[* ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು 2005ರಲ್ಲಿ ಪ್ರಕಟಿಸಿದ ಹೊನ್ನಾರು ಮಾಲೆ ಎಂಬ ಮಾಲಿಕೆಯಲ್ಲಿ ಡಾ.ಪಾಟೀಲ ಪುಟ್ಟಪ್ಪ ಅವರು ರಚಿಸಿದ ‘‘ಕನ್ನಡ ನಾಡು ನುಡಿ’’ ಎಂಬ ಕೃತಿಯಿಂದ ಪ್ರಸ್ತುತ ಲೇಖನವನ್ನು ಆಯ್ದುಕೊಳ್ಳಲಾಗಿದೆ. ಈ ಲೇಖನವನ್ನು ಪ್ರಕಟಿಸಲು ಒಪ್ಪಿಗೆ ನೀಡಿದ ಲೇಖಕರಿಗೆ ಕೃತಜ್ಞತೆಗಳು -ಸಂ.ಏ]

ಗೋಕಾಕ ವರದಿಯ ಅನುಷ್ಠಾನಕೋಸ್ಕರ 1982ರಲ್ಲಿ ಕರ್ನಾಟಕದ ಉದ್ದಗಲಗಳಲ್ಲೆಲ್ಲ ಒಂದು ಅಭೂತಪೂರ್ವ ಹೋರಾಟ ನಡೆಯಿತು. ಯುವ ಪೀಳಿಗೆಗೆ ಸೇರಿದವರಿಗೆ ಆ ಹೋರಾಟದ ಬಗೆಗೆ ಏನೂ ತಿಳಿಯದು. ಅವರಲ್ಲಿ ಅನೇಕರು ಗೋಕಾಕ ವರದಿ ಅಂದರೇನು? ಅದಕೋಸ್ಕರ ಏಕೆ ಹೋರಾಟ ನಡೆಯಿತು? ಎಂದು ಹತ್ತು ಹಲವು ಪ್ರಶ್ನೆ ಕೇಳಿದ್ದಾರೆ.

ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಅನುಷ್ಠಾನಗೊಳಿಸುವುದಕ್ಕೋಸುಗ ಆ ಹೋರಾಟ ನಡೆಯಿತೆಂದು ಹೇಳಿ ಬಿಟ್ಟರೆ ಅದರ ಬಗೆಗೆ ಏನನ್ನೂ ಹೇಳಿದಂತೆ ಆಗುವುದಿಲ್ಲ. ಈ ರಾಜ್ಯ ನಿರ್ಮಾಣಗೊಂಡ ಮೇಲೆ ಕರ್ನಾಟಕದ ಸಿಂಹಾಸನವನ್ನು ಕನ್ನಡವೇ ಅಲಂಕರಿಸಬೇಕಾಗಿದ್ದಿತು. ಚೆಲುವ, ಕನ್ನಡ ನಾಡಿನಲ್ಲಿ ಕನ್ನಡವು ಇಲ್ಲದೇ ಹೋದರೆ, ಈ ಕನ್ನಡನಾಡು ಚೆಲುವಾಗಿ ಉಳಿಯುವುದು ಸಾಧ್ಯವಿಲ್ಲ. ಇಲ್ಲಿ ನಾನು ಕನ್ನಡಕ್ಕೋಸುಗ ನಡೆದ ಹೋರಾಟವನ್ನು ವಿವರಿಸಬೇಕೆಂದಿದ್ದೇನೆ.

ಕರ್ನಾಟಕವು ಭಾರತದ ಒಂದು ಬಹು ಪ್ರಾಚೀನ ಜನಪದ. ಕನ್ನಡ ಭಾಷೆ ಬಹು ವ್ಯಾಪಕವಾದ ಕ್ಷೇತ್ರವನ್ನು ಆವರಿಸಿಕೊಂಡಿದ್ದಿತು. ಕಾವೇರಿಯಿಂದ ಗೋದಾವರಿಯವರೆಗೆ ಅದರ ವ್ಯಾಪ್ತಿ ಇದ್ದಿತು. ಇಲ್ಲಿ ನಾನು ಆ ಹಳೆಯ ಇತಿಹಾಸವನ್ನು ಹೇಳಲು ಹೋಗು ವುದಿಲ್ಲ. ಮಹತ್ವದ ಕೆಲ ಸಂಗತಿಗಳ ಬಗ್ಗೆ ಸ್ಥೂಲ ಉಲ್ಲೇಖವನ್ನು ಮಾತ್ರ ನಾನು ಮಾಡುತ್ತೇನೆ. ಕ್ರಿಸ್ತಶಕದ ಆರಂಭ ಕಾಲದ ಒಂದು ಗ್ರೀಕ್ ನಾಟಕದಲ್ಲಿ ಕನ್ನಡ ಮಾತುಗಳು ಉಧೃತಗೊಳ್ಳಬೇಕಾದರೆ, ಆ ಕಾಲದಲ್ಲಿಯೇ ಕನ್ನಡ ಭಾಷೆ ಪ್ರಗಲ್ಭ ಸ್ಥಿತಿಗೆ ಬಂದು ಪ್ರಾಮುಖ್ಯತೆ ಪಡೆದಿರಲೇಬೇಕು. ಕನ್ನಡದ ಬೇರುಗಳು ಬಹು ವಿಶಾಲವಾದ ಪ್ರದೇಶದ ತುಂಬೆಲ್ಲ ಹಬ್ಬಿಕೊಂಡಿದ್ದವು. ತೀರ ಇತ್ತೀಚೆಗೆ, ಈ ಶತಮಾನದ ಆರಂಭ ಕಾಲದಲ್ಲಿ ಲೋಕಮಾನ್ಯ ಟಿಳಕರು, ಬೆಳಗಾವಿ ಜಿಲ್ಲೆಯ ಗುರ್ಲ ಹೊಸೂರಿನಲ್ಲಿ, ಸಮಾವೇಶಗೊಂಡಿದ್ದ ಕರ್ನಾಟಕ ರಾಜಕೀಯ ಪರಿಷತ್ತಿನಲ್ಲಿ ಹೇಳಿದ ಮಾತುಗಳನ್ನು ನೆನೆದರೆ ನಮ್ಮ ಮನಸ್ಸು ಜುಮ್ಮೆನ್ನುತ್ತದೆ. ದೇಹ ರೋಮಾಂಚನಗೊಳ್ಳುತ್ತದೆ. ಒಂದು ಕಾಲಕ್ಕೆ ಎರಡೂ ಪ್ರದೇಶಗಳ ಜನರು ಆಡುವ ಭಾಷೆ ಒಂದೇ ಆಗಿದ್ದಿತು. ಅದು ಕನ್ನಡವಾಗಿದ್ದಿತು. ಕನ್ನಡ ಭಾಷೆಯನ್ನು ಆಡುತ್ತಿದ್ದ ಪ್ರದೇಶದಲ್ಲಿ ಬೇರೆ ಭಾಷೆ ಆಡುವ ಜನರ ಪ್ರಭುತ್ವ ಬಂದ ಮೇಲೆ, ಕನ್ನಡದ ಮೇಲೆ ದಾಳಿ ನಡೆದು ಕರ್ನಾಟಕವು ಕೂಡ ಆಕುಂಚನಗೊಂಡಿತು. ದೊಡ್ಡ ಮಾರ್ಗ ಎನ್ನುವ ಕನ್ನಡ ಹೆಸರನ್ನು ಇಂದಿಗೂ ಇರಿಸಿಕೊಂಡಿರುವ ಸಾವಂತವಾಡಿ, ವೆಂಗುರ್ಲಾ ಕರ್ನಾಟಕದ್ದಾಗಿ ಉಳಿಯಲಿಲ್ಲ. ‘ದೊಡ್ಡ ಬೆಟ್ಟ’ವನ್ನು ಪಡೆದಿರುವ ನೀಲಗಿರಿ ಕರ್ನಾಟಕಕ್ಕೆ ಕಳೆದು ಹೋಯಿತು. ಅಚ್ಚಗನ್ನಡ ಪ್ರದೇಶವಾದ ಕಾಸರಗೋಡು ಕರ್ನಾಟಕದ ಕೈ ತಪ್ಪಿ ಹೋದುದು ಕನ್ನಡದ ಕರುಳು ಕಿತ್ತು ಬರುವ ಹೃದಯವಿದ್ರಾವಕ ಸಂಗತಿಯಾಗಿದೆ. 1956ರಲ್ಲಿ ಅಳಿದುಳಿದ ಕರ್ನಾಟಕ ಒಂದುಗೂಡಿ ನಮ್ಮ ರಾಜ್ಯ ನಿರ್ಮಾಣಗೊಂಡಿತು. ಹೊರಗೆ ಹೋದ ಕರ್ನಾಟಕ ಪ್ರದೇಶದಲ್ಲಿ ಕನ್ನಡದ ಅವಸ್ಥೆ ಏನು ಎನ್ನುವುದು ಪ್ರತ್ಯೇಕ ಪ್ರಶ್ನೆ. ಆದರೆ, ಕರ್ನಾಟಕವೆನಿಸಿದ ಪ್ರದೇಶದಲ್ಲಿ ಕನ್ನಡವನ್ನು ವ್ಯವಸ್ಥಿತವಾಗಿ ಹೇಗೆ ಉಳಿಸಿಕೊಳ್ಳ ಬೇಕೆನ್ನುವುದು ನಮ್ಮೆದುರು ಇರುವ ಪ್ರಚಲಿತ ಪ್ರಶ್ನೆ. ಫಜಲಾಲಿ ಆಯೋಗವು ಪ್ರಾಮುಖ್ಯವಾಗಿ ಭಾಷೆಯ ತಳಹದಿಯ ಮೇಲೆಯೇ ರಾಜ್ಯಗಳನ್ನು ಪುನರ್ಘಟಿಸುವ ತೀರ್ಮಾನ ಕೈಕೊಂಡಿತು. ಅದರ ಶಿಫಾರಸುಗಳ ಆಧಾರದ ಮೇಲೆ ಮಸೂದೆ ರಚನೆಗೊಂಡು ಪಾರ್ಲಿಮೆಂಟ್ ನೂತನ ರಾಜ್ಯ ನಿರ್ಮಿಸುವ ಕಾನೂನು ಮಾಡಿತು. ಈ ನೂತನ ರಾಜ್ಯಗಳು ಭಾಷೆಯ ತಳಹದಿಯ ಮೇಲೆಯೇ ನಿರ್ಮಾಣಗೊಂಡವು ಎಂದಾಗ, ಆಯಾ ರಾಜ್ಯದಲ್ಲಿ ಅಲ್ಲಿಯ ಭಾಷೆಗೆ ಪ್ರಾಧಾನ್ಯತೆ ಇರಬೇಕೆನ್ನುವುದು ಸುಸ್ಪಷ್ಟ. ಮಹಾರಾಷ್ಟ್ರದಲ್ಲಿ ಮರಾಠಿಗೆ, ಆಂಧ್ರ ಪ್ರದೇಶದಲ್ಲಿ ತೆಲುಗಿಗೆ, ತಮಿಳುನಾಡಿನಲ್ಲಿ ತಮಿಳಿಗೆ, ಕೇರಳದಲ್ಲಿ ಮಲಯಾಳಂ ಭಾಷೆಗೆ ಆದ್ಯತೆ ಇರುವಂತೆ, ಕರ್ನಾಟಕದಲ್ಲಿ ಕನ್ನಡ ಭಾಷೆಗೇ ಆದ್ಯತೆ ಇರಬೇಕು.

ಭಾಷಾ ರಾಜ್ಯಗಳೊಂದಿಗೆ ಭಾಷಾ ಅಲ್ಪಸಂಖ್ಯಾತರೂ ಕೂಡ ತಮ್ಮ ಸೂಕ್ಷ್ಮ ಮೋಕ್ಷ ತಾವಿರುವ ರಾಜ್ಯದ ಭಾಷೆಯೊಂದಿಗೇ ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದ್ದಿತು. ಆದರೆ ಕರ್ನಾಟಕದಲ್ಲಿರುವ ಬಹಳಷ್ಟು ಜನ ಈ ಭಾಷಾ ಅಲ್ಪಸಂಖ್ಯಾತರು ತಿಳಿದುಕೊಳ್ಳಲೇ ಇಲ್ಲ. ಅವರು ರಾಜ್ಯದ ಮುಖ್ಯ ಭಾಷಾ ಪ್ರವಾಹದಿಂದ ದೂರದಲ್ಲಿಯೇ ಇದ್ದವರಂತೆ ಬದುಕಿದ್ದಾರೆ. ಕೆಲ ವರ್ಷಗಳ ಹಿಂದೆ ಆಗ ರಾಷ್ಟ್ರಪತಿ ಆಗಿದ್ದ ಗ್ಯಾನಿ ಜೇಲ್‌ಸಿಂಗರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಕರ್ನಾಟಕದ ಕೆಲ ಭಾಷಾ ಅಲ್ಪಸಂಖ್ಯಾತರು ಒಂದು ಮನವಿ ಅರ್ಪಿಸಿ ಕನ್ನಡದ ಬಗೆಗೆ, ಕರ್ನಾಟಕದ ಬಗೆಗೆ ತಮಗಿರುವ ಅಸಹನೆಯನ್ನು ಬಹಿರಂಗವಾಗಿ ಪ್ರದರ್ಶನ ಮಾಡಿದರು. ಅವರ ಬೇಡಿಕೆಯನ್ನು ಕ್ರೋಡೀಕರಿಸಿ ಈ ರೀತಿ ಹೇಳಬಹುದು. ಇದು ಕರ್ನಾಟಕ ಹೌದು, ಆದರೆ ಕನ್ನಡ ರಾಜ್ಯ ಅಲ್ಲ. ನಮಗೆ ಇಂಗ್ಲೀಷು ಹಿಂದೀ ಕಲಿಯುವುದಕ್ಕೆ ಅವಕಾಶ ಇರಬೇಕು. ಕನ್ನಡವನ್ನಂತೂ ನಮಗೆ ಕಲಿಸಲೇ ಕೂಡದು. ಬೆಂಗಳೂರಿನಲ್ಲಿ ನಮಗೆ ಆರಕ್ಷಣೆ ಎನಿಸುತ್ತದೆ. ಆದುದರಿಂದ ಬೆಂಗಳೂರನ್ನು ಕೇಂದ್ರದ ಆಡಳಿತಕ್ಕೆ ಒಳಪಡಿಸಬೇಕು. ಭಾಷಾ ಅಲ್ಪಸಂಖ್ಯಾತರು ಬೇರೆ ರಾಜ್ಯಗಳಲ್ಲಿಯೂ ಇದ್ದಾರೆ. ಅಲ್ಲಿ ಯಾರೂ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರು ಹೋದಷ್ಟು ದೂರ ಹೋಗಿಲ್ಲ. ಅವರು ತಾವಿರುವ ರಾಜ್ಯದ ಭಾಷೆಯೊಂದಿಗೆ ಬೆರೆತು ಸಮರಸಗೊಂಡು ಹೋಗಿದ್ದಾರೆ. ಮಹಾರಾ್ಟ್ರದಲ್ಲಿ ಅವರು ಮರಾಠಿ ಆಗಿದ್ದಾರೆ. ಆಂಧ್ರ ಪ್ರದೇಶದಲ್ಲಿ ಅವರು ತೆಲುಗು ಆಗಿದ್ದಾರೆ. ತಮಿಳುನಾಡಿನಲ್ಲಿ ತಮಿಳು ಆಗಿದ್ದಾರೆ. ಕೇರಳದಲ್ಲಿ ಮಲಯಾಳಿ ಆಗಿದ್ದಾರೆ. ತಮಿಳುನಾಡಿನ ಮಸೀದಿಗಳಲ್ಲಿ ತಮಿಳು ಭಾಷೆಯಲ್ಲಿ ಕುರಾನ್ ಪಠನ ನಡೆಯುತ್ತದೆ. ಅದೇ ರೀತಿ, ಕೇರಳದಲ್ಲಿ ಮಸೀದಿಯ ಬೋಧ ಭಾಷೆ ಮಲಯಾಳಂ ಆಗಿದೆ. ಮಹಾರಾಷ್ಟ್ರದಲ್ಲಿ ಚರ್ಚಿನ ಭಾಷೆ ಮರಾಠಿ ಆಗಿರುವುದು ಪಂಡಿತ ರಮಾಬಾಯಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ತಮಿಳುನಾಡಿನಲ್ಲಿ ಚರ್ಚಿನ ಬೋಧೆ ಪ್ರಾರ್ಥನೆಗಳೆಲ್ಲವೂ ತಮಿಳಿನಲ್ಲಿಯೇ ನಡೆಯುತ್ತವೆ. ಕೇರಳದಲ್ಲಿ ಇದು ಉದ್ದಕ್ಕೂ ನಡೆದುಕೊಂಡು ಬಂದಿದೆ. ಕರ್ನಾಟಕದಲ್ಲಿ ಕೂಡ ಬಹುತೇಕವಾಗಿ ಎಲ್ಲ ಇಗರ್ಜಿಗಳಲ್ಲಿಯೂ ಧಾರ್ಮಿಕ ಕಾರ್ಯಗಳಲ್ಲಿ ಕನ್ನಡವೇ ಉಪಯೋಗವಾಗುತ್ತದೆ. ಬೆಂಗಳೂರಿನ ಕ್ಯಾಥೋಲಿಕ್ ಚರ್ಚು ಮಾತ್ರ ಇದಕ್ಕೆ ಅಪವಾದವಾಗಿದೆ. ಅಲ್ಲಿಯ ಧಾರ್ಮಿಕ ಸೇವೆ ಕನ್ನಡದಲ್ಲಿ ನಡೆಯಬೇಕೆಂದು ಕನ್ನಡ ಕ್ರಿಸ್ತೀಯರ ಬಹು ಬಲವಾದ ಒತ್ತಾಯ ಇದೆ.

