ಅಂಟು:

ಅಂಟನ್ನು ಕೊರಮರು ತಮ್ಮ ಭಾಷೆಯಲ್ಲಿ ಜಿಗುರು ಎಂದು ಕರೆಯುತ್ತಾರೆ. ಹಕ್ಕಿಗಳನ್ನು ಹಿಡಿಯಲು ಮಾತ್ರ ಇದನ್ನು ಉಪಯೋಗಿಸುತ್ತಾರೆ. ಈ ಅಂಟನ್ನು ಅರಳೀಮರದ ಹಾಲಿನಿಂದ ತಯಾರಿಸುತ್ತಾರೆ. ಚೆನ್ನಾಗಿ ಬೆಳೆದಿರುವ ಅರಳೀ ಮರದ ಬುಡದಲ್ಲಿ ಅಥವಾ ದೊಡ್ಡ ದೊಡ್ಡ ಟೊಂಗೆಗಳಲ್ಲಿ ಮಚ್ಚಿನಿಂದ ಮೂರು ನಾಲ್ಕು ಅಡಿ ದೂರಕ್ಕೆ ಒಂದೊಂದು ಕಚ್ಚು ಹಾಕುತ್ತಾರೆ. ಮಧ್ಯಾಹ್ನದಲ್ಲಿ ಕಚ್ಚು ಹಾಕಿದರೆ (ಕಡಿದರೆ) ಹೆಚ್ಚು ಹಾಲು ಬರುವುದಿಲ್ಲವೆಂದು ಬೆಳಗ್ಗೆಯೇ ಕಚ್ಚು ಹಾಕಿ ಬರುತ್ತಾರೆ. 2-3 ಗಂಟೆಗಳ ನಂತರ ಆ ಕಚ್ಚಿನಲ್ಲಿ ಹಾಲು ಸೇರಿ ಕಟ್ಟಿಯಾಗಿರುತ್ತದೆ.ಬೆರಳು ಗಾತ್ರದ ಒಂದಡಿ ಉದ್ದದ ಬಿದಿರಿನ ಕಡ್ಡಿಗೆ ಗಟ್ಟಿಯಾದ ಹಾಲನ್ನು ಸುತ್ತಿ ತಂದು ನೀರಿನಲ್ಲಿ ಹಾಕಿ ಅದರಲ್ಲಿ ಸೇರಿರುವ ಕಸಕಡ್ಡಿಯನ್ನು ತೆಗೆದು ಸ್ವಚ್ಛ ಮಾಡುತ್ತಾರೆ. ನೀರಿನಲ್ಲಿದ್ದಾಗ ಆ ಅಂಟು ಕೈಗೆ ಮೆತ್ತಿಕೊಳ್ಳುವುದಿಲ್ಲ. ಹೀಗೆ ಶೇಖರಿಸಿದ ಹಾಲನ್ನು ಒಂದು ಬೋಕಿಗೆ ಹಾಕಿ (ಒಡಕು ಮಡಕೆಯ ಚೂರು) ಒಲೆಯ ಮೇಲಿಟ್ಟು ಹದಕ್ಕೆ ತಕ್ಕಂತೆ ಕಾಯಿಸಿ ಬಿಸಿಯಾಗಿರುವಾಗಲೇ ಒಂದು ಬಿದಿರಿನಿಂದ ಮಾಡಿದ ಕೊಳವೆಗೆ (ಗೊಟ್ಟದ ಮಾದರಿಯ ಬಿದಿರಿನ ಕೊಳವೆ -ಚಿತ್ರ-1) ತುಂಬಿ ಇಟ್ಟುಕೊಳ್ಳುತ್ತಾರೆ. ಆರಿದ ಮೇಲೆ ಅದು ತೀರ ತೆಳು ಅಥವಾ ಗಟ್ಟಿಯಲ್ಲದ ಅಂಟಾಗುತ್ತದೆ. ಈ ಅಂಟು ಹೆಚ್ಚು ಶಕ್ತಿಯುತವಾಗಿರುತ್ತದೆ. ಈ ಅಂಟಿಗೆ ಒಮ್ಮೆ ತಗಲಿಕೊಂಡ ಹಕ್ಕಿ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಮಳೆಗಾಲಕ್ಕಿಂತ ಬೇಸಿಗೆಯಲ್ಲಿ ಇದರ ಉಪಯೋಗ ಹೆಚ್ಚು. ಮತ್ತು ಇದು ಬಹಳ ದಿನಗಳವರೆಗೆ ಕೆಡುವುದಿಲ್ಲ.

 

ಕತ್ತರಿ ಕಡ್ಡಿ

ಹಕ್ಕಿಗಳನ್ನಿಡಿಯಲು ಅಂಟೊಂದಿದ್ದರೆ ಸಾಲದು. ಜೊತೆಗೆ ಬಿದಿರಿನಿಂದ ಮಾಡಿದ ಕತ್ತರಿ ಕಡ್ಡಿಯೂ ಬೇಕು. ಇದನ್ನು ಅವರು ತಮ್ಮ ಭಾಷೆಯಲ್ಲಿ ಮುಕ್ಕೋಡು ಎನ್ನುತ್ತಾರೆ. ಎರಡು ನಮೂನೆಯ ಮುಕ್ಕೋಡನ್ನು ಮಾಡುತ್ತಾರೆ. ಅಂಚಿಕಡ್ಡಿ ಗಾತ್ರದ ಸುಮಾರು 12 ರಿಂದ 18 ಅಂಗುಲ ಉದ್ದದ ಬಿದಿರಿನ ಎರಡು ಕಡ್ಡಿಯನ್ನು ಎರೆದು ನುಣುಪು ಮಾಡಿ ಕಡ್ಡಿಗಳನ್ನು ಒಟ್ಟಿಗೆ ಸೇರಿಸಿ ಮಧ್ಯಕ್ಕೆ ಕಟ್ಟಿ ಆ ಕಡ್ಡಿಯನ್ನು ಅಗಲಿಸಿ ಮಧ್ಯೆ ಮತ್ತೆ ಆ ಎರಡು ಕಡ್ಡಿಯ ನಾಲ್ಕು ತುದಿಗಳನ್ನೂ ನೆಲದ ಮೇಲೆ ಸಮನಾಗಿ ಕೂರುವಂತೆ ಬಗ್ಗಿಸಿ ಆ ತುದಿಗಳಿಗೆ ಅಂಟು ಹಚ್ಚುತ್ತಾರೆ. (ಚಿತ್ರ 2). ಮತ್ತು

 

ಚಿತ್ರ ೨

ಹೀಗೆ ತಯಾರಿಸಿದ ಕತ್ತರಿಕಡ್ಡಿಯ ಮಧ್ಯಕ್ಕೆ ಒಂದು ಕುಂಬಾರ ಹುಳವನ್ನು ಕಟ್ಟುತ್ತಾರೆ. ಹೀಗೆ ಸಿದ್ಧಗೊಳಿಸಿದ ಮುಕ್ಕೊಡನ್ನು ಬೇಟೆಗೆ ಹೋದಾಗ ಹಕ್ಕಿ ಎಲ್ಲಿ ಕುಳಿತಿದೆಯೋ ಅದನ್ನು ನೋಡಿ ಸ್ವೊಲ್ಪ ಅಂತರದಲ್ಲಿ ದಾರಿಹೋಕನಂತೆ ಬಗ್ಗದೆ ನಡೆಯುವಾಗಲೆ ಸಮನೆಲ ನೋಡಿ, ಹಕ್ಕಿಗೆ ಕಾಣುವಂತೆ ಹಾಕಿ ಹೋಗುತ್ತಾರೆ. ಅದರಲ್ಲಿ ಕಟ್ಟಿದ ಹುಳ ಓಡಿಯಾಡುವುದನ್ನು ನೋಡಿದ ಹಕ್ಕಿ ಹುಳಕ್ಕೆ ಎರಕಿ ಅಂಟಿಗೆ ಸಿಕ್ಕಿಕೊಳ್ಳುತ್ತದೆ. ಆಗ ಹೋಗಿ ಅದನ್ನು ಹಿಡಿಯುತ್ತಾರೆ. ಮತ್ತೊಂದು ರೀತಿಯ ಕತ್ತರಿ ಕಡ್ಡಿಗೆ ನಾಲ್ಕು ಅಂಚಿಕಡ್ಡಿ ಗಾತ್ರದ ನುಣುಪು ಮಾಡಿದ ಬಿದಿರಿನ ಕಡ್ಡಿಗಳನ್ನು ತೆಗೆದುಕೊಂಡು ಮಧ್ಯಕ್ಕಿಂತ ಸ್ವಲ್ಪ ಕೆಳಭಾಗದಲ್ಲಿ ಕಟ್ಟಿ ಆ ನಾಲ್ಕು ಕಡ್ಡಿಗಳನ್ನು ಅಗಲಿಸಿ ಕಟ್ಟಿ ನೆಲದ ಮೇಲೆ ನಿಲ್ಲುವಂತೆ ಮಾಡಿ ಮೇಲ್ಭಾಗದ ನಾಲ್ಕು ಕಡ್ಡಿಗಳಿಗೂ ಅಂಟನ್ನು ಹಚ್ಚಿ, ನೆಲದ ಮೇಲೆ ಹರಿದಾಡುವಂತೆ ಕುಂಬಾರು ಹುಳವೊಂದನ್ನು ಕಟ್ಟುತ್ತಾರೆ. ಅದನ್ನು ತೆಗೆದುಕೊಂಡು ಹೋಗಿ ಮೇಲೆ ಹೇಳಿದಂತೆ ಹಕ್ಕಿ ಇರುವ ಜಾಗವನ್ನು ನೋಡಿ ಇಡುತ್ತಾರೆ. ಇದನ್ನು ದೊಡ್ಡ ಪಕ್ಷಿಗಳನ್ನು ಹಿಡಿಯಲು ಉಪಯೋಗಿಸಿದರೆ (ಚಿತ್ರ 3) ಮೊದಲು ಹೇಳಿದ್ದನ್ನು ಚಿಕ್ಕ ಚಿಕ್ಕ ಪಕ್ಷಿಗಳನ್ನು ಹಿಡಿಯಲು ಉಪಯೋಗಿಸುತ್ತಾರೆ. ಕುಂಬಾರ ಹುಳುಗಳನ್ನು ಮೊದಲೇ ಹಿಡಿದು ಬಿದಿರಿನ ಸಣ್ಣ ಬಾಯಿರುವ ಬುಟ್ಟಿಗೆ ಹಾಕಿ ಇಟ್ಟುಕೊಂಡಿರುತ್ತಾರೆ. ಅದರೊಳಗೆ ಸಗಣಿಯನ್ನು ತುಂಬಿ ಬಾಯಿಗೆ ಬಟ್ಟೆ ಬಿರುಡೆ ಹಾಕಿಟ್ಟುಕೊಂಡಿರುತ್ತಾರೆ.

