“ಕೊರಮಗೊಂದೂರಲ್ಲ, ಕೊಕ್ರೆಗೊಂದು ಕರೆಯಲ್ಲ” ಎನ್ನುವಂತೆ ನೆಲೆಕಾಣದ ಈ ಜನ ಅನೇಕ ದೇವ-ದೇವತೆಗಳನ್ನು ಪೂಜಿಸಿದರೂ ತಮ್ಮ ದೇವರಿಗೆ ಸ್ವಂತ ನೆಲೆಯನ್ನು ದಕ್ಷಿಣ ಕರ್ನಾಟಕದಲ್ಲಿ ಮಾಡಿಕೊಳ್ಳಲಾಗಲಿಲ್ಲ. ಕಂಡ ಕಂಡ ಕಲ್ಲಿಗೆ ಕೈಮುಗಿಯುವ ಇವರಿಗೆ ಮನೆ ದೇವತೆಗಳು, ಸ್ಥಳೀಯ ದೇವತೆಗಳು, ನಾಡದೇವತೆಗಳು ಒಂದೇ ಆಗಿ ಕಂಡರು ತಮ್ಮ ಪೂರ್ವಜರು ಮೂಲನೆಲೆಯಿಂದ ಹೊರಟಾಗ ಅವರ ಜೊತೆಯಲ್ಲಿ ಬಂದ ದೇವತೆಗಳ ಬಗೆಗೆ ಇವರಿಗೆ ತಿಳಿದಿಲ್ಲ. ಕಾಲಾಂತರದಲ್ಲಿ ಆ ಸ್ಥಾನವನ್ನು ತಾವು ಸಂಚಾರ ಮಾಡುತ್ತಿದ್ದ ಪ್ರದೇಶದ ದೇವತೆಗಳು, ನಾಡದೇವತೆಗಳು ಆಕ್ರಮಿಸಿಕೊಂಡಿವೆ. ಇವರಲ್ಲಿ ಕೆಲವರು ಬಾಳೆಹೊನ್ನೂರು ತಮ್ಮ ಧಾರ್ಮಿಕ ಕೇಂದ್ರವೆಂದು ಹೇಳಿದರೆ, ಹೆಚ್ಚಿನವರು ತಿರುಪತಿಯನ್ನು ಧಾರ್ಮಿಕ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಪಂಡರಾಪುರದಲ್ಲಿ ಕೈಕಾಡಿಮಠವಿರುವುದಾಗಿ ತಿಳಿದು ಬರುತ್ತದೆಯಾದರೂ ದಕ್ಷಿಣ ಕರ್ನಾಟಕದ ಜನ ಅಲ್ಲಿಗೆ ನಡೆದುಕೊಳ್ಳುವುದಿಲ್ಲ. ಮೂಢನಂಬಿಕೆಗೆ ದಾಸರಾದ ಇವರಲ್ಲಿ ದೇವರ ಬಗೆಗೆ ವಿಶೇಷವಾದ ನಂಬಿಕೆ ಭಯಭಕ್ತಿಯನ್ನು ಕಾಣಬಹುದು. ವಾರದಲ್ಲಿ ಒಂದು ದಿನವನ್ನು ವಾರದ ದಿನವೆಂದು ಆಚರಿಸುತ್ತಾರೆ. ಶನಿವಾರ ಕೆಲವರಿಗೆ, ಸೋಮವಾರ ಕೆಲವರಿಗೆ ವಾರದ ದಿನ. ಇತ್ತೀಚೆಗೆ ಕೆಲವರು ಗುರುವಾರವನ್ನು ಆಚರಿಸುತ್ತಾರೆ. ಅಂದರೆ ಇವರು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತಿರಲಿಲ್ಲವೆಂದಲ್ಲ. ಇವರದು ನೈಜಭಕ್ತಿ, ಬೆಳಿಗ್ಗೆ ಎದ್ದಮೇಲೆ ಮನೆಯ ಬಾಗಿಲಿನ ಹೊರಗಡೆ ಮುಖ ತೊಳೆದು ಬರಿದಾದ ಚಂಬನ್ನು ಕೈಗಳ ಮಧ್ಯೆ ಹಿಡಿದು ಸೂರ್ಯನ ಕಡೆ ಮುಖಮಾಡಿ ಮುಗಿಯುತ್ತಾ ದೇವತೆಗಳನ್ನು ಸ್ಮರಿಸುತ್ತಾರೆ. ಸೂರ್ಯನನ್ನು ಸೂರ್ಯನಾರಾಯಣ ಎಂದು ಕರೆಯುತ್ತಾರೆ.

