[* ಕರ್ನಾಟಕ ಏಕೀಕರಣ ಕಥನ ಎಂಬ ಕೃತಿಯನ್ನು ಯಥಾವತ್ತಾಗಿ ಬಳಸಲು ಅವಕಾಶ ನೀಡಿದ ಡಾ.ಎಸ್.ಚಂದ್ರಶೇಖರ ಅವರಿಗೆ ಹಾಗೂ ಕೃತಿಯನ್ನು ಈ ಮೊದಲು ಪ್ರಕಟಿಸಿದ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ನಾವು ಅಭಾರಿಯಾಗಿದ್ದೇವೆ. -ಸಂ.]

ಪ್ರವೇಶ

ಆಧುನಿಕ ಕರ್ನಾಟಕ ಕಂಡ ಎರಡು ಮುಖ್ಯ ಐತಿಹಾಸಿಕ ಘಟನೆಗಳೆಂದರೆ, ಸ್ವಾತಂತ್ರ್ಯ ಸಂಗ್ರಾಮ ಮತ್ತು ರಾಜ್ಯದ ಏಕೀಕರಣ. ಸ್ವಾತಂತ್ರ್ಯ ಸಂಗ್ರಾಮ ಇಡೀ ಭಾರತಕ್ಕೆ ಸಂಬಂಧಿಸಿದ್ದರೆ, ಏಕೀಕರಣ ಕೆಲವು ಪ್ರದೇಶಗಳಿಗೆ ಸೀಮಿತವಾಗಿತ್ತು. ಆದರೆ ಈ ಎರಡೂ ಚಳವಳಿಗಳು ಒಟ್ಟಾಗಿಯೇ ನಡೆದವು. ಭಾರತದ ಉಳಿದ ಪ್ರದೇಶಗಳಂತೆ ಕನ್ನಡ ಪ್ರಾಂತ್ಯಗಳೂ ಪರಕೀಯ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟಿದ್ದು ನಿಜ. ಆದರೆ ಕನ್ನಡಿಗರ ಬದುಕು ತೀರಾ ದುಸ್ಥಿತಿಯಲ್ಲಿತ್ತೆಂದೇ ಹೇಳಬೇಕು. ಏಕೆಂದರೆ ಅವರು ಇಪ್ಪತ್ತೆರಡು ವಿಭಿನ್ನ ಆಡಳಿತ ಘಟಕಗಳಲ್ಲಿ ಹರಿದು ಹಂಚಿಹೋಗಿದ್ದರು. ಈ ಛಿದ್ರೀಕರಣ ಬರೀ ಕನ್ನಡಿಗರ ಕರ್ನಾಟಕದ ಛಿದ್ರೀಕರಣವಾಗಿರದೆ, ಅವರು ನೆರೆಯ ಭಾಷಿಕರ ನಡುವೆ ಮೈಸೂರನ್ನು ಹೊರತುಪಡಿಸಿ ಅಲ್ಪಸಂಖ್ಯಾತರಂತೆ ಬದುಕುವ ಅನಿವಾರ್ಯತೆ ಸೃಷ್ಟಿಸಿತ್ತು.

ವಸಾಹತುಗಳಾಗಿದ್ದ ಜಗತ್ತಿನ ಹಲವಾರು ದೇಶಗಳು ಸಾಮ್ರಾಜ್ಯವಾದಿ ಜಿಗಣೆಗಳಿಂದ ತಮ್ಮ ನೆತ್ತರವನ್ನು ಹೀರಿಸಿಕೊಂಡಿವೆ. ಭಾರತ ಇಡಿಯಾಗಿ ಈ ಸಂಕಷ್ಟಕ್ಕೆ ಒಳಗಾಗಿತ್ತಾದರೂ, ಕರ್ನಾಟಕದ ಪರಿಸ್ಥಿತಿ ಹೆಚ್ಚು ಗಂಭೀರವಾಗಿತ್ತು. ಕಾರಣ: ವಸಾಹತುಶಾಹಿ ಒಂದು ಕಡೆಯಿಂದ ಭಾರತದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿದ್ದರೆ, ವಸಾಹತುವಾದಿ ಬಾಲಂಗೋಚಿಗಳಾಗಿದ್ದ ದೇಶೀ ಅರಸರು ಮತ್ತು ನೆರೆಯ ಪ್ರಾಂತದವರು ಕನ್ನಡಿಗರ ಸಂಪತ್ತನ್ನು ಬಳಸಿಕೊಳ್ಳುವ ಪರಿಸ್ಥಿತಿ ಇತ್ತು. ಅಂದರೆ ಇಬ್ಬಗೆಯ ಶೋಷಣೆಗೆ ಕನ್ನಡಿಗ ಕರ್ನಾಟಕ ಒಳಗಾಗಿದ್ದರು. ಬ್ರಿಟಿಷರ ‘ಒಡೆದು ಆಳುವ ನೀತಿ’ಗೆ ಜ್ವಲಂತ ಉದಾಹರಣೆ ಎಂದರೆ ಕರ್ನಾಟಕವೇ. ಹೀಗೆನ್ನುವಾಗ ಆಗಬಹುದಾದ ಒಂದು ಗೊಂದಲವನ್ನು ಇಲ್ಲಿಯೇ ನಿವಾರಿಸಿಕೊಳ್ಳುವುದು ಬಹಳ ಮುಖ್ಯ. ಇಂದಿನ ಅರ್ಥದಲ್ಲಿ, ರೂಪದಲ್ಲಿ, ಕರ್ನಾಟಕ ಮತ್ತು ಭಾರತ ಭೌಗೋಳಿಕವಾಗಿಯಾಗಲಿ, ಆಡಳಿತಾತ್ಮಕ ವಾಗಿಯಾಗಲಿ, ರಾಜಕೀಯವಾಗಿ ಆಗಲಿ ಸ್ವಾತಂತ್ರ್ಯ ಪೂರ್ವದಲ್ಲಿ ಎಂದೂ ಒಂದಾಗಿರಲಿಲ್ಲ. ಕರ್ನಾಟಕವೆಂಬ ರಾಜಕೀಯ ಕಲ್ಪನೆ ಪೂರ್ಣವಾಗಿ ಆಧುನಿಕವಾದದ್ದು. ಭಾರತ ರಾಷ್ಟ್ರವೆಂಬುದು ಹೇಗೋ ಹಾಗೆಯೇ ಕರ್ನಾಟಕವೂ ರಾಜಕೀಯವಾಗಿ ರೂಪುಗೊಂಡಿದ್ದು ಆಧುನಿಕ ಕಾಲದಲ್ಲೇ. ಚರಿತ್ರೆಯಲ್ಲಿ ಕನ್ನಡ ಪ್ರಾಂತಗಳನ್ನು ಕೆಲವು ನೆರೆಯ ಪ್ರಾಂತಗಳೊಂದಿಗೆ ಒಂದು ರಾಜ್ಯವಾಗಿ, ಒಂದು ಮಾರುಕಟ್ಟೆಯಾಗಿ, ವ್ಯವಸ್ಥಿತ ಆಡಳಿತವಾಗಿ, ಬೆಸೆಯುವ ಪ್ರಯತ್ನವೇನಾದರೂ ಆಗಿದ್ದರೆ ಅದು ಟಿಪ್ಪುಸುಲ್ತಾನನ ಕಾಲದಲ್ಲಿ. ಆದರೆ ಆ ಪ್ರಯತ್ನವೂ ಪ್ರಜ್ಞಾಪೂರ್ವಕವಾಗಿ ಇಂದಿನ ಅರ್ಥದಲ್ಲಿ ರಾಷ್ಟ್ರೀಯ ಘಟಕವನ್ನಾಗಿ ಕಟ್ಟುವ ಪ್ರಯತ್ನವೆನ್ನಲು ಆಗದು. ಆದರೆ ಬ್ರಿಟಿಷ್ ವಸಾಹತುದಾರರು ಅದನ್ನು ಭಂಗಗೊಳಿಸಿದರು. ಕಾರಣ, ಬ್ರಿಟೀಷರು ತಾವು ಸಾಧಿಸಿದ್ದನ್ನು ಇತರರು ಸಾಧಿಸಕೂಡದು, ಹಾಗಾದರೆ ಅವರ ಅಧಿಕಾರಕ್ಕೆ ಕುತ್ತು ಎಂದು ಅರಿತಿದ್ದರು. ಆದ್ದರಿಂದಲೇ ಒಂದು ಸಂಘಟಿತ ಅರಸೊತ್ತಿಗೆಯಾಗಿ ರೂಪುಗೊಳ್ಳುತ್ತಿದ್ದ ಟಿಪ್ಪುವಿನ ಮೈಸೂರನ್ನು ಚಿಂದಿ ಮಾಡಿ ಹಂಚಿಕೊಂಡರು. ಆದರೆ ಕನ್ನಡ ಮತ್ತು ಕರ್ನಾಟಕಗಳಿಗೆ ಒಂದು ರಿೀತಿಯ ಸಾಹಿತ್ಯಕ ಸಾಂಸ್ಕೃತಿಕ ಅನನ್ಯತೆ ಇತ್ತು. ಈ ಅನನ್ಯತೆಗಳನ್ನು ಹೆಕ್ಕಿ ತೆಗೆಯುವ ಅವನ್ನು ಜೋಡಿಸಿ ಕಟ್ಟುವ ಮತ್ತು ಪೋಷಿಸುವ ಮುನ್ನಡೆಸುವ ಕೆಲಸವೂ ಹಲವಾರು ಏಳು ಬೀಳುಗಳೊಂದಿಗೆ ನಡೆದು ಬಂದಿತು.

