ಹೆಣ್ಣು ತನ್ನ ಸಂಸಾರದ ಉನ್ನತಿಗೆ ಬೆಂದು, ಗಂಧದಂತೆ ತೇದು, ದೀಪದಂತೆ ಬೆಳಗುತ್ತಾ, ಸಾಮಾಜಿಕವಾಗಿ ಅರ್ಥವತ್ತಾದ ಬದುಕನ್ನು ಬದುಕುತ್ತಾ, ಆಯಾ ನೆಲೆಯಲ್ಲಿ ಬಂದ ದುಃಖ-ದುಮ್ಮಾನಗಳನ್ನು ನುಂಗಿ ತವರಿಗೂ, ಗಂಡನ ಮನೆಗೂ ಅಂತೆಯೇ ನೆರೆ- ಹೊರೆಗೂ ಪ್ರೀತಿಯ ಗರತಿಯಾಗಿ ಬಾಳುತ್ತಾ ಬಂದಿದ್ದಾಳೆ.

ಕೈಗೊಂದು, ಕಾಲಿಗೊಂದು ಆಳು ಇಟ್ಟುಕೊಂಡು ಸಂಸಾರ ಯಾವ ಭಾರವೂ ಇಲ್ಲದೆ ಸುಖದ ಸುಪ್ಪತ್ತಿಗೆಯಲ್ಲಿ ವಿಹರಿಸುವ ಹೆಣ್ಣಿನ ಸಿತ್ಥಿ ಬೇರೆ. ಆದರೆ, ಉಣ್ಣಲಿಕ್ಕೂ ಗತಿಯಿಲ್ಲದೆ, ಉಡಲಿಕ್ಕೂ ಸ್ಥಿತ್ಥಿಯಿಲ್ಲದೆ ಇರುವ ಹೆಣ್ಣು, ತನ್ನೊಬ್ಬಳಿಗಲ್ಲದೆ ಇಡೀ ಸಂಸಾರಕ್ಕೆ ಆಧಾರವಾಗಿ ನಿಂತು ವಹಿಸುವ ಶ್ರಮ ಅಪಾರವಾದದ್ದು. ಅದರಲ್ಲೂ ಅಲೆಮಾರಿ ಹೆಣ್ಣುಮಕ್ಕಳ ಜೀವನವನ್ನಂತೂ ಹೇಳುವಂತಿಲ್ಲ. ಆಕೆ ಗಾಣಕ್ಕೆ ಕಟ್ಟಿದ ಎತ್ತಿನಂತೆ ದುಡಿದು ಕುಟುಂಬದ ಸೌಖ್ಯಕ್ಕಾಗಿ ಸವೆದು ಹೋಗುತ್ತಾಳೆ.

ಅಲೆಮಾರಿ ಬುಡಕಟ್ಟಿಗೆ ಸೇರಿದ ಕೊರಮರು ಈ ಸಾವಿರಾರು ವರ್ಷಗಳ ಜೀವನ ಪ್ರವಾಹದಲ್ಲಿ ರೂಢಿಸಿಕೊಂಡು ಬಂದ ಜಾನಪದೀಯ ಅಂಶಗಳು ಮರೆಯಾಗುತ್ತಿವೆ; ಜೀವನ ಕ್ರಮ ಬದಲಾಗುತ್ತಿದೆ. ಜೀವನ ಹೋರಾಟದಲ್ಲಿ ಈ ಬುಡಕಟ್ಟಿನ ಹೆಣ್ಣು-ಗಂಡು ನಿರ್ವಹಿಸಿಕೊಂಡು ಬಂದಿರುವ ಕಾರ್ಯ ಕಲಾಪಗಳು ಇಂದಿನ ನಾಗರಿಕ ಬದುಕಿನ ಸಂದರ್ಭದಲ್ಲಿ ಆಶ್ಚರ್ಯವೆನಿಸುತ್ತದೆ. ಕುಟುಂಬ ನಿರ್ವಹಣೆಯ ಸಂದರ್ಭದಲ್ಲಿ ಕೊರವಂಜಿಯ ಪಾತ್ರವು ಅತಿ ಮಹತ್ವದ್ದಾಗಿ ತೋರುತ್ತದೆ, ಮತ್ತು ಆಕೆಯ ಕಷ್ಟಸಹಿಷ್ಣುತೆಯ ಬಗೆಗೆ ಮರುಕವೂ ಉಂಟಾಗುತ್ತದೆ.

ಕೊರಮರಲ್ಲಿ ಹೆಂಗಸರಿಗೆ, ಅವರು ಬಸುರಿ, ಬಾಣಂತಿಯರಿದ್ದಾಗಲೂ ಚಳಿ, ಮಳೆ, ಗಾಳಿಯಿಂದ, ಬಿಸಿಲಿನ ತಾಪದಿಂದ ರಕ್ಷಣೆ ಸಿಕ್ಕುತ್ತಿರಲಿಲ್ಲ. ಆಕೆ ಇದ್ದುದರಲ್ಲಿಯೇ ತನ್ನನ್ನು ಮತ್ತು ತನ್ನ ಸಂತಾನವನ್ನು ರಕ್ಷಿಸಿಕೊಳ್ಳಬೇಕಾಗಿತ್ತು. ಅವಳಿಗೆ ಆ ಸಮಯದಲ್ಲಿಯೂ ಸಿಕ್ಕುತ್ತಿದ್ದ ವಿಶ್ರಾಂತಿ ಹೆಚ್ಚಲ್ಲ. ಬಸುರಿಯಿದ್ದಾಗಂತೂ ಹಳ್ಳಿಗಳ ಮೇಲೆ ಹೋಗುವುದು ಸಾಮಾನ್ಯವಾದರೂ, ಬಾಣಂತಿ ಕೆಲವೇ ದಿನಗಳಲ್ಲಿ ತನ್ನ ನಿತ್ಯದ ಬದುಕಿಗೆ ಸಿದ್ಧಳಾಗುತ್ತಿದ್ದಳು. ತಾವು ಉಳಿದ ಹಳ್ಳಿಯಲ್ಲಿಯೇ ಅಲ್ಪ-ಸ್ವಲ್ಪ ಸಂಪಾದನೆಯನ್ನು ಮಾಡುತ್ತಿದ್ದಳು. ಬದುಕಿನ ಅನಿವಾರ್ಯತೆಯೇ ಹಾಗಿರುವಾಗ ಅವರ ಬಗ್ಗೆ ವಿಶೇಷ ಆಸ್ಥೆಯನ್ನು ತೋರುವವರಾರೂ ಇರಲಿಲ್ಲ.

ಕೊರವಂಜಿ ಈ ಸಾವಿರಾರು ವರ್ಷಗಳಲ್ಲಿ ಜನಪದದ ಮನ ಗೆದ್ದವಳು. ಅಷ್ಟೇ ಅಲ್ಲ, ಸಾಮಾಜಿಕವಾಗಿ ಮಹತ್ವದ ಸ್ಥಾನವನ್ನು ಗಳಿಸಿದಳು. ಒಂದು ಕಾಲಕ್ಕೆ ಆಕೆಗಿದ್ದ ಸ್ಥಾನ ಯಾರಿಗೂ ಬೆರಗುಂಟು ಮಾಡುವಂಥದು. ಕೊರಮರ ಮೂಲ ಉದ್ಯೋಗ ಏನೇ ಇರಲಿ, ಕಾಲಾಂತರದಲ್ಲಿ ತಾವು ಉಳಿದ ಪ್ರದೇಶದ ಸನ್ನಿವೇಶ ಹಾಗೂ ಅನುಕೂಲಕ್ಕೆ ತಕ್ಕಂತೆ ಬುಟ್ಟಿನೇಯುವ, ವಾಲಗ ಊದುವ, ಕೋತಿ ಆಡಿಸುವ, ಕಳ್ಳತನ ಮಾಡುವ, ಉಪ್ಪು ಮಾರುವ, ಹಾವು ಹಿಡಿಯುವ, ಎತ್ತು ಮಾರುವ ಇನ್ನೂ ಅನೇಕ ಬಗೆಯ ವೃತ್ತಿಗಳನ್ನು ಅವಲಂಬಿಸಿ ಜೀವನ ಸಾಗಿಸುತ್ತಾ ಬಂದಿದ್ದಾರೆ. ಆದರೆ ಕೊರವಂಜಿಯರು ಮಾತ್ರ ಕಣಿ ಹೇಳುತ್ತಿದ್ದುದು ಎಲ್ಲ ಕಾಲದಲ್ಲಿಯೂ, ಎಲ್ಲ ಪ್ರದೇಶದಲ್ಲಿಯೂ ಕಂಡು ಬರುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಅಲೆಮಾರಿಗಳಾಗಿ ಬದುಕುತ್ತಿರುವ ದಬ್ಬೆ ಕೊರಮರಿಗೆ ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ ಎಂಬುದಲ್ಲಿ ಇವರ ಚಿಂತೆ. ತನ್ನ ಮತ್ತು ತನ್ನ ಕುಟುಂಬದ ಉದರ ಪೋಷಣೆಯ ಕಡೆಗೆ ಆಕೆಯ ಗಮನ. ಹೊತ್ತಾರೆ ಎದ್ದು ಇದ್ದುದನ್ನು ಬೇಯಿಸಿಟ್ಟು, ತಾನಿಷ್ಟು ಉಂಡು ತರಹಾವರಿ ಕುಕ್ಕೆಗಳನ್ನು ತಲೆಗೇರಿಸಿ ಬಿಸಿಲೇರುವುದರೊಗೆ ಯಾವುದಾದರೂ ಹಳ್ಳಿಗೆ ಸೇರಿಕೊಳ್ಳಲು ಬಿರವಿರನೆ ಕಾಲು ಹಾಕುತ್ತಿದ್ದಳು. ದಾರಿಯಲ್ಲಿ ನೂರೊಂದು ದೇವರ ನೆನೆಯುತ್ತಾ ಸಾಗಿದರೆ ಅವಳಿಗೆ ಸೋಲೇ ಕಾಣುತ್ತಿರಲಿಲ್ಲ. ಕೆಲವು ವೇಳೆ ತಂಗಳಿದ್ದರೆ ಅದನ್ನೇ ಉಂಡು, ಮಗುವಿದ್ದರೆ-ಸೊಂಟಕ್ಕೆ ಎತ್ತಿಕೊಂಡು ಹೋಗುತ್ತಿದ್ದುದೂ ಇತ್ತು. ಸಾಮನ್ಯವಾಗಿ ಇಬ್ಬಿಬ್ಬರು ಜೊತೆಯಾಗಿ ಹೆಂಗಸರೇ ಹೋಗುತ್ತಿದ್ದರು.

