ಒಂದು ಬೆಳೆಯುತ್ತಿರುವ ಭಾಷೆ ತನ್ನ ಸಮೀಪದ ಭಾಷೆಗಳ ಜೊತೆಗೆ ಕೊಡುಕೊಳಿ ಮಾಡುವುದಂತೂ ಸಹಜವೇ. ತೀರಾ ಕಡಿಮೆ ಸಂಖ್ಯೆಯ ಜನ ಸಮುದಾಯ ಮಾತನಾಡುವ ಭಾಷೆ ಅಥವಾ ತನ್ನ ಮೂಲಜನ ಸಮೂಹದಿಂದ ದೂರಾದ ಅಲ್ಪಸಂಖ್ಯೆಯ ಜನರಲ್ಲಿಯೇ ಉಳಿದ ಭಾಷೆ ಕಾಲಾಂತರದಲ್ಲಿ ತನ್ನ ಮೂಲ ಭಾಷೆಯೊಂದಿಗೆ ಸೇರಲು ಸಾಧ್ಯವಾಗದೇ ತನ್ನ ರೂಪವನ್ನು ಮಾರ್ಪಾಡಿಸಿಕೊಂಡಿರುವುದು ಮಾತ್ರ ಗೋಚರಿಸುತ್ತದೆ. ಅಂದಮಾತ್ರಕ್ಕೆ ಅದರ ಮೂಲ ಬದಲಾಗುವುದಿಲ್ಲ. “ದ್ರಾವಿಡ ವರ್ಗಕ್ಕೆ ಸೇರಿದ ತೆಲಗು. ಕನ್ನಡ, ತಮಿಳು ಮಾತನಾಡುತ್ತಿದ್ದ ಜನ ಪ್ರತಿಯೊಂದು ವಿಷಯದಲ್ಲಿಯೂ ವಿಶೇಷವಾಗಿ ಭಾಷೆಯಲ್ಲಿ ಬೇರೆ ಬೇರೆ ರೂಪಗಳನ್ನು ಬೆಳೆಸಿಕೊಳ್ಳುತ್ತಿದ್ದರು

[1] ಎನ್ನುವುದನ್ನು ನೋಡಿದಾಗ ದ್ರಾವಿಡ ವರ್ಗದ ತಮಿಳು ಮೂಲಕ್ಕೆ ಸೇರಿದ ಕೊರಮರ ಭಾಷೆಯೂ ರೂಪಾಂತರ ಹೊಂದಿರುವುದು ಸಹಜವೇ ಆಗಿದೆ.

ಸಮಾಜ ಶಾಸ್ತ್ರಜ್ಞರು ಇಷ್ಟೆಲ್ಲ ಮಾಹಿತಿ ನೀಡಿದ್ದರೂ ತಮಿಳು ಮತ್ತು ಕೊರಮ ಭಾಷೆಯ ಶಬ್ದ ಮತ್ತು ಸಂಖ್ಯಾ ಪದಗಳ ಹೋಲಿಕೆಯಿಂದಲೂ ತಮಿಳಿನ ಒಂದು ರೂಪವೇ ಕೊರಮ ಭಾಷೆ ಎಂಬುದನ್ನು ಅರಿಯಬಹುದು.

ಕನ್ನಡ ತಮಿಳು ಕೊರಮ ಕನ್ನಡ ತಮಿಳು ಕೊರಮ
ನೀರು ತಣ್ಣಿ ತನ್ನಿ ಅನ್ನ ಚೋರು ಸೋರು
ಮುದ್ದೆ ಕಳಿ ಕಳಿ ರಾಗಿ ಕೆವರು ಕೋರುಗ
ಮುದುವೆ ಕಲ್ಯಾಣ ಕಣ್ಯಾಳ ಹಾಲು ಪಾಲು ಪಾಲು
ಬಟ್ಟೆ ತುನಿಯೂ ತುಣಿವಾನು ಮನೆ ವೀಡು ವೂಡು
ಬೆಂಕಿ ನೆರಪ್ಪು ನೆರ‍್ಪು ದೀಪ ವಿಳಕ್ಕು ವಳಕು
ಹಾವು ಪಾಂಬು ಪಾಮು ಅಕ್ಕಿ ಅರಸಿ ಎರಸಿ
ಗಿಡ ಶೆಡಿ ಸೆಡಿ ಸಾರು ಕೊಳಂಬು ಕಟ್ಟು

ಹೀಗೆ ಎಷ್ಟು ಬೇಕಾದರೂ ಶಬ್ದಗಳನ್ನು ಉದಾಹರಿಸಬಹುದು. ಇವೆಲ್ಲ ಒಂದೇ ಅರ್ಥ ಕೊಡುವುದಾರೂ ಉಚ್ಚಾರಣೆಯಲ್ಲಿ ವ್ಯತ್ಯಾಸ ತೋರುತ್ತದೆ. ಇದರಂತೆಯೇ ಕೆಲವು ಪ್ರಾಣಿ, ಪಕ್ಷಿಗಳ, ಆಹಾರ, ಪದಾರ್ಥಗಳ ಕೆಲವು ವಸ್ತುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ನೋಡಬಹುದು. ಸೋಟಿ-ಮೊರ, ಪಣಿ-ಕುಕ್ಕೆ, ಇದಿರು-ಬಿದಿರು, ಎನ್ನುಮ್ಮು-ಎಮ್ಮೆ, ಪೆಯತನ್ನಿ-ಸರಾಯಿ, ಕರಗು-ಹಗ್ಗ, ತಿತ್ತಿ-ಚೀಲ, ಪಗಾಲಿ-ಹೊಗೆಸೊಪ್ಪು, ತಳಾಕು-ಎಲೆ, ಪಾಕು-ಅಡಿಕೆ, ಸೆಟ್ಟಿ-ಮಡಿಕೆ, ಅಡುಪು-ಒಲೆ, ಪೆರಗು-ಮೊಸರು, ಲೇಗ್ಲ-ನಡೆಯೋ, ಮಕ್ರದು-ಕೊಡಪಾನ, ಪೋತಿಗ್ರದು-ಹೊದೆಯುವುದು, ಗಾಂಜಲು-ಬಳೆ, ಕ್ವಾಕಿ-ಸೀರೆ, ಕಳು-ಗಂಗಳ, ತೀಪಾನು-ಬೆಲ್ಲ, ಪರಕಡ್ಡಿ-ಪೊರಕೆ, ತಲಕಾಯಿಬಟ್ರವು-ಕ್ಷೌರಿಕ, ಸಾಕ್ಲವು-ಅಗಸ, ಕುಂದೇಲಿ-ಮೊಲ, ಕವಾಲು-ನಾಯಿ, ಮಾಡು-ದನಮ ಕೋದ-ಕತ್ತೆ, ಒಡಿಪಾನು-ತೆಂಗಿನಕಾಯಿ, ಶ್ಯಾತಾಳು-ಕೈ, ಕಾಪಾಲು-ಕಾಲು, ಎನ್ನು-ಬೆನ್ನು, ಮೆಗರು-ಕೊದಲು, ಪೆಂತೆವೋರ‍್ಯ-ರಣಹದ್ದು, ಕಾನೋಗೋಯಿ-ಕೊಳವಂಕ, ಸಂಬಾರುಪೊತು-ಸಂಬಾರಕಾಗೆ, ಏಲಿಗ-ಕಾಗೆಸಿಳ್ಳ, ಸೆರೆಗ-ಸೆರ‍್ಲೆಹಕ್ಕಿ, ಕುರುಬಾಡು-ಕುರಿ, ಕೆರವಾಡು-ಕರಿಮೀನು, ಎಲ್ಲೂರ-ಲಗಡು,  ಶಂಬಾರಾ-ಗಿಡಗ, ಒಂಗೊಕ್ಕು-ಬೆಳ್ಳಕ್ಕಿ, ಮಡೆಗುಡ್ಡ-ಕುಲ್ಡಗೊಕ್ರ, ನಣುವಯಾ-ಉಣ್ಣಿಗೊರವ, ಪೂಡ್ರಿ-ಪುರ‍್ಲೆಹಕ್ಕಿ, ಪಿಳಲಿ-ಸೋಬಾನದ ಹಕ್ಕಿ, ಪೆನ್ನೂರ-ಕೆಂಗಲ್‌ಬಾದ, ಕೆವಾದಿ-ಗೌಜಿಗನಹಕ್ಕಿ, ಗೊದ್ದರನಕ್ಕಿ-ಹರಿವೆಸೊಪ್ಪು, ವಾಲಾಸರಗು-ಕನ್ನೆಸೊಪ್ಪು, ಕೊಣ್ಣಕ್ಕಿ-ಪುಂಡಿಸೊಪ್ಪು, ಕೆಂಚಾಳನಕ್ಕಿ-ಅಕ್ಕಿನರಿ, ಉಲಗಡ್ಡಿ-ಈರುಳ್ಳಿ, ಒಂಗೆಡ್ಡಿ-ಬೆಳ್ಳುಳ್ಳಿ, ಮಾವು-ಅಸಿಟ್ಟು, ಮಳಕಾಯಿ-ಮೆಣಸು, ಕರೆತಲಿಯ-ಕರೆಮೊತಿಹಕ್ಕಿ, ಕಾಡ-ಅಂಗನಕ್ಕಿ, ಸೀಕ್ರೆಕುಂಜು-ಬಾವಲಿ, ಮುರುವ-ಮುರಕಾಟಿ, ಇನ್ನು ಸಂಖ್ಯಾಸೂಚಕ ಪದಗಳಲ್ಲಿಯೂ ಇದೇ ರೀತಯ ಹೋಲಿಕೆಗಳನ್ನು ನೋಡಬಹುದು.

ಕನ್ನಡ ತಮಿಳು ಕೊರಮ ಕನ್ನಡ ತಮಿಳು ಕೊರಮ
ಒಂದು ಒಂಡ್ರು ಒಂಡು ಎರಡು ಇರಂಡು ರಂಡು
ಮೂರು ಮೂನ್ರ ಮೂಡು ನಾಲ್ಕು ನಾಂಗು ನಾಲು
ಐದು ಐಂದು ಅಂಜು ಆರು ಆರು ಆರು
ಏಳು ಏಲು ಓಗ್ ಎಂಟು ಎಟ್ಟು ಆಟ್ಟು
ಒಂಭತ್ತು ಒಂಬದು ಒಂಬಿದಿ ಹತ್ತು ಪತ್ತು ಪತ್ತು
ಹನ್ನೊಂದು ಪದಿನೊಣ್ಣು ಪನ್ನೊಂಡು ಹನ್ನೆರಡು ಪನಿರೆಂಡು ಪನ್ನೆಂಡು
ಪದಿಮೂನ್ರು ಪದಿಮೂಡು ಹದಿನಾಲ್ಕು ಪದಿನಾಂಗು ಪದಿನಾಲು
ಹದಿನೇಳು ಪದಿನೇಳು ಪದಿನೊಗು ಹದಿನೆಂಟು ಪದಿನೆಟ್ಟು ಪದ್ನಟ್ಟು
ಹತ್ತೊಂಭತ್ತು ಪತ್ತೊಂಬದು ಪತ್ತೊಂಬಿದಿ ಇಪ್ಪತ್ತು ಇರುವುದು ಇರ್ದಿ
ಮೂವತ್ತು ಮುಪ್ಪದು ಮುಪ್ಪದಿ ನಲವತ್ತು ನಾಪದು ನಾಪದಿ
ಐವತ್ತು ಐಂಬುದು ಅಂಜುರಕಾಪತ್ತು ಅರವತ್ತು ಅರವದು ಅರ‍್ರಕಾಪತ್ತು
ಎಪ್ಪತ್ತು ಎಳವದು ಓಗ್ರಕಾಪತ್ತು ಎಂಭತ್ತು ಎಂಬುದು ಅಟ್ರಕಾಪತ್ತು
ತೊಂಭತ್ತು ತೊನ್ನೂರು ಒಂಬಿದ್ರಿಕಾಪತ್ತು ನೂರು ನೂರು ನೂರು

ಹೀಗೆ ಎರಡೂ ಭಾಷೆಗಳಲ್ಲಿ ಕಂಡು ಬರುವ ಸಾಮ್ಯವು ಯಾವುದೋ ಕಾಲದ ಒಂದೇ ಮೂಲವನ್ನು ಖಚಿತಪಡಿಸುತ್ತವೆ. ಆದ್ದರಿಂದ ಕೊರಮ ಭಾಷೆಗೆ ತಮಿಳು ಮೂಲವೇ ಹೊರತು ಬೇರೆಯಲ್ಲ ಎಂದು ಹೇಳಲಡ್ಡಿಯಲ್ಲ.

ಕೊರಮರು ಯಾವ ರಾಜ್ಯದಲ್ಲಿದ್ದರೂ ಅವರು ಯಾವ ಹೆಸರನ್ನು ಪಡೆದುಕೊಂಡಿದ್ದರೂ, ಯಾವುದೇ ಉದ್ಯೋಗ ಮಾಡುತ್ತಿದ್ದರೂ ಮೊನ್ನೆ ಮೊನ್ನೆಯವರೆಗೆ ತಮ್ಮ ಮಾತೃ ಭಾಷೆಯನ್ನಾಡುತ್ತಿದ್ದರು. ಇತ್ತೀಚೆಗೆ ಅವರ ಮೇಲಾಗುತ್ತಿರುವ ನಾಗರಿಕತೆಯ ಪ್ರಭಾವ ಮತ್ತು ಸಾಮಾಜಿಕ ಬದಲಾವಣೆಯಿಂದಾಗಿ ಹಲವು ಜನ ತಮ್ಮ ಭಾಷೆಯನ್ನು ಮಾತನಾಡುತ್ತಿಲ್ಲ. ತಮ್ಮ ಮುಂದಿನ ಜನಾಂಗಕ್ಕೂ ಅದನ್ನು ಕಲಿಸುತ್ತಿಲ್ಲ. ಕರ್ನಾಟಕದಲ್ಲಿ ಈಗ ಮಾತನಾಡುವವರಲ್ಲಿಯೇ ಭಾಷೆ ಒಂದೇ ರೀತಿಯಾಗಿ ವ್ಯವಹರಿಸುತ್ತಿಲ್ಲ. ಕನ್ನಡ ಒಂದೇ ಆದರೂ ಧಾರವಾಡ, ಮಂಗಳೂರು, ಮೈಸೂರುಗಳಲ್ಲಿ ಕಂಡುಬರುವ ಕನ್ನಡದ ಹಾಗೆ ಶಿವಮೊಗ್ಗ ಜಿಲಲೆಯ ಕೊರಮರು ತಮ್ಮ ಭಾಷೆಯ ಕೆಲವು ಅಕ್ಷರಗಳನ್ನು ಎರಡು- ಮೂರು ಮಾತ್ರೆಯವರೆಗೂ ಹಿಗ್ಗಿಸಿ ದೀರ್ಘವಾಗಿ ಉಚ್ಚರಿಸುತ್ತಾರೆ. ಉದಾ:- “ಎಂದ್ಯಾss ಮಾಮಾs ಎಪ್ಪೋವಂದ್ಲ ಎಲ್ಲಾs ನಲ್ಲಕಿಗರಂಗ್ಳಾss” (ಏನೋ ಮಾವಾ ಯಾವಾಗ ಬಂದೆ ಎಲ್ಲಾ ಚೆನ್ನಾಗಿದ್ದಾರಾ) ಎಂದು ರಾಗ ಎಳೆದರೆ ತುಮಕೂರು ಜಿಲ್ಲೆಯವರು “ಎಂದ್ಲಮಾಮಾ ಎಪ್ಪೋವಂದ್ಲ ಎಲ್ಲ ನಲ್ಲಕಿಗಗಂಗ್ಳ” ಎಂದು ಚುರುಕಾಗಿ ಮಾತನಾಡುತ್ತಾರೆ. ತಮಿಳಿನ ವ್ಯಂಜನಾಂತ ಶಬ್ದಗಳು ಕೊರಮ ಭಾಷೆಯಲ್ಲಿ ತಮಿಳಿನಲ್ಲಿ “ಪುಲ್ಲಿಂಗವಾಚಕ ಶಬ್ದ “ಒರುವನ್‌” (ಒಬ್ಬ) ಎಂದು ಬಳಕೆಯಾಗುತ್ತಿತ್ತು. ಸ್ತ್ರೀಯರಲ್ಲಿ “ಒರುತ್ತಿ”(ಒಬ್ಬಳು) ಎಂದು ಬಳಕೆಯಲ್ಲಿ ಇತ್ತು. ಪುಲ್ಲಿಂಗವಾಚಕ ಕ್ರಿಯಾಪದಗಳಲ್ಲಿ ನಕಾರ, ಸ್ತ್ರೀಲಿಂಗ ವಾಚಕ ಕ್ರಿಯಾಪದಗಳಲ್ಲಿ “ಳ” ಕಾರ ಉಪಯೋಗಿಸಲ್ಪಸುತ್ತಿದ್ದವು”[2] ಈ ತಮಿಳಿನ ಓರುವನ್‌ ಮತ್ತು ಓರುತ್ತಿ ಎಂಬುದು ಕೊರಮರ ಭಾಷೆಯಲ್ಲಿ ಇಂದಿಗೂ ಒರ‍್ತು-ಒಬ್ಬ, ಒರ್ತಿ-ಒಬ್ಬಳು ಎಂದು ಪ್ರಯೋಗವಾಗುತ್ತಿವೆ. “ತಮಿಳಿನಲ್ಲಿ ನಾಲ್ಕು ಪ್ರಾದೇಶಿಕವಾದ ಉಪಭಾಷಾ ಕ್ಷೇತ್ರಗಳಿವೆ. ಅವುಗಳು; ೧) ದಕ್ಷಿಣ ಉಪಭಾಷೆ-ಮಧುರೈ, ರಾಮನಾಥಪುರಂ, ತಿರುನಲ್ವೇಲಿ ಮತ್ತು ಕನ್ಯಾಕುಮಾರಿ ಜಿಲ್ಲೆಗಳಲ್ಲಿ ಮಾತನಾಡುವಂಥದು. ೨) ಕೇಂದ್ರದ ಉಪಭಾಷೆ ತಂಜಾವೂರು, ತಿರುಚನಾಪಲ್ಲಿ ಮತ್ತು ದಕ್ಷಿಣ ಅರ್ಕಾಟ್ನಲ್ಲಿ ಮಾತನಾಡುವಂಥದು. ೩) ಉತ್ತರದ ಉಪಭಾಷೆ ದಕ್ಷಿಣ ಅರ್ಕಾಟು, ಉತ್ತರ ಅರ್ಕಾಟು, ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ಮಾತನಾಡುವಂಥದು ಮತ್ತು ೪) ಪಶ್ಚಿಮದ ಉಪಭಾಷೆ ಕೊಯಿಂಬತ್ತೂರು, ಪೆರಿಯಾರ್, ಸೇಲಂ, ಧರ್ಮಪುರಿ ಮತ್ತು ನೀಲಗಿರಿ ಜಿಲ್ಲೆ, ಪಾಂಡ್ಯನಾಡು, ಚೋಳನಾಡು, ತೊಂಡೈನಾಡು ಮತ್ತು ಕೊಂಗನಾಡು ಎಂದು ಮಾಡಿದ್ದ ವಿಭಾಗಕ್ಕೆ ಸರಿ ಹೊಂದುತ್ತವೆ”[3] ಕೊರಮರು ತಮ್ಮ ಭಾಷೆಯನ್ನು “ಕೊಂಗ” ಭಾಷೆ ಎಂದು ಹೇಳುವುದನ್ನು ನೋಡಿದರೆ ಮೇಲೆ ಹೇಳಿದ ಕೊಂಗನಾಡಿಗೂ ಈ ಕೊಂಗ ಭಾಷೆಗೂ ಒಂದು ರೀತಿಯ ಸಂಬಂಧವಿರುವಂತೆ ತೋರುತ್ತದೆ. ಕೊರಮ ಭಾಷೆಯ ಪದಸಂಪತ್ತು, ವಾಕ್ಯ ವಿಧಾನ ಮತ್ತು ಪ್ರಯೋಗಗಳನ್ನು ಗುರುತಿಸುವ ದೃಷ್ಟಿಯಿಂದ ಕೊರಮ ಭಾಷೆಯ ಎರಡು ಕಥೆಗಳನ್ನು ಅವರು ಉಚ್ಚರಿಸುವ ರೀತಿಯಲ್ಲಿಯೇ ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಓತಿಕಾತನ ಕಥೆ :

ಒಂಡು ಓತಿಕಾತು. ಆ ಓತಿಕಾತ್ನುಕು ನಾಲೇರ ಪಂಡಮಾರು, ಆ ನಾಲೇರ ಪಂಡ್ಮಾರ್ ಯಾರ‍್ಯಾರ್ ಅಂಡಿಕೆ ಇಲಿ, ಒಂಗಕ್ಕು, ನಂಡು, ಪೂನ, ಒಂಡ್ನಾಳ್‌ ಓತಿಕಾತು ಓಗೋರ್ ಗವುದ್ಲೆ ಅಸಗಂಡೋಗಿ ಕಲ್‌ ಕಟ್ಟಿಮೇನಿ ವುಕ್ಕಂಡ್ ಪಂಚಾಯ್ತಿ ಸೇಯ್ತಾ ಇಟ್ಗಂಡು ಸಂತ್ಗೋಗ್ರಿಕ್ ವಂದ ಅಂಗ್ಯಾಸಿ. ಅಪ್ಪದು ಓತಿಕಾತು ಅಕ್ಕರ್‌ತ್ಗು “ಎಂಕೋಕ್ರ” ಅಂಡು ಕೋಟು. ಅತ್ಗ ಅವ “ನಿಮ್ವ ಬಿರಕ ವಡಮಕ, ನಿಮ್ವ ಬಿಟ ವಡಮಕು ಎಸರುಳ್‌ ಪ್ಯಾಟ್ಲಿ ಅತ್ತೆರಕೊಕ್ರೆ. ನಿಮ್ವ ವಡಮಕ ಸವರುಕ್ಕು” ಅಂಡ. ಅಪ್ಪದು ಆ ಓತಿಕಾತು “ಇಂತ ವಾತ ಅಂಡಳೆ ನನ್ನ ಮರ್ಯಾದೆಲ್ಲ ಓಸೆ” ಅಂಡು ಅದ್ದಿಂದ್ ಓಯೋಟು ಪೂನಿಯಟ್ಗು. ಅಪ್ಪದು “ತನ್ನಿ ಕಾಸಂಗೋ, ಅಣ್ಣಿ ಕಾಸಂಗೋ ವಡಮ ಕವ್ವರ‍್ಕ, ಅಂಡ ಪೂನಿ. “ನಿಮ್ವ ಅಣ್ಣಿ ಯಾರಕ್ಬೇಕು ನಿಮ್ವ ತನ್ನಿ ಯಾರಕ್ಬೇಕು ನಾಕ್ ಮಾಣ, ಅಂಡು.”ಎಂತ್ಗ ಇತ್ನಿ ಬೇಜಾರಾಗಿಗರಯೇ,ಅಂಡು ಕೋಟ. ನಾನು ಓಹಗೋರ್ ಗೌದ್ಲ ಉಪ್ಪಿಚಗಂಡು ಪಂಚಾಯ್ತಿಸೇಯ್ತಾ ಇಂದೆ. ಅವ ಸಂತಿಗೋಗ್ರಕವಂದ ನಮ್ಟ ಮರ್ಯಾದ ಕಳಜ ಇಲಿ, ಅಂಡು. ಆತ್ಗ ಪೂನಿ “ಅವ ಅಂಗ್ರವಳೆ ಅವ ಕಂಡಗ್ರ ಟೂಟ್ಲೆಲ್ಲ ದೊಗರ ಅಡುಕ್ರವ ನನ್ ಪಾತು ನಿಮ್ಟ ಕಾಡ್ಗಣಿಕ್ ಬೇಕ ಕಣ್ಕಪ್ಪು, ಅಂಡು.ಪಂಡುಕ ದೂರುಸೊಣ್ಣಿ ಅವು ಇನ್ನೊಂಡ್ ಪಂಡು ನೂಟ್ಗ್ ಓನು, ನಂಡು ಟೂಟ್ಗು.

ನಂಡು ಅಪ್ಪದು ತನ್ನಿಕುಂಗೋ ಉಂಗ್ರುಕ್ “ಅಂಡು ನಿಮ್ಟ ತನ್ನಿ ಮಾಣ.ನಿಮ್ಟ ಊಟು ಮಾಣ,ಅಂಡು ಓತಿಕಾತು. ಆತ್ಗನಂಡು “ಯಂತ್ಗ ಇತ್ನಿ ಬೇಜಾರಾಗಿಗರೆಯೇ,ಅಂಡು. ಇನಿನಗ ಇಲಿ ಸುಪ್ಪಾಣಿ ಇಂತಿಂತವಾತ ಅಂಡು ನನ್ಕ್, ಅಂಡು. ಆತ್ಗನಂಡು ನನ್ಕ್” ನಿಮ್ಟ ಗಿಜಋ ಕಾಲಕ್ಬೇಕ ಸುತ್ತು ಮಿಂಚು ಅಂಡುಕೋಟು,ಅಂಡು. ಅಪ್ಪದು ಓತಿಕಾತು ಇನ್ನೊಂಡ ಪಂಡಟೂಟ್ಗ್ ವೋನು ಒಂಗಕ್ಕು ಟೂಟ್ಗು. ಅವ ಮಣಿ ಓಡಂಗೋ ಉಕ್ಕಟು, ಅಂಡು. ಯಂತ್ಗ್‌ ಇತ್ನಿ ಬೇಜಾರು ಅಂಡು ಕೋಟ. ಆತ್ಗ “ಇಲೆಸುಪ್ಪಾಣಿ ನನಕ್ಕ್ ಇಂತ ವಾತ್ಯ ಅಂಡ, ನಂಟ್ ಮರ‍್ಯದಿ ಆಡ್ತ ಅಂಡು. ಆತ್ಗ ಅವ “ನನ್ಕ ನಿಮ್ಟ ಮಾರುದ್ದ ಕುತ್ತಿಗಿಕ್ ಬೇಕ ರಂಡಾಣಿ ಸರಪಣಿ ಅಂಡುಸೊಣ್ಣ. ಅಪ್ಪದು ಓತಿಕಾತು ಯಾರ್ ಟೂಟ್ಗುವರಲಿಲ್ಲ.[4]

ಓತಿಕಾತನ ಕಥೆಯ ಕನ್ನಡ ಅನುವಾದ

ಒಂದು ಓತಿಕಾತ.ಆ ಓತಿಕಾತನಿಗೆ ನಾಲ್ಕು ಜನ ಹೆಂಡತಿಯರು. ಆ ನಾಲ್ಕುಜನ ಹೆಂಡತಿಯರು. ಯಾರ‍್ಯಾರು ಅಂದರೆ, ಇಲಿ, ಕೊಕ್ಕರೆ, ಏಡಿ, ಬೆಕ್ಕು. ಒಂದು ದಿನ ಓತಿಕಾತ ಏಳೂರು ಗೌಡ್ರ ಕರಕಂಡೋಗಿ ಕಲ್ಲು ಕಟ್ಟೆಯ ಮೇಲೆ ಕುತ್ಗಂಡು ಪಂಚಾಯ್ತಿ ಮಾಡುತ್ತಾ ಇದ್ದಪೇಟ,ರುಮಾಲು ಸುತ್ತಿಕೊಂಡು. ಆವಾಗ ಇಲಿ ಸಾಸ್ವೆಯಷ್ಟು ಬುಟ್ಟಿ ಹೊತ್ಗೊಂಡು, ಜಡೆಹಾಕ್ಕೊಂಡು, ಸಣ್ಣ ನಾಮ ಇಟ್ಗಂಡು ಸಂತೋಗೋಗ್ಹೊಕೆ ಬಂದ್ಲು ಅಲ್ಲಾಸಿ. ಆವಾಗ ಓತಿಕಾತ ಪ್ರೀತಿಗೆ “ಎಲ್ಗೋಗ್ತೀಯಾ, ಅಂತ ಕೇಳ್ದ. ಅದಕ್ಕೆಅವಳು “ನಿನ್ನ ಬಿರಕ ಕೆಮೈಗೆ, ನಿನ್ನ ಬೀಟ್ ಮೈಗೆ ಎಸರುಳ್ ಪ್ಯಾಟೇಲಿ ಎಣ್ಣೆ ತರಕ್ ಹೋಗ್ತೀನಿ. ನಿನ್ನ ಮೈಗೆ ಸವರೋಕೆ, ಅಂದ್ಲು. ಆವಾಗ ಆ ಓತಿಕಾತ “ಇಂಥ ಮಾತ ಅಂದ್ಲಲ್ಲ, ನನ್ನ ಮರ್ಯಾದೆಯೆಲ್ಲ ಓಯ್ತುಅಂದ. ಎದ್ದೊಗ್ಬಿಟ್ಟ ಬೆಕ್ಕಿನ ಮನೆಗೆ. ಆವಾಗ ನೀರ ಕಾಯ್ಸಿರಿ, ಎಣ್ಣೆ ಕಾಸರಿ ಮೈ ತೊಳೆಯಲು ಅಂದ್ಲು ಬೆಕ್ಕು “ನಿನ್ನ ಎಣ್ಣೆ ಯಾರಿಗೆ ಬೇಕು, ನಿನ್ನ ನೀರು ಯಾರಿಗೆ ಬೇಕು ನನಗೆ ಬೇಡ ,ಅಂದ. “ಯಾಕಿಷ್ಟು ಬೇಜಾರಾಗಿ ಇದ್ದೀಯಲ್ಲ, ಅಂತ ಕೇಳಿದ್ಲು.

ನಾನು ಏಳೂರ ಗೌಡ್ರ ಕುಂಡ್ರಿಸಿಕೊಂಡು ಪಂಚಾಯ್ತಿ ಮಾಡ್ತಾ ಇದ್ದೆ. ಅವಳು ಸಂತೆಗೆ ಹೋಗಲು ಬಂದಳು. ನನ್ನ ಮರ್ಯಾದೆ ಕಳದ್ಲು ಇಲಿ, ಎಂದ.ಅದಕ್ಕೆ ಬೆಕ್ಕು “ಅವಳು ಅನ್ನೋಳೆ, ಅವಳು ಕಂಡೋರ ಮನೇಲಿ ಬಿಲ ತೆಗೆಯೋಳು ನನ್ನ ನೋಡಿ ನಿನ್ನ ಕಾಡಿಗೆ ಕಣ್ಣಿಗೆ ಬೇಕ ಕಣ್ಕಪ್ಪ, ಅಂದ್ಲು.ಹೆಂಡತಿಗೆ ದೂರು ಹೇಳಿ ಅವನು ಇನ್ನೊಬ್ಳು ಹೆಣ್ತಿ ಮನೆಗೆ ಹೋದ, ಏಡಿ ಮನೆಗೆ.

ಏಡಿ ಆಗ “ನೀರು ಕೊಡ್ರಿ ಉಣ್ಣಕೆ, “ಇಂಗಿಂಗೆ ಇಲಿ ಸುಪ್ಪಾಣಿ ಇಂತಿಂತ ಮಾತು ಆಡಿದ್ಲು ನನಗೆ, ಅಂದ. ಅದಕ್ಕೆ ಏಡಿ ನನಗೆ “ನಿನ್ನ ಗಿರ್ಜಿ ಕಾಲಿಗೆ ಬೇಕ ಸುತ್ತು ಮಿಂಚು ,ಅಂತ ಕೇಳಿದ್ಲು,ಅಂದ್ಲು, ಆಗ ಓತಿಕಾತ ಇನೊಬ್ಳು ಹೆಂಡತಿಯ ಮನೆಗೆ ಹೋದ. ಕೊಕ್ಕರೆ ಮನೆಗೆ, ಅವ್ಳು “ಮಣಿ ಹಾಕ್ರಿ ಕುಂತಗಳಲಿ, ಅಂದ್ಲು. ಯಾಕಿಷ್ಟು ಬೇಜಾರು “ಅಂತ ಅಂದ್ಲು,.ಅದಕ್ಕೆ “ಇಲಿ ಸುಪ್ಪಾಣಿ ನನಗೆ ಇಂಥಮಾತು ಅಂದ್ಲು. ನನ್ನ ಮರ್ಯಾದೆ ಕಳದ್ಲು, ಅಂದ. ಅದಕ್ಕೆ ಅವಳು ನನಗೆ ನಿನ್ನ ಮಾರುದ್ದ ಕುತ್ತಿಗೆಗೆ ಬೇಕ ಎರಡಾಣಿ ಸರಪಣಿ ಅಂದ್ಲು, ಅಂತ ಹೇಳಿದ್ಲು. ಆಗ ಓತಿಕಾತ ಯಾರು ಮನೇನು ಬೇಡಾ ಎಂದು ಅಲ್ಲಿಂದ ಬೇರೆ ಹೋಗ್ಬಿಟ್ಟ.ಮತ್ತೆ ಯಾರು ಮನೆಗೂ ಬರಲಿಲ್ಲ      .

ಭಾಗ್ಯಲಕ್ಷ್ಯಿಕಥೆ
ಒಂಡೂರುಳ್ಳಿ ಒರ‍್ತುಗವುದು ಇಂದು. ಅವನ್ಟೊಡುಳ್ಳಿ ವಿಜಯಲಕ್ಷ್ಮಿಇಂಧ. ಒಂಡ್ನಾಳು ಅವ ಓಯೋಡರುಕ್ಕು ಪಾತ. ಎಂತ್ಗಂಡಿಕೆ ಈ ಊಟಗೌಡು ಗುದ್ದಡಿಕೋಟಗ್ರ ಮಣಿ ಆತ್ಗಂಡೋಗಿ ತಲಿದಸ್ಕಿ ಓಟ್ಗಂಡು ಬೂದ್ಗಂಡು. ಈ  ದರಿದ್ರನ್ ಟೂಟುಳ್ಳಿ ನಾನಿಕ್ರದಿಲ್ಲ ನಾನು  ಓಯೋಡ್ರೆ ಅನುಬರ‍್ಕು ದರಿದ್ರ ಲಕ್ಷ್ಮಿ ಊಟ್ಗೊರ‍್ರ. ಈ ಬೆರುಗೌಡು ಪಮುಡ್ರ್ ಗುದ್ದಡಿ ಕೋಟಗ್ರಮಣಿ, ಪಮುಡ್ರು ಮುಟ್ಟಕರಂಗ ಊಸ್ ಉಡರಂಗ ಮಣಿಮೇನಿ ಉಕ್ಕುಗರಂಗ ಅಂತ ಮಣಿ ಓಟ್ಗಂಡು ಅಂಡು ಎಲ್ಲೋಟ. ಈ ಊಟುಳ್ಳಿ ಒರ‍್ತು ಬಡುವು ನಲ್ಲ ಶೆಡುಳ್ಳಿ-ಕಾಡುಳ್ಳಿ ಪೊಂಡು, ಪುಳ್ಳಲೆಲ್ಲ ಎಚ್ಗಂಡು ವಾಸ ಸೇಯ್ತಾ ಇಂದು.ಎನಗ ಶೆಯ್ತಾ ಇಂದು ಈ ಗೌಡ್ನಟೂಟಳ್ಳಿ ಎಲ್ಲಾ ತಿಗಡಗಂಡೋಗಿ ಎಚ್ಚಂಡು ಒಂಡ್ ಮಾದ್ದು ಅಗರ ಸಾಮನೆಚ್ಗಂಡು ಜೀವನ ಸೇಯ್ತಾ ಇಂದು ತಿಗುಡು. ಅಮಾನು ಅ ಟೂಟ್ಗುವಂದು ತಿಗಡತನ ಸೇಂದ್ಗಂಡು, ಸಾಮಾನು ಅತ್ಗಂಡು ಬಾಸ್ಲಕ್ ವಂದು. ಭಾಗ್ಯಲಕ್ಷ್ಮಿ ಎಲರಿಕ್ ಪಾತ. ತಿಗಡ್ನೂ ಎಲ್ರತ್ ವಾಸ್ಲಕ್‌ವಂದು. ಅಪ್ಪದು ಇವರ ವಡಮ್ಮ ಇವ ತಾಕ್ನ. ಇದೆಂದು ಇನಗ ತಾಕ್ಸ್‌ಪಮುಡ್ರ ಮಾಟ್ಲೆ ಅಂಡು ನಿಂಡ್ರು ಗಂಡು. ಆ ತಿಗುಡು ಪಾತು “ಯಾರಮ್ಮ ನೀರು” ಅಂಡು ಕೋಟು “ನಾನಯ್ಯ ಈ ಊಟು ಭಾಗ್ಯಲಕ್ಷ್ಮಿ”. ಈ ಊಟ ಸಾವ್ಕಾರು ಗುದ್ದಡಕಿ ವೋಟ್ಗಂಡಕ್ಕುಗರಂತಾ ಮಣಿ ಆತ್ಗಂಡೋಗಿ ತಲದಸ್ಗಿ ಒಟ್ಗಂಡು, ಈ ಊಟ್ಗು ದರಿದ್ರ ವಂಚು. ನಾನು ಆಕ್ಡಿ ಎಲ್ಲೊಕ್ರೆ ಈ ದಿರದ್ರನ ಟೂಡುಳ್ಳಿ ಇಕ್ರಿದಿಲ್ಲಾ” ಅಂಡು ಒಗ್ರುಕ್ ಪಾತ. ಆ ಬಡವುನ್‌ಕು ಬಾರಿ ಸಂಕ್ಟೊಂಚು.

ಈ ಊಟುಳ್ಳಿ ಭಾಗ್ಯು ಇಕ್ರಿಗಂಟ್ಲೆ ನಾನು ವಂದೊಂದು ತಿಗಡ್ತನ್ತಸೇಂದ್ಗಂಡು ಆತ್ಗಂಡೋಗಿ ನಂಟ ಪಂಡು ಪುಳ್ಳಿಲ ವರ‍್ಗವರಿತಾ ಇಗ್ರೆ.ಇವರ ಎಲ್ಲೋಯಟಿಕೆ ಈ ಊಟ್ಗ ದ್ರರಿದ್ರವರು. ಅನಬರ‍್ಕುನನಕು ಬಾರಿ ಕಸ್ಟತ್ಕ್ವರದು ಅಂಡು ಅವು ಅಂಗೆ ಉಕ್ಕುಂಡು. ನನಕೆಂತಾರ ಸೆಯ್ಯುಟು, ಹಿಂಸೆ ಸೆಯ್ಯಾಟು, ವತಾಟು ನಾನು ಅಕ್ಕಡಕಿ ಓಯೋಟಿಕೆ ಭಾಗ್ಯಲಕ್ಷ್ಮಿ ಆಕ್ಡಿಕಿ ಓಯೋಡರ, ದರಿದ್ರಲಕ್ಷ್ಮಿ ಬೇಲಿ ವಾಸ್ಲಕವಂದು ನಿಂಡ್ರಂಡಿರ. ಅಪ್ಪದು ಬಡವು ವಾಸ್ಲುಳ್ಳೆ ವುಕ್ಕಂಡೋಟು ವುಡ್ರಿದಂಕ. ವುಕ್ಕಂಡಿದಪದು ಗೌಡು ಬೇಲಿಕೋಗ್ರಕು ವಂದು. ವಂದವು “ಯಾರ‍್ಲ ನೀರು ಯಂತ್ಗವಂದಿಗ್ರ” ಅಂಡು ಅವನ್ನ ಕೋಟು. ಆತ್ಗ ಅವು ಇನಿನಿಗ ಪಮುಡ್ರು ಗುದ್ದಡಿ ಕೋಟುಗ್ರಂತ ಮಣಿ ಆತ್ಗಂಡೋಗಿ ತಲಿದಸ್ಕಿ ವೋಟ್ಗಂಡು ಬೂದ್ಗಂಡಿದಯ್ಮಲ್ಲೆ ಅತ್ಗು ಭಾಗ್ಯಲಕ್ಷ್ಮಿ ನಿಂಟೊಟ್ಳಿ ಇಂದವ ಓಗ್ತಾ ಇಂದ. ನಿಂಟೊಟುಳ್ಳಿ ನಾನು ಕಾಲಾವದಿ ತಿಗಡ್ತನ ಸೇಂದ್ಗಂಡೋಗಿ ಪಂಡು ಪುಳ್ಳೆಲ ವರಗು ವರಿತಾ ಇಂದೆ. ಇಮಾನು ಒಂದು ತಿಗಡ್ತನ ಸೇಂದ್ಗಂಡೋಗ್ರಪ್ಪದು ಭಾಗ್ಯಲಕ್ಷ್ಮಿ ಬೇಲ್ಲಿಕೋಗ್ರಕ ವಂದ. ನೀರು ಯಾರಮ್ಮ ಎಂಕೊಕ್ರ ಅಂಡು ಕೋಟಿ ಅತ್ಗವ ಎಲ್ಲಾಸೊಣ್ಣಾ. ಆತ್ಗ ನಾನು ಇಂಗೆ ವಾಸ್ಲುಳ್ಳಿ ಭಾಗ್ಯಲಕ್ಷ್ಮಿ ಬೇಲ್ಕಿ ವೋಗಾಲ್ಲಾರ ಮಾಟ್ಲಿ ವುಕ್ಕುಂಡೋಟಿ, ಭಾಗ್ಯಲಕ್ಷ್ಮಿವುಳ್ಳೆಇಗ್ರ. ಇನ್‌ಮೇನಿ ನೀನು ಮಣಿ ತಲ್ದಸ್ಕಿವೋಟ್ಗ ಮಾನ ಅಂಡು. ಸಾವ್ಕಾರು ಆ ಬಡವನ್ನು ನೀರು ನಾಮಾರ್ಲಿ ಕಾಂಗುಲ್ಲಾರ ಮಾಟ್ಲೆ ತಿಗಡ್ತನತ್ಗ ವರಮಾಣ, ನಿನಕ್‌ಎಂದು ಬೇಕೋ ವಂದು ನನ್ನ ಕೋರು, ನೀರು ನಲ್ಲ ಉಪಕಾರ‍್ತ ಸೇಂದಿರ ಎಲ್ಲಾ ತರ‍್ರೆ ಅಂಡು ಅಮಸ್ನು.

ಭಾಗ್ಯಲಕ್ಷ್ಮಿ ಕಥೆಯ ಕನ್ನಡನುವಾದ:

ಒಂದ್ನೂರಲ್ಲಿ ಒಬ್ಬ ಗೌಡ ಇದ್ದ. ಅವನ ಮನೇಲಿ ಭಾಗ್ಯಲಕ್ಷ್ಮಿಇದ್ದಳು. ಒಂದು ದಿನ ಅವಳಿ ಹೋಗ್ಲಿಕ್ಕೆ ನೋಡಿದ್ಲು. ಯಾಕೆ ಅಂದರೆ ಈ ಮನೆ ಗೌಡ ತಿಗದಡಿ ಹಾಕ್ಕೊಳ್ಳೋ ಮಣಿ ತಂಗಡೋಗಿ ತಲೆಕೆಳಗ ಹಾಕ್ಕೊಂಡು ಮಲಗಿದ. ಈ ದರಿದ್ರನ ಮನೇಲಿ ನಾನಿರುವುದಿಲ್ಲ. ನಾನು ಹೋಗಿ ಬಿಡ್ತೀನಿ. ಆಮೇಲೆ ದರಿದ್ರಲಕ್ಷ್ಮಿ ಮನೆಗ ಬರ್ತಾಳೆ. ಈ ದೊಡ್ಡಗೌಡ ಹೆಂಗಸ್ರು ತಿಕದಡಿ ಹಾಕ್ಕೊಳ್ಳೋ ಮಣಿ, ಹೆಂಗಸರು ಮುಟ್ಟಾಗ್ತಾರೆ. ಊಸು ಬಿಡ್ತಾರೆ, ಮಣೆ ಮೇಲೆ ಕುಳಿತುಕೊಳ್ತಾರೆ ಅಂಥ ಮಣೆ ಹಾಕ್ಕೊಂಡ್ನಲ್ಲ” ಎಂದು ಹೊರಟ್ಟು. ಈ ಮನೇಲಿ ಒಬ್ಬ ಬಡವ ಒಳ್ಳೆ ಗಿಡದಲ್ಲಿ ಕಾಡಲ್ಲ ಹೆಂಡ್ತಿ ಮಕ್ಕಳ್ನೆಲ್ಲ ಇಟ್ಗೊಂಡು ಒಂದು ತಿಂಗಳು ಆಗುವಷ್ಟು ಸಾಮಾನಿಟ್ಗಂಡು ಜೀವನ ಮಾಡ್ತಾ ಇದ್ದ ಕಳ್ಳ. ಆ ದಿನ ಆ ಮನೆಗೆ ಬಂದು ಕಳ್ತನ ಮಾಡ್ಕೊಂಡು, ಸಾಮಾನು ತಗಂಡು ಹೋಗಕೆ ಬಾಗಿಲಿಗೆ ಬಂದ. ಆಗ ಇವನ ಮೈಗೆ ಇವಳು ತಾಗಿದಳು. ಇದೇನು ಹೀಗೆ ತಾಗಿದಂಗಾಯ್ತಲ್ಲ ಹೆಂಗಸರ ಹಾಗೆ” ಎಂದು ನಿಂತುಕೊಂಡ. ಆ ಕಳ್ಳ ನೋಡ್ದ, “ಯಾರಮ್ಮ ನೀನು” ಅಂತ ಕೇಳ್ದ. “ನಾನಯ್ಯ ಈ ಮನೆ ಭಾಗ್ಯಲಕ್ಷ್ಮಿ” ಈ ಮನೆ ಸಾವ್ಕಾರ ತಿಗದಡಿಗೆ ಹಾಕ್ಕೊಂಡು ಕುಳಿತುಕೊಳ್ಳವಂತಾ ಮಣಿ ತಗಂಡೋಗಿ ತಲೆ ಅಡಿಗೆ ಹಾಕ್ಕೊಂಡ ಈ ಮನೆಗ ದರಿದ್ರ ಬಂತು. ನಾನು ಹೊರಗಡೆಗೆ ಹೋಗ್ಬಿಡ್ತೀನಿ. ಈ ದರಿದ್ರನ ಮನೇಲಿ ಇರೋದಿಲ್ಲ” ಎಂದು ಹೋಗೋಕ್‌ನೋಡಿದ್ದು, ಆ ಬಡವನಿಗೆ ಭಾರಿ ಸಂಕ್ಟ ಬಂತು.

ಈ ಮನೇಲಿ ಭಾಗ್ಯಲಕ್ಷ್ಮಿ ಇದ್ದುದ್ರಿಂದ ನಾನು ಬಂದ್ಬಂದು ಕಳ್ತನ ಮಾಡ್ಕೊಂಡು ತಗಂಡೋಗಿ ನನ್ನ ಹೆಂಡ್ತಿಮಕ್ಳ ಹೊಟ್ಟೆ ಹೊರಿತಾ ಇದ್ದೀನಿ. ಇವಳು ಹೋರಟು ಹೋಗ್ಬಿಟ್ಟರೆ ಈ ಮನೆಗೆ ದರಿದ್ರ ಬರುತ್ತದೆ, ಆಮೇಲೆ ನನಗೆ ಭಾರಿ ಕಷ್ಟಕ್ಕೆ ಬರುತ್ತೆ” ಎಂದು ಅವನು ಅಲ್ಲಿಯೇ ಕುಳಿತುಕೊಂಡ, ನನಗೇನಾರೂ ಮಾಡ್ಲಿ ಹಿಂಸೆ ಮಾಡ್ಲಿ, ಹೊಡೆಲಿ, ನಾನು ಹೊರಕ್ಕೆ ಹೊಗ್ಬಿಟ್ಟರೆ ಭಾಗ್ಯಲಕ್ಷ್ಮಿ ಆಚೆಗೆ ಹೋಗ್ಬಿಡ್ತಾಳೆ. ದರಿದ್ರ ಲಕ್ಷ್ಮಿ ಹೊರಗಡೆ ಬಾಗಿಲಿಗೆ ಬಂದು ನಿಂತ್ಕೊಂಡಿದಾಳೆ. ಆಗ ಬಡವ ಬಾಗಿಲಲ್ಲ ಕೂತ್ಕೂಂಡ್ಬಿಟ್ಟ ಬೆಳಗಿನತನಕ. ಕೂತ್ಕೂಂಡಿದ್ದಾಗ ಗೌಡ ಹೊರಕ್ಕೋಗಕೆ ಬಂದ. ಬಂದವನು ” ಯಾರೋ ನೀನು, ಯಾಕೆ ಕುಂತ್ಗಂಡಿದ್ದೀಯಾ” ಅಂತ ಅವನ್ನ ಕೇಳ್ದ. ಅದಕ್ಕೆ ಅವನು ಇಂಗಿಂಗೆ ಹೆಂಗಸ್ರು ತಿಗದಡಿಕೆ ಹಾಕ್ಕೊಳ್ವಂತ ಮಣಿ ತಗಂಡೋಗಿ ತಲೆ ಅಡಿಗೆ ಹಾಕ್ಕೊಂಡು ಮಲಕ್ಕೊಂಡಿದ್ದೆಯಂತಲ್ಲ ಅದಕ್ಕೆ ಭಾಗ್ಯಲಕ್ಷ್ಮಿನಿನ್ನ ಮನೆಲಿದ್ದೋಳು ಹೋಗ್ತಾ ಇದ್ದಳು. ನಿನ್ನ ಮನೇಲಿ ನಾನು ಕಾಲಾವದಿ ಕಳ್ತನ ಮಾಡ್ಕಂಡೋಗಿ ಹೆಂಡ್ತಿ ಮಕ್ಕಳ ಹೊಟ್ಟೆ ಹೊರಿತಾ ಇದ್ದೆ. “ನೀನು ಯಾರಮ್ಮ ಎಲ್ಲಿಗೋಗ್ತಿಯಾ” ಅಂತ ಕೇಳ್ದೆ. ಅದಕ್ಕೆ ಅವಳು ಎಲ್ಲಾ ಹೇಳಿದ್ಲು, ಅದ್ಕೆ ನಾನು ಇಲ್ಲಿ ಬಾಗ್ಲಲ್ಲಿ ಭಾಗ್ಯಲಕ್ಷ್ಮಿಹೊರಕ್ಕೆ ಹೋಗದ ಹಾಗೆ ಕುಂತ್ಗಂಬಿಟ್ಟೆ, ಭಾಗ್ಯಲಕ್ಷ್ಮಿ ಒಳಗೆ ಇದ್ದಾಳೆ. ಇನ್‌ಮೇಲೆ ನೀನು ಮಣಿ ತಗಂಡೋಗಿ ತಲ್ದಸಿಗೆ ಹಾಕೊಳ್ಬೇಡ” ಅಂದ, ಆಗ ಸಾವ್ಕಾರ ಬಡವನಿಗೆ “ನೀನು ರಾತ್ರೀಲಿ ಕಾಣದ ಹಾಗೆ ಕಳ್ಳತನಕ್ಕೆ ಬರಬೇಡಾ ನಿನಗೆ ಏನೋ ಬೇಕೋ ಬಂದು ನನ್ನ ಕೇಳು. ನೀನು ಒಳ್ಳೆ ಉಪಕಾರ ಮಾಡಿದ್ದೀಯಾ ಎಲ್ಲಾ ಕೋಡ್ತೀನಿ” ಎಂದು ಕಳಿಸ್ದ.

ಕುಳುವ ಭಾಷೆ ಅಂದರೆ ಕೊರಮರ ಮೂಲ ಮಾತೃಭಾಷೆಯ ಸ್ವರೂಪ. ಈ ಎರಡು ಕಥೆಗಳ ನಿರೂಪಣೆಯಲ್ಲಿ ಕಂಡುಬರುತ್ತದೆ. ಇಲ್ಲಿನ ಪದಸಂಪತ್ತು. ಸಮ್ಮಿಶ್ರ ಸ್ವರೂಪದ್ದು. ಹೆಚ್ಚಿನ ಶಬ್ದಗಳು ಮೂಲ ತಮಿಳಿಗೆ ಸಮೀಪವಾದವು. ಕ್ರಿಯಾಪದ, ವಿಶೇಷಣ, ಸರ್ವನಾಮಗಳು, ದ್ರಾವಿಣ ಭಾಷಾ ಸ್ವರೂಪವನ್ನು ಸೂಚಿಸುತ್ತದೆ. ವಾಕ್ಯ ರಚನೆಗೂ ಈ ಮಾತು ಅನ್ವಯಿಸುತ್ತದೆ. ಕೊರಮರ ಈ ಭಾಷೆಯನ್ನು ಆಧುನಿಕ ಭಾಷಾ ಶಾಸ್ತ್ರದನ್ವಯ ವಿಶ್ಲೇಷಿಸಿ ವಿಶೇಷಾಂಶಗಳನ್ನು ಗುರುತಿಸುವುದೇ ಒಂದು ಪ್ರತ್ಯೇಕ ಸಂಶೋಧನೆಯಾಗುತ್ತದೆ. ಉಳಿದ ದ್ರಾವಿಡ ಭಾಷೆಗಳೊಡನೆ ತೌಲನಿಕ ಅಭ್ಯಾಸವು ಒಂದು ಅವಶ್ಯವಾದ ಕೆಲಸ. ಮುಂದಿನ ಸಂಶೋಧಕರು ಈ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಕೊರಮ ಬುಡಕಟ್ಟಿನ ಸಾಂಸ್ಕೃತಿಕ ಅಧ್ಯಯನದಲ್ಲಿ ಅವರ ಜೀವನ ವಿಧಾನ, ನಂಬಿಕೆ ಆಚರಣೆಗಳೊಡನೆ ಸಂಸ್ಕೃತಿಯ ಪ್ರತಿಬಿಂಬವಾಗಿರುವ ಅವರ ಭಾಷಾ ಸ್ವರೂಪದ ಸ್ಥೂಲ ವಿಚೇಚನೆಯನ್ನು ಮಾತ್ರ ಇಲ್ಲಿ ಮಾಡಲಾಗಿದೆ. ಈ ನಿ‌ಟ್ಟಿನಲ್ಲಿ ಇದೊಂದು ಪ್ರಯತ್ನ ಮಾತ್ರ. ಪ್ರಾಥಮಿಕ ಪ್ರಯತ್ನವೂ ಹೌದು ಎಂಬುದನ್ನು ನಿವೇದಿಸುತ್ತೇವೆ.


[1]       ಅನು: ಡಾ. ಕೆ.ಜಿ.ಶಾಸ್ತ್ರಿ, ಶ್ರೀ ಎಸ್‌.ಡಿ.ಪಾಟೀಲ “ಕರ್ನಾಟಕ ಸಂಸ್ಕೃತಿ ಪರಂಪರೆ”

[2]      ಜಿ.ಎಸ್‌.ಕುಳ್ಳಿ; ಆಧುನಿಕ ಭಾಷಾ ವಿಜ್ಞಾನ, ಪು- 39

[3]        ಭಾರತೀಯ ಸಾಹಿತ್ಯ ಭಾಗ-೧ (ಕರ್ನಾಟಕ ಸಾಹಿತ್ಯ ಅಕಾಡೆಮಿ), ಪು- 29

[4]      ಹೇಳಿದವರು ಅರೆಕೇನಹಳ್ಳಿ ಪಾಪಯ್ಯನವರ ಪತ್ನಿ ಸಾವಿತ್ರಮ್ಮ, ತಿಪಟೂರು ತಾಲ್ಲೂಕು. ವರ್ಷ 75.