ಭಾರತದ ಸ್ವಾತಂತ್ರ್ಯ ಇತಿಹಾಸವನ್ನು 1857ರ ಮಾರ್ಚ್ 29ರಂದು ಮಂಗಲಪಾಂಡೆ ಇಂಗ್ಲಿಷ್ ಸೈನ್ಯದ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿ, ಏಪ್ರಿಲ್ 8ರಂದು ಫಾಸಿ ಏರಿ ಹುತಾತ್ಮತೆಯಿಂದ ಉದ್ಘಾಟಿಸಿದ. ಝಾನ್ಸಿರಾಣಿ ಲಕ್ಷ್ಮೀದೇವಿ ಸ್ವಾತಂತ್ರ್ಯ ಯಜ್ಞಕುಂಡಕ್ಕೆ ಹವಿಸ್ಸಾದಳು. ಅನೇಕರು ಯುದ್ಧ ಮಾಡುತ್ತ ಆತ್ಮಾರ್ಪಣೆ ಮಾಡಿದರು. ದಯಾನಂದ, ವಿವೇಕಾನಂದ, ಅರವಿಂದರ ಆವಾಹನೆಗಳು ಲೋಕಮಾನ್ಯ ಬಾಲಗಂಗಾಧರ ತಿಲಕರ ಸಿಂಹಗರ್ಜನೆ, ಗಾಂಧೀಜಿ ಅವರ ಅಹಿಂಸೆ ಹೋರಾಟ ಅದರ ಮಧ್ಯದಲ್ಲಿಯೇ ಕ್ರಾಂತಿ ಪಂಥಕ್ಕೆ ಧಿಂಗ್ರಾ, ಭಗತಸಿಂಗ್, ರಾಜಗುರು, ಸಖದೇವ, ಚಂದ್ರಶೇಖರ ಆಜಾದ್ ರಂತಹವರು ಒಂದಲ್ಲ ಎರಡಲ್ಲ ಸಾವಿರಾರು ಜನರು ತಮ್ಮನ್ನು ಸಮರ್ಪಿಸಿಕೊಂಡರು. ಎಲ್ಲರೂ ಅಂದುಕೊಂಡಂತೆ ಸ್ವಾತಂತ್ರ್ಯ ಪರ್ವವು 1947 ಆಗಸ್ಟ್ 15ಕ್ಕೆ ಪೂರ್ಣಗೊಳ್ಳಲಿಲ್ಲ. ಅದು ಹೈದರಾಬಾದ್ ಪ್ರಾಂತದಲ್ಲಿ ಮತ್ತೆ ಕಾಶ್ಮೀರದಲ್ಲಿ ಮುಂದುವರಿಯಿತು.

ಭಾರತೀಯ ಭಾವೋಜ್ವಲದ ಸಂಕೇತವಾದ ತ್ರಿವರ್ಣ ಧ್ವಜವು ದಿಲ್ಲಿಯ ಕೆಂಪುಕೋಟೆಯ ಮೇಲೆ ಹಾರಿದರೆ ಹೈದರಾಬಾದ್ ರಾಜ್ಯಕ್ಕೆ ಅದು ನಿಷೇಧಿತ ವಸ್ತುವಾಯಿತು. ಗಾಂಧಿ ಟೋಪಿ ತಿರಸ್ಕೃತವಾಯಿತು. ವಂದೇ ಮಾತರಂ ಗೀತೆ ದೇಶದ್ರೋಹದ ಹಾಡಾಯಿತು. ಭಾರತದ ಸ್ವಾತಂತ್ರ್ಯ ನಾಯಕರಾದ ಗಾಂಧೀಜಿ, ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಮೌಲಾನಾ ಅಬ್ದುಲ್ ಕಲಂ ಆಜಾದ್ ಮೊದಲಾದವರ ಭಾವಚಿತ್ರಗಳು ನಿಜಾಮ ಸರ್ಕಾರದಿಂದ ಬಹಿಷ್ಕೃತವಾದವು. ಹೈದರಾಬಾದ್ ನವಾಬ ಇಂಗ್ಲಿಷರು ನೀಡಿದ ಸ್ವಾತಂತ್ರ್ಯದನುಸಾರ ಕೂಡಿಕೆ ಇಲ್ಲದೆ ಯಥಾಸ್ಥಿತಿ ಅನ್ವಯಿಸಿ ಭಾರತದ ಒಕ್ಕೂಟ ರಾಜ್ಯದಲ್ಲಿ ಸೇರಲು ನಿರಾಕರಿಸಿದನು. 1947ನೆಯ ಜೂನ್ 26ರಲ್ಲಿ ಸ್ವತಂತ್ರ ರಾಜ್ಯ ವೆಂದು ಘೋಷಿಸಿದನು. ರಾಜ್ಯಶಾಹಿ ಆಡಳಿತವನ್ನು ಮುಂದುವರೆಸಲು ನಿರ್ಧರಿಸಿದನು.

ಹೈದರಾಬಾದ್ ಪ್ರಾಂತದ ಸ್ವಾತಂತ್ರ್ಯ ಇತಿಹಾಸ ಪ್ರಾರಂಭವಾಗುವುದು 1938ರ ‘ವಂದೇ ಮಾತರಂ’ ಚಳವಳಿಯಿಂದ. ಈ ದೇಶಭಕ್ತಿಗೀತೆ ಹಾಡಲು ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಜ್ಜಾಗಿದ್ದರು. ಈ ಸಂದರ್ಭದಲ್ಲಿ ಹಿರಿಯ ನಾಯಕರನ್ನು ಒಪ್ಪಿಸಿ ನಿಜಲಿಂಗಪ್ಪ ಅವರು ರಮಾನಂದ ತೀರ್ಥರನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದರಂತೆ. ಮುಂದಿನ ಆಗು-ಹೋಗುಗಳಿಗೆ ಹೈದರಾಬಾದ್ ಪ್ರಾಂತ್ಯದ ಜನ ಬಲಿ ನೀಡಬೇಕಾಗಿದೆಯೇನೋ ಎಂದು ಚಿಂತಿಸಿದುದು ಉಲ್ಲೇಖನಾರ್ಹ.

1947 ಆಗಸ್ಟ್ 7ರ ದಿನವನ್ನು ಹೈದರಾಬಾದ್ ಪ್ರಾಂತವು ಸಂಘ ರಾಜ್ಯವನ್ನು ಸೇರುವ ದಿನವೆಂದು ಆಚರಿಸಲು ಕಾಂಗ್ರೆಸ್ಸ್ ಕರೆ ನೀಡಿತು. ನಿಜಾಮ ಸರಕಾರ ಅದನ್ನು ಬಹಿಷ್ಕರಿಸಿದರೂ ರಾಜ್ಯದಾದ್ಯಂತ ದೊಡ್ಡ ದೊಡ್ಡ ಪ್ರತಿಭಟನಾ ಸಭೆಗಳು. ಮೆರವಣಿಗೆ, ಪ್ರಭಾತಫೇರಿ, ಹರತಾಳ, ಮುಷ್ಕರ, ಸತ್ಯಾಗ್ರಹಗಳು ಪಟ್ಟಣ ಹಳ್ಳಿ ಎನ್ನದೆ ಶಾಲೆ-ಕಾಲೇಜು, ವಿಶ್ವವಿದ್ಯಾನಿಲಯ, ಕಾರ್ಖಾನೆ, ರೈತ ಕಾರ್ಮಿಕ, ಬಡವ ಬಲ್ಲಿದ ಎನ್ನದೆ ಎಲ್ಲರೂ ಸ್ವಾತಂತ್ರ್ಯದ ತೇರನ್ನು ಹೊತ್ತು ಅಮಿತ ಉತ್ಸಾಹ ದಿಂದ ತಮ್ಮ ಅದಮ್ಯ ಬಯಕೆಯನ್ನು ಎತ್ತಿ ತೋರಿಸಿದರು. ರಾಯಚೂರು, ಕೊಪ್ಪಳ, ಗಂಗಾವತಿಗಳಲ್ಲಿಯೂ ಇಂತಹ ಸಭೆಗಳು ನಡೆದವು. ಕೊಪ್ಪಳದ ಜನಾರ್ಧನರಾವ್ ದೇಸಾಯಿ ಮತ್ತು ಅವರ ಸ್ನೇಹಿತರು ನಿಷೇಧಾಜ್ಞೆ ಉಲ್ಲಂಘಿಸಿ ಮಾತನಾಡಿ ದಸ್ತಗಿರಿಯಾದರು.

ನಿಜಾಮನ ಆಳ್ವಿಕೆಯನ್ನು ಪ್ರತಿಭಟಿಸಿ 1947 ಆಗಸ್ಟ್ 15ರಂದು ಕಿನ್ನಾಳದಲ್ಲಿ ಸಿದ್ದಪ್ಪ ಮಾಸ್ತರ, ಕೊಪ್ಪಳದಲ್ಲಿ ಪಂಚಾಕ್ಷರಿ ಹಿರೇಮಠ, ಕುಕನೂರಿನಲ್ಲಿ ಶ್ಯಾಮರಾವ್ ದೇಸಾಯಿ, ರಾಜಾಸಾಹೇಬ್ ಪಿಂಜಾರ್, ಮಾಲಗಿತ್ತಿಯಲ್ಲಿ ರಾಚಪ್ಪ ಸೂಡಿ, ಕುಷ್ಟಗಿಯಲ್ಲಿ ಚಳಗೇರಿ ಭೀಮಾಚಾರ್ಯ ಮೊದಲಾದವರು ಧ್ವಜ ಏರಿಸಿ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ಕೊಪ್ಪಳ, ಯಲಬುರ್ಗಾ, ಕುಕನೂರು, ಕಿನ್ನಾಳ, ವಂಕಲಕುಂಟಾ, ಕವಲೂರು, ನವಲಿ, ಕುಷ್ಟಗಿ ಮುಂತಾದೆಡೆಗಳಲ್ಲಿ ಸತ್ಯಾಗ್ರಹ ಮಾಡಿ ನೂರಾರು ಜನರು ಬಂಧನಕ್ಕೆ ಒಳಗಾದರು.

ಇದೇ ಸಂದರ್ಭದಲ್ಲಿ ಭಾರತದ ಮುಂಬೈ ಪ್ರಾಂತದ ಗಡಿಗಳಿಗೆ ಸಮೀಪವಿದ್ದ ಗುಡ್ಡದ ಮಲ್ಲಾಪುರ, ತಿಳ್ಳಿಹಾಳ, ಸಾಂತಗೇರಿ, ಚಿಕ್ಕ ಅಳಗುಂಡಿ, ಇಟಗಿ, ಬೊಮ್ಮನಾಳ, ಬಸಾಪೂರ, ಪುರತಗೇರಿ, ಹುಣಿಸೆಮರಡಿ, ಯರಗೇರಿ, ಮೂಗನೂರು, ಮುಗಳಿ, ಬಲಗೋಡ, ಗುಳಗಳ್ಳಿ ಹೊಸೂರು, ಹೊನ್ನಿಗನೂರು, ಕಾಟ್ರಳ್ಳಿ, ಕರಮೂಡಿ ಮೊದಲಾದ 24 ಹಳ್ಳಿಗಳು ಸ್ವತಂತ್ರ ಸಾರಿದವು. ಗಾಂಧೀಜಿಯವರ ಕಲ್ಪನೆಯ ಸಾಕಾರದಂತೆ ಇವನ್ನು ಗ್ರಾಮರಾಜ್ಯಗಳೆಂದು ಸಾರಿದರು. ಗೌಡ, ಕುಲ್ಕರ್ಣಿ ಅವರು ರಾಜೀನಾಮೆ ನೀಡಿದರು. ವಿಲೇಜ್ ಡಿಫೆನ್ಸ್ ಫೋರ್ಸ್ ಹುಟ್ಟಿಕೊಂಡಿತು. ಈ ಹಳ್ಳಿಗಳು ರಜಾಕಾರರ ಹಾವಳಿಯಿಂದ ಮುಕ್ತಿ ಪಡೆವಲ್ಲಿ ಪ್ರಮುಖ ಹೆಜ್ಜೆ ಇದು. ಬಹುಶಃ ಕಲ್ಪನೆಗೂ ಮಿಗಿಲಾದ ಧೈರ್ಯ ತೋರಿಸಿದರು. ಈ ದೀರ್ಘವಾದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಶಿಬಿರಗಳನ್ನು ಗಮನಿಸುವುದರಿಂದ ಅದರ ಅಂತರಾರ್ಥ ಕಲ್ಪನೆ ಬಂದೀತು.

ಹೈದರಾಬಾದ್ ಪ್ರಾಂತದ ಸ್ವಾತಂತ್ರ್ಯ ಹೋರಾಟದ ಚಿತ್ರಣದಲ್ಲಿ ಶಿಬಿರಗಳು ಪ್ರಮುಖ ಆದ್ಯತೆ ಪಡೆಯುತ್ತವೆ. ಬಹುಸಂಖ್ಯಾತ ಹಿಂದುಗಳು ಹಾಗೂ ಅನೇಕ ರಾಷ್ಟ್ರೀಯವಾದಿ ಮುಸ್ಲಿಮರು ಸೇರಿ ಪ್ರಜಾತಂತ್ರ ಬಯಸಿದರು. ಸ್ವಾತಂತ್ರ್ಯದ ಬೇಡಿಕೆ ಯಾಗಿ ಸತ್ಯಾಗ್ರಹ ಚಳವಳಿಗಳು, ನೂಲುವುದು, ಹರಿಜನೋದ್ಧಾರದ ಕಾರ್ಯಕ್ರಮಗಳು ಹೆಚ್ಚಿದಂತೆಲ್ಲ ರಾಜಕೀಯ ಮತ್ತು ಸಾಮಾಜಿಕ ಚಿಂತನೆಗಳಲ್ಲಿ ಗಾಂಧೀಜಿ ಮಾರ್ಗದಲ್ಲಿ ಸೂಕ್ತ ರೂಪ ಧರಿಸುತ್ತಿರುವುದನ್ನು ಕಂಡು ಸರ್ವ ಮುಸಲ್ಮಾನರ ರಕ್ಷಣೆಯನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿದ್ದ ಧರ್ಮದ ಆಫೀಮಿನಿಂದ ಸಂಘಟನೆ ಮಾಡುತ್ತ ನಿಜಾಮ ರಾಜ್ಯಶಾಹಿಯ ವಿರುದ್ಧ ಮಾಡುವ ಹೋರಾಟಗಳೆಲ್ಲ ಅಲ್ಲಾನ ವಿರುದ್ಧ ಮಾಡುವ ಸೈತಾನಿ ಕೃತ್ಯಗಳೆಂದು, ಅದನ್ನು ನಿವಾರಿಸಲು ಯಾವುದೇ ಕ್ರಮ ಕೈಕೊಂಡರೂ ಅದು ‘ಜೆಹಾದ್’ ಎಂದು (ಧರ್ಮಯುದ್ಧ) ಸಮರ್ಥಿಸಲು ಹೊರಟಿತು. ಅದಕ್ಕಾಗಿ ರಜಾಕಾರ(ಅರೆ ಸೈನಿಕರು)ರನ್ನು ನಿಯಮಿಸಿಕೊಂಡು ಸ್ವಾತಂತ್ರ್ಯದ ಕಿಚ್ಚನ್ನು ನಂದಿಸಲು ಮುಂದಾಯಿತು. ರಜಾಕಾರರು ಹಿಂದುಗಳ ಮನೆ ದರೋಡೆ, ಸ್ತ್ರೀಯರ ಮೇಲೆ ಅತ್ಯಾಚಾರ, ದಬ್ಬಾಳಿಕೆಗೆ ಪ್ರಾರಂಭಿಸಿತು. ಅಲ್ಲಲ್ಲಿ ಹಿಂದೂಗಳನ್ನು ಒತ್ತಾಯವಾಗಿ ಮುಸ್ಲಿಂರನ್ನಾಗಿ ಪರಿವರ್ತಿಸುವ ಮತಾಂತರ, ವ್ಯಭಿಚಾರ ವೃತ್ತಿ, ಆರ್ಥಿಕವಾಗಿ ಶೈಕ್ಷಣಿಕವಾಗಿ ನಲುಗಿ ಹೋಗಿದ್ದ ಜನರ ಮೇಲೆ ಲೇವಿ, ಕರೋಡಗಿರಿ, ಹಪ್ತೆ ಮತ್ತು ಪುಂಡಗಂದಾಯ ಹೇರಿ ಶೋಷಿಸುವ ರೀತಿಯಿಂದ ಜನರು ಪ್ರತಿಭಟನೆಗಾಗಿ ಕುದಿಯುತ್ತಿದ್ದರು.

ಈ ಸಂದರ್ಭದಲ್ಲಿ ಉಂಟಾದ ರಾಜಕೀಯ ವಿಚಾರಧಾರೆ, ಸ್ವಾತಂತ್ರ್ಯದ ಕಲ್ಪನೆ, ದೇಶ ಎನ್ನುವ ಪ್ರೀತಿ, ಬೆಳೆದು ನಮ್ಮ ಸಮಸ್ಯೆಗಳಿಗೆ ಮೂಲವಾದ ರಾಜ್ಯಶಾಹಿಯ ನೊಗವನ್ನು ಕಿತ್ತೊಗೆಯಬೇಕೆಂಬ ಆಶಯ ತನ್ನಿಂದ ತಾನೇ ಗಟ್ಟಿಗೊಳ್ಳುತ್ತಿದ್ದ ಕಾಲವದು. ಆ ಕಾಲದಲ್ಲಿ ರಮಾನಂದತೀರ್ಥರು, ಸಮಾಜವಾದಿ ಪಕ್ಷದ ಆರ್.ವಿ.ಬಿಡಪ್, ಗಾಂಧಿವಾದಿ ಹರ್ಡೇಕರ ಮಂಜಪ್ಪ, ಜನಾರ್ಧನರಾವ್ ದೇಸಾಯಿ, ಜಿ.ಎಸ್. ಮೇಲುಕೋಟೆ, ಬಿಂದುಮಾಧವರಾವ್, ಕೋಳೂರು ಮಲ್ಲಪ್ಪ ಮೊದಲಾದವರು ಕೊಪ್ಪಳ ಜಿಲ್ಲೆ ಅಂತರ್ಗತ ರಾಯಚೂರು ಜಿಲ್ಲೆಯ ಗಡಿಯುದ್ದಕ್ಕೂ ಪ್ರವಾಸ ಮಾಡಿ. ನಿಜಾಮ ಸರ್ಕಾರದ ಆಡಳಿತದ ವಿರುದ್ಧ ಅಸಹಕಾರ ಆಂದೋಲನಕ್ಕೆ ಕರೆ ನೀಡಿ ರಾಜಕೀಯ ಬುಡಮೇಲು ಕೃತ್ಯಗಳನ್ನು ಸಂಘಟಿಸಲು ತಿಳಿಸಿ ಜನರಲ್ಲಿ ಧೈರ್ಯ ತುಂಬಿದರು. ಜನರನ್ನು ರಜಾಕಾರರಿಂದ ಕಾಪಾಡಲು ಸರ್ಕಾರಿ ಯಂತ್ರವನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಗಡಿಭಾಗದಾದ್ಯಂತ ಶಿಬಿರ ಸ್ಥಾಪನೆ ಮಾಡಿ ಭೂಗತ ಚಟುವಟಿಕೆ ಕೈಕೊಳ್ಳಲು ಕರೆ ನೀಡಿದರು. ಆ ಪರಿಣಾಮವಾಗಿ ಜನ್ಮತಾಳಿದ ಪ್ರಮುಖ ಶಿಬಿರಗಳಾದ ಮುಂಡರಗಿ, ಗಜೇಂದ್ರಗಡ(ಇಳಕಲ್, ಗುಡ್ಡದ ಮಲ್ಲಾಪುರ, ಹನುಮನಾಳ), ಕಂಪ್ಲಿ, ತುಂಗಭದ್ರಾಗಳನ್ನು ಕೂಡಿಕೊಂಡು ಹಲವಾರು ಚಿಕ್ಕಪುಟ್ಟ ಶಿಬಿರಗಳು ಸ್ಥಾಪನೆಯಾದವು. ಇದಕ್ಕೆ ಕೇಂದ್ರ ಕಛೇರಿ ಗದಗಿನಲ್ಲಿದ್ದು ಅದು ಮಾರ್ಗದರ್ಶನ, ಶಸ್ತ್ರಾಸ್ತ್ರ ಸಹಾಯ, ಸಹಕಾರ ಸಂಘಟನೆ, ನಾಯಕರ ನಿರ್ದೇಶನ ಮತ್ತು ಇತರ ಕಾರ್ಯಕ್ರಮಗಳನ್ನು ಶಿಬಿರಗಳಿಗೆ ಪೂರಕವಾಗಿ ನಿಭಾಯಿಸುತ್ತಿತ್ತು.

 

ಗಜೇಂದ್ರಗಡ ಶಿಬಿರ

ಗಜೇಂದ್ರಗಡ ಶಿಬಿರವು ಈಗಾಗಲೇ ಚರ್ಚಿಸಿದಂತೆ ನಿಜಾಮ ಆಡಳಿತದ ವಿರುದ್ಧ ಜನಾಭಿಪ್ರಾಯ ಮೂಡಿಸುವುದು, ಜನಸಂಘಟನೆ ಮಾಡಿ ಆಡಳಿತ ಮಾಡಲು ಶಕ್ಯವಾಗದಂತೆ ಬುಡಮೇಲು ಕೃತ್ಯಗಳನ್ನು ಗೈಯುವುದು, ರಜಾಕಾರರಿಂದ ಸಂತ್ರಸ್ತರಾದ ಜನರಲ್ಲಿ ಧೈರ್ಯ ತುಂಬಿ ಓಡಿ ಬಂದವರನ್ನು ಕಾಪಾಡುವುದು ಮೊದಲಾದ ಗುರಿ ಇಟ್ಟುಕೊಂಡು ಶಿಬಿರ ಸ್ಥಾಪನೆಯಾಗಿ ಜಗನ್ನಾಥರಾವ್ ಕಾರಟಗಿ ಮತ್ತು ರಂಗಪ್ಪ ದೇಸಾಯಿ ಅವರಿಗೆ ಅದರ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪುಂಡಲೀಕಪ್ಪ ಜ್ಞಾನಮೋಠೆ, ಬಿ.ವಿ.ದೇಸಾಯಿ, ಸೌದಿ ಗುರಾಚಾರ, ವಿಜಯರಾವ್ ದೇಸಾಯಿ ಮೊದಲಾದವರು ಕಾರ್ಯಕರ್ತರಾಗಿದ್ದರು. ಆಗ ಪುಂಡಲೀಕಪ್ಪನವರಿಗೆ ವಂಕಲಕುಂಟಿ ಭಾಗದಲ್ಲಿ ಸತ್ಯಾಗ್ರಹಿಗಳನ್ನು ಸಂಘಟಿಸಿ, ಸಂತೆ ದಿನ ಸತ್ಯಾಗ್ರಹ ಮಾಡಿಸುವುದು ಮತ್ತು ಶಿಬಿರಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಆರ್ಥಿಕ ನೆರವನ್ನು ಪಡೆಯುವ ಜವಾಬ್ದಾರಿ ಇತ್ತು. ಇದನ್ನು ಜಯತೀರ್ಥ ರಾಜಪುರೋಹಿತ, ಶಿವಬಸಯ್ಯ ಮತ್ತು ಸುತ್ತಮುತ್ತಲಿನ ಜನರ ಸಹಾಯದಿಂದ ನೆರವೇರಿಸುತ್ತಿದ್ದರು.

ಈ ಕಾಲದ ಮರೆಯದ ಘಟನೆಯೆಂದರೆ ಗುರುವಾರ ಹಿರೇವಂಕಲಕುಂಟಿಯ ಸಂತೆಗೆ ಬಂದ ತರುಣ ಒಕ್ಕಲಿಗರು ಸತ್ಯಾಗ್ರಹಿಗಳಾಗುತ್ತಿದ್ದರು. ಗಾಂಧಿ ಟೋಪಿ ಹಾಕಿ ಜೈ ಹಿಂದ್ ಎಂದು ಕೂಗುವುದು, ತ್ರಿವರ್ಣ ಧ್ವಜ ಹಿಡಿದು ವಂದೇ ಮಾತರಂ ಗೀತೆ ಹೇಳುವುದು ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ಅವರು ಮುಗ್ಧತೆಯಿಂದ ಗಾಂಧೀಜಿಯ ಸೇವೆ ಮಾಡುತ್ತಿದ್ದೇವೆ ಎಂದು ಭಾವಿಸಿ ಪೊಲೀಸರಿಗೆ ಎದೆ ಸೆಟೆಸಿ ನಡೆಯುತ್ತಿದ್ದರು. ಜನರು ಇವರ ದಿಟ್ಟತನಕ್ಕೆ ಬೊಟ್ಟುಕಚ್ಚಿ, ಕೆಲವರು ಮರೆಯಾಗುತ್ತಿದ್ದರೆ, ಹಲವರು ಇವರ ಜೊತೆ ನಡೆಯುತ್ತಿದ್ದರು. ಈ ಸಂದರ್ಭದಲ್ಲಿ ಕಲಭಾವಿ ದೇಸಾಯಿಯವರ ಹೆಂಡತಿ ಕಮಲಾಬಾಯಿ ದೇಸಾಯ್ತಿ ಬಂಡಿಯಲ್ಲಿ ಹತ್ತಾರು ಗೆಳತಿಯರೊಂದಿಗೆ ಬಂದು ಸತ್ಯಾಗ್ರಹಿಗಳಿಗೆ ಆರತಿ ಮಾಡಿ, ಹಣೆಗೆ ಕುಂಕುಮವಿಟ್ಟು ಗಾಂಧಿ ಟೊಪ್ಪಿಗೆ ಹಾಕಿ ಸಿಹಿ ತಿನಿಸಿ ವೀರೋಚಿತವಾಗಿ ಸತ್ಯಾಗ್ರಹಕ್ಕೆ ಕಳಿಸುವ ಆ ತಾಯಿಯ ಧೈರ್ಯ, ದೇಶಪ್ರೇಮ ಚಿರಸ್ಮರಣೀಯ. ಪೊಲೀಸರ ಬೆದರಿಕೆಯ ಮಧ್ಯದಲ್ಲಿ ಸರಕಾರದ ವಿರೋಧ ಕಟ್ಟಿಕೊಂಡು ಜೀವದ ಹಂಗು ತೊರೆದು ಮಾಡುತ್ತಿದ್ದ ಈ ದೇಶಸೇವಾ ಕಾರ್ಯ ನೆನೆದರೆ ಮೈಮನಗಳು ಜುಮ್ಮೆನ್ನುತ್ತಿದ್ದವು.

