ಸಂಮಿಶ್ರ ಸ್ವರೂಪದ ಸಂಸ್ಕೃತಿಯನ್ನು ಪಡೆದ ಭಾರತಿಯ ಜನಾಂಗ ಅನೇಕತೆಯಲ್ಲಿ ಏಕತೆ ಎನ್ನುವ ಸ್ಥೂಲ ತತ್ವವನ್ನು ತೋರ್ಪಡಿಸಿದರೂ ಸಮಗ್ರ ರಾಷ್ಟ್ರ ಸಂಘಟಿತ ರಾಷ್ಟ್ರೀಯ ಜೀವನ ದರ್ಶನವನ್ನು ರೂಪಿಸಿಕೊಳ್ಳುವ ಪ್ರಯತ್ನ ಸ್ವಾಂತಂತ್ರ್ಯಾನಂತರ ನಡೆಯುತ್ತಾ ಬಂದಿದೆ. ಎಲ್ಲ ಪ್ರದೇಶ, ಭಾಷೆ, ಜನಾಂಗ, ಬುಡಕಟ್ಟುಗಳ ಸಮನ್ವಯ ರಾಷ್ಟ್ರಧರ್ಮ ಅಥವಾ ರಾಷ್ಟ್ರೀಯತೆ ಅದು ಈ ಎಲ್ಲ ಜನಾಂಗ, ಬುಡಕಟ್ಟು, ಭಾಷೆಗಳ ಮೌಲಿಕಾಂಶಗಳಿಂದ ಕೂಡಿದ ಸಮಗ್ರ ಜೀವನ ದೃಷ್ಟಿಯಿಂದ ರೂಪಿತವಾಗಬೇಕು.

ಇಂಥ ಉದ್ದೇಶ ಸಾಧನೆಯ ಹಿನ್ನೆಲೆಯಲ್ಲಿ ಭಾರತೀಯ ಬುಡಕಟ್ಟುಗಳ ಅಧ್ಯಯನ ಒಂದು ಮಹತ್ವದ ಕೊಡುಗೆಯಾಗಲಿದೆ. ಮೇಲ್ವರ್ಗದ ಭಾವ-ಭಾವನೆಗಳ ಪ್ರಭಾವವೇ ಮೇಲುಗೈಯಾಗಿರುವ ಇಂದಿನ ಸಾಮಾಜಿಕ ದೃಷ್ಟಿ ಪರಿವರ್ತನೆಗೊಂಡು ಸಮಗ್ರ ಜನಾಂಗ ಜೀವನ ದೃಷ್ಟಿ ಅಂದರೆ ಸಮನ್ವಿತ ಭಾರತೀಯ ಜನಾಂಗಿಕ ದೃಷ್ಟಿ ಮೈದೋರಬೇಕಾಗಿದೆ. ಶತಮಾನಗಳಿಂದ ಬೆಳೆದು ಬಾಳಿ ಬಂದಿರುವ ಬುಡಕಟ್ಟುಗಳಲ್ಲಿ ರಾಷ್ಟ್ರವ್ಯಾಪಕವಾಗಿ ಹಬ್ಬಿರುವ “ಕೊರಮ” ಬುಡಕಟ್ಟು ತನ್ನದೇ ಆದ ವಿಶಿಷ್ಟಾಂಶಗಳನ್ನು ಮೂಲ ಪ್ರವಾಹಕ್ಕೆ ನೀಡುವಷ್ಟು ಪ್ರಬಲವಿದೆ. ಕೊರಮ ಜನಾಂಗದ ಐತಿಹಾಸಿಕ ಹಿನ್ನೆಲೆಯಲ್ಲಿ ಆ ಜನಾಂಗದ ನಡೆ-ನುಡಿ, ಜೀವನ ವಿವರವಾದ ಅಧ್ಯಯನ ಈ ಸಾಧ್ಯತೆಯನ್ನು ಎತ್ತಿ ತೋರುತ್ತದೆ.

