ಪೂರ್ವದಿಂದಲೂ ಈ ಬುಡಕಟ್ಟಿಗೆ ಸಾಮಾಜಿಕವಾಗಿ ಹೆಚ್ಚಿನ ಸ್ಥಾನಮಾನವಿರುವುದು ಕಂಡು ಬರುವುದಿಲ್ಲ. ಕೊರವಂಜಿ ಕಣಿ ಹೇಳುವುದರ ಮೂಲಕ ಹೆಚ್ಚು ಪ್ರಚಾರ ಪಡೆದುಕೊಂಡಿದ್ದರೂ ಆಕೆಯನ್ನು ಸಮಾನವಾಗಿ ಸಮಾಜ ನಡೆಸಿಕೊಂಡದ್ದು ಕಡಿಮೆಯೆ. ಅಲೆಮಾರಿಗಳಾದ ಇವರು ಊರುಹೊರಗೆ ಬೀಡುಬಿಟ್ಟು ನಾಲ್ಕು ದಿನ ನಿಂತು ಮತ್ತೊಂದು ಕಡೆಗೆ ಮುಂದುವರಿಯುತ್ತಿದ್ದುದು ಇವರ ಸ್ವಭಾವವಾದ್ದರಿಂದ ಒಂದು ಕಡೆ ನೆಲೆ ನಿಂತು ಸ್ಥಳೀಯರೊಡನೆ ಒಂದಾಗಲು ಸಾಧ್ಯವಾಗಲಿಲ್ಲ. ಅಲ್ಲದೇ ಇವರು ಪ್ರತಿಯೊಂದು ಸ್ಥಳದಲ್ಲಿಯೂ ಅನ್ಯರಂತೆಯೇ ಕಂಡು ಬಂದದ್ದರಿಂದ ತಮ್ಮ ಸ್ಥಾನ-ಮಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿಲ್ಲ. “ಕೈಲಿಲ್ಲದವನು ಕಳ್ಳ, ಹೊಟ್ಟೆಗಿಲ್ಲದವನು ಬಡವ” ಎಂಬ ಗಾದೆಯಂತೆ ಬಡತನ ಮತ್ತು ಮೌಢ್ಯವೂ ಇವರ ಹೀನ ಸ್ಥಿತಿಗೆ ಕಾರಣವಾಯಿತು.

ಕಾಲ ಕಳೆದಂತೆ ಇವರು ಊರ ಹೊರಗಿನ ತಮ್ಮ ತಾತ್ಕಾಲಿಕ ಬಿಡಾರಗಳನ್ನು ಊರಿನಲ್ಲಿಯೇ ಕಂಡುಕೊಳ್ಳಬೇಕಾಯಿತು. ಕೆಲವರು ನೆಲೆನಿಂತು ಊರಿಗೆ ಹೊಂದಿಕೊಂಡಂತೆ ಹಟ್ಟಿಗಳನ್ನೂ ಕಟ್ಟಿಕೊಂಡರು. ಕೆಲವರು ಸ್ವತಂತ್ರವಾದ ಹಟ್ಟಿಗಳನ್ನೂ ನಿರ್ಮಿಸಿಕೊಂಡು ಗುಂಪು ಗುಂಪಾಗಿ ವಾಸಿಸತೊಡಗಿದರು. ಏನೇ ಆದರೂ ಇವರು ತಮ್ಮ ಆಚಾರ, ವಿಚಾರ, ನಂಬಿಕೆ, ನಡುವಳಿಕೆ, ಅತಿಕೊಳಕಾದ ಉಡುಪು, ಕಿತ್ತಾಟ, ಮಾಡುತ್ತಿದ್ದ ಉದ್ಯೋಗ ಮುಂತಾದವುಗಳಿಂದ ಸಮಾಜದ ಕೆಳಸ್ಥರದಲ್ಲಿಯೇ ನಿಲ್ಲಬೇಕಾಯಿತು. ಒಂದುಕಾಲಕ್ಕೆ ದೇವಸ್ಥಾನದ ತೀರ ಒಳ ಭಾಗಕ್ಕೆ ಪ್ರವೇಶವಿರಲಿಲ್ಲ. ಬ್ರಾಹ್ಮಣರ ಮನೆಯೊಳಗೆ ಪ್ರವೇಶವಿರಲಿಲ್ಲ. ಬ್ರಾಹ್ಮಣರನ್ನು ಇವರು “ಬಾಪನವು-ತನ್ನುಳ್ಳವು” ಎಂದು ಕರೆಯುತ್ತಾರೆ. ಅಂದರೆ ಉಪಾಯಗಾರ, ಮೋಸಗಾರ ಮತ್ತು ನೀರಿನಲ್ಲಿಯ ಮೀನಿನಂತಿರುವವನು ಎಂಬೆಲ್ಲ ಅರ್ಥ ಬರುತ್ತದೆ. ವೀರಶೈವರು, ಗಂಗಡಿಕಾರರು ಇತರೆ ಮಧ್ಯಮ ವರ್ಗದವರ ಮನೆಗಳಲ್ಲಿ ನಡುಮನೆಯವರೆಗೆ ಪ್ರವೇಶವಿದೆ. ಹೊಲೆಯರ, ಮಾದಿಗರ ಮನೆಯೊಳಗೆ ಪ್ರವೇಶ ಮಾಡುವುದಿಲ್ಲ. ತಮ್ಮ ಬಾವಿಯ ನೀರನ್ನು ಅವರು ಮುಟ್ಟುವಂತಿಲ್ಲ. E. Thurston ಅವರು “….. and will not take food in company with muhammadans, barbers, washermen, carpenters, Goldsmiths, blacksmiths, paraiyans or chakkiliyans. The boyas seem to be the lowest class with whom they will eat”

