ನಿಜಾಮರ ಆಳ್ವಿಕೆಯಿಂದ ಹೈದರಾಬಾದ್ ಕರ್ನಾಟಕ ಮುಕ್ತವಾಗಿ ಐವತ್ತೈದು ವರ್ಷಗಳು ಮುಗಿದುಹೋದವು. ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿ ಐವತ್ತನೇ ವರ್ಷವನ್ನು (1947) ಭಾರತದ ಸರ್ಕಾರ ದೇಶಾದ್ಯಂತ ಸಂಭ್ರಮದದಿಂದ ಆಚರಿಸಿತಷ್ಟೆ.ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಜನರು, ತಮ್ಮ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕಿದ್ದನ್ನು ನೆನಪಿಸಿಕೊಂಡರು. ಅದರಂತೆ ಐವತ್ತನೇ ಸ್ವಾತಂತ್ರ್ಯೋತ್ಸವವನ್ನು ಸೆಪ್ಟೆಂಬರ್ 17, 1998ರಂದು ಆಚರಿಸಿದರು.ಈ ಪ್ರಾಂತ್ಯದಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಗಸ್ಟ್ 15ರಂದೇ ಆಚರಿಸುತ್ತ ಬಂದಿದ್ದರು. ಸೆಪ್ಟೆಂಬರ್ 17ರಂದು ಆಚರಿಸಲು ಸರಕಾರವು ಅನುವು ಮಾಡಿಕೊಟ್ಟಿತು. ನಿಜಾಮರ ಆಡಳಿತದ ವಿರುದ್ಧ ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಜನರು ನಡೆಸಿದ ಹೋರಾಟ, ಅನುಭವಿಸಿದ ನೋವು ಎಲ್ಲವೂ ರೋಮಾಂಚನವನ್ನುಂಟು ಮಾಡುವಂಥದ್ದೆಂದು ಸ್ವಾತಂತ್ರ್ಯ ಹೋರಾಟಗಾರರು ವೇದಿಕೆ ಮೇಲೆ ಹೇಳತೊಡಗಿದರು. ವಿಚಿತ್ರವೆಂದರೆ ಈ ಹೋರಾಟವನ್ನು ಚರಿತ್ರೆಯಲ್ಲಿ ಸರಿಯಾಗಿ ಯಾರೂ ದಾಖಲು ಮಾಡುವ ಕಡೆಗೆ ಗಮನ ಹರಿಸಲಿಲ್ಲ. ಬ್ರಿಟಿಷ್ ನಿಜಾಮರ ವಿರುದ್ಧ, ನಿಜಾಮ ರಜಾಕಾರರ ವಿರುದ್ಧ, ಪಠಾಣರ ವಿರುದ್ಧ, ಹಂತ ಹಂತವಾಗಿ ಈ ಪ್ರಾಂತ್ಯದ ಜನರು ಸ್ವಾತಂತ್ರ್ಯಕ್ಕಾಗಿ ಹೋರಾಡಿರುವುದನ್ನು ಹೋರಾಟಗಾರರು ತಮ್ಮ ಸ್ಮೃತಿಯಲ್ಲಿ ಉಳಿಸಿಕೊಂಡು ಬಂದಿದ್ದಾರೆಯೇ ಹೊರತು ದಾಖಲೆಗಳ ವಿಚಾರದಲ್ಲಿ ಮಿತಿಗಳನ್ನು ಹೊಂದಿದ್ದಾರೆ.

‘ಸ್ವಾತಂತ್ರ್ಯಾಂದೋಲನ’(ಧ್ರುವನಾರಾಯಣ, 1987) ಎಂಬ ಕೃತಿಯಲ್ಲಿ ಪ್ರಥಮವಾಗಿ ಹೋರಾಟದ ವಿವರಗಳು ಸಂಕಲನಗೊಂಡಿವೆ. ‘ಸ್ವಾತಂತ್ರ್ಯಾ ಸಂಗ್ರಾಮದ ಸ್ಮೃತಿಗಳು’ (ಕಾಮತ್, 1965:75) ಕೃತಿಯಲ್ಲಿ ಹೋರಾಟಗಾರರ ನೆನಪುಗಳು ಸ್ವಲ್ಪ ದಾಖಲಾಗಿವೆ. ಈಚೆಗೆ ಹೈದರಾಬಾದ್ ಕರ್ನಾಟಕದಲ್ಲಿ ರಾಜಕೀಯ ಚಳವಳಿಗಳು(ಬಿ.ಸಿ. ಚುರ್ಚಿ ಹಾಳಮಠ) ಹಾಗೂ ಕೊಪ್ಪಳ ಜಿಲ್ಲಾ ಆಡಳಿತದ ವತಿಯಿಂದ ‘ವಿಮೋಚನೆ’ ಈ ಎರಡು ಕೃತಿಗಳಲ್ಲಿ ವಿಪುಲ ಮಾಹಿತಿಗಳು ಸೇರಿಕೊಂಡಿವೆ. ರಾಮಣ್ಣ ಹವಳೆ ಅವರ ‘ಸ್ವಾತಂತ್ರ್ಯ ಹೋರಾಟದಲ್ಲಿ ಗಜೇಂದ್ರಗಡ ಶಿಬಿರ’ ಎಂಬ ಕೃತಿ ಇದಕ್ಕೆ ಸಂಬಂಧಿಸಿದೆ. ಅಮರೇಶ ನುಗಡೋಣಿ ಅವರ ‘ರಾಯಚೂರು ಜಿಲ್ಲೆಯಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಚಳವಳಿ’ ಹಾಗೂ ‘ಹೈದರಾಬಾದ್ ಕರ್ನಾಟಕದ ಹಾಡು-ಪಾಡು’ ಈ ವಿಷಯದ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುವ ಕೃತಿಗಳಾಗಿವೆ.

ಇಂದು ಇತಿಹಾಸಕಾರರು ಹಾಗೂ ಸಾಹಿತಿಗಳು ‘ಹೈದರಾಬಾದ್ ಕರ್ನಾಟಕ ವಿಮೋಚನ’ದಿನವನ್ನು ಈ ಪ್ರಾಂತ್ಯದಲ್ಲಿ ಆಚರಿಸುವ ಸಂಭ್ರಮದಲ್ಲಿ ಹೋರಾಟದ ನೆನಪುಗಳು ಮರುಕಳಿಸುತ್ತಿವೆ. ಆಗಿನ ನಿಜಾಮ ಆಡಳಿತದ ವಿರುದ್ಧ ಮಾತನಾಡುವ ಮುಸ್ಲಿಮರ ಮನಸ್ಸನ್ನು ಕದಡಿದಂತಾಗುತ್ತದೆ. ಯಾಕೆಂದರೆ, ರಜಾಕಾರರು ಎಂದರೆ ಮುಸ್ಲಿಮರ ಪಡೆ ಎಂಬ ಭಾವನೆ ಇದ್ದೇ ಇದೆ.  ಪ್ರಮುಖವಾಗಿ ಈ ದೃಷ್ಟಿಯಿಂದ ಇಲ್ಲಿನ ವಿಮೋಚನಾ ಚಳವಳಿಯನ್ನು ಕುರಿತು ಅಧ್ಯಯನಗಳು ನಡೆಯುವಾಗಲೂ ಅವು ಮತೀಯವಾಗದಂತೆ ಎಚ್ಚರ ವಹಿಸುವ ಅಗತ್ಯವಂತೂ ಹೆಚ್ಚಿದೆ. ಯಾಕೆಂದರೆ, ‘ಹಿಂದೂ’ ಗಳ ಪ್ರಾಂತ್ಯವನ್ನು ‘ಮುಸ್ಲಿಮ್’ ಅರಸರು ಆಳಿದರೆಂಬ ಸಂಗತಿಯಲ್ಲಿ ಅನೇಕ ಪೂರ್ವ ಗ್ರಹಗಳಿಗೆ ಒಳಗಾಗುವ ಸಾಧ್ಯತೆಯಿದೆ ಎನ್ನುವ ಅಮರೇಶ ನುಗಡೋಣಿ ಅವರ ಮಾತು ಇಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಸ್ತುತವಾಗಿದೆ.

ಉತ್ತರ ಭಾರತದಲ್ಲಿ ಆಳ್ವಿಕೆ ಮಾಡುತ್ತಿದ್ದಂತಹ ಮೊಗಲರ ಆಡಳಿತದಲ್ಲಿ ಬಿರುಕುಗಳು ಕಾಣಿಸಿಕೊಂಡವು. ಈ ಅವಕಾಶವನ್ನು ಉಪಯೋಗಿಸಿಕೊಂಡು ಸುಬೇದಾರರ ಮೀರ್ ಕಮರುದ್ದೀನ್ (1728ೊರಿಂದ 1748) ಕಾಲದಲ್ಲಿ ರಾಯಚೂರು, ಗುಲ್ಬರ್ಗಾ, ಬೀದರ್, ವಿಜಾಪುರ, ಧಾರವಾಡ ಜಿಲ್ಲಾ ಪ್ರದೇಶವನ್ನು ಒಳಗೊಂಡಂತೆ  ಒರಿಸ್ಸಾ, ತಂಜಾವೂರಿನವರೆಗೆ ಇತ್ತು. ಕರ್ನಾಟಕದ ಉತ್ತರ ಪ್ರಾಂತ್ಯದ ಕಡೆಗೆ  ಮರಾಠರು ಪ್ರಬಲ ರಾಗುತ್ತಿದ್ದರು. ತುಂಗಭದ್ರ ನದಿಯವರೆಗೆ ನಿಜಾಮನ ಆಳ್ವಿಕೆಯಿತ್ತು. ವಿಜಾಪುರ,ೊಧಾರವಾಡ ಭಾಗಗಳಲ್ಲಿ, ಸವಣೂರಿನ ನವಾಬರು ನಿಜಾಮರ ಅಧೀನದಲ್ಲಿದ್ದು ಆಳುತ್ತಿದ್ದರು. ಬಾದಾಮಿ,  ಬಾಗಲಕೋಟೆ ಮುಂತಾದ ಪ್ರದೇಶಗಳಲ್ಲಿ ಮರಾಠರ ಪ್ರಾಬಲ್ಯೊಹೆಚ್ಚಾಗಿತ್ತು. ಹೀಗಾಗಿ ಉತ್ತರದ ಪ್ರಾಂತ್ಯವು ನಿಜಾಮರಿಗೆ  ಪೂರ್ಣವಾಗಿ ಸ್ಥಿರವಾಗಿ ಉಳಿಯುತ್ತಿರಲಿಲ್ಲ. ಇವನ ನಂತರ ಅಧಿಕಾರಕ್ಕಾಗಿ ಅಂತಃಕಲಹ ನಡೆಯಿತು. ಕಮರುದ್ದೀನನ ಮಗ ನಾಸಿರ್‌ಜಂಗನನಿಗೂ ಹಾಗೂ ಮಗಳ  ಮಗ ಮುಝಾಪರ್ ಜಂಗನಿಗೂ ಅಧಿಕಾರಕ್ಕಾಗಿ ಪೈಪೋಟಿ ನಡೆಯಿತು. ಇದನ್ನು ಕಂಡ ಬ್ರಿಟಿಷರು ಹಾಗೂ ಫ್ರೆಂಚರು ನಡುವೆ  ಸೇರಿ ಕೊಂಡರು.ೊಫ್ರೆಂಚರು ಮುಜಾಫರ್ ಜಂಗನನ್ನು ಬ್ರಿಟಿಷರ ನಾಸಿರ್‌ಜಂಗನನ್ನು ಬೆಂಬಲಿಸಿದರು. ಮುಜಾಫರ್ ಜಂಗ್ ಫ್ರೆಂಚರ ಬೆಂಬಲದಿಂದ ಅಧಿಕಾರಕ್ಕೆ ಬಂದರೂ ಇದೇ ಕಲಹದಲ್ಲಿ ಮರಣೊಹೊಂದಿದ. ಮುಂದೆ ನಾಸಿರ್‌ಜಂಗ್ ತಮ್ಮ ಸಬಲತ್ ಜಂಗನು ಅಧಿಕಾರದಲ್ಲಿದ್ದಾಗ, ಇವನ ತಮ್ಮ ನಿಜಾಮ್ ಅಲಿ ಬಂಡಾಯ ಹೂಡಿದ. ಆಗ ಸಬಲತ್ ಜಂಗನು ಬ್ರಿಟಿಷರ ಮೊರೆ ಹೋದ. ಇದೇ ಬ್ರಿಟೀಷರಿಗೆ ಹೈದರಾಬಾದಿನ ರಾಜಕೀಯದಲ್ಲಿ ಪ್ರವೇಶಕ್ಕೆ ದಾರಿಯಾಯಿತು. ಬ್ರಿಟಿಷರಿಗೆ ಅನೇಕ ರೀತಿಯ ಸಹಾಯ ಮಾಡುವುದು ನಿಜಾಮರಿಗೆ ಅನಿವಾರ್ಯವಾಯಿತು. ನಿಜಾಮ್ ಅಲಿ 1761ರಲ್ಲಿ ಅಧಿಕಾರಕ್ಕೆ ಬಂದನು. ಇವನ ಕಾಲದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಹೈದರ್ ಪ್ರಬಲವಾಗಿ ಬೆಳೆಯುತ್ತಿದ್ದ. ಇದನ್ನು ನಿಜಾಮ್ ಅಲಿ ಸಹಿಸದೆ, ಹೈದರ್ ಅಲಿ ಅಧಿಕಾರಕ್ಕೆ ಬರಲು ಹಕ್ಕಿಲ್ಲವೆಂದು ವಿರೋಧಿಸಿದ. ಮುಂದೆ ಟಿಪ್ಪುಸುಲ್ತಾನನ ಕಡೆ ವಾಲದಂತೆ ಬ್ರಿಟಿಷರು ಇಬ್ಬರನ್ನು ನಿರಂತರವಾಗಿ ದ್ವೇಷಿಸಿದರು. ಯಾವುದೇ ಕಾರಣಕ್ಕೂ ನಿಜಾಮನನ್ನು ಟಿಪ್ಪುಸುಲ್ತಾನನ ಕಡೆ ವಾಲದಂತೆ ಬ್ರಿಟಿಷರು ನೋಡಿಕೊಂಡರು.  ಕೊನೆಗೆ ಬ್ರಿಟಿಷರು ಟಿಪ್ಪುವನ್ನು ಅಂತ್ಯಗೊಳಿಸಿದ್ದು ನಿಜಾಮನ ಬೆಂಬಲದಿಂದ ಎಂಬುವುದು ಇಂದು ಚರಿತ್ರೆ. ಇದರಿಂದ ಬ್ರಿಟಿಷರ ಸರ್ಕಾರ ನಿಜಾಮರಿಗೆ ಅನೇಕ ಸವಲತ್ತುಗಳನ್ನು ನೀಡಲು ಮುಂದಾಯಿತು. ಇದಕ್ಕೆ ಮತ್ತೊಂದು ಕಾರಣವೆಂದರೆ ಈ ಹಂತದಲ್ಲಿ ಸಂಸ್ಥಾನಕ್ಕೆ ಬಂದ ರಾಜರೆಲ್ಲರೂ ದುರ್ಬಲರಾಗಿಯೇ ಇದ್ದರು. ಮೊದಲಿನಿಂದಲೂ ನಿಜಾಮರು ಪ್ರತ್ಯೇಕವಾದ ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಆಕಾಶವಾಣಿ, ಶಿಕ್ಷಣ ಮುಂತಾದ ಸೌಲಭ್ಯವನ್ನು ಹೊಂದಿದ್ದರು.  ಒಂದು ಪೈಸೆಯಿಂದ ನೂರು ರೂಪಾಯಿಯವರೆಗೆ ನಾಣ್ಯಗಳ ಮೇಲೆ ನಿಜಾಮನ ಮುದ್ರೆಯಿತ್ತು. ಈ ನಾಣ್ಯಗಳಿಗೆ ಪ್ರಪಂಚದ ಮಾರುಕಟ್ಟೆಯಲ್ಲಿ ವಿನಿಮಯ ದರವು ಗೊತ್ತಾಗಿ ಅಂತಾರಾಷ್ಟ್ರೀಯ ಮಾನ್ಯತೆಯೂ ಪಡೆದಿತ್ತು. ಮೀರ್‌ಉಸ್ಮಾನ್ ಅಲಿಖಾನ್ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾ, ತುರ್ಕಿಸ್ಥಾನ, ಕೆನಡ ಮುಂತಾದ ದೇಶಗಳ ಜೊತೆ ಸಂಪರ್ಕವನ್ನು ಹೊಂದಿದ್ದ.ೊ ಭಾರತದಲ್ಲಿದ್ದಂತಹ ಸುಮಾರು 556 ಸಂಸ್ಥಾನಗಳಲ್ಲಿ ಹೈದರಾಬಾದ್ ಸಂಸ್ಥಾನವೇ ಅತ್ಯಂತ ದೊಡ್ಡದು. ಭೌಗೋಳಿಕವಾಗಿ ಹಾಗೂ ಜನಸಂಖ್ಯೆಯ ದೃಷ್ಟಿಯಿಂದ ವಿಶಾಲವಾಗಿತ್ತು. ತೆಲಂಗಾಣದ ಎಂಟು ಜಿಲ್ಲೆಗಳು, ಮರಾಠವಾಡದ ಐದು ಜಿಲ್ಲೆಗಳು, ಕರ್ನಾಟಕದ ಮೂರು ಜಿಲ್ಲೆಗಳು ಸೇರಿ ಒಟ್ಟು 16 ಜಿಲ್ಲೆಗಳು ಈ ಸಂಸ್ಥಾನದಲ್ಲಿದ್ದವು. ತೆಲಂಗಾಣದ 80 ಲಕ್ಷ, ಮರಾಠವಾಡದ 40, ಲಕ್ಷ, ಕರ್ನಾಟಕದ 20 ಲಕ್ಷ ಹೀಗೆ ಒಂದೂವರೆ ಕೋಟಿ ಜನಸಂಖ್ಯೆಯನ್ನು ಹೊಂದಿತ್ತು. ಸಂಸ್ಥಾನದಲ್ಲಿ ಐದು ಕೋಟಿ ಎಕರೆ ಜಮೀನು ಸಾಗುವಳಿಯಲ್ಲಿತ್ತು. ಇದರಲ್ಲಿ ಎರಡು ಕೋಟಿ ಎಕರೆ ಜಮೀನು ಜಹಗೀರುದಾರರ, ಒಂದು ಕೋಟಿ ಎಕರೆ ಜಮೀನು ದೇಶಮುಖರ ಹಾಗೂ ದೇಸಾಯಿಗಳ ಒಡೆತನದಲ್ಲಿತ್ತು. ಸ್ವತಃ ನಿಜಾಮನಿಗೆ ಐವತ್ತು ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನಿತ್ತು. ಸಂಸ್ಥಾನದಲ್ಲಿ ಬಹುಸಂಖ್ಯಾತರು ಹಿಂದೂಗಳು. ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. 1947ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಾಗ ಈ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಸ್ವತಂತ್ರ ಭಾರತದಲ್ಲಿ ತನ್ನ ಸಂಸ್ತಾನವನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದನು.  ಈ ದಿನಗಳಲ್ಲೇ ರಜಾಕಾರರು ಸೃಷ್ಟಿಯಾದರು.

 

ರಜಾಕಾರರು

1947ರಲ್ಲಿ ಸ್ವತಂತ್ರ ಭಾರತದಲ್ಲಿ ನಿಜಾಮನು ಸಂಸ್ಥಾನವನ್ನು ವಿಲೀನಗೊಳಿಸಲು ನಿರಾಕರಿಸಿದ್ದರ ಪರವಾಗಿ ‘ಇತ್ತೇಹಾದ್ ಮುಸಲ್ಮೀನ್’ ಎಂಬ ಸಂಘಟನೆಯು ಕಟಿಬದ್ಧವಾಯಿತು. ಈ ಸಂಘಟನೆಯ ಸದಸ್ಯರ ಸಂಖ್ಯೆಯು ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು. ನಂತರ ಬೆಳೆಯುತ್ತ ಅರೆಮಿಲಿಟರಿಯ ರೂಪದಲ್ಲಿ ಬದಲಾಗುತ್ತ ರಜಾಕಾರರು ಎಂಬ ಹೆಸರಿನಲ್ಲಿ ಕಾಣಿಸಿಕೊಂಡರು. ಇದರ ಮುಖಂಡ ಕಾಶಿಂ ರಜ್ವಿ, ಇವನು ಮೂಲತಃ ಮತೀಯವಾದಿಯಾಗಿದ್ದ. ನಿಜಾಂ ಆಳ್ವಿಕೆಯನ್ನು ಬೆಂಬಲಿಸುತ್ತ ನಿಜಾಂ ಸರ್ಕಾರದ ಸವಲತ್ತುಗಳನ್ನು ಸ್ವೇಚ್ಛೆಯಿಂದ ಬಳಸುತ್ತ ಮತಾಂಧನಾಗಿ ರೂಪುಗೊಂಡ ಈ ರಜಾಕಾರರು ಸಂಸ್ಥಾನದ ತುಂಬ ಜನರ ಮೇಲೆ ಕ್ರೌರ್ಯದಿಂದ ದಬ್ಬಾಳಿಕೆ ನಡೆಸತೊಡಗಿದರು. 1948ರ ಹೊತ್ತಿಗೆ ಒಂದು ಲಕ್ಷ ರಜಾಕಾರರಿದ್ದರು. ತಮ್ಮ ಪಡೆಗೆ ತಮ್ಮವರನ್ನು  ಬಲವಂತದಿಂದ ಸೇರಿಸಿಕೊಂಡರು. ಇವರ ಜೊತೆಗೆ ಪಠಾಣರು,  ನಿಜಾಮ ಪೊಲೀಸರು ಸೇರಿಕೊಂಡು ಹಳ್ಳಿಗಳಲ್ಲಿ ದಾಳಿ ಮಾಡಿದರು. ಅತ್ಯಾಚಾರಗಳು, ದರೋಡೆಗಳು, ಸಾವು ನೋವುಗಳಿಂದ ಇಡೀ ಸಂಸ್ಥಾನವೇ ತಲ್ಲಣಗೊಂಡಿತು. ಬೀದರ್, ರಾಯಚೂರು, ಗುಲ್ಬರ್ಗ ಜಿಲ್ಲಾ ಪ್ರದೇಶದ ಜನರು ರಜಾಕಾರರ ಕ್ರೌರ್ಯಕ್ಕೆ ಅಂಜಿ ಗಡಿಗಳನ್ನು ದಾಟಿ ವಲಸೆ ಹೋದರು. ರಜಾಕಾರರ ದಬ್ಬಾಳಿಕೆ ಎಂದು ಬರೆದ ಇಂರೋಜ್ ಉರ್ದು ಪತ್ರಿಕೆಯ ಸಂಪಾದಕ ಷೋಯಬುಲ್ಲಾಖಾನನನ್ನು ರಜಾಕಾರರು ಗುಂಡಿಟ್ಟು ಕೊಂದರು. ಹಳ್ಳಿ ಹಳ್ಳಿಗಳಲ್ಲಿ ದರೋಡೆಗಳು, ಮಾನಭಂಗಗಳು, ಸಾವುಗಳು ಸಹಜ ಎಂಬಷ್ಟರಮಟ್ಟಿಗೆ ನಡೆಯತೊಡಗಿದವು. ಈ ಪರಿಸ್ಥಿತಿಯನ್ನು ಅರಿತ ಭಾರತ ಸರ್ಕಾರ ನಿಜಾಮನಿಗೆ ಮೊದಲು ಹಿಂಸೆ, ದಬ್ಬಾಳಿಕೆ, ಸಾವುಗಳನ್ನು ನಿಲ್ಲಿಸಲು ಸೂಚಿಸಿತು. ಆದರೆ ಇದು ನಿಜಾಮನಿಂದ ಸಾಧ್ಯವಾಗಲಿಲ್ಲ. ಯಾಕೆಂದರೆ, ನಿಜಾಮನೇ ರಜಾಕಾರರ ಕೈಗೊಂಬೆಯಾಗಿ ಅಸಹಾಯಕ ನಾಗಿದ್ದ. ಈ ಹಂತದಲ್ಲಿ ರಜಾಕಾರರು ಸಾರಿಗೆ ವ್ಯವಸ್ಥೆ, ಸೈನ್ಯ, ಮದ್ದು-ಗುಂಡುಗಳನ್ನು ಮತ್ತು ಆಕಾಶವಾಣಿಯನ್ನು ಸ್ವತಂತ್ರವಾಗಿ ಬಳಸುವಷ್ಟು ಶಕ್ತಿ ಪಡೆದುಕೊಂಡಿದ್ದರು.

 

ಶಿಬಿರಗಳ ಉಗಮ

ಮೇಲಿನ ಘಟನೆಗಳನ್ನು ಗಂಭೀರವಾಗಿ ಮನಗಂಡ ಹೈದರಾಬಾದ್ ಕರ್ನಾಟಕದ ಅನೇಕ ರಾಜಕೀಯ ಮುಖಂಡರು ಜನರನ್ನು ಸಂಘಟಿಸಿ ನಿಜಾಮನ ವಿರುದ್ಧ  ಸ್ವತಂತ್ರ ಭಾರತಕ್ಕಾಗಿ ಹೋರಾಡುವ ಬದಲು ರಜಾಕಾರರ ವಿರುದ್ಧ ಹೋರಾಡುವ ಬಗ್ಗೆ ಆಲೋಚಿಸಿದರು. ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚಿಸಿದರು. ಹಿಂಸಾತ್ಮಕ ಹೋರಾಟಕ್ಕೆ ಹಿರಿಯ ನಾಯಕರ ಒಪ್ಪಿಗೆ ದೊರೆಯಲಿಲ್ಲ. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಚಳವಳಿಗೆ ಆದೇಶ ನೀಡಿದು. ರಜಾಕಾರರ ದಾಳಿಗೆ ತಲ್ಲಣಗೊಂಡು ಪರಪ್ರಾಂತ್ಯಗಳಿಗೆ ವಲಸೆ ಹೋಗಲು ಪ್ರಾರಂಭಿಸಿದ್ದ ಜನರಿಗೆ ಧೈರ್ಯ ತುಂಬುವುದು, ಜನರನ್ನು ಸಂಘಟಿಸಿ ಜನಾಂದೋಲನ ನಡೆಸುವುದಕ್ಕೆ ಹೈದರಾಬಾದ್ ಕರ್ನಾಟಕ ಕಾಂಗ್ರೆಸ್‌ನ ನಾಯಕರು ತೀವ್ರವಾಗಿ ಶ್ರಮಿಸಿದರು. ಹೋರಾಟಕ್ಕಾಗಿ, ‘ಕ್ರಿಯಾಸಮಿತಿ’ ರಚನೆಯಾಯಿತು. ಅನ್ನದಾನಪ್ಪ ದೊಡ್ಡಮೇಟಿ, ಜನಾರ್ದನರಾವ್ ದೇಸಾಯಿ, ಗುರುಭೀಮ ರಾಯ್ ಪಾಟೀಲ, ಭೈರಪ್ಪ ಪಾಟೀಲ ಬೂಸನೂರ, ಅಣ್ಣಾರಾವ್ ವೀರಭದ್ರಪ್ಪ ಪಾಟೀಲ, ಸರದಾರ್ ಶರಣಗೌಡ ಪಾಟೀಲ ಇನಾಂದಾರ್ ಹಾಗೂ ದಿಗಂಬರರಾವ್ ಕಲ್ಮಣಕರ್ ಮುಂತಾದವರ ನೇತೃತ್ವದಲ್ಲಿ ಗಡಿಭಾಗದಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಂಡು ರಜಾಕಾರರ ಹಾಗೂ ಪಠಾಣರ ವಿರುದ್ಧ ಹೋರಾಟವನ್ನು ಸಂಘಟಿಸಲು ನಿರ್ಧರಿಸಿದರು. ಈ ಶಿಬಿರಗಳನ್ನು ವ್ಯವಸ್ಥಿತವಾಗಿ ಕಟ್ಟಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಉತ್ಸಾಹಿ ಯುವಕರನ್ನು ಆಯ್ಕೆ ಮಾಡಲಾಯಿತು.

ಗುಲ್ಬರ್ಗಾದಲ್ಲಿ ಅಣ್ಣಾರಾವ್ ವೀರಭದ್ರಪ್ಪ ಪಾಟೀಲ, ಸರದಾರ್ ಶರಣಗೌಡ ಪಾಟೀಲ ಇನಾಂದಾರ್ ಹಾಗೂ ದಿಗಂಬರ್‌ರಾವ್ ಕಲ್ಮಣಕರ್ ಮುಂತಾದವರ ನೇತೃತ್ವ ದಲ್ಲಿ ‘ಶಿಬಿರ’ಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳಲ್ಲಿ ಒಬ್ಬ ಶಿಬಿರಾಧಿಪತಿ, ದಳನಾಯಕ, ಕೋಶಾಧಿಪತಿ ಹಾಗೂ ಆಹಾರ ವ್ಯವಸ್ಥೆ ಮಾಡುವವರು ಇದ್ದರು.ೊಒಂದೊಂದು ಶಿಬಿರಗಳಲ್ಲಿ ಈ ಮುಖ್ಯಸ್ಥರ ಜೊತೆಗೆ ನೂರಾರು ಜನರು ಹೋರಾಟಕ್ಕೆ ಸಿದ್ಧರಾಗುತ್ತಿದ್ದರು. ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ಮಾಡುವುದೇ ಈ ಶಿಬಿರಗಳ ಉದ್ದೇಶವಾಯಿತು. ಈ ಶಿಬಿರಗಳಿಗೆ ಸೇರುವವರಿಗೆ ಸೈನಿಕ ತರಬೇತಿಯನ್ನು ವ್ಯವಸ್ಥಿತವಾಗಿ ನೀಡಲಾಗಿತ್ತು. ಈ ತರಬೇತಿ ನೀಡಲು  ಅಜಾದ್ ಸೈನ್ಯದಲ್ಲಿದ್ದವರು ಬಂದರು. ತೆಲಂಗಾಣ, ಮದ್ರಾಸ್, ಮಹಾರಾಷ್ಟ್ರ ಜನರಿಗೆ ಧೈರ್ಯ ಬಂತು. ಶಿಬಿರಗಳಿಗೆ ಹೆಚ್ಚಿನ ನೆರವು ದೊರೆಯಿತು. ಹೈದರಾಬಾದ ಕರ್ನಾಟಕದ ತುಂಬ ನೂರಾರು ಶಿಬಿರಗಳ ನೆಲೆಗಳಲ್ಲಿ ಸಹಾಯ ಮಾಡಿದರು. ಮುಂಡರಗಿ, ಗಜೇಂದ್ರಗಡ, ಸಿಂದಗಿ, ದುದನಿ, ಗೌಡಗಾಂವ, ವಾಗ್ದರಗಿ, ಕೇಸರಿ ಜವಳಗಾಗಳು ಗುಲ್ಬರ್ಗದ ಮುಖ್ಯ ಶಿಬಿರಗಳಾಗಿದ್ದವು. ಈ ಶಿಬಿರದ ಹೋರಾಟಗಾರರು ಹಾಗೂ ರಜಾಕಾರರ ನಡುವೆ  ಕೆಲವು ಕಡೆ ಯುದ್ಧದ ರೀತಿಯಲ್ಲಿ ಹೋರಾಟ ನಡೆದು ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಈ ಶಿಬಿರಗಳ ಮೂಲಕ ಸ್ವಾಭಿಮಾನಿಗಳು ಹೋರಾಡಿದ ಪರಿಣಾಮವಾಗಿ ರಜಾಕಾರರು ಧೈರ್ಯಗುಂದಿದರು. ಗುಲ್ಬರ್ಗ ಹಾಗೂ ರಾಯಚೂರು ಸರಹದ್ದಿನ ಎಷ್ಟೋ ಹಳ್ಳಿಗಳು ಸ್ವತಃ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು, ಸ್ಥಳೀಯ ಸರಕಾರವನ್ನು ಪಂಚಾಯಿತಿ ರಾಜ್ಯ ಮಾದರಿಯಲ್ಲಿ ರಚಿಸಿಕೊಂಡವು. ಸಂಸ್ಥಾನದಲ್ಲಿ ಕದನಗಳು ನಡೆದು ಸಾವು ನೋವಿನಿಂದ ಅರಾಜಕತೆ ಉಂಟಾದದ್ದು ಕಂಡ ಭಾರತ ಸರಕಾರವು ನಿಜಾಂ ಸರಕಾರದ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿತು. ಗೃಹಮಂತ್ರಿಗಳಾಗಿದ್ದಂತಹ ಸರದಾರ ವಲ್ಲಭಬಾಯಿ ಪಟೇಲರು ಜನರಲ್ ಚೌಧರಿಯವರ ನೇತೃತ್ವದಲ್ಲಿ ಭಾರತೀಯ ಸೇನೆ ಯನ್ನು ಸೆಪ್ಟೆಂಬರ್ 13, 1948ರಂದು ಕಳಿಸಿದರು. ಭಾರತೀಯ ಸೇನೆಯುೊಹೈದರಾಬಾದ್ ಸಂಸ್ಥಾನವನ್ನು ಪ್ರವೇಶಿಸಿ ರಜಾಕಾರರದಿಂದ ಉಂಟಾದ ಅರಾಜಕತೆಯನ್ನು ಶಾಂತಗೊಳಿಸಿತು. ಹೈದರಾಬಾದ್ ಸಂಸ್ಥಾನ ನಿಜಾಮನ ಆಳ್ವಿಕೆಯಿಂದ ಬಿಡುಗಡೆಯಾಗಿ ಸ್ವತಂತ್ರವಾಯಿತು. ಹೈದರಾಬಾದ್ ಕರ್ನಾಟಕ ರಾಜಕೀಯವಾಗಿ ಮುಕ್ತವಾಯಿತು.

 

ಗುಲ್ಬರ್ಗ ಜಿಲ್ಲೆಯ ಶಿಬಿರಗಳು

ಶಿಬಿರಗಳು                      ಮುಖ್ಯಸ್ಥರು

1. ಧುದನಿ ಶಿಬಿರ                          ಗುರುಭೀಮರಾವ್ ಪಾಟೀಲ

2. ಗೌಡಗಾಂವ ಶಿಬಿರ                   ಭೈರಪ್ಪ ಪಾಟೀಲ ಭೂಸನೂರ

3. ವಾಗ್ದರಿಗಿ ಶಿಬಿರ                       ಅಣ್ಣಾರಾವ್ ವೀರಭದ್ರಪ್ಪ ಪಾಟೀಲ

4. ಸಿಂದಗಿ ಶಿಬಿರ                                    ಸರದಾರ ಶರಣಗೌಡ ಪಾಟೀಲ ಇನಾಂದಾರ್

5. ಕೇಸರ ಜವಳಗಾ ಶಿಬಿರ            ದಿಗಂಬರ್‌ರಾವ್ ಕಲ್ಮಣಕರ್ (ಕಲ್ಮಣಕರ್ ಡಿ.ಬಿ.)

 

ಧುದನಿ ಶಿಬಿರ

ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲ್ಲೂಕಿನಲ್ಲಿರುವ ಈ ಗ್ರಾಮವು ಕರ್ನಾಟಕದ ಗಡಿ ಪ್ರದೇಶವಾಗಿದೆ. ಈ ಗ್ರಾಮವು ರೈಲು ಸಂಚಾರ ಹೊಂದಿದ್ದು, ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ರವಾನಿಸಲು ಸೂಕ್ತವಾದ ಸೌಲಭ್ಯವನ್ನು ಧುದನಿ ಗ್ರಾಮವು ಹೊಂದಿತ್ತು. ಇಲ್ಲಿನ ಜನರು ಹಿಂದಿ, ಉರ್ದು, ಮರಾಠಿ ಹಾಗೂ ಕನ್ನಡ ಭಾಷೆಯನ್ನು ಬಲ್ಲವರಾಗಿದ್ದು, ಅನೇಕ ಪ್ರಮುಖ ನಗರಗಳೊಂದಿಗೆ ಸಂಪರ್ಕ ಹೊಂದಿದ್ದರು. ರಜಾಕಾರರ ಹಾವಳಿಯಿಂದ ಬೇಸತ್ತ ಜನತೆ ಧುದನಿ ಗ್ರಾಮದಲ್ಲಿ ಸಭೆ ಸೇರಿ ವಿಮೋಚನಾ ಹೋರಾಟದ ಮುಂದಾಳತ್ವ ವಹಿಸಿಕೊಂಡು ಶಿಬಿರವೊಂದನ್ನು ಸ್ಥಾಪಿಸಿದರು. ಈ ಶಿಬಿರಕ್ಕೆ ಮಧುಗುಣಜಿಯ ಗುರುಭೀಮರಾವ್ ಪಾಟೀಲರು ಮುಂಚೂಣಿಯ ವ್ಯಕ್ತಿಯಾಗಿ ಶಿಬಿರವನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಂಡರು. ಆಗ ಸುತ್ತಮುತ್ತಲಿನ ಊರುಗಳ ಅನೇಕ ಜನರು ಒಟ್ಟಾಗಿ ಪಾಲ್ಗೊಳ್ಳುವ ಮೂಲಕ ವಿಮೋಚನಾ ಹೋರಾಟಗಾರರ ಸಂಖ್ಯೆಯನ್ನು ಹೆಚ್ಚಿಸಿದುದಲ್ಲದೆ ಹೋರಾಟದ ಕಿಚ್ಚನ್ನು ಹೆಚ್ಚಿಸುವಲ್ಲಿ ಯಶಸ್ವಿಯಾದರು.

ಧುದನಿಯ ಅಕ್ಕಪಕ್ಕದ ಊರುಗಳಾದ ಸಿನ್ನೂರು, ಬಳೂರಗಿ, ನಂದರಗಾ ಮತ್ತು ಜೀವರ್ಗಿಗಳಲ್ಲಿ ಪಠಾಣರ ದಾಳಿಯು ತೀವ್ರವಾಗಿತ್ತು. ಬೇಸತ್ತ ಜನತೆ ತಮ್ಮ ನೋವು ಗಳನ್ನು ಧುದನಿ ಶಿಬಿರಾಧಿಪತಿಗೆ ಹೇಳಿಕೊಂಡರು. ಒಮ್ಮೆ ಪಠಾಣರ ಹಾವಳಿಯನ್ನು ಮುಂಚಿತವಾಗಿ ಅರಿತುಕೊಂಡ ಸಿನ್ನೂರು, ಬಳೂರಗಿ ಗ್ರಾಮದ ಜನತೆಯ ಸಹಾಯದಿಂದ ಪಠಾಣರ ಸೈನಿಕರ ಮೇಲೆರಗಿ ಖಡ್ಗಗಳು ಹಾಗೂ ಬಂದೂಕುಗಳನ್ನು ವಶಪಡಿಸಿಕೊಂಡರು. ರಜಾಕಾರರು ಮತ್ತೆ ಜನತೆಯ ಸಹಾಯದಿಂದ ಪಠಾಣರ ಸೈನಿಕರ ಮೇಲೆರಗಿ ಖಡ್ಗಗಳು ಹಾಗೂ ಬಂದೂಕುಗಳನ್ನು ವಶಪಡಿಸಿಕೊಂಡರು. ರಜಾಕಾರರು ಮತ್ತೆ ಜನತೆಯ ಮೇಲೆರಗಿ ಬರದಂತೆ ತಡೆಯೊಡ್ಡಿದರು. ಜೀವರ್ಗಿಯ ವಿಠಲಗೌಡರು ಪಠಾಣರಿಗೆ ತೀವ್ರವಾದ ಪ್ರತಿರೋಧ ಒಡ್ಡಿದರು. ಗುರುಭೀಮರಾವ್ ಪಾಟೀಲರು ಪ್ರತಿಯೊಂದು ಹಳ್ಳಿಗೆ ಹೋಗಿ ಅವರ ಸಮಸ್ಯೆಗಳನ್ನು ಕೇಳುತ್ತಿದ್ದರು. ಇವರ ಜೊತೆಗೆ ನಂದರಗಾ ಗ್ರಾಮದ ಜಹಗೀರದಾರ ಆದ ಪಚ್ಚೇಸಾಬ್ ಈ ಗ್ರಾಮಗಳ ಕುಂದುಕೊರತೆ ನೋಡಿ ಕೊಳ್ಳುತ್ತಿದ್ದರು. ಇವರು ನಿಜಾಂ ಸರ್ಕಾರದಲ್ಲಿ ಜಹಗೀರದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಮುಸ್ಲಿಮ ಜನಾಂಗದವರಾದರೂ ನಿಜಾಮ ಮತ್ತು ರಜಾಕಾರರ  ಕೆಟ್ಟ ಕಾರ್ಯಗಳಿಗೆ ಆಸ್ಪದ ಕೊಡುತ್ತಿರಲಿಲ್ಲ.  ಇವರು ಊರನ್ನು ಕಾವಲು ಕಾಯಲು ಒಬ್ಬ ವಾಲೀಕಾರನನ್ನು ನೇಮಿಸಿದರು. ಇವರ ೊತೆಗೆ ಶರಣದೊಡ್ಡಮನಿ, ಹಸನಪ್ಪ ದೊಡ್ಡಮನಿಯವರು ಪಚ್ಚೇಸಾಬರ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸಿದರು. ಇವರ ಜೊತೆಗೆ ಶರಣ ದೊಡ್ಡಮನಿ, ಹಸನಪ್ಪ ದೊಡ್ಡಮನಿ, ಚಂದ್ರಶಾವಾಗ್ದರಿಗಿ, ದೌಲಪ್ಪ, ಚಂಡಕಿ, ಪಾರಪ್ಪ ದೊಡ್ಡಮನಿ, ಗೌವಪ್ಪ ದೊಡ್ಡಮನಿ, ರೇವಣಸಿದ್ದಪ್ಪ ಪಾಟೀಲ್ ಜೀವರ್ಗಿ, ಶಿವರಾಯ ಪಾಟೀಲ ಜೀವರ್ಗಿ, ಮಲ್ಲೇಸಪ್ಪ ಮಗಣಗೇರಿ, ದುಂಡಪ್ಪ ಪೂಜಾರಿ, ಯಲ್ಲಪ್ಪಅಳ್ಲಗಿ ಇವರೆಲ್ಲರೂ ಕೈಜೋಡಿಸಿ ರಜಾಕಾರರ ಹಾವಳಿಗೆ ತಡೆಗೋಡೆ ಯಾದರು. ಹೀಗೆ ಹಗಲು ರಾತ್ರಿಗಳೆನ್ನದೆ ಶರಣಪ್ಪ ದೊಡ್ಡಮನಿ, ಹಸನಪ್ಪ ದೊಡ್ಡಮನಿ, ಪಾರಪ್ಪ, ಗೌವಪ್ಪ ದೊಡ್ಡಮನಿ ಇವರು ಊರನ್ನು ಕಾವಲು ಕಾಯುತ್ತಿದ್ದರು.

ದಿಗ್ಗಸಂಗಿ ಗ್ರಾಮದ ಮೇಲೆ ನಡೆಸಿದ ಆಕ್ರಮಣದಲ್ಲಿ ರಜಾಕಾರರಿಂದ ಮೂವತ್ತು ಬಂದೂಕುಗಳನ್ನು ವಶಪಡಿಸಿಕೊಂಡರು. ಸಣಲಿಗಿ ಗ್ರಾಮದ ಮೇಲೆ ರಜಾಕಾರರು ನಡೆಸಿದ  ಆಕ್ರಮಣವನ್ನು  ಎದುರಿಸಿ ಐದು ಬಂದೂಕು ಹಾಗೂ ಅವರಿಂದ ಕುದುರೆ ಗಳನ್ನು ಚಂದ್ರಶೇಖರ ಬೈರಮಡಗಿ, ಸಿದ್ಧರಾಮಪ್ಪ ತೆಲ್ಲೂರ, ಅಣವಿರಯ್ಯ, ಸ್ಟೇಷನ್ ಗಾಣಗಾಪುರ ಮುಂತಾದವರು ವಶಪಡಿಸಿಕೊಂಡರು. ಅರ್ಜಣಗಿ, ಕುಲಾಲಿ, ರೇವೂರ್ ಗ್ರಾಮದ ಜನತೆಗೆ ರಜಾಕಾರರು ಹಾಗೂ ಪಠಾಣರು ಅನೇಕ ತೊಂದರೆಗಳನ್ನು ಕೊಡುತ್ತಿದ್ದರು. ಈ ಗ್ರಾಮಗಳ ಜನತೆಯನ್ನು ಹೆದರಿಸಿ ಅವರಲ್ಲಿದ್ದ ಹಣ, ಆಭರಣ ಹಾಗೂ ವರ್ಷವಿಡೀ ಕಷ್ಟಪಟ್ಟು ದುಡಿದು ಸಂಗ್ರಹಿಸಿದ ದವಸಧಾನ್ಯಗಳನ್ನು ಕಬಳಿಸಿ ಕೊಳ್ಳುತ್ತಿದ್ದರು.ೊಇದರಿಂದ ನೊಂದ ಜನರು ಗುರುಭೀಮರಾವ್ ಪಾಟೀಲರನ್ನು ಸಂಪರ್ಕಿಸಿ ತಮ್ಮ ಕಷ್ಟಗಳನ್ನು ಹೇಳಿಕೊಂಡರು. ಪಾಟೀಲರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಗುರುನಾಥ ಮಾತೋಳಿ, ಮಲ್ಲೇಶಪ್ಪ ನಿಂಬಾಳಿ, ಶಿವಪ್ಪ ಭೂಸನೂರ, ಈರಣ್ಣ ಭೂಸನೂರ, ಶಿವಪ್ಪ ಮಾಶಾಳ ಮುಂತಾದ ಯುವಕರನ್ನು ಸೇರಿಸಿ ಒಂದು ತಂಡ ರಚಿಸಿದರು. ಇವರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ಕೊಟ್ಟು ರಜಾಕಾರರ ಹಾಗೂ ಪಠಾಣರ ಮೇಲೆ ದಾಳಿ ಮಾಡಲು ಸೂಚಿಸಿದರು. ಇವರ ಮಾರ್ಗದರ್ಶನದಲ್ಲಿ ಈ ಯುವಕರು ರಜಾಕಾರರ ಹಾಗೂ ಪಠಾಣರ ದೌರ್ಜನ್ಯಗಳನ್ನು ತಡೆದರಲ್ಲದೇ ಅವರಲ್ಲಿದ್ದ ಹತ್ತು ಬಂದೂಕು, ಹದಿನೈದು ಖಡ್ಗಗಳು ಮತ್ತು ಅನೇಕ ಭರ್ಚಿಗಳನ್ನು ವಶಪಡಿಸಿಕೊಂಡರು. ಗವೂರ ಮತ್ತು ಮಾಶಾಳ ಗ್ರಾಮಗಳಲ್ಲಿ ರಜಾಕಾರರು ಅನೇಕ ಮದ್ದು ಗುಂಡುಗಳನ್ನು ಹಾಗೂ ಬಂದೂಕು ತಯಾರಿಸುತ್ತಿದ್ದರು. ಇದನ್ನರಿತ ಶಿವಗೌಡಪ್ಪ ಮಾಶಾಳ, ಸಿದ್ಧರಾಮ ಮಾಶಾಳ,  ಹರಿಹರರಾವ್ ಅಫಜಲಪೂರ್, ತುಕ್ಕಪ್ಪ ಪ್ಯಾಟಿ, ಇಟ್ಟರಿಪ್ಪ ಅಫಜಲಪೂರ ಮುಂತಾದವರು ಸೇರಿ ರಜಾಕಾರರ ಮದ್ದುಗುಂಡುಗಳನ್ನು ಧುದನಿ ಗೌಡಗಾಂವ ಶಿಬಿರಗಳ ಕಾರ್ಯಕರ್ತರಿಗೆ ಕಳುಹಿಸಿಕೊಟ್ಟರು. ನಂತರ ಇಡೀ ಶಿಬಿರದ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಕಾರಣೀಭೂತರಾದರು.

 

ಗೌಡಗಾಂವ ಶಿಬಿರ

‘ಧುದನಿ’ ಶಿಬಿರದಂತೆ “ಗೌಡಗಾಂವ” ಎಂಬಲ್ಲಿಯೂ ಒಂದು ಶಿಬಿರವನ್ನು ವಿಮೋಚನಾ ಹೋರಾಟಗಾರರು ಸಂಘಟಿಸಿದು. ಈ ಶಿಬಿರವು ಅಫಜಲಪೂರ ತಾಲ್ಲೂಕಿನ ಮಧ್ಯದಲ್ಲಿ ಬರುವ ಸ್ಟೇಷನ್ ಹತ್ತಿರವಿದೆ. ಇದರ ನೇತೃತ್ವವನ್ನು ಬೈರಪ್ಪ ಪಾಟೀಲ ಭೂಸನೂರ ಮತ್ತು ಧರ್ಮವೀರ ಸೂರ್ಯವಂಶಿಯವರು ನಿರ್ವಹಿಸಿದ್ದರು. ಕುಸುಮಾಕರ ದೇಸಾಯಿ, ಅಪ್ಪಾರಾವ ಪಾಟೀಲ ಮಹಾಗಾಂವ ಮುಂತಾದ ಕ್ರಿಯಾಶೀಲ ಕಾರ್ಯಕರ್ತರು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು. 1948ರ ಆಗಸ್ಟ್ ತಿಂಗಳಲ್ಲಿ ಚಿರುಚಾಕಿನ ಚೋಳ ಮತ್ತು ಜಂಬಗಿ ಗ್ರಾಮದಲ್ಲಿ ಅನೇಕ ವಿಮೋಚನಾ ಹೋರಾಟಗಾರರು ಸಭೆ ಸೇರಿದ್ದರು. ಗೌಡಗಾಂವ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಶಿಬಿರದ ಕಾರ್ಯಕರ್ತರಲ್ಲಿ ಅನೇಕರು ಹೋರಾಟಗಾರರು ಸಭೆ ಸೇರಿದ್ದರು. ಗೌಡಂಗಾವ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಶಿಬಿರದ ಕಾರ್ಯಕರ್ತರಲ್ಲಿ ಅನೇಕರು ಉಗ್ರವಾದಿ ಧೋರಣೆಗಳನ್ನು ಹೊಂದಿದ್ದರು. ಈ ಶಿಬಿರವು ತನ್ನ ಸುತ್ತಮುತ್ತಲಿನ ಸುಮಾರು ಇಪ್ಪತ್ತು ಕಿಲೋಮೀಟರ್ ದೂರದವರೆಗೆ ತನ್ನ ನಿಯಂತ್ರಣವನ್ನು ಸಾಧಿಸಿತ್ತು.

ಗಜಾನನ ದೇವಲ್‌ಗಾಣಗಾಪೂರ್, ದತ್ತಾತ್ರೇಯ, ಶಾಂತಪ್ಪ ಕಡಗಂಚಿ ಚಂದ್ರಶೇಖರ ಬೈರಾಮಡಗಿ, ತುಕ್ಕಪ್ಪ ಪ್ಯಾಟಿ ಮುಂತಾದ ಯುವಕರು ಪ್ರಾಣಭಯವನ್ನು ತೊರೆದು ರಜಾಕಾರರ ವಿರುದ್ಧ ಹೋರಾಡಿದ್ದರು. ಗೌಡಗಾಂವ ಶಿಬಿರದ ಕಾರ್ಯಕರ್ತರು ಗಾಣಗಾಪೂರ ಸ್ಟೇಷನ್ ಹತ್ತಿರ ಇದ್ದ ನಿಜಾಂ ಪೊಲೀಸ್ ಠಾಣೆಯನ್ನು ಹಾಗೂ ಕಂದಾಯ ಇಲಾಖೆ ಯನ್ನು ಲೂಟಿ ಮಾಡಿದರಲ್ಲದೆ, ಕೋಗನೂರ್, ಬೈರಾಮಡಗಿ, ದಿಗ್ಗಸಂಗಿ, ನೀಲೂರ್, ಗ್ರಾಮಗಳಿಗೆ ಹೋಗಿ ಅಲ್ಲಿದ್ದ ರಜಾಕಾರರ ಗೂಢಚಾರಿಗಳನ್ನು ಸೆರೆಹಿಡಿದು ಕೊಂದು ಹಾಕಿದರು. ಆಗ ನಿಜಾಮನ ದೃಷ್ಟಿಯಲ್ಲಿ ಈ ಹೋರಾಟಗಾರರು ಉಗ್ರಗಾಮಿಗಳಾಗಿ ಕಾಣಿಸಿದರು. 1948ರ ಸೆಪ್ಟೆಂಬರ್ ತಿಂಗಳಲ್ಲಿ ನಿಂಬರ್ಗ ಮಡ್ಯಾಳ, ಯಳಸಂಗಿ ಮುಂತಾದ ಕಡೆ ನಿಜಾಮನ ಪೊಲೀಸ್ ಠಾಣೆ ಮತ್ತು ಕಂದಾಯ ಕಛೇರಿಗಳಿಗೆ ಬೆಂಕಿಯಿಟ್ಟರು. ಈ ಹೋರಾಟದ ಸ್ವರೂಪವನ್ನು ಅರಿತ ನಿಜಾಂ ಸೈನಿಕರು ದಿಕ್ಕಾಪಾಲಾಗಿ ಓಡಿಹೋದರು. ಆದರೂ ಛಲಬಿಡದೆ ವಿಮೋಚನಾ ಹೋರಾಟಗಾರರು ಪಠಾಣನನ್ನು ಹುಡುಕಿ ಕೊಂದುಹಾಕಿದರು. ಮತ್ತೊಂದು ಕಡೆ ನಿಜಾಂ ಸೈನಿಕರು ಹಾಗೂ ರಜಾಕಾರರು ಸೇರಿ ಗೌಡಗಾಂವ ಶಿಬಿರಾರ್ಥಿಗಳನ್ನು ಸೆರೆಹಿಡಿಯಲು ಹೊಂಚು ಹಾಕುತ್ತಿದ್ದರು. ಈ ಸುದ್ದಿ ತಿಳಿದ ಭೂಸನೂರ ಭೈರಪ್ಪ ಪಾಟೀಲ, ಅಫಜಲಪುರದ ಧರ್ಮವೀರ ಸೂರ್ಯವಂಶಿ ಮತ್ತು ಕಲಬುರ್ಗಿಯ ಕುಸುಮಾಕರ ದೇಸಾಯಿಯವರೂ ಮುಂತಾದ ಯುವಕರು ನಿಜಾಂ ಸೈನ್ಯದ ವಿರುದ್ಧ ಹೋರಾಡಲು ಮುಂದಾದರು. ಅದರಲ್ಲಿ ಕೆಲವರು ನಿಜಾಂ ಪೊಲೀಸ್‌ರಿಂದ ಸೆರೆಮನೆವಾಸ ಅನುಭವಿಸಿದರೆ ಮತ್ತೆ ಕೆಲವರು ಪ್ರಾಣ ಕಳೆೆದುಕೊಂಡರು. ಪ್ರಾಣ ಕಳೆದುಕೊಂಡವರಲ್ಲಿ ಮಹಾಗಾಂವದ ಅಪ್ಪಾರಾವ್ ಪಾಟೀಲರು ಒಬ್ಬರು.

ಗೌಡಗಾಂವ ಶಿಬಿರದ ಸಮೀಪದ ಗ್ರಾಮಗಳಾದ ಸ್ಟೇಷನ್ ಗಾಣಗಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನತೆಗೆ ರಜಾಕಾರರು ತೊಂದರೆಗಳನ್ನು ಕೊಡುತ್ತಿದ್ದರು ಹಾಗೂ ಮುಂಬೈ ಮತ್ತು ಮದ್ರಾಸಿನಿಂದ ಬರುವ ರೈಲುಗಳನ್ನು ಮಧ್ಯ ನಿಲ್ಲಿಸಿ ಪ್ರಯಾಣಿಕರನ್ನು ಹೆದರಿಸಿ ಹಣ ಮತ್ತು ಆಭರಣಗಳನ್ನು ರಜಾಕಾರರು ದೋಚುತ್ತಿದ್ದರು. ಕೆಲ ಹೆಣ್ಣುಮಕ್ಕಳ ಮೇಲೆ ಮಾನಭಂಗ ಮಾಡಿದ್ದಲ್ಲದೆ ಅವರ ಕೆಲ ಹೆಣ್ಣುಮಕ್ಕಳ ಪ್ರಾಣ ತೆಗೆಯುತ್ತಿದ್ದರು. ಇಂತಹ ಘಟನೆಗಳು ಈ ಭಾಗದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ನಡೆದವು. ಗೌಡಗಾಂವ ಗ್ರಾಮದ ಜನತೆಯನ್ನು ರಜಾಕಾರರು ಅನೇಕ ರೀತಿಯಲ್ಲಿ ಹಿಂಸಿಸುತ್ತಿದ್ದರು. ಗೌಡಗಾಂವ, ಬೈರಾಮಡಗಿ ಹಾಗೂ ಬೆಣ್ಣಿಸೂರ ಗ್ರಾಮಗಳ ಜನತೆ ಯನ್ನು ರಜಾಕಾರರು ಅನೇಕ ರೀತಿಯಲ್ಲಿ ಹಿಂಸಿಸುತ್ತಿದ್ದರು. ಗೌಡಗಾಂವ, ಬೈರಾಮಡಗಿ ಹಾಗೂ ಬೆಣ್ಣಿಸೂರ ಗ್ರಾಮಗಳ ಜನರು ಪಠಾಣರಿಗೆ ಹೆದರಿ ಬೇರೆ ಕಡೆ ವಲಸೆ ಹೋಗಲು ಪ್ರಾರಂಭಿಸಿದರು. ಈ ಗ್ರಾಮಗಳ ಜನರ ರಕ್ಷಣೆಗಾಗಿ ಗೌಡಗಾಂವ ಶಿಬಿರದ ಮುಖಂಡರಾದ ಭೈರಪ್ಪ ಪಾಟೀಲರು ಒಂದು ತಂಡವನ್ನು ರಚಿಸಿದರು. ಅದರಲ್ಲಿ ವೀರಯ್ಯ ಸ್ಟೇಷನ್ ಗಾಣಗಾಪೂರ, ಚಂದ್ರಶೇಖರ ಬೈರಾಮಡಗಿ, ಶಿವಪ್ಪ ಭೂಸನೂರ, ಗುರುಶಾಂತಪ್ಪ ಭೂಸನೂರ ಮುಂತಾದ ಗೌಡಗಾಂವ ಶಿಬಿರದ ಕಾರ್ಯಕರ್ತರು ಸೇರಿ ರಜಾಕಾರರ ಕ್ಯಾಂಪುಗಳ್ನು ಪತ್ತೆ ಹಚ್ಚಿದರು. ಆದರೆ ಅವರ ಮೇಲೆ ದಾಳಿಮಾಡಲು ಶಸ್ತ್ರಾಸ್ತ್ರಗಳ ಕೊರತೆಯಿಂದ ಅವರನ್ನು ಎದುರಿಸಲು ಅಶಕ್ತರಾದರು. ಶಿಬಿರದ ಶಿಬಿರಾಧಿಪತಿಯಾದ ಭೈರಪ್ಪ ಪಾಟೀಲರು ಕೊಲ್ಲೂರು ಮಲ್ಲಪ್ಪ ಅವರಿಗೆ ಗುಪ್ತಚಾರರಿಂದ ಪತ್ರ ವ್ಯವಹಾರದ ಮೂಲಕ ವಿಷಯ ತಿಳಿಸಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಂಡರು. ಅನೇಕ ಬಂದೂಕು ಹಾಗೂ ಕೈಬಾಂಬುಗಳನ್ನು ಸಂಗ್ರಹಿಸಿ ರಜಾಕಾರರ ಮೇಲೆ ಶಿಬಿರದ ಕಾರ್ಯಕರ್ತರು ದಾಳಿ ಮಾಡಿದರು. ಈ ದಾಳಿಯಲ್ಲಿ ಒಂಬತ್ತು ಜನ ರಜಾಕಾರರು ತಮ್ಮ ಪ್ರಾಣವನ್ನು ಕಳೆದು ಕೊಂಡರು. ಸತತವಾಗಿ ಎರಡು ಗಂಟೆಗಳ ಕಾಲ ಗುಂಡಿನ ಸುಮರಿಮಳೆಯನ್ನು ನಡೆಸಿ ದರು. ರಜಾಕಾರರ ಗುಂಡಿಗೆ ಗೌಡಗಾಂವ ಶಿಬಿರದ ಕಾರ್ಯಕರ್ತರಾದ ಬಸವಣಗೌಡ ಹಾಗೂ ಮಲ್ಲಣದಸ್ತಿ ಎನ್ನುವರು ಬಲಿಯಾದರು. ಚೌಡಪೂರ, ಆತನೂರ ಗ್ರಾಮಗಳಲ್ಲಿ ನಿಜಾಮನ ಕಂದಾಯ ಕಛೇರಿಯಲ್ಲಿದ್ದ ಮೂರು ಸಾವಿರ ರೂಪಾಯಿ ವಶಪಡಿಸಿಕೊಂಡು ಗೌಡಗಾಂವ ಶಿಬಿರದ ಖರ್ಚು ವೆಚ್ಚಕ್ಕೆ ಉಪಯೋಗಿಸಿಕೊಂಡರು. ರಜಾಕಾರರ ಕಪಿಮುಷ್ಟಿ ಯಲ್ಲಿದ್ದ ಮಾಡ್ಯಾಳ, ಯಳಸಂಗಿ, ಬೆಣ್ಣಿಸೂರ, ನಿಂಬಾಳ ಮುಂತಾದ ಗ್ರಾಮಗಳನ್ನು ಮುಕ್ತಿಗೊಳಿಸಿದರು. ಈ ಶಿಬಿರದಲ್ಲಿ ಹಿಂದೂ ಕಾರ್ಯಕರ್ತರಲ್ಲದೇ ಮುಸ್ಲಿಂ ಕಾರ್ಯಕರ್ತರಾದ ಕಿರಂಸಾಬ, ಮಹ್ಮದ ಅಲಿ ಸೇರಿ ನಿಜಾಮನ ದಬ್ಬಾಳಿಕೆಯನ್ನು ಎದುರಿಸಿದರು.

 

ವಾಗ್ದರಿಗಿ ಶಿಬಿರ

ಮಹಾರಾಷ್ಟ್ರ ಸೊಲ್ಲಾಪುರ ಜಿಲ್ಲೆ ಅಕ್ಕಲಕೋಟೆ ತಾಲೂಕಿನಲ್ಲಿರುವ ವಾಗ್ದರಿಗಿ ಗ್ರಾಮದಲ್ಲಿ ರಜಾಕಾರರ ಹಾವಳಿ ಹೆಚ್ಚಾಗಿತ್ತು. ಇದನ್ನು ಮನಗಂಡ ಅಲ್ಲಿನ ಜನತೆ ಶಿಬಿರವೊಂದನ್ನು ಸ್ಥಾಪಿಸಿದರು. ನಿಜಾಮರ ದುರಾಡಳಿತದಿಂದ ಕಂಗೆಟ್ಟು ಅಲ್ಲಿಯ ಜನರಲ್ಲಿ ಧೈರ್ಯ ತುಂಬಲು ಕೇವಲ ಅಲ್ಪಸಂಖ್ಯೆಯ ವ್ಯಕ್ತಿಗಳಿಂದ ಆರಂಭವಾದ ಈ ಶಿಬಿರವು ದಿನೇ ದಿನೇ ಹೋರಾಟಗಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ ಹೋಯಿತು. ಬಾಬಾ ಸಾಹೇಬ ಪರಾಂಜಿ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದ ಈ ಶಿಬಿರಕ್ಕೆ ಗೋಪಾಲ ದೇವಶಾಸ್ತ್ರಿಯವರು ಅಧಿಪತಿಗಳಾಗಿದ್ದರು. ಇವರು 1947ರಲ್ಲಿ ರಜಾಕಾರರು ‘ಹಿರೋಲಿ’ ಗ್ರಾಮದ ಮೇಲೆ ದಾಳಿ ಮಾಡಿದಾಗ ಪ್ರತಿಹೋರಾಟ ನಡೆಸಿ ರಜಾಕಾರರನ್ನು ಹಿಮ್ಮೆಟ್ಟಿಸಿದರು. ಈ ಸಂದರ್ಭದಲ್ಲಿ ಗೋಪಾಲದೇವಶಾಸ್ತ್ರಿ ಅವರಿಗೆ ಕೈಬಾಂಬ್ ಸ್ಫೋಟದಿಂದ ಗಾಯಗಳಾಗಿದ್ದರಿಂದ ನಂತರ ಶಿಬಿರವನ್ನು ಮುನ್ನಡೆಸಲು ಅಣ್ಣಾರಾವ್ ಪಾಟೀಲ ಎಂಬುವರು ಸರ್ವಾನುಮತದಿಂದ ಆಯ್ಕೆಯಾಗಿ ಮುನ್ನಡೆಸಿದರು.

ಒಮ್ಮೆ ಆಳಂದ ಗ್ರಾಮದಲ್ಲಿ ನಡೆಯುತ್ತಿದ್ದ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ರಜಾಕಾರರು ದಾಳಿ ಮಾಡಿ ದೇವರಪಲ್ಲಿಗೆ ಬೆಂಕಿ ಹಚ್ಚಿದರು. ಇದರಿಂದ ರೊಚ್ಚಿಗೆದ್ದ ಜನರು ರಜಾಕಾರರನ್ನು ಹಿಡಿದು ಮನಬಂದಂತೆ ತಳಿಸಿದರು. ಅಲ್ಲದೆ ನಿಜಾಂ ಪೊಲೀಸರನ್ನು ಸೆರೆಹಿಡಿದು ಅವರಲ್ಲಿದ್ದ ಬಂದೂಕುಗಳನ್ನು ವಶಪಡಿಸಿ ಕೊಂಡರು. ಸ್ವತಃ ತಾವೇ ಆಳಂದ ಗ್ರಾಮವನ್ನು ಸ್ವಾತಂತ್ರ್ಯಗ್ರಾಮವೆಂದು ಘೋಷಿಸಿಕೊಂಡು ನಿಜಾಮರಿಗೆ ಸೆಡ್ಡುಹೊಡೆದು ನಿಂತರು. ಸಹಜವಾಗಿಯೇ ರಜಾಕಾರರು ಹಾಗೂ ನಿಜಾಮರು ಆಳಂದ ಗ್ರಾಮವನ್ನು ತಮ್ಮ ತೆಕ್ಕೆಗೆ ಪಡೆದುಕೊಳ್ಳಲು ಪ್ರಯತ್ನಿಸಿ ವಿಫಲ ರಾದರು. ಆದರೆ ಅಣ್ಣಾರಾವ್ ಪಾಟೀಲರ ತಂದೆ ವೀರಭದ್ರಪ್ಪ ಅವರನ್ನು ರಜಾಕಾರರು ಸೆರೆಹಿಡಿದರು. ಆದರೆ ಇದರಿಂದಾಗುವ ಅನಾಹುತವನ್ನು ತಪ್ಪಿಸಲು ನಿಜಾಂ ಸರ್ಕಾರದ ಪೊಲೀಸರೇ ವೀರಭದ್ರಪ್ಪನವರನ್ನು ಬಿಡುಗಡೆಗೊಳಿಸಿದರು. ಶಿಬಿರದಲ್ಲಿದ್ದ ಶಂಕರಶೆಟ್ಟಿ ಪಾಟೀಲರು ಗುರುನಾಥರಾವ್, ದಿಗಂಬರ ಕತಾರೆ, ಮಾರುತಿರಾವ್ ಬುಲಬುಲ್ಲೆ ಅವರು ಅಣ್ಣಾರಾವ್ ಪಾಟೀಲರ ಜೊತೆಸೇರಿ ಜನತೆಯ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದರು. ಶಿಬಿರದ ಕೆಲವು ಯುವಕರು ಶಸ್ತ್ರಾಸ್ತ್ರ ತರಬೇತಿ ಪಡೆದು ಕೊಂಡಿದ್ದರು. ಇವರ ಸಹಾಯದಿಂದಾಗಿ ಗಾಣಗಾಪುರ ಹಾಗೂ ಸರಸಂಭ ಗ್ರಾಮಗಳು ರಜಾಕಾರರಿಂದ ಮುಕ್ತಿಗೊಂಡವು. ನಿಜಾಂ ಸರ್ಕಾರದ ಕಛೇರಿಗಳ ಮೇಲೆ ದಾಳಿಮಾಡಿ ಅವುಗಳನ್ನು ನಾಶಗೊಳಿಸಿದರು. ಅಲ್ಲದೆ ಆಳಂದ ಹಾಗೂ ಬಾಲ್ಕಿ ಗ್ರಾಮಗಳಲ್ಲಿದ್ದ ಈಚಲ ಮರಗಳನ್ನು ಕಡಿಯುವ ಚಳವಳಿಯನ್ನು ವಾಗ್ದರಿಗಿ ಶಿಬಿರದ ಶಿಬಿರಾರ್ಥಿಗಳು ಕೈಗೊಂಡರು. ಕೆಲವು ದಿನ ಅಣ್ಣಾರಾವ್ ವೀರಭದ್ರಪ್ಪ ಪಾಟೀಲರು ಖಂಡಾಳಕ್ಕೆ ಹೋಗಿ ಅಲ್ಲಿಂದ ಅಕ್ಕಲಕೋಟೆ, ಸೊಲ್ಲಾಪುರ ಭಾಗಗಳಲ್ಲಿ ಸಂಚರಿಸಿ ಶಸ್ತ್ರಾಸ್ತ್ರಗಳ ತರಬೇತಿಯನ್ನು ಪಡೆದುಕೊಂಡರು. ವಾಗ್ದರಿಗಿ ಗಡಿಭಾಗಗಳಲ್ಲಿ ರಜಾಕಾರರ ಕ್ರೂರ ವರ್ತನೆಗೆ ತತ್ತರಿಸಿದ ಜನತೆ ಕಣ್ಣೀರಿಡುತ್ತಿದ್ದರು. ಇಂತಹ ಸಮಯದಲ್ಲಿ ಅಣ್ಣಾರಾವ್ ಪಾಟೀಲರು ತಮ್ಮ ಶಿಬಿರದ  ಯುವಕರನ್ನು ಒಂದುಗೂಡಿಸಿ ಸರಸಂಭ, ಸಕ್ಕರಗಿ, ಮೋಘ, ತಡಕಲ ಹೀಗೆ ಒಟ್ಟು 66 ಗ್ರಾಮಗಳನ್ನು ರಜಾಕಾರರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರು. ನಾಯಕರು ಪ್ರತಿಯೊಂದು ಹಳ್ಳಿಗೂ ಭೇಟಿ ನೀಡಿ ನಿಜಾಮರ ವಿರುದ್ಧ ಅಸಹಕಾರ ಚಳವಳಿಯನ್ನು ಹೂಡಲು ಜನರನ್ನು ಹುರಿದುಂಬಿಸಿದರು.

 

ಸಿಂದಗಿ ಶಿಬಿರ

ಧುದನಿ, ಗೌಡಗಾಂವ, ವಾಗ್ದರಿಗಿ ಶಿಬಿರಗಳಂತೆಯೇ ಜಿಲ್ಲೆಯ ಗಡಿಭಾಗದಲ್ಲಿ ಸಿಂದಗಿ ಶಿಬಿರವನ್ನು ಸ್ಥಾಪಿಸಲಾಗಿತ್ತು. ಪ್ರಸ್ತುತ ಈ ಗ್ರಾಮ ಬಿಜಾಪುರ ಜಿಲ್ಲೆಯ ಒಂದು ತಾಲೂಕು ಕೇಂದ್ರವಾಗಿದೆ. ಈ ಪ್ರದೇಶವು ಹೆಚ್ಚಿನ ಪ್ರಮಾಣದಲ್ಲಿ ರಜಾಕಾರರ ಹಾವಳಿಗೆ ತುತ್ತಾಗಿತ್ತು. ಸರದಾರ್ ಶರಣಗೌಡ ಪಾಟೀಲ್ ಇನಾಂದಾರ್ ಅವರು ಇಲ್ಲಿ ಶಿಬಿರವನ್ನು ಸ್ಥಾಪಿಸಿ ಮುಂದಾಳತ್ವ ವಹಿಸಿಕೊಂಡರು. ಬಸವಂತರಾವ್ ಗುರು ಮಿಟಕಲ್, ಚನ್ನಬಸಪ್ಪ ಕುಳಗೇರಿ, ಮುಖ್ತೇದಾರ್ ದಾಸ್‌ರಾವ್ ಮುಂತಾದವರು ಶಿಬಿರದ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಈ ಶಿಬಿರದಲ್ಲಿ 25 ಕುದುರೆಗಳು ಹಾಗೂ ಮೂರು ಜೀಪುಗಳು ಶಿಬಿರಾರ್ಥಿಗಳ ಉಪಯೋಗಕ್ಕೆ ಬಳಸಲಾಗುತ್ತಿದ್ದುದು ವಿಶೇಷವಾಗಿದೆ. ಶರಣಗೌಡರು ಗಡಿಭಾಗದಲ್ಲಿ ಸಂಚರಿಸಿ ಅನೇಕ ಗ್ರಾಮಗಳಿಗೆ ಭೇಟಿ ಕೊಟ್ಟು ಜನತೆಗೆ ಧೈರ್ಯ ಹೇಳಿದರು. ಕಕ್ಕಳ ಮೇಲಿ, ಮೂಡಬಾಳ, ಹಡಗಲಿ, ಭೂಟನೂರು ಗ್ರಾಮಗಳ ಮೇಲೆ ರಜಾಕಾರರು ಅತಿಯಾದ ದೌರ್ಜನ್ಯವೆಸಗಿದರು. ಇದನ್ನು ಮನಗಂಡ ಶರಣಗೌಡರು ಮಲ್ಲಪ್ಪ ಹರಿಜನ, ಅಚ್ಚಪ್ಪಗೌಡ, ಬಸವಣ್ಣಪ್ಪ ಆಂದೋಲ ಮುಂತಾದ ನಾಯಕರನ್ನು ಸೇರಿಸಿ ರಜಾಕಾರರ ಮೇಲೆ ಪ್ರಬಲವಾದ ದಾಳಿ ಮಾಡಿದರು. ಆ ದಾಳಿಯಲ್ಲಿ ಅನೇಕ ರಜಾಕಾರರು ಪ್ರಾಣ ಕಳೆದುಕೊಂಡರು. ಕೆಲ ರಜಾಕಾರರು ಧುದನಿ ಶಿಬಿರದ ಕಡೆ ಓಡಿದರು. ಇದೇ ರೀತಿ ಜೇವರ್ಗಿ, ಸುರಪುರ, ಶಹಾಪುರ ಪ್ರದೇಶಗಳಲ್ಲಿಯೂ ರಜಾಕಾರರ ಹುಟ್ಟಡಗಿಸಲು ಶರಣಗೌಡರು ಮುಂದಾದರು. ಸಿಂದಗಿ ಶಿಬಿರದ ಶಿಬಿರಾರ್ಥಿಗಳಾದ ಮಲ್ಲಾರರಾವ್ ಕೆಂಬಾವಿ, ಸಿದ್ರಾಮಪ್ಪ ಯತನಾಳ, ಶಿವಲಿಂಗಪ್ಪ ಪಾಟೀಲರು ಸೇರಿಕೊಂಡು ಜೀರಟಗಿ, ಹಲ್ಲೂರ್, ಯಡ್ರಾಮಿ ಕಲ್ಲೂರ ಮುಂತಾದ ಗ್ರಾಮಗಳ ಮೇಲೆ ರಜಾಕಾರರು ಎಸಗುತ್ತಿದ್ದ ದೌರ್ಜನ್ಯಕ್ಕೆ ತಡೆಯೊಡ್ಡಿದರು.

 

ಕೇಸರ ಜವಳಗಾ ಶಿಬಿರ

ಗುಲ್ಬರ್ಗಾ ಹಾಗೂ ಸೊಲ್ಲಾಪುರ ಜಿಲ್ಲೆಯ ಗಡಿಭಾಗಗಳಲ್ಲಿ ರಜಾಕಾರರ ಹಾವಳಿ ಹೆಚ್ಚಾಗತೊಡಗಿತ್ತು. ರಜಾಕಾರರನ್ನು ಸದೆಬಡಿಯಲು ವಿಮೋಚನಾ ಹೋರಾಟಗಾರರಾದ ಜಗನ್ನಾಥರಾವ್ ಚಂಡ್ರಿಕಿ, ಶರಣಗೌಡ ಪಾಟೀಲ, ಗುರುಭೀಮರಾವ್ ಪಾಟೀಲರು, ಗೋವಿಂದದಾಸ್ ಸರಾಫ್ ಅವರ ಸೂಚನೆ ಹಾಗೂ ಸಲಹೆಯ ಮೇಲೆ ಕೇಸರ ಜವಳಗಾ ಶಿಬಿರವನ್ನು ಸ್ಥಾಪಿಸಲಾಯಿತು. ಈ ಶಿಬಿರದ ಮುಖಂಡತ್ವವನ್ನು ಡಿ.ಬಿ.ಕಲ್ಮಣಕರ್ (ಮಾಜೀ ವಿಧಾನಸಭಾ ಅಧ್ಯಕ್ಷರು) ಅವರು ವಹಿಸಿಕೊಂಡಿದ್ದರು.

ಈ ಶಿಬಿರವು ಧುದನಿ, ಗೌಡಗಾಂವ, ವಾಗ್ದರಿಗಿ ಶಿಬಿರಗಳ ನಿಕಟ ಸಂಪರ್ಕವನ್ನು ಹೊಂದಿತ್ತು. ಈ ಮೂರು ಶಿಬಿರಗಳ ಕಾರ್ಯಕರ್ತರು ಕೇಸರ ಜವಳಗಾ ಶಿಬಿರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೇಸರ ಜವಳಗಾ ಶಿಬಿರದ ಶಿಬಿರಾಧಿಪತಿ ಹಾಗೂ ನೂರದಪ್ಪ ರುದ್ರವಾಡಿ, ಹನುಮಂತರಾಯ ರುದ್ರವಾಡಿ, ದೂಳಪ್ಪ ಅನೂರ, ಅಪ್ಪಾರಾವ ಜವಳಗಿ, ಸಿದ್ಧರಾಮಪ್ಪ ಜವಳಗಿ ಹೀಗೆ ಅನೇಕ ಶಿಬಿರಾರ್ಥಿಗಳು ಕೂಡಿ 10.07.1948 ರಂದು ಸರಸಂಭಾ ಗ್ರಾಮದ ರಜಾಕಾರರ ಮೇಲೆ ದಾಳಿ ಮಾಡಿದರು. ಈ ದಾಳಿಯಲ್ಲಿ ಹೋರಾಟಗಾರರಿಗೆ ರಜಾಕಾರರನ್ನು ಎದುರಿಸಲು ಕಷ್ಟವಾಯಿತು. ಕೆಲವು ಕಾರ್ಯಕರ್ತರು ತಮ್ಮ ತೊಂದರೆಗಳನ್ನು ಶಿಬಿರದ ಮುಖಂಡರಾದ ಕಲ್ಮಣಕರರಲ್ಲಿ ಹೇಳಿಕೊಂಡರು. ಆಗ ಪರಿಸ್ಥಿತಿಯನ್ನು ಅರಿತುಕೊಂಡ ಇವರು ಕಾರ್ಯಕರ್ತರನ್ನು ಪಾಟಿಯಾಲ, ಪುಣೆ, ಡೆಹರಾಡೂನ್, ಸತಾರ ಮುಂತಾದ ಪ್ರದೇಶಗಳಿಗೆ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಕಳಿಸಿಕೊಟ್ಟರು. ಕೆಲದಿನಗಳ ಕಾಲ ಶಸ್ತ್ರಾಸ್ತ್ರ ತರಬೇತಿ ಪಡೆದ ಯುವಕರು ಕೇಸರ ಜವಳಗಾ ಶಿಬಿರಕ್ಕೆ ಮರಳಿ ರಜಾಕಾರರ ತಾಣಗಳನ್ನು ಧ್ವಂಸ ಮಾಡತೊಡಗಿದರು.

ಅನೂರ ಗ್ರಾಮದ ಮೇಲೆ ದಿನನಿತ್ಯ ಪಠಾಣರು ಅಧಿಕಾರವನ್ನು ನಡೆಸುತ್ತಿದ್ದರು. ಊರಿನ ಹೊರಭಾಗದಲ್ಲಿ ಪಠಾಣರು ದೊಡ್ಡದೊಡ್ಡ ಕ್ಯಾಂಪನ್ನು ಹಾಕಿಕೊಂಡು ಅನೂರ ಗ್ರಾಮದ ಜನರಲ್ಲಿ ಹಫ್ತಾ ವಸೂಲಿ ಮಾಡುತ್ತಿದ್ದರು. ರೈತರು ಬೆಳೆದ ದವಸ ಧಾನ್ಯಗಳಲ್ಲಿ ಅರ್ಧದಷ್ಟು ಪಠಾಣರಿಗೆ ಕೊಡಬೇಕಾಗಿತ್ತು. ಇದರಿಂದ ಬೇಸತ್ತ ತಿಪ್ಪಣ್ಣ ಅನೂರ ಮತ್ತು ಧೂಳಪ್ಪ ಅನೂರ ಅವರು ಕೇಸರ ಜವಳಿಗಾ ಶಿಬಿರದ ಶಿಬಿರಾಧಿಪತಿಗಳಲ್ಲಿ ಮೊರೆ ಹೋದರು. ಶಿಬಿರಾಧಿಪತಿ ಡಿ.ಬಿ.ಕಲ್ಮಣಕರ್ ಅವರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಶಸ್ತ್ರಾಸ್ತ್ರ ತರಬೇತಿಹೊಂದಿದ ತಂಡವನ್ನು ಅಲ್ಲಿನ ಪಠಾಣರ ಮೇಲೆ ದಾಳಿ ಮಾಡಲು ತಿಳಿಸಿದರು. ಶಿಬಿರಾರ್ಥಿಗಳು ಮಿಂಚಿನ ದಾಳಿ ಮಾಡಿ ಪಠಾಣರನ್ನು ಭೀಕರವಾಗಿ ಕೊಲೆಗೈದರು. ಈ ಶಿಬಿರದ ಮತ್ತೊಂದು ಸಾಹಸವೆಂದರೆ ಪಡಸಾವಳಾಗಿ ಗ್ರಾಮವನ್ನು ರಜಾಕಾರರಿಂದ ಮುಕ್ತಗೊಳಿಸಲು ಘೋರ ಹೋರಾಟವೇ ನಡೆಯಿತು. ಈ ಹೋರಾಟದಲ್ಲಿ ಮೂರು ಜನ ರಜಾಕಾರರನ್ನು ಕೊಲೆ ಮಾಡಿ ಅವರಲ್ಲಿದ್ದ ಹೊಸ ರಿವಾಲ್ವಾರ್‌ಗಳನ್ನು ವಶಪಡಿಸಿಕೊಂಡರು. ಹೀಗೆ ವಶಪಡಿಸಿಕೊಂಡ ರಿವಾಲ್ವಾರ್‌ಗಳಿಂದ ತಿಳಿದುಬಂದ ಪ್ರಮುಖ ಅಂಶವೆಂದರೆ ಆಸ್ಟ್ರೇಲಿಯಾದ ಶಸ್ತ್ರಾಸ್ತ್ರ ಸರಬರಾಜುಗಾರ ಸಿಡ್ನಿಕಾಬನ್ ರಹಸ್ಯವಾಗಿ ನಿಜಾಂ ಸರಕಾರಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತಿದ್ದಾ ಎಂಬುವುದು. ಅವನು ಕರಾಚಿಯನ್ನು ಪ್ರಧಾನ ಕಛೇರಿಯನ್ನಾಗಿ ಮಾಡಿಕೊಂಡು ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ. ಇದರಿಂದ ಇವರಿಗೆ ಅಂತಾರಾಷ್ಟ್ರೀಯ ಸಂಬಂಧವಿತ್ತೆಂದು ಹೇಳಬಹುದಾಗಿದೆ.

ಈ ಶಿಬಿರಕ್ಕೆ ಡಿ.ಬಿ.ಕಲ್ಮಣಕರ್ ಅವರ ಕೊಡುಗೆ ಅಪಾರ. ಈ ಭಾಗದ ಜನತೆಗೆ ಸ್ವಾತಂತ್ರ್ಯ, ಭ್ರಾತೃತ್ವದ ಅರ್ಥವನ್ನು ಮನನ ಮಾಡಿಕೊಟ್ಟವರು ಇವರು. ಕೇಸರ ಜವಳಗಾ ಶಿಬಿರಕ್ಕೆ ಕಲಬುರ್ಗಿಯ ನಾರಾಯಣರಾವ್ ಕಾನಿಹಾಳ್, ಭೂಸನೂರಿನ ಭೈರಪ್ಪ ಪಾಟೀಲ್, ತಡಕರ್‌ನ ದೇಶಮುಖರು ಶಾಂತಪ್ಪ ಮುನೋಳಿ, ಚಿಕ್ಕವೀರಯ್ಯಸ್ವಾಮಿ, ರುಕ್ಮಯ್ಯ ಗುತ್ತೇದಾರ್, ಅಮೂರಿನ ಸಾಯಬಣ್ಣಪ್ಪ ಕಾರಾಬರಿ, ಸಿದ್ಧಲಿಂಗಪ್ಪೊಪಾಟೀಲ್, ರುದ್ರವಾಡಿಯ ರಿಯಾಸ್‌ಖಾನ್ ಮೊದಲಾದವರು ಜಾತಿಭೇದ ಮರೆತು ರಜಾಕಾರರೊಡನೆ ಹೋರಾಡಲು ಸಹಕರಿಸಿದರು. ಕಲ್ಮಣಕರ್ ಅವರು ಹಳ್ಳಿಗಳಿಗೆ ಹೋಗಿ ಜನರಲ್ಲಿ ನಿಜಾಂ ವಿರುದ್ಧ ಹೋರಾಡುವ ಅರಿವು ಮೂಡಿಸಿದರು. ಅನೇಕ ಯುವಕರನ್ನು ಸಂಘಟಿಸಿ ಈಚಲ ಮರಗಳನ್ನು ಕಡಿದು ನಿಜಾಮನಿಗೆ ಧಿಕ್ಕಾರ ಕೂಗುವಂತೆ ಪ್ರೇರೇಪಿಸಿದರು. ಸುಮಾರು 50ರಿಂದ 60 ಗ್ರಾಮಗಳಲ್ಲಿ ಈ ರೀತಿಯ ಅರಿವಿನ ಕೆಲಸ ಕೈಗೊಂಡು ಪ್ರಜ್ಞೆ ಮೂಡಿಸಿದರು.

ಹೀಗೆ ಗುಲಬರ್ಗಾ ಜಿಲ್ಲೆಯ ಶಿಬಿರಗಳು ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಜನರನ್ನು ರಜಾಕಾರರ ಹಾಗೂ ಪಠಾಣರ ದಬ್ಬಾಳಿಕೆಯಿಂದ ರಕ್ಷಿಸಲು ಶ್ರಮಿಸಿದವು. ಈ ಗಡಿಶಿಬಿರಾರ್ಥಿಗಳು ತಮ್ಮ ಜೀವದ ಹಂಗುತೊರೆದು ಜನತೆಯ ಸುರಕ್ಷತೆಗಾಗಿ ಹೋರಾಡಿದರು. ಧುದನಿ, ಗೌಡಗಾಂವ, ವಾಗ್ದರಿಗಿ, ಕೇಸರ ಜವಳಗಾ, ಸಿಂಧಗಿ ಹೀಗೆ ಅನೇಕ ಉಪ ಶಿಬಿರಗಳು ಹೈದರಾಬಾದ್ ಪ್ರದೇಶಗಳಲ್ಲಿ ನಿಜಾಂ ಹಾಗೂ ರಜಾಕಾರರ ವಿರುದ್ಧ ಹೋರಾಡಿದವು. ಶಿಬಿರದ ಶಿಬಿರಾಧಿಪತಿಯು ಶಿಬಿರಾರ್ಥಿಗಳಿಗೆ ಊರಿನ ರಕ್ಷಣೆಯ ಜೊತೆಗೆ ಶಸ್ತ್ರಾಸ್ತ್ರ ತರಬೇತಿ, ಅವುಗಳನ್ನು ತಯಾರಿಸುವುದನ್ನು ಪ್ರಮುಖವಾಗಿ ತಿಳಿಸುತ್ತಿದ್ದರು. ರಜಾಕಾರರಿಗೆ ತುತ್ತಾದ ಜನರಿಗೆ ಆಶ್ರಯ ನೀಡುವ ತಾಣಗಳಾಗಿದ್ದವು. ಈ ಶಿಬಿರಗಳಿಗೆ ಅನೇಕ ಶ್ರೀಮಂತ ದಾನಿಗಳು ಹಣ ಹಾಗೂ ದವಸಧಾನ್ಯಗಳನ್ನು ದಾನವಾಗಿ ನೀಡುತ್ತಿದ್ದರು. ಇವರೆಲ್ಲರ ಸಹಕಾರ ಹೋರಾಟದಿಂದಾಗಿ ಹೈದರಾಬಾದ್ ನಿಜಾಮರಿಂದ ಮುಕ್ತವಾಗಿ ಸ್ವತಂತ್ರ ಭಾರತದೊಂದಿಗೆ ವಿಲೀನವಾಯಿತು.

 

ದೌರ್ಜನ್ಯದ ವಿರುದ್ಧ ಹೋರಾಟದ ಲಾವಣಿ

ಹೈದರಾಬಾದ್ ವಿಮೋಚನಾ ಹೋರಾಟದ ಸಮಯದಲ್ಲಿ ರಜಾಕಾರರ ನಾಯಕ ಕಾಸಿಮ ರಜವೀಯ ದೌರ್ಜನ್ಯ, ದಬ್ಬಾಳಿಕೆ, ಅನ್ಯಾಯ ಅಷ್ಚು ಇಷ್ಟಲ್ಲ. ಇದನ್ನು ಕಣ್ಣಾರೆ ಕಂಡ  ಶ್ರೀಕಂಠಶಾಸ್ತ್ರೀ ಅಮರಾರ್ಯ ಹಿರೇಮಠ ನಲವಡಿ ಅವರು ರಜಾಕಾರರ ದಬ್ಬಾಳಿಕೆ ಹಾಗೂ ಆ ದಬ್ಬಾಳಿಕೆಯನ್ನು ತಡೆಯಲು ಸ್ಥಳೀಯ ಜನರು ಒಂದಾದ ರೀತಿಯನ್ನು ಅಕ್ಷರದಲ್ಲಿ ದಾಖಲಿಸಿದ ಕವಿ. ಈ ಲಾವಣಿಯನ್ನು ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು 1999ರಲ್ಲಿ ಪ್ರಕಟಿಸಿದೆ. ಈ ಲೇಖನದಲ್ಲಿ ಸಮಗ್ರ ಲಾವಣಿಯನ್ನು ಯತವತ್ತಾಗಿ ಉಲ್ಲೇಖಿಸಲಾಗಿದೆ. ಈ ಲಾವಣಿ ರಜಾಕಾರರ ದೌರ್ಜನ್ಯದ ಸಂದರ್ಭದಲ್ಲಿ ಜನರು ಅನುಭವಿಸಿದ ಹಸಿವು, ನೋವು, ಆಕ್ರಂದನ, ಆಸ್ತಿಪಾಸ್ತಿ ನಷ್ಟ ಹಾಗೂ ಆರ್ಥಿಕ ದುಃಸ್ಥಿತಿ, ಸಾಮಾಜಿಕ ಅಧಃಪತನ ಮುಂತಾದ ವಿವಿಧ ಸ್ತರಗಳನ್ನು ಚರ್ಚಿಸಿರುವುದನ್ನು ಗಮನಿಸಬಹುದಾಗಿದೆ.

(ಸುನೋ ಸುನೋ ಏ ದುನಿಯಾ ವಾಲೋ ಬಾಪೂಜಿಕಾ ಅಮರಕಾನೀ ಎಂಬಂತೆ)

 

ಕೇಳಿರಿದೋ ಈ ಕ್ರಾಂತಿಯ ಕಥೆಯಾ ಹೈದರಾಬಾದಿನ ಶರಣಾಗತಿಯಾ

ಕಾಂಗ್ರೆಸ್ಸಿನ ಕರೆ ಕಮ್ಮೀರಿನ ಮೊರೆ ಕಾಸೀಮ ರಜವೀ ನರಹತಿಯಾ ||ಪ||

1

ಭಾರತದೇಶವು ಸ್ವತಂತ್ರವಾಯಿತು ಬ್ರಿಟಿಶ್ ರಾಜ್ಯದಾಳಿಕೆ ಮುಗಿದು

ಭಾರತ ಸಂಸ್ಥಾನಿಕರು ಸೇರಿದರು ಹಿಂದೀ ಒಕ್ಕೂಟವನೊಲಿದು

ಭಾರತಿ ಕಣ್ಣಲಿನೋಡಿ ನಲಿದಳು ಆನಂದಾಶ್ರುಗಳನ್ನು ಸುರಿದು

ಸಾರಲೇನು ಹದಗೆಟ್ಟಿತು ಹೈದರಾಬಾದವು ಕಾಂಗ್ರೆಸ್ಸನ್ನು ಜರಿದು

ಯಾರದಿಲ್ಲಿ ಅಧಿಕಾರವೆಂದ ನೈಜಾಮ ದೊರೆಯು ಮಾರ್ಗವ ತೊರೆದು.

2

ಪ್ರಜಾರಾಜ್ಯಾವಾಗಲು ಬೇಕೆಂದರು ದೇಶನಿಷ್ಠ ಕಾಂಗ್ರೆಸ್ಸಿಗರು

ನಿಜಾಮ ಪ್ರಭುವಿಗೆ ನಾನಾ ಬಗೆಯಲ್ಲಿ ನಮ್ರ ನಿವೇದನೆ ಮಾಡಿದರು

ಪ್ರಜಾಮತದಿ ರಾಜ್ಯವ ನಡೆಸೆಂದರು ರಾಜನೀತಿಯನು ಬಲ್ಲಿವರು

ಅಜೇಯರಾಗಲಿ ಸಹಕಾರದಿ ಹಿಂದು ಮುಸ್ಲಿಮ ಸಹೋದರರು

ಸಜಾತೀಯತೆಯು ನಷ್ಟವಾಗಲೆಂದರು ನಾಡಿನ ಸರ್ವಪ್ರಜರು.

3

ಕೇಳದಾದ ನೈಜಾಮ ಪ್ರಭುವು ಕಾಂಗ್ರೆಸ್ಸಿನ ಕೂಗನು ಮೈಮರೆದು

ಹಾಳಾಗುವ ಆಲೋಚನೆ ಮಾಡಿದ ಮಂತ್ರಿಮಂಡಲವ ಕರೆಕರೆದು

ಏಳಗೊಡದೆ ಕಾಂಗ್ರೆಸ್ಸಿಗರು ಸೆರೆಹಿಡಿಯಿರೆಂದು ಕತ್ತಿಯ ಹಿರಿದು

ತಾಲೆಗೆಟ್ಟ ಹೈದರಾಬಾದಿನೊಳು ಮೂಡಿತಂದು ಗ್ರಹ ಮೈದೆರೆದು

ಕಾಳಗತ್ತಲೆಯ ಕಾರಭಾರದಲಿ ಕೆಡುಹಲು ಬಂದಿತು ಮುಂದರಿದು

4

ನಿಜಾಮರಾಜ್ಯದಿ ಧೂಮಕೇತುವು ಮೂಡಿತು ಕೇಡಿನ ಸೂಚನೆಯಾ

ಮಾಡಿತಾಕ್ಷಣ ಕೊಲೆಗಡಕರ ರಜಾಕಾರರ ಸಂಘ ಸ್ಥಾಪನೆಯಾ

ಇತ್ತೆಹಾದಿ ಎಂಬ ನಾಮವಿತ್ತಾನಾ ಸಂಸ್ಥೆಗೆ ರಜವೀ ಸ್ವಾರ್ಥಮಯಾ

ಹಿಂದೂ ಜನರನ್ನು ಕೊಂದು ಹಾಕಿಸಿದ ಹರಿಸಿದ ರಕ್ತಾದ ಕಾಲುವೆಯಾ

ಕಣ್ಣೀರಲಿ ಮೈದೊಳಿಸಿದನೆಲ್ಲರ ಕಾಸೀಮ ರಜವೀ ಕಲ್ಲೆದೆಯಾ

5

ಹೈದರಾಬಾದಿನ ನಾಲ್ಕು ನಿಟ್ಟಿನಲ್ಲಿ ನಡೆಸಿದ ನಾಡಿನೊಳನ್ಯಾಯ

ಸುಲಿಗೆ ಕೊಳ್ಳೆ ಕೊಲೆ ಮಾಡಿರೆಂದು ರಜಾಕಾರರನಟ್ಟಿದ ಪಾಪಮಯ

ಅಕ್ಕ ತಂಗಿಯರ ಮಾನಭಂಗಕೆ ಮಾಡಿಸಿದನು ನಿಷ್ಠರುಣಾಹೃದಯ

ನಡೆದತ್ಯಾಚಾರವ ಕೇಳಿದರೂ ಮಿಡುಕಲಿಲ್ಲ ಜಿನ್ನಾ ಹೃದಯ

6

ಸಾವಿರಾರು ಜನ ನಿರಪರಾಧಿಗಳ ಸಜೀವ ಸುಡಿಸಿದ ಚಿತ್ರಗಳು

ಗಂಡರ ಕಂಬಕೆ ಕಟ್ಟಿ ಹೆಂಡರನು ಕೆಡಿಸಿದ ಪಾಪದ ಕೃತ್ಯಗಳು

ಸಣ್ಣ ಕೂಸುಗಳ ಚೆಂಡನಾಡಿ ತೂರಾಡಿದ ರಾಕ್ಷಸ ನೃತ್ಯಗಳು

ಮಾನಕಂಜಿ ಭಾವಿಯ ಹಾರಿದರು ಅಸಂಖ್ಯ ಹಿಂದು ಮಾತೃಗಳು

ಪಾಪಕೃತ್ಯಗಳ ನೋಡಿ ಭಾರತೀ ಕಣ್ಣಲಿ ನೀರನು ಸುರಿಸಿದಳು.

7

ಹತ್ತೊಂಬತ್ತನೂರಾ ನಾಲ್ವತ್ತೆಂಟನೆಯ ಜನವರಿ ತಿಂಗಳ ಕಡೆ ಮೊದಲು

ಕೊಲೆಗಾರಂಭವದಾಯಿತು ಹೈದರಾಬಾದಿನ ಹಿಂದೂ ಜನತೆಯೊಳು

ಮೂರುನೂರು ಐವತ್ಮೂರು ಹಳ್ಳಿಗಳ ಸುಟ್ಟು ಸುಲಿದ ಚಿನ್ನಾಟಗಳು

ಸಿರಿವಂತರ ಮನೆ ಲೂಟಿಸಿ ಜಗ್ಗಿದ ಕೋಟ್ಯಾವಧಿ ಧನ ನಾಣ್ಯಗಳು

ಹರಿದು ಹೋಗುತಿರೆ ಸ್ವಾಮಿ ರಮಾನಂದರು ಕೇಳ್ದರು ನಾಡಿನ ಗೋಳು.

8

ನೋಡಿ, ನಡೆದ ಕೊಲೆ ಹೈದರಾಬಾದಿನ ನಾಡೊಳು ಮೂಡಿದ ಉದಯರವಿ

ಗಾಢ ಕತ್ತಲೆಯ ಕಳೆಯಲು ಬಂದನು ರಮಾನಂದ ಲೋಕಾನುಭವಿ

ಹೂಡಿದ ಮಾನವ ಸ್ವಾತಂತ್ರ್ಯದ ರಥಕೆರಡು ಕುದುರೆಗಳ ಶೀಘ್ರ ಜವಿ

ಜೋಡಿಸಿ ಕಟ್ಟಿದ ಸತ್ಯಶಾಂತಿಗಳ ಗಾಂಧಿತತ್ವಾಮೃತದ ಸವಿ

ಕೇಡಿನಿಂದ ಕಡೆಗಾಗಲೆಂದು ನೈಜಾಮರಿಗರುಹಿದ ಶಾಂತಿ ಪವಿ.

9

ದೊರೆ ನಿಜಾಮ ಕೇಳ್ ಭಾರತ ರಾಜ್ಯವು ಸ್ವತಂತ್ರವಾದುದ ನೀನರಿಯಾ

ಅರಸು ಪ್ರಜೆಗಳ ಸ್ವಾತಂತ್ರ್ಯವ ಕಸಿವುದು ಪಾಪವೆಂಬುದನು ನೀನರಿಯಾ

ತೊರೆದು ಪ್ರಜಾಮತ ರಾಜ್ಯವಾಳಿದರೆ ಚಿರಕಾಲವು ನೀ ಬಾಳುವೆಯಾ

ಭರತರಾಜ್ಯದಲಿ ಲೀನವಾಗಿ ನೀ ಹೋದರೇನು ಹಾಳಾಗುವೆಯಾ

ಉರಿಯ ಹಚ್ಚಿ ಮುಸ್ಲೀಮರು ಉರಿದ ಕಿಚ್ಚ ನೀ ನೋಡುವೆಯಾ

10

ಮೀರಲಾಯಕ ಅಲಿ ಮಂತ್ರಿ ನಿಜಾಮರ ಕಾರಸ್ಥಾನೀ ಮಂಡಲವು

ವೈರಭಾವದಿಂ ಮೀರಿ ಹಿತೋಕ್ತಿಯ ಗೈಸಿದ ತೀರ್ಥರ ಬಂಧನವು

ಘೋರ ತಾಪದುರಿ ಕಿಡಿಗಳನುಗುಳಿತು ಕಾರಿತು ಬೆಂಕಿ ಪ್ರಜಾಮನವು

\u3225?;ರಿ ಪುಣ್ಯ ನಿಜಾಮ ದೊರೆಗಳನು ದುರ್ಗತಿಗೊಯ್ಯುವುದೇ ನಿಜವು

ಊರಕೇರಿಯಲಿ ನಗರ ಬೀದಿಯಲಿ ಉದ್ಭವಿಸಿತು ಕೋಲಾಹಲವು.

11

ನೀತಿವಂತ ನಿರ್ಮಲ ಮನಸಿನ ಇಂಬ್ರೋಜ ಪತ್ರ ಸಂಪಾದಕರು

ಖ್ಯಾತವಂತ ಶೋಬುಲ್ಲಾಖಾನನು ಮುಸಲೀಮ್ ಧರ್ಮಪ್ರಚಾರಕರು

ಪಾತಕನವಿದು ಪ್ರಜೆಗಳ ಕೊಲ್ಲುವುದು ಬೇಡವೆಂದು ನಿಜ ಸಾರಿದರು

ಘಾತಿಸುತವರನು ಕೊಲೆ ಮಾಡಿಸಿದರು ರಜವೀ ರಾಜ್ಯ ಸ್ಥಾಪಕರು.

12

ಗಾಣದಾಳ ಸ್ಟೇಶನ್ನದಿ ಗಾಡಿಯ ನಿಲ್ಲಿಸಿ ಲೂಟಿಯ ಮಾಡಿದರು

ಮಾನವತಿಯರನು ಹಿಡಿದೆಳೆದೊಯ್ಯುತೆ ಮಾನಹಾನಿಯನ್ನೆಸಗಿದರು

ಕೋಣನಂಥ ರಜಾಕಾರರು ಕೆಲವರ ಪ್ರಾಣಗಲನ್ನೇ ಹೀರಿದರು

ಪ್ರಾಣಭಯವ ತೋರಿಸಿ ನಾರಿಯರನ್ನೊಯ್ದು ಕಮ್ಗೆ ಮರೆಮಾಚಿದರು

ಗೋಣೆಗೆ ನೇಣನು ಸುತ್ತಿ ಗಿಡಗಳಿಗೆ ಜೋತುಗಟ್ಟಿ ತೂಗಾಡಿದರು.

13

ಎತ್ತಲು ಸುತ್ತಲು ಕೊಯ್ಯುವ ಕೊಲ್ಲುವ ಕೃತ್ಯಗಳನು ಕಿವಿಗೇಳಿದವು

ಎತ್ತು ಎಮ್ಮೆ ಕುರಿ ಕೋಣ ಕೋಳಿಗಳ ನೆತ್ತರದಿಂ ತೊಯ್ದಿತು ನೆಲವು

ಅತ್ತು ಕರೆದು ಕೊರಚಿಟ್ಟು ಚೀರುತಿಹ ಮುತ್ತೈದೆರ ಬಾಯಾರಿದವು

ಹೆತ್ತೆ ಏಕೆ ಹಡದಮ್ಮ ನಮ್ಮನೆಂದತ್ತು ಅತ್ತು ಕೊರಳುಬ್ಬಿದವು

ಕತ್ತು ಮುರಿದು ಕೂಸುಗಳ ಚಲ್ಲಿದರು ಕಾಣಲಿಲ್ಲ ತಾಯಿಗೆ ಮಗವು.

14

ಭಾರತ ಹೈದರಬಾದ ಒಪ್ಪಂದದ ಮುರಿದು ಗೈದ ಒಳಸಂಧಾನ

ಮೀರಲಾಯಕ ಅಲಿ ಮಂತ್ರಿ ನಡೆಸಿದನು ಗುಪ್ತಯುದ್ಧ ಕಾರಸ್ಥಾನ

ಹೇರಿ ವಿಮಾನದಿ ತಂದುಕೊಟ್ಟ ಶಸ್ತ್ರಗಲನ್ನು ಸಿನೆ ಕಾಟನ್ನಾ

ಮಾರಿದ ಹಣ ಐವತ್ತು ಕೋಟಿ ನೈಜಾಮರಿತ್ತು ಕಳುಹಿದರವನಾ

ಚೋರ ಕ್ರೂರತನ ಹೈದರಬಾದಿನ ಕೇಳಲಿಲ್ಲ ಪಾಕಿಸ್ತಾನ.

15

ಕೇಳಿ ಹೈದರಾಬಾದಿನ ಕೋಲಾಹಲ ಕೆರಳಿತು ಭಾರತ ಸರಕಾರ

ಹೇಳಿ ಬುದ್ದಿ ನೈಜಾಮ ದೊರೆ ಮಾು ರಕ್ಷಣೆಯ ವಿಚಾರ

ಕೇಳಲಿಲ್ಲ ಹೈದರಾಬಾದಿನ ದೊರೆ ನಡೆಯಿತು ಮಾನವ ಸಂಹಾರ

ಮೇಳಗೊಡದಾಯಿತು ಮೌಂಟಬ್ಯಾಟನ್ನರು ನಡೆಸಿದರು ಸಹಕಾರ

ತಾಳಗೆಟ್ಟ ನಾಡಿನ ರಕ್ಷಣೆ ಮಾಡುವದೇ ಭಾರತ ನಿರ್ಧಾರ.

16

ಹೌದರಾಬಾದಿನು ಹಿಂದೀ ಒಕ್ಕೂಟದಿ ಸೇರ್ಪಡಿಸಲು ತಿಳಿಸಿದರು

ಹೈದರಾಬಾದಿನ ಏಜೆಂಟ ಜನರಲ್ ಕೆ.ಎಮ್.ಮುನಸಿ ಎಂಬವರು

ಕೈದು ಮಾಡುತವರನ್ನು ನಿಜಾಮರು ಸುಡುವಾಲೋಚನೆ ನಡೆಸಿದರು

ಸಂಧಿ ಮಾಡಿಸಲು ಬಂದರು ಮೈಸೂರಿನ ಮಿರ್ಜಾಯಿಸ್ಮಾಯಿಲರು

ಒಂದುಗೂಡಿಸದೆ ಹಿಂದಕೆ ದೈವಬರಹ ಮೀರುವರಾರು.

17

ಪಡುವಣ ಮೂಡಣ ತೆಂಕಣ ಬಡಗಣ ಗಡಿಯಲಿ ಅತ್ಯಾಚಾರಗಳು

ಸುಡುವ ಕೊಲ್ಲುವ ಗುಂಡಿಕ್ಕುವ ಜಾತ್ಯಂತರಗೊಳಿಸುವ ಖಲಕೃತ್ಯಗಳು

ಹಿಡಿದೆಳೆಯುವ ಹಿಂದೂ ಹೆಂಗಳೆಯರ ಹರಿದವು ಮಂಗಲಸೂತ್ರಗಳು

ಹೊಡೆದು ಕೆಡಹಿ ಮಾಂಸವ ತಿನಿಸುವ ರಜಾಕಾರರ ಕಕ್ಕಸ ಬಲುಮಗಳು

ನಡೆದವು ಬೀದರ ಬಿಜವಾಡ ರಾಯಚೂರ ದುದನಿ ಕೊಪ್ಪಳ ಗಡಿನಾಡಿನೊಳು.

18

ಗಡಿಯಲಿ ಕೊಪ್ಪಳ ಇಟಗಿ ಶಾಂತಗಿರಿ ಹೆಂಗಳೆಯರು ಹೋರಾಡಿದರು

ಕುಡುಗೋಲಿನ ಕೈಯಿಂದ ವೈರಿಗಳ ಸುಡುಗಾಡಿಗೆ ಎಡೆಮಾಡಿದರು

ಕಡುಗಲಿ ಕಿತ್ತೂರಿನ ಚೆನ್ನಮ್ಮನ ಕದನ ಶೌರ್ಯವನು ತೋರಿದರು

ತುಡುಗ ಪಠಾಣರು ಬರಲು ಮಾಳಿಗೆಯನ್ನೇರಿ ಕಲ್ಲು ಮಳೆ ಸುರಿಸಿದರು

ಹೆಡೆಯೆತ್ತಿದ ಸರ್ಪ ಕಾಮುತೆ ರಜಾಕರರು ಹೇಳದೆ ಓಡಿದರು.

19

ಕನ್ನಡ ಕಡುಗಲಿ ಕೆ.ಎಸ್.ಪಾಟೀಲರು ರಕ್ಷಕದಳ ರಚಿಸಿದರು.

ಮುನ್ನಡೆಯಲಿ ರಜಾಕಾರರೆಲ್ಲಿಯು ನಿಲ್ಲದಂತೆ ಪ್ರತಿಭಟಿಸಿದರು

ಮಾನ್ಯ ಮಹೋದಯ ಶರಣಗೌಡ ಗುಲ್‌ಬುರ್ಗೆಯ ಶೌರ್ಯನಿಕೇತನರು

ಮಣ್ಣು ಮುಕ್ಕಿಸುವ ವೈರಿಯ ಜೀವದ ಹಂಗುದೊರೆದು ಕಾದಾಡಿದರು

ಕಣ್ಣು ಕಂಡಕಡೆಗೋಡುತಲಿದ್ದರು ಕಾಸೀಮ ರಜವೀ ಬೆನ್ನಿಗರು.

20

ಶೂರಧೀರ ಸರದಾರ ಪಾಟೀಲರು ವೀರಘೋಷಣೆಯ ಮಾಡಿದರು

ಸೇರಿಸಿಕೊಳ್ಳಲು ಹೈದರಾಬಾದನು ಮೂರೇ ದಿನ ಸಾಕೆಂದರು.

ಮಾರುತ್ತರದಲಿ ಮೀರಲಾಯಕ ಅಲಿ ಗುಂಪಿನವರು ಉರಿ ಕಾರಿದರು

ಭಾರತ ಹೈದರಾಬಾದದ ಗೊಡವೆಗೆ ಬಾರದಿರುವದೊಳಿತೆಂದರು

ಮೇರೆದಪ್ಪಿದರೆ ತೋರಿಸುವರು ಕೈ ನಿಜಾಮನಾಡಿನ ರಕ್ಷಕರು

21

ವಿಷಯ ಕಾರುತಲಿ ಕಾಸೀಮ ರಜವಿಯು ಹಸಿಬಿಸಿ ಹುಸಿಮಾತಾಡಿದನು

ಅಸಫಜಾಹಿ ಧ್ವಜ ಹಾರಿಸುವೆವು ದಿಲ್ಲಿಯ ಕಿಲ್ಲೆಯೊಳೆಂದುಸುರಿದನು

ಮಸೆದು ಹಲ್ಲು ಕಡಿಯುತ್ತ ಕರೆದು ರಜಕಾರರಿಗಾಜ್ಞೆಯ ನೀಡಿದನು

ಹೊಸೆದು ಮೀಸೆ ಹಿಂದುಗಳ ಬಿಡದೆ ಹಿಂಸಿಸುವ ಪ್ರತಿಜ್ಞೆಯಗೈಸಿದನು

ಹಸಿದು ಹುಲಿಯು ಆರ್ಭಟಿಸುವಂತೆ ಭಾರತಯುದ್ಧವನೇ ಸಾರಿದನು.

22

ತಡೆದು ತಡೆದು ಕಡೆ ಕಡೆಗೆ ಸಹಿಸದೆಲೆ ಭಾರತ ಪ್ರಧಾನ ಮಂಡಲದಿ

ನಡೆದು ನಡೆದು ಹೈದರಾಬಾದಿನ ಬಗೆಗೊಳಿಸುವ ವಿಚಾರ ಮಂಡನದಿ

ಕಡೆಯ ಮಾತು ಜನ ವಿತ್ತಜೀವಿಗಳು ರಕ್ಷಣೆಮಾಡುವ ದೃಢಪಣದಿ

ನುಡಿದ ನೆಹರೂ ಘೋಷಣೆ ಹಿಂದೂ ಬಂಧು ಭಗನಿಯರ ರಕ್ಷಣದಿ

ತಡಮಾಡದೆ ಮುನ್ನಡೆೆಯಿತು ಭಾರತ ಸೈನ್ಯವು ನಿರ್ಗತ ಶಾಸನದಿ

23

ಹತ್ತೊಂಭತ್ತನೂರಾ ನಾಲ್ವತ್ತೆಂಟನೆಯ ಸೆಪ್ಟೆಂಬರ ಹನ್ನೆರಡರಲಿ

ಇತ್ತ ನೆಹರೂ ಘೋಷದ ಮರುದಿನ ಹದಿಮೂರರ ನಡುರಾತ್ರಿಯಲಿ

ಗೊತ್ತರಿಯದ ಸೊಲ್ಲಾಪುರದಲ್ಲಿಹ ಹಿಂದೀ ಸೈನ್ಯದ ಶಿಬಿರದಲಿ

ಹತ್ತಿ ವಿಮಾನದಿ ಬಂದ ಪಟೇಲರು ಸೈನ್ಯಕಿತ್ತ ಸಂದೇಶದಲಿ

ಸುತ್ತು ವೀರರಸ ಉಕ್ಕಿತು ಸೈನ್ಯದಿ ಪಶ್ಚಿಮ ದಂಡಿನ ಯಾತ್ರೆಯಲಿ

24

ಪೂರ್ವ ದಂಡಯಾತ್ರೆಯು ಹೊರಟಿತು ಬಿಜವಾಡದಿಂದ ಬಹುಒತ್ತರದಿ

ಸರ್ವಸಿದ್ದಿ ಸಂಗ್ರಾಮಸಾಧನ ಸಮೂಹದಿಂದ ಜಯದಾತುರದಿ

ಗರ್ವ ಭೇದಿಸುವ ಮದ್ದು ಗುಂಡುಗಳ ಮಳೆಗರೆಯುತ ಸಿಡಿಲಬ್ಬರದಿ

ಪೂರ್ವರಂಗ ನಿರ್ವೈರ ಭಾರತದ ಕಟ್ಟುವ ಕಾದುವ ದೃಢಮನದಿ

ಊರ್ವಿ ಭಾರ ರಜಾಕಾರ ಸಿಂಹಸಕರ ನಿರ್ಮೂಲನ ಗೈಯುವ ತೆರದಿ

25

ಮೇಜರ್ ಜನರಲ್ ಚೌದರಿ ಹಿಂದೀ ಸೇನಾಪತಿ ಪೂರ್ವೋತ್ತರದಿ

ತೇಜೋರಾಶಿ ಕಮಾಂಡರ ಶ್ರೀರಾಜೇಂದ್ರಸಿಂಹ ದಳ ಪಶ್ಚಿಮದಿ

ನೈಜ ಸೈನ್ಯಪತಿ ರುದ್ರ ಬ್ರಿಗೇಡರ ಜಾಳರ ಹಂಪಿಯ ದಕ್ಷಿಣದಿ

ಓಜಃಶಾಲಿ ಮಂಡಲಪತಿಗಳು ಹಿಂದೀಜನ ಸಂರಕ್ಷಣದಿ

ರಾಜ್ಯಾಘಾತುಕರ ತುಂಡರಿಸಲೀ ಮಾಡಿದರಾಜ್ಞೆಯನೊಂದೇ ಕ್ಷಣದಿ

26

ಬನ್ನಿರಿ ನೆಲದುರ್ಗವ ನೋಡುವ ಜನ ಹಿಂದುಬಾಂಧವ ಭಗನಿಯರು

ದಿನ್ನೆ ದಿಬ್ಬಗಳು ಸುತ್ತಮುತ್ತ ಕಾಣಿಸುವವು ನಿಮ್ಮಯ ಕಣ್ಣೆದರು

ಬಣ್ಣಿಸಲವು ರಜಾಕಾರರ ಗರ್ವದ ಮುದ್ದೆಗಳೆಂಬೊಲು ಮಣ್ಣೆರು

ದನ್ಯ ನಿಜಾಮರ ಸಿರಿಯ ಕೊಬ್ಬಿನಬ್ಬರವ ಸೂಚಿಸುವ ಕಡಿದೇರು

ಮುನ್ನವೇ ನಲರಾಜನು ಕಟ್ಟಿದ ನಲದುರ್ಗವು ಸೌಂದರ್ಯದ ತವರು

27

ಅಂದಿನ ಸೆಪ್ಟೆಂಬರ ಹದಿಮೂರರ ಬೆಳಗು ಮೂಡುವುದರೊಳಗಾಗಿ

ಬಂದ ಮೂರುಸಾವಿರ ನೈಜಾಮರ ಸೈನ್ಯ ತಕ್ಷಣದಿ ಹತವಾಗಿ

ಅಂದವಾಗಿ ನಲದುರ್ಗಕೋಟೆಯದು ಹಿಂದೀ ಸೈನ್ಯದ ವಶವಾಗಿ

ಮುಂದೆ ನಡೆದ ಚೌದರಿಯ ಸೈನ್ಯವದು ಮಿಂಚಿನ ವೇಗದಿ ಮುಂದಾಗಿ

ಬಂದುದು ರಾಜೇಶ್ವರ ಹುಮನಾಬಾದ ಕೇಂದ್ರ ಝಹಿರಬಾದಿಗೆ ಸಾಗಿ

28

ಹತರಾದರು ನೈಜಮ ಸೈನಿಕರು ಸಿಡಿದ ಗುಂಡುಗಳಿಗೆದೆಯೊಡೆದು

ಮೃತರಾದರು ರಜಾಕಾರರು ರಣದಲಿ ಕಾಸೀಮ ರಜವಿಯ ನೆನೆನೆನೆದು

ಗತಿಗಾಣದೆ ಮನಬಂದ ಬಂದಕಡೆಗೋಡುತಲಿದ್ದರು ಸಿಡಿಸಿಡಿದು

ಪತನವಾಯ್ತು ನಲದುರ್ಗ ನಿಜಾಮರ ಅರಸುತನ ಜಗದಲಿ ಮುಗಿದು

ಗತಿಯಾವುದು ಶರಣಾಗತಿ ಎಂದೆನುತಿದ್ದರು ಸರ್ವರು ಕೈಮುಗಿದು

29

ಇತ್ತ ದಕ್ಷಿಣದಿ ಮುನಿರಾಬಾದದಿ ತುಂಗಭದ್ರೆಯ ದಂಡೆಯಲಿ

ಮುತ್ತಿದ ಪಠಾಣ ರಜಕಾರರ ಪಡೆ ಮೂರುಸಾವಿರದ ಸಂಖ್ಯೆಯಲಿ

ಒತ್ತಿ ಬಂದ ಹಿಂದೀ ಸೇನಾದಳವಿತ್ತು ಮೂರುನೂರಂಕಿಯಲಿ

ಎತ್ತಲು ನಡೆಯದ ಹೈದರಾಬಾದಿನ ಪೋಲೀಸ ಕ್ರಮ ಘಟನೆಯಲಿ

ಸತ್ತರಸಂಖ್ಯರು ನೈಜಾಮ ಸೈನಿಕರು ಅಚ್ಚಗನ್ನಡರ ಕೆಚ್ಚಿನಲಿ

30

ಕಡೆಗಾಣದೆ ನೈಜಾಮರು ಕೊನೆಯಲಿ ಶರಣಾಗತಿಯನು ಸಾರಿದನು

ಸಡಲಿದ ಹೈದರಾಬಾದಿನ ಸಕ್ತಿಯ ಪತನದ ವಾರ್ತೆಯ ಕೇಳಿದರು

ತಡಮಾಡದೆ ಭಾರತ ಸೇರ್ಪಡೆಯಾಗಲು ಎಂಡ್ರಸನ್ನರನಟ್ಟಿದರು

ಬಿಡದಾಗಲೇ ಸೋಲನ್ನೊಪ್ಪಿದ ಬಿಳಿ ನಿಶಾನೆಗಳ ಹಿಡಿದೆತ್ತಿದರು

ನುಡಿದರು ಜಯ ಜಯ ಹಿಂದ ಎಂದು ಜಯ ದನಿಯಲಿ ಹಿಂದೀ ಸೈನಿಕರು

31

ಆರತಿ ಜಯ ಜಯ ಭಾರತಿ ಗಾಂಧಿ ಮಹಾತ್ಮರ ಪಡೆದ ದಯಾಧರಣಿ

ಶೂರ ಸರದಾರ ಸುಭಾಷ ನೇಹರೂ ವೀರರತ್ನಗಳ ಗರ್ಭಖಣಿ

ಸೇರಲಿ ಹೈದರಬಾದ ನಿಜಾನರು ಭಾರತ ಒಕ್ಕೂಟದಿ ಜವದಿ

ಏರಲಿ ರಾಷ್ಟ್ರೀಯ ಧ್ವಜ ಹೈದರಾಬಾದಿನ ಸರ್ವಜಗಜ್ಜನದಿ

ಆರಿತಿಗೈಯಲಿ ಭಾರತಮಾತೆಗೆ ಪ್ರೇಮದಿಂದ ಹಿಂದೂ ಭಗನಿ.

 

ಹೈದರಾಬಾದ್ ಕರ್ನಾಟಕದ ವಿಮೋಚನಾ ಹೋರಾಟದಲ್ಲಿ ಗುಲಬರ್ಗ ಜಿಲ್ಲೆಯು ಪ್ರಮುಖ ಪಾತ್ರ ವಹಿಸಿದೆ. ಏಕೆಂದರೆ, ಹೈದರಾಬಾದ್ ಕರ್ನಾಟಕದ ಕೇಂದ್ರ ಆಗಿದ್ದ ಗುಲಬರ್ಗ ರಾಜಕೀಯ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಮೆರೆದ ಬೀಡಾಗಿದೆ. ಗುಲಬರ್ಗ ಜಿಲ್ಲೆಯು ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಭಾಗಗಳಿಗೆ ಹೊಂದಿ ಕೊಂಡಿದೆ. ಇದರಿಂದ ಮಹಾರಾಷ್ಟ್ರದ ಕೆಲ ಗಡಿಭಾಗಗಳು, ಕರ್ನಾಟಕದ ಬೀದರ್, ಗುಲಬರ್ಗ, ರಾಯಚೂರು (ಇಂದಿನ ಕೊಪ್ಪಳ ಜಿಲ್ಲೆಯೂ ಸೇರಿದಂತೆ) ಜಿಲ್ಲೆಗಳು ಹಾಗೂ ಆಂಧ್ರದ ಕೆಲ ಪ್ರದೇಶಗಳು ಹೈದರಾಬಾದ್ ನಿಜಾಮನ ಆಡಳಿತಕ್ಕೆ ಒಳಪಟ್ಟಿದ್ದವು. ಈ ಪ್ರದೇಶಗಳು ಪ್ರಾಂತೀಯ ರಾಜ್ಯಗಳು ರಚನೆಯಾಗಿರದೆ ಮೊದಲಿನ ವ್ಯಾಪ್ತಿ ಇದಾಗಿತ್ತು.

ಬಹುಭಾಷಾ ಸಂಸ್ಕೃತಿಯ ನೆಲೆಬೀಡಾದಂತಹ ಗುಲಬರ್ಗ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿಸೀಮೆಯಲ್ಲಿ ರಜಾಕಾರರು ನಡೆಸಿದ ದೌರ್ಜನ್ಯ ಹೇಳಲಾಗದ್ದು. ಮೌಖಿಕ ಪರಂಪರೆಯ ಚರಿತ್ರೆಯಾದ ಲಾವಣಿ, ಬುಲಾಯಿ ಹಾಡುಗಳು, ಗೀಗೀ ಪದಗಳು ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನೆಯಲ್ಲಿ ಹೋರಾಡಿದಂತಹ ಹೋರಾಟಗಾರರನ್ನು ಬಾಯಿಯಿಂದ ಬಾಯಿಗೆ ತಿಳಿಹೇಳಿದ್ದಾರೆ. ಅಂದಿನ ಕ್ರೌರ್ಯ, ಹೋರಾಟ ಇಂದಿಗೂ ಕೆಲವು ಜನರಲ್ಲಿ ಅಚ್ಚಳಿಯದೇ ಉಳಿದಿದೆ. ಗುಲ್ಬರ್ಗಾ ಜಿಲ್ಲೆಯಲ್ಲಿ ರಜಾಕಾರರು ನಡೆಸಿದ ದೌರ್ಜನ್ಯದ ಸ್ಥಳಗಳು ಇಂದಿಗೂ ಐತಿಹಾಸಿಕ ನೆನಪುಗಳಾಗಿ ಉಳಿದುಕೊಂಡಿವೆ.

ಇಡೀ ಭಾರತ ದೇಶವೇ ಸ್ವಾತಂತ್ರ್ಯಗೊಂಡರೂ ಹೈದರಾಬಾದ್ ಕರ್ನಾಟಕದ ಜನತೆ ನಿಜಾಮನ ವಿರುದ್ಧ ಸ್ವಾತಂತ್ರ್ಯ ಹೋರಾಟ ಮಾಡಬೇಕಾಯಿತು. ಪ್ರತ್ಯೇಕ ಪಾಕಿಸ್ತಾನ ಮಾಡುವ ಕನಸಿನಲ್ಲಿದ್ದ ನಿಜಾಮ ಹಾಗೂ ಇವನ ಸೇವಕರು ಈ ಭಾಗದ ಜನತೆಗೆ ನೆಮ್ಮದಿಯಿಂದರಲು ಬಿಡಲಿಲ್ಲ. ಇದಕ್ಕೆ ಈ ಭಾಗದ ಮಹಾತ್ಮರಾದ ಸ್ವಾಮಿ ರಮಾನಂದ ತೀರ್ಥರು ಅವಕಾಶ ಮಾಡಿಕೊಡಲಿಲ್ಲ. ಇವರು ಹಾಕಿಕೊಟ್ಟ ಮಾರ್ಗದಲಿ ಸಾವಿರಾರು ದೇಶಪ್ರೇಮಿಗಳು ಹೈದರಾಬಾದ್ ವಿಮೋಚನೆಗಾಗಿ ತಮ್ಮ ತನು, ಮನ, ದನಗಳನ್ನು ಮುಡುಪಾಗಿಟ್ಟು ಹೋರಾಡಿದರು. ಅಂಥವರಲ್ಲಿ ದತ್ತಾತ್ರೇಯ ಸಂಗೋಳಿಗಿ, ಶಂಭಪವಾರ್ ಮುಂತಾದವರು ಪ್ರಮುಖರಾಗಿದ್ದಾರೆ. ಸಾವಿರಾರು ಜನರ ಮೇಲೆ ಹಾಗೂ ಅನೇಕ ಗ್ರಾಮಗಳನ್ನೇ ರಜಾಕಾರರು ಹಾವಳಿ ಹಾಗೂ ದೌರ್ಜನ್ಯ ನಡೆಸಿ, ಅತ್ಯಾಚಾರ ಮಾಡಿ, ಹತ್ಯೆಗೈದರೂ ಸಹ ಜನರು ಹಿಂಜರಿಯಲಿಲ್ಲ. ಸಂಘಟಿತರಾದ ಜನರು ಕೆಚ್ಚೆದೆಯಿಂದ ನಿಜಾಮ ಹಾಗೂ ರಜಾಕಾರರ ವಿರುದ್ಧ ಹೋರಾಡಿದರು. ಇದಕ್ಕಾಗಿ ಶಿಬಿರಗಳನ್ನು ಸ್ಥಾಪಿಸಿ ಕೊಂಡು ಅವುಗಳಿಗೆ ಸೇನಾ ಗುಂಪುಗಳನ್ನು ನೇಮಿಸಿಕೊಂಡು ರಜಾಕಾರರಿಗೆ ಎದೆಯೊಡ್ಡಿ ನಿಂತರು. ಇವರಿಗೆ ಸುದ್ದಿ ಮಾಧ್ಯಮಗಳು, ಪತ್ರಿಕೆಗಳು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷ ವಾಗಿ ಬೆಂಬಲಕ್ಕೆ ನಿಂತವು. ಇದರಿಂದಾಗಿ ರಜಾಕಾರರ ಹಾವಳಿಯಿಂದ ಅನೇಕ ಗ್ರಾಮಗಳೇ ಮುಕ್ತಗೊಂಡವು. ಈ ಹೋಾಟದ ಫಲವಾಗಿಯೇ ಹೈದರಾಬಾದ್ ಮುಕ್ತವಾಗಿ ಭಾರತದೊಂದಿಗೆ ವಿಲೀನವಾಯಿತು.

 

ಪರಾಮರ್ಶನ ಗ್ರಂಥಗಳು

1. ಚಿನ್ನಸ್ವಾಮಿ ಸೋಸಲೆ ಎನ್., 1998. ಏಕೀಕರಣದ ನಂತರ ಕರ್ನಾಟಕದಲ್ಲಿ ಗಡಿ ಚಳವಳಿ, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ಹಂಪಿ.

2. ಪಾಟೀಲ ಕಲ್ಲಿನಗೌಡ, 1986. ಕರ್ನಾಟಕ ಏಕೀಕರಣದ ಹಾದಿಯಲ್ಲಿ, ಹುಬ್ಬಳ್ಳಿ

3. ಕೌಸ್ತುಬ, 1977. ಕನ್ನಡ ಸಾಹಿತ್ಯ ವಜ್ರಮಹೋತ್ಸವದ ನೆನಪಿನ ಸಂಚಿಕೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು

4. ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.