ನಿಜಾಮರ ಆಳ್ವಿಕೆಯಿಂದ ಹೈದರಾಬಾದ್ ಕರ್ನಾಟಕ ಮುಕ್ತವಾಗಿ ಐವತ್ತು ವರ್ಷಗಳು ಮುಗಿದುಹೋದವು. ಭಾರತವು ರಾಜಕೀಯ ಸ್ವಾತಂತ್ರ್ಯ ಸಿಕ್ಕ ಐವತ್ತನೇ ವರ್ಷವನ್ನು (1997) ಭಾರತದ ಸರಕಾರ ದೇಶಾದ್ಯಂತ ಸಂಭ್ರಮದಿಂದ ಆಚರಿಸಿತಷ್ಟೆ. ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಜನರು, ತಮ್ಮ ಪ್ರಾಂತ್ಯಕ್ಕೆ ಒಂದು ವರ್ಷ ತಡವಾಗಿ ಸ್ವಾತಂತ್ರ್ಯ ಸಿಕ್ಕದ್ದನ್ನು ನೆನಪಿಸಿಕೊಂಡರು. ಅದರಂತೆ ಐವತ್ತನೇ ಸ್ವಾತಂತ್ರ್ಯೋತ್ಸವವನ್ನು 1998ನೆಯ ಸೆಪ್ಟೆಂಬರ್ 17ರಂದು ಆಚರಿಸಿದರು. ಈ ಪ್ರಾಂತ್ಯದಲ್ಲಿ ಸ್ವಾತಂತ್ರ್ಯೋತ್ಸವನ್ನು ಆಗಸ್ಟ್ 15ರಂದೇ ಆಚರಿಸುತ್ತ ಬಂದಿದ್ದರು. ಸೆಪ್ಟೆಂಬರ್ 17ರಂದು ಆಚರಿಸಲು ಸರಕಾರವೂ ಅನುವು ಮಾಡಿಕೊಟ್ಟಿತು. ನಿಜಾಮರ ಆಡಳಿತದ ವಿರುದ್ಧ ಹೈದರಾಬಾದ್ ಕರ್ನಾಟಕ ವಿಮೋಚನೆಗಾಗಿ ಜನರು ನಡೆಸಿದ ಹೋರಾಟ, ಅನುಭವಿಸಿದ ನೋವು ಎಲ್ಲವೂ ರೋಮಾಚನವನ್ನುಂಟು ಮಾಡುವಂಥದ್ದೆಂದು ಸ್ವಾತಂತ್ರ್ಯ ಹೋರಾಟಗಾರರು ವೇದಿಕೆ ಮೇಲೆ ಹೇಳತೊಡಗಿದರು. ವಿಚಿತ್ರವೆಂದರೆ ಈ ಹೋರಾಟವನ್ನು ಚರಿತ್ರೆಯಲ್ಲಿ ಸರಿಯಾಗಿ ಯಾರೂ ದಾಖಲು ಮಾಡುವ ಕಡೆಗೆ ಗಮನ ಹರಿಸಿರಲಿಲ್ಲ. ಬ್ರಿಟಿಶ್-ನಿಜಾಮರ ವಿರುದ್ಧ, ನಿಜಾಮ-ರಜಾಕಾರರ ವಿರುದ್ಧ, ರಜಾಕಾರ-ಪಠಾಣರ ವಿರುದ್ಧ ಹಂತಹಂತವಾಗಿ ಈ ಪ್ರಾಂತ್ಯದ ಜನರು ‘ಸ್ವಾತಂತ್ರ್ಯ’ಕ್ಕಾಗಿ ಹೋರಾಡಿರುವುದನ್ನು ಹೋರಾಟಗಾರರು ತಮ್ಮ ಸ್ಮೃತಿಯಲ್ಲಿ ಉಳಿಸಿಕೊಂಡು ಬಂದಿ ದ್ದಾರೆಯೇ ಹೊರತು ಹೇಳಿಕೊಳುವಷ್ಟು ದಾಖಲು ಮಾಡಲಿಲ್ಲ. ಐವತ್ತು ವರ್ಷಗಳು ಕಳೆದರೂ ಅಧ್ಯಯನಕಾರರೂ ಈ ಬಗ್ಗೆ ಆಸಕ್ತಿಯನ್ನು ತೋರಿಸಲಿಲ್ಲ. ಈ ಹೋರಾಟದಲ್ಲಿ ಭಾಗಿಗಳಾಗಿದ್ದ ಸಾಹಿತಿಗಳೂ ಮೌನ ವಹಿಸಿರುವುದು ವಿಚಿತ್ರವಾಗಿ ಕಾಣುತ್ತ
ದೆ.

‘ಸ್ವಾತಂತ್ರ್ಯಾಂದೋಳನ’(ಸಂ: ಧ್ರುವ ನಾರಾಯಣ) ಎಂಬ ಕೃತಿಯಲ್ಲಿ ಪ್ರಥಮವಾಗಿ ಹೋರಾಟದ ವಿವರಗಳು ಸಂಕಲನಗೊಂಡಿವೆ. ‘ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು’(ಸಂ: ಡಾ.ಸೂರ್ಯನಾಥ ಕಾಮತ್)ೊಕೃತಿಯಲ್ಲಿ ಹೋರಾಟಗಾರರ ನೆನಪುಗಳು ಸ್ವಲ್ಪ ದಾಖಲಾಗಿದೆ. ಈಚೆಗೆ ‘ಹೈದರಾಬಾದು ಕರ್ನಾಟಕದಲ್ಲಿ ರಾಜಕೀಯ ಚಳವಳಿಗಳು’(ಡಾ.ಬಿ.ಸಿ. ಮಹಾಬಲೇಶ್ವರಪ್ಪ) ಎಂಬ ಪಿಎಚ್.ಡಿ.ಕೃತಿ ಹೊರಬಂದಿದೆ. ‘ಮುಂಡರಗಿ ನಾಡ ಸ್ವಾತಂತ್ರ್ಯ ಸಂಗ್ರಾಮ’(ಡಾ.ಸಿ.ಎಂ.ಚುರ್ಚಿಹಾಳಮಠ) ಹಾಗೂ ಕೊಪ್ಪಳ ಜಿಲ್ಲಾ ಆಡಳಿತದ ವತಿಯಿಂದ ‘ವಿಮೋಚನೆ’ ಈ ಎರಡು ಕೃತಿಗಳಲ್ಲಿ ವಿಪುಲ ಮಾಹಿತಿಗಳು ಸೇರಿಕೊಂಡಿವೆ. ರಾಮಣ್ಣ ಹವಳೆ ಅವರ ‘ಸ್ವಾತಂತ್ರ್ಯ ಹೋರಾಟದಲ್ಲಿ ಗಜೇಂದ್ರಗಡ ಶಿಬಿರ’ ಎಂಬ ಕೃತಿ ಇದಕ್ಕೆ ಸಂಬಂಧಿಸಿದೆ. ಇವೆಲ್ಲವೂ ಚಳವಳಿ ಮುಗಿದು ಅರ್ಧಶತಮಾನದ ತರುವಾಯ ಪ್ರಕಟವಾಗಿವೆ. ಇದು ಆಶಾದಾಯಕವಾದ ಸಂಗತಿಯೇ ಆದರೂ ಈ ವಿಸ್ಮೃತಿ ಯಾಕೆ ಮತ್ತು ಈ ಹೊತ್ತಿನಲ್ಲಿ ಈ ಪ್ರಾಂತ್ಯದ ವಿಮೋಚನ ಚಳವಳಿಯನ್ನು ಕುರಿತು ಅಧ್ಯಯನಗಳು ನಡೆದಿರುವುದು ಯಾಕೆ?

ಈ ಹೊತ್ತಿನಲ್ಲಿ ‘ಹೈದರಾಬಾದ್ ಕರ್ನಾಟಕ ವಿಮೋಚನ’ ದಿನವನ್ನು ಈ ಪ್ರಾಂತ್ಯದಲ್ಲಿ ಆಚರಿಸುವ ಸಂಭ್ರಮದಲ್ಲಿ, ಹೋರಾಟದ ನೆನಪುಗಳು ಮರುಕಳಿಸುತ್ತಿವೆ. ಆಗ ನಿಜಾಮ ಆಡಳಿತದ ವಿರುದ್ಧ ಮಾತಾಡುವ ನೆಪದಲ್ಲಿ ರಜಾಕಾರರ ದಾಳಿ- ದೌರ್ಜನ್ಯ ವನ್ನು ಖಂಡಿಸಲಾಗುತ್ತಿದೆ. ಖಂಡಿಸುವಾಗ ಸೂಕ್ಷ್ಮತೆ ಇರದೇ ಹೋದರೆ ಅನಾವಶ್ಯಕವಾಗಿ ಮುಸ್ಲಿಮರ ಮನಸ್ಸನ್ನು ಕದಡಿದಂತಾಗುತ್ತದೆ. ಯಾಕೆಂದರೆ ರಜಾಕಾರರು ಎಂದರೆ ಮುಸ್ಲಿಮರ ಪಡೆ ಎಂಬ ಭಾವನೆಯಿರುತ್ತದೆ. ಈ ಪ್ರಾಂತ್ಯದ ವಿಮೋಚನ ಚಳವಳಿಯನ್ನು ಕುರಿತು ಅಧ್ಯಯನಗಳು ನಡೆಸುವಾಗಲೂ ಅವು ‘ಮತೀಯ’ವಾಗದಂತೆ ಎಚ್ಚರ ವಹಿಸುವ ಅಗತ್ಯವಂತೂ ಹೆಚ್ಚಿದೆ. ಯಾಕೆಂದರೆ ಹಿಂದೂಗಳ ಪ್ರಾಂತ್ಯವನ್ನು ‘ಮುಸ್ಲಿಮ್’ ಅರಸರು ಆಳಿದರೆಂಬ ಸಂಗತಿಯೇ ಅನೇಕ ಪೂರ್ವಗ್ರಹಗಳಿಗೆ ಒಳಗಾಗುವ ಸಾಧ್ಯತೆಗಳಿರುತ್ತವೆ.

ಬ್ರಿಟಿಶರಿಂದ ಭಾರತ ಸ್ವಾತಂತ್ರ್ಯಗೊಂಡಾಗ, ನಿಜಾಮನು ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರ ರಾಜ್ಯವನ್ನಾಗಿ ಉಳಿಸಿಕೊಂಡು ಆಳಲು ನಿಂತನು. ಇಲ್ಲಿಂದಲೇ ಈ ಪ್ರಾಂತ್ಯದ ಜನರು ಹೋರಾಟಕ್ಕೆ ತೀವ್ರವಾಗಿ ಅಣಿ ಯಾದದ್ದು. ಹಾಗೆ ನೋಡಿದರೆ ಬ್ರಿಟಿಶರ ಅಧೀನದಲ್ಲಿ ನಿಜಾಮರು, ನಿಜಾಮರ ಅಧೀನದಲ್ಲಿ ಜಹಗೀರುದಾರರು. ಜಹಗೀರುದಾರರ ಅಧೀನದಲ್ಲಿದೇಶಮುಖ್, ದೇಸಾಯಿ, ಪಟೇಲ್ ಮುಂತಾದವರಿದ್ದರು. ಇವರ ಕೈಕೆಳಗೆ ದುಡಿಯುವ ಸಾಮಾನ್ಯ ಜನರು ತಲೆತಲಾಂತರದಿಂದ ಜಮೀನುದಾರರ ಅಧೀನದಲ್ಲಿರುವ ಅವರಿಗೆ ಸ್ವಾತಂತ್ರ್ಯದ ಕಲ್ಪನೆ ಕನಸು ಇರಲಿಲ್ಲ. ನಿಜಾಮ ಆಡಳಿತದಿಂದ ಜಮೀನುದಾರರಿಗೆ ಕುತ್ತು ಬಂದಾಗ, ಆಗ ಹೋರಾಡಲು ಜಮೀನುದಾರರ ಪರವಾಗಿ ಸಾಮಾನ್ಯರೇ ನಿಲ್ಲಬೇಕಾಯಿತು. ರಜಾಕಾರರು ಜಮೀನುದಾರರ ಮನೆಗೆ ದಾಳಿ ಮಾಡಿದಾಗಲೂ ಅವರ ರಕ್ಷಣೆಗೆ ಸಾಮಾನ್ಯ ಜನರೇ ನಿಂತರು. ಪರಿಸ್ಥಿತಿ ಹೀಗಿತ್ತು.

ನಿಜಾಮನ ಆಡಳಿತವನ್ನು ‘ಇತ್ತೇಹಾದುಲ್ ಮುಸಲ್ಮೀನ್’ ಎಂಬ ಸಂಘಟನೆ ಬೆಂಬಲಿಸಿತು. ಇದರ ಸದಸ್ಯರೇ ಮುಂದೆ ‘ರಜಾಕಾರರ’ ಪಡೆಯಾಗಿ ಬೆಳೆದು ನಿಂತಿತು. ಇದರ ನಾಯಕ ಕಾಶಿಂ ರಜ್ವಿ ಮೂಲತಃ ಮತಾಂಧನಾಗಿದ್ದುದೇ ಅನೇಕ ದುರಂತಗಳಿಗೆ ಕಾರಣವಾಯಿತು. ಈ ಪಡೆ ನಿಜಾಮನನ್ನು ಕೈಗೊಂಬೆ ಮಾಡಿಕೊಳ್ಳುವಷ್ಟು ಶಕ್ತವಾಗಿ ಬೆಳೆದಿತ್ತು. ಸಂಸ್ಥಾನದಲ್ಲಿ ರಜಾಕಾರರು ನಿಜಾಮನ ಬೆಂಬಲದಿಂದ ದಾಳಿ ಮಾಡುತ್ತ ದೌರ್ಜನ್ಯ ನಡೆಸಿದರು. ಇವರ ಜೊತೆ ಪಠಾಣರು ಸೇರಿಕೊಂಡರು. ದಾಳಿಯಿಂದ ಜನರನ್ನು ಸುಲಿಯುವುದು, ಅತ್ಯಾಚಾರ ಮಾಡುವುದು ನಡೆಯಿತು. ಇಂಥ ಸಂದರ್ಭಗಳಿಗಾಗಿ ಕಾಯುವ ಅಥವಾ ಉಪಯೋಗಿಕೊಳ್ಳುವ ಸಮಯಸಾಧಕರೂ ಇದರಲ್ಲಿ ಸೇರಿಕೊಂಡರು. ಜಯತೀರ್ಥ ರಾಜಪುರೋಹಿತರು ಹೇಳುವಂತೆ, ‘ಅನೇಕ ಹಿಂದು ಅಧಿಕಾರಿಗಳೂ, ಜಾಗೀರದಾರರೂ ಸ್ವಾತಂತ್ರ್ಯಂದೋಲನವನ್ನು ಹತ್ತಿಕ್ಕಲು ನಿಜಾಮರಿಗೆ ನೆರವಾದ ನಿದರ್ಶನಗಳಿಗೇನೂ ಕೊರತೆಯಿಲ್ಲ’(ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು) ಎಂಬ ಮಾತು ಇದಕ್ಕೆ ಸಾಕ್ಷಿಯಾಗಿದೆ. ರಜಾಕಾರರ ಹಾವಳಿಯಲ್ಲಿ ಸ್ಥಳೀಯರೂ ಸೇರಿಕೊಂಡಿರುವ ಸಂಗತಿಯನ್ನು ಈ ಪ್ರಾಂತ್ಯದ ಅನೇಕ ಕಥೆಗಳು ಹೇಳುತ್ತವೆ.

ಹೈದರಾಬಾದ್ ಕರ್ನಾಟಕ ವಿಮೋಚನ ಚಳವಳಿಯಲ್ಲಿ ಮುಸ್ಲಿಮರು ಪಾಲ್ಗೊಂಡು ಹೋರಾಡಿದರೇ ಎಂಬ ಪ್ರಶ್ನೆಯನ್ನು ಸರಳವಾಗಿ ನೋಡುವಂತಿಲ್ಲ. ನೂರಾರು ಹಳ್ಳಿಗಳಲ್ಲಿ ದುಡಿದು ಬದುಕುವ ಮುಸ್ಲಿಮರು ಮತ್ತು ಒಳಪಂಗಡದ ಪಿಂಜಾರರು ಈ ಚಳವಳಿಯ ಸಂದರ್ಭದಲ್ಲಿ ತಲ್ಲಣಕ್ಕಿಡಾಗಿರುವುದು ಕಂಡುಬರುತ್ತದೆ. ನಿಜಾಮರು ರಜಾಕಾರರ ಪರವಾಗಿದ್ದರೆ ಹಿಂದೂಗಳ ಸಿಟ್ಟಿಗೆ ಗುರಿಯಾಗಬೇಕು. ಯಾಕೆಂದರೆ ತಲೆತಲಾಂತರದಿಂದ ಒಟ್ಟಿಗೆ ಬದುಕುತ್ತ ಆಶ್ರಯಿಸಿಕೊಂಡಿದ್ದವರು ನಿಜಾಮರ ರಜಾಕಾರರನ್ನು ವಿರೋಧಿಸಿದರೆ ಧರ್ಮವಿರೋಧಿಗಳು, ಜನಾಂಗ ವಿರೋಧಿಗಳು ಎಂಬ ಅಪವಾದಕ್ಕೆ ಗುರಿಯಾಗಬೇಕು. ತಟಸ್ಥವಾಗಿಯೂ ಉಳಿಯುವಂತಿರಲಿಲ್ಲ. ಸಂದರ್ಭ ಹೇಗಿತ್ತೆಂದರೆ ಹಿಂದೂಗಳ ಕಡೆ ಸ್ಥಳೀಯ ಬಡ ಮುಸ್ಲಿಮರು ಸೇರಿದರೂ ಅವರನ್ನು ಅನುಮಾನಿಸುವ ಸಾಧ್ಯತೆಗಳೇ ಹೆಚ್ಚಿದವು. ಇಂಥ ಹಲವು ಒತ್ತಡಗಳಲ್ಲಿ ಸ್ಥಳೀಯ ಮುಸ್ಲಿಮರು ಸಿಕ್ಕಿಕೊಂಡಿದ್ದರು.

ಯಾವ ಜಾತಿಯವನ ಆಸ್ತಿಯನ್ನಾದರೂ ಮುಸಲ್ಮಾನರು ಕೊಳ್ಳಬಹುದು. ಆದರೆ ಮುಸಲ್ಮಾನರ ಆಸ್ತಿಯನ್ನು ಮುಸ್ಲಿಮೇತರರು ಕೊಳ್ಳಬಾರದು. ಮುಸ್ಲಿಮ್ ಮತಕ್ಕೆ ಮತಾಂತರಗೊಂಡರೆ ಅಂಥವರು ‘ಹಿಂದೂ’ಗಳಲ್ಲಿ ಸಾಲ ಮಾಡಿದರೆ ಅದನ್ನು ಮರಳಿಸಬೇಕಾಗಿಲ್ಲ

ಎಂಬ ಫರ್ಮಾನನ್ನು ನಿಜಾಮ ಈ ವಿಮೋಚನ ಚಳವಳಿಯ ಸಂದರ್ಭದಲ್ಲಿ ಹೋರಡಿಸುತ್ತಾನೆ. ಇದು ಹಿಂದೂಗಳನ್ನು ಕೆರಳಿಸುತ್ತದೆ. ಈ ಫರ್ಮಾನಿನ ಹಿಂದೆ ನಿಜಾಮನ ದಡ್ಡತನ ಕಾಣುತ್ತದೆ. ಯಾಕೆಂದರೆ ಈ ಪ್ರಾಂತ್ಯದ ಅಲ್ಪಸಂಖ್ಯಾತ ಮುಸ್ಲಿಮರಲ್ಲಿ ಎಷ್ಟರಮಟ್ಟಿಗೆ ಆಸ್ತಿಯಿತ್ತು? ಇನ್ನೊಬ್ಬರ ಆಸ್ತಿಯನ್ನು ಕೊಳ್ಳುವಷ್ಟು ಶಕ್ತಿ ಮುಸ್ಲಿಮರಲಿತ್ತೇ? ಸಾಲ ಮಾಡಿದ ಬಡವರು, ದಲಿತರು ಸಾಲ ತೀರಿಸಲಾಗದೆ ಮತಾಂತರಗೊಳ್ಳುವ ಸಾಧ್ಯತೆ ಇತ್ತು ಎನ್ನುವುದಾದರೆ, ಅಂಥವರ ಸಾಲವನ್ನು ಮನ್ನಾ ಮಾಡುವ ಔದಾರ್ಯವನ್ನು ಸಾಲ ನೀಡಿದ ಜಮೀನುದಾರರು ತೋರಿಸಬಹುದಾಗಿತ್ತು ಎನ್ನಿಸುತ್ತದೆ. ಹೈದರಾಬಾದ್ ಕರ್ನಾಟಕ ವಿಮೋಚನ ಚಳವಳಿ ಏಕಮುಖವಾಗಿಲ್ಲ. ಸಂಕೀರ್ಣತೆಯಿಂದ ಕೂಡಿದೆ ಎಂಬುದಕ್ಕೆ ಇಂಥ ಅನೇಕ ಸಂಗತಿಗಳು ನಿದರ್ಶನವಾಗಿವೆ.

ಆದರೂ ಈ ಪ್ರಾಂತ್ಯದಲ್ಲಿ ನಿಜಾಮರ ಬೆಂಬಲಿಗರಂತೆ ವರ್ತಿಸಿದ ರಜಾಕಾರರು ಮಾಡಿದ ದಾಳಿ, ದೌರ್ಜನ್ಯ, ಅತ್ಯಾಚಾರಗಳಿಂದ ಜನರು ತಲ್ಲಣಗೊಂಡರು. ಹಿಂಸೆಗೆ ಒಳಗಾದರು. ಮನೆಮಾರು ತೊರೆದು ಗಡಿದಾಟಿ ವಲಸೆ ಹೋಗುವಂತಾಯಿತು. ಜನರೇ ಸಂಘಟಿತರಾಗಿ ಹೋರಾಡುವ ಅನಿವಾರ್ಯತೆ ಎದುರಾಯಿತು. ಇದರಿಂದ ಈ ಪ್ರಾಂತ್ಯದಲ್ಲಿ ಹಿಂದೂ ಮತ್ತು ಮುಸ್ಲಿಂ ಜನಾಂಗ ಇಬ್ಬರೂ ಹಾನಿಗೊಳಗಾದರು. ಮನಸ್ಸು ಕದಡಿದವು. ಇದರಲ್ಲಿ ಅನಂತರ ರಾಜಕೀಯವೂ ಸೇರಿ ಮತ್ತಷ್ಟು ಅಂತರ ಏರ್ಪಡುವಂತಾಯಿತು. ಆದರೆ ದುಡಿದು ಬದುಕುವ ಎರಡು ಜನಾಂಗಗಳ ಮಧ್ಯ ತನ್ನಿಂದ ತಾನೇ ಏರ್ಪಡುವ ಸಹಬಾಳ್ವೆಯನ್ನು ಒಡೆಯಲು ಯಾರಿಂದಲೂ ಸಾಧ್ಯವಾಗದು ಎಂಬುದನ್ನು ಈ ಪ್ರಾಂತ್ಯದಲ್ಲಿ ಕಾಣಬಹುದು.

ಲೇಖನದ ಮುಂದಿನ ಭಾಗದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನ ಚಳವಳಿಯಲ್ಲಿ ರಾಯಚೂರು ಜಿಲ್ಲೆಯ ಪಾತ್ರವನ್ನು ಕುರಿತು ಸಮೀಕ್ಷೆಯ ಮಾದರಿಯಲ್ಲಿ ಬರೆಯಲಾಗಿದೆ. ಈ ಪ್ರಾಂತ್ಯದ ರಾಜಕೀಯ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟದ ಸಾಮಾನ್ಯ ಚಿತ್ರವನ್ನು ನಿರೂಪಿಸಲು ಪ್ರಯತ್ನಿಸಲಾಗಿದೆ.

 

ಪ್ರಾಂತ್ಯದ ರಾಜಕೀಯ ಇತಿಹಾಸ

ದೆಹಲಿಯ ಮೊಗಲ್ ಅರಸರಿಗೆ ಮೊದಲಿನಿಂದ ದಕ್ಷಿಣ ಭಾರತದ ಕಡೆಗೆ ಕಣ್ಣಿತ್ತು. ದಖನ್ ಪ್ರಾಂತ್ಯವನ್ನು ತಮ್ಮ ಅಧೀನಕ್ಕೆ ಒಳಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. 1686ರಲ್ಲಿ ಔರಂಗಜೇಬನು ವಿಜಾಪುರದ ಆದಿಲ್‌ಶಾಹಿಗಳ ಆಳ್ವಿಕೆಯನ್ನು ಅಂತ್ಯಗೊಳಿಸಿದ ಮೇಲೆ ಮೊಗಲ್ ಸಾಮ್ರಾಜ್ಯಕ್ಕೆ ಮುಂಬಯಿ, ಮದರಾಸು, ಕರ್ನಾಟಕ ಹಾಗೂ ಮೈಸೂರಿನ ಕೆಲವು ಭಾಗಗಳು ಸೇರಿಕೊಂಡವು. ಈ ಭಾಗಗಳಲ್ಲಿ ಮರಾಠಿ, ತೆಲುಗು ಹಾಗೂ ಕನ್ನಡ ಮಾತನಾಡುವ ಪ್ರಜೆಗಳಿದ್ದರು. ದಖನ್ ಪ್ರಾಂತ್ಯವನ್ನು ನೋಡಿಕೊಳ್ಳುವುದಕ್ಕೆ ಮೀರ್ ಕಮರುದ್ದೀನ್ ಎಂಬ ಸುಬೇದಾರನನ್ನು ನೇಮಿಸಲಾಗಿತ್ತು. ದೆಹಲಿಗೆ ಔರಂಗಜೇಬನು ಮರಳಿದ ನಂತರ ದಖನ್ ಪ್ರಾಂತ್ಯದ ಸುಬೇದಾರ ಮೀರ್ ಕಮರುದ್ದೀನ್ 1724ರಲ್ಲಿ ತನ್ನ ಅಧೀನ ಪ್ರಾಂತ್ಯದಲ್ಲಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು ಆಳತೊಡಗಿದನು. ಅವನಿಗೆ ಅಸಫ್ ಜಾ ಎಂಬ ಬಿರುದು ಇತ್ತು. ಇವನ ಆದಿಯಾಗಿ ಮುಂದೆ 1948ರ ವರೆಗೆ ಏಳು ಜನರು ಅಧಿಕಾರಕ್ಕೆ ಬಂದು ಆಳಿದರು. ಇವರಿಗೆ ಹೈದರಾಬಾದ್ ನಿಜಾಮ ರೆಂದು, ಇವರ ಅಧೀನ ರಾಜ್ಯಕ್ಕೆ ಹೈದರಾಬಾದ್ ಸಂಸ್ಥಾನವೆಂದು ಕರೆಯಲಾಗುತ್ತಿದೆ. ಈ ಸಂಸ್ಥಾನದಲ್ಲಿ ಕರ್ನಾಟಕದ ಬೀದರ್, ಕಲ್ಬುರ್ಗಿ ಹಾಗೂ ರಾಯಚೂರು ಜಿಲ್ಲಾ ಪ್ರದೇಶಗಳು ಸೇರಿಕೊಂಡಿದ್ದವು. ಈ ಮೂರು ಜಿಲ್ಲೆಗಳ ಪ್ರದೇಶವನ್ನು ‘ನಿಜಾಮ ಪ್ರಾಂತ್ಯ’, ‘ನೈಜಾಮ ಕರ್ನಾಟಕ’, ‘ಹೈದರಾಬಾದ್ ಕರ್ನಾಟಕ’ವೆಂತಲೂ ಕರೆಯಲಾಗುತ್ತಿದೆ. ಕರ್ನಾಟಕದ ಪೂರ್ವಚರಿತ್ರೆಯು ಈ ಪ್ರಾಂತ್ಯದಿಂದಲೇ ಆರಂಭವಾಗುತ್ತದೆ.

