ಕರ್ನಾಟಕತ್ವ: ಸಂಕೀರ್ಣತೆ

ಆಲೂರರಂಥ ಉತ್ಸಾಹಿಗಳು ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಮೊದಲ ಹೆಜ್ಜೆಯಾಗಿ ‘ಅಖಿಲ ಕರ್ನಾಟಕ ಗ್ರಂಥಕರ್ತರ’ ಸಮ್ಮೇಳನವನ್ನು ಸಂಘಟಿಸಿದರು. 1907 ಮತ್ತು 1908ರಲ್ಲಿ ವಾರ್ಷಿಕ ಸಮ್ಮೇಳನಗಳು ಧಾರವಾಡದಲ್ಲಿ ನಡೆದವು. ಮೈಸೂರು ಸಂಸ್ಥಾನದವರನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನಗಳೂ ನಡೆದವು. ಕ್ರಮೇಣ ಈ ಪ್ರಯತ್ನ ಫಲ ಕೊಡತೊಡಗಿತು. ಆದರೂ ಅದು ಮುಂಬೈ ಕರ್ನಾಟಕದವರಿಗೆ ಬಹಳ ಪ್ರಯಾಸಕರವಾದ ಕೆಲಸವೆನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಮೈಸೂರು ಸಂಸ್ಥಾನ ಮಹಾರಾಜರ ಆಳ್ವಿಕೆಯಲ್ಲಿತ್ತು. ಸಾಹಿತ್ಯ, ಸಂಸ್ಕೃತಿ, ಭಾಷೆ ಮುಂತಾದ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದ ಬಹುತೇಕ ಮೈಸೂರಿನ ವಿದ್ವಾಂಸರಿಗೆ ಮಹಾರಾಜರ ಸರ್ಕಾರದ ಬಗ್ಗೆ ಭಯ, ಭಕ್ತಿಗಳಿದ್ದವು ಮತ್ತು ನೇರವಾಗಿಯೇ ಎಲ್ಲರೂ ಅವರ ಕೃಪಾಶ್ರಯದಲ್ಲಿದ್ದವರು. ಮುಂಬೈ ಕರ್ನಾಟಕದವರು ಈ ವಿಚಾರದಲ್ಲಿ ತಿಲಕರ ರಾಜಕೀಯ ರಾಷ್ಟ್ರೀಯತೆಯಿಂದ ಪ್ರಭಾವಿತರಾಗಿ, ಬಹಿರಂಗವಾಗಿಯೇ ಸ್ವದೇಶಿ ಚಳವಳಿಯಲ್ಲಿ ತೊಡಗಿ, ಬ್ರಿಟಿಷ್ ಪ್ರಭುತ್ವದ ಟೀಕಾಕಾರರೂ ಆಗಿದ್ದರು. ಅಂಥವರೊಡನೆ ಒಡನಾಡುವುದು ಮೈಸೂರಿಗರಿಗೆ ‘ಪ್ರಭುತ್ವ ವಿರೋಧಿ’ಚಟುವಟಿಕೆಯಾಗುತ್ತದೆ ಎನ್ನುವ ಭಯವೂ ಇದ್ದಂತೆ ತೋರುತ್ತದೆ. ಆದ್ದರಿಂದಲೇ ಇವರು ಧಾರವಾಡದ ಏಕೀಕರಣಾಸಕ್ತರ ಚಟುವಟಿಕೆಗಳಿಗೆ ಅಷ್ಟಾಗಿ ಸ್ಪಂದಿಸದೆ ಹೋದರು ಎನಿಸುತ್ತದೆ. ಹಾಗೆಯೇ ಮುಂಬೈ ಕರ್ನಾಟಕದವರು ಗ್ರಂಥಕರ್ತರ ಸಮ್ಮೇಳನವನ್ನು ಮೈಸೂರು ಪ್ರಾಂತದಲ್ಲಿ ನಡೆಸಲು ಮಾಡಿದ ಪ್ರಯತ್ನ ಸಫಲವಾಗಲಿಲ್ಲ. ಈ ನಡುವೆ ಬಿಹಾರ, ಒರಿಸ್ಸಾ, ಆಂಧ್ರ ಪ್ರಾಂತದವರೂ ತಮ್ಮ ಪ್ರಯತ್ನಗಳನ್ನು ತೀವ್ರಗೊಳಿಸಿದರು. ಸಭೆ, ಸಮಾರಂಭಗಳನ್ನು ಹಮ್ಮಿಕೊಂಡು ನಿರ್ಣಯಗಳನ್ನು ಅಂಗೀಕರಿಸುತ್ತ, ಪತ್ರಿಕೆಗಳಲ್ಲಿ ಈ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತ, ಸಂಬಂಧಪಟ್ಟ ಅಧಿಕಾರವರ್ಗಕ್ಕೆ ಮನವಿಗಳನ್ನು ಅರ್ಪಿಸುತ್ತ, ಕಾಂಗ್ರೆಸ್ ನಂಥ ಸಂಸ್ಥೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತ ಭಾಷಾವಾರು ಪ್ರಾಂತ ರಚನೆ ವಿಚಾರವನ್ನು ಒಂದು ಚಳವಳಿಯನ್ನಾಗಿ ಪರಿವರ್ತಿಸುವ ಸನ್ನಾಹದಲ್ಲಿ ತೊಡಗಿದರು.

ಆದರೆ ಒಂದು ಅಂಶವನ್ನಂತೂ ಇಲ್ಲಿ ಸ್ಪಷ್ಟಪಡಿಸಬೇಕು. ಈ ಹಂತದ ಎಲ್ಲ ಪ್ರಯತ್ನಗಳಲ್ಲಿೊಸಕ್ರಿಯವಾಗಿ ತೊಡಗಿಸಿಕೊಂಡವರು ಕೆಲವೇ ಜನ. ಬಹುತೇಕ ಮೇಲ್ಜಾತಿಯ ವಿದ್ಯಾವಂತರು ಮತ್ತು ಬುದ್ದಿಜೀವಿಗಳು. ಈ ಚಟುವಟಿಕೆಯ ಕೇಂದ್ರವಾಗಿದ್ದ ಧಾರವಾಡದ ಎಲ್ಲರೂ ತಿಲಕರ ಅನುಯಾಯಿಗಳು ಹಾಗೂ ಕಾಂಗ್ರೆಸ್ಸಿಗರು. 1915ರ ಸುಮಾರಿಗೆ ಮೈಸೂರಿನ ಎಂ.ವೆಂಕಟಕೃಷ್ಣಯ್ಯ ಧಾರವಾಡದವರ ಈ ಪ್ರಯತ್ನಗಳಿಗೆ ಸಹಾನುಭೂತಿ ತೋರಿದರೂ, ಅದು ಮುಂದುವರೆಯಲಿಲ್ಲ. ಮಿಗಿಲಾಗಿ ಆ ಸುಮಾರಿಗೆ ಬ್ರಾಹ್ಮಣ, ಬ್ರಾಹ್ಮಣೇತರ ವಾಗ್ವಾದವೂ ಪ್ರಾರಂಭವಾಯಿತು. ದಕ್ಷಿಣ ಮತ್ತು ಪಶ್ಚಿಮ ಭಾರತದ ಎಲ್ಲೆಡೆ ಬಿರುಸಾಗಿ ನಡೆದ ಈ ವಾಗ್ವಾದ ಏಕೀಕರಣ ಪ್ರಯತ್ನಗಳ ಮೇಲೆ ತನ್ನ ನೆರಳನ್ನು ಚಾಚಿತು. ಕಾಂಗ್ರೆಸ್ಸಿಗರೂ, ತಿಲಕ್‌ವಾದಿಗಳೂ, ಏಕೀಕರಣವಾದಿಗಳೂ, ಸಾಮಾಜಿಕ ಸುಧಾರಣೆ ಬದಲಾವಣೆಗಳ ಬಗ್ಗೆ ಆಸಕ್ತಿ ತೋರದವರೂ ಎಲ್ಲವೂ ಒಂದೇ ಆಗಿದ್ದ ಸನ್ನಿವೇಶವದು. ಅನಿಬೆಸೆಂಟ್ ತಿಲಕರ ನಾಯಕತ್ವದಲ್ಲಿ ಹೋಂರೂಲ್ ಚಳವಳಿ 1916ರಲ್ಲಿ ಪ್ರಾರಂಭವಾಯಿತು. ಕರ್ನಾಟಕದ ಹೋಂರೂಲ್ ಚಟುವಟಿಕೆಯೂ ಕನ್ನಡ ಪ್ರಾಂತಗಳಲ್ಲಿ ಹೆಚ್ಚಿನ ಜನಬೆಂಬಲ ಗಳಿಸಿಕೊಳ್ಳದೇ ಹೋಯಿತು. ಆದರೆ ಹೋಂರೂಲ್  ಚಳವಳಿ ಮತ್ತು ತಿಲಕರ ನಾಯಕತ್ವ ಭಾಷಾವಾರು ಪ್ರಾಂತ ರಚನೆಗೆ ಒಂದು ತಳಹದಿ ಹಾಕಿಕೊಟ್ಟಿತು. ಬಾಂಬೆ ಕರ್ನಾಟಕ ಪ್ರಾಂತಕ್ಕೆ ವಿಶೇಷವಾಗಿ ಹೋಂರೂಲ್ ಘಟಕವೊಂದನ್ನು ಸ್ಥಾಪಿಸುವ ಮೂಲಕ ಭಾಷಾವಾರು ಪ್ರಾಂತಕ್ಕೆ ಮನ್ನಣೆ ಕೊಟ್ಟಂತಾಯಿತು. ಮಿಗಿಲಾಗಿ ವಿಕೇಂದ್ರೀಕರಣ ಕುರಿತು ವರದಿ ಸಲ್ಲಿಸಲು ಬ್ರಿಟಿಷ್ ಸರ್ಕಾರ ನೇಮಿಸಿದ ಆಯೋಗದ ಮುಂದೆ ತಿಲಕರು. ‘ಭಾಷಾವಾರು ನೆಲೆಯಲ್ಲಿ ಪ್ರಾಂತಗಳ ಪುನರ್ ವಿಂಗಡಣೆ ಅತ್ಯಗತ್ಯವೆಂದು ಪ್ರತಿಪಾದಿಸಿದ್ದರು. ಈ ವರದಿಯನ್ನು ಮತ್ತು ಹಲವಾರು ಭಾರತೀಯರ ಮನವಿಗಳನ್ನು ಅಧ್ಯಯನ ಮಾಡಿ ತಯಾರಿಸಲಾದ ಮಾಂಟೆಗೂ ಚೇಮ್ಸ್‌ಫರ್ಡ್ ವರದಿಯೂ ‘ಭಾಷಾವಾರು ಅಥವಾ ಜನಾಂಗೀಯ’ ಪ್ರಾಂತಗಳ ರಚನೆಗೇ ಒಲವು ತೋರಿಸಿತು ಮತ್ತು ಒಂದು ಪ್ರದೇಶದ ಜನತೆ ಬಯಸುವುದಾದರೆ ಇರುವ ಪ್ರಾಂತಗಳನ್ನು ಪುನರ್ವಿಂಗಡಿಸಿ ಹೊಸ ಪ್ರಾಂತಗಳನ್ನು ರಚಿಸಲು ವೈಸ್‌ರಾಯರಿಗೆ ಅಧಿಕಾರವಿದೆಯೆಂದು ಹೇಳಿತು.

ಗಾಂಧೀಜಿ ಛಾಪು

ಭಾಷಾವಾರು ಪ್ರಾಂತ ರಚನಾ ಗರಿಗೆದರಿ ನಿಂತದ್ದು ಗಾಂಧೀಜಿಯವರು ರಾಷ್ಟ್ರೀಯ ಚಳವಳಿಯ ನಾಯಕತ್ವಕ್ಕೆ ಏರಿದ ಮೇಲೆ. ಆ ಬಗ್ಗೆ ಸ್ಪಷ್ಟ ದಿಟ್ಟ ನಿಲುವು ಅವರದು. ಭಾಷೆ, ಸಂಸ್ಕೃತಿ, ವಿಶಾಲಾರ್ಥದಲ್ಲಿ ಧರ್ಮದ ನೆಲೆಯಲ್ಲೇ ರಾಷ್ಟ್ರವೊಂದು ರೂಪುತಾಳಲು ಸಾಧ್ಯವೆಂದು ಗಾಂಧೀಜಿ ನಂಬಿದ್ದರು. ಆದ್ದರಿಂದಲೇ ಕಾಂಗ್ರೆಸ್ ನಾಯಕತ್ವದ ರಾಷ್ಟ್ರೀಯ ಚಳವಳಿ ತಮ್ಮ ತೆಕ್ಕೆಗೆ ಬಂದ ಕೂಡಲೇ ಭಾಷಾವಾರು ಪ್ರಾಂತ ರಚನೆ, ಕಾಂಗ್ರೆಸ್ಸಿನ ಅಧಿಕೃತ ಪ್ರಣಾಳಿಕೆಯ ಪಟ್ಟಿಗೆ ಸೇರುವಂತೆ ಕ್ರಮ ಕೈಗೊಂಡರು. ಅವರಿಗೆ ಸರ್ಕಾರ ಅದಕ್ಕೆ ಮನ್ನಣೆ ನೀಡುವುದೋ, ಬಿಡುವುದೋ ಮುಖ್ಯವಾಗಿರಲಿಲ್ಲ. ಭಾರತೀಯರ ಮಟ್ಟಿಗೆ, ತಾವು ತೆಗೆದುಕೊಳ್ಳುವ ತೀರ್ಮಾನವೇ ಮುಖ್ಯವೆಂದು ಗಾಂಧಿ ಬಗೆದರು. ಹಾಗೆಯೇ 1920ರ ನಾಗಪುರ ಕಾಂಗ್ರೆಸ್ ಅಧಿವೇಶನ ಭಾಷಾವಾರು ಪ್ರಾಂತ ರಚನೆಯ ತತ್ವವನ್ನು ಒಪ್ಪಿಕೊಂಡದ್ದೇ ಅಲ್ಲದೇ ಕಾಂಗ್ರೆಸ್ಸಿನ ಮಟ್ಟಿಗೆ ಭಾಷಾವಾರು ಪ್ರಾಂತ ಸಮಿತಿಗಳೇ ಅಧಿಕೃತವೆನ್ನುವ ನಿಲುವು ಪ್ರಕಟಿಸಿತು. ಅದರಂತೆ ಕನ್ನಡ ಮಾತನಾಡುವ ಎಲ್ಲ ಪ್ರದೇಶ ಗಳನ್ನು ಒಳಗೊಳ್ಳುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಸ್ತಿತ್ವಕ್ಕೆ ಬಂದಿತು. ಈ ಸಮಿತಿಯ ವ್ಯಾಪ್ತಿಗೆ ಕನ್ನಡ ಮಾತನಾಡುವ ಜನರಿದ್ದ ದೇಶೀ ಸಂಸ್ಥಾನ ಗಳೂ ಸೇರಿದ್ದವೆಂಬುದನ್ನು ಒತ್ತಿಹೇಳಬೇಕು. ಮೈಸೂರು ಸೇರಿದಂತೆ ಬೇರೆಲ್ಲಾ ಪ್ರದೇಶಗಳು ಕೆಪಿಸಿಸಿ ವ್ಯಾಪ್ತಿಗೆ ತಾತ್ವಿಕವಾಗಿ ಒಳಪಟ್ಟವೇನೋ ನಿಜ. ಆದರೆ ಮದ್ರಾಸ್ ಪ್ರಾಂತ್ಯದಲ್ಲಿದ್ದ ಬಳ್ಳಾರಿಯ ಬಗ್ಗೆ ತಕರಾರಿತ್ತು. ಬಳ್ಳಾರಿ ಜಿಲ್ಲೆ ಆಂಧ್ರಕ್ಕೆ ಸೇರಬೇಕೋ ಅಥವಾ ಕರ್ನಾಟಕಕ್ಕೋ? ಕಾಂಗ್ರೆಸ್ಸಿನ ಎನ್.ಸಿ.ಕೇಳ್ಕರ್ ಅವರ ನೇತೃತ್ವದಲ್ಲಿ ಸಮಿತಿಯೊಂದು ರಚಿತವಾಯಿತು. ಕೇಳ್ಕರ್ ಅವರು ಆಲೂರು, ಆದವಾನಿ, ರಾಯದುರ್ಗ ತಾಲ್ಲೂಕುಗಳನ್ನು ಹೊರತುಪಡಿಸಿ, ಉಳಿದ ಬಳ್ಳಾರಿ ಜಿಲ್ಲೆ ಕೆಪಿಸಿಸಿ ವ್ಯಾಪ್ತಿಗೆ ಸೇರಬೇಕೆಂದು ವರದಿ ನೀಡಿದರು.

ಈ ಮಧ್ಯೆ ಮೈಸೂರು ಸರ್ಕಾರದ ನಿರ್ಣಯದೊಂದಿಗೆ ‘ಕರ್ನಾಟಕ ಸಾಹಿತ್ಯ ಪರಿಷತ್ತು’ 1915ರಲ್ಲಿ ಸ್ಥಾಪಿತವಾಯಿತು. ಪರಿಷತ್ತಿನ ಹುಟ್ಟಿಗೆ ಹಲವರು ತಾವೇ ಕಾರಣರೆಂದು ಹೇಳಿಕೊಂಡಿರುವರಾದರೂ, ಅಂತಿಮವಾಗಿ ಅದಕ್ಕೆ ಮೈಸೂರು ಮಹಾರಾಜರ ಅನುಮತಿ ಮತ್ತು ಪ್ರೋನಿರ್ಣಾಯಕವಾಯಿತೆನ್ನುವುದನ್ನು ತಳ್ಳಿಹಾಕಲಾಗುವುದಿಲ್ಲ. ಹಾಗೆ ನೋಡಿದರೆ ಪರಿಷತ್ತಿನ ಸ್ಥಾಪನೆಯೂ ಒಂದು ರಾಜಕೀಯ ನಿರ್ಣಯವೇ. ಪರಿಷತ್ತಿನ ಸ್ಥಾಪನೆಯ ಹಿನ್ನೆಲೆಗೆ ಮೈಸೂರು ಸರ್ಕಾರದ ಮೈಸೂರು ಎಕನಾಮಿಕ್ ಕಾನ್ಫರೆನ್ಸ್‌ನ ಒಂದು ನಿರ್ಣಯ, ದಿವಾನ್ ವಿಶ್ವೇಶ್ವರಯ್ಯ ಮತ್ತು ಕೆಲವರ ಒತ್ತಾಸೆ ಗಳಿದ್ದುವೆನ್ನುವುದು ಸ್ಪಷ್ಟ. ಈ ನಿರ್ಣಯವೇ ‘ಕರ್ನಾಟಕ ಸಾಹಿತ್ಯ ಸಮ್ಮೇಳನ’ದ ಮೊದಲ ಅಧಿವೇಶನವನ್ನು ಆಗುಮಾಡಿತು. ಈ ಅಧಿವೇಶನದ ನಂತರ ವಾರ್ಷಿಕ (ಮೂರು ವರ್ಷಗಳನ್ನು ಬಿಟ್ಟು) ಅಧಿವೇಶನಗಳು ಕನ್ನಡ ಪ್ರದೇಶಗಳಾದ್ಯಂತ ನಡೆದವು-ನಡೆಯುತ್ತಿವೆ.

ಪರಿಷತ್ತು ಕನ್ನಡ ಭಾಷೆ-ಸಂಸ್ಕೃತಿಗಳ ಬಗ್ಗೆ ಅಭಿಮಾನ ಮೂಡಿಸುವ ಕೆಲಸವನ್ನಂತೂ ನಿಷ್ಠೆಯಿಂದ ಮಾಡಿತು. ಆದರೆ ಅದು ಮೈಸೂರು ಮಹಾರಾಜರ ಸರ್ಕಾರದ ಅಧೀನಸಂಸ್ಥೆಯಾಗಿಯೇ 1950ರವರೆಗಾದರೂ ಇದ್ದುದೂ ಸ್ಪಷ್ಟ. ಏಕೆಂದರೆ, 1920 ರಿಂದ ಅದರ ಅಧ್ಯಕ್ಷಗಿರಿ ಮೈಸೂರು ಅರಸರ ಮನೆತನದ ಏಕಸ್ವಾಮ್ಯವಾಗಿತ್ತು. ಕಾಂಗ್ರೆಸ್ ಭಾಷಾವಾರು ಕಾಂಗ್ರೆಸ್ ಸಮಿತಿಗಳನ್ನು ರಚಿಸಿದ್ದು 1920ರಲ್ಲಿ. ಭಾರತ ಸ್ವತಂತ್ರವಾಗಿ, ಮೈಸೂರು ಮಹಾರಾಜರು ಅಧಿಕಾರ ಕಳೆದುಕೊಳ್ಳುವವರೆಗೆ ಪರಿಷತ್ತು ‘ರಾಜಕೀಕರಣ’ಗೊಳ್ಳುವುದು, ಅರಸೊತ್ತಿಗೆಗೆ ಆಡಳಿತಾಧಿಕಾರಿಗಳಿಗೆ ಬೇಕಾಗಿರಲಿಲ್ಲ ವೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಪರಿಷತ್ತು ತನ್ನ ಸಮ್ಮೇಳನಗಳು, ಪ್ರಕಟಣೆಗಳ ಮೂಲಕ ಕನ್ನಡದ ವಿಕಾಸಕ್ಕೆ ಮತ್ತು ಕರ್ನಾಟಕದ ಏಕೀಕರಣಕ್ಕೆ ತಮ್ಮ ಮಿತಿಯಲ್ಲಿ ಕೊಡುಗೆ ನೀಡಿರುವುದಂತೂ ನಿರ್ವಿವಾದ.

