ಆರೋಗ್ಯ ಪೂರ್ಣವಾದ ಸಮಾಜದ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅತೀ ಮುಖ್ಯವಾಗಿ ರೂಢಿಸಿಕೊಂಡ ಒಂದು ವ್ಯವಸ್ಥೆ ಮದುವೆ. ಇಂಥ ಮದುವೆಯ ವ್ಯವಸ್ಥೆ ಕೊರಮ ಬುಡಕಟ್ಟಿನಲ್ಲಿ ಯಾವಾಗಿನಿಂದ ರೂಢಿಯಲ್ಲಿ ಬಂತು ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ಇವರಲ್ಲಿ ಕುಟುಂಬ ಜೀವನ ಪದ್ಧತಿಯನ್ನು ಬಹು ಹಿಂದಿನಿಂದಲೂ ಕಾಣಬಹುದು. ಇವರಲ್ಲಿನ ಬೆಡಗುಗಳು ಸ್ವಗೋತ್ರದಲ್ಲಿನ ವಿವಾಹಗಳನ್ನು ತಲೆಮಾರುಗಳಿಂದ ತಡೆಯುತ್ತಾ ಬಂದಿರುವ ಪದ್ಧತಿ ಇದಕ್ಕೊಂದು ನಿದರ್ಶನ. ಇವರ ಜಾತಿಯ ಹುಟ್ಟಿನ ಬಗೆಗೆ ದೊರೆತ ಕಥೆಗಳಲ್ಲಿಯೂ ದಂಪತಿಗಳ ವಿಷಯ ಬರುತ್ತದೆ. ಸಾಹಿತ್ಯದಲ್ಲಿಯೂ ಈ ಸುಳುಹುಗಳಿವೆ. ಸಗೋತ್ರದಲ್ಲಿ ಸಂಬಂಧಗಳು ನಡೆಯುವುದಿಲ್ಲ. ಅಂಥವು ಕಂಡುಬಂದರೆ ಅವರನ್ನು ಮೂರು ಕುಲದವರು ಎಂದು ಅವರ ಸಂಬಂಧ ಬೆಳೆಸುವುದಿಲ್ಲ. ಮದುವೆಯ ಮೂಲಕ ಆಗುವ ಗಂಡು-ಹೆಣ್ಣಿನ ಸಂಬಂಧ ಒಂದು ಪವಿತ್ರ ಬಂಧವೆಂದು ತಿಳಿಯುತ್ತಾರೆ. ಗಂಡಿನ ತಂದೆ ಹೆಣ್ಣಿನ ಮನೆಗೆ ಹೆಣ್ಣನ್ನು ಕೇಳಲು ಹೋಗುವುದು ರೂಢಿ. ಒಂದು ಕಾಲಕ್ಕೆ ಹಿರಿಯರು ಮಾಡಿದ ಒಪ್ಪಂದ ಮುರಿಯುತ್ತಿರಲಿಲ್ಲ. ಹೆಣ್ಣು ಗಂಡನ್ನು, ಗಂಡು ಹೆಣ್ಣನ್ನು ನೋಡಬೇಕು, ಒಪ್ಪಿಗೆ ಸೂಚಿಸಬೇಕು ಎಂಬುದೂ ಇರಲಿಲ್ಲ. ಇವರಲ್ಲಿ ಏಕಪತ್ನಿತ್ವದ ಪದ್ಧತಿ ರೂಢಿಯಲ್ಲಿದೆ. ಮೊದಲನೆಯ ಹೆಂಡತಿಗೆ ಮಕ್ಕಳಾಗದಿದ್ದರೆ ಅಥವಾ ಸತ್ತರೆ ಮಾತ್ರ ಎರಡನೆಯ ಮದುವೆ. ಅದು ಗಂಡಿಗೆ ಮಾತ್ರ. ಹೆಣ್ಣಿಗೆ ಒಮ್ಮೆ ಮದುವೆಯಾದ ಮೇಲೆ ಎರಡನೆಯ ಮದುವೆ ಇಲ್ಲ.

ವಿಶೇಷ ಸಂದರ್ಭಗಳಲ್ಲಿ ಅಂದರೆ, ಕೊರಮ ಬುಡಕಟ್ಟಿನವರು ಬೇರೆ ಬುಡಕಟ್ಟು ಅಥವಾ ಜಾತಿಯವರನ್ನು ತಮ್ಮ ಬುಡಕಟ್ಟಿಗೆ ಸೇರಿಸಿಕೊಳ್ಳುವುದಿಲ್ಲ. ತಮಗಿಂತ ಮೇಲು ಜಾತಿಯ ಹೆಣ್ಣನ್ನು ಕೂಡಿಕೊಂಡರೆ ಆಕೆಯನ್ನು ಕುಲಕ್ಕೆ ತೆಗೆದುಕೊಳ್ಳುತ್ತಿದ್ದರು. ಹೆಣ್ಣು ಕೂಡಿಕೊಂಡರೆ ಅಷ್ಟೆ. ಮೇಲು ಜಾತಿಯ ಗಂಡು ಈ ಬುಡಕಟ್ಟಿನ ಹೆಣ್ಣನ್ನು ಪ್ರೀತಿಸಿದರೆ ಅಂಥವರನ್ನು ತಮ್ಮ ಕುಲಕ್ಕೆ ಸೇರಿಸಿಕೊಳ್ಳುತ್ತಿದ್ದರು. ಗಂಡಿನ ತಂದೆ ಹೆಣ್ಣು ಕೇಳಲು ಕುಲದವರೊಂದಿಗೆ ಬೀಗರ ಮನೆಗೆ ಹೋಗುತ್ತಾನೆ. ತಾವು ಬರುವ ವಿಷಯವನ್ನು ಮೊದಲೆ ಅವರಿಗೆ ಬೇರೆಯವರಿಂದ ತಿಳಿಸುತ್ತಿದ್ದರು. ಹೆಣ್ಣಿನವರು ಒಪ್ಪಿಗೆ ಕಳಿಸಿದರೆ ಮಾತ್ರ ಹೋಗುತ್ತಿದ್ದರು. ಪೂರ್ವದಲ್ಲಿ ಹೆಂಡದಂಗಡಿಯಲ್ಲಿಯೂ ಮದುವೆ ನಿಶ್ಚಯಗಳು ನಡೆಯುತ್ತಿದ್ದ ಬಗ್ಗೆ ತಿಳಿಯುತ್ತದೆ. ಈ ಬಗ್ಗೆ ಈ.ಥರ‍್ಸಟನ್ ಅವರು “Marriages are arranged by the elders. The father of a youth who is of a marriageable age calls together some of the elders of his divition, and proceeds in quest of a suitable bride. if the family visited consent to the match, the head men is sent for, and a move is made to the toddy shop. Here the father of the future bride-groom fills a small eatrhern vessel, called is Telugu Muntha, and offers it to the father of the bride elect, asking him. Do you know why I give you this toddy? The recipient replies, it is because I have given you my daughter, and I drink to her health. The vessel is refilled and offered to the head man, who takes it, and enquiries of the father of the girl why he is to drink. The reply is, because I have given my daughter to……’s son, drink to her healt. The questions and answers are repeated while every one present, according to rank, has a drink. Those who have so drunk at this bertothal ceremony are looked upon as witnesses to the contrace”

