ಕಂಕಣ:

ಹಿಂದೆ ಕಳಸದ ದಾರವನ್ನು ಬಿಳಿ ಮತ್ತು ಕರಿಯ ಕಂಬಳಿಯ ದಾರದಿಂದ ಮಾಡುತ್ತಿದ್ದರಂತೆ. ಈಗ ಅರಿಷಿಣ ದಾರಕ್ಕೆ ವೀಳ್ಯದೆಲೆಯನ್ನು ಸುರಳಿ ಸುತ್ತಿ ಕಟ್ಟಿ ಕಂಕಣ ಮಾಡುತ್ತಾರೆ. ಗಂಡಿಗೆ ಕಟ್ಟುವ ಕಂಕಣಕ್ಕೆ ಒಂದು ಅರಿಷಿಣದ ಕೊನೆ, ಒಂದು ತಾಮ್ರದ ಉಂಗುರವನ್ನು ಕಟ್ಟಿ, ಬಲಗೈಗೆ ಕಟ್ಟುತ್ತಾರೆ. ಕಳಸ ಪೂಜಿಸಿದ ಮೇಲೆ ಕಳಸ-ಕನ್ನಡಿ ಮತ್ತು ಮದುಮಗನ ಜೊತೆಯಲ್ಲಿ ಗಂಗೆ ಪೂಜೆಗೆ ಹೊರಡುತ್ತಾರೆ. ಹೀಗೆ ಹೋಗುವಾಗ ಕಳಸಕ್ಕೆ ಬಿಳಿ ಛತ್ರಿ ಹಿಡಿದಿರುತ್ತಾರೆ. ಗಂಡಿನ ಕೈಗೆ ಕೆಂಪು ವಸ್ತ್ರ ಸುತ್ತಿದ, ತುದಿಗೆ ನಿಂಬೆಹಣ್ಣು ಸಿಕ್ಕಿಸಿದ ಕಠಾರಿಯೊಂದನ್ನು ಕೊಡುತ್ತಾರೆ. ಇದನ್ನು ಕೂಡ ಕಳಸದ ಜೊತೆಯಲ್ಲಿಯೇ ಪೂಜಿಸಿರುತ್ತಾರೆ. ಈ ಕಠಾರಿ ಮದುವೆ ಮುಗಿಯುವವರೆಗೂ ಮದುಮಗನ ಕೈಯಲ್ಲಿ ಹೊರಗೆ ಹೋಗುವಾಗ ಇದ್ದೇ ಇರುತ್ತದೆ.

ಕಳಸ ಹೂಡಿ ಗಂಡಿನ ಕೈಗೆ ಕಂಕಣ ಕಟ್ಟಿದ ಮೇಲೆ ಆತ ಮದುಮಗನಾಗುತ್ತಾನೆ. ಆ ದಿನ ರಾತ್ರಿ ಮನೆಯಲ್ಲಿ ಅಕ್ಕಿಯಿಂದ “ಹಸೆ” ಬರೆದು ಹಸೆಯ ಮೇಲೆ ಗಂಡನ್ನು ಕೂರಿಸಿ ಮೂರು ಜನ ಅಥವಾ ಐದು ಜನ ಮುತ್ತೈದೆಯರು ಅರಿಷಿಣ ಎಣ್ಣೆ ಹಚ್ಚುತ್ತಾರೆ. ನೆಲದ ಮೇಲೆ ಕಂಬಳಿ ಹಾಸಿ ಅದರ ಮೇಲೆ ಅರಿಷಿಣ ಬೆರೆಸಿದ ಅಕ್ಕಿ ಕಾಳಿನಿಂದ ಚಿತ್ರ ಬರೆದು ಅದರಮೇಲೆ ಒಂದು ಮಣೆ ಹಾಕಿ, ಆ ಹಸೆಯ ಮಣೆಯ ಮೇಲೆ ಗಂಡನ್ನು ಕೂರಿಸಿ ಅರಿಷಿಣ ಎಣ್ಣೆ ಹಚ್ಚುತ್ತಾರೆ. ಎಣ್ಣೆ ಹಚ್ಚಿದ ಮುತ್ತೈದೆಯರು ಎರಡು ಕೈಗಳಲ್ಲಿಯೂ ಅಕ್ಷತೆ ಕಾಳನ್ನು ತೆಗೆದುಕೊಂಡು, ಪದ್ಮಾಸನದಲ್ಲಿ ಮಣೆಯ ಮೇಲೆ ಕುಳಿತ ಗಂಡಿನ ಮಂಡಿಗಳನ್ನು, ಹೆಗಲುಗಳನ್ನು ಮುಟ್ಟುತ್ತಾ ಕೈಗಳ ಅಕ್ಕಿಯನ್ನು ಮೂರು ಸಾರಿ ಅವನ ತಲೆಯ ಮೇಲೆ ಹಾಕುತ್ತಾರೆ. ಈ ಶಾಸ್ತ್ರ ನಡೆಯುತ್ತಿರುವಾಗ ಅಲ್ಲಿ ಸೇರಿದ ಹೆಂಗಸರು ಸೋಬಾನ ಪದಗಳನ್ನು ಹೇಳುತ್ತಿರುತ್ತಾರೆ. ಗಂಡು ಹೆಣ್ಣು ಒಂದೇ ಊರಿನವರಾದರೆ ಗಂಡಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದಿಲ್ಲ. ಬೇರೆ ಊರಿಗೆ ಹೋಗುವುದಾದರೆ ಸ್ನಾನ ಮಾಡಿಸಿ ಕರೆದುಕೊಂಡು ಹೋಗುತ್ತಾರೆ.

ಮದುವಳಗಿತ್ತಿ ಶಾಸ್ತ್ರ:

ಗಂಡಿನ ಮನೆಯಲ್ಲಿ ಮದುವಣಿಗ ಶಾಸ್ತ್ರ ನಡೆದಂತೆ ಅದೇ ದಿನ ಹೆಣ್ಣಿನ ಮನೆಯಲ್ಲಿ ಮದುವಣಗಿತ್ತಿ ಶಾಸ್ತ್ರ ನಡೆಯುತ್ತದೆ. ಹೆಣ್ಣಿಗೆ ಸ್ನಾನ ಮಾಡಿಸಿ ಮನೆಗೆ ಬಳೆಗಾರನನ್ನು ಕರೆಸಿ ಮಲ್ಲಾರಕ್ಕೆ ಪೂಜೆ ಮಾಡಿಸಿ ಹೊಸ ಬಳೆ ತೊಡಿಸುತ್ತಾರೆ. ಮೊದಲು ಹೆಣ್ಣಿಗೆ ನಂತರ ಐದು ಜನ ಮುತ್ತೈದೆಯರಿಗೆ ಬಳೆ ತೊಡಿಸುತ್ತಾರೆ. ಗಂಡಿಗೆ ಎರಡು ಬಾರಿ ಹಸೆ ಹಚ್ಚಿದರೆ, ಅರಿಷಿಣ ಎಣ್ಣೆ ಹಚ್ಚಿದರೆ, ಹೆಣ್ಣಿಗೆ ಒಂದು ಸಾರಿ ಹಸೆ ಹಚ್ಚಿ ಅರಿಷಿಣ ಹಚ್ಚುತ್ತಾರೆ. ಈ ಎಣ್ಣೆ ಹಚ್ಚುವಾಗ ಹೆಣ್ಣಿಗೂ, ಗಂಡಿಗೂ ಬಿಳಿ ಬಟ್ಟೆಯನ್ನು ಉಡಿಸಿರುತ್ತಾರೆ. ಈ ಶಾಸ್ತ್ರಕ್ಕೆ ಹೊಸ ಬಟ್ಟೆಗಳೇ ಬೇಕೆಂಬ ನಿಯಮವೇನೂ ಇಲ್ಲ. ಹೆಣ್ಣಿನ ಮನೆಯಲ್ಲಿ ಈ ಶಾಸ್ತ್ರ ನಡೆಯುವಾಗ ಅಲ್ಲಿ ಸೇರಿದ್ದ ಹೆಣ್ಣು ಮಕ್ಕಳು ಸೋಬಾನ ಪದಗಳನ್ನು ಹೇಳುತ್ತಿರುತ್ತಾರೆ. ಈ ಅರಿಷಿಣ ಎಣ್ಣೆ ಹಚ್ಚಿದ ಮೇಲೆ ಗಂಡು, ಹೆಣ್ಣು, ದೇವರ ಸಮಾನ ಎಂಬ ನಂಬಿಕೆ ಈ ಜನರಲ್ಲಿದೆ. ಗಂಡು ಹೆಣ್ಣು ಹೀಗೆ ಹಸಿ ಮೈಯಲ್ಲಿರುವಾಗ ಒಬ್ಬೊಬ್ಬರನ್ನೆ ಹೊರಗೆ ಕಳಿಸುವುದಿಲ್ಲ. ಹುಣಸೇಮರದ ಕೆಳಗೆ ಹೋಗುವಂತಿಲ್ಲ. ಅಲ್ಲಿ ದೆವ್ವಗಳು ಇರುತ್ತವೆ ಎಂದು ನಂಬುತ್ತಾರೆ.