ಹಾಗೆಯೇ ಕನ್ನಡ-ಕರ್ನಾಟಕಗಳ ಬಗ್ಗೆ ಜಾಗೃತಿ ಯುಂಟುಮಾಡಲು ಪರೋಕ್ಷವಾಗಿ ಕಾರಣರಾದವರು ಹಲವು ಐರೋಪ್ಯ ಮಹನೀಯರು. ಕನ್ನಡದ ಕೃಷಿಯಿಂದ ಕರ್ನಾಟಕದ ಚರಿತ್ರೆ-ಸಂಸ್ಕೃತಿಗಳಿಗೆ ಅಪಾರ ಲಾಭವಾಯಿತು. ಶತಮಾನಗಳ ಕಾಲಗರ್ಭದಲ್ಲಿ ಹೂತುಹೋಗಿದ್ದ ಬೆಲೆಕಟ್ಟಲಾಗದ ಮಾಹಿತಿಯನ್ನು ಈ ವಿದ್ವಾಂಸರು ಹೊರತೆಗೆದು ಕನ್ನಡ ಸಾಹಿತ್ಯ ತನ್ನೆಲ್ಲ ವೈಭವ-ವೈವಿಧ್ಯತೆಗಳೊಂದಿಗೆ ಪ್ರಚಾರವಾಗಲು ಕಾರಣರಾದರು. ಇದರಲ್ಲಿ ಥಾಮಸ್ ಮನ್ರೊ, ಕಿಟ್ಟೆಲ್, ರೈಸ್, ಫ್ಲೀಟ್, ಜೀಗ್ಲರ್, ಮೆಕೆಂಜಿ, ಬಿ.ಡಬ್ಲ್ಯು. ಈಲಿಯಟ್ ಮುಂತಾದವರು ಮುಖ್ಯರು. ಹಾಗೆಯೇ ಡೆಪ್ಯೂಟಿ ಚನ್ನಬಸಪ್ಪ, ಗಂಗಾಧರ ಮಡಿವಾಳೇಶ್ವರ ತುರಮುರಿ, ಮುಳಬಾಗಲ, ರಾ.ಹ. ದೇಶಪಾಂಡೆ, ವೆಂಕಟರಂಗೋಕಟ್ಟಿ, ಎಸ್.ಜಿ.ನರಸಿಂಹಾಚಾರ್ಯ, ಬಸವಪ್ಪಶಾಸ್ತ್ರಿ ಮುಂತಾದ ಕನ್ನಡಿಗರ ಕೊಡುಗೆಯೂ ಅಪಾರ.

ಆಂಧ್ರ ಮತ್ತು ಮಹಾರಾಷ್ಟ್ರ ಇದೇ ಸಂದರ್ಭದಲ್ಲಿ ಭಾಷಾವಾರು ಪ್ರಾಂತೀಯ ಸಮ್ಮೇಳನಗಳನ್ನು ಹಮ್ಮಿಕೊಂಡವು. 1914-15ರಲ್ಲಿ ಸಭೆ ನಡೆಸಿದ ಈ ಸಂಘಟನೆಗಳು ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಕ್ರಮವಾಗಿ ನಿರ್ಣಯ ಕೈಗೊಂಡವು.

ಕಾಂಗ್ರೆಸ್ಸುಸಂಸ್ಥಾನಗಳು

ಬೆಂಗಳೂರಿನಲ್ಲಿ ಸ್ಥಾಪನೆಯಾದ ಕರ್ನಾಟಕ ಸಾಹಿತ್ಯ ಪರಿಷತ್ತು ಧಾರವಾಡದ ಏಕೀಕರಣಾಸಕ್ತರ ಇಚ್ಛೆಯಂತೆ ನಡೆಯದೆ ಏಕೀಕರಣದ ಬಗ್ಗೆ ಬಹುತೇಕ ನಿರಾಸಕ್ತ ವಾಗಿದ್ದುದನ್ನು ಕಂಡು, ಆಲೂರರ ಬಳಗ ಮತ್ತೊಂದು ಸಂಸ್ಥೆಯ ಅವಶ್ಯಕತೆ ಮನ ಗಂಡಿತು. ಗದಿಗೆಯ್ಯ ಹೊನ್ನಾಪುರಮಠ ಅವರ ಮನೆಯಲ್ಲೇ ಸಭೆ ಸೇರಿ ಕನ್ನಡಿಗರ ರಾಜಕೀಯ ಮತ್ತು ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಅವುಗಳ ಈಡೇರಿಕೆಗೆ ಕಾರ್ಯತಂತ್ರ ರೂಪಿಸಲು, ಒಂದು ಹೊಸ ಸಂಸ್ಥೆಯನ್ನು ಸ್ಥಾಪಿಸಿದರು. ಅದೇ 1917ರಲ್ಲಿ ಹುಟ್ಟಿದ ‘ಕರ್ನಾಟಕ ಸಭೆ’. ಈ ಸಭೆಯ ಪ್ರಯತ್ನದಿಂದಾಗಿ ಮಾಂಟ್-ಫರ್ಡ್ ಆಯೋಗಕ್ಕೆ ಒಂದು ಲಕ್ಷ ಕನ್ನಡಿಗರ ಸಹಿಮಾಡಿದ ಮನವಿಯೊಂದನ್ನು ಸಲ್ಲಿಸಿ ಕರ್ನಾಟಕದ ಏಕೀಕರಣದ ಬಗ್ಗೆ ಒತ್ತಾಯಿಸಿತು. ಆದರೂ ಈ ‘ಏಕೀಕರಣ’ ಬ್ರಿಟಿಷ್ ಕರ್ನಾಟಕ ಪ್ರಾಂತ್ಯಕ್ಕೆ ಮಾತ್ರ ಸೀಮಿತಗೊಂಡಿತ್ತು. ಕನ್ನಡ ದೇಶೀ ಸಂಸ್ಥಾನಗಳು ಅದರ ವ್ಯಾಪ್ತಿಗೆ ಸೇರಿರಲಿಲ್ಲ. ಅನಂತರ ನಾಗಪುರ ಕಾಂಗ್ರೆಸ್ ಅಧಿವೇಶನಕ್ಕೆ ಹಿನ್ನೆಲೆಯಾಗಿ ‘ಅಖಿಲ ಕರ್ನಾಟಕ ರಾಜಕೀಯ ಪರಿಷತ್ತ’ನ್ನು ಸಂಘಟಿಸಲಾಯಿತು. ಇದು 1920ರಲ್ಲಿ ಮೈಸೂರಿನ ಮಾಜಿ ದಿವಾನ್ ವಿ.ಪಿ.ಮಾಧವರಾಯರ ಅಧ್ಯಕ್ಷತೆಯಲ್ಲಿ ಧಾರವಾಡದಲ್ಲೇ ಸಮಾವೇಶಗೊಂಡು ‘ಅಖಂಡ ಕರ್ನಾಟಕ’ ನಿರ್ಮಾಣದ ಬಗ್ಗೆ ಗೊತ್ತುವಳಿ ಸ್ವೀಕರಿಸಿತು. ಸಮ್ಮೇಳನದ ಅಧ್ಯಕ್ಷರು ಮೈಸೂರಿನವರೇ ಆದರೂ ಮೈಸೂರಿಗರು ಆ ಬಗ್ಗೆ ಉತ್ಸಾಹ ತೋರಲಿಲ್ಲ. ಕರ್ನಾಟಕ ಸಭೆ ಮತ್ತು ಕರ್ನಾಟಕ ಪ್ರಾಂತೀಯ ರಾಜಕೀಯ ಪರಿಷತ್ತುಗಳೇ ಇತರ ಭಾಷಾವಾರು ಪ್ರಾಂತಚಳವಳಿಗಾರರ ಜೊತೆ ಸೇರಿ ಕಾಂಗ್ರೆಸ್ ಮೇಲೆ ಒತ್ತಡ ತಂದು ನಾಗಪುರ ಅಧಿವೇಶನದಲ್ಲಿ ಭಾಷಾವಾರು ಪ್ರಾಂತ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಗಳನ್ನು ಗಿಟ್ಟಿಸಿಕೊಂಡವು. ಇಡೀ ಮೈಸೂರು ಸಂಸ್ಥಾನವನ್ನು ಒಂದು ಜಿಲ್ಲೆಯೆಂದು ಪರಿಗಣಿಸಿ ಮೈಸೂರು ಜಿಲ್ಲಾ ಕಾಂಗ್ರೆಸ್ ಕಮಿಟಿ ಎಂದು ರಚಿಸಿ ಅದನ್ನು ಕೆಪಿಸಿಸಿಯ ಒಂದು ಭಾಗವನ್ನಾಗಿ ಸೇರಿಸಲಾಯಿತು. ಇದು ಮೈಸೂರಿನವರಿಗೆ ಒಪ್ಪಿಗೆಯಾಯಿತೆಂದು ಹೇಳಲು ದಾಖಲೆಗಳಿಲ್ಲ. ಆದರೆ ಮೈಸೂರು ಜಿಲ್ಲಾ ಕಾಂಗ್ರೆಸ್ಸಿಗೆ ಅಧ್ಯಕ್ಷರಾದವರು ಮಾತ್ರ ಉತ್ತರ ಕರ್ನಾಟಕದ ಮೂಲದವರಾದ ಎಸ್.ಎಸ್.ಸೆಟ್ಲೂರ್, ಸೆಟ್ಲೂರರು ಬಾಂಬೆ ಹೈ ಕೋರ್ಟಿನ ನಿವೃತ್ತ ನ್ಯಾಯಾಧೀಶರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ವಾಸವಿದ್ದವರು. ಇಷ್ಟಕ್ಕೂ ಮೈಸೂರು ಕಾಂಗ್ರೆಸ್ಸಿನಲ್ಲಿದ್ದವರು ಬೆರಳೆಣಿಕೆಗೆ ಸಿಗುವಷ್ಟು ಜನ ಮಾತ್ರ ಅದೂ ಎಲ್ಲರೂ ಬ್ರಾಹ್ಮಣರು ಮತ್ತು ಬ್ರಾಹ್ಮಣೇತರ ರಾಜಕೀಯ ಪಕ್ಷವಾದ ಪ್ರಜಾಮಿತ್ರಮಂಡಳಿಯ ವಿರೋಧಿಗಳು. ಹೀಗಾಗಿ ಮೈಸೂರು ಏಕೀಕರಣ ಚಳವಳಿಗಳ ಬಗ್ಗೆಯಾಗಲಿ, ಕಾಂಗ್ರೆಸ್ಸಿನ ಬಗ್ಗೆ ಆಗಲಿ ನಿರುತ್ಸಾಹದಿಂದಿದ್ದುದು ಆಶ್ಚರ್ಯಕರವಲ್ಲ.

ಇಷ್ಟಕ್ಕೂ ಮೈಸೂರು, ಹೈದರಾಬಾದು ಕರ್ನಾಟಕಗಳಲ್ಲಿ ರಾಜಕೀಯ, ಸಾಂಸ್ಕೃತಿಕ ಪರಿಸ್ಥಿತಿ ತೀರ ಭಿನ್ನವಾಗಿದ್ದವು. ಮುಂಬೈ ಕರ್ನಾಟಕದೊಂದಿಗೆ ಆ ಪರಿಸ್ಥಿತಿಯನ್ನು ಹೋಲಿಕೆ ಮಾಡಲು ಸಾಧ್ಯವಿರಲಿಲ್ಲ. ಮೈಸೂರಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಗಳ ಪ್ರೋಸರ್ಕಾರವೇ ಸಾಕಷ್ಟು ಆಸಕ್ತಿ ವಹಿಸುತ್ತಿದ್ದು, ಸಾಹಿತ್ಯ ಪರಿಷತ್ತೇ ಅರಮನೆಯ ಕೃಪಾಶ್ರಯದಿಂದ ನಾಡು-ನುಡಿಗಳ ಸೇವೆಯಲ್ಲಿ ತೊಡಗಿತ್ತು. ಇಲ್ಲಿಯ ವಿದ್ವಜ್ಜನರೂ, ತಮ್ಮ ಆಳರಸರ ಪ್ರೀತಿಗೆ ಪಾತ್ರರಾಗಿದ್ದರು. ಇಡೀ ಭಾರತೀಯ ಸಂಸ್ಥಾನಗಳಲ್ಲೇ ಮೊದಲನೆಯದಾದ, ಮಾದರಿಯಾದ ವಿಶ್ವವಿದ್ಯಾಲಯವನ್ನೂ ಮೈಸೂರು ಅರಸರು ಸ್ಥಾಪಿಸಿದ್ದರು. ಆರ್ಥಿಕವಾಗಿ, ಸಾಮಾಜಿಕವಾಗಿ ಮೈಸೂರು ‘ಮಾದರಿ’ ರಾಜ್ಯವೆನ್ನಿಸಿಕೊಂಡಿತ್ತು. ರಾಷ್ಟ್ರೀಯ ಕಾಂಗ್ರೆಸ್ಸಿಗೆ ಪ್ರಿಯವಾದ ಸ್ವದೇಶೀ ಕಾರ್ಯಕ್ರಮವನ್ನು ಮೈಸೂರು ತನ್ನ ಮಿತಿಯಲ್ಲಿ ಕಾರ್ಯಗತಗೊಳಿಸಿತ್ತು. ಗಾಂಧೀಜಿಗೆ ಪ್ರಿಯವಾದ ‘ರಚನಾತ್ಮಕ ಕಾರ್ಯಕ್ರಮ’ಗಳನ್ನು ಮೈಸೂರು ಸರ್ಕಾರ ತನ್ನ ಅಧಿಕೃತ ಕಾರ್ಯಕ್ರಮಗಳಂತೆ ಅಳವಡಿಸಿಕೊಂಡದ್ದು ಉಂಟು. ಆದರೆ ಏಕೀಕರಣ, ಬ್ರಿಟಿಷ್ ವಿರೋಧ, ಅಸಹಕಾರ ಮುಂತಾದವು ಬಹಳ ಮುಖ್ಯವಾಗಿ ‘ರಾಜಕೀಯ’ ಕಾರ್ಯಕ್ರಮಗಳು. ಈ ಕಾರ್ಯಕ್ರಮಗಳು ಮೈಸೂರು ಅರಸರ ಮತ್ತು ಬ್ರಿಟಿಷರ ನಡುವಿನ ಒಪ್ಪಂದಗಳನ್ನು ಪ್ರಶ್ನಿಸುವಂಥವು. ಆದ್ದರಿಂದ ಆ ಬಗ್ಗೆ ಮೈಸೂರು ಸಂಸ್ಥಾನ ಸಹಕಾರ ಕೊಡಲು ಸಾಧ್ಯವಿರಲಿಲ್ಲ. ಮೈಸೂರಿನಲ್ಲಿದ್ದ ಕಾಂಗ್ರೆಸ್ಸಿಗೆ ಬೆನ್ನೆಲುಬೇ ಇರಲಿಲ್ಲ. ಇಂಥ ಕಾಂಗ್ರೆಸ್ ‘ಜನಪ್ರಿಯ’ವಾಗಿದ್ದ ಮೈಸೂರು ಸರ್ಕಾರವನ್ನು ಈ ವಿಚಾರದಲ್ಲಿ ಎದುರು ಹಾಕಿಕೊಳ್ಳಲು ಸಾಧ್ಯವಿರಲಿಲ್ಲ. ಕೆಲವು ಬುದ್ದಿಜೀವಿಗಳು ಮತ್ತು ಪತ್ರಕರ್ತರು ಆಗಿಂದಾಗ್ಗೆ ಅಸ್ಪಷ್ಟವಾಗಿ ಕನ್ನಡ ಸಂಸ್ಕೃತಿ ಭಾಷೆಗಳ ಶ್ರೀಮಂತಿಕೆ, ವೈಭವಗಳ ಬಗ್ಗೆ ಮಾತನಾಡಿದರೂ, ಅದೆಲ್ಲಾ ಸಂದರ್ಭಕ್ಕೆ ತಕ್ಕಂತೆ ಮಾತ್ರ. ಬಿ.ಎಂ.ಶ್ರೀ, ಕರ್ಪೂರ ಶ್ರೀನಿವಾಸರಾವ್, ಡಿ.ವಿ.ಜಿ., ಮಾಸ್ತಿ, ವೆಂಕಟ ಕೃಷ್ಣಯ್ಯ ಮುಂತಾದವರು ಮಾಡಿದ್ದೂ ಇದನ್ನೇ.

ಇನ್ನು ಹೈದರಾಬಾದ್ ಕರ್ನಾಟಕದ ವಿಚಾರ: ಈ ಪ್ರಾಂತ್ಯದಲ್ಲಿ ಕನ್ನಡಿಗರ ಸಂಖ್ಯೆ ಸುಮಾರು ಇಪ್ಪತ್ತು ಲಕ್ಷದಷ್ಟಿತ್ತು. ಅವರು ಒಂದುಕಡೆ ಪ್ರಬಲ ಮರಾಠರು, ಮತ್ತೊಂದು ಕಡೆ ತೆಲುಗಿನವರ ಒತ್ತಡಕ್ಕೆ ಸಿಕ್ಕಿದ್ದರೆ, ಇವೆಲ್ಲವನ್ನೂ ಮೀರಿ ಉರ್ದುವಿನ ಯಾಜಮಾನ್ಯ ಸ್ಥಾಪಿಸಲ್ಪಟ್ಟಿತ್ತು. ಉರ್ದು ಅಲ್ಲಿ ಸುಮಾರು 250 ವರ್ಷಗಳಿಂದ ಆಡಳಿತ ಭಾಷೆಯಾಗಿ ರಾರಾಜಿಸಿತ್ತು. ಹೈದರಾಬಾದ್ ಅರಸ ನಿಜಾಮ ಈ ಭಾಷೆಗೆ ಪ್ರೋಕೊಡುತ್ತಿದ್ದುದೇ ಈ ಪರಿಸ್ಥಿತಿಗೆ ಕಾರಣ. ನಿಜಾಮ್ ಆಡಳಿತ ಸಂಪೂರ್ಣವಾಗಿ ದಮನಕಾರಿಯಾಗಿತ್ತು. ಅಲ್ಲಿ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಿರಲಿಲ್ಲ. ರಾಷ್ಟ್ರೀಯ ಚಳವಳಿ ಮತ್ತು ಕಾಂಗ್ರೆಸ್‌ಗಳು ಜನಪ್ರಿಯವಾಗುತ್ತಿದ್ದಂತೆ, ನಿಜಾಮನ ಸರ್ಕಾರ ಅವಕ್ಕೆ ಕೋಮುವಾದಿ ಬಣ್ಣಹಚ್ಚಿ ಅಲ್ಪಸಂಖ್ಯಾತ, ಸಮುದಾಯಕ್ಕೆ ಸೇರಿದ ನಿಜಾಮರ ವಿರುದ್ಧದ ಬಹುಸಂಖ್ಯಾತರ ಕೋಮುವಾದಿ ಚಳವಳಿಯೆಂದು ಅದಕ್ಕೆ ಅವಕಾಶ ನಿರಾಕರಿಸಿದ. ಇದಕ್ಕೆ ಪುಷ್ಟಿಕೊಡುವಂತೆ ಹೈದರಾಬಾದ್ ಸಂಸ್ಥಾನದಲ್ಲಿ ನಿಜಾಮನ ಸರ್ವಾಧಿಕಾರೀ ಧೋರಣೆಯನ್ನು ಪ್ರತಿಭಟಿಸಿ ಚಳವಳಿ ಪ್ರಾರಂಭಿಸಿದ್ದು ಆರ್ಯಸಮಾಜ. ಆರ್ಯಸಮಾಜ ಹಿಂದೂ ಪುನರುತ್ಥಾನವಾದಿ ಸಂಘಟನೆ ಎಂಬ ಬಗ್ಗೆ ಎರಡು ಮಾತಿಲ್ಲ. ಮಿಗಿಲಾಗಿ ಹಿಂದೂಯೇತ ರರನ್ನೂ ಹಿಂದೂಗಳನ್ನಾಗಿ ಮತಾಂತರ ಮಾಡುವ ‘ಶುದ್ದಿ’ಕಾರ್ಯಕ್ರಮ ಹಾಕಿಕೊಂಡಿದ್ದ ಈ ಸಂಘಟನೆಯನ್ನು ಸುಲಭವಾಗಿ ಕೋಮುವಾದಿ ಎಂದು ಆಪಾದಿಸಿ ಕ್ರಮ ಕೈಗೊಳ್ಳಬಹುದಾಗಿತ್ತು.