ವಾರದ ದಿನಗಳಂದು ಪಾತ್ರೆಗಳನ್ನೆಲ್ಲ ಶುಚಿಯಾಗಿ ತೊಳೆದು, ಮನೆಯನ್ನು ಸಾರಿಸಿ, ಕೆಲವರ ಮನೆಯಲ್ಲಿ ಎಲ್ಲರೂ ಸ್ನಾನಮಾಡಿ ಮಡಿಬಟ್ಟೆ ತೊಟ್ಟು ಪೂಜಿಸುತ್ತಾರೆ. ಪೂಜೆ ಮಾಡುವಾಗ ತಮ್ಮ ಮನೆಗಳಲ್ಲಿ ಅಡಿಗೆ ಮನೆಯ ಗೋಡೆಯಲ್ಲಿ ಪೂರ್ವಕ್ಕಿದಿರಾಗಿ ಒಂದು ಅಡಿ ಉದ್ದಗಲದ ಗೂಡು ಮಾಡಿ ಅದರಲ್ಲಿ ಸಗಣಿಯಿಂದ ಮಾಡಿದ ಪೀಠ (ಗದ್ದುಗೆ) ಮೇಲೆ ದೀಪ ಇಟ್ಟು ಹರಳೆಣ್ಣೆ ಹಾಕಿ ಉರಿಸಿ ಹೂವುಗಳನ್ನಿಟ್ಟು ಪೂಜಿಸುತ್ತಾರೆ. ಇದನ್ನು ದೇವರ ಗೂಡೆಂದು ಕರೆಯುತ್ತಾರೆ. ಮನೆಯ ಹೊರಕ್ಕೆ ಬಂದು ಪೂರ್ವದಿಂದ ಪ್ರಾರಂಭಿಸಿ ನಾಲ್ಕು ದಿಕ್ಕುಗಳಲ್ಲಿಯೂ ದೇವತೆಗಳನ್ನು ಸ್ತುತಿಸಿ, ಬಾಗಿಲಿಗೆ ಪೂಜಿಸಿ ದೀಪದ ಹತ್ತಿರ ಬಂದು ಮತ್ತೆ ಪೂಜೆ ಮಾಡಿ ಕೈಮುಗಿದು ಅಡ್ಡ ಬೀಳುತ್ತಾರೆ. ಕೆಲವು ಮನೆಗಳಲ್ಲಿ ಕೋಣೆಯಷ್ಟನ್ನೇ ಸಾರಿಸಿ ಯಾರಾದರೊಬ್ಬರು ಸ್ನಾನ ಮಾಡಿ ಪೂಜಿಸುವುದೂ ಇದೆ. ಕೆಲವರು ಆ ದಿನ ಕೋಣೆಯಲ್ಲಿ ಮಾಂಸದ ಅಡಿಗೆ ಮಾಡುವುದಿಲ್ಲ. ಹಿಂದಿನ ದಿನ ಮಾಡಿದ್ದು ಇದ್ದರೂ ಅದನ್ನು ಕೋಣೆಯಿಂದ ಹೊರಗಿಟ್ಟು ಶುಚಿಗೊಳಿಸುತ್ತಾರೆ. ಕೆಲವರು ಹಂದಿಯ ಮಾಂಸವನ್ನು ಕೋಣೆಯಲ್ಲಿ ಮಾಡುವುದೇ ಇಲ್ಲ.

 

ಗೋಪಾಳದ ಬೂತಪ್ಪ

 