ಸಾವಿರಾರು ವರ್ಷಗಳ ಭಾಷಿಕ ಸಾಂಸ್ಕೃತಿಕ ಹಿನ್ನೆಲೆಯಿದ್ದ ಕನ್ನಡ ಪ್ರದೇಶಗಳು 1799ರ ನಂತರ ಗುರುತೂ ಸಿಗದಂತೆ ಛಿದ್ರೀಕರಣಗೊಂಡವು. ಬ್ರಿಟಿಷರು ಮಾಡಿದ ಈ ವ್ಯವಸ್ಥೆ ಕನ್ನಡಿಗರಿಗೆ ಅವ್ಯವಸ್ಥೆಯ ಆಗರವಾಗಿದ್ದು ಯಾವುದೇ ವೈಚಾರಿಕ ವಿವರಣೆಗೆ ನಿಲುಕುವಂತಿರಲಿಲ್ಲ. ವಸಾಹತುವಾದಿಗಳ ರಕ್ಷಣೆ ಮತ್ತು ಆರ್ಥಿಕ ಲಾಭವೇ ಈ ವರ್ಗೀಕರಣದ ಮೂಲವಾಗಿತ್ತು. ಕರ್ನಾಟಕದ ಭೂಭಾಗದ ಮೇಲಿನ ಪರಕೀಯ ಪ್ರಭುತ್ವದ ಕಪಿಮುಷ್ಟೀ ಹೇಗಿತ್ತೆಂದರೆ, ದೇಶೀಸಂಸ್ಥಾನದ ರಾಜರುಗಳನ್ನೂ ಅವರು ನಂಬುತ್ತಿರಲಿಲ್ಲ. ಆದ್ದರಿಂದಲೇ ಇಲ್ಲಿಯ ಯಾವ ದೇಶೀಸಂಸ್ಥಾನಕ್ಕೂ ಕಡಲ ತೀರಕ್ಕೆ ಪ್ರವೇಶವಿರಲಿಲ್ಲ. ಸುತ್ತಲೂ ಭೂ ಆವೃತವಾದ ಈ ಸಂಸ್ಥಾನಗಳ ವ್ಯಾಪಾರ ವಾಣಿಜ್ಯ ವೆಲ್ಲಾ ವಸಾಹತುವಾದಿಗಳ ಅನುಮತಿ ಇಲ್ಲದೇ ನಡೆಯುವಂತಿರಲಿಲ್ಲ. ಆದ್ದರಿಂದ ಆರ್ಥಿಕವಾಗಿ ಕನ್ನಡಿಗ-ಕರ್ನಾಟಕ ಕಳೆದುಕೊಂಡಿದ್ದು ಅಪಾರ. ಬೇಸತ್ತು ದಂಗೆಯೆದ್ದವರನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಈ ಪ್ರಕ್ರಿಯೆಯಲ್ಲಿ ಹಲವಾರು ಭೂಭಾಗಗಳನ್ನು 1799ರ ನಂತರವೂ ಬ್ರಿಟಿಷ್ ಆಡಳಿತ ತನ್ನ ನೇರ ಆಳ್ವಿಕೆಗೆ ಒಳಪಡಿಸಿಕೊಂಡಿತು. ಹೀಗೆ ಆಕ್ರಮಿಸಲಾದ ಪ್ರದೇಶಗಳನ್ನು ಮುಖ್ಯವಾಗಿ ಐದು ಭಾಗಗಳಲ್ಲಿ ಸೇರಿಸಲಾಯಿತು.

1. ಮೈಸೂರು ಸಂಸ್ಥಾನ

2. ಹೈದರಾಬಾದ್ ಸಂಸ್ಥಾನ

3. ಕೊಡಗು

4. ಬಾಂಬೆ ಕರ್ನಾಟಕ

5. ಮದರಾಸು ಕರ್ನಾಟಕ

ಹೀಗೆ ಬೇರೆ ಬೇರೆ ಭಾಗಗಳಲ್ಲಿ ಹಂಚಿಹೋದ ಭಾಗದ ಜನತೆಯ ಸ್ಥಿತಿ ಅತಂತ್ರ ವಾಗಿತ್ತು. ಬಾಂಬೆ ಪ್ರಾಂತ್ಯದ ಕನ್ನಡಿಗರು ಅಲ್ಲಿ ಪ್ರಬಲರಾಗಿದ್ದ ಮರಾಠಿಗರು ಮತ್ತು ಮರಾಠಿ ಭಾಷೆಯ ಒತ್ತಡಗಳಿಗೆ ಈಡಾದರು. ಪರಕೀಯ ಇಂಗ್ಲಿಷ್ ಭಾಷೆ ಮತ್ತು ಇಂಗ್ಲಿಷರ ಆಡಳಿತದ ಪ್ರಭಾವದಿಂದ ಒಂದು ಕಡೆ ಸಂಕಷ್ಟಕ್ಕೆ ಈಡಾದರೆ, ಶಾಲೆ, ಕಾಲೇಜು ಮತ್ತು ಆಡಳಿತ ಕಚೇರಿಗಳಲ್ಲಿ ಮರಾಠಿ ಭಾಷೆಯ ಹೇರಿಕೆಯಿಂದ ಇನ್ನೊಂದು ಕಡೆ ಬಳಲಿದರು. ಅದೂ ಸಾಲದೆಂಬಂತೆ ಈ ಕನ್ನಡ ಪ್ರದೇಶ ‘ದಕ್ಷಿಣ ಮರಾಠ ದೇಶ’ ವೆಂದು ಕರೆಯಲ್ಪಟ್ಟಿತು. ಹೈದರಾಬಾದ್ ಕರ್ನಾಟಕವಂತೂ ನಿಜಾಮನ ಸರ್ವಾಧಿಕಾರದಿಂದ ನಲುಗಿ ಹೋಗುತ್ತಿತ್ತು. 1940ರ ತನಕ ಈ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆಯ ಮಾತಿರಲಿ, ಯಾವುದೇ ಬಗೆಯ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಆಸ್ಪದವಿರಲಿಲ್ಲ. ಮದರಾಸು ಪ್ರಾಂತ್ಯದಲ್ಲಿ ಕನ್ನಡಿಗರು ತಮಿಳರು, ತೆಲುಗರು ಮತ್ತು ಮಲೆಯಾಳಿಗಳ ನಡುವೆ ಕಾಲ ಹಾಕುತ್ತಿದ್ದರು.

