ಇಲ್ಲಿ ಇನ್ನೊಂದು ವಿಚಾರವನ್ನೂ ಚರ್ಚಿಸುವ ಅಗತ್ಯವಿದೆ. ಅದು ವಿವಿಧ ಕನ್ನಡ ಪ್ರದೇಶಗಳ ರಾಜಕಾರಣಿಗಳು ಮತ್ತು ಪಕ್ಷಗಳ ಭವಿಷ್ಯ ಮತ್ತು ರಾಜಕೀಯ ಅನಿವಾರ್ಯತೆ. ಉತ್ತರ ಕರ್ನಾಟಕದವರು ಮೈಸೂರನ್ನು ಹೊರತುಪಡಿಸಿ ಏನನ್ನೂ ಮಾಡುವಂತಿರಲಿಲ್ಲ. ಮೈಸೂರು ಈಗಾಗಲೇ ಆಡಳಿತಾತ್ಮಕವಾಗಿ ಸಂಘಟಿತವಾಗಿತ್ತು. ಆರ್ಥಿಕವಾಗಿಯೂ ಮುಂದುವರೆದಿತ್ತು. ಉದ್ದೇಶಿತ ಏಕೀಕೃತ ಪ್ರದೇಶಗಳ ಅರ್ಧದಷ್ಟು ಪ್ರದೇಶವನ್ನು, ಜನಸಂಖ್ಯೆಯನ್ನೂ, ನೈಸರ್ಗಿಕ ಮತ್ತು ಆರ್ಥಿಕ ಸಂಪನ್ಮೂಲವನ್ನೂ ಹೊಂದಿತ್ತು. ಮೈಸೂರಿಗೆ ಹೋಲಿಸಿದರೆ ಮುಂಬೈ ಕರ್ನಾಟಕವೂ ಸೇರಿ ಉಳಿದೆಲ್ಲವೂ ಈ ವಿಚಾರದಲ್ಲಿ ಸರಿಸಾಟಿಯಾಗಲು ಸಾಧ್ಯವಿರಲಿಲ್ಲ. ಹೈದರಾಬಾದ್ ಕನ್ನಡ ಪ್ರದೇಶವಂತೂ ಎಲ್ಲ ರೀತಿಯಿಂದಲೂ ಹಿಂದುಳಿದಿತ್ತು. ಅವರು ಇತರರೊಂದಿಗೆ ಸೇರಿಕೊಳ್ಳಬಹುದಿತ್ತೇ ವಿನಾ, ಸೇರಿಸಿಕೊಳ್ಳುವಂತಿರಲಿಲ್ಲ. ಸಣ್ಣಪುಟ್ಟ ಸಂಸ್ಥಾನಿ ಕನ್ನಡಿಗರದು ತೀರಾ ಅಸಹಾಯಕ ಸ್ಥಿತಿ. ಈ ವಿಚಾರ ಮೈಸೂರಿಗರಿಗೂ ತಿಳಿದ ವಿಷಯವೇ. ಆದ್ದರಿಂದಲೇ ಮೈಸೂರಿನವರನ್ನು ಓಲೈಸಬೇಕಾದ ಅನಿವಾರ್ಯತೆ ಅವರಿಗೆಲ್ಲ ಇದ್ದಂತೆ ಕಾಣುತ್ತದೆ.ಇನ್ನು ಸ್ವಾತಂತ್ರ್ಯೋತ್ತರ ಮೈಸೂರು ಕಾಂಗ್ರೆಸ್ ಅಧಿಕಾರದಲ್ಲಿ ಪ್ರತಿಷ್ಠಾಪಿತವಾಯಿತು. ರಾಜ್ಯಾಧಿಕಾರಕ್ಕಾಗಿ ಕಾಂಗ್ರೆಸ್ಸಿನ ಕನಿಷ್ಠ ಎರಡು ಗುಂಪುಗಳಾದರೂ ಅಲ್ಲಿ ಸೆಣಸಾಟ ನಡೆಸಿದವು. ಈ ಸೆಣಸಾಟ, ಎರಡೂ ಗುಂಪುಗಳನ್ನೂ ಅನಿವಾರ್ಯವಾಗಿಂೆುೀ ಕಾಂಗ್ರೆಸ್ ಹೈಕಮಾಂಡಿನ ಮರ್ಜಿಗೆ ಒಳಪಡಿಸಿತು. ಕೆಂಗಲ್ ಮತ್ತು ರೆಡ್ಡಿಯವರ ಗುಂಪುಗಳ ಅಧಿಕಾರ ರಾಜಕಾರಣ ಏಕೀಕರಣ ಪ್ರಕ್ರಿಯೆಯೆ ಮೇಲೆ ತನ್ನ ನೆರಳು ಚಾಚಿತು. ಆದರೂ ಕೇಂದ್ರೀಯ ಕಾಂಗ್ರೆಸ್ಸಿನ ಮೇಲಣ ಅವಲಂಬನೆ, ಅವರನ್ನು ಅಂತಿಮವಾಗಿ ಹೈಕಮಾಂಡಿನ ಆಜ್ಞಾರಾಧಕರನ್ನಾಗಿಸಿತ್ತು. ಮುಂಬೈ ಮತ್ತು ಹೈದರಾಬಾದ್ ಕನ್ನಡಿಗರದು ಅತಂತ್ರಸ್ಥಿತಿ. ಅವರಿಗೆ ಇನ್ನೂ ತಮ್ಮದೇ ಆದ ಅಧಿಕಾರಕೇಂದ್ರ ಬಂದಿರಲಿಲ್ಲ. ಆಂಧ್ರಪ್ರದೇಶ ನಿರ್ಮಾಣವಾದಾಗ ಮದ್ರಾಸ್ ಪ್ರಾಂತದಿಂದ ಹೊರಬಿದ್ದ ಬಳ್ಳಾರಿ ಕನ್ನಡಿಗರು ಹರಸಾಹಸ ಪಟ್ಟು ಮೈಸೂರಿನಲ್ಲಿ ಸೇರಿಕೊಳ್ಳಬೇಕಾಯಿತು. ಈ ಬಗ್ಗೆ ಬಳ್ಳಾರಿ ಕರ್ನಾಟಕ ಕ್ರಿಯಾ ಸಮಿತಿ ಕಾರ್ಯದರ್ಶಿ ಯಾಗಿದ್ದ ಕೋ.ಚೆನ್ನಬಸಪ್ಪನವರ ಮಾತುಗಳಿವು:

ವಾಂಛೂ ಆಯೋಗ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳು ನಿಸ್ಸಂದಿಗ್ಧವಾಗಿ ಕರ್ನಾಟಕ ಪ್ರದೇಶವೆಂದೇ ಒಪ್ಪಿಕೊಂಡರೂ, ಅವು ಕರ್ನಾಟಕರಾಜ್ಯ ರಚನೆ ಆಗುವವರೆಗೆ ಆಂಧ್ರರಾಜ್ಯದಲ್ಲಿಯೇ ಇರಬೇಕೆಂದು ಶಿಫಾರಸ್ಸು ಮಾಡಿತು! ಇದು ಕರ್ನಾಟಕಕ್ಕೆ, ತತ್ರಾಪಿ ಬಳ್ಳಾರಿ ಕನ್ನಡಿಗರಿಗೆ ವಜ್ರಾಘಾತವಾಗಿ ಪರಿಣಮಿಸಿತು! ಬಳ್ಳಾರಿ ಕನ್ನಡಿಗರು ಕರ್ನಾಟಕ ಕ್ರಿಯಾ ಸಮಿತಿ ಎಂಬ ಸಂಸ್ಥೆ ಸ್ಥಾಪಿಸಿ ವಾಂಛೂ ವರದಿಯನ್ನು ಪ್ರಚಂಡವಾಗಿ ಪ್ರತಿಭಟಿಸಿ ಘೋರ ಚಳವಳಿಯನ್ನು ಐಕೈಗೊಂಡರು.

