ಎಲ್ಲ ಗುಡ್ಡಗಾಡು ಜನಾಂಗದ ಸಂಪ್ರದಾಯದಂತೆ ಕೊರವ ಅಥವಾ ಕೊರಮರ ನ್ಯಾಯವೆಲ್ಲ ಮೊನ್ನೆ ಮೊನ್ನೆಯವರೆಗೆ ತಮ್ಮ ತಮ್ಮಲ್ಲೇ ಬಗೆಹರಿಯುತ್ತಿತ್ತು. ಇವರು ನ್ಯಾಯದ ಸಲುವಾಗಿ ಬೇರೆಯವರನ್ನು ಅವಲಂಬಿಸಿದವರಲ್ಲ. ಕುಲಪದ್ಧತಿಯನ್ನು ಮೀರುವ, ಕುಲಗೆಟ್ಟವರನ್ನು ಹೊರಕ್ಕೆ ಹಾಕುವ ಅಥವಾ ಕುಲಕ್ಕೆ ತೆಗೆದುಕೊಳ್ಳುವ, ಅಷ್ಟೇ ಅಲ್ಲದೆ, ಮದುವೆ, ಕೂಡಿಕೆಗೆ ಸಂಬಂಧಿಸಿದ ಮತ್ತು ತಮ್ಮತಮ್ಮಲ್ಲಿ ಅಗುತ್ತಿದ್ದ ಜಗಳ ಮುಂತಾದವುಗಳನ್ನು ತಾವೇ ತಮ್ಮ ಕುಲಪಂಚಾಯಿತಿಯಲ್ಲಿ ಬಗೆಹರಿಸಿಕೊಳ್ಳುತ್ತಿದ್ದರು. ಇವರಲ್ಲಿ ಪ್ರತಿಯೊಂದು ಗುಂಪಿಗೂ ಯಜಮಾನರಿರುತ್ತಿದ್ದರು. ಇವರನ್ನು “ಬೆರು ಮನುಷ್ಯ” ಎನ್ನುತ್ತಿದ್ದರು. ಅಂದರೆ ಹಿರಿಯವ ಎಂಬುದು ಒಂದರ್ಥವಾದರೆ “ಯಜಮಾನ” ಎಂಬುದು ಮತ್ತೊಂದು ಅರ್ಥ. ಇವನನ್ನು ಕಟ್ಟಿ ಯಜಮಾನನೆಂದೂ ಕರೆಯುತ್ತಿದ್ದರು. ಇವರಲ್ಲಿ ನ್ಯಾಯ ಹಿಡಿದು ಮಾತನಾಡುವವರು “ಓಕಾಳಿ”ಗಳಾಗುತ್ತಿದ್ದರು. ಇವರೇ ನ್ಯಾಯಾಧೀಶರಾಗುತ್ತಿದ್ದರು. ಸಾಮೂಹಿಕ ನ್ಯಾಯ ನಿರ್ಣಯ ಪದ್ದತಿ ಇವರದ್ದಾಗಿತ್ತು. ಇವರಲ್ಲಿ ಒಬ್ಬ ಕೋಲುಕಾರನೂ ಇರುತ್ತಿದ್ದ. ಅವನು ಯಜಮಾನ ಹೇಳಿದ ಸುದ್ದಿಯನ್ನು ಕೇರಿಯಲ್ಲಿ ಸಾರುವುದು ಮತ್ತು ಬೇಕಾದವರನ್ನು ಕರೆದುಕೊಂಡು ಬರುವ ಕೆಲಸ ಮಾಡುತ್ತಿದ್ದನು.