ಎಚ್ಚರ

ಹತ್ತೊಂಬತ್ತನೇ ಶತಮಾನದ ನಡುವಿನ ಹೊತ್ತಿಗೆ ಕನ್ನಡಿಗರಲ್ಲಿ ಪ್ರಜ್ಞಾವಂತರಾದವರು ತಮಗಾಗಿರುವ ಹಾನಿಯ ಪ್ರಮಾಣವನ್ನು ಅರಿಯತೊಡಗಿದರು. ಈ ಅರಿವು ತಮ್ಮ ಭಾಷೆ ಮತ್ತು ಸಾಹಿತ್ಯ ಸಂಸ್ಕೃತಿಗಳ ಅನನ್ಯತೆಯನ್ನು ಗುರ್ತಿಸಿ, ಪೋಷಿಸುವಂಥ ವೈಯಕ್ತಿಕ ಪ್ರಯತ್ನಗಳ ಮೂಲಕ ಪ್ರಕಟವಾಗತೊಡಗಿತು. ಹಾಗೆ ನೋಡಿದರೆ ಈ ಸಾಂಸ್ಕೃತಿಕ ಅನನ್ಯತೆಗಳ ಬಗ್ಗೆ ಅರಿವು ಮೂಡತೊಡಗಿದ್ದು ತಾವು ಏನನ್ನೋ ಕಳೆದುಕೊಳ್ಳುತ್ತಿದ್ದೇವೆ ಎಂಬ ಭಾವನೆಯಿಂದ. ಈ ಭಾವನೆಗೆ ಪರೋಕ್ಷವಾಗಿ ಒತ್ತಾಸೆಯಾದದ್ದು ಪರಕೀಯ ಆಂಗ್ಲರ ಆಡಳಿತವಾದರೆ, ಪ್ರತ್ಯಕ್ಷವಾಗಿ ದೇಶೀಯರಲ್ಲಿ ಹುಟ್ಟಿದ ಅತಂತ್ರ ಪ್ರಜ್ಞೆ. ಈ ಬೆಳವಣಿಗೆಗೆ ಕಾರಣವಾಯಿತೆನ್ನಿಸುತ್ತದೆ. ಅದೇ ಶತಮಾನದಲ್ಲಿ ಹಲವಾರು ಭಾರತೀಯರು ಪಾಶ್ಚಾತ್ಯ ಉದಾರವಾದದಿಂದ, ಮಾನವತಾವಾದದಿಂದ ಪ್ರಭಾವಿತರಾಗಿದ್ದರು. ಈ ಪರಿಕಲ್ಪನೆಗಳು ದೇಶೀಯರಲ್ಲಿ ‘ತಮ್ಮತನ’ ಜಾಗೃತಗೊಳ್ಳಲು ಸಹಾಯಕವಾಯಿತು. ಈ ‘ತಮ್ಮತನ’ ‘ಅನನ್ಯತೆ’ಗಳು. ಟಿಸಿಲೊಡೆದು ಬೆಳೆವ ಪ್ರಕ್ರಿಯೆಯಲ್ಲಿ ಮೂಡಿಬಂದದ್ದೇ ರಾಷ್ಟ್ರೀಯತೆ. ರಾಷ್ಟ್ರೀಯತೆಯ ಭಾಗವಾಗಿ ಅಂಕುರಿಸಿದ್ದೇ ‘ಉಪರಾಷ್ಟ್ರೀಯತೆ’.

ರಾಷ್ಟ್ರೀಯತೆಯನ್ನು ಹಲವು ರೀತಿ ವ್ಯಾಖ್ಯಾನಿಸಲಾಗಿದೆ ಮತ್ತು ವ್ಯಾಖ್ಯಾನಿಸಲಾಗುತ್ತಿದೆ. ಅವನ್ನು ಸಂಕ್ಷಿಪ್ತವಾಗಿ ಹೀಗೆ ಗುರುತಿಸಬಹುದು:

1. ಒಂದು ಜನಸಮುದಾಯ ಅಥವಾ ಹಲವು ಜನಸಮುದಾಯಗಳು, ರಾಷ್ಟ್ರೀಯ, ಉಪರಾಷ್ಟ್ರೀಯ ಸಮುದಾಯವಾಗಿ, ರಾಷ್ಟ್ರೀಯ, ಉಪರಾಷ್ಟ್ರೀಯ ಪ್ರಭುತ್ವವಾಗಿ, ರಾಷ್ಟ್ರೀಯ ಸಂಸ್ಕೃತಿಗಳಾಗಿ ರೂಪುಗೊಳ್ಳುವ ಪ್ರಕ್ರಿಯೆ.

2. ಪರಕೀಯರ ಆಕ್ರಮಣ, ಆಳ್ವಿಕೆ, ಶೋಷಣೆ, ದಬ್ಬಾಳಿಕೆಗಳಿಂದ ಸ್ವತಂತ್ರವಾಗಲು ಹವಣಿಸುವ ಸಂಘಟಿತ ಪ್ರಯತ್ನ ಹಾಗೂ ಹೋರಾಟ.

ಈ ಪ್ರಕ್ರಿಯೆ ಬಹಳ ಸಂಕೀರ್ಣ ಸ್ವರೂಪದ್ದು. ಸಾಮಾನ್ಯವಾಗಿ ವಿಶಾಲಾರ್ಥದಲ್ಲಿ ಒಂದು ಸೈದ್ಧಾಂತಿಕ ತಾತ್ವಿಕ ಚೌಕಟ್ಟಿಗೆ ಒಳಪಟ್ಟು, ಸಂಘಟಿತ ನಾಯಕತ್ವದಲ್ಲಿ ಈ ಹೋರಾಟ ನಡೆಯುತ್ತದೆ. ಮಾರ್ಕ್ಸ್, ಎಂಗೆಲ್ಸ್, ಲೆನಿನ್ನರು ರಾಷ್ಟ್ರೀಯತೆಯನ್ನು ವಿವರಿಸುವ ರೀತಿ ಸ್ವಲ್ಪ ಭಿನ್ನವಾಗಿದೆ. ಇವರ ಚಿಂತನಾಕ್ರಮದ ಪ್ರಕಾರ ರಾಷ್ಟ್ರೀಯತೆ ಬಂಡವಾಳವಾದಿ ಚಾರಿತ್ರಿಕ ಘಟ್ಟದ ಕೂಸು. ರಾಷ್ಟ್ರೀಯ ಶಕ್ತಿಗಳ ಜಯವೆಂದರೆ ಊಳಿಗಮಾನ್ಯ ಶಕ್ತಿಗಳ ನಿರ್ನಾಮ ಮತ್ತು ಏಕೀಕೃತ ಮಾರುಕಟ್ಟೆಯ ಉಗಮವೆಂಬುದೇ ಅವರ ಅಭಿಮತ. ಗಾಂಧೀಜಿ ಅದನ್ನು ನೈತಿಕ, ಆಧ್ಯಾತ್ಮಿಕ ಪರಿಭಾಷೆಯಲ್ಲಿ ಅರ್ಥೈಸುತ್ತಲೇ ವಿಕೇಂದ್ರೀಕೃತ ಸ್ವತಂತ್ರ ಸ್ವದೇಶಿ ಸ್ವರಾಜ್ಯವೆನ್ನುತ್ತಾರೆ.

ಅದೇನೇ ಇರಲಿ ಭಾರತೀಯ ಸನ್ನಿವೇಶದಲ್ಲಿ ರಾಷ್ಟ್ರೀಯತೆಯನ್ನು ಕುರಿತು ವಿವೇಚಿಸು ವಾಗ ಎರಡು ಮುಖ್ಯ ಅಂಶಗಳನ್ನು ಗಮನಿಸಬೇಕು.