 

ಚಿತ್ರ ೩

ಉಳ್ಳ

ಉಳ್ಳ ಎಂದರೆ ಉರುಳು ಅಥವಾ ನೇಣು. ಕುದುರೆ ಜವಿ (ಕುದುರೆ ಬಾಲದ ಕೂದಲು)ಯಿಂದ ದಾರ ಹೊಸೆದು ಮಾಡಿರುತ್ತಾರೆ. ಹಿಂದೆ ಜಿಂಕೆ ಮುಂತಾದ ದೊಡ್ಡ ಪ್ರಾಣಿಗಳನ್ನು ಹಿಡಿಯಲು ಕೆಲವು ಪ್ರಾಣಿಗಳ ನರದಿಂದ ಮಾಡಿದ ಉಳ್ಳನ್ನು ಉಪಯೋಗಿಸುತ್ತಿದ್ದರಂತೆ. ಉಳ್ಳಿಗೆ ತಮ್ಮ ಭಾಷೆಯಲ್ಲಿ “ಕಣ್ಣಿ” ಎಂದು ಕರೆಯುತ್ತಾರೆ (ಚಿತ್ರ 4). ಈಗ ಕೆಲವರ ಹತ್ತಿರ ಹಕ್ಕಿಗಳನ್ನು ಹಿಡಿಯುವ ಕಣ್ಣುಗಳು ಮಾತ್ರ ಕಂಡು ಬರುತ್ತವೆ. ಅಂಚಿಕಡ್ಡಿ ಗಾತ್ರದ ಗೇಣುದ್ದದ ಕಡ್ಡಿಗಳಿಗೆ ಒಂದೊಂದು ಕಡ್ಡಿಗೊಂದರಂತೆ ಉಳ್ಳನ್ನು ಕಟ್ಟಿ ಇಂಥ ಹಲವಾರು ಕಡ್ಡಿಗಳನ್ನು ಒಂದು ದಾರಕ್ಕೆ ಸಾಲಾಗಿ ಕಟ್ಟಿರುತ್ತಾರೆ. ಬೇಟೆಯಾಡುವಾಗ ಈ ಉಳ್ಳಿನ ಕಡ್ಡಿಗಳನ್ನು ಸಾಲಾಗಿ ಒಂದಕ್ಕೊಂದರ ನಡುವೆ ಜಾಗ ಬಿಡದಂತೆ ಭೂಮಿಗೆ ನೆಡುತ್ತಾರೆ. ಮೇಯುವ ಹಕ್ಕಿಗಳು ಇ ಉಳ್ಳಿಗೆ ಬೀಳುವಂತೆ ದೂರದಲ್ಲಿ ಸುಳಿದಾಡುತ್ತಾರೆ. ಒಮ್ಮೆ ಉಳ್ಳಕ್ಕೆ ಸಿಕ್ಕಿಕೊಂಡರೆ ಬಿಡಿಸಿಕೊಳ್ಳುವುದು ಸುಲಭವಲ್ಲ.

ಚಿತ್ರ ೪

ಕಡ್ಡಿಗಳಿಲ್ಲದ ಉಳ್ಳಗಳನ್ನು ದಾರಕ್ಕೆ ಉದ್ದಕ್ಕೆ ಕಟ್ಟಿ ನೀರಿನ ಮೇಲೆ ಒಂದು ದಡದಿಂದ ಇನ್ನೊಂದು ದಡಕ್ಕೆ ಕಟ್ಟಿ ನೀರುಗೋಳಿ, ಸೆರಲೆ ಮುಂತಾದವುಗಳನ್ನು ಹಿಡಿದರೆ, ತೆಂಗಿನಮರ ಮುಂತಾದವುಗಳ ಬುಡಕ್ಕೆ ಕಟ್ಟಿ ಅಳಿಲನ್ನು ಹಿಡಿಯುತ್ತಾರೆ.

ಪಾಜಿ: ಇದು ಉಳ್ಳುಗಳನ್ನು (ಕುಣಿಕೆ) ಬಂಧಿಸಿದ ಕಡ್ಡಿಗಳ ಕಟ್ಟು. ಬಿದಿರಿನ ಕಡ್ಡಿಯಿಂದ ಪಾಜಿಯ ಚೌಕಟ್ಟನ್ನು ತಯಾರಿಸಿಕೊಂಡು ಅ ಚೌಕಟ್ಟಿನೊಳಗೆ ನಾಲ್ಕು, ಐದು ಉಳ್ಳಗಳು ಕೂರುವಂತೆ ದಾರದಿಂದ ಮನೆಗಳನ್ನು ಕಟ್ಟಿ ಪ್ರತಿಯೊಂದು ಮನೆಗೂ ಉಳ್ಳನ್ನು ಬಂಧಿಸುತ್ತಾರೆ. ಇಂತಹ ಹಲವಾರು ಚೌಕಟ್ಟುಗಳನ್ನು ಸೇರಿಸಿ ಪಾಜಿಯನ್ನು ತಯಾರಿಸಿರುತ್ತಾರೆ. (ಚಿತ್ರ 5). ಇದು ಹಗುರವಾಗಿರುವುದರಿಂದ ಎಷ್ಟು ದೂರ ಬೇಕಾದರೂ ತೆಗೆದುಕೊಂಡು ಹೋಗಬಹುದು. ಬೇಟೆಗೆ ಬೇಕಾದಾಗ ಬಿಡಿಸಿ ಉದ್ದಕ್ಕೆ ಬಿಟ್ಟು ನಂತರ ಮಡಿಸಿ ಹೆಗಲಿಗೇರಿಸಿದರಾಯಿತು. ಹಕ್ಕಿಗಳು ಗುಂಪುಗುಂಪಾಗಿ ಮೇಯುವಲ್ಲಿ ಈ ಪಾಜಿಯನ್ನು ಬಿಟ್ಟು ದೂರದಿಂದ ತಲೆ ತೋರಿಸಿ ಪಾಜಿಗೆ ಒಮ್ಮೆಲೆ ಹಲವು ಹಕ್ಕಿಗಳು ಬೀಳುವಂತೆ ಮಾಡುತ್ತಾರೆ.

 

ಚಿತ್ರ ೫

 ಬಿಲ್ಲು: ಮೆದುವಾದ ಬಿದಿರಿನ ದಬ್ಬೆಯಿಂದ ಬಿಲ್ಲನ್ನು ಮಾಡಿಕೊಳ್ಳುತ್ತಿದ್ದರು. ಎದೆಗೆ ಕಲ್ಲನ್ನು ಇಟ್ಟು ಹೊಡೆಯಲು ಮಧ್ಯ ಭಾಗದಲ್ಲಿ ಬಿಲ್ಲಿನ ಎರಡು ತುದಿಗಳನ್ನು ಬಂಧಿಸಿದ ದಾರಕ್ಕೆ ಬಲೆಯಂತೆ ನೇಯ್ಗೆ ಇರುತ್ತಿತ್ತು (ಚಿತ್ರ 6). ಪಕ್ಷಿಗಳನ್ನು ಸಣ್ಣ ಸಣ್ಣ ಪ್ರಾಣಿಗಳನ್ನು ಕೊಲ್ಲಲು ಬಿಲ್ಲನ್ನು ಉಪಯೋಗಿಸುತ್ತಿದ್ದರು. ಬಿಲ್ಲನ್ನು ಹೊಡೆಯಲು ಎಲ್ಲರಿಗೂ ಬರುವುದಿಲ್ಲ. ಅದಕ್ಕೂ ರೂಢಿ ಬೇಕು. ಇಲ್ಲದಿದ್ದರೆ ಎಡಗೈ ಹೆಬ್ಬೆರಳಿಗೆ ಪೆಟ್ಟು ಬೀಳುತ್ತದೆ ಎಂದು ಹೇಳುತ್ತಾರೆ (ಚಿತ್ರ 7). ಮೀಟು ಪಕ್ಷಿಗಳನ್ನು ಹಿಡಿಯುವ ಒಂದು ಬಗೆಯ ಸಾಧನ.