ಗೋಪಾಳದ ಮಾರೆಮ್ಮ

ಮನೆ ದೇವತೆಗಳು: ಒಂದೊಂದು ವಂಶದ ಕುಟುಂಬಗಳ ಬೇರೆ ಬೇರೆ ಹೆಸರಿನ ಮನೆ ದೇವತೆಗಳನ್ನು ಪೂಜಿಸುತ್ತಾರೆ. ಕೈಕಾಡಿಗಳು ಭವಾನಿಯನ್ನು, ಕೊರವರು ಸುಬ್ರಹ್ಮಣ್ಯನನ್ನು, ಯರಕಲರು ಲಕ್ಷ್ಮೀ ವೆಂಕಟೇಶರನನ್ನು ಪೂಜಿಸುವ ಬಗ್ಗೆ ದಾಖಲೆಗಳಲ್ಲಿ ಹೇಳಿದೆ. ವಿಶಾಖಪಟ್ಟಣ ಜಿಲ್ಲೆಯಲ್ಲಿ ಮಹಾಸತಿ ಯರಕಮ್ಮನನ್ನು ಪೂಜಿಸಿದರೆ, ಕೊಲ್ಲಾಪುರದಮ್ಮ, ಪೆರುಮಾಳಸ್ವಾಮಿ ಅಂದರೆ ವೆಂಕಟೇಶರ, ನಿದ್ರಾದೇವಿಯಾದ ಮೂದೇವಿ, ಯಲ್ಲಮ್ಮ ಮುಂತಾದ ದೇವತೆಗಳನ್ನು ಪೂಜಿಸುವವರಿದ್ದಾರೆ. ಇವರಲ್ಲಿ ಮುನೀಶ್ವರನನ್ನು ಪೂಜಿಸುವುದು ಸಾಮಾನ್ಯ. ಮಾರುತಿಯನ್ನು ವಿಶೇಷವಾಗಿ ಪೂಜಿಸುತ್ತಾರೆ. ಕೆಲವರು ಮಾರೆವ್ವ, ಕೊಲಲ್ಲೊಲೈಪ್ಪ, ಹುಲಿಗೆಮ್ಮ ಮತ್ತು ಸಂಕಾಲಮ್ಮ ದೇವತೆಗಳನ್ನು ಪೂಜಿಸುತ್ತಿದ್ದ ಬಗ್ಗೆಯೂ ತಿಳಿಯುತ್ತದೆ.

ತಾವು ವಾಸಿಸುವ ಗುಡಿಸಲಿನ ಸಮೀಪದಲ್ಲಿ ಜೇಡಿಮಣ್ಣಿನಿಂದ ಕೋನಾಕಾರ ಮಾಡಿ ಬೇವಿನ ಸೊಪ್ಪು ಸಿಕ್ಕಿಸಿ ಅದರ ಮುಂದೆ ಕಲ್ಲುಗಳನ್ನು ಇಟ್ಟು ಉಪವಾಸವಿದ್ದ ಹೆಂಗಸರು ಪೋಲೇರಮ್ಮನೆಂದು ಪೊಂಗಲ್‌ನ್ನು ಅರ್ಪಿಸಿ ಪೂಜಿಸುವರು. ಕುದಿಯುವ ನೀರನ್ನು ಗಮನಿಸಿ ಒಳಿತು ಮತ್ತು ಕೆಟ್ಟದ್ದನ್ನು ತಿಳಿಯುತ್ತಾರಂತೆ. “ಸತುವು” ಕೊರವರ ಗೃಹದೇವತೆ ಎಂದು ತಿಳಿಯುತ್ತದೆ. “ಹಳ್ಳಿಯ ಪಶ್ವಿಮಕ್ಕೆ ಎಲ್ಲರೂ ಸೇರಿ ಮಂಟಪ ನಿರ್ಮಿಸಿ ಕುಡುಗೋಲು, ದೊಣ್ಣೆ, ಸಾರಾಯಿಯನ್ನು ಇಟ್ಟು ತೆಂಗಿನಕಾಯಿ, ಬಾಳೆಹಣ್ಣು, ಅನ್ನವನ್ನು ನೈವೇದ್ಯ ಮಾಡಿ ಕುರಿ ಕಡಿದು ಎಡೆ ಮಾಡಿ ಹಬ್ಬ ಆಚರಿಸುತ್ತಾರೆ.

