ಕರ್ನಾಟಕ ರಾಜ್ಯವು ಅಸ್ತಿತ್ವಕ್ಕೆ ಬಂದು 50 ವರ್ಷಗಳಾಗುತ್ತಿವೆ. ನಮ್ಮ ರಾಜ್ಯದ ಏಕೀಕರಣದ-ರಾಜ್ಯೋದಯದ ಸುವರ್ಣ ಮಹೋತ್ಸವವನ್ನು ಕರ್ನಾಟಕವು 2006ರಲ್ಲಿ ಆಚರಿಸಿತು. ಏಕೀಕರಣ ಚಳುವಳಿಯ ಮೂಲಕ ಕರ್ನಾಟಕವು ಉದಯಿಸಿತು. ಏಕೀಕರಣ ವೆಂಬುದು ತುಂಬಾ ಭಾವಗರ್ಭಿತ ನುಡಿಯಾಗಿದೆ. ಒಂದು ಕಾಲಕ್ಕೆ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಹರಿದು ಹಂಚಿಹೋಗಿದ್ದವು. ಅವು ನೆರೆಯ ರಾಜ್ಯಗಳ ಬಾಲಂಗೋಚಿ ಯಂತಿದ್ದವು. ಬೆಳಗಾವಿ, ಧಾರವಾಡ, ಬಿಜಾಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬೊಂಬಾಯಿಯ ಕಡೆ ಮುಖ ಮಾಡಿಕೊಂಡಿದ್ದರೆ ಗುಲಬರ್ಗಾ, ಬೀದರ್ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ಕಡೆಗೆ ಮುಖ ಮಾಡಿಕೊಂಡಿದ್ದವು. ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳು ಮದರಾಸಿನ ಕಡೆಗೆ ಮುಖಮಾಡಿಕೊಂಡಿದ್ದವು. ಮೈಸೂರು ಸಂಸ್ಥಾನದಲ್ಲಿ 9 ಜಿಲ್ಲೆಗಳಿದ್ದವು. ಕೊಡಗು ಪ್ರತ್ಯೇಕ ಭಾಗವಾಗಿತ್ತು. ಈ ಎಲ್ಲ ಭಾಗಗಳನ್ನೂ ಒಂದುಗೂಡಿಸಿ 1956ನೆಯ ನವೆಂಬರ್ 1ರಲ್ಲಿ ಕರ್ನಾಟಕವನ್ನು ರೂಪಿಸಲಾಯಿತು.
ಭಾಷೆ, ಸಂಸ್ಕೃತಿ, ಸಾಹಿತ್ಯ, ರಾಜಕಾರಣಗಳ ದೃಷ್ಟಿಯಿಂದ ಏಕೀಕರಣವಾಯಿತು. ಪ್ರಾದೇಶಿಕವಾಗಿ ಒಂದು ನಿರ್ದಿಷ್ಟ ನೆಲೆಯನ್ನು ರಾಜ್ಯವು ಪಡೆದುಕೊಂಡಿತು. ಆದರೆ ಅಭಿವೃದ್ದಿಯ ದೃಷ್ಟಿಯಿಂದ ಏಕೀಕರಣವಾಗಿದೆಯೆ? ರಾಜ್ಯದ ಎಲ್ಲ ಪ್ರದೇಶಗಳೂ ಅಭಿವೃದ್ದಿಯ ಫಲಗಳನ್ನು ಸಮಾನವಾಗಿ ಅನುಭವಿಸುತ್ತಿವೆಯೆ? ರಾಜ್ಯದ 5.28 ಕೋಟಿ ಜನರನ್ನು ಒಳಗೊಳ್ಳುವಂತೆ ಅಭಿವೃದ್ದಿ ನಡೆದಿದೆಯೆ? ಹೈದರಾಬಾದ್-ಕರ್ನಾಟಕ ಪ್ರದೇಶದ 95 ಲಕ್ಷ ಜನರು ಕರ್ನಾಟಕವನ್ನು ‘ನಮ್ಮದು’ ಎನ್ನುವ ಸ್ಥಿತಿಯಲ್ಲಿದ್ದಾರೆಯೆ? ಅಭಿವೃದ್ದಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿರುವ ದೇವದುರ್ಗ ಹಾಗೂ ಮೊಟ್ಟಮೊದಲನೆಯ ಸ್ಥಾನದಲ್ಲಿರುವ ಮಡಿಕೇರಿ ತಾಲ್ಲೂಕುಗಳ ನಡುವೆ ಅಂತರವು ಅಜಗಜಾಂತರವಿದೆ, ಯಾಕೆ?
ಪ್ರಸ್ತುತ ಲೇಖನದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅಭಿವೃದ್ದಿ ಸಂಬಂಧಿಸಿದಂತೆ ಉಂಟಾಗಿರುವ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು, ಪ್ರಮಾಣವನ್ನು ಮತ್ತು ಕಾರಣಗಳನ್ನು ವಿಶ್ಲೇಷಿಸಲು ಇಲ್ಲಿ ಪ್ರಯತ್ನಿಸಲಾಗಿದೆ. ಪ್ರಾದೇಶಿಕ ಅಸಮಾನತೆ ಕುರಿತಂತೆ ಪ್ರಾಥಮಿಕವೆನ್ನ ಬಹುದಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪ್ರಾದೇಶಿಕ ಅಸಮಾನತೆ ಕುರಿತ ಸೈದ್ಧಾಂತಿಕ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿವರವಾದ ಮಾಹಿತಿ, ಅಂಕಿ-ಅಂಶಗಳನ್ನು ಇಲ್ಲಿ ನೀಡಲಾಗಿದೆ. ಕರ್ನಾಟಕದಲ್ಲಿ ಉದ್ಭವಿಸಿರುವ ಪ್ರಾದೇಶಿಕ ಅಸಮಾನತೆಗೆ ಚಾರಿತ್ರಿಕ ಹಿನ್ನೆಲೆಯಿದೆ. ಕರ್ನಾಟಕ ರಾಜ್ಯದ ಉದಯದೊಂದಿಗೆ ತಲೆ ಎತ್ತಿದ ‘ಬಾಲಗ್ರಹ ಪೀಡೆ’ ಪ್ರಾದೇಶಿಕ ಅಸಮಾನತೆ.

ಕರ್ನಾಟಕದ ಪ್ರಾದೇಶಿಕ ಸ್ವರೂಪ
ಪ್ರಾದೇಶಿಕವಾಗಿ ಕರ್ನಾಟಕವನ್ನು ದಕ್ಷಿಣ ಕರ್ನಾಟಕ ಪ್ರದೇಶ(ದ.ಕ.ಪ್ರ.) ಮತ್ತು ಉತ್ತರ ಕರ್ನಾಟಕ ಪ್ರದೇಶ(ಉ.ಕ.ಪ್ರ)ವೆಂದು ವರ್ಗೀಕರಿಸುವುದು ರೂಢಿಯಲ್ಲಿದೆ. ದ.ಕ.ಪ್ರ.ವು 15 ಜಿಲ್ಲೆಗಳನ್ನು ಹೊಂದಿದ್ದರೆ ಉ.ಕ.ಪ್ರ.ದಲ್ಲಿ 12 ಜಿಲ್ಲೆಗಳಿವೆ. ಆಡಳಿತಾತ್ಮಕವಾಗಿ ರಾಜ್ಯವನ್ನು ನಾಲ್ಕು ಕಂದಾಯ ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳ ಹಾಗೂ ಅವುಗಳಿಗೆ ಸಂಬಂಧಿಸಿದ ಜಿಲ್ಲೆಗಳ ವಿವರ ಇಲ್ಲಿದೆ.
ಬೆಂಗಳೂರು ವಿಭಾಗ : ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ ಮತ್ತು ತುಮಕೂರು(7)
ಮೈಸೂರು ವಿಭಾಗ : ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಮಂಡ್ಯ ಮತ್ತು ಹಾಸನ(8)
ಬೆಳಗಾವಿ ವಿಭಾಗ : ಧಾರವಾಡ, ಹಾವೇರಿ, ಗದಗ, ಬಿಜಾಪುರ, ಬಾಗಲಕೋಟೆ, ಬೆಳಗಾವಿ ಮತ್ತು ಉತ್ತರ ಕನ್ನಡ (7)
ಗುಲಬರ್ಗಾ ವಿಭಾಗ : ಬೀದರ್, ಬಳ್ಳಾರಿ, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ (5)
ಬೆಂಗಳೂರು ಮತ್ತು ಮೈಸೂರು ವಿಭಾಗಗಳು ಸೇರಿ ದ.ಕ.ಪ್ರ.ವಾದರೆ ಬೆಳಗಾವಿ ಮತ್ತು ಗುಲಬರ್ಗಾ ವಿಭಾಗಗಳು ಸೇರಿ ಉ.ಕ.ಪ್ರ.ವಾಗಿದೆ. ಬೆಳಗಾವಿ ವಿಭಾಗವನ್ನು ‘ಬಾಂಬೆ ಕರ್ನಾಟಕ’ವೆಂದು ಮತ್ತು ಗುಲಬರ್ಗಾ ವಿಭಾಗವನ್ನು (ಬಳ್ಳಾರಿ ಬಿಟ್ಟು) ಹೈದರಾಬಾದ್-ಕರ್ನಾಟಕವೆಂದು ಕರೆಯಲಾಗುತ್ತದೆ. ಏಕೆಂದರೆ ಬೆಳಗಾವಿ ವಿಭಾಗದ ನಾಲ್ಕು ಜಿಲ್ಲೆಗಳು ಏಕೀಕರಣ ಪೂರ್ವದಲ್ಲಿ ಬಾಂಬೆ ಸಂಸ್ಥಾನದ ಭಾಗಗಳಾಗಿದ್ದವು. ಅದೇ ರೀತಿ ಗುಲಬರ್ಗಾ ವಿಭಾಗದ ಬೀದರ್, ಗುಲಬರ್ಗಾ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳು ಹೈದರಾಬಾದ್ ನಿಜಾಮನ ಸಂಸ್ಥಾನದ ಭಾಗಗಳಾಗಿದ್ದವು. ಏಕೀಕರಣದ ಸಂದರ್ಭದಲ್ಲಿ(1956) ಇವು ಕರ್ನಾಟಕದಲ್ಲಿ ವಿಲೀನಗೊಂಡವು. ದಕ್ಷಿಣ ಕನ್ನಡ ಹಾಗೂ ಬಳ್ಳಾರಿ ಜಿಲ್ಲೆಗಳು ಏಕೀಕರಣ ಪೂರ್ವದಲ್ಲಿ ಮದರಾಸು ಪ್ರಾಂತದ ಭಾಗಗಳಾಗಿದ್ದವು. ಹೀಗೆ ವಿವಿಧ ಆಡಳಿತಗಳ ಭಾಗಗಳಾಗಿದ್ದ ಪ್ರದೇಶಗಳೆಲ್ಲವೂ ಕರ್ನಾಟಕದಲ್ಲಿ ವಿಲೀನ ಗೊಂಡವು. ಹೀಗೆ ವಿಲೀನಗೊಂಡ ಸಂದರ್ಭದಲ್ಲಿ ಅವು ವಿವಿಧ ಅಭಿವೃದ್ದಿ ಮಟ್ಟಗಳಲ್ಲಿದ್ದವು.
ಚಾರಿತ್ರಿಕ ಕಾರಣಗಳಿಂದಾಗಿ ಬಾಂಬೆ ಪ್ರಾಂತದ ಭಾಗಗಳಾಗಿದ್ದ ನಾಲ್ಕು ಜಿಲ್ಲೆಗಳು ವಸಾಹತುಶಾಹಿ ಆಡಳಿತದಿಂದಾಗಿ ಅನೇಕ ಬಗೆಯ ಅಭಿವೃದ್ದಿ ಅನುಕೂಲಗಳನ್ನು ಪಡೆದುಕೊಂಡವು. ಅದೇ ರೀತಿ ಬಳ್ಳಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳೂ ಸಹ ವಸಾಹತುಶಾಹಿ ಆಡಳಿತದ ಅನುಕೂಲಗಳನ್ನು ಪಡೆದುಕೊಂಡವು. ಆದರೆ ನಿಜಾಮ ಸಂಸ್ಥಾನಕ್ಕೆ ಸೇರಿದ್ದ ಗುಲಬರ್ಗಾ, ಬೀದರ್, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳು ಮೊದಲನೆಯದಾಗಿ ವಸಾಹತುಶಾಹಿ ಆಡಳಿತದ ಅನುಕೂಲಗಳನ್ನು ಪಡೆದುಕೊಳ್ಳಲಿಲ್ಲ ಹಾಗೂ ಎರಡನೆಯದಾಗಿ ಮೈಸೂರು ಸಂಸ್ಥಾನದಲ್ಲಿದ್ದಂತಹ ಉದಾರವಾದಿ ಆಡಳಿತದ ಅನುಕೂಲಗಳೂ ಅವುಗಳಿಗೆ ದೊರೆಯಲಿಲ್ಲ. ಅಭಿವೃದ್ದಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆ ಕುರಿತಂತೆ ಚರ್ಚೆ ಮಾಡುವಾಗ ಮೇಲಿನ ಚಾರಿತ್ರಿಕ ಸಂಗತಿಗಳನ್ನು ಅವಶ್ಯ ಗಮನಿಸಬೇಕಾಗುತ್ತದೆ.

ಅಧ್ಯಯನದ ಉದ್ದೇಶಗಳು
ಈಗಾಗಲೆ ಹೇಳಿರುವಂತೆ ಪ್ರಾದೇಶಿಕ ಅಸಮಾನತೆ ಕುರಿತಂತೆ ಪ್ರಾಥಮಿಕವಾದ ಮಾಹಿತಿಯನ್ನು ನೀಡುವುದು ಪ್ರಸ್ತುತ ಅಧ್ಯಯನದ ಉದ್ದೇಶವಾಗಿದೆ. ನಿರ್ದಿಷ್ಟವಾಗಿ ಇಲ್ಲಿನ ಉದ್ದೇಶಗಳು ಹೀಗಿವೆ.
1. ಅಭಿವೃದ್ದಿ ಮತ್ತು ಪ್ರಾದೇಶಿಕ ಅಸಮಾನತೆ ಕುರಿತಂತೆ ಸೈದ್ಧಾಂತಿಕ ಸಂಗತಿಗಳನ್ನು ಚರ್ಚಿಸುವುದು.
2. ಮಾನವ ಅಭಿವೃದ್ದಿ ವರದಿ ಹಾಗೂ ಡಿ.ಎಂ.ನಂಜುಂಡಪ್ಪ ವರದಿಗಳ ಸಾರವನ್ನು ಸಂಗ್ರಹರೂಪದಲ್ಲಿ ನೀಡುವುದು.
3. ಪ್ರಾದೇಶಿಕ ಅಸಮಾನತೆಯ ವಿವಿಧ ಆಯಾಮಗಳನ್ನು ಪರಿಶೀಲಿಸುವುದು.
4. ಇಲ್ಲಿನ ಚರ್ಚೆಯ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕೆಲವು ನೀತಿ ಸಂಬಂಧಿ ತಂತ್ರಗಳನ್ನು ಸೂಚಿಸುವುದು.

ಅಧ್ಯಯನ ವಿಧಾನ
ಗುನ್ನಾರ್ ಮಿರ್ಡಾಲ್, ಜೆ.ಜಿ. ವಿಲಿಯಂಸನ್, ರಾಜ್ಕೃಷ್ಣ, ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ ಮುಂತಾದವರು ರೂಪಿಸಿರುವ ಪ್ರಾದೇಶಿಕ ಅಸಮಾನತೆಗೆ ಸಂಬಂಧಿಸಿದ ಸಿದ್ಧಾಂತಗಳ ಚೌಕಟ್ಟಿನಲ್ಲಿ ಕರ್ನಾಟಕದಲ್ಲಿನ ಪ್ರಾದೇಶಿಕ ಅಸಮಾನತೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ. ಕರ್ನಾಟಕದಲ್ಲಿನ ಅಭಿವೃದ್ದಿ ಸಂಬಂಧಿ ಅಸಮಾನತೆಯನ್ನು ಅಧ್ಯಯನ ಮಾಡಲು ನಮಗೆ ಎರಡು ಮುಖ್ಯ ವರದಿಗಳಿವೆ. ಮೊದಲನೆಯದು ಕರ್ನಾಟಕದ ಯೋಜನಾ ವಿಭಾಗವು ಸಿದ್ಧಪಡಿಸಿರುವ ‘ಕರ್ನಾಟಕದಲ್ಲಿ ಮಾನವ ಅಭಿವೃದ್ದಿ: 1999 ಮತ್ತು ಪ್ರಾದೇಶಿಕ ಅಸಮಾನತಾ ನಿವಾರಣಾ ಅಧ್ಯಯನದ ಉನ್ನತಾಧಿಕಾರ ಸಮಿತಿಯ ‘ಅಂತಿಮ ವರದಿ’(ಡಿ.ಎಂ.ನಂಜುಂಡಪ್ಪ ವರದಿ). ಇವೆರಡೂ ವರದಿಗಳು ನಮಗೆ ಅಗತ್ಯವಾದ ಮಾಹಿತಿಗಳನ್ನು ಒದಗಿಸುತ್ತವೆ. ಇವೆರಡೂ ವರದಿಗಳು ಪ್ರಾದೇಶಿಕ ಅಸಮಾನತೆಯನ್ನು ಪರಿಭಾವಿಸಿಕೊಂಡಿರುವ ಬಗೆಯನ್ನು ಕುರಿತಂತೆ ಭಿನ್ನಾಭಿಪ್ರಾಯ ಸಾಧ್ಯ. ಆದರೆ ಅವು ಒದಗಿಸುವ ಮಾಹಿತಿ ಮಾತ್ರ ಅಧ್ಯಯನಗಳಿಗೆ ತುಂಬಾ ಉಪಯುಕ್ತವಾಗಿವೆ. ಪ್ರಸ್ತುತ ಅಧ್ಯಯನದಲ್ಲಿ ಅಂಕಿ-ಅಂಶಗಳ ಆಧಾರದ ಮೇಲೆ ಕೆಳಕಂಡ ಸಂಗತಿಗಳನ್ನು ಪ್ರತಿಪಾದಿಸಲು ಪ್ರಯತ್ನಿಸಲಾಗಿದೆ.
1. ಕರ್ನಾಟಕದಲ್ಲಿ ಮಾನವ ಅಭಿವೃದ್ದಿ : 1999’ ಹಾಗೂ ಡಿ.ಎಂ. ನಂಜುಂಡಪ್ಪ ವರದಿಗಳು ಬಹಳ ಮುಖ್ಯವಾಗಿ ಆರ್ಥಿಕವಾಗಿ ಮುಂದುವರಿಕೆ ಅಥವಾ ಹಿಂದುಳಿದಿರುವಿಕೆ ಎಂಬ ಸಂಗತಿಗಳು ದ.ಕ.ಪ್ರ. ಹಾಗೂ ಉ.ಕ.ಪ್ರ. ಎರಡಕ್ಕೂ ಅನ್ವಯಿಸುತ್ತವೆ ಎಂಬುದನ್ನು ಪ್ರತಿಪಾದಿಸುತ್ತಿವೆ. ಇದು ನಿಜವಿರಬಹುದು. ಆದರೆ ಹಿಂದುಳಿದಿರುವಿಕೆಯ ತೀವ್ರತೆ ಹಾಗೂ ಗಂಭೀರತೆಯು ಉ.ಕ.ಪ್ರ.ದಲ್ಲಿ ಉಲ್ಬಣ ಸ್ಥಿತಿಯಲ್ಲಿದ್ದರೆ ಮುಂದು ವರಿದಿರುವಿಕೆಯು ದ.ಕ.ಪ್ರ.ದಲ್ಲಿ ಮಡುಗಟ್ಟಿಕೊಂಡಿದೆ. ಇದನ್ನು ಪ್ರಸ್ತುತ ಕೃತಿಯಲ್ಲಿ ಸಾಧಿಸಿ ತೋರಿಸಲಾಗಿದೆ.
2. ಉ.ಕ.ಪ್ರ.ವನ್ನು ಒಂದು ಪ್ರಾದೇಶಿಕ ಘಟಕವಾಗಿ ಪರಿಗಣಿಸುತ್ತಾ ಬರಲಾಗಿದೆ. ಇದರಿಂದ ಗುಲಬರ್ಗಾ ವಿಭಾಗದ ಜಿಲ್ಲೆಗಳಿಗೆ ಅನ್ಯಾಯವಾಗುವ ಸಾಧ್ಯತೆಯಿದೆ. ಇಡೀ ಉ.ಕ.ಪ್ರ.ವು ಹಿಂದುಳಿದಿದೆ. ಆದರೆ ಅದರೊಳಗೆ ಗುಲಬರ್ಗಾ ವಿಭಾಗದ ಐದು ಜಿಲ್ಲೆಗಳ ಸ್ಥಿತಿಯು ಬೆಳಗಾವಿ ವಿಭಾಗದ ಏಳು ಜಿಲ್ಲೆಗಳ ಸ್ಥಿತಿಗಿಂತ ಹೀನಾಯ ವಾಗಿದೆ. ಕರ್ನಾಟಕದ ಸಂದರ್ಭದಲ್ಲಿ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಯನ್ನು ಹೈದರಾಬಾದ್-ಕರ್ನಾಟಕ (ಬಳ್ಳಾರಿಯನ್ನು ಸೇರಿಸಿಕೊಂಡು) ಪ್ರದೇಶದ ನೆಲೆಯಿಂದಲೇ ನಡೆಸಬೇಕು ಎಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ.
3. ಅಭಿವೃದ್ದಿಯನ್ನು ಅಳೆಯುವ ಬಹುಮುಖ್ಯ ಜನಪ್ರಿಯ ಮಾನದಂಡ ವರಮಾನ. ಆದರೆ ಅದೊಂದು ಸೀಮಿತವಾದ ನೆಲೆಯಲ್ಲಿ ಅಭಿವೃದ್ದಿಯನ್ನು ಹಿಡಿದಿಡುತ್ತದೆ. ವರಮಾನವನ್ನು ಮುಖ್ಯ ಘಟಕವನ್ನಾಗಿ ಮಾಡಿಕೊಂಡು ಪ್ರಾದೇಶಿಕ ಅಸಮಾನತೆ ಕುರಿತಂತೆ ನಡೆಸುವ ಚರ್ಚೆಯಲ್ಲಿ ಸಮಸ್ಯೆಗೆ ಕಾರಣವಾದ ಸಂಗತಿಗಳ ಬಗ್ಗೆ ಯಾವುದೇ ಸೂಚನೆ ತಿಳಿಯುವುದಿಲ್ಲ. ಪ್ರಾದೇಶಿಕ ಅಸಮಾನತೆಗೆ ಜಾತಿಸಂಬಂಧಿ ಹಾಗೂ ಲಿಂಗಸಂಬಂಧಿ ಆಯಾಮಗಳಿರುವುದು ಸಾಧ್ಯ. ಶಿಕ್ಷಣ, ಆರೋಗ್ಯ, ಆಹಾರ ಭದ್ರತೆ ಮುಂತಾದವುಗಳ ನೆಲೆಯಿಂದ ನಡೆಸುವ ಚರ್ಚೆಯಿಂದ ಸಮಸ್ಯೆಗೆ ಕಾರಣವಾದ ಸಂಗತಿಗಳನ್ನು ಹಿಡಿದಿಡುವುದು ಸಾಧ್ಯ. ಈ ಅಧ್ಯಯನದಲ್ಲಿ ‘ಮಾನವ ಅಭಿವೃದ್ದಿ’ ಎಂಬ ಪರಿಭಾವನೆಯ ಚೌಕಟ್ಟಿನಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಚರ್ಚಿಸಲು ಪ್ರಯತ್ನಿಸಲಾಗಿದೆ.
4. ಪ್ರಾದೇಶಿಕ ಅಸಮಾನತೆಯೆಂಬುದು ಭೌತಿಕವಾದ ಅಥವಾ ಭೌಗೋಳಿಕವಾದ ಸಂಗತಿಯಲ್ಲ. ಅದು ಜನರನ್ನು ಒಳಗೊಂಡ ಒಂದು ಸಂಗತಿ. ಹಿಂದುಳಿದಿರುವ ಪ್ರದೇಶಗಳ ಬಗ್ಗೆ ಮಾತನಾಡುವಾಗ ನಾವು ಅಲ್ಲಿ ದಲಿತರು, ಕೂಲಿಕಾರರು, ಮಹಿಳೆಯರು ಮುಂತಾದವರ ಬಗ್ಗೆ ಮಾತನಾಡಬೇಕಾಗುತ್ತದೆ. ಪ್ರಸ್ತುತ ಕೃತಿಯಲ್ಲಿ ಜನರನ್ನು ಮೂಲಧಾತುವನ್ನಾಗಿಟ್ಟುಕೊಂಡು ಪ್ರಾದೇಶಿಕ ಅಸಮಾನತೆಯನ್ನು ಚರ್ಚಿಸಲಾಗಿದೆ.