ಬಳ್ಳಾರಿ ಜಿಲ್ಲೆಯ ಕರ್ನಾಟಕ ತಾಲ್ಲೂಕುಗಳನ್ನು ಮದ್ರಾಸ್ ರಾಜ್ಯದಲ್ಲೇ ಕರ್ನಾಟಕರಾಜ್ಯ ರಚನೆ ಆಗುವವರೆಗೆ ಉಳಿಸಬೇಕೆಂದು ಮನವಿ ಅರ್ಪಿಸಿದೆವು. ಆಗ ಮದ್ರಾಸ್ ಮುಖ್ಯಮಂತ್ರಿಗಳಾಗಿದ್ದ ರಾಜಾಜಿ ಅದಕ್ಕೆ ಒಪ್ಪಲಿಲ್ಲ. ಆಡಳಿತದ ದೃಷ್ಟಿಯಿಂದ ಅದು ಅಸಾಧ್ಯವೆಂದು ನಮ್ಮ ಮನವಿಯನ್ನು ತಿರಸ್ಕರಿಸಿ ಬಿಟ್ಟರು. ಆಗ ಬಳ್ಳಾರಿಯ ಕನ್ನಡಿಗರು ಅನಿವಾರ್ಯವಾಗಿ ಮೈಸೂರು ಸೀಮೆಯ ಕಡೆಗೆ ತಿರುಗಿ ತಮ್ಮನ್ನು ರಕ್ಷಿಸಬೇಕೆಂದು ಮೊರೆಯಿಟ್ಟರು. ಆಗ ಮೈಸೂರು  ಮುಖ್ಯಮಂತ್ರಿ ಗಳಾಗಿದ್ದ ಕೆ.ಹನುಮಂತಯ್ಯನವರು, ಮೈಸೂರು ಕಾಂಗ್ರೆಸ್ ಮುಖಂಡರ ಪ್ರಬಲ ವಿರೋಧದ ಮಧ್ಯದಲ್ಲೂ ಬಹು ಜಾಣ್ಮೆಯಿಂದ ಬಳ್ಳಾರಿಯ ಕನ್ನಡ ಭಾಗವನ್ನು ಮೈಸೂರು ರಾಜ್ಯದಲ್ಲಿ ಸೇರಿಸಿಕೊಳ್ಳಲು ನಿರ್ಧರಿಸಿದರು. ಆದರೆ ಈ ಸಂದರ್ಭದಲ್ಲಿ ಆಂಧ್ರಪರವಿದ್ದ ಕೆಲವು ದುಷ್ಕರ್ಮಿಗಳು ಬಳ್ಳಾರಿ ಕನ್ನಡ ಕ್ರಿಯಾಸಮಿತಿಯ ಸದಸ್ಯ ರಂಜಾನ್ ಸಾಬರ ಮೇಲೆ ಬಳ್ಳಾರಿ ವಿಧ್ಯುಕ್ತವಾಗಿ ಮೈಸೂರನ್ನು ಸೇರುವ ಮುನ್ನಾದಿನ ಅಂದರೆ ಸೆಪ್ಟೆಂಬರ್ 30ರ ರಾತ್ರಿ ಆಸಿಡ್ ಬಲ್ಬ್ ಎಸೆದು ರಂಪ ಮಾಡಿದರು. ರಂಜಾನ್ ಸಾಬರು ಆ ಗಾಯಗಳಿಂದ ಚೇರಿಸಿಕೊಳ್ಳಲಾಗಿದೆ ಹುತಾತ್ಮರಾದರು. ಇಡೀ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪೊಲೀಸರ ಗೋಲಿಬಾರ್ ನಡೆದಾಗ ಹುಬ್ಬಳ್ಳಿಯಲ್ಲಾದ ಸಾವುನೋವು ಹೊರತುಪಡಿಸಿದರೆ, ಏಕೀಕರಣ ಚಳವಳಿಯಲ್ಲಿ ಹುತಾತ್ಮರಾದವರು ರಂಜಾನ್ ಸಾಬ್ ಒಬ್ಬರೇ.

ಎರಡು ಅಂಶಗಳನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು. ಒಂದು: ಬಳ್ಳಾರಿ ಕನ್ನಡಿಗರ ಅನಾಥಪ್ರಜ್ಞೆ. ಮೈಸೂರು ಕಾಂಗ್ರೆಸ್ಸಿಗರ ನಿರಾಸಕ್ತಿ ಮತ್ತು ಇವರ ನಡುವೆ ಲೇಖಕರ ದೃಷ್ಟಿಯಲ್ಲಿ ಕೆಂಗಲ್ಲರ ಔದಾರ್ಯ, ಎರಡು: ಸೇರಬೇಕೆಂದಿದ್ದವರು ಹಾಗೂ ಸೇರಿಸಿಕೊಳ್ಳುವವರು ಏಕೀಕರಣ ಸಮಸ್ಯೆಯನ್ನು ನೋಡಿದ ಕ್ರಮ.

