ಕಣಿ ಹೇಳುತ್ತಿರುವ ವ್ಯಕ್ತಿಯ ಹೆಸರನ್ನು ಕೇಳಿ ಗಂಗಣ್ಣನ ಹೆಸ್ರಬಲಕೆ ಕೇಳ್ತೀದೀಯಲ್ಲಣ್ಣ ಕರಕ್ವಾಗೈತೆ ನೂರೊರ್ಸ ಆಯಸ್ವಲ. ಅದು ಕೂಡ ಮನಿಗೆ ಮಾರಿ ಪರರಿಗುಪಕಾರಿ. ನಿನ್ಧರ್ಮ ಬಿಟ್ಟಿಲ್ಲ ಅವಧರ್ಮಕ್ಕೋಗಿಲ್ಲ. ಆದ್ರೂ ಕೂಡ ದೇವರ ದೆಸೆಯಿಂದ ಲಕ್ಷ್ಮೀ ಯೋಗ ಐತೆ. ಕಾಸ ಮಾತ್ರ ಖರ್ಚು ಮಾಡನಲ್ಲ ಮಗನಾರ. ನಿನ ಮನಸ್ಸಾಗೊಂದಾಲೋಚ್ನೆ ಕುರತ್ಗಂಡು ಕೇಳ್ತೀದಿಯಲ್ಲ. ಕೈಯಲ್ಲಿ ಕಾಸಿಲ್ಲ, ಕೊಯ್‌ಅವಳ ಮೂಗ, ಅಂತ ಕುಂತಿದ್ದೀಯಣ್ಣ, ಆದ್ರೂ ಕೂಡ ಅಕ್ಕಿಲ್ಲ ಬ್ಯಾಳಿಲ್ಲ ಶುಕ್ರಾರ ದೇವ್ರೂಟ. ಆದ್ರೂ ಕೂಡ ಮನಸ್ಸಲೋಂದಾಲೋಚ್ನೆ ಕುರುತ್ಗುಂಡು ಕೇಳ್ತಿದ್ದೀಯಾ ಇದೇನು ಹೇಳು ಕೊರವಂಜಿ ಅಂತ. ಈಗ ಯಾ ದಿಕ್ನಲ್ಲಿ ಕುಂತಿರದು ಹೇಳು ಕೊರವಂಜಿ ಅಂತ ಕೇಳ್ತಿದಿಯಲ್ಲಣ್ಣ. ಈ ದಿಕ್ಕಿನಕಡೆ ಆಲೋಚ್ನೆ, ಆಲೋಚ್ನೆ, ಆಲೋಚ್ನೆ, ಆದ್ರೂ ಕೂಡ ಮೀಸಿಮ್ಯಾಲೆ ಮಲ್ಲಿಗ್ಹೂವ ಹಾಕ್ಕೊಂಡಿದೀಯಲ್ಲಣ್ಣ. ಏನೂ ಕಷ್ಟ ಇಲ್ಲ ಗಾಳಿ ಮಳೆ ಕೂಡ್ದಂಗೆ ಕಡ್ತೈನೆ ನಿ ಕಾರ್ಯ, ಕೊರವಂಜಿ ಕಣಿ ಸುಳ್ಳಾಗಲ್ಲ. ನಿನ್ನ ಕಾರ್ಯ ಹಾಲುಕ್ದೆಂಗೆ ಉಕ್ತೈತೆ. ಆದ್ರೂ ಕೂಡ ಮುಂದೆ ಕಷ್ಟ ಐತಾ ಸುಖಾ ಐತಾ ಅಂತ ಕೇಳಿದ್ದೀಯಾ ನೀನೇನು ಯೋಚ್ನೆ ಮಾಡ್ಬೇಡ ಮುಂದೆ ಕಷ್ಟ ಇಲ್ಲ ಸುಖವಾಗುತ್ತೆ ಹೋಗು. ಹೀಗೆಯೇ ಕಣಿ ಮುಂದುವರಿಯುತ್ತದೆ. ಪ್ರಶ್ನೋತ್ತರಗಳಾಗುತ್ತವೆ. ಅವರು ಕೇಳಿದ ಪ್ರಶ್ನೆಗೆ ಕೊರವಂಜಿ ನಯವಾದ ಉತ್ತರ ಕೊಡುತ್ತಾ ಕಣಿ ಮುಗಿಸುತ್ತಾಳೆ. ಈ ಕಣಿಯನ್ನು ಓದುವುದಕ್ಕಿಂತ ಅವರ ಬಾಯಿಂದಲೇ ಕೇಳಬೇಕು. ಜಾನಪದ ಗೀತೆಗಳಲ್ಲಿ ಕಂಡು ಬರುವ ದಾಟಿ ಕೈತೋರೆ ಎನ್ನುವ ಗೀತೆಯ ನಡುಗೆ ಎಲ್ಲ ಮಾಯವಾಗಿ ಇವರ ಕಣಿ ಗದ್ಯಕ್ಕೆ ತಿರುಗಿದೆ.

ಕೊರವಂಜಿ ಈ ಸಾವಿರಾರು ವರ್ಷಗಳಲ್ಲಿ ಜನಪದದ ಮನ ಗೆದ್ದವಳು. ಈಕೆ ಕಣಿ ಹೇಳುವುದು ಜೀವನದ ಒಂದು ಉಪಮಾರ್ಗದಂತೆ ಕಂಡರೂ ತಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳಲು ಬಯಸಿದ ಜನರಿಗೆ ನೇರವಾಗಿ ಅವರು ಮಾಡಿರುವ ತಪ್ಪನ್ನು ತಿಳಿಸಿ, ಭವಿಷ್ಯದಲ್ಲಿ ಎದುರಾಗುವ ಕಷ್ಟಗಳಿಗೆ ಪರಿಹಾರವನ್ನೂ ಸೂಚಿಸಿ ನೆಮ್ಮದಿಯನ್ನುಂಟು ಮಾಡಿದ್ದೇ ಅಲ್ಲದೆ ಸಮಾಜ ಧರ್ಮವನ್ನು ಉಳಿಸಿ ಬದುಕಿನ ಸ್ವಾಸ್ಥ್ಯ ಕಾಯ್ದಿದ್ದಾಳೆ. ಸಕಲರಿಗೂ ಲೇಸನ್ನುಂಟುಮಾಡುವ ಅವಧೂತಿಯಂತೆ ತೋರುತ್ತಾಳೆ. ಸಂಸ್ಕೃತಿಗೆ ಈಕೆ ನೀಡಿರುವ ಕೊಡುಗೆ ಅಪಾರವಾದದ್ದು. ಕೊರವಂಜಿ ದೈವ ದೃಷ್ಟಯುಳ್ಳವಳು ಎಂಬ ನಂಬಿಕೆ ಜನರಲ್ಲಿ ಇದ್ದುದರಿಂದ ಯಾರು ಅವಳ ಬಗ್ಗೆ ತಿರಸ್ಕಾರ ತೋರುತ್ತಿರಲಿಲ್ಲ. ಇಲ್ಲದಿದ್ದರೆ ಇಷ್ಟು ವ್ಯಾಪಕವಾಗಿ ಈ ವೃತ್ತಿ ಬೆಳೆದು ಬರಲು ಸಾಧ್ಯವಾಗುತ್ತಿರಲಿಲ್ಲ. ಇವರು ಹೇಳುತ್ತಿದ್ದ ಕಣಿ ಸತ್ಯವೋ? ಸುಳ್ಳೋ? ಎಂಬುದು ಮುಖ್ಯವಲ್ಲ. ಗಾಬರಿಗೊಂಡ ಮನಸ್ಸಿಗೆ ಸ್ವಾಂತನ ನೀಡುತ್ತಿದ್ದ ಬಗ್ಗೆ ಮೆಚ್ಚುವಂಥದು. ಇದನ್ನು ಒಂದು ರೀತಿಯ ಮಾನಸಿಕ ಚಿಕಿತ್ಸೆ ಎಂದರೂ ತಪ್ಪಾಗಲಾರದು. ಎಷ್ಟೋ ಸಾರಿ ರೋಗಕ್ಕೆ ಕೊಡುವ ಔಷಧಿಗಿಂತ ಮನಸ್ಸಿಗೆ ಮೂಡಿಸುವ ನಂಬಿಕೆಯೇ ಮುದ್ದಾಗುತ್ತದೆ.

ಉಪ್ಪು ಮಾರುವ, ಆಹಾರಧಾನ್ಯ ಮಾರುವ, ವಾದ್ಯ ಮಾಡುವ ಮತ್ತು ವ್ಯವಸಾಯವನ್ನು ಅವಲಂಬಿಸಿದ್ದ ಊರ ಕೊರಮರಲ್ಲಿ ಇದು ತೋರದಿದ್ದರೂ, ಬುಟ್ಟಿ ಮಾಡುವ ಕೊರಮರಲ್ಲಿ ಮತ್ತು ಕುಮಚಿ ಕೊರಮರಲ್ಲಿ ಕೊರಂಚಿಯರು ತೋರುತ್ತಾರೆ.

