[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2007ರಲ್ಲಿ ಡಾ.ಹಿ.ಚಿ.ಬೋರಲಿಂಗಯ್ಯ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘‘ಅಭಿವೃದ್ದಿ ಪಥ’ ಎನ್ನುವ ಕೃತಿಯಿಂದ ಡಾ.ಟಿ.ಆರ್.ಚಂದ್ರಶೇಖರ ಅವರ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಒಪ್ಪಿಗೆ ನೀಡಿದ ಸಂಪಾದಕರಿಗೆ ಹಾಗೂ ಲೇಖಕರಿಗೆ ಕೃತಜ್ಞತೆಗಳು -ಸಂ.]

ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶಿಷ್ಟವಾದ ಸ್ಥಾನವಿದೆ. ಈ ವಿಶಿಷ್ಟತೆಯು ಕೇವಲ ಭೌಗೋಳಿಕ, ಭಾಷೆ, ಸಾಹಿತ್ಯ, ಹವಾಮಾನ ಮುಂತಾದ ವಿಷಯಕ್ಕೆ ಮಾತ್ರ ಸಂಬಂಧಿಸಿದ ಸಂಗತಿಯಲ್ಲ. ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅದು ಅನೇಕ ವಿಶಿಷ್ಟತೆಗಳನ್ನು ಮೆರೆದಿದೆ. ಇದನ್ನು ಕರ್ನಾಟಕದ ಆರ್ಥಿಕತೆ, ಸಮಾಜ, ರಾಜಕಾರಣಗಳನ್ನು ಕುರಿತಂತೆ ಅಧ್ಯಯನ ನಡೆಸಿದ ಸಮಾಜವಿಜ್ಞಾನಿಗಳು ಗುರುತಿಸಿದ್ದಾರೆ (ಜೇಮ್ಸ್ ಮೇನರ್ 1989, ಶ್ರೀನಿವಾಸ್ ಎಂ.ಎನ್. 1984, ವಿನೋದ್ ವ್ಯಾಸುಲು, 1997). ಕರ್ನಾಟಕವು ಒಂದು ಆಧುನಿಕ ರಾಜಕೀಯ ವ್ಯವಸ್ಥೆಯಾಗಿ ರೂಪುಗೊಂಡು 2006ಕ್ಕೆ 50 ವರ್ಷಗಳಾಗುತ್ತವೆ. ಕರ್ನಾಟಕವು 2006ನೆಯ ಸಾಲನ್ನು ‘ಸುವರ್ಣ ಕರ್ನಾಟಕ ವರ್ಷ’ವೆಂದು ಘೋಷಿಸಿದೆ. ಒಂದು ದೇಶ/ಪ್ರದೇಶದ ಅಭಿವೃದ್ದಿ ದೃಷ್ಟಿಯಿಂದ 50 ವರ್ಷವು ದೀರ್ಘಾವಧಿಯೂ ಅಲ್ಲ ಅಥವಾ ಅಲ್ಪಾವಧಿಯೂ ಅಲ್ಲ. ಅದೊಂದು ಸಂಧಿಕಾಲ. ಅದೊಂದು ಆತ್ಮಾವಲೋಕನ ನಡೆಸುವ ಸಂದರ್ಭ. ಪ್ರಸ್ತುತ ಪ್ರಬಂಧದಲ್ಲಿ ಕರ್ನಾಟಕದ ಅಭಿವೃದ್ದಿಗೆ ಸಂಬಂಧಿಸಿದಂತೆ ಅದರ ವಿಶಿಷ್ಟತೆಗಳನ್ನು ಹಾಗೂ ಕಳೆದ 50 ವರ್ಷಗಳ ಅದರ ಅಭಿವೃದ್ದಿ ಯೋಜನೆಗಳ ಅನುಭವಗಳನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ.

ಎಂ.ಎನ್.ಶ್ರೀನಿವಾಸ್ರ ಪ್ರಮೇಯ

ಖ್ಯಾತ ಸಮಾಜಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ ಅವರು ಕರ್ನಾಟಕದ ಆರ್ಥಿಕತೆ, ರಾಜಕಾರಣ ಹಾಗೂ ಸಮಾಜ ಕುರಿತಂತೆ ಒಂದು ಪ್ರಸಿದ್ಧ ಪ್ರಮೇಯವನ್ನು ರೂಪಿಸಿದ್ದಾರೆ. ಅವರ ಪ್ರಕಾರ (1984)
ದಕ್ಷಿಣ ಭಾರತದ ಕೇರಳ ಮತ್ತು ತಮಿಳುನಾಡುಗಳು ಅನುಭವಿಸುತ್ತಿರುವ ‘ಉಗ್ರ’ ಸ್ವರೂಪದ ಅಂದರೆ ಮೂಲಭೂತವೆನ್ನಬಹುದಾದ ಬದಲಾವಣೆಗಳಿಗೆ ಭಿನ್ನವಾದ ರೀತಿಯಲ್ಲಿ ಒಂದು ರೀತಿಯಲ್ಲಿ ಮೇಲ್ಪದರದ ‘ರಾಜಿ’ ಸ್ವರೂಪದ ಬದಲಾವಣೆ ಗಳನ್ನು ಕರ್ನಾಟಕವು ಅನುಭವಿಸುತ್ತಿದೆ
ಎಂಬುದು ಅವರ ಪ್ರಮೇಯದ ಸ್ಥೂಲ ರೂಪವಾಗಿದೆ. ಎಡಪಂಥೀಯ ಸಾಮಾಜಿಕ ಚಿಂತನೆಯು, ಚಳವಳಿಯು, ಅಭಿವೃದ್ದಿಯು ಕರ್ನಾಟಕದಲ್ಲಿ ಸಂಭವಿಸಲೇ ಇಲ್ಲ ಎಂಬ ಮಾತನ್ನು ಶ್ರೀನಿವಾಸ್ ತಮ್ಮ ಪ್ರಬಂಧದಲ್ಲಿ ಹೇಳುತ್ತಾರೆ.ೊಕರ್ನಾಟಕವನ್ನು ಕುರಿತಂತೆ ಅನೇಕ ದಶಕಗಳಿಂದ ಅಧ್ಯಯನ ನಡೆಸಿಕೊಂಡು ಬಂದಿರುವ ಜೇಮ್ಸ್ ಮೇನರ್ ಇದನ್ನು ‘ಕೊಹೆಸಿವ್ ಸಮಾಜ’ವೆಂದು ಕರೆದಿದ್ದಾರೆ(1989). ವಿನೋದ್ ವ್ಯಾಸುಲು ಅದನ್ನು ‘ಮಧ್ಯಮಗತಿ ಆರ್ಥಿಕತೆ’ಯೆಂದು ಕರೆದಿದ್ದಾರೆ (1997). ಅಂದರೆ ಕರ್ನಾಟಕವು ‘ಬದಲಾವಣೆ’ಗಳನ್ನೇ ಕಾಣದ ‘ಜಡ’, ‘ಯಥಾಸ್ಥಿತಿ’ಯ ಸಮಾಜವೇನಲ್ಲ. ಆದರೆ ಅದಕ್ಕೆ ‘ಉಗ್ರ’ ರೂಪದ ಬದಲಾವಣೆಗಳನ್ನು ಹುಟ್ಟು ಹಾಕುವುದು ಸಾಧ್ಯವಾಗಿಲ್ಲ ವೆಂಬುದು ನಿಜ. ಒಂದು ರೀತಿಯಲ್ಲಿ ಕರ್ನಾಟಕದ ಸಮಾಜ-ಆರ್ಥಿಕತೆ-ರಾಜಕಾರಣವು ‘ಯಥಾಸ್ಥಿತಿ’ ಮತ್ತು ‘ಗತಿಸ್ಥಿತಿ’ಗಳ ನಡುವೆ ತೂಗುಯ್ಯಲೆಯಾಡುತ್ತಾ ನಡೆದಿದೆಯೆಂದು ಹೇಳಬಹುದು. ಇಲ್ಲಿ ಬದಲಾವಣೆಗಳಾಗುತ್ತಿವೆ, ಅಭಿವೃದ್ದಿ ನಡೆಯುತ್ತಿದೆ. ಆದರೆ ಅವು ಮಧ್ಯಮಗತಿಯ ಬದಲಾವಣೆ-ಅಭಿವೃದ್ದಿಗಳಾಗಿವೆ.
ಇದಕ್ಕೆ ನಿದರ್ಶನವಾಗಿ ಕರ್ನಾಟಕದ ಕೃಷಿ ವ್ಯವಸ್ಥೆಯನ್ನು ನೋಡಬಹುದು. ಕರ್ನಾಟಕವು ಮೂಲತಃ ಒಣಭೂಮಿಯನ್ನು ವ್ಯಾಪಕವಾಗಿ ಹೊಂದಿರುವ ರಾಜ್ಯ. ಈ ರಾಜ್ಯದ ನಿವ್ವಳ ಬಿತ್ತನೆ ಪ್ರದೇಶವು ಸರಿಸುಮಾರು 100 ಲಕ್ಷ ಹೆಕ್ಟೇರುಗಳ ಆಸುಪಾಸಿನಲ್ಲಿದೆ. ಕಳೆದ 50 ವರ್ಷಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ತುಂಬಾ ಬದಲಾವಣೆಯಾಗಿಲ್ಲ. ಈ ಬಿತ್ತನೆ ಪ್ರದೇಶದಲ್ಲಿ ನೀರಾವರಿ ಪ್ರದೇಶವು 1960ರಲ್ಲಿ 8 ಲಕ್ಷ ಹೆಕ್ಟೇರ್ರಷ್ಟಿದ್ದುದು 2005-06ರಲ್ಲಿ 32 ಲಕ್ಷ ಹೆಕ್ಟೇರಿಗೇರಿದೆ. ಈ ರಾಜ್ಯದ ನೀರಾವರಿಯ ಅಂತಿಮ ಸಾಮರ್ಥ್ಯ 52 ಲಕ್ಷ ಹೆಕ್ಟೇರುಗಳೆಂದು ಅಂದಾಜು ಮಾಡಲಾಗಿದೆ. ಇಡೀ ದೇಶದಲ್ಲಿ ಒಣಭೂಮಿ ಬೇಸಾಯವನ್ನು ಅತಿ ಹೆಚ್ಚಾಗಿ ನಡೆಸಿರುವ ಮೂರನೆಯ ರಾಜ್ಯ ಕರ್ನಾಟಕ(ವಿವರಗಳಿಗೆ ನೋಡಿ: ಮಿಹಿರ್ ಶಹಾ ಮತ್ತು ಇತರರು 1998). ನೈಸರ್ಗಿಕ ಸಂಪನ್ಮೂಲಗಳ ದೃಷ್ಟಿಯಿಂದ ಕರ್ನಾಟಕವು ಅನುಕೂಲಕರ ಸ್ಥಿತಿಯಲ್ಲೇನೂ ಇಲ್ಲ. ಇಷ್ಟಾದರೂ ಅದು ಆಹಾರ ಉತ್ಪನ್ನ ದಲ್ಲಿ ಸ್ವಯಂಪೂರ್ಣತೆಯನ್ನು ಸಾಧಿಸಿಕೊಂಡಿದೆ. ಬರಗಾಲವನ್ನು ಅದು ಸ್ವಸಾಮರ್ಥ್ಯದ ಮೇಲೆ ನಿರ್ವಹಿಸುವ ಸ್ಥಿತಿಯಲ್ಲಿದೆ.
ಕರ್ನಾಟಕದ ಅಭಿವೃದ್ದಿ ಸಾಧನೆಯು ಕಣ್ಣುಕೋರೈಸುವಂತಹದಲ್ಲ. ಆದರೆ ಅದು ಅಲ್ಲಗಳೆಯವಂತಹದ್ದೂ ಅಲ್ಲ. ಕರ್ನಾಟಕದ ಅಭಿವೃದ್ದಿಯನ್ನು ಪಂಚವಾರ್ಷಿಕ ಯೋಜನೆ ಗಳಿಗೆ ಸಂಬಂಧಿಸಿದಂತೆ ಅದರ ಅನುಭವಗಳನ್ನು ಕುರಿತಂತೆ ಚರ್ಚಿಸುವಾಗ ನಾವು ಮೇಲ್ಕಂಡ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಕೋಷ್ಟಕ-1ರಲ್ಲಿ ಅದರ ಮಧ್ಯಮಗತಿ ಅಭಿವೃದ್ದಿ ಸ್ಥಿತಿಯನ್ನು ಭಾರತದ ಒಕ್ಕೂಟ ವ್ಯವಸ್ಥೆಯ ಚೌಕಟ್ಟಿನಲ್ಲಿ ತೋರಿಸಲಾಗಿದೆ.
ಈ ಕೋಷ್ಟಕದಲ್ಲಿ ಮುಂದುವರಿದ ನಾಲ್ಕು ರಾಜ್ಯಗಳು ಹಾಗೂ ಹಿಂದುಳಿದ ನಾಲ್ಕು ರಾಜ್ಯಗಳ ಕೆಲವು ಆಯ್ದಸೂಚಿಗಳನ್ನು ಕರ್ನಾಟಕಕ್ಕೆ ಮುಖಾಮುಖಿ ಮಾಡಿ ತೋರಿಸಲಾಗಿದೆ. ಇಲ್ಲಿ ನೀಡಿರುವ ಒಂಬತ್ತು ಸೂಚಿಗಳಲ್ಲೂ ಕರ್ನಾಟಕದ ಸ್ಥಾನವು ಹಿಂದುಳಿದ ರಾಜ್ಯಗಳಿಗಿಂತ ಉತ್ತಮವಾಗಿದೆ ಹಾಗೂ ಮುಂದುವರಿದ ರಾಜ್ಯಗಳಿಗಿಂತ ಕೆಳಮಟ್ಟದಲ್ಲಿದೆ. ಇಲ್ಲಿ ನೀಡಿರುವ ವಿವರಗಳೆಲ್ಲವೂ ಮಾನವ ಅಭಿವೃದ್ದಿ ಸೂಚಿಗೆ ಸಂಬಂಧಿಸಿವೆ. ಇಲ್ಲಿ ವರಮಾನ, ಶಿಶು ಮರಣ ಪ್ರಮಾಣ, ಸಾಕ್ಷರತೆ ಹೀಗೆ ಎಲ್ಲ ವಿವರಗಳೂ ಇವೆ. ಕರ್ನಾಟಕದ ಮಧ್ಯಮಗತಿ ಆರ್ಥಿಕತೆಯ ಸ್ಪಷ್ಟ ಚಿತ್ರ ಇದರಿಂದ ದೊರೆಯುತ್ತದೆ.

ಸುವರ್ಣ ವರ್ಷ
ಕರ್ನಾಟಕವು ತನ್ನ ಏಕೀಕರಣದ 50ನೆಯ ವಾರ್ಷಿಕೋತ್ಸವವನ್ನು 2006ರಲ್ಲಿ ಆಚರಿಸಿದೆ. ಕಳೆದ 50 ವರ್ಷಗಳಲ್ಲಿ (1956-2006) ರಾಜ್ಯದ ಜೀವನದಿಗಳಾದ ಕೃಷ್ಣ-ಕಾವೇರಿಗಳಲ್ಲಿ ಅಗಾಧವಾಗಿ ನೀರು ಹರಿದು ಹೋಗಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅನೇಕ ಮಹತ್ವದ ಬದಲಾವಣೆಗಳಾಗಿವೆ. ಕರ್ನಾಟಕದ ಅಭಿವೃದ್ದಿ ಸಾಧನೆಯು ಪಂಜಾಬ್-ಹರಿಯಾಣಗಳಂತೆ ಅದ್ಭುತವಾಗಿಲ್ಲ ಅಥವಾ ಅದು ಬಿಹಾರ-ಮಧ್ಯಪ್ರದೇಶಗಳಂತೆ ಕಳಾಹೀನವಾಗಿಲ್ಲ. ಕೇರಳ-ತಮಿಳುನಾಡುಗಳಂತೆ ಸಾಮಾಜಿಕವಾಗಿಯೂ ಅದರ ಸಾಧನೆಯು ಗಣನೀಯವಾಗಿಲ್ಲ.
ಆದರೆ ಕರ್ನಾಟಕದ ಅಭಿವೃದ್ದಿಯು ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಅದರದೇ ಆದ ಒಂದು ‘ಅಭಿವೃದ್ದಿ ಮಾದರಿ’ಯನ್ನು ರೂಪಿಸಿಕೊಂಡಿದೆ. ಅಭಿವೃದ್ದಿಯ ಸಾಮಾಜಿಕ ವ್ಯಾಪ್ತಿಯು ಸಾವಕಾಶವಾಗಿ ವಿಸ್ತೃತಗೊಳ್ಳುತ್ತಾ ನಡೆದಿದೆ. ಇಂದು ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಜೈವಿಕ ತಂತ್ರಜ್ಞಾನ(ಬಿಟಿ)ಗಳಿಗೆ ಸಂಬಂಧಿಸಿದಂತೆ ವಿಶ್ವಕ್ಕೆ ಮಾದರಿಯಾದ ಸ್ಥಾನವನ್ನು ಅದು ಪಡೆದುಕೊಂಡಿದೆ.
ಅದರ ಅಭಿವೃದ್ದಿಯ ಗತಿಯು ಮಧ್ಯಮ ಮಟ್ಟದಿಂದ ಮೇಲೇರಿಲ್ಲ. ಆದರೆ ಅದರಲ್ಲಿ ಯಾವುದೇ ಕುಸಿತ ಸಂಭವಿಸಿಲ್ಲವೆಂಬುದೇ ಸಮಾಧಾನಕರವಾದ ಸಂಗತಿಯಾಗಿದೆ. ಅಲ್ಲಿ ಸಮೃದ್ದಿಯಿಲ್ಲ. ಅಲ್ಲಿ ದುಸ್ಥಿತಿಯೂ ಇಲ್ಲ. ಆದರೆ ಅದು ಸುಸ್ಥಿತಿಯಲ್ಲಿದೆ. ಅಭಿವೃದ್ದಿಯ ಯಾವುದೇ ಸೂಚ್ಯಂಕ ತೆಗೆದುಕೊಂಡರೂ ಅಂದರೆ ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ, ಸಾರಿಗೆ, ಜನಸಂಖ್ಯೆ, ವ್ಯಾಪಾರ, ತಂತ್ರಜ್ಞಾನ – ಹೀಗೆ ಯಾವುದನ್ನು ತೆಗೆದುಕೊಂಡರೂ ಅದರ ಸ್ಥಾನವು ಮಧ್ಯಮಸ್ಥಿತಿಯದ್ದಾಗಿದೆ. ಕಳೆದ 50 ವರ್ಷಗಳಲ್ಲಿ ಅದು ತನ್ನ ಮಧ್ಯಮಗತಿ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ.
ಈ ಹಿನ್ನೆಲೆಯಲ್ಲಿ ಕರ್ನಾಟಕವು ಕಳೆದ 50 ವರ್ಷಗಳಲ್ಲಿ ಅಭಿವೃದ್ದಿಗೆ ಸಂಬಂಧಿಸಿದಂತೆ ಸಾಧಿಸಿಕೊಂಡ ಸಿದ್ಧಸಾಧನೆಗಳನ್ನು ಪಂಚವಾರ್ಷಿಕ ಯೋಜನೆಗಳ ಮೂಲಕ ಚರ್ಚಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಪ್ರಧಾನವಾಗಿ ಇದೊಂದು ಎಂಪೆರಿಕಲ್ ಅಧ್ಯಯನ. ಆದರೂ ಸೈದ್ಧಾಂತಿಕವಾದ ಸಂಗತಿಗಳ ಹಿನ್ನೆಲೆಯಲ್ಲಿ ಅದರ ಸಾಧನೆಗಳನ್ನು ಗುರುತಿಸಲಾಗಿದೆ. ಒಂದು ರೀತಿಯ ಆತ್ಮಾವಲೋಕನ ವಿಧಾನದಲ್ಲಿ ಪ್ರಸ್ತುತ ಅಧ್ಯಯನವನ್ನು ಕಟ್ಟಲಾಗಿದೆ. ಸರ್ಕಾರದ ಪ್ರಕಟಣೆಗಳು, ಯೋಜನಾ ಇಲಾಖೆಯ ವರದಿಗಳನ್ನು ಇಲ್ಲಿ ಮೂಲ ಆಕರಗಳನ್ನಾಗಿ ಬಳಸಲಾಗಿದೆ.

ಅಧ್ಯಯನದ ಉದ್ದೇಶಗಳು
1. ಕಳೆದ 50 ವರ್ಷಗಳ ಕರ್ನಾಟಕದ ಅಭಿವೃದ್ದಿ ಯೋಜನೆಗಳಿಗೆ ಸಂಬಂಧಿಸಿದ ಅನುಭವಗಳನ್ನು ಚರ್ಚಿಸುವುದು.
2. ಅಭಿವೃದ್ದಿಯ ದೃಷ್ಟಿಯಿಂದ ಪಂಚವಾರ್ಷಿಕ ಯೋಜನೆಗಳ ವಿವರಣೆಯನ್ನು ನೀಡುವುದು.
3. ಪ್ರಾದೇಶಿಕ ಅಸಮಾನತೆ, ಮಾನವ ಅಭಿವೃದ್ದಿ ಮತ್ತು ಲಿಂಗ ಸಂಬಂಧಗಳನ್ನು ಕುರಿತಂತೆ ಯೋಜನೆಗಳ ಪರಿಣಾಮವನ್ನು ಪರಾಮರ್ಶೆಗೆ ಒಳಪಡಿಸುವುದು.
4. ಕರ್ನಾಟಕದ ಅಭಿವೃದ್ದಿಯ ಮುಂದಿನ ದಿಶೆ-ಗತಿಯನ್ನು ಕುರಿತಂತೆ ಕೆಲವು ಸಂಗತಿಗಳನ್ನು ಸೂಚಿಸುವುದು.

ಅಧ್ಯಯನದ ವಿನ್ಯಾಸ
ಈ ಅಧ್ಯಯನದಲ್ಲಿ ಪ್ರಸ್ತಾವನೆ ಹಾಗೂ ಸಂಗ್ರಹ ಭಾಗಗಳನ್ನು ಬಿಟ್ಟು ಒಟ್ಟು ನಾಲ್ಕು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಕರ್ನಾಟಕದ ಜನಸಂಖ್ಯೆಗೆ ಸಂಬಂಧಿಸಿದ ಹಾಗೂ ಕೃಷಿಗೆ ಸಂಬಂಧಿಸಿದ ಕೆಲವು ವಿವರಗಳನ್ನು ಚರ್ಚಿಸಲಾಗಿದೆ. ಎರಡನೆಯ ಭಾಗದಲ್ಲಿ ವರಮಾನದ ವರ್ಧನೆ – ಬೆಳವಣಿಗೆಯನ್ನು ಸ್ಥೂಲವಾಗಿ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ಪಂಚವಾರ್ಷಿಕ ಯೋಜನೆಗಳ ವಿವರಗಳನ್ನು ನೀಡಲಾಗಿದೆ. ನಾಲ್ಕನೆಯ ಭಾಗದಲ್ಲಿ ಕರ್ನಾಟಕದ ಅಭಿವೃದ್ದಿಗೆ ಸಂಬಂಧಿಸಿದ ಮೂರು ಮುಖ್ಯ ವೈಫಲ್ಯದ ಸಂಗತಿಗಳನ್ನು ಚರ್ಚಿಸಲಾಗಿದೆ. (ಪ್ರಾದೇಶಿಕ ಅಸಮಾನತೆ, ಮಾನವ ಅಭಿವೃದ್ದಿ ಮತ್ತು ಲಿಂಗ ಸಂಬಂಧಗಳು) ಕೊನೆಯ ಸಂಗ್ರಹದಲ್ಲಿ ಅಧ್ಯಯನದ ತಥ್ಯಗಳನ್ನು ಸಾರಾಂಶ ರೂಪದಲ್ಲಿ ನೀಡಲಾಗಿದೆ ಹಾಗೂ ಅಭಿವೃದ್ದಿಯ ಮುಂದಿನ ದಿಶೆ-ಗತಿಯನ್ನು ಕುರಿತು ಕೆಲವು ಸೂಚನೆಗಳನ್ನು ನೀಡಲಾಗಿದೆ.

ಜನಸಂಖ್ಯೆ ಮತ್ತು ಕೃಷಿ ಅವಲಂಬನೆ
ಕೋಷ್ಟಕ-2ರಲ್ಲಿ ಕರ್ನಾಟಕ ಜನಸಂಖ್ಯೆಯ ಬೆಳವಣಿಗೆಯ ಗತಿಶೀಲ ಸ್ವರೂಪವನ್ನು ತೋರಿಸಲಾಗಿದೆ. ಅತ್ಯಂತ ಅಭಿನಂದನಾರ್ಹ ಸಂಗತಿಯೆಂದರೆ ಕರ್ನಾಟಕದ ಜನಸಂಖ್ಯೆ ಒಟ್ಟು ಪರಿಮಾಣದಲ್ಲಿ ಏರಿಕೆಯಾಗುತ್ತಾ ನಡೆದಿದ್ದರೂ ಅದರ ಏರಿಕೆಯ ಗತಿ 1951-61ರ ದಶಕದಲ್ಲಿ ಶೇ.21.55ರಷ್ಟಿದ್ದುದು 1971-81ರಲ್ಲಿ ಶೇ.26.8 ಕ್ಕೆ ಏರಿಕೆ ಯಾಯಿತು. ಆದರೆ 1981ರ ನಂತರ ಅದು ಕಡಿಮೆಯಾಗತೊಡಗಿತು. ಜನಸಂಖ್ಯೆಯು 1981-91ರ ದಶಕದಲ್ಲಿ ಶೇ. 21.1ರ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದು 1971-81ರ ದಶಕದಲ್ಲಿ ಏರಿಕೆಗಿಂತ ಶೇ. 5.7 ಅಂಶಗಳಷ್ಟು ಕಡಿಮೆಯಾಗಿದೆ. ಕಳೆದ 1991-2001 ದಶಕದಲ್ಲಿ ಅದರ ದಶಕವಾರು ಬೆಳವಣಿಗೆ ಪ್ರಮಾಣ ಶೇ.17.25. ಲಿಂಗ ಅನುಪಾತವು 1991ರಲ್ಲಿ 960 ಇದ್ದುದು 2001ರಲ್ಲಿ ಅದು 964 ಕ್ಕೇರಿದೆ. ಜನನ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣದಲ್ಲಿ ತೀವ್ರ ಇಳಿಕೆ ಕಂಡುಬಂದಿದೆ. ಜನಸಂಖ್ಯೆಯ ಗುಣವನ್ನು ಸೂಚಿಸುವ ಸಾಕ್ಷರತಾ ಪ್ರಮಾಣವು 1961ರಲ್ಲಿ ಶೇ.29.80ರಷ್ಟಿದ್ದುದು 2001ರಲ್ಲಿ ಶೇ.67.04ಕ್ಕೇರಿದೆ. ಮಹಿಳೆಯರ ಸಾಕ್ಷರತೆಯು ಶೇ. 16.70ರಿಂದ ಶೇ. 57.45ಕ್ಕೇರಿದೆ. ಒಟ್ಟಾರೆ ಜನಸಂಖ್ಯಾ ಪರಿವರ್ತನಾ ಸಿದ್ಧಾಂತದಲ್ಲಿ ಗುರುತಿಸಲಾಗುವ ಕೆಳಮಟ್ಟದ ಜನನ ಪ್ರಮಾಣ ಮತ್ತು ಕೆಳಮಟ್ಟದ ಮರಣ ಪ್ರಮಾಣಗಳನ್ನು ಪ್ರತಿನಿಧಿಸುವ ಮೂರನೆಯ ಹಂತವನ್ನು ಕರ್ನಾಟಕವು ಪ್ರವೇಶಿಸಿದೆ.

ಮೂಲ : ನ್ಯಾಷನಲ್ ಪ್ಯಾಮಿಲಿ ಹೆಲ್ತ್ ಸರ್ವೆ, ಕರ್ನಾಟಕ : 1992-93, ಪಿ.ಆರ್.ಸಿ. ಬೆಂಗಳೂರು ಮತ್ತು ಐಐಪಿವಿಎಸ್, ಮುಂಬೈ, 1995, ಪು.8, ಕರ್ನಾಟಕ ಸರ್ಕಾರ, 2004, ಆರ್ಥಿಕ ಸಮೀಕ್ಷೆ: 2003-04, ಪು.ಎ8ರಿಂದ ಎ10.

ಕರ್ನಾಟಕದ ಸಂದರ್ಭದಲ್ಲಿ ಜನಸಂಖ್ಯೆಯ ಬೆಳವಣಿಗೆಯನ್ನು ಒಂದು ಸಮಸ್ಯೆಯನ್ನಾಗಿ ಪರಿಗಣಿಸುವ ಸ್ಥಿತಿ ಇಂದು ಇಲ್ಲ. ಇಂದು ಸೈದ್ಧಾಂತಿಕವಾಗಿ ಜನಸಂಖ್ಯೆಗೆ ಸಂಬಂಧಿಸಿದಂತೆ ಲಿಂಗಸಂಬಂಧಿ ನೆಲೆಯ ಚರ್ಚೆ ಮುಂಚೂಣಿಗೆ ಬಂದಿದೆ. ಈ ಮುಂದೆ ಭಾಗ ನಾಲ್ಕರಲ್ಲಿ ವಿವರವಾಗಿ ಇದನ್ನು ಚರ್ಚಿಸಲಾಗಿದೆ

ಕೃಷಿಯಲ್ಲಿ ಬೆಳವಣಿಗೆ
ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ಕೃಷಿ ಮೇಲೆ ತೊಡಗಿಸಿದ ಹಣಕಾಸು ವಿವರವನ್ನು ಕೋಷ್ಟಕ-3ರಲ್ಲಿ ನೀಡಿದೆ.

ಮೂಲ : ದೇಶಪಾಂಡೆ ಆರ್.ಎಸ್. ಮತ್ತು ರಾಜು ಕೆ.ವಿ., 2001, ‘ಅಗ್ರಿಕಲ್ಚರಲ್ ಡೆವಲಪ್ಮೆಂಟ್ ಆಂಡ್ ಪಾಲಿಸಿ ಇನ್ ಕರ್ನಾಟಕ’; ಪು.110-111. ಇಲ್ಲಿ ಅರುಣ್ ಪಿ.ಬಾಲಿ (ಸಂ) ದಿ ಫ್ಯಾಶನಿಂಗ್ ದಿ ನ್ಯೂ ಎಕಾನಾಮಿಕ್ ಆರ್ಡರ್ : ಕರ್ನಾಟಕ ಇನ್ ಟ್ರಾನ್ಸಿಷನ್, ರಾವತ್ ಪಬ್ಲಿಕೇಶನ್ಸ್, ನವದೆಹಲಿ

ಅತ್ಯಂತ ದುರದೃಷ್ಟದ ಸಂಗತಿಯೆಂದರೆ ಯೋಜನಾ ಅವಧಿಯಲ್ಲಿ ಕೃಷಿಗೆ ಮೀಸಲಿಟ್ಟ ಹಣದ ಪ್ರಮಾಣವು ಕಡಿಮೆಯಾಗುತ್ತಾ ಬಂದಿದೆ. ಮೊದಲನೆಯ ಯೋಜನೆಯಲ್ಲಿ ಅದು ಶೇ.52.25ರಷ್ಟಿತ್ತು. ಒಂಬತ್ತನೆಯ ಯೋಜನೆಯಲ್ಲಿ ಅದು ಶೇ.31.13ಕ್ಕೆ ಕುಸಿದಿದೆ. ಏಳು ಮತ್ತು ಎಂಟನೆಯ ಯೋಜನೆಗಳಲ್ಲಿ ಅದು ಶೇ.25ಕ್ಕಿಂತ ಕಡಿಮೆಯಿತ್ತು. ಈ ಕಾರಣಕ್ಕೆ 80ರ ದಶಕದಲ್ಲಿ ಕರ್ನಾಟಕದಲ್ಲಿ ಆಹಾರೋತ್ಪಾದನೆಯು ಒಂದು ಮಟ್ಟದಲ್ಲಿ ಸ್ಥಿರಗೊಂಡಿತ್ತು.
ಕೋಷ್ಟಕ-4ರಲ್ಲಿ ತೋರಿಸಿರುವಂತೆ 1980-81ರಿಂದ 1990-91ರ ದಶಕದಲ್ಲಿ ಆಹಾರೋತ್ಪಾದನೆಯು 62 ಲಕ್ಷ ಟನ್ಗಳಲ್ಲಿ ಸ್ಥಿರವಾಗಿ ಬಿಟ್ಟಿದೆ. ಆಹಾರೋತ್ಪಾದನೆಯ 2000-01ರಲ್ಲಿ ಚೇತರಿಸಿಕೊಂಡಿದ್ದು, 109 ಲಕ್ಷ ಟನ್ ತಲುಪಿದ್ದುದು 2004-05ರಲ್ಲಿ ಅದು 104.95 ಲಕ್ಷ ಟನ್ಗೆ ಇಳಿದಿದೆ.

ಮೂಲ : ಕರ್ನಾಟಕ ಸರ್ಕಾರ, ಆರ್ಥಿಕ ಸಮೀಕ್ಷೆ : 2005-06, 2006 ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ಪು.ಎ2

ಕರ್ನಾಟಕದಲ್ಲಿ ಆಹಾರೋತ್ಪಾದನೆಯು ತೀವ್ರ ಏರುಪೇರಿಗೆ ಒಳಗಾಗಿದೆ. ಇದಕ್ಕೆ ಪ್ರಬಲವಾದ ಕಾರಣವೆಂದರೆ ಕೃಷಿಯ ಮೇಲೆ ತೊಡಗಿಸುತ್ತಿರುವ ಬಂಡವಾಳ ತುಂಬಾ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಕೃಷಿಯು ಒಂದು ಬಗೆಯಲ್ಲಿ ಸಂಕಷ್ಟವನ್ನು-ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿಯೇ ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ.
ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಯನ್ನು ಕರ್ನಾಟಕದಲ್ಲಿ ಒಂದು ಸಬಲವಾದ ಹಾಗೂ ದೃಢವಾದ ನೆಲೆಯಲ್ಲಿ ಅಭಿವೃದ್ದಿಪಡಿಸುವುದು ಸಾಧ್ಯವಾಗಿಲ್ಲ. ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೆಂದರೆ ಒಣಭೂಮಿ ಬೇಸಾಯ. ಈ ಬಗ್ಗೆ ಭಾಗ-4ರಲ್ಲಿ ಚರ್ಚೆ ಮಾಡಲಾಗಿದೆ.
ಕರ್ನಾಟಕ ರಾಜ್ಯದ ವರಮಾನದಲ್ಲಿ ಕೃಷಿರಂಗದ ಕೊಡುಗೆ ಕಳೆದ ಐದು ದಶಕಗಳಲ್ಲಿ ತೀವ್ರವಾಗಿ ಕುಸಿದಿದೆ. ರಾಜ್ಯದ ವರಮಾನದಲ್ಲಿ ಪ್ರಾಥಮಿಕ ವಲಯದ ಪಾಲು 1960-61ರಲ್ಲಿ ಶೇ.61ರಷ್ಟಿದ್ದುದು 2000-01ರಲ್ಲಿ ಅದು ಶೇ.28.97ಕ್ಕೆ ಇಳಿದಿದೆ. ಆದರೆ ಕೃಷಿಯನ್ನು ಅವಲಂಬಿಸಿಕೊಂಡಿರುವ ದುಡಿಮೆಗಾರರ ಪ್ರಮಾಣವು ಅದೇ ಪ್ರಮಾಣದಲ್ಲಿ ಕಡಿಮೆಯಾಗಲಿಲ್ಲ(ವಿವರಗಳಿಗೆ ನೋಡಿ : ಕೋಷ್ಟಕ 5 ಮತ್ತು ಕೋಷ್ಟಕ 6). ಈ ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿದ್ದವರ ಪ್ರಮಾಣ 1960-61ರಲ್ಲಿ ಶೇ.70.25ರಷ್ಟಿದ್ದುದು 2000-01ರಲ್ಲಿ ಅದು ಕೇವಲ ಶೇ.55.89ಕ್ಕೆ ಇಳಿದಿದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿರುವ ಭೂರಹಿತ ದಿನಗೂಲಿಗಳನ್ನು ಇತರೆ ವಲಯಕ್ಕೆ ವರ್ಗಾಯಿಸುವ ಕಾರ್ಯಕ್ರಮ ರೂಪಿಸಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಇಂದು ಕರ್ನಾಟಕದಲ್ಲಿ 62 ಲಕ್ಷ ಭೂರಹಿತ ಕೃಷಿ ಕೂಲಿಕಾರರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಮುಂದಿನ ಅಭಿವೃದ್ದಿ ಯೋಜನೆಗಳ ಸ್ವರೂಪದ ಬಗ್ಗೆ ಯೋಚಿಸಬೇಕಾಗುತ್ತದೆ. ಕೃಷಿ ವಲಯವನ್ನು ಆಧುನೀಕರಿಸುವ ಹಾಗೂ ಅದರ ಬೆಳೆ ಪದ್ಧತಿಯನ್ನು ವೈವಿಧ್ಯಪಡಿಸುವ ದಿಶೆಯಲ್ಲಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ತೋಟಗಾರಿಕೆ ಬೆಳೆಗಳಿಗೆ, ಮುಖ್ಯವಾಗಿ ಹಣ್ಣು, ತರಕಾರಿ, ಹೂವುಗಳ ಕೃಷಿಯನ್ನು ವಿಸ್ತೃತವಾಗಿ ಬೆಳಸಬೇಕಾಗಿದೆ. ಮುಂದಿನ ಪಂಚವಾರ್ಷಿಕ ಯೋಜನೆಗಳಲ್ಲಿ ಕೃಷಿಯ ಬೆಳವಣಿಗೆ ಬಗ್ಗೆ ಹೆಚ್ಚಿನ ಸಂಪನ್ಮೂಲ ಹಾಗೂ ಗಮನ ನೀಡುವ ಅಗತ್ಯವಿದೆ. ನೇರವಾಗಿ ಇಂದು 131 ಲಕ್ಷ ಜನರು ರಾಜ್ಯದಲ್ಲಿ ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ.

ಮೂಲ : ವಿವಿಧ ದಶಕಗಳ ಜನಗಣತಿ ವರದಿಗಳು
ಪಾ.ವ : ಪ್ರಾಥಮಿಕ ವಲಯ, ದ್ವಿ.ವ : ದ್ವಿತೀಯ ವಲಯ, ತೃ.ವ : ತೃತೀಯ ವಲಯ

ಮೂಲ : ವಿವಿಧ ದಶಕಗಳ ಜನಗಣತಿ ವರದಿಗಳು

ವರಮಾನ ಮತ್ತು ತಲಾ ವರಮಾನ
ಅಭಿವೃದ್ದಿ ಯೋಜನೆಗಳ ಮುಖ್ಯ ಉದ್ದೇಶವೆಂದರೆ ಜನರ ವರಮಾನದ ಮಟ್ಟವನ್ನು ಅಧಿಕಗೊಳಿಸುವುದು. ಅಭಿವೃದ್ದಿಯನ್ನು ವರಮಾನದ ವರ್ಧನೆಯ ನೆಲೆಯಲ್ಲೇ ಪಂಚವಾರ್ಷಿಕ ಯೋಜನೆಗಳಲ್ಲಿ ಪರಿಭಾವಿಸಿಕೊಂಡು ಬರಲಾಗಿದೆ. ಪಂಚವಾರ್ಷಿಕ ಯೋಜನೆಗಳ ಸಾಫಲ್ಯ-ವೈಫಲ್ಯವನ್ನು ವರಮಾನದ ವಾರ್ಷಿಕ ಬೆಳವಣಿಗೆಯ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಕೋಷ್ಟಕ-8ರಲ್ಲಿ ಕರ್ನಾಟಕ ರಾಜ್ಯದ ವರಮಾನದ ವಾರ್ಷಿಕ ಬೆಳವಣಿಗೆ ಪ್ರಮಾಣವನ್ನು ವಿವಿಧ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಲಾಗಿದೆ.
ಈ ಕೋಷ್ಟಕದಲ್ಲಿ ತೋರಿಸಿರುವಂತೆ 1975ರ ವರೆಗೆ ರಾಜ್ಯದ ವರಮಾನದ ಬೆಳವಣಿಗೆ ಪ್ರಮಾಣವು ಭಾರತದ ಆರ್ಥಿಕ ಬೆಳವಣಿಗೆ ಪ್ರಮಾಣಕ್ಕಿಂತ ಅಧಿಕವಾಗಿತ್ತು. ಆದರೆ 1975ರ ನಂತರ ಸರಿಸುಮಾರು 1995ರವರೆಗೆ ಅದರ ಬೆಳವಣಿಗೆ ಪ್ರಮಾಣವು ದೇಶದ ಬೆಳವಣಿಗೆ ಪ್ರಮಾಣಕ್ಕಿಂತ ಕಡಿಮೆಯಿತ್ತು. ಒಂಬತ್ತನೆಯ ಯೋಜನೆಯ ಅವಧಿಯಲ್ಲಿ ಅದು ಮತ್ತೊಮ್ಮೆ ದೇಶದ ಅಭಿವೃದ್ದಿ ಪ್ರಮಾಣವನ್ನು ಮೀರಿದ ಸಾಧನೆ ಮಾಡಿದೆ. ಇಂದು ರಾಜ್ಯವು ವರಮಾನದ ಬೆಳವಣಿಗೆಯನ್ನು ಶೇ.10ಕ್ಕೆ ಏರಿಸಲು ಪ್ರಯತ್ನಿಸುತ್ತಿದೆ.
ಕೋಷ್ಟಕ-7ರಲ್ಲಿ ಕರ್ನಾಟಕ ರಾಜ್ಯದ ವರಮಾನ ಹಾಗೂ ತಲಾ ವರಮಾನದ ವಿವರ ನೀಡಲಾಗಿದೆ. ಕಳೆದ ನಾಲ್ಕು ದಶಕಗಳಲ್ಲಿ ಅದರ ತಲಾವರಮಾನವು ಸರಿಸುಮಾರು 67 ಪಟ್ಟು ಏರಿಕೆಯಾಗಿದ್ದರೆ ಒಟ್ಟು ವರಮಾನವು ಇದೇ ಅವಧಿಯಲ್ಲಿ 151 ಪಟ್ಟು ಏರಿಕೆಯಾಗಿದೆ. ತಲಾ ವರಮಾನಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಸ್ಥಿತಿಯು 1990ರವರೆಗೆ ಅಖಿಲ ಭಾರತ ಮಟ್ಟಕ್ಕಿಂತ ಕೆಳಗಿತ್ತು. ಇತ್ತೀಚಿಗೆ ಅದು ಭಾರತದ ಸರಾಸರಿ ತಲಾವರಮಾನ ಕ್ಕಿಂತ ಅಧಿಕ ಮಟ್ಟವನ್ನು ಸಾಧಿಸಿಕೊಂಡಿದೆ.