ಅಧ್ಯಯನದ ವಿನ್ಯಾಸ
ಪ್ರಸ್ತಾವನೆ ಮತ್ತು ಸಂಗ್ರಹ ಭಾಗಗಳನ್ನು ಬಿಟ್ಟು ಇಲ್ಲಿ ಎಂಟು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಕರ್ನಾಟಕದಲ್ಲಿನ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಚಾರಿತ್ರಿಕ ಆಯಾಮಗಳನ್ನು ಗುರುತಿಸಲಾಗಿದೆ. ಎರಡನೆಯ ಭಾಗದಲ್ಲಿ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಕುರಿತ ಸಿದ್ಧಾಂತಗಳನ್ನು ಕುರಿತಂತೆ ಚರ್ಚಿಸಲಾಗಿದೆ. ಮೂರನೆಯ ಭಾಗದಲ್ಲಿ ಪ್ರಾದೇಶಿಕ ಅಸಮಾನತೆಗೆ ಸಂಬಂಧಿಸಿದ ವರಮಾನದ ಸ್ವರೂಪ ಹಾಗೂ ಅದರ ಊಳಿಗಮಾನ್ಯ-ಅರೆಬಂಡವಾಳಶಾಹಿ ಸ್ವರೂಪವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ವರಮಾನ ವರ್ಧನೆಗೆ ಭಿನ್ನವಾದ ಮಾನವ ಅಭಿವೃದ್ದಿ ಸೂಚ್ಯಂಕದ ಮೂಲಕ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ನಾಲ್ಕನೆಯ ಭಾಗದಲ್ಲಿ ಚಿತ್ರಿಸಲಾಗಿದೆ. ಇಲ್ಲಿ ಪ್ರಾದೇಶಿಕ ಅಸಮಾನತೆ ಕುರಿತಂತೆ ಡಿ.ಎಂ. ನಂಜುಂಡಪ್ಪ ವರದಿಯ ಮುಖ್ಯ ತಥ್ಯಗಳನ್ನು ಸಂಗ್ರಹಿಸಿಕೊಡಲಾಗಿದೆ. ಈ ಹೊತ್ತಿಗೆಯ ಐದನೆಯ ಭಾಗದಲ್ಲಿ ಸಾಕ್ಷರತೆ-ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಆಳ-ಹರವುಗಳನ್ನು ಹಿಡಿದಿಡಲಾಗಿದೆ. ಶೈಕ್ಷಣಿಕವಾಗಿ ಅತ್ಯಂತ ದುಸ್ಥಿತಿಯನ್ನು ಎದುರಿಸುತ್ತಿರುವ ತಾಲ್ಲೂಕು ಗಳನ್ನು ಪ್ರಸ್ತುತ ಅಧ್ಯಯನಕ್ಕಾಗಿ ಗುರುತಿಸಲಾಗಿದೆ.
ಜನಸಂಖ್ಯೆಯ ವಿವಿಧ ಸೂಚಿಗಳನ್ನು ಬಳಸಿಕೊಂಡು ವಿನೂತನವಾಗಿ ಪ್ರಾದೇಶಿಕ ಅಸಮಾನತೆಯನ್ನು ಇಲ್ಲಿ ಚರ್ಚಿಸಲು ಪ್ರಯತ್ನಿಸಲಾಗಿದೆ. ಆರನೆಯ ಭಾಗವನ್ನು ಅದಕ್ಕಾಗಿ ಮೀಸಲಿಡಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ಇಲ್ಲಿ ಹಿಡಿದಿಡಲಾಗಿದೆ. ಅಧ್ಯಯನದ ಏಳು ಮತ್ತು ಎಂಟನೆಯ ಭಾಗಗಳಲ್ಲಿ ಪ್ರಾದೇಶಿಕ ಅಸಮಾನತೆಯ ಲಿಂಗಸಂಬಂಧಿ ಸ್ವರೂಪವನ್ನು ಹಾಗೂ ಅದರ ಪರಿಶಿಷ್ಟವಾದಿ ನೆಲೆಗಳನ್ನು ಶೋಧಿಸಲು ಪ್ರಯತ್ನಿಸಲಾಗಿದೆ.
ಕೊನೆಯ ಸಂಗ್ರಹ ಭಾಗದಲ್ಲಿ ಅಧ್ಯಯನದ ಸಾರವನ್ನು ಪಟ್ಟಿ ಮಾಡಲಾಗಿದೆ ಹಾಗೂ ಸರ್ಕಾರ ಮತ್ತು ಸಮಾಜ ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಏನು ಮಾಡಬಹುದು ಎಂಬುದನ್ನು ಸ್ಥೂಲವಾಗಿ ಚರ್ಚಿಸಲಾಗಿದೆ.

ಪ್ರಾದೇಶಿಕ ಅಸಮಾನತೆಯ ಚಾರಿತ್ರಿಕ ಹಿನ್ನೆಲೆ
ಕರ್ನಾಟಕವು ಎದುರಿಸುತ್ತಿರುವ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯು ನೆನ್ನೆ ಮೊನ್ನೆ ಹುಟ್ಟಿಕೊಂಡ ಸಮಸ್ಯೆಯಲ್ಲ. ಅದು ಕರ್ನಾಟಕಕ್ಕೆ ಮಾತ್ರ ಮೀಸಲಾದ ಸಮಸ್ಯೆಯೂ ಅಲ್ಲ. ಅದರ ಬೇರುಗಳು ಚರಿತ್ರೆಯಲ್ಲಿ ಹುದುಗಿಕೊಂಡಿವೆ. ವಸಾಹತುಶಾಹಿ ಕಾಲದಲ್ಲಿ ಕರ್ನಾಟಕವು ಎದುರಿಸಬೇಕಾಗಿ ಬಂದ ಸಮಸ್ಯೆಯನ್ನು ರಾಜ್ಯ ಪುನರ್ವಿಂಗಡಣೆ ಆಯೋಗವು ಸರಿಯಾಗಿ ಹೀಗೆ ಗುರುತಿಸಿದೆ.
ಬ್ರಿಟಿಶ್ರ ಆಡಳಿತಾವಧಿಯ ಪ್ರಾದೇಶಿಕ ವಿಭಜನೆಯಲ್ಲಿ ಕನ್ನಡಿಗರಿಗೆ ಹೆಚ್ಚು ಅನ್ಯಾಯವಾಯಿತೆಂಬ ಅಂಶವನ್ನು ಸಾಮಾನ್ಯವಾಗಿ ಗುರುತಿಸ ಲಾಗಿದೆ. ಈ ಪ್ರದೇಶವನ್ನು ನಾಲ್ಕು ಭಾಗಗಳಾಗಿ ವಿಭಜಿಸಿದಾಗ, ಮೂರರಲ್ಲಿ ಅವರು ಕೊನೆಯಯಲ್ಲಿದ್ದರು. ಅಥವಾ ಪ್ರಭಾವವಿಲ್ಲದ ಅಲ್ಪಸಂಖ್ಯಾತರಾಗಿದ್ದರು (ಎಸ್.ಆರ್.ಸಿ. ರಿಪೋರ್ಟ್, ಪು.90).
ಹೀಗೆ ವಿವಿಧ ಪ್ರಾಂತ ಭಾಗಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಸೇರಿ 1956ರಲ್ಲಿ ಕರ್ನಾಟಕ ನಿರ್ಮಾಣವಾದಾಗ ವಿವಿಧ ಪ್ರದೇಶಗಳ ಸ್ಥಿತಿ ಹೇಗಿತ್ತು ಎಂಬುದನ್ನು ಕೋಷ್ಟಕ-1 ರಲ್ಲಿ ತೋರಿಸಿದೆ.

ವಿವಿಧ ಪ್ರದೇಶಗಳ ಅಭಿವೃದ್ದಿ ಮಟ್ಟ ವಿವಿಧ ನೆಲೆಯಲ್ಲಿದ್ದುದು ಇದರಿಂದ ಸ್ಪಷ್ಟ ವಾಗುತ್ತದೆ. ಆರ್ಥಿಕ ಹಾಗೂ ಸಾಮಾಜಿಕ – ಎರಡೂ ನೆಲೆಯಲ್ಲಿ ಅಸಮಾನತೆ ಇದ್ದುದು ಕೋಷ್ಟಕದಿಂದ ತಿಳಿದುಬರುತ್ತದೆ.

ಕೃಷ್ಣಕುಮಾರ ಕಲ್ಲೂರ (1956) ಎನ್ನುವ ವಿದ್ವಾಂಸರು 1956ರಲ್ಲಿ ಸರ್ಕಾರವು ಪ್ರಕಟಿಸಿದ ಒಂದು ಸಂಪುಟದಲ್ಲಿ ಪ್ರಾದೇಶಿಕ ಅಸಮಾನತೆಯ ಅಭಿವೃದ್ದಿ ಸ್ವರೂಪವನ್ನು ಹೀಗೆ ಹಿಡಿದಿಟ್ಟಿದ್ದಾರೆ.
… ಸಂಯುಕ್ತ ಕರ್ನಾಟಕದ ಬೇಡಿಕೆ ಹೊರ ಹೊರಗೆ ಭಾಷಾತ್ಮಕ ವಾಗಿದ್ದರೂ ನಿಜವಾಗಿ ಅದು ಆರ್ಥಿಕ ದೃಷ್ಟಿಯಲ್ಲಿ ಹಿಂದುಳಿದವರ ಕೂಗಾಗಿತ್ತು. ಆದುದರಿಂದ ಈಗ ಒಂದಾಗಿರುವ ಸಂಯುಕ್ತ ಕರ್ನಾಟಕ ಹಿಂದುಳಿದ ಪ್ರದೇಶಗಳದೇ ಒಂದು ರಾಜ್ಯವೆಂತಲೂ, ಭಾಷೆ ಒಂದಾಗಿರುವುದು ಒಂದು ಹೆಚ್ಚಿನ ಅನುಕೂಲವೆಂದು ಭಾವಿಸಿಕೊಳ್ಳಬೇಕು. ಆದುದರಿಂದ ಭಾಷೆ ಸಾಹಿತ್ಯದ ಬೆಳವಣಿಗೆಗಿಂತಲೂ, ಹಿಂದುಳಿದ ಪ್ರದೇಶಗಳ ಆರ್ಥಿಕ ಬೆಳವಣಿಗೆಯೇ ಕರ್ನಾಟಕ ರಾಜ್ಯದ ಗುರಿ ಎಂದು ಬಗೆಯಬೇಕು. ಈ ವಿಷಯದಲ್ಲಿ ಮೈಸೂರು ಸಂಸ್ಥಾನದಲ್ಲೂ ಬೆಂಗಳೂರು, ಮೈಸೂರು ಪರಿಸರದಲ್ಲಿ ಮಾತ್ರ ಸಾಕಷ್ಟು ಬೆಳವಣಿಗೆ ಯಾಗಿದೆಯೇ ಹೊರತು ಮಿಕ್ಕ ಹಲಭಾಗ ಸಾಕಷ್ಟು ಹಿಂದುಳಿದಿದೆ. ಇದನ್ನೆಲ್ಲಾ ನೋಡಿದರೆ ನಿಜ ಕರ್ನಾಟಕ ಕೊಡಗು, ಕನ್ನಡ ಜಿಲ್ಲೆ, ಶಿವಮೊಗ್ಗ, ಚಿತ್ರದುರ್ಗ, ಬಿಜಾಪುರ, ಗುಲಬರ್ಗಾ ಪ್ರದೇಶದಲ್ಲಿ ಇರುವುದಲ್ಲದೆ ಬೆಂಗಳೂರು-ಮಂಗಳೂರು-ಮೈಸೂರು ನಗರಗಳಲ್ಲಲ್ಲ ಎಂಬುದು ತಿಳಿಯುತ್ತದೆ.
ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಅರಿವು 1956ರಲ್ಲಿ ರಾಜ್ಯವು ಉದಯವಾದ ಸಂದರ್ಭದಲ್ಲೇ ಇತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ತಿಳಿದುಬರುವುದೇನೆಂದರೆ, ಕರ್ನಾಟಕದಲ್ಲಿ ಅಭಿವೃದ್ದಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯೆಂಬುದು ಅದರ ಹುಟ್ಟಿನಿಂದಲೇ ಪ್ರಾಪ್ತವಾದ ‘ಬಾಲಗ್ರಹಪೀಡೆ’ಯಾಗಿದೆ.
ವಸಾಹತುಶಾಹಿ ಕಾಲದಲ್ಲಿ ಮೈಸೂರು ಸಂಸ್ಥಾನವು ದೂರದೃಷ್ಟಿಯುಳ್ಳ ದಿವಾನರು ಗಳಿಂದಾಗಿ ಮತ್ತು ಪ್ರಜಾವತ್ಸಲರಾದ ಅರಸರಿಂದಾಗಿ ಅಭಿವೃದ್ದಿಯನ್ನು ಸಮೃದ್ಧವಾಗಿ ಅನುಭವಿಸಿತು. ಬಾಂಬೆ ಕರ್ನಾಟಕದ ಜಿಲ್ಲೆಗಳಿಗೆ ವಸಾಹತುಶಾಹಿ ಆಡಳಿತದ ಅನುಕೂಲಗಳು ದೊರೆತವು. ಶಿಕ್ಷಣ, ಆರೋಗ್ಯ, ಸಾರಿಗೆ ಮುಂತಾದ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಅವು ಕಂಡವು. ಆದರೆ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ಬೀದರ್, ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳು ವಸಾಹತುಶಾಹಿ ಆಡಳಿತದ ಅನುಕೂಲಗಳಿಂದ ವಂಚಿತ ವಾದವು. ನೂರಾರು ವರ್ಷಗಳ ಕಾಲ ಅವು ಸಂಘರ್ಷವನ್ನು ಎದುರಿಸಿದವು. ಈ ಎಲ್ಲ ಕಾರಣಗಳಿಂದಾಗಿ ಪ್ರಾದೇಶಿಕ ಅಸಮಾನತೆಯು ರಾಜ್ಯದಲ್ಲಿ ಇಂದಿಗೂ ಮುಂದುವರಿದಿದೆ. ಹಿಂದುಳಿದ ಪ್ರದೇಶ-ಮುಂದುವರಿದ ಪ್ರದೇಶ ಎಂಬ ನುಡಿಗಟ್ಟುಗಳು 1956ರಲ್ಲೇ ಬಳಕೆಯಾಗಿವೆ.
ವಸಾಹತುಶಾಹಿ ಆಡಳಿತ, ಜನಾನುರಾಗಿ ಪ್ರಭುತ್ವದಿಂದಾಗಿ ದಕ್ಷಿಣ ಕರ್ನಾಟಕ ಪ್ರದೇಶವು ಊಳಿಗಮಾನ್ಯ ವ್ಯವಸ್ಥೆಯ ಕಪಿಮುಷ್ಟಿಯಿಂದ ಬಿಡುಗಡೆ ಪಡೆದುಕೊಂಡಿತು. ಅಲ್ಲಿ 1956ರಿಂದ ಬಂಡವಾಳಶಾಹಿ ವ್ಯವಸ್ಥೆ ಮೊಳಕೆಯೊಡೆಯತೊಡಗಿತು. ಆದರೆ ಉತ್ತರ ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ, ಅದರಲ್ಲೂ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಿಗೆ ಅಂತಹ ಬಿಡುಗಡೆ ದೊರೆಯಲಿಲ್ಲ. ಅವು ಇಂದಿಗೂ ಜಮೀನುದಾರಿ ಪಾಳೆಗಾರಿಕೆಯ ಕಬಂಧ ಬಾಹುಗಳಲ್ಲಿ ನಲುಗುತ್ತಿರುವುದನ್ನು ಕಾಣಬಹುದು. ಪ್ರಸ್ತುತ ಹೊತ್ತಿಗೆಯ ಮೂರನೆಯ ಭಾಗದಲ್ಲಿ ಇದನ್ನು ವಿವರವಾಗಿ ಪರಿಶೀಲಿಸಲಾಗಿದೆ. ಒಂದು ಬಗೆಯ ಚಾರಿತ್ರಿಕ ವಿಕಲತೆಗೆ ಒಳಗಾದ ಹೈದರಾಬಾದ್-ಕರ್ನಾಟಕ ಪ್ರದೇಶದ ಅಭಿವೃದ್ದಿ ಇಂದಿಗೂ ಮಂದಗತಿಯಲ್ಲಿ ನಡೆದಿರುವುದನ್ನು ನೋಡಬಹುದು. ಅಲ್ಲಿ ಅಭಿವೃದ್ದಿಯು ಕುಂಠಿತಗೊಂಡಿಲ್ಲ. ಆದರೆ ಅದು ಕುಂಟುತ್ತಾ ನಡೆದಿದೆ. ಚಾರಿತ್ರಿಕ ಸಂಗತಿ ಗಳನ್ನು ನಿರ್ಲಕ್ಷಿಸಿ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ಕುರಿತಂತೆ ಚರ್ಚಿಸುವುದು ಸಾಧ್ಯವಿಲ್ಲ. ಒಂದು ರಾಜ್ಯದೊಳಗೆ ಕೆಲವು ಪ್ರದೇಶಗಳು ಹಿಂದುಳಿದಿದ್ದರೆ, ದುಸ್ಥಿತಿಗೆ ಒಳಗಾಗಿದ್ದರೆ ಅದಕ್ಕೆ ‘ಬಾಹ್ಯಜನ್ಯ’ ಸಂಗತಿಗಳು ಕಾರಣವಾಗಿರುತ್ತವೆ ಹಾಗೂ ‘ಆಂತರಿಕ’ ವಾದ ಸಂಗತಿಗಳು ಕಾರಣವಾಗಿರುತ್ತವೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು ಪ್ರಾದೇಶಿಕ ಅಸಮಾನತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ.

ಪ್ರಾದೇಶಿಕ ಅಸಮಾನತೆಯ ಸೈದ್ಧಾಂತಿಕ ನೆಲೆಗಳು
ಅಭಿವೃದ್ದಿ ಸಿದ್ಧಾಂತಗಳಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಂಗತಿಯೆಂದರೆ ಪ್ರಾದೇಶಿಕ ಅಸಮಾನತೆ. ಅಭಿವೃದ್ದಿ ಸಿದ್ಧಾಂತಗಳಲ್ಲಿ ಪ್ರದೇಶ ನಿರ್ದಿಷ್ಟ ಸಂಗತಿಗಳನ್ನು ಕಡೆಗಣಿಸಲಾಗಿದೆ. ಅಭಿವೃದ್ದಿಯನ್ನು ‘ಅಖಂಡ’ವಾದ ಪ್ರಕ್ರಿಯೆಯೆಂದೂ ಅದು ಸಾವಧಾನವಾಗಿ ದೇಶ/ಪ್ರದೇಶದ ಎಲ್ಲ ಭಾಗಗಳಿಗೂ ಪಸರಿಸುತ್ತದೆ ಎಂದೂ ಅರ್ಥಶಾಸ್ತ್ರದಲ್ಲಿ ಪ್ರತಿಪಾದಿಸಲಾಗಿದೆ. ಅಭಿವೃದ್ದಿಯ ಪ್ರಕ್ರಿಯೆಯ ಲಕ್ಷಣವೆಂದರೆ ಅದು ಕೆಲವೊಂದು ಪ್ರಶಸ್ತ ಪ್ರದೇಶಗಳಲ್ಲಿ ಮಡುಗಟ್ಟಿಕೊಂಡರೆ ಕೆಲವೊಂದು ಪ್ರದೇಶಗಳು ಅಂತಹ ಪ್ರಕ್ರಿಯೆಯಿಂದ ವಂಚಿತವಾಗಿರುತ್ತವೆ. ಅಭಿಜಾತ – ನವಅಭಿಜಾತ ಅರ್ಥಶಾಸ್ತ್ರಜ್ಞರು ವಾದಿಸಿದಂತೆ ಅಭಿವೃದ್ದಿಯು ಸಹಜವಾಗಿ ಎಲ್ಲ ಪ್ರದೇಶಗಳಿಗೂ ತನ್ನಷ್ಟಕ್ಕೆ ತಾನೆ ಪಸರಿಸುತ್ತದೆ ಎಂಬುದು ಇಂದು ಸುಳ್ಳಾಗಿದೆ. ಆದರೆ ಅಖಂಡವಾದಿ-ವಿಶ್ವಾತ್ಮಕ ಸಿದ್ಧಾಂತಗಳ ಬಗ್ಗೆ ಇನ್ನೂ ಜನರಿಗೆ ವಿಶ್ವಾಸ ಉಳಿದುಕೊಂಡಿದೆ. ಜಾಗತೀಕರಣವೂ ಕೂಡ ಇಂತಹ ಅಖಂಡ – ವಿಶ್ವಾತ್ಮಕ ಪ್ರವಹಿಸುವಿಕೆಯಲ್ಲಿ ನಂಬಿಕೆಯಿಟ್ಟಿರುವ ಒಂದು ವಿಚಾರ ಪ್ರಣಾಳಿಕೆಯಾಗಿದೆ.
ಜೆ.ಜಿ. ವಿಲಿಯಂಸನ್ (1965) ಪ್ರಕಾರ ಒಂದು ದೇಶ/ಪ್ರದೇಶದಲ್ಲಿ ಅಭಿವೃದ್ದಿಯು ಶೈಶಾವಸ್ಥೆಯಲ್ಲಿದ್ದಾಗ ಪ್ರಾದೇಶಿಕ ಅಸಮಾನತೆಗಳು ತೀವ್ರಗೊಳ್ಳುತ್ತವೆ. ಆದರೆ ಒಮ್ಮೆ ಅಭಿವೃದ್ದಿಯ ಗತಿ ತೀವ್ರಗೊಂಡಂತೆ ಹಾಗೂ ಅದು ಉನ್ನತ ಮಟ್ಟವನ್ನು ತಲುಪಿದಂತೆ, ಅಂದರೆ ಅದು ಪ್ರೌಢಾವಸ್ಥೆ ತಲುಪಿದಂತೆ ಪ್ರದೇಶ-ಪ್ರದೇಶಗಳ ನಡುವಣ ಅಭಿವೃದ್ದಿ ಅಂತರಗಳು ಕಡಿಮೆಯಾಗುತ್ತವೆ. ಇದು ಅವರ ಪ್ರಮೇಯ. ಅಭಿವೃದ್ದಿಯ ಸಹಜ ಗುಣ ವೆಂದರೆ ಅದು ಆರಂಭದಲ್ಲಿ ಕೆಲವು ಪ್ರಶಸ್ತ ಸ್ಥಳಗಳಲ್ಲಿ ಮಡುಗಟ್ಟಿಕೊಳ್ಳುತ್ತದೆ. ಈ ಪ್ರಕ್ರಿಯೆಯಿಂದಾಗಿ ಅಲ್ಲಿ ಪ್ರಾದೇಶಿಕ ಅಸಮಾನತೆಯು ಅನಿವಾರ್ಯ. ಆದರೆ ಕಾಲಾನಂತರ ಅದು ಸರಿಯಾಗುತ್ತದೆ. ಅವರ ಪ್ರಕಾರ ಅಸಮಾನತೆ-ಸಮಾನತೆಗಳೆರಡೂ ಅಭಿವೃದ್ದಿಯ ಎರಡು ಹಂತಗಳಾಗಿವೆ.
ಆದರೆ ಪ್ರದೇಶವಾರು ಅಸಮಾನತೆಗಳು ಅಭಿವೃದ್ದಿಯ ಗತಿ ತೀವ್ರಗೊಂಡಂತೆ ಮತ್ತು ಅದು ಉನ್ನತಮಟ್ಟ ತಲುಪಿದಂತೆ ತನ್ನಷ್ಟಕ್ಕೆ ತಾನೆ ಮಾಯವಾಗಿ ಬಿಡುತ್ತವೆ ಎಂಬುದಕ್ಕೆ ನಮಗೆ ನಿದರ್ಶನಗಳು ದೊರೆಯುವುದಿಲ್ಲ.
ಅಭಿವೃದ್ದಿಯ ಉನ್ನತ ಹಂತದಲ್ಲಿ ಪ್ರಾದೇಶಿಕ ಸಮಾನತೆ ಸಾಧಿಸಿಕೊಳ್ಳಲು ಉದ್ದೇಶ ಪೂರ್ವಕವಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಪ್ರಾದೇಶಿಕ ಅಸಮಾನತೆಗಳು ಸಹಜವಾಗಿ ಕರಗಿ ಹೋಗುವುದಿಲ್ಲ. ಇದಕ್ಕೆ ಕರ್ನಾಟಕ ರಾಜ್ಯವೇ ಒಂದು ಉದಾಹರಣೆ. ಕರ್ನಾಟಕ ರಾಜ್ಯವು ಇಡಿಯಾಗಿ ಬೆಳೆಯುತ್ತಿದೆ. ಅದರ ವರಮಾನವು ವರ್ಧನೆಯಾಗುತ್ತಿದೆ. ಅದರ ತಲಾವರಮಾನವು 1960-61ರಲ್ಲಿ (ಚಾಲ್ತಿ ಬೆಲೆ) ರೂ.289ರಷ್ಟಿದ್ದುದು 1999-2000ರಲ್ಲಿ ಅದು ರೂ. 16,654ರಷ್ಟಾಗಿದೆ. ಅಂದು 1961-61ರಲ್ಲಿ ರಾಜ್ಯ ಸರಾಸರಿ ತಲಾವರಮಾನಕ್ಕಿಂತ ಕಡಿಮೆ ತಲಾವರಮಾನ ಹೊಂದಿದ್ದ 10 ಜಿಲ್ಲೆಗಳಿದ್ದವು. ಆದರೆ 1999-2000ರಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ತಲಾವರಮಾನ ಹೊಂದಿರುವ ಜಿಲ್ಲೆಗಳ ಸಂಖ್ಯೆ 20(ಅಂದು ರಾಜ್ಯದಲ್ಲಿ 19 ಜಿಲ್ಲೆಗಳಿದ್ದವು. ಇಂದು ಅವುಗಳ ಸಂಖ್ಯೆ 27). ಇಷ್ಟಾದರೂ ಅಂದು ಒಟ್ಟು ಜಿಲ್ಲೆಗಳಲ್ಲಿ ಶೇ. 52.63ರಷ್ಟು ಜಿಲ್ಲೆಗಳಲ್ಲಿ ತಲಾವರಮಾನವು ರಾಜ್ಯ ಸರಾಸರಿಗಿಂತ ಕಡಿಮೆಯಿದ್ದರೆ ಇಂದು ಒಟ್ಟು ಜಿಲ್ಲೆಗಳ ಪೈಕಿ ಶೇ. 75ರಷ್ಟರಲ್ಲಿ ತಲಾವರಮಾನವು ರಾಜ್ಯ ಸರಾಸರಿಗಿಂತ ಕಡಿಮೆಯಿದೆ. ಪ್ರಾದೇಶಿಕ ಅಸಮಾನತೆಯು ತೀವ್ರಗೊಳ್ಳುತ್ತಾ ನಡೆದಿರುವುದನ್ನು ಇದರಿಂದ ತಿಳಿದುಕೊಳ್ಳಬಹುದು.
ಗುನ್ನಾರ್ ಮಿರ್ಡಾಲ್ (1963) ಅವರು ತಮ್ಮ ‘ಎಕಾನಮಿಕ್ ಥಿಯರಿ ಅಂಡ್ ಅಂಡರ್ಡೆವಲಪ್ಡ್ ರೀಜನ್ಸ್’(1963) ಕೃತಿಯಲ್ಲಿ ಅಭಿವೃದ್ದಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಅಸಮಾನತೆ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ. ಅಲ್ಲಿ ಅವರು ರೂಪಿಸಿರುವ ಸಿದ್ಧಾಂತವನ್ನು ದೇಶದೊಳಗೆ-ರಾಜ್ಯದೊಳಗೆ ಉಂಟಾಗುವ ಪ್ರಾದೇಶಿಕ ಅಸಮಾನತೆ ಪ್ರಕ್ರಿಯೆಗಳಿಗೂ ಅನ್ವಯಿಸಿಕೊಳ್ಳಬಹುದು. ಈ ಬಗೆಯ ಪ್ರಾದೇಶಿಕ ಅಸಮಾನತೆಗಳ ಹುಟ್ಟು, ಬೆಳವಣಿಗೆ, ಪರಿಣಾಮ ಹಾಗೂ ಪರಿಹಾರಗಳ ಬಗ್ಗೆ ಅಭಿವೃದ್ದಿ ಸಿದ್ಧಾಂತಗಳು ಮೌನವಾಗಿರುವುದನ್ನು ಮಿರ್ಡಾಲ್ ಟೀಕಿಸಿದ್ದಾರೆ.
ಅಭಿವೃದ್ದಿಯು ಒಮ್ಮೆ ಒಂದು ಪ್ರದೇಶದಲ್ಲಿ ಆರಂಭಗೊಂಡರೆ ಅದು ಆವರ್ತನ ರೀತಿಯಲ್ಲಿ ಅಲ್ಲೇ ಮಡುಗಟ್ಟಿಕೊಳ್ಳುತ್ತದೆ. ಕಾಲಾನಂತರ ಅದು ಸಂಚಿತ ಪ್ರಕ್ರಿಯೆಯಾಗಿ ಬಿಡುತ್ತದೆ. ಅಭಿವೃದ್ದಿ ಸಂಪನ್ನಗೊಂಡ ಪ್ರದೇಶಗಳು ಅಕ್ಕ-ಪಕ್ಕದ ಪ್ರದೇಶಗಳಿಂದ ಬಂಡವಾಳ, ಕಚ್ಚಾಸಾಮಗ್ರಿ, ಮಾನವ ಸಂಪನ್ಮೂಲವನ್ನು ಆಕರ್ಷಿಸ ತೊಡಗುತ್ತವೆ. ಇದರಿಂದಾಗಿ ಪ್ರಶಸ್ತ ಪ್ರದೇಶಗಳಲ್ಲಿ ಅಭಿವೃದ್ದಿ ಮಡುಗಟ್ಟಿಕೊಂಡು ಬಿಡುತ್ತದೆ. ಈ ಪ್ರಕ್ರಿಯೆಯನ್ನು ಮಿರ್ಡಾಲ್ ‘ಪ್ರಸರಣಾ ಪರಿಣಾಮ’ವೆಂದು ಕರೆದಿದ್ದಾರೆ. ಕಚ್ಚಾಸಾಮಗ್ರಿ, ಬಂಡವಾಳ, ಮಾನವ ಸಂಪನ್ಮೂಲವನ್ನು ಕಳೆದುಕೊಳ್ಳುವ ಪ್ರದೇಶಗಳು ‘ಸಂಪನ್ಮೂಲ ಬರಿದಾಗುವ ಪರಿಣಾಮ’ ಎದುರಿಸುತ್ತವೆ. ಹೀಗೆ ಅಭಿವೃದ್ದಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆ ಉಂಟಾಗುತ್ತದೆ ಎಂಬುದು ಮಿರ್ಡಾಲ್ರ ವಿಚಾರವಾಗಿದೆ.
ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆ ನಿವಾರಣೆಯು ಸಾಂಪ್ರದಾಯಿಕ ಹಾಗೂ ಪಶ್ಚಿಮದಿಂದ ಆಮದು ಮಾಡಿಕೊಂಡ ಸಿದ್ಧಾಂತಗಳಿಂದ ಸಾಧ್ಯವಿಲ್ಲವೆಂದು ಅವರು ಹೇಳಿದ್ದಾರೆ. ಈ ಬಗೆಯ ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಅವರು ‘ಪ್ರದೇಶ – ನಿರ್ದಿಷ್ಟ’ ನೀತಿಯ ಬಗ್ಗೆ ಕರೆ ನೀಡಿದ್ದಾರೆ.