ಹಚ್ಚೆ :

ಹಚ್ಚೆ ಇದೊಂದು ಪ್ರಾಚೀನ ಜನಪದ ಕಲೆ. ಜನಪದ ಲಲಿತ ಕಲೆಗಳ ಪ್ರಸ್ತಾವ ಮಾಡುವಾಗ ಜಗತ್ತಿನಾದ್ಯಂತ ಸಾರ್ವತ್ರಿಕ ಪದ್ಧತಿಯಾಗಿ ಮೊನ್ನೆಮೊನ್ನೆಯವರೆಗೆ ರೂಢಿಯಲ್ಲಿದ್ದ ಹಚ್ಚೆ ಹೊಯ್‌ಉವ ಸಂಪ್ರದಾಯವನ್ನು ತಪ್ಪದೆ ಗಮನಿಸಬೇಕು.

[1] ಕ್ರಿ.ಪೂ. ೨೦೦೦ ವರ್ಷಗಳ ಹಿಂದೆಯೇ ಈಜಿಪ್ಟಿನಲ್ಲಿ ಈ ಕಲೆ ಬಳಕೆಯಲ್ಲಿದ್ದುದು ಕಂಡು ಬರುತ್ತದೆ. ಗ್ರೀಕರು, ರೋಮನ್ನರು, ಪೂರ್ವ ಜರ್ಮನ್‌ರಲ್ಲಿ ಇದು ಪ್ರಚಲಿತವಿತ್ತೆಂಬುದು ದಾಖಲೆಗಳಿಂದ ತಿಳಿಯುತ್ತದೆ. ಪಾಲಿನೇಷಿಯನ್ ಮೂಲದ ಈ ವಿಶಿಷ್ಟ ಕಲೆ ವಿಶ್ವ ವ್ಯಾಪ್ತಿಯಾಗಿ ಎಲ್ಲ ದೇಶಗಳ ಜನಾಂಗಗಳಲ್ಲಿ ವಿವಿಧ ರೀತಿಯಾಗಿ ಬೆಳೆದು ಬಂದಿದೆ.[2] ಇಂಥ ಹಚ್ಚೆಯ ಉಗಮದ ಬಗೆಗೆ ಅನೇಕ ರೀತಿಯ ಅಭಿಪ್ರಾಯಗಳು ವ್ಯಕ್ತಿವಾಗಿವೆ. ಆದಿಮಾನವ ಪ್ರಕೃತಿಯೊಂದಿಗೆ ಸ್ಪಂದಿಸುತ್ತಾ ಬೌದ್ಧಿಕವಾಗಿ ಬೆಳೆದಂತೆ ಅವನ ಮನಸ್ಸಿನಲ್ಲುಂಟಾದ ಸೌಂದರ್ಯ ಪ್ರಜ್ಞೆಯ ಹಚ್ಚೆಯ ಹುಟ್ಟಿಗೆ ಕಾರಣವಾಗಿರಬೇಕು. ಬಣ್ಣಗಳು ಆತನನ್ನು ಆಕರ್ಷಿಸಿರಬೇಕು.

“The desire to look well, that soto produce on agreable impression by decoration by one’s look, is not puculiar to man alone. Many animals feel and show the same desire. This fact is very remarkable in birds which know how to make their feathers look glossy and show themselves with grace, making the most of their bright colours”.[3]

ಸಹಜವಾಗಿಯೇ ಪ್ರಾಣಿ ಪಕ್ಷಿಗಳು ತಮ್ಮ ರೆಕ್ಕೆ ಪುಕ್ಕಗಳನ್ನು ಅರಳಿಸಿ ಚಂದವಾಗಿ ಕಾಣಲು ಪ್ರಯತ್ನಿಸುವಂತೆ ಅವುಗಳ ಸಂಗಾತಿಗಳಾದ ಮನುಷ್ಯರೂ ತಮ್ಮ ಅಂಗಾಂಗಳನ್ನು ವಿವಿಧ ಬಣ್ಣ ರೇಖೆಗಳ ಮೂಲಕ ಅಲಂಕರಿಸಿಕೊಂಡು ತಮ್ಮ ಸೌಂದರ್ಯ ವೃದ್ಧಿಸಿಕೊಳ್ಳಲು ಪ್ರಯತ್ನಿಸಿರಬೇಕು. ಅಂತೆಯೇ ಬಣ್ಣಗಳನ್ನು ಚಿತ್ರಗಳ ಮೂಲಕ ತನ್ನ ಅಂಗಾಂಗಗಳಲ್ಲಿ ಬಿಡಿಸಿಕೊಳ್ಳಲು ಮಾಡಿದ ಒಂದು ಪ್ರಯತ್ನದಿಂದಾಗಿ ಹಚ್ಚೆ ರೂಪುಗೊಂಡಿರಬೇಕು. ತನ್ನ ಸುತ್ತಲಿನ ಪ್ರಕೃತ್ತಿಯೊಂದಿಗೆ ಸ್ಪಂದಿಸಿ ಬದುಕುತ್ತಿದ್ದ ಆದಿಮಾನ ಅಲ್ಲಿಯ ಪ್ರಾಣಿ ಪಕ್ಷಿಗಳನ್ನು, ಹೂವು ಹಣ್ಣುಗಳನ್ನು ಇತರ ಅನೇಕ ವಿಶೇಷತೆಗಳನ್ನು ಗಮನಿಸಿ ಮನಸ್ಸಿಗೆ ತಂದುಕೊಂಡಂತೆ, ಅವುಗಳ ಚಿತ್ರಗಳನ್ನು ಬಿಡಿಸುವ ಹವ್ಯಾಸವನ್ನು ಬೆಳೆಸಿಕೊಂಡಿರಬೇಕು. ಅಂಥ ಚಿತ್ರಗಳನ್ನು ತನ್ನ ಅಂಗಾಂಗಗಳ ಮೇಲೆ ಬಿಡಿಸಿಕೊಳ್ಳುವ ಅಪೇಕ್ಷೆಯನ್ನು ಹೊಂದಿದ ಸುಟ್ಟ ಗಾಯಗಳಿಂದಾದ ಮೈಮೇಲಿನ ಕಲೆಯೂ ಇದಕ್ಕೆ ಪೂರಕವಾಯಿತು. ಮೈಯಲ್ಲಿ ಗುರುತು ಉಳಿಯಲು ಬೇಕಾಗುವ ಬಣ್ಣವನ್ನು ಶೋಧಿಸಿ ಮುಳ್ಳುಗಳ ಸಹಾಯದಿಂದ ಹಚ್ಚೆಯನ್ನು ರೂಪಿಸಿಕೊಂಡಿರಬೇಕು. ಮನುಷ್ಯನಿಗೆ ತಾತ್ಕಾಲಿಕ ಬಣ್ಣದಿಂದ ತೃಪ್ತಿಯಾದಂತೆ ಕಾಣಲಿಲ್ಲ. ಆದ್ದರಿಂದಲೇ ಶಾಶ್ವತ ಬಣ್ಣವನ್ನೂ ಕಂಡುಹಿಡಿದ. ಈ ಹಿನ್ನೆಲೆಯಲ್ಲಿಯೇ ಹಚ್ಚೆ ಶಾಶ್ವತ ಬಣ್ಣದ ಕಲೆಯಾಗಿ ಉಗಮವಾಯಿತು. making (The body painting of primeval man apparently passed into tottooing as a means of securing durable designs”[4]