ನಿಜಾಮ ಸರ್ಕಾರದ ಕಣ್ಣಿನಲ್ಲಿ ದೇಶದ್ರೋಹಿ ಆದ ಪುಂಡಲೀಕಪ್ಪನವರನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಹಿರೇವಂಕಲಕುಂಟಿಯ ಕುಲಕರ್ಣಿಯ ಹೆಂಡತಿ ಸುಭದ್ರಮ್ಮ ಇವರನ್ನು ಕಾಪಾಡಲು ಗುಪ್ತಚಾರಳಾಗಿ ಪೊಲೀಸರ ಇರುವಿಕೆ ತಿಳಿಸಿ ದಾರಿ ಬದಲಿಸಿ ಕಳುಹಿಸುತ್ತಾಳೆ. ಪುಂಡಲೀಕಪ್ಪನವರು ಹಿರೇವಂಕಲಕುಂಟಿಯಲ್ಲಿ ಅಡಗಿರುವಾಗ ಅಲ್ಲಿಯ ವಾಲೇಕಾರ ವಂಕಲಕುಂಟೆಪ್ಪ ಇವರ ಖಾದಿ ಬಟ್ಟೆಗಳನ್ನು ಒಗೆಯಲು ಹಳ್ಳಕ್ಕೆ ಹೋದಾಗ ಖಾದಿ ಬಟ್ಟೆಗಳನ್ನು ಹಿಂಡುತ್ತಿದ್ದಾಗ ಅವನನ್ನು ಪೊಲೀಸರು ಬಂಧಿಸಿದರು. ಪುಂಡಲೀಕಪ್ಪನವರು ಅಡಗಿರುವುದೆಲ್ಲಿ ಎಂದು ಪರಿಪರಿಯಾಗಿ ಕೇಳಿ ಮೊಣಕಾಲುಗಳಿಗೆ ರಕ್ತ ಬರುವಂತೆ ಹೊಡೆದು ಚಿತ್ರಹಿಂಸೆ ಕೊಟ್ಟರೂ ಆ ಹಿರಿಯ ಜೀವ ಬಾಯಿ ಬಿಡಲಿಲ್ಲ. ಇದಕ್ಕೆಲ್ಲ ಕಾರಣ ದೇಶಭಕ್ತಿಯ ಅಂತರ್ಜಲ.

ಗಜೇಂದ್ರಗಡ ಶಿಬಿರವು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೇ ಇರುವಾಗ ಸ್ಥಳೀಯರ ಹಾಗೂ ಕಾಂಗ್ರೆಸ್ ನಾಯಕರ ಸೂಚನೆಯಂತೆ ಶಿಬಿರಾಧಿಪತ್ಯವನ್ನು ಪುಂಡಲೀಕಪ್ಪನವರನ್ನು ಕರೆಯಿಸಿ ವಹಿಸಲಾಯಿತು. ಮುಂಡರಗಿ ಶಿಬಿರವನ್ನು ಹೊರತು ಪಡಿಸಿದರೆ ಇದೇ ದೊಡ್ಡ ಶಿಬಿರ. ಗಜೇಂದ್ರಗಡ ಶಿಬಿರದ ಬೆನ್ನ ಹಿಂದಿನ ಬೆಳಕು ಭೀಮಜ್ಜ ಮುರಡಿಯವರಾಗಿದ್ದರು. ಇವರೊಬ್ಬ ಸನ್ಯಾಸಿ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತಪಸ್ಸನ್ನೇ ಧಾರೆಯೆರೆದು ಜನಸಂಘಟನೆ ಮಾಡಿ ನಿಜಾಮ ಸರ್ಕಾರದ ವಿರುದ್ಧ ಸತ್ಯಾಗ್ರಹ ಮಾಡಿದರು, ಜೈಲು ಸೇರಿದರು. ಹರಿಜನರ ಸೇವೆಗೆ ಕಂಕಣಕಟ್ಟಿದರು. ಆನಂದಾಶ್ರಮದ ಮುಖಾಂತರ ಹೊಸ ಸಮಾಜ ಕಟ್ಟುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು 1956ರಲ್ಲಿ ಪರಂಧಾಮವನ್ನೈದಿದರು.

ಪುಂಡಲೀಕಪ್ಪ ಅವರು ಶಿಬಿರಾಧಿಪತಿಯಾದ ಮೇಲೆ ಭೀಮಜ್ಜ ಅವರು ಗಜೇಂದ್ರಗಡ ಗವಿಯಲ್ಲಿಯೇ ಇದ್ದು ಅನುಷ್ಠಾನ ಮಾಡುತ್ತ ಶಿಬಿರದ ಧರ್ಮದರ್ಶಿಗಳಾಗಿದ್ದರು. ಕುಂದರಗಿ ಅಂದಾನೆಪ್ಪ, ಪಲ್ಲೇದ ಅಂದಾನೆಪ್ಪ ಮಂತ್ರಿ ಶೇಡಜಿ, ನಾಗಪ್ಪ ಮೊದಲಾದವರು ಈ ಶಿಬಿರದ ಆಶ್ರಯದಾತರಾಗಿದ್ದರು. ಈ ಶಿಬಿರದ ಒಟ್ಟಾರೆ ಕಾರ್ಯಕ್ರಮಗಳನ್ನು ಒಂದು ಸೂತ್ರದಲ್ಲಿ ನೋಡುವುದೇ ಲೇಸು. ಏಕೆಂದರೆ 13 ತಿಂಗಳಲ್ಲಿ ನಡೆದ ನೂರಾರು ಘಟನೆಗಳನ್ನು ಹೇಳಲು ಪುಟಗಳು ಸಾಲವು.

 

ವಿಧಾಯಕ ಚಳವಳಿಗಳು

ಸತ್ಯಾಗ್ರಹಿಗಳು, ಈಚಲ ಮರ ಕಡಿಯುವ ಘಟನೆಗಳು, ಹೆಂಡದಂಗಡಿ ಬಂದ್ ಮಾಡಿಸುವ ಕ್ರಮಗಳು, ಹರಿಜನರಿಗೆ ದೇವಾಲಯ ಪ್ರದೇಶಗಳು ವಿಧಾಯಕ ಚಳವಳಿಗಳೆಂದು ಕರೆಯಬಹುದು. ರಾಚಪ್ಪ ಸೂಡಿ, ರಾಘವೇಂದ್ರರಾವ್ ಪಟ್ಟಲಚಿಂತಿ, ಗುರುಲಿಂಗಯ್ಯ, ಬಸಪ್ಪ ವಾಲೀಕಾರ, ಶಿವಮಲ್ಲಪ್ಪ ಮಾಲಗಿತ್ತಿ ಮೊದಲಾದವರು ಕೂಡ 1948ನೆಯ ಆಗಸ್ಟ್ 18ರಂದು ಮಾಲಗಿತ್ತಿ, ಪಟ್ಟಲಚಿಂತಿ, ಬೊಮ್ಮಸಾಗರಗಳಲ್ಲಿ ಧ್ವಜವೇರಿಸಿ ಪ್ರಭಾತಫೇರಿ ನಡೆಸಿದರು. ಸೀತಮ್ಮ ಬಡಿಗೇರ ಮಾಲಗಿತ್ತಿಯ ಹೆಣ್ಣು ಮಗಳು. ಧ್ವಜ ಏರಿಸಿ ಸ್ವಾತಂತ್ರ್ಯಕ್ಕೆ ಸೆರಗು ಕಟ್ಟಿ ನಿಂತಳು. ಅನೇಕ ಕಡೆ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಬತ್ತಿ ಬಾಂಬು ಒಗೆದಳು.

ಈಗಾಗಲೇ ಚರ್ಚಿಸಿದಂತೆ ಹಿರೇವಂಕಲಕುಂಟಿಯಲ್ಲಿ ನಡೆದ ಸತ್ಯಾಗ್ರಹಗಳು ಕಾಂಗ್ರೆಸ್ಸಿನ ವಿಧಾಯಕ ಕಾರ್ಯಕ್ರಮಗಳಾಗಿದ್ದವು. ಯರಿಕುರುಬಿನಾಳ, ಮಸಿಕುರುಬಿನಾಳ, ತುಮರಿಕೊಪ್ಪ, ಇಟಗಿ, ನಿಲೋಗಲ್, ಪಟ್ಟಲಚಿಂತಿ, ಮಡಿಕೇರಿ, ನೀರಲಕೊಪ್ಪ, ಚಿಕ್ಕ ಅಳಗುಂಡಿ, ಶಾಂತಗೇರಿ, ಕೊಡತಗೇರಿ, ಹುಣಸಿಮರಡಿ, ಗುಡ್ಡದ ಮಲ್ಲಾಪುರ ಮೊದಲಾದ ಸುತ್ತಮುತ್ತಲಿನ ಊರುಗಳಲ್ಲಿ ಈಚಲು ಗಿಡಗಳನ್ನು ಕಡಿದರು. ಇದರ ಸಾಮೂಹಿಕ ನಾಯಕತ್ವವನ್ನು ಗುಡ್ಡದ ದ್ಯಾವಲಾಪುರದ ಗುರನಗೌಡ್ರು, ಪಟ್ಟಲಚಿಂತಿಯ ರಾಘವೇಂದ್ರರಾವ್ ಪಟ್ವಾರಿ, ನಾರಾಯಣರಾವ್ ಕುಲಕರ್ಣಿ, ಸಬ್ ಕಮಾಂಡರ್ ಚೈಲಪ್ಪ ಎಚ್ಚರಪ್ಪ ಬಡಿಗೇರ, ಸೀತಮ್ಮ ಬಡಿಗೇರ ಮೊದಲಾದವರು ವಹಿಸಿದ್ದರು.

ಆಗ ಸೇಂದಿ, ಸರಾಯಿ ಕುಡಿಯುವುದು ದೇಶದ್ರೋಹವಾಗಿತ್ತು. ಸೇಂದಿ ಮಾರುವುದು ಸಮಾಜಘಾತುಕವಾಗಿತ್ತು. ಈ ಸಂದರ್ಭದಲ್ಲಿ ಪಟ್ಟಲಚಿಂತಿಯ ನಾರಾಯಣರಾವ್ ಪಟ್ಟಲಚಿಂತಿಯ ಸೇಂದಿ ಅಂಗಡಿ ಬಂದ್ ಮಾಡಿಸಿ ಜೇಲಿಗೆ ಹೋದುದು ಒಂದಾದರೆ ರಾಘವೇಂದ್ರರಾವ್ ಪಟ್ಟಾರಿ ಮತ್ತು ಅವರ ಸ್ನೇಹಿತರು ಕೂಡಿ ಬಿಳೇಕಲ್ ಸೇಂದಿ ಅಂಗಡಿಯನ್ನು ಸುಟ್ಟು ಹಾಕಿದುದು ಮಿಟ್ಟಲ ಕೋಡಿನ ಕೂಡ್ಲೆಪ್ಪ ಕಳ್ಳಭಟ್ಟಿ ಕ್ರಾಸಿನ ಸೇಂದಿ ಅಂಗಡಿ ಬೆಂಕಿ ಇಟ್ಟದ್ದು ಅವರ ದೇಶಪ್ರೇಮದ ಕಾರ್ಯವಾಗಿತ್ತು.

ಗುಡ್ಡದ ಮಲ್ಲಾಪುರ ಭಾಗದ ಪಟ್ಟಲಚಿಂತಿ, ಮೂಗನೂರು ಗುಡ್ದ ದ್ಯಾವಲಾಪುರ ಬಿಳೇಕಲ್ಲು, ಶ್ಯಾಡಲಗೇರಿ, ತುಗ್ಗಲಡೋಣಿ, ಕಡಿವಾಳ, ಜಾಗೀರ ಗುಡದೂರು, ತುಮರಿಕೊಪ್ಪ ಮೊದಲಾದ ಹಳ್ಳಿಗಳ ಜನರು ಸೇರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿ ಪೊಲೀಸ್ ಕಾರ್ಯಾಚರಣೆ ಕೋರಿದ್ದರು. ನಿಜಾಮನ ಕಪಿಮುಷ್ಟಿಯಿಂದ ರಜಾಕಾರರ ಹಾವಳಿಯಿಂದ ಪಾರುಮಾಡಲು ಕೋರಿ ಪತ್ರ ಬರೆದು ದೆಹಲಿಗೂ ಗದುಗಿನ ಕಾಂಗ್ರೆಸ್ ಆಫೀಸಿಗೂ ಕಳಿಸಿದ್ದರು. ಇದೊಂದು ಸಹಿ ಚಳವಳಿ ಎಂದು ಈ ಭಾಗದಲ್ಲಿ ಹೆಸರಾಗಿದೆ.

ಸರ್ಕಾರಿ ಅಧಿಕಾರಿಗಳಾದ ಗೌಡ, ಕುಲ್ಕರ್ಣಿ, ಸೈನ್ಯದ ಪಠಾಣರು ಮತ್ತು ಪೊಲೀಸರು ನೀಡುತ್ತಿದ್ದ ಸುದ್ದಿಗಳನ್ನು ಒಯ್ಯುತ್ತಿದ್ದ ವಾಲೀಕಾರರಿಗೆ ಪೊಲೀಸರ ಬೆಂಗಾವಲು ಇರುತ್ತಿತ್ತು. ಬಿಳೇಕಲ್ ವಾಲೀಕಾರನು ಒಯ್ಯುತ್ತಿದ್ದ ಟಪಾಲನ್ನು ಸ್ವಾತಂತ್ರ್ಯ ಸೇನಾನಿಗಳು ಕಸಿದುಕೊಂದು ಸುಟ್ಟು ಹಾಕಿದರು. ಪೊಲೀಸರ ಮೇಲೆ ಕೈ ಬಾಂಬು ಎಸೆದು ಓಡಿಸಿದರು. ಇದು ಹನುಮನಾಳ ಶಿಬಿರದ ಗಡಿಯಲ್ಲಿ ಸರ್ವಸಾಮಾನ್ಯವಾಗಿತ್ತು. ಇದರ ಉದ್ದೇಶ ಅಸಹಕಾರ ತೋರುವುದು ಆಗಿತ್ತು. ಹನುಮನಾಳ ಗ್ರಾಮವು ಮುಂಬೈ ಪ್ರಾಂತಕ್ಕೆ ಸೇರಿತ್ತು. ಅಲ್ಲಿಂದ ಹೈದರಾಬಾದ್ ಪ್ರಾಂತಕ್ಕೆ ಆಮದು ಆಗುತ್ತಿದ್ದ ಚಿಮಣಿ ಎಣ್ಣೆ, ಬಟ್ಟೆ, ಅಬಕಾರಿ, ಆಹಾರ ಧಾನ್ಯಗಳನ್ನು ಸ್ವಾತಂತ್ರ್ಯಯೋಧರು ರಾತ್ರೋರಾತ್ರಿ ಜಪ್ತಿ ಮಾಡುತ್ತಿದ್ದರು. ಆಹಾರ ಧಾನ್ಯದ ಕೊರತೆಯಿಂದ ಬೆಲೆ ಏರಿದಾಗ ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕುವಂತೆ ಮಾಡುತ್ತಿದ್ದರು. ಈ ಸರ್ಕಾರ ಹೋದರೆ ಸಾಕೆಂಬ ಅಭಿಪ್ರಾಯ ಮೂಡಿಸುವಲ್ಲಿ ಹನುಮನಾಳ ಮತ್ತು ಗಜೇಂದ್ರಗಡ, ಇಲಕಲ್ ಶಿಬಿರಗಳು ಬಹಳಷ್ಟು ಕೆಲಸ ಮಾಡಿದವು. ಹನುಮನಾಳ ಶಿಬಿರವು ರಜಾಕಾರ ಹಾವಳಿಯಿಂದ ಓಡಿ ಬಂದವರಿಗೆ ಊಟ ವಸತಿ ಏರ್ಪಡಿಸಿತ್ತು.

 

ಲೇವಿಹಪ್ತೆ ಲೂಟಿ

ನಿಜಾಮ ಸರ್ಕಾರವು ರೈತನು ಬೆಳೆದ ಹೊಲಕ್ಕೆ ಇಂತಿಷ್ಟು ಎಂದು ಯಾವುದೇ ವೈಜ್ಞಾನಿಕ ಕ್ರಮವಿಲ್ಲದೇ ಲೇವಿ ವಸೂಲಿ ಮಾಡುತ್ತಿತ್ತು. ಎಷ್ಟೋ ಸಲ ಬೆಳೆದದ್ದೆಲ್ಲ ಸರ್ಕಾರಕ್ಕೆ ಲೇವಿ ರೂಪದಲ್ಲಿ ಕೊಡಬೇಕಾಗಿತ್ತು. ಲೇವಿ ಬೆಲೆ ಅತ್ಯಂತ ಕಡಿಮೆ ಇದ್ದು ರೈತನು ಲುಕ್ಸಾನದಲ್ಲಿ ಬದುಕುತ್ತಿದ್ದನು. ಇದರಿಂದ ರೈತರು ಬೇಸತ್ತಿದ್ದರು. ಈ ಶೋಷಣೆಯನ್ನು ವಿರೋಧಿಸಿ, ಅದನ್ನು ಕಾಯುತ್ತಿದ್ದ ಪೊಲೀಸರನ್ನು ಹೊಡೆದೋಡಿಸಿ ರೈತರಿಂದ ವಸೂಲಿ ಮಾಡಿದ ಲೇವಿ ಧಾನ್ಯವನ್ನು ಶಿಬಿರದವರು ಒಯ್ಯುತ್ತಿದ್ದರು. ಜೀವದ ಪರಿವೇ ಇಲ್ಲದೆ ಸಾವು ನೋವುಗಳಿಗೆ ಅಂಜದೆ ನಡೆಯುವ ಭೂಗತ ಚಟುವಟಿಕೆಗಳು ಎಲ್ಲ ಶಿಬಿರದ ಲಕ್ಷಣಗಳಾಗಿದ್ದವು. ಬರಗಾಲದಲ್ಲಿಯೂ ಹಪ್ತೆ ವಸೂಲಿಯನ್ನು ಅತ್ಯಂತ ಕಿರಿಕಿರಿ ನೀಡಿ ಮಾನಹಾನಿ ಮಾಡಿ ವಸೂಲು ಮಾಡುತ್ತಿದ್ದರು. ಜೀವಕ್ಕೆ, ಮಾನಕ್ಕೆ ಬೆದರಿದವರು ಹೊಲಮನೆ ಮಾರಿ ಹಪ್ತೆ ಕಟ್ಟುತ್ತಿದ್ದರು. ಇದು ಜನರಲ್ಲಿ ಕೋಪ ತಂದಿತ್ತು. ಇದನ್ನು ವಿರೋಧಿಸಿ ತುಮರಿಗುದ್ದಿಯಲ್ಲಿ (15-10-1947) ಬಂದೂಕು ಹಾರಿಸಿ ಲೇವಿಧಾನ್ಯ ಕಾಯುತ್ತಿದ್ದ ವಾಲೇಕಾರನನ್ನು ಓಡಿಸಿ ಊರಿನ ಸಂಗನಗೌಡ, ಕುಲಕರ್ಣಿ ಕಿಷನರಾವ್ ನನ್ನು ಬೆದರಿಸಿ 50 ಕೊರಿ ಚೀಲ ಭತ್ತವನ್ನು ಶಿಬಿರಕ್ಕೆ ಒಯ್ದರು. ಈ ಕಾರ್ಯಾಚರಣೆಯಲ್ಲಿ ಬಿ.ವಿ.ದೇಸಾಯಿ, ರಾಮನಗೌಡ ಹಿರೇಗೊಣ್ಣಾಗರ ಮೊದಲಾದ ಇಪ್ಪತ್ತು ಜನರು ಭಾಗವಹಿಸಿದ್ದರು.

ಬೇವೂರಿನಲ್ಲಿ ಕುಲ್ಕರ್ಣಿ ವೆಂಕಟರಾವ್ ಬೀಡಿಕರನನ್ನು ಹೆದರಿಸಿ ದಾಳಿ ಮಾಡಿ 500 ರೂ. ಮಾಲ್ಗುಜಾರಿ ಲೂಟಿ ಮಾಡಿದರು. ಈ ಕಾರ್ಯಾಚರಣೆ ಸಾದಾಪುರ ಹನುಮಂತರಾವ್ ಕೊರ್ಲಳ್ಳಿ, ಶ್ರೀನಿವಾಸಾಚಾರ್ ಮೊದಲಾದ ಐದು ಜನರಿದ್ದರು. ಇದೇ ರೀತಿ ಮುಧೋಳ ದಲ್ಲಿ ದೇಸಾಯಿಯರ ಮನೆಯಲ್ಲಿ ಇಟ್ಟಿದ್ದ ಹಪ್ತೆಯನ್ನು ಸುಮಾರು 1300 ರೂ., ತ್ರೀನಾಟ್‌ತ್ರೀ ಗನ್, ಮದ್ದಿನ ಬಂದೂಕು, ಕತ್ತಿ ಮೊದಲಾದವು ಲೂಟಿ ಮಾಡಿದರು. ಈ ಕಾರ್ಯಾಚರಣೆಯಲ್ಲಿ ಜೆ.ಕೆ. ರಾಜಪುರೋಹಿತ. ಶ್ರೀನಿವಾಸಾಚಾರ್ಯ ಕಾಟಾಪುರ ಮೊದಲಾದ 13 ಜನ ಇದ್ದರು. ಗುನ್ನಾಳಿಗೆ ಕಂದಾಯ ವಸೂಲಿಗೆ ಬಂದಿದ್ದ ಹುಲಿಹೈದರ ಜಹಗೀರಿನ ತಹಸೀಲ್ದಾರನಿಗೆ ಜಯತೀರ್ಥ ರಾಜಪುರೋಹಿತ, ಮೊದಲಾದವರು ಸೇರಿ ಅವನಿಗೆ ಬುದ್ದಿ ಕಲಿಸಲು ರಾತ್ರೋ ರಾತ್ರಿ ಹೋಗಿ ಮಲಗಿದ್ದಾಗ ಲಾಠಿ ಏಟು ಕೊಟ್ಟರು. ಅಕಸ್ಮಾತ್ತಾಗಿ ಸ್ವಾತಂತ್ರ್ಯಯೋಧರ ಬಂದೂಕದಿಂದಲೇ ಗುಂಡು ಸಿಡಿದು ಸ್ವಾತಂತ್ರ್ಯ ಯೋಧ ಬಂಡೆಪ್ಪನಿಗೆ ಗುಂಡು ಬಡಿಯಿತು. ಕುಷ್ಟಗಿ ತಾಲೂಕಿನ ಗ್ವಾತಗಿಯಲ್ಲಿ ಮುಡಿಯಪ್ಪಗೌಡ, ಶ್ರೀನಿವಾಸಾಚಾರ್ಯ ಕಲ್ಲೂರು, ವಿಠೋಬಾಚಾರ್ಯ ಜೋಷಿ, ಕಾಟಾಪುರ ಮೊದಲಾವರು ಸೇರಿ ಪೊಲೀಸರ ಮೇಲೆ ಏರಿ ಹೋಗಿ ಮಾಲ್ಗುಜಾರಿ ಲೂಟಿ ಮಾಡಿದರು. ಪೊಲೀಸರು ಕಾಯುತ್ತಿದ್ದ ಮಿಟ್ಟಲಕೋಟ ಕರೋಡಗಿರಿ ಕಚೇರಿಗೆ ಬೆಂಕಿ ಇಟ್ಟು ಬಾಂಬು ಸಿಡಿಸಿ ಪೊಲೀಸರನ್ನು ಓಡಿಸಿದರು. ಈ ಕಾರ್ಯಾಚರಣೆಯಲ್ಲಿ ಗುಡ್ಡದ ಮಲ್ಲಾಪುರ ಶಿಬಿರದ ಕೂಡ್ಲೆಪ್ಪ ಕಾಳಪ್ಪ ಬಡಿಗೇರ, ರಾಘವೇಂದ್ರರಾವ್ ಪಟವಾರಿ ಮೊದಲಾದವರು ಇದ್ದರು. ಸರಿರಾತ್ರಿಯಲ್ಲಿ ನಿಲೋಗಲ್ ಕರೋಡಗಿರಿ ಕಚೇರಿ ಹಾಗೂ ಪೊಲೀಸ್ ಠಾಣೆಗೆ 3 ಕಡೆಯಿಂದ ಮುತ್ತಿಗೆ ಹಾಕಿ ಕಛೇರಿಗೆ ಬೆಂಕಿ ಇಟ್ಟು ಬಾಂಬ್ ಸಿಡಿಸಿದರು. ಈ ಸಾಹಸದಲ್ಲಿ ರಾಚಪ್ಪಸೂಡಿ, ಸೀತಮ್ಮ ಬಡಿಗೇರ, ಕಾಳಪ್ಪ ಬಡಿಗೇರ, ಲಕ್ಷ್ಮಪ್ಪ ತೆನರಪ್ಪ, ಗುರನಗೌಡ, ರಾಘವೇಂದ್ರ ಪಟ್ವಾರಿ ಮೊದಲಾದವರು ಜೀವದ ಭಯವಿಲ್ಲದೇ ಹೋರಾಡಿ ಪೊಲೀಸರನ್ನು ಓಡಿಸದರು.