ಹಳ್ಳಿಯ ಕೇರಿ ಕೇರಿಗಳಲ್ಲಿ “ಕುಕ್ಕೆಬೇಕೇನ್ರವ್ವ ಕುಕ್ಕೆ, ಎಂದು ಸಾರುವುದರೊಂದಿಗೆ ಆಕೆಯ ವ್ಯಾಪಾರ-ವ್ಯವಹಾರ ಪ್ರಾರಂಭವಾಗುತ್ತಿತ್ತು. ಹೆಂಗಸರ ನಡುವೆ ನಡೆಯುತ್ತಿದ್ದ ಈ ವ್ಯಾಪಾರಕ್ಕೆ ಕೊರಮತಿಯರೇ ಹೆಚ್ಚು ಸೂಕ್ತವಾಗಿದ್ದರು. ಹೆಂಗಸೆಂಗಸರ ನಡುವೆ ಬರುತ್ತಿದ್ದ ಮಾತಿನ ಸಲುಗೆ, ಗಂಡಸರೊಂದಿಗೆ ಬರಲು ಸಾಧ್ಯವಿಲ್ಲವಾದ್ದರಿಂದ ಇವರು ಹೆಚ್ಚು ಗಳಿಸಲು ಸಾಧ್ಯವಾಗುತ್ತಿತ್ತು. ಇವರದ್ದೆಲ್ಲ ಕಾಳಿಗೇ ಹೆಚ್ಚು ವ್ಯಾಪಾರ. ದುಡ್ಡಿಗೆ ವ್ಯಾಪಾರ ಇಲ್ಲವೆಂದರು ಸರಿಯೆ. ಬೆಳೆದ ಕಾಳು ಮನೆಯಲ್ಲಿರುವಾಗ ದುಡ್ಡುಕೊಟ್ಟು ಕುಕ್ಕೆ ಕೊಳ್ಳುವವರ್ಯಾರು ? ಕೊರಮರಿಗೂ ಅದೇ ಬೇಕಾಗಿತ್ತು. ಇವರು ತಮ್ಮ ಬುಟ್ಟಿಗಳನ್ನು ಮಾರಲು ಬಳಸುತ್ತಿದ್ದ ಅಳತೆಯ ಮಾನವೇ ಬೇರೆ. ಅದೊಂದು ಸಣ್ಣ ಬಿದಿರಿನ ಕುಕ್ಕೆ. ಇದನ್ನು ಬೆಲೆಬುಟ್ಟಿ ಎಂದು ಕರೆಯುತ್ತಿದ್ದರು. ಸೇರು, ಬಳ್ಳ ಇವರಲ್ಲಿ ನಡೆಯದು. ಯಾರಾದರೂ ಏಕೆ ಹೀಗೆ? ಎಂದು ಕೇಳಿದರೆ – ಇದು ನಮ್ಮ ಸೋದರ ಮಾವನಿಂದ ಮಾಡಿಸಿಕೊಂಡಿದ್ದು. ನಮ್ಮ ಕುಲಪದ್ಧತಿಯಂತೆ ಅಮವಾಸ್ಯೆಯ ದಿನ ಕುಲಕ್ಕೆ ಊಟಕೊಟ್ಟು ಶಾಸ್ತ್ರೋಕ್ತವಾಗಿ ಮಾಡಿಸಿದ್ದೇವೆ. ಇದರಲ್ಲಿಯೇ ನಮ್ಮ ವ್ಯಾಪಾರ, ಇದನ್ನು ಬಿಟ್ಟು ವ್ಯಾಪಾರ ಮಾಡುವಂತಿಲ್ಲ ಎಂದು ಹೇಳಿ ಬಾಯಿ ಮುಚ್ಚಿಸುತ್ತಿದ್ದರು. ಯಾರಾದರೂ ಅಳೆಯೋಣ ಎಷ್ಟು ಹಿಡಿಸುತ್ತದೆ? ನೋಡೋಣವೆಂದರೆ, ಇಲ್ಲವ್ವ ನಾವು ಈ ಬುಟ್ಟಿನ ಅಳಸಾಕಿಲ್ಲ. ಅಳಸಿದರೆ  ನಮ್ಮ ಕತ್ತೆ ಮೇವು ಬಿಡುತ್ತೆ. ಈ ಬುಟ್ಟಿಗೆ ತಡೆಕಟ್ಟಿದೆ ಎಂದು ಅಳೆಸುತ್ತಿರಲಿಲ್ಲ. ಅಳಸಿದರೆ ವ್ಯಾಪಾರ ಮುರಿದು ಹೋಗುತ್ತಿತ್ತು.

ಕುಕ್ಕೆ ಮಾರಲು ಹೋದಾಗ ಜೊತೆಯಲ್ಲಿ ಬಿದಿರಿನ ಸೀಬನ್ನು ತೆಗೆದುಕೊಂಡು ಹೋಗುತ್ತಿದ್ದರು. ಹಳೆಯ ಮರ, ಕುಕ್ಕೆ, ಹೆಡಿಗೆ ಮುಂತಾದವುಗಳಿಗೆ ಸೀಬ ಹಾಕಿ (ರಿಪೇರಿ ಮಾಡಿ) ಕಾಳು ಕಡಿ ಪಡೆಯುತ್ತಿದ್ದರು. ಹಳ್ಳಿಗಳಿಗೆ ಹೋದಾಗ ತಮ್ಮ ಕುಕ್ಕೆಗಳನ್ನು ಮಾರುವುದಷ್ಟೇ ಅಲ್ಲ. ಆಕೆ ಮಾಂತ್ರಿಕಳಂತೆ ಸಂಚಾರಿ ವೈದ್ಯೆಯಂತೆಯೂ ಕೆಲಸ ಮಾಡುತ್ತಿದ್ದಳು. ಅವುಗಳಲ್ಲೊಂದು ಬಾಲಗ್ರಹ ಬಿಡಿಸುವುದು.

ಬಾಲಗ್ರಹ ಅಥವಾ ಬಿದ್ದಬೀಳು: ಬಿದ್ದಬೀಳು ಮಕ್ಕಳಿಗೆ ಮಾಡುವ ಒಂದು ತೀರಿಯ ಶಾಂತಿ. ಬಾಲಗ್ರಹ 2-3  ತಿಂಗಳ ಮಗುವಿನಿಂದ ಹಿಡಿದು ಹತ್ತು ಹನ್ನೆರಡು ವರ್ಷದ ಮಕ್ಕಳವರೆಗೂ ಆಗುತ್ತದೆ ಎನ್ನುತ್ತಾರೆ ಇವರು. ಬಾಲಗ್ರಹಕ್ಕೆ ಬಿದ್ದಬೇಳು ಎಂದೂ ಕರೆಯುತ್ತಾರೆ. ಮಕ್ಕಳು ಆಟ ಆಡುವಾಗ ಬಿದ್ದು ಹೆದರಿದರೆ, ಅಂಥ ಮಕ್ಕಳು ಮಂಕಾಗಿ ಲವಲವಿಕೆ ಇಲ್ಲದೆ ಇರುತ್ತವೆ. ಆ ಮಕ್ಕಳಿಗೆ ಹಳ್ಳಗರು ಕೊರಮಿತಿಯರಿಂದ  ಶಾಂತಿ ಮಾಡಿಸುತ್ತಾರೆ. ಅಥವಾ ಶಾಂತಿ ಮಾಡಿಸುವಂತೆ ಇವರೆ ಹೇಳುತ್ತಾರೆ.