ಡಾ.ಕೃಷ್ಣಾನಂದ ಕಾಮತ್‌ ಅವರು ಮನುಷ್ಯ ತನ್ನ ಆಹಾರಕ್ಕಾಗಿ ಅಲೆಯುತ್ತಿದ್ದಾಗ ಕ್ರೂರ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಮತ್ತು ಅವುಗಳಂತೆ ಬಣ್ಣ ಲೇಪನ ಮಾಡಿಕೊಂಡು ಅತಿ ಚತುರತೆಯಿಂದ ಬೇಟೆಯಾಡುವ ಸಲುವಾಗಿ ಹಚ್ಚೆಯನ್ನು ಕಲಿತನೆನ್ನುವ ಅಭಿಪ್ರಾಯವೂ ಇದೆ.[5] ಎನ್ನುತ್ತಾರೆ. ಹಚ್ಚೆ ಬೇಟೆಯ ಸಲುವಾಗಿ ಕಪ್ಪು ಬಣ್ಣದ ಹಚ್ಚೆಯನ್ನು ಮೈತುಂಬ ಹೊಯ್ಸಿಕೊಳ್ಳುತ್ತಿದ್ದರು ಎನ್ನುವುದಕ್ಕಿಂತ ಇದು ಮೊದಲು ಅಂಗಾಂಗ ಸೌಂದರ್ಯಕ್ಕಾಗಿ ರೂಪುಗೊಂಡು ನಂತರ ಧಾರ್ಮಿಕ ಅಂಶಗಳನ್ನು ಮೈಗೂಡಿಸಿಕೊಂಡು ಅಲ್ಲಲ್ಲಿಯ ನಂಬಿಕೆ ನಡಾವಳಿಗಳಿಗೆ ಒಳಗಾಗುತ್ತ ಜಗತ್ತಿನಾದ್ಯಂತ ಬೆಳೆಯಿತು ಎಂದು ಹೇಳುವುದೇ ಹೆಚ್ಚು ಸೂಕ್ತವಾದುದು. ಬೇಟೆಯ ಸಲುವಾಗಿ ಮೈತುಂಬ ಹಚ್ಚೆ ಹೊಯ್ಸಿಕೊಳ್ಳುತ್ತಿದ್ದುದು ಒಂದು ಕಾಲಕ್ಕೆ ಇದ್ದುದೇ ಆಗಿದ್ದರೆ ಇಂದು ಜಗತ್ತಿನ ಯಾವ ಭಾಗದಲ್ಲಾದರೂ ಅದರ ಪಳೆಯುಳಿಕೆಯಾಗಿ ಜನರಲ್ಲಿ ಇದು ಉಳಿಯಬೇಕಾಗಿತ್ತು. ಅಂಥ ಆಧಾರಗಳು ದೊರೆತೆ ಈ ಮಾತಿಗೆ ಅರ್ಥ ಬರುತ್ತದೆ.

“ಆದಿ ಮಾನವರಲ್ಲಿ ಬಣ್ಣಗಳ ಆಕರ್ಷಣೆ ಮತ್ತು ಲೈಂಗಿಕ ಮಿಡಿತಕ್ಕೆ ಸಂಬಂಧವಿತ್ತು ಎಂಬುದನ್ನು ಕಡೆಗಣಿಸುವಂತಿಲ್ಲ.” eval ma (It is also believed that in primitive man there is close connection between love of colour and sexual impulse.)”[6] ಆದಿಯಲ್ಲಿ ಅನೇಕ ಕಾರಣಗಳ ಭಾವನಾತ್ಮಕ ತುಮುಲದಿಂದ ರೂಪು ತಳೆದು ಸೌಂದರ್ಯ ಸಾಧನವಾಗಿ ಬೆಳೆದ ಹಚ್ಚೆ ಮುಂದೆ ಧಾರ್ಮಿಕ ಅಂಶಗಳನ್ನು ಮೈಗೂಡಿಕೊಂಡು ತನ್ನ ಸ್ಥಾನವನ್ನು ಗಟ್ಟಿಯಾಗಿಸಿಕೊಂಡಿದೆ.[7] ಹಚ್ಚೆಯಲ್ಲಿ ಮುಖ್ಯವಾಗಿ ಎರಡು ರೀತಿಯನ್ನು ಕಾಣಬಹುದು. ಅವುಗಳಲ್ಲಿ ಒಂದು ಚರ್ಮದ ಮೇಲೆ ರೇಖೆಗಳನ್ನು ಮೂಡಿಸಿ ಹಚ್ಚೆಯ ಶಾಶ್ವತ ಚಿತ್ತಾರವನ್ನು ಮೂಡಿಸುವ ಸರಳ ಕ್ರಮ. ಮತ್ತೊಂದು – ಚರ್ಮವನ್ನು ಕತ್ತರಿಸಿ ಅದರಾಳಕ್ಕೆ ಕಪ್ಪನ್ನು ತುಂಬಿ ಚರ್ಮವನ್ನು ಎಬ್ಬಿಸಿ ಉಬ್ಬು ಚರ್ಮ ಕೆತ್ತನೆ  (Skinbase life) ಮಾಡುವ ಕ್ರಮ. ಇವುಗಳನ್ನು ಇಂಗ್ಲಿಷಿನಲ್ಲಿ ಕ್ರಮವಾಗಿ tottooing ಹಾಗೂ Cricatrization  ಎಂಬುದಾಗಿ ಕರೆಯುತ್ತಾರೆ.[8] ಇವುಗಳಲ್ಲಿ ಮೊದಲನೆಯ taottooing ಕ್ರಮ ದಕ್ಷಿಣ ಕರ್ನಾಟಕದಲ್ಲಿ ರೂಢಿಯಲ್ಲಿದೆ.

ಚಾರ್ಲ್ಸ್‌ಡಾರ್ವಿನ್ ಹಚ್ಚೆಯ ಬಗ್ಗೆ ಉತ್ತರ ಧೃವದಿಂದ ಹಿಡಿದು ದಕ್ಷಿಣ ಧೃವ ಪ್ರಾಂತದ ನ್ಯೂಜಿಲ್ಯಾಂಡ್‌ನವರಗೆ ಇರುವ ಯಾವುದೊಂದು ದೊಡ್ಡ ದೇಶದಲ್ಲಿಯೇ ಆಗಲಿ ಹಚ್ಚೆ ಹಾಕಿಸಿಕೊಳ್ಳದೇ ಇರುವಂಥ ಬುಡಕಟ್ಟುಗಳ ಪ್ರಾಚೀನ ಸಂಸ್ಕೃತಿಯುಳ್ಳ ಜನರನ್ನು ಹೆಸರಿಸುವುದು ಅಸಾಧ್ಯ ಎಂದು ಹೇಳಿದ್ದಾನೆ.[9] (“Not one great country can be named from polar regions in the north to Newzealand in the south in which the aborgines do not tatto themselves”)  ಎಂದು ಹಚ್ಚೆಯ ಸಾರ್ವತ್ರಿಕತೆಯನ್ನು ಹೇಳಿದರೆ ಡಬ್ಲ್ಯು ಜೋಯಿಸ್ಟ್ ಎಂಬಾತ ಕೂಡ “ತಮ್ಮ ದೇಹಕ್ಕೆ ಬಣ್ಣ ಹಚ್ಚಿಕೊಳ್ಳದ ಇರುವ ಅಥವಾ ಹಚ್ಚೆ ಚುಚ್ಚಿಸಿಕೊಳ್ಳದಿರುವ ಜನರೇ ಜಗತ್ತಿನಲ್ಲಿಲ್ಲ”[10] ಎಂದಿದ್ದಾನೆ. ಈ ಹೇಳಿಕೆಗಳನ್ನು ಗಮನಿಸಿದರೆ ಹಚ್ಚೆ ಆಯಾ ಪ್ರದೇಶದ ಜನರ ಸಂಸ್ಕೃತಿಯ ಒಂದಂಗವಾಗಿ ಬೆಳೆದು, ಲೋಕಪ್ರಿಯತೆಯನ್ನು ಪಡೆದುಕೊಂಡಿದೆ ಎಂಬುದು ವ್ಯಕ್ತವಾಗುತ್ತದೆ.

ಧಾರ್ಮಿಕ ಸಂಕೇತವಾಗಿ, ಪ್ರಿತಿಯ ಕುರುಹಾಗಿ, ಸೌಂದರ್ಯ ಮಾಧ್ಯಮವಾಗಿ ಜನಮನವನ್ನಾಳಿದ ಹಚ್ಚೆ ಭಾರತದಲ್ಲಿ ಅಥವಾ ಕರ್ನಾಟಕದಲ್ಲಿ ಯಾವಾಗ ಕಾಣಿಸಿಕೊಂಡಿತೆಂಬುದರ ಬಗ್ಗೆ ನಿಖರವಾಗಿ ಹೇಳಲು ಯಾವುದೇ ಆಧಾರಗಳಿಲ್ಲ. ಗಂಗವ್ವ ಚುಚ್ಚಿಕೊಂಡ ಹಣಚಿ ಗರತಿತನ ತಂತ ಹಚ್ಚಿ ಬಟ್ಟಿನ ತುಂಬ ಕುಂಕುಮ ಬಟ್ಟು ಚೆಂದ”[11] ಸತ್ತರೆ ನಮಕೂಟ ಮತ್ತೇನ ಬರಬಹುದು, ಹಚ್ಚೆಯ ಬುಟ್ಟು ಸುಲಿ ಹಲ್ಲು | ಕಟ್ಟಿಕೋ ತುರುಬು. ಅತ್ತೆ ಬೈದರೆ ಒಪ್ಪು, ಮಾವ ಬೈದರೆ ಒಪ್ಪು ಹಚ್ಚೆಯ ಬೊಟ್ಟು ಹಣೆಗೊಪ್ಪು, ತಂಗ್ಯೆವ್ವ ಚೊಚ್ಚಾಲ ಬಸಿರು ನಿನಗೊಪ್ಪು,[12] ಹಚ್ಚೆ ಬೊಟ್ಟಿನ ಕೈ ಒತ್ತಿ ಹಿಡಿಯಲು ಬ್ಯಾಡಾ ನೆತ್ತರಿಳಿದಾವ ಬೆರಳೀಗೆ ಮುಂತಾದ ಮಾತುಗಳು ಜನಪದದಲ್ಲಿ ವ್ಯಾಪಕವಾಗಿದ್ದ ಹಚ್ಚೆಯ ಸ್ಥಾನವನ್ನು ವಿವರಿಸುವೆ.