ದೇಶೀ ಸಂಸ್ಥಾನಗಳಲ್ಲಿ ಆಳರಸರ ವಿರುದ್ಧ ಯಾವುದೇ ಚಟುವಟಿಕೆ ಹಮ್ಮಿಕೊಳ್ಳಲು ಕಾಂಗ್ರೆಸ್ ಒಪ್ಪುತ್ತಿರಲಿಲ್ಲ. ಅದು 1938ರವರೆಗೂ ಕಾಂಗ್ರೆಸ್ಸಿನ ರಾಷ್ಟ್ರೀಯ ನೀತಿಯೂ ಆಗಿತ್ತು. ಆದ್ದರಿಂದ ಏಕೀಕರಣವಿರಲಿ, ಹಬ್ಬ ಹರಿದಿನಗಳನ್ನು ಆ ಪ್ರಾಂತದಲ್ಲಿ ಬಹಿರಂಗವಾಗಿ ಆಚರಿಸುವಂತಿರಲಿಲ್ಲ. ಏನಿದ್ದರೂ 1937ರ ನಂತರವೇ ಅಲ್ಲಿ ಅಲ್ಪಸ್ವಲ್ಪ ಬಹಿರಂಗ ಚಟುವಟಿಕೆ ಕಾಣಿಸಿಕೊಳ್ಳಲು ಸಾಧ್ಯವಾಯಿತು. ಹೈದರಾಬಾದ್ ಕರ್ನಾಟಕದವರಿಗೆ ಅರಸೊತ್ತಿಗೆಯ ಬಗ್ಗೆ ಎಂಥ ಭಯ ದ್ವೇಷವಿತ್ತೆಂದರೆ ಏಕೀಕರಣೋತ್ತರ ಕರ್ನಾಟಕಕ್ಕೆ ಮೈಸೂರು ಅರಸರು ರಾಜಪ್ರಮುಖರಾಗಿರಲಿ ಎಂಬ ಪ್ರಸ್ತಾವನೆಯನ್ನು ಅವರು ತೀವ್ರವಾಗಿ ವಿರೋಧಿಸಿದರು. ಆ ಬಗ್ಗೆ ತಮ್ಮ ಸಮ್ಮೇಳನದಲ್ಲಿ ಗೊತ್ತುವಳಿಯನ್ನೂ ಸ್ವೀಕರಿಸಿದರು. ಮಿಕ್ಕವು ಚಿಕ್ಕಪುಟ್ಟ ಸಂಸ್ಥಾನಗಳು. ಸಂಡೂರು, ಜಮಖಂಡಿ, ರಾಮದುರ್ಗ, ಅಕ್ಕಲಕೋಟೆ ಮುಂತಾದ ಹತ್ತಾರು ಸಂಸ್ಥಾನಗಳಲ್ಲಿ ಕನ್ನಡಿಗರು ಪಟ್ಟ ಬವಣೆ ವಿಚಿತ್ರ ರೀತಿಯದು.

ಈ ಹಿನ್ನೆಲೆಯಲ್ಲಿ ಏಕೀಕರಣ ಚಳವಳಿಗೆ ನಿಜವಾದ ರಾಜಕೀಯ ಆಯಾಮ ಒದಗಿಸಿ, ಅದನ್ನು ಜೀವಂತವಾಗಿಟ್ಟವರು ಮುಂಬೈ ಕರ್ನಾಟಕದವರೇ. ಕೆಪಿಸಿಸಿಯಲ್ಲಿ ಒಟ್ಟಾರೆ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದವರೂ ಅವರೇ. ಮೈಸೂರು, ಹೈದರಾಬಾದ್ ಮತ್ತು ಮಿಕ್ಕೆಲ್ಲ ಸಂಸ್ಥಾನೀ ಕನ್ನಡಿಗರ ಪಾತ್ರವೇನಿದ್ದರೂ ಅವರವರ ಜರೂರು, ಸಂದರ್ಭಗಳಿಗೆ ಅನುಗುಣವಾಗಿ ನಿರ್ಧಾರಿತವಾಯಿತು.

ಬ್ರಿಟಿಷ್ ವಿರೋಧಿ ರಾಷ್ಟ್ರೀಯ ಸಂಗ್ರಾಮದ ಜೊತೆಜೊತೆಗೆ ಏಕೀಕರಣ ಚಳವಳಿ ಮುಂದುವರೆಯಬೇಕಾಗಿತ್ತು. ಏಕೆಂದರೆ ಎಲ್ಲರಿಗಲ್ಲದಿದ್ದರೂ ಕೆಲವು ನಾಯಕರಿಗೆ ಒಂದಂಶ ಸ್ಪಷ್ಟವಾಗಿತ್ತು. ವಸಾಹತುಶಾಹಿ ಆಡಳಿತವಿರುವವರೆಗೂ ಕರ್ನಾಟಕದ ರಾಜಕೀಯ ಏಕೀಕರಣ ಸಾಧ್ಯವಿಲ್ಲವೆಂದು ರಂಗನಾಥ ದಿವಾಕರ, ನಿಜಲಿಂಗಪ್ಪ, ಕೆಂಗಲ್ ಮುಂತಾದವರಿಗೆ ಖಾತ್ರಿಯಾಗಿತ್ತು. ಏಕೆಂದರೆ ದೇಶಿಸಂಸ್ಥಾನದ ಆಳರಸರು ಏಕೀಕರಣಕ್ಕೆ ಒಪ್ಪುವುದು ಆ ಪರಿಸ್ಥಿತಿಯಲ್ಲಿ ಸಾಧ್ಯವೇ ಇರಲಿಲ್ಲ. ಇಷ್ಟಕ್ಕೂ ಒಪ್ಪಲು ಅವರು ಸ್ವತಂತ್ರರಾಗಿರಲಿಲ್ಲ. ಸಂಸ್ಥಾನಿ ಪ್ರಜೆಗಳಿಗೆ ಅವರ ರಾಜಕೀಯ ಸಮಸ್ಯೆಗಳು ಪೂರ್ಣ ಭಿನ್ನವಾಗಿದ್ದುದು ತಿಳಿದಿತ್ತು. ಆ ಸಮಸ್ಯೆಗಳ ಪರಿಹಾರಕ್ಕೆ ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಸ್ಥಾನದ ವಿಷಯಗಳಲ್ಲಿ ಮಧ್ಯ ಪ್ರವೇಶಿಸದೆ ಇರುವ ನೀತಿಯೇ ತೊಡಕಾಗಿತ್ತು. ರಾಜಕೀಯ ಪ್ರಗತಿಯ ವಿಚಾರಕ್ಕೆ ಬಂದರೆ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಆದಷ್ಟು ಅಧಿಕಾರ ವಿಕೇಂದ್ರೀಕರಣವೂ ಸಂಸ್ಥಾನಗಳಲ್ಲಿ ಆಗಿರಲಿಲ್ಲ. ಅಂಥ ವಿಕೇಂದ್ರೀಕರಣ ಸಂಸ್ಥಾನಗಳಲ್ಲಿ ಆಗಬೇಕೆಂಬ ಸಂಸ್ಥಾನಿಗರ ಒತ್ತಾಯಕ್ಕೆ ಕಾಂಗ್ರೆಸ್ ಬೆಂಬಲವನ್ನು ಕೊಡುತ್ತಿರಲಿಲ್ಲ. ಮೈಸೂರಿನ ಅರಸರಂತೂ ಕಾಂಗ್ರೆಸ್, ಗಾಂಧಿಯವರಿಗೆ ಅಚ್ಚುಮೆಚ್ಚಿನವರಾಗಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ಸಿಗರಿಗಿದು ನುಂಗಲಾರದ ತುತ್ತಾಗಿತ್ತು. ಒಟ್ಟಾರೆ ಮುಂಬೈ ಕರ್ನಾಟಕದ ‘ಏಕೀಕರಣ’ ಉತ್ಸಾಹಿಗಳು ಈ ಬಗ್ಗೆ ಬೇಸರಪಟ್ಟುಕೊಂಡದ್ದೂ ಉಂಟು. ಆಲೂರರಂಥವರು ಮೈಸೂರಿಗರ ವಿಚಾರವಾಗಿ ಬೇಸತ್ತು ಸಾಹಿತ್ಯ ಪರಿಷತ್ತಿನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆದರು. ಅದು ಬಹಳ ಸಂಕೀರ್ಣವಾದ ಪರಿಸ್ಥಿತಿ.

ಆದರೆ ಅವರ ಉತ್ಸಾಹ ಕುಗ್ಗಲಿಲ್ಲ. ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಏಕೀಕರಣ ಚಳವಳಿಯ ಬಿಸಿಯನ್ನು ಕಾಯ್ದುಕೊಳ್ಳುವ ತೀರ್ಮಾನ ಕೈಗೊಂಡರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ವಿಸ್ತರಿಸುತ್ತ ಜನ ಜಾಗೃತಿಯನ್ನನುಂಟು ಮಾಡುತ್ತ, ಮನವಿ ಮತ್ತು ನೆನಪಿನ ಓಲೆಗಳನ್ನು ಬರೆದು ಕಳಿಸುತ್ತ ಆಲೂರು ಮತ್ತವರ ಗೆಳೆಯರು ಓಡಾಡಿದರು. 1920ರಿಂದ ಅಸಹಕಾರ, ಖಿಲಾಪತ್ ಚಳವಳಿಗಳು ಪ್ರಾರಂಭವಾದವು. ಅನಂತರ 1924ರಲ್ಲಿ ಬೆಳಗಾವಿಯಲ್ಲಿ, ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಅಖಿಲಭಾರತ ಕಾಂಗ್ರೆಸ್ ಅಧಿವೇಶನ ಸ್ವಾತಂತ್ರ್ಯ ಚಳವಳಿ ಮತ್ತು ಏಕೀಕರಣ ಚಳವಳಿಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು.

ಕನ್ನಡಿಗರು ಅಖಿಲ ಭಾರತ ಸ್ವಾತಂತ್ರ ಹೋರಾಟದೊಡನೆ ತಮ್ಮನ್ನು ಗುರುತಿಸಿ ಕೊಳ್ಳುವುದರ ಜೊತೆಗೆ, ಸಾವಿರಾರು ಸಂಖ್ಯೆಯಲ್ಲಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿ ಕಾಂಗ್ರೆಸ್ ಸಹಾಯಕವಾಯಿತು. ಆ ಮೂಲಕ ಕನ್ನಡ ಕಾರ್ಯಕರ್ತರು ತಮ್ಮ ಸ್ಥಳೀಯ ಭಿನ್ನತೆಗಳನ್ನು ಬದಿಗಿಟ್ಟು ಭಾವೈಕ್ಯತೆ ಬೆಳೆಸಿಕೊಳ್ಳಲು ಸ್ವಲ್ಪಮಟ್ಟಿಗಾದರೂ ಸಾಧ್ಯವಾಯಿತು. ಹಾಗೆಯೇ ಕರ್ನಾಟಕ ಏಕೀಕರಣಕ್ಕೆ ಅಖಿಲ ಭಾರತ ಮಟ್ಟದಲ್ಲಿ ಸಮರ್ಥನೆಯನ್ನು ಒದಗಿಸಲು ಅವರು ಈ ಅವಕಾಶವನ್ನು ಉಪಯೋಗಿಸಿಕೊಂಡರು. ಅಧಿವೇಶನ ನಡೆದ ಸ್ಥಳಕ್ಕೆ ಆ ವೇಳೆ ಕರ್ನಾಟಕ ಸಾಮ್ರಾಜ್ಯವೆನಿಸಿಕೊಂಡಿದ್ದ ವಿಜಯನಗರ ವೆಂದು ಹೆಸರಿಸಲಾಗಿತ್ತು. ಪ್ರತಿನಿಧಿಗಳಿಗೆ ಸರಬರಾಜು ಮಾಡಲು ನಿರ್ಮಿಸಿದ್ದ ನೀರಿನೊ ಕೊಳಕ್ಕೆೊ‘ಪಂಪಾ ಸರೋವರ’ವೆಂದು ನಾಮಕರಣ ಮಾಡಿದ್ದರು. ಅದೇ ಸಂದರ್ಭ ದಲ್ಲಿ ‘ಅಖಿಲ ಕರ್ನಾಟಕ ಏಕೀಕರಣ ಪರಿಷತ್ತ’ನ್ನು ಕೂಡಿಸಿ ನಿರ್ಣಯ ಕೈಗೊಳ್ಳುವ ವ್ಯವಸ್ಥೆ ಆಗಿತ್ತು. ಕಾಂಗ್ರೆಸ್ಸಿನಿಂದ ಹೊರಗಿದ್ದ ಬ್ರಾಹ್ಮಣೇತರರನ್ನು ಆಕರ್ಷಿಸಲು ಬ್ರಾಹ್ಮಣೇತರ ಪರಿಷತ್ತಿನ ಸಮಾವೇಶವೂ ಕಾಂಗ್ರೆಸ್ ಸಮಾವೇಶದ ಸ್ಥಳದಲ್ಲೇ ಆಯೋಜಿಸಲಾಯಿತು. ಏಕೀಕರಣ ಸಮ್ಮೇಲನದ ಅಧ್ಯಕ್ಷತೆಗೆ ಬ್ರಾಹ್ಮಣೇತರ ಪರಿಷತ್ತಿನ ಮುಖಂಡ ಸರ್ ಸಿದ್ಧಪ್ಪ ಕಂಬಳಿಯವರನ್ನು ಆರಿಸಲಾಯ್ತು. ಆ ಮೂಲಕ ಏಕೀಕರಣ ಪ್ರಯತ್ನಕ್ಕೆ ಬ್ರಾಹ್ಮಣೇತರರ ಬೆಂಬಲ ಗಳಿಸಿಕೊಳ್ಳುವ ಹುನ್ನಾರು ಅಲ್ಲಿ ಅಡಗಿತ್ತು. ಅಲ್ಲಿಯೇ ‘ಕರ್ನಾಟಕ ಏಕೀಕರಣ ಸಂಘ’ದ ಸ್ಥಾಪನೆಗೆ ತೀರ್ಮಾನವಾಯಿತು. ಕಾಂಗ್ರೆಸ್ಸಿನೊರಾಷ್ಟ್ರೀಯ ನಾಯಕತ್ವ ಕನ್ನಡಿಗರ ಸಾಂಸ್ಕೃತಿಕ ಅನನ್ಯತೆ ಮತ್ತು ಔದಾರ್ಯಗಳಿಗೆ ಮನಸೋತರು. ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಹಾಡು ಮೊದಲ ಬಾರಿಗೆ ಕೇಳಿ ಬಂದದ್ದು ಬೆಳಗಾವಿ ಅಧಿವೇಶನದಲ್ಲೇ. ವೀಣೆ ಶೇಷಣ್ಣನವರ ‘ಕರ್ನಾಟಕ ಸಂಗೀತ’ ಕಛೇರಿಯನ್ನು ಅಲ್ಲಿ ಏರ್ಪಡಿಸಲಾಗಿತ್ತು. ಒಟ್ಟಾರೆ ಏಕೀಕರಣದ ಅಗತ್ಯವನ್ನು ಮನದಟ್ಟು ಮಾಡಿಕೊಡುವ ಪ್ರಯತ್ನದಲ್ಲಿ ಅಧಿವೇಶನವನ್ನು ಸಂಘಟಿಸಿದ ಕನ್ನಡ ಮುಂದಾಳುಗಳು ಯಶಸ್ವಿಯಾದರೆಂದೇ ಹೇಳಬೇಕು.

ಬೆಳಗಾವಿಯಲ್ಲಿ ಸ್ಥಾಪಿತವಾದ ಏಕೀಕರಣ ಸಂಘವು ಕೆಪಿಸಿಸಿಯ ಸಹಯೋಗದೊಂದಿಗೆ ಉತ್ತಮ ಕೆಲಸ ಮಾಡಿತು. ಕೇಳ್ಕರ್ ವರದಿ ಬಳ್ಳಾರಿಯನ್ನು ಕೆಪಿಸಿಸಿಗೆ ಸೇರಿಸಿತ್ತು ನಿಜ. ಆದರೆ ಆಂಧ್ರ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಬಳ್ಳಾರಿಯನ್ನು ಅದರ ವ್ಯಾಪ್ತಿಗೆ ಒಳಪಡಿಸುವ ಪ್ರಶ್ನೆ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸಿತು. ಅದನ್ನು ತಪ್ಪಿಸುವಂತೆ ಮದ್ರಾಸ್ ಶಾಸನಸಭಾ ಸದಸ್ಯರ ಮನವೊಲಿಸಲು 1925-26ರಲ್ಲಿ ಎರಡು ನಿಯೋಗಗಳನ್ನು ಕಳಿಸಲಾಯಿತು. ಮುಖ್ಯನಗರಗಳಲ್ಲಿ ಪ್ರತಿಭಟನಾ ಪ್ರದರ್ಶನಗಳನ್ನು ಸಂಘಟಿಸಲಾಯ್ತು. ಸಹಿಸಂಗ್ರಹಣಾ ಚಳವಳಿಯೂ ನಡೆಯಿತು. ಏಕೀಕರಣ ಚಟುವಟಿಕೆಗಳನ್ನು ವಿಸ್ತರಿಸುವ ಸಲುವಾಗಿ ನಾಲ್ಕನೇ ಕರ್ನಾಟಕ ಪ್ರಾಂತ ಸಮ್ಮೇಳನ, ಏಕೀಕರಣ ಸಮಾವೇಶಗಳನ್ನು 1926ರಲ್ಲಿ ಬಳ್ಳಾರಿಯಲ್ಲೇ ನಡೆಸಲಾಯಿತು. ಅದೇ ವರ್ಷದಲ್ಲಿ ಕೊಡಗಿನಲ್ಲಿ ಜಮೀನ್ದಾರರ ಸಮ್ಮೇಳನದಲ್ಲಿ ಪಾಲ್ಗೊಂಡು ಕೊಡಗು ಏಕೀಕೃತ ಕರ್ನಾಟಕದ ಭಾಗವಾಗಬೇಕೆಂಬ ನಿರ್ಣಯ ಮಾಡುವ ಕೆಲಸವೂ ಯಶಸ್ವಿಯಾಯಿತು. ಕರಾವಳಿ ಕರ್ನಾಟಕದ ಉತ್ತರ ದಕ್ಷಿಣ ಜಿಲ್ಲೆಗಳು, ನೀಲಗಿರಿ, ಕೊಳ್ಳೇಗಾಲ ಮುಂತಾದ ಕಡೆ ಪ್ರವಾಸ ಮಾಡಿ ಅಲ್ಲಿಯ ಕನ್ನಡಿಗರಲ್ಲಿ ಏಕೀಕರಣದ ಬಗ್ಗೆ ಜಾಗೃತಿಯುಂಟುಮಾಡಿದರು. 1926ರಲ್ಲಿ ಕಾಂಗ್ರೆಸ್ ರಚಿಸಿದ ಮೋತಿಲಾಲ್ ನೆಹರೂ ಅಧ್ಯಕ್ಷತೆಯ ಸರ್ವಪಕ್ಷ ಸಮ್ಮೇಳನದ ಮುಂದೆ ಏಕೀಕರಣ ಸಂಘದ ಪ್ರತಿನಿಧಿಗಳು ತಮ್ಮ ವಾದಗಳನ್ನು ಸಮರ್ಥವಾಗಿ ಮಂಡಿಸಿ ಕರ್ನಾಟಕ ಏಕೀಕರಣ ಕೂಡಲೇ ಆಗಬೇಕೆಂದು ಸಮಿತಿ ಶಿಫಾರಸ್ಸು ಮಾಡುವಂತೆ ಒತ್ತಡ ಹೇರಲಾಯಿತು. ಹಾಗೆಯೇ ‘ಇಂಡಿಯನ್ ಸ್ಟಾಟ್ಯೂಟರಿ ಕಮಿಷನ್’ ಕೂಡಾ ಭಾಷಾವಾರು ಪ್ರಾಂತ ರಚನೆಯ ವಾದವನ್ನು ಎತ್ತಿ ಹಿಡಿಯಿತು. ಮೋತಿಲಾಲ್‌ನೆಹರೂ ಸಮಿತಿ ಕನ್ನಡ ದೇಶೀಸಂಸ್ಥಾನಗಳ ಮತ್ತು ವಿಶೇಷವಾಗಿ ಮೈಸೂರು ಸಂಸ್ಥಾನದ ಪ್ರತಿಕ್ರಿಯೆಯ ಬಗ್ಗೆ ಪ್ರಸ್ತಾಪ ಮಾಡಿ, ಮೈಸೂರಿನಿಂದ ಒದಗಬಹುದಾದ ಅಡೆತಡೆಗಳ ಬಗ್ಗೆಯೂ ಗಮನ ಸೆಳೆಯಿತು.