ಶಾಂತಿ ಮಾಡಲು ಮನೆಯ ತಲೆಬಾಗಿಲಿನ ಹತ್ತಿರ ಒಳಭಾಗದಲ್ಲಿ ಒಂದು ಮೊಳದಗಲ ನೆಲ ಸಾರಿಸಿ ಅದರ ಮೇಲೆ ಸ್ವಲ್ಪ ಅಕ್ಕಿ, ರಾಗಿ ಅಥವಾ ಯಾವುದೇ ಧಾನ್ಯವನ್ನು ಸುರಿಸಿ ಅದರ ಮೇಲೆ ಬೆನಕನನ್ನು ಕೂರಿಸಿ, ಗರಿಕೆ ಏರಿಸಿ, ಅರಿಷಿಣ, ಕುಂಗಮ ಹಾಕಿ ದಕ್ಷಿಣೆ ಇಡಿಸುತ್ತಾರೆ. ಎದುರಿಗೆ ಮಗವನ್ನು ಕೂರಿಸಿಕೊಳ್ಳುತ್ತಾರೆ. ಒಂದು ಬಿಳಿತಟ್ಟೆಗೆ ಅರಿಷಿಣ ಬಳಿದು ಮೂರ ತರಹ ಹೂ, ಮೂರು ಧಾನ್ಯ ತರಿಸಿ ಅದರಲ್ಲಿ ಐದು ತರಹದ ಗಿಡಮೂಲಿಕೆ ಕಟ್ಟಿ ಬೆನಕನ ಪಕ್ಕದಲ್ಲಿ ಮಗುವಿಗೆ ನೀವಾಳಿ ತೆಗೆಯುತ್ತಾ, ಅನ್ನ ಕಾಣದ ಮುಕ್ಕ, ಗಂಜಿ ಕಾಣದ ಮುಕ್ಕ, ಕೂಳು ಕಾಣದ ಮುಕ್ಕ, ಮೂಗು ಕುಯ್ದೇನು, ಮುಂದಲೆ ಕುಯ್ದೇನು, ಅಂದ ನೋಡಿ ಬಂದ್ಯ, ಚಂದ ನೋಡಿ ಬಂದ್ಯ ನಿನ ನಾಲಿಗೆ ಕುಯ್ದು ನಾರಾಯಣನ ಪಾದಕೊಪ್ಸೆನು, ಜನಿವಾರ ಕುಯ್ದೇನು, ತೋಳುಬಿಟ್ಟು ಬಾ, ತೊಡೆಬಿಟ್ಟು ಬಾ, ಕೈ ಮುರಿದೇನು, ಕಾಲು ಮುರಿದೇನು, ಯಾಮೂಲೇಲಿ ಬಂದೆ ಆ ಮೂಲೇಲಿ ಹೋಗು ಯಾ ಬನದಿಂದ ಬಂದೆ ಆ ಬನಕೋಗು – ಎಂದು ಮುಂತಾಗಿ ಮಂತ್ರ ಹೇಳುತ್ತಾ ಓಕಳಿ ನೀರನ್ನು, ಒಂದು ಚಂಬು ನೀರನ್ನು ನಿವಾಳಿಸುತ್ತಾರೆ. ಹಣ್ಣಿಟ್ಟು, ಕಾಯೊಡೆದು ಪೂಜಿಸುತ್ತಾರೆ. ಇದರ ಜೊತೆಗೆ ಮೂರು ತರದ ಸೌದೆ, ನೀರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಕಾಯಿ, ಉಪ್ಪು, ಅಕ್ಕಿ, ಅಸಿಟ್ಟು ಅವರಿಂದ ಪಡೆದು ಆ ಮಗುವಿಗೆ ನಿವಾಳಿ ತೆಗೆದು ಅದೆಲ್ಲವನ್ನೂ ಮೂರು ದಾಗಿ ಕೂಡಿದಲ್ಲಿ ಚೆಲ್ಲಿ ಬರುತ್ತಾರೆ. ಮೂರು ತರದ ಧಾನ್ಯ, ಒಂದಾಣೆ ದುಡ್ಡು, ಹಣ್ಣು ಕಾಯಿಯನ್ನು ತೆಗೆದುಕೊಂಡು ಆ ಗಿಡಮೂಲಿಕೆ ಗಂಟನ್ನು ಮಗುವಿನ ಕೊರಳಿಗೆ ಕಟ್ಟುತ್ತಾರೆ. ಆ ಮಗುವಿನ ಕೊರಳಲ್ಲಿ ಮೊದಲೆ ಬಾಲಗ್ರಹ ತಾಳಿ ಇದ್ದರೆ ಅದನ್ನು ತೆಗೆದು ಬೆಂಕಿಯಲ್ಲಿ ಸುಡಿಸಿ ತೊಳೆದು ಅರಿಷಿಣದ ದಾರ ಕಟ್ಟಿ ಅದನ್ನು ಬೆನಕನ ಮುಂದಿಟ್ಟು ಪೂಜಿಸಿ ಕುತ್ತಿಗೆಗೆ ಕಟ್ಟುತ್ತಾರೆ. ಹೊಟ್ಟೆಗೂ ಒಂದಿಷ್ಟು ಔಷಧಿ ಕೊಡುತ್ತಾರೆ. ಆ ಮಗು ಕುತ್ತಿಗೆಯ ಗಂಟನ್ನು ಆಗಾಗ್ಗೆ ಬಾಯಲ್ಲಿಟ್ಟುಕೊಂಡು ಚೀಪುತ್ತಿದ್ದರೆ ರೋಗ ನಿವಾರಣೆಯಾಗುತ್ತಿತ್ತು ಎಂದು ತಿಳಿದು ಬಂದಿದೆ.

ಇಂಥ ಶಾಂತಿಯನ್ನು ಸಾಮಾನ್ಯವಾಗಿ ಸಂಜೆಯ ಸಮಯದಲ್ಲಿ ಸೂರ್ಯ ಮುಳುಗುವ ಸಮಯಕ್ಕೆ ನೆರವೇರಿಸುತ್ತಿದ್ದರು. ಕೊರಮಿತಿಯ ಕೈಯಿಂದ ಮಾಡಿಸಿದರೆ ಗುಣವಾಗುತ್ತದೆ ಎನ್ನುವ ನಂಬಿಕೆಯೂ ಹಳ್ಳಿಯವರಿಗಿತ್ತು.

ಮಕ್ಕಳ ಫಲಕ್ಕೆ ಔಷಧಿ: ಕೊರವಂಜಿಯರು ಬಂಜೆ ಹಣ್ಣು ಮಕ್ಕಳಿಗೆ ಮಕ್ಕಳ ಫಲದ ಔಷಧಿ ಕೊಡುವುದರಲ್ಲಿಯೂ ಹೆಸರುವಾಸಿಯಾಗಿದ್ದರು. ಅದರಲ್ಲಿ ವಯಸ್ಸಾದ ಕೆಲವು ಕೊರವಂಜಿಯರು ಮಾತ್ರ ಔಷಧಿ ಕೊಡುತ್ತಿದ್ದರು. ಇವರ ಔಷಧಿಯಿಂದ ಕೆಲವು ಕಡೆ ಮಕ್ಕಳಾದ ನಿದರ್ಶನಗಳೂ ಇವೆಯಂತೆ. ಮಗುವನ್ನು ಪಡೆದವರು ಈ ಕೊರಮಿತಿಯನ್ನು ಕರೆಸಿ ಉಡುಗೊರೆ ಕೊಟ್ಟು ಗೌರವಿಸಿದ್ದೂ ಉಂಟು ಎಂದು ಹೇಳುತ್ತಾರೆ.

ಇವರು ಔಷಧಿ ಕೊಡುವ ಬಂಜೆಯ ಕೈಯನ್ನು ಹಿಡಿದು ಹಸ್ತು ನೋಡುತ್ತಾ, ಬಗಶೈತೆ, ಭಾಗ್ಯವೈತೆ, ತುತ್ತೈತೆ, ಗೇಣೊಸ್ತ್ರೈತೆ ನೀನು ಮೊದಲ ಮದುವ್ಯಾದೊರ್ಸ ಸೂತಕವಾದೆ, ಆಗ ನೀನು ಸ್ನಾನ ಮಾಡಿದ ನೀರಿನ ಮೇಲೆ ಗಬ್ಬದ ನಾಗಪ್ಪ ಹರಿದೋಗಿದೆ. ಆ ಮುಟ್ಟು ಅವನಿಗೆ ತಗುಲಿದೆ. ಅರರ ಶಿವಶಿವ ಯಾ ಪಾಪಿ ಮುಟ್ಟೋ, ಯಾ ಕರ್ಮಿ ಮುಟ್ಟೋ ಅಂತ ನಾಗಪ್ಪ ಅಂದ, ಅವನ ಏಳು ಕಣ್ಣಿಗೆ ಪರೆ ಮುಚ್ಚೋಯ್ತು. ಆ ಶಾಪಗುಣ ನಿನ್ನ ಹೊಕ್ಕುಳ ಮ್ಯಾಲೆ ಮೊಳಕ್ಕಾಗಿ ನಿಂತೈತೆ. ಅದ್ನ ನೀನು ಆರ್ತು ಗುಣ ಮಾಡ್ಸು. ದೋಷ ಪರಿಹಾರವಾಗುತ್ತೆ. ಮುಂದೆ ಮಕ್ಕಳಾಗ್ತವೆ. ಎಂದು ಹೇಳತ್ತಾರೆ. ಇದಕ್ಕೆ ಒಂಬತ್ತು ಬಗಸೆ ಧಾನ್ಯ, ಹಣ್ಣು ಕಾಯಿ ಬಂದು ಚೆಂಬು ನೀರು, ಒಲೆಯ ಬೂದಿ ಆಗ್ಬೇಕು. ಇವರಲ್ಲ ನೀವಾಳಿ ತೆಗೆದು ನಿನ್ ಹೊಕ್ಕುಳ ತೊಳೆದು ಹೊಟ್ಟಿಗೆ ಜಾಸ್ತಿ ಕೊಡ್ತೀನಿ ಎಂದು ಹೇಳ ಆಸೆ ಹುಟ್ಟಿಸಿ ಔಷಧಿ ಕೊಡುತ್ತಿದ್ದರಂತೆ.