ಮೂಲ : ಯೋಜನಾ ಇಲಾಖೆ, ಕರ್ನಾಟಕ ಸರ್ಕಾರ, 1999. ಕರ್ನಾಟಕದಲ್ಲಿ ಮಾನವ ಅಭಿವೃದ್ದಿ: 1999. ಪು.303-304, ಕರ್ನಾಟಕ ಸರ್ಕಾರ : ಆರ್ಥಿಕ ಸಮೀಕ್ಷೆ : 2005-06

ಮೂಲ : ಕರ್ನಾಟಕ ಸರ್ಕಾರ, 1970. ಮೈಸೂರು ರಾಜ್ಯದ ಆರ್ಥಿಕ ಅಭಿವೃದ್ದಿ : 1956-69, ಕರ್ನಾಟಕ ಸರ್ಕಾರ : ಎಂಟನೆಯ ಪಂಚವಾರ್ಷಿಕ ಯೋಜನೆಯ ಕರಡು : 1990-95, ಭಾರತ ಸರ್ಕಾರ: ಆರ್ಥಿಕ ಸಮೀಕ್ಷೆ : 2004-05, ಕರ್ನಾಟಕ ಸರ್ಕಾರ : ಆರ್ಥಿಕ ಸಮೀಕ್ಷೆ : 2005-06

ಭಾಗ 3
ಅಭಿವೃದ್ದಿ ಯೋಜನೆಗಳು
ಪ್ರಬಂಧದ ಪ್ರಸ್ತುತ ಭಾಗದಲ್ಲಿ ಅಭಿವೃದ್ದಿ ಯೋಜನೆಗಳು, ಅವುಗಳ ಸೈದ್ಧಾಂತಿಕ ನೆಲೆಗಟ್ಟು, ಅವುಗಳ ಗಾತ್ರ, ವಲಯವಾರು ವಿತರಣೆ, ಅನುಷ್ಠಾನ ಹಾಗೂ ಸಿದ್ದಿ ಸಾಧನೆಗಳನ್ನು ಚರ್ಚಿಸಲಾಗಿದೆ. ಮೊದಲು ಅಭಿವೃದ್ದಿ ಯೋಜನೆ ಕುರಿತ ಸೈದ್ಧಾಂತಿಕ ಸಂಗತಿಗಳನ್ನು ಚರ್ಚೆ ಮಾಡಬಹುದು. ಈಗಾಗಲೆ ಗುರುತಿಸಿರುವಂತೆ ಭಾರತ ಅದರಂತೆ ಕರ್ನಾಟಕದಲ್ಲಿ ಅಭಿವೃದ್ದಿ ಯನ್ನು ವರಮಾನದ ವರ್ಧನೆಯ ನೆಲೆಯಲ್ಲಿ ಪರಿಭಾವಿಸಿಕೊಳ್ಳಲಾಗಿದೆ. ಕರ್ನಾಟಕಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಭಿವೃದ್ದಿಯನ್ನು ವರಮಾನ ಹಾಗೂ ತಲಾವರಮಾನಗಳು ವರ್ಧನೆಯೆಂದು ನಿರ್ವಚಿಸಿಕೊಳ್ಳಲಾಗಿತ್ತು. ಬಹಳ ಕುತೂಹಲದ ಸಂಗತಿಯೆಂದರೆ ಅಭಿವೃದ್ದಿಯ ಚೌಕಟ್ಟಿನೊಳಗೆ ಭೌತಿಕ ಸರಕುಗಳ ಜೊತೆಗೆ ಸೇವಾ ಚಟುವಟಿಕೆಗಳಾದ ಶಿಕ್ಷಣ, ಆರೋಗ್ಯ ಮತ್ತು ಆಡಳಿತದ ಸಂಗತಿಗಳನ್ನು ಸೇರಿಸಲಾಗಿತ್ತು. ಕರ್ನಾಟಕ ಸರ್ಕಾರವು 1970ರಲ್ಲಿ ಪ್ರಕಟಿಸಿರುವ ಅಭಿವೃದ್ದಿ ಕುರಿತ ಅಧಿಕೃತ ಕೃತಿಯಲ್ಲಿ ಅಭಿವೃದ್ದಿಯನ್ನು ಹೀಗೆ ನಿರ್ವಚಿಸಲಾಗಿದೆ.
“ಆರ್ಥಿಕ ಅಭಿವೃದ್ದಿಯ ಮುಖ್ಯ ಗುರಿಯೆಂದರೆ ಭೌತಿಕ ಹಾಗೂ ಭೌತಿಕೇತರ ಸರಕುಗಳ ತಲಾ ಅನುಭೋಗದಲ್ಲಿ ಸಾಧಿಸುವ ಸಾಮಾನ್ಯ ವರ್ಧನೆಯಾಗಿದೆ.” (1970: ಪು:21)
ಭೌತಿಕ ಸರಕುಗಳಲ್ಲಿ ಅನುಭೋಗಿ ಸರಕುಗಳು, ಆಹಾರ, ಬಾಳಿಕೆ ಬರುವ ಹಾಗೂ ತಕ್ಷಣಕ್ಕೆ ಉಪಯೋಗಿಸುವ ಸರಕುಗಳನ್ನು ಸೇರಿಸಿದ್ದರೆ ಭೌತಿಕೇತರ ಸರಕುಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಆಡಳಿತಗಳನ್ನು ಸೇರಿಸಲಾಗಿದೆ. ಮೊದಲನೆಯ ಪ್ರಕಾರವನ್ನು ‘ವರಮಾನ ಅಭಿವೃದ್ದಿ’ಯೆಂದೂ ಎರಡನೆಯ ಪ್ರಕಾರವನ್ನು ಸ್ಥೂಲವಾಗಿ ‘ಮಾನವ ಅಭಿವೃದ್ದಿ’ಯೆಂದೂ ಹೇಳಬಹುದು. ಅಖಿಲ ಭಾರತ ಮಟ್ಟದಲ್ಲೂ ಆರ್ಥಿಕ ಅಭಿವೃದ್ದಿಯನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಂಡಿರುವುದು ಕಂಡುಬರುತ್ತದೆ. ಎರಡನೆಯ ಪಂಚವಾರ್ಷಿಕ ಯೋಜನೆಯ ಕರಡಿನಲ್ಲಿ ಅಭಿವೃದ್ದಿಯನ್ನು ಹೀಗೆ ನಿರ್ವಚಿಸಲಾಗಿದೆ.
ಅಭಿವೃದ್ದಿಯು ಸಮುದಾಯದ ಬದುಕಿನ ಎಲ್ಲ ಅಂಶಗಳನ್ನು ಒಳಗೊಳ್ಳುತ್ತದೆ. ಅದನ್ನು ವಿಸ್ತೃತ ನೆಲೆಯಲ್ಲಿ ಪರಿಭಾವಿಸಿಕೊಳ್ಳಬೇಕಾಗುತ್ತದೆ. ಆರ್ಥಿಕ ಯೋಜನೆಯೆಂಬುದು ಆರ್ಥಿಕೇತರ ಸಂಗತಿಗಳಾದ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನು ಒಳಗೊಳ್ಳುವ ಒಂದು ಸಂಗತಿಯಾಗಿದೆ(ಕೇಂದ್ರದ ಎರಡನೆಯ ಪಂಚವಾರ್ಷಿಕ ಯೋಜನೆ ಕರಡು: 1956, ಪು.1).
ಅಭಿವೃದ್ದಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಗಳ ಪಾತ್ರವನ್ನು ಕುರಿತಂತೆ ಇಂದು ಹೆಚ್ಚಿನ ಚರ್ಚೆಗಳಾಗುತ್ತವೆ. ಅಮರ್ತ್ಯಸೆನ್ ಅವರ ಮಾನವ ಅಭಿವೃದ್ದಿ ಪರಿಭಾವನೆಯು ಇಂತಹ ಚರ್ಚೆಗೆ ಹೆಚ್ಚಿನ ಅವಕಾಶ ಮಾಡಿಕೊಟ್ಟಿದೆ. ಆದರೆ ನಮ್ಮ ಯೋಜನೆಗಳನ್ನು ಪರಿಭಾವಿಸಿ ಕೊಳ್ಳುವಾಗ ಅವುಗಳನ್ನು ಅತ್ಯಂತ ವಿಸ್ತೃತವಾದ ನೆಲೆಯಲ್ಲಿ, ಅಂದರೆ ಶಿಕ್ಷಣ ಮತ್ತು ಆರೋಗ್ಯವನ್ನು ಒಳಗೊಳ್ಳುವ ರೀತಿಯಲ್ಲಿ ಪರಿಭಾವಿಸಿಕೊಳ್ಳಲಾಗಿತ್ತು ಎಂಬುದು ಬಹಳ ಮುಖ್ಯವಾದ ಸಂಗತಿಯಾಗಿದೆ. ಈ ಬಗ್ಗೆ ಪ್ರಬಂಧದ ನಾಲ್ಕನೆಯ ಭಾಗದಲ್ಲಿ ವಿವರವಾಗಿ ಚರ್ಚಿಸಲಾಗಿದೆ.

ಮೂಲ : 1. ಗೌರ್ನಮೆಂಟ್ ಆಫ್ ಮೈಸೂರು : 1970 (ಕ್ರ.ಸಂ. 1ರಿಂದ 4) 2. ಗೌರ್ನಮೆಂಟ್ ಆಫ್ ಕರ್ನಾಟಕ : 1980 (ಕ್ರ.ಸಂ. 5ರಿಂದ 8) 3. ಗೌರ್ನಮೆಂಟ್ ಆಫ್ ಕರ್ನಾಟಕ : 1990 (ಕ್ರ.ಸಂ. 9ರಿಂದ 10) 4. ಗೌರ್ನಮೆಂಟ್ ಆಫ್ ಕರ್ನಾಟಕ : 2004 (ಕ್ರ.ಸಂ. 11ರಿಂದ 13)

ಅಭಿವೃದ್ದಿ ಯೋಜನೆಗಳು ಭಾರತದಲ್ಲಿ ಆರಂಭಗೊಂಡ ಬಗ್ಗೆ, ಅವುಗಳ ಉಗಮದ ಬಗ್ಗೆ ಅನೇಕ ತಪ್ಪು ಅಭಿಪ್ರಾಯಗಳಿವೆ. ಪಂಚವಾರ್ಷಿಕ ಯೋಜನೆಗಳಿಗೆ ಪ್ರೇರಣೆ ಭಾರತದ ಒಳಗಿನಿಂದಲೂ ಬಂದಿವೆ ಮತ್ತು ಬಾಹ್ಯವಾಗಿಯೂ ಬಂದಿವೆ. ಸೋವಿಯಟ್ ರಷ್ಯಾದಿಂದ ಪ್ರೇರಣೆ ಪಡೆದು ಯೋಜನೆಗಳನ್ನು ರೂಪಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಇದು ನಿಜವಿರಬಹುದು. ಆದರೆ ಕರ್ನಾಟಕವನ್ನೇ ತೆಗೆದುಕೊಂಡರೂ ಯೋಜಿತ ಅಭಿವೃದ್ದಿ ಬಗ್ಗೆ ಪ್ರಯತ್ನಗಳು ಸ್ವಾತಂತ್ರ್ಯಪೂರ್ವದಲ್ಲೇ ಆರಂಭಗೊಂಡಿದ್ದು ಕಂಡುಬರುತ್ತದೆ. ಸರ್ ಎಂ.ವಿಶ್ವೇಶ್ವರಯ್ಯ ಅವರು 1910ರಲ್ಲಿ ‘ಮೈಸೂರು ಆರ್ಥಿಕ ಸಮಾವೇಶ’ವನ್ನು ನಡೆಸಿದರು. ಅಲ್ಲಿ ಎರಡು ಸಂಗತಿಗಳ ಬಗ್ಗೆ ಚರ್ಚೆ ನಡೆದವು.
1. ರಾಜ್ಯದಲ್ಲಿನ ಆರ್ಥಿಕ ಬದುಕನ್ನು ಕುರಿತಂತೆ ಅಧ್ಯಯನ.
2. ರಾಜ್ಯವನ್ನು ಹೇಗೆ ಅಭಿವೃದ್ದಿಪಡಿಸಬೇಕು ಎಂಬ ಅಧ್ಯಯನ.
ಈ ಸಮಾವೇಶದಲ್ಲಿ ಶಿಕ್ಷಣ, ಕೃಷಿ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಪ್ರತಿನಿಧಿಗಳು ಭಾಗವಹಿಸಿದ್ದರು. ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಅನೇಕ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ವಿವಿಧ ಮಂಡಳಿಗಳ ಮೂಲಕ ಅವುಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಾಯಿತು. ಅಂದ ಮೇಲೆ ಮೈಸೂರು ರಾಜ್ಯದಲ್ಲಿ ಯೋಜಿತ ಅಭಿವೃದ್ದಿ ಪ್ರಕ್ರಿಯೆಯು 20ನೆಯ ಶತಮಾನದ ಆದಿಭಾಗದಲ್ಲೇ ಆರಂಭಗೊಂಡಿತೆಂದು ಹೇಳಬಹುದು.

ಪಂಚವಾರ್ಷಿಕ ಯೋಜನೆಗಳ ಪರ್ವ
ಕರ್ನಾಟಕದಲ್ಲಿ ಯೋಜನೆಗಳ ಪರ್ವವು ಅಖಿಲ ಭಾರತದಲ್ಲಿದ್ದಂತೆ 1951ರಲ್ಲಿ ಆರಂಭಗೊಂಡಿತು. ಕೋಷ್ಟಕ¬-9ರಲ್ಲಿ 1951ರಿಂದ 2007ರವರೆಗಿನ ಯೋಜನೆಗಳ ವಿವರವನ್ನು ನೀಡಲಾಗಿದೆ. ಇದರ ಪ್ರಕಾರ ಮೊದಲನೆಯ ಯೋಜನೆಯ ಗಾತ್ರ ರೂ.40.51 ಕೋಟಿ ಇತ್ತು. ಇದು ಒಂಬತ್ತನೆಯ ಯೋಜನೆಯಲ್ಲಿ ರೂ.22075 ಕೋಟಿಗೇರಿದೆ. ಹತ್ತನೆಯ ಯೋಜನೆಯ ಗಾತ್ರ ರೂ.43558.22 ಕೋಟಿ. ಇಲ್ಲಿ ಯೋಜನಾ ಗಾತ್ರವು 1951ರಿಂದ 2007ರ ಅವಧಿಯಲ್ಲಿ ಸರಿಸುಮಾರು 1075 ಪಟ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಮೂರು ಭಾರಿ ಯೋಜನಾ ಪ್ರಕ್ರಿಯೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೊದಲನೆಯ ಬಾರಿ 1966-69ರವರೆಗೆ, ಎರಡನೆಯ ಬಾರಿ 1978-80ರವರೆಗೆ ಮತ್ತು ಮೂರನೆಯ ಬಾರಿ 1990¬-92ರಲ್ಲಿ ಯೋಜನೆಗಳ ಅನುಕ್ರಮದಲ್ಲಿ ವ್ಯತ್ಯಯ ಉಂಟಾಗಿದೆ. ಸದ್ಯ ರಾಜ್ಯದಲ್ಲಿ ಹತ್ತನೆಯ ಯೋಜನೆ (2002-2007) ಅನುಷ್ಠಾನದಲ್ಲಿದೆ. ಕೋಷ್ಟಕ-8ರಲ್ಲಿ ತೋರಿಸಿರುವಂತೆ ಪಂಚವಾರ್ಷಿಕ ಯೋಜನೆಗಳ ಅವಧಿಯಲ್ಲಿ ರಾಜ್ಯದ ವರಮಾನವು 1956ರಿಂದ 1985ರವರೆಗೆ ವಾರ್ಷಿಕ ಶೇ. 4ಕ್ಕಿಂತ ಕಡಿಮೆ ಪ್ರಮಾಣದಲ್ಲಿ ವರ್ಧಿಸುತ್ತಾ ಬಂದಿದ್ದು 1985ರ ನಂತರ ಅದು ವಾರ್ಷಿಕ ಶೇ.5ರ ಪ್ರಮಾಣವನ್ನು ಮೀರಿದೆ. ಒಂಬತ್ತನೆಯ ಯೋಜನೆಯಲ್ಲಿ ಅದನ್ನು ಶೇ.10ಕ್ಕೆ ಏರಿಸಲು ಪ್ರಯತ್ನ ನಡೆದಿದೆ. ಆದರೆ 2000-01ರಲ್ಲಿ ಅದರ ಏರಿಕೆ ಪ್ರಮಾಣವು ಶೇ.7.1ರಷ್ಟಿತ್ತು. ಸರ್ಕಾರದ 2005-06ರ ಆರ್ಥಿಕ ಸಮೀಕ್ಷೆಯಲ್ಲಿ ನೀಡಿರುವಂತೆ 2004-05ರಲ್ಲಿ ವರಮಾನದ ಬೆಳವಣಿಗೆ ಪ್ರಮಾಣವು ಶೇ.10.2 ಎಂದು ಅಂದಾಜು ಮಾಡಲಾಗಿದೆ. ಇದು ರಾಷ್ಟ್ರದ ವರಮಾನದ ಬೆಳವಣಿಗೆ ಪ್ರಮಾಣಕ್ಕಿಂತ ಅಧಿಕವಾಗಿದೆ. ಅದೇ ರೀತಿ 2005-06ರಲ್ಲಿ ನಿರೀಕ್ಷಿಸಿರುವ ವರಮಾನದ ಬೆಳವಣಿಗೆ ಪ್ರಮಾಣ ಶೇ.8.7 ಎಂದು ಅಂದಾಜು ಮಾಡಲಾಗಿದೆ.

ಮೊದಲ ಮೂರು ಯೋಜನೆಗಳು : 1951-1966
ಮೊದಲ ಮೂರು ಪಂಚವಾರ್ಷಿಕ ಯೋಜನೆಗಳನ್ನು ಒಂದು ಘಟಕವಾಗಿ ಅಧ್ಯಯನ ಮಾಡಬಹುದು. ಏಕೆಂದರೆ ಅವು ಒಂದಾದ ಮೇಲೊಂದರಂತೆ ಅನುಷ್ಠಾನಗೊಂಡವು. ಈ ಮೂರರಲ್ಲಿ ಮೂರನೆಯ ಯೋಜನೆ ಬಿಟ್ಟು ಉಳಿದೆರಡು ಪ್ರಾಥಮಿಕವಾದ ಅಂದರೆ ಆರಂಭ ಕಾಲದ ಯೋಜನೆಗಳೆಂದು ಕರೆಯಬಹುದು. ಮೊದಲನೆಯ ಯೋಜನೆಯು ಕೇವಲ ಮೈಸೂರು ಪ್ರಾಂತದ ಒಂಬತ್ತು ಜಿಲ್ಲೆಗಳು ಹಾಗೂ 1953ರಲ್ಲಿ ಮೈಸೂರು ಪ್ರಾಂತದಲ್ಲಿ ವಿಲೀನಗೊಂಡ ಬಳ್ಳಾರಿ ಜಿಲ್ಲೆಯನ್ನು ಮಾತ್ರ ಒಳಗೊಂಡಿತ್ತು. ಅಂದರೆ ‘ವಿಶಾಲ ಮೈಸೂರು’ ಎಂದು ಯಾವುದನ್ನು ಕರೆಯಲಾಗುತ್ತಿತ್ತೋ ಅದು ಅಂದು ರಚನೆಯಾಗಿರಲಿಲ್ಲ. ರಾಜ್ಯ ಪುನರ್ವಿಂಗಡನೆಯ ಕಾರಣದಿಂದಾಗಿ (1956) ಎರಡನೆಯ ಯೋಜನೆಯು ಒಂದು ಬಗೆಯಲ್ಲಿ ಸಿದ್ಧತಾ ಯೋಜನೆಯಾಗಿತ್ತು. ಮೂರನೆಯ ಪಂಚವಾರ್ಷಿಕ ಯೋಜನೆಯಿಂದ ಸರಿಯಾದ ಅರ್ಥದಲ್ಲಿ ಆರ್ಥಿಕ ಯೋಜನೆ ಮೈಸೂರು ರಾಜ್ಯದಲ್ಲಿ ಆರಂಭಗೊಂಡಿತೆನ್ನ ಬಹುದು.
ಎರಡನೆಯ ಮಹಾಯುದ್ಧದ ಪರಿಣಾಮವಾಗಿ ಉಂಟಾಗಿದ್ದ ಪರಿಣಾಮಗಳನ್ನು ಸರಿಪಡಿಸುವ ಉದ್ದೇಶವು ಮೊದಲ ಪಂಚವಾರ್ಷಿಕ ಯೋಜನೆಗಿತ್ತು. ರಾಜ್ಯದಲ್ಲಿ 1940ರ ದಶಕದಲ್ಲಿ ಆರಂಭ ಮಾಡಿದ್ದ ಕಾರ್ಯಕ್ರಮಗಳ ಮುಂದುವರಿಕೆ ಮೊದಲನೆಯ ಯೋಜನೆ ಯಲ್ಲಿ ನಡೆಯಿತೆಂದು ಹೇಳಬಹುದು. ಈ ಯೋಜನೆಯಲ್ಲಿ ವಿನಿಯೋಗಿಸಿದ ಮೊತ್ತ ಹಾಗೂ ವಲಯವಾರು ವಿವರಣೆ ವಿವರವನ್ನು ಕೋಷ್ಟಕ 10ರಲ್ಲಿ ನೀಡಿದೆ. ಮೊದಲನೆಯ ಹಂತದಲ್ಲಿ ಯೋಜನೆಗೆ ರೂ.42.14 ಕೋಟಿಯನ್ನು ನಿಗದಿಪಡಿಸಲಾಗಿತ್ತು. ಆದರೆ 1953ರಲ್ಲಿ ಬಳ್ಳಾರಿ ಜಿಲ್ಲೆಯನ್ನು ರಾಜ್ಯದಲ್ಲಿ ವಿಲೀನಗೊಳಿಸಿದ್ದರಿಂದ ಯೋಜನೆಯ ಮೊತ್ತವನ್ನು ರೂ.47.58 ಕೋಟಿಗೇರಿಸಲಾಯಿತು. ಈ ಯೋಜನೆಯಲ್ಲಿ ನಿಗದಿಪಡಿಸಿದ್ದ ಹಣಕಾಸು ಸಂಪನ್ಮೂಲ ರೂ.47.58 ಕೋಟಿಯಾದರೂ ವಾಸ್ತವವಾಗಿ ಖರ್ಚು ಮಾಡಿದ ಮೊತ್ತ ಕೇವಲ ರೂ.40.51 ಕೋಟಿ.
ರಾಜ್ಯ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನಂತೆ 01.11.1956ರಂದು ವಿಶಾಲ ಮೈಸೂರು ರಾಜ್ಯವು ಉದಯವಾಯಿತು. ಹೀಗೆ ಉದಯವಾದ ಏಳು ತಿಂಗಳ ಹಿಂದೆ ಎರಡನೆಯ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು. ಅನೇಕ ಕಾರಣಗಳಿಂದಾಗಿ ಸದರಿ ಯೋಜನೆಯಲ್ಲಿ ಅಭಿವೃದ್ದಿಗಾಗಿ ಸಂಘಟಿತ ಪ್ರಯತ್ನ ನಡೆಸುವುದು ಸಾಧ್ಯವಾಗಲಿಲ್ಲ. ಎರಡನೆಯ ಯೋಜನೆಗೆ ಮೀಸಲಿಟ್ಟಿದ್ದ ಹಣ ರೂ.145.13 ಕೋಟಿ. ಆದರೆ ಖರ್ಚಾದ ಹಣ ರೂ.142.58 ಕೋಟಿ.
ಮೂರನೆಯ ಯೋಜನೆಯನ್ನು ಏಪ್ರಿಲ್ 1961ರಲ್ಲಿ ಜಾರಿಗೊಳಿಸಲಾಯಿತು. ಯೋಜನಾ ಅಭಿವೃದ್ದಿಯ ಪರ್ವದ ಆರಂಭವನ್ನು ಮೂರನೆಯ ಯೋಜನೆಯಿಂದ ಗಣನೆ ಮಾಡುತ್ತಾರೆ. ಮೈಸೂರು ಪ್ರಾಂತದಲ್ಲಿ ವಿಲೀನವಾದ ಹೊಸ ಕರ್ನಾಟಕದ ಭಾಗಗಳ ಅಭಿವೃದ್ದಿಗೆ, ಅಂದರೆ ಸಮತೋಲನ ಪ್ರಾದೇಶಿಕ ಅಭಿವೃದ್ದಿಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಯಿತು.
ಈ ಯೋಜನೆಯ ಉದ್ದೇಶಗಳು ಹೀಗಿವೆ.
1. ಹಿಂದಿನ ಎರಡು ಯೋಜನೆಗಳಲ್ಲಿ ಆರಂಭಿಸಿದ ಅಭಿವೃದ್ದಿ ಕಾರ್ಯಕ್ರಮ ಪ್ರಯತ್ನಗಳ ವೇಗವನ್ನು ಹೆಚ್ಚಿಸುವುದು.
2. ಕೈಗಾರಿಕಾ ರಂಗದಲ್ಲಿನ ಬೆಳವಣಿಗೆಗೆ ಅನುಗುಣವಾಗಿ ಕೃಷಿ ಅಭಿವೃದ್ದಿಯನ್ನು ತೀವ್ರಗೊಳಿಸುವುದು.
3. ಗ್ರಾಮೀಣ ಪ್ರದೇಶದಲ್ಲಿ ಕನಿಷ್ಟ ಮಟ್ಟದ ನಾಗರಿಕ ಸೌಲಭ್ಯಗಳನ್ನು ಒದಗಿಸುವುದು.
4. ಸಾಮಾಜಿಕ ಮತ್ತು ಆರ್ಥಿಕ ಅಸಮತೋಲನದ ನಿವಾರಣೆಗಾಗಿ ಭೂಸುಧಾರಣೆಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು.
5. ಮಾನವ ಸಂಪನ್ಮೂಲದ ಪೂರ್ಣ ಬಳಕೆಗಾಗಿ ಮಾರ್ಗೋಪಾಯಗಳನ್ನು ಕಂಡು ಹಿಡಿಯುವುದು.
6. ರಾಜ್ಯದಲ್ಲಿ 6 ರಿಂದ 11 ವಯೋಮಾನದ ಮಕ್ಕಳಿಗೆಲ್ಲ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವುದು.
ಮೂರನೆಯ (1961-1966) ಯೋಜನೆಗೆ ನಿಗದಿಪಡಿಸಿದ್ದ ಹಣಕಾಸು ಸಂಪನ್ಮೂಲ ರೂ. 246.21 ಕೋಟಿ. ಆದರೆ ಖರ್ಚಾದ ಹಣ ರೂ.264.13 ಕೋಟಿ.