ಕೊರಮರಲ್ಲಿ ಸಣ್ಣ ಸಣ್ಣ ಜಗಳವಾದರೆ ಯಜಮಾನನೇ ನ್ಯಾಯ ಬಗೆಹರಿಸುತ್ತಿದ್ದ. ಹೊಡೆದಾಟ ಬಡಿದಾಟಗಳಾದರೆ, ಕುಲಕ್ಕೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಬೇಕಾದರೆ ಮನೆಗೊಬ್ಬರಂತೆ ಹಿರಿಯರು ಒಂದೆಡೆ ಸೇರಿ ಪಂಚಾಯಿತಿ ಮಾಡುತ್ತಿದ್ದರು. ಯಜಮಾನನ ಮಾತಿಗೆ ಎಲ್ಲರೂ ಗೌರವ ಕೊಡುತ್ತಿದ್ದರು. ಒಂದು ಪಕ್ಷ ನ್ಯಾಯ ಬಗೆಹರಿಯದಿದ್ದರೆ ಎರಡು ಮೂರು ದಿನಗಳವರೆಗೂ ಪಂಚಾಯಿತಿ ಮುಂದುವರೆಯುತ್ತಿತ್ತು. ಆಗಲೂ ಬಗೆಹರಿಯದಿದ್ದರೆ ನಾಡಿಗೆ ಒಯ್ಯುತ್ತಿದ್ದರು. ಅಂದರೆ ಒಂದು ದಿನ ಗಡುವು ಮಾಡಿ ಬೇರೆ ಬೇರೆ ಕಟ್ಟಿ ಅಥವಾ ಹಟ್ಟಿಯ ತಮ್ಮ ಜಾತಿಯ ಯಜಮಾನರನ್ನು ಕರೆಸಿ ಪಂಚಾಯಿತಿ ಮಾಡುತ್ತಿದ್ದರು. ಅಪರಾಧಿ ಫಿರ್ಯಾದಿ ಇಬ್ಬರಿಂದಲೂ ಮೊದಲು ಸ್ವಲ್ಪ ಹಣವನ್ನು ಮುಂಗಡವಾಗಿ ತೆಗೆದುಕೊಳ್ಳುತ್ತಿದ್ದರು. ಆ ಹಣ ನ್ಯಾಯ ಬಗೆಹರಿಯುವವರೆಗೆ ಯಜಮಾನನ ಹತ್ತಿರವಿರುತ್ತಿತ್ತು. ಅಲ್ಲದೆ ಪಂಚಾಯತಿಗೆ ಸೇರಿದ ಎಲ್ಲ ಜನರ ಖರ್ಚನ್ನು ಆ ಇಬ್ಬರೂ ಮೊದಲು ಭರಿಸಬೇಕಾಗಿತ್ತು. ಅವರಿಗೆ, ಎಲೆ, ಅಡಿಕೆ, ತಂಬಾಕು ಸಂಜೆಗೆ ಕುಡಿಯಲು ಸೇಂದಿ, ಊಟಕ್ಕೆ ಮಾಂಸದ ಅಡಿಗೆ ಈ ಎಲ್ಲ ಖರ್ಚನ್ನು ನೋಡಿಕೊಳ್ಳಬೇಕಾಗಿತ್ತು. ನ್ಯಾಯ ಬಗೆಹರಿದ ಮೇಲೆ ತಪ್ಪಿತಸ್ಥನಾದವನಿಂದ ಎಲ್ಲ ಖರ್ಚನ್ನು ಜೊತೆಗೆ ದಂಡವನ್ನು ವಸೂಲಿ ಮಾಡುತ್ತಿದ್ದರು. ಮೊದಮೊದಲು ಅಪರಾಧಿಗಳಾದ ಇವರು ಗುಪ್ತಸ್ಥಳಗಳಲ್ಲಿ ಸೇರಿ ನ್ಯಾಯ ಬಗೆಹರಿಸಿಕೊಳ್ಳುತ್ತಿದ್ದರು ಎಂಬುದಿದ್ದರೂ ನಾಡಿನ ಸಂಪರ್ಕ ಹೊಂದಿದ ಮೇಲೆ ಸಾಮಾನ್ಯವಾಗಿ ಇವರ ಪಂಚಾಯಿತಿಗಳೆಲ್ಲ ತಾವಿರುವ ಊರು ಮತ್ತು ಹಟ್ಟಿಯ ಹೊರಗೆ ನಡೆಯುತ್ತಿದ್ದವು. ಇವರ ಪಂಚಾಯಿತಿಯಲ್ಲಿ ಸೇರಿದ ಯಜಮಾನರು ನ್ಯಾಯ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದರು. ಒಂದು ವೇಳೆ ಬಗೆಹರಿಯದಿದ್ದರೆ ಕೆಲವು “ದಿವ್ಯ” ಅಥವಾ ಪರೀಕ್ಷೆಗಳನ್ನು ಏರ್ಪಡಿಸಿ ನ್ಯಾಯ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಕೆಲವು ಸಂದರ್ಭಗಳಲ್ಲಿ ಹಾರೆಯೊಂದನ್ನು ಕೆಂಪಗೆ ಕಾಸಿ ಪಂಚಾಯಿತಿ ಹೂಡಿದ ಇಬ್ಬರ ಕೈಯಿಂದಲೂ ಈಜಿಸಲಾಗುತ್ತಿತ್ತು. ಹೀಗೆ ಈಜಿದ ಆ ಇಬ್ಬರಿಗೆ ಸ್ವಲ್ಪ ಸ್ವಲ್ಪ ಭತ್ತವನ್ನು ಕೊಟ್ಟು, ತಿಕ್ಕಿ ಅಕ್ಕಿ ಮಾಡಲು ಹೇಳುತ್ತಿದ್ದರು. ಯಾರು ಅಕ್ಕಿಯಾಗುವಂತೆ ಕೈಗಳಿಂದ ಉಜ್ಜುತ್ತಿದ್ದರೋ ಅವರು ಗೆದ್ದಂತೆ ಎಂದು ತೀರ್ಮಾನಿಸುತ್ತಿದ್ದರು. ಇದಲ್ಲದೆ ಕೆಲವು ವೇಳೆ ಎರಡು ಮಣ್ಣಿನ ಹೊಸ ಮಡಿಕೆಗಳನ್ನು ತರಿಸಿ ಒಂದೇ ಪ್ರಮಾಣದ ಹಾಲನ್ನೂ ಕೊಟ್ಟು, ಒಂದೇ ಅಳತೆಯ ಎರಡು ಒಲೆಗಳನ್ನು ಹೂಡಿ ಕಾಯಿಸಲು ಹೇಳುತ್ತಿದ್ದರಂತೆ. ಯಾರ ಹಾಲು ಮೊದಲು ಉಕ್ಕುತ್ತದೆಯೋ  ಅವರು ಗೆದ್ದಂತೆ

