ಸಂದಿಗ್ಧತೆ ಸಂಕಟಗಳು

ಸಂಸತ್ತಿನಲ್ಲಿ ಆಗಾಗ ಕಾಂಗ್ರೇತರ ಸದಸ್ಯರು ಈ ಕುರಿತು ಪ್ರಶ್ನಿಸುತ್ತಲೂ ಇದ್ದರು. ಆದರೆ ಪ್ರಧಾನಮಂತ್ರಿ ನೆಹರೂ ಈ ನಿರ್ಣಯಗಳಿಗೆ ಸೊಪ್ಪು ಹಾಕುತ್ತಿರಲಿಲ್ಲ. ಅಷ್ಟೇ ಅಲ್ಲದೆ ಕಾಂಗ್ರೆಸ್ ಸದಸ್ಯರಿಗೆ ವಿಪ್(ಆಜ್ಞೆ) ನೀಡಿ ಅವು ತಿರಸ್ಕೃತವಾಗುವಂತೆ ನೋಡಿಕೊಳ್ಳುತ್ತಿದ್ದರು. ಕಾಂಗ್ರೆಸ್ ಸದಸ್ಯರಿಗೆ ಈ ಬಗ್ಗೆ ಎಷ್ಟೇ ಆಸಕ್ತಿಯಿದ್ದರೂ ಅವರು ನಿರ್ಣಯದ ಪರ ಮತ ಹಾಕುವಂತಿರಲಿಲ್ಲ. ಹಾಗೆ ಮಾಡಿದರೆ ಅದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗುತ್ತಿತ್ತು. ಇಷ್ಟಕ್ಕೂ ಸರ್ವಶಕ್ತ ಕಾಂಗ್ರೆಸ್ ಹೈಕಮಾಂಡನ್ನು, ನೆಹರೂ ಅವರನ್ನು ಎದುರು ಹಾಕಿಕೊಳ್ಳಲು ಯಾವ ಕಾಂಗ್ರೆಸ್ಸಿಗರೂ ತಯಾರಿರಲಿಲ್ಲ. ಆದರೆ ಒಂದಂತೂ ಸ್ಪಷ್ಟ. ಏಕೀಕರಣಾಸಕ್ತರ ಪ್ರಚಾರ, ಕಮ್ಯುನಿಸ್ಟರ ಚಳವಳಿಗಳು ದಕ್ಷಿಣದ ಜನರಲ್ಲಿ, ವಿಶೇಷವಾಗಿ ಆಂಧ್ರ, ಕೇರಳಗಳಲ್ಲಿ ಕಾಂಗ್ರೆಸ್ಸಿನ ಜನಪ್ರಿಯತೆಯನ್ನು ಕ್ಷೀಣಿಸು ವಂತೆ ಮಾಡಿತ್ತು. ಈ ಪ್ರದೇಶಗಳ ಕಾಂಗ್ರೆಸ್ ನಾಯಕರಿಗಂತೂ ತೀರಾ ಮುಜುಗರ ಉಂಟುಮಾಡುವ ಸನ್ನಿವೇಶಗಳು ಎದುರಾಗುತ್ತಿದ್ದವು.

ಆಂಧ್ರ ಏಕೀಕರಣವಾದಿಗಳ ಸಹನೆಯಂತೂ ಕಟ್ಟೆ ಒಡೆಯಿತು. ಜೆವಿಪಿ ವರದಿ ಆಂಧ್ರ ಪ್ರಾಂತ ರಚನೆಗೆ ಶಿಫಾರಸ್ಸು ಮಾಡಿದರೂ ಅದು ಆಗುವಂತೆ ಕಾಣುತ್ತಿರಲಿಲ್ಲ. ಚಳವಳಿಗಾರರ ಮತ್ತು ಕಾಂಗ್ರೆಸ್ಸಿಗರ ಯಾವ ಮನವಿ, ತಂತ್ರಗಳೂ ಫಲಕಾರಿಯಾಗದೇ ಹೋದಾಗ ಅವರು ಆಮರಣ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದರು. ಹೀಗೆ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದವರು ಶ್ರೀೊಪೊಟ್ಟಿ ಶ್ರೀರಾಮುಲು ಎಂಬ ಕಾರ್ಯಕರ್ತ. ಸತ್ಯಾಗ್ರಹ ಪ್ರಾರಂಭವಾದದ್ದು 19.11.1952ರಂದು. ಮುಂದುವರಿದಂತೆ ಅದಕ್ಕೆ ಪತ್ರಿಕಾರಂಗ ವ್ಯಾಪಕ ಪ್ರಚಾರಕೊಟ್ಟಿತು. ಜನತೆ ಭಾವುಕರಾದರು. ಚದುರಿದಂತೆ ಅಲ್ಲಲ್ಲಿ ಗಲಭೆ ಪ್ರದರ್ಶನಗಳಾದವು. ಸತ್ಯಾಗ್ರಹಿ ಶ್ರೀರಾಮುಲು ಅವರ ದೇಹಸ್ಥಿತಿ ಕ್ಷೀಣಿಸಿದಂತೆ ಹಿಂಸಾತ್ಮಕ ಚಟವಟಿಕೆಗಳೂ ಆರಂಭವಾದವು. ಆಸ್ತಿ-ಪಾಸ್ತಿಗೂ ಹಾನಿಯಾಯಿತು. ನೆಹರೂ ನಡೆಸಿದ ಸಂಧಾನವೂ ವಿಫಲವಾಯಿತು. ಐವತ್ತೆಂಟು ದಿನಗಳ ಸತತ ಉಪವಾಸವಿದ್ದ ಶ್ರೀರಾಮುಲು 15.12.1952ರಂದು ಕೊನೆಯುಸಿರೆಳೆದರು. ಆಕ್ರೋಶಗೊಂಡ ಜನತೆ ವಿದ್ವಂಸಕ ಕೃತ್ಯಗಳಲ್ಲಿ ತೊಡಗಿ ಮದ್ರಾಸ್ ಪ್ರಾಂತದ ತೆಲುಗು ಜಿಲ್ಲೆಗಳಲ್ಲಿ ಸಾವು-ನೋವುಗಳುಂಟಾದವು. ಕೊನೆಗೂ ಕೇಂದ್ರ ಸರ್ಕಾರ ಮಣಿದು ಆಂಧ್ರ ಪ್ರದೇಶದ ರಚೆನೆಗೆ ಒಪ್ಪಿತು.

ಆಂಧ್ರ ರಚನೆಯ ತೀರ್ಮಾನ ಕರ್ನಾಟಕ ಏಕೀಕರಣ ಚಳವಳಿಯ ಮೇಲೆ ವ್ಯಾಪಕ ಪರಿಣಾಮ ಬೀರುವುದು ಸಹಜವಾಗಿತ್ತು. ಏಕೆಂದರೆ ಬಳ್ಳಾರಿಯ ಬಗ್ಗೆ 1920ರಿಂದಲೂ ವಿವಾದವಿತ್ತು. ಭಾಷಾವಾರು ಪ್ರಾಂತ ಕಾಂಗ್ರೆಸ್ ಸಮಿತಿಗಳು ಅಸ್ತಿತ್ವಕ್ಕೆ ಬಂದಾಗಲೇ ಈ ವಿವಾದ ಇತ್ಯರ್ಥಕ್ಕಾಗಿ ಕೇಳ್ಕರ್ ಸಮಿತಿ ರಚಿಸಲಾಗಿದ್ದುದನ್ನು ಇಲ್ಲಿ ನೆನೆಯಬಹುದು. ಕೇಳ್ಕರ್ ವರದಿ ರಾಯದುರ್ಗ, ಆಲೂರು, ಆದವಾನಿ ತಾಲ್ಲೂಕುಗಳನ್ನು ಹೊರತುಪಡಿಸಿದ ಬಳ್ಳಾರಿ ಜಿಲ್ಲೆಯನ್ನು ಕನ್ನಡ ಪ್ರದೇಶವೆಂದು ಹೇಳಿ ಅದನ್ನು ಕೆಪಿಸಿಸಿ ವ್ಯಾಪ್ತಿಗೆ ಒಳಪಡಿಸಿತ್ತು. ಆದರೆ ತೆಲುಗರು ಸುತರಾಂ ಒಪ್ಪಲಿಲ್ಲ. ಹಾಗೆಯೇ ಕನ್ನಡಿಗರೂ ಈ ಬಗ್ಗೆ ಅಸಂತುಷ್ಟರಾಗಿದ್ದರು. ಎರಡೂ ಬಣದವರು ತಮ್ಮ ಸಮರ್ಥನೆಗೆ ಏನೆಲ್ಲಾ ಕಸರತ್ತುಗಳಲ್ಲಿ ತೊಡಗಿದ್ದುದೂ ಸಹಜವೇ. ಒಟ್ಟಾರೆ ಬಳ್ಳಾರಿ ಸಮಸ್ಯೆಯನ್ನು ಒಳಗೊಂಡಂತೆ ಆಂಧ್ರದ ರಚನೆಯ ಬಗ್ಗೆ ವರದಿ ನೀಡಲು ಕೆ.