 

ಪೊಲೀಸ್ ಠಾಣೆಗಳ ಮೇಲೆ ದಾಳಿ

ಸರ್ಕಾರಕ್ಕೆ ಭಯ ಹುಟ್ಟಿಸಿದ ಪ್ರಸಂಗಗಳು ಅನೇಕ. ಹೀಗೆ ಯಾವುದೇ ಸರ್ಕಾರವು ಜನಪ್ರಿಯತೆ ಕಳೆದುಕೊಂಡಾಗ ಅದರ ಕ್ರಿಯೆಗಳು ಸಾಮಾಜಿಕವಾಗಿ ಅಹಿತವಾದಾಗ ಜನರು ಸರ್ಕಾರದ ಎದುರು ಬೀಳುವುದು ಸಹಜ. ಆ ಪ್ರತಿಭಟನೆಯು ಹಿಂಸಾರೂಪ ತಳೆಯುತ್ತದೆ ಎಂಬುದನ್ನು ಈ ಕೆಳಗಿನ ಘಟನೆಗಳಲ್ಲಿ ಕಾಣಬಹುದು.

ಪೊಲೀಸರ ದುರ್ನೀತಿಯ ಫಲವಾಗಿ, ರಾಜ್ಯ ಸರ್ಕಾರದ ವಿಫಲತೆಯ ಪರಿಣಾಮವಾಗಿ ಸ್ವಾತಂತ್ರ್ಯ ಯೋಧರು ಹಿರೇವಂಕಲಕುಂಟಿ ಪೊಲೀಸ್ ಠಾಣೆಗೆ ದಾಳಿಯಿಕ್ಕಿದರು (1947ನೆಯ ಅಕ್ಟೋಬರ್ 8). ಹತ್ತು ಜನ ಪೊಲೀಸರನ್ನು ಕಟ್ಟಿಹಾಕಿ ಶಸ್ತ್ರಾಸ್ತ್ರಗಳನ್ನು ಒಯ್ದರು. ಅಲ್ಲಿ ಜಿ.ಕೆ.ರಾಜಪುರೋಹಿತ, ಸೇತುರಾಮಾಚಾರ್, ಮಧ್ವಾಚಾರ್ಯ ಮೊದಲಾದವರು ಇದ್ದರು. ಇವರಲ್ಲಿ ಲಿಂಗಯ್ಯಸ್ವಾಮಿ ಹಿರೇವಂಕಲಕುಂಟಿ, ಶ್ರೀಮತಿ ಸುಬ್ಬಮ್ಮ, ಶ್ರೀಮತಿ ಶಿವಬಸಯ್ಯ ಅವರು ಹೆಚ್ಚಿನ ಸಹಕಾರ ನೀಡಿದರು.

ಮಾಲಗಿತ್ತಿಯಲ್ಲಿ ರಜಾಕಾರರ ಠಾಣೆಯಲ್ಲಿ ಪೊಲೀಸರು ಇದ್ದರು. ಹಾಡುಹಗಲೇ ಲೂಟಿ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಇವು ಇವರ ದಿನಂಪ್ರತಿ ಕೆಲಸಗಳಾಗಿದ್ದವು. 1948ನೆಯ ಜನವರಿ 2ರಂದು ಇಟಗಿ ವೇಣುಗೋಪಾಲ, ನಾಗಪ್ಪನಗಡ ಶಿವಮಲ್ಲಪ್ಪ ಹನುಮನಾಳ ಶಿಬಿರ, ಗುಡ್ಡದ ಮಲ್ಲಾಪುರ ಶಿಬಿರದ ಬಸಪ್ಪ ಹೂಗಾರ ಮಹಾಲಿಂಗಪ್ಪ, ಪಟ್ಟಲಚಿಂತಿ, ರಾಘವೇಂದ್ರರಾವ್ ಮೊದಲಾವರು ದಾಳಿ ಮಾಡಿ 7 ಜನ ಕಾಯ್ದಿಟ್ಟ ಪಡೆಯನ್ನು ಕೊಂದರು. ಈ ಪ್ರಕರಣದಲ್ಲಿ ಜೈಲಿಗೆ ಹೋದ ಸ್ವಾತಂತ್ರ್ಯ ಯೋಧ ಹನುಮನಗೌಡ ಚಿತ್ರಹಿಂಸೆಯಿಂದ ಕೊಲ್ಲಲ್ಪಟ್ಟರೆ, ಭೀಮಗೌಡ ಮತ್ತು ಭುಜಂಗಪ್ಪ, ದೇಶ ಸ್ವತಂತ್ರವಾದ ಮೇಲೆ ಜೇಲಿನಿಂದ ಹೊರಗೆ ಬಂದರು. ಹೂಲಗಿರಿ ನಾಕಾ ಮತ್ತು ಪೊಲೀಸ್ ಕಚೇರಿ 1948ನೆಯ ಮಾರ್ಚ್ 5ರಂದು ಸುಡಲು ಹೋದ ಗುರುಚಾರ ಸೌದಿ, ಅಡಿವೆಪ್ಪ ಸಾಹು, ಗದ್ದಿಕೇರಿ ರಾಮರಾವ, ಗಂಗಾ ಬೇಡಕರ, ಜಿ. ಕೆ. ರಾಜಪುರೋಹಿತ ಮೊದಲಾದವರು ಪೊಲೀಸರ ಗುಂಡಿನ ದಾಳಿಯಲ್ಲಿ ಬದುಕುಳಿದದ್ದೇ ಸಾಹಸ. ಕಲಾಲಬಂಡಿಯಲ್ಲಿ ರಜಾಕಾರರ ಬೀಡು ಬಿಟ್ಟ ಸುದ್ದಿ ತಿಳಿದು ಹನುಮಂತರಾವ್ ಕಾಟಾಪುರ, ಜಿ.ಕೆ. ರಾಜಪುರೋಹಿತ, ಕೊರ್ಲಳ್ಳಿ ಶ್ರೀನಿವಾಸಾಚಾರ್ಯ ನಾಯಕತ್ವದಲ್ಲಿ 200-300 ಜನ ಸೇರಿ ಹೊರಟರು. ನಿಜಾಮ ಪಡೆಯೊಂದಿಗೆ ನೇರ ಯುದ್ಧ ನಡೆದು ಕೈಬಾಂಬು ಬಳಸಿದರು. ರೈಫಲ್ ಗುಂಡು ಸಿಡಿದವು. ಒಬ್ಬ ರಜಾಕಾರ ಕೊಲ್ಲಲ್ಪಟ್ಟನು. ಅವರನ್ನು ಕರೆಸಿದ ಜಂಗ್ಲಿಸಾಬ್ ಓಡಿಹೋದ, ರಜಾಕಾರರು ಓಡಿ ಹೋದರು. ಯಲಬುರ್ಗಾ ತಹಶೀಲ್ದಾರ ಕಚೇರಿಯ ಮೇಲೆ ದಿನಾಂಕ 1948ನೆಯ ಸೆಪ್ಟೆಂಬರ್ 10ರಂದು ಸ್ವಾತಂತ್ರ್ಯ ಹೋರಾಟಗಾರರು ದಾಳಿ ಮಾಡಿ ಪಠಾಣ ಸೈನ್ಯವನ್ನು ಓಡಿಸಿದರು. ಆ ಆಕ್ರಮಣದಲ್ಲಿ ಸಾವಿರಾರು ಜನ ಸ್ವಾತಂತ್ರ್ಯಯೋಧರು ಸೇರಿ ತಹಶೀಲ್ದಾರ ಕಚೇರಿಯನ್ನು ವಶಪಡಿಸಿಕೊಂಡದ್ದು ಐತಿಹಾಸಿಕ ಸತ್ಯ. ಈ ಕಾರ್ಯಾಚರಣೆ ಶಿಬಿರಾಧಿಪತಿ ಪುಂಡಲೀಕಪ್ಪ ಅವರ ನಾಯಕತ್ವದಲ್ಲಿ ನಡೆಯಿತು.

 

ನೇರ ಯುದ್ಧಗಳು

ಗಜೇಂದ್ರಗಡ ಶಿಬಿರದಿಂದ ಆರು ಮೈಲಿ ದೂರದಲ್ಲಿದ್ದ ತುಮರಿಕೊಪ್ಪದಲ್ಲಿ ಸಾವಿರಾರು ಜನರು ಸುತ್ತಮುತ್ತಲಿನ ಹಳ್ಳಿಯಿಂದ 1947ನೆಯ ನವೆಂಬರ್ 6ರಂದು ನೆರೆದಿದ್ದರು. ನೈಜಾಮ ಸೈನ್ಯ ಹೆಣ್ಣು ಮಕ್ಕಳ ಮೇಲೆ ನಡೆಸಿದ ಅತ್ಯಾಚಾರ, ಅಕ್ರಮಸುಂಕ, ಲೇವಿ, ಲೂಟಿ ಬಗ್ಗೆ ಜನರು ರೋಸಿ ಹೋಗಿ ಏನು ಮಾಡಬೇಕೆಂಬ ವಿಚಾರಕ್ಕಾಗಿ ಸೇರಿದ್ದರು. ಆಗ ಅಲ್ಲಿಗೆ ಹನ್ನೆರಡು ಜೀಪಿನಲ್ಲಿ ನಿಜಾಮ ಸೈನಿಕರು ಬರುವ ಸುದ್ದಿ ತಿಳಿಯಿತು. ಜನರು ಕತ್ತಿ ಕವಣೆ ಬೀಸುತ್ತ ಸಿಡಿಮದ್ದು, ಬೋರಗನ್ನುಗಳನ್ನು ತೆಗೆದು ಕೊಂಡು ಜೈಹಿಂದ್ ಎನ್ನುತ್ತ ಬಾದಿಮನಾಳ ಕತ್ರಿಗೆ ಬಂದು ನಿಂತರು. ಜನಪ್ರವಾಹವೇ ಅಲ್ಲಿತ್ತು. ಜೀಪಿನಲ್ಲಿ ಬಂದ ಸೈನಿಕರಿಗೆ ಈ ಅನಿರೀಕ್ಷಿತ ಆಕ್ರಮಣ ಪ್ರಸಂಗದಿಂದ ಗಾಬರಿಯಾಯ್ತು. ಸಮೀಪದ ವೆಂಕಟರಾವ್ ಸಾಳುಂಕಿ ಹೊಲದಲ್ಲಿ ನಿಂತು ತಮ್ಮ ಸುತ್ತಲೂ ಗೆರೆ ಕೊರೆದು ಇದನ್ನು ದಾಟಿ ಬರಬೇಡಿ ಸುಟ್ಟು ಬೂದಿಯಾಗುವಿರಿ ಎಂದು ಹೇಳಿ ತ್ರೀನಾಟ್ ತ್ರಿ ಗನ್ ಹಿಡಿದು ನಿಂತರು. ಪ್ರಾಣದ ಪರಿವಿಲ್ಲದ ಜೋಷ್‌ನಲ್ಲಿದ್ದ ಜನ ಗೆರೆಗೆ ಬಂದು ಸೆಡ್ಡು ಹೊಡೆದರು. ಕೆಲವರು ಮದ್ದುಗುಂಡು ಹಾರಿಸಲು ಪ್ರಾರಂಭಿಸಿದರು. ಕಲ್ಲು ಕವಣೆ ತೂರಿದರು. ಆಗ ಸೇನೆ ನೇರವಾಗಿ ಜನರ ಎದುರಿಗೆ ಗುಂಡಿಕ್ಕಿತು. ಈ ಕದನದಲ್ಲಿ ಸ್ವಾತಂತ್ರ್ಯ ಯೋಧ ಅಲಿಸಾಬ್ ಪಿಂಜಾರ, ಹಿರೇಗೊಣ್ಣಾಗರ ಮತ್ತು ಹನುಮಂತಪ್ಪ ಕುನ್ನಾಪುರವರಿಗೆ ಗುಂಡೇಟುಗಳು ಬಿದ್ದವು. ಹುತಾತ್ಮರಾದರು. ಗುಂಡೇಟಿಗೆ ಬೆದರಿ ಜನ ಹನುಮನಾಳದತ್ತ ಹಿರೇಗೊಣ್ಣಾಗರ ದತ್ತ ಓಡಿದರು. ನೂರಾರು ಜನರನ್ನು ಬಂಧಿಸಿದರು. ತುಮರಿಕೊಪ್ಪದಲ್ಲಿ ಇಳಿದುಕೊಂಡು ಮನಸ್ವಿ ಅತ್ಯಾಚಾರ ಮಾಡಿದರು. ಬಾದಿಮನಾಳಿನ ದುರಗವ್ವಾ ಡೊಳ್ಳಿನ ಹಾಗೂ ಹಾಬಲಕಟ್ಟಿ ಯಮನವ್ವಳನ್ನು ಅತ್ಯಾಚಾರ ಮಾಡಿಯೇ ಕೊಂದರು. ಅನೇಕ ಹೆಣ್ಣುಮಕ್ಕಳ ಶೀಲ ಹರಣವಾಯಿತು. ಈ ದುಃಖಕ್ಕೆ ಈಡಾದವರು ಇನ್ನೂ ಬದುಕುಳಿದು ಕಣ್ಣೀರು ಸುರಿಸುತ್ತ ದುರಂತವನ್ನು ಶಪಿಸುತ್ತಾರೆ.

ಇಲ್ಲಿ ಅನೇಕರು ಜೈಲು ಅನುಭವಿಸಿದರೂ ಅವರಿಗೆ ಸ್ವಾತಂತ್ರ್ಯಯೋಧರ ಮಾಶಾಸನ ವಿಲ್ಲ. ಸರ್ಕಾರದ ಕಡತಗಳು ಬರಿಗೈಗೆ ಮಾರಕವಾಗುತ್ತವೆ. ಸಾವಿನ ದವಡೆಯಲ್ಲಿರುವ ವಯಸ್ಸಿನ ಭಾರದಿಂದ ನಲುಗಿಹೋದ ಇವರಿಗೆ ಯಾವುದಾದರೂ ಕರುಣೆ ಹಸ್ತ ಕೈಚಾಚಬಹುದೆ? ಇದನ್ನು ಪ್ರಜಾತಂತ್ರವೇ ಹೇಳಬೇಕು(ಈ ಸತ್ಯಸಮೀಕ್ಷೆ ಬಯಸಿದವರು ತುಮರಿಕೊಪ್ಪಕ್ಕೆ ಹೋಗಿ ಬರಲಿ).

ಗುಡ್ಡದ ದ್ಯಾವಲಾಪುರ ಸಮೀಪದ ಊರುಗಳಲ್ಲಿದ್ದ ಸ್ವಾತಂತ್ರ್ಯ ಯೋಧರ ಮೇಲೆ ಕಣ್ಣಿಡಲು ಹುಸೇನಸಾಬ್ ಎಂಬ ನಿಜಾಮ ಪಡೆಯ ಗುಪ್ತಚಾರನಿದ್ದನು. ಅವನಿಂದ ಬೇಸರಪಟ್ಟವರು ಅವನನ್ನು ಹಿಡಿದು ಗಿಡಕ್ಕೆ ಕಟ್ಟಿಹಾಕಿ ಗುಂಡು ಹಾಕಿ ಕೊಂದರು. ಈ ಘಟನೆ ಅರಿತ ರಜಾಕಾರರು ಕಾಂಗ್ರೆಸ್ ಕಾರ್ಯಕರ್ತರನ್ನೆಲ್ಲ ಮುಗಿಸಿ ಹೈದರಾಬಾದಿಗೆ ತೆರಳಲು ಸಿದ್ಧರಾದರು. ಏಕೆಂದರೆ ಭಾರತ ಸೈನ್ಯ ಹೈದರಾಬಾದ್ ಪ್ರಾಂತ್ಯ ಮುತ್ತಿದೆ ಎಂದು ಸುದ್ದಿ ಹರಡಿತ್ತು. ಇದು ನಿಜವೂ ಆಗಿತ್ತು. 1948ನೆಯ ಸೆಪ್ಟೆಂಬರ್ 16ರಂದು ಈ ಕಾರ್ಯಾಚರಣೆಗೆಂದು ನಿಜಾಮ ಸೈನಿಕರು ಹೊರಟಾಗ ಈ ಸುದ್ದಿ ತಿಳಿದು ಸ್ವಾತಂತ್ರ್ಯಯೋಧರು ಅವರನ್ನು ಎದುರುಗೊಂಡು ತಡವಿದರು. ಫೈರಿಂಗ್ ಆರಂಭಿಸಿದರು. ತತ್‌ಕ್ಷಣ ಎಚ್ಚರವಾದ ಸೈನಿಕರು ಗುಡ್ಡದ ಆಶ್ರಯ ಪಡೆದು ಹೊಲದಲ್ಲಿ ನಿಂತಿದ್ದ ಗುಂಪಿನ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು. ಯುದ್ಧ ಪ್ರಾರಂಭವಾಯಿತು. ಕಲ್ಲು, ಕವಣೆ, ಬಾಂಬು ಸಿಡಿದವು. ಈ ಯುದ್ಧದಲ್ಲಿ ಗುಡ್ಡದ ಮಲ್ಲಾಪುರ ಕ್ಯಾಂಪಿನ ಕಮಾಂಡರ್ ಶ್ರೀರಾಮುಲುಗೆ ಗುಂಡೇಟು ಬಿತ್ತು. ತಕ್ಷಣ ಸತ್ತ. ಹನುಮಾಳದ ಕಲ್ಲಪ್ಪ ಗುಡದೂರು ಗುಂಡೇಟಿಗೆ ನೆಲಕ್ಕೆ ಕುಸಿದನು. ನಿಜಾಮ ಸೈನಿಕರು ಗುಡ್ಡದ ಆಶ್ರಯದಲ್ಲಿ ಇದ್ದರೆ ಇವರು ಹೊಲದಲ್ಲಿ ಇದ್ದರು. ಅವರ ಕೈ ಮೇಲಾಯಿತು. ಸೇರಿದ ಜನ ಓಡಿದರು. ಪಠಾಣ ಸೈನಿಕರು ಕುಷ್ಟಗಿಗೆ ಹೊರಟರು.

ಗಜೇಂದ್ರಗಡದ ಸಮೀಪ ಕಗ್ಗಲ್ಲು ಹಳ್ಳದಲ್ಲಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡುತ್ತಿದ್ದ ನಿಜಾಮ ಸೈನಿಕರನ್ನು ಹೊಡೆದೋಡಿಸಲು ಕಾಟಾಪುರ ಹನುಮಂತರಾವ ಕೊರ್ಲಳ್ಳಿ ಶ್ರೀನಿವಾಸಾಚಾರ ಮೊದಲಾದವರು ಹೊರಟರು. ಪಠಾಣರಿಗೂ ಇವರಿಗೂ ಗುಂಡಿನ ಕಾಳಗ ನಡೆಯಿತು. ಈ ಸುದ್ದಿ ಗಜೇಂದ್ರಗಡ ಶಿಬಿರ ತಲುಪುತ್ತಲೇ ಅವರು ಭಾರತ ಸರ್ಕಾರದ ಯೂನಿಯನ್ ಕ್ಯಾಂಪಿಗೆ ತಿಳಿಸಿ ಅವರ ಸಹಾಯ ಪಡೆದರು. ಯೂನಿಯನ್ ಕ್ಯಾಂಪು ಕ್ಯಾಪ್ಟನ್ ಸಾವಂತರ ಹಿರಿತನದಲ್ಲಿ ಬಂದರು. ಚಿಕ್ಕ ಯುದ್ಧವೇ ನಡೆಯಿತು. ಪಠಾಣರ ಗುಂಡು ಭಾರತೀಯ ಸೈನಿಕನೊಬ್ಬನ ಕೈಯಲ್ಲಿ ಹರಿದು ಹೋಯಿತು. ಆಗ ಭಾರತ ಸೈನ್ಯವು ರೊಚ್ಚಿಗೆದ್ದು ಅವರನ್ನು ಸುತ್ತಿತು. ಅನೇಕ ಪಠಾಣರು ಗಾಯ ಹೊಂದಿ ಅಲ್ಲಿಂದ ಕಂಬಿ ಕಿತ್ತರು. ಈ ಘಟನೆ ಜರುಗಿದುದು ಸುಮಾರು 1948ರ ಜುಲೈ ಎಂದು ತಿಳಿದುಬರುತ್ತದೆ.

ಈ ಎಲ್ಲ ಅನ್ಯಾಯಗಳನ್ನು ಅರಿತು ಹೈದರಾಬಾದ್ ಸರ್ಕಾರವನ್ನು ಮಣಿಸಲು ಭಾರತವು ಪೊಲೀಸ್ ಆಯಕ್ಷನ್ ಕೈಗೊಂಡಿತು. ಭಾರತ ಸರ್ಕಾರ ಪೋಲೋ ಆಪರೇಷನ್ ಕಾರ್ಯಾಚರಣೆ 1948ನೆಯ ಸೆಪ್ಟೆಂಬರ್ 9ರಿಂದ ಪ್ರಾರಂಭಿಸಿತು. ಹೈದರಾಬಾದ್ 1948ನೆಯ ಸೆಪ್ಟೆಂಬರ್ 17ರಂದು ಶರಣಾಯಿತು. ಇದು ಗಜೇಂದ್ರಗಡ ಶಿಬಿರದ ವೀರಗಾಥೆ. ಇಲ್ಲಿ ಕೇವಲ ಶಿಬಿರಾಧಿಪತಿ ಪುಂಡಲೀಕಪ್ಪ ಜ್ಞಾನಮೋಠೆಯವರಲ್ಲ. ಇಡೀ ಸಮುದಾಯವೇ ಸೇರಿತ್ತು. ಇಲಕಲ್ ಮಠ ಸಹ ಸೇರಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಹೋರಾಟದ ವ್ಯಾಪ್ತಿಯಲ್ಲಿ ಇಲ್ಲಿಯ ಪಶುಪಕ್ಷಿ ಆದಿಯಾಗಿ ಕಲ್ಲುಮಣ್ಣು ನೀರು ನೆಲ ಎಲ್ಲವೂ ಇದ್ದವು.

1947ರಲ್ಲಿ ಶ್ರೀ ವೀರಭದ್ರಪ್ಪ ಶಿರೂರ ಇವರು ಕೆಲವೊಂದು ಕಾರ್ಯಕರ್ತರೊಡನೆ ಕೊಪ್ಪಳ ರೈಲು ನಿಲ್ದಾಣದಲ್ಲಿ ಜಯಪ್ರಕಾಶರನ್ನು ಸ್ವಾಗತಿಸಿ ಹೈದ್ರಾಬಾದ್‌ನ ಹೋರಾಟಕ್ಕೆ ಸಹಾಯ ನೀಡಬೇಕೆಂದು ಮನವಿ ಮಾಡಿಕೊಂಡರು. 1947ನೆಯ ಆಗಸ್ಟ್ 15 ಭಾರತವು ಸ್ವತಂತ್ರವಾದ ದಿನ. ಭಾರತದ ಮೂಲೆ ಮೂಲೆಗಳಲ್ಲಿ ವೈಭವದಿಂದ ಆಚರಿಸಲ್ಪಟ್ಟಿತು. ಆದರೆ ಹೈದರಾಬಾದ್ ಸಂಸ್ಥಾನದ ಪ್ರಜೆಗಳಿಗೆ ಮಾತ್ರ ಈ ಉತ್ಸಾಹದಲ್ಲಿ ಭಾಗವಹಿಸುವ ಪುಣ್ಯವಿರಲಿಲ್ಲ. ನಿಜಾಮ ಸರಕಾರವು ಒಂದು ಫರ್ಮಾನು (ಆಜ್ಞೆ) ಹೊರಡಿಸಿ ಯಾರೂ ಭಾರತ ರಾಷ್ಟ್ರ ಧ್ವಜವನ್ನು ಹಾರಿಸದಂತೆ ನೋಡಿಕೊಳ್ಳಬೇಕೆಂದು ಸೂಚಿಸಿತ್ತು. ಸಭೆ ಮೆರವಣಿಗೆಗಳ ಮೇಲೆ ಮೊದಲೇ ನಿರ್ಬಂಧ ಹಾಕಲಾಗಿತ್ತು. ಶ್ರೀ ಜನಾರ್ಧನರಾವ ವಕೀಲ ಕೊಪ್ಪಳ ಇವರು ಸಭೆಯ ಪ್ರತಿಬಂಧಕ ಆಜ್ಞೆಯನ್ನು ಮುರಿದು ಸೆರೆಯಾಳಾಗಿದ್ದರು. ದಿನಾಂಕ 15ರ ಕಾರ್ಯಕ್ರಮದ ಬಗ್ಗೆ ಶ್ರೀ ವೀರಭದ್ರಪ್ಪ ಶಿರೂರ ಇವರು ಕೊಪ್ಪಳ ಕಾತರಕಿ, ಕಿನ್ನಾಳ, ಯಲಬುರಗಿ, ಕುಕನೂರು ಈ ಕಡೆಗಳಲ್ಲಿ ಒಮ್ಮೆಲೇ ಧ್ವಜ ಹಾರಿಸಲು ನಿರ್ಣಯಿಸಿ ಅದರಂತೆ ಸಿದ್ಧತೆ ಮಾಡಿದ್ದರು. ಪೂರ್ವ ತಯಾರಿಯಂತೆ ಕೊಪ್ಪಳದಲ್ಲಿ ಶ್ರೀ ಲಕ್ಷ್ಮಣಾಚಾರ್ಯ ವಕೀಲ, ಶ್ರೀವೀರಭದ್ರಪ್ಪ ಶಿರೂರ, ಶ್ರೀ ಹಂಪಿ ನರಸಿಂಗರಾವ ಕೂಕನೂರಲ್ಲಿ ಶ್ರೀ ಇಟಗಿ ರಾಘವೇಂದ್ರರಾವ ವಕೀಲರು ಯಲಬುರ್ಗಿಯಲ್ಲಿ ಶ್ರೀ ಯಾರ್ವಣಕಿ ಶ್ರೀನಿವಾಸರಾಯರು ಕಿನ್ನಾಳಲ್ಲಿ ಶ್ರೀ ಸಿದ್ದಪ್ಪ ಮಾಸ್ತರರು ಕಾತರಕಿಯಲ್ಲಿ ಶ್ರೀ ಬಂಗಾರ ಶೆಟ್ಟರು ಈ ಪ್ರಕಾರ ಸುಮಾರು 20 ಜನ ಕಾರ್ಯಕರ್ತರು 15ನೇ ಅಗಸ್ಟಕ್ಕೆ ಧ್ವಜ ಹಾರಿಸಿ ಬಂಧಿತರಾದರು. ಕೊಪ್ಪಳದಲ್ಲಿ ಈ ದಿವಸ ಮುಂಜಾನೆ ಜನರ ಸಮೂಹವು ಶ್ರೀ ಲಕ್ಷ್ಮಣಾಚಾರ್ಯರ ಮನೆಯ ಮುಂದೆ ಬಂದು ನಿಂತಿತ್ತು. ಮೂವರು ಸತ್ಯಾಗ್ರಹಿಗಳು ಸಿದ್ಧತೆಯಿಂದ ಹೊರಬಂದು ಸ್ಟೇಶನ್ ಸಮೀಪದ ಬೈಲಲ್ಲಿ ಧ್ವಜವಂದನೆ ಮಾಡಿದರು. ಪ್ರಮಾಣ ಪತ್ರವನ್ನು ಓದಿದರು. 35-40 ಜನ ಪೊಲೀಸರು ಶಸ್ತ್ರಧಾರಿಗಳಾಗಿ ನಿಂತು ಕಾರ್ಯಕ್ರಮವು ಪೂರ್ತಿಯಾದ ಮೇಲೆ ಬಂಧಿಸಲಾಯಿತೆಂದು ಹೇಳಿದರು. ಇವರನ್ನು ಪೊಲೀಸ ಠಾಣೆಗೆ ಕರೆದೊಯ್ಯಲಾಯಿತು. ಸಾವಿರಾರು ಜನರು ಪೊಲೀಸ ಕಚೇರಿಯ ಬಳಿ ಬಂದು ನಿಂತು ‘‘ಮಹಾತ್ಮಾ ಗಾಂಧೀಜಿ ಕೆ ಜೈ’’ ಎಂದು ಜಯಘೋಷ ಹಾಕಹತ್ತಿದರು. ಶ್ರೀ ಲಕ್ಷ್ಮಣಾಚಾರ್ಯರು ಹೊರಗೆ ಬಂದು ಎಲ್ಲರಿಗೂ ಶಾಂತರೀತಿಯಿಂದ ಮನೆಗೆ ಹೋಗಲು ವಿನಂತಿ ಮಾಡಿಕೊಂಡರು.