ಈ ರಾಜ್ಯದಲ್ಲಿ ಉರ್ದು, ಮರಾಠಿ, ಮಲಯಾಳಿ, ತೆಲುಗು, ತಮಿಳು ಹಾಗೂ ಕೊಂಕಣಿ ಭಾಷೆಗಳನ್ನು ಆಡುವ ಜನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ನಿಜ, ಆದರೆ ಅದಕ್ಕೋಸುಗ ಅವರು ಕನ್ನಡದಿಂದ ಪ್ರತ್ಯೇಕ ಉಳಿಯಬೇಕಾದುದಿಲ್ಲ. ನಿಸಾರ್ ಅಹಮ್ಮದ್ ಮುಸ್ಲಿಂ ಆಗಿಯೂ ಶ್ರೇಷ್ಠ ಕನ್ನಡಿಗರಾಗಿದ್ದಾರೆ. ಬೇಂದ್ರೆ ಮರಾಠಿ ಹೌದು, ಆದರೆ ಅವರಿಗಿಂತ ಶ್ರೇಷ್ಠ ಕನ್ನಡಿಗರು ಯಾರಿದ್ದಾರೆ? ನಾ. ಕಸ್ತೂರಿ ಮಲಯಾಳಿ ಹೌದು, ಆದರೆ ಅವರು ಕನ್ನಡಿಗರಲ್ಲವೆಂದು ಯಾರು ಹೇಳಬಲ್ಲರು? ಡಿ.ವಿ.ಜಿ. ತೆಲುಗು ಹೌದು. ಆದರೆ ಕನ್ನಡಿಗರಲ್ಲವೆಂದು ಹೇಳಿದರೆ, ಅವರಿಗಿಂತ ಹೆಚ್ಚಿನ ಕನ್ನಡಿಗರನ್ನು ಎಲ್ಲಿಂದ ತರಬೇಕು? ಮಾಸ್ತಿ ತಮಿಳರು ನಿಜ. ಆದರೆ ಅವರು ಕನ್ನಡಿಗರಲ್ಲವೆಂದು ಹೇಳುವ ಎದೆಗಾರಿಕೆ ಯಾವ ಕನ್ನಡಿಗನಲ್ಲಿದೆ? ಮಂಜೇಶ್ವರ ಗೋವಿಂದ ಪೈಗಳು ಕೊಂಕಣಿಯವರು. ಆದರೆ ಅವರು ಕನ್ನಡಿಗರಿಗಿಂತಲೂ ಹೆಚ್ಚೆನಿಸುವಂತೆ ಕನ್ನಡಕ್ಕೆ ಪರಿಪೋಷಣೆಯನ್ನು ಒದಗಿಸಿಕೊಟ್ಟರು. ಉರ್ದು ಭಾಷೆಯನ್ನು ಮುಸ್ಲಿಂ ಬಾಂಧವರಲ್ಲಿ ಅನೇಕ ಜನ ಆಡುತ್ತಾರೆ. ಆದರೆ ಅವರೆಲ್ಲರ ಭಾಷೆ ಉರ್ದು ಅಲ್ಲ. ಕರ್ನಾಟಕದ ಗ್ರಾಮಾಂತರ ಪ್ರದೇಶದ ಬಹುತೇಕ ಜನ ಮುಸ್ಲಿಮರಿಗೆ ಕನ್ನಡ ಬರುವಂತೆ ಉರ್ದು ಬರಲಾರದು. ಈ ಮುಸ್ಲಿಮರು ನೃಪತುಂಗನ ಕಾಲದಿಂದಲೂ ಕನ್ನಡಿಗರೇ ಆಗಿದ್ದಾರೆ. ತನ್ನ ಮುಸ್ಲಿಂ ಪ್ರಜೆಗಳಿಗೋಸುಗ ನೃಪತುಂಗನು ಮೊಟ್ಟ ಮೊದಲನೆಯ ಮಸೀದಿಯನ್ನು ಮಳಖೇಡದಲ್ಲಿ ಕಟ್ಟಿಸಿದ ನೆನ್ನುವುದನ್ನು ಇತಿಹಾಸಕಾರ ಅಲ್ಟೇಕರ್ ತಮ್ಮ ರಾಷ್ಟ್ರಕೂಟರ ಚರಿತ್ರೆಯಲ್ಲಿ ತಿಳಿಸಿದ್ದಾರೆ. ಗುಜರಾತ್‌ದಲ್ಲಿ ಶೇಕಡಾ 15ರಷ್ಟು ಉರ್ದು ಮಾತನಾಡುವ ಜನ ಇದ್ದಾರೆ. ಆದರೆ ಅಲ್ಲಿಯ ಸರಕಾರವು ಎರಡು ಸರಕಾರೀ ಪ್ರಕಟಣೆಗಳನ್ನು ಗುಜರಾತಿ ಭಾಷೆಯಲ್ಲಿಯೇ ಹೊರತರುತ್ತಿದೆ. ವಿಷಯದ ಬಗೆಗೆ ಭಾಷಾ ಅಲ್ಪಸಂಖ್ಯಾತ ಆಯೋಗದ ಆಯುಕ್ತರು, ಸರಕಾರದ ಪ್ರಕಟಣೆಗಳು ಉರ್ದು ಭಾಷೆಯಲ್ಲಿ ಬರೆದ, ಗುಜರಾತೀ ಭಾಷೆಯಲ್ಲಿ ಮಾತ್ರವೇ ಏಕೆ ಬರುತ್ತವೆ ಎಂದು ಸರಕಾರವನ್ನು ಕೇಳಿದರು. ಆದರೆ ಗುಜರಾತ್ ಸರಕಾರ ನೀಡಿದ ಉತ್ತರ ಅತ್ಯಂತ ಗಮನಾರ್ಹವಾಗಿದೆ. ರಾಜ್ಯದಲ್ಲಿ ಉರ್ದು ಭಾಷೆಯನ್ನು ಉಪಯೋಗಿಸುತ್ತಾರೆ. ಅದನ್ನು ಯಾರೊಬ್ಬರೂ ಅಲ್ಲಗಳೆಯಲಾರರು. ಆದರೆ, ಈ ಉರ್ದು ಭಾಷೆಯನ್ನು ಆಡುವವರೆಲ್ಲರ ಮಾತೃಭಾಷೆ ಗುಜರಾಥಿಯೇ ಆಗಿರುವುದರಿಂದ, ಸರಕಾರದ ಪ್ರಕಟಣೆಗಳನ್ನು ಬೇರೆ ಭಾಷೆಯಲ್ಲಿ ಪ್ರಕಟಿಸಬೇಕಾದ ಅವಶ್ಯಕತೆ ಇಲ್ಲ”. ಕರ್ನಾಟಕದಲ್ಲಿರುವ ಮತ್ತು ತೆಲುಗು ಭಾಷೆಯ ಜನರು ಹೊರಗಿನವರೇನೂ ಅಲ್ಲ. ಅವರು ಶತಮಾನಗಳಿಂದಲೂ ಇಲ್ಲಿಯೇ ಇದ್ದಾರೆ. ತಮಿಳರಲ್ಲಿ ಮಲಯಾಳಿಗಳಲ್ಲಿ ಕೆಲವರು ಮೂರು ನಾಲ್ಕು ದಶಕಗಳ ಹಿಂದೆ ಬಂದವರಾಗಿದ್ದಾರೆ. ಒಂದು ರಾಜ್ಯದ ಭಾಷೆಯನ್ನು ತಿಳಿಯುವುದಕ್ಕೆ, ಕಲಿಯುವುದಕ್ಕೆ ಇದು ಅತ್ಯಲ್ಪ ಅವಧಿಯೇನೂ ಅಲ್ಲ. ಕನ್ನಡ ಭಾಷೆ ಆಡಲು ಈ ಭಾಷಾ ಅಲ್ಪಸಂಖ್ಯಾತರು ಮುಂದಾಗದಿದ್ದರೆ, ಆ ತಪ್ಪು ಕೆಲ ಮಟ್ಟಿಗೆ ಕನ್ನಡಿಗರದೂ ಆಗಿದೆ. ಅವರು ಇಲ್ಲಿರುವ ಬೇರೆ ಭಾಷೆಯ ಜನರೊಂದಿಗೆ ಕನ್ನಡದಲ್ಲಿ ಮಾತನಾಡದೇ ಅವರ ಭಾಷೆಯಲ್ಲಿಯೇ ಮಾತನಾಡಬೇಕೆನ್ನುತ್ತಾರೆ.

ನಮ್ಮ ಪ್ರಮುಖ ರಾಜಕೀಯ ಮುಂದಾಳುಗಳಲ್ಲಿ ಒಬ್ಬರಾದ ಕೆಂಗಲ್ ಹನುಮಂತಯ್ಯ ನವರು ಈ ರಾಜ್ಯವು ಸಮ್ಮಿಶ್ರ ಕಾಂಪೋಜಿಟ್ ರಾಜ್ಯವೆಂದು ಹೇಳಿರುವ ಮಾತಿನಿಂದ ಈ ಭಾಷಾ ಅಲ್ಪಸಂಖ್ಯಾತರು ಉತ್ತೇಜಿತರಾಗಿದ್ದಾರೆ. ಕೇವಲ ಒಂದೇ ಭಾಷೆ ಆಡುವ ರಾಜ್ಯ ಯಾವುದೂ ಇಲ್ಲ. ಮಹಾರಾಷ್ಟ್ರ, ಗುಜರಾಥ, ಉತ್ಕಲ, ಬಂಗಾಲ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಗಳಲ್ಲಿಯೂ ಬೇರೆ ಭಾಷೆ ಆಡುವ ಜನ ಇದ್ದಾರೆ. ಆ ರಾಜ್ಯಗಳು ಸಮ್ಮಿಶ್ರ ರಾಜ್ಯ ಅಲ್ಲವಾದರೆ, ಕರ್ನಾಟಕವು ಹೇಗೆ ಸಮ್ಮಿಶ್ರ ರಾಜ್ಯ ಆಗಿರಬಲ್ಲದು? ಹನುಮಂತಯ್ಯನವರು ಹೇಳಿದ ಮಾತನ್ನು ಈ ಭಾಷಾ ಅಲ್ಪಸಂಖ್ಯಾತರು ಅಪಾರ್ಥವಾಗಿ ಭಾವಿಸಿಕೊಂಡಿದ್ದಾರೆ. ಇದು ಅನೇಕ ಭಾಷೆ ಆಡುವ ಜನರ ರಾಜ್ಯ, ಯಾರ ಬಗೆಗೂ ಇಲ್ಲಿ ತಿರಸ್ಕಾರ ಇಲ್ಲ. ಎಲ್ಲರೂ ಸೇರಿ ಇದು ಕರ್ನಾಟಕ ಎಂದು ಹನುಮಂತಯ್ಯ ವ್ಯಕ್ತಪಡಿಸಿದ ಸದಾಶಯವನ್ನು ತಪ್ಪು ಅರ್ಥದಲ್ಲಿ ಓದಿಕೊಂಡು, ಕನ್ನಡವನ್ನು ತಳ್ಳಿ ಹಾಕುವ ಮನೋಭಾವನೆಯನ್ನು ಅವರ ದೃಷ್ಟಿಯಿಂದಲೇ ಅನರ್ಥಕಾರಿಯಾಗಿದೆ. ಭಾಷಾ ಅಲ್ಪಸಂಖ್ಯಾತರು ಯಾವ ರಾಜ್ಯದಲ್ಲಿಯೇ ಇದ್ದರೂ ಅಲ್ಲಿಯ ಮುಖ್ಯ ಭಾಷೆಯ ಒಂದು ಭಾಗವಾಗಿಯೇ ಬೆಳೆಯಬೇಕು. ಮನೆಗೆ ಬಂದ ಸೊಸೆಯು ಮನೆಯವಳೇ ಆಗುವಂತೆ ಅವರು ಅವಿನಾಭಾವೀ ಸಂಬಂಧ ಬೆಳೆಸಿಕೊಳ್ಳಬೇಕು. ಸಂವಿಧಾನ ರೂಪಿಸಿದವರೂ ಕೂಡ, ಭಾಷಾ ಅಲ್ಪಸಂಖ್ಯಾತರು ತಾವಿರುವ ರಾಜ್ಯದ ಜೀವನದೊಂದಿಗೆ, ಭಾಷೆಯೊಂದಿಗೆ ಸಮರಸಗೊಳ್ಳಬೇಕೆಂದು ಆಶಿಸಿದ್ದರು. ಎಂತಲೇ ಅವರು ಸಂವಿಧಾನದಲ್ಲಿ, ಈ ಭಾಷಾ ಅಲ್ಪಸಂಖ್ಯಾತರು,ೊತಮ್ಮಮಾತೃಭಾಷೆಯಲ್ಲಿ ಪ್ರಾಥಮಿಕ ಶಾಲೆಯ ಕೊನೆಯ ಹಂತದವರೆಗೂ ಶಿಕ್ಷಣ ಪಡೆಯಲು ಹಕ್ಕುಳ್ಳವರಾಗಿದ್ದಾರೆ ಎಂದು ಹೇಳಿದ್ದಾರೆ.

