಿಸರ್ಗದ ಇತರ ಆಸ್ತಿಗಳನ್ನು ರಕ್ಷಿಸುವ ಪ್ರಯತ್ನ ಯಶಸ್ವಿಯಾಗದಿರುವುದೇ ವೇದಿಕೆಯ ಆತಂಕಕ್ಕೆ ಮೂಲ ಕಾರಣ. ಕುದುರೆಮುಖ, ಬಿಸಗೋಡು, ದಾಂಡೇಲಿ ಮತ್ತು ಸಂಡೂರು ಗಣಿಗಳ ಚಿತ್ರ ಇನ್ನೂ ಹಸಿಯಾಗಿಯೇ ಇದೆ. ಗಣಿಗಾರಿಕೆಯಲ್ಲಿ ಬಳ್ಳಾರಿ ಜಿಲ್ಲೆ ಅಗ್ರಸ್ಥಾನವನ್ನು ಪಡೆದುಕೊಂಡಿದ್ದರೂ ಚಳವಳಿಯ ದೃಷ್ಟಿಯಿಂದ ಅಷ್ಟೇ ಕೆಳಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ದುಡಿಯುವ ವರ್ಗ ಮತ್ತು ದುಡಿಸುವ ವರ್ಗಗಳು ಮಾತ್ರ ಇದ್ದು ಪ್ರಶ್ನಿಸುವ ಮಧ್ಯಮ ವರ್ಗ ಗೈರುಹಾಜರಾಗಿದೆ. ಸ್ಥಳೀಯ ಶ್ರೀಮಂತ ವರ್ಗ ಮತ್ತು ಬಂಡವಾಳಶಾಹಿ ಮಾತ್ರ ಈ ಜಿಲ್ಲೆಯಲ್ಲಿ ನಿರ್ಧಾರಕ ಶಕ್ತಿಗಳಾಗಿದ್ದು ಪರಿಸರ ಚಳವಳಿಗಳು ಇನ್ನೂ ಸ್ಪಷ್ಟವಾಗಿ ಕಾಣಿಸಿಕೊಂಡಿಲ್ಲ.
ಕರ್ನಾಟಕದಲ್ಲಿ ಗಣಿಗಾರಿಕೆ ಕುರಿತ ವಿಚಾರಗಳು ಹೆಚ್ಚು ಚರ್ಚೆಗೆ ಈಡಾಗಿರುವುದು 2006ರಲ್ಲಿ. ಆರೋಪ ಪ್ರತ್ಯಾರೋಪದ ಹಿಂದಿನ ರಾಜಕೀಯ ಉದ್ದೇಶಗಳು ಹಾಗೂ ಸತ್ಯಾಸತ್ಯತೆಗಳು ಏನೇ ಇದ್ದರೂ, ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿಯೇ ಗಣಿಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಹಲವಾರು ಗಣಿ ಮಾಲಿಕರನ್ನು ಕೋಟ್ಯಧೀಶರನ್ನಾಗಿ ಮಾಡಿದ್ದಂತೂ ನಿಜ. ಸಂಡೂರು, ಹೊಸಪೇಟೆ ಮತ್ತು ಬಳ್ಳಾರಿ ತಾಲೂಕುಗಳಲ್ಲಿ ದಿನದ ಇಪ್ಪತ್ತನಾಲ್ಕು ತಾಸುಗಳೂ ಗಣಿ ಚಟುವಟಿಕೆಗಳು ನಡೆಯುತ್ತಿರುತ್ತವೆ. ಅದಿರು ಹೊರ ತೆಗೆಯುವ, ತೆಗೆದ ಅದಿರಿನ ಕಲ್ಲುಗಳನ್ನು ಸಾಗಣೆಗೆ ಅನುಕೂಲವಾಗುವಂತೆ ಒಡೆಯುವ ಕಲ್ಲಿನ ರೂಪದ ಅದಿರನ್ನು ಪುಡಿ ಮಾಡುವ ಮತ್ತು ಅದನ್ನು ಲಾರಿ, ರೈಲು ಬೋಗಿಗಳಿಗೆ ತುಂಬಿ ಸಾಗಿಸುವ ಕೆಲಸಗಳಲ್ಲಿ ಸಾವಿರಾರು ಕಾರ್ಮಿಕರು ಹಗಲಿರುಳು ದುಡಿಯುತ್ತಿರುತ್ತಾರೆ. ಗಣಿಗಾರಿಕೆ ಬಿಟ್ಟರೆ ಬೇರೆ ಯಾವ ಕೆಲಸಗಳೂ ನಡೆಯುತ್ತಿಲ್ಲ ಎನ್ನುವ ಪರಿಸ್ಥಿತಿ ಸಂಡೂರು ತಾಲೂಕಿನಲ್ಲಿದೆ. ಆದರೆ ಈ ತಾಲೂಕುಗಳು ಅದರಲ್ಲೂ ಸಂಡೂರು ತಾಲೂಕು ಅತ್ಯಂತ ದುಸ್ಥಿತಿಯಲ್ಲಿದೆ. ಗಣಿಗಾರಿಕೆ ನಡೆಯುವ ಪ್ರದೇಶದ ಸುತ್ತಲಿನ ಹಳ್ಳಿಗಳು ಕೆಮ್ಮಣ್ಣು ಬಳಿದುಕೊಂಡು ನಿಂತಿವೆ. ಇದರಿಂದ ಸುತ್ತಮುತ್ತಲಿನ ಪರಿಸರ ಮತ್ತು ಜನಜೀವನದ ಮೇಲೆ ಅಪಾರ ಪ್ರಮಾಣದ ದುಷ್ಪರಿಣಾಮಗಳಾಗಿವೆ. ಕೃಷಿ ಭೂಮಿಯಲ್ಲಿ ಅದಿರು ತೆಗೆಯುವಂಥ ಗಣಿಗಾರಿಕೆಯೂ ಸಂಡೂರು ತಾಲೂಕಿಲ್ಲಿ ನಡೆಯುತ್ತಿದೆ. ಇದರಿಂದಾಗಿ ನೂರಾರು ಎಕರೆ ಕೃಷಿ ಭೂಮಿ ನಿರುಪಯುಕ್ತವಾಗಿದ್ದು ಈ ಭೂಮಿಯನ್ನು ಮತ್ತೆ ಕೃಷಿಗೆ ಸಿದ್ಧಪಡಿಸಲು ರೈತರು ಸಾಕಷ್ಟು ಬೆವರು ಸುರಿಸಬೇಕಾಗಿದೆ. ಗಣಿಗಾರಿಕೆಯನ್ನು ನಿಷೇಧಿಸುವ ಕುರಿತಾಗಿ ಸರಕಾರ ಯೋಚಿಸುತ್ತಿರುವುದಾಗಿ ಹೇಳಿಕೆಗಳು ಬಂದರೂ ಅದು ಗಣಿಗಾರಿಕೆ ಮೇಲೆ ಯಾವ ಪರಿಣಾಮವನ್ನೂ ಬೀರಲಿಲ್ಲ. ಅಕ್ರಮ ಗಣಿಗಾರಿಕೆಯನ್ನು ನಿಷೇಧಿಸಬೇಕು, ನ್ಯಾಯಾಂಗ ತನಿಖೆ ನಡೆಸಬೇಕು ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿದ್ದರೂ ಗಣಿಗಾರಿಕೆ ಯಾವ ಆತಂಕವೂ ಇಲ್ಲದೆ ನಡೆಯುತ್ತಿರುವುದನ್ನು ಕಾಣಬಹುದಾಗಿದೆ.

ತುಂಗಾ ಮೂಲ ಉಳಿಸಿ ಚಳವಳಿ
ಈ ಚಳವಳಿಯೂ ಗಣಿಗಾರಿಕೆಗೆ ಸಂಬಂಧಿಸಿದ್ದೇ ಆಗಿದೆ. ಗಂಗಡಿಕಲ್ಲು ನೆಲ್ಲಿ ಬೀಡುಗಳಲ್ಲಿನ ಗಣಿಗಾರಿಕೆಯೇ ಈ ಸಮಸ್ಯೆಯನ್ನು ಹುಟ್ಟುಹಾಕಿದೆ. ಇದು ತುಂಗಾ ಮತ್ತು ಭದ್ರಾ ನದಿಗಳೆರಡರ ಅಸ್ತಿತ್ವದ ಪ್ರಶ್ನೆಯಾಗಿದೆ. ನೆಲ್ಲಿಬೀಡು ಭದ್ರೆಯ ಪ್ರಶ್ನೆಯಾದರೆ, ಗಂಗಡಿಕಲ್ಲು ತುಂಗೆಯ ಪ್ರಶ್ನೆಯಾಗಿದೆ. ಕುದುರೆಮುಖ ಕಂಪೆನಿಯ ಪ್ರಯತ್ನದಿಂದಾಗಿ ಇಲ್ಲಿ ಗಣಿಗಾರಿಕೆ ನಡೆಸಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿತು. ಇದೊಂದು ಕುದುರೆಮುಖ ಕಬ್ಬಿಣದ ಅದಿರಿನ ಕಂಪೆನಿಯ ವಿಸ್ತರಣಾ ಯೋಜನೆ. ಇದರ ಹಿಂದೆ ಬಹುರಾಷ್ಟ್ರೀಯ ಜಯಪ್ರಕಾಶ ಕಂಪೆನಿಯ ಹಿತಾಸಕ್ತಿಯೂ ಇದೆ. ಶಿವಮೊಗ್ಗ, ಕಳಸ, ಶೃಂಗೇರಿಯ ನಾಗರಿಕರು ಈ ಯೋಜನೆಯನ್ನು ವಿರೋಧಿಸಿದರು. ತುಂಗಾ ಮೂಲ ಉಳಿಸಿ ಎಂಬ ಫಲಕ ಹೊತ್ತು ಹಳ್ಳಿಗಳಲ್ಲಿ ಸೈಕಲ್ ಜಾಥಾ ನಡೆಸಿದರು. ಶಿವಮೊಗ್ಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಿಮೋಚನಾ ರಂಗವು ಈ ಚಳವಳಿಯನ್ನು ಕೈಗೆತ್ತಿಕೊಂಡಿತು. ಇದು ಏನೇ ಸಮಸ್ಯೆಗಳು ಎದುರಾದರೂ ಈ ಯೋಜನೆಯನ್ನು ವಿರೋಧಿಸುವುದು ಖಂಡಿತ ಎನ್ನುವ ಹೇಳಿಕೆಯನ್ನು ನೀಡಿತು. ಅದೇ ರೀತಿ ಕುದುರೆಮುಖ ಅದಿರು ಕಂಪೆನಿ, ಜಯಪ್ರಕಾಶ್ ಕಂಪೆನಿ ಮತ್ತು ಸರಕಾರದ ನಡುವಿನ ಒಪ್ಪಂದವೂ ಮುಂದುವರಿಯಿತು. ಇದರಿಂದಾಗಿ ಯಾವುದೇ ಸ್ಪಷ್ಟ ತೀರ್ಮಾನಗಳು ಹೊರಬರಲು ಸಾಧ್ಯವಾಗಲಿಲ್ಲ. ಸಾಹಿತಿ ಯು.ಆರ್. ಅನಂತಮೂರ್ತಿ ಅವರ ನೇತೃತ್ವ ದಲ್ಲಿ ಈ ಚಳವಳಿ ಮತ್ತೊಮ್ಮೆ ರಾಜ್ಯಾದ್ಯಂತ ಪ್ರಚಾರವನ್ನು ಪಡೆದುಕೊಂಡಿತು. ಚಳವಳಿ ಗಾರರು ಸರಕಾರದೊಂದಿಗೆ ನೇರ ಮಾತುಕತೆ ನಡೆಸಿದರು. ಆದರೆ ಈ ಚಳವಳಿಯೂ ನಿರೀಕ್ಷಿಸಿದಷ್ಟು ಯಶಸ್ಸನ್ನು ಪಡೆಯಲಿಲ್ಲ.

ಪಶ್ಚಿಮಘಟ್ಟ ಉಳಿಸಿ ಚಳವಳಿ
ಪಶ್ಚಿಮಘಟ್ಟ ಉಳಿಸಿ ಎನ್ನುವ ಚಳವಳಿ ಆರಂಭಗೊಳ್ಳುವುದಕ್ಕೆ ಅನೇಕ ಕಾರಣಗಳಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಗಣಿಗಾರಿಕೆ, ನದಿಮೂಲದ ಸಮಸ್ಯೆ, ವಾಣಿಜ್ಯ ಬೆಳೆ, ಪರಿಸರ ನೀತಿ, ಆಡಳಿತ ಹಾಗೂ ಆರ್ಥಿಕ ನೀತಿ ಮತ್ತು ಅದರೊಡನೆ ಬಂದ ಬಹುರಾಷ್ಟ್ರೀಯ ಕಂಪೆನಿಗಳ ಧೋರಣೆಗಳು. ಪಶ್ಚಿಮಘಟ್ಟಗಳು ಕಾಫಿ, ಟೀ, ಏಲಕ್ಕಿ ತೋಟಗಳಾಗಿ, ರೈಲ್ವೆ ಹಳಿಯ ಅಡಿಪಟ್ಟಿಗಳಾಗಿ, ಅಣೆಕಟ್ಟುಗಳ ಅಡಿಯಲ್ಲಿ ಮುಳುಗಿ, ಗಣಿಗಾರಿಕೆಗೆ ಸಿಲುಕಿ, ಕೈಗಾರಿಕಾ ಕ್ರಾಂತಿಯ ಬೆನ್ನೆಲುಬಾಗಿ, ಮಾನವನ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡವು. ಕರ್ನಾಟಕ ಏಕೀಕರಣಗೊಂಡ ನಂತರ ಇಲ್ಲಿಯವರೆಗೆ ಸುಮಾರು ಮೂರೂವರೆ ಲಕ್ಷ ಹೆಕ್ಟೇರಿನಷ್ಟು ಪ್ರದೇಶ ವಿವಿಧ ಯೋಜನೆಗಳ ಹೆಸರಿನಲ್ಲಿ ಬಳಕೆಯಾಗಿದೆ. ಇದರಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಸುಮಾರು ಒಂದು ಲಕ್ಷದ ಮೂವತ್ತು ಸಾವಿರ ಹೆಕ್ಟೇರ್ ಪ್ರದೇಶ ಬಳಕೆಯಾಗಿದೆ. ಸುಮಾರು ಅರವತ್ತು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿದೆ. ಪಶ್ಚಿಮ ಘಟ್ಟದಲ್ಲಿ ಹುಟ್ಟಿದ ಚಕ್ರಾ, ಕಾಳಿ, ಶರಾವತಿ, ಬೇಡ್ತಿ, ಮಹದಾಯಿ, ಅಘನಾಶಿನಿ, ಕಪಿಲೆ ಮುಂತಾದ ನದಿಗಳು ಸಮಸ್ಯೆಯನ್ನೇ ಹೊತ್ತು ಹರಿಯುತ್ತಿದೆ.
ಪಶ್ಚಿಮಘಟ್ಟ ಉಳಿಸಿ ಚಳವಳಿಯ ಸಂದರ್ಭದಲ್ಲಿ ಚರ್ಚೆಗೊಳಗಾದ ಇನ್ನೊಂದು ಸಂಗತಿ ಪಶ್ಚಿಮಘಟ್ಟದ ಅಭಿವೃದ್ದಿಗೆ ಸಂಬಂಧಿಸಿದ್ದು. ಪಶ್ಚಿಮಘಟ್ಟದ ಅಭಿವೃದ್ದಿಗೆಂದು ಸಾಗರೋತ್ತರ ಅಭಿವೃದ್ದಿ ಸಂಸ್ಥೆಗಳಿಂದ ಹಣ ಸಂಗ್ರಹಿಸಲಾಯಿತು. ಬ್ರಿಟನ್ ದೇಶವು 260 ಕೋಟಿ ರೂಪಾಯಿಯನ್ನು ಪಶ್ಚಿಮಘಟ್ಟ ಅರಣ್ಯ ಮತ್ತು ಪರಿಸರ ಯೋಜನೆಗಾಗಿ ನೀಡಿತು. ಇದು ಸರಕಾರ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ನಡುವಿನ ಒಡಂಬಡಿಕೆ. 1982ರಲ್ಲಿ ವಿಶ್ವಬ್ಯಾಂಕ್ ಪಶ್ಚಿಮಫಟ್ಟಗಳ ಅಭಿವೃದ್ದಿಗೆಂದು 25 ಕೋಟಿ ರೂಪಾಯಿ ಗಳನ್ನು ನೀಡಿತು. ಇವು ಯಾವುವೂ ಸರಿಯಾದ ರೀತಿಯಲ್ಲಿ ಬಳಕೆಯಾಗಲಿಲ್ಲ. ಇವುಗಳನ್ನು ಪ್ರಶ್ನಿಸಿ ಚಳವಳಿಗಳು ನಡೆಯುತ್ತಲೇ ಇವೆ. ಸಾವಿರಾರು ಸಭೆಗಳು, ವಿಚಾರ ಸಂಕಿರಣಗಳು ನಡೆದಿವೆ ಹಾಗೂ ಲೇಖನಗಳು, ಗ್ರಂಥಗಳು ಬಂದಿವೆ. ಪ್ರತಿಷ್ಠಿತ ಪರಿಸರ ಸಂಸ್ಥೆಯಾದ ‘ಕನ್ಸರ್ವೇಷನ್ ಇಂಟರ್ನ್ಯಾಷನಲ್’ ಪಶ್ಚಿಮ ಘಟ್ಟವನ್ನು, ಮಾನವ ಚಟುವಟಿಕೆಗಳಿಂದ ನಶಿಸಿ ಹೋಗುತ್ತಿರುವ ಅಪರೂಪದ ಜೀವರಾಶಿಗಳಿಗೆ ತಾಣವಾಗಿರುವ ‘ಜೀವ ವೈವಿಧ್ಯಗಳ ಕೇಂದ್ರಬಿಂದು’ ಎಂದು ಘೋಷಿಸಿದೆ. ವಿಶ್ವಸಂಸ್ಥೆಯ ಪರಿಸರ ವಿಭಾಗವು ಕೂಡ ಪಶ್ಚಿಮ ಘಟ್ಟಗಳನ್ನು ಇಡೀ ಭಾರತದಲ್ಲೇ ಪ್ರಮುಖವಾಗಿ ಮತ್ತು ಪ್ರತ್ಯೇಕವಾಗಿ ಭದ್ರವಾಗಿ ಮುಚ್ಚಿಟ್ಟು ಸಂರಕ್ಷಿಸಿಡಬೇಕಾದ ಪ್ರದೇಶ ಎಂದು ಅಂಗೀಕರಿಸಿದೆ. ಪಶ್ಚಿಮಫಟ್ಟದ ಪಟ್ಟಿಯ ಜನರು ಪಶ್ಚಿಮಘಟ್ಟ ಉಳಿಸಿ ಹೆಸರಿನಲ್ಲಿ ನೂರು ದಿನಗಳ ಬೃಹತ್ ಜಾಥಾವನ್ನು ಸಂಘಟಿಸಿದರು. ಈ ಜಾಥಾದಲ್ಲಿ ಹೊನ್ನಾವರ ಪರಿಸರ ಕೂಟ, ಶಿರಸಿಯ ಅಪ್ಪಿಕೊ ತಂಡ, ಬೆಂಗಳೂರಿನ ಅಣುಶಕ್ತಿ ವಿರೋಧಿ ನಾಗರಿಕ ಶಕ್ತಿ ಮುಂತಾದ ಸಂಘ-ಸಂಸ್ಥೆಗಳ ಸದಸ್ಯರು ಪಾಲ್ಗೊಂಡರು. ಆದರೆ ನೂರು ದಿನಗಳ ಜಾಥಾವನ್ನು ಪೂರೈಸಿರುವುದಷ್ಟೇ ಇದರ ಸಾಧನೆಯಾಯಿತು. ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದ ಹಾಗೂ ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕಗಳ ಸುಮಾರು 2000 ಚದುರ ಕಿ.ಮೀ. ಪ್ರದೇಶವನ್ನು ‘ನೈಸರ್ಗಿಕ ಸೂಕ್ಷ್ಮ ಪ್ರದೇಶ’ವೆಂದು ಘೋಷಿಸಬೇಕು ಎಂದು ರಾಷ್ಟ್ರೀಯ ಸಂಪನ್ಮೂಲಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ಆರ್. ಹಿರೇಮಠ ಅವರು ಸರಕಾರವನ್ನು ಒತ್ತಾಯಿಸಿದರು. ಈ ಕುರಿತು ಬೆಳಗಾವಿಯ ಪರಿಸರ ಪ್ರೇಮಿಗಳ ಸಂಘ ಮತ್ತು ಧಾರವಾಡದ ಸಮಾಜ ಪರಿವರ್ತನ ಸಮುದಾಯ ಸರಕಾರದ ಗಮನವನ್ನು ಸೆಳೆಯುವ ಕೆಲಸವನ್ನು ಮಾಡಿವೆ. ಈ ರೀತಿಯ ಒತ್ತಾಯಗಳು ಸರಕಾರಕ್ಕೆ ಹೊಸತೇನಲ್ಲ. ಪರಿಸರ ಮತ್ತು ಅರಣ್ಯ ಇಲಾಖೆಗಳ ಹಾಗೂ ಸಚಿವಾಲಯದ ಅಧಿಕಾರಿಗಳು ಈ ಒತ್ತಾಯಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುವುದಿಲ್ಲ. ಪಶ್ಚಿಮಘಟ್ಟಗಳು ನಿಧಾನವಾಗಿ ಕರಗುತ್ತಲೆ ಇವೆ. ಅಧಿಕಾರಶಾಹಿಗಳ ಮಟ್ಟದಲ್ಲಿ ಧೋರಣೆ ಬದಲಾಗಲೇ ಇಲ್ಲ. ಅಭಿವೃದ್ದಿ ಮತ್ತು ಪರಿಸರದ ನಡುವೆ ದೊಡ್ಡ ಕಂದಕವನ್ನೇ ನಿರ್ಮಾಣ ಗೊಳಿಸಲಾಯಿತು. ಈ ಎಲ್ಲಾ ಕಾರಣಗಳಿಂದಾಗಿ ಪಶ್ಚಿಮಘಟ್ಟಗಳ ಅಳಿವು-ಉಳಿವು ಪ್ರಶ್ನೆಯಾಗಿಯೇ ಉಳಿಯಬೇಕಾಯಿತು.

