[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ 2007ರಲ್ಲಿ ಡಾ.ಹಿ.ಚಿ.ಬೋರಲಿಂಗಯ್ಯ  ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘‘ಅಭಿವೃದ್ದಿ ಪಥ’ ಎನ್ನುವ ಕೃತಿಯಿಂದ ಡಾ.ಎಸ್.ಚಂದ್ರಶೇಖರ ಅವರ ಈ  ಲೇಖನವನ್ನು ಆಯ್ದುಕೊಳ್ಳಲಾಗಿದೆ. ಇದನ್ನು ಬಳಸಲು ಒಪ್ಪಿಗೆ ನೀಡಿದ ಸಂಪಾದಕರಿಗೆ ಹಾಗೂ ಲೇಖಕರಿಗೆ ಕೃತಜ್ಞತೆಗಳು -ಸಂ.]

ಸ್ವಾತಂತ್ರ್ಯ ಗಳಿಸಿಕೊಂಡ ಭಾರತ ಅರವತ್ತರ ಹೊಸ್ತಿಲಿನಲ್ಲಿದೆ. ಕರ್ನಾಟಕ ರಾಜ್ಯವು ಭಾರತದ ಒಂದು ಭಾಗವಾಗಿ ಸ್ವಾತಂತ್ರ್ಯಕ್ಕೆ ಸಂಪೂರ್ಣವಾಗಿ ಭಾಗಿಯಾದರೂ ರಾಜ್ಯದ ಚರಿತ್ರೆಯ ಮೊದಲ ದಶಕ ವಿಚಿತ್ರ ಗೊಂದಲಗಳನ್ನು, ಅನಿಶ್ಚಿತತೆಗಳನ್ನು ಎದುರಿಸಬೇಕಾಯಿತು. ಬ್ರಿಟಿಷ್ ಸಂಕೋಲೆಗಳಿಂದ ಬಿಡಿಸಿಕೊಂಡ ಕರ್ನಾಟಕದ ಜನತೆ ವಿವಿಧ ಸಂಸ್ಥಾನ, ಪ್ರದೇಶಗಳಲ್ಲಿ ಹರಿದು ಹಂಚಿ ಹೋಗಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಈ ಪ್ರದೇಶಗಳ ಆಡಳಿತ ರಾಜಕೀಯ ಏಕೀಕರಣಕ್ಕೆ ಮತ್ತು ಜನತಾಂತ್ರಿಕ ಆಡಳಿತ ಸ್ಥಾಪನೆಗೆ ಪ್ರಯತ್ನಗಳು ನಡೆದಿದ್ದರೂ ಅವು ಸಾಕಾರಗೊಳ್ಳಲು 1956ರವರೆಗೆ ಹೋರಾಟಗಳನ್ನು ನಡೆಸುತ್ತ ಕಾಯಬೇಕಾಯಿತು. ಈ ದೊಡ್ಡ ದೇಶೀ ಸಂಸ್ಥಾನಗಳಾಗಿದ್ದ ಮೈಸೂರು ಮತ್ತು ಹೈದರಾಬಾದ್‌ಗಳ ಜನತೆ ಅಲ್ಲಿಯ ಮಹಾರಾಜರು-ನಿಜಾಮರ ಸರ್ವಾಧಿಕಾರದಿಂದ ಬಿಡಿಸಿಕೊಳ್ಳಲು ಭಿನ್ನ ರೀತಿಯ ಚಳವಳಿ ಹೋರಾಟಗಳನ್ನು ಹಮ್ಮಿಕೊಳ್ಳಬೇಕಾಯಿತು. ಮೈಸೂರು ಮಹಾರಾಜರು ಜನತಾಂತ್ರಿಕ ಸರ್ಕಾರದ ರಚನೆಯ ಬಗ್ಗೆ ಮೌನ ವಹಿಸಿದರೆ, ಹೈದರಾಬಾದ್ ನಿಜಾಮರು ಭಾರತ ಒಕ್ಕೂಟವನ್ನೇ ಸೇರಲು ನಿರಾಕರಿಸಿದರು. ಆದರೆ ಮೈಸೂರು ಜನತೆ ಮೈಸೂರು ಚಲೋ ಅರಮನೆ ಸತ್ಯಾಗ್ರಹಗಳನ್ನು ಸಂಘಟಿಸಿ ವ್ಯಾಪಕ ಪ್ರತಿಭಟನೆ ನಡೆಸಿದ ಪರಿಣಾಮ ಅರಸರು ತಲೆಬಾಗಬೇಕಾಯಿತು. ಹೈದರಾಬಾದ್‌ನಲ್ಲಂತೂ ರಜಾಕಾರ ಹಾವಳಿ, ಹಿಂಸೆ ವ್ಯಾಪಕವಾಗಿ ನಡೆದು, ಅಲ್ಲಿಯ ಜನತೆಯ ಧೃಡ ನಿರ್ಧಾರ, ಕೇಂದ್ರ ಸರ್ಕಾರದ ದಿಟ್ಟ ನಿಲುವು ಮತ್ತು ಅಂತಿಮವಾಗಿ ಸೈನ್ಯದ ಕಾರ್ಯಾಚರಣೆಯಿಂದಾಗಿ ನಿಜಾಮ ಸರ್ಕಾರ ಮಣಿದು ಹೈದರಾಬಾದ್ ಒಕ್ಕೂಟಕ್ಕೆ ಸೇರಿ ಮುಕ್ತಿಗೊಂಡಿತು. ಈ ಸಂಸ್ಥಾನಗಳಲ್ಲಿ ಹಲವು ಸಾವು-ನೋವುಗಳಾದವು. ಸ್ವಾತಂತ್ರ್ಯ, ಜನತಂತ್ರಕ್ಕಾಗಿ ಕನ್ನಡಿಗರು ತೆತ್ತ ಬೆಲೆ ಇದು.

ಪರಕೀಯ ಪ್ರಭುತ್ವ ಮತ್ತು ಸರ್ವಾಧಿಕಾರದಿಂದ ಸ್ವಾತಂತ್ರ್ಯವೇನೋ ದಕ್ಕಿತು. ಮೈಸೂರಿನಲ್ಲಿ ಕೆ.ಸಿ.ರೆಡ್ಡಿಯವರು ಮುಖ್ಯಮಂತ್ರಿಗಳಾಗಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಯಿತು. ಹೈದರಾಬಾದ್‌ನಲ್ಲೂ ಜನತಂತ್ರ ಅಸ್ತಿತ್ವಕ್ಕೆ ಬಂತು. ಆದರೆ ಕನ್ನಡಿಗರ ಕರ್ನಾಟಕ ಏಕೀಕರಣದ ಕನಸು ಹಾಗೆಯೇ ಉಳಿಯಿತು. ಅದನ್ನು ನನಸು ಮಾಡಿಕೊಳ್ಳಲು ಮತ್ತೆ ಒಂಬತ್ತು ವರ್ಷಗಳ ಕಾಲ ಹೋರಾಟ ನಡೆಯಿತು.

ಕರ್ನಾಟಕ, ಏಕೀಕರಣದ ಸುವರ್ಣ ಮಹೋತ್ಸವ ಆಚರಿಸುವ ಈ ಸಂದರ್ಭದಲ್ಲಿ ಏಕೀಕರಣ ಚಳವಳಿಯ ಕುರಿತ ಸಂಕ್ಷಿಪ್ತ ಹಿನ್ನೋಟ ಅಗತ್ಯ. 19ನೇ ಶತಮಾನದ ಕೊನೆಯ ದಶಕಗಳಲ್ಲಿ ಏಕೀಕರಣದ ಅಸ್ತಿಬಾರ ಹಾಕಿದ್ದರೂ ಅದು ತೀವ್ರಗೊಂಡದ್ದು 1947ರ ತರುವಾಯ. ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಏಕೀಕರಣ ಸಮಿತಿ ಸಂಘಗಳು, ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು, ಕನ್ನಡ ಚಳವಳಿಯ ವಿವಿಧ ಸಂಘ‑ಸಂಸ್ಥೆಗಳು ಈ ಚಳವಳಿಯನ್ನು ಮುನ್ನಡೆಸಿದವು. ಆಗತಾನೆ ಸ್ವಾತಂತ್ರ್ಯ ಗಳಿಸಿದ್ದ ಭಾರತ ಸಮಸ್ಯೆಗಳ ಆಗರವಾಗಿದ್ದು, ಭಾಷಾವಾರು ಪ್ರಾಂತಗಳ ರಚನೆಯ ಬಗ್ಗೆ ಕೇಂದ್ರ ಸರ್ಕಾರ ಉತ್ಸುಕವಾಗಿರಲಿಲ್ಲ. ಆದರೆ ಕನ್ನಡಿಗರಿಗೆ, ವಿಶೇಷವಾಗಿ ಉತ್ತರ ಕರ್ನಾಟಕದವರಿಗೆ ಈ ಸಮಸ್ಯೆಯನ್ನು ಆದ್ಯತೆಯ ಮೇಲೆ ಪರಿಹರಿಸಬೇಕಾಗಿತ್ತು. ಆದ್ದರಿಂದ ಸ್ಥಳೀಯ ಕಾಂಗ್ರೆಸ್ಸಿಗರ ಮೇಲೆ ಒತ್ತಡ ಹೇರುತ್ತಲೇ ಕೇಂದ್ರ ಸರ್ಕಾರದ ಗಮನ ಸೆಳೆಯಲು ಅವಕಾಶಕ್ಕಾಗಿ ಕಾದರು.

ಹುಬ್ಬಳ್ಳಿಯ ಉಪ ಚುನಾವಣೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಏಕೀಕರಣ ಸಮಿತಿಯ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಿ, ಪ್ರಚಂಡ ಬಹುಮತದಿಂದ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ, ಕೇಂದ್ರ ಸರ್ಕಾರ ಮತ್ತು ಅದರ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕರಿಗೆ ಬಿಸಿಮುಟ್ಟಿಸಿದರು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು ಎಲ್ಲೆಡೆ ಸತ್ಯಾಗ್ರಹಗಳನ್ನು ನಡೆಸಿತು. ಸಾವಿರಾರು ಜನ ಪ್ರತಿಬಂಧಕಾಜ್ಞೆಗಳನ್ನು ಉಲ್ಲಂಘಿಸಿ ಜೈಲು ಸೇರಿದರು. ಬಳ್ಳಾರಿ ಜಿಲ್ಲೆಯ ಪ್ರಶ್ನೆಯಂತೂ ಕಗ್ಗಂಟಾಗಿತ್ತು. 1920ರಿಂದ 1956 ನವೆಂಬರ್ ತನಕವೂ ವಿವಿಧ ಮಜಲುಗಳನ್ನು ಹಾದು ಕೊನೆಗೂ ಮೂರು ತಾಲ್ಲೂಕುಗಳನ್ನು ಆಂಧ್ರಕ್ಕೆ ಬಿಟ್ಟು ಬಳ್ಳಾರಿ ಕರ್ನಾಟಕದಲ್ಲಿ ಸೇರಿತು. ಹಲವಾರು ಆಯೋಗಗಳು ರಾಜ್ಯಗಳ ಪುನರ್ ವಿಂಗಡನೆಯ ಬಗ್ಗೆ ವರದಿ ಕೊಟ್ಟವು. ಬ್ರಿಟಿಷರು ನೇಮಿಸಿದ ಸಮಿತಿಗಳನ್ನು ಹೊರತುಪಡಿಸಿಯೂ, ಕರ್ನಾಟಕ ಏಕೀಕರಣದ ಬಗ್ಗೆ, 1921ರಲ್ಲಿ ರಚಿಸಿದ ಎನ್.ಸಿ. ಕೇಳ್ಕರ್ ಸಮಿತಿಯಿಂದ ಮೊದಲ್ಗೊಂಡು ಧರ್ ಸಮಿತಿ, ನೆಹರೂ ಪಟೇಲ್ ಪಟ್ಟಾಭಿ ಸಮಿತಿ, ವಾಂಛೂ ಸಮಿತಿ, ಎಲ್.ಎಸ್. ಸಮಿತಿ, ಫಜಲ್ ಅಲಿ ಸಮಿತಿ ಮತ್ತು ನೆಹರೂ‑ಪಂತ್‑ ಮೌಲಾನಾ ಆಜಾದ್ ಸಮಿತಿ ಹೀಗೆ, ವಿವಿಧ ಹಂತಗಳಲ್ಲಿ ವರದಿ ಸಲ್ಲಿಸಿದವು. ಒಟ್ಟು ಸ್ವಾತಂತ್ರ್ಯೋತ್ತರ ಕರ್ನಾಟಕ ಅನುಭವಿಸಿದ, ಕಂಡ ರೋಚಕ ಪ್ರಕ್ರಿಯೆ ಅದು. 1956ರ ನವೆಂಬರ್ 1ರಂದು ‘ವಿಶಾಲ ಮೈಸೂರು’ ಅಸ್ತಿತ್ವಕ್ಕೆ ಬರುವುದರೊಂದಿಗೆ ಕರ್ನಾಟಕದ ಒಂದು ಮುಖ್ಯ ಘಟ್ಟ ಮುಗಿದಿದೆ. ರಾಜ್ಯಕ್ಕೆ ‘ಕರ್ನಾಟಕ’ವೆಂದು ಅಧಿಕೃತವಾಗಿ ನಾಮಕರಣವಾದುದು 1973ರಲ್ಲಿ.

ಜನತಂತ್ರ ವ್ಯವಸ್ಥೆ ಸ್ಥಾಪನೆಗೊಂಡು ರಾಜ್ಯದ ಏಕೀಕರಣವಾಯಿತು. ಸ್ವಾತಂತ್ರ್ಯೋತ್ತರ ಕರ್ನಾಟಕ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಜನರ ಆಶೋತ್ತರಗಳು ಅಪಾರವಾಗಿದ್ದವು. ಬಡತನ, ನಿರುದ್ಯೋಗ, ಅನಕ್ಷರತೆಯಿಂದ ಜನತೆ ಬಳಲುತ್ತಿತ್ತು. ವಿಲೀನಗೊಂಡ ಪ್ರದೇಶಗಳು ಅದರಲ್ಲೂ ಹೈದರಾಬಾದ್ ಕರ್ನಾಟಕ ತೀರಾ ಹಿಂದುಳಿದಿತ್ತು. ಪ್ರಾದೇಶಿಕ ಅಸಮತೆಗಳಿದ್ದವು. ಭಾವೈಕ್ಯತೆ ಎನ್ನುವುದು ಬಹಳ ಮುಖ್ಯವಾದುದು. ನೂರಾರು ವರ್ಷಗಳ ಕಾಲ ವಿವಿಧ ಪ್ರಾಂತಗಳಲ್ಲಿ, ಆಡಳಿತಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ಭಾಷಿಕರು ಮತ್ತು ಭಾಷಾ ಅಲ್ಪಸಂಖ್ಯಾತ ಸಮುದಾಯಗಳು ಒಂದೇ ಆಡಳಿತದಡಿ ಬಂದು ಸೇರಿದವು. ಈ ಸೇರುವಿಕೆ ರಾಜಕೀಯ ಆಡಳಿತಾತ್ಮಕವಾಗಿತ್ತು. ಅದು ಸಾಂಸ್ಕೃತಿಕ ಭಾವನಾತ್ಮಕ ಮತ್ತು ಪರಸ್ಪರ ಹಿತಾಸಕ್ತಿಗಳ ಸಂಘರ್ಷಗಳಿಲ್ಲದ ಐಕ್ಯತೆಯಾಗಿ ವಿಕಾಸ ವಾಗಬೇಕಾಗಿತ್ತು. ಏಕೀಕರಣ ಅರ್ಥಪೂರ್ಣವಾಗಬೇಕಾದರೆ ಪರಸ್ಪರ ನಂಬಿಕೆ, ಅನ್ಯೋನ್ಯ ಮತ್ತು ನಾವೆಲ್ಲ ಒಂದು ಎನ್ನುವ ಭಾವನೆ ಅತ್ಯಗತ್ಯವಾಗಿತ್ತು.