ಮೌರ್ಯರ ಆಳ್ವಿಕೆಗೆ ಈ ಪ್ರಾಂತ್ಯ ಒಳಪಟ್ಟಿತ್ತು. ಅಶೋಕ ಚಕ್ರವರ್ತಿ (ಕ್ರಿ.ಪೂ.274 233)ಯ ಶಿಲಾ ಶಾಸನಗಳು ಮಸ್ಕಿ, ಕೊಪ್ಪಳ, ನಿಟ್ಟೂರು, ಉದೆಗೊಳಂ, ಬ್ರಹ್ಮಗಿರಿ, ಸಿದ್ಧಾಪುರ, ಜಟ್ಟಿಂಗ ರಾಮೇಶ್ವರ ಸ್ಥಳಗಳಲ್ಲಿ ದೊರೆತಿವೆ. ಆ ಕಾಲದಲ್ಲಿ ಈ ಸ್ಥಳಗಳು ದಖನ್ ಪ್ರಾಂತ್ಯದ ಮುಖ್ಯ ಧಾರ್ಮಿಕ ಕೇಂದ್ರಗಳಾಗಿದ್ದವು. ಬೌದ್ಧ ಸಂಘಗಳನ್ನು ಇಲ್ಲಿ ನೆಲೆಗೊಳಿಸಿ, ತನ್ನ ಬೌದ್ಧಧರ್ಮವನ್ನು ಪ್ರಚಾರ ಮಾಡಲು ಪ್ರಯತ್ನಿಸಿರಬೇಕು. ಮಸ್ಕಿಯ ಹಿಂದಿನ ರೂಪವು ‘ಮಾಸಂಗಿ’ ಎಂದಿತ್ತು. ಮೂಲ ‘ಮಹಾಸಂಘ’ ಎಂಬುದು ‘ಮಾಸಂಗಿ’ಯಾಗಿರಬೇಕು. ಈ ಸ್ಥಳವು ಅಶೋಕನ ಕಾಲದಲ್ಲಿ ಬೌದ್ಧ ಭಿಕ್ಷುಗಳ ನೆಲೆಯಾಗಿ ಬೌದ್ಧಮತದ ಪ್ರಚಾರ ಕೇಂದ್ರವೂ ಆಗಿತ್ತು. ಕೊಪ್ಪಳವು ಪ್ರಾಚೀನ ಕಾಲದಿಂದ ಬಹುಮುಖ್ಯ ಘಟನೆಗಳಿಗೆ ಕೇಂದ್ರವಾಗಿದೆ. ಆರಂಭದಲ್ಲಿ ಬೌದ್ಧಮತಕ್ಕೂ ನಂತರ ಜೈನಮತಕ್ಕೂ ಅದು ನೆಲೆಯಾಗಿತ್ತು. ಕೊಪ್ಪಳ ನಾಡನ್ನು ಶ್ರೀವಿಜಯ, ರನ್ನ ತಮ್ಮ ಕಾವ್ಯಗಳಲ್ಲಿ ಹೆಸರಿಸಿದ್ದಾರೆ. ರನ್ನನು ಇದನ್ನು ಜೈನ ಕ್ಷೇತ್ರವೆಂದು ಉಲ್ಲೇಖಿಸಿದ್ದಾನೆ. ಇದರಿಂದ ಈ ಪ್ರಾಂತ್ಯವು ಕನ್ನಡ ಭಾಷಿಕರದಾಗಿತ್ತು. ಪುರಾತನ ಕಾಲದಿಂದ ಮೌರ್ಯರ ಆಡಳಿತಕ್ಕೂ, ಮತ ಪ್ರಚಾರಕ್ಕೂ ಈ ಪ್ರಾಂತ್ಯ ನೆಲೆಯಾಗಿತ್ತೆಂದು ಕಾಣುತ್ತದೆ.

ಮೌರ್ಯರ ನಂತರ ದಕ್ಷಿಣ ಪ್ರಾಂತ್ಯದಲ್ಲಿ ಕ್ರಿ.ಶ.ಆರಂಭದಿಂದ ಮೂರು ಶತಮಾನಗಳ ವರೆಗೆ ಶಾತವಾಹನರು ರಾಜ್ಯಭಾರ ಮಾಡಿದರು. ಈ ಮನೆತನಕ್ಕೆ ಆಂಧ್ರಭೃತ್ಯ ಎಂಬ ಹೆಸರೂ ಇದೆ. ಇವರು ಆಳಿದ ಪ್ರದೇಶಗಳಲ್ಲಿ ಈ ಪ್ರಾಂತ್ಯವೂ ಸೇರಿತ್ತು. ಸನ್ನತಿಯಲ್ಲಿ ಶಾತವಾಹನರ ಅವಶೇಷಗಳು ಇವೆ. ಗೌತಮಿಪುತ್ರ ಶಾತಕರ್ಣಿ, ವಾಸಿಷ್ಠ ಪುತ್ರ ಪುಳುಮಾವಿ ಅರಸರನ್ನು ಉಲ್ಲೇಖಿಸುವ ಶಾಸನಗಳಿವೆ. ಇವರ ಮಾಂಡಲಿಕರಾದ ಮಹಾರಥಿಗಳು ಗುಲಬರ್ಗಾದಿಂದ ಚಿತ್ರದುರ್ಗದವರೆಗೆ ಆಳ್ವಿಕೆ ನಡೆಸಿದರು. ನಂತರ ಚುಟುಗಳ ಆಳ್ವಿಕೆಗೆ ಒಳಪಟ್ಟಿತು. ರಾಯಚೂರು, ಚಿತ್ರದುರ್ಗಗಳಲ್ಲಿ ಇವರ ನಾಣ್ಯಗಳು ದೊರೆತಿವೆ. ಇಲ್ಲಿಂದ ಕರ್ನಾಟಕವು ಒಬ್ಬ ರಾಜನ ಆಧಿಪತ್ಯಕ್ಕೆ ಒಳಪಡದೆ ಹಲವಾರು ರಾಜ್ಯ ಮನೆತನಗಳ ಪಾಲಾಗಿ ಬಿಡಿ ಬಿಡಿಯಾಗಿ ಹಂಚಿಹೋಯಿತು. ಬನವಾಸಿಯ ಕದಂಬರು, ತಲಕಾಡಿನ ಗಂಗರು, ನೊಳಂಬರು ಆಳಿದರು. ಆರನೇ ಶತಮಾನದಲ್ಲಿ ಬಾದಾಮಿಯ ಚಾಲುಕ್ಯರು ರಾಜ್ಯವನ್ನು ಕಟ್ಟಿದರು. ಕ್ರಿ.ಶ.540ರಿಂದ 753ರವರೆಗೆ ಕರ್ನಾಟಕವನ್ನು ಬಾದಾಮಿ ಚಾಳುಕ್ಯರು ಆಳಿದರು. ಕರ್ನಾಟಕವೂ ಸೇರಿದಂತೆ ಮಹಾರಾಷ್ಟ್ರ, ಗೋವಾ, ಗುಜರಾತಿನ ಕೆಲ ಭಾಗಗಳು, ಒರಿಸ್ಸಾ, ಆಂಧ್ರ ಮತ್ತು ತಮಿಳುನಾಡಿನ ಕೆಲವು ಭಾಗಗಳು ಇವರ ಅಧೀನದಲ್ಲಿದ್ದವು. ಎರಡನೇ ಪುಲಿಕೇಶಿಯು ನರ್ಮದೆಯಿಂದ ಪಲ್ಲವ ರಾಜ್ಯದವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ. ಇವನು ಉತ್ತರದ ಹರ್ಷವರ್ಧನನನ್ನು ಸೋಲಿಸಿದುದರ ಪರಿಣಾಮವಾಗಿ ಉತ್ತರದ ಅರಸರು ದಕ್ಷಿಣದ ಅರಸರ ಬಗ್ಗೆ ಭಯವನ್ನು ತಾಳಿರಬೇಕು. ಕನ್ನಡ ನಾಡಿನವರ ಶಕ್ತಿಯ ಅರಿವು ಉತ್ತರದವರಿಗೆ ಆದದ್ದು ವಿಶೇಷ ಎಂಬ ಅಂಶವನ್ನು ಚೀನಾ ದೇಶದ ಬೌದ್ಧ ಯಾತ್ರಿಕ ಹ್ಯೂಯನ್‌ತ್ಸಾಂಗ್‌ನ ಗ್ರಂಥದಿಂದ ತಿಳಿದುಬರುತ್ತದೆ. ಬಾದಾಮಿ ಚಾಳುಕ್ಯರ ಕಾಲದ ಆಡಳಿತವೆಂದರೆ ಕನ್ನಡಿಗರ ಏಳಿಗೆಯ ಕಾಲವೆಂದೇ ಹೇಳಬೇಕು. ಸ್ವತಂತ್ರ ರಾಜ್ಯ ನಿರ್ಮಾಣವಾದದ್ದು, ಕನ್ನಡ ಸಂಸ್ಕೃತಿಯ ಸ್ವರೂಪವನ್ನು ವಿಸ್ತರಿಸಿಕೊಳ್ಳಲು ಅನುವಾಯಿತು. ಭಾಷೆ, ಸಾಹಿತ್ಯ, ಧರ್ಮ, ಕಲೆ ಮುಂತಾದ ಸಾಂಸ್ಕೃತಿಕ ಅರಿವು ಹಚ್ಚಿಸಿಕೊಳ್ಳಲು ಅಣಿಯಾದದ್ದು ಈ ಕಾಲದಲ್ಲಿಯೇ.

ದಂತಿದುರ್ಗನು 757ರಲ್ಲಿ ಬಾದಾಮಿಯ ಚಾಳುಕ್ಯರ ಆಡಳಿತವನ್ನು ಅಂತ್ಯಗೊಳಿಸಿ ರಾಷ್ಟ್ರಕೂಟ ಸಾಮ್ರಾಜ್ಯದ ಸ್ಥಾಪನೆಗೆ ಕಾರಣನಾದ. ರಾಷ್ಟ್ರಕೂಟರ ರಾಜ್ಯಾಡಳಿತ ಆರಂಭವಾದ ಕಾಲದಿಂದ ಈ ಪ್ರಾಂತ್ಯದ ಕನ್ನಡ ಭಾಗವು ಎಲ್ಲ ಚಟುವಟಿಕೆಗಳಿಗೆ ಮುಖ್ಯ ನೆಲೆಯಾಯಿತು. ಇವರ ರಾಜಧಾನಿ ಮಾನ್ಯಖೇಟವಾಯಿತು. ರಾಷ್ಟ್ರಕೂಟ ಅರಸರಲ್ಲಿ ಅಮೋಘವರ್ಷ ನೃಪತುಂಗ ಪ್ರಸಿದ್ಧ ದೊರೆಯಾಗಿದ್ದ. ಮಾನ್ಯಖೇಟವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿ ಇಡೀ ಭಾರತದಲ್ಲಿ ಎದ್ದು ಕಾಣುವಂತೆ ಮಾಡಿದ. ಅನ್ಯದೇಶದ ವ್ಯಾಪಾರಿಗಳೂ ಕೂಡ ಮಾನ್ಯಖೇಟದ ಮಹತ್ವವನ್ನು ಪ್ರಸ್ತಾಪಿಸುವಂತಾಯಿತು. ಸಾಹಿತ್ಯಕವಾಗಿಯೂ ಮುಖ್ಯ ನಗರವಾಯಿತು. ಅರಬ್ ಗ್ರಂಥಕರ್ತೃ ಸುಲೇಮಾನನು ಅಮೋಘವರ್ಷನನ್ನು ಪ್ರಪಂಚದ ದೊಡ್ಡ ಸಾಮ್ರಾಟರೊಂದಿಗೆ ಹೋಲಿಸಿದ್ದಾನೆ. ಕವಿರಾಜಮಾರ್ಗ ಕೃತಿಯ ಶ್ರೀವಿಜಯ ಇಲ್ಲಿಯೇ ಇದ್ದ. ನೃಪತುಂಗನ ಪೂರ್ವಿಕನಾದ 1ನೆಯ ಕೃಷ್ಣನು ಎಲ್ಲೋರದ ಕೈಲಾಸ ದೇವಾಲಯವನ್ನು ಕಟ್ಟಿಸಿ ಕನ್ನಡಿಗರ ಶಿಲ್ಪಕಲೆಯ ಕುಶಲತೆಯನ್ನೂ ಲಲಿತಕಲೆಯ ಅಭಿರುಚಿಯನ್ನು ತೋರಿಸಿದನು. ಮುಂದೆ 3ನೆಯ ಕೃಷ್ಣನ ಕಾಲದ ಹೊತ್ತಿಗೆ ಅಂದರೆ 10ನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯವು ಕವಿ ಚಕ್ರವರ್ತಿಗಳನ್ನು ಪಡೆಯುವ ಕಾಲವಾಯಿತು. ಈ ಶತಮಾನವು ರಾಜಕೀಯ ಚರಿತ್ರೆ ಯಲ್ಲಿಯೂ ಸಾಹಿತ್ಯ ಚರಿತ್ರೆಯಲ್ಲಿಯೂ ಮಹತ್ವವನ್ನು ಪಡೆಯಿತು. 10ನೆಯ ಶತಮಾನದ ಕೊನೆಗೆ ಚಾಳುಕ್ಯರ ಎರಡನೇ ತೈಲಪನು ಅಂತ್ಯವಾಗುತ್ತಿದ್ದ ಚಾಳುಕ್ಯ ವಂಶದ ಕುಡಿಯನ್ನು ಚಿಗುರಿಸಿದನು. ಆದರೆ ಮಾನ್ಯಖೇಟವನ್ನು ಯುದ್ಧದಲ್ಲಿ ಅಗ್ನಿಗೆ ಆಹುತಿ ಮಾಡಿದನೆಂದು ಹೇಳಲಾಗುತ್ತದೆ. ಮಾನ್ಯಖೇಟದಲ್ಲಿದ್ದ ಅನೇಕ ಗ್ರಂಥಗಳು ನಾಶವಾದವೆಂದು, ಕವಿರಾಜಮಾರ್ಗದಲ್ಲಿ ಉಲ್ಲೇಖವಾಗಿರುವ ಅನೇಕ ಕವಿಗಳ ಕಾವ್ಯ ಗ್ರಂಥಗಳು ಇಲ್ಲಿ ಅಗ್ನಿಗೆ ಸಿಕ್ಕವೆಂದು ಕಾಣುತ್ತದೆ. ಆದರೂ ಈ 2ನೆಯ ತೈಲಪನು ಕಲ್ಯಾಣವನ್ನು ರಾಜಧಾನಿ ಯನ್ನಾಗಿ ಮಾಡಿದನು. ಮಾನ್ಯಖೇಟದ ಸಾಂಸ್ಕೃತಿಕ ಪರಿಸರವು ಕಲ್ಯಾಣಕ್ಕೆ ವರ್ಗವಾಯಿತು. ರನ್ನ ಕವಿ ಕನ್ನಡ ರಾಜ್ಯದ ಮುಖ್ಯ ಸ್ಥಳಕ್ಕೆ ಬಂದದ್ದು, ಕವಿ ಚಕ್ರವರ್ತಿ ಎಂಬ ಬಿರುದು ಪಡೆದದ್ದು, ಸಾಹಿತ್ಯ ಮತ್ತೆ ಏಳಿಗೆ ಹೊಂದಿದ್ದು ಈ ಕಾಲದಲ್ಲಿಯೇ.

ರಾಷ್ಟ್ರಕೂಟರ 2ನೆಯ ಕರ್ಕನನ್ನು 2ನೆಯ ತೈಲಪನು ಸೋಲಿಸುವುದರ ಮೂಲಕ ಕಲ್ಯಾಣದ ಚಾಳುಕ್ಯರ ಆಡಳಿತವನ್ನು ಆರಂಭಿಸಿದನು. ಕಲ್ಯಾಣ ಚಾಳುಕ್ಯರ ಆರನೇ ವಿಕ್ರಮಾದಿತ್ಯ ದೀರ್ಘಕಾಲ ಆಳಿದ ಅರಸ. ಇವನಿಂದ ಶಕವರ್ಷ ಆರಂಭವಾಯಿತು. ಸಾಮ್ರಾಜ್ಯವನ್ನು ವಿಸ್ತರಿಸಿದಂತೆ ಕರ್ನಾಟಕದ ಸಂಸ್ಕೃತಿಯನ್ನು ಎತ್ತಿ ಹಿಡಿದನು. ಇವನ ಕಾಲದಲ್ಲಿ ಸಾಹಿತ್ಯ ಹಾಗೂ ಶಾಸನಗಳು ಹೆಚ್ಚು ರಚನೆಯಾದವು. ಶಾಸನ ಸಾಹಿತ್ಯ ಪ್ರವರ್ಧಮಾನಕ್ಕೆ ಬಂತು. ಕಲಬುರ್ಗಿ, ಬೀದರ ಹಾಗೂ ರಾಯಚೂರು ಹೈದರಾಬಾದು ಸರಹದ್ದಿನಲ್ಲಿ ಹಾಗೂ ತೆಲಂಗಾಣದಲ್ಲಿಯೂ ವಿಕ್ರಮಾದಿತ್ಯನ ಶಾಸನಗಳು ದೊರೆಯು ವಂತಾದವು. ಇವನ ಕೀರ್ತಿ ಉತ್ತರ ಹಿಂದೂಸ್ಥಾನದಲ್ಲಿಯೂ ಹರಡಿತು. ಬಿಲ್ಹಣ, ವಿಜ್ಞಾನೇಶ್ವರ ಮುಂತಾದ ಪ್ರತಿಭಾವಂತರು ಇವನ ಆಸ್ಥಾನದಲ್ಲಿದ್ದರು. ವಿಕ್ರಮಾಂಕದೇವ ಚರಿತ್ರೆ ರಚನೆಯಾಯಿತು. ಕನ್ನಡಿಗರ ಜೀವನ ಕುರಿತು ಈ ಕೃತಿ ಸಂಸ್ಕೃತದಲ್ಲಿದ್ದರೂ ಕರ್ನಾಟಕತ್ವವನ್ನೂ ಬಿಂಬಿಸುತ್ತದೆ.

ಕಲ್ಯಾಣ ಚಾಳುಕ್ಯರ ಮಾಂಡಲಿಕರೂ ಬೀಗರೂ ಆದರ ಕಲಚೂರಿಗಳು 1162ರಲ್ಲಿ ಕಲ್ಯಾಣವನ್ನು ಆಳತೊಡಗಿದರು. ಕಲಚೂರಿ ವಂಶದ ಬಿಜ್ಜಳನು ಪ್ರಸಿದ್ದನು. ಇವನ ಮಂತ್ರಿಯಾದ ಬಸವಣ್ಣನು ಕರ್ನಾಟಕ ಚರಿತ್ರೆಯಲ್ಲಿ ಕಂಡ ಬಹುದೊಡ್ಡ ಸಾಂಸ್ಕೃತಿಕ ವ್ಯಕ್ತಿ. ರಾಜಕೀಯ ವಲಯದಲ್ಲಿದ್ದುಕೊಂಡು ತನ್ನ ಕಾಲದ ಕೆಟ್ಟ ವ್ಯವಸ್ಥೆಯ ವಿರುದ್ಧ ಬಂಡಾಯ ಹೂಡಿದನು. ರಾಜಕೀಯ, ಧಾರ್ಮಿಕ, ಆರ್ಥಿಕ, ಸಾಮಾಜಿಕ ವಲಯಗಳಲ್ಲಿ ತುಂಬಿದ್ದ ಮನುಷ್ಯವಿರೋಧಿ ನಿಲುವುಗಳನ್ನು ಬದಿಗೊತ್ತಿ ಹೊಸ ಸಾಂಸ್ಕೃತಿಕ ವಲಯವನ್ನು ರೂಪಿಸಲು ಜನಸಾಮಾನ್ಯರ ಜೊತೆ ಸಂಘಟನೆಯನ್ನು ಕಟ್ಟಿದ. ಸಮಾಜದಲ್ಲಿ ತುಂಬಿದ್ದ ಜಾತೀಯತೆ, ಮೌಢ್ಯ, ಶೋಷಣೆಯನ್ನು ತಡೆಗಟ್ಟಿ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿದ. ಜಾತಿ ನಿರ್ವೂಲನೆ, ಕಡ್ಡಾಯ ದುಡಿಮೆ, ಸಮಾನ ಬಾಳು ಇವು ಸಮಾಜದಲ್ಲಿ ನೆಲೆ ಗೊಳ್ಳುವಂತೆ ಶ್ರಮಿಸಿದ. ಕಲ್ಯಾಣ ಇವನ ಕೇಂದ್ರವಾಗಿತ್ತು. ನೂರಾರು ಶರಣರು ರಚಿಸಿದ ವಚನಗಳು ಇಂದಿಗೂ ಸಮಾಜ ಪರಿವರ್ತನೆಗೆ ಪ್ರೇರಕವಾಗಿವೆ. ಬೌದ್ದಿಕ ಚಿಂತನೆಗೆ ನೆಲೆಯಾಗಿವೆ. ವೈಚಾರಿಕ ಸಂಘರ್ಷಕ್ಕೆ ನೆಲೆಯಾದ ಬಸವಕಲ್ಯಾಣವು ಈ ಪ್ರಾಂತ್ಯದಲ್ಲಿದ್ದುದು ವಿಶೇಷವಾಗಿದೆ.

ಬಿಜ್ಜಳನ ತರುವಾಯ ಅವನ ಮಕ್ಕಳು ಹೆಚ್ಚು ಕಾಲ ರಾಜ್ಯಭಾರ ಮಾಡಲಾಗಲಿಲ್ಲ. ಒಂದು ಕಡೆಯಿಂದ ಕಾಕತೀಯ ರುದ್ರನು, ಮತ್ತೊಂದು ಕಡೆಯಿಂದ ಸೇವುಣ ಭಿಲ್ಲಮನು, ಇನ್ನೊಂದು ಕಡೆಯಿಂದ ಹೊಯ್ಸಳ ವೀರಬಲ್ಲಾಳನು ಚಾಳುಕ್ಯ ಸಾಮ್ರಾಜ್ಯವನ್ನು ಆಕ್ರಮಿಸಲು ಪ್ರಯತ್ನಿಸಿ ಸಫಲರಾದರು. ರುದ್ರದೇವನು ಕಾಕತೀಯ ಸಿಂಹಾಸನವನ್ನು ಏರಿದನು. ಮುಂದೆ ಈ ರಾಜ್ಯವೇ ತೆಲುಗು ರಾಜ್ಯವಾಯಿತು. ಸೇವುಣ ಭಿಲ್ಲಮನು ಯಾದವ ರಾಜ್ಯಕ್ಕೆ ಅಧಿಪತಿಯಾದ. ಮುಂದೆ ಇದು ಮಹಾರಾಷ್ಟ್ರವಾಯಿತು. ಇನ್ನುಳಿದ ಭಾಗ ವೀರಬಲ್ಲಾಳನಿಗೆ ಸೇರಿತು. ತುಂಗಭದ್ರೆಯ ದಕ್ಷಿಣ ಪ್ರಾಂತ್ಯವೆಲ್ಲವೂ ಬರೀ ಕರ್ನಾಟಕವಾಗಿ ಉಳಿಯಿತು. 12ನೆಯ ಶತಮಾನದ ಕೊನೆಗೆ ಮಹಾರಾಷ್ಟ್ರ, ಆಂಧ್ರ ಹಾಗೂ ಕರ್ನಾಟಕಗಳೆಂಬ ಪ್ರತ್ಯೇಕವಾದ ಪ್ರಾಂತ್ಯಗಳ ವಿಭಜನೆಗೆ ಈಡಾಯಿತು. ಈ ಮೂರು ರಾಜ್ಯಗಳ ಅರಸರ ನಡುವೆ ನಡೆದ ಹೋರಾಟವು ನಿರಂತರವಾಗಿ ಮುಂದುವರಿಯುತ್ತಲೇ ಹೋಯಿತು. ಒಬ್ಬ ರಾಜನ ತರುವಾಯದಲ್ಲಿ ಪಟ್ಟಕ್ಕೆ ಬಂದ ರಾಜನು ಕೂಡಲೇ ತನ್ನ ನೆರೆಯ ರಾಜನೊಡನೆ ಯುದ್ಧ ಹೂಡುವುದು ಒಂದು ಸಂಪ್ರದಾಯವಾಗಿ ಹೋಯಿತು.

13ನೆಯ ಶತಮಾನದಲ್ಲಿ ಈ ಮೂರು ಮನೆತನಗಳ ನಡುವೆ ನಡೆದ ನಿರಂತರ ಕದನ ದಿಂದಾಗಿ ಉತ್ತರದವರು ಇಲ್ಲಿಗೆ ಬರಲು ಸಾಧ್ಯವಾಯಿತು. 1296ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಅಪಾರ ಸೈನ್ಯದೊಂದಿಗೆ ಬಂದು ದೇವಗಿರಿಯನ್ನು ಮುತ್ತಿಗೆ ಹಾಕಿ ಸೇವುಣರ ರಾಮಚಂದ್ರನನ್ನು ಸೋಲಿಸಿ ಅಪಾರ ಸಂಪತ್ತನ್ನು ಪಡೆದು ದೆಹಲಿಗೆ ಮರಳಿದ. ಇವನ ಹಾದಿಯಲ್ಲಿಯೇ ಮಲ್ಲಿಕಾಫರ ಬಂದು ಕಾಕತೀಯರನ್ನು ಸೋಲಿಸಿ ಸಂಪತ್ತಿನೊಂದಿಗೆ ಹಿಂತಿರುಗಿದ. ಹೀಗೆ ಉತ್ತರದವರ ದಾಳಿಗೆ ದಕ್ಷಿಣ ಪ್ರಾಂತ್ಯದ ಸಣ್ಣಪುಟ್ಟ ರಾಜರೆಲ್ಲ ಸೋತು ಹೋದರು. ಇದರಿಂದ ಉತ್ತರದ ಅರಸರ ದಾಳಿಗೆ ಈ ಪ್ರಾಂತ್ಯದ ಜನ ಸಮುದಾಯಗಳು ಅತಂತ್ರ ಸ್ಥಿತಿಗೆ ತಲುಪಿದರು. ಅರಾಜಕತೆ ಹೆಚ್ಚಾಯಿತು. ಮೇಲಿಂದ ಮೇಲೆ ನಡೆದ ಸೈನಿಕ ದಾಳಿಗೆ ಪ್ರಜೆಗಳು ತಲ್ಲಣಿಸಿದರು. ತುಘಲಕ್‌ನು ದಖನ್ನಿನ ಮೇಲೆ ನಿರಂತರ ದಾಳಿ ಮಾಡಿ ಕಂಪಿಲಿಯ ಕಂಪಿಲರಾಯ, ವಾರಂಗಲ್ಲಿನ ಪ್ರತಾಪರುದ್ರ, ಮಾಬರನ ವೀರಪಾಂಡ್ಯ ಮುಂತಾದ ಚಿಕ್ಕ ರಾಜ್ಯದ ರಾಜರನ್ನು ಅಂತ್ಯಗೊಳಿಸಿದನು. ಉತ್ತರದಲ್ಲಿ ಅರಾಜಕತೆ ಮೂಡಲು ತುಘಲಕ್ ಮರಳಿ ಹೋದನು. ಈ ಪ್ರಾಂತ್ಯದಲ್ಲಿ ಜನಸಮುದಾಯಗಳು ಅನಾಯಕತ್ವದಿಂದ ತಲ್ಲಣಿಸುತ್ತಿದ್ದಾಗಲೇ 1336ರಲ್ಲಿ ವಿಜಯನಗರ ಸಾಮ್ರಾಜ್ಯ ಉದಯವಾಯಿತು. ತುಘಲಕ್‌ನ ದಾಳಿ, ನಂತರ ಅವನ ಅಧೀನ ಪ್ರದೇಶ ಗಳಲ್ಲಿ ಅಧಿಕಾರಕ್ಕೆ ಬಂದವನೇ ಹಸನ್‌ಗಂಗು. ಅವನು ದಖನ್ ಪ್ರಾಂತ್ಯದಲ್ಲಿ ಸ್ವತಂತ್ರ ನಾಗಿ 1347ರಲ್ಲಿ ಬಹಮನಿ ಸಾಮ್ರಾಜ್ಯ ಸ್ಥಾಪಿಸಿದನು. ಉತ್ತರ ಕರ್ನಾಟಕದಲ್ಲಿ ಹಿಂದೂ ಮತ್ತು ಮುಸ್ಲಿಂ ಸಾಮ್ರಾಜ್ಯಗಳು ಹುಟ್ಟಿಕೊಂಡು ನಿರಂತರ ಯುದ್ಧಗಳಿಗೆ ಕಾರಣವಾದವು. ಈ ಯುದ್ಧ ನಾಡೇ ಈ ಪ್ರಾಂತ್ಯವಾಗಿತ್ತು. ವಿಜಯನಗರದ ರಾಜರು ತುಂಗಭದ್ರ ನದಿಯನ್ನು ದಾಟಿ ಬಹಮನಿ ರಾಜ್ಯಕ್ಕೆ ನುಗ್ಗುವುದು, ಬಹಮನಿ ರಾಜರು ಇವರನ್ನು ತಡೆಯಲು ಸೈನ್ಯದೊಂದಿಗೆ ತುಂಗಭದ್ರೆಯತ್ತ ಬರುವುದು ಹೀಗೆ ಎರಡು ರಾಜಪ್ರಭುತ್ವಗಳು ನಿರಂತರ ಯುದ್ಧದಲ್ಲಿ ಕಾಲ ಕಳೆದವು. ಯುದ್ಧ ಗಡಿಯೇ ಈ ಪ್ರಾಂತ್ಯವಾಗಿತ್ತು. ಜನಸಮುದಾಯಗಳು ಯುದ್ಧದ ನೆರಳಿನಲ್ಲಿ ಬದುಕಿದರು.

ಬಹಮನಿ ರಾಜರು ದುರ್ಬಲರಾಗಲು ಅವರ ಅಧೀನದಲ್ಲಿದ್ದ ಮಾಂಡಲಿಕರು ಸ್ವತಂತ್ರರಾಗಲು ತಮ್ಮ ತಮ್ಮಲ್ಲಿ ಸ್ಪರ್ಧೆ ನಡೆಸಿದರು. ವಿಸ್ತಾರವಾದ ರಾಜ್ಯ ಒಡೆದು ಐದು ರಾಜ್ಯಗಳಾದವು. ವಿಜಾಪುರ, ಗುಲಬರ್ಗಾ, ಬೀದರ್‌ಗಳೇ ಈ ರಾಜ್ಯಗಳ ರಾಜಧಾನಿಗಳಾದವು. ಈ ರಾಜರು ಸೇರಿ ವಿಜಯನಗರ ಸಾಮ್ರಾಜ್ಯವನ್ನು ಅಂತ್ಯಗೊಳಿಸಿದರು. ಆದಿಲ್‌ಶಾಹಿಗಳು ಪ್ರಬಲರಾಗಿ ಆಳಿದರೂ ಪುನಃ ಉತ್ತರದ ಔರಂಗಜೇಬನ ದಾಳಿಗೆ ಈ ಸಾಮ್ರಾಜ್ಯ ಅಂತ್ಯವಾಯಿತು. ಔರಂಗಜೇಬನ ದಖನ್ ಸುಬೇದಾರನು 1724ರಲ್ಲಿ ಸ್ವತಂತ್ರನಾಗುವ ಮೂಲಕ ಈ ಪ್ರಾಂತ್ಯದಲ್ಲಿ ಅಸಫ್ ಜಾ ಮನೆತನದವರು ಅಧಿಕಾರಕ್ಕೆ ಬಂದರು.

