ಪ್ರತಿಯೊಂದು ಜನಾಂಗವೂ ಈ ಸಾವಿರಾರು ವರ್ಷಗಳ ಬದುಕಿನಲ್ಲಿ ತಮ್ಮದೇ ಆದ ಕೆಲವು ನಂಬಿಕೆ, ನಡವಳಿಕೆ, ಆಚರಣೆಗಳನ್ನು ರೂಢಿಸಿಕೊಂಡಿವೆ. ಕಾಲದಿಂದ ಕಾಲಕ್ಕೆ ಸಾಗಿಬರುವ ಸಂದರ್ಭದಲ್ಲಿ ಉಂಟಾದ ಮಾನಸಿಕ ಬೆಳವಣಿಗೆಯಿಂದಲೋ ಭಿನ್ನ ಜನಾಂಗಗಳನ್ನು ಕಲೆತು ಮುಂದುವರೆದಾಗ ಉಂಟಾದ ಬದಲಾವಣೆಯಿಂದಲೋ ಅವು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಳ್ಳಬಹುದು. ಕೆಲವು ಮರೆಯಾಗಲೂ ಬಹುದು. ಏನೇ ಇದ್ದರೂ ಸಂಪೂರ್ಣವಾಗಿ ಯಾವುದೇ ಜನಾಂಗ ಅಥವಾ ಬುಡಕಟ್ಟು ತಮ್ಮ ನಂಬಿಕೆ ಮತ್ತು ಆಚರಣೆಗಳಿಂದ ಮುಕ್ತವಾಗಲು ಸಾಧ್ಯವಾಗುವುದಿಲ್ಲ. ಇಂಥ ನಂಬಿಕೆ-ಆಚರಣೆಗೆ ನಿಸರ್ಗದ ಪಾಲು ಬಲುದೊಡ್ಡದು. “ನಮಗೆ ಮೊದಲು ಕಾಣಿಸುವುದು ವಿಶಾಲದವಾದ ನಿಸರ್ಗ ನದಿ, ಕಡಲು, ಗುಡ್ಡ, ಬಯಲು, ಅರಣ್ಯ, ಬಾನು. ಗಿಡಮರ ಜೀವಿಗಳಿಂದ ಕೂಡಿದ ಈ ನಿಸರ್ಗ ಅವನ ನೆಲೆಗಟ್ಟಾಗಿ ನಿಲ್ಲುತ್ತದೆ; ಉಸಿರಾಗಿ ನಿಲ್ಲುತ್ತದೆ. ಒಂದೊಂದೂ ಒಂದೊಂದು ನೆಲೆಯನ್ನು ಅರಸಿ, ನೆಲೆಸಿ ಅಲ್ಲಿ ಬಾಳ್ವೆ ಮಾಡುವಾಗ ಅಲ್ಲಲ್ಲಿನ ನಿಸರ್ಗ ಅವರವರ ಬಾಳ್ವೆಯ ಮೇಲೆ ಪರಿಣಾಮವುಂಟು ಮಾಡುತ್ತದೆ. ಪ್ರತಿಯೊಂದು ಜನಾಂಗವೂ ತಮ್ಮ ಬದುಕಿನ ನಾನಾ ಸಂದರ್ಭಗಳಿಗೆ ಒಂದು ವಿಶೇಷತೆಯನ್ನು ತಂದುಕೊಳ್ಳಲು ಅನೇಕ ರೀತಿಯ ಆಚರಣೆಗಳನ್ನು ಆಚರಿಸುತ್ತದೆ. ಅವುಗಳಲ್ಲಿ ದೈವೀ ಸಂಬಂಧಿಯಾದ ಪೂಜೆ, ಪಾರಾಯಣ, ಹಬ್ಬ, ಜಾತ್ರೆ ಮುಂತಾದವುಗಳು ಒಂದು ಬಗೆಯಾದರೆ, ತಮ್ಮ ವೈಯಕ್ತಿಕವಾದ ಬದುಕಿನ ಸಂದರ್ಭಗಳಿಗೆ ರೂಢಿಸಿಕೊಂಡ ಆಚರಣೆಗಳು ಮತ್ತೊಂದು ಬಗೆಯವು. ಈ ಎಲ್ಲ ಬಗೆಯ ಆಚರಣೆಗಳನ್ನು ಆಚರಿಸುವುದರಲ್ಲಿ ಕೊರಮ ಬುಡಕಟ್ಟು ಹಿಂದೆ ಬಿದ್ದಿಲ್ಲ. ಹಬ್ಬ-ಹರಿದಿನಗಳಷ್ಟೇ ಅಲ್ಲದೆ ಹುಟ್ಟು, ಮದುವೆ, ಸಾವು ಮುಂತಾದ ಸಂದರ್ಭಗಳಲ್ಲಿ ಕುಲಪದ್ಧತಿಗಳು ಆಚರಿಸಲ್ಪಡುತ್ತವೆ. ಈ ಬಗೆಯ ಆಚರಣೆಗಳನ್ನು ಸರಿಯಾಗಿ ಆಚರಿಸದಿದ್ದರೆ ಮುಂದೆ ಒಳ್ಳೆಯದಾಗುವುದಿಲ್ಲವೆಂದು ನಂಬುತ್ತಾರೆ. ಆದ್ದರಿಂದಲೇ ಇವರ ಸಂಪ್ರದಾಯಗಳಲ್ಲಿನ ಆ ಮೂಲದ ಅಂಶಗಳು ಇನ್ನೂ ಉಳಿದುಕೊಂಡಿವೆ. ತಮ್ಮ ಪರಿಶ್ರಮದ ಅಲೆದಾಟದ ಬದುಕಿನಲ್ಲಿ ಇವರಿಗೆ ಬಿಡುವೆಂಬುದೇ ಇರಲಿಲ್ಲ. ಇವರಲ್ಲಿ ಹೆಣ್ಣು ಮಕ್ಕಳಂತೂ ಹೋರಾಟದ ಬದುಕನ್ನೇ ನಡೆಸಿದ್ದಾರೆ. ಕೊರಮ ಜನಾಂಗದವರು ಜೀವನದ ಸಂದರ್ಭದಲ್ಲಿ ಆಚರಿಸಲ್ಪಡುವ ಕೆಲವು ಆಚರಣೆಗಳನ್ನು ಪರಿಶೀಲಿಸೋಣ.
Leave A Comment