[1] ಎಂದು ದಾಖಲಿಸಿರುವಂತೆ ದಕ್ಷಿಣ ಕರ್ನಾಟಕದಲ್ಲಿ ಇವರಲ್ಲಿ ಈಗಲೂ ತಮ್ಮ ಕುಲಪದ್ಧತಿಯನ್ನು ಮೀರದೆ ಇರುವವರು ಇದ್ದಾರೆ. ಕ್ರಿಶ್ಚಿಯನ್ನರು, ಮುಸಲ್ಮಾನರು, ಕ್ಷೌರಿಕರು, ಮಡಿವಾಳರು ಮುಂತಾದವರು ಮನೆಗಳಲ್ಲಿ ಊಟ ಮಾಡುವುದಿಲ್ಲ. ಕೆಳವರ್ಗದ ಬೋಯ ಜನಾಂಗದೊಡನೆ ಕೊರವರ ಸಂಪರ್ಕ ಇದ್ದಿತೆಂದು ಹೇಳುವ ಪರಿಪಾಠ ಈಗ ದಕ್ಷಿಣ ಕರ್ನಾಟಕದಲ್ಲಿ ಕಾಣುವುದಿಲ್ಲ. ಮತ್ತು ಬೋಯರು ಈ ಭಾಗದಲ್ಲಿ ಕಾಣದಿರುವುದೂ ಇದಕ್ಕೆ ಕಾರಣವಿರಬಹುದು.

ಬಿದಿರು ಕೆಲಸ ಮಾಡುವ ಮೇದರು, ಕೊರಮರು ತಮಗಿಂತ ಕೀಳು ಎಂದು ಭಾವಿಸುತ್ತಾರೆ. “They may live in the quarter of the village which other non brahman class occupy, but in the large towns they usually have separate quarters”[2] ಎನ್ನುವ ಮಾತುಗಳಿಂದಲೂ ಇವರ ಸಾಮಾಜಿಕ ಸ್ಥಾನ-ಮಾನ ತಿಳಿಯುತ್ತದೆ. ಇಂದಿಗೂ ಈ ಜನ ಸಮಾಜದಲ್ಲಿ ಸ್ಥಾನ-ಮಾನ ಕಲ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ ಅಲ್ಪಸ್ವೊಲ್ಪ ಜಮೀನು ಮಾಡಿಕೊಂಡು ಅಲ್ಲಿಯ ನೆಲ-ಜಲಕ್ಕೆ ಹೊಂದಿಕೊಂಡು ಬದುಕುತ್ತಿದ್ದರೂ ಪಟ್ಟಣದವರನ್ನು ಬಿಟ್ಟು ಹಳ್ಳಿಯವರಲ್ಲಿ ಹಿಂದಿನ ಸ್ಥಿತಿ ಅಷ್ಟಾಗಿ ಬದಲಾಗಿಲ್ಲ. ಇವರು ಸ್ವತಂತ್ರವಾದ ವೃತ್ತಿಯನ್ನನುಸರಿಸಿ ಜೀವನ ಸಾಗಿಸುವುದೇ ಹೆಚ್ಚು. ಕೂಲಿ ಕೆಲಸ ಮಾಡುವ ಪ್ರವೃತ್ತಿ ಕಂಡು ಬರುವುದಿಲ್ಲ. ಕೃಷಿ ಕಾರ್ಮಿಕರಿಗೆ ಈ ಮಾತು ಅನ್ವಯಿಸುವುದಿಲ್ಲ. ಇತ್ತೀಚೆಗೆ ಕೊರಮ ಜನಾಂಗದವರು ನಿರ್ವಹಿಸುತ್ತಿರುವ ವಿವಿಧ ವೃತ್ತಿಗಳ ಬಗೆಗೆ ಹಿಂದೆಯೇ ನಮೂದಿಸಲಾಗಿದೆ. ಸಮಾಜದ ಮುಖ್ಯ ಪ್ರವಾಹದಲ್ಲಿ ಪ್ರತ್ಯೇಕವಾಗಿ ಗುರುತಿಸಲಾರದಷ್ಟು ಸಮೀಕರಣಗೊಂಡಿದ್ದಾರೆ. ಕುಲ ಸಂಬಂಧದ ಮೂಲ ವೃತ್ತಿನಾಮಗಳು ಕುಲದೇವತೆಗಳು, ಬೆಡಗುಗಳು ಇತ್ತೀಚೆಗೆ ಕೆಲವರಲ್ಲಿ ಮಾಯವಾಗಿವೆ. ಹೊಸ ಜನಾಂಗದಲ್ಲಿ ಕೊರಮರ ಕುಳುವ ಭಾಷೆಯೂ ಮರೆಯಾಗುತ್ತಿದೆ.