1. ಭಾರತ ತನ್ನ ರಾಷ್ಟ್ರೀಯತೆ ಉಪರಾಷ್ಟ್ರೀಯತೆಯನ್ನು ಕಂಡುಕೊಂಡದ್ದು ವಸಾಹತು ಸನ್ನಿವೇಶದಲ್ಲಿ, ಅಂದರೆ ಪರಕೀಯರ ಆಳ್ವಿಕೆಯ ಸಂದರ್ಭದಲ್ಲಿ.

2. ಭಾರತ ಏಕರೂಪದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ವ್ಯವಸ್ಥೆಯಾಗಿರದೆ ಬಹುಮುಖೀ ವ್ಯವಸ್ಥೆಯ ಭೌಗೋಳಿಕ ಪ್ರದೇಶವಾಗಿದ್ದುದು.

ಆದ್ದರಿಂದ ಬಹುಮುಖೀ ವ್ಯವಸ್ಥೆಗಳಿರುವ ಅದರಲ್ಲೂ ಪೂರ್ಣವಾಗಿ ಪರಕೀಯವಾದ ವಸಾಹತುವಾದಿ ಶಕ್ತಿಯೊಂದು ಆಳುತ್ತಿರುವ ನಾಡುಗಳ ರಾಷ್ಟ್ರೀಯತಾ ಪ್ರಶ್ನೆಗಳನ್ನು ಎತ್ತಿಕೊಂಡಾಗ ತೀವ್ರ ಎಚ್ಚರದಿಂದ ಇರಬೇಕಾಗುತ್ತದೆ. ಯಾವುದೇ ಬಹುಮುಖೀ ಜೀವನಕ್ರಮ, ಸಂಸ್ಕೃತಿ, ಭಾಷೆ, ಇತಿಹಾಸಗಳನ್ನು ಒಳಗೊಂಡಿರುವ ನಾಡು ತನ್ನಲ್ಲಿ ಹಲವಾರು ರಾಷ್ಟ್ರೀಯತೆಗಳನ್ನು ಒಳಗೊಂಡಿರುತ್ತದೆ. ಯಾವುದೋ ಒಂದು ಸಂಕೀರ್ಣ ಎಳೆ, ಸೂಕ್ಷ್ಮ ಎಳೆ ಅವುಗಳನ್ನು ಸಡಿಲವಾಗಿ ಒಂದುಗೂಡಿಸಿರುತ್ತದೆ. ನವಿರಾದ ಈ ಎಳೆಯನ್ನು ಅಷ್ಟೇ ಸೂಕ್ಷ್ಮವಾಗಿ ಒರಟಾಗಿ ಜಗ್ಗದೆ ಹರಿದುಕೊಂಡು ಹೋಗಬಹುದಾದ ಸನ್ನಿವೇಶ ನಿರ್ಮಾಣ ಮಾಡದೆ ನಿರ್ವಹಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾದಾಗ ಈ ಬಂಧ ಹಾಗೆಯೇ ಮುಂದುವರಿಯುತ್ತದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಪ್ರಯತ್ನಗಳಿಗೆ ತೀವ್ರ ಅಡೆತಡೆಗಳೂ ಇರುತ್ತವೆ. ಅದೂ ಭಾರತದಂಥ ಒಂದು ಬಹುಮುಖೀ ಸಮಾಜ, ಸಂಸ್ಕೃತಿ ಒಡೆದು ಆಳುವ ನೀತಿಯನ್ನೇ ತನ್ನ ಆಡಳಿತಕ್ಕಾಗಿ ನಂಬಿ ಕೂತಿದ್ದ ಬ್ರಿಟಿಷ್ ವಸಾಹತುವಾದಿಗಳ ಹಿಡಿತದಲ್ಲಿದ್ದಾಗ ಈ ಅಡೆತಡೆಗಳು ಹೇರಳವಾಗಿದ್ದುದು ಸಹಜ. ಈ ಕಂಟಕಗಳನ್ನು ನಿವಾರಿಸಿಕೊಳ್ಳುವುದು ಸುಲಭ ಸಾಮಾನ್ಯ ಕೆಲಸವೇನಾಗಿರಲಿಲ್ಲ. ಈ ಸಮಸ್ಯೆಯನ್ನು ನಿವಾರಿಸಿಕೊಂಡು ಭಾರತವನ್ನು ಒಂದುಗೂಡಿಸಿ ಅದರ ಸ್ವಾತಂತ್ರ್ಯ ರಾಷ್ಟ್ರೀಯ ಹೋರಾಟ ಮುನ್ನುಗ್ಗಬೇಕಾಗಿತ್ತು. ಈ ಅರಿವಿದ್ದ ಜನ ಕೆಲವರಾದರೂ ಭಾರತದಲ್ಲಿದ್ದರು. ತಮ್ಮತನ ಅನನ್ಯತೆಗಳನ್ನು ಮರೆತಂತಿದ್ದ ಭಾರತೀಯರು ಕ್ರಮೇಣ ಎಚ್ಚರಗೊಳ್ಳತೊಡಗಿದರು. ತಮ್ಮ ವಿಮೋಚನೆಗಾಗಿ ಹಂಬಲಿಸಿದರು. ಈ ಪ್ರಕ್ರಿಯೆಯಲ್ಲಿ ಬೆಳೆದದ್ದೇ ರಾಷ್ಟ್ರೀಯತೆ. ವಿವಿಧ ಭಾಷೆ, ಧರ್ಮ, ಸಂಸ್ಕೃತಿಗಳ ಭಾರತವನ್ನು ಒಂದುಗೂಡಿಸಿ ಪರಕೀಯರ ದಬ್ಬಾಳಿಕೆ ವಿರುದ್ಧ ಸಂಘಟಿಸಲು ತೊಡಗಿದವರು ಕೆಲವೇ ಜನ. ಹಾಗೆಂದು ಏಕತ್ರಗೊಳಿಸುವ ಭರದಲ್ಲಿ ಬಹುಮುಖತೆ, ವೈವಿಧ್ಯತೆಗಳನ್ನು ಅವರು ಕಡೆಗಣಿಸಲಿಲ್ಲ. ಹಾಗೆ ಮಾಡುವುದು ಭಾರತಕ್ಕೆ ಆತ್ಮಹತ್ಯಾತ್ಮಕವೆಂದು ಕೆಲವು ರಾಷ್ಟ್ರೀಯನಾಯಕರಿಗಾದರೂ ತಿಳಿದಿತ್ತು. ಆದ್ದರಿಂದಲೇ ದೇಶೀ ಭಾಷೆ, ಸಂಸ್ಕೃತಿ, ನಡೆ, ನುಡಿಗಳ ವಿಕಸನಕ್ಕೆ ಅವರು ಅವಕಾಶ ಕಲ್ಪಿಸಿದರು. ‘ವೈವಿಧ್ಯತೆಯಲ್ಲಿ ಏಕತೆ’ ಎಂಬುದು ರಾಷ್ಟ್ರೀಯ ಚಳವಳಿಯ ಘೋಷಿತ ಮಂತ್ರವಾಯಿತು.