ಎನ್.ವಾಂಛೂ ಸಮಿತಿ ನೇಮಕವಾಯಿತು. ವಾಂಛೂ ಸಮಿತಿ ಬಳ್ಳಾರಿ ಜಿಲ್ಲೆಯ ಬಗ್ಗೆ ಬಹುತೇಕ ಕೇಳ್ಕರ್ ಸಮಿತಿಯ ತೀರ್ಪನ್ನೇ ಎತ್ತಿಹಿಡಿಯಿತು. ಆದರೆ ಬಳ್ಳಾರಿ ಪಟ್ಟಣ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳದೆ ಆಂಧ್ರಕ್ಕೆ ಸೇರಲು ಅಲ್ಲಿನ ಕನ್ನಡಿಗರ ವಿರೋಧವಿದೆಯೆಂದು ಹೇಳಿ ಕೈತೊಳೆದುಕೊಳ್ಳುವ ಭೀತಿಯಿತ್ತು. ಜೊತೆಗೆ ನೂರಾರು ವರ್ಷ ಜೊತೆಗೆ ಬಾಳಿದ ಕನ್ನಡಿಗರನ್ನು ಅನಾಥರನ್ನಾಗಿಸಿ ಬಿಡೇಕಾಗುತ್ತಿತ್ತು. ಎಲ್ಲಕ್ಕೂ ಮಿಗಿಲಾಗಿ ಬಳ್ಳಾರಿಯಲ್ಲಿ ಕನ್ನಡಿಗರ ಆಧಿಕ್ಯವೂ ಇದ್ದು ಅವರೆಲ್ಲ ಕಟ್ಟಾ ಕರ್ನಾಟಕವಾದಿಗಳೂ ಆಗಿದ್ದರು. ಬಳ್ಳಾರಿ ತಾಲೂಕಿನ ಸಮಸ್ಯೆ ಏಕೀಕರಣ ವಿಚಾರವನ್ನು ಕನ್ನಡ ಪ್ರದೇಶಗಳ ರಾಜಕೀಯ ಕೇಂದ್ರಕ್ಕೆ ತಂದಿಟ್ಟಿತು. ವಾಂಛೂ ಸಮಿತಿ ನೇಮಕವಾಗುವ ಮುನ್ನವೇ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ (ಎಐಸಿಸಿ) ಹೈದರಾಬಾದಿನ ನಾನಲನಗರದಲ್ಲಿ 1952 ಜನವರಿಯಲ್ಲಿ ಸಮಾವೇಶಗೊಂಡಿತು. ಏಕೀಕರಣದ ಬಗ್ಗೆ ಏಐಸಿಸಿ ‘ಆಂಧ್ರಪ್ರದೇಶವನ್ನು ಬಿಟ್ಟು ಬೇರೆ ಯಾವ ಪ್ರಾಂತ ರಚನೆಯೂ ಈಗ ಸಾಧ್ಯವಿಲ್ಲ’ವೆಂಬ ಗೊತ್ತುವಳಿ ಸ್ವೀಕರಿಸಿತು. ಈ ತೀರ್ಮಾನ ಏಕೀಕರಣವಾದಿಗಳ ಪಾಲಿಗೆ ‘ಉರಿವ ಬೆಂಕಿಗೆ ತುಪ್ಪ ಸುರಿದಂತಾಯಿತು’. ಅದೇನೇ ಇರಲಿ ಈ ಸಂದರ್ಭದಲ್ಲಿ ಮೈಸೂರಿನ ಮುಖ್ಯಮಂತ್ರಿಯಾಗಲಿದ್ದ ಕೆಂಗಲ್ ಹನುಮಂತಯ್ಯನವರು ದೃಢವಾಗಿ ಈ ನಿರ್ಣಯವನ್ನು ವಿರೋಧಿಸಿದರು.

