ಕೊರಮರಲ್ಲಿ ಆಡುವ ವಯಸ್ಸಿನಲ್ಲಿಯೇ ಕಾಡುವ ಬದುಕಿಗೆ ಅನಿವಾರ್ಯವಾಗಿ ಮಕ್ಕಳು ಅಂಟಿಕೊಳ್ಳಬೇಕಾಗಿತ್ತು. ಗಂಡು ತಂದೆಯನ್ನು ಅನುಸರಿಸಿದರೆ ಹೆಣ್ಣು ಮಕ್ಕಳು ತಾಯಿಯ ಜೊತೆಯೋ, ಅಜ್ಜಿಯ ಜೊತೆಯೇ ಭವಿಷ್ಯಕ್ಕೆ ಬೇಕಾದ ಬದುಕಿನ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕಾಗಿತ್ತು. ಮದುವೆಯಾದ ಮೇಲಂತೂ ಆಕೆ ಗಾಣಕ್ಕೆ ಕಟ್ಟಿದ ಪಶುವಾದರೆ ಆತ ಗಾಣವಾಗುತ್ತಿದ್ದ.

ಕೊರಮರು ನಾಲ್ಕು ಗೋಡೆಯ ನಡುವೆ ಬಂಧಿಯಾಗದೆ ಸಮಾಜದಲ್ಲಿ ಮುಕ್ತವಾಗಿ ವ್ಯವಹರಿಸುತ್ತಾ ಬಂದಿದ್ದರೂ, ಸಾಮಾಜಿಕವಾಗಿ ತಮ್ಮಸ್ಥಾನವನ್ನು ತೀರ ಕೆಳ ಸ್ತರದಲ್ಲಿ ಕಂಡುಕೊಳ್ಳಬೇಕಾಯಿತು. ಇದಕ್ಕೆ ಅವರ ವ್ಯವಹಾರ ನಡವಳಿಕೆ ಅಲ್ಲದೆ ಅವರ ಅಲೆಮಾರಿತನವೂ ಕಾರಣವಾಗಿದೆ. ಬೆಟ್ಟಗುಡ್ಡಗಳಲ್ಲಿದ್ದ ಇವರು ಕಾಡಿನ ಸೊಬಗನ್ನಾಗಲಿ, ಹರಿಯುವ ನೀರನ್ನಾಗಲಿ ಅಥವಾ ಪ್ರಕೃತಿಯ ನಾನಾ ವಿಶೇಷಗಳನ್ನು ಗಮನಿಸಿ ಭಾವನಾ ಲೋಕದಲ್ಲಿ ವಿಹರಿಸಿದವರಲ್ಲ. ತುತ್ತಿನ ಚೀಲ ದೊಡ್ಡದಾದಾಗ ಅದನ್ನು ತುಂಬಿಕೊಳ್ಳಲು ಹೆಣಗಿದರು. ಇವರು ಪ್ರೀತಿಸಿದ್ದು ಬದುಕನ್ನು. ಕಾಡಿನಲ್ಲಿದ್ದರೂ ನಾಡಿಗೆ ಬಂದು, ಉಪವೃತ್ತಿಗಳನ್ನನುಸರಿಸಿದರು. ಸಮಾಜದಲ್ಲೊಂದಾಗಲು ಶ್ರಮಿಸಿದರು. ಇದಲ್ಲದೆ ಬಹುಜನ ಅಶಿಕ್ಷಿತರಾಗಿಯೇ ಉಳಿದುದು ದುರ್ದೈವದ ಸಂಗತಿ.

ತೀರದ ಬಡತನದ, ಆದ ಬವಣೆಯ, ಮೂಢನಂಬಿಕೆ ಕಂದಾಚಾರಗಳ ತವರಾದ ಕೊರಮರು ಅಲ್ಪ ತೃಪ್ತರು. ದೂರದೃಷ್ಟಿಯ ಮಹತ್ವಾಕಾಂಕ್ಷೆ ಇವರಿಗೆ ಇರಲಿಲ್ಲ. ಇವರಲ್ಲಿ ಆ ಕಾಲಕ್ಕೆ ನೂರಾರು ರೂಪಾಯಿ ಇಟ್ಟುಕೊಂಡವನೇ ಶ್ರೀಮಂತ. “ಕೊರಮಗೊಂದೂರಲ್ಲ ಕೊಕ್ರೆಗೊಂದು ಕೆರೆಯಿಲ್ಲ” ಎನ್ನುವಂತೆ ಊರೂರು ತಿರುಗುತ್ತಾ ಜೀವನ ಸಾಗಿಸುತ್ತಿದ್ದರು. ಇತರರ ಹಾಗೆ ತಾವೂ ಭೂಮಿಯನ್ನು ನಂಬಿ, ಒಂದು ಕಡೆ ನೆಲೆ ನಿಂತು ನೆಮ್ಮದಿ ಬದುಕನ್ನು ರೂಢಿಸಿಕೊಂಡವರಲ್ಲ. ಆ ಕಾರಣದಿಂದಾಗಿ ಬದುಕಿನುದ್ದಕ್ಕೂ ಆತಂಕ ಮತ್ತು ಅಭದ್ರತೆಯೊಂದಿಗೆ ಸಾಗಿ ಬಂದಿದ್ದಾರೆ. ಕೊರಮ ಬುಡಕಟ್ಟು ತಲೆತಲಾಂತರಗಳಿಂದ ಅನುಸರಿಸಿಕೊಂಡು ಬರುತ್ತಿರುವ ವೃತ್ತಿಗಳ ಬಗೆಗೆ ಅಲ್ಲಲ್ಲಿ ಮಾಹಿತಿಗಳು ದೊರೆಯುತ್ತವೆ. ವೃತ್ತಿಯಲ್ಲಿ ಮೇಲು ಕೀಳೆಂಬುದಿಲ್ಲ. ತನ್ನ ಉದರ ಪೋಷಣೆಗಾಗಿ ಪ್ರತಿಯೊಬ್ಬನೂ ಒಂದಲ್ಲ ಒಂದು ಉದ್ಯೋಗವನ್ನು ಮಾಡುವುದು ಸ್ವಾಭಾವಿಕವೇ. ಅಂತೆಯೇ ಕೊರಮರೂ ಕೂಡ ತಮ್ಮ ಉಳಿದ ಸ್ಥಳ ಸನ್ನಿವೇಶ, ಅಂತೆಯೇ ದೊರೆಯುತ್ತಿದ್ದ ಕಚ್ಚಾ ವಸ್ತು ಮುಂತಾದವುಗಳನ್ನು ಅವಲಂಬಿಸಿ ತಮ್ಮ ವೃತ್ತಿಯನ್ನು ರೂಢಿಸಿಕೊಂಡಿದ್ದಾರೆ. ಇಲ್ಲಿ ತೋರಿಬರುವ ವೃತ್ತಿಗಳು ಆಯಾ ಕಾಲಕ್ಕೆ ಬದಲಾಗುತ್ತಾ ಬಂದಿವೆ. ಸಮಾಜದ ಮುಖ್ಯ ಪ್ರವಾಹದಲ್ಲಿ ತಾವೂ ಒಂದಾಗಲು ಮಾಡಿದ ಪ್ರಯತ್ನವೇ ಇದಕ್ಕೆ ಕಾರಣ. ಆ ಪ್ರಯತ್ನದಲ್ಲಿ ಇವರು ಎಷ್ಟು ಸಫಲರಾಗಿದ್ದಾರೆ ಎಂಬುದು ಮುಖ್ಯವಲ್ಲ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವು ಸಹಾಯಕವಾಗಿವೆ ಮತ್ತು ಹೊಸತನದ ಬದುಕಿಗೂ ದಾರಿ ತೋರಿಸಿವೆ.

ಶ್ರೀ ರೈಸ್ ಅವರು ಕೊರಮರ ಉದ್ಯೋಗವನ್ನು ಕುರಿತು ಹೇಳುತ್ತಾ “….. thieves and robbers, moving with droves of cattle and asses, carrying salt and grain, and making bamboo mats and baskets”

[1] ಎಂದರೆ Abbe Dubois ಅವರು “carries and baskets makers, who were perpetually wandering about, and showed much affinity with the Gypsies of Europe, especially in telling fortunes. The women according to him, were skillful tatoers, but the tribe in his time hade an evil reputation for thieving and house breacking”[2] ಎಂದು ದಾಖಲಿಸಿದ್ದಾರೆ.

R.E. Enthovan ಅವರು ಈ ಮೇಲಿನ ಹೇಳಿಕೆಯನ್ನು ಉದಾಹರಿಸುವುದರ ಜೊತೆಗೆ “They are a wandering tribes of hunters, fortune tellers, cattle breeders, carries, musicians, basket makers and thieves”[3] ಎಂದು ದಾಖಲಿಸಿದ್ದಾರೆ.

ಹಿರೇಂದ್ರ ಕೆ. ರಕ್ಷಿತ ಅವರು “traditionally they are fortune-tellers, a very substantial number of them are now living on basketry”[4] – ಎಂದಿದ್ದಾರೆ.