1961ರಲ್ಲಿ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ ಅಧ್ಯಕ್ಷತೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಸೇರಿ, ಈ ಭಾಷಾ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ಇರುವ ಪ್ರದೇಶಗಳಲ್ಲಿ ಸರಕಾರದ ಆಜ್ಞೆ, ಪರಿಪತ್ರ ಮೊದಲಾದವುಗಳನ್ನು ಅವರ ಭಾಷೆಗಳಲ್ಲಿ ಹೊರಡಿಸಬೇಕು ಎಂದು ಒಪ್ಪಿಕೊಂಡರು. ಅವರು ಆಗ ಒಪ್ಪಿದ ಈ ವಿಚಾರ ತಮಗೋಸುಗ ಲಭಿಸಿದ ಶಾಶ್ವತ ಭರವಸೆ ಎಂದು ಕೆಲ ಭಾಷಾ ಅಲ್ಪಸಂಖ್ಯಾತರು ತಪ್ಪು ತಿಳಿವಳಿಕೆಯನ್ನು ತಮ್ಮ ತಲೆಯಲ್ಲಿ ತುಂಬಿಕೊಂಡರು. ಆದರೆ, ಈ ತಪ್ಪು ತಿಳುವಳಿಕೆಯನ್ನು ಭಾಷಾ ಅಲ್ಪಸಂಖ್ಯಾತರ ಆಯೋಗದ ಆಯುಕ್ತರೇ ತೊಡೆದು ಹಾಕಿದ್ದಾರೆ. ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ನಡೆದ ಮುಖ್ಯಮಂತ್ರಿಗಳ ಸಭೆಯ ನಡವಳಿಕೆಗಳಿಗೆ ಚಿರಂತನತೆ ಇಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ. ಭಾಷಾ ಅಲ್ಪಸಂಖ್ಯಾತರಿಗೆ ಇಂಥ ಪ್ರತ್ಯೇಕ ರಿಯಾಯಿತಿ ಇರಬೇಕಾದ ಅವಶ್ಯಕತೆ ಇಲ್ಲವೆಂದು ಅವರು ಸಾರಿ ಹೇಳಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಕುರಿತು ಬ್ರಿಟಿಶ್ ಕೋರ್ಟಿನಲ್ಲಿ ಒಂದು ಸ್ವಾರಸ್ಯಕರ ಪ್ರಕರಣ ಬಂದಿದ್ದಿತು. ಆ ಪ್ರಕರಣದಲ್ಲಿ ತಲೆದೋರಿದ ಪ್ರಶ್ನೆಯು ಭಾರತದಲ್ಲಿ, ವಿಶೇಷತಃ ಕರ್ನಾಟಕದಲ್ಲಿಯೂ ಪ್ರಸ್ತುತವೆನಿಸಿದೆ. ಪಾಕಿಸ್ತಾನಿ ಪಂಜಾಬದ ಒಬ್ಬ ಮನುಷ್ಯ ಇಪ್ಪತ್ತು ವರ್ಷಗಳಿಂದಲೂ ಬ್ರಿಟನ್ನಿನಲ್ಲಿ ಇದ್ದ. ತನಗೆ ಸಮಾಜ ಕಲ್ಯಾಣ ಯೋಜನೆ ಪ್ರಯೋಜನಗಳು ಸಿಕ್ಕುತ್ತಿಲ್ಲವೆಂದು ಅವನು ದೂರಿದ. ಸರಕಾರದವರೇನೂ ಅವನ ದೂರನ್ನು ತಮ್ಮ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಆಗ ಅವನು, ತನಗೆ ಸಮಾಜ ಕಲ್ಯಾಣದ ಪ್ರಯೋಜನಗಳನ್ನು ಒದಗಿಸಿಕೊಡುವಂತೆ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಕೋರ್ಟಿಗೆ ಹೋದ. ಕೋರ್ಟಿನಲ್ಲಿ ಅವನು ತನ್ನ ಸಾಕ್ಷಿ ನುಡಿಯುವುದಿದ್ದಿತು. ತನಗೆ ಇಂಗ್ಲೀಷು ಬರುವುದಿಲ್ಲವಾದುದರಿಂದ ತನಗೆ ಒಬ್ಬ ದುಭಾಷಿಯನ್ನು ಕೊಡಬೇಕೆಂದೂ ತನ್ನ ಪಂಜಾಬಿಯನ್ನು ಆತ ಇಂಗ್ಲೀಷಿಗೆ ತುರ್ಜುಮೆ ಮಾಡಿ ತಿಳಿಸುವನೆಂದೂ ಅವನು ಕೋರ್ಟಿಗೆ ಅರಿಕೆ ಮಾಡಿಕೊಂಡ. ಅವನ ಈ ಕೋರಿಕೆಯನ್ನು ಕೇಳಿ ಅಲ್ಲಿಯ ನ್ಯಾಯಾಧೀಶರಿಗೆ ಅಚ್ಚರಿ ಎನಿಸಿತು.

ಏನು, ನಿನಗೆ ಇಂಗ್ಲೀಷು ಬರುವುದಿಲ್ಲವೇ? ಇಂಗ್ಲೆಂಡಿನಲ್ಲಿ ನೀನು ಇದ್ದು ಈಗಾಗಲೇ ಇಪ್ಪತ್ತು ವರ್ಷ ಕಳೆದಿವೆ. ನಿನ್ನನ್ನು, ಇಂಗ್ಲೀಷ್ ಕಲಿಯುವ ಬಗೆಗೆ ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡುತ್ತೇನೆ. ಎರಡು ವರ್ಷಗಳಲ್ಲಿ ನೀನು ಇಂಗ್ಲೀಷು ಕಲಿಯದಿದ್ದರೆ, ನಿನ್ನನ್ನು ಪಾಕಿಸ್ತಾನಕ್ಕೆ ದೇಶಾಂತರ ಕಳಿಸಲಾಗುವುದು

ಎಂದು ಅವರು ಅವನಿಗೆ ಎಚ್ಚರಿಸಿದರು. ರಾಜ್ಯದ ಭಾಷೆಯ ಬಗೆಗೆ ಕರ್ನಾಟಕದಲ್ಲಿ ಗೊಂದಲ ಇರುವಂತೆ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ರಾಜ್ಯದ ಭಾಷೆಯ ಪ್ರಶ್ನೆ ಅಲ್ಲಿ ಸಂದೇಹಾತೀತವಾಗಿದೆ. ಅದಕ್ಕಿರುವ ಸಿಂಹಾಸನ ಸ್ಥಾನವನ್ನು ಪ್ರಶ್ನಿಸುವವರು ಅಲ್ಲಿ ಯಾರೂ ಇಲ್ಲ.ಇಲ್ಲಿ ಕರ್ನಾಟಕದಲ್ಲಿಯೂ ರಾಜ್ಯ ರಚನೆಯ ನಂತರ ಕನ್ನಡವನ್ನು ಜನಪ್ರಿಯಗೊಳಿಸಿ, ಅದಕ್ಕೆ ಸಾರ್ವತ್ರಿಕತೆ ತಂದುಕೊಡುವ ಬಗೆಗೆ ನಿಶ್ಚಿತ ಕ್ರಮ ಕೈಕೊಂಡು ದೃಢವಾದ ಹೆಜ್ಜೆ ಇರಿಸಿ ಮುಂದಾಗಿದ್ದರೆ, ಈಗ ಇಲ್ಲಿ ಕಾಣಿಸಿರುವ ಸಂದಿಗ್ಧ ಪರಿಸ್ಥಿತಿಗೆ ಅವಕಾಶವೇ ಇರಲಿಲ್ಲ. ತಾವಿರುವ ಪ್ರದೇಶಗಳಲ್ಲಿ ಕನ್ನಡದ ಬಗೆಗೆ, ಕನ್ನಡ ಮಾತನಾಡುವ ಜನರ ಬಗೆಗೆ ತಾತ್ಸಾರ ಇದೆಯೆಂದು ಹೇಳಿ ಆ ಪ್ರದೇಶದ ಪರಲು ಹರಿದುಕೊಂಡು ಕರ್ನಾಟಕಕ್ಕೆ ಬಂದವರಿಗೆ, ಭರವಸೆ ನೀಡುವ ಭವಿಷ್ಯ ಯಾವುದೂ ಕಾಣಲಿಲ್ಲ. ರಾಜ್ಯ ರಚನೆ ಆದೊಡನೆಯೇ ಕನ್ನಡಕ್ಕೆ ಇಲ್ಲಿ ಸಿಂಹಾಸನದ ಸ್ಥಾನ ಲಭಿಸದೇ ಹೋಯಿತು. ಇಪ್ಪತ್ತೆರಡು ಆಡಳಿತ ಪ್ರದೇಶಗಳಿಗೆ ಒಳಪಟ್ಟ ಈ ನಾಡನ್ನು ಒಂದೇ ರಾಜಕೀಯ ಹಾಗೂ ಆಡಳಿತ ಸಂಘಟನೆಗೆ ಒಳಪಡಿಸುವುದರಲ್ಲಿಯೇ ಆಡಳಿತ ನಿರ್ವಹಿಸಿದವರ ಶಕ್ತಿ ಶ್ರಮ ಹಾಗೂ ಸಮಯ ಕಳೆದು ಹೋದವು. ಕನ್ನಡದ ಕಡೆಗೆ ಕೊಡಬೇಕಾದ ಗಮನವನ್ನು ಅವರು ಕೊಡದೇ ಹೋದರು. ಈ ರಾಜ್ಯ ನಿರ್ಮಾಣಗೊಂಡ ಆರು ವರ್ಷಗಳ ನಂತರ ಆಡಳಿತ ನಡೆಸುವವರಿಗೆ ಕನ್ನಡದ ಬಗೆಗೆ ಅರಿವಾಯಿತು. ರಾಜ್ಯದ ಅಧಿಕೃತ ಭಾಷೆ ಕನ್ನಡವೆಂದು ರಾಜ್ಯದ ವಿಧಾನ ಮಂಡಲದಲ್ಲಿ ಗೊತ್ತುವಳಿಯೊಂದು ಸ್ವೀಕೃತವಾಯಿತು. ಕನ್ನಡ ಜನಪದಕ್ಕೆ ಯಾವುದು ಸಿಕ್ಕರೂ ಅದು ತುಂಬ ತಡವಾಗಿ ಸಿಕ್ಕಿದೆ. ಉತ್ಕಲ ಆದಾಗಲೇ ಕರ್ನಾಟಕವೂ ಆಗಬೇಕಾಗಿದ್ದಿತು. ಆದರೆ, ಕರ್ನಾಟಕವು ಉತ್ಕಲ ಆದ ಇಪ್ಪತ್ತು ವರ್ಷಗಳ ನಂತರ ಬಂದಿತು. ಈ ರಾಜ್ಯ ಬಂದರೂ ಇದಕ್ಕೆ ಕರ್ನಾಟಕ ಎನ್ನುವ ಹೆಸರು ಬರಲಿಲ್ಲ. ಕರ್ನಾಟಕ ಎನ್ನುವ ತನ್ನ ಸಹಜ ಹೆಸರನ್ನು ಪಡೆದುಕೊಳ್ಳಲಿಲ್ಲ. ಅದಕ್ಕೋಸುಗ ಮುಂದೆ ಹದಿನೇಳು ವರ್ಷ ಕಾಯಬೇಕಾಯಿತು. ರಾಜ್ಯ ಬಂದಿತು, ಹೆಸರು ಬಂದಿತು. ಕನ್ನಡದ ಉಸಿರು ಬರಬೇಕಾಗಿದೆ. ಮಹಾಶ್ವೇತೆಯ ಜೀವ ಮರಳಿ ಬರಲೆಂದು ಪ್ರತೀಕ್ಷೆ ಮಾಡುತ್ತ ಕುಳಿತ ಪುಂಡರೀಕನಂತೆ ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಪ್ರಾಣ, ಉಸಿರು ತುಂಬುವುದನ್ನು ನೋಡುವ ತವಕದಿಂದ ಕಾತರಿಸಿ ಕುಳಿತಿದ್ದಾರೆ.

ಕನ್ನಡವು ಕೋರ್ಟು ಕಚೇರಿಗಳಲ್ಲಿ ಬರಬೇಕೆನ್ನುವುದು ಹೊಸ ಸಂಗತಿಯೇನೂ ಅಲ್ಲ. ಮುಂಬಯಿ ರಾಜ್ಯದ ಕನ್ನಡ ಪ್ರದೇಶಗಳಲ್ಲಿ ಅದು 1823ರಷ್ಟು ಹಿಂದೆ, ಮೈಸೂರು ರಾಜ್ಯದಲ್ಲಿ 1856ರಷ್ಟು ಹಿಂದೆ ಜಾರಿಗೆ ಬಂದಿದ್ದಿತು. ಕನ್ನಡವು ಕೋರ್ಟಿನಲ್ಲಿ, ಕಚೇರಿಯಲ್ಲಿ, ಉದ್ದಿಮೆ ಸ್ಥಾವರಗಳಲ್ಲಿ, ವ್ಯವಹಾರದಲ್ಲಿ ಸಾರ್ವಜನಿಕರಲ್ಲಿ, ಕರ್ನಾಟಕದ ಎಲ್ಲೆಡೆಗಳಲ್ಲಿಯೂ ಧ್ವನಿಗೊಳ್ಳಬೇಕು. ಪ್ರತಿಧ್ವನಿ ಗೊಳ್ಳಬೇಕು. ಇದು ಕರ್ನಾಟಕ, ಕನ್ನಡ ಎನ್ನುವುದು, ಕರ್ನಾಟಕದ ಒಳಗೆ ಇರುವವರಿಗೆ, ಕರ್ನಾಟಕಕ್ಕೆ ಹೊರಗಿನಿಂದ ಬರುವವರಿಗೆ ಅನಿಸಬೇಕು. ಕನ್ನಡವು ಕರ್ನಾಟಕದಲ್ಲಿ ಇರುವವರೆಲ್ಲರ ನಿಷ್ಠೆ, ಶ್ರದ್ಧೆ ಹಾಗೂ ಆರಾಧನೆಯ ವಿಷಯವೆನಿಸಬೇಕು. ಕನ್ನಡವು ಶಿಕ್ಷಣದಲ್ಲಿ ಇರಬೇಕು. ಆಡಳಿತದಲ್ಲಿ ಬರಬೇಕು. ಕನ್ನಡವನ್ನು ಬಿಟ್ಟರೆ ತಮಗೆ ಬೇರೆ ಗತ್ಯಂತರವೇ ಇಲ್ಲ ಎನ್ನುವುದು ಇಲ್ಲಿರುವ ಎಲ್ಲ ಜನರಿಗೂ ತಿಳಿಯಬೇಕಾದರೆ ಆಡಳಿತದ ಎಲ್ಲ ವ್ಯವಹಾರಗಳಲ್ಲೂ ಕನ್ನಡದಲ್ಲಿಯೇ ನಡೆಯಬೇಕು. ರಾಜ್ಯದಲ್ಲಿರುವ ಪ್ರತಿಯೊಂದು ಕುಟುಂಬಕ್ಕೂ ಸರಕಾರದೊಂದಿಗೆ ವ್ಯವಹರಿಸುವುದು ಏನಾದರೊಂದು ಇದ್ದೇ ಇರುತ್ತದೆ. ತಮಗೆ ಕನ್ನಡ ಬಾರದೇ ಹೋದರೆ ಸರಕಾರದೊಂದಿಗೆ ವ್ಯವಹರಿಸುವುದು ಸಾಧ್ಯವೇ ಇಲ್ಲ ಎನ್ನುವುದು ಈ ರಾಜ್ಯದಲ್ಲಿರುವ ಪ್ರತಿಯೊಬ್ಬನಿಗೂ ಮನವರಿಕೆ ಆಗಬೇಕು. ಈ ದಿಶೆಯಲ್ಲಿ ಸರಕಾರವು 1962ರಿಂದಲೂ ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸುವ ಬಗೆಗೆ ಸುತ್ತೋಲೆಗಳನ್ನು ಹೊರಡಿಸುತ್ತಲೇ ಬಂದಿದೆ. ಅವುಗಳ ಸಂಖ್ಯೆ ಇನ್ನೂರೈವತ್ತನ್ನೂ ಮಿಕ್ಕಿದೆಯೆಂದು ಹೇಳಿದರೆ ಕೇಳಿದವರ ಮನಸ್ಸಿಗೆ ಆಘಾತ ಉಂಟಾಗಬಹುದು. ಆದರೆ ಸತ್ಯಸಂಗತಿಯು ಕಟ್ಟು ಕಥೆಗಿಂತಲೂ ವಿಲಕ್ಷಣವಾಗಿರುತ್ತದೆ.

ಶಿಕ್ಷಣದಲ್ಲಿ ಕನ್ನಡದ ಸ್ಥಾನ ಏನಿರಬೇಕೆಂಬ ಬಗೆಗೆ ನಿಷ್ಕರ್ಷೆ ಮಾಡಲು ಸರಕಾರವು ಸಮಿತಿಯೊಂದನ್ನು ನೇಮಿಸಲಿಲ್ಲ. ಆದರೆ, ಅದು ಬಹು ವಿಚಿತ್ರ ಸನ್ನಿವೇಶದಲ್ಲಿ ಒಂದು ಭಾಷಾ ಸಮಿತಿಯನ್ನು ನೇಮಿಸಿತು. ಮುಖ್ಯಮಂತ್ರಿ ಗುಂಡೂರಾಯರು ಉಡುಪಿಗೆ ಹೋದಾಗ ಅಲ್ಲಿಯ ಸ್ವಾಮಿಗಳು ಶಿಕ್ಷಣದಲ್ಲಿ ಸಂಸ್ಕೃತಕ್ಕೆ ಪ್ರಾಶಸ್ತ್ಯ ಇರಬೇಕೆಂದು ಆಗ್ರಹಪಡಿಸಿದರು. ಗೋಕಾಕ ಸಮಿತಿ ನೇಮಕಕ್ಕೆ ಗುಂಡೂರಾಯರು ಉಡುಪಿಗೆ ನೀಡಿದ ಭೆಟ್ಟಿಯೇ ಕಾರಣವೆನಿಸಿತು. ಕರ್ನಾಟಕದ ರಚನೆಯಾದ ಮೇಲೆ ಕನ್ನಡಿಗರನ್ನು ಆಮೂಲಾಗ್ರವಾಗಿ ಅಲುಗಿಸಿದ ಘಟನೆಯೆಂದರೆ ಗೋಕಾಕ ವರದಿಯ ಅನುಷ್ಠಾನದ ಆಂದೋಲನವೊಂದೇ ಆಗಿದೆ. ಕನ್ನಡಿಗರಲ್ಲಿ ಹೊಸ ಜಾಗೃತಿ ಉಂಟಾಗುವುದಕ್ಕೆ ಗೋಕಾಕರು ಕಾರಣಕರ್ತರೆನಿಸಿದರು. ತಮ್ಮ ವರದಿಯ ಮೂಲಕ ಅವರು ಕನ್ನಡಿಗರಿಗೆ ಹೊಸ ಉಸಿರನ್ನು ಒದಗಿಸಿಕೊಟ್ಟರು. ಕರ್ನಾಟಕದ ಅಬಾಲ ವೃದ್ಧರಲ್ಲಿ, ವಿಶೇಷತಃ ಯುವ ಪೀಳಿಗೆಯಲ್ಲಿ ಹೊಸ ಪ್ರಾಣವಾಯು ಸಂಚರಿಸುವುದಕ್ಕೆ ಗೋಕಾಕ ವರದಿಯೇ ಕಾರಣವೆನಿಸಿತು. ಈ ನೆಲದಲ್ಲಿ ಆ ಎರಡು ಮೂರು ತಿಂಗಳು, ಅವರ ಹೆಸರು ಕೇಳಿ ಬಂದಂತೆ ಬೇರೆ ಯಾರ ಹೆಸರೂ ಕೇಳಿ ಬಂದಿಲ್ಲವೆಂದು ಹೇಳಿದರೆ, ಅದರಲ್ಲಿ ತಿಲ ಮಾತ್ರವೂ ಅತಿಶಯೋಕ್ತಿ ಇಲ್ಲ. ಗೋಕಾಕ ವರದಿಯು ಗೋಕಾಕ ಎಂಬ ಹೆಸರಿಗೆ ಅಮರತ್ವವನ್ನು ತಂದುಕೊಟ್ಟಿದೆ.

 

ಗೋಕಾಕ ವರದಿ ಹಿನ್ನೆಲೆ

ಕರ್ನಾಟಕ ಸರಕಾರ ಡಾ.ವಿನಾಯಕ ಕೃಷ್ಣ ಗೋಕಾಕರ ಅಧ್ಯಕ್ಷತೆಯಲ್ಲಿ ಭಾಷಾ ಸಮಿತಿಯೊಂದನ್ನು ನೇಮಿಸಿತು. ಆ ಸಮಿತಿ ಸಂಸ್ಕೃತಕ್ಕೆ ಪ್ರಾಧಾನ್ಯತೆ ತಂದು ಕೊಡುವುದಕ್ಕೋಸುಗವೇ ನೇಮಕಗೊಂಡಿದೆಯೆನ್ನುವ ಭಾವನೆ ಕನ್ನಡದ ಪ್ರತಿಪಾದಕರಲ್ಲಿ ಬೆಳೆದುಕೊಂಡಿತು. ಅದರ ಪರಿಣಾಮವಾಗಿ ಗೋಕಾಕ ಸಮಿತಿ ಧಾರವಾಡಕ್ಕೆ ಬಂದಾಗ ಅಕ್ಟೋಬರ್ 23, 1980ರಂದು ಅದು ಧಾರವಾಡದ ಕನ್ನಡಿಗರಿಂದ ಗೋಕಾಕರ ಶಿಷ್ಯ, ಚಂದ್ರಶೇಖರ ಪಾಟೀಲರಿಂದ ಘೆರಾವೋಕ್ಕೆ ಗುರಿಯಾಯಿತು. ಗೋಕಾಕರು ಅಲ್ಲಿಯ ಸರಕಾರೀ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜಿನ ಪ್ರಾರ್ಥನಾ ಮಂದಿರದಲ್ಲಿ ಸಭೆ ನಡೆಸಿ ಸಾಕ್ಷ್ಯಗಳನ್ನು ಕೇಳಲು ಹೋದಾಗ ಅವರು, ‘ಗೋ ಬ್ಯಾಕ್ ಗೋಕಾಕ್’ ‘ಗೋಕಾಕರೇ ತಿರುಗಿ ಹೋಗಿ’ ಎಂಬ ಘೋಷಣೆಯ ಸ್ವಾಗತವನ್ನು ಕಂಡರು. ಅವರಿಂದ ಅಲ್ಲಿ ಸಭೆ ನಡೆಸುವುದಕ್ಕೆ ಆಗಲಿಲ್ಲ.

ಗೋಕಾಕರು ತಮ್ಮ ವರದಿಯಲ್ಲಿ ಏನು ಹೇಳುತ್ತಿದ್ದರೆನ್ನುವುದು ಆಗ ಯಾರಿಗೂ ಗೊತ್ತಿರಲಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಏಕೈಕ ಪ್ರಥಮ ಭಾಷೆ ಆಗಿರಬೇಕೆನ್ನುವ ಉತ್ಸಾಹವೇ ಗೋಕಾಕರ ವಿರುದ್ಧದ ಆ ಮತಪ್ರದರ್ಶನಕ್ಕೆ ಕಾರಣವೆನಿಸಿದ್ದಿತು. ತಮಗೆ ಕನ್ನಡದ ಬಗೆಗೆ ಏನು ಮಾಡಬೇಕೆನ್ನುವುದು ಗೊತ್ತಿದೆಯೆಂದು ಗೋಕಾಕರು ಹೇಳಿದರಾದರೂ ಕನ್ನಡವನ್ನು ಕಡೆಗಣಿಸುವ ಪಿತೂರಿ ಸರಕಾರದಲ್ಲಿ ನಡೆದಿದೆಯೆನ್ನುವ ಸಂದೇಹ ಜನರ ಮನಸ್ಸಿನಲ್ಲಿ ಬಹು ಬಲವತ್ತರವಾಗಿ ಬೆಳೆದುಕೊಂಡಿದ್ದುದರಿಂದ, ಅವರ ಮಾತು ಕಿವುಡು ಕಿವಿಗಳ ಮೇಲೆ ಬಿದ್ದಂತಾಗಿ ಅದರ ಕಡೆಗೆ ಯಾರೊಬ್ಬರೂ ಗಮನ ಕೊಡಲಿಲ್ಲ. ತಮ್ಮ ವಿರುದ್ಧದ ಕೂಗು, ಪ್ರತಿಭಟನೆ ಮತ ಪ್ರದರ್ಶನಗಳಿಂದ ಗೋಕಾಕರು ತಮ್ಮ ಮನಸ್ಸಿನ ಪ್ರಸನ್ನತೆಯನ್ನು ಕಳೆದುಕೊಳ್ಳಲಿಲ್ಲ. ತಮ್ಮ ವಿಚಾರದ ನಿಚ್ಚಳತೆಯನ್ನು ಮಸುಕು ಮಾಡಿಕೊಳ್ಳಲಿಲ್ಲ. ಅವರು ಮರು ವರ್ಷದ ಆರಂಭಕ್ಕೆ ತಮ್ಮ ವರದಿಯನ್ನು ಸರಕಾರಕ್ಕೆ ಸಲ್ಲಿಸಿದರು. ಆದು ಒಂದು ರಾಜ್ಯದ ಭಾಷೆಗೆ ಇರಬೇಕಾದ ಸ್ಥಾನವನ್ನು ನಿಷ್ಕರ್ಷಿಸುವುದರಲ್ಲಿ ಒಂದು ಮೈಲುಗಲ್ಲೆನಿಸಿತು. ತಮ್ಮ ವರದಿಯಲ್ಲಿ ಗೋಕಾಕರು ಪ್ರಾದೇಶಿಕ ಭಾಷೆಗೆ ಪಟ್ಟ ಕಟ್ಟಿದರು. ಸಂಸ್ಕೃತದ ಮಹತ್ವವನ್ನು ಹೇಳಿದರಲ್ಲದೆ, ಅದಕ್ಕೆ ಪ್ರಾದೇಶಿಕ ಭಾಷೆಯ ಮಹತ್ವ ಇರಲಾರದೆನ್ನುವುದನ್ನೂ ತಿಳಿಸಿದರು. ಆದರೆ ಅದೇ ವೇೆಗೆ ಕನ್ನಡದ ಬೆಳವಣಿಗೆಗೆ ಸಂಸ್ಕೃತ ಬೇಕು ಎನ್ನುವುದನ್ನು ಹೇಳಿದರು. ಕನ್ನಡದಲ್ಲಿ ಸಂಸ್ಕೃತವು ಹಾಸುಹೊಕ್ಕಾಗಿ ಬೆರೆತುಕೊಂಡಿದೆ. ದ್ರಾವಿಡ ಭಾಷೆಗಳಿಗೆ ಅದು ಬಹಳಷ್ಟು ಶಬ್ದ ಸಂಪತ್ತನ್ನು ಒದಗಿಸಿಕೊಟ್ಟಿದೆ. ದಕ್ಷಿಣದ ಭಾಷೆಗಳನ್ನು ಅದು ಸಾಕು ತಾಯಿಯಂತೆ ಸಹಿಸಿಕೊಂಡು ಬಂದಿದೆಯೆಂದು ಹೇಳಿದರೂ ತಪ್ಪಾಗಲಾರದು. ಸಂಸ್ಕೃತದ ಈ ಕೊಡುಗೆಯನ್ನು ಯಾರೊಬ್ಬರಿಂದಲೂ ಅಲ್ಲಗಳೆಯುವುದಕ್ಕಾಗುವುದಿಲ್ಲ. ಆದರೆ ಅದು ಜನಸಾಮಾನ್ಯರ ಭಾಷೆ ಆಗುವುದು ಸಾಧ್ಯವಿಲ್ಲ. ಮಗುವಿಗೆ ತಾಯಿಯ ಎದೆಹಾಲು ಆಗುವಂತೆ ಬೇರೆ ಹೊಯ್‌ಹಾಲು ಆಗಲಾರದು. ಮಾತೃಭಾಷೆಯು ತಾಯಿ ಎದೆ ಹಾಲಿನಂತೆಯೇ ಇದೆ. ಸಂಸ್ಕೃತವು ಮಹತ್ವದ ಭಾಷೆಯಾದರೂ ಅದು ಕನ್ನಡದ ಸ್ಥಾನವನ್ನು ಪಡೆದುಕೊಳ್ಳಲಾರದು. ಪಂಡಿತರ ಭಾಷೆ ಪಂಡಿತರಿಗೋಸುಗ ಬೇಕು. ಅದನ್ನು ಪಾಮರರು ಜೀರ್ಣಿಸಿಕೊಳ್ಳಲಾರರು. ಆದರೆ ಸಾಹಿತ್ಯದ ಅಭ್ಯಾಸ ಮಾಡಬೇಕೆನ್ನುವವರಿಗೆ ಸಂಸ್ಕೃತದ ಓದು ಹೆಚ್ಚಿನ ಇಂಬನ್ನು ತಂದುಕೊಡುತ್ತದೆ.

ಬಹುಸಂಖ್ಯಾತ ಕನ್ನಡಿಗರ ಕಂಠದಲ್ಲಿ ಸಂಸ್ಕೃತ ಇಳಿಯಲಾರದೆನ್ನುವ ಕಾರಣದಿಂದಲೇ ರಾಮಾಯಣ ಮಹಾಭಾರತಗಳು ಕನ್ನಡದಲ್ಲಿ ಬಂದವು. ಜ್ಞಾನಾರ್ಜನೆ ಮಾಡಿಕೊಳ್ಳುವುದಕ್ಕೆ ಮಾತೃಭಾಷೆಯೇ ಹೆಚ್ಚು ಸುಲಭವಾದ ಸಾಧನ. ಇದನ್ನು ಗಮನಿಸಿಯೇ ಕವಿ ಮಹಲಿಂಗರಂಗ ‘ಸಂಸ್ಕೃತದೊಳಿನ್ನೇನು’ ಎಂದು ಕೇಳಿದ, ‘ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ’ ಎಂದು ಅವನು ಕನ್ನಡದ ಮೇಲ್ಮೈಯನ್ನು ಕೊಂಡಾಡಿದ. ಜನರಿಗೆ ತಿಳಿಸುವ ಭಾಷೆ ಸಂಸ್ಕೃತ ಅಲ್ಲವಾದರೆ, ಅದು ಇಂಗ್ಲೀಷು ಕೂಡ ಅಲ್ಲ. ಭಾಷೆಯ ಬೆಳವಣಿಗೆಗೆ ಸಂಸ್ಕೃತ ಬೇಕಾಗಿರುವಂತೆ, ಜ್ಞಾನದ ಬೆಳವಣಿಗೆಗೆ ಇಂಗ್ಲೀಷು ಬೇಕು. ವಿಪುಲ ಜ್ಞಾನಭಂಡಾರದ ಕೀಲಿಕೈ ಇಂಗ್ಲೀಷೇ ಆಗಿದೆಯೆಂದು ಹೇಳಿದರೆ ತಪ್ಪಾಗಲಾರದು. ಆದರೆ ಇಂಗ್ಲೀಷನ್ನು ಮಗುವಿನ ಮಾತೃಭಾಷೆ ತಳ್ಳಿಹಾಕಿ ಅದರ ಸ್ಥಾನದಲ್ಲಿ ತರುವುದಕ್ಕೆ ಆಗುವುದಿಲ್ಲ. ಶಿಕ್ಷಣ ಮಾಧ್ಯಮವು ಮಾತೃಭಾಷೆಯಲ್ಲಿಯೇ ಆಗಿರಬೇಕು. ಇಂಗ್ಲೀಷನ್ನು ಚೆನ್ನಾಗಿ ಬರೆಯುವವರೂ ಇಲ್ಲ. ಕಲಿಸುವವರೂ ಇಲ್ಲ. ಇಂಗ್ಲೀಷನ್ನು ಪ್ರಾಥಮಿಕ ಹಂತದಿಂದಲೇ ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿದರೆ, ಇಂಗ್ಲೀಷ್, ಭಾಷೆ ಮಕ್ಕಳಿಗೆ ಚೆನ್ನಾಗಿ ಬರುವುದೆಂದು ತಿಳಿಯುವುದು ಒಂದು ಭ್ರಮೆಯೆಂದು ಗೋಕಾಕ್ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಜ್ಞಾನವನ್ನು ಮಾತೃಭಾಷೆಯಲ್ಲಿ ಗ್ರಹಿಸುವುದು ಸುಲಭವೆನಿಸುತ್ತದೆ. ಇಂಗ್ಲೀಷಿನ ಜ್ಞಾನ ಸರಿಯಾಗಿ ಆಗುವಂತೆ ಅದನ್ನು ಒಂದು ಭಾಷೆಯೆಂದು ಚೆನ್ನಾಗಿ ಕಲಿಸಬೇಕು. ಕಲಿಸುವ ಪದ್ಧತಿಯಲ್ಲಿಯೂ ಬದಲಾವಣೆ ಆಗಬೇಕು.

ಭಾಷೆಗಳನ್ನು ಸುಲಭವಾಗಿ ಕಲಿಯುವ ದಿಢೀರ್ ಕ್ರಮಗಳು ಈಗ ಬಂದಿವೆ. ಐದಾರು ವಾರಗಳಲ್ಲಿ ಒಂದು ಭಾಷೆಯ ಜ್ಞಾನ ಮಾಡಿಕೊಡುವುದು ಸಾಧ್ಯ ಎನ್ನುವುದು ಸೋಜಿಗವನ್ನು ಉಂಟು ಮಾಡಬಹುದು. ಆದರೆ ಇದು ಸೋಜಿಗಪಡತಕ್ಕ ಸಂಗತಿಯೇನೂ ಅಲ್ಲ. ಒಂದು ಭಾಷೆಯನ್ನು ಆ ರೀತಿ ಅತ್ಯಲ್ಪ ಅವಧಿಯಲ್ಲಿ ಕಲಿತವರಿದ್ದಾರೆ. ಹಳೆಯ ಮೈಸೂರು ಸಂಸ್ಥಾನಕ್ಕೆ ಅಧಿಕಾರಿಯಾಗಿ ಬಂದ ಹಡ್ಸನ್ ಕೇವಲ ಆರು ವಾರಗಳಲ್ಲಿ ಕನ್ನಡ ಕಲಿತನೆನ್ನುವುದನ್ನು ಇತಿಹಾಸ ಹೇಳುತ್ತದೆ. ಅವನು ಕನ್ನಡ ಕಲಿತ. ಇಷ್ಟೇ ಅಲ್ಲ, ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಥಮ ಮುಖ್ಯಾಧಿಕಾರಿಯೂ ಆದ ಅವನು, ಜೇಬಿನಿಂದ ತನ್ನ ಸ್ವಂತದ ಹಣ ತೆಗೆದು ಆಗಿನ ಕಾಲದಲ್ಲಿ 72 ಕನ್ನಡ ಶಾಲೆಗಳನ್ನು ಆರಂಭಿಸಿದ ಕೀರ್ತಿ ಅವನದು. ಉತ್ತರ ಕರ್ನಾಟಕದಲ್ಲಿ ಡೆಪ್ಯುಟಿ ಚೆನ್ನಬಸಪ್ಪನವರು ಮಾಡಿದ್ದ ಕೆಲಸವನ್ನು ಅವನು ಮೈಸೂರಿನಲ್ಲಿ ಮಾಡಿದ. ಇಂಗ್ಲೆಂಡಿಗೆ ಹೋದ ಮೇಲೆ ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕಲು ಲಂಡನ್ನಿನಲ್ಲಿ ಬೆಂಗಳೂರು ಕಾಟೇಜ್ ಕಟ್ಟಿದ. ಗೋಕಾಕರು ತ್ರಿಭಾಷಾ ಸೂತ್ರ ಅನುಸರಿಸಿ ಶಿಕ್ಷಣದಲ್ಲಿ ಮೂರು ಭಾಷೆಗಳ ಸ್ಥಾನವನ್ನು ನಿರ್ದೇಶಿಸಿದರು. 350 ಅಂಕಗಳ ಭಾಷಾ ಪರೀಕ್ಷೆಯಲ್ಲಿ ಕನ್ನಡವು 150 ಅಂಕಗಳ ಏಕೈಕ ಪ್ರಥಮ ಭಾಷೆ ಆಗಿರಬೇಕೆಂದು ಹೇಳಿದರು. ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಿದ ಈ ವರದಿಯ ಮೇಲೆ ಸರಕಾರ ಯಾವುದೇ ನಿರ್ಣಯ ಕೈಕೊಳ್ಳದೇ ಅದು ಧೂಳು ತಿನ್ನುವಂತೆ ಬೀರುವಿನಲ್ಲಿ ಇರಿಸಿ ಸುಮ್ಮನೇ ಕುಳಿತು ಕೊಂಡಿದ್ದಿತು. ಸರಕಾರವು ಈ ವರದಿಯನ್ನೇ ಮೂಲೆಗೆ ತಳ್ಳುವುದೆನ್ನುವ ಭಯ ಸಂದೇಹಗಳು ಕನ್ನಡಿಗರಲ್ಲಿ ಕಾಣಿಸಿಕೊಂಡವು. ಅಲ್ಲಲ್ಲಿ ಸಭೆ ನಡೆದವು. ವರದಿಯನ್ನು ಅನುಷ್ಠಾನಗೊಳಿಸಲು ಒತ್ತಾಯಪಡಿಸಿ ಸಭೆ ಪ್ರತಿಭಟನೆ ಸಂಘಟನೆಗೊಂಡವು.

 

ಕೇಂದ್ರ ಕ್ರಿಯಾ ಸಮಿತಿಯ ರಚನೆ

ಇದರ ಬಗೆಗೆ ಏನಾದರೂ ಒಂದು ದೊಡ್ಡ ಸಂಘಟನೆ ಮಾಡಿ ಸರಕಾರದ ಮೇಲೆ ಬಲವಾದ ಒತ್ತಾಯ ತರಬೇಕೆಂದು ಫೆಬ್ರುವರಿ 23, 1982ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕನ್ನಡದ ಅನೇಕ ಸಂಘಟನೆಗಳು ಸಭೆ ಸೇರಿ, ಆ ಸಂಘದ ನೇತೃತ್ವದಲ್ಲಿ, ಅಖಿಲ ಕರ್ನಾಟಕದ ಕೇಂದ್ರ ಕನ್ನಡ ಕ್ರಿಯಾ ಸಮಿತಿಯೊಂದನ್ನು ರಚಿಸಿದವು. 1890ರಲ್ಲಿ ಸ್ಥಾಪನೆಗೊಂಡ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವು, ಹರಿದ ಹಂಚಿ, ಜೀವನ್ಮೃತವಾಗಿ ಬಿದ್ದಿದ್ದ ಕರ್ನಾಟಕದ ದೇಹದಲ್ಲಿ ಕನ್ನಡದ ಉಸಿರು ತುಂಬುವ ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆ ಬೆಳೆಸುವ ಕೆಲಸವನ್ನು ಮಾಡಿಕೊಂಡು ಬಂದಿದೆ. ನಿರಾಶೆಯ ಕಾರ್ಗತ್ತಲು ಕವಿದಿದ್ದ ಆಗಿನ ದಿನಗಳಲ್ಲಿ ರಾ.ಹ. ದೇಶಪಾಂಡೆಯವರು ಕನ್ನಡವನ್ನು ಬೆಳೆಸುವುದಕ್ಕೋಸುಗ ಒಂದು ಪಂಜು ಹಚ್ಚಿ ನಿಂತರು. ಧಾರವಾಡದ ನಗರದಲ್ಲಿಯೇ ಆಗ 29 ಮರಾಠೀ ಶಾಲೆಗಳೂ ಒಂದೇ ಒಂದು ಕನ್ನಡ ಶಾಲೆಯೂ ಇದ್ದ ಸಂಗತಿಯನ್ನು ನೆನೆದರೆ ಕನ್ನಡದ ಹಾಗೂ ಕನ್ನಡಿಗರ ಶೋಚನೀಯ ಸ್ಥಿತಿಯ ಕಲ್ಪನೆ ಬರಬಹುದು. ದೇಶಪಾಂಡೆಯವರು ಉತ್ತರ ಕರ್ನಾಟಕದಲ್ಲಿ ಎಂ.ಎ. ಆದವರಲ್ಲಿ ಮೊದಲಿಗರು. ಅವರ ಕನ್ನಡಪರ ನಿಲುವು ಮರಾಠೀಪರ ಅಧಿಕಾರಿಗಳು ತುಂಬಿದ್ದ ಮುಂಬಯಿ ಸರಕಾರಕ್ಕೆ ಸೇರಿಕೆ ಆಗಲಿಲ್ಲ. ಹೀಗಾಗಿ ಅವರು ಭಡತಿ ಪಡೆಯದೆ ಕೇವಲ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿ ನಿವೃತ್ತರಾಗಬೇಕಾಯಿತು. ಕರ್ನಾಟಕ ವಿದ್ಯಾವರ್ಧಕ ಸಂಘವು ಕರ್ನಾಟಕದ ಪ್ರದೇಶಗಳಲ್ಲಿ ಕನ್ನಡದ ಪ್ರಜ್ಞೆ ಬೆಳೆಸಿತು. ಹಳೆಯ ಮೈಸೂರಿನಲ್ಲಿ ಕರ್ನಾಟಕದ ಇನ್ನುಳಿದ ಪ್ರದೇಶಗಳಿಗಿಂತ ಹೆಚ್ಚು ಕನ್ನಡ ಇದ್ದೂ ಕೂಡ, ಅಲ್ಲಿಯ ಜನರು ಮಾರ್ಗದರ್ಶನಕ್ಕೋಸುಗ ಧಾರವಾಡದ ಕಡೆಗೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಕಡೆಗೆ ನೋಡುತ್ತಿದ್ದರು. ಕನ್ನಡದ ಆಚಾರ್ಯ ಪುರುಷರಾದ ಪ್ರೊ.ಬಿ.ಎಂ. ಶ್ರೀಕಂಠಯ್ಯನವರು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದಿಸುತ್ತಿದ್ದರಾದರೂ ತಮ್ಮ ಪ್ರಥಮ ಸಾರ್ವಜನಿಕ ಭಾಷಣವನ್ನು ಅವರು 1910ರಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ನೀಡಿದರು.

ಆಗ ಅವರು ತಮ್ಮ ಭಾಷಣಕ್ಕೆ ಆಯ್ದುಕೊಂಡ ವಿಷಯ ‘ಕನ್ನಡ ಮಾತು ತಲೆಯೆತ್ತುವ ಬಗೆ’ ಅವರು ಆ ಮಾತು ಹೇಳಿ ಒಂದು ಶತಮಾನವೇ ಸಮೀಪಿಸುತ್ತ ಬಂದಿದ್ದರೂ ಅವರ ಮಾತಿನ ಪ್ರಸ್ತುತತೆ ಇಂದಿಗೂ ಕಳೆದು ಹೋಗಿಲ್ಲ. ಬಿ.ಎಂ.ಶ್ರೀಯವರು ಮೈಸೂರಿಗೆ ಹಿಂದಿರುಗಿದ ಮೇಲೆ ದೇಶಪಾಂಡೆಯವರಿಗೆ ಕೃತಜ್ಞತೆ ಸೂಚಿಸಿ ಒಂದು ಕಾಗದ ಬರೆದರು. ಆ ಕಾಗದ ಇಂಗ್ಲೀಷಿನಲ್ಲಿ ಇದ್ದಿತು. ‘ಕನ್ನಡದ ಪ್ರಜ್ಞೆ ಬೆಳೆಸಬೇಕೆನ್ನುವ ನೀವು ಇಂಗ್ಲೀಷಿನಲ್ಲಿ ಬರೆದರೆ ಹೇಗೆ ಎಂಬರ್ಥ ಸೂಚಿಸುವ ಒಂದು ಪತ್ರವನ್ನು ದೇಶಪಾಂಡೆಯವರು ಅವರಿಗೆ ಬರೆದು ಹಾಕಿದರು. ಬಿ.ಎಂ.ಶ್ರೀಯವರು ತಮ್ಮ ತಪ್ಪನ್ನು ಒಪ್ಪಿಕೊಂಡು ಅಂಥ ಪ್ರಮಾದ ತಮ್ಮಿಂದ ಇನ್ನು ಮುಂದೆ ಎಂದೂ ಆಗುವುದಿಲ್ಲವೆಂದು ಹೇಳಿ ಕ್ಷಮಾಪಣೆ ಕೋರಿ, ಒಂದು ಮರು ಓಲೆ ಬರೆದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಾಯ್ದುಬಂದರೆ ಕನ್ನಡದ ಕ್ರಿಯಾಶಾಲಿ ಚೇತನಗಳೊಂದಿಗೆ ಅನುಸಂಧಾನ ಮಾಡಿದ ಅನುಭವ ನಮಗೆ ಆಗುತ್ತದೆ. ರಾ.ಹ.ದೇಶಪಾಂಡೆ, ಶಾಂತಕವಿ, ಝಿಗ್ಲರ್, ಕಿಟೆಲ್, ಹೊನ್ನಾಪುರಮಠ, ಆಲೂರು ವೆಂಕಟ ರಾಯರು, ದ.ರಾ.ಬೇಂದ್ರೆ, ಶಿ.ಶಿ.ಬಸವನಾಳ, ಶಂ.ಬಾ. ಶ್ರೀರಂಗ, ಬೆಟಗೇರಿ ಕೃಷ್ಣಶರ್ಮ, ಮಾಳವಾಡ ಇವರೇ ಮೊದಲಾದವರೊಂದಿಗೆ ನಾವು ಸಂವಾದ ನಡೆಸಿದ ನೆನಪು ನಮ್ಮ ಸ್ಮರಣೆಗೆ ಬರುತ್ತದೆ. ಈ ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡ ಸರಕಾರವೇ ಇರುವ ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇರಬೇಕೆಂದು ಒತ್ತಾಯಿಸಿತು. ಶ್ರೀನಿವಾಸರಾಯರು, ಕರ್ಪೂರ ಶ್ರೀನಿವಾಸರಾಯರು, ಆಲೂರು ವೆಂಕಟರಾಯರು ಬೆಂಗಳೂರಿಗೆ ಹೋಗಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರನ್ನು ಮನವೊಲಿಸಿ ಸಾಹಿತ್ಯ ಪರಿಷತ್ತು 1915ರಲ್ಲಿ ಸ್ಥಾಪನೆ ಗೊಳ್ಳುವಂತೆ ಮಾಡಿದರು.  ಕನ್ನಡಿಗರ ಉಸಿರಿನ ಉಸಿರಾಗಿ, ಅನಿಸಿಕೆಗಳ ಧ್ವನಿಯಾಗಿ ಈ ವಿದ್ಯಾವರ್ಧಕ ಸಂಘವು ಕನ್ನಡದ ದೀಕ್ಷೆ ತೊಟ್ಟು ಕರ್ನಾಟಕದ ಸಂಕಲ್ಪ ದೀಕ್ಷೆ ತೊಟ್ಟು ಕರ್ನಾಟಕದ ಸಂಕಲ್ಪ ಸಿದ್ದಿಗೋಸುಗ ಉದ್ದಕ್ಕೂ ಶ್ರಮಿಸುತ್ತ ಬಂದಿದೆ. ಧಾರವಾಡದಲ್ಲಿ ಆಕಾಶವಾಣಿ ಕೇಂದ್ರ, ಕರ್ನಾಟಕ ವಿಶ್ವವಿದ್ಯಾಲಯದ ಸ್ಥಾಪನೆ, ಕರ್ನಾಟಕ ಏಕೀಕರಣ ಸಾಧನೆ, ಇಷ್ಟೆಲ್ಲ ಅದರ ಪ್ರಾಣಕ್ಕೆ ಹತ್ತಿದ ಪ್ರಶ್ನೆಗಳಾಗಿದ್ದವು.

ಅದೇ ಸಂಸ್ಥೆಯ ನೇತೃತ್ವದಲ್ಲಿ ಕನ್ನಡಕ್ಕೆ ಸಿಂಹಾಸನದ ಸ್ಥಾನವನ್ನು ತಂದುಕೊಡಲು ಈಗ ಒಂದು ಅಖಿಲ ಕರ್ನಾಟಕ ಕನ್ನಡ ಕೇಂದ್ರ ಕ್ರಿಯಾ ಸಮಿತಿ ಸ್ಥಾಪನೆಗೊಂಡು ಕಾರ್ಯ ಪ್ರವೃತ್ತವಾಗುವುದು ಕೂಡ ಒಂದು ಅಪೂರ್ವ ಯೋಗಾಯೋಗ ಎಂದು ಅನೇಕ ಜನರು ಭಾವಿಸಿದರು. ಕರ್ನಾಟಕವನ್ನು ತರಲು ಕಾರಣೀಭೂತವಾದ ಸಂಸ್ಥೆಯ ಮೇಲೆಯೇ ಕನ್ನಡವನ್ನು ತರುವ ಕೆಲಸವೂ ಬಿದ್ದಿತು. ಹೊರಿಸುವವರ ಮೇಲೆಯೇ ಹೊರಿಸುತ್ತಾರೆ. ಮಾಡಿದವರೇ ಮಾಡಬೇಕಾಗುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಗೋಕಾಕ್ ವರದಿಯ ಬಗೆಗೆ ಸರಕಾರ ಏನನ್ನೂ ಮಾಡಲಿಲ್ಲ. ಸಂದಿಗ್ಧ ಪರಿಸ್ಥಿತಿ ಹಾಗೆಯೇ ಉಳಿದುಕೊಂಡಿತು. ಕನ್ನಡದ ಪ್ರತಿಪಾದಕರಿಗೆ ಕಳವಳವೆನಿಸಿತು. ಅವರು ಕಸಿವಿಸಿಗೊಂಡರು. ಬಿಜಾಪುರದಲ್ಲಿ ಕೋರಳ್ಳಿಯವರು ಗೋಕಾಕ್ ವರದಿಯ ಅನುಷ್ಠಾನವನ್ನು ಒತ್ತಾಯಿಸಿ ಉಪವಾಸ ಕುಳಿತರು. ಮಾರ್ಚ್ 30, 1982ರಂದು ಕನ್ನಡ ಕ್ರಿಯಾ ಸಮಿತಿಯ ಸಭೆ ಸೇರಿ, ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಿಂದ ಗೋಕಾಕ್ ವರದಿಯ ಪರವಾದ ಆಂದೋಲನವನ್ನು ಆರಂಭಿಸಬೇಕೆಂದು ನಿರ್ಧಾರ ಕೈಕೊಳ್ಳಲಾಯಿತು. ಕ್ರಿಯಾ ಸಮಿತಿಗೆ ಡಾ.ಶಂ.ಬಾ.ಜೋಶಿ ಯವರನ್ನು ಅಧ್ಯಕ್ಷರೆಂದು ಆಯ್ಕೆ ಮಾಡಲಾಗಿದ್ದಿತು. ಅದಕ್ಕೆ ಶ್ರೀಯುತರಾದ ಪಾಟೀಲ ಪುಟ್ಟಪ್ಪ, ಬಸವರಾಜ ಕಟ್ಟಿಮನಿ, ಡಾ.ಆರ್.ಸಿ.ಹಿರೇಮಠ, ಚೆನ್ನವೀರ ಕಣವಿ, ಡಾ.ರಾ.ಯ. ಧಾರವಾಡಕರ, ಾ.ಎಸ್.ಎಂ. ವೃಷಭೇಂದ್ರಸ್ವಾಮಿ, ವ್ಹಿ.ಎಸ್.ಹಿರೇಗೌಡರು ಮೊದಲಾದವರು ಉಪಾಧ್ಯಕ್ಷರಾಗಿದ್ದರು. ಪ್ರೊ.ಚಂದ್ರಶೇಖರ ಪಾಟೀಲ, ಪ್ರೊ.ಎಂ.ಎಂ. ಕಲಬುರ್ಗಿ ಮತ್ತು ಪ್ರೊ.ಗುರುಲಿಂಗ ಕಾಪಸೆ ಕಾರ್ಯದರ್ಶಿ ಆಗಿದ್ದರು. ಏಪ್ರಿಲ್ ದಿನಾಂಕ ಎರಡರಂದು ಉಪವಾಸ ಸತ್ಯಾಗ್ರಹ ಆರಂಭಿಸುವುದಕ್ಕೆ ವಿಶಿಷ್ಟ ಕಾರಣ ಇದ್ದಿತು. ಏಪ್ರಿಲ್ ಒಂದರಂದು ಸತ್ಯಾಗ್ರಹಕ್ಕೆ ಕೂಡುವುದಾಗಿ ಹೇಳಿದ್ದರೆ, ಆ ದಿನದ ಮಹಿಮೆಯಿಂದ ಜನರು ಅದನ್ನು ನಂಬದೇ ಇರಬಹುದೆನ್ನುವ ಭಾವನೆ ಇದ್ದಿತು. ಉಪವಾಸ ಸತ್ಯಾಗ್ರಹದಲ್ಲಿ ಡಾ.ಶಂ.ಬಾ.ಜೋಶಿ, ಪಾಟೀಲ ಪುಟ್ಟಪ್ಪ, ಡಾ.ಆರ್.ಸಿ. ಹಿರೇಮಠ ಮತ್ತು ಬಸವರಾಜ ಕಟ್ಟೀಮನಿ ಇರಬೇಕೆಂದು ಮುಂಚಿತವಾಗಿಯೇ ತೀರ್ಮಾನ ಕೈಕೊಳ್ಳಲಾಗಿದ್ದಿತು. ಬಹಳೇ ಕಾತರದಿಂದ ನಿರೀಕ್ಷಿಸುತ್ತಿದ್ದ ಆ ದಿನ ಬಂದೇ ಬಿಟ್ಟಿತು. ಬೆಳಿಗ್ಗೆ ಧಾರವಾಡಕ್ಕೆ ಹೋದರೆ, ಪ್ರೊ.ಚಂದ್ರಶೇಖರ ಪಾಟೀಲರು ಬಂದು, ‘ನಮ್ಮ ಉಪವಾಸ ಸತ್ಯಾಗ್ರಹಕ್ಕೆ ವಿಘ್ನ ಬಂದಿದೆ. ಡಾ.ಶಂ.ಬಾ.ಜೋಶಿಯವರು ತಮಗೆ ಉಪವಾಸ ಹೂಡುವ ತತ್ವದಲ್ಲಿ ವಿಶ್ವಾಸವಿಲ್ಲ ಎನ್ನುತ್ತಾರೆ. ನಾವು ಅವರಲ್ಲಿಗೆ ಹೋಗಿ ಸೋತು ಬಂದಿದ್ದೇವೆ. ಅವರು ಬರದಿದ್ದರೆ ನಾವು ಅಪಹಾಸ್ಯಕ್ಕೆ ಗುರಿ ಆಗುತ್ತೇವೆ ಎಂದು ಹೇಳಿ, ನಾನೇ ಹೋಗಿ ಈಗ ಅವರನ್ನು ಮನವೊಲಿಸಿಕೊಂಡು ಕರೆತರಬೇಕು’ ಎಂದು ಕೇಳಿದರು. ಡಾ.ಶಂ.ಬಾ.ಜೋಶಿ ತತ್ವನಿಷ್ಠುರ ವ್ಯಕ್ತಿ. ಅವರು ಸುಲಭವಾಗಿ ಜಗ್ಗುವವರಲ್ಲ. ‘ನಾನು ಮಹಾತ್ಮಾ ಗಾಂಧಿಯವರ ಉಪವಾಸಕ್ಕೇ ಮೆಚ್ಚಿದವನಲ್ಲ. ನನಗೆ ಈ ಉಪವಾಸ ತತ್ವದಲ್ಲಿ ವಿಶ್ವಾಸವಿಲ್ಲ’ ಎಂದರು.

ನನಗಾದರೂ ಇದರ ಬಗೆಗೆ ವಿಶ್ವಾಸವಿಲ್ಲ. ನಾನೂ ಕೂಡ ನಿಮ್ಮ ಅಭಿಪ್ರಾಯದವನೇ, ಆದರೆ, ಒಂದು ವಾತಾವರಣ ನಿರ್ಮಾಣ ಮಾಡಬೇಕಾಗಿದೆ. ನಿಮ್ಮಂಥವರು ಇದ್ದರೆ ಅದು ದೇಶದ ಗಮನವನ್ನು ಸೆಳೆಯುತ್ತದೆ. ಈ ಉಪವಾಸ ಒಂದು ಸಾಂಕೇತಿಕ ಪ್ರತಿಭಟನೆ. ಕನ್ನಡ ಹೋರಾಟಕ್ಕೆ ಜೀವ ತುಂಬಲು ಇದು ಒಂದು ಸಾಧನ ನೀವು ಬರಲೇಬೇಕು. ನಿಮ್ಮ ಬಲವಂತಕ್ಕೆ ನಾನು ಬರುತ್ತೇನೆ. ಆದರೆ, ನನಗೆ ಅಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ.

‘ನೀವು ಒಂದೇ ಗಂಟೆ ಕುಳಿತರೆ ಸಾಕು’. ‘ನಾನು ಮಧ್ಯಾಹ್ನ ಮುಂಬಯಿಗೆ ಹೋಗಬೇಕು.’ ‘ನಮ್ಮನ್ನು ಆಶೀರ್ವದಿಸಿ ನೀವು ಎಲ್ಲಿಗಾದರೂ ಹೋಗಿ’

ಡಾ. ಶಂಬಾರನ್ನು ನಾನು ನನ್ನೊಂದಿಗೆ ಕರೆತಂದಾಗ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳಿಗೆಲ್ಲ ಸಂತೋಷ ಹಾಗೂ ಸೋಜಿಗ ಎರಡೂ ಏಕಕಾಲದಲ್ಲಿ ಉಂಟಾದವು. ನಿರುತ್ಸಾಹಗೊಂಡಿದ್ದ ಅವರ ಮುಖದಲ್ಲಿ ಹೊಸ ಉತ್ಸಾಹ ಕಾಣಿಸಿಕೊಂಡಿದ್ದಿತು. ಗೆಲುವಿನ ಕಳೆಯನ್ನು ಅವರು ತಮ್ಮ ಮುಖದ ಮೇಲೆ ಬರೆದು ಕೊಂಡಿದ್ದರು. ಒಮ್ಮೆಲೇ ವಿದ್ಯುತ್ ಸಂಚಾರವಾದಂತಾಗಿ ಚಟುವಟಿಕೆ ಆರಂಭಗೊಂಡವು. ಅದೊಂದು ಅಪೂರ್ವ ಘಟನೆ ಎನಿಸಿತು. ಉಪವಾಸದ ಆ ಪ್ರಸಂಗ ಅನೇಕ ಜನರನ್ನು ಆಕರ್ಷಿಸಿತು. ಭಾಷೆಗೋಸುಗ ಡಾ.ಶಂ.ಬಾ.ಜೋಶಿ ಮೊದಲಾದ ಜನರು ಉಪವಾಸ ಕುಳಿತರೆನ್ನುವುದು ಭಾರತದ ಪತ್ರಿಕೆಗಳಿಗೆಲ್ಲ ಬಹುದೊಡ್ಡ ಸುದ್ದಿ ಎನಿಸಿತು. ಉಪವಾಸ ಕುಳಿತ ಆ ಘಟನೆ ಬಹುದೂರದವರೆಗೆ ಧ್ವನಿ ತರಂಗಗಳನ್ನು ಎಬ್ಬಿಸಿತು. ಆ ಸುದ್ದಿಯನ್ನು ಬಿ.ಬಿ.ಸಿ. ಲಂಡನ್ನಿನಿಂದ, ತನ್ನ ರಾತ್ರಿ 10‑30 ಪ್ರಸಾರದಲ್ಲಿ ಬಿತ್ತರಿಸಿತು. ಏಪ್ರಿಲ್ 19ನೆಯ ತಾರೀಖು ಕರ್ನಾಟಕ ಏಕೀಕರಣಕ್ಕೋಸುಗ ನಡೆದ ಆಂದೋಲನವು ಕೂಡ ಭಾರೀ ಸುದ್ದಿ ಮಾಡಿ ಗೋಳಿಬಾರ್‌ದಲ್ಲಿ ಪರ್ಯವಸಾನಗೊಂಡಿತು. ಆ ಸುದ್ದಿ ಆಗ ಬಿ.ಬಿ.ಸಿಯಲ್ಲಿ ಬಿತ್ತರಣೆಗೊಂಡಿತು. ಅಂದು ಕರ್ನಾಟಕ ಏಕೀಕರಣವಾಯಿತು. ಇಂದು ಕನ್ನಡ ಭಾಷೆ ಸಿಂಹಾಸನದ ಮೇಲೆ ಬಂದು ಕುಳಿತುಕೊಳ್ಳುತ್ತದೆ ಎಂದು ನಾವು ಭಾವನೆ ಮಾಡಿಕೊಂಡೆವು. ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯು ಬಹಳ ಶಿಸ್ತಿನಿಂದ ಕಾರ್ಯ ನಿರ್ವಹಿಸಿಕೊಂಡು ನಡೆದುದು ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಯಿತು. ಬಹುಶಃ ಅವರ ಬಳಿಯಲ್ಲಿ ಇರುವಷ್ಟು ಪರಿಣತೆಯು ಬೇರೆ ಯಾವ ಸಂಘಟನೆಯಲ್ಲೂ ಇರಲಿಲ್ಲ. ಡಾ.ಆರ್.ಸಿ.ಹಿರೇಮಠ, ಪ್ರೊ.ಎಸ್.ಎಸ್.ಮಾಳವಾಡ, ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ಡಾ.ದೇವೇಂದ್ರ ಕುಮಾರ ಹಕಾರಿ, ಚಂದ್ರಶೇಖರ ಪಾಟೀಲ, ಡಾ.ರಾ.ಯ. ಧಾರವಾಡಕರ, ಡಾ.ಎಂ.ಎಸ್.ಸುಂಕಾಪುರ, ಡಾ.ಎಂ.ಎಂ.ಕಲಬುರ್ಗಿ, ಡಾ.ಎಂ.ಎಸ್. ವೃಷಭೇಂದ್ರಸ್ವಾಮಿ, ವೆಂಕಟೇಶ ಕುಲಕರ್ಣಿ, ಡಾ.ಗುರುಲಿಂಗ ಕಾಪಸೆ, ಎನ್.ಕೆ. ಕುಲಕರ್ಣಿ, ಶಾಂತಾದೇವಿ ಮಾಳವಾಡ, ಗೀತಾ ಕುಲಕರ್ಣಿ, ಸುರೇಂದ್ರ ದಾನಿ, ವೆಂಕಟೇಶ ಕುಲಕರ್ಣಿ, ಕೆ.ಎಸ್.ದೇಶಪಾಂಡೆ, ಮಹಾದೇವ ಬಣಕಾರ, ಬಿ.ವಿ.ಗುಂಜೆಟ್ಟಿ, ಎಂ.ಜೀವನ, ಹೀಗೆ ಒಬ್ಬರೇ ಇಬ್ಬರೇ?

ಸತ್ಯಾಗ್ರಹ ಮಾಡುವ ಉತ್ಸಾಹ ಜನರಲ್ಲಿ ಎಷ್ಟೊಂದು ತುಂಬಿಕೊಂಡಿದ್ದಿತು ಎನ್ನುವುದನ್ನು ಸಮಗ್ರ ಕರ್ನಾಟಕವೇ ಕಂಡಿದ್ದಿತು. ಅದು ಸಾರ್ವಜನಿಕ ಜೀವನದ ಎಲ್ಲ ಬಗೆಯ, ಎಲ್ಲ ವರ್ಗಗಳ ಜನರನ್ನೂ ಆಕರ್ಷಿಸಿದ್ದಿತು. ಆಗ ಸತ್ಯಾಗ್ರಹ, ಆಚರಿಸಬೇಕೆನ್ನುವ ಯಾರೊಬ್ಬರೂ ತಮ್ಮಷ್ಟಕ್ಕೇ ವೇದಿಕೆಯ ಮೇಲೆ ಏರಿ ಕುಳಿತುಕೊಳ್ಳುವ ಹಾಗೆ ಇರಲಿಲ್ಲ. ಅವರು ಮೊದಲು ಕ್ರಿಯಾಸಮಿತಿಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿರ ಬೇಕಾಗಿದ್ದಿತು. ಆದ್ಯತೆಯನ್ನು ಗಮನಿಸಿ ಅವರಿಗೆ ಅನುಮತಿಯನ್ನು ನೀಡಲಾಗುತ್ತಿತ್ತು. ಸ್ವಯಂ ಪ್ರಚಾರ ಪಡೆಯಬೇಕೆನ್ನುವವರಿಗೆ ಅಲ್ಲಿ ಅವಕಾಶ ಇರಲಿಲ್ಲ. ಉಪವಾಸದ ಒಂದು ತಂಡ ಬೆಳಿಗ್ಗೆ ಎಂಟು ಗಂಟೆಗೆ ಏಳುತ್ತಿತ್ತು. ಇನ್ನೊಂದು ತಂಡ ಆನಂತರ ಬಂದು ಅಲ್ಲಿ ಕುಳಿತುಕೊಳ್ಳುತ್ತಿತ್ತು. ಅದು ಒಂದು ರೀತಿಯಿಂದ ಕನ್ನಡದ ಖೋ ಖೋ ಆಟದಂತೆ ಇದ್ದಿತು. ಕ್ರಿಯಾ ಸಮಿತಿಯು ಹೂಡಿದ ಆಂದೋಲನ ಬೊಂಬಾಯಿಯಿಂದ ಹಿಡಿದು ಬೆಂಗಳೂರುವರೆಗೆ ಅನೇಕ ಜನರನ್ನು ಆಕರ್ಷಿಸಿದ್ದಿತು. ಕನ್ನಡ ಹಾಗೂ ಕರ್ನಾಟಕಗಳ ಬಗ್ಗೆ ದೀಕ್ಷಾಬದ್ಧರಾಗಬೇಕೆನ್ನುವವರೆಲ್ಲರೂ ಆಗ ಆಲೂರು ವೆಂಕಟರಾಯ ಮಂಟಪದಲ್ಲಿ ಬಂದು ಕುಳಿತುಕೊಳ್ಳುತ್ತಿದ್ದರು. ಪ್ರತಿದಿನ ನಡೆಯುವ ಕಾರ್ಯಕ್ರಮಗಳಲ್ಲಿ ಗೀತೆ ಹಾಡುವವರೂ ಇದ್ದರು, ಲಾವಣಿ ಹೇಳುವವರೂ ಇದ್ದರು. ಬಹುಶಃ ಯಾವ ಸಾಹಿತ್ಯ ಸಮ್ಮೇಳನವೂ ಅಷ್ಟೊಂದು ವೈವಿಧ್ಯಮಯ ಕಾರ್ಯಕ್ರಮಗನ್ನು ಕೊಟ್ಟಿರಲಾರದು. ಡಾ.ಶಂ.ಬಾ.ಜೋಶಿ ಉಪವಾಸ ಕುಳಿತ ಅದೇ ದಿನ ಮಧ್ಯಾಹ್ನ ರೈಲಿನಲ್ಲಿ ಮುಂಬಯಿಗೆ ತೆರಳಿದರು. ಹಿರಿಯನಿಲ್ಲದ ಮನೆಯಲ್ಲಿ ನಾವೇ ಕುಟುಂಬದ ವ್ಯವಹಾರವನ್ನು ನಿರ್ವಹಿಸಬೇಕಾಯಿತು.  ಕೇಂದ್ರ ಕ್ರಿಯಾ ಸಮಿತಿಯ ಅಧ್ಯಕ್ಷರು ಹೋದರೆಂದು ಅದರ ಕೆಲಸ ನಿಲ್ಲುವ ಹಾಗಿರಲಿಲ್ಲ. ಹೆಚ್ಚಿನ ಉತ್ಸಾಹದಿಂದ ನಾವು ಆ ಕಾರ್ಯಕ್ಕೆ ತೊಡಗಿಸಿಕೊಂಡೆವು. ಶ್ರೀರಾಮನಿಲ್ಲವೆಂದು ಅಯೋಧ್ಯೆಯ ಆಡಳಿತ ತಡೆದು ನಿಂತಿತೇ? ಶ್ರೀರಾಮನ ಹೆಸರಿನಲ್ಲಿ ಭರತನು ರಾಜ್ಯ ಕಾರಭಾರ ನಿರ್ವಹಿಸಿದನೆನ್ನುವ ನಿದರ್ಶನ ನಮ್ಮ ಕಣ್ಣೆದುರಿನಲ್ಲಿ ಇದೆ. ದೊರೆಯ ಗೈರು ಹಾಜರಿಯಲ್ಲಿ ಯಾರಾದರೂ ದೊರೆತನದ ಜವಾಬ್ದಾರಿಯನ್ನು ನಿರ್ವಹಿಸಲೇಬೇಕಲ್ಲ? ಕೇಂದ್ರ ಕ್ರಿಯಾ ಸಮಿತಿಯ ಕಾರ್ಯಕಾರಣಿಯ ಸಭೆ ಸೇರಿತು. ಆ ಸಮಿತಿಯ ಕಾರ್ಯವನ್ನು, ನಾನು ಕಾರ್ಯವಾಹಕ ಅಧ್ಯಕ್ಷನಾಗಿ ನಿರ್ವಹಿಸಬೇಕೆಂದು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ಸೂಚಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ನಾನು ಅಧ್ಯಕ್ಷನಾಗಿ ಇದ್ದುದರಿಂದ, ಕಾರ್ಯವಾಹಕ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗುವುದು ಸೂಕ್ತವೆಂದು ಆ ಮಿತ್ರರೆಲ್ಲರೂ ಆಲೋಚಿಸಿದ್ದರು.

ಗೋಕಾಕ್ ವರದಿಯ ಅನುಷ್ಠಾನದ ಆಂದೋಲನ ರಾಜ್ಯದೊಳಗಿನ ಅನೇಕ ಪರಿಣತಿಗಳನ್ನು ಆಕರ್ಷಿಸಿದ್ದಿತು. ಆಂದೋಲನದ ಬಗೆಗೆ ಕೊಟ್ಟ ಕರೆ ರಾಜ್ಯದ ತುಂಬೆಲ್ಲ ಕಾಳ್ಗಿಚ್ಚಿನಂತೆ ಹಬ್ಬಿಕೊಂಡಿದ್ದಿತು. ಧಾರವಾಡದಲ್ಲಿ ಪ್ರತಿದಿನ ಸಭೆ, ನಗರ ಸಂಕೀರ್ತನೆಗಳು ನಡೆಯತೊಡಗಿದವು. ಧಾರವಾಡದ ಈ ಮಾದರಿ ರಾಜ್ಯದಲ್ಲಿ ಬಹಳಷ್ಟು ಕೆಲಸ ಮಾಡಿತು. ಬೆಂಗಳೂರು ಮೈಸೂರುಗಳೇ ಮೊದಲಾಗಿ ರಾಜ್ಯದ ಅನೇಕ ನಗರಗಳಲ್ಲಿ ಈ ಆಂದೋಲನ, ಸಾಹಿತಿಗಳನ್ನು, ಶಿಕ್ಷಕರನ್ನು, ಯುವಕರನ್ನು, ವಿದ್ಯಾರ್ಥಿಗಳನ್ನು ಆಕರ್ಷಿಸಿತು. ಕನ್ನಡದ ಪ್ರತಿಧ್ವನಿ ರಾಜ್ಯದ ಮೂಲೆ ಮೂಲೆಗಳಲ್ಲಿ ಕೇಳಿ ಬಂದಿತು.

 

ಹೋರಾಟದ ಹಾದಿ

‘ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬಲಿ’, ‘ಗೋಕಾಕ್ ವರದಿ ಜಾರಿಗೆ ಬರಲಿ’, ‘ಕನ್ನಡ ಕ್ರಿಯಾ ಸಮಿತಿಗೆ ಜಯವಾಗಲಿ’ ಎಂಬ ಕೂಗಿನೊಂದಿಗೆ, ಕರ್ನಾಟಕ ವಿದ್ಯಾವರ್ಧಕ ಸಂಘದ ಆಲೂರು ವೆಂಕಟರಾವ್ ವೇದಿಕೆಯ ಮೇಲೆ ನಿರ್ಮಿಸಲಾದ ವಿಶೇಷ ಮಂಟಪದಲ್ಲಿ ಆರಂಭಗೊಂಡ ಸರತಿ ಉಪವಾಸ ಸತ್ಯಾಗ್ರಹ ಕರ್ನಾಟಕದಲ್ಲಿ ಅಭೂತಪೂರ್ವವೆನಿಸಿತು. ಆ ಶಿಸ್ತು, ಆ ವ್ಯವಸ್ಥೆ, ಆ ಸಂಘಟನೆ ಮಹಾತ್ಮಾ ಗಾಂಧಿ ಕಾಲದ ಸತ್ಯಾಗ್ರಹವನ್ನು ಸ್ಮರಣೆಗೆ ತಂದು ಕೊಡುತ್ತಿತ್ತು. ಕನ್ನಡತಾಯಿ ಭುವನೇಶ್ವರಿಯನ್ನು ಕಣ್ಣೆದುರಿಗಿರಿಸಿಕೊಂಡು, ಕರ್ನಾಟಕತ್ವವನ್ನು ಬಿತ್ತರಿಸಿದ ಆಲೂರು ವೆಂಕಟರಾಯರನ್ನು, ಕನ್ನಡತ್ವವನ್ನು ಬಿಂಬಿಸಿದ ಡೆಪ್ಯೂಟಿ ಚೆನ್ನಬಸಪ್ಪನವರ ಆದರ್ಶಗಳನ್ನು ಹೃದಯಕ್ಕೆ ಹಚ್ಚಿಕೊಂಡು ಆರಂಭಗೊಂಡ, ಕನ್ನಡದ ಉಸಿರು ತುಂಬುವ ಆಂದೋಲನ, ಕರ್ನಾಟಕದ ತುಂಬೆಲ್ಲ ತನ್ನ ಪ್ರಭಾವ ಪರಿಣಾಮಗಳನ್ನು ಬೀರಿತು. ತಮ್ಮ ಅಶಕ್ತ ದೈಹಿಕ ಪ್ರಕೃತಿಯನ್ನು ಅನುಲಕ್ಷಿಸಿ ಎರಡು ಗಂಟೆಗಳ ಕಾಲ ಮಾತ್ರ ಸಾಂಕೇತಿಕ ಸತ್ಯಾಗ್ರಹ ನಡೆಸಿದ ಡಾ.ಶಂಬಾ, ಆ ಸಂದರ್ಭದಲ್ಲಿ ಹೇಳಿದ ಮಾತು ಹೋರಾಟದ ಮೂಲ ನೆಲೆಯನ್ನು ತೋರಿಸಿಕೊಟ್ಟಿತು. ಪ್ರತಿಯೊಬ್ಬ ಕನ್ನಡಿಗನೂ ಆ ಮಾತನ್ನು ತನ್ನ ಹೃದಯಕ್ಕೆ ಹಚ್ಚಿಕೊಂಡನು. ಅಂತಃಕರಣದಲ್ಲಿ ತುಂಬಿಸಿಕೊಂಡನು. “ಕನ್ನಡ ನನ್ನ ಜೀವ ಜೀವಾಳದ ಉಸಿರು. ಭಾಷಿಕ ಸಮಷ್ಟಿ, ಉಳಿದರೆ, ಆ ಭಾಷಿಕ ವ್ಯಕ್ತಿಯ ಅಸ್ತಿತ್ವ ಉಳಿಯುತ್ತದೆ”. “ಕನ್ನಡದ ಅಸ್ತಿತ್ವವನ್ನು ಸಂದಿಗ್ಧ ಸ್ಥಿತಿಗೆ ತಳ್ಳುವ ಹೊಂಚು ಕಾಣುತ್ತಿದೆ” ಎಂದು ಶಂಬಾ ಜೋಶಿ ಹೆದರಿಸಿದ ಮಾತು ಮಂತ್ರದಂತೆ ಕೆಲಸ ಮಾಡಿತು.

ವೈರಿಗೆ ಪೂರ್ವಭಾವಿಯಾಗಿ ತಿಳಿಸಿಯೇ ಯುದ್ಧ ಹೂಡುವ ಪರಿಪಾಟ ಪ್ರಾಚೀನದಲ್ಲಿ ಪ್ರಚಲಿತವಿದ್ದಿತು. ಆ ಪರಂಪರೆಯನ್ನು ಅನುಲಕ್ಷಿಸಿ ಕ್ರಿಯಾ ಸಮಿತಿಯ ಕಾರ್ಯದರ್ಶಿಗಳಾದ ಚಂದ್ರಶೇಖರ ಪಾಟೀಲ, ಎಂ.ಎಂ. ಕಲಬುರ್ಗಿ ಹಾಗೂ ಗುರುಲಿಂಗ ಕಾಪಸೆಯವರು ಗೋಕಾಕ್ ವರದಿಯನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿ ಗುಂಡೂರಾಯರನ್ನು ಒತ್ತಾಯಪಡಿಸಿದರು. ‘ರಾಜ್ಯದ ತುಂಬೆಲ್ಲ ಸಹಜವಾಗಿಯೇ ಹಬ್ಬುವ ಈ ಹೋರಾಟವನ್ನು ತಪ್ಪಿಸುವುದು ನಿಮ್ಮ ಕೈಯಲ್ಲಿಯೇ ಇದೆ. ನೀವು ಗೋಕಾಕ್ ವರದಿಯನ್ನು ತೀವ್ರವೇ ಜಾರಿಗೊಳಿಸಬೇಕು. ಕನ್ನಡವನ್ನು ಉಳಿಸಿ ಕರ್ನಾಟಕದ ಮುಖ್ಯಮಂತ್ರಿಗಳೆಂದು ತೋರಿಸಿಕೊಡಬೇಕು. ಆ ಸಂದರ್ಭದಲ್ಲಿ ಖಾದ್ರಿ ಶಾಮಣ್ಣನವರು ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಏಪ್ರಿಲ್ 4, 1982ರಂದು ಒಂದು ವಿಶೇಷ ಸಂಪಾದಕೀಯವನ್ನು ಬರೆದು ‘ಕನ್ನಡದ  ವಿಷಯದಲ್ಲಿ ಸರಕಾರವು ಚೌಕಾಸಿ ಮಾಡುತ್ತಿರುವುದು ಯಾರಿಗೂ ಮರ್ಯಾದೆ ತರುವಂಥದಲ್ಲ’ ಎಂದು ಹೇಳಿದರು. ‘ಸಾಹಿತಿಗಳು ಭಾಷಾ ಕೋವಿದರು ಇದಕ್ಕಾಗಿ ಬೀದಿಗೆ ಇಳಿಯುವಂತೆ ಮಾಡಿರುವುದು ನಿಜಕ್ಕೂ ವಿಷಾದಕರ. ಆದರೆ, ಅವರ ದಿಟ್ಟತನ ಅತ್ಯಂತ ಪ್ರಶಂಸನೀಯ. ಕನ್ನಡಕ್ಕಾಗಿ ಹೋರಾಟ ಮಾಡಬೇಕಾಗಿ ಬಂದರೆ ಯಾರೂ ಅಂಜರು. ಕನ್ನಡದ ಸ್ಥಾನಮಾನ ಕಾಯಲು ನಮ್ಮೆಲ್ಲರ ಪ್ರಾಣವನ್ನು ಪಣಕ್ಕೆ ಹಚ್ಚೋಣ. ‘ಕನ್ನಡ ಪ್ರಭ’ದ ಸಂಪಾದಕೀಯವು ಹೋರಾಟಕ್ಕೆ ಕಾರಣವೆನಿಸಿದ ಸಮಗ್ರ ಪ್ರಶ್ನೆಯನ್ನು ವಿವರವಾಗಿ ಸಮಗ್ರವಾಗಿ ತಿಳಿಸಿರುವುದರಿಂದ, ಅದನ್ನು ಇಲ್ಲಿ ಇಡಿಯಾಗಿ ಉಧೃತಗೊಳಿಸು ವುದು ಅಗತ್ಯವಿದೆ.

ಗೋಕಾಕ್ ವರದಿಯ ಸಮಗ್ರ ಜಾರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಶಂ.ಬಾ.ಜೋಶಿ, ಬಸವರಾಜ ಕಟ್ಟೀಮನಿ, ಆರ್.ಸಿ.ಹೀರೇಮಠ ಹಾಗೂ ಪಾಟೀಲ ಪುಟ್ಟಪ್ಪ ಅವರಿಂದ ನಿರಶನ ಆರಂಭವಾಗಿ ರಾಜ್ಯಾದ್ಯಂತ ಚಳುವಳಿ ನಡೆಸುವ ಮಟ್ಟಕ್ಕೆ ಈ ಸಂಗತಿ ಬಂದುದು ಅತ್ಯಂತ ವಿಷಾದಕರ.

ಗೋಕಾಕ್ ಸಮಿತಿಯ ವರದಿಯನ್ನು ಓದದೆಯೇ ವಿರೋಧಿಸುವವರುಂಟು. ಸರಿಯಾಗಿ ಓದಿದ ಮೇಲೆ ಎಲ್ಲ ಸಂಶಯದ ಪರಿಹಾರ. ಆ ಮೇಲೆಯೂ ಅದನ್ನು ವಿರೋಧಿಸಿದರೆ ಅದಕ್ಕೆ ರಾಜಕೀಯ ಕಾರಣ.

1. ಘಂಟಾಘೋಷವಾಗಿ ಹೇಳಬಹುದು. ಗೋಕಾಕ್ ವರದಿಯ ಜಾರಿಯಿಂದ ಯಾವ ಭಾಷಾ ಅಲ್ಪಸಂಖ್ಯಾತರಿಗೂ ಅನ್ಯಾಯ ಇಲ್ಲ. ಬದಲಾಗಿ ಅವರಿಗೇ ಲೇಸು. ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆ. ವಾದ ವಿವಾದಕ್ಕೆ ಎಡೆ ಇಲ್ಲ. ಸಿದ್ಧಪಟ್ಟಿರುವ ಸಂಗತಿ. ಸಂವಿಧಾನದ ಉಲ್ಲಂಘನೆಯ ಮಾತೂ ಇಲ್ಲ. ಅದೆಲ್ಲ ಬರಿ ನೆಪ.

2. ಪ್ರಾಥಮಿಕ ಶಾಲೆಯ ನಾಲ್ಕು ವರ್ಷ ತಾಯಿನುಡಿಯಲ್ಲಿ ಕಲಿಯಲು ಎಲ್ಲ ಅವಕಾಶ. ಈ ವರದಿಯನ್ನು ವಿರೋಧಿಸುತ್ತಿರುವ ಮಂದಿ ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಿಶು ವಿಹಾರಕ್ಕೆ ಕಳುಹಿಸುತ್ತಾರೆ. ತಾಯಿನುಡಿಯೂ ಇಲ್ಲ. ಪ್ರದೇಶ ಭಾಷೆಯೂ ಇಲ್ಲ. ಮೊರೆ ಹೋಗುವುದು ತಾಯಿನುಡಿಯ ಮರೆಯಲ್ಲಿ. ಬೆಳೆಸುವುದು ಇಂಗ್ಲೀಷನ್ನು.

3. ಇವರದು ಉದಾರ ಭಾಷಾ ನೀತಿಯಂತೆ, ಕನ್ನಡವನ್ನು ಎತ್ತಿ ಹಿಡಿಯುವವರು ಭಾಷಾಂಧರಂತೆ, ಎಂಥ ವಿಚಿತ್ರ ತರ್ಕ. ಯಾವ ದೃಷ್ಟಿಯಿಂದ ನೋಡಿದರೂ ನ್ಯಾಯ ಸಮ್ಮತ ಅಲ್ಲ. ಮತ್ತೊಂದು ವಾದ. ಯಾವ ರಾಜ್ಯದಲ್ಲಿಯೂ ಪ್ರದೇಶ ಭಾಷೆ ಪ್ರಥಮ ಭಾಷೆ ಅಲ್ಲವಂತೆ, ಆಗದಿದ್ದರೇನು? ಕರ್ನಾಟಕದಲ್ಲಿ ಕನ್ನಡವನ್ನೇಕೆ ಮಾಡಬಾರದು? ನಾವೇ ಮುಂದಾಗೋಣ. ಇತರರಿಗೆ ಮಾದರಿಯಾಗೋಣ. ಇಷ್ಟೂ ತಿಳುವಳಿಕೆ ಇಲ್ಲದವರು ಎಂಥ ಜನರು?

4. ಎಲ್ಲ ರಾಜ್ಯಗಳಲ್ಲಿಯೂ ಭಾಷಾ ಅಲ್ಪಸಂಖ್ಯಾತರು ಇದ್ದೇ ಇರುತ್ತಾರೆ. ತಮಿಳುನಾಡಿನಲ್ಲಿ ಕನ್ನಡಿಗರಿಗೆ, ತೆಲುಗರಿಗೆ ಏನು ಮರ್ಯಾದೆ? ಅವಿಭಕ್ತ ಮದ್ರಾಸ್ ಪ್ರಾಂತದಿಂದ ತೆಲುಗರು ಸಿಡಿದು ಹೋದದ್ದೇ ಅನ್ಯಾಯದ ದೆಸೆಯಿಂದ. ಮುಂಬೈ ಪ್ರಾಂತದಿಂದ ಕನ್ನಡಿಗರು, ಗುಜರಾತಿಗಳು ಬೇರಾದುದೇ ಈ ಕಾರಣದಿಂದ. ಇದನ್ನೆಲ್ಲ ಮರೆಯಲಾದೀತೇ?

5. ಈಗಲೂ ಮಹಾರಾಷ್ಟ್ರ, ತಮಿಳು ನಾಡುಗಳಲ್ಲಿ ಅಲ್ಪಸಂಖ್ಯಾತ ಕನ್ನಡಿಗರ ಭಾಷೆಗೆ, ಶಾಲೆಗಳಿಗೆ ಪ್ರೋಇಲ್ಲ. ನ್ಯಾಯವಾಗಿ ಸಲ್ಲಬೇಕಾದ ಮನ್ನಣೆಯೂ ಇಲ್ಲ. ಕನ್ನಡ ಶಾಲೆಗಳು ಸೊರಗುತ್ತಿವೆ. ಇಂಥವರು ನಮಗೆ ಉಪದೇಶ ಮಾಡಬಲ್ಲರೇ? ಹಾಗೆ ನೋಡಿದರೆ, ಕರ್ನಾಟಕವೇ ಈ ವಿಷಯದಲ್ಲಿ ಅತ್ಯಂತ ಮಾದರಿ. ಎಲ್ಲ ಭಾಷಾ ಅಲ್ಪಸಂಖ್ಯಾತರಿಗೂ ಇಲ್ಲಿ ಸಾಕಷ್ಟು ಪ್ರೋಈ ಮಾದರಿಯನ್ನು ಇತರ ರಾಜ್ಯಗಳೂ ಅನುಸರಿಸಲಿ.

6. ಉರ್ದು ಕೇವಲ ಮುಸ್ಲಿಮರ ಭಾಷೆ ಅಲ್ಲ. ಎಷ್ಟೋ ಜನ ಮುಸಲ್ಮಾನರಿಗೆ ಉರ್ದುವಿನ ಗಾಳಿ ಗಂಧವೇ ಇಲ್ಲ. ಉರ್ದುವಿನಲ್ಲಿ ಪಾರಂಗತರಾದ ಹಿಂದೂ ಬಾಂಧವರೂ ಇದ್ದಾರೆ. ಉರ್ದು ಇರಲಿ. ಅದಕ್ಕೆ ಪ್ರೋಸಿಗಲಿ, ಯಾರೂ ಕರುಬರು. ಆದರೆ, ಪ್ರಥಮ ಭಾಷೆಯ ಸ್ಥಾನಕ್ಕೆ ಅದು ಬರಲಾರದು. ಈ ಮಾತನ್ನು ಮರೆಯತಕ್ಕದ್ದಲ್ಲ.

7. ಆಡಳಿತ ಪಕ್ಷದ ಮಾತು ಬಿಡಿ. ಇತರ ರಾಜಕೀಯ ಪಕ್ಷಗಳು ಏಕೆ ನಿಚ್ಚಳ ನಿಲುವು ತಳೆದಿಲ್ಲ? ಅಲ್ಪಸಂಖ್ಯಾತರ ಮತಗಳ ಪರಿಗಣನೆಯೇ ಸರಿಯಲ್ಲ. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ. ಈ ವಿಷಯದಲ್ಲಿ ರಾಜಿ ಅಸಾಧ್ಯ. ಪ್ರತಿಪಕ್ಷಗಳು ಏಕೆ ಈ ಮಾತನ್ನು ಸಾರಿ ಸಾರಿ ಹೇಳುತ್ತಿಲ್ಲ? ಕನ್ನಡಕ್ಕಾಗಿ ಹೋರಾಡುವುದು ಎಲ್ಲ ಪ್ರಗತಿಪರರ ಕರ್ತವ್ಯ. ಪ್ರತಿಯೊಂದು ಪ್ರದೇಶ ಭಾಷೆಯೂ ತನ್ನ ತನ್ನ ಸ್ಥಾನದಲ್ಲಿ ಸಾರ್ವಭೌಮ. ಅಲ್ಲಿರು ವವರೆಲ್ಲರೂ ಅದನ್ನು ಕಲಿಯಲೇ ಬೇಕು. ಇದು ಬೆಳಕಿನಷ್ಟು ತಿಳಿಯಾದ ಸತ್ಯ.

ಕರ್ನಾಟಕದಲ್ಲಿಯೇ ಸಾಹಿತಿಗಳಿಂದ ಕನ್ನಡದ ಉಳಿವಿಗಾಗಿ ಪ್ರಾರಂಭಗೊಂಡ ಈ ಸತ್ಯಾಗ್ರಹ ಚರಿತ್ರಾರ್ಹ ಎಂದು ಪತ್ರಿಕೆಗಳು ಬರೆದವು. ಸರದಿ ಉಪವಾಸದ ಸರಣಿಯನ್ನು ಮುಂದುವರಿಸಿಕೊಂಡು ಹೋಗಲು ಕನ್ನಡ ಕೇಂದ್ರ ಕ್ರಿಯಾ ಸಮಿತಿ ನಿರ್ಧರಿಸಿತು. ಈ ಸತ್ಯಾಗ್ರಹದಲ್ಲಿ ಹೆಸರಾಂತ ಲೇಖಕರಾದ ಚೆನ್ನವೀರ ಕಣವಿ, ಗೀತಾ ಕುಲಕರ್ಣಿ, ರಾ.ಯ.ಧಾರವಾಡಕರ, ಶಾಂತಾದೇವಿ ಮಾಳವಾಡ, ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಮೊದಲಾದವರು ಉಪವಾಸ ಮಾಡಿ ಪಾಲ್ಗೊಂಡರು. ಧಾರವಾಡದಲ್ಲಿ ಆರಂಭಗೊಂಡ ಈ ಸವಿನಯ ಅಹಿಂಸಾತ್ಮಕ ಹೋರಾಟವು ರಾಜ್ಯದ ತುಂಬೆಲ್ಲ ಭಾರೀ ಪರಿಣಾಮವನ್ನು ಉಂಟುಮಾಡಿತು. ಬೆಂಗಳೂರು, ಮೈಸೂರು, ಮಂಡ್ಯ, ಕೊಪ್ಪಳ, ರಾಯಚೂರು, ಗುಲಬರ್ಗಾ, ಬಿಜಾಪುರ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ ಹೀಗೆ, ರಾಜ್ಯದ ಸಾಹಿತಿಗಳನ್ನು ಅದು ಉತ್ಸಾಹಗೊಳಿಸಿತು. ಸಿದ್ಧಯ್ಯ ಪುರಾಣಿಕ, ಪಿ.ಲಂಕೇಶ್, ಸುಮತೀಂದ್ರ ನಾಡಿಗ, ಡಾ.ಎಂ.ಚಿದಾನಂದಮೂರ್ತಿ, ಡಾ.ಎಚ್. ತಿಪ್ಪೇರುದ್ರಸ್ವಾಮಿ, ಪ.ಮಲ್ಲೇಶ, ರೆಹಮಾನ್‌ಖಾನ್, ಶಾಂತರಸ, ಬಿ.ಟಿ.ಲಲಿತಾ ನಾಯಕ್ ಮೊದಲಾದವರೂ ಈ ಆಂದೋಲನದ ಮುಂಚೂಣಿಯಲ್ಲಿ ನಿಂತರು. ರಾಜ್ಯದೊಳಗಿನ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಅಧ್ಯಾಪಕರು, ಹೈಸ್ಕೂಲು ಶಿಕ್ಷಕರು, ವಿದ್ಯಾರ್ಥಿಗಳು ಇದರಲ್ಲಿ ಸೇರಿಕೊಂಡರು. ಸಣ್ಣ ಹಳ್ಳವಾಗಿ ಆರಂಭಗೊಂಡು ದುದು ಒಂದು ದೊಡ್ಡ ಹೊಳೆಯಾಗಿ ಪರಿಣಮಿಸಿತು. ಅದು, ಕರ್ನಾಟಕದ ಬಹು ವ್ಯಾಪಕ ಜನವರ್ಗವನ್ನು ಬಡಿದೆಬ್ಬಿಸಿತು.

ಹೋರಾಟವು ಹೆಚ್ಚು ಪರಿಣಾಮ ತೋರಿಸಿಕೊಡುವಂತೆ ಕ್ರಿಯಾ ಸಮಿತಿಯು ಬಹು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಕರ್ನಾಟಕವನ್ನು, ಅದರ ಪ್ರಾಚೀನದಿಂದ ಅರ್ವಾಚೀನದವರೆಗೆ ತಿಳಿಸಿಕೊಡುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಯಿತು. ಕನ್ನಡ ಭಾಷೆಯ ಮೇಲ್ಮೈಯನ್ನು ಎತ್ತಿ ತೋರಿಸುವುದು ನಡೆಯಿತು. ಸಾರ್ವಜನಿಕ ಅಭಿಪ್ರಾಯ ವನ್ನು ರೂಪಿಸಲು ಜನರ ಮುಂದೆ ಹೋಗುವ ಕಾರ್ಯಕ್ರಮಗಳನ್ನು ಯೋಜಿಸಲಾಯಿತು. ಜನರ ಕಣ್ಣೆದುರು ಇಲ್ಲದೇ ಹೋದರೆ, ಜನರ ಮನಸ್ಸಿನಲ್ಲಿಯೂ ಇರುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಶಾಸಕರ ಮೇಲೆ, ಮಂತ್ರಿಗಳ ಮೇಲೆ ಒತ್ತಡ ತರುವುದು ಆಂದೋಲನದ ಒಂದು ಪ್ರಮುಖ ಉದ್ದೇಶವೆನಿಸಿತು. ಆಗ ಕೇಂದ್ರದ ಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರು ಇದರ ಪ್ರಥಮ ರುಚಿಯನ್ನು ಹುಬ್ಬಳ್ಳಿಯಲ