ಮೈಸೂರು ಮತ್ತು ಇತರ ಸಂಸ್ಥಾನಗಳು ಈ ಬಗ್ಗೆ ಉತ್ಸಾಹಿತರಾಗಲಿಲ್ಲ. ಆಳುವವರು ಮತ್ತು ಆಳಿಸಿಕೊಳ್ಳುವವರು ಇಬ್ಬರೂ ಈ ವಿಚಾರವನ್ನು ಒಂದು ‘ರಾಜಕೀಯ’ ಸಂಗತಿಯಾಗಿಯೇ ನೋಡಿದರು. ಅದು ಹಾಗಿದ್ದುದೂ ಹೌದು. ಮುಂಬೈ ಪ್ರಾಂತ ಕನ್ನಡಗರಿಗೆ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಪರಿಷತ್ತು ಏಕೀಕರಣದ ವಿಚಾರವಾಗಿ ನಿರ್ಲಿಪ್ತವಾಗಿದ್ದುದು ಸರಿಯೆನಿಸಲಿಲ್ಲ. ಆದ್ದರಿಂದಲೇ ಆಲೂರರೂ ಸೇರಿ ಹಲವಾರು ಜನ ಪರಿಷತ್ತಿನಿಂದ ದೂರ ಸರಿದರು. ಪರಿಷತ್ತು ಒಂದು ಹೆಜ್ಜೆ ಮುಂದೆ ಹೋಗಿ ಏಕೀಕರಣ “ರಾಜಕೀಯ ವಿಚಾರವಾದುದರಿಂದ ಅದರ ಚರ್ಚೆಯಲ್ಲಿ ತಾನು ಭಾಗಿಯಾಗುವುದಿಲ್ಲವೆಂದು” ಬಹಿರಂಗವಾಗಿಯೇ ಘೋಷಿಸಿತು.

ಮುಂಬೈ ಕರ್ನಾಟಕದ ಉತ್ಸಾಹಿಗಳು ಧೃತಿಗೆಡದೆ ತಮ್ಮ ಪ್ರಯತ್ನಗಳನ್ನು ಮುಂದು ವರಿಸಿದರು. ಶಾಸನ ಸಭೆಗಳ ಚುನಾಯಿತ ಪ್ರತಿನಿಧಿಗಳ ಮನವೊಲಿಸಿ ದೆಹಲಿ, ಮದ್ರಾಸ್, ಮುಂಬಯಿ, ಕೊಡಗು ಶಾಸನಸಭೆಗಳಲ್ಲಿ, ಏಕೀಕರಣ ಕುರಿತು ಚರ್ಚೆ, ನಿರ್ಣಯ ಕೈಗೊಳ್ಳುವಂತೆ ಪ್ರೇರೇಪಿಸಿದರು. 1930-33ರ ಅವಧಿಯಲ್ಲಿ ಲಂಡನ್ನಿನಲ್ಲಿ ನಡೆದ ಚಕ್ರಗೋಷ್ಠಿಗಳ ಸಂದರ್ಭದಲ್ಲಿ ಕರ್ನಾಟಕದ ಪರ ಪ್ರಚಾರ ಮಾಡಲು ಬೆನಗಲ್ ರಾಮರಾವ್ ಸೋದರರನ್ನು ಕಳುಹಿಸಿಕೊಡಲಾಯಿತು. ಈ ಚಕ್ರಗೋಷ್ಠಿಯ ವರದಿ ಭಾಷಾವಾರು ಪ್ರಾಂತರಚನೆಗೆ ಅನುಕೂಲಕರವಾಗಿದ್ದುದು ಕನ್ನಡಿಗರಿಗೆ ಹರ್ಷ ತಂದಿತು. ಅದರ ಅನ್ವಯ ಸಿಂಧ್ ಮತ್ತು ಒರಿಸ್ಸಾ ಪ್ರಾಂತಗಳು 1936ರಲ್ಲಿ ಪ್ರತ್ಯೇಕ ಭಾಷಾವಾರು ಪ್ರಾಂತಗಳಾಗಿ ಅಸ್ತಿತ್ವಕ್ಕೆ ಬಂದವು. ಕರ್ನಾಟಕ ವಾದಿಗಳು ಸಹಜವಾಗಿಯೇ ಇದರಿಂದ ಉತ್ತೇಜಿತರಾದರು.

1936 ಕರ್ನಾಟಕ ಏಕೀಕರಣ ಚಳವಳಿಯ ಚರಿತ್ರೆಯಲ್ಲಿ ಮಹತ್ವ ಪಡೆದಿದೆ. ಕಾರಣ ಆ ಸಂವತ್ಸರ ವಿಜಯನಗರ ಸ್ಥಾಪನೆಯಾಗಿ ಆರುನೂರು ಸಂವತ್ಸರಗಳು ಪೂರ್ಣ ಗೊಳ್ಳುತ್ತಿದ್ದವು. ಈ ಸಂದರ್ಭವನ್ನು ಬಳಸಿಕೊಂಡು ಕರ್ನಾಟಕ ಏಕೀಕರಣ ಚಳವಳಿಯನ್ನು ಶಕ್ತಿಯುತಗೊಳಿಸಲು ಧಾರವಾಡ, ಬೆಳಗಾವಿ ಆಸಕ್ತರು ತೀರ್ಮಾನಿಸಿದರು. ಅದನ್ನು ‘ವಿಜಯನಗರ ಷಟ್ ಶತಮಾನೋತ್ಸವ’ವೆಂದು ಹೆಸರಿಸಿ ಮೂರು ದಿನಗಳ ಕಾಲ ವೈಭವದಿಂದ ಉತ್ಸವವನ್ನು ಆಚರಿಸಿದರು. ಒಂದು ಅಂದಾಜಿನ ಪ್ರಕಾರ ಸುಮಾರು ನಲವತ್ತು ಸಾವಿರಜನ ಈ ಉತ್ಸವದಲ್ಲಿ ಪಾಲ್ಗೊಂಡರು. ಅದೇ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಕರ್ನಾಟಕ ಚರಿತ್ರೆ ಸಂಸ್ಕೃತಿ ಮುಂತಾದ ಗತವೈಭವವನ್ನು ವಿವರಿಸುವ ಷಟ್ ಶತಮಾನೋತ್ಸವ, ಸ್ಮರಣ ಸಂಚಿಕೆಗಳನ್ನು ಪ್ರಕಟಿಸಿದರು. ಆಲೂರರು ಸಲಹೆ ಮಾಡಿದಂತೆ ಆಗಿಹೋದ ಕರ್ನಾಟಕದ ಶ್ರೇಷ್ಠ ಪುರುಷರ ಉತ್ಸವಗಳನ್ನು ನಾಡಿನಾದ್ಯಂತ ಆಚರಿಸಿ ಕನ್ನಡಿಗರಲ್ಲಿ ನಾಡು ನುಡಿ ಸಂಸ್ಕೃತಿಗಳ ಅಭಿಮಾನ ಮೂಡಿಸಲು ಕ್ರಮ ಕೈಗೊಳ್ಳಲಾಯಿತು.

ಇತ್ತ ಮೈಸೂರಿನಲ್ಲಿ ಬ್ರಾಹ್ಮಣ, ಬ್ರಾಹ್ಮಣೇತರರು ಅಖಿಲ ಭಾರತಮಟ್ಟದ ರಾಜಕೀಯ ಬೆಳವಣಿಗೆಗಳಿಂದ ಒತ್ತಡಕ್ಕೆ ಸಿಲುಕಿ ಒಂದಾಗದೆ ತಮಗೆ ರಾಜಕೀಯ ಭವಿಷ್ಯವಿಲ್ಲವೆಂದು ಮನಗಂಡರು. 1935ರ ಭಾರತ ಸಂವಿಧಾನ ಸುಧಾರಣೆಗಳ ಅನ್ವಯ ಬ್ರಿಟಿಷ್ ಪ್ರಾಂತ್ಯಗಳಲ್ಲಿ ಪ್ರಾಂತೀಯ ಸ್ವಾಯತ್ತ ಸರ್ಕಾರಗಳು ರಚಿತವಾದವು. ಬಹುತೇಕ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಬಹುಮಖಗಳಿಸಿ ಅಧಿಕಾರಗಳಿಸಿಕೊಂಡಿತು. ಆದರೆ ದೇಶೀ ಸಂಸ್ಥಾನಿಕರಿಗೆ ಈ ಸೌಲಭ್ಯವಿರಲಿಲ್ಲ. ಜವಾಬ್ದಾರಿ ಸರ್ಕಾರಕ್ಕಾಗಿ ಒತ್ತಾಯಿಸುತ್ತ ರಾಷ್ಟ್ರೀಯ ಕಾಂಗ್ರೆಸ್ಸಿನ ಬೆಂಬಲವಿಲ್ಲದೆ ತಮ್ಮ ಮಿತಿಯಲ್ಲೇ ತೊಳಲಾಡುತ್ತಿದ್ದ ಮೈಸೂರಿನ ಬ್ರಾಹ್ಮಣ ಬ್ರಾಹ್ಮಣೇತರರು ಈಗ ಒಟ್ಟಾಗಲು ತೀರ್ಮಾನಿಸಿ ಮೈಸೂರು ಕಾಂಗ್ರೆಸ್ ಸಮಿತಿಯನ್ನು ರಚಿಸಿಕೊಂಡರು. ಇದರ ಹಿನ್ನೆಲೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ 1937ರಲ್ಲಿ ಸಂಸ್ಥಾನಗಳ ಬಗೆಗಿನ ತನ್ನ ಧೋರಣೆ ಬದಲಾಯಿಸಿ ಅಲ್ಲಿಯ ಕಾಂಗ್ರೆಸ್ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ ಎಂಬ ವದಂತಿಯೂ ಇತ್ತು. ಅದೇನೇ ಇರಲಿ ಮೈಸೂರು ಕಾಂಗ್ರೆಸ್ಸಂತೂ ಅಸ್ತಿತ್ವಕ್ಕೆ ಬಂತು. ಮತ್ತು ಒತ್ತಡ ಹೇರಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸಹಾನುಭೂತಿ, ಬೆಂಬಲಗಳನ್ನು ಗಳಿಸಿಕೊಂಡಿತು. ಅನಂತರ ತಾತ್ವಿಕವಾಗಿ ಯಾದರೂ ಕೆಪಿಸಿಸಿ ಜೊತೆಗಿದ್ದ ನಂಟನ್ನು ಕಡಿದುಕೊಂಡಿತು. ಇದರಿಂದ ಮುಂಬೈ ಪ್ರಾಂತದ ಕನ್ನಡಿಗರಿಗೆ ಆತಂಕ ಹೆಚ್ಚಾಯಿತು. ಮೊದಲೇ ನಿರಾಸಕ್ತರಾಗಿದ್ದ ಮೈಸೂರಿಗರು ಈಗ ಹೆಚ್ಚು ನಿರ್ಲಿಪ್ತರಾಗಬಹುದೆಂಬ ಭೀತಿ ಅವರನ್ನು ಕಾಡಿರಲು ಸಾಕು. ಬ್ರಾಹ್ಮಣೇತರ ಪ್ರಜಾಸಂಯುಕ್ತಪಕ್ಷ ಕಾಂಗ್ರೆಸ್ಸಿನೊಂದಿಗೆ ವಿಲೀನವಾಗುವ ಮುಂಚೆಯೇ ಏಕೀಕರಣದ ಬಗ್ಗೆ ನಿರ್ಣಯವೊಂದನ್ನು ಮಾಡಿತು. ಆದರೆ ಎಲ್ಲ ಪ್ರದೇಶಗಳನ್ನು ಒಳಗೊಳ್ಳುವ ತೀರ್ಮಾನವೋ ಅಥವಾ ಬ್ರಿಟಿಷ್ ಕರ್ನಾಟಕಕ್ಕೆ ಸೀಮಿತವಾಗುವಂಥದೋ ಸ್ಪಷ್ಟವಿಲ್ಲ. ಆದರೆ 1938ರಲ್ಲಿ ಶಿವಮೂರ್ತಿ ಶಾಸ್ತ್ರಿ ಮತ್ತು ಬೆನಗಲ್ ರಾಮರಾವ್ ಇವರ ಪ್ರಯತ್ನಗಳಿಂದ ಬೆಂಗಳೂರಿನಲ್ಲಿ ಏಕೀಕರಣ ಸಂಘವೊಂದು ಪ್ರಾರಂಭವಾಯಿತು. ಈ ಸಂಘ ಗಡಿನಾಡಿನಲ್ಲಿ ತನ್ನ ಚಟುವಟಿಕೆ ಆರಂಭಿಸಿ ಮದರಾಸು ಪ್ರಾಂತದ ಕನ್ನಡಿಗರ ನಡುವೆ ಏಕೀಕರಣದ ಬಗ್ಗೆ ಪ್ರಚಾರ ಮಾಡಿತು. ಏನೇ ಆದರೂ ಮುಂಬೈ ಕರ್ನಾಟಕ ಮತ್ತು ಮೈಸೂರು ಸಂಸ್ಥಾನಗಳ ನಡುವಿನ ಸಂಶಯ ನಿವಾರಣೆಯಾಗದೆ ಹೆಚ್ಚತ್ತಲೇ ಹೋಯಿತು.

ಮುಂಬೈ, ಮದ್ರಾಸ್ ಮತ್ತು ಕೊಡಗು ಶಾಸನ ಸಭೆಗಳಲ್ಲಿ ಭಾಷಾವಾರುಪ್ರಾಂತ ಕುರಿತ ನಿರ್ಣಯಗಳು ಒಕ್ಕೊರಲಿನಿಂದ ಅಂಗೀಕರಿಸಲ್ಪಟ್ಟವು. ಆದರೆ ಮೈಸೂರು ಪ್ರತಿನಿಧಿ ಸಭೆಗಳಲ್ಲಿ ಆ ಪ್ರಯತ್ನಗಳು ಆಗಲಿಲ್ಲ. ಅಷ್ಟೇ ಅಲ್ಲ ಮುಂಬೈ ಕರ್ನಾಟಕದಲ್ಲಿ ನಡೆಯುತ್ತಿದ್ದ ಏಕೀಕರಣ ಸಭೆ ಸಮಾರಂಭಗಳು ಅಲ್ಲಿ ಅಂಗೀಕಾರವಾಗುತ್ತಿದ್ದ ನಿರ್ಣಯಗಳ ಬಗ್ಗೆ ಮೈಸೂರಿನವರು ಪ್ರತಿಕ್ರಿಯಿಸುತ್ತಿರಲಿಲ್ಲ.

ಎರಡನೆ ಮಹಾಯುದ್ಧದ ಪ್ರಾರಂಭ ಮತ್ತು ಭಾರತವು ಅದಕ್ಕೆ ಪ್ರತಿಕ್ರಿಯಿಸಿದ ರೀತಿ ಏಕೀಕರಣ ಚಳವಳಿ ಒಂದು ರೀತಿಯ ಬಿಡುವು ಕೊಟ್ಟಿತು. ಕಾಂಗ್ರೆಸ್ ಮಂತ್ರಿ ಮಂಡಲಗಳು ರಾಜೀನಾಮೆ ನೀಡಿದವು. 1942ರಲ್ಲಿ ಚಲೇಜಾವ್ ಚಳವಳಿ ಪ್ರಾರಂಭವಾಗಿ, ಕಾಂಗ್ರೆಸ್ ಮತ್ತು ಅದರ ಅಂಗಸಂಸ್ಥೆಗಳ ಮೇಲೆ ನಿಷೇಧ ಹೇರಲಾಯಿತು. ಈ ಸನ್ನಿವೇಶದಲ್ಲಿ ಸಾಹಿತ್ಯಕ ಸಾಂಸ್ಕೃತಿಕ ಸಂಘಟನೆಗಳೇ ರಾಷ್ಟ್ರೀಯತೆ ಮತ್ತು ಏಕೀಕರಣವನ್ನು ಸಾಕಾರಗೊಳಿಸಬಲ್ಲದಾಗಿತ್ತು. ಆದ್ದರಿಂದ ರಾಜಕೀಯ ಏಕೀಕರಣದಲ್ಲಿ ಅಚಲನಂಬಿಕೆ ಯಿದ್ದವರು ಕಾಂಗ್ರೆಸ್ಸಿನ ಚಲೇಜಾವ್ ಚಳವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದರು. ಈ ಪ್ರಹಸನ ಮುಗಿದಿದ್ದು 1946ರಲ್ಲಿ, ಬ್ರಿಟಿಷ್ ಮತ್ತು ರಾಷ್ಟ್ರನಾಯಕರ ನಡುವೆ ಸಂಧಾನವೇರ್ಪಟ್ಟು ಭಾರತ ಸ್ವತಂತ್ರವಾಗುವುದು ಖಚಿತವಾದ ಮೇಲೆ. ಈ ನಡುವೆ ಏಕೀಕರಣ ಸಮಾವೇಶಗಳು, ಸಾಹಿತ್ಯ ಸಮ್ಮೇಳನಗಳು ಅಲ್ಲಲ್ಲಿ ನಡೆದೇ ಇದ್ದವು. ಮಾಮೂಲಿನಂತೆ ಅವು ತಮ್ಮ ನಿರ್ಣಯಗಳನ್ನು ಮಂಡಿಸುತ್ತಲೂ, ಅಂಗೀಕರಿಸುತ್ತಲೂ, ಜನರಲ್ಲಿ ಆ ಬಗ್ಗೆ ಆಸಕ್ತಿ ಕೆರಳಿಸುತ್ತಲೂ ಚಟುವಟಿಕೆಯಿಂದಿದ್ದವು. ಈ ನಡುವೆ ಮಹಾರಾಷ್ಟ್ರ, ಆಂಧ್ರ, ಕೇರಳ ಏಕೀಕರಣ ಸಮಿತಿಗಳವರು ಕನ್ನಡಿಗರು ತಮಗೆ ಸೇರಬೇಕೆಂದು ಬಯಸುತ್ತಿದ್ದ ಪ್ರದೇಶಗಳ ಬಗ್ಗೆ ತಗಾದೆ ಮಾಡಿ ನಿರ್ಣಯ ಕೈಗೊಂಡಾಗ ಏಕೀಕರಣವಾದಿಗಳು ಪ್ರತಿಭಟಿಸುತ್ತಿದ್ದರು. ಈ ರೀ ನಡೆದ ಒಂದು ಘಟನೆ ಆಂಧ್ರ ಮಹಾಸಭೆಗೆ ಸಂಬಂಧಿಸಿದೆ. 1942ರಲ್ಲಿ ಈ ಸಭೆಯನ್ನು ಬಳ್ಳಾರಿಯಲ್ಲಿ ಸಂಘಟಿಸಬೇಕೆಂದು ತೆಲುಗರು ಬಯಸಿದರು. ಆದರೆ ಕರ್ನಾಟಕ ಏಕೀಕರಣವಾದಿಗಳು ಬೃಹತ್ ಪ್ರತಿಭಟನೆ ನಡೆಸಿ ಅದನ್ನು ಆಗದಂತೆ ತಡೆದರು.

