ಕೊರಮರಲ್ಲಿ ಹೆಂಗಸರಿಗೆ ಬಿಡುವು ಸಿಕ್ಕಿದರೆ ಅದು ಗರ್ಭಿಣಿಯರಿದ್ದಾಗ ಮಾತ್ರ. ಅದೂ ಹೆಚ್ಚಲ್ಲ. ಆ ಸಮಯದಲ್ಲೂ ಆಕೆ ಗಂಡನ ಮನೆಯಲ್ಲಾಗಲಿ, ತವರುಮನೆಯಲ್ಲಾಗಲಿ ಹಗುರವಾದ ಕೆಲಸಗಳನ್ನು ಮಾಡುತ್ತಿರುತ್ತಾಳೆ. ಹೀಗೆ ಕೆಲಸ ಮಾಡುವುದರಿಂದ ಹೆರಿಗೆಯ ಸಮಯದಲ್ಲಿ ತೊಂದರೆಯಾಗುವುದಿಲ್ಲ ಎನ್ನುವ ನಂಬಿಕೆ. ಅಲೆಮಾರಿಗಳಾದ ಇವರಲ್ಲಿ ತವರುಮನೆಯವರು ದೂರದಲ್ಲಿದ್ದರೆ ಅಂಥ ಸಂದರ್ಭಗಳಲ್ಲಿ ಗಂಡನ ಮನೆಯಲ್ಲಿಯೇ ಆಕೆಯ ಹೆರಿಗೆಯಾಗುತ್ತಿತ್ತಂತೆ. ಇವರು ಸಂಚಾರಿಗಳಾದರೂ ಅವರ ಕುಟುಂಬಗಳು ಅಂಥ ಸಂದರ್ಭಗಳಲ್ಲಿ ಹೆಚ್ಚು ದೂರ ಉಳಿಯದೆ ಮಗಳನ್ನು ಚೊಚ್ಚಲ ಹೆರಿಗೆಗೆ ಕರೆದುಕೊಂಡು ಹೋಗುತ್ತಿದ್ದುದೇ ಹೆಚ್ಚು ಎಂದು ಹೇಳುತ್ತಾರೆ. ಇವರಿಗೂ ಮೂಲ ನೆಲೆಯೊಂದು ಇರುತ್ತಿತ್ತು. ವಿಶೇಷ ಸಂದರ್ಭಗಳಲ್ಲಿ ಅಲ್ಲಿಗೆ ಬರುತ್ತಿದ್ದರು. ಗರ್ಭಿಣಿಗೆ ಅವಳ ಬಯಕೆಗಳನ್ನು ಅರಿತು ಪೂರೈಸುತ್ತಾರೆ. ಇಲ್ಲದಿದ್ದರೆ ಹೆರಿಗೆಗೆ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಹೆರಿಗೆಯ ಸಮಯದಲ್ಲಿ ಸೂಲಗಿತ್ತಿ ಗರ್ಭಿಣಿಗೆ “ನಿನ್ನ ಗಂಡನ ಹೆಸರು ಹೇಳಮ್ಮ ಎಂದು ಹೇಳಿ ಅವಳ ಬಾಯನ್ನು ತೆಗೆಸಿ ಅದರೊಳಗೆ ಮಣ್ಣನ್ನು ಹಾಕಿ ತಿನ್ನುವಂತೆ ಹೇಳಿ ಪ್ರಸವ ವೇದನೆಯನ್ನು ತಗ್ಗಿಸುವಳು”

[1] ಎನ್ನುವ ವಿಷಯ ಬೇರೆ ಕಡೆ ಕೊರಮರಲ್ಲಿ ಇರುವ ಬಗೆಗೆ ದಾಖಲಾಗಿರುವುದಾದರೂ ದಕ್ಷಿಣ ಕರ್ನಾಟಕದಲ್ಲಿ ಇಂಥ ಪದ್ಧತಿ ಇಲ್ಲ. ಆದರೆ ಗರ್ಭಿಣಿಯರು ಗರ್ಭ ಧರಿಸಿದ ಎರಡು-ಮೂರು ತಿಂಗಳ ನಂತರ ಸಹಜವಾಗಿಯೇ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನುವುದು ಕಂಡುಬರುತ್ತದೆ. ಅವರನ್ನು ಕೇಳಿದರೆ ಹಾಗೆ ಮಣ್ಣು ತಿನ್ನುವ ಬಯಕೆಯಾಗುತ್ತದೆ ಎನ್ನುತ್ತಾರೆ. ಇದು ಸಾಮಾನ್ಯವಾದ ಸಂಗತಿ.