ನೀಲಗಿರಿ ವಿರೋಧಿ ಚಳವಳಿ
ಕರ್ನಾಟಕದಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಸಹಯೋಗದೊಂದಿಗೆ ಜಾರಿಗೆ ತರಲಾದ ಯೋಜನೆಗಳಲ್ಲಿ ಸಾಮಾಜಿಕ ಅರಣ್ಯ ಯೋಜನೆಯೂ ಒಂದು. ಈ ಯೋಜನೆ ಆರಂಭಗೊಂಡಿರುವುದು ಬಡಜನರ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶದಿಂದ. ಈ ಯೋಜನೆಗೆ ವಿಶ್ವಬ್ಯಾಂಕ್ ಮತ್ತು ಬ್ರಿಟನ್ ದೇಶದ ಆರ್ಥಿಕ ಸಹಕಾರ ಸಿಕ್ಕಿತು. ಹಲವಾರು ಕೋಟಿ ರೂಪಾಯಿಗಳನ್ನು ಈ ಯೋಜನೆಗಾಗಿ ಖರ್ಚು ಮಾಡಲಾಯಿತು. ಅರಣ್ಯ ಸೃಷ್ಟಿಯ ಪ್ರಯತ್ನ ಮಾಡುವುದರ ಜೊತೆಯಲ್ಲಿ ಎಷ್ಟೋ ಬೀಳು ನೆಲಗಳನ್ನು ಅಥವಾ ಒಣಪ್ರದೇಶಗಳನ್ನು ಅರಣ್ಯಾಭಿವೃದ್ದಿಯ ಸಲುವಾಗಿ ಸದ್ದುಗದ್ದಲ ಎಬ್ಬಿಸದೆಯೇ ವಿವಿಧ ಔದ್ಯಮಿಕ ಸಂಸ್ಥೆಗಳಿಗೆ ನೀಡುವ ಕೆಲಸವೂ ನಡೆಯಿತು. ಆದರೆ ಯೋಜನೆಯ ಮುಖ್ಯ ಉದ್ದೇಶವಾದ ಜನಸಾಮಾನ್ಯರ ಪಾಲಿನ ಉರುವಲು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಪರಿಹಾರ ಕಂಡಿಲ್ಲ. ಅರಣ್ಯಾಭಿವೃದ್ದಿಯ ಹೆಸರಿನಲ್ಲಿ ಪಶ್ಚಿಮಘಟ್ಟಗಳಲ್ಲಿ ಈ ಯೋಜನೆಯ ಪ್ರಯೋಗವನ್ನು ನಡೆಸಲಾಯಿತು. ನೀಲಗಿರಿ, ಯೂಕಲಿಪ್ಟಸ್, ಅಕೆಸಿಯಾ, ಆರಿಕ್ಯುಲಿಪಾರ್ಮಿಸ್ ಮುಂತಾದ ವಿದೇಶಿ ಸಸ್ಯಗಳ ಅಭಯಾರಣ್ಯವನ್ನು ಪಶ್ಚಿಮಘಟ್ಟಗಳಲ್ಲಿ ಬೆಳೆಸುವ ಕೆಲಸ ಪ್ರಾರಂಭಗೊಂಡಿತು. ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಹಳ್ಳಿಗರು ಉಪಯೋಗಿಸುತ್ತಿದ್ದ ಗೋಮಾಳ ಮತ್ತು ಇತರ ಸ್ಥಳಗಳಲ್ಲಿ ನೀಲಗಿರಿ ನೆಡುತೋಪನ್ನು ನಿರ್ಮಾಣ ಮಾಡುವ ತೀರ್ಮಾನಗಳನ್ನು ಸರಕಾರ ಕೈಗೊಂಡಿತು. ಸರಕಾರದೊಂದಿಗೆ ಟಾಟಾ ಬಿರ್ಲಾಗಳ ಉದ್ಧಾರವೂ ಈ ಯೋಜನೆಯಲ್ಲಿ ಸೇರಿತ್ತು. ರೈತರು ರಾಗಿ, ಭತ್ತ ಬೆಳೆಯುವ ಬದಲಾಗಿ ನೀಲಗಿರಿ ನೆಡುವಂತೆ ಪ್ರಚೋದಿಸ ಲಾಯಿತು. ರೇಯಾನ್ ಕಾರ್ಖಾನೆ ನೀಲಗಿರಿ ಯನ್ನು ಉಪಯೋಗ ಮಾಡುತ್ತಿದ್ದು, ಬೆಳೆಗಾರರಿಗೆ ಪ್ರೋನೀಡಿತು. ಬಡಜನರಿಗೆ ಉರುವಲು ಕಟ್ಟಿಗೆಯನ್ನು ಪೂರೈಸುವ ಬದಲಾಗಿ ಉದ್ದಿಮೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವ ಕೆಲಸದಲ್ಲಿ ಈ ಯೋಜನೆ ಯಶಸ್ವಿಯಾಯಿತು.
ನೀಲಗಿರಿ ನೆಡುತೋಪುಗಳು ಮರವಾದ ಹಾಗೆ ಭೂಮಿಯ ಅಂತರಾಳದಲ್ಲಿ ನೀರಿನ ಸೆಲೆಗಳು ಬತ್ತಿ ಅಂತರ್ಜಲದ ಸಮಸ್ಯೆ ಕಾಣಿಸಿಕೊಳ್ಳಲಾರಂಭಿಸಿತು. ನೀಲಗಿರಿ ಮರ ಗಳಿಂದಾಗುವ ಕೆಟ್ಟ ಪರಿಣಾಮಗಳನ್ನು ವಿರೋಧಿಸಿ ಹಲವಾರು ಪ್ರದೇಶಗಳಲ್ಲಿ ಚಳವಳಿಗಳು ನಡೆದವು. 1982ರಲ್ಲಿ ಹಾಸನದ ಎಳಗುಂದ ಗ್ರಾಮದಲ್ಲಿ ರೈತರು ಮತ್ತು ಪರಿಸರಾಸಕ್ತರು ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಕಿತ್ತು ತಮ್ಮ ಪ್ರತಿಭಟನೆಯನ್ನು ಸೂಚಿಸಿದರು. 1983ರಲ್ಲಿ ತುಮಕೂರು ಜಿಲ್ಲೆಯಲ್ಲಿ ರೈತರು ನೀಲಗಿರಿ ಸಸಿಗಳನ್ನು ಕಿತ್ತು ನೀಲಗಿರಿ ವಿರೋಧಿ ಚಳವಳಿ ನಡೆಸಿದರು. 1986ರ ಸುಮಾರಿಗೆ ಚಿಕ್ಕಮಗಳೂರಿನ ಕೋಗಿಲೆ ಹಳ್ಳಿ, ಚೆನ್ನಹಳ್ಳಿ ಮೊದಲಾದೆಡೆಗಳಲ್ಲಿಯೂ ಈ ಚಳವಳಿ ಕಾಣಿಸಿಕೊಂಡಿತು. ಗುಡ್ಡಗಾಡು ಅಭಿವೃದ್ದಿ ಸಮಿತಿ, ಮಣ್ಣು ರಕ್ಷಣಾ ಕೂಟ, ಫೆಡರೇಶನ್ ಆಫ್ ವಾಲಂಟರಿ ಆರ್ಗನೈಜೇಶನ್ ಫಾರ್ ರೂರಲ್ ಡೆವಲಪ್ಮೆಂಟ್, ಕರ್ನಾಟಕ ಸರ್ವೋದಯ ಮಂಡಳಿಗಳು ಈ ಚಳವಳಿಯಲ್ಲಿ ಭಾಗವಹಿಸಿದವು. ಈ ಯೋಜನೆಯಲ್ಲಿ ತೊಡಗಿ ಕೊಂಡವರು ಸಾಮಾಜಿಕ ಅರಣ್ಯ ಯೋಜನೆ ಸಫಲವಾಗಿದೆ ಎಂದು ಹೇಳಿಕೊಂಡು ನ್ಯೂನತೆಗಳನ್ನು ಬದಿಗಿಟ್ಟು ಮಾನ್ಯತೆಯನ್ನು ಗಿಟ್ಟಿಸಿಕೊಂಡರು ಎನ್ನುವುದು ನೀಲಗಿರಿ ವಿರೋಧಿಗಳ ಅಭಿಪ್ರಾಯ.

ಕುದುರೆಮುಖ ಯೋಜನೆ ಮತ್ತು ರಾಷ್ಟ್ರೀಯ ಉದ್ಯಾನ ನಿರ್ಮಾಣದ ವಿರುದ್ಧ ನಡೆದ ಚಳವಳಿಗಳು
ಪಶ್ಚಿಮಘಟ್ಟಗಳಲ್ಲಿ ನಡೆಯುತ್ತಿರುವ ಯೋಜನೆಗಳಲ್ಲಿ ಅತಿ ದೊಡ್ಡ ಯೋಜನೆ ಯೆಂದರೆ ಕುದುರೆಮುಖ ಕಬ್ಬಿಣದ ಅದಿರು ಯೋಜನೆ. ಕುದುರೆಮುಖದಲ್ಲಿನ ಶೋಲಾ ಕಾಡುಗಳು ಮತ್ತು ಹುಲ್ಲುಗಾವಲಿನಿಂದಾವೃತವಾದ ಬೆಟ್ಟಗಳು ಈ ಯೋಜನೆಗಾಗಿ ಬಳಕೆಯಾಗಿವೆ. ಆರಂಭದಲ್ಲಿ ಸ್ಥಳೀಯರ ಹಾಗೂ ಪರಿಸರವಾದಿಗಳ ಪ್ರತಿಭಟನೆಯ ನಡುವೆಯೇ ಈ ಯೋಜನೆ ನಿರಾತಂಕವಾಗಿ ಆರಂಭಗೊಂಡಿತ್ತು. ಜೀವಿ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಿರುವವರ ಪ್ರಕಾರ ಕುದುರೆಮುಖ ಯೋಜನೆಗಾಗಿ ಆಯ್ಕೆ ಮಾಡಿದ ಹುಲ್ಲುಗಾವಲು ಹಾಗೂ ಶೋಲಾಕಾಡು ಪರಿಸರ ದೃಷ್ಟಿಯಿಂದ ತುಂಬಾ ಮಹತ್ವವನ್ನು ಹೊಂದಿದ್ದಾಗಿವೆ. ಆದರೆ ಅತಿಯಾದ ಗಣಿಗಾರಿಕೆಯಿಂದಾಗಿ ಕುದುರೆಮುಖದ ಜೀವಲೋಕ ಮಾಯವಾಗುವ ಸ್ಥಿತಿಯಲ್ಲಿದೆ. ಭದ್ರಾನದಿ ಈ ಯೋಜನೆಯಿಂದಾಗಿ ಕಲುಷಿತಗೊಂಡು ಪಕ್ಕದ ಹಳ್ಳಿಯ ಜನರಿಗೆ ಕುಡಿಯಲು ಮತ್ತು ಕೃಷಿಗೆ ಬಳಸಲು ಯೋಗ್ಯವಲ್ಲದಂತಾಗಿದೆ. ಗಣಿಗಾರಿಕೆಯ ಧೂಳು ಮತ್ತು ಕಬ್ಬಿಣದ ವಾಸನೆ ಸ್ಥಳೀಯ ಜನರ ಆರೋಗ್ಯ ಕೆಡುವಂತೆ ಮಾಡಿದೆ ಎನ್ನುವುದು ಸ್ಥಳೀಯ ಜನರ ಕೊರಗು. ಈ ವಿಚಾರಗಳನ್ನಿಟ್ಟುಕೊಂಡು ಪರಿಸರ ಸಂಘಟನೆಗಳು ಚಳವಳಿ ನಡೆಸಿವೆ. ಆದರೆ 1992 93ನೇ ಸಾಲಿನ ಪರಿಸರ ಸಂರಕ್ಷಣಾ ಪ್ರಶಸ್ತಿ ಈ ಯೋಜನೆಗೆ ಲಭಿಸಿತು.
2005ರ ಡಿಸೆಂಬರ್ 31ಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕೆಂಬ 2002ರ ಅಕ್ಟೋಬರ್ 30ರ ಸುಪ್ರಿಂಕೋರ್ಟ್ ತೀರ್ಪಿನಂತೆ ಕುದುರೆಮುಖದಲ್ಲಿ 2005ರ ಡಿಸೆಂಬರ್ 31ಕ್ಕೂ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಯಿತು. ಸುಪ್ರಿಂಕೋರ್ಟ್ನ ಈ ತೀರ್ಪಿನ ಹಿಂದೆ ಪರಿಸರವಾದಿಗಳ ನಿರಂತರ ಹೋರಾಟದ ಶ್ರಮ ಇದೆ. ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಡಿಸೆಂಬರ್ 31ರ ಮಧ್ಯರಾತ್ರಿ ಗಣಿಗಾರಿಕೆ ಸ್ಥಗಿತಗೊಳಿಸಿದ ಬೆನ್ನಲ್ಲೇ ಸಂಸ್ಥೆಯ ನೌಕರರು ತಮ್ಮ ಕುಟುಂಬ ವರ್ಗದವರೊಡನೆ ಕುದುರೆಮುಖದಲ್ಲಿ ಕರಾಳ ದಿನ ಆಚರಿಸಿದರು. ಗಣಿಗಾರಿಕೆ ಪುನರಾರಂಭಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿದರು. ಪಟ್ಟಣದಾದ್ಯಂತ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟಿಸಲಾಯಿತು. ಗಣಿಗಾರಿಕೆ ಸ್ಥಗಿತಗೊಳ್ಳಲು ಕಾರಣರಾದ ಪರಿಸರವಾದಿಗಳ ವಿರುದ್ಧ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಕುದುರೆಮುಖದಲ್ಲಿ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ ಪರಿಸರವಾದಿಗಳಾದ ಪ್ರವೀಣ್ ಭಾರ್ಗವ್, ನೀರೇನ್ ಜೈನ್, ಸಾಹಿತಿ ಯು.ಆರ್. ಅನಂತಮೂರ್ತಿ, ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟದ ಅಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಅವರ ಹೆಸರು ಅಂಟಿಸಿದ್ದ ಪ್ರತಿಕೃತಿಯ ಅಣಕು ಶವಯಾತ್ರೆ ನಡೆಸಿ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಕುದುರೆಮುಖ ವೃತ್ತದಲ್ಲಿ ಪ್ರತಿಕೃತಿ ದಹಿಸಿ ಮಾತನಾಡಿದ ಕಾರ್ಮಿಕ ಮುಖಂಡರು ವಿದೇಶಿ ಹಣವನ್ನು ಕಬಳಿಸುವ ಡೋಂಗಿ ಪರಿಸರವಾದಿಗಳು ಸುಪ್ರಿಂಕೋರ್ಟ್ಗೆ ಸಂಸ್ಥೆಯ ಬಗ್ಗೆ ಸುಳ್ಳು ದಾಖಲೆಗಳನ್ನು ನೀಡಿ ಗಣಿಗಾರಿಕೆ ಸ್ಥಗಿತಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಕುದುರೆಮುಖ ಕಂಪನಿಗೆ ಕೆಲಸಕ್ಕೆ ಬರುತ್ತಿದ್ದ ದಿನಗೂಲಿಗಳೇ ಹೆಚ್ಚಾಗಿ ವಾಸಿಸುವ ಸಮೀಪದ ಜಾಂಬಳೆ, ನೆಲ್ಲಿಬೀಡು ಮತ್ತು ಅಕ್ಕಪಕ್ಕದ ಗ್ರಾಮಗಳಲ್ಲೂ ಕರಾಳ ದಿನ ಬೆಂಬಲಿಸಿ ಅಘೋಷಿತ ಬಂದ್ ಆಚರಿಸಲಾಯಿತು. ಕುದುರೆಮುಖ ನೌಕರರ ಒಕ್ಕೂಟ(ಕೆಇಯು), ಕುದುರೆಮುಖ ಶ್ರಮಶಕ್ತಿ ಸಂಘಟನೆ(ಕೆಎಸ್ಎಸ್), ಕುದುರೆಮುಖ ಮಜ್ದೂರ್ ಸಂಘ (ಕೆಎಂಎಸ್) ಎಂಬ ಬೇರೆ ಬೇರೆಯಾಗಿಯೇ ಗುರುತಿಸಿಕೊಂಡಿದ್ದ ಸಂಘಟನೆಗಳು ಗಣಿಗಾರಿಕೆ ಸ್ಥಗಿತಗೊಂಡಾಗ ಒಗ್ಗೂಡಿ ಪ್ರತಿಭಟಿಸಿದವು. ಮಂಗಳೂರಿನ ಪಣಂಬೂರಿನಲ್ಲಿರುವ ತಮ್ಮ ಸಂಸ್ಥೆಯ ಎದುರು ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆಯ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪರಿಸರವಾದಿಗಳ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಅವರು ಪರ್ಯಾಯವಾಗಿ ಬಳ್ಳಾರಿ ಅಥವಾ ಬೇರೆ ಕಡೆ ಕಬ್ಬಿಣದ ಅದಿರಿನ ಗಣಿಗಾರಿಕೆ ಪ್ರಾರಂಭಿಸಿ ನೆಲೆ ಕಳೆದುಕೊಂಡ 20 ಸಾವಿರ ಕುಟುಂಬಗಳಿಗೆ ಬದಲಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದೆಂದು ತಿಳಿಸಿದರು. ಪರಿಸರವಾದಿಗಳ ಪ್ರತಿಕೃತಿ ದಹಿಸಿರುವುದನ್ನು ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ ತೀವ್ರವಾಗಿ ಖಂಡಿಸಿತು. ಕುದುರೆಮುಖದಲ್ಲಿ ಗಣಿಗಾರಿಕೆ 1969ರಿಂದ 1999ರ ಜುಲೈ 24ರವರೆಗಿನ ಮೂವತ್ತು ವರ್ಷಗಳ ಅವಧಿಗೆ ಮಾತ್ರ ಸೀಮಿತವಾಗಿತ್ತು. ಗಣಿಗಾರಿಕೆ ನಿರಂತರವಾದುದಲ್ಲ. ಅದು ಎಂದಾದರೊಂದು ದಿನ ನಿಲ್ಲಲೇಬೇಕು. ಅದು ಬಿಟ್ಟು ಗಣಿಗಾರಿಕೆ ಇನ್ನೂ ಮುಂದುವರಿಯಬೇಕು ಎಂದರೆ ಎಲ್ಲಿಯವರೆಗೆ ಅದಕ್ಕೊಂದು ಮಿತಿ ಬೇಡವೇ ಎಂದು ಒಕ್ಕೂಟದ ಅಧ್ಯಕ್ಷ ಕಲ್ಕುಳಿ ವಿಠಲ ಹೆಗ್ಡೆ ಪ್ರಶ್ನಿಸಿದರು.
ಕುದುರೆಮುಖ ಇತ್ತೀಚೆಗೆ ಹುಟ್ಟುಹಾಕಿರುವ ಇನ್ನೊಂದು ಪ್ರಶ್ನೆ ರಾಷ್ಟ್ರೀಯ ಉದ್ಯಾನದ ನಿರ್ಮಾಣ ಕುರಿತಾದದ್ದು. ಪರಿಸರ ಚಳವಳಿ ಈ ಸಂಬಂಧವಾಗಿ ಮತ್ತೊಮ್ಮೆ ಕಾಣಿಸಿಕೊಂಡಿತು. ರಾಷ್ಟ್ರೀಯ ಉದ್ಯಾನದಲ್ಲಿ ಅನೇಕ ವರ್ಷಗಳಿಂದ ವಾಸಿಸುತ್ತಿರುವ ಮೂಲನಿವಾಸಿಗಳನ್ನು ಹಾಗೂ ಇತರರನ್ನು ಒಕ್ಕಲೆಬ್ಬಿಸುವ ಪ್ರಯತ್ನದ ವಿರುದ್ಧ ಈ ಚಳವಳಿಗಳು ನಡೆದವು. ಸರಕಾರ ಈ ಯೋಜನೆಗಾಗಿ ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶವನ್ನು ವಶಪಡಿಸಿಕೊಳ್ಳಲು ತೀರ್ಮಾನಿಸಿತು. ಇಲ್ಲಿ ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳು ನೂರಾರು ವರ್ಷಗಳಿಂದ ವಾಸ ಮಾಡುತ್ತಿವೆ. ಈ ಯೋಜನೆ ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅನೇಕ ತಾಲೂಕುಗಳನ್ನು ಒಳಗೊಂಡಿದೆ. ಈ ಚಳವಳಿ ಇನ್ನೂ ಅಸ್ತಿತ್ವದಲ್ಲಿದೆ.