ಬೆಟ್ಟ ಗುಡ್ಡಗಳೊಂದಿಗೆ ತಮ್ಮ ಬದುಕನ್ನು ರೂಢಿಸಿಕೊಂಡಿದ್ದ ಕೊರಮರು ನಾಡಿನೊಂದಿಗೆ ಸಂಪರ್ಕ ಹೊಂದಿದ ಮೇಲೆ ಕೆಲವರು ಅಲೆಮಾರಿಗಳಾಗಿಯೂ, ಕೆಲವರು ಕೆಲವು ಕಡೆ ಸ್ಥಿರವಾಗಿ ನಿಂತು, ನಾನಾ ಉದ್ಯೋಗಗಳನ್ನು ಕೈಕೊಂಡು ಜೀವನ ಸಾಗಿಸುತ್ತಾ ಬಂದಿದ್ದಾರೆ. ಆಯಾ ಭಾಗದ ಜನ ಜೀವನದ ಪ್ರಭಾವ ಈ ಜನರ ಮೇಲಾದರೂ ತಮ್ಮ ಮೂಲದ ಅನೇಕ ಅಂಶಗಳನ್ನು ಬಿಟ್ಟುಕೊಡಲಿಲ್ಲ. ಅಲ್ಲದೆ ಇವರು ಆಯಾ ಪ್ರದೇಶಕ್ಕೆ ಅನ್ಯರಂತೆಯೂ ಕಂಡು ಬಂದದ್ದರಿಂದ ಅಲ್ಲಿಯ ಜನ ಮೊದಮೊದಲು ನಿಂತಲ್ಲಿ ನಿಲ್ಲಲು ಬಿಡದೆ ಒಕ್ಕಲೆಬ್ಬಿಸುವ ಕೆಲಸ ಮಾಡಿದರು. ಆದ್ದರಿಂದ ಇವರು ತಮ್ಮ ನೆಲೆಗಳನ್ನು ಕಂಡುಕೊಳ್ಳಲು ಸಾಧ್ಯವಾಗದೆ ಊರ ಹೊರಗೆ ಜನರ ಸಂಪರ್ಕದಿಂದ ದೂರವಾಗಿ ತಾತ್ಕಾಲಿಕ ಬಿಡಾರಗಳನ್ನು ಮಾಡಿಕೊಂಡು ಸ್ವಲ್ಪ ದಿವಸ ತಂಗಿ ಅಲ್ಲಿಂದ ಮತ್ತೊಂದು ಕಡೆಗೆ ಹೋಗುತ್ತಿದ್ದರು. ಇವರಲ್ಲಿ “Another large class are the Thubba, Dhubbai or Dhabbai (split bamboo) Karavas who restrict their wanderings to the foot of hill ranges, where bamboos are obtainable”

[1] ಎಂದು ದಬ್ಬೆ ಅಥವಾ ಕೊರಮರು ಉಳಿಯುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಇವರಂತೆ ಬೇರೆ ವೃತ್ತಿಯನ್ನು ಅವಲಂಬಿಸಿದ ಕೊರಮರೂ ಊರ ಹೊರಗೆ ಉಳಿಯುತ್ತಿದ್ದರು. ಕೊರವರ ಭಿನ್ನ ಸಂಸ್ಕೃತಿ ಆಚರಣೆ, ಭಾಷೆ, ಉದ್ಯೋಗ ಮುಂತಾದವುಗಳೂ ಇವರು ಊರ ಹೊರಗೆ ಉಳಿಯಲು ಕಾರಣವಾಯಿತು.

 

ಕೊಲಾರಿಯಾಕಾರದ ಮನೆಗಳು

 