ಏಕೀಕೃತ ಕರ್ನಾಟಕದಲ್ಲಿ ಈ ಭಾವೈಕ್ಯತೆಯನ್ನು ಸಾಧಿಸಲು ರಾಜ್ಯದ ನಾಯಕತ್ವ ಬೌದ್ದಿಕ, ಸಾಂಸ್ಕೃತಿಕ, ಆರ್ಥಿಕ ಮತ್ತು ಸಾಮಾಜಿಕ ನೆಲೆಗಟ್ಟುಗಳಲ್ಲಿ ಕಾರ್ಯತತ್ಪರವಾಗ ಬೇಕಾಯಿತು. ಕರ್ನಾಟಕ ಸಂಪದ್ಭರಿತ ರಾಜ್ಯ, ಅವುಗಳ ಬಳಕೆ ಮತ್ತು ಆ ಫಲ ಜನತೆಗೆ ಮುಟ್ಟುವಂತೆ ಕ್ರಮಕೈಗೊಳ್ಳುವ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ ಇವುಗಳಿಗೆ ಯೋಜನಾಬದ್ಧ ಆದ್ಯತೆ ನೀಡಿ ಸರ್ಕಾರ ಕಾರ್ಯ ಪ್ರವೃತ್ತವಾಯಿತು. 1952ರಿಂದ ಪ್ರಾರಂಭವಾದ ಪಂಚವಾರ್ಷಿಕ ಯೋಜನೆಗಳು ಮೇಲ್ಕಾಣಿಸಿದ ನಾಲ್ಕು ಕ್ಷೇತ್ರಗಳ ಅಭಿವೃದ್ದಿಗೆಂದು ಸಹಜವಾಗಿಯೇ ಆದ್ಯತೆ ನೀಡಿದವು. ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸರ್ಕಾರವೂ ಬದ್ಧವಾಗಿತ್ತು. ಯಾವುದೇ ದೇಶದ, ಪ್ರದೇಶದ ಅಭಿವೃದ್ದಿಗೆ ರಾಜಕೀಯ ಇಚ್ಛಾಶಕ್ತಿ ಮತ್ತು ಸ್ಥಿರತೆ ಅತ್ಯಗತ್ಯ. ಸುದೈವವೆಂದರೆ ಕರ್ನಾಟಕದಲ್ಲಿ 1947ರಿಂದ 1980ರವರೆಗೂ ರಾಜಕೀಯ ಸ್ಥಿರತೆ ಇತ್ತು.

ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ ಏಕೀಕರಣ ಪೂರ್ವ ಮೈಸೂರಿನಲ್ಲಿ ಸ್ಥಿರತೆ ಒದಗಿಸುವುದರ ಜೊತೆಗೆ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು. ಕೆಂಗಲ್ಲರಂತೂ, ಏಕೀಕರಣ ಚಳವಳಿಯಿಂದುಂಟಾದ ಭಿನ್ನಮತವನ್ನು ಎದುರಿಸಿಯೂ ಹಲವಾರು ಯೋಜನೆಗಳನ್ನು ಹಾಕಿಕೊಂಡರು. ಸಾಂಸ್ಕೃತಿಕ ಸಾಹಿತ್ಯಕ ಕ್ಷೇತ್ರದಲ್ಲೂ ಅವರದು ಒಳ್ಳೆಯ ಸಾಧನೆಯೇ. ರಾಜ್ಯದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಯನ್ನು ಹೊಸ ದಾಗಿ ಸ್ಥಾಪಿಸಿದ ಕೀರ್ತಿ ಕೆಂಗಲ್ಲರಿಗೆ ಸೇರುತ್ತದೆ. ಏಕೀಕರಣೋತ್ತರ ವಿಶಾಲ ಕರ್ನಾಟಕ ದಲ್ಲಿ ಕ್ರಮವಾಗಿ ಎಸ್.ನಿಜಲಿಂಗಪ್ಪ, ಕಂಠಿ, ಜತ್ತಿ ಮತ್ತು ವೀರೇಂದ್ರ ಪಾಟೀಲರು 1956ರಿಂದ 1971ರವರೆಗೆ ಮುಖ್ಯಮಂತ್ರಿಗಳಾದರು. ಈ ಅವಧಿಯಲ್ಲಿ ರಾಜ್ಯದ ನೈಸರ್ಗಿಕ ಸಂಪನ್ಮೂಲಗಳನ್ನು, ಜನತೆಯ ಜೀವನಮಟ್ಟ ಸುಧಾರಿಸುವ ಉದ್ದೇಶಕ್ಕಾಗಿ ಸಮರ್ಪಕವಾಗಿ ಬಳಸಿಕೊಳ್ಳಲಾಯಿತು. ಕೃಷಿ, ಕೈಗಾರಿಕೆ ಅದಕ್ಕೆ ಪೂರಕವಾಗಿ ವಿದ್ಯುತ್, ನೀರಾವರಿ ಯೋಜನೆಗಳನ್ನು ಹಾಕಿಕೊಳ್ಳಲಾಯಿತು. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ದಿಗಾಗಿ ಕ್ರಮ ಕೈಗೊಳ್ಳಲಾಯಿತು. ರಾಜ್ಯದೆಲ್ಲೆಡೆ ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯವಿದ್ದ ಮಾನವ ಸಂಪನ್ಮೂಲ ಒದಗಿಸಲು ಕೃಷಿ ತರಬೇತಿ ಕೇಂದ್ರಗಳು, ವಿಶ್ವವಿದ್ಯಾನಿಲಯಗಳು, ತಾಂತ್ರಿಕ ಶಿಕ್ಷಣ ಕೇಂದ್ರಗಳು ಪ್ರಾರಂಭವಾದವು. ನೀರಾವರಿ ಮತ್ತು ವಿದ್ಯುತ್ ಪೂರೈಕೆಗಾಗಿ, ಹೇಮಾತಿ, ಶರಾವತಿ, ಹಾರಂಗಿ, ಮಲಪ್ರಭಾ, ಘಟಪ್ರಭಾ, ತುಂಗಭದ್ರಾ, ಕೃಷ್ಣಾ ಯೋಜನೆಗಳನ್ನು ಪ್ರಾರಂಭಿಸಲಾಯಿತು ಅಥವಾ ಅವುಗಳನ್ನು ವಿಸ್ತರಿಸಲಾಯಿತು. ಸಾರ್ವಜನಿಕ ಕ್ಷೇತ್ರದಲ್ಲಿ ವಿಮಾನ ಕಾರ್ಖಾನೆ, ಬಿ.ಇ.ಎಲ್., ಐ.ಟಿ.ಐ., ಎಚ್.ಎಂ.ಟಿ., ಬಿ.ಎಚ್.ಇ.ಎಲ್. ಮುಂತಾದ ಬೃಹತ್ ಕೈಗಾರಿಕೆಗಳು ಸ್ಥಾಪಿತವಾದವು. ವಿದ್ಯುತ್ ಕೊರತೆ ನೀಗಲು ರಾಯಚೂರಿನಲ್ಲಿ ಥರ್ಮಲ್ ಯೋಜನೆ ಪ್ರಾರಂಭವಾದರೆ, ಅನಂತರ ಉತ್ತರ ಕನ್ನಡ ದಲ್ಲಿ ಕೈಗಾ ಅಣುಶಕ್ತಿ ಕೇಂದ್ರ ಸಾಕಾರಗೊಂಡಿತು. ಅಭಿವೃದ್ದಿ ಕಾಮಗಾರಿಗಳು ಯಶಸ್ವಿಯಾಗಿ ನಡೆದವು. ಈ ಅವಧಿಯ ಕರ್ನಾಟಕದ ಆರ್ಥಿಕ ಪ್ರಗತಿ ಗಮನಾರ್ಹವಾಗಿದೆ. ಅದು ಒಟ್ಟಾರೆ ಭಾರತದ ಸರಾಸರಿ ಅಭಿವೃದ್ದಿಗಿಂತ ಹೆಚ್ಚಿನ ಪ್ರಮಾಣದ್ದಾಗಿತ್ತು. ಅಂದರೆ ಭಾರತದ ವಾರ್ಷಿಕ ಆರ್ಥಿಕ ಪ್ರಗತಿ ಶೇ. 3.8 ಇದ್ದರೆ ಕರ್ನಾಟಕದ ಪ್ರಗತಿ ಶೇ. 4ಕ್ಕಿಂತಲೂ ಹೆಚ್ಚಿತ್ತು. 1970ರ ನಂತರ ರಾಷ್ಟ್ರದ ಆರ್ಥಿಕ ಪ್ರಗತಿ ಹೆಚ್ಚುತ್ತಾ ಹೋದರೆ ಕರ್ನಾಟಕ ಕುಂಟುತ್ತ ಸಾಗಿತು. ಏಕೆಂದರೆ ರಾಷ್ಟ್ರದ ಸರಾಸರಿ ಪ್ರಗತಿಗಿಂತ ಕರ್ನಾಟಕದ ಪ್ರಗತಿ ಕಡಿಮೆ ಪ್ರಮಾಣದಲ್ಲಿದೆ.

ಕೃಷಿ‑ಕೃಷಿಕ ಕರ್ನಾಟಕ ಅರ್ಥವ್ಯವಸ್ಥೆಯ ಬೆನ್ನೆಲುಬು. ಎಪ್ಪತ್ತರವರೆಗೆ ಮಂದಗತಿ ಯಲ್ಲಾದರೂ ಮುನ್ನಡೆದಿದ್ದ ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಗಳು 1974ರಿಂದೀಚೆಗೆ ಸ್ಥಗಿತಗೊಂಡಂತಿದೆ. ಕೈಗಾರಿಕಾ ಕ್ಷೇತ್ರದಲ್ಲಿಯೂ ಈ ಮಾತು 1995ರೊವರೆಗಾದರೂ ನಿಜ. ಈ ಕ್ಷೇತ್ರದಲ್ಲೂ ಉತ್ಪಾದನಾ ಪ್ರಮಾಣ ಕ್ಷೀಣಿಸುತ್ತ ಸಾಗಿ ರಾಷ್ಟ್ರದ ಸರಾಸರಿಗಿಂತ ಕಡಿಮೆಯಾಯಿತು. 1994‑95ರಲ್ಲಿ ರಾಷ್ಟ್ರದ ಸರಾಸರಿ ಕೈಗಾರಿಕಾ ಪ್ರಗತಿ ಶೇಕಡಾ 7ರಿಂದ 8 ಇದ್ದರೆ ರಾಜ್ಯದ ಪ್ರಗತಿ 4ಕ್ಕೆ ಇಳಿದಿತ್ತು. ಇದಕ್ಕೆ ಪ್ರಮುಖ ಕಾರಣ ವಿದ್ಯುತ್ ಮತ್ತು ಇಂಧನ ಉತ್ಪಾದನೆಯಲ್ಲಿ ರಾಜ್ಯ ಪ್ರಗತಿ ಸಾಧಿಸಲು ಸಾಧ್ಯ ವಾಗದೇ ಹೋದದ್ದು. ಇಡೀ ರಾಷ್ಟ್ರದಲ್ಲಿ ಈ ಅವಧಿಯಲ್ಲಿ ವಿದ್ಯುತ್ ಅಭಾವ ಶೇ. 7.3 ಇದ್ದರೆ ಕರ್ನಾಟಕದಲ್ಲಿ ಅದು 21.9ರಷ್ಟಿತ್ತು. ಇದಕ್ಕೆ ಮುಖ್ಯ ಕಾರಣ ರಾಜ್ಯದ ಆದಾಯದಲ್ಲಿ ವಿವಿಧ ವಲಯಗಳಿಗೆ ಹರಿಸಿದ ಪಾಲು ವಿವಿಧ ಯೋಜನೆಗಳ ಅನುಷ್ಠಾನದ ಫಲ ಯಾರಿಗೆ ಅತ್ಯಗತ್ಯವಾಗಿ ದೊರಕಬೇಕಾಗಿದ್ದಿತೋ ಅವರಿಗೆ ಸೇರಲಿಲ್ಲ. ಜನಸಾಮಾನ್ಯರ ಬದುಕಿನಲ್ಲಿ ಗಮನಾರ್ಹವಾದ ಪ್ರಗತಿಯೂ ಕಾಣಲಿಲ್ಲ. ಜನಸಾಮಾನ್ಯ ರೆಂದರೆ ಸಹಜವಾಗಿಯೇ ಗ್ರಾಮಾಂತರ ಪ್ರದೇಶದಲ್ಲಿ ಕೃಷಿ ಮತ್ತಿತರ ಕೈಕಸುಬುಗಳಲ್ಲಿ ನಿರತರಾದವರು. ಕೃಷಿಯೇತರ ಕ್ಷೇತ್ರಗಳಿಗೆ ಹೋಲಿಸಿದರೆ, ಕೃಷಿ ಮತ್ತು ಕೃಷಿ ಸಂಬಂಧಿ ಕ್ಷೇತ್ರಗಳನ್ನು ಅವಲಂಬಿಸಿ ಉಪಜೀವನ ನಡೆಸುತ್ತಿದ್ದವರ ಆದಾಯದಲ್ಲಿ ಏರಿಕೆಯಾಗಲಿಲ್ಲ. ಅಂದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವೆ ಆರ್ಥಿಕ ಅಸಮಾನತೆ ಹೆಚ್ಚುತ್ತ ಹೋಯಿತು.

ಒಂದೆಡೆ ರಾಷ್ಟ್ರದ ರಾಜಕೀಯ ವಿದ್ಯಮಾನಗಳು ಎಲ್ಲ ಪ್ರಾಂತಗಳ ಮೇಲೂ ಪ್ರಭಾವ ಬೀರಿದರೆ, ರಾಜ್ಯದ ವಿದ್ಯಮಾನಗಳೂ ಅಪಾರವಾದ ರಾಜಕೀಯ ಸಾಮಾಜಿಕ ಏರಿಳಿತಗಳಿಗೆ ಕಾರಣವಾದವು. ಯೋಜನೆಗಳ, ಅಭಿವೃದ್ದಿಯ ಫಲ ಸಾಮಾನ್ಯ ಜನತೆಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿ ಶ್ರೀಮಂತರಿಗೆ ಮತ್ತು ನಗರ ವಾಸಿಗಳಿಗೆ ಸೇರಿತು. ಆದ್ದರಿಂದ ಜನರಲ್ಲಿ ಅಸಮಾಧಾನ ಹೆಚ್ಚುತ್ತ ಹೋಯಿತು. ರಾಜಕೀಯ ಅಧಿಕಾರ ಮೇಲ್ಜಾತಿಗಳ ಕೈಯಲ್ಲಿ ಅದರಲ್ಲೂ ವಿಶೇಷವಾಗಿ ಲಿಂಗಾಯಿತರಲ್ಲಿ ಕೇಂದ್ರೀಕೃತವಾಯಿತೆಂಬ ಭಾವನೆಯಿತ್ತು. 1956ರಿಂದ 1971ರವರೆಗೆ ಮುಖ್ಯಮಂತ್ರಿಗಳಾಗಿದ್ದವರೆಲ್ಲ ಲಿಂಗಾಯಿತ ಕೋಮಿಗೆ ಸೇರಿದ್ದು ಆ ಬಗ್ಗೆ ಅಸಮಾಧಾನ ಉಂಟಾಯಿತು. ಸಮಾಜವಾದಿ,ೊಕಮ್ಯುನಿಸ್ಟ್, ಸ್ವತಂತ್ರ ಪಕ್ಷಗಳು, ಜನಸಂಘ ಮುಂತಾದ ವಿರೋಧ ಪಕ್ಷಗಳಿದ್ದರೂ ಅವು ಪರ್ಯಾಯ ಗಳಾಗುವ ಶಕ್ತಿ ಪಡೆದಿರಲಿಲ್ಲ. ಶಾಂತವೇರಿ ಗೋಪಾಲಗೌಡರಂತಹ ಧೀಮಂತರು ಸಮಾಜ ವಾದಿ ಪಕ್ಷದಲ್ಲಿದ್ದರೂ ನಾಯಕರಲ್ಲಿದ್ದ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ಪಕ್ಷ ಬಸವಳಿಯಿತು.

1969ರಲ್ಲಿ ಘಟಿಸಿದ ಕಾಂಗ್ರೆಸ್ ಒಡಕು ಬಹುಸಂಖ್ಯಾತ ಹಿಂದುಳಿದ, ದಲಿತ ಜಾತಿಗಳವರು ಒಂದು ರೀತಿಯಲ್ಲಿ ರಾಜಕೀಯ ಧ್ರುವೀಕರಣಗೊಳ್ಳಲು ಪ್ರೇರೇಪಿಸಿತು. ಕರ್ನಾಟಕದ ವೀರೇಂದ್ರ ಪಾಟೀಲರ ಕಾಂಗ್ರೆಸ್ ಸರ್ಕಾರ, ನಿಜಲಿಂಗಪ್ಪನವರ ನೇತೃತ್ವದ ಸಂಸ್ಥಾ ಕಾಂಗ್ರೆಸ್ಸಿನೊಂದಿಗೆ ಗುರ್ತಿಸಿಕೊಂಡಿತು. ಹಿಂದುಳಿದ ಕೋಮಿಗೆ ಸೇರಿದ ಬಹುತೇಕ ಕಾಂಗ್ರೆಸ್ಸಿಗರು ಮತ್ತು ವಿರೋಧ ಪಕ್ಷಗಳಲ್ಲಿದ್ದ ಹಲವರು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ಸಿನ ಒಡಕು, ಇಂದಿರಾ ಅವರ ‘ಗರೀಬೀ ಹಟಾವೋ’ ಘೋಷಣೆ ಮಹತ್ವಾಕಾಂಕ್ಷಿಗಳನ್ನೂ, ಯುವಕರು, ಮಹಿಳೆಯರು ಮತ್ತು ಕಡೆಗಣಿಸಲ್ಪಟ್ಟ ವರೆಂದುಕೊಂಡಿದ್ದ ಹಿಂದುಳಿದ ದಲಿತ ನಾಯಕರನ್ನೂ ಇಂದಿರಾ ಕಾಂಗ್ರೆಸ್ಸಿಗೆ ಆಕರ್ಷಿಸಿತು. 1971ರ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಇಂದಿರಾ ಕಾಂಗ್ರೆಸ್ ಗೆದ್ದಿತು. ವೀರೇಂದ್ರರ ಸರ್ಕಾರ ಬಿಕ್ಕಟ್ಟಿಗೆ ಒಳಗಾಯಿತು. ತಮ್ಮ ರಾಜಕೀಯ ಭವಿಷ್ಯದ ಸುರಕ್ಷತೆಯನ್ನರಸಿದ ಸಂಸ್ಥಾ ಕಾಂಗ್ರೆಸ್‌ನ ಬಹುತೇಕ ಶಾಸಕರು ಇಂದಿರಾೊಕಾಂಗ್ರೆಸ್‌ಗೆ ಪಕ್ಷಾಂತರ ಮಾಡಿದ ಪರಿಣಾಮ ವೀರೇಂದ್ರರ ಸರ್ಕಾರ ಪತನವಾಯಿತು.