[1] ಇದೇ ರೀತಿ ಅಕ್ಕಿಯನ್ನು ಕುದಿಸಿ ನ್ಯಾಯ ನಿರ್ಣಯಿಸುವ ಬಗೆಗೆ ಪದ್ಮಭೂಷಣ ವಿ. ರಾಘವಯ್ಯ ಅವರು ಬರೆಯುತ್ತಾರೆ.[2] ಇದಲ್ಲದೆ “ವಿವಾದಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದಕ್ಕೆ ಒಪ್ಪಿಕೊಂಡ ಮೇಲೆ ಸಾಮಾನ್ಯವಾಗಿ ತಪ್ಪಿತಸ್ಥನ ಪಕ್ಷದವರು ದೂರವಿರುತ್ತಾರೆ. ಇನ್ನೊಂದು ಪಕ್ಷದವರು ಒಂದು ಕೋಳಿಯನ್ನು ಕೊಂದು ಅದರ ಒಂದು ಕಾಲನ್ನು ಕತ್ತರಿಸಿ ಒಂದು ಮರಕ್ಕೆ ಕಟ್ಟಿ ಮುಂಡವನ್ನು ಸೀಳಿ ತಮ್ಮ ದೇವರನ್ನು ನ್ಯಾಯಕ್ಕಾಗಿ ಪ್ರಾರ್ಥಿಸುತ್ತಾರೆ” ಎನ್ನುವಂಥ ಕ್ರಮವೂ ದಕ್ಷಿಣ ಕರ್ನಾಟಕದಲ್ಲಿ ಕಂಡು ಬರುವುದಿಲ್ಲ. ಇಂಥ ಕೆಲವು ಪರೀಕ್ಷೆಗಳ ವಿವರಗಳನ್ನು Mr. Fowcett ದಾಖಲಿಸಿರುವುದನ್ನು ಶ್ರೀ ಎಚ್.ವಿ.ನಂಜುಂಡಯ್ಯ ಮತ್ತು ಶ್ರೀ ಎಲ್.ಕೆ.ಅನಂತಕೃಷ್ಣ ಅಯ್ಯರ್ ಅವರು ಉದಾಹರಿಸಿದ್ದಾರೆ.[3][4]