ದಕ್ಷಿಣ ಕರ್ನಾಟಕದ ಕಡೆ ಗರ್ಭಿಣಿ ಪ್ರಸವವಾಗುವುದು ಮನೆಯ ಒಳಗೇ ಹೊರತು ಹೊರಗಡೆಯ ಪ್ರತ್ಯೇಕ ಗುಡಿಸಲು ಅಥವಾ ಪ್ರತ್ಯೇಕವಾದ ಜಾಗದಲ್ಲಲ್ಲ. ಅಂಗಳದಲ್ಲಿನ ಜೋಪಡಿಯಲ್ಲಿ ಗರ್ಭಿಣಿಯನ್ನು ದಬ್ಬಿ, ಹೆರಿಗೆಯ ಸಮಯದಲ್ಲಿ ಯಾವ ಸಹಾಯವನ್ನೂ ಮಾಡದೆ ಇಪ್ಪತ್ತೆಂಟು ದಿನಗಳವರೆಗೆ ಯಾವ ಉಪಚಾರವನ್ನೂ ಮಾಡದೆ, ಔಷಧಿಗಳನ್ನು ದೂರದಿಂದಲೇ ಎಸೆಯುವ ಕ್ರೂರ ಪದ್ಧತಿ ಕೊರವರಲ್ಲಿದ್ದ ಬಗೆಗೆ ದಾಖಲೆಗಳಿಂದ ತಿಳಿದು ಬಂದರೂ ಈ ಕಡೆ ಅಂಥ ಯಾವ ನಿರ್ಬಂಧವೂ ಇಲ್ಲ. ಹೆರಿಗೆಗೆ ಸೂಲಗಿತ್ತಿಯ ಜೊತೆಗೆ ಇತರೆ ಅನುಕೂಲಗಳೂ ದೊರೆಯುತ್ತವೆ. “When a child is born after the death of one or more children a pecular custom is observed in some places. Soon after she is purified by a both, the mother either really of nominally goes begging to a few houses, to perform a vow previously taken to venkatramana of Tirpati, or other family deity, while the father follows her with the child in his arms. Out of the money collected, a silver or a copper necklace is made, and put round the child’s neck. The nose is bored; and a ring inserted in the hole; and the child is given a name, to denote that he has been born for the sake of begging or by begging”[2] ಇಂಥ ಯಾವ ಪದ್ಧತಿಯೂ ಇಂದು ರೂಢಿಯಲ್ಲಿಲ್ಲ.

ಬೇರೆ ಬೇರೆ ಪ್ರದೇಶದಲ್ಲಿ ವಾಸಿಸುವ ಈ ಬುಡಕಟ್ಟಿನಲ್ಲಿ ಹೆಂಡತಿಯ ಹೆರಿಗೆಯ ಸಮಯದಲ್ಲಿ ಗಂಡನಿಗೆ ಉಪಚಾರವಾಗುವ ಬಗೆಗೆ ಹಲವಾರು ವಿದ್ವಾಂಸರು ದಾಖಲಿಸಿರುವುದು ಕಂಡುಬರುತ್ತದೆ. ಶಿವಮೊಗ್ಗ ಪಕ್ಕದ ಗೋಪಾಳದಲ್ಲಿಯೂ ಈ ಪದ್ಧತಿ ಆಚರಣೆಯಲ್ಲಿದ್ದ ಬಗೆಗೆ ಶ್ರೀ ಜಿ.ಕೃಷ್ಣರಾವ್ ಅವರು[3] ದಾಖಲಿಸಿದ್ದಾರೆ.  ನಾನು ಅದೇ ಗೋಪಾಳದಲ್ಲಿ ಗಿಡ್ಡಪ್ಪ ಸೂಮಾರು 75 ವರ್ಷಗಳು, ಮಾ.ಛೇ.ನಿಂಗಪ್ಪ ಸುಮಾರು 80 ವರ್ಷ, ಮಾಜಿ ಛೇ. ನಂಜಪ್ಪ 50 ವರ್ಷ ಮುಂತಾದ ಕೆಲವರನ್ನು ಈ ಬಗೆಗೆ ವಿಚಾರಿಸಿದ್ದಕ್ಕೆ, ಇಂಥ ಪದ್ಧತಿ ನಮಗೆ ಗೊತ್ತಿರುವ ಹಾಗೆ ನಮ್ಮಲ್ಲಿ ರೂಢಿಯಲ್ಲಿರಲಿಲ್ಲ. ಅಲ್ಲದೆ ನಮ್ಮ ಹಿರಿಯರಿಂದಲೂ ನಾವು ಕೇಳಿಲ್ಲ ಎನ್ನುತ್ತಾರೆ. ಇದೇ ಗೋಪಾಳದಲ್ಲಿ ಈ ಪದ್ಧತಿ ಆಚರಿಸುತ್ತಿದ್ದರೆಂಬುದನ್ನು ಇಲ್ಲಿಯ ಜನರಿಂದಲೇ ಕೇಳಿ ಜಿ.ಕೃಷ್ಣರಾವ್ ಅವರು ದಾಖಲಿಸಿದ್ದಾರೆ ಎಂದು ಹೇಳಿದ್ದಕ್ಕೆ” ಅದು ನಮಗೆ ತಿಳಿಯದು ಎನ್ನುತ್ತಾರೆ.