 

ಚಿತ್ರ ೬

 

ಬಲೆ

ಇವರು ಉಪಯೋಗಿಸುವ ಬಲೆಗಳು ಅನೇಕ ರೀತಿಯವು. ಅಳಿಲು ಹಿಡಿಯುವ ಬಲೆಯೇ ಬೇರೆ. ಮೊಲದ ಬಲೆ ಬೇರೆ, ಹಂದಿಗಳನ್ನು ಬೀಳಿಸುವ ಬಲೆ ಬೇರೆ. ಅಂತೆಯೇ ಮೀನನ್ನು ಹಿಡಿಯಲು ಎಳೆಯುವ ಬಲೆ, ಬೀಸುವ ಬಲೆ, ತೊಟ್ಟಿ ಬಲೆಗಳನ್ನು ಉಪಯೋಗಿಸುತ್ತಾರೆ. ಬಾವುಲಿಗಳನ್ನು ರಾತ್ರಿ ಸಮಯದಲ್ಲಿ ಬಲೆ ಬೀಸಿ ಹಿಡಿಯುತ್ತಾರೆ.

ಬಳ್ಳಾರಿ ಜಿಲ್ಲೆಯ ಗೆಝೆಟಿಯರ್‌ನಲ್ಲಿ ಬೇಟೆಯ ಬಗೆಗೆ “Catch small birds by lining twings or an arrangement of bits of bamboo with a worm hung inside it, or by setting horse-hair noses round in the nests. Quails they ecpture by freely snaring a peace of ground, and then putting a quail in a cage in the middle of it, to lure the birds towards the share. They also catch them, and partridge too, by driving the bevy towards a collapsible net. To do this, they cover themselves with a dark blanket, conceal their heads in a kind of big hat made of hair, feathers and grass, and stalk the birds from a bulluck trained to the work, very gradually driving them in to the net. They also occassionally capture black-buck (Antelope) by sending a tame buck with noses on his horns to fight with a wild one. The latter speedily gets his horns entagles in the nooses. and is easily secured.”

[1] ಇವುಗಳಲ್ಲದೆ ಆಮೆ, ಮುರಕಾಟಿಗಳನ್ನು ಯಾವ ಉಪಕರಣವೂ ಇಲ್ಲದೆ ಹಿಡಿಯುತ್ತಾರೆ. ಕೆರೆಯ ಏರಿಯ ಹಿಂದೆ, ಸೊಪ್ಪು ಸೆದೆ ಬಿದ್ದು ಮೆದುವಿನಿಂದ ತಂಪಾದ ಜಾಗದಲ್ಲಿ ಇವು ಅಡಗಿಕೊಂಡಿರುತ್ತವೆ. ಕೈಯಲ್ಲಿ ಕೋಲೊಂದನ್ನು ಹಿಡಿದು ನೆಲವನ್ನು ತಿವಿಯುತ್ತಾ ಹೋದರೆ, ಇವುಗಳ ಮೇಲೆ ಪೆಟ್ಟು ಬಿದ್ದಾಗ ಡುಬ್ ಎಂಬ ಶಬ್ದ ಬರುತ್ತದೆ. ಅಲ್ಲಿ ಕೆರೆದು ನೋಡಿದರೆ ಆಮೆ ಅಥವಾ ಮುರುಕಾಟೆ ಇದ್ದೇ ಇರುತ್ತದೆ ಎನ್ನುತ್ತಾರೆ. ಇವು ನೀರಿನಲ್ಲಿರುವಾಗಲೂ ಹಿಡಿಯುತ್ತಾರೆ.

ಐದು-ಆರು ಅಡಿಗಳಿಗಿಂತಲೂ ಹೆಚ್ಚು ನೀರಿರುವ ಹೊಂಡಗಳಲ್ಲಿ ಇವು ಇದ್ದರೆ ಅಂಥಕಡೆ ಬಲೆ ಹಾಕಿ ಹಿಡಿಯುತ್ತಾರೆ. ಇಲ್ಲವೆ ನೀರಿಗಿಳಿದು ನೀರನ್ನು ಬಡಿದು ಗಲಾಟೆ ಎಬ್ಬಿಸಿ ಅವು ದಡ ಸೇರುವಂತೆ ಮಾಡುತ್ತಾರೆ. ಅವು ದಡಕ್ಕೆ ಹತ್ತದಿದ್ದರೆ, ನೀರಿನ ದಡದಲ್ಲಿ ದೊಡ್ಡ ಬೆಂಕಿ ಮಾಡುತ್ತಾರೆ. ಆ ದೊಡ್ಡದಾದ ಬೆಂಕಿ ನೋಡಿ ಅವು ದಡಕ್ಕೆ ಬರುತ್ತವೆ. ಆಗ ಅವುಗಳನ್ನು ಹಿಡಿಯುತ್ತಾರೆ. ಕೆಲವರು ವಾಸನೆಯ ಮೇಲಿಂದಲೇ ಅವು ಇರುವ ಸ್ಥಳವನ್ನು ಪತ್ತೆ ಹಚ್ಚಿ ಹುಡುಕಿ ತೆಗೆಯುತ್ತಾರಂತೆ.

ಈ ಬುಡಕಟ್ಟಿನಲ್ಲಿ ಬೇಟೆ ಎಲ್ಲರಿಗೂ ಕೈಗತ್ತುವುದಿಲ್ಲ ಎನ್ನುವ ನಂಬಿಕೆ ಇದೆ. ಚೆನ್ನಾಗಿ ಬೇಟೆ ಮಾಡುವವನನ್ನು ಪಲಸು ಕೈಯವು ಎನ್ನುತ್ತಾರೆ. ಉದಾ: ರಾಸಿ ಹುಲುಸಾಗಲಿ ಎಂಬಂತೆ. ಅಂಥವರ ಜೊತೆ ಬೇಟೆಗೆ ಹೋಗುವುದೇ ಹೆಚ್ಚು. ಬೇಟೆಯಾಡಲು ಬುದ್ಧಿವಂತಿಕೆ ಬೇಕು. ಆಕಾಶದಲ್ಲಿರುವ ಹಕ್ಕಿಗಳಿಗೂ ಆಹಾರದ ಆಸೆ ತೋರಿಸಿ ತಮ್ಮ ಬಲೆಗೆ ಹಾಕಿಸಿಕೊಳ್ಳುವ ಇವರ ತಂತ್ರ ಮೆಚ್ಚುವಂಥದ್ದು. ಬಲೆ ಎಲ್ಲಿ ಬಿಡಬೇಕು, ಕತ್ತರಿ ಕಡ್ಡಿ ಎಲ್ಲಿ ಇಡಬೇಕು, ಪಾಜಿ ಎಲ್ಲಿ ಹಾಕಬೇಕು, ಹಕ್ಕಿಗಳನ್ನು ಬಲೆಗೆ ಅಥವಾ ಪಾಜಿಗೆ ತಳ್ಳಲು ಹೇಗೆ ಹೊಂಚು ಹಾಕಬೇಕು, ಹಕ್ಕಿಗಳನ್ನು ಯಾವ ದಿಕ್ಕಿಗೆ ತಿರುಗಿಸಬೇಕು ಎಂಬೆಲ್ಲ ತಿಳುವಳಿಕೆ ಇರಬೇಕು. ಇದು ಎಲ್ಲರಿಗೂ ಅಷ್ಟು ಸುಲಭವಾಗಿ ತಿಳಿಯುವುದಿಲ್ಲ. ಬೇಟೆಯ ಸಮಯದಲ್ಲಿ ಪ್ರಾಣಿ, ಪಕ್ಷಿಗಳಿಗೆ ಅನುಮಾನ ಬರದಂತೆ ಎಷ್ಟು ಜಾಗರೂಕತೆ ವಹಿಸಿದರೂ ಸಾಲದು, ಮನುಷ್ಯರಂತೆ ಅವುಗಳಿಗೂ ಬುದ್ಧಿ ಇದೆ ಎನ್ನುತ್ತಾರೆ.

ಕೆಲವರು, ಗೌಜಿಗನ ಹಕ್ಕಿಯನ್ನು ಹಿಡಿದು ಪಳಗಿಸಿ ಪಂಜರದಲ್ಲಿಟ್ಟು ಬೇಟೆಗೆ ಉಪಯೋಗಿಸುತ್ತಾರೆ. ಗೌಜಿಗನ ಹಕ್ಕಿಗಳು ಇರುವ ಕಡೆ ಪಾಜಿ ಹಾಕಿ ಅದರ ಪಕ್ಕದಲ್ಲಿ ಸಾಕಿದ ಹಕ್ಕಿ ಪಂಜರವನ್ನು ಇಟ್ಟರೆ ಆ ಹಕ್ಕಿ ಕೂಗುತ್ತದೆ. ಆ ಕೂಗನ್ನು ಕೇಳಿ ಕಾಡಿನ ಹಕ್ಕಿಗಳು ಬರುತ್ತವೆ. ಇವರು ದೂರದಲ್ಲೇ ಸುಳಿದು, ತಲೆ ತೋರಿಸಿ ಆ ಹಕ್ಕಿಗಳು ಪಾಜಿಗೆ ಬೀಳುವಂತೆ ಮಾಡುತ್ತಾರೆ. ಹಸು ಎತ್ತುಗಳನ್ನು ಪಳಗಿಸಿ ಈ ಕೆಲಸಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಅವುಗಳ ಮರೆಯಲ್ಲಿ ಹೋಗಿ ಬಾರಕೋಲಿನಿಂದ ಹೊಡೆಯುತ್ತಾರೆ. ಉದಾ: ಬಸವಣ್ಣನವರ ವಚನಗಳಲ್ಲಿ ಬರುವ ಬೆಳ್ಳಾವಿನ ಮರೆಯಲ್ಲಿ ಕುಳಿತು ಮೃಗಕ್ಕೆ ಅಂಬು ಬಿಡುವವರಂತೆ ಎಂಬ ಪ್ರಯೋಗ ಗಮನಿಸಬಹುದು.