ನಾಗರಹೊಳೆ ಬಂಡೀಪುರ ಅಭಯಾರಣ್ಯಕ್ಕೆ ಸಂಬಂಧಿಸಿದ ಚಳವಳಿಗಳು
ನಾಗರಹೊಳೆ ಬಂಡೀಪುರ ಅರಣ್ಯ ಪ್ರದೇಶಗಳು ಕಾಡಿಗೆ ಬಿದ್ದ ಬೆಂಕಿಯ ಪ್ರಕರಣ ಮತ್ತು ಗಿರಿಜನರ ಪುನರ್ವಸತಿ ಯೋಜನೆಯ ಕುರಿತಾಗಿ ಚರ್ಚೆಯ ವಸ್ತುಗಳಾದವು. ನಾಗರಹೊಳೆ ಮತ್ತು ಬಂಡೀಪುರ ಅರಣ್ಯಗಳ ಅನೇಕ ಪ್ರದೇಶಗಳು ಹಲವು ಬಾರಿ ಬೆಂಕಿಗೆ ಆಹುತಿಯಾಗಿವೆ. ಅಪಾರ ಪ್ರಮಾಣದ ಪ್ರಾಣಿವರ್ಗ ಮತ್ತು ಸಸ್ಯವರ್ಗ ಈ ಬೆಂಕಿಗೆ ಸಿಲುಕಿ ಬೆಂದುಹೋಗಿವೆ. 1992ರಲ್ಲಿ ಬೆಂಕಿ ಕಾಣಿಸಿಕೊಡಾಗ ರಾಜ್ಯಾದ್ಯಂತ ಚಳವಳಿಗಳು ಕಾಣಿಸಿಕೊಂಡವು. ನಂತರ ತನಿಖೆಗಳು ಮುಂದುವರಿದವು. 1992ರಲ್ಲಿ ಬೇಟೆಗಾರ ಚಿಪ್ಪನ ಕೊಲೆ ನಾಗರಹೊಳೆಯಲ್ಲಿ ನಡೆದಾಗ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯಾಧಿಕಾರಿಗಳ ಮೇಲಿನ ಸಿಟ್ಟಿಗೆ ಕಾಡಿಗೆ ಬೆಂಕಿ ಹಚ್ಚಿ ಸೇಡು ತೀರಿಸಿಕೊಂಡಿದ್ದರು. 1999ರಲ್ಲಿ ಮತ್ತೊಮ್ಮೆ ಬೆಂಕಿ ಬಿದ್ದಾಗ ಇದರ ಹಿಂದೆ ವ್ಯವಸ್ಥಿತ ಕೈವಾಡ ಇದೆಯೆಂಬ ಭಾವನೆ ಎಲ್ಲರಲ್ಲೂ ಮೂಡಿತು; ನಾಗರಹೊಳೆಗೆ ಬೆಂಕಿ ಬಿದ್ದ ಸಂದರ್ಭದಲ್ಲಿಯೇ ಇತರೆಡೆಗಳಲ್ಲೂ ಭಾರಿ ಬೆಂಕಿ ಅನಾಹುತಗಳಾದವು. ಕುಶಾಲನಗರ ಸಮೀಪದ ಆನೆಕಾಡು ರಕ್ಷಿತಾರಣ್ಯ, ಸೋಮವಾರಪೇಟೆ ಸಮೀಪದ ಹುದುಗೂರು, ಬಾಣಾವರ, ಮಡಿಕೇರಿ ತಾಲೂಕಿನ ನಾಪೋಕ್ಲು ವ್ಯಾಪ್ತಿಯಲ್ಲಿ ಬರುವ ಪೇರೂರು ಬಲ್ಲಮಾವಟಿಯಲ್ಲಿ ಅಪಾರ ವೆಚ್ಚದ ಸಾಮಾಜಿಕ ಅರಣ್ಯಕ್ಕೆ ಬೆಂಕಿ ಬಿದ್ದಿತು. ಕೊಡಗಿನ ಸಂಪದ್ಭರಿತ ಅಭಯಾರಣ್ಯಗಳು ಹೊತ್ತಿ ಉರಿದವು. ಇದು ಮರದ ವ್ಯಾಪಾರಿಗಳಿಗೆ ಸಂಪತ್ತನ್ನು ವೃದ್ದಿಸುವ ಸುಗ್ಗಿಯ ಕಾಲವೂ ಆಯಿತು. ಅನೇಕ ಪರಿಸರ ಸಂಘಟನೆಗಳ ಪ್ರಕಾರ ಅರಣ್ಯಾಧಿಕಾರಿಗಳ ಭ್ರಷ್ಟತನ ಮತ್ತು ಸರಕಾರದ ಬೇಜವಾಬ್ದಾರಿತನವೇ ಕಾಡಿಗೆ ಬೆಂಕಿ ಬೀಳುವಂತೆ ಮಾಡಿತು.
ನಾಗರಹೊಳೆಗೆ ಬೆಂಕಿ ಬಿದ್ದಿರುವುದು ಅನೇಕ ಬದಲಾವಣೆಗಳಿಗೆ ಕಾರಣವಾಯಿತು. ರಾಜಕೀಯ ಬದಲಾವಣೆಗಳಿಗೆ ಕಾರಣವಾಗಿರುವುದರಿಂದಾಗಿ ಇದು ಹೆಚ್ಚು ಚರ್ಚೆಗೆ ಒಳಗಾಯಿತು. ಅಂದಿನ ಅರಣ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೂಗು ಕೇಳಲಾರಂಭಿಸಿತು. ಅದೇ ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭಿಸಲು ಸರಕಾರವು ಸದನ ಸಮಿತಿಯನ್ನು ರಚಿಸಬೇಕೆಂದು ಆಗ್ರಹಪಡಿಸಲಾಯಿತು. ಈ ಒತ್ತಾಯಗಳನ್ನು ಪರಿಸರ ಸಂಘಟನೆಗಳು ಮಾಡಿದವು. ಗಿರಿಜನ ಕ್ರಿಯಾಕೂಟ ಇದರಲ್ಲಿ ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಿತು. ಇದರಲ್ಲಿ 14 ಸ್ವಯಂ ಸೇವಾ ಸಂಸ್ಥೆಗಳೂ ಸೇರಿಕೊಂಡವು. ನಾಗರಹೊಳೆಗೆ ಬೆಂಕಿ ಬೀಳುವುದಕ್ಕೆ ಸ್ವಯಂ ಸೇವಾ ಸಂಸ್ಥೆಗಳೇ ಕಾರಣ ಎನ್ನುವ ಅರಣ್ಯ ಸಚಿವರ ಹೇಳಿಕೆಯನ್ನು ಇವು ಖಂಡಿಸಿದವು. ಈ ಅಭಯಾರಣ್ಯಗಳಿಗೆ ಸಂಬಂಧಿಸಿದಂತೆ ಇರುವ ಇನ್ನೊಂದು ಸಮಸ್ಯೆಯೆಂದರೆ ಗಿರಿಜನರ ಪುನರ್ವಸತಿಗೆ ಸಂಬಂಧಿಸಿದ್ದು. ರಾಜ್ಯ ಮೂಲನಿವಾಸಿ ವೇದಿಕೆಯ ಸಹಸಂಚಾಲಕಿ ಜಾಜಿಯವರು ಗಿರಿಜನರ ಪುನರ್ವಸತಿಯ ಕುರಿತು ಸರಕಾರದೊಡನೆ ಚರ್ಚಿಸಿದರು. ಕಾಡಿನಿಂದ ಹೊರಬಂದಿರುವ ಗಿರಿಜನರು ಸಾಂಪ್ರದಾಯಿಕ ಬದುಕು ಸಾಗಿಸಲು ಅರಣ್ಯ ಸಿಬ್ಬಂದಿ ಬಿಡುತ್ತಿಲ್ಲ. ಪರಿಸರಾಭಿವೃದ್ದಿಯ ಹೆಸರಿನಲ್ಲಿ ಕಿರುಕುಳ ನೀಡಲಾಗುತ್ತಿದೆ ಎನ್ನುವುದು ರಾಜ್ಯ ಮೂಲನಿವಾಸಿ ವೇದಿಕೆಯ ವಾದ.

ಕಾರ್ಗಿಲ್ ಸಂಸ್ಥೆಯ ವಿರುದ್ಧ ನಡೆದ ಚಳವಳಿ
ನವವಸಾಹತುಶಾಹಿ ಕೇವಲ ಕೈಗಾರಿಕೆಗಳ ಸ್ಥಾಪನೆಗಷ್ಟೇ ಸೀಮಿತಗೊಳ್ಳದೆ ಕೃಷಿ ಕ್ಷೇತ್ರವನ್ನೂ ಅಧೀನಗೊಳಿಸಿಕೊಂಡಿದೆ. ಇದಕ್ಕೆ ಡಂಕೆಲ್ ಪ್ರಸ್ತಾಪವೇ ಉತ್ತಮ ಉದಾಹರಣೆಯಾಗಿದೆ. ರೈತರ ಸ್ವಾತಂತ್ರ್ಯವನ್ನು ಬಂಡವಾಳದ ಮೂಲಕ ಕಸಿದುಕೊಳ್ಳುವುದೇ ಇಲ್ಲಿನ ಉದ್ದೇಶ. ರೈತರು ಬೀಜವನ್ನು ಬೆಳೆಸುವಂತಿಲ್ಲ, ಏಕೆಂದರೆ ಅವುಗಳು ಪೇಟೆಂಟ್ ಆಗಿರುತ್ತವೆ. ಇದರಿಂದಾಗಿ ರೈತರು ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕಗಳಿಗೆ ಬಹು ರಾಷ್ಟ್ರೀಯ ಕಂಪೆನಿಗಳನ್ನೇ ಅವಲಂಬಿಸಬೇಕಾಗುತ್ತದೆ. ಡಂಕೆಲ್ ಪ್ರಸ್ತಾವನೆಯ ವಿರುದ್ಧ ಕರ್ನಾಟಕದಲ್ಲಿ 1992ರಲ್ಲಿ ಚಳವಳಿ ಕಾಣಿಸಿಕೊಂಡಿತು. ಇದು ಕಾರ್ಯರೂಪಕ್ಕೆ ಬಂದಿರುವುದು 1993ರಲ್ಲಿ. ರೈತರು ಬೆಂಗಳೂರಿನ ಕಾರ್ಗಿಲ್ ಕಂಪೆನಿಯ ವಿರುದ್ಧ ಚಳವಳಿ ನಡೆಸಿದರು. ನಂತರ ಇದು ರಾಜ್ಯದ ಹಲವಾರು ಪ್ರದೇಶಗಳಲ್ಲಿ ಕಾಣಿಸಿಕೊಂಡಿತು. ಬೆಂಗಳೂರಿನ ಕಾರ್ಗಿಲ್ ಸೀಡ್ಸ್(ಇಂಡಿಯಾ) ಲಿಮಿಟೆಡ್ ಕಂಪೆನಿಯು ಬಹುರಾಷ್ಟ್ರೀಯ ಲಾಭಕೋರ ಸಂಸ್ಥೆ. ಚಳವಳಿಕಾರರು ಕಾರ್ಗಿಲ್ ಸಂಸ್ಥೆಯ ಕಛೇರಿಗೆ ನುಗ್ಗಿ, ಕಡತಗಳನ್ನು, ಕಛೇರಿಯನ್ನು ಹಾಗೂ ಅಲ್ಲಿದ್ದ ಅಮೆರಿಕಾ ಸಂಯುಕ್ತ ಸಂಸ್ಥಾನದ ಬಾವುಟಗಳನ್ನು ನಾಶಮಾಡಿದರು. ಇವರು ಕಂಪೆನಿಯ ವಿರುದ್ಧ ಸಮರ ಸಾರಿ ಕೆಲವೊಂದು ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.
1. ಭಾರತೀಯ ಕೃಷಿಗೆ ಮಾರಕವಾಗಬಹುದಾದ ಡಂಕೆಲ್ ಪ್ರಸ್ತಾಪಗಳನ್ನು ಕೇಂದ್ರ ಸರಕಾರ ತಿರಸ್ಕರಿಸಬೇಕು.
2. ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ನಮ್ಮ ದೇಶದ ಬೀಜೋದ್ಯಮವನ್ನು ಪ್ರವೇಶಿಸುವುದನ್ನು ನಿಷೇಧಿಸಬೇಕು.
3. ಬೀಜ ಉತ್ಪಾದಿಸುವ, ಮಾರುವ ಹಕ್ಕನ್ನು ರೈತರಿಗೇ ಉಳಿಸಿಕೊಡಬೇಕು.
4. ಸಬ್ಸಿಡಿಗಳನ್ನು ಉಳಿಸಿಕೊಳ್ಳಬೇಕು.
5. ಕೀಟನಾಶಕ, ಕಳೆನಾಶಕ, ಉತ್ಪಾದಕ, ಔಷಧಿ ತಯಾರಿಕಾ ಕಂಪೆನಿಗಳ ಸ್ಥಾಪನೆಯನ್ನು ನಿಲ್ಲಿಸಬೇಕು.
1993ರ ಅಕ್ಟೋಬರ್ 2ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ರೈತ ಸಂಘವು ಸಂಘಟಿಸಿತು. ಈ ಸಮಾವೇಶಕ್ಕೆ ಮೂರನೆಯ ಜಗತ್ತಿನ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಆಗಮಿಸಿದ್ದರು. ಡಂಕೆಲ್ ಪ್ರಸ್ತಾಪವನ್ನು ಇಲ್ಲಿ ವಿರೋಧಿಸಲಾಯಿತು. ಕಳೆನಾಶಕಗಳ ತಯಾರಿಕಾ ಕಂಪೆನಿಗಳಿಂದಾಗಬಹುದಾದ ಪರಿಸರ ಮಾಲಿನ್ಯದ ಕುರಿತು ಗಂಭೀರವಾಗಿ ಚರ್ಚಿಸಲಾಯಿತು.

ಕೈಗಾರಿಕಾ ನಗರಗಳ ವಿರುದ್ಧ ಚಳವಳಿ
ಕಳೆದ ಮೂರು ದಶಕಗಳಿಂದೀಚೆಗೆ ಕರ್ನಾಟಕದಲ್ಲಿ ಪೇಟೆ, ಪಟ್ಟಣ, ನಗರಗಳು ಬೃಹತ್ ಗಾತ್ರದಲ್ಲಿ ಬೆಳೆಯಲಾರಂಭಿಸಿದ್ದು ಕಂಡುಬರುತ್ತದೆ. ಜನಸಂಖ್ಯೆಯೂ ಅಷ್ಟೇ ಗಾತ್ರದಲ್ಲಿ ವೃದ್ದಿಸಿದೆ. ಇದು ಅತಿರೇಕದ ನಗರೀಕರಣ ಮತ್ತು ಕೈಗಾರಿಕೀಕರಣದ ಫಲವಾಗಿದ್ದು ನಾಗರಿಕ ಅನುಕೂಲಗಳು ದಿನದಿನಕ್ಕೆ ಹದಗೆಡುತ್ತಾ ಹೋಗುತ್ತಿವೆ. ಇದರಿಂದಾಗಿ ಕೊಳೆಗೇರಿಗಳು ಹೆಚ್ಚುತ್ತಾ ಹೋಗಿ ನೆಲಬಳಕೆಯ ಯೋಜನೆಗಳು ಏರುಪೇರಾಗಿವೆ. ಬೃಹತ್ ಕೈಗಾರಿಕಾ ನಗರಗಳು ಸುತ್ತಲಿನ ಕೃಷಿ ಭೂಮಿಯನ್ನೆಲ್ಲಾ ನುಂಗುತ್ತಲೇ ಇನ್ನಷ್ಟು ವಿಸ್ತಾರವಾಗಿ ಬೆಳೆಯುತ್ತಾ ಹೋಗುತ್ತಿರುವುದಕ್ಕೆ ಸಾಕ್ಷಿಗಳು ನಮ್ಮ ಕಣ್ಣ ಮುಂದೆಯೇ ಇವೆ. ಇದರಿಂದಾಗಿ ಇಂದು ಸಾವಿರಾರು ಎಕರೆ ಕೃಷಿಭೂಮಿ ಹರಿದು ಹಂಚಿ ಹೋಗಿದೆ. ಮಹಾನಗರ ಪ್ರದೇಶಗಳಲ್ಲಿಯೇ ಕೈಗಾರಿಕೆಗಳು ಸ್ಥಾಪನೆ ಗೊಳ್ಳುವುದನ್ನು ತಪ್ಪಿಸಲು ಕೈಗಾರಿಕೆಗಳ ವಿಕೇಂದ್ರೀಕರಣವನ್ನು ಪ್ರೋತಾದರೂ ಅದು ಉದ್ಯಮಪತಿಗಳ ಮತ್ತು ಸ್ಥಳೀಯ ಶ್ರೀಮಂತವರ್ಗದ ರಾಜಕೀಯಕ್ಕೆ ಸಿಕ್ಕಿ ಯಶಸ್ವಿಯಾಗಲಿಲ್ಲ. ಕರ್ನಾಟಕ ಸರಕಾರ ಕೈಗಾರಿಕಾ ಕ್ಷೇತ್ರಗಳನ್ನು ಹೆಚ್ಚಿನ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಸ್ಥಾಪಿಸಿತು. ಇವುಗಳಲ್ಲಿ ಬೆಂಗಳೂರಿನ ಪೀಣ್ಯ, ಮಹದೇವಪುರ, ವೈಟ್ಫೀಲ್ಡ್, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ನಗರ, ಕೋರಮಂಗಲ, ಮೈಸೂರಿನ ಬೋಗಾದಿ, ಹುಣಸೂರು ರಸ್ತೆ, ಮಂಗಳೂರಿನ ಬೈಕಂಪಾಡಿ, ಬಂದರು ಪ್ರದೇಶ, ಶಿವಮೊಗ್ಗಾದ ಸಾಗರ ರಸ್ತೆಯಲ್ಲಿರುವ ಕೈಗಾರಿಕಾ ಕ್ಷೇತ್ರಗಳು ಮತ್ತು ಹತ್ತಿರದ ಭದ್ರಾವತಿ ಪ್ರಮುಖವಾದವು.
ಕೈಗಾರಿಕಾ ನಗರಗಳ ಮತ್ತು ಕೈಗಾರಿಕಾ ಪ್ರದೇಶಗಳ ಕುರಿತು ಚರ್ಚಿಸುವಾಗ ಕರ್ನಾಟಕದ ಅನೇಕ ನಗರಗಳು ಚರ್ಚೆಯ ವ್ಯಾಪ್ತಿಯಲ್ಲಿ ಬರುತ್ತವಾದರೂ ರಾಜಧಾನಿ ಬೆಂಗಳೂರು ಪ್ರಮುಖ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಬಹುರಾಷ್ಟ್ರೀಯ ಕಂಪೆನಿಗಳು ಸಾಲುಸಾಲಾಗಿ ಬರುತ್ತಿರುವುದು ಹಾಗೂ ಸರಕಾರಿ ಸ್ವಾಮ್ಯದ ಮತ್ತು ಖಾಸಗೀ ವಲಯದ ಉದ್ದಿಮೆಗಳು ಎಲ್ಲೆಂದರಲ್ಲಿ ಸ್ಥಾಪನೆಗೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿ ಕಂಡುಬರುತ್ತದೆ. ಬೆಂಗಳೂರಿನ ಅನೇಕ ಪರಿಸರ ಸಂಘಟನೆಗಳು ಒಂದಲ್ಲ ಒಂದು ಕಾರಣಕ್ಕಾಗಿ ಚಳವಳಿ ನಡೆಸುತ್ತಲೇ ಬಂದಿವೆ. 1993ರಲ್ಲಿ ಜಪಾನ್ ತಂತ್ರಾಧಾರಿತ ಕೈಗಾರಿಕಾ ಕಾಲೋನಿಯ ಹೆಸರು ಕೇಳಿಬಂದಾಗ ಅದರ ಸ್ಥಾಪನೆಯನ್ನು ನವವಸಾಹತುಶಾಹಿಯ ಪ್ರವೇಶ ಎಂಬುದಾಗಿ ಕರೆದು ವ್ಯಾಪಕವಾಗಿ ಪ್ರತಿಭಟಿಸಲಾಯಿತು. ಹಲವಾರು ಪರಿಸರ ಸಂಘಟನೆಗಳು ಒಗ್ಗೂಡಿ ಜಪಾನ್ ಕೈಗಾರಿಕಾ ನಗರ ವಿರೋಧಿ ಒಕ್ಕೂಟವನ್ನು ಸ್ಥಾಪಿಸಿದವು. ಈ ಒಕ್ಕೂಟ ಕೈಗಾರಿಕಾ ನಗರ ವಿರುದ್ಧ ಜನರನ್ನು ಸಂಘಟಿಸಿ ವ್ಯಾಪಕ ಪ್ರತಿಭಟನೆಯನ್ನು ನಡೆಸಿತು. ಕನ್ನಡ ಚಳವಳಿಗಾರ ಚಿದಾನಂದಮೂರ್ತಿ, ಕೆ.ವಿ.ಸುಬ್ಬಣ್ಣ ಮುಂತಾದವರು ಈ ಚಳವಳಿಯಲ್ಲಿ ಪಾಲ್ಗೊಂಡರು. ಸಂಬಂಧಿಸಿದ ಇಲಾಖೆಗಳಿಗೆ ಮನವಿ ಸಲ್ಲಿಸಿ ಬೀದಿ ಪ್ರದರ್ಶನವನ್ನು ನಡೆಸಲಾಯಿತು. ಚಳವಳಿಯ ತೀವ್ರತೆಯನ್ನು ಅರ್ಥೈಸಿಕೊಂಡ ಸರಕಾರ ಜಪಾನ್ ಕೈಗಾರಿಕಾ ನಗರ ಯೋಜನೆಯನ್ನು ಕೈಬಿಟ್ಟಿತು.

