ಸಾಮಾನ್ಯವಾಗಿ ಎಲ್ಲ ಜನಾಂಗದವರಲ್ಲಿಯೂ ಆಚರಣೆಯಲ್ಲಿರುವಂತೆ ಕೊರಮ ಬುಡಕಟ್ಟಿನವರಲ್ಲಿಯೂ ಸಾವಿನ ಸಂದರ್ಭದಲ್ಲಿ ಆಚರಿಸುವ ಕೆಲವು ಆಚರಣೆಗಳಿವೆ. ಯಾವ ಮನೆಯಲ್ಲಿ ಸಾವು ಸಂಭವಿಸುತ್ತದೆಯೋ ಆ ಮನೆಯ ಮುಂದೆ ಬೆಂಕಿ ಹಾಕುತ್ತಾರೆ. ಆ ಬೆಂಕಿಗೆ ಇಂಥದ್ದೆ ಸೌದೆ ಬೇಕೆಂಬ ನಿಯಮವಿಲ್ಲ. ವ್ಯಕ್ತಿ ಸಾಯುವುದು ಖಚಿತವಾದಾಗ ಕೆಲವು ಕಡೆ ಆ ವ್ಯಕ್ತಿಯನ್ನು ಅಂಗಳಕ್ಕೆ ಹಿಡಿದರೆ, ಶಿವಮೊಗ್ಗದ ಗೋಪಾಳದಲ್ಲಿ ಮನೆಯ ಹೊರಗೆ ತರುವ ಪದ್ಧತಿ ಇಲ್ಲವೆಂದು ಹೇಳುತ್ತಾರೆ. ಕಾರಣ ಕೇಳಿದರೆ, ಇಷ್ಟು ವರ್ಷ ಕಾಲ ಮನೆಯಲ್ಲಿದ್ದ ವ್ಯಕ್ತಿ ಸಾಯುವಾಗ ಮನೆಯಿಂದ ಹೊರಕ್ಕೆ ಹಿಡಿಯುವುದು ಸರಿಯಲ್ಲವಾದ್ದರಿಂದ ನಾವು ಮನೆಯ ಒಳಗೇ ಸಾಯಲು ಅವಕಾಶ ಕೊಡುತ್ತೇವೆಂದರು.

ಸತ್ತವ್ಯಕ್ತಿಗೆ ಸ್ನಾನ ಮಾಡಿಸಿ, ಬಟ್ಟೆ ಉಡಿಸಿ ಗಂಡಸಾದರೆ ಹಣೆಗೆ ನಾಮ ಇಟ್ಟು, ಬಾಯಿಗೆ ಎಲೆ ಅಡಿಕೆ ಇಟ್ಟು ಹೂಹಾಕಿ, ಹೆಂಡತಿಯನ್ನು ಪಕ್ಕಕ್ಕೆ ಕೂರಿಸಿ ಆಕೆಗೆ ಮಡಿಲಕ್ಕಿ ಹೊಯ್ಯುತ್ತಾರೆ. ಆಕೆಯ ತವರಿನವರು ಆಕೆಗೆ ಹೊಸ ಬಟ್ಟೆ ಕೊಡುತ್ತಾರೆ. ಹೆಂಗಸು ಸತ್ತರೆ ಇದೇ ರೀತಿ ಸ್ನಾನ ಮಾಡಿಸಿ ಹಣೆಗೆ ಕುಂಕುಮ ಇಟ್ಟು ಪೂಜಿಸುತ್ತಾರೆ. ಗಂಡನೂ ಪಕ್ಕದಲ್ಲಿರುತ್ತಾನೆ. ಆ ದಿನ ಹೆಣ ಮಣ್ಣಾಗುವವರೆಗೂ ಆ ಮನೆಯಲ್ಲಾಗಲಿ ಅಥವಾ ಆ ಕೇರಿಯಲ್ಲಾಗಲಿ ಅಡಿಗೆ ಮಾಡುವುದಿಲ್ಲ. ಇನ್ನೂ ಕೆಲವು ಕಡೆ ಅಣ್ಣ ತಮ್ಮಂದಿರನ್ನು ಬಿಟ್ಟು ನೆಂಟರ ಮನೆಗಳಲ್ಲಿ ಅಡಿಗೆ ಮಾಡುತ್ತಾರೆ ಎನ್ನುತ್ತಾರೆ. ಹೆಣಕ್ಕೆ ಪೂಜೆಯಾದ ಮೇಲೆ ಬಿದಿರಿನಿಂದ ಮಾಡಿದ ಚಟ್ಟದ ಮೇಲಿಟ್ಟು, ಹೊಸ ಬಟ್ಟೆ ಹೊದಿಸಿ ಬಿಗಿಯುತ್ತಾರೆ. ಹಿಂದೆ ಇಬ್ಬರು, ಮುಂದೆ ಇಬ್ಬರು ಹೊತ್ತು ಸಮಾಧಿ ಮಾಡುವಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ. ಅಷ್ಟರಲ್ಲಿ ಮನೆಯ ಮುಂದೆ ಹಾಕಿದ ಬೆಂಕಿಯ ಪಕ್ಕದಲ್ಲಿ ಮೂರು ಗುಂಡುಗಳನ್ನು ಹೂಡಿ ಹೊಸ ಮಡಿಕೆಗೆ ಸ್ವಲ್ಪ ಅಕ್ಕಿ ಹಾಕಿ ಅನ್ನ ಮಾಡಿರುತ್ತಾರೆ. ಇದನ್ನು ಕೂಳು ಎಂದು ಕರೆಯುತ್ತಾರೆ. ಈ ಕೂಳಿನ ಮಡಿಕೆಯನ್ನು ತಂದೆ ಸತ್ತರೆ ಹಿರಿಯ ಮಗನೂ, ತಾಯಿ ಸತ್ತರೆ ಕಿರಿಯ ಮಗನೂ ಹಿಡಿದು ಶವದ ಮುಂದೆ ಹೋಗುತ್ತಾನೆ. ಉಳಿದವರು ಹೆಣದ ಹಿಂದಿರುತ್ತಾರೆ. ಅವರ‍್ಯಾರೂ ಹೆಣವನ್ನು ಮುಟ್ಟಿಕೊಳ್ಳುವುದಿಲ್ಲ.