“ಸಾಮಾನ್ಯವಾಗಿ ಕೊರವರು ಮಗುವಿನ ಜನ್ಮದಿನೋತ್ಸವವನ್ನು ಅಷ್ಟೊಂದು ವಿಜೃಂಭಣೆಯಿಂದ ಆಚರಿಸುವುದಿಲ್ಲ. ಮಗು ಹುಟ್ಟಿದ ಕೂಡಲೇ ಉಗುರು ಬೆಚ್ಚಗಿನ ನೀರಿನಲ್ಲಿ ಮಗುವಿಗೆ ಸ್ನಾನ ಮಾಡಿಸುತ್ತಾರೆ. ಕೆಲಸಲ ಬಾಣಂತಿಗೂ ಸ್ನಾನ ಮಾಡಿಸುತ್ತಾರೆ. ಟೊಂಕ ಬಿಗಿದು ದೇಹವನ್ನು ಬೆಚ್ಚಗಿಡಲು ವನಸ್ಪತಿ ಔಷಧಿ ಕೊಟ್ಟು ಅಂಗಾತ ಮಲಗಿಸುವರು”[4] ದಕ್ಷಿಣ ಕರ್ನಾಟಕದಲ್ಲಿಯೂ ಹೆರಿಗೆಯಾದ ಮೇಲೆ ಬಾಣಂತಿ ಮತ್ತು ಮಗುವಿನ ಸ್ನಾನ ಮಾಡಿಸಿ ಬೆಚ್ಚಗೆ ಮಲಗಿಸುತ್ತಾರೆ. ಮತ್ತು ಸೊಂಟಕ್ಕೆ ಚೆನ್ನಾಗಿ ಬಟ್ಟೆ ಬಿಗಿದು ಕಟ್ಟುತ್ತಾರೆ. ಬಾಣಂತಿ ಸಮಯದಲ್ಲಿ ಬಜೆ, ಹೂವಿನಕಾಳು, ಕಾಡುಜೀರಿಗೆ ಮುಂತಾದವುಗಳನ್ನು ಕೊಡುತ್ತಾರೆ. ಮಗುವಿಗೆ ರೋಗ-ರುಜಿನಗಳನ್ನು ತಡೆಯಲು ಕತ್ತೆ ಹಾಲನ್ನು ಮೊನ್ನೆ ಮೊನ್ನೆಯವರೆಗೆ ಹಾಕುತ್ತಿದ್ದರು. ಕಪ್ಪು ಗಾಜಿನ ಬಳೆ ಅಥವಾ ಸೂಜಿಯನ್ನು ಕಾಯಿಸಿ, ಮಗುವಿನ ನೆತ್ತಿ, ಪಕ್ಕೆಗಳು, ಎದೆಯ ಮೇಲೆ, ಹೊಟ್ಟೆಯ ಮೇಲೆ, ಕಾಲುಗಳ ಹೆಬ್ಬೆರಳುಗಳ ತುದಿಗಳಿಗೆ ಸುಟಿಕೆ ಹಾಕುತ್ತಿದ್ದರು.