[1] ದಬ್ಬೆ ಕೊರಮರು ಮಳಲಮ್ಮನನ್ನು ಪೂಜಿಸುತ್ತಾರೆ. ಇವೆಲ್ಲ ಈ ಜನಾಂಗ ಸಂಚಾರ ಮಾಡುತ್ತಿದ್ದ ಪ್ರದೇಶವನ್ನು ಸೂಚಿಸುತ್ತವೆ. ಮೂಲದ ದೇವತೆಗಳು ಮರೆಯಾಗಿ ಈ ಮೇಲೆ ಹೇಳಿದ ದೇವತೆಗಳು ಆ ಸ್ಥಾನವನ್ನು ಆಕ್ರಮಿಸಿವೆ. “ಯರಕಮ್ಮ” ಮಹಾಸತಿಯಾದ ಕೊರಮರ ದೇವತೆಯಾದರೂ ಬೇರೆ ಬೇರೆ ಪ್ರದೇಶದಲ್ಲಿರುವ ಈ ಬುಡಕಟ್ಟು ಆಕೆಯನ್ನು ಪೂಜಿಸುವುದು ಕಂಡು ಬರುವುದಿಲ್ಲ. ಆದ್ದರಿಂದ ಆಕೆ ನಂತರದಲ್ಲಿ ಸತಿಯಾಗಿರಬೇಕು. ವಿಶಾಖಪಟ್ಟಣ ಜಿಲ್ಲೆಯಲ್ಲಿ ಈಕೆಯ ದೇವಸ್ಥಾನ ಈಗಲೂ ಇರುವ ಬಗ್ಗೆ ತಿಳಿದು ಬರುತ್ತದೆ. ನಿದ್ರಾದೇವಿಯಾದ ಮೂದೇವಿ ಈ ಜನಾಂಗದಲ್ಲಿ ಕೆಲವರು ಕಳ್ಳತನ ರೂಢಿಸಿಕೊಂಡ ಮೇಲೆ ಪೂಜಿಸುವ ದೇವತೆಯಾಗಿರಬಹುದು.

ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯವಾಗಿ ಪರಿಯಾಪಟ್ಳದಮ್ಮ, ಕೊಲ್ಲಾಪುರದಮ್ಮ, ಜಿಂಕದಮ್ಮ, ಮಸ್ಳೆ ಹನುಮಂತರಾಯ, ಒಲೆಮಸಣಿ, ಅಟ್ಟಿಲಕ್ಕಮ್ಮ, ಅಂತ್ರಗಟ್ಟಮ್ಮ, ಮೆಳೆಯಮ್ಮ, ತೆಲಗಿಹನುಂತರಾಯ, ಹಾಗೆಯೇ ತಿರುಪತಿ ವೆಂಕಟರಮಣಸ್ವಾಮಿ ಮುಂತಾದ ದೇವರುಗಳನ್ನು ಮನೆ ದೇವರಾಗಿ ಪೂಜಿಸುವವರಿದ್ದಾರೆ. ಇನ್ನೂ ಅನೇಕ ಬಗೆಯ ದೇವತೆಗಳು ಬೇರೆ ಬೇರೆಯವರ ಮನೆ ದೇವರುಗಳಾಗಿವೆ. ಕೊಲ್ಲಾಪುರದಮ್ಮ ಎಂದು ಹೆಸರಿಟ್ಟುಕೊಂಡವರೂ ಇದ್ದಾರೆ. ಇವರು ಮಹಾರಾಷ್ಟ್ರ ಕಡೆಯಿಂದ ಬಂದ ಬಗ್ಗೆ ಮತ್ತು ಪಿರಿಯಾಪಟ್ಳದಮ್ಮ ಮೈಸೂರು ಕಡೆಯಿಂದ ಬಂದು ಒಂದು ಕಡೆ ನೆಲೆಸಿರುವವರ ಬಗ್ಗೆ ಸೂಚಿಸುತ್ತವೆ. ಇವರಲ್ಲಿ ಶನಿದೇವರ ಬಗ್ಗೆ ಅತಿಯಾದ ಭಯ-ಭಕ್ತಿ ಇದೆ. ಕಷ್ಟ ಕಾಲದಲ್ಲಿ ತಿರುಪತಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಅಂತೆಯೇ ಸ್ಥಳೀಯ ದೇವತೆಗಳಿಗೂ, ಮಂಜುನಾಥನಿಗೂ ಹರಕೆ ಕಟ್ಟಿ ಕಾಣಿಕೆ ಸಲ್ಲಿಸುತ್ತಾರೆ. ಮೂದೇವಿ, ಸತು, ಯರಕಮ್ಮ, ಮುನೀಶ್ವರ ಮುಂತಾದ ದೇವತೆಗಳ ಪೂಜೆ ಕಂಡು ಬರುವುದಿಲ್ಲ. ಶನಿದೇವರು, ಹನುಮಂತರಾಯ ಮುಂತಾದ ಕೆಲವು ಸ್ಥಳೀಯ ದೇವತೆಗಳಿಗೆ ಕುರಿ-ಕೋಳಿಗಳನ್ನು ಬಲಿಕೊಡುವುದಿಲ್ಲ. ಕೆಲವರಲ್ಲಿ ತಮ್ಮ ಮನೆ ದೇವತೆಗಳಿಗೆ, ಸ್ಥಳದೇವತೆಗಳಿಗೆ ಬಲಿ ಕೊಡುವ ರೂಢಿಯೂ ಇದೆ.

