ಹೆಣ್ಣು ಪುಷ್ಪವತಿಯಾದಾಗ ಮಾಡುವ ಆಚರಣೆ ಇದು. ಇದು ಕೂಡ ಸೂತಕವೇ. ಹೆಣ್ಣು ಮೈನೆರೆದ ದಿನದಿಂದ ಒಳಗೆ ಬರುವಂತಿಲ್ಲ. ಆಕೆಗಾಗಿ ಹೊರಗೆ ಅಂಗಳದಲ್ಲಿ ಒಂದು ಸೊಪ್ಪಿನ ಗುಡಿಸಲು ಹಾಕುತ್ತಾರೆ. ಆ ಗುಡಿಸಲನ್ನು ಹಾಕುವವರು ಮೈನೆರೆದ ಹೆಣ್ಣಿನ ಸೋದರಮಾವಂದಿರು. ಆ ಗುಡಿಸಲಿಗೆ ಸಾಮಾನ್ಯವಾಗಿ ಮೂರು ಅಥವಾ ಐದು ತರದ ಹಸಿರು ಸೊ‌ಪ್ಪನ್ನು ಹಾಕುತ್ತಾರೆ. ಮಾವಿನಸೊಪ್ಪು, ತೆಂಗಿನಗರಿ, ಲೆಕ್ಕಸೊಪ್ಪು, ಅಥವಾ ಸ್ಥಳೀಯವಾಗಿ ದೊರೆಯುವ ಸೊ‌ಪ್ಪನ್ನು ಹಾಕುತ್ತಾರೆ. ಗುಡಿಸಲನ್ನು ಹಾಕಿದವರಿಗೆ ಕೊಬರಿ ಬೆಲ್ಲ ಕೊಡುತ್ತಾರೆ. ಮೈನೆರೆತ ಹೆಣ್ಣು ಐದು ದಿನವೂ ಗುಡಿಸಲಿನಲ್ಲಿ ಇರಬೇಕು. ಅಲ್ಲದೆ ಅಷ್ಟು ದಿನಗಳ ರಾತ್ರಿಗಳಲ್ಲಿ ನಿದ್ರೆ ಮಾಡುವಂತಿಲ್ಲ. ಆಕೆಗೆ ಪ್ರತಿದಿನ ರಾತ್ರಿಯಲ್ಲಿ ಕೊಬರಿ ಬೆಲ್ಲ, ಚಿಗಣಿತಮಟ ಮುಂತಾದವುಗಳನ್ನು ಮಡಿಲಿಗೆ ಹಾಕುತ್ತಾರೆ. ಆ ಸಮಯದಲ್ಲಿ ಅಲ್ಲಿ ನೆರೆದ ಹೆಂಗಸರು ಸೋಬಾನ ಪದಗಳನ್ನು ಹೇಳುತ್ತಿರುತ್ತಾರೆ. ಗುಡಿಸಲಿನ ಒಳಗೆ ಹರಳೆಣ್ಣೆಯ ದೀಪ ಉರಿಯುತ್ತದೆ. ಮಡಿಲುತುಂಬಿದ ಮೇಲೆ ಅಲ್ಲಿ ಸೇರಿದವರಿಗೆಲ್ಲ ಫಲಾಹಾರ ಕೊಡುತ್ತಾರೆ. ಅವಳಿಗೆ ಪ್ರತ್ಯೇಕವಾಗಿ ಚಾಪೆ ಮತ್ತು ಹೊದಿಕೆಯನ್ನು ಕೊಟ್ಟಿರುತ್ತಾರೆ. ಗುಡಿಸಲಿನ ಒಳಕ್ಕೆ ಎಕ್ಕದ ಕೊನೆ ಮತ್ತು ಮಚ್ಚನ್ನು (ಕಬ್ಬಿಣದ ಕತ್ತಿ) ಇಡುತ್ತಾರೆ. ಕೆಲವರು ಮೆಟ್ಟನ್ನು ಇಡುತ್ತಾರೆ.