ಬಂಜೆಗೆ ಔಷಧಿ ಕೊಡುವ ವಿಷಯ ಅತ್ಯಂತ ರಹಸ್ಯವಾಗಿ ನಡೆಯತ್ತಿತ್ತು. ಮುಂಬಾಗಿಲನ್ನು ಮುಚ್ಚಿ, ನಡುಮನೆಯಲ್ಲಿ ಮೊಳದಗಲ ನೆಲಸಾರಿಸಿ ಬೆನಕನನ್ನು ಕೂರಿಸಿ, ದೀಪ ಹಚ್ಚಿ, ಒಂಭತ್ತು ಬಗಸಿ ಧಾನ್ಯ ಇಡಿಸಿ ಕಾಯೊಡೆದು ಪೂಜೆ ಮಾಡಿ ಹೊಟ್ಟೆಗೆ ಔಷಧಿ ಕೊಡುತ್ತಿದ್ದಂತೆ, ಕಾಯಿ ಇಲ್ಲ ಅಂದರೆ ಕಾಂಚಾಣ ಕೊಟ್ಟು ಕರ್ಮಂತ್ರ ಕಳಿ, ದುಡ್ಡು ಕೊಟ್ಟು ದೂಪಾಂತ್ರಕಳಿ, ಕಾಯೊಡೆದರೆ ಕಂಟಕ ಒಡೆದಂತ ಎಂದು ಹೇಳೀ ಕಾಯಿ, ದಕ್ಷಿಣೆಯನ್ನೂ ಗಿಟ್ಟಿಸುತ್ತಿದ್ದರು. ಪೂಜೆ ಆದ ಮೇಲೆ, ಸ್ವಲ್ಪ ಬೂದಿ, ಒಂದು ಚೆಂಬು ನೀರನ್ನು ತರಿಸಿಕೊಂಡು ಬಂಜೆಗೆ ನೀವಾಳಿ ತೆಗೆಯುತ್ತಿದ್ದರು. ನೀವಾಳಿ ತೆಗೆಯುವಾಗ ಆ ಹೆಂಗಸು ಪೂರ್ವಕ್ಕೆ ಮುಖಮಾಡಿ ಕುಳಿತಿರಬೇಕು. ನೀವಾಳಿ ತೆಗೆಯುವ ಮೊದಲೆ ಒಂದು ಕುಕ್ಕೆಯ ತುಂಬ ಮನೆಯಲ್ಲಿರುವ ಯಾವುದೇ ಧಾನ್ಯವನ್ನು ತುಂಬಿಸಿ ಅದರ ಮೇಲೆ ಆಕೆಯ ಹಸ್ತವನ್ನು ಊರಿಸಿ ಬೇರೆ ಕಡೆ ಇಡಿಸುತ್ತಿದ್ದರಂತೆ. ಬೂದಿ ಮತ್ತು ಚೆಂಬು ನೀರನ್ನು ನೀವಾಳಿಸಿದ ಮೇಲೆ, ಆಕೆಯ ತಲೆಯ ಮೇಲೆ ಈ ದವಸ ತುಂಬಿದ ಕುಕ್ಕೆಯನ್ನು ಹೊರಿಸಿ, ಅದರ ಕಾಳು ಬಾಗಿಲಿನ ಮೇಲ್ಭಾಗಕ್ಕೆ ತಗಲುವಂತೆ ದಾಟಿಸುತ್ತಾ, ಎಲ್ಲಿಗೋಗ್ತಿಯಮ್ಮ ಅಂತ ಕೇಳಿ ಅವಳಿಂದ ತೊಟ್ಲ ಹೊತ್ಗೊಂಡು ತೌರ ಮನಿಗೋಗ್ತೇನಿ ಅಂತ ಹೇಳಿಸುತ್ತಿದ್ದರಂತೆ. ನಂತರ ಅವಳ ತಲೆಯ ಗೂಡೆಯನ್ನು ಪೂಜೆ ಮಾಡಿದ ಜಾಗದಲ್ಲಿ ಇಳಿಸಿ ಆಕೆಯನ್ನು ಎದುರಿಗೆ ಕೂರಿಸಿಕೊಂಡು ಕಾಳು ತುಂಬಿದ ಬುಟ್ಟಿಯನ್ನು ಬೆರಳಿನಿಂದ ಬಡಿಯುತ್ತಾ ” ತೊತ್ತೆ ಮುತ್ತೆ, ಕಾಟವೆ, ಕನಿಷ್ಟವೆ, ಅರಿದೊಯ್ತು ಮುಕ್ಕ. ಬಂಜೆ ಫಲ ಹೋಯ್ತು, ಮಕ್ಕಳ ಫಲ ಬಂತು” ಎಂದು ಬಂಜೆಯರಿಂದ ಹೇಳಿಸುತ್ತಿದ್ದರಂತೆ. ನಂತರ ಬಂಜೆಯನ್ನು ಹಿಂದಕ್ಕೆ ತಿರುಗಿಸಿ ಬೆನ್ನ ಮೇಲೆ ಸ್ವಲ್ಪ ನೀರನ್ನು ಹಾಕಿ, ಮುಂದಕ್ಕೆ ತಿರುಗಿಸಿ ಅವಳ ಹೊಕ್ಕಳನ್ನೂ ತೊಳೆಯುತ್ತಿದ್ದರಂತೆ. ಔಷಧಿಯನ್ನು ತಮ್ಮ ಇಷ್ಟದೇವತೆಗಳನ್ನು ಸ್ಮರಿಸುತ್ತಾ ಅವಳಿಗೆ ಕೊಟ್ಟು ಜಗಿದು ನುಂಗುವಂತೆ ಹೇಳುತ್ತಿದ್ದರಂತೆ. ಬಂಜೆಗೆ ಔಷಧಿ ಕೊಡುವಾಗ ಬೇರೆ ಯಾರೂ ಇರಕೂಡದು. ಪೂಜೆ ಮಾಡಿದ ಎಲ್ಲ ದಿವಸ, ಕಾಣಿಕೆ ತೆಂಗಿನಕಾಯಿ ಮುಂತಾದವನ್ನು ಅಲ್ಲದೆ ಬುಟ್ಟಿ ತುಂಬಿದ ಧಾನ್ಯವನ್ನು ತೆಗೆದುಕೊಳ್ಳುತ್ತಿದ್ದರು. “ಈ ಧಾನ್ಯವನ್ನು ನಾನು ತೆಗೆದುಕೊಳ್ಳುತ್ತೇನೆ ಎಂದು ತಿಳಿಯಬೇಡ, ಇದನ್ನು ತೆಗೆದುಕೊಂಡು ಹೋಗಿ ಚೌಡಮ್ಮನಿಗೆ ಎಡೆ ಹಾಕಬೇಕು. ಗಿಡ ಕಿತ್ತು ಗಿಡ ಮುಗುಚುವಾಗ ಈ ಎಡೆ ಹಾಕುತ್ತೇನೆ. ನಿನಗೆ ಮಕ್ಕಳಾದರೆ ಮುಂದಿನ ವರ್ಷ ಸೀರೆ ಉಡಿಸಬೇಕು. ನಿನಗೆ ತಿಳಿದಷ್ಟು ಕಾಣಿಕೆ ಕೊಡಬೇಕು” ಎಂದು ಒಪ್ಪಂದವನ್ನೂ ಮಾಡಿಕೊಳ್ಳುತ್ತಿದ್ದರಂತೆ.

“ಔಷಧಿ ಏನು ಕೊಡುತ್ತಿದ್ದಿರಿ” ಎಂದು ಕೇಳಿದರೆ. “ನಮ್ಮ ಹಿರಿಯರು ಮೊದಲು ಕುಂಬಳದ ಮುಂದಿನ ಎರಡು ದೊಡ್ಡ ತೊಟ್ಟುಗಳನ್ನು ಮುರಿದು ಇದರ ಸ್ವಲ್ಪ ಭಾಗಕ್ಕೆ ಜೀವನ ಹುಳುವನ್ನು ಬಾಲೆ ಹಣ್ಣಿನಲ್ಲಿ ಸೇರಿಸಿ, ಹೊಟ್ಟೆಗೆ ನುಂಗಿಸುತ್ತಿದ್ದರಂತೆ. ಕೆಲವರು ಹಸಿರು ಔಷಧಿಯನ್ನು ಕೊಡುತ್ತಿದ್ದರಂತೆ. ನಾನು ಹಸಿರು ಔಷಧಿಯ ಜೊತೆಗೆ ಮಾವಿನ ಓಟಿಯ ಬೀಜದ ತುಂಡು ಮೂರು ಮೆಣಸು, ಮೂರು ಇಲಕು ಬೆಳ್ಳುಳ್ಳಿಲ, ಬೆಲ್ಲ ಸೇರಿಸಿ ಕೊಡುತ್ತಿದ್ದೇವು. ಈಗ ಎಲ್ಲ ನಿಂತು ಹೋಗಿದೆ.” ಎನ್ನುತ್ತಾರೆ. ಅಷ್ಟು ಸುಲಭವಾಗಿ ಇಂಥ ವಿಷಯವನ್ನು ಬಾಯಿ ಬಿಡುವುದಿಲ್ಲ. ಕೆಲವು ವೇಳೆ ಪೂಜೆ ಮಾಡಿಯಾದ ಮೇಲೆ ಪಂಚಲೋಹದ ಮಳೆಯನ್ನು ಬೆಚ್ಚಗೆ ಕೈ ಎಣ್ಣೆಯ ದೀಪದಲ್ಲಿ ಕಾಯಿಸಿ ಬಂಜೆಗಂಟುಗಳೆಂದು ಬಂಜೆಯ ಮೈಯಲ್ಲಿಯ ಹಸಿರು ನರಗಳ ಮೇಲೆ ಸುಟಿಕೆ ಹಾಕುತ್ತಿದ್ದರಂತೆ. ಅದು ಏನೇ ಇದ್ದರೂ ಬಂಜೆಯನ್ನು ಕೆಲವು ಸಮಯವಾದರೂ ತಾಯ್ತನದ ಆನಂದದಲ್ಲಿ ತೇಲುವಂತೆ ಮಾಡುತ್ತಿದ್ದರು. ಇಂಥ ಆಚರಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬಂಜೆಯ ಮನಸ್ಸಿಗೆ ಧೈರ್ಯ ಸ್ಥೈರ್ಯವನ್ನು ತುಂಬಿ ಮಕ್ಕಳ ಬಯಕೆ ಕೈಗೂಡುವಂತೆ ಮಾನಸಿಕ ಸಿದ್ಧತೆಗೆ ಅವರನ್ನು ಅಣಿ ಮಾಡುತ್ತಿದ್ದರು ಎಂಬುದು ತಿಳಿಯುತ್ತದೆ.