ವಲಯವಾರು ಸಂಪನ್ಮೂಲ ಹಂಚಿಕೆ : 1951-1966
ಮೊದಲ ಮೂರು ಯೋಜನೆಗಳ ವಲಯವಾರು ಹಣಕಾಸು ವಿನಿಯೋಗದ ವಿವರಗಳನ್ನು ಕೋಷ್ಟಕ 10,11 ಮತ್ತು 12ರಲ್ಲಿ ನೀಡಲಾಗಿದೆ. ಕೋಷ್ಟಕದಲ್ಲಿನ ಮೊದಲ ಮೂರು ಬಾಬ್ತುಗಳನ್ನು ‘ಕೃಷಿ’ಯೆಂದು ಪರಿಗಣಿಸಿದರೆ ಅದಕ್ಕೆ ಮೊದಲ ಯೋಜನೆಯಲ್ಲಿ ಮೀಸಲಿಟ್ಟ ಹಣದ ಪ್ರಮಾಣ ಶೇ.48.4. ಎರಡನೆಯ ಯೋಜನೆಯಲ್ಲಿ ಅದೇ ಮೂರು ಬಾಬತ್ತುಗಳಿಗೆ ತೆಗೆದಿಟ್ಟ ಹಣದ ಪ್ರಮಾಣ ಶೇ.43.6. ಮೂರನೆಯ ಯೋಜನೆಯಲ್ಲಿ ಮೊದಲ ಮೂರು ಬಾಬತ್ತುಗಳಿಗೆ ಪ್ರಮಾಣ ಶೇ.40.6. ಇಂಧನ ಮತ್ತು ಸಾರಿಗೆ ಸೇರಿ ಮೂರು ಯೋಜನೆಗಳಲ್ಲಿ ತೆಗೆದಿಟ್ಟ ಹಣದ ಪ್ರಮಾಣ ಕ್ರಮವಾಗಿ ಶೇ.39.4, ಶೇ.25.7 ಮತ್ತು ಶೇ.33.2.
ಒಂದು ರೀತಿಯಲ್ಲಿ ಯೋಜಿತ ಅಭಿವೃದ್ದಿಗೆ ಅಗತ್ಯವಾದ ಅಡಿಪಾಯವನ್ನು ಮೊದಲೆರಡು ಯೋಜನೆಗಳಲ್ಲಿ ಸಿದ್ಧಪಡಿಸಲಾಯಿತು. ಮೂರನೆಯ ಯೋಜನೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ನಿರ್ದಿಷ್ಟ ಉದ್ದೇಶದೊಡನೆ ಅಳವಡಿಸಿಕೊಳ್ಳಲಾಯಿತು. ಆಹಾರ ಉತ್ಪಾದನೆಯ 1956-57ರಲ್ಲಿ 33.31 ಲಕ್ಷ ಟನ್ ಇದ್ದುದು 1968-69ರಲ್ಲಿ ಅದು 44.94 ಟನ್ಗೇರಿತು. ನೀರಾವರಿ ಪ್ರದೇಶ ವಿಸ್ತೀರ್ಣವು 1956-57ರಲ್ಲಿ 7.4 ಲಕ್ಷ ಹೆಕ್ಟೇರ್ನಷ್ಟಿದ್ದುದು 1966-67ರಲ್ಲಿ ಅದು 10.21 ಲಕ್ಷ ಹೆಕ್ಟೇರ್ಗೇರಿತು. ಕೈಗಾರಿಕಾ ಕ್ಷೇತ್ರದಲ್ಲಿ ಗಣನೀಯವಾದ ಪ್ರಗತಿ ಸಾಧಿಸಿಕೊಳ್ಳಲಾಯಿತು.

ಯೋಜನಾ ಪ್ರಕ್ರಿಯೆಯಲ್ಲಿ ವ್ಯತ್ಯಯ

ರಾಷ್ಟ್ರಮಟ್ಟದಲ್ಲಿ ಎರಡು ಪ್ರಮುಖ ಕಾರಣಗಳಿಂದಾಗಿ ಮೂರನೆಯ ಯೋಜನೆ ಮುಗಿದ ಮೇಲೆ ನಾಲ್ಕನೆಯ ಯೋಜನೆಯನ್ನು 1966-67ರಲ್ಲಿ ಆರಂಭಿಸುವುದು ಸಾಧ್ಯವಾಗಲಿಲ್ಲ. ನಾಲ್ಕನೆಯ ಯೋಜನೆಯನ್ನು ಮುಂದೂಡಲಾಯಿತು. ಇದರಿಂದಾಗಿ ರಾಜ್ಯದಲ್ಲಿ 1966-67, 1967-68 ಮತ್ತು 1968-69 – ಹೀಗೆ ಮೂರು ವಾರ್ಷಿಕ ಯೋಜನೆಗಳನ್ನು ಜಾರಿಗೊಳಿಸಲಾಯಿತು. ಹೀಗೆ ನಾಲ್ಕನೆಯ ಯೋಜನೆಯನ್ನು ಮೂರು ವರ್ಷ ಮುಂದೂಡಲು ಕಾರಣವಾದ ಎರಡು ಸಂಗತಿಗಳು ಹೀಗಿದ್ದವು.
1. ಚೀನಾ ಮತ್ತು ಪಾಕಿಸ್ತಾನಗಳ ಜೊತೆ ಭಾರತವು 1962ರಲ್ಲಿ ಮತ್ತೆ 1965ರಲ್ಲಿ ಯುದ್ಧ ನಡೆಸಬೇಕಾಯಿತು. ಇದರಿಂದಾಗಿ ಸಂಪನ್ಮೂಲವನ್ನು ರಕ್ಷಣಾ ಉದ್ದಿಮೆಗೆ ವರ್ಗಾಯಿಸಬೇಕಾಯಿತು.
2. ರಾಷ್ಟ್ರವು 1965-66 ಮತ್ತು 1966-67ರಲ್ಲಿ ತೀವ್ರ ಸ್ವರೂಪದ ಕ್ಷಾಮವನ್ನು ಎದುರಿಸಬೇಕಾಯಿತು. ಇದರ ಪರಿಣಾಮವಾಗಿ 1960-61ರಲ್ಲಿ 39.30 ಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆಯು 1965-66ರಲ್ಲಿ 35.45 ಲಕ್ಷ ಟನ್ಗಳಿಗೆ ಕುಸಿಯಿತು.

ವಾರ್ಷಿಕ ಯೋಜನೆಗಳು 1966-67ರಿಂದ 1968-69
ಕೋಷ್ಟಕ-13ರಲ್ಲಿ ವಾರ್ಷಿಕ ಯೋಜನೆಗಳ ವಿವರವನ್ನು ನೀಡಲಾಗಿದೆ. ಕೋಷ್ಟಕದಲ್ಲಿ ತೋರಿಸಿರುವಂತೆ ಮೂರು ವರ್ಷದ ಒಟ್ಟು ಸಂಪನ್ಮೂಲದ ವಿನಿಯೋಜನೆಯಲ್ಲಿ ಅತ್ಯಧಿಕ ಶೇ.29.61 ಇಂಧನ ಕ್ಷೇತ್ರಕ್ಕೆ ಮೀಸಲಾಗಿರಿಸಲಾಗಿತ್ತು. ಕೃಷಿ ಮತ್ತು ತತ್ಸಂಬಂಧಿ ಕ್ಷೇತ್ರಕ್ಕೆ ಶೇ.26.65ರಷ್ಟು ಸಂಪನ್ಮೂಲ ವಿನಿಯೋಗಿಸಲಾಯಿತು. ಒಟ್ಟು ಮೂರು ಯೋಜನೆಗಳ ಅವಧಿಯಲ್ಲಿ ವಿನಿಯೋಗಿಸಿದ ಮೊತ್ತ ರೂ.164.67 ಕೋಟಿ. ವಾಸ್ತವವಾಗಿ ವೆಚ್ಚ ಮಾಡಿದ ಮೊತ್ತ ರೂ.195.51 ಕೋಟಿ. ಯುದ್ಧ, ಕ್ಷಾಮ, ವಿದೇಶಿ ನೆರವಿನ ಕಡಿತ ಮುಂತಾದ ಕಾರಣಗಳಿಂದಾಗಿ ಯೋಜನೆಯ ವೆಚ್ಚದಲ್ಲಿ ತೀವ್ರ ಏರುಪೇರು ಉಂಟಾಯಿತು.
ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ತೀವ್ರತರದಲ್ಲಿ ಏರಿಸಲಾಯಿತು. ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ 1965-66ರಲ್ಲಿ 35.45 ಲಕ್ಷ ಟನ್ಗಳಷ್ಟಿದ್ದುದು 1968-69ರಲ್ಲಿ ಅದು 46.94 ಲಕ್ಷ ಟನ್ಗಳಿಗೇರಿತು. ಆರ್ಥಿಕತೆಯಲ್ಲಿ ಒಂದು ಬಗೆಯ ದೃಢತೆಯನ್ನು ಸಾಧಿಸಲಾಯಿತು. ಈ ಕಾರಣದಿಂದಾಗಿ ರಾಜ್ಯಕ್ಕೆ ನಾಲ್ಕನೆಯ ಯೋಜನೆಯನ್ನು 1969ರಲ್ಲಿ ಆರಂಭಿಸುವುದು ಸಾಧ್ಯವಾಯಿತು.

ನಾಲ್ಕನೆಯ ಪಂಚವಾರ್ಷಿಕ ಯೋಜನೆ : 1969-74
ಯೋಜನಾ ಪ್ರಕ್ರಿಯೆಯಲ್ಲಿ ಉಂಟಾದ ವ್ಯತ್ಯಯವು 60ರ ದಶಕದ ಕೊನೆಯ ಹೊತ್ತಿಗೆ ಸರಿ ಹೋಯಿತು. ಮೂರು ವರ್ಷಗಳ ವಾರ್ಷಿಕ ಯೋಜನೆ(1966-1969)ಗಳ ಮೂಲಕ ಆರ್ಥಿಕತೆಯಲ್ಲಿ ಒಂದು ಬಗೆಯ ದೃಢತೆಯನ್ನು ಮರುಸ್ಥಾಪಿಸಲಾಯಿತು. ವಾಸ್ತವವಾಗಿ ಆಹಾರ ಉತ್ಪಾದನೆಯು ಕ್ರಾಂತಿಕಾರಕ ರೀತಿಯಲ್ಲಿ 1970ರ ಹೊತ್ತಿಗೆ ಏರಿಕೆ ಅನುಭವಿಸಿತು. ಹೊಸ ಕೃಷಿ ನೀತಿಯಿಂದಾಗಿ ರಾಷ್ಟ್ರದಲ್ಲಿ ಹಸಿರುಕ್ರಾಂತಿಗೆ ಅಂದು ನಾಂದಿ ಹಾಡಲಾಯಿತು. ಸಂಕಷ್ಟಗಳಿಂದ ಹೊರ ಬಂದ ಭಾರತವು 1969ರಲ್ಲಿ ನಾಲ್ಕನೆಯ ಯೋಜನೆಯನ್ನು ಆರಂಭಿಸಿತು.

ಕರ್ನಾಟಕದ ನಾಲ್ಕನೆಯ ಯೋಜನೆಯ ವಲಯವಾರು ವಿನಿಯೋಜನೆಯ ವಿವರವನ್ನು ಕೋಷ್ಟಕ-14ರಲ್ಲಿ ನೀಡಲಾಗಿದೆ. ಬಹಳ ಕುತೂಹಲಕಾರಿಯಾದ ಸಂಗತಿಯೆಂದರೆ ಇಲ್ಲಿ ಕೃಷಿಯ ಮೇಲಿನ ವಿನಿಯೋಜನೆಯನ್ನು ತೀವ್ರ ಏರಿಸಲಾಯಿತು. ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳ ಮೇಲಿನ ವಿನಿಯೋಜನೆಯು ಇಲ್ಲಿ ಶೇ.23.97ರಷ್ಟಿದೆ. ಜಲಸಂಪನ್ಮೂಲ ಹಾಗೂ ಇಂಧನದ ಮೇಲಿನ ವಿನಿಯೋಜನೆ ಪ್ರಮಾಣವು ಶೇ.47.07ರಷ್ಟಿದೆ. ಕೃಷಿ, ಸಹಕಾರ, ನೀರಾವರಿ ಮತ್ತು ಇಂಧನಗಳಿಗೆ ಸದರಿ ಯೋಜನೆಯಲ್ಲಿ ಶೇ.73.9ರಷ್ಟು ಸಂಪನ್ಮೂಲವನ್ನು ಮೀಸಲಿಡಲಾಗಿತ್ತು. ಮುಂದಿನ ಯೋಜನೆಗಳಲ್ಲಿ ನಾವು ನೋಡುವಂತೆ ಕೃಷಿ ಮೇಲಿನ ವಿನಿಯೋಜನೆಯ ಶೇ.10 ದಾಟುವುದಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕನೆಯ ಯೋಜನೆಯಲ್ಲಿ ಕೃಷಿಗೆ ಯೋಜನೆಯ ಶೇ. 23.97ರಷ್ಟನ್ನು ಮೀಸಲಿಟ್ಟಿರುವುದು ವಿಶಿಷ್ಟವಾದ ಸಂಗತಿಯಾಗಿದೆ. ಈ ಕಾರಣದಿಂದಾಗಿ ನಾಲ್ಕನೆಯ ಯೋಜನೆಯಲ್ಲಿ ಕೃಷಿಕ್ಷೇತ್ರದ ವಾರ್ಷಿಕ ಅಭಿವೃದ್ದಿ ಪ್ರಮಾಣ ಶೇ. 3.66ರಷ್ಟಿತ್ತು. ಇಡೀ ದೇಶದಲ್ಲಿ ಕೃಷಿಯ ವಾರ್ಷಿಕ ಅಭಿವೃದ್ದಿ ಪ್ರಮಾಣ ನಾಲ್ಕನೆಯ ಯೋಜನೆ ಅವಧಿಯಲ್ಲಿ (1969-1974) ಶೇ.3.92ರಷ್ಟಿದ್ದರೆ ಕರ್ನಾಟಕದಲ್ಲಿ ಅದು ಶೇ.3.66ರಷ್ಟಿತ್ತು. ಕೃಷಿ ಮತ್ತು ತತ್ಸಂಬಂಧಿ ಚಟುವಟಿಕೆಗಳನ್ನು ತೆಗೆದುಕೊಂಡರೆ ಅಭಿವೃದ್ದಿಯ ವಾರ್ಷಿಕ ಪ್ರಮಾಣ ಶೇ.3.24. ಇದು ರಾಷ್ಟ್ರಮಟ್ಟದ ಅಭಿವೃದ್ದಿ ಪ್ರಮಾಣವಾದ ಶೇ.2.74 ಕ್ಕಿಂತ ಅಧಿಕವಿದೆ(ವಿವರಗಳಿಗೆ ನೋಡಿ: ಸತೀಶ್ಚಂದ್ರನ್, ಕರ್ನಾಟಕ ಅಗ್ರಿಕಲ್ಚರ್: ಪ್ರಾಬ್ಲಮ್ಸ್ ಆಂಡ್ ಪ್ರಾಸ್ಪೆಕ್ಟ್ಸ್). ಕೈಗಾರಿಕಾ ಕ್ಷೇತ್ರದಲ್ಲೂ ಕರ್ನಾಟಕವು ನಾಲ್ಕನೆಯ ಯೋಜನೆಯಲ್ಲಿ ಸಾಧಾರಣ ಬೆಳವಣಿಗೆ ಸಾಧಿಸಿಕೊಂಡಿತು.
ಈ ಯೋಜನೆಯ ಗಾತ್ರವು (ರೂ.350 ಕೋಟಿ) ಮೂರನೆಯ ಯೋಜನೆಯ ವಿನಿಯೋಜನೆಗಿಂತ ಶೇ. 42.15ರಷ್ಟು ಅಧಿಕವಾಗಿತ್ತು. ನಿಗದಿಪಡಿಸಿದ ಮೊತ್ತಕ್ಕಿಂತ ವೆಚ್ಚ ಮಾಡಿದ ಮೊತ್ತವು ಅಧಿಕವಾಗಿತ್ತು. ಈ ಯೋಜನೆಗೆ ನಿಗದಿಪಡಿಸಿದ್ದ ಮೊತ್ತ ರೂ.350 ಕೋಟಿ. ಆದರೆ ವಾಸ್ತವವಾಗಿ ಖರ್ಚು ಮಾಡಿದ ಮೊತ್ತ ರೂ. 359.85 ಕೋಟಿ.
ಎರಡನೆಯ ಮತ್ತು ಮೂರನೆಯ ಯೋಜನೆಗಳಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆಗೆ ಮೀಸಲಿಟ್ಟ ಪ್ರಮಾಣ ಶೇ.10ಕ್ಕಿಂತ ಅಧಿಕವಿತ್ತು. ಆದರೆ ನಾಲ್ಕನೆಯ ಯೋಜನೆಯಲ್ಲಿ ಕೈಗಾರಿಕೆ ಮತ್ತು ಗಣಿಗಾರಿಕೆ ಮೇಲೆ ವಿನಿಯೋಗಿಸಿದ ಪ್ರಮಾಣವು ಕೇವಲ ಶೇ.4.21.

ಮೂಲ : ಗೌರ್ನಮೆಂಟ್ ಆಫ್ ಕರ್ನಾಟಕ : 1980

ಐದು, ಆರು ಮತ್ತು ಏಳನೆಯ ಯೋಜನೆಗಳು 1974ರಿಂದ 1990
ಕೋಷ್ಟಕ – 15, 16, 17 ಮತ್ತು 18ರಲ್ಲಿ ಐದು, ಆರು ಮತ್ತು ಏಳನೆಯ ಯೋಜನೆ ಗಳು ವಲಯವಾರು ವಿನಿಯೋಜನೆ ವಿವರಗಳನ್ನು ನೀಡಲಾಗಿದೆ. ಈ ಯೋಜನಾ ಅವಧಿ ಯಲ್ಲಿ 1978-80ರಲ್ಲಿ ವಾರ್ಷಿಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಯಿತು. ವಾಸ್ತವವಾಗಿ ಐದನೆಯ ಯೋಜನೆಯು ತನ್ನ ಪೂರ್ಣಾವಧಿಯಾದ ಐದು ವರ್ಷಗಳನ್ನು ಪೂರೈಸಲಿಲ್ಲ. ಒಂದು ವರ್ಷ ಮೊದಲೇ ಅದನ್ನು ರದ್ದುಪಡಿಸಲಾಯಿತು. ಅದು 1979ಕ್ಕೆ ಕೊನೆಗೊಳ್ಳುವುದಕ್ಕೆ ಪ್ರತಿಯಾಗಿ 1978ಕ್ಕೆ ಕೊನೆಗೊಂಡಿತು. ಐದು ಮತ್ತು ಆರನೆಯ ಯೋಜನೆಗಳ ನಡುವೆ ಎರಡು ವರ್ಷಗಳ ಅಂತರ ಇದರಿಂದ ಉಂಟಾಯಿತು.

ಈ ನಾಲ್ಕು ಯೋಜನೆಗಳ ಅವಧಿಯಲ್ಲಿ (1974-1990) ಕೃಷಿ ವಲಯದ ಬೆಳವಣಿಗೆ ಪ್ರಮಾಣವು ಅತ್ಯಂತ ಕೆಳಮಟ್ಟ ತಲುಪಿತು. ಅನೇಕ ಬಗೆಯ ಸಂಕಷ್ಟವನ್ನು ಕೃಷಿ ಎದುರಿಸಬೇಕಾಯಿತು. ಈ ನಾಲ್ಕು ಯೋಜನೆಗಳ ಅವಧಿಯಲ್ಲಿ ರಾಜ್ಯದ ಕೃಷಿಯ ಬೆಳವಣಿಗೆ ಪ್ರಮಾಣವು ದೇಶದ ಕೃಷಿ ಬೆಳವಣಿಗೆ ಪ್ರಮಾಣಕ್ಕಿಂತ ಕೆಳಮಟ್ಟದಲ್ಲಿತ್ತು. ಕೃಷಿಯ ಬೆಳವಣಿಗೆ ಪ್ರಮಾಣವು ಏಳನೆಯ ಯೋಜನಾವಧಿಯಲ್ಲಿ ಅತ್ಯಂತ ಕೆಳಮಟ್ಟವನ್ನು (ಶೇ.1.89) ತಲುಪಿರುವುದು ಕೋಷ್ಟಕದಿಂದ ಸ್ಪಷ್ಟವಾಗುತ್ತದೆ.

ಯೋಜನೆಯ ಗಾತ್ರವು ಐದನೆಯ ಯೋಜನೆಯಲ್ಲಿ ರೂ.1076.33 ಕೋಟಿಯಷ್ಟಿ ದ್ದುದು ಏಳನೆಯ ಯೋಜನೆಯಲ್ಲಿ ಅದು ರೂ. 3575 ಕೋಟಿಯಷ್ಟಾಗಿದೆ. ಈ ಯೋಜನೆ ಗಳ ಅವಧಿಯಲ್ಲಿ ಸಾಮಾಜಿಕ ಸೇವೆಗಳಿಗೆ ಮೀಸಲಿಟ್ಟ ಪ್ರಮಾಣವು ಅಧಿಕಗೊಂಡಿರುವುದು ಕಂಡುಬರುತ್ತದೆ. ಐದನೆಯ ಯೋಜನೆಯಲ್ಲಿ ಅದಕ್ಕೆ ಮೀಸಲಿಟ್ಟ ಪ್ರಮಾಣ ಶೇ.17.46ರಷ್ಟಿತ್ತು. ಆದರೆ ಆರನೆಯ ಯೋಜನೆಯಲ್ಲಿ ಅದು ಶೇ.24.48ಕ್ಕೆ ಮತ್ತು ಏಳನೆಯ ಯೋಜನೆಯಲ್ಲಿ ಅದು ಶೇ.28.32ಕ್ಕೆ ಏರಿಕೆಯಾಗಿದೆ. ಈ ವಲಯದ ಎರಡು ಮುಖ್ಯ ಭಾಗಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಯೋಜನಾ ಪ್ರಕ್ರಿಯೆಯಲ್ಲಿ ಉಂಟಾದ ಬಹುಮುಖ್ಯ ಬದಲಾವಣೆ ಇದಾಗಿದೆ. ಮುಂದೆ ನೋಡುವಂತೆ ಹತ್ತನೆಯ ಯೋಜನೆಯಲ್ಲಿ ಅದರ ಪಾಲು ಶೇ.32.56ಕ್ಕೇರುತ್ತದೆ.
ಈ ಯೋಜನೆಗಳ ಅವಧಿಯಲ್ಲಿ (1975-1990) ದೇಶವು ಅನೇಕ ಬಗೆಯ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗಳನ್ನು ಅನುಭವಿಸಿತು. ಅಭಿವೃದ್ದಿಯು ತುಂಬಾ ಕುಂಠಿತಗೊಂಡಿತು. ಅತ್ಯಂತ ಆತಂಕಕಾರಿಯಾದ ಸಂಗತಿಯೆಂದರೆ ಆಹಾರದ ಉತ್ಪಾದನೆಯು 1980-81ರಲ್ಲಿ 62 ಲಕ್ಷ ಟನ್ಗಳಿಷ್ಟಿದ್ದುದು 1990-91ರಲ್ಲೂ ಅದು 62 ಲಕ್ಷ ಟನ್ಗಳಲ್ಲೇ ಸ್ಥಿರಗೊಂಡಿತ್ತು. ಹೀಗೆ ಎಂಬತ್ತರ ದಶಕವು ಅಭಿವೃದ್ದಿಯ ದೃಷ್ಟಿಯಿಂದ ಅತ್ಯಂತ ಮಂದಗತಿಯ ಅವಧಿಯಾಗಿತ್ತು.