ಸತ್ಯಾಗ್ರಹವು ದಿನದಿನಕ್ಕೆ ಹೆಚ್ಚುತ್ತ ನಡೆಯಿತು. ಕೊಪ್ಪಳ, ಯಲಬುರಗಿ ಈ ಎರಡು ತಾಲೂಕುಗಳಲ್ಲಿ ಸುಮಾರು 120ರವರೆಗೆ ಸತ್ಯಾಗ್ರಹಿಗಳ ಸಂಖ್ಯೆ ಬೆಳೆಯಿತು. ನೈಜಾಮ ಸರಕಾರವು ಹಾಗೂ ರಜಾಕಾರರು ರೊಚ್ಚಿಗೆದ್ದು ಮನಬಂದಂತೆ ತಮ್ಮ ಕೃತ್ಯಗಳನ್ನು ಮಾಡಹತ್ತಿದರು. ಶ್ರೀ ಚಾಕಲಬ್ಬಿ ವಕೀಲರನ್ನು ಸತ್ಯಾಗ್ರಹಿಗಳಿಗೆ ಸಹಾಯ ಮಾಡುತ್ತಿರುವರೆಂಬ ಕಾರಣಕ್ಕಾಗಿ ಅವರ ಮನೆಯ ಶೋಧ ನಡೆಸಿ ಅವರ ಮೇಲೆ ಖಟ್ಲೆ ಹಾಕಿದರು. ಸತ್ಯಾಗ್ರಹಿಗಳಿಗೆ ಶಿಕ್ಷೆವಿಧಿಸಿ ಹೈದರಾಬಾದ್, ಕಲಬುರ್ಗಿ, ರಾಯಚೂರು, ನಿಜಾಮಾಬಾದ್, ಔರಂಗಾಬಾದ್ ಸೆರೆಮನೆಯಲ್ಲಿ ಇಟ್ಟರು. ಕಾಂಗ್ರೆಸಿಗರ ಸತ್ಯಾಗ್ರಹವು ಭರದಿಂದ ನಾ ಮುಂದೆ ನೀ ಮುಂದೆ ಎಂದು ನಡೆಯುತ್ತಿರುವುದನ್ನು ಕಂಡು, ಸರಕಾರವು ಬೆದರಿತು. ಕಾಂಗ್ರೆಸ್ ಮುಖಂಡರೊಡನೆ ಒಪ್ಪಂದ ಮಾಡಿಕೊಂಡರು. ಸೆರೆಮನೆಯಿಂದ ಕೆಲವರನ್ನು ಬಿಟ್ಟರು. ಶ್ರೀ ವೀರಭದ್ರಪ್ಪ ಶಿರೂರ ಇವರನ್ನು ಬಿಟ್ಟ ಕೂಡಲೇ ನೇರವಾಗಿ ಗದುಗಿಗೆ ಹೋದರು. ಅಲ್ಲಿ ಶಿಬಿರಗಳ ಮುಖಂಡರನ್ನು ಕಂಡು ಮುಂದೆ ಹೇಗೆ ನಡೆಸಬೇಕೆಂಬ ಬಗ್ಗೆ ವಿಚಾರ ಮಾಡಿದರು. ನಿಜಾಮ ಸರಕಾರದ ಒಪ್ಪಂದವು ಇಲ್ಲಿಯ ಮುಸ್ಲಿಂ ರಜಾಕಾರರಿಗೆ ಒಪ್ಪಿಗೆ ಆಗಿರದೆ ಕಾಯಿದೆಯನ್ನೇ ತಮ್ಮ ಕೈಯಲ್ಲಿ ತೆಗೆದುಕೊಂಡು ದರೋಡೆ, ಲೂಟಿ, ಕೊಲೆ, ಸುಲಿಗೆ ನಡೆಸಿದರು. ಹೈದರಾಬಾದ್ ಮುಸ್ಲಿಮರ ರಾಜ್ಯ ವೆಂದೂ ಇವರ ರಕ್ಷಣೆಗಾಗಿ ಸಕಲ ಮುಸ್ಲಿಮರು ಬರಬೇಕೆಂದು ಕಾಸೀಮ ರಜವಿಯವರು ಘೋಷಣೆ ಮಾಡಿದರು. ಕೆಲವೊಂದು ಮುಸ್ಲಿಮರು ಮತಿಗೆಟ್ಟು ಕುಣಿದಾಡಿದರು. ರಜಾಕಾರರ ಕ್ಯಾಂಪುಗಳು ಸ್ಥಾಪಿತವಾದವು.

ಅಳವಂಡಿ, ಕವಲೂರ, ಬನ್ನಿಕೊಪ್ಪ, ಮುಧೋಳ ಗ್ರಾಮಗಳಲ್ಲಿ ಪಠಾಣರು ಬಂದು ನೆಲೆಸಿದರು. ಬೆಟಗೇರಿಯಲ್ಲಿ ಪೊಲೀಸರು ತಮ್ಮ ಠಾಣೆ ಹಾಕಿದರು. ಅಳವಂಡಿಯ ಶ್ರೀ ಶಿದ್ದಪ್ಪಯ್ಯನವರ ಮಠವೂ ಕವಲೂರ ಶ್ರೀ ಬಸನಗೌಡರ ಕಿಲ್ಲೇದ ಮನೆಯೂ ಮುಧೋಳದ ಶ್ರೀ ಉಪಾಸಪ್ಪ ದೇಸಾಯರ ವಾಡೆಯೂ ಪಠಾಣರ ವಾಸಸ್ಥಾನಗಳಾದವು. ಊರು ಊರಿಗೆ ಹಣಕ್ಕಾಗಿ ತಿರುಗಾಡಿದರು. ಇವರು ಬೇಡಿದ್ದು ಕೊಡಲೇಬೇಕು. ಎಷ್ಟೋ ಜನರು ಇವರಿಗೆ ಹೆದರಿ ಮನೆಮಾರು ಆಸ್ತಿಪಾಸ್ತಿ ಬಿಟ್ಟು ಓಡಿ ಹೋದರು. ಶ್ರೀ ಗದಿಗೆಪ್ಪ ದೇಸಾಯಿ ಮುಧೋಳ, ಶ್ರೀ ಗುರುರಾವ ದೇಸಾಯಿ ಕುಕನೂರ ಮೊದಲಾದವರನ್ನು ಕಾಂಗ್ರೆಸಿಗರಿಗೆ ಸಹಾಯ ಮಾಡುತ್ತಿರುವರು ಅನ್ನುವ ಕಾರಣಕ್ಕಾಗಿ ಅವರನ್ನು ಬಂಧಿಸಿದರು. ಕೆಲವು ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದ ವರದಿಗಳೂ ಬರಹತ್ತಿದವು. ಜನರು ಬೆಂಕಿಯಾಗಿ ಬಿಟ್ಟಿದ್ದರು. ಇವರಿಗೆ ಮಾರ್ಗದರ್ಶನವು ಬೇಕಾಗಿತ್ತು. ಹೈದರಾಬಾದ್ ಕಾಂಗ್ರೆಸ್ ಕ್ರಿಯಾ ಸಮಿತಿಯು ರಜಾಕಾರರ ಉಪಟಳವನ್ನು ಎದುರಿಸಲು ಸಂಘಟಿತರಾಗಲು ಆದೇಶವನ್ನಿತ್ತಿತು. ಅದೇ ಪ್ರಕಾರ ಅಲ್ಲಲ್ಲಿ ಶಿಬಿರಗಳು ಸ್ಥಾಪಿತವಾದವು. ಮುಂಡರಗಿಯಲ್ಲಿ ಶ್ರೀ ಶಿವಮೂರ್ತಿಸ್ವಾಮಿಗಳೂ ಬರದೂರಲ್ಲಿ ಶ್ರೀ ಮುಡಿಯಪ್ಪಗೌಡರೂ ಗಜೇಂದ್ರ ಗಡದಲ್ಲಿ ಶ್ರೀ ಪುಂಡಲೀಕಪ್ಪ ಇವರು ಶಿಬಿರದ ಮುಖ್ಯಸ್ಥರೆಂದು ನಿರ್ಣಯ ಮಾಡಲಾಯಿತು. ಹೈದರಾಬಾದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಾಲಯವು ಗದುಗಿನಲ್ಲಿಯೇ ತನ್ನ ಕಾರ್ಯವನ್ನು ಮುಂದುವರಿಸಿತು.

 

ಮುಂಡರಗಿ ಶಿಬಿರ

ಮುಂಡರಗಿ ಶಿಬಿರದ ಕಾರ್ಯಕರ್ತರು ಕುಕನೂರ ಪೊಲೀಸ್ ಠಾಣೆಯನ್ನು ಮುತ್ತಿ ಅಲ್ಲಿಯ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಹೋದರು. ಯಲಬುರ್ಗಿಯ ತಹಶೀಲ ಕಚೇರಿಯ ಮೇಲೆ ದಾಳಿ ಮಾಡಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಸರಕಾರಿ ಯಂತ್ರವನ್ನೇ ನಿಲ್ಲಿಸುವುದಕ್ಕಾಗಿ ಸರಕಾರದ ಎಲ್ಲ ಅಸ್ತಿಗಳನ್ನು ನಾಶ ಮಾಡಹತ್ತಿದರು. ಕಂದಾಯ ಕೊಡುವುದನ್ನು ನಿಲ್ಲಿಸಿದರು. ಕೆಲವು ಗ್ರಾಮಗಳು ಸ್ವಾತಂತ್ರ್ಯ ಸಾರಿದವು. ಅಲ್ಲಿ ಪಂಚಾಯಿತ ಕಮಿಟಿಗಳನ್ನು ಸ್ಥಾಪಿಸಿ ಆಡಳಿತ ನಡೆಸಲಾಯಿತು. ಶ್ರೀ ವೀರಭದ್ರಪ್ಪ ಶಿರೂರ ಸೆರೆಮನೆಯಿಂದ ಬಿಡುಗಡೆಯಾಗಿ ಬಂದು ಮುಂಡರಗಿ ಶಿಬಿರದ ಗದುಗಿನ ಕಾರ್ಯಾಲಯದಲ್ಲಿ ಶಿಬಿರದ ಸಲಹೆಗಾರರಾಗಿ ಕೆಲಸ ಮಾಡಹತ್ತಿದರು. ಈ ಶಿಬಿರದಲ್ಲಿ ಸುಮಾರು 132ರವರೆಗೆ ಕಾರ್ಯಕರ್ತರು ಕೆಲಸ ಮಾಡುತ್ತಿದ್ದರು. ಇದರ ಶಾಖೆಗಳು ಹೆಸರೂರ, ಮುಂಡರಗಿ, ಮೇವುಂಡಿ, ಹಳ್ಳಿಕೇರಿ, ತಿಮ್ಮಾಪುರ, ಗದಗ, ಕೊಪ್ಪಳ ಈ ಕಡೆಗಳಲ್ಲಿದ್ದವು. ಬರದೂರ ಶಿಬಿರದಲ್ಲಿ 15-16 ಕಾರ್ಯಕರ್ತರಿದ್ದರು. ಗಜೇಂದ್ರಗಡ ಶಿಬಿರದಲ್ಲಿ 19-20 ಕಾರ್ಯಕರ್ತರಿದ್ದರು. ಪೊಲೀಸರ ಒಂದು ಗುಂಪು ಕವಲೂರಿಗೆ ಬಂದು ಜನರನ್ನು ಹೆದರಿಸಹತ್ತಿದಾಗ ಕೆಲವರು ಅವರನ್ನು ಎದುರಿಸಿ ಅವರ ಗುಂಡಿನೇಟಿಗೆ ಆಹುತಿಯಾದರು. ಬೆಟಗೇರಿಯ ಇಬ್ಬರು ನಿರಪರಾಧಿ ಹೆಣ್ಣುಮಕ್ಕಳನ್ನು ಪಠಾಣರು ಗುಂಡಿಟ್ಟು ಕೊಂದರು. ಬನ್ನಿಕೊಪ್ಪದ ಹತ್ತಿರ ದಾರಿಕಾರನೊಬ್ಬನನ್ನು ಕೊಲ್ಲಲಾಯಿತು. ಮುನಿರಾಬಾದದ ಸಮೀಪದ ಹಳ್ಳಿಗಳಲ್ಲಿ ಪಠಾಣರು ರಜಾಕಾರರು ಹೆಣ್ಣುಮಕ್ಕಳ ಮಾನಭಂಗ ಮಾಡಿದರು. ತುಂಗಭದ್ರಾ ಅಣೆಕಟ್ಟು ಕಟ್ಟಿದ ಗುಡ್ಡಗಳ ದೊಡ್ಡ ಆಯಕಟ್ಟಿನ ಸ್ಥಳಗಳಲ್ಲಿ ಮದ್ದು ಗುಂಡುಗಳ ಸಂಗ್ರಹ ಮಾಡಿ ಅಲ್ಲಿ ಪಠಾಣರು ತಮ್ಮ ಮುಖ್ಯ ಠಾಣೆಯನ್ನಾಗಿ ಮಾಡಿದ್ದರು. ಇಲ್ಲಿ ಸುಮಾರು 200 ರಜಾಕಾರರು ಇರುತ್ತಿದ್ದರು.

ಮುಂಡರಗಿ ಶಿಬಿರದ ಕಾರ್ಯಕರ್ತರು ಹೈದರಾಬಾದ್ ಭಾಗದಿಂದ ಹೊರಗೆ ಹೋಗುತ್ತಿದ್ದ ಜನರಿಗೆ ರಕ್ಷಣೆ ಕೊಡಲು ಗಡಿಯಲ್ಲಿ ಸಂಚರಿಸುತ್ತಿದ್ದರು. ಹೀಗೆ ಸಂಚರಿಸುವಾಗ ರಜಾಕಾರರಿಗೂ ಸ್ವಯಂಸೇವಕರಿಗೂ ಸಣ್ಣಪುಟ್ಟ ಘರ್ಷಣೆಗಳಾಗುತ್ತಿದ್ದವು. ಒಂದು ದಿವಸ ಮುಂಡರಗಿಯ ಸಮೀಪದ ಹಳ್ಳಿಯಾದ ಬೆಳಗಟ್ಟಿ ಎಂಬ ಗ್ರಾಮಕ್ಕೆ 3 ಗಂಟೆಯ ಸುಮಾರಿಗೆ 200 ರಜಾಕಾರರು ಪಠಾಣರು ಪೊಲೀಸರು ಕೂಡಿ ಬಂದಿದ್ದರು. ಈ ಸುದ್ದಿಯು ಹಳ್ಳಿಯ ಜನರನ್ನು ಗಾಬರಿಗೊಳಿಸಿತು. ಅವರು ಓಡುತ್ತ ಬಂದು ಮುಂಡರಗಿಯ ಶಿಬಿರದ ಕಾರ್ಯಾಲಯಕ್ಕೆ ಈ ಸುದ್ದಿ ಮುಟ್ಟಿಸಿದರು. ಅಂದು ಶಿಬಿರದಲ್ಲಿ ಅಲ್ಲಿ ಹೆಚ್ಚಾಗಿ ಕಾರ್ಯಕರ್ತರು ಇರಲಿಲ್ಲ. 8-10 ಜನರು ಮಾತ್ರ ಇದ್ದರು. ಒಮ್ಮೆಲೆ ಸಿಂಹದ ಮರಿಗಳಂತೆ ಜಿಗಿಯತ್ತ ಹೊಂಚು ಹಾಕಿ ಸುತ್ತಲು ಮುತ್ತಿಗೆ ಹಾಕಿ ಗುಂಡಿನ ಮಳೆಗರೆದರು. ರಜಾಕಾರರು ಹೆದರಿ ಓಡಿಹೋದರು. ಈ ಹೋರಾಟದಲ್ಲಿ  ಪ್ರಾಣೇಶಾ ಚಾರ್ಯರು, ಹೈದರಾಬಾದ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿಗಳು,  ಕೃಷ್ಣಾಚಾರ್ಯ ಜೋಶಿಯವರು, ಡಾ. ಮೇಲುಕೋಟಿಯವರು ಸಲಹೆ, ಮಾರ್ಗದರ್ಶನ ಮಾಡುತ್ತಿದ್ದರು. ಕ್ರಿಯಾ ಸಮಿತಿಯ ಕಾರ್ಯಾಲಯ ಮದ್ರಾಸಿನಲ್ಲಿ ಇತ್ತು. ಎಲ್ಲ ಕಾರ್ಯಕರ್ತರ ಸಭೆಯನ್ನು ಅಲ್ಲಿಯೇ ಕರೆಯಲಾಗಿತ್ತು. ಈ ಭಾಗದಿಂದ ಕೊಟ್ಟೂರ ಬಸಯ್ಯ ಮೈನಳ್ಳಿ ವೀರಭದ್ರಪ್ಪ ಶಿರೂರ ಇವರು ಹೋಗಿದ್ದರು. ಹೋರಾಟವನ್ನು ಹೇಗೆ ಮುಂದುವರಿಸ ಬೇಕೆಂಬುವ ಬಗ್ಗೆ ಗಂಭೀರವಾಗಿ ವಿಚಾರ ವಿನಿಮಯ ಸೂಚನೆಯನ್ನು ಕೊಟ್ಟರು. ಆಗಿರುವ ಸಣ್ಣ ಪುಟ್ಟ ಶಿಬಿರಗಳನ್ನು ಒಟ್ಟು ಗೂಡಿಸಿ 400-500 ಸಂಖ್ಯೆಯುಳ್ಳ ದೊಡ್ಡ ಶಿಬಿರಗಳನ್ನು ಸಂಘಟಿಸಿ ಒಮ್ಮೆಲೇ 20 ಕಡೆಗಳಿಂದ ನುಗ್ಗಬೇಕು. ಒಳನುಗ್ಗಿದ ನಂತರ ಜನತೆಯೂ ನಮ್ಮನ್ನು ಬೆಂಬಲಿಸುವರು. ಕಾರ್ಯಕರ್ತರೂ ಇವರು ಹೀಗೆ ಹೇಳಿದ್ದನ್ನು ಒಪ್ಪಿದರು. ಗೋವಿಂದದಾಸ ಸರಾಫರು ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಮೊದಲನೆ ಸಂಘಟನೆಯನ್ನು ಮುಂಡರಗಿ ಶಿಬಿರವೇ ಮಾಡತಕ್ಕದ್ದು ಎಂದು ನಿರ್ಣಯವಾಯಿತು. ಇದರ ಪ್ರಯತ್ನವು ನಡೆಯಿತು. ಎಲ್ಲ ಶಿಬಿರಗಳು ಸಮ್ಮತಿಸಿದವು. ಎಲ್ಲಿ ಹೇಗೆ ಕಾರ್ಯ ಮಾಡಬೇಕೆಂಬುದನ್ನು ಗೊತ್ತುಪಡಿಸಲಾಯಿತು. ಇದಕ್ಕೆ ಮುಂಡರಗಿ ಶಿಬಿರದ ಕಾರ್ಯಕರ್ತರು ಒಪ್ಪಿ ಹುರುಪಿನಿಂದ ಕಾರ್ಯ ಮಾಡಲು ಸಿದ್ಧರಾದರು. ಇದರಲ್ಲಿ ಪ್ರಮುಖ ಕಾರ್ಯಕರ್ತರು.

1. ಶಿವಮೂರ್ತಿ ಸ್ವಾಮಿಗಳು, ಶಿಬಿರದ ಅಧಿಪತಿಗಳು

2. ವೀರಭದ್ರಪ್ಪ ಶಿರೂರ, ಶಿಬಿರದ ಸಲಹೆಗಾರರು

3. ಕರಿಶಿದ್ಧ ಸ್ವಾಮಿಗಳು, ಅಳವಂಡಿ

4. ಪಟ್ಟದಾರ್ಯರು, ಕೊಂಡದಕಟ್ಟಿಮಠ

5. ಪಂಚಾಕ್ಷರ ಸ್ವಾಮಿ, ಗುರುಪಾದಮಠ

6. ಎಚ್.ಕೊಟ್ರಪ್ಪನವರು, ಕೊಪ್ಪಳ

7. ಶಂಕರಪ್ಪ ಯರಾಸಿ, ಕೊಪ್ಪಳ

8. ಫಕೀರಪ್ಪ ಗದ್ದಿಕೇರಿ, ಅಳವಂಡಿ

9. ರಂಗರಾವ ದೇಸಾಯಿ, ಶಿದ್ನೆಕೊಪ್ಪ

10.ಶಂಕರಪ್ಪ ಬಂಗಾರ ಶೆಟ್ಟರ, ಕೊಪ್ಪಳ

11. ಸೋಮಪ್ಪ ಡಂಬಳ, ಕೊಪ್ಪಳ

ಬಸಲಿಂಗನಗೌಡರು ಪಾಟೀಲ ಇಟಗಿ ಮತ್ತು ದಾನಶೂರ ಬಸರಿಗಿಡದ ವೀರಪ್ಪನವರು ಯೋಗ್ಯ ಸಹಾಯ ಮಾಡುತ್ತ ಸಲಹೆ ನೀಡುತ್ತಲಿದ್ದರು. ಶಿಬಿರದ ಕಾರ್ಯಕರ್ತರಿಗೆ ಸೈನಿಕ ಶಿಕ್ಷಣವನ್ನು ಕೊಡಲಾಗಿತ್ತು. ಶಿಸ್ತು ಹಾಗೂ ಶಾಂತಿಯಿಂದ ನಡೆಯಲು ಸೂಚನೆಯನ್ನು ನೀಡಲಾಗಿತ್ತು. ಪ್ರತಿನಿತ್ಯ ಮುಂಜಾನೆ ಸಾಯಂಕಾಲ ಪ್ರಾರ್ಥನೆಯ ಕಾರ್ಯಕ್ರಮವನ್ನು ಇಡಲಾಗಿತ್ತು. ಎಲ್ಲರೂ ಒಕ್ಕಟ್ಟಿನಿಂದ ಪ್ರೇಮದಿಂದ ವಿಶ್ವಾಸದಿಂದ ರಜಾಕಾರರನ್ನು ಎದುರಿಸಿ ಜನತೆಗೆ ರಕ್ಷಣೆ ಕೊಡುತ್ತಿರುವುದನ್ನು ಕಂಡು ಇಲ್ಲಿಯ ಜನತೆಯಲ್ಲಿ ಧೈರ್ಯವೂ ಉತ್ಸಾಹವೂ ಬಂದಿತ್ತು. ಪ್ರತಿದಿನ ನೂರಾರು ಜನರು ಹೈದರಾಬಾದ್ ಭಾಗ ದಿಂದ ನಿರಾಶ್ರಿತರಾಗಿ ಬರಹತ್ತಿದರು. ಇವರ ಸಹಾಯಕ್ಕಾಗಿ ಗದುಗಿನಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಇಲ್ಲಿಂದ ಬರುವ ಜನರಿಗೆ ಊಟದ ವಸತಿಯ, ಉದ್ಯೋಗದ ವ್ಯವಸ್ಥೆ ಮಾಡುವುದೇ ಈ ಕಮಿಟಿಯ ಕಾರ್ಯವಾಗಿತ್ತು. ವೀರಭದ್ರಪ್ಪ ಶಿರೂರ ಇವರು ಈ ಕಮೀಟಿಯ ಕಾರ್ಯದರ್ಶಿಗಳಾಗಿದ್ದರು. ಗದುಗಿನ ವ್ಯಾಪಾರಸ್ಥರು ನಿಧಿಯನ್ನು ಸಂಗ್ರಹಿಸಿ ಕೊಡುತ್ತಿದ್ದರು. ಕೈಲಾಸವಾಸಿ ಬಸರಿಗಿಡದ ವೀರಪ್ಪನವರಂತೂ ಸಕಲ ರೀತಿಯಿಂದ ಸಹಾಯ ನೀಡುತ್ತಿದ್ದರು. ಇವರು ದನಕರುಗಳಿಗೆ ಹೊಟ್ಟು ಮೇವು ಕೂಡ ಒದಗಿಸಿಕೊಟ್ಟರು. ತಮ್ಮ ಲಾರಿಯಲ್ಲಿ ಹೇರಿಕೊಂಡು ಹೆಸರೂರು, ಮುಂಡರಗಿ ಮೊದಲಾದ ಸ್ಥಳಗಳಿಗೆ ಮುಟ್ಟಿಸಿದರು.