 

ನಿಜಾಮರ ಆಳ್ವಿಕೆ

ಉತ್ತರ ಭಾರತದಲ್ಲಿ ಮೊಗಲರ ಆಡಳಿತದಲ್ಲಿ ಬಿರುಕುಗಳು ಕಾಣಿಸಿಕೊಂಡವು. ಈ ಅವಕಾಶವನ್ನು ಉಪಯೋಗಿಸಿಕೊಂಡ ಸುಬೇದಾರ ಮೀರ್ ಕಮರುದ್ದೀನ್ 1724ರಲ್ಲಿ ತನ್ನ ಪ್ರಾಂತ್ಯದಲ್ಲಿ ಸ್ವತಂತ್ರನಾದನು. ಇಲ್ಲಿಂದ ನಿಜಾಮ ಆಳ್ವಿಕೆ ಆರಂಭವಾಯಿತು. ಮೀರ್ ಕಮರುದ್ದೀನ್ (1724-48) ಕಾಲದಲ್ಲಿ ರಾಯಚೂರು, ಗುಲಬರ್ಗಾ, ಬೀದರ್, ವಿಜಾಪುರ, ಧಾರವಾಡ ಜಿಲ್ಲಾ ಪ್ರದೇಶವನ್ನು ಒಳಗೊಂಡಂತೆ ಒರಿಸ್ಸಾ, ತಂಜಾವೂರಿನವರೆಗೆ ಇತ್ತು. ಕರ್ನಾಟಕದ ಉತ್ತರ ಪ್ರಾಂತ್ಯದ ಕಡೆ ಮರಾಠರು ಪ್ರಬಲರಾಗುತ್ತಿದ್ದರು. ತುಂಗಭದ್ರ ನದಿವರೆಗೆ ನಿಜಾಮನ ಆಳ್ವಿಕೆಯಿತ್ತು. ವಿಜಾಪುರ, ಧಾರವಾಡ ಭಾಗಗಳಲ್ಲಿ ಸವಣೂರಿನ ನವಾಬರು ನಿಜಾಮರ ಅಧೀನದಲ್ಲಿದ್ದು ಆಳುತ್ತಿದ್ದರು. ಬಾದಾಮಿ, ಬಾಗಲಕೋಟೆ ಮುಂತಾದ ಪ್ರದೇಶಗಳಲ್ಲಿ ಮರಾಠರ ಪ್ರಾಬಲ್ಯ ಹೆಚ್ಚಾಗಿತ್ತು. ಹೀಗಾಗಿ ಉತ್ತರದ ಪ್ರಾಂತ್ಯವು ನಿಜಾಮರಿಗೆ ಸ್ಥಿರವಾಗಿ ಉಳಿಯುತ್ತಿರಲಿಲ್ಲ.

ಇವನ ನಂತರ ಅಧಿಕಾರಕ್ಕಾಗಿ ಅಂತಃಕಲಹ ನಡೆಯಿತು. ಕಮರುದ್ದೀನನ ಮಗ ನಾಸಿರ್ ಜಂಗನಿಗೂ ಹಾಗೂ ಮಗಳ ಮಗ ಮುಜಫರ್ ಜಂಗನಿಗೂ ಅಧಿಕಾರಕ್ಕಾಗಿ ಪೈಪೋಟಿ ನಡೆಯಿತು. ಇದನ್ನು ಕಂಡ ಬ್ರಿಟಿಶರು ನಾಸಿರ್‌ಜಂಗನನ್ನು ಬೆಂಬಲಿಸಿದರು. ಮುಜಫರ್‌ಜಂಗ್ ಫ್ರೆಂಚರ ಬೆಂಬಲದಿಂದ ಅಧಿಕಾರಕ್ಕೆ ಬಂದರೂ ಇದೇ ಕಲಹದಲ್ಲಿ ಮರಣಹೊಂದಿದ. ಮುಂದೆ ನಾಸಿರಜಂಗನ ತಮ್ಮ ಸಬಲತ್ ಜಂಗನು ಅಧಿಕಾರದಲ್ಲಿದ್ದಾಗ, ಇವನ ತಮ್ಮ ನಿಜಾಮ್ ಅಲಿ ಬಂಡಾಯ ಹೂಡಿದ. ಆಗ ಸಬಲತ್ ಜಂಗನು ಬ್ರಿಟಿಶರ ಮೊರೆ ಹೋದ. ಇದೇ ಬ್ರಿಟಿಶರಿಗೆ ಹೈದರಾಬಾದಿನ ರಾಜಕೀಯದಲ್ಲಿ ಪ್ರವೇಶಕ್ಕೆ ದಾರಿಯಾಯಿತು. ಬ್ರಿಟಿಶರಿಗೆ ಅನೇಕ ಬಗೆಯಲ್ಲಿ ಸಹಾಯ ಮಾಡುವುದು ನಿಜಾಮರಿಗೆ ಅನಿವಾರ್ಯವಾಯಿತು. ನಿಜಾಮ್ ಅಲಿ 1761ರಲ್ಲಿ ಅಧಿಕಾರಕ್ಕೆ ಬಂದನು. ಇವನ ಕಾಲದಲ್ಲಿ ಮೈಸೂರು ಪ್ರಾಂತ್ಯದಲ್ಲಿ ಹೈದರ್ ಅಲಿ ಪ್ರಬಲವಾಗಿ ಬೆಳೆಯುತ್ತಿದ್ದ. ಇದನ್ನು ನಿಜಾಮ ಅಲಿ ಸಹಿಸದೆ, ಹೈದರ್ ಆಲಿ ಅಧಿಕಾರಕ್ಕೆ ಬರಲು ಹಕ್ಕಿಲ್ಲವೆಂದು ವಿರೋಧಿಸಿದ. ಮುಂದೆ ಟಿಪ್ಪುಸುಲ್ತಾನನನ್ನು ವಿರೋಧಿಸಿ ಬ್ರಿಟಿಶರಿಗೆ ನೆರವಾಗಿ ನಿಂತನು. ಈ ನಿಜಾಮ ಒಮ್ಮೆ ಬ್ರಿಟಿಶರಿಗೆ, ಒಮ್ಮೆ ಮರಾಠರಿಗೆ ಬೆಂಬಲ ನೀಡಿ ಹೈದರ್ ಅಲಿ, ಟಿಪ್ಪು ಇಬ್ಪರನ್ನು ನಿರಂತರವಾಗಿ ದ್ವೇಷಿಸಿದನು. ಯಾವುದೇ ಕಾರಣಕ್ಕೂ ನಿಜಾಮರನ್ನು ಟಿಪ್ಪುಸುಲ್ತಾನನ ಕಡೆ ವಾಲದಂತೆ ಬ್ರಿಟಿಶರು ನೋಡಿಕೊಂಡರು. ಕೊನೆಗೆ ಬ್ರಿಟಿಶರು ಟಿಪ್ಪುವನ್ನು ಅಂತ್ಯಗೊಳಿಸಿದ್ದು ನಿಜಾಮನ ಬೆಂಬಲದಿಂದ. ನಿಜಾಮ ಅಲಿ ನಂತರ ಸಿಕಂದರ್ ಜಾ(1803-1829) ಅಧಿಕಾರಕ್ಕೆ ಬಂದ. ಇವನು ದುರ್ಬಲ ನಿಜಾಮನಾಗಿದ್ದ. ಆಡಳಿತವನ್ನು ಪ್ರಧಾನಮಂತ್ರಿ ರಾಜ ಚಂದೂಲಾಲ್ ನಿರ್ವಹಿಸುತ್ತಿದ್ದನು. ಇವನ ಕಾಲದಲ್ಲಿ ಬ್ರಿಟಿಶರ ಹಿಡಿತ ಹೆಚ್ಚಾಯಿತು. ನಿಜಾಮರ ಸಂಸ್ಥಾನವು ಬ್ರಿಟಿಶರ ಅಧೀನ ವಾದಂತಾಯಿತು. ನಂತರ ನಾಸಿರ್ ಉದ್‌ದೌಲನು (1829-1857) ಅಧಿಕಾರಕ್ಕೆ ಬಂದು ಬ್ರಿಟಿಶರು ಹೇರಿದ ಒಪ್ಪಂದಗಳಂತೆ ನಡೆದುಕೊಂಡನು. ಬ್ರಿಟಿಶರು ಒದಗಿಸಿದ ಸೈನ್ಯದ ಸಹಾಯಕ್ಕೆ ರಾಯಚೂರು ಭಾಗವನ್ನೇ ಬಿಡಬೇಕಾಯಿತು. ಇವನು 1857ರಲ್ಲಿ ನಿಧನದ ಮುನ್ನ ಮಗ ಅಫ್ಜಲುದ್ದೌಲ್ಲನಿಗೆ(1857-1869), ಬ್ರಿಟಿಶರಿಗೆ ನೆರವು ನೀಡಿ ಬೆಂಬಲಿಸಿ ದರು. ಇದರ ಪರಿಣಾಮವಾಗಿ ರಾಯಚೂರು ಜಿಲ್ಲೆಯನ್ನು ಪುನಃ ನಿಜಾಮನಿಗೆ ಬ್ರಿಟಿಶರು ನೀಡಿದರು. ಕರ್ನಾಟಕಕ್ಕೆ ಸಂಬಂಧಿಸಿದ ರಾಯಚೂರು, ಗುಲಬರ್ಗಾ, ಬೀದರ ಜಿಲ್ಲೆಗಳು ಸ್ಥಿರವಾಗಿ ನಿಜಾಮನ ರಾಜ್ಯಕ್ಕೆ ಸೇರಿದವು. ಈ ನಿಜಾಮನ ಕಾಲದಲ್ಲಿ ಸುರಪುರದ ಸಂಸ್ಥಾನವನ್ನು ಅಂತ್ಯಗೊಳಿಸಲಾಯಿತು. ನಂತರ ಮೀರ್‌ಮಹಬೂಬು ಅಲಿಖಾನ್(1869-1911) ಅಧಿಕಾರಕ್ಕೆ ಬಂದಾಗ ಅಪ್ರಾಪ್ತನಾಗಿದ್ದ. ಆಡಳಿತವನ್ನು ಸಾಲಾರ ಜಂಗ್, ನವಾಬ್ ಶಮ್ಸುಲ್ಲಾ ಉಮ್ರಾ ಇಬ್ಬರು ನೋಡಿಕೊಂಡರು. ಅಡಳಿತದಲ್ಲಿ ಬ್ರಿಟಿಶರ ರೆಸಿಡೆಂಟ್ ಕೂಡ ಇದ್ದ. ಇವನ ಕಾಲದಲ್ಲಿ ಆಡಳಿತದ ಅನುಕೂಲಕ್ಕೆ ರಾಜ್ಯವನ್ನು ವಿಂಗಡಿಸಿ ವಿಭಾಗಗಳನ್ನಾಗಿ ಮಾಡಿದ. ನಂತರ ಮಗ ಮೀರ್ ಉಸ್ಮಾನ್ ಅಲಿ ಖಾನ್(1911-1948) ನಿಜಾಮನಾದನು. ಇವನ ಅವಧಿಯಲ್ಲಿ ಪ್ರಥಮ ಮಹಾಯುದ್ಧ ನಡೆಯಿತು. ಆಗ ಬ್ರಿಟಿಶರಿಗೆ ಅನೇಕ ಬಗೆಯಲ್ಲಿ ನೆರವನ್ನು ನೀಡಲಾಯಿತು. ಸಂಸ್ಥಾನದಲ್ಲಿ ಆಡಳಿತ ಸಿಬ್ಬಂದಿಯನ್ನು ಭಾರತೀಕರಣ ಮಾಡಲಾಯಿತು. ಭಾರತೀಯರು ಅದರಲ್ಲೂ ಹೈದರಾಬಾದಿನ ಜನರು ಸೇರಿಕೊಳ್ಳುವಂತಾಯಿತು. ಇವನ ಕಾಲದಲ್ಲಿ ಭಾರತ ಸ್ವಾತಂತ್ರ್ಯ ಚಳವಳಿ ಆರಂಭವಾಯಿತು. ಇದನ್ನು ನಿರಾಕರಿಸಿ ದಮನ ಮಾಡುವ ನೀತಿಯನ್ನು ಹೊಂದಿದ.

ಬ್ರಿಟಿಶರು ಅನೇಕ ಸವಲತ್ತುಗಳನ್ನು ಹೈದಾರಾಬಾದ್ ಸಂಸ್ಥಾನಕ್ಕೆ ನೀಡಿತ್ತು. ಮೊದಲಿನಿಂದಲೂ ನಿಜಾಮರು ಪ್ರತ್ಯೇಕವಾದ ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಆಕಾಶವಾಣಿ, ಶಿಕ್ಷಣ ಮುಂತಾದ ಸೌಲಭ್ಯಗಳನ್ನು ಹೊಂದಿದ್ದರು. ಒಂದು ಪೈಸೆಯಿಂದ ನೂರು ರೂಪಾಯಿವರೆಗೆ ನಾಣ್ಯಗಳ ಮೇಲೆ ನಿಜಾಮನ ಮುದ್ರೆಯಿತ್ತು. ಈ ನಾಣ್ಯಗಳಿಗೆ ಪ್ರಪಂಚದ ಮಾರುಕಟ್ಟೆಯಲ್ಲಿ ವಿನಿಮಯದ ದರವು ಗೊತ್ತಾಗಿ ಅಂತಾರಾಷ್ಟ್ರಿಯ ಮಾನ್ಯತೆಯೂ ಪಡೆದಿತ್ತು. ಮೀರ್ ಉಸ್ಮಾನ್ ಅಲಿಖಾನ್ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕ, ತುರ್ಕಿಸ್ಥಾನ, ಕೆನಡ ಮುಂತಾದ ದೇಶಗಳ ಜೊತೆ ಸಂಪರ್ಕವನ್ನು ಹೊಂದಿದ್ದ. ಭಾರತದಲ್ಲಿದ್ದ ಸುಮಾರು 556ೊಸಂಸ್ಥಾನಗಳಲ್ಲಿ ಹೈದರಾಬಾದ್ ಸಂಸ್ಥಾನವು ದೊಡ್ಡದು. ಭೌಗೋಳಿಕವಾಗಿ ಮತ್ತು ಜನಸಂಖ್ಯೆ ದೃಷ್ಟಿಯಿಂದ ವಿಶಾಲವಾಗಿತ್ತು. ತೆಲಂಗಾಣದ ಎಂಟು ಜಿಲ್ಲೆಗಳು, ಮರಾಠವಾಡದ ಐದು ಜಿಲ್ಲೆಗಳು, ಕರ್ನಾಟಕದ ಮೂರು ಜಿಲ್ಲೆಗಳು ಸೇರಿ ಒಟ್ಟು 16 ಜಿಲ್ಲೆಗಳು ಈ ಸಂಸ್ಥಾನದಲ್ಲಿದ್ದವು. ತೆಲಂಗಾಣದ 80 ಲಕ್ಷ, ಮರಾಠ ವಾಡದ 40 ಲಕ್ಷ, ಕರ್ನಾಟಕದ 20 ಲಕ್ಷ ಹೀಗೆ ಒಂದೂವರೆ ಕೋಟಿ ಜನಸಂಖ್ಯೆಯನ್ನು ಹೊಂದಿತ್ತು. ಸಂಸ್ಥಾನದಲ್ಲಿ ಐದು ಕೋಟಿ ಎಕರೆ ಜಮೀನು ಸಾಗುವಳಿಯಲ್ಲಿತ್ತು. ಇದರಲ್ಲಿ ಎರಡು ಕೋಟಿ ಎಕರೆ ಜಮೀನು ಜಹಗೀರುದಾರರ, ಒಂದು ಕೋಟಿ ಎಕರೆ ಜಮೀನು ದೇಶಮುಖ ಹಾಗೂ ದೇಸಾಯಿಗಳ ಒಡೆತದಲ್ಲಿತ್ತು. ಸ್ವತಃ ನಿಜಾಮನಿಗೆ ಐವತ್ತು ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನಿತ್ತು. ಸಂಸ್ಥಾನದಲ್ಲಿ ಬಹುಸಂಖ್ಯಾತರು ಹಿಂದೂಗಳು. ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. 1947ರಲ್ಲಿ ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಬಂದಾಗ ಈ ಸಂಸ್ಥಾನದ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಸ್ವತಂತ್ರ ಭಾರತದಲ್ಲಿ ತನ್ನ ಸಂಸ್ಥಾನವನ್ನು ವಿಲೀನಗೊಳಿಸಲು ನಿರಾಕರಿಸಿ ಸ್ವತಂತ್ರವಾಗಿ ಉಳಿ ಯಲು ನಿರ್ಧರಿಸಿದನು. ಹೀಗಾಗಿ ಹೈದರಾಬಾದು ಕರ್ನಾಟಕಕ್ಕೆ 1947ರಲ್ಲಿ ಸ್ವಾತಂತ್ರ್ಯ ಸಿಗಲಿಲ್ಲ.

 

ಸ್ವಾತಂತ್ರ್ಯಕ್ಕಾಗಿ ಹೋರಾಟ ಆರಂಭ

ಈ ಪ್ರಾಂತ್ಯದಲ್ಲಿ ಜನರು ಸ್ವಾತಂತ್ರ್ಯಕ್ಕಾಗಿ ಮೂರು ಹಂತದಲ್ಲಿ ಬ್ರಿಟಿಶರ, ನಿಜಾಮರ, ರಜಾಕಾರ ಪಠಾಣರ ಜೊತೆ ಹೋರಾಟ ನಡೆಸಿದರು. 1800ರಿಂದ ಸುಮಾರು 1900ರವರೆಗೆ ಮೊದಲ, 1900ರಿಂದ 1947ರವರೆಗೆ ಎರಡನೆ ಹಂತ. 1947ನೆಯ ಆಗಸ್ಟ್ 15ರಿಂದ 1948ನೆಯ ಸೆಪ್ಟೆಂಬರ್ 17ರವರೆಗೆ ಕೊನೆಯ ಹಾಗೂ ಮೂರನೆಯ ಹಂತವಾಗಿ ಹೋರಾಟ ನಡೆಯಿತು. 1819ರ ಸುಮಾರು ಕೊಪ್ಪಳದಲ್ಲಿ ಬ್ರಿಟಿಶ್ ಹಾಗೂ ನಿಜಾಮನ ವಿರುದ್ಧ ದಂಗೆ ಕಾಣಿಸಿಕೊಂಡಿತು. ಮೊದಲಿಗೆ ಭೂಮಾಲಿಕ ವೀರಪ್ಪದೇಸಾಯಿ ಪ್ರಭುತ್ವದ ವಿರುದ್ಧ ದನಿ ಎತ್ತಿದ. ಬ್ರಿಟಿಶರೇ ಮೇಜರ್ ಡೋವ್ಹೇಶನ್‌ನ ನೈತೃತ್ವದಲ್ಲಿ ಸೈನ್ಯವನ್ನು ಕೊಪ್ಪಳಕ್ಕೆ ಕಳಿಸಿದರು. 300 ಕುದುರೆ ಸವಾರರು, 900 ಸಹಾಯಕರು ಸೈನದಲ್ಲಿದ್ದರು. ನಿಜಾಮನು ಏಡ್ರೂಸ್ ಖಾನನ ನೇತೃತ್ವದಲ್ಲಿ ಅಪಾರ ಸೈನ್ಯವನ್ನು ಕಳಿಸಿದ್ದು. ವೀರಪ್ಪ ಅನೇಕ ಜಮೀನ್ದಾರರ ಜೊತೆ ಸೇರಿ ಈ ಬಂಡಾಯ ಹೂಡಿದ್ದರಿಂದ ಪ್ರಬಲ ವಿರೋಧವನ್ನು ಒಡ್ಡುವನೆಂದು ಬ್ರಿಟಿಶರಿಗೆ ನಿಜಾಮರಿಗೆ ಮನವರಿಕೆಯಾಗಿರಬೇಕು. ಕೊಪ್ಪಳ ಕೋಟೆಯನ್ನು ಸುತ್ತುವರಿದು ವೀರಪ್ಪನ ಬಂಡಾಯವನ್ನು ಅಡಗಿಸಿದರು.

1818ರ ಹೊತ್ತಿಗೆ ಪೇಶ್ವೆಯರ ಆಳ್ವಿಕೆ ಕೊನೆಗೊಂಡು ಬ್ರಿಟಿಶರ ಪ್ರಾಬಲ್ಯ ಹೆಚ್ಚಾಯಿತು. ಚಿಕ್ಕ ಸಂಸ್ಥಾನಿಕರೆಲ್ಲ ದೇಸಾಯಿ, ದೇಶಮುಖ, ದೇಶಪಾಂಡೆ ಇವರೆಲ್ಲ ಹೆಚ್ಚು ಕಮ್ಮಿ ರಾಜರಂತೆ ಮೆರೆಯುತ್ತಿದ್ದರು. ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡೇ ಇದ್ದರು. ಬ್ರಿಟಿಶರು ಒಂದು ಹೊಸ ಆಡಳಿತ ನೀತಿಯನ್ನು ಜಾರಿಗೆ ತಂದಂತೆ ಇವರಿಗೆ ಕಷ್ಟವಾಯಿತು. ಇನಾಮ್ ಕಮೀಶನ್ ಎಂಬ ಪದ್ಧತಿ ಜಾರಿಗೆ ಬಂದಾಗ ಇದು ಜಮೀನ್ದಾರರಿಗೆ ಮಾರಕವಾಗಿ ಪರಿಣಮಿಸಿತು. ಈ ಪೂರ್ವದಲ್ಲಿ ಮರಾಠರು ತಮಗೆ ನಿಷ್ಠರಾದ ದೇಸಾಯಿ, ದೇಶಪಾಂಡೆ, ದೇಶಮುಖ, ಪಾಟೀಲ್, ಕುಲಕರ್ಣಿ, ನಾಡಗೌಡ ಮುಂತಾದವರಿಗೆ ಕಂದಾಯ ವಸೂಲಿ ಮಾಡಲು ಬಿಟ್ಟಿದ್ದರು. ಇವರಿಗೆಲ್ಲ ಪ್ರಭುತ್ವದಿಂದ ರಕ್ಷಣೆಯೂ ಇತ್ತು. ಆದರೆ ಬ್ರಿಟಿಶರು ಬಂದ ಮೇಲೆ ಇದು ಬದಲಾಗಿ ಅವರು ಮಾಮಾಲೇದಾರ, ಕಲೆಕ್ಟರ್, ಶೇಕಸನದಿ ಮೊದಲಾದ ಹುದ್ದೆಗಳನ್ನು ಹುಟ್ಟುಹಾಕಿ ಇವರಿಂದ ಕಂದಾಯ ವಸೂಲಿಯನ್ನು ನೇರವಾಗಿ ಮಾಡತೊಡಗಿದರು. ಇದರಿಂದ ಮೊದಲಿನವರಿಗೆ ಕಂದಾಯ ವಸೂಲಿ ತಪ್ಪಿ ಹೊಯಿತು. ಜಮೀನ್ದಾರರೆಲ್ಲ ಪ್ರಭುತ್ವಗಳು ಸ್ಥಿತ್ಯಂತರಗಳಾದಾಗೆಲ್ಲ ಆಸ್ತಿಯನ್ನು ಮಾಡಿಕೊಂಡು ಮೆರೆಯುತ್ತಿದ್ದರು. ಇವರ ವತನಗಳನ್ನು ಮರಳಿ ಪಡೆಯಲು ಬ್ರಿಟಿಶರು ಯೋಚಿಸಿ ಕರ್ನಲ್ ಏಥ್ರಿಜ್ ಮುಖಂಡತ್ವದಲ್ಲಿ ಒಂದು ಆಯೋಗವನ್ನು ರಚಿಸಿದರು. ಅದೇ ಇನಾಮ್ ಕಮೀಶನ್. 1943ರಿಂದ 1857ರವರೆಗೆ ಇದು ಕೆಲಸ ಮಾಡಿತು. ಇದು ಕಂಪನಿಗೆ ಆದಾಯವನ್ನು ತರುವ ಆಯೋಗವಾಗಿತ್ತು. ಇದು ಜಾರಿಗೆ ಬಂದ ಕೂಡಲೇ ಜಮೀನ್ದಾರರು ಆತಂಕಗೊಂಡರು. ಹಮ್ಮಿಗಿ ಕೆಂಚನ ಗೌಡ, ಡಂಬಳದ ಬಹದ್ದೂರ ದೇಸಾಯಿ, ನರಗುಂದದ ಬಾಬಾಸಾಹೇಬ ಸೇರಿ 1857ರಲ್ಲಿ ಒಂದೇ ಕಾಲಕ್ಕೆ ಬಂಡಾಯವನ್ನು ಹೂಡಲು ತಯಾರಿ ನಡೆಸಿದರು. ಮುಂಡರಗಿ ಭೀಮರಾಯ, ಸೊರಟೂರು ದೇಸಾಯಿ, ಹಮ್ಮಿಗಿ ಕೆಂಚನಗೌಡ ಇವರೆಲ್ಲ ಕೊಪ್ಪಳ ಪ್ರಾಂತ್ಯದಲ್ಲಿ ಶಕ್ತಿಮೀರಿ ಬ್ರಿಟಿಶರ ಜೊತೆ ಹೋರಾಡಿ ಅಂತ್ಯಗೊಂಡರು. ನಿಜಾಮನ ನೆರವಿಗೆ ಬ್ರಿಟಿಶರು ನಿಂತು ಈ ಎಲ್ಲ ಜಮೀನ್ದಾರರನ್ನು ಹತ್ತಿಕ್ಕಿದರು. ಸಿಂದಗಿ, ಬಾದಾಮಿ, ಹಲಗಲಿ(ಬೇಡರು), ಸುರುಪುರ(ನಾಯಕರು), ನರಗುಂದ ಮುಂತಾದ ಕಡೆ ಎದ್ದ ದಂಗೆಗಳನ್ನು ಬ್ರಿಟಿಶರು ನಿಜಾಮನ ಸಹಾಯದಿಂದ ಬಗ್ಗು ಬಡಿದರು.

1800ರಿಂದ 1900ರವರೆಗೆ ಜಮೀನ್ದಾರರು ನಿಜವಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡದಿದ್ದರೂ ದೇಶವನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುವ ಬ್ರಿಟಿಶರ ವಿರುದ್ಧ ತಮ್ಮ ತಮ್ಮ ನಾಡುಗಳನ್ನು ರಕ್ಷಿಸಿಕೊಳ್ಳಲು, ಆ ನಾಡಿನಲ್ಲೇ ಸ್ವತಂತ್ರವಾಗಿರಲು ಬಯಸಿದ ಈ ಬಂಡಾಯಗಾರರು ನಿಜವಾಗಿಯೂ ಸ್ವಾಭಿಮಾನಿಗಳೆಂದು ಗುರುತಿಸಿಕೊಂಡರು. ಕರ್ನಾಟಕದ ಉತ್ತರದಲ್ಲಿದ್ದ ನಿಜಾಮರ ಸಂಸ್ಥಾನವು ಬ್ರಿಟಿಶರಿಗೆ ಅಧೀನವಾದದ್ದು ಹಾಗೂ ಕರ್ನಾಟಕದ ದಕ್ಷಿಣದಲ್ಲಿದ್ದ ಮೈಸೂರು ಸಂಸ್ಥಾನವೂ ಬ್ರಿಟಿಶರಿಗೆ ಅಧೀನವಾದದ್ದು ಈ ನಾಡಿನ ದುರ್ದೈವ. ಈ ಸಂಸ್ಥಾನಗಳ ನಡುವೆ ಬ್ರಿಟಿಶರಿಗೆ ನೆರವಿತ್ತು ಅಂತ್ಯಗೊಳಿಸಿದರು. ನಿಜಾಮರಂತೂ ಹೈದರ್ ಅಲಿ, ಟಿಪ್ಪುಸುಲ್ತಾನ, ಧೊಂಡಿಯಾ ವಾಘ, ಸುರುಪುರದ ವೆಂಕಟಪ್ಪನಾಯಕ ಮುಂತಾದ ಬಲಿಷ್ಠರು ಬ್ರಿಟಿಶರ ಜೊತೆ ಯುದ್ಧ ಹೂಡಿದಾಗ, ಬ್ರಿಟಿಶರಿಗೆ ಅಪಾರ ನೆರವು ನೀಡಿ ಇವರೆಲ್ಲರ ನಾಶಕ್ಕೆ ಕಾರಣರಾದರು. ಒಂದು ವೇಳೆ ನಿಜಾಮರು ಹೈದರ್‌ಅಲಿ, ಟಿಪ್ಪುಸುಲ್ತಾನರಿಗೆ ನೆರವಾಗಿದ್ದರೆ ಬ್ರಿಟಿಶರಿಗೆ ಈ ನಾಡಿನಲ್ಲಿ ನೆಲೆಯೂರಲು ಸುಲಭವಾಗುತ್ತಿರಲಿಲ್ಲವೇನೋ!