ಕೋಷ್ಟಕ-19ರಲ್ಲಿ ಕರ್ನಾಟಕದ ಕೃಷಿರಂಗದ ಬೆಳವಣಿಗೆ ಪ್ರಮಾಣದ ವಿವರವನ್ನು ನೀಡಲಾಗಿದೆ.

ಎಂಟು, ಒಂಬತ್ತು ಮತ್ತು ಹತ್ತನೆಯ ಯೋಜನೆಗಳು : 1990-91 ರಿಂದ 2006-07
ಅನೇಕ ಆರ್ಥಿಕ-ರಾಜಕೀಯ ಹಾಗೂ ಸಾಮಾಜಿಕ ಕಾರಣಗಳಿಂದಾಗಿ ದೇಶದಲ್ಲಿ ಏಳನೆಯ ಯೋಜನೆಯು ಮುಗಿದ ಮೇಲೆ, ಅಂದರೆ 1990-91ರಲ್ಲಿ ಎಂಟನೆಯ ಯೋಜನೆಯನ್ನು ಆರಂಭಿಸುವುದು ಸಾಧ್ಯವಾಗಲಿಲ್ಲ. ಏಳನೆಯ ಮತ್ತು ಎಂಟನೆಯ ಯೋಜನೆಗಳ ಮಧ್ಯೆ (1990-91 ಮತ್ತು 1991-92) ವಾರ್ಷಿಕ ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಯಿತು.
ಕೋಷ್ಟಕ-20,21,22 ಮತ್ತು 23ರಲ್ಲಿ ಕ್ರಮವಾಗಿ ವಾರ್ಷಿಯ ಯೋಜನೆಗಳು (1990-92) ಎಂಟನೆಯ ಯೋಜನೆ (1992-1997), ಒಂಬತ್ತನೆಯ ಯೋಜನೆ (1997-2002) ಮತ್ತು ಹತ್ತನೆಯ ಯೋಜನೆ(2002-2007)ಗಳ ವಲಯವಾರು ವಿನಿಯೋಜನೆಯ ವಿವರಗಳನ್ನು ನೀಡಲಾಗಿದೆ.


ಮೂಲ : ಗೌರ್ನಮೆಂಟ್ ಆಫ್ ಕರ್ನಾಟಕ : 1997

ಈ ಯೋಜನೆಗಳ ಅವಧಿಯಲ್ಲಿ ಕೃಷಿಯ ಪಾಲು ಶೇ.5ಕ್ಕೆ ಕುಸಿದಿದೆ. ಮೊದಲ ಏಳು ಯೋಜನೆಗಳ ಅವಧಿಯಲ್ಲಿ ಅದು ಶೇ.10ರಷ್ಟಿತ್ತು. ಆದರೆ ಸಾಮಾಜಿಕ ಸೇವೆಗಳ ಪಾಲು ಮಾತ್ರ ಹಿಂದೆ ಶೇ.20ಕ್ಕಿಂತ ಕಡಿಮೆಯಿತ್ತು. ಇದು ಎಂಟನೆಯ ಯೋಜನೆಯಲ್ಲಿ ಶೇ.26.58ಕ್ಕೆ, ಒಂಬತ್ತನೆಯ ಯೋಜನೆಯಲ್ಲಿ ಶೇ.30.79 ಮತ್ತು ಹತ್ತನೆಯ ಯೋಜನೆಯಲ್ಲಿ ಶೇ.32.50ಕ್ಕೆ ಏರಿಕೆಯಾಗಿರುವುದು ಕಂಡುಬರುತ್ತದೆ.
ಸಾಮಾಜಿಕ ಸೇವೆಗಳು ಮಾನವ ಅಭಿವೃದ್ದಿ ಸೂಚಿಗಳಾದ ಶಿಕ್ಷಣ ಮತ್ತು ಆರೋಗ್ಯವನ್ನು ಒಳಗೊಳ್ಳುತ್ತವೆ. ಹೀಗೆ 1990ರ ನಂತರ ಯೋಜನೆಗಳಲ್ಲಿ ಮಾನವ ಅಭಿವೃದ್ದಿಗೆ ಸಂಬಂಧಿಸಿದ ಸಂಗತಿಗಳಿಗೆ ಹೆಚ್ಚಿನ ಒತ್ತನ್ನು ನೀಡಲು ತೊಡಗಿದ್ದು ಕಂಡುಬರುತ್ತದೆ.
ನೀರಾವರಿ ಮತ್ತು ಇಂಧನಗಳ ಪಾಲು ಇಲ್ಲಿನ ಮೂರು ಯೋಜನೆಗಳ ಅವಧಿಯಲ್ಲಿ ಕಡಿಮೆಯಾಗಿರುವುದು ಕಂಡುಬರುತ್ತವೆ. ಇವೆರಡೂ ವಲಯಗಳಿಗೆ ಎಂಟನೆಯ ಯೋಜನೆಯಲ್ಲಿ ಶೇ.44.1ರಷ್ಟು ಹಣವನ್ನು ಮೀಸಲಿಡಲಾಗಿತ್ತು.

ಮೂಲ : ಕರ್ನಾಟಕ ಸರ್ಕಾರ : 2004, ಇಂಟರ್ಸ್ಟೇಟ್ ಇಂಡಿಕೇಟರ್ಸ್. ಪ್ಲಾನಿಂಗ್ ಡಿಪಾರ್ಟ್ಮೆಂಟ್.

ಆದರೆ ಅದು ಒಂಬತ್ತನೆಯ ಯೋಜನೆಯಲ್ಲಿ ಶೇ. 42.37ಕ್ಕೆ ಮತ್ತು ಹತ್ತನೆಯ ಯೋಜನೆಯಲ್ಲಿ ಅದು ಶೇ. 37.75ಕ್ಕೆ ಕಡಿಮೆಯಾಗಿದೆ.

ಕೃಷಿ ವಲಯದ ಬೆಳವಣಿಗೆ
ಕೋಷ್ಟಕ 24ರಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಮುಖ್ಯ ಸೂಚಿಗಳ ವಿವರ ನೀಡಲಾಗಿದೆ.
ಈ ಅವಧಿಯಲ್ಲಿ ಆಹಾರದ ಉತ್ಪಾದನೆಯು 100 ಲಕ್ಷ ಟನ್ ಗಡಿ ದಾಟಿತು. ಆಹಾರ ಧಾನ್ಯ ಬೆಳೆಯುವ ನಿವ್ವಳ ಪ್ರದೇಶ 69.18 ಲಕ್ಷ ಹೆಕ್ಟೇರುಗಳಿಂದ 74.28 ಲಕ್ಷ ಹೆಕ್ಟೇರುಗಳಿಗೇರಿತು. ಅಧಿಕ ಇಳುವರಿ ತಳಿಗಳ ಸಾಗುವಳಿ ಪ್ರದೇಶವು 33.44 ಲಕ್ಷ ಹೆಕ್ಟೇರುಗಳಿಂದ 52.11 ಲಕ್ಷ ಹೆಕ್ಟೇರುಗಳಿಗೇರಿತು. ಆದರೆ ಒಣಭೂಮಿ ಬೇಸಾಯಕ್ಕೆ ಸಂಬಂಧಿಸಿದಂತೆ ತೀವ್ರ ಬದಲಾವಣೆಗಳು ನಡೆಯಲಿಲ್ಲ. ಈ ಬಗ್ಗೆ ಮುಂದಿನ ಭಾಗದಲ್ಲಿ ಚರ್ಚೆ ಮಾಡಲಾಗಿದೆ.

ಮೂಲ : ಕರ್ನಾಟಕ ಸರ್ಕಾರ : 2006, ಆರ್ಥಿಕ ಸಮೀಕ್ಷೆ:2005-06

ಕೈಗಾರಿಕಾ ವಲಯದ ಬೆಳವಣಿಗೆ
ಕೋಷ್ಟಕ-25ರಲ್ಲಿ 1990-91ರಿಂದ 2005-06ರ ಅವಧಿಯಲ್ಲಿ ಕೈಗಾರಿಕಾ ವಲಯದಲ್ಲಿನ ಬೆಳವಣಿಗೆ ವಿವರಗಳನ್ನು ಕೋಷ್ಟಕ 25ರಲ್ಲಿ ನೀಡಲಾಗಿದೆ.
ಕಳೆದ 15 ವರ್ಷಗಳ ಅವಧಿಯಲ್ಲಿ ಕೈಗಾರಿಕಾ ವಲಯದ ವಾರ್ಷಿಕ ಸರಾಸರಿ ಅಭಿವೃದ್ದಿ ಪ್ರಮಾಣವು ಶೇ.5ಕ್ಕಿಂತ ಅಧಿಕವಿದೆ. ಅದರಲ್ಲೂ ಮೂಲವಸ್ತುಗಳ ಮತ್ತು ಬಂಡವಾಳ ವಸ್ತುಗಳ ಉತ್ಪಾದನೆಯ ವಾರ್ಷಿಕ ಬೆಳವಣಿಗೆ ಪ್ರಮಾಣವು ಶೇ. 7 ದಾಟಿದೆ. ಇವೆಲ್ಲದರ ಪರಿಣಾಮವಾಗಿ ರಾಜ್ಯದ ವರಮಾನವು ಉನ್ನತ ಮಟ್ಟಕ್ಕೇರಿದೆ.

ಹತ್ತನೆಯ ಯೋಜನೆಯಲ್ಲಿ ಯೋಜನಾ ಆಯೋಗವು ವರಮಾನದ ಬೆಳವಣಿಗೆಗೆ ನಿಗದಿಪಡಿಸಿದ್ದ ಗುರಿ ವಾರ್ಷಿಕ ಶೇ.10.1. ರಾಜ್ಯದ ಒಟ್ಟು ದೇಶೀಯ ಉತ್ಪನ್ನವು 2004-05ನೆಯ ಸಾಲಿನಲ್ಲಿ ಶೇ.10.2ರಷ್ಟು ಬೆಳವಣಿಗೆ ಸಾಧಿಸಿತ್ತು. ಆದರೆ 2005-06ರಲ್ಲಿ ಅದು ಶೇ.8.7ಕ್ಕೆ ಇಳಿದಿದೆ. ಸರ್ಕಾರದ ವರದಿ ಪ್ರಕಾರ 1993-94ರ ಬೆಲೆಗಳಲ್ಲಿ ರಾಜ್ಯದ ವರಮಾನವು 1993-94ರಿಂದ 2003-04ರ ಅವಧಿಯಲ್ಲಿ ಸಾಧಿಸಿಕೊಂಡ ವಾರ್ಷಿಕ ಬೆಳವಣಿಗೆ ಪ್ರಮಾಣ ಶೇ.6.5 ಹಾಗೂ ಇದೇ ಅವಧಿಯಲ್ಲಿ ತಲಾ ವರಮಾನದ ಬೆಳವಣಿಗೆ ಪ್ರಮಾಣ ಶೇ.4.9.

ವಿಕೇಂದ್ರೀಕೃತ ಯೋಜನೆ : ರಾಜ್ಯದ ಸಾಧನೆ
ತಳಮಟ್ಟಕ್ಕೆ, ಅಂದರೆ ಗ್ರಾಮ ಮಟ್ಟಕ್ಕೆ ಅಧಿಕಾರವನ್ನು ಒಯ್ಯಬೇಕೆಂಬ ಉದ್ದೇಶದಿಂದ ವಿನೂತನವಾದ ಪಂಚಾಯತ್ರಾಜ್ ವ್ಯವಸ್ಥೆ ಕರ್ನಾಟಕದಲ್ಲಿ 01.04.1987ರಲ್ಲಿ ಅಸ್ತಿತ್ವಕ್ಕೆ ಬಂದಿತು. ಜಿಲ್ಲಾ ಪರಿಷತ್ಗಳು ಮತ್ತು ಮಂಡಲ ಪಂಚಾಯಿತಿಗಳನ್ನು ಒಳಗೊಂಡ ವ್ಯವಸ್ಥೆ ವಿಕೇಂದ್ರೀಕರಣ ಪ್ರಕ್ರಿಯೆಯಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಜಿಲ್ಲಾ ಯೋಜನಾ ಪ್ರಕ್ರಿಯೆಯ ಪ್ರಯತ್ನವು 1978-79ರಲ್ಲೇ ಆರಂಭವಾಗಿತ್ತು. ಆದರೆ ಅಂದು ತಳಮಟ್ಟದಲ್ಲಿ ಚುನಾಯಿತ ಸಂಸ್ಥೆಗಳಿರಲಿಲ್ಲ.
ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಪರಿಷತ್ತುಗಳು ಮತ್ತು ಮಂಡಲ ಪಂಚಾಯಿತಿಗಳಿಗೆ ತಮ್ಮ ಕ್ಷೇತ್ರದಲ್ಲಿ ಅಭಿವೃದ್ದಿ ಯೋಜನೆ ರೂಪಿಸಲು ಅಗತ್ಯವಾದ ಹಣಕಾಸನ್ನು ಒಂದು ಮೊತ್ತದಲ್ಲಿ ನೀಡುವ ಕ್ರಮವು ಜಾರಿಗೆ ಬಂದಿತು. ಈ ವಿಧಾನದಲ್ಲಿ ಕೆಲವೊಂದು ಅಭಿವೃದ್ದಿ ಕಾರ್ಯಕ್ರಮಗಳನ್ನು ಜಿಲ್ಲಾ ಪರಿಷತ್ತುಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿಗಳಿಗೆ ಹಣವನ್ನು ವರ್ಗಾಯಿಸಲು ಒಂದು ಸೂತ್ರವನ್ನು ರೂಪಿಸಲಾಯಿತು. ಇದರಿಂದಾಗಿ ಹಿಂದುಳಿದ ಜಿಲ್ಲೆಗಳಿಗೆ ಹೆಚ್ಚು ಹಣಕಾಸು ದೊರೆಯುವಂತಾಯಿತು. ಅದೇ ರೀತಿ ಮಂಡಲ ಪಂಚಾಯಿತಿಗಳಿಗೆ ಹಣಕಾಸು ಸಂಪನ್ಮೂಲ ಒದಗಿಸಲು ಒಂದು ಸೂತ್ರವನ್ನು ರೂಪಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಯೋಜನೆ ರೂಪಿಸುವ ಕಾರ್ಯದ ಮೇಲುಸ್ತು ವಾರಿಯನ್ನು ರಾಜ್ಯ ಯೋಜನಾ ಇಲಾಖೆಗೆ ವಹಿಸಲಾಯಿತು.
ಜಿಲ್ಲಾ ಪರಿಷತ್ತುಗಳು ಹಾಗೂ ಮಂಡಲ ಪಂಚಾಯಿತಿಗಳಿಗೆ ಹಣಕಾಸು ವಿನಿಯೋಜನೆ ನಿರ್ಧರಿಸಲು 1989ರಲ್ಲಿ ಸರ್ಕಾರವು ಹಣಕಾಸು ಆಯೋಗವನ್ನು ನೇಮಿಸಿತು. ಈ ಆಯೋಗವು ಮಾರ್ಚ್ 1989ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಸರ್ಕಾರವು ವಿಕೇಂದ್ರೀಕೃತ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಳಲು ಡಾ.ಕೃಷ್ಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿತು. ಸಮಿತಿಯು ಅತ್ಯಂತ ಉತ್ತಮವಾದ ರೀತಿಯಲ್ಲಿ ಜಿಲ್ಲಾ ಪರಿಷತ್ತುಗಳು ಮತ್ತು ಮಂಡಲ ಪಂಚಾಯಿತಿಗಳು ಕಾರ್ಯ ಮಾಡುತ್ತಿರುವ ರೀತಿಯನ್ನು ಗುರುತಿಸಿತು.

ಜಿಲ್ಲಾ ಪರಿಷತ್ತು ಯೋಜನೆಗಳು : 1987-1990
ಈ ಸಂಸ್ಥೆಗಳು 1.04.1987ರಲ್ಲಿ ಅಸ್ತಿತ್ವಕ್ಕೆ ಬಂದಿದ್ದರಿಂದ ಅವು 1987-88ನೆಯ ಸಾಲಿಗೆ ಯೋಜನೆ ರೂಪಿಸಲು ಸಾಧ್ಯವಾಗಲಿಲ್ಲ. ಅವು 1988-89ನೆಯ ಸಾಲಿನಲ್ಲಿ ಪ್ರಥಮ ಬಾರಿಗೆ ಯೋಜನೆ ರೂಪಿಸಿದವು. ಜಿಲ್ಲಾ ಪರಿಷತ್ತುಗಳು ಹಾಗೂ ಮಂಡಲ ಪಂಚಾಯಿತಿಗಳು 1987-90ರ ಅವಧಿಯಲ್ಲಿ ಯೋಜನೆಗಾಗಿ ಪಡೆದ ಹಣಕಾಸು ಸಂಪನ್ಮೂಲದ ವಿವರವನ್ನು ಕೋಷ್ಟಕ 26ರಲ್ಲಿ ನೀಡಲಾಗಿದೆ.

ಮೂಲ : ಕರ್ನಾಟಕ ಸರ್ಕಾರ, 1990, ಎಂಟನೆಯ ಯೋಜನೆಯ ಕರಡು : 1990-95, ಪು.v-14

ಎಂಟನೆಯ ಯೋಜನೆಯಲ್ಲಿ ಜಿಲ್ಲಾ ವಲಯದ ಪಾಲು : 1992-1997
ಎಂಟನೆಯ ಯೋಜನೆಯ ಅವಧಿಯಲ್ಲಿ ರಾಜ್ಯ ಯೋಜನಾ ಮೊತ್ತ ರೂ.20380 ಕೋಟಿ. ಇದರಲ್ಲಿ ರೂ.4809 ಕೋಟಿಗಳಲ್ಲಿ (ಶೇ.23.6) ಜಿಲ್ಲಾ ವಲಯಕ್ಕೆ ಮೀಸಲಿಡಲಾಗಿತ್ತು. ಜಿಲ್ಲಾ ಪಂಚಾಯಿತಿಗಳು ತಮ್ಮ ಯೋಜನೆಯಲ್ಲಿ ಅತ್ಯಂತ ಹೆಚ್ಚು ಶೇ.28.7ರಷ್ಟನ್ನು ಗ್ರಾಮೀಣ ಅಭಿವೃದ್ದಿಗೆ ಮೀಸಲಿಟ್ಟಿದ್ದವು.

ಒಂಬತ್ತನೆಯ ಯೋಜನೆ : 1997-2002
ಈ ಯೋಜನೆಯ ಒಟ್ಟು ಮೊತ್ತವಾದ ರೂ. 23400 ಕೋಟಿಗಳಲ್ಲಿ ಜಿಲ್ಲಾ ವಲಯಕ್ಕೆ ತೆಗೆದಿರಿಸಿದ ಮೊತ್ತ ರೂ.3957 ಕೋಟಿ(ಶೇ.16.9). ಈ ಯೋಜನಾ ಅವಧಿಯಲ್ಲೂ ಗ್ರಾಮೀಣ ಅಭಿವೃದ್ದಿಗೆ ಅತ್ಯಂತ ಹೆಚ್ಚು ಶೇ.28.8ರಷ್ಟನ್ನು ವಿನಿಯೋಗಿಸಲಾಯಿತು.
ಕರ್ನಾಟಕವು 1990ರ ದಶಕದಲ್ಲಿ ವಿಕೇಂದ್ರೀಕೃತ ಯೋಜನೆಗೆ ಸಂಬಂಧಿಸಿದಂತೆ ಮುಂಚೂಣಿಯಲ್ಲಿತ್ತು. ಜಿಲ್ಲಾಮಟ್ಟದಲ್ಲಿ ಸಮಗ್ರ ಜಿಲ್ಲಾ ಅಭಿವೃದ್ದಿ ಯೋಜನೆ ರೂಪಿಸಲು ‘ಜಿಲ್ಲಾ ಯೋಜನಾ ಸಮಿತಿ’ಗಳು ಅಸ್ತಿತ್ವಕ್ಕೆ ಬಂದವು. ಆದರೆ ಇಂದಿಗೂ ಜಿಲ್ಲಾ ಯೋಜನಾ ಸಮಿತಿಗಳು ಕರ್ನಾಟಕದಲ್ಲಿ ಕ್ರಿಯಾಶೀಲವಾಗಲು ಸಾಧ್ಯವಾಗಿಲ್ಲ. ಅವು ಕೇವಲ ಹೆಸರಿಗೆ ಅನ್ನುವಂತಾಗಿವೆ. ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಯೋಜನೆಗಳನ್ನು ಸಂಯೋಜಿಸಿ ಜಿಲ್ಲಾ ಯೋಜನಾ ಸಮಿತಿಗಳು ಜಿಲ್ಲಾ ಸಮಗ್ರ ಯೋಜನೆ ರೂಪಿಸಬೇಕು. ಕರ್ನಾಟಕದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಇಂದು ವಿಕೇಂದ್ರೀಕರಣ ವ್ಯವಸ್ಥೆಯು ಒಂದು ರೀತಿಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ರಾಜ್ಯಮಟ್ಟದಲ್ಲಿ ಜನಪ್ರತಿನಿಧಿಗಳು ಜಿಲ್ಲಾಮಟ್ಟದ ಸ್ಥಳೀಯ ಸಂಸ್ಥೆಗಳ ಮೇಲೆ ಸವಾರಿ ನಡೆಸಲು ಹೊರಟಿವೆ. ಇದೊಂದು ಅತ್ಯಂತ ವಿಷಾದನೀಯವಾದ ಸಂಗತಿಯಾಗಿದೆ.