ಉತ್ತಮ ಸಂಸದೀಯಪಟುವೂ ಆಗಿದ್ದ ಕೆಂಗಲ್ಲರು ಏಕೀಕರಣವನ್ನು ಭಾಷೆಯೊಂದಕ್ಕೇ ಸೀಮಿತಗೊಳಿಸದೆ ಭಾಷೆಯ ಜೊತೆಗೆ ಸಾಂಸ್ಕೃತಿಕವಾಗಿ ಹೊಂದಿಕೊಳ್ಳುವ ಪ್ರದೇಶಗಳ ನಿರ್ದಿಷ್ಟ ಆಡಳಿತ ಘಟಕಗಳನ್ನಾಗಿಸಿ ಪುನರ್ ರಚಿಸಲೇಬೇಕೆಂದು ಖಡಾಖಂಡಿತವಾಗಿ ಪ್ರತಿಪಾದಿಸಿದರು. ಅಷ್ಟಕ್ಕೇ ನಿಲ್ಲಿಸದೆ ಮುಂಬೈ ಮತ್ತು ಹೈದರಾಬಾದ್ ಕನ್ನಡಿಗರ ಸಂಶಯವನ್ನು ನಿವಾರಿಸಲೆಂಬಂತೆ ‘ಮೈಸೂರು ರಾಜ್ಯಕ್ಕೆ ಹೊಂದಿಕೊಂಡಿರುವ ಮುಂಬೈ, ಮದ್ರಾಸ್, ಕೊಡಗು ಮತ್ತಿತರ ಕನ್ನಡ ಪ್ರದೇಶಗಳನ್ನು ಒಟ್ಟುಗೂಡಿಸಿ ಕರ್ನಾಟಕ ಏಕೀಕರಣ ಮಾಡಬೇಕೆಂದು ಒತ್ತಾಯಿಸಿದರು. ಹೈದರಾಬಾದಿನ ಎಐಸಿಸಿ, ನಡೆಯುತ್ತಿರುವಂತೆ ಬಾಂಬೆ ಕರ್ನಾಟಕದಲ್ಲಿ ಏಕೀಕರಣ ಚಳವಳಿ ತೀವ್ರಗೊಳಿಸಲು, ಕಾರ್ಯಕರ್ತರಿಗೆ ಜಿಲ್ಲಾವಾರು ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಯಿತು. ಅಂದಾನಪ್ಪ ದೊಡ್ಡಮೇಟಿಯವರು ಏಕೀಕರಣದ ತುರ್ತಿನ ಬಗ್ಗೆ ಅರಿವು ಮೂಡಿಸಲು ಹದಿನೈದು ದಿನಗಳ ಉಪವಾಸ ಕೈಗೊಂಡರು. ಹಲವಾರು ಕಾರ್ಯಕರ್ತರು ಸ್ವಪ್ರೇರಣೆಯಿಂದ ಶಿಬಿರಗಳನ್ನು ಸಂಘಟಿಸಿ, ಉಪವಾಸಗಳನ್ನು ಮಾಡಿದರು. ಈ ರೀತಿಯ ಚಳವಳಿ ನಾಲ್ಕು ತಿಂಗಳ ಕಾಲ ಉತ್ತರ ಕರ್ನಾಟಕದಾದ್ಯಂತ ನಡೆದು, ಜನರಲ್ಲಿ ಉತ್ಸಾಹ ಮೂಡಿಸಿತು. ಈ ಉಪವಾಸ ಕಾರ್ಯಕ್ರಮ ಅದರಗುಂಚಿ ಶಂಕರಗೌಡ ಪಾಟೀಲರ ಉಪವಾಸದೊಂದಿಗೇ ಮುಕ್ತಾಯ ಕಂಡದ್ದು. ಆದರೆ ಶಂಕರಗೌಡ ಪಾಟೀಲರ ಉಪವಾಸ ಆಮರಣಾಂತರವೆಂದು ಪ್ರಾರಂಭವಾಯಿತು. ಪಾಟೀಲ ಕಟ್ಟಾ ಕಾಂಗ್ರೆಸ್ಸಿಗ. ಅವರ ಉಪವಾಸ ಕೆಪಿಸಿಸಿಯನ್ನು ತೀರ ಇಕ್ಕಟ್ಟಿಗೆ ಸಿಲುಕಿಸಿತು. ಆಂಧ್ರದ ಪೊಟ್ಟಿ ಶ್ರೀರಾಮುಲು ಅವರ ಆತ್ಮಾರ್ಪಣೆಯ ಉದಾಹರಣೆ ಬೇರೆ ಕಾಂಗ್ರೆಸ್ಸಿನವರ ನಿದ್ರೆ ಕೆಡಿಸಿತ್ತು. ಕೇಂದ್ರನಾಯಕರು ಕೆಪಿಸಿಸಿಯ ಮೇಲೆ ತೀವ್ರ ಒತ್ತಡ ತಂದು ಪರಿಸ್ಥಿತಿ ಕೈಮೀರಿ ಹೋಗದಂತೆ ತಡೆಯಬೇಕೆಂದು ದುಂಬಾಲು ಬಿದ್ದಿರಲೂ ಸಾಕು. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು ಕೇಂದ್ರ ಸರ್ಕಾರವನ್ನು ಪ್ರಾಂತ ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು. ಹೈದರಾಬಾದ್ ಕಾಂಗ್ರೆಸ್ ಸಮಾವೇಶದ ಏಕೀಕರಣದ ಬಗೆಗಿನ ನೇತ್ಯಾತ್ಮಕ ತೀರ್ಮಾನ ಜನರನ್ನು ಮತ್ತೂ ರೊಚ್ಚಿಗೆಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಹೇಗಾದರೂ ಶಂಕರ ಪಾಟೀಲರ ಮನವೊಲಿಸಿ ಉಪವಾಸ ನಿಲ್ಲಿಸುವ ಕಾರ್ಯಯೋಜನೆಗೆ ಕೆಪಿಸಿಸಿ ಸಜ್ಜಾಯಿತು. 