ಕೊಪ್ಪಳ ನಾಡಿನ ರಜಾಕಾರರ ಹಾಗೂ ಪಠಾಣರ ಮತ್ತು ಪೊಲೀಸರ ಕೇಂದ್ರಗಳ ಮಾಹಿತಿಯನ್ನು ಮಾಡಿಕೊಳ್ಳಲು ಕೆಲವು ಸ್ವಯಂ ಸೇವಕರು ವೇಷ ಬದಲಾಯಿಸಿಕೊಂಡು ತಿರುಗಾಡುತ್ತಿದ್ದರು. ಮುಂದೆ ಕೆಲವು ದಿವಸಗಳಲ್ಲಿ ಹಿಂದೂಸ್ಥಾನ ಸರಕಾರವು ನೈಜಾಮ ಸರಕಾರದ ಅನ್ಯಾಯ ಅತ್ಯಾಚಾರಗಳನ್ನು ಸಹಿಸದೆ ಪೊಲೀಸ ಕ್ರಮವನ್ನು ಕೈಕೊಂಡಿತು. ಆಗ ಸರಕಾರವು ಶಿಬಿರದ ಕಾರ್ಯಕರ್ತರ ಸಲಹೆ ಸಹಾಯ ಪಡೆಯಿತು. ಅನೇಕ ಕಾರ್ಯಕರ್ತರಿಗೆ ಗುರುತಿನ ಕಾರ್ಡು ಕೊಡಲಾಯಿತು. ಆಡಳಿತದ ಹೊಣೆಗಾರಿಕೆಗಾಗಿ ರಾಯಚೂರ ಜಿಲ್ಲಾಧಿಕಾರಿಯೆಂದು ಕೊಟ್ಟರ ಬಸಯ್ಯನವರನ್ನು ಕೊಪ್ಪಳ ತಾಲೂಕಾಧಿಕಾರಿ ಎಂದು ವೀರಭದ್ರಪ್ಪ ಶಿರೂರ ಇವರನ್ನು ನೇಮಿಸಲಾಗಿತ್ತು. 1948ನೆಯ ಸೆಪ್ಟೆಂಬರ್ 13ರಂದು ಭಾರತ ಸರಕಾರವು ನೈಜಾಮ ರಾಜ್ಯದ ಮೇಲೆ ಪೊಲೀಸ್ ಕ್ರಮವನ್ನು ಕೈಕೊಂಡಿತು. 14ನೆಯ ತಾರೀಕಿಗೆ ಕೊಪ್ಪಳವನ್ನು ವಶಪಡಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ರಜಕಾರರ ವಿರುದ್ಧ ಬಹಿರಂಗ ಹೋರಾಟಕ್ಕೆ ಇಲ್ಲಿನ ಹೋರಾಟಗಾರರು ನಿಂತರು. ಅಂತಹ ಕೆಲವು ಹೋರಾಟಗಾರರ ವಿವರವನ್ನು ನೀಡಲಾಗಿದೆ.

 

ಶಿವಮೂರ್ತಿಸ್ವಾಮಿ, ಅಳವಂಡಿ

ಹೈದರಾಬಾದ್ ಕಾಲೇಜಿನಲ್ಲಿ ಬಿ.ಎಸ್ಸಿ. ವ್ಯಾಸಂಗ ಮಾಡುತ್ತಿದ್ದ ಅಳವಂಡಿ ಶಿವಮೂರ್ತಿಸ್ವಾಮಿಗಳನ್ನು ‘ಜಿಂದಾ ಯಾ ಮುರ್ದಾ’ (ಜೀವಂತ ಇಲ್ಲವೆ ಹೆಣ) ಸೆರೆ ಹಿಡಿಯಲು ನಿಜಾಮ ಸರಕಾರ ವಾರಂಟ್ ಹೊರಡಿಸಿತ್ತು. ಕೊಪ್ಪಳ ತಾಲೂಕಿನ ಅಳವಂಡಿ ಕಟ್ಟೀಮನಿ ಸಂಸ್ಥಾನ ಹಿರೇಮಠ, ಶ್ರೀ ಸಿದ್ಧೇಶ್ವರ ಮಠ(ಪಟ್ಟದ್ದೇವರು)ದ ವಂಶಸ್ಥರು; ಇನಾಮದಾರರು. ಮಹಾತ್ಮಾ ಗಾಂಧಿ, ಸ್ವಾಮಿ ರಮಾನಂದತೀರ್ಥರಿಂದ ಪ್ರಭಾವಿತರಾಗಿ, ಕಾಲೇಜು ತೊರೆದು, ವಿದ್ಯಾರ್ಥಿ ಕಾಂಗ್ರೆಸ್ ಸೇರಿದರು. ರಜಾಕಾರರ-ಪಠಾಣರ ಹಾಗೂ ನಿಜಾಮ ಪೊಲೀಸರ ದೊಂಬಿ, ಲೂಟಿ, ಕೊಲೆ, ಮಾನಹರಣ, ಮುಗ್ಧ ಪ್ರಜೆಗಳ ಮೇಲಿನ ದರ್ಪ ದೌರ್ಜನ್ಯಗಳನ್ನು ಊರುಗಳಲ್ಲಿ ವಿಮೋಚನಾ ಶಿಬಿರ ತೆರೆದು ಹೋರಾಟ ಮಾಡಲು ಆದೇಶಿಸಿತು. ಶ್ರೀ ಶಿವಮೂರ್ತಿಸ್ವಾಮಿ ಇನಾಮದಾರ ಅಳವಂಡಿ ಇವರು ಮುಂಡರಗಿ ವಿರೂಪಾಕ್ಷಪ್ಪ, ಡಿ ಆರ್.ವಿಠ್ಠಲರಾವ್(ನಿವೃತ್ತ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು), ಪ್ರಭುರಾಜ ಪಾಟೀಲ (ಮಾಜಿ ಶಾಸಕರು : ಸಂಗನಾಳ), ಸೋಮಪ್ಪ ಡಂಬಳ(ವಕೀಲರು), ಎಂ. ವಿರೂಪಾಕ್ಷಪ್ಪ(ಮಾಜಿ ಶಾಸಕರು ಹಾಗೂ ವಕೀಲರು) ಮೊದಲಾದವರು ಇವರ ಬೆಂಬಲಕ್ಕೆ ನಿಂತರು. ಇವರ ಸೋದರ ಕರಿಸಿದ್ಧಸ್ವಾಮಿ ಇನಾಮದಾರರು ಅಣ್ಣನ ಹೋರಾಟದಲ್ಲಿ ಹುರುಪಿನಿಂದ ಭಾಗವಹಿಸಿದರು. ಇವರ ಪ್ರಭಾವಶಾಲಿ ವ್ಯಕ್ತಿತ್ವ ಹಾಗೂ ಭಾಷಣ ವೈಖರಿಗೆ ಜನರು ಆಕರ್ಷಣೆಗೊಳ್ಳುತ್ತಿದ್ದರು. ತಮ್ಮ ತಾಯಿಯವರಿಂದ ಬಂಗಾರದ ಬಳೆ ಪಡೆದು ತಮ್ಮ ಹೋರಾಟಕ್ಕೆ ಬೇಕಾದ ಹಣವನ್ನು ಯಾರು ಬಳಸುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಪಠಾಣರು, ರಜಾಕಾರರು ಇವರ ಮಠವನ್ನೇ ಲೂಟಿ ಮಾಡಿ ತಮ್ಮ ಮಿಲಿಟರಿ ಕ್ಯಾಂಪ್ ಮಾಡಿ ಕೊಂಡಿದ್ದಲ್ಲದೆ, ಅಳವಂಡಿಯ ಜನರಿಗೆ ಚಿತ್ರಹಿಂಸೆ ನೀಡಿದರು. ಸ್ತ್ರೀಯರ ಮಾನಹರಣ ಮಾಡಿದರು. ಹನುಮರೆಡ್ಡಿ ಕಲ್ಗುಡಿಯೆಂಬ ರೈತನನ್ನು ಎಳೆದುಕೊಂಡು ಹೋಗಿ ನೆರೆದ ನೂರಾರು ಜನರೆದುರು ಗುಂಡು ಹಾರಿಸಿ ಕೊಂದರು. ಶಿಬಿರಕ್ಕೆ ಉಪ್ಪಿನ ಬೆಟಗೇರಿ ಪಾತರದ ತಾಯಿ ಮಗಳಿಬ್ಬರು ಜೋಗಮ್ಮರಾಗಿ ರಜಾಕಾರರ ಗುಟ್ಟು ತಿಳಿಸುತ್ತಿದ್ದರು. ಇವರಿಬ್ಬರನ್ನು ಪಠಾಣರು ಚಿತ್ರಹಿಂಸೆ ನೀಡಿ ಕೊಂದು ಹಾಕಿದರು. ಅಳವಂಡಿ ಅವರು ಹೈದರಾಬಾದ್ ವಿಮೋಚನೆಗೊಂಡನಂತರ, ಎರಡು ಸಲ ಲೋಕಸಭಾ ಸದಸ್ಯರಾಗಿದ್ದರು. ಭಾರತ ಸ್ವಾತಂತ್ರ್ಯ ಹೋರಾಟ, ಹೈದರಾಬಾದ್ ವಿಮೋಚನಾ ಹೋರಾಟಗಳಲ್ಲದೆ, ಬಳ್ಳಾರಿಯನ್ನು ಕರ್ನಾಟಕಕ್ಕೆ ಉಳಿಸಿಕೊಳ್ಳುವಲ್ಲಿ ತೀವ್ರ ಹೋರಾಟ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಪ್ರಮುಖರಲ್ಲಿ ಶಿವಮೂರ್ತಿ ಸ್ವಾಮಿಗಳೂ ಒಬ್ಬರು. ಮತದಾರ ಸಂಘದ ರಾಷ್ಟ್ರಮಟ್ಟದ ಸಮಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ತುಂಗಭದ್ರಾನದಿಯ ಮುಳುಗಡೆ ಪ್ರದೇಶದ ಏತ-ನೀರಾವರಿಗೆ ಆಂಧ್ರಪ್ರದೇಶ ಸರಕಾರ ತಂಟೆ ತೆಗೆದಾಗ ಲೋಕಸಭೆಯಲ್ಲಿ ವಾದ ಮಾಡಿ ಕರ್ನಾಟಕ ಸರಕಾರದ ನೀರಾವರಿ ಇಲಾಖೆಗೆ ಪರಿಹಾರ ದೊರಕಿಸಿಕೊಟ್ಟರು.

 

ಶಿರೂರು ವೀರಭದ್ರಪ್ಪ

ಎಸ್.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಕುಕನೂರು ಮೂಲಕ ಗಜೇಂದ್ರಗಡಕ್ಕೆ ಹೊರಟಿದ್ದರು. ದಾರಿಯಲ್ಲಿಯೇ ಯಲಬುರ್ಗಿ ಶಾಸಕರಾಗಿದ್ದ ಶಿರೂರು ವೀರಭದ್ರಪ್ಪನವರನ್ನು ಕಾಣಲು ಅವರ ಸ್ವಗ್ರಾಮ ಆಡೂರಿಗೆ ಹೋದರು. ಆಗ ತಮ್ಮ ಮನೆ ಮುಂದಿನ ದೇವರಗುಡಿಯಲ್ಲಿ ಕಡ್ಡಿಚಾಪೆಯ ಮೇಲೆ ತಲೆದಿಂಬಾಗಿ ಎರಡು ಇಟ್ಟಂಗಿಯಿಟ್ಟುಕೊಂಡು ಮಲಗಿ ಗಾಢ ನಿದ್ರಾವಶರಾಗಿದ್ದ ಶಾಸಕರನ್ನು,  ಕಂಡು ಆಶ್ಚರ್ಯ ಚಕಿತರಾದರು. ನಂತರ ಬಂದ ನಾಲ್ಕಾರು ಜನರು ಕೂತುಕೊಳ್ಳಲು ಸಹ ಅಸಾಧ್ಯವಾದ ಸಣ್ಣ ಮನೆಯನ್ನು ಕಂಡು, ಮುಖ್ಯಮಂತ್ರಿ ನಿಜಲಿಂಗಪ್ಪನವರು ದಂಗಾದರು. ನಿಜವಾದ ಅರ್ಥದಲ್ಲಿ ಗಾಂಧೀವಾದಿ ಆಗಿದ್ದವರು ಶಿರೂರು ವೀರಭದ್ರಪ್ಪನವರು.

ಇವರು 1934ರಲ್ಲಿ ಮಹಾತ್ಮಗಾಂಧೀಜಿ, 1936ರಲ್ಲಿ ಡಾ. ಬಾಬು ರಾಜೇಂದ್ರ ಪ್ರಸಾದರನ್ನು ಭಾನಾಪುರ ರೈಲು ನಿಲ್ದಾಣದಲ್ಲಿ ಕೆಳಗಿಳಿಸಿ ಕೊಪ್ಪಳ ಜಿಲ್ಲೆಯ ಮುಖಂಡರಾಗಿ, ಪ್ರತಿನಿಧಿಯಾಗಿ ಮನವಿ ಅರ್ಪಿಸಿ ಈ ಭಾಗದ ಸಂಕಷ್ಟಗಳನ್ನು ರಾಷ್ಟ್ರನಾಯಕರಿಗೆ ಆಗಲೇ ಮನವರಿಕೆ ಮಾಡಿಕೊಟ್ಟಿದ್ದರು. ಭಾರತ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಹೋರಾಡಿದರು. ಅಳವಂಡಿ ಶಿವಮೂರ್ತಿ ಸ್ವಾಮಿಗಳಿಗೆ ಸದಾ ಬೆಂಗಾವಲಾಗಿದ್ದರು. ಮಹಾತ್ಮಾ ಗಾಂಧೀಜಿ ಸ್ಥಾಪಿಸಿದ ಲೋಕ-ಸೇವಕ ಸಂಘದಿಂದ ಶಿವಮೂರ್ತಿ ಸ್ವಾಮಿಗಳವರು, ಶಿರೂರು ವೀರಭದ್ರಪ್ಪನವರು ಕ್ರಮವಾಗಿ ಲೋಕಸಭಾ ಹಾಗೂ ವಿಧಾನಸಭಾ ಸದಸ್ಯರಾಗಿದ್ದರು. ಖಾದಿ ಗ್ರಾಮೋದ್ಯೋಗದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಆಡೂರಿನಂಥ ಚಿಕ್ಕ ಹಳ್ಳಿಯಲ್ಲಿ ವಿಶ್ವನಾಥ ವಾಚನಾಲಯ ಸ್ಥಾಪಿಸಿ, ಜನರಿಗೆ ಓದಿನ ರುಚಿ ಹಚ್ಚಿಸಿದರು.  ಇವರು ಕೊಪ್ಪಳ ಜಿಲ್ಲೆಯ ರಾಜಕಾರಣ, ಸಮಾಜ ಸೇವೆಯಲ್ಲಿ ಮೊದಲ ಪಂಕ್ತಿಯ ನಾಯಕರಾಗಿದ್ದರು.

 

ತೆಗ್ಗಿನಮನಿ ಶಂಕರಗೌಡರು, ಬನ್ನಿಕೊಪ್ಪ

ನಿಜಾಮ ಸರಹದ್ದಿನ ಮುಂಡರಗಿ ಶಿಬಿರಾಧಿಪತಿ ಅಳವಂಡಿ ಶಿವಮೂರ್ತಿ ಸ್ವಾಮಿಗಳಾಗಿದ್ದರೆ. ಶಿಬಿರದ ಮಿಲಿಟರಿ ಕಮಾಂಡರ್ ಬನ್ನಿಕೊಪ್ಪದ ಯರಾಶಿ ಶಂಕರಪ್ಪನವರು, ಬನ್ನಿಕೊಪ್ಪದ ತಗ್ಗಿನಮನಿ ಶಂಕರಗೌಡರಂಥವರು ಗೆರಿಲ್ಲಾ ಮಾದರಿ ತರಬೇತಿ ಕಪ್ಪತ್ತಗುಡ್ಡದಲ್ಲಿ ಕ್ಯಾಪ್ಟನ್ ಜಗತ್ ಸಿಂಗ್‌ರಿಂದ ಪಡೆದ ಯೋಧರು. ಅವರು ಥ್ರೀನಾಟ್ ಥ್ರಿ ಬಂದೂಕು ಗುರಿಯಿರಿಸಿ ಹೊಡೆಯುವುದರಲ್ಲಿ ನಿಸ್ಸೀಮರು. ಗನ್ ಎದೆಗಾನಿಸಿಕೊಳ್ಳದೆ, ಪಿಸ್ತೂಲಿನಿಂದ ಗುಂಡು ಹಾರಿಸಿದಂತೆ ಥ್ರೀನಾಟ್ ಥ್ರೀ ಗನ್ನಿನಿಂದ ಗುರಿಯಿಟ್ಟು ಹೊಡೆಯುವಷ್ಟು ತಾಕತ್ತಿನ ಶೂರ ಸೈನಿಕ. ಮನೆ ಮಾರು ಕುಲ ಕುಟುಂಬ ಇವಾವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಪಠಾಣರನ್ನು, ರಜಾಕಾರರನ್ನು, ನಿಜಾಮ ಪೊಲೀಸ್ ಪಡೆಯನ್ನು ಎದುರಿಸಿ, ಗುಂಡಿಟ್ಟು ಹೊಡೆದುರುಳಿಸುವಷ್ಟು ಛಲ; ಹಾಗೆ ಹೋರಾಟ ಮಾಡಿದ್ದಾರೆ. ಪ್ರಭುರಾಜ ಪಾಟೀಲ, ಯರಾಶಿ ಶಂಕರಪ್ಪ, ತೆಗ್ಗಿನಮನಿ ಶಂಕರಗೌಡರಂಥ ತಾಕತ್ತಿನ ವೀರಯೋಧರಿದ್ದುದರಿಂದಾಗ, ಮುಂಡರಗಿ ಶಿಬಿರಕ್ಕೆ ಗೆಲುವು, ಕೀರ್ತಿ, ಮೆರುಗು ಕೂಡ ಬಂದಿತ್ತು. ರಾಜಕೀಯದ ಯಾವ ಸ್ಥಾನಮಾನ ಪಡೆಯುವ ಮುನ್ನವೇ ತಮ್ಮ ಹರೆಯದಲ್ಲೇ ನಿಧನರಾದದ್ದು ದುರ್ದೈವದ ಸಂಗತಿ!

 

ಪ್ರಭುರಾಜ ಪಾಟೀಲ, ಸಂಗನಾಳ

ಹೈದರಾಬಾದಿನಲ್ಲಿ ಕಾಲೇಜು ವ್ಯಾಸಂಗ ಮಾಡುತ್ತಿದ್ದಾಗ ಹೈದರಾಬಾದ್ ವಿಮೋಚನೆ ಗಾಗಿ ಕಾಲೇಜು ತ್ಯಜಿಸಿ, ಮುಂಡರಗಿ ಶಿಬಿರದ ಪ್ರಮುಖ ಸ್ಥಾನದಲ್ಲಿದ್ದು ತಮ್ಮ ಓರಿಗೆಯವರನ್ನು ಹುರಿದುಂಬಿಸಿ, ದಂಡು ಕಟ್ಟಿಕೊಂಡು ಹೋರಾಡಿದರು. ಕುಕನೂರು ಪೊಲೀಸ್ ಠಾಣೆ ಮೇಲಿನ ದಾಳಿಯಲ್ಲಿ ತಮ್ಮ ಶೌರ್ಯ, ಧೈರ್ಯ, ಸಾಹಸ ಪ್ರದರ್ಶಿಸಿ ‘ಹೀರೋ’ ಆಗಿದ್ದರು; ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು; ಆದರೆ ಅವರೊಬ್ಬ ಮೃದು ಮಾತುಗಾರರಾಗಿದ್ದರು. ಮುಂಡರಗಿ ಶಿಬಿರ ಕೊನೆಯ ಹಂತದಲ್ಲಿ ತೂಕತಪ್ಪುತ್ತಿದ್ದಾಗ ಯರಾಶಿ ಶಂಕರಪ್ಪ ಮತ್ತು ಸಂಗಡಿಗರೊಂದಿಗೆ ಅದನ್ನು ಸರಿದಾರಿಗೆ ತಂದರು. ಅನಂತರ ಮುಂದೆ ಓದಿ ವಕೀಲರಾದರು. ಯಲಬುರಗಿ ಶಾಸಕರಾದರು. ತಮ್ಮ ಅಂತ್ಯಕಾಲದವರೆಗೂ ಸಾರ್ವಜನಿಕ ಸಂಪರ್ಕ ಪಡೆದುಕೊಂಡಿದ್ದರು.

 

ಸೋಮಪ್ಪ ಡಂಬಳ, ವಕೀಲರು

ಇವರು ಹೈದರಾಬಾದ್ ಸರಹದ್ದಿನ ಕೊನೆಯ ಹಳ್ಳಿ ಘಟ್ಟಿರೆಡ್ಡಿಹಾಳದ ಅಪ್ಪಟ ಹಳ್ಳಿಗ. ಹೈದರಾಬಾದಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶಿವಮೂರ್ತಿ ಸ್ವಾಮಿಗಳೊಡನೆ ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಮುಂಡರಗಿ ಶಿಬಿರದ ಉಪ ಶಿಬಿರಾಧಿಪತಿ, ತುಂಗಭದ್ರಾ ನದಿಯ ಆಚೆ ದಡದ ತಂಬ್ರಳ್ಳಿ-ಹಂಪಸಾಗರ ಶಿಬಿರಗಳ ಅಧಿಪತಿಯಾಗಿದ್ದು, ವಿಮೋಚನಾ ಹೋರಾಟದಲ್ಲಿ ಬೆಳಗಟ್ಟಿ, ಕುಕನೂರು, ಯಲಬುರ್ಗಾ ದಾಳಿಗಳಲ್ಲಿದ್ದು ವೀರಯೋಧರೆನ್ನಿಸಿದ್ದಾರೆ. ಅನಂತರ ವಕೀಲರಾಗಿ, ಶಿಕ್ಷಣರಂಗಕ್ಕೆ ಸೇವೆ ಸಲ್ಲಿಸಿದವರಾಗಿ, ಸಹಕಾರಿ ಧುರೀಣರಾಗಿ, ಸಂಕಷ್ಟದಲ್ಲಿದ್ದ ಕೊಪ್ಪಳ ಅರ್ಬನ್ ಬ್ಯಾಂಕ್ ಸುಧಾರಕರಾಗಿ, ಕೃಷಿಕರಾಗಿ, ಉದ್ಯಮಿಗಳಾಗಿ, ಗಟ್ಟಿ ಮಾತುಗಾರರಾಗಿ, ಜನರೊಂದಿಗೆ ಬೆರೆತುಕೊಂಡು, ವಕೀಲರಾಗಿಯೂ ಆಧುನಿಕ ಉಡುಪು ಬಿಟ್ಟು, ಉತ್ತರ ಕರ್ನಾಟಕದ ಪೇಟಾ(ಪಟಗ) ತಲೆಗೆ ಸುತ್ತಿಕೊಂಡು ಗಾಂಧಿವಾದಿಗಳಾದರು.

 

ಕೆ.ಸಿ.ಸಾರಂಗಮಠ

ಕಾಶೀನಾಥಸ್ವಾಮಿ ಚನ್ನಯ್ಯಸ್ವಾಮಿ ಸಾರಂಗಮಠ ಯಲಬುರ್ಗಾ ತಾಲೂಕಿನ ಸಂಗನಾಳದವರು. ಪ್ರಭುರಾಜ ಪಾಟೀಲರು, ಚಿಕ್ಕಮ್ಯಾಗೇರಿ ಲಿಂಗರಾಜ ದೇಸಾಯಿಗಳ ಒಡನಾಡಿಗಳಾಗಿ ಡಾ.ದೇವೇಂದ್ರ ಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠರ ಗೆಳೆಯರಾಗಿ, ಕೊಪ್ಪಳದ ಸರಕಾರಿ ಹೈಸ್ಕೂಲಿನಲ್ಲಿ ಓದುತ್ತಿದ್ದಾಗ ನಿಜಾಮರ ಆಡಳಿತ, ದೌರ್ಜನ್ಯ, ಸಂಸ್ಥಾನದ ಪಾರತಂತ್ರ್ಯದ ಕಹಿಯುಂಡು, ತಮ್ಮ ಗೆಳೆಯರನ್ನು ಸಂಘಟಿಸಿ, ಅದರ ನೇತೃತ್ವ ವಹಿಸಿ, ಮುಂಡರಗಿ ಶಿಬಿರ ಸೇರುವುದರ ಮೂಲಕ ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಬೆಟಗೇರಿ, ಬಿಸರಳ್ಳಿ ಸರಕಾರಿ ಕಾಗದ ಪತ್ರಗಳನ್ನು ಸುಡುವುದರಲ್ಲಿ, ಕುಕನೂರು-ಯಲಬುರ್ಗಾ ದಾಳಿಯಲ್ಲಿ ಪಾಲ್ಗೊಂಡವರು. ಕೊಪ್ಪಳ ಶ್ರೀ ಗವಿಮಠದಲ್ಲಿ ವಿದ್ಯಾರ್ಥಿಯಾಗಿದ್ದ ಕೆ.ಸಿ.ಸಾರಂಗಮಠರು ಹಿಂದೀ ಪರೀಕ್ಷೆ ಕೊರಲು ಮೇಲಿಂದ ಮೇಲೆ ಧಾರವಾಡಕ್ಕೆ ಹೋಗುತ್ತಿದ್ದುದರಿಂದ ಲಿಂಗಮಠಾ ಶಾಂತವೀರ ಮಹಾಸ್ವಾಮಿಗಳವರು ಇವರನ್ನು ‘ಧಾರವಾಡದ ಕಾಶಯ್ಯ’ನೆಂದು ಕರೆಯು ತ್ತಿದ್ದರು. ಈ ಮಾತೇ ಸತ್ಯವಾಗಿ ಇವರು ಧಾರವಾಡದಲ್ಲಿ ನೆಲೆಸಿ ಧಾರವಾಡದ ಕಾಶಯ್ಯರಾದರು.