ಈ ಬುಡಕಟ್ಟಿನವರು ಬೇಟೆಗೆ ಹೋಗುವಾಗ ಬೇರೆ ಜನಾಂಗದವರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದಿಲ್ಲ. ತಾವು ತಾವೇ ಒಂದಾಗಿ ಹೋಗಿ ಬೇಟೆಯಾಡಿ ಸಿಕ್ಕಿದುದನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಹಿಂದೆ ಯಜಮಾನನಿಗೆ ಒಂದು ಪಾಲನ್ನು ಅಥವಾ ಹೆಚ್ಚು ಬೇಟೆ ಆದ ದಿನ ಅವನಿಗೆ ಊಟಕ್ಕೆ ಕರೆಯುವ ರೂಢಿ ಇತ್ತಂತೆ. ಹಕ್ಕಿಗಳನ್ನು ಪುಕ್ಕ ತೆರೆದು ಸುಟ್ಟು, ಪ್ರಾಣಿಗಳ ಚರ್ಮ ಸುಲಿದು, ಆಮೆ ಮುರಕಾಟಿ ಸುಟ್ಟು ಚಿಪ್ಪು ತೆಗೆದು ಹೊಟ್ಟೆ ಸೀಳಿ ಕರುಳು ತೆಗೆದು ಶುಚಿಗೊಳಿಸುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಇವರ ಬೇಟೆಯ ಹವ್ಯಾಸ ಕಡಿಮೆಯಾಗುತ್ತಾ ಬಂದಿದೆ. ಇವರಲ್ಲಿ ಕೋವಿ, ಸಿಡಿಮದ್ದು ಬಳಸುವವರು ತುಂಬಾ ಕಡಿಮೆ. ನಾಗರಿಕತೆ ಮುಂದುವರೆದಂತೆಲ್ಲ ಈ ಜನ ತಮ್ಮ ಮೂಲ ಪ್ರವೃತ್ತಿಯಿಂದ ದೂರವಾಗುತ್ತಿದ್ದಾರೆ. ಇತ್ತೀಚೆಗೆ ಯುವಕರಿಗೆ ಮೊದಲಿನ ಹಾಗೆ ಹಕ್ಕಿ ಪಕ್ಷಿಗಳನ್ನು ಹಿಡಿಯುವುದೆಂದರೆ ನಾಚಿಕೆಯ ಸಂಗತಿ. ನೋಡಿದವರು ಏನೆಂದಾರು ಎನ್ನುವ ಅಳುಕು. ಅಲ್ಲದೆ ಅವುಗಳ ಸಂತತಿಯೂ ಈಗ ಕಡಿಮೆ. ಬೇಟೆಯ ಬಗೆಗೆ ಈ ಬುಡಕಟ್ಟಿನ ಹಿರಿಯರಲ್ಲಿ ಕೇಳಿದಾಗ ಬರುವ ಆಸಕ್ತಿ, ಹಿಂದಿನದನ್ನು ನೆನೆದು ಅದನ್ನು ಹೇಳುವ ಕುತೂಹಲ. ಒಂದು ಕಾಲಕ್ಕೆ ಬೇಟೆಯಲ್ಲಿ ಇವರು ಎಷ್ಟು ನಿಪುಣರಾಗಿದ್ದರು ಎಂಬುದನ್ನು ಸೂಚಿಸುತ್ತದೆ. ಹಂದಿಯ ಬೇಟೆಗೆ ಹೋದಾಗ ಕೆಲವೊಮ್ಮೆ ಹಂದಿಗಳು ಯಾರ ಮೈಮೇಲಾದ್ರೂ ಬಿದ್ದರೆ ನಾಲ್ಕಾರು ಜನ ಧೈರ್ಯದಿಂದ ನಾಲ್ಕು ದಿಕ್ಕಿನಿಂದಲೂ ಅದರ ಮೇಲೆ ಬಿದ್ದು ತಮ್ಮ ಕೈ ಆಯುಧಗಳಿಂದ ಇರಿಯುತ್ತಿದ್ದ ಬಗೆಗೆ ಹೇಳುತ್ತಾರೆ. ಈಗ ಅವೆಲ್ಲ ಅವರಿಗೆ ನೆನಪು ಮಾತ್ರ. ಅಂದಿನ ಬೇಟೆ ಇಂದಿಗೂ ಅವರ ಬಾಯಲ್ಲಿ ನೀರೂರಿಸದೆ ಇರದು. ಬೇಟೆ ಅವರ ಒಂದು ಕಾಲದ ಕಾಡಿನ ಜೀವನವನ್ನು ಪ್ರತಿನಿಧಿಸುತ್ತದೆ.

ಕಳ್ಳತನ

ಗುಡ್ಡಗಾಡಿನಲ್ಲಿ ವಾಸ ಮಾಡುತ್ತಿದ್ದ ಕೊರಮರು ಹಳ್ಳಿಗಳ ಸಂಪರ್ಕ ಹೊಂದಿದಂತೆಲ್ಲ ಹೊಸ ವೃತ್ತಿಗಳನ್ನು ರೂಢಿಸಿಕೊಂಡಂತೆ ಕಾಣುತ್ತದೆ. ಬಡತನದಲ್ಲಿ ಬದುಕಬೇಕಾಗಿದ್ದ ಆ ದುರ್ದೈವಿಗಳಿಗೆ ಕಳ್ಳತನವೂ ಒಂದು ಲಾಭದಾಯಕ ವೃತ್ತಿಯಾಯಿತು. ತಮ್ಮ ಜನಾಂಗಕ್ಕೆ ಕಳ್ಳರೆಂಬ ಅಗೌರವ ಬಂದರೂ ಅದೊಂದು ಅವರಿಗೆ ಅನಿವಾರ್ಯ ಕ್ರಿಯೆಯಾಗಿದ್ದಂತೆ ತೋರುತ್ತದೆ. ಈ ಅವಹೇಳನಕರ ವೃತ್ತಿಗೆ ಇಳಿಯಲು ಬ್ರಿಟಿಷ್ ಆಳ್ವಿಕೆಯ ಕ್ರಮವೂ ಕಾರಣವಾಗಿರಬಹುದು.

ಕೊರಮ ಬುಡಕಟ್ಟು ಅಪರಾಧದ ವಿಷಯದಲ್ಲಿ ಅತಿ ಕೆಟ್ಟ ಹೆಸರ‍ನ್ನು ಪಡೆದುಕೊಂಡಿವೆ. ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುವ ಈ ಜನ ಕಳ್ಳತನ, ಸುಲಿಗೆ, ದರೋಡೆ ಮುಂತಾದವುಗಳಲ್ಲಿ ನಿರತರಾಗಿದ್ದ ಬಗ್ಗೆ ಹಲವು ಜನ ವಿದ್ವಾಂಸರು ಈಗಾಗಲೇ ದಾಖಲಿಸಿದ್ದಾರೆ. ಆದರೆ ಒಂದು ಕಾಲಕ್ಕೆ ಜಾನಪದ ಮತ್ತು ಪ್ರೌಢ ಸಾಹಿತ್ಯದಲ್ಲಿ ತೋರಿ ಬರುವ ಹಾಗೆ ಇವರು ಆರ್ಥಿಕವಾಗಿ ಹಿಂದುಳಿದು ಕಣಿ ಹೇಳುತ್ತ, ಬುಟ್ಟಿಗಳನ್ನು ಮಾಡಿ ಮಾರುತ್ತಾ ಸಮಾಜದಲ್ಲಿ ಗೌರವದಿಂದ ಬದುಕಿ ಬಂದಿರುವುದನ್ನು ಕಾಣಬಹುದು. ಮೂಲತಃ ಇದೊಂದು ದುಷ್ಟ ಬುಡಕಟ್ಟಾಗಿದ್ದರೆ ಸಮಾಜ ಇವರನ್ನು ದೂರೀಕರಿಸುತ್ತಿತ್ತು. ಮೊದಮೊದಲು ಇವರ ಪ್ರವೃತ್ತಿ ಒಳ್ಳೆಯದಾದ್ದರಿಂದಲೇ ರಾಜ-ರಾಣಿಯರವರೆಗೂ ಸಂಪರ್ಕವಿರಿಸಿಕೊಂಡಿದ್ದರು.

ಇಂಥ ಒಂದು ಬುಡಕಟ್ಟು ಅಪರಾಧಿ ಮನೋಭಾವವನ್ನು ಬೆಳೆಸಿಕೊಳ್ಳಬೇಕಾದರೆ ಕಳ್ಳತನ, ದರೋಡೆ, ಸುಲಿಗೆಗಳಲ್ಲಿ ತೊಡಗಬೇಕಾದರೆ ಕಾರಣಗಳಿಲ್ಲದೆ ಇಲ್ಲ. ಸಾಮಾನ್ಯವಾಗಿ ಬ್ರಿಟಿಷರು ಈ ದೇಶಕ್ಕೆ ಕಾಲಿಡುವ ಮೊದಲು ಈ ಬುಡಕಟ್ಟು ಅಪರಾಧಗಳಲ್ಲಿ ತೊಡಗಿದ ಬಗ್ಗೆ ಹೆಚ್ಚಿನ ವಿವರಗಳು ದೊರೆಯುವುದಿಲ್ಲ. ಕಳ್ಳ ಕೊರಮಣ್ಣ ಬರುತ್ತಾನೆ, ಚೋರ ಕೊರಮಣ್ಣ ಬರುತಾನೆ ಎಂಬ ಮಾತುಗಳು ಜಾನಪದ ಸಾಹಿತ್ಯದಲ್ಲಿ ತೋರುತ್ತವೆಯಾದರೂ ಬ್ರಿಟಿಷರು ಈ ದೇಶಕ್ಕೆ ಬಂದ ಮೇಲೆಯೇ ಅವರ ಆಡಳಿತದ ಪರಿಣಾಮವಾಗಿ ಅತಂತ್ರರೂ, ಅಸಮಾಧಾನಿಗಳೂ ಆದ ಇವರು ಅಪರಾಧಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿರಬೇಕು. ಆದ್ದರಿಂದಲೇ ಜನಪದರ ಬಾಯಲ್ಲಿ ಈ ಮೇಲೆ ಹೇಳಿದಂಥ ಮಾತುಗಳು ಬಂದಿರಬೇಕು.