1952ನೆಯ ಏಪ್ರಿಲ್ 19-20ರಂದು ಕೆಪಿಸಿಸಿ ವಿಶೇಷ ಸಭೆ ಹುಬ್ಬಳ್ಳಿಯಲ್ಲಿ ಸೇರಿತು. ಅಲ್ಲಿಗೆ ಶಂಕರ ಗೌಡ ಪಾಟೀಲರು ಉಪವಾಸ ಆರಂಭಿಸಿ ಇಪ್ಪತ್ತಮೂರು ದಿನಗಳಾಗಿದ್ದವು. ಮುಂದಿನದನ್ನು ಅಂದಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ನಿಜಲಿಂಗಪ್ಪನವರ ಮಾತುಗಳಲ್ಲೇ ನೋಡಬಹುದು. ‘ನಾನಲನಗರದ ನಿರ್ಣಯದಿಂದ ಕರ್ನಾಟಕದಲ್ಲಿ ಅಸಂತೋಷದ ದಳ್ಳುರಿ ಹಬ್ಬಿತು. 1952ನೆಯ ಏಪ್ರಿಲ್ 19-20ರಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿಯ ವಿಶೇಷ ಸಾಧಾರಣ ಸಭೆ, ಶ್ರೀ ಶಂಕರಗೌಡರ ಆಮರಣ ಉಪವಾಸ ಸಂಕಲ್ಪದ ನೆರಳಿನಲ್ಲಿ ನಡೆಯಿತು.

ಕಾರ್ಯಕಲಾಪಗಳನ್ನು ವೀಕ್ಷಿಸಲು ಬೇರೆ ಬೇರೆ ಭಾಗಗಳಿಂದ ಸಾವಿರಾರು ಜನರು ಬಂದರು. ಧ್ವಜಗಳಿಂದಲಂಕೃತವಾದ, ಘೋಷಣೆಗಳನ್ನು ಕೂಗುವ ರೈತರ ಗುಂಪುಗಳಿಂದ ತುಂಬಿದ, ನೂರಾರು ಎತ್ತಿನ ಬಂಡಿಗಳು ಸಭಾಸ್ಥಾನವಾದ ಟೌನ್‌ಹಾಲ್ ಕಡೆಗೆ ಸಾಗಿದವು. ಜನರ ಗುಂಪು ಸಭಾಮಂದಿರದಲ್ಲಿ ನುಗ್ಗಿ ‘ರಾಜೀನಾಮೆ, ರಾಜೀನಾಮೆ ಬೇಕು! ನಿರ್ಣಯಗಳು ಸಾಕು!! ಎಂದು ಗರ್ಜಿಸತೊಡಗಿದರು. ಕೆಪಿಸಿಸಿಯ ಕಾರನ್ನು ಸುಡಲಾಯಿತು. ಕಲ್ಲುಗಳನ್ನೆಸೆಯಲಾಯಿತು. ಕೆಲವು ಜನ ಮುಖಂಡರಿಗೆ ಹೊಡೆತಗಳು ಬಿದ್ದವು. ಪೊಲೀಸರು ನಡುವೆ ಬಂದು ಲಾಠಿಪ್ರಹಾರ ಮಾಡಿ ಗುಂಪನ್ನು ಚದುರಿಸಲು ಪ್ರಯತ್ನಿಸಿ, ಕೊನೆಗೆ ಗೋಲೀಬಾರ್ ಮಾಡಬೇಕಾಯಿತು. ಕೆಪಿಸಿಸಿ ಸಭೆಯನ್ನು ಮುಂದಕ್ಕೆ ಹಾರ ಬೇಕಾಯಿತು. ಮರುದಿನ ನಡೆದ ಸಭೆಯಲ್ಲಿ ‘ಕರ್ನಾಟಕ ರಾಜ್ಯವನ್ನು 1954ರ ಕೊನೆಯೊಳಗಾಗಿ ನಿರ್ಮಿಸದಿದ್ದಲ್ಲಿ ಹಾಗೂ ಈ ಕುರಿತು 1953ರ ಅಕ್ಟೋಬರ್ ಒಳಗಾಗಿ ಭಾರತ ಸರ್ಕಾರ ಸ್ಪಷ್ಟ ಹಾಗೂ ಅಸಂದಿಗ್ಧ ಘೋಷಣೆ ಮಾಡದಿದ್ದಲ್ಲಿ ಕೆಪಿಸಿಸಿ ಸದಸ್ಯರು, ಪ್ರಥಮ ಹೆಜ್ಜೆಯೆಂದು ಕೆಪಿಸಿಸಿಯ ಸದಸ್ಯತ್ವ ಬಿಟ್ಟುಕೊಡುವರು; ಹಾಗೂ ಶಾಸನ ಮಂಡಳಿಗಳಲ್ಲಿಯ ಮತ್ತು ಪಾರ್ಲಿಮೆಂಟಿನಲ್ಲಿಯ ಕರ್ನಾಟಕ ಪ್ರತಿನಿಧಿ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನೀಯುವರು ಎಂಬುದಾಗಿ ನಿರ್ಣಯವನ್ನು ಅಂಗೀಕರಿಸ ಲಾಯಿತು.