[1] ಎನ್ನುವ ಹಲವು ವಿವರ ನೀಡಿದ್ದಾರೆ. “ಮುಂತ ಕಳ್ಳು ಹುಯ್ಸುವ ಪದ್ಧತಿ ದಕ್ಷಿಣ ಕರ್ನಾಟಕದ ಹಳ್ಳಿಗಳಲ್ಲಿ ವಾಸಿಸುವ ಜನರಲ್ಲಿ ಈಗಲೂ ರೂಢಿಯಲ್ಲಿದೆ. ಹೆಣ್ಣು ಕೊಡುವ ಬಗೆಗೆ ಒಪ್ಪಂದ ಆದ ಮೇಲೆ ಎಲ್ಲರೂ ಹೆಂಡದಂಗಡಿಗೆ ಹೋಗುತ್ತಾರೆ. ಅಲ್ಲಿ ಗಂಡಿನ ತಂದೆ ಹೆಣ್ಣಿನ ತಂದೆಗೆ ಮತ್ತು ಕುಲದವರಿಗೆ ಹೆಂಡ ಕುಡಿಸುತ್ತಾನೆ. ಈ ಮದುವೆ ಒಪ್ಪಂದಕ್ಕೆ ಅವರೆಲ್ಲ ಸಾಕ್ಷಿಗಳು. ಈ ಒಪ್ಪಂದಕ್ಕೆ ಇವರಲ್ಲಿ “ಜಾತ್ರಿಕೆ” ಇಡುವುದು ಎನ್ನುತ್ತಾರೆ. ಹೆಣ್ಣಿನ ತಂದೆ ಹೆಂಡದಂಗಡಿಯಲ್ಲಿ ಹೆಂಡ ಕುಡಿಯುವಾಗ “ನನ್ನ ಮಗಳನ್ನು ನಿನ್ನ ಮಗನಿಗೆ ಕೊಡುವುದಕ್ಕೆಮತ್ತು ಅವಳ ಆರೋಗ್ಯಕ್ಕಾಗಿ ಕುಡಿಯುತ್ತೇನೆ” ಎನ್ನುವ ಮಾತುಗಳು ಈ ದಕ್ಷಿಣ ಕಾರ್ನಾಟಕದ ಕಡೆ ಈಗ ರೂಢಿಯಲ್ಲಿ ಇಲ್ಲ. ಈ ಒಪ್ಪಂದಕ್ಕೆ ವಿಳ್ಯಶಾಸ್ತ್ರವೆಂತಲೂ ಕರೆಯುತ್ತಾರೆ.

ಜಾತ್ರಿಕೆ:

ವೀಳ್ಯಶಾಸ್ತ್ರದ ದಿನ ಮನೆಗೆ ಬರುವ ಗಂಡಿನವರನ್ನು ಹೆಣ್ಣಿನವರು ಪ್ರೀತಿಯಿಂದ ಬರಮಾಡಿಕೊಂಡು ಹಾಸಿದ ಕಂಬಳಿಯ ಮೇಲೆ ಕೂರಿಸುತ್ತಾರೆ. ಹಿರಿಯರೆಲ್ಲ ಸೇರಿ ನಿಷ್ಕರ್ಶೆ ಮಾಡಿದ ಮೇಲೆ ತೆರೆದ ಹಣ ಪೂರ್ತಿಯಾಗಿ ಅಥವಾ ಸ್ವಲ್ಪಭಾಗ ಕೊಟ್ಟು ನಿಶ್ಚಯ ಮಾಡಿಕೊಳ್ಳುತ್ತಾರೆ. ಇದಲ್ಲದೆ ಒಂದಣ ದುಡ್ಞು ಎಲೆ ಅಡಕೆಯನ್ನು “ಬಳಗೊಸ್ಥರ” ಮುಂದೆ ಇಡುತ್ತಾರೆ. ಬಳಗೊಸ್ಥರು ಅದನ್ನು ತೆಗೆದುಕೊಂಡು ಹೆಣ್ಣಿನ ತಂದೆ ತಾಯಿಗೆ ಕೊಡುತ್ತಾ “ಈ ಹೆಣ್ಣು ಇವರದು” ಎಂದು ನಿಗದಿ ಮಾಡುತ್ತಾರೆ. ಅದೇ ದಿನ ಗಂಡಿನವರು ಹೆಣ್ಣಿನವರಿಗೆ “ಪಾನಕಳ್ಳು” ಅಥವಾ “ಮುಂತಕಳ್ಳ”ನ್ನು ಕುಡಿಸುವುದು, ನಿಶ್ಚಿತಾರ್ಥಕ್ಕೆ ಬಂದಿದ್ದ ಹಿರಿಯರಿಗೂ ಕುಡಿಸುತ್ತಾರೆ. ಆದರೆ ಅನಂತಕೃಷ್ಣ ಐಯ್ಯರ ಅವರು “They observe no vilya sastra, do not call in any band of pipers, nor use the bhashing, marrige chaplet, and some do not even errect a marriage both”[2] ಎಂದಿದ್ದಾರೆ. ವಾದ್ಯದವರನ್ನು ಕರೆಯದೆ ಈಗಂತೂ ಮದುವೆಯಾಗುವುದಿಲ್ಲ. ಬಾಷಿಂಗ ಕಟ್ಟುವುದಿಲ್ಲ. ಆದರೆ ತಲೆಗೆ ಪೇಟ ಸುತ್ತುತ್ತಾರೆ. ಹಿಂದೆ ಮದುವೆಯಲ್ಲಿ ವಾದ್ಯದವರಿರುತ್ತಿರಲಿಲ್ಲವೆಂದು ಕೆಲವರು ಹೇಳುತ್ತಾರೆ. ಇವರ ಮದುವೆಗಳಲ್ಲಿ ಬ್ರಾಹ್ಮಣರಿಗೆ ಪ್ರವೇಶವಿರಲಿಲ್ಲ. ಧಾರೆಯನ್ನು ಕುಲದ ಹಿರಿಯರೇ ನೆರವೇರಿಸುತ್ತಿದ್ದರು. ಹೆಸರು ಬಲದ ಬಗೆಗೆ ಬ್ರಾಹ್ಮಣರನ್ನು ಕೇಳುತ್ತಿದ್ದರು.

ಹಿಂದೆ ಈ ಬುಡಕಟ್ಟಿನವರಲ್ಲಿ ಚಿಕ್ಕರಿರುವಾಗಲೇ ಕೆಲವು ಸಂದರ್ಭಗಳಲ್ಲಿ ಮಕ್ಕಳು ಹುಟ್ಟುವ ಪೂರ್ವದಲ್ಲಿಯೇ ಗಂಡು ಹೆಣ್ಣಿನ ಒಪ್ಪಂದ ನಡೆಯುತ್ತಿತ್ತಂತೆ. ತೆರೆದ ಮುಂಗಡವನ್ನು ಕೊಟ್ಟು ಹೆಂಡವನ್ನು ಕುಡಿಯುತ್ತಿದ್ದರಂತೆ. ಯಾರೂ ಆಡಿದ ಮಾತಿಗೆ ತಪ್ಪುವಂತಿರಲಿಲ್ಲ. ತಪ್ಪಿದರೆ ಕುಲದವರು ದಂಡ ಹಾಕುತ್ತಿದ್ದರು. ಮಕ್ಕಳು ಹುಟ್ಟುವ ಪೂರ್ವದಲ್ಲಿಯೇ ಒಪ್ಪಂದ ಮಾಡಿಕೊಳ್ಳುತ್ತಿದ್ದ ಬಗೆಗೆ ಆರ್.ಇ. ಎಂಥೋವನ್ ಅವರು “The bertothal is settled by the payment of Rs.4 or 5 by the boy’s father to the girls father in the presence of felations and friends. He has also to pay a bride price called mohar of not less than Rs. 30/- to the girl’s father. Exchange of children in the marriage are said to be arranged before their birth. Teh girl’s father some time makes the boys father promise to give him two of his sons’ daughters or to pay a some of money as their price”[3] ಎಂದು ದಾಖಲಿಸಿರುವುದು ಕೊರಮ ಬುಡಕಟ್ಟಿನ ಒಂದು ಕಾಲದ ಪದ್ಧತಿಯನ್ನು ಸೂಚಿಸುತ್ತದೆ. ದಕ್ಷಿಣ ಕರ್ನಾಟಕದಲ್ಲಿಯೂ ಹಿಂದೆ ಇಂಥ ಪದ್ಧತಿಗಳು ರೂಡಿಯಲ್ಲಿದ್ದ ಬಗೆಗೆ ಹೇಳಲಾಗಿದೆ. ಈ ಪದ್ಧತಿಗಳು ಬುಡಕಟ್ಟಿನ ಜನಾಂಗದ ಸಮೀಪ ಸಂಬಂಧ, ರಕ್ತ ಬಾಂಧವ್ಯ, ಕುಲದ ಶೀಲಗಳ ಪೋಷಣೆಗೆ ನೆರವಾಗುತ್ತಿದ್ದವು. ಇಂಥ ವೈವಾಹಿಕ ಸಂಬಂಧದ ಸಂಪ್ರದಾಯ ಸಾಮಾನ್ಯವಾಗಿ ಎಲ್ಲ ಮುಂದುವರಿದ ಸಮಾಜಗಳಲ್ಲೂ, ಎಲ್ಲ ಬುಡಕಟ್ಟು ಜನಾಂಗಗಳಲ್ಲಿಯೂ ಕಂಡು ಬರುವುದು ಒಂದು ವಿಶೇಷ.