ಯಾರ ಮನೆಯಲ್ಲಿ ಹೆರಿಗೆಯಾಗುವುದೋ ಆ ಮನೆಯ ವಂಶಸ್ಥರ ಅಂದರೆ ಆ ಮನೆಯವರ ಅಣ್ಣ-ತಮ್ಮಂದಿರೆಲ್ಲರಿಗೆ ಸೂತಕ ಅಂದರೆ ಮೈಲಿಗೆ ತಟ್ಟುತ್ತದೆ. ಈ ಸೂತಕದ ಮನೆಗಳಿಂದ ಬೀಗರು ಯಾವುದೇ ವಸ್ತುಗಳನ್ನು ತೆಗೆದುಕೊಳ್ಳುವುದಿಲ್ಲ. ಅವರ ಮನೆಗಳಿಗೆ ಪ್ರವೇಶಿಸುವುದಿಲ್ಲ. ಸೂತಕವನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ. ಮಗು ಹುಟ್ಟಿದ ಐದು, ಒಂಭತ್ತು ಅಥವಾ ಹನ್ನೆರಡನೆಯ ದಿನಕ್ಕೆ ನಾಮಕರಣ ಶಾಸ್ತ್ರ ಇಟ್ಟುಕೊಳ್ಳುತ್ತಾರೆ. ಅದೇ ದಿನ ಸೂತಕ ತೆಗೆಸಿಕೊಳ್ಳುತ್ತಾರೆ. ಮುಂಚೆಯೇ ಈ ವಿಷಯವನ್ನು ಅಣ್ಣ-ತಮ್ಮಂದಿರಿಗೆಲ್ಲ ಅವರು ಎಲ್ಲಿರುತ್ತಾರೋ ಅಲ್ಲಿಗೆ ತಿಳಿಸಿರುತ್ತಾರೆ. ಅವರೂ ಕೂಡ ಅದೇ ದಿನ ಸೂತಕ ತೆಗೆಸಿಕೊಳ್ಳುತ್ತಾರೆ. ಅನುಕೂಲವಿಲ್ಲದವರು ಮುಂದೆ ಹಾಕಬಹುದು.

ನಾಮಕರಣದ ದಿನ ಮನೆಯನ್ನು ಸಾರಿಸಿ ಎಲ್ಲರೂ ಸ್ನಾನ ಮಾಡಿ ಮನೆಯಲ್ಲಿ ಸಿಹಿ ಅಡಿಗೆ ಮಾಡುತ್ತಾರೆ. ತಿರುಪತಿ ತಿಮ್ಮಪ್ಪನ ಮುದ್ರೆ ಹೊತ್ತಿರುವ ದಾಸಯ್ಯನನ್ನು ಹೆರಿಗೆ ಮಾಡಿಸಲು ಬಂದ ಸೂಲಗಿತ್ತಿಯನ್ನೂ ಕರೆಸುತ್ತಾರೆ. ಮೊದಲು ಸೂಲಗಿತ್ತಿ ತಮ್ಮ ಜಾತಿಯವಳೇ ಆಗಿರುತ್ತಿದ್ದಳು. ದಾಸಪ್ಪ ಬಂದಾಗ ಅವನ ಕಾಲಿಗೆ ನೀರು ಕೊಟ್ಟು ಒಳಗೆ ಕರಿ ಕಂಬಳಿ ಹಾಸಿ ಅದರ ಮೇಲೆ ಕೂರಿಸುತ್ತಾರೆ. ಒಳಗೆ ಕೋಣೆಯಲ್ಲಿ ದೇವರ ದೀಪ ಹತ್ತಿಸಿ ಅದರ ಮುಂದೆ ದಾಸಯ್ಯನ ಶಂಕು ಜಾಗಟೆ ಇಡಿಸಿ, ಒಂದು ಹಣ ಕಾಣಿಕೆ ಇಡುತ್ತಾರೆ. ಜೊತೆಗೆ ರಾಗಿ, ಅಕ್ಕಿ, ಅಸಿಟ್ಟು, ಬೇಳೆ ಮುಂತಾದ ಒಣ ಪಡಿಯನ್ನು ಇಡುತ್ತಾರೆ. ದಾಸಯ್ಯ ದೇವರುಗಳನ್ನು ಸ್ಮರಿಸುತ್ತಾ ಜಾಗಟೆ ಬಡಿದು, ಶಂಕನ್ನು ಊದುತ್ತಾನೆ. ಮಧ್ಯೆ ಮಧ್ಯೆ “ತಿರುಪತಿ ವೆಂಕಟರಮಣನ ಪಾದಕ್ಕೆ ಗೋವಿಂದಾ” ಎಂದು ಗೋವಿಂದನನ್ನು ಹಾಕುತ್ತಾ ಶಂಕನ್ನು ಮೂರು ಬಾರಿ ಊದುತ್ತಾನೆ. ನಂತರ ಶಂಕು ಜಾಗಟೆಯನ್ನು ಮನೆಯವರೆಲ್ಲರ ತಲೆಯ ಮೇಲೆ ಇಡುತ್ತಾನೆ. ಎಲ್ಲರೂ ದಾಸಪ್ಪನ ಕಾಲಿಗೆ ಬೀಳುತ್ತಾರೆ.

