ಕೊರಮ ಬುಡಕಟ್ಟಿನಲ್ಲಿ ದೇವದಾಸಿ ಪದ್ಧತಿಯ ನಿದರ್ಶನಗಳು ಅಲ್ಲಲ್ಲಿ ವಿರಳವಾಗಿ ತೋರುತ್ತವೆ. ಅತಿ ಹಿಂದುಳಿದ, ಮೌಢ್ಯ ಮತ್ತು ಬಡತನದ ತವರಾದ ಈ ಜನರಲ್ಲಿ ಮೂಢನಂಬಿಕೆಗಳು ಯಥೇಚ್ಛವಾಗಿ ಕಂಡುಬರುತ್ತವೆ. ಆದರೆ ದೇವದಾಸಿ ಪದ್ಧತಿ ಮಾತ್ರ ವ್ಯಾಪಕವಾಗಿ ತೋರುವುದಿಲ್ಲ. ಆದರೆ ಕೆಲವು ಮನೆತನಗಳಲ್ಲಿ ದೇವರ ಮುದ್ರೆ ಹಾಕಿಸಿಕೊಳ್ಳುವ, ಬಸವಿ ಬಿಡುವ ಸಂಪ್ರದಾಯ ಇತ್ತಂತೆ. ಈಗ ಯಾರನ್ನು ಕೇಳಿದರೂ ಈ ಬುಡಕಟ್ಟಿನವರು “ಹಿಂದೆ” ಇದ್ದರು, ಈಗ “ಇಲ್ಲ”ವೆನ್ನುತ್ತಾರೆ. ದೇವದಾಸಿಯರನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇತ್ತು ಎಂದು ಹೇಳುತ್ತಾರಾದರೂ ಇದೆಲ್ಲದಕ್ಕೆ ಬಡತನವೇ ಕಾರಣ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಚಿಕ್ಕ ಹೆಣ್ಣು ಮಕ್ಕಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರ ಮುದ್ರೆ (ಶಂಕ-ಚಕ್ರ)ಯನ್ನು ಅವರ ತೋಳ ಮೇಲೆ ಒತ್ತಿಸುತ್ತಿದ್ದರಂತೆ. ಅಂದಿನಿಂದ ಆಕೆ ದೇವದಾಸಿ. ಅಂಥವರನ್ನು ಯಾರೂ ಮದುವೆಮಾಡಿಕೊಳ್ಳುತ್ತಿರಲಿಲ್ಲ.

ದೇವದಾಸಿ ತನಗೆ ಇಷ್ಟ ಬಂದವನ ಜೊತೆ ಬಾಳಬಹುದಿತ್ತು. ಅಥವಾ ವಿಲಾಸ ಜೀವನವನ್ನೂ ನಡೆಸಬಹುದಿತ್ತು. ಈ ಬುಡಕಟ್ಟಿನಲ್ಲಿ ವೇಶ್ಯಾಜೀವನ ನಡೆಸುತ್ತಿದ್ದ ಒಂದು ಗುಂಪನ್ನು ವಿದ್ವಾಂಸರು ಗುರುತಿಸಿ ದಾಖಲಿಸಿದ್ದಾರೆ. ಮದುವೆಯಾಗದ ಹೆಣ್ಣು ಮಕ್ಕಳನ್ನು ಗಿರವಿ ಇಡುತ್ತಿದ್ದ ಬಗೆಗೆ ಮತ್ತು ಪತ್ನಿಯರನ್ನು ಮಾರುತ್ತಿದ್ದ ಮದ್ರಾಸ್ ಪ್ರಾಂತ್ಯದ ಕೆಲಭಾಗದ ಕೊರವರ ದಾಖಲೆಗಳೂ ಇವೆ. ಆರ್.ಇ. ಎಂಥೋವನ್ ಅವರು “The partads or shawl weavers (patra a scarf) are dancers, singers and prostitutes connected with Venkatagiri in North arcot. The sulis (Kan. Suli) are prostituties”

[1] ಎಂಬ ಅಂಶಗಳನ್ನು ದಾಖಲಿಸಿದ್ದಾರೆ. ಇ.ಥರ‍್ಸಟನ್ ಅವರು ಶ್ರೀ ರೂಪರಾವ ನಾಯಡು ಅವರು ಹೇಳಿರುವ “Obtaining their living by prostitution. They also kidnap or sell children for this purpose. Some of the women of this class are thriving well in the Madras presidency as experts in dancing. They are kept by rich people, and are called in the Teluge country Erukala Bogamvaru, in Tamil Korava Themidia. They also train monkeys, and show them to the public”. ಇದಲ್ಲದೆ ಈ ಬುಡಕಟ್ಟಿನಲ್ಲಿ “ಒಬ್ಬ ಹೆಂಗಸು ಒಂದಾದ ಮೇಲೊಂದರಂತೆ ಏಳು ಜನ ಗಂಡಸರನ್ನು ಮದುವೆ ಮಾಡಿಕೊಂಡರೆ ಅವನು ಸತ್ತು ಹೋದಾಗ ಅಥವಾ ವಿಚ್ಛೇದನ ಮಾಡಿದಾಗ ಅವಳನ್ನು ಪೆದ್ದಾ ಬೋಯಿಸಾನಿ ಎಂದು ಕರೆದು ತುಂಬ ಗೌರವ ಕೊಡುವರು. ಮದುವೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಅವಳು ಮುಂದಾಳತ್ವ ವಹಿಸುವಳು” ಎನ್ನುವ ಅಂಶಗಳು ತಿಳಿದು ಬರುತ್ತವೆಯಾದರೂ ದಕ್ಷಿಣ ಕರ್ನಾಟಕದಲ್ಲಿ ಈ ಬುಡಕಟ್ಟಿನಲ್ಲಿ ಇಂದು ಇಂಥ ಯಾವ ಪದ್ಧತಿಗಳೂ ಕಂಡುಬರುವುದಿಲ್ಲ. ಆದರೆ ಹಿಂದಿನ ತಲೆಮಾರಿನಲ್ಲಿ ಚಿತ್ರದುರ್ಗ ಜಿಲ್ಲೆಯ ಕೆಲವು ಭಾಗದಲ್ಲಿ ಮುದ್ರೆ ಒತ್ತಿಸಿಕೊಂಡವರು ಇದ್ದರೆಂದು ಹೇಳುತ್ತಾರೆ. ತುಮಕೂರು ಜಿಲ್ಲೆಯ ಕೆಲವು ಕಡೆ ಅಂದರೆ ಹಿರೇಬಿದರೆಯ ದೊಡ್ಡಮನೆ ಕೃಷ್ಣಯ್ಯನವರು ಹೇಳುವ ಹಾಗೆ ಸಾರ್ತವಳ್ಳಿಯಲ್ಲಿ ಇಂಥ ಪದ್ಧತಿ ಇದ್ದ ಬಗೆಗೆ ಕೇಳಿದ್ದೇವೆಂದು ಹೇಳುತ್ತಾರೆ. ಈ ಬುಡಕಟ್ಟಿನಲ್ಲಿ ಸಾಮಾಜಿಕ ಜ್ಞಾನ ಹೆಚ್ಚಿದಂತೆಲ್ಲ ಮೂಢ ನಂಬಿಕೆಗಳು ದೂರಾದಂತೆಲ್ಲ ಇಂಥ ಕೀಳು ಪದ್ಧತಿಗಳು ದೂರಾಗುತ್ತಾ ಬಂದಿವೆ.


[1]       R.E. Enthovan The of Tribes and  castes  of Bombay Vol-II           , p-268