ಕೊರಮ ಬುಡಕಟ್ಟಿನ ಬಗೆಗೆ ಎಚ್.ವಿ.ನಂಜುಂಡಯ್ಯ ಮತ್ತು ಅನಂತ ಕೃಷ್ಣ ಅಯ್ಯರ್ ಅವರು “Korachas also know as Koravas adn Koramas are tribe of hunters, forune tellers, cattle breeders….”

[1] ಎಂದು ಹೇಳಿರುವ ಅಂಶವನ್ನೇ “R.E. Enthovan[2] ಅವರು, ಶ್ರೀಮತಿ ವಿಮಲ ದೊರೈಸ್ವಾಮಿ, ಮತ್ತು ಎಲ್.ದೊರೆಸ್ವಾಮಿ ಉದಾಹರಿಸಿದ್ದಾರೆ. ಕಾಡಿನಲ್ಲಿದ್ದ ಈ ಜನರಿಗೆ ಪಶುಪಾಲನೆ ಮೂಲ ವೃತ್ತಿಯಾಗಿರಬೇಕು.[3] ತಾವು ಸ್ವತಂತ್ರವಾಗಿ ತಮ್ಮ ತಮ್ಮ ನೆಲೆಗಳಲ್ಲಿ ಬದುಕುತ್ತಿದ್ದಾಗ ದನಕರುಗಳನ್ನು ತಮ್ಮ ಸಂಪತ್ತೆಂದು ಭಾವಿಸಿದ್ದ ಈ ಜನ ಕಾರಣಾಂತರಗಳಿಂದ ನೆಲೆ ಕಳೆದುಕೊಂಡು ಅತಂತ್ರರಾದಾಗ ಸಾಕು ಪ್ರಾಣಿಗಳಾದ ದನಕರುಗಳನ್ನು ಕಳೆದುಕೊಂಡಿರಬೇಕು. ಕಾಡಿನಿಂದ ನಾಡಿನ ಕಡೆಗೆ ಮುಖ ಮಾಡಿ ಊರಿಂದೂರಿಗೆ ಅಲೆಯುವುದು ಅನಿವಾರ್ಯವಾದಾಗ, ವಾಹನ ಸೌಕರ್ಯಗಳಿಲ್ಲದ ಅಂದಿನ ದಿನಗಳಲ್ಲಿ ತಮ್ಮ ಕುಟುಂಬದ ಸಾಮಾನುಗಳನ್ನು ಸಾಗಿಸಲು ಕತ್ತೆಗಳನ್ನು ಸಾಕುವುದು ಅನಿವಾರ್ಯವಾಯಿತು. ನಾಯಿಗಳು ಬೇಟೆಯ ಒಂದು ಸಾಧನವಾಗುವುದರ ಜೊತೆಗೆ ತಮ್ಮ ಬಿಡಾರದ ರಕ್ಷಣೆಗೆ ಅಗತ್ಯವಾದ್ದರಿಂದ ಅವುಗಳನ್ನು ಸಾಕುತ್ತಿದ್ದರು. ಕೆಲವರು ಮಂಗಗಳನ್ನು ಆಡಿಸಿ ಜೀವನ ಸಾಗಿಸುವುದನ್ನು ಕಲಿತ ಮೇಲೆ ಮಂಗಗಳೂ ಇವರ ಸಾಕು ಪ್ರಾಣಿಗಳಾದವು. ಅವುಗಳಿಗೆ ಆಟ ಕಲಿಸಿ ಆಡಿಸಿ ಹಣ ಸಂಪಾದಿಸುತ್ತಿದ್ದರು.