ಉತ್ತರ-ದಕ್ಷಿಣ ಕಂದರ
ವಿಶ್ವಸಂಸ್ಥೆಯ ಪರಿಭಾಷೆಯಲ್ಲಿ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ‘ಉತ್ತರ-ದಕ್ಷಿಣ’ ಕಂದರವೆಂದು ಕರೆಯುವುದು ರೂಢಿಯಲ್ಲಿದೆ. ಇಲ್ಲಿ ಉತ್ತರವೆಂಬುದು ಅಭಿವೃದ್ದಿ ಹೊಂದಿದ ಸ್ಥಿತಿಯನ್ನು ಮತ್ತು ದಕ್ಷಿಣವೆಂಬುದು ಹಿಂದುಳಿದಿರುವ ಸ್ಥಿತಿಯನ್ನು ಸೂಚಿಸುತ್ತವೆ. ಕರ್ನಾಟಕದ ಸಂದರ್ಭದಲ್ಲಿ ಇದು ತಲೆಕೆಳಗಾಗಿದೆ. ಇಲ್ಲಿ ದಕ್ಷಿಣವು ಅಭಿವೃದ್ದಿ ಹೊಂದಿದ್ದರೆ ಉತ್ತರವು ಹಿಂದುಳಿದ ಸ್ಥಿತಿಯಲ್ಲಿದೆ. ಖ್ಯಾತ ಅರ್ಥಶಾಸ್ತ್ರಜ್ಞ ರಾಜ್ಕೃಷ್ಣ ಅವರು ಇಂತಹ ಕಂದರವನ್ನು ‘ಬ್ರಾಹ್ಮಣರಾಜ್ಯ’ಗಳು ಹಾಗೂ ‘ಶೂದ್ರರಾಜ್ಯ’ಗಳೆಂದು ಕರೆದಿದ್ದಾರೆ (1986). ಮಿರ್ಡಾಲ್ರಂತೆ ರಾಜ್ಕೃಷ್ಣ ಸಹ ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಪ್ರದೇಶ ನಿರ್ದಿಷ್ಟ ಕಾರ್ಯ ಯೋಜನೆಯನ್ನು ಪ್ರತಿಪಾದಿಸಿದ್ದಾರೆ. ಅತ್ಯಂತ ದುಸ್ಥಿತಿಯಲ್ಲಿರುವ ಪ್ರದೇಶಗಳ ಅಭಿವೃದ್ದಿಗೆ ಆದ್ಯತೆಯನ್ನು ಯಾಕೆ ನೀಡಬೇಕು ಎಂಬುದಕ್ಕೆ ಇವರು ಎರಡು ಕಾರಣಗಳನ್ನು ನೀಡುತ್ತಾರೆ.
ಮೊದಲನೆಯದಾಗಿ ಬಡವರು, ದುರ್ಬಲರು, ಕೂಲಿಕಾರರು, ಅನಕ್ಷರಸ್ಥರು ಅಧಿಕವಾಗಿ ದುಸ್ಥಿತಿಯಲ್ಲಿರುವ ಪ್ರದೇಶಗಳಲ್ಲಿ ದಟ್ಟೈಸಿರುತ್ತಾರೆ. ಇಂತಹ ಪ್ರದೇಶಗಳ ಅಭಿವೃದ್ದಿಯಿಂದ ರಾಜ್ಯದ/ದೇಶದ ಬಡತನ- ನಿರುದ್ಯೋಗವನ್ನು ನಿವಾರಣೆ ಮಾಡಬಹುದು. ಎರಡನೆಯದಾಗಿ ಸಾರ್ವಜನಿಕ ಬಂಡವಾಳ ಹೂಡಿಕೆಯು ಸಾಮಾನ್ಯವಾಗಿ ಭಾರಿ ಉದ್ದಿಮೆ ಹಾಗೂ ಮೂಲ ಸೌಕರ್ಯಗಳ ಮೇಲಿರುತ್ತದೆ. ಇಂತಹ ಹೂಡಿಕೆಯನ್ನು ಹಿಂದುಳಿದ ಪ್ರದೇಶಗಳಿಗೆ ಅಧಿಕವಾಗಿ ಹರಿಯುವಂತೆ ಮಾಡುವುದರಿಂದ ಅಲ್ಲಿ ಅದು ‘ಪ್ರಸರಣಾ ಪರಿಣಾಮ’ಕ್ಕೆ ಎಡೆ ಮಾಡಿಕೊಡುತ್ತದೆ. ಇಂತಹ ಹೂಡಿಕೆಯು ಹಿಂದುಳಿದ ಪ್ರದೇಶಗಳಲ್ಲಿ ಉದ್ಯೋಗದ ಅವಕಾಶಗಳನ್ನು ವಿಸ್ತರಿಸುತ್ತದೆ ಹಾಗೂ ಬಡವರಿಗೆ ವರಮಾನದ ಮೂಲವನ್ನು ಒದಗಿಸುತ್ತದೆ.
ಅಭಿವೃದ್ದಿ ಸಿದ್ಧಾಂತಗಳು, ಅಭಿವೃದ್ದಿ ಯೋಜನೆಗಳು ಸಮಾಜದಲ್ಲಿ ಉಳ್ಳವರ ಹಿತಾಸಕ್ತಿಗಳನ್ನು ಪೋಷಿಸುವ ಗುಣ ಹೊಂದಿರುತ್ತವೆ. ಉಳ್ಳವರ ಹಿತಾಸಕ್ತಿಗಳನ್ನು ಈಡೇರಿಸುವಲ್ಲಿ ಅಭಿವೃದ್ದಿ ಯೋಜನೆಗಳು ಮಗ್ನವಾಗಿರುತ್ತವೆ. ಅಧಿಕಾರವನ್ನು ಓಲೈಸುವ ಗುಣ ಸರ್ಕಾರಗಳಿಗಿರುತ್ತದೆ. ಈ ಬಗೆಯ ದೃಷ್ಟಿಕೋನ ಹೊಂದಿರುವ ಸಿದ್ಧಾಂತಗಳನ್ನು ಮತ್ತು ಅಭಿವೃದ್ದಿ ಕಾರ್ಯಯೋಜನೆಗಳನ್ನು ಬದಲಾಯಿಸಬೇಕಾಗುತ್ತದೆ. ದುರ್ಬಲರು, ಕೂಲಿಕಾರರು, ದಲಿತರು ಅಭಿವೃದ್ದಿಯ ಧಾತುಗಳಾಗಬೇಕು. ಅವರ ನೆಲೆಯಿಂದ ಅಭಿವೃದ್ದಿ ಯೋಜನೆಗಳನ್ನು ಸಿದ್ಧಪಡಿಸಬೇಕು. ಈ ಬಗೆಯ ಸೈದ್ಧಾಂತಿಕ ಪರಿವರ್ತನೆಯಿಂದ ಪ್ರಾದೇಶಿಕ ಅಸಮಾನತೆಗಳು ಅಭಿವೃದ್ದಿ ನೀತಿಯಲ್ಲಿ ಆದ್ಯತೆಯ ಸಂಗತಿಗಳಾಗಿ ಬಿಡುತ್ತವೆ. ಹಿಂದುಳಿದ ಪ್ರದೇಶ ಗಳಲ್ಲಿನ ಹಿಂದುಳಿದ ವರ್ಗಗಳ ಅಳಲು ತುಂಬಾ ಅರಣ್ಯರೋದನವಾಗಿರುತ್ತದೆ. ರಾಜ್ಕೃಷ್ಣ ವಾದಿಸುವಂತೆ ಹಿಂದುಳಿದ ಪ್ರದೇಶಗಳ ಹಿಂದುಳಿದಿರುವಿಕೆಯನ್ನು ‘ರಾಜಕೀಕರಣ’ಕ್ಕೆ ಒಳಪಡಿಸಬೇಕು. ಹಿಂದುಳಿದ ಪ್ರದೇಶಗಳಲ್ಲಿನ ಹಿಂದುಳಿದ ವರ್ಗಗಳು, ದಲಿತರು ಸಂಘಟಿತರಾಗಬೇಕು. ಆಗ ಮಾತ್ರ ರಾಜ್ಯದಲ್ಲಿ ಕಟ್ಟಕಡೆಯ ತಾಲ್ಲೂಕಾದ ದೇವದುರ್ಗದ ಅಭಿವೃದ್ದಿ ಸರ್ಕಾರಕ್ಕೆ ಆದ್ಯತೆಯ ಸಂಗತಿಯಾಗುತ್ತದೆ. ರಾಜ್ಯಮಟ್ಟದಲ್ಲಿ ಪ್ರತಿ ಸಾವಿರ ಜನಸಂಖ್ಯೆಗೆ 11 ವಿದ್ಯಾರ್ಥಿಗಳು ಹತ್ತನೆಯ ತರಗತಿ ಯಲ್ಲಿದ್ದರೆ ದೇವದುರ್ಗ ತಾಲ್ಲೂಕಿನಲ್ಲಿ ಅವರ ಸಂಖ್ಯೆ ಕೇವಲ ಐದು. ಇಂತಹ ಸಂಗತಿಗಳು ರಾಜಕೀಕರಣಗೊಳ್ಳಬೇಕು. ಸಿಈಟಿ ಸೀಟುಗಳಿಂದ, ಹೈಕೋರ್ಟ್ ಪೀಠದಿಂದ ಹಿಂದುಳಿದ ಪ್ರದೇಶಗಳಿಗೆ ಏನೂ ಉಪಯೋಗವಿಲ್ಲ. ಅವು ಉಳ್ಳವರ ಹಿತಾಸಕ್ತಿಗಳನ್ನು ಮಾತ್ರ ಪೂರೈಸಬಲ್ಲವು!
ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ ಅವರು ಭಾರತದ ಆಭಿವೃದ್ದಿ ಕುರಿತಂತೆ ಇತ್ತೀಚೆಗೆ ಬರೆದ (2002) ಕೃತಿಯಲ್ಲಿ ಹಿಂದುಳಿದ ಪ್ರದೇಶಗಳು, ಜನಸಂಖ್ಯಾ ಸಂಬಂಧಿ ದುಸ್ಥಿತಿ ಹಾಗೂ ಲಿಂಗ ಸಂಬಂಧಗಳ ನಡುವಣ ಆಶ್ಲೇಷವನ್ನು ಕುರಿತಂತೆ ಪ್ರಮೇಯ ವೊಂದನ್ನು ರೂಪಿಸಿದ್ದಾರೆ. ಭಾರತದ ನಾಲ್ಕು ಹಿಂದುಳಿದ ರಾಜ್ಯಗಳಾದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಅವರು ತಮ್ಮ ಪ್ರಮೇಯ ರಚಿಸಿದ್ದಾರೆ. ಅವರ ಪ್ರಮೇಯ ಹೀಗಿದೆ.
ಯಾವ ಪ್ರದೇಶದಲ್ಲಿ ಜನಸಂಖ್ಯಾ ಸಂಬಂಧಿ ದುಸ್ಥಿತಿಯಿರುತ್ತದೋ ಅಂತಹ ಪ್ರದೇಶಗಳು ತೀವ್ರ ಲಿಂಗ ಸಂಬಂಧಿ ಅಸಮಾನತೆಯನ್ನು ಎದುರಿಸುತ್ತಿರುತ್ತವೆ.
ನಮಗೆ ತಿಳಿದಿರುವಂತೆ ಯಾವ ಪ್ರದೇಶಗಳು ಜನಸಂಖ್ಯಾ ಸಂಬಂಧಿ ದುಸ್ಥಿತಿಯಿಂದ ನರಳುತ್ತಿರುತ್ತವೋ ಅವು ಅಭಿವೃದ್ದಿಯ ದೃಷ್ಟಿಯಿಂದಲೂ ಹಿಂದುಳಿದಿರುತ್ತವೆ. ಜನಸಂಖ್ಯಾ ಸಂಬಂಧಿ ದುಸ್ಥಿತಿ, ಅಭಿವೃದ್ದಿ ಸಂಬಂಧಿ ಹಿಂದುಳಿದಿರುವಿಕೆ ಮತ್ತು ಲಿಂಗ ಸಂಬಂಧಿ ಅಸಮಾನತೆಗಳು ಮುಪ್ಪುರಿಗೊಂಡಿರುವ ಒಂದು ಸ್ಥಿತಿಯ ಬಗ್ಗೆ ಡ್ರೀಜ್ ಮತ್ತು ಸೆನ್ ಮಾತನಾಡುತ್ತಿದ್ದಾರೆ.
ಇವರ ಪ್ರಮೇಯವನ್ನು ಕರ್ನಾಟಕದ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಗೆ ಅನ್ವಯಿಸಬಹುದಾಗಿದೆ. ಪ್ರಸ್ತುತ ಪ್ರಬಂಧದ ಆರು ಮತ್ತು ಏಳನೆಯ ಭಾಗದಲ್ಲಿ ಕರ್ನಾಟಕದ ಗುಲಬರ್ಗಾ ವಿಭಾಗದ ಜಿಲ್ಲೆಗಳು ಎದುರಿಸುತ್ತಿರುವ ಜನಸಂಖ್ಯಾ ಸಂಬಂಧಿ ದುಸ್ಥಿತಿ ಹಾಗೂ ಲಿಂಗ ಸಂಬಂಧಿ ಅಸಮಾನತೆಗಳ ಸ್ವರೂಪವನ್ನು ಚಿತ್ರಿಸಲಾಗಿದೆ. ಡೀಜ್ ಮತ್ತು ಸೇನ್ ಪ್ರಮೇಯವು ಪ್ರಾದೇಶಿಕ ಅಸಮಾನತೆ ಹಾಗೂ ಲಿಂಗ ಸಂಬಂಧಿ ಅಸಮಾನತೆಗಳ ನಡುವಣ ಸಂಬಂಧದ ಮೇಲೆ ಬೆಳಕು ಚೆಲ್ಲುತ್ತದೆ. ಜನಪ್ರಿಯ ಪರಿಭಾಷೆಯಲ್ಲಿ ಪ್ರಾದೇಶಿಕ ಅಸಮಾನತೆ ಬಗ್ಗೆ ಮಾತನಾಡುವಾಗ ಅದರ ಲಿಂಗ ಸಂಬಂಧಿ ಆಯಾಮದ ಬಗ್ಗೆ ನಿರ್ಲಕ್ಷ್ಯ ತಳೆಯಲಾಗುತ್ತದೆ. ಪ್ರಾದೇಶಿಕ ಅಸಮಾನತೆಯ ನಿವಾರಣೆ ಬಗ್ಗೆ ಕಾರ್ಯತಂತ್ರ ರೂಪಿಸುವಾಗ ಅದರ ಲಿಂಗ ಸಂಬಂಧಿ ಆಯಾಮವನ್ನು ಗಮನಿಸಬೇಕಾಗುತ್ತದೆ. ನೀತಿ-ನಿರೂಪಣೆಯ ದೃಷ್ಟಿಯಿಂದ ಡ್ರೀಜ್-ಸೇನ್ ಪ್ರಮೇಯವು ತುಂಬಾ ಮಹತ್ವ ಪಡೆದಿದೆ. ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ತೀವ್ರ ಸ್ವರೂಪದ ಜನಸಂಖ್ಯಾ ಸಂಬಂಧಿ ದುಸ್ಥಿತಿಯನ್ನು, ಅಭಿವೃದ್ದಿ ಸಂಬಂಧಿ ಹಿಂದುಳಿದಿರುವಿಕೆ ಯನ್ನು ಮತ್ತು ಲಿಂಗ ಸಂಬಂಧಿ ಅಸಮಾನತೆ ಯನ್ನು ಎದುರಿಸುತ್ತಿವೆ. ಜನಸಂಖ್ಯೆಯ ಮಿತಿ ಮೀರಿದ ಬೆಳವಣಿಗೆಯನ್ನು ತಡೆಯುವ ದಿಶೆಯಲ್ಲಿ ಲಿಂಗ ಸಂಬಂಧಗಳ ಪಾತ್ರ ತುಂಬಾ ಮಹತ್ವದ್ದಾಗಿದೆ. ಈ ಬಗೆಯ ಸಮಸ್ಯೆಗಳ ನಿವಾರಣೆಗೆ ಬಂಡವಾಳವನ್ನು ಬೃಹತ್ ಪ್ರಮಾಣದಲ್ಲಿ ಅಪೇಕ್ಷಿಸುವ ಅಗತ್ಯವಿಲ್ಲ. ಅಭಿವೃದ್ದಿ ಯೋಜನೆಗಳನ್ನು ಇಲ್ಲಿ ಲಿಂಗ ಸ್ಪಂದಿಯನ್ನಾಗಿ ಮಾಡಬೇಕಾಗುತ್ತದೆ. ಲಿಂಗ ಸಂಬಂಧಿ ಅಸಮಾನತೆಯ ನಿವಾರಣೆಯು ಕೇವಲ ಮಹಿಳೆಯರಿಗೆ ಸಂಬಂಧಿಸಿದ ಸಂಗತಿಯೆಂದು ಭಾವಿಸುವುದು ರೂಢಿಯಲ್ಲಿದೆ. ವಾಸ್ತವವಾಗಿ ಅವರ ಬದುಕು ಉತ್ತಮಗೊಳ್ಳುವುದರಿಂದ ಇಡೀ ಸಮಾಜದ ಬದುಕು ಹಾಗೂ ಪುರುಷರ ಬದುಕು ಉತ್ತಮವಾಗುವ ಸಾಧ್ಯತೆಯಿದೆ.