1900ರಿಂದ 1947ರವರೆಗಿನ ಈ ಪ್ರಾಂತ್ಯದ ಹೋರಾಟ ಬ್ರಿಟಿಶರ ನಿಜಾಮರ ವಿರುದ್ಧವಾಗಿತ್ತು. ಅಸಂಖ್ಯಾತ ಅಕ್ಷರ ಜ್ಞಾನವಿಲ್ಲದ ಈ ನಾಡಿನ ಜನರಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅನುಗೊಳಿಸುವುದೇ ಒಂದು ದೊಡ್ಡ ಸಾಹಸದ ಕೆಲಸವಾಗಿತ್ತು. ನಿಜಾಮ ಪ್ರಾಂತ್ಯದ ವಿದ್ಯಾವಂತ ಕೆಲವೇ ಜನ ಆರಂಭದಲ್ಲಿ ಸಂಘಟಕರಾಗಿ ಸ್ವಾತಂತ್ರ್ಯದ ಬಗ್ಗೆ ಜನ ಸಮುದಾಯಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು. ಬ್ರಿಟಿಶರ ಅಧೀನದಲ್ಲಿ  ನಿಜಾಮರಿದ್ದರು. ನಿಜಾಮರ ಅಧೀನದಲ್ಲಿ ಜಹಗೀರುದಾರರಿದ್ದರು. ಇವರ ಅಧೀನದಲ್ಲಿ ದೇಶಮುಖ, ದೇಸಾಯಿ, ಪಾಟೀಲ, ಗೌಡ ಸಾಹುಕಾರರಿದ್ದರು. ಜನಸಾಮಾನ್ಯರು ಇವರ ಅಧೀನದಲ್ಲಿದ್ದರು. ಹೀಗಾಗಿ ಒಟ್ಟಾಗಿ ಹೋರಾಟ ಮಾಡುವುದು ಸುಲಭವಾಗಿರಲಿಲ್ಲ. ಹೈದರಾಬಾದು ಸಂಸ್ಥಾನದ ನಿಜಾಮರು ಬ್ರಿಟಿಶರ ಅಧೀನದಲ್ಲಿದ್ದರೂ ಆಡಳಿತಾತ್ಮಕವಾಗಿ ಅನೇಕ ವಿಷಯಗಳಲ್ಲಿ ಸ್ವತಂತ್ರರಾಗಿದ್ದರು. ಉರ್ದು ರಾಜ್ಯದ ಆಡಳಿತ ಭಾಷೆಯಾಗಿಯೂ ಶಿಕ್ಷಣದ ಭಾಷೆಯಾಗಿಯೂ ಪ್ರಭುತ್ವದಲ್ಲಿತ್ತು. ಎಲ್ಲ ಮಾಧ್ಯಮಗಳು ನಿಜಾಮರ ವಶದಲ್ಲಿದ್ದವು. ಭಾರತದ ಜನತೆ ಸಾತಂತ್ರ್ಯಕ್ಕಾಗಿ ಹಂಬಲಿಸಿ ಬ್ರಿಟಿಶರ ಜೊತೆ ಹೋರಾಟಕ್ಕೆ ಅಣಿಯಾಗುತಿದ್ದಾಗ ಈ ಪ್ರಾಂತ್ಯದ ಜನ ನಿಜಾಮನ ಬಗ್ಗೆ ಹಾರಾಡಲು ಸಂಘಟಿತರಾಗ ಬೇಕಾಯಿತು. ಬ್ರಿಟಿಶರ ಜೊತೆ ರಾಷ್ಟ್ರದ ನಾಯಕರು ಹೋರಾಡಲು ಕರೆ ಕೊಟ್ಟಾಗಲೆಲ್ಲ ಇಲ್ಲಿಯ ಪ್ರಜೆಗಳು ನಿಜಾಮರ ದಮನಕ್ಕೆ ಒಳಗಾಗಬೇಕಾಗುತ್ತಿದ್ದರು. ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಬಹಾದ್ದೂರ್(1910-1948) ಕಾಲದಲ್ಲಿ ಇಲ್ಲಿಯ ಪ್ರಜೆಗಳಲ್ಲಿ ಸ್ವಾತಂತ್ರ್ಯದ ಹಂಬಲ ಹೆಚ್ಚಾಯಿತು. ಇದಕ್ಕೆ ಸಂಸ್ಥಾನದ ಹೊರಗೆ ಅನೇಕ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ನಡೆಯುವ ಚಳವಳಿ ಗಳು, ಸತ್ಯಾಗ್ರಹಗಳು ಕಾರಣವಾಗಿ ಇಲ್ಲಿಯ ಪ್ರಜೆಗಳಿಗೆ ಸ್ಫೂರ್ತಿಯನ್ನು ನೀಡಿದವು.

1900ರ ನಂತರ ಭಾರತದಲ್ಲಿ ಸ್ವಾತಂತ್ರ್ಯಕ್ಕಾಗಿ ತೀವ್ರ ಸ್ವರೂಪದ ಹೋರಾಟ ಕಂಡುಬಂದಾಗ ಆಡಳಿತದಲ್ಲಿ ಸುಧಾರಣೆಗಳು ಕಂಡುಬಂದವು. 1919ರಲ್ಲಿ ‘ಮಾಂಟೆಗೋ ಚೇಮ್ಸಫರ್ಡ್’ ಸುಧಾರಣೆಗಳು ಜಾರಿಗೆ ಬಂದವು. ಆದರೆ ಇದು ಹೈದಾರಾಬಾದ್ ಸಂಸ್ಥಾನದಲ್ಲಿ ಯಾವ ಪರಿಣಾಮವನ್ನುಂಟು ಮಾಡಲಿಲ್ಲ. ಇದರಿಂದ ಪ್ರಜೆಗಳಲ್ಲಿ ಅಸಮಾಧಾನ ಹೆಚ್ಚಾಯಿತು. ಇದನ್ನು ಕಂಡ ನಿಜಾಮ ಒಂದು ಫರಮಾನ್ ಹೊರಡಿಸಿ, ಶಾಸನ ಸಭೆಗೆ ಬೇಕಾದ ಮಾಹಿತಿಯನ್ನು ಒದಗಿಸಲು ಸರ್ ಅಲೀ ಇಮಾಮರನ್ನು ನೇಮಿಸಿದ. ಇವರಿಗೆ ಸಹಾಯ ಮಾಡಲೆಂದು ರಾಯಬಾಲ್ ಮುಕ್ಕುಂದ ಅವರನ್ನೂ ಸೇರಿಸಿಕೊಂಡರು. ಇವರು ಕಾರ್ಯ ನಿರ್ವಹಿಸಿ 1921ರಲ್ಲಿ ತಮ್ಮ ವರದಿಯನ್ನು ಶಾಸನ ಸಭೆಗೆ ಒಪ್ಪಿಸಿದರು. ಆದರೆ ಈ ವರದಿಯನ್ನು ನಿಜಾಮ ಜಾರಿಗೆ ತರಲಿಲ್ಲ. ಪ್ರಜೆಗಳಲ್ಲಿ ತೀವ್ರ ಅಸಮಾಧಾನ ಕಾಣಿಸಿತು. ಈ ಅಸಮಾಧಾನವನ್ನು ಅಡಗಿಸಲು ನಿಜಾಮ ಬ್ರಿಟಿಶರ ಅಧಿಕಾರಿಗಳನ್ನು ನೇಮಿಸಿಕೊಂಡು ಜನತೆಯ ಮೇಲೆ ಅಧಿಕಾರವನ್ನು ಚಲಾಯಿಸಿದ. ಸಂಸ್ಥಾನದ ಪ್ರಜೆಗಳು ‘ಸುಧಾರಣಾ ಸಮಿತಿ’ಯನ್ನು ರಚಿಸಿಕೊಂಡು ಸಾಮೂಹಿಕವಾಗಿ ಸಂಘಟನೆಗೊಂಡು ನಿಜಾಮನ ಮೇಲೆ ಒತ್ತಡ ಹೇರಲು ನಿಂತರು. ಇದನ್ನು ತಡೆಯಲು ನಿಜಾಮನು ಕಾಲಾ ಗಸ್ತಿ ನಂಬರ್ 53 ಜಾರಿಗೆ ತಂದನು. ಇದರ ಪ್ರಕಾರ ಪ್ರಜೆಗಳು ಯಾವುದೇ ಗುಂಪು ಚಟುವಟಿಕೆಗಳನ್ನು ಸರಕಾರದ ಅನುಮತಿಯಿಲ್ಲದೆ ಮಾಡುವಂತಿಲ್ಲ. ಇದನ್ನೂ ಎದುರಿಸಲು ಪ್ರಜೆಗಳು ನಿಜಾಮ ಸರಕಾರಕ್ಕೆ ನಾಗರಿಕ ಹಕ್ಕುಗಳ ಬಗೆಗೆ ತಿಳುವಳಿಕೆಯನ್ನು ನೀಡಲು ಪ್ರಯತ್ನಿಸಿದರು. ಹೈದರಾಬಾದು ಕರ್ನಾಟಕದಲ್ಲಿ ಅನೇಕ ಮುಖಂಡರು ನಿಜಾಮನ ವಿರುದ್ಧ ಹೋರಾಡಲು ಸಂಘಟನಾತ್ಮಕ ಚಟುವಟಿಕೆಗಳನ್ನು ರೂಪಿಸಿಕೊಂಡರು.ೊಪಂಡಿತ ತಾರಾನಾಥರು ನಿಜಾಮನ ವಿರುದ್ಧ ‘ಇಂಡಿಯನ್ ಡಯ್ಯರ್’ ಎಂಬ ಉಗ್ರ ಲೇಖನವನ್ನು ಬರೆದು ಪ್ರಕಟಿಸಿದರು. ‘ಇಂರೋಜ್’ ಎಂಬ ಉರ್ದು ಪತ್ರಿಕೆಯ ಸಂಪಾದಕ ಷೊಯಬುಲ್ಲಾಖಾನರುೊ‘ಸ್ವಾತಂತ್ರ್ಯದ ಪರಿಕಲ್ಪನೆ’, ‘ಜಮೀನ್ದಾರಿ ಪದ್ಧತಿಯ ದೋಷಗಳು’, ‘ತೆಲಂಗಾಣದ ಸಮತಾವಾದಿಗಳ ಸಿದ್ಧಾಂತ’ ಮುಂತಾದ ಲೇಖನಗಳನ್ನು ಬರೆದರು. ಈ ಸಂಸ್ಥಾನದಲ್ಲಿ ನಡೆಯುವ ವಿದ್ಯಮಾನಗಳನ್ನು ರಾಷ್ಟ್ರದ ನಾಯಕರೂ ಗಮನಿಸಿ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಬೆಂಬಲ ನೀಡತೊಡಗಿದರು. 1920ರಲ್ಲಿ ವಿದೇಶ ಬಟ್ಟೆಗಳ ಬಹಿಷ್ಕಾರ ಆಂದೋಲನ ಶುರುವಾಯಿತು. ಗಾಂಧೀಜಿ ಅವರು ಮದ್ರಾಸಿನಿಂದ ಬೊಂಬಾಯಿಗೆ ಹೋಗುವಾಗ ಈ ಪ್ರಾಂತ್ಯದ (ರಾಯಚೂರು) ಮಾರ್ಗವಾಗಿ ಹೋದರು. ರಾಷ್ಟ್ರೀಯ ನಾಯಕನನ್ನು ರೈಲ್ವೇ ನಿಲ್ದಾಣಗಳಲ್ಲಿ ನೋಡಿದ ಜನರು, ಅವರ ಕರೆಯ ಮೇರೆಗೆ ಸ್ವದೇಶಿ ಬಟ್ಟೆಗಳ ಬಳಕೆಗೆ ಬದ್ಧರಾದರು. ಜೊತೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ಪಡೆದುಕೊಂಡರು.

ಜನತೆಯ ಸಂಘಟನೆಯಾದ ‘ಹೈದರಾಬಾದ್ ರಾಜಕೀಯ ಪರಿಷತ್ತು’ ಅಧಿವೇಶನವು 1923ರಲ್ಲಿ ಕಾಕಿನಾಡದಲ್ಲಿ ನಡೆಯಿತು. ಸರೋಜಿನಿ ನಾಯ್ಡು, ಸಿ.ಆರ್.ದಾಸ್ ಹಾಗೂ ಸರದಾರ್ ವಲ್ಲಭಬಾಯಿ ಪಟೇಲರು ಬಂದು ಪ್ರಜೆಗಳಿಗೆ ಜವಾಬ್ದಾರಿಯ ಸರಕಾರವನ್ನು ಸ್ಥಾಪಿಸುವ ಬಗ್ಗೆ ಕರೆ ನೀಡಿದರು. ಈ ಪರಿಷತ್ತು ರಾಜಕೀಯ ಚಟುವಟಿಕೆಗಳನ್ನು ನಿಜಾಮನ ವಿರುದ್ಧ ಹಮ್ಮಿಕೊಂಡಿತು. 1926ರಲ್ಲಿ ಮುಂಬೈನಲ್ಲಿ 1928ರಲ್ಲಿ ಪುಣೆ ಯಲ್ಲಿ ಸಭೆ ನಡೆಸಿತು. ಮೂರನೆಯ ಸಭೆಗೆ ನೇತಾಜಿ ಸುಭಾಷ ಚಂದ್ರಬೋಸ್ ಬಂದು ಭಾಷಣ ಮಾಡಿದರು. ಹೈದರಾಬಾದ್ ಸಂಸ್ಥಾನದ ನಿಜಾಮನ ರಾಜಕೀಯ ಹಾಗೂ ಸಾಮಾಜಿಕ ನಿಲುವುಗಳನ್ನು ಖಂಡಿಸಲಾಯಿತು. ರಾಷ್ಟ್ರದಲ್ಲಿ ಸ್ವಾತಂತ್ರಕ್ಕಾಗಿ ನಡೆಯುವ ಚಟುವಟಿಕೆ ಸತ್ಯಾಗ್ರಹಗಳೆಲ್ಲ ಹೈದರಾಬಾದ್ ಕರ್ನಾಟಕದ ಜನತೆಗೆ ಸ್ಫೂರ್ತಿ ನೀಡಿದವು. ಇದರಿಂದ ‘ಹೈದರಾಬಾದ್ ಸ್ವದೇಶಿ ಲೀಗ್’, ‘ನಿಜಾಮ ಪ್ರಜಾ ಪರಿಷತ್’(1935) ‘ಹೈದರಾಬಾದ್ ಪೀಪಲ್ಸ್ ಕನ್‌ವೆನಷನ್’ ಮುಂತಾದ ಜನ ಸಂಘಟನೆಯ ಸಂಸ್ಥೆಗಳು ಹುಟ್ಟಿಕೊಂಡು ನಿಜಾಮನ ವಿರುದ್ಧ ಹೋರಾಟಕ್ಕೆ ನಿಂತವು.

1934ರಲ್ಲಿ ‘ಕನ್ನಡ ಸಾಹಿತ್ಯ ಸಮ್ಮೇಳನ’ವು ರಾಯಚೂರಲ್ಲಿ ನಡೆಯಿತು. ಈ ಸಮ್ಮೇಳನ ಅಧ್ಯಕ್ಷರು ಪಂಜೆ ಮಂಗೇಶರಾಯರು. ನಾಡಿನ ಪ್ರತಿಭಾವಂತ ಸಾಹಿತಿಗಳು, ರಾಜಕೀಯ ಮುಖಂಡರು, ಹೋರಾಟಗಾರರು ಸಮ್ಮೇಳನಕ್ಕೆ ಬಂದ್ದರು. ಸಂಸ್ಥಾನದ ಹಾಗೂ ರಾಜಕೀಯ ಪರಿಸ್ಥಿತಿಗಳನ್ನು ಕುರಿತು ಇವರು ಚರ್ಚಿಸಿದರು. ಇದೇ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕದ ಪ್ರಜ್ಞಾವಂತ ಸಾಹಿತಿಗಳು ಕೂಡಿಕೊಂಡು ‘ನಿಜಾಮ ಕರ್ನಾಟಕ ಪರಿಷತ್’ಅನ್ನು ಗುಡಗುಂಟಿ ರಾಮಾಚಾರ್ಯ ಜೋಶಿ, ಜನಾರ್ದನ ರಾವ್ ದೇಸಾಯಿ, ಜಿ.ಕೆ. ಪ್ರಾಣೇಶಾಚಾರ್ಯ ಮುಂತಾದವರು ಕೂಡಿಕೊಂಡು ಸ್ಥಾಪಿಸಿದರು. ಪಿ.ಕಿಷನ್‌ರಾವ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಅಧಿವೇಶನ ಹೈದರಾಬಾದಿನಲ್ಲಿ ನಡೆಯಿತು. ಉರ್ದುಭಾಷಾ ಹೇರಿಕೆಯನ್ನು ಖಂಡಿಸುವ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ರಾಜಕೀಯ ನಿಲುವುಗಳನ್ನು ತೆಗೆದುಕೊಂಡರು. ನಂತರ ಈ ಪರಿಷತ್ತಿನ ಸಭೆಗಳು ಬೀದರ, ಗುಲಬರ್ಗಾ, ರಾಯಚೂರಿನ ಅನೇಕ ಕಡೆಗಳಲ್ಲಿ ನಡೆದವು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವುಗಳ ಬಗ್ಗೆ ಅಭಿಮಾನ ಬೆಳೆಯುವಂತೆ ಪ್ರೇರೇಪಿಸಿದರು. ರಾಜಕೀಯ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಲು ಸಜ್ಜಾದರು. ಇಂಥ ಅನೇಕ ಘಟನೆಗಳು ನಡೆದು, 1938ರಲ್ಲಿ ‘ಹೈದರಾಬಾದ್ ಸಂಸ್ಥಾನ ಕಾಂಗ್ರೆಸ್’ ಸ್ಥಾಪನೆಯಾಯಿತು. ಮೊದಲೇ ಕಾಂಗ್ರೆಸ್ ಎಂದರೆ ಉರಿಯುತ್ತಿದ್ದ ನಿಜಾಮನಿಗೆ ಈ ಸಂಸ್ಥಾನ ಕಾಂಗ್ರೆಸ್ ಸ್ಥಾಪನೆ, ಅದರ ಚಟುವಟಿಕೆಗಳನ್ನು ತಡೆಯಲಾಗಲಿಲ್ಲ. ಅದರಲ್ಲೂ ಸ್ವಾಮಿ ರಮಾನಂದ ತೀರ್ಥ, ಜಿ.ಎಸ್.ಮೇಲ್ಕೋಟೆ ಈ ಸಂಸ್ಥೆಯ ಮುಖಂಡರಾಗಿ ಹೈದರಾಬಾದು ಕರ್ನಾಟಕ ಭಾಗಗಳಲ್ಲಿ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ತೀವ್ರ ಹಂಬಲವನ್ನು ಹುಟ್ಟಿಸಿದರು. ಈ ಸಂದರ್ಭದಲ್ಲಿಯೇ ನಿಜಾಮ ಸರಕಾರದ ಪ್ರಧಾನ ಮಂತ್ರಿಯಾಗಿ ಸರ್ ಮಿರ್ಜಾ ಇಸ್ಮಾಯಿಲ್ ನೇಮಕವಾದರು. ಸಂಸ್ಥಾನದಲ್ಲಿ ಹುಟ್ಟಿಕೊಂಡಿದ್ದ ಕಾಂಗ್ರೆಸ್ ಮೇಲೆ ನಿಜಾಮ ಸರಕಾರ ಅನೇಕ ನಿರ್ಬಂಧಗಳನ್ನು ಹೇರಲಾಗಿತ್ತು. ಸಂಸ್ಥಾನದಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿತ್ತು. ರಾಷ್ಟ್ರೀಯ ನಾಯಕರಾದ ಗಾಂಧೀಜಿ, ನೆಹರೂ ಅವರು ಸರ್ ಮಿರ್ಜಾ ಇಸ್ಮಾಯಿಲ್‌ರಿಗೆ ಪತ್ರ ಬರೆದು, ಸಂಸ್ಥಾನದಲ್ಲಿ ಕಾಂಗ್ರೆಸ್ ಮೇಲೆ ಹೇರಿದ್ದ ಅನೇಕ ನಿರ್ಬಂಧಗಳನ್ನು ತೆಗೆದುಹಾಕಲು ಕೇಳಿಕೊಂಡರು. ಈ ನಾಯಕರ ಮನವಿಗೆ ಸ್ಪಂದಿಸಿದ ಮಿರ್ಜಾ ಇಸ್ಮಾಯಿಲ್ ಸಂಸ್ಥಾನಿ ಕಾಂಗ್ರೆಸ್ ಮೇಲಿದ್ದ ಪ್ರತಿಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಿದರು. ತೀರಾ ಹದಗೆಟ್ಟಿದ್ದ ನಿಜಾಮ ಸಂಸ್ಥಾನದ ಆಡಳಿತವನ್ನು ಹಿಡಿತಕ್ಕೆ ತರಲು ಮಿರ್ಜಾ ಶ್ರಮಿಸಲು ಪ್ರಯತ್ನಿಸಿದರೂ ಅವರು ಅಧಿಕಾರದಲ್ಲಿ ಬಹಳ ದಿನವಿರಲಿಲ್ಲ. ಸ್ಥಳೀಯವಾಗಿ ಅನೇಕ ಮುಖಂಡರು ನಿಜಾಮನ ವಿರುದ್ಧ ಹೋರಾಡಲು ನಿಂತರು. ಇದೇ ಸಂದರ್ಭದಲಿ್ಲ ರಾಘವೇಂದ್ರ ದೇಸಾಯಿ ನಿಜಾಮನ ಕಾಲೇಜಿನಿಂದ ಹೊರಬಂದು ಕುಕನೂರಿನಲ್ಲಿ ‘ವಿದ್ಯಾನಂದ ಗುರುಕುಲ’ ಸ್ಥಾಪಿಸಿ ದೊಡ್ಡ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಾಗಿ ಬೆಳೆಯಲು ಶ್ರಮಿಸಿದರು. ಈ ಸಂಸ್ಥೆ ಸಂಸ್ಥಾನದಲ್ಲಿ ರಾಷ್ಟ್ರೀಯ ಪ್ರಜ್ಞೆಗೆ ಸ್ಫೂರ್ತಿಯಾಯಿತು. ಹಲವು ಕಡೆ ಶಿಕ್ಷಣ ಸಂಸ್ಥೆಗಳು ಹಾಗೂ ಗ್ರಂಥಾಲಯಗಳು ಆರಂಭವಾದವು. ವಾಚನಾಲಯಗಳಂತೂ ಬಿರುಸಿನಿಂದಲೇ ಹುಟ್ಟಿಕೊಂಡವು. ವಿಠಲರಾವ್ ದೇವಾಲ್ಗಾಂವಕರ್ ಗುಲಬರ್ಗಾದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಂಘವನ್ನು, ಶರಣ ಬಸವೇಶ್ವರ ದಾಸೋಹ ಪೀಠವು ವಾಚನಾಲಯವನ್ನು ಸ್ಥಾಪಿಸಿದವು. ಉಸ್ಮಾನಿಯ ಮಾಧ್ಯಮಿಕ ಶಾಲೆಯ ಉಪಾಧ್ಯಾಯ ಬಳಗವು ಚಿಂಚೋಳಿಯಲ್ಲಿ ಭಾರತ ವಾಚನಾಲಯ ವನ್ನು ತೆರೆಯಿತು. ರಾಯಚೂರು, ಗಂಗಾವತಿ, ಬಸವಕಲ್ಯಾಣ, ಆಡೂರು, ಇಟಗಿ, ಚಿತಾಪುರ ಮುಂತಾದ ಹೈದರಾಬಾದ್ ಕರ್ನಾಟಕದ ಹಲವೆಡೆಯಲ್ಲಿ ಗ್ರಂಥಾಲಯ ಹಾಗೂ ವಾಚನಾಲಯಗಳು 1930ರ ನಂತರದಿಂದ ಚಳವಳಿಯ ರೂಪದಲ್ಲಿ ಕಾರ್ಯ ನಿರ್ವಹಿಸಿದವು.

‘ವಂದೇ ಮಾತರಂ’ ಚಳವಳಿ ದೇಶದಾದ್ಯಂತ ಹಬ್ಬಿತು. ಉಸ್ಮಾನಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ‘ವಂದೇ ಮಾತರಂ’ ಹಾಡಲು ನಿರ್ಬಂಧಿಸಲಾಯಿತು. ಇದರಿಂದ ಚಳವಳಿಗೆ ಮತ್ತಷ್ಟು ಶಕ್ತಿ ಬಂದಂತಾಯಿತು. 1942ರ ‘ಚಲೇಜಾವ್’ ಚಳವಳಿಯಲ್ಲಿ ಹೈದರಾಬಾದು ಕರ್ನಾಟಕದ ಜನತೆ ಪಾಲ್ಗೊಂಡು ಸೆರೆವಾಸ ಕಂಡಿತು. ಹೀಗೆ ರಾಷ್ಟ್ರೀಯ ಚಳವಳಿಗಳು, ಸತ್ಯಾಗ್ರಹಗಳು ಇಲ್ಲಿಯ ಜನರಿಗೆ ಪ್ರೇರಣೆ ನೀಡುತ್ತಲೇ ನಿಜಾಮನಿಂದ ಮುಕ್ತರಾಗಲು ಪ್ರೇರೇಪಿಸಿದವು. ಇದರಿಂದ ಹುಟ್ಟಿಕೊಂಡ ಅನೇಕ ಸಂಘಟನೆಗಳು, ಸಂಘ-ಸಂಸ್ಥೆಗಳು ನಿಜಾಮನಿಗೆ ಬಿಸಿ  ಮುಟ್ಟಿಸಿದವು. ಇವೆಲ್ಲ ‘ಜಾತೀಯ’ ಸಂಘಟನೆ ಗಳೆಂದು, ಆದ್ದರಿಂದ ಇವು ಯಾವ ಸಭೆ ಸೇರುವಂತಿಲ್ಲವೆಂದು ನಿಷೇಧಿಸಿಬಿಟ್ಟನು. ಆದರೆ 1940ರ ಹೊತ್ತಿಗೆ ಮುಮ್ನವೇ ಹುಟ್ಟಿಕೊಂಡಿದ್ದ ‘ಇತ್ತೇಹಾದುಲ್ ಮುಸಲ್ಮೀನ್’ ಎಂಬ ಮತೀಯ ಸಂಘಟನೆಗೆ ಮತ್ತು ಅದರ ಚಟುವಟಿಕೆಗಳಿಗೆ ನಿಜಾಮನೇ ಬೆಂಬಲ ವಿತ್ತನು. ಹೈದರಾಬಾದು ಸಂಸ್ಥಾನದಲ್ಲಿ ಅಲ್ಪಸಂಖ್ಯಾತರಾಗಿದ್ದ ಮುಸ್ಲಿಮರನ್ನು ‘ಇಸ್ಲಾಂ ಖತರೇಮೇಹೈ’ೊಎಂಬ ವಾದವನ್ನು ಮುಂದುಮಾಡಿ ಕೆರಳಿಸಲಾಯಿತು. ಇದಕ್ಕೆ ಬೆಂಬಲವಾಗಿ ‘ಇತ್ತೇಹಾದುಲ್ ಮುಸಲ್ಮೀನ್’ ಸಂಸ್ಥೆ ನಿಂತಿತು. ಇದೇ ಸಮಯದಲ್ಲಿ ನಿಜಾಮನು ಒಂದು ಫರ್ಮಾನನ್ನು ಹೊರಡಿಸಿದ. ಮುಸಲ್ಮಾನರು ಬೇರೆ ಜಾತಿಯವರಿಂದ ಜಮೀನು ಖರೀದಿಸಬಹುದು. ಆದರೆ ಬೇರೆ ಜಾತಿಯವರು ‘ಮುಸಲ್ಮಾನರ ಜಮೀನನ್ನು ಖರೀದಿಸಬಾರದು. ಜಮೀನು ಒತ್ತೆ ಹಾಕಿ ಸಾಲ ಪಡೆದವರು(ದಲಿತರು) ಮುಸಲ್ಮಾನರಾದರೆ ಅಂಥವರು ಸಾಲದಿಂದ ಮುಕ್ತರು’ ದಲಿತರು ಭೂಮಾಲೀಕರಲ್ಲಿ ಮಾಡಿದ್ದ ಕಾಲದ ಹೊರೆಯಿಂದ ಹೊರಬರಲು ಇದೊಂದು ಅವಕಾಶ ದೊರೆಯಿತು. ಮತಾಂತರದ ಕೆಲಸ ಭರದಿಂದ ನಡೆಯಿತು. ಇದನ್ನು ತಡೆಗಟ್ಟಲು ಆರ್ಯಸಮಾಜ, ‘ಹಿಂದೂ ಸಿವಿಲ್ ಲಿಬರ್ಟೀಸ್ ಲೀಗ್’ ಚುರುಕಾದವು.