ಸ್ವಾತಂತ್ರ್ಯ ಸಂಸ್ಥಾನಗಳು

ಕಾಂಗ್ರೆಸ್ ಪಕ್ಷ ಮತ್ತೆ ಪ್ರಾಂತಗಳ ಚುನಾವಣೆಗಳಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡಿತ್ತು. ಭಾರತ 1947ರಲ್ಲಿ ಸ್ವತಂತ್ರವಾಗುವುದು ಖಚಿತವಾಗಿತ್ತು. ರಾಷ್ಟ್ರಮಟ್ಟದಲ್ಲಿ ಸಂವಿಧಾನ ಘಟನಾ ಸಮಿತಿಗೆ ಚುನಾವಣೆ ನಡೆಸಲು ಸಿದ್ಧತೆ ಆಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಳ್ಳುವುದೂ ನಿಶ್ಚಿತವಾಗಿತ್ತು. ಈ ಎಲ್ಲ ಬೆಳವಣಿಗೆ ನಿರೀಕ್ಷೆಗಳು ಏಕೀಕರಣ ಚಳವಳಿಯ ಮೇಲೆ ತೀವ್ರತರ ಪ್ರಭಾವ ಬೀರಿದವು. ಮುಂಬೈ ಕರ್ನಾಟಕದಲ್ಲಿ ದೇಶೀ ಸಂಸ್ಥಾನಗಳ ಸೇರ್ಪಡೆ ಬಗ್ಗೆ ಅವರಿಗೆ ಸಂದೇಹಗಳಿದ್ದವು.

ಹತ್ತನೆಯ ಏಕೀಕರಣ ಸಮಾವೇಶ ಬಾಂಬೆನಗರದಲ್ಲಿ ಕೂಡಿತು. ಪ್ರಾಂತ ಮುಖ್ಯಮಂತ್ರಿ ಬಿ.ಜಿ.ಖೇರ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾವೇಶವನ್ನು ಉದ್ಘಾಟಿಸಲು ಒಪ್ಪಿದ್ದವರು ಭಾರತದ ‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಬಾಯಿ ಪಟೇಲ್. ಪಟೇಲರ ಅನುಪಸ್ಥಿತಿ ಯಲ್ಲಿ ಅವರ ವಿಚಾರಗಳನ್ನು ಓದಿದವರು ರಂ.ರಾ.ದಿವಾಕರ್. ಪಟೇಲ್ ಮತ್ತು ಖೇರ್ ಇಬ್ಬರೂ ಕರ್ನಾಟಕ ಏಕೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸ್ವಾತಂತ್ರ್ಯ ಬಂದು ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ನಂತರ ಬಹುದಿನಗಳ ಈ ಬೇಡಿಕೆ ಈಡೇರುತ್ತದೆಂಬ ಆಶ್ವಾಸನೆಯನ್ನು ಅವರು ಕೊಟ್ಟರು. ಈ ಬೆಳವಣಿಗೆಗಳನ್ನು ನಿರ್ಣಯ ಗಳು ಮೈಸೂರಿನಲ್ಲಿ, ಹೈದರಾಬಾದ್ ಸಂಸ್ಥಾನದಲ್ಲಿ ಗೊಂದಲಗಳನ್ನು ಸೃಷ್ಟಿಸಿದವು. ಬ್ರಿಟಿಷ್ ಭಾರತ ಸಂಪೂರ್ಣ ಸ್ವಾತಂತ್ರದ ಕಡೆ ದಾಪುಗಾಲು ಹಾಕಿ ಗುರಿಯನ್ನು ಮುಟ್ಟೇ ಬಿಟ್ಟಿತ್ತೆನ್ನುವಾಗ, ಈ ಸಂಸ್ಥಾನಿಕರು ಈ ಗುರಿಯಿಂದ ಸಾವಿರಾರು ಮೈಲು ದೂರವಿದ್ದಂತೆ ಭಾಸವಾಗುತ್ತಿತ್ತು. ಅವರ ಆಳರಸರು ಯಾವ ತೀರ್ಮಾನ ತೆಗೆದುಕೊಳ್ಳುವರೋ, ಬ್ರಿಟಿಷ್ ಸರ್ಕಾರ ಏನು ಮಾಡಲಿದೆಯೋ, ಎಲ್ಲಕ್ಕೂ ಮುಖ್ಯವಾಗಿ ಕಾಂಗ್ರೆಸ್‌ನ ರಾಷ್ಟ್ರನಾಯಕರ ನಿಲುವು ಏನಾಗು ವುದೋ ಸಂಸ್ಥಾನದ ಜನಸಮುದಾಯ ಹೇಗೆ ಪ್ರತಿಕ್ರಿಯಿಸುವುದೋ. ಇವೆಲ್ಲಾ ಅವರ ಮುಂದಿದ್ದ ಪ್ರಶ್ನೆಗಳು.

ಬಾಂಬೆ ಸಮಾವೇಶದ ತರುವಾಯ ಬೆಂಗಳೂರಿನ ಏಕೀಕರಣ ಸಂಘ ಮತ್ತು ಕೆಪಿಸಿಸಿ ಎರಡೂ ಸೇರಿ ದಾವಣಗೆರೆಯಲ್ಲಿ ‘ಅಖಿಲ ಕರ್ನಾಟಕ ಮಹಾಧಿವೇಶನ’ವನ್ನು ಸಂಘಟಿಸಿ ದರು. ಮೈಸೂರಿನ ಹಲವಾರು ಜನ ಏಕೀಕರಣದ ಬಗ್ಗೆ ಆಸಕ್ತಿ ವಹಿಸಿದ್ದು, ಸಮ್ಮೇಳನಕ್ಕೆ ದುಡಿದದ್ದು ಮತ್ತು ಮೈಸೂರು ಪ್ರಾಂತ್ಯದ ವ್ಯಾಪ್ತಿಯಲ್ಲಿ ಸಮಾವೇಶ ನಡೆಸಿದ್ದು ಇದು ಮೊದಲ ಬಾರಿ. ಅಂತೆಯೇ ಅದು ಕೊನೆಯ ಬಾರಿಯೂ ಹೌದು. ಈ ಘಟನೆಗೆ ಒಂದು ಬಹುಮುಖ್ಯ ರಾಜಕೀಯ ಹಿನ್ನೆಲೆಯೂ ಇತ್ತು. ಈ ಮಹಾಧಿವೇಶನ ನಡೆದದ್ದು ಆಗಸ್ಟ್ 1946ರಲ್ಲಿ. ಈಗಾಗಲೇ ವಿವರಿಸಿದಂತೆ ರಾಷ್ಟ್ರೀಯ ಕಾಂಗ್ರೆಸ್ ಈಗ ನಿರ್ಣಾಯಕ ಪಾತ್ರ ವಹಿಸಲು ಸಜ್ಜಾಗಿತ್ತು. ಸ್ವತಂತ್ರ ಭಾರತದ ಸಂವಿಧಾನದಿಂದ ಮೊದಲ್ಗೊಂಡು ಭಾರತದ ಎಲ್ಲ ಪ್ರಾಂತ್ಯ, ನಾಯಕರ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಅದಕ್ಕೆ ಪ್ರಾಪ್ತ ವಾಗುವುದರಲ್ಲಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಬಾಂಬೆ ಕರ್ನಾಟಕದ ಕೆಲವು ನಾಯಕರು ಸರ್ದಾರ್ ಪಟೇಲ್ ಮತ್ತು ನೆಹರೂಗಳಿಗೆ ಹತ್ತಿರದವರಾಗಿದ್ದರು. ನೆಹರೂ-ಪಟೇಲರೇ ಭಾರತದ ಶಕ್ತಿಕೇಂದ್ರಗಳೆಂದು ಎಲ್ಲರಿಗೂ ತಿಳಿದಿತ್ತು. ಆದರೇನು ಮಾಡುವುದು, ಮೈಸೂರಿಗರೂ ಸೇರಿದಂತೆ ದೇಶೀ ಸಂಸ್ಥಾನಿಕರ ಭವಿಷ್ಯ ಅನಿಶ್ಚಿತವಾಗಿತ್ತು. ಅವರಿನ್ನೂ ರಾಜಶಾಹಿಯ ಅಧಿಕಾರದಲ್ಲೇ ತೊಳಲಾಡಬೇಕಾಗಿತ್ತು. ಸ್ವಾಯತ್ತ ಸ್ವತಂತ್ರ ಸರ್ಕಾರವಿರಲಿ, ಜವಾಬ್ದಾರಿ ಸರ್ಕಾರಗಳೂ ಅವರಿಗೆ ಇನ್ನೂ ಮರೀಚಿಕೆಯಾಗಿಯೇ ಉಳಿದಿತ್ತು. ಸ್ವಾತಂತ್ರ್ಯ ಬಂದರೂ ಅವರ ಕನಸು ನನಸಾಗುವ ಸಾಧ್ಯತೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ದಾವಣಗೆರೆಯ ಏಕೀಕರಣ ಸಮಾವೇಶ ಅರ್ಥಪೂರ್ಣವಾಗಿ ಕಾಣುತ್ತದೆ. ಮುಂಬೈ ಕರ್ನಾಟಕದವರಿಗೆ ಕೇವಲ ಬ್ರಿಟಿಷ್ ಪ್ರಾಂತಗಳನ್ನೊಳಗೊಂಡ ಕರ್ನಾಟಕ ತೀರಾ ಕಿರಿದು ಮತ್ತು ಆರ್ಥಿಕವಾಗಿ ಸಬಲವಾಗುವಂಥ ರಾಜ್ಯವಾಗುತ್ತದೆನ್ನುವ ಖಾತ್ರಿಯಿರಲಿಲ್ಲ. ಮೈಸೂರು, ಹೈದರಾಬಾದ್ ಮತ್ತಿತರ ಸಂಸ್ಥಾನಿ ಕನ್ನಡ ಪ್ರದೇಶಗಳನ್ನು ಒಳಗೊಳ್ಳದ ಕರ್ನಾಟಕ ತೀರಾ ಚಿಕ್ಕದೂ, ದುರ್ಬಲವೂ ಆಗುತ್ತದೆಂದು ಅವರಿಗೆ ಭಯ ಕಾಡಿರಲೂ ಸಾಕು. ಮೈಸೂರನ್ನೊಳಗೊಂಡ ದೇಶೀ ಸಂಸ್ಥಾನದವರಿಗಿದ್ದ ಜರೂರುಗಳನ್ನು ಆತಂಕಗಳನ್ನು ಈಗಾಗಲೇ ಚರ್ಚಿಸಲಾಗಿದೆ. ಮೈಸೂರಿಗರ ಮುಂದಿದ್ದ ತತ್‌ಕ್ಷಣದ ರಾಜಕೀಯ ತುರ್ತು ಎಂದರೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಭಾವೀ ನಾಯಕರ ವರ್ಚಸ್ಸನ್ನು ಬಳಸಿಕೊಂಡು, ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರಿ ಆ ಮೂಲಕ ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವನ್ನು ಡೆಯುವುದು. ಅದಕ್ಕಾಗಿಯಾದರೂ ಕೆಪಿಸಿಸಿಯವರಿಗೆ ಪ್ರಿಯವಾದ ಏಕೀಕರಣ ಚಳವಳಿಗೆ ಬೆಂಬಲ ವ್ಯಕ್ತಪಡಿಸುವುದು. ಎರಡನೆಯದಾಗಿ ಮೈಸೂರು ಸಂಸ್ಥಾನದವರಿಗೆ ರಾಜಕೀಯ ಭವಿಷ್ಯ ಎಷ್ಟು ಜಟಿಲವಾಗಿತ್ತೆಂದರೆ, ದೇಶೀ ರಾಜರು ಸ್ವತಂತ್ರವಾಗಿಯೇ ಉಳಿಯಲು ತೀರ್ಮಾನಿಸಿದರೇನು ಮಾಡುವುದು ಅಥವಾ ಒಕ್ಕೂಟ ಸೇರಿದರೂ ತಮ್ಮ ನಿರಂಕುಶ ಆಳ್ವಿಕೆಯನ್ನು ಮುಂದುವರಿಸಿದರೇನು ಮಾಡುವುದು. ಗಾಂಧೀಜಿ-ಪಟೇಲ್ ಮುಂತಾದವರಿಗೆ ಮೈಸೂರಿನ ಬಗ್ಗೆ ಮಹಾರಾಜರ ಬಗ್ಗೆ ಇನ್ನಿಲ್ಲದ ವ್ಯಾಮೋಹ. ಗಾಂಧೀಜಿಯಂತೂ ಮೈಸೂರನ್ನು ರಾಮರಾಜ್ಯ, ಮಹಾರಾಜರನ್ನು ರಾಜರ್ಷಿಯೆಂದು ಹೊಗಳಿ ಲೇಖನವನ್ನೂ ಬರೆದಿದ್ದರು. ಗಾಂಧಿ ಮತ್ತು ಕಾಂಗ್ರೆಸ್ ದೇಶೀ ಚಳವಳಿಗಾರರಿಗೆ ಮಹಾರಾಜರ ವಿರುದ್ಧ ಬೆಂಬಲ ಕೊಡಬಹುದೆ? ಇಷ್ಟಕ್ಕೂ ಅಂಥ ಸನ್ನಿವೇಶ ಬಂದರೆ ಮಹಾರಾಜರ ಬಗ್ಗೆ ಅಪಾರನಿಷ್ಠೆಯಿಂದಿರುವ ಮೈಸೂರಿನ ಜನತೆ ತಮಗೆ ಬೆಂಬಲ ಕೊಡಬಹುದೇ? ಈ ರೀತಿಯ ಸಂಶಯಗಳು ಅವರನ್ನು ಕಾಡಿರಲು ಸಾಕು. ಇವು ಕೇವಲ ಊಹೆಗಳಲ್ಲ. 1946ರ ಭಾರತದ ಸಂಕೀರ್ಣ ರಾಜಕೀಯ ಸ್ಥಿತಿ ಅದು. ಆದ್ದರಿಂದಲೇ ಇರಬೇಕು ಏಕೀಕರಣದ ಬಗ್ಗೆ ಎಂದೂ ಸೊಲ್ಲೆತ್ತದವರು, ಅದನ್ನು ಆನಂತರ ತೀವ್ರವಾಗಿ ಪ್ರತಿಭಟಿಸಿದವರು, ಏಕೀಕರಣಕ್ಕೆ ಪರೋಕ್ಷ ಬೆಂಬಲ ಕೊಟ್ಟು ಮುಖ್ಯಮಂತ್ರಿಗಳ ಪದಚ್ಯುತಿ ಮಾಡಿಸಿದವರು ಎಲ್ಲರೂ ದಾವಣಗೆರೆ ಸಮಾವೇಶದಲ್ಲಿದ್ದರು.

ದಾವಣಗೆರೆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ಶ್ರೀ ಎಂ.ಪಿ.ಪಾಟೀಲರು. ಮೈಸೂರಿನವರ ಈ ಉತ್ಸಾಹವನ್ನು ಅವರು ಗಮನಿಸದೇ ಹೋಗಲಿಲ್ಲ. ಆ ಬಗ್ಗೆ ಮಾತನಾಡುತ್ತ ‘ಮೊದಲ ಬಾರಿಗೆ ಇಷ್ಟು ಜನ ಮೈಸೂರಿಗರು ಮತ್ತು ಮುಂಬೈ ಕರ್ನಾಟಕದವರು ಒಟ್ಟಿಗೆ ಸೇರಿದ್ದಾರೆ’ ಎಂದು ಅರ್ಥಗರ್ಭಿತವಾಗಿ ಹೇಳಿಯೂಬಿಟ್ಟರು. ಆದರೆ ಈ ಸಭೆ ಎಂಥ ಸಂದಿಗ್ಧಗಳನ್ನು ಎದುರಿಸುತ್ತಿತ್ತು ಎಂಬುದು ಮತ್ತು ಎಂಥಾ ಭಯ, ಸಂಶಯಗಳು ಎಲ್ಲರನ್ನೂ ಕಾಡುತ್ತಿದ್ದವೆಂಬುದು ಅಲ್ಲಿ ಅಂಗೀಕರಿಸಲಾದ ನಿರ್ಣಯಗಳಲ್ಲಿ ಎದ್ದುಕಾಣುತ್ತದೆ. ಸಮ್ಮೇಳನದಲ್ಲಿ ಬ್ರಿಟಿಷ್ ಪ್ರಾಂತ್ಯಗಳಿಗೆ ಸೀಮಿತ ಗೊಳಿಸಿದಂತೆ ಏಕೀಕರಣ ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯದ ಎರಡನೆಯ ಭಾಗ ದೇಸೀ ರಾಜ್ಯಗಳು, ಜವಾಬ್ದಾರಿ ಸರ್ಕಾರ ಪಡೆದುಕೊಂಡ ನಂತರ ಕರ್ನಾಟಕವನ್ನು ಸೇರಿಕೊಳ್ಳಬಹುದೆಂದು ಹೇಳಿತು. ಈ ಬಗ್ಗೆ ಮೈಸೂರಿಗರು ನಿರಾಶರಾದದ್ದೇ ಅಲ್ಲ, ಹಲವಾರು ಜನ ಆಕ್ರೋಶ ವ್ಯಕ್ತಪಡಿಸಿದರು. ಅವರ ಈ ನಿರಾಶೆ ಮೈಸೂರನ್ನು ಏಕೀಕೃತವಾಗಬೇಕಾದ ಪ್ರಾಂತಕ್ಕೆ ಸೇರಿಸಲಿಲ್ಲ ಎಂಬ ಕಾರಣಕ್ಕಿಂತ, ಜವಾಬ್ದಾರಿ ಸರ್ಕಾರ ಪಡೆದುಕೊಂಡ ನಂತರ ಸೇರಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಅನ್ನಿಸುತ್ತದೆ. ಕೆಂಗಲ್ ಹನುಮಂತಯ್ಯ, ಹೆಚ್.ಸಿ. ದಾಸಪ್ಪ ಮುಂತಾದವರು ಈ ನಿರ್ಣಯವನ್ನು ತೀವ್ರವಾಗಿ ವಿರೋಧಿಸಿದರು. ಈ ಆಕ್ರೋಶವನ್ನು ಶಮನಗೊಳಿಸಲೋ ಎಂಬಂತೆ, ಕೆಪಿಸಿಸಿ ಮೈಸೂರಿ ನವರು ಜವಾಬ್ದಾರಿ ಸರ್ಕಾರಕ್ಕಾಗಿ ನಡೆಸುವ ಹೋರಾಟಕ್ಕೆ ಬೆಂಬಲ ಕೊಡುವುದಾಗಿ ಆಶ್ವಾಸನೆಯನ್ನೂ ಕೊಡಬೇಕಾಯಿತು. ದಾವಣಗೆರೆಯಲ್ಲಾದ ಮತ್ತೊಂದು ನಿರ್ಣಯವೆಂದರೆ ದೆಹಲಿ ಮಟ್ಟದಲ್ಲಿ ಏಕೀಕರಣ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಮೂರುಜನರ ಒಂದು ಸಮಿತಿಯನ್ನು ರಚಿಸಲಾಯಿತು. ಕೆಪಿಸಿಸಿಯ ಮಾರ್ಗದರ್ಶನ ಮತ್ತು ಒಪ್ಪಿಗೆ ಯೊಂದಿಗೆ ಈ ಸಮಿತಿ ತನ್ನ ತಂತ್ರಗಾರಿಕೆ ರೂಪಿಸಬೇಕಾಗಿತ್ತು.