ಈ ಎಲ್ಲ ಕೆಲಸಗಳು ದಕ್ಷಿಣ ಕರ್ನಾಟಕದಲ್ಲಿ ಬುಟ್ಟಿ ಮಾಡುವ. ದಬ್ಬೆ ಅಥವಾ ಕುಕ್ಕೆ ಕೊರಮರಲ್ಲಿ ಪ್ರಚಲಿತವಿದ್ದವುಗಳು. ಇತ್ತೀಚೆಗೆ ನಾಗರಿಕತೆಯ ಪ್ರಭಾವದಿಂದಾಗಿ ಹಳ್ಳಿಯ ಜನರಲ್ಲಿಯೂ ಜಾಗ್ರತೆಯುಂಟಾಗಿ ನಂಬಿಕೆ ಹೊರಟು ಹೋಗಿದೆ. ಕೊರವಂಜಿಯೂ ಔಷಧಿ ಕೊಡಲು ಹೆದರುತ್ತಾರೆ.

ಸೋಂಕು :

ಸೋಂಕು ಕೂಡ ದೆವ್ವ ಪೀಡೆ, ಗ್ರಹ ಮುಂತಾದವುಗಳಿಗೆ ಸಂಬಂಧಿಸಿದ್ದು, ಕೈಕಾಲು ಹೊಡೆತ, ಮೈನಲ್ಲಿ ಚಳುಕು, ತೀವ್ರವಾದ ಹೊಟ್ಟೆನೋವು ಇರುವವರಿಗೆ ಸೋಂಕಿನ ದಾರವನ್ನು ಕಟ್ಟುತ್ತಾರೆ. ಈ ದಾರವನ್ನು ಕಟ್ಟಿಸಿಕೊಂಡರೆ ದುಷ್ಟ ಶಕ್ತಿಗಳೆಲ್ಲ ವಾರೆಯಾಗುತ್ತವೆನ್ನುವ ನಂಬಿಕೆ ಇದೆ. ಆದ್ದರಿಂದ ಕೊರವಂಜಿಯೂ ಬೂದಿ ಮಂತ್ರಿಸಿ ದಾರ ಕಟ್ಟುತ್ತಾರೆ. ಇದು ಕೂಡ ಸೂರ್ಯ ಮುಳುಗುವ ಸಮಯದಲ್ಲಿ ಕಟ್ಟುವಂಥದು.

ಸೋಂಕಿನ ದಾರವನ್ನು ಕಟ್ಟಿಸಿಕೊಳ್ಳುವ ವ್ಯಕ್ತಿಯ ಮನೆಯ ಪ್ರಧಾನ ಬಾಗಿಲಿನ ಒಳಭಾಗದಲ್ಲಿ ಸ್ವಲ್ಪ ನೆಲ ಸಾರಿಸಿ ಅದರ ಮೇಲೆ ಬೆನಕರನ್ನು ಕೂರಿಸಿ ಮೂರು ತರಹ ಹೂ ಮುಡಿಸಿ ಅರಿಷಿಣ, ಕುಂಕುಮ ಹಾಕಿ ಆ ವ್ಯಕ್ತಿಯನ್ನು ಎದುರಿಗೆ ಕೂರಿಸಿಕೊಂಡು, ಆ ವ್ಯಕ್ತಿಯಷ್ಟು ಉದ್ದದ ದಾರಕ್ಕೆ ಅರಿಷಿಣ ಬಳಿದು ಅಲ್ಲಿ ಇಟ್ಟು ಪೂಜಿಸುತ್ತಾರೆ. ಒಂಭತ್ತು ತರದ ಧಾನ್ಯವನ್ನು ಪಡೆದು ನೀವಾಳಿ ತೆಗೆಯುತ್ತಾರೆ. ಆ ವ್ಯಕ್ತಿಗೆ ನೀವಾಳಿ ತೆಗೆಯುವಾಗ ಒಂದೇ ಸಮನೆ ದೇವರನ್ನು ನೆನೆಯುತ್ತಾ ಯಾವ ಸೋಂಕಿದ್ರೂ ಒಡಕಳವ್ವ ಮೆಳೆಯವ್ವ ಎನ್ನುತ್ತಾರೆ. ನೀವಾಳಿ ತೆಗೆದ ದಾರವನ್ನು ಒಂದು ಹಸಿರು ಗಿಡಕ್ಕೆ ಕಟ್ಟಿಸುತ್ತಾರೆ. ಆ ದಾರವನ್ನು ಗಿಡಕ್ಕೆ ಕಟ್ಟುವುದರಿಂದ ಆ ವ್ಯಕ್ತಿಯ ಮೈಮೇಲಿದ್ದ ಸೋಂಕು ಗಿಡಕ್ಕೆ ಹೋಗುತ್ತದೆ ಎನ್ನುತ್ತಾರೆ.

ದಟ್ಟವಾಗಿ ಸಿಕ್ಕು ಸಿ‌ಕ್ಕಾಗಿ ಬೆಳೆದ ಗಿಡಕ್ಕೆ ಮಳೆ – ಪೆಳೆ ಎಂದು ಕರೆಯುತ್ತಾರೆ ಇವರು. ಮೆಳೆ ಅಥವಾ ಗಿಡವನ್ನು ದೇವರಿಗೆ ಹೋಲಿಸಿ ಪೂಜಿಸುವುದನ್ನು ನೋಡಿದರೆ, ಇವರು ಮೊದಲು ಪ್ರಕೃತಿಯ ಆರಾಧಕರಾಗಿದ್ದರು ಎಂಬುದು ತಿಳಿಯುತ್ತದೆ. ಗುಡ್ಡಗಾಡು ಜನಾಂಗದ ತಾವು ಮೂಲ ಆದಿವಾಸಿಗಳ ನಂಬಿಕೆ  ಆಚರಣೆಗಳನ್ನು ಇಂದಿಗೂ ಪ್ರಯೋಗಿಸುವುದನ್ನು ಕಾಣಬಹುದು. ನರದೌರ್ಬಲ್ಯ ಸ್ನಾಯುಗಳ ಹಿಡಿತ, ಕೀಲುಗಳ ಹೊಡೆತ ಮುಂತಾದ ದೈಹಿಕ ವ್ಯಾಧಿಗಳನ್ನು ಈ ಮೂಲಕ ಸರಿಪಡಿಸುತ್ತಿದ್ದರು. ಬಾಲಗ್ರಹ, ಸೋಂಕು, ಶಾಂತಿ ಮುಂತಾದವುಗಳನ್ನು ಈ ಜಾತಿಯ ಎಲ್ಲ ಹೆಂಗಸರು ಮಾಡುವುದಿಲ್ಲ. ಕೆಲವರ ಕೈಗುಣ ಚೆನ್ನಾಗಿರುತ್ತೆ. ಅಂಥವರೇ ಈ ಕಾರ್ಯ ಮಾಡುತ್ತಾರೆ. ಈ ಕಾರ್ಯಗಳನ್ನು ಹೊರಗಿನ ಜನರಿಗೆ ಮಾತ್ರವಲ್ಲದೆ ತಮ್ಮ ತಮ್ಮಲ್ಲಿಯೂ ಮಾಡಿಕೊಳ್ಳುತ್ತಾರೆ. ತಮ್ಮ ಜಾತಿಯವರಲ್ಲಿ ಮಾಡುವಾಗ ದಕ್ಷಿಣೆ ಮಾತ್ರ ತೆಗೆದುಕೊಳ್ಳುತ್ತಾರೆ. ಇದಲ್ಲದೆ ಅಜೀರ್ಣವಾಗಿ ಹೊಟ್ಟೆ ನೊಂದರೂ ಅವರಿಗೆ ಚಿಪ್ಪನ್ನು ಸುಟ್ಟ ಕೆಂಡವನ್ನು ನೀವಾಳಿ ತೆಗೆದು ಓಕಳಿ ನೀರಿನಲ್ಲಿ ಹಾಕುತ್ತಾರೆ. ಎಲೆಯಿಂದ ಆ ಓಕಳಿ ನೀರನ್ನು ಹೊಟ್ಟೆ ನೊಂದವರ ಅಂಗೈ, ಅಂಗಾಲುಗಳಿಗೆ ಸವರುತ್ತಾರೆ. ಆ ಓಕಳಿ ನೀರನ್ನು ಮೂರು ದಾರಿ ಕೂಡಿದಲ್ಲಿ ಚೆಲುತ್ತಾರೆ. ಈ ಕ್ರಿಯೆಗಳಿಂದ ಗುಣ ಆಗಲಿ ಬಿಡಲಿ ಅಂತೂ ಅವುಗಳ ಬಗ್ಗೆ ಅಪಾರ ನಂಬಿಕೆ ಇವರಿಗೆ ಇದೆ. ಹಿಂದಿನ ಕಾಲದ ಜಾನಪದರಲ್ಲಿಯೂ ಈ ಬಗೆಗೆ ಸಂಪೂರ್ಣ ವಿಶ್ವಾಸವಿದ್ದುದು ಸುಳ್ಳಲ್ಲ. ಆಶ್ಚರ್ಯವೆಂಬಂತೆ ಅನೇಕ ಸಂದರ್ಭಗಳಲ್ಲಿ ಈ ಚಿಕಿತ್ಸೆ ಫಲಕಾರಿಯಾಗುತ್ತಿತ್ತು. ಕೆಂಡ (ರಂಚು) ಹಾಕುವ ರೂಢಿಯೂ ಇವರಲ್ಲಿದೆ. ಹೊಟ್ಟೆನೋವು ಬಂದವರಿಗೆ ಚಿಪ್ಪಿನ ಕೆಂಡವನ್ನು ಒಂದು ಲೋಟದಲ್ಲಿ ಹಾಕಿ ಅವರಿಗೆ ನೀವಾಳಿ ತೆಗೆದು, ಓಕಳಿ ನೀರಿರುವ ಒಂದು ತಟ್ಟೆಯಲ್ಲಿ ಬೋರಲು ಹಾಕುತ್ತಾರೆ. ಆ ಲೋಟ ತಟ್ಟೆಯಲ್ಲಿ ನೀರನ್ನು ಎಳೆದುಕೊಂಡು ಗಟ್ಟಿಯಾಗುತ್ತದೆ. ಅದು ಭದ್ರವಾಗಿ ಹಿಡಿದಷ್ಟುರಂಚು ಮೀರಿದೆ ಎನ್ನುತ್ತಾರೆ. ಆ ತಟ್ಟೆಯನ್ನು ಒಂದು ಮೂಲೆಯಲ್ಲಿಟ್ಟು, ಅದು ಬಿಟ್ಟ ಮೇಲೆ ಮೂರು ದಾರಿ ಕೂಡಿದಲ್ಲಿ ಚೆಲ್ಲುತ್ತಾರೆ.