ನಂಜನಗೂಡು ಅನಿಲ ದುರಂತ
ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿರುವ ಔಷಧಿ ತಯಾರಿಕಾ ಘಟಕ ಮ್ಯಾಕ್ಸಿ ಫಾರ್ಮಾ 1997ರಲ್ಲಿ ರಾಜ್ಯಾದ್ಯಂತ ಸುದ್ದಿ ಮಾಡಿತು. ಇದಕ್ಕೆ ಕಾರಣ ಒಂದೇ ವರ್ಷದಲ್ಲಿ ಮೂರು ಬಾರಿ ಆದ ಅನಿಲ ಸೋರಿಕೆ. ಈ ಕಾರ್ಖಾನೆಯು ಕಾನೂನು ಉಲ್ಲಂಘಿಸಿ ಪರಿಸರವನ್ನು ಮಲಿನಗೊಳಿಸುತ್ತಿದೆಯೆಂದು ಸ್ಥಳೀಯ ಪರಿಸರ ಸಂಘಟನೆಗಳು ಆಪಾದಿಸಿದವು. ಅನಿಲ ಸೋರಿಕೆಯಿಂದಾಗಿ ನಾಲ್ಕು ಜನ ಕಾರ್ಮಿಕರು ಅಸು ನೀಗಿದರು, ಅನೇಕರು ಹೈಡ್ರೋಜನ್ ಸಲ್ಫೈಟ್ ಕುಡಿದು ಅಸ್ವಸ್ಥರಾದರು ಮತ್ತು ಅನೇಕ ಹಸುಗಳು ಸತ್ತವು. ಮಾಲಿನ್ಯ ನಿಯಂತ್ರಣ ಮಂಡಳಿಯು ಹೊಸ ಅನುಮತಿ ನೀಡುವವರೆಗೂ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಮುಚ್ಚಬೇಕೆಂದು ಆಗ್ರಹಪಡಿಸಲಾಯಿತು. ಆದರೆ ಹೆಚ್ಚಿನ ಕಾರ್ಮಿಕರು ಪರಿಸರ ಸಂಘಟನೆಗಳೊಡನೆ ಬೆರೆಯಲಿಲ್ಲ. ಸ್ಥಳೀಯರ ಪ್ರಕಾರ ಈ ಕಾರ್ಮಿಕರು ಹೊರ ರಾಜ್ಯಗಳವರಾಗಿದ್ದು ಮಾಲಿಕರ ವಿರುದ್ಧ ಹೋರಾಟ ನಡೆಸಲು ಆಸಕ್ತಿ ತೋರಿಸಲಿಲ್ಲ. ದೊಡ್ಡ ಹುದ್ದೆಗಳಲ್ಲಿರುವ ಅಧಿಕಾರಿಗಳಿಗೆ ಎಲ್ಲ ಸವಲತ್ತು ಸೌಕರ್ಯಗಳೂ ಇರುವುದರಿಂದಾಗಿ ಅವರ್ಯಾರೂ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಇದರಿಂದಾಗಿ ಅನಿಲ ಸೋರಿಕೆ ಉಂಟಾದರೂ ಕಾರ್ಖಾನೆಯ ಕೆಲಸ ಕಾರ್ಯಗಳು ನಡೆಯುತ್ತಲೇ ಇದ್ದವು.
ಪರಿಸರ ಚಳವಳಿಕಾರರು ಈ ಕಾರ್ಖಾನೆಯನ್ನು ವಿರೋಧಿಸಲು ಇನ್ನೊಂದು ಮುಖ್ಯ ಕಾರಣವೆಂದರೆ ಈ ಕಾರ್ಖಾನೆಯಿಂದಾಗಿ ನೆರೆಯ ಗ್ರಾಮದ ಮೇಲಾಗಿರುವ ಕೆಟ್ಟ ಪರಿಣಾಮಗಳು. ಕಾರ್ಖಾನೆಯ ಹಿಂಬದಿಯಲ್ಲಿಯೇ ಇರುವ ಕಲ್ಲಹಳ್ಳಿಯ ಜನರು ಕಾರ್ಖಾನೆಯ ಘಾಟು ವಾಸನೆಯನ್ನು ಕುಡಿದು ಚರ್ಮರೋಗ, ಟಿ.ಬಿ. ಮೊದಲಾದ ರೋಗಗಳಿಗೆ ತುತ್ತಾಗಿದ್ದರು. ಕಾರ್ಖಾನೆಯಿಂದ ಹೊರಬೀಳುವ ಕಲ್ಮಶ ನೀರು ಪೈಪ್ ಮೂಲಕ ಕಲ್ಲಹಳ್ಳಿಯ ಹೊಲಗಳ ಮಧ್ಯೆ ಹರಿದು ಕಬಿನಿ ನದಿಯನ್ನು ಸೇರುವುದೇ ಹೆಚ್ಚಿನ ಅನಾಹುತಗಳಿಗೆ ಕಾರಣವಾಯಿತು. ಕಲ್ಲಹಳ್ಳಿ ಬಡಜನರಿಂದಲೇ ತುಂಬಿಕೊಂಡಿರು ವುದರಿಂದ ಕಾರ್ಖಾನೆಯ ಅಧಿಕಾರಿಗಳಿಗೆ ಹಳ್ಳಿಯನ್ನು ತಮ್ಮ ನಿಯಂತ್ರಣದಲ್ಲಿಡಲು ಸುಲಭವಾಯಿತು.

ಹರಿಹರ ಪಾಲಿಫೈಬರ್ ಕಾರ್ಖಾನೆ
ಬಿರ್ಲಾ ಮೂಲದ ಪಾಲಿಫೈಬರ್ ಕಾರ್ಖಾನೆ ನಿರ್ಮಾಣಗೊಳ್ಳುವ ಹಂತದಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ಎದುರಿಸಿತು. ಆದರೆ ಪ್ರತಿಭಟನೆಗಳನ್ನು ಸಮರ್ಥವಾಗಿ ಎದುರಿಸಿ ತನ್ನ ಕಾಮಗಾರಿಯನ್ನು ಪೂರ್ಣಗೊಳಿಸಿ ಕೊಂಡಿತು. ಆದರೂ ಪಾಲಿಫೈಬರ್ ಮತ್ತು ಗ್ರಾಸಿಮ್ ಕಾರ್ಖಾನೆಗಳ ವಿರುದ್ಧ ಹರಿಹರ ಮತ್ತು ದಾವಣಗೆರೆಯಲ್ಲಿ ಚಳವಳಿಗಳು ನಡೆದವು. ಈ ಕಾರ್ಖಾನೆಗಳು ತುಂಗಭದ್ರಾ ನದಿಯನ್ನು ಅವಲಂಬಿಸಿ ಕೊಂಡಿರುವುದೇ ಚಳವಳಿಗಳಿಗೆ ಮೂಲ ಕಾರಣ. ತುಂಗಭದ್ರಾ ನದಿಯ ನೀರು ಮಾಲಿನ್ಯಕ್ಕೊಳಗಾಗುತ್ತಿದೆ ಎನ್ನುವುದೇ ಚಳವಳಿಕಾರರ ವಾದ. ಪಾಲಿಫೈಬರ್ ಕಾರ್ಖಾನೆಯು ವಿಷಪೂರಿತ ಕೊಳಕು ನೀರನ್ನು ತುಂಗಭದ್ರಾ ನದಿಗೆ ಹರಿಬಿಟ್ಟಿದ್ದರಿಂದಾಗಿ ತುಂಗಭದ್ರಾ ನದಿಯ ಮೀನುಗಳು ಸತ್ತವು ಎನ್ನುವ ವರದಿ ವ್ಯಾಪಕ ಜನ ಪ್ರತಿಭಟನೆಗೆ ಕಾರಣವಾಯಿತು. ಕೃಷಿಕರು, ಮೀನುಗಾರರು ಹಾಗೂ ನಗರವಾಸಿಗಳು ಬೃಹತ್ ಸಂಖ್ಯೆಯಲ್ಲಿ ಸೇರಿ ಈ ಘಟನೆಯ ವಿರುದ್ಧ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಆದರೆ ಕಾರ್ಖಾನೆಯ ಮಾಲಿಕರು ಈ ಪ್ರಕರಣಕ್ಕೆ ಬೇರೆಯೇ ಕಾರಣವನ್ನು ನೀಡಿದರು. ಅವರ ಪ್ರಕಾರ ಯಾರೋ ದುಷ್ಕರ್ಮಿಗಳು ವಿಮಾನದಿಂದ ನದಿಗೆ ವಿಷವನ್ನು ಚಿಮುಕಿಸಿ ಮೀನುಗಳು ಸಾಯುವಂತೆ ಮಾಡಿದರು. ಇದರಲ್ಲಿ ಕಾರ್ಖಾನೆಯ ಯಾವ ಕೈವಾಡವೂ ಇಲ್ಲ. ಪ್ರಭಾವಿ ವಕೀಲರ ಸಹಾಯದಿಂದ ಮಾಲಿಕರ ಈ ವಾದ ನ್ಯಾಯಮಂಡಲಿ ಯಲ್ಲಿ ಗಟ್ಟಿಯಾಗಿ ಉಳಿಯಿತು. ಧಾರವಾಡದ ಸಮಾಜ ಪರಿವರ್ತನ ಸಮುದಾಯವು ಈ ಕಾರ್ಖಾನೆಗಳ ವಿರುದ್ಧ ಚಳವಳಿ ನಡೆಸಿತು. ಆದರೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸರಕಾರಿ ತಂತ್ರಜ್ಞರ ತೀರ್ಮಾನವೇ ಅಂತಿಮವಾಗಿರುವುದರಿಂದಾಗಿ ಹರಿಹರ ಮತ್ತು ದಾವಣಗೆರೆಯಲ್ಲಿನ ಚಳವಳಿಗಳು ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲಿಲ್ಲ. ಚಳವಳಿ ಯೊಳಗಿನ ಆಂತರಿಕ ಭಿನ್ನತೆಗಳೂ ಇದಕ್ಕೆ ಕಾರಣವಾದವು.

ಬೀದರ್ ಕೈಗಾರಿಕಾ ಪ್ರದೇಶ
ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿಪಡಿಸಲಾಗಿದೆ. ಹೊಸದಾಗಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ದಿಪಡಿಸುವಾಗ ಸಂಬಂಧಿಸಿದ ಇಲಾಖೆಗಳು ಹಾಗೂ ಆಡಳಿತವರ್ಗದ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನಕ್ಕೆ ಬೀದರ್ ಕೈಗಾರಿಕಾ ಪ್ರದೇಶವೇ ಉತ್ತಮ ಉದಾಹರಣೆ. ಬೀದರ್ ಕೈಗಾರಿಕಾ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆ. 1983ರಲ್ಲಿ ಕೇಂದ್ರ ಸರಕಾರ ಬೀದರ್ ಜಿಲ್ಲೆಯನ್ನು ಕೈಗಾರಿಕಾರಹಿತ ಜಿಲ್ಲೆ ಎಂಬುದಾಗಿ ಘೋಷಿಸಿತು. ಇದರ ನಂತರ ಬೀದರ್ನಲ್ಲಿ ಕೈಗಾರಿಕೀಕರಣ ಪ್ರಕ್ರಿಯೆ ಕಾಣಿಸಿಕೊಳ್ಳಲಾರಂಭಿಸಿತು. ಬೀದರ್ನ ಕೋಳಾರ ಮತ್ತು ನೌಬಾದ್ ಗ್ರಾಮಗಳನ್ನು ಕೈಗಾರಿಕಾ ಪ್ರದೇಶವಾಗಿ ಅಭಿವೃದ್ದಿಪಡಿಸಲಾಯಿತು. ಈ ಅಭಿವೃದ್ದಿ ಕಾರ್ಯಕ್ಕಾಗಿ ಒಕ್ಕಲೆಬ್ಬಿಸಿದ ಗ್ರಾಮಸ್ಥರಿಗೆ ಸೂಕ್ತ ಪರಿಹಾರ, ಪುನರ್ವಸತಿ ಸಿಗಲಿಲ್ಲ. ಸುಮಾರು 15 ರಾಸಾಯನಿಕ ಹಾಗೂ ಔಷಧಿ ಉತ್ಪಾದನಾ ಕಾರ್ಖಾನೆಗಳು ಸ್ಥಾಪನೆಗೊಂಡವು. ಪರಿಸರ ಮಾಲಿನ್ಯ ನಿವಾರಣೆಗೆ ಹಾಗೂ ನೀರು ಶುದ್ದೀಕರಣಕ್ಕೆ ಸರಿಯಾದ ವ್ಯವಸ್ಥೆಯನ್ನು ಮಾಡಿರಲಿಲ್ಲ. 1991ರಲ್ಲಿ ಕೈಗಾರಿಕಾ ಪ್ರದೇಶದ ಹತ್ತಿರವಿರುವ ಚಾಮಪುರ ಕೆರೆಗೆ ನೀರು ಕುಡಿಯಲು ಹೋದ ನೂರಾರು ಆಕಳುಗಳು, ಕುರಿಗಳು, ಎಮ್ಮೆಗಳು ಸತ್ತುಹೋದವು. ಕೈಗಾರಿಕೆಗಳ ವಿಷಪೂರಿತ ನೀರು ಕೆರೆಯನ್ನು ಸೇರಿರುವುದೇ ಇದಕ್ಕೆ ಕಾರಣ. ಸತ್ತ ಜಾನುವಾರುಗಳ ಮೃತದೇಹಗಳನ್ನು ಜಿಲ್ಲಾದಿಕಾರಿಗಳ ಕಛೇರಿಯ ಮುಂದೆ ರಾಶಿ ಹಾಕಿ ಪ್ರದರ್ಶನವನ್ನು ನಡೆಸಲಾಯಿತು. ಈ ಘಟನೆಯಾದ ಕೆಲವು ವರ್ಷಗಳ ಬಳಿಕ ಇಬ್ಬರು ಕಾರ್ಮಿಕರು ಕಾರ್ಖಾನೆಯ ವಿಷಗಾಳಿ ಸೇವಿಸಿ ಮೃತರಾದರು. ಅವರ ಕುಟುಂಬಗಳಿಗೆ ನ್ಯಾಯಬದ್ಧವಾದ ಪರಿಹಾರವೂ ಸಿಗಲಿಲ್ಲ.
ಕರ್ನಾಟಕ ವಿಮೋಚನಾ ರಂಗವು ಬೀದರ್ ಕೈಗಾರಿಕಾ ಪ್ರದೇಶದ ಅವ್ಯವಸ್ಥೆಯನ್ನು ಖಂಡಿಸಿ ಚಳವಳಿ ಆರಂಭಿಸಿತು. ಬಂಜಗೆರೆ ಜಯಪ್ರಕಾಶ್, ಸಿರಿಮನೆ ನಾಗರಾಜ್, ಸಂಜೀವ ಕುಮಾರ್ ಹಾಗೂ ಇನ್ನೂ ಅನೇಕ ಪರಿಸರ ಪ್ರೇಮಿಗಳು ಚಳವಳಿಯಲ್ಲಿ ಭಾಗವಹಿಸಿದರು. ಪೊಲೀಸ್ ಪಡೆಗಳ ಪ್ರವೇಶ ಚಳವಳಿಯನ್ನು ಹಿಂಸಾತ್ಮಕಗೊಳಿಸಿತು. ಚಳವಳಿಗಾರರು ಮಾಲಿನ್ಯವನ್ನುಂಟುಮಾಡಿದ ಕೈಗಾರಿಕೆಗಳ ಗೇಟುಗಳಿಗೆ ಬೀಗಮುದ್ರೆ ಜಡಿಯುವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಚಳವಳಿಯ ಪರಿಣಾಮವಾಗಿ 1995ರಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ನಾಲ್ಕು ಕೈಗಾರಿಕೆಗಳನ್ನು ಮುಚ್ಚುವಂತೆ ಆದೇಶಿಸಿತು. ಇನ್ನುಳಿದ ಕೈಗಾರಿಕೆಗಳು ನೀರು ಶುದ್ದೀಕರಣ ಘಟಕವನ್ನು ಸ್ಥಾಪಿಸಲು ಒಪ್ಪಿಕೊಂಡವು. ಕೈಗಾರಿಕೆಗಳಿಂದ ಉಂಟಾದ ಪರಿಸರ ಮಾಲಿನ್ಯವನ್ನು ವಿರೋಧಿಸಿ ಅನೇಕ ಸಮಿತಿಗಳು ಹೋರಾಟ ನಡೆಸಿದವು. ಅವುಗಳಲ್ಲಿ ಕೋಲಾರ ಕೈಗಾರಿಕಾ ಪ್ರದೇಶ ಗ್ರಾಮೀಣ ಹೋರಾಟ ಸಮಿತಿಯೂ ಒಂದು. ರಾಸಾಯನಿಕ ಘಟಕಗಳು ಹೊರಬಿಡುತ್ತಿರುವ ವಿಷಯುಕ್ತ ತ್ಯಾಜ್ಯ ವಸ್ತುಗಳಿಂದಾಗಿ ಈ ಭಾಗದ ಸುಮಾರು 35 ಸಾವಿರ ಜನರು ಮತ್ತು ಸುಮಾರು 5,000 ಎಕರೆಗೂ ಅಧಿಕ ಭೂಮಿ ಅಪಾಯದಲ್ಲಿದೆ ಎಂಬ ಆತಂಕವನ್ನು ಸಮಿತಿಯು ವ್ಯಕ್ತಪಡಿಸಿತು. ಇದು ಬೀದರ್ ಕೈಗಾರಿಕಾ ಪ್ರದೇಶವೊಂದರ ಚಿತ್ರಣ ಮಾತ್ರವಾಗಿರದೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿನ ಕೈಗಾರಿಕಾ ಪ್ರದೇಶಗಳ ಸ್ಥಿತಿಯೂ ಆಗಿದೆ.

ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿ.ಎಂ.ಐ.ಸಿ.)
ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ 1984ರಲ್ಲಿಯೇ ಪರಿಶೀಲನೆ ನಡೆಸಲಾಗಿತ್ತು. 1994ರಲ್ಲಿ ಕಲ್ಯಾಣಿ ಗುಂಪಿನವರು ಸರಕಾರದೊಡನೆ ಒಡಂಬಡಿಕೆ ಮಾಡಿಕೊಂಡು ಯೋಜನೆಗೆ ಚಾಲನೆ ಒದಗಿಸಿದರು. ಈ ಯೋಜನೆಯ ಒಡಂಬಡಿಕೆಗಳು ವಿಚಿತ್ರವಾದದ್ದಾಗಿದ್ದವು. ಅದೇನೆಂದರೆ ಖಾಸಗಿ ಕಂಪೆನಿಯವರು ರಸ್ತೆ ನಿರ್ಮಾಣಕ್ಕೆ ಮುಂದೆ ಬರಬೇಕಾದರೆ ಶೇಕಡ 20ರಷ್ಟು ವೆಚ್ಚವನ್ನು ಸಬ್ಸಿಡಿ ರೂಪದಲ್ಲಿ ನೀಡಬೇಕಲ್ಲದೆ ರಸ್ತೆ ಬದಿ ಜಮೀನನ್ನು ರಿಯಲ್ ಎಸ್ಟೇಟ್ ರೀತಿ ಅಭಿವೃದ್ದಿಪಡಿಸಲು ಅನುಮತಿ ನೀಡಬೇಕೆನ್ನುವುದು. ಇದರ ಪ್ರಕಾರ ಕಲ್ಯಾಣಿ ಗುಂಪು ಅಮೆರಿಕದ ಕೆಲವು ಬಹುರಾಷ್ಟ್ರೀಯ ಕಂಪೆನಿಗಳೊಡನೆ ಸೇರಿಕೊಂಡು ಕೂಟವೊಂದನ್ನು ರಚಿಸಿ ಹೆದ್ದಾರಿ ಯೋಜನೆಗೆ ಆಸಕ್ತಿ ವಹಿಸಿತು. ರಸ್ತೆ ನಿರ್ಮಾಣದೊಂದಿಗೆ ಏಳು ಹೊಸ ನಗರಗಳನ್ನು ನಿರ್ಮಿಸಲು ಸರಕಾರದಿಂದ ಅನುಮತಿ ಪಡೆದುಕೊಂಡಿತು.
ಕರ್ನಾಟಕ ವಿಮೋಚನಾ ರಂಗವು ಈ ಯೋಜನೆಯ ವಿರುದ್ಧ ಚಳವಳಿ ನಡೆಸಿತು. ಇದರ ಪ್ರಕಾರ ಈ ಯೋಜನೆ ಬಡಜನರ ಊಹೆಗೂ ನಿಲುಕದ ಮತ್ತು ಅವರಿಗೆ ಯಾವ ರೀತಿಯ ಪ್ರಯೋಜನವೂ ಇಲ್ಲದ ಶ್ರೀಮಂತವರ್ಗದ ಯೋಜನೆ. ಇದರೊಡನೆ ಹಲವಾರು ಪರಿಸರ ಸಂಘಟನೆಗಳೂ ಸೇರಿಕೊಂಡವು. ಪರಿಸರ ಕುರಿತು ಕೆಲಸ ಮಾಡುತ್ತಿ ರುವ ಯಲ್ಲಪ್ಪ ರೆಡ್ಡಿ, ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟದ ಅಧ್ಯಕ್ಷರಾದ ಎಚ್.ಎಸ್.ದೊರೆಸ್ವಾಮಿ, ಕರ್ನಾಟಕ ವಿಮೋಚನಾ ರಂಗದ ಅಧ್ಯಕ್ಷ ಸಿರಿಮನೆ ನಾಗರಾಜ್, ಪ್ರಜಾತಾಂತ್ರಿಕ ಜನರ ವೇದಿಕೆಯ ನಗರಗೆರೆ ರಮೇಶ್, ಯೋಜನೆಯನ್ನು ವಿರೋಧಿಸುತ್ತಿರುವ ಚಿಂತಕ ಶಿವಸುಂದರ್ ಮುಂತಾದವರು ಯೋಜನೆಯ ಪ್ರಸ್ತಾವಗಳನ್ನು ಸಾರ್ವಜನಿಕರ ಮುಂದಿಟ್ಟರು. ಯೋಜನೆಯಿಂದಾಗಿ ಆ ಭಾಗದ ಜನರಿಗಾಗುವ ಅನನುಕೂಲತೆಗಳನ್ನು ಸರಕಾರದ ಮುಂದಿಟ್ಟು ಯೋಜನೆಯನ್ನು ಕೈಬಿಡುವಂತೆ ಒತ್ತಾಯಪಡಿಸಲಾಯಿತು. ಆದರೂ 1999ರಲ್ಲಿ ಕಲ್ಯಾಣಿ ಗುಂಪು ಸರಕಾರದ ಸಹ ಭಾಗಿತ್ವದೊಂದಿಗೆ ಯೋಜನೆಯ ಕಾಮಗಾರಿಯನ್ನು ಆರಂಭಿಸುವಲ್ಲಿ ಯಶಸ್ವಿ ಯಾಯಿತು.
ಈ ಯೋಜನೆಯು ಮತ್ತೊಮ್ಮೆ ಬಿರುಸಿನ ಚರ್ಚೆಗೆ ಈಡಾಗಿದ್ದು 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮಿಶ್ರ ಸರಕಾರ ಈ ಯೋಜನೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಸರಕಾರ ಮತ್ತು ನೈಸ್ ಕಂಪನಿ ನಡುವಿನ ಪ್ರತಿಷ್ಠಿತ ಸಮರದಿಂದ ಬಿ.ಎಂ.ಐ.ಸಿ.ಯೋಜನೆ ವಿವಾದ ಮತ್ತಷ್ಟು ಜಟಿಲಗೊಂಡಿತು. ಕಾರಿಡಾರ್ ಯೋಜನೆಯನ್ನು ಆರಂಭಿಸಿದ ನೈಸ್ ಕಂಪನಿಯ ಕೆಲಸ ಕಾರ್ಯಗಳ ಬಗ್ಗೆ ಪರಿಸರ ಸಂಘಟನೆಗಳು ಹೊಂದಿದ್ದ ಅನುಮಾನ ಹಾಗೂ ಅಸಮಾಧಾನಗಳು ನಿಜವಾದದ್ದು ಎನ್ನುವ ವಿಚಾರ ಸರಕಾರಕ್ಕೆ ಮನವರಿಕೆಯಾಗಿದೆ. ಮೂಲ ಒಪ್ಪಂದದ ಪ್ರಕಾರ ಯೋಜನೆಗೆ 20,192 ಎಕರೆ ಭೂಮಿ ಎಂದು ತೀರ್ಮಾನವಾಗಿದ್ದು, ನೈಸ್ ಕಂಪನಿಯು 29,140 ಎಕರೆ ಭೂಮಿಗೆ ಅಧಿಸೂಚನೆ ಹೊರಡಿಸಿದೆ ಎನ್ನುವುದು ಕಂಪನಿಯ ವಿರುದ್ಧದ ಆರೋಪವಾಗಿತ್ತು. ಹೆಚ್ಚುವರಿ ಭೂಮಿ ಕಬಳಿಸಲು ಕಂಪನಿ ಸಂಚು ನಡೆಸಿದೆ, ಹೀಗಾಗಿ ಆ ಕಂಪನಿ ವಿರುದ್ಧ ಸರಕಾರ ನ್ಯಾಯಾಲಯಗಳ ಆದೇಶದ ವ್ಯಾಪ್ತಿಯಲ್ಲೇ ಕ್ರಮ ಕೈಗೊಳ್ಳಬೇಕೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸರಕಾರಕ್ಕೆ ತಿಳಿಸಿದರು. ಸರಕಾರವು ಈ ಯೋಜನೆಯನ್ನು ತನ್ನ ಸ್ವಾಧೀನಕ್ಕೆ ತರುವ ಪ್ರಯತ್ನವನ್ನೂ ಮಾಡಿತು. ಅದೇ ರೀತಿ ಬಿ.ಎಂ.ಐ.ಸಿ. ಯೋಜನೆಗೆ ಬದಲಾಗಿ ಬೆಂಗಳೂರು-ಮೈಸೂರು ನಡುವೆ ಹಾಲಿ ಇರುವ ಚತುಷ್ಪಥ ರಸ್ತೆಯನ್ನು ಆರು ಲೇನ್ ರಸ್ತೆಯಾಗಿ ಅಭಿವೃದ್ದಿಪಡಿಸುವ ಬಗೆಗೂ ಸರಕಾರ ಚಿಂತನೆ ನಡೆಸಿತು. ಯೋಜನೆ ಸ್ವಾಧೀನಕ್ಕೆ ವಿಧೇಯಕ ತರಲು ಮುಂದಾದ ಸರಕಾರದ ಕ್ರಮವನ್ನು ಧರ್ಮಸಿಂಗ್ ನೇತೃತ್ವದ ವಿರೋಧ ಪಕ್ಷ ವಿರೋಧಿಸಿತು. ಅದೇ ರೀತಿ ನೈಸ್ ಕಂಪನಿ ಮುಖ್ಯಸ್ಥ ಅಶೋಕ್ಖೇಣಿ ಸರಕಾರದ ಈ ಪ್ರಯತ್ನದ ವಿರುದ್ಧ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದರು. ಸರಕಾರದ ಜತೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ಕಾರಿಡಾರ್ ಯೋಜನೆಗೆ ಅಗತ್ಯ ಭೂಮಿಯನ್ನು ಪಡೆಯಲಾಗಿದೆ, ಇದರಲ್ಲಿ ಹೆಚ್ಚುವರಿ ಭೂಮಿ ಎಲ್ಲಿಂದ ಬರಲು ಸಾಧ್ಯ ಎನ್ನುವುದು ಅಶೋಕ್ ಖೇಣಿಯವರ ಪ್ರಶ್ನೆಯಾಗಿತ್ತು. ಈ ವಾದ-ವಿವಾದದ ನಡುವೆಯೇ ಬಿ.ಎಂ.ಐ.ಸಿ. ಯೋಜನೆಯ ಭಾಗವಾದ ಫೆರಿಫೆರಲ್ ರಸ್ತೆ (ಬೆಂಗಳೂರು ಹೊರವಲಯದ ಹೆಮ್ಮಿಗೆ ಪುರದಲ್ಲಿ) ಜೂನ್ 19, 2006ರಂದು ಸಾರ್ವಜನಿಕ ಸೇವೆಗೆ ಮುಕ್ತವಾಯಿತು. ಆದರೆ ಈ ಯೋಜನೆಗೆ ಮೈಸೂರು ಕಡೆಯಿಂದ ಕಾಮಗಾರಿ ಆರಂಭಿಸುವ ನೈಸ್ ಕಂಪನಿಯ ಪ್ರಯತ್ನ ಸಫಲವಾಗಲಿಲ್ಲ. ಆದರೆ ನೈಸ್ ಕಂಪನಿ ತನ್ನ ಪ್ರಯತ್ನ ಮುಂದುವರಿಸಿದೆ. ಇದೊಂದು ಸರಕಾರ ಮತ್ತು ನೈಸ್ ಕಂಪನಿ ನಡುವಿನ ವಾದ-ವಿವಾದವಾಗಿದ್ದು ಇದನ್ನು ರಾಜ್ಯದ ಸಮಸ್ಯೆಯನ್ನಾಗಿ ಬಿಂಬಿಸಿರುವುದು ವಿಪರ್ಯಾಸ. ಬಂಡವಾಳಶಾಹಿ ವ್ಯವಸ್ಥೆ ತನ್ನ ಸಮಸ್ಯೆಯನ್ನು ರಾಜ್ಯದ ಸಮಸ್ಯೆಯನ್ನಾಗಿ ಬಿಂಬಿಸಿ ಯಾವ ರೀತಿ ಸಮಯ- ಸಂದರ್ಭದ ಲಾಭವನ್ನು ಪಡೆದುಕೊಳ್ಳುತ್ತದೆ ಎನ್ನುವುದಕ್ಕೆ ಬಿ.ಎಂ.ಐ.ಸಿ. ಯೋಜನೆ ಉತ್ತಮ ಉದಾಹರಣೆಯಾಗಿದೆ.

ಕಬ್ಬನ್ ಪಾರ್ಕ್ ಉಳಿಸಿ ಚಳವಳಿ
ಪರಿಸರ ಚಳವಳಿಗಳಿಗೆ ರಾಜ್ಯದ ಉದ್ಯಾನಗಳೂ ವಸ್ತುಗಳಾಗಿವೆ. ರಾಜ್ಯದ ಹೆಚ್ಚಿನ ಉದ್ಯಾನಗಳು ಬೆಂಗಾಡಿನಂತಿವೆ, ನಗರಪಾಲಿಕೆಗಳು ಅವುಗಳನ್ನು ಕಡೆಗಣಿಸಿವೆ ಎಂಬುದಾಗಿ ಪರಿಸರ ಪ್ರೇಮಿಗಳು ಆಪಾದಿಸುತ್ತಲೇ ಬಂದಿದ್ದಾರೆ. ಉದ್ಯಾನಗಳನ್ನು ರಕ್ಷಿಸಿ ಎನ್ನುವ ಚಳವಳಿಗೆ ಉತ್ತಮ ಉದಾಹರಣೆ 1998ರಲ್ಲಿ ನಡೆದ ಕಬ್ಬನ್ ಪಾರ್ಕ್ ಉಳಿಸಿ ಚಳವಳಿ. ಶಾಸಕರ ಭವನದ ವಿಸ್ತರಣೆ ನಿರ್ಮಾಣ ಮತ್ತಿತರ ಕೆಲಸಗಳಿಗಾಗಿ ಕಬ್ಬನ್ ಪಾರ್ಕನ್ನು ಬಳಸಿಕೊಳ್ಳುವುದಾಗಿ ಸರಕಾರ ತೀರ್ಮಾನಿಸಿದಾಗ ವ್ಯಾಪಕ ಚಳವಳಿ ಕಾಣಿಸಿಕೊಂಡಿತು. ಇದು ಭಾರಿ ವಿವಾದವನ್ನೇ ಸೃಷ್ಟಿಸಿ ‘ಕಬ್ಬನ್ ಪಾರ್ಕ್ ಉಳಿಸಿ’ ಎಂಬ ಪರಿಸರ ಚಳವಳಿಯಾಗಿ ಇಡೀ ರಾಜ್ಯದ ಗಮನ ಸೆಳೆಯಿತು. ಈ ವಿಚಾರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಿ ಶಾಸಕಾಂಗ ಮತ್ತು ನ್ಯಾಯಾಂಗದ ನಡುವಣ ಘರ್ಷಣೆಗೂ ನಾಂದಿಯಾಯಿತು. ಬೆಂಗಳೂರಿನ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಇತರ ಖಾಸಗಿ ಸಂಸ್ಥೆಗಳ ಕಾರ್ಯಕರ್ತರು ಕಬ್ಬನ್ ಪಾರ್ಕ್ ಉಳಿಸಿ ಚಳವಳಿಯ ಅಂಗವಾಗಿ ವಿಕ್ಟೋರಿಯಾ ರಾಣಿ ಪ್ರತಿಮೆ ಬಳಿ ಧರಣಿ ನಡೆಸಿದರು. ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್ನ ಸಂಚಾಲಕ ಲಿಯೋ ಸಲ್ಡಾನಾ ಮತ್ತು ಬಿಮಲ್ ದೇಸಾಯಿ ಇವುಗಳ ನೇತೃತ್ವ ವಹಿಸಿದರು. ನರ್ಮದಾ ಉಳಿಸಿ ಚಳವಳಿಯ ನಾಯಕಿ ಮೇಧಾ ಪಾಟ್ಕರ್ ತಮ್ಮ ಬೆಂಬಲ ಸೂಚಿಸಿದರು. ನಾಟಕಕಾರ ಗಿರೀಶ್ ಕಾರ್ನಾಡ್, ಪರಿಸರತಜ್ಞ ಅ.ನ.ಯಲ್ಲಪ್ಪ ರೆಡ್ಡಿ, ನಿವೃತ್ತ ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಈ ಚಳವಳಿಯಲ್ಲಿ ಭಾಗವಹಿಸಿದರು. ಈ ಚಳವಳಿ ಹೆಚ್ಚಿನ ಹಾನಿ ಉಂಟುಮಾಡದೆ ಆರಿಹೋಗಿದ್ದು ಆಶ್ಚರ್ಯಕರ. ಇದೊಂದು ಪ್ರತಿಷ್ಠೆಯ ಪ್ರಶ್ನೆಯೂ ಆಗಿದ್ದು ಕೆಲವು ಕಾಲ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಿತು. ರಾಜಕೀಯ ಧುರೀಣರು ಪ್ರಶ್ನೆಗೆ ಸಂಬಂಧಿಸದ ಉತ್ತರವನ್ನು ನೀಡಿ ಗೊಂದಲವನ್ನುಂಟುಮಾಡಿದರು. ಸಾರ್ವಜನಿಕರು ಸಮಸ್ಯೆಯ ಮೂಲವನ್ನು ತಿಳಿಯದೆ ತಾವೂ ಗೊಂದಲಕ್ಕೀಡಾದರು.

ಉತ್ತರ ಕರ್ನಾಟಕದ ಕೆರೆ ಉಳಿಸಿ ಚಳವಳಿ
ಕೆರೆಗಳು ಉತ್ತರ ಕರ್ನಾಟಕದ ಚರಿತ್ರೆಯಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ಅದೇ ರೀತಿ ಸಮಸ್ಯೆಗಳ ಆಗರವೂ ಆಗಿವೆ. ನಗರೀಕರಣ ಹಾಗೂ ಕೈಗಾರಿಕೀಕರಣಗಳಿಂದಾಗಿ ಕೆರೆಗಳು ತಮ್ಮ ಸ್ವರೂಪದಲ್ಲಿ ಬದಲಿಸಲಾಗದಂಥ ಬದಲಾವಣೆಗಳನ್ನು ತಂದವು. ಕೆರೆಗಳ ಹೆಸರಿನಲ್ಲಿ ನಡೆಯುವ ರಾಜಕೀಯ ಈ ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸಿತು. ಕೆರೆಗಳ ಹೂಳೆತ್ತುವುದು, ಕೆರೆಗಳ ಪುನರ್ ನಿರ್ಮಾಣ ಹಾಗೂ ಹೊಸದಾಗಿ ಕೆರೆಗಳನ್ನು ನಿರ್ಮಿಸುವುದು ಮುಂತಾದ ಕೆಲಸ ಕಾರ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಯ ವಸ್ತುಗಳಾದವು. ಇಲ್ಲಿ ಉತ್ತರ ಕರ್ನಾಟಕದ ಕೆಲವು ಕೆರೆಗಳನ್ನು ಉದಾಹರಣೆಯಾಗಿ ತೆಗೆದುಕೊಂಡು ಅಲ್ಲಿನ ಸಮಸ್ಯೆಗಳು ಮತ್ತು ಚಳವಳಿಗಳ ಅಧ್ಯಯನವನ್ನು ನಡೆಸುವ ಪ್ರಯತ್ನವನ್ನು ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿ ಎರಡನೆಯ ಅತಿ ದೊಡ್ಡ ಕೆರೆಯಾದ ಕೆಲಗೇರಿ ಕೆರೆ ಇಂದು ವಿವಾದಗಳಿಂದ ಕೂಡಿದೆ. ಈ ಕೆರೆ ಸುಮಾರು 174 ಎಕರೆ ಪ್ರದೇಶದಲ್ಲಿದ್ದು 1911ರಲ್ಲಿಯೇ ಇದರ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿತ್ತು. ಧಾರವಾಡ ನಗರಕ್ಕೆ ನೀರು ಪೂರೈಸುತ್ತಿದ್ದ ಈ ಕೆರೆ ಅತಿಯಾಗಿ ಮಲಿನಗೊಂಡು ಕುಡಿಯಲು ಯೋಗ್ಯವಲ್ಲ ದಾಗಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಈ ಕೆರೆಯ ಮೇಲಿನ ತನ್ನೆಲ್ಲ ಹಕ್ಕು ಸ್ವಾಯತ್ತತೆಯನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸುಮಾರು 15 20 ವರ್ಷಗಳ ಹಿಂದೆಯೇ ಒಪ್ಪಿಸಿತ್ತು. ಆದರೆ ಹಣಕಾಸಿನ ಅಭಾವದಿಂದಾಗಿ ಯಾವುದೇ ಅಭಿವೃದ್ದಿ ಯೋಜನೆಯೂ ಜಾರಿಗೆ ಬರಲಿಲ್ಲ. ಪರಿಸರ ಸಂಘಟನೆಗಳ ಒತ್ತಾಯದಿಂದಾಗಿ ಮತ್ತೊಮ್ಮೆ ಮಹಾನಗರಪಾಲಿಕೆ ಮತ್ತು ಕೃಷಿ ವಿಶ್ವವಿದ್ಯಾಲಯ ಕೆರೆಯ ಕುರಿತು ಆಲೋಚನೆ ಮಾಡಲು ತೀರ್ಮಾನಿಸಿದವು. ಇದೇ ಸಮಸ್ಯೆಯನ್ನು ಎದುರಿಸುತ್ತಿರುವ ಇನ್ನೊಂದು ಕೆರೆ ಹುಬ್ಬಳ್ಳಿಯ ಉಣಕಲ್ ಕೆರೆ. ಇದು 1903ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಇಂದು ಈ ಕೆರೆ ಹುಬ್ಬಳ್ಳಿ ನಗರದ ಕಸದ ಬುಟ್ಟಿಯಾಗಿ ಪರಿವರ್ತನೆಗೊಂಡಿದೆ. ಧಾರವಾಡದ ನಾಗರಿಕ ಪರಿಸರ ವೇದಿಕೆಯು ಈ ಕೆರೆಯನ್ನು ಉಳಿಸಬೇಕೆಂದು ಚಳವಳಿ ಆರಂಭಿಸಿತು. ಈ ವೇದಿಕೆಯೊಡನೆ ಉಣಕಲ್ ಕೆರೆ ಸುಧಾರಣಾ ಸಮಿತಿಯೂ ಧ್ವನಿಗೂಡಿಸಿತು.
ಗದಗ ನಗರದಲ್ಲಿ ಸುಮಾರು 103 ಎಕರೆ ಪ್ರದೇಶವನ್ನು ಆವರಿಸಿರುವ ಭೀಷ್ಮಕೆರೆ ವಿವಾದದಲ್ಲಿ ಸಿಲುಕಿರುವ ಇನ್ನೊಂದು ಕೆರೆ. ಈ ಕೆರೆಯು ಸುಮಾರು 12ನೆಯ ಶತಮಾನದಲ್ಲಿ ನಿರ್ಮಾಣಗೊಂಡಿತ್ತು ಎನ್ನುವುದಕ್ಕೆ ಚಾರಿತ್ರಿಕ ದಾಖಲೆಗಳು ಲಭ್ಯವಿವೆ. 1992ರಲ್ಲಿ ಗದಗದ ನಗರಾಭಿವೃದ್ದಿ ಪ್ರಾಧಿಕಾರವು ಭೀಷ್ಮಕೆರೆಯ 15 ಎಕರೆ ಭೂಮಿಯನ್ನು ಬಸ್ ನಿಲ್ದಾಣಕ್ಕೆ ಹಾಗೂ ವಾಣಿಜ್ಯ ಸಂಕೀರ್ಣದ ನಿರ್ಮಾಣದ ಉದ್ದೇಶಕ್ಕೆ ಗುರುತು ಮಾಡಿಕೊಂಡಿತು. ಇದೊಂದು ಪುರಾತನ ಕೆರೆ, ಇದರ ರಕ್ಷಣೆ ಆಗಬೇಕಾಗಿದೆ ಎನ್ನುವುದು ಸ್ಥಳೀಯ ಪರಿಸರವಾದಿಗಳ ನಿಲುವು. ನಗರದ ಮಧ್ಯದಲ್ಲಿ ಕೆರೆಯೊಂದು ಹೊಲಸು ತಂಗುದಾಣವಾಗಿರು ವುದು ಅಷ್ಟೇನೂ ಸರಿ ಕಾಣುವುದಿಲ್ಲ. ಈ ಕೆರೆಯ ನಿರರ್ಥಕ ಭಾಗವನ್ನು ಮಾತ್ರ ಉದ್ದೇಶಿತ ಯೋಜನೆಗಾಗಿ ಬಳಸಲಾಗುತ್ತದೆ ಎನ್ನುವುದು ಅಧಿಕಾರಿಗಳ ವಾದ.
ಕೆರೆಗಳು ಕೇವಲ ನಗರಗಳಿಗೆ ನೀರುಣಿಸುವ ಕೇಂದ್ರಗಳಾಗಿರದೆ ಕೃಷಿಯಲ್ಲಿ ಅವುಗಳ ಮಹತ್ವ ಅಡಗಿದೆ. ಉತ್ತರ ಕರ್ನಾಟಕದಲ್ಲಿ ರೈತರು ಹೆಚ್ಚಾಗಿ ಕೆರೆ ಮತ್ತು ಜಲಾಶಯಗಳನ್ನೇ ಕೃಷಿಗೆ ಅವಲಂಬಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು 38,000 ಕೆರೆಗಳಿದ್ದು ಇನ್ನೂ ಅನೇಕ ಕೆರೆಗಳು ನಿರ್ಮಾಣಗೊಳ್ಳುತ್ತಿವೆ, ಅದೇ ರೀತಿ ಹಿಂದಿದ್ದ ಅನೇಕ ಕೆರೆಗಳು ಕಣ್ಮರೆಯಾಗುತ್ತಿವೆ. ಹೊಸದಾಗಿ ನಿರ್ಮಾಣಗೊಳ್ಳುವ ಕೆರೆಗಳು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಇದಕ್ಕೆ ಬೀದರ್ನ ಜಮಿಸ್ತಾನಪುರ ಮತ್ತು ಹೊಕರಾಣ ಕೆರೆಗಳು ಉದಾಹರಣೆಗಳಾಗಿವೆ. ಈ ಕೆರೆಗಳ ನಿರ್ಮಾಣ ಕಾರ್ಯದ ಸಂದರ್ಭದಲ್ಲಿ ಭೂಮಿ ಮುಳುಗಡೆಯಾಗುವ ಪ್ರದೇಶದ ಜನರು ತೀವ್ರ ವಿರೋಧವನ್ನು ಒಡ್ಡಿದರು. ಅವರಿಗೆ ಯೋಗ್ಯ ಪರಿಹಾರ ಮತ್ತು ಪುನರ್ವಸತಿ ದೊರೆಯಲಿಲ್ಲ. ಚಳವಳಿ ನಡೆಯುತ್ತಿದ್ದಂತೆಯೇ ನಬಾರ್ಡ್ ಬ್ಯಾಂಕ್ನ ನೆರವಿನಿಂದ 1996ರಲ್ಲಿ ಕೆರೆಗಳ ನಿರ್ಮಾಣ ಕಾರ್ಯಗಳು ನಡೆದವು.

