ಕೊರಮ ಬುಡಕಟ್ಟಿನಲ್ಲಿ “ಕೂಡಿಕೆ” ಅಥವಾ ಕೂಟಿಕೆಗಳಿಗೆ ಅವಕಾಶವುಂಟು. ಗಂಡಿನ ಮರು ಮದುವೆಗೆ ಇವರಲ್ಲಿ ಹಿಂದಿನಿಂದಲೂ ನಿಷೇಧವಿಲ್ಲ. ಆದರೆ ಹೆಣ್ಣಿನ ಮರು ಮದುವೆಗೆ ಮದುವೆ ಎಂದು ಕರೆಯುವುದಿಲ್ಲ. ಇದಕ್ಕೆ “ಉಡಿಕೆ”, ಮತ್ತು “ಸೀರುಡಿಕೆ” ಎಂತಲೂ ಕರೆಯುತ್ತಾರೆ. ಹೆಂಡತಿ ಸತ್ತವನು ಗಂಡ ಸತ್ತವಳನ್ನು, ಗಂಡ ಬಿಟ್ಟವಳನ್ನು ಹೀಗೆ ಉಡಿಕೆ ಮಾಡಿಕೊಳ್ಳುತ್ತಾರೆ. ಇನ್ನೊಬ್ಬರ ಹೆಂಡತಿಯನ್ನು ಕದ್ದುಕೊಂಡು ಹೋಗಿ ಹೀಗೆ ಉಡಿಕೆ ಮಾಡಿಕೊಳ್ಳುವುದೂ ಹಿಂದೆ ಇತ್ತಂತೆ. ಸೀರುಡಿಕೆಯು ಸಾಂಸಾರಿಕ ಜೀವನದಿಂದ ವಂಚಿತರಾದವರು, ಸಾಂಸಾರಿಕ ಜೀವನ ಸಾಗಿಸಲು ಕುಲದಿಂದ ಒಪ್ಪಿಗೆ ಪಡೆಯಲು ಮಾಡಿಕೊಂಡ ಒಂದು ಪದ್ಧತಿ. ಈ ಬಗೆಗೆ ಆರ್.ಇ. ಎಂಥೋವನ್ ಅವರು “The re-marriage of widows is permitted. it is stated that a widow who has daughters may not marry until all the girls are married, and that a widow who has sons can never marry. Divorce is not to be allowed” ಕೂಡಿಕೆಗಳನ್ನು ಮಾಡಿಕೊಳ್ಳದೆ ಗಂಡು-ಹೆಣ್ಣುಗಳು ಹಾಗೆಯೇ ನಡೆದುಕೊಳ್ಳುತ್ತಿದ್ದರೆ, ಅದು ಅನೈತಿಕ ಸಂಬಂಧವಾಗುತ್ತದೆ. ಮತ್ತು ಅದು ಕುಲಕ್ಕೆ ತಿಳಿದರೆ ದಂಡ ತೆರಬೇಕಾಗುತ್ತದೆ. ಗಂಡ ಸತ್ತ ಮೇಲೆ ಆಕೆ ಗಂಡನ ಅಣ್ಣತಮ್ಮಂದಿರನ್ನು ಮದುವೆಯಾಗುವ ರೂಢಿ ದಕ್ಷಿಣ ಕರ್ನಾಟಕದಲ್ಲಿಲ್ಲ. “ಹಿಂದೆ ಇಂಥ ರೂಢಿ ಇದ್ದ ಬಗೆಗೆ ಕೇಳಿದ್ದೀರಾ” ಎಂದು ಹಿರಿಯರನ್ನು ಕೇಳಿದರೆ “ತಿಳಿಯದು” ಎನ್ನುತ್ತಾರೆ. ಕೂಡಿಕೆಯಲ್ಲಿ ಮದುವೆಯ ಯಾವ ಶಾಸ್ತ್ರಗಳೂ ನಡೆಯುವುದಿಲ್ಲ. ಚಪ್ಪರ ಹಾಕುವುದಿಲ್ಲ. ಗಂಗೆಪೂಜೆ ಇಲ್ಲ, ಇದು ಅತ್ಯಂತ ಸರಳವಾಗಿ ನಡೆಯುತ್ತದೆ. ಒಂದು ಕಂಬಳಿಯ ಮೇಲೆ ಅಕ್ಕಿಕಾಳನ್ನು ಉದುರಿಸಿ ಅದರ ಮೇಲೆ ಕೂಡಿಕೆಯಾಗುವವರಿಬ್ಬರನ್ನು ಕೂರಿಸಿ ಗಂಡಿನಿಂದ ಹೆಣ್ಣಿನ ಕುತ್ತಿಗೆಗೆ ತಾಳಿ ಕಟ್ಟಿಸಿದರಾಯಿತು. ಕುಲದವರಿಗೆ ಮಾಂಸದ ಊಟವಿರುತ್ತಿತ್ತು. ಕೂಡಿಕೆಯಾದ ಮೇಲೆ ಯಾವ ಭಯವೂ ಇಲ್ಲದೆ ಬದುಕಬಹುದಿತ್ತು. ಅಲ್ಲದೆ ಕುಲದವರೂ ಸಮಾನವಾಗಿ ನಡೆಸಿಕೊಳ್ಳುತ್ತಿದ್ದರು. ಗಂಡ ಇದ್ದೂ ಅಂಥವನ ಹೆಂಡತಿಯನ್ನು ಬೇರೊಬ್ಬನು ಕದ್ದುಕೊಂಡು ಹೋದರೆ, ಮತ್ತು ಅವರು ಇಂಥ ಕಡೆ ಇದ್ದಾರೆ ಎಂದು ತಿಳಿದರೆ ಕುಲೊಸ್ಥರು ಹೋಗಿ ಕರೆದುಕೊಂಡು ಬಂದು ದಂಡವನ್ನು ಹಾಕುವುದರ ಜೊತೆಗೆ ಅವಳ ಮೊದಲ ಗಂಡನಿಗೆ ಮದುವೆಯ ಖರ್ಚನ್ನು ಕೊಡಿಸುತ್ತಿದ್ದರು. ಮತ್ತು ಕುಲಕ್ಕೆ ಊಟ ಕೊಡಬೇಕಾಗಿತ್ತು. ಮೊದಲನೆಯ ಗಂಡ ಆಕೆಯನ್ನು ತನ್ನ ಜೊತೆಯಲ್ಲಿ ಇಟ್ಟುಕೊಳ್ಳಲು ಒಪ್ಪಿದರೆ ಕದ್ದುಕೊಂಡು ಹೋದವನಿಗೆ ದಂಡ ವಿಧಿಸುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಒಬ್ಬಳನ್ನು ಹೊತ್ತುಕೊಂಡು ಹೋದವನು ಆಕೆಯನ್ನು ನಂತರದಲ್ಲಿ ನಿರಾಕರಿಸಿದರೆ ಅವನಿಗೆ ದಂಡ ವಿಧಿಸುತ್ತಾರೆ. ಆತನಿಗೆ ಈ ಮೊದಲೆ ಮದುವೆಯಾಗಿದ್ದರೂ, ಪ್ರೀತಿಸಿದ ಎರಡನೆಯವಳನ್ನು ಮದುವೆ ಅಥವಾ ಕೂಡಿಕೆ ಮಾಡಿಕೊಳ್ಳಲೇಬೇಕು. ಹಿಂದೆ ಬಹುಪತ್ನಿತ್ವ ರೂಢಿಯಲ್ಲಿತ್ತಂತೆ. ಕೊರಮ ಬುಡಕಟ್ಟಿನ ಗಂಡ ಹೆಂಡಿರಲ್ಲಿ ವಿಚ್ಛೇದನಗಳೂ ನಡೆಯುತ್ತಿದ್ದವು. ಗಂಡನಾದವನು ಹೆಂಡತಿಯ ಕುತ್ತಿಗೆಯ ಕರಿಮಣಿ ತಪ್ಪನ್ನು ಹೇಳಿ, ಆಕೆ ಪುರುಷನೊಂದಿಗೆ ಸಂಬಂಧ ಇರಿಸಿಕೊಂಡಿದ್ದರೆ, ಅಥವಾ ಇತರ ಬಲವಾದ ಕಾರಣಗಳಿದ್ದರೆ, ಅವಳ ಜೊತೆಯಲ್ಲಿ ಬದುಕಲು ಸಾಧ್ಯವೇ ಇಲ್ಲ ಎನ್ನುವಂತಿದ್ದರೆ ವಿಚ್ಛೇದನಗಳಾಗುತ್ತಿದ್ದವು. ಅಂಥ ಸಮಯದಲ್ಲಿ ಕರಿಮಣಿ ಸರಗಳನ್ನು ಹರಿದುಕೊಂಡು ಹೆಂಡತಿಯನ್ನು ಬಿಟ್ಟು ಬಿಡುತ್ತಿದ್ದರು. ಹೆಂಡತಿಯಾದರೂ ಅಷ್ಟೇ. ತನಗೆ ಗಂಡನಿಂದ ವಿಚ್ಛೇದನ ಪಡೆಯುವುದು ಅಗತ್ಯವೆನಿಸಿದರೆ ಕುಲೊಸ್ಥರ ಎದುರಿಗೆ ಕಾರಣಗಳನ್ನು ಹೇಳಿ ಗಂಡನ ಕರಿಮಣಿ ಸರವನ್ನು ಅವನಿಗೆ ಕೊಡುತ್ತಿದ್ದಳು ಎಂದು ಹಿರಿಯರು ಹೇಳುತ್ತಾರೆ. ಆದರೆ ಬಹುತೇಕವಾಗಿ ಪತ್ನಿಯರು ಗಂಡಂದಿರಿಗೆ ವಿಧೇಯರಾಗಿ ನಡೆದುಕೊಳ್ಳುವುದು ಕಂಡುಬರುತ್ತದೆ.
Leave A Comment