ಮಾರನೆಯ ದಿನವೂ ಅರಿಷಿಣ ಎಣ್ಣೆ ಹಚ್ಚುತ್ತಿದ್ದರಂತೆ. ಗಂಡು ಬೇರೆ ಊರಿನದ್ದಾದರೆ ಈ ದಿನ ಹೆಣ್ಣಿನೂರಿಗೆ ಬರುತ್ತದೆ. ಬಿಡದಿ ಮನೆಯಲ್ಲಿ ಗಂಡಿಗೆ ಆ ದಿನ ಅರಿಷಿಣ ಎಣ್ಣೆ ಹಚ್ಚುತ್ತಾರೆ. ಹೆಂಗಸರು ಸೋಬಾನ ಪದಗಳನ್ನು ಹೇಳುತ್ತಾರೆ. ಕೆಲವು ವೇಳೆ ಹೆಣ್ಣಿನ ಮನೆಯಲ್ಲಿಯೇ ಗಂಡಿಗೆ ಮೂರನೆಯ ಬಾರಿ ಅರಿಷಿಣ ಎಣ್ಣೆ ಹಚ್ಚುತ್ತಾರೆ. ಹೆಣ್ಣಿನವರು ಗಂಡಿನ ಕಡೆಯವರನ್ನು ವಾಲಗ ಉತ್ಸವದ ಮೇಲೆ ಬರಮಾಡಿಕೊಳ್ಳುತ್ತಾರೆ. ಅದೇ ದಿನ ಹೆಣ್ಣಿಗೂ ಒಂದು ಹಸಿ ಹಚ್ಚಿ ಅರಿಷಿಣ ಎಣ್ಣೆ ಹಚ್ಚುತ್ತಾರೆ. ಒಟ್ಟಿನಲ್ಲಿ ಗಂಡಿಗೆ ಮೂರು ಬಾರಿ, ಹೆಣ್ಣಿಗೆ ಎರಡು ಬಾರಿ ಎಣ್ಣೆ ಹಚ್ಚುತ್ತಾರೆ. ಗಂಡು ಬೇರೆಯ ಊರಿನಿಂದ ಬರುವಾಗ ಅವರ ಜೊತೆಯಲ್ಲಿ ಕಳಸವನ್ನು ತರುತ್ತಾರೆ. ಹಿಂದೆ ಅದೇ ದಿನ ಗಂಡಿನವರು ಹೆಣ್ಣಿಗೆ ಬಟ್ಟೆ; “ಬಿಚ್ಚೋಲೆ” (ಕಿವಿಗೆ ಸುರಳಿ ಸುತ್ತಿ ಇಟ್ಟುಕೊಳ್ಳುವ ತಾಳೆಯ ಗರಿ) ಮತ್ತು ಕರಿಮಣಿಗಳನ್ನು ಕೊಡುತ್ತಿದ್ದರಂತೆ. ಈಗಲೂ ಬಟ್ಟೆ, ಒಡವೆಗಳನ್ನು ಕೊಡುತ್ತಾರೆ. ಹಿಂದೆ ಹೆಣ್ಣಿಗೊಂದು ಗಂಡಿಗೊಂದು ಹಾಕಿ ಮದುವೆ ಮಾಡುತ್ತಿದ್ದ ಸಂದರ್ಭದಲ್ಲಿ ಅರಿಷಿಣ ಎಣ್ಣೆ ಹಚ್ಚುವಾಗ ಗಂಡಿಗೆ ಮೊದಲು ಹಚ್ಚಿ ಅದೇ ಮುತ್ತೈದೆಯರೇ ಹೆಣ್ಣಿನ ಗುಡಿಸಲಿಗೂ ಹೋಗಿ ಹೆಣ್ಣಿಗೂ ಹಚ್ಚುತ್ತಿದ್ದರಂತೆ. ಮದುವೆ ಮುಂತಾದ ಮಂಗಳ ಕಾರ್ಯಗಳಲ್ಲಿ ವಿಧವೆಯರು ಶಾಸ್ತ್ರಗಳಲ್ಲಿ ಭಾಗವಹಿಸುವಂತಿಲ್ಲ. ಇದು ಮೊದಲಿನಿಂದಲೂ ರೂಢಿಯಲ್ಲಿದೆಯಂತೆ.

ಧಾರೆ ಮುಹೂರ್ತ:

ಧಾರೆ ನಡೆಯುವುದು ಹೆಣ್ಣಿನ ಮನೆಯ ಚಪ್ಪರದಲ್ಲಿ ಹಿಂದೆ ಅದು ರಾತ್ರಿ ಸಮಯದಲ್ಲಿ ನಡೆಯುತ್ತಿತ್ತಂತೆ. ಧಾರೆಯ ದಿನವೂ ಗಂಗೆ ಪೂಜೆ ಮಾಡಿಕೊಂಡು ಗಂಗೆ ತರುತ್ತಾರೆ. ಗಂಗೆ ತರಲು ಹೋಗುವಾಗ ಜೊತೆಯಲ್ಲಿ ಗಂಡಿನ ಕಳಸವೂ ಹೋಗುತ್ತದೆ. ಜೊತೆಗೆ ವಾದ್ಯದವರೂ ಇರುತ್ತಾರೆ. ಗಂಗೆಯ ಹತ್ತಿರ (ಬಾವಿ ಅಥವಾ ಹೊಳೆ ಹೋಗಿ ತಂದ ಕಳಸವನ್ನು ಸಡಿಲಿಸಿ, ಹೊಸದಾಗಿ ಕಳಸವನ್ನು ಹೂಡುತ್ತಾರೆ. ಮೊದಲಿನ ಕಳಸದ ತಟ್ಟೆಯಲ್ಲಿದ್ದ ಕೊಬರಿ ಬಟ್ಟಲು, ಬೆಲ್ಲ, ಸಣ್ನ ಕನ್ನಡಿ ಮುಂತಾದ ಎಲ್ಲಾ ವಸ್ತುಗಳನ್ನು ಹೊಸ ಕಳಸದ ತಟ್ಟೆಗೆ ಬದಲಾಯಿಸುತ್ತಾರೆ. ಹೊಸ ಜೋಡಿಗಡಿಗೆಗಳಲ್ಲಿ ನೀರನ್ನು ತುಂಬಿಸಿ ಕಳಸದ ಜೊತೆಗೆ ಗಡಿಗೆಗಳನ್ನೂ ಪೂಜಿಸುತ್ತಾರೆ. ಈ ಗಡಿಗೆಗಳಲ್ಲಿ ಒಂದಕ್ಕೆ ಸುತ್ತ ಸುಣ್ಣದಿಂದ ಬೆರಳಿನಲ್ಲಿ ಚಿತ್ರ ಬರೆದಿರುತ್ತಾರೆ. ಈ ಗಡಿಗೆಯನ್ನು “ಅರಣಿ” (ಐರಣಿ) ಗಡಿಗೆ ಎನ್ನುತ್ತಾರೆ. ಮತ್ತೊಂದಕ್ಕೆ ಚಿತ್ರ ಬರೆಯುವುದಿಲ್ಲ. ಅದನ್ನು ಒತ್ತು ಗಡಿಗೆ ಎಂದು ಕರೆಯುತ್ತಾರೆ. ಒಂದು ಬಿಳಿಯ ಪಂಚೆಯನ್ನು ಎರಡು ತುದಿಯ ಕಡೆಯಿಂದಲೂ ಸುತ್ತಿ ಸಿಂಬೆ ಮಾಡಿ ನಡುವೆ ಕತ್ತರಿಸದಂತೆ ಒಬ್ಬ ಗಂಡಸು ಮತ್ತೊಬ್ಬಳು ಹೆಂಗಸಿನ ತಲೆಯ ಮೇಲಿಟ್ಟು ಹೊರಿಸಿಕೊಂಡು ಬರುತ್ತಾರೆ. ಹೀಗೆ ಬರುವಾಗ ಕಳಸ ಕನ್ನಡಿಯ ಜೊತೆಯಲ್ಲಿ ಆ ಮೊದಲೆ ತಂದು ಇಟ್ಟಿದ್ದ ಅತ್ತಿ ಕೊನೆಯನ್ನು ತರುತ್ತಾರೆ. ಅತ್ತಿ ಮರದ ಕೊನೆ ಅಥವಾ ಟೊಂಗೆಯನ್ನು ಗಂಡಿನ ಸೋದರಮಾವ ಧಾರೆಗೆ ಒಂದು ದಿನ ಮುಂಚೆಯೇ ಕಡಿದು ತಂದು ಗಂಗೆ ಪೂಜೆಗೆ ಹೋಗುವ ಬಾವಿಯಲ್ಲಿಯೋ, ಕೆರೆಯಲ್ಲಿಯೋ ಇಟ್ಟಿರುತ್ತಾರೆ. ಮತ್ತೆ ಕೆಲವರು ಹೆಣ್ಣಿನ ಕಡೆಯವರೇ ಅತ್ತಿಕೊನೆಯನ್ನು ತಂದು ಇಟ್ಟಿರುತ್ತಾರೆ ಎಂದು ಹೇಳಿದರು. ಆ ಅತ್ತಿಕೊನೆಯನ್ನು ಯಾರು ತಂದಿರುತ್ತಾರೋ ಅವರ ಕೈಯಲ್ಲಿಯೇ ಹಿಡಿಸಿಕೊಂಡು ಚಪ್ಪರಕ್ಕೆ ತರುತ್ತಾರೆ. ದಾರಿಯುದ್ದಕ್ಕೂ ಹೆಂಗಸರು ಸೋಬಾನ ಪದಗಳನ್ನು ಹೇಳುತ್ತಿರುತ್ತಾರೆ. ಮುಂದೆ ವಾದ್ಯದವರು ಇರುತ್ತಾರೆ. ಮೊದಲು ಕೊರಮ ಬುಡಕಟ್ಟಿನ ಮದುವೆಗಳಲ್ಲಿ ವಾದ್ಯದವರಿರುತ್ತಿರಲಿಲ್ಲವೆಂದು ಹಿರಿಯರು ಹೇಳುತ್ತಾರೆ. ಕಳಸಕ್ಕೆ “ತಳಿ” ಹಿಡಿದಿರುತ್ತಾರೆ. ತಳಿ ಅಂದರೆ ಬಿಳಿಯ ಛತ್ರಿ. ಹೀಗೆ ತಂದ ಜೋಡಿ ಗಡಿಗೆಗಳನ್ನು ಮದುವೆ ಚಪ್ಪರದ ನಡುವೆ ಇರುವ ಹಾಲುಗಂಭದ ಬಲ ಭಾಗಕ್ಕೆ ಅರಣಿ ಗಡಿಗೆಯನ್ನು, ಎಡಭಾಗಕ್ಕೆ ಒತ್ತು ಗಡಿಗೆಯನ್ನು ಪೂರ್ವ ದಿಕ್ಕಿಗೆ ಇದಿರಾಗಿ ಇಡುತ್ತಾರೆ. ಈ ಗಡಿಗೆಗಳ ನಡುವೆ ಕಬ್ಬಿಣದ ಹಾರೆಯೊಂದನ್ನು ನೆಟ್ಟು ಅತ್ತಿ ಕೊನೆಯನ್ನು ಅದಕ್ಕೆ ಕಟ್ಟುತ್ತಾರೆ. ಅತ್ತಿ ಕೊನೆಯನ್ನು “ಶಾಸು ಕಂಬು” (ಶಾಸ್ತ್ರ ಕಂಭ) ಎಂದು ಕರೆಯುತ್ತಾರೆ. ಹಾಲುಗಂಭ ಮತ್ತು ಅತ್ತಿಕೊನೆಗೆ ಬಿಳಿ ಬಟ್ಟೆ ಸುತ್ತಿರುತ್ತಾರೆ. ಅತ್ತಿಕೊನೆ ತಂದವರಿಗೆ ಕೊಬರಿ ಬೆಲ್ಲ ಕೊಡುತ್ತಾರೆ.

ಇ. ಥರ್ಸ್‌ಟನ್ ಅವರು ಕೊರವರು ಮದುವೆಯಲ್ಲಿ “ನಾವಲ ಮರದ ರಂಬೆ

[1] ತರುತ್ತಾರೆ ಎಂದು ಬರೆದಿದ್ದಾರೆ. ಮಿಕ್ಕೆಲ್ಲ ಆಚರಣೆ ದಕ್ಷಿಣ ಕರ್ನಾಟಕದಂತೆಯೇ ತೋರುತ್ತದೆ. ಅತ್ತಿಕೊನೆ ತರುವುದೇ ಸಾಮಾನ್ಯವಾಗಿ ಕಂಡುಬರುತ್ತದೆ. ಆರ್.ಇ.ಎಂಥೋವನ್ ಅವರು ಈ ಬಗೆಗೆ “Then a branch of the Khair or catechu tree is felled and dropped into the nearest well. At midnight the five married women, singing songs go to the well, and, after each has drawn a pot full of water, take the branch out of the well. The branch is then planted opposite the front dorr”[2] ಎಂಬ ಅಂಶವನ್ನು ದಾಖಲಿಸಿದ್ದಾರೆ. ಎಚ್.ವಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಐಯ್ಯರ್ ಅವರು “Early in the morning of the next day, the maternal uncle of either the bride or the bride groom who happens to be unmarried, outs a branch of a Nerale tree (Jamboland) and places it by a well, or a water course”[3] ಎಂದು ನೇರಲೆ ಮರದ ಟೊಂಗೆಯೊಂದನ್ನು ತರುವ ಬಗೆಗೆ ದಾಖಲಿಸಿದ್ದಾರೆ. ಮುಂದಿನ ಕ್ರಮಗಳೆಲ್ಲ ಒಂದೇ ರೀತಿಯಾಗಿವೆ. ಆದರೆ ದಕ್ಷಿಣ ಕರ್ನಾಟಕದಲ್ಲಿ ನೇರಳೆ ಮರದ ಟೊಂಗೆಯೊಂದನ್ನು ತರುವ ಬಗೆಗೆ ಯಾರೂ ಹೇಳುವುದಿಲ್ಲ.