ಅಭಿವೃದ್ದಿ ಯೋಜನೆಗಳ ಮೌಲ್ಯಮಾಪನ
ಕರ್ನಾಟಕವು ಹತ್ತು ಪಂಚವಾರ್ಷಿಕ ಯೋಜನೆಗಳನ್ನು ಮುಗಿಸಿ 2007ರಿಂದ ಹನ್ನೊಂದನೆಯ ಯೋಜನೆಯನ್ನು ಆರಂಭಿಸಲಿದೆ. ಕಳೆದ 50 ವರ್ಷಗಳಲ್ಲಿ ರಾಜ್ಯವು ಗಣನೀಯವಾದ ಅಭಿವೃದ್ದಿಯನ್ನು ಸಾಧಿಸಿಕೊಂಡಿದೆ. ಸಾಮಾಜಿಕ-ರಾಜಕೀಯ ಬದಲಾವಣೆಗಳು ಸಂಭವಿಸಿವೆ. ಅದರ ವರಮಾನದ ವಾರ್ಷಿಕ ಬೆಳವಣಿಗೆ ಪ್ರಮಾಣವು ಎರಡಂಕಿ ಮುಟ್ಟುವ ಹಂತದಲ್ಲಿದೆ. ಕೃಷಿ, ಕೈಗಾರಿಕೆ, ಸಾರಿಗೆ, ಸಂಪರ್ಕ, ಬ್ಯಾಂಕಿಂಗ್, ವಿದ್ಯುತ್ತು, ನೀರಾವರಿ, ವ್ಯಾಪಾರ, ಶಿಕ್ಷಣ, ಆರೋಗ್ಯ – ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಅದು ಪ್ರಗತಿ ಸಾಧಿಸಿಕೊಂಡಿದೆ. ಈಗಾಗಲೆ ತಿಳಿಸಿರುವಂತೆ ಅವರ ಸಾಧನೆಯು ಕ್ರಾಂತಿಕಾರಕ ಅಥವಾ ಕಣ್ಣು ಕೋರೈಸುವಂತಹದ್ದಲ್ಲ. ಆದರೆ ಅದು ತಲೆತಗ್ಗಿಸುವಂತಹದ್ದೂ ಅಲ್ಲ.
ಸಾಮಾಜಿಕವಾಗಿ ಅಭಿವೃದ್ದಿಯ ಹರವು ವಿಸ್ತೃತಗೊಂಡಿದೆ. ರಾಜ್ಯದಲ್ಲಿ ಕೃಷಿ ಅವಲಂಬನೆಯ ಪ್ರಮಾಣ 1991ರಲ್ಲಿ ಶೇ.63.13ರಷ್ಟಿದ್ದುದು 2001ರಲ್ಲಿ ಶೇ.55.88 ಕ್ಕಿಳಿದಿದೆ. ಅಂದರೆ ಕೃಷಿಯೇತರ ಚಟುವಟಿಕೆಗಳ ಪ್ರಮಾಣವು ಸಾಪೇಕ್ಷವಾಗಿ ಏರಿಕೆಯಾಗುತ್ತಿದೆ. ಈ ಬಗೆಯ ಬದಲಾವಣೆಯು ಮಂದಗತಿಯಲ್ಲಿ – ಮಧ್ಯಮಗತಿಯಲ್ಲಿ ನಡೆದಿದೆ. ಸಮಾಜದಲ್ಲಿ ವಂಚಿತ ವರ್ಗವು ಅಭಿವೃದ್ದಿಯಲ್ಲಿ ಪಾಲು ಪಡೆಯತೊಡಗಿದೆ ಮತ್ತು ಫಲವನ್ನು ಒತ್ತಾಯಿಸುತ್ತಿದೆ. ಆರ್ಥಿಕವಾಗಿ ಸದೃಢವಾಗಿ ರಾಜ್ಯವು ಅಭಿವೃದ್ದಿ ಸಾಧಿಸಿಕೊಂಡಿದೆ. ಆದರೆ ಆತಂಕದ ಸಂಗತಿಯೆಂದರೆ ವರಮಾನಕ್ಕೆ ಸಂಬಂಧಿಸಿದಂತೆ ಅಸಮಾನತೆಯು ತೀವ್ರವಾಗುತ್ತಿದೆ. ಉದಾಹರಣೆಗೆ 1960/61ರಲ್ಲಿ ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಶೇ.75ರಷ್ಟು ಜನರು ರಾಜ್ಯದ ಒಟ್ಟು ವರಮಾನದಲ್ಲಿ ಶೇ.61ರಷ್ಟನ್ನು ಅನುಭವಿಸುತ್ತಿದ್ದರು. ಆದರೆ 2000-01ರಲ್ಲಿ ಒಟ್ಟು ದುಡಿಮೆಗಾರರಲ್ಲಿ ಶೇ.60ರಷ್ಟು ಜನರು ರಾಜ್ಯದ ವರಮಾನದ ಕೇವಲ ಶೇ.27ರಷ್ಟನ್ನು ಮಾತ್ರ ಅನುಭವಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ 1960/61ರಲ್ಲಿ ಪ್ರಾಥಮಿಕೇತರ ವಲಯದ ಶೇ.25ರಷ್ಟು ದುಡಿಮೆಗಾರರು ವರಮಾನದ ಶೇ.39ರಷ್ಟನ್ನು ಪಾಲು ಪಡೆದಿದ್ದರು. ಇದು 2000-01ರಲ್ಲಿ ತೀವ್ರ ಬದಲಾವಣೆಯಾಗಿದೆ. ಪ್ರಾಥಮಿಕೇತರ ವಲಯದ ಶೇ.40ರಷ್ಟು ದುಡಿಮೆಗಾರರು ವರಮಾನದ ಶೇ.73ರಷ್ಟು ಪಾಲು ಅನುಭವಿಸುತ್ತಿದ್ದಾರೆ. ಈ ಸಂಗತಿ ಸ್ಥೂಲವಾಗಿ ರಾಜ್ಯದಲ್ಲಿ ಅಸಮಾನತೆಯು ತೀವ್ರವಾಗಿ ಏರಿಕೆಯಾಗಿರುವುದನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯದ ತಲಾವರಮಾನವು 1964-65ರಲ್ಲಿ ರಾಷ್ಟ್ರಮಟ್ಟದ ತಲಾವರಮಾನದ ಶೇ.91.66 ರಷ್ಟಿದ್ದುದು 2002-03ರಲ್ಲಿ ಅದು ಶೇ.97.27ರಷ್ಟಾಗಿದೆ. ರಾಜ್ಯದ ಒಟ್ಟು ಸಾಕ್ಷರತೆಯು 1961ರಲ್ಲಿ ದೇಶದಲ್ಲಿನ ಸಾಕ್ಷರತೆಯ ಶೇ.88.34ರಷ್ಟಿದ್ದುದು 2001 ಅದು ಶೇ.103.92ರಷ್ಟಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಸಾಕ್ಷರತೆಯು 1991ರಲ್ಲಿ ಒಟ್ಟು ಜನಸಂಖ್ಯೆಯ ಸಾಕ್ಷರತೆಯ ಶೇ.67.91ರಷ್ಟಿದ್ದುದು 2001ರಲ್ಲಿ ಅದು ಶೇ.78.91ರಷ್ಟಾಗಿದೆ. ಮಹಿಳೆಯರ ಸಾಕ್ಷರತೆಯು 1961ರಲ್ಲಿ ಪುರುಷರ ಸಾಕ್ಷರತೆಯ ಶೇ.39.49ರಷ್ಟಿದ್ದುದು 2001ರಲ್ಲಿ ಅದು ಶೇ.74.71ರಷ್ಟಾಗಿದೆ.
ಹೀಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಅದರ ಪ್ರಗತಿಯು ಉತ್ತೇಜನಕಾರಿ ಯಾಗಿದೆ. ಪ್ರಾಕೃತಿಕ ಸಂಪನ್ಮೂಲದ ದೃಷ್ಟಿಯಿಂದ ಅನನುಕೂಲ ಸ್ಥಿತಿಯಲ್ಲಿರುವ ರಾಜ್ಯವು ಕಳೆದ 50 ವರ್ಷಗಳಲ್ಲಿ ಸಾಧಿಸಿಕೊಂಡಿರುವ ಸಾಧನೆಯು ಕಡಿಮೆಯಾದುದೇನಲ್ಲ. ಜನಸಂಖ್ಯೆಯ ಬೆಳವಣಿಗೆಯನ್ನು ಅದು ಸಮರ್ಥವಾಗಿ ನಿಯಂತ್ರಿಸುವುದರಲ್ಲಿ ಯಶಸ್ವಿ ಯಾಗಿದೆ. ಇಡೀ ದೇಶದಲ್ಲಿ ಒಟ್ಟು ಜನಸಂಖ್ಯೆಯಲ್ಲಿ 0-6 ವಯೋಮಾನದ ಮಕ್ಕಳ ಪ್ರಮಾಣವು 2001ರಲ್ಲಿ ಶೇ.15.37ರಷ್ಟಿದ್ದರೆ ಕರ್ನಾಟಕದಲ್ಲಿ ಅವರ ಪ್ರಮಾಣ ಶೇ.13.59. ವಾರ್ಷಿಕ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ 1991-2001ರಲ್ಲಿ ರಾಷ್ಟ್ರ ಮಟ್ಟದಲ್ಲಿ ಶೇ.2.13ರಷ್ಟಿದ್ದರೆ ಕರ್ನಾಟಕದಲ್ಲಿ ಅದು 1.72ರಷ್ಟಿದೆ.
ಕೃಷಿಗೆ ಸಂಬಂಧಿಸಿದಂತೆ ರಾಜ್ಯವು ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟು ಕೇವಲ ರೈತರ ಆತ್ಮಹತ್ಯೆಗೆ ಸಂಬಂಧಿಸಿದುದಲ್ಲ. ಅದು ನಮ್ಮ ಒಟ್ಟಾರೆ ಆರ್ಥಿಕ ನೀತಿಗೆ ಸಂಬಂಧಿಸಿದ ಸಂಗತಿಯಾಗಿದೆ. ಕರ್ನಾಟಕದಲ್ಲಿ ಇಂದು 131 ಲಕ್ಷ ದುಡಿಮೆಗಾರರು ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ. ಇದರಲ್ಲಿ ದಿನಗೂಲಿ ದುಡಿಮೆಗಾರರ ಸಂಖ್ಯೆ 62 ಲಕ್ಷ. ಈ 62 ಲಕ್ಷ ದುಡಿಮೆಗಾರರ ದಿನಗೂಲಿ ಸರಾಸರಿ ರೂ. 50ರಿಂದ ರೂ. 70 ದಾಟುವುದಿಲ್ಲ. ಈ 62 ಲಕ್ಷ ದಿನಗೂಲಿ ಕೃಷಿ ದುಡಿಮೆಗಾರರಲ್ಲಿ ಮಹಿಳೆಯರ ಸಂಖ್ಯೆ 36 ಲಕ್ಷ (ಶೇ.58). ಇವರ ಬದುಕು ಅತ್ಯಂತ ದುಸ್ಥಿತಿಯಲ್ಲಿದೆ. ಇವರೆಲ್ಲರೂ ಆಹಾರ ಅಭದ್ರತೆಯಿಂದ ನರಳುತ್ತಿದ್ದಾರೆ. ಆರೋಗ್ಯ ಮತ್ತು ಶಿಕ್ಷಣಗಳಿಂದ ಇದು ವಂಚಿತವಾದ ವರ್ಗವಾಗಿದೆ.
ಇದಕ್ಕಿಂತ ಮುಖ್ಯವಾಗಿ ಕೃಷಿಗೆ ಸಂಬಂಧಿಸಿದಂತೆ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೆಂದರೆ ಒಣಭೂಮಿ ಬೇಸಾಯ. ಸುಮಾರು 75 ಲಕ್ಷ ಹೆಕ್ಟೇರು ಭೂಮಿ ರಾಜ್ಯದಲ್ಲಿ ಮಳೆಯನ್ನು ಆಶ್ರಯಿಸಿಕೊಂಡಿದೆ. ಆದರೆ ಒಣಭೂಮಿ ಬೇಸಾಯದ ಮೇಲೆ ಸರ್ಕಾರವು ತೊಡಗಿಸುತ್ತಿರುವ ಬಂಡವಾಳ ನಿಕೃಷ್ಟವಾದುದು. ಅನೇಕ ರಾಷ್ಟ್ರಮಟ್ಟದ ಅಧ್ಯಯನಗಳು ತೋರಿಸಿರುವಂತೆ ಬಡತನದ ಪ್ರಮಾಣವನ್ನು ಕಡಿಮೆ ಮಾಡಲು ಇರುವ ಪರಿಣಾಮಕಾರಿ ಮಾರ್ಗವೆಂದರೆ ಕೃಷಿ ಕ್ಷೇತ್ರದಲ್ಲಿ ತೀವ್ರ ಬೆಳವಣಿಗೆ ಸಾಧಿಸಿಕೊಳ್ಳುವುದಾಗಿದೆ(ವಿವರಗಳಿಗೆ ನೋಡಿ : ಮಾರ್ಟಿನ್ ರಾವೇಲಿಯನ್ : 2000, ಶೆನ್ಗೆನ್ಪಾನ್, ಪೀಟರ್ ಹಾಜೆಲ್ : 2000).
ಕೃಷಿಕ್ಷೇತ್ರವನ್ನು ಅವಲಂಬಿಸಿಕೊಂಡಿರುವ ದಿನಗೂಲಿಗಳ ಆರೋಗ್ಯದ ಮಟ್ಟ ಹಾಗೂ ಶಿಕ್ಷಣದ ಮಟ್ಟವನ್ನು ಸುಧಾರಿಸುವುದರಿಂದಲೂ ಬಡತನದ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಏಕೆಂದರೆ ಅಮರ್ತ್ಯಸೆನ್, ಮೆಹಬೂಬ್ ಉಲ್ಹಕ್ ಮುಂತಾದವರ ಪ್ರಕಾರ ಜನರ ಧಾರಣ ಸಾಮರ್ಥ್ಯವನ್ನು ನಿರ್ಧರಿಸುವ ಬಹುಮುಖ್ಯ ಚಲಗಳೆಂದರೆ ಶಿಕ್ಷಣ ಮತ್ತು ಆರೋಗ್ಯ. ಮುಂದಿನ ಪಂಚವಾರ್ಷಿಕ ಯೋಜನೆಗಳಲ್ಲಿ ಕರ್ನಾಟಕ ಸರ್ಕಾರವು ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು.
1. ಕೃಷಿಯ ಮೇಲೆ, ಅದರಲ್ಲೂ ಒಣಭೂಮಿ ಬೇಸಾಯದ ಮೇಲೆ ತೊಡಗಿಸುವ ಬಂಡವಾಳವನ್ನು ಅಧಿಕಗೊಳಿಸಬೇಕು. ಕೃಷಿಕ್ಷೇತ್ರದಲ್ಲಿ ಉನ್ನತ ಮಟ್ಟದ ಬೆಳವಣಿಗೆ ಸಾಧಿಸಿಕೊಳ್ಳದೆ ಮತ್ತು ಅದರಲ್ಲಿ ದೃಢತೆಯನ್ನು ಸಾಧಿಸಿಕೊಳ್ಳದೆ ಬಡತನವನ್ನು ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ.
2. ಕೃಷಿಯೇತರ ಕ್ಷೇತ್ರಗಳ ವಿಸ್ತರಣೆಯ ಲಾಭವನ್ನು ರಾಜ್ಯದ ಬಡವರ್ಗ ಪಡೆದುಕೊಳ್ಳ ಬೇಕಾದರೆ ಧಾರಣ ಸಾಮರ್ಥ್ಯವನ್ನು ಉತ್ತಮಪಡಿಸಬೇಕಾಗುತ್ತದೆ. ಅದಕ್ಕಾಗಿ ಸರ್ಕಾರವು ಮುಂದಿನ ಯೋಜನೆಗಳಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ ಗ್ರಾಮೀಣ ಆರೋಗ್ಯ ವ್ಯವಸ್ಥೆಯನ್ನು ಹಾಗೂ ಪ್ರಾಥಮಿಕ ಶಿಕ್ಷಣವನ್ನು ತುಂಬಾ ಸುಧಾರಿಸಬೇಕಾಗುತ್ತದೆ.
ರಾಜ್ಯವು ಸಾಧಿಸಿಕೊಂಡ ಅಭಿವೃದ್ದಿಯ ಫಲವು ವಂಚಿತ ವರ್ಗಕ್ಕೆ ದೊರೆಯಬೇಕಾದರೆ ಅವರ ಧಾರಣ ಶಕ್ತಿ ಉತ್ತಮವಾಗಬೇಕು. ಅದಕ್ಕಾಗಿ ಮಾನವ ಅಭಿವೃದ್ದಿಯ ಸೂಚಿಗಳ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸಬೇಕಾಗುತ್ತದೆ. ರಾಜ್ಯದಲ್ಲಿ ಒಣಭೂಮಿ ಬೇಸಾಯದ ಮೇಲೆ ಹೆಚ್ಚಿನ ಬಂಡವಾಳ ತೊಡಗಿಸುವುದು ಮತ್ತು ಗ್ರಾಮೀಣ ಪ್ರಾಥಮಿಕ ಆರೋಗ್ಯ ಹಾಗೂ ಪ್ರಾಥಮಿಕ ಶಿಕ್ಷಣದ ಮೇಲೆ ಹಣ ತೊಡಗಿಸುವುದೆಂದರೆ ರಾಜ್ಯದ ಹಿಂದುಳಿದ ಪ್ರದೇಶಗಳ ಮೇಲೆ ಬಂಡವಾಳ ತೊಡಗಿಸಿದಂತೆ ಲೆಕ್ಕ ಇಂತಹ ಕ್ರಮಗಳಿಂದ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸಬಹುದಾಗಿದೆ.

ಲಿಂಗಸಂಬಂಧಿ ಅಭಿವೃದ್ದಿ
ರಾಜ್ಯದ ಪಂಚವಾರ್ಷಿಕ ಯೋಜನೆಗಳ ಬಹುದೊಡ್ಡ ಲೋಪದ ಸಂಗತಿಯೆಂದರೆ ಲಿಂಗ ಸಂಬಂಧಿ ಅಭಿವೃದ್ದಿಯ ನಿರ್ಲಕ್ಷ್ಯ. ಜನಪ್ರಿಯ ಮಟ್ಟದಲ್ಲಿ ಮಹಿಳೆಯರ ಅಭಿವೃದ್ದಿ ಕುರಿತಂತೆ ಸರ್ಕಾರವು ತೀವ್ರ ಸ್ವರೂಪದ ಲಿಂಗ ಸ್ಪಂದಿ ಮನೋಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಅವು ಮಹಿಳೆಯರ ದೈನಂದಿನ ಹಿತಾಸಕ್ತಿಗಳನ್ನು ಈಡೇರಿಸಬಲ್ಲವೇ ವಿನಾ ಅವರ ಸಂಘರ್ಷಣಾತ್ಮಕ ಹಿತಾಸಕ್ತಿಗಳನ್ನು ಹಿಡಿದಿಡಲಾರವು. ಮಹಿಳೆಯರ ಸ್ಥಿತಿಗತಿ ಉತ್ತಮ ಪಡಿಸುವ ಉದ್ದೇಶದ ಹತ್ತಾರು ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆದರೆ ಅವು ಎಷ್ಟರಮಟ್ಟಿಗೆ ಮಹಿಳಾ ಸ್ವಾಯತ್ತತೆಯನ್ನು, ಸಬಲೀಕರಣವನ್ನು ಸಾಧಿಸಿವೆ ಎಂಬುದು ಅನುಮಾನಾಸ್ಪದವಾದ ಸಂಗತಿಯಾಗಿದೆ.
ಸ್ತ್ರೀಶಕ್ತಿ, ಸ್ವಶಕ್ತಿ, ಯಶಸ್ವಿನಿ, ನಮ್ಮ ಮಕ್ಕಳು-ನಮ್ಮ ಭಾಗ್ಯ ಮುಂತಾದ ರಂಜನೀಯ ವಾದ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಇವು ಮೂಲಭೂತವಾಗಿ ‘ಸುಧಾರಣಾವಾದಿ’ ಕ್ರಮಗಳಾಗಿವೆ. ಇವು ಪರಿವರ್ತನಾವಾದಿ ಕ್ರಮಗಳಲ್ಲ. ಉದಾಹರಣೆಗೆ ಕೆಳಗಿನ ಸಂಗತಿಗಳನ್ನು ನೋಡಬಹುದು (ಕೋಷ್ಟಕ 26).

ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರವೇನು, ಪಾತ್ರವೆಷ್ಟು ಎಂಬುದನ್ನು ಮೇಲಿನ ಸಂಗತಿಗಳು ಸೂಚಿಸುತ್ತವೆ. ಆದರೆ ಪಂಚವಾರ್ಷಿಕ ಯೋಜನೆಗಳಲ್ಲಿ ನಿರ್ದಿಷ್ಟವಾಗಿ ದುಡಿಯುವ ಮಹಿಳೆಯರ ಅಭಿವೃದ್ದಿಗಾಗಿ ಪರಿವರ್ತನಾವಾದಿ-ಸಂಘರ್ಷಣಾವಾದಿ ಕಾರ್ಯಕ್ರಮಗಳು ಕಂಡುಬರುವುದಿಲ್ಲ.

ಅಭಿವೃದ್ದಿ ಕೊಡಮಾಡುವ ಫಲಗಳಲ್ಲಿ ಮಹಿಳೆಯರ ಪಾಲು ಕಡಿಮೆ. ಆದರೆ ದುಸ್ಥಿತಿಯಲ್ಲಿ ಅವರ ಪಾಲು ಅಧಿಕ. ಇದಕ್ಕೆ ರಾಜ್ಯದಲ್ಲಿನ ಕೃಷಿ ಅವಲಂಬನೆಯನ್ನು ನೋಡಬಹುದು(ಕೋಷ್ಟಕ-27).
ಕೃಷಿಯ ಅವಲಂಬನೆಯು ಪುರುಷ ದುಡಿಮೆಗಾರರಿಗಿಂತ ಮಹಿಳಾ ದುಡಿಮೆಗಾರರಲ್ಲಿ ಅಧಿಕವಾಗಿದೆ. ಒಟ್ಟು ಕೃಷಿ ಅವಲಂಬನೆ ಶೇ. 55ರಷ್ಟಿದ್ದರೆ ಮಹಿಳೆಯರ ಕೃಷಿ ಅವಲಂಬನೆ ಶೇ.68ರಷ್ಟಿದೆ. ಆದರೆ ಪುರುಷ ದುಡಿಮೆಗಾರರ ಕೃಷಿ ಅವಲಂಬನೆಯು ಕೇವಲ ಶೇ.48.92 (2001). ಯಾವ ವೃತ್ತಿಯಲ್ಲಿ ಕೂಲಿ ಕಡಿಮೆಯಿರುತ್ತದೋ ಮತ್ತು ಯಾವುದು ಹಂಗಾಮಿಯಾಗಿರುವುದೋ ಅಲ್ಲಿ ಮಹಿಳೆಯರು ಅಧಿಕವಾಗಿರುತ್ತದೆ.
1. ಕೃಷಿ ಕೂಲಿಕಾರರಲ್ಲಿ ಮಹಿಳೆಯರ ಪ್ರಮಾಣವು 1991ರಲ್ಲಿ ಸರಿಸುಮಾರು ಶೇ. 50 ರಷ್ಟಿದ್ದರೆ 2001ರಲ್ಲಿ ಅವರ ಪ್ರಮಾಣವು ಶೇ. 57.91ಕ್ಕೇರಿದೆ.
2. ಅಕ್ಷರಸ್ಥರಲ್ಲಿ ಪುರುಷರ ಪ್ರಮಾಣ ಅಧಿಕವಾಗಿದ್ದರೆ ಅನಕ್ಷರಸ್ಥರಲ್ಲಿ ಮಹಿಳೆಯರ ಪ್ರಮಾಣವು ಅಧಿಕವಾಗಿದೆ.