‘ಕೊರಮ ಕೂಡಿ ಕೆಟ್ಟ, ದೊಂಬಿ ಅಗಲಿ ಕೆಟ್ಟ’ ಎಂಬ ಗಾದೆಯಲ್ಲಿ ಇವರ ಜೀವನ ವ್ಯವಸ್ಥೆ ಸ್ಪಷ್ಟವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಅರಿತವರಲ್ಲ. ಆದ್ದರಿಂದಲೇ ಇವರ ಏಳ್ಗೆ ಸಾಧ್ಯವಾಗಲಿಲ್ಲ. ಇತ್ತೀಚೆಗೆ ಈ ಬುಡಕಟ್ಟಿನ ಕೆಲವರು ವಿದ್ಯಾವಂತರು ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಸಂಘ-ಸಂಸ್ಥೆಗಳನ್ನು ಕಟ್ಟಿಕೊಂಡಿರುವುದು ತಿಳಿಯುತ್ತದೆಯಾದರೂ ಅವು ಪಟ್ಟಣ ಪ್ರದೇಶಕ್ಕೆ ಮಾತ್ರ ಸೀಮಿತವಾಗಿವೆ. ಹಳ್ಳಿಗಳಲ್ಲಿರುವ ಬಾಂಧವರಿಗೆ ಇವುಗಳಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ತಮ್ಮಲ್ಲಿಯ ಒಳಗುಂಪುಗಳ ಭೇದವೂ ಇದಕ್ಕೆ ಕಾರಣವಾಗಿರಬಹುದು. ಇಲ್ಲವೇ ಬದುಕಿನ ಅನಿವಾರ್ಯತೆಯಲ್ಲಿ ತಮ್ಮನ್ನು ಇತ್ತಕಡೆ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಇರುವುದು ಮತ್ತೊಂದು ಕಾರಣವಾಗಿರಬಹುದು. ವಿವಿಧ ರಾಜ್ಯಗಳಲ್ಲಿ ವಾಸ ಮಾಡುತ್ತಿರುವ ಈ ಕೊರಮರಲ್ಲಿ ಸಂಪರ್ಕ ಬೆಳೆದು ಬಂದಿಲ್ಲ. ಅಲೆಮಾರಿ ಸ್ವಭಾವ ಕಡಿಮೆಯಾಗಿ ಸ್ಥಿತ ಜೀವನ ವ್ಯವಸ್ಥೆಗೆ ಈ ಜನ ಬರದಿರುವುದೇ ಇದಕ್ಕೆ ಕಾರಣ.