ಇಷ್ಟರಲ್ಲಾಗಲೆ ನಾಲ್ವರು ಹೋಗಿ ಗುಂಡಿ ಕೆರೆದಿರುತ್ತಾರೆ. ಆ ಗುಂಡಿಯನ್ನು “ಗುದ್ದು” ಎಂದು ಕರೆಯುತ್ತಾರೆ. ಈ ಗುದ್ದು ಸ್ವಲ್ಪ ದೂರ ಇರುವಾಗ ಚಟ್ಟವನ್ನು ಇಳಿಸುತ್ತಾರೆ. ಹೆಣದ ತಲೆಯ ಹತ್ತಿರ ಮೂರು ಸಣ್ಣ ಕಲ್ಲುಗಳನ್ನು ಇಟ್ಟು ಅದರ ಮೇಲೆ ಕೂಳಿನ ಮಡಿಕೆಯನ್ನಿಟ್ಟು, ಕೂಳು ತಂದವನು ಕೈಯಲ್ಲಿ ಹಿಡಿದ ಕೊಳ್ಳಿಯಿಂದ ಮಡಕೆಯನ್ನು ಒಡೆಯುತ್ತಾನೆ. ಆ ಕೊಳ್ಳಿಯನ್ನು ಅಲ್ಲೇ ಎಸೆಯುತ್ತಾರೆ. ಆ ಕೂಳನ್ನು ಎಲ್ಲ ದಿಕ್ಕುಗಳಿಗೂ ಚೆಲ್ಲುತ್ತಾನೆ. ನಂತರ ಚಟ್ಟ ಹೊತ್ತಿದ್ದವರು ಹಿಂದಿನವರು ಮುಂದಕ್ಕೂ, ಮುಂದಿನವರು ಹಿಂದಕ್ಕೂ ಚಟ್ಟವನ್ನು ಹೊತ್ತು ಗುದ್ದಿನ ಹತ್ತಿರಕ್ಕೆ ತರುತ್ತಾರೆ. ಹೆಣವನ್ನು ಪಕ್ಕಕ್ಕೆ ಇಳಿಸಿ ಪೂಜೆ ಮಾಡುತ್ತಾರೆ. ನಂತರ ಮೈಮೇಲೆ ಒಡವೆಗಳಿದ್ದರೆ ಬಿಚ್ಚಿಕೊಳ್ಳುತ್ತಾರೆ. ನಂತರ ಹೆಣವನ್ನೆತ್ತಿ ತೆಂಕ ದಿಕ್ಕಿಗೆ ತಲೆ ಇಟ್ಟು ಮಲಗಿಸುತ್ತಾರೆ. ಗುಂಡಿಯಲ್ಲಿ ಹೆಣದ ಮುಖ ಮೇಲಕ್ಕಿರುತ್ತದೆ. ಗಂಡ ಸತ್ತಾಗ ಹೆಂಡತಿಗೆ ಹೊಸ ಬಟ್ಟೆ ಉಡಿಸಿ, ಹೂವು ಮುಡಿಸಿ ಗುದ್ದಿನ ಹತ್ತಿರ ಕರೆದುಕೊಂಡು ಹೋಗುತ್ತಾರೆ. ಹೆಣಕ್ಕೆ ಮೊದಲು ಮನೆಯವರು ನಂತರ ಉಳಿದವರು ಒಂದೊಂದು ಹಿಡಿ ಮಣ್ಣು ಹಾಕುತ್ತಾರೆ. ನಂತರ ಗುದ್ದನ್ನು ಗುಂಡಿ ತೆಗೆದವರು ಮುಚ್ಚುತ್ತಾರೆ. ಆ ಗುದ್ದಿನ ಮೇಲೆ ಚಿಲ್ಲರೆ ನಾಣ್ಯಗಳನ್ನು ಹಾಕಿ ಪೂಜೆ ಮಾಡಿ, ಸತ್ತ ವ್ಯಕ್ತಿಯ ಹೆಂಡತಿಯ ಮುಡಿಯ ಹೂವನ್ನು ತೆಗೆಸಿ, ಕುಂಕುಮವನ್ನು ಅಳಿಸಿ ಬಳೆಗಳನ್ನು ಗುದ್ದಿನ ಮೇಲೆ ಚಚ್ಚುತ್ತಾರೆ. ಆ ಮೆಲೆ ಆಕೆ ಅವುಗಳನ್ನು ಹಾಕಿಕೊಳ್ಳುವಂತಿಲ್ಲ.

ಗುಂಡಿ ತೆಗೆಯಲು ಬಂದಿದ್ದವರಲ್ಲಿ ಮೊದಲು ಯಾರು ನೆಲಕ್ಕೆ ಹಾರೆ ಹಾಕಿರುತ್ತಾರೋ ಅವರು ಗುದ್ದಲಿಯನ್ನು ಕಳಚಿ ಹಿಂದು ಮುಂದಾಗಿ ಕಾವನ್ನು ಸೇರಿಸಿ ಗುಂಡಿಯು ಪಕ್ಕದಲ್ಲಿ ನಿಂತು ಒಂದು ಕಾಲನ್ನು ಎತ್ತಿ ಆ ಕಾಲ ಕೆಳಗಡೆಯಿಂದ, ಗುಡ್ಡೆಯ ಇನ್ನೊಂದು ಪಕ್ಕಕ್ಕೆ ಗುದ್ದಲಿಯನ್ನು ಎಸೆಯುತ್ತಾನೆ. ಹೀಗೆ ಮೂರು ಸಾರಿ ಎಸೆಯಬೇಕಾಗುತ್ತದೆ. ಎರಡೂ ಪಕ್ಕದಿಂದಲೂ ಎಸೆಯುತ್ತಾನೆ. ಗುಂಡಿ ತೆಗೆಯಲು ಬಂದವರಿಗೆ ಗುಂಡಿಯ ಹತ್ತಿರ ಹೊಸ ಗಾಯಗಳಾಗಬಾರದು. ಒಂದು ವೇಳೆ ಆದರೆ ಬೇಗ ಗುಣವಾಗುವುದಿಲ್ಲ ಎನ್ನುತ್ತಾರೆ. ನಂತರ ಅಲ್ಲಿಂದ ಎಲ್ಲರೂ ನೀರಿನ ಹತ್ತಿರ ಹೋಗಿ ಕೈಕಾಲು ಮುಖ ತೊಳೆದು ಮನೆಯ ಹತ್ತಿರ ಬರುತ್ತಾರೆ. ಅಷ್ಟರಲ್ಲಿ ಸತ್ತವರ ಮನೆಯಲ್ಲಿ ಒಂದು ಹರಳೆಣ್ಣೆ ದೀಪವನ್ನು ಹೊತ್ತಿಸಿ ಬಾಗಿಲಿನಲ್ಲಿ ನಿಂತವರಿಗೆ ಕಾಣುವಂತೆ ಒಳಗೆ ಇಟ್ಟಿರುತ್ತಾರೆ. ಆ ದೀಪವನ್ನು ನೋಡಿದವರು ತಮ್ಮ ತಮ್ಮ ಮನೆಯೊಳಗೆ ಹೋಗುತ್ತಾರೆ. ಆದರೆ ಗುಂಡಿ ತೆಗೆಯಲು ಉಪಯೋಗಿಸಿದ ಹಾರೆ-ಗುದ್ದಲಿಗಳನ್ನು ಕೂಳಿನ ಮಡಕೆ ಹಿಡಿದವನು ತರುತ್ತಾನೆಂದು ಗೋಪಾಳದವರು ಹೇಳಿದರು. ಇವರೂ ಕೂಡ ಹೆಣದ ತಲೆಯನ್ನು ಗುದ್ದಿನಲ್ಲಿ ಉತ್ತರಕ್ಕೆ ಇಡುತ್ತಾರಂತೆ.

ಕನ್ನಡ ಜಾನಪದ ವಿಶ್ವಕೋಶದಲ್ಲಿ “ಅಲೆಮಾರಿ ಕೊರವ ಸತ್ತು ಹೋದರೆ ಸಾಧ್ಯವಾದಷ್ಟು ಬೇಗ ತಲೆಯನ್ನು ಉತ್ತರಕ್ಕಿಟ್ಟು ಹೂತು ಬಿಡುವರು”