ಕಾಂಗ್ರೆಸ್ಸೇತರ ಪಕ್ಷಗಳವರೇ ಇದ್ದ ‘ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು’ ಏಕೀಕರಣ ಚಳವಳಿಗೆ ತೀವ್ರತೆಯನ್ನು ತಂದುಕೊಟ್ಟಿತು. ಅಳವಂಡಿ ಶಿವಮೂರ್ತಿಸ್ವಾಮಿ, ಕೆ.ಆರ್.ಕಾರಂತ, ಶಾಂತವೇರಿ ಗೋಪಾಲಗೌಡ, ಬಿ.ವಿ.ಕಕ್ಕಿಲಾಯ ಮುಂತಾದ ಸಮಾಜವಾದಿ ಮತ್ತು ಕಮ್ಯುನಿಸ್ಟ್ ನಾಯಕರು ಕನ್ನಡ ಪ್ರದೇಶಗಳಲ್ಲೆಲ್ಲ ಸಂಚರಿಸಿ ಕಾಂಗ್ರೆಸ್ಸಿನ ‘ನಂಬಿಕೆ ದ್ರೋಹ’ದ ಬಗ್ಗೆ ‘ಸಮಯ ಸಾಧಕತನ’ದ ಬಗ್ಗೆ ಕಟು ಟೀಕೆ ಮಾಡಿದರು. ಉತ್ತರ ಕರ್ನಾಟಕದ ಕನ್ನಡಿಗರ ತಾಳ್ಮೆ ತಪ್ಪಿದ ಕುರುಹಾಗಿ ಹುಬ್ಬಳ್ಳಿಯಿಂದ ಮುಂಬೈ ಶಾಸನ ಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಏಕೀಕರಣ ಪಕ್ಷದ ಅಭ್ಯರ್ಥಿ ಪ್ರಚಂಡ ಜಯ ಗಳಿಸಿದರು. ಇದು ಕಾಂಗ್ರೆಸ್ಸಿನ ಪ್ರತಿಷ್ಠೆಗೆ ಬಿದ್ದ ಪೆಟ್ಟು. ಏಕೀಕರಣದ ಪರವಿದ್ದ ಮುಂಬೈ ಕರ್ನಾಟಕದ ಕನ್ನಡಿಗರು ಈ ಫಲಿತಾಂಶ ಒಂದು ರೀತಿಯಲ್ಲಿ ದೆಹಲಿಯ ಮೇಲೆ ಒತ್ತಡ ಹೇರಲು ವರವಾಗಿ ಪರಿಣಮಿಸಿತು. ಆಕರಾನಿ(ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ) ಪರಿಷತ್ತು ವಿಜಯೋತ್ಸವ ಆಚರಿಸಿತು. ಚುನಾವಣೆ ಆಗಸ್ಟ್ 1953ರಲ್ಲಿ ನಡೆಯಿತು. ಸೆಪ್ಟೆಂಬರ್‌ನಲ್ಲಿ ಆಕರಾನಿ ಪರಿಷತ್ತು ಬೆಂಗಳೂರಿನಲ್ಲಿ ಸೇರಿ ಚಳವಳಿಯಲ್ಲಿ ಭಾಗಿಯಾಗಿ ಜೈಲು ಸೇರಿದವರನ್ನೂ ಬಿಡುಗಡೆ ಮಾಡಲು ಏಕೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಒತ್ತಾಯಿಸಿ ನಿರ್ಣಯ ಕೈಗೊಂಡಿತು. ಅಳವಂಡಿ ಶಿವಮೂರ್ತಿಸ್ವಾಮಿ ಮತ್ತು ಕೆ.ಆರ್. ಕಾರಂತರು ಆಗಸ್ಟ್‌ನಲ್ಲಿ ದೆಹಲಿಯಲ್ಲಿ ನೆಹರೂರನ್ನು ಸಂದರ್ಶಿಸಿ ಈ ಬಗ್ಗೆ ಚರ್ಚಿಸಿ ಬರಿಗೈಯಲ್ಲಿ ವಾಪಸಾಗಿದ್ದರು. ಕೂಡಲೇ ಕರ್ನಾಟಕದಾದ್ಯಂತ ಸೆಪ್ಟೆಂಬರ್ ಮೊದಲ ವಾರವನ್ನು ಕರ್ನಾಟಕ ವಾರವೆಂದು ಆಚರಿಸಲು ಕರೆ ಕೊಟ್ಟಿತು. ಮುಂಬೈ-ಹೈದರಾಬಾದ್-ಮದ್ರಾಸ್ ಕನ್ನಡ ಪ್ರಾಂತಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ ಕಂಡುಬಂದಿತು. ಟೆಲಿಗ್ರಾಫ್ ತಂತಿ ತುಂಡರಿಸುವ, ರೈಲ್ವೆ ಹಳಿಗಳನ್ನು ತಪ್ಪಿಸುವುದೇ ಮೊದಲಾದ ವಿಧ್ವಂಸಕ ಕೃತ್ಯಗಳೂ ಅಲ್ಲಲ್ಲಿ ನಡೆದವು. ಅವರಿವರು ಎನ್ನದೆ ಎಲ್ಲ ವರ್ಗದ ಜನರೂ ಈ ಚಳವಳಿಗೆ ಸಹಕಾರ ನೀಡಿದರು. ಸರ್ಕಾರಕ್ಕೆ ಒಂದಂಶವಂತೂ ಸ್ಪಷ್ಟವಾಯಿತು. ಹೀಗೇ ಮುಂದುವರಿದರೆ ಕಾಂಗ್ರೆಸ್ಸಿಗೆ-ಕಾಂಗ್ರೆಸ್ಸಿಗರಿಗೆ ರಾಜಕೀಯ ಭವಿಷ್ಯ ಶೂನ್ಯವೆಂದು ಮನದಟ್ಟಾಯಿತು. ಇದೇ ಸಂದರ್ಭ ಬಳಸಿಕೊಂಡು ಕೆಪಿಸಿಸಿ, ನಿಜಲಿಂಗಪ್ಪನವರ ನೇತೃತ್ವದಲ್ಲಿ ನೆಹರೂ ಮುಂತಾದವರನನ್ನು ದೆಹಲಿಯಲ್ಲಿ ಸಂಧಿಸಿ ತಮ್ಮ ಸಂಕಟವನ್ನು ತೋಡಿಕೊಂಡರು. ಚುನಾವಣಾ ಫಲಿತಾಂಶ, ಕಾಂಗ್ರೆಸ್ಸೇತರ ಪಕ್ಷಕರ ಚಟುವಟಿಕೆಗಳು ಮತ್ತು ಬಲವರ್ಧನೆ ಸಹಜವಾಗಿಯೇ ಕೇಂದ್ರಕಾಂಗ್ರೆಸ್ಸಿಗರನ್ನು ಎಚ್ಚರಗೊಳಿಸಿತು.

ನನಸು

1953 ಅಕ್ಟೋಬರ್ 28ರಂದು ಪ್ರಧಾನಿ ನೆಹರೂ ನಿಜಲಿಂಗಪ್ಪನವರಿಗೆ ಪತ್ರ ಬರೆದು ಡಿಸೆಂಬರ್ ಅಂತ್ಯದ ವೇಳೆಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು. ಅದರಂತೆ 1953 ಡಿಸೆಂಬರ್ 29ರಂದು ರಾಜ್ಯಪುನರ್‌ವಿಂಗಡನಾ ಆಯೋಗ ರಚಿಸಿ ಆಜ್ಞೆ ಹೊರಡಿಸಲಾಯಿತು. ಈ ಆಯೋಗವೇ ‘ಫಜಲ್ ಆಲಿ ಆಯೋಗ’ವೆಂದು ಇತಿಹಾಸ ಪ್ರಸಿದ್ಧವಾಗಿದೆ. ಫಜಲ್ ಅಲಿ ಅಧ್ಯಕ್ಷರಾಗಿ, ಹೃದಯನಾಥ ಕುಂಜ್ರು ಮತ್ತು ಕೆ.ಎಂ.ಫಣಿಕ್ಕರ್ ಸದಸ್ಯರಾಗಿದ್ದ ಈ ಆಯೋಗವು ಕೂಡಲೇ ಕಾರ್ಯಾರಂಭ ಮಾಡಿತು.