ಮಲಗಿದಾಗ ದುಷ್ಟಶಕ್ತಿಗಳು ಗುಡಿಸಲಿಗೆ ಪ್ರವೇಶಿಸುತ್ತವೆ ಎಂಬ ನಂಬಿಕೆಯಿಂದಲೇ ರಾತ್ರಿ ಸಮಯದಲ್ಲಿ ಮಲಗಲು ಬಿಡದೆ ಗುಡಿಸಲಿನ ಹೊರಗೆ ಒಬ್ಬರೋ, ಇಬ್ಬರೋ ಹೆಂಗಸರು ಕುಳಿತು ಮೈನೆರೆತವಳನ್ನು ಮಾತನಾಡಿಸುತ್ತಾ, ಕಥೆಗಳನ್ನು ಹೇಳುತ್ತಾ, ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾರೆ. ಮೈನೆರೆದವಳು ಐದನೆಯ ದಿನದವರೆಗೆ ಸ್ನಾನ ಮಾಡುವಂತಿಲ್ಲ. ಐದನೆಯ ದಿನ ಸ್ನಾನ ಮಾಡಿಸಿ ದಾಸಯ್ಯನನ್ನು ಕರೆಸಿ ಸೂತಕ ತೆಗೆಸಿಕೊಳ್ಳುತ್ತಾರೆ. ಮತ್ತು ಮೈನೆರೆದವಳಿಂದ ಗಂಗೆ ಪೂಜೆ ಮಾಡಿಸಿ ನೀರು ಹೊರಿಸಿಕೊಂಡು ಮನೆಗೆ ಕರೆತರುತ್ತಾರೆ. ಆ ದಿನ ರಾತ್ರಿ ಆ ಹುಡುಗಿಯನ್ನು ಅಲಂಕರಿಸಿ, ಹೊಸ ಬಟ್ಟೆ ಉಡಿಸಿ ಕೂರಿಸಿ ಆರತಿ ಎತ್ತಿ ಒಸಗೆ ಮಾಡುತ್ತಾರೆ. ಮತ್ತು ನೆಂಟರಿಷ್ಟರಿಗೆ ಊಟ ಕೊಡುತ್ತಾರೆ. ಇಷ್ಟಾದ ಮೇಲೆ ಬಂಧುಗಳು ಆ ಹುಡುಗಿಗೆ ತಮ್ಮ ತಮ್ಮ ಮನೆಗಳಲ್ಲಿ ಆರತಿ ಅಥವಾ ಒಸಗೆ ಮಾಡಬಹುದು. ಈ ಬಗೆಗೆ ಎಚ್.ವಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಐಯ್ಯರ್ ಅವರು “When a girl attains puberty, she is considered impore for four days. During this period, she remains outside of the house, or hut, and a separate shed, made for green leaves of lakkali plant is put up for her. She is given a mat to sit. on; and a branch of Ekka plant and an iron knife are kept always in the shed, to word off evil spirits, to whose attacks she is considered specially liable during the period”

[1] ಎಂದೂ ದಾಖಲಿಸಿರುವಲ್ಲಿಯೂ ಸಮಾನವಾದ ಅಂಶಗಳು ಗೋಚರಿಸುತ್ತವೆ. ಈ ಐದು ದಿನಗಳ ಆಚರಣೆ ಈಚೆಗೆ ಮೂರು ದಿನಗಳಿಗಿಳಿದಿರುವುದೂ ಕಂಡು ಬರುತ್ತದೆ.

ಹಿಂದೆ ಮೈನೆರೆದು ಗುಡಿಸಲಿಗೆ ಹೊಕ್ಕ ಹುಡುಗಿಗೆ ಊಟ ಮಾಡಲು ತಟ್ಟೆಯನ್ನಾಗಲಿ, ನೀರು ಕುಡಿಯಲು ಲೋಟವನ್ನಾಗಲಿ, ಕೊಡುತ್ತಿರಲಿಲ್ಲವಂತೆ. ಕಲ್ಲಿನ ಮೇಲೆ ಅಥವಾ ಕೈಯಲ್ಲಿ ಆಹಾರವನ್ನು ಹಿಡಿದು ಊಟ ಮಾಡಬೇಕಾಗಿತ್ತು. ತೆಂಗಿನ ಚಿಪ್ಪಿನಿಂದ ನೀರು ಕುಡಿಯಬೇಕಾಗಿತ್ತು. ಊಟ ಮಾಡಿದ ಕೈಯನ್ನು ಗುಡಿಸಲಿನ ಒಳಗೆ ಗುಂಡಿ ಮಾಡಿಕೊಂಡು ಕೈತೊಳೆದು, ಎಂಜಲು ಚೆಲ್ಲುವುದರಿಂದ ನಾಯಿ, ಕೋಳಿಗಳು ತಿಂದು ಅದನ್ನು ತುಳಿದು ಮನೆಯೊಳಗೆ ಬರುತ್ತವೆ ಎಂದು ಹಾಗೆ ಮಾಡುತ್ತಿದ್ದರಂತೆ. ಗುಡಿಸಲನ್ನು ಬಿಡುವ ದಿನ ಆಕೆ ಆ ಎಂಜಲು ಗುಂಡಿಯನ್ನು ಮಣ್ಣಿನಿಂದ ಮುಚ್ಚಿ ಬರುತ್ತಿದ್ದಳಂತೆ.