Abbe J.A. Dubois ಅವರು “The koravas are also the fortunetellers of the country”[5] – ಎಂದು ಹೇಳುವುದರ ಜೊತೆಗೆ ಕಣಿ ಹೇಳುತ್ತಿದ್ದ, ಹಚ್ಚೆ ಹಾಕುತ್ತಿದ್ದ ಬಗ್ಗೆಯೂ ಮನೆಗಳ್ಳತನ, ಜೇಬುಗಳ್ಳತನದ ಬಗ್ಗೆಯೂ ಹೇಳಿದ್ದಾರೆ. MICHAEL KENNEDY[6] ಅವರು ಕೊರಮ ಬುಡಕಟ್ಟಿನ ಉಪಪಂಗಡಗಳ ಬಗೆಗೆ ಹೇಳುತ್ತಾ ಕೊರಮರು ಕಳ್ಳತನ, ನಜೆಹಲ್ಲಿನ ಪೊರಕೆ, ಹಗ್ಗ, ನೆಲುವುಗಳನ್ನು ಮಾಡುತ್ತಿದ್ದ ಬಗೆಗೆ ಒಂದು ಉಪಪಂಗಡ ಹಾವು ಆಡಿಸಿ ಜೀವನ ಸಾಗಿಸುತ್ತಿದ್ದ ಬಗೆಗೆ ಮತ್ತೊಂದು ಗುಂಪು ವಾದ್ಯಕಾರರಾಗಿದ್ದ ಬಗೆಗೆಯೂ ಬರೆಯುತ್ತಾರೆ. ಅಲ್ಲದೆ E.Thurston[7] ಅವರು ಬಿದಿರಿನಿಂದ ವಿವಿಧ ರೀತಿಯ ಬುಟ್ಟಿಗಳನ್ನು, ನೇಕಾರರಿಗೆ ಬೇಕಾಗುವ ಕುಚ್ಚುಗಳನ್ನು, ಉಪ್ಪಿನ ವ್ಯಾಪಾರ ಮಾಡುತ್ತಿದ್ದುದನ್ನು ದಾಖಲಿಸಿದ್ದಾರೆ. ಇದೇ ವಿಷಯವನ್ನು ಕನ್ನಡ ಜನಪದ ವಿಶ್ವಕೋಶದಲ್ಲಿಯೂ ಹೇಳಲಾಗಿದೆ.[8] ಎಚ್‌.ವಿ.ನಂಜುಂಡಯ್ಯ ಮತ್ತು ಎಲ್‌.ಕೆ. ಅನಂತಕೃಷ್ಣ ಐಯ್ಯರ್ ಅವರು “Korachas also known as Koramas of Koravas, are a tribe of hunters, fortune-tellers, cattle breeders, basket makers and thieves.” ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ಎತ್ತು, ಕತ್ತೆಗಳ ಮೇಲೆ ಉಪ್ಪುಸಾಗಿಸಿ ಮಾರಾಟ ಮಾಡುತ್ತಿದ್ದ ಬಗೆಗೆ, ಕೆಲವರು ಕೋತಿ ಆಡಿಸಿ ಜೀವನ ಸಾಗಿಸುತ್ತಿದ್ದ ಬಗೆಗೆ, ವಾದ್ಯ ನುಡಿಸುತ್ತಿದ್ದ ಬಗೆಗೆ, ಹಚ್ಚೆ ಹಾಕುತ್ತಿದ್ದ ಬಗೆಗೆ ಬರೆದಿದ್ದಾರೆ.[9] ಇವರಷ್ಟೇ ಅಲ್ಲದೆ ಇನ್ನೂ ಅನೇಕ ಮಹನೀಯರು ಕೊರವರ ಅನುಸರಿಸುತ್ತಿದ್ದ ಇತರ ಉದ್ಯೋಗಗಳನ್ನು ಗುರುತಿಸಿದ್ದಾರೆ. ಅದೇ ಅಂಶವನ್ನು ಶ್ರೀಮತಿ ವಿಮಲ ದೊರೆಸ್ವಾಮಿ ಮತ್ತು ಎಂ.ದೊರೆಸ್ವಾಮಿ ಅವರೂ ದಾಖಲಿಸಿ ಇವರು ವಾದ್ಯಕಾರರು ಮತ್ತೆ ವ್ಯವಸಾಯಗಾರರಾಗಿದ್ದ ಬಗ್ಗೆ ತಿಳಿಸುತ್ತಾರೆ.[10]

ಪೂಪರಾವ್ ನಾಯಡು ಅವರು Koot (dancing) of Kothee Kaikadies ಅವರ ಬಗ್ಗೆ “obtaining their living by prostitution. They also kidnap or sell children for this purpose. some of the woman of this class are thriving well in the Madras Presidency as experts in dancing. They are kept by rich people, and are called in the Telugu contry Erkula Bogamvaru, in Tamil Korava Thevidia, They also train monkey and show them to be the public”[11] ಎಂದು ಹೇಳಿದ್ದಾರೆ. ಜೀವನ ನಿರ್ವಹಣೆ ಕಷ್ಟವಾದಾಗ ಹೆಣ್ಣು ಮಕ್ಕಳು ಮೊದಮೊದಲು ಹೊಟ್ಟೆ ತುಂಬಿಕೊಳ್ಳಲು ತಮ್ಮನ್ನೇ ಅರ್ಪಿಸಿಕೊಳ್ಳುವ ಸ್ಥಿತಿಗೆ ಬಂದಿರಬಹುದು. ಅಥವಾ ಹೊಟ್ಟೆ ತುಂಬಿಕೊಳ್ಳಲು ದಿಕ್ಕಿಲ್ಲದೆ ಅಲೆಮಾರಿಗಳಾಗಿ ಬಂದವರ ಮೇಲೆ ಸ್ಥಳೀಯ ಜನ ದೌರ್ಜನ್ಯ ಮಾಡಿ ದುರಾಚಾರಕ್ಕಿಳಿಸಿರಬೇಕು. ಮುಂದೆ ಜೀವನ ನಿರ್ವಹಣೆಗೆ ಅದೇ ಮಾರ್ಗವೇ ಸುಲಭವಾದ್ದರಿಂದ ವೈಶ್ಯಾವೃತ್ತಿಯನ್ನೇ ಮುಂದುವರಸಿರಬಹುದು. ಆದರೆ ಇದು ಎಲ್ಲ ಕಡೆಯೂ ತೋರುವುದಿಲ್ಲ. ಅವಮಾನದ ವೃತ್ತಿಯಾದ ಇದು ಆಂಧ್ರ ಮತ್ತು ತಮಿಳುನಾಡಿನಲ್ಲಿದ್ದರೂ ದಕ್ಷಿಣ ಕರ್ನಾಟಕದಲ್ಲಿ ಕಂಡು ಬರುವುದಿಲ್ಲ. ಅಲ್ಲದೆ ಕೋತಿ ಕೊರಮರೂ ಈ ಭಾಗದಲ್ಲಿ ನೆಲೆಯಾಗಿಲ್ಲ. ಈ ಮೇಲೆ ಗುರುತಿಸಿದ ಉದ್ಯೋಗಗಳನ್ನು ಅನುಸರಿಸುತ್ತಿರುವ ಕೊರಮ ಬುಡಕಟ್ಟು ಮುಂದೆ ಒಂದೇ ಆಗಿ ಉಳಿಯಲಿಲ್ಲ. ತಮ್ಮ ಮೂಲ ನೆಲೆಯಿಂದ ಚದುರಿದ ಮೇಲೆ ಪ್ರತಿಯೊಂದು ಗುಂಪೂ ಒಂದರಿಂದ ಒಂದು ದೂರ ಉಳಿದು ಸಂಬಂಧ ಕಳೆದುಕೊಂಡವು. ತಮ್ಮ ಆಚಾರ, ವಿಚಾರಗಳು ಕಾಲದಿಂದ ಕಾಲಕ್ಕೆ ಬದಲಾದಂತೆಲ್ಲ ಒಂದನ್ನೊಂದು ಸೇರದೆ ಹೋದವು. ಮತ್ತು ತಮ್ಮತಮ್ಮಲ್ಲಿಯೇ ಮೇಲು ಕೀಳುಗಳುಂಟಾದವು.