[1] ಎಂದು ದಾಖಲಿಸಿದರೆ ಆರ್.ಇ. ಎಂಥೋವನ್ ಅವರು “The dead are either burnt or buried, burying being more common”[2] ಎಂದಿದ್ದಾರೆ. “ವಿಶಾಕಪಟ್ಟಣದಲ್ಲಿ ಯರುಕಳರು ಶವವನ್ನು ನಗ್ನವಾಗಿ ಸುಡುವರೆಂದು ಹಯವದನ ರಾಯರು ಹೇಳಿರುವರು”[3] ಆದರೆ ದಕ್ಷಿಣ ಕರ್ನಾಟಕದ ಕಡೆಗೆ ಹೆಣವನ್ನು ಹುಗಿಯುವುದೇ ರೂಢಿ. ಈ ಕಡೆಯ ಪದ್ಧತಿಯನ್ನು ಶ್ರೀ ಎಚ್‌.ವಿ. ನಂಜುಂಡಯ್ಯ ಮತ್ತು ಅನಂತಕೃಷ್ಣ ಐಯ್ಯರ್ ಅವರುಗಳು “The daed are buried. As soon as life is exting, the body is washed, and a Nama Marse in put on the forehead if a male and a kumkuma one if a female. Then it is covered with a new cloth and carried to the burial ground on a bier of bamboos. The carriers must, if possible, be all related as agnates to the deceased. As usual, the boody is placed on the ground when half way to the gurial ground, and the chief mourner going round it three times from right to left; breaks a new pot, standing by the head of the corpse and throws rice round about the bier”[4] ನಂತರ ಹೆಣ ಹೊತ್ತವರು ಹೆಗಲು ಬದಲಾಯಿಸುವುದು, ಗುಂಡಿಗೆ ಹೆಣವನ್ನು ಇಳಿಸಿ ಪೂಜೆ ಮಾಡುವುದು, ತೆಂಕ ದಿಕ್ಕಿಗೆ ತಲೆ ಇಡುವುದು, ನಂತರ ನೀರಿನ ಹತ್ತಿರ ಹೋಗಿ ಕೈಕಾಲು ತೊಳೆದು ಸಾವಿನ ಮನೆಯ ದೀಪ ನೋಡುವ ವಿವರಗಳನ್ನು ಹೇಳಿದ್ದಾರೆ.

ಹಿಂದೆ ಹೆಣ ಹೊತ್ತವರು ಅಂದೆ ಸ್ನಾನ ಮಾಡಿ ಒಳಗೆ ಬರುತ್ತಿದ್ದರಂತೆ. ತಲೆಗೂಳನ್ನು ಕುಕ್ಕಿದವನು ಮಾತ್ರ ಐದು ದಿನ ಹೊರಗೆ ಇರಬೇಕಾಗುತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಶಿವಮೊಗ್ಗದ ಪಕ್ಕದ ಗೋಪಾಳದ ಕೊರಮರು ಹೇಳುವ ಹಾಗೆ ಹಿಂದೆ ಹೆಣವನ್ನು ಕಂಬಳಿಯಲ್ಲಿ ಸುತ್ತಿ ಒಂದು ದೊಣ್ಣೆಗೆ ಕಟ್ಟಿ ಹಿಂದೆ, ಮುಂದೆ ಇಬ್ಬರು ಹೊತ್ತು ಸಾಗಿಸುತ್ತಿದ್ದರಂತೆ. ಹೆಣ ಹೊತ್ತವರು ಐದು ದಿನ ಒಳಗೆ ಬರುತ್ತಿರಲಿಲ್ಲವಂತೆ. ಅವರಿಗೆ ಅಷ್ಟು ದಿನವೂ ಕಲ್ಲ ಮೇಲೆ ಊಟ ಹಾಕುತ್ತಿದ್ದರಂತೆ. ಅವರು ಒಂದು ಗುಂಡಿ ಮಾಡಿಕೊಂಡು ಎಂಜಲ ಕೈಗಳನ್ನು ತೊಳೆಯುತ್ತಿದ್ದರಂತೆ. ಕೈಬಾಯಿ ತೊಳೆದ ಮೇಲೆ ಕೋಳಿ ನಾಯಿ ಎಂಜಲನ್ನು ತಿಂದು ಮನೆಯೊಳಗೆ ಬರುತ್ತವೆ ಎಂದು ಗುಂಡಿಯನ್ನು ಮುಚ್ಚುತ್ತಿದ್ದರಂತೆ.

ಚಿಕ್ಕನಾಯಕನಹಳ್ಳಿ ತಾಲೂಕು ಸೋರಲಮಾವಿನ ಓದೋ ಹನುಮಯ್ಯನವರು ಹೇಳುವಂತೆ “ಹಿಂದೆ ಶವ ಹೊತ್ತವರು ಮನೆಯಿಂದ ಹೊರಗೆ ಐದು ದಿನ ಇರಬೇಕಾಗುತ್ತಿತ್ತು. ಕೈಯಲ್ಲಿ ಮುದ್ದೆ ತೆಗೆದುಕೊಂಡು ಅದರಲ್ಲಿ ಗುಂಡಿ ಮಾಡಿಕೊಂಡು ಸಾರು ಹಾಕಿಸಿಕೊಂಡು ಊಟ ಮಾಡಬೇಕಾಗುತ್ತಿತ್ತು. ಮತ್ತು ಹೆಣದ ತಲೆ ತೆಂಕದಿಕ್ಕಿಗೆ ಇರುವಂತೆ ಮಲಗಿಸುತ್ತಿದ್ದರು” ಎನ್ನುತ್ತಾರೆ. “ಯಾರಾದರೂ ಸತ್ತ ತಕ್ಷಣ ಕೊರಮರು ತಮ್ಮ ಬೀಡನ್ನು ಬೇರೆ ಕಡೆ ಬದಲಾಯಿಸುವರು. ಅಲೆಮಾರಿ ಕೊರವರು ಶವಗಳನ್ನು ರಾತ್ರಿ ಹೊತ್ತು ಎಲ್ಲಿ ಹೂಳುತ್ತಾರೆ ಎಂಬುದೇ ಯಾರಿಗೂ ಗೊತ್ತಾಗುವುದಿಲ್ಲ. ಸತ್ತ ಕೋತಿಯನ್ನಾಗಲಿ, ಕೊರವರ ಸ್ಮಶಾನವನ್ನಾಗಲಿ ಯಾರು ಕಂಡಿದ್ದಾರೆ” ಎಂಬ ಗಾದೆಯೂ ಉಂಟು”[5] ಎಂಬ ದಾಖಲೆಗಳೂ ಸಿಕ್ಕುತ್ತವೆ. ಈ ಜನ ಅಲೆಮಾರಿಗಳಾಗಿದ್ದಾಗ ಕದ್ದುಮುಚ್ಚಿ ಹೆಣಗಳನ್ನು ಗುಪ್ತ ಸ್ಥಳದಲ್ಲಿ ಸುಡುತ್ತಿದ್ದುದು ಅಥವಾ ಹುಗಿಯುತ್ತಿದ್ದುದು ಇದ್ದಿರಬಹುದಾದರೂ ಇಂದು ಹಾಗೆ ಯಾರೂ ಮಾಡುವುದಿಲ್ಲ. ದಕ್ಷಿಣ ಕರ್ನಾಟಕದಲ್ಲಿ ಇವರು ತಮಗೇ ಮೀಸಲಾದ ಸ್ಮಶಾನಗಳನ್ನು ಮಾಡಿಕೊಂಡಿಲ್ಲ. ತಮ್ಮ ಜಮೀನು ಅಥವಾ ಸರ್ಕಾರಿ ಜಾಗದಲ್ಲಿ ಹುಗಿಯುತ್ತಾರೆ.