 

ದೇವೇಂದ್ರಕುಮಾರ ಹಕಾರಿ

ಕವಿತೆ ಕಟ್ಟುವ ಹದಿಹರೆಯದ ಕೋಮಲ ಮನಸ್ಸಿನ ಭಾವನಾಜೀವಿ, ಕೈಯಲ್ಲಿ ಕೋವಿ ಹಿಡಿದು, ಹೈದರಾಬಾದ್ ವಿಮೋಚನೆಗೆ ರಣರಂಗದಲ್ಲಿ ಕ್ಷಾತ್ರ ತೇಜಸ್ಸಿನಿಂದ ಹೋರಾಡಿದ್ದು ದೇಶಭಕ್ತಿಯ ದ್ಯೋತಕ. ಸ್ವಾಮಿ ರಮಾನಂದ ತೀರ್ಥರು ಕಾಲೇಜು ತಿರಸ್ಕರಿಸಲು, ನಿಜಾಮ ಆಡಳಿತ ವಿರುದ್ಧ ಹೋರಾಡಲು ಕರೆ ಕೊಟ್ಟಿದ್ದರಿಂದ ಶಿವಮೂರ್ತಿಸ್ವಾಮಿ ಅಳವಂಡಿ ಅವರ ನೇತೃತ್ವದಲ್ಲಿ ಪ್ರಭುರಾಜ ಪಾಟೀಲ, ಬಿ.ವಿರೂಪಾಕ್ಷಪ್ಪ, ಎಂ. ವಿರೂಪಾಕ್ಷಪ್ಪ, ಡಿ.ಆರ್.ವಿಠ್ಠಲರಾವ್, ಸೋಮಪ್ಪ ಡಂಬಳ, ಪಂಚಾಕ್ಷರಿ ಹಿರೇಮಠ ಮೊದಲಾದವರು ಮುಂಡರಗಿ ಶಿಬಿರದಲ್ಲಿ ಹಕಾರಿಯವರೊಂದಿಗಿದ್ದರು. ದೇವೇಂದ್ರಕುಮಾರ ಹಕಾರಿಯವರು ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಪಾಲ್ಗೊಂಡು ಶಿಬಿರದ ಜವಾಬ್ದಾರಿ ಸ್ಥಾನದಲ್ಲಿದ್ದುದಾಗಿ ದಾಖಲೆಗಳಿಂದ ತಿಳಿದುಬರುತ್ತದೆ. ತಮ್ಮೂರು ಚಿಕ್ಕೇನಕೊಪ್ಪದ ಪತ್ರಿವನದ ಅಧ್ಯಾತ್ಮದ ಅನುಭಾವಿಗಳ ಕೂಟ-ನಿಜಗುಣರ ಷಟ್‌ಶಾಸ್ತ್ರದ ಅನುಭವಾಮೃತ ಸವಿದು, ನಿಜಗುಣ ಶಿವಯೋಗಿಗಳನ್ನು ಕುರಿತು ‘ಚೆಲ್ವ ಕೋಗಿಲೆ’, ಕನ್ನಡ ನಾಡಿನ ಶಿಲ್ಪಕಲೆಯ ವೈಭವ ಸಾರುವ ‘ಕೂಗುತಿವೆ ಕಲ್ಲು’ ಕಾದಂಬರಿ ಬರೆದರು. ಆ ಕಾಲದ ಕಥಾ ಸಂಗ್ರಹ ‘ಒರೆಗಲ್ಲು’, ರಸವಿಮರ್ಶೆಯ ಕಿರುಹೊತ್ತಿಗೆಗಳು, ‘ಚಿನ್ಮಯಿ’ಯಿಂದ ಇತ್ತೀಚಿನ ಆಯ್ದ ಕವನಸಂಗ್ರಹದವರೆಗೆ ನಾಲ್ಕು ಕವನ ಸಂಗ್ರಹ ಪ್ರಕಟಿಸಿದ್ದಾರೆ. ಜಾನಪದ ಕುರಿತು ವಿಮರ್ಶಾ ಲೇಖನ ಸಂಗ್ರಹ ತಂದಿದ್ದಾರೆ. ಇವರು ಕರ್ನಾಟಕ ವಿ.ವಿ.ನಿವೃತ್ತ ಕನ್ನಡ ಪ್ರಾಧ್ಯಾಪಕರು.

 

ಪಂಚಾಕ್ಷರಿ ಹಿರೇಮಠ

ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಹಿರೇಮಠದ ಮಲಕಯ್ಯ ಸ್ವಾಮಿಗಳು ಬಸಮ್ಮ ದಂಪತಿಗಳ ಮಗ. ಕಡುಬಡತನದಲ್ಲಿ ವಿದ್ಯಾರ್ಜನೆ ಪಡೆದು. ಕರ್ನಾಟಕ, ಭಾರತ ಹಾಗೂ ವಿಶ್ವ ಪರ್ಯಟನೆ ಮಾಡಿದರು.ೊಅಲ್ಲೆಲ್ಲ ಅಭಿಮಾನಿಗಳನ್ನು ಹೊಂದಿದ್ದಾರೆ. ವಿದ್ಯಾರ್ಥಿಯಾಗಿ ಕೊಪ್ಪಳ ಸರಕಾರಿ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಭಾರತದ ಪ್ರಥಮ ಸ್ವಾತಂತ್ರ್ಯದ ದಿನದಂದು ರಾಷ್ಟ್ರಧ್ವಜ ಹಾರಿಸಿದ ದೇಶಭಕ್ತರು. ಅಳವಂಡಿ ಶಿವಮೂರ್ತಿ ಸ್ವಾಮಿಗಳವರ ನೇತೃತ್ವದ ಮುಂಡರಗಿ ಶಿಬಿರದಲ್ಲಿದ್ದು, ಕಪ್ಪತ್ತಗುಡ್ಡದಲ್ಲಿ ಕ್ಯಾಪ್ಟನ್ ಜಗತ್‌ಸಿಂಗ್‌ರಿಂದ ಗೆರಿಲ್ಲಾ ಮಾದರಿ ಯುದ್ಧ ತರಬೇತಿ ಪಡೆದು, ಬೆಳಗಟ್ಟಿ ಮುಖಾಮುಖಿ ಹೋರಾಟದಲ್ಲಿ ಸೈನಿಕರಿಗೆ ಉರುಳುತ್ತ ಕಾಡತೂಸು ಪೂರೈಸಿದ ಇವರ ಸಾಹಸದ, ರೋಮಾಂಚನದ ಸಂಗತಿಯನ್ನು ಸಿ.ಎಂ.ಚುರ್ಚಿಹಾಳಮಠರು ಇಂದಿಗೂ ನೆನಪಿಸಿ ರೋಮಾಂಚನಗೊಳಿಸುತ್ತಾರೆ. ವಾಲಿ ಚೆನ್ನಪ್ಪನವರ ನೇತೃತ್ವದಲ್ಲಿ ನಡೆದ ಯಲಬುರ್ಗಾ ದಾಳಿಯಲ್ಲಿ ಬಾಂಬ್ ಸಿಡಿದು ಗವಿಯಪ್ಪ ಹಿರೇಕುಂಬಿಯವರ ಕೈ ಹೋದರೆ, ಪಂಚಾಕ್ಷರಿಯವರ ಕಾಲು ಹೋಗಿಯೇ ಬಿಟ್ಟಿತೆಂಬಷ್ಟು ಸುಟ್ಟು ಗಾಯಗೊಂಡು, ಚಿಕಿತ್ಸೆಯಿಂದ ಗುಣಮುಖರಾದರು. ಹೈದರಾಬಾದ್ ವಿಮೋಚನೆಗೊಂಡ ನಂತರ ತಮ್ಮ ವ್ಯಾಪಕ ಅಧ್ಯಯನದಿಂದ ಬಹುಭಾಷೆಗಳಿಂದ ಹಲವಾರು ಕೃತಿಗಳನ್ನು ಅನುವಾದಗೊಳಿಸಿ ದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕೃಷಿಗೈದಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದು ನಿವೃತ್ತರಾಗಿದ್ದಾರೆ. ‘ವಾತ್ಸಲ್ಯ’ ಇವರ ಅಭಿನಂದನ ಗ್ರಂಥ.

 

ಕೊಟ್ರಬಸಯ್ಯ ಮೈನಳ್ಳಿ

ಕೊಪ್ಪಳ ತಾಲೂಕಿನ ಮೈನಳ್ಳಿ ಗ್ರಾಮದ ಬಡ ಮನೆತನದಲ್ಲಿ ಜನಿಸಿದ ಮೈನಳ್ಳಿ ಅವರು ಹೈದರಾಬಾದಿನಲ್ಲಿ ಓದುತ್ತಿದ್ದಾಗ, ಹೈದರಾಬಾದ್ ವಿಮೋಚನೆ ಕೆರೆಗೆ ಓಗೊಟ್ಟು ಮುಂಡರಗಿ ಶಿಬಿರದಲ್ಲಿ ಭಾಗವಹಿಸಿದ್ದರು. ಶಿಬಿರದಲ್ಲಿ ಜವಾಬ್ದಾರಿ ಕಾರ್ಯನಿರ್ವಹಿಸುತ್ತ ಬಂದರು. ಹೈದರಾಬಾದ್ ವಿಮೋಚನೆಗೊಂಡ ನಂತರ ಶಿಬಿರದ ಕಾರ್ಯಕರ್ತರಿಂದಾದ ಲೋಪದೋಷಗಳ ವಿಚಾರಣಾ ಸಮಿತಿಯ ಕಾರ್ಯದರ್ಶಿಯಾಗಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸ್ವಾಮಿ ರಮಾನಂದ ತೀರ್ಥರು ಹೈದರಾಬಾದ್ ವಿಮೋಚನೆಗೊಂಡ ನಂತರ ಅವರಲ್ಲಾದ ಪರಿವರ್ತನೆಯ ಟೀಕಾಕಾರರಾದರು. ನಂತರ ಸರಕಾರಿ ಸೇವೆಗೆ ಸೇರಿ ವಿಶೇಷ ಜಿಲ್ಲಾಧಿಕಾರಿಗಳಾಗಿ ನಿವೃತ್ತರಾಗಿದ್ದರು. ಗುಲಬರ್ಗಾದಲ್ಲಿ ಹೈದರಾಬಾದಿನಲ್ಲಿ ಓದುತ್ತಿದ್ದಾಗ ಸಿದ್ಧಯ್ಯ ಪುರಾಣಿಕ(ಕಾವ್ಯಾನಂದ)ರು ಬಸವೇಶ್ವರರನ್ನು ಕುರಿತು ಬರೆದು ಪ್ರಯೋಗಿಸಿದ ‘ಆತ್ಮಾರ್ಪಣೆ’ ನಾಟಕದಲ್ಲಿ ಬೆಟ್ಟದೂರು ಚನ್ನಬಸವಪ್ಪ ವಕೀಲ ಮೊದಲಾದವರೊಡನೆ ಬಿಜ್ಜಳನ ಪಾತ್ರ ನಿರ್ವಹಿಸಿ ಹೌದೆನ್ನಿಸುವ ಅಭಿನಯ ನೀಡಿದ್ದನ್ನು ಇವರ ಸಂಗಾತಿಗಳು ನೆನಪಿಸುತ್ತಾರೆ. ಕೆಲವು ಕಾಲ ರಾಯಚೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದರು.

 

ಸಿ.ಎಂ.ಚುರ್ಚಿಹಾಳಮಠ

ಚುರ್ಚಿಹಾಳಮಠ ಚನ್ನಯ್ಯನವರು ಯಲಬುರ್ಗಾ ತಾಲೂಕಿನ ಎರೇಹಂಚಿನಾಳ ತಾಯಿ ತವರುಮನೆಯಲ್ಲಿ ಜನಿಸಿದರು. ಇವರದು ವೈದ್ಯಕೀಯ ವೃತ್ತಿ. ಭಾರತ ಸ್ವಾತಂತ್ರ್ಯ ಹೋರಾಟ, ಮೈಸೂರು ಚಲೋ ಚಳವಳಿ ಮತ್ತು ಹೈದರಾಬಾದ್ ವಿಮೋಚನಾ ಹೋರಾಟಗಳಲ್ಲಿ ಮುಂಚೂಣಿಯ ವೀರಯೋಧರಾಗಿ ದುಡಿದಿದ್ದಾರೆ. ಜೊತೆ ಜೊತೆಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ರಾಜಕೀಯ, ಧರ್ಮ, ಆಯುರ್ವೇದ, ನಿಸರ್ಗ ಚಿಕಿತ್ಸೆ ಸೇವೆ, ಹೋಮ್‌ಗಾರ್ಡ್ಸ್(ಗೃಹರಕ್ಷಕ ದಳ) ಹೀಗೆ ಹಲವು ಹತ್ತು ಹವ್ಯಾಸಗಳನ್ನು ಮೈಗೂಡಿಸಿ ಕೊಂಡು ಹೋರಾಟದ ಹಿರಿಯ ವಕ್ತಾರರಾಗಿದ್ದಾರೆ. ಮುಂಡರಗಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಕೂಡ ಆಗಿದ್ದರು. ನಿಜಾಮ ಸರಹದ್ದಿನ ಮುಂಡರಗಿ ಶಿಬಿರ ಇನ್ನಿತರ ಎಲ್ಲ ಶಿಬಿರಗಳೊಡನೆ ಸಂಪರ್ಕ ಹೊಂದಿದ್ದರು. ಮುಂಡರಗಿ ಶಿಬಿರಕ್ಕೆ ಅಲ್ಲಿಯ ನಾಗರಿಕ ಸೇವಾ ಸಮಿತಿಯ ಮೂಲಕ ಎಲ್ಲ ರೀತಿಯ ನೆರವು ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂಥ ಉದಾರ ವ್ಯಕ್ತಿತ್ವ, ಸಂಘಟನಾಶೀಲತೆ ಚುರ್ಚಿಹಾಳಮಠ ಡಾಕ್ಟರ ವ್ಯಕ್ತಿ ವೈಶಿಷ್ಟ್ಯವಾಗಿದೆ. ಮುಂಡರಗಿ ಕೊಪ್ಪಳ ಪ್ರದೇಶದ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಂಗತಿಗಳನ್ನು ಇತಿಹಾಸವಾಗಿಸುವ ಅದನ್ನು ಹೊರುತ್ತಿರುವ ಪ್ರಯತ್ನ ಅದರ ಕೀರ್ತಿ ಇವರದಾಗಿದೆ.

 

ಜಯತೀರ್ಥರಾಜ ಪುರೋಹಿತ

ಕೊಪ್ಪಳ ಹುಲಿಗಿ ಆಚಾರ್ಯರಲ್ಲಿ ಸಂಸ್ಕೃತಾಧ್ಯಯನ ಮಾಡಲು ಕನಕಗಿರಿಯಿಂದ ಬಂದು, ಇಂಗ್ಲಿಷ್ ಕಲಿಯುವ ಹಂಬಲದಿಂದ ನಾಗಪುರ ವಿಶ್ವವಿದ್ಯಾಲಯದಿಂದ ಮೆಟ್ರಿಕ್ ಪಾಸಾಗಿ, ಹೈದರಾಬಾದಿನಲ್ಲಿ ಓದುತ್ತಿದ್ದಾಗ ವಿಮೋಚನಾ ಹೋರಾಟದಲ್ಲಿ ದುಮುಕಿ, ಕೊಪ್ಪಳ ಯಲಬುರ್ಗಾ-ಕುಷ್ಟಗಿ ಹಾಗೂ ಗಂಗಾವತಿ ತಾಲೂಕುಗಳಲ್ಲಿ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಹಲವಾರು ಗಂಡಾಂತರಕಾರಿ ಪ್ರಸಂಗಗಳಿಂದ ಪಾರಾಗಿ ಉಳಿದರು. ಇವರು ಖ್ಯಾತ ಕತೆಗಾರರು, ಕಾದಂಬರಿಕಾರರು. ಹೈದರಾಬಾದ್ ವಿಮೋಚನೆ ಕುರಿತು ಸಮಕಾಲೀನ ಕಥಾ ವಸ್ತುವುಳ್ಳ ‘ಹಾಲು ಜೇನು’ ಕಾದಂಬರಿ ಬರೆದಿದ್ದಾರೆ. ‘ಸುಳಿಗಾಳಿ’ ಮತ್ತೊಂದು ಕಾದಂಬರಿಗೆ ಸುಧಾ ವಾರಪತ್ರಿಕೆ ಬಹುಮಾನ ಬಂದಿದೆ. ಸರಕಾರಿ ಸೇವೆಯಲ್ಲಿದ್ದು ಐ.ಎ.ಎಸ್. ಪಡೆದು ಇವರು ಕನ್ನಡದಲ್ಲಿ ತೀರ್ಪುಗಳನ್ನು ಬರೆದಿದ್ದಾರೆ.

 

ಭೀಮನಗೌಡ ಪಾಟೀಲ

ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ಮುಂಡರಗಿ ಶಿಬಿರದ ಪಾತ್ರ ಹಿರಿದು. ಈ ಶಿಬಿರದಲ್ಲಿ ಯಲಬುರ್ಗಾ ತಾಲೂಕಿನ ಹೋರಾಟಗಾರರ ಪ್ರಾಧಾನ್ಯತೆ ಹೆಚ್ಚು! ಇನ್ನೂ ವಿದ್ಯಾರ್ಥಿಯಾಗಿದ್ದ ಬನ್ನಿಕೊಪ್ಪದ ಭೀಮನಗೌಡ ತಮ್ಮ ಊರಿನ ಹಿರಿಯರೊಂದಿಗೆ ಹಿರಿಯರಾಗಿ, ಧೈರ್ಯಸ್ಥೈರ್ಯಗಳಿಂದ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಂತರ ಪೊಲೀಸ್ ಇಲಾಖೆ ಸೇರಿ ಇನ್‌ಸ್ಪೆಕ್ಟರ್ ಆಗಿದ್ದರು.

 

ಹನುಮರೆಡ್ಡಿ ಕಲ್ಗುಡಿ

ಅಳವಂಡಿಯಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥಾನಮಠ(ಪಟ್ಟದ್ದೇವರಮಠ) ತುಂಬ ಪ್ರಖ್ಯಾತ. ಈ ಮಠದ ಪರಮಭಕ್ತರು ‘ಕಲ್ಗುಡಿ’ ಮನೆತನದವರು. ಪಠಾಣನೊಬ್ಬ ಇವರ ಗೊಬ್ಬರ ತಿಪ್ಪೆಯಲ್ಲಿ ಮಲವಿಸರ್ಜನೆ ಮಾಡಿದ್ದನ್ನು ಹನುಮರೆಡ್ಡಿ ಕಲ್ಗುಡಿ-ಪ್ರತಿಭಟಿಸಿದ್ದಕ್ಕಾಗಿ ಅಪಾರ ಬಂಧುಬಳಗ ಊರುತುಂಬ ಜನರಿದ್ದರೂ ರಜಾಕಾರರು ಮನೆಗೆ ನುಗ್ಗಿ ಹನುಮರೆಡ್ಡಿಯನ್ನೂ ಹಿಡಿದುಕೊಂಡು ಹೋಗಿ ಹಾಡಹಗಲು ಊರ ಮುಂದೆ ನೂರಾರು ಜನರೆದುರು ಗುಂಡು ಹಾಕಿ ಕೊಂದರು. ಪಠಾಣರ ಗುಂಡಿಗೆ ಆಹುತಿಯಾದ ಹುತಾತ್ವ!

 

ಪಂಚಪ್ಪ ಶೆಟ್ಟರು

ಅಳವಂಡಿಯಲ್ಲಿ ಭಕ್ತಿಗೆ-ವ್ಯಾಪಾರಕ್ಕೆ ಮುಂದು ಶೆಟ್ಟರ ಮನೆತನ. ಬಸಪ್ಪಶೆಟ್ಟರು,  ಸಿದ್ಲಿಂಗಪ್ಪಶೆಟ್ಟರು, ಅರಿವೆ ಅಂಗಡಿ ಸಿದ್ಲಿಂಗಪ್ಪ ಶೆಟ್ಟರು ಮೊದಲಾದವರ ಬಂಧು ಪಂಚಪ್ಪ ಶೆಟ್ಟರು. ವೀರಯೋಧರಾಗಿ ಮುಂಡರಗಿ ಶಿಬಿರದಲ್ಲಿದ್ದು ಬೆಳಗಟ್ಟಿಯ ಮುಖಾಮುಖಿ ಗುಂಡಿನ ಹೋರಾಟದಲ್ಲಿ ಥ್ರೀನಾಟ್ ಥ್ರೀ ಗನ್ ಹಿಡಿದು ಭಾಗವಹಿಸಿ ದ್ದವರು. ಪಠಾಣರನ್ನು ಹಿಡಿದುಕೊಂಡು ಹೋಗಿ ಅಳವಂಡಿ-ಹಲವಾಗಲಿ ನಡುವಿನ ಕರೇ ಹಳ್ಳದಲ್ಲಿ ಎತ್ತಿನ ಬಂಡಿಗೆ ಅವರನ್ನು ಹೂಡಿ ಬಾರುಕೋಲಿನಿಂದ ಅವರನ್ನು ಬಡಿಯುತ್ತ ಜೋರಾಗಿ ಓಡುವಂತೆ, ಮತ್ತೆ ಮತ್ತೆ ಹೊಡೆದು ರೋಷ ತಗ್ಗಿಸಿಕೊಂಡ ರೋಚಕ ಕಥೆ ಇವರದು.

 

ಘಂಟೂಸಾ ಮಗಜಿ

ಮುಂಡರಗಿಯ ಸ್ವಾತಂತ್ರ್ಯ ಯೋಧ ಘಂಟೂಸಾ ಮಗಜಿ ಬೆಳಗಟ್ಟಿಯಲ್ಲಿ ಶಿಬಿರದ ಹೋರಾಟಗಾರರು. ರಜಾಕಾರರ ಮುಖಾಮುಖಿ ಹೋರಾಟದಲ್ಲಿ ಎದೆಗೆ ಗುಂಡು ಬಡಿದರೂ ಸಿ.ಎಂ.ಚುರ್ಚಿಹಾಳಮಠದ ಸಕಾಲಿಕ ಚಿಕಿತ್ಸೆಯಿಂದ ಬದುಕಿ ಉಳಿದರು. ಅಂಥ ಇಚ್ಛಾಶಕ್ತಿ ಇವರದು! ಮುಂಡರಗಿ ಬಸ್ ಸ್ಟ್ಯಾಂಡಿನಲ್ಲಿ ಸೋಡಾ ಅಂಗಡಿಯಿಟ್ಟು ಕೊಂಡಿದ್ದ ಇವರು ಮುಂಡರಗಿ ಶಿಬಿರದಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ.

 

ಡಿ.ಆರ್.ವಿಠ್ಠಲರಾವ್

ದೇವರಕೊಳ್ಳದ ರಾಮಣ್ಣ ಅವರ ಮಗ ವಿಠ್ಠಲರಾವ್ ಕಾತರಕಿಯ ನೇಕಾರ ಕುಟುಂಬ ದಿಂದ ಬಂದವರು. ಮನೆಯ ಬಡತನ-ಧಾರ್ಮಿಕ ವಾತಾವರಣದಲ್ಲಿ ಬೆಳೆದು, ಇಟಗಿಯ ಕಟ್ಟಿ ಸಿದ್ದಪ್ಪ ಮಾಸ್ತರರಿಂದ ಕಾತರಕಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಕೊಪ್ಪಳದ ಸರಕಾರಿ ಹೈಸ್ಕೂಲಿನಿಂದ ಮೆಟ್ರಿಕ್, ಹೈದರಾಬಾದಿನಲ್ಲಿ ಬಿ.ಎಸ್.ಸಿ., ಎಲ್.ಎಲ್.ಬಿ. ಪದವಿ. ಹೈದರಾಬಾದ್ ವಿಮೋಚನಾ ಹೋರಾಟದಲ್ಲಿ ವಿದ್ಯಾರ್ಥಿ ನಾಯಕರು, ಮುಂಡರಗಿ ಶಿಬಿರದಲ್ಲಿ ಬಿ.ವಿರೂಪಾಕ್ಷಪ್ಪ, ಪ್ರಭುರಾಜ ಪಾಟೀಲ, ಸೋಮಪ್ಪ ಡಂಬಳರೊಂದಿಗೆ ಪಾಲ್ಗೊಂಡರು. ನಾಡಿನ ವಿಮೋಚನೆಗಾಗಿ ತ್ಯಾಗ ಬಲಿದಾನಕ್ಕೂ ಸಿದ್ಧವಾಗಿದ್ದರು. ಆನಂತರ ರಾಯಚೂರು ಪ್ರಸಿದ್ಧ ಕ್ರಿಮಿನಲ್ ಲಾಯರಾಗಿ ಹೆಸರು ಮಾಡಿದರು. ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶರಾದರು. ಹಲವಾರು ಸರಕಾರಿ ಆಯೋಗಗಳಿಗೆ ಅಧ್ಯಕ್ಷರಾಗಿದ್ದರು. ಉತ್ತರ ಪ್ರದೇಶದ ಷಹಜಾನಪುರದ ಶ್ರೀೊರಾಮಚಂದ್ರ ಮಿಷನ್ ಶಾಖೆಗಳನ್ನು ರಾಯಚೂರು, ಗುಲಬರ್ಗಾ ಹಾಗೂ ಕರ್ನಾಟಕದ ಇನ್ನಿತರ ಕಡೆಗಳಲ್ಲಿ ಕಟ್ಟಿ ಬೆಳೆಸಿದ್ದರು.