ಉತ್ತರ ಕನ್ನಡ ಜಿಲ್ಲೆಯ ಪರಿಸರ ಚಳವಳಿಗಳು
ಕರ್ನಾಟಕದ ಪರಿಸರ ಚಳವಳಿಗಳ ಅಧ್ಯಯನ ನಡೆಸುವಾಗ ಉತ್ತರ ಕನ್ನಡ ಜಿಲ್ಲೆ ಮೊದಲ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಈ ಜಿಲ್ಲೆಯೊಂದರಲ್ಲೇ ಅನೇಕ ಯೋಜನೆಗಳು ಅಸ್ತಿತ್ವಕ್ಕೆ ಬಂದವು. ಅವುಗಳಿಗೆ ಸಂಬಂಧಿಸಿದಂತೆ ಪರಿಸರ ವೇದಿಕೆಗಳು, ಸಂಘಟನೆಗಳು, ಸ್ವಯಂ ಸೇವಾ ಸಂಸ್ಥೆಗಳೂ ಹುಟ್ಟಿಕೊಂಡವು. 1979 80ರಲ್ಲಿ ಪ್ರತಿಭಟನಾತ್ಮಕ ಜನಾ ಆಂದೋಲನ ಪ್ರಾರಂಭವಾಯಿತು. ಈ ಜನಾಂದೋಲನಗಳ ಸ್ವರೂಪದ ಬಗ್ಗೆ ಲೇಖನದ ಮೊದಲ ಭಾಗದಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಜಲ ಮತ್ತು ಅಣುವಿದ್ಯುತ್ ಯೋಜನೆ, ಜಲಾಶಯ ನಿರ್ಮಾಣ ಹಾಗೂ ಇತರ ಉದ್ದಿಮೆಗಳ ನಿರ್ಮಾಣ ಸಂದರ್ಭದಲ್ಲಾದ ಬೆಳವಣಿಗೆಗಳನ್ನು ಕೆಲವು ಉದಾಹರಣೆಗಳನ್ನು ನೀಡುವ ಮೂಲಕ ಇಲ್ಲಿ ವಿವರಿಸಲಾಗಿದೆ. ಈ ಜಿಲ್ಲೆಯಲ್ಲಿ ಈಗಾಗಲೇ ಹೆಚ್ಚು ಪ್ರಚಾರವನ್ನು ಪಡೆದು ಕೊಂಡಿರುವ ಯೋಜನೆಗಳೆಂದರೆ, ಸೂಪಾ ಜಲಾಶಯ, ದಾಂಡೇಲಿ ಜಲಾಶಯ, ಬೊಮ್ಮನಹಳ್ಳಿ ಜಲಾಶಯ, ಕದ್ರಾ ಜಲಾಶಯ, ಮಾಗೋಡು ಜಲಾಶಯ, ಅಘನಾಶಿನಿ ಜಲಾಶಯ, ಕಾಗೇರಿ ಜಲಾಶಯ, ತಟ್ಟಿಹಳ್ಳಿ ಜಲಾಶಯ, ಕೊಡಸಳ್ಳಿ ಜಲಾಶಯ, ವಾರಾಹಿ ವಿದ್ಯುತ್ ಸ್ಥಾವರ, ಶರಾವತಿ ಟೇಲ್ರೇಸ್, ಲಿಂಗನಮಕ್ಕಿ, ಕಾರವಾರ ಬಂದರು, ಸೀಬರ್ಡ್ ನೌಕಾನೆಲೆ, ಕೈಗಾ ಅಣುಸ್ಥಾವರ, ಗಣಿಗಾರಿಕೆ, ತಂತಿ ಮಾರ್ಗ, ಕೊಂಕಣ ರೈಲ್ವೆ ಇತ್ಯಾದಿ.
ಬೇಡ್ತಿ ನದಿಗೆ ಮೂರು ಹಂತಗಳಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಎಂ.ಪಿ.ಸಿ. ಮತ್ತು ರಾಜ್ಯ ಸರಕಾರ ಹಾಕಿಕೊಂಡಾಗ ಬೇಡ್ತಿ ಚಳವಳಿ ಕಾಣಿಸಿಕೊಂಡಿತು. 1972ರಲ್ಲಿ ಬೇಡ್ತಿ ನದಿಯ ವಿಚಾರವಾಗಿ ಯೋಜನಾ ವರದಿಯನ್ನು ಮಂಡಿಸಲಾಗಿತ್ತು. ಈ ಯೋಜನೆಯನ್ನು ವಿರೋಧಿಸಿ ‘ಉತ್ತರ ಕನ್ನಡ ಜಿಲ್ಲಾ ಜಲ ವಿದ್ಯುತ್ ವಿರೋಧಿ ಸಮಿತಿ’ ಎನ್ನುವ ಪರಿಸರ ಸಂಘಟನೆಯೊಂದು ಹುಟ್ಟಿಕೊಂಡಿತು. ಶ್ರೀಮತಿ ಅನಸೂಯ ಶರ್ಮ ಅವರ ನೇತೃತ್ವದಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ತಾತ್ಕಾಲಿಕ ತಡೆಯಾಜ್ಞೆ ತರುವಲ್ಲಿ ಸಮಿತಿ ಯಶಸ್ವಿಯಾಯಿತು. ಪರಿಸರವಾದಿ ಸುಂದರ್ಲಾಲ್ ಬಹುಗುಣ ಅವರು ಶಿರಸಿಗೆ ಭೇಟಿ ಕೊಟ್ಟು ಯೋಜನೆಯ ಕುರಿತು ಚಳವಳಿಗಾರರಿಗೆ ಸೂಕ್ತ ಸಲಹೆಯನ್ನು ನೀಡಿದರು. 1981ರಲ್ಲಿ ಅವಿರತ ಸತ್ಯಾಗ್ರಹ ಆರಂಭ ಗೊಂಡಿತು. ಸಮಿತಿಯಲ್ಲಿ ಆಂತರಿಕ ಬಿಕ್ಕಟ್ಟುಗಳು ಕಾಣಿಸಿಕೊಂಡು ಸಮಿತಿಯು ಇಬ್ಭಾಗ ವಾಯಿತು. ಸರಕಾರ ಚಳವಳಿಗಾರರನ್ನು ಸಂತೈಸಲು ತಾತ್ಕಾಲಿಕ ನೀತಿಗಳನ್ನು ಜಾರಿಗೊಳಿಸಿದರೂ ಯೋಜನೆಯನ್ನು ಕೈಬಿಡಲಿಲ್ಲ. 1992ರಲ್ಲಿ ಬೇಡ್ತಿ ಮತ್ತು ಅಘನಾಶಿನಿ ಯೋಜನೆಯನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡಿತು. 1999ರಲ್ಲಿ ತಟ್ಟಿಹಳ್ಳ ವರ್ಧನಾ ಯೋಜನೆಯನ್ನು ಕೈಗೆತ್ತಿಕೊಂಡಿತು. ಕರ್ನಾಟಕ ವೃಕ್ಷಲಕ್ಷ ಆಂದೋಲನವು ಈ ಯೋಜನೆಯನ್ನು ವಿರೋಧಿಸಿತು. ಸರಕಾರವು ಅಘನಾಶಿನಿ ಮತ್ತು ಶರಾವತಿ ಜಲವಿದ್ಯುತ್ ಯೋಜನೆಯನ್ನು ಜಾರಿಗೊಳಿಸಿದಾಗಲೂ ಇದೇ ರೀತಿಯ ಚಳವಳಿಗಳು ನಡೆದವು. ಆದರೆ ಯೋಜನೆಯ ಕಾಮಗಾರಿಗಳು ನಿಲ್ಲಲಿಲ್ಲ.
ಶರಾವತಿ ನದಿಗೆ ಶರಾವತಿಕೊಳ್ಳದಲ್ಲಿ ಅಣೆಕಟ್ಟು ಕಟ್ಟುವ ಯೋಜನೆಯನ್ನು ‘ಶರಾವತಿ ಟೇಲ್ರೇಸ್ ಯೋಜನೆ’ ಎಂಬ ಹೆಸರಿನಿಂದ ಕರೆಯಲಾಗಿದೆ. ಹೊನ್ನಾವರ ಪರಿಸರ ಕೂಟ ಶರಾವತಿ ಅಣೆಕಟ್ಟು ವಿರೋಧಿ ಸಮಿತಿ ಈ ಯೋಜನೆಯನ್ನು ವಿರೋಧಿಸಿತು. ಡಾ.ಕುಸುಮಾ ಸೊರಬ, ಡಾ.ಶಿವರಾಮ ಕಾರಂತ ಮೊದಲಾದವರು ಈ ಯೋಜನೆಯ ವಿರುದ್ಧ ನಿರಂತರ ಚಳವಳಿ ನಡೆಸಿದರು. ವಿಶ್ವಬ್ಯಾಂಕ್ ತಜ್ಞರು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಸ್ಥೆಯ ನಿಸರ್ಗ ವಿಜ್ಞಾನಿಗಳು ಡಾ.ಶಪಿ ಉಲ್ಲಾ ಸಮಿತಿ ಶರಾವತಿಕೊಳ್ಳದ ಅಧ್ಯಯನ ನಡೆಸಿ ಇದೊಂದು ಅಪರೂಪದ ಸಸ್ಯಪ್ರಾಣಿಗಳನ್ನು ಹೊಂದಿರುವ ಭಾಗ ಎನ್ನುವ ವರದಿಯನ್ನು ನೀಡಿದರು. ಚಳವಳಿಗಾರರು ‘ಅಪ್ಪಿಕೋ ಚಳವಳಿ’ಯನ್ನೂ ನಡೆಸಿದರು. 1987ರಲ್ಲಿ ಕಾಣಿಸಿಕೊಂಡ ಚಳವಳಿ 1999ರವರೆಗೂ ಮುಂದುವರಿಯಿತು. ಕೇವಲ ತಾತ್ಕಾಲಿಕ ತಡೆಯಾಜ್ಞೆಯಷ್ಟೇ ಚಳವಳಿಕಾರರಿಗೆ ನೆಮ್ಮದಿ ತರುವಂತದ್ದಾಗಿತ್ತು. ಯೋಜನೆಯನ್ನು ಶಾಶ್ವತವಾಗಿ ನಿಲ್ಲಿಸುವಲ್ಲಿ ಚಳವಳಿ ಯಶಸ್ವಿಯಾಗಲಿಲ್ಲ.
ಕಾಳಿ ನದಿಯ ಎರಡನೇ ಹಂತದ ಜಲವಿದ್ಯುತ್ ಯೋಜನೆಗಾಗಿ ಕೊಡಸಳ್ಳಿ ಅಣೆಕಟ್ಟನ್ನು ನಿರ್ಮಿಸಲಾಯಿತು. 1978ರಲ್ಲಿ ಅಣೆಕಟ್ಟು ಕಟ್ಟುವ ಕೆಲಸ ಆರಂಭಗೊಂಡಿತ್ತು. ಕೆ.ಪಿ.ಸಿ.ಯವರು ಪ್ರತಿ ಮಳೆಗಾಲ ಬರುತ್ತಿದ್ದಂತೆಯೇ ಅಣೆಕಟ್ಟಿನಲ್ಲಿ ನೀರು ನಿಲ್ಲಿಸುತ್ತೇವೆ ಎನ್ನುವ ನೋಟೀಸನ್ನು ಸ್ಥಳೀಯ ನಿವಾಸಿಗರಿಗೆ ಕಳುಹಿಸಿಕೊಡುತ್ತಿದ್ದರು. ಗ್ರಾಮಸ್ಥರು ಆರಂಭದಲ್ಲಿ ಒಪ್ಪದಿದ್ದರೂ ಒತ್ತಾಯ ಅತಿಯಾದಾಗ ಮನೆ, ಜಮೀನು ಖಾಲಿ ಮಾಡಲು ಒಪ್ಪಿಕೊಂಡರು. ಆದರೆ ಕೆ.ಪಿ.ಸಿ.ಯವರು ತಿಳಿಸಿದ ದಿನಾಂಕದ ಮೊದಲೇ ಅಣೆಕಟ್ಟಿನಲ್ಲಿ ನೀರು ನಿಲ್ಲಿಸಿದರು. ಸೂಪಾ ಡ್ಯಾಮ್ನಿಂದ ಬೃಹತ್ ಪ್ರಮಾಣದ ನೀರನ್ನು ಕೊಡಸಳ್ಳಿ ಅಣೆಕಟ್ಟಿಗೆ ಬಿಡಲಾಯಿತು. ಇದರಿಂದಾಗಿ ಗ್ರಾಮಸ್ಥರು ಮನೆ, ಜಮೀನು ಕಳೆದುಕೊಳ್ಳ ಬೇಕಾಯಿತು. ಪುನರ್ವಸತಿ ವ್ಯವಸ್ಥೆಯೂ ವ್ಯವಸ್ಥಿತವಾಗಿ ನಡೆಯಲಿಲ್ಲ. ಕೊಡಸಳ್ಳಿ ಜಲವಿದ್ಯುತ್ ಯೋಜನೆಯ ನಿರಾಶ್ರಿತರ ಪುನರ್ವಸತಿ ಸಮಿತಿಯೊಂದು ರಚನೆಗೊಂಡಿತು. ಪುನರ್ವಸತಿ ಕುರಿತ ಸರಕಾರದ ಏಕಪಕ್ಷೀಯ ತೀರ್ಮಾನವನ್ನು ಸಮಿತಿಯು ವಿರೋಧಿಸಿತು. ಸಮಿತಿಯ ಸದಸ್ಯರ ಪ್ರಕಾರ ಯಾವ ಪರಿಸರವಾದಿಗಳೂ ಅವರ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಒಟ್ಟಾರೆಯಾಗಿ ಕೊಡಸಳ್ಳಿ ಅಣೆಕಟ್ಟು ಯೋಜನೆ ಗೊಂದಲಮಯ ಚಿತ್ರಣ ವನ್ನು ನೀಡುತ್ತದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೆ ಒಳಗಾಗಿರುವ ಯೋಜನೆಗಳಲ್ಲಿ ಕೈಗಾ ಅಣುಸ್ಥಾವರವೂ ಒಂದು. ಸ್ಥಾವರದ ಹೆಸರಿನಲ್ಲಿ 1200 ಹೆಕ್ಟೇರ್ ಅರಣ್ಯ ಪ್ರದೇಶ ನಾಶವಾಯಿತು. ಸ್ಥಾವರದ ವಿಕಿರಣದ ದುಷ್ಪರಿಣಾಮಕ್ಕೆ ನೆರೆಯ ಗ್ರಾಮಗಳು ತುತ್ತಾಗಿವೆ ಎನ್ನುವುದು ಪರಿಸರವಾದಿಗಳ ವಾದ. ಶಿರಸಿಯ ಪ್ರೊ.ಲಿಂಗೇಶ ಶರ್ಮ, ಡಾ.ಶಿವರಾಮ ಕಾರಂತ, ಡಾ.ಕುಸುಮಾ ಸೊರಬ ಅವರು ಈ ಸ್ಥಾವರದ ವಿರುದ್ಧ ಚಳವಳಿ ಆರಂಭಿಸಿದರು. ಹೊನ್ನಾವರ ಪರಿಸರ ಕೂಟ ಇದರ ಮುಂದಾಳತ್ವ ವಹಿಸಿತು. 1987ರಲ್ಲಿ ಚಳವಳಿಗಾರರು ಅಣುಸ್ಥಾವರ ನಿರ್ಮಾಣವಾಗುವ ಸ್ಥಳಕ್ಕೇ ಹೋಗಿ ಪ್ರತಿಭಟನೆ ನಡೆಸಿದರು. ಅನಂತರ ಜಿಲ್ಲೆಯಾದ್ಯಂತ ಚಳವಳಿಗಳು ಕಾಣಿಸಿಕೊಂಡವು. ಕೈಗಾ ಅಣುಸ್ಥಾವರದ ಗುಮ್ಮಟದ ಒಂದು ಭಾಗ ಕುಸಿದ ಘಟನೆ 1994ರಲ್ಲಿ ಮತ್ತೊಮ್ಮೆ ಚಳವಳಿ ಕಾಣಿಸಿಕೊಳ್ಳಲು ಕಾರಣವಾಯಿತು. ಪರಮಾಣು ವಿರೋಧಿ ಆಂದೋಲನಗಳೂ ಕಾಣಿಸಿಕೊಂಡವು. ಡಾ.ಶಿವರಾಮ ಕಾರಂತ ಮತ್ತು ಡಾ.ಕುಸುಮಾ ಸೊರಬ ತಮ್ಮ ಜೀವಿತದ ಕೊನೆಯವರೆಗೂ ಕೈಗಾದ ವಿರುದ್ಧ ಧ್ವನಿ ಎತ್ತುತ್ತಲೇ ಇದ್ದರು. ಇಷ್ಟೆಲ್ಲಾ ವಿರೋಧಗಳ ನಡುವೆಯೇ ಕೈಗಾ ಅಣುಸ್ಥಾವರದ 1-2ನೇ ವಿದ್ಯುತ್ ಘಟಕಗಳು ಕಾರ್ಯಾರಂಭಿಸಿದವು. ಅಣುಸ್ಥಾವರದ 3-4ನೇ ವಿದ್ಯುತ್ ಘಟಕಗಳು 2007ರಲ್ಲಿ ಕಾರ್ಯಾರಂಭ ಮಾಡಲಿವೆ. 5-6ನೇ ಘಟಕಗಳ ಕುರಿತೂ ಪ್ರಸ್ತಾಪಗಳಾಗಿವೆ. ಕೈಗಾ ಅಣುಸ್ಥಾವರದಲ್ಲಿ ಉತ್ಪಾದಿಸುವ ವಿದ್ಯುತ್ ಸಾಗಾಟಕ್ಕೆ ಅರಣ್ಯವನ್ನು ನಾಶಮಾಡಲಾಗಿದೆ ಎಂಬುದಾಗಿ ಪರಿಸರ ಸಂಘಟನೆಗಳು ಮತ್ತೊಮ್ಮೆ ಹೋರಾಟ ಆರಂಭಿಸಿವೆ. ಕೈಗಾ-ನರೇಂದ್ರ ತಂತಿ ಮಾರ್ಗಕ್ಕೆ ಸಾವಿರ ಎಕರೆ ಅರಣ್ಯ ನಾಶವಾಗಿದೆ. ಕೈಗಾ-ಶಿರಸಿ-ದಾವಣಗೆರೆ ವಿದ್ಯುತ್ ಮಾರ್ಗಕ್ಕೆ 660 ಎಕರೆ ಅರಣ್ಯ ನಾಶವಾಗಿದೆ. ಪಶ್ಚಿಮ ಘಟ್ಟದ ಎಲ್ಲೆಡೆ ತಂತಿ ಮಾರ್ಗಗಳೇ ಆದರೆ ವನ್ಯಜೀವಿ, ಸಸ್ಯ ಸಂತತಿಗೆ ಉಳಿಗಾಲ ವಿಲ್ಲವೆಂಬುದು ಪರಿಸರವಾದಿಗಳ ಆತಂಕವಾಗಿದ್ದು ಈ ಕುರಿತು ಸರಕಾರ ಹಾಗೂ ಪ್ರತಿಯೊಬ್ಬ ನಾಗರಿಕನೂ ಚಿಂತಿಸಬೇಕಾಗಿದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಸೀಬರ್ಡ್ ನೌಕಾನೆಲೆ ಯೋಜನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೊಮ್ಮೆ ಚಳವಳಿ ಚುರುಕುಗೊಳ್ಳುವಂತೆ ಮಾಡಿತು. ಈಗಾಗಲೇ ಮುಂಬಯಿಯಲ್ಲಿರುವ ನೌಕಾನೆಲೆಯನ್ನು ಶೇ. 90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕಾರವಾರಕ್ಕೆ ಸ್ಥಳಾಂತರಿಸುವ ಕಾರ್ಯವೇ ಇದರ ಮೂಲ ಉದ್ದೇಶ. ಈ ಯೋಜನೆಯ ರೂವಾರಿ ಅಡ್ಮಿರಲ್ ಆಸ್ಕರ್ ಸ್ಟಾನ್ಲಿ ದಾವ್ಸನ್. 1951ರಲ್ಲಿಯೇ ಚರ್ಚೆಗೆ ಬಂದಿದ್ದ ಈ ಯೋಜನೆಗೆ ಚಾಲನೆ ಸಿಕ್ಕಿರುವುದು 1998ರಲ್ಲಿ. ಈ ಯೋಜನೆಯಿಂದಾಗಿ ಕಾಣಿಸಿಕೊಂಡ ಪ್ರಮುಖ ಸಮಸ್ಯೆ ಪುನರ್ವಸತಿಗೆ ಸಂಬಂಧಿಸಿದ್ದು. ಸಂಬಂಧಪಟ್ಟ ವರದಿಯ ಪ್ರಕಾರ ಯೋಜನೆಯಿಂದ ನಿರಾಶ್ರಿತರಾಗುವ ಒಟ್ಟು ಕುಟುಂಬಗಳು ಸುಮಾರು 4,500. ಕಾಮಗಾರಿಯನ್ನು ಆರಂಭಿಸುವ ಸಲುವಾಗಿ ಚೆಂಡಿಯಾ, ಅಲಿಗದ್ದಾ, ಅರ್ಗಾ, ಬಿಣಗಾ ಗ್ರಾಮದ ಗ್ರಾಮಸ್ಥರನ್ನು ಸ್ಥಳಾಂತರಿಸಲಾಯಿತು. ಸೀಬರ್ಡ್ ಪುನರ್ವಸತಿ ಕೇಂದ್ರಗಳಲ್ಲಿ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸಿಲ್ಲ ಎಂಬುದಾಗಿ ಸೀಬರ್ಡ್ ನಿರಾಶ್ರಿತರ ವೇದಿಕೆ ಅಸಮಾಧಾನ ವ್ಯಕ್ತಪಡಿಸಿತು. ಜೆ.ಎಚ್.ಪಟೇಲ್ರ ನೇತೃತ್ವದ ಸರಕಾರದ ಧೋರಣೆಯನ್ನು ವೇದಿಕೆಯು ಖಂಡಿಸಿತು. ಬೆಂಗಳೂರು ಚಲೋ, ವಿಧಾನಸೌಧ ಮುತ್ತಿಗೆ ಮುಂತಾದ ಕಾರ್ಯಕ್ರಮಗಳನ್ನು ವೇದಿಕೆಯು ಹಮ್ಮಿಕೊಂಡಿತು. ನಿರಾಶ್ರಿತರ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಉದ್ದೇಶಕ್ಕಾಗಿ ಬಳಸಿಕೊಂಡಿರು ವುದು ನಿರಾಶ್ರಿತರಲ್ಲಿ ಆತಂಕವನ್ನು ಮೂಡಿಸಿತು.
ಕರ್ನಾಟಕದ ಕರಾವಳಿ ತೀರದಲ್ಲಿ ಹಬ್ಬಲಾರಂಭಿಸಿದ ಸೀಗಡಿ ಕೃಷಿ ವ್ಯಾಪಕ ಪ್ರತಿಭಟನೆಗೆ ಒಳಗಾಯಿತು. 1994ರ ಮೇ 28ರಂದು ಕುಮಟಾದಲ್ಲಿ ಸುಮಾರು 300 ರೈತರು “ಸೀಗಡಿ ಕೃಷಿ ನಿಲ್ಲಿಸಿ ಪರಿಸರ ಉಳಿಸಿ” ಎಂಬ ಘೋಷಣೆಯೊಡನೆ ಈ ಯೋಜನೆಯನ್ನು ವಿರೋಧಿಸಿದರು. ಅಘನಾಶಿನಿ, ಕಾಳಿ, ಗಂಗಾವತಿ, ಶರಾವತಿ, ಚಕ್ರ, ಉದ್ಯಾವರ ಮುಂತಾದ ನದಿಗಳ ಹಿನ್ನೀರಿನ ದಡದಲ್ಲಿರುವ ಭತ್ತದ ಗದ್ದೆಗಳು ಸೀಗಡಿಯ ಕೊಳಗಳಾಗಿ ಬದಲಾಗು ತ್ತಿರುವುದೇ ಈ ಚಳವಳಿಗೆ ಮುಖ್ಯ ಕಾರಣ. ಸೀಗಡಿ ಕೃಷಿಯಿಂದಾಗಿ ಪರಿಸರ ಮಾಲಿನ್ಯ, ಸಾಗರ ಜೀವಿಗಳ ನಾಶ, ಅರಣ್ಯನಾಶ ಉಂಟಾಗುತ್ತಿದೆ ಎನ್ನುವುದು ಚಳವಳಿಗಾರರ ಅಭಿಪ್ರಾಯ. ಉಷ್ಣವಲಯದ ಅಪರೂಪದ ಜೀವಲೋಕಗಳಲ್ಲಿ ಒಂದಾಗಿರುವ ಕಾಂಡ್ಲಾ ಕಾಡುಗಳು ಸೀಗಡಿ ಕೃಷಿಯಿಂದಾಗಿ ನಾಶವಾಗುತ್ತಿವೆ ಎನ್ನುವುದು ಕಾಂಡ್ಲಾ ಕಾಡಿನ ಅಭಿವೃದ್ದಿಗಾಗಿ ದುಡಿದ ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ನ ವಿಜ್ಞಾನಿ ಡಾ.ಟಿ.ಆನಂದರಾವ್ ಅವರ ಅಭಿಪ್ರಾಯ. ಸೀಗಡಿ ಕೃಷಿಯಿಂದಾಗಿ ಕಡಲತೀರದ ಮೀನುಗಾರರಿಗೆ ಆದ ಹಾನಿ ಹಾಗೂ ಭತ್ತ, ಅಡಿಕೆ ಮತ್ತು ತೆಂಗಿನ ಕೃಷಿಗಾದ ಹಾನಿಯ ವಿರುದ್ಧ ನಡೆದ ಚಳವಳಿ ಸೀಗಡಿ ಮರಿಗಳಿಗೆ ರೋಗ ಬಂದು ಕೋಟ್ಯಂತರ ರೂಪಾಯಿ ನಷ್ಟವಾಯಿತೆನ್ನುವ ಉದ್ಯಮಪತಿಗಳ ಹಾಹಾಕಾರದ ಎದುರು ಸದ್ದಿಲ್ಲದಾಯಿತು.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾಕ್ಕೆ ಸಮೀಪದ ತದಡಿಯಲ್ಲಿ ಕೇಂದ್ರ ಸರಕಾರ ಸ್ಥಾಪಿಸಲು ಉದ್ದೇಶಿಸಿರುವ 4,000 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣವಿದ್ಯುತ್ ಸ್ಥಾವರಕ್ಕೆ ಹಿಂದಿನಿಂದಲೂ ಜನವಿರೋಧಗಳಿದ್ದರೂ, ಅದು ಸಂಘಟಿತ ರೂಪ ಪಡೆದು ಕೊಂಡಿದ್ದು 2006ರಲ್ಲಿ. ಸ್ವರ್ಣವಲ್ಲಿ ಮತ್ತು ರಾಮಚಂದ್ರಾಪುರದ ಸ್ವಾಮಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪರಿಸರ ಸಂಘಟನೆಗಳೂ ಇವರಿಗೆ ಬೆಂಬಲ ವ್ಯಕ್ತಪಡಿಸಿವೆ. ಕೇಂದ್ರದ ಇಂಧನ ಸಚಿವ ಸುಶೀಲ್ ಕುಮಾರ್ ಶಿಂಧೆಯವರು ಈ ಯೋಜನೆಗೆ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ “ತದಡಿ ಬೇಡವಾದರೆ ಬಿಡಿ; ಬೇರೆ ರಾಜ್ಯಗಳು ಈ ಯೋಜನೆ ಪಡೆಯಲು ಉತ್ಸುಕವಾಗಿವೆ” ಎಂದಾಗ ಉತ್ತರ ಕನ್ನಡ ಜಿಲ್ಲೆಯ ಪರಿಸರವಾದಿಗಳು “ಆ ಪ್ರಸ್ತಾಪ ಹೂತು ಹಾಕ್ಬಿಡಿ” ಎನ್ನುವ ಉತ್ತರ ನೀಡಿದರು. ಪರಿಸರವಾದಿಗಳ ಪ್ರಕಾರ ಶಿಂಧೆ ಹೇಳಿರುವಂತೆ
4,000 ಮೆಗಾವ್ಯಾಟ್ ಸಾಮರ್ಥ್ಯದ ತದಡಿ ವಿದ್ಯುತ್ ಸ್ಥಾವರ ಕಾರ್ಯಾರಂಭ ಮಾಡಿದರೆ ರಾಜ್ಯದ ವಿದ್ಯುತ್ ಕೊರತೆಯೇನೋ ನೀಗಬಹುದು. ಆದರೆ ಜಗತ್ತಿನಲ್ಲೆಲ್ಲ ತಿರಸ್ಕೃತವಾಗಿರುವ ಕಲ್ಲಿದ್ದಲ್ಲನ್ನು ಇಂಧನವಾಗಿ ಬಳಸುವ ಥರ್ಮಲ್ ಟೆಕ್ನಾಲಜಿ ಯಾಕೆ ಬೇಕು? ಕಲ್ಲಿದ್ದಲು ಬಳಕೆಯಿಂದ ದಿನಂಪ್ರತಿ ತ್ಯಾಜ್ಯ ವಸ್ತುವಾಗಿ ಹೊರಬೀಳುವ ಸಾವಿರಾರು ಟನ್ ಹಾರುಬೂದಿ ವಿಲೇವಾರಿಗೆ ಈವರೆಗೆ ಯಾವುದೇ ಸಮರ್ಪಕ ಉತ್ತರ ಸಿಕ್ಕಿಲ್ಲ. ಈ ಹಾರುಬೂದಿ ಸಮುದ್ರ, ನದಿ, ಅರಣ್ಯ ಮತ್ತು ಗಾಳಿಯಲ್ಲಿ ಸೇರಿಕೊಂಡು ಉಂಟಾಗುವ ಪರಿಸರ ಮಾಲಿನ್ಯ ನಿವಾರಣೆಗೆ ಸರಕಾರದ ಬಳಿ ಉತ್ತರವಿಲ್ಲ. ಪುನರ್ ನವೀಕರಿಸಿಕೊಳ್ಳಬಹುದಾದ ಅನೇಕ ವಿದ್ಯುತ್ ಉತ್ಪಾದನಾ ಆಯ್ಕೆಗಳು ಇದ್ದರೂ ಸರಕಾರ ಈ ಕುರಿತು ಯೋಚಿಸಿಲ್ಲ. ಸೌರಶಕ್ತಿ, ಪವನಶಕ್ತಿ, ಸಮುದ್ರ ಅಲೆಯಾಧಾರಿತ ತಂತ್ರಜ್ಞಾನವನ್ನು ಬಳಸಿ ವಿದ್ಯುತ್ ಉತ್ಪಾದಿಸುವ ಕಡೆಗೆ ಸರಕಾರ ಆಲೋಚಿಸಬೇಕಾಗಿದೆ.