ಕೊರಮರ ಉಪಪಂಗಡ ಮತ್ತು ಅವರ ವೃತ್ತಿ

ಪಶು ಸಂಗೋಪನೆಯೊಂದಿಗೆ ಕಾಡಿನಲ್ಲಿದ್ದ ಈ ಬುಡಕಟ್ಟು ಅರಣ್ಯೋತ್ಪನ್ನಗಳಾದ ಬಿದಿರು, ಬೆತ್ತ, ಬಳ್ಳಿಗಳಿಂದ ತಟ್ಟಿ ಬುಟ್ಟಿಗಳನ್ನು ಮಾಡುತ್ತಾ, ಅವುಗಳನ್ನು ಮಾರಿ ಜೀವನ ಸಾಗಿಸಲು ನಾಡನ್ನು ಅವಲಂಬಿಸಿದರು. ಬೇಟೆಯೂ ಇವರ ಮುಖ್ಯ ಪ್ರವೃತ್ತಿಯಾಗಿತ್ತು. ಬೆಟ್ಟದಿಂದ ಬಿದಿರು ತರುವುದು ಒಂದು ಪ್ರಯಾಸವೇ. ಗಂಟುಗಂಟಾದ, ಒರಟಾದ ಬಿದಿರು ಇವರ ಕೆಲಸಕ್ಕೆ ಬರುವುದಿಲ್ಲ. ಆದ್ದರಿಂದ ನೀಳವಾಗಿ ಬೆಳೆದ ಉದ್ದನೆಯ ಗಣ್ಣಿನ ಮೆದುವಾದ ಬಿದಿರನ್ನು ಹುಡುಕಿ ಕಡಿದು ತಲೆಯ ಮೇಲೆ ಹೊತ್ತುಕೊಂಡೋ, ಕತ್ತೆ, ಎತ್ತುಗಳ ಮೇಲೆ ಹೇರಿಕೊಂಡೋ ತರುತ್ತಿದ್ದರು. ದಾರಿಯಿಲ್ಲದ ದಟ್ಟವಾದ ಕಾಡುಗಳಲ್ಲಿ, ಗಿಡಗಂಟಿಗಳನ್ನು ಬಳಸಿ, ಸೊಂಟಕ್ಕೂ ಮೇಲೆ ಬೆಳೆದ ಹುಲ್ಲು ಕರಡಗಳನ್ನು ದಾಟುತ್ತಾ ತಗ್ಗಿಳಿದು, ಏರುಹತ್ತಿ ತಮ್ಮ ಕೆಲಸಕ್ಕೆ ಒಳ್ಳೆಯ ಮಳೆಗಳನ್ನು ಆರಿಸುತ್ತಿದ್ದರು. ಆ ಮಳೆಯಲ್ಲಿ ಸಿಕ್ಕುಸಿಕ್ಕಾಗಿ ಬೆಳೆದ ಮುಳ್ಳುಗಳನ್ನು ಬಿಡಿಸಿ, ಕತ್ತರಿಸಿ ಬಿದಿರನ್ನು ಜಗ್ಗಿ ಹೊರಗೆಳೆಯುವುದು ಜೀವ ಬಾಯಿಗೆ ಬಂದಷ್ಟು ಕಷ್ಟ. ಬಿದಿರ ಮುಳ್ಳೊಡೆದು ಮೈಮೇಲಿನ ಬಟ್ಟೆ ಅಷ್ಟೇ ಅಲ್ಲ; ಕೈಯ ಚರ್ಮವೂ ಛಿದ್ರವಾಗುತ್ತಿತ್ತು. ಮೈಯೆಲ್ಲ ಪರಚಿ ಹೋಗುತ್ತಿತ್ತು. ಕಡಿದ ಬಿದಿರನ್ನು ಸಿಗಿದು ಹೊರೆ ಕಟ್ಟುತ್ತಿದ್ದರು. ಒಂದು ದಬ್ಯೆ ಹೆಚ್ಚು ತಂದರೆ ಮತ್ತೆರಡು ಬುಟ್ಟಿಯಾಗುತ್ತವೆ ಎನ್ನುವ ಆಸೆ. ಹೆಣಭಾರವಾದ ಹೊರೆಯನ್ನು ತಲೆಗೇರಿಸಿದರೆ ತಾವಿರುವ ತಾವಿಗೆ ಬಂದು ಸೇರುತ್ತಿದ್ದುದು ಸಾಯಂಕಾಲವೇ. ಹೀಗೆ ಹಗಲೆಲ್ಲ ಸಶ್ರಮವಾದ ಜೀವನವನ್ನು ನಡೆಸಬೇಕಾಗಿತ್ತು ಕೊರಮ ಜನಾಂಗದ ಗಂಡಸರು.

ಈ ಕುಕ್ಕೆ ಕೊರಮರ ಅಥವಾ ದಬ್ಬೆ ಕೊರಮರ ಪ್ರಯಾಸ ಅಷ್ಟಿಷ್ಟಲ್ಲ. ತಿಪಟೂರು ತಾಲ್ಲೂಕು ಬಿದರೆಗುಡಿಯಲ್ಲಿ ಸುಮಾರು 60-70 ಮನೆಗಳಿವೆ. ಇಲ್ಲಿರುವವರೆಲ್ಲರೂ ಕುಕ್ಕೆ ಕೊರಮರೆ. ಕೆಲವರು ಈಗ ಹೊಲ, ತೋಟ ಮಾಡಿಕೊಂಡಿದ್ದಾರೆ. ಇಲ್ಲಿ ಎಲ್ಲರೂ ಸಾಮಾನ್ಯವಾಗಿ ಬಿದಿರು ಬುಟ್ಟಿಗಳನ್ನು ಮಾಡುತ್ತಾರೆ. ಇವರು ಸುಮಾರು 20 ವರ್ಷಗಳ ಹಿಂದೆ ಸುಮಾರು 20-25 ಕಿಲೋ ಮೀಟರ್ ದೂರವಿರುವ ಹಿರೇಕಲ್ಲು ಗುಡ್ಡಕ್ಕೆ ಬಿದಿರು ತರಲು ಹೋಗುತ್ತಿದ್ದರಂತೆ. ಈ ದಿನ ಸಾಯಂಕಾಲವೇ ಬಿದಿರು ತರಲು ಹೋಗುವ ಗಂಡಸರು ಗುಡ್ಡದ ಸಮೀಪವಿರುವ ಹಳ್ಳಿಯಲ್ಲಿ ಹೋಗಿ ತಂಗುತ್ತಿದ್ದರಂತೆ. ಮಾರನೆಯ ದಿನ ನಸುಕಿಗೇ ಎದ್ದು ಬಿಸಿಲೇರುವುದರೊಳಗೆ ಗುಡ್ಡಹತ್ತಿ ಬಿದಿರು ಕಡಿದು ಹೊರೆಕಟ್ಟಿ 2-3 ಗಂಟೆಯ ಸಮಯಕ್ಕೆ ಗುಡ್ಡವನ್ನು ಬಿಟ್ಟರೆ ರಾತ್ರಿ ಎಂಟುಗಂಟೆಗೋ ಒಂಬತ್ತು ಗಂಟೆಗೋ ಮನೆ ಮುಟ್ಟುತ್ತಿದ್ದರಂತೆ. ಇವರಿಗೆ ಮನೆಯಿಂದ ತೆಗೆದುಕೊಂಡು ಹೋದ ರೊಟ್ಟಿಯೋ, ಬುತ್ತಿಯೋ ಆಧಾರ. ಗುಡ್ಡದಿಂದ ಬಿದಿರು ತರುವವರಿಗೆ ಎದುರಾಗಿ ಹೆಂಗಸರು ಅರ್ಧದಾರಿಗೆ ಊಟ ತೆಗೆದುಕೊಂಡು ಹೋಗುತ್ತಿದ್ದಂತೆ ಬರುವಾಗ ಅವರ ತಲೆಯ ಮೇಲೆಯೂ ಅರ್ಧ ಬಿದಿರನ್ನು ಹೊರಿಸುತ್ತಿದ್ದರಂತೆ. ಇಷ್ಟೆಲ್ಲ ಆಯಾಸಪಟ್ಟು ಬಿದಿರು ತಂದರೂ ಬೆಳಿಗ್ಗೆಯಾದರೆ ವಿಶ್ರಾಂತಿಯಿಲ್ಲದೆ ಕೆಲಸದಲ್ಲಿ ತೊಡಗುತ್ತಿದ್ದರಂತೆ.[12]

 


ವೃತ್ತಿನಿರತ ಕೊರಮರು


 

ಕುಕ್ಕೆ ಮಾರಲು ಹೊರಟ ಕೊರಮ ದಂಪತಿಗಳು

ಉಪ್ಪು ಮಾರುವ ಕೊರಮರು ಕೋಲಾರ ಜಿಲ್ಲೆಯಲ್ಲಿ ಕಂಡು ಬರುತ್ತಾರೆ. ಒಂದು ಕಾಲಕ್ಕೆ ಸಮುದ್ರ ತೀರದ ಉಪ್ಪು ಉತ್ಪಾದನಾ ಸ್ಥಳದಿಂದ ಎತ್ತು ಕತ್ತೆಗಳ ಮೇಲೆ ಉಪ್ಪನ್ನು ಸಾಗಿಸಿ ವ್ಯಾಪಾರ ಮಾಡುತ್ತಿದ್ದ ಬಗ್ಗೆ ತಿಳಿಯುತ್ತದೆ. ಈಗ ಉಪ್ಪನ್ನು ಸಮುದ್ರ ತೀರದಿಂದ ತರದೇ ಇದ್ದರೂ ಅಲ್ಲಿಯೇ ಕೊಂಡು ಮಾರುತ್ತಾರೆ. ಇವರನ್ನು ಕುರಿತು ಎಚ್‌.ವ್ಹಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಐಯ್ಯರ ಅವರು “But improved roads and means of transport have sadly encroached on their main lawful occupation, and have driven them more than ever to thieving, Where they have not settled down to agriculture. In some places howere as e.g., Avani, in the Mulbagal taluk, Kolar District they still adhere at weekly fairs, and sell it retail in the surrounding villages, thus making a scanty living.”[13]

ಕುಂಚಿ ಕೊರವರು ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ಕಂಡು ಬರುವುದಿಲ್ಲ. ಅಲೆಮಾರಿಗಳಾದ ಇವರು ಈ ಕಡೆ ಯಾವಾಗಲಾದರೊಮ್ಮೆ ನಜೆ ಹುಲ್ಲಿನ ಪೊರಕೆ, ನೆಲುವುಗಳನ್ನು ಮಾರಲು ಬರುತ್ತಾರೆ. ಇವರಲ್ಲಿ ಹೆಂಗಸರು ಕಣಿ ಹೇಳುತ್ತಾರೆ.

ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಾಗಿ ವಾಲಗದ ಅಥವಾ ಊರ ಕೊರಮರು ಕಾಣಸಿಗುತ್ತಾರೆ. ಇವರು ಊದುವ ವಾಲಗಕ್ಕೆ ಸೊನಾಯಿ ಎಂದೂ ಕರೆಯುತ್ತಾರೆ. ದೇವಸ್ಥಾನದ ಪೂಜಾ ಸಮಯದಲ್ಲಿ, ಮದುವೆ, ಮುಂಜಿಗಳಲ್ಲಿ ವಾದ್ಯ ಮಾಡುತ್ತಿದ್ದರು. ಇವರು ವ್ಯವಸಾಯವನ್ನೂ ಅವಲಂಬಿಸಿದ್ದಾರೆ. ಕುಕ್ಕೆ ಕೊರವರೂ ವಾದ್ಯ ನುಡಿಸುತ್ತಾರೆ.

ಹಾವು ಆಡಿಸುವ ವೃತ್ತಿಯನ್ನು ಅವಲಂಬಿಸಿದ ಕೊರಮರು ಈ ಭಾಗದಲ್ಲಿ ಕಂಡು ಬರುವುದಿಲ್ಲ. ಯಾವಾಗಲಾದರೂ ಈ ಜನ ಬಂದರೆ ಇವರನ್ನು ತಮ್ಮ ಜಾತಿಯೆಂದು ಈ ಕೊರಮರು ಯಾರೂ ಹೇಳುವುದಿಲ್ಲ. ಕೊರಮರಲ್ಲಿಯೇ ಅತ್ಯಂತ ಕೀಳು ಇವರು. ತಮಿಳು ನಾಡಿನಲ್ಲಿ ಹಾವಿನ ಕೊರಮರು ಇದ್ದಾರೆಯೇ ಹೊರತು ಇಲ್ಲಿ ನೆಲೆಯೂರಿಲ್ಲ. ಅತ್ಯಂತ ಕೊಳಕಾಗಿ ಕಾಣುತ್ತಾರೆ.

ಕೊರಚರೆನ್ನುವ ಗುಂಪು ಹಗ್ಗಗಳನ್ನು ತಯಾರಿಸುತ್ತದೆ. ಹಗ್ಗಕ್ಕೆ ಕಾತಾಳೆಪಟ್ಟಿ, ತೆಂಗಿನ ನಾರನ್ನು ಉಪಯೋಗಿಸುತ್ತಾರೆ. ರೈತರಿಗೆ ಬೇಕಾಗುವ ಎಲ್ಲಾ ರೀತಿಯ ಹಗ್ಗಗಳನ್ನೂ ಕಣ್ಣಿಗಳನ್ನು ತಯಾರಿಸಿ ಹಳ್ಳಿಗಳ ಮೇಲೆ ಮಾರುತ್ತಾರೆ. ಇವರಲ್ಲಿಯೂ ಕಣಿ ಹೇಳುವ, ಹಚ್ಚೆ ಹಾಕುವ ಹೆಂಗಸರು ಕಾಣಸಿಗುತ್ತಾರೆ. ತಿಪಟೂರು ತಾಲೂಕು ಬಿದರೆಗುಡಿ ಕಾಲೋನಿಯಲ್ಲಿ ಈ ಜನ ಸರಕಾರದಿಂದ ಜಮೀನು ಪಡೆದು ನೆಲೆಯಾಗಿದ್ದಾರೆ. ಒಂದು ಕಾಲಕ್ಕೆ ಕಳ್ಳತನಕ್ಕೆ ಕೊರಚರು ಹೆಸರಾಗಿದ್ದರು. ಕಡಿಮೆ ಬೆಲೆಗೆ ಎತ್ತುಗಳನ್ನು ಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡುವ ಎತ್ತಿನ ಕೊರಚ, ಎತ್ತಿನ ಕೊರಮರಿದ್ದರು. ಎತ್ತುಗಳನ್ನು ದೂರದ ಊರುಗಳಿಗೆ ಹೊಡೆದುಕೊಂಡು ಹೋಗಿ ಹೆಚ್ಚು ಲಾಭಕ್ಕೆ ಮಾರುತ್ತಿದ್ದರಂತೆ.

ಮಂಗಗಳನ್ನು ಹಿಡಿದು ಪಳಗಿಸಿ ಅವಕ್ಕೆ ಆಟ ಕಲಿಸಿ ಹಳ್ಳಿಗಳಲ್ಲಿ ಮನೆಮನೆಯ ಮುಂದೆ ಆಡಿಸುತ್ತಾರೆ. ಕೋತಿಯ ಆಟ ವಿನೋದಮಯವೂ, ರಂಜನೀಯವೂ ಆಗಿರುತ್ತದೆ. ಗಂಡಸರು ಕೋತಿ ಆಡಿಸಿದರೆ, ಹೆಂಗಸರು ನಜೆ ಹುಲ್ಲಿಂದ ಮಾಡಿದ ಹಗ್ಗ, ಬಾಯಿ ಕುಕ್ಕೆ, ನೆಲುವುಗಳನ್ನು ಮಾರುತ್ತಾರೆ. ಕೋತಿಗಳನ್ನು ಹಿಡಿದುಕೊಂಡು ಹೋಗಿ ಮನೆಮನೆಯ ಮುಂದೆ ಬೇಡುತ್ತಾರೆ. ಈ ಕೋತಿ ಕೊರಮರು ಕೂಡ ದಕ್ಷಿಣ ಕರ್ನಾಟಕದಲ್ಲಿ ನೆಲೆಯಾದಂತೆ ಕಂಡು ಬರುವುದಿಲ್ಲ.

ತೆರಿಗೆ ಕೊರಮರು :

ಇವರು ಹಿಂದೆ ಹಳ್ಳಿಗಳಲ್ಲಿ ಕಳ್ಳತನಗಳಾಗದಂತೆ ಊರು ಕೇರಿಗಳನ್ನು ರಾತ್ರಿಯಲ್ಲಿ ಕಾಯುತ್ತಿದ್ದರಂತೆ. ಈ ಕೆಲಸಕ್ಕೆ ತೆರಿಗೆ ರೂಪದಲ್ಲಿ ಪ್ರತಿಮನೆಯಿಂದಲೂ ಧಾನ್ಯವನ್ನು ಪಡೆಯುತ್ತಿದ್ದರಂತೆ. ಯಾರಾದರೂ ತೆರಿಗೆಯನ್ನು ಕೊಡಲು ನಿರಾಕರಿಸಿದರೆ ಅಂಥವರ ಮನೆಗಳಲ್ಲಿ ಇವರೇ ಕಳ್ಳತನ ಮಾಡುತ್ತಿದ್ದರಂತೆ. ಇವರು ಕಾಯುವ ಸಮಯದಲ್ಲಿ ಕಳ್ಳತನವಾದರೆ ಆ ಕಳ್ಳರನ್ನು ಇವರು ಹಿಡಿಯಬೇಕಾಗಿತ್ತು. ಇಲ್ಲದಿದ್ದರೆ ಕಳ್ಳತನವಾದ ವಸ್ತುಗಳ ಬೆಲೆಯನ್ನು ಕಳೆದುಕೊಂಡವರಿಗೆ ಕೊಡಬೇಕಾಗಿತ್ತಂತೆ. ಇಂಥ ವ್ಯವಸ್ಥೆ ಈಗ ಎಲ್ಲಿಯೂ ಕಂಡು ಬರುವುದಿಲ್ಲ.[14] ಆದರೆ ಹಿಂದೆ ತಿಪಟೂರು ತಾಲೂಕು ನವುಲೆ, ಕಾರೇಹಳ್ಳಿ, ಚನ್ನರಾಯಪಟ್ಟಣ ಮುಂತಾದ ಕಡೆ ತೆರಿಗೆ ಕೊರಮರು ಇದ್ದರೆಂದು ದೊಡ್ಡಮನೆ ಕೃಷ್ಣಯ್ಯ ಹೇಳುತ್ತಾರೆ.