ಆಯೋಗದ ರಚನೆಗೆ ಮುನ್ನ ನೆಹರೂ ಕೆಪಿಸಿಸಿ ಅಧ್ಯಕ್ಷ ನಿಜಲಿಂಗಪ್ಪನವರಿಗೆ ಬರೆದ ಪತ್ರದಲ್ಲಿಯೇ ಸೂಚ್ಯವಾಗಿ ಎಲ್ಲರಿಗೂ ವಿಶೇಷವಾಗಿ ಮೈಸೂರಿಗರಿಗೆ ಕೆಲವು ಎಚ್ಚರಿಕೆಯ ಮಾತುಗಳನ್ನು ಆಡಿದಂತೆ ತೋರುತ್ತದೆ. ಪತ್ರದಲ್ಲಿ ಕರ್ನಾಟಕ ರಾಜ್ಯ ರಚನೆಯು ಸುಲಭವಾಗಿದೆ. ಬೇರೆ ಬೇರೆ ಕಾರಣಗಳಿಂದ ಆ ಬಗ್ಗೆ ನಿರ್ಧಾರ ಕೈಗೊಳ್ಳಲು ತಡವಾಗಿದೆ. ಮೈಸೂರಿನ ವಿಷಯ ಅಷ್ಟೊಂದು ತೊಂದರೆ ಕೊಟ್ಟೀತೆಂದು ಅನಿಸುವುದಿಲ್ಲ. ಆ ಬಗ್ಗೆ ಏನೇನು ಮಾಡಲು ಸಾಧ್ಯವಿದೆಯೋ ಅದನ್ನು ಸರಿಯಾದ ರೀತಿಯಲ್ಲಿ ಮಾಡಲಾಗುವುದು. ಅಂದರೆ ನೆಹರೂ ಮುಂತಾದ ಕೇಂದ್ರ ನಾಯಕರಿಗೆ ರಾಜ್ಯದ ರಾಜಕೀಯ ವಿದ್ಯಮಾನಗಳ ಸಂಪೂರ್ಣ ಅರಿವಿತ್ತು. ಮತ್ತು ಭಿನ್ನಾಭಿಪ್ರಾಯಗಳನ್ನೂ ಹೇಗೆ ಬಗೆಹಿರಬಹುದೆಂಬ ಬಗ್ಗೆ ಕೂಡ ಸ್ಪಷ್ಟತೆಯೂ ಇದ್ದಂತೆ ಕಾಣುತ್ತದೆ. ಇದಕ್ಕೆ ಪೂರಕವೋ ಎಂಬಂತೆ ಮೈಸೂರಿನ ಮುಖ್ಯಮಂತ್ರಿ ಕೆಂಗಲ್ಲರು, ಶಾಸನಸಬೆಯ ವಿರೋಧ ಪಕ್ಷದ ನಾಯಕರಾದ ಜೆ.ಎಂ.ಇಮಾಂ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಉತ್ತರ ಕರ್ನಾಟಕದ ಪ್ರವಾಸ ಮಾಡಿದರು. ಮೈಸೂರಿಗರ ಬಗ್ಗೆ ಇತರ ಕನ್ನಡ ಪ್ರಾಂತಗಳಲ್ಲಿದ್ದ ಸಂಶಯಗಳನ್ನು ನಿವಾರಿಸುತ್ತ ಇಬ್ಬರೂ ನಾಯಕರೂ ಸಭೆಗಳನ್ನು ನಡೆಸಿದರು. ಹೋದೆಡೆಯಲ್ಲೆಲ್ಲ ಮೈಸೂರಿನ ನಾಯಕರಿಗೆ ಸಿಕ್ಕ ಸ್ವಾಗತ ಅದ್ಭುತವಾಗಿತ್ತು. ಕೆಂಗಲ್ಲರೂ ಸಂತುಷ್ಟರಾಗಿ ತಾವು ಏಕೀಕರಣದ ಕಟ್ಟಾ ಬೆಂಬಲಿಗರೆಂದು ಸ್ಪಷ್ಟಪಡಿಸಿ ಬಂದರು. ಆದರೆ ಈ ಪ್ರಕ್ರಿಯೆಯಲ್ಲಿ ಬಹುತೇಕ ಪ್ರಭಾವಿ ಮೈಸೂರು ಕಾಂಗ್ರೆಸ್ಸಿಗರ ವಿರೋಧ ಕಟ್ಟಿಕೊಳ್ಳಬೇಕಾಯಿತು ಮತ್ತು ಏಕೀಕರಣಕ್ಕೆ ಮುನ್ನವೇ ತಮ್ಮ ಮುಖ್ಯಮಂತ್ರಿ ಸ್ಥಾನ ತೆರವು ಮಾಡಬೇಕಾಯಿತು. ಉತ್ತರ ಕರ್ನಾಟಕದ ಪ್ರವಾಸದಿಂದ ಹಿಂದಿರುಗಿದ ಕೆಂಗಲ್ಲರು ಏಕೀಕರಣ ವಿರೋಧಿ ಅಲೆಯನ್ನು ಎದುರಿಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷ, ಮೈಸೂರು ಕಾಂಗ್ರೆಸ್ ಸಮಿತಿಗಳ ಅಲ್ಲದೆ ರಾಜ್ಯಮಂತ್ರಿ ಮಂಡಳದಲ್ಲೂ ತೀವ್ರ ಭಿನ್ನಮತ ವ್ಯಕ್ತವಾಯಿತು. ‘ಮೈಸೂರು ವಾದಿಗಳು’ ಹಲವಾರು ಕಾರಣಗಳನ್ನು ನೀಡಿ ‘ಎರಡು ಕರ್ನಾಟಕ’ಗಳ ಬಗ್ಗೆ ಮಾತನಾಡತೊಡಗಿದರು. ವಿಚಿತ್ರವೆಂದರೆ ಅಲ್ಲಿಯವರೆಗೂ ‘ಅಡ್ಡಗೋಡೆ ಮೇಲೆ ದೀಪವಿಟ್ಟಂತೆ’ ಮಾತನಾಡುತ್ತಿ ದ್ದವರು ಬಹುತೇಕ ರಾಜಕಾರಣಿ ಸಾಹಿತಿಗಳೂ ಸೇರಿದಂತೆ ಎಲ್ಲರೂ ‘ದ್ವಿ ಕರ್ನಾಟಕಕ್ಕೆ’ ಬಹಿರಂಗವಾಗಿ ಒತ್ತಾಯಿಸಲಾರಂಭಿಸಿತು. ಅಧೀರರಾದ ಕೆಂಗಲ್ಲರ ಸರ್ಕಾರ ಸದ್ಯಕ್ಕಾದರೂ ಈ ವಿವಾದವನ್ನು ತಣ್ಣಗಾಗಿಸಲು ಶೇಷಾದ್ರಿಯವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ನೇಮಿಸಿ, ಎಲ್ಲ ಕನ್ನಡ ಪ್ರದೇಶಗಳ ಆರ್ಥಿಕ ಪರಿಸ್ಥಿತಿ ಮತ್ತು ಒಗ್ಗೂಡುವುದರಿಂದಾಗ ಬಹುದಾದ ಪರಿಣಾಮ ಕುರಿತು ವರದಿ ಸಲ್ಲಿಸಲು ಸೂಚಿಸಿತು. ಅಖಂಡ ಕರ್ನಾಟಕ ರಚನೆಗೆ ಹೋರಾಡುತ್ತಿದ್ದವರಿಗೆ ಇದರಿಂದ ಮತ್ತೆ ಸಂಶಯಗಳು ಕಾಡತೊಡಗಿದವು. ಕೊಡಗು ಪ್ರತ್ಯೇಕವಾಗಿಯೇ ಉಳಿಯಬೇಕೆಂಬ ಕೂಗು ಕೇಳಿಬಂತು. ಶೇಷಾದ್ರಿ ಸಮಿತಿಯ ವರದಿ ಎರಡು ಕರ್ನಾಟಕಗಳ ರಚನೆಯನ್ನು ಸಮರ್ಥಿಸುವಂಥ ವರದಿ ನೀಡಿತು. ಮೈಸೂರನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ವಾದಿಸುತ್ತಿದ್ದವರಿಗೆ ಇದರಿಂದ ಸಮರ್ಥನೆ ದೊರೆಯಿತು. ಫಜಲ್ ಅಲಿ ಆಯೋಗ ಜೂನ್ 1954ರಲ್ಲಿ ಮೈಸೂರು ಪ್ರಾಂತಕ್ಕೆ ಬಂದಾಗ ಕಾಂಗ್ರೆಸ್ ಒಳಜಗಳ ಪರಾಕಾಷ್ಠೆೊಮುಟ್ಟಿತ್ತು. ಭಿನ್ನಮತ ಭುಗಿಲೆದ್ದು ಮೈಸೂರುವಾದಿಗಳು ಕೆಂಗಲ್ಲರ ನಾಯಕತ್ವವನ್ನೇ ಪ್ರಶ್ನಿಸಿ, ‘ಒಂದೇ ಕರ್ನಾಟಕ’ ವಿಚಾರವನ್ನು ಮುಂದಿಟ್ಟುಕೊಂಡು ಅವರು ಚುನಾವಣೆ ಗೆದ್ದು ಬರಲಿ ಎನ್ನುವಂಥ ಸವಾಲುಗಳೂ ಕೇಳಿಬಂದವು. ಆಗಲೇ ಕೆಂಗಲ್ಲರ ಸರ್ಕಾರವೇ ಬೀಳಬಹುದು ಎಂಬಂಥ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ದೆಹಲಿ ಮಧ್ಯ ಪ್ರವೇಶಿಸಿ ಎರಡೂ ಬಣದವರನ್ನು ಅತಿರೇಕಕ್ಕೆ ಹೋಗದಂತೆ ತಡೆಯಿತೆನ್ನಿಸುತ್ತದೆ. ಆದ್ದರಿಂದಲೇ ಎರಡೂ ಬಣಗಳವರು ಆಯೋಗದ ಮುಂದೆ ಸಾಕ್ಷ್ಯ ನೀಡದಂತೆ ವಿಪ್ ನೀಡಿ ಕಾಂಗ್ರೆಸ್ ಮತ್ತು ಸರ್ಕಾರಕ್ಕೆ ಬಹಿರಂಗವಾಗಿ ಮುಜುಗರವಾಗದಂತೆ ತಡೆಯುವ ಪ್ರಯತ್ನಗಳಾದವು. ಆದರೂ ಪತ್ರಿಕಾ ಮಾಧ್ಯಮದಲ್ಲಿ ಈ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಯಿತು. ಆದರೆ ಮಿಕ್ಕೆಲ್ಲ ಪಕ್ಷಗಳೂ, ವಾಣಿಜ್ಯ, ಕಾರ್ಮಿಕ, ಮಹಿಳಾ, ಯುವಕ, ರೈತ ಸಂಘಗಳು ಒಂದೇ ಕರ್ನಾಟಕದ ಪರ ಮನವಿಯರ್ಪಿಸಿ, ಸಾಕ್ಷಿ ಒದಗಿಸಿದವು. ಆಯೋಗ ಕನ್ನಡ ಪ್ರಾಂತ ಗಳಲ್ಲಿ ಏಕೀಕರಣದ ಪರವಾಗಿದ್ದ ಜನಾಭಿಪ್ರಾಯವನ್ನು ದಾಖಲಿಸಿಕೊಂಡಿತು. ಎರಡನೆಯ ಬಾರಿಗೆ ಆಯೋಗವು ಬೆಂಗಳೂರಿಗೆ ಭೇಟಿ ಕೊಡುವ ಹೊತ್ತಿಗೆ ದೆಹಲಿಯ ಕೃಪೆಯೋ, ಅಥವಾ ತಮ್ಮ ರಾಜಕೀಯ ಭವಿಷ್ಯ ಕುರಿತ ಭಯವೋ, ಒಟ್ಟಾರೆ ‘ದ್ವಿ ಕರ್ನಾಟಕ’ ವಿವಾದ ಬಹುತೇಕ ಶಮನಗೊಂಡಿತ್ತು.

