ಕೊರವಂಜಿ ಸಾಹಿತ್ಯಿಕವಾಗಿ ಪಡೆದಷ್ಟು ಪ್ರಚಾರ, ಕೊರಮನಿಗೆ ಸಾಧ್ಯವಾಗಲಿಲ್ಲ. ಒಂದು ಕಾಲಕ್ಕೆ ಕೊರವಂಜಿ ಸಾರ್ವಜನಿಕ ಕ್ಷೇತ್ರದಲ್ಲಿ ವ್ಯವಹರಿಸುವುದು ಬದುಕಿನ ಒಂದು ಅನಿವಾರ್ಯತೆಯೇ ಆಗಿದ್ದುದರಿಂದ ತನ್ನ ವೃತ್ತಿಗನುಗುಣವಾಗಿ ಅಲಂಕರಿಸಿಕೊಳ್ಳುತ್ತಿದ್ದ ಬಗ್ಗೆ ತಮಿಳು ಕೃತಿ “ಶಿಲಪ್ಪದಿಗಾರಮ್”ನಲ್ಲಿ ಆ ನಾರಿಗೆ ಮುಖದ ತುಂಬೆಲ್ಲ ಸುಂದರವಾದ ಬಣ್ಣದ ಚುಕ್ಕೆಗಳು.

[1] “ಕೊರವಂಜಿ ಜಡೆ ಬಿಚ್ಚಿ ಬೆನ್ನ ಮೇಲೆಲ್ಲ ಹರಡಿಕೊಂಡು, ಕರಿಯ ಸೀರೆ ಉಟ್ಟು ತಲೆಯ ಮೇಲೆ ಕೊರವಂಜಿ ಬುಟ್ಟಿ, ಕುಂಕುಳಲ್ಲಿ ಮಗುವಿನ ಗೊಂಬೆಯೊಂದನ್ನು ಹಿಡಿದುಕೊಂಡು ಬರುತ್ತಾಳೆ”[2] ಇದು ನಾಟಕದ ಅಂಶವಾದರೂ ಇದಕ್ಕೆ ಸ್ಫೂರ್ತಿ ಆಕೆಯ ವಾಸ್ತವಿಕತೆ ಎಂಬುದನ್ನು ಒಪ್ಪಲೇಬೇಕಾಗುತ್ತದೆ. ಹೀಗೆ ಬರುತ್ತಿದ್ದ ಆಕೆಯ ಸೀರೆ ಕುಪ್ಪಸಗಳೂ ರಂಗು ರಂಗಿನವೇ “ಹಸಿರೊಂದು ಉಟ್ಟಿದಾಳ ಎನ್ನುಮ್ಮಹಸಿರೊಂದು ತೊಟ್ಟಿದ್ದಾಳ ಎನ್ನಮ್ಮ, ಕೆಂಪೊಂದ ಉಟ್ಟಿದಾಳ ಎನ್ನಮ್ಮ ಕೆಂಪೊಂದ ತೊಟ್ಟಿದಾಳ”[3] ಎನ್ನುವ ಜಾನಪದ ಗೀತೆಗಳ ಸಾಲು ಅವರ ಒಂದು ಕಾಲದ ಉಡುಪನ್ನು ನಿರ್ದೇಶಿಸುತ್ತವೆ. ಹೀಗೆ “ಹಿರಿಯರು ವರ್ಣಿಸುವ ಆ ಕಾಡು ಸ್ತ್ರೀ ವೇಷ-ಭೂಷಣದಿಂದ ಅಂದಿನ ಕೊರವಂಜಿ ನೋಡಲು ಪ್ರಭಾವ ಯುತವಾಗಿ ಕಾಣುತ್ತಿದ್ದಳು ಎಂಬ ಅಂಶ ತಿಳಿದುಬರುತ್ತದೆ. ಆದರೆ ಚಲನಚಿತ್ರದಲ್ಲಿ ಕಾಣುವಂತೆ ಅದರಲ್ಲಿನ ಕೊರವಂಜಿಯ ವೇಷ-ಭೂಷಣಗಳನ್ನು ಆದರ್ಶವೆಂದು ಅನುಕರಿಸುವ ಇಂದಿನ ಕೊರವಂಜಿ[4] ಬೇರೆಯಾಗಿಯೇ ತೋರುತ್ತಾಳೆ.