ಪ್ರತಿಯೊಂದು ಜನಾಂಗ ಅಥವಾ ಪಂಗಡಗಳು ಆಯಾ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗನುಗುಣವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಲವು ರೀತಿಯ ಉದ್ಯೋಗಗಳನ್ನು ಅಳವಡಿಸಿಕೊಳ್ಳುತ್ತಾ ಮುಂದುವರಿಯುತ್ತವೆ. ಅವುಗಳಲ್ಲಿ ಕೆಲವು ಸಮಾಜದ ದೃಷ್ಟಿಯಿಂದ ಕೆಟ್ಟವುಗಳೇ ಆಗಿರಬಹುದು. ಇದಕ್ಕೆ ಅಂದಿನ ಪರಿಸ್ಥಿತಿ ಕಾರಣವಾಗುತ್ತದೆಯೇ ಹೊರತು ಜಾತಿಯಲ್ಲ, ಬುಡಕಟ್ಟಲ್ಲ.

ಕೊರಮ ಬುಡಕಟ್ಟಿನ ಸಂದರ್ಭದಲ್ಲಿ ಈ ಬುಡಕಟ್ಟು ಕಳ್ಳತನ, ದರೋಡೆ, ಲೂಟಿ ಮುಂತಾದ ಕಾರ್ಯಗಳಲ್ಲಿ ತೊಡಗಿದ್ದುದರ ದಾಖಲೆಗಳು ದೊರೆಯುತ್ತವೆ. ಅಂದ ಮಾತ್ರಕ್ಕೆ ಇಡೀ ಬುಡಕಟ್ಟನ್ನೇ ಅಪರಾಧಿ ಬುಡಕಟ್ಟೆಂದು ಪರಿಗಣಿಸುವುದು ಸಮಂಜಸವೆನಿಸುವುದಿಲ್ಲ. ಅಂದು ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿದ ಈ ಬುಡಕಟ್ಟಿನ ಕೆಲವು ಜನ ಅನುಕೂಲವಾದ ಉದ್ಯೋಗಗಳನ್ನು ಹಿಡಿಯುವಲ್ಲಿ ವಿಫಲವಾದುದರಿಂದ ಅಥವಾ ಉದ್ಯೋಗಗಳು ದೊರಕದೆ ಹೋದದ್ದರಿಂದ, ಅಲೆಮಾರಿಗಳಾದ ಜನ ಪರಕೀಯರಂತೆ ಕಂಡು ಬಂದದ್ದರಿಂದ ಬದುಕಿನ ಒತ್ತಡಕ್ಕೆ ಸಿಕ್ಕಿದ ಇವರು ಪ್ರಾಯಶಃ ಕಳ್ಳತನ, ದರೋಡೆ, ಸುಲಿಗೆ ಮುಂತಾದವುಗಳಿಗೆ ತೊಡಗಿರಬೇಕು. ಬುಡಕಟ್ಟುಗಳ ಈ ಜನಾಂಗದ ಶಾಂತಿಯುತವಾದ ಜೀವನದ ಬಾಳ್ವಿಕೆಗೆ ಭಾರತದಲ್ಲಿ ಆಂಗ್ಲೇಯರ ರಾಜ್ಯ ಸ್ಥಾಪನೆಯ ಯುದ್ಧಗಳು ಬರಸಿಡಿಲಂತೆರಗಿದವು. ಸೇನೆಗೆ ಸೇರಿದ್ದ ಯೋಧರು, ಸಣ್ಣ ಪುಟ್ಟ ವ್ಯಾಪಾರಗಳಲ್ಲಿ ನಿರತರಾಗಿದ್ದ ಜನರು, ಚಲ್ಲಾಪಿಲ್ಲಿಯಾಗಿ ಚದುರಿ, ಜೀವನಕ್ಕಾಗಿ ದೇಶದೇಶಗಳಲ್ಲಿ, ಕಾಡು ಮೇಡುಗಳನ್ನು ಪುನಃ ಸೇರಿದರು. 2-3 ದಿನಗಳ ಉಪವಾಸದಿಂದ ಬೆಂದ ಬಹು ಅಲ್ಪ ಜನರು ತಮ್ಮ ಹೊಟ್ಟೆಪಾಡಿಗಾಗಿ ಪ್ರಾಣ ಉಳಿಸಿಕೊಳ್ಳಲು ಜೀನ್ ವಾಲ್ ಜೀನ್‌ನಂತೆ ಕಳ್ಳತನ ಮಾಡಬೇಕಾಯಿತು.[2] ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಕಳ್ಳತನ ಮಾಡಿದ ಈ ಜನರನ್ನು ಹಿಡಿದು ಗ್ಯಾಂಗುಗಳನ್ನಾಗಿ ಮಾಡಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಕಳ್ಳತನದಲ್ಲಿ ಸೊರಬ ತಾಲ್ಲೂಕಿನ ಕೊರಮರ ಕನ್ನೇಶ್ವರ ರಾಮನ ಹೆಸರು ಹೆಚ್ಚು ಪ್ರಸಿದ್ಧಿ.

ಇಂಥ ಗ್ಯಾಂಗುಗಳಲ್ಲಿ ಕೊರಮರೂ ಕೆಲವರು ಇದ್ದರು ಎಂದು ಈ ಜಾತಿಯ ಹಿರಿಯರು ಹೇಳುತ್ತಾರೆ. ಹೊಸದಾಗಿ ರೈಲ್ವೆ ಮಾರ್ಗಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದ ಬ್ರಿಟಿಷರು ಇಂಥ ಕಳ್ಳರನ್ನು ರೈಲ್ವೆ ಗ್ಯಾಂಗುಗಳಿಗೆ ಸೇರಿಸುತ್ತಿದ್ದರಂತೆ. ಈ ಗ್ಯಾಂಗಿನಲ್ಲಿ ಎ ಗ್ಯಾಂಗು, ಬಿ ಗ್ಯಾಂಗು ಎಂದು ಎರಡು ಬಗೆ. ಈ ಗ್ಯಾಂಗುಗಳು ಪೊಲೀಸರ ಹಿಡಿತದಲ್ಲಿಯೇ ಇರುತ್ತಿದ್ದವಂತೆ. ಎಲ್ಲೇ ಕಳ್ಳತನಗಳಾದರೂ ಪೊಲೀಸರು ಈ ಗ್ಯಾಂಗಿನ ಕೊರಮರನ್ನು ಜಪ್ತಿ ಮಾಡುತ್ತಿದ್ದರಂತೆ. ಗ್ಯಾಂಗಿನಲ್ಲಿದ್ದವರು ತಾವು ಬೇರೆ ಕಡೆ ಹೋಗುವ ಸಂದರ್ಭ ಬಂದರೆ ಪೊಲೀಸರಿಂದ ಅಪ್ಪಣೆ ಪಡೆದು ಹೋಗಬೇಕಾಗಿತ್ತಂತೆ.

ಅಲೆಮಾರಿಗಳಾಗಿ ಹಳ್ಳಿಯಿಂದ ಹಳ್ಳಿಗೆ ಹೋಗುತ್ತಿದ್ದ ಕೊರಮರು, ತಾವು ಇದ್ದ ಹಳ್ಳಿಯ ಪಟೇಲ ಅಥವಾ ಊರ ಗೌಡರಿಂದ ತಮ್ಮ ಪರಿಚಯ ಅಥವಾ ನಡವಳಿಕೆಯ ಬಗೆಗೆ ಪ್ರಮಾಣ ಪತ್ರ ಪಡೆದು ಮುಂದೆ ತಾವು ಉಳಿದುಕೊಳ್ಳುತ್ತಿದ್ದ ಹಳ್ಳಿಯ ಮುಖಂಡರಿಗೆ ತೋರಿಸಬೇಕಾಗುತ್ತಿತ್ತಂತೆ. ಇವರಲ್ಲಿ ಕೆಲವರಿಗೆ ಗ್ಯಾಂಗು ಇದ್ದರೆ ಮತ್ತೆ ಕೆಲವರಿಗೆ ಗ್ಯಾಂಗು ಇರಲಿಲ್ಲವಂತೆ. ಗ್ಯಾಂಗು ಇದ್ದವರು ಗ್ಯಾಂಗಿನ ವಿವರ ತೋರಿಸಬೇಕಾಗಿತ್ತಂತೆ.[3]