ಮಕ್ಕಳಿಗೆ ಆಸರ ತೆಗೆಯುತ್ತಾರೆ. ಮಕ್ಕಳು ರೆಚ್ಚೆಗಿಟ್ಟುಕೊಂಡು ಒಂದೇ ಸಮನೆ ಅಳುತ್ತಿದ್ದರೆ, ಅಂಥ ಮಕ್ಕಳಿಗೆ ಇದೇ ರೀತಿ ಕೆಂಡವನ್ನು ನೀವಾಳಿ ತೆಗೆದು, ಮೂರು ದಾರಿ ಕೂಡಿದಲ್ಲಿ ಚೆಲ್ಲುತ್ತಾರೆ. ಪೊರಕೆಯ ಅಂಚಿ ಕಡ್ಡಿಯನ್ನು ನೀವಾಳಿಸಿ ಬೆಂಕಿಗೆ ಹಾಕುತ್ತಾರೆ. ಆ ಕಡ್ಡಿ  ಪಟಪಟನೆ ಸಿಡಿದಷ್ಟು ಆಸರ ಹೆಚ್ಚಾಗಿದೆ ಎಂದು ತಿಳಿಯುತ್ತಾರೆ. ಉಪ್ಪನ್ನು ನೀವಾಳಿಸಿಯೂ ಬೆಂಕಿಗೆ ಹಾಕುತ್ತಾರೆ. ಪೊರಕೆ ನೀವಾಳಿ ತೆಗೆಯುತ್ತಾರೆ. ತಮ್ಮ ಎಡಗಾಲನ್ನು ತಲೆಯಿಂದ ಕಾಲಿನವರೆಗೆ ಮೂರು ಬಾರಿ ಎಳೆಯುತ್ತಾರೆ. ಆಸ್ರ ದೂಸ್ರ ರಂಡೆ ಕಣ್ಣು, ಮುಂಡೆಕಣ್ಣು, ಹರಿದೋಗ್ಲಿ ಮುಕ್ಕ ಎಂದು ನೀವಾಳಿ ತೆಗೆಯುತ್ತಾರೆ. ಇದೆಲ್ಲ ತಮ್ಮಲ್ಲಿ ಅಷ್ಟೆ ಅಲ್ಲ, ಹಳ್ಳಿಗೆ ಹೋದಾಗಲೂ ಮಾಡುತ್ತಾರೆ. ಈ ರೀತಿ ವಿವಿಧ ಬಾಲಗ್ರಹ ಚಿಕಿತ್ಸೆ, ಮಹಿಳಾ ಮಾನಸಿಕ ರೋಗಗಳ ಚಿಕಿತ್ಸೆಗಳಿಂದ ಕೊರವಂಜಿ ಮನೆಮನೆಯ ವೈದ್ಯಳಾಗಿ ವಿಜೃಂಭಿಸುವ ಕಾಲವೊಂದಿತ್ತು.

ಕಣಿ ಹೇಳಲು ಬಂದೆ ಕೇಳಮ್ಮ|
ಮಣಿ ಮಂತ್ರವ ಬಲ್ಲ ಕೊರವಂಜಿ ನಾನಮ್ಮ|
ಮದ್ದು ಮಾಟವ ಮಾಡಲು ಬಲ್ಲೆ|
ಬಿದ್ದ ಬೀಳನು ಎತ್ತಲು ಬಲ್ಲೆ,
ಕದ್ದೋಡೋ ಕಳ್ಳನ ಹಿಡಿದು ಕೂಗಾಡಬಲ್ಲೆ|
ಒದ್ದೋಡ್ಡೋ ಗಂಡನ ಕರೆದು ಕೂಡಿಸಬಲ್ಲೆ|
ಇದ್ದಂತ ಮಾತಿದು ನನಮಗಳೆ|
ಎಲ್ಲ (ವ) ಬಲ್ಲ ದೇವಲೋಕದ ಕೊರವಿ ನಾನಮ್ಮ.

[1]

ಕಣಿ:

ಭಾರತೀಯ ಸಂಸ್ಕೃತಿಯಲ್ಲಿ ಕಣಿ ಅಥವಾ ಭವಿಷ್ಯ ಹೇಳುವ ಸಂಪ್ರದಾಯ ಹೊಸದೇನಲ್ಲ. ಈ ಸಾವಿರಾರು ವರ್ಷಗಳಲ್ಲಿ ಜನ ಮುಂದಾಗುವುದನ್ನು ತಿಳಿಯಲು, ಆಗಿರುವುದನ್ನು ಅರಿಯಲು ಕುತೂಹಲ ತೋರಿಸಿರುವುದು ಸಾಮಾನ್ಯವೇ ಸಹಜವೇ; ಭವಿಷ್ಯದಲ್ಲಿ ಒಳ್ಳೆಯದಾಗುವುದಾದರೆ ಸಂತೋಷವನ್ನು, ಕೇಡಾಗುವುದಾದರೆ ಅದರಿಂದ ತಪ್ಪಿಸಿಕೊಳ್ಳಲು ಉಪಾಯ ಅಥವಾ ಶಾಂತಿಯನ್ನು ಮಾಡಲು ಜನ ಮುಂದಾಗಿರುವುದು ಸಾಮಾನ್ಯವಾದ ಸಂಗತಿ. ಆದರೆ ಮುಂದಾಗುವುದನ್ನು ತಿಳಿಯಲು ಎಲ್ಲರಿಂದಲೂ ಸಾಧ್ಯವಿಲ್ಲ. ಅಂಥ ವಿಶೇಷ ಶಕ್ತಿ ಇದ್ದವರು ಮಾತ್ರ ಕಣಿ ಅಥವಾ ಭವಿಷ್ಯ ಹೇಳುವ ಕಾಯಕದಲ್ಲಿ ನಿರತರಾಗಿದ್ದಾರೆ.

“ಇಂಗ್ಲೀಷಿನ Devination ಎಂಬ ಪದಕ್ಕೆ ಕಣಿ ಎಂಬ ಪದವನ್ನು Prediction ಎಂಬ ಪದಕ್ಕೆ   ಭವಿಷ್ಯ ಎಂಬ ಪದವನ್ನು ಕನ್ನಡದಲ್ಲಿ ಸಮಾನಾರ್ಥಕ ಪದಗಳಾಗಿ ಬಳಸಬಹುದು.,

ಮಾನವ ಪಂಚೇಂದ್ರಿಯಗಳ ಮೂಲಕ ತಿಳಿಯಲು ಸಾಧ್ಯವಾಗದ, ಆದರೆ ಅತೀಂದ್ರಿಯ ಶಕ್ತಿಯಿಂದ ತಿಳಿಯಲು ಸಾಧ್ಯವಾಗುವ ಕ್ರಮವನ್ನೆ ಕಣಿ ಎಂದು ಕರೆಯಲಾಗಿದೆ. ಅತ್ರೀಂದಿಯ ಶಕ್ತಿಯಿಂದ ಬೇರೊಬ್ಬ ಮನಸ್ಸಿನಲ್ಲಿರುವ ಆಲೋಚನೆಗಳನ್ನು ತಿಳಿಯುವುದು, ಕಳೆದು ಹೋಗಿರುವ ವಸ್ತುವನ್ನು ಪತ್ತೆ ಹಚ್ಚುವುದು, ಮುಂದೆ ನಡೆಯುವುದನ್ನು ಮೊದಲೆ ತಿಳಿದುಕೊಳ್ಳುವುದು ಈ ಎಲ್ಲ ಕೆಲಸಗಳೂ ಕಣಿ ಹೇಳುವುದರಲ್ಲಿ ಸೇರಿ ಹೋಗುತ್ತವೆ.[2] ಕೊರವಂಜಿಯರೂ ಹಳ್ಳಿಗಳಿಗೆ ಹೋದಾಗ ಕಣಿ ಹೇಳುತ್ತಿದ್ದುದು ಈ ಸಾವಿರಾರು ವರ್ಷಗಳ ದಾಖಲೆ ಶಿಲಪ್ಪದಿಗಾರಮಮ್ ನಿಂದ ಮೊದಲ್ಗೊಂಡು ಇತ್ತೀಚಿನ ಸಮಾಜ ವಿಜ್ಞಾನಿಗಳವರೆಗೂ ಕಂಡು ಬರುತ್ತದೆ. ಕೆಲವು ಜನಪದ ಗೀತಗಳಲ್ಲಂತೂ ಕೊರವಂಜಿ ಯಾವ ಪೂರ್ಣ ಸೂಚನೆಯೂ ಇಲ್ಲದೆ ಹಿಂದಾದುದನ್ನು, ಮುಂದೆ ಆಗುವುದನ್ನು ಹೇಳಿ ತಾನು ಪಕ್ಕ ಭವಿಷ್ಯಗಾರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾಳೆ.[3] ಭವಿಷ್ಯ ಹೇಳುವುದು ಅಂದರೆ ಅತ್ತೀಂದ್ರಿಯ ಶಕ್ತಿಯಿಂದ ಮುಂದಾಗುವುದನ್ನು ತಿಳಿಯುವುದು. ಕಣಿ ಎಂಬುವುದು ವ್ಯಾಪಕವಾದ ಪದ. ಹೀಗಾಗಿ ಕಣಿ ಹೇಳುವುದರಲ್ಲಿ ಭವಿಷ್ಯ ಹೇಳುವುದು ಕೇವಲ ಒಂದು ಭಾಗವಾಗಿ ಮಾತ್ರ ಬರುತ್ತದೆ.[4] ಭವಿಷ್ಯ ಎಂಬುದು ಶಿಷ್ಟರೂಪದಂತೆ ಕಂಡರೂ ಕಣಿ ಜಾನಪದ ರೂಪವೇ. ಕೊರವಂಜಿಯ ಅತ್ತೀಂದ್ರಿಯ ಶಕ್ತಿ ಅಥವಾ ವ್ಯಾಪಕ ಸಾಮಾಜಿಕ ಪರಿಜ್ಞಾನವೇ ಆಕೆಯ ಕಣಿಗೆ ಕಾರಣ. ಈ ಬಗೆಗೆ ಜನರಲ್ಲಿದ್ದ ನಂಬಿಕೆಯೂ ಕೊರವಂಜಿಯ ವೃತ್ತಿಯ ಪ್ರಗತಿಗೆ ಸಹಾಯಕವಾಗಿದೆ.