ಸತ್ತ ವ್ಯಕ್ತಿಯ ಸುದ್ದಿಯನ್ನು ಬೇರೆ ಸ್ಥಳಗಳಲ್ಲಿರುವ ಬಂಧುಗಳಿಗೆ ಹೊಲೆಯರವನೇ ಹೋಗಿ ಹೇಳಬೇಕೆಂಬ ನಿಯಮವೇನೂ ಕಂಡುಬರುವುದಿಲ್ಲ. “ಮೈಸೂರು ಪ್ರಾಂತ್ಯದ ಕೊರವರ ಶವವನ್ನು ಹೊರಲು ಜನ ಸಿಗುವುದೇ ಕಷ್ಟ ಎಂದು ತಿಳಿದುಬರುತ್ತದೆ. ಒಂದು ವೇಳೆ ಸತ್ತ ವ್ಯಕ್ತಿಯ ಹೆಂಡತಿ ಬಾಲಕಿಯಾಗಿದ್ದಲ್ಲಿ ಅದೇ ದಿನ ಅವಳನ್ನು ಯಾರಾದರೂ ಮದುವೆಯಾಗಿ ಅವಳ ಶವ ಸಂಸ್ಕಾರ ಯಾತ್ರೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸಂಪ್ರದಾಯವಾಗಿದೆ. ಎರಡು ಅಡಿ ಆಳದ ತಟ್ಟಿಯಾಕಾರದ ಗೋರಿಯನ್ನು ತೆಗೆದು ಅದರಲ್ಲಿ ಶವವನ್ನು ಮಲಗಿಸುವರು. ಅದರ ಮೇಲೆ ಚದುರಿದ ಹಾಗೆ ಮಣ್ಣನ್ನು ತುಂಬಿಸಿ ಮುಖ್ಯ ಶೋಕತಪ್ತ ವ್ಯಕ್ತಿ ಸೀಳಿದ ಬೊಂಬಿನ ತುದಿಯಲ್ಲಿಟ್ಟ ಬೆಂಕಿಯ ಮಡಿಕೆಯನ್ನು ಒಡೆದು ಹಾಕಿ ಸಮಾಧಿಯ ಮೇಲೆ ನೀರಿನ ಮಡಕೆಯನ್ನು ಇರಿಸುವರು. ರಾತ್ರಿ ವೇಳೆ ನರಿಗಳು ಬಂದು ಕೊರವರ ಶವವನ್ನು ತಿಂದು, ನೀರು ಕುಡಿದು ತಮ್ಮ ಹಸಿವನ್ನು ತೀರಿಸಿಕೊಳ್ಳುತ್ತವೆ. ಇದರಿಂದ ಅವನ ಆತ್ಮ ಬಿಡುಗಡೆ ಪಡೆದು ತನ್ನ ರಾಜ್ಯವನ್ನು ಸೇರಿಕೊಳ್ಳುತ್ತದೆ. ಇನ್ನು ಮೇಲೆ ಅದರಿಂದ ಮಕ್ಕಳು, ಹೆಂಗಸರು, ಗಂಡಸರು ಅಥವಾ ದನಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಭಾವಿಸುವರು. ಇದನ್ನು ಶುಭ ಶಕುನ ಎಂದು ನಂಬುವರು. ಆರನೆಯ ದಿನ ಮುಖ್ಯ ಶೋಕತಪ್ತ ವ್ಯಕ್ತಿ ಹುಂಜವನ್ನು ಕೊಂದು, ಅದರ ರಕ್ತದಲ್ಲಿ ಅನ್ನವನ್ನು ಕಲೆಸಿ ಅದನ್ನು ವೀಳ್ಯೆದೆಲೆ ಮತ್ತು ಅಡಿಕೆಯೊಂದಿಗೆ ಸಮಾಧಿಯ ಬಳಿ ಇರಿಸುವನು. ಕಾಗೆ ಏನಾದರೂ ಅದನ್ನು ಹೊತ್ತುಕೊಂಡು ಹೋದದ್ದೇ ಆದರೆ ಎಲ್ಲವೂ ತೃಪ್ತಿಕರವಾಗಿ ನೆರವೇರಿತು ಎಂದು ಭಾವಿಸುತ್ತಾರೆ.[6] ಎಂದು ಕನ್ನಡ ಜಾನಪದ ವಿಶ್ವಕೋಶದಲ್ಲಿ ಹೇಳಿದೆ. ಇದು ತೀರ ಹಿಂದಿನ ದಾಖಲೆ ಇರಬಹುದು. ಇಂಥ ಪದ್ಧತಿಯ ಬಗೆಗೆ ದಕ್ಷಿಣ ಕರ್ನಾಟಕದಲ್ಲಿಯೂ ಸಂಚಾರಿ ಕೊರವನೊಬ್ ಸತ್ತಾಗ, ಅಪರಿಚಿತ ಮತ್ತು ಸಾಮಾಜಿಕವಾಗಿ ಕೀಳು ಸ್ಥಾನದಲ್ಲಿದ್ದ ಆತನ ಶವವನ್ನು ಬೇರೆ ಜಾತಿಯವರು ಹೊರದೇ ಹೋಗಿರಬಹುದು. ಕೊರಮರು ತಮ್ಮವರ ಶವವನ್ನು ಸಂಸ್ಕಾರ ಮಾಡದೆ, ಹೆಣವನ್ನು ಹೊರಲು ಬೇರೆಯವರನ್ನು ಕರೆಯುತ್ತಿದ್ದುದೂ ಕೂಡ ಈಗ ಕೇಳಿಬರುವುದಿಲ್ಲ. ಅದಲ್ಲದೆ ಗಂಡ ಸತ್ತರೆ ಆ ಬಾಲೆಯನ್ನು ಅದೇ ದಿನ ಮದುವೆಯಾಗುವ ವ್ಯಕ್ತಿ ಸಿಕ್ಕುತ್ತಿದ್ದುದೂ ಅಷ್ಟೂ ಸುಲಭವಲ್ಲ. ಆ ಮೇಲೆ ಹೇಳಿದ ವಿಶಿಷ್ಟ ಪದ್ಧತಿಗಳು ಕೊರಮರು ಅಲೆಮಾರಿ ಜನಾಂಗವಾಗಿಯೇ ಬಾಳುತ್ತಿದ್ದ ಕಾಲವೆಂದು ಹೇಳಬಹುದು. ಕಂಬಳಿಯಲ್ಲಿ ಹೆಣ ಹೊರುವ, ಗುಪ್ತವಾಗಿ ಸಂಸ್ಕಾರ ಮಾಡುವ, ಬಾಲವಿಧವೆಯನ್ನು ಗಂಡ ಸತ್ತ ದಿನವೇ ಮರುಮದುವೆ ಮಾಡಿ ಸಾಮಾಜಿಕ ರಕ್ಷಣೆ ಒದಗಿಸುವ ಕೆಲವು ವಿಶೇಷ ಆಚರಣೆಗಳು ಇಂದು ವಿಚಿತ್ರವೆನಿಸಿದರೂ ಅಂದಿನ ಸಂದರ್ಭದಲ್ಲಿ ಇವು ಅನಿವಾರ್ಯವಾಗಿರಬಹುದು. ಆಯಾ ಸಂದರ್ಭದಲ್ಲಿ ಅವುಗಳಿಗೂ ಅರ್ಥವಿದೆ.

ಗುಡ್ಡೆ ಶಾಸ್ತ್ರ:

ಒಬ್ಬ ವ್ಯಕ್ತಿ ಸತ್ತ ಮೂರನೆಯ ದಿನ ಗುಡ್ಡ ಶಾಸ್ತ್ರ ಮಾಡುತ್ತಾರೆ. ಆ ದಿನ ಸತ್ತ ವ್ಯಕ್ತಿಯ ಮನೆಯವರು ಬಂಧುಗಳ ಜೊತೆಯಲ್ಲಿ ಸಮಾಧಿಯ ಹತ್ತಿರ ಹೋಗುತ್ತಾರೆ. ಮನೆಯಲ್ಲಿ ಮಾಡಿಕೊಂಡು ಹೋದ ಫಲಾಹಾರ, ಹೂವು, ಹಣ್ಣು ಇಟ್ಟು ಕಾಯೊಡೆದು ಪೂಜೆ ಮಾಡುತ್ತಾರೆ. ಪೂಜೆಯಾದ ಮೇಲೆ ಫಲಾಹಾರವನ್ನು ಬಂದಿದ್ದವರೆಲ್ಲರಿಗೂ ಹಂಚಿ ತಿನ್ನುತ್ತಾರೆ. ಬರುವಾಗ ನೀರಿನ ಹತ್ತಿರ ಹೋಗಿ ಕೈಕಾಲು ಮುಖ ತೊಳೆದು ಮನೆಗೆ ಬರುತ್ತಾರೆ.