 

ಎಚ್.(ಹಂಜಿ)ಕೊಟ್ರಪ್ಪ

ಆ ಕಾಲ ! ಕೊಪ್ಪಳದಲ್ಲಿ ಇಂಗ್ಲಿಷ್ ಓದಲು ಬರೆಯಲು ಬಲ್ಲವರು. ಸಾರ್ವಜನಿಕ ಜೀವನದಲ್ಲಿ ಓಡಾಡುತ್ತ ಶ್ರೀ ಅರವಿಂದರು ಗಾಂಧೀಜಿ ಅವರ ಪ್ರಭಾವದಿಂದ ಭಾರತ ಸ್ವಾತಂತ್ರ್ಯ, ಹೈದರಾಬಾದ್ ವಿಮೋಚನಾ ಹೋರಾಟಕ್ಕೆ ಅಣಿಗೊಂಡು ಹಿರಿಯರನ್ನು ಕಿರಿಯರನ್ನು ಒಗ್ಗೂಡಿಸಿದವರು. ಅನಂತರ ಕೊಪ್ಪಳದಲ್ಲಿ ವರ್ತಮಾನ ಪತ್ರಿಕೆಗಳ ಏಜಂಟರಾಗಿದ್ದುಕೊಂಡು ಸದ್ಗುಗದ್ದಲವಿಲ್ಲದೆ ಗುಪ್ತವಾಗಿ ರಜಾಕಾರರ ವಿರುದ್ಧ ಕಾರ್ಯನಿರ್ವಹಿಸಿದರು.

 

ಎಂ.ವಿರೂಪಾಕ್ಷಪ್ಪ

ಹಿರೇ ಸಿಂದೋಗಿಯ ಮಾದಿನೂರು ಕುಟುಂಬ ಕೃಷಿ, ಧಾರ್ಮಿಕ ಸೇವೆ, ವಿದ್ಯಾಭ್ಯಾಸ, ಸರಕಾರಿ ಸೇವೆಗಳಲ್ಲಿ ಅಗ್ರಸ್ಥಾನ ಪಡೆದಿದೆ. ಹೈದರಾಬಾದಿನಲ್ಲಿ ಓಡುತ್ತಿದ್ದ ಎಂ. ವಿರೂಪಾಕ್ಷಪ್ಪ, ಮುಂಡರಗಿ ಶಿಬಿರದಲ್ಲಿ ಜವಾಬ್ದಾರಿ ಸ್ಥಾನ ಹೊಂದಿದ್ದರು. ಹೋರಾಟದಲ್ಲಿ ಪಾಲ್ಗೊಂಡಿದ್ದರು. ನಿರಾಡಂಬರ ವ್ಯಕ್ತಿತ್ವ ಸೌಜನ್ಯತೆಗೆ ಹೆಸರಾದ ವಕೀಲರಾಗಿ, ಕೊಪ್ಪಳ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ.

 

ಗವಿಯಪ್ಪ ಬೆಳವಡಿ

ಮುಂಡರಗಿ ಶಿಬಿರದ ಯಲಬುರ್ಗಾ ತಹಸೀಲ ದಾಳಿ ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಉತ್ತರ ಕರ್ನಾಟಕದ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ವಾಲಿ ಚೆನ್ನಪ್ಪನವ ರೊಂದಿಗೆ ಬಂದಿದ್ದರು. ಸವದತ್ತಿ ತಾಲೂಕಿನ ಹಿರೇಕುಂಬಿಯ ತಾಯಿ ಸಿದ್ಧಮ್ಮ ತಂದೆ ಸಿದ್ಧಪ್ಪ ಇವರ ಎಲ್ಲ ಹೆಣ್ಣು ಹಾಗೂ ಗಂಡು ಮಕ್ಕಳು ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯೋಧರಾಗಿ ಹೋರಾಡಿದವರು. ಈ ಕುಟುಂಬದ ಎರಡನೇ ಗಂಡುಮಗ ಬೆಳವಡಿ ಗವಿಯಪ್ಪ. ಯಲಬುರ್ಗಾ ತಹಸೀಲ ಕಾರ್ಯಾಚರಣೆಯಲ್ಲಿ ಕೈಬಾಂಬ್ ಸ್ಫೋಟಗೊಂಡು ಎಡಗೈ ಸುಟ್ಟು ಹೋಯಿತು. ಅಂಥದರಲ್ಲಿಯೇ ಎಲ್ಲ ಸೈನಿಕರೊಂದಿಗೆ ಯಲಬುರ್ಗಿಯಿಂದ ಹಾಳಕೇರಿಯವರಿಗೆ ಓಡುತ್ತ ಹೋದರು. ಗದಗಿನ ಜರ್ಮನ್ ಆಸ್ಪತ್ರೆಯಲ್ಲಿ ಅರವಳಿಕೆ ನೀಡದೆ, ನಂಜಾದ ಇಡೀ ಕೈಯನ್ನು ಕತ್ತರಿಸಿದಾಗ ‘ಹಾ’ ಎಂದು ನರಳದ ಗಟ್ಟಿಗ! ಇವರ ತಾಯಿ ಸಿದ್ಧಮ್ಮ ರಣಾಂಗಣದಿಂದ ಓಡಿ ಬಂದ ಹೇಡಿಯೆಂದು ಉಗುಳಿದ್ದರಂತೆ. ತಾಯಿ ಮಗನಿಬ್ಬರ ವೀರತನವನ್ನು ಸಭೆ ಸಮಾರಂಭಗಳಲ್ಲಿ ಕರಿಸಿದ್ಧಸ್ವಾಮಿ ಇನಾಮದಾರರು ಕಥೆ ಮಾಡಿ ಹೇಳುತ್ತಿದ್ದರು. ಗದಗ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಶಕುಂತಲಾ ದಂಡನರ ಚಿಕ್ಕಪ್ಪ, ಎಂ.ಎಲ್.ಸಿ. ಗವಿಸಿದ್ಧಪ್ಪ ಬೆಳವಡಿಯವರು ಇವರ ಹಿರಿಯಣ್ಣ.

 

ಲಕ್ಷ್ಮಣಾಚಾರ್ಯ ಅಗ್ನಿಹೋತ್ರಿ

ಮೂರುನೂರು ವರ್ಷಗಳ ಹಿಂದೆ ಮುಳಗುಂದದಿಂದ ಕೊಪ್ಪಳಕ್ಕೆ ಬಂದ ಅಗ್ನಿಹೋತ್ರಿ ಮನೆತನದಲ್ಲಿ ಲಕ್ಷ್ಮಣಾಚಾರ್ಯ ವಿಷ್ಣುತೀರ್ಥಾಚಾರ್ಯ ಅಗ್ನಿಹೋತ್ರಿ ಜನಿಸಿದರು. ಆಗಿನ ಮೆಟ್ರಿಕ್ ಪಾಸಾಗಿ ಕೊಪ್ಪಳದ ಉಸ್ಮಾನಿಯಾ (ಈಗಿನ ಸರಕಾರಿ ಹೈಸ್ಕೂಲು) ಹೈಸ್ಕೂಲಿನಲ್ಲಿ ಶಿಕ್ಷಕರು ಹುಡುಗರನ್ನು ಹೊಡೆಯುತ್ತಿದ್ದುದರಿಂದ ತಾಯಿ ಬೇಸರಗೊಂಡು ಮಾಸ್ತರಿಕೆ ಬಿಡಿಸಿದರು. ಹೈದರಾಬಾದಿನಲ್ಲಿ  ಎಲ್.ಎಲ್.ಬಿ.ಪದವಿ ಪಡೆದು 36 ವರ್ಷ ವಕಾಲತ್ತು ಮಾಡಿದರು. 32 ವರ್ಷ ವಕೀಲರ ಸಂಘದ ಅಧ್ಯಕ್ಷರಾಗಿದ್ದರು. ಇದು ನಿಜಾಮ ಆಡಳಿತದಲ್ಲಿ ದೊಡ್ಡ ದಾಖಲೆ.  ಜನಾರ್ಧನರಾವ್ ದೇಸಾಯಿ, ರಾಘವೇಂದ್ರರಾವ್ ಚಾಕಲಬ್ಬಿ, ತಿಮ್ಮನಗೌಡ ಬೇಳೂರ್, ಬನ್ನಿಕೊಪ್ಪ, ನರ್ಸಿಂಗರಾವ್ ಹಂಪೀಕರ ಮಾಸ್ತರ, ಧೀರೇಂಧ್ರಾಚಾರ್ಯವಾಡಪ್ಪ, ರಾಮದಾಸ, ಕೊಪ್ಪಳದಲ್ಲಿ ಹಾಗೂ ಹಳ್ಳಿ ಹಳ್ಳಿಗಳಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಹಂಚುತ್ತಿದ್ದ ‘‘ಕೊಪ್ಪಳದ ಗಾಂಧಿ’’, ಶೀರೂರ ವೀರಭದ್ರಪ್ಪ, ಕಾಟ್ರಹಳ್ಳಿ ಬಸವಂತರಾಯ್ ಹಿರೇಮಠ, ಇಟಗಿ ವಿರೂಪಾಕ್ಷಯ್ಯ ಮೊದಲಾದವರೊಂದಿಗೆ ಭಾರತ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈದರಾಬಾದ್ ವಿಮೋಚನೆಗಾಗಿ ಹೋರಾಡಿದವರು. 1942 ರಿಂದ 1947ರವರೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು, ಚಾಕಲಬ್ಬಿ ವಕೀಲರು ಕಾರ್ಯದರ್ಶಿಗಳಾಗಿದ್ದರು. 1947 ಆಗಸ್ಟ್ 15ರ ಪ್ರಥಮ ಸ್ವಾತಂತ್ರ್ಯೋತ್ಸವ ದಿನದಂದು ಕೋಟಿಯ ರಾಮದೇವರ ಗುಡಿಯಿಂದ ನೂರಾರು ಜನರೊಡನೆ ಮೆರವಣಿಗೆ ಯಲ್ಲಿ ಬಂದು ಈಗ ಹಲಗೇರಿ ಹಾಗೂ ಯತ್ನಟ್ಟಿ ಗೌಡರ ಮನೆಗಳಿರುವ(ಹೊಸ ಬಸ್ ಸ್ಟ್ಯಾಂಡ್ ಹತ್ತಿರ) ಜಾಗದ ಬಯಲಲ್ಲಿ ಭಾರತ ಧ್ವಜವನ್ನು ಹಾರಿಸಿ, ಶಿರೂರ ವೀರಭದ್ರಪ್ಪ ಹಂಪೀಕರರೊಂದಿಗೆ ಬಂಧಿತರಾದರು.

ಕೋಟೆ ವೆಂಕಟೇಶ್ವರ ದೇವಸ್ಥಾನದಲ್ಲಿ ಗಜಾನನ ಲೈಬ್ರರಿ ನಡೆಯುತ್ತಿತ್ತು. ಗಜಾನನ ಮಹೋತ್ಸವ, ಧಾರ್ಮಿಕ ಕಾರ್ಯಕ್ರಮಗಳು, ಕೀರ್ತನ, ದೇಶಭಕ್ತಿ ನಾಟಕಗಳ ಪ್ರಯೋಗಕ್ಕೆ ನಿಜಾಮ ಸರ್ಕಾರ ನಿಷೇಧ ಒಡ್ಡಿದಾಗ ಕೋರ್ಟಿನಲ್ಲಿ ವಾದ ಮಾಡಿ ಪರವಾನಿಗೆ ಕೊಡಿಸುತ್ತಿದ್ದರು. ಒಳ್ಳೆಯ ಸಂಘಟಕರು, ದೇಶಪ್ರೇಮಿಗಳು, ಸಾಹಿತ್ಯ ಹಾಗೂ ಸಂಸ್ಕೃತಿ ಹಾಗೂ ಕಲಾಪ್ರೇಮಿಗಳಾಗಿದ್ದರು. ಆ ಕಾಲದ ಗಜಾನನೋತ್ಸವಕ್ಕೆ ಬಿ. ಎಂ.ಶ್ರೀ., ಮಾಸ್ತಿ, ಗಳಗನಾಥರು, ಪಂಜೆಯವರು, ದೇವುಡು, ಜಿ.ಪಿ.ರಾಜರತ್ನಂ. ಸಿ.ಕೆ.ವೆಂಕಟರಾಮಯ್ಯ, ಶಿವರಾಮ ಕಾರಂತ, ಅ.ನ.ಕೃ., ದ.ರಾ.ಬೇಂದ್ರೆ, ವಿ.ಕೃ.ಗೋಕಾಕ, ರಂ.ಶ್ರೀ.ಮುಗಳಿ, ಮಿಂಚಿನಬಳ್ಳಿ ಬುರ್ಲಿ ಬಿಂದು ಮಾಧವರು, ಗೋರೆಬಾಳ ಹನುಮಂತ ರಾಯರು, ಆರ್ಯ ಸಮಾಜದ ಆಚಾರ್ಯ ನರೇಂದ್ರ ದೇವಜಿ, ಲೋಕನಾಯಕೊಜಯಪ್ರಕಾಶ ನಾರಾಯಣರು, ಕೀರ್ತನ ಕೇಸರಿ ಕೊಪ್ಪಳ ಜಯರಾಮಾಚಾರ್ಯರು, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರು ಹಾಜರಿದ್ದರು. ನಾ.ಭಾ.ಶಾಸ್ತ್ರಿಗಳ ಸೋದರ ನಾರಾಯಣ ಶಾಸ್ತ್ರಿಗಳು ಹಾಗೂ ಕೋಟೆಯ ಜನ ಈ ಕಾರ್ಯಕ್ರಮ ಸಂಘಟಿಸುತ್ತಿದ್ದರು.

ಗೋಪಾಲಾಚಾರ್ಯ ಅಗ್ನಿಹೋತ್ರಿ, ಧೀರೇಂದ್ರಚಾರ್ಯ ವಾಡಪ್ಪಿ, ಮೃತ್ಯುಂಜಯ ಶಾಸ್ತ್ರಿ, ಸಿಂದೋಗಿ ಶಂಕ್ರಪ್ಪ ಮೊದಲಾದ ಕೋಟೆಯ ತರುಣರು ಕಿತ್ತೂರು ಚೆನ್ನಮ್ಮ, ಎಚ್ಚೆಮನಾಯ್ಕ, ಕುರುಕ್ಷೇತ್ರ, ಶಮಂತಕೋಪಾಖ್ಯಾನ ಹಾಗು ವಿಜಯನಗರ ಪತನ ಮುಂತಾದ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಚಿಕೇನಕೊಪ್ಪದ ಮೌನ ತಪಸ್ವಿಗಳೆಂದು ಪ್ರಖ್ಯಾತರಾದ ಶ್ರೀ ಚನ್ನವೀರ ಶರಣರು ಗಾಂವಠಿ ಶಾಲಾ ಶಿಕ್ಷಕರಾಗಿದ್ದಾಗ ಲಕ್ಷ್ಮಣಾಚಾರ್ಯ ರಲ್ಲಿ ಬಂದು ಸ್ವಾತಂತ್ರ್ಯ ಹೋರಾಟದ ಬಗ್ಗೆ ಚರ್ಚಿಸುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೆ ಎಂದು ಅವರ ಮಗ ನಿವೃತ್ತ ಹಿಂದಿ ಪಂಡಿತ ಉಡುಪಿಕೃಷ್ಣಾ ಚಾರ್ಯರು ತಿಳಿಸುತ್ತಾರೆ. ಬೀಡಿನಾಳ ದೇಸಾಯರು ಖಾದಿ ಪ್ರಚಾರಕ್ಕೆ ನೂಲುವ ಚರಕಗಳನ್ನು ತಂದು ಪ್ಯಾಟಿ ಈಶ್ವರ ದೇವಸ್ಥಾನದ ಎದುರಿಗಿರುವ ಹನುಮಂತ ದೇವರ ಗುಡಿಯಲ್ಲಿ ಖಾದಿ ನೂಲು ತೆಗೆಯಲು ಹೆಣ್ಣು ಮಕ್ಕಳಿಗೆ ಉದ್ಯೋಗ ಒದಗಿಸಲು ಪ್ರಯತ್ನಿಸುತ್ತಿದ್ದುದಾಗಿ ಅವರೇ ದಾಖಲಿಸಿರುತ್ತಾರೆ.

 

ಮುಸ್ಲಿಮ್ ಹೋರಾಟಗಾರರು

ಭಾರತ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈದರಾಬಾದ್ ವಿಮೋಚನೆ ಕುರಿತು ಸಂಯುಕ್ತ ಕರ್ನಾಟಕದಲ್ಲಿ ಈಗಲೂ ಬರೆಯುತ್ತಿರುವ ವಿ.ಹೆಚ್.ದೇಸಾಯಿಯವರು (ಹೈದರಾಬಾದಿನ ವಿದ್ಯಾಭವನದ ಸಂಚಾಲಕರು) ಹೈದರಾಬಾದಿನಲ್ಲಿ ತಾವು ಪತ್ರಿಕೆಗಳಿಗೆ ಬರೆದ ವರದಿಗಳನ್ನು ‘‘ಉಸ್ಮಾನ್’’ ಎಂಬ ಅಂಚೆ ಜವಾನ ಇವರಿದ್ದಲ್ಲಿಗೆ ತಪ್ಪದೇ ಹೋಗಿ ತೆಗೆದುಕೊಂಡು ಸುದ್ದಿ ರವಾನಿಸುತ್ತಿದ್ದನೆಂದು ತಮ್ಮ ಲೇಖನದಲ್ಲಿ ನೆನೆದಿದ್ದಾರೆ. ನಿಜಾಮರು ತಪ್ಪು ಹಾದಿ ಹಿಡಿದು ತಪ್ಪು ನಿರ್ಣಯ ತೆಗೆದುಕೊಂಡು ಪ್ರಜೆಗಳನ್ನು ಗಂಡಾಂತರಕ್ಕೆ ದಬ್ಬುತ್ತಿದ್ದಾನೆಂಬ ಅರಿವು ಆ ಅಂಚೆ ಜವಾನನಿಗಿತ್ತಂತೆ! ಇಮ್ರೊಜ್ ಪತ್ರಿಕಾ ಸಂಪಾದಕ ಶೋಯೆಬುಲ್ಲಾಖಾನರು ಗಾಂಧಿ ಅನುಯಾಯಿಯಾಗಿದ್ದರು, ರಾಷ್ಟ್ರೀಯವಾದಿ ಪತ್ರಕರ್ತರಾಗಿದ್ದರು. 1948ನೆಯ ಆಗಸ್ಟ್ 22ರಂದು ಅವರನ್ನು ಬೀದಿಯಲ್ಲಿ ಕೊಚ್ಚಿ ಹಾಕಲಾಯಿತು.

ಕೊಪ್ಪಳದಲ್ಲಿ ಹಲವಾರು ಮುಸಲ್ಮಾನ ಬಾಂಧವರು ತಮ್ಮ ಹಿಂದೂ ಬಾಂಧವರೊಂದಿಗೆ ಅನೋನ್ಯ ಸಂಬಂಧವನ್ನು ಹೊಂದಿದವರಾಗಿದ್ದರು. ನಿಜಾಮ ಆಡಳಿತ ರಜಾಕಾರರ ದಬ್ಬಾಳಿಕೆ ದೌರ್ಜನ್ಯ ಇವುಗಳಿಂದ ಬೇಸತ್ತವರಾಗಿದ್ದರು. ಡಾ. ಮುರ್ತುಜಾ ಬಾದಾಮಿ ಎಂಬುವರು 1987ರವರೆಗೆ ಬದುಕಿದ್ದರು. ಭಾರತ ಸ್ವಾತಂತ್ರ್ಯ ಹಾಗೂ ಹೈದರಾಬಾದ್ ವಿಮೋಚನೆಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಆಳರಸರ ವಿರುದ್ಧ ರಾಷ್ಟ್ರಪ್ರೇಮದ ಅನೇಕ ನಾಟಕಗಳನ್ನು ಪ್ರಯೋಗಿಸಿ, ನಿಜಾಮನನ್ನು ಬ್ರಿಟಿಷರನ್ನು ಗೇಲಿ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇವರಿಗೆ ನಾಟಕ ಕಲಿಸಿ ನಿರ್ದೇಶನ ನೀಡುತ್ತಿದ್ದವರು ರಾಂಪುರಿ ಇಮ್ಮಣ್ಣ ಮಾಸ್ತರರು ಮುಸಲ್ಮಾನರು. ಇವರ ಭೌಮಾಸುರ, ಮಹಾರಥಿ ಕರ್ಣ, ಸತ್ಯ ಹರಿಶ್ಚಂದ್ರ ಪಾತ್ರಗಳು ಸ್ಮರಣಾರ್ಹ. ಇವರ ನಾಟಕ ಮಂಡಳಿಯಲ್ಲಿ ಅನೇಕ ಕಲಾವಂತ ಮುಸ್ಲಿಂ ಯುವಕರು ಪ್ರಧಾನ ಹಾಗೂ ಪೋಷಕ ಪಾತ್ರಗಳನ್ನು ವಹಿಸುತ್ತಿದ್ದುದಾಗಿ ಅವರ ಅಳಿಯ ಮುನಿರುದ್ದೀನ ರಾಂಪುರಿಯವರು ಬಹಿರಂಗಪಡಿಸುತ್ತಾರೆ. ಬಾಲಕರಾಗಿದ್ದ ಮುನಿರುದ್ದೀನ ಮುಸ್ಲಿಂ ವಾತಾವರಣದಲ್ಲಿ ಬೆಳೆದಿದ್ದರೂ ಕನ್ನಡ ಮುಖ್ಯ ವಿಷಯದೊಂದಿಗೆ ಬಿ.ಎ.ಪದವಿಯನ್ನು ಪಡೆದ ಶುದ್ಧ ಉಚ್ಚಾರಣೆಯ ಮುಸ್ಲಿಂ ಕನ್ನಡಿಗ ! ಇವರ ಹಿರಿಯ ಸೋದರ ಚಾಂದ್ ಸುಲ್ತಾನಾ ಟೀಚರ್ ಉರ್ದು, ಪರ್ಷಿಯನ್, ಭಾಷೆಗಳಲ್ಲಿ ಪರಿಣತರಾಗಿದ್ದಷ್ಟೇ ಕನ್ನಡದಲ್ಲಿ ಪರಿಣತರಾಗಿದ್ದಾರೆ. ಮುರ್ತುಜಾ ಬಾದಾಮಿ, ಇಮ್ಮಣ್ಣ ಮಾಸ್ತರ, ಕನ್ನಡ ಸಾಂಸ್ಕೃತಿಕ ಹಾಗೂ ಕಲಾವಂತಿಕೆಯ ವಾತಾವರಣದಲ್ಲಿ ಬೆಳೆದು, ಡಾ. ಮಹಾಲಿಂಗಯ್ಯನವರ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಕಣ್ಣಾರೆ ಕಂಡು ಅನುಭವಿಸಿ ಅದನ್ನು ಮೈಗೂಡಿಸಿಕೊಂಡ ವ್ಯಕ್ತಿ. ಈತ ಹದಿಹರೆಯದವನಾಗಿದ್ದಾಗ 1948ರಲ್ಲಿ ಈಗಿನ ಬನ್ನಿಕಟ್ಟಿ ಪ್ರದೇಶದಲ್ಲಿ ಈತನ ಖಾದಿ ಧೋತ್ರ, ಷರ್ಟು, ಗಾಂಧಿ ಟೊಪ್ಪಿಗೆಯನ್ನು ಕಂಡು ರಜಾಕಾರರು ಈತನನ್ನು ಕಾಫೀರ್ ಎಂದು ಕರೆದರು. ಇದರಿಂದ ಈತ ರೊಚ್ಚಿಗೆದ್ದಾಗ ರಜಾಕಾರರು ಮುರ್ತುಜಾನ ತಲೆಯ ಮೇಲಿದ್ದ ಗಾಂಧಿ ಟೊಪ್ಪಿಗೆಯನ್ನು ಕಸಿದುಕೊಂಡು ಮೇಲೆ ತೂರಿ ಅದಕ್ಕೆ ಗುಂಡಿಟ್ಟು ಸುಟ್ಟದ್ದಕ್ಕಾಗಿ ಅತ್ತು ಕರೆದವನು ಮುರ್ತುಜಾ. ಬಿಸರಳ್ಳಿಯ ಹುಸೇನ ಸಾಹೇಬ ಸೈದಾಸಾಬ ಎಂಬ ಯುವಕನು ಮುಂಡರಗಿ ಶಿಬಿರದಲ್ಲಿದ್ದು ಗೃಹರಕ್ಷಕ ದಳದಲ್ಲಿದ್ದು ಹೋರಾಟದಲ್ಲಿ ಭಾಗವಹಿಸಿ ಡಾ.ಸಿಂ.ಎಂ. ಚುರ್ಚಿಹಾಳ ಮಠ ಇವರ ಪ್ರೀತಿಗೆ ಪಾತ್ರನಾಗಿದ್ದನು.