ವರಮಾನ ವರ್ಧನೆಯಲ್ಲಿ ಪ್ರಾದೇಶಿಕ ಅಸಮಾನತೆ
ವರಮಾನ ವರ್ಧನೆಯನ್ನೇ ಅಭಿವೃದ್ದಿಯೆಂದು ಅರ್ಥಶಾಸ್ತ್ರದಲ್ಲಿ ನಿರ್ವಚಿಸಿಕೊಂಡು ಬರಲಾಗಿದೆ. ವರಮಾನವು ಅಭಿವೃದ್ದಿಯನ್ನು ಅಳೆಯುವ ಮಾಪನವಾಗಿದೆ. ಜಿಡಿಪಿ ಅಥವಾ ಎಸ್ಡಿಪಿಗಳು ಅಭಿವೃದ್ದಿ ಕುರಿತ ಚರ್ಚೆಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಸೂಚಿಗಳು. ಈ ಬಗೆಯ ವರಮಾನ ಆಧರಿತ ಅಭಿವೃದ್ದಿ ನಿರ್ವಚನವನ್ನು ಅನೇಕರು ಟೀಕಿಸುತ್ತಿದ್ದಾರೆ. ಏಕೆಂದರೆ ವರಮಾನವೆಂಬುದು ಅಭಿವೃದ್ದಿಯ ಸಾಧನವೇ ವಿನಾ ಅದೇ ಅಭಿವೃದ್ದಿಯಲ್ಲ. ಅಮರ್ತ್ಯಸೆನ್ ಮತ್ತು ಮೆಹಬೂಬ್ ಉಲ್ ಹಕ್ ಅವರು ವರಮಾನ ಕೇಂದ್ರಿತ ಅಭಿವೃದ್ದಿಗೆ ಪ್ರತಿಯಾಗಿ ಮಾನವ ಕೇಂದ್ರಿತ ಅಭಿವೃದ್ದಿ ಮೀಮಾಂಸೆಯನ್ನು ರೂಪಿಸಿದರು. ವರಮಾನವೆಂಬುದು ಅಭಿವೃದ್ದಿಯಿಂದ ಉಂಟಾಗುವ ಒಂದು ಅವಕಾಶ. ಅಭಿವೃದ್ದಿಯೆಂದರೆ ಅವಕಾಶಗಳನ್ನು ಧಾರಣೆ ಮಾಡಿಕೊಳ್ಳುವ ಜನರ ಸಾಮರ್ಥ್ಯ. ಸಮಾಜದಲ್ಲಿ ಅವಕಾಶಗಳು ಹರಿದು ಬರುತ್ತಿರುತ್ತವೆ. ಹೀಗೆ ಹರಿದು ಬರುವ ಅವಕಾಶ ಗಳನ್ನು ಜನರು ಧಾರಣೆ ಮಾಡಿಕೊಳ್ಳಬೇಕು. ಅದು ಅಭಿವೃದ್ದಿ. ಅಂದಮೇಲೆ ಜನರ ಧಾರಣಶಕ್ತಿಯ ವರ್ಧನೆಯೇ ಅಭಿವೃದ್ದಿ.
ಪ್ರಸ್ತುತ ಭಾಗದಲ್ಲಿ ವರಮಾನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಉಂಟಾಗಿರುವ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ಚರ್ಚಿಸಲಾಗಿದೆ. ಕಳೆದ ಐದು ದಶಕಗಳ ಅವಧಿಯಲ್ಲಿ ವರಮಾನಕ್ಕೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಪ್ರದೇಶಗಳ ಪಾಲು ಹೇಗೆ ಬದಲಾವಣೆಯಾಗಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ. ಕೋಷ್ಟಕ-2ರಲ್ಲಿ ಜಿಲ್ಲಾ ವರಮಾನವನ್ನು ವಿಭಾಗವಾರು ಮೂರು ಕಾಲಖಂಡಕ್ಕೆ ಸಂಬಂಧಿಸಿದಂತೆ ನೀಡಲಾಗಿದೆ. ಕಳೆದ 40 ವರ್ಷಗಳ ಕಾಲಾವಧಿಯಲ್ಲಿ ವಿವಿಧ ವಿಭಾಗಗಳ ನಡುವೆ ನಿವ್ವಳ ಜಿಲ್ಲಾ ವರಮಾನದ ಪಾಲು ಹೇಗೆ ಬದಲಾವಣೆಯಾಗುತ್ತಾ ಬಂದಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಅಸಮಾನತೆಯು ಯಾವ ಸ್ವರೂಪದಲ್ಲಿದೆ ಎಂಬುದನ್ನು ಇಲ್ಲಿ ತೋರಿಸಲಾಗಿದೆ.
ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ವರಮಾನವು ವಿಭಾಗವಾರು ಹೇಗೆ ವಿತರಣೆ ಯಾಗಿದೆ ಎಂಬುದನ್ನು ಕೋಷ್ಟಕ-2ರಲ್ಲಿ ತೋರಿಸಿದೆ. ಈ ಕೋಷ್ಟಕದಲ್ಲಿ ವರಮಾನದ ವಿತರಣೆಗೆ ಸಂಬಂಧಿಸಿದಂತೆ ಒಂದು ಪ್ರಧಾನ ಪ್ರವೃತ್ತಿಯನ್ನು ಗುರುತಿಸಬಹುದಾಗಿದೆ. ಅದೇನೆಂದರೆ 1960-61ರ ನಂತರ ವರಮಾನವು ದಕ್ಷಿಣ ಕರ್ನಾಟಕಕ್ಕಭಿಮುಖವಾಗಿ ಹರಿಯುತ್ತಿರುವ ಪ್ರವೃತ್ತಿ ಇಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ಆರಂಭದಲ್ಲಿ, ಅಂದರೆ 1960-61ರಲ್ಲಿ ವರಮಾನದ ವಿಭಾಗವಾರು ವಿತರಣೆಯು ಜನಸಂಖ್ಯೆಯ ವಿಭಾಗವಾರು ವಿತರಣೆಗನುಗುಣವಾಗಿತ್ತು.
1. ರಾಜ್ಯದ ಜನಸಂಖ್ಯೆಯಲ್ಲಿ ದ.ಕ.ಪ್ರ.ದ ಪಾಲು ಶೇ. 57.28. ರಾಜ್ಯದ ನಿವ್ವಳ ಜಿಲ್ಲಾ ವರಮಾನದಲ್ಲಿ ಅದರ ಪಾಲು 1960-61ರಲ್ಲಿ ಶೇ.57.94ರಷ್ಟಿತ್ತು. ಆದರೆ ನಂತರ ಅದು ಏರಿಕೆಯಾಗುತ್ತಾ ಸಾಗಿ 1999-2000ರಲ್ಲಿ ಅದು ಶೇ.65.31 ರಷ್ಟಾಗಿದೆ.
2. ಇದಕ್ಕೆ ಪ್ರತಿಯಾಗಿ ಜನಸಂಖ್ಯೆಯಲ್ಲಿ ಶೇ.42.72 ಪಾಲು ಪಡೆದಿರುವ ಉ.ಕ.ಪ್ರ.ವು ನಿವ್ವಳ ಜಿಲ್ಲಾ ವರಮಾನದಲ್ಲಿ 1960-61ರಲ್ಲಿ ಶೇ.42.72 ಪಾಲು ಪಡೆದಿತ್ತು. ಆದರೆ ಮುಂದೆ ಅದು ಕಡಿಮೆಯಾಗುತ್ತಾ ನಡೆದು 1999-2000ರಲ್ಲಿ ಶೇ.34.67 ರಷ್ಟಾಗಿದೆ.
3. ಉತ್ತರ-ದಕ್ಷಿಣಗಳ ನಡುವಿನ ಕಂದರವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ.
4. ಆತಂಕಕಾರಿ ಸಂಗತಿಯೆಂದರೆ ವರಮಾನ ಸಂಬಂಧಿ ಅಸಮಾನತೆಯು ಕಾಲಾನಂತರ ಉಲ್ಬಣಗೊಳ್ಳುತ್ತಾ ನಡೆದಿದೆ.
5. ರಾಜ್ಯದ ಕೊಡಗು ಜಿಲ್ಲೆಯ ತಲಾ ವರಮಾನವು 1960-61ರಲ್ಲಿ ಅತ್ಯಧಿಕವಾಗಿತ್ತು. (ರೂ.558) ಅಂದು ಕನಿಷ್ಟ ತಲಾ ವರಮಾನ (ರೂ.223) ಬೀದರ್ ಜಿಲ್ಲೆಯಲ್ಲಿತ್ತು. (ಚಾಲ್ತಿಬೆಲೆ)

 

ಮೂಲ : 1. ಗೌರ್ನಮೆಂಟ್ ಆಫ್ ಮೈಸೂರ್, 1970, ಪು.239, 2.ಗೌರ್ನಮೆಂಟ್ ಆಫ್ ಕರ್ನಾಟಕ, 1995, ಪು.56-63, 3.ಗೌರ್ನಮೆಂಟ್ ಆಫ್ ಕರ್ನಾಟಕ, 2002, ಪು.56-67, 4.ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ ಪು.84-88

ಕೊಡಗು ಜಿಲ್ಲೆಯ ತಲಾ ವರಮಾನವು 1960-61ರಲ್ಲಿ ರಾಜ್ಯದ ಸರಾಸರಿ ತಲಾ ವರಮಾನದ (ರೂ.289) ಶೇ.193.07ರಷ್ಟಿದ್ದರೆ ಬೀದರ್ ಜಿಲ್ಲೆಯ ತಲಾ ವರಮಾನವು ರಾಜ್ಯದ ಸರಾಸರಿ ತಲಾ ವರಮಾನದ ಶೇ.77.16ರಷ್ಟಿತ್ತು. ಆದರೆ 1999-2000ರಲ್ಲಿ ಅತ್ಯಧಿಕ ತಲಾ ವರಮಾನವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದರೆ (ರೂ.34296) ಕನಿಷ್ಟ ಬೀದರ್ ಜಿಲ್ಲೆಯಲ್ಲಿತ್ತು. (ರೂ.9902) ದಕ್ಷಿಣ ಕನ್ನಡ ಜಿಲ್ಲೆಯ ತಲಾ ವರಮಾನವು ರಾಜ್ಯ ಸರಾಸರಿಯ (ರೂ.16654) ಶೇ. 205.93ರಷ್ಟಿದ್ದರೆ ಬೀದರ್ ಜಿಲ್ಲೆಯ ತಲಾ ವರಮಾನವು ರಾಜ್ಯ ಸರಾಸರಿಯ ಶೇ.59.45 ರಷ್ಟಿತ್ತು(ಚಾಲ್ತಿಬೆಲೆ). ಅಂದರೆ 1960-61ರಿಂದ 1999-2000ರ ಅವಧಿಯಲ್ಲಿ ಗರಿಷ್ಟ-ಕನಿಷ್ಟಗಳ ನಡುವೆ ಅಂತರವು ತೀಕ್ಷ್ಣಗೊಂಡಿದೆ. ಅದು ಶೇ.115.91 ಅಂಶಗಳಿಂದ ಶೇ. 146.48ಕ್ಕೆ ಏರಿಕೆಯಾಗಿದೆ.
1. ಅತ್ಯಂತ ಕನಿಷ್ಟ ತಲಾ ವರಮಾನ ಪಡೆದ ಬೀದರ್ನ ತಲಾ ವರಮಾನವು 1960-61ರಲ್ಲಿ ರಾಜ್ಯದ ಸರಾಸರಿಗಿಂತ ಶೇ. 22.84 ರಷ್ಟು ಕಡಿಮೆಯಿತ್ತು. ಆದರೆ 1999-2000ರಲ್ಲಿ ಅದರ ತಲಾ ವರಮಾನವು ರಾಜ್ಯ ಸರಾಸರಿಗಿಂತ ಶೇ.40.55 ರಷ್ಟು ಕಡಿಮೆಯಿದೆ.
2. ಇದಕ್ಕೆ ಪ್ರತಿಯಾಗಿ ಅತ್ಯಂತ ಗರಿಷ್ಟ ತಲಾ ವರಮಾನ ಪಡೆದ ಕೊಡಗು ಜಿಲ್ಲೆಯ ತಲಾ ವರಮಾನವು 1960-61ರಲ್ಲಿ ರಾಜ್ಯ ಸರಾಸರಿಗಿಂತ ಶೇ.93.07ರಷ್ಟು ಅಧಿಕವಿದ್ದರೆ 1999-2000ರಲ್ಲಿ ಅತ್ಯಂತ ಗರಿಷ್ಟ ತಲಾ ವರಮಾನ ಪಡೆದ ದಕ್ಷಿಣ ಕನ್ನಡ ಜಿಲ್ಲೆಯದ್ದು ರಾಜ್ಯ ಸರಾಸರಿಗಿಂತ ಶೇ.105.93ರಷ್ಟು ಅಧಿಕವಿತ್ತು.
ಇದರಿಂದ ಸ್ಪಷ್ಟವಾಗುವ ಸಂಗತಿಯೆಂದರೆ ಶ್ರೀಮಂತವಾಗುತ್ತಿರುವ ಜಿಲ್ಲೆಗಳು ಹೆಚ್ಚು ಶ್ರೀಮಂತವಾಗುತ್ತಿವೆ ಮತ್ತು ಬಡತನದ ಜಿಲ್ಲೆಗಳು ಹೆಚ್ಚು ಬಡತನವನ್ನು ಅನುಭವಿಸುತ್ತಿವೆ. ಈ ಬಗೆಯ ಅಸಮಾನತೆಯನ್ನು ತಡೆಗಟ್ಟುವುದು ತುರ್ತಾಗಿ ನಡೆಯಬೇಕಾಗಿದೆ. ಈ ಬಗೆಯ ಅಭಿವೃದ್ದಿ-ಸಮೃದ್ದಿ ಒಂದು ಕಡೆ-ಮತ್ತೊಂದು ಕಡೆ ದುಸ್ಥಿತಿ. ಇದನ್ನು ‘ಆರೋಹಣವಾದಿ ಅಸಮಾನತೆ’ಯೆಂದು ಕರೆಯಬಹುದು.

ಜಮೀನುದಾರಿ ಪಾಳೆಗಾರಿಕೆ
ಅತ್ಯಂತ ಸರಳವಾದ ರೀತಿಯಲ್ಲಿ ಜಮೀನುದಾರಿ ಪಾಳೆಗಾರಿಕೆಯ ಅಸ್ತಿತ್ವವನ್ನು ಕೃಷಿಗೆ ಸಂಬಂಧಿಸಿದ ಸಾಗುವಳಿದಾರರು ಹಾಗೂ ಭೂರಹಿತ ಕೃಷಿ ಕೂಲಿಕಾರರ ಸಾಪೇಕ್ಷ ಪ್ರಮಾಣದ ಆಧಾರದ ಮೇಲೆ ಗುರುತಿಸಬಹುದಾಗಿದೆ. ಅಭಿವೃದ್ದಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಗಳಲ್ಲಿ ಹಾಗೂ ಅಧ್ಯಯನಗಳಲ್ಲಿ ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ. ಇದಕ್ಕೆ ಒಕ್ಕಲುತನದ ಅವಲಂಬನೆಯನ್ನು ಒಂದು ಸ್ಥೂಲ ಮಾನದಂಡವನ್ನಾಗಿ ಪರಿಗಣಿಸಬಹುದು. ಎಲ್ಲಿ ಕೃಷಿಯ ಅವಲಂಬನೆಯು ಅಧಿಕವಾಗಿರುತ್ತದೋ ಅಲ್ಲಿ ಅಭಿವೃದ್ದಿಯು ಮಂದಗತಿಯಲ್ಲಿರುತ್ತದೆ ಮತ್ತು ಅಲ್ಲಿ ಜಮೀನುದಾರಿ ಪಾಳೆಗಾರಿಕೆಯನ್ನು ಗುರುತಿಸಬಹುದಾಗಿದೆ.
ಕರ್ನಾಟಕ ರಾಜ್ಯಮಟ್ಟದಲ್ಲಿ 2001ರಲ್ಲಿ ಕೃಷಿಯ ಅವಲಂಬನೆ ಪ್ರಮಾಣ ಶೇ.55.89. ಆದರೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಇದರ ಸ್ಥಿತಿ ಭಿನ್ನಭಿನ್ನವಾಗಿದೆ. ಬಹಳ ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕೃಷಿ ಅವಲಂಬನೆ ಅತ್ಯಧಿಕ ಶೇ.68.39ರಷ್ಟಿದೆ. ಆದರೆ ದ.ಕ.ಪ್ರ.ದಲ್ಲಿ ಅದು ಶೇ.50 ಕ್ಕಿಂತ ಕಡಿಮೆಯಿದೆ. ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಕೃಷಿಯೇತರ ಚಟುವಟಿಕೆಗಳು ನಿಕೃಷ್ಟವಾಗಿರು ವುದನ್ನು ಇದು ತೋರಿಸುತ್ತದೆ. ಎರಡನೆಯ ಬಹುಮುಖ್ಯ ಮಾನದಂಡವೆಂದರೆ ಸಾಗುವಳಿ ದಾರರ ಮತ್ತು ಭೂರಹಿತ ಕೃಷಿಕೂಲಿಕಾರರ ಸಾಪೇಕ್ಷ ಪ್ರಮಾಣ. ಜಮೀನುದಾರಿ ಪಾಳೆಗಾರಿಕೆಯನ್ನು ಇದು ತುಂಬಾ ಸೂಕ್ಷ್ಮವಾಗಿ ಸೂಚಿಸುತ್ತದೆ. ಸಾಗುವಳಿದಾರರ ಸಾಪೇಕ್ಷ ಪ್ರಮಾಣವು ಎಲ್ಲಿ ಅಧಿಕವಾಗಿರುತ್ತದೋ ಮತ್ತು ಭೂರಹಿತ ಕೃಷಿಕೂಲಿಕಾರರ ಪ್ರಮಾಣವು ಕಡಿಮೆಯಿರುತ್ತದೋ ಅಲ್ಲಿ ಕೃಷಿಯು-ಆರ್ಥಿಕತೆಯು ಊಳಿಗಮಾನ್ಯ ವ್ಯವಸ್ಥೆಯಿಂದ ಬಂಡವಾಳಶಾಹಿ/ಅರೆ ಬಂಡವಾಳಶಾಹಿ ವ್ಯವಸ್ಥೆ ಕಡೆಗೆ ಪರಿವರ್ತನೆಯಾಗು ತ್ತಿರುತ್ತದೆ. ಇದಕ್ಕೆ ಪ್ರತಿಯಾಗಿ ಎಲ್ಲಿ ಸಾಗುವಳಿದಾರರ ಪ್ರಮಾಣವು ಸಾಪೇಕ್ಷವಾಗಿ ಕಡಿಮೆಯಿದ್ದು ಭೂರಹಿತ ಕೃಷಿ ಕೂಲಿಕಾರರ ಪ್ರಮಾಣವು ಅಧಿಕವಾಗಿರುತ್ತದೋ ಅಲ್ಲಿ ಕೃಷಿ-ಆರ್ಥಿಕತೆಯು ಜಮೀನುದಾರಿ ಪಾಳೆಗಾರಿಕೆಯ ಕಪಿಮುಷ್ಟಿಯಲ್ಲಿರುತ್ತದೆಯೆಂದು ತಿಳಿಯಬಹುದು.

ಈ ಕೋಷ್ಟಕ-3 ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಪ್ರದೇಶಗಳ ನಡುವಣ ಕಂದರವನ್ನು ಅತ್ಯಂತ ಸ್ಪಷ್ಟವಾಗಿ ಇದು ತೋರಿಸುತ್ತದೆ. ದ.ಕ.ಪ್ರ.ದಲ್ಲಿ ಮಾತ್ರ ಒಟ್ಟು ದುಡಿಮೆಗಾರರಲ್ಲಿ ಸಾಗುವಳಿದಾರರ ಪ್ರಮಾಣ ಅಧಿಕವಿದ್ದು ಭೂರಹಿತ ಕೃಷಿ ಕೂಲಿಕಾರರ ಪ್ರಮಾಣ ಕಡಿಮೆಯಿದೆ. ಇದು ಶೇ.ವಾರು ಹಾಗೂ ಒಟ್ಟು ಅಂಕಿಗಳಲ್ಲೂ ಕಂಡುಬರುತ್ತದೆ. ಆದರೆ ಉ.ಕ.ಪ್ರ.ದಲ್ಲಿ ಇದು ತಲೆಕೆಳಗಾಗಿದೆ. ಅಲ್ಲಿ ಒಟ್ಟು ದುಡಿಮೆಗಾರರಲ್ಲಿ ಸಾಗುವಳಿದಾರರ ಪ್ರಮಾಣವು ಭೂರಹಿತ ಕೃಷಿ ಕೂಲಿಕಾರರ ಪ್ರಮಾಣಕ್ಕಿಂತ ಕಡಿಮೆಯಿದೆ. ಅದರಲ್ಲೂ ಮುಖ್ಯವಾಗಿ ಹೈದರಾಬಾದ್-ಕರ್ನಾಟಕ ಪ್ರದೇಶವು ಭೂರಹಿತ ಕೃಷಿ ಕೂಲಿಕಾರರನ್ನು ಅಗಾಧವಾಗಿ ಪಡೆದಿದೆ.

ಇನ್ನೂ ಕುತೂಲಹಕಾರಿ ಸಂಗತಿಯೆಂದರೆ ರಾಜ್ಯದ ಒಟ್ಟು ಭೂರಹಿತ ಕೃಷಿಕೂಲಿಕಾರರಲ್ಲಿ ದ.ಕ.ಪ್ರ.ದ ಪಾಲು ಕೇವಲ ಶೇ.42.76. ಒಟ್ಟು ದುಡಿಮೆಗಾರರಲ್ಲಿ ದ.ಕ.ಪ್ರ. ಎಷ್ಟು ಪಾಲು ಪಡೆದಿದೆಯೋ (ಶೇ.58.24) ಅದಕ್ಕಿಂತಲೂ ಕಡಿಮೆ ಪಾಲನ್ನು ಕೂಲಿಕಾರರಲ್ಲಿ ಪಡೆದಿದೆ. ಆದರೆ ಉ.ಕ.ಪ್ರ.ವು ರಾಜ್ಯದ ಒಟ್ಟು ಭೂರಹಿತ ಕೃಷಿ ಕೂಲಿಕಾರರಲ್ಲಿ ಶೇ. 57.24 ಪಾಲು ಪಡೆದಿದೆ. ಆದರೆ ಅದು ಒಟ್ಟು ದುಡಿಮೆಗಾರರಲ್ಲಿ ಮಾತ್ರ ಕೇವಲ ಶೇ.41.76 ಪಾಲು ಪಡೆದಿದೆ. ರಾಜ್ಯಮಟ್ಟದಲ್ಲಿ ಒಟ್ಟು ದುಡಿಮೆಗಾರರಲ್ಲಿ ಭೂರಹಿತ ಕೃಷಿ ಕೂಲಿಕಾರರ ಪ್ರಮಾಣ ಕೇವಲ ಶೇ.26.40. ದ.ಕ.ಪ್ರ.ದಲ್ಲಿ ಇದು ಕೇವಲ ಶೇ.19.37. ಆದರೆ ಉ.ಕ.ಪ್ರ.ದಲ್ಲಿ ಇವರ ಪ್ರಮಾಣ ಶೇ.35.55. ಒಟ್ಟು ದುಡಿಮೆಗಾರರಲ್ಲಿ ಭೂರಹಿತ ಕೃಷಿಕೂಲಿಕಾರರ ಪ್ರಮಾಣ ಶೇ.40.59 ಅತ್ಯಧಿಕ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿದೆ. ಈ ಭೂರಹಿತ ಕೃಷಿಕೂಲಿಕಾರರು ಅನೇಕ ಬಗೆಯ ಸಂಕೋಲೆಯಲ್ಲಿ ಸಿಲುಕಿರುತ್ತಾರೆ.

ಪ್ರಾದೇಶಿಕ ಅಸಮಾನತೆ-ಮಾನವ ಅಭಿವೃದ್ದಿ ದೃಷ್ಟಿಕೋನ
ವರಮಾನ, ಬಂಡವಾಳ, ಕೈಗಾರಿಕೆ ಮುಂತಾದ ಸಂಗತಿಗಳ ಆಧಾರದ ಮೇಲೆ ಅಭಿವೃದ್ದಿಯನ್ನು ಮತ್ತು ಪ್ರಾದೇಶಿಕ ಅಸಮಾನತೆಯನ್ನು ಅಳೆಯುವ ಹಾಗೂ ಚರ್ಚಿಸುವ ಕ್ರಮ ರೂಢಿಯಲ್ಲಿದೆ. ಈ ಬಗೆಯ ವಿಚಾರ ಪ್ರಣಾಳಿಕೆ ಬಗ್ಗೆ ಅಮರ್ತ್ಯಸೆನ್ (1999) ಹಾಗೂ ಮೆಹಬೂಬ್ ಉಲ್ ಹಕ್ (1995) ಅವರ ಟೀಕೆಯೆಂದರೆ ಇಲ್ಲಿ ಅಭಿವೃದ್ದಿಯ ಸಾಧನಗಳೇ ಅಭಿವೃದ್ದಿಯೆನಿಸಿಕೊಳ್ಳುತ್ತವೆ ಎಂಬುದಾಗಿದೆ. ಜನರು ಆರೋಗ್ಯದಿಂದ ಬದುಕುತ್ತಿದ್ದಾರೆಯೆ? ಅವರು ಸುದೀರ್ಘ ಕಾಲ ಬದುಕುತ್ತಾರೆಯೆ? ಅವರು ಅಕ್ಷರಜ್ಞಾನ ಹೊಂದಿದ್ದಾರೆಯೆ? ಅವರು ಆಹಾರ ಅಭದ್ರತೆಯಿಂದ ಮುಕ್ತರಾಗಿದ್ದಾರೆಯೆ? ಸೆನ್-ಹಕ್ ಪ್ರಕಾರ ಅಭಿವೃದ್ದಿಯಲ್ಲಿ ಜನರು, ಜನರ ಬದುಕು, ಜನರ ಆರೋಗ್ಯ, ಅವರ ಶಿಕ್ಷಣ, ಅವರ ಆಹಾರ ಮುಖ್ಯ. ಅಭಿವೃದ್ದಿಯೆಂದರೆ ವರಮಾನದ ವರ್ಧನೆ ಮಾತ್ರವಲ್ಲ. ಬದುಕನ್ನು ಉತ್ತಮಪಡಿಸಿಕೊಳ್ಳಲು ಲಭ್ಯವಿರುವ ಅವಕಾಶಗಳನ್ನು ಧಾರಣ ಮಾಡಿಕೊಳ್ಳುವ ಜನರ ಸಾಮರ್ಥ್ಯವೇ ಅಭಿವೃದ್ದಿ. ಬದುಕನ್ನು ಉತ್ತಮಪಡಿಸಿಕೊಳ್ಳುವ ಅವಕಾಶಗಳ ವರ್ಧನೆ ಹಾಗೂ ಅಂತಹ ಅವಕಾಶಗಳಲ್ಲಿ ಜನರು ತಮಗೆ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಸೆನ್ ಅಭಿವೃದ್ದಿಯೆಂದು ನಿರ್ವಚಿಸಿದ್ದಾರೆ. ಇಲ್ಲಿ ಜನರ ಸಮೂಹವೇ ಮುಖ್ಯಧಾತು. ಇದನ್ನು ‘ಮಾನವ ಅಭಿವೃದ್ದಿ’ಯೆಂದು ಕರೆಯಲಾಗಿದೆ. ಈ ಬಗೆಯಲ್ಲಿ ಅಭಿವೃದ್ದಿಯನ್ನು ಮಾಪನ ಮಾಡಲು ‘ಮಾನವ ಅಭಿವೃದ್ದಿ ಸೂಚ್ಯಂಕ’ವೆಂಬ ಗಣತೀಯ ಸೂತ್ರವನ್ನು ರೂಪಿಸಲಾಗಿದೆ. ಈ ಮಾನವ ಅಭಿವೃದ್ದಿ ಸೂಚ್ಯಂಕವು ಮೂರು ಸಂಗತಿಗಳನ್ನು ಒಳಗೊಂಡ ಒಂದು ಸಂಯುಕ್ತ ಸೂಚಿಯಾಗಿದೆ. ಇದು ಒಳಗೊಳ್ಳುವ ಮೂರು ಸೂಚಿಗಳು ಹೀಗಿವೆ –
1. ಜನರ ಆರೋಗ್ಯವನ್ನು ಸೂಚಿಸುವ ಜೀವನಾಯುಷ್ಯ.
2. ಜನರ ಜ್ಞಾನದ ಮಟ್ಟವನ್ನು ಸೂಚಿಸುವ ವಯಸ್ಕರ ಸಾಕ್ಷರತೆ ಹಾಗೂ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಪ್ರಮಾಣ.
3. ಸಂಪನ್ಮೂಲಗಳ ಮೇಲಿನ ಅಧಿಕಾರವನ್ನು ಸೂಚಿಸುವ ತಲಾವರಮಾನ.
ಕರ್ನಾಟಕ ಸರ್ಕಾರದ ಯೋಜನಾ ಇಲಾಖೆಯು 1999ರಲ್ಲಿ ‘ಕರ್ನಾಟಕದಲ್ಲಿ ಮಾನವ ಅಭಿವೃದ್ದಿ’ ಎಂಬ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ಜಿಲ್ಲಾವಾರು ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ರಚಿಸಲಾಗಿದೆ. ಪ್ರಾದೇಶಿಕ ಅಸಮಾನತೆಯ ನಿವಾರಣಾ ಅಧ್ಯಯನದ ಉನ್ನತಾಧಿಕಾರ ಸಮಿತಿಯು 1998ಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ಮಾನವ ಅಭಿವೃದ್ದಿ ಸೂಚ್ಯಂಕವನ್ನು ಗಣನೆ ಮಾಡಿದೆ. ಇವೆರಡೂ ವರದಿಗಳು ರಾಜ್ಯದ 20 ಜಿಲ್ಲೆಗಳನ್ನು ಗಣನೆ ಮಾಡಿ ಸೂಚ್ಯಂಕವನ್ನು ರೂಪಿಸಿವೆ.
ವರಮಾನ ವರ್ಧನೆ ಆಧರಿಸಿದ ಅಭಿವೃದ್ದಿ ನಿರ್ವಚನ ಹಾಗೂ ಮಾನವ ಅಭಿವೃದ್ದಿ ಆಧರಿತ ಮೀಮಾಂಸೆಗಳ ನಡುವಣ ವ್ಯತ್ಯಾಸವನ್ನು ಮೇಲಿನ ಕೋಷ್ಟಕದ ನೆರವಿನಿಂದ ತೋರಿಸಬಹುದಾಗಿದೆ. ಬಳ್ಳಾರಿ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳು ಕ್ರಮವಾಗಿ ಮಾನವ ಅಭಿವೃದ್ದಿಯಲ್ಲಿ (1998) 17ನೆಯ ಹಾಗೂ 14ನೆಯ ಸ್ಥಾನಗಳನ್ನು ಪಡೆದಿವೆ. ಆದರೆ ನಿವ್ವಳ ತಲಾ ದೇಶೀಯ ಉತ್ಪನ್ನದಲ್ಲಿ ಮಾತ್ರ ಅವುಗಳ ಸ್ಥಾನ ಕ್ರಮವಾಗಿ 10 ಮತ್ತು 5. ವರಮಾನ ವರ್ಧನೆಯ ದೃಷ್ಟಿಯಿಂದ ಇವೆರಡೂ ಜಿಲ್ಲೆಗಳು ಮುಂದುವರಿದ ಸ್ಥಿತಿಯಲ್ಲಿವೆ. ಆದರೆ ಜೀವನಾಯುಷ್ಯ ಹಾಗೂ ಶಿಕ್ಷಣಗಳನ್ನು ಒಳಗೊಂಡ ಮಾನವ ಅಭಿವೃದ್ದಿಯಲ್ಲಿ ಅವುಗಳ ಸ್ಥಾನ ಅತ್ಯಂತ ಕೆಳಮಟ್ಟದಲ್ಲಿದೆ. ಈ ಕಾರಣದಿಂದ ವರಮಾನ ಆಧರಿಸಿದ ಅಭಿವೃದ್ದಿಯ ಮಾಪನಕ್ಕಿಂತ ಜನರ ಧಾರಣಶಕ್ತಿ ಆಧರಿತ ಅಭಿವೃದ್ದಿ ಮಾಪನವು ಹೆಚ್ಚು ಉಪಯುಕ್ತವಾದುದಾಗಿದೆ.