ಇಂಥ ಹಚ್ಚೆಗಳನ್ನು ಹಾಕುತ್ತಿದ್ದವರು ಜಾನಪದರು. ಹಚ್ಚೆಗಳು ದೃಷ್ಟಿ ಬೀಳುವಂತ ದೇಹದ ಭಾಗದಲ್ಲಿದ್ದು ಆಕರ್ಷಣೀಯವಾಗಿರಬೇಕು ಎಂಬುದೂ ಇದೆ. “Both these modes (tatu and cictrization i.e. cutting the body to mark) of personal decoration are of considerable antiquity and of wide distribution; they have been found among people of greatly varying culture, from the aborings of Australia, who adorn their bodies with cicatries, to the polynesians and Japanese, who have developed tatu proper into a fine art at a very early stage man no doubt felt a desire for personal decoration and learnt to use pigment for this purpose; and it is possible that tatu was resorted to as a means of giving a permanent character to the designs thus made to beautiful the body at a stage prior to the body use of clothes”[13]  ಎನ್ನುವಲ್ಲಿ ಹಚ್ಚೆಯ ಹಲವು ಅಂಶಗಳೊಂದಿಗೆ ಆಸ್ಟ್ರೇಲಿಯಾ ಮತ್ತು ಜಪಾನ್ ದೇಶಗಳಲ್ಲಿ ಇದನ್ನು ಲಲಿತ ಕಲೆಯಾಗಿ ಬೆಳೆಸಿದ ಬಗ್ಗೆಯೂ ತಿಳಿಯುತ್ತದೆ.

ನಮ್ಮಲ್ಲಿ ೧೨ನೇ ಶತಮಾನಕ್ಕಾಗಲೆ ಹಚ್ಚೆ ಜನಪದದಿಂದ ಶಿಷ್ಟರಲ್ಲಿಯೂ ಕಾಣಿಸಿಕೊಳ್ಳುವಷ್ಟು ಪ್ರಚಾರ ಹೊಂದಿತ್ತು ಎಂಬುದು ಸಾಹಿತ್ಯದಿಂದ ತಿಳಿಯುತ್ತದೆ. ಮತ್ತು ಹಚ್ಚೆಯ ಬಗ್ಗೆ ಕಂಡು ಬರುವ ನಂಬಿಕೆಗಳು, ನಂಬಿಕೆಗಳಾಗಿ ರೂಪುಗೊಳ್ಳುವಲ್ಲಿ ತೆಗೆದುಕೊಂಡಿರುವ ಅವಧಿಯೂ ಕಡಿಮೆಯಲ್ಲ.

ಮಲ್ಲಿಕಾರ್ಜುನ ಸೂಕ್ತ ಸುಧಾರ್ಣವದಲ್ಲಿ ಬಂದಿರುವ “ಅಣಚಿತನವಂಕೈಯೊಳ್ ನಿನ್ನೋಲೆ ಭಾಗ್ಯದ ಭದ್ರ ಲಕ್ಷಣದ ಪದದೊಳ್ ಸಂದೀ ಸೌಭಾಗ್ಯದಿಂಸ್ವಜನಗಳಿಂ ತಣಿಸೆ” ಎಂಬಲ್ಲಿ ಹಚ್ಚೆಯ ಶ್ರೇಷ್ಠತೆ ಮೆರೆದಿದೆ. ೧೨ನೇ ಶತಮಾನದ ಈ ಕಾವ್ಯದಲ್ಲಷ್ಟೇ ಅಲ್ಲದೆ ಶಿವಶರಣರ ಗಮನವನ್ನು ಹಚ್ಚೆ ಸೆಳೆದಿದೆ. ಬಸವಣ್ಣನವರು ತಮ್ಮ ವಚನವೊಂದರಲ್ಲಿ ” ಐದೆ ಅಣಚಿಯಿಲ್ಲದವಳಿಗೆ ಸೌಭಾಗ್ಯದ ಹೂವಿನ ಬೊಟ್ಟೇಕೆ” ಎಂದು ಹೇಳುವಲ್ಲಿ ಆ ಕಾಲಕ್ಕೆ ಹಚ್ಚೆಯು ಸೌಭಾಗ್ಯದ ಕುರುಹಾಗಿ ಬೆಳೆದು ಬಂದಿರುವ ನಂಬಿಕೆಯನ್ನು ಸೂಚಿಸುತ್ತದೆ. ಅದೇ ಕಾಲಕ್ಕೆ ಚನ್ನಬಸವಣ್ಣ ತನ್ನ ವಚನದಲ್ಲಿ ಹರಭಕ್ತರು ಹಸಿರು ಹಚ್ಚೆಗಳನ್ನು ಹಾಕಿಸಿಕೊಳ್ಳುವುದು ತಪ್ಪು ಎಂಬ ಮಾತೂ ಬರುತ್ತದೆ. ಹಚ್ಚೆ ಹಾಕಿಸಿಕೊಂಡ ಹರಭಕ್ತೆಯ ಕೈಯಿಂದ ಕೊಂಬ ಪ್ರಸಾದ ಪ್ರಸಾದವಲ್ಲ ಅದು; ನರಮಾಂಸ, ಹೆಂಡ ಹಾಗೂ ನಾಯಿಉ ರಕ್ತಕ್ಕೆ ಸಮಾನ ಎಂದು ಕಟುವಾಗಿ ಟೀಕಿಸುತ್ತಾರೆ.[14] ಅದು ಏನೇ ಇರಲಿ ಹಚ್ಚೆಯ ಪ್ರಾಚೀನತೆಯಂತೂ ಈ ಮಾತುಗಳಿಂದ ವ್ಯಕ್ತವಾಗುತ್ತದೆ.

“ಮಾರ್ಕೋ ಪೋಲೋ, ನಿಕೋಲೋಕೊಂಟಿ, ತಾವರ್ ನಿಯರ್ ಮುಂತಾದ ಪಾಶ್ಚಿಮಾತ್ಯ ದೇಶದ ಪ್ರವಾಸಿಗರು ಭಾರತಕ್ಕೆ ಬಂದು ಇಲ್ಲಿಯ ಪುರುಷ ಮತ್ತು ಸ್ತ್ರೀಯರಲ್ಲಿ ಪ್ರಚಲಿತವಿರುವ ಹಚ್ಚೆಯ ಬಗೆಗೆ ಬರೆದಿದ್ದಾರೆ.[15] ಪ್ರಾಚೀನವಾದ ಈ ಕಲೆ ನಮ್ಮಲ್ಲಿಯೂ ವೈವಿಧ್ಯಮಯವಾಗಿ ಬೆಳೆದು ತನ್ನ ಸ್ಥಾನವನ್ನು ಸ್ಥಿರವಾಗಿಸಿತ್ತು. ಆದರೆ ನಾಗರಿಕತೆಯ ಪ್ರಭಾವದಿಂದ ಇಂದು ಅದು ದೂರವಾಗುತ್ತಿರುವುದು ವಿಷಾದದ ಸಂಗತಿ.

ದ್ರಾವಿಡ ಭಾಷೆಗಳಾದ ತಮಿಳು ಮತ್ತು ಮಳಯಾಲಗಳಲ್ಲಿ ಹೇಳುವ ಪಚ್ಚೆಗೆ ಕನ್ನಡದಲ್ಲಿ ಹಚ್ಚೆ ಎಂದು ಕರೆಯುತ್ತಾರೆ. ಪಚ್ಚೆ ಅಂದರೆ ಹಸಿರು. ದೇಹಕ್ಕೆ ಸೇರಿದ ಕಪ್ಪು ಹಸಿರಾಗಿ ಕಾಣುತ್ತದೇ ಇದಕ್ಕೆ ಕಾರಣವಾಗಿರಬಹುದು. ಪಚ, ಪಚ್ಚ, ಪಚ್ಚೆ ಎಂದು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಬಳಸಲ್ಪಡುವ ಈ ಪದಗಳಿಗೆ ಇತರ ದ್ರಾವಿಡ ಭಾಷೆಗಳಲೂ ಇಂಥವೇ ರೂಪಗಳಿವೆ.