ರಾಷ್ಟ್ರೀಯತೆ ಎನ್ನುವುದು ಮೂಲತಃ ರಾಜಕೀಯ ಪರಿಕಲ್ಪನೆಯೇ. ಆದರೆ ಅದು ಬಹುತೇಕ ಕಡೆ ವ್ಯಕ್ತಗೊಂಡದ್ದು ಸಾಂಸ್ಕೃತಿಕ ಪರಿಭಾಷೆಯಲ್ಲಿ. ಭಾರತದಲ್ಲಿ ಈ ಪ್ರಕ್ರಿಯೆ ಪ್ರಾರಂಭವಾದದ್ದು 19ನೇ ಶತಮಾನದ ಉತ್ತರಾರ್ಧದಲ್ಲಿ. ಅದು ತನ್ನ ಅಭಿವ್ಯಕ್ತಿಯನ್ನು ಪಡೆದುಕೊಂಡದ್ದು ಸಾಂಸ್ಕೃತಿಕ, ಸಾಹಿತ್ಯಕ, ಧಾರ್ಮಿಕ ಕ್ಷೇತ್ರದಲ್ಲಿ. ಹಾಗೆಂದು ಈ ಪ್ರಕ್ರಿಯೆಯಲ್ಲಿ ರಾಜಕೀಯಲೇಪ ಇರಲಿಲ್ಲವೆಂದಲ್ಲ. ಆದರೆ ಅದು ಕ್ರಮೇಣ ಪರೋಕ್ಷವಾಗಿ, ಸಂಕೀರ್ಣವಾಗಿ ಮೈದಾಳಿತು. ರಾಜಕೀಯ ಪರಿಭಾಷೆಯ ರಾಷ್ಟ್ರೀಯತೆಗೂ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆಗೂ ಸಂಕೀರ್ಣವಾದ ಸಂಬಂಧವಿದೆ. ದೇಶೀ ಸಾಂಸ್ಕೃತಿಕ ಸ್ಪರ್ಶವಿಲ್ಲದ ರಾಜಕೀಯ ರಾಷ್ಟ್ರೀಯತೆ ಕಳೇಬರ ಮಾತ್ರ. ಅದು ಯಾರದ್ದೆಂದು ಗುರುತಿಸಲೂ ಸಾಧ್ಯವಿರುವುದಿಲ್ಲ. ಈ ಅರಿವಿದ್ದವರು, ಸಾಹಿತ್ಯಕ, ಸಾಂಸ್ಕೃತಿಕ ಕ್ಷೇತ್ರ ದಲ್ಲಿ ಸೃಜನಾತ್ಮಕ ಸಕ್ರಿಯವಾದಾಗ ರಾಜಕೀಯ ರಾಷ್ಟ್ರೀಯತೆ ಅರ್ಥಪೂರ್ಣವಾಗುತ್ತದೆ.

ವಸಾಹತುಶಾಹಿಯ ಎಲ್ಲ ಕುರೂಪಗಳನ್ನು ಕುರಿತು, ಬೌದ್ದಿಕ ತೀಕ್ಷ್ಣತೆಯಿಂದ ಅದನ್ನು ಬೆತ್ತಲುಗೊಳಿಸಿ, ಪರೋಕ್ಷವಾಗಿ ಪ್ರತಿರೋಧ ಒಡ್ಡಿದ ಮೊದಲಿಗರು ಸಾಹಿತಿ ಗಳು. ಅನಂತರ ಇತರರು. ವಿವಿಧ ಭಾಷೆ, ಸಂಸ್ಕೃತಿ, ಜನಾಂಗಗಳ ಭಾರತ ತನ್ನ ಸಾಹಿತ್ಯಾಭಿವ್ಯಕ್ತಿಯಲ್ಲಿ ಆಯಾ ಸಾಂಸ್ಕೃತಿಕ, ಪ್ರಾದೇಶಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡೇ ದೇಶೀಯವೂ, ರಾಷ್ಟ್ರೀಯೂ, ವಸಾಹತುಶಾಹಿ ವಿರೋಧಿಯೂ ಆಗಬೇಕಾಗಿತ್ತು ಮತ್ತು ಅದು ಅನಿವಾರ್ಯವೂ ಆಗಿತ್ತು. ಹಾಗೆ ನೋಡಿದರೆ ಭಾರತದ ಸಾಂಸ್ಕೃತಿಕ ಸ್ವಾಯತ್ತತೆ, ಸ್ವಾತಂತ್ರಗಳನ್ನು ಕಾಯ್ದ ಶಕ್ತಿ, ವಿಶಾಲಾರ್ಥದಲ್ಲಿ ರಾಷ್ಟ್ರೀಯತೆಯೇ. ಈ ಪ್ರಯತ್ನ ತನ್ನ ಪರಿಸರವನ್ನು ಬಣ್ಣಿಸುವಲ್ಲಿ ತನ್ನ ಭಾಷೆಯ ವಿಸ್ತೃತ ಬಳಕೆಯಲ್ಲಿ ತನ್ನ ಸುತ್ತಮುತ್ತಲಿನವರ ಪ್ರಗತಿಗಾಗಿ ದುಡಿಯುವಲ್ಲಿ ತನ್ನ ಪರಂಪರೆಯನ್ನು ಉಳಿಸಿ, ಬೆಳೆಸುವುದರಲ್ಲಿ ಮತ್ತು ಆಮೂಲಕ ತನ್ನ ಅನನ್ಯತೆಯನ್ನು ಗಟ್ಟಿಗೊಳಿಸಿಕೊಳ್ಳುವುದರಲ್ಲಿ ಕಂಡುಬರುತ್ತದೆ.

ಈ ಅನನ್ಯತೆಗಳ ಚೌಕಟ್ಟಿನಲ್ಲಿ ಉಗಮವಾದದ್ದೇ ‘ಏಕೀಕರಣ’. ಈ ‘ಏಕೀಕರಣ’ ಹುಟ್ಟಿ ವಿಕಾಸವಾದದ್ದು ಬಹುತೇಕ ಆಯಾ ಭಾಷಾವಾರು ಪ್ರದೇಶಗಳಲ್ಲಿ. ಭಾಷಾವಾರು ರಾಜ್ಯಗಳನ್ನು ರಚಿಸುವ ಆಲೋಚನೆಗಳು 19ನೇ ಶತಮಾನದ ಕೊನೆಯ ವೇಳೆಗೆ ಹಲವು ಚಿಂತಕರ ಗಮನ ಸೆಳೆಯಿತು. ಒಂದೇ ಭಾಷೆಯನ್ನಾಡುವ ಜನರನ್ನು ಒಟ್ಟುಗೂಡಿಸುವಲ್ಲಿ ಭಾಷೆಯು ಅತ್ಯುತ್ತಮ ಮಾಧ್ಯಮವಾಗಬಲ್ಲದೆಂದು ಅವರು ಅರಿತರು. ಅಷ್ಟೇ ಅಲ್ಲದೆ, ಇಂಗ್ಲಿಷ್ ಭಾಷೆ ಮತ್ತು ವಸಾಹತುವಾದಿ ಸಂಸ್ಕೃತಿಗಳಿಗೆ ವಿದೇಶಿಯರು ತೀರಾ ಮಾರು ಹೋಗದಂತೆ ತಡೆಯುವ ಸಾಧನವಾಗಿಯೂ ದೇಶೀಭಾಷೆಗಳು ಸಹಾಯಕವಾಗಬಲ್ಲದೆಂದೂ ಅವರು ತಿಳಿದಿದ್ದರು. ಭಾರತದ ಸಂದರ್ಭದಲ್ಲಿ ಇದು ವ್ಯಕ್ತವಾದದ್ದು ಭಾಷಾಭಿಮಾನ, ಆತ್ಮಗೌರವ, ದೇಶಾಭಿಮಾನ ಇವುಗಳ ಮೂಲಕವೇ. ಕನ್ನಡ ಪ್ರಾಂತ್ಯಗಳಲ್ಲಿ ಆದದ್ದೂ ಅದೇ ಆದರೂ ಕರ್ನಾಟಕದ ವಿಶಿಷ್ಟತೆಯನ್ನು ಕಡೆಗಣಿಸಲಾಗದು. ಆ ವಿಶಿಷ್ಟತೆಯೆಂದರೆ ಅವುಗಳ ಛಿದ್ರೀಕರಣ ಮತ್ತು ಆಯಾ ತುಣುಕುಗಳಲ್ಲಿದ್ದ ಕನ್ನಡ ಭಾಷಿಕರು ಅನುಭವಿಸುವ ಕಷ್ಟ-ಕಾರ್ಪಣ್ಯಗಳು. ಭಾರತದ ಯಾವ ಭಾಷಾ ಪ್ರಾಂತ್ಯದ ಜನರೂ ಕನ್ನಡಿಗರಷ್ಟು ಶೋಷಣೆ, ದಬ್ಬಾಳಿಕೆಗಳಿಗೆ ಒಳಗಾಗಿರಲಿಲ್ಲವೆಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ನಿಜ, ಆಂಧ್ರ, ಕೇರಳ ಮತ್ತು ಒರಿಸ್ಸಾಗಳೂ ಛಿದ್ರೀಕೃತವಾಗಿದ್ದವು. ಆದರೆ ಕರ್ನಾಟಕದಷ್ಟಲ್ಲ. ಕನ್ನಡ ಪ್ರದೇಶಗಳು ಈಗಾಗಲೇ ವಿವರಿಸಿದಂತೆ ಅತಿಯಾದ ಆಂತರಿಕ ಮತ್ತು ಬಾಹ್ಯ, ಆರ್ಥಿಕ ಮತ್ತು ಸಾಂಸ್ಕೃತಿಕ ಶೋಷಣೆಗೆ ಒಳಗಾಗಿದ್ದವು.