ಅಕ್ಕನ ಮಗಳನ್ನು ಇವರು ಮದುವೆಯಾಗುತ್ತಾರೆ. ಆದರೆ ತಂಗಿಯ ಮಗಳನ್ನು ಮದುವೆಯಾಗುವುದಿಲ್ಲ. ಮೊದಮೊದಲಿಗೆ ದಬ್ಬೆ ಕೊರಮರು, ಊರ ಕೊರಮರು, ಕೊರಚರು, ಎತ್ತಿನ ಕೊರಮರು ಮುಂತಾದವರ ನಡುವ ಊಟೋಪಚಾರ, ಗಂಡು ಹೆಣ್ಣುಗಳ ಸಂಬಂಧ ನಡೆಯುತ್ತಿರಲಿಲ್ಲ ಎಂದು ಹೇಳುತ್ತಾರೆ. ತಮ್ಮ ಭಾಷೆಯಲ್ಲಿ ಊರ ಕೊರಮರಲ್ಲಿ “ಊರ‍್ಗುಳುವರು” ಕೊರಚರನ್ನು “ಬ್ಯಾರಗಾಯಿಗಳು” ಎನ್ನುತ್ತಾರೆ. ಇಂದಿಗೂ ಕೋತಿ ಕೊರಮರಿಗೆ, ಹಾವಿನ ಕೊರಮರಿಗೆ ಉಳಿದವರು ಯಾರೂ ಹೆಣ್ಣು ಕೊಟ್ಟು ತರುವುದಿಲ್ಲ. ಊಟೋಪಚಾರ ನಡೆಯುವುದಿಲ್ಲ. ಇತ್ತೀಚೆಗೆ ದಬ್ಬೆ ಕೊರಮರು, ಊರ ಕೊರಮರು, ಕೊರಚರು ಎತ್ತಿನ ಕೊರಮರಲ್ಲಿ ಊಟ ಉಪಚಾರ ನಡೆಯುತ್ತದೆ. ಹೆಣ್ಣು ಗಂಡುಗಳ ಸಂಬಂಧಗಳೂ ನಡೆಯುತ್ತವೆ. ಆದರೆ ಆರ್.ಇ. ಎಂಥೋವನ್ ಅವರು “The tribe contains four family stocks-Santi padia, kavadia, Manpadia and Menara gutti. Perons belonging to the same stock do not inter marry. Bids and Dabbes eat together, and bids will give their girls to Dobbes though they do not marry Dabbe girles”[4] ಎಂದು ಅವರ ಪದ್ದತಿಯ ವಿವರಗಳನ್ನು ನೀಡಿರುವುದು ಗಮನಾರ್ಹವಾಗಿದೆ. ಈ ಬುಡಕಟ್ಟಿನ ಒಳಪಂಗಡಗಳಲ್ಲಿ ಇದ್ದ ಸಾಮಾಜಿಕ ತಾರತಮ್ಯಗಳನ್ನು ಇದು ಸೂಚಿಸುತ್ತದೆ.

ತೆರೆ:

ಗಂಡಿನವರು ಹೆಣ್ಣಿನ “ಜಾತ್ರಿಕೆ”ಯಾದ ಮೇಲೆ, ಹೆಣ್ಣಿನವರಿಗೆ ಕೊಡುತ್ತಿದ್ದ ದಕ್ಷಿಣೆಯೇತೆರ ತೆರದಲ್ಲಿ “ಸಣ್ಣ ತೆರ” ಮತ್ತು “ದೊಡ್ಡ ತೆರ” ಎಂದು ಎರಡು ಬಗೆಗಳಿವೆ. ಸಣ್ಣ ತೆರೆದ ಮೊತ್ತ ಎಪ್ಪತ್ತೆರಡು ರೂಪಾಯಿ ಇದ್ದರೆ ದೊಡ್ಡ ತೆರೆದ ಮೊತ್ತು ತೊಂಬತ್ತಾರು ರೂಪಾಯಿಗಳಿವೆ. ಅನುಕೂಲವಿದ್ದವರು ದೊಡ್ಡ ತೆರ ಕೊಟ್ಟರೆ ಬಡವರು ಸಣ್ಣ ತೆರ ಕೊಡುವ ವಾಡಿಕೆ ಇತ್ತು. ಎಚ್.ವಿ.ನಂಜುಂಡಯ್ಯ ಅವರು ಈ ತೆರದ ಬಗೆಗೆ “The amount of bride price or seventy two rupees and in some places twenty pagodas or sixty rupess. it is said that some times, as much as sum of Rs.100/- has to be paid”[5] ಎಂದು ವಿವರವನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಹಣದ ಮೊತ್ತದಲ್ಲಿ ಹೆಚ್ಚು ಕಡಿಮೆಯಾದರೂ, ದಕ್ಷಿಣ ಕರ್ನಾಟಕದಲ್ಲಿ ತೆರದ ಪದ್ಧತಿ ರೂಢಿಯಲ್ಲಿದೆ.

ಇ. ಥರ್‌ಸಟನ್ ಅವರು ತೆರದ ವಿವರಗಳನ್ನು ನೀಡುತ್ತಾ “The purchase money is 101 madas (a mada=two rupees) and is always the same for both well to do and poor. But as a matter of fact. the whole of it is never paid. A few instalment are sometimes handed over but generally the money is the cause of endless quarrels”[6] ಎಂದಿದ್ದಾರೆ. ತೆರದ ಹಣವನ್ನು ಕಂತುಗಳಲ್ಲಿ ಕೊಡುವುದು, ಈ ಹಣದ ಸಲುವಾಗಿ ಜಗಳಗಳಾಗುತ್ತಿದ್ದು ಸಾಮಾನ್ಯ ವಿಷಯವೇ. ಈ ತೆರವನ್ನು ಕೊಡುವುದು, ಹೆಚ್ಚಾಗಿ ತಾಯಿಯ ಅಣ್ಣ-ತಮ್ಮಂದಿರ ಹಕ್ಕು. ಆರ್.ಇ. ಇಂಥೋವನ್ ಅವರು ಇ ಅಂಶವನ್ನು ಗಮನಿಸಿದ್ದಾರೆ. ಗಂಡಿನ ತಂದೆ 30 ರೂಪಾಯಿಗೆ ಕಡಿಮೆ ಇಲ್ಲದಂತೆ ವಧುವಿಗೆ ಬೆಲೆ ಅಥವಾ ಮೊಹರನ್ನು ಕೊಡುತ್ತಿದ್ದ ಬಗೆಗೆ ಹೇಳುತ್ತಾ ಅದರಲ್ಲಿ “Half this sum is paid to the girls maternal uncle”[7] ಎಂಬ ಅಂಶವನ್ನು ದಾಖಲಿಸಿದ್ದಾರೆ. ಹೆಣ್ಣಿನ ಸೋದರ ಮಾವಂದಿರಿಗೆ ತೆರದ ಹಣದ ಕೆಲವು ಭಾಗ ಸೇರುತ್ತಿದ್ದುದು ಹಿಂದಿನಿಂದಲೂ ಇತ್ತು ಎಂಬುದು ತಿಳಿದುಬರುತ್ತದೆ. ಹಳ್ಳಿಗಳಲ್ಲಿ ಈಗಲೂ ಕೆಲವರಲ್ಲಿ ರೂಢಿಯಲ್ಲಿದೆ. ಈ “ತೆರದ ಪದ್ಧತಿ”. ಆದರೆ ಕೊರಮ ಜನಾಂಗದಲ್ಲಿ ಎಂದಿಗೂ ವರದಕ್ಷಿಣೆ ಪದ್ಧತಿ ಇದ್ದುದ್ದು ಕಂಡುಬಂದಿಲ್ಲ. ಮೇಲ್ವರ್ಗದ  ಜನರ ಸಂಪರ್ಕದಿಂದ ಇತ್ತೀಚೆಗೆ ವರದಕ್ಷಿಣೆ ಪದ್ಧತಿ ಇವರಲ್ಲಿಯೂ ಹಬ್ಬುತ್ತಿದೆ.