1947ನೆಯ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು. ಭಾರತ ಇಬ್ಭಾಗವಾಗಿ, ಕೋಮುದಳ್ಳುರಿಯ ನರಳುವಿಕೆಯೊಂದಿಗೇ, ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡಿಗರು ಈಗ ಇನ್ನೊಂದು ರೀತಿಯ ಸಂಕಷ್ಟದಲ್ಲಿ ತೊಳಲಾಡಲಾರಂಭಿಸಿದರು. ಕೊಡಗು ಕನ್ನಡ ಪ್ರಾಂತಗಳ ಕನ್ನಡಿಗರೇನೋ ಅಪರಿಮಿತ ಸಂತೋಷಪಟ್ಟರು. ಆದರೆ ಹೈದರಾಬಾದ್, ಮೈಸೂರು ಮತ್ತಿತರ ಸಂಸ್ಥಾನಗಳ ಕನ್ನಡಿಗರು ಅತಂತ್ರ ಸ್ಥಿತಿಯಲ್ಲೇ ಮುಂದುವರಿಯಬೇಕಾಯಿತು. ಹೈದರಾಬಾದ್ ಸ್ವತಂತ್ರವಾಗುವುದಾಗಿ ಸುದ್ದಿ ಹಬ್ಬಿತು. ಮೈಸೂರು ಮಹಾರಾಜರು ರಾಷ್ಟ್ರಬಾವುಟವನ್ನು ಹಾರಿಸದೆ ಮೀನಮೇಷ ಎಣಿಸತೊಡಗಿದರು. ಕಾಂಗ್ರೆಸ್ಸಿಗರು ಮಹಾರಾಜರ ಮೇಲೆ ಒತ್ತಡ ಹೇರಲು ‘ಮೈಸೂರು ಚಲೋ’ ಚಳವಳಿ ನಡೆಸಿ ಅದರ ಅಂಗವಾಗಿ ಅಮಾಯಕರ ಸಾವು ನೋವುಗಳನ್ನು ಕಂಡು, ಜವಾಬ್ದಾರಿ ಸರ್ಕಾರವನ್ನು ಪಡೆದುಕೊಂಡರು.  ಆದರೆ ರಾಜಶಾಹಿಯ ಪಳಯುಳಿಕೆಯಾಗಿ ದಿವಾನರನ್ನು ತನ್ನ ಮಂತ್ರಿಮಂಡಳದಲ್ಲಿ ಇಟ್ಟುಕೊಳ್ಳಬೇಕಾಯಿತು. ಇಷ್ಟಕ್ಕೂ ಮೈಸೂರಿಗರು ಮಹಾ ರಾಜರನ್ನು ಅಲ್ಲಿಯತನಕ ಪೂರ್ಣಾಧಿಕಾರ ಬಿಟ್ಟುಕೊಡಿ ಎಂದೇನೂ ಕೇಳಿರಲೂ ಇಲ್ಲ. ಜೊತೆಗೆ ಸ್ವತಂತ್ರ ಭಾರತ ರಚಿಸುತ್ತಿದ್ದ ಸಂವಿಧಾನ ದೇಶೀ ಸಂಸ್ಥಾನಗಳಿಗೂ ಪೂರ್ಣ ಅನ್ವಯವಾಗುವ ಬಗ್ಗೆಯೂ ಸಂಶಯವಿತ್ತು. ಈ ಸಂಶಯಕ್ಕೆ ಪುಷ್ಟಿಕೊಡುವಂತೆ ಮೈಸೂರಿಗೆ ಒಂದು ಸಂವಿಧಾನ ರಚಿಸಬೇಕೆಂಬ ಪ್ರಯತ್ನವೂ ನಡೆದಿತ್ತು. ಅದೇನೇ ಇರಲಿ ಮೈಸೂರಿನ ಮೊದಲ ಚುನಾಯಿತ ಮುಖ್ಯಮಂತ್ರಿಯಾಗಿ ಕೆ.ಸಿ.ರೆಡ್ಡಿಯವರು 24.10. 1947ರಂದು ಅಧಿಕಾರ ವಹಿಸಿಕೊಂಡರು.

ಮುಂಬೈ-ಮದರಾಸು-ಕೊಡಗು ಶಾಸನಸಭೆಗಳು ಒಮ್ಮತದಿಂದ ಕರ್ನಾಟಕ-ಆಂಧ್ರ-ಕೇರಳ ರಾಜ್ಯಗಳ ಏಕೀಕರಣದ ಬಗ್ಗೆ ನಿರ್ಣಯಕೈಗೊಂಡವು. ಅಲ್ಲಿಯ ಏಕೀಕರಣವಾದಿಗಳು ದಿನೇದಿನೇ ಚಳವಳಿಯನ್ನು ಕ್ರಿಯಾತ್ಮಕಗೊಳಿಸುತ್ತ ಮುನ್ನಡೆದರು. ಆದರೆ ಮೈಸೂರು ಶಾಸನಸಭೆ ಆ ಬಗ್ಗೆ ಚಕಾರವೆತ್ತದೆ ಮೌನವಹಿಸಿತು. ಮೈಸೂರೇತರ ಕನ್ನಡಿಗರು ಸಹಜ ವಾಗಿಯೇ ವ್ಯಗ್ರರಾದರು. ಪ್ರತ್ಯೇಕ ಮೈಸೂರು ಕಾಂಗ್ರೆಸ್ ಘಟಕದ ಮುಂದುವರಿಕೆಯೂ ಹಲವಾರು ಸಂಶಯಗಳಿಗೆ ಕಾರಣವಾಯಿತು. ಆಂಧ್ರ-ಕೇರಳ-ಮಹಾರಾಷ್ಟ್ರದ ಏಖೀಕರಣವಾದಿಗಳು, ಕರ್ನಾಟಕ ಏಕೀಕರಣವಾದಿಗಳು ತಮ್ಮ ಪ್ರಾಂತ್ಯಕ್ಕೆ ಸೇರಬೇಕೆಂದು ಒತ್ತಾಯಿಸುತ್ತಿದ್ದ ಹಲವು ಜಿಲ್ಲೆ-ತಾಲ್ಲೂಕುಗಳನ್ನು ತಮ್ಮ ಭಾಷಾವಾರು ಪ್ರಾಂತಗಳಿಗೆ ಸೇರಿಸಬೇಕೆಂದು ಒತ್ತಾಯ ಪಡಿಸಲಾರಂಭಿಸಿದರು. ಆಂಧ್ರರು ಬಳ್ಳಾರಿಯನ್ನೂ, ಮಹಾರಾಷ್ಟ್ರದವರು ಬೆಳಗಾವಿ ಮತ್ತು ಉತ್ತರ ಕನ್ನಡವನ್ನೂ, ಕೇರಳದವರು, ದಕ್ಷಿಣ ಕನ್ನಡ ಜೆಲ್ಲೆಯನ್ನೂ ತಮ್ಮ ಪರಿಕಲ್ಪನೆಯ ಪ್ರಾಂತಗಳಿಗೆ ಸೇರಬೇಕೆಂದು ನಿರ್ಣಯಗಳನ್ನು ಮಾಡುತ್ತಾ, ದೆಹಲಿಯ ಮೇಲೆ ರಾಜಕೀಯ ಒತ್ತಡ ಹೇರುತ್ತಿದ್ದರು. ಈ ಒತ್ತಡಗಳಿಗೆ ಪ್ರತಿ ಒತ್ತಡ ತರುವ ಕಾಯಕ ಕನ್ನಡಿಗರದಾಯಿತು. ಡಿಸೆಂಬರ್ 1947ರಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನ ಕಾಸರಗೋಡಿನಲ್ಲಿ ನಡೆದು ಕೇರಳದವರಿಗೆ ಒಂದು ರೀತಿಯ ಪ್ರತ್ಯುತ್ತರ ನೀಡಿ ಕೇಂದ್ರ ಸರ್ಕಾರದ ಮೇಲೆ ಪರೋಕ್ಷ ಒತ್ತಡ ಹೇರಿತು. ವಿಳಂಬ ಅಪಾಯಕಾರಿ ಎಂದರಿತು ಸಿದ್ಧವ್ವನಹಳ್ಳಿ ನಿಜಲಿಂಗಪ್ಪನವರ ನಾಯಕತ್ವದಲ್ಲಿ ಒಂದು ಸಮಿತಿ ರಚಿಸಿ ದೆಹಲಿ ಮಟ್ಟದಲ್ಲಿ ಗಾಂಧೀಜಿಯನ್ನೊಳಗೊಂಡು ಎಲ್ಲ ನಾಯಕರನ್ನೂ ಕಂಡು ಕರ್ನಾಟಕದ ಏಕೀಕರಣ ತುರ್ತನ್ನು ಮನವರಿಕೆ ಮಾಡಿಕೊಡಲು ನಿರ್ಧರಿಸಿತು. ಅದೇ ಸಂದರ್ಭದಲ್ಲಿ ಸಮ್ಮೇಳನ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರ ಬಗ್ಗೆ ‘ತನ್ನ ತೀವ್ರ ನಿರಾಶೆ ಮತ್ತು ಅಸಮಾಧಾನ’ವನ್ನೂ ವ್ಯಕ್ತಪಡಿಸಿತು.

ಸಮಿತಿಗಳು ಸಂಶಯಗಳು

ಹೊಸದಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರದ ಮುಂದೆ ಸಾವಿರಾರು ಸಮಸ್ಯೆಗಳಿದ್ದವು. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಗಂಭೀರ ಸಮಸ್ಯೆಗಳ ನಡುವೆ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದ ಏಕೀಕರಣ ಸಮಸ್ಯೆ ಆದ್ಯತೆಯ ಮೇಲೆ ಬಗೆಹರಿಸ ಬೇಕಾದ್ದೆಂದು ನೆಹರೂ ಮುಂತಾದವರಿಗೆ ಅನ್ನಿಸದಿದ್ದರೆ ಅದು ಆಶ್ಚರ್ಯವೇನಲ್ಲ. ಆದರೂ ಈ ದಕ್ಷಿಣ ರಾಜ್ಯಗಳ ಒತ್ತಡವನ್ನು ನಿವಾರಿಸಿಕೊಳ್ಳಲು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರೂ ಸಂವಿಧಾನ ಘಟನಾಸಮಿತಿ ಅಧ್ಯಕ್ಷರೂ ಆದ ಶ್ರೀ ರಾಜೇಂದ್ರ ಪ್ರಸಾದರು ಜೂನ್ 1948ರಲ್ಲಿ ಮೂರು ಸದಸ್ಯರ ಸಮಿತಿಯೊಂದನ್ನು ಶ್ರೀ ಎಸ್.ಕೆ.ಧರ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದರು. ಈ ಸಮಿತಿ ಆಂಧ್ರ, ಕೇರಳ,  ಪ್ರಾಂತಗಳ ರಚನೆಯ ಸಾಧಕ, ಬಾಧಕಗಳನ್ನು ಕುರಿತು ಪರಿಶೀಲಿಸಿ ವರದಿ ಮಾಡಲು ನಿರ್ದೇಶಿತವಾಯಿತು.

ಈ ಮಧ್ಯೆ ಹೈದರಾಬಾದ್ ಸಮಸ್ಯೆ ಉಲ್ಬಣಿಸಿತು. ನಿಜಾಮನ ಮೂಗಿನಡಿಯಲ್ಲೇ ರಜಾಕಾರರ ಪುಂಡಾಟಿಕೆ ಶುರುವಾಯಿತು. ನಿಜಾಮ ಭಾರತ ಒಕ್ಕೂಟ ಸೇರಲು ನಿರಾಕರಿಸಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದ. ನಿಜಾಮ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರೋಧಿಸಿದವರನ್ನು ರಜಾಕಾರರೂ ಹಿಂಸೆಗೆ ಗುರಿಪಡಿಸಿದರು. ಒಂದು ವರ್ಷಕಾಲ ತಾಳ್ಮೆಯಿಂದ ಕಾದ ಕೇಂದ್ರ ಸರ್ಕಾರ, ಇನ್ನು ಕಾಯುವುದು ಸಮಂಜಸವಲ್ಲವೆಂದು ತೀರ್ಮಾನಿಸಿ ಸೆಪ್ಟೆಂಬರ್ 13, 1948ರಂದು ಸೈನ್ಯವನ್ನು ಹೈದರಾಬಾದ್ ನುಗ್ಗಿಸಿ ನಿಜಾಮ ಸರ್ಕಾರವನ್ನು ಶರಣಾಗಿಸಿತು. ಹೈದರಾಬಾದ್ ಸಂಸ್ಥಾನದ ಕನ್ನಡ ಜಿಲ್ಲೆಗಳಾದ ಗುಲ್ಬರ್ಗಾ, ಬೀದರ್, ರಾಯಚೂರು ಈ ರೀತಿ ಸ್ವತಂತ್ರವಾದವು. ಪ್ರಸ್ತಾಪಿತ ಕರ್ನಾಟಕ ರಾಜ್ಯ ಸೇರಲು ಉತ್ಸುಕವಾದವು.

ಧರ್ ಸಮಿತಿ ಬ್ರಿಟಿಷ್ ಕರ್ನಾಟಕ ಪ್ರಾಂತಗಳಿಗೆ ತನ್ನ ಭೇಟಿಯನ್ನು ಸೀಮಿತ ಗೊಳಿಸಿಕೊಂಡದ್ದನ್ನು ನೋಡಿದರೆ ಸಂಸ್ಥಾನ ಕರ್ನಾಟಕ ಅದರ ಕಾರ್ಯವ್ಯಾಪ್ತಿಗೆ ಸೇರಿರಲಿಲ್ಲವೆನ್ನುವುದು ಸ್ಪಷ್ಟ. ಸಮಿತಿಯ ನೇಮಕಾತಿ ಚಳವಳಿಗಾರರ ಆಕ್ರೋಶವನ್ನು ಶಮನಗೊಳಿಸುವ ಒಂದು ತಂತ್ರವಾಗಿತ್ತು ಅನ್ನಿಸುತ್ತದೆ. ಸಮಿತಿ ಕರ್ನಾಟಕ ಏಕೀಕರಣ ವಾದಿಗಳ ಒಂದು ಸಾವಿರಕ್ಕೂ ಹೆಚ್ಚು ಮನವಿಗಳನ್ನು ಸ್ವೀಕರಿಸಿ, ಏಳುನೂರಕ್ಕೂ ಹೆಚ್ಚು ಸಾಕ್ಷಿಗಳ ಅಹವಾಲನ್ನು ಕೇಳಿತು. ಆಂಧ್ರ, ಕೇರಳಗಳಲ್ಲೂ ಈ ಕ್ರಮ ಜರುಗಿತು. ಆದರೆ ಪರಿಣಾಮ ಮಾತ್ರ ಸೊನ್ನೆ. ಏಕೆಂದರೆ ಧರ್ ಸಮಿತಿ ಏನೆಲ್ಲ ಸಬೂಬುಗಳನ್ನು ಹೇಳುತ್ತ ಕೊನೆಗೆ ‘ಭಾಷಾನ್ವಯ ಪ್ರಾಂತ ರಚನೆ ಕೈಗೊಳ್ಳಬಾರದ್ಬು’ ಎಂಬ ನಿರ್ಣಯ ಕೊಟ್ಟಿತು. ಅಷ್ಟೇ ಆಗಿದ್ದರೆ ಸರಿ. ಆದರೆ ವಿವಿಧ ಕನ್ನಡ ಪ್ರಾಂತಗಳ ಜನರಲ್ಲಿ ಸಂಶಯ, ಅನಿಶ್ಚಿತತೆ ಉಂಟುಮಾಡುವ ಮಾತುಗಳು ವರದಿಯಲ್ಲಿದ್ದವು. ಉದಾಹರಣೆಗೆ ಕೊಡಗಿನ ಬಗ್ಗೆ ಪ್ರಸ್ತಾಪಿಸಿ ‘ಕೊಡಗು ಮೈಸೂರಿನಲ್ಲಿ ಸೇರಲು ಸಿದ್ಧವಿದೆ. ಆದರೆ ಮೈಸೂರನ್ನು ಹೊರಗಿಟ್ಟು ರಚಿತವಾಗುವ ಕರ್ನಾಟಕ ಸೇರಲು ತಯಾರಿಲ್ಲ’. ‘ಮೈಸೂರು ಕರ್ನಾಟಕದಲ್ಲಿ ಸೇರಲು ಇನ್ನೂ ಸಿದ್ಧವಾಗಿರುವಂತೆ ಕಾಣುವುದಿಲ್ಲ’ ಎಂದೂ ತನ್ನ ವರದಿಯಲ್ಲಿ ತಿಳಿಸಿತ್ತು.

ಈ ರೀತಿ ವರದಿ ಮಾಡಲು ಕಾರಣಗಳೂ ಇದ್ದವು. ಮೈಸೂರಿಗರು ಏಕೀಕರಣದ ಬಗ್ಗೆ ತೀರಾ ಗೊಂದಲಗೊಂಡಿದ್ದು, ಸ್ಪಷ್ಟ ಮಾತುಗಳು ಅವರಲ್ಲಿರಲಿಲ್ಲ. ಹಾಗೆಯೇ ಮೈಸೂರು ಸಂಸ್ಥಾನಕ್ಕೆ ಅಂಟಿಕೊಂಡಂತಿದ್ದ ಕೊಡಗು, ಮೈಸೂರು ಇಲ್ಲದ ಪ್ರಾಂತಕ್ಕೆ ಸೇರಿಕೊಳ್ಳುವುದು ದುಸ್ತರವೂ ಆಗಿತ್ತು. ಇಷ್ಟಕ್ಕೂ ದೇಶೀಸಂಸ್ಥಾನಗಳು ಸ್ವತಂತ್ರ ಭಾರತದಲ್ಲಿ ಏನಾಗುತ್ತವೆ ಎಂಬ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲದಾಗ ಅವುಗಳನ್ನು ಏಕೀಕರಣಕ್ಕೆ ಒಳಪಡಿಸುವುದು ಸಂವಿಧಾನಾತ್ಮಕವಾಗಿಯೂ ಅಸಂಬದ್ಧ ತೀರ್ಮಾನವಾಗುತ್ತಿತ್ತು. ಈ ಎಲ್ಲದರೊಂದಿಗೆ ಇನ್ನೊಂದು ಗಂಭೀರವಾದ ಭಾವನಾತ್ಮಕ, ವಿಚಾರವೂ ಇತ್ತು. ಮುಂಬೈ ಕರ್ನಾಟಕದವರು ದೇಶೀಸಂಸ್ಥಾನಗಳು ಕರ್ನಾಟಕದಲ್ಲಿ ವಿಲೀನವಾಗಬೇಕೆಂದು ಬಯಸಿದ್ದರೆ, ಮೈಸೂರಿಗರು ಉಳಿದ ಭಾಗಗಳು ಮೈಸೂರಿಗೆ ಸೇರಿ ‘ವಿಶಾಲ ಮೈಸೂರು’ ಆಗಬೇಕೆಂದು ಬಯಸುತ್ತಿದ್ದರು. ಒಂದು ರೀತಿಯಲ್ಲಿ ಕೆಲವು ಏಕೀಕರಣವಾದಿಗಳಿಗೆ ಇದು ಪ್ರತಿಷ್ಠೆಯ ಪ್ರಶ್ನೆಯೂ ಆಗಿತ್ತು. ಮಿಗಿಲಾಗಿ ಮೈಸೂರು ಕಾಂಗ್ರೆಸ್ ಮತ್ತು ಮೈಸೂರಿನ ಜನತೆ ತಮ್ಮ ಮಾದರಿ ಮೈಸೂರಿನ ವ್ಯಾಮೋಹಿಗಳೂ ಆಗಿದ್ದರು. ಹಿಂದುಳಿದ ಮುಂಬೈ ಕನ್ನಡ ಪ್ರಾಂತ್ಯಕ್ಕೆ ಹೋಲಿಸಿದರೆ ಕನ್ನಡ ಮಾತನಾಡುವ ವಿಸ್ತಾರ ಪ್ರದೇಶ ಮೈಸೂರು ಎಂದೂ, ಕನ್ನಡ ಸಾಂಸ್ಕೃತಿಕ ಪ್ರಸ್ಥಭೂಮಿ ತುಂಗಭದ್ರಾನದಿಯ ದಕ್ಷಿಣ(ಅಂದರೆ ಮೈಸೂರು ಸಂಸ್ಥಾನ) ದಲ್ಲಿದೆ ಯೆಂಬುದೂ ಅವರ ಅಭಿಪ್ರಾಯವಾಗಿತ್ತು. ಸ್ವಾತಂತ್ರ್ಯೋತ್ತರ ಏಕೀಕರಣ ಚಳವಳಿಯ ಮುಂಚೂಣಿಯಲ್ಲಿದ್ದವರು ಮುಂಬೈ ಕರ್ನಾಟಕದ ರಾಜಕೀಯಸ್ಥರೇ. ಅವರ ಬೆನ್ನೆಲುಬಾಗಿ ನಿಂತಿದ್ದವರು ಸಾಹಿತ್ಯ-ಸಂಸ್ಕೃತಿಗಳ ಕ್ಷೇತ್ರದಲ್ಲಿ ದುಡಿಯುತ್ತಿದ್ದ ಬುದ್ದಿಜೀವಿಗಳು. ಎಲ್ಲರೂ ಕನ್ನಡ ಮಾತನಾಡುವ ಬಹುತೇಕ ಎಲ್ಲ ಜನವರ್ಗಗಳಿಂದ ಆಗಿಂದಾಗ್ಗೆ ಬೆಂಬಲ ಒತ್ತಾಸೆ ಪಡೆದುಕೊಳ್ಳುತ್ತಿದ್ದರು. ಮುಂಬೈ ಕರ್ನಾಟಕದ ರಾಜಕಾರಣಿಗಳು ಮತ್ತು ಬುದ್ದಿಜೀವಿಗಳಿಗೆ ರಾಜಸತ್ತೆಯ ಬಗ್ಗೆ ಅಂಥಾ ಅಭಿಮಾನವಿರಲಿಲ್ಲ. ಏಕೆಂದರೆ ಅಲ್ಲಿಯ ಚಾರಿತ್ರಿಕ ರಾಜ್ಯಗಳು ರಾಜರು ಅಳಿದು ಕನಿಷ್ಠ 150 ವರ್ಷಗಳಾದರೂ ಸಂದಿದ್ದವು.  ದೇಶೀ ಸಂಸ್ಥಾನಗಳ ಅರಸರು ಸ್ವಾತಂತ್ರ ಚಳವಳಿ ಮತ್ತು ಏಕೀಕರಣ ಚಳವಳಿಗಳ ಬಗ್ಗೆ ನೇತ್ಯಾತ್ಮಕ ನಿಲುವು ತಳೆದಿದ್ದರು. ಸ್ವಾತಂತ್ರ ಹೋರಾಟಗಾರರನ್ನಂತೂ ನಿರ್ದಯವಾಗಿ ಶಿಕ್ಷಿಸಿದ ಉದಾಹರಣೆಗಳೂ ಇದ್ದವು. ಜನತಂತ್ರ ಸ್ವಾತಂತ್ರ ಪಾರತಂತ್ರದ ಪ್ರಶ್ನೆ ಬಂದಾಗ ದೇಶೀ ಅರಸರು ಅಂತಿಮವಾಗಿ ಬ್ರಿಟಿಷರ ಪರವಾಗಿಯೇ ಇರುತ್ತಿದ್ದರು. ಅಂಥ ಸನ್ನಿವೇಶದಲ್ಲಿ ಭಾರತ ಸ್ವಾತಂತ್ರ ಗಳಿಸಿಕೊಂಡು ಜನತಂತ್ರವನ್ನೂ ಒಪ್ಪಿಕೊಂಡ ಮೇಲೂ ಊಳಿಗಮಾನ್ಯ ಪಳೆಯುಳಿಕೆಯಾದ ರಾಜಸತ್ತೆಯ ಜೊತೆಗೆ ಸಂಧಾನ ಮಾಡಿಕೊಳ್ಳುವ ಅಗತ್ಯವಿಲ್ಲವೆಂಬ ಅವರ ಅಭಿಪ್ರಾಯ ಸಾಧುವಾದದ್ದೇ.