ಮೂಲ : ಕರ್ನಾಟಕ ಸರ್ಕಾರ 2002, ಪು. 101

ಮಾನವ ಅಭಿವೃದ್ದಿ – 1991
ಕರ್ನಾಟಕದ 20 ಜಿಲ್ಲೆಗಳನ್ನು 1991ರ ಮಾನವ ಅಭಿವೃದ್ದಿ ಸೂಚ್ಯಂಕದ ಆಧಾರದ ಮೇಲೆ ಎರಡು ಗುಂಪುಗಳಾಗಿ ವರ್ಗೀಕರಿಸಲಾಗಿದೆ.

ಕರ್ನಾಟಕ ರಾಜ್ಯದ ಮಾನವ ಅಭಿವೃದ್ದಿ ಸೂಚ್ಯಂಕ : 0.470 (1991)
ದಕ್ಷಿಣ ಕರ್ನಾಟಕದ 12 ಜಿಲ್ಲೆಗಳ ಪೈಕಿ 7 ಜಿಲ್ಲೆಗಳ ಸೂಚ್ಯಂಕವು ರಾಜ್ಯ ಸರಾಸರಿಗಿಂತ ಅಧಿಕವಾಗಿದೆ. ಆದರೆ ಉ.ಕ.ಪ್ರ.ದ 8 ಜಿಲ್ಲೆಗಳ ಪೈಕಿ ಕೇವಲ ಮೂರು ಜಿಲ್ಲೆಗಳ ಸೂಚ್ಯಂಕವು 0.450ಕ್ಕಿಂತ ಅಧಿಕವಿದೆ.
ಅತ್ಯಂತ ಕಡಿಮೆ ಸೂಚ್ಯಂಕ 0.399 ರಾಯಚೂರು ಜಿಲೆಯಲ್ಲಿದೆ. ಮಾನವ ಅಭಿವೃದ್ದಿ ಸೂಚ್ಯಂಕದ ಪ್ರಾದೇಶಿಕ ಸ್ವರೂಪದಲ್ಲಿ 1998 ರಲ್ಲಿ ಯಾವ ಬದಲಾವಣೆ ಯಾಗಲಿಲ್ಲವೆಂಬುದು ಕೆಳಗಿನ ಚಾರ್ಟ್ನಿಂದ ತಿಳಿದುಬರುತ್ತದೆ.

ಕರ್ನಾಟಕ ರಾಜ್ಯದ ಮಾನವ ಅಭಿವೃದ್ದಿ ಸೂಚ್ಯಂಕ : 0.67(1998)

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ 1991ರಿಂದ 1998ರ ಅವಧಿಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಏರಿಕೆಯಾಗಿದೆ. ಆದರೆ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿನ ಪ್ರಾದೇಶಿಕ ಸ್ವರೂಪದಲ್ಲಿ ಬದಲಾವಣೆಯಾಗಿಲ್ಲ.
ರಾಯಚೂರು ಜಿಲ್ಲೆಯ ಮಾನವ ಅಭಿವೃದ್ದಿ ಸೂಚ್ಯಂಕವು 1991ರಲ್ಲಿ ಅತ್ಯಂತ ಅಧಿಕ ಸೂಚ್ಯಂಕವಾದ ಕೊಡಗಿನ ಸೂಚ್ಯಂಕದ ಶೇ. 63ರಷ್ಟಿತ್ತು. ಇದು 1998ರಲ್ಲಿ ಶೇ. 71ಕ್ಕೆ ಏರಿಕೆಯಾಗಿದೆ.
ಒಟ್ಟಾರೆ ಮಾನವ ಅಭಿವೃದ್ದಿ ಸೂಚ್ಯಂಕದ ಪ್ರಕಾರ (1991 ಮತ್ತು 1998) ಐದು ಜಿಲ್ಲೆಗಳು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿವೆ. ಅವು ಬಿಜಾಪುರ, ಬಳ್ಳಾರಿ, ಬೀದರ್, ಗುಲಬರ್ಗಾ ಮತ್ತು ರಾಯಚೂರು. ಈ ಐದು ಜಿಲ್ಲೆಗಳಲ್ಲಿ ನಾಲ್ಕು ಗುಲಬರ್ಗಾ ವಿಭಾಗಕ್ಕೆ ಸೇರಿದ್ದರೆ ಒಂದು ಜಿಲ್ಲೆ ಮಾತ್ರ ಬಾಂಬೆ ಕರ್ನಾಟಕಕ್ಕೆ ಸೇರಿದೆ. ಇದರಿಂದ ತಿಳಿದುಬರುವುದೇನೆಂದರೆ ರಾಜ್ಯದಲ್ಲಿ ಅತ್ಯಂತ ದುಸ್ಥಿತಿಯಲ್ಲಿರುವ ಪ್ರದೇಶವೆಂದರೆ ಹೈದರಾಬಾದ್-ಕರ್ನಾಟಕದ ಜಿಲ್ಲೆಗಳು. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗುತ್ತದೆ. ಈಗಾಗಲೆ ತಿಳಿಸಿರುವಂತೆ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ಒಂದು ಬಗೆಯ ಚಾರಿತ್ರಿಕ ವಿಕಲತೆಗೆ ಒಳಗಾಗಿವೆ. ಈ ವಿಕಲತೆಯ ಪರಿಣಾಮವಾಗಿ ಅವು ರಾಜ್ಯದ ಉಳಿದ ಪ್ರದೇಶಗಳಿಗಿಂತ ಹಿಂದುಳಿದಿವೆ. ಈ ಪ್ರದೇಶವು ಜಮೀನುದಾರಿ ಪಾಳೆಗಾರಿಕೆಯ ಕಪಿಮುಷ್ಟಿಯಿಂದ ಇನ್ನೂ ಬಿಡುಗಡೆ ಪಡೆದಿಲ್ಲ. ಈ ಎಲ್ಲ ಸಂಗತಿಗಳನ್ನು ಗಮನಿಸಿ ನಾವು ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಡಿ.ಎಂ. ನಂಜುಂಡಪ್ಪ ವರದಿ
ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಸಮಸ್ಯೆಯನ್ನು ಕುರಿತಂತೆ ಅಧ್ಯಯನ ಮಾಡಿ ಅದರ ಪರಿಹಾರಕ್ಕೆ ಸಲಹೆ-ಸೂಚನೆ ನೀಡುವ ಸಲುವಾಗಿ ಉನ್ನತಾಧಿಕಾರ ಸಮಿತಿಯೊಂದನ್ನು ಡಾ.ಡಿ.ಎಂ.ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 3, 2000ರಲ್ಲಿ ಸರ್ಕಾರವು ನೇಮಿಸಿತು. ಈ ಸಮಿತಿಯು ತನ್ನ ವರದಿಯನ್ನು ಜೂನ್ 25, 2002ರಲ್ಲಿ ಸರ್ಕಾರಕ್ಕೆ ಸಲ್ಲಿಸಿತು.
ಈ ಸಮಿತಿಯು ಪ್ರಾದೇಶಿಕ ಅಸಮಾನತೆಯನ್ನು ತಾಲ್ಲೂಕುವಾರು ಮಾಪನ ಮಾಡಿದೆ. ಅಸಮಾನತೆಯನ್ನು ಮಾಪನ ಮಾಡಲು ಅದು ‘ಸಮಗ್ರ ಸಂಯುಕ್ತ ಅಭಿವೃದ್ದಿ ಸೂಚ್ಯಂಕ’ವೆಂಬ ಗಣತೀಯ ಸೂಚಿಯನ್ನು ಅಭಿವೃದ್ದಿ ಪಡಿಸಿದೆ. ಈ ಸೂಚ್ಯಂಕದ ಆಧಾರದ ಮೇಲೆ ಸಮಿತಿಯು ರಾಜ್ಯದ 175 ತಾಲ್ಲೂಕುಗಳನ್ನು ಮೊದಲನೆಯ ಹಂತದಲ್ಲಿ ಅಭಿವೃದ್ದಿ ಹೊಂದಿದ ಮತ್ತು ದುಸ್ಥಿತಿಯಲ್ಲಿರುವ ತಾಲ್ಲೂಕುಗಳಾಗಿ ವರ್ಗೀಕರಿಸಿದೆ. ಇದನ್ನು ವಿಭಾಗವಾರು ಕೆಳಗಿನ ಕೋಷ್ಟಕ-5ರಲ್ಲಿ ನೀಡಲಾಗಿದೆ.
ಈ ಕೋಷ್ಟಕದಿಂದ ತಿಳಿದುಬರುವುದೇನೆಂದರೆ ರಾಜ್ಯದ ಅಭಿವೃದ್ದಿ ಹೊಂದಿದ 61 ತಾಲ್ಲೂಕುಗಳಲ್ಲಿ ದ.ಕ.ಪ್ರ. ದ ಪಾಲು ಶೇ. 65.57ರಷ್ಟಿದ್ದರೆ ಉ.ಕ.ಪ್ರ.ದ ಪಾಲು ಕೇವಲ ಶೇ. 34.86. ಆದರೆ ಅಭಿವೃದ್ದಿ ಹೊಂದದಿರುವ 114 ತಾಲ್ಲೂಕುಗಳಲ್ಲಿ ದ.ಕ.ಪ್ರ.ದ ಪಾಲು ಕೇವಲ ಶೇ. 48.25. ಆದರೆ ಉ.ಕ.ಪ್ರ.ದ ಪಾಲು ಶೇ. 51.75.
ರಾಜ್ಯದ ಅಭಿವೃದ್ದಿ ಹೊಂದದ ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗದ ಪಾಲು ಅತ್ಯಂತ ಅಧಿಕ ಶೇ. 24.56ರಷ್ಟಿದೆ. ಆದರೆ ರಾಜ್ಯದ ಅಭಿವೃದ್ದಿ ಹೊಂದಿದ ತಾಲ್ಲೂಕುಗಳಲ್ಲಿ ಇದರ ಪಾಲು ಕೇವಲ ಶೇ. 4.92.

ಮೂಲ : ಕರ್ನಾಟಕ ಸರ್ಕಾರ  2002, ಪು. 290-295

ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ (ಡಾ.ಡಿ.ಎಂ.ನಂಜುಂಡಪ್ಪ) ವರದಿಯ ಅನುಸಾರ ಪರಿಗಣಿಸಲಾದ ಹಿಂದುಳಿದ ತಾಲೂಕುಗಳ ವಿವರ

ಮಾಹಿತಿ : ಪ್ರಾದೇಶಿಕ ಅಸಮತೋಲನ ನಿವಾರಣ ಸಮಿತಿ ವರದಿ

ಡಾ.ಡಿ.ಎಂ. ನಂಜುಂಡಪ್ಪರವರ ವರದಿಯಂತೆ (ಕರ್ನಾಟಕ ಅಂಕಿ ಅಂಶಗಳ ನೋಟ, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಬೆಂಗಳೂರು) ಡಿ.ಎಂ.ನಂಜುಂಡಪ್ಪ ಸಮಿತಿಯು ದುಸ್ಥಿತಿಯ ತೀವ್ರತೆಯನ್ನು ಗುರುತಿಸುವ ಉದ್ದೇಶದಿಂದ ಅಭಿವೃದ್ದಿ ಹೊಂದದ ತಾಲ್ಲೂಕುಗಳನ್ನು ಮತ್ತೆ ಮೂರು ಗುಂಪುಗಳಾಗಿ ವರ್ಗೀಕರಿಸಿದೆ. ಅದರ ವಿವರ ಕೋಷ್ಟಕ – 6 ರಲ್ಲಿದೆ.
ಅತ್ಯಂತ ಕುತೂಹಲದ ಸಂಗತಿಯೆಂದರೆ ರಾಜ್ಯದಲ್ಲಿನ ಅತ್ಯಂತ ಹಿಂದುಳಿದ 39 ತಾಲ್ಲೂಕುಗಳಲ್ಲಿ ಗುಲಬರ್ಗಾ ವಿಭಾಗ ಪಾಲು ಶೇ. 66.66. ಇದು ಪ್ರಾದೇಶಿಕ ಅಸಮಾನತೆಯ ಕೇಂದ್ರ ಬಿಂದು ಯಾವುದು ಎಂಬುದನ್ನು ತೋರಿಸುತ್ತದೆ.

ವಿಭಾಗವಾರು ಹಿಂದುಳಿದಿರುವಿಕೆಯ ಪ್ರಮಾಣ
ಆರ್ಥಿಕ-ಸಾಮಾಜಿಕ ಹಿಂದುಳಿದಿರುವಿಕೆಯಲ್ಲಿ ರಾಜ್ಯದ ನಾಲ್ಕು ವಿಭಾಗಗಳ ಸಾಪೇಕ್ಷ ಪಾಲು ಎಷ್ಟು ಎಂಬುದನ್ನು ಸಮಿತಿಯು ಗಣನೆ ಮಾಡಿಕೊಟ್ಟಿದೆ. ಇದನ್ನು ಕೋಷ್ಟಕ-7ರಲ್ಲಿ ತೋರಿಸಿದೆ.

ಮೂಲ : ಕರ್ನಾಟಕ ಸರ್ಕಾರ 2002, ಪು. 290-295

ಮೂಲ : ಕರ್ನಾಟಕ ಸರ್ಕಾರ 2002, ಪು.1013
ರಾಜ್ಯದ ಹಿಂದುಳಿದಿರುವಿಕೆಯಲ್ಲಿ ಉ.ಕ.ಪ್ರ.ದ ಪಾಲು ಶೇ.60. ಅದರಲ್ಲೂ ಗುಲಬರ್ಗಾ ವಿಭಾಗದ ಪಾಲು ಶೇ.40. ಹಿಂದುಳಿದಿರುವಿಕೆಯ ಆಧಾರದ ಮೇಲೆ ಸರ್ಕಾರವು ಸಂಪನ್ಮೂಲವನ್ನು ಮತ್ತು ಬಂಡವಾಳವನ್ನು ರಾಜ್ಯದ ವಿಭಾಗಗಳ ನಡುವೆ ಹಂಚಬೇಕು ಎಂಬುದು ಡಿ.ಎಂ.ನಂಜುಂಡಪ್ಪ ಸಮಿತಿಯ ಮುಖ್ಯ ಸಲಹೆಯಾಗಿದೆ.

ಸಾಕ್ಷರತೆ ಮತ್ತು ಪ್ರಾಥಮಿಕ ಶಿಕ್ಷಣ
ಸಾಕ್ಷರತೆ ಹಾಗೂ ಪ್ರಾಥಮಿಕ ಶಿಕ್ಷಣದ ಮಹತ್ವವನ್ನು ಗುರುತಿಸುವ ಅಥವಾ ವಿವರಿಸುವ ಅಗತ್ಯವಿಲ್ಲ. ಹಿಂದುಳಿದ ದೇಶ/ಪ್ರದೇಶಗಳ ದೃಷ್ಟಿಯಿಂದ ಅವುಗಳ ಪಾತ್ರ ನಿರ್ಣಾಯಕವಾದುದಾಗಿದೆ. ಸಾಕ್ಷರತೆ ಹಾಗೂ ಪ್ರಾಥಮಿಕ ಶಿಕ್ಷಣಗಳು ಅಭಿವೃದ್ದಿಯ ಸಾಧನಗಳು ಹೌದು ಮತ್ತು ಅವು ಅಭಿವೃದ್ದಿಯ ಅಂತರ್ಗತ ಗುಣವೂ ಹೌದು. ಇದನ್ನೇ ಅಮರ್ತ್ಯಸೆನ್ ‘ಅಂತಸ್ಥಗುಣ’ ಮತ್ತು ‘ಉಪಕರಣವಾದಿಗುಣ’ವೆಂದು ಕರೆದಿದ್ದಾರೆ. ಸಮಾಜದಲ್ಲಿ ಸರೀಕರ ಮುಂದೆ ತಲೆ ಎತ್ತಿ ನಿಲ್ಲಲು ಸಾಕ್ಷರತೆ-ಶಿಕ್ಷಣ ಅಗತ್ಯ. ಅನಕ್ಷರತೆ ಎನ್ನುವುದು ಒಂದು ಬಗೆಯಲ್ಲಿ ಸಾಮಾಜಿಕ ವಿಕಲತೆ.
ಜೀನ್ಡ್ರೀಜ್ ಮತ್ತು ಅಮರ್ತ್ಯಸೆನ್ ಅವರು ಸಾಕ್ಷರತೆಯ ಮಹತ್ವವನ್ನು ಹೀಗೆ ಗುರುತಿಸಿದ್ದಾರೆ,
ಸಾಮಾಜಿಕ ಸಂಪರ್ಕ ಮತ್ತು ಸಂಬಂಧ ಹಾಗೂ ಸಂವಹನ ಲಿಖಿತ ಮಾಧ್ಯಮದ ಮೂಲಕ ಸಂಭವಿಸುವುದರಿಂದ ಸಮಾಜದಲ್ಲಿ ಸಾಕ್ಷರತೆಯು ಸ್ವರಕ್ಷಣೆಯ ಸಾಧನ ವಾಗಿರುತ್ತದೆ. ಅಕ್ಷರ ಜ್ಞಾನವಿಲ್ಲದವರು ತಮ್ಮನ್ನು ತಾವು ನ್ಯಾಯಾಲಯದ ಕಟಕಟೆಯಲ್ಲಿ ರಕ್ಷಿಸಿಕೊಳ್ಳಲಾರರು, ಬ್ಯಾಂಕಿನಿಂದ ಸಾಲ ಪಡೆಯಲಾರರು, ತಮ್ಮ ವಾರಸುದಾರಿಕೆ ಹಕ್ಕುಗಳನ್ನು ಚಲಾಯಿಸಲಾರರು, ಆಧುನಿಕ ತಂತ್ರಜ್ಞಾನದ ಅನುಕೂಲ ಪಡೆದುಕೊಳ್ಳಲಾರರು, ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೋಟಿ ಮಾಡಲಾರರು, ಸರಿಯಾದ ಬಸ್ಸು ಏರಲಾರರು, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲಾರರು -ಒಟ್ಟಾರೆ ಆಧುನಿಕ ಆರ್ಥಿಕತೆ- ಸಮಾಜದಲ್ಲಿ ಯಶಸ್ವಿಯಾಗಿ ಸಹಪಾಲುದಾರರಾಗಲಾರರು(2002: 143).
ಸಾಕ್ಷರತೆಯ ಮಹತ್ವವನ್ನು ತುಂಬಾ ಸರಳವಾದ ನಿದರ್ಶನಗಳ ಮೂಲಕ ತೋರಿಸಬಹುದು. ಕರ್ನಾಟಕದ ವಿವಿಧ ಜಿಲ್ಲೆಗಳ ಅಭಿವೃದ್ದಿ ಸಂಬಂಧಿ ಸಾಧನೆಗಳನ್ನು ಮುಖಾಮುಖಿಯಾಗಿಸಿದರೆ ಯಾವ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಉನ್ನತವಾಗಿರುತ್ತದೋ ಅದು ಅಭಿವೃದ್ದಿಯಲ್ಲೂ ಉನ್ನತ ಮಟ್ಟ ಸಾಧಿಸಿಕೊಂಡಿರುವುದು ತಿಳಿಯುತ್ತದೆ. ಇವೆರಡರ ನಡುವೆ ಕಾರಣ-ಪರಿಣಾಮ ಸ್ವರೂಪದ ಸಂಬಂಧವಿರಬಹುದು. ಆದರೆ ಸಾಕ್ಷರತೆಯಲ್ಲಿ ಉನ್ನತ ಮಟ್ಟ ತಲುಪಿರುವ ಜಿಲ್ಲೆಗಳು ಅಭಿವೃದ್ದಿಯಲ್ಲೂ ಮುಂಚೂಣಿಯಲ್ಲಿರುತ್ತವೆ. ಕೋಷ್ಟಕ-8 ರಲ್ಲಿ ಕರ್ನಾಟಕದ ವಿವಿಧ ವಿಭಾಗಗಳಿಗೆ ಸೇರಿದ ಆಯ್ದ ಜಿಲ್ಲೆಗಳ ತಲಾ ನಿವ್ವಳ ದೇಶೀಯ ಉತ್ಪನ್ನ ಹಾಗೂ ಒಟ್ಟು ಸಾಕ್ಷರತೆಯ ಪ್ರಮಾಣವನ್ನು ತೋರಿಸಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ, ಪು.229, ಗೌರ್ನಮೆಂಟ್ ಆಫ್ ಕರ್ನಾಟಕ 2002, ಪು. 56-67