ಆ ಶೋಷಣೆಯೇ ‘ಏಕೀಕರಣ’ ಕಲ್ಪನೆಗೆ ನಾಂದಿ. ಈ ಬಗ್ಗೆ ಅಸ್ಪಷ್ಟವಾಗಿ ಮಾತನಾಡಿದವರು, ಅದನ್ನು ಸಾಕಾರಗೊಳಿಸುವ ಆರಂಭಿಕ ಪ್ರಯತ್ನಗಳನ್ನು ಮಾಡಿದವರು ಸಂವೇದನಾಶೀಲರಾದ ಬೆರಳೆಣಿಕೆಯಷ್ಟು ಮಂದಿ. ಅವರಲ್ಲಿ ಮೊದಲಿಗರೆಂದರೆ ಡೆಪ್ಯುಟಿ ಚನ್ನಬಸಪ್ಪ ಮತ್ತು ವೆಂಕಟರಂಗೋಕಟ್ಟಿ. ಈ ಮಹನೀಯರಿಬ್ಬರೂ ಬಾಂಬೆ ಕರ್ನಾಟಕದವರು.

1857 ಆಧುನಿಕ ಭಾರತದ ಚರಿತ್ರೆಯಲ್ಲಿ ಒಂದು ನಿರ್ಣಾಯಕ ಘಟ್ಟ. ಭಾರತದ ಮೊದಲ ಸ್ವಾತಂತ್ರ ಸಂಗ್ರಾಮವೆಂದು ಕರೆಯಲ್ಪಡುವ ಮಹಾನ್ ಘಟನೆ ನಡೆದದ್ದು 1857-58ರಲ್ಲಿ. ತದನಂತರ ಭಾರತ ವ್ಯಾಪಾರಿ ಸಂಸ್ಥೆಯಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಿಂದ ಬ್ರಿಟಿಷ್ ಸಾಮ್ರಾಜ್ಯದ ನೇರ ಆಡಳಿತಕ್ಕೆ ಒಳಪಟ್ಟಿತ್ತು. ಈ ಸಂದರ್ಭದಲ್ಲೇ ಬ್ರಿಟಿಷ್ ಸಂಸತ್ತು ಭಾರತದ ಬಗ್ಗೆ ವ್ಯಾಪಕ ಚರ್ಚೆ ನಡೆಸಿತು. ಈ ಚರ್ಚೆಯಲ್ಲಿ ಪ್ರಾಸಂಗಿಕವಾಗಿ ಭಾಷಾವಾರು ಪ್ರಾಂತ್ಯರಚನೆಯ ಬಗ್ಗೆ ಪ್ರಸ್ತಾಪ ಮಾಡಿದ ವ್ಯಕ್ತಿ ಜಾನ್‌ಬ್ರೈಟ್. ಹಾಗೆ ನೋಡಿದರೆ 1858ರ ನಂತರ ಪ್ರದೇಶಗಳ ಮರುವಿಂಗಡನೆ ಪ್ರಾರಂಭಿಸಿದ್ದು ಬ್ರಿಟಿಷ್ ಸರ್ಕಾರವೇ. ಆದರೆ ಅದು ಭಾರತೀಯರ ಅಪೇಕ್ಷೆಯಂತಲ್ಲ. 1862ರಲ್ಲಿ ಉತ್ತರ ಕನ್ನಡ ಜಿಲ್ಲೆಯನ್ನು ಮುಂಬೈನಿಂದ ಬಾಂಬೆ ಪ್ರಾಂತಕ್ಕೆ ಬಂಗಾಳ ಪ್ರಾಂತದಲ್ಲಿದ್ದ ಸಿಲ್ಹಟ್ ಜಿಲ್ಲೆಯವರು ಅಸಮಾಧಾನಗೊಂಡರು.

ಕರ್ನಾಟಕ ಮತ್ತಿತರ ದಕ್ಷಿಣದವರು ಹಲವಾರು ಹೊರಗಿನ ಮತ್ತು ಒಳಗಿನ ರಾಜಕೀಯ, ಸಾಂಸ್ಕೃತಿಕ ಬೆಳವಣಿಗೆಗಳಿಂದ ಒತ್ತಡಕ್ಕೆ ಸಿಲುಕಿದರು. ಬಾಂಬೆ ಕರ್ನಾಟಕದಲ್ಲಿ ಕನ್ನಡ ಭಾಷಾ ಶಾಲೆಗಳನ್ನು ಪ್ರಾರಂಭಿಸಬೇಕೆಂಬ ಪ್ರಯತ್ನಗಳಿಂದ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಕ್ರಮೇಣ 1890ರ ವೇಳೆಗೆ ಸಂಘಟಿತ ಪ್ರಯತ್ನಗಳು ಕಂಡುಬಂದವು. ಆ ಹೊತ್ತಿಗೆ ಕನ್ನಡ ಪತ್ರಿಕೆಗಳು, ನಿಯತಕಾಲಿಕೆಗಳು ಪ್ರಕಟವಾಗುತ್ತಿದ್ದವು. ‘ಕರ್ನಾಟಕ’ವೆಂಬ ಪದವೂ ಚಾಲ್ತಿಗೆ ಬಂದಿತ್ತು. ಮೈಸೂರು ಪ್ರಾಂತ್ಯದಲ್ಲಿ ಮಹಾರಾಜರ ಸಹಾನುಭೂತಿ ಯೊಂದಿಗೇ ‘ಕರ್ನಾಟಕ ಭಾಷೋಜ್ಜೀವಿನಿ ಸಭಾ’ ಎಂಬ ಸಂಸ್ಥೆ 1887ರಲ್ಲಿ ಅಸ್ತಿತ್ವ ಪಡೆದುಕೊಂಡಿತು. ಈ ಸಭೆ ಕನ್ನಡ ಭಾಷೆ, ಸಾಹಿತ್ಯ ಕ್ಷೇತ್ರಗಳಿಗೆ ತನ್ನ ಕೆಲಸವನ್ನು ಸೀಮಿತಗೊಳಿಸಿಕೊಂಡಿತ್ತು.