ಈ ಮಾತು ಬರಹ ಅಂದಿನ ಕೆಪಿಸಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ನಿಜಲಿಂಗಪ್ಪ ನವರದು. ಹುಬ್ಬಳ್ಳಿಯಲ್ಲಿ ಆೊದಿನ ನಡೆದುದು ಏಕೀಕರಣದ ಚರಿತ್ರೆಯಲ್ಲಿ ಅತ್ಯಂತ ಮಹತ್ವಪೂರ್ಣವಾದುದು. ಸುಮಾರು ಅರವತ್ತು ವರ್ಷಕ್ಕೂ ಹೆಚ್ಚು ಅವಧಿಯಲ್ಲಿ ಹುಟ್ಟಿ ಬೆಳೆದು, ಬೆಳೆಯುತ್ತಿದ್ದ ಚಳವಳಿಗೆ ನಿರ್ಣಾಯಕ ತಿರುವು ನೀಡಿದ ಘಟನೆ ಹುಬ್ಬಳ್ಳಿ ಘಟನೆ. ಕೆಪಿಸಿಸಿ ಸಭೆ ನಡೆದ ಸ್ಥಳದಲ್ಲಿ ನೆರೆದಿದ್ದುದು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಏಕೀಕರಣೋತ್ಸಾಹಿಗಳು. ನಾಯಕತ್ವ ವಹಿಸಿದ್ದವರು ನಿಸ್ಸಂದೇಹವಾಗಿ ಕಮ್ಯುನಿಸ್ಟರು. ಆಕ್ರೋಶಗೊಂಡಿದ್ದ ಗುಂಪು ಮಾಡಬಾರದ್ದನ್ನೆಲ್ಲ ಮಾಡಿತು. ಕೆಪಿಸಿಸಿ ಅಧ್ಯಕ್ಷರಿಗೆ ಅರಿಶಿನ ಕುಂಕುಮ ಹಚ್ಚಿ ಬಳೆ ತೊಡಿಸಿದ ಗುಂಪು ಕೆಪಿಸಿಸಿ ನಾಯಕರನ್ನು ನಿಂದಿಸಿ ಅವರ ವಾಹನಗಳನ್ನು ಸುಟ್ಟು ಸಭಾಭವನದ ಪೀಠೋಪಕರಣಗಳನ್ನು ಧ್ವಂಸೊಮಾಡಿ, ಸಾರ್ವಜನಿಕ ಆಸ್ತಿಪಾಸ್ತಿಗೂ ನಷ್ಟ ಉಂಟುಮಾಡಿತು. ಈ ಹಿಂಸೆಗೆ ಕಮ್ಯುನಿಸ್ಟರನ್ನು ಹೊಣೆಮಾಡಿ ಎನ್.ಕೆ.ಉಪಾಧ್ಯಾಯ, ಎ.ಜೆ.ಮುಧೋಳ, ಸಿ.ಜಿ.ಪಾಟೀಲ ಮುಂತಾದವರ ಮೇಲೆ ಕೇಸುಗಳನ್ನು ದಾಖಲಿಸಿತು. ಯುವ ವಕೀಲರಾಗಿದ್ದು ಕೇಸು ನಡೆಸಿದರು. ಹುಬ್ಬಳ್ಳಿ ಘಟನೆ ಒಂದು ಅಂಶವನ್ನು ಸ್ಪಷ್ಟಪಡಿಸಿತು. ಸಾಮಾನ್ಯ ಜನರ ತಾಳ್ಮೆ ಮೀರಿದೆ. ಯಾವುದೇ ಸಬೂಬುಗಳನ್ನು ಕೇಳಲು ಅವರು ತಯಾರಿಲ್ಲ. ಜೊತೆಗೆ ಕಾಂಗ್ರೆಸ್ಸೇತರ ಪಕ್ಷಗಳು ಖಂಡಿತವಾಗಿ ಈ ಅಸಮಾಧಾನವನ್ನು ಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್ಸಿಗೆ ಭವಿಷ್ಯ ಮಸುಕಾಗುತ್ತದೆ, ಎಂದು ಕಾಂಗ್ರೆಸ್ಸಿಗೆ ಮನದಟ್ಟಾಯಿತು. ಆದ್ದರಿಂದಲೇ ಕೆಪಿಸಿಸಿಯವರ ಹಂತ ಹಂತದ ರಾಜೀನಾಮೆ ನಿರ್ಣಯ.