ಫ್ರಾನಸಿಸ್ ಅವರು ದಾಖಲಿಸಿರುವಂತೆ “A Kurava marry his sisters daughters and when he gives his sister in marriage, he expects her to produce a bride for him. His sister’s husband accordingly pays Rs. 7-50 out of the Rs.60/- of which the bride price consists at the wedding itself, and Rs.2-50 more each year until the woman bears a daughter”[8] ಈ ತೆರದ ಪದ್ದತಿ ಈ ಬುಡಕಟ್ಟಿನಲ್ಲಿ ಅವರು ಎಲ್ಲೇ ವಾಸಿಸುತ್ತಿರಲಿ ಸಾಮಾನ್ಯವಾಗಿತ್ತೆಂಬ ಅಂಶ ಇಲ್ಲಿಯ ದಾಖಲೆಗಳಿಂದ ವ್ಯಕ್ತವಾಗುತ್ತದೆ. ಕುರಿ ಕೊಟ್ಟವರಿಗೆ ಮರಿ ಕೊಡಬೇಕೆಂಬ ಈ ಜನಾಂಗದ ಅನುಭವ ನುಡಿ ಈ ಸಂಪ್ರದಾಯದಿಂದಲೇ ಪ್ರೇರಿತವಾದುದು. ಇಂಥ ಪದ್ಧತಿಯಿಂದ ಮನೆತನಗಳ ಗುಪ್ತರೋಗಗಳು ತಂದುಕೊಳ್ಳುವ ಮನೆತನಕ್ಕೂ ಹಬ್ಬುವುದನ್ನು ತಡೆಗಟ್ಟುವ ದೂರದೃಷ್ಟಿ ಇದ್ದಂತಿದೆ. ದಕ್ಷಿಣ ಕರ್ನಾಟಕದಲ್ಲಿಯೂ ಕೂಡ ಇವರಲ್ಲಿ ಹೆಣ್ಣಿಗೆ ತೆರ ಕೊಡುವ ಸಂಪ್ರದಾಯವಿದೆ. ಈ ತೆರದಲ್ಲಿ ಕೆಲಭಾಗ ಹೆಣ್ಣಿನ ಸೋದರ ಮಾವಂದಿರಿಗೆ ಸೇರುತ್ತದೆ. ಒಂದು ಹೆಣ್ಣು ಮದುವೆಯಾಗಿ ಆಕೆಯ ಹೊಟ್ಟೆಯಲ್ಲಿ ಹುಟ್ಟಿದ ಇಬ್ಬರು ಹೆಣ್ಣುಮಕ್ಕಳ ತೆರ ಆಕೆಯ ಅಣ್ಣ-ತಮ್ಮಂದಿರಿಗೆ ಸೇರುತ್ತದೆ. ಸಣ್ಣ ತೆರ ಮತ್ತು ದೊಡ್ಡ ತೆರ ಎರಡೂ ರೂಢಿಯಲ್ಲಿ ಇದೆ. ಸಣ್ಣ ತೆರ ಎಪ್ಪತ್ತೆರಡು ರೂಪಾಯಿಯಲ್ಲಿ ನಲವತ್ತು ರೂಪಾಯಿ ಸೋದರ ಮಾವನಿಗೆ ಸೇರಿದರೆ, ಮೂವತ್ತು ರೂಪಾಯಿ ಹೆಣ್ಣಿನ ತಂದೆ, ತಾಯಿಯವರಿಗೆ ಸೇರುತ್ತದೆ. ಉಳಿದ ಎರಡು ರೂಪಾಯಿ ಎದೆಹಾಲು ಕುಡಿಸಿದ ಕೂಲಿಯೆಂದು ತಾಯಿಗೆ ಕೊಡುತ್ತಾರೆ.

ದೊಡ್ಡ ತೆರದ ತೊಂಬತ್ತೆಂಟು ರೂಪಾಯಿಗಳಲ್ಲಿ ನಲವತ್ತೆಂಟು ರೂಪಾಯಿ ಹೆಣ್ಣಿನ ಸೋದರ ಮಾವನಿಗೆ ಸೇರಿದರೆ, 48 ರೂಪಾಯಿ ಹೆಣ್ಣಿನ ತಂದೆ-ತಾಯಿಗಳಿಗೆ ಉಳಿದ ಎರಡು ರೂಪಾಯಿ ತಾಯಿಯ ಎದೆಯ ಹಾಲಿನ ಕೂಲಿ ಎಂದು ಕೊಡುತ್ತಾರೆ. ಶಿವಮೊಗ್ಗಾದ ಗೋಪಾಳದಲ್ಲಿ ತೆರದ ಮೊತ್ತು ಐವತ್ತಾರು ರೂಪಾಯಿಗಳೆಂದು ಈ ಬುಡಕಟ್ಟಿನ ಅಲ್ಲಿನ ಹಿರಿಯರು ಹೇಳುತ್ತಾರೆ.

ಇಬ್ಬರು ಹೆಣ್ಣು ಮಕ್ಕಳ ನಂತರದ ಹೆಣ್ಣು ಮಕ್ಕಳ ತೆರ ತಂದೆ ತಾಯಿಗಳೇ ತೆಗೆದುಕೊಳ್ಳಬಹುದು. ಸೋದರ ಮಾವಂದಿರು ತೆರದ ರೂಪದಲ್ಲಿ ಪಡೆದ ಹಣವನ್ನು ಯಾವುದೋ ಒಡವೆ ಅಥವಾ ವಸ್ತುವಿನ ರೂಪದಲ್ಲಿ ಹೆಣ್ಣಿಗೆ ಹಿಂತಿರುಗಿಸಬಹುದು. ಅಥವಾ ತೆರ ಕೊಟ್ಟವರಿಗೂ ಕೊಡಬಹುದು. ತೆರದ ಹಣವನ್ನು ಕಂತುಗಳಲ್ಲಿ ಕೊಡುವ ಸೌಲಭ್ಯವಿದ್ದರೂ, ಕೊಡದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತೆರ ಕೊಡದಿದ್ದರೆ ಪಂಚಾಯಿತಿಯಲ್ಲಿ ದಂಡ ಹಾಕುತ್ತಿದ್ದರು. ಒಂದು ಸಾರಿ ಹೆಣ್ಣು ನಿಶ್ಚಯ ಆದ ಮೇಲೆ ಆ ಹೆಣ್ಣನ್ನು ಬೇರೆಯವರಿಗೆ ಕೊಡುವಂತಿರಲಿಲ್ಲ. ಒಂದು ಪಕ್ಷ ಕೊಟ್ಟರೆ ಅದಕ್ಕೆ ಬಲವಾದ ಕಾರಣ ಬೇಕಾಗುತ್ತಿತ್ತು. ಇಲ್ಲವೆ “ಜಾತ್ರಿಕೆ” ಇಟ್ಟ ಗಂಡಿನವರ ಎಲ್ಲಾ ಖರ್ಚನ್ನು ಜೊತೆಗೆ ಕುಲಕ್ಕೆ ದಂಡವನ್ನೂ ತೆರಬೇಕಾಗುತ್ತಿತ್ತು. ಗಂಡಿನವರಾದರೂ ಅಷ್ಟೇ. ಜಾತ್ರಿಕೆ ಇಟ್ಟ ಮೇಲೆ ಹೆಣ್ಣನ್ನು ಬಿಡುವಂತಿಲ್ಲ. ಅಷ್ಟು ಕಟ್ಟುನಿಟ್ಟಾಗಿದ್ದ ಈ ಪದ್ದತಿಗಳು ಈಗ ಸಡಿಲಾಗಿ ಈ ಬುಡಕಟ್ಟಿನಲ್ಲಿಯೂ ವರದಕ್ಷಿಣೆ ಪಿಡುಗು ಹಬ್ಬುತ್ತಿದೆ.