ಕನ್ನಡದಲ್ಲಿ ಹಚ್ಚೆಗೆ ಸಮಾನಾಂತರವಾಗಿ ಅಚ್ಚೆ, ಅಜ್ಜೆ, ಅಂಚೆ, ಹಂಚೆ, ಅಣಚೆ ಎಂಬುದರ ಜೊತೆಗೆ ಹಸಿರು ಎಂಬ ಶಬ್ದವೂ ರೂಢಿಯಲ್ಲಿದೆ. ದಕ್ಷಿಣ ಕರ್ನಾಟಕದಲ್ಲಿ ಶಿಷ್ಟರ ಹಚ್ಚೆ ಎಂದು ಕರೆದರೆ ಜನಪದರು ಅಜ್ಜೆ,| ಹಸಿರು ಎಂದು ಕರೆಯುತ್ತಾರೆ. ಹಚ್ಚೆಗಳನ್ನು ಕುರಿತ ಮುತ್ತೈದೆ ತನಕ ಇವು ಮೇಲ್ದೋ ಎಂಬ ಆಶಯ ಅಂದಿನ ಸಮಾಜದಲ್ಲಿ ಸಾಮಾನ್ಯವಾಗಿತ್ತು. ಗಿಂಡಿ ಇದ್ದೋಳು ಗಂಡನಿಗೆ ನೀರ ಕೊರಬಾರ‍್ದು, ರಾಶಿಕಣಕ್ಕೆ ಹಚ್ಚೆ ಇಲ್ದೋಳು ಹೋಗಬಾರ‍್ದು ಎಂಬಂತ ಮಾತುಗಳೂ ಇವೆ. ಇವೆಲ್ಲ ಹಿಂದೂಗಳಿಗೆ ಮಾತ್ರ ಅನ್ವಯಿಸುವ ಮಾತುಗಳು.

ಇತರೇ ಧರ್ಮಗಳಲ್ಲಿಯೂ ಇಂಥ ನಂಬಿಕೆಗಳು ಇಲ್ಲದಿದ್ದರೆ ಹಚ್ಚೆ ಕಲೆ ಅವರಲ್ಲಿ ಬೆಳೆಯುತ್ತಿರಲಿಲ್ಲ. ಸೌಂದರ್ಯವರ್ಧನೆಯೋ, ಧಾರ್ಮಿಕ ಕಾರಣವೋ ಅಥವಾ ಅಂದಿನ ಬದುಕಿನ ಅಗತ್ಯಕ್ಕೆ ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಹಚ್ಚೆ ಜಗತ್ತಿನಾದ್ಯಂತ ಬೆಳೆದು ಬಂದಿದೆ. ಕೆಲವು ಜಾತಿಯವರಲ್ಲಿ ಹಚ್ಚೆ ಹಾಕಿಸಿಕೊಳ್ಳದೇ ಇರುವುದೂ ಉಂಟು ಕ್ರಿಶ್ಚಿಯನ್ನರು ಶಿಲುಬೆ ಮುಂತಾದ ಹಚ್ಚೆಯ ಚಿತ್ರಗಳನ್ನು ಹಾಕಿಸಿಕೊಳ್ಳುವುದು ಕಂಡು ಬಂದರೂ ಮುಸ್ಲಿಮರು ಹೆಚ್ಚಾಗಿ ಕಾಣಿಸಿಕೊಳ್ಳುವುದು ಕಂಡು ಬರುವುದಿಲ್ಲ.  ಬ್ರಾಹ್ಮಣರಲ್ಲಿಯೂ ಹಚ್ಚೆ ಹಾಕಿಸಿಕೊಳ್ಳುವುದು ತುಂಬಾ ಕಡಿಮೆ ಅಥವಾ ಇಲ್ಲವೆಂದರೂ ಸರಿಯೆ. ಮೇಲ್ಜಾತಿಯವರಾದ ನಾವು ಶೂದ್ರರಿಂದ ಮೈ ಮುಟ್ಟಿಸಿಕೊಳ್ಳಬಾರದು ಎಂಬ ಮಡಿವಂತಿಕೆಯೂ ಇದಕ್ಕೆ ಕಾರಣವಾಗಿರಬಹುದು. ಅವರ ಧಾರ್ಮಿಕ ನಂಬಿಕೆಯೂ ಇದಕ್ಕೆ ಅಡ್ಡಿಯಾಗಿರಬಹುದೆಂದು ತೋರುತ್ತದೆ. ಇದೊಂದು ಅಭಿಪ್ರಾಯ ಮಾತ್ರ.

ಹಚ್ಚೆಯ ಚರಿತ್ರೆ ಏನೇ ಇದ್ದರೂ ಕರ್ನಾಟಕದಲ್ಲಿ ಅನೇಕ ಜಾತಿಯ ಜನ ಹಚ್ಚೆ ಹೊಯ್ಯುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಡಾ.|| ನಂ.ತಪಸ್ವೀಕುಮಾರ್ ಅವರು “ಕೊರವಂಜಿ, ಕೊರಮರು, ಕುಕ್ಕೆ ಕೊರಮರು, ಸಿಳ್ಳೆಕ್ಯಾತರು, ಮೇದಾರರು, ಜೋಗಿಗಳು, ಬುರುಡೆ ಬೆಸ್ತರು, ಮತ್ತು ಚಿತ್ತ ಮರಾಠಿ ಜನ ಮುಂತಾದ ಜಾತಿಯ ವಯಸ್ಕರಾದ ನುರಿತ ಹೆಂಗಸರು ಹಚ್ಚೆ ಹೊಯ್ಯುತ್ತಿದ್ದರು,[16] ಎಂದು ಹೇಳಿದ್ದಾರೆ. ಆದರೆ ತಮ್ಮ ಪ್ರೌಢ ಪ್ರಬಂಧದಲ್ಲಿ ಕೊರಮರ ವಿಷಯವನ್ನು ಹೇಳದೆ ಇರುವುದು ಆಶ್ಚರ್ಯವೆನಿಸುತ್ತದೆ.

ಡಾ|| ಎಚ್.ಎಂ.ಮಹೇಶ್ವರಯ್ಯ ಅವರೂ ಕೂಡ “ಕೊರಮರ, ಕುಕ್ಕೆ ಕೊರಮರ, ಕರೆಗಾರರು, ಬೆಸ್ತರು, ಗುಂಡೆ ಬೆಸ್ತರು, ಬುರುಡೆ ಬೆಸ್ತರು, ಕೊರವಂಜಿಗಳು, ಬ್ಯಾಡರು, ಕಿಳ್ಳೆ ಕ್ಯಾತರು, ಶಿಳ್ಳೆ ಕ್ಯಾತರು, ಮೇದಾರರು, ಗೊಂದಲಿಗರು, ಜೋಗೇರರು, ಇಡ್ಡರು ಗೊಂಬೆಯಾಟದ ಮರಾಠಿಗರು, ಜಾತಿಗಾರರು, ಕುರುಬರು, ಹಚ್ಚೆ ಹಾಕುತ್ತಾರೆ.[17] ಎಂದಿದ್ದಾರೆ. ಈ ಮೇಲಿನ ಹೇಳಿಕೆಗಳಲ್ಲಿ ಕೊರಮರು, ಕುಕ್ಕೆ ಕೊರಮರ ಮತ್ತು ಕೊರವಂಜಿಗಳು ಎಂಬವು ಒಂದೇ ಬುಡಕಟ್ಟಿನ ವಿವಿಧ ಹೆಸರುಗಳು ಎಂಬುದನ್ನು ಗಮನಿಸದೇ ಇರುವುದು ಕಂಡು ಬರುತ್ತದೆ.

ಹಚ್ಚೆ ಹೊಯ್ಯುವ ಈ ಮೇಲೆ ಹೇಳಿದ ಎಲ್ಲ ಜಾತಿಯವರೂ ಈ ಕಲೆಯನ್ನು ಏಕಕಾಲದಲ್ಲಿ ರೂಢಿಸಿಕೊಂಡಿರುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮೊದಲು ಹಚ್ಚೆ ಹಾಕಲು ಕಲಿತವರು ಯಾರು ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ, ಆಯಾ ಜಾತಿಯ ಜೀವನ ವಿಧಾನ, ನಡವಳಿಕೆ, ಕಾರ್ಯಪ್ರವೃತ್ತಿ ಮುಂತಾದವುಗಳ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವ ಜಾತಿಯ ಜನ ಮೊದಲು ಹಚ್ಚೆ ಹಾಕಲು ಪ್ರಾರಂಭಿಸಿರಬಹುದು ಎಂಬ ಬಗ್ಗೆ ವಿಚಾರ ಮಾಡಬಹುದು.