ಹೆಗಲಿಳಿಸುವ ಶಾಸ್ತ್ರ:

ಇದು ಐದನೆಯ ದಿನದಲ್ಲಿ ಮಾಡುವ ಶಾಸ್ತ್ರ. ಹೆಗಲಿಳಿಸುವುದು ಎಂದರೆ ಹೆಣವನ್ನು ಹೊತ್ತುಕೊಂಡು ಹೋಗಿದ್ದ ನಾಲ್ವರಿಗೆ ಸ್ನಾನ ಮಾಡಿಸಿ, ತಲೆಗೆ ಎಣ್ಣೆ ಹಾಕುತ್ತಾರೆ. ಈ ಜನರಲ್ಲಿ ಸೂತಕ, ಮಟ್ಟುಗಳಿಗೆ ತುಂಬಾ ಮಹತ್ವವಿದೆ. ಹೆಣವನ್ನು ಹೊತ್ತುಕೊಂಡು ಹೋದವರು ಐದು ದಿನಗಳವರೆಗೂ ಮನೆಯ ಹೊರಗೇ ಇರಬೇಕು. ಬೇರೆಯವರು ಮುಟ್ಟಿಸಿಕೊಳ್ಳುವಂತಿಲ್ಲ. ಐದನೆಯ ದಿನ ಸ್ನಾನವಾದ ಮೇಲೆ ಗೀರುಂಡೆ(ಬಿಳಿಯ ನಾಮ) ಹಾಕಿ, ತುಪ್ಪ ಮತ್ತು ಗೋಮೂತ್ರವನ್ನು ಬೆರೆಸಿ ಒಂದು ಲೊಟದಲ್ಲಿ ಹಾಕಿಕೊಂಡು, ಗರಿಕೆ ಹುಲ್ಲಿನಿಂದ ಆ ಮಿಶ್ರಣವನ್ನು ತೆಗೆದುಕೊಳ್ಳುತ್ತಾ ಆ ನಾಲ್ಕು ಜನರಿಗೂ ಹೆಗಲಿನಿಂದ ಕೆಳಕ್ಕೆ ಐದೈದು ಬಾರಿ ಎಳೆಯುತ್ತಾರೆ. ಅಲ್ಲಿಗೆ ಅವರ ಹೆಗಲನ್ನು ಇಳಿಸಿದಂತೆ. ಹೆಗಲಿಳಿಸಿದ ಮೇಲೆ ಅವರಿಗೆ ಕಟ್ಟಿಲ್ಲ, ಮುಟ್ಟಿಲ್ಲ. ಆ ದಿನ ಅವರ ಮನೆಯಲ್ಲಿ ಆ ನಾಲ್ವರಿಗೂ ಊಟ ಮಾಡಿಸುತ್ತಾರೆ. ಅವರಿಗೆ ಕುಡಿಯುವಷ್ಟು ಹೆಂಡ ಕುಡಿಸುತ್ತಾರೆ. ಬುಡಕಟ್ಟಿನ ಆಚರಣೆಗಳತ್ತ ಬೆರಳು ತೋರಿಸುವ “ಸತ್ತ ಕೋತಿಯನ್ನಾಗಲಿ, ಕೊರವರ ಸ್ಮಶಾನವನ್ನಾಗಲಿ ಯಾರು ಕಂಡಿದ್ದಾರೆ” ಎಂಬ ಜಾನಪದದ ಹೇಳಿಕೆ ಇಲ್ಲಿ ಸತ್ಯವಿರುವಂತೆ ತೋರುತ್ತದೆ. ಮಂಗದ ಶವವನ್ನು ಗುಂಪಿನ ಎಲ್ಲ ಮಂಗಗಳೂ ಸಾಮೂಹಿಕ ರೋದನದ ಮೂಲಕ ಹೆಣವನ್ನು ಹೊತ್ತು ದೂರ ಸಾಗಿಸುವುದನ್ನು ಗಮನಿಸಿದರೆ ಅಲೆಮಾರಿಗಳಾದ ಕೊರಮರ ಹೆಣ ಅಲ್ಲಲ್ಲಿಯೇ ಬಹುಶಃ ಗುಪ್ತವಾಗಿ ಸಂಸ್ಕಾರಗೊಳಿಸಲಾಗುತ್ತಿತ್ತು ಎಂದು ತೋರುತ್ತದೆ. ಇವೆಲ್ಲ ಬುಡಕಟ್ಟು ಜನರ ಆಚರಣೆಯ ಪಳೆಯುಳಿಕೆಗಳು. ಸಂಸ್ಕೃತೀಕರಣಗೊಂಡ ಮೇಲೆ ಇವು ಬದಲಾಗಿರುವುದು ಸ್ವಾಭಾವಿಕವೇ ಆಗಿದೆ.

ಹೆಗಲಿಳಿಸುವ ದಿನ ಸಾವಿನ ಮನೆಯವರೆಲ್ಲರೂ ಸ್ನಾನ ಮಾಡಿ ಒಂದು ಕೋಳಿ, ಶಕ್ತಿಯಿದ್ದರೆ ಹಂದಿ ಕಡಿದು ಅದರ ಹೊಟ್ಟೆಯ ಭಂಡಾರವನ್ನು ತೆಗೆದು ಬೇರೆ ಸಾರು ಮಾಡುತ್ತಾರೆ. ಇದರ ಜೊತೆಗೆ ತಾವು ಮಾಡಿದ ಇತರ ಅಡಿಗೆಯನ್ನು ಸ್ವಲ್ಪ ಸ್ವಲ್ಪ ತೆಗೆದುಕೊಂಡು ಜೊತೆಗೆ ಹೂವು, ಹಣ್ಣು, ಕಾಯಿ ಮುಂತಾದ ಪೂಜಾ ಸಾಮಾನುಗಳನ್ನು ತೆಗೆದುಕೊಂಡು ಊರ ಹೊರಗಿನ ಬಯಲಿಗೆ ಹೋಗುತ್ತಾರೆ. ಬಯಲಿನಲ್ಲಿ ಒಂದು ಕಡೆ ಎಡೆ ಹಾಕಿ ಪೂಜೆ ಮಾಡುತ್ತಾರೆ. ನಂತರ ಎಲ್ಲರೂ ದೂರ ಹೋಗಿ ಕುಳಿತುಕೊಳ್ಳುತ್ತಾರೆ. ಕಾಗೆ ಬಂದು ಆ ಎಡೆಯನ್ನು ಮುಟ್ಟಬೇಕು. ಕೆಲವರು ಅಲ್ಲಿಗೆ ಬಂದ ಜನರನ್ನು ಸಾಲಾಗಿ ಕೂರಿಸಿ ಅವರ ಮುಂದೆ ಎಲೆ ಹಾಕಿ ಬಡಿಸುತ್ತಾರೆ. ಅವರೆಲ್ಲರೂ ಊಟ ಮಾಡುವವರಂತೆ ನಟಿಸಿ ಎದ್ದು ಹೋಗಿ ದೂರ ಕುಳಿತುಕೊಳ್ಳುತ್ತಾರೆ. ಕಾಗೆಗಳು ಬೇಗ ಬಂದು ಆ ಎಲೆಗಳ ಆಹಾರವನ್ನು ತಿನ್ನಲಿ ಎಂದು. ಕಾಗೆಗಳು ಆ ಅನ್ನವನ್ನು ತಿಂದರೆ ಸತ್ತವನಿಗೆ ಮೋಕ್ಷ ಸಿಗುತ್ತದೆ ಎಂದು ನಂಬುತ್ತಾರೆ. ಮೇಲ್ವರ್ಗದ ಬ್ರಾಹ್ಮಣರ ಈ ಹೊಲೆ, ಶ್ರಾದ್ಧ, ಪಿಂಡ ಮುಂತಾದವುಗಳು ಅಲ್ಲಲ್ಲಿ ನೆಲೆನಿಂತ ಕೊರಮರ ಆಚರಣೆಗಳಾಗಿರುವುದನ್ನು ಗಮನಿಸಿದರೆ, ಮೇಲ್ವರ್ಗದ ಸಂಸ್ಕೃತಿ ಕೆಳಮುಖವಾಗಿ ಪ್ರವಹಿಸಿ ಬುಡಕಟ್ಟು ಜನಾಂಗಗಳ ಮೂಢನಂಬಿಕೆ, ಆಚರಣೆಗಳನ್ನು ಪರಿವರ್ತಿಸಿ ಬಿಡುವ ಪ್ರಕ್ರಿಯೆ ಅತ್ಯಂತ ಗಮನಾರ್ಹವಾದುದು. ಆದರೂ ಪ್ರಕೃತಿಯ ಮಕ್ಕಳಾಗಿ ಬದುಕಿದ ಪಶು, ಪಕ್ಷಿ ಪ್ರಾಣಿಗಳೊಡನೆ ಸಮರಸ ಬಾಳ್ವೆ ಮಾಡುತ್ತ ಬಂದಿದ್ದ ಈ ಬುಡಕಟ್ಟು ಜನಾಂಗದ ಕೆಲವಾದರೂ ಆಚರಣೆಗಳಿಗೆ ಅರ್ಥವಿದೆ. ಅನುಸರಣೆಗೆ ಯೋಗ್ಯವಾಗಿವೆ ಎಂಬುದನ್ನು ಮನಗಂಡಿರುವುದನ್ನು ಗಮನಿಸಬೇಕು.