ಟಿಪ್ಪಣಿ : ಆವರಣದಲ್ಲಿ ಅಂಕಿಗಳು ಒಟ್ಟು ಮೊತ್ತದ ಶೇಕಡ ಪ್ರಮಾಣ ತೋರಿಸುತ್ತವೆ.
ಮೂಲ : ಜನಗಣತಿ ವರದಿಗಳು : 1991 ಮತ್ತು 2001.

ಈ ಬಗೆಯಲ್ಲಿ ಅಭಿವೃದ್ದಿಯು ಮಹಿಳೆಯರಿಗೆ ಪ್ರತಿಕೂಲವಾಗಿದೆ. ಆದರೆ ಪಂಚವಾರ್ಷಿಕ ಯೋಜನೆಗಳಲ್ಲಿ ಮಹಿಳೆಯರ ಅಭಿವೃದ್ದಿಗಾಗಿ ಮಹತ್ವದ್ದೆನ್ನಬಹುದಾದ ಕಾರ್ಯಯೋಜನೆ ಕಂಡು ಬರುವುದಿಲ್ಲ. ಅಭಿವೃದ್ದಿಯು ರಾಜ್ಯದಲ್ಲಿ ಪುರುಷಶಾಹಿಯಿಂದ ಮೆರೆಯುತ್ತಿದೆ ಎಂಬುದಕ್ಕೆ 2006ರಲ್ಲಿ ರಾಜ್ಯದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲದಿರು ವುದು ನಿದರ್ಶನವಾಗಿದೆ. ಮಹಿಳೆಯರು ರಾಜ್ಯದಲ್ಲಿ ಎಂತಹ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದರೆ ರಾಜ್ಯ ಮಹಿಳಾ ಆಯೋಗವು ಮುಖ್ಯಸ್ಥರಿಲ್ಲದೆ ನಡೆದಿದೆ. ಇದು ಕೇವಲ ತಾತ್ಕಾಲಿಕವಾದ ಒಂದು ಅಪವಾದವೆಂದು ಯಾರಾದರೂ ಹೇಳಬಹುದು. ಆದರೆ ಇಂತಹ ಸೂಕ್ಷ್ಮಸಂಗತಿಗಳು ಆಡಳಿತ-ಅಭಿವೃದ್ದಿಯ ಮೂಲದಲ್ಲಿ ಕೆಲಸ ಮಾಡುತ್ತಿರುವವರ ಮನೋಭಾವವನ್ನು ಸೂಚಿಸುತ್ತವೆ. ಲಿಂಗ ಸಮಾನತೆ ಅಥವಾ ಮಹಿಳೆಯರ ಸಬಲೀಕರಣ ವೆಂಬುದು ಅಭಿವೃದ್ದಿಯೊಂದಿಗೆ ಸಹಜವಾಗಿ ಸಂಭವಿಸುವ ಸಂಗತಿಗಳಲ್ಲ. ಅದನ್ನು ನಾವು ಪ್ರಜ್ಞಾಪೂರ್ವಕವಾಗಿ ಸಾಧಿಸಿಕೊಳ್ಳಬೇಕಾಗುತ್ತದೆ. ಈ ದಿಶೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಯೋಚಿಸಬೇಕಾಗುತ್ತದೆ. ಪಂಚವಾರ್ಷಿಕ ಯೋಜನೆಗಳಲ್ಲಿ ಕನಿಷ್ಟ ಶೇ.33ರಷ್ಟು ಬಂಡವಾಳವನ್ನು ಮಹಿಳೆಯರ ಅಭಿವೃದ್ದಿ ಕಾರ್ಯಕ್ರಮಗಳಿಗೆ ಮೀಸಲಿಡಬೇಕಾಗುತ್ತದೆ.
ಸರ್ಕಾರವು ಜಾರಿಗೊಳಿಸುವ ಮಹಿಳಾ ಅಭಿವೃದ್ದಿ ಕಾರ್ಯಕ್ರಮಗಳಿಂದ ಮಹಿಳೆಯರ ಸ್ಥಿತಿಗತಿ ಉತ್ತಮವಾಗಬಹುದು. ಆದರೆ ಸಮಾಜದಲ್ಲಿ ಮತ್ತು ಪುರುಷರಿಗೆ ಸಾಪೇಕ್ಷವಾಗಿ ಮಹಿಳೆಯರ ಸ್ಥಾನಮಾನವು ಉತ್ತಮವಾಗಲಿಕ್ಕಿಲ್ಲ. ಏಕೆಂದರೆ ಸ್ಥಿತಿಗತಿಯೆನ್ನುವುದು ಸಾಪೇಕ್ಷವಾದುದು. ಆದರೆ ಸ್ಥಾನಮಾನವೆನ್ನುವುದು ಸಂಬಂಧವಾದಿ ಸಂಗತಿಯಾಗಿದೆ. ಇದು ಅಧಿಕಾರಕ್ಕೆ ಸಂಬಂಧಿಸಿದ ಸಂಗತಿಯಾಗಿದೆ. ಉದಾಹರಣೆಗೆ ಮಹಿಳೆಯರಿಗೆ ಶಿಕ್ಷಣ ಮುಖ್ಯ. ಆದರೆ ಶಿಕ್ಷಣದಿಂದ ಲಿಂಗಸಮಾನತೆ ಅಥವಾ ಮಹಿಳೆಯರ ಸ್ವಾಯತ್ತತೆ ಸಾಧ್ಯವಾಗುವುದಿಲ್ಲ. ಮನೆಯ ಹೊರಗೆ ಉದ್ಯೋಗ ದೊರೆತುಬಿಟ್ಟರೆ ಮಹಿಳೆಗೆ ವಿಮೋಚನೆ ದೊರೆಯುತ್ತದೆ ಎಂಬುದೂ ಸರಿಯಲ್ಲ. ಮಹಿಳೆಯರು ಮತ್ತು ಪುರುಷರ ನಡುವಿನ ಅಧಿಕಾರ ಸಂಬಂಧವನ್ನು ಬದಲಾಯಿಸುವ ದಿಶೆಯಲ್ಲಿ ತೆಗೆದುಕೊಳ್ಳುವ ಕ್ರಮಗಳು ತುಂಬಾ ಮುಖ್ಯವಾಗುತ್ತವೆ. ಉದಾಹರಣೆಗೆ ಆಸ್ತಿ ಹಕ್ಕು, ಕುಟುಂಬದಲ್ಲಿ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮಹಿಳೆಯರ ಸಹಭಾಗಿತ್ವ, ಗೃಹವಾರ್ತೆಯನ್ನು ಪುರುಷರೊಂದಿಗೆ ಹಂಚಿಕೊಳ್ಳುವುದು, ಲಿಂಗ ಸಂಬಂಧಿ ಶ್ರಮವಿಭಜನೆಯನ್ನು ತಿರಸ್ಕರಿಸುವುದು ಮುಂತಾದವು ಮಹಿಳೆಯರ ಬದುಕಿನ ದೃಷ್ಟಿಯಿಂದ ಮುಖ್ಯವಾಗುತ್ತವೆ.
ಪಂಚವಾರ್ಷಿಕ ಯೋಜನೆಗಳಲ್ಲಿ ಮಹಿಳೆಯರ ಸಂಘರ್ಷಣಾತ್ಮಕ ಸಂಗತಿಗಳು ಬಗ್ಗೆ ಯಾವುದೇ ಚಿಂತನೆ ನಡೆಲಿಲ್ಲ. ಲಿಂಗ ಸಂಬಂಧಗಳ ದೃಷ್ಟಿಯಿಂದ ನಮ್ಮ ಯೋಜನೆಗಳು ಲಿಂಗ ನಿರಪೇಕ್ಷವಾಗಿವೆ. ಅವುಗಳನ್ನು ಲಿಂಗ ಸ್ಪಂದಿಯನ್ನಾಗಿ ಮಾಡುವುದರ ಬಗ್ಗೆ ನಾವು ಯೋಚಿಸಬೇಕಾಗಿದೆ.

ಮಾನವ ಅಭಿವೃದ್ದಿ ವೈಫಲ್ಯಗಳು
ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳಲ್ಲಿ ಅಗತ್ಯವಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹಾಗೂ ಸಾಮರ್ಥ್ಯಗಳ ವರ್ಧನೆಯನ್ನು ಅಮರ್ತ್ಯಸೇನ್ ಅಭಿವೃದ್ದಿಯೆಂದು ನಿರ್ವಚಿಸಿದ್ದಾರೆ. ಕರ್ನಾಟಕದಲ್ಲಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದಿಂದ ವಂಚಿತವಾದ 62 ಲಕ್ಷ ಭೂರಹಿತ ಕೃಷಿ ಕೂಲಿಕಾರರಿದ್ದಾರೆ. ಇವರ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಎಲ್ಲವೂ ಆತಂಕಕಾರಿ ಸ್ಥಿತಿಯಲ್ಲಿವೆ. ಈ 62 ಲಕ್ಷ ಭೂರಹಿತ ಕೃಷಿಕೂಲಿಕಾರರಲ್ಲಿ ಪರಿಶಿಷ್ಟ ಜಾತಿಯವರ ಪ್ರಮಾಣ ಶೇ.27.89 ಮತ್ತು ಪರಿಶಿಷ್ಟ ಪಂಗಡದವರ ಪ್ರಮಾಣ ಶೇ.11.83. ರಾಜ್ಯದ ಜನಸಂಖ್ಯೆಯಲ್ಲಿ ಒಟ್ಟು ಪರಿಶಿಷ್ಟರ (ಪ.ಜಾ.+ಪ.ಪಂ.) ಪ್ರಮಾಣ ಶೇ.22.81ರಷ್ಟಾದರೆ ಕೂಲಿಕಾರರಲ್ಲಿ ಅವರ ಪ್ರಮಾಣ ಶೇ.39.71.
ಮಾನವ ಅಭಿವೃದ್ದಿಯ ದೃಷ್ಟಿಯಿಂದ ರಾಜ್ಯದಲ್ಲಿ ಅತ್ಯಂತ ಕೆಳಮಟ್ಟದಲ್ಲಿರುವವರೆಂದರೆ ಪರಿಶಿಷ್ಟರಾಗಿದ್ದಾರೆ (ಪ.ಜಾ.+ಪ.ಪಂ.). ರಾಜ್ಯದಲ್ಲಿ ಒಟ್ಟು ಕೂಲಿಕಾರರ ಸಂಖ್ಯೆ 62 ಲಕ್ಷವಾದರೆ ಪರಿಶಿಷ್ಟ ಕೂಲಿಕಾರರ ಸಂಖ್ಯೆ 24.74 ಲಕ್ಷ. ಇವರಿಗೆ ಹೊಟ್ಟೆ ಬಟ್ಟೆ ಬದುಕೇ ಕಷ್ಟಕರವಾಗಿರುವುದರಿಂದ ಅವರು ಶಿಕ್ಷಣ ಪಡೆದುಕೊಳ್ಳುವಲ್ಲಿ ತೀವ್ರ ಹಿಂದುಳಿದಿದ್ದಾರೆ ಮತ್ತು ಆರೋಗ್ಯದ ಬಗ್ಗೆ ಅವರಿಗೆ ಚಿಂತಿಸಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.
ರಾಜ್ಯದ 62 ಲಕ್ಷ ದಿನಗೂಲಿ ದುಡಿಮೆಗಾರರು ಆಹಾರ ಅಭದ್ರತೆಯನ್ನು ಎದುರಿಸುತ್ತಿದ್ದಾರೆ. ಆರೋಗ್ಯ ಕಾರ್ಯಕ್ರಮವು ರೋಗ ನಿರ್ದಿಷ್ಟವಾಗುತ್ತಿರುವುದರಿಂದ ಸಾರ್ವತ್ರಿಕ ಪ್ರಾಥಮಿಕ ಆರೋಗ್ಯ ಸೇವೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಂದೊಂದು ರೋಗಕ್ಕೆ ಒಂದೊಂದು ಸಂಸ್ಥೆಗಳನ್ನು ಸ್ಥಾಪಿಸಲಾಗುತ್ತಿದೆ. ಇದು ಬೇಕು. ಆದರೆ ಏಕೀಕೃತವಾದ ಆರೋಗ್ಯ ಸೇವೆಯನ್ನು ಒಂದು ನೆಲೆಯಲ್ಲಿ ಕೊಡುವುದರಿಂದ ಬಡವರಿಗೆ ಅನುಕೂಲ ವಾಗುತ್ತದೆ. ಯೋಜನೆಗಳಲ್ಲಿ ಮಾನವ ಅಭಿವೃದ್ದಿ ಸೂಚಿಗಳ ನಿರ್ವಹಣೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.

ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮತೋಲನ
ಆರಂಭದ ಪಂಚವಾರ್ಷಿಕ ಯೋಜನೆಯಿಂದಲೂ ಪ್ರಾದೇಶಿಕವಾಗಿ ಅಭಿವೃದ್ದಿಗೆ ಸಂಬಂಧಿಸಿದಂತೆ ಸಮತೋಲನವನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಾ ಬರಲಾಗಿದೆ. ಹಿಂದುಳಿದ ಪ್ರದೇಶ/ಜಿಲ್ಲೆಗಳ ಅಭಿವೃದ್ದಿಗಾಗಿ ವಿಶೇಷ ಮಂಡಳಿಗಳನ್ನು ಸರ್ಕಾರವು ರಚಿಸಿದೆ. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಹಣಕಾಸು ವಿನಿಯೋಗವು ಜಿಲ್ಲೆಗಳ ಹಿಂದುಳಿದಿರುವಿಕೆಯನ್ನು ಆಧರಿಸಿ ನೀಡಲಾಗುತ್ತಿದೆ. ಈ ಸಮಸ್ಯೆಯ ಅಧ್ಯಯನಕ್ಕಾಗಿ ಸರ್ಕಾರವು ನೇಮಿಸಿದ್ದ ಸಮಿತಿಯು 2002ರಲ್ಲಿ ತನ್ನ ಬೃಹತ್ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಪ್ರಾದೇಶಿಕ ಅಸಮಾನತೆಯೆನ್ನುವುದು ಕರ್ನಾಟಕ ರಾಜ್ಯದ ಹುಟ್ಟಿನೊಂದಿಗೆ ಬೆಳೆದು ಕೊಂಡು ಬರುತ್ತಿರುವ ಬಾಲಗ್ರಹ ಪೀಡೆಯಾಗಿದೆ. ರಾಜ್ಯದ 27 ಜಿಲ್ಲೆಗಳ ಪೈಕಿ ಗುಲಬರ್ಗಾ ವಿಭಾಗದ ಐದು ಹಾಗೂ ಬೆಳಗಾವಿ ವಿಭಾಗದ ಎರಡು- ಒಟ್ಟು ಏಳು ಜಿಲ್ಲೆಗಳು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿರುವುದನ್ನು ಅನೇಕ ಅಧ್ಯಯನಗಳು ಹಾಗೂ ಸರ್ಕಾರದ ವರದಿಗಳು ದೃಢಪಡಿಸಿವೆ. ಪಂಚವಾರ್ಷಿಕ ಯೋಜನೆಗಳಲ್ಲಿ ತೀವ್ರ ಪ್ರಯತ್ನ ನಡೆದರೂ ಅಸಮಾನತೆಯು ಮುಂದುವರಿದಿದೆ. ಈ ಬಗ್ಗೆ ತುಂಬಾ ಗಂಭೀರವಾಗಿ ಯೋಜಿಸಬೇಕಾಗಿದೆ. ಏಕೀಕರಣಕ್ಕಾಗಿ ಹೋರಾಟ ನಡೆಯುವ ಸಂದರ್ಭದಲ್ಲಿ ಇಂತಹ ಸಮಸ್ಯೆಯನ್ನು ವಿದ್ವಾಂಸರು ಗುರುತಿಸಿದ್ದರು.
ಹೈದರಾಬಾದ್-ಕರ್ನಾಟಕ ಪ್ರದೇಶದ ಬೀದರ್, ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳ, ಬೆಳಗಾವಿ ವಿಭಾಗದ ಬಾಗಲಕೋಟೆ ಮತ್ತು ಬಿಜಾಪುರ ಹಾಗೂ ಹಿಂದಿನ ಮದರಾಸು ಪ್ರಾಂತದ ಭಾಗವಾಗಿದ್ದ ಬಳ್ಳಾರಿ -ಇವು ಅತ್ಯಂತ ಹಿಂದುಳಿದಿರುವ ಜಿಲ್ಲೆಗಳು. ಈ ಜಿಲ್ಲೆಗಳ ಹಿಂದುಳಿದಿರುವಿಕೆಗೆ ಅನೇಕ ಕಾರಣಗಳನ್ನು ನೀಡಲಾಗುತ್ತಿದೆ. ಸರ್ಕಾರದ ಮಲತಾಯಿ ಧೋರಣೆಯನ್ನು ಇದಕ್ಕೆ ಕಾರಣವನ್ನಾಗಿ ಮಾಡಲಾಗುತ್ತಿದೆ. ಇದರಲ್ಲಿ ಹುರುಳಿದೆಯೆಂದು ಹೇಳಲು ಸಾಧ್ಯವಿಲ್ಲ. ಇದನ್ನು ಇನ್ನೊಂದು ರೀತಿಯಲ್ಲಿ ಹೇಳಬಹುದು. ಬಡವರು, ದುರ್ಬಲರು, ದಲಿತರು, ಹಿಂದುಳಿದ ಪ್ರದೇಶ ¬- ಇವುಗಳ ಬಗ್ಗೆ ಸರ್ಕಾರಗಳು ಆದ್ಯತೆ ನೀಡುವುದು ಕಡಿಮೆ. ಏಕೆಂದರೆ ಸರ್ಕಾರಕ್ಕೆ ಎದ್ದು ಕಾಣುವಂತಹ ಫಲಿತಾಂಶ ನೀಡಬಲ್ಲ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಹಿಂದುಳಿದ ಪ್ರದೇಶಗಳ ಮೇಲೆ ಬಂಡವಾಳ ತೊಡಗಿಸುವುದರಿಂದ ತಕ್ಷಣದ ಪ್ರತಿಫಲ ಸಾಧ್ಯವಿಲ್ಲ. ಈ ಕಾರಣದಿಂದ ಸರ್ಕಾರಗಳು ಒಂದು ಬಗೆಯ ಔದಾಸೀನ್ಯ ಭಾವ ತಳೆಯುತ್ತವೆ.
ಆದರೆ ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಆಶ್ವಾಸನೆಗಳ, ಭರವಸೆಗಳ ಮಹಾಪುರ ಹರಿಯುತ್ತದೆ. ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು ಜಪದಂತೆ ಜಪಿಸಲಾಗುತ್ತಿದೆ. ಆದರೆ ನಿರ್ದಿಷ್ಟವಾಗಿ ಒಂದೇ ಒಂದು ಕಾರ್ಯಕ್ರಮವನ್ನು ಸರ್ಕಾರವು ಪ್ರಾದೇಶಿಕ ಅಸಮಾನತೆ ನಿವಾರಣೆ ಬಗ್ಗೆ ಬಡವರ ನೆಲೆಯಿಂದ ಜಾರಿಗೊಳಿಸಲಿಲ್ಲ. ಅಕ್ಷರ ದಾಸೋಹ ಕಾರ್ಯಕ್ರಮವನ್ನು ಮೊದಲು ಹಿಂದುಳಿದ ಜಿಲ್ಲೆಗಳಲ್ಲಿ ಆರಂಭಿಸಲಾಯಿತು. ಅದರ ಯಶಸ್ವಿನಿಂದ ಪ್ರಭಾವಿತಗೊಂಡ ಸರ್ಕಾರವು ಅದೇ ಯೋಜನೆಯನ್ನು ರಾಜ್ಯದ ಎಲ್ಲ ಭಾಗಗಳಿಗೂ ವಿಸ್ತರಿಸಿತು. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ, ಶೇ.50ರಷ್ಟು ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳಿರುವ ಜಿಲ್ಲೆಗಳಲ್ಲಿ, ಸಾಕ್ಷರತೆ ಶೇ.45 ದಾಟದಿರುವ ತಾಲ್ಲೂಕುಗಳಲ್ಲಿ ಅದನ್ನು ಹೆಚ್ಚು ಅರ್ಥಪೂರ್ಣವಾಗಿ ಅನುಷ್ಠಾನಗೊಳಿಸಬೇಕೆಂಬ ಜ್ಞಾನ ಸರ್ಕಾರಕ್ಕೆ ಹೊಳೆಯಲಿಲ್ಲ. ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಶೇ.10ರಷ್ಟಿರುವ ಭಾಗಗಳಲ್ಲಿ ಮಧ್ಯಾಹ್ನದ ಊಟದ ಸೌಲಭ್ಯವಿದೆ. ಅದೇ ಸೌಲಭ್ಯ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಶೇ.50ರಷ್ಟಿರುವ ಭಾಗದಲ್ಲೂ ಆಚರಣೆಯಲ್ಲಿದೆ. ಹಿಂದುಳಿದ ಜಿಲ್ಲೆ-ತಾಲ್ಲೂಕುಗಳಲ್ಲಿ ಎರಡು ಹೊತ್ತು ಊಟ ಒದಗಿಸುವ ಬಗ್ಗೆ ಸರ್ಕಾರವು ಯೋಚಿಸಬಹುದಿತ್ತು.