ಕೆಂಗಲ್ಲರ ರಾಜಕೀಯ ಅಸ್ಥಿರತೆ ಕಾಪಾಡತೊಡಗಿತ್ತು. ಉತ್ತರ ಕರ್ನಾಟಕದಲ್ಲಿ ಏಕೀಕೃತ ಕರ್ನಾಟಕದ ಬಗ್ಗೆ ಸ್ಪಷ್ಟ ನಿಲುವು ತಾಳಿ ಅಲ್ಲಿನ ಕನ್ನಡಿಗರಲ್ಲಿ ಉತ್ಸಾಹ ತುಂಬಿದ ಅವರು ಶೇಷಾದ್ರಿ ವರದಿ, ತಮ್ಮ ಪಕ್ಷದ ಭಿನ್ನ ಮತೀಯ ಚಟುವಟಿಕೆಗಳಿಂದ ಜರ್ಜರಿತರಾಗಿದ್ದಂತೆ ಕಂಡುಬಂತು.

ಶೇಷಾದ್ರಿ ಸಮಿತಿ ಒದಗಿಸಿರುವ ಅಂಕಿ-ಅಂಶಗಳು ಕರ್ನಾಟಕ ಏಕೀಕರಣದ ವಿರುದ್ಧವಾಗಿವೆ. ಈ ಸಮಿತಿಯ ನೇಮಕಾತಿಯನ್ನು ನೀವು ಗಮನಿಸಿದರೆ ನಾನು ಈ ವಿಷಯದ ಬಗ್ಗೆ ಯಾವ ರೀತಿಯ ಅಭಿಪ್ರಾಯ ಹೊಂದಿ ದ್ದೇನೆ ಎನ್ನುವುದು ಸ್ಪಷ್ಟವಾಗುತ್ತದೆ.

ಎಂದು ಹೇಳಿದರೆಂಬ ವರದಿಯೂ ಇದೆ. ಆಯೋಗದ ವರದಿ ಪ್ರಕಟವಾಗಿ ಮೈಸೂರಿನ ರಾಜಕೀಯದಲ್ಲಿ ಗಂಭೀರ ಪರಿಸ್ಥಿತಿ ಉಂಟಾಯಿತು. ಕೆಂಗಲ್ಲರ ‘ಎಲ್ಲ ಕಾಲಕ್ಕೂ ನಾನು ಮೈಸೂರಿನ ವಿಸ್ತರಣೆಯನ್ನು ಮಾತ್ರ ಬೆಂಬಲಿಸುತ್ತಿದ್ದೇನೆ’ ಎಂಬ ಮಾತುಗಳನ್ನು ಅವರ ಬೆಂಬಲಿಗರು, ವಿರೋಧಿಗಳು ಮತ್ತು ಪತ್ರಿಕಾಮಾಧ್ಯಮ ತಮಗೆ ತೋಚಿದಂತೆ ವಿಶ್ಲೇಷಿಸಿ ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಗೊಳಿಸಿದರು. ಬೆಂಗಳೂರಿನ ಪ್ರಮುಖ ದೈನಿಕವೊಂದು ‘ಕೆಂಗಲ್ಲರ ಅಡ್ಡಗೋಡೆಯ ಮೇಲೆ ದೀಪವಿಟ್ಟಂಥ ತಮ್ಮ ಧೋರಣೆಯನ್ನು ಬಿಟ್ಟು ಸ್ಪಷ್ಟನಿಲುವು ತಾಳಬೇಕೆಂದು,ೊಸಂಪಾದಕೀಯ ಬರೆಯಿತು. ಸಚಿವಸಂಪುಟದಲ್ಲಿ ಬಿಕ್ಕಟ್ಟು ತಲೆದೋರಿತು. ಮೂವರು ಸಚಿವರು ಏಕೀಕರಣವನ್ನು ವಿರೋಧಿಸಿ ಬಹಿರಂಗ ಹೇಳಿಕೆಗಳನ್ನು ಕೊಟ್ಟರು. ಒಬ್ಬ ಸಚಿವರಂತೂ ಮುಖ್ಯಮಂತ್ರಿಗಳ ಹೇಳಿಕೆ ‘ಸ್ವಂತ ಅಭಿಪ್ರಾಯವೇ ಹೊರತು ಸಂಪುಟದಲ್ಲ’ವೆಂದು ಪತ್ರಿಕಾ ಹೇಳಿಕೆಯಿತ್ತರು.

ಮೈಸೂರಿನ ಆಂತರಿಕ ಬಿಕ್ಕಟ್ಟುಗಳು ಮತ್ತಿತರ ಗೊಂದಲಗಳು ಕೇಂದ್ರ ಸರ್ಕಾರವನ್ನು ಚಿಂತೆಗೀಡು ಮಾಡಿದವು. ಈ ಸಮಸ್ಯೆಯನ್ನು ಬಗೆಹರಿಸಲು ನೆಹರೂ, ಜಿ.ಬಿ.ಪಂತ್, ಮೌಲಾನ ಆಜಾದ್ ಹಾಗೂ ಕಾಂಗ್ರೆಸ್ ಅಧ್ಯಕ್ಷ ಯು.ಎನ್.ದೇಭರ್ ಸದಸ್ಯರಾದ ಒಂದು ಸಮಿತಿ ರಚಿತವಾಯಿತು. ಆದರೆ ಈ ಸಮಿತಿ ಮೈಸೂರು ಕಾಂಗ್ರೆಸ್ಸಿಗರನ್ನು ತಣ್ಣಗಾಗಿಸಿ ಏಕೀಕರಣಕ್ಕೆ ಒಪ್ಪಿಕೊಳ್ಳುವಂತೆ ಮನ ಒಲಿಸುವುದಕ್ಕೆ ರಚಿತವಾಯಿತೆಂದು ತರ್ಕಿಸಬಹುದು.

ಈ ಮಧ್ಯೆ ಆಯೋಗದ ವರದಿ ತೀರ್ಮಾನವಾಗಿದ್ದ ಬಳ್ಳಾರಿಯ ಪ್ರಶ್ನೆಯನ್ನು ಮತ್ತೆ ಕೆದಕಿ, ಆ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತವಾಯಿತು. ಕಾಸರಗೋಡನ್ನು ಕೇರಳಕ್ಕೆ, ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಟ್ಟದ್ದು ಅತೀವ ಆಕ್ರೋಶಕ್ಕೆ ಕಾರಣವಾಯಿತು. ವರದಿ ಪರಿಗಣನೆಯ ವಿವಿಧ ಹಂತಗಳಲ್ಲಿ ಬಳ್ಳಾರಿ ಸಮಸ್ಯೆಯನ್ನು ಬಗೆಹರಿಸಲಾಯಿ ತಾದರೂ ಕಾಸರಗೋಡು ಮತ್ತು ಇತರ ಗಡಿ ಕನ್ನಡಿಗರ ಸಮಸ್ಯೆ ಹಾಗೇ ಉಳಿಯಿತು. ಈಗಲೂ ಅದು ಹಾಗೆಯೇ ಇದೆ. ಆಯೋಗದ ವರದಿಯನ್ನು ಚರ್ಚಿಸಲು ಮೈಸೂರು ಶಾಸನ ಸಭೆ ಕೂಡಿತು. ಆದರೆ ಕೇಂದ್ರೀಯ ಕಾಂಗ್ರೆಸ್ ನೇಮಿಸಿದ ಸಮಿತಿ ತನ್ನ ವರದಿ ಸಲ್ಲಿಸುವುದನ್ನು ತಡಮಾಡಲಾಗಿ ಸಭೆಯನ್ನು ಮುಂದೂಡಲಾಯಿತು. ಆದರೆ ವಿಧಾನ ಮಂಡಲದ ಉಭಯ ಸದನಗಳು ವರದಿಯನ್ನು ಚರ್ಚಿಸುವುದಕ್ಕೂ ಮುನ್ನ ಮೈಸೂರು ಕಾಂಗ್ರೆಸ್ ಅಧ್ಯಕ್ಷರು ಮತ್ತು ಕೆಂಗಲ್ಲರ ವಿರೋಧಿ ಪಾಳ್ಯದ ಮುಖಂಡರೂ ಆದ ಸಾಹುಕಾರ್ ಚನ್ನಯ್ಯನವರು, ಕೇಂದ್ರ ನಾಯಕರು ಏಕೀಕೃತ ಕರ್ನಾಟಕದ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿದ್ದಾರೆ ಎಂದು ಘೋಷಿಸಿದರು.