ಹಿಂದೆ ರಾತ್ರಿ ಸಮಯದಲ್ಲಿ ಮದುವೆಗಳನ್ನು ಏಕೆ ಮಾಡುತ್ತಿದ್ದರು ಎಂದು ಕೇಳಿದರೆ, “ನಮ್ಮ ಮದುವೆಗಳನ್ನು ಬ್ರಾಹ್ಮಣರು ನೋಡಬಾರದೆಂದು ರಾತ್ರಿಯಲ್ಲಿ ಮದುವೆ ಮಾಡುತ್ತಿದ್ದುದಾಗಿ ಹಿರಿಯರು ಹೇಳುತ್ತಿದ್ದರು” ಎನ್ನುತ್ತಾರೆ. ಆದರೆ ಈಗ ಹೆಸರು ಬಲ ಮತ್ತು ಮುಹೂರ್ತವನ್ನು ಕೇಳಿ ನಿಶ್ಚಯಿಸಿಕೊಳ್ಳುತ್ತಾರೆ. ಈಗೆಲ್ಲ ರಾತ್ರಿ ಮದುವೆಗಳು ನಿಂತು ಹೋಗಿವೆ. ಧಾರೆಯನ್ನು ಬ್ರಾಹ್ಮಣರೇ ಮಾಡಿಸುತ್ತಾರೆ. ಅತ್ತಿಕೊನೆ ಸುಖ, ಶಾಂತಿ ಮತ್ತು ಸಮೃದ್ಧಿಯ ಸಂಕೇತವೆಂದು ನಂಬುತ್ತಾರೆ. ಗಂಗೆ ಪೂಜೆ ಮಾಡಿಕೊಂಡು ಕಳಸ-ಕನ್ನಡಿ ಸಮೇತ, ಅತ್ತಿಕೊನೆ, ಜೊಡಿ ಗಡಿಗೆಗಳನ್ನು ಹೊರಿಸಿಕೊಂಡು ಹೆಣ್ಣಿನ ಮನೆಯ ಮದುವೆ ಚಪ್ಪರಕ್ಕೆ ಬರುತ್ತಾರೆ. ಅಷ್ಟರಲ್ಲಿ ಹಸೆ ಬರೆದು ಧಾರೆಗೆ ಅಣಿ ಮಾಡಿರುತ್ತಾರೆ. ಅರಣಿ ಗಡಿಗೆ ಮತ್ತು ಒತ್ತು ಗಡಿಗೆಗಳನ್ನು ಇಳಿಸಿದ ಮೇಲೆ ಹೆಣ್ಣಿನ ಮನೆಯವರು ದೊಡ್ಡದಾಗಿ ಉರಿಯುವ ಒಂದು ಎಣ್ಣೆದೀಪವನ್ನು ತಂದು ಅರಿಣಿ ಗಡಿಗೆಯ ಮೇಲೆ ಇಡುತ್ತಾರೆ. ಇದನ್ನು “ತಾಯೊಳಹು” ಎನ್ನುತ್ತಾರೆ. ಬೊಗಸೆಯಾಕಾರದ ಮಣ್ಣಿನ ಮುಚ್ಚಳಕ್ಕೆ ಸ್ವಲ್ಪ ಅನ್ನವನ್ನು ಹಾಕಿ ಮುಚ್ಚಳದ ತುಂಬ ಹರಡಿ ಕೈ ಬೆರಳುಗಳಿಂದ ಒತ್ತಿ ಗಟ್ಟಿ ಮಾಡಿ ಅದರ ತುಂಬಾ ಮೂರು ತರದ ಎಣ್ಣೆಹಾಕಿ “ಕಕ್ಕಡ” ಅಂದರೆ ದಪ್ಪ ಬತ್ತಿ ಹಾಕಿ ಉರಿಸುತ್ತಾರೆ. ಈ ವೇಳೆಗೆ ಗಂಡನ್ನು ಅಲಂಕರಿಸಿಕೊಂಡು ಧಾರೆಗೆ ಕರೆತಂದಿರುತ್ತಾರೆ. ಆ ತಾಯೊಳಕನ್ನು ಇಟ್ಟವರು “ಸಭೆ ಸಂಪನ್ನರೆ ಮೇಲುಬಾಗದವರೇ, ಕುಲೋಸ್ಥರೆ, ಬಳಗೋಸ್ಥರೇ ತಾಯಿ ದೀಪವನ್ನು ಕಂಡಿರಾ” ಎಂದು ಕೇಳಿ ನಂತರ ಗಂಡನ್ನು ಕುರಿತು “ತಾಯಿ ದೀಪವನ್ನು ಕಂಡ್ಯೇನಪ್ಪ, ನಿನಗೆ ಸಂತೋಷವಾಯಿತೆ” ಎಂದು ಕೇಳುತ್ತಾರೆ. ಅಲ್ಲಿ ನೆರೆದವರು ಮತ್ತು ಗಂಡು “ಕಂಡೆವು, ಸಂತೋಷವಾಯಿತು” ಎನ್ನುತ್ತಾರೆ.

ತಾಯಿ ದೀಪದ ಬಗೆಗೆ ಆರ್.ಇ. ಎಂಥೋವನ್[4] ಅವರು ದಾಖಲಿಸಿದ್ದಾರೆ. ಇದೇ ವಿಷಯವನ್ನು ಇ.ಥರ‍್ಟ್‌ಟನ್ ಅವರು “The mouth of each pot is closed by placing on top an earthern vessel on which is ap lamp”[5] ಎಂದು ಈ ಅಂಶವನ್ನು ಗಮನಿಸಿದ್ದಾರೆ. ತಮಿಳುನಾಡಿನ ಕುರುವರಲ್ಲಿ ಈ ಪದ್ಧತಿ ಇರುವುದನ್ನು ಗಮನಿಸಿದರೆ, ಕೊರಮರು ತಮ್ಮ ಮೂಲ ನೆಲೆಯಲ್ಲಿ ಈ ಪದ್ಧತಿಯನ್ನು ಅನುಸರಿಸುತ್ತಿದ್ದ ಬಗೆಗೆ ತಿಳಿಯುತ್ತದೆ. ಎಚ್.ವಿ.ಎನ್. ಅವರೂ ಕೂಡ “Two earthern dishes filled with cotton seed and castoroil, are placed on these pots and liighted, and kept buring, till the dhare is over”[6] ಈ ತಾಯಿ ದೀಪ ಬೇರೆ ಬೇರೆ ಕಡೆ ವಾಸಿಸುವ ಕೊರಮರ ಮದುವೆಗಳಲ್ಲಿ ಕಂಡುಬರುತ್ತದೆ. ಹಿಂದೆ ರಾತ್ರಿ ಸಮಯದಲ್ಲಿ ಮದುವೆ ನಡೆಯುತ್ತಿದ್ದಾಗ ಬೆಳಕಿನ ಸಲುವಾಗಿ ಇಂಥ ದೀಪದ ವ್ಯವಸ್ಥೆ ಮಾಡಿಕೊಂಡಿರಬೇಕು. ಈ ತಾಯೊಳಕು ಚಪ್ಪರದಲ್ಲಿ ಧಾರೆ ಆಗುವವರೆಗೆ ಉರಿಯುತ್ತಿರುತ್ತದೆ. ನಂತರ ಹೆಣ್ಣಿನ ಮನೆಯವರು ಒಳಗೆ ತೆಗೆದುಕೊಂಡು ಹೋಗುತ್ತಾರೆ. ಅಂದಿನ ಈ ಬೆಳಕಿನ ವ್ಯವಸ್ಥೆ ಇಂದಿಗೂ ಇವರಲ್ಲಿ ಒಂದು ಸಂಪ್ರದಾಯವಾಗಿ ಬೆಳೆದು ಉಳಿದುಕೊಂಡು ಬಂದಿದೆ. ಇಂದು ಹಗಲಿನಲ್ಲಿ ಮದುವೆಗಳು ನಡೆಯುತ್ತಿದ್ದರೂ “ತಾಯೊಳಕು” ಮಾತ್ರ ತನ್ನ ಸ್ಥಾನ ಕಳೆದುಕೊಂಡಿಲ್ಲ.