ಮೇಲೆ ಹೇಳಿದ ಜಾತಿಯವರಲ್ಲಿ ಕುರುಬರು ಮತ್ತು ಬ್ಯಾಡರನ್ನುಳಿದು ಇತರೆಯವರೆಲ್ಲ ಬೇರೆ ಬೇರೆ ಭಾಷೆಗಳನ್ನಾಡುತ್ತಾರೆ. ಆದ್ದರಿಂದ ಇವರ ಮೂಲ ಬೇರೆಯೇ ಕರ್ನಾಟಕವಲ್ಲ ಎಂಬುದು ತಿಳಿಯುತ್ತದೆ. ಆದರೂ ಹೆಚ್ಚಾಗಿ ಕರ್ನಾಟಕದಲ್ಲಿ ಕೃಷ್ಣ ಕೊರಮರ ಹಚ್ಚೆ ಹೊಯ್ಯುವುದರಲ್ಲಿ ಪರಿಣಿತರು.[18] ಬಹಳ ಹಿಂದಿನಿಂದಲೂ ಇವರು ಹಚ್ಚೆ ಕಲೆಯನ್ನು ಮುಂದೆವರಿಸಿಕೊಂಡು ಬಂದಿರುವ ಬಗ್ಗೆ ಅನೇಕ ವಿದ್ವಾಂಸರು ದಾಖಲಿಸಿದ್ದಾರೆ. ಕೊರಮರ ಹೆಂಗಸರ ವ್ಯವಹಾರವೆಲ್ಲ ಹಳ್ಳಿಯ ಗರತಿಯರ ನಡುವೆ ನಡೆಯುತ್ತಿತ್ತು. ಬಿದಿರು ಬುಟ್ಟಿಗಳನ್ನಾಗಲಿ, ಕೊಳ್ಳಲು ಗರತಿಯರೇ   ಮುಂದಾಗುತ್ತಿದ್ದರು. ಕಣಿಯನ್ನು ಕೇಳುತ್ತಿದ್ದರು. ಹೀಗೆ ಹೆಣ್ಣು ಮಕ್ಕಳು ಒಂದಾಗಿ ಸೇರಿದ ಕಡೆ ಹಚ್ಚೆ ಹಾಕಲು ಇವರು ಮುಂದಾತ್ತಿದ್ದುದು ಸಾಮಾನ್ಯವಾದುದರಿಂದ ಹಚ್ಚೆ ಇವರಿಂದಲೇ ಮೊದಲು ಕರ್ನಾಟಕದಲ್ಲಿ ರೂಢಿಯಾಗಿರಬೇಕು. ಹೆಚ್ಚಾಗಿ ಇವರು ವ್ಯಾಪಾರವೆಲ್ಲವೂ ಕಾಳು, ಅಂದರೆ ಬೆಳೆದ ಆಹಾರ ಧಾನ್ಯಗಳ ಮೂಲಕ ನಡೆಯುತ್ತಿದ್ದುದರಿಂದ ಹೆಂಗಸರೇ ಹೆಚ್ಚಾಗಿ ಈ ವ್ಯವಹಾರದಲ್ಲಿ ತೊಡಗುತ್ತಿದರು. ದುಡ್ಡಿಗಾಗಿ ಗಂಡಸರನ್ನು ಕಾಯುತ್ತಿರಲಿಲ್ಲ. ಆದ್ದರಿಂದ ಕೊರವಂಜಿಯರು ಹಳ್ಳಿಯಲ್ಲಿ ತಮ್ಮ ವ್ಯಾಪಾರ ವ್ಯವಹಾರದ ಜೊತೆಗೆ ಅಲ್ಲಿ ನೆರೆದ ಹೆಂಗಸರಿಗೆ ಮಕ್ಕಳಿಗೆ ಹಚ್ಚೆಯನ್ನು ಹಾಕುತ್ತಿದ್ದರು. ಹಚ್ಚೆ ಹೊಯ್ತೇನ ಹೊಯ್ಸಿಕೋ, ಬರೀಕೈಲಿದ್ದೀಯೆ ಮುತ್ತೈದೆ, ಬರಿಕೈಲಿರಬಾರದು. ನಿನಕೈಗೆ ಅಚ್ಚೆ ಎಂಥಾ ಚೆಂದಾಗಿರುತ್ತೆ ಎಂದು ಮನ ಸೆಳೆಯುತ್ತಿದ್ದರು ಮತ್ತು ಪ್ರೇರೇಪಿಸಿ ಹಚ್ಚೆ ಹಾಕುತ್ತಿದ್ದರಿ. ಅಂದರೆ ಹಳ್ಳಿಯ ಹೆಣ್ಣು ಮಕ್ಕಳ ಜೊತೆ ಬೆರೆತು ಕೊರವಂಜಿಯರು ತಮ್ಮ ಉದ್ದೇಶ ಸಾಧಿಸಿಕೊಳ್ಳಲು ಅವಕಾಶ ಹೆಚ್ಚಾಗಿತ್ತು. ಇದು ಕೊರವಂಜಿಗಳಿಗೆ ಒಂದು ಲಲಿತ ಕಲೆಯಾಗದೆ ಹೊಟ್ಟೆಪಾಡಿನ ವೃತ್ತಿಯಾಯಿತು; ಇದನ್ನು ಪ್ರೀತಿಸುವ ಗ್ರಾಮೀಣ ಜನರಿಗೆ ಕಲೋಪಾಸನೆಯೂ ಮಾನಸಿಕ ತೃಪ್ತಿಯೂ ಸಾಧಿತವಾದಂತಾಯಿತು.

“ಹಚ್ಚೆ ಹೊಯ್ಯುವವರೆಲ್ಲ ಸಾಮಾನ್ಯವಾಗಿ ಹೆಂಗಸರು, ಕಣಿ ಹೇಳಿ ಭಿಕ್ಷೆ ಎತ್ತುತ್ತಾ ಊರೂರು ತಿರುಗುವ ಕೊರವಂಜಿಯರು. ಅವರು ಕಪ್ಪು, ಕೆಂಪು, ಹಸಿರು ಮೊದಲಾದ ಬಣ್ಣವನ್ನು ಸೂಜಿಯಲ್ಲಿ ಅದ್ದಿಕೊಂಡು ಹಚ್ಚೆ ಹುಯ್ಸಿಕೊಳ್ಳುವವರ ಚರ್ಮಕ್ಕೆ ಚುಚ್ಚಿ ಬೇಕಾದ ಆಕಾರವನ್ನು ನಿರ್ಮಿಸುತ್ತಾರೆ.[19] ಎಂದು ಎಲ್. ಗುಂಡಪ್ಪನವರು ಹೇಳಿದ್ದಾರಾದರೂ ಕೆಂಪುಮಸಿ (ಬಣ್ಣ) ಯನ್ನು ಬಳಸುವುದರ ಬಗ್ಗೆ ಎಲ್ಲಿಯೂ ತಿಳಿಯುವುದಿಲ್ಲ.

ಕೊರಮರ ತಮ್ಮ ಕುಳುವ ಭಾಷೆಯಲ್ಲಿ ಹಚ್ಚೆಯನ್ನು ಪಚ್ಚಿ ಎಂದು ಕರೆಯುತ್ತಾರೆ. ಪಚ್ಚೆ ಎಂದರೆ ಹಸಿರು ಎಂಬ ಅರ್ಥದ ಜೊತೆಗೆ ಹಸಿಯಾದದ್ದು ಎಂಬ ಅರ್ಥವೂ ಇದೆ. ಕೇರಳದಲ್ಲಿ ಹಚ್ಚೆ ಹಾಕುವ ವಿಧಾನಕ್ಕೆ ಪಚ್ಚೆಕುತುಕ ಎನ್ನುವುದರ ಬಗ್ಗೆ ಶ್ರೀ ಎಲ್.ಕೆ.ಅನಂತ ಕೃಷ್ಣ ಐಯ್ಯರ್ ಅವರು “In Malabar and Cochin tatooing is known as “Pachakutta” or prinking with green colour. it is thus done”[20] ಎಂದು ಗುರ್ತಿಸಿದ್ದಾರೆ. ಅಲ್ಲದೆ ಕರ್ನಾಟಕದಲ್ಲಿ “In Mysore both the sex are tatooead by trained woman, of Koravanji, Koramas, Kukke Koramas, sillekyatars, Medars, Jogis, Burude besthas and puppet know exhibitors of the Maratha caste”[21] ಎಂದು ಹಚ್ಚೆ ಹಾಕುವವರನ್ನು ಹೆಸರಿಸಿದ್ದಾರೆ.

ಕೊರಮರು ಹಚ್ಚೆ ಹೊಯ್ಯುವ ವಿಧಾನಕ್ಕೆ ಪಚ್ಚೆ ಕುತ್ರದು (ಹಚ್ಚೆ ಹೊಯ್ಯುವದು) ಎನ್ನುತ್ತಾರೆ. ಪಾಲಿನೇಷಿಯನ್‌ಭಾಷೆಯಲ್ಲಿ “ta” ಎಂಬುದಕ್ಕೆ ಹೊಡೆ, ತಟ್ಟು ಎಂಬ ಅರ್ಥವಿದೆ. ಹೆಚ್ಚೆಯ ಮಸಿಯಿಂದ ಚಿತ್ರ ಬಿಡಿಸಿದ ಭಾಗದಲ್ಲಿ ಸೂಜಿಗಳ ದಿಂಡಿನಿಂದ ಒಂದೇ ಸಮನೆ ಕುಕ್ಕುವ ಅಥವಾ ಚುಚ್ಚುವ ಕ್ರಿಯೆಯೆ ಹಚ್ಚೆ ಹೊಯ್ಯುವ ವಿಧಾನ ಎನ್ನುತ್ತಾರೆ. ಇದನ್ನೆ ಇಂಗ್ಲೀಷಿನಲ್ಲಿ “tattoo” ಎಂದು ಕರೆಯುತ್ತಾರೆ.