ಕೊರಮರಲ್ಲಿ ಹಂದಿಗಳನ್ನು ಹಿಂಡು ಹಿಂಡೇ ಸಾಕುತ್ತಿದ್ದರು. ಅವುಗಳನ್ನು ಮಾರಿ ನಾಲ್ಕು ಕಾಸು ಕೂಡಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ನಾಗರಿಕ ಪ್ರಜ್ಞೆಯಿಂದಾಗಿ ಹಂದಿ ಸಾಕುವುದೂ ಕಡಿಮೆಯಾಗುತ್ತಿದೆ. ಅಲೆಮಾರಿ ಕೊರಮರು ನಾಯಿ, ಕತ್ತೆ, ಕೋಳಿ, ಎತ್ತುಗಳನ್ನು ಸಾಕುವುದು ಹೆಚ್ಚಾಗಿತ್ತು. ಒಂದೊಂದು ಕಡೆ ನೆಲೆ ನಿಂತವರು ಇತರೆ ರೈತ ವರ್ಗದವರ ಹಾಗೆ ದನ, ಕರು, ಎಮ್ಮೆ, ಆಡು, ಕುರಿ, ಕೋಳಿಗಳನ್ನು ಬಾತುಕೋಳಿಗಳನ್ನು ಸಾಕುತ್ತಾರೆ. “Kunchi Koravas live in huts. Similar to those of the kaikadi korachas and are accompanied by women and childern, cows bullocks, asses, dogs, monkeys and pigs”[4] ಎಂದು ಬರೆಯುತ್ತಾ ಪಾಮುಲರೂ ಕೂಡ ಹೆಂಡತಿ ಮಕ್ಕಳ ಜೊತೆ ಭಾರ ಹೊರಲು ಎತ್ತು-ಕತ್ತೆಗಳು, ಹಸು-ನಾಯಿಗಳನ್ನು ಸಾಕುತ್ತಿದ್ದ ಬಗ್ಗೆಯೂ ತಿಳಿಸಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಕೆಲವು ಕುಟುಂಬಗಳವರು ಹಂದಿ ಸಾಕುವುದನ್ನು ವೃತ್ತಿ ಮಾಡಿಕೊಂಡವರಿದ್ದರು. ಕತ್ತೆ ಸಾಕುವುದೂ ಹೆಚ್ಚಾಗಿತ್ತು. ಹಂದಿಗಳಿಗಾಗಿ ಮನೆಯ ಪಕ್ಕದಲ್ಲಿಯೇ ಗೂಡುಗಳನ್ನು ಕಟ್ಟಿಕೊಳ್ಳುತ್ತಿದ್ದರು. ನೆಲೆದಲ್ಲಿ ಸುಮಾರು ಎರಡು ಅಡಿ ತಗ್ಗು ಮಾಡಿ, ಅಂಚಿನಲ್ಲಿ ನೆಲದ ಮೇಲೆ ಸುಮಾರು ಎರಡು ಅಡಿ ಗೋಡೆಯನ್ನು ಗುಂಡಿಯ ಸುತ್ತಲೂ ಚಚ್ಚೌಕವಾಗಿ ಹಾಕಿ ಹಿಂದಿನ ಮುಂದಿನ ಗೋಡೆಯನ್ನು ನಾಲ್ಕಾರು ಅಡಿ ಏರಿಸಿ ಬಿದಿರುಗಳನ್ನು ಹಾಕಿ ಸೋಗೆ ಹೊದಿಸುತ್ತಿದ್ದರು. ಮುಂಭಾಗದಲ್ಲಿ ಒಂದು ಸಣ್ಣ ಬಾಗಿಲು ಇರುತ್ತಿತ್ತು. ಇದನ್ನು ಗೂಡು ಎಂದು ಕರೆಯುತ್ತಿದ್ದರು. ಹಂದಿಗಳನ್ನೂ ಬೆಳಗ್ಗೆ ಊರುಸುತ್ತಿ ಮೇಯಸುತ್ತಿದ್ದರು. ಕಿತ್ತಾಳೆ ಗಿಡವನ್ನು ಕಡಿದು ಅದರ ಗಡ್ಡೆಯನ್ನು ತಂದು ತುಂಡು ತುಂಡು ಮಾಡಿ ಹಾಕುತ್ತಿದ್ದರು. ಬತ್ತದ ತೌಡನ್ನು ನೀರಿನಲ್ಲಿ ಕಲೆಸಿ ದೋಣಿಗೆ ಹಾಕಿ ತಿನ್ನಿಸುತ್ತಿದ್ದರು. ಈಗೀಗ ಇವರೆಲ್ಲ ಆಡು, ಕುರಿ, ಕೋಳಿ ಸಾಕುತ್ತಾರೆ. ಕತ್ತೆಗಳನ್ನು ಸಾಕುವುದು ಅಪರೂಪವಾಗಿದೆ. ಹಂದಿ ಸಾಕುವುದೂ ಕೂಡಾ ಕಡಿಮೆಯಾಗುತ್ತಿದೆ. ಹಿಂಡು ಹಿಂಡೇ ಹಂದಿಗಳನ್ನು ಸಾಕುತ್ತಿದ್ದವರು ಹಬ್ಬ ಜಾತ್ರೆಯ ಸಲುವಾಗಿ ಒಂದೋ ಎರಡೋ ಮನೆಯ ಹತ್ತಿರವೇ ಸಾಕುತ್ತಾರೆ. ದನಕರುಗಳನ್ನು, ಎಮ್ಮೆಗಳನ್ನು ಸಾಕುವುದು ಹೆಚ್ಚಾಗಿದೆ. ಅನೇಕ ಬಾರಿ ಹಂದಿ ಮುಂತಾದ ಪ್ರಾಣಿಗಳನ್ನು ಆಹಾರವಾಗಿ ಬಳಸುತ್ತಿದ್ದುದು ಕಂಡು ಬರುತ್ತದೆ. ಇಂಥ ಪ್ರಾಣಿಗಳ ಮಾರಾಟವನ್ನು ಜೀವನ ನಿರ್ವಹಣೆಯ ವೃತ್ತಿಯನ್ನಾಗಿಯೂ ಮಾಡಿಕೊಂಡಿದ್ದರು. ಗುಡ್ಡಗಾಡಿನ ಜನಾಂಗವಾಗಿದ್ದಾಗಿನ ಪಶು, ಪ್ರಾಣಿ, ಪಕ್ಷಿ, ಮನುಷ್ಯ ಸಮಾಗಮದ ಸಾಮೂಹಿಕ ಜೀವನದ ಮೂಲ ಪ್ರವೃತ್ತಿಯನ್ನು ಕೊಂಚ ಮಟ್ಟಿಗಾದರೂ ಉಳಿಸಿ ಬೆಳೆಸಿಕೊಂಡು ಬಂದಿರುವುದರ ದ್ಯೋತಕ ಇದು. ಮೂಲತಃ ಪಶುಪಾಲನೆಯ ವೃತ್ತಿಯನ್ನು ಅವಲಂಬಿಸಿದ್ದ ಕೊರಮರು ಕಾಡು ಬೆಟ್ಟ ನಾಡಿಗಿಳಿದಾಗ ಎತ್ತಿನ ವ್ಯಾಪಾರ ಮಾಡುವುದು ಅವುಗಳ ಸುಳಿ, ಬಣ್ಣ, ಬಾಲ, ಕಾಲು ಮತ್ತು ಗೊರಸಿನ ರಚನೆಯ ವೈಶಿಷ್ಟ್ಯಗಳನ್ನು ಖಚಿತವಾಗಿ ಗುರುತಿಸುವುದನ್ನು ಅರಿತರು. ದನಗಳಿಗೆ ಬರುವ ಅಜೀರ್ಣರೋಗ, (ಮಲರೋಗ) ಚಪ್ಪರೋಗ, ಗೊರಸು ಮತ್ತು ಬಾಯಿಗೆ ಹುಣ್ಣಾಗುತ್ತಿದ್ದಂಥ “ಕಾಲು ಬಾಯಿ ರೋಗಗಳನ್ನು ಗುಣಪಡಿಸುವ, ದನದ ಮುರಿದ ಮೂಳೆಗಳನ್ನು ಸರಿಯಾಗಿ ಜೋಡಿಸಿ, ಗಿಡಮೂಲಿಕೆ, ಔಷಧಿಯನ್ನೂ ಒಂದು ಜಾತಿಯ ಸೊಪ್ಪನ್ನು ಸುತ್ತಿ ಬಿಗಿಯಾಗಿ ಕಟ್ಟಿ, ಗುಣಪಡಿಸುವಂಥ ಈ ವಿಶೇಷ ವಿದ್ಯೆಯನ್ನು ಕರಗತಗೊಳಿಸಿಕೊಂಡಿದ್ದರು. ದನಗಳು ಆಹಾರದೊಡನೆ ವಿಷದ ಕ್ರಿಮಿ ಮತ್ತು ಕೀಟಗಳನ್ನು ನುಂಗಿದಾಗ ಸೂಕ್ತ ಗಿಡ ಮೂಲಿಕೆಯನ್ನು ಗೊಟ್ಟದಲ್ಲಿ ಕುಡಿಸಿ ಶುಶ್ರೂಷೆ ಮಾಡುವ ವಿಧಾನವೂ ಅವರಿಗೆ ತಿಳಿದಿತ್ತು. ಶಕ್ತಿವರ್ಧಕವಾದ ಹುತ್ತದ ಹುಳುವನ್ನು ಬೆಳೆಯುತ್ತಿರುವ ಹೋರಿಗಳಿಗೆ ನುಂಗಿಸುತ್ತಿದ್ದ ಪರಿಪಾಠವೂ ಇತ್ತು.

 


 


[1]       B. H.V. Nanjundaiah, and L.K. Anantha Krishna lyer, The Mysore Tribes and Castes, Vol-III  P-618.

[2]      R.E. Enthovan castes of Tribes and castes of Bombay  P-266.

[3]      Editorial Akila Karnataka Koramara Sangha, Banglore.

[4]      Michael Kennedy, Criminal Classes in the Bombay Presidency. P-67.