ಮದುವೆ ಚಪ್ಪರಕ್ಕೆ ತಾಯಿ ದೀಪ ಇಟ್ಟ ಮೇಲೆ ಧಾರೆ ಪ್ರಾರಂಭವಾಗುತ್ತದೆ. ಗಂಡಿನ ಕೈಗೆ ವೀಳ್ಯೆದೆಲೆಯಲ್ಲಿ ಬಾಳೆಹಣ್ಣೊಂದನ್ನಿಟ್ಟು ಕೈಮೇಲೆ ನೀರು ಹಾಕುತ್ತಾರೆ. ಆತ ನಿಂತಲ್ಲಿಯೇ ಪ್ರದಕ್ಷಿಣೆ ಹಾಕುತ್ತಾ ದೇವರನ್ನು ಸ್ಮರಿಸಿ ಧಾರೆಯ ಹಸೆಯ ಮೇಲಿನ ಮಣೆಗೆ ಬರುತ್ತಾನೆ. ಒಂದು ಬಿಳಿ ಬಟ್ಟೆಯ ಪರದೆಯನ್ನು ಅಡ್ಡ ಹಿಡಿದು ಗಂಡು ಹೆಣ್ಣನ್ನು ಎದಿರುಬದಿರಾಗಿ ನಿಲ್ಲಿಸುತ್ತಾರೆ. ನೇರವಾಗಿ ಗಂಡು ಹೆಣ್ಣು ಒಬ್ಬರ ಮುಖವನ್ನೊಬ್ಬರು ನೋಡುವಂತಿಲ್ಲ. ಕುಲದ ಹಿರಿಯರೊಬ್ಬರು ಧಾರೆ ಸಮಯದಲ್ಲಿ ಪುರೋಹಿತ ಕೆಲಸ ಮಾಡುತ್ತಾರೆ. ಇವರು ಹೆಣ್ಣಿನಿಂದ ಗಂಡಿಗೆ ಸಂಬಂಧ ಮಾಲೆ ಹಾಕಿಸಲು ಕೊಲೋಸ್ಥರ ಅಪ್ಪಣೆಯನ್ನು ಆಕೆಯಿಂದ ಕೇಳಿಸುತ್ತಾರೆ. ಹೆಣ್ಣು “ಕುಲದವರೇ, ಬಳಗದವರೆ, ಸಂಬಂಧ ಮಾಲೆ ಹಾಕಲು ಅಪ್ಪಣೆ ಕೊಡಿ” ಎಂದು ಕೇಳಿದಾಗ ಅಲ್ಲಿದ್ದವರು “ಅಪ್ಪಣೆ, ದೇವರಪ್ಪಣೆ” ಎನ್ನುತ್ತಾರೆ. ಹೆಣ್ಣು ಹೂಮಾಲೆಯನ್ನು ಗಂಡಿನ ಕೊರಳಿಗೆ ಹಾಕುತ್ತಾಳೆ. ಅದೇ ರೀತಿ ಹೂಮಾಲೆಯನ್ನು ಗಂಡಿನ ಕೈಗೂ ಕೊಟ್ಟು, ಆತನಿಂದ “ತಂದೆ ತಾಯಂದಿರೇ, ಅತ್ತೆ ಮಾವಂದಿರೇ, ಕುಲೋಸ್ಥರೇ, ಮಾಲೆ ಹಾಕಲು ಅಪ್ಪಣೆ ಕೊಡುತ್ತೀರಾ” ಎಂದು ಕೇಳಿಸಿ, ಎಲ್ಲರೂ ಅಪ್ಪಣೆ ಕೊಟ್ಟ ಮೇಲೆ ಹಾರ ಹಾಕಿಸುತ್ತಾರೆ. ಇದಾದ ಮೇಲೆ ಇದೇ ರೀತಿ ಗಂಡಿನಿಂದ ಅಪ್ಪಣೆ ಕೇಳಿಸಿ ಕುಲೊಸ್ಥರು ಅಪ್ಪಣೆ ಎಂದ ಮೇಲೆ ಮಾಂಗಲ್ಯ ಧಾರಣೆ ಮಾಡಿಸುತ್ತಾರೆ. ತಂದೆ-ತಾಯಿ, ಅತ್ತೆ ಮಾವ, ಎಲ್ಲರೂ ಗಂಡು ಹೆಣ್ಣಿನ ತಲೆಯ ಮೇಲೆ ಅಕ್ಕಿಕಾಳು ಹಾಕುತ್ತಾರೆ. ಬಂಧು-ಬಳಗದವರೆಲ್ಲ ಕೈಮೇಲೆ ಹಾಲೆರೆಯುತ್ತಾರೆ.

ಹಿಂದೆ ಈ ರೀತಿ ಹಾಲೆರೆಯುವ ಪದ್ಧತಿ ಇರಲಿಲ್ಲವಂತೆ. ಬರಿ ಅಕ್ಷತೆ ಕಾಳನ್ನು ಹಾಕಿ ಎಬ್ಬಿಸುತ್ತಿದ್ದರಂತೆ. ಧಾರೆಯಾದ ಮೇಲೆ ಅತ್ತಿಕೊನೆಯನ್ನು ಯಾರು ತಂದಿದ್ದರೋ ಅವರೇ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡುತ್ತಿದ್ದರಂತೆ.

ತಾಳಿ:

ಹಿಂದೆ ತಾಳಿಗೆ ಬದಲಾಗಿ ಅರಿಷಿಣದ ತುಂಡನ್ನು ಕಟ್ಟಿದ ದಾರವನ್ನೂ ಅಥವಾ ಕರಿಮಣಿ ಪೋಣಿಸಿದ ದಾರವನ್ನೂ ಹೆಣ್ಣಿನ ಕುತ್ತಿಗೆಗೆ ಕಟ್ಟುತ್ತಿದ್ದ ಬಗೆಗೆ ದಾಖಲೆಗಳು ಇವೆ. ಇ.ಥರ‍್ಸ್ಟನ್ ಅವರು ಈ ಬಗ್ಗೆ ಒಂದು ಕಥೆಯನ್ನು ಸಂಗ್ರಹಿಸಿದ್ದಾರೆ. “Onec upon a time a bridge groom forget to bring the tail, and he was told off to procure the necessary piece of gold from a goldsmith. The parties waited and waited but the youngman did not return. Since then the string of beads has been used as a marriage badge”[7] ಇದರ ಜೊತೆಗೆ ಮತ್ತೊಂದು ಕಥೆಯನ್ನು ಹೇಳಿದ್ದಾರೆ. “ನದಿ ದಂಡೆಯ ಮೇಲೆ ಇಟ್ಟುಬಂದಿದ್ದ ತಾಳಿಯನ್ನು ತರಲು ಹೋದಾಗ ಅದು ಕಾಣೆಯಾಗಿತ್ತಂತೆ. ಅದಕ್ಕಾಗಿ ಮತ್ತೊಂದು ಹೊಸ ತಾಳಿ ತರಲು ಹೋದ ವ್ಯಕ್ತಿ ಮರಳಲಿಲ್ಲವಂತೆ”[8] ಈ ಕಥೆಗಳೇನೇ ಇದ್ದರೂ ಹಿಂದೆ ಕಾಡು-ಮೇಡಿನಲ್ಲಿಯೇ ಇದ್ದ ಈ ಜನ ತಾಳಿಗೆ ಬದಲಾಗಿ ಅರಿಷಿಣದ ತಂಡನ್ನು, ಕರಿಮಣಿ ದಾರವನ್ನು ಕಟ್ಟುತ್ತಿದ್ದರು. ಈ ಬಗೆಗೆ ಯರುಕಲರ ಮತ್ತು ಕುರವರ ದಾಖಲೆಗಳು ಇವೆ.[9] ನಾಡಿನ ಸಂಪರ್ಕ ಬಂದ ಮೇಲೆ ತಾಳಿಯನ್ನು ಬಳಕೆಗೆ ತಂದುಕೊಂಡಿದ್ದಾರೆ. ಈಗ ಗಂಡನ ತಾಳಿಯ ಜೊತೆಗೆ ತಾಯಿಯ ಮನೆಯ ತಾಳಿಯೂ ಹೆಣ್ಣಿನ ಕುತ್ತಿಗೆಯಲ್ಲಿ ಕಾಣುತ್ತದೆ. ಶ್ರೀ ಎಚ್.ವಿ. ನಂಜುಂಡಯ್ಯ ಅವರು ತಾಳಿಯ ಬಗೆಗೆ “The bride-groom ties the tail made of a string of black glass beads round the bride’s neck; and then they put handfuls of rice on each other’s head”[10] ಎಂದು ವಿವರ ನೀಡಿದ್ದಾರೆ.