ಹಚ್ಚೆಯ ಸಾಧನ :

ಕೊರವಂಜಿಯರು ಹಚ್ಚೆಯ ಹೊಯ್ಯಲು ಉಪಯೋಗಿಸುವ ಪರಿಕರಗಳೆಂದರೆ ಕಪ್ಪಿನ ಕುಡಿಕೆ, ಸೂಜಿದಿಂಡು ಮತ್ತು ಚಿತ್ರ ಬರೆಯುವ ಕಡ್ಡಿ, ತಮ್ಮ ಕುಳುವ ಭಾಷೆಯಲ್ಲಿ ಈ ಕುಡಿಕೆಗೆ “ಪಚ್ಚಗಿದ್ದ” (ಹಚ್ಚೆ ಕುಡಿಕೆ) ಎನ್ನುತ್ತಾರೆ. ಒಂದು ದೊಡ್ಡ ನಿಂಬೆ ಹಣ್ಣು ಗಾತ್ರದ ಒಂದು ಬೆರಳು ಹಿಡಿಸುವಷ್ಟು ಬಾಯಿಯಿರುವ ಮಣ್ಣಿನ ಕುಡಿಕೆ. ಇದಕ್ಕೆ ಮಸಿ ಅಥವಾ ಕಪ್ಪು ತಯಾರಿಸಿ ತುಂಬಿ ಇಟ್ಟುಕೊಳ್ಳುತ್ತಾರೆ. ಕೆಲವರ ಹತ್ತಿರ ಹಿತ್ತಾಳೆಯ ತಾಮ್ರದ ಕುಡಿಕೆಗಳೂ ಇರುತ್ತವೆ. ಇವುಗಳ ಬಾಯಿಗೆ ಬುರುಡೆ ಹಾಕಿ ಇಟ್ಟುಕೊಂಡಿರುತ್ತಾರೆ. ಬೇಕಾದಾಗ ಪ್ರಮಾಣಕ್ಕೆ ಅನುಗುಣವಾಗಿ ನೀರು ಹಾಕಿ ಕಲಿಸಿ ಉಪಯೋಗಿಸುತ್ತಾರೆ.

ಒಂದೂವರೆ ಇಂಚು ಉದ್ದದ ೩-೪ ಸೂಜಿಗಳನ್ನು ಸಾಲಾಗಿ ಒಂದೇಸಮ ಒಂದರ ಪಕ್ಕದಲ್ಲೊಂದು ಜೋಡಿಸಿ, ಅವುಗಳ ಎರಡು ಬದಿಗೂ ಬಿದಿರಿನಿಂದ ಮಾಡಿದ ಸಣ್ಣ ಎರಡು ಪಟ್ಟಿಯ ಆಧಾರಗಳನ್ನಿಟ್ಟು ಬಿಗಿಯಾಗಿ ದಾರದಿಂದ ಸುತ್ತಿ ದಿಂಡಿನ್ನು ತಯಾರು ಮಾಡಿಕೊಳ್ಳುತ್ತಾರೆ. ಇದನ್ನು ಇವರು ರಾಜಶ್ರೀ ಎಂದು ಕರೆಯುತ್ತಾರೆ. ಆ ದಿಂಡಿನೊಳಗಿಂದ ಸೂಜಿಯ ತುದಿಯ ಭಾಗ ೧/೪ ಇಂಚು ಮಾತ್ರ ಹೊರಕ್ಕೆ ಕಾಣಿಸುತ್ತಿರುತ್ತದೆ.  ಈ ದಿಂಡಗಳನ್ನು ವಾಟಿ ಕೊಳವೆ ಮಾಡಿ ಅದರಲ್ಲಿ ಹಾಕಿ ಇಟ್ಟುಕೊಂಡಿರುತ್ತಾರೆ. ಇವು ತುಕ್ಕು ಹಿಡಿದಿದ್ದರೂ ಬದಲಾಯಿಸಬೇಕು ಎಂಬ ಪರಿವೆ ಇವರಿಗೆ ಹಿಂದೆ ಇದ್ದಂತೆ ತೋರುವುದಿಲ್ಲ. ಸೂಜಿ ಬಳಕೆಗೆ ಬರುವುದಕ್ಕಿಂತ ಮುಂಚೆ ಜಾಲಿ ಮುಳ್ಳು, ರಾಕ್ಷನ ಪಟ್ಟೆ ಮುಳ್ಳುಗಳನ್ನು ಉಪಯೋಗಿಸುತ್ತಿದ್ದ ಬಗ್ಗೆ ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ.

ಚಿತ್ರ ಬರೆಯಲು ಸಣ್ಣ ಅಂಚಿ ಕಡ್ಡಿ ಗಾತ್ರದ ಬಿದಿರಿನ ೩-೪ ಅಂಗುಲ ಉದ್ದದ ಕಡ್ಡಿಯನ್ನು ಉಪಯೋಗಿಸುತ್ತಿದ್ದರು. ಬಿದಿರಿನ ಕಡ್ಡಿ ತೇವಕ್ಕೆ ಮೆದುವಾಗುವುದಿಲ್ಲ. ಗೆರೆಗಳನ್ನು ಸರಿಯಾಗಿ ಎಳೆಯಲು ಈ ಕಡ್ಡಿಗಳೇ ಉತ್ತಮ ಎನ್ನುತ್ತಾರೆ. ಅಲ್ಲದೆ ಚಿತ್ರದ ಮಸಿ ಒಣಗಿದಂತೆಲ್ಲ ಈ ಕಡ್ಡಿಯಿಂದ ಮಸಿಯನ್ನು ಹಚ್ಚಿ ಹೊಯ್ಯುತ್ತಾರೆ. ಹಚ್ಚೆ ಹೊಯ್ದಾದ ಮೇಲೆ, ನೀರು ಹಾಕಿ ಆ ಭಾಗವನ್ನು ತೊಳೆದು ಚಿತ್ರ ಚೆನ್ನಾಗಿ ಮೂಡಿದೆಯೇ ಇಲ್ಲವೋ ಎಂಬುದನ್ನು ನೋಡಿ, ಸರಿಯಾಗಿ ಮೂಡದಿದ್ದ ಕಡೆ ಕಡ್ಡಿಯಿಂದ ಮತ್ತೆ ಮಸಿಯ ಗೆರೆ ಎಳೆದು ಕುಕ್ಕುತ್ತಿದ್ದರು. ನಂತರ ಅದರ ಮೇಲೆ ದಟ್ಟವಾಗಿ ಅದೇ ಕಪ್ಪನ್ನು ಬಳಿಯುತ್ತಿದ್ದರು. ಹಚ್ಚೆ ಹೊಯ್ದು ಭಾಗ ಒಂದು ಪಕ್ಷ ಗಾಯವಾದರೆ ಅದಕ್ಕೆ ಅರಿಷಿಣ ಪುಡಿ ಹಾಕಿ ಮಲಗುವಾಗ ಅ ಭಾಗದ ಮೇಲೆ ತಲೆಯಿಟ್ಟು ಮಲಗುವಂತೆ ಹೇಳುತ್ತಿದ್ದರು. ಹಚ್ಚೆ ಹೊಯ್ದಾದ ಮೇಲೆ ಹಚ್ಚೆಯ ಕಪ್ಪು ಚುಚ್ಚಿದಲ್ಲಿ ಇಳಿದು ಚೆನ್ನಾಗಿ ಮೂಡುವುದರ ಜೊತೆಗೆ ಗಾಯವೂ ಬೇಗ ವಾಸಿಯಾಗುತ್ತಿತ್ತಂತೆ. ಹಚ್ಚೆ ಹೊಯ್ಸಿಕೊಂಡವರಿಗೆ ಕುಟ್ಟುವ, ಬೀಸುವ ಕೆಲಸ ಹೇಳುತ್ತಿದ್ದರಂತೆ. ಈ ಕೆಲಸದಿಂದ ಕೈಯ ನರಗಳು ಸಡಿಲಾಗುತ್ತವೆ ಎಂದು ಹೇಳುತ್ತಾರೆ. ಹಚ್ಚೆ ಹೊಯ್ದಾದ ಮೇಲೆ ಉಪ್ಪು, ಹುಣಸೇ ಹಣ್ಣು, ಮೆಣಸಿನಕಾಯಿ, ಅಸಿಟ್ಟು (ರಾಗಿಯ ಹಿಟ್ಟು ) ಮುಂತಾದವುಗಳನ್ನು ಪಡೆದು ಹಚ್ಚೆಗೆ ನೀವಾಳಿ ತೆಗೆದು ಅವುಗಳನ್ನು ತಾವು ಇಟ್ಟುಕೊಳ್ಳುತ್ತಿದ್ದರು. ಹೆಚ್.ವಿ.ನಂಜುಂಡಯ್ಯ ಮತ್ತು ಎಲ್‌.ಕೆ.ಅನಂತಕೃಷ್ಣ ಐಯ್ಯರ್ ಅವರು “After the tatooing operation is over, the Koracha woman asks for and gets some chillies and little salt, which she waves round the tatooed portion, repeating a formula which means by the help of such and such a God let the effect of evil eyes cost on the tattoo by the standards and others, including the woman herself be removed”[22] ಎಂದು ಅಲ್ಲಿಯ ಕೆಲವು ವಿವರಗಳನ್ನು ಒದಗಿಸಿದ್ದಾರೆ. ಹಚ್ಚೆಯ ಮೇಲೆ ಕೆಟ್ಟ ಕಣ್ಣು ಬಿದ್ದರೆ ಹಚ್ಚೆ ಕೆಡುತ್ತದೆ. ಕೈ ಗಾಯವಾಗುತ್ತದೆ ಎಂದೆಲ್ಲ ಹೇಳುವ ಅಂಶಗಳು ಇಲ್ಲಿ ವ್ಯಕ್ತವಾಗಿವೆ. ಮಳೆಗಾಲ, ಚಳಿಗಾಲಕ್ಕಿಂತ ಬೇಸಿಗೆ ಕಾಲ ಹಚ್ಚೆ ಹೊಯ್ಸಿಕೊಳ್ಳಲು ಹೆಚ್ಚು ಸೂಕ್ತವಾದುದು. ಬೇಸಿಗೆಯಲ್ಲಿ ಹಚ್ಚೆಯ ಗಾಯ ಬೇಗ ಒಣಗುತ್ತದೆ. ನೀರು ತುಂಬುವುದಿಲ್ಲ. ಹಳ್ಳಿಯ ಹೆಣ್ಣು ಮಕ್ಕಳಿಗೂ ಅದು ಬಿಡುವಿನ ಸಮಯ. ಹಚ್ಚೆ ಹೊಯ್ಯುವ ಕೊರವಂಜಿಯರು ಹಳ್ಳಿಗಳಲ್ಲಿ ಬೇಸಿಗೆ ಕಾಲದಲ್ಲಿಯೇ ಹೆಚ್ಚು ಕಂಡುಬರುತ್ತಾರೆ.