ಬೆಡಗು: ಬೇರೆ ಮೇಲ್ವರ್ಗದವರಲ್ಲಿ ಗೋತ್ರಗಳಿರುವ ಹಾಗೆ ಕೊರಮ ಬುಡಕಟ್ಟಿನಲ್ಲಿಯೂ ಬೆಡಗುಗಳಿವೆ. ಇಂದಿಗೂ ಅವುಗಳ ಪಾಲನೆ ಅತಿ ಕಟ್ಟುನಿಟ್ಟಾಗಿ ನಡೆಯುತ್ತದೆ. ತನ್ನ ಮೂಲದ ಶುದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಈ ಬೆಡಗುಗಳು ಪ್ರಮುಖ ಪಾತ್ರ ವಹಿಸಿವೆ ಮತ್ತು ಆ ಕಾರಣಕ್ಕಾಗಿಯೇ ಹಿಂದೆ ಈ ಬೆಡಗುಗಳು ರೂಪುಗೊಂಡಿವೆ. ಈ ಬುಡಕಟ್ಟಿನವರು ಯಾವುದೇ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದರೂ ಇವರು ಯಾವ ಪ್ರದೇಶದವರೇ ಆದರೂ ನಂಟಸ್ತಿಕೆಗಳನ್ನು ಬೆಡಗುಗಳ ಮೂಲಕವೇ ನಡೆಸುತ್ತಾರೆ. ಆ ಬೆಡಗುಗಳೆಂದರೆ 1) ಕಾವಾಡಿ, 2) ಶ್ಯಾತಪಾಡಿ, 3) ಮ್ಯಾನಪಾಡಿ, 4) ಮ್ಯಾನಗುತ್ತಿ.

ಈ ಬೆಡಗಿನ ಶಬ್ದಗಳ ಅರ್ಥ ಇಂದು ಈ ಜನರಿಗೆ ತಿಳಿದಿಲ್ಲ. ಕೇಳಿದರೆ, “ಅರ್ಥಗೊತ್ತಿಲ್ಲ ಹಿಂದಿನಿಂದ ಬಂದದ್ದು ನಾವು ಹಾಗೆಯೇ ಹೇಳುತ್ತೇವೆ” ಎನ್ನುತ್ತಾರೆ. ದಕ್ಷಿಣ ಕರ್ನಾಟಕದ ಕೊರಮರಲ್ಲಿ 1) ಕಾವಾಡಿ, 2) ಶ್ಯಾತಪಾಡಿ ಬೆಡಗುಗಳು ಕಂಡರೆ, ಕೊರಚರಲ್ಲಿ 1) ಮ್ಯಾನಪಾಡಿ, 2) ಮ್ಯಾನಗುತ್ತಿಯನ್ನು ಕಾಣಬಹುದು. ಕೊರಚರಿಗೂ, ಕೊರಮರಿಗೂ ಒಂದು ಕಾಲದವರೆಗೆ ಹೆಣ್ಣು ಗಂಡು ನಡೆಯುತ್ತಿರಲಿಲ್ಲ. ಕೇಳಿದರೆ ಒಬ್ಬರಿಗೊಬ್ಬರು “ಅವರಿಗಿಂತ ನಾವೇ ಮೇಲು” ಎಂದು ಹೇಳಿಕೊಳ್ಳುತ್ತಾರೆ. ಈ ಬುಡಕಟ್ಟಿನ ಬೆಡಗುಗಳನ್ನು ಎಚ್.ವಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಐಯ್ಯರ್ ಗಮನಿಸಿದ್ದಾರೆ.[9] ಅಂತೆಯೇ ಎಮ್.ಕೆನಡಿ[10] ಇ. ಥರ‍್ಸ್‌ಟನ್[11] ಆರ್.ಇ.ಎಂಥೋವನ್[12] ಅವರೂ, ಇನ್ನೂ ಅನೇಕ ವಿದ್ವಾಂಸರು ಹಲಕೆಲವು ವ್ಯತ್ಯಾಸಗಳೊಂದಿಗೆ ದಾಖಲಿಸಿದ್ದಾರೆ. ಪಟ್ಟಾಡಿಗಳಿಗೆ “ಕಕ್ಕೆ” ಕಾವಾಡಿಗಳಿಗೆ “ಬೇವು” ಪವಿತ್ರ ಎಂದು ಎಚ್.ವಿ.ನಂಜುಂಡಯ್ಯ ಅವರು ಹೇಳುತ್ತಾರೆ. ದ್ರಾವಿಡ ಮೂಲದ ಈ ಜನರಿಗೆ ಮರಗಿಡಗಳನ್ನು ಪೂಜಿಸುವುದು ಹೊಸದಲ್ಲವಾದ್ದರಿಂದ ಈ ಜನರಿಗೆ ಕಕ್ಕೆ ಮತ್ತು ಬೇವು ಪವಿತ್ರವೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ಈ ಗಿಡಗಳು ಕುಲಪದ್ಧತಿಯಲ್ಲಿ ಪೂಜೆಗೊಳಪಡುವುದಿಲ್ಲ.

ಜಾನಪದ ವಿಶ್ವಕೋಶದಲ್ಲಿ ಮೈನ್ ವಾರಿಂಗ್ ಅವರು ಬೆಡಗುಗಳ ಬಗೆಗೆ ಹೇಳಿದ್ದಾರೆ. ಅವುಗಳಲ್ಲಿ “1) ಸಂಕೈ, ಸಂಪತಿ, ಸಾತುಪಡಿ “2) ಕಾವಡಿ ಅಥವಾ ಗಜ್ಜಲ 3) ದೇವರಕೊಂಡ, ಮಿಂಡ್ರಕುಟ್ಟಿ ಅಥವಾ ಮಿನಪಡಿ. ಮೊದಲ ಎರಡು ವರ್ಗದವರು ಶುದ್ಧ ಕೊರಮರು. ಅಂದರೆ ಕೊರವರ ಜಾತಿಯಲ್ಲಿ ನ್ಯಾಯಬದ್ದವಾಗಿ ವಿವಾಹವಾದವರಲ್ಲಿ ಹುಟ್ಟಿದವರು. ಮೂರನೆಯ ವರ್ಗದವರು ಮಿಶ್ರ ಮದುವೆಯಿಂದ ಜನಿಸಿದವರು.”[13] ಎನ್ನುವಲ್ಲಿ ಸಂಕೈ, ಸಂಪತಿ, ಗಜ್ಜಲ ಎನ್ನುವ ಹೊಸ ರೂಪಗಳು ಕಂಡುಬಂದರೂ ಸಾತುಪಡಿ, ಕಾವಡಿ, ಮಿಂಡ್ರಕುಟ್ಟಿ, ಮಿನಪಡಿ ಸ್ವಲ್ಪ ವ್ಯತ್ಯಾಸದೊಂದಿಗೆ ದಕ್ಷಿಣ ಕರ್ನಾಟಕದಲ್ಲಿ ಕೊರಮ ಬುಡಕಟ್ಟಿನಲ್ಲಿ ಪ್ರಚಲಿತವಿದೆ.