ಸರಿ ಸುಮಾರು ಮೂರು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿರುವ ತದಡಿ ಉಷ್ಣ ವಿದ್ಯುತ್ ಸ್ಥಾವರದಿಂದ ಬಿಡುಗಡೆಯಾಗುವ ಬಿಸಿ ನೀರಿನಿಂದ ಜಲಚರಗಳ ನಾಶ, ಜೀವ ವೈವಿಧ್ಯದ ಮೇಲಿನ ಪರಿಣಾಮ, ಸುಣ್ಣ, ಉಪ್ಪು, ತಯಾರಿಕಾ ಘಟಕಗಳಂಥ ಉದ್ದಿಮೆಗಳ ಅಳಿವು, ಕೃಷಿಯ ಮೇಲೆ ಬೀಳುವ ಹೊಡೆತ ಮುಂತಾದ ಅನಾಹುತಗಳನ್ನು ತಡೆಯುವ ದೃಷ್ಟಿಯಿಂದ ಈ ಯೋಜನೆಗೆ ಅನುಮತಿ ನೀಡಬಾರದೆಂದು ಸ್ಥಳೀಯ ಜನರು ಹಾಗೂ ಪರಿಸರ ಸಂಘಟನೆಗಳು ಸರಕಾರಕ್ಕೆ ಒಕ್ಕೂರಲಿನ ಮನವಿ ಸಲ್ಲಿಸಿವೆ. ತದಡಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣವಿದ್ಯುತ್ ಸ್ಥಾಪನೆಯಿಂದ ದಕ್ಷಿಣ ಭಾರತದ ಪರಿಸರದ ಹೃದಯ ಎನಿಸಿರುವ ಪಶ್ಚಿಮ ಘಟ್ಟಗಳ ಮೇಲೆ ಭಾರೀ ಪರಿಣಾಮ ಉಂಟಾಗಲಿದೆ ಎಂದು ಪರಿಸರವಾದಿಗಳು ಎಚ್ಚರಿಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪರಿಸರ ಚಳವಳಿಗಳು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ(ಉಡುಪಿ ಜಿಲ್ಲೆಯನ್ನು ಸೇರಿಸಿಕೊಂಡಂತೆ) ಹಲವಾರು ಪರಿಸರ ಚಳವಳಿಗಳು ನಡೆದಿವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ, ಎಂ.ಆರ್. ಪಿ.ಎಲ್., ಕೊಜೆಂಟ್ರಿಕ್ಸ್, ನಾಗಾರ್ಜುನ, ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರ, ಸರಪಾಡಿ ಅಣೆಕಟ್ಟು, ಹಡಗು ಒಡೆಯುವ ಉದ್ದಿಮೆ, ಕೊಳವೆ ಮಾರ್ಗ ನಿರ್ಮಾಣ, ಕಡಲ ಕೊರೆತ, ಕೊಂಕಣ ರೈಲ್ವೆ ಮುಂತಾದವುಗಳ ವಿರುದ್ಧ ನಡೆದ ಚಳವಳಿಗಳು. ಈ ಉದ್ದೇಶಕ್ಕಾಗಿಯೇ ಹಲವಾರು ಪರಿಸರ ಸಂಘಟನೆಗಳು ಹುಟ್ಟಿಕೊಂಡವು. ಅವುಗಳೆಂದರೆ, ದಕ್ಷಿಣ ಕನ್ನಡ ಪರಿಸರಾಸಕ್ತ ಒಕ್ಕೂಟ, ದಕ್ಷಿಣ ಕನ್ನಡ ನಿಸರ್ಗ ಬಳಗ, ದಕ್ಷಿಣ ಕನ್ನಡ ಕೃಷಿಕರ ವೇದಿಕೆ, ದಕ್ಷಿಣ ಕನ್ನಡ ಜಿಲ್ಲಾ ನಾಗರಿಕ ಸೇವಾ ಟ್ರಸ್ಟ್ ಇತ್ಯಾದಿ. ರಾಜಕೀಯ ಪಕ್ಷಗಳು ನೇರವಾಗಿ ಚಳವಳಿಗಳಲ್ಲಿ ಭಾಗವಹಿಸಿರುವುದು ಚಳವಳಿಗಳು ದಿಕ್ಕು ತಪ್ಪುವುದಕ್ಕೆ ಕಾರಣವಾಯಿತು. ಅದೇ ರೀತಿ ಭೂಮಾಲೀಕರ ಹಿಡಿತದಲ್ಲಿ ಚಳವಳಿಗಳು ಸಿಲುಕಿಕೊಂಡಿರುವುದೂ ಅವುಗಳ ದ್ವಂದ್ವಕ್ಕೆ ಕಾರಣವಾಯಿತು. ಆದರೆ ಮೇಲ್ನೋಟಕ್ಕೆ ಇವು ಯಾವುವೂ ಕಂಡುಬರುವುದಿಲ್ಲ.
ಎಂ.ಆರ್.ಪಿ.ಎಲ್.ನ ವಿರುದ್ಧ ಚಳವಳಿ ನಡೆಸಿದವರು ಬೆಸ್ತರು. ಆದರೆ ವಿವಿಧ ರಾಜಕೀಯ ಪಕ್ಷಗಳ ಭಾಗವಹಿಸುವಿಕೆಯಿಂದಾಗಿ ನ್ಯಾಯಯುತವಾಗಿ ನಡೆಯುತ್ತಿದ್ದ ಚಳವಳಿ ದಾರಿ ತಪ್ಪಿತು. ಯಾರಿಗೆ ಅನ್ಯಾಯವಾಗಿದೆ ಮತ್ತು ಯಾರಿಗೆ ಯಾವ ರೀತಿಯ ಪರಿಹಾರ ಸಿಗಬೇಕು ಎನ್ನುವ ಕುರಿತು ರಾಜಕಾರಣಿಗಳು ಮತ್ತು ಪರಿಸರವಾದಿಗಳೆಂದು ಕರೆಯಿಸಿ ಕೊಳ್ಳುವವರು ಚಿಂತಿಸಲಿಲ್ಲ. ಬದಲಾಗಿ ಪರಿಸರನಾಶ ಎಂಬ ದೊಡ್ಡ ಬ್ಯಾನರ್ನೊಂದಿಗೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನು ಸೇರಿಸಿಕೊಂಡು ಬೃಹತ್ ಚಳವಳಿ ನಡೆಸುವಂತೆ ಪ್ರಚೋದಿಸಿದರು. ಇದರಿಂದಾಗಿ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡು ಯಾರಿಗೆ ಪರಿಹಾರ ಸಿಗಬೇಕಾಗಿತ್ತೋ ಆ ಜನವರ್ಗವೇ ನಿರ್ಲಕ್ಷ್ಯಕ್ಕೆ ಒಳಗಾಗಬೇಕಾಯಿತು. ಎಂ.ಆರ್.ಪಿ.ಎಲ್. ಕಲ್ಮಶ ನೀರನ್ನು ಸಮುದ್ರಕ್ಕೆ ಬಿಡುವ ಮಾಹಿತಿ ಸಿಕ್ಕಿದಾಗ ಮೀನು ಗಾರರು ಒಂದಾಗಿ ವಿರೋಧಿಸಿದರು. ಅಧಿಕಾರಿಗಳು ಹಾಕಿಸಿದ್ದ ಕೊಳವೆಗಳನ್ನು ಕಿತ್ತು ಎಸೆಯಲಾಯಿತು. ಇದು ಸಹಜ ಪ್ರತಿಭಟನೆ. ಕಾರ್ಖಾನೆಯ ಮುಖಂಡರು ಕಲ್ಮಶ ನೀರನ್ನು ಶುದ್ದೀಕರಿಸುವ ಪರ್ಯಾಯ ವ್ಯವಸ್ಥೆ ಮಾಡುತ್ತೇವೆಂಬ ಭರವಸೆಯನ್ನು ನೀಡಿದರು. ಅದೇ ರೀತಿ ಪುನರ್ವಸತಿ ಮತ್ತು ಉದ್ಯೋಗದ ಕುರಿತಾಗಿಯೂ ಭರವಸೆ ನೀಡಿದರು. ಆದರೆ ಇವು ಯಾವುವೂ ವ್ಯವಸ್ಥಿತವಾಗಿ ನಡೆಯಲಿಲ್ಲ. ನಿರಾಶ್ರಿತರ ಸಮಸ್ಯೆಗಳು ರಾಜಕೀಯ ಪಕ್ಷಗಳಿಗೆ ರಾಜಕೀಯ ನಡೆಸಲು ವೇದಿಕೆಗಳಾದವು.
ಅಮೆರಿಕಾ ಮೂಲದ ಕೊಜೆಂಟ್ರಿಕ್ಸ್ ಸಂಸ್ಥೆ ಮಂಗಳೂರಿನ ನಂದಿಕೂರಿನಲ್ಲಿ ಮಂಗಳೂರು ಪವರ್ ಕಾರ್ಪೋರೇಷನ್ ಹೆಸರಿನಲ್ಲಿ 1300 ಎಕರೆ ಪ್ರದೇಶದಲ್ಲಿ 250 ಮೆಗಾವ್ಯಾಟ್ ಸಾಮರ್ಥ್ಯದ ನಾಲ್ಕು ಉಷ್ಣ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮುಂದಿಟ್ಟಿತು. ದಕ್ಷಿಣ ಕನ್ನಡ ಜಿಲ್ಲಾ ಪರಿಸರಾಸಕ್ತ ಒಕ್ಕೂಟ ಮತ್ತು ನಂದಿಕೂರು ಜನಜಾಗೃತಿ ಸಮಿತಿ ಈ ಯೋಜನೆಯ ವಿರುದ್ಧ ಕೆಲಸ ಮಾಡುತ್ತಲೇ ಬಂದವು. ಇವು ಯೋಜನೆಯಿಂದಾಗಬಹುದಾದ ಪುನರ್ವಸತಿ ಸಮಸ್ಯೆ ೊಸುತ್ತಲಿನ ಜನರಿಗೆ ಸಾಗರ ಜೀವಿಗಳಿಗೆ ಮತ್ತು ಸಸ್ಯಲೋಕದ ಮೇಲೆ ಬೀರಬಹುದಾದ ಪರಿಣಾಮ, ಉಷ್ಣವಿದ್ಯುತ್ ಸ್ಥಾವರದಲ್ಲಿ ಉತ್ಪತ್ತಿಯಾಗುವ ಹಾರುವ ಬೂದಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಿದವು. 1992ರಿಂದ ವಿರೋಧವನ್ನು ಎದುರಿಸುತ್ತಿರುವ ಈ ಸಂಸ್ಥೆ 1999ರಲ್ಲಿ ಯೋಜನೆಯನ್ನು ಕೈಬಿಡುವ ನಿರ್ಧಾರವನ್ನು ಪ್ರಕಟಿಸಿತು. ಇದು ಸರಕಾರ ಮತ್ತು ಉದ್ಯಮಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದರೆ ಪರಿಸರವಾದಿಗಳಿಗೆ ಸಂತೋಷವನ್ನುಂಟುಮಾಡಿತು. ನಾಗರಿಕ ಸೇವಾ ಟ್ರಸ್ಟ್, ದಕ್ಷಿಣ ಕನ್ನಡ ಮೀನುಗಾರರ ಸಂರಕ್ಷಣಾ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪರಿಸರಾಸಕ್ತ ಒಕ್ಕೂಟ, ನಂದಿಕೂರು ಜನ ಜಾಗೃತಿ ಸಮಿತಿ ಮುಂತಾದ ಪರಿಸರ ಸಂಘಟನೆಗಳು ತಮಗಾದ ಸಂತೋಷವನ್ನು ಪರಸ್ಪರ ಹಂಚಿಕೊಂಡವು. ಸರಕಾರ ಮತ್ತು ಕೊಜೆಂಟ್ರಿಕ್ಸ್ ಸಂಸ್ಥೆಯೊಡನೆ ನಡೆದ ಮಾತುಕತೆಗಳು ವಿಫಲವಾದವು. ಸಂಸತ್ತಿನ ಉಭಯ ಸದನಗಳಲ್ಲೂ ಈ ಕುರಿತು ಗದ್ದಲ ಏರ್ಪಟ್ಟಿತು. ಕೊಜೆಂಟ್ರಿಕ್ಸ್ ಯೋಜನೆ ಯಂತೆಯೇ ವಿರೋಧವನ್ನು ಎದುರಿಸಿರುವ ಇನ್ನೊಂದು ಯೋಜನೆ ನಾಗಾರ್ಜುನ ಉಷ್ಣ ವಿದ್ಯುತ್ ಸ್ಥಾವರ ಯೋಜನೆ. ಸ್ಥಳೀಯರು ಈ ಯೋಜನೆಯ ಭೂ ಸರ್ವೇಕ್ಷಣಾ ಕಾರ್ಯಕ್ಕೆ ತಡೆ ಉಂಟುಮಾಡಿದ್ದಲ್ಲದೆ ಜಮೀನು ತೆರವುಗೊಳಿಸಬೇಕೆನ್ನುವ ನೋಟೀಸ್ಗಳನ್ನು ಸ್ವೀಕರಿಸಲಿಲ್ಲ.
ಉಡುಪಿಯ ನಂದಿಕೂರಿನಲ್ಲಿ ಸ್ಥಾಪನೆಗೊಳ್ಳಲಿರುವ ಈ ಯೋಜನೆಯನ್ನು ಸ್ಥಳೀಯ ಜನತೆ ವಿರೋಧಿಸುತ್ತಲೇ ಬಂದಿದೆ. ಉಷ್ಣ ವಿದ್ಯುತ್ ಸ್ಥಾವರದಂತೆ ಈ ಯೋಜನೆಯೂ ಕಲ್ಲಿದ್ದಲು ಆಧಾರಿತ ಥರ್ಮಲ್ ವಿದ್ಯುತ್ ಸ್ಥಾವರವಾಗಿದೆ. ಇದರಿಂದ ಹೊರಬೀಳಲಿರುವ ಹಾರುವ ಬೂದಿಯಿಂದಾಗುವ ಪರಿಸರ ಮಾಲಿನ್ಯದ ಕುರಿತು ಸ್ಥಳೀಯರು ಎಚ್ಚೆತ್ತು ಕೊಂಡಿದ್ದಾರೆ. ಅಧಿಕ ಉಷ್ಣಾಂಶವನ್ನು ಹೊರಸೂಸುವ ಈ ಯೋಜನೆಯಿಂದ ಗಣನೀಯ ಪ್ರಮಾಣದಲ್ಲಿ ಗಂಧಕದ ಡೈಆಕ್ಸೈಡ್ ಬಿಡುಗಡೆಯಾಗಿ ವಾತಾವರಣದ ಆಮ್ಲೀಯತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ. ಸುತ್ತಲಿನ ಕೆರೆ, ಹಳ್ಳ, ಸರೋವರ, ನದಿಗಳೂ ಸೇರಿದಂತೆ ಇಡೀ ಪ್ರದೇಶದ ಅಂತರ್ಜಲ ಆಮ್ಲೀಕರಣಗೊಳ್ಳುತ್ತದೆ. ಈ ಯೋಜನೆಯನ್ನು ಆರಂಭ ದಿಂದಲೇ ವಿರೋಧಿಸುತ್ತಾ ಬಂದಿರುವ ನಾಗಾರ್ಜುನ ಸ್ಥಾವರ ವಿರೋಧಿ ಸಮಿತಿ ಈ ಯೋಜನೆಯನ್ನು ಕೈಬಿಡುವಂತೆ ಸರಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಕರ್ನಾಟಕದ ಅಭಿವೃದ್ದಿಯ ದೃಷ್ಟಿಯಿಂದ ಇಂಥ ಯೋಜನೆಗಳು ಅನಿವಾರ್ಯ ಎನ್ನುವುದು ಸರಕಾರದ ಧೋರಣೆ. 2006ರಲ್ಲಿ ಈ ಯೋಜನೆಯ ವಿರುದ್ಧ ಹೋರಾಟಗಳು ತೀವ್ರಗೊಂಡಾಗ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಯೋಜನೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಿ ಜನರ ಹಾಗೂ ಜನಪ್ರತಿನಿಧಿಗಳ ಅನುಮಾನವನ್ನು ಹೋಗಲಾಡಿಸಿ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು. ಇದರಿಂದ ಸಮಾಧಾನಗೊಳ್ಳದ ನಾಗಾರ್ಜುನ ವಿರೋಧಿ ಸಮಿತಿ ತನ್ನ ಹೋರಾಟವನ್ನು ಮುಂದುವರಿಸಿದೆ.
ಅಮೆರಿಕ ಮೂಲದ ಸ್ಮಿತ್ಕೋ ಜನರೇಷನ್ ಸಂಸ್ಥೆಯು ಬೆಂಗ್ರೆಯಲ್ಲಿ ಬಾರ್ಜ್ ಮೌಂಟೆಡ್ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಹೊರಟಾಗ ಬೆಂಗ್ರೆಯ ಇಡೀ ಮೀನುಗಾರರ ಸಮೂಹ ಒಂದಾಗಿ ವಿರೋಧಿಸಿತು. ಮೊಗವೀರ ಮಹಾಜನ ಸಭೆಯು ಈ ಯೋಜನೆಯ ವಿರುದ್ಧ ಮೀನುಗಾರರನ್ನು ಸಂಘಟಿಸಿತು. ಮಂಗಳೂರಿನ ತಣ್ಣೀರು ಬಾವಿ ಎಂಬಲ್ಲಿ 1993ರಲ್ಲಿ ಹಡಗು ಒಡೆಯುವ ಉದ್ದಿಮೆ ಕಾಣಿಸಿಕೊಂಡಾಗ ದಕ್ಷಿಣ ಕನ್ನಡ ನಾಡದೋಣಿ ಮೀನುಗಾರರ ಒಕ್ಕೂಟವು ಬಂದರು ಅಧಿಕಾರಿಗಳ ನೀತಿಯನ್ನು ವಿರೋಧಿಸಿ ಬೃಹತ್ ಮೆರವಣಿಗೆ ನಡೆಸಿತು. ಚಳವಳಿಯ ತೀವ್ರತೆಯನ್ನು ಅರ್ಥೈಸಿಕೊಂಡ ಅಧಿಕಾರಿಗಳು ಈ ಉದ್ದಿಮೆಗೆ ತಡೆಯಾಜ್ಞೆ ನೀಡಿದರು. ಮೀನುಗಾರರ ಚಳವಳಿ ಸುಮಾರು ಮೂರು ತಿಂಗಳಿನಷ್ಟು ಕಾಲ ಮುಂದುವರಿಯಿತು.
ನೇತ್ರಾವತಿ ನದಿಗೆ ಬಂಟ್ವಾಳ ತಾಲೂಕಿನ ಸರಪಾಡಿ ಎಂಬಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಕರ್ನಾಟಕ ವಿದ್ಯುತ್ ನಿಗಮವು ಸಿದ್ಧಪಡಿಸಿದಾಗ ವ್ಯಾಪಕ ಚಳವಳಿ ಕಾಣಿಸಿಕೊಂಡಿತು. ಈ ಯೋಜನೆಗೆ 1960ರಲ್ಲಿಯೇ ಸಮೀಕ್ಷೆ ನಡೆಸಲಾಗಿತ್ತು. ಆದರೆ ಪರಿಸರ ಚಳವಳಿಗಳ ಕಾರಣದಿಂದಾಗಿ ಯೋಜನೆ ಸ್ಥಗಿತಗೊಳ್ಳಬೇಕಾಯಿತು. ಸರಪಾಡಿ ಅಣೆಕಟ್ಟು ಯೋಜನೆ ವಿರೋಧಿ ಸಮಿತಿ ಚಳವಳಿಯನ್ನು ಸಂಘಟಿಸಿತು. ಮಂಗಳೂರು ತೈಲಾಗಾರದಿಂದ ಉತ್ಪನ್ನಗಳನ್ನು ಸಾಗಿಸಲು ಕೊಳವೆ ಮಾರ್ಗಗಳನ್ನು ನಿರ್ಮಿಸುವ ಯೋಜನೆಯನ್ನು ಎಚ್.ಪಿ.ಸಿ.ಎಲ್. ಹಾಕಿಕೊಂಡಾಗ ಪರಿಸರ ಚಳವಳಿಗಳು ಕಾಣಿಸಿ ಕೊಂಡವು. ಇದಕ್ಕಿದ್ದ ಕಾರಣಗಳು ಎರಡು. ರೈತರ ಸಾವಿರಾರು ಎಕರೆ ತೋಟ-ಜಮೀನುಗಳು ನಾಶವಾಗುವ ಭಯ ಒಂದಾದರೆ, ಪೈಪ್ ಸೋರಿಕೆಯಿಂದ ಪರಿಸರ ಹಾಳಾಗುವ ಭಯ ಇನ್ನೊಂದು. ಜನರಿಗಿರುವ ಈ ಭಯವನ್ನೇ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವು.
ಕೊಂಕಣ ರೈಲು ಯೋಜನೆ ಭಾರತದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು. ಇದು ಯಶಸ್ವಿಯಾಗಿ ಪೂರ್ಣಗೊಂಡರೂ ಇದಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪರಿಹಾರ ಕಾಣದೆ ಬಾಕಿ ಉಳಿಯಬೇಕಾಗಿ ಬಂತು. ಕೊಂಕಣ ರೈಲ್ವೆಯ ನಿರ್ಮಾಣದ ಸಂದರ್ಭದಲ್ಲಿ ಪರಿಸರ ರಕ್ಷಣೆ ಅಷ್ಟೇನೂ ಮಹತ್ವದ ವಿಷಯವಾಗಿರಲಿಲ್ಲ. ಇದರಿಂದಾಗಿ ಪಶ್ಚಿಮ ಕರಾವಳಿಯ ಸಂಪದ್ಭರಿತ ಅರಣ್ಯ ಹಾಗೂ ವೈವಿಧ್ಯಮಯ ಸಸ್ಯ, ಪ್ರಾಣಿಗಳಿಗೆ ಈ ಯೋಜನೆಯಿಂದಾಗಿ ಅಪಾರ ಹಾನಿ ಉಂಟಾಯಿತು. ಅದೇ ರೀತಿ ಈ ಯೋಜನೆಯಿಂದಾಗಿ ಸುಮಾರು 44,000 ಕುಟುಂಬಗಳು ತಮ್ಮ ಮನೆಮಠ ಕಳೆದುಕೊಂಡರು. ನಿರ್ವಸಿತರಾದ ಇವರೆಲ್ಲರಿಗೂ ಮೊದಲೇ ಮಾಡಿಕೊಂಡ ಒಪ್ಪಂದದ ಪ್ರಕಾರ ಸಿಗಬೇಕಾದ ಹಣ ಮತ್ತು ಉದ್ಯೋಗ ಸಿಗಲಿಲ್ಲ. ಪರಿಸರ ಸಂಘಟನೆಗಳ ಪ್ರಕಾರ ಕೊಂಕಣ ರೈಲು ತನ್ನ ಹಳಿಗಳನ್ನು ಭದ್ರಪಡಿಸಿಕೊಂಡು ಅಲ್ಲಿನ ಜನರ ಬದುಕಿನ ಹಳಿಗಳನ್ನು ಅಸ್ತವ್ಯಸ್ತಗೊಳಿಸಿತು. ಯೋಜನೆಯ ಕಾಮಗಾರಿಯನ್ನು ದಾಖಲೆಯ ರೀತಿಯಲ್ಲಿ ಪೂರ್ಣಗೊಳಿಸಿದ ಅಧಿಕಾರಿಗಳು ಪರಿಸರ ಸಂರಕ್ಷಣೆ ಮತ್ತು ಪುನರ್ವಸತಿಗೆ ಅಷ್ಟೇ ಪ್ರಾಮುಖ್ಯತೆಯನ್ನು ನೀಡಿದ್ದರೆ ಯೋಜನೆ ಪರಿಸರದ ದೃಷ್ಟಿಯಿಂದ ಚರ್ಚೆಯ ವಸ್ತುವಾಗುತ್ತಿರಲಿಲ್ಲ.
ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನಡೆದ ಈ ಎಲ್ಲಾ ಚಳವಳಿಗಳ ಅಧ್ಯಯನ ನಡೆಸುವಾಗ ಶ್ರೀಮಂತವರ್ಗದ ಸಾಂಸ್ಕೃತಿಕ ರಾಜಕೀಯದ ಸ್ಪಷ್ಟ ಚಿತ್ರಣ ಸಿಗುತ್ತದೆ. ಪರಿಸರ ಚಳವಳಿಗಳು ಶ್ರೀಮಂತವರ್ಗದ ಪ್ರಭಾವಿ ನೆಲೆಯೊಳಗೇ ಕಾರ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ. ಇಂಥ ವರ್ಗಕ್ಕೆ ಪರಿಸರ ಚಳವಳಿ ಫ್ಯಾಷನ್ ಆಗಿದೆ. ಇವರು ನಡೆಸುವ ಚಳವಳಿ ಸ್ವಾರ್ಥಪೂರಿತವಾಗಿದ್ದು, ಸಮಾಜದಿಂದ ಬೇರ್ಪಟ್ಟ ರೀತಿಯಲ್ಲಿ ಇರುತ್ತವೆ. ಇದರಿಂದಾಗಿ ವಿವಿಧ ಯೋಜನೆಗಳಿಂದ ನಿಜವಾಗಿಯೂ ತೊಂದರೆಗೊಳಗಾದ ಜನವರ್ಗ ನಡೆಸುವ ಚಳವಳಿ ವಿವಿಧ ಸ್ವರೂಪದ ಒತ್ತಡಗಳಿಗೆ ಮಣಿಯಬೇಕಾಯಿತು. ಇಂಥ ಸಂದರ್ಭಗಳಲ್ಲಿ ಚಳವಳಿಗಳು ಸ್ವಂತಂತ್ರವಾಗಿ ಇಲ್ಲವೇ ನಿರಂತರವಾಗಿ ಮುಂದುವರಿಯಲು ಸಾಧ್ಯವಿಲ್ಲ. ಅದೇ ರೀತಿ ಪರಿಸರ ಮತ್ತು ಅಭಿವೃದ್ದಿಯ ಕಲ್ಪನೆಯೂ ಸೀಮಿತಾರ್ಥದಿಂದ ಕೂಡಿರುತ್ತದೆ. ಇವು ಹೆಚ್ಚೆಂದರೆ ಪರಿಸರ ಬಿಕ್ಕಟ್ಟಿಗೆ ಕಾರಣವಾಗಬಹುದು. ಸೈದ್ಧಾಂತಿಕ ನಿಲುವುಗಳಿಲ್ಲದೆ ನಡೆಯುತ್ತಿರುವ ಪರಿಸರ ಚಳವಳಿಗಳು ಸಾಮಾಜಿಕ ವಾಸ್ತವ ಸ್ಥಿತಿಯನ್ನು ವಿರೂಪಗೊಳಿಸುವ ಸಾಧ್ಯತೆಯೇ ಹೆಚ್ಚು. ಜಾತಿ/ವರ್ಗಭೇದಗಳ ಗಡಿಯನ್ನು ದಾಟಿ ಒಂದು ಸೈದ್ಧಾಂತಿಕ ಚೌಕಟ್ಟನ್ನು ನಿರ್ಮಿಸಿಕೊಂಡರೆ ಮಾತ್ರ ಪರಿಸರ ಚಳವಳಿಗಳು ನೀರಿಕ್ಷಿಸಿದ ಯಶಸ್ಸನ್ನು ಗಳಿಸಲು ಸಾಧ್ಯ. ಚಿಂತನೆ, ಸಂಘಟನೆ ಮತ್ತು ಹೋರಾಟ ಇವು ಮೂರು ಒಂದಕ್ಕೊಂದು ಪೂರಕವಾಗಿದ್ದು, ಯಾವುದೇ ಚಳವಳಿಯನ್ನೂ ವ್ಯವಸ್ಥಿತವಾಗಿ ನಡೆಯುವಂತೆ ಮಾಡುತ್ತದೆ. ಪರಿಸರ ಚಳವಳಿಗಳು ತಮ್ಮ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾದರೆ ಈ ರೀತಿಯ ಹೋರಾಟವನ್ನು ಸಂಘಟಿಸುವುದು ಅನಿವಾರ್ಯ.