ಕೊರಮರ ಸೋಗೆಯ ಮನೆ

ಪ್ರಯಾಣ ಸೌಕರ್ಯಗಳಿಲ್ಲದಿದ್ದ ಅಂದಿನ ದಿನಗಳಲ್ಲಿ ಎರಡು ಮೂರು ಅಥವಾ ಅದಕ್ಕಿಂತ ಹೆಚ್ಚು ಸಂಸಾರಗಳು ಒಂದೊಂದು ದಿಕ್ಕಿನಲ್ಲಿ ಮುಂದುವರೆಯುತ್ತಿದ್ದವು. ಕುಡಿತ ಇವರಲ್ಲಿ ಹೆಂಗಸರು ಮಕ್ಕಳೆನ್ನದೇ ಎಲ್ಲರಲ್ಲಿಯೂ ಸಾಮಾನ್ಯವಾದುದಾಗಿತ್ತು. ಅತಿ ದಡ್ಡತನದಿಂದಲೂ ಕೂಡಿದ ಈ ಜನ ಜಗಳ ಬಡಿದಾಟ ಮಾಡುತ್ತಿದ್ದುದೇ ಹೆಚ್ಚು. ಊರಿನ ಜನ ಅದಕ್ಕಾಗಿಯೇ ಇವರನ್ನು ದೂರ ಇಟ್ಟಿರಬೇಕು. “ಕೊರಮ ಕೂಡಿಕೆಟ್ಟ, ದೊಂಬಿ ಅಗಲಿ ಕೆಟ್ಟ” ಎಂಬ ಗಾದೆಯೇ ಇದನ್ನು ಸೂಚಿಸುತ್ತದೆ. ಆದ್ದರಿಂದ ಇವರು “ಊರ ಹೊರಗಡೆ ಕೊಲ್ಲಾರಿಯಾಕಾರದ ತಾತ್ಕಾಲಿಕ ಗುಡಿಸಲುಗಳನ್ನು ಕಟ್ಟಿಕೊಂಡು ಅಲ್ಲಿ ವಾಸಿಸುತ್ತಾರೆ” ದಕ್ಷಿಣ ಕರ್ನಾಟಕದಲ್ಲಿ ಇಂಥ ಗುಡಿಸಲುಗಳಿಗೆ “ಕೊತ್ತಲೂಡು” ಎಂದು ಕರೆಯುತ್ತಾರೆ. ಇವು ಕಮಾನಿನ ಆಕಾರದಲ್ಲಿ ಇರುತ್ತವೆ. ಈ ಗುಡಿಸಲಿಗೆ ಒಂದೇ ಬಾಗಿಲು ಬಗ್ಗಿ ಓಡಾಡುವಷ್ಟು ಚಿಕ್ಕದು. ಮೇಲೆ ತೆಂಗಿನಗರಿ ಅಥವಾ ಹುಲ್ಲನ್ನು ಹೊದಿಸುತ್ತಿದ್ದರು. ಬಿದರಿನ ತಡಿಕೆಗಳನ್ನು ಉಪಯೋಗಿಸುತ್ತಿದ್ದರು. ಈ ಬಗ್ಗೆ ಜಾನಪದ ವಿಶ್ವಕೋಶದಲ್ಲಿ “ಕೊರವರು ಸಣ್ಣ ಸಣ್ಣ ಮಣ್ಣಿನ ಗೋಡೆಯ, ತೆಂಗಿನಗರಿ, ತಾಳೆಯಗರಿ ಅಥವಾ ಚಾಪೆಯನ್ನು ಹೊದಿಸಿದ ನಾಲ್ಕು ಅಡಿಗಳಿಗಿಂತಲೂ ಎತ್ತರವಿರದ ಗುಡಿಸಲುಗಳಲ್ಲಿ ವಾಸಿಸುತ್ತಾರೆ.”[2] ಎಂದು ಹೇಳಿರುವ ಅಂಶ ಅವರ ಮನೆಗಳ ಮಾದರಿಯನ್ನು ಸೂಚಿಸುತ್ತದೆ. ಶ್ರೀ ಎಚ್‌.ವಿ. ನಂಜುಂಡಯ್ಯ ಮತ್ತು ಶ್ರೀ ಅನಂತಕೃಷ್ಣ ಅಯ್ಯರ್ ಅವರು “Ura koravas live in houses similar to those of other castes of their own standing, But the wandering Korachas live outside in the villages, in temperary huts with orahed coverings, like the top of a countary cart, the bent bamboos being stuck in the groups, so as to leave a breath of about four feet. They enchamp in the ground, and when they shift to their places, they carry away their huts on their bullocks. The Thieving ganerally select their places for camping in the jungle”[3] ಎಂದು ಉಳಿಯುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಅಂತೆಯೇ ಎಂ.ಕೆನಡಿ ಅವರು “in the Bombay presidency gangas are to be found roving throuthout the Deccan and Carnatic Districts. Their habitations are temporarily constracted huts or pals which with their other goods and cattles they carry from place to place on donkeys. They usually enchamp some little distance from villages in the vicinity of water”[4] ಎಂದು ದಾಖಲಿಸಿರುವುದನ್ನು ನೋಡಿದರೆ ಈ ಜನಾಂಗ ಊರಿನ ಹೊರಗೆ ಪ್ರತ್ಯೇಕವಾಗಿ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ಬದುಕುವ ತಮ್ಮ ಮೂಲ ಪ್ರವೃತ್ತಿಯನ್ನು ಉಳಿಸಿಕೊಂಡಿರುವುದನ್ನು ಅರಿಯಬಹುದು.