ಮಗುವನ್ನು ಬಿದಿರಿನ ತೊಟ್ಟಿಲಿಗೆ ಹಾಕಬೇಕಾದರೆ ಆ ತೊಟ್ಟಿಲಿಗೆ ಮೂರು ಬಾರಿ ಸಗಣಿಯನ್ನು ತುಂಬಿ ತಿಪ್ಪೆಗೆ ಹಾಕಿ ನಂತರ ಆ ತೊಟ್ಟಿಲಿಗೆ ಮಗುವನ್ನು ಮಲಗಿಸುತ್ತಾರೆ. ದಾಸಯ್ಯ ಮನೆಗೆಲ್ಲ ತೀರ್ಥವನ್ನು ಸಿಂಪಡಿಸುತ್ತಾನೆ. ಅಲ್ಲಿಗೆ ಸೂತಕ ಹರಿದಂತೆ. ದಾಸಯ್ಯ ಇವರ ಮನೆಯಲ್ಲಿ ಊಟ ಮಾಡುವುದಿಲ್ಲ. ಸೂಲಗಿತ್ತಿಗೆ ತಲೆಗೆ ಎಣ್ಣೆ ಹಾಕಿ ಅವರ ಶಕ್ತ್ಯಾನುಸಾಸ ಸೀರೆ, ರವಿಕೆಯನ್ನು ಕೊಟ್ಟು, ಅದೂ ಸಾಧ್ಯವಾಗದಿದ್ದರೆ ನೆನಪಿನ ಕಾಣಿಕೆ ಕೊಟ್ಟು ತಮ್ಮ ಜೊತೆಯಲ್ಲಿಯೇ ಊಟ ಮಾಡಿಸಿ ಗೌರವಿಸುತ್ತಾರೆ. ಶಕ್ತಿ ಇದ್ದರೆ ನೆಂಟರಿಷ್ಟರಿಗೂ ಊಟ ಕೊಡುತ್ತಾರೆ. ಅಂದು ಸಿಹಿ ಅಡಿಗೆಯೇ ಇರುತ್ತದೆ. ಮಗುವನ್ನು ತೊಟ್ಟಿಲಿಗೆ ಹಾಕಿದ ಮೇಲೆ ಅದರ ಸೋದರ ಮಾವ “ಮಗುವಿಗೆ ಹೆಸರಿಡುವಾಗ ಅವನು ಅದರ ಕೈಗೆ ಒಂದು ದಾರ (ಕಂಕಣ)ವನ್ನು ಕಟ್ಟುವನು. ಇದು ಮಗು ಕೊರವ ಜನಾಂಗಕ್ಕೆ ಪ್ರವೇಶ ಪಡೆದುದರ ಸಂಕೇತ”[5]ವೆನ್ನುವ ಇಂಥ ಕ್ರಮಗಳು ದಕ್ಷಿಣ ಕರ್ನಾಟಕದ ಕಡೆ ಇತ್ತೀಚೆಗೆ ಕಳಚಿ ಹೋಗಿದೆ.