ಬೆಡಗಿನ ಹೆಸರುಗಳು ಕಚ್ಚಾ ತಮಿಳು ರೂಪವಾದ ತಮ್ಮ ಕುಳವ ಭಾಷೆಯವು. ಆ ಹೆಸರಿನ ಪದಗಳಿಗೆ ಎಚ್.ವಿ.ನಂಜುಂಡಯ್ಯ ಅವರು ಅರ್ಥವನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. “It is stated that satpadi are so called because they adorn their God with flowers and jewels, this process being in Tamil styled Satpadi, which is equivalent to Samarpane in Sanskrit. Kavadi means a carrying a pole, and the people of this division are said to have carried their offering to their God. Suspended to a pole at birth ends. The Menpadi Division sing praises of their God before the idol; and the Mendragutti division offer shoes to the idol ಎಂಬ ವಿವರಗಳನ್ನು ದಾಖಲಿಸುವುದರ ಜೊತೆಗೆ ಉಪ್ಪು ಕೊರವರ ಉಪ ಬೆಡಗುಗಳನ್ನು ಹೇಳಿದ್ದಾರೆ. ಅವುಗಳೆಂದರೆ.

Amgojala lotus
Avula cows
Bandi Cart
Dasari Vishnava Mendicant
Gaggal Small bell
Kampa bush of thorms
Kanaga (Pongamia glamera)
Katari dagger[14]
Mogill (Pandanus fascicularis)
Pulu flowers
Ragala Ragi, grain
Samudrala Sea
Suka Star
Thoka (tail)
Uyyala Swing
Venkagagiri a town

ಎಂದು ಇ. ಥರ‍್ಸಟನ್ ಅವರು ದಾಖಲಿಸಿರುವ ಅಂಶವನ್ನೇ ಹೇಳಿದ್ದಾರೆ. ಆ ಜನರನ್ನು ಗುರುತಿಸುವ ಉಪಗೋತ್ರಗಳು ಎಂದಿದ್ದಾರೆ. ಇವು ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ಹಾಸನ ಮುಂತಾದ ಜಿಲ್ಲೆಗಳಲ್ಲಿ ರೂಢಿಯಲಿಲ್ಲ. ಈ ಮೇಲೆ ಹೇಳಿದ ಭಿನ್ನ ಗೋತ್ರಗಳು ಕಾಣಿಸದಿದ್ದರೂ ಮುಖ್ಯವಾಗಿ ಕಾವಾಡಿ, ಶ್ಯಾತವಾಡಿ, ಮ್ಯಾನಪಾಡಿ, ಮತ್ತು ಮ್ಯಾನ್ರಗುತ್ತಿ ಎಂಬ ಗೋತ್ರಗಳು ಬಳಕೆಯಲ್ಲಿವೆ.

ಮಿಕಾಯಿಲ್ ಕೆನಡಿ ಅವರು ಕೊರವರ ಆರು ಬಗೆಯ ವಿವಿಧ ಗುಂಪುಗಳನ್ನು ಹೇಳುತ್ತಾ “Each sub division is again divided four clans or goths, namely 1) Satapadi, 2) Melpadi, 3) Kavadi, 4) Mendra Gutti”[15] ಎಂಬ ಬೆಡಗುಗಳನ್ನು ದಾಖಲಿಸಿದ್ದಾರೆ. ಕೊರಮ ಬುಡಕಟ್ಟಿನವರು ಬೊಂಬಾಯಿ ಪ್ರಾಂತದವರಾಗಲಿ, ತಮಿಳು ನಾಡಿನವರಾಗಲಿ, ಕರ್ನಾಟಕದಲ್ಲಿರುವವರಾಗಲಿ ಇವರೆಲ್ಲವಲ್ಲಿ ಬೆಡಗುಗಳು ಮಾತ್ರ ಒಂದೇ ಆಗಿವೆ. ಅವರೆಲ್ಲರೂ ಮೂಲದಲ್ಲಿ ಒಂದೇ ಎಂಬುದನ್ನು ಇವು ಸೂಚಿಸುತ್ತವೆ.

ಸಾತುಪಾಡಿಗಳು ಉಡುಗೆ ತೊಡುಗೆಗಳಿಂದ ದೇವರನ್ನು ಅಲಂಕರಿಸುವುದಾಗಲಿ, ಕಾವಾಡಿಗಳು ದೇವರ ನೈವೇದ್ಯವನ್ನು ಅಡ್ಡೆಯಲ್ಲಿ ದೇವಸ್ಥಾನಕ್ಕೆ ಹೊತ್ತುಕೊಂಡು ಹೋಗಿ ಅರ್ಪಿಸುವುದಾಗಲಿ, ಮಾನಪಾಡಿಗಳು ಪೂಜಾ ಸಮಯದಲ್ಲಿ ದೇವರನ್ನು ಸ್ತುತಿಸುವುದಾಗಲಿ, ಮಂಡ್ರೆಗುಟ್ಟಿಗಳು ದೇವರಿಗೆ ಚಪ್ಪಲಿಗಳನ್ನು ಅರ್ಪಿಸುವುದಾಗಲಿ ದಕ್ಷಿಣ ಕರ್ನಾಟಕದಲ್ಲಿ ಕಂಡುಬರುವುದಿಲ್ಲ. ಆದರೆ ಪೂಜಾ ಸಮಯದಲ್ಲಿ ಶಹನಾಯಿ ಊದುವ ಕೊರಮರು ಇದ್ದಾರೆ. ಅರಸೀಕೆರೆ ತಾಲೂಕು ಕ್ಯಾತನಕೆರೆಯ ರಂಗಪ್ಪ ಎನ್ನುವವರು ಬೆಡಗಿನ ಹೆಸರುಗಳ ಅರ್ಥದ ಬಗೆಗೆ “ಕಾವಾಡಿ ಎಂಬುದು ಕೊರಮ ಬುಡಕಟ್ಟಿನ ಮೂಲ, ಶ್ಯಾತವಾಡಿ ದೇವರನ್ನು ಅಲಂಕರಿಸುವವರು. ಮ್ಯಾಂಡ್ರಗುಟ್ಟಿ ದೇವರ ಪೂಜೆ ಮಾಡುವವರು, ಮ್ಯಾನಪಾಡಿಗಳು ಮೆರವಣಿಗೆಯಲ್ಲಿ ದೇವರನ್ನು ಹೊರುವವರು ಎಂದು ಹಿರಿಯರು ಹೇಳುತ್ತಿದ್ದುದನ್ನು ಕೇಳಿದ ನೆನಪಿದೆ” ಎಂದು ಹೇಳಿದರು. ಚಪ್ಪಲಿಗಳನ್ನು ದೇವಸ್ಥಾನಕ್ಕೆ ಅರ್ಪಿಸಿದ ಬಗೆಗೆ ಮಾಹಿತಿ ಇಲ್ಲ. “ಮಿಂಡ್ರಗುಟ್ಟಿ ಎಂಬುದು ಮಿನ್ರಕುಟ್ಟಿ ಎಂಬುದರ ಅಶುದ್ಧರೂಪ. ಒಂದು ಜೊತೆ ಚಪ್ಪಲಿಗಳನ್ನು ಹೊಲಿದು ದೇವಸ್ಥಾನಕ್ಕೆ ಅರ್ಪಿಸುವರು. ಈಗಲೂ ತಿರುಪತಿ ಮುಂತಾದ ಕ್ಷೇತ್ರಗಳಲ್ಲಿ ಈ ಸಂಪ್ರದಾಯ ರೂಢಿಯಲ್ಲಿ ಇದೆ.”[16] ಆದರೆ ದಕ್ಷಿಣ ಕರ್ನಾಟಕದಲ್ಲಿ ಈ ಪದ್ಧತಿ ಕಂಡು ಬರುವುದಿಲ್ಲ. ಅಲ್ಲದೆ ಪೋತು, ಪೆಂಟ ಎಂಬ ಹೆಸರುಗಳು ಕೇಳುವುದಿಲ್ಲ.