ಆದರೆ ಮೈಸೂರು ಸಂಸ್ಥಾನದವರ ಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಿತ್ತು. ಪಕ್ಷಭೇದವಿಲ್ಲದೆ ಎಲ್ಲರೂ ರಾಜಸತ್ತೆಯನ್ನು ವಿರೋಧಿಸಿದವರೇ. ಸ್ವಾತಂತ್ರವನ್ನು ಹಂಬಲಿಸಿದವರೇ. ಆದರೆ ಗೊಂದಲಮಯ ರಾಜಕೀಯ ಸ್ಥಿತಿಯಲ್ಲಿ ಅವರು ಸ್ಪಷ್ಟ ನಿಲುವು ತಾಳದವರಾಗಿದ್ದರು. ಈ ವಿಚಾರದಲ್ಲಿ ಕಮ್ಯುನಿಸ್ಟರು ಮತ್ತು ಸಮಾಜವಾದಿಗಳು ಮಾತ್ರ ರಾಜತ್ವವನ್ನು ಧಿಕ್ಕರಿಸುವ ದಿಟ್ಟ ನಿಲುವು ತೆಗೆದುಕೊಂಡರು. ಆದರೆ ಈ ಎರಡೂ ಪಕ್ಷಗಳ ಬಲ ಮೈಸೂರಿನಲ್ಲಿ ಹೇಳಿಕೊಳ್ಳುವಂಥದ್ದಾಗಿರಲಿಲ್ಲ. ಸ್ವಾತಂತ್ರಕ್ಕಾಗಿ ಹೋರಾಡಿದ ಕಾಂಗ್ರೆಸ್ಸಿಗರು ಬದಲಾದ ಪರಿಸ್ಥಿತಿಯಲ್ಲಿ ಮೈಸೂರು ಮಹಾರಾಜರ ಸ್ಥಾನಮಾನ ಏನಾಗಬಹುದೆಂಬ ಬಗ್ಗೆ ತಿಳಿಯದವರಾಗಿದ್ದರು. ಮಿಗಿಲಾಗಿ ರಾಜಸತ್ತೆಯನ್ನು ತಾವು ಪೂರ್ಣ ತಿರಸ್ಕರಿಸುವಷ್ಟು ಪ್ರಬಲರಾಗಿದ್ದೇವೆಯೇ ಎಂಬ ಬಗ್ಗೆ ಅನುಮಾನವಿದ್ದಿರಬಹುದು. ಯಾಕೆಂದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಮಾದರಿ ಮೈಸೂರಿನ ರಾಜರ್ಷಿ ಮಹಾರಾಜರ ಅಸ್ತಿತ್ವವೇ ಕೊನೆಗೊಳ್ಳುತ್ತದೆನ್ನುವುದಾದರೆ ಮೈಸೂರಿನ ಜನತೆ ಹೇಗೆ ಪ್ರತಿಕ್ರಿಯಿಸಬಹುದು ಎನ್ನುವ ಗಂಭೀರ ಪ್ರಶ್ನೆಯೂ ಅಲ್ಲಿತ್ತು. ಹಿಂದೊಮ್ಮೆ ಜವಹರಲಾಲರು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಂಸ್ಥಾನಗಳು, ನೆರೆಯ ಪ್ರಾಂತಗಳಲ್ಲಿ ವಿಲೀನಗೊಂಡು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಮತ್ತು ರಾಜ ಮಹಾರಾಜರು ಎಲ್ಲರಂತೆ ಭಾರತದ ಶ್ರೀಸಾಮಾನ್ಯರಾಗೇಕೆಂದು ಹೇಳಿದ್ದುಂಟು. ಆದರೆ ಅದು ಅವರು ಯುವಕರಾಗಿದ್ದಾಗ ಕಾಂಗ್ರೆಸ್ಸಿನಲ್ಲಿ ತಮ್ಮ ವಿರೋಧಿಗಳನ್ನು ಮಣಿಸಿ ಜನ ಬೆಂಬಲ ಗಳಿಸಿಕೊಳ್ಳುವ ಹಂತದಲ್ಲಿ ಪರಿಸ್ಥಿತಿ ಈಗ ಬದಲಾಗಿತ್ತು. ನೆಹರೂ ಸ್ವತಂತ್ರ ಭಾರತದ ಜವಾಬ್ದಾರಿಯುತ ಪ್ರಧಾನಮಂತ್ರಿ. ರಾಷ್ಟ್ರೀಯ ಕಾಂಗ್ರೆಸ್ಸಿನವರು ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ದುಸ್ತರವಿತ್ತು. ಹಾಗೆಯೇ ಸ್ಥಳೀಯ ರಾಜಕೀಯ ಅನಿವಾರ್ಯತೆಗಳು ಅವರ ಕೈಗಳನ್ನು ಕಟ್ಟಿಹಾಕುತ್ತಿದ್ದವು. ಅಧಿಕಾರಕ್ಕಾಗಿ ಮೇಲಾಟ ಪ್ರಾರಂಭವಾಗಿದ್ದುದು ಸಹಜ. ಪರಸ್ಪರ ವಿರುದ್ಧವಾದ ಎರಡು ಗುಂಪುಗಳಂತೂ ಮೈಸೂರು ಕಾಂಗ್ರೆಸ್ಸಿನಲ್ಲಿದ್ದವು. ಮುಖ್ಯಮಂತ್ರಿ ಕೆ.ಸಿ.ರೆಡ್ಡಿಯವರದು ಒಂದು ಬಣವಾದರೆ, ಕೆಂಗಲ್ ಹನುಮಂತಯ್ಯನವರದ್ದು ಇನ್ನೊಂದು ಬಣ. ಇವುಗಳನ್ನುಳಿದು ಪರಿಸ್ಥಿತಿ ಹೇಗೆ ಬದಲಾಗಬಹುದೆಂದು ತಮ್ಮ ಸರದಿಗಾಗಿ ಕಾಯುತ್ತಿದ್ದ ಮೂರನೇ ಗುಂಪೊಂದು ಇತ್ತು. ಅದು ಶ್ರೀ ಎಸ್ ನಿಜಲಿಂಗಪ್ಪನವರದು. ಆದರೆ ಸ್ಥಳೀಯ ರಾಜಕೀಯದಲ್ಲಿ ಆ ಗುಂಪು ಸಕ್ರಿಯವಾಗಿರದೆ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ದೆಹಲಿ ಮಟ್ಟದಲ್ಲಿ ಕಾರ್ಯನಿರತವಾಗಿತ್ತು. ಜಾತಿ ಕೋಮು ಲೆಕ್ಕಾಚಾರಗಳೂ ಅಲ್ಲಿ ಇಲ್ಲದಿರಲಿಲ್ಲ. ಮೈಸೂರಿನ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಗಳ ದಿಗ್ಗಜರು, ರಾಜಕೀಯಸ್ಥರ ಕೈ ಮೇಲಾದೊಡನೆ ಬಹುತೇಕ ಏಕೀಕರಣ ವಿಚಾರದಲ್ಲಿ ತಟಸ್ಥರಾದಂತಿತ್ತು. ಇದಕ್ಕೆ ಅವಾದವೆಂದರೆ ಕುವೆಂಪು ಮತ್ತು ಅನಕೃ ಮಾತ್ರ. ಅದೇನೇ ಇರಲಿ ಮೈಸೂರು ಕಾಂಗ್ರೆಸ್ಸಿಗರು ‘ಕಾದು ನೋಡುವ’ ನೀತಿಯನ್ನು ಅನುಸರಿಸಿದಂತೆ ಕಾಣುತ್ತದೆ.

ದಕ್ಷಿಣದಲ್ಲಿ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ನೇತ್ಯಾತ್ಮಕ ವರದಿ ನೀಡಿದ ಧರ್ ಸಮಿತಿಯ ನಿಲುವನ್ನು ದಕ್ಷಿಣ ರಾಜ್ಯಗಳ ಎಲ್ಲರೂ ಒಕ್ಕೊರಲಿನಿಂದ ತಿರಸ್ಕರಿಸಿದರು. ಭಾಷಾವಾರು ಪ್ರಾಂತ ರಚನೆಯ ಸಾಧಕ ಬಾಧಕಗಳ ಬಗ್ಗೆ ವಿಚಾರಿಸಿ ವರದಿ ಕೊಡಲು ನಿರ್ದೇಶಿತವಾಗಿದ್ದ ಸಮಿತಿ, ತನ್ನ ವ್ಯಾಪ್ತಿಯನ್ನು ಮೀರಿ ಭಾಷಾವಾರು ಪ್ರಾಂತ ರಚನೆಯ ಸಿದ್ಧಾಂತವನ್ನೇ ತಿರಸ್ಕರಿಸಿದ್ದು ವಿರೋಧಾಭಾಸ ಮತ್ತು ಅದು ತನ್ನ ಅಂಕೆ ಮೀರಿ ವರ್ತಿಸಿದೆ ಎನ್ನುವ ಕಟುಮಾತುಗಳಲ್ಲಿ ವರದಿಯನ್ನು ಟೀಕಿಸಲಾಯಿತು. ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್ ಮುಖಂಡರ ಮೇಲೆ ಒತ್ತಡ ತೀವ್ರವಾಯಿತು. ಕರ್ನಾಟಕದಿಂದ ಮುಂಬೈ ಕರ್ನಾಟಕದವರ ಜೊತೆಗೆ ಈ ಒತ್ತಡ ಹೇರಲು ಕಾರಣರಾದವರಲ್ಲಿ ನಿಜಲಿಂಗಪ್ಪ, ಅಂದಾನಪ್ಪ ದೊಡ್ಡಮೇಟಿ, ಕೆ.ಆರ್.ಕಾರಂತ, ಸಿ.ಎಂ.ಪೂಣಚ್ಚ ಪ್ರಮುಖರು. ಆಂಧ್ರ ದವರೂ ಧರ್ ವರದಿಯನ್ನು ತಿರಸ್ಕರಿಸಿ, ಚಳವಳಿಯಲ್ಲಿ ತೊಡಗಿದರು. ಈ ಹಿನ್ನೆಲೆಯಲ್ಲಿ 1948 ಡಿಸೆಂಬರ್‌ನಲ್ಲಿ ಜಯಪುರ ಕಾಂಗ್ರೆಸ್ ಅಧಿವೇಶನ ಕೂಡಿತು. ದಕ್ಷಿಣ ರಾಜ್ಯಗಳ ಸಾವಿರಾರು ಏಕೀಕರಣಾಸಕ್ತರು ನಿರ್ದಿಷ್ಟ ಉದ್ದೇಶದಿಂದಲೇ ಅಧಿವೇಶನಕ್ಕೆ ಹೋಗಿದ್ದರು. ಕೇಂದ್ರ ನಾಯಕರ ಬಗ್ಗೆ ಪತ್ರಿಕಾ ಮಾಧ್ಯಮದಲ್ಲಿ ಮತ್ತು ಕಾಂಗ್ರೆಸ್ಸೇತರ ಪಕ್ಷಗಳ ಸಭೆ, ಸಮಾವೇಶಗಳಲ್ಲಿ ಈ ಬಗ್ಗೆ ಉಗ್ರ ಟೀಕೆಗಳು ಬಂದವು. ದಕ್ಷಿಣ ರಾಜ್ಯಗಳ ಕಾಂಗ್ರೆಸ್ ಮುಖಂಡರಾಗಲಿ, ದೆಹಲಿಂು ಕಾಂಗ್ರೆಸ್ ನಾಯಕತ್ವವಾಗಲಿ ಇದೆಲ್ಲವನ್ನೂ ಕಡೆಗಣಿಸುವಂತಿರಲಿಲ್ಲ. ಇಷ್ಟಕ್ಕೂ ಭಾರತ ಜನತಂತ್ರವಾಗಿತ್ತಷ್ಟೇ. ಜನಾಭಿಪ್ರಾಯವನ್ನು ಕಡೆಗಣಿಸಲು ಯಾರಿಗೂ ಸಾಧ್ಯವಿರಲಿಲ್ಲ. ಈ ಪರಿಸ್ಥಿತಿಯಲ್ಲಿ ಜಯಪುರ ಕಾಂಗ್ರೆಸ್ಸು ಮತ್ತೊಂದು ಸಮಿತಿಯನ್ನು ರಚಿಸಿತು. ಈ ಸಮಿತಿಯಲ್ಲಿ ಘಟಾನುಘಟಿಗಳಿದ್ದರು. ನೆಹರೂ, ಪಟೇಲ್ ಮತ್ತು ಪಟ್ಟಾಭಿ ಸೀತಾರಾಮಯ್ಯನವರನ್ನು ಒಳಗೊಂಡ ಈ ಸಮಿತಿ ಮಾರ್ಚ್ 1949ರಲ್ಲೇ ತನ್ನ ವರದಿ ಸಲ್ಲಿಸಿತು. ಆದರೆ ಕರ್ನಾಟಕಾಸಕ್ತರಿಗೆ ಈ ವರದಿ ಭ್ರಮನಿರಸನವನ್ನು ಉಂಟುಮಾಡಿತು. ಆಂಧ್ರದ ಪಟ್ಟಾಭಿಯವರು ಆ ಸಮಿತಿಯಲ್ಲಿದ್ದುದರಿಂದಲೋ ಅಥವಾ ಹೈದರಾಬಾದ್ ನಿಜಾಮನನ್ನು ಪದಚ್ಯುತಗೊಳಿಸಿದ ಮೇಲೆ ಅಲ್ಲಿ ದೇಶೀಸಂಸ್ಥಾನಗಳ ಪ್ರಶ್ನೆ ಜಟಿಲವಾಗಿಲ್ಲ ಎನ್ನುವ ಕಾರಣಕ್ಕೋ ಏನೋ ಆಂಧ್ರದ ರಚನೆಗೆ ಒಲವು ತೋರಿಸಿದ ಸಮಿತಿ ಕರ್ನಾಟಕವನ್ನೊಳ ಗೊಂಡು ಇತರ ಭಾಷಾವಾರು ರಾಜ್ಯಗಳ ನಿರ್ಮಾಣವನ್ನು ತಿರಸ್ಕರಿಸಿತು. ವಿಚಿತ್ರವೆಂದರೆ ಧರ್ ಸಮಿತಿ ವರದಿಯನ್ನು ಪರಿಗಣಿಸದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ಜೆ.ವಿ.ಪಿ. ವರದಿಯನ್ನು ಅಂಗೀಕರಿಸಿತು. ಆ ಮೂಲಕ ಕನ್ನಡಿಗರ ನಿರಾಶೆ, ಆಕ್ರೋಶಕ್ಕೆ ತುತ್ತಾ ಯಿತು. ಆದರೆ ಕೇರಳ ಕಾಂಗ್ರೆಸ್ ಆಗಲಿ, ಕರ್ನಾಟಕ  ಕಾಂಗ್ರೆಸ್ ಆಗಲಿ ಅದನ್ನು ಪ್ರತಿಭಟಿಸುವ ಸ್ಥಿತಿಯಲ್ಲಿರಲಿಲ್ಲ. ಕಾರಣ ರಾಜಕೀಯ ಅನಿವಾರ್ಯತೆ, ಕೇಂದ್ರ ಕಾಂಗ್ರೆಸ್ ನಾಯಕತ್ವದ ಮರ್ಜಿಗೆ ಅವರೆಲ್ಲ ಒಳಗಾಗಿದ್ದರು. ಹಾಗೆ ನೋಡಿದರೆ ಬಹುತೇಕ ಸಾಂಸ್ಕೃತಿಕವಾಗಿದ್ದ ಕೇರಳ, ಆಂಧ್ರ, ಕರ್ನಾಟಕಗಳ ‘ಏಕೀಕರಣ’ ಸಮಸ್ಯೆ ವಿಶಾಲ ಜನಸ್ತೋಮದ ಮಡಿಲಿಗೆ ಬಿದ್ದುದು ಈ ಹಂತದಲ್ಲೇ. ಪೂರ್ಣ ರಾಜಕೀಕರಣಗೊಂಡದ್ದು ಕಾಂಗ್ರೆಸ್ಸೇತರ ರಾಜಕೀಯ ಪಕ್ಷಕಗಳು ಈ ಅವಕಾಶವನ್ನು ಉಪಯೋಗಿಸಿಕೊಂಡವು. ಸ್ಥಳೀಯ ಕಾಂಗ್ರೆಸ್ಸಿಗರು ಅಸಹಾಯಕ ಸ್ಥಿತಿ ತಲುಪಿದರು.