ವಿಧಾನ ಮಂಡಲದಲ್ಲಿ ನಡೆದ ಫಜಲ್ ಅಲಿ ವರದಿ ಮೇಲಿನ ಚರ್ಚೆ ಬಹುತೇಕ ಔಪಚಾರಿಕವಾಗಿತ್ತು. ವಿರೋಧಿಸುತ್ತಿದ್ದ ಅನೇಕರು ತಮ್ಮ ಆಕ್ರೋಶವನ್ನು ನುಂಗಿಕೊಳ್ಳ ಬೇಕಾಯಿತು. ಆದರೂ ಕೆಲವು ಶಾಸಕರು ಕೇಂದ್ರ ರಾಜ್ಯ ನಾಯಕರನ್ನು ಕಟುವಾಗಿಯೇ ಟೀಕಿಸಿದರು. ಒಬ್ಬ ಸದಸ್ಯರಂತೂ ‘ಚರ್ಚೆಯೇ  ಅನವಶ್ಯಕ… ಸಮಯ ಹಾಳು’ ಎಂದದ್ದೂ ಉಂಟು. ವಿಧಾನಸಭೆಯಲ್ಲಿ ವರದಿಯನ್ನು ಮತಕ್ಕೆ ಹಾಕಿದಾಗ ಅರವತ್ತು ಸದಸ್ಯರು ಅದರಲ್ಲಿ ಭಾಗವಹಿಸಿದರೆ ಮೂವತ್ತೈದು ಸದಸ್ಯರು ತಟಸ್ಥರಾಗುಳಿದರು. ಮತಹಾಕಿದವರಲ್ಲಿ ಮೂವರು ವಿಧೇಯಕದ ವಿರುದ್ಧ ಹಾಕಿದರು. ಬೆಂಗಳೂರು, ತುಮಕೂರುಗಳಲ್ಲಿ ಏಕೀಕರಣ ವಿರೋಧಿ ತೀವ್ರಗಲಭೆಗಳಾದರೆ, ಮಂಡ್ಯದಲ್ಲಿ ಬೃಹತ್ ಸಮ್ಮೇಳನವೇ ನಡೆಯಿತು. ಅದೇನೇ ಇರಲಿ ಆಯೋಗದ ವಿಧೇಯಕ ಔಪಚಾರಿಕವಾಗಿ ಒಪ್ಪಿಗೆ ತಡೆಯಿತು. ಎರಡನೆಯ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿದ್ದುದರಿಂದ, ಏಕೀಕರಣವನ್ನು ವಿರೋಧಿಸುತ್ತಿದ್ದ ಕಾಂಗ್ರೆಸ್ ವರಿಷ್ಠರ ಅವಕೃಪೆಗೆ ಒಳಗಾಗಿ. ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಲ್ಪಡುವ ಗುಂಪಿನಲ್ಲಿ ಸೇರಿ ರಾಜಕೀಯ ಭವಿಷ್ಯವನ್ನು ಮಸುಕಾಗಿಸಿಕೊಳ್ಳಲಿಚ್ಛಿಸದೆ, ಕೊನೇಗಳಿಗೆಯಲ್ಲಿ ಪರವಾಗಿ ಮತ ಹಾಕಿದವರೂ ಇದ್ದರು. ಎಲ್ಲಕ್ಕೂ ಮಿಗಿಲಾಗಿ ಕೆಂಗಲ್ಲರು ‘ವರದಿಯ ಬಗ್ಗೆ ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು’ ಎಂದು ಘೋಷಿಸಿಯೂ ಆಗಿತ್ತು.

ಅನಿಶ್ಚಿತತೆ, ಗೊಂದಲ ಎಷ್ಟು ವ್ಯಾಪಕವಾಗಿತ್ತೆಂದರೆ, ಕೇಂದ್ರ ಮಂತ್ರಿ ಆಗಿದ್ದು, ಈ ಗೊಂದಲದ ಸಂದರ್ಭದಲ್ಲಿ ಬಿಹಾರದ ರಾಜ್ಯಪಾಲರಾಗಿದ್ದ ರಂಗನಾಥ ದಿವಾಕರರಿಗೆ ಏಕೀಕರಣದ ಕನಸು ನನಸಾಗುವುದರ ಬಗ್ಗೆ ‘ಅನುಮಾನ’ ಬಂದಿತಂತೆ. ಏಕೀಕರಣದ ಬಗ್ಗೆ ಸತತವಾಗಿ ತಮ್ಮ ಮಿತಿಯಲ್ಲೇ ಜನಾಭಿಪ್ರಾಯ ರೂಪಿಸುತ್ತಿದ್ದ ಕುವೆಂಪು ಮೈಸೂರು ರಾಜಕಾರಣಿಗಳು ಮತ್ತು ಕೆಲವು ಸಾಹಿತಿ, ಪತ್ರಕರ್ತರ ಎಡಬಿಡಂಗಿತನದಿಂದ ಬೇಸತ್ತು ಮೈಸೂರಿನ ಒಂದು ಸಭೆಯಲ್ಲಿ ಏಕೀಕರಣದಿಂದಲ್ಲದೆ, ಕರ್ನಾಟಕ ಏಕೆ ಇಡೀ ಭಾರತದ ಕಲ್ಯಾಣ ಸಾಧನೆ ಕ್ಷೇಮ ಖಂಡಿತ ಸಾಧ್ಯವಿಲ್ಲವೆಂದು ಘೋಷಿಸಿದ್ದರು. ಆ ಹೊತ್ತಿಗೆ ಮೈಸೂರಿನಲ್ಲಿ ಪ್ರಜಾಸರ್ಕಾರವಿತ್ತು. ಶಿಕ್ಷಣ ಸಚಿವರು ಕುವೆಂಪು ಅವರಿಗೆ ವಿವರಣೆ ಕೇಳಿ ಪತ್ರ ಬರೆದರು. ಕುವೆಂಪು ತಮ್ಮ ಒಂದು ಪದ್ಯದ ಮೂಲಕವೇ ಉತ್ತರ ಕೊಟ್ಟಿದ್ದೂ ಉಂಟು. ಅಷ್ಟಕ್ಕೇ ಬಿಡದೆ ರಾಜಕೀಯಸ್ಥರನ್ನು ಕವನದ ಮೂಲಕ ತರಾಟೆಗೆ ತೆಗೆದುಕೊಂಡು ತಮ್ಮ ಕನಸಿನ ಸಾಂಸ್ಕೃತಿಕ ಕರ್ನಾಟಕವನ್ನು ಸಾದರಪಡಿಸಿದ್ದು ಹೀಗೆ:

ಅಲ್ತೊ ನಮ್ಮಕೂಟಾಟದ ರಾಜಕೀಯ ನಾಟಕ!

ಇಂದು ಬಂದು ನಾಳೆ ಸಂದು

ಹೋಹ ಮಂತ್ರಿ ಮಂಡಲ…..