ಈಗ ಊಟಕ್ಕೆ ಪ್ರತ್ಯೇಕ ತಟ್ಟೆಗಳನ್ನು ಕೊಡುತ್ತಾರೆ. ಎಂಜಲನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಿಸುತ್ತಾರೆ. ಮೈನೆರೆದವಳಿಗೆ ಬಂಧುಗಳು ಒಂದೊಂದು ದಿನ ಒಳ್ಳೆಯ ಅಡಿಗೆ ಮಾಡಿ ತಂದು ಕೊಡುತ್ತಾರೆ. ಮೊದಲಿನಷ್ಟು ನಿರ್ಬಂಧಗಳು ಈಗ ಕಾಣಿಸುತ್ತಿಲ್ಲ. ಮುಟ್ಟು-ತಟ್ಟನ್ನು ಸರಿಯಾಗಿ ಪಾಲಿಸದಿದ್ದರೆ ಕೆಟ್ಟದಾಗುತ್ತದೆ, ಬಡತನ ಬರುತ್ತದೆ ಎಂದು ನಂಬುತ್ತಿದ್ದರಂತೆ. ಐದನೆಯ ದಿನ ಮೈನೆರೆತವಳು ಗುಡಿಸಲನ್ನು ಕಿತ್ತು ಮೂರು ಹೊರೆ ಮಾಡಿ ತಾನೆ ಉರ ಹೊರಗೆ ತೆಗೆದುಕೊಂಡು ಹೋಗಿ ಸುಟ್ಟು ಬಂದು ಸ್ನಾನ ಮಾಡಿ ನಡುಮನೆಗೆ ಬರುತ್ತಿದ್ದಳಂತೆ. ಇಲ್ಲಿಯ ಎಷ್ಟೋ ಆಚರಣೆಗಳು ನೆರೆಹೊರೆಯ ಇತರ ಸಮಾಜವನ್ನು ನೋಡಿ ರೂಢಿಸಿಕೊಂಡವುಗಳಾದರೂ, ಮೈಲಿಗೆಯ ಬಗೆಗಿನ ಅವರ ವಿಚಾರ, ದುಷ್ಟಶಕ್ತಿಗಳ ಬಗೆಗಿನ ನಂಬಿಕೆ ಮತ್ತು ಅವುಗಳನ್ನು ತಡೆಯಲು ಮಾಡಿಕೊಂಡ ಉಪಾಯ ಮುಂತಾದವುಗಳೆಲ್ಲ ಈ ಬುಡಕಟ್ಟಿನ ಮೂಲದ ಆಚರಣೆಯ ಸ್ವರೂಪವನ್ನು ತಿಳಿಸುತ್ತವೆ. ಇಂಥ ಸಂದರ್ಭಗಳು ಬದುಕಿನಲ್ಲಿ ಒಮ್ಮೆ ಮಾತ್ರ ಬಂದು ಹೋಗುವಂಥವು. ಅವುಗಳನ್ನು ವಿಶೇಷವಾಗಿ ಆಚರಿಸುವುದರಿಂದ ವ್ಯಕ್ತಿಯ ಮಾನಸಿಕ ಬೆಳವಣಿಗೆಗೆ ಒಂದು ಹೊಸ ತಿರುವನ್ನು ನೀಡುವುದರ ಜೊತೆಗೆ, ತಾವೂ ನಾಲ್ಕು ದಿನ ಸಂತೋಷದಿಂದ ಕಾಲ ಕಳೆಯಲು ಮತ್ತು ಮೈನೆರೆದ ಹುಡುಗಿಯ ನೂತನ ಭಾವನೆಗಳ ಸಾಮಾಜೀಕರಣಕ್ಕೆ ಒಂದು ಅವಕಾಶವೆಂದು ಆಚರಿಸಬೇಕು. ಇಂಥ ಆಚರಣೆಗಳು ಕೊರಮರ ಸಾಂಸ್ಕೃತಿಕ ಬದುಕಿಗೊಂದು ನಿದರ್ಶನ.

ಕೊರಮ ಬುಡಕಟ್ಟಿನಲ್ಲಿ ತಿಂಗಳ ಮುಟ್ಟಿಗೆ ಹೆಚ್ಚು ಮಹತ್ವವಿದೆ. ಮೂರು ದಿನ ಆಕೆಯನ್ನು ಯಾರೂ ಮುಟ್ಟುವಂತಿಲ್ಲ. ಹಾಲು ಕುಡಿಯುವ ಮಕ್ಕಳಿದ್ದರೆ ಮಕ್ಕಳ ಮೈಮೇಲಿನ ಬಟ್ಟೆ ತೆಗೆದು ಹಾಲು ಕುಡಿಸುತ್ತಾರೆ. ಒಂದು ನೀರು ಹಾಕಿಕೊಂಡು ನಡುಮನೆಯವರೆಗೆ ಬಂದರೂ ಕೋಣೆಗೆ ಮೂರು ನೀರು ಹಾಕಿಕೊಂಡ ಮೇಲೆಯೇ ಪ್ರವೇಶ. ಅವರಿಗೆ ಹಾಸಿಗೆ, ಹೊದಿಕೆಯಲ್ಲ ಪ್ರತ್ಯೇಕ. ಮೂರು ದಿನದ ನಂತರ ಅವುಗಳನ್ನು ನೀರಿಗೆ ಹಾಕಿ ತೆಗೆದುಕೊಳ್ಳುತ್ತಾರೆ.


[1]       H.V. Nanjundaiah and L.K. Anantha Krishna lyer, The Mysore Tribes and Castes, Vol-III, p-597