ಸಾಮಾನ್ಯವಾಗಿ ಇವರು ಹಿಂದೂಗಳು ಆಚರಿಸುವ ಕೆಲವು ಹಬ್ಬಗಳನ್ನು ಆಚರಿಸುತ್ತಾರೆ. ಯುಗಾದಿ, ದಸರಾ (ಮಾರ‍್ನವಮಿ) ಮತ್ತು ದೀಪಾವಳಿಗಳನ್ನು ವಿಶೇಷವಾಗಿ ಆಚರಿಸುತ್ತಾರೆ. “Observe no feaste, but keep some of the principal feasts of the Hindus, such as the new year’s day. Gauri feast and Navaratri. Saturdays are devoted to the worship of Venkataramana”

[1] ಎಂದು ಶ್ರೀ ಎಲ್.ಕೆ.ಹೆಚ್. ಮತ್ತು ಶ್ರೀ ಅ.ಕೃ. ಐಯ್ಯರ್ ಅವರು ಹೇಳಿದರೆ ಆರ್.ಇ. ಎಂಥೋವನ್ “of the Hindu holidays they observe only Ugadi, Nagarapanchami, Dasara and Divali”[2] ಎಂದು ದಾಖಲಿಸಿದ್ದಾರೆ.

ದಕ್ಷಿಣ ಕರ್ನಾಟಕದಲ್ಲಿಯೂ ಕೊರಮರು ಆಯಾ ಸ್ಥಳೀಯ ಹಬ್ಬಗಳನ್ನೂ, ನಾಡ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ವಿಶೇಷವಾಗಿ ಇವರು ಆಚರಿಸುವ ಹಬ್ಬವೆಂದರೆ ಹಿರಿಯ ಹಬ್ಬ. ಕೆಲವರು ದೀಪಾವಳಿಯಲ್ಲಿ ಹಿರಿಯರಿಗೆ ಹೆಡೆ ಹಾಕಿದರೆ, ಮತ್ತೆ ಕೆಲವರು ಮಾರ‍್ನವಮಿಯಲ್ಲಿ ಎಡೆ ಹಾಕುತ್ತಾರೆ. ಮನೆ ಮಟಗಳನ್ನೆಲ್ಲ ಸಾರಿಸಿ ಶುಚಿಗೊಳಿಸುತ್ತಾರೆ. ಬಾಗಿಲಿಗೆ ತೋರಣ ಕಟ್ಟಿ ಅಲಂಕರಿಸುತ್ತಾರೆ. ಎಲ್ಲರೂ ಸ್ನಾನ ಮಾಡುತ್ತಾರೆ ನೆಂಟರಿಷ್ಟರು ಕೂಡಿ ಹಬ್ಬ ಆಚರಿಸುತ್ತಾರೆ. ದೀಪಾವಳಿಯಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಹೊಸ ಬಟ್ಟೆ ಇದ್ದೇ ಇರುತ್ತದೆ. ಈ ಹಬ್ಬದಲ್ಲಿ ಹಂದಿ ಕಡಿಯುವುದೇ ಹೆಚ್ಚು. ಕೆಲವರು ಕುರಿ, ಕೋಳಿಗಳನ್ನು ಕಡಿಯುತ್ತಾರೆ. ಆ ದಿನ ಮನೆಯ ಹಿರಿಯ ಉಪವಾಸವಿರುತ್ತಾನೆ. ರಾತ್ರಿ ಎಂಟು-ಎಂಟೂವರೆಯ ಸುಮಾರಿಗೆ ಅಡಿಗೆ ಸಿದ್ದವಾಗುತ್ತದೆ. ಎಡೆ ಹಾಕಲು ಪ್ರಾರಂಭಿಸುತ್ತಾರೆ.