ಕೊರವರ ಉಡುಗೆ ತೊಡುಗೆಗಳ ಬಗೆಗೆ ಮುಲ್ಲೆ ಅವರು “ಮಹಿಳೆಯರು ಎಲ್ಲ ತರಹದ ಬಣ್ಣದ ಮಣಿಗಳನ್ನು ನಡುನಡುವೆ ಪೋಣಿಸಿದ ಕವಡೆ ಮತ್ತು ಕಪ್ಪೆ ಚಿಪ್ಪಿನ ಸರಗಳನ್ನು ಎದೆಯವರೆಗೂ ತೂಗುಹಾಕಿಕೊಳ್ಳುವರು. ಮುಂಗೈನಿಂದ ಮೊಣಕೈವರೆಗೂ ಹಿತ್ತಾಳೆ ಬಳೆಗಳನ್ನು ತೊಟ್ಟುಕೊಳ್ಳುವರು. ಸೀಸ ಮತ್ತು ಬೆಳ್ಳಿಯ ಒರಟಾದ ಉಂಗುರಗಳನ್ನು ತಮ್ಮ ಮಧ್ಯದ ಬೆರಳಿನ ಹೊರತು ಉಳಿದೆಲ್ಲ ಬೆರಳುಗಳಿಗೂ ಹಾಕಿಕೊಳ್ಳುವರು. ಒರಟಾದ ಹತ್ತಿ ಬಟ್ಟೆ ಕೊರವ ಹೆಂಗಸರ ವಿಶೇಷ ಉಡುಗೆಯಾದರೂ ತಾವು ಕದ್ದುತಂದ ಬಟ್ಟೆಗಳ ಮೂಲ ಗುರುತನ್ನು ಹೋಗಲಾಡಿಸಿ ತೊಟ್ಟುಕೊಳ್ಳುವರು. ಪುರುಷರು ತುಂಬಾ ಕೊಳಕಾಗಿರುತ್ತಾರೆ. ತಲೆಯ ಮೇಲೆ ಉದ್ದನೆಯ ಕೂದಲನ್ನು ಸೇರಿಸಿ ಗಂಟು ಹಾಕಿಕೊಂಡು, ಒಂದು ಗೋಸಿಯನ್ನು ಸುತ್ತಿಕೊಂಡು ಒಂದು ಚೀಲವನ್ನು ತೂಗುಹಾಕಿಕೊಳ್ಳುವರು”[5] ಎಂದು ದಾಖಲಿಸಿರುವ ವಿವರಗಳು ಕನ್ನಡ ಜಾನಪದ ವಿಶ್ವಕೋಶದಲ್ಲಿ ಬಂದಿದೆ.

ಮೈಕಲ್ ಕೆನಡಿ ಅವರು ಕೊರವರ ಉಡುಗೆ-ತೊಡುಗೆಗಳ ಬಗ್ಗೆ “In the carnatic, kaddi koravas and Kunchi koravas usually wear langotis with a girdle of kachataid round the waist, a rumal or head scart and a dohi or kambli thrown over the shoulders, Korachas wear chaddis (short drawers) or knee drawers (cholnas), rarely a dhotar, an angi or shirt, rumal or head-scarr and a hachada. (a sheet to coarse cloth) or kambli thrown over the upper part of the body, A dhotar is generally tied round the wait if a langothi is worn” ಇದರ ಜೊತೆಗೆ ಪಾಮುಲರ ಬಗ್ಗೆಯೂ ಹೇಳುತ್ತಾ, Kaddi Korava and Kunchi korava women dress much like those of the depressed classes and are generally unkempt and dirty. Korcha women wear the sari in a puculiar fashion, the inner end being drawn up from left to right and round the shoulders to cover the breasts. Unlike other kaikadi woman they do not wear the bodiee. They deck themselves with brass (not glass) bangles and beads round the neck in profusin” ಎಂದು ಹೇಳುತ್ತ ಪಾಮುಲರ ಹೆಂಗಸರ ಉಡುಗೆಯ ಬಗ್ಗೆಯೂ ಹೇಳಿದ್ದಾರೆ.16A

ಶ್ರೀ ಎಚ್‌.ವಿ.ಎನ್. ಮತ್ತು ಶ್ರೀ ಎಲ್‌.ಕೆ.ಅ. ಅವರೂ ಕೂಡ “As regards dress man wear short drawers turban and an upper cloth and some time a coat. They sport ear-ring, named meti muravu, and silver bangles on the wrists women wear a sari, but not a ravike but among uru and sonai korachas, woman wear this article of dress also. The wandering koracha woman deck themselves profusely with garlands of glass beads” ಎಂಬ ವಿವರಗಳನ್ನು ದಾಖಲಿಸಿದ್ದಾರೆ. ಎಲ್ಲ ಪ್ರದೇಶದಲ್ಲಿ ವಾಸಿಸುವ ಕೊರವರ ಉಡುಗೆ ತೊಡುಗೆ ಒಂದೇ ರೀತಿಯಾಗಿಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಹಲವು ಕೆಲವು ವ್ಯತ್ಯಾಸಗಳು ತೋರುತ್ತವೆ.

ದಕ್ಷಿಣ ಕರ್ನಾಟಕದಲ್ಲಿ ಕೊರಮರ ಗಂಡಸರು ಒಳಗೆ ಕಾಚ, ಲಂಗೋಟಿ ಅಥವಾ ಚೆಡ್ಡಿಗಳನ್ನು ಹಾಕಿ ಮೇಲೆ ಕಚ್ಚೆಪಂಚೆ ಉಟ್ಟು ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾರೆ. ದಪ್ಪ ಬಟ್ಟೆಯ ಬರಿ ಚಡ್ಡಿ ಹಾಕುವುದೂ ಇದೆ. ಉದ್ದನೆಯ ಅಂಗಿ ಅದರ ಮೇಲೆ ಕೆಲವರು ಕೋಟು ಹಾಕುತ್ತಿದ್ದರು. ತಲೆಗೆ ರುಮಾಲು ಸುತ್ತಿದರೆ, ಕೆಲವರ ಹೆಗಲ ಮೇಲೆ ಟವೆಲ್, ದುಪ್ಪಟಿಗಳನ್ನು ಹಾಕುತ್ತಿದ್ದರು. ತಲೆಯ ಮುಂಭಾಗದ ಕೂದಲನ್ನು ಅರ್ಧ ಚಂದ್ರಾಕಾರವಾಗಿ ಬೋಳಿಸಿ ಹಿಂದಿನ ಕೂದಲನ್ನು ಹೆಂಗಸರ ಹಾಗೆ ಉದ್ದ ಬಿಟ್ಟು ಗಂಟು ಹಾಕಿಕೊಳ್ಳುತ್ತಿದ್ದರು. ಕಿವಿಗೆ ಬಂಗಾರದ ಒಂಟಿ ದೊಡ್ಡ ಹರಳಿನ ಕುಡುಕುಗಳನ್ನು ಹಾಕಿಕೊಳ್ಳುತ್ತಿದ್ದರು. ಬೆರಳುಗಳಿಗೆ ಬೆಳ್ಳಿಯ, ತಾಮ್ರದ ಕೆಲವರು ಇತರೆ ಲೋಹದ, ಇದ್ದವರು ಬಂಗಾರದ ಉಂಗುರಗಳನ್ನು ಹಾಕಿಕೊಳ್ಳುತ್ತಿದ್ದರು.