ಕಾಗೆಗಳು ಮುಟ್ಟುವವರೆಗೂ ಕಾಯುತ್ತಾರೆ. ಕಾಗೆಗಳು ದೂರದಲ್ಲಿದ್ದರೂ ಈ ಎಡೆ ಹಾಕಿದ ಕಡೆ ಬರುವಂತೆ ಬೆದರಿಸುತ್ತಾರೆ. ಕಡೆಗೂ ಕಾಗೆಗಳು ಮುಟ್ಟದಿದ್ದರೆ, ಆ ಎಡೆಯನ್ನು ಬಸವನಿಗೆ ಕೊಡುತ್ತಾರೆ. ಇಲ್ಲವೆ ನೀರಿನಲ್ಲಿ ಬಿಡುತ್ತಾರೆ. ಹಿಂದೆ ಸತ್ತವರ ನೆನಪಿಗಾಗಿ ಅವರ ಹೆಸರಿನಲ್ಲಿ ತಾಳಿಗಳನ್ನು ಮಾಡಿಸಿ ಇಟ್ಟುಕೊಳ್ಳುತ್ತಿದ್ದರು. ಆ ತಾಳಿಗಳನ್ನು ವರ್ಷಕ್ಕೊಮ್ಮೆ ಮಾಡುವ ಹಿರಿಯರಿಗೆ ಎಡೆ ಹಾಕುವ ಹಬ್ಬದಲ್ಲಿ ಕಳಸಕ್ಕೆ ಕಟ್ಟಿ ಪೂಜೆ ಮಾಡುತ್ತಾರೆ. ಆದರೆ ಇತ್ತೀಚೆಗೆ ಈ ತಾಳಿಗಳನ್ನು ಮಾಡಿಸುವ ಪದ್ಧತಿ ನಿಂತು ಹೋಗಿದೆ.

ತಿಥಿ:

ತಿಥಿಯನ್ನು ವ್ಯಕ್ತಿ ಸತ್ತ ಹನ್ನೆರಡನೆ ದಿನಕ್ಕೆ ಮಾಡುತ್ತಾರೆ. ಅನುಕೂಲವಾಗದಿದ್ದರೆ ತಿಂಗಳಿಗೂ ಮಾಡುತ್ತಾರೆ. ತಿಥಿಯ ದಿನ ಮನೆಯನ್ನು ಗುಡಿಸಿ, ಸಾರಿಸಿ ಶುಚಿಗೊಳಿಸುತ್ತಾರೆ. ಆ ದಿನ ಕುಲೊಸ್ಥರಿಗೆ ಊಟ ಹಾಕುತ್ತಾರೆ. ಇದ್ದವರು ಹೆಚ್ಚು ಹಂದಿಗಳನ್ನು ಕಡಿದು ಅಡಿಗೆ ಮಾಡಿದರೆ ಬಡವರು ತಮ್ಮ ಯೋಗ್ಯತಾನುಸಾರ ಊಟ ಕೊಡುತ್ತಾರೆ. ಸಾಮಾನ್ಯವಾಗಿ ಮಾಂಸದ ಊಟವೇ ಇರುತ್ತದೆ. ಇತ್ತೀಚೆಗೆ ಕೆಲವರು ಸಿಹಿಯೂಟವನ್ನು ಕೊಡುತ್ತಾರೆ. ವ್ಯಕ್ತಿಯ ಹೆಸರಿನಲ್ಲಿ ಉಂಡು ಸಂತೋಷಪಟ್ಟರೆ ಸತ್ತವ್ಯಕ್ತಿ ಆತ್ಮಕ್ಕೆ ಶಾಂತಿ ಸಿಕ್ಕುತ್ತದೆ ಎನ್ನುವ ನಂಬಿಕೆ ಇವರದು. ಮನೆಯಲ್ಲಿ ಆ ದಿನ ಕಳಸ ಹೂಡಿ ಅದರ ಮುಂದೆ ಮಾಡಿದ ಅಡಿಗೆಯನ್ನೆಲ್ಲ ಇಟ್ಟು ಪೂಜಿಸುತ್ತಾರೆ. ಮತ್ತು ಸಮಾಧಿಯ ಹತ್ತಿರ ಹೋಗಿ ಆ ಸಮಾಧಿಯ ಮುಂದೆ ಎಡೆ ಹಾಕಿ ಪೂಜಿಸಿ, ಎಡೆಯಲ್ಲಿ ಸ್ವಲ್ಪ ಭಾಗವನ್ನು ಕಾಗೆಗೆ ಇಟ್ಟು ಉಳಿದುದನ್ನು ತಾವು ತಿಂದು ಬರುತ್ತಾರೆ.