ಹಳ್ಳಿಯಲ್ಲಿರುವ ಜನರಿಗೆ ವಿದ್ಯೆ ಇನ್ನು ತಲುಪಿಲ್ಲ. ಅಲ್ಲದೇ ಎಲ್ಲರಿಗೂ ವಿದ್ಯೆ ಕಲಿಸಲು-ಕಲಿಯಲು ಅನುಕೂಲಗಳಿಲ್ಲ. ಸಾವಿರಾರು ವರ್ಷಗಳಿಂದ ಸಾಗಿ ಬಂದ ಹಳ್ಳಿಯ ಅತಂತ್ರ ಬದುಕಿನ ಹಿನ್ನೆಲೆಯ ಜೊತೆಗೆ ವಿದ್ಯೆಯಿಂದ ದೂರವಾಗಿದ್ದ ಈ ಜನರಿಗೆ, ಈ ವೈಜ್ಞಾನಿಕ ಯುಗದ ಮುಂದುವರಿದ ಶಿಕ್ಷಣ ಕ್ರಮ ಆಕಾಶ ದೀಪವಾಗಿದೆ. ವಿದ್ಯಾವಂತರಾದ ತಂದೆ-ತಾಯಿಗಳು ಕೊಡುವ ತಿಳುವಳಿಕೆ, ಮನೆಪಾಠ, ಸತ್ವಯುತವಾದ ಆಹಾರ, ಮುದ ಕೊಡುವ ಪೋಷಾಕು, ವಿಹಾರಗಳ ಜೊತೆಗೆ ಆಧುನಿಕ ಪ್ರಸಾರ ಮಾಧ್ಯಮಗಳ ನೆರವಿನಿಂದ ಒಬ್ಬ ವಿದ್ಯಾರ್ಥಿ ಪಡೆಯುವ ಜ್ಞಾನದ ಮಟ್ಟಕ್ಕೆ ಈ ವಿದ್ಯಾರ್ಥಿ ಏರಲಾರ. ಬೇಕಾದ ಸವಲತ್ತುಗಳನ್ನು ಒದಗಿಸಿ ಎಲ್ಲರಿಗೂ ತಲುಪುವಂತೆ ಮಾಡಿ, ಉದ್ಯೋಗಗಳನ್ನೊದಗಿಸಿದರೆ ಈ ಬುಡಕಟ್ಟು ಮೇಲೆ ಬಂದೀತು. ಈ ದಿಸೆಯಲ್ಲಿ ಸರಕಾರದ ಸಹಾಯಪಡೆದು ಈ ಜನರನ್ನು ಮೇಲೆತ್ತಲು ಸಂಘ-ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ. ಅವರ ವೃತ್ತಿ-ಪ್ರವೃತ್ತಿಗಳನ್ನು ಉಳಿಸಿಕೊಳ್ಳುವ ಯೋಜನೆಗಳು ಇಂದು ಅವಶ್ಯಕವಾಗಿದೆ. ಹೀಗೆ ಬುಡಕಟ್ಟಿನ ಜನಾಂಗದ ಕೊರಮರು ಆಧುನಿಕ ಜೀವನದ ಸಂಪರ್ಕ ಹೊಂದಿ ತಮ್ಮ ಜೀವನ ವ್ಯವಸ್ಥೆ, ದುಡಿಮೆಯ ವಿಧಾನಗಳು, ನಂಬಿಕೆ-ನ್ಯಾಯ ನಿರ್ಣಯ, ಶುಚಿಯಾದ ಹಾಗೂ ಸಂಘಟಿತ ಜೀವನದ ಕಡೆ ಒಲಿಯುತ್ತಿರುವುದು ಶುಭ ಸೂಚನೆ.

ಕಳ್ಳತನದ ಮುಳ್ಳಿನ ಕಿರೀಟವನ್ನು ಹೊತ್ತು ಸಮಾಜ ಬಾಹಿರರೆನ್ನುವಂತೆ ಬಾಳಿದ್ದರೂ, ಜನ ಸಾಮಾನ್ಯರ ಬದುಕಿಗೆ ನೆಮ್ಮದಿ ನೀಡುವ ಕಣಿ ಹೇಳುವ ಕಾಯಕದಿಂದ ಜನಪ್ರಿಯರಾಗಿ ಬಾಳಿ, ಶತಮಾನಗಳವರೆಗೆ ಜನ ಜೀವನದ ಮೂಲ ವಾಹಿನಿಯ ಸಂಪರ್ಕದಿಂದ ದೂರವಾಗಿದ್ದರೂ ತಮ್ಮ ಜನಾಂಗದ ವೈಶಿಷ್ಟ್ಯ ಅನನ್ಯತೆಗಳನ್ನು ಉಳಿಸಿಕೊಂಡು ಬಂದಿರುವ ಈ ಕೊರಮ ಬುಡಕಟ್ಟು ಬದುಕನ್ನು ವಿಸ್ತರಿಸಿಕೊಡು ನಾಡಿನಗಲಕ್ಕೂ ಹಬ್ಬಿ ಹರಡಿ ಮುಖ್ಯ ಪ್ರವಾಹದಲ್ಲಿ ಒಡಬೆರತು ಮುನ್ನಡೆಯುವಂತೆ ಮಾಡಬೇಕಾದುದು ಎಲ್ಲರ ಕರ್ತವ್ಯ.


[1]       E. Thurston The Castes and Tribes of Southern India Vol, III – K  P-475.

[2]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-618.