ಒಲೆ ಮಸಣಿ ಎನ್ನುವ ದೇವತೆಯನ್ನು ಪೂಜಿಸುವವರು ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ತಮ್ಮ ಜಮೀನಿನಲ್ಲಿ ಒಲೆ ಮಾಡಿ ಅದನ್ನು ಸಾರಿಸಿ ಮೂರು ಸಣ್ಣ ಬಳಿಯ ಕಲ್ಲುಗಳನ್ನು ಸಾಲಾಗಿ ಇಟ್ಟು, ಅರಿಷಿಣ-ಕುಂಕುಮ ಹಾಕಿ, ಪೂಜಿಸಿ ಶಕ್ತ್ಯಾನುಸಾರ ಕೋಳಿಯೋ, ಹಂದಿಯೋ, ಅಥವಾ ಕುರಿಯನ್ನು ಬಲಿಕೊಟ್ಟು ಅಲ್ಲಿಯೇ ಅಡಿಗೆ ಮಾಡಿ ದೇವರಿಗೆ ಎಡೆಕೊಟ್ಟು ತಾವು ಉಂಡು ಮನೆಗೆ ಬರುತ್ತಾರೆ. ಇದು ಉಗ್ರದೇವತೆ. ಈ ಹಬ್ಬಕ್ಕೆ ತಮ್ಮ ಮನೆಯವರು ಅಥವಾ ಆ ವಂಶದವರನ್ನು ಬಿಟ್ಟು ಬೇರೆ ಯಾರನ್ನೂ ಕರೆಯುವಂತಿಲ್ಲ. ಕರೆಯುವುದಿರಲಿ ಹಬ್ಬ ಮುಗಿಯುವವರೆಗೆ ಇವರ ಎದುರಿಗೆ ಉಳಿಕೆಯವರು ಬರುವುದಿಲ್ಲ, ಮಾತನಾಡುವುದಿಲ್ಲ. ಹಾಗೆ ಮಾಡಿದರೆ ಕೇಡುಂಟಾಗುತ್ತದೆ ಎನ್ನುವ ನಂಬಿಕೆ ಇದೆ.

ಹಬ್ಬದ ದಿನ ಹಿರಿಯರು ಉಪವಾಸವಿರುತ್ತಾರೆ. ದೇವಿಯ ಮುಂದೆ ಎಡೆಯಲ್ಲಿ ಏಳು ಚಂಡು ಮುದ್ದೆ, ಏಳು ಹಿಡಿ ಅನ್ನ, ಮತ್ತು ಅಷ್ಟೇ ಪ್ರಮಾಣದಲ್ಲಿ ಮಾಂಸ, ಸಾರು ಇಟ್ಟು ಪೂಜಿಸುತ್ತಾರೆ. ಆ ಎಡೆಯನ್ನು ಆ ಮನೆಯ ಯಜಮಾನಿ ಊಟ ಮಾಡಬೇಕು. ಆ ದಿನ ಹೆಂಡ ಅಥವಾ ಸರಾಯಿ ಧಾರಾಳವಾಗಿರುತ್ತದೆ. ಹಿಂದೆ ಒಲೆಯಲ್ಲಿ ಮಣ್ಣಿನ ಮೂರ್ತಿ ಮಾಡಿ ಹಂದಿ ಕಡಿದು ಪೂಜಿಸಿ ಉದ್ದೇಶಿತ ವ್ಯಕ್ತಿಗೆ ತೊಂದರೆ ಕೊಡಲು ಅಥವಾ ಬಲಿ ತೆಗೆದುಕೊಳ್ಳಲು “ಮಾಟ”ದ ದೇವತೆಯನ್ನಾಗಿಯೂ ಪೂಜಿಸುತ್ತಿದ್ದರಂತೆ. ಇಂದು ಆ ಅಂಶಗಳಾವುವೂ ಕಾಣುತ್ತಿಲ್ಲ. ಕೆಲವರು ತಿರುಪತಿಗೆ ಯಾತ್ರೆ ಹೋಗಿ ಬರುತ್ತಾರೆ. ಹೋಗುವಾಗ ಮನೆಯಲ್ಲಿ ಹಬ್ಬ ಆಚರಿಸುತ್ತಾರೆ.