ಕೋಷ್ಟಕ-8ರಲ್ಲಿ ತೋರಿಸಿರುವಂತೆ ದ.ಕ.ಪ್ರ.ದ ಎರಡೂ ವಿಭಾಗಗಳಲ್ಲಿ ಸಾಕ್ಷರತೆ ಮಟ್ಟವು ಹಾಗೂ ತಲಾ ನಿವ್ವಳ ದೇಶೀಯ ಉತ್ಪನ್ನವೂ ರಾಜ್ಯ ಸರಾಸರಿಗಿಂತ ಅಧಿಕವಾಗಿದೆ. ಆದರೆ ಉ.ಕ.ಪ್ರ.ದ ಜಿಲ್ಲೆಗಳಲ್ಲಿ ತಲಾ ನಿವ್ವಳ ದೇಶೀಯ ಉತ್ಪನ್ನವು ರಾಜ್ಯ ಸರಾಸರಿಗಿಂತ ಕಡಿಮೆಯಿದೆ ಹಾಗೂ ಸಾಕ್ಷರತೆ ಪ್ರಮಾಣವು ಕಡಿಮೆಯಿದೆ. ವರಮಾನದಂತೆ ಅಕ್ಷರ ಭಾಗ್ಯವು ಜನರ ಧಾರಣಶಕ್ತಿಯನ್ನು ವರ್ಧಿಸುತ್ತದೆ. ಬದುಕನ್ನು ಉತ್ತಮಪಡಿಸಿ ಕೊಳ್ಳಲು ಅಗತ್ಯವಾದ ಒಂದು ಅವಕಾಶವನ್ನು ಸಾಕ್ಷರತೆ ಪ್ರತಿನಿಧಿಸುತ್ತದೆ. ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಕನಿಷ್ಟ ಸಾಕ್ಷರತೆಯ ತಾಲ್ಲೂಕು ಯಾದಗಿರಿ. ಅಲ್ಲಿ 2001ರ ಜನಗಣತಿ ಪ್ರಕಾರ ಸಾಕ್ಷರತೆ ಶೇ. 37.43. ಇದು ಗುಲಬರ್ಗಾ ಜಿಲ್ಲೆಗೆ ಸೇರಿದೆ.
ಅದೇ ರೀತಿ ಸಾಕ್ಷರತೆ ಅತ್ಯಧಿಕವಿರುವ ಮಂಗಳೂರು ತಾಲ್ಲೂಕಿನಲ್ಲಿ ಅದು ಶೇ. 87.29. ಇದು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದೆ. ಸಾಕ್ಷರತೆಯು ಅಭಿವೃದ್ದಿಯ ಒಂದು ಸೂಚಿ. ಅನಕ್ಷರತೆಯು ದುಸ್ಥಿತಿಯ ಒಂದು ಸೂಚಿ.ೊಕೋಷ್ಟಕ-9ರಲ್ಲಿ ಎರಡು ಕಾಲಘಟ್ಟಗಳಿಗೆ (1991 ಮತ್ತು 2001) ಸಂಬಂಧಿಸಿದಂತೆ ಸಾಕ್ಷರತೆ ಪ್ರಮಾಣವನ್ನು ವಿಭಾಗವಾರು ನೀಡಲಾಗಿದೆ. ಸಾಕ್ಷರತೆಯ ಪ್ರಮಾಣವು 1991ರಿಂದ 2001ರ ಅವಧಿಯಲ್ಲಿ ಶೇ. ಎಷ್ಟು ಬೆಳೆದಿದೆ ಎಂಬುದನ್ನು ಲೆಕ್ಕಹಾಕಿ ಕೋಷ್ಟಕದಲ್ಲಿ ನೀಡಲಾಗಿದೆ. ಇಲ್ಲಿ ಎರಡು ಸಂಗತಿಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಸಾಕ್ಷರತೆ ಪ್ರಮಾಣವು ಉ.ಕ.ಪ್ರ.ದಲ್ಲಿ ಕಡಿಮೆಯಿದ್ದು ದ.ಕ.ಪ್ರ.ದಲ್ಲಿ ಅಧಿಕ ಮಟ್ಟದಲ್ಲಿದೆ. ಕನಿಷ್ಟ ಸಾಕ್ಷರತೆ ಎರಡೂ ಕಾಲಘಟ್ಟಗಳಲ್ಲಿ ಗುಲಬರ್ಗಾ ವಿಭಾಗದಲ್ಲಿದೆ. ದ.ಕ.ಪ್ರ.ದ ಸಾಕ್ಷರತೆಯ ಪ್ರಮಾಣವು 2001ರಲ್ಲಿ ರಾಜ್ಯಮಟ್ಟದ ಸಾಕ್ಷರತೆಯ ಶೇ. 106.65ರಷ್ಟಿದ್ದರೆ ಉ.ಕ.ಪ್ರ.ದ ಸಾಕ್ಷರತೆಯು ರಾಜ್ಯಮಟ್ಟದ ಸಾಕ್ಷರತೆಯ ಶೇ. 90.72ರಷ್ಟಿದೆ. ಆದರೆ ಗುಲಬರ್ಗಾ ವಿಭಾಗದ ಸಾಕ್ಷರತೆಯು ರಾಜ್ಯ ಸರಾಸರಿ ಸಾಕ್ಷರತೆಯ ಶೇ. 81ರಷ್ಟಿದೆ. ಎರಡನೆಯದಾಗಿ ರಾಜ್ಯಮಟ್ಟದಲ್ಲಿ ಸಾಕ್ಷರತೆಯು 1991-2001ರ ದಶಕದಲ್ಲಿ ಶೇ. 19.62ರಷ್ಟು ಬೆಳವಣಿಗೆ ಸಾಧಿಸಿಕೊಂಡಿದೆ. ಉ.ಕ.ಪ್ರ.ದಲ್ಲಿ ಸಾಕ್ಷರತೆಯ ಬೆಳವಣಿಗೆ ಪ್ರಮಾಣ ಅತ್ಯಧಿಕವಿದೆ.
ಬೆಳಗಾವಿ ವಿಭಾಗದಲ್ಲಿ ಮಾತ್ರ ಅದು ಕೆಳಮಟ್ಟದಲ್ಲಿದೆ. ಗುಲಬರ್ಗಾ ವಿಭಾಗದಲ್ಲಿ ಅದು ಶೇ. 34.62 ರಷ್ಟು ಬೆಳವಣಿಗೆ ಕಂಡಿದೆ. ಇಷ್ಟಾದರೂ ಅಂತರ ಮಾತ್ರ ತೀವ್ರವಾಗಿದೆ. ಕೋಷ್ಟಕ-10 ಸಾಕ್ಷರತೆಗೆ ಸಂಬಂಧಿಸಿದ ಪ್ರಾದೇಶಿಕ ಅಂತರವನ್ನು ಸ್ಪಷ್ಟವಾಗಿ ತೋರಿಸುತ್ತದೆ. ದ.ಕ. ಹಾಗೂ ಉ.ಕ. ಪ್ರದೇಶಗಳ ಸಾಪೇಕ್ಷ ಸಾಧನವು ಅಕ್ಷರಸ್ಥರ ಸಂಖ್ಯೆಗೆ ಸಂಬಂಧಿಸಿದಂತೆ ಎರಡೂ ಕಾಲಘಟ್ಟಗಳಲ್ಲಿ ಸ್ಥಿರವಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 57.28 ಪಾಲು ಪಡೆದಿರುವ ದ.ಕ.ಪ್ರ.ವು ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಶೇ. 62ರಷ್ಟು ಪಾಲು ಪಡೆದಿದೆ. ಆದರೆ ಜನಸಂಖ್ಯೆಯಲ್ಲಿ ಶೇ. 42.72 ರಷ್ಟು ಪಾಲು ಪಡೆದಿರುವ ಉ.ಕ.ಪ್ರ.ವು ಅಕ್ಷರಸ್ಥರಲ್ಲಿ. ಕೇವಲ ಶೇ.38 ಪಾಲು ಪಡೆದಿದೆ. ಇದು 1991 ಹಾಗೂ 2001 ಎರಡೂ ಕಾಲಘಟ್ಟಗಳಲ್ಲಿ ಬದಲಾಗದೆ ಮುಂದುವರೆದಿದೆ. ಇದು ಆತಂಕಕಾರಿ ಸಂಗತಿಯಾಗಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991, ಸೀರಿಸ್ 11, ಕರ್ನಾಟಕ,ಪು.40-43, ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ, ಪು.229

ಉ.ಕ.ಪ್ರ.ದ ಜಿಲ್ಲೆಗಳಲ್ಲಿ ಸಾಕ್ಷರತೆಯ ಪ್ರಮಾಣವನ್ನು ಉತ್ತಮಪಡಿಸಲು ತೀವ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸಮಸ್ಯಾತ್ಮಕ ತಾಲ್ಲೂಕುಗಳನ್ನು ಆಯ್ದುಕೊಂಡು ವಿಶೇಷ ಅಭಿಯಾನದ ಮೂಲಕ ಸಮಸ್ಯೆಯನ್ನು ಎದುರಿಸಬೇಕಾಗಿದೆ.

ಕರ್ನಾಟಕದ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ
ಒಂದರಿಂದ ಹತ್ತನೆಯ ತರಗತಿವರೆಗಿನ ಮಕ್ಕಳ ದಾಖಲಾತಿ ವಿವರಗಳನ್ನು ಕೋಷ್ಟಕ-11ರಲ್ಲಿ ನೀಡಲಾಗಿದೆ. ಇದರಲ್ಲಿ ಒಂದು ಸೂಕ್ಷ್ಮ ಸಂಗತಿಯನ್ನು ನಾವು ಗುರುತಿಸಬೇಕಾಗಿದೆ. ಇದರಲ್ಲಿ ಒಂದರಿಂದ ಏಳನೆಯ ತರಗತಿಯ ಮಕ್ಕಳ ದಾಖಲಾತಿಯನ್ನು ತೆಗೆದುಕೊಂಡರೆ ದ.ಕ.ಪ್ರ.ದ ಪಾಲು ಅದು ಜನಸಂಖ್ಯೆಯಲ್ಲಿ ಪಡೆದುಕೊಂಡ ಪಾಲಿಗಿಂತ ಕಡಿಮೆಯಿದೆ. ಆದರೆ ಉ.ಕ.ಪ್ರ.ವು ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಅಧಿಕ ಪಾಲನ್ನು ಒಂದರಿಂದ ಏಳನೆಯ ತರಗತಿಯ ಮಕ್ಕಳ ದಾಖಲಾತಿಯಲ್ಲಿ ಪಡೆದಿದೆ. ಇದೊಂದು ಸ್ವಾಗತಾರ್ಹ ಸಂಗತಿಯಾಗಿದೆ. ಆದರೆ ಪ್ರೌಢಶಾಲೆಗಳ 8ರಿಂದ 10 ನೆಯ ತರಗತಿಗಳನ್ನು ತೆಗೆದುಕೊಂಡರೆ ಚಿತ್ರವು ತಿರುವುಮುರುವಾಗುತ್ತದೆ. ಇಲ್ಲಿ ದ.ಕ.ಪ್ರ. ಪಾಲು ಶೇ. 61.71. ಆದರೆ ಉ.ಕ.ಪ್ರ.ದ ಪಾಲು ಕೇವಲ ಶೇ. 38.29. ರಾಜ್ಯದಲ್ಲಿ 2005ರಲ್ಲಿ ಹತ್ತನೆಯ ತರಗತಿಯಲ್ಲಿ ಓದುತ್ತಿರುವ ಮಕ್ಕಳ ಒಟ್ಟು ಸಂಖ್ಯೆ 5.58 ಲಕ್ಷ. ಇದರಲ್ಲಿ ದ.ಕ.ಪ್ರ.ದ ಪಾಲು ಶೇ. 60.96 ಮತ್ತು ಉ.ಕ.ಪ್ರ.ದ ಪಾಲು ಕೇವಲ ಶೇ. 39.03.
ಇದರಿಂದ ತಿಳಿದು ಬರುವುದೇನೆಂದರೆ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಹಂತಕ್ಕೆ ಸಾಗಿದಂತೆ ಉ.ಕ.ಪ್ರ.ದ ಪಾಲು ಕಡಿಮೆಯಾಗುತ್ತದೆ. ಇದಕ್ಕೆ ಪ್ರತಿಯಾಗಿ ದ.ಕ.ಪ್ರ.ದ ಪಾಲು ಅಧಿಕವಾಗಿದೆ. ಇದನ್ನೇ ಪ್ರಾದೇಶಿಕ ಅಸಮಾನತೆಯೆಂದು ಹೇಳುವುದು. ಇದರ ಒಳಾರ್ಥವಿಷ್ಟೆ. ಉ.ಕ.ಪ್ರ.ದಲ್ಲಿ ಶಾಲೆಯನ್ನು ಸೇರಿದ ಮೇಲೆ ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಪ್ರಮಾಣ ಅಧಿಕವಾಗಿದೆ. ಒಂದನೆಯ ತರಗತಿಗೆ ಸೇರುವ ಮಕ್ಕಳಲ್ಲಿ ಉ.ಕ.ಪ್ರ.ದ ಪಾಲು ಅಧಿಕವಾಗಿರುತ್ತದೆ. ಆದರೆ ಉನ್ನತ ಹಂತಕ್ಕೆ ಸಾಗುವಾಗ ಶಾಲೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇಲ್ಲಿ ಬಿಟ್ಟುಬಿಡುತ್ತವೆ. ಇದರಿಂದಾಗಿ ಪ್ರೌಢಶಾಲೆ ಹಂತದಲ್ಲಿ ಉ.ಕ.ಪ್ರ.ದ ಪಾಲು ಕಡಿಮೆಯಾಗುತ್ತದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991, ಸೀರಿಸ್ 11, ಕರ್ನಾಟಕ,ಪು.78-79 ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ, ಪು.86-93

ಮೂಲ : ಕರ್ನಾಟಕ ಸರ್ಕಾರ 2005, ಪು. 66-69 ಮತ್ತು 364

ಕೋಷ್ಟಕ-12 ರಲ್ಲಿ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣವನ್ನು ವಿಭಾಗವಾರು ತೋರಿಸಲಾಗಿದೆ.

ಮೂಲ : ಕರ್ನಾಟಕ ಸರ್ಕಾರ 2005, ಪು. 347-354

ಕೋಷ್ಟಕ-12ರಿಂದ ಸ್ಪಷ್ಟವಾಗುವುದೇನೆಂದರೆ ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣ ಗರಿಷ್ಟ ಮತ್ತು ಕನಿಷ್ಟ ಮಟ್ಟಗಳು ಉ.ಕ.ಪ್ರ.ದ ಜಿಲ್ಲೆಗಳಲ್ಲಿ ಅಧಿಕವಿದೆ. ಈ ಸಮಸ್ಯೆಯು ಗುಲಬರ್ಗಾ ವಿಭಾಗದಲ್ಲಿ ಗಂಭೀರ ಸ್ವರೂಪದಲ್ಲಿದೆ. ಈ ಕಾರಣದಿಂದಾಗಿ ಪ್ರೌಢಶಾಲೆ ಹಂತದಲ್ಲಿ ಉ.ಕ.ಪ್ರ.ದ ಪಾಲು ಕಡಿಮೆಯಿರುವುದನ್ನು ಕಾಣಬಹುದು.

ಶೈಕ್ಷಣಿಕ ದುಸ್ಥಿತಿಯ ಕೂಪಗಳು
ಈ ಕೆಳಗೆ ಕೊಟ್ಟಿರುವ ಕೋಷ್ಟಕ-13ರಲ್ಲಿ ಶೈಕ್ಷಣಿಕವಾಗಿ ಅತ್ಯಂತ ದುಸ್ಥಿತಿಯಲ್ಲಿರುವ ಆರು ತಾಲ್ಲೂಕುಗಳ ಸ್ಥಿತಿಯನ್ನು ನೀಡಲಾಗಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ,ಪು.229, ಕರ್ನಾಟಕ ಸರ್ಕಾರ 2005, ಪು. 347-354, ಕರ್ನಾಟಕ ಸರ್ಕಾರ 2002, ಪು. 290-295
ಈ ಕೋಷ್ಟಕ (13) ದಲ್ಲಿರುವ ತಾಲ್ಲೂಕುಗಳಲ್ಲಿ ನಾಲ್ಕು ಗುಲಬರ್ಗಾ ಜಿಲ್ಲೆಗೆ ಸೇರಿದ್ದರೆ ಎರಡು ರಾಯಚೂರು ಜಿಲ್ಲೆಗೆ ಸೇರಿವೆ. ಒಟ್ಟಾರೆ 6 ತಾಲ್ಲೂಕುಗಳು ಗುಲಬರ್ಗಾ ವಿಭಾಗಕ್ಕೆ, ಅಂದರೆ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿವೆ.
1. ರಾಜ್ಯದಲ್ಲಿ ಅತ್ಯಂತ ಕನಿಷ್ಟ ಸಾಕ್ಷರತೆಯ ತಾಲ್ಲೂಕುಗಳು ಇವಾಗಿವೆ.
2. ಜನಸಂಖ್ಯೆಗೆ ಸಾಪೇಕ್ಷವಾಗಿ ಹತ್ತನೆಯ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳ ಸಂಖ್ಯೆ ಇಲ್ಲಿ ಕನಿಷ್ಟವಾಗಿದೆ.
3. ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣವು ಅತ್ಯಧಿಕವಿರುವ ತಾಲ್ಲೂಕುಗಳು ಇವಾಗಿವೆ.
4. ಅಭಿವೃದ್ದಿಯ ದೃಷ್ಟಿಯಿಂದ ರಾಜ್ಯದ 175 ತಾಲ್ಲೂಕುಗಳ ಪೈಕಿ ಇವುಗಳ ಸ್ಥಾನ ಅತ್ಯಂತ ಕೆಳಮಟ್ಟದಲ್ಲಿದೆ.
ಶಾಲೆಯನ್ನು ಮಧ್ಯದಲ್ಲಿ ಬಿಡುವ ಮಕ್ಕಳ ಪ್ರಮಾಣವು ಶೇ. 40 ಕ್ಕಿಂತ ಅಧಿಕವಿರುವ ಹಾಗೂ ಸಾಕ್ಷರತೆ ಶೇ. 45 ಕ್ಕಿಂತ ಕಡಿಮೆಯಿರುವ ತಾಲ್ಲೂಕುಗಳನ್ನು ಇಲ್ಲಿ ಆಯ್ಕೆ ಮಾಡಲಾಗಿದೆ. ಈ ತಾಲ್ಲೂಕುಗಳು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ತಾಲ್ಲೂಕುಗಳು ಅಭಿವೃದ್ದಿಯನ್ನು ವಿಶೇಷ ಕಾರ್ಯಕ್ರಮಗಳ ಮೂಲಕ ನಿರ್ವಹಿಸಬೇಕಾಗುತ್ತದೆ. ಆದರೆ ಅಂತಹ ಪ್ರಯತ್ನಗಳಾವುವು ನಡೆಯದಿರುವುದು ಪ್ರಾದೇಶಿಕ ಅಸಮಾನತೆಯೆಂಬುದು ಎಂತಹ ನಿರ್ಲಕ್ಷಕ್ಕೆ ಒಳಗಾಗಿದೆ ಎಂಬುದು ತಿಳಿಯುತ್ತದೆ.
ಪ್ರಾಥಮಿಕ ಶಿಕ್ಷಣವೆಂಬುದು ಹೆಸರೇ ಸೂಚಿಸುವಂತೆ ಅದೊಂದು ಪ್ರಾಥಮಿಕ ಅಗತ್ಯ. ಪ್ರಾಥಮಿಕ ಅಗತ್ಯದಿಂದ ಮೇಲ್ಕಂಡ ತಾಲ್ಲೂಕುಗಳಲ್ಲಿ ಸುಮಾರು ಶೇ.40ರಷ್ಟು ಮಕ್ಕಳು ವಂಚಿತರಾಗಿದ್ದಾರೆ. ಇಂತಹ ಸಂಗತಿಗಳನ್ನು ‘ರಾಜಕೀಕರಣ’ಗೊಳಿಸಬೇಕಾಗಿದೆ.

ಜನಸಂಖ್ಯೆ ಮತ್ತು ಆರೋಗ್ಯ ಭಾಗ್ಯ
ಜನಸಂಖ್ಯೆಯ ಬೆಳವಣಿಗೆ ಪ್ರಮಾಣವನ್ನು ಹಿಂದುಳಿದಿರುವಿಕೆಯ ಒಂದು ಸೂಚಿಯಾಗಿ ಬಳಸಬಹುದು. ಜನಸಂಖ್ಯೆಯ ಗತಿಶೀಲ ಗುಣಗಳಾದ ಸಂತಾನೋತ್ಪತ್ತಿ ಪ್ರಮಾಣ, 0-6 ಮಕ್ಕಳ ಪ್ರಮಾಣ, ಜೀವನಾಯುಷ್ಯ, ಶಿಶುಮರಣ ಪ್ರಮಾಣ ಮುಂತಾದ ಸಂಗತಿಗಳ ಆಧಾರದ ಮೇಲೆ ಜನರ ಆರೋಗ್ಯದ ಮಟ್ಟವನ್ನು ಗುರುತಿಸಬಹುದಾಗಿದೆ. ಇವೆಲ್ಲವೂ ಜನರ ಆರೋಗ್ಯದ ಮಟ್ಟವನ್ನು ಸೂಚಿಸುತ್ತವೆ. ಜನಸಂಖ್ಯೆಯ ಬೆಳವಣಿಗೆ ಹಾಗೂ ಆರೋಗ್ಯ ಸೂಚಿಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ವಿವಿಧ ಪ್ರದೇಶಗಳ ನಡುವೆ ತೀವ್ರ ಅಂತರ-ಅಸಮಾನತೆಗಳಿವೆ. ಮಾನವ ಅಭಿವೃದ್ದಿ ಸೂಚ್ಯಂಕವು ಒಳಗೊಳ್ಳುವ ಮೂರು ಸೂಚಿಗಳಲ್ಲಿ ಆರೋಗ್ಯವೂ ಒಂದಾಗಿದೆ ಮತ್ತು ಅಲ್ಲಿ ಅದಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ.
ಶಿಕ್ಷಣದಂತೆ ಆರೋಗ್ಯವನ್ನು ಅಭಿವೃದ್ದಿಯ ಸಾಧನವಾಗಿ ನೋಡುವ ಕ್ರಮವು ರೂಢಿಯಲ್ಲಿದೆ. ಜನರ ದುಡಿಮೆಯ ಸಾಮರ್ಥ್ಯ ಉತ್ತಮವಾಗುತ್ತದೆ ಎನ್ನುವ ಕಾರಣಕ್ಕೆ ಆರೋಗ್ಯವು ಮುಖ್ಯವಾಗಬೇಕಾಗಿಲ್ಲ. ಆರೋಗ್ಯವು ಜನರ ದೃಷ್ಟಿಯಿಂದ ತನ್ನದೇ ಆದ ಮಹತ್ವ ಪಡೆದಿದೆ. ಅಭಿವೃದ್ದಿಯನ್ನು ಅನುಭವಿಸಲು ಆರೋಗ್ಯದ ಅವಶ್ಯಕತೆಯಿದೆ. ವರಮಾನದ ಏರಿಕೆಯಾಗಿ ಬಿಟ್ಟರೆ ಜನರ ಜೀವನಮಟ್ಟ ಉತ್ತಮವಾಗಿ ಬಿಡುವುದಿಲ್ಲ. ಏರಿಕೆಯಾದ ವರಮಾನದ ಲಾಭವು ಜನರಿಗೆ ದೊರೆಯಬೇಕಾದರೆ ಜನರ ಆರೋಗ್ಯ ಉತ್ತಮವಾಗಬೇಕು.
ಜನರು ದೃಢಕಾಯರಾಗಿ ದೀರ್ಘಕಾಲ ಬದುಕಬೇಕು. ಹುಟ್ಟಿದ ಮಕ್ಕಳೆಲ್ಲವೂ ಬದುಕುಳಿಯಬೇಕು ಮತ್ತು ಜವಾಬುದಾರಿಯುತ ನಾಗರಿಕರಾಗಬೇಕು. ಮತ್ತೆ ಮತ್ತೆ ಮಕ್ಕಳನ್ನು ಹೆರುವ ಒತ್ತಡದಿಂದ ಮಹಿಳೆಯರು ಮುಕ್ತರಾಗಬೇಕು. ಅಪ್ರಾಪ್ತ ವಯಸ್ಸಿಗೆ ಮರಣ ಹೊಂದುವ ಪ್ರಕರಣಗಳು ಕಡಿಮೆಯಾಗಬೇಕು.
ಮೇಲೆ ತಿಳಿಸಿದ ಎಲ್ಲ ವಿಷಯಗಳಲ್ಲಿ ಉತ್ತರ ಕರ್ನಾಟಕದ ಸ್ಥಿತಿಯು ದಕ್ಷಿಣ ಕರ್ನಾಟಕದ ಸ್ಥಿತಿಗಿಂತ ಕೆಳಮಟ್ಟದಲ್ಲಿದೆ. ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ತೀವ್ರ ಆರೋಗ್ಯ ದುಸ್ಥಿತಿಯಿಂದ ನರಳುತ್ತಿವೆ. ಆಯ್ದಸೂಚಿಗಳನ್ನು ಬಳಸಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಕರ್ನಾಟಕವು ಅನುಭವಿಸುತ್ತಿರುವ ಪ್ರಾದೇಶಿಕ ಅಸಮಾನತೆಯ ಸ್ವರೂಪವನ್ನು ಇಲ್ಲಿ ನೀಡಲಾಗಿದೆ.

ಒಟ್ಟು ಸಂತಾನೋತ್ಪತ್ತಿ ಪ್ರಮಾಣ 2001
ಮಹಿಳೆಯೊಬ್ಬಳು ತನ್ನ ಜೀವಿತಾವಧಿಯಲ್ಲಿ ಎಷ್ಟು ಮಕ್ಕಳನ್ನು ಹೆರುತ್ತಾಳೆ ಎಂಬುದನ್ನು ಒಟ್ಟು ಸಂತಾನೋತ್ಪತ್ತಿ ಪ್ರಮಾಣವು ಸೂಚಿಸುತ್ತದೆ. ಕರ್ನಾಟಕದ ವಿವಿಧ ವಿಭಾಗಗಳ-2001ರಲ್ಲಿನ ಸಂತಾನೋತ್ಪತ್ತಿ ಪ್ರಮಾಣವನ್ನು ಕೆಳಗಿನ ಚಿತ್ರದಲ್ಲಿ ತೋರಿಸಿದೆ.

ಮೂಲ : ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಫೆಬ್ರವರಿ 16, 2002 ಪು.669(ಬೇಸ್ಡ್ ಆನ್ ಸೆನ್ಸಸ್ ಆಫ್ ಇಂಡಿಯಾ, 2001).

ಸಂತಾನೋತ್ಪತ್ತಿ ಪ್ರಮಾಣವು ರಾಜ್ಯದಲ್ಲಿನ ಗುಲಬರ್ಗಾ ವಿಭಾಗದ ಜಿಲ್ಲೆಗಳಲ್ಲಿ ಅತ್ಯಧಿಕ 3ರ ಮಟ್ಟವನ್ನು ಮೀರಿದೆ. ಈ ವಿಭಾಗದ ಜಿಲ್ಲೆಗಳನ್ನು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ 3ರಿಂದ 4 ಮಕ್ಕಳಿಗೆ ಜನ್ಮ ನೀಡಬೇಕಾಗುತ್ತದೆ. ಆದರೆ ದ.ಕ.ಪ್ರ.ದ ಜಿಲ್ಲೆಗಳಲ್ಲಿ ಅದರ ಪ್ರಮಾಣವು ಕಡಿಮೆಯಿದೆ.
ಜನಸಂಖ್ಯೆಯ ಬೆಳವಣಿಗೆಯ ಒತ್ತಡವನ್ನು ತೋರಿಸುವ ಮತ್ತೊಂದು ಸೂಚಿಯೆಂದರೆ ಜನಸಂಖ್ಯೆಯಲ್ಲಿನ 0-6 ವಯೋಮಾನದ ಮಕ್ಕಳ ಪ್ರಮಾಣವಾಗಿದೆ. ಕೋಷ್ಟಕ 15ರಲ್ಲಿ ವಿಭಾಗವಾರು ಜನಸಂಖ್ಯೆಯಲ್ಲಿ ಎಳೆಯ ಮಕ್ಕಳ ಪ್ರಮಾಣವು ಎಷ್ಟಿದೆ ಎಂಬುದನ್ನು ತೋರಿಸಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991, ಸೀರಿಸ್ 11, ಕರ್ನಾಟಕ,ಪು.86-93, ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ,ಪು.84-88.