ಮಾಂಗಲ್ಯ ಧಾರಣೆ ಆದ ಮೇಲೆ ಹೆಣ್ಣಿನ ಮಣೆಯನ್ನು ಗಂಡಿನ ಎಡಪಕ್ಕಕ್ಕೆ ಹಾಕಿ ಕೂರಿಸುತ್ತಾರೆ. ತಂದೆ-ತಾಯಿ, ಅತ್ತೆ-ಮಾವ, ಬಂಧು-ಬಳಗ ಮತ್ತು ನೆರೆದವೆಲ್ಲರೂ ಒಬ್ಬರಾದ ಮೇಲೊಬ್ಬರಂತೆ ಅಕ್ಷತೆ ಇಡುತ್ತಾರೆ. ಇದೇ ಸಮಯದಲ್ಲಿ ಹೆಣ್ಣಿನ ಕಡೆಯವರು ಹೆಣ್ಣಿನ ಮತ್ತು ಗಂಡಿನ ಸೆರಗಿಗೆ ಗಂಟು ಹಾಕುತ್ತಾರೆ. ಗಂಡು-ಹೆಣ್ಣು ಹಿರಿಯರಿಗೆ ನಮಸ್ಕಾರ ಮಾಡುತ್ತಾರೆ. ಗಂಡು-ಹೆಣ್ಣನ್ನು ಎಬ್ಬಿಸುತ್ತಾರೆ. ಎಲ್ಲರಿಗೂ ಊಟ ನಡೆಯುತ್ತದೆ. ಗಂಡು-ಹೆಣ್ಣಿಗೆ ಹೆಣ್ಣಿನ ಮನೆಯಲ್ಲಿ “ಭೂವನ್ನ” ಅಂದರೆ ಬೆಲ್ಲ ಕಲಿಸಿದ ಅನ್ನವನ್ನು ಊಟಕ್ಕೆ ಕೊಡುತ್ತಾರೆ. ಇದಕ್ಕೆ ತುಪ್ಪ ಸೇರಿಸಿರುತ್ತಾರೆ. ಹಿರಿಯರೊಬ್ಬರು ಒಂದಾದಮೇಲೊಂದರಂತೆ ಮೂರು ತುತ್ತುಗಳನ್ನು ಗಂಡಿನ ಕೈಗೆ ಹಾಕಿ ತಾನು ಅರ್ಧ ತಿಂದು ಹೆಣ್ಣಿಗೆ ಅರ್ಧ ಕೊಡುವಂತೆ ಹೇಳುತ್ತಾರೆ. ಹೆಣ್ಣು ಅದನ್ನು ತಿನ್ನುತ್ತಾಳೆ. ಹೆಣ್ಣಿನ ಕೈಗೆ ಎರಡು ತುತ್ತನ್ನು ಹಾಕಿ ಗಂಡಿನ ಬಾಯಿಗಿಡುವಂತೆ ಹೇಳುತ್ತಾರೆ. ಇದಾದ ಮೇಲೆ ಗಂಡಿನ ಕಡೆಯವರು ಗಂಡಿನ ತಟ್ಟೆಯಲ್ಲಿ, ಹೆಣ್ಣಿನ ಕಡೆಯವರು ಹೆಣ್ಣಿನ ತಟ್ಟೆಯಲ್ಲಿ ಒಟ್ಟೊಟ್ಟಾಗಿ ಜೊತೆ ಜೊತೆಗೆ ಭೂವನ್ನ ತಿನ್ನುತ್ತಾರೆ.

ಹಿಂದೆ ಧಾರೆ ಊಟಕ್ಕೆ ಹಂದಿಗಳನ್ನು ಕಡಿದು ಮಾಂಸದೂಟ ಹಾಕುತ್ತಿದ್ದರಂತೆ. ಕುಲಕ್ಕೆ ಸರಿಯಾಗಿ ಊಟ ಕೊಡದಿದ್ದರೂ ಜಗಳ ತೆಗೆದು ದಂಡ ಹಾಕುತ್ತಿದ್ದರಂತೆ. ನಾಗರೀಕ ಪ್ರಜ್ಞೆ ಮೈಗೂಡಿದಂತೆಲ್ಲ ಅವರಲ್ಲಿ ಬದಲಾವಣೆಗಳಾಗುತ್ತಿವೆ.

ನಾಗೋಳಿ ಶಾಸ್ತ್ರ:

ಧಾರೆಯಾದ ಮಾರನೆಯ ದಿನ ನಾಗೋಳಿ ಶಾಸ್ತ್ರ ಮತ್ತು ಇತರೆ ಆಚರಣೆಗಳು ನಡೆಯುತ್ತವೆ. ಮದುವೆಯ ಚಪ್ಪರದಲ್ಲಿ “ಹಸೆ” ಬರೆಯುತ್ತಾರೆ. ಹಸೆ ಬರೆಯುತ್ತಿರುವಾಗ ಕೆಲವರು ಹೆಂಗಸರು ಹೆಣ್ಣನ್ನು ಗಂಡಿಗೆ ಕಾಣದಂತೆ ಯಾರದ್ದಾದರೂ ಬೇರೆ ಮನೆಯಲ್ಲಿ ಅಡಗಿಸಿಡುತ್ತಾರೆ. ಒಬ್ಬ ಹುಡುಗನಿಗೆ ಹೆಣ್ಣಿನಂತೆ ವೇಷ ಹಾಕಿ ಆತನನ್ನು ಬೇರೆ ಕಡೆ ಬಚ್ಚಿಡುತ್ತಾರೆ. ಗಂಡು ಹೆಣ್ಣನ್ನು, ವೇಷಧಾರಿ ಹೆಣ್ಣನ್ನು ಹುಡುಕಿ ಕರೆತರಬೇಕು. ಗಂಡಿಗೆ ಹುಡುಕುವುದು ಕಷ್ಟವಾದಾಗ ಬೇರೆಯವರು ಸುಳುಹನ್ನು ಕೊಡುತ್ತಾರೆ. ಗಂಡು ಹೆಣ್ಣನ್ನು ವೇಷಧಾರಿ ಹೆಣ್ಣನ್ನು ಜೊತೆಗೆ ಕರೆದುಕೊಂಡು ಮದುವೆ ಚಪ್ಪರಕ್ಕೆ ಬರುತ್ತಾನೆ. ಅಲ್ಲಿ ಹಸೆಯ ಮಣೆಯ ಮೇಲೆ ಗಂಡನ್ನು ಆತನ ಬಲಕ್ಕೆ ವೇಷಧಾರಿ ಹೆಣ್ಣನ್ನು, ಎಡಕ್ಕೆ ಹೆಣ್ಣನ್ನು ಕೂರಿಸಿ ಅಕ್ಷತೆ ಇಡುತ್ತಾರೆ. ನಂತರ ಹೆಣ್ಣಿನ ವೇಷಧಾರಿ ಹುಡುಗನನ್ನು ಎಬ್ಬಿಸುತ್ತಾರೆ. ಹೆಣ್ಣು ಗಂಡಿನ ಪಾದ ತೊಳೆದು ಅರಿಷಿಣ-ಕುಂಕುಮ ಇಟ್ಟು, ಪೂಜೆ ಮಾಡಿ ಪಾದಕ್ಕೆ ಹಣೆ ಮುಟ್ಟಿಸಿ ನಮಸ್ಕರಿಸಬೇಕು. ಗಂಡಿನ ಪಾದದ ಮೇಲೆ ಬಂಗಾರದ ಒಡವೆಯೊಂದನ್ನು ಇಡುತ್ತಾರೆ. ಹೆಣ್ಣು ನಮಸ್ಕರಿಸುವಾಗ ಆಕೆಯ ಅಣೆಗೆ ಬಾಳೆಹಣ್ಣನ್ನು ಸವರುತ್ತಾರೆ. ಬಂಗಾರದ ಹಣೆಗೆ ಅಂಟಿಕೊಂಡರೆ ಗಂಡು-ಹೆಣ್ಣಿಗೆ ಒಳ್ಳೆಯದಾಗುತ್ತದೆ ಎಂದು ನಂಬುತ್ತಾರೆ. ಗಂಡೂ ಕೂಡ ಹೆಣ್ಣಿನ ಕೈ ತೊಳೆದು ಪೂಜೆ ಮಾಡಿ ನಮಸ್ಕರಿಸುತ್ತಾನೆ. ಬೇರೆ ಬೇರೆ ಕಡೆ ಬೆಳೆದ ಈ ಇಬ್ಬರಲ್ಲಿ ಹೊಂದಾಣಿಕೆ, ಪ್ರೀತಿ ಹಾಗೂ ಸಲುಗೆಯನ್ನು ಬೆಳೆಸುವ ಸಲುವಾಗಿಯೇ ಇಂಥ ಕೆಲವು ಶಾಸ್ತ್ರಗಳನ್ನು ಮಾಡುತ್ತಾರೆ. ಹೆಣ್ಣು ಗಂಡಿನ ಎಂಜಲನ್ನು ತಿನ್ನಬಹುದು. ಹೆಣ್ಣಿನ ಎಂಜಲನ್ನು ಗಂಡು ತಿನ್ನಬಾರದು. ತಿಂದರೆ ದರಿದ್ರ ಬರುತ್ತದೆ ಎನ್ನುತ್ತಾರೆ. ಇದೇ ಹಸೆಯ ಮೇಲೆಯೇ ಮಗು ತೂಗುವ ಶಾಸ್ತ್ರವೂ ನಡೆಯುತ್ತದೆ. ಒಂದು ಗುಂಡುಕಲ್ಲಿಗೆ ದಾರವನ್ನು ಸುತ್ತಿ ಒಂದು ವಸ್ತ್ರದ ಮೇಲಿಡುತ್ತಾರೆ. ಆ ವಸ್ತ್ರದ ಒಂದು ಭಾಗವನ್ನು ಹೆಣ್ಣು, ಮತ್ತೊಂದು ತುದಿಯನ್ನು ಗಂಡು ಹಿಡಿದು ತೊಟ್ಟಿಲು ತೂಗುವಂತೆ ತೂಗುತ್ತಾರೆ. ಗಂಡು ಮಕ್ಕಳನ್ನು ಹೆತ್ತು ಸುಖವಾಗಿರಲಿ ಎಂಬುದೇ ಇದರ ಆಶಯ. ಮಗು ತೂಗಿ ಆದ ಮೇಲೆ ಹೆಣ್ಣಿನ ಸ್ಥಳದಲ್ಲಿ ಗಂಡನ್ನು ಕೂರಿಸುತ್ತಾರೆ. ಆಗ ಹೆಣ್ಣು “ಮಾವನ ಮಗನೆ, ಮುತ್ತಿನ ಚಂಡೆ ನನ್ನ ಬೆಳ್ಳಿ ಚದರ ಬಟ್ಟು ಚಿನ್ನದ ಪದರಕ್ಕೆ ದಯಮಾಡಿಸಿ” ಎಂದು ಗಂಡನ ಹೆಸರಿನ ಜೊತೆಗೆ “ಶೆಟ್ರಿ” ಎಂದು ಸೇರಿಸಿ ಹೇಳುವಂತೆ ಹಿರಿಯರು ಹೇಳಿಕೊಡುತ್ತಾರೆ. ಆಕೆ ಹಾಗೆ ಹೇಳಿದ ಮೇಲೆ ಗಂಡು ತನ್ನ ಸ್ಥಾನಕ್ಕೆ ಬರುತ್ತಾನೆ. ನಂತರ ಗಂಡಿನ ಸ್ಥಾನದಲ್ಲಿ ಹೆಣ್ಣನ್ನು ಕೂರಿಸಿ ಗಂಡಿನಿಂದ “ಅತ್ತೆಯ ಮಗಳೆ ಮಲ್ಲಿಗೆ ಹರಳೇ ನನ್ನ ಚಿನ್ನದ ಚದರ ಬಿಟ್ಟು, ನಿನ್ನ ಬೆಳ್ಳಿ ಚದರಕ್ಕೆ ದಯಮಾಡಿಸೆ” ಎಂದು ಹೇಳುತ್ತಾರೆ. ಹೆಣ್ಣು ತನ್ನ ಜಾಗಕ್ಕೆ ಬರುತ್ತಾಳೆ. ಐದು ಜನ ಮುತ್ತೈದೆಯರು ಮಂಗಳಾರತಿ ಮಾಡುತ್ತಾರೆ. ಗಂಡು-ಹೆಣ್ಣು ಮಂಗಳಾರತಿ ತಟ್ಟೆಗೆ ದುಡ್ಡುಹಾಕಬೇಕು. ಹಾಕುವವರೆಗೂ ಬಿಡುವುದಿಲ್ಲ. ಅಷ್ಟರಲ್ಲಿ ಓಕಳಿ ಆಟಕ್ಕೆ ಸಿದ್ದ ಮಾಡಿರುತ್ತಾರೆ.