ಹಿಂಡು ಗೂಡಿಸುವುದು:

ಒಬ್ಬ ವ್ಯಕ್ತಿ ಸತ್ತ ಮೇಲೆ ಹೇಳಿದ ಎಲ್ಲಾ ಕ್ರಿಯೆಗಳು ಮುಗಿದ ಮೇಲೆ ಸತ್ತವನು ತಮ್ಮನ್ನು ಕಾಡುವುದಿಲ್ಲವೆಂದು ತಿಳಿಯುತ್ತಾರೆ. ಮತ್ತು ಅಂತ್ಯಕ್ರಿಯಾದಿಗಳನ್ನು ಸರಿಯಾಗಿ ಆಚರಿಸದಿದ್ದರೆ ಸತ್ತವರು ಕಾಡುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದಲೇ ಮಾಡುವ ಕ್ರಿಯೆ ಅಥವಾ ಶಾಸ್ತ್ರಗಳನ್ನು ಶ್ರದ್ಧೆಯಿಂದ ಮಾಡುತ್ತಾರೆ. ಸತ್ತ ವ್ಯಕ್ತಿಯ ಆತ್ಮವನ್ನು ಆ ವರ್ಷದ ಹಿರಿಯರ ಹಬ್ಬದಲ್ಲಿ ಹಿಂಡುಗೂಡಿಸುತ್ತಾರೆ. ಅಂದರೆ ತಮ್ಮ ಪೂರ್ವಜರ ಆತ್ಮಗಳೊಂದಿಗೆ ಸೇರಿಸುವುದು. ಕೆಲವರು ದೀಪಾವಳಿಯಲ್ಲಿ ಹಿರಿಯರ ಹಬ್ಬ ಮಾಡಿದರೆ ಮತ್ತೆ ಕೆಲವರು ದಸರಾದಲ್ಲಿ ಹಿರಿಯರಿಗೆ ಎಡೆ ಹಾಕುತ್ತಾರೆ. ಅಲ್ಲಿಗೆ ಹಿಂಡುಗೂಡಿಸಿದಂತಾಯಿತು. ಮುಂದೆ ಪ್ರತಿವರ್ಷ ಪೂಜೆ ನಡೆಯುತ್ತಾ ಹೊಗುತ್ತದೆ.

ಸಣ್ಣ ಮಕ್ಕಳು ಮತ್ತು ಮದುವೆಯಾಗದೆ ಇದ್ದವರು ಸತ್ತರೆ ಅವರನ್ನೂ ಹೂಳುತ್ತಾರೆ. ತಿಥಿಯೊಂದನ್ನು ಬಿಟ್ಟು ಇತರೆ ಎಲ್ಲಾ ಶಾಸ್ತ್ರಗಳನ್ನು ಆಚರಿಸುತ್ತಾರೆ. ಮೂರನೆಯ ದಿನದ ಶಾಸ್ತ್ರಕ್ಕೆ ಮನೆಯಿಂದ ಫಲಾಹಾರ ಮಾಡಿಕೊಂಡು ಕುಲೊಸ್ಥರೊಂದಿಗೆ ಸಮಾಧಿಯ ಹತ್ತಿರ ಹೋಗಿ ಪೂಜೆ ಮಾಡುತ್ತಾರೆ. ಸಮಾಧಿಯ ಮೇಲೆ ಹಾಲೆರೆಯುತ್ತಾರೆ. ತೆಗೆದುಕೊಂಡು ಹೋಗಿದ್ದ ಫಲಾಹಾರವನ್ನು ಎಲ್ಲರಿಗೂ ಹಂಚಿ ತಾವೂ ತಿಂದು ಮನೆಗೆ ಬರುತ್ತಾರೆ.

ಕೊರಮ ಬುಡಕಟ್ಟಿನಲ್ಲಿ ಗರ್ಭಿಣಿಯರು, ಬಾಣಂತಿಯರು ಸತ್ತಾಗ ಅವರನ್ನು ಹಿಂದೆ ಕಾಡಿಗೆಸೆಯುತ್ತಿದ್ದರಂತೆ. ಮತ್ತು ಹೆಣದ ಹತ್ತಿರ ಒಂದು ಮಡಕೆಯಲ್ಲಿ ನೀರನ್ನು ಇಟ್ಟು ಬರುತ್ತಿದ್ದರಂತೆ. ಕೆಲವರು ಬಸುರಿ ಸತ್ತರೆ ಸುಡುತ್ತಿದ್ದರಂತೆ. ಹೂಳುವುದೂ ಇತ್ತಂತೆ. ಗರ್ಭಿಣಿ ಸತ್ತರೆ ಆಕೆಯ ಹೊಟ್ಟೆಯ ಮೇಲೆ ಬಾಳೆ ಎಲೆಯನ್ನು ಹಾಸಿ ಆ ಎಲೆಯನ್ನು ಉದ್ದಕ್ಕೆ ಸೀಳುತ್ತಿದ್ದರಂತೆ. ಆ ಎಲೆಯನ್ನು ಸೀಳಿದರೆ ಆಕೆಯ ಹೊಟ್ಟೆ ಸೀಳಿದಂತೆ ಎಂದು ನಂಬುತ್ತಿದ್ದರಂತೆ. ಆಕೆಯ ಭಾರವನ್ನು ಇಳಿಸಬೇಕು ಎಂಬ ವಿಚಾರದಿಂದಾಗಿಯೇ ಇಂಥ ಆಚರಣೆಯನ್ನು ರೂಢಿಸಿಕೊಂಡಿರಬೇಕು. ಹಿಂದೆ ಗರ್ಭಿಣಿ ಸತ್ತರೆ ಆಕೆಯ ಗಂಡ ಯಾರೊಡನೆಯೂ ಮಾತನಾಡದಂತೆ ಶವ ಸಂಸ್ಕಾರವಾದ ಮೇಲೆ ಏಳು ದಿನ ಮನೆಗೆ ಬರುತ್ತಿರಲಿಲ್ಲವಂತೆ. ಆ ಏಳೂ ದಿನಗಳೂ ಆತ ದಿನಕ್ಕೊಂದು ಕಡೆ ಅಂದರೆ ಎರಡು ಹಳ್ಳಿಗಳ ಗಡಿ ಸೇರಿದ ಜಾಗದಲ್ಲಿ ಮೂರು ಗುಂಡಿನಿಂದ ಒಲೆ ಹೂಡಿ ಹೊಸ ಮಡಿಕೆಯಿಂದ ಅಡಿಗೆ ಮಾಡಿ ಉಂಡು ಆ ಮಡಕೆಗಳನ್ನು ಒಡೆದು ಆ ಒಲೆಗುಂಡನ್ನು ಒಂದಾಗಿ ಸೇರಿಸಿ ಮುಂದಿನ ಜಾಗಕ್ಕೆ ಹೋಗಬೇಕಾಗಿತ್ತಂತೆ. ಹೀಗೆ ಏಳು ಕಡೆ ಅಡಿಗೆ ಮಾಡಿ ಉಂಡು ಏಳನೇ ದಿನ ಊರಿಗೆ ಬಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಮನೆಗೆ ಬರುತ್ತಿದ್ದನಂತೆ. ಮತ್ತು ಕುಲದವರಿಗೆ ತನ್ನ ಶಕ್ತ್ಯಾನುಸಾರ ಊಟ ಕೊಡುತ್ತಿದ್ದನಂತೆ. ಈಗ ಅಂಥ ಪದ್ಧತಿಗಳೆಲ್ಲ ನಿಂತು ಹೋಗಿವೆ. ಈಗ ಅಂಥವರನ್ನೂ ಸಮಾಧಿ ಮಾಡಿ ಇತರೆಯವರಿಗೆ ಮಾಡಿದ ಶಾಸ್ತ್ರಗಳನ್ನೇ ಮಾಡುತ್ತಾರೆ ಎಂದು ಇವರು ಹೇಳುತ್ತಾರೆ.