ಒಟ್ಟಾರೆ ಬಳ್ಳಾರಿೊಜಿಲ್ಲೆ ಮತ್ತು ನಿರ್ದಿಷ್ಟವಾಗಿ ಬಳ್ಳಾರಿ ಪಟ್ಟಣ ಮತ್ತು ತಾಲ್ಲೂಕುಗಳ ಬಗ್ಗೆ ಅಂತಿಮ ತೀರ್ಮಾನವಾಗಿರಲಿಲ್ಲ. ಆಲೂರು, ಆದೋನಿ, ರಾಯದುರ್ಗ ಈ ಮೂರು ತಾಲ್ಲೂಕುಗಳು ಮತ್ತು ಬಳ್ಳಾರಿ ತಾಲ್ಲೂಕುಗಳನ್ನುಳಿದು ಮಿಕ್ಕ ಬಳ್ಳಾರಿ ಜಿಲ್ಲೆ ಕರ್ನಾಟಕಕ್ಕೆ ಸೇರಬೇಕೆಂದು ತೀರ್ಮಾನವೇನೋ ಆಗಿತ್ತು. ಆದರೆ ಯಾವ ಕರ್ನಾಟಕ? ಕರ್ನಾಟಕವೇ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಬಳ್ಳಾರಿ ತಾಲ್ಲೂಕಿನ ಪ್ರಶ್ನೆಯಂತೂ ಕಗ್ಗಂಟಾಯಿತು. ತೆಲುಗುರು, ಕನ್ನಡಿಗರು ತೀವ್ರ ರೀತಿಯ ಸ್ಪರ್ಧೆಗಿಳಿದರು. ವಿಚಿತ್ರವೆಂದರೆ ಕನ್ನಡ ಪ್ರಾಂತ ಸರ್ಕಾರವಿದ್ದುದು ಮೈಸೂರಿನಲ್ಲಿ. ಆದರೆ ಮೈಸೂರು ಬಳ್ಳಾರಿಯ ಭವಿಷ್ಯದ ಬಗ್ಗೆ ಮೌನ ವಹಿಸಿತ್ತು. ಆ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರು ಸಮಾಜವಾದಿ ಚಿಂತಕರಾದ ಶಾಂತವೇರಿ ಗೋಪಾಲಗೌಡ. ಬಳ್ಳಾರಿ ತಾಲ್ಲೂಕನ್ನೂ ಕರ್ನಾಟಕಕ್ಕೆ ಉಳಿಸಿಕೊಳ್ಳಬೇಕೆಂದು ಹರಸಾಹಸ ಮಾಡಿದವರು ನೂರಾರು ಜನ, ಅದಕ್ಕೆ ಒತ್ತಾಸೆ ನೀಡಿದವರು ಲಕ್ಷಾಂತರ ಜನ. ಈ ಚಳವಳಿಯಲ್ಲಿ ವಿಶೇಷ ಆಸಕ್ತಿ ವಹಿಸಿ ಹೋರಾಟ ಮಾಡಿದವರಲ್ಲಿ ಕೋ.ಚನ್ನಬಸಪ್ಪ, ಜ.ಗಾದಿಲಿಂಗಪ್ಪ, ಟೇಕೂರು ಸುಬ್ರಹ್ಮಣ್ಯ, ಅಲ್ಲಂ ಕರಿಬಸಪ್ಪ ಮುಂತಾದವರನ್ನು ನೆನೆಯುವುದು ಅವಶ್ಯಕ. ಬಳ್ಳಾರಿ ತಾಲ್ಲೂಕಿನ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಎಲ್.ಎಸ್.ಮಿಶ್ರಾ ಅವರನ್ನು ನಿಯೋಜಿಸ ಲಾಯಿತು. ಮಿಶ್ರಾ ಬಳ್ಳಾರಿ ತಾಲ್ಲೂಕು ಕರ್ನಾಟಕಕ್ಕೆ ಸೇರಬೇಕೆಂದು ವರದಿಯಿತ್ತು. ಈ ವಿವಾದ ಸುಖಾಂತ್ಯ ಕಾಣಲು ಕಾರಣರಾದವರಲ್ಲಿ ಆಂಧ್ರದ ಕೆಲವು ಕಾಂಗ್ರೆಸ್ ನಾಯಕರೂ ಇದ್ದರು. ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನೀಲಂ ಸಂಜೀವ ರೆಡ್ಡಿ, ಮುಖಂಡರಾದ ಕಾಳೇಶ್ವರರಾವ್ ಮುಂತಾದವರು ಆಂಧ್ರವಾದಿಗಳನ್ನು ಸಾಂತ್ವನಗೊಳಿಸಿದರು. ಹಾಗೆಯೇ ನಿಜಲಿಂಗಪ್ಪನವರ ಪ್ರಭಾವವೂ ಇಲ್ಲಿ ಬಳಕೆಯಾಗಿರುವುದು ಕಾಣುತ್ತದೆ. ಆಂಧ್ರಪ್ರದೇಶ 1.10.1953ರಂದು ಅಸ್ತಿತ್ವಕ್ಕೆ ಬಂದು, ಕರ್ನಾಟಕಕ್ಕೆ ಬರಬೇಕಾಗಿದ್ದ ಬಳ್ಳಾರಿ  ಜಿಲ್ಲೆಯ ಭಾಗವನ್ನು ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಇದು ಏಕೀಕರಣದ ಕನಸು ನನಸಾದ ಮೊದಲ ಹಂತ. ಈ ಘಟನೆ ಏಕೀಕರಣವಾದಿಗಳಿಗೆ ಹೊಸ ಹುರುಪು ನೀಡಿತು.

ಅತ್ತಲಾಗಿ ಕಾಂಗ್ರೆಸ್ಸಿಗರನ್ನು ಬದಿಗಿಟ್ಟು ಸಮಾಜವಾದಿಗಳು ಕಮ್ಯುನಿಷ್ಟರೇ ಮುಂತಾದ ರಾಜಕೀಯಾಸಕ್ತರು ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಅಳವಂಡಿ ಶಿವಮೂರ್ತಿಸ್ವಾಮಿ, ಕೆ.ಆರ್.ಕಾರಂತ ಮುಂತಾದವರ ನೇತೃತ್ವದಲ್ಲಿ ‘ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು’ 1952ರ ಮೇ ನಲ್ಲಿ ಅಸ್ತಿತ್ವಕ್ಕೆ ಬಂದು, ಅದರ ಸಮಾವೇಶದಲ್ಲಿ ಕೇಂದ್ರಸರ್ಕಾರ ಕೂಡಲೇ ಏಕೀಕರಣ ಸಮಿತಿಯೊಂದನ್ನು ರಚಿಸಬೇಕು. ಇಲ್ಲವಾದಲ್ಲಿ ಶಾಂತಿಯುತ ಚಳವಳಿ ಪ್ರಾರಂಭಿಸಿತು. ಡಿಸೆಂಬರ್ ವೇಳೆಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಚಳವಳಿಗಾರರನ್ನು ಸ್ಥಾನಬದ್ಧತೆಯಲ್ಲಿರಿಸಲಾಯಿತು ಅಥವಾ ಜೈಲಿಗೆ ಹಾಕಲಾಯಿತು. ಏಕೀಕರಣಜ್ವರ ಗುಜರಾತ್, ಮಹಾರಾಷ್ಟ್ರ, ಕೇರಳಗಳಲ್ಲೂ ಹಬ್ಬಿ ಕಾಂಗ್ರೆಸ್ ಪಕ್ಷದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಯಿತು. ಕೆಪಿಸಿಸಿಯಂತೂ ಘಾಸಿಗೊಳಗಾಗಿತ್ತು. ತನ್ನ ಸದಸ್ಯರು ವಿವಿಧ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಲಿದ್ದಾರೆಂದು ತೆಗೆದುಕೊಂಡ ನಿರ್ಣಯಕ್ಕೆ ದೆಹಲಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೆಪಿಸಿಸಿ ನಿಗದಿಪಡಿಸಿದ ಅಂತಿಮ ಗಡುವು ಮುಗಿದಿತ್ತು. ‘ಮಾಡು ಇಲ್ಲವೆ ಮಡಿ’ ಎನ್ನುವ ಸ್ಥಿತಿ ಅವರಿಗೆ ಎದುರಾಗಿತ್ತು.