ಪರಾಮರ್ಶನ ಗ್ರಂಥಗಳು
1. ರಾಜಶೇಖರ್ ಜಿ., 1986. ಸಮಾಜವಾದ ಮತ್ತು ಪರಿಸರ (ವಿಲಿಯಂ ರೇಮಂಡ್ಸ್ ಅವರ ಸೋಷಿಯಲಿಸಂ ಆಯಂಡ್ ಎನ್ವಿರಾನ್ಮೆಂಟ್ನ (ಅನುವಾದ), ಉಡುಪಿ: ಸ್ನೇಹಿತರ ಬಳಗ ಪ್ರಕಾಶನ.
2. ರಾಮಚಂದ್ರ ಗುಹಾ, 1992. ‘‘ಪ್ರಿ ಹಿಸ್ಟರಿ ಆಫ್ ಇಂಡಿಯನ್ ಎನ್ವೈರ್ನಾಮೆಂಟ್ ಮೆಂಟಾಲಿಸಮ್: ಇಂಟಲೆಕ್ಚ್ವಲ್ ಟ್ರೆಡಿಷನ್ಸ್’’, ಇಕಾನಮಿಕ್ ಎಂಡ್ ಪೊಲಿಟಿಕಲ್ ವೀಕ್ಲಿ. 4 11, ಜನವರಿ
3. ರಾಮಚಂದ್ರ ಗುಹಾ(ಸಂ.), 1994. ಸೋಷಿಯಲ್ ಇಕಾಲಜಿ, ನವದೆಹಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
4. ಯಲ್ಲಪ್ಪ ರೆಡ್ಡಿ ಅ.ನ., ಸತೀಶ್ ಚಪ್ಪರಿಕೆ, 1997. ಮತ್ತೊಂದು ಮೌನ ಕಣಿವೆ, ಸಾಗರ: ಅಕ್ಷರ ಪ್ರಕಾಶನ, ಹೆಗ್ಗೋಡು.
5. ಚಂದ್ರಪೂಜಾರಿ ಎಂ., 1998. ಪರಿಸರ ಮತ್ತು ಅಭಿವೃದ್ದಿ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
6. ಮೋಹನ್ಕೃಷ್ಣ ರೈ ಕೆ., ಪರಿಸರ ಚಳವಳಿಗಳು, 1999. ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
7. ನಾಗೇಶ ಹೆಗಡೆ, 1993. ಪಶ್ಚಿಮ ಘಟ್ಟಗಳ ಅಳಿವು ಉಳಿವು, ಪಶ್ಚಿಮ ಘಟ್ಟಗಳು ನೆನ್ನೆ-ಇಂದು, ಬೆಂಗಳೂರು: ಮಣ್ಣು ರಕ್ಷಣಾ ಕೂಟ.
8. ವಿವಿಧ ಪರಿಸರ ಸಂಘಟನೆಗಳು ಹಾಗೂ ಪರಿಸರ ಹೋರಾಟಗಾರರ ಕಾರ್ಯ ಚಟುವಟಿಕೆಗಳ ವರದಿಗಳು ಹಾಗೂ ದಾಖಲೆಗಳನ್ನು ಬಳಸಿಕೊಳ್ಳಲಾಗಿದೆ.