ಕ್ರಮೇಣ ಹಳ್ಳಿಯ ಜೊತೆ ಇವರ ಒಡನಾಟ ಹೆಚ್ಚಾದಂತೆಲ್ಲ ಕೆಲ ಕುಟುಂಬಗಳು ಹಳ್ಳಿಯೊಳಗೂ ಪ್ರವೇಶ ಪಡೆದವು. ಒಂದೋ, ಎರಡೋ ಮನೆಯವರು ಪ್ರತ್ಯೇಕಗೊಂಡು ಹೊರಗೆ ಉಳಿಯಲು ಸಾಧ್ಯವಾಗದೆ ಊರ ದೇವಸ್ಥಾನದ ಅಂಗಳದಲ್ಲಿ ಅಥವಾ ಊರ ಮುಂದಿನ ಮರಗಳ ಕೆಳಗೆ ಇಲ್ಲವೆ ಯಾರಾದಾದರೂ ಮನೆಗಳ ಜಗುಲಿಯ ಮೇಲೆ ಆ ಮನೆಯವರ ಅನುಮತಿ ಪಡೆದು ಉಳಿಯುವಂತಾದರು. ಇವರಲ್ಲಿ ಗುಂಪು ಗುಂಪಾಗಿ ಇದ್ದು ಊರಿಂದೂರಿಗೆ ವಲಸೆ ಹೋಗುವವರು ಮಾತ್ರ ಊರ ಹೊರಗೆ ಉಳಿದುಕೊಳ್ಳುತ್ತಿದ್ದರು. ಆದರೆ ಕಳ್ಳತನ ಮಾಡುತ್ತಿದ್ದ ಕುಟುಂಬಗಳು ಊರಿನಿಂದ ಬಹುದೂರದಲ್ಲಿ, ಕಾಡಿನ ಸಮೀಪ, ಜನಸಂಪರ್ಕವಿಲ್ಲದ ಕಡೆ ನೆಲೆಯೂರುತ್ತಿದ್ದರು.

ಅದು ಏನೇ ಇದ್ದರೂ ಈ ಬುಡಕಟ್ಟು ಯಾವುದಕ್ಕೂ ಹೆದರದೆ ಧೈರ್ಯದಿಂದ ಎಲ್ಲವನ್ನೂ ನಿಭಾಯಿಸುವುದರ ಜೊತೆಗೆ ಸ್ವತಂತ್ರವಾಗಿ ಬದುಕುತ್ತಾ ತಮ್ಮ ಕಟ್ಟು ಪಾಡುಗಳನ್ನು ಬಿಟ್ಟುಕೊಡದೆ ಕಾಲದಿಂದ ಕಾಲಕ್ಕೆ ಸಾಗಿ ಬಂದಿರುವ ರೀತಿ ಮಾತ್ರ ವೈವಿಧ್ಯದಿಂದ ಕೂಡಿದೆ.[1]       E. Thurston Castes and Tribes of Southern India Vol, III – K  P-453.

[2]      ಜಾನಪದ ಸಾಹಿತ್ಯ ದರ್ಶನ ಭಾಗ-6 ಪುಟ-201

[3]      H.V. Nanjundaiah, and Anantha Krishna lyer, The Mysore Tribes and Castes, Vol-III  P-587.

[4]      Michael Kennedy, Criminal Classes in the Bombay Presidency. P-66.