ಈ ಬುಡಕಟ್ಟಿನ ಜನ ಸಾಮಾನ್ಯವಾಗಿ ಮಾಂಸಾಹಾರಿಗಳು. ಇವರು ಬೇಟೆಯಾಡುವ ಪ್ರಾಣಿ-ಪಕ್ಷಿಗಳನ್ನು ನೋಡಿದಾಗ ಎಷ್ಟೊಂದು ಬಗೆಯ ಮಾಂಸವನ್ನು ಯಾವ ಯಾವ ರೂಪದಲ್ಲಿ ತಿನ್ನುತ್ತಿದ್ದರು ಎಂಬುದು ತಿಳಿಯುತ್ತದೆ. ಆಯಾ ಪ್ರದೇಶಕ್ಕೆ ಹೊಂದಿಕೊಂಡಂತೆ ಅವರು ಅಲ್ಲಿ ಬೆಳೆಯುವ ಎಲ್ಲಾ ರೀತಿಯ ಆಹಾರ ಧಾನ್ಯಗಳನ್ನು ಉಪಯೋಗಿಸುತ್ತಾರೆ. ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬದುಕುವ ಈ ಜನ ಅಲ್ಲಿ ಬೆಳೆಯುವ ರಾಗಿ, ಜೋಳ, ನವಣಿ, ಅರಕ, ಬರಗ, ಸಾವೆ, ಭತ್ತ, ಸಜ್ಜೆ, ಅಲ್ಲದೇ ಎಲ್ಲಾ ರೀತಿಯ ಕಾಳುಗಳನ್ನೂ ತಮ್ಮ ಅಡಿಗೆಗಾಗಿ ಉಪಯೋಗಿಸುತ್ತಾರೆ. ಮುದ್ದೆ, ರೊಟ್ಟಿ, ಅನ್ನ, ತಯಾರಿಸಿ ಊಟ ಮಾಡುತ್ತಾರೆ. ಇವರು ಮಾಡುವ ಕೈರೊಟ್ಟಿ (ಮಾಸಾಲೆರೊಟ್ಟಿ) ಪಯಣದ ರೊಟ್ಟಿ ರುಚಿಯಾಗಿರುತ್ತದೆ. ದೂರ ಪ್ರಯಾಣ ಸಂದರ್ಭದಲ್ಲಿ ಬಿದಿರು ತರಲು ಬೆಟ್ಟ ಗುಡ್ಡಗಳಿಗೆ ಹೋದಾಗ ಈ ರೊಟ್ಟಿಯನ್ನು ತೆಗೆದುಕೊಂಡು ಹೋಗುತ್ತಿದ್ದರು.
ಹಂದಿ, ಅಳಿಲುಗಳನ್ನು ಬೆಂಕಿಯಲ್ಲಿ ಹದವಾಗಿ ಸುಟ್ಟು ತೊಳೆದು ಹೊಟ್ಟೆ ಸೀಳಿ ಕರುಳು ತೆಗೆದರೆ, ಪಕ್ಷಿಗಳನ್ನು ಕೋಳಿ ಸುಡುವ ಹಾಗೆ ಪುಕ್ಕೆ ತೆಗೆದು ಸುಟ್ಟು ಕರುಳು ತೆಗೆದು ಕೊಯ್ದು ತುಂಡು ತುಂಡು ಮಾಡುತ್ತಾರೆ. ಬಾವಲಿಯನ್ನು ಸುಲಿಯುತ್ತಾರೆ. ಅಳಿಲು ಮತ್ತು ಕೆಲವು ಸಣ್ಣ ಸಣ್ಣ ಹಕ್ಕಿಗಳ ಕಾಲುಗಳನ್ನು ಸುಟ್ಟಾದ ಮೇಲೆ ಅವುಗಳ ಕಾಲನ್ನು ಮುರಿದು ಬೂದಿಯನ್ನು ಉರುಬಿ ತಿನ್ನುತ್ತಿದ್ದರು. ಮಕ್ಕಳಿಗೂ ಕೊಡುತ್ತಿದ್ದರು. ಇವು ಕುರುಕುರು ಆಗಿ ಒಂದು ತರಹದ ರುಚಿ ಕೊಡುತ್ತವೆ. ಮತ್ತು ಇವುಗಳ ಈರಿಯನ್ನು ಉಪ್ಪು ಸವರಿ ಬೆಂಕಿಯಲ್ಲಿ ಸುಟ್ಟು ನೆಂಚಲು, ಚಾಕಣ ಮಾಡಿಕೊಂಡು ದೊಡ್ಡವರು ಹೆಂಡದ ಅಂಗಡಿಗೆ ತೆಗೆದುಕೊಂಡು ಹೋಗುತ್ತಾರೆ. ಕೆಲವು ವೇಳೆ ಉಪ್ಪು ಇಲ್ಲದಿದ್ದರೂ ಇಡೀ ಹಕ್ಕಿಯನ್ನೇ ಬೇಟೆಯಿಂದ ಬರುವಾಗ ಮಾರ್ಗ ಮಧ್ಯೆ ಹೆಂಡದಂಗಡಿಗೆ ಹೋಗಬೇಕಾದರೆ ಸುಟ್ಟು ನೆಂಚಿಕೆಯಾಗಿ ಮಾಡಿಕೊಳ್ಳುತ್ತಾರೆ.
ಮಾಂಸವನ್ನು ಸಾರು ಮಾಡುತ್ತಾರೆ. ಜಾಕಾಯಿ, ಲವಂಗ, ಚಕ್ಕೆ, ಏಲಕ್ಕಿ ಮುಂತಾದ ಮಸಾಲೆ ಅರೆಯುವುದು ಇರಲಿಲ್ಲ. ಕಾಯಿ ಇದ್ದರೆ ಆಯಿತು. ಇಲ್ಲದಿದ್ದರೂ ಸರಿಯೆ. ನೀರು ಹಾಕದೆ ಹುರಿದು ಗಟ್ಟಿಯಾಗಿಯೂ ಮಾಡುತ್ತಿದ್ದರು. ಇದನ್ನು “ಒರ್ತಕರ್ರಿ” ಎಂದರೆ ಹುರಿದ ಮಾಂಸ ತಿನ್ನುತ್ತಿದ್ದರು. ಮಾಂಸವನ್ನು ಸೀಳು ಸೀಳಾಗಿ ಸೀಳಿ ಹಗ್ಗದ ಮೇಲೆ ತೂಗು ಹಾಕಿ ಒಣಗಿಸುತ್ತಿದ್ದರು. ಬಸಿಲಿನಲ್ಲಿ ಒಣಗಿಸಿದಂತೆ, ಒಲೆಯ ಮೇಲೆ ಬೆಂಕಿಯ ಝಳ ತಗುಲುವಲ್ಲಿಯೂ ತೂಗು ಹಾಕಿ ಚೆನ್ನಾಗಿ ಒಣಗಿಸಿಟ್ಟು ತಮಗೆ ಬೇಕೆನಿಸಿದಾಗ ನೀರಿನಲ್ಲಿ ನೆನೆಸಿಟ್ಟು ಸಾರು ಮಾಡುತ್ತಿದ್ದರು. ಅದು ಯಾವುದೇ ರೂಪದಲ್ಲಿರಲಿ ಮಾಂಸದ ಊಟ ಬಲು ಇಷ್ಟ. ಅದರಲ್ಲಿಯೂ ಹಂದಿ ಮಾಂಸವೆಂದರೆ ಬಲು ಪ್ರೀತಿ. ಕೆಲವರು ಹಂದಿಯ ಹಸಿಯ ಬಾರನ್ನು ಜಗಿದು ತಿನ್ನುತ್ತಿದ್ದರು.
ಇ. ಥರ್ಸಟನ್ ಅವರು “Given an elephant to pandit, and eat to a Kuruvan” ಎನ್ನುವ ಗಾದೆಯನ್ನು ಹೇಳಿ ಅವರು ತಿನ್ನುವ ಕೆಲವು ಪ್ರಾಣಿ-ಪಕ್ಷಿಗಳನ್ನು ಹೆಸರಿಸಿದ್ದಾರೆ. ಇದರಿಂದಲೇ ಅವರ ಮಾಂಸ ಭಕ್ಷಣೆಯ ಶಿಷಯ ತಿಳಿಯುತ್ತದೆ. ಆದರೆ “They will not eat cattle or buffaloes” ಇತ್ತೀಚೆಗೆ ಇವರಲ್ಲಿ ಅನೇಕರು ಹೊಸ ರುಚಿಯ ಅಡಿಗೆ ಮಾಡಲು ಕಲಿಯುತ್ತಿದ್ದಾರೆ. ಸ್ಥಳೀಯ ಜನರು ಮಾಡುವ ಎಲ್ಲ ಬಗೆಯ ಅಡುಗೆಗಳನ್ನು ಮಾಡುತ್ತಾರೆ.
Leave A Comment