ಶಿವಮೊಗ್ಗದ ಗೋಪಾಳದ ಕೊರಮರ ಸಾಗರ-ಸೊರಬದ ಕಡೆಯ ಕೊರಮರನ್ನು “ದೇಶ ಭಾಗದವರು” ಎನ್ನುತ್ತಾರೆ. ಇವರಲ್ಲಿಯೂ ಬೆಡಗುಗಳು ಬದಲಾಗಿಲ್ಲ. ಗೋಪಾಳದವರು ಕೊರಮರನ್ನು ಐದು ಗುಂಪುಗಳಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಅವುಗಳೆಂದರೆ 1) ತೆವಟ ಕುಳುವರು, 2) ಬದ್ದಲ್ ಬಾಟಾವಿ, 3) ಶೀರ್ ನಾಟವು, 4) ಕೋತಿಕುಳುವರು, 5) ಪಾಮಲ ಕುಳುವರು ಸಗೋತ್ರದಲ್ಲಿ ಮದುವೆಯಾಗಿ ಗೋತ್ರ ಕಳೆದುಕೊಂಡು ಮೂರು ಕುಲದಲ್ಲಿ ಸೇರಿದರೆ ಉಳಿದ ಗೋತ್ರದ ಜನ ಇವರಿಗೆ ಹೆಣ್ಣು ಕೊಟ್ಟು ತರುತ್ತಿರಲಿಲ್ಲ. ಅಂಥವರಿಗೆ ಮತ್ತೊಂದು ಮೂರು ಕುಲದವರೇ ಹೆಣ್ಣುಕೊಟ್ಟು ತರಬೇಕು. ರಕ್ತಶುದ್ಧತೆಯನ್ನು ಕಾಯ್ದುಕೊಳ್ಳುವಲ್ಲಿ ಮೊದಲಿನಿಂದಲೂ ಈ ಬುಡಕಟ್ಟು ಕಟ್ಟುನಿಟ್ಟಾದ ಕ್ರಮಗಳನ್ನು ಅನುಸರಿಸಿಕೊಂಡು ಬಂದಿದೆ. ಕಾವಾಡಿಗಳು ಶ್ಯಾತಪಾಡಿ ಬೆಡಗಿನವರ ಹೆಣ್ಣನ್ನು ತಂದರೆ ಶ್ಯಾತಪಾಡಿ, ಕಾವಾಡಿಗಳ ಹೆಣ್ಣನ್ನು ತರುತ್ತಾರೆ. ಮ್ಯಾನಪಾಡಿ, ಮ್ಯಾನ್ರಗುಟ್ಟಿ ಬೆಡಗಿನಲ್ಲಿಯೂ ಹಾಗೆಯೇ. ಆದರೆ ಇತ್ತೀಚೆಗೆ ಸಗೋತ್ರದಲ್ಲಿ ಮದುವೆಗಳಾಗದಿದ್ದರೂ ನಾಲ್ಕು ಗೋತ್ರಗಳಲ್ಲಿ ಒಂದು ಗೋತ್ರದವರು ಇನ್ನೊಂದು ವಿರುದ್ಧ ಗೋತ್ರದಲ್ಲಿ ಸಂಬಂಧ ಬೆಳೆಸುವುದು ಕಂಡುಬರುತ್ತದೆ.

ಕೊರಮ ಬುಡಕಟ್ಟಿನವರು ಹಿಂದೆ ಐದು ದಿನಗಳವರೆಗೆ ಅದ್ಧೂರಿಯಿಂದ ಮದುವೆ ಮಾಡುತ್ತಿದ್ದರಂತೆ. ಐದು ದಿನಗಳೂ ಶಾಸ್ತ್ರ ನಡೆಯುತ್ತಿದ್ದವು. ಬಂಧುಗಳು, ಕುಲಸ್ಥರು ಒಂದು ಕಡೆ ಸೇರಿ ಹೆಂಡ, ಖಂಡಗಳ ಸಮೃದ್ಧಿಯೊಂದಿಗೆ ಅದ್ಧೂರಿಯಾಗಿ ಮದುವೆ ಮಾಡುತ್ತಿದ್ದರು. ಕುಡಿದಾಗ ಸಣ್ಣಪುಟ್ಟ ಕಾರಣಗಳಿಗೂ ಜಗಳ ಮಾಡುವುದು, ಹೊಡೆದಾಡುವುದು, ಸಾಮಾನ್ಯವೇ ಆಗಿತ್ತಂತೆ. ಧಾರೆಗೆ ನಿರ್ದಿಷ್ಟವಾದ ವಾರವೇ ಆಗಬೇಕೆಂಬ ನಿಯಮವೇನೂ ಕಂಡು ಬರುವುದಿಲ್ಲ. ಮೊದಲನೆಯ ದಿನ ಮದುವಣಿಗೆ ಶಾಸ್ತ್ರ ಪ್ರಾರಂಭವಾದರೆ ಮಾರನೆಯ ದಿನವೂ ಅರಿಷಿಣ ಎಣ್ಣೆ ಹಚ್ಚುವ ಶಾಸ್ತ್ರ ಮಾಡುತ್ತಿದ್ದರಂತೆ. ಮೂರನೆಯ ದಿನ ಧಾರೆ, ನಾಲ್ಕನೆಯ ದಿನ ನಾಗೋಳಿ, ಐದನೆಯ ದಿನ ಹೆಣ್ಣು ಕಳಿಸುವ ಶಾಸ್ತ್ರ ಇದರೊಂದಿಗೆ ಮದುವೆ ಮುಗಿಯುತ್ತಿತ್ತು.

ಮದುವೆ ಚಪ್ಪರ:

ಮದುವೆಯಲ್ಲಿ ಮೊದಲು ಚಪ್ಪರ ಹಾಕುತ್ತಾರೆ. ಚಪ್ಪರಗಳನ್ನು ಗಂಡು ಹೆಣ್ಣಿನ ಮನೆಗಳ ಮುಂದೆ ಹಾಕುತ್ತಾರೆ. ಐದು ಇಲ್ಲವೆ ಒಂಭತ್ತು ಅಥವಾ ಬೆಸ ಸಂಖ್ಯೆಗಳ ಕಂಭಗಳನ್ನು ನೆಡುತ್ತಾರೆ. ಐದು ಕಂಭಗಳ ಚಪ್ಪರದಲ್ಲಿ ನಾಲ್ಕು ಕಂಭಗಳನ್ನು ಚಚೌಕವಾಗಿ ನೆಟ್ಟು ಐದನೆಯದನ್ನು ಅವುಗಳ ಮಧ್ಯೆ ನೆಡುತ್ತಾರೆ. ಇದನ್ನು ಹಾಲುಗಂಭವೆಂದು ಕರೆಯುತ್ತಾರೆ. ಅದೇ ರೀತಿ ಒಂಭತ್ತು ಕಂಭಗಳ ಚಪ್ಪರವನ್ನು ಹಾಕುತ್ತಾರೆ. ಹಾಲುಗಂಭದ ಮುಂದೆಯೇ ಧಾರೆ ಮತ್ತು ಅನೇಕ ಶಾಸ್ತ್ರಗಳು ನಡೆಯುತ್ತವೆ. ಹಿಂದೆ ಈ ಬುಡಕಟ್ಟು ಮದುವೆಗಳಿಗೆ ಮುಖ್ಯವಾಗಿ ಬಿಳಿಛತ್ರಿ, ಬಿಳಿ ಕುದುರೆ, ಮತ್ತು ಮೇಲ್ಕಟ್ಟನ್ನು ತರಿಸುತ್ತಿದ್ದರಂತೆ. ಈಗ ಬಿಳಿ ಕುದುರೆ ಇಲ್ಲದಿದ್ದರೂ ಛತ್ರಿಗೆ ಬಿಳಿ ಬಟ್ಟೆ ಹೊದಿಸಿ ಬಿಳಿ ಛತ್ರಿಯಾಗಿ ಉಪಯೋಗಿಸುತ್ತಾರೆ. ಚಪ್ಪರಕ್ಕೆ ಹಸಿರು ತೆಂಗಿನ ಗರಿ, ಮಾವಿನ ಸೊಪ್ಪನ್ನು ಕಟ್ಟಿ ಅಲಂಕರಿಸಿ ಮೇಲ್ಕಟ್ಟನ್ನು ಚಪ್ಪರದ ಸುತ್ತಲೂ ಮೇಲ್ಭಾಗಕ್ಕೆ ಕಟ್ಟುತ್ತಾರೆ. ಈ ಮೇಲ್ಕಟ್ಟಿನ ಬಟ್ಟೆಯನ್ನು ಅಗಸರಿಂದ ತರುತ್ತಾರೆ.