1972ರಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಮತ್ತೆ ಇಂದಿರಾ ಕಾಂಗ್ರೆಸ್ ಜಯ ಗಳಿಸಿತು. ರಾಜ್ಯದಲ್ಲಿ ಆ ಪಕ್ಷದ ನೇತೃತ್ವ ವಹಿಸಿದ್ದ ದೇವರಾಜ ಅರಸ್ ಮುಖ್ಯಮಂತ್ರಿಯಾದರು. ಅರಸರು 1972ರಿಂದ 1980ರವರೆಗೆ(1977‑78ರ ಸ್ವಲ್ಪ ಅವಧಿಯನ್ನುಳಿದು) ಮುಖ್ಯಮಂತ್ರಿಯಾಗಿದ್ದರು. ಅರಸರ ಕಾಲದಲ್ಲಿ ಕರ್ನಾಟಕದ ರಾಜಕೀಯ ಮಹತ್ತರ ತಿರುವುಗಳನ್ನು ಪಡೆದುಕೊಂಡಿತು. ಅಲ್ಲಿಯವರೆಗೆ ಅಧಿಕಾರ ನಡೆಸಿದ್ದ ಲಿಂಗಾಯತ ರಾಜಕೀಯ ಮುಖಂಡರನ್ನು ನೇಪಥ್ಯಕ್ಕೆ ಸರಿಸಿದ ಅರಸರು ಇತರರನ್ನು ಆಯಕಟ್ಟಿನ ಖಾತೆಗಳಿಗೆ ಮಂತ್ರಿಗಳನ್ನಾಗಿಸಿದರು.

ಹಿಂದುಳಿದ ವರ್ಗ ಜಾತಿಗಳ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಆ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕಾದ್ದು ಪ್ರಭುತ್ವದ ಸಾಂವಿಧಾನಿಕ ಕರ್ತವ್ಯ. ಮೈಸೂರು ಸಂಸ್ಥಾನದಲ್ಲಿ ಆ ಬಗ್ಗೆ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಯತ್ನಗಳು ನಡೆದಿದ್ದವು. ಸ್ವಾತಂತ್ರ್ಯಾನಂತರ ಅವು ಮುಂದುವರಿಯಬೇಕಾಗಿದ್ದು, ಸರ್ಕಾರ ಬಹುತೇಕ ತಾತ್ಕಾಲಿಕ ಕ್ರಮ ತೆಗೆದುಕೊಳ್ಳುತ್ತಿತ್ತೆನ್ನುವ ಸಂಶಯ ಹಲವರಲ್ಲಿತ್ತು. ಇನ್ನೂ ಕೆಲವರಲ್ಲಿ ಸಮಸ್ಯೆಯ ಆಳ ಅರಿಯುವ ಬಗ್ಗೆ ಮೇಲ್ವರ್ಗಗಳಿಂದಲೇ ನಿಯಂತ್ರಿಸಲ್ಪಡುತ್ತಿದ್ದ ಸರ್ಕಾರಕ್ಕೆ ಆಸಕ್ತಿಯಿರಲಿಲ್ಲವೆನ್ನುವ ಅಭಿಪ್ರಾಯವೂ ಇದೆ. ಜೊತೆಗೆ ಅಧಿಕಾರ ಹಂಚಿಕೆಯಲ್ಲಿಯೂ ಮೇಲ್ವರ್ಗದವರ ಪರವಾದ ತಾರತಮ್ಯ ಭಾವನೆಯಿತ್ತೆಂಬ ಆಪಾದನೆಯಲ್ಲೂ ಸತ್ಯಾಂಶವಿದೆ. ಹಾಗೆಯೇ ಕರ್ನಾಟಕದಲ್ಲಿ ಬಡವರ, ಭೂಹೀನರ ಸ್ಥಿತಿ ಎಳ್ಳಷ್ಟೂ ಉತ್ತಮವಾಗಿರಲಿಲ್ಲ. ಅದಕ್ಕೆ ಶ್ರೀಮಂತರೇ ರಾಜ್ಯ ರಾಜಕಾರಣವನ್ನು ನಿಯಂತ್ರಿಸುತ್ತಿದ್ದು, ಆ ವರ್ಗಗಳಿಗೆ ಅನುಕೂಲವಾಗುವ ಕಾರ್ಯಕ್ರಮಗಳನ್ನು ಸರಿಯಾಗಿ ಅನುಷ್ಠಾನ ಮಾಡದೆ ಉಪೇಕ್ಷಿಸುತ್ತಿದ್ದರು. ಭೂ ಸುಧಾರಣಾ ಕಾಯ್ದೆಯಾಗಲಿ, ಜೀತ ಪದ್ಧತಿಯಾಗಲಿ, ಕನಿಷ್ಠ ವೇತನವಾಗಲಿ, ಖಾಸಗಿ ಬಂಡವಾಳಿಗರ ಲೇವಾದೇವಿ ವ್ಯವಹಾರ ವನ್ನಾಗಲಿ ನಿಯಂತ್ರಿಸಿ, ಕಾರ್ಯಗತಗೊಳಿಸುವ ರಾಜಕೀಯ ಇಚ್ಛಾಶಕ್ತಿಯ ಕೊರತೆ ಅಲ್ಲಿದ್ದಂತೆ ಕಾಣುತ್ತದೆ. ಇದಕ್ಕೆ ಹಿಂದುಳಿದ ವರ್ಗಗಳಿಗೆ ಕಲ್ಪಿಸಿದ ಸವಲತ್ತುಗಳನ್ನು ನಿಭಾಯಿಸಿದ ಕ್ರಮ ಬಲವಾದ ಉದಾಹರಣೆಯಾಗಿದೆ. 1977ರವರೆಗೆ ವಿವಿಧ ಹಿಂದುಳಿದವರಿಗೆ ಶೇ. 50 ಮೀಸಲಾತಿ ಇದ್ದರೂ ಕೇವಲ 28ರಷ್ಟು ಮಾತ್ರ ಆ ವರ್ಗದ ವರಿಗೆ ದಕ್ಕಿತ್ತು. ಇದಕ್ಕೆ ಸರ್ಕಾರದ ನಿರಾಸಕ್ತಿಯಲ್ಲದೆ ಬೇರೆ ಕಾರಣಗಳು ಇರಲು ಸಾಧ್ಯವೇ?

ದೇವರಾಜ ಅರಸು ತಮ್ಮ ಆಡಳಿತಾವಧಿಯಲ್ಲಿ ಈ ಸಮಸ್ಯೆಗಳ ಬಗ್ಗೆ ಗಮನ ಹರಿಸಿದರು. ಹಿಂದುಳಿದ ವರ್ಗಗಳನ್ನು ಕಾನೂನು ಚೌಕಟ್ಟಿನಲ್ಲಿ, ವೈಜ್ಞಾನಿಕವಾಗಿ ಗುರ್ತಿಸುವ ಕೆಲಸಕ್ಕಾಗಿ ಲಕ್ಷ್ಮಣ ಹಾವನೂರ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿದರು. 1977ರ ಫೆಬ್ರವರಿಯಲ್ಲಿ ಹಾವನೂರ ಆಯೋಗದ ವರದಿಯಾಧಾರಿತ ಸರ್ಕಾರಿ ಆಜ್ಞೆಯನ್ನು ಹೊರಡಿಸಲಾಯಿತು. ಆ ಸಂದರ್ಭದಲ್ಲಿ ಅವರು ಎದುರಿಸಿದ ರಾಜಕೀಯ ಸಮಸ್ಯೆಗಳು ಹಲವಾರು. ವರದಿಯ ಅನುಷ್ಠಾನಕ್ಕೆ ಗಂಭೀರ ರೂಪದ ವಿರೋಧವಿತ್ತು. ಅದನ್ನು ಶಮನಗೊಳಿಸಲೆನ್ನುವಂತೆ ಹಾವನೂರರ ಶಿಫಾರಸ್ಸು ಹೊರತಾಗಿ ಎರಡು ಬದಲಾವಣೆಗಳನ್ನು ಮಾಡಲಾಯಿತು. ಮುಸ್ಲಿಂ ಸಮುದಾಯವನ್ನು ಹಿಂದುಳಿದ ಸಮುದಾಯಕ್ಕೆ ಸೇರಿಸಿ, ವರದಿಯ ಪ್ರಕಾರ ಯಾವ ಮೀಸಲಾತಿಗೂ ಅರ್ಹತೆಯಿಲ್ಲದ ಬ್ರಾಹ್ಮಣ, ವೈಶ್ಯ, ಲಿಂಗಾಯತ ಮುಂತಾದ ಸಮುದಾಯಗಳಿಗೆ ವಾರ್ಷಿಕ ವರಮಾನದ ಆಧಾರದ ಮೇಲೆ ‘ವಿಶೇಷ ವರ್ಗ’ವೆಂದು ಆಜ್ಞೆಯಲ್ಲಿ ಮೀಸಲಾತಿ ಕಲ್ಪಿಸಲಾಯಿತು.

ಅರಸರ ಕಾಲದಲ್ಲಿ ಜಾರಿಗೆ ತಂದ ಇನ್ನೊಂದು ಮಹತ್ವದ ಕಾಯ್ದೆ ಎಂದರೆ ಭೂಸುಧಾರಣಾ ಕಾಯ್ದೆ. ಈ ಕಾಯ್ದೆ ಹಿಂದಿನ ಎಲ್ಲ ಕಾಯ್ದೆಗಳಿಗಿಂತ ಪರಿಣಾಮಕಾರಿ ಯಾಗಿತ್ತು. ಗೇಣಿದಾರರಿಗೆ ಅನುಕೂಲಕರವಾಗಿದ್ದು ಕೆಲವು ಪ್ರದೇಶಗಳ ಭೂಮಾಲೀಕರಿಗೆ ಸ್ವಲ್ಪ ಬಿಸಿ ಮುಟ್ಟಿಸಬಲ್ಲ ಕಾಯ್ದೆ ಇದಾಗಿತ್ತು. ರಾಜ್ಯಾದ್ಯಂತ ತಾಲ್ಲೂಕಿಗೊಂದರಂತೆ ನ್ಯಾಯ ಮಂಡಳಿಗಳೂ ರಚಿತವಾಗಿ, ಈ ಮಂಡಳಿಯ ಶೇಕಡ 60ಕ್ಕೂ ಹೆಚ್ಚು ತೀರ್ಮಾನಗಳು ಗೇಣಿದಾರರ ಪರವಾಗಿದ್ದವು. ಆದರೂ ಈ ಸುಧಾರಣೆ ಭೂಹೀನರಿಗೆ ಲಾಭದಾಯಕವಾಗಲಿಲ್ಲ. ಮೊದಲ ಹಂತವಾಗಿ ಅವರು ಈ ವಿಷಯವಾಗಿ ಉದಾರವಾದಿ ಕ್ರಮ ಜರುಗಿಸಿ ಗ್ರಾಮೀಣ ಹಿಂದುಳಿದ ವರ್ಗಗಳಲ್ಲಿ ಸಾಮಾಜಿಕ ರಾಜಕೀಯ ಜಾಗೃತಿಯುಂಟುಮಾಡಲು ಹಾಕಿಕೊಂಡ ಕಾರ್ಯಕ್ರಮಗಳಲ್ಲಿ ಭೂಸುಧಾರಣೆಯೂ ಒಂದಿರಬಹುದು. ಏಕೆಂದರೆ ಭೂಹೀನ ದಲಿತ ವರ್ಗಗಳಿಗೆ ಈ ಸುಧಾರಣೆಗಳಿಂದ ಪ್ರಯೋಜನವಾದದ್ದು ಅತ್ಯಲ್ಪ. ರಾಜ್ಯದಲ್ಲಿ 1971ರ ಜನಗಣತಿಯ ಪ್ರಕಾರ ಸುಮಾರು 30ಲಕ್ಷದಷ್ಟು ಭೂಹೀನ ಕುಟುಂಬಗಳಿದ್ದು ಇವರಲ್ಲಿ ಕೇವಲ ಶೇ.0.3ರಷ್ಟು ಭೂಹೀನರಿಗೆ ಮಾತ್ರ ಭೂಮಿ ದೊರೆಯಿತೆಂದರೆ ಈ ಕಾಯ್ದೆ ಎಷ್ಟರ ಮಟ್ಟಿಗೆ ಉಪಯುಕ್ತವಾಯಿತು ಎನ್ನುವುದನ್ನು ಊಹಿಸಬಹುದು. ಕರ್ನಾಟಕದಲ್ಲಿ 1947ರಿಂದ ರಾಜಕೀಯ ಆಧಿಪತ್ಯ ಪಡೆದಿದ್ದು ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ ಜಾತಿಗಳ ಹಿಡಿತವನ್ನು ಸಡಿಲಗೊಳಿಸಲು ಈ ಕ್ರಮ ನೆರವಾಯಿತು. ಆದರೆ ಈ ಜಾತಿಗಳ ವಿರುದ್ಧವೇ ಈ ಕಾಯ್ದೆ ಎಂದರೆ ಸರಿಯಾಗಲಾರದು. ಏಕೆಂದರೆ ಒಡೆದು ಆಳುವ ನೀತಿಯಲ್ಲಿ ಅರಸರದು ಎತ್ತಿದ ಕೈ. ವಿರೋಧಿಗಳ ಬಲಾಬಲಗಳನ್ನರಿತು ರಾಜಕೀಯಪಟ್ಟು ಹಾಕಿದ ರಾಜಕೀಯಪಟು ಅರಸು. ಬಲಾಢ್ಯ ಕೋಮುಗಳ ಮುಖಂಡರನ್ನು ಒಮ್ಮೆಲೆ ಮೈಮೇಲೆ ಎಳೆದುಕೊಳ್ಳಲು ಅರಸು ತಯಾರಿರಲಿಲ್ಲ. ಲಿಂಗಾಯತರನ್ನು ಮೊದಲು ಒಡೆಯಲು ತೀರ್ಮಾನಿಸಿ ಅವರು ಸಫಲರಾದರು. ನಗರವಾಸಿ, ಶ್ರೀಮಂತ ವ್ಯಾಪಾರಿ ಲಿಂಗಾಯತರನ್ನು ವ್ಯವಸಾಯ ಗ್ರಾಮೀಣರಿಂದ ಮೊದಲು ಬೇರ್ಪಡಿಸಿದ ಅರಸರು ಆರ್ಥಿಕವಾಗಿ ಹಿಂದುಳಿದ ಲಿಂಗಾಯತ, ಬ್ರಾಹ್ಮಣ ಜನರನ್ನು ಆ ಜಾತಿಗಳ ಅನುಕೂಲಸ್ಥರಿಂದ ಬೇರ್ಪಡಿಸಲು ಆ ಜಾತಿಗಳಿಗೆ ವಿಶೇಷ ವರ್ಗವೊಂದನ್ನು ಸೃಷ್ಟಿಸಿ ಮೀಸಲಾತಿ ಅನುಕೂಲ ಕಲ್ಪಿಸಿದರು. ಭೂಸುಧಾರಣೆಗಳಂತೂ ಮುಖ್ಯವಾಗಿ ಲಿಂಗಾಯಿತ, ಒಕ್ಕಲಿಗ ಮತ್ತು ಸ್ವಲ್ಪಮಟ್ಟಿಗೆ ಬ್ರಾಹ್ಮಣ ಸಮುದಾಯದವರಿಗೆ ಸಾಕಷ್ಟು ಕಿರಿಕಿರಿಯನ್ನುಂಟುಮಾಡಿದವು. ಆದರೆ ಕಾಗೋಡು ಸತ್ಯಾಗ್ರಹದ(1951‑51) ಕಾಲದಿಂದಲೂ ಭೂಸುಧಾರಣೆಗಾಗಿ ಒತ್ತಡವಿತ್ತು. ಅರಸರ ಭೂಸುಧಾರಣಾಕಾಯ್ದೆ ಎಡಪಂಥೀಯ ಚಳವಳಿಗಳನ್ನು ಬಲಹೀನ ಗೊಳಿಸುವಲ್ಲಿ ತಾತ್ಕಾಲಿಕವಾಗಿಯಾದರೂ ಯಶಸ್ವಿಯಾಯಿತು.