 

 

ಕೊರವಂಜಿ

“ಕಣಿ ಹೇಳುವ ವಿಧಾನ ಒಂದೇ ತೆರನಾಗಿಲ್ಲ. ಜನ್ಮದ ಸಮಯ, ನಕ್ಷತ್ರ, ವಾರ, ಗ್ರಹಗಳ ಚಲನೆಯ ಆಧಾರದ ಮೇಲೆ ಮುಂದಾಗುವುದನ್ನು ಹೇಳುವ ಭವಿಷ್ಯವೇ ಬೇರ. ಇದಾವುದರ ಸಹಾಯವೂ ಇಲ್ಲದೆ, ಕಣಿ ಹೇಳುವ ವಿಧಾನವೇ ಬೇರೆ. ಕಣಿ ಹೇಳುವುದರಲ್ಲಿ ಆಂತರಿಕ ವಿಧಾನ ಮತ್ತು ಬಾಹ್ಯ ವಿಧಾನ ಎಂಬ ಎರಡು ಬಗೆಗಳಿವೆ. ಅಂಜನ ಹಚ್ಚಿ ನೋಡುವುದು, ಗಣೆ ಊದಿ ಶಾಸ್ತ್ರ ಹೇಳುವುದು. ಬಾಹ್ಯ ವಿಧಾನಕ್ಕೂ ಸೇರುತ್ತವೆ.”[5] ಇದಿಷ್ಟೇ ಅಲ್ಲದೆ ವ್ಯಕ್ತಿ ಮುಂದಿನ ಒಳ್ಳೆಯ ಅಥವಾ ಕೆಟ್ಟದ್ದನ್ನು ನಂಬಿಕೊಂಡು ಬಂದ ಆಚರಣೆಯ ಮೂಲಕ ತನ್ನಷ್ಟಕ್ಕೆ ತಾನೆ ತಿಳಿದುಕೊಳ್ಳುವುದೂ ಇದೆ. ದೇವರ ಮೇಲೆ ಹೂಗಳನ್ನು ಮುಡಿಸಿ ಕುರುಹು ಕೇಳುವುದು, ಹೂವು ಎಡಕ್ಕೆ ಬಿದ್ದರೆ ಕೆಟ್ಟದೆಂದೂ, ಬಲಕ್ಕೆ ಬಿದ್ದರೆ ಒಳ್ಳೆಯದೆಂದೂ ತಿಳಿಯುವುದು, ಅಂತೆಯೇ ಸಾರಿಸಿದ ನೆಲದ ಮೇಲೆ ರಾಗಿ ಸುರಿದು ಅದರ ಮೇಲೆ ತುಂಬಿದ ಚೆಂಬನ್ನಿಟ್ಟು ಅದರ ಬಾಯಿಗೆ ಕೇರುವ ಮೊರವನ್ನಿರಿಸಿ ಪೂಜೆ ಮಾಡಿ ಅದರ ಮೇಲೆ ಹುಡುಗನೊಬ್ಬನನ್ನು ಕೂರಿಸಿ ಪೂಜೆ ಮಾಡಿ ಕುರುಹು ಕೇಳುತ್ತಾರೆ. ಎಡಕ್ಕೆ ತಿರುಗಿದರೆ ಕೆಟ್ಟದೆಂದೂ, ಬಲಕ್ಕೆ ತಿರುಗಿದರೆ ಒಳ್ಳೆಯದೆಂದೂ ತಿಳಿಯುತ್ತಾರೆ. ಇಂಥ ವಿಧಾನಗಳು ತಾವು ತಿಳಿದುಕೊಳ್ಳುವಂಥವುಗಳೇ ಹೊರತು ಇನ್ನೊಬ್ಬರಿಗೆ ಕಣಿಯ ಹಾಗೆ ಹೇಳುವಂಥವುಗಳಲ್ಲ. ಇವುಗಳನ್ನು ಕುರುಹು ಎಂದು ಕರೆಯುತ್ತಾರೆ. ಬಹುಶಃ ಇಂತಹ ಕುರುಹುಗಳೇ ಕಣಿ ನಂಬುಗೆಗೆ ಮೂಲವೆಂದು ತೋರುತ್ತದೆ.

“ಕರ್ನಾಟಕದಲ್ಲಿಯೂ ಕಣಿ ಹೇಳುವ ಹಲವಾರು ವಿಧಾನಗಳಿವೆ. ಕಣಿ ಹೇಳುವುದರಲ್ಲಿ ಕೊರಚರು ಪ್ರಸಿದ್ಧರಾಗಿದ್ದರು. ಇವರು ಮೊರದಲ್ಲಿ ಅಕ್ಕಿಯ ಕಾಳನ್ನು ಹಾಕಿಕೊಂಡು ಅದನ್ನು ಎಣಿಸುವುದರ ಮೂಲಕ ಕಣಿ ಹೇಳುತ್ತಾರೆ.”[6] ಅಷ್ಟೇ ಅಲ್ಲ; ಕೈಯ ರೇಖೆಗಳನ್ನು ಗುರ್ತಿಸುವುದರ ಮೂಲಕವೂ ಕಣಿ ಹೇಳುತ್ತಾರೆ. ಕಣಿ ಹೇಳುವವರು ಕೊರಮರಲ್ಲಿ ಹೆಂಗಸರೇ ಹೊರತು ಗಂಡಸರಲ್ಲ. ಇವರು ಬಾಹ್ಯ ವಿಧಾನದಲ್ಲಿಯೇ ಕಣಿ ಹೇಳುತ್ತಾರೆ. ಕಣಿ ನೇರವಾಗಿ ಮನಸ್ಸಿನ ಮೇಲೆ ದಾಳಿ ಮಾಡುವ ಒಂದು ಸಾಧನ. ಇಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ನೇರವಾಗಿ ಮನಸ್ಸಿಗೆ ಸಂಬಂಧಪಟ್ಟಿದ್ದು. ಕಣಿ ಹೇಳುವವರು ಒಂದು ಮಾತಿನಲ್ಲಿ ನಾನಾರ್ಥ ಗ್ರಹೀತವಾಗುವ ಹಾಗೆ ಧ್ವನಿಯಲ್ಲಿಯೇ ಮಾತನಾಡುತ್ತಾರೆ. ( ಉದಾ: ಲಕ್ಷ್ಮೀ ಎಂದರ ಹಣ, ಭೂಮಿ, ಹೆಣ್ಣು ಮೂರರಲ್ಲಿ ಯಾವುದೂ ಆಗಬಹುದು).