ಅಡುಗೆ ಕೋಣೆಯಲ್ಲಿ ಅಥವಾ ನಡುಮನೆಯಲ್ಲಿ ಎಡೆ ಹಾಕಲು ಬೇಕಾಗುವಷ್ಟು ನೆಲವನ್ನು ಸಾರಿಸಿ ಮಧ್ಯೆ ಯಾವುದಾದರೂ ಒಂದು ಧಾನ್ಯ ಹಾಕಿ ಅದರ ಮೇಲೆ ಕಳಸ ಹೂಡುತ್ತಾರೆ. ಆ ಕಳಸದ ಚಂಬಿಗೆ ಕೆಲವರು ಹೆಂಡ ತುಂಬಿದರೆ, ಮತ್ತೆ ಕೆಲವರು ನೀರನ್ನೇ ತುಂಬುತ್ತಿದ್ದ ಬಗೆಗೆ ತಿಳಿಯುತ್ತದೆ. ಅದರ ಬಾಯಿಗೆ ಮೂರು ವೀಳ್ಯದೆಲೆಯನ್ನು ತುದಿ ಮೇಲೆ ಬರುವಂತೆ ಒಂದರ ಪಕ್ಕದಲ್ಲೊಂದು ಇಟ್ಟು ಅವುಗಳ ನಡುವೆ ತೆಂಗಿನಕಾಯಿಯೊಂದನ್ನು ಹಾಕಿ ಅಲಂಕರಿಸುತ್ತಾರೆ. ಅಂದರೆ ಕಳಸ ಹೂಡುತ್ತಾರೆ. ಆ ಚೆಂಬಿನ ಬಾಯಿಗೆ ತಮ್ಮ ಹಿರಿಯರ ಗುರುತಿನ ಸಲುವಾಗಿ ಮಾಡಿಸಿಟ್ಟುಕೊಂಡಿರುವ ಬಂಗಾರದ ಅಥವಾ ಬೆಳ್ಳಿಯ ತಾಳಿಗಳನ್ನು ಚೆನ್ನಾಗಿ ಉಜ್ಜಿ ತೊಳೆದು ಆ ಕಳಸದ ಚೆಂಬಿಗೆ ಕಟ್ಟುತ್ತಾರೆ. ಅಕ್ಕಪಕ್ಕದಲ್ಲಿ ಹರಳೆಣ್ಣೆ ದೀಪ ಉರಿಯುತ್ತಿರುತ್ತವೆ. ಆ ಕಳಸದ ಮುಂದೆ ಬೆಸ ಸಂಖ್ಯೆಯ ಎಡೆಗಳನ್ನು ಹಾಕುತ್ತಾರೆ. ಕೆಲವರ ಮನೆಗಳಲ್ಲಿ ಒಂಬತ್ತು, ಹದಿಮೂರರವರೆಗೂ ಎಡೆ ಇರುತ್ತದೆ. ಆ ಎಡೆಗಳಿಗೆ ಕೆಲವರು ಔಡಲ ಎಲೆಯನ್ನೇ ಉಪಯೋಗಿಸುತ್ತಾರೆ. ಆ ಎಲೆಗಳ ಮೇಲೆ ಅನ್ನ, ಹುರಿದ ಮಾಂಸ, ಸಾರು, ಈರುಳ್ಳಿಯ ತುಂಡು, ಎಲೆ ಅಡಿಕೆ, ಸುಣ್ಣ, ತಂಬಾಕು, ಬೀಡಿ, ಸಿಗರೇಟು ಹೀಗೆ ಹಿರಿಯರು ಉಪಯೋಗಿಸುತ್ತಿದ್ದ ಎಲ್ಲ ವಸ್ತುಗಳನ್ನು ಇಡುತ್ತಾರೆ. ಕೆಲವು ಮನೆಗಳ ಈ ಎಡೆಗಳಲ್ಲಿ ಒಂದು ಎಡೆ ದೊಡ್ಡದಿರುತ್ತದೆ. ಇದನ್ನು “ಪೆದ್ಲೆಡೆ” ಎನ್ನುತ್ತಾರೆ. ಅಂದರೆ “ದೊಡ್ಡೆಡೆ” ಎಂದು. ಇದು ಮನೆತನದ ಹಿರಿಯರಿಗಾಗಿ ಮೀಸಲಾದದ್ದು.

ಇವರಲ್ಲಿ ತಮಗಿಂತ ಉತ್ತಮ ಜಾತಿಯ ಹೆಂಗಸರನ್ನು ಯಾರಾದರೂ ಮದುವೆಯಾಗಿ ಅವರು ಸತ್ತಿದ್ದರೆ ಅಂಥವರಿಗೆ ಪ್ರತ್ಯೇಕ ಎಡೆಯನ್ನು ಹಾಕುವುದೂ ಇದೆ. ಬಿದರೇಗುಡಿ ಪಾಪಯ್ಯನವರ ಮನೆಯಲ್ಲಿ ಇಂಥ ಒಂದು ಎಡೆ ಹಾಕುತ್ತಾರೆ. ಇದನ್ನು “ಬಳ್ಳಾಗ್ಸಿ” ಎಡೆ ಎನ್ನುತ್ತಾರೆ. ಅಂದರೆ ತಮಗಿಂತ ಮೇಲಿನವರನ್ನು ಒಟ್ಟಾರೆ “ಬಳ್ಳಾಗ್ರು” ಎಂದು ಕರೆಯುತ್ತಾರೆ. ಉಪವಾಸವಿದ್ದ ಹಿರಿಯರು ಪೂಜೆ ಮಾಡಿದ ಮೇಲೆ, ಮನೆಯ ಉಳಿದವರು, ನೆಂಟರಿಷ್ಟರೂ ಪೂಜೆ ಮಾಡುತ್ತಾರೆ. ಎಲ್ಲರ ಪೂಜೆ ಆದ ಮೇಲೆ ಎಲ್ಲರೂ ಹೊರಗೆ ಬಂದು ಬಾಗಿಲು ಹಾಕಿಕೊಳ್ಳುತ್ತಾರೆ. ಒಳಗೆ ಬೆಕ್ಕು, ನಾಯಿಗಳು ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡಿರುತ್ತಾರೆ. ಬಾಗಲಿನಲ್ಲಿ ಯಾರೂ ಶಬ್ದ ಮಾಡದಂತೆ ಒಂದೆರಡು ನಿಮಿಷ ನಂತರ ಶಬ್ಧ ಮಾಡುತ್ತಾ ಬಾಗಿಲಿನಲ್ಲಿ ಯಾರೂ ಶಬ್ಧ ಮಾಡದಂತೆ ಒಂದೆರಡು ನಿಮಿಷ ನಿಂತು ನಂತರ ಶಬ್ಧ ಮಾಡುತ್ತಾ ಬಾಗಿಲು ತೆಗೆದು ಒಳಗೆ ಹೋಗುತ್ತಾರೆ ಎಂದು ನಂಬುತ್ತಾರೆ. ನಂತರ ಎಲ್ಲರಿಗೂ ಊಟ ನಡೆಯುತ್ತದೆ.