ಒಂದು ನೆಲೆಯಲ್ಲಿ ನೆಮ್ಮದಿಯಿಂದ ಹೇಗೋ ಜೀವನ ಕಂಡುಕೊಂಡಿದ್ದ ಬುಡಕಟ್ಟುಗಳ ಬದುಕಿನ ಮೇಲೆ ಉಂಟಾದ ಅನಿರೀಕ್ಷಿತ ದಾಳಿಯಿಂದಾಗಿ ಆ ಜನ ತತ್ತರಿಸಿ ಹೋದರು; ಜೀವ ಹಿಡಿಯುವುದು ಅನಿವಾರ್ಯವಾದ್ದರಿಂದ ಕಾಡಿನಿಂದ ನಾಡಿಗೆ ಬರಬೇಕಾಯಿತು. ಭಾರತದಲ್ಲಿ ಬುಡಕಟ್ಟುಗಳ ಪರಿಸ್ಥಿತಿ ಕಾಲದಿಂದ ಕಾಲಕ್ಕೆ ಬದಲಾಗುತ್ತ ಬಂದಿದೆ. ಬ್ರಿಟಿಷರ ಆಳ್ವಿಕೆಗೆ ಮೊದಲು ಬುಡಕಟ್ಟುಗಳ ಸ್ವಾತಂತ್ರ್ಯಕ್ಕೆ ಯಾವ ರೀತಿಯಲ್ಲೂ ಧಕ್ಕೆ ಬಂದಿರಲಿಲ್ಲ. ಮುಸಲ್ಮಾನರ ಹಲವಾರು ಶತಮಾನಗಳ ಆಳ್ವಿಕೆಯ ಕಾಲದಲ್ಲಿಯೂ ಬುಡಕಟ್ಟುಗಳು ಸ್ವತಂತ್ರವಾಗಿದ್ದವು. ಬ್ರಿಟಿಷರು ಬಂದ ನಂತರ ಭಾರತದಾದ್ಯಂತ ಏಕರೀತಿಯ ಆಳ್ವಿಕೆಯ ಕ್ರಮ ಜಾರಿಗೆ ಬಂತು. ಕಾಲ ಕ್ರಮೇಣ ಕೈಗಾರಿಕಾ ಕ್ರಾಂತಿಯಿಂದಾಗಿ ಬ್ರಿಟಿಷರು ಭಾರತದಾದ್ಯಂತ ರೇಲ್ವೆ ಸಂಪರ್ಕ ಏರ್ಪಡಿಸಲು ರಸ್ತೆಗಳನ್ನು ಆರಂಭಿಸಿದರು. ಇದರಿಂದ ಕಾಡು ಮೇಡುಗಳನ್ನು ಕಡಿಯಬೇಕಾಯಿತು. ಸಂಪರ್ಕ ಸಾಧನಗಳು ಹೆಚ್ಚಿದಂತೆಲ್ಲ ಪರ್ವತಾರಣ್ಯಗಳಲ್ಲಿ ವಾಸವಾಗಿದ್ದ ಬುಡಕಟ್ಟುಗಳ ಜನ ಅನಿವಾರ್ಯವಾಗಿ ಇತರ ಜನಗಳ ಸಂಪರ್ಕಕ್ಕೆ ಬರಬೇಕಾಯಿತು.[4] ಹೀಗೆ ಇತರ ಜನಗಳ ಸಂಪರ್ಕಕ್ಕೆ ಬಂದ ಬುಡಕಟ್ಟುಗಳು ಪರಕೀಯತೆಯನ್ನನುಭವಿಸುವುದರ ಜೊತೆಗೆ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಕ್ಕಿಕೊಳ್ಳಬೇಕಾಯಿತು. ಪುನರ್ವಸತಿಗಳನ್ನು ಕಲ್ಪಿಸದೇ ಇದ್ದುದು, ಆ ಜನರಿಗೆ ದಿಕ್ಕು ತಪ್ಪಿಸಿದಂತಾಯಿತು. ಇದರಿಂದ ದಿನನಿತ್ಯ ಇತರ ಜನರ ಸಂಪರ್ಕಕ್ಕೆ ಬಂದು, ಬುಡಕಟ್ಟು ಜನ ತಮ್ಮ ಸಂಸ್ಕೃತಿಯ ಮೂಲಸ್ವರೂಪವನ್ನು ಕಳೆದುಕೊಳ್ಳುತ್ತಾ ಇತರ ಹಿಂದೂ ಜಾತಿಗಳ ಸಂಪ್ರದಾಯಗಳನ್ನು ಅನುಸರಿತೊಡಗಿದರು.[5] ಕೆಲವು ಬುಡಕಟ್ಟುಗಳೆಂದು ಪರಿಗಣಿಸಿ ಬ್ರಿಟಿಷ್‌ಸರಕಾರ ಇವುಗಳ ಮೇಲೆ ವಿಶೇಷ ರಕ್ಷಣಾ ಕ್ರಮಗಳನ್ನು ಕೈಕೊಳ್ಳಬೇಕಾಯಿತು.[6] ಕೊರಮರೂ ಕೂಡ ಅಪರಾಧದಿಂದ ಹೊರಗುಳಿಯಲಾಗಲಿಲ್ಲ. ಬ್ರಿಟಿಷರ ಕ್ರಮದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ಬ್ರಿಟಿಷರ ಆಡಳಿತ ಕ್ರಮದಿಂದಾಗಿ ಮೂಲ ನೆಲೆಯನ್ನು ಕಳೆದುಕೊಂಡ ಕೊರಮರು ಉದ್ಯೋಗಾವಕಾಶಗಳು ದೊರಕದೆ, ಪರಕೀಯತೆಯ ಜೊತೆಗೆ ಆರ್ಥಿಕ ಮುಗ್ಗಟ್ಟಿಗೆ ಸಿಕ್ಕಿ ಅಪರಾಧೀ ಮಾರ್ಗದಲ್ಲಿ ಕೆಲವರು ಮುಂದುವರೆದಿರಬಹುದೇ ಹೊರತು ಅದನ್ನೇ ಮೂಲದಿಂದ ಒಂದು ವೃತ್ತಿಯನ್ನಾಗಿ ಮಾಡಿಕೊಂಡವರಲ್ಲ ಎಂದು ತಿಳಿಯಬೇಕಾಗುತ್ತದೆ. ಇವರ ಅಪರಾಧಿ ಮನೋಭಾವವನ್ನರಿತ ಕೆಲವರು ಇವರನ್ನು ತಮ್ಮ ಅನುಕೂಲಕ್ಕಾಗಿ ಆ ಮಾರ್ಗದಲ್ಲಿ ದುಡಿಸಿಕೊಂಡಿರುವುದೂ ಗೋಚರಿಸುತ್ತದೆ.

ಕೊರಮರ ಕಳ್ಳತನದ ಬಗ್ಗೆ ಎಚ್‌.ವ್ಹಿ. ನಂಜುಂಡಯ್ಯ ಮತ್ತು ಎಲ್‌.ಕೆ. ಅನಂತ ಕೃಷ್ಣ ಐಯ್ಯರ ಅವರು ಹೇಳುತ್ತಾ ಸುಲಿಗೆ, ಮನೆಕಳ್ಳತನ, ರಸ್ತೆ ದರೋಡೆಗಳ ಬಗೆಗೆ ಕದ್ದ ವಸ್ತುಗಳನ್ನು ಹಂಚಿಕೊಳ್ಳುವ ಇನ್ನು ಅನೇಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಮನೆಗಳ್ಳತನಕ್ಕೆ “They are thought the different methods of stealing, and the easiest way of getting into various kinds of houses. One must be entered through the roof, another by a hole in the wall, and by making a hole near the bolt of the door, Before letting himself down from the roof, the korava must make sure that he does not alight on brass vesseIs or crockery”[7] ಮುಂತಾದ ತಂತ್ರಗಳನ್ನು ಉಪಯೋಗಿಸುತ್ತಿದ್ದರು. ರಾತ್ರಿ ಸಮಯದಲ್ಲಿ ತಾವು ಮಾಡಿನಿಂದ (ಹೆಂಚು ತೆಗೆದು) ಇಳಿಯುವಾಗ ಯಾವ ಭಾಗಕ್ಕೆ ಇಳಿಯುತ್ತಿದ್ದೇವೆ ಎಂಬುದನ್ನು ತಿಳಿಯಲು ಮತ್ತು ಮನೆಯ ಜನರು ಮಲಗಿದ್ದಾರೋ ಇಲ್ಲವೋ ತಿಳಿಯಲು ಮೇಲಿನಿಂದ ಸಣ್ಣ ಮರಳನ್ನು ಉದುರಿಸುತ್ತಿದ್ದರು.

ಕತ್ತಲಾದ ಮೇಲೆ ಭಿಕ್ಷುಕರಂತೆ ಮನೆಯ ಮುಂದೆ ಬಂದು ಬೇಡಿ ಆಹಾರ ನೀಡಲು ಬಂದ ಹೆಂಗಸರ ಕುತ್ತಿಗೆಯಲ್ಲಿನ ಆಭರಣಗಳನ್ನು ಕಸಿದು ಕತ್ತಲಲ್ಲಿ ಪರಾರಿಯಾಗುತ್ತಿದ್ದರು.

Abbe J.A. Dubois ಅವರು “The last Musalaman prince who governed Mysore had a regular regiment of Kall-bantras in his service, whom he employed, not to fight amongst his troops,  bolt to despoil the enemy’s camp during the night to steel the horses, carry off any valuables they could find amongst the officers baggage, the spike the enemy’s guns, and act as spices. They were paid according to their skill and success. In times of peace they were sent into neighbouring states to pilfer for the benefit of their master, and also to report on the proceedings of the rulers’[8] ಎಂದು ಕೊರಮರಲ್ಲಿಯ ಒಂದು ಪಂಗಡವಾದ ಕಳ್ಳಬಂಟರ ಕಾರ್ಯಾಚರಣೆಯ ಬಗ್ಗೆ ವಿವರಿಸಿದ್ದಾರೆ. ಬೆಳಗಿನ ಸಮಯದಲ್ಲಿ ಗಂಡಸರೇಳುವುದಕ್ಕಿಂತ ಮುಂಚೆ ಹೆಂಗಸರು ಬಹಿರ್ದೆಸೆಗೆ ಹೋಗುವಾಗ ಅವರ ಕಂಠಾಭರಣಗಳನ್ನು ಕಸಿದು, ಅಥವಾ ಕತ್ತರಿಸಿಕೊಂಡು ಅವರು ಕೂಗುವ ಮೊದಲೆ ಪರಾರಿಯಾಗುತ್ತಿದ್ದರು. ಹಗಲಲ್ಲಿಯೇ ಗಿಡಗನಂತೆ ಎರಗಿ ಸಿಕ್ಕಿದ್ದನ್ನು ತೆಗೆದುಕೊಂಡು ಮಂಗಮಾಯವಾಗುತ್ತಿದ್ದರು. ಮನೆಗಳ್ಳತನದಲ್ಲಿ ಹೆಂಗಸರ ಆಭರಣ ಕಿತ್ತುಕೊಂಡು ಹೋಗುವಾಗ ಕಿವಿ ಹರಿದದ್ದು ಇದೆ. ಕಿವಿ ಹಿಡಿದು ಮೇಲತ್ತಿ ಬಿಡುವಾಗ ಹೆಂಗಸರು ಕೆಳಗೆ ಬಿದ್ದು ತಲೆಯೊಡೆದದ್ದೂ ಇದೆ. “Theft in a sporting method of making a living and not a crime as understood by the rest of the society”[9] ಎನ್ನುವ ಅಭಿಪ್ರಾಯ ಇವರದು.