ಸಾವಿನ ಸೂತಕ:

ಈ ಬುಡ್ಡಕಟ್ಟಿನಲ್ಲಿ ಯಾರಾದರೂ ಒಬ್ಬ ಸತ್ತರೆ ಆ ಮನೆ ಸೂತಕದ ಮನೆಯಾಗುತ್ತದೆ. ಅಣ್ಣತಮ್ಮಂದಿರನ್ನು ಬಿಟ್ಟು ಬೀಗರಾದವರು ಆ ಮನೆಗಳಿಗೆ ಹೋಗುವುದಿಲ್ಲ. ಸಾವಿನ ಮನೆಯವರು ಸೂತಕ ತೆಗೆಸಿಕೊಂಡ ದಿನವೇ ಇತರೆ ಅಣ್ಣ ತಮ್ಮಂದಿರೂ ಸೂತಕ ತೆಗೆಸಿಕೊಳ್ಳುತ್ತಾರೆ. ಬೇರೆ ಊರಿನಲ್ಲಿದ್ದವರು ಮೂಲ ಸೂತಕದ ಮನೆಯಲ್ಲಿ ಮೈಲಿಗೆ ತೆಗೆಸಿಕೊಂಡ ಮೇಲೆಯೇ ತಾವೂ ತೆಗೆಸಿಕೊಳ್ಳುತ್ತಾರೆ. ಸೂತಕ ತೆಗೆಸಿಕೊಳ್ಳುವ ದಿನ ದಾಸಯ್ಯನನ್ನು ಮನೆಗೆ ಕರೆಸುತ್ತಾರೆ. ಮನೆಯನ್ನು ಗುಡಿಸಿ-ಸಾರಿಸಿ ಅಚ್ಚುಕಟ್ಟುಗೊಳಿಸುತ್ತಾರೆ. ಬಂದ ದಾಸಯ್ಯನನ್ನು ಕಂಬಳಿಯ ಮೇಲೆ ಕೂರಿಸಿ “ಒಣಪಡಿ ಕಾಣಿಕೆ ಇಟ್ಟು, ದಾಸಯ್ಯನ ಶಂಖ ಜಾಗಟೆಗಳನ್ನೂ ಇಡಿಸಿ ಪೂಜೆ ಮಾಡುತ್ತಾರೆ. ದಾಸಯ್ಯ ಶಂಖ ಊದಿ ಜಾಗಟೆ ಬಡಿದು ಮನೆಗೆಲ್ಲ ತೀರ್ಥ ಹಾಕುತ್ತಾನೆ. ಅಲ್ಲಿಗೆ ಸೂತಕ ಹರಿದಂತೆ. ದಾಸಯ್ಯನ ಕಾಲಿಗೆ ಎಲ್ಲರೂ ಬೀಳುತ್ತಾರೆ. ಆತ ಎಲ್ಲರ ತಲೆಯ ಮೇಲೂ ಶಂಖ ಜಾಗಟೆಯನ್ನು ಇಡುತ್ತಾನೆ. ದಾಸಯ್ಯನೆಂದರೆ ತಿರುಪತಿ ತಿಮ್ಮಪ್ಪನ ಪ್ರತಿನಿಧಿ ಎಂದು ನಂಬುತ್ತಾರೆ.

ಈ ಸೂತಕ ತೆಗೆಸಿಕೊಳ್ಳುವ ದಿನ ಸಾವಿನ ಮನೆಯ ಹಿರಿಯರಿಗೆ ಮುಖ್ಯವಾಗಿ ಮಾವ, ಭಾವ, ಮೈದುನರು, ಕೈಯ ಮೇಲೆ ಸ್ವಲ್ಪ ಹೆಂಡ ಸುರಿದು ಕುಡಿಯಲು ಕೊಡುತ್ತಾರೆ. ನೆಂಟರಾದವರೂ ಹೀಗೆಯೇ ಮಾಡುತ್ತಾರೆ. ಹಾಗೆಯೇ ಮಾತನಾಡಿದರೆ ದೋಷವೆಂದು ಮಾತನಾಡಿಸುತ್ತಿರಲಿಲ್ಲವಂತೆ. ಆದರೆ ಈಗ ಅಂಥ ನಂಬಿಕೆಗಳೆಲ್ಲ ದೂರಾಗುತ್ತಿವೆ. ಎಲ್ಲರೂ ಒಂದಾಗಿ ಇಂಥ ಸಂದರ್ಭದಲ್ಲಿ ಕೆಲಸ ಮಾಡುತ್ತಾರೆ. ಆದರೂ ಸಂಪ್ರದಾಯ ಮೂಲಕ ಬಂದ ಕೆಲವು ಮುಖ್ಯವಾದ ಆಚರಣೆಗಳು ದೂರಾಗಿಲ್ಲ.

ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಈ ಬುಡಕಟ್ಟಿನ ಮೂಲದ ಆಚರಣೆಗಳು ಸಾಮಾಜಿಕ ಸ್ಥಿತ್ಯಂತರದ ಮತ್ತು ತಮ್ಮ ಸಂಚಾರಿ ಬದುಕಿನ ನಡುವೆಯೂ ಕೆಲವು ಉಳಿದುಕೊಂಡು ಬಂದಿರುವುದು ಈ ಜನರ ಶ್ರದ್ಧೆ ಮತ್ತು ನಂಬಿಕೆಯನ್ನು ಸೂಚಿಸುತ್ತದೆ. ಇಂಥ ಅಂಶಗಳೆಲ್ಲ ಒಂದು ಬುಡಕಟ್ಟಿನ ಅಧ್ಯಯನದ ಸಂದರ್ಭದಲ್ಲಿ ಸತ್ಯವನ್ನು ಪರಿಚಯಿಸುತ್ತದೆ. ಆದರೂ ಈ ಬುಡಕಟ್ಟು ತಾವು ವಾಸಿಸುತ್ತಿರುವ ಪ್ರದೇಶದ ಜನರ ಸಂಪರ್ಕದಿಂದ ಪಡೆದ ಅಂಶಗಳಿಂದ ಇವರಲ್ಲಿ ಉಂಟಾಗಿರುವ ಬದಲಾವಣೆಗಳನ್ನೂ ತಳ್ಳಿಹಾಕಲು ಬರುವುದಿಲ್ಲ.

ಸಂಸ್ಕೃತೀಕರಣ ಪ್ರಕ್ರಿಯೆ ಕೆಳಮುಖವಾಗಿ ಹರಿಯುತ್ತಾ ಬಂದಿದೆಯೇ ಹೊರತು, ಉಪ ಸಂಸ್ಕೃತಿಗಳ ಸಾಂಸ್ಕೃತಿಕ ಮೌಲ್ಯಗಳು ಉನ್ನತೀಕರಣಗೊಂಡು ಮೇಲ್ಮುಖದ ಹರಿಯುವಿಕೆಯನ್ನು ಪಡೆದುಕೊಂಡಿಲ್ಲ ಎನ್ನುವುದನ್ನು ಇಂದಿನ ಸಂದರ್ಭದಲ್ಲಿ ಗಮನಿಸಬೇಕಾಗುತ್ತದೆ. ಬ್ರಾಹ್ಮಣೀಕರಣವೇ ಸಂಸ್ಕೃತೀಕರಣ ಎಂಬ ವಿಚಾರ ಇಂದು ಬದಲಾಗಬೇಕಾಗಿದೆ. ಉಪ ಸಂಸ್ಕೃತಿಗಳಲ್ಲಿ ಕಾಣುವ ಮಾನವೀಯ ಹಾಗೂ ಪ್ರಾಕೃತಿಕ ಮೌಲ್ಯಗಳನ್ನು ಅರ್ಥಮಾಡಿಕೊಂಡು ಅವುಗಳ ಉನ್ನತಿಗೆ ದಾರಿಮಾಡಿ ಕೊಡಬೇಕಾಗಿದೆ.[1]       ಕನ್ನಡ ಜಾನಪದ ವಿಶ್ವಕೋಶ, ಪು-537

[2]      R.E. Enthovan The of Tribes and  castes  of Bombay Vol-II, p-267

[3]        ಕನ್ನಡ ಜಾನಪದ ವಿಶ್ವಕೋಶ, ಪು-537

[4]      H.V. Nanjundaiah and L.K. Anantha Krishna lyer, The Mysore Tribes and Castes, Vol-III, p-609

[5]      ಕನ್ನಡ ಜಾನಪದ ವಿಶ್ವಕೋಶ, ಪು-536

[6]      ಅದೇ, ಪು-538