ನಾಡ ದೇವತೆಗಳು:

ಕೆಲವು ಕಡೆ ಪ್ಲೇಗಿನಮ್ಮ, ನಾಡಮ್ಮ, ಗಿಡದಮ್ಮಗಳನ್ನು ಪೂಜಿಸುವ ಬಗ್ಗೆ ತಿಳಿಯುತ್ತದೆ. ಈ ದೇವತೆಗಳಲ್ಲಿ ತಮಗೆ, ತಮ್ಮ ಹಟ್ಟಿಗೆ ರಕ್ಷಣೆ ಒದಗಿಸುವಂತೆ ಬೇಡುತ್ತಾರೆ. ನಿಗದಿಯಾದ ದಿನ ಊರ ಹೊರಗೆ ಬೇವಿನ ಮರದ ಬುಡದಲ್ಲಿ ಗದ್ದಿಗೆ ಮಾಡಿ ಮೂರು ಕಲ್ಲುಗಳನ್ನು ಇಟ್ಟು ಅರಿಷಿಣ-ಕುಂಕುಮ ಹಾಕಿ (ನಾಮ) ಪ್ಲೇಗಿನಮ್ಮನನ್ನು, ಅಂತೆಯೇ ಊರ ಹೊರಗೆ ಬಯಲಿನಲ್ಲಿ ನಾಡಮ್ಮನನ್ನು ಪ್ರತಿಷ್ಠಾಪಿಸಿ ಊರಿನವರೆಲ್ಲ ಆರತಿ ಬಾನ ಮಾಡಿ, ಸಂಜೆಗೆ ಕೋಳಿ ಕುರಿಗಳನ್ನು ಬಲಿಕೊಟ್ಟು, ಅಡಿಗೆ ಮಾಡಿ ಎಡೆಹಾಕಿ ಹಬ್ಬ ಆಚರಿಸುತ್ತಾರೆ. ಬುಡಕಟ್ಟಿನವರಾದ ಇವರು ಗಿಡದಮ್ಮ, ಮಳೆಯಮ್ಮನನ್ನು ಪೂಜಿಸುತ್ತಾರೆ. ಹಿರೇಬಿದರೆಯಲ್ಲಿ ಪ್ಲೇಗಿನಮ್ಮ,ನಾಡಮ್ಮಗಳನ್ನು ಪೂಜಿಸುತ್ತಿದ್ದುದು ಇತ್ತೀಚೆಗೆ ಮರೆಯಾಗಿದೆ. ಸ್ಥಳೀಯ ದೇವತೆಗಳ ಹಬ್ಬ-ಜಾತ್ರೆಗಳನ್ನು ತಾವೂ ಆಚರಿಸುತ್ತಾರೆ. ಆಯಾ ಸ್ಥಳೀಯ ಜನರ ಪದ್ಧತಿಗನುಗುಣವಾಗಿ ತಾವೂ ವರ್ತಿಸುತ್ತಾರೆ. ಶಿವಮೊಗ್ಗ ಪಕ್ಕದ ಗೋಪಾಳದಲ್ಲಿ ಪ್ರತ್ಯೇಕ ತಮ್ಮದೇ ಆದ ದೇವಸ್ಥಾನಗಳನ್ನು ಕಟ್ಟಿಕೊಂಡು ಪೂಜಿಸುತ್ತಾರೆ. ಇಲ್ಲಿ ಪೂಜೆಗೊಳ್ಳುವ ದೇವತೆಗಳೆಂದರೆ, 1) ಮಾರೆಮ್ಮ, 2) ಭೂತಪ್ಪ, 3) ಕಣಿಮೆ ಮಾರಿ, 4) ಯಲ್ಲಮ್ಮ, 5)  ಸಿರಸಿಮಾರಿ, 6) ಹನುಮಂತರಾಯ, 7) ಗೌರಸಂದ್ರದ ಮಾರಿ, 8) ಕೊಲ್ಲಾಪುರದಮ್ಮ, 9) ತಿರುಪತಿ ತಿಮ್ಮಪ್ಪ. ಆಯಾ ಮನೆಯವರು ತಮ್ಮ ದೇವರುಗಳನ್ನು ಬಿದಿರಿನಿಂದ ಮಾಡಿದ ಪೆಟ್ಟಿಗೆಯಲ್ಲಿ ಇಟ್ಟು ಬಾಯಿ ಮುಚ್ಚಿ ಭದ್ರಪಡಿಸಿರುತ್ತಾರೆ. ವಾರದ ದಿನಗಳಂದು ಮಾತ್ರ ಆ ದೇವತೆಗಳನ್ನು ಹೊರಕ್ಕೆ ತೆಗೆದು ಶುಚಿಗೊಳಿಸಿ ಪೂಜಿಸಿ ಮತ್ತೆ ಅದೇ ಪೆಟ್ಟಿಗೆಯಲ್ಲಿ ಇಡುತ್ತಾರೆ. ಕೆಲವು ಗುಡಿಗಳಲ್ಲಿ ದೇವತಾ ವಿಗ್ರಹಗಳು ಪೀಠದ ಮೇಲೆ ಸದಾ ಇರುತ್ತವೆ. ಇಂಥಾ ವ್ಯವಸ್ಥೆ ದಕ್ಷಿಣ ಕರ್ನಾಟಕದಲ್ಲಿ ಮತ್ತೆಲ್ಲಿಯೂ ಕೊರಮರಲ್ಲಿ ಕಂಡು ಬರುವುದಿಲ್ಲ.