ನೃಪತುಂಗನೆ ಚಕ್ರವರ್ತಿ

ಪಂಪನಲ್ಲಿ ಮುಖ್ಯಮಂತ್ರಿ!

ರನ್ನ ಜನ್ನ ನಾಗವರ್ಮ

ರಾಘವಾಂಕ ಹರಿಹರ

ಬಸವೇಶ್ವರ ನಾರಾಣಪ್ಪ

ಸರ್ವಜ್ಞ ಷಡಕ್ಷರ

ಸರಸ್ವತಿಯೆ ರಚಿಸಿದೊಂದು

ನಿತ್ಯ ಸಚಿವ ಮಂಡಲ….

ತನಗೆ ರುಚಿರ ಕುಂಡಲ

ಕೊನೆಗೂ ಸಂಸತ್ತು, ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಮೈಸೂರು ಎಂಬ ಹೆಸರಿನಲ್ಲೇ ಏಕೀಕೃತ ಕರ್ನಾಟಕ ಅಸ್ತಿತ್ವಕ್ಕೆ ಬಂದದ್ದು 1 ನವೆಂಬರ್ 1956ರಂದು. ‘ಮೈಸೂರು ವ್ಯಾಮೋಹಿ’ಗಳನ್ನು ಸಂತೈಸಲೋ ಎಂಬಂತೆ ಏಕೀಕೃತ ರಾಜ್ಯಕ್ಕೆ ‘ಮೈಸೂರು ರಾಜ್ಯ’ವೆಂದೇ ಹೆಸರಿಸಲಾಯಿತು. ಈ ಬಗ್ಗೆ ಬಹುಮಂದಿಗೆ ಅಸಮಾಧಾನವೂ ಇತ್ತು. ಈ ಹೆಸರು ‘ಕರ್ನಾಟಕ’ವೆಂದಾದುದು 1973ರಲ್ಲಿ. ಏಕೀಕರಣದ ಕಟ್ಟಾ ವಿರೋಧಿಗಳಾಗಿದ್ದ ದೇವರಾಜ ಅರಸರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ಕರ್ನಾಟಕ ನಾಮಾಂಕಿತ ಏಕೀಕೃತ ರಾಜ್ಯ ರಚನೆಯಾಯಿತೇನೋ ನಿಜ. ಆದರೆ ಕನ್ನಡ ಮಾತನಾಡುವ ಅನೇಕ ಪ್ರದೇಶಗಳು ನೆರೆ ರಾಜ್ಯಗಳ ಪಾಲಿಗೆ ಹೋದವು. ಈ ಬಗ್ಗೆ ಅಸಮಾಧಾನ ವ್ಯಕ್ತ ವಾಗುತ್ತಲೇ ಇದೆ. ಬೆಳಗಾವಿ, ಕಾಸರಗೋಡುಗಳ ಬಗ್ಗೆ ಅನಂತರ ರಚಿತವಾದ ಮಹಾಜನ ವರದಿ ಕೆಲವು ಶಿಫಾರಸ್ಸುಗಳನ್ನು ಮಾಡಿದೆ. ಆದರೆ ಅದು ಅನುಷ್ಠಾನವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಅಧಿಕಾರ ರಾಜಕಾರಣ ಮತ್ತು ರಾಜಕಾರಣಿಗಳು.

ಕರ್ನಾಟಕ ಏಕೀಕರಣ ಕಲ್ಪನೆ ಹುಟ್ಟಿದ್ದೇ ಕನ್ನಡಭಾಷೆ, ಸಂಸ್ಕೃತಿ, ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಅರಿವಿನಿಂದ. ಸಾಂಸ್ಕೃತಿಕವಾಗಿ ಆರಂಭಗೊಂಡು ಅನಂತರ ಅದು ಅನಿವಾರ್ಯವಾಗಿಯೇ ರಾಜಕೀಯ ಅಯಾಮ ಪಡೆದುಕೊಂಡಿತು. ಆದರೆ ಏಕೀಕರಣ ಚಳವಳಿ ತನ್ನ ಸಾಂಸ್ಕೃತಿಕ ನೆಲೆಯಲ್ಲಿ ಚರಿತ್ರೆಯನ್ನು ಧಾರಾಳವಾಗಿ ಬಳಸಿಕೊಂಡಿತು. ಹಾಗೆ ನೋಡಿದರೆ ಚರಿತ್ರೆಯನ್ನು ವಸ್ತುನಿಷ್ಠವಾಗಿ ಬಳಸಿಕೊಂಡಿತೆಂದು ಹೇಳುವುದು ಕಷ್ಟ. ಅನೇಕರು, ವಿಶೇಷವಾಗಿ ಆಲೂರು ಅಂಥವರು ಅದಕ್ಕೆ ಧಾರ್ಮಿಕ ಆಧ್ಯಾತ್ಮಿಕ ಆಯಾಮ ಒದಗಿಸಿ ಭಾವನಾತ್ಮಕ ನೆಲೆಯಲ್ಲಿ ಕರ್ನಾಟಕದ ಕನಸನ್ನು ಕಂಡರು. ಆದರೆ ಭಾವನೆಗಳಿಗೆ ತಮ್ಮವೇ ಆದ ಸಂಕೀರ್ಣತೆ ಮತ್ತು ಮಿತಿ ಎರಡೂ ಇವೆ. ಈ ಸಂಕೀರ್ಣತೆ ಮತ್ತು ಮಿತಿಗಳಿಗೆ ಒಂದು ನಿರ್ದಿಷ್ಟ ರೂಪ ಕೊಡಲು ಸಾಧ್ಯವಾಗುವುದು ರಾಜಕೀಯ ತೀರ್ಮಾನಕ್ಕೆ. ಈ ರಾಜಕೀಯ ತೀರ್ಮಾನಕ್ಕೆ ಬರಲು ಅವಶ್ಯಕವಾದ ಸಾಮಗ್ರಿಯನ್ನು ಒದಗಿಸಿಕೊಟ್ಟವರು ಸಾಹಿತಿಗಳು, ಕಲಾವಿದರು ಮತ್ತು ಸಂಸ್ಕೃತಿ ಕ್ಷೇತ್ರದ ದಿಗ್ಗಜರು. ಅನಂತರ ರಾಜಕೀಯ ಪರಿಕಲ್ಪನೆಯ ಸುತ್ತ ಸಮುದಾಯಗಳನ್ನು ನೆರೆಯಿಸುವ ಕರ್ತವ್ಯ ನಿರ್ವಹಿಸಿದವರು ವಿಶೇಷವಾಗಿ ವಿವಿಧ ರಾಜಕೀಯ ಪಕ್ಷಗಳ ಸಂಘಟಕರು. ಈ ರಾಜಕೀಯಕ್ಕೆ ತನ್ನದೇ ಆದ ಹಿತಾಸಕ್ತಿ, ತುರ್ತು ಸಾಂದರ್ಭಿಕ ಒತ್ತಡಗಳು ಇದ್ದವು. ಆದ್ದರಿಂದಲೇ 1947ರವರೆಗೂ ಭಾಷಾವಾರು ಪ್ರಾಂತ ರಚನೆ ಬಗ್ಗೆ ಉತ್ಸಾಹದಿಂದಿದ್ದ ಕಾಂಗ್ರೆಸ್ ಅನಂತರ ನಿಧಾನ ನೀತಿ ಅನುಸರಿಸಿತು. ಆಗ ತಾನೇ ರಾಜಕೀಯ ಸ್ವಾತಂತ್ರ್ಯ ಪಡೆದಿದ್ದ ಭಾರತ ಮತ್ತು ಅದನ್ನು ನಿಭಾಯಿಸುವ ಹೊಣೆ ಹೊತ್ತ ಕಾಂಗ್ರೆಸ್ಸಿಗೆ ತನ್ನದೇ ಪರಿಕಲ್ಪನೆಯ ಸ್ವತಂತ್ರ ಭಾರತ ಮುಂದಿತ್ತು. ಆದ್ಯತೆಗಳಿದ್ದವು. ಅವು ತಪ್ಪೆಂದು ವಾದಿಸುವುದು ಸುಲಭ. ಆದರೆ ವಸ್ತುಸ್ಥಿತಿ ಅದಾಗಿರಲಿಲ್ಲ. ಭಾರತ ಸರ್ಕಾರ ಮೈಯೆಲ್ಲ ಕಣ್ಣಾಗಿ ಕೆಲಸ ಮಾಡುವ ಅವಶ್ಯಕತೆಯಿತ್ತು. ಏಕೀಕರಣೋತ್ಸಾಹಿಗಳು, ತಮ್ಮ ಆದ್ಯತೆಯನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮತ್ತು ಅಧಿಕಾರ ದಲ್ಲಿದ್ದವರನ್ನು ಟೀಕೆ ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಅದು ಸರಿ ಇರಬಹುದು. ಆದರೆ ಸಮಗ್ರ ದೃಷ್ಟಿಯೆನ್ನುವುದರೊಂದಿಗೆ ಏಕೀಕರಣ ಸಮಸ್ಯೆ ಭಾರತ ಸರ್ಕಾರಕ್ಕೆ ತುರ್ತಾಗಿ ನಿವಾರಿಸಬೇಕಾದ ವಿಚಾರವೆಂದು ಅನ್ನಿಸದಿದ್ದರೆ ಅದರ ಆದ್ಯತೆಗಳು ಬೇರೆಯಾಗಿದ್ದವು ಎಂದೇ ಅರ್ಥ. ಇವೆಲ್ಲಕ್ಕೂ ಮಿಗಿಲಾಗಿ ಕರ್ನಾಟಕ ಏಕೀಕರಣದ ಸಮಸ್ಯೆ ಎಲ್ಲ ದೃಷ್ಟಿಯಿಂದಲೂ ಕ್ಲಿಷ್ಟವಾಗಿತ್ತು. ಪರಸ್ಪರ ವಿರುದ್ಧವಾದ ನಿಲುವುಗಳು, ಕನ್ನಡೇತರ ಭಾಷಿಕರ ಮತ್ತು ನೇರ ಭಾಷಾವಾರು ಪ್ರದೇಶಗಳ ರಚನೆಗಾಗಿ ಹೋರಾಡುತ್ತಿದ್ದವರ ಅಭೀಪ್ಸೆಗಳನ್ನೂ ದೃಷ್ಟಿಯಲ್ಲಿಟ್ಟುಕೊಂಡು ಮುನ್ನಡೆಯಬೇಕಾಗಿದ್ದುದು ತೀರಾ ಅಗತ್ಯವಾಗಿತ್ತು.