ಕಣಿ ಹೇಳುವ ಕೊರವಂಜಿಯ ಮಾತಿನಲ್ಲಿ ಕೆಲವು ಘಟಿಸಿದರೂ ಅದು ಅವರು ಖಚಿತ ಪಡಿಸಿಕೊಂಡು ಹೇಳಿದ್ದಲ್ಲ. ಪಂಚೇಂದ್ರಿಯಗಳನ್ನು ಮೀರಿದ ಅತೀಂದ್ರಿಯ ಶಕ್ತಿಯ ಸಹಾಯದಿಂದ ಮುಂದಾಗುವುದನ್ನು ಗ್ರಹಿಸುವುದು ಸಾಧ್ಯವಿಲ್ಲ ಎಂಬುದನ್ನು ಅನೇಕರು ಇಂದಿಗೂ ವ್ಯಕ್ತಪಡಿಸುತ್ತಾದರೂ ಇತ್ತೀಚೆಗೆ ವಿಜ್ಞಾನದ ಸ್ಥಾನಮಾನಗಳನ್ನು ಗಳಿಸಿಕೊಂಡಿರುವ ಪರಾ ಮನೋವಿಜ್ಞಾನ ಈ ಸಾದ್ಯತೆಯನ್ನೂ, ವೈಜ್ಞಾನಿಕ ಪ್ರಯೋಗಗಳ ಮೂಲಕ ಸಮರ್ಥಿಸಿದೆ. ಪಂಚೇಂದ್ರಿಯಗಳ ವ್ಯಾಪ್ತಿಯನ್ನು ಮೀರಿ, ಕಾಲದೇಶಗಳ ಪರಿಮಿತಿಯನ್ನು ದಾಟಿ ಮಾನವ ಗಳಿಸಿಕೊಳ್ಳಬಹುದಾದ ಜ್ಞಾನವನ್ನು ಅತೀಂದ್ರಿಯ ಜ್ಞಾನ (Extra Sensory Perception) ಎಂದು ಕರೆಯಲಾಗಿದೆ. ಈ ಜ್ಞಾನ ಮೂರು ರೀತಿಯಲ್ಲಿ ಇರಬಹುದು. ಪಂಚೇಂದ್ರಿಯಗಳ ಸಹಾಯವಿಲ್ಲದೆ ಬೇರೊಬ್ಬ ವ್ಯಕ್ತಿಯ ಮನಸ್ಸಿನಲ್ಲಿರುವ ಆಲೋಚನೆಗಳನ್ನು ತಿಳಿಯುವುದು ಅನ್ಯ ಮನೋದರ್ಶನ, (Telepathy); ಪಂಚೇಂದ್ರಿಯಗಳ ಸಹಾಯವಿಲ್ಲದೆ ಬಹುದೂರದಲ್ಲಿ ನಡೆದ ಘಟನೆಗಳನ್ನು ತಿಳಿಯುವುದು ಭವಿಷ್ಯ ದರ್ಶನ. ( Precognition)  ಮಾನವ ಶಕ್ತಿ ಇರುವುದು ಸುಳ್ಳಲ್ಲ. ಸತ್ಯವಾದುವು ಎಂಬುದನ್ನು ಪರಾ ಮನೋವಿಜ್ಞಾನ (Parapsychology)  ವೈಜ್ಞಾನಿಕ ಪ್ರಯೋಗಗಳಿಂದ ಸಾಧಿಸಿ ತೋರಿಸಿದೆ.[7] ಆದ್ದರಿಂದ ಕಣಿ ಹೇಳುವ ಪದ್ಧತಿ ಹುರುಳಿಲ್ಲದ್ದು ಮೂರ್ಖತನದ್ದು ಎಂದು ತಳ್ಳಿಹಾಕಲು ಬರುವುದಿಲ್ಲವಾದರೂ ಕೊರಮರ ಕಣಿಗೆ ಯಾವುದೇ ಶಾಸ್ತ್ರೋಕ್ತವಾದ, ಆಧಾರಗಳಿಲ್ಲ, ಪಂಚೇಂದ್ರಿಯಗಳ ಸಹಾಯವಿಲ್ಲದೆ ಅನ್ಯರ ಮನಸ್ಸನ್ನು ಅರಿಯುವ ಶಕ್ತಿ ಅನ್ಯ ಮನೋದರ್ಶನ ಇವರಲ್ಲಿ ಕಣಿ ಹೇಳಲು ಪೂರಕ ಶಕ್ತಿಯಾಗಿದೆ ಎಂದು ಹೇಳಬಹುದು.

“ಇಂದಿಗೂ ಗೌರಸಂದ್ರದ ಮಾರಮ್ಮನ ಜಾತ್ರೆಯಲ್ಲಿ ಕಣಿ ಹೇಳುವ ಕೊರವಂಜಿಯ ಇಟ್ಟಾರೆ ಸೇರುತ್ತಾರೆ. ಜಾತ್ರೆಗೆ ಬಂದ ಕಾಡುಗೊಲ್ಲರು ಹಾಗೂ ಇತರರು ಈ ಕೊರವಂಜಿಯರಲ್ಲಿ ಕಣಿ ಕೇಳುತ್ತಾರೆ. ಕಣಿ ಹೇಳುವ ಕೊರವಂಜಿಯ ಸಂಪ್ರದಾಯ ಕೊರಮ ಬುಡಕಟ್ಟಿಗೆ ವಿಶಿಷ್ಟವಾದುದು. ಅವರಿಂದ ಪ್ರಭಾವಿತರಾದ ಕೆಲವರು ಕಾಡುಗೊಲ್ಲರ ಹೆಂಗಸರೂ ಕಣಿ ಹೇಳಲು ತೊಡಗಿದ್ದಾರೆ. ಕೊರಚರ ಕಸುಬುಗಳಲ್ಲಿ ಕಣಿ ಹೇಳುವುದು ಒಂದು ಮುಖ್ಯ ಕಸುಬು. ಅದರಲ್ಲಿಯೂ ಈ ಬುಡಕಟ್ಟಿನ ಹೆಂಗಸರಿಗೆ ಈ ಕೆಲಸ ಮೀಸಲಾದುದು”[8] ಎಲ್ಲ ಕಾಲಕ್ಕೂ ಕೊರವಂಜಿ ಈ ಕೆಲಸವನ್ನು ತನ್ನ ಹಕ್ಕು ಎಂಬಂತೆ ಪಾಲಿಸಿಕೊಂಡು ಬಂದಿದ್ದಾಳೆ. ಕೊರವಂಜಿಯರು ಕಣಿ ಹೇಳುವಾಗ ಒಂದು ಗೂಡೆ ಅದರೊಳಗೆ ತಮ್ಮ ಮನೆದೈವದ ಕಟ್ಟು ಇಟ್ಟುಕೊಂಡಿರುತ್ತಾರೆ. ಕೈಯಲ್ಲಿ ಒಂದು ಮಂತ್ರದ ಕೋಲು ಇರುತ್ತದೆ. ದೇವರ ಕಟ್ಟಿಗೆ ಕವಡೆಗಳನ್ನು ಅಂಟಿಸಿರುತ್ತಾರೆ. ದೇವರ ಕಟ್ಟು ಎಂದರೆ ಏನು? ಎಂದು ಕೇಳಿದರೆ ಇದು ಬಾಣಂತಿಯ ಹಸ್ತ. ಇದನ್ನು ಭಾನುವಾರ ಸ್ಮಶಾನದಿಂದ ಶಾಂತಿ ಮಾಡಿ ತಂದು ಇಟ್ಟುಕೊಳ್ಳುತ್ತೇವೆ. ಅದು ಸೂರ್ಯ ಗ್ರಹಣ ಅಥವಾ ಚಂದ್ರಗ್ರಹಣದ ಭಾನುವಾರವೇ ಆಗಬೇಕು ಎಂದು ಹೇಳುತ್ತಾರೆ. ಕೆಲವು ವೇಳೆ ಇವರ ಹತ್ತಿರ ದೊಡ್ಡ ದೊಡ್ಡ ಪಕ್ಷಿಗಳ ನೀಳವಾದ ಎಲುಬುಗಳೂ ಇರುತ್ತಿದ್ದವು. ಇವು ಏನು ಎಂದು ಕೇಳಿದರೆ ಇವು ಬಾಣಂತಿಯವು ಎಂದು, ಇಲ್ಲದ ಭಯ ಹುಟ್ಟಿಸಿ ಕಣಿ ಹೇಳುತ್ತಿದ್ದರು.

ಕಣಿ ಕೇಳುವ ವ್ಯಕ್ತಿಯ ಕೈಯನ್ನು ದೇವರ ಕಟ್ಟು ಇರುವ ಗೋಡೆಯ ಮೇಲೆ ಬರುವಂತೆ ಹಿಡಿದುಕೊಂಡು (ಗೋಡೆ ಇಬ್ಬರ ಮಧ್ಯೆ ಇರುತ್ತದೆ) ಬಲಗೈಯ ಮಂತ್ರದ ಕೋಲಿನಿಂದ ಆ ವ್ಯಕ್ತಿಯ ಕೈಯ ರೇಖೆಗಳನ್ನು ನೋಡುತ್ತಾ ಕಣಿ ಹೇಳಲು ಪ್ರಾರಂಭಿಸುತ್ತಾಳೆ. ತಮ್ಮ ಇಷ್ಟ ದೇವತೆಗಳ ಪ್ರಾರ್ಥನೆಯೊಂದಿಗೆ ಕಣಿ ಪ್ರಾರಂಭವಾಗುತ್ತದೆ.

“ಸ್ವಾಮಿ ನಾರಾಯಣ, ಅಟ್ಟಿಲಕ್ಕಮ್ಮ, ತಾಯಿ ಮದ್ದಗಿರಿ ಮಾರಮ್ಮ, ದಂಡಿನ ಮಾರಮ್ಮ ತಾಯಿ ದಂಡಮಾರತಳಿ, ಪಿರಾಪಟ್ಳದಮ್ಮ, ಚಿಕ್ಕಮ್ಮ, ದೊಡ್ಡಮ್ಮ, ನಾಡಮ್ಮ, ಕೊಂಣ್ಯಕ್ಳಮ್ಮ, ಪಸ್ರಮಳಕಾಯಮ್ಮ” ಎಂದು ಮುಂತಾಗಿ ದೇವರನ್ನು ನೆನೆಯುತ್ತಾರೆ. ಇಲ್ಲಿ ಕೊಣ್ಯಕ್ಳಮ್ಮ, ಪುಂಡಿಸೊಪ್ಪಿನಮ್ಮ, ಪಸ್ರಮಳಕಾಯಮ್ಮ, ಹಸಿಮೆಣಸಿನಕಾಯಮ್ಮ, ಎಂದು ಹೇಳುತ್ತಾರೆ. ಇದು ಒಂದು ರೀತಿ ವ್ಯಂಗ್ಯವೂ ಹೌದು.[1]       ವಿದ್ಯಾರ್ಥಿ ಭಾರತಿ, ಸಂಪುಟ-2, ಸಂಚಿಕೆ-1, ಕವಿವಿ ಧಾರವಾಡ. ಜನೇವರಿ 1990.

[2]      ಡಾ|| ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು ಪು-174.

[3]      ಡಾ|| ತೀ.ನಂ. ಶಂಕರನಾರಾಯಣ, ಕಾಡುಗೊಲ್ಲರ ಸಂಪ್ರದಾಯಗಳು ಮತ್ತು ನಂಬಿಕೆಗಳು ಪು-174.

[4]        – ಅದೇ – 174

[5]      – ಅದೇ – 174

[6]      – ಅದೇ – 176

[7]      – ಅದೇ – 176

[8]      – ಅದೇ – 176