1947ನೆಯ ಆಗಸ್ಟ್ 15ರಂದು ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯ ಲಭಿಸಿತು. ಆದರೆ ‘ಹೈದರಾಬಾದ್ ಸಂಸ್ಥಾನ’ಕ್ಕೆ ರಾಜಕೀಯ ಸ್ವಾತಂತ್ರ್ಯ ದೊರೆಯಲಿಲ್ಲ. ಬ್ರಿಟಿಶರು ಭಾರತವನ್ನು ಬಿಟ್ಟು ಹೊರಡುವ ಮುನ್ನ ಸಂಸ್ಥಾನಿಕರಿಗೆ, ‘ಸ್ವತಂತ್ರ ಭಾರತದಲ್ಲಿ ವಿಲೀನ ವಾಗಬಹುದು ಇಲ್ಲ ಸ್ವತಂತ್ರವಾಗಿಯೇ ಮುಂದುವರಿಯಬಹುದು’ೊಎಂಬ ಆಯ್ಕೆಯ ಪ್ರಶ್ನೆಯನ್ನು ಎತ್ತಿದ್ದರು. ಇದರ ಪರಿಣಾಮವಾಗಿಯೇ ನಿಜಾಮನು 1947ನೆಯ ಜೂನ್ 26ರಂದು ಒಂದು ಫರಮಾನ್ ಹೊರಡಿಸಿದ. ಹೈದರಾಬಾದ್ ಸಂಸ್ಥಾನವು ಸ್ವತಂತ್ರ ವಾಗಿಯೇ ಮುಂದುವರಿಯುವುದು ಪ್ರಜೆಗಳು ಸಂಸ್ಥಾನಕ್ಕೆ ನಿಷ್ಠೆಯಿಂದಿರಬೇಕು ಎಂದು 1947ನೆಯ ಆಗಸ್ಟ್ 15ರಂದು ಭಾರತಕ್ಕೆ ಸಂಭ್ರಮದ ದಿನವಾದರೆ, ಭಾರತದ ಒಳಗಿರುವ ಈ ಸಂಸ್ಥಾನದ ಜನರಿಗೆ ಆತಂಕದ ದಿನವಾಯಿತು. ಭಾರತ ರಾಷ್ಟ್ರದ ಧ್ವಜವನ್ನು ಎಲ್ಲೂ ಹಾರಿಸಬಾರದೆಂದು ನಿಜಾಮ ಸರಕಾರ ಕಠೋರ ನಿರ್ಬಂಧ ವಿಧಿಸಿತು. ಸ್ವಾಭಿಮಾನಿ ಜನ ರಾಷ್ಟ್ರಧ್ವಜ ಹಾರಿಸಿ ಬಂಧನಕ್ಕೊಳಗಾದರು ಮತ್ತು ಶಿಕ್ಷೆಗೆ ಗುರಿಯಾದರು.

 

ರಜಾಕಾರರು

ನಿಜಾಮ ಸರಕಾರದ ನಿಲುವುಗಳನ್ನು ಬೆಂಬಲಿಸಲು ‘ಇತ್ತೇಹಾದುಲ್ ಮುಸಲ್ಮೀನ್’ ಎಂಬ ಸಂಘಟನೆಯು ಕಟಿಬದ್ಧವಾಯಿತು. ಈ ಸಂಘಟನೆಯ ಸದಸ್ಯರ ಸಂಖ್ಯೆಯು ಪ್ರಾರಂಭದಲ್ಲಿ ಕಡಿಮೆ ಪ್ರಮಾಣದಲ್ಲಿತ್ತು. ನಂತರ ಬೆಳೆಯುತ್ತ ಅರೆಮಿಲಿಟರಿಯ ರೂಪದಲ್ಲಿ ಬದಲಾಗುತ್ತ ‘ರಜಾಕಾರರು’ ಎಂಬ ಹೆಸರಿನಲ್ಲಿ ಕಾಣಿಸಿಕೊಂಡರು. ಇದರ ಮುಖಂಡ ಕಾಶಿಂ ರಜ್ವಿ. ಇವನು ಮೂಲತಃ ಮತೀಯವಾದಿಯಾಗಿದ್ದ. ನಿಜಾಮ ಆಳ್ವಿಕೆ ಯನ್ನು ಬೆಂಬಲಿಸುತ್ತ, ನಿಜಾಮ ಸರಕಾರದ ಸವತ್ತುಗಳನ್ನು ಸ್ವೇಚ್ಚೆಯಿಂದ ಬಳಸುತ್ತ ಮತಾಂಧನಾಗಿ ರೂಪುಗೊಂಡನು. ತನ್ನ ಅಧೀನದಲ್ಲಿದ್ದ ರಜಾಕಾರರಿಗೆ ಸಂಸ್ಥಾನದಲ್ಲೆಲ್ಲ ನಿಜಾಮ ಪ್ರಭುತ್ವವನ್ನು ಒಪ್ಪಿಕೊಳ್ಳುವಂತೆ ಜನರನ್ನು ಒತ್ತಾಯಿಸಲು ಹೇಳಿದ. ಈ ರಜಾಕಾರರು ಸಂಸ್ಥಾನದ ತುಂಬ ಜನರ ಮೇಲೆ ಕ್ರೌರ್ಯದಿಂದ ದಬ್ಬಾಳಿಕೆ ನಡೆಸ ತೊಡಗಿದರು. 1948ರ ಹೊತ್ತಿಗೆ ಒಂದು ಲಕ್ಷ ರಜಾಕಾರರಿದ್ದರು. ತಮ್ಮ ಪಡೆಗೆ ಜನರನ್ನು ಬಲವಂತದಿಂದ ಸೇರಿಸಿಕೊಂಡರು. ಇವರ ಜೊತೆ ಪಠಾಣರು, ನಿಜಾಮ ಪೊಲೀಸರು ಸೇರಿಕೊಂಡು ಹಳ್ಳಿ ಹಳ್ಳಿಗಳಲ್ಲಿ ದಾಳಿ ಮಾಡಿದರು. ಅತ್ಯಾಚಾರಗಳು, ದರೊಡೆಗಳು, ಸಾವು ನೋವುಗಳಿಂದ ಇಡೀ ಸಂಸ್ಥಾನವೇ ತಲ್ಲಣಗೊಂಡಿತು. ಬೀದರ, ರಾಯಚೂರು, ಗುಲಬರ್ಗಾ ಜಿಲ್ಲಾ ಪ್ರದೇಶದ ಜನರು ರಜಾಕಾರರ ಕ್ರೌರ್ಯಕ್ಕೆ ಅಂಜಿ ಗಡಿಗಳನ್ನು ದಾಟಿ ವಲಸೆ ಹೋದರು. ‘ರಜಾಕಾರರ ದಬ್ಬಾಳಿಕೆ’ ಎಂದು ಬರೆದ ‘ಇಂರೋಜ್’ ಉರ್ದು ಪತ್ರಿಕೆಯ ಸಂಪಾದಕ ಷೋಯಬುಲ್ಲಾಖಾನನನ್ನು  ರಜಾಕಾರರು ಗುಂಡಿಟ್ಟು ಕೊಂದರು. ಹಳ್ಳಿ ಹಳ್ಳಿಗಳಲ್ಲಿ ದರೋಡೆಗಳು, ಮಾನಭಂಗಗಳು, ಸಾವುಗಳು ಸಹಜ ಎಂಬಷ್ಟರ ಮಟ್ಟಿಗೆ ನಡೆಯತೊಡಗಿದವು. ಈ ಪರಿಸ್ಥಿತಿಯನ್ನು ಅರಿತ ಭಾರತ ಸರಕಾರವು ನಿಜಾಮನಿಗೆ ಮೊದಲು ಹಿಂಸೆ, ದಬ್ಬಾಳಿಕೆ, ಸಾವುಗಳನ್ನು ನಿಲ್ಲಿಸಲು ಸೂಚಿಸಿತು. ಆದರೆ ಇದು ನಿಜಾಮನಿಂದ ಸಾಧ್ಯವಾಗಲಿಲ್ಲ. ಯಾಕೆಂದರೆ ನಿಜಾಮನೇ ರಜಾಕಾರರ ಕೈಗೊಂಬೆಯಾಗಿ ಅಸಹಾಯಕನಾಗಿದ್ದ. ರಜಾಕಾರರು ಸಾರಿಗೆ ವ್ಯವಸ್ಥೆ, ಸೈನ್ಯ, ಮದ್ದು ಗುಂಡುಗಳನ್ನು ಮತ್ತು ಆಕಾಶವಾಣಿಯನ್ನು ಸ್ವತಂತ್ರವಾಗಿ ಬಳಸುವಷ್ಟು ಶಕ್ತಿ ಪಡೆದುಕೊಂಡಿದ್ದರು.

ಹೈದರಾಬಾದ್ ಕರ್ನಾಟಕದ ಅನೇಕ ರಾಜಕೀಯ ಮುಖಂಡರು ಜನರನ್ನು ಸಂಘಟಿಸಿ ನಿಜಾಮನ ವಿರುದ್ಧ ಹೋರಾಡುವ ಬದಲು ರಜಾಕಾರರ ವಿರುದ್ಧ ಹೋರಾಡುವ ಬಗ್ಗೆ ಗಂಭೀರವಾಗಿ ಆಲೋಚಿಸಿದರು. ರಾಷ್ಟ್ರೀಯ ಕಾಂಗ್ರೆಸ್ ನಾಯಕರ ಜೊತೆ ಸಮಾಲೋಚಿಸಿ ದರು. ಹಿಂಸಾತ್ಮಕ ಹೋರಾಟಕ್ಕೆ ಹಿರಿಯ ನಾಯಕರ ಒಪ್ಪಿಗೆ ದೊರೆಯಲಿಲ್ಲ. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಚಳವಳಿಗೆ ಆದೇಶ ನೀಡಿದರು. ರಜಾಕಾರರ ದಾಳಿಗೆ ತಲ್ಲಣ ಗೊಂಡು ಪರಪ್ರಾಂತ್ಯಗಳಿಗೆ ವಲಸೆ ಹೋಗಲು ಪ್ರಾರಂಭಿಸಿದ್ದ ಜನರಿಗೆ ಧೈರ್ಯ ತುಂಬು ವುದು, ಜನರನ್ನು ಸಂಘಟಿಸಿ ಜನಾಂದೋಲನ ನಡೆಸುವುದಕ್ಕೆ ಹೈದರಾಬಾದು ಕರ್ನಾಟಕದ ಕಾಂಗ್ರೆಸ್ ನಾಯಕರು ತೀವ್ರವಾಗಿ ಶ್ರಮಿಸಿದರು. ಹೋರಾಟಕ್ಕಾಗಿ ಕ್ರಿಯಾ ಸಮಿತಿ ರಚನೆ ಯಾಯಿತು. ಅನ್ನದಾನಪ್ಪ ದೊಡ್ಡಮೇಟಿ, ಜನಾರ್ದನರಾವ್ ದೇಸಾಯಿ ಮುಂತಾದವರ ನೇತೃತ್ವದಲ್ಲಿ ಗಡಿ ಭಾಗಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಂಡು ರಜಾಕಾರರ ಪಠಾಣರ ವಿರುದ್ಧ ಹೋರಾಟವನ್ನು ಸಂಘಟಿಸಲು ನಿರ್ಧರಿಸಿದರು. ಈ ಶಿಬಿರಗಳನ್ನು ವ್ಯವಸ್ಥಿತವಾಗಿ ಕಟ್ಟಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಉತ್ಸಾಹಿ ಯುವಕರನ್ನು ಆಯ್ಕೆ ಮಾಡಲಾಯಿತು.

ದಿಗಂಬರರಾವ್ ಬಿಂದು, ಜಿ.ಕೆ.ಪ್ರಾಣೇಶಾಚಾರ್ಯರ ನೇತೃತ್ವದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳಲ್ಲಿ ಒಬ್ಬ ಶಿಬಿರಾಧಿಪತಿ, ದಳನಾಯಕ, ಕೋಶಾಧಿಪತಿ ಹಾಗೂ ಆಹಾರ ವ್ಯವಸ್ಥೆ ಮಾಡುವವರು ಇದ್ದು, ಒಂದೊಂದು ಶಿಬಿರಗಳಲ್ಲಿ ಈ ಮುಖ್ಯಸ್ಥರ ಜೊತೆಗೆ ನೂರಾರು ಜನರು ಹೋರಾಟಕ್ಕೆ ಸಿದ್ಧರಾಗಿರುತ್ತಿದ್ದರು. ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ಮಾಡುವುದೇ ಈ ಶಿಬಿರಗಳ ಉದ್ದೇಶವಾಯಿತು. ಈ ಶಿಬಿರಗಳಲ್ಲಿ ಸೇರುವವರಿಗೆ ಸೈನಿಕ ತರಬೇತಿಯನ್ನು ವ್ಯವಸ್ಥಿತವಾಗಿ ನೀಡಲಾಯಿತು. ಈ ತರಬೇತಿ ನೀಡಲು ಆಜಾದ್ ಹಿಂದ್ ಸೈನ್ಯದಲ್ಲಿದ್ದವರು ಬಂದರು. ತೆಲಂಗಾಣ, ಮದ್ರಾಸ್, ಮಹಾರಾಷ್ಟ್ರ ಗಡಿಗಳಲ್ಲಿ ಶಿಬಿರಗಳು ಹೆಚ್ಚು ಕ್ರಿಯಾಶೀಲವಾಗಿ ಹೋರಾಡಿ ರಜಾಕಾರರಿಗೆ ಭಯ ಹುಟ್ಟಿಸಿದವು. ಇದರಿಂದ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಧೈರ್ಯಬಂದಿತು. ಶಿಬಿರಗಳಿಗೆ ಹೆಚ್ಚಿನ ನೆರವು ದೊರೆಯಿತು. ಹೈದರಾಬಾದ್ ಕರ್ನಾಟಕದ ತುಂಬ ನೂರಾರು ಶಿಬಿರಗಳು ಹುಟ್ಟಿಕೊಂಡು ರಜಾಕಾರರ ವಿರುದ್ಧ ಸಶಸ್ತ್ರ ಹೋರಾಟ ನಡೆಸಿದವು. ಮಹಿಳೆಯರು ಈ ಶಿಬಿರಾರ್ಥಿಗಳಿಗೆ ತಮ್ಮ ತಮ್ಮ ನೆಲೆಗಳಲ್ಲಿ ಸಹಾಯ ಮಾಡಿದರು. ಮುಂಡರಗಿ, ಗಜೇಂದ್ರಗಡ, ಸಿಂದಗಿ, ದುದನಿ, ತಾಳಿಕೋಟೆ, ಮೈಂದರಗಿ, ತುಂಗಭದ್ರ, ಕಂಪ್ಲಿ, ಮಂತ್ರಾಲಯ ಮುಂತಾದ ಕಡೆಗಳಲ್ಲಿ ಮುಖ್ಯ ಶಿಬಿರಗಳ ಮೂಲಕ ಸ್ವಾಭಿಮಾನಗಳು ಹೋರಾಡಿದ ಪರಿಣಾಮವಾಗಿ ರಜಾಕಾರರು ಧೈರ್ಯಗುಂದಿದರು. ಕೊಪ್ಪಳದ ಸರಹದ್ದಿನ ಎಷ್ಟೋ ಹಳ್ಳಿಗಳು ಸ್ವತಃ ಸ್ವಾತಂತ್ರ್ಯವನ್ನು ಘೋಷಿಸಿಕೊಂಡು, ಸ್ಥಳೀಯ ಸರಕಾರವನ್ನೂ ಪಂಚಾಯಿತಿ ರಾಜ್ಯ ಮಾದರಿಯಲ್ಲಿ ರಚಿಸಿಕೊಂಡವು. ಇದೊಂದು ಅಭೂತಪೂರ್ವ ಘಟನೆಯಾಗಿದೆ. ಸಂಸ್ಥಾನದಲ್ಲಿ ಕದನಗಳು ನಡೆದು ಸಾವು ನೋವಿನಿಂದ ಅರಾಜಕತೆ ಉಂಟಾದದ್ದು ಕಂಡ ಭಾರತ ಸರಕಾರವು ನಿಜಾಮ ಸರಕಾರದ ವಿರುದ್ಧ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಲು ನಿರ್ಧರಿಸಿತು. ಉಪ ಪ್ರಧಾನಿಗಳಾಗಿದ್ದ ಸರದಾರ್ ವಲ್ಲಭಬಾಯಿ ಪಟೇಲರು ಜನರಲ್ ಚೌಧರಿಯವರ ನೇತೃತ್ವದಲ್ಲಿ ಭಾರತೀಯ ಸೇನೆಯನ್ನು ಸೆಪ್ಟೆಂಬರ್ 13, 1948ರಂದು ಕಳಿಸಿದರು. ಭಾರತೀಯ ಸೇನೆೊಹೈದರಾಬಾದ್ ಸಂಸ್ಥಾನವನ್ನು ಪ್ರವೇಶಿಸಿ ರಜಾಕಾರರಿಂದ ಉಂಟಾದ ಅರಾಜಕತೆಯನ್ನು ಶಾಂತಗೊಳಿಸಿತು. ಹಳ್ಳಿ ಹಳ್ಳಿಗಳಲ್ಲಿ ನಡೆದ ಕದನಗಳು ತಣ್ಣಗಾದವು. ಸೆಪ್ಟೆಂಬರ್ 18, 1948ರಂದು ನಿಜಾಮ ಶರಣಾಗತನಾದನು. ಹೈದರಾಬಾದ್ ಸಂಸ್ಥಾನ ನಿಜಾಮನ ಆಳ್ವಿಕೆಯಿಂದ ಬಿಡುಗಡೆಯಾಗಿ ಸ್ವತಂತ್ರವಾಯಿತು. ಹೈದರಾಬಾದು ಕರ್ನಾಟಕ ರಾಜಕೀಯವಾಗಿ ವಿಮೋಚನವಾಯಿತು.

1947ನೆಯ ಆಗಸ್ಟ್ 15ರ ನಂತರ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದ ಬೀದರ, ಗುಲಬರ್ಗಾ, ರಾಯಚೂರು ಜಿಲ್ಲಾ ಪ್ರದೇಶಗಳಲ್ಲಿ, ಗಡಿಗಳಲ್ಲಿ ಜನ ಸಮುದಾಯಗಳು ಅಪಾರ ನೋವನ್ನನುಭವಿಸಿದವು. ಹೈದರಾಬಾದ್ ಕರ್ನಾಟಕವು 1948ನೆಯ ಸೆಪ್ಟೆಂಬರ್ 18ರಂದು ಸ್ವತಂತ್ರ ಭಾರತದಲ್ಲಿ ವಿಲೀನವಾದ ಮೇಲೆಯೂ ಅನೇಕ ಸಮಸ್ಯೆಗಳು ತಲೆದೋರಿದವು. ಹೊಸದಾಗಿ ರೂಪಗೊಂಡ ಹೈದರಾಬಾದ್ ರಾಜ್ಯದಲ್ಲಿ ವಿವಿಧ ಕೋಮುಗಳ ನಡುವೆ ಒಡೆದ ಮನಸ್ಸುಗಳು ಸೌಹಾರ್ದತೆಯಿಂದಿರಲು ಸಾಧ್ಯವಾಗಲಿಲ್ಲ. ತೆಲುಗು ಭಾಷೆಯನ್ನಾಡುವ ಜನ ಭಾಷಾವಾರು ಪ್ರಾಂತ ರಚನೆಗಾಗಿ ಪ್ರತ್ಯೇಕ ಆಂಧ್ರಕ್ಕಾಗಿ ಚಳವಳಿಯನ್ನು ಆರಂಭಿಸಿದರು. ಕನ್ನಡ ಭಾಷೆಯನ್ನಾಡುವ ಜನರೂ ಈ ದಿಸೆಯಲ್ಲಿ ಹೋರಾಟಕ್ಕೆ ಸಜ್ಜಾದರು. ಭಾಷಾವಾರು ಪ್ರಾಂತ ರಚನೆಗಾಗಿ ಈ ಹಿಂದಿನಿಂದಲೇ ಚಳವಳಿಗಳು ಸುರುವಾಗಿದ್ದವು. ಅದರಲ್ಲೂ ಉರ್ದು ಭಾಷೆ ಆಡಳಿತ ಭಾಷೆಯಾಗಿದ್ದರಿಂದ ಜನರಲ್ಲಿ ಅಸಮಾಧಾನವಿತ್ತು. ಕನ್ನಡ ಭಾಷೆಯನ್ನಾಡುವ ಜನರ ಚಳವಳಿ ತೀವ್ರವಾದ ಪರಿಣಾಮವಾಗಿ ಹೈದರಾಬಾದ್ ರಾಜ್ಯದಲ್ಲಿದ್ದ ಬೀದರ, ಗುಲಬರ್ಗಾ, ರಾಯಚೂರು ಜಿಲ್ಲೆಗಳು ಹೊಸದಾಗಿ ರಚನೆಯಾಗಿದ್ದ ಮೈಸೂರು ರಾಜ್ಯದಲ್ಲಿ 1956ರಲ್ಲಿ ಸೇರಿಕೊಂಡವು. ಮುಂದೆ 1970ರಲ್ಲಿ ಕರ್ನಾಟಕ ರಾಜ್ಯವಾಯಿತು. ಈಚೆಗೆ ಆಡಳಿತದ ಅನುಕೂಲಕ್ಕಾಗಿ ಗುಲಬರ್ಗಾವನ್ನು ವಿಭಾಗವನ್ನಾಗಿ ಮಾಡಿ ಈ ಮೂರು ಜಿಲ್ಲೆಗಳ ಜೊತೆಗೆ ಬಳ್ಳಾರಿಯನ್ನು ಸೇರಿಸಲಾಯಿತು. ಈಗ ಕೊಪ್ಪಳವು ಜಿಲ್ಲೆಯಾಯಿತು. ಹೀಗಾಗಿ ಮೊದಲು ‘ಹೈದರಾಬಾದ್ ಕರ್ನಾಟಕ’ ಎಂದರೆ ಮೂರು ಜಿಲ್ಲೆಗಳಿಗೆ ಬದಲಾಗಿ ಈಗ ಐದು ಜಿಲ್ಲೆಗಳಾಗಿವೆ.

 

ರಾಯಚೂರು ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟ

ನಿಜಾಮರು ತಮ್ಮ ಅಧೀನದಲ್ಲಿದ್ದ ಕೊಪ್ಪಳ ನಾಡನ್ನು ನವಾಬ ಸಾಲಾರಜಂಗನಿಗೆ ಜಹಗೀರು ಎಂದು ನೀಡಿದ್ದರು. ಇದರ ಆಡಳಿತವನ್ನು ಹೈದರಾಬಾದಿನಲ್ಲಿದ್ದುಕೊಂಡೇ ಸಾಲಾರಜಂಗ್ ನಡೆಸುತ್ತಿದ್ದ. ಕೊಪ್ಪಳ ಯಲಬುರ್ಗಿ ತಾಲ್ಲೂಕುಗಳ ಈ ಜಹಗೀರು ಸುಮಾರು 270 ಹಳ್ಳಿಗಳನ್ನು ಒಳಗೊಂಡಿತ್ತು. ನಾಡಿನ ಸ್ವಾತಂತ್ರ್ಯಕ್ಕಾಗಿ ಕೊಪ್ಪಳ ಪ್ರಾಂತ್ಯದಲ್ಲಿ 1900ರ ಹೊತ್ತಿಗಾಗಲೇ ವೀರಪ್ಪ, ಭೀಮರಾಯ, ಕೆಂಚನಗೌಡ ಮುಂತಾದ ಜಮೀನ್ದಾರರು ನಿಜಾಮರ ಪ್ರಭುತ್ವವನ್ನು ವಿರೋಧಿಸಿ ಹೋರಾಡಿ, ನಿಜಾಮ ಬ್ರಿಟಿಶರಿಂದ ಹತರಾಗಿ ಆದರ್ಶವಾಗಿ ಪರಿಣಮಿಸಿದ್ದರು. ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಕಾಯಿದೇ ಭಂಗ ಚಳವಳಿಯನ್ನು ಈ ಭಾಗದಲ್ಲಿ ಕೈಗೊಳ್ಳಲಾಯಿತು. ಬಹಿಷ್ಕಾರ, ಸತ್ಯಾಗ್ರಹ, ಅಸಹಕಾರ ಮುಂತಾದ ಚಟುವಟಿಕೆಗಳಲ್ಲಿ ತೊಡಗಲು ಜನರು ಮಾನಸಿಕವಾಗಿ ಸಿದ್ಧರಾದರು. ಜಯರಾಮಚಾರ್ಯ, ರಾಘವೇಂದ್ರರಾವ್ ಚಾಕಲಬ್ದಿ, ತಮ್ಮನಗೌಡ ಪೀಟಲೀ, ಬಸವಂತರಾವ್ ಕಾಟರಳ್ಳಿ ಮುಂತಾದವರು ಚಳವಳಿಯ ಸಂಘಟನೆಯಲ್ಲಿ ತೊಡಗಿಸಿಕೊಂಡರು. 1925ರಲ್ಲಿ ಗಾಂಧೀಜಿ ಅವರ ಮುಖಂಡತ್ವದಲ್ಲಿ ಕಾಂಗ್ರೆಸ್ ಅಧಿವೇಶನವು ಬೆಳಗಾವಿಯಲ್ಲಿ ನಡೆಯಿತು. ಕನ್ನಡನಾಡಿನ ಜನತೆಯನ್ನು ಎಚ್ಚರಿಸಿ ಹುರಿದುಂಬಿಸಿದರು. ಇದು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿತು. ಕೊಪ್ಪಳ ಜಿಲ್ಲೆಯ ಅನೇಕ ಪ್ರಜ್ಞಾವಂತರು ಕಾಂಗ್ರೆಸ್ಸನ್ನು ಸೇರಿದರು. 1928ರಲ್ಲಿ ಲಖನೋ ಕಾಂಗ್ರೆಸ್ ಅಧಿವೇಶನದಲ್ಲಿ ನೆಹರೂ ಸ್ವಾತಂತ್ರ್ಯದ ಘೋಷಣೆ ಮಾಡಿದರು. ಎಚ್. ಕೊಟ್ರಪ್ಪ, ಹಂಪಿ ನರಸಿಂಗರಾವ್, ಶಿರೂರು ವೀರಭದ್ರಪ್ಪ ಮುಂತಾದವರು ಕಾಂಗ್ರೆಸ್ ಕಾರ್ಯಕರ್ತರಾಗಿ ಕೊಪ್ಪಳ, ಯಲಬುರ್ಗ ತಾಲ್ಲೂಕುಗಳಲ್ಲಿ ಸಂಚರಿಸಿ ಜನರನ್ನು ಜಾಗೃತಗೊಳಿಸಲು ಪ್ರಯತ್ನಿಸಿದರು. 1930ರ ಸುಮಾರಿಗೆ ಕೊಪ್ಪಳ ನಾಡಿನಲ್ಲಿ ಬರ ಕಾಣಿಸಿತು. ಜಾಗೀರದಾರನಾಗಿದ್ದ ಸಾಲಾರಜಂಗನಿಗೆ ಬರದಿಂದ ಸಂಕಷ್ಟಗಳಿಗೆ ಒಳಗಾದ ರೈತರ ಬವಣೆಗಳನ್ನು ಗಮನಕ್ಕೆ ತರಲು ಪ್ರಯತ್ನಿಸಲಾಯಿತು. ಹೈದರಾಬಾದ್ ಕೇಂದ್ರ ದಿಂದ ಕೊಪ್ಪಳ ನಾಡು ಬಹುದೂರದಲ್ಲಿದ್ದ ಕಾರಣ ಇಲ್ಲಿಯ ಕುಂದುಕೊರತೆಗಳು ನೇರವಾಗಿ ಸರಕಾರಕ್ಕೆ ಬೇಗನೆ ತಲುಪುತ್ತಿರಲಿಲ್ಲ. ಅಧಿಕಾರಿಗಳ ಮೂಲಕ ಸಾಲಾರಜಂಗನಿಗೆ ತಲುಪಿದರೆ ತಲುಪೀತು ಇಲ್ಲದಿದ್ದರೆ ಇಲ್ಲ. ಒಂದು ವೇಳೆ ಗಮನಕ್ಕೆ ಹೋದರೂ ಪರಿಹಾರ ಕೈಗೊಳ್ಳುತ್ತಿರಲಿಲ್ಲ. 1930ರಲ್ಲಿ ಕಾಣಿಸಿಕೊಂಡ ಬರ, ನಾಡಿನ ದುರ್ದೈವವೆಂಬಂತೆ 1933, 35, 37 ಹಾಗೂ 1940ರಲ್ಲಿಯೂ ಬಂದಿತು. ಇದರಿಂದ ಜನ ತತ್ತರಿಸಿದರು. ರೈತ ಮುಖಂಡರು ಹೈದರಾಬಾದಿಗೆ ಹೋಗಿ ನವಾಬರನ್ನು ಕಂಡು, ನಾಡಿನಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಬರಕ್ಕೆ ಪರಿಹಾರವನ್ನು ಕೇಳಿದರು. ಇದರಿಂದ ಸರಕಾರದ ಸ್ಥಳೀಯ ಅಧಿಕಾರಿಗಳಲ್ಲಿ ದ್ವೇಷ ಬೆಳೆಯಿತು. ನಿಜಾಮರಲ್ಲಿಗೆ ಹೋಗಿದ್ದ ಮುಖಂಡರ ಮನೆಗಳಿಗೆ ಹೋಗಿ ತೆರಿಗೆ ವಸೂಲಿ ಮಾಡುವ, ಮನೆ ಜಪ್ತಿ ಮಾಡುವ ಕಾರ್ಯಕ್ಕಿಳಿದರು. ಸರಕಾರಿ ಅಧಿಕಾರಿಗಳ ಈ ಕೃತ್ಯದಿಂದ ರೈತರು ಸಂಘಟಿತರಾದರು. ಶಿರೂರು ವೀರಭದ್ರಪ್ಪ ನಾಡಿನಲ್ಲಿ ಸಂಚರಿಸಿ ರೈತರಿಂದ ಮನವಿಗಳನ್ನು ಪಡೆದು ಅಧಿಕಾರಿಗಳಿಗೆ ಕಳುಹಿಸುವುದು, ಪತ್ರಿಕೆಗಳಲ್ಲಿ ಬರದ ಬಗ್ಗೆ ವರದಿ ಪ್ರಕಟವಾಗುವಂತೆ ಮಾಡುವುದು ಹಾಗೂ ಅನೇಕರನ್ನು ಸಂಘಟಿಸಿಕೊಂಡು, ಬರಗಾಲ ಪರಿಹಾರ ಕಾಮಗಾರಿಗಳನ್ನು ನಡೆಸಲು ಒತ್ತಾಯಿಸುವುದು, ತೆರಿಗೆ ವಸೂಲಿಯನ್ನು ನಿಲ್ಲಿಸಲು ನವಾಬರ ಮೇಲೆ ಒತ್ತಡ ತರುವುದು ಮುಂತಾದ ಕಾರ್ಯಗಳನ್ನು ಕೈಗೊಂಡರು. 1935ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾಕ್ಟರ್ ರಾಜೇಂದ್ರ ಪ್ರಸಾದರು ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರು. ಕೊಪ್ಪಳಕ್ಕೆ ಸಮೀಪದ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ಅವರಿಗೆ ಈ ನಾಡಿನ ಬರವನ್ನು, ಜನರ ಸಂಕಷ್ಟಗಳನ್ನು ವಿವರಿಸಿದರು. 1937ರಲ್ಲಿ ಕಾಣಿಸಿಕೊಂಡ ಬರದಿಂದ ಜನರು ರೊಚ್ಚಿಗೆದ್ದು ನಿಜಾಮ ಸರಕಾರದ ಮೇಲೆ ಒತ್ತಡವನ್ನು ಹೆಚ್ಚಿಸಿದರು. ಜನರ ಒತ್ತಡಕ್ಕೆ ಮಣಿದು ಸರಕಾರ ಪರಿಹಾರ ಕೈಗೊಂಡಿತು. ಹೀಗೆ ಪರಿಹಾರ ನೀಡಿದ್ದು ಜಹಗೀರ ಸರಕಾರದ ಇತಿಹಾಸದಲ್ಲಿಯೇ ಮೊದಲಿನದು. ಇದರಿಂದ ಜನರಿಗೆ ಸಂಘಟಿತ ಹೋರಾಟದಲ್ಲಿ ವಿಶ್ವಾಸ ಬೆಳೆಯಿತು. ಇದು ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಉತ್ಸಾಹ ಕೊಟ್ಟಿತು.