ಇವುಗಳ ಜೊತೆಗೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗಾಗಿ ವೃದ್ಧಾಪ್ಯ ವೇತನ, ದಲಿತ ಬಡಕುಟುಂಬಗಳಿಗೆ ಜನತಾಮನೆ, ಋಣವಿಮುಕ್ತಿ ಕಾಯಿದೆ, ಜೀತವಿಮುಕ್ತಿ, ಉಚಿತ ನಿವೇಶನ, ಪದವೀಧರರಿಗೆ ಸ್ಟೈಫಂಡ್ ಇದೆಲ್ಲವೂ ಸಮಾಜಕಲ್ಯಾಣ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳೇ. ಆದರೆ ಇವುಗಳ ಹಿಂದಿನ ಉದ್ದೇಶ ರಾಜಕೀಯ ಬಲಸಂವರ್ಧನೆ. ನಗರವಾಸಿಗಳ ಹಾಗೂ ಬುದ್ದಿಜೀವಿಗಳ ಬೆಂಬಲವನ್ನು ಗದ್ದುಗೆಯಿಂದ ಇಳಿಯುವ ತನಕ ಗಳಿಸಿಕೊಳ್ಳುವ ಪ್ರಯತ್ನ ಮಾಡುವುದಿರಲಿ, ಬೇಡವೇ ಬೇಡವೆಂದು ಖಡಾಖಂಡಿತವಾಗಿ ತಿರಸ್ಕರಿಸಿದ್ದೂ ಉಂಟು.

ರಾಜ್ಯದಲ್ಲಿ ರಾಜಕಾರಣಿಗಳು ತಮ್ಮ ಬೆಂಬಲ ಅನುಕೂಲಗಳಿಗಾಗಿ ಉಪಯೋಗಿಸಿ ಕೊಳ್ಳುತ್ತಿದ್ದ ಅಸಂಘಟಿತ ಆದರೆ ಪ್ರಬಲಶಕ್ತಿ ವಿದ್ಯಾರ್ಥಿ ಸಮೂಹ. ಸ್ವಾತಂತ್ರ್ಯ ಪೂರ್ವದಲ್ಲಿ ಬಹುತೇಕ ಆ ಶಕ್ತಿ ರಾಷ್ಟ್ರದ ಸ್ವಾತಂತ್ರಕ್ಕಾಗಿ ತ್ಯಾಗ‑ಬಲಿದಾನ‑ಹೋರಾಟಗಳ ರೂಪದಲ್ಲಿ ಬಳಕೆಯಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ ವಿದ್ಯಾರ್ಥಿಗಳು ರಾಜಕೀಯದಲ್ಲಿ ಪಾಲ್ಗೊಳ್ಳಬೇಕೆ ಅಥವಾ ಬೇಡವೇ? ಎನ್ನುವ ಬಗ್ಗೆ ಗೊಂದಲ ಸೃಷ್ಟಿ ಯಾಯಿತು. ಸುಮಾರು 1967ರವರೆಗೂ ವಿದ್ಯಾರ್ಥಿ ಸಮೂಹ ಬಹುತೇಕ ಅಧಿಕಾರ ರಾಜಕಾರಣದಿಂದ ದೂರವಿತ್ತು. ಆದರೆ ಕಾಂಗ್ರೆಸ್ ಒಡಕಿನ ನಂತರ ಆ ಶಕ್ತಿ ರಾಜಕಾರಣ ದಲ್ಲಿ ಯಥೇಚ್ಛವಾಗಿ ಬಳಕೆಯಾಗತೊಡಗಿತು. ಕರ್ನಾಟಕದ ಮಟ್ಟಿಗಂತೂ ಈ ಮಾತು ಸತ್ಯ. ಅರಸರು ಈ ಸ್ಫೋಟಕ ಶಕ್ತಿಯನ್ನು ತಮ್ಮ ರಾಜಕೀಯಕ್ಕೆ ಯಶಸ್ವಿಯಾಗಿ ಬಳಸಿಕೊಂಡರು. ಕೆಲವು ವೇಳೆ ಸದುಪಯೋಗಪಡಿಸಿಕೊಂಡರೆ ಹಲವಾರು ಬಾರಿ ಆ ಬಳಕೆ ಪ್ರಶ್ನಾರ್ಹವಾದುದಾಗಿತ್ತು. ವೀರೇಂದ್ರ ಪಾಟೀಲರ ವಿರುದ್ಧ ನಡೆದ ‘ಎಕ್ಸ್‌ಪೋ 70’ ವಿದ್ಯಾರ್ಥಿ‑ಯುವಜನರ ಪ್ರತಿಭಟನೆಯ ಸಮಯದಲ್ಲಿ ಅರಸು ವಿದ್ಯಾರ್ಥಿ ನಾಯಕರನ್ನು ತಮ್ಮೆಡೆಗೆ ಸೆಳೆದುಕೊಂಡರು. ಈ ನಾಯಕರಿಗೆ ಎಲ್ಲ ವಿಧವಾದ ಬೆಂಬಲ ನೀಡಿದ್ದಲ್ಲದೆ, ಅಲ್ಪಸಂಖ್ಯಾತ ಕೋಮುಗಳಿಗೆ ಸೇರಿದ ವಿದ್ಯಾರ್ಥಿ ಯುವನಾಯಕತ್ವವನ್ನು ಬೆಳೆಸಿದರು. ಅರಸರ ಅಧಿಕಾರಾವಧಿಯಲ್ಲಿ ನಮಗೆ ಎದ್ದು ಕಾಣುವುದೆಂದರೆ ಸರ್ಕಾರದ ವಿರುದ್ಧ ಯಾವುದೇ ಚಳವಳಿ ನಡೆಯದೇ ಹೋದದ್ದು ಮತ್ತು ಅರಸರು ಅಂದು ಪೋಷಿಸಿದ ಹಲವಾರು ಜನ ಅವರ ನಂತರ ಅಧಿಕಾರದಲ್ಲಿ ಪ್ರತಿಷ್ಠಾಪನೆಯಾದರು. ಇವರಲ್ಲಿ ಮುತ್ಸದ್ದಿತನ, ಬೌದ್ದಿಕ ತಯಾರಿ ನಿರೀಕ್ಷಿಸಿದ ಮಟ್ಟದಲ್ಲಿಲ್ಲವೆನ್ನುವುದು ಬೇರೆ ಮಾತು. ಪರ್ಯಾಯ ರಾಜಕೀಯ ಶಕ್ತಿಯನ್ನು ಸಂಘಟಿಸುವ ಅರಸರ ಪ್ರಯತ್ನ ಸ್ವಾಗತಾರ್ಹವಾದದ್ದೇ. ಆದರೆ ತಮ್ಮ ಅಧಿಕಾರ ಹಿತಾಸಕ್ತಿಗಳಿಗೆ ಧಕ್ಕೆಯಾದಾಗ ತಮ್ಮ ಬೆಂಬಲಕ್ಕೆ ನಿಂತಿದ್ದವರನ್ನು ಅವರು ರಕ್ಷಿಸಲು ಹಿಂದೇಟು ಹಾಕಿದರು. ಅಷ್ಟೇ ಅಲ್ಲ ಕೆಲವು ಬಾರಿ ಅಂಥ ಬೆಂಬಲಿಗರ ವಿರುದ್ಧವೇ ತಮ್ಮ ಶಕ್ತಿ‑ಯುಕ್ತಿಗಳನ್ನು ಪ್ರಯೋಗಿಸಿದರು. ಇದಕ್ಕೆ ಉದಾಹರಣೆಯಾಗಿ ರೈತ ಚಳವಳಿ, ಬೂಸಾ ಪ್ರಕರಣಗಳಲ್ಲಿ ಅವರು ತೆಗೆದು ಕೊಂಡ ನಿಲುವುಗಳನ್ನು ಹೆಸರಿಸಬಹುದು. ಇನ್ನು ಕೆಲವು ವೇಳೆ, ಅವರು ಅನುಕೂಲದಿಂದ ರಾಜಕಾರಣ ಮಾಡಿದ್ದೂ ಉಂಟು. ಇದಕ್ಕೆ ಪೂರಕವಾಗಿ ಕಾರ್ಮಿಕಮಂತ್ರಿ, ಸಜ್ಜನ ಕೇ. ಶ್ರೀರಾಮುಲು ಅವರ ರಾಜೀನಾಮೆಯಲ್ಲಿ ಅರಸರ ಪಾತ್ರವನ್ನು ನೆನಪಿಸಿಕೊಳ್ಳಬಹುದು.

ಬಹುತೇಕ ರಾಜಕಾರಣಗಳು ಇದಕ್ಕೆ ಹೊರತಲ್ಲವಾದರೂ ಅರಸರು ಈ ಗುಂಪಿನಲ್ಲಿ ಎದ್ದು ಕಾಣುವ ವ್ಯಕ್ತಿ. ತಾವು ಹಿಂದುಳಿದವರಿಗಾಗಿ ಮೀಸಲಾತಿ ಜಾರಿಯಾಗಿದ್ದರೂ, ಬಿಹಾರದಲ್ಲಿ ಇವರಿಗೆ ಆಗ ವಿರೋಧಿಯಾಗಿದ್ದ ಕರ್ಪೂರಿ ಠಾಕೂರರು ಮೀಸಲಾತಿ ಘೋಷಿಸಿ ವಿರೋಧವನ್ನು ಎದುರಿಸುತ್ತಿದ್ದಾಗ, ಕರ್ಪೂರಿಯನ್ನು ಟೀಕಿಸಿದರು. ಭಾರತದ ಅಧಿಕಾರ ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯವಾದರೂ ಅರಸರ ವಿಷಯದಲ್ಲಿ ಒಂದು ವೈಶಿಷ್ಟ್ಯವಿದೆ. ಒಬ್ಬನಾಯಕನ ಗುಣ, ವಿಶೇಷತೆಗಳನ್ನು ವಿಮರ್ಶಿಸುವಲ್ಲಿ, ಆತನ ಅಧಿಕಾರಾವಧಿ ಮತ್ತು ಅದರಿಂದ ಹೊರಗಿದ್ದ ಸ್ಥಿತಿಯಲ್ಲಿ ತೆಗೆದುಕೊಂಡ ನಿಲುವು ಮತ್ತು ಮಾಡಿದ ಕೆಲಸಗಳ ಒಂದು ತುಲನಾತ್ಮಕ ಅಧ್ಯಯನ ಉಪಯುಕ್ತವೆನ್ನಿಸುತ್ತದೆ. ಈ ತುಲನೆಯೂ ಒಂದು ಪೂರ್ಣಚಿತ್ರಣ ಕೊಡುವುದರಲ್ಲಿ ಸೋಲುತ್ತದೆ. ಏಕೆಂದರೆ, ಅಧಿಕಾರ ಮತ್ತು ಅದರ ಆಚೆಯಿದ್ದ ಸ್ಥಿತಿಗಳ ಮನುಷ್ಯ ಸ್ವಭಾವಕ್ಕೆ ತಮ್ಮದೇ ಮಿತಿಗಳಿರುತ್ತವೆ. ಅರಸರು ಅಧಿಕಾರದಲ್ಲಿದ್ದಾಗ ಸಾಮಾಜಿಕ ನ್ಯಾಯದ ಪರವಾಗಿ ಎಂಥ ಕಾಳಜಿಯಿತ್ತೋ, ಅನಂತರವೂ ಅದೇ ಪ್ರಮಾಣದಲ್ಲಿ ಅದು ಮುಂದುವರಿಯಿತು. ಆದರೆ ಅವರ ಪಕ್ಷ ರಾಜಕೀಯ ಮತ್ತು ಜನತಾಂತ್ರಿಕ ನಿಲುವುಗಳಲ್ಲಿ ಅಪಾರ ವ್ಯತ್ಯಾಸವನ್ನು ಕಾಣುತ್ತೇವೆ. ವಿರೋಧ ಪಕ್ಷಗಳನ್ನು ಕೇವಲವಾಗಿ ಪರಿಗಣಿಸಿ, ಅವನ್ನು ಹತ್ತಿಕ್ಕಲು ಕ್ರಿಯೆ ಕೈಗೊಂಡ ಅರಸರು, ತಾವೇ ವಿರೋಧ ಪಕ್ಷದಲ್ಲಿ ಕೂರುವಂತಾದಾ ಬಹಳ ವಿಲಕ್ಷಣ ಪರಿಸ್ಥಿತಿಯನ್ನೆದುರಿಸಿದರು.

ತಾವು ದೂರವಿಟ್ಟವರನ್ನು ತಬ್ಬಿಕೊಳ್ಳಲು ಹೋದಾಗ ಅರಸರ ಈ ನಿಲುವು ಎಷ್ಟೇ ಪ್ರಾಮಾಣಿಕವಾಗಿದ್ದರೂ ಅವರನ್ನು ಹಿಂದೆ ಎದುರಿಸಿದ ವಿರೋಧಿಗಳು ಅವರನ್ನು ಕೊನೆಯವರೆಗೂ ಒಪ್ಪಿಕೊಳ್ಳಲಿಲ್ಲ. ಒಟ್ಟಿನಲ್ಲಿ ಈ ಸ್ಥಿತಿ ಅರಸರ ಮತ್ತು ಕರ್ನಾಟಕದ ವಿರೋಧ ಪಕ್ಷಗಳ ದುರಂತವೂ ಹೌದು.

ಅರಸರ ಬಗ್ಗೆ ಇಷ್ಟೆಲ್ಲ ಚರ್ಚಿಸಲು ಕಾರಣವಿದೆ. ರಾಜ್ಯದ ರಾಜಕೀಯದಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿದ ವ್ಯಕ್ತಿ ಅರಸು. ಅಧಿಕಾರ ರಾಜಕಾರಣದಲ್ಲಿ ಸುಲಭವಾಗಿ ಅಳಿಸ ಲಾಗದ ಹೊಸ ಭಾಷ್ಯ ಬರೆದ ಅರಸು ಸ್ವಾತಂತ್ರ್ಯಾನಂತರದ ಎರಡೂವರೆ ದಶಕಗಳ ಕಾಲ ಅಧಿಕಾರ ಪ್ರಾಬಲ್ಯ ಪಡೆದಿದ್ದ ಶಕ್ತಿಗಳನ್ನು ಗಮನೀಯವಾಗಿ ನಿಷ್ಕ್ರಿಯಗೊಳಿಸಿದ್ದೇ ಅಲ್ಲದೆ, ಸಮಾಜದ ಹಿಂದುಳಿದವರಲ್ಲಿ ಹೊಸ ಜಾಗೃತಿ ಮೂಡಿಸಲು, ಪರ್ಯಾಯ ನಾಯಕತ್ವ ಬೆಳೆಸಲು ತಮ್ಮದೇ ರೀತಿಯಲ್ಲಿ ಶ್ರಮಿಸಿದ ಕೀರ್ತಿ ಅವರಿಗೆ ಸಲ್ಲಬೇಕು.

ಆದರೆ ಅರಸು ತಾವು ಸಂಘಟಿಸಬೇಕೆಂದಿದ್ದವರನ್ನು ಸಂಘಟಿಸಲು ಪ್ರಯತ್ನಿಸಿದ್ದು ತಳಮಟ್ಟದಿಂದಲ್ಲ. ಇದರ ವಿರುದ್ಧ ದಿಕ್ಕಿನಲ್ಲಿ ಅಂದರೆ ಅಧಿಕಾರ ಗದ್ದುಗೆಯಿಂದ. ಯಾವುದೇ ಸಂಘಟನೆ ಉಳಿಯಬೇಕಾದರೆ ಅದರ ತಳಪಾಯ ದೃಢವಾಗಿರಬೇಕು. ಕರ್ನಾಟಕದಲ್ಲೇ ಏಕೆ, ನಮ್ಮ ದೇಶದ ಯಾವುದೇ ಭಾಗದಲ್ಲಿ ಕಮ್ಯುನಿಸ್ಟ್ ಮತ್ತು ಬಲಪಂಥೀಯರನ್ನು ಬಿಟ್ಟು ರಾಜಕೀಯ ಪಕ್ಷಗಳು ತಮ್ಮ ನೆಲೆಗಟ್ಟನ್ನು ಸಂಘಟನಾತ್ಮಕವಾಗಿ ಬೆಳೆಸಿಕೊಂಡಂತಿಲ್ಲ. ಅರಸರಿಗೆ ಹಿಂದುಳಿದವರ ರೊಚ್ಚು ತಾವೇ ನಿರೀಕ್ಷಿಸಿರದಿದ್ದ ರೀತಿಯಲ್ಲಿ ಸಹಾಯಕವಾಯಿತು. ಆ ರೊಚ್ಚು ಅವರ ವಿರೋಧಿಗಳೇ ಆಡಳಿತ ನಡೆಸುತ್ತಿದ್ದ ರಾಜ್ಯದಲ್ಲಿ 1971ರ ಮಧ್ಯಂತರ ಲೋಕಸಭಾ ಚುನಾವಣೆಯಲ್ಲಿ ಅರಸರೇ ಅಧ್ಯಕ್ಷರಾಗಿದ್ದ ಇಂದಿರಾ ಕಾಂಗ್ರೆಸ್ ಪಕ್ಷವನ್ನು ಎಲ್ಲ ಸ್ಥಾನಗಳಲ್ಲೂ ಗೆಲ್ಲಿಸುವುದರ ಮೂಲಕ ಆಸ್ಫೋಟಗೊಂಡಿತು. ಅರಸರು ಈ ಸ್ಥಿತಿಯನ್ನೇ ರಾಜಕೀಯ ಧ್ರುವೀಕರಣಕ್ಕೆ ಬಳಸಿಕೊಳ್ಳಲು ಪ್ರಯತ್ನಪಟ್ಟರು. ತಮ್ಮ ಪಕ್ಷದವರ ಸಾಮಾಜಿಕ‑ಆರ್ಥಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಂಡು ಶಾಸಕತ್ವ ಮತ್ತು ಇತರ ಅಧಿಕಾರ ಸ್ಥಾನಗಳನ್ನು ಹಂಚಲು ಪ್ರಾರಂಭಿಸಿದರು. ಪಕ್ಷದ ಪಧಾಧಿಕಾರಿಗಳನ್ನೂ ಅವರ ಹಿನ್ನೆಲೆಯನ್ನರಿತೇ ನೇಮಕ ಮಾಡುತ್ತ ಹೋದರು. ಎಲ್ಲ ಹಂತಗಳಲ್ಲಿಯೂ ನಾಯಕತ್ವವನ್ನು, ಅಧಿಕಾರೇತರರ ಅಧಿಕಾರವನ್ನು ಹೇರುತ್ತಲೇ ತಳಮಟ್ಟ ಮುಟ್ಟಲು ಅರಸರು ಪ್ರಯತ್ನಪೂರ್ವಕವಾಗಿಯೇ ಅಥವಾ ತಮಗೇ ತಿಳಿಯದೆಯೇ ಪ್ರಯತ್ನಿಸಿದರು. ಈ ಬದಲಾವಣೆಗಳೆಲ್ಲ ಸಹಜವಾದವುಗಳಾಗಿರಲಿಲ್ಲ, ಸ್ಪಷ್ಟ ರಾಜಕೀಯ ತಾತ್ವಿಕತೆಯೊಂದು ಅಲ್ಲಿ ಕಾಣುತ್ತಿರಲಿಲ್ಲ.

ಇದಕ್ಕೆ ವಿರುದ್ಧವಾಗಿ ಒಂದು ಸತ್ವಯುತ ತಾತ್ವಿಕ ತಳಹದಿಯುಳ್ಳ ಸಂಘಟನೆ ಪಕ್ಷದಲ್ಲಿ, ಸಂಘಟನಾತ್ಮಕ ಬದಲಾವಣೆಗಳು, ನಾಯಕತ್ವದಲ್ಲಿ, ಅಧಿಕಾರ ಕೇಂದ್ರದಲ್ಲಿ ಬದಲಾವಣೆ ತರಬಲ್ಲವು. ಇದು ಸಾಮಾನ್ಯ ರಾಜಕೀಯ ತರ್ಕ. ಆದರೆ ಭಾರತದ ರಾಜಕಾರಣ ಈ ಸಾರ್ವತ್ರಿಕ ಸತ್ಯವನ್ನು ಮೈಗೂಡಿಸಿಕೊಳ್ಳದಿರುವುದು ನಮ್ಮ ದೇಶ‑ರಾಜ್ಯಗಳ ಒಂದು ದೊಡ್ಡ ರಾಜಕೀಯ ಜನತಂತ್ರದ ಲೋಪ. ಅರಸರ ಮತ್ತು ಕರ್ನಾಟಕದ ರಾಜಕೀಯದಲ್ಲಿ ಆದ ಬದಲಾವಣೆ ಮೇಲೆ ಚರ್ಚಿಸಿದ ರೀತಿಯದೇ. ಬೇರೆ ಯಾವ ರಾಜ್ಯದ ಕಾಂಗ್ರೆಸ್ ಮುಖ್ಯಮಂತ್ರಿಗಳು ಸಾಮಾಜಿಕ‑ರಾಜಕೀಯವಾಗಿ ಸಾಧಿಸಲಾಗದೇ ಹೋದುದನ್ನು ಅರಸು ಸಾಧಿಸಿದರು ನಿಜ. ಆದರೆ ಈ ಸಾಧನೆಗಳ ಯಶಸ್ಸು ಹೆಚ್ಚಾಗಿ ತಮ್ಮ ನಾಯಕಿ ಇಂದಿರಾಗಾಂಧಿಯವರಿಗೆ ಸಲ್ಲಬೇಕು ಎನ್ನುವ ನಂಬಿಕೆಯನ್ನು ಬಲವಾಗಿ ನೆಟ್ಟರು. ಅಂದರೆ ಮುಖ್ಯಮಂತ್ರಿಯಾಗಿ ಅರಸರ ನಂತರ ಅಧಿಕಾರಕ್ಕೆ ಬಂದ ಗುಂಡೂರಾಯರು ಯಾವುದನ್ನು ‘ಇಂದಿರಾ ಕೃಪಾ ಪೋಷಿತ ನಾಟಕ ಮಂಡಳಿ’ ಎಂದು ಕರೆದರೋ ಆ ನಾಟಕ ಮಂಡಳಿಯ ಒಬ್ಬ ಪಾತ್ರಧಾರಿ ತಾನೆಂದು ಅರಸರು ಬಿಂಬಿಸಿ ಬಿಟ್ಟಿದ್ದರು. ಇದೇ ಅರಸರ ರಾಜಕೀಯ ಪತನಕ್ಕೆ ಕಾರಣವಾಯಿತು. ಇಂದಿರಾ ಅವರ ಕಾಂಗ್ರೆಸ್‌ನಿಂದ ಹೊರ ಬಂದ ಕೆಲವೇ ತಿಂಗಳುಗಳಲ್ಲಿ ಅರಸರ ಗದ್ದುಗೆ ತಲೆಕೆಳಗಾಯಿತು. ಅರಸರು ಕಟ್ಟಲು ಪ್ರಯತ್ನಿಸುತ್ತಿದ್ದ ಕೋಟೆ ಕುಸಿಯಿತು. ರಾಜಕೀಯ ಪರಿಣತರನ್ನು, ಬುದ್ದಿಜೀವಿಗಳನ್ನು ದೂರವಿಟ್ಟೇ ಅಧಿಕಾರ ನಡೆಸಿದ ಅರಸರು ನಂಬಿದ್ದು ‘ಅದೃಶ್ಯ ಮತದಾರರನ್ನು’ ಆ  ಮತದಾರರೇ ಅರಸರಿಗೆ ‘ಕೈ’ ಕೊಟ್ಟಿದ್ದರು, ಕಾರಣ ಸ್ಪಷ್ಟ.

ಅದೇನೇ ಇರಲಿ ಅರಸು ಪ್ರತಿಪಾದಿಸಿದ, ಜಾರಿಗೊಳಿಸಿದ ಕಾರ್ಯನೀತಿಯಲ್ಲಿ ಒಂದು ಪ್ರಗತಿಪರ ಧೋರಣೆಯನ್ನು ಕಾಣಬಹುದು. ಪಟ್ಟಭದ್ರ ವಿರೋಧವನ್ನೆದುರಿಸಿ ಅನೇಕ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದದ್ದೇ ಅಲ್ಲದೆ, ಒಂದು ಪರ್ಯಾಯ ರಾಜಕೀಯ ಶಕ್ತಿಯನ್ನು ಪ್ರಗತಿಪರ ರೀತಿಯಲ್ಲಿ ಬೆಳೆಸಬೇಕೆಂಬ ಅವರ ಹವಣಿಕೆ ಸ್ತುತ್ಯಾರ್ಹ. ಆ ದೃಷ್ಟಿಯಿಂದ ರಾಜ್ಯದ ಚರಿತ್ರೆಯಲ್ಲಂತೂ ಅಳಿಸಲಾಗದ ಒಂದು ಪ್ರಮುಖ ಪಾತ್ರವನ್ನು ಸಮಾಜ ವಿಜ್ಞಾನಿಗಳು ದಾಖಲಿಸಲೇ ಬೇಕಾದಷ್ಟು ಪ್ರಭಾವವನ್ನು ಅರಸು ಬೀರಿ ಹೋಗಿದ್ದಾರೆ.

ಮೇಲೆ ವಿವರಿಸಿದಂತೆ 1980ರಲ್ಲಿ ಅರಸರು ಅಧಿಕಾರ ಕಳೆದುಕೊಂಡರು. ಅರಸರ ರಾಜಕೀಯ ಸಾಧನೆ, ಸಾಮಾಜಿಕ ನ್ಯಾಯದ ಕಲ್ಪನೆಗಳು, ಕಾರ್ಯಕ್ರಮಗಳು ಏನೇ ಇದ್ದರೂ ಈಗಾಗಲೇ ಚರ್ಚಿಸಿದಂತೆ, ರಾಜ್ಯದ ಆರ್ಥಿಕ ಪ್ರಗತಿ ಕುಂಠಿತಗೊಂಡಿದ್ದಂತೂ ಸತ್ಯ. ಅವರ ಅಧಿಕಾರಾವಧಿಯಲ್ಲೇ ಭ್ರಷ್ಟಾಚಾರ ಸಾಂಸ್ಥಿಕ ರೂಪ ಪಡೆಯಿತೆನ್ನುವ ಮಾತಿನಲ್ಲಿ ಕೂಡ ಸತ್ಯಾಂಶವಿದೆ.

ಅರಸರ ನಂತರ, ಅವರನ್ನು ತೊರೆದು ಬಂದ ಶಾಸಕರ ಬಲದಿಂದ ಸರ್ಕಾರ ರಚಿಸಿದವರು ಶ್ರೀ ಆರ್. ಗುಂಡೂರಾವ್. ಭ್ರಷ್ಟಾಚಾರ, ಆರ್ಥಿಕ ಹಿಂಜರಿತ, ಹೆಚ್ಚುತ್ತಿದ್ದ ವಿದ್ಯಾವಂತರ ನಿರುದ್ಯೋಗ, ಕೃಷಿ ಕೈಗಾರಿಕಾ ವಲಯಗಳ ಹಿನ್ನೆಡೆ ಎಲ್ಲವೂ ಈ ಕಾಲದಲ್ಲಿ ಉಲ್ಬಣಗೊಂಡವು. 1980ರ ನಂತರ ಜನಸಾಮಾನ್ಯರ, ವಿಶೇಷವಾಗಿ, ರೈತ ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ಸಿಗದೆ ಈ ವರ್ಗಗಳು ಅಸಂತುಷ್ಟಗೊಂಡವು. ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳು ಇದ್ದರೂ ಅವು ಸೇರಬೇಕಾದವರಿಗೆ ಸೇರದೇ ಹೋದವು. ಎಚ್ಚೆತ್ತ ರೈತಪ್ರಜ್ಞೆ ಚಳವಳಿಯ ಹಾದಿ ಹಿಡಿಯಿತು. ಹಾಗೆಯೇ ಕಾರ್ಮಿಕ ಚಳವಳಿಗಳೂ ಆರಂಭವಾದವು. ಜೊತೆಗೆ ತೀವ್ರ ಭಾವೋದ್ರೇಕ ಉಂಟುಮಾಡುವ ಶಿಕ್ಷಣದಲ್ಲಿ ಕನ್ನಡ ಭಾಷೆಯ ಸ್ಥಾನಮಾನದ ಬಗ್ಗೆ ತೀವ್ರತರ ಸಮಸ್ಯೆ ಉಂಟಾಯಿತು. ಸರ್ಕಾರದ ನಿಲುವನ್ನು ಖಂಡಿಸಿ ಸಾಹಿತಿ‑ಕಲಾವಿದ‑ಬುದ್ದಿಜೀವಿಗಳ ಬಳಗ ಚಳವಳಿ ಹಮ್ಮಿಕೊಂಡಿತು. ವಿದ್ಯಾರ್ಥಿ ಯುವಜನ ಸಮೂಹ ಈ ವಿಷಯದಲ್ಲಿ ರೊಚ್ಚಿಗೆದ್ದಿತು. ಗೋಕಾಕ್ ಚಳವಳಿಯೆಂದು ಪ್ರಸಿದ್ದಿಯಾದ ಕನ್ನಡ ಚಳವಳಿ ರಾಜ್ಯ ಸರ್ಕಾರವನ್ನು ಅಲುಗಾಡಿಸಿತು. ವರನಟ ರಾಜ್‌ಕುಮಾರ್ ಅವರೇ ಸ್ವತಃ ಚಳವಳಿಗೆ ದುಮುಕಿದರು. ರೈತ‑ಕಾರ್ಮಿಕ ಚಳವಳಿ ತೀವ್ರಗೊಂಡು ಹಲವಾರು ಕಡೆ ಪ್ರತಿಬಂಧಕಾಜ್ಞೆ, ಲಾಠಿಚಾರ್ಜು, ಗೋಲಿಬಾರ್‌ಗಳಾಗಿ ಸಾವು ನೋವುಗಳುಂಟಾದವು. ರಾಜ್ಯದ ರಾಜಕೀಯದಲ್ಲಿ ಹಲವಾರು ಬದಲಾವಣೆಗಳಾದವು. ಬಂಗಾರಪ್ಪನವರ ನೇತೃತ್ವದಲ್ಲಿ ಒಂದು ಗುಂಪು ಕಾಂಗ್ರೆಸ್ ತೊರೆದು ‘ಕ್ರಾಂತಿರಂಗ’ವನ್ನು ಹುಟ್ಟಿ ಹಾಕಿತು.

1976‑77ರ ತುರ್ತು ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ವಿರೋಧ ಪಕ್ಷವಾಗಿದ್ದ ಜನತಾಪಕ್ಷ ದೇವೇಗೌಡರ ನೇತೃತ್ವದಲ್ಲಿ ರೈತರ ಪರ ನಿಲುವು ತಳೆದು ಪರಿಸ್ಥಿತಿಯನ್ನು ತನ್ನಪರ ಬಳಸಿಕೊಂಡಿತು. ಜನತಾಪಕ್ಷ ಮತ್ತು ಕ್ರಾಂತಿರಂಗ, ಭಾರತೀಯ ಜನತಾಪಕ್ಷಗಳು, 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಎದುರಿಸಿದವು. ಕಮ್ಯುನಿಸ್ಟ್ ಪಕ್ಷಗಳೂ ಈ ಚುನಾವಣೆಯಲ್ಲಿ ತಮ್ಮ ಅಸ್ತಿತ್ವವನ್ನು ದೃಢಪಡಿಸಿದವು. ಇದೆಲ್ಲದರ ಪರಿಣಾಮವೆಂದರೆ ಕಾಂಗ್ರೆಸ್‌ನ ಸೋಲು. 1983ರಿಂದ 1989ರವರೆಗೆ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರಗಳು ರಾಜ್ಯವನ್ನು ಆಳಿದವು. ಶ್ರೀ ರಾಮಕೃಷ್ಣ ಹೆಗಡೆ, ಬೊಮ್ಮಾಯಿಯವರು ಈ ಅವಧಿಯಲ್ಲಿ ಮುಖ್ಯಮಂತ್ರಿಗಳಾದರು. 1985ರ ಮಧ್ಯಂತರ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದ ಜನತಾಪಕ್ಷ ಅಧಿಕಾರ ವಿಕೇಂದ್ರೀಕರಣಗೊಳಿಸುವ ಮಹತ್ತರ ತೀರ್ಮಾನ ಮಾಡಿತು. ನಜೀರ್‌ಸಾಬ್ ಇದರ ರೂವಾರಿ. ಭಾರತಕ್ಕೇ ಮಾದರಿಯಾದ ಈ ಪಂಚಾಯತ್‌ರಾಜ್ ವ್ಯವಸ್ಥೆ ಜಿಲ್ಲೆ, ತಾಲ್ಲೂಕು ಮತ್ತು ಮಂಡಲ ಹಂತಗಳಲ್ಲಿ ಜನಪ್ರತಿನಿಧಿಗಳೇ ತಮ್ಮ ಬೇಕು‑ಬೇಡಗಳನ್ನು ಚರ್ಚಿಸಿ ಯೋಜನೆಗಳನ್ನು ರೂಪಿಸುವ, ಜಾರಿಗೆ ತರುವ ಅಧಿಕಾರವನ್ನು ನೀಡಿತು. ಲಕ್ಷಾಂತರ ಮಂದಿ ನೀತಿ‑ನಿರೂಪಣೆ ಮತ್ತು ಅವುಗಳ ಅನುಷ್ಠಾನ ಮುಂತಾದ ಆಡಳಿತದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದಾದ ಅದ್ಭುತ ಜನತಾಂತ್ರಿಕ ಪ್ರಯೋಗ ಅದು. ಸ್ಥಳೀಯ ಅಗತ್ಯತೆಗಳನ್ನು ಗುರುತಿಸಿ, ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನು ನಿರ್ಧರಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿ, ಅಧಿಕಾರ ಎರಡನ್ನೂ ಕೊಟ್ಟದ್ದು ಈ ಕಾಯಿದೆಯ ವೈಶಿಷ್ಟ್ಯ. ಪಂಚಾಯತ್ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿ ಆ ಮೂಲಕ ಅಧಿಕಾರ ವಂಚಿತ ವರ್ಗವೊಂದಕ್ಕೆ ಆಡಳಿತದಲ್ಲಿ ಅವಕಾಶ ಮಾಡಿಕೊಟ್ಟದ್ದು ಜನತಂತ್ರವನ್ನು ತಳಮಟ್ಟದವರೆಗೂ ತೆಗೆದುಕೊಂಡು ಹೋದದ್ದು ಈ ಕಾಯ್ದೆಯ ಹೆಗ್ಗಳಿಕೆ. ಅದೇ ರೀತಿ ರಾಜ್ಯದ ಬೊಕ್ಕಸದಿಂದ ಹಣ ಮತ್ತಿತರ ಅವಶ್ಯಕ ಸೇವೆಗಳನ್ನು ಒದಗಿಸಲು ಏರ್ಪಾಡು ಮಾಡಲಾಯಿತು. ಒಟ್ಟಾರೆ ಅಧಿಕಾರವನ್ನು ಅಧಿಕಾರಶಾಹಿಯಿಂದ ಜನಪ್ರತಿನಿಧಿಗಳಿಗೆ ಹಸ್ತಾಂತರಿಸುವ ಮಹದುದ್ದೇಶ ಈ ಪ್ರಯತ್ನದ ಹಿಂದೆ ಇದ್ದುದು ಸ್ಪಷ್ಟ. ಈ ಹಂತದಲ್ಲಿ ನೀರಾವರಿ ಸರ್ಕಾರದ ಗಮನ ಸೆಳೆಯಿತು. ಆದರೆ ಒಟ್ಟಾರೆ ಆರ್ಥಿಕ ಪ್ರಗತಿ ಹೇಳಿಕೊಳ್ಳುವಂಥ ಪ್ರಗತಿಯನ್ನೇನೂ ಕಾಣಲಿಲ್ಲ.

ರಾಜ್ಯದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿೊಮಾಡುವ ಪ್ರಾಥಮಿಕ ವಲಯದ ಮೇಲೆ ಸರ್ಕಾರ ತೊಡಗಿಸಿದ ರಾಜ್ಯದ ವರಮಾನ ಮತ್ತಷ್ಟು ಕ್ಷೀಣಿಸಿತು. 1969‑70ರಲ್ಲಿ ರಾಜ್ಯದ ವರಮಾನದ ಶೇ. 57.90ರಷ್ಟನ್ನು ಪ್ರಾಥಮಿಕ ವಲಯದ ಮೇಲೆ ವೆಚ್ಚ ಮಾಡುತ್ತಿದ್ದ ಸರ್ಕಾರ 1989‑90ರ ವೇಳೆಗೆ ಶೇ.37.51ರಷ್ಟು ಕಡಿಮೆ ವರಮಾನವನ್ನು ಮಾತ್ರ ಈ ವಲಯದಲ್ಲಿ ಖರ್ಚು ಮಾಡಿತ್ತು. ಇದಕ್ಕೆ ವಿರುದ್ಧವಾಗಿ ಅದೇ ವೇಳೆ ಕಡಿಮೆ ಉದ್ಯೋಗ ಸೃಷ್ಟಿ ಮಾಡುತ್ತಿದ್ದ ಎರಡನೆಯ ಮತ್ತು ಮೂರನೆಯ ವಲಯಗಳ ಮೇಲೆ 42.00ರಷ್ಟಿದ್ದ ಈ ವೆಚ್ಚ ಶೇ.62.49ಕ್ಕೆ ಏರಿತ್ತು. ಅಂದರೆ ಉದ್ಯೋಗ ಸೃಷ್ಟಿಗೆ ಆದ್ಯತೆ ಅಲ್ಲಿರಲಿಲ್ಲ. ಈ ವ್ಯತ್ಯಾಸ ಗ್ರಾಮ ಮತ್ತು ನಗರ, ಬಡವ ಮತ್ತು ಶ್ರೀಮಂತರ ನಡುವಿನ ಅಂತರವನ್ನು ತೀವ್ರಗೊಳಿಸಿತು. 1989‑90ರಲ್ಲಿ ರಾಷ್ಟ್ರಮಟ್ಟದಲ್ಲಿ ಬಡತನ ರೇಖೆಗಿಂತ ಕೆಳಗಿದ್ದವರ ಸಂಖ್ಯೆ ಶೇ.30 ಇದ್ದರೆ, ಕರ್ನಾಟಕದಲ್ಲಿ ಇದು ಶೇ.35ರಷ್ಟಿತ್ತು. ಅಂದರೆ ರಾಷ್ಟ್ರದ ಸರಾಸರಿಗಿಂತ ಕರ್ನಾಟಕದಲ್ಲಿದ್ದ ಬಡವರ ಸಂಖ್ಯೆ ಶೇ.5ರಷ್ಟು ಹೆಚ್ಚಿತ್ತು. ಸುಮಾರು ಆರು ವರ್ಷಗಳ ಕಾಲ ಅಧಿಕಾರ ನಡೆಸಿದ ಜನತಾಪಕ್ಷ ಆಂತರಿಕ ಕಲಹಗಳಿಗೆ ಪ್ರಸಿದ್ದಿಯಾಯಿತು. ಜನತೆಯೂ ಈ ಕಿತ್ತಾಟಗಳಿಂದ ಬೇಸತ್ತಿತ್ತು. ಆಂತರಿಕ ಕಲಹದಿಂದ ಸರ್ಕಾರ ಆಹುತಿಯಾದದ್ದು ಕರ್ನಾಟಕದಲ್ಲಿ. ಅಂತೂ ಮೊದಲಬಾರಿಗೆ ಈ ಕಿತ್ತಾಟದ ಲಾಭ ಪಡೆದ ಪಕ್ಷ ಕಾಂಗ್ರೆಸ್. 1978ರಲ್ಲಿ ಇಂದಿರಾಗಾಂಧಿಯವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ವಿರುದ್ಧ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಕಾಂಗ್ರೆಸ್ 1990ರ ಚುನಾವಣೆಯನ್ನು ಎದುರಿಸಿತು. ಕಾಂಗ್ರೆಸ್ ಹಿಂದೆಂದೂ ಗಳಿಸದ ಬಹುಮತವನ್ನು ಗಳಿಸಿತು.

224ರ ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ಸು 180ರಷ್ಟು ಸ್ಥಾನಗಳನ್ನು ಗೆದ್ದಿತು. ಆದರೆ ರಾಜ್ಯದ ಅಧಿಕಾರ ರಾಜಕಾರಣ ಎಷ್ಟು ಬದಲಾಗಿತ್ತೆಂದರೆ, ವೀರೇಂದ್ರರಿಗೆ ಅದನ್ನು ನಿಭಾಯಿಸುವುದು ಕಷ್ಟವಾಗಿತ್ತು. ಅವರ ಕಾರ್ಯ ವೈಖರಿ ರಾಜ್ಯದ ಕಾಂಗ್ರೆಸ್ಸಿಗರಿಗಷ್ಟೇ ಅಲ್ಲದೆ, ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರಿಗೂ ಸರಿಹೊಂದಲಿಲ್ಲ. ಆಂತರಿಕ ಭಿನ್ನಮತ ಹೊಗೆ ಯಾಡುತ್ತಲೂ ಇತ್ತು. ಆದರೂ ವೀರೇಂದ್ರರ ಸರ್ಕಾರ ರಾಜ್ಯದ ಸಂಪನ್ಮೂಲಗಳನ್ನು ಕ್ರೋಡೀಕರಿಸುವಲ್ಲಿ, ಭ್ರಷ್ಟಾಚಾರವನ್ನು ಕಡಿಮೆಗೊಳಿಸುವಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿ ಯಾಯಿತು. ಹಾಗೆಯೇ ರಾಜ್ಯ ರಾಜಕೀಯದಲ್ಲಿ ಅಪಾರ ಪ್ರಭಾವ ಬೀರುತ್ತಿದ್ದ ಲಾಬಿ ಗಳಿಗೂ ಕಡಿವಾಣ ಹಾಕಲಾಯಿತು. ಪಟ್ಟಭದ್ರ ಹಿತಾಸಕ್ತಿಗಳಿಗೆ ಉಸಿರುಕಟ್ಟಿಸುವ ವಾತಾವರಣ ನಿರ್ಮಾಣವಾಯಿತು. ವೀರೇಂದ್ರರ ಸರ್ಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರಗಳೂ ಹೆಣೆಯಲ್ಪಟ್ಟವು. ವೀರೇಂದ್ರರಿಗೆ ಹೊಡೆದ ಪಾರ್ಶ್ವವಾಯು ಅವರ ಸರ್ಕಾರಕ್ಕೆ ಹೊಡೆದಂತಾಗಿ, ವೀರೇಂದ್ರರನ್ನು ಪದಚ್ಯುತಗೊಳಿಸಲಾಯಿತು. ಅನಂತರ  ಬಂಗಾರಪ್ಪ ಮತ್ತು ವೀರಪ್ಪ ಮೊಯಿಲಿಯವರು ಕ್ರಮವಾಗಿ 1991ರಿಂದ 95ರವರೆಗೆ ಮುಖ್ಯಮಂತ್ರಿಗಳಾದರು. ಅಂದರೆ ಅಪಾರ ಬಹುಮತವಿದ್ದೂ ಕಾಂಗ್ರೆಸ್ ಸರ್ಕಾರ ಮೂರು ಜನ ಮುಖ್ಯಮಂತ್ರಿಗಳನ್ನು ಬದಲಾಯಿಸಬೇಕಾಯಿತು.

ಇಡೀ ಭಾರತದಲ್ಲಿ ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಉತ್ಪಾದನೆ ಕುಸಿತ ಉಂಟಾಗಿ 1990ರ ದಶಕ ಕರ್ನಾಟಕದಲ್ಲೂ ವಿಚಿತ್ರ ತಲ್ಲಣವನ್ನು ಉಂಟುಮಾಡಿತು. ರಾಜಕೀಯ ಗೊಂದಲ, ಕಲಹಗಳು ರಾಜ್ಯದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಿದವು.

ಈ ನಡುವೆ ಹಾವನೂರು ವರದಿ ಆಧಾರಿತ ಹಿಂದುಳಿದ ವರ್ಗಗಳ ಮೀಸಲಾತಿ ಆಜ್ಞೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿತವಾಯಿತು. ಅದರ ಲೋಪ ದೋಷಗಳನ್ನು ಒಪ್ಪಿಕೊಂಡ ಸರ್ಕಾರ ಸರಿಪಡಿಸುತ್ತೇನೆಂಬ ಭರವಸೆ ನೀಡಿತು. ಅದರ ಫಲವಾಗಿ ವೆಂಕಟಸ್ವಾಮಿ ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳು ನೇಮಕವಾಗಿ ವರದಿಗಳನ್ನು ಕೊಟ್ಟವು. ಆದರೆ ಸಾಂವಿಧಾನಿಕವಾಗಿ ಅವು ಊರ್ಜಿತವಾಗುವುದು ಕಷ್ಟವಾಯಿತು. ಈ ಮಧ್ಯೆ ಹಿಂದುಳಿದ ವರ್ಗಗಳ ಮೀಸಲಾತಿ ವಿಚಾರ ಕಗ್ಗಂಟಾಗಿ ಪರಿಣಮಿಸಿದೆ. ಒಟ್ಟು ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಿರಬಾರದೆಂಬ ಸುಪ್ರೀಂಕೋರ್ಟ್ ನಿರ್ಣಯ ಮೀಸಲಾತಿ ಸೌಲಭ್ಯವನ್ನು ಕಡಿಮೆ ಮಾಡಿದೆ. 1995ರ ವೇಳೆಗೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಆರ್ಥಿಕ ಕ್ಷೇತ್ರಗಳಲ್ಲಾದ ಏರುಪೇರುಗಳಿಂದ ಭಾರತದಲ್ಲಿ ಶೇ.39ರಷ್ಟು ಜನ ಬಡತನದ ರೇಖೆಗಿಂತ ಕೆಳಗಿನವರೆಂದು ಅಂದಾಜು ಮಾಡಲಾಗಿತ್ತು. 1992ರಲ್ಲಿ ಭಾರತ ಜಾಗತೀಕರಣ ಉದಾರೀಕರಣದ ಪ್ರಕ್ರಿಯೆಗೆ ತನ್ನನ್ನು ಒಡ್ಡಿಕೊಂಡಿತು. ರಾಜ್ಯದ ಮೇಲೆ ಇದರಿಂದಾಗಬಹುದಾದ ಪರಿಣಾಮವನ್ನು ಕುರಿತ ವೈಜ್ಞಾನಿಕ ಅಧ್ಯಯನಗಳು ಇನ್ನು ಆಗಬೇಕಿದೆ. ಆದರೆ ಒಂದಂತೂ ಸ್ಪಷ್ಟ, ಕೆಲಸ ಮಾಡುವ ಮತ್ತು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರುವ ಕೈಗಳಿಗೆ ಉದ್ಯೋಗ ಸೃಷ್ಟಿ ಮಾತ್ರ ಕ್ರಮೇಣ ಕ್ಷೀಣಿಸುತ್ತಿರುವುದು ಕಂಡುಬರುತ್ತಿದೆ. ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ವಾಣಿಜ್ಯ ಒಪ್ಪಂದಗಳು, ವಿಶ್ವಬ್ಯಾಂಕ್ ವಿಧಿಸುತ್ತಿರುವ ನಿಯಮಗಳು ಕೃಷಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮೇಲೆ ಅಪಾರ ನೇತ್ಯಾತ್ಮಕ ಪರಿಣಾಮ ಬೀರುತ್ತಿವೆ. ಬೃಹತ್ ಉದ್ಯಮಗಳು ಬಹುರಾಷ್ಟ್ರೀಯ ಕಂಪೆನಿಗಳು ಜಗತ್ತಿನೆಲ್ಲೆಡೆ ತಮ್ಮ ಬಾಹುಗಳನ್ನು ಚಾಚುತ್ತಿವೆ.

1995ರಲ್ಲಿ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ, ಐಕ್ಯಮತ್ಯದಿಂದ ಸೆಣೆಸಿದ ಜನತಾದಳವನ್ನು ಅಧಿಕಾರಕ್ಕೆ ತರಲಾಯಿತು. ಶ್ರೀಯುತರಾದ ದೇವೇಗೌಡ ಮತ್ತು ಜೆ.ಎಚ್.ಪಟೇಲ್ ಕ್ರಮವಾಗಿ ರಾಜ್ಯದ ಮುಖ್ಯಮಂತ್ರಿಗಳಾದರು. ರಾಜ್ಯವು ತಮ್ಮ ಪಾಲಿನ ಕೃಷ್ಣಾ ನದಿಯ ನೀರನ್ನು 2000ದ ವರ್ಷಾಂತ್ಯದೊಳಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆಯಿತ್ತು.ೊಆ ಯೋಜನೆಗಳನ್ನು ಪೂರ್ಣಗೊಳಿಸಲು ಅಪಾರ ಹಣ ಶ್ರಮಗಳನ್ನು ಹಾಕಲಾಯಿತು. ಮಿಕ್ಕಂತೆ ಆಡಳಿತ ಮಾಮೂಲಿಯಾಗಿಯೇ ನಡೆಯಿತು. ಹಿಂದಿನ ಸರ್ಕಾರಗಳನ್ನು ಕಾಡಿದ್ದ ಭಿನ್ನಮತ ಪಟೇಲರ ಸರ್ಕಾರವನ್ನೂ ಬಿಡಲಿಲ್ಲ. ಕಳೆದ ಸುಮಾರು ಎರಡು ದಶಕಗಳಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮನೆ ಮಾಡಿಕೊಂಡಂತಿದೆ. ಭಿನ್ನಮತ, ಸ್ವಪ್ರತಿಷ್ಠೆ, ಗುಂಪುಗಾರಿಕೆ, ಅಂತಃಕಲಹಗಳಿಂದ ರಾಜಕೀಯ ಇಚ್ಛಾಶಕ್ತಿಗೆ ಧಕ್ಕೆಯೊದಗಿದೆ. ಈ ಆಂತರಿಕ ಭಿನ್ನಮತ ಸಾರ್ವತ್ರಿಕವಾಗಿ ಎಲ್ಲ ಪಕ್ಷಗಳನ್ನೂ ಕಾಡುತ್ತಿದೆ. ಇವುಗಳ ಪರಿಣಾಮ ರಾಜ್ಯದ ಅಭಿವೃದ್ದಿಯ ಮೇಲೂ ತನ್ನ ಕರಿನೆರಳು ಚಾಚಿದೆ.

1999ರಲ್ಲಿ ಚುನಾವಣೆ ನಡೆದು, ಎಸ್.ಎಂ.ಕೃಷ್ಣರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಒಂದು ರೀತಿಯಲ್ಲಿ ಹಿಂದಿನ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಭಿನ್ನಮತ ಕೃಷ್ಣರನ್ನು ಅಷ್ಟಾಗಿ ಕಾಡಲಿಲ್ಲ. ದೇವೇಗೌಡರ ಆಡಳಿತಾವಧಿಯಿಂದ ಪ್ರಾರಂಭವಾಗಿ, ಪಟೇಲ್, ಕೃಷ್ಣ ಇವರ ನೇತೃತ್ವದ ಸರ್ಕಾರಗಳಲ್ಲಿ ರಾಜ್ಯ ಜಾಗತೀಕರಣ, ಉದಾರೀಕರಣಗಳ ಪ್ರಕ್ರಿಯೆಗೆ ಸಜ್ಜಾಗತೊಡಗಿತು. ಬೃಹತ್ ಬಹುರಾಷ್ಟ್ರೀಯ ಕಂಪೆನಿ ಗಳನ್ನು, ವಿದೇಶೀ ಬಂಡವಾಳವನ್ನು ಆಕರ್ಷಿಸುವ ಪ್ರಯತ್ನಗಳಿಗೆ ಚಾಲನೆ ದೊರೆಯಿತು. ಖಾಸಗಿ ಬಂಡವಾಳ ಹೂಡಿಕೆಗೆ ಇದ್ದ ಅಡೆ‑ತಡೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಯಿತು. ಅದಕ್ಕಾಗಿ ಅಪಾರ ರಿಯಾಯಿತಿ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಬಂಡವಾಳ ಹರಿದು ಬರತೊಡಗಿದೆ. ಆದರೆ ಈ ಬಂಡವಾಳ ಕೇಂದ್ರೀಕೃತವಾದದ್ದು ರಾಜಧಾನಿ ಬೆಂಗಳೂರಿನಲ್ಲಿ. ಬೆಂಗಳೂರು ‘ಸಿಲಿಕಾನ್ ಸಿಟಿ’ ಎಂಬ ಹೆಸರೇನೋ ಪಡೆಯಿತು. ಆದರೆ ಅದರ ನೇತ್ಯಾತ್ಮಕ ಪರಿಣಾಮಗಳನ್ನು ಎದುರಿಸುವ ನಿಟ್ಟಿನಲ್ಲಿ ಆಗಬೇಕಾದ ಕೆಲಸ ಆಗುತ್ತಿಲ್ಲವೆನ್ನುವ ಅಭಿಪ್ರಾಯವಿದೆ.

2004ರಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಲಿಲ್ಲ. ಮೂರು ದೊಡ್ಡ ಪಕ್ಷಗಳಲ್ಲಿ ಕನಿಷ್ಟ ಎರಡಾದರೂ ಒಮ್ಮತಕ್ಕೆ ಬಂದರೆ ಸರ್ಕಾರ ರಚನೆ ಸಾಧ್ಯವಿತ್ತು. ಹೀಗಾಗಿ ಕಾಂಗ್ರೆಸ್‑ಜನತಾ ದಳ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದವು. ಆದರೆ ಇಪ್ಪತ್ತು ತಿಂಗಳು ಮಾತ್ರ ಕಾಂಗ್ರೆಸ್ಸಿನ ಶ್ರೀ ಧರ್ಮಸಿಂಗ್ ನೇತೃತ್ವದಲ್ಲಿ ಈ ಸರ್ಕಾರ ಅಧಿಕಾರದಲ್ಲಿರಲು ಸಾಧ್ಯವಾಯಿತು. ಆಂತರಿಕ ಸಂಘರ್ಷ ದಿಂದಾಗಿಯೇ ಸರ್ಕಾರದ ಪತನವಾಯಿತು. ಆಗ ತೀವ್ರತರ ತಾತ್ವಿಕ ಭಿನ್ನಾಭಿಪ್ರಾಯವಿದ್ದರೂ ಚುನಾವಣೆ ಎದುರಿಸಲು ಇಷ್ಟವಿಲ್ಲದೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಪಕ್ಷಗಳ ಮೈತ್ರಿ ಮಾಡಿಕೊಂಡು ಜಾತ್ಯತೀತ ಜನತಾದಳದ ಶ್ರೀಯುತ ಕುಮಾರಸ್ವಾಮಿಯವರ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು.

ಕಳೆದ ಎರಡು ದಶಕಗಳ ಕರ್ನಾಟಕದ ಅಧಿಕಾರ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದಂಶ ಸ್ಪಷ್ಟವಾಗುತ್ತದೆ. ಅದು ರಾಜಕೀಯ ಸಿದ್ಧಾಂತಗಳಿಗೆ ಕೊಡುತ್ತಿರುವ ತಿಲಾಂಜಲಿ. ವ್ಯಕ್ತಿ ಪ್ರತಿಷ್ಠೆಗಳ ಮೇಲಾಟ. ಯಾರು ಯಾವ ಸಿದ್ಧಾಂತಕ್ಕೆ ಬದ್ಧರು ಎಂಬ ಬಗ್ಗೆ ಗೊಂದಲ ಮನೆ ಮಾಡಿಕೊಂಡಿದೆ. ಅಧಿಕಾರಕ್ಕಾಗಿ ಆಸೆ ಪಡುವುದು, ಅದಕ್ಕಾಗಿ ಪ್ರಯತ್ನಿಸುವುದು, ಜನತಂತ್ರದಲ್ಲಿ ಸಹಜ. ಆದರೆ ಅದಕ್ಕೆ ತೆರುತ್ತಿರುವ ಬೆಲೆ?

ಯಾವುದೇ ಸರ್ಕಾರವೂ ಸಮರ್ಪಕವಾಗಿ ಕಾರ್ಯ ನಿರ್ವಹಿಸಲಾರದಾದವು. ರಾಜ್ಯ, ಜನತೆಯ ಹಿತಕ್ಕಿಂತ ಒಂದು ಗುಂಪಿನ, ವ್ಯಕ್ತಿಯ ಹಿತಾಸಕ್ತಿಗಳೇ ಮೇಲುಗೈ ಪಡೆಯುತ್ತ ಅಭಿವೃದ್ದಿ ಕಾರ್ಯಗಳು ಕುಂಠಿತಗೊಳ್ಳುತ್ತಿವೆ. ರಾಜ್ಯದ ನದಿ ನೀರಿನ ಬಳಕೆ ಹಂಚಿಕೆಗಳ ಸಮಸ್ಯೆ ರಾಜಕೀಯಸ್ಥರ ಕೈಯಲ್ಲಿ ಅಸ್ತ್ರವಾಗಿ ಬಳಕೆಯಾಗುತ್ತಿವೆ. ನೆರೆಯ ರಾಜ್ಯಗಳ ನಾಯಕತ್ವಕ್ಕಿದ್ದ ಇಚ್ಛಾಶಕ್ತಿ ನಮ್ಮ ನಾಯಕರಲ್ಲಿ ಇಲ್ಲದ್ದು ರಾಜ್ಯದ ದುರ್ದೈವ. ಅಭಿವೃದ್ದಿ ವಿಷಯದಲ್ಲಿ ಬೇರೆ ಬೇರೆ ಪ್ರಾಂತಗಳ ಜನರಲ್ಲಿ ಅಲಕ್ಷಿಸಲ್ಪಟ್ಟಿದ್ದೇವೆಂಬ ಭಾವನೆ ಬಲವಾಗುತ್ತಿದೆ. ಕೊಡಗು, ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲಿ ಈ ಭಾವನೆ ಆಕ್ರೋಶವಾಗಿಯೂ ವ್ಯಕ್ತವಾಗಿದೆ. ಈ ಆಕ್ರೋಶವನ್ನು ಶಮನಗೊಳಿಸಲು ಆ ಪ್ರಾಂತ್ಯಗಳಿಗೆ ಸೀಮಿತಗೊಂಡಂತೆ ಅಭಿವೃದ್ದಿ ಮಂಡಳಿಗಳನ್ನು ರಚಿಸಿದರೂ ಅವುಗಳ ಫಲಿತಾಂಶ ಆಶಾದಾಯಕವಾಗಿಲ್ಲ. ಶಿಕ್ಷಣ ವಾಣಿಜ್ಯೀಕರಣಗೊಂಡಿದೆ. ಮಧ್ಯಮ ವರ್ಗದವರಲ್ಲಿ ಸ್ವಾರ್ಥ, ಸಿನಿಕತನ ಹೆಚ್ಚುತ್ತಿದೆ. ಜಾತಿ‑ಜಾತಿಗಳ ನಡುವೆ ಕೋಮು‑ ಕೋಮುಗಳ ನಡುವೆ, ಅಸಹನೆ, ಸಂಶಯ ಮತ್ತು ಅಸೂಯೆ ದ್ವೇಷಗಳು ಹೆಚ್ಚುತ್ತಿವೆ. ಸಾಮರಸ್ಯಕ್ಕೆ, ಶಾಂತಿಯುತ ಸಹಬಾಳ್ವೆಗೆ ಕರ್ನಾಟಕ ಅದನ್ನು ಬಲಹೀನಗೊಳಿಸುವ ನಿಟ್ಟಿನಲ್ಲಿ ಸಾಗಿದಂತಿದೆ. ಹುಬ್ಬಳ್ಳಿಯ ಈದ್ಗಾ ಮತ್ತು ಬಾಬಾ ಬುಡನ್ ದತ್ತ ಪೀಠದ ವಿಚಾರದಲ್ಲಿ ಕೋಮು ಪರಿಸ್ಥಿತಿ ಆಗಾಗ ಕದಡುತ್ತಿದೆ. ರಾಜ್ಯದ ಗಡಿ ಸಮಸ್ಯೆ ಆಗಾಗ ಭಾವೋದ್ರೇಕಕ್ಕೆ ಕಾರಣವಾಗುತ್ತಿದೆ.

ಈ ಅವಧಿಯ ಕರ್ನಾಟಕದಲ್ಲಿ ಹಲವಾರು ಜನಪರ, ಸಮೂಹ ಚಳವಳಿಗಳು ಹುಟ್ಟಿ‑ಬೆಳೆದು, ಕೆಲವು ನಿತ್ರಾಣಗೊಂಡಿವೆ. ಅವುಗಳಲ್ಲಿ ಪ್ರಮುಖವಾದವು ರೈತ‑ದಲಿತ, ಕಾರ್ಮಿಕ ಮತ್ತು ಕನ್ನಡ ಚಳವಳಿಗಳು. ರಾಜ್ಯದ ರೈತ ಚಳವಳಿಯ ಇತಿಹಾಸ ಏಳು ಬೀಳುಗಳ ಇತಿಹಾಸವಾಗಿದೆ. ಸಮಾಜವಾದಿಗಳು, ಕಮ್ಯುನಿಸ್ಟರು ರೈತ ಚಳವಳಿಯನ್ನು ಸಂಘಟಿಸಿದವರಲ್ಲಿ ಪ್ರಮುಖರು. ಕಾಗೋಡು ಸತ್ಯಾಗ್ರಹ, ಸಂಡೂರು ರೈತ ಹೋರಾಟ, ನರಗುಂದ‑ನವಲಗುಂದ ರೈತರ ಚಳವಳಿ, ಕಾವೇರಿ‑ತುಂಗಭದ್ರಾ ನದಿ ಪಾತ್ರದ ರೈತರ ಹೋರಾಟಗಳು ರೈತ ಸಂಘಟನೆಯಲ್ಲಿರುವ ಅಸ್ಪಷ್ಟತೆಗೆ, ತಾತ್ವಿಕ ಗೊಂದಲಗಳಿಗೆ ನಿದರ್ಶನ. ರೈತ ಚಳವಳಿಯೂ ತಾತ್ವಿಕ ಗೊಂದಲ ಮತ್ತು ವೈಯಕ್ತಿಕ ಪ್ರತಿಷ್ಠೆಗಳಿಂದಾಗಿ ಸೊರಗಿದೆ. ಅನೇಕ ಹೋರಾಟಗಳನ್ನು ಹಮ್ಮಿಕೊಂಡೂ ಜಾಗತೀಕರಣದ ಯುಗದಲ್ಲಿ ಅನೇಕ ಒತ್ತಡಗಳಿಗೆ ಒಳಗಾಗಿ, ಹಲವಾರು ಪ್ರಯೋಗಗಳಲ್ಲಿ ತೊಡಗಿದಂತೆ ಕಾಣುತ್ತಿದೆ. ಆ ನಿಟ್ಟಿನಲ್ಲಿ ದಲಿತ ಸಂಘಟನೆಗಳೊಂದಿಗೆ ಒಂದು ಪ್ರಮುಖ ರೈತ ಸಂಘಟನೆ ಕೈಜೋಡಿಸಿ ಕಟ್ಟಲು ಪ್ರಯತ್ನಿಸುತ್ತಿರುವ ‘ಸರ್ವೋದಯ ಕರ್ನಾಟಕ ಪಕ್ಷ’ ಒಂದು ಪ್ರಯೋಗ. 1970ರಲ್ಲಿ ರಾಜ್ಯದೆಲ್ಲೆಡೆ ದಲಿತರಲ್ಲಿ ಮೂಡುತ್ತಿದ್ದ ಜಾಗೃತಿಯ ಕುರು ಹಾಗಿ ದಲಿತ ಸಂಘಟನೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ ಬಿ.ೊಶ್ಯಾಮಸುಂದರ್, ಮೈಸೂರು ಭಾಗದಲ್ಲಿ ಬಿ.ಕೃಷ್ಣಪ್ಪ  ಈ ಸಂಘಟನೆ ಗಳ ಹುಟ್ಟಿಗೆ ಕಾರಣಕರ್ತರಾದರು. ಇದರ ಹಿನ್ನೆಲೆಗೆ ಬಸವಲಿಂಗಪ್ಪನವರ ಬೂಸಾ ಪ್ರಕರಣವಿತ್ತು. ಶ್ಯಾಮಸುಂದರ್ ಅವರ ‘ಭೀಮಸೇನೆ’ ಸರ್ಕಾರದಿಂದ ‘ಮಿಲಿಟೆಂಟ್’ ಎನ್ನಿಸಿಕೊಂಡೂ, ಕೃಷ್ಣಪ್ಪನವರ ನೇತೃತ್ವದ ‘ದಲಿತ ಸಂಘರ್ಷ ಸಮಿತಿ’ ಸಿದ್ಧಾಂತ  ಮತ್ತು ಹೋರಾಟ ಎರಡಕ್ಕೂ ಪ್ರಾಮುಖ್ಯತೆ ನೀಡಿತು. ಆ ಮೂಲಕ ರಾಜ್ಯ‑ಹೊರ ರಾಜ್ಯಗಳ ಕೆಲವು ಪ್ರಗತಿ ಪರರನ್ನು ತನ್ನೆಡೆಗೆ ಆಕರ್ಷಿಸಿದುದರ ಜೊತೆಗೆ ಹಲವು ಕಡೆಗಳಲ್ಲಿ ಸೈದ್ಧಾಂತಿಕ ಶಿಬಿರಗಳನ್ನೂ ಏರ್ಪಡಿಸಿದ್ದು ಒಂದು ದಶಕಕ್ಕೂ ಹೆಚ್ಚುಕಾಲ ಅತ್ಯಂತ ಕ್ರಿಯಾಶೀಲವಾಗಿದ್ದ ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ಅನೇಕ ಯುವ ಮುಖಂಡರನ್ನು ಸೈದ್ಧಾಂತಿಕವಾಗಿ ಬೆಳೆಸಿತು. ಕೃಷಿ ಕೂಲಿಗಳ, ನಗರ ಕಾರ್ಮಿಕರ ಸಮಸ್ಯೆಗಳನ್ನು ಎತ್ತಿಕೊಂಡು ಹೋರಾಟಗಳನ್ನು ನಡೆಸಿತು. ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ಉತ್ತು‑ಬಿತ್ತುತ್ತಿದ್ದ ದಲಿತ ನಿರ್ಗತಿ ಕರಿಗೆ ಆ ಭೂಮಿಯನ್ನು ಶಾಶ್ವತವಾಗಿ ಅವರಿಗೇ ಬಿಡುವಂತೆ ಒತ್ತಾಯಿಸಿ ಚಳವಳಿ ಹಮ್ಮಿಕೊಂಡು ಹಲವಾರು ಕಡೆ ಯಶಸ್ವಿಯಾಯಿತು. ರಾಜ್ಯದ ಎಲ್ಲ ಕಡೆ ದಲಿತ ಸಂಘರ್ಷ ಸಮಿತಿ(ಡಿ.ಎಸ್.ಎಸ್)ಯ ಶಾಖೆಗಳು ಹುಟ್ಟಿಕೊಂಡವು. ಸಂಘಟನೆಗೆ ರಾಜ್ಯಮಟ್ಟದ ಸಮಿತಿಯೂ ರಚಿತವಾಯಿತು. ಶಕ್ತಿಶಾಲಿ ಲೇಖಕರಾದ ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಗೋವಿಂದಯ್ಯ ಮುಂತಾದವರ ಮಾರ್ಗದರ್ಶನವೂ ಅದಕ್ಕೆ ದೊರೆಯಿತು. ಸಾಂಸ್ಕೃತಿಕ ನೆಲೆಗಟ್ಟು ಯಾವುದೇ ಚಳವಳಿಗೆ ಮುಖ್ಯವೆಂದು ತಿಳಿದಿದ್ದ ನಾಯಕತ್ವ ಆ ನಿಟ್ಟಿನಲ್ಲಿಯೂ ಗಮನಾರ್ಹ ಕೆಲಸ ಮಾಡಿತು. ಹಾಗೆ ನೋಡಿದರೆ ಬಂಡಾಯ, ದಲಿತ ಸಾಹಿತ್ಯ ಚಳವಳಿಗಳು ಶೋಷಿತ ಸಮುದಾಯದಲ್ಲಿ ಮೂಡಿದ ಎಚ್ಚರದ ಪ್ರತೀಕಗಳೇ. ಬಾಬಾ ಸಾಹೇಬ್ ಅಂಬೇಡ್ಕರರ ಹೋರಾಟ ತಾತ್ವಿಕತೆಗಳು ಈ ಚಳವಳಿಗೆ ಸ್ಫೂರ್ತಿ ನೀಡಿದವು. ಆದರೆ 1990ರ ದಶಕದಲ್ಲಿ ದಲಿತ ಚಳವಳಿ ಹಲವು ಸೈದ್ಧಾಂತಿಕ ಮತ್ತು ವ್ಯಕ್ತಿನಿಷ್ಠ ಒತ್ತಡ-ಗೊಂದಲಗಳಿಗೆ ಒಳಗಾಯಿತು. ರಾಜ್ಯದ ಅಧಿಕಾರ ರಾಜಕಾರಣದ ಕಾಣದ ಕೈಗಳು ಅಲ್ಲಿ ಕೆಲಸ ಮಾಡಿದಂತೆ ಕಾಣುತ್ತದೆ. ರಾಷ್ಟ್ರಮಟ್ಟದಲ್ಲಿ ಬಹುಜನ ಸಮಾಜ ಪಕ್ಷದ ಸ್ಥಾಪನೆ ರಾಜ್ಯದ ದಲಿತ ಚಳವಳಿಗೆ ಬೇರೊಂದು ಆಯಾಮವನ್ನು ಒದಗಿಸಿತು. ಒಟ್ಟಾರೆ ರಾಜ್ಯದಲ್ಲಿ ಈಗ ಹಲವಾರು ದಲಿತ ಸಂಘಟನೆಗಳಿವೆ. ಪ್ರತಿ ರಾಜಕೀಯ ಪಕ್ಷವೂ ತಮ್ಮದೇ ಆದ ದಲಿತ ಘಟಕಗಳನ್ನು ಸ್ಥಾಪಿಸಿಕೊಂಡಿವೆ. ಆದರೆ ದಲಿತ ಸಂಘರ್ಷ ಸಮಿತಿಗಳು ಇಂದಿಗೂ ಹಲವಾರು ಸಮಸ್ಯೆಗಳನ್ನು ಎತ್ತಿಕೊಂಡು ಕ್ರಿಯಾಶೀಲವಾಗಿವೆ.

ಜಾಗತೀಕರಣ‑ಉದಾರೀಕರಣ‑ಮಾರುಕಟ್ಟೆ, ಆರ್ಥಿಕತೆ, ರೈತ‑ದಲಿತ‑ಕನ್ನಡ ಚಳವಳಿಗಳ ಮೇಲೆ ಅಪಾರ ಒತ್ತಡ ಹೇರಿದೆ. ಅದರೊಂದಿಗೆ ಸಮರ್ಥವಾಗಿ ಅನುಸಂಧಾನ ನಡೆಸಬೇಕಾದ ತುರ್ತು ಇದೆ. ಸಾರ್ವಜನಿಕ ಕ್ಷೇತ್ರದಲ್ಲಿನ ಮೀಸಲಾತಿ ಮುಂತಾದ ಅವಕಾಶಗಳು ಕ್ಷೀಣಿಸುತ್ತಿವೆ. ಖಾಸಗಿ ಕ್ಷೇತ್ರ ಮೀಸಲಾತಿಗೆ ವಿರುದ್ಧವಾಗಿದೆ. ಕೃಷಿ ಕ್ಷೇತ್ರ ಅವಗಣನೆಗೆ ಒಳಗಾಗಿ ಕಷ್ಟ ನಷ್ಟಕ್ಕೆ ಈಡಾಗಿದೆ. ರೈತರು ಸಾವಿರಾರು ಸಂಖ್ಯೆಯಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಜಾಗತೀಕರಣದ ಹೊಡೆತದಿಂದಾಗಿ ಇಂಗ್ಲಿಷ್ ಮತ್ತು ವಿದೇಶಿ ಸರಕು ಸಂಸ್ಕೃತಿಯ ಬಗ್ಗೆ ವ್ಯಾಮೋಹ ಹೆಚ್ಚುತ್ತಿದೆ. ಈ ಮಧ್ಯೆ ಶಿಕ್ಷಣದಲ್ಲಿ ಕನ್ನಡದ ಸ್ಥಾನಮಾನದ ಬಗ್ಗೆ ವಾಗ್ವಾದ ಏರ್ಪಟ್ಟಿದೆ. ಇದು ಕೇವಲ ಭಾಷೆ ಸಂಸ್ಕೃತಿಗಳ ಪ್ರಶ್ನೆಯಲ್ಲ. ಒಂದು ರಾಜ್ಯದ ಅಭಿವೃದ್ದಿ ಪಥದ ಸಂಕೇತವೂ ಹೌದು. ದೃಶ್ಯ ಮಾಧ್ಯಮ ಆತಂಕಕಾರಿಯಾದ ಸಂಸ್ಕೃತಿಯನ್ನು ಬಿತ್ತರಿಸುತ್ತಿದೆ. ಮಾರುಕಟ್ಟೆ ಮತ್ತು ಸರಕು ಗ್ರಾಹಕ ಸಂಸ್ಕೃತಿಯೇ ವಿಜೃಂಭಿಸುವಂತೆ ಕಾಣುತ್ತಿದೆ. ಈ ಮಧ್ಯೆ ಹುಸಿ ಸ್ವದೇಶಿ, ಹುಸಿ ಧರ್ಮ, ಹುಸಿ ಸಂಸ್ಕೃತಿಗಳನ್ನು ಮಾರುಕಟ್ಟೆಯಲ್ಲಿ ಬಿಕರಿ ಮಾಡಲು ಕೆಲವು ಶಕ್ತಿಗಳು ಹವಣಿಸುತ್ತಿವೆ. ನಿಜ ದೇಶಿ, ನಿಜ ರಾಷ್ಟ್ರ ಸಂಸ್ಕೃತಿಗಳು ನೇಪಥ್ಯಕ್ಕೆ ಸರಿಯುತ್ತಿವೆ. ಅದಕ್ಕೆ ನಿಜವಾಗಿಯೂ ದಕ್ಕಬೇಕಾದ ಪ್ರಾಮುಖ್ಯತೆಯನ್ನು ತಂದುಕೊಡುವುದು ರೈತ‑ದಲಿತ‑ಭಾಷಾ ಚಳವಳಿಗಳಿಗೆ ಮಾತ್ರ ಸಾಧ್ಯ.

ಪ್ರಸ್ತುತ ‘ಕರ್ನಾಟಕ ಅಭಿವೃದ್ದಿರಂಗ’ದ ಸರ್ಕಾರ ಅಧಿಕಾರ ನಡೆಸುತ್ತಿದೆ. ಇಡೀ ರಾಷ್ಟ್ರದ ಮುಂದೆ ಇದ್ದಂತೆಯೇ, ಕರ್ನಾಟಕಕ್ಕೂ ಹಲವಾರು ಪ್ರಶ್ನೆಗಳಿದ್ದು, ಅವಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆ ಒಂದು ಅಂದಾಜಿನಂತೆ ಶೇ.40ರಷ್ಟಿದೆ. ಜಾಗತೀಕರಣದಿಂದಾಗಿ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಇದರ ಒತ್ತಡ ಇನ್ನೂ ಹೆಚ್ಚಾಗುವ ಸಂಭವವಿದೆ. ಇಂದಿನ ‘ವಿಶೇಷ ಆರ್ಥಿಕ ವಲಯ’ಗಳೂ ಅಗತ್ಯ ಎಚ್ಚರ ವಹಿಸದಿದ್ದರೆ ಗ್ರಾಮೀಣರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸುವ ಸಾಧ್ಯತೆಯಿದೆ. ಮೂಲಭೂತ ಶಿಕ್ಷಣ ಅಪಾಯದ ಅಂಚಿನಲ್ಲಿದೆ. ವ್ಯಕ್ತಿಯನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ‑ನಾಗರಿಕರನ್ನಾಗಿ ರೂಪುಗೊಳಿಸುವ ಸಮಾಜವಿಜ್ಞಾನಗಳು ಮತ್ತು ಮೂಲಭೂತ ವಿಜ್ಞಾನಗಳಿಗೆ ಆದ್ಯತೆ ಸಿಗುತ್ತಿಲ್ಲ. ಖಾಸಗಿ ಒಡೆತನದ ಶಿಕ್ಷಣ ಸಂಸ್ಥೆಗಳು ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ತರಾತುರಿಯಲ್ಲಿ ಶಿಕ್ಷಣವನ್ನು ವಾಣಿಜ್ಯೀಕರಣಗೊಳಿಸುತ್ತಿವೆ. ಪರಿಣಾಮವೆಂದರೆ ಬಡ‑ದಲಿತ ಸಮುದಾಯ ಈ ಶಿಕ್ಷಣದಿಂದ ವಂಚಿತವಾಗುತ್ತಿವೆ. ಈ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿದ್ದ ವಿಕೇಂದ್ರೀಕೃತ ವ್ಯವಸ್ಥೆ, ರಾಜಕೀಯ ಒತ್ತಡಗಳಿಂದಾಗಿ ಕೇಂದ್ರೀಕೃತವಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಅಧಿಕಾರಶಾಹಿ ರಾಜಕಾರಣಿಗಳ ಏಕಸ್ವಾಮ್ಯಕ್ಕೆ ಒಳಗಾಗುತ್ತಿದ್ದರೆ, ಖಾಸಗಿ ವಲಯದ ಶಿಕ್ಷಣ ವಿದ್ಯೆಯ ವ್ಯಾಪಾರಗಳಿಂದ ನಿಯಂತ್ರಿಸಲ್ಪಡುತ್ತಿದ್ದು, ಅದು ಒಂದು ಬಲಿಷ್ಠ ಲಾಬಿಯಾಗಿ ಸರ್ಕಾರವನ್ನೇ ನಿಯಂತ್ರಿಸುವ ಶಕ್ತಿ ಪಡೆದುಕೊಂಡಿವೆ. ವಿವಿಧ ಕ್ಷೇತ್ರಗಳಲ್ಲಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವ ಲಾಬಿಗಳು ರಾಜಕೀಯ ಮತ್ತು ಆಡಳಿತವನ್ನು ಪ್ರತ್ಯಕ್ಷವಾಗಿ ಪರೋಕ್ಷವಾಗಿ ತಮ್ಮ ತೆಕ್ಕೆಗೆ ತೆಗೆದುಕೊಂಡಿವೆ. ಮೇಲ್ನೋಟಕ್ಕೆ ಈ ಎಲ್ಲವೂ ಒಂದು ರೀತಿಯ ‘ಅಭಿವೃದ್ದಿ’ಗೆ ಕಾರಣಗಳೆಂದು ಹೇಳುತ್ತಿದ್ದರೂ ರಾಜ್ಯದ ಬಹುಸಂಖ್ಯಾತ ಜನತೆಯ ಮೇಲೆ ಅವುಗಳ ದೀರ್ಘಕಾಲೀನ ಪರಿಣಾಮಗಳು ಮಾತ್ರ ದುರ್ಭರವಾಗುವ ಸಾಧ್ಯತೆ ಹೆಚ್ಚಿದೆ.

ಬಡವ‑ಶ್ರೀಮಂತರ ನಡುವೆ ಅಂತರ ಹೆಚ್ಚುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು, ಆರ್ಥಿಕ‑ವಾಣಿಜ್ಯ ಸಂಸ್ಥೆಗಳ ನಿಬಂಧನೆಗಳು ಮಾರುಕಟ್ಟೆ ಆರ್ಥಿಕತೆ ನಿರುದ್ಯೋಗ ಹೆಚ್ಚಲು ಕಾರಣವಾಗಿವೆ. ಕೃಷಿ ಯೋಗ್ಯ ಭೂಮಿ ಮತ್ತಿತರ ನೈಸರ್ಗಿಕ ಸಂಪತ್ತು ದೇಶ ವಿದೇಶ ಬಂಡವಾಳ ಹೂಡಿಕೆಗೆ ಅಧೀನವಾಗಿ ಬಳಕೆಯಾಗುತ್ತಿದೆ. ಫಲಿತಾಂಶವೆಂದರೆ ತೀವ್ರಗಾಮಿತ್ವ, ಭಯೋತ್ಪಾದಕತೆ, ನಕ್ಸಲೈಟ್ ಚಳವಳಿಗಳು ಹಬ್ಬುತ್ತ ಹಿಂಸೆಗೆ ಹಾದಿ ಮಾಡಿಕೊಡುತ್ತಿವೆ. ಇವೆಲ್ಲ ಬಹುಸಂಖ್ಯಾತರ ಪಾಲಿಗೆ, ನೈಜ ಜನತಂತ್ರ, ಪ್ರಗತಿಗೆ ನೇಣಿನ ಕುಣಿಕೆಗಳಾಗುವ ಅಪಾಯವಿದೆ. ಎಚ್ಚರಿಕೆಯ ಗಂಟೆಗಳು ಮೊಳಗುತ್ತಿವೆ. ಅದನ್ನು ಕೇಳುವ ಕಿವಿಗಳು ನೋಡುವ ಕಣ್ಣುಗಳು ಎಲ್ಲರಿಗೂ ವಿಶೇಷವಾಗಿ ರಾಜಕೀಯ ನಾಯಕತ್ವಕ್ಕೆ ತೆರೆದುಕೊಂಡಿರಬೇಕಾದ ತುರ್ತು ಇದೆ. ಹಾಗೆಯೇ ಈ ಸಮಸ್ಯೆಗಳಿಗೆ ಪರಿಹಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಪರಾಮರ್ಶನ ಗ್ರಂಥಗಳು

1. ಚಂದ್ರಶೇಖರ್ ಎಸ್., 2002. ಆಧುನಿಕ ಕರ್ನಾಟಕದ ಆಂದೋಲನಗಳು, ತಿಪಟೂರು: ನಮ್ಮ ಪ್ರಕಾಶನ.

2. ಚಂದ್ರಶೇಖರ್ ಎಸ್., 2005. ಏಕೀಕರಣ : ಒಂದು ಕಥನ, ಬೆಂಗಳೂರು : ಕನ್ನಡ ಪುಸ್ತಕ ಪ್ರಾಧಿಕಾರ.

3. ಕರಿಗೌಡ ಬೀಚನಹಳ್ಳಿ(ಸಂ), 1995. ಕನ್ನಡ ಅಧ್ಯಯನ : ಭವಿಷ್ಯದ ಕರ್ನಾಟಕ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

4. ತಂಬಂಡ ವಿಜಯ್ ಪೂಣಚ್ಚ ಮತ್ತು ಇತರರು (ಸಂ), 2001. ಚರಿತ್ರೆ, ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ 4, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

5. ಗಂಗಾರಾಂ ಚಾಂಡಾಳ, 1992. ಕರ್ನಾಟಕ ದಲಿತ ಚಳವಳಿ ಮತ್ತು ಬಿ.ಆರ್. ಅಂಬೇಡ್ಕರ್, ಚಿಕ್ಕತಿರುಪತಿ: ಚೈತ್ರ ಪ್ರಕಾಶನ.

6. ಮುಜಾಫರ್ ಅಸ್ಸಾದಿ, 1997. ಪೆಸೆಂಟ್ ಮೂವ್‌ಮೆಂಟ್ಸ್ ಇನ್ ಕರ್ನಾಟಕ, ದೆಹಲಿ,

7. ರಾಜಶೇಖರ್ ಜಿ., 1987. ಕಾಗೋಡು ಸತ್ಯಾಗ್ರಹ, ಸಾಗರ: ಅಕ್ಷರ ಪ್ರಕಾಶನ.

8. ತಿಮ್ಮಯ್ಯ. ಜಿ. ಮತ್ತು ಅಬ್ದುಲ್ ಅಜೀಜ್, 1984. ಪೊಲಿಟಿಕಲ್ ಎಕಾನಮಿ ಆಫ್ ಲ್ಯಾಂಡ್ ರಿಫಾರ್ಮ್ಸ್, ನ್ಯೂಡೆಲ್ಲಿ: ಆಶಿಶ್ ಪಬ್ಲಿಷಿಂಗ್ ಹೌಸ್.