ಆದರೆ ಪ್ರಾಂತೀಯ ಒತ್ತಡ ಸ್ಥಳೀಯ ಕಾಂಗ್ರೆಸ್ಸಿಗರನ್ನು ಸಂದಿಗ್ಧಕ್ಕೆ ನೂಕಿತು. ಅವರ ಸ್ಥಿತಿ ‘ಅತ್ತದರಿ ಇತ್ತಪುಲಿ’ ಎಂಬಂತಾಯಿತು. ಕಾಂಗ್ರೆಸ್ ಕಾರ್ಯಕಾರಣಿ ಜೆವಿಪಿ ವರದಿಯನ್ನು  ಒಪ್ಪಿಕೊಂಡ ಮೇಲೆ ಕೆಪಿಸಿಸಿ ತೀರಾ ಸಂಕಷ್ಟಕ್ಕೆ ಸಿಲುಕಿತು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರೇ ಒಪ್ಪಿಕೊಳ್ಳುವಂತೆ ‘ಈ ವರದಿ ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಬಿಕ್ಕಟ್ಟನ್ನೇ ಉಂಟುಮಾಡಿತು’. ಕೆಪಿಸಿಸಿ ಸಭೆ ಸೇರಿ ಕೇಂದ್ರ ಮತ್ತು ಪ್ರಾಂತಗಳ ಕರ್ನಾಟಕದ ಶಾಸಕರು, ವರದಿಯನ್ನು ಪ್ರತಿಭಟಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು, ಕೇಂದ್ರ ಸಂಸದೀಯ ಮಂಡಲಿಯ ಅನುಮತಿ ಪಡೆಯಬೇಕೆಂದು ತೀರ್ಮಾನಿಸಿತು. ಆದರೆ ಕಾಂಗ್ರೆಸ್ ಕಾರ್ಯಕಾರಣಿ ಕೆಪಿಸಿಸಿ ಬೇಡಿಕೆಯನ್ನು ‘ಅಶಿಸ್ತು ಮತ್ತು ದೇಶಕ್ಕೆ ಅಪಾಯಕಾರಿ’ ಎಂದೆಲ್ಲ ಬಣ್ಣಿಸಿ ಕರ್ನಾಟಕ ಕಾಂಗ್ರೆಸ್ಸಿಗರಲ್ಲಿ ಭಯ ಮೂಡಿಸಿತು. ಹಲವಾರು ಶಾಸಕರು ರಾಜೀನಾಮೆ ಪತ್ರಗಳನ್ನು ಕೆಪಿಸಿಸಿಗೆ ಸಲ್ಲಿಸಿದರಾದರೂ ಅದು ‘ಔಪಚಾರಿಕ’ವಾಗಿದ್ದು ಕೇಂದ್ರದ ಮೇಲೆ ಒತ್ತಡ ತರುವ ತಂತ್ರವಾಗಿತ್ತು. ಹೈದರಾಬಾದ್ ಕರ್ನಾಟಕದವರೂ ಈಗ ಬಾಂಬೆ ಕರ್ನಾಟಕದವರೊಡನೆ ಕೈಜೋಡಿಸಿದರು. ಏಕೆಂದರೆ ಅವರ ಸ್ಥಿತಿ ಎಲ್ಲರಿಗಿಂತ ಅತಂತ್ರವಾಗಿತ್ತು. ಆದರೆ ಮೈಸೂರಿನ ನಿಲುವಿನಲ್ಲಿ ಹೇಳಿಕೊಳ್ಳುವಂಥ ಬದಲಾವಣೆ ಕಂಡುಬರಲಿಲ್ಲ. ಆದರೂ ಮೈಸೂರಿನಾಚೆ ಮತ್ತು ಅಖಿಲಭಾರತ ಮಟ್ಟದಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮೈಸೂರಿಗರ ಮೇಲೆ ತೀವ್ರ ಒತ್ತಡ ಹಾಕಿದವು. ಏಕೀಕರಣ ವಿಚಾರದಲ್ಲಿ ದೀರ್ಘಕಾಲ ತಟಸ್ಥವಾಗಿರುವುದು ಸಾಧ್ಯವಿಲ್ಲವೆಂದು ಅವರಿಗೆ ಮನವರಿಕೆಯಾಯಿತೆನಿಸುತ್ತದೆ. ಆದರೂ ಅಲ್ಲಿ ಒಮ್ಮತ ಬರಲು ಸಾಧ್ಯವಿರಲಿಲ್ಲ. ಕ್ರಮೇಣ ಮೈಸೂರಿನಲ್ಲಿ ಎರಡು ಬಣಗಳು ಅಸ್ತಿತ್ವಕ್ಕೆ ಬಂದವು. ಆದರೆ ಯಾವ ಬಣವೂ ಬಹಿರಂಗವಾಗಿ ಉತ್ತರ ಕರ್ನಾಟಕದವರ ಕಲ್ಪನೆಯ ಏಕೀಕರಣ ವನ್ನು ಸ್ಪಷ್ಟವಾಗಿ ಬೆಂಬಲಿಸಲಿಲ್ಲ. ಉತ್ತರ ಕರ್ನಾಟಕ ವ್ಯಾಪಕ ಜನಾಂದೋಲನ ಸಂಘಟಿಸಲು ಉದ್ಯುಕ್ತವಾದರೆ, ಮೈಸೂರಿಗರು ತೆರೆಯಮರೆಯಲ್ಲಿ ಆ ಬಗ್ಗೆ ಚರ್ಚಿಸತೊಡಗಿದರು.

ಜೆವಿಪಿ ವರದಿ ಸಂಸ್ಥಾನಗಳು,ೊಪ್ರಾಂತಗಳಲ್ಲಿವಿಲೀನವಾಗಿ ತಮ್ಮ ಚಹರೆ ನೀಗಿ ಕೊಳ್ಳಬೇಕೇ ಹೊರತು ಪ್ರಾಂತಗಳು ಸಂಸ್ಥಾನಗಳಲ್ಲಿ ವಿಲೀನವಾಗಲು ಸಾಧ್ಯವಿಲ್ಲವೆಂದು ಹೇಳಿದ ಮಾತು ಮೈಸೂರಿನಲ್ಲಂತೂ ವಿವಾದಾಸ್ಪದವಾಯಿತು. ಏಕೀಕರಣದ ಬಗ್ಗೆ ಒಳಗೇ ವಿರೋಧವಿದ್ದವರು, ಈ ಮಾತನ್ನೇ ಬಳಸಿಕೊಂಡು ‘ಮಾದರಿ ಮೈಸೂರು’ ವ್ಯಾಮೋಹ ಹರಿಯಬಿಟ್ಟರು. ‘ಸಂಯುಕ್ತ ಸಂಸ್ಕೃತಿ’ ಮೈಸೂರಿನ ಜೀವಾಳ. ಅದಕ್ಕೆ ಧಕ್ಕೆ ಬರುವುದನ್ನು ಸಹಿಸಲು ಸಾಧ್ಯವಿಲ್ಲ. ಅರಸೊತ್ತಿಗೆ ಮೈಸೂರಿಗರ ಪರಂಪರೆ. ಅದನ್ನು ಅನಾಥಗೊಳಿಸುವುದು ಧರ್ಮವಲ್ಲವೆಂಬಂತೆ ಮಾತುಗಳು ಕ್ಷೀಣ ಧ್ವನಿಯಲ್ಲಿ ಕೇಳಿಸಲಾರಂಭಿಸಿದವು. ಇದು ಗಂಭೀರ ವಿಚಾರ ಹೇಗೋ, ಹಾಗೆಯೇ ಸೂಕ್ಷ್ಮವಿಚಾರವೂ ಆಗಿದ್ದು ಕೆಪಿಸಿಸಿಯವರಿಗೆ ಈ ಅರಿವಿತ್ತು. ಆದ್ದರಿಂದಲೇ ಇರಬೇಕು. 1949ರ ಜನವರಿಯಲ್ಲಿ ಸಭೆ ಸೇರಿದ ಕೆಪಿಸಿಸಿ, ಮೈಸೂರು ಮಹಾರಾಜರನ್ನು ಏಕೀಕೃತ ರಾಜ್ಯದ ಸಾಂವಿಧಾನಿಕ ರಾಜಪ್ರಮುಖರನ್ನಾಗಿ ಒಪ್ಪಿಕೊಳ್ಳುವ ತೀರ್ಮಾನ ಕೈಗೊಂಡಿತ್ತು. ಜೆವಿಪಿ ವರದಿ ಕೆಪಿಸಿಸಿಯಲ್ಲೇ ಏಕೆ ಮೈಸೂರು ಕಾಂಗ್ರೆಸ್ಸಿಗರಲ್ಲೂ ತೀವ್ರತರದ ಭಿನ್ನಮತಕ್ಕೆ ಕಾರಣವಾಯಿತು. ಈ ಹಂತದಲ್ಲೇ ಕೆಲವು ಮೈಸೂರಿಗರು ತಮ್ಮ ರಾಜ್ಯದ ಹಿತವನ್ನೂ ಗಮನದಲ್ಲಿಟ್ಟುಕೊಂಡು ಹೊಸ ಪ್ರದೇಶಗಳು ತಮ್ಮೊಡನೆ ಸೇರಿದರೆ ಆಗುವ ಪರಿಣಾಮಗಳನ್ನು ಕುರಿತು ಸಮಗ್ರ ಅಧ್ಯಯನ ಮಾಡುವ ಬಗ್ಗೆ ಮಾತನಾಡತೊಡಗಿದರು. ಒಂದು ರೀತಿಯಲ್ಲಿ ಇದು ವಿಳಂಬತಂತ್ರವೂ ಹೌದು. ಈ ಗುಂಪು ಮೈಸೂರು ಇತರ ಕನ್ನಡ ಪ್ರಾಂತಗಳಿಗೆ ಹೋಲಿಸಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಪ್ರಗತಿ ಸಾಧಿಸಿದ್ದು ತೀರಾ ಅಸಮತೋಲನ ಸ್ಥಿತಿ ಏರ್ಪಡುತ್ತದೆ. ಅ ಭಾಗಗಳ ಅಭಿವೃದ್ದಿಗಾಗಿ ಮೈಸೂರು ತನ್ನ ಸಂಪನ್ಮೂಮೂಲಗಳನ್ನು ತೊಡಗಿಸಿಬೇಕಾಗು ತ್ತದೆ ಎನ್ನುವ ಶಂಕೆಯನ್ನು ವ್ಯಕ್ತಪಡಿಸಿತು. ಹಾಗೆಯೇ ಉತ್ತರ ಕರ್ನಾಟಕ ಮೈಸೂರಿಗೆ ಸೇರಿದರೆ ರಾಜಕೀಯ ಏರುಪೇರಾಗಿ ಲಿಂಗಾಯಿತರು ಪ್ರಬಲವಾಗುತ್ತಾರೆಂಬ ಸಂಶಯವೂ ಹಲವರಲ್ಲಿತ್ತು. ಈಗ ರಾಜಕೀಯ ಪ್ರಾಬಲ್ಯ ಹೊಂದಿದ್ದ ಮೈಸೂರಿನ ಒಕ್ಕಲಿಗ ಸಮುದಾಯ ತನ್ನ ಪ್ರಾಬಲ್ಯ ಕಳೆದುಕೊಳ್ಳಬಹುದೆಂಬ ಆತಂಕವೂ ಇತ್ತು.

ಈ ಮಧ್ಯೆ ತನ್ನ ಸಂವಿಧಾನ ರಚನೆಯನ್ನು ಪೂರ್ಣಗೊಳಿಸಿ ವಿದ್ಯುಕ್ತವಾಗಿ ಸಂಸತ್ತಿನಲ್ಲಿ ಅಳವಡಿಸಿಕೊಂಡ ಭಾರತ 26.1.1950ರಂದು ಗಣರಾಜ್ಯವೆಂದು ಘೋಷಿಸಿಕೊಂಡಿದ್ದೂ ಆಯ್ತು. ಸಂವಿಧಾನ ಅನುಷ್ಠಾನವಾದ ಮೇಲೆಯೂ ಕೇಂದ್ರ ಸರ್ಕಾರ ವಿಳಂಬ ನೀತಿ  ಅನುಸರಿಸುವುದು ಕಷ್ಟಕರವಾಗಿತ್ತು. ದಕ್ಷಿಣ ರಾಜ್ಯಗಳಲ್ಲೆಡೆ ಏಕೀಕರಣ ಚಳವಳಿಗಳು ತೀವ್ರಗೊಳ್ಳುತ್ತಿದ್ದರು. ಕಮ್ಯುನಿಸ್ಟರು, ಸಮಾಜವಾದಿಗಳ ನೇತೃತ್ವದಲ್ಲಿ ಯುವಕರು, ನಗರ ಕಾರ್ಮಿಕರು, ವಿದ್ಯಾರ್ಥಿಗಳು ಸಂಘಟಿತಗೊಂಡು ಏಕೀಕರಣಕ್ಕಾಗಿ ಸಭೆ, ಸಮಾರಂಭಗಳನ್ನು ಏರ್ಪಡಿಸಿ ನಿರ್ಣಯಗಳನ್ನು ಕೈಗೊಳ್ಳ ತೊಡಗಿದರು. ಇವರಿಗೆಲ್ಲ ಮುಂಚೆಯೇ ಮಹಿಳೆಯರು ಕರ್ನಾಟಕ ಸಾಹಿತ್ಯ ಪರಿಷತ್ತಿನ ಗೋಷ್ಠಿಯೊಂದರಲ್ಲಿ 1940ರಲ್ಲಿಯೇ ಮೈಸೂರನ್ನು ಒಳಗೊಂಡ ಎಲ್ಲ ಕನ್ನಡ ಪ್ರಾಂತಗಳ ಏಕೀಕರಣವಾಗಬೇಕೆಂದು ಸ್ಪಷ್ಟ ನಿರ್ಣಯ ತೆಗೆದುಕೊಂಡಿದ್ದರು. ಈ ಬಗ್ಗೆ ಪರಿಷತ್ತು ಸ್ಪಷ್ಟವಾದ ಅಧಿಕೃತ ನಿರ್ಣಯ ತೆಗೆದುಕೊಂಡದ್ದು 1950ರಲ್ಲಿ ಈ ನಿರ್ಣಯಗಳು ಏಕೀಕರಣ ವಿಚಾರವನ್ನು ಗಟ್ಟಿಗೊಳಿಸಲು ಸಹಾಯಕವಾದವು ನಿಜ. ಆದರೂ ಕೇಂದ್ರ ಕಾಂಗ್ರೆಸ್ ನಾಯಕರು ಮತ್ತೆ ಎರಡು ವರ್ಷಕಾಲ ಈ ಬಗ್ಗೆ ಯಾವುದೇ ನಿರ್ಣಯ ತೆಗೆದುಕೊಳ್ಳಲಿಲ್ಲ. ಆದರೆ ಮೊದಲ ಸಾರ್ವತ್ರಿಕ ಚುನಾವಣೆಗಳು ಕಾಂಗ್ರೆಸ್ಸನ್ನು ಇಡಿಯಾಗಿ ಒತ್ತಡಕ್ಕೆ ಸಿಲುಕಿಸಿತು. ದಕ್ಷಿಣ ಭಾರತದ ಕಾಂಗ್ರೆಸ್ಸಿಗರಂತೂ ಬೇಸತ್ತಿದ್ದರು. ಅವರೆಲ್ಲರ ಬಹುಕಾಲದ ಬಯಕೆಯಾಗಿದ್ದ ಭಾಷಾವಾರು ಪ್ರಾಂತರಚನೆ ಕಾಂಗ್ರೆಸ್ ವಿರೋಧಿಗಳ ಚುನಾವಣಾ ಬತ್ತಳಿಕೆಯಲ್ಲಿ ಸೇರಿಹೋಗುವ ಭಯವಿತ್ತು. ಹಾಗೆ ನೋಡಿದರೆ ಅದು ಈಗ ಪೂರ್ಣ ರಾಜಕೀಯ ವಿಚಾರವಾಯಿತು. 1952ರಲ್ಲಿ ಸಂಸತ್ತು ರಾಜ್ಯ ಶಾಸನಸಭೆಗಳಿಗೆ ವಯಸ್ಕ ಮತದಾನದ ಆಧಾರದ ಮೇಲೆ ಚುನಾವಣೆ ನಡೆಯಬೇಕಾಗಿದ್ದಿತು. ಆದ್ದರಿಂದಲೇ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ‘ಭಾಷಾವಾರು ಪ್ರಾಂತರಚನೆ’ಗೆ ಕಾಂಗ್ರೆಸ್ ಬದ್ಧ ಎಂದು ಘೋಷಿಸಿತು. ಆದರೆ ಅದಕ್ಕೆ ‘ಸಂಬಂಧಪಟ್ಟ ಜನತೆಯ ಸಮ್ಮತಿ’ ಮತ್ತು ‘ಆರ್ಥಿಕ, ಆಡಳಿತಾತ್ಮಕ, ವಿಚಾರಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆಂದು ಗೊತ್ತುವಳಿ ಸ್ವೀಕರಿಸಿತು. ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ ಎಲ್ಲ ಪಕ್ಷಗಳೂ ಇದೇ ಘೋಷಣೆಯೊಂದಿಗೆ ಚುನಾವಣೆಗೆ ಸಜ್ಜಾದವು.

ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ಹೋರಾಟ ತ್ಯಾಗ ಬಲಿದಾನಗಳೇ ಬಂಡವಾಳವಾಗಿ ಕಾಂಗ್ರೆಸ್ ಎಲ್ಲೆಡೆ ಜಯಭೇರಿ ಬಾರಿಸಿ ಅಧಿಕಾರಕ್ಕೇರಿತು. ಆದರೆ ಏಕೀಕರಣದ ವಿಚಾರ ಮತ್ತೆ ನೆನೆಗುದಿಗೆ ಬಿದ್ದಿತು. ಸಂಸತ್ತಿನಲ್ಲಿ ಕಮ್ಯುನಿಸ್ಟರು ಪದೇಪದೇ ಈ ಬಗ್ಗೆ ನಿರ್ಣಯಗಳನ್ನು ಮಂಡಿಸಿದರೂ ಸರ್ಕಾರ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಿತ್ತು. ದಕ್ಷಿಣದ ಏಕೀಕರಣವಾದಿಗಳ ಜೊತೆ ಈಗ ಗುಜರಾತಿನವರು ಸೇರಿಕೊಂಡರು. ಆಂಧ್ರ, ಕೇರಳ ಮತ್ತು ಕರ್ನಾಟಕ ಪ್ರಾಂತಗಳಲ್ಲಿ ಕಮ್ಯುನಿಷ್ಟರು ಚಳವಳಿಗಳ ಮೂಲಕ ಕೇಂದ್ರದ ಮೇಲೆ ಒತ್ತಡ ತಂದರು. ಕರ್ನಾಟಕದಲ್ಲಿ ಎಸ್.ವಿ.ಘಾಟೆ ಮತ್ತು ಎನ್.ಎಲ್.ಉಪಾಧ್ಯಾಯ ಇವರ ನೇತೃತ್ವದಲ್ಲಿ ‘ಕರ್ನಾಟಕ ಸಂಘಟನಾ ಸಮಿತಿ’ಯನ್ನು ರಚಿಸಿ ಚಳವಳಿಯನ್ನು ಸಂಘಟಿಸಲು ತೀರ್ಮಾನಿಸಲಾಯಿತು. ಎಲ್ಲ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾವಾರು ಪ್ರತಿನಿಧಿಗಳನ್ನು ನೇಮಿಸಿ ಸಂಘಟನಾ ಕಾರ್ಯವನ್ನು ವಹಿಸಲಾಯಿತು. ಕನ್ನಡ ಪ್ರದೇಶಗಳನ್ನೆಲ್ಲ ಸಂಚರಿಸಿ ಏಕೀಕರಣ ಪರ ಪ್ರಚಾರ ಕೈಗೊಂಡರು. ಕೇಂದ್ರಕಾಂಗ್ರೆಸ್ಸಿನ ಮೌನ ಮೈಸೂರಿಗರ ಮೇಲಿನ ಒತ್ತಡವನ್ನು ಕಡಿಮೆ ಮಾಡಿತೆಂದೇ ಹೇಳಬೇಕು. ಆದರೂ ಮೈಸೂರು ಅಧಿಕಾರ ರಾಜಕಾರಣದಲ್ಲಿ ಮಹತ್ತರ ಬದಲಾವಣೆಗಳಾಗಿದ್ದವು. ಏಕೀಕರಣ ವಿಚಾರದಲ್ಲಿ ಮೃದುಧೋರಣೆಯಿದ್ದ ಕೆಂಗಲ್ ಹನುಮಂತಯ್ಯನವರು ಈಗ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ಸಿನೊಳಗೆ ಅವರ ರಾಜಕೀಯ ವಿರೋಧಿಯಾಗಿದ್ದ ಕೆ.ಸಿ.ರೆಡ್ಡಿಯವರು ನೆಹರೂ ಸಂಪುಟದಲ್ಲಿ ಸಚಿವರಾಗಿ ದೆಹಲಿಯಲ್ಲಿದ್ದರು. ಆದರೂ ಅವರ ರಾಜಕೀಯ ನೆಲೆಯಾದ ಮೈಸೂರಿನಲ್ಲಿ ಈ ಎರಡೂ ಗುಂಪುಗಳ ನಡುವೆ ಅಧಿಕಾರಕ್ಕಾಗಿ ಮೇಲಾಟ ನಡೆದೇ ಇತ್ತು. ಈ ಅಧಿಕಾರ ರಾಜಕಾರಣ ಏಕೀಕರಣದ ವಿಷಯದಲ್ಲಿ ಸೃಷ್ಟಿಸಿದ ಅನಿಶ್ಚಿತತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅನಕೃ ಮತ್ತು ಕುವೆಂಪು ಅವರಂಥ ಕೆಲವು ಸಾಹಿತಿಗಳನ್ನು ಬಿಟ್ಟರೆ ಬೇರೆಯವರನ್ನು ಸುಮ್ಮನಾಗಿಸಿತು. ದುರ್ದೈವದ ಸಂಗತಿ ಎಂದರೆ ಏಕೀಕರಣ ಸಂಘಕ್ಕಾಗಿ ಹಗಲು ರಾತ್ರಿ ದುಡಿದ ಸಾಹಿತಿ ಶ್ರೀರಂಗರು ರಾಜಕೀಯ ಕುತಂತ್ರಕ್ಕೆ ಬಲಿಯಾಗಿ ತಮ್ಮ ಸರ್ಕಾರಿ ನೌಕರಿಗೆ ರಾಜೀನಾಮೆ ಕೊಡಬೇಕಾಯಿತು.