ರಾಷ್ಟ್ರಮಟ್ಟದಲ್ಲಿ ಬ್ರಿಟಿಶರ ವಿರುದ್ಧ ರಾಷ್ಟ್ರನಾಯಕರು ಬಿರುಸಿನ ಹೋರಾಟಕ್ಕೆ ಕರೆ ನೀಡುತ್ತಿದ್ದರು. 1934ರಲ್ಲಿ ಗಾಂಧೀಜಿಯವರಿಗೆ ಕೊಪ್ಪಳ ನಾಡಿನ ಸಾವಿರಾರು ಜನರು ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ಮನವಿ ಪತ್ರವನ್ನು, ಹರಿಜನ ನಿಧಿಯನ್ನು ಅರ್ಪಿಸಿದರು. ಗಾಂಧೀಜಿಯವರನ್ನು ಕಂಡು ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ಪಡೆದರು. ಹರ್ಡೇಕರ್ ಮಂಜಪ್ಪನವರು ಕೊಪ್ಪಳ ಯಲಬುರ್ಗಿ ತಾಲೂಕುಗಳಲ್ಲಿ ಪ್ರವಾಸ ಮಾಡಿ ಜನರನ್ನು ಎಚ್ಚರಿಸಿದರು. ವಿದೇಶಿ ಬಟ್ಟೆಗಳನ್ನು ತ್ಯಜಿಸುವುದು, ಖಾದಿ ಬಟ್ಟೆ ಧರಿಸುವುದು, ಅಸ್ಪೃಶ್ಯತೆಯ ನಿವಾರಣೆ, ಮದ್ಯಪಾನ ನಿರೋಧ ಮುಂತಾದ ವಿಚಾರಗಳನ್ನು ಬಿತ್ತುತ್ತ ಜನಪ್ರಿಯಗೊಳಿಸಿದರು. ಜಯಪ್ರಕಾಶ್ ನಾರಾಯಣರಿಂದ ಪ್ರೇರಣೆ ಪಡೆದ ಮುಖಂಡರು ಒಂದು ಕಡೆ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಜ್ಜಾದರೆ, ಇನ್ನೊಂದು ಕಡೆ ನಿಜಾಮರ ಕಡೆಯಿಂದ ಬರ ಪರಿಹಾರಕ್ಕಾಗಿ ಕಾಮಗಾರಿಗಳನ್ನು ನಡೆಸುವಂತೆ ಜನರಿಂದ ಒತ್ತಾಯ ಮಾಡಿಸಿದರು. ಲೆವಿ ಜಪ್ತಿ ಮಾಡುವ ನಿಜಾಮರ ನೀತಿಯನ್ನು ವಿರೋಧಿಸಿದರು. ಕಂದಾಯ ಮನ್ನ ಮಾಡಿಸಿಕೊಳ್ಳುವಂತ ಹೋರಾಟವನ್ನು ಸಂಘಟಿಸಿದರು. 1930ರ ದಶಕದುದ್ದಕ್ಕೂ ನಾಡಿನಲ್ಲಿ ಬರ ಕಾಣಿಸಿಕೊಂಡದ್ದನ್ನು ಆರ್.ಜಿ.ಜಾಗೀರದಾರ್, ಶಿರೂರು ವೀರಭದ್ರಪ್ಪ, ಬಸರಿಗಿಡದ ವೀರಪ್ಪ, ಜಿ.ಕೆ.ಪ್ರಾಣೇಶಾಚಾರ್ ಮುಂತಾದವರು ಸರಕಾರದ ಗಮನಕ್ಕೆ ವರದಿ ಸಮೇತ ತಂದರು. ಇದರಿಂದಾಗಿ ನಿಜಾಮ ಸರಕಾರದ ಕಂದಾಯ ಮಂತ್ರಿ ಗ್ರಿಗ್ಗಸನ್ ಕೊಪ್ಪಳ ಭಾಗಕ್ಕೆ ಬಂದು ಪರಿಶೀಲಿಸುವಂತಾಯಿತು. ಬಸವಂತರಾವ್ ಕಾಟರಹಳ್ಳಿ, ಬಸರಿಗಿಡದ ವೀರಪ್ಪ ಮುಂತಾದ ಮುಖಂಡರು ಸಾವಿರಾರು ರೈತ ಸಮುದಾಯದೊಂದಿಗೆ ಮನವಿಗಳನ್ನು ಒಪ್ಪಿಸಿದರು. ಕಂದಾಯ ಮಾಫಿ, ಕಾಳುಕಡ್ಡಿ ಹಂಚಿಕೆ, ಬರ ಪರಿಹಾರ ಕಾಮಗಾರಿಗಳು ಮುಂತಾದವುಗಳನ್ನು ನಿಜಾಮ ಸರಕಾರ ಒಪ್ಪಿತು. ನಾಡಿನ ಮುಖಂಡರು ಶಾಶ್ವತ ಬರಪರಿಹಾರಕ್ಕೆ ತುಂಗಭದ್ರಾ ನದಿಗೆ ಅಣೆಕಟ್ಟು ಕಟ್ಟುವುದು ಎಂದು ಒತ್ತಾಯಿಸಿದರು.

ಹೈದರಾಬಾದ್ ಸಂಸ್ಥಾನ ಕಾಂಗ್ರೆಸ್ ವತಿಯಿಂದ ಗೋವಿಂದರಾವ್ ನಾನಲ್, ಸ್ವಾಮಿ ರಮಾನಂದ ತೀರ್ಥ ಮುಂತಾದವರು ಕೊಪ್ಪಳ ಕುಕನೂರು, ಆಡೂರು, ರಾಜೂರು ಮುಂತಾದ ಹಳ್ಳಿಗಳಲ್ಲಿ ಸಂಚರಿಸಿದರು. ಇಲ್ಲಿಯ ರೈತ ಮುಖಂಡರನ್ನು, ಸಂಘ ಸಂಸ್ಥೆಗಳನ್ನು ಕಂಡು ಮಾತಾಡಿದರು. ಈ ಹೊತ್ತಿಗಾಗಲೇ ಸ್ಥಾಪನೆಗೊಂಡಿದ್ದ ಕುಕನೂರಿನ ವಿದ್ಯಾನಂದ ಗುರುಕುಲ, ಆಡೂರಿನ ವಿಶ್ವನಾಥ ವಾಚನಾಲಯ, ರಾಜೂರಿನ ಹರಿಜನ ಶಾಲೆ, ಖಾದಿ ಸಂಘ, ಆಡೂರಿನ ರಾಷ್ಟ್ರೀಯ ಶಾಲೆ, ಕೊಪ್ಪಳದ ವಿದ್ಯಾರ್ಥಿ ನಿಲಯ ಮುಂತಾದವುಗಳನ್ನು ಕಂಡ ಈ ಮುಖಂಡರು ನಾಡಿನ ಚಟುವಟಿಕೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ಸಂಘ ಸಂಸ್ಥೆಗಳು ಜನರ ಅಭಿರುಚಿಗಳನ್ನು ಉತ್ತಮಪಡಿಸಿದವು. ಹಲವಾರು ಹಳ್ಳಿಗಳಲ್ಲಿ ವಾಚನಾಲಯಗಳು ಚಳವಳಿಯ ರೀತಿಯಲ್ಲಿ ಹುಟ್ಟಿಕೊಂಡು ರಾಷ್ಟ್ರದ ವಿದ್ಯಮಾನಗಳನ್ನು ಅರಿತು ಚರ್ಚಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಜನರು ಮಾನಸಿಕವಾಗಿ ಸಿದ್ಧಗೊಂಡರು. 1940ರಲ್ಲಿ ಜನಾರ್ದನರಾವ್ ದೇಸಾಯಿ ಅಧ್ಯಕ್ಷತೆಯಲ್ಲಿ ಹೈದರಾಬಾದ್ ಕರ್ನಾಟಕ ಪರಿಷತ್ತಿನ ದ್ವಿತೀಯ ಅಧಿವೇಶನವು ಬೀದರಿನಲ್ಲಿ ನಡೆಯಿತು. ಕೊಪ್ಪಳ ಭಾಗದ ಪ್ರಮುಖರು ಹೋಗಿ ಪಾಲ್ಗೊಂಡು ಬಂದರು. ಪರಿಷತ್ತಿನ ಉಪಸಮಿತಿ ಗಳು ಈ ಭಾಗದಲ್ಲಿ ಹುಟ್ಟಿದವು. 1942ರಲ್ಲಿ ಚಲೇಜಾವ್ ಚಳವಳಿಯು ನೆರೆಯ ಧಾರವಾಡ, ವಿಜಾಪುರ, ಬೆಳಗಾವಿ ಜಿಲ್ಲೆಗಳಲ್ಲಿ ತೀವ್ರಗೊಂಡವು. ಇದರ ಪ್ರಭಾವವು ಹೆಚ್ಚಾಯಿತು. ದೊಡ್ಡಮೇಟಿ ಅಂದಾನಪ್ಪ, ಹಳ್ಳಿಕೇರಿ ಗುದ್ಲೆಪ್ಪನವರು ಈ ಭಾಗದಲ್ಲಿ ಅಲೆದಾಡಿ ಜನರನ್ನು ಸರಕಾರದ ನೀತಿಯ ವಿರುದ್ಧ ಎಚ್ಚರಿಸಿದರು. ರಾಷ್ಟ್ರದಲ್ಲಿ ಬ್ರಿಟಿಶರನ್ನು ಹೊರಹಾಕಲು ಜನರು ನಡೆಸಿರುವ ಹೋರಾಟವನ್ನು ವಿವರಿಸಿದರು. ಹೀಗೆ ಜಹಗೀರು ನಾಡಾದ ಕೊಪ್ಪಳದಲ್ಲಿ ಜನರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆಗಳನ್ನು ಪಡೆದರು.

1947ನೆಯ ಆಗಸ್ಟ್ 15ರಂದು ‘ಯಾರೂ ಸಂಸ್ಥಾನದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಬಾರದು’ ಎಂದು ನಿಜಾಮ ಆಜ್ಞೆ ಜಾರಿಗೊಳಿಸಿದನು. ಸಭೆ, ಸಮಾರಂಭಗಳು ನಡೆಯ ಬಾರದು ಎಂದು ಘೋಷಿಸಿದರು. ಇದರಿಂದ ಜನತೆ ತಲ್ಲಣಿಸಿದರು. ಜನಾರ್ದನ ರಾವ್ ದೇಸಾಯಿ ಈ ಆಜ್ಞೆಯನ್ನು ಮುರಿದು ಬಂಧಿತರಾದರು. ಶಿರೂರು ವೀರಭದ್ರಪ್ಪನವರು ಕೊಪ್ಪಳ, ಕಾತರಕಿ, ಕಿನ್ನಾಳ, ಯಲಬುರ್ಗ, ಕುಕನೂರು ಮುಂತಾದ ಕಡೆ ಧ್ವಜ ಹಾರಿಸುವ ಸಿದ್ಧತೆ ಮಾಡಿದ್ದರು. ಅದರಂತೆ ಕೊಪ್ಪಳದಲ್ಲಿ ಲಕ್ಷ್ಮಣಾಚಾರ್ಯ ವಕೀಲ, ವೀರಭದ್ರಪ್ಪ ಶಿರೂರು, ಹಂಪಿ ನರಸಿಂಗರಾಯರು, ಕಿನ್ನಾಳದಲ್ಲಿ ಸಿದ್ದಪ್ಪ ಮಾಸ್ತರರು, ಕಾತರಕಿಯಲ್ಲಿ ಬಂಗಾರಶೆಟ್ಟರು 15ನೆಯ ಆಗಸ್ಟ್ 1947ರಂದು ಧ್ವಜ ಹಾರಿಸಿ ಬಂಧಿತರಾದರು. ದಿನದಿಂದ ದಿನಕ್ಕೆ ಸತ್ಯಾಗ್ರಹಗಳು ಹೆಚ್ಚಾದವು. ನಿಜಾಮ ಸರ್ಕಾರವು ತಮ್ಮ ಬಲದಿಂದ ಇಂತಹ ಚಟುವಟಿಕೆಗಳನ್ನು ಹತ್ತಿಕ್ಕಲು ತೊಡಗಿದರು. ಸತ್ಯಾಗ್ರಹಿಗಳನ್ನು ಬಂಧಿಸಿ ಶಿಕ್ಷೆ ವಿಧಿಸಿ ಹೈದರಾಬಾದ್, ಕಲಬುರ್ಗಿ, ರಾಯಚೂರು, ನಿಜಾಮಬಾದ್, ಔರಂಗಬಾದ್ ಸೆರೆಮನೆಗಳಲ್ಲಿ ಇಡಲಾಯಿತು. ಕಾಂಗ್ರೆಸ್ ಸೇರಿದ ಜನರು ಇದಕ್ಕೆ ಹೆದರದೆ ಹರತಾಳದಲ್ಲಿ ತೊಡಗಿದಾಗ ಸರಕಾರಕ್ಕೆ ಭಯ ಉಂಟಾಯಿತು. ಜೈಲಿನಿಂದ ಕೆಲವರನ್ನು ಬಿಡುಗಡೆ ಮಾಡಿತು.

1947ರ ನಂತರ ರಜಾಕಾರರು ಕೊಪ್ಪಳ ನಾಡಿನಲ್ಲಿ ತುಂಬಿಕೊಂಡು, ನಿಜಾಮರ ಬೆಂಬಲದಿಂದ ಕಾನೂನು ತಮ್ಮ ಕೈಗೆ ತೆಗೆದುಕೊಂಡು ದರೋಡೆ, ಲೂಟಿ, ಕೊಲೆ, ಸುಲಿಗೆ ನಡೆಸಿದರು. ಹೈದರಾಬಾದ್ ಸಂಸ್ಥಾನವು ಮುಸ್ಲಿಂ ರಾಜ್ಯವೆಂದು ನಾಡಿನ ಮುಸ್ಲಿಮರೆಲ್ಲ ಒಂದಾಗಿ ಈ ರಾಜ್ಯವನ್ನು ಸಂರಕ್ಷಿಸಬೇಕೆಂದು ರಜಾಕಾರರ ನಾಯಕ ಕಾಸಿಂರಜ್ವಿ ಜನರಲ್ಲಿ ಮತಾಭಿಮಾನ ಬಿತ್ತಿದನು. ಅಳವಂಡಿ, ಕವಲೂರು, ಬನ್ನಿಕೊಪ್ಪ, ಮುಧೋಳ ಗ್ರಾಮಗಳಲ್ಲಿ ರಜಾಕಾರರು, ಪಠಾಣರು ಬಂದು ಸೇರಿಕೊಂಡರು. ನಿಜಾಮ ಪೊಲೀಸರು ಠಾಣೆಗಳನ್ನು ತೆರೆದರು. ಇವರೆಲ್ಲ ಕೂಡಿಯೇ ಈ ನಾಡಿನ ಸ್ವಾತಂತ್ರ್ಯ ಹೋರಾಟಗಾರರನ್ನು, ಹಳ್ಳಿ ಗಳನ್ನು ಹತ್ತಿಕ್ಕಲು ವಿವಿಧ ತಂತ್ರಗಳನ್ನು ರೂಪಿಸಿಕೊಂಡರು. ಅಳವಂಡಿಯ ಸಿದ್ಧಪ್ಪಟ್ಟನವರ ಮಠವು, ಕವಲೂರು ಬಸವನಗೌಡರ ಗಿಲ್ಲೇದ ಮನೆಯು ಮುಧೋಳದ ಉಪಾಸಪ್ಪ ದೇಸಾಯಿಯವರ ವಾಡಿಯೂ ಪಠಾಣರ ತಂಗುದಾಣಗಳಾದವು. ನಿಜಾಮ ಪೊಲೀಸರಿಗೆ, ರಜಾಕಾರರಿಗೆ, ಪಠಾಣರಿಗೆ ಜನರು ಬಲಿಯಾಗತೊಡಗಿದರು. ಇವರು ದೌರ್ಜನ್ಯ ನಡೆಸಿ ಜನರಿಂದ ತಮಗೆ ಬೇಕಾದ್ದನ್ನು ದೋಚತೊಡಗಿದರು. ಹಣ, ದವಸ ಎಲ್ಲವನ್ನು ದೋಚತೊಡಗಿದರು. ಹಳ್ಳಿಯ ಜನ ಹೆದರಿ ಊರು ತೊರೆದು ನಿಜಾಮ್ ರಾಜ್ಯದಿಂದ ಹೊರಗೆ ವಲಸೆ ಹೋದರು. ಸ್ಥಳೀಯ ಮುಖಂಡರೂ, ರಾಜ್ಯದ ಮುಖಂಡರೂ ಸೇರಿಕೊಂಡು ರಜಾಕಾರರನ್ನು ಎದುರಿಸಲು ಗಡಿ ಪ್ರದೇಶಗಳಲ್ಲಿ ಶಿಬಿರಗಳನ್ನು ಸ್ಥಾಪಿಸಿ ದರು. ಕೊಪ್ಪಳಕ್ಕೆ ಸೇರಿದಂತೆ ಮುಂಡರಗಿ, ಗಜೇಂದ್ರಗಡದಲ್ಲಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಮುಂಡರಗಿಯ ಶಿಬಿರಕ್ಕೆ ಅಳವಂಡಿ ಶಿವಮೂರ್ತಿ ಸ್ವಾಮಿಗಳು, ಬರದೂರಿನ ಶಿಬಿರಕ್ಕೆ ಮುಡಿಯಪ್ಪ ಗೌಡ, ಗಜೇಂದ್ರಗಡದ ಶಿಬಿರಕ್ಕೆ ಪುಂಡಲೀಕಪ್ಪ ಶಿಬಿರಾಧಿಪತಿಗಳಾಗಿ ನೇಮಕಗೊಂಡರು. ಇವರ ನೇತೃತ್ವದಲ್ಲಿ ಅನೇಕ ಸದಸ್ಯರು ಸೇರಿ ಕೊಂಡು ಜೀವನದ ಭಯ ತೊರೆದು ನಾಡಿಗೆ ಹೋರಾಡಿ ಗೆಲುವು ಸಾಧಿಸಿದರು.

ಭಾರತ ಸ್ವಾತಂತ್ರ್ಯ ಚಳವಳಿಯ ಸಮಯದಲ್ಲೂ ಮತ್ತು ಹೈದರಾಬಾದ್ ಕರ್ನಾಟಕ ವಿಮೋಚನ ಅಂದೋಲನದ ಸಮಯದಲ್ಲಿಯೂ ಗಂಗಾವತಿ ನಾಡಿನ ಜನ ಕ್ರಿಯಾತ್ಮಕವಾಗಿ ತೊಡಗಿಸಿಕೊಂಡು ಹೋರಾಟ ನಡೆಸಿದರು. ಈ ನಾಡಿನ ಜನರು ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟವೆಂದರೆ ಅದು ರಜಾಕಾರರ ವಿರುದ್ಧ ನಡೆಸಿದ ಹೋರಾಟವೇ ಆಗಿತ್ತು. ಪ್ರಜ್ಞಾವಂತ ಜನರು ಈ ಹೋರಾಟಕ್ಕೆ ಜನತೆಯನ್ನು ಸಂಘಟಿಸಿದ ರೀತಿ, ಕೈಗೊಂಡ ಯೋಜನೆಗಳು, ಸತ್ಯಾಗ್ರಹ, ಅಸಹಕಾರ ಹರತಾಳ ಹಾಗೂ ರಜಾಕಾರರ ವಿರುದ್ಧ ರೂಪಿಸಿದ ಪ್ರತಿರೋಧಕ ಚಟುವಟಿಕೆಗಳ ಕಥನ ಅನನ್ಯ ರೀತಿಯದು. ಸ್ವಾತಂತ್ರ್ಯಪೂರ್ವದಲ್ಲಿ ಗಂಗಾವತಿ ನಾಡಿನಲ್ಲಿ ರಾಜಕೀಯ ಪ್ರಜ್ಞೆ ಮತ್ತು ದೇಶಭಕ್ತಿ ಮೂಡಲು ಹಲವು ಸಂಗತಿಗಳು ಪ್ರೇರಕವಾದವು. ಹೈದರಾಬಾದ್ ರಾಜ್ಯದ ಕಾಂಗ್ರೆಸ್ ನಾಯಕರಾದ ಜನಾರ್ದನರಾವ್ ದೇಸಾಯಿ, ರಾಘವೇಂದ್ರಾಚಾರ್ ಜಾಗೀರದಾರ, ವಿದ್ಯಾನಂದ ಗುರು ಕುಲದ ಸಂಸ್ಥಾಪಕರಾದ ರಾಘವೇಂದ್ರರಾವ್ ದೇಸಾಯಿ ಮುಂತಾದವರು ಗಂಗಾವತಿಗೆ ಕೆಲವು ಸಲ ಬಂದು ಸ್ವಾತಂತ್ರ್ಯಕ್ಕಾಗಿ ಇಲ್ಲಿಯ ಕಾಂಗ್ರೆಸ್ ನಾಯಕರಿಗೆ, ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಹಬ್ಬ, ಉತ್ಸವಗಳನ್ನು ನೆಪವಾಗಿಟ್ಟುಕೊಂಡುೊಸ್ಥಳೀಯರು ನಾಡಿನ ಹಿರಿಯರನ್ನು ಅತಿಥಿಗಳನ್ನಾಗಿ ಕರೆಸಿ ಉಪನ್ಯಾಸವನ್ನು ಏರ್ಪಡಿಸುತ್ತಿದ್ದರು. ಉಪನ್ಯಾಸಗಳು ನಾಡಿನ ಜನತೆಗೆ ಪ್ರೇರಕವಾಗಿರುತ್ತಿದ್ದವು. ಕಸಬೆ ಪಾಂಡುರಂಗರಾವ್, ಕೀರ್ತನ ಕೇಸರಿ ಜಯರಾಮಚಾರಿ, ಕೊತ್ಲಾಚಾರ ಮುಂತಾದವರು ಬಂದು ರಾಜಕೀಯ ಪ್ರಜ್ಞೆಯನ್ನು ಮೂಡಿಸಿದರು.

‘ನಿಜಾಮ ಕರ್ನಾಟಕ ಪರಿಷತ್’ ಸಮ್ಮೇಳನ ಬೀದರಿನಲ್ಲಿ ಜರುಗಿದಾಗ ಗಂಗಾವತಿ ನಾಡಿನ ಅನೇಕರು ಪಾಲ್ಗೊಂಡರು. ಇದರಿಂದ ಪ್ರಭಾವಿತರಾಗಿ ಮುಂದಿನ ಸಮ್ಮೇಳನವನ್ನು ಗಂಗಾವತಿಯಲ್ಲಿ ನಡೆಸಲು ನಿರ್ಧರಿಸಿ ಪರಿಷತ್ ಮುಖಂಡರಿಗೆ ಮನವಿ ಮಾಡಿಕೊಂಡರು. ಒಪ್ಪಿಗೆ ಪಡೆದು ಗಂಗಾವತಿಯಲ್ಲಿಯೇ ಹೈದರಾಬಾದ್ ನಿಜಾಮ ಕರ್ನಾಟಕ ಪರಿಷತ್ತನ್ನು ಆಯೋಜಿಸಿದರು. ಸಮ್ಮೇಳನವು ಮೂರು ದಿನ ಆದ್ದೂರಿಯಿಂದ ಖಾಜನಗೌಡರ ಮನೆ ಬಯಲಲ್ಲಿ ನಡೆಯಿತು. ರಾಜ್ಯಮಟ್ಟದ ನಾಯಕರು ಬಂದು ಪಾಲ್ಗೊಂಡರು. ಇದರಿಂದ ಸ್ಥಳೀಯ ಕಾರ್ಯಕರ್ತರಿಗೆ ಚೈತನ್ಯ ತುಂಬಿತು. ‘ಒಕ್ಕೂಟ ಸೇರಿರಿ’ ದಿನಾಚರಣೆಯಲ್ಲಿ ಆರ್.ಎಂ.ಗಂಗಾವತಿ, ಕೇಶವರಾವ್, ಶ್ರೀಖಂಡೆಯವರ ನೇತೃತ್ವವನ್ನು ಪಡೆದು ಹೋರಾಟಗಾರರು ಹರತಾಳ, ಸತ್ಯಾಗ್ರಹ ಮಾಡಿ ಬಂಧಿತರಾದರು. 1947ನೆಯ ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ನೈಜಾಮ ಪ್ರಾಂತ್ಯದ ಆ ದಿನ ಕರಾಳದಿನವಾಗಿ ಪರಿಣಮಿಸಿತು. ಯಾರೂ ರಾಷ್ಟ್ರಧ್ವಜವನ್ನು ಹಾರಿಸುವಂತಿಲ್ಲ. ಆದರೂ ಗಂಗಾವತಿಯಲ್ಲಿ ಎರಡೋಣಿ ವೆಂಕೋಬಾಚಾರ್ಯರು ಮರಳಿ ಹಳ್ಳಿಯಲ್ಲಿ, ಬೆಣಕಲ್ ಭೀಮಸೇನರಾವ್ ಕಾರಟಗಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡಿ ಬಂಧಿತರಾದರು. ಗುಲಬರ್ಗಾ ಜೈಲಿನಲ್ಲಿ ಪೊಲೀಸರ ಕ್ರೌರ್ಯಕ್ಕೆ ಭೀಮಸೇನರಾವ್ ಜೀವ ತೆತ್ತರು. 1947ನೆಯ ಸೆಪ್ಟೆಂಬರ್ 2ರಂದು ರಾಷ್ಟ್ರಧ್ವಜ ದಿನಾಚರಣೆಯನ್ನು ನೆರವೇರಿಸಿದರು. ಇಂಟರ್ ಮೀಡಿಯಟ್ ವಿದ್ಯಾರ್ಥಿ ವೆಂಕಣ್ಣಶೆಟ್ಟಿ ಸ್ಫೂರ್ತಿದಾಯಕ ಭಾಷಣ ಮಾಡಿ ಬಂಧಿತನಾದ. ಜೊತೆಗೆ ವೆಂಕೋಬಾಚಾರ್ಯ ಮತ್ತು ಪ್ರಹ್ಲಾದರಾವ್ ಅಕ್ಬರರನ್ನು ಕೂಡ ಇನ್‌ಸ್ಪೆಕ್ಟರ್ ಬಂಧಿಸಿದರು. 1947ನೆಯ ಅಕ್ಟೋಬರ್ 2ರಂದು ಗಂಗಾವತಿಯಲ್ಲಿ ‘ನಿಜಾಮ್ ದಬ್ಬಾಳಿಕೆ ವಿರೋಧಿ ದಿನ’ ಆಚರಿಸಿ ಎಂ.ವೆಂಕನಗೌಡ, ಎನ್.ರುದ್ರಗೌಡ, ನಂದಿಹಳ್ಳಿ ಎನ್.ನರಸಿಂಹಾಚಾರ್ಯ, ಎನ್ ಆನಂತರಾವ್, ಟಿ.ನಾರಾಯಣರಾವ್ ಸತ್ಯಾಗ್ರಹ ಮಾಡಿ ಸೆರೆಮನೆಗೆ ಸೇರಿದರು. ರಾಯಚೂರಿನ ವಿದ್ಯಾರ್ಥಿ ಸಂಘದ ಮುಖಂಡರಾದ ಕೆ.ಮಹಾಂತಯ್ಯಸ್ವಾಮಿ ಹಿರೇಮಠ ಹಾಗೂ ನೀಲಕಂಠಯ್ಯ ಗೋರೇಬಾಳ ಇವರು ಗಂಗಾವತಿಗೆ ಬಂದು ವಿದ್ಯಾರ್ಥಿಗಳನ್ನು ಸಂಘಟಿದರು. ಹೈದರಾಬಾದ್ ಕರ್ನಾಟಕ ವಿಮೋಚನೆಯಾಗುವವರೆಗೆ ಶಾಲಾ ಕಾಲೇಜು ಗಳನ್ನು ಬಹಿಷ್ಕರಿಸಬೇಕೆಂದು ನಿರ್ಣಯಿಸಲಾಯಿತು. ಚಿಕ್ಕವಯಸ್ಸಿನಲ್ಲೇ ಬಸಪ್ಪ ಎನ್. ಅಂಗಡಿಯವರು ಬರಗೂರಿನಲ್ಲಿ ಮತ್ತು ನಂತರ ಡಾ.ರಾಮರಾಯರೊಂದಿಗೆ ಕಾರಟಗಿಯಲ್ಲಿ ಪ್ರತಿಭಟಿಸಿದಾಗ ನಿಜಾಮ ಪೊಲೀಸರು ಬಂಧಿಸಿ ಗಂಗಾವತಿ ಜೈಲಿನಲ್ಲಿಟ್ಟರು. ವಿದ್ಯಾರ್ಥಿಗಳಾದ ಎಣ್ಣೆ ವೆಂಕಣ್ಣ, ರುದ್ರಗೌಡ ಕಾರಟಗಿ, ಭೀಮಸೇನರಾವ್ ಗೋಗಿ, ವೆಂಕೋಬಾಚಾರ್ಯ, ನಾಗರಹಳ್ಳಿ, ಹೇರೂರು ರಾಮರಾವ, ನರಸಿಂಹಾಚಾರ ನವಲಿ, ನವಲಿ ಗುರುರಾಜ, ಅಕಬರ ಬೋಗೇಶರಾವ್, ಪ್ರಹ್ಲಾದರಾವ್ ಅಕಬರ, ಕಲ್ಯಾಣರಾವ್ ಕುಲಕರ್ಣಿ, ರಾಧಾ ಕಿಷನ್‌ಸಿಂಗ್, ಸುಗಂಧಿ ಪಂಪಣ್ಣ, ವೆಂಕನಗೌಡ ತಾವರಗೇರಿ, ಶ್ರೀರಾಮಾಚಾರ್ಯ ಆಯೋಧ್ಯಾ ಮುಂತಾದವರು ಹೋರಾಟಕ್ಕೆ ಮುಂದೆ ಬಂದು ನಿಂತರು.