ಕೊರವರಲ್ಲಿ ಹೆಂಗಸರೂ ಗಂಡಸರಂತೆ ಬೇರೆ ಬೇರೆ ತಂತ್ರಗಳಿಂದ ಕಳವು ಮಾಡುತ್ತಾರೆ. “The women are equally criminal with the man, but one less frequenty ecught…..”[10] ಇವರು ಕದ್ದ ಸಣ್ಣ ಸಣ್ಣ ವಸ್ತುಗಳನ್ನು ಅಂಥ ಸಂದರ್ಭದಲ್ಲಿ ತಮ್ಮ ಗುಪ್ತಾಂಗಗಳಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದ ಬಗ್ಗೆ 1901 ರಲ್ಲಿ ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ಹೆಂಗಸೊಬ್ಬಳನ್ನು ಬಂಧಿಸಿ ಅವರ ಗುಪ್ತಾಂಗದಲ್ಲಿದ್ದ ಚಿನ್ನದ ತುಣುಕನ್ನು ವಶಪಡಿಸಿಕೊಂಡ ಬಗ್ಗೆ ಮತ್ತು ಗಂಡಸರು ಬಾಯಲ್ಲಿ ಹಾಗೂ ಗುದದ್ವಾರಗಳಲ್ಲಿ ಅಡಗಿಸಿಟ್ಟುಕೊಳ್ಳುತ್ತಿದ್ದ ಬಗ್ಗೆ ತಂಜಾವೂರು ಜಿಲ್ಲೆಯ ಕೊರವನೊಬ್ಬನನ್ನು ಬಂಧಿಸಿ ಅವರ ಗುದದ್ವಾರದಿಂದ 14 ಇಂಚು ಉದ್ದದ ಎರಡು ಸಣ್ಣ ಎಳೆಯ ಚೈನನ್ನು ವಶಪಡಿಸಿಕೊಂಡ ಬಗ್ಗೆ ಎಮ್‌.ರೂಪಾರಾವ್ ನಾಯ್ಡು ಅವರು ಹೇಳಿರುವ ಹೇಳಿಕೆಗಳಿಂದ ಅರಿಯಬಹುದು.[11]

Cuddappa Manualನಲ್ಲಿ ಹೇಳಿರುವಂತೆ ಹೆಚ್ಚು ಬಂಗಾರ ಮೈಮೇಲಿರುವ ಹೆಂಗಸನ್ನು ಮೊದಲೆ ನೋಡಿ ಗುರುತಿಟ್ಟುಕೊಂಡು, ಆ ಮನೆಯ ಗಂಡಸು ರಾತ್ರಿ ಹೊಲಕ್ಕೆ ಹೋದ ಮೇಲೆ ಒಳಗ್ಗೆ ನುಗ್ಗಿ ಮಲಗಿದ ಹೆಂಗಸಿನ ಮೈಮೇಲಿನ ಬಂಗಾರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಇಲ್ಲವೆ ಬೆಳಗಿನ ಜಾವ ಅಂಥ ಹೆಂಗಸಿನ ಮನೆಯ ಮುಂದೆ ಅವಿತು ಕುಳಿತು ಆಕೆ ಹೊರಬಂದ ತಕ್ಷಣ ಆಭರಣಗಳನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ರೈಲು ಬಂದ ಮೇಲೆ ಇವರು ನೂರಾರು ಮೈಲಿಗಳವರೆಗೆ ಹೋಗಿ ಮಲಗಿದ ಪ್ರಯಾಣಿಕರ ಸಾಮಾನು ದೋಚಿ ಪರಾರಿಯಾಗುತ್ತಿದ್ದರು.

ಕೈಕಾಡಿಗಳು ಕಳ್ಳತನ, ಸುಲಿಗೆ, ದರೋಡೆಗಳಲ್ಲಿ ನಿಪುಣರು. ಇವರು ವಡ್ಡರು ಜಮಖಾನೆ ರಿಪೇರಿಯವರು, ಮರಾಠರು, ಗೋಸಾವಿಗಳು, ಕಣಿ ಹೇಳುವವರು, ದಾಸಯ್ಯಗಳು ಮತ್ತು ಜಂಗಮರ ಹಾಗೆ ವೇಷತೊಟ್ಟು ಹಳ್ಳಿಗಳಿಗೆ ಹೋಗಿ ಕಳ್ಳತನಕ್ಕೆ ಬೇಕಾದ ಮಾಹಿತಿ ಸಂಗ್ರಹಿಸುತ್ತಿದ್ದರು. ಮತ್ತೆ ಕೆಲವರು ಸಾಧು ಸ್ವಭಾವದ ಕುಂಚಿಕೊರವ, ಭಜಂತ್ರಿ ಅಲ್ಲದೆ ಬನಿಯ, ಮರಾಠರ ಹಾಗೆ ವೇಷ ಹಾಕಿ ತಮ್ಮ ಮಕ್ಕಳಿಗೆ ಗಂಡು ಹೆಣ್ಣು ಹುಡುಕುವವರಂತೆ ಹೋಗಿ ಹಳ್ಳಿಗಳಲ್ಲಿ ವಿಷಯ ಸಂಗ್ರಹಿಸಿ ಕಳ್ಳತನ ಮಾಡುತ್ತಿದ್ದರು. “First and foremost Deccan Kaikadies, pamulars and Kall Kaikadies of carnatic one daring and restless docoits. They regard docoits as a hereditary profession, They also commit bargalaries and occasionally high way robberies.”[12] ಇಷ್ಟೇ ಅಲ್ಲದೆ ಹಿತ್ತಾಳೆಯ ಮೊಹರುಗಳನ್ನು ಬಂಗಾರದವುಗಳೆಂದು ತೋರಿಸಿ ಗುಪ್ತ ಸ್ಥಳಕ್ಕೆ ಜನರನ್ನು ಕರೆದು ಅವರ ಹಣ ಲಪಟಾಯಿಸಿ ಪರಾರಿಯಾಗುತ್ತಿದ್ದರು.

ಇವರಲ್ಲಿ ಬೆಳೆ, ಆಹಾರಧಾನ್ಯ, ಕೋಳಿ ಕುರಿ ಆಡು ಮುಂತಾದವುಗಳನ್ನು ಕದ್ದು ತಿನ್ನುವುದು ಸಾಮಾನ್ಯವಾದ ಸಂಗತಿ. ಕುರಿ, ಕೋಳಿ, ಆಡುಗಳನ್ನು ಅಂದೇ ಕಡಿದು ತಿನ್ನುವುದು ನಿಯಮವಾಗಿತ್ತು. ಕಡ್ಡಿ ಕೊರವರಲ್ಲಿ “Their wormen beg, and while so employed, one experts in breaking open and picking locks and entering house by day with a view to commit theft. They are corrigible thieves.”[13] ಇವರಲ್ಲಿ ಯಜಮಾನಿ ಇರುತ್ತಾಳೆ. ಇವಳನ್ನು ಪುಲಕುಳಿಸಿ ಎನ್ನುತ್ತಾರೆ. ಈಕೆ ತನ್ನ ಗುಂಪಿನೊಂದಿಗೆ ಹಳ್ಳಿಗಳಿಗೆ ಹೋಗಿ ಭಿಕ್ಷೆ ಬೇಡುತ್ತಾ ಯಾವುದಾದರೂ ಮನೆಯ ಮುಂದೆ ಕೆಲವರು ತಮ್ಮತಮ್ಮಲ್ಲಿಯೇ ಜಗಳಕ್ಕೆ ಪ್ರಾರಂಭಿಸುತ್ತಾರೆ. ಉಳಿದವರು ಆ ಮನೆಯ ಹಿಂಭಾಗಕ್ಕೆ ಸರಿಯುತ್ತಾರೆ. ಮನೆಯ ಮುಂದೆ ಜಗಳ ಹೆಚ್ಚಾಗಿ ರಕ್ತ ಬರುವಂತೆ ಒಬ್ಬರಿಗೊಬ್ಬರು ಪರಚಾಡಿ ಮನೆಯ ಒಳಗಿದ್ದವರನ್ನು ಹೊರಕ್ಕೆ ಬರುವಂತೆ ಮಾಡುತ್ತಾರೆ. ಈ ಸಮಯದಲ್ಲಿ ಮನೆಯ ಹಿಂಭಾಗದಲ್ಲಿದ್ದವರು ಹಿಂಬಾಗಿಲಿನಿಂದ ಒಳಗೆ ಬಂದು ಕೈಗೆ ಸಿಕ್ಕಿದ್ದನ್ನು ಲಪಟಾಯಿಸಿ ಪರಾರಿಯಾಗುತ್ತಾರೆ. ಇವರು ತಪ್ಪೊಪ್ಪಿಕೊಳ್ಳುವುದು ಬಹಳ ಕಡಿಮೆ.