ಕೊರಮ ಬುಡಕಟ್ಟಿನಲ್ಲಿ ಮಕ್ಕಳಿಗೆ ದೇವರ ಹೆಸರನ್ನುಇಡುತ್ತಾರೆ. ವ್ಯಕ್ತಿಯ ಆಕಾರ, ಬಣ್ಣ ಮುಂತಾದವುಗಳಿಗೆ ಹೊಂದಿಕೊಳ್ಳುವ ಹೆಸರುಗಳು ಮುಂದೆ ರೂಢಿಯಾಗಿಬಿಡುತ್ತವೆ. ತೆಲುಗು ಮಾತನಾಡುವ ಕಡೆ “ಕಪ್ಪಗಿರುವವನನ್ನು “ನಲ್ಲವಾಡು”, ಕುಳ್ಳಗಿರುವವನನ್ನು “ಪೊಟ್ಟಗಾಡು”, ಉದ್ದ ಕಾಲಿರುವವನನ್ನು “ನೆಟ್ಟಕಲಾಡು”, ಕುಂಟನನ್ನು “ಕುಂಟಾಡು”, ಜುಟ್ಟು ಬಿಟ್ಟವನನ್ನು “ಜುಟ್ಟುವಾಡು” ಹೀಗೆ ನಾನಾ ರೀತಿಯಲ್ಲಿ ಕರೆಯುವರು”[6] ಡಾ.ಬಿ.ವಿ. ಮಲ್ಲಾಪೂರ ಅವರು ಸುಂಕ; ಮಾರ; ಹೊನ್ನೂರ; ಹನುಮ; ಮಲ್ಲಿ; ಎಲ್ಲ;” ಮುಂತಾದ ಎಚ್‌.ವಿ. ನಂಜುಂಡಯ್ಯ ಮತ್ತು ಅನಂತ ಕೃಷ್ಣ ಐಯ್ಯರ್ ಉದಾಹರಿಸಿರುವ ಹೆಸರುಗಳನ್ನು ಸೂಚಿಸಿ “ಜೂಲಿ, ಸೊಟ್ಟ ಮುಂತಾದ ಉಪನಾಮಗಳು ಇರುವುದುಂಟು ಎಂದಿದ್ದಾರೆ”[7] ಇಂಥ ಉಪನಾಮಗಳು ದಕ್ಷಿಣ  ಕರ್ನಾಟಕದಲ್ಲಿಯೂ ಕಂಡು ಬರುತ್ತವೆ. ಕಪ್ಪಗಿರುವವಳನ್ನು ಕರ‍್ಕಿ, ಹೆಚ್ಚು ತಿನ್ನುವವರನ್ನು ಬೂಕ; ಹೆಣ್ಣಿನಂತೆ ವರ್ತಿಸುವವನನ್ನು “ಪರಸ, ಗೊಜ್ಜಿಗ” ಮುಂತಾದ ಹಲವು ಹೆಸರುಗಳಿಂದ ಕರೆಯುತ್ತಾರೆ. ಅಲ್ಲದೆ ಉಪನಾಮಗಳಾದ ಕರ‍್ತೆಂಕ್ಟಪ್ಪ, ಸಿನ್ನ, ಬುಡ್ಡಮ್ಮ, ಮಚ್ಚ, ದೊಡ್ಡ ಕಣ್ಣಿನವರನ್ನು “ಗೆಡ್ಲಗಣ್ಣ” ಹಲ್ಲು ಉದ್ದ ಇದ್ದವರನ್ನು “ಪೆಲಬೀರ, ಗಂಜಿಕೂರ, ಪಣಸಬಲ್ಡಿ, ಜೋಲಾಲಿ, ಪಾಮ್ಲು ಕಿಮ್ಮ, ಗುಡಾರಹನುಮು, ಮದ್ಲಾಳಿ ಮುಂತಾದ ಹೆಸರುಗಳೂ ರೂಢಿಯಲ್ಲಿವೆ. ಇವುಗಳಲ್ಲಿ ಕೆಲವು ಪೂರ್ವಪದ ಅಥವಾ ಉತ್ತರಪದ ಕುಳುವ ಭಾಷೆಯವೇ ಆಗಿವೆ. ವಂಶದ ಹಿರಿಯರ ಹೆಸರನ್ನು ಹಿರಿಯ ಮಕ್ಕಳಿಗೆ ಇಡುವ ಸಂಪ್ರದಾಯ ದಕ್ಷಿಣ ಕರ್ನಾಟಕದಲ್ಲಿ ಈ ಬುಡಕಟ್ಟಿನವರಲ್ಲಿ ಈಗಲೂ ರೂಢಿಯಲ್ಲಿದೆ.[1]        ಕನ್ನಡ ಜಾನಪದ ವಿಶ್ವಕೋಶ, ಪು-535

[2]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-600.

[3]        E. Thurston Ethnographic Notes on South India Vol, I, p-549-50.

[4]        ಜಾನಪದ ಸಾಹಿತ್ಯ ದರ್ಶನ ಭಾಗ-6, ಪು-207

[5]      ಕನ್ನಡ ಜಾನಪದ ವಿಶ್ವಕೋಶ, ಪು-534

[6]      ಅದೇ, ಪು-534

[7]        ಜಾನಪದ ಸಾಹಿತ್ಯ ದರ್ಶನ ಭಾಗ-6, ಪು-207