ತಮಗಿಂತ ಕೀಳುಜಾತಿಯ ಹೆಣ್ಣನ್ನು ಕೂಡಿಕೊಂಡು ಅವರು ಮನೆಯಲ್ಲಿ ಊಟ ಮಾಡಿದರೆ ಮತ್ತೊಬ್ಬನ ಹೆಂಡತಿಯನ್ನು ಕೂಡಿಕೊಂಡರೆ, ಹೊತ್ತುಕೊಂಡು ಹೋದರೆ ಅಲ್ಲದೆ ಕುಲದ ಚೌಕಟ್ಟನ್ನು ಮೀರಿದರೆ ಅಂಥವರನ್ನು ಕುಲದ ಹೊರಗೆ ಇಡುತ್ತಿದ್ದರು. ಅಂಥವರಿಗೆ ನೀರನ್ನಾಗಲಿ, ಬೆಂಕಿಯನ್ನಾಗಲಿ, ಇತರೆಯವರು ಕೊಡುವಂತಿರಲಿಲ್ಲ. ಅವರ ಕಷ್ಟ, ನಷ್ಟಕ್ಕೆ ಸಾವುನೋವಿಗೆ ಹೋಗುವುದಿರಲಿ ಮಾತನಾಡಿಸುವಂತಿರಲಿಲ್ಲ. ಕುಲದಿಂದ ಹೊರಗಿರುವುದು ಎಂದರೆ ಬದುಕಿದ್ದೂ ಸತ್ತಂತೆ. ಆದ್ದರಿಂದ ಎಷ್ಟೇ ದಂಡ ಕಟ್ಟಾದರೂ ಕುಲಕ್ಕೆ ಸೇರುತ್ತಿದ್ದರು.

ಜಾತಿ ಕೆಟ್ಟ ಮತ್ತು ಕುಲದ ಗಂಡಸರನ್ನು ಹಿಂದಕ್ಕೆ ತೆಗೆದುಕೊಂಡರೂ, ಕೀಳುಕುಲದ ಹೆಣ್ಣನ್ನು ತೆಗೆದುಕೊಳ್ಳುತ್ತಿರಲಿಲ್ಲ. ಕುಲಕ್ಕೆ ತೆಗೆದುಕೊಳ್ಳುವಾಗ ಆ ವ್ಯಕ್ತಿಯ ನಾಲಿಗೆಯನ್ನು ಹಸುವಿನ ಗಂಜಳದಿಂದ ತೊಳೆಯುತ್ತಿದ್ದರು. ಇಲ್ಲವೆ ಬೇವಿನ ಕಡ್ಡಿಯ ಬೆಂಕಿಯಿಂದ ನಾಲಿಗೆ ಸುಟ್ಟು ಶುದ್ಧಗೊಳಿಸುತ್ತಿದ್ದರು. ಕುಲಕ್ಕೆ ಬಂದವರು ಅನುಕೂಲಕ್ಕೆ ತಕ್ಕಂತೆ ಕುಲದವರಿಗೆಲ್ಲ ಊಟ, ಜೊತೆಗೆ ಹೆಂಡವನ್ನು ಕೊಡುತ್ತಿದ್ದರು.