ಭಾರತ ಒಂದು ಆಧುನಿಕ ಸ್ವತಂತ್ರ ರಾಷ್ಟ್ರವಾಗಿ ಇತಿಹಾಸ ಸೃಷ್ಟಿಸುತ್ತಿದ್ದಂತೆ, ಕರ್ನಾಟಕವೂ ಒಂದು ಆಧುನಿಕ ಸ್ವಾಯತ್ತ ಉಪರಾಷ್ಟ್ರವಾಗಿ ತನ್ನ ಆಸ್ಮಿತೆಯನ್ನು ಕಟ್ಟಿಕೊಳ್ಳುತ್ತಿತ್ತು. ಈ ಪ್ರಕ್ರಿಯೆ 1947ರಲ್ಲಿ ಒಂದು ಹಂತವನ್ನು ತಲುಪಿತು. ಆ ಹೊತ್ತಿಗೆ ಕರ್ನಾಟಕದ ಸಾಂಸ್ಕೃತಿಕ ನೆಲೆಗಟ್ಟು ಮಾತ್ರ ಸಿದ್ಧವಾಗಿತ್ತು. ಅದು ರಾಜಕೀಯ ನೆಲೆಗಟ್ಟಾಗಿ ಪರಿವರ್ತನೆಗೊಳ್ಳುವುದು ಹೆಚ್ಚು ಪ್ರಯಾಸಕರವಾಗಿತ್ತು. ಯಾಕೆಂದರೆ ನಿಜವಾದ ಸಂಘರ್ಷ ತಳಮಳ ಮತ್ತು ಒಡಂಬಡಿಕೆಗಳು ಪ್ರಾರಂಭವಾಗುವುದು ಸಾಧ್ಯವಿದ್ದುದೇ ಆಗ. ಸ್ವಾತಂತ್ರ ಪೂರ್ವದಲ್ಲಿ ಅದೆಲ್ಲ ಸಾಧ್ಯವಿರಲಿಲ್ಲ. ಅಂಥಾ ಸಂಘರ್ಷ ಪ್ರಾರಂಭವಾಗಿದ್ದರೆ ಏಕೀಕರಣ ಚಳವಳಿಯ ಮುಂದಾಳುಗಳಿಗೆ ಈ ವಿಚಾರ ಗೊತ್ತಿತ್ತು. ಕನ್ನಡಿಗರನ್ನು ಹುರಿದುಂಬಿಸಲು ಸಾಹಿತ್ಯಕ-ಸಾಂಸ್ಕೃತಿಕ-ಭಾವನಾತ್ಮಕ ವಿಚಾರಗಳನ್ನು ಬಳಸಿಕೊಂಡರು. ಆದರೆ ಅದು ಅಂತಿಮವಾಗಿ ಉದ್ದೇಶಿತ ರಾಜ್ಯದ ಆರ್ಥಿಕ ರಾಜಕೀಯ ಸಾಮಾಜಿಕ ಧೃಡತೆ ಮತ್ತು ಒಟ್ಟಾರೆ ನವಭಾರತದ ಏಕತೆ, ಸಮಗ್ರತೆ ಗಳ ನೆಲೆಯಲ್ಲೇ ಅಸ್ತಿತ್ವಕ್ಕೆ ಬಂದಿತು. ಭಾವನಾತ್ಮಕತೆ ಒಂದು ಘಟ್ಟದಲ್ಲಿ ಪ್ರಯೋಜನಕಾರಿ ಆದರೂ ಒಟ್ಟಾರೆಯಾಗಿ ಒಂದುಗೂಡಿದ ಒಂದುಗೂಡುವ ಪ್ರದೇಶಗಳ ಜನರ ಸಂತೃಪ್ತಿ ಮಾತ್ರ ಅಂಥವರನ್ನು ಸಾಮರಸ್ಯದಿಂದ ಮುನ್ನೆಡೆಸುವ ಮಾನದಂಡ. ಇಷ್ಟಕ್ಕೂ ಭಾವನಾತ್ಮಕ ಏಕೀಕರಣ ನಿರಂತರವಾಗುವುದು ಸಂತೃಪ್ತಿಯಿಂದ ತಾನೇ? ಕೊಡುಗು, ಉತ್ತರ ಕರ್ನಾಟಕದಿಂದ ಆಗಾಗ ಕೇಳಿ ಬರುವ ಪ್ರತ್ಯೇಕತೆಯ ಕೂಗು ಮತ್ತು ನಂಜುಂಡಪ್ಪನವರ ವರದಿಯ ಸಾರಾಂಶ ಕೂಡ ಅದನ್ನೇ ಸಮರ್ಥಿಸುತ್ತದೆ.

ಪರಮರ್ಶನ ಗ್ರಂಥಗಳು

1. ಚಂದ್ರಶೇಖರ ಎಸ್., 2002. ಆಧುನಿಕ ಕರ್ನಾಟಕದ ಆಂದೋಲನಗಳು, ಬಿಳಿಗೆರೆ: ನಮ್ಮ ಪ್ರಕಾಶನ, ತಿಪಟೂರು ತಾಲ್ಲೂಕು.

2. ಚಂದ್ರಶೇಖರ ಎಸ್., 2007. ಕರ್ನಾಟಕ ಏಕೀಕರಣ, ಬೆಂಗಳೂರು: ಪುಸ್ತಕ ಪ್ರಾಧಿಕಾರ, ಕರ್ನಾಟಕ ಸರ್ಕಾರ.

3. ಚಂದ್ರಶೇಖರ ಎಸ್.(ಸಂ), 1997. ಕರ್ನಾಟಕ ಚರಿತ್ರೆ, ಸಂಪುಟ 7, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ಹಂಪಿ.