ಈ ಕೋಷ್ಟಕವು ತೋರಿಸುತ್ತಿರುವಂತೆ 1991 ರಿಂದ 2001ರ ಅವಧಿಯಲ್ಲಿ ರಾಜ್ಯದ ಎಲ್ಲ ವಿಭಾಗಗಳಲ್ಲೂ ಎಳೆಯ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಎರಡೂ ಕಾಲಘಟ್ಟಗಳಲ್ಲಿ ಎಳೆಯ ಮಕ್ಕಳ ಪ್ರಮಾಣವು ಗುಲಬರ್ಗಾ ವಿಭಾಗದಲ್ಲಿ ಅಧಿಕವಿದೆ. ಕುತೂಹಲದ ಸಂಗತಿಯೆಂದರೆ 2001ರಲ್ಲಿ ಎಳೆಯ ಮಕ್ಕಳ ಸಂಖ್ಯೆಯು ದ.ಕ.ಪ್ರ. ಮತ್ತು ಉ.ಕ.ಪ್ರ.ಗಳ ನಡುವೆ ಸರಿಸುಮಾರು ಸಮನಾಗಿ ಬಿಟ್ಟಿದೆ. ಜನಸಂಖ್ಯೆಯಲ್ಲಿ ಸುಮಾರು ಶೇ.42 ಪಾಲು ಪಡೆದಿರುವ ಉ.ಕ.ಪ್ರ.ವು ಎಳೆಯ ಮಕ್ಕಳಲ್ಲಿ ಶೇ. 49 ಪಾಲು ಪಡೆದಿದೆ. ಆದರೆ ಜನಸಂಖ್ಯೆಯಲ್ಲಿ ಶೇ.58 ಪಾಲು ಪಡೆದಿರುವ ದ.ಕ.ಪ್ರ.ವು ಮಾತ್ರ ಎಳೆಯ ಮಕ್ಕಳಲ್ಲಿ ಕೇವಲ ಶೇ. 51 ಪಾಲು ಪಡೆದಿದೆ. ಇದರಿಂದಾಗಿ ಜನಸಂಖ್ಯೆಯ ಬೆಳವಣಿಗೆಗೆ ಒತ್ತಡವು ರಾಜ್ಯದ ಯಾವ ಪ್ರದೇಶದಲ್ಲಿ ಮತ್ತು ಯಾವ ವಿಭಾಗದಲ್ಲಿ ಅಧಿಕವೆಂಬುದನ್ನು ತಿಳಿದುಕೊಳ್ಳಬಹುದಾಗಿದೆ.
ಆರೋಗ್ಯದ ಬಹುಮುಖ್ಯ ಸೂಚಿಯೆಂದರೆ ಜನರ ಜೀವನಾಯುಷ್ಯ ಹಾಗೂ ಶಿಶುಮರಣ ಪ್ರಮಾಣ. ಕರ್ನಾಟಕದಲ್ಲಿ 1991ರಲ್ಲಿ ವಿವಿಧ ಜಿಲ್ಲೆಗಳಲ್ಲಿ ಇದ್ದ ಜೀವನಾಯುಷ್ಯ ಹಾಗೂ ಐಎಮ್ಆರ್ ಪ್ರಮಾಣವನ್ನು ಕೋಷ್ಟಕ-16ರಲ್ಲಿ ತೋರಿಸಿದೆ.

ಮೂಲ : ಕರ್ನಾಟಕ ಸರ್ಕಾರ 1999, ಪು.26-27

ಜೀವನಾಯುಷ್ಯಕ್ಕಿಂತ ಶಿಶುಮರಣ ಪ್ರಮಾಣದಲ್ಲಿ ಪ್ರಾದೇಶಿಕ ಅಸಮಾನತೆ ಎದ್ದುಕಾಣುತ್ತದೆ. ದ.ಕ.ಪ್ರ.ದ 12 ಜಿಲ್ಲೆಗಳ ಪೈಕಿ ಶಿಶುಮರಣ ಪ್ರಮಾಣವು ಕೇವಲ 5 ಜಿಲ್ಲೆಗಳಲ್ಲಿ ಮಾತ್ರ 55ಕ್ಕಿಂತ ಅಧಿಕವಿದೆ. ಆದರೆ ಉ.ಕ.ಪ್ರ.ದ 8 ಜಿಲ್ಲೆಗಳ ಪೈಕಿ 6ರಲ್ಲಿ ಅದು 55ಕ್ಕಿಂತ ಅಧಿಕವಿದೆ. ಅತ್ಯಧಿಕ 79 ಬಳ್ಳಾರಿ ಜಿಲ್ಲೆಯಲ್ಲಿದೆ. ಅದು 70ಕ್ಕಿಂತ ಅಧಿಕವಿರುವ ಮೂರು ಜಿಲ್ಲೆಗಳು ಉ.ಕ.ಪ್ರ.ದಲ್ಲಿವೆ. ಕರ್ನಾಟಕದಲ್ಲಿ ಶಿಶುಮರಣ ಪ್ರಮಾಣವು 70ಕ್ಕಿಂತ ಅಧಿಕವಿರುವ ಜಿಲ್ಲೆಗಳೆಂದರೆ ಬಳ್ಳಾರಿ(79), ಬಿಜಾಪುರ(75) ಮತ್ತು ಧಾರವಾಡ(74).
ಅಧಿಕ ಸಂತಾನೋತ್ಪತ್ತಿ ಪ್ರಮಾಣ, ಅಧಿಕ ಪ್ರಮಾಣದ ಎಳೆಮಕ್ಕಳು ಹಾಗೂ ಅಧಿಕ ಪ್ರಮಾಣದ ಶಿಶುಮರಣ ಪ್ರಮಾಣಗಳಿಂದ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ಜರ್ಜರಿತವಾಗಿವೆ. ಪ್ರಾದೇಶಿಕ ಅಸಮಾನತೆ ಬಗ್ಗೆ ಮಾತನಾಡುವವರು ಇಂತಹ ಸಂಗತಿಗಳ ಬಗ್ಗೆ ಮಾತನಾಡುವುದಿಲ್ಲ. ಈ ಸಂಗತಿಗಳು ಪ್ರಾದೇಶಿಕ ಅಸಮತೋಲನದ ಪ್ರಮಾಣವನ್ನು ತೋರಿಸುತ್ತವೆ ಮತ್ತು ಯಾಕೆ ಅಸಮಾನತೆ ಉಂಟಾಗಿದೆ ಎಂಬುದರ ಮೇಲೂ ಬೆಳಕು ಚೆಲ್ಲುತ್ತವೆ. ಈ ಬಗ್ಗೆ ಅಭಿಯಾನದೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.

ಭಾಗ 7

ಅಭಿವೃದ್ದಿ-ಪ್ರಾದೇಶಿಕ ಅಸಮಾನತೆ -ಲಿಂಗಸಂಬಂಧಗಳು

ಕೋಷ್ಟಕ-17ರಲ್ಲಿ ದುಡಿಮೆಯ ಲಿಂಗಸಂಬಂಧಿ ಸ್ವರೂಪವನ್ನು ಹಿಡಿದಿಡಲು ಪ್ರಯತ್ನಿಸಲಾಗಿದೆ. ಇಲ್ಲಿ ಹೈದರಾಬಾದ್ ಕರ್ನಾಟಕ (ಗುಲಬರ್ಗಾ ವಿಭಾಗ)ದ ಐದು ಜಿಲ್ಲೆಗಳಾದ ಬಳ್ಳಾರಿ, ಬೀದರ್, ಗುಲಬರ್ಗಾ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳು ಹಾಗೂ 22 ಜಿಲ್ಲೆಗಳನ್ನು ಒಳಗೊಂಡ ಉಳಿದ ಕರ್ನಾಟಕಗಳ ನಡುವಣ ಸ್ಥಿತಿಗತಿಯನ್ನು ತುಲನಾತ್ಮಕವಾಗಿ ನೀಡಲಾಗಿದೆ.
ಈ ಕೋಷ್ಟಕ-17ರಲ್ಲಿ ಸ್ಪಷ್ಟವಾಗಿ ತೋರಿಸಿರುವಂತೆ ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣವು ಉಳಿದ ಕರ್ನಾಟಕ ಭಾಗದಲ್ಲಿರುವುದಕ್ಕಿಂತ ಅಧಿಕವಿದೆ. ದುಡಿಮೆ ಸಹಭಾಗಿತ್ವ ಪ್ರಮಾಣವೂ ಕೂಡ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಧಿಕವಿದೆ.
ಇದನ್ನು ಕೇವಲ ದುಡಿಮೆಯ ‘ಮಹಿಳೀಕರಣ’ವೆಂದು ಹೇಳಿ ಬಿಡುವುದು ಸರಿಯಲ್ಲ. ಏಕೆಂದರೆ ಹೈದರಾಬಾದ್ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಒಟ್ಟು ದುಡಿಮೆಗಾರರಲ್ಲಿ ಮಹಿಳೆಯರ ಪ್ರಮಾಣವೇನೋ ಅಧಿಕವಿದೆ. ಆದರೆ ಈ ಪ್ರದೇಶದಲ್ಲಿ ಮಹಿಳೆಯರು ಅತ್ಯಧಿಕವಾಗಿ ಕೃಷಿಯಲ್ಲಿ ದುಡಿಯುತ್ತಿದ್ದಾರೆ. ಅವರು ಅಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಅತ್ಯಂತ ಮುಂದುವರಿದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲೂ ಮಹಿಳೆಯರ ದುಡಿಮೆ ಸಹಭಾಗಿತ್ವ ಪ್ರಮಾಣವು ಅಧಿಕವಾಗಿದೆ. ಆದರೆ ಈ ಜಿಲ್ಲೆಗಳಲ್ಲಿ ಮಹಿಳೆಯರು ಕೃಷಿಯೇತರ ಕ್ಷೇತ್ರಗಳಲ್ಲಿ ಅಧಿಕವಾಗಿದ್ದಾರೆ. ಈ ಭಿನ್ನತೆಯನ್ನು ಅರ್ಥ ಮಾಡಿಕೊಳ್ಳದಿದ್ದರೆ ನಮಗೆ ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿನ ಮಹಿಳೆಯರು ಎದುರಿಸುತ್ತಿರುವ ಒತ್ತಡದ ಕಲ್ಪನೆ ಬರುವುದಿಲ್ಲ. ದುಡಿಮೆಯ ಸಹಭಾಗಿತ್ವ ಪ್ರಮಾಣವು ಅಧಿಕವಾಗಿ ಬಿಟ್ಟರೆ ಸಾಕಾಗುವುದಿಲ್ಲ. ಮಹಿಳೆಯರು ಯಾವ ಬಗೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂಬುದು ಮುಖ್ಯ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991, ಸೀರಿಸ್ 11, ಕರ್ನಾಟಕ, ಪು.88-97, ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ,ಪು.323-332

ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಮಹಿಳೆಯರು ತೀವ್ರ ರೀತಿಯ ಆರ್ಥಿಕ ಮತ್ತು ಸಾಮಾಜಿಕ ದುಸ್ಥಿತಿ ಅನುಭವಿಸುತ್ತಿದ್ದಾರೆ.
1. ಈ ಪ್ರದೇಶದ ಜಿಲ್ಲೆಗಳಲ್ಲಿ ಮಹಿಳೆಯರ ಸಾಕ್ಷರತೆಯು ಅತ್ಯಂತ ಕನಿಷ್ಟತಮವಾಗಿದೆ.
2. ಈ ಪ್ರದೇಶದ ಜಿಲ್ಲೆಗಳಲ್ಲಿ ಪ್ರತಿಯೊಬ್ಬ ಮಹಿಳೆಯೂ ತಮ್ಮ ಜೀವಿತಾವಧಿಯಲ್ಲಿ ಅಧಿಕ ಹೆಣ್ಣುಮಕ್ಕಳಿಗೆ ಜನ್ಮ ನೀಡಬೇಕಾಗುತ್ತದೆ.
3. ಒಟ್ಟು ದುಡಿಮೆಗಾರರಲ್ಲಿ ದಿನಗೂಲಿಗಳಾಗಿ ದುಡಿಯುವ ಮಹಿಳೆಯರ ಪ್ರಮಾಣವು ಇಲ್ಲಿನ ಜಿಲ್ಲೆಗಳಲ್ಲಿ ಸಾಪೇಕ್ಷವಾಗಿ ಅಧಿಕವಿದೆ.
ಈ ಪ್ರದೇಶದ ಜಿಲ್ಲೆಗಳಲ್ಲಿನ ಮಹಿಳೆಯರ ಸಾಕ್ಷರತೆಯನ್ನು ಗಮನಿಸಿದಾಗ ಅವರು ಅನುಭವಿಸುತ್ತಿರುವ ದುಸ್ಥಿತಿಯ ಕಲ್ಪನೆ ಮೂಡುತ್ತದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991, ಸೀರಿಸ್ 11, ಕರ್ನಾಟಕ,ಪು.40-43, ಸೆನ್ಸಸ್ ಆಫ್ ಇಂಡಿಯಾ 2001, ಸೀರಿಸ್ 30, ಕರ್ನಾಟಕ,ಪು.229

ಕರ್ನಾಟಕದಲ್ಲಿ ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆ ಬಗ್ಗೆ ಮಾತನಾಡುವಾಗ ಅದರ ಲಿಂಗಸಂಬಂಧಿ ಸ್ವರೂಪವನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಲಿಂಗಸಮಾನತೆಯೆಂಬುದು ಅಭಿವೃದ್ದಿಯ ಒಂದು ಗುರಿಯೆಂಬುದಾದರೆ ಹೈದರಾಬಾದ್-ಕರ್ನಾಟಕ ಪ್ರದೇಶದ ಮಹಿಳೆಯರ ಅಭಿವೃದ್ದಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಅಭಿವೃದ್ದಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡುವುದರಿಂದ ಮಹಿಳೆಯರಿಗೆ ಮಾತ್ರ ಅನುಕೂಲ ಒದಗುತ್ತದೆ ಎಂಬ ತಪ್ಪು ಕಲ್ಪನೆ ಯಿದೆ. ಇದು ಸರಿಯಲ್ಲ. ಮಹಿಳೆಯರ ಅಭಿವೃದ್ದಿಯಿಂದ ಇಡೀ ಸಮಾಜದ ಹಾಗೂ ಪುರುಷರ ಅಭಿವೃದ್ದಿಯೂ ಸಾಧ್ಯ.

ಶಾಲಾ ದಾಖಲಾತಿಯ ಲಿಂಗಸ್ವರೂಪ : ಪ್ರಾದೇಶಿಕ ಆಯಾಮಗಳು
ಲಿಂಗ ಅಸಮಾನತೆಗೂ ಮತ್ತು ಪ್ರಾದೇಶಿಕ ಅಸಮಾನತೆಗೂ ನಡುವೆ ಸಂಬಂಧವಿರುವಂತೆ ಕಾಣುತ್ತದೆ. ಯಾವ ಪ್ರದೇಶವು ಆರ್ಥಿಕವಾಗಿ ಹಿಂದುಳಿದಿರುತ್ತದೋ ಮತ್ತು ಜನಸಂಖ್ಯೆಯ ಬೆಳವಣಿಗೆ ತೀವ್ರವಾಗಿರುತ್ತದೋ ಅಲ್ಲಿ ಲಿಂಗ ಸಂಬಂಧಗಳು ಅಸಮಾನತೆಯಿಂದ ಕೂಡಿರುತ್ತವೆ. ಇಂತಹ ಒಂದು ಪ್ರಮೇಯಕ್ಕೆ ನಿದರ್ಶನವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

 

 

ಮೂಲ : ಕರ್ನಾಟಕ ಸರ್ಕಾರ 2005, ಪು. 66-69

ಕೋಷ್ಟಕದಲ್ಲಿ 1 ರಿಂದ 7 ಮತ್ತು 8 ರಿಂದ 10ನೆಯ ತರಗತಿಗಳಲ್ಲಿ ಹಾಗೂ ಒಟ್ಟು 1 ರಿಂದ 10ನೆಯ ತರಗತಿಗಳಲ್ಲಿ ಪುರುಷರ ದಾಖಲಾತಿಗೆ ಸಾಪೇಕ್ಷವಾಗಿ ಹೆಣ್ಣುಮಕ್ಕಳ ಸಾಕ್ಷರತೆ ಎಷ್ಟಿದೆ ಎಂಬುದನ್ನು ಗಣನೆ ಮಾಡಿ ತೋರಿಸಲಾಗಿದೆ.
ಹೆಣ್ಣು ಮಕ್ಕಳ ಶಾಲಾ ದಾಖಲಾತಿಯು ದ.ಕ.ಪ್ರ.ದಲ್ಲಿ ಉತ್ತಮವಾಗಿದೆ. ಅಲ್ಲಿ ಅದು ಶೇ. 90ರ ಗಡಿಯನ್ನು ದಾಟಿದೆ. ಆದರೆ ಹೆಣ್ಣುಮಕ್ಕಳ ದಾಖಲಾತಿ ಉ.ಕ.ಪ್ರ.ದಲ್ಲಿ ಕೆಳಮಟ್ಟದಲ್ಲಿದೆ. ಅಲ್ಲಿ ಅದು 1 ರಿಂದ 7ನೆಯ ತರಗತಿವರೆಗೆ ಶೇ. 91.44ರಷ್ಟಿದ್ದರೆ 8 ರಿಂದ 10ನೆಯ ತರಗತಿವರೆಗೆ ಶೇ. 77.46 ರಷ್ಟಿದೆ. ಅತ್ಯಂತ ಕನಿಷ್ಟ ಮಟ್ಟದ ಸೂಚಿಯನ್ನು ಗುಲಬರ್ಗಾ ವಿಭಾಗದಲ್ಲಿ ಕಾಣಬಹುದು. ಅಲ್ಲಿ ದಾಖಲಾತಿ ಪ್ರಮಾಣವು ಶೇ. 90ಕ್ಕಿಂತ ಕಡಿಮೆಯಿದೆ. ಪ್ರೌಢ ಶಾಲೆಗೆ ಸಂಬಂಧಿಸಿದಂತೆ ಲಿಂಗಸಮಾನತಾ ಸೂಚಿಯು ಶೇ. 75.23ರಷ್ಟಿದೆ. ಪ್ರಾದೇಶಿಕ ಅಸಮಾನತೆಗೆ ಲಿಂಗಸಂಬಂಧಿ ಆಯಾಮ ವಿರುವುದನ್ನು ಇಲ್ಲಿ ತೋರಿಸಲಾಗಿದೆ.

ಪ್ರಾದೇಶಿಕ ಅಸಮಾನತೆಯ ಪರಿಶಿಷ್ಟವಾದಿ ನೆಲೆಗಳು
ಕೋಷ್ಟಕ-20ರಲ್ಲಿ ವಿಭಾಗವಾರು ಪರಿಶಿಷ್ಟ (ಪ.ಜಾ.+ಪ.ಪಂ.) ಜನಸಂಖ್ಯೆಯ ಪ್ರಮಾಣವನ್ನು ತೋರಿಸಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 1991 ಸೀರಿಸ್ 11, ಪು.52-63ೊ&ೊ324-335, ಸೆನ್ಸಸ್ ಆಫ್ ಇಂಡಿಯಾ 2001, ಪು. 01-93

ಕರ್ನಾಟಕದಲ್ಲಿ ಪರಿಶಿಷ್ಟರ ಪ್ರಮಾಣವು 1991 ರಿಂದ 2001ರ ಅವಧಿಯಲ್ಲಿ ಶೇ.20.64 ರಿಂದ ಶೇ. 22.56ಕ್ಕೆ ಏರಿಕೆಯಾಗಿದೆ. ಅದೇ ರೀತಿ ಎಲ್ಲ ವಿಭಾಗಗಳಲ್ಲೂ ಅವರ ಪ್ರಮಾಣದಲ್ಲಿ ಏರಿಕೆಯಾಗಿದೆ. ಪರಿಶಿಷ್ಟರ ಪ್ರಮಾಣ ಅತ್ಯಧಿಕ ಗುಲಬರ್ಗಾ ವಿಭಾಗದಲ್ಲಿ ಶೇ. 31.57ರಷ್ಟಿದ್ದರೆ ಅತ್ಯಂತ ಕನಿಷ್ಟ ಬೆಳಗಾವಿ ವಿಭಾಗದಲ್ಲಿ ಶೇ. 17.03ರಷ್ಟಿದೆ. ಈ ಭಾಗದಲ್ಲಿ ಎರಡು ವಿಶಿಷ್ಟ ಸಂಗತಿಗಳ ಮೂಲಕ ಪ್ರಾದೇಶಿಕ ಸ್ವರೂಪದ ಪರಿಶಿಷ್ಟ ನೆಲೆಗಳನ್ನು ಗುರುತಿಸಲು ಪ್ರಯತ್ನಿಸಲಾಗಿದೆ.

i. ಸಾಕ್ಷರತೆಯ ಸಾಮಾಜಿಕ ಸ್ವರೂಪ
ಅಭಿವೃದ್ದಿಯ ಅಂತರ್ಗತ ಭಾಗವಾಗಿರುವ ಹಾಗೂ ಅದರ ಸೂಚಿಯಾಗಿರುವ ಸಾಕ್ಷರತೆಯು ರಾಜ್ಯದ ಎಲ್ಲ ಭಾಗಗಳಲ್ಲೂ ಸಮವಾಗಿಲ್ಲ ಮತ್ತು ರಾಜ್ಯದ ವಿವಿಧ ಸಾಮಾಜಿಕ ಗುಂಪುಗಳ ನಡುವೆಯೂ ಸಮಾನವಾಗಿಲ್ಲ. ಇವೆರಡೂ ನೆಲೆಗಳನ್ನು ಇಲ್ಲಿ ಗುರುತಿಸಲು ಪ್ರಯತ್ನಿಸಲಾಗಿದೆ.
ಕೋಷ್ಟಕ-21ರಲ್ಲಿ ಜಿಲ್ಲಾವಾರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಒಟ್ಟು ಜನಸಂಖ್ಯೆಗೆ ಸಂಬಂಧಿಸಿದ ಸಾಕ್ಷರತೆ ಪ್ರಮಾಣವನ್ನು ನೀಡಿದೆ.

ಮೂಲ : ಸೆನ್ಸಸ್ ಆಫ್ ಇಂಡಿಯಾ 2001, 22 ಅಭಿವೃದ್ದಿ ಅಧ್ಯಯನ ಸಂ.6, ದಾಖಲು ಪು. 108-128.

ರಾಜ್ಯಮಟ್ಟದಲ್ಲಿ ಪ.ಜಾ. ಜನರ ಸಾಕ್ಷರತೆಯು ಒಟ್ಟು ಸಾಕ್ಷರತೆಯ ಶೇ. 78.9ರಷ್ಟಿದ್ದರೆ ಪ.ಪಂ. ಜನರ ಸಾಕ್ಷರತೆಯು ಒಟ್ಟು ಸಾಕ್ಷರತೆಯ ಶೇ. 72.05ರಷ್ಟಿದೆ. ಕುತೂಹಲದ ಸಂಗತಿಯೆಂದರೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಸರಿಸುಮಾರು ಪ.ಜಾ. ಹಾಗೂ ಪ.ಪಂ. ಜನರ ಸಾಕ್ಷರತೆಯು ಒಟ್ಟು ಸಾಕ್ಷರತೆಯ ಶೇ. 70ರಿಂದ ಶೇ. 80ರಷ್ಟಿದೆ. ಇದೊಂದು ತುಂಬಾ ಸ್ವಾಗತಾರ್ಹವಾದ ಸಂಗತಿಯಾಗಿದೆ.
ಆದರೂ ಸಾಕ್ಷರತೆಗೆ ಸಂಬಂಧಿಸಿದ ಸಾಮಾಜಿಕ ತಾರತಮ್ಯವನ್ನು ನಿವಾರಿಸುವ ಕಡೆಗೆ ಗಮನ ನೀಡಬೇಕಾದ ಅಗತ್ಯವಿದೆ. ಒಟ್ಟು ಸಾಕ್ಷರತೆಯಲ್ಲಿ ಕಂಡುಬಂದಂತೆ ಪ.ಜಾ. ಮತ್ತು ಪ.ಪಂ.ಗಳ ಜನರ ಸಾಕ್ಷರತೆಯು ಅತ್ಯಂತ ಕನಿಷ್ಟ ಹೈದರಾಬಾದ್-ಕರ್ನಾಟಕ ಪ್ರದೇಶಗಳ ಜಿಲ್ಲೆಗಳಲ್ಲಿದೆ. ಇಂದಿಗೂ (2001) ಸಾಕ್ಷರತೆ ಪ್ರಮಾಣ ಶೇ. 29 (ಪ.ಪಂ. ರಾಯಚೂರು ಜಿಲ್ಲೆ)ರಷ್ಟಿದೆ ಎಂದರೆ ಅದು ತಲೆತಗ್ಗಿಸಬೇಕಾದ ಸಂಗತಿ. ಇದನ್ನು ಸರಿಪಡಿಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಸರ್ಕಾರವು ಪ್ರಜ್ಞಾಪೂರ್ವಕವಾಗಿ ಇಂತಹ ಅಸಮಾನತೆಯ ನಿವಾರಣೆಗೆ ಪ್ರಯತ್ನಿಸದಿದ್ದರೆ ಸಾಮಾಜಿಕ ತಾರತಮ್ಯಗಳು ಕೊನೆಗೊಳ್ಳುವುದಿಲ್ಲ. ಈ ಬಗೆಯ ಅಸಮಾನತೆಗಳು ತಮ್ಮಷ್ಟಕ್ಕೆ ತಾವೆ ಬಗೆಹರಿಯುವುದಿಲ್ಲ. ಇಲ್ಲಿ ಸರ್ಕಾರದ ಪಾತ್ರ ತುಂಬಾ ಮಹತ್ವದ್ದಾಗಿದೆ. ರಾಜ್ಯದ ಹಿಂದುಳಿದ ಪ್ರದೇಶದಲ್ಲಿ ದಲಿತರ ಸಾಕ್ಷರತೆಯನ್ನು ಉತ್ತಮಪಡಿಸಲು ವಿಶೇಷ ಪ್ರಯತ್ನ ನಡೆಸುವ ಅಗತ್ಯವಿದೆ.