ಕೃಷಿ ಕೂಲಿಕಾರರು
ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಕೂಲಿಕಾರರ ಪ್ರಮಾಣ ಶೇ.26.45. ಆದರೆ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಅದು ಶೇ.19.37ರಷ್ಟಿದೆ. ಕಲಬುರ್ಗಿ ವಿಭಾಗದಲ್ಲಿ ಅದರ ಪ್ರಮಾಣ ಶೇ.40.59. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಸಾಗುವಳಿದಾರರ ಸಂಖ್ಯೆಯು ಕೂಲಿಕಾರರ ಸಂಖ್ಯೆಗಿಂತ ಅಧಿಕವಿದೆ. ಆದರೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಇದು ತಿರುವು ಮುರುವಾಗಿದೆ.
ಭೂರಹಿತ ಕೃಷಿ ಕೂಲಿಕಾರರು ಒಂದು ಪ್ರದೇಶದಲ್ಲಿ ಅಗಾಧವಾಗಿರುವುದಕ್ಕೂ ಮತ್ತು ಅಲ್ಲಿ ಸಾಕ್ಷರತೆ ಕೆಳಮಟ್ಟದಲ್ಲಿರುವುದಕ್ಕೂ ಸಂಬಂಧವಿರುತ್ತದೆ. ಇಂತಹ ಪ್ರದೇಶಗಳು ಸಹಜವಾಗಿ ವಲಸೆ ಪ್ರವೃತ್ತಿ ಹೊಂದಿರುತ್ತವೆ. ಅಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಅಧಿಕವಾಗಿರುತ್ತದೆ. ಈ ಪ್ರದೇಶಗಳು ಸಾಮಾನ್ಯವಾಗಿ ಒಣಭೂಮಿ ಬೇಸಾಯ ಹೊಂದಿರುತ್ತವೆ.
ಆದ್ದರಿಂದ ಬಡವರನ್ನು, ದಲಿತರನ್ನು, ಮಹಿಳೆಯರನ್ನು ಮುಖ್ಯ ಧಾತುವನ್ನಾಗಿ ಮಾಡಿಕೊಂಡು ಅಭಿವೃದ್ದಿಯನ್ನು ನಿರ್ವಹಿಸಿದಾಗ ಮಾತ್ರ ಪ್ರಾದೇಶಿಕ ಅಸಮತೋಲನವನ್ನು ನಿವಾರಿಸುವುದು ಸಾಧ್ಯ. ನಂಜುಂಡಪ್ಪ ವರದಿಯನ್ನು ಜಪ ಮಾಡಿಬಿಟ್ಟರೆ ಪ್ರಾದೇಶಿಕ ಅಸಮಾನತೆ ಬಗೆಹರಿಯುವುದಿಲ್ಲ. ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಆದರೆ ಅದರ ಪರಿಹಾರಕ್ಕೆ ಸಮರ್ಪಕ ಕಾರ್ಯಕ್ರಮಗಳನ್ನು ಯೋಜನೆಗಳಲ್ಲಿ ರೂಪಿಸುವುದು ಸಾಧ್ಯವಾಗಿಲ್ಲ. ಕರ್ನಾಟಕದಲ್ಲಿ ಅಭಿವೃದ್ದಿ ಯೋಜನೆಗಳ ಬಹುದೊಡ್ಡ ವೈಫಲ್ಯವೆಂದರೆ ಇದಾಗಿದೆ. ಈ ಬಗ್ಗೆ ತುಂಬಾ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಈ ಸಮಸ್ಯೆಯನ್ನು 50 ವರ್ಷಗಳ ನಂತರವೂ ಬಗೆಹರಿಸಿಕೊಂಡಿಲ್ಲವೆಂದರೆ ಸಮಸ್ಯೆ ಸಂಕೀರ್ಣತೆಯನ್ನು ಊಹಿಸಿಕೊಳ್ಳಬಹುದು.

ಸಂಗ್ರಹ
ಈ ಭಾಗದಲ್ಲಿ ಎರಡು ಸಂಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಮೊದಲು ಇಲ್ಲಿ ಅಧ್ಯಯನದ ಮುಖ್ಯ ತಥ್ಯಗಳನ್ನು ಗುರುತಿಸಲಾಗಿದೆ. ಕೊನೆಯ ಭಾಗದಲ್ಲಿ ಅಭಿವೃದ್ದಿಯ ಹಾಗೂ ಯೋಜನೆಯ ಮುನ್ನೋಟವನ್ನು ಕುರಿತಂತೆ ಕೆಲವು ಸಂಗತಿಗಳನ್ನು ಚರ್ಚಿಸಲಾಗಿದೆ. ಕರ್ನಾಟಕದ ಮುಂದಿನ ಅಭಿವೃದ್ದಿಯ ಪಥವನ್ನು ಗುರುತಿಸಲು ಇಲ್ಲಿ ಪ್ರಯತ್ನಿಸಲಾಗಿದೆ.

ಮುಖ್ಯ ತಥ್ಯಗಳು
1. ಕರ್ನಾಟಕದ ಅಭಿವೃದ್ದಿಯ ಅಧ್ಯಯನದಿಂದ ರೂಪಿಸಬಹುದಾದ ಒಂದು ಪ್ರಮೇಯವೆಂದರೆ ಅದು ಎಂ.ಎನ್.ಶ್ರೀನಿವಾಸ್, ಜೇಮ್ಸ್ ಮೇನರ್ ಮುಂತಾದವರು ಗುರುತಿಸಿರುವ ‘ಮಧ್ಯಮ ಗತಿ’ -‘ಮಧ್ಯಮ ಸ್ಥಿತಿ’ ಸ್ವರೂಪಕ್ಕೆ ಅನುಗುಣವಾಗಿ ಅಲ್ಲಿ ಅಭಿವೃದ್ದಿ ನಡೆದಿದೆ ಎಂಬುದಾಗಿದೆ. ‘ಆರಕ್ಕೆ ಏಳಲಿಲ್ಲ – ಮೂರಕ್ಕೆ ಬೀಳಲಿಲ್ಲ’ ಎಂಬಂತೆ ಅದರ ಅಭಿವೃದ್ದಿ ನಡೆದಿದೆ.
2. ಜನಸಂಖ್ಯೆಯ ಬೆಳವಣಿಗೆಗೆ ಸಂಬಂಧಿಸಿದಂತೆ ಅದು ಯಶಸ್ವಿಯಾಗಿದೆ. ಕೇರಳ, ತಮಿಳುನಾಡುಗಳ ನಂತರ ಜನಸಂಖ್ಯೆಯ ಬೆಳವಣಿಗೆಯನ್ನು ನಿಯಂತ್ರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಮೂರನೆಯ ಸ್ಥಾನ ಪಡೆಯಬಲ್ಲದಾಗಿದೆ.
3. ಕರ್ನಾಟಕದ ಅಭಿವೃದ್ದಿಯ ಅತ್ಯಂತ ದುರ್ಬಲವಾದ ಅಂಶವೆಂದರೆ ಕೃಷಿ ವಲಯ. ಈ ವಲಯವನ್ನು ರಾಜ್ಯದ ಒಟ್ಟು ದುಡಿಮೆಗಾರರಲ್ಲಿ ಶೇ.55ರಷ್ಟು (131 ಲಕ್ಷ) ಇದನ್ನು ಅವಲಂಬಿಸಿಕೊಂಡಿದ್ದಾರೆ. ಆದರೆ ಇದನ್ನು ಸದೃಢವಾದ ನೆಲೆಯಲ್ಲಿ ಅಭಿವೃದ್ದಿಪಡಿಸು ವುದು ನಮಗೆ ಸಾಧ್ಯವಾಗಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಒಣಭೂಮಿ ಬೇಸಾಯ ವನ್ನು ನಾವು ಅಲಕ್ಷ್ಯ ಮಾಡಿದ್ದು ಎಂದು ಹೇಳಬಹುದು. ನೀರಾವರಿ ಯೋಜನೆಗಳ ಮೇಲೆ ತೊಡಗಿಸಿದ ಬಂಡವಾಳದಲ್ಲಿ ಅರ್ಧದಷ್ಟಾನ್ನಾದರೂ ಒಣಭೂಮಿ ಬೇಸಾಯದ ಮೇಲೆ ತೊಡಗಿಸಿದ್ದರೆ ನಮ್ಮ ಕೃಷಿ ಕ್ಷೇತ್ರದ ಚಿತ್ರವು ಬೇರೆಯೇ ಆಗಿಬಿಡುತ್ತಿತ್ತು. ಹಣ್ಣು, ಹೂವು, ತರಕಾರಿ ಮುಂತಾದವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದರ ಬಗ್ಗೆ ಯೋಜನೆಗಳಲ್ಲಿ ಪ್ರಯತ್ನ ನಡೆಯಲಿಲ್ಲ. ಈ ದಿಶೆಯಲ್ಲಿ ನಾವು ಯೋಚಿಸಬೇಕಾಗಿದೆ.
4. ಮೊದಲ ಮೂರು-ನಾಲ್ಕು ಯೋಜನೆಗಳಲ್ಲಿ ‘ಸಾಮಾಜಿಕ ಸೇವೆ’ಯನ್ನು ನಿರ್ಲಕ್ಷಿಸ ಲಾಗಿತ್ತು. ಆದರೆ 6-7ನೆಯ ಯೋಜನೆಗಳ ನಂತರ ಸಾಮಾಜಿಕ ಸೇವೆಗೆ ಆದ್ಯತೆ ದೊರೆಯತೊಡಗಿತು. ಕರ್ನಾಟಕದ ಅಭಿವೃದ್ದಿ ಯೋಜನೆಗಳಿಗೆ ಸಂಬಂಧಿಸಿದಂತೆ ಇದೊಂದು ಮಹತ್ವದ ಬದಲಾವಣೆಯೆಂದು ಹೇಳಬಹುದು.
5. ರಾಜ್ಯವು 1987ರ ನಂತರ ವಿಕೇಂದ್ರೀಕೃತ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು. ಎಂಬತ್ತು ಮತ್ತು ತೊಂಬತ್ತರ ದಶಕಗಳಲ್ಲಿ ರಾಜ್ಯವು ಕ್ರಾಂತಿಕಾರಕವಾದ ರೀತಿಯಲ್ಲಿ ಅಭಿವೃದ್ದಿಯನ್ನು ತಳಮಟ್ಟದಿಂದ ರೂಪಿಸುವ ಕ್ರಿಯೆಗೆ ಮೂರ್ತ ರೂಪ ನೀಡಲಾಯಿತು. ದುರದೃಷ್ಟದ ಸಂಗತಿಯೆಂದರೆ ಇಂದು ಪಂಚಾಯತ್ರಾಜ್ ವ್ಯವಸ್ಥೆಯು ರಾಜ್ಯದಲ್ಲಿ ಒಂದು ರೀತಿಯ ‘ಹಿನ್ನಡೆ’ಗೆ ಒಳಗಾಗಿದೆ. ರಾಜ್ಯ-ರಾಷ್ಟ್ರಮಟ್ಟದ ಉನ್ನತ ಸಂಸ್ಥೆಗಳ ಜನಪ್ರತಿನಿಧಿಗಳು ಅಟ್ಟಹಾಸವು ಜೋರಿನಿಂದ ನಡೆಸಿದೆ.
6. ಮಾನವ ಅಭಿವೃದ್ದಿಯಲ್ಲಿ ಕರ್ನಾಟಕದ ಸಾಧನೆಯು ಕೇರಳ ಮತ್ತು ತಮಿಳುನಾಡುಗಳಿಗೆ ಹೋಲಿಸಿದರೆ ತೀರಾ ದುರ್ಬಲವಾಗಿದೆ. ಅದೇ ರೀತಿ ಲಿಂಗ ಸಂಬಂಧಗಳನ್ನು ಕುರಿತಂತೆಯೂ ರಾಜ್ಯದ ಸಾಧನೆ ಹೇಳಿಕೊಳ್ಳುವ ಸ್ಥಿತಿಯಲ್ಲಿಲ್ಲ. ಇಂದು 2006ರಲ್ಲಿ ರಾಜ್ಯದ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯವಿಲ್ಲ. ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥರ ಸ್ಥಾನ ಖಾಲಿ ಇದೆ. ಮಾನವ ಅಭಿವೃದ್ದಿ ಮತ್ತು ಲಿಂಗ ಸಂಬಂಧಗಳ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ.
7. ಪ್ರಾದೇಶಿಕ ಅಸಮಾನತೆ ಬಗ್ಗೆ ಜನಜಾಗೃತಿ ಉಂಟಾಗಿದೆ. ಸರ್ಕಾರವು ಅದನ್ನು ನಿರ್ಲಕ್ಷಿಸುವುದು ಸಾಧ್ಯವಿಲ್ಲ. ಇಷ್ಟಾದರೂ ಬೆಂಗಳೂರು ಬ್ರಹ್ಮರಾಕ್ಷಸನಂತೆ ಇಡೀ ರಾಜ್ಯವನ್ನೇ ನುಂಗುವಂತೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದಾಗಿ ರಾಜ್ಯದ ಒಳನಾಡು ರೋಗಗ್ರಸ್ತವಾಗಿದೆ.

ಮುನ್ನೋಟ
ಕರ್ನಾಟಕವು ಇನ್ನು ಮುಂದೆಯೂ ತನ್ನ ಮಧ್ಯಮಗತಿ ಸ್ಥಾನದಲ್ಲೇ ಮುಂದುವರಿಯುವ ಸಾಧ್ಯತೆಯಿದೆ. ಅದರ ಮಧ್ಯಮ ಸ್ಥಿತಿಗೆ ಯಾವುದೇ ಬಗೆಯ ಧಕ್ಕೆ ಬರುವ ಸಾಧ್ಯತೆಯಿಲ್ಲ. ಅದು ಕಳೆದ 50 ವರ್ಷಗಳಲ್ಲಿ ಸಾಧಿಸಿದ ಅಭಿವೃದ್ದಿಯ ಹಿನ್ನೆಲೆಯಲ್ಲಿ ಹೇಳುವುದಾದರೆ ಅದಕ್ಕೆ ಮಧ್ಯಮ ಗತಿಯನ್ನು ಮೀರಿ ಬೆಳೆಯುವುದು ಸಾಧ್ಯವಾಗಿಲ್ಲ. ಇದಕ್ಕೆ ಬಹುಮುಖ್ಯ ಕಾರಣವೆಂದರೆ ಪ್ರಾಕೃತಿಕ ಸಂಪನ್ಮೂಲಗಳಿಗೆ ಸಂಬಂಧಿಸಿದಂತೆ ಇರುವ ಅನನುಕೂಲತೆ. ಮಧ್ಯಮಗತಿ ಅಭಿವೃದ್ದಿಗೆ ತನ್ನದೇ ಆದ ಕೆಲವು ಅನುಕೂಲಗಳಿರುತ್ತವೆ. ಬಹಳ ಮುಖ್ಯವಾಗಿ ಅದರಿಂದ ಪರಿಸರದ ಸಮತೋಲನವು ತೀವ್ರ ಹದಗೆಡುವುದಿಲ್ಲ.
ಇನ್ನು ಮುಂದೆ ರಾಜ್ಯದಲ್ಲಿನ ಹಿಂದುಳಿದ ಪ್ರದೇಶಗಳ ಅಭಿವೃದ್ದಿಯಿಂದ ಮಾತ್ರ ಕರ್ನಾಟಕವು ಉನ್ನತ ಅಭಿವೃದ್ದಿ ಸಾಧಿಸಿಕೊಳ್ಳಬಹುದು. ಪ್ರಾದೇಶಿಕ ಅಸಮತೋಲನವನ್ನು ರಾಜ್ಯವು ಮುಂದೆ ಸರಿಪಡಿಸಿಕೊಳ್ಳಬೇಕಾಗುತ್ತದೆ. ಇದು ರಾಜ್ಯದ ಅಭಿವೃದ್ದಿ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಲಿಂಗ ಸಂಬಂಧಗಳನ್ನು ಕುರಿತಂತೆಯೂ ಮುಂದೆ ರಾಜ್ಯವು ಹೆಚ್ಚಿನ ಸಾಧನೆಯನ್ನು ತೋರಬಹುದಾಗಿದೆ. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ, ದುಡಿಮೆಗಾರರಲ್ಲಿ 2/3ರಷ್ಟಿರುವ ಮಹಿಳೆಯರ ಕೊಡುಗೆ ರಾಜ್ಯದ ಅಭಿವೃದ್ದಿಗೆ ಅಧಿಕಗೊಳ್ಳುವ ಸಾಧ್ಯತೆಯಿದೆ. ವಿಕೇಂದ್ರೀಕೃತ ಯೋಜನೆಯು ತಾತ್ಕಾಲಿಕವಾಗಿ ಹಿನ್ನೆಡೆ ಅನುಭವಿಸುತ್ತಿದ್ದರೂ ಮುಂದೆ ಅದು ಸಬಲವಾಗುತ್ತದೆ. ಪ್ರತಿಯೊಂದು ಗ್ರಾಮವೂ ಅಭಿವೃದ್ದಿಯ ಘಟಕವಾಗುವ ಸಾಧ್ಯತೆಯಿದೆ.

ಪರಾಮರ್ಶನ ಗ್ರಂಥಗಳು
1. ಕರ್ನಾಟಕ ಸರ್ಕಾರ, 2005. ಆರ್ಥಿಕ ಸಮೀಕ್ಷೆ : 2004-05, ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
2. ಕರ್ನಾಟಕ ಸರ್ಕಾರ, 2006. ಆರ್ಥಿಕ ಸಮೀಕ್ಷೆ : 2005-06, ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
3. ಗೌರ್ನಮೆಂಟ್ ಆಫ್ ಮೈಸೂರು, 1970. ಎಕಾನಮಿಕ್ ಡೆವಲಪ್ಮೆಂಟ್ ಆಫ್ ಮೈಸೂರು: 1956-1969, ಬೆಂಗಳೂರು: ಬ್ಯೂರೋ ಆಫ್ ಎಕಾನಮಿಕ್ಸ್ ಆಂಡ್ ಸ್ಟ್ಯಾಟಿಸ್ಟಿಕ್ಸ್.
4. ಗೌರ್ನಮೆಂಟ್ ಆಫ್ ಕರ್ನಾಟಕ, 1980. ಡ್ರಾಫ್ಟ್ ಸಿಕ್ಸ್ತ್ ಫೈವ್ ಇಯರ್ ಪ್ಲಾನ್: 1980-1985, ಬೆಂಗಳೂರು: ಯೋಜನಾ ಇಲಾಖೆ.
5. ಗೌರ್ನಮೆಂಟ್ ಆಫ್ ಕರ್ನಾಟಕ, 1990 ಡ್ರಾಫ್ಟ್ ಎಡ್ತ್ ಫೈವ್ ಇಯರ್ ಪ್ಲಾನ್: 1990-1995, ಬೆಂಗಳೂರು: ಯೋಜನಾ ಇಲಾಖೆ.
6. ಗೌರ್ನಮೆಂಟ್ ಆಫ್ ಕರ್ನಾಟಕ, 1997. ನೈನ್ತ್ ಪ್ಲಾನ್: 1997-2002 ಬೆಂಗಳೂರು: ಯೋಜನಾ ಇಲಾಖೆ.
7. ಜೇಮ್ಸ್ ಮೇನರ್, 1997. ‘‘ಕರ್ನಾಟಕ : ಕಾಸ್ಟ್, ಕ್ಲಾಸ್, ಡಾಮಿನೆನ್ಸ್ ಆಂಡ್ ಪಾಲಿಟಿಕ್ಸ್ ಇನ್ ಎ ಕೊಹೆಸಿವ್ ಸೊಸೈಟಿ’’ ಸುದಿಪ್ತ ಕವಿರಾಜ್ (ಸಂ.) ಪಾಲಿಟಿಕ್ಸ್ ಇನ್ ಇಂಡಿಯಾ, ನವದೆಹಲಿ:ೊಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ಪು.262-273
8. ಮಾರ್ಟಿನ್ ರವೇಲಿಯನ್, 2000. ‘‘ವಾಟ್ ಇಸ್ ನೀಡೆಡ್ ಫಾರ್ ಎ ಮೋರ್ ಪ್ರೊ ಪೂರ್ ಗ್ರೋಥ್ ಪ್ರೊಸಸ್ ಇನ್ ಇಂಡಿಯಾ?’’, ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಮಾರ್ಚ್ 25.
9. ಮಿಹಿರ್ ಶಹಾ ಮತ್ತು ಇತರರು, 1998. ಇಂಡಿಯಾಸ್ ಡ್ರೈ ಲ್ಯಾಂಡ್ಸ್, ನವದೆಹಲಿ:ೊಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
10. ವಿನೋದ್ ವ್ಯಾಸುಲು 1991, ಫ್ಯಾಸೆಟ್ಸ್ ಆಫ್ ಡೆವಲಪ್ಮೆಂಟ್ : ಸ್ಟಡೀಸ್ ಇನ್ ಕರ್ನಾಟಕ, ಜೈಪುರ್: ರಾವತ್ ಪಬ್ಲಿಕೇಶನ್ಸ್.
11. ಶೆನ್ಗೆನ್ ಫ್ಯಾನ್, ಪೀಟರ್ ಹೆಜೆಲ್ 2000, ‘ಶುಡ್ ಡೆವಲಪಿಂಗ್ ಕಂಟ್ರೀಸ್ ಇನ್ವೆಸ್ಟ್ ಮೋರ್ ಇನ್ ಲೆಸ್ ಫೇವರ್ಡ್ ಏರಿಯಾಸ್?: ಆನ್ ಎಂಫೆರಿಕಲ್ ಅನಾಲಿಸಿಸ್ ಆಫ್ ರೂರಲ್ ಇಂಡಿಯಾ’, ಇಕಾನಮಿಕ್ ಆಯಂಡ್ ಪೊಲಿಟಿಕಲ್ ವೀಕ್ಲಿ, ಏಪ್ರಿಲ್ 22.
12. ಶ್ರೀನಿವಾಸ್ ಎಂ.ಎನ್., ಪಾನಿನಿ ಎಂ.ಎನ್., 1984. ‘‘ಪಾಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ’’, ಎಕಾನಮಿಕ್ ಆ್ಯಂಡ್ ಪೊಲಿಟಿಕಲ್ ವೀಕ್ಲಿ, ಜನವರಿ 14, ಪು.69-75
13. ಸೆನ್ಸಸ್ ಆಫ್ ಇಂಡಿಯಾ, 1991. ಸಿರೀಸ್-11, ಕರ್ನಾಟಕ. ಪಾರ್ಟ್-11ಬಿ (i) ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್: ಜನರಲ್ ಪಾಪುಲೇಶನ್, ಕರ್ನಾಟಕ: ಡೈರೆಕ್ಟರೇಟ್ ಆಫ್ ಸೆನ್ಸ್ಸ್ ಆಪರೇಶನ್.
14. ಸೆನ್ಸಸ್ ಆಫ್ ಇಂಡಿಯಾ, 1991. ಸೀರಿಸ್-11, ಕರ್ನಾಟಕ ಪಾರ್ಟ್-11 ಬಿ (ii) ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್: ಎಸ್.ಸಿ. ಆಂಡ್ ಎಸ್.ಟಿ. ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್, ಕರ್ನಾಟಕ
15. ಸೆನ್ಸಸ್ ಆಫ್ ಇಂಡಿಯಾ, 2001. ಸೀರಿಸ್-30, ಕರ್ನಾಟಕ ಪ್ರೈಮರಿ ಸೆನ್ಸಸ್ ಅಬ್ಸ್ಟ್ರಾಕ್ಟ್, ಡೈರೆಕ್ಟರೇಟ್ ಆಫ್ ಸೆನ್ಸಸ್ ಆಪರೇಶನ್, ಕರ್ನಾಟಕ