ಓಕಳಿ ಚೆಂಡಾಟ:

ಗಂಡು ಹೆಣ್ಣಿಗೆ ಅರಿಷಿಣ ಎಣ್ಣೆ  ಹಚ್ಚುವಾಗ ಹಾಕಿದ್ದ ಬಟ್ಟೆಗಳನ್ನೇ ಉಡಿಸುತ್ತಾರೆ. ಹಸೆಯ ಮೇಲೆದ್ದ ಗಂಡಿನ ಮಣೆಯನ್ನು ಹೆಣ್ಣಿಗೆ, ಹೆಣ್ಣಿನ ಮಣೆಯನ್ನು ಗಂಡಿಗೆ ಚಪ್ಪರದ ಹೊರಕ್ಕೆ ಹಾಕಿ ನಿಲ್ಲಿಸುತ್ತಾರೆ. ಅವರ ಹತ್ತಿರ ಓಕಳಿ ನೀರು ತುಂಬಿದ ಪಾತ್ರೆಗಳಿರುತ್ತವೆ. ಆ ನೀರಿನೊಳಗೆ ಒಣಗಿದ ಬಾಳೆ ಎಲೆಗಳಿಂದ ಮಾಡಿದ ಚೆಂಡುಗಳಿರುತ್ತವೆ. ಮೊದಲು ಗಂಡು ನಂತರ ಹೆಣ್ಣು ಒಬ್ಬರ ಮೇಲೊಬ್ಬರು ಚಂಡೆಸೆದು ಆಟವಾಡುತ್ತಾರೆ. ಗಂಡಿನ ಕಡೆ ಐದು ಹೆಣ್ಣಿನ ಕಡೆ ನಾಲ್ಕು ಚೆಂಡುಗಳಿರುತ್ತವೆ. ಉಳಿದ ಓಕಳಿ ನೀರನ್ನು ಒಬ್ಬರ ಮೇಲೊಬ್ಬರಂತೆ ಬಾಗಿ ನಿಲ್ಲುವಂತೆ ಮಾಡಿ ಗಂಡು ಹೆಣ್ಣಿನ ಮೇಲೆ ಹಾಕುತ್ತಾರೆ. ಧಾರೆಯ ದಿನ ತಂದ ಅರಣಿ ಗಡಿಗೆ ಮತ್ತು ಒತ್ತು ಗಡಿಗೆಯ ನೀರನ್ನು ಹಾಕುತ್ತಾರೆ. ಐದು ಬಾರಿ ಒಬ್ಬರ ಮೇಲೊಬ್ಬರನ್ನು ಬಾಗಿ ನಿಲ್ಲುವಂತೆ ಮಾಡಿ ನೀರು ಹಾಕಿ ನಂತರ ಸ್ನಾನ ಮಾಡಿಸುತ್ತಾರೆ.

ನಾಗೋಳಿ ಶಾಸ್ತ್ರದ ಮಾರನೆಯ ದಿನ ಮದುವೆ ಚಪ್ಪರದಲ್ಲಿ ಹಸೆಹಚ್ಚಿ ಗಂಡು ಹೆಣ್ಣನ್ನು ಕೂರಿಸಿ ಬಂಧು-ಬಳಗದವರೆಲ್ಲರೂ ಮುಯ್ಯಿ ಮಾಡುತ್ತಾರೆ. ಅಂದೇ ಹೆಣ್ಣನ್ನು ಗಂಡನ ಮನೆಗೆ ಕಳಿಸಿಕೊಡುವ ಶಾಸ್ತ್ರ ಮಾಡುತ್ತಾರೆ. ಮದುವೆ ಮುಗಿಯುವುದರೊಳಗೆ ಒಂಭತ್ತು ಹಸೆ ಹಚ್ಚುತ್ತಾರೆ.