ಪ್ರಾಥಮಿಕ ಶಿಕ್ಷಣ(1-10)ದಲ್ಲಿ ಪರಿಶಿಷ್ಟರ ದಾಖಲಾತಿ : ಪ್ರಾದೇಶಿಕ ಸ್ವರೂಪ
ಪ್ರಸ್ತುತ ಅಧ್ಯಯನಕ್ಕಾಗಿ ಕೆಳಗಿನ ಕೋಷ್ಟಕ 22ನ್ನು ರಚಿಸಲಾಗಿದೆ. ಇದರಲ್ಲಿ ಅನೇಕ ಕುತೂಹಲಕಾರಿ ಸಂಗತಿಗಳನ್ನು ಗುರುತಿಸಬಹುದಾಗಿದೆ. ಎರಡು ಮುಖ್ಯ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮೊದಲನೆಯದಾಗಿ 1ರಿಂದ 10ನೆಯ ತರಗತಿ ದಾಖಲಾತಿಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆ ಎಂಬುದನ್ನು ಇಲ್ಲಿ ಹಿಡಿದಿಡಲಾಗಿದೆ. ಎರಡನೆಯದಾಗಿ ಪರಿಶಿಷ್ಟರ ದಾಖಲಾತಿಯ ಪ್ರಾದೇಶಿಕ ಸ್ವರೂಪವನ್ನು ಚರ್ಚಿಸಲಾಗಿದೆ.
ಜನಸಂಖ್ಯೆಯಲ್ಲಿ ಪರಿಶಿಷ್ಟರ ಪ್ರಮಾಣ ಎಷ್ಟಿದೆಯೋ ಅದಕ್ಕಿಂತ ಅಧಿಕ ಪಾಲನ್ನು 1 ರಿಂದ 7ನೆಯ ತರಗತಿಗಳ ದಾಖಲಾತಿಯಲ್ಲಿ ಪರಿಶಿಷ್ಟರು ಪಡೆದುಕೊಂಡಿದ್ದಾರೆ. ಇದು ರಾಜ್ಯದ ಎಲ್ಲ ನಾಲ್ಕು ವಿಭಾಗಗಳಿಗೂ ಅನ್ವಯಿಸುವ ಸಂಗತಿಯಾಗಿದೆ. ಇದೊಂದು ಸ್ವಾಗತಾರ್ಹ ಸಂಗತಿಯಾಗಿದೆ. ಈ ತರಗತಿಗಳ ಒಟ್ಟು ಪರಿಶಿಷ್ಟರ ದಾಖಲಾತಿಯಲ್ಲಿ ದ.ಕ.ಪ್ರ.ದ ಪಾಲು ಶೇ. 51.52 ಮತ್ತು ಉ.ಕ.ಪ್ರ.ದ ಪಾಲು ಶೇ. 48.48.
ಆದರೆ 1ರಿಂದ 7ನೆಯ ತರಗತಿ ಬಿಟ್ಟು 8ರಿಂದ 10ನೆಯ ತರಗತಿಗಳಲ್ಲಿನ ದಾಖಲಾತಿಯನ್ನು ಗಮನಿಸಿದರೆ ನಮಗೆ ಭಿನ್ನವಾದ ಚಿತ್ರ ಕಂಡುಬರುತ್ತದೆ. ಪ್ರೌಢ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು ಪರಿಶಿಷ್ಟ ಮಕ್ಕಳ ಸಂಖ್ಯೆ 4.5 ಲಕ್ಷ. ಇವರಲ್ಲಿ ದ.ಕ.ಪ್ರ.ದ ಪಾಲು ಶೇ. 65.33 ಮತ್ತು ಉ.ಕ.ಪ್ರ.ದ ಪಾಲು ಕೇವಲ ಶೇ. 34.67. ಇದು ತುಂಬಾ ಕುತೂಹಲಕಾರಿ ಸಂಗತಿಯಾಗಿದೆ. ಪ್ರಾಥಮಿಕ ಹಂತದ 1ರಿಂದ 7ನೆಯ ತರಗತಿಗಳನ್ನು ಗಣನೆ ಮಾಡಿದರೆ ಉ.ಕ.ಪ್ರ.ದ ಪಾಲು ಶೇ. 48.48. ಆದರೆ ಪ್ರೌಢ ಶಾಲೆ ಹಂತದ 8ರಿಂದ 10ನೆಯ ತರಗತಿಗಳನ್ನು ಗಣನೆ ಮಾಡಿದರೆ ಪರಿಶಿಷ್ಟರಲ್ಲಿ ಉ.ಕ.ಪ್ರ.ದ ಪಾಲು ಕೇವಲ ಶೇ. 34.67.
ಈ ಕುರಿತಂತೆ ಹೈದರಾಬಾದ್-ಕರ್ನಾಟಕದ ಜಿಲ್ಲೆಗಳಲ್ಲಿ ಆತಂಕಕಾರಿ ಪರಿಸ್ಥಿತಿ ಇರುವುದನ್ನು ಗಮನಿಸಬಹುದಾಗಿದೆ. ರಾಜ್ಯದ ಒಟ್ಟು ಪರಿಶಿಷ್ಟ ಜನಸಂಖ್ಯೆಯಲ್ಲಿ ಹೈದರಾಬಾದ್-ಕರ್ನಾಟಕದ ಪಾಲು ಶೇ. 25.00. ಆದರೆ ಪ್ರೌಢ ಶಾಲೆಯಲ್ಲಿ ಕಲಿಯುತ್ತಿರುವ ಒಟ್ಟು ಪರಿಶಿಷ್ಟ ಮಕ್ಕಳಲ್ಲಿ ಇದರ ಪಾಲು ಕೇವಲ ಶೇ. 16. ಕೋಷ್ಟಕದಲ್ಲಿ ಇದನ್ನು ತೋರಿಸಲಾಗಿದೆ.
ಶಿಕ್ಷಣದ ಕೆಳಹಂತಗಳಲ್ಲಿ ಪರಿಶಿಷ್ಟರ ಪ್ರಾತಿನಿಧ್ಯವು ಅಧಿಕವಾಗಿದೆ. ಇದನ್ನು ‘ಶಿಕ್ಷಣದ ದಲಿತೀಕರಣ’ವೆಂದು ಕರೆಯಬಹುದು. ಆದರೆ ಉನ್ನತ ಹಂತಕ್ಕೆ ಸಾಗಿದಂತೆ ಅವರ ಪ್ರಾತಿನಿಧ್ಯವೂ ಕುಸಿಯುವುದನ್ನು ಕಾಣಬಹುದು. ಇದನ್ನು ‘ದಲಿತೀಕರಣದ ಅವರೋಹಣ ಗತಿ’ಯೆಂದು ಕರೆಯಬಹುದು. ಇವೆರಡೂ ಪ್ರಕ್ರಿಯೆಗಳು ಕರ್ನಾಟಕದಲ್ಲಿ ನಡೆದಿವೆ. ಹೈದರಾಬಾದ್-ಕರ್ನಾಟಕದಲ್ಲಿ ಇಂತಹ ಪ್ರಕ್ರಿಯೆ ತೀವ್ರವಾಗಿರುವುದನ್ನು ಕೋಷ್ಟಕ 23ರಲ್ಲಿ ತೋರಿಸಲಾಗಿದೆ. ರಾಜ್ಯದ ಪರಿಶಿಷ್ಟರಲ್ಲಿ ಶೇ. 25 ಪಾಲು ಪಡೆದಿರುವ ಹೈದರಾಬಾದ್-ಕರ್ನಾಟಕ ಪ್ರದೇಶವು ಪ್ರೌಢ ಶಾಲೆ ದಾಖಲಾತಿಯಲ್ಲಿ ಕೇವಲ ಶೇ. 16 ಪಾಲು ಪಡೆದಿದೆ.

ಅಧ್ಯಯನದ ಸಾರಸಂಗ್ರಹ
ಪ್ರಸ್ತುತ ಅಧ್ಯಯನದಲ್ಲಿ ಕರ್ನಾಟಕದಲ್ಲಿನ ಅಭಿವೃದ್ದಿಗೆ ಸಂಬಂಧಿಸಿದ ಪ್ರಾದೇಶಿಕ ಅಸಮಾನತೆಯ ವಿರಾಟ್ ಸ್ವರೂಪವನ್ನು ನೀಡಲು ಪ್ರಯತ್ನಿಸಲಾಗಿದೆ. ಇಲ್ಲಿ ಅನೇಕ ಚಲಗಳನ್ನು ಮತ್ತು ಸೂಚಿಗಳನ್ನು ಬಳಸಿಕೊಂಡು ಅಸಮಾನತೆಯ ಆಯಾಮಗಳನ್ನು ಪರಿಚಯಿಸಲಾಗಿದೆ. ಈ ಅಧ್ಯಯನಕ್ಕಾಗಿ ಕೆಲವು ಕುತೂಹಲಕಾರಿ ಸಂಗತಿಗಳನ್ನು ಬೆಳಕಿಗೆ ತರಲಾಗಿದೆ. ಆರೋಗ್ಯ, ಶಿಕ್ಷಣ ಮತ್ತು ವರಮಾನಗಳಿಗೆ ಸಂಬಂಧಿಸಿದ ಸೂಚಿಗಳ ಆಧಾರದ ಮೇಲೆ ಪ್ರಾದೇಶಿಕ ಅಸಮಾನತೆಯು ರಾಜ್ಯದ ಯಾವ ಭಾಗ-ವಿಭಾಗವನ್ನು ಹೆಚ್ಚು ಕಾಡುತ್ತಿದೆ ಎಂಬುದನ್ನು ಕುರಿತಂತೆ ಚರ್ಚಿಸಲಾಗಿದೆ. ಪ್ರಾದೇಶಿಕ ಅಸಮಾನತೆ ಕುರಿತ ಚರ್ಚೆಗಳಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಭೂಮಾಲೀಕತ್ವ ಹಾಗೂ ಕೃಷಿಕೂಲಿಕಾರರ ರಾಚನಿಕ ಮತ್ತು ಸಾಂಸ್ಥಿಕ ಸ್ವರೂಪವನ್ನು ಇಲ್ಲಿ ಚರ್ಚಿಸಲಾಗಿದೆ. ಪ್ರಾದೇಶಿಕ ಅಸಮಾನತೆಯ ಲಿಂಗಸಂಬಂಧಿ ಸ್ವರೂಪವನ್ನು ಹಾಗೂ ಪರಿಶಿಷ್ಟವಾದಿ ನೆಲೆಗಳನ್ನು ಇಲ್ಲಿ ಪರಿಶೋಧಿಸಲಾಗಿದೆ. ಪ್ರಾದೇಶಿಕ ಅಸಮಾನತೆಯೆಂಬುದು ಯಾವುದೋ ಒಂದು ಮುಖವುಳ್ಳ ಸಮಸ್ಯೆಯಲ್ಲ. ರಾಜ್ಯದ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ಹೇಗೆ ಚಾರಿತ್ರಿಕ ವಿಕಲತೆಗೆ ಒಳಗಾಗಿವೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಮೂಲ : ಕರ್ನಾಟಕ ಸರ್ಕಾರ 2005, ಪು.66-69 ಮತ್ತು ಪು.364

ಈ ಅಧ್ಯಯನದಲ್ಲಿ ಅನೇಕ ಬಗೆಯ ಅಂಕಿ-ಸಂಖ್ಯೆಗಳನ್ನು ಬಳಸಲಾಗಿದೆ. ಅಂಕಿ-ಸಂಖ್ಯೆಗಳು ತಮ್ಮಷ್ಟಕ್ಕೇ ತಾವೆ ಏನನ್ನು ಹೇಳುವುದಿಲ್ಲ. ಅವುಗಳ ಮೂಲದಲ್ಲಿ ಪ್ರಚ್ಛನ್ನವಾಗಿ ಅಡಗಿರುವ ಒಳಾರ್ಥವನ್ನು ಹಿಡಿದಿಡಬೇಕಾಗುತ್ತದೆ. ಅಂತಹ ಒಳಾರ್ಥ-ಇಂಗಿತಾರ್ಥಗಳನ್ನು ಇಲ್ಲಿ ಗುರುತಿಸಲಾಗಿದೆ. ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯನ್ನು ಕುರಿತಂತೆ ಅಭಿಜಾತ-ನವಅಭಿಜಾತ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿಕೊಂಡು ಬಂದ ‘ಸಮತೋಲನದ ಕಡೆಗೆ ಸಹಜವಾಗಿ ಸಾಗುವ ಆರ್ಥಿಕತೆಯ ಗುಣ’ವನ್ನು ಇಲ್ಲಿ ಟೀಕೆಗೆ ಗುರಿಪಡಿಸಲಾಗಿದೆ. ಗುನ್ನಾರ್ ಮಿರ್ಡಾಲ್, ರಾಜ್ಕೃಷ್ಣ ಮುಂತಾದವರು ಸೂಚಿಸಿರುವಂತೆ ಪ್ರಜ್ಞಾಪೂರ್ವಕವಾಗಿ ಪ್ರದೇಶ ನಿರ್ದಿಷ್ಟ ಕಾರ್ಯತಂತ್ರದ ಮೂಲಕ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗೆ ಸಂಬಂಧಿಸಿದ ಪ್ರತಿಷ್ಠಿತ ವರ್ಗದ ಒತ್ತಾಸೆಗಳನ್ನು-ಹಿತಾಸಕ್ತಿಗಳನ್ನು ಗುರುತಿಸುವ ಅಗತ್ಯವಿದೆ. ಜನಸಮೂಹವನ್ನು ಕೇಂದ್ರದಲ್ಲಿಟ್ಟುಕೊಂಡು ಪ್ರಾದೇಶಿಕ ಅಸಮಾನತೆ ಕುರಿತ ಸಂಗತಿಗಳನ್ನು ಚರ್ಚಿಸುವುದು ಹೆಚ್ಚು ಉಪಯುಕ್ತವೆಂಬುದನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ಜಮೀನುದಾರಿ ಪಾಳೆಯಗಾರಿಕೆ ಅಥವಾ ಊಳಿಗಮಾನ್ಯ ವ್ಯವಸ್ಥೆಯ ಕಪಿಮುಷ್ಟಿಯಿಂದ ಹೈದರಾಬಾದ್-ಕರ್ನಾಟಕ ಪ್ರದೇಶದ ಜಿಲ್ಲೆಗಳು ಇನ್ನೂ ಬಿಡುಗಡೆ ಪಡೆದುಕೊಂಡಿಲ್ಲವೆಂಬುದನ್ನು ಇಲ್ಲಿ ತೋರಿಸಲಾಗಿದೆ.
ಜನಸಂಖ್ಯೆಯ ಅತಿಯಾದ ಬೆಳವಣಿಗೆ ಒತ್ತಡವು ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿರುವುದಕ್ಕೂ, ಅಲ್ಲಿ ಭೂರಹಿತ ಕೃಷಿಕೂಲಿಕಾರರು ಅಗಾಧವಾಗಿರುವುದಕ್ಕೂ ಮತ್ತು ಸಾಕ್ಷರತಾ ಪ್ರಮಾಣವು ಕೆಳಮಟ್ಟದಲ್ಲಿರುವುದಕ್ಕೂ ನಡುವೆ ಸಂಬಂಧಗಳಿವೆ. ಈ ಪ್ರದೇಶವು ದುಸ್ಥಿತಿಯಲ್ಲಿರುವುದಕ್ಕೂ ಮತ್ತು ಇಲ್ಲಿ ಲಿಂಗಸಂಬಂಧಗಳು ತೀವ್ರ ಅಸಮಾನತೆಯಿಂದ ಕೂಡಿರುವುದಕ್ಕೂ ಸಂಬಂಧವಿದೆ. ಒಟ್ಟಾರೆ ಇದು ಅತ್ಯಂತ ಸಂಕೀರ್ಣ ವಾದ ಹಾಗೂ ಬಹುಮುಖಿಯಾದ ಸಂಗತಿಯಾಗಿದೆ. ಕೇವಲ ಬಂಡವಾಳ ವಿನಿಯೋಜನೆ, ಸಂಪನ್ಮೂಲದ ಹಂಚಿಕೆ, ಹೈಕೋರ್ಟ್ ಪೀಠ, ಸಿಈಟಿನಲ್ಲಿ ಮೀಸಲಾತಿ ಮುಂತಾದ ಸಂಗತಿಗಳಿಂದ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಇವೆಲ್ಲವೂ ಬೇಕು. ಬಂಡವಾಳ, ಸಂಪನ್ಮೂಲವಿಲ್ಲದೆ ಅಭಿವೃದ್ದಿ ಸಾಧ್ಯವಿಲ್ಲ. ಆದರೆ ಸಮಸ್ಯೆಯು ಅನೇಕರು ಭಾವಿಸಿರುವಂತೆ ಸರಳವಾಗಿಲ್ಲ. ಅಭಿವೃದ್ದಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಗತಿಶೀಲ ನೆಲೆಗಳನ್ನು ಕುರಿತಂತೆ ವ್ಯಾಪಕವಾಗಿ ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ. ಈ ದಿಶೆಯಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ.

ಪರಾಮರ್ಶನ ಗ್ರಂಥಗಳು
1. ಅಮರ್ತ್ಯಸೆನ್ 1999. ಡೆವಲಪ್ಮೆಂಟ್ ಆಸ್ ಪ್ರೀಡಮ್, ನವದೆಹಲಿ:ೊಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
2. ಕರ್ನಾಟಕ ಸರ್ಕಾರ 1999. ಕರ್ನಾಟಕದಲ್ಲಿ ಮಾನವ ಅಭಿವೃದ್ದಿ 1999, ಬೆಂಗಳೂರು: ಯೋಜನಾ ಇಲಾಖೆ.
3. ಕರ್ನಾಟಕ ಸರ್ಕಾರ 2002. ಪ್ರಾದೇಶಿಕ ಅಸಮತೋಲನ ನಿವಾರಣಾ ಉನ್ನತಾಧಿಕಾರದ ಸಮಿತಿ: ಅಂತಿಮ ವರದಿ, ಬೆಂಗಳೂರು
4. ಕರ್ನಾಟಕ ಸರ್ಕಾರ 2005. ತಾಲ್ಲೂಕುವಾರು ಶೈಕ್ಷಣಿಕ ಅಂಕಿ-ಅಂಶ: 2005, ಬೆಂಗಳೂರು:ೊರಾಜ್ಯ ಯೋಜನಾ ನಿರ್ದೇಶಕ, ಸರ್ವಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ.
5. ಕೃಷ್ಣಕುಮಾರ ಕಲ್ಲೂರ, 1956. ಕನ್ನಡನಾಡು: ಸಾರಿಗೆ ಮತ್ತು ಸಂಪರ್ಕ (ಸಂ.ಟಿ.ಆರ್. ಚಂದ್ರಶೇಖರ) ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
6. ಗುನ್ನಾರ್ ಮಿರ್ಡಾಲ್, 1963. ಇಕಾನಾಮಿಕ್ ಥಿಯರಿ ಆಂಡ್ ಅಂಡರ್ಡೆವಲಪ್ಡ್ ರೀಜನ್ಸ್, ಲಂಡನ್: ಮಿಥಿಯುನ್ ಆ್ಯಂಡ್ ಕಂಪನಿ ಲಿಮಿಟೆಡ್, ಪು.27-30
7. ಗೌನರ್ಮೆಂಟ್ ಆಫ್ ಮೈಸೂರು 1970. ಇಕಾನಮಿಕ್ ಡೆವಲಪ್ಮೆಂಟ್ ಆಫ್ ಮೈಸೂರು : 1956-1969, ಬೆಂಗಳೂರು: ಬ್ಯೂರೋ ಆಫ್ ಇಕಾನಮಿಕ್ ಆ್ಯಂಡ್ ಸ್ಟಾಟಿಸ್ಟಿಕ್ಸ್.
8. ಗೌರ್ವನಮೆಂಟ್ ಆಫ್ ಕರ್ನಾಟಕ 1995, ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್: ಕರ್ನಾಟಕ 1980-81 ಟು 1993-94, ಬೆಂಗಳೂರು: ಡೈರೆಕ್ಟೊರೇಟ್ ಆಫ್ ಇಕಾನಾಮಿಕ್ ಆಯಂಡ್ ಸ್ಟ್ಯಾಟಿಸ್ಟಿಕ್ಸ್.
9. ಗೌರ್ನಮೆಂಟ್ ಆಫ್ ಕರ್ನಾಟಕ 2002, ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್: ಕರ್ನಾಟಕ 1993-94 ಟು 2000-01, ಬೆಂಗಳೂರು: ಡೈರೆಕ್ಟೊರೇಟ್ ಆಫ್ ಇಕಾನಮಿಕ್ ಆ ಯಂಡ್ ಸ್ಟ್ಯಾಟಿಸ್ಟಿಕ್ಸ್.
10. ಜೀನ್ ಡ್ರೀಜ್ ಮತ್ತು ಅಮರ್ತ್ಯಸೆನ್ 2002, ಇಂಡಿಯಾ: ಡೆವಲಪ್ಮೆಂಟ್ ಆ್ಯಂಡ್ ಪಾರ್ಟಿಸಿಪೇಶನ್ಸ್, ನವದೆಹಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
11. ಮೆಹಬೂಬ್ ಉಲ್ ಹಕ್ 1995. ರಿಪ್ಲೆಕ್ಷನ್ಸ್ ಆನ್ ಹೂಮನ್ ಡೆವಲಪ್ಮೆಂಟ್, ನ್ಯೂಯಾರ್ಕ್: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್.
12. ರಾಜ್ ಕೃಷ್ಣ 1986. ‘ದಿ ಸೆಂಟರ್ ಆಂಡ್ ದಿ ಫೆರಿಫೆರಿ: ಇಂಟರ್ ಸ್ಟೇಟ್ ಡಿಸ್ಪ್ಯಾರಿಟೀಸ್ ಇನ್ ಇಕಾನಮಿಕ್ ಡೆವಲಪ್ಮೆಂಟ್’ ಇಲ್ಲಿ ರಾಯಚೌದರಿ ಆರ್.ಎ.ಶಮಾ ಗಮ್ಕರ್
13.ೊಅರಬಿಂದೋ ಘೋಷ್(ಸಂ.) 1990. ದಿ ಇಂಡಿಯನ್ ಇಕಾನಮಿ ಆಂಡ್ ಇಟ್ಸ್ ಫಾರ್ಮಾರ್ಮೆನ್ಸ್ ಸಿನ್ಸ್ ಇಂಡಿಪೆನ್ಡೆನ್ಸ್, ನವದೆಹಲಿ: ಆಕ್ಸ್ಫರ್ಡ್ ಯೂನಿವರ್ಸಿಟಿ ಪ್ರೆಸ್, ಪು.43-85,
14. ವಿಲಿಯಮ್ಸನ್ ಜೆ.ಜಿ. 1965. ‘ರೀಜನಲ್ ಇನಿಕ್ವಾಲಿಟಿ ಆಂಡ್ ದಿ ಪ್ರೊಸೆಸ್ ಆಫ್ ನ್ಯಾಷನಲ್ ಡೆವಲಪ್ಮೆಂಟ್ ಎ ಡಿಸ್ಕ್ರಿಪ್ಷನ್ ಆಫ್ ಪ್ಯಾಟ್ರನ್ಸ್’ ಎಕಾನಮಿಕ್ ಡೆವಲಪ್ಮೆಂಟ್ ಆ್ಯಂಡ್ ಕಲ್ಚರಲ್ ಚೇಂಜ್, ಸಂ.13, ಸಂ.4, ಪಾರ್ಟ್ II, ಪು.3-83
15. ಸೆನ್ಸಸ್ ಆಫ್ ಇಂಡಿಯಾ 1991. ಸಿರೀಸ್ 11 ಕರ್ನಾಟಕ, ಪಾರ್ಟ್ 11-ಬಿ (i) ಪ್ರೈಮರಿ ಸೆನ್ಸ್ಸ್ ಅಬ್ಸ್ಟ್ರಾಕ್ಟ್: ಜನರಲ್ ಪಾಪ್ಯುಲೇಶನ್, ಕರ್ನಾಟಕೊ: ಡೈರೆಕ್ಟೊರೇಟ್ ಆಫ್ ಸೆನ್ಸ್ಸ್ ಆಫರೇಶನ್.
16. ಸೆನ್ಸಸ್ ಆಫ್ ಇಂಡಿಯಾ 2001, ಸಿರೀಸ್ 30 ಕರ್ನಾಟಕ ಪೇಪರ್-2, 2001, ಪ್ರಾವಿಶನಲ್ ಪಾಪ್ಯುಲೇಶನ್ ಟೋಟಲ್ಸ್: ರೂರಲ್ ಆಂಡ್ ಅರ್ಬನ್ ಡಿಸ್ಟ್ರಿಬೂಷನ್ ಆಫ್ ಪಾಪ್ಯುಲೇಶನ್, ಕರ್ನಾಟಕ: ಡೈರೆಕ್ಟೊರೇಟ್ ಆಫ್ ಸೆನ್ಸಸ್ ಆಫರೇಶನ್.
17. ಸೆನ್ಸಸ್ ಆಫ್ ಇಂಡಿಯಾ 2001, ಸಿರೀಸ್ 30 ಕರ್ನಾಟಕ, ಪೇಪರ್-2, 2001, ಪ್ರಾವಿಶನಲ್ ಪಾಪ್ಯುಲೇಶನ್ ಟೋಟಲ್ಸ್ ಡಿಸ್ಟ್ರಿಬೂಷನ್ ಆಫ್ ವರ್ಕರ್ಸ್ ಆಂಡ್ ನಾನ್ವರ್ಕರ್ಸ್, ಡೈರೆಕ್ಟೊರೇಟ್ ಆಫ್ ಸೆನ್ಸ್ಸ್ ಆಫರೇಶನ್, ಕರ್ನಾಟಕ
18. ಸೆನ್ಸಸ್ ಆಫ್ ಇಂಡಿಯಾ 2001, ಸಿರೀಸ್ 30, ಕರ್ನಾಟಕ, ಫೈನಲ್ ಪಾಪ್ಯುಲೇಶನ್ ಟೋಟಲ್ಸ್, ಕರ್ನಾಟಕ: ಡೈರೆಕ್ಟೊರೇಟ್ ಆಫ್ ಸೆನ್ಸಸ್ ಆಫರೇಶನ್ೊ(ಶೆಡ್ಯೂಲ್ಡ್ ಕಾಸ್ಟ್ ಮತ್ತು ಶೆಡ್ಯೂಲ್ಡ್ ಟ್ರೈಬ್) .