ಈ ಬಗ್ಗೆ E. Thurston ಅವರು ಕೂಡ ದಾಖಲಿಸಿದ್ದಾರೆ. “In the South, the Koravas are frequently employed a theit ot keep others thieves off. They are paid in grain. The villagers are more than half afraid of them, and, if the remuneration stipulated upon is not prompity paid to the watchman, a house-breking will certainly occur in the village, If a crime happens to take place in a village where Korava has been appointed watchman, he frequenty manages to get back the stolen propery if the theft in the work of another korava, but only on condition that the police are not called into investigate the offende.”[15] ಇವರಲ್ಲಿ ಊರ ಕೊರಮರು ಊರುಗಳಲ್ಲಿ ನೆಲೆ ಕಂಡವರು. ಅಲ್ಲಿಯ ಆಚಾರ ವಿಚಾರಗಳನ್ನು ಕಟ್ಟು ಪಾಡುಗಳನ್ನು ಅನುಸರಿಸುತ್ತಾ ತಾವೂ ಸ್ಥಳೀಯರಲ್ಲಿ ಒಂದಾದವರು. ವಾದ್ಯ ನುಡಿಸುವುದು ಇವರ ಮುಖ್ಯ ಕಸುಬು. ಊರ ದೇವಾಲಯಗಳಲ್ಲಿ, ಊರಿನ ಶುಭ ಸಂದರ್ಭಗಳಾದ ಹಬ್ಬ, ಜಾತ್ರೆಗಳಲ್ಲಿ ಮತ್ತು ಮದುವೆ, ಮುಂಜಿಗಳಲ್ಲಿಯೂ ವಾದ್ಯ ನುಡಿಸುತ್ತಾರೆ. ಇವರಿಗೆ ಕೆಲವು ಊರುಗಳಲ್ಲಿ ದೇವಸ್ಥಾನದ ಭೂಮಿಯನ್ನು ಜೀವನಕ್ಕೆ ಬಿಟ್ಟು ಕೊಟ್ಟಿರುವುದುಂಟು. ಚಿತ್ರದುರ್ಗದ ಜಿಲ್ಲೆ ಹೊರಕೇರೆ ದೇವರ ಪುರದ ಶ್ರೀ ರಂಗನಾಥ ಸ್ವಾಮಿ ದೇವಾಲಯದಲ್ಲಿ ವಾದ್ಯ ನುಡಿಸುವ ಕೊರಮರಿಗೆ ಈಗಲೂ ಜಮೀನು ಬಿಟ್ಟುಕೊಟ್ಟಿದ್ದಾರೆ. ಕೆಲವು ಊರುಗಳಲ್ಲಿ ಆಯಗಾರರಿಗೆ ಕೊಡುವಂತೆ ಇವರಿಗೂ ಊರಿನವರು ಧನ-ಧಾನ್ಯಗಳನ್ನು ಕೊಡಿಸಿ ಕೊಡುತ್ತಿದ್ದುದೂ ಇತ್ತು. ಇವರು ವ್ಯವಸಾಯವನ್ನೂ ಅವಲಂಬಿಸಿದ್ದರು. ವ್ಯವಸ್ಥಿತ ಬದುಕಿಗೆ ಅಂಟಿಕೊಂಡ ಇವರು ಸಂಚಾರಿ ಕೊರಮರನ್ನು ತಮಗಿಂತ ಕೀಳು ಎಂದು ತಿಳಿಯುತ್ತಾರೆ.

ಕೊರಮ ಬುಡಕಟ್ಟು ನಾಡಿನುದ್ದಗಲಕ್ಕೆ ಚದುರಿ ಹೋಗಿದೆ. ದಕ್ಷಿಣ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ಜನ ತಮ್ಮ ಮೂಲ ಉದ್ಯೋಗಗಳೊಂದಿಗೆ ಮತ್ತು ಆಧುನಿಕತೆಗನುಗುಣವಾಗಿ ಅನೇಕ ರೀತಿಯ ವೃತ್ತಿಗಳನ್ನವಲಂಬಿಸಿ ಜೀವನ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಬಿದರೇಗುಡಿ, ಭೈರಾಪುರ, ಆರಾಘಟ್ಟ, ಮಾರನಗೆರೆ ಇನ್ನೂ ಅನೇಕ ಹಳ್ಳಿಗಳಲ್ಲಿಯೂ, ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ತಾಲೂಕಿನ ಎರೆಹಳ್ಳಿ, ದಿಬ್ಬೂರು, ದಮ್ಮೇನಹಳ್ಳಿ, ಬೊಮ್ಮನಹಳ್ಳಿ, ಬಿಟ್ಟೀಹಳ್ಳಿ, ಹಾಸನದ ಹತ್ತಿರದ ಆಲ್ದಹಳ್ಳಿ ಮುಂತಾದ ಕಡೆಯೂ, ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕಂಚೀಪುರ, ಶ್ರೀರಾಂಪುರ, ಮತ್ತೋಡು, ಕಾರೇಹಳ್ಳಿ ಮುಂತಾದ ಕಡೆಯೂ, ಚನ್ನರಾಯಪಟ್ಟಣ ತಾಲೂಕಿನ ಪಡುವನಹಳ್ಳಿ, ಕಲಸಿಂದ, ಶೆಟ್ಟಿಹಳ್ಳಿ, ಶ್ರವಣಾರು ಮುಂತಾದ ಕಡೆಯೂ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಕೊಮ್ಮನಹಳ್ಳಿ, ಹೊಳೆನರಸೀಪುರದಲ್ಲಿ, ಕೋಡ್ರಾಮದ ಹಳ್ಳಿಯಲ್ಲಿ ಅಲ್ಲದೆ ಸಾಮಾನ್ಯವಾಗಿ ಎಲ್ಲ ಜಿಲ್ಲೆಗಳಲ್ಲಿಯೂ ಕಂಡು ಬರುತ್ತಾರೆ, ಕೆಲವು ಕಡೆ ಬುಟ್ಟಿ ಹಣೆಯುವುದು ಕಂಡು ಬಂದರೆ, ಕೆಲವು ಕಡೆ ವಾದ್ಯ ನುಡಿಸುತ್ತಾರೆ. ವ್ಯವಸಾಯ ಮಾಡುತ್ತಾರೆ. ತಮ್ಮ ಮೂಲ ಉದ್ಯೋಗವನ್ನು ಬಿಟ್ಟು ಬೇರೆ ಬೇರೆ ಉದ್ಯೋಗಗಳನ್ನು ಅವಲಂಬಿಸಿರುವುದು ತೋರುತ್ತದೆ. ಇವುಗಳಲ್ಲಿ ದೇವರ ಫೋಟೋ, ವ್ಯವಸಾಯೋಪಕರಣ, ಪಾತ್ರೆಗಳನ್ನು ಮಾರುವುದು ಕೆಲವರಿಗೆ ಉದ್ಯೋಗವಾಗಿದೆ.

ಬಿದರೇಗುಡಿ, ಸೋರಲಮಾವು, ಬಿಟ್ಟೀಹಳ್ಳಿ ಮುಂತಾದ ಕಡೆ ಇರುವ ಕೊರಮರು ಸುಮಾರು 25-30 ವರ್ಷಗಳಿಂದಲೂ ತೆಂಗಿನಗಿಡ, ಮಾವಿನ ಗಿಡ, ಇನ್ನೂ ಅನೇಕ ರೀತಿಯ ಗಿಡಗಳನ್ನು ಅವು ದೊರೆಯುವ ಕಡೆಯಿಂದ ತಂದು ಮಲೆನಾಡುಗಳಲ್ಲಿ ಮಾರುವುದು ರೂಢಿಯಾಗಿದೆ. ತಮಿಳು ನಾಡಿನಿಂದಲೂ ಗಿಡಗಳನ್ನು ತರುತ್ತಾರೆ. ಕಂಬಳಿ, ಜಮಖಾನೆ, ಬೆಡ್‌ಶೀಟಗಳನ್ನು ಮಾರುತ್ತಾರೆ. ಇನ್ನೂ ಕೆಲವರು ವಾದ್ಯನುಡಿಸುವ, ವ್ಯವಸಾಯ ಮಾಡುವ ಕೆಲಸ ಮಾಡುತ್ತಾರೆ.

“ಈ ಕೊರಮ ಜನಾಂಗದವರು ಶಿವಮೊಗ್ಗಾ ಜಿಲ್ಲೆಯ ಸೊರಬ, ಶಿಕಾರಿಪುರ, ಹೊನ್ನಾಳಿ, ಚನ್ನಗಿರಿ, ಭದ್ರಾವತಿ, ಸಾಗರ ಮತ್ತು ಶಿವಮೊಗ್ಗಾ ತಾಲೂಕುಗಳಲ್ಲಿ ಕಂಡು ಬರುತ್ತಾರೆ. ವಿಚಿತ್ರವೆಂದರೆ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕುಗಳಲ್ಲಿ ಒಂದು ಕುಟುಂಬವೂ ಇಲ್ಲ.”[16]

“ಈ ಜನಾಂಗದ ಪೂರ್ವಿಕರ ಮುಖ್ಯ ಕಸುಬು ವಾದ್ಯ ನುಡಿಸುವುದು. ದೇವಸ್ಥಾನ ಮತ್ತು ಮದುವೆ ಮುಂಜಿಗಳಲ್ಲಿ ಮತ್ತು ಇತರ ಯಾವುದೇ ಮಂಗಳ ಕಾರ್ಯಗಳಲ್ಲಿ ಈ ಜನಾಂಗದವರೇ ಮಂಗಳವಾದ್ಯವಾಗಬೇಕು.”[17]

“ಈ ಜನಾಂಗಕ್ಕೋಸ್ಕರ ಪ್ರತಿ ದೇವಸ್ಥಾನದಲ್ಲಿ ಉಂಬಳಿ ಜಮೀನುಗಳನ್ನು ಕೊಟ್ಟಿರುತ್ತಾರೆ. ಈಗಲೂ ಈ ಜಮೀನುಗಳಿವೆ. ಇವುಗಳ ಉತ್ಪನ್ನಗಳಿಂದ ಇವರು ಜೀವನೋಪಾಯ ಮಾಡುತ್ತಿದ್ದಾರೆ. ಇವರ ಇತರೇ ಕಸುಬು ಬೇಸಾಯ, ಬುಟ್ಟಿ ತಯಾರು ಮಾಡುವುದು, ಬಿದಿರು, ನೆಲವು ಬಳ್ಳಿ, ಹೂಬಳ್ಳಿಗಳಿಂದ ವೈವಿಧ್ಯಮಯವಾದ ಬುಟ್ಟಿ, ಮರ, ಬೀಸಣಿಕೆ, ತೊಟ್ಟಿಲುಗಳನ್ನು ಮಾಡುವುದು. ಈಗಲೂ ಕೆಲ ಕುಟುಂಬಗಳು ಈ ಕೆಲಸಗಳನ್ನು ಮಾಡುತ್ತಿವೆ.”[18]

ಕೊರಚರ ಬಗ್ಗೆ ಎನ್.ಜಗನ್ನಾಥ ಪ್ರಕಾಶ್ ಅವರು ಪರಿಚಯಿಸುತ್ತಾ “ಕೋಲಾರ ಜಿಲ್ಲೆಯ ಬೇತಮಂಗಲದ ಆಸುಪಾಸಿನ ಹಲವು ಹಳ್ಳಿಗಳ ಕೊರಚರ ಕುಟುಂಬಗಳಿಗೆ ಬಾತುಕೋಳಿ ಸಾಕುವುದೇ ಮುಖ್ಯ ವೃತ್ತಿ.

ಹಳ್ಳಿಯಲ್ಲಿ ಅಲ್ಪಸ್ವಲ್ಪ ಭೂಮಿ ಇದ್ದರೂ ಮಳೆಯನ್ನು ನಂಬಲಾಗದೆ ಬಾತು ಸಾಕುವ ಹವ್ಯಾಸಕ್ಕಿಳಿದಿದ್ದಾರೆ. ಈ ಕೊರಚರು ಸುಮಾರು 50-60 ವರ್ಷಗಳ ಹಿಂದೆ ಈ ವೃತ್ತಿಗಾರಂಭಿಸಿದರು. ಬೂಡದಿಮಿಟ್ಟ ಹಳ್ಳಿಯ ಆಜುಬಾಜಿನ ಹಳ್ಳಿಯ ಕೊರಚರಿಗೆ ಇದೇ ಮುಖ್ಯ ವೃತ್ತಿ”[19] ಕುಲ ಕಸುಬಿನಿಂದ ಹೊಟ್ಟೆ ತುಂಬದಾದಾಗ ಅಥವಾ ಕುಲ ಕಸುಬಿಗೆ ಬೇಕಾದ ಕಚ್ಚಾ ವಸ್ತುವಿನ ಕೊರತೆಯುಂಟಾದಾಗ ತಮ್ಮ ವೃತ್ತಿಯನ್ನೇ ಬದಲಾಯಿಸಿಕೊಂಡಿದ್ದಾರೆ. ಉಪ್ಪು ಮಾರುವವರು ಅಲ್ಲಲ್ಲಿ ಕಂಡು ಬಂದರೂ ನಾಗರಿಕ ಪ್ರಜ್ಞೆ ಬೆಳೆಸಿಕೊಂಡ ಇವರು ತಮ್ಮ ವೃತ್ತಿಯಿಂದಾಗಿ ಕೆಳಸ್ತರದಲ್ಲಿಯೇ ತಮ್ಮ ಸ್ಥಾನಮಾನ ಕಂಡುಕೊಳ್ಳಬೇಕಾಯಿತು.

ಈಗಲೂ ಇವರಲ್ಲಿ ಆರ್ಥಿಕ ಸ್ಥಿತಿ ಬದಲಾಗಿಲ್ಲ. “ಕೊರಚರಲ್ಲಿ ಶಾಲೆಯ ಮುಖ ನೋಡಿದವರು ಇಲ್ಲವೇ ಇಲ್ಲ ಎನ್ನಬೇಕು. ನಿತ್ಯದ ಗಂಜಿಗಾಗಿ ಅಲೆಮಾರಿಗಳಾದ ಇವರು ವಿದ್ಯೆ ನಮಗೆ ಅಗತ್ಯವಿಲ್ಲವೆಂದು ಭಾವಿಸುತ್ತಾರೆ.”[20] ಇಷ್ಟೆಲ್ಲ ವೃತ್ತಿಗಳನ್ನನುಸರಿಸಿಯೂ ಬಡತನದ ಒಡಲಲ್ಲಿ ಬಾಳುತ್ತಿರುವ ಕೊರಮರು ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗಿಲ್ಲ.

ಹೆಂಡ ಮಾಂಸಗಳೆಂದರೆ ಇವರಿಗೆ ಪ್ರಾಣ. ಹೆಂಡದಂಗಡಿಗೆ ಹೋಗುವಾಗ ದಾರಿಯಲ್ಲಿ ಹಕ್ಕಿ ಪಕ್ಷಿಗಳನ್ನೂ, ಅಳಿಲು ಮುಂತಾದವನ್ನೋ ಹಿಡಿದು ನಂಚಿಗೆ ಮಾಡಿಕೊಂಡು ಹೆಂಡದ ಪ್ಯಾಟಿಗೆ ಬಂದು ಕಂಠಪೂರ್ತಿ ಕುಡಿಯುತ್ತಿದ್ದರು. ಮತ್ತೆ ಬುರುಡೆ ತುಂಬಿಸಿಕೊಂಡು ತೂಗಾಡುತ್ತಾ ಹೊರಡುವ ವೇಳೆಗೆ ಕತ್ತಲಾಗುತ್ತಿತ್ತು. ದಾರಿಯುದ್ದಕ್ಕೂ ಜೊತೆಯವರೊಂದಿಗೆ ಜಗಳವಾಡುತ್ತಲೋ, ಹಾಡು ಹೇಳುತ್ತಲೋ ಗುಡಿಸಲಿಗೆ ಬಂದರೆಂದರೆ ಎಷ್ಟೋ ಹೆಂಗಸರ ಕೈಕಾಲು ನಡುಗುತ್ತಿದ್ದವು.

ಅಡಿಗೆ ಮಾಡಿಕೊಂಡು ದಾರಿ ಕಾಯುತ್ತ ಕುಳಿತ ಹೆಂಡತಿಗೆ ಬುರುಡೆ ಬಗ್ಗಿಸಿ ಕುಡಿಯಲು ಕೊಟ್ಟು ಮತ್ತೆ ತಾನೂ ಕುಡಿದು ಇದ್ದುದನ್ನು ಉಂಡು, ಇಹವನ್ನು ಮರೆತು ಕತ್ತಲೊಳಗೆ ಒಂದಾದರೆ, ಇನ್ನು ಕೆಲವು ಗಂಡಸರಿಗಂತೂ ಹೆಂಡತಿಯರಿಗೆ ಬಡಿಯದಿದ್ದರೆ ಸಮಾಧಾನವಾಗುತ್ತಿರಲಿಲ್ಲ. ಇಲ್ಲಸಲ್ಲದ ಕಾರಣಗಳನ್ನು ಕೆದಕಿ, ಬೆಳಗಿನಿಂದ ಒಂದೇ ಸಮನೆ ದುಡಿದು ನೆಲ ಸಿಕ್ಕರೆ ಸಾಕಪ್ಪ ಎನ್ನುವಂತಿದ್ದ ಅವಳಿಗೆ ಹೊಡೆದು, ಬೈದು ರದ್ಧಾಂತ ಮಾಡಿ ತಮ್ಮ ಪೌರುಷ ತೋರಿಸಿಕೊಳ್ಳುತ್ತಿದ್ದರು. ಇವರ ನಾಲ್ಕಾರು ಮನೆಗಳಿದ್ದಲ್ಲಿ ಗಲಾಟೆ ತಪ್ಪಿದ್ದಲ್ಲ. ಅದಕ್ಕಾಗಿಯೇ “ಕೊರಮ ಕೂಡಿ ಕೆಟ್ಟ, ದೊಂಬ ಅಗಲಿ ಕೆಟ್ಟ” ಎಂಬ ಗಾದೆಯೂ ಬಂದಿದೆ. ಊರ ಹೊರಗೆ ಗುಡಿಸಲುಗಳನ್ನು ಹಾಕಿಕೊಂಡು ಊರವರು ಬಡಿದಾರೆಂಬ ಅಂಜಿಕೆಯಿಂದ ಊರ ಹೊರಗೆ ಉಳಿಯುತ್ತಿದ್ದರು. ಸಹಜವಾದ ನಿತ್ಯದ ವಿಷಯಗಳ ಬಗೆಗೆ ಮಾತನಾಡಿದರೂ, ಕೇಳುವವರಿಗೆ ಇದು ಜಗಳದ ಭಾಷೆಯೇ ಎಂಬಂತೆ ತೋರುತ್ತಿತ್ತು. ಅತಿ ಜೋರಾಗಿ ಮಾತನಾಡುವುದು ಈ ಬುಡಕಟ್ಟಿನ ಸ್ವಭಾವವೆಂಬಂತೆ ತೋರುತ್ತದೆ. ಕಾಡಿನ ಪ್ರದೇಶದಲ್ಲಿ ಗುಂಪು ಗುಂಪುಗಳಾಗಿ ದೂರ ದೂರ ವಾಸಿಸುತ್ತಿದ್ದ ಇವರು ಪರಸ್ಪರ ಸಂಪರ್ಕ ಪಡೆಯಲು, ಕಾಡು ಮೃಗಗಳಿಂದ ರಕ್ಷಣೆ ಮಾಡಿಕೊಳ್ಳಲು ಇಂಥ ಎತ್ತರ ದನಿಯನ್ನು ರೂಢಿಸಿಕೊಂಡಿರುವಂತೆ ತೊರುತ್ತದೆ. ಕಾಡಿನ ಅಂಚಿನಲ್ಲಿ, ಕುಡಿದ ಅಮಲಿನಲ್ಲಿ, ಬೆಳದಿಂಗಳ ರಾತ್ರಿಯಲ್ಲಿ, ಉರಿಯುವ ಬೆಂಕಿಯ ಮುಂದೆ ಕೊರಮ ತನ್ನ ಬದುಕನ್ನು ಗಟ್ಟಿ ದನಿಯಲ್ಲಿ ತೋಡಿಕೊಂಡಿದ್ದೇ ಹಾಡಾಗಿ ಹರಿದಿರಬೇಕು. ಇಂಥ ಹಾಡನ್ನು ಹಾಡಿನ ದೇವತೆಗಳೇ ಆಲಿಸುತ್ತಿದ್ದಿರಬೇಕು. ಕೊರಮ ಗಂಡಸರಿಗೆ ಕುಡಿಯಲು ಕಾಸಿಲ್ಲದೇ ಹೋದಾಗ ಹೆಂಗಸರನ್ನು ಕೇಳುತ್ತಿದ್ದರು. ಹೆಂಗಸರು ಹಳ್ಳಿಗಳಿಗೆ ಹೋದಾಗ ಹಚ್ಚೆ ಹುಯ್ದೋ, ಸೀಬು ಹಾಕಿಯೋ, ಕಣಿ ಹೇಳಿಯೋ ಹಗ್ಗ-ನೆಲುವುಗಳನ್ನು ಮಾರಿಯೋ ನಾಲ್ಕು ಕಾಸು ಸಂಪಾದಿಸಿ ಕಷ್ಟ ಸುಖಕ್ಕೆ ಬೇಕೆಂದು ಇಟ್ಟುಕೊಂಡಿದ್ದ ಪುಡಿಗಾಸನ್ನೂ ಕೊಡಬೇಕಾಗುತ್ತಿತ್ತು. ಕೆಲವು ಹೆಂಗಸರು ಗಲಾಟೆ ಮಾಡಿದರೂ ಮನೆಯ ಮಡಿಕೆ-ಕುಡಿಕೆ, ಗಂಟು-ಮೂಟೆಗಳನ್ನೆಲ್ಲ ತಡಕಿ ಎಲ್ಲಿಯೂ ಸಿಕ್ಕದಿದ್ದರೆ ಅವರ ಸೊಂಟದ ಸೀರೆಯ ಗಂಟನ್ನು ಬಿಚ್ಚಿಸುತ್ತಿದ್ದರು. ಎಷ್ಟೋ ಸಾರಿ ದುಡ್ಡು ಕೊಡದೆ ಹೋದರೆ ಅವರಿಗೆ ಪೆಟ್ಟೂ ಬೀಳುತ್ತಿತ್ತು.

ಮಕ್ಕಳ ಲಾಲನೆ-ಪಾಲನೆ, ಹಿರಿಯರನ್ನು ನೋಡಿಕೊಳ್ಳುವುದರ ಜೊತೆಗೆ ಬುಟ್ಟಿ ಹಗ್ಗಗಳನ್ನೂ ಮಾಡುತ್ತಿದ್ದರು. ಮತ್ತು ಕಣಿ ಹೇಳಲೂ, ಹಚ್ಚೆ ಹಾಕಲೂ ಹಳ್ಳಿಗಳಿಗೆ ಹೋಗಬೇಕಾಗುತ್ತಿತ್ತು. ಉಳಿದ ದಿನಗಳಂದು ಗಂಡಸರಂತೆ ತಾವೂ ಬುಟ್ಟಿ, ಹಗ್ಗ, ಚಾಪೆ ಮುಂತಾದವುಗಳನ್ನು ಮಾಡುತ್ತಿದ್ದರು.

ಬೇಟೆ :

ಬೇಟೆ ಒಂದು ಕಾಲಕ್ಕೆ ಕೊರಮ ಬುಡಕಟ್ಟಿನ ಅವಿಭಾಜ್ಯ ಅಂಗವಾಗಿತ್ತು. ಕಾಡೇ ಇವರ ಬೀಡಾದ್ದರಿಂದ ಅದರ ಜೊತೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ಅಲ್ಲಿಯ ಪ್ರಾಣಿ ಪಕ್ಷಿಗಳನ್ನು ಬೇಟೆಯಾಡಿ ತಿನ್ನುವುದು ಸಾಮಾನ್ಯವಾದ ಸಂಗತಿಯಾದುದರಿಂದ ಅವುಗಳನ್ನು ಬೇಟೆಯಾಡುವ ತಂತ್ರಗಳನ್ನು ತಲೆಮಾರಿನಿಂದ ತಲೆಮಾರಿಗೆ ಬೆಳೆಸಿಕೊಂಡು ಬಂದರು. ಪ್ರಾಣಿಗಳನ್ನು ಹಿಡಿಯಲು ಬಳಸುವ ಉಪಾಯಗಳು ಒಂದು ತೆರೆನಾದರೆ, ಹಾರಾಡುವ ಪಕ್ಷಿಗಳನ್ನು ಹಿಡಿಯುವುದರ ಉಪಾಯವೇ ಬೇರೆ. ಶಿಕಾರಿ ಅಥವಾ ಬೇಟೆ ಇವರ ಹವ್ಯಾಸ ಎನ್ನುವುದಕ್ಕಿಂತ ಜೀವನದ ಒಂದು ಭಾಗ ಎಂದರೆ ಸರಿಯಾಗುತ್ತದೆ.

ಇವರನ್ನು ಕುರಿತು ಎಚ್‌.ವ್ಹಿ. ನಂಜುಂಡಯ್ಯ ಮತ್ತು ಎಲ್‌.ಕೆ. ಅನಂತಕೃಷ್ಣ ಐಯ್ಯರ್ ಅವರು “Korachas also known as koravas and koramas are tribe of hunters”[21] ಎಂದರೆ ಇದೇ ಅಂಶವನ್ನು ಕುರಿತು R.E. Enthrovan ಅವರು “They are wandering tribe of hunters”[22] ಎಂದಿದ್ದಾರೆ. ಇದೇ ಅಂಶವನ್ನು ಶ್ರೀಮತಿ ವಿಮಲ ದೊರೈಸ್ವಾಮಿ ಮತ್ತು ಎಂ. ದೊರೈಸ್ವಾಮಿ ಅವರೂ ಹೇಳಿದ್ದಾರೆ.[23]

ಇವರು ಬೇಟೆಯಾಡಿದ ಪ್ರಾಣಿ ಪಕ್ಷಿಗಳನ್ನು ಮಾರಿ ಜೀವನ ಸಾಗಿಸುವವರಲ್ಲ. ಪ್ರತಿದಿನವೂ ಬೇಟೆಗೆ ಹೋಗದಿದ್ದರೂ ಮೂರಕ್ಕೆ ನಾಲ್ಕಕ್ಕೆ ಬೇಟೆಗೆ ಹೋಗುವುದು ಸಾಮಾನ್ಯವಾಗಿತ್ತು. ಇವರಲ್ಲಿ ಹಬ್ಬ ಹರಿದಿನಗಳನ್ನು ಬಿಟ್ಟರೆ ಉಳಿದಂತೆ ಗುಂಪು ಗುಂಪಾಗಿ ಬೇಟೆಗೆ ಹೋಗುತ್ತಿದ್ದುದು ಕಡಿಮೆ. ಕೊರಮರ ಬೇಟೆ ಸಣ್ಣ ಸಣ್ಣ ಪ್ರಾಣಿಗಳಿಗೂ ಪಕ್ಷಿಗಳಿಗೂ ಸೀಮಿತವಾಗಿರುವುದರಿಂದ ಒಬ್ಬೊಬ್ಬರೇ ಅಥವಾ ಇಬ್ಬಿಬ್ಬರು ಜೊತೆಯಾಗಿ ಹೋಗಿ ಬಲೆ, ಅಂಟು, ಪಾಜಿಗಳನ್ನು ಉಪಯೋಗಿಸಿ ಬೇಟೆಯಾಡುತ್ತಿದ್ದುದೇ ಹೆಚ್ಚು. ಇವರು ಹಗಲಿನಲ್ಲಿ ಬೇಟೆಯಾಡಿದಂತೆ ರಾತ್ರಿಯಲ್ಲಿಯೂ ಮೊಲ ಮತ್ತು ಬಾವಲಿಯಂಥವುಗಳನ್ನು ಹಿಡಿಯುತ್ತಿದ್ದರು. ಬಿಲಕ್ಕೆ ಸೇರಿದ ಉಡ, ಬೆಳ್ಳಲಿ ಮುಂತಾದವುಗಳನ್ನು ಹೊಗೆ ಹಾಕಿ ಬೇಟೆಯಾಡುತ್ತಿದ್ದರಂತೆ. ಯುಗಾದಿ ಹಬ್ಬದ ವಸ್ತ್ರಡಕಿನ ದಿನ ಒಟ್ಟಾಗಿ ಹೋಗಿ ಬೇಟೆಯಾಡುತ್ತಿದ್ದರಂತೆ. ಅಂದು ಮನೆಯಲ್ಲಿ “ಹೊಲಸು” ಮಾಡದಿದ್ದರೆ ಬರುವ ವರ್ಷದವರೆಗು ಬೇಟೆಯಾಗುವುದು ಕಡಿಮೆ ಎಂಬ ನಂಬಿಕೆಯೂ ಇತ್ತಂತೆ.

ಇವರು ಬೇಟೆಯಾಡಿ ತಿನ್ನುತ್ತಿದ್ದ ಪ್ರಾಣಿ ಪಕ್ಷಿಗಳೆಂದರೆ 1) ಮೊಲ, 2) ಜಿಂಕೆ, 3) ಮುಳ್ಳುಹಂದಿ, 4) ಕಾಡುಹಂದಿ, 5) ಚಿಪ್ಪಂದಿ, 6) ಅಕ್ಕಿನರಿ, 7) ಕಾಡುಬೆಕ್ಕು, 8) ಕೆಂದಳಿಲು, 9) ಹಾರುಬೆಕ್ಕು, 10) ಕಡವೆ, 11) ಮುಂಗಸಿ, 12) ಉಡ, 13) ಅಳಿಲು, 14) ಬೆಳ್ಳಿಲಿ, 15) ಕಾಡುಕುರಿ ಮುಂತಾದ ಪ್ರಾಣಿಗಳನ್ನು, 16) ಸರ್ಲೆಹಕ್ಕಿ, 17) ಬಾತುಕೋಳಿ, 18) ನೀರ‍್ಕೋಳಿ, 19) ಕುಲ್ಡುಗೊಕ್ಕರೆ, (ಇದನ್ನು ತಮ್ಮ ಭಾಷೆಯಲ್ಲಿ ಮೆಡಯ ಎನ್ನುತ್ತಾರೆ.) 20) ಬೆಳ್ಳಕ್ಕಿ(ಇದನ್ನು ಒಂಗಕ್ಕು ಎನ್ನುತ್ತಾರೆ), 21) ನವಿಲು, 22) ಗೌಜಿಗನಹಕ್ಕಿ (ಇದನ್ನು ಕೆರವಾದಿ ಎನ್ನುತ್ತಾರೆ), 23) ಕಾಡುಕೋಳಿ, 24) ಕಲ್ಗವುಜ, 25) ಪಾರಿವಾಳ, 26) ಕುಕ್ಕಲಿನ ಹಕ್ಕಿ, 27) ಲಗಡು, 28) ಅಣ್ಣಪ್ಪಯ್ಯನ ಹಕ್ಕಿ (ಇದನ್ನು ತೀತಿ ತಿಮ್ಮ ಎನ್ನುತ್ತಾರೆ), 29) ಗಿಳಿ, 30) ಗೂಬೆ, 31) ಗುಡುಮುಗಾಡಿ ಹಕ್ಕಿ, 32) ಪುರಲೆ ಹಕ್ಕಿ, 33) ಲ್ಯಾಮಿಗೆ ಹಕ್ಕಿ, 34) ಕಬ್ಬಕ್ಕಿ, 35) ಕೋಗಿಲೆ, 36) ಬೆಳವನ ಹಕ್ಕಿ, 37) ಗಿಡಗ, 38) ಉಣ್ಣಿಗೊರವ, 39) ಪೂಡಿರಿ ಹಕ್ಕಿ, 40) ಸಂಬಾರ ಕಾಗೆ, 41) ಕೆಂಗಲ್ ಬಾದ, 42) ಮರಕುಟಿಗ, 43) ಬಾವುಲಿ, 44) ಕಾರೆಸಿಳ್ಳ ಇವೇ ಅಲ್ಲದೆ ಇನ್ನೂ ಅನೇಕ ರೀತಿಯ ಪಕ್ಷಿಗಳನ್ನು, ಮೀನು, ಮುಟಕಾಟಿ ಮುಂತಾದ ಜಲಚರಗಳನ್ನು ಬೇಟೆಯಾಡುತ್ತಿದ್ದರು.

ಹಿಂದೆ ಜಿಂಕೆಯಥ ಪ್ರಾಣಿಗಳನ್ನು ಉಳ್ಳ (ಉರುಳು)ದಿಂದಲೇ ಕೆಡವುತ್ತಿದ್ದಂತೆ. ಬಲೆಗಳನ್ನು ಉಪಯೋಗಿಸಿ ನಾಯಿಗಳನ್ನು ಕರೆದುಕೊಂಡು ಹೋಗಿ ಹಂದಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬಗ್ಗೆ ಹೇಳುತ್ತಾರೆ. ಇವರು ಆಕಾಶದಲ್ಲಿ ಹಾರುವ ಹಕ್ಕಿಗಳನ್ನು, ನೆಲದ ಮೇಲಿನ ಪ್ರಾಣಿಯನ್ನು ಹಿಡಿಯಲು ಅನೇಕ ರೀತಿಯ ಸಾಧನಗಳನ್ನು ಉಪಯೋಗಿಸುತ್ತಿದ್ದರು.[1]       Rice’s Mysore, Vol, I,  P-312, 350 and Vol, III  P-214, Quoted: R.E. Enthovan, The Tribes and castes of Bombay Vol. II,               P-267

[2]        Ibid.,

[3]        Ibid.,

[4]        H.K. Rakshit Language, culture and Race in South India  P-223.

[5]        Abe J.A. Dubois / Hindu Manners Customs and Ceremonies  P-66, 67 / and Henry K. Beau Champ.

[6]        Michael Kenedy, Criminal Class in the Bombay Presidency  P-63.

[7]      E. Thurston Castes and Tribes of Southern India Vol, III – K  P-54.

[8]        ಕನ್ನಡ ಜಾನಪದ ವಿಶ್ವಕೋಶ, ಸಂಪುಟ – 1, ಪು-531.

[9]        H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-583.

[10]       Pupa Rao Naidu Quoted : E. Thurston, Castes and Tribes in Southern India, Vol. III – I,  P-460.

[11]        Souvenir Akila Karnataka Koramara Sangha, July 1983  P-30.

[12]      ಮಾಹಿತಿ ಕೊಟ್ಟವರು : ಅಂಕೇನಹಳ್ಳಿ ಪಾಪಯ್ಯ, ದೊಡ್ಡಮನೆ ತಿಮ್ಮಯ್ಯ, ಛೇರ‍್ಮನ್, ಜವರಪ್ಪ, ಬಿದರೇಗುಡಿ, ತಿಪಟೂರು ತಾಲೂಕು.

[13]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-611.

[14]      ಮಾಹಿತಿ ಕೊಟ್ಟವರು : ಅಂಕೇನಹಳ್ಳಿ ಪಾಪಯ್ಯ, ದೊಡ್ಡಮನೆ ತಿಮ್ಮಯ್ಯ, ಛೇರ‍್ಮನ್, ಜವರಪ್ಪ, ಬಿದರೇಗುಡಿ, ತಿಪಟೂರು ತಾಲೂಕು.

[15]       E. Thurston Castes and Tribes of Southern India Vol, III – K  P-477.

[16]      Souvenir – Akila Karnataka Koramara Sangha, Banglore. July 1983  P-8.

[17]       Ibid.,

[18]      Ibid.,

[19]      ತರಂಗ 17-4-1988, ಪು-38-39.

[20]      – ಅದೇ –

[21]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-583.

[22]      R.E. Enthovan The Tribes and castes of Bombay Vol. II  P-266.

[23]      Souvenir – Akila Karnataka Koramara Sangha, Banglore. July 1983  P-30.