ಈಗ ಐದು ದಿನದ ಮದುವೆಗಳು ನಡೆಯುತ್ತಿಲ್ಲ. ಮೂರು ದಿನಕ್ಕೆ ಸೀಮಿತಗೊಂಡಿವೆ. ಹಳ್ಳಿಗಳ ಮದುವೆಗಳಲ್ಲಿ ಕೆಲವು ಶಾಸ್ತ್ರ ಮುಗಿಸಿ, ಮಾರನೆಯ ದಿನ ಧಾರೆ ಮಾಡುತ್ತಾರೆ. ಮೂರನೆಯ ದಿನಕ್ಕೆ ಹೆಣ್ಣನ್ನು ಗಂಡಿನ ಮನೆಗೆ ಕಳಿಸಿಕೊಡುತ್ತಾರೆ. ಮದುವೆಗಳಲ್ಲಿ ಸೋಬಾನ ಹಾಡುಗಳು ಕಡಿಮೆಯಾಗುತ್ತಿವೆ. ಮೊದಲು ಅಕ್ಕಿಯಲ್ಲಿ ಬಂಗಾರವನ್ನು ಹಾಕಿ ಹೆಣ್ಣು ಗಂಡಿನಿಂದ ಹುಡುಕಿಸುತ್ತಿದ್ದರು. ಈಗ ಕೆಲವರು ಮಾಡಿಸುತ್ತಾರೆ. ಕೆಲವರು ಬಿಟ್ಟಿದ್ದಾರೆ. ಹಾಗೆಯೇ ಓಕಳಿ ಚೆಂಡಾಟ, ಗುಂಡುಕಲ್ಲು ತೂಗಿಸುವ ಶಾಸ್ತ್ರಗಳೂ ಮರೆಯಾಗುತ್ತಿವೆ. ಕಲ್ಯಾಣ ಮಂಟಪಗಳಲ್ಲಿ ಮದುವೆಯಾದರಂತೂ ಬುಡಕಟ್ಟಿನ ಯಾವ ಪದ್ಧತಿಯೂ ಕಾಣುವುದಿಲ್ಲ. ಹಳ್ಳಿಗಳಲ್ಲಿ ಈಗ ಬೇರೆ ಜಾತಿಯ ಜನ ಅನುಸರಿಸುವ ಪದ್ಧತಿಗಳನ್ನು ಈ ಬುಡಕಟ್ಟು ರೂಢಿಸಿಕೊಂಡಿದೆ. ತಮ್ಮ ಪೂರ್ವದ ಸರಳ ವಿವಾಹ ಸಂಪ್ರದಾಯಗಳನ್ನೆಲ್ಲ ಕೈಬಿಟ್ಟು ಪರಿಸರದ ಸುಧಾರಿಸಿದ ಜನರ ಆಚರಣೆ ಮತ್ತು ಅನುಕರಣೆ ಪ್ರಭಾವಗಳಿಗೆ ಒಳಗಾಗಿರುವುದು ಕಂಡು ಬರುತ್ತಿದೆ. ಇದೊಂದು ಅನಿವಾರ್ಯವಾದ ಸಂಸ್ಕೃತೀಕರಣ ಕ್ರಿಯೆ. ಇಂಥ ಪ್ರಸಂಗಗಳಲ್ಲಿ ಮೂಡಿ ಬರುತ್ತಿದ್ದ ಕುಲ ಸಂಬಂಧಗಳ ಆತ್ಮೀಯತೆ ಕೂಡಿ ಉಣ್ಣುವ ಸಂಪ್ರದಾಯದ ನೂತನ ವಧು-ವರರು ಭಾವ ಸಮರಸತೆ ಹೊಂದಲು ಅವಶ್ಯಕವಾಗಿದ್ದ ವಿವಿಧ ವಿನೋದದ ಆಟಗಳು ಮರೆಯಾಗುತ್ತಿವೆ.

ಸೋಬನ:

ಹೆಣ್ಣಿನವರು ತಮಗೆ ಅನುಕೂಲವಾದ ದಿನ ಐದು ದಿನಕ್ಕೋ, ಒಂಭತ್ತು ದಿನಕ್ಕೋ ಅಥವಾ ಮತ್ತೊಂದು ದಿನ ಸೋಬನ ಮಾಡಿಸುತ್ತಾರೆ. ಆ ದಿನ ಗಂಡು ಹೆಣ್ಣನ್ನು ದೇವಸ್ಥಾನಕ್ಕೆ ಕಳಿಸಿ ಪೂಜೆ ಮಾಡಿಸುತ್ತಾರೆ. ಹೊಸ ಹಾಸಿಗೆ, ಹೊದಿಕೆಗಳನ್ನು ಪೂಜಿಸಿ ಗಂಡು ಹೆಣ್ಣನ್ನು ಒಂದು ಮನೆಯಲ್ಲಿ ಕೂಡಿ ತಾವೆಲ್ಲ ಬೇರೆ ಕಡೆ ಹೋಗುತ್ತಾರೆ.

ಮದುವೆಯಾದ ವರ್ಷ ಆಷಾಢ ಮಾಸದಲ್ಲಿ ಅತ್ತೆ-ಸೊಸೆ ಒಂದೇ ಬಾಗಿಲಿನಿಂದ ಓಡಾಡಬಾರದೆಂದು ಸೊಸೆಯನ್ನು ತವರುಮನೆಗೆ ಕಳಿಸುವ ಪದ್ಧತಿ ಇದೆ. ಮದುವೆ ಮನೆಗಳಲ್ಲಿ ಬೆಕ್ಕುಗಳನ್ನು ಇಟ್ಟುಕೊಳ್ಳುವುದಿಲ್ಲ. ಬೆಕ್ಕುಗಳಿದ್ದರೆ ಬೇರೆ ಕಡೆ ಕಟ್ಟಿ ಹಾಕುತ್ತಾರೆ. ಬೆಕ್ಕುಗಳು ಅಮಂಗಳವೆಂದು ನಂಬುತ್ತಾರೆ.

ಸಾಮಾನ್ಯವಾಗಿ ಸೋಮವಾರವೇ ಧಾರೆ ಇರುತ್ತಿತ್ತು. ಶುಕ್ರವಾರದಿಂದಲೇ ಮದುವೆಯ ಕೆಲಸಗಳು ಪ್ರಾರಂಭವಾಗುತ್ತಿದ್ದವು ಎಂಬ ಬಗೆಗೆ ಎಚ್.ವಿ. ನಂಜುಂಡಯ್ಯ ಅವರು “Monday is considered the proper day, to commence the actual ceremoney. On the previous Friday, the bride-groom goes to the bride’s hut, and presents herewith a few coins, the acceptance of which signifies her consent”[11] ಎಂದು ಬರೆದಿದ್ದಾರೆ. ಆರ್.ಇ. ಎಂಥೋವನ್ ಅವರೂ ಕೂಡ “The marriage of Koravas generally take place on mondyas. On the friday before the marrige monday the relations of the bride take turmeric powder and oil to the bride-groom’s and the boy’s relations take turmeric powder and oil to the girls”[12] ಮುಂತಾಗಿ ಬರೆಯುತ್ತಾರೆ. ಆದರೆ ಈಗ ದಕ್ಷಿಣ ಕರ್ನಾಟಕದಲ್ಲಿ ಇಂಥ ನಿಗದಿಯಾದ ವಾರಗಳೇನೂ ಕಂಡು ಬರುವುದಿಲ್ಲ.[1]       E. Thurston The Castes and Tribes of Southern India Vol.-III-K, p-483

[2]      R.E. Enthovan The of Tribes and  castes  of Bombay I, p-268

[3]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-593

[4]      R.E. Enthovan The of Tribes and  castes  of Bombay Vol-II, p-269

[5]      E. Thurston The Castes and Tribes of Southern India Vol.-III-K, p-483

[6]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-593

[7]      E. Thurston The Castes and Tribes of Southern India Vol.-III-K, p-485

[8]      ಕನ್ನಡ ಜಾನಪದ ವಿಶ್ವಕೋಶ, ಪು-534

[9]      E. Thurston The Castes and Tribes of Southern India Vol.-III-K, pp-442-444

[10]       H.V. Nanjundaiah and L.K. Anantha Krishna lyer, The Mysore Tribes and Castes, Vol-III, p-593

[11]      ಅದೇ, ಪು-592

[12]      R.E. Enthovan The of Tribes and  castes  of Bombay Vol-III, p-268