ತಮ್ಮ ಜಾತಿಯ ಹೆಣ್ಣನ್ನು ಕೂಡಿಕೊಂಡ ಬೇರೆ ಮೇಲು ಜಾತಿಯ ಜನರನ್ನು ತಮ್ಮ ಕುಲಕ್ಕೆ ತೆಗೆದುಕೊಳ್ಳುವಾಗ ಆಚರಿಸುತ್ತಿದ್ದ ಆಚರಣೆಗಳ ಬಗೆಗೆ ಶ್ರೀ ಎಚ್.ವಿ.ನಂಜುಂಡಯ್ಯ ಮತ್ತು ಅನಂತಕೃಷ್ಣ ಅಯ್ಯರ್ ಅವರು “They have no objection to take into their community persons, male of female of their caste, such okkaligas, Banjigas, or kurubas who are admitted by higher in the social state”[5] ಇಂಥ ಮೇಲು ಜಾತಿಯವರನ್ನು ತೆಗೆದುಕೊಳ್ಳುವಾಗ ಅವರ ನಾಲಿಗೆಯನ್ನು ಬಂಗಾರದಿಂದ ಕಾಯಿಸಿದ ಅಥವಾ ಬೇವಿನ ಕಡ್ಡಿಯಿಂದ ಸುಡುತ್ತಿದ್ದರು. ಕೆಲವು ವೇಳೆ ಅರಿಷಿಣ ಪುಡಿ ಮತ್ತು ಅಂಟುವಾಳ ಕಾಯಿಯ ಪುಡಿಯನ್ನು ನೀರಿನಿಂದ ಕಲಿಸಿ ಕುಡಿಸುತ್ತಿದ್ದರು. ದೇವಸ್ಥಾನದಲ್ಲಿ ತೀರ್ಥ ಪ್ರಸಾದ ತೆಗೆದುಕೊಂಡ ಮೇಲೆ ಯಜಮಾನ ಅಧಿಕೃತವಾಗಿ ಈ ವಿಷಯವನ್ನು ಘೋಷಿಸುತ್ತಿದ್ದನು. ಎಲ್ಲರೂ ಜೊತೆಯಲ್ಲಿ ಕುಳಿತು ಊಟ ಮಾಡಿ ಸಂಜೆಗೆ ಕುಲಕ್ಕೆ ಹೊಸದಾಗಿ ಸೇರಿದವರ ಹಣದಲ್ಲಿ ಹೆಂಡ ಕುಡಿಯುತ್ತಿದ್ದರು. E. Thurston ಅವರೂ ಈ ವಿಷಯವನ್ನು ದಾಖಲಿಸಿದ್ದಾರೆ. ಇಂಥ ಪದ್ದತಿಗಳು ಈಗ ಮಾಯವಾಗುತ್ತಿವೆ.[6]