ಮನರಂಜನೆ: ಬೇಸಿಗೆಯಲ್ಲಿ ತಮ್ಮ ಹಳ್ಳಿಗಳಲ್ಲಿ ಹೆಂಗಸರು-ಮಕ್ಕಳು ಎಲ್ಲರೂ ಸೇರಿ ತಿಂಗಳ ಮಾವನ ಪೂಜೆ ರಾತ್ರಿ ಸಮಯದಲ್ಲಿ ಮಾಡುತ್ತಿದ್ದರು. ಇಬ್ಬರು ಮಕ್ಕಳಿಗೆ ಅಲಂಕರಿಸಿ ತಿಂಗಳ ಮಾವನ ಮದುವೆ ಮಾಡುತ್ತಿದ್ದರು. ರಾತ್ರಿಯೆಲ್ಲ ಹಾಡು ಹೇಳುತ್ತಿದ್ದರು. ಶ್ರಾವಣದಲ್ಲಿ ಭಜನೆ ಮಾಡುತ್ತಿದ್ದರು. ಯುವಕರು ಕೋಲಾಟ ಆಡುತ್ತಿದ್ದರು. ಇವೆಲ್ಲ ಸ್ಥಳೀಯ ಜನರ ಪ್ರಭಾವದಿಂದ ಬಂದವುಗಳು. ತುತ್ತಿನ ಚೀಲ ತುಂಬಿಕೊಳ್ಳಲು ಬೆಳಗಿನಿಂದ ಸಂಜೆಯವರೆಗೆ ಏಗುತ್ತಿದ್ದ ಇವರು ಸಂಜೆಯಾದ ಮೇಲೆ ಮದ್ಯದ ಅಮಲಿನಲ್ಲಿ ಕೆಲವರು, ತಮ್ಮ ಕೆಲಸ ಕಾರ್ಯಗಳಲ್ಲಿ ಕೆಲವರು ತೊಡಗಿಸಿಕೊಳ್ಳುತ್ತಿದ್ದರಿಂದ ಇವರದೇ ಆದ ಮನರಂಜನೆಯ ಆಟಗಳು ಇವರಲ್ಲಿ ರೂಢಿಯಾಗಲಿಲ್ಲ. ಅಲ್ಲಲ್ಲಿ ಒಂದು ಕಡೆ ನೆಲೆನಿಂತ ಮೇಲೆ, ಅಲ್ಲಿಯ ಆಟಗಳು ಇವರ ಮೇಲೆ ಪ್ರಭಾವ ಬೀರಿದವು.[1]       ಕನ್ನಡ ಜಾನಪದ ವಿಶ್ವಕೋಶ ಪುಟ-587.

[2]      H.V. Nanjundaiah, and Anantha Krishna lyer, The Mysore Tribes and Castes, Vol-III  P-608.

[3]      R.E. Enthovan The of Tribes and  castes  P-267.