ಏಕೀಕರಣ ಪ್ರಯತ್ನಗಳಲ್ಲಿ ಮೊದಲ ನಿರ್ಣಾಯಕವಾದ ಹೆಜ್ಜೆಯೆಂದರೆ ಧಾರವಾಡದಲ್ಲಿ ರಾ.ಹ.ದೇಶಪಾಂಡೆ ಮತ್ತು ಸಂಗಡಿಗರಿಂದ 1890ರಲ್ಲಿ ‘ಕರ್ನಾಟಕ  ವಿದ್ಯಾವರ್ಧಕ ಸಂಘ’ದ ಸ್ಥಾಪನೆ. ಈ ಸಂಘದ ಮುಖವಾಣಿಯಾಗಿ 1896ರಲ್ಲಿ ಪ್ರಾರಂಭವಾದ ಪತ್ರಿಕೆ ‘ವಾಗ್ಭೂಷಣ’. ಹಾಗೆ ನೋಡಿದರೆ ಸಮಸ್ತ ಭಾರತದಲ್ಲಿ ಭಾಷೆ, ಸಾಹಿತ್ಯಗಳ ಉನ್ನತಿಯ ಉದ್ದೇಶದಿಂದ ಮೊದಲ ಸಂಘ ಸಂಸ್ಥೆಗಳು ಪ್ರಾರಂಭವಾದದ್ದು ಕನ್ನಡಿಗರಿಂದಲೇ. ಏಕೆಂದರೆ ಈ ದಿಸೆಯಲ್ಲಿ ಅಪಾರ ಕ್ರಿಯಾಶೀಲತೆಯಿಂದ ಅದ್ಭುತವಾದದ್ದನ್ನು ಸಾಧಿಸಿದ ಬಂಗಾಳಿ, ಮರಾಠಿ ಮತ್ತು ತೆಲುಗು ಪ್ರಾಂತ್ಯಗಳಲ್ಲೂ ಈ ಉದ್ದೇಶದಿಂದ ಸಂಘಸಂಸ್ಥೆಗಳು ಪ್ರಾರಂಭವಾದದ್ದು ಕರ್ನಾಟಕದ ತರುವಾಯ. ಹಾಗೆಯೇ ಭಾಷಾವಾರು ಪ್ರಾಂತ್ಯಗಳ ರಚನೆಯ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ, ಬಿಹಾರ, ಆಂಧ್ರ, ಒರಿಸ್ಸಾ, ಕೇರಳದವರೂ ಸಂಘಟಿತ ಪ್ರಯತ್ನಕ್ಕೆ ತೊಡಗಿದ್ದು ಕರ್ನಾಟಕದವರಿಗಿಂತ ತಡವಾಗಿ. ‘ಬಂಗಾಳಿ ಸಾಹಿತ್ಯ ಪರಿಷತ್’ 1895 ಮತ್ತು ‘ಉತ್ಕಲ ಏಕೀಕರಣ ಪರಿಷತ್ 1903’ರಲ್ಲಿ ಅಸ್ತಿತ್ವಕ್ಕೆ ಬಂದವು. ಅದೇನೇ ಇದ್ದರೂ ಕನ್ನಡಿಗರ ಪ್ರಯತ್ನ ತಮ್ಮ ಭಾಷೆ, ಸಂಸ್ಕೃತಿಗಳ ದೀನಸ್ಥಿತಿಯನ್ನು ದೂರ ಮಾಡುವುದಕ್ಕಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಹಲವಾರು ಕಡೆ ಸಭೆ, ಸಮಾರಂಭಗಳನ್ನು ನಡೆಸುತ್ತ ಕನ್ನಡ ಸಂಸ್ಕೃತಿ, ಚರಿತ್ರೆ, ಕನ್ನಡ ಭಾಷೆಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನದಲ್ಲಿ ತೊಡಗಿತ್ತು.

ವಂಗಭಂಗ ಚಳವಳಿ

ಈ ಆರಂಭಿಕ ಪ್ರಯತ್ನಗಳು ತೀವ್ರಗೊಂಡದ್ದು 1904-05ರ ತರುವಾಯ. ಆ ವರ್ಷದಲ್ಲಿ ಬ್ರಿಟಿಷರ ‘ಒಡೆದು ಆಳುವ ನೀತಿ’ ಧರ್ಮ-ಭಾಷೆ ಎರಡಕ್ಕೂ ವಿಸ್ತರಿಸಿತು. ಅಲ್ಲಿಯ ತನಕ ಬಹುತೇಕ ಧರ್ಮ-ಮತಗಳಿಗೆ ಸೀಮಿತಗೊಂಡಿದ್ದ ಒಡೆದು ಆಳುವ ನೀತಿ, ಭಾಷೆಗೆ ವಿಸ್ತರಿಸಿತು. ಹಿಂದಿನ ಅಸಹಜ ಪ್ರಾಂತೀಯ ವರ್ಗೀಕರಣವನ್ನು ‘ಚರಿತ್ರೆಯ ಆಕಸ್ಮಿಕ’ಗಳೆಂದು ನುಣುಚಿಕೊಳ್ಳುತ್ತಿದ್ದ ಪರಂಗಿ ಸರ್ಕಾರ, ಈಗ ನೇರವಾಗಿ ಬಂಗಾಳ ವಿಭಜನೆಯನ್ನು ಘೋಷಿಸುವ ಮೂಲಕ ತನ್ನನ್ನು ತಾನು ಬತ್ತಲುಗೊಳಿಸಿಕೊಂಡಿತು. ‘ವಂಗಭಂಗ’ವು ಭಾಷಾವಾರು ಪ್ರಾಂತ ಚಳವಳಿ ಮತ್ತು ರಾಷ್ಟ್ರೀಯ ಚಳವಳಿಯ ಹಾದಿಯಲ್ಲಿ ಒಂದು ಮೈಲಿಗಲ್ಲು. ಏಕೆಂದರೆ ಸುಪ್ತವಾಗಿದ್ದ ರಾಷ್ಟ್ರೀಯ ಭಾವನೆಗಳನ್ನು ಈ ಘಟನೆ ಸ್ಫುಟಗೊಳಿಸಲು ಸಹಾಯಕವಾಯಿತು.

‘ಭಾರತಕ್ಕೆ ನೆಗಡಿಯಾದರೆ, ಬಂಗಾಳ ಸೀನುತ್ತದೆ’ ಎಂಬ ನಾಣ್ಣುಡಿ ಇದೆ. ಕಾರಣ, ಭಾರತದ ಬಹುತೇಕ ಎಲ್ಲ ಆಧುನಿಕ ಚಟುವಟಿಕೆಗಳು ಪ್ರಾರಂಭವಾದದ್ದು ಬಂಗಾಳದ ಮಣ್ಣಿನಿಂದ. ಆಧುನೀಕರಣ ಪ್ರಕ್ರಿಯೆಗಳಾದ ಶಿಕ್ಷಣ, ಸುಧಾರಣೆ, ರಾಷ್ಟ್ರೀಯತೆ, ತೀವ್ರವಾದ, ಬಾಂಬು ಇದೆಲ್ಲವೂ ಬಂಗಾಳದಿಂದಲೇ ಆರಂಭಗೊಂಡವು. 1911ರ ವರೆಗೆ ವಸಾಹತು ಭಾರತದ ರಾಜಧಾನಿಯೂ ಬಂಗಾಳದ ರಾಜಧಾನಿ ಕಲಕತ್ತಾ ನಗರವೇ ಆಗಿದ್ದಿತು. ಬ್ರಿಟಿಷ ಆಡಳಿತಕ್ಕೆ ಸಂಘಟಿತ ಪ್ರತಿರೋಧ ಶುರುವಾದದ್ದೂ ಬಂಗಾಳದಿಂದ. ಭಾರತದ ನವೋದಯದ ಮುಂಚೂಣಿಯಲ್ಲಿದ್ದ ಬಂಗಾಳ ಸ್ವಾತಂತ್ರ್ಯ ಚಳವಳಿಯ ಕೇಂದ್ರವೂ ಆಗಿತ್ತು. ಬ್ರಿಟಿಷರು ಬಂಗಾಳವನ್ನು ‘ರಾಜದ್ರೋಹದ ಕಾರ್ಯಾಗಾರ’ವೆಂದೇ ಬಣ್ಣಿಸುತ್ತಿದ್ದರು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕ್ರಾಂತಿಕಾರಿ ರಾಷ್ಟ್ರೀಯತೆ ಬಂಗಾಳದಲ್ಲಿ ಕಾಣಿಸಿಕೊಂಡಾಗ ಬ್ರಿಟಿಷ್ ಸರ್ಕಾರ ಬೆಚ್ಚಿತು. ಬಂಗಾಳ ಮತ್ತು ಆ ಮೂಲಕ ಎಚ್ಚೆತ್ತ ರಾಷ್ಟ್ರೀಯ ಭಾರತದ ಗಮನವನ್ನು ಬೇರೆಡೆ ತಿರುಗಿಸಲು ವಸಾಹತುಶಾಹಿ ಸರ್ಕಾರ ಬಂಗಾಳ ವಿಭಜನೆಗೆ ಕೈಹಾಕಿತು. ಆ ಬಗ್ಗೆ ಅಂದಿನ ಭಾರತದ ವೈಸ್‌ರಾಯ್‌ನಾಗಿದ್ದ ಕರ್ಜನ್ 19.10.1905ರಂದು ಬಂಗಾಳದ ವಿಭಜನೆ ಜಾರಿಗೆ ಬರುತ್ತದೆಂದು ಆಜ್ಞೆ ಹೊರಡಿಸಿದ. ವಂಗಭಂಗಕ್ಕೆ ತೀವ್ರರೀತಿಯ ಪ್ರತಿಕ್ರಿಯೆ ವ್ಯಕ್ತವಾಯಿತು. ಪೂರ್ವ (ಇಂದಿನ ಬಾಂಗ್ಲಾದೇಶ) ಮತ್ತು ಪಶ್ಚಿಮ ಬಂಗಾಳಗಳ ಬಂಗಾಲಿಗಳು ಈ ಕ್ರಮವನ್ನು ವಿರೋಧಿಸಿದರು. ಹಿಂದೂ ಮುಸ್ಲಿಮರ ಸಂಖ್ಯೆ ಸರಿಸಮವಾಗಿತ್ತು. ಪೂರ್ವದಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ, ಪಶ್ಚಿಮದಲ್ಲಿ ಹಿಂದೂಗಳು ಬಹುಸಂಖ್ಯಾತ ರಾಗಿದ್ದರು.