“ಒಂದು ಕಾಲದಲ್ಲಿ ಕೊರವಂಜಿಗಳಿಗೆ ಕಣಿ ಹೇಳುವುದೇ ವೃತ್ತಿಯಾಗಿದ್ದು ಅದರಿಂದ ಹೊಟ್ಟೆ ತುಂಬದೇ ಹೋದಾಗ ಜೀವನೋಪಾಯಕ್ಕೆ ಈಗೀಗ ಈಚಲ ಕಡ್ಡಿಗಳಿಂದ ಬುಟ್ಟಿ, ತಟ್ಟೆ, ಜಲ್ಲೆಗಳನ್ನು ಹೆಣೆದು ಮಾರಿ ಜೀವಿಸುತ್ತಿದ್ದಾರೆ.”[23] ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು. ಈ ಬುಡಕಟ್ಟಿನ ಜನ ಆದಿಯಿಂದಲೂ ತಟ್ಟೆ ಬುಟ್ಟಿಗಳನ್ನು ಮಾಡುತ್ತಿದ್ದರೆಂಬುದಕ್ಕೆ ಇವರ ಬಗ್ಗೆ ದಾಖಲಾಗಿರುವ ಬರಹಗಳಲ್ಲಿ ಆಧಾರವಿದೆ. ಕೊರಮರು ಕಣಿ ಹೇಳುವುದರ ಜೊತೆಗೆ ತಮ್ಮ ಮೂಲ ಕಸುಬಾದ ಬುಟ್ಟಿ, ತಟ್ಟೆ, ಮಂಕರಿ ಮುಂತಾದವುಗಳನ್ನು ಹೆಣೆಯುವ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಏಕೆಂದರೆ ಅವರ ಮೂಲ ನಿವಾಸ ಬೆತ್ತ ಬಿದಿರುಗಳು ವಿಶೇಷವಾಗಿ ಬೆಳೆಯುವಂಥ ಗುಡ್ಡುಗಾಡು ಭಾಗವೇ ಆಗಿರುತ್ತಿತ್ತು. ಅದನ್ನೆ ಬಳಸಿಕೊಂಡು ತಮ್ಮ ವೃತ್ತಿಯನ್ನು ಆರಂಭಿಸಿದುದು ಅತ್ಯಂತ ಸಹಜವಾದ ಪ್ರಕ್ರಿಯೆ.[1]       ಡಾ|| ನಂ. ತಪಸ್ವೀಕುಮಾರ, ಕನ್ನಡ ಜಾನಪದ ಗೀತೆಗಳು: ಸಾಂಸ್ಕೃತಿಕ ಅಧ್ಯಯನ ಪು-198

[2]        ಡಾ|| ಎಚ್‌.ಎಂ. ಮಹೇಶ್ವರಯ್ಯ, ಹಚ್ಚೆ : ಒಂದು ಜಾನಪದ ಕಲೆ, ಪು-6.

[3]        L.K. Anantha Krishna lyer, The Mysore Tribes and Castes, Vol-I  P-4.

[4]        Chambers Encyclopedia (Vol. 3) P – 476.

[5]      ಡಾ|| ಕೃಷ್ಣಾನಂದ ಕಾಮತ್, ಮಲ್ಲಿಗೆ – ಮಾರ್ಚ್‌1979. ಉದಾಹೃತ : ಡಾ|| ಎಚ್‌.ಎಚ್‌. ಮಹೇಶ್ವರಯ್ಯ, ಹಚ್ಚೆ: ಒಂದು ಜಾನಪದ ಕಲೆ, ಪು-5.

[6]        L.K. Anantha Krishna lyer, The Mysore Tribes and Castes, Vol-I P-6.

[7]      ಜಾನಪದ ಜಗತ್ತು ಸಂಪುಟ – 7, ಸಂಚಿಕೆ-6, ನವೆಂಬರ್-ಡಿಸೆಂಬರ್, 1986, ಪು-10.

[8]        ಜಾನಪದ ಜಗತ್ತು ಸಂಪುಟ-1, ಸಂಚಿಕೆ-2, ಮಾರ್ಚ್‌, 1980, ಪು-28.

[9]      The Mysore Tribes and Castes Vol-1, P-436. ಉದಾಹೃತ : ನಂ. ತಪಸ್ವೀಕುಮಾರ, ಜಾನಪದ ಜಗತ್ತು, ಸಂ-1, ಸಂಚಿಕೆ-2, ಮಾರ್ಚ್‌80

[10]       ಜಾನಪದ ಜಗತ್ತು ಸಂಪುಟ-1, ಸಂಚಿಕೆ-2, ಪು-28 1980.

[11]      ಡಾ|| ಬಿ.ಎಸ್‌. ಗದ್ದಿಗಿಮಠ, ಕನ್ನಡ ಜಾನಪದ ಗೀತೆಗಳು, ಪು-373.

[12]       ಸಂಯುಕ್ತ ಕರ್ನಾಟಕ, ಸಾಪ್ತಾಹಿಕ ಪುರವಣಿ, 9-12, 1990.

[13]      Encyclopedia of Religion and Ethics Vol. 12 P-208 (Antiquity and distribution)

[14]      ಡಾ|| ಎಚ್‌.ಎಂ. ಮಹೇಶ್ವರಯ್ಯ, ಹಚ್ಚೆ : ಒಂದು ಜಾನಪದ ಕಲೆ, ಪು-7.

[15]       – ಅದೇ-

[16]      ಜಾನಪದ ಜಗತ್ತು ಸಂಪುಟ-1, ಸಂಚಿಕೆ-2, ಮಾರ್ಚ್‌1980, ಪು-28.

[17]       ಬೆಳ್ವೊಲ, ಪ್ರಕಾಶಕರು : ಕಾರ್ಯಾಧ್ಯಕ್ಷರು, ಡಾ|| ಆರ್.ಸಿ. ಹಿರೇಮಠ ಸನ್ಮಾನ ಸಮಿತಿ, ಕನ್ನಡ ಅಧ್ಯಯನ ಪೀಠ, ಕವಿವಿ ಧಾರವಾಡ-1981.

[18]      ಪ್ರಜಾವಾಣಿ, 14-1-1989, ಸಾಪ್ತಾಹಿಕ ಪುರವಣಿ, ಪು-3.

[19]      ಎಲ್‌. ಗುಂಡಪ್ಪ, ನಾಡಪದಗಳು, ಪು-131.

[20]     L.K. Anantha Krishna lyer, The Mysore Tribes and Castes, Vol-I  P-439.

[21]       Ibid, P-440.

[22]     H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-612.

[23]     ಕನ್ನಡ ಜಾನಪದ ವಿಸ್ವಕೋಶ, ಪು-541.