ಹೆಂಗಸರು ಹತ್ತಿಯ ದಪ್ಪ ಹದಿನಾರು ಮೊಳದ ಸೀರೆಗಳನ್ನು ಉಡುತ್ತಿದ್ದರು. ಒಳಗಿನ ಬಾಡಿ-ಲಂಗಗಳು ಇವರಲ್ಲಿ ಇತ್ತೀಚೆಗೆ ಪ್ರವೇಶಿಸಿವೆ. ರವಿಕೆಯನ್ನೂ ತೊಡುತ್ತಿದ್ದರು. ಅದರ ಎರಡು ತುದಿಗಳನ್ನು ಎದೆಯ ಗೂಡಿನಲ್ಲಿ ಗುಂಟು ಹಾಕುತ್ತಿದ್ದರು. ಕರಿಮಣಿ ಸರ ಸಾಮಾನ್ಯವಾಗಿ ಇವರ ಕೊರಳಲ್ಲಿ ಇರುತ್ತದೆ. ತಾಮ್ರದ, ಬೆಳ್ಳಿಯ ಅಥವಾ ಇದ್ದವರು ಬಂಗಾರದ ಆಭರಣಗಳನ್ನು ಧರಿಸುತ್ತಾರೆ. ತಮ್ಮವೇ ಆದ ನಿರ್ದಿಷ್ಟ ಒಡವೆಗಳೇನು ಇಲ್ಲ. ಕೈಗೆಬಂದಿ, ಸೊಂಟಕ್ಕೆ ಪಟ್ಟಿ, ಕಾಲಿಗೆ ಉಂಗುರಗಳನ್ನು ತೊಡುತ್ತಾರೆ. ಆದರೆ ಇತ್ತೀಚೆಗೆ ಗಂಡಸರು ಹೆಂಗಸರಿಬ್ಬರಲ್ಲಿಯೂ ಉಡುಗೆ ತೊಡುಗೆಗಳು ಬದಲಾಗಿವೆ. ತಮ್ಮ ಪರಿಸರದ ಜನರಂತೆಯೇ ಇವರು ತಮ್ಮ ವೇಷ-ಭೂಷಣಗಳನ್ನು ಅಳವಡಿಸಿಕೊಂಡಿದ್ದಾರೆ. ಮೂಲದ ಗುಡ್ಡಗಾಡು ನಿವಾಸಿಗಳಾಗಿದ್ದ ಸಮಯದಲ್ಲಿ ಕೊರಮರ ವೇಷ-ಭೂಷಣಗಳ ದಾಖಲೆ ನಮಗೆ ದೊರೆಯುತ್ತಿಲ್ಲ. 9ನೇ ಶತಮಾನದ ವೇಳೆಗಾಗಲೇ ಇವರು ವಿಚಿತ್ರವಾದರೂ ಸಭ್ಯ ರೀತಿಯ ಉಡುಪುಗಳನ್ನು ಧರಿಸುತ್ತಿದ್ದ ಬಗ್ಗೆ “ಶಿಲಪ್ಪದಿಗಾರಮ್” ಮತ್ತು ಕರ್ಣಪಾರ್ಯನ ನೇಮಿನಾಥ ಪುರಾಣ ಹಾಗೂ ಜಾನಪದ ಸಾಹಿತ್ಯದಲ್ಲಿ ಕೆಲವು ದಾಖಲೆಗಳು ಮಾತ್ರ ದೊರೆಯುತ್ತವೆ.[1]       ಎಂ.ಟಿ. ಧೂಪದ ಕರ್ನಾಟಕ ಜಾನಪದ ರಂಗಭೂಮಿ ಪುಟ-227.

[2]      ಡಾ. ಬಸವರಾಜ ಮಲಶೆಟ್ಟಿ, ಉತ್ತರ ಕರ್ನಾಟಕದ ಬಯಲಾಟಗಳು.

[3]      ಸಂ. ಕಾಪಸೆ ರೇವಪ್ಪ ಮಲ್ಲಿಗೆ ದಂಡೆ ಪುಟ-13, 17.

[4]      ಎಂ.ಟಿ. ಧೂಪದ ಕರ್ನಾಟಕ ಜಾನಪದ ರಂಗಭೂಮಿ ಪುಟ-232.

[5]      ಕನ್ನಡ ಜಾನಪದ ವಿಶ್ವಕೋಶ ಪುಟ-539.

16A     Michael Kennedy, Criminal Classes in the Bombay Presidency. P-67.