ಬ್ರಿಟಿಷರು ವಂಗಭಂಗಕ್ಕೆ ಏನೇ ಬಹಿರಂಗ ಕಾರಣಗಳನ್ನು ಕೊಟ್ಟರೂ ಆಂತರ್ಯ ದಲ್ಲಿದ್ದುದು ಮತೀಯ ವಿಭಜನೆಯೇ. ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ಕಾರ್ಯತಂತ್ರ ಈ ಕ್ರಮದಲ್ಲಿ ಅಡಗಿತ್ತು. ಒಂದು, ಹಿಂದೂ ಮುಸ್ಲಿಮರನ್ನು ರ್ಬೇಪಡಿಸಿ, ಅವರನ್ನು ದಾರಿ ತಪ್ಪಿಸುವುದು. ಎರಡು, ಬಲಿಷ್ಠವಾಗುತ್ತಿದ್ದ ರಾಷ್ಟ್ರೀಯ ಚಳವಳಿಯನ್ನು ಹಳಿತಪ್ಪಿಸಿ ದುರ್ಬಲಗೊಳಿಸುವುದು. ಆದರೆ ಬಂಗಾಳಿಗಳನ್ನು ಬೆಸೆದಿಟ್ಟುಕೊಂಡದ್ದು ಹೆಚ್ಚಾಗಿ ಅವರ ಭಾಷೆ ಮತ್ತು ಸಂಸ್ಕೃತಿ. ಎಚ್ಚೆತ್ತ ಬಂಗಾಳ ಈ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿತು. ವಿಭಜನೆ ಕಾರ್ಯಗತವಾಗುವ ದಿನ ಬಂಗಾಲಿಗಳು ಸಾಂಕೇತಿಕವಾಗಿ ಒಗ್ಗಟ್ಟನ್ನು ಪ್ರದರ್ಶಿಸಿದ್ದು ರಾಖಿಗಳನ್ನು ಕಟ್ಟುವ ಮೂಲಕ, ಉಪವಾಸವನ್ನು ಆಚರಿಸುವ ಮೂಲಕ, ಪ್ರತಿಭಟನಾ ಸೂಚಕವಾಗಿ ಸಾವಿರಾರು ಸಹಿ ಸಂಗ್ರಹಿಸಿ ಅದನ್ನು ಲಂಡನ್ನಿಗೆ ರವಾನಿಸುವ ಮೂಲಕ. ಬಂಗಾಳ ವಿಭಜನೆಯೇ ನಿಮಿತ್ತವಾಗಿ ‘ಸ್ವದೇಶಿ’ ಚಳವಳಿ ಪ್ರಾರಂಭವಾಯಿತು. ಕೊನೆಗೂ ಒತ್ತಡಕ್ಕೆ ಮಣಿದ ಸರ್ಕಾರ 1911ರಲ್ಲಿ ಬಂಗಾಳ ವಿಭಜನೆಯನ್ನು ರದ್ದುಗೊಳಿಸಿತು.

ಈ ಎಲ್ಲ ಬೆಳವಣಿಗೆಗಳು ಕನ್ನಡಿಗರನ್ನು ಪ್ರಭಾವಿಸಿದವು. ತಿಲಕರ ರಾಷ್ಟ್ರೀಯ ಚಿಂತನೆ ಚಟುವಟಿಕೆಗಳಿಂದ ಮುಂಬೈ ಕರ್ನಾಟಕದ ಹಲವಾರು ಜನ ಆಕರ್ಷಿತರಾಗಿದ್ದರು. ಅವರಲ್ಲಿ ಅಗ್ರಗಣ್ಯರೆಂದರೆ ಆಲೂರು ವೆಂಕಟರಾವ್. ಸ್ವದೇಶಿ ಚಳವಳಿಯಲ್ಲಿ ಸಕ್ರಿಯವಾಗತೊಡಗಿದ ಆಲೂರರು ಅದರ ಬಿಸಿ ಆರಿದ ಮೇಲೆ ಕೆಲವು ಕಾಲ ಏಕೀಕರಣಕ್ಕೆ ಪೂರ್ಣಾವಧಿ ತೊಡಗಿಸಿಕೊಂಡರು. ವಂಗಭಂಗದ ರದ್ದು ಭಾಷಾವಾರು ಪ್ರಾಂತ ರಚನೆಯಲ್ಲಿ ಆಸಕ್ತರಾಗಿದ್ದವರನ್ನು ಉತ್ತೇಜಿಸಿತು. ಜೊತೆಗೆ ಜನರಲ್ಲಿ ಭಾಷಾಭಿಮಾನ, ಪ್ರಾಂತಾಭಿಮಾನಗಳು ಗರಿಗಟ್ಟುತ್ತಲೇ ರಾಷ್ಟ್ರೀಯ ಸ್ವಾತಂತ್ರ ಚಳವಳಿಯೂ ಸಶಕ್ತವಾಗುತ್ತ ನಡೆಯಿತು. ಭಾರತದ ಆಗುಹೋಗುಗಳ ಬಗ್ಗೆ ಸದಾ ಎಚ್ಚರದಿಂದಿದ್ದ ಲಯನರ್ ಕರ್ಟಿಸ್ ಎಂಬ ಇಂಗ್ಲಿಷ್ ಸಂಸದ ಭಾರತದ ಪ್ರಾಂತಗಳು ಪುನರ್ ವಿಂಗಡಣೆಯಾದರೆ ಆಂತರಿಕವಾಗಿ ಶಾಂತಿ ಸೌಹಾರ್ದಗಳು ನೆಲೆಗೊಳ್ಳಲು ಸಹಾಯಕವಾಗುವುದೆಂದು ಅಭಿಪ್ರಾಯಪಟ್ಟ. ಈ ಪುನರ್ ವಿಂಗಡನೆಗೆ ಜನಾಂಗ, ಧರ್ಮಗಳು ಪೂರಕವಾದರೂ ‘ಭಾಷೆ  ಎಲ್ಲಕ್ಕಿಂತ ಮುಖ್ಯ ನೆಲೆ’ಯಾಗಬೇಕೆಂದು ವಾದಿಸಿದ.