ಕೊರಮರು ಅಥವಾ ಕೈಕಾಡಿಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಗುಂಪಾಗಿ ನಾಯಕನೊಬ್ಬನ ನೇತೃತ್ವದಲ್ಲಿ ಕಳ್ಳತನ, ಸುಲಿಗೆ, ದರೋಡೆ ಮಾಡುತ್ತಾರೆ. ನಾಯಕನನ್ನು ಬೆರು ಮನುಸ ಎಂದು ಕರೆಯುತ್ತಾರೆ. ದೊಡ್ಡ ದೊಡ್ಡ ದರೋಡೆಯ ಸಮಯದಲ್ಲಿ 30 ರಿಂದ 40 ಜನರ ಗುಂಪಿನವರೆಗೂ ಇರುತ್ತದೆ. ಇವರು ತಮ್ಮ ಹೆಂಗಸರನ್ನು ಹಳ್ಳಿಗಳಿಗೆ ಕಣಿ ಹೆಳುವವರ ಹಾಗೆ, ಕಲ್ಲಿಗೆ ಚಾಣ ಹಾಕುವವರ ಹಾಗೆ ಕಳಿಸಿ ಮಾಹಿತಿ ಸಂಗ್ರಹಿಸಿ ಕಳ್ಳತನ ಮಾಡುತ್ತಿದ್ದರು. ನಾಯಕನಾದವನಿಗೆ ಇಂಡಿಯನ್ ಪಿನಲ್ ಕೋಡ್ ತಿಳಿದಿರುತ್ತಿತ್ತು. ಇವರು ಬಹಳ ದೂರದವರೆಗೆ ಹೋಗಿ ಕಳ್ಳತನ ದರೋಡೆ ಮಾಡಿಕೊಂಡು ಬರುತ್ತಿದ್ದರು. ಜಿಲ್ಲೆಯ ಎಲ್ಲ ಭಾಗದ ಮಾಹಿತಿಯೂ ಅವನಿಗೆ ಇರುತ್ತಿತ್ತು. ಸ್ಥಳೀಯ ಪೊಲೀಸರ ಎಲ್ಲೆ ತಿಳಿದಿರುತ್ತಿತ್ತು. ಕಳ್ಳತನಕ್ಕೆ ಬೇಕಾದ ಕಾರ್ಯ ತಂತ್ರ ನಾಯಕನೇ ರೂಪಿಸುತ್ತಿದ್ದ ಇವರು ಕೆಪ್ಪಮಾರಿಗಳ ಹಾಗೆ, ಪೂಜಾರಿಗಳ ಹಾಗೆ, ಅಲಗಿರಿಗಳ ಹಾಗೆ ವೇಷ ಧರಿಸುವುದರ ಜೊತೆಗೆ ಇವರು ಮತ್ತು ಕತ್ರಿವಾಂಡ್ಲುಗಳ ತಂತ್ರವನ್ನು ಕಳ್ಳತನಕ್ಕೆ ಬಳಸುತ್ತಿದ್ದರು.

ಕಳ್ಳತನಕ್ಕೆ ಹೋಗುವಾಗ ಅವರ ಕೈಯಲ್ಲಿ ಕೊಡಲಿ, ದೊಣ್ಣೆ, ಕಲ್ಲು, ಕವಣೆ ಮುಂತಾದವುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಕೆಲವು ವೇಳೆ ಪಟಾಕಿಗಳನ್ನು ಸಿಡಿಸಿ ತಮ್ಮಲ್ಲಿ ಬಂದೂಕುಗಳಿವೆ ಎಂಬ ಹೆದರಿಕೆ ಹುಟ್ಟಿಸುತ್ತಿದ್ದರು. ಮನೆಗಳ್ಳತನದಲ್ಲಿ ಕೊಡಲಿಯಿಂದ, ಕಲ್ಲಿನಿಂದ ಬಾಗಿಲು ಒಡೆದು ಹೋಗಿ ದೋಚುವುದೂ ಇತ್ತು. ಸುತ್ತಲಿನವರು ಬರದ ಹಾಗೆ ಅಕ್ಕಪಕ್ಕದ ಮನೆಗಳ ಬಾಗಿಲಿನ ಹೊರ ಚಿಲಕವನ್ನು ಹಾಕಿ ಹೊರಗೆ ಬರದಂತೆ ಮಾಡುತ್ತಿದ್ದರು. ದಾರಿಯ ಮೇಲೆ ಮುಳ್ಳನ್ನು ಹರಡುತ್ತಿದ್ದರು. ಹೊರಗಿನ ತೊಂದರೆ ಅರಿತು ಸಂಕೇತ ನೀಡಲು ಕೆಲವು ಹಿರಿಯರನ್ನು ನೇಮಿಸಿಕೊಂಡಿರುತ್ತಿದ್ದರು. ಯಾವಾಗ ತಮ್ಮ ಯಜಮಾನ ಸಂಕೇತ ಕೊಡುತ್ತಿದ್ದನೋ ಆಗ ಎಲ್ಲರೂ ಹೊರಗೆ ಬಂದು ಸೇರುತ್ತಿದ್ದರು. ಎಲ್ಲರೂ ಇದ್ದಾರೆ ಎಂದು ಖಾತ್ರಿಯಾದ ಮೇಲೆ ಅಲ್ಲಿಂದ ಪರಾರಿಯಾಗುತ್ತಿದ್ದರು. ಓಡುವುದರಲ್ಲಿ ಇವರು ಗಟ್ಟಿಗರು. ಆದರೆ ಕಳ್ಳಬಂಟರು “always commit their depredations at night. Noisele entering a village, they place sentinels along the different Roods, while they select the houses that can be entered wiht the least risk.”[14] ಹಾಗೆ ಪ್ರವೇಶಿಸಿದ ಇವರು ಕೆಲವೆ ನಿಮಿಷಗಳಲ್ಲಿ ಆ ಮನೆಯ ಬೆಲೆಬಾಳುವ ಪಾತ್ರೆಗಳು, ವಸ್ತುಗಳು ಜೊತೆಗೆ ಬೆಳ್ಳಿ, ಬಂಗಾರ ಅಷ್ಟೇ ಅಲ್ಲದೆ ಮಲಗಿದ ಹೆಂಗಸರ ಮಕ್ಕಳ ಕುತ್ತಿಗೆಯ ಆಭರಣಗಳನ್ನೂ ದೋಚುತ್ತಾರೆ. “They never break open the doors of the houses for that would make too much noise and so lead to their detection. There plan is to pierce the mud wall of the house with a sharp iron instrument specially made for the purpose, with which they can in a few moments easily make a hole large enough for a man to creep through.”[15] ಆದ್ದರಿಂದ ಆಯಾ ಸಮಯಕ್ಕೆ ತಕ್ಕಂತೆ, ಅಥವಾ ತಾವು ರೂಢಿಸಿಕೊಂಡ ನಿಯಮಗಳಂತೆ ಕಳ್ಳತನವನ್ನು ಮಾಡಿ ಪರಾರಿಯಾಗುತ್ತಿದ್ದರು. ಕೆಲವರು ಮನೆಗಳಲ್ಲಿ ಸಣ್ಣ ಕನ್ನ ಕೊರೆದು ಮಕ್ಕಳನ್ನು ಒಳಗೆ ಕಳಿಸಿ ಬಾಗಿಲು ತೆರೆಸಿ ಒಳಗೆ ಹೋಗುತ್ತಿದ್ದರು. ಬಾಗಿಲು ತೆಗೆಯಲು ಸಾಧ್ಯವಾಗದಿದ್ದರೆ ಆ ಮಕ್ಕಳಿಂದ ಬೆಲೆಬಾಳುವ ವಸ್ತುಗಳನ್ನು ಹೊರಗೆ ತರಿಸುತ್ತಿದ್ದರು. ಮಕ್ಕಳಿಗೆ ಇವರು ಚಿಕ್ಕಂದಿನಲ್ಲಿಯೇ ಯಾರು ಏನೇ ಕೇಳಿದರೂ ನನಗೆ ಗೊತ್ತಿಲ್ಲ ಎನ್ನುವ ಒಂದೇ ಉತ್ತರ ಕೊಡುವಂತೆ ತರಬೇತಿ ನೀಡುತ್ತಿದ್ದರು.[1]       Mr. Francis Quoted : E. Thurston castes and Tribes of southern India, Vol. III – K.  P-455.

[2]      ಡಾ|| ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು ಪು-11.

[3]      ಮಾಹಿತಿ ನೀಡಿದವರು : ಛೇ. ಜವರಪ್ಪ ದುರ್ಗಪ್ಪ ಬಿದರೇಗುಡಿ, ತಿಪಟೂರು ತಾಲೂಕು.

[4]      ಡಾ|| ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯ ಮತ್ತು ನಂಬಿಕೆಗಳು ಪು-11.

[5]      – ಅದೇ –

[6]      – ಅದೇ –

[7]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-612.

[8]      Abbe J.A. Dubois and henry K. Beau Champ, Hindu Manners, Customs and Ceremonies  P-68.

[9]        H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-612, 613.

[10]       E. Thurston Castes and Tribes of Southern India Vol, III – K  P-472.

[11]      Ibid.,

[12]       Michael Kennedy, Criminal Classes in the Bombay Presidency. P-73.

[13]      Ibid.,  P-74.

[14]      Abbe J.A. Dubois and henry K. Beau Champ, Hindu Manners, Customs and Ceremonies  P-67.

[15]       Ibid.,  P-67.