ಹಿಂದೆ ಹೆಣ್ಣಿಗೊಂದು, ಗಂಡಿಗೊಂದು ಗುಡಿಸಲು ಹಾಕಿ ಅರಿಷಿಣ ಎಣ್ಣೆ ಹಚ್ಚುವ ಶಾಸ್ತ್ರ ಮಾಡುತ್ತಿದ್ದರಂತೆ. ಆ ಎರಡು ಗುಡಿಸಲುಗಳ ನಡುವೆಯೇ ಧಾರೆ ಶಾಸ್ತ್ರ ಮಾಡುತ್ತಿದ್ದರಂತೆ. ಎದುರುಬದಿರಾಗಿ ಹಾಕಿದ ಈ ಗುಡಿಸಲುಗಳಲ್ಲಿ ಗಂಡಿನ ಬಾಗಿಲು ಪೂರ್ವಕ್ಕಿರುತ್ತಿತ್ತು ಎಂದು ಹಿರಿಯರು ಹೇಳುತ್ತಿದ್ದರು ಎನ್ನುತ್ತಾರೆ. ಈಗ ಗಂಡು-ಹೆಣ್ಣು ಒಂದೇ ಊರಿನವರಾಗಿದ್ದರೆ ಅವರವರ ಮನೆಯ ಮುಂದೆ ಚಪ್ಪರ ಹಾಕಿ ಶಾಸ್ತ್ರ ಮಾಡುತ್ತಾರೆ. ಧಾರೆ ಹೆಣ್ಣಿನ ಮನೆಯ ಚಪ್ಪರದಲ್ಲಿಯೇ ನಡೆಯುತ್ತದೆ. ಗಂಡಿನವರು ಹೆಣ್ಣಿನೂರಿಗೆ ಬರುವಾಗಲೂ ಮನೆಯ ಮುಂದೆ ಚಪ್ಪರ ಹಾಕುತ್ತಾರೆ. ಹೆಣ್ಣಿನೂರಿಗೆ ಬಂದಾಗ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ತಮಗಾಗಿ ಬಿಟ್ಟುಕೊಟ್ಟ ಬಿಡದಿ ಮನೆಗೆ ಬರುತ್ತಾರೆ. ಅದಕ್ಕಾಗಿಯೇ ಹಿಂದೆ ಪ್ರತ್ಯೇಕ ಗುಡಿಸಲುಗಳನ್ನು ಹಾಕುತ್ತಿದ್ದರಂತೆ. ಈ ಬಗೆಗೆ ಎಚ್.ಡಿ.ನಂಜುಂಡಯ್ಯ ಅವರು “On the day fixed for the marriage, two fresh huts are erected, with their doors opening the east, one being for the bride, and the other for the bride groom”.[17] ಈ ಬಗೆಗೆ ಇ. ಥರ‍್ಸ್ಟನ್ ಅವರಲ್ಲಿಯೂ ವಿವರ ಸಿಕ್ಕುತ್ತದೆ. ಆದರೆ ಇತ್ತೀಚೆಗೆ ಇಂಥ ಪದ್ಧತಿಗಳೆಲ್ಲ ನಿಂತು ಹೋಗಿ, ತಾವು ವಾಸಿಸುವ ಪ್ರದೇಶದ ಜನರ ಆಚರಣೆಯನ್ನು ಕಾಲಕ್ರಮದಲ್ಲಿ ರೂಢಿಸಿಕೊಂಡಿದ್ದಾರೆ. ಆದರೂ ಹಳ್ಳಿಗಳಲ್ಲಿ ವಾಸಿಸುವವರು ತಮ್ಮ ಮೂಲದ ಕೆಲವು ಆಚರಣೆಗಳನ್ನು ಬಿಟ್ಟುಕೊಟ್ಟಿಲ್ಲ.

ಮದುವಣಿಗ ಶಾಸ್ತ್ರ:

ಮದುವೆಯ ಗಂಡು, ಹೆಣ್ಣನ್ನು ಮದುವಣಿಗ ಮತ್ತು ಮದುವಣಗಿತ್ತಿಯನ್ನಾಗಿಸುವ ದಿನ ಇದು. ಆ ದಿನ ಗಂಡಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಅಥವಾ ಮಡಿಬಟ್ಟೆ ತೊಡಿಸಿ ಬಂಧುಗಳ ಮತ್ತು ಮಿತ್ರರ ಜೊತೆಯಲ್ಲಿ ಪೂಜೆಗೆ ದೇವಸ್ಥಾನಕ್ಕೆ ಕಳಿಸಿ ಕೊಡುತ್ತಾರೆ. ಆ ದಿನ ಸಂಜೆಯೇ ಮನೆಯಲ್ಲಿ ಕಳಸವನ್ನು ಪೂಜಿಸುತ್ತಾರೆ. ಕಳಸದ ತಟ್ಟೆಯಲ್ಲಿ ಒಂದು ಕೊಬರಿ ಬಟ್ಟಲು ಸಣ್ಣದಾದ ಒಂದು ಕನ್ನಡಿ, ಮೂರಚ್ಚು ಬೆಲ್ಲ, ಅರಿಷಿಣ ಕೊನೆ, ಸೀಗೆಕಾಯಿ, ಉತ್ತುತ್ತಿ ಹಣ್ಣು ಇಟ್ಟಿರುತ್ತಾರೆ. ಕಳಸಕ್ಕೆ ಹೂ ಹಾಕಿ ಸಿಂಗರಿಸಿರುತ್ತಾರೆ. ಕಳಸದ ಚಂಬಿನ ಬಾಯಿಗೆ ಕಂಕಣ ಕಟ್ಟುತ್ತಾರೆ.[1]       E. Thurston Castes and Tribes of Southern India, p-476

[2]        H.V. Nanjundaiah and L.K. Anantha Krishna lyer, The Mysore Tribes and Castes, Vol-III, p-593

[3]      R.E. Enthovan The of Tribes and  castes  of Bombay Vol.-II, p-268

[4]      ಅದೇ, ಪು-267

[5]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-596

[6]      E. Thurston Castes and Tribes of Southern India, Vol.-III-K, p-478

[7]      R.E. Enthovan The of Tribes and  castes  of Bombay, Vol.-II, p-268

[8]        Madras Census Report 1901 Quoted E. Thurston Ethnographic Notes on Southern   India Part-I, p-68

[9]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-588

[10]       Michael Kennedy, Criminal Classes in the Bombay Presidency, pp-63-64

[11]      E. Thurston The Castes and Tribes of Southern India Vol.-III-K, p-451

[12]      R.E. Enthovan The of Tribes and  castes  of Bombay Vol.-II, p-267

[13]      ಕನ್ನಡ ಜಾನಪದ ವಿಶ್ವಕೋಶ, ಪು-526

[14]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-589

[15]      Michael Kennedy, Criminal Classes in the Bombay Presidency, p-63

[16]      ಕನ್ನಡ ಜಾನಪದ ವಿಶ್ವಕೋಶ, ಪು-527

[17]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-592