 

ಬೆಟಗೇರಿಯ ಹೆಣ್ಣು ಮಕ್ಕಳ ದುರಂತ

ಕೊಪ್ಪಳ ತಾಲೂಕಿನ ಬೆಟಗೇರಿಯ ಗ್ರಾಮದ ತಾಯಿ ಶಾಮವ್ವ ಹಾಗು ಮಗಳು ಲಕ್ಷ್ಮವ್ವ ಪಾತ್ರದ ಜೋಗಮ್ಮರಾಗಿ ಬೆಟಗೇರಿ, ಅಳವಂಡಿ ಗ್ರಾಮಗಳಲ್ಲಿದ್ದ ರಜಾಕಾರರ ಕ್ಯಾಂಪಿನ ಚಟುವಟಿಕೆಗಳ ಮಾಹಿತಿಯನ್ನು ಮುಂಡರಗಿ ಶಿಬಿರಕ್ಕೆ ಮುಟ್ಟಿಸುತ್ತಿದ್ದರು. ಇದರಿಂದಾಗಿ ಬೆಳಗಟ್ಟಿ, ಅಳವಂಡಿ ಹಾಗೂ ಬೆಟಗೇರಿಗಳಲ್ಲಿ ರಜಾಕಾರರು ಮುಂಡರಗಿ ಶಿಬಿರದ ಹೋರಾಟಗಾರರ ಗುಂಡಿಗೆ ಬಲಿಯಾದರು. ಈ ಮಾಹಿತಿ ಈ ಪಾತರದ ಹೆಣ್ಣು ಮಕ್ಕಳಿಂದ ಸೋರಿ ಹೋಗುತ್ತಿದೆ ಎಂದು ರಜಾಕಾರರಿಗೆ ತಿಳಿಯಿತು. ಈ ಇಬ್ಬರು ಹೆಣ್ಣುಮಕ್ಕಳನ್ನು ಚಿತ್ರಹಿಂಸೆಯಿಂದ ಕೊಂದು ಹಾಕಿದರು. ಅದೇ ಊರಿನ ಸಿಕ್ಕ ಸಿಕ್ಕ ಜನರನ್ನು ಗುಂಡು ಹಾಕಿ ಕೊಂದರು.

 

ಸಾಧುಸಂತರು, ಮಠಾಧೀಶರು

ತಪಸ್ವಿ ಮುರಡಿ ಭೀಮಜ್ಜನು ಗಜೇಂದ್ರಗಡ ಶಿಬಿರದ ನೇತಾರನಾಗಿದ್ದು ಕುಷ್ಟಗಿಯ ಪುಂಡಲೀಕಪ್ಪ ಜ್ಞಾನಮೋಠೆಯವರ ಮಾರ್ಗದರ್ಶಕರಾಗಿದ್ದನು. ಸ್ವತಃ ಹೋರಾಟದಲ್ಲಿ ಪಾಲ್ಗೊಂಡಿದ್ದನು. ಚಿಕ್ಕೇನಕೊಪ್ಪದ ಮೌನ ತಪಸ್ವಿ ಶರಣರು ಗಾಂವಠೀ ಶಾಲಾಶಿಕ್ಷಕರಾಗಿ ದ್ದಾಗ ಹೋರಾಟದಲ್ಲಿ ಉತ್ಸುಕರಾಗಿದ್ದುದಾಗಿದ್ದರು. ಮುಂಡರಗಿ ಹಾಗೂ ಕೊಪ್ಪಳ ಮಠಾಧೀಶರು ಹೋರಾಟಗಾರರಿಗೆ ಆಶ್ರಯ ನೀಡಿದ್ದರು. ಮುಂಡರಗಿ ಶಿಬಿರವಿದ್ದುದೇ ತೋಂಟದಾರ್ಯಮಠದಲ್ಲಿ. ಕೊಪ್ಪಳ ತಾಲೂಕು ಬಿಸರಳ್ಳಿ ಗ್ರಾಮದಲ್ಲಿ ಊರಿನ ಜನ ರಜಾಕಾರರ ಹಾವಳಿಯಿಂದ ತತ್ತರಿಸುತ್ತಿದ್ದಾಗ ಆ ಊರಿನಲ್ಲಿದ್ದ ಅವಧೂತ ಸಾಧು ಗರಸಿನಜ್ಜ ರಜಾಕಾರರ ವಿರುದ್ಧ ನಿಂತದ್ದು ದಾಖಲಾರ್ಹ ಸಂಗತಿ. ಈ ಸಾಧು ಹಂಪಸಾಗರದ ಬ್ರಾಹ್ಮಣ ಕುಟುಂಬದಿಂದ ಬಂದವರಾಗಿದ್ದು ರಾಮಕೃಷ್ಣ ಬಾವಾ ಎಂಬ ಹೆಸರಿದ್ದರೂ ‘ಗರಸಿನ ಸಾಧು’ ಎಂದು ಬಲ್ಲವರಾಗಿದ್ದರು. ಅಳವಂಡಿ ಶಿವಮೂರ್ತಿ ಸ್ವಾಮಿಗಳಿಗೆ ಈ ಸಾಧು ತುಂಬಾ ಆಪ್ತರಾಗಿದ್ದರು. ಇವರ ಸ್ವಾತಂತ್ರ್ಯ ಪ್ರೇಮದ ವಾತಾವರಣದಿಂದಾಗಿ ತರುಣರಾಗಿದ್ದ ನಾರಾಯಣ ಮೂರ್ತಿ ವೇದಪಾಠಕ, ಶರಣ ಬಸವರಾಜ ಬಿಸರಳ್ಳಿ ಇವರು ರಜಾಕಾರರ ವಿರುದ್ಧ ಹೋರಾಡಿ ಹೆಸರುವಾಸಿಯಾಗಿದ್ದಾರೆ. ಗರಸಿನ ಸಾಧುವಿನ ಪ್ರಭಾವದಿಂದ ಪಂಚಾಕ್ಷರಿ ಹಿರೇಮಠ, ಶರಣಬಸವರಾಜ ಬಿಸರಳ್ಳಿ, ಮಹಾತ್ಮಾ ಗಾಂಧಿಯವರ ಚಿತಾಭಸ್ಮವನ್ನು ಸರ್ದಾರ ವೀರನಗೌಡರಿಂದ ಪಡೆದು ಗಾಂಧೀಕಟ್ಟೆಯನ್ನು ಬಿಸರಳ್ಳಿಯಲ್ಲಿ ಕಟ್ಟಿದರು. ಅದು ಇಂದಿಗೆ ಸಾರ್ವಜನಿಕ ಧ್ವಜಾರೋಹಣ ಕೇಂದ್ರವಾಗಿದೆ. ಹಿರೇಗೌಡರು ಮಾಲೀಪಾಟೀಲ ಅವರ ಮನವೊಲಿಸಿ ಅವರ ಹೊಸಮನಿ ಯಲ್ಲಿ ವಾಚನಾಲಯ ಆರಂಭಿಸಿದರು. ಆ ಕಟ್ಟಡವನ್ನು ಇಂದಿಗೂ ಅರ್ಧಶತಮಾನ ಕಳೆದರೂ ‘ಲೈಬ್ರರಿ’ ಎಂದೇ ಕರೆಯುತ್ತಾರೆ. ರಮಾನಂದತೀರ್ಥರು  ಇವರಿಗೆ ಹೆಚ್ಚಿನ ಪ್ರೇರಣೆ ನೀಡಿದರು.

 

ರೊಕ್ಕಪ್ಪ ವೀರಬಸಪ್ಪ ಆರ್ಯರ, ಯರೇಹಂಚಿನಾಳ

ರೊಕ್ಕಪ್ಪನವರು, ಯಲಬುರ್ಗಾ ತಾಲೂಕಿನ ಸೆರಗಿನ ಹಳ್ಳಿ ಯರೇಹಂಚಿನಾಳದ ಪ್ರಭಾವಿತ ವ್ಯಕ್ತಿ. ಹೈದ್ರಾಬಾದ್ ಕರ್ನಾಟಕ ಪಠಣರ ಹಾವಳಿಯಿಂದ ತತ್ತರಿಸಿ ಹೋಗಿತ್ತು. ಅದೇ ರೀತಿ ಯರೇಹಂಚಿನಾಳ ಸಹ ಇವರ ಹಾವಳಿಗೆ ತುತ್ತಾಗಿತ್ತು. ದೇಶದಲ್ಲಿ ಸ್ವತಂತ್ರ ಚಳವಳಿ ಅದರ ಚಳಕು ಈ ತುದಿಯ ಹಳ್ಳಿಗೂ ಬಡಿದಿತ್ತು. ಇದರ ಮುಂಚೂಣಿಯಲ್ಲಿದ್ದು ತನ್ನ ಸಂಗಡಿಗರಾದ ಅಂದಪ್ಪ ಕಮತರ, ಲಕ್ಷ್ಮಪ್ಪ ಕೋಳೂರು, ಕೊಟ್ರಯ್ಯ ಮೊಗಂಡಮಠ, ಚನ್ನಬಸಪ್ಪ ಆರ್ಯರ, ಅಂದಪ್ಪ ಮಾಸ್ತರ ಚಿತವಾಡಗಿ, ದಾಸರಡ್ಡಿಹನ್ಸಿ ಮುಂತಾದವರೊಂದಿಗೆ ರೊಕ್ಕಪ್ಪನವರು ಚಲೇಜಾವ್ ಚಳವಳಿಯಲ್ಲಿ ದುಮುಕಿ, ರೈಲುಕಂಬಿ ಕೀಳುವುದು, ಪೋಸ್ಟ್ ಆಫೀಷ್ ಚಾವಡಿ ಸುಡುವುದು ಮುಂತಾದ ಬ್ರಿಟಿಷ ವಿರೋಧಿ ವಿಧ್ವಂಸಕ ಕಾರ್ಯದಲ್ಲಿ ತೊಡಗಿದರು. ಇದೇ ವೇಳೆಯಲ್ಲಿ ತಮ್ಮೂರಿನ ಜನರಿಗೆ ಖಾದಿಯ ಮಹತ್ವದ ಬಗ್ಗೆ ಹೇಳುವುದರೊಂದಿಗೆ, ಸ್ವಾವಲಂಬನೆಯ ಬಗ್ಗೆ ತಿಳಿಸಿ 50 ಚರಕ ತರಿಸಿ ಖಾದಿ ಬಟ್ಟೆ ನೇಯ್ದು ಧರಿಸಲು ಆರಂಭಿಸಿದರಲ್ಲದೆ ಸ್ವತಃ ರೊಕ್ಕಪ್ಪನವರು ಚಕದಿಂದ ಬಟ್ಟೆ ನೇಯ್ದು, ಖಾದಿ ಧರಿಸಲು ಪ್ರಾರಂಭಿಸಿದರು. ತಮ್ಮ ಜೀವನ ಪರ್ಯಂತ ಅವರು ಖಾದಿ ಪ್ರಿಯರಾಗಿ ಖಾದಿ ಧರಿಸುತ್ತಿದ್ದರು.

ಹೀಗೆ ಅವರು ಊರನ್ನು ಸಂಘಟಿಸಿ ನಿಜಾಮಷಾಹಿ ವಿರುದ್ಧ ಹೋರಾಟಕ್ಕೆ ಸನ್ನದ್ಧರಾದರು. ಹಂಚಿನಾಳದಲ್ಲಿ ಆಗಾಗ ಆಗುವ ಪಠಾಣರ ದಾಳಿಯಿಂದ ಊರಜನ ತತ್ತರಿಸಿ ಹೋಗಿದ್ದರು. ಗುಂಪುಗಳನ್ನು ಮಾಡಿ ರಾತ್ರಿ ಊರು ಕಾಯುತ್ತಿದ್ದರು. ಮಾಳಿಗೆಗಳ ಮೇಲೆ ಕಲ್ಲು ಸಂಗ್ರಹಿಸಿ ಪಠಾಣರು ಬಂದರೆ ಅವರನ್ನು ಕಲ್ಲುಗಳಿಂದ ಹೊಡೆದೋಡಿಸುತ್ತಿದ್ದರು. ಇವರ ಗುಂಪು ತಿಮ್ಮಾಪೂರ ಶಿಬಿರ ಪ್ರಾರಂಭಿಸಿ ಮುಂದೆ ಮುಂಡರಗಿಗೆ ಹೋಗಿ ಮುಂಡರಗಿ ಶಿಬಿರದಲ್ಲಿ ವಿಲೀನಗೊಂಡರು. ಮುಂಡರಗಿ ಶಿಬಿರದಲ್ಲಿ ಯಲಬುರ್ಗಾ ತಾಲೂಕಿನ ಅನೇಕ ಮಿತ್ರರ ಗುಂಪುಗಳಿದ್ದವು ಅವರೊಂದಿಗೆ ಇವರೂ ಸೇರಿ ಹೋರಾಟದಲ್ಲಿ ಪಾಲ್ಗೊಂಡರು. ಹೋರಾಟದ ಫಲವಾಗಿ 1948 ಸೆಪ್ಟಂಬರದಲ್ಲಿ ನಿಜಾಮನ ನೊಗ ಕಿತ್ತೊಗೆದಾಗ ಇವರು ಭಾರತದ ರಾಷ್ಟ್ರಧ್ವಜ ಊರಲ್ಲಿ ಹಾರಿಸಿ ಜಯ ಜಯಕಾರ ಮಾಡಿ ಯರೇಹಂಚಿನಾಳ ಸ್ವತಂತ್ರ ಊರಾದಂತೆ ಜಯಘೋಷ ಮಾಡಿದರು. ನಂತರ ಇವರು ವ್ಯಾಪಾರದಲ್ಲಿ ತೊಡಗಿ, ದೊಡ್ಡ ವ್ಯಾಪಾರಿಗಳಾಗಿ ಕುಕನೂರನಲ್ಲಿ ಬಂದು ನೆಲಸಿದರು. ಸಾರ್ವಜನಿಕ ಕೆಲಸದಲ್ಲಿ ತೊಡಗಿ, ಅನೇಕ ಸಂಘ, ಸಂಸ್ಥೆಗಳೊಂದಿಗೆ ಸಂಪರ್ಕವಿರಿಸಿಕೊಂಡು ತಮ್ಮ ಸಾರ್ಥಕ ಜೀವನ ಸಾಗಿಸಿದರು.

 

ಲಿಂಗಪ್ಪ ಲಕ್ಷ್ಮಪ್ಪ ಬಡಿಗೇರ, ಚಿಕ್ಕೇನಕೊಪ್ಪ

ತೊಂಬತ್ತು ದಾಟಿದ್ದರೂ, ಹುಡುಗರಷ್ಟು ಚಟುವಟಿಕೆ. ಖಾದಿಯನ್ನು ಧರಿಸಿ ಆಯುರ್ವೇದದಲ್ಲಿ ಆಸಕ್ತಿ ಹೊಂದಿ ತಮ್ಮ ಉತ್ತಮ ಆರೋಗ್ಯದಿಂದ ಜೀವನ ಸಾಗಿಸುತ್ತ ಗುಲಬರ್ಗಾದಲ್ಲಿ ತಮ್ಮ ಮಕ್ಕಳು-ಮೊಮ್ಮಕ್ಕಳೊಂದಿಗೆ ಇದ್ದಾರೆ.

ಚಿಕ್ಕೇನಕೊಪ್ಪ ಯಲಬುರ್ಗಾ ತಾಲೂಕಿನ ಹೈದ್ರಾಬಾದ್ ಕರ್ನಾಟಕದ ಕೊನೆಯಂಚಿನ ಒಂದು ಊರು. ಪೂಜ್ಯ ಶರಣರ ಪುಣ್ಯಸ್ಥಳ. ಅನೇಕ ಹೋರಾಟಗಾರರನ್ನು ಕೊಟ್ಟ ಊರು. ಡಾ. ದೇವೇಂದ್ರಕುಮಾರ ಹಕಾರಿ ಅವರು ಇಲ್ಲಿಯವರೇ. ನಿಜಾಮಶಾಹಿ ವಿರುದ್ಧ ಹೋರಾಟ ಮಾಡಿದವರು ಇನ್ನೂ ಅನೇಕರು ಜೀವಂತವಾಗಿದ್ದು ಆಗಿನ ಕಥೆಯನ್ನು ವಿವರಿಸುತ್ತಾರೆ. ಅವರೆಲ್ಲರಲ್ಲಿ ಹಿರಿಯರು ಲಿಂಗಪ್ಪನವರು. ಇವರು ತಮ್ಮ ಸಂಗಡಿಗರನ್ನು ಕೂಡಿಸಿ ನಿಜಾಮನ ದಬ್ಬಾಳಿಕೆಯ ವಿರುದ್ಧ ಬಂಡೆದ್ದು, ಸತ್ಯಾಗ್ರಹ ಹೂಡಿ ಭೂಗತ ಕಾರ್ಯದಲ್ಲಿ ತೊಡಗಿದ್ದರು. ಚಿಕ್ಕೇನಕೊಪ್ಪದ ಶರಣರು ಇವರನ್ನು ಕಾಕಾ ಎಂದು ಗೌರವಿಸುತ್ತಿದ್ದರು.

1934ರಲ್ಲಿ ಲಿಂಗಪ್ಪನವರು ಮುನಿರಾಬಾದ ರೈಲ್ವೆ ಸ್ಪೇಶನ್‌ನಲ್ಲಿ ಮಹಾತ್ಮಗಾಂಧೀಜಿ ಯವರ ಸಂಗಡ ಹರಿಜನೋದ್ಧಾರಕ್ಕಾಗಿ ಹಣ ಕೂಡಿಸುವುದರಲ್ಲಿ ಗದುಗಿನವರೆಗೆ ಅವರೊಂದಿಗೆ ಪ್ರಯಾಣ ಬೆಳೆಸಿದರು.  ಇವರ ನಿಜಾಮಶಾಹಿ ವಿರುದ್ಧದ ಚಟುವಟಿಕೆಗಳನ್ನು ನೋಡಿದ ನಿಜಾಮ ಸರ್ಕಾರ ಇವರ ಮೇಲೆ ವಾರಂಟ್ ಜಾರಿ ಮಾಡಿ, ಕಂಡಲ್ಲಿ ಗುಂಡಿಕ್ಕಲು ಹುಕುಂ ಮಾಡಿತು. ಇದರಿಂದ ಇವರು ಭೂಗತರಾಗಿ, ಧಾರವಾಡ ಜಿಲ್ಲೆಯ ತಿಮ್ಮಾಪುರ, ನರೇಗಲ್ಲ, ಗಜೇಂದ್ರಗಡ ಶಿಬಿರಗಳಲ್ಲಿ ಕಾರ್ಯ ಮಾಡಹತ್ತಿದರು. ಶಿಬಿರದಲ್ಲಿದ್ದ 250ಕ್ಕೂ ಮಿಕ್ಕ ಹೋರಾಟಗಾರರಿಗೆ ಚಿಕ್ಕೇನಕೊಪ್ಪದ ಜನ ಆಹಾರ ಪೂರೈಸುತ್ತಿದ್ದರಂತೆ. ಈ ವೇಳೆಯಲ್ಲಿ ಈ ಜನರಿಗೆ ಪಠಾಣರು ತೊಂದರೆ ಕೊಡುತ್ತಿದ್ದರು. ಹೆಣ್ಣು ಮಕ್ಕಳಿಗಂತೂ ಬಹಳ ಕಿರುಕುಳ. ಆದ್ದರಿಂದ ಅವರು ತಮ್ಮ ಮಾನರಕ್ಷಣೆಗಾಗಿ ಯಾವಾಗಲೂ ತಮ್ಮ ಉಡಿಯಲ್ಲಿ ಕಲ್ಲು, ಕಾರದಪುಡಿ ಚೀಟು ಕಟ್ಟಿಕೊಂಡಿರುತ್ತಿದ್ದರು. ಲಿಂಗಪ್ಪನವರಿಗೆ ತಾವು ದೇಶಕ್ಕಾಗಿ ತಮ್ಮ ಭಾಗದ ಜನರಿಗಾಗಿ ಹೋರಾಡಿದ್ದು ಹೆಮ್ಮೆಯ ವಿಷಯ. ಶಿವಮೂರ್ತಿ ಸ್ವಾಮಿಗಳು ಶಿರೂರು ವೀರಭದ್ರಪ್ಪನವರ ಮತ್ತು ದೇವೇಂದ್ರಕುಮಾರ ಅವರ ಸಂಗಡ ಕೆಲಸ ಮಾಡಿದ್ದು ಅವರಿಗೆ ಹೆಮ್ಮೆ ಇತ್ತು. ಪೋಸ್ಟ್ ಆಫೀಸ್, ಪೋಲೀಸ್ ಸ್ಟೇಶನ್ ಲೂಟಿ ಮಾಡಿದ ನೆನಪುಗಳು ಇವರ ಮನಸ್ಸಿನಲ್ಲಿ ಇನ್ನೂ ಹಸಿಯಾಗಿ ಇದ್ದವೆಂದು ಅವರೇ ಬರೆದುಕೊಂಡಿರುವ ಪತ್ರದಲ್ಲಿ ತಿಳಿಯಬಹುದು.

 

ಅಜ್ಜಯ್ಯಸ್ವಾಮಿ ಕಂಬಾಳಿಮಠ, ಯಲಬುರ್ಗಾ

ಅಜ್ಜಯ್ಯಸ್ವಾಮಿ ಕಂಬಾಳಿಮಠರು ಯಲಬುರ್ಗಾ ತಾಲೂಕಿನ ಸುಪರಿಚಿತ ವ್ಯಕ್ತಿ. ಸಾಮಾಜಿಕ ಕಾರ್ಯಕರ್ತರು. ಪತ್ರಿಕಾ ವರದಿಗಾರರಾಗಿ ಕೆಲಸ ಮಾಡಿದರು. ಇತ್ತೀಚೆಗೆ ಶಿಕ್ಷಣ ಸಂಸ್ಥೆ ಕಟ್ಟುವ ಆಶೆಯಿಂದ ನಿರಾಶರಾದರು. ಆದರೂ ಶಾಲಾ ಮಕ್ಕಳಿಗೆ ಫ್ರೀ ಬೋರ್ಡಿಂಗ್ ತೆರದು ಪ್ರಸಾದ ಕೊಡುತ್ತಿದ್ದರು. ತಮ್ಮ ಮಠದಲ್ಲಿ ಅನೇಕ ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟಿದ್ದರು. ಇವರೇ ಬರೆದುಕೊಂಡಂತೆ 1947-48ರ ವಿಮೋಚನೆಯಲ್ಲಿ ಭಾಗವಹಿಸಿದಾಗ ಇವರಿಗೆ ಕೇವಲ 16 ವರ್ಷ. ಮುಂಡರಗಿ ಶಿಬಿರದಲ್ಲಿ ಇವರನ್ನು ಗುಪ್ತ ವರದಿಗಳನ್ನು ಕಳಿಸುವ ಕೆಲಸಕ್ಕೆ ನೇಮಿಸಿದ್ದರಂತೆ.

 

ಶಂಕರಪ್ಪ ಯರಾಶಿ

ಪ್ರಗತಿಪರ ರೈತರನ್ನು ಪಡೆದ ಕೀರ್ತಿ ಸಂಪಾದಿಸಿದ ಬನ್ನಿಕೊಪ್ಪದಲ್ಲಿ ಜನಿಸಿದ ಲಿಂ.ಶಂಕರಪ್ಪ ಯರಾಶಿ ಬಿಳಿಜೋಳ, ಗೋಧಿ ಹೆಚ್ಚೆಚ್ಚು ಬೆಳೆದು ‘ಹಿರಿದಾದ ರಾಶಿ’ ಮಾಡಿದ್ದರಿಂದ ‘ಯರಾಶಿ’ ಎಂಬ ಹೆಸರಿಗೆ ಸಾರ್ಥಕತೆ ತಂದುಕೊಟ್ಟವರು. ಗೌರವ, ಗಾಂಭೀರ್ಯ, ನೇರ ನುಡಿಗಳ ಸಮರ್ಥ ಈ ಹಳ್ಳಿಯ ರೈತ. ಬಿಳಿಯ ಧೋತರ, ಅಂಗಿ, ಗಾಂಧಿ ಟೊಪ್ಪಿಗೆ ಬಿಟ್ಟರೆ ಬೇರೆ ಆಧುನಿಕ ಪೋಷಾಕು ಧರಿಸಲಿಲ್ಲ. ಇವರು ಅಪ್ಪಟ ಗಾಂಧೀ ತತ್ವದ ಅನುಯಾಯಿಯಾಗಿದ್ದರು.

ಇವರು ಮುಂಡರಗಿ ಶಿಬಿರದ ಸೈನಿಕ ಕಮಾಂಡರ್ ಆಗಿದ್ದರು. ಕಪ್ಪತ್ತಗುಡ್ಡದಲ್ಲಿ ಗೆರಿಲ್ಲಾ ಮಾದರಿಯ ತರಬೇತಿಯನ್ನು ಕ್ಯಾಪ್ಟನ್ ಜಗತ್‌ಸಿಂಗರಿಂದ ಪಡೆದಿದ್ದರು. ಕುಕನೂರು ಪೊಲೀಸ್ ಠಾಣೆಯ ದಾಳಿಯಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಅಳವಂಡಿ ಭಾಗದ ಹೋರಾಟಗಾರರಲ್ಲಿ ಕೆಲವು ಪ್ರಮುಖರು ರಜಾಕಾರರ ಹೆಸರಿನ ದುರ್ಲಾಭ ಪಡೆದು ಲೂಟಿಗೆ ತೊಡಗಿದಾಗ ನಿಷ್ಠುರವಾಗಿ ಇವರು ಪ್ರಭುರಾಜ ಪಾಟೀಲರೊಂದಿಗೆ ವಿರೋಧಿಸಿ ನಿಯಂತ್ರಣ ಮಾಡಿದ್ದೂ ಪ್ರಶಂಸನೀಯ.

 

ಪರಾರ್ಮಶನ ಗ್ರಂಥಗಳು

1. ರಾಮಣ್ಣ ಹವಳೆ, 1998. ಸ್ವಾತಂತ್ರ್ಯ ಹೋರಾಟದಲ್ಲಿ ಗಜೇಂದ್ರಗಡ ಶಿಬಿರ, ಗಜೇಂದ್ರಗ

2. ರಾಮಣ್ಣ ಹವಳೆ, ಸ್ವಾತಂತ್ರ್ಯ ಸೇನಾನಿ ಪುಂಡಲೀಕಪ್ಪ ಜ್ಞಾನಮೋಠೆ

3. ದೇಸಾಯಿ ವಿ.ಎಚ್., ವಂದೇ ಮಾತರಂದಿಂದ ಜನಗಣಮನವರೆಗೆ