ಇಂಥ ವ್ಯವಸ್ಥೆಗಳಿಂದ ತಮ್ಮ ಬುಡಕಟ್ಟಿನ ಕಟ್ಟುಪಾಡುಗಳನ್ನು ಕಾಯ್ದುಕೊಳ್ಳುವುದರ ಜೊತೆಗೆ, ತಮ್ಮ ಯಾವುದೆ ತಂಟೆಯನ್ನು ಬಗೆಹರಿಸಿಕೊಳ್ಳುವ ಮೂಲಕ ತಮ್ಮ ಸ್ವತಂತ್ರ ಪ್ರವೃತ್ತಿಯನ್ನು ಮತ್ತು ಬುದ್ಧಿಮತ್ತೆಯನ್ನು ಮೆರೆದಿದ್ದಾರೆ. ಎಲ್ಲ ಗುಡ್ಡಗಾಡು ಜನಾಂಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಕುಲ ಗೌರವ ರಕ್ಷಣೆ, ಬುಡಕಟ್ಟಿನ ಐಕ್ಯತೆಯ ಘೋಷಣೆ ಮತ್ತು ಪರಿಶುದ್ಧತೆಯ ರಕ್ಷಣೆ ಇಂಥ ವ್ಯವಸ್ಥೆ ಇವರಲ್ಲಿಯೂ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಕೊರಮ ಜನಾಂಗದಲ್ಲಿ ಮಹಿಳೆಯರು ನ್ಯಾಯದ ಕಟ್ಟೆಗೆ ನ್ಯಾಯ ನಿರ್ಣಯಕ್ಕಾಗಿ ಬರುವ ಅಧಿಕಾರ ಹೊಂದಿರದೆ ಅಪರಾಧಿಯೋ, ಫಿರ್ಯಾದಿಯೋ ಅಥವಾ ಸಾಕ್ಷಿದಾರಳೋ ಆಗಿ ಮಾತ್ರ ಬರುತ್ತಿದ್ದುದು ಒಂದು ಗಮನಾರ್ಹ ವಿಷಯ. ಇತ್ತೀಚೆಗೆ ಬುಡಕಟ್ಟಿನಲ್ಲಿಯೇ ನ್ಯಾಯನಿರ್ಣಯ ಆಗದಿದ್ದರೆ ಇತರ ಜನಾಂಗದ ಹಿರಿಯರ ನೆರವನ್ನೂ ಪಡೆದುಕೊಳ್ಳುವ ಪರಿಪಾಠ ಕಂಡುಬರುತ್ತದೆ. ಇವರಲ್ಲಿ ಈಗೀಗ ಕೋರ್ಟ್‌ಕಚೇರಿಗಳಿಗೆ ಹೋಗುವ ಪ್ರವೃತ್ತಿಯೂ ಕಂಡು ಬರುತ್ತದೆ. ಬುಡಕಟ್ಟು ಜನಾಂಗ ಹರಿದು ಹಂಚಿ ಹೋದಾಗ ಇತರ ಸಮಾಜದೊಡನೆ ಸಮೀಕರಣಗೊಂಡಾಗ ಹೀಗಾಗುವುದು ಅನಿವಾರ್ಯ.

ಕುಟುಂಬದ ಒಡೆತನ: ಈ ಬುಡ್ಡಕಟ್ಟಿನಲ್ಲಿ ಬಹಳ ಹಿಂದಿನಿಂದಲೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯೇ ಮುಂದುವರಿದುಕೊಂಡು ಬಂದಿದೆ. ಸಾಮಾನ್ಯವಾಗಿ ಮನೆಯ ಹಿರಿಯನೇ ಯಜಮಾನನಾಗಿರುತ್ತಾನೆ. ಆತನ ಆದೇಶದ ಮೇಲೆ ಇತರ ಸದಸ್ಯರೆಲ್ಲ ವಿಧೇಯರಾಗಿ ಕೆಲಸ  ನಿರ್ವಹಿಸುತ್ತಾರೆ. ಹೆಣ್ಣು ಮಕ್ಕಳಂತೂ ಗಂಡ ಮತ್ತು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಲೇ ಬೇಕಾಗಿತ್ತು. ಇವರಲ್ಲಿ ಅವಿಭಾಜ್ಯ ಕುಟುಂಬಗಳು ಕಡಿಮೆ. ಅಲೆಮಾರಿತನವೇ ಇದಕ್ಕೆ ಕಾರಣವಿರಬಹುದು. ಮದುವೆ, ಆಸ್ತಿ ಭಾಗದಂಥ ಸಂದರ್ಭಗಳಲ್ಲಿ ಯಜಮಾನನೇ ಪ್ರಮುಖ ಪಾತ್ರ ವಹಿಸುತ್ತಾನೆ. ಇತರೆ ಹಿಂದುಗಳಲ್ಲಿರುವಂತೆ ಪಿತ್ರಾರ್ಜಿತವಾದ ಆಸ್ತಿ ಗಂಡು ಮಕ್ಕಳಿಗೆ ಸಿಕ್ಕುತ್ತದೆ. ಮನೆಯ ಹಿರಿಯ ತೀರಿಕೊಂಡಾಗ ತಾಯಿ ಅಥವಾ ಹಿರಿಯಣ್ಣ ಮನೆಯ ಯಜಮಾನಿಕೆಯನ್ನು ವಹಿಸಲು ಬಾಧ್ಯರಾಗಿರುತ್ತಿದ್ದರು.

ಮನೆಯಲ್ಲಿ ಸದಸ್ಯರು ಬೇರೆಯಾಗುವಾಗ ಮದುವೆಯಾಗುವ ಹೆಣ್ಣು ಗಂಡು ಇದ್ದರೆ ಅವರ ಮದುವೆಗೆ ಮದುವೆಯಾದ ಗಂಡು ಮಕ್ಕಳು ಕುಲದ ಹಿರಿಯರು ನಿಗದಿಪಡಿಸಿದಷ್ಟು ಹಣವನ್ನು ಕೊಡಬೇಕಾಗುತ್ತದೆ. ಅಲ್ಲವೇ ಆಸ್ತಿಯಲ್ಲಿ ಮದುವೆ ಈಡನ್ನು ತೆಗೆಯುತ್ತಾರೆ. ಮಕ್ಕಳಿಲ್ಲದವರು ದತ್ತು ತೆಗೆದುಕೊಳ್ಳಬಹುದು. ಅಣ್ಣ-ತಮ್ಮಂದಿರ ಮಕ್ಕಳನ್ನು ಅಥವಾ ಜಾತಿಯ ಮಗುವನ್ನು ದತ್ತು ತೆಗೆದುಕೊಳ್ಳುತ್ತಾರೆ. ಮೇಲ್ಜಾತಿಯ ಮಕ್ಕಳನ್ನು ತೆಗೆದುಕೊಳ್ಳಬಾರದೆಂದೇನೂ ಇಲ್ಲ. ದತ್ತು ತೆಗೆದುಕೊಂಡಾಗ ಹಳೆಯ ಉಡದಾರನ್ನು ತೆಗೆದು ಹೊಸ ಉಡದಾರವನ್ನು, ಹೊಸ ಬಟ್ಟೆಗಳನ್ನು ಮಗುವಿಗೆ ಹಾಕುತ್ತಾರೆ. ಕುಲಕ್ಕೆ ಊಟ ಕೊಟ್ಟು ದತ್ತು ತೆಗೆದುಕೊಂಡ ವಿಷಯವನ್ನು ಅಧಿಕೃತವಾಗಿ ಪ್ರಕಟಿಸುತ್ತಾರೆ. ಈ ಜನ ಎಷ್ಟೇ ಅಸಂಸ್ಕೃತರಂತೆ ಕಂಡರೂ, ಕುಡಿದು ಕಿತ್ತಾಡಿದರೂ ಕುಟುಂಬ ಜೀವನವನ್ನು ಬಿಟ್ಟು ಬದುಕುವವರಲ್ಲ. ಮುಪ್ಪಿನ ತಂದೆ ತಾಯಿಯರನ್ನು, ಮಕ್ಕಳನ್ನು ಪ್ರೀತಿಯಿಂದ ಪೋಷಿಸುತ್ತಾರೆ. ಇದ್ದುದನ್ನು ಹಂಚಿ ತಿನ್ನುತ್ತಾರೆ. ಕೊರಮರಲ್ಲಿ ತಮ್ಮ ಹೆಣ್ಣು ಅಥವಾ ಗಂಡು ಸಂತಾನದ ಬಗೆಗೆ ತಾರತಮ್ಯ ಭಾವನೆ ಇರುತ್ತಿರಲಿಲ್ಲ.[1]       ದಿ. ದುರ್ಗಪ್ಪ ದೊಡ್ಡಮನೆ ಹನುಮಯ್ಯ ಇವರು ನೀಡಿದ ಮಾಹಿತಿ.

[2]      ಮೂಲ ಪದ್ಮಭೂಷಣ ವಿ. ರಾಘವಯ್ಯ ಅನು: ಅಕ್ಕಮಹಾದೇವಿ ಬುಡಕಟ್ಟು ನ್ಯಾಯ ಪುಟ-68

[3]      E. Thurston Castes and Tribes of Southern India Vol, III – K  P-448.

[4]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-603.

[5]      H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-605.

[6]      E. Thurston The Castes and Tribes of Southern India Vol, III – K  P-450.