“ಪೆದ್ಲೆಡೆ”ಯನ್ನು ಉಪವಾಸವಿದ್ದ ಹಿರಿಯರು ಊಟ ಮಾಡಿದರೆ ಉಳಿದ ಎಡೆಗಳನ್ನು ಪ್ರಸಾದವೆಂದು ಹಂಚಿ ತಿನ್ನುತ್ತಾರೆ. ಕೆಲವರು ಬೆಳಿಗ್ಗೆಗೆ ಎತ್ತಿಟ್ಟು ತಿನ್ನುವುದೂ ಉಂಟು. ಎಡೆ ಹಾಕಲು ಔಡಲ ಎಲೆ ಇಂದಿಗೂ ಇವರು ಉಪಯೋಗಿಸುವುದನ್ನು ನೋಡಿದರೆ, ಅಲೆಮಾರಿಗಳಾಗಿದ್ದಾಗ ಹೊಲಗಳಲ್ಲಿ ದೊರೆಯುತ್ತಿದ್ದ ಈ ಎಲೆಗಳನ್ನು ಉಪಯೋಗಿಸುತ್ತಿದ್ದುದೇ ಇದಕ್ಕೆ ಕಾರಣ ಎಂಬ ಆಂಶ ಮನವರಿಕೆಯಾಗುತ್ತದೆ. ಮೂರನೇ ದಿನವೂ ಇವರಿಗೆ ಹಬ್ಬವೆ. ಅಂದೂ ಕೂಡ ಮಾಂಸದ ಊಟವೇ. ಹಬ್ಬ-ಜಾತ್ರೆಗಳಲ್ಲಿ ಹೆಂಡ, ಸಾರಾಯಿ ಯಥೇಚ್ಛವಾಗಿರುತ್ತಿತ್ತು. ಆ ದಿನ ಯುವಕರು ಲಗ್ಗೆ, ಚೆಂದಾಟ, ಸೂರು ಚೆಂಡು ಆಡಿದರೆ ಹೆಣ್ಣು ಮಕ್ಕಳು ಚೌಕಾಬಾರ ಉಯ್ಯಾಲೆ, ಆಟಗಳನ್ನು ಆಡುತ್ತಿದ್ದರು. ಇತ್ತೀಚೆಗೆ ಬಿಲ್ಲೆ ಎಸೆದು,ಇಸ್ಪೀಟು ಆಡಿ ಕಾಲ ಕಳೆಯುತ್ತಾರೆ.

ಯುಗಾದಿಯಲ್ಲಿ ಇವರದು ಸಿಹಿ ಅಡಿಗೆ ಹೆಚ್ಚಾಗಿ ಹೋಳಿಗೆ ಮಾಡುವುದು ರೂಢಿ. ಅಂದು ಮನೆಗೆ ಸುಣ್ಣ ಬಣ್ಣ ಬಳಿದು ತೋರಣ ಕಟ್ಟಿ, ಅಂಗಳ ಬಳಿದು ಅಲಂಕರಿಸಿ ಹಬ್ಬ ಆಚರಿಸುತ್ತಾರೆ. ಹಿಂದೆ ವಸ್ತ್ರಡಕಿನ ಸಲುವಾಗಿ ಬೇಟೆ ಹೋಗುತ್ತಿದ್ದರು. ಅಂದು ಬೇಟೆಯಾದರೆ ವರ್ಷವೆಲ್ಲ ಬೇಟೆಯಾಗುತ್ತದೆ ಎಂಬುದು ನಂಬಿಕೆ. ಈಗ ಬೇಟೆ ಇವರಲ್ಲಿ ನಿಂತು ಹೋಗಿದೆ.


[1]       H.V. Nanjundaiah, and Anantha Krishna lyer, The Mysore Tribes and Castes, Vol-III  P-608.

[2]      R.E. Enthovan The of Tribes and  castes  P-267.