ರಾಮಭಟ್ ಜೋಶಿಯವರು ನಿಜಾಮ ಸರಕಾರದ ದಬ್ಬಾಳಿಕೆಯ ವಿರುದ್ಧ ಹೋರಾಟಕ್ಕೆ ಅನೇಕರನ್ನು ಕೂಡಿಕೊಂಡು ಭೂಗತ ಚಳವಳಿ ಆರಂಭಿಸಿದರು. ಗಂಗಾವತಿ ತಾಲ್ಲೂಕಿನ ನವಲಿ ಹಳ್ಳಿಯಲ್ಲಿ ನಿಜಾಮ ಸರಕಾರದ ವಿರುದ್ಧ ಸಿಡಿದೆದ್ದು ನಿಂತ ಜನತೆ, ನಿಜಾಮ ಸರಕಾರಕ್ಕೆ ಲೇವಿ ಹಾಗೂ ಮಾಲ ಗುಜಾರಿ ಕೊಡುವುದಿಲ್ಲವೆಂದು ಬಂಡೆದ್ದರು. ವಿರೂಪಾಕ್ಷಗೌಡ, ಚಳ್ಳೂರು ರಾಘವೇಂದ್ರರಾವ್, ಪಂಚಾಕ್ಷರಯ್ಯ ವಕೀಲ ನೇತೃತ್ವ ವಹಿಸಿಕೊಂಡರು. ರೈತರು ಪೊಲೀಸರಿಗೆ ಲೇವಿ ಕೊಡಲು ನಿರಾಕರಿಸಿದರು. ಪೊಲೀಸರು ಗೋಲಿಬಾರ್ ಮಾಡಿದರು. ರೈತ ಮುಖಂಡ ಮಾರಣ್ಣ ಕಂಬ್ಳಿ ಗುಂಡು ತಗುಲಿ ಮೃತ ಪಟ್ಟನು. ಇನ್ನೊಬ್ಬ ರೈತ ಜಂಮ್ಯಾಪ್ಪ ಲಮಾಣಿಗೂ ಗುಂಡು ಬಡಿಯಿತು. ಮಾರಣ್ಣ ಕಂಬ್ಳಿ ಅವರ ಮರಣ ಹೊಂದಿದ ಸ್ಥಳದಲ್ಲಿ ಧ್ವಜರೋಹಣ ಮಾಡಲಾಯಿತು.

ನಿಜಾಮ ಸರಕಾರವನ್ನು ಬೆಂಬಲಿಸುವ ರಜಾಕಾರರಿಗೆ ಪ್ರಭುತ್ವವೇ ಅನೇಕ ಸವಲತ್ತುಗಳನ್ನು ನೀಡುತ್ತಿತ್ತು. ಗಂಗಾವತಿ ನಾಡಿನಲ್ಲಿ ರಜಾಕಾರರು ಕಾಂಗ್ರೆಸ್ಸಿಗರ ಮನೆಗೆ ನುಗ್ಗಿ ಬೆದರಿಕೆ ಹಾಕುವುದು, ಮನೆಮಂದಿಗೆ ಮಾನಸಿಕ ಭಯವನ್ನುಂಟು ಮಾಡುವ ಕೆಲಸವನ್ನು ನಿರಂತರವಾಗಿ ಮುಂದುವರಿಸಿದರು. ಕಿರುಕುಳವನ್ನು ತಾಳಲಾರದೇ ಅನೇಕರು ಮನೆಮಾರು ಬಿಟ್ಟು ಗುಡಿದಾಟಿ ಕಂಪ್ಲಿ, ಕಮಲಾಪುರ, ಹೊಸಪೇಟೆಗೆ ವಲಸೆ ಹೋದರು. ಆಯೋಧ್ಯಾ ರಾಘವೇಂದ್ರಚಾರರ ಹೊಲದಲ್ಲಿ ಕಬ್ಬು ಮತ್ತು ನೆಲ್ಲನ್ನು ರಜಾಕಾರರು ಲೂಟಿ ಮಾಡಿದರು. ರಾಮಭಟ್ ಜೋಶಿಯ ಪತ್ನಿಯನ್ನು(ಪದ್ಮಾವತಿ)ಯನ್ನು ಬಂಧಿಸಿ ಕೊಪ್ಪಳದ ಜೈಲಿಗೆ ಸಾಗಿಸಿದರು. ಆನೆಗುಂದಿಯಲ್ಲಿ ಪ್ರಭುತ್ವದಲ್ಲಿದ್ದ ಅಧಿಕಾರಿಗಳ ಹೆಸರನ್ನು ಬರೆದು ಕತ್ತೆಗೆ ಅಂಟಿಸಿದ್ದರಿಂದ ಅನಂತಕೃಷ್ಣರ ಮನೆಯನ್ನು ಪೂರ್ತಿ ಲೂಟಿ ಮಾಡಿದರು. ಬಂಧಿಸಿ ಗುಲಬರ್ಗಾ ಜೈಲಿಗೆ ಕಳಿಸಿದರು. ಸಂತೆಗೆ ಹೋಗಿ ಮರುಳುತ್ತಿದ್ದ ಮುಕ್ಕಂಪ ಹಳ್ಳಿಯ ಹೆಂಗಸರ ಮೇಲೆ ರಜಾಕಾರರು ಬಲತ್ಕಾರ ಮಾಡಲು ಪ್ರಯತ್ನಿಸಿ ವಿಫಲರಾದರು. ರೈತರಿಗೆ ವಿಪರೀತ ಹಿಂಸೆ ನೀಡುತ್ತಿದ್ದ ಹುಲಿಹೈದರ ಜಹಗೀರಿನ ತಹಸೀಲ್ದಾರನು ಒಮ್ಮೆ ಗುನ್ನಾಳಿಯ ಪುರುಷೋತ್ತಮ ರಾಯರ ಮನೆ ಹೊರಗೆ ಮಲಗಿದ್ದನು. ಇದನ್ನು ಮನಗಂಡು ಜಯತೀರ್ಥರಾಜ ಪುರೋಹಿತರು ಕನಕಗಿರಿ ತಲೆಗೆ ಪೆಟ್ಟು ನೀಡಿ ಓಡಿ ಹೋದರು.

ರಜಾಕಾರರ ದಾಳಿ, ಹಾವಳಿ ಹೆಚ್ಚಾದಾಗ ಅನೇಕ ಹಳ್ಳಿಯ ಜನ ನಿಜಾಮ ರಾಜ್ಯ ದಾಟಿ ಹೊರಗೆ ವಲಸೆ ಹೋದರು. ಅದರಂತೆ ಜನರು ಗಡಿಯಲ್ಲಿ ಶಿಬಿರಗಳನ್ನು ಸ್ಥಾಪಿಸಿ, ಅಲ್ಲಿಯೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ರಜಾಕಾರರ ಮೇಲೆ ಗೆರಿಲ್ಲಾ ಯುದ್ಧ ಮಾಡುವ ಕಲೆ ಕಲಿತು ಅದರಂತೆ ರಜಾಕಾರರ ಗುಂಪುಗಳಿಗೆ, ವಾಸಸ್ಥಾನಗಳಿಗೆ, ಅವರ ಕಚೇರಿಗಳಿಗೆ ಬಹಳಷ್ಟು ನಷ್ಟ ಮಾಡಿದರು. ಶಿರಗುಪ್ಪ, ಕಂಪ್ಲಿಯಲ್ಲಿ ಗಂಗಾವತಿಯ ಹೋರಾಟಗಾರರು ಶಿಬಿರಗಳನ್ನು ಸ್ಥಾಪಿಸಿದರು. ಬಿ.ಮರಿಯಪ್ಪ ಶಿಬಿರಾಧಿಪತಿಯಾಗಿದ್ದರು. ಬಿ.ಎನ್.ಅಂಗಡಿ, ಭೀಮಸೇನರಾವ್ ಜೋಶಿ, ರಾಯಚೂರಿನ ಶಿವಯ್ಯ ಶಿಬಿರದ ಸದಸ್ಯರಾಗಿದ್ದರು. ಕಂಪ್ಲಿ ಶಿಬಿರದಲ್ಲಿ ಕೇಶವರಾವ ಶ್ರೀಖಂಡೆ, ಗೌಳಿ ಮಹಾದೇವಪ್ಪ, ಎಸ್.ಗುರುರಾಜರಾವ್, ಕಾರಟಗಿ ರುದ್ರಪ್ಪ, ಕನಗಿರಿ ಹಂಪಯ್ಯ, ಆರ್. ಎಂ.ಗಂಗಾವತಿ, ನಂದಿಹಳ್ಳಿ ರುದ್ರಗೌಡ, ಮುಕ್ಕುಂದಿ ವೆಂಕೋಬಾಚಾರ್, ಎಸ್.ಪಂಪಣ್ಣ, ಇದ್ದರು. ರಜಾಕಾರರ ಕ್ಯಾಂಪಿಗೆ ಯಾವುದೇ ರೀತಿಯ ಸಂಪರ್ಕ, ಸೌಲಭ್ಯಗಳನ್ನು ದಕ್ಕದಂತೆ ನೋಡಿಕೊಳ್ಳುವುದು ಈ ಶಿಬಿರಗಳ ಸದಸ್ಯರ ಕೆಲಸವಾಗಿರುತ್ತಿದ್ದವು. ಇಲ್ಲಿ ಹುಸೇನಸಾಬ, ಪರ್ವತಪ್ಪ ಮರೆಯದಂತಹ ಕೆಲಸ ಮಾಡಿದರು. ಕ್ಯಾಂಪುಗಳನ್ನು ಸುಡುವುದು, ಬಾಂಬ್ ಎಸೆಯುವುದು, ಮೇಲೆ ಆಕ್ರಮಣ ಮಾಡಿ ನಷ್ಟವನ್ನು ಉಂಟುಮಾಡುವಂತೆ ಯೋಜನೆ ಗಳಾಗಿರುತ್ತಿದ್ದವು.

1920ರಲ್ಲಿ ಗಾಂಧೀಜಿಯವರು ಮದರಾಸಿನಿಂದ ಮುಂಬಯಿಗೆ ರಾಯಚೂರು ಮಾರ್ಗವಾಗಿ ಪ್ರಯಾಣ ಬೆಳೆಸಿದರು. ಈ ಹೊತ್ತಿಗೆ ರಾಷ್ಟ್ರ ಮಟ್ಟದಲ್ಲಿ ಬ್ರಿಟಿಶರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಅನೇಕ ಬಗೆಯಲ್ಲಿ ಹೋರಾಟಗಳು ನಡೆದಿದ್ದವು. ವಿದೇಶಿ ಬಟ್ಟೆಗಳ ಬಹಿಷ್ಕಾರ ಆಂದೋಲನವೂ ಬಿರುಸಾಗಿತ್ತು. ರಾಯಚೂರು ರೈಲು ನಿಲ್ದಾಣದಲ್ಲಿ ಗಾಂಧೀಜಿಯವರನ್ನು ಕಾಣುವ ಉತ್ಸಾಹ ರಾಯಚೂರಿನ ಜನಕ್ಕೆ ಹೆಚ್ಚಾಗಿತ್ತು. ನಿಜಾಮ ಪೊಲೀಸರು ಇದನ್ನು ತಡೆಯಲು ಸಾಕಷ್ಟು ಶ್ರಮಿಸಿದರು. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹುಮ್ಮಸಿನ ಜನರು, ನಿಜಾಮರ ಅಡ್ಡಿ ಆತಂಕಗಳನ್ನು ಲೆಕ್ಕಿಸದೆ ಗಾಂಧೀಜಿ ಅವರನ್ನು ಕಾಣಲು ರೈಲು ನಿಲ್ದಾಣಕ್ಕೆ ನುಗ್ಗಿದರು. ಗಾಂಧೀಜಿಯವರು ಕುಳಿತಿದ್ದ ಬೋಗಿಯ ಹಿಂದೆ ಮುಂದಿನ ಬೋಗಿಗಳು ಜನರು ಎಸೆದ ವಿದೇಶಿ ಬಟ್ಟೆಗಳಿಂದ ತುಂಬಿದ್ದವು. ರಾಯಚೂರಿನ ಜನ ತೊಟ್ಟ ಬಟ್ಟೆಗಳನ್ನು ಬಿಚ್ಚಿ ಎಸೆದು ವಿದೇಶಿ ಬಟ್ಟೆಗಳ ಬಹಿಷ್ಕಾರ ಆಂದೋಲನಕ್ಕೆ ಕೈ ಜೋಡಿಸಿದರು. ಅಸಂಖ್ಯಾತ ಜನರು ಗಾಂಧೀಜಿಯವರ ಕರೆಯ ಮೇರೆಗೆ ಹೋರಾಟಕ್ಕೆ ಸ್ಫೂರ್ತಿ ಪಡೆದರು.

ಇದೇ ಸಮಯದಲ್ಲಿ ಪಂಡಿತ ತಾರಾನಾಥರು ನಿಜಾಮ ಆಡಳಿತವನ್ನು ವಿರೋಧಿಸಿ ಲೇಖನಗಳನ್ನು ಬರೆದರು. ರಾಯಚೂರಿನಲ್ಲಿ ಅವರು ಹಮದರ್ದ ಶಾಲೆಯನ್ನು ಆರಂಭಿಸಿದರು. ಸರಕಾರಿ ಶಾಲೆಯಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬಂದು ಸೇರಿಕೊಂಡರು. ರಾಷ್ಟ್ರೀಯ ಭಾವನೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಲು ಈ ಶಾಲೆ ನೆಲೆಯಾಯಿತು. ರಾಯಚೂರಿನಲ್ಲಿ ತಾರಾನಾಥರ ತತ್ವಗಳಿಗೆ ಬೆಂಬಲವಿತ್ತ ಅನೇಕ ಪ್ರಜ್ಞಾವಂತರು ಸ್ವಾತಂತ್ರ್ಯದ ಹೋರಾಟಕ್ಕೆ ತೊಡಗಿಸಿಕೊಂಡರು. ಪಿ.ಕಿಶನ್‌ರಾಯ, ಪಿ.ಶ್ರೀನಿವಾಸರಾಯ, ಯೋಗೇಂದ್ರರಾಯ ಮುಂತಾದವರು ರಾಷ್ಟ್ರದಲ್ಲಿ ನಡೆಯುವ ವಿದ್ಯಮಾನಗಳನ್ನು ಚರ್ಚಿಸುತ್ತಿದ್ದರು. ಗಾಂಧೀಜಿ ಪ್ರಭಾವದಿಂದ ಅಡವಿರಾವ್ ಫಡ್ನವೀಸ್ ರಾಯಚೂರಿನಲ್ಲಿ ಸ್ವಾತಂತ್ರ್ಯಾಂದೋಲನದ ಬಗ್ಗೆ ಭಾಷಣಗಳನ್ನು ಮಾಡುತ್ತ ಜನರನ್ನು ಪ್ರೇರೇಪಿಸಿದರು. ಇವರಿಗೆ ರಾ.ಗು.ಜೋಷಿ ಜೊತೆಯಾಗಿ ನಿಂತರು. ವೀರಣ್ಣ ಮಾಸ್ತಾರ, ಗುಡಿಹಾಳ್ ಹನುಮಂತರಾಯ ಮುಂತಾದವರೆಲ್ಲ ಸೇರಿಕೊಂಡು ಸ್ವಾತಂತ್ರ್ಯ ಹೋರಾಟದ ಚಟುವಟಿಕೆಗಳನ್ನು ಗುಪ್ತವಾಗಿಯೂ ಮಾಡತೊಡಗಿದರು. ನಿಜಾಮ್ ಪೊಲೀಸರ ಕಣ್ಣಿಗೆ ಒತ್ತುವಂತೆ ಖಾದಿ ಪ್ರಚಾರಗಳು ನಡೆದವು. 1924 ಮತ್ತು 1928ರಲ್ಲಿ ಎರಡು ಸಲ ಭಾಸ್ಕರಾನಂದಜಿ ರಾಯಚೂರಿಗೆ ಬಂದು ‘ಭಕ್ತಿ ಯೋಗ’ದ ಮೇಲೆ ಉಪನ್ಯಾಸ ಮಾಡಿದರು. ಕೀರ್ತನ ಕೇಸರಿ ಎಂದೇ ಖ್ಯಾತರಾದ ಕೊಪ್ಪಳದ ಜಯರಾಮಚಾರ್ಯ ಜಿಲ್ಲೆಯಾದ್ಯಂತ ತಮ್ಮ ಕೀರ್ತನೆಗಳನ್ನು ಏರ್ಪಡಿಸಿದರು. ಇಂಥ ಸಾಂಸ್ಕೃತಿಕ ಚಟುವಟಿಕೆಗಳು ನೇರವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋರಾಯಚೂರು ಜಿಲ್ಲೆಯಾದ್ಯಂತ ಯಾವುದೇ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳು ನಡೆದರೂ ಅವು ಹೋರಾಟವನ್ನೂ ಬಲಪಡಿಸುವ ನೀತಿಯನ್ನು ಹೊಂದಿದ್ದವು.

 

ಕರ್ನಾಟಕ ತರುಣ ಸಂಘ

ರಾಯಚೂರಿನಲ್ಲಿ ‘ಕರ್ನಾಟಕ ತರುಣ ಸಂಘ’ ಹುಟ್ಟಿಕೊಂಡದ್ದೇ ಸಾಹಿತ್ಯ ಕಲೆ, ಸಂಗೀತ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ. ಜನರಲ್ಲಿ ಜಾಗೃತಿಯನ್ನು ಹೆಚ್ಚಿಸುವುದಕ್ಕಾಗಿ ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರೀಯ ಮನೋಭಾವವನ್ನು ಜನತೆಯಲ್ಲಿ ಬೆಳೆಸಲು ಒಂದು ವೇದಿಕೆಯ ಅಗತ್ಯವಿತ್ತು. ರಾಷ್ಟ್ರಮಟ್ಟದಲ್ಲಿ ಸಂಭವಿಸುವ ಸಂಗತಿಗಳನ್ನು ಅರಿತುಕೊಳ್ಳಲು, ನಿಜಾಮ ರಾಜ್ಯದ ಪರಿಸ್ಥಿತಿಯನ್ನೂ ಜನರಿಗೆ ತಿಳಿಸಲು ಜನರನ್ನು ಒಂದು ವೇದಿಕೆಗೆ ತರುವ ಪ್ರಯತ್ನದ ಫಲವಾಗಿ ಕರ್ನಾಟಕ ತರುಣ ಸಂಘ ಹುಟ್ಟಿಕೊಂಡಿತು. ಇದರ ವತಿಯಿಂದ ವಾಚನಾಲಯವೂ ಆರಂಭವಾಯಿತು. ವೀರಣ್ಣ ಮಾಸ್ತರ, ಜಗನ್ನಾಥರಾವ್ ಫಡ್ನವೀಸ್, ಡಿ.ಮಾಣಿಕರಾವ್, ರಾ.ಗು.ಜೋಶಿ, ಜಿ.ಮಧ್ವರಾವ್ ಮುಂತಾದವರು ಸೇರಿಕೊಂಡು ಈ ಸಂಘವನ್ನು ಹುಟ್ಟುಹಾಕಿ, ಸಾಂಸ್ಕೃತಿಕ ಚಟುವಟಿಕೆಗಳ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳನ್ನು ಶುರು ಮಾಡಿದರು. 1930ರ ಹೊತ್ತಿಗೆ ಇದು ‘ಕರ್ನಾಟಕ ಸಂಘ’ವಾಗಿ ನಾಡಹಬ್ಬ, ಗಣೇಶೋತ್ಸವ, ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಂಡಿತು. ಈ ಉತ್ಸವಗಳಿಗೆ ನಾಡಿನ ವಿದ್ವಾಂಸರನ್ನು, ರಾಷ್ಟ್ರೀಯ ಪ್ರಜ್ಞೆ ಎಚ್ಚರಿಸುವ ಮುತ್ಸದ್ದಿಗಳನ್ನು ಅತಿಥಿಗಳಾಗಿ ಕರೆಸುವ ಮೂಲಕ ಈ ನಾಡಿನ ಚರಿತ್ರೆ, ಸಂಸ್ಕೃತಿ, ಜನರ ಸ್ವಾಭಿಮಾನವನ್ನು ಬಣ್ಣಿಸುವ ಮತ್ತು ಆ ಮೂಲಕ ಸದ್ಯದ ಪರಿಸ್ಥಿತಿಯನ್ನು ಜನರ ಗಮನಕ್ಕೆ ತಂದು ಬ್ರಿಟಿಶರಿಂದ ನಿಜಾಮರಿಂದ ನಾಡನ್ನು, ದೇಶವನ್ನು ಮುಕ್ತಗೊಳಿಸಲು ಹೋರಾಟದ ಅಗತ್ಯವನ್ನು ವಿವರಿಸುತ್ತಿದ್ದರು. ಇದು ನಿಜಾಮ ಸರಕಾರಕ್ಕೆ ಗೊತ್ತಾಗಿ, ಇಂಥ ಸಾಂಸ್ಕೃತಿಕ ಚಟುವಟಿಕೆಗಳನ್ನು ಏರ್ಪಡಿಸುವಾಗ ಸರಕಾರದ ಅನುಮತಿಯನ್ನು ಪಡೆಯಬೇಕೆಂಬ ನಿಯಮ ಹೇರಿತು. ಇದರಿಂದ ಮೈಸೂರು ಸಂಸ್ಥಾನದಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಮಾಸ್ತಿ ಅವರು ಒಮ್ಮೆ ನಾಡಹಬ್ಬಕ್ಕೆ ರಾಯಚೂರಿಗೆ ಬಂದು, ಈ ಸಂಘಕ್ಕೆ ಭೇಟಿ ನೀಡಿ ಭಾಷಣ ಮಾಡಲು ಸಾಧ್ಯವಾಗದೇ ಹಿಂದಿರುಗಿ ಹೋದರಂತೆ. ಹಿರಿಯ ಸಾಹಿತಿ ಮಾಸ್ತಿ ಅವರಿಗೆ ನಿಜಾಮ ಸಂಸ್ಥಾನದ ಅವಸ್ಥೆಯ ಅರಿವಿತ್ತು. ಅವರು ಸುಶೀಲ ರಜಾಕಾರ್ ಎಂಬ ಕಥೆಯನ್ನು ಬರೆದಿದ್ದಾರೆ. ಅದು ನಿಜಾಮ ಸಂಸ್ಥಾನದ ಕ್ರೌರ್ಯದ ನೈಜ ಚಿತ್ರಣವನ್ನು ಹೊಂದಿದೆ. ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾಯ, ದ.ರಾ.ಬೇಂದ್ರೆ, ಜಿ.ಪಿ.ರಾಜರತ್ನಂ, ಬಿ.ಎಂ.ಶ್ರೀ, ಡಿ.ವಿ.ಗುಂಡಪ್ಪ, ಗರೂಡ ಸದಾಶಿವರಾಯರು ಮುಂತಾದ ನಾಡಿನ ಹಿರಿಯ ಸಾಹಿತಿಗಳು ರಾಯಚೂರಿನ ಕರ್ನಾಟಕ ಸಂಘಕ್ಕೆ ಬಂದು ಉಪನ್ಯಾಸ, ಭಾಷಣಗಳನ್ನು ಮಾಡಿ ಜನರಲ್ಲಿ ಜಾಗೃತಿಯನ್ನುಂಟು ಮಾಡಿದರು. 20ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 1934ರಲ್ಲಿ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ನಗರದ ನಗರೇಶ್ವರ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಸಲಾಯಿತು. ಮೂರು ದಿನಗಳ ಕಾಲ ವಿವಿಧ ಗೋಷ್ಠಿಗಳಲ್ಲಿ ಉಪನ್ಯಾಸಗಳಿದ್ದವು. ಗುಡಿಹಾಳ ಹನುಮಂತರಾವ್, ರಾ.ಗು.ಜೋಶಿ, ಡಿ.ಮಾಣಿಕ್‌ರಾವ್ ಈ ಸಮ್ಮೇಳನಕ್ಕೆ ದುಡಿದರು.

ರಾಯಚೂರು ಜಿಲ್ಲೆಯಲ್ಲಿನ ಅನೇಕ ಹಳ್ಳಿಗಳಲ್ಲಿ ನಿಜಾಮ ಅಧಿಕಾರಿಗಳು ‘ಲೇವಿ’ ವಸೂಲಿಗೆ ಬಲವಂತ ಮಾಡುವುದು ಅತಿಯಾದಾಗ ರೈತರು ಅನಿವಾರ್ಯವಾಗಿ ವಿರೋಧಿಸುವ ಮನೋಭಾವ ಬೆಳೆಸಿಕೊಂಡರು. ‘ಲೇವಿ’ ವಸೂಲಿಯ ನೆಪದಲ್ಲಿ ಸರಕಾರದ ಅಧಿಕಾರಿಗಳು ಕೆಟ್ಟ ಕೃತ್ಯಗಳಲ್ಲಿ ತೊಡಗಿದರು. ಹರವಿ, ನಾರಬಂಡಿ, ಕವಿತಾಳ, ಕಾಡಲೂರು ಮುಂತಾದ ಅನೇಕ ಹಳ್ಳಿಗಳಲ್ಲಿ ಬಡವರನ್ನು ಹಿಂಸೆಗೆ ಗುರಿಮಾಡಲಾಯಿತು. ರಾಯಚೂರು ಜಿಲ್ಲೆಯಲ್ಲೇ ಈ ‘ಲೇವಿ’ ವಸೂಲಿಯ ಸಂದರ್ಭದಲ್ಲಿ ನಿಜಾಮ ಅಧಿಕಾರಿ ಗಳು ರೈತರಿಗೆ ಬಗೆಬಗೆ ರೀತಿಯ ಕಿರುಕುಳ ನೀಡಿದರು. ಬಲವಂತವಾಗಿ ವಸೂಲಿ ಮಾಡಿಕೊಂಡರು. ವಿರೋಧಿಸಿದ ರೈತರನ್ನು ನಿಜಾಮ ಪೊಲೀಸರು ದಂಡಿಸಿದರು. ಅನೇಕ ರೈತರು ಪ್ರಾಣವನ್ನು ಕಳೆದುಕೊಂಡರು. ಅನೇಕ ಹಳ್ಳಿಗಳಲ್ಲಿ ‘ಲೆವಿ’ ವಸೂಲಿಗೆ ಬಂದವರ ಜೊತೆ ಹೋರಾಡಿ ಲೇವಿ ಉಳಿಸಿಕೊಂಡರು. ಈ ಘಟನೆಯ ಹಿನ್ನೆಲೆಯಲ್ಲಿ ಪ್ರಾಣಹಿತ ಸಂಘವೂ ಹುಟ್ಟಿ ಕೊಂಡು ರಕ್ಷಣೆಯನ್ನು ನೀಡಲು ಶ್ರಮಿಸಿತು. ರಾಯಚೂರು ನಗರದಲ್ಲಿ ನಿಜಾಮನ ನಾಣ್ಯಗಳ ಜೊತೆಗೆ ಬ್ರಿಟಿಶರ ನಾಣ್ಯಗಳೂ ಚಲಾವಣೆಯಲ್ಲಿದ್ದವೆಂದು ತಿಳಿದುಬರುತ್ತದೆ. ನಿಜಾಮನ ನಾಣ್ಯಗಳನ್ನೇ ಬಳಸಬೇಕೆಂದು ಅಧಿಕಾರಿಗಳು ಜನರಿಗೆ ಪೀಡಿಸಿದರು. ಇಂಥ ಸಮಯದಲ್ಲಿ ಜನರಿಗೆ ನಿಜಾಮ ಆಡಳಿತವು ಮಾರಕವಾಗಿ ಪರಿಣಮಿಸುತ್ತಿತ್ತು.

ರಾಯಚೂರು ನಗರದಲ್ಲಿ ರೈಲ್ವೆ ಮಾರ್ಗ ಹಾದು ಹೋದದ್ದರಿಂದ ಮುಂಬಯಿ ಮದರಾಸು ಪ್ರಯಾಣ ಕೈಗೊಂಡ ರಾಷ್ಟ್ರನಾಯಕರನ್ನು ರಾಯಚೂರಿನ ಜನ ನಿಲ್ದಾಣದಲ್ಲಿ ಭೇಟಿಯಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಸ್ಫೂರ್ತಿಯನ್ನು ಪಡೆಯುತ್ತಿದ್ದರು. 1942ರಲ್ಲಿ ನಡೆದ ಚಲೇಜಾವ್ ಚಳವಳಿಯ ಸಂದರ್ಭದಲ್ಲಿ ನಗರದ ಮಧ್ಯಭಾಗದಲ್ಲಿ ಅಡವಿರಾವ್ ಫಡ್ನವೀಸ್, ಗಾಣದಾಳ ನಾರಾಯಣಪ್ಪ, ಬಿ.ಜಿ.ದೇಶಪಾಂಡೆ ಮುಂತಾದವರು ಸತ್ಯಾಗ್ರಹ ಮಾಡಿ ನಿಜಾಮ ಪೊಲೀಸರಿಂದ ಬಂಧನಕ್ಕೊಳಗಾದರು. ಬಂಧನವೆಂದರೆ ಬಡಿತ, ಶಿಕ್ಷೆ ಇದ್ದೇ ಇರುತ್ತಿತ್ತು. ಭಾರತ ಒಕ್ಕೂಟಕ್ಕೆ ಸೇರಿ ದಿನಾಚರಣೆ ಮಾಡಲು ರಮಾನಂದ ತೀರ್ಥರು ಕರೆ ಕೊಟ್ಟಾಗ ಆಗಸ್ಟ್ 7ರಂದು ರಾ.ಗು.ಜೋಶಿ, ಗುಡಿಹಾಳ ಹನುಮಂತರಾವ್, ದೋಮಕುಂಟಿ ನಾರಾಯಣಪ್ಪ ಮುಂತಾದವರು ನಗರದಲ್ಲಿ ಸತ್ಯಾಗ್ರಹ ಮಾಡಿ ಜೈಲಿಗೆ ಸೇರಿದರು. ಇದರ ಹಿಂದೆಯೆ ಜಿ.ಮಧ್ವರಾವ್, ಲಿಂಗನದೊಡ್ಡಿ ರಾಘವೇಂದ್ರ, ಲಕ್ಷ್ಮಣಾಚಾರ್ಯ ವೈದ್ಯ ಮುಂತಾದವರು ಬಂಧಿತರಾದರು. ಸಿಂಧನೂರು, ಮಾನ್ವಿ, ದೇವದುರ್ಗ, ಕುಷ್ಟಗಿ ಮುಂತಾದ ತಾಲ್ಲೂಕುಗಳಲ್ಲಿ ಹೋರಾಟಗಾರರು ಸಂಘಟಿತರಾಗಿ ತಮ್ಮ ತಮ್ಮ ನೆಲೆಯಲ್ಲಿ ನಿಜಾಮರ ಆಡಳಿತವನ್ನು ವಿರೋಧಿಸಿದರು. ಲಿಂಗಸೂಗೂರಿನ ಶಂಕರಪ್ಪ, ಸದಾಶಿವಪ್ಪ, ಪೂಲ್‌ಬಾವಿ, ಬಸವಲಿಂಗಯ್ಯ ಹಿರೇಮಠ, ರಾಮಾಜಿ ನಾಯಕ, ಸಿಂಧನೂರಿನಲ್ಲಿ ರಾಮರಾವ್, ಚಿನ್ನಹಳ್ಳಿ ಹನುಮಂತರಾವ್, ಗುಡಿಹಾಳ್ ಕಿಶನ್‌ರಾವ್, ಮಾನ್ವಿಯಲ್ಲಿ ಬೆಟ್ಟದೂರು ಶಂಕರಗೌಡ, ರಾಮರಾಯ, ಶ್ರೀನಿವಾಸರಾಯ, ದೇವದುರ್ಗದಲ್ಲಿ ಶೇಖರಪ್ಪ ಆದಿ, ವೆಂಕಟರಾವ್ ಮುಂತಾದವರು ಸೆರೆಮನೆ ವಾಸ ಕಂಡರು. ಕುಷ್ಟಗಿ ಕಡೆಯಲ್ಲಿ ಚಳ್ಳಕೇರಿ ಭೀಮಾಚಾರ್ಯ, ಸೌದೆ ಗುರಪ್ಪ, ವಿಜಯರಾವ್ ದೇಸಾಯಿ, ಪೂಲ್‌ಚಂದ್ ಸೇಟ್ ಮುಂತಾದವರು ಯೋಗಿಗಳಾದ ಮುರಡಿ ಭೀಮಜ್ಜರ ಸಲಹೆಗಳನ್ನು ಪಡೆದು ತಮ್ಮ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಘಟಿತರಾಗಿ ಹೋರಾಡಿದರು. ಪುಂಡಲೀಕಪ್ಪನವರ ನೇತೃತ್ವದ ಹೋರಾಟದಲ್ಲಿ ನಿಜಾಮ ಪೊಲೀಸರ ಗುಂಡಿಗೆ ಅಲ್ಲಿಸಾಬು ಪಿಂಜಾರ, ರಾಮುಲು, ಹನುಮಂತಪ್ಪ ಕೋನಾಪುರ ಬಲಿಯಾದರು. ಕಲ್ಲುಭಾವಿಯ ದೇಸಾಯರ ಹೆಂಡತಿ ಕಮಲಮ್ಮ ಹೋರಾಟಗಾರರಿಗೆ ಆರತಿ ಬೆಳಗಿ ಸ್ಫೂರ್ತಿ ನೀಡುತ್ತಿದ್ದರು. ಹಳ್ಳಿ ಹಳ್ಳಿಗಳ ಮೂಲೆಯಲ್ಲಿ ಇಂಥ ಮಹಿಳೆಯರೂ ಈ ಹೋರಾಟದಲ್ಲಿ ಪಾಲ್ಗೊಂಡರು.

ಭಾರತಕ್ಕೆ 1947ನೆಯ ಆಗಸ್ಟ್ 15ರಂದು ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ದೇಶಾದ್ಯಂತ ಜನತೆ ಸಂಭ್ರಮದಿಂದ ಧ್ವಜಾರೋಹಣ ಮಾಡಿ, ಸ್ವಾತಂತ್ರ್ಯಕ್ಕಾಗಿ ದುಡಿದ ಶ್ರಮವನ್ನು ನೆನೆದು ಸಂತೋಷಪಟ್ಟರು. ಆದರೆ ಹೈದರಾಬಾದ್ ಸಂಸ್ಥಾನದ ನಿಜಾಮನು, ಸ್ವತಂತ್ರ ಭಾರತದಲ್ಲಿ ತನ್ನ ಸಂಸ್ಥಾನವು ವಿಲೀನಗೊಳ್ಳುವುದಿಲ್ಲ, ಸ್ವತಂತ್ರವಾಗಿ ಉಳಿಯುತ್ತದೆ, ಸಂಸ್ಥಾನದ ಜನತೆ ಇದಕ್ಕೆ ಬೆಂಬಲ ಕೊಡಬೇಕೆಂದು ಹಾಗೂ ಸಂಸ್ಥಾನದಲ್ಲಿ ಪ್ರಜೆಗಳು ಧ್ವಜಾರೋಹಣವನ್ನು ಮಾಡಕೂಡದೆಂದು ಈ ನಿಯಮವನ್ನು ಮೀರಿದವರಿಗೆ ಶಿಕ್ಷೆ ವಿಧಿಸಲಾಗುವುದೆಂದು ಘೋಷಿಸಿದನು. ರಾಯಚೂರು ಜಿಲ್ಲೆಯಾದ್ಯಂತ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಖಂಡರು ಧ್ವಜಾರೋಹಣವನ್ನು ಆಚರಿಸಲು ತುದಿಗಾಲಿನ ಮೇಲೆ ನಿಂತಿದ್ದರು. ನಿಜಾಮನ ಫರ್ಮಾನು ಕೇಳಿ ರೊಚ್ಚಿಗೆದ್ದರು. ಧ್ವಜವನ್ನು ಹಾರಿಸುವುದು ಜೀವನ್ಮರಣದ ಪ್ರಶ್ನೆಯಾಗಿ ನಿಂತಿತು. ಜೀವದ ಹಂಗು ತೊರೆದು ಜಿಲ್ಲೆಯಾದ್ಯಂತ ಅನೇಕ ಹೋರಾಟಗಾರರು ಧ್ವಜವನ್ನು ಹಾರಿಸಿದರು. ಸಾವಿರಾರು ಜನ ಬಂಧನಕ್ಕೊಳಗಾದರು. ಧ್ವಜ ಏರಿಸುವುದು ಸಾಹಸದ, ರೋಮಾಂಚನಕಾರಿಯಾದ ಸಂಗತಿಯಾಗಿ ಪರಿಣಮಿಸಿತು.

ಹೈದರಾಬಾದ್ ನಗರದಲ್ಲಿಯೇ ಬಿಗಿ ಪೊಲೀಸ್ ಕಾವಲಿದ್ದರೂ ಎಲ್ಲರ ಕಣ್ಣು ತಪ್ಪಿಸಿ ಮೊಟ್ಟ ಮೊದಲು ರಾಷ್ಟ್ರ ಧ್ವಜವನ್ನು ಬಸವರಾವ್ ಕಾಟರಹಳ್ಳಿ ಹಾರಿಸಿದರು. ರಾಯಚೂರು ನಗರದ ಮುಖ್ಯ ಸ್ಥಳವಾದ ಕಲೆಕ್ಟರ್ ಕಚೇರಿಯ ಮೇಲೆ ಮಟಮಾರಿ ನಾಗಪ್ಪನವರು ತನ್ನ ಜೊತೆಗೆ ಶರಭಯ್ಯ, ಚಂದ್ರಯ್ಯ, ಬಸವಣ್ಣ ಮತ್ತು ಪರವತರೆಡ್ಡಿ ಅವರುಗಳನ್ನು ಸೇರಿಸಿಕೊಂಡು ಮಧ್ಯರಾತ್ರಿಯಲ್ಲಿ ಧ್ವಜ ಏರಿಸಿ ಪರಾರಿಯಾದರು. ಬೆಳಿಗ್ಗೆ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಾಡುತ್ತಿತ್ತು. ಧ್ವಜ ಏರಿಸಿದವರನ್ನು ನಿಜಾಮ ಪೊಲೀಸರು ಹಿಡಿಯಲು ನೋಡಿದರೆ, ಸಾಹಸಿಗರು ಗಡಿದಾಟಿ ತುಂಗಭದ್ರಕ್ಕೆ ಹೋಗಿದ್ದರು. ನಗರದಲ್ಲಿ ಜಿ.ಮಧ್ವರಾಯ, ರಾಘವೇಂದ್ರರಾಯ, ಲಕ್ಷ್ಮಣಾಚಾರ್ಯ ವೈದ್ಯರು ಬಂಧನಕ್ಕೆ ಒಳಗಾದರು.

1947ನೆಯ ಆಗಸ್ಟ್ 15ರ ನಂತರದ ಹೋರಾಟದ ಸ್ವರೂಪವೇ ಬದಲಾಯಿತು. ನಿಜಾಮರ ಬೆಂಬಲ ಪಡೆದ ರಜಾಕಾರರು ಜಿಲ್ಲೆಯಾದ್ಯಂತ ತುಂಬಿಕೊಂಡರು. ಇವರ ಜೊತೆಗೆ ಪಠಾಣರು ಸೇರಿಕೊಂಡರು. ಹಳ್ಳಿ ಹಳ್ಳಿಗಳಲ್ಲಿ ಮನ ಬಂದಂತೆ ವರ್ತಿಸಿ ಜನತೆಯನ್ನು ಪೀಡಿಸಿದರು.ೊಇವರ ದರೋಡೆ, ಅತ್ಯಾಚಾರ, ಸ್ವೇಚ್ಛಾಚಾರದಿಂದ ಜಿಲ್ಲೆಯೇ ತತ್ತರಿಸಿತು. ರಾಯಚೂರಿನ ಎಲ್ಲ ತಾಲ್ಲೂಕುಗಳಲ್ಲಿ ಜನರು ರಜಾಕಾರರಿಂದ ದೌರ್ಜನ್ಯಕ್ಕೆ ಒಳಗಾದರು. ಆದರೂ ಹಳ್ಳಿ ಹಳ್ಳಿಗಳಲ್ಲಿ ಜನರೇ ಸಂಘಟಿತರಾಗಿ ತಮ್ಮ ತಮ್ಮ ಊರುಗಳನ್ನು ರಕ್ಷಿಸಿಕೊಳ್ಳುವ ಎದೆಗಾರಿಕೆಯನ್ನು ಬೆಳೆಸಿಕೊಂಡರು. ನಿಜಾಮರ ಬೆಂಬಲ ಪಡೆದ ರಜಾಕಾರರು, ಪಠಾಣರು ಹಾಗೂ ನಿಜಾಮ ಪೊಲೀಸರು ಜಿಲ್ಲೆಯಾದ್ಯಂತ ಜನರನ್ನು ಬಗ್ಗು ಬಡಿಯಲು ನಿಂತರು. ಮಾರಕಾಸ್ತ್ರಗಳನ್ನು ಜನರು ಹೊಂದಿರಬಾರದೆಂದು ಕಸಿದುಕೊಂಡು ನಿರಾಯುಧರನ್ನಾಗಿ ಮಾಡಿದರು. ಆದರೂ ಜನರು ಹೋರಾಡುವ ಮನಸ್ಥಿತಿಯನ್ನು ಕಳೆದುಕೊಳ್ಳಲಿಲ್ಲ.

ಹೈದರಾಬಾದ್ ಸಂಸ್ಥಾನವು ಸ್ವತಂತ್ರ ಭಾರತದಲ್ಲಿ ವಿಲೀನಗೊಳ್ಳದೆ ನಿಜಾಮನ ಅಧೀನದಲ್ಲಿ ಸ್ವತಂತ್ರವಾಗಿ ಮುಂದುವರಿದದ್ದು ರಾಷ್ಟ್ರನಾಯಕರನ್ನೂ ಆತಂಕಕ್ಕೆ ಗುರಿ ಮಾಡಿತ್ತು. ಮೇಲಾಗಿ ಸ್ವಾತಂತ್ರ್ಯದ ಹಂಬಲಕ್ಕಾಗಿ ಜನರು ನಡೆಸಿದ ಹೋರಾಟವನ್ನು ನಿಜಾಮ ಸರಕಾರ ಬಗ್ಗು ಬಡಿಯುವ ಕ್ರಮವೇ ಬ್ರಿಟಿಶರಿಗಿಂತ ಭೀಕರವಾಗಿ ಕಂಡಿತು. ರಜಾಕಾರರು ಪಠಾಣರು ಸಂಸ್ಥಾನದಲ್ಲಿ ನಡೆಸಿದ ದಾಳಿ, ದೌರ್ಜನ್ಯಗಳು ರಾಷ್ಟ್ರನಾಯಕರಿಗೆ ಸಂಸ್ಥಾನದ ಹೋರಾಟಗಾರರಿಂದ ತಲುಪುತ್ತಲೇ ಇದ್ದವು. ಸಂಸ್ಥಾನದ ಪ್ರಮುಖ ಹೋರಾಟಗಾರರು ರಜಾಕಾರರನ್ನು ಎದುರಿಸಿ ಜೀವ ರಕ್ಷಣೆಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರು. ಈಗಾಗಲೇ ಮಹಾರಾಷ್ಟ್ರ, ಆಂಧ್ರಗಳಲ್ಲಿ ಶಿಬಿರಗಳು ಸ್ಥಾಪನೆಗೊಂಡಿದ್ದವು. ಕರ್ನಾಟಕದ ನೈಜಾಮ ಪ್ರಾಂತ್ಯದಲ್ಲಿ ಶಿಬಿರಗಳನ್ನು ಸ್ಥಾಪಿಸಲು ಜನಾರ್ಧನರಾವ್ ದೇಸಾಯಿ ನೇತೃತ್ವದಲ್ಲಿ ಸಂಘಟನೆ ಶುರುವಾಯಿತು. ಗಡಿ ಭಾಗಗಳಲ್ಲಿ ಮತ್ತು ಅನೇಕ ಆಯಕಟ್ಟಿನ ಸ್ಥಳಗಳಲ್ಲಿ ಶಿಬಿರಗಳು ಸ್ಥಾಪನೆಯಾದವು. ಈ ಶಿಬಿರಗಳಲ್ಲಿ ಒಬ್ಬ ಶಿಬಿರಾಧಿಪತಿ ಹಾಗೂ ಅದರ ಕಾರ್ಯಸಮಿತಿಯಲ್ಲಿ ಅನೇಕರು ನೇಮಕಗೊಂಡರು. ಶಿಬಿರಗಳು ವ್ಯವಸ್ಥಿತವಾಗಿ, ಜವಾಬ್ದಾರಿಯುತವಾಗಿ ನಡೆಯುವಂತೆ ಶಿಬಿರಾಧಿಪತಿಗಳು ಎಚ್ಚರಿಕೆ ವಹಿಸಿಕೊಂಡರು. ಜನರಿಗೆ ಕಿರುಕುಳ ಕೊಡುವ ರಜಾಕಾರರಿಗೆ ಪಠಾಣರಿಗೆ ಬುದ್ದಿ ಕಲಿಸುವುದಕ್ಕಾಗಿಯೇ ಈ ಶಿಬಿರಗಳು ಕಾಂರ್ು ಮಾಡಿದವು. ಪ್ರತಿಯೊಂದು ಶಿಬಿರಕ್ಕೆ ಬೇಕಾಗುವ ಕಾರ್ಯಕರ್ತರಿಗೆ ಸೈನಿಕ ತರಬೇತಿಯನ್ನು ಕಪ್ಪತ ಗುಡ್ಡದಲ್ಲಿ ನೀಡಲಾಯಿತು. ಬಂದೂಕು, ನಾಡಬಾಂಬುಗಳನ್ನು ಒದಗಿಸಲಾಯಿತು. ಹಳ್ಳಿಹಳ್ಳಿಗಳನ್ನು ರಕ್ಷಿಸುವುದು ಈ ಶಿಬಿರಗಳ ಮುಖ್ಯ ಕೆಲಸವಾಯಿತು. ಮುಂಡರಗಿ, ಗಜೇಂದ್ರಗಡ, ಸೂಡಿ, ಇಟಗಿ,ೊ ಶಾಂತಗೇರಿ, ಕಂಪಲಿ, ಚಳ್ಳೆಕೂಡ್ಲೂರು, ಶಿರಗುಪ್ಪ, ಇಳಕಲ್, ಮಂತ್ರಾಲಯ,ೊಬರದೂರು, ಗುಡ್ಡದ ಮಲ್ಲಾಪುರ, ಹೆಸರೂರು, ಹಳ್ಳಿಕೇರಿ, ತಿಮ್ಮಾಪುರ, ನರೇಗಲ್, ನಿಡಗುಂದಿ, ಕೊಪ್ಪ, ತಂಬ್ರಹಳ್ಳಿ, ಬಾಚಿಗೊಂಡನಹಳ್ಳಿ ಮುಂತಾದ ಊರುಗಳಲ್ಲಿ ಶಿಬಿರಗಳು, ಉಪಶಿಬಿರಗಳು ಸ್ಥಾಪನೆಯಾದವು. ಈ ಶಿಬಿರಗಳಲ್ಲಿ ಮುಖ್ಯಸ್ಥರಾಗಿ ನಾಯಕರಾದ ಅಳವಂಡಿ ಶಿವಮೂರ್ತಿಸ್ವಾಮಿ, ಪುಂಡಲೀಕಪ್ಪ ಜ್ಞಾನಮೋಠೆ, ಜಿ.ರಾಘವೇಂದ್ರರಾವ್, ಗುಡ್ಡದ ರಾಘವೇಂದ್ರರಾವ್, ಆರ್.ವಿ.ಬಿಡಪ್ಪ, ವಿರೂಪಾಕ್ಷಪ್ಪ, ಅನಂತ ಜೋಶಿ, ಮುಡಿಯಪ್ಪಗೌಡ ಕವಲೂರು, ಲಿಂಗನಗೌಡ, ಇಟಗಿ ವಿರೂಪಾಕ್ಷಯ್ಯ, ಕುಕನೂರ ನಾಗಪ್ಪ, ಆನಂದಗೌಡ, ಸಿದ್ಧಲಿಂಗಪ್ಪ, ಪಂಚಾಕ್ಷರಿ ಹಿರೇಮಠ, ಕೆ.ಚನ್ನ ಬಸವನಗೌಡ, ಸೌದೆ ಗುರಪ್ಪ ಮುಂತಾದವರು ಜೀವದ ಹಂಗು ತೊರೆದು ರಜಾಕಾರರ ಪಠಾಣರ ಹಾಗೂ ನಿಜಾಮ ಪೊಲೀಸರ ಜೊತೆ ಯುದ್ಧಗಳನ್ನೇ ಮಾಡಿದರು. ರಜಾಕಾರರು ಹಳ್ಳಿ ಹಳ್ಳಿಗಳಲ್ಲಿ ಬೀಡುಬಿಟ್ಟಿದ್ದರು. ಅವರನ್ನು ಓಡಿಸುವುದು, ಪೊಲೀಸ್ ಠಾಣೆಗ ಮೇಲೆ ದಾಳಿ ಮಾಡುವುದು, ಜನರಿಗೆ ರಕ್ಷಣೆ ನೀಡುವುದು ಶಿಬಿರಗಳ ಕಾರ್ಯಕರ್ತರ ಕೆಲಸವಾಯಿತು. ಶಿಬಿರಗಳು ಹುಟ್ಟಿಕೊಂಡು ಹೋರಾಟ ಆರಂಭವಾದ ಮೇಲೆ ನಿಜಾಮ ಸರಕಾರ ಆತಂಕಕ್ಕೆ ಒಳಗಾಯಿತು. ರಜಾಕಾರರು ಎದೆಗುಂದಿದರು. ಶಿವಮೂರ್ತಿಸ್ವಾಮಿ, ಚುರ್ಚಿಹಾಳ ಮಠ, ಪುಂಡಲೀಕಪ್ಪ, ಸಾರಾಗಮಠ, ಬಂಗಾರಶೆಟ್ರು, ಜಯತೀರ್ಥ ರಾಜಪುರೋಹಿತ, ರಾಮಾಭಟ್ ಜೋಶಿ ಮುಂತಾದವರು ರೋಮಾಂಚನ ಕಾರಿಯಾಗಿ ಹೋರಾಟ ಮಾಡಿದರು. ಇವರೆಲ್ಲರಿಗೆ ನೆರವಾಗಿ ಸಾವಿರಾರು ಜನ ಹೋರಾಟಗಾರರು ರಾಯಚೂರು ಜಿಲ್ಲೆಯಾದ್ಯಂತ ದುಡಿದರು. ಗ್ರಾಮರಕ್ಷಕ ದಳ, ಗೃಹರಕ್ಷಕ ದಳ ಮುಂತಾದ ಸೇವಾದಳಗಳು ರಾಯಚೂರು ಜಿಲ್ಲೆಯ ಮುಂಡರಗಿ, ಗದಗ ಮುಂತಾದ ಗಡಿ ಭಾಗದಲ್ಲಿ ಶ್ರಮಿಸಿ ಹಳ್ಳಿಗರನ್ನು, ಗ್ರಾಮಗಳನ್ನು ರಜಾಕಾರರಿಂದ, ಪಠಾಣರಿಂದ ರಕ್ಷಿಸಿದರು. ಈ ಸೇವಾದಳಗಳ ವತಿಯಿಂದ ಸಿ.ಎಂ.ಚುರ್ಚಿಹಾಳ ಮಠ, ಮುಡಿಯಪ್ಪ ಮುಂತಾದವರು ಜವಾಬ್ದಾರಿಯಿಂದ ಕೆಲಸ ಮಾಡಿದರು. ಮುಂಡರಗಿ ಅನ್ನದಾನೇಶ್ವರ ಸಂಸ್ಥಾನ ಮಠ, ಜಗದ್ಗುರು ತೋಂಟದಾರ್ಯ ಮಠ, ಡಂಬಳ ಗದಗ ಸಂಸ್ಥಾನ ಮಠ, ಇಲಕಲ್ಲ ವಿಜಯ ಮಹಾಂತಸ್ವಾಮಿ ಮಠ ಮುಂತಾದ ಧಾರ್ಮಿಕ ಮಠಗಳು ಈ ಸಂದರ್ಭದಲ್ಲಿ ಹೋರಾಟಗಾರರಿಗೆ ಅನೇಕ ರೀತಿಯಲ್ಲಿ ಬೆಂಬಲ ನೀಡಿದವು.

ಹಿಂಸೆಗೆ ಒಳಗಾಗುತ್ತಿದ್ದ ಹಳ್ಳಿಗಳ ಜನರನ್ನು ರಕ್ಷಿಸಲು ಶಿಬಿರಗಳ ಮುಖ್ಯಸ್ಥರಾಗಿ ದುಡಿದ ಕೆಲವರನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿಯೂ ನಿಜಾಮ ಸರಕಾರ ಘೋಷಿಸಿತ್ತು. ಅಕ್ಷರಶಃ ಈ ಹೋರಾಟಗಾರರು ನಿಜಾಮ ಸರಕಾರಕ್ಕೆ ಪ್ರತಿ ರೋಧ ಒಡ್ಡಿದ್ದರು. ಈ ಶಿಬಿರಗಳು ನಡೆಸಿದ ಹೋರಾಟದಿಂದ ಇಟಗಿ, ಚಿಕ್ಕ ಅಳವಂಡಿ, ಬೊಬ್ಬನಾಳ, ಸಾಂತಗೇರಿ, ಖನಾಪುರ, ತಿಳ್ಳಿಬಾಳ, ಪುರತಗೇರಿ, ಗುಡ್ಡದ ಮಲ್ಲಾಪುರ, ಯರಗೇರಿ, ಕಮುಡಿ, ಮೂಗನೂರು, ಕಾಟ್ರಳ್ಳಿ, ಹೊನ್ನಿಗನೂರು, ಮುಗಳಿ, ಹೊಸೂರು, ಬಲಗೋಡು, ಗುಲಗಳ್ಳಿ ಮುಂತಾದ ಅನೇಕ ಹಳ್ಳಿಗಳು ಸ್ವಾತಂತ್ರ್ಯವನ್ನು ಘೋಷಿಸಿಕೊಂಡು, ಗಾಂಧೀಜಿ ಅವರ ಗ್ರಾಮರಾಜ್ಯಗಳ ಕಲ್ಪನೆಯಂತೆ ವ್ಯವಸ್ಥೆ ಮಾಡಿಕೊಂಡರು.

ಸಂಸ್ಥಾನದ ಗುಲಬರ್ಗಾ, ಬೀದರ ಜಿಲ್ಲೆಗಳಲ್ಲಿ ರಜಾಕಾರರ ಹಾವಳಿ ಮಿತಿಮೀರಿ ಹೋಯಿತು. ಸಂಸ್ಥಾನದ ಬಿಕ್ಕಟ್ಟನ್ನು ಕಂಡು ಸ್ವತಂತ್ರ ಭಾರತದ ನಾಯಕರು ಸೈನಿಕ ಕಾರ್ಯಾಚರಣೆಗೆ ಆದೇಶ ನೀಡಲು ನಿರ್ಧರಿಸಿದರು. ಸರ್ದಾರ್ ವಲ್ಲಭಾಯಿ ಪಟೇಲರು ಚೌಧರಿಯವರ ನೈತೃತ್ವದಲ್ಲಿ ಸಂಸ್ಥಾನದ ಮೇಲೆ ಸೈನಿಕ ಕಾರ್ಯಾಚರಣೆ ನಡೆಸಿತು. 1948ರ ಸೆಪ್ಟೆಂಬರ್ 13ರಂದು ಸ್ವತಂತ್ರ ಭಾರತದ ಸೈನ್ಯವು ಸಂಸ್ಥಾನದ ಮೇಲೆ ಬಂದಿತು. ಈಗಾಗಲೇ ಶಿಬಿರಗಳಲ್ಲಿ ದುಡಿದ ಮುಖಂಡರ ನೆರವಿನಿಂದ ಸೈನ್ಯಾಧಿಕಾರಿಗಳು ರಜಾಕಾರರನ್ನು ಬಂಧಿಸಿದರು. 1948ನೆಯ ಸೆಪ್ಟೆಂಬರ್ 18ರಂದು ನಿಜಾಮ ಶರಣಾಗತ ನಾದ. ಸಂಸ್ಥಾನದಲ್ಲಿ ಹೋರಾಟ ನಿಂತಿತು. ಹೈದರಾಬಾದ್ ಸಂಸ್ಥಾನವು ಸ್ವತಂತ್ರ ಭಾರತದಲ್ಲಿ ವಿಲೀನಗೊಂಡಿತು. ಜನರು ಸ್ವಾತಂತ್ರೋತ್ಸವ ಆಚರಿಸಿದರು.

 

ಪರಾಮರ್ಶನ ಗ್ರಂಥಗಳು

1. ವಿಮೋಚನೆ, ರಾಯಚೂರಿನಲ್ಲಿ ನಡೆದ 68ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಗ್ರಂಥ.

2. ಅಮರೇಶ ನುಗಡೋಣಿ, 2001. ಹೈದ್ರಾಬಾದ್ ಕರ್ನಾಟಕದ ಹಾಡುಪಾಡು, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ಹಂಪಿ.

3. ಗೋಪಾಲರಾವ್ ಎಚ್.ಎಸ್., ಕರ್ನಾಟಕ ಏಕೀಕರಣ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