ಹಚ್ಚೆಯ ಕಪ್ಪು ಅಥವಾ ಬಣ್ಣ :

ಹಚ್ಚೆಯ ಬಣ್ಣದ ಬಗೆಗೆ ಅನೇಕರು ಅನೇಕ ರೀತಿಯ ವಿವರಗಳನ್ನು ದಾಖಲಿಸಿದ್ದಾರೆ. ಅವುಗಳಲ್ಲಿ ಶ್ರೀ ಎಚ್.ವಿ.ನಂಜುಂಡಯ್ಯ ಮತ್ತು ಶ್ರೀ ಅನಂತಕೃಷ್ಣ ಐಯ್ಯರ್ ಅವರು ೧೯೦೧ರಲ್ಲಿನ ಮೈಸೂರು ಸೆನ್ಸಸ್ ರಿಪೋರ್ಟ್‌ನಲ್ಲಿನ ವಿವರ ದಾಖಲಿಸಿದ್ದಾರೆ. ಅದೆಂದರೆ ” The tattooes generally use pigments of black and green colours. They prepare these pigments by mixing with the juice of certain plants or herbs fine charcoal powder obtained by burning a coconut shell and powdering it finally, ir lamp-block or soot, and adding to the mixture, before it is used, either breast milk or water both”

[1] ಎಂದು ವಿವರಿಸಿದ್ದಾರೆ.

ಡಾ|| ಎಚ್‌.ಎಂ.ಮಹೇಶ್ವರಯ್ಯ ಅವರು ಬಣ್ಣ ತಯಾರಿಕೆಯ ೧೪ ವಿಧಾನಗಳನ್ನು ಹೇಳಿದ್ದಾರೆ. ಮಾಹಿತಿ ಒಂದೆಡೆ ದೊರೆಯಲೆಂಬ ದೃಷ್ಟಿಯಿಂದ ಇದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆಂದು ಭಾವಿಸಲಾಗಿದೆ.

1. ಮುನಿಯವರೆ ಸೊಪ್ಪನ್ನು ಕಾವಲಿಗೆ ಹಾಕಿ ಬಿಸಿಮಾಡಿ ಅದನ್ನು ತಿಕ್ಕಿ, ಹರಳೆಣ್ಣೆ ದೀಪಕ್ಕ ಹಿಡಿಯಬೇಕು. ಅದರಿಂದ ಬಂದ ಕಪ್ಪಿಗೆ ನೀರು ಹಾಕಿದರೆ ಬಣ್ಣವಾಗುತ್ತದೆ.

2. ವೀಳದ್ಯೆಲೆಯ ರಸವನ್ನು ಹೊಸದಾದ ಕಾವಲಿಗೆ ಹಚ್ಚಿ ಹರಳೆಣ್ಣೆ ದೀಪಕ್ಕ (ಔಡಲೆಣ್ಣೆ) ಹಿಡಿದರೆ ಅದರಿಂದ ಕಪ್ಪು ಬಣ್ಣ ಬರುತ್ತದೆ. ಅದಕ್ಕೆ ಆಕಳುಹಾಲು ಅಥವಾ ಮೊಲೆಹಾಲನ್ನು ಬೆರೆಸಿ ಬಣ್ಣ ತಯಾರಿಸಬಹುದು.

3. ಹರಳೆಣ್ಣೆ ದೀಪದ ಬತ್ತಿಯ ಕರಿಗೆ ಮೊಲೆಹಾಲನ್ನು ಸೇರಿಸಿ ಬೆರೆಸಿದರೆ ಬಣ್ಣ ತಯಾರಿಸಬಹುದು.

4. ಇದ್ದಿಲಿನ ನುಣುಪಾದ ಪುಡಿಗೆ ಹಚ್ಚೆ ಸೊಪ್ಪಿನ ರಸವನ್ನು ಬೆರೆಸಿದರೆ ಬಣ್ಣ ಬರುತ್ತದೆ. ( ಹಚ್ಚೆಸೊಪ್ಪು ಎಂದು ಯಾವುದಕ್ಕೆ ಕರೆಯುತ್ತಾರೋ ತಿಳಿಯದು)

5. ಹಾಗಲರಸ ಅಥವಾ ಚಪ್ಪರದವರೆ ರಸವನ್ನು ಮಣ್ಣಿನ ಮಡಿಕೆಯಲ್ಲಿ ಹಾಕಿ ಸ್ವಲ್ಪ ಬೆಚ್ಚಗೆ ಮಾಡಿದರೆ ಲೋಳೆಯಾಕಾರದ ರಸ ಬರುತ್ತದೆ. ಅದನ್ನೋ ಬಣ್ಣವಾಗಿ ಉಪಯೋಗಿಸುತ್ತಾರೆ.

6. ಕಿರುಗೋಣಿ ಸೊಪ್ಪಿನ ರಸಕ್ಕೆ ಅಥವಾ ನೆಲ್ಲಿ ಸೊಪ್ಪಿನ ರಸಕ್ಕೆ ಎಣ್ಣೆ ದೀಪದ ಕರಿಯನ್ನು ಸೇರಿಸಿ ಹಚ್ಚೆಯ ಬಣ್ಣ ತಯಾರಿಸುತ್ತಾರೆ.

7. ಹಾಗಲ ಕಾಯಿ ಎಲೆಗಳ ರಸಕ್ಕೆ ಆಥವಾ ಚಪ್ಪರದವರೆ ಅಥವಾ ನೆಲ್ಲಿಕಾಯಿಯ ರಸಕ್ಕೆ ತುಪ್ಪ ಮತ್ತು ದೀಪದ ಕರಿ ಸೇರಿಸಿದರೆ ಬಣ್ಣ ಬರುತ್ತದೆ.

8. ವೀಳ್ಯೆದೆಲೆಯ ರಸ ಮತ್ತು ಹಸುವಿನ ಶೆಗಣಿಯನ್ನು ಹಂಚಿನ ಮೇಲೆ ಹರಡಬೇಕು. ಹರಳೆಣ್ಣೆಯ ದೀಪದ ಝಳಕ್ಕೆ ಹಿಡಿದರೆ ಕಪ್ಪು ಬರುತ್ತದೆ. ಅದನ್ನು ಕೆರೆದು ಮಣ್ಣಿನ ಕುಡಿಕೆಯಲ್ಲಿ ಹಾಕಿ ಬೇಕಾದಾಗ ತಣ್ಣೀರನ್ನು ಹಾಕಿ ಬಣ್ಣ ತಯಾರಿಸಬಹುದು.

9. ತುಂಬೇ ಸೊಪ್ಪಿನ ರಸಕ್ಕೆ ಮೊಲೆಹಾಲು ಮತ್ತು ಕೊಬ್ಬರಿ ಎಣ್ಣೆ ಬೆರೆಸಿ ಬಣ್ಣ ತಯಾರಿಸಬಹುದು.

10. ಬರಗನ ಸೊಪ್ಪಿನ ರಸಕ್ಕೆ ಹಚ್ಚೆ ಸೊಪ್ಪಿನ ರಸ ಅಥವಾ ಹೊನಗೊನ್ನೆ ಸೊಪ್ಪಿನ ರಸವನ್ನು ಮಡಿಕೆಯಲ್ಲಿ ಬೆರೆಸಿ ಮೊಲೆಹಾಲನ್ನು ಸೇರಿಸಿ ಬಣ್ಣ ತಯಾರಿಸುತ್ತಾರೆ.

11. ರೊಟ್ಟಿ ಹಂಚಿನ ತಳದ ಕರಿಗೆ ಎದೆಹಾಲನ್ನು ಬೆರೆಸಿದರೆ ಬಣ್ಣ ಬರುತ್ತದೆ.

12. ಹರಳೆಣ್ನೆಯ ದೀಪದ ಕರಿಗೆ ನೀರನ್ನು ಬೆರೆಸಿ ಬಣ್ನ ತಯಾರಿಸಬಹುದು.

13. ಮದ್ಯ ಭಾರತದಲ್ಲಿ ಕೆಲವು ಬುಡಕಟ್ಟು ಜನಾಂಗಗಳು ಬೀಟಿ ಮರದ ತೊಗಟೆಗೆ ನೀರು ಹಾಗೂ ಅರಿಷಿಣ ಪುಡಿಯನ್ನು ಸೇರಿಸಿ ಬಣ್ಣ ತಯಾಸುರಿತ್ತಾರೆ.

14. ನೀಲಗಿರಿ ಮರದ ಎಲೆಯ ರಸಕ್ಕೆ ದೀಪದ ಕಪ್ಪನ್ನು ಹಾಕಿ ಬಣ್ಣ ತಯಾರಿಸುತ್ತಾರೆ.

ಶಿವಮೊಗ್ಗಾದ ಕೆಲವು ಮಹಿಳೆಯರು, ಕಾಚು, ಅಳಲೀಕಾಯಿ, ವೀಳ್ಯದೆಲೆಯ ರಸವನ್ನು ಸುಟ್ಟು ಕರಿಮಾಡಿ ನಂತರ ಅದಕ್ಕೆ ಚಿಮಣಿ ಬುಡ್ಡಿಯ ಕಪ್ಪನ್ನು ಸೇರಿಸಿ ಬಣ್ಣ ತಯಾರಿಸುತ್ತಾರೆ. ಇದು ಹುಡಿ ರೂಪದಲ್ಲಿದ್ದು ಬೇಕಾದಾಗ ನೀರನ್ನು ಸೇರಿಸಿ ದ್ರವ ರೂಪವನ್ನಾಗಿ ಮಾಡಿಕೊಳ್ಳುತ್ತಾರೆ. ಈ ಬಣ್ಣದ ಬಳಕೆಗೆ ನಿಗದಿತ ಕಾಲವೆಂಬುದಿಲ್ಲ. ಎಷ್ಟು ದಿನ ಬೇಕಾದರೂ ಹಾಗೆಯೇ ಇಟ್ಟು ಹಚ್ಚೆ ಹಾಕುವ ಸಮಯದಲ್ಲಿ ಉಪಯೋಗಿಸಬಹುದು.[2] ಎಂದಿದ್ದಾರೆ. ಡಾ|| ನಂ.ತಪಸ್ವೀ ಕುಮಾರ್ ಅವರು ದಕ್ಷಿಣ ಕರ್ನಾಟಕ ಪ್ರಾಂತ್ಯದಲ್ಲಿ ಹಚ್ಚೆಯ ಕಪ್ಪನ್ನು ತಯಾರಿಸುವ ಬಗ್ಗೆ ಬರೆಯುತ್ತಾ “ಬರಗನ ಸೊಪ್ಪು, ಹಚ್ಚೆ ಸೊಪ್ಪು, ಹೊನಗೊನೆ ಸೊಪ್ಪು ಇತ್ಯಾದಿ ಸೊಪ್ಪುಗಳ ರಸವನ್ನು ಮಡಕೆಯ ತಳದ ಮಸಿಯೊಂದಿಗೆ ತೇಯ್ದು ಬೆರೆಸಿ ಇಟ್ಟುಕೊಳ್ಳಲಾಗುತ್ತದೆ. ಹಚ್ಚೆ ಹೊಯ್ಯುವ ಸಮಯದಲ್ಲಿ ಎದೆ ಹಾಲಿನೊಂದಿಗೆ ಬೆರೆಸಿ ಹದ ಮಾಡಿಕೊಂಡು ಚುಚ್ಚಲಾಗುತ್ತದೆ.” ಎಂದು ಹೇಳುವದರ ಜೊತೆಗೆ ಮನವರಿಕೆ ಸೊಪ್ಪಿನ ಹಂಚಿಗೆ ಸವರಿ ಅದರ ಮೇಲೆ ಅರಿಷಿಣ ಪುಡಿ ಉದುರಿರಿ, ಅಥವಾ ಮಣೀ ಅವರೆ ಸೊಪ್ಪಿನ ರಸ ಅಥವಾ ವೀಳ್ಯದೆಲೆಯ ರಸ ಮುಂತಾದವನ್ನು ಮೇಲೆ ಹೇಳಿದಂತೆ ಹಂಚಿಗೆ ಸವರಿ, ಕುಸುಬೆ ಎಣ್ಣೆಯ ದೀಪಕ್ಕೆ ಹಿಡಿದು ಕಿಟ್ಟ ಕಟ್ಟಿಸಿ, ಆ ಕಿಟ್ಟಕ್ಕೆ ನೀರೋ ಅಥವಾ ಹಾಲನ್ನೋ ಹಾಕಿ ಬೆರೆಸಿ ಬಣ್ಣ ತಯಾರಿಸುವ ಬಗ್ಗೆ ಅಲ್ಲದೆ, ಹಚ್ಚೆ ಸೊಪ್ಪಿನ ರಸವನ್ನು ನುಣ್ಣಗೆ ಅರೆದು ಇದ್ದಿಲ ಪುಡಿಯೊಂದಿಗೆ ಬೆರೆಸಿ ಮತ್ತು ತಂಬೀ ಸೊಪ್ಪಿನ ರಸ, ಹಾಗಲ ಸೊಪ್ಪಿನ ರಸ, ಚಪ್ಪರದವರೆ ಅಥವಾ ನೆಲ್ಲವರೆ ಸೊಪ್ಪಿನ ರಸಗಳನ್ನು ತುಪ್ಪದಲ್ಲಿ ಬೆರೆಸಿ ದೀಪದ ಕರಿಯೊಂದಿಗೆ ಮಸೆದು, ಕಿರಗೋಣಿ ಸೊಪ್ಪು, ನೆಲ್ಲಿಸೊಪ್ಪು ಮುಂತಾದವುಗಳ ರಸದೊಂದಿಗೆ ದೀಪದ ಕರಿಯನ್ನು ಬೆರೆಸಿ ಹಚ್ಚೆಯ ಕಪ್ಪನ್ನು ತಯಾರಿಸುವ ಬಗ್ಗೆ ಹೇಳಿದ್ದಾರೆ.[3]

“ವೀಳ್ಯದೆಲೆಯ ರಸವನ್ನು ಕಾವಲಿಗೆ ಬಳಿದು ಹರಳೆಣ್ಣೆ ದೀಪಕ್ಕೆ ಹಿಡಿದು ಅದರಿಂದ ಬರುವ ಮಸಿಯನ್ನು ಆಕಳಹಾಲು ಅಥವಾ ಸ್ತ್ರೀಯರ ಮೊಲೆಯ ಹಾಲಿನಿಂದ ಮಿಶ್ರಣ ಮಾಡಿ ಹಚ್ಚೆಯ ಬಣ್ಣ ತಯಾರಿಸುವುದು ಒಂದು ವಿಶ್ವಾಸ” ಎನ್ನುವುದರ ಜೊತೆಗೆ ಬಣ್ಣ ತಯಾರಿಕೆಯ ಬೇರೆ ವಿಧಾನಗಳನ್ನು ನಾಗರಾಜ ಉಂಚಳ್ಳಿ ಅವರು ಹೇಳಿದ್ದಾರೆ.[4]

ಅದು ಏನೇ ಇದ್ದರೂ ತಿಪಟೂರು ತಾಲ್ಲೂಕು ಬಿದರೇಗುಡಿಯ ಕೊರವಂಜಿಯರು ಸರಳ ವಿಧಾನದಲ್ಲಿ ಹಚ್ಚೆ ಕಪ್ಪನ್ನು ತಯಾರಿಸುತ್ತಾರೆ. ಸೀಮೆ ಎಣ್ಣೆ ಅಥವಾ ಹರಳೆಣ್ಣೆ ದೀಪವನ್ನು ದೊಡ್ಡದಾಗಿ ಉರಿಯುವಂತೆ ಮಾಡಿ ದೀಪದ ಕುಡಿ ಮಡಿಕೆಯ ತಳಕ್ಕೆ ತಾಕುವಂತೆ ಬೋರಲು ಹಾಕಿ ಗಾಳಿಯಾಡಲು ಜಾಗ ಬಿಟ್ಟಿರುತ್ತಾರೆ. ದೀಪ ಒಂದೇ ಸಮನೆ ಉರಿಯುವುದರಿಂದ ಅದರ ಕಾಡಿಗೆ (ಮಸಿ) ಮಡಿಕೆಯ ತಳದಲ್ಲಿ ಕಟ್ಟುತ್ತದೆ. ಆ ಕಾಡಿಗೆಯನ್ನು ಶೇಖರಿಸಿಕೊಂಡು ಬೇಕಾದಾಗ ನೀರು ಹಾಕಿಕೊಂಡು ಮಸಿ ತಯಾರಿಸುತ್ತಾರೆ. ಕೆಲವರು ಈ ಮಸಿಯ ಜೊತೆಗೆ ತುಂಬೆ ಸೊಪ್ಪಿನ ರಸವನ್ನಾಗಲಿ ಅಥವಾ ಅಳಲೆಕಾಯಿಯ ಸೊಪ್ಪಿನ ರಸವನ್ನಾಗಲಿ ಹಾಕಿ ಬೆರಳಿನಿಂದ ತೀಡಿ ಲೇಪನ  ಮಾಡಿಟ್ಟುಕೊಳ್ಳುತ್ತಾರೆ. ಹಚ್ಚೆಯ ಬಣ್ಣ ತೆಳ್ಳಗಾಗಲಿ, ದಪ್ಪಗಾಗಲಿ ಇರಬಾರದು. ಒಮ್ಮೆ ಈ ಕಪ್ಪು ಶರೀರವನ್ನು ಸೇರಿತೆಂದರೆ ಮತ್ತೆ ಅಳಿಸಲು ಸಾಧ್ಯವಿಲ್ಲ. ಈ ಕಪ್ಪು ಬಹಳ ದಿನಗಳವರೆಗೆ ಕೆಡುವುದಿಲ್ಲ. ಬಣ್ಣ ಕಳೆದುಕೊಳ್ಳವುದಿಲ್ಲ. ಈ ಎಲ್ಲ ವಿಧಾನಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ  ಜಾನಪದ ಬದುಕಿಗೆ ಸಮೀಪವಾದ ಗಿಡಮೂಲಿಕೆಗಳು ಇದ್ದಿಲು, ಕಪ್ಪು, ಕಾಡಿಗೆ ಎಣ್ಣೆ ಹಾಗೂ ತಾಯಿಯ ಎದೆಹಾಲು ಮುಂತಾದ ವೈದ್ಯಕೀಯ ಗುಣವುಳ್ಳ ವಸ್ತುಗಳನ್ನು ಬಳಸಿ ಹಚ್ಚೆಯ ಕಪ್ಪು ಸಿದ್ಧಪಡಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಜಾನಪದರ ಹಾಗೂ ಕೊರವಂಜಿಯರ ಪರಂಪರೆಯ ಪರಿಸರ ಜ್ಞಾನವನ್ನು ಇದು ಸೂಚಿಸುತ್ತದೆ. ಹಚ್ಚೆಯಿಂದ ಕೀವು, ರಸಿಗೆ ಬರದಂತೆ ರಕ್ಷಿಸುವ ಈ ವಿಧಾನವನ್ನು ಈಜಿಪ್ಟಿನಲ್ಲಿ ಕಾಣಬಹುದು.

ಹಚ್ಚೆಯ ಬಗೆಗಳು : ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಚ್ಚೆಯ ಚಿತ್ರಗಳು ಬದಲಾಗುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಕೊರವಂಜಿಯರು ಅನೇಕ ರೀತಿಯ ಹಚ್ಚೆಗಳನ್ನು ಹಾಕುತ್ತಿದ್ದರು. ಇವುಗಳಲ್ಲಿ 1) ಶ್ರೀ ಕೃಷ್ಣ ಪಾರಿಜಾತ 2) ಬಿಡಿ ಪಾರಿಜಾತ 3) ಶ್ರೀ ರಾಮರ ತೊಟ್ಲು 4) ಶಿವನ ಆಸೆ, 5) ಗೌರಿಗದ್ದಿಗೆ, 6) ಸೀತೆ ಸೆರಗು, 7) ಗೌರಿಕಣ್ಣು, 8) ಸೀತೆ ತುರುಬು, 9) ಗೌರಿಮುಡಿ, 10) ಶಿವನ ಶಂಕು, 11) ತಿಂಗಳ ಮಾವ, 12)  ಅರೆದಿಂಗಳು, 13) ಚುಕ್ಕೆಸಾಲು , 14) ಚಿಕ್ಕ ತೇರು, 15) ವೃಂದಾವನ, 16) ಹಣಚಿ, 17) ಗಿಂಡಿ, 18) ಗಿಣಿ, 19) ಬಾಳೆ ಮರ, 20) ಮುತ್ತಿನ ಬಲೆ, 21) ನವಿಲು, 22) ತೊಂಡ್ಲ,  23) ತೋಳ್ ಚಪ್ಪರ, 24) ಬಾಸಿಂಗ, 25) ಚೇಳು, 26) ನಾಗರ ಹೆಡೆ,  27) ನಿಂಬೆ ಹೂವು, 28) ತಾವರೆ ಹೂವು, 29) ಜೋಗಿ ಜಡೆ, 30) ಹೂವಿನ ಕೋಲು, 31) ಹಿರಣಮುಡಿ, 32) ಪಚ್ಚೆತೆನೆ, 33) ಕಲ್ಕಟ್ಟಿ ಸಾಲು, 34) ಒಲೆಕೊಪ್ಪ, 35) ಹೊಗೆಗಾಡಿ, 36) ಚೇಳೂರ ಬಾವಿ, 37) ವಸ್ತ್ರ ಸೆರಗು, 38) ಚೌಕ್ಳಿಮನೆ, 39) ಆರಾರಸೆ, 40) ಜೀರಿಗೆ ಹೂವು, 41) ರವಕೆ, 42) ದೃಷ್ಟಿಬೊಟ್ಟು ಮುಂತಾದವುಗಳು.

 


 


  

ದಕ್ಷಿಣ ಕರ್ನಾಟಕದ ತುಮಕೂರು, ಚಿತ್ರದುರ್ಗದ ಕೆಲಭಾಗ, ಹಾಸನ ಜಿಲ್ಲೆಯಲ್ಲಿ ಕಾಣುವ ಕೆಲವು ಹಜ್ಜೆಗಳು. ದಕ್ಷಿಣ ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಕಾಣುತ್ತವೆ. ಇವಿಷ್ಟೇ ಅಲ್ಲದೆ ಕರ್ನಾಟಕದ ವಿವಿಧ ಭಾಗಗಳಲ್ಲಿ ರೂಢಿಯಲ್ಲಿರುವ ಹಚ್ಚೆಯ ಚಿತ್ರಗಳ ಮಾದರಿಯನ್ನು ಅನೇಕರು ಈಗಾಗಲೇ ಪ್ರಕಟಿಸಿದ್ದಾರೆ. ಡಾ|| ಎಚ್.ಎಂ. ಮಹೇಶ್ವರಯ್ಯ ಅವರು 198 ರೀತಿಯ ವಿವಿಧ ಪ್ರದೇಶದ ಚಿತ್ರಗಳನ್ನು ಅವುಗಳಲ್ಲಿ ಕೆಲವು ರಂಗೋಲಿ ಚಿತ್ರಗಳನ್ನು ಹೋಲುತ್ತವೆ. ಎಸ್‌.ರೋಹಿಣಿ ಶರ್ಮ ಅವರು ಹನ್ನೊಂದು ರೀತಿಯ ಚಿತ್ರಗಳನ್ನು, ವಸಂತಮಾಲಾ ಜವಳಿ ಅವರು ಇಪ್ಪತ್ತೊಂದು ನಮೂನೆಯ ಚಿತ್ರಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ಕೆಲವು ಎಲ್ಲ ಕಡೆಯೂ ಕಂಡು ಬರುತ್ತವೆ. ಉದಾ: ಪಾರಿಜಾತ, ಜೋಗಿಜಡೆ, ಗೌರಿಮುಡಿ ಮುಂತಾದವು. ಇವು ಒಂದು ಕಾಲಕ್ಕೆ ಸಾರ್ವತ್ರಿಕವಾಗಿ ಪಡೆದಿದ್ದ ಪ್ರಸಿದ್ಧಿಯ ಕುರುಹಾಗಿವೆ.

ಎಲ್‌. ಗುಂಡಪ್ಪನವರು ಹಜ್ಜೆಯ ಬಗ್ಗೆ “ಹಚ್ಚೆ ಹೊಯ್ಸಿಕೊಳ್ಳುವುದು ಹಳ್ಳಿಯ ಹೆಂಗಸರಿಗೆ ಬಹು ರೂಢಿ. ಗಂಡಸರೂ ಒಬ್ಬಿಬ್ಬರು ಕುಕ್ಕಿಸಿಕೊಳ್ಳುವುದುಂಟು. ಹಣೆ ಹುಬ್ಬಿನ ನಡುವೆ, ಗಲ್ಲ, ಕುತ್ತಿಗೆ, ಎದೆ, ಕೈ ತೋಳು, ತೊಡೆ ಹಾಗೆ ಮೈಯಲ್ಲಿ ಎಲ್ಲಿ ಬೇಕಾದರೂ ಹಚ್ಚೆ ಕುಕ್ಕಿಸಿಕೊಳ್ಳುತ್ತಾರೆ. ತಿಲಕ, ಚುಕ್ಕೆ, ಕಡಗ, ಕಂಕಣ ಮೊದಲಾದ ಅಲಂಕಾರಗಳು ತ್ರಿಕೋಣ, ಚೌಕ, ವರ್ತುಲ ಮೊದಲಾದ ಹಲವು ಆಕಾರದ ರಂಗೋಲಿ ಹಸೆಗಳು, ಲಿಂಗ, ನಂದಿ, ಕೊಳಲು, ಕೃಷ್ಣ, ಕಾಳಿಂಗ ಮರ್ದನ, ರಾಮಸೀತೆ, ನಾಗರು, ಬಳ್ಳಿ ಮೊದಲಾದ ಬಗೆಬಗೆಯ ಚಿತ್ರಗಳು ಯಾವುದು ಬೇಕಾದರೂ ಅವರವರ ಇಷ್ಟಕ್ಕೆ ತಕ್ಕಂತೆ ಹಜ್ಜೆ ಹುಯ್ಯಿಸಿಕೊಳ್ಳಬಹುದು”[5] ಎಂದಿದ್ದಾರೆ.

ತಿಲಕ ಪ್ರಾಯವಾದ ಹಣಜ್ಜೆಯನ್ನು ಹೆಣ್ಣುಮಕ್ಕಳ ಹಣೆಗೆ ಹಾಕಿದರೆ, ಗಿಂಡಿಯನ್ನು ಮುಂಗೈ ಮೇಲೆ ಹೊಯ್ಯುತ್ತಾರೆ. ತೋಳಿನ ಮೇಲೆ ರಟ್ಟೆಯ ಮೇಲೆ, ದೊಡ್ಡ ದೊಡ್ಡ ಹಜ್ಜೆಗಳನ್ನು ಕುಕ್ಕಿ ಅವುಗಳ ಮೇಲ್ಭಾಗದ ಎರಡೂ ಕಡೆಗೆ ಗಿಣಿಗಳನ್ನು ಕುಕ್ಕುತ್ತಾರೆ. “ಹಚ್ಚೆ ಹೊಯ್ದೇನು ಬಾರೆ ಬಿತ್ತರಿ ತೋಳಿನ ಮೇಲೆ ಹಚ್ಚೆಯ ಮೇಲೆ ಗಿಣಿರಾಮ” ಎಂಬ ಮಾತುಗಳೇ ಇದಕ್ಕೆ ಸಾಕ್ಷಿಯಾಗಿವೆ. ಪಾರಿಜಾತ, ಶ್ರೀರಾಯರ ತೊಟ್ಟು, ಗೌರಿಗದ್ದುಗೆ, ಸೀತೆಸೆರಗು, ಮುಂತಾದ ದೈವೀ ಸಂಬಂಧಿ ಹಚ್ಚೆಗಳನ್ನು ಬೆಳಗಾಗಿ ಎದ್ದು ತಮ್ಮ ಕೈಯಲ್ಲಿ ನೋಡಿಕೊಂಡರೆ ಕಂಟಕ ದೂರವಾಗುತ್ತದೆ ಎಂದು ನಂಬಿಕೆ ಇದ್ದ ಜನ ಹಾಕಿಸಿಕೊಳ್ಳುತ್ತಿದ್ದರು. ಗಲ್ಲದ ಮೇಲೆ ದೃಷ್ಟಿ ಬೊಟ್ಟು ಹಾಕಿಸಿಕೊಂಡರೆ ದೃಷ್ಟಿ ತಾಗುವುದಿಲ್ಲವೆಂದು ನಂಬುತ್ತಿದ್ದರು. ದೃಷ್ಟಿಬೊಟ್ಟನ್ನು ಗಲ್ಲದ ಮೇಲೆ ಹಾಕಿಸಿಕೊಳ್ಳುತ್ತಿದ್ದರು.

ಹಚ್ಚೆಯಲ್ಲೇ ಅತಿ ದೊಡ್ಡದಾದ ಹಚ್ಚೆಯೆಂದರೆ ಕುಬುಸದ ಹಚ್ಚೆ ಅಥವಾ ರವಕೆ. ಕೊರವಂಜಿಯರಲ್ಲಿ ಈ ಹಚ್ಚೆಯ ಬಗ್ಗೆ ಒಂದು ಐತಿಹ್ಯವೇ ಇದೆ. “ಹಿಂದೆ ಒಂದೂರಲ್ಲಿ ಒಬ್ಬಳು ಸೂಳೆ ಇದ್ದಳು. ಒಂದು ದಿನ ಅವಳು ತನ್ನ ಗೆಣೆಯನ ಜೊತೆ ಸಂತೋಷವಾಗಿರುವಾಗ ಹೊರಗೆ ಬೀದಿಯಲ್ಲಿ “ಅಜ್ಜೆ ಹೊಯ್ಸಿಕೊಳ್ತೀರೇನಮ್ಮ ಅಜ್ಜೆ” ಎಂಬ ಕೊರವಂಜಿಯ ಕೂಗು ಅವಳ ಕಿವಿಗೆ ಬಿತ್ತು. ಆಕೆ ತನ್ನ ಗೆಣೆಯನಿಗೆ ಒಂದು ಹಚ್ಚೆ ಹಾಕಿಸುವಂತೆ ಕೇಳಿದಳು. ಗೆಣೆಯ ಒಪ್ಪಿ ಕೊರವಿಯನ್ನು ಕರೆಸಿದ. ಕೊರವಿಯಲ್ಲಿ ಆಕೆ ಕುಬುಸದ ಹಚ್ಚೆ ಹಾಕುವಂತೆ ಕೇಳಿದಳು. “ನಾನೇನೋ ಕುಬುಸದ ಹಚ್ಚೆ ಹಾಕಬಹುದು. ಆದರೆ ನಿನಗೆ ತಡೆದುಕೊಳ್ಳಲು ಅಗುವುದಿಲ್ಲ” ಎಂದಳು ಕೊರವಂಜಿ. ಆದರ ಆ ಸೂಳೆ ಕೇಳದೆ ನಾನು ತಡೆದುಕೊಳ್ಳುತ್ತೇನೆ. ನನಗೆ ಕುಬುಸದ ಹಚ್ಚೆಯನ್ನೇ ಹಾಕು. ಕೂಲಿ ಎಷ್ಟು ಹೇಳು ಎಂದಾಗ ಕೊರವಂಜಿ, “ನಿನ್ನ ಪ್ರಾಣಕ್ಕೆ ನಾನು ಜವಾಬ್ದಾರಳಲ್ಲ. ಕೂಲಿಯನ್ನು ಒಂದು ಎಮ್ಮೆ ಮತ್ತು ತಿಳಿದಷ್ಟು ದುಡ್ಡು ಕೊಡಬೇಕೆಂದು ಕೇಳಿದಳು. ಕೂಲಿ ಹೆಚ್ಚು ಹೇಳಿದರೆ ಬಿಡಬಹುದೆಂದು, ಅದಕ್ಕೂ ತನ್ನ ಗೆಣೆಯನನ್ನು ಒಪ್ಪಿಸಿದಳು. ಆಕೆ ಹೆಚ್ಚೆ ಹೊಯ್ಸಿಕೊಳ್ಳಲು ಬಂದು ಕುಳಿತಳು.

ಕೊರವಂಜಿ ವಿಧಿಯಿಲ್ಲದೆ ಆಕೆಯ ಮೈಮೇಲಿನ ಕುಬುಸವನ್ನು ತೆಗೆದು ಅದೇ ಆಕಾರದಲ್ಲಿ ಕಪ್ಪನ್ನು ಬಳಿದು ಕುಕ್ಕಲು ಪ್ರಾರಂಭಿಸಿದಳು. ಆಕೆ ಕುಕ್ಕಿಸಿಕೊಳ್ಳುತ್ತಾ ಹೋದಳು. ಹಚ್ಚೆ ಪೂರ್ತಿಯಾಗುತ್ತಾ ಬಂತು. ಆದರೂ ಸೂಳೆ ಯಾವ ನೋವನ್ನೂ ತೋರಗೊಡದೆ ಕುಳಿತಿದ್ದಳು. ಎದೆಯ ಗೂಡಿನಲ್ಲಿ ಗಂಟೂಡುವಾಗ ಆಕೆಯ ಪ್ರಾಣ ಹೋಯಿತಂತೆ. (ಹಿಂದೆ ಹೆಂಗಸರು ಕುಬುಸದ ತುದಿಯನ್ನು ಎದೆಯ ಗೂಡಿನಲ್ಲಿ ಗಂಡು ಹಾಕುತ್ತಿದ್ದ ಬಗ್ಗೆ ಇದರಿಂದ ತಿಳಿಯುತ್ತದೆ) ಆದರೆ ಆಡಿದ ಮಾತಿನಂತೆ ಆಕೆಯ ಇನಿಯ ಎಮ್ಮೆಯನ್ನೂ ಮೇಲೆ ದುಡ್ಡನ್ನೂ ಕೊಟ್ಟು ಕೊರವಂಜಿಯನ್ನು ಕಳಿಸಿದನಂತೆ.[6] ಇದರಿಂದ ಒಂದು ಕಾಲಕ್ಕೆ ಹಚ್ಚೆಯ ಬಗ್ಗೆ ಜನರಲ್ಲಿ ಪ್ರೀತಿ ವ್ಯಕ್ತವಾಗುತ್ತದೆ. ಸೌಂದರ್ಯ ಸಾಧನವಾಗಿ ಹಚ್ಚೆಯನ್ನು ಬೆಳೆಸಿಕೊಂಡು ಬಂದಿರುವ ಅಂಶವೂ ಇದರಿಂದ ತಿಳಿಯುತ್ತದೆ.

ಯಾವ ಕೊರವಂಜಿಯ ನಾಲಿಗೆಗೆ ಸರಸ್ವತಿ ಒಲಿದಳೋ! ಅಂತು ಆಕೆ ಕಟ್ಟಿದ ನುಡಿಗಳು ತಾಳಬುದ್ಧವಾಗಿ ಕೇಳುಗರ ಮನಸ್ಸಿಗೆ ನೇರವಾಗಿ ತಾಕುತ್ತವೆ. ಈ ಹಾಡುಗಳಲ್ಲಿ ಆಕೆಯ ಉದ್ದೇಶ, ಲೋಕಜ್ಞಾನ, ಕಾವ್ಯಪ್ರತಿಭಾ ಶಕ್ತಿ, ಔಚಿತ್ಯಗಳು ವ್ಯಕ್ತವಾಗುತ್ತವೆ. ಕೊರವಂಜಿಯರು ಹಚ್ಚೆ ಹೊಯ್ಯುವಾಗ ಹಾಡುತ್ತಿದ್ದ ಹಾಡುಗಳದ್ದೂ ಒಂದು ವಿಶೇಷವೇ. ಅವರು ಹಾಡುತ್ತಿದ್ದ ಹಾಡುಗಳು ಹಚ್ಚೆ ಹೊಯ್ಯುವ ಸಂದರ್ಭಕ್ಕೆ ಮೀಸಲಾದವುಗಳೇನಲ್ಲ. ಆಯಾ ಸಂದರ್ಭಕ್ಕೆ ಹಚ್ಚೆ ಹೊಯ್ಸಿಕೊಳ್ಳುವ ವ್ಯಕ್ತಿಗನುಗುಣವಾಗಿ ಹಾಸ್ಯದ ಅಥವಾ ನೀತಿಯ ಇಲ್ಲವೆ ದೇವರ ಹಾಡುಗಳನ್ನು ಹಾಡುತ್ತಿದ್ದರು. ಹಚ್ಚೆ ಹಾಕಿಸಿಕೊಳ್ಳುವವರನ್ನು ಹಾಕಿಸುವವರನ್ನು ಹಾಡಿನಲ್ಲಿಯೇ ಹೊಗಳಿ ಹಚ್ಚೆ ಹೊಯ್ಯುತ್ತಿದ್ದುದು ಮೆಚ್ಚುವಂಥದು. ಹಳ್ಳಿಗಳಿಗೆ ಹೋದಾಗ ಹಚ್ಚೆ ಹೊಯ್ಯಲು ಅಲ್ಲಿಯ ಗರತಿಯನ್ನು-

“ಹಚ್ಚೆ (ಅಜ್ಜೆ) ಹೊಯ್ದೆನು ಬಾರೆ ನಿನ (ನಿಸ್ತ್ರೆ) ಬಿತ್ತರಿತೋಳಿನ ಮ್ಯಾಲೆ
ಹಚ್ಚೆಯ ಮೇಲೆ ಗಿಣಿರಾಮ ಸುವ್ವಯ್ಯ
ಹಚ್ಚೆಯ ಮೇಲೆ ಗಿಣಿರಾಮ್ನ ಬರೆದೇನು
ಚುಚ್ಚಿಸಿಕೊಂಬೋದೆ ನಿನಭಾರ ಸುವ್ವಯ್ಯ
ಕೂಲಿ ಕೊಡುವಾಗ ನಿನಕದನ ಸುವ್ವಯ್ಯ
ಹಚ್ಚೆನೆ ಕೆಟ್ಟರೆ ಒಂದ್ಕೆರಡ ಉಯ್ತೀನಿ
ಕೊಯ್ ಅಂದ್ರೂ ಕೂಲಿ ಬಿಡೋದಿಲ್ಲ ಸುವ್ವಯ್ಯಾ”

ಎಂದು ಆಹ್ವಾನಿಸಿ ಅವರ ಚೌಕಾಸಿಯನ್ನು ಬಯಲಿಗೆಳೆದು ಹಣವನ್ನು ಪಡೆಯುತ್ತಿದ್ದರು. ಈ ಮಾತುಗಳನ್ನು ಕೇಳಿದ ಮೇಲೆ ಚೌಕಾಸಿ ಮಾಡಲು ಯಾರೂ ಮುಂದಾಗುತ್ತಿರಲಿಲ್ಲ. ಹಚ್ಚೆ ಹೊಯ್ಯುವಾಗ ಅದರ ನೋವನ್ನು ಸಹಿಸಿಕೊಳ್ಳುವ ಭಾರವನ್ನು ಅವರ ಮೇಲೆ ಹಾಕಿ ಕುಕ್ಕುತ್ತಿದ್ದರು. ಹಚ್ಚೆ ಕುಕ್ಕುವಾಗ ದಿಂಡಿನಲ್ಲಿರುವ ಸೂಜಿಯ ಮೊನೆ ಒಂದು ಹದವಾದ ಚರ್ಮದೊಳಗೆ ಇಳಿಯುವಂತೆ ಅದರ ಜೊತೆಯಲ್ಲಿ ಕಪ್ಪು ಒಳಸೇರುವಂತೆ ಕುಕ್ಕುತ್ತಿದ್ದರು.

ಹಚ್ಚೆ ಹೊಯ್ಯುವವರೆಲ್ಲ ಸಾಮಾನ್ಯವಾಗಿ ಹೆಂಗಸರೇ, ಅವರು ಈ ಕಲೆಯಲ್ಲಿ ಸಾಕಷ್ಟು ಪಳಗಿದವರೇ ಅಗಿರುತ್ತಾರೆ. ಹೊಸದಾಗಿ ಮದುವೆಯಾದ ಅಥವಾ ಮದುವೆಯಾಗುವ ಹೆಣ್ಣು ಸಿಕ್ಕುಬಿಟ್ಟರೆ ತಮ್ಮ ಹಾಡಿನ ಮೋಡಿಯಲ್ಲಿ ಅವರು ನಾಚಿ ನೀರಾಗುವಂತೆ, ಕೈಯ ನೋವನ್ನು ಮರೆಯುವಂತೆ ಮಾಡುತ್ತಿದ್ದರು. ಮತ್ತು ಅವರಿಗೆ ತಮ್ಮ ಹಾಡಿಗೆ ದನಿಕೂಡಿಸುವಂತೆ ಹೇಳುತ್ತಿದ್ದರು.ಹಾಗೆ ಮಾಡುವುದರಿಂದಲೂ ಗಮನ ಹಾಡಿನ ಕಡೆಗೆ ಹರಿದು ನೋವು ಕಡಿಮೆಯಾಗುತ್ತದೆ ಎನ್ನುತ್ತಾರೆ ಈ ಕೊರವಂಜಿಯವರು.

“ಅಮ್ಮಿ ನಿನಗಂಡ ಎಂತೋನೇ ದಮ್ಮಯ್ಯ
ವಂತ್ಕಾರ ಕಾಣೇ ವಲಿ ಮುರುವ ಸುವ್ವಯ್ಯ
ವಂತ್ಕಾರ ಕಾಣೇ ವಲಿ ಮುರುವ ಅಮ್ಮೀ ಗಂಡ
ಸಂತೇಲಿ ಕದ್ದ ಕರೀಮಿನಮ್ಮೀ ಗಂಡ
ಸಂದೀಲಿ ತಿಂದ ಮೂರು ಗುದ್ದ ಸುವ್ವಯ್ಯ”

ಎಂದು ಆ ಕಿಶೋರಿಯನ್ನು ಕುರಿತು ಸುತ್ತ ನೆರೆದ ಹೆಂಗಸರ ನಡುವೆ ವಂತ್ಕಾರ ಕಣೆ (ಬಲುಶೂರ ಕಣೇ), ವಲಿ ಮುರುವ (ಕೈಲಾಗವ) ಮುರುವ ಎಂದರೆ ಕೊರಮ ಭಾಷೆಯಲ್ಲಿ ಮುರುಕಾಟಿ. ಅದು ಒಂದೇ ಕಡೆ ಬಿದ್ದುಕೊಂಡಿರುವ ಸ್ವಭಾವದ್ದು. ಇಂಥವ ಹೋಗಿ ಸಂತೆಯಲ್ಲಿ ಕರಿಮೀನು ಕದ್ದು, ಮೂರು ಗುದ್ದನ್ನು ತಿಂದ ಎಂದರೆ ಯಾವ ಹೆಣ್ಣು ತಾನೆ ನಾಚದೆ ಇದ್ದಾಳು?

ಹಚ್ಚೆ ತನ್ನ ಬಿತ್ತರಿ ತೋಳಿನ ಅಂದ ಚೆಂದ ಹೆಚ್ಚು ಮಾಡಿದ್ದನ್ನು ಗಮನಿಸಿದ ಗರತಿ ಪಡುವ ಸಂತೋಷ ಅಪರಿಮಿತವಾದದ್ದು. ಆ ಸಮಯದಲ್ಲಿ ಹಚ್ಚೆ ಹಾಕಿಸಿದವಳನ್ನು ನೆನೆಯುವುದರಲ್ಲಿ ಇರುವ ನಿರ್ಮಲ ಪ್ರೇಮ ವರ್ಣಿಸಲಾಗದ್ದು. ಕೆಲವರು ತಮ್ಮ ನೆನಪಿಗಾಗಿ ಬೇರೆಯವರ ಕೈಗೆ ಹಚ್ಚೆ ಹಾಕಿಸುತ್ತಿದ್ದುದು ಗ್ರಾಮೀಣರಲ್ಲಿ ಬಹು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಹಚ್ಚೆ ಹಾಕಿಸಿದರೆ ಅವಳಿಗೆ ಏನೋ ಪುಣ್ಯದ ಕೆಲಸ ಮಾಡಿದಷ್ಟು ಸಂತೋಷ. ಆ ಸಂತೋಷಕ್ಕೆ ಕಾರಣ ಹಚ್ಚೆ ಹೊಯ್ಸಿಕೊಂಡವಳ ಸ್ಮರಣೆ.

“ಅಜ್ಜೆ ಉಯ್ಸಿದ ಮನ ಎಲ್ಲಮ್ಮ ನೆನೆಯೋದು
ಕಲು ಬಾವಿ ತಾವ ಕೈಯ ತೊಳೆದು ಸುವ್ವಯ್ಯ
ಕಲ ಬಾವಿ ತಾವ ಕೈಯ ತೊಳೆದು ಬರುವಾಗ
ಅಜ್ಜೆ ಉಯ್ಸಿದಮಗೆ ಸುಖ ಬಾಳ ಸುವ್ವಯ್ಯ
ಅಜ್ಜೆ ಉಯ್ಸಿದಮ್ಮ ಹಾಡು ಕಲಿಸೀದಮ್ಮ
ಹಸು ಮಕ್ಕಳಿಗಾಲ ನೆರೆದಮ್ಮ ಬರುತಾಳೆ
ಕುಸುಲು ಸತ್ತರಿಗೆ ನೆರಳಾಗೆ ಸುವ್ವಯ್ಯ
ಅಜ್ಜೆ ಉಯ್ಸಿದಮಗೆ ಎಲ್ಲ ಭಾಗ್ಯವು ಬರಲಿ
ಪಲ್ಲಕ್ಕಿ ಮೇಲೆ ಮಗ ಬರಲಿ ಸುವ್ವಯ್ಯ
ಪಲ್ಲಕ್ಕಿ ಮೇಲೆ ಮಗ ಬರಲಿ ಅವ್ವಯ್ಯ
ಮಲ್ಲಿಗೆ ಮುಡಿಯೊ ಸೊಸೆ ಬರಲಿ ಸುವ್ವಯ್ಯ”

ಹೀಗೆ ಹಾಡು ಮುಂದುವರಿಯುತ್ತದೆ. ಇಂಥ ಹಾಡುಗಳ ಮೂಲಕ ಕೊರವಿಯನ್ನು ಹಚ್ಚೆ ಹಾಕಿಸುವವರ ತಂಡವನ್ನೇ ಕಟ್ಟುತ್ತಿದ್ದರು. ಕಲ್ಲು ಬಾವಿ ಗಂಗೆಯಿರುವ ಪವಿತ್ರ ಸ್ಥಳ. ಅಲ್ಲಿ ಹಚ್ಚೆ ಹೊಯ್ಸಿದವಳನ್ನು ಸ್ಮರಿಸಿ, ವಂದಿಸಿ, ಸುಖವನ್ನು ಕೋರಿ ತಲೆಗೆ ಕುಸುಲು ಸತ್ತರಿಗೆ ಹಿಡಿದು ಗೌರವಿಸುವರು. ಇಂಥ ಸನ್ಮಾನದ ಜೊತೆಗೆ ಮಗ ಬರಲಿ, ಮಲ್ಲಿಗೆ ಮುಡಿಯೋ ಸೊಸೆ ಬರಲಿ, ಸೌಭಾಗ್ಯವೇ ಬರಲಿ ಎಂದು ಹಾರೈಸುತ್ತಿದ್ದ ಹಾರೈಕೆ ಆ ಕಾಲಕ್ಕೆ ಸಾಮಾನ್ಯವಾದುದಾಗಿರಲಿಲ್ಲ.

ಹಚ್ಚೆ ಹೊಯ್ಸಿಕೊಂಡಷ್ಟೆ ಅಲ್ಲ, ಅವಳ ತಾಯಿಯೂ ಮಗಳ ಕೈ ಮೇಲಿನ ಹಚ್ಚೆಯನ್ನು ನೋಡಿ ಅವುಗಳನ್ನು ಹೊಯ್ಸಿದಾಕೆಯನ್ನು ಕುರಿತು-

“ಯಾರು ಉಯ್ಸಿದಾರಮ್ಮಾ ದೇವಲೋಕದ ಅಜ್ಜೆ
ಹಡೆದವ್ವ ಬಂದು ಕೈಯ ನೋಡಿ ಸುವ್ವಯ್ಯಾ
ಹಡೆದವ್ವ ಬಂದು ಕೈಯ ನೋಡೇನಂದಾಳೆ
ಮುತ್ತೈದೆ ತನಕೆ ಇವ ಮೇಲು ಸುವ್ವಯ್ಯ”

ಎಂದು ಸಂತೋಷ ವ್ಯಕ್ತಪಡಿಸಿರುವುದನ್ನು ನೋಡಿದರೆ ಹಚ್ಚೆ ಹುಯ್ಸಿದವಳನ್ನು ಸ್ಮರಿಸುವುದಷ್ಟೇ ಅಲ್ಲ; ಹಚ್ಚೆ ಮುತ್ತೈದೆತನದ ಸಂಕೇತ ಎಂಬ ನಂಬಿಕೆ ಅಂದು ಸಾರ್ವತ್ರಿಕವಾಗಿದ್ದುದನ್ನು ಗುರುತಿಸಬಹುದು. ಅಲ್ಲದೆ ಸತ್ತಾಗ ಹಿಂದೆ ಬರುವ ಆಸ್ತಿ ಹಚ್ಚೆಯೊಂದೇ ಎಂಬ ನಂಬಿಕೆಯೂ ಜನಪದರಲ್ಲಿ ಇತ್ತು. ಅಲ್ಲದೇ ಇದು ಹಚ್ಚೆ ಪಡೆದಿದ್ದ ಗೌರವದ ದ್ಯೋತಕವಾಗಿದೆ. ಕೆಲವರು ತಮ್ಮಲ್ಲಿ ಮೊದಲೇ ಬರೆದಿಟ್ಟುಕೊಂಡಿದ್ದ ಹಚ್ಚೆಯ ನಮೂನೆಗಳನ್ನು ತೋರಿಸಿ ಬೇಕಾದುದನ್ನು ಹೊಯ್ಯುತ್ತಿದ್ದರು ಎಂಬ ಮಾತಿದ್ದರೂ, ಹೆಚ್ಚಾಗಿ ಹಚ್ಚೆಯ ಹೆಸರನ್ನು ಕೇಳಿಯೇ ಅವುಗಳನ್ನು ಗ್ರಹಿಸುವಷ್ಟು ಗರತಿಯರಲ್ಲಿ ಹಚ್ಚೆಗಳು ಪರಿಚಯವಾಗಿದ್ದವು. ಕೆಲವು ವೇಳೆ ಕೊರವಂಜಿಯರು ಹಚ್ಚೆಯ ನಮೂನೆಯನ್ನು ಕೈಮೇಲೆ ಬರೆದು ತೋರಿಸುತ್ತಿದ್ದರು. ಒಪ್ಪಿಗೆಯಾದ ಹಚ್ಚೆ ಹೊಯ್ಯುತ್ತಿದ್ದರು. ಹಚ್ಚೆ ಹೊಯ್ಯಲು ತೆಗೆದುಕೊಳ್ಳುವ ಸಮಯ ಮತ್ತು ನಮೂನೆಗನುಗುಣವಾಗಿ ಕೂಲಿಯನ್ನು ನಿಗದಿಮಾಡಿಕೊಂಡು ಅದು ಕಾಳಿರಲಿ, ದುಡ್ಡಿರಲಿ ಹಚ್ಚೆ ಹುಯ್ದಾದ ಮೇಲೆ ಪಡೆದುಕೊಳ್ಳುತ್ತಿದ್ದರು.

ಇವರು ಹಚ್ಚೆ ಹೊಯ್ಯುತ್ತಾ ಹಾಡತೊಡಗಿದರೆ ಇವರ ಹೆಗ್ಗಳ ಕಂಠದಲ್ಲಿ ಹೊಮ್ಮುವ ನಾದ ಮಾಧುರ್ಯ, ಹಾಡಿನ ನೀತಿ, ಕಥೆ ಯಾರನ್ನೂ ಆಕರ್ಷಿಸುತ್ತಿದ್ದವು. ಶುದ್ಧ ಜಾನಪದ ದಾಟಿಯಲ್ಲಿ ತಾಳ ಲಯಬದ್ಧವಾಗಿ ದನಿ ಎತ್ತಿ ಇಬ್ಬಿಬ್ಬರು ಕೂಡಿ ಹಾಡುತ್ತಿದ್ದರು. ಆ ಹಾಡು ಹಚ್ಚೆ ಕುಕ್ಕಿಸಿಕೊಳ್ಳುವವಳ ಜೊತೆಗೆ ಅಲ್ಲಿಯ ಇತರರನ್ನೂ ತೊಟ್ಟಿಲಾಗಿ ತೂಗುತ್ತಿತ್ತು. ಇವರ ಪದಗಳಲ್ಲಿ ರಾಮಾಯಣ, ಮಹಾಭಾರತ ಮೊದಲಾದ ಪುಣ್ಯ ಕಥೆಗಳೂ, ಗ್ರಾಮದೇವತೆಗಳೂ, ಹಳ್ಳಿಯ ಐತಿಹ್ಯಗಳಿಗೂ ಸಂಬಂಧಿಸಿದ ಸಂಗತಿಗಳು ಹೆಚ್ಚು. ರಾಗಿಕಲ್ಲು ಪದಗಳನ್ನೂ ಹೇಳುವುದುಂಟು. ಕೆಲವು ವೇಳೆ ದಾನಿಗಳನ್ನು ಹೊಗಳುವ ಪ್ರಶಂಸೆಗಳನ್ನೂ ಹಾಡುತ್ತಾರೆ.[7] ಹಚ್ಚೆಗಳಿಗೆಂದೇ ನಿರ್ದಿಷ್ಟವಾದ ಹಾಡುಗಳೇನೂ ಇಲ್ಲ. ಕೊಯ್ಯುವಾಗ, ಬೀಸುವಾಗ, ಕುಟ್ಟುವಾಗ ಹಾಡುವ ಹಾಡುಗಳನ್ನೂ ತ್ರಿಪದಿಗಳನ್ನೂ ಹಾಡುತ್ತಿದ್ದರು. ಅವೆಲ್ಲವೂ ಕನ್ನಡದಲ್ಲಿಯೇ ಇರುತ್ತಿದ್ದವು. ತೆಲುಗು ಹಾಡುಗಳನ್ನು ಹೇಳುವುದುಂಟು. ತಮ್ಮ ಭಾಷೆ ಬೇರೆಯಾದರೂ ತಾವು ವ್ಯವಹರಿಸುವ ಪ್ರದೇಶದ ಭಾಷೆಯಲ್ಲಿಯೇ ಇವರು ಹಾಡು ಹೇಳುತ್ತಾರೆ. ಮತ್ತು ವ್ಯವಹರಿಸುತ್ತಾರೆ. ಕೊರವಂಜಿಯರನ್ನು ನೀವು ಹಚ್ಚೆ ಹೊಯ್ಸುವಾಗ ಹಚ್ಚೆಗೆ ಸಂಬಂಧಿಸಿದ ಹಾಡುಗಳನ್ನಷ್ಟೇ ಹೇಳುತ್ತೀರೋ ಅಥವಾ ಹಳ್ಳಿಯ ಹಾಡುಗಳನ್ನು ಹೇಳುತ್ತೀರೋ ಎಂದು ಕೇಳಿದರೆ ಅವರು ಹಿಂದಿನವರು ಅಜ್ಜೆ ಪದಗಳನ್ನೇ ಹೇಳುತ್ತಿದ್ದರು. ಒಂದೊಂದು ಅಜ್ಜೆ ಉಯ್ದು ಮುಗಿದರೂ ಪದ ಮುಗಿಯುತ್ತಿರಲಿಲ್ಲ. ಈಗ ಅಂತರ್ಯಾರಿದ್ದಾರಪ್ಪ ಯಾವುದು ಬಾಯಿಗೆ ಬರುತ್ತೋ ಅದನ್ನೇ ಹೇಳುತ್ತೇವೆ. ಎಲ್ಲಾ ಹರಕು ಮುರುಕು ಪದಗಳು, ಅಜ್ಜೆ ಈಗ ಯಾರು ಉಯ್ಸಿಕೊಳ್ತಾರೆ, ಅಜ್ಜೆ ಹೋದಂಗೆ ಪದಗಳೂ ಓದ್ವು ಎನ್ನುತ್ತಾರೆ.

ವಸಂತಮಾಲಾ ಜವಳಿ ಅವರು ಕೊಟ್ಟಿರುವ ಒಂದೆರಡು ಹಚ್ಚೆಯ ಹಾಡಿನಲ್ಲಿ ಹಚ್ಚೆಯ ಪ್ರಸ್ತಾಪದ ಜೊತೆಗೆ ದಕ್ಷಿಣ ಕರ್ನಾಟಕದ ಕೊರವಂಜಿಯ ಹಾಡುವ ಹಾಡಿನ ಸಾಲುಗಳೂ ಕಂಡುಬರುತ್ತವೆ.

“ಒಕ್ಕಳಕ್ಕೆ ಹಾಕಿ ಒಂದು ಬದನೆಕಾಯಿ
ಲಕ್ಷದ ಮ್ಯಾಲೆ ತೊಂಬತ್ತಾರು ಸಾವಿರ ಜನಕೆ
ನಿತ್ಯ ಭೋಜನ ಮಾಡಿಸಿ ಕಲ್ಯಾಣ ಮಂಟಪಕ್ಕೆ ದಿನ ಮಧ್ಯಾಹ್ನಹೂಡಿ
ನೀಲಮ್ಮನ ಪಾದಕ್ಕೆ ಉಘೇ ಅನ್ನ ಹೆಸರು ಹಾಕುವೆ ಹೆಸರು ಹಾಡುವೆ
ಹೇಸುರಮ್ಮ ತಾಯಿ ನಿನ್ನ ಹೆಸರ್ಹೇಳಿ ಜನಗಳಿಗೆ ಹೆಸರು ಹಾಕುವೆ
ಬೇಗನೆ ನಿನ್ನುತ್ತಿ ಕೈಯಲ್ಲಿ ಶೋಭಿಸು ದೇವರ ಹೆಸರಲ್ಲಿ ರಾರಾಜಿಸು.

“ಗಂಗವ್ವ ಚುಚ್ಚಿಸಿಕೊಂಡ ಹಣಚಿ ಬೊಟ್ಟು
ಗರತಿತನ ತಂತ, ಕುಂಕುಮ ತಂತ
ಯಾರು ಹುಯ್ದಾರಮ್ಮಾ ಈ ಮುತ್ತಿನ ಮಣಿಯಂತಾ ಹಚ್ಚೆ
ಹೆತ್ತಮ್ಮಾ ಬಂದು ಕೈ ನೋಡಿ ಏನೆಂದಾಳೋ
ಮುತ್ತೈದಿ ತನಕ ಇವು ಮೇಲು”

ಇಂಥ ಪದಗಳನ್ನು ಗರತಿಯರಿಗೆ ಹಚ್ಚೆ ಹಾಕುವಾಗ ಹಾಡಿದರೆ ಚಿಕ್ಕ ಮಕ್ಕಳಿಗೆ ಶಿಶು ಗೀತಗಳಂಥ ಹಾಡುಗಳನ್ನು ಹೇಳುತ್ತಿದ್ದ ಬಗ್ಗೆ ಈ ಹಾಡು ಸಾಕ್ಷಿಯಾಗಿದೆ.

“ಕಡ್ಲೆ ತಿಂದ ಕುರುಕುರು
ಹೂಸು ಬಿಟ್ಟ ಪುರುಪುರು
ಗಂಡ ಬರ್ತಾನೆ ಸುಮ್ಮನಿರು
ಉಳ್ಳಾಗಡ್ಡಿ ತಿನ್ನಬ್ಯಾಡ
ಗಂಡ ಬರ್ತಾನೆ ಅಳಬೇಡ
ಕುಂಡಿ ಮ್ಯಾಲ ಹೊಡಿತಾನೆ
ಕುಣಿಬ್ಯಾಡ ಕುಣಿಬ್ಯಾಡ”

ಹಚ್ಚೆಯ ಮಹತ್ವದ ಬಗ್ಗೆ –

“ಮುತ್ತೈದೆ ತನಕ ಇವು ಮೇಲು
ಸತ್ತರೆ ಸಂಗಾತಿ ಇದ್ದರೆ ಗೆಣಕಾತಿ
ಸತ್ತರೆ ನಮಗುಂಟ ಬರೋದಲ್ಲೆ
ಕೈ ಮಾಗಳ ಹಚ್ಚೆ….”[8]

ಎಂಬ ಹಾಡುಗಳನ್ನು ಹಾಡುತ್ತಿದ್ದ ಬಗ್ಗೆ ತಿಳಿಯುತ್ತದೆ.

ಎಲ್. ಗುಂಡಪ್ಪನವರು ಕೊಟ್ಟಿರುವ ಹಚ್ಚೆಯ ಪದದಲ್ಲಿ ಹಚ್ಚೆಯ ಬಗೆಗಿನ ಯಾವ ವಿವರವೂ ಇಲ್ಲ. ವಿಷಯಾಂತರದ ಇಲ್ಲಿಯ ತ್ರಿಪದಿಗಳಲ್ಲಿ ಒಮ್ಮೆ ಊರ ಗೌಡಿಕೆ ಬಗ್ಗೆ, ಮತ್ತೊಮ್ಮೆ ಪತ್ರ ಓದುವವನ ಸೌಂದರ್ಯದ ಬಗ್ಗೆ ವಿವರಣೆ ಬಂದರೆ, ಕೆಲವು ತ್ರಿಪದಿಗಳಲ್ಲಿ ಉತ್ತರದೇವಿ ಕಥನ ಗೀತೆಯಲ್ಲಿಯ ಕೆಲವು ತ್ರಿಪದಿಗಳ ಛಾಯೆ ತೋರುತ್ತದೆ. ಇದಲ್ಲದೆ ಕೆಂಪು ಮತ್ತು ಕಪ್ಪು ಹೆಣ್ಣುಗಳ ಗುಣ ಸ್ವಭಾವವನ್ನು ಚಿತ್ರಿಸುವ ತ್ರಿಪದಿಗಳೂ ಈ ಗೀತೆಯಲ್ಲಿ ಸೇರಿ ಹೋಗಿವೆ.”[9]

ಡಾ|| ಎಚ್‌.ಎಂ. ಮಹೇಶ್ವರಯ್ಯ ಅವರು ಬುರುಡೆ ಬೆಸ್ತರ ಹಾಲಮ್ಮನಿಂದ ಸಂಗ್ರಹಿಸಿರುವ ಹಾಡುಗಳಲ್ಲಿ –

1)       “ಅತ್ತೆ ಬೈದರೆ ಒಪ್ಪು
ಮಾವ ಬೈದರೆ ಒಪ್ಪು
ಹಚ್ಚೇಯ ಬೊಟ್ಟು ಹಣೆಗೊಪ್ಪು
ಹಚ್ಚೇಯ ಬೊಟ್ಟು ಹಣೆಗೊಪ್ಪು ತಂಗ್ಯವ್ವ
ಚೊಚ್ಚಿಲ ಬಸಿರು ನಿನಗೊಪ್ಪು.

2)         ಬಾ ನನ್ನ ನಾದೂನೆ ಹಾಲು ಮ್ಯಾಲಿನ ಕೆನೆಯೇ
ಯಾಲಕ್ಕಿ ಗೊನೆಯೇ ಸಂಪಿಗೆ ತೆನೆಯೆ
ಹಚ್ಚಿ ಬೊಟ್ಟಿನ ಕೈಯ ಒತ್ತಿ ಹಿಡಿಯಲು ಬ್ಯಾಡ
ನೆತ್ತರ ಇಳಿದಾವು ಕಿರಿಬಳ್ಳು|
ಸತ್ತರೆ ನಮಕೂಟ ಮತ್ತೇನು ಬರಬಹುದು
ಹಚ್ಚಿಯ ಬೊಟ್ಟು ಸುಲಿಹಲ್ಲು, ಕಟ್ಟಿರೋ ತುರುಬು |” [1]

ಎನ್ನುವ ಹಚ್ಚೆಯ ಬಗೆಗಿನ ತ್ರಿಪದಿಗಳನ್ನು ಬಿಟ್ಟರೆ, ಮಿಕ್ಕವುಗಳೆಲ್ಲ ಗಂಡ ಹೆಂಡಿರ ಪ್ರೀತಿ, ಕೋಪದ ಸನ್ನಿವೇಶ ಪ್ರಣಯದ ಸನ್ನಿವೇಶಗಳು. ಅಂತೆಯೇ ಪುರಾಣ ವಿಷಯಗಳನ್ನೊಳಗೊಂಡ ಗೀತೆಗಳು, ಬದುಕಿಗೆ ಸಂಬಂಧಿಸಿದ ಹಲವಾರು ಸಾಮಾಜಿಕ ಸಂದರ್ಭಗಳನ್ನು ಚಿತ್ರಿಸುವ ಗೀತೆಗಳು ಶಿಶು ಗೀತೆಗಳನ್ನು ಹೋಲುವ ಗೀತೆಗಳು ಇಲ್ಲಿವೆ. ಇವುಗಳನ್ನೆಲ್ಲ ನೋಡಿದರೆ, ಹಚ್ಚಿಗೆ ಪ್ರತ್ಯೇಕವಾದ ಹಾಡುಗಳು ಇರಲಿಲ್ಲ ಎಂಬುದು ಮನವರಿಕೆಯಾಗುತ್ತದೆ.

ಶ್ರೀ ಎಚ್‌.ಎಲ್. ನಾಗೇಗೌಡ ಅವರು ನಾಗಮಂಗಲದಲ್ಲಿ ನಡೆದ ಜಾನಪದ ಸಮ್ಮೇಳನದಲ್ಲಿ ಹಚ್ಚೆ ಹಾಡುವುದನ್ನು ಹಾಡುವ ಕೊರವಂಜಿಯರನ್ನು ಕರೆಸಿ, ಹಾಡಿಸಿ ಅವುಗಳನ್ನು ಸಂಗ್ರಹಿಸಿ ಹಚ್ಚೆಯ ಹಾಡುಗಳು ಎಂದು ಪ್ರತ್ಯೇಕ ವಿಭಾಗ ಮಾಡಿ ಪದವವೇ ನಮ್ಮ ಎದೆಯಲ್ಲಿ ಎಂಬ ಕೃತಿಯಲ್ಲಿ ಪ್ರಕಟಿಸಿದ್ದಾರೆ. ದಕ್ಷಿಣ ಕರ್ನಾಟಕದ ಇಂಥ ಪ್ರಯತ್ನ ಮತ್ತೆಲ್ಲಿಯೂ ಕಂಡು ಬರುವುದಿಲ್ಲ. ಈ ಸಮ್ಮೇಳನಕ್ಕೆ ಹೋಗಿ ನನ್ನೂರಿನ (ಬಿದರೇಗುಡಿಯ) ಕೊರವಂಜಿಯೂ ಹಚ್ಚೆ ಹಾಡುಗಳನ್ನು ಹಾಡಿ ಬಂದಿದ್ದಾರೆ. ಇಲ್ಲಿಯ ಹಾಡುಗಳು ಹಚ್ಚೆಗೆಂದೇ ನಿರ್ದಿಷ್ಟವಾದವುಗಳೇನಲ್ಲ. ಜನಪದ ಜೀವನಕ್ಕೆ ಸಂಬಂಧಿಸಿದ ಹಾಡುಗಳೇ ಎಂಬುದು ಸ್ವಯಂವೇದ್ಯ. ಇದನ್ನು ಹಾಡಿ ಬಂದವರ ಮಾತುಗಳೇ ಇವಕ್ಕೆ ಸಾಕ್ಷಿ. ದಿವಾನ್ ಬಹಾದ್ದೂರ ಅನಂತ ಕೃಷ್ಣ ಐಯ್ಯರ ಅವರು ಹಚ್ಚೆಯ ಹಾಡೊಂದನ್ನು ಕೊಟ್ಟಿದ್ದಾರೆ.

“Stay darling stay only for an hour
and you will be the fairest of the fair,
your lotus eyes can soothe the savage beast
your lips are like the newly blossomed rose
your teeth shine like pearls; but where are they
before the beauties of my hand work.”
“Stay darling stay tis only for an hour
and you will be the rairestor the fair
I, left my home all day long I toil,
So to adorm the maidan of the land,
That erring husbands may return to them,
Such are the beauties, of my hand work
Stay darling stay tis only for the an hour
and you will be the fairest of the world
in the days of the old, fair SIta laid her head
upon the lap of one of our clan,
When which her lord she wandered in the wild,
and like emerald shone her beautious arms,
Stay darling stay tis only for an hour
and you will be the fairest of the fair,
and after in the wilds, so it is said
She also of the pan dus went in Quest
of one of us; but found not enen one
and sighed, she was not her sister’s blest.
Stay darling stay, tis only for an hour,
and you will be the fairest of the fair,
my work is done, rejoice for your will be
The fairest of the sisters in the land,
Rejoice for ever more, among them you,
will shaine as both moon among the stars.”[2]

ಹಚ್ಚೆಗಳನ್ನು ಹಾಕಿಸಿಕೊಳ್ಳುವುದರಲ್ಲಿ ಪುರುಷರೂ ಹಿಂದೆ ಬಿದ್ದಿಲ್ಲ. ಕೆಲವು ನಿರ್ದಿಷ್ಟ ಜನಾಂಗದ ಯುವಕರು ತಮ್ಮ ತಮ್ಮ ಹೆಸರನ್ನು ತಮಗೆ ಪ್ರಿಯವಾದ ಹೋರಿ, ಕುರಿ ಮುಂತಾದ ಸಾಕು ಪ್ರಾಣಿಗಳ ಕುರುಹುಗಳನ್ನು ಹಚ್ಚೆಯ ರೂಪದಲ್ಲಿ ತಮ್ಮ ಅಂಗಾಂಗಗಳ ಮೇಲೆ ಹಾಕಿಸಿಕೊಳ್ಳುತ್ತಿದ್ದುದನ್ನು ಅನುಭವಿಗಳು ತಿಳಿಸುತ್ತಾರೆ.

ಹುಲಿಯನ್ನು ಕೊಂದ ಮೇಲೆ ಆ ವಿಜಯದ ಸಂಕೇತವಾಗಿ ಹುಲಿಯ ಚಿತ್ರವನ್ನು ತನ್ನ ಬಲಗೈ ತೋಳಿನ ಮೇಲೆ ಹಾಕಿಸಿಕೊಳ್ಳುತ್ತಿದ್ದರಂತೆ. ಪ್ರೀತಿಸುವ ಹೆಣ್ಣಿನ ಹೆಸರನ್ನು ವ ಗಂಡಿನ ಹೆಸರನ್ನು ಹಚ್ಚೆಯ ರೂಪದಲ್ಲಿ ಬರೆಯಿಸಿಕೊಳ್ಳುತ್ತಿದ್ದುದು ಅಂದು ಪ್ರಚಾರದಲ್ಲಿ ಇದ್ದಿತಂತೆ. ಪಾತಿವ್ರತ್ಯ ಹಾಗೂ ಸತಿ ವ್ರತದ ಸಂಕೇತವಾಗಿ ಪುರುಷ ಮತ್ತು ಸ್ತ್ರೀಯರು ತಮ್ಮಗುಪ್ತಾಂಗಗಳ ಮೇಲೂ ಹಚ್ಚೆಯ ಗುರುತುಗಳನ್ನು ಹಾಕಿಸಿಕೊಳ್ಳುತ್ತಿದ್ದರೆಂಬುದನ್ನು ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಈಗ ಪ್ರಚಲಿತವಿರುವ ಅಕ್ಯುಪಂಕ್ಚರ್ ವಿಧಾನಕ್ಕೂ ಹಚ್ಚೆಗೂ ಏನಾದರೂ ಸಂಬಂಧವಿದೆಯೆ ಎಂಬುವ ಸಾಧ್ಯತೆಗಳನ್ನೂ ಪರಿಶೀಲಿಸಬೇಕಾಗಿದೆ.

ಕೊರಮ ಜನಾಂಗದ ಸ್ತ್ರೀಯರ ವೃತ್ತಿಯಾದ ಕಣಿ ಹೇಳುವಿಕೆ. ಪುರುಷರ ವೃತ್ತಿಯಾದ ಬೇಟೆ, ಬಿದಿರು, ಹಗ್ಗದ ಕೆಲಸಗಳಿಂದ ಈ ಜನಾಂಗವನ್ನು ಇಂದೂ ಗುರುತಿಸಬಹುದಾಗಿದೆ. ಸುಧಾರಣೆಯ ಮಧ್ಯದಲ್ಲಿಯೂ ತಮ್ಮ ಜನಾಂಗದ ವೈಶಿಷ್ಟ್ಯಗಳನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿ. ಮುಖ್ಯವಾಗಿ ಇಂದಿಗೂ ಕೊರವಂಜಿ ನಮ್ಮ ಹಳ್ಳಿಗಾಡಿನ ಭವಿಷ್ಯಗಾರ್ತಿಯಾಗಿ ಜನಪದ, ನಾಟಕ ಕಲೆಗಳ ವಸ್ತುವಾಗಿ ಬಾಳುತ್ತಿದ್ದಾಳೆ.[1]       ಡಾ|| ಎಚ್‌.ಎಂ. ಮಹೇಶ್ವರಯ್ಯ, ಹಚ್ಚೆ: ಒಂದು ಜಾನಪದ ಕಲೆ, ಪು-62.

[2]      A.  A.K. lyer, The Mysore Tribes and Castes, Vol-I  P-445.[1]        Mysore Census Report 1901, Quoted : H.V. Nanjundaiah and L.K. Ananth Krishna lyer. Vol III  P-611.

[2]      ಡಾ|| ಎಚ್‌.ಎಂ. ಮಹೇಶ್ವರಯ್ಯ, ಹಚ್ಚೆ: ಒಂದು ಜಾನಪದ ಕಲೆ, ಪು-15.

[3]      ಜಾನಪದ ಜಗತ್ತು : ಸಂಪುಟ-1, ಸಂಚಿಕೆ-2, ಮಾರ್ಚ್‌1980, ಪು-31.

[4]        ಸಂಯುಕ್ತ ಕರ್ನಾಟಕ (ಸಾಪ್ತಾಹಿಕ ಸೌರಭ), 9-12-1990.

[5]      ಎಲ್.ಗುಂಡಪ್ಪ, ನಾಡಪದಗಳು ಪು-131.

[6]      ಹೇಳಿದವರು: ಪಾಪಯ್ಯನವರ ಪತ್ನಿ ಸಾವಿತ್ರಮ್ಮ ಹಿರೇಬಿದರೆ.

[7]      ಎಲ್.ಗುಂಡಪ್ಪ, ನಾಡಪದಗಳು, ಪು-131.

[8]      ವಿದ್ಯಾರ್ಥಿ ಭಾರತಿ, ಕವಿವಿ ಧಾರವಾಡ, ಜನವೇರಿ 1984, ಪು-70.

[9]      ಎಲ್.ಗುಂಡಪ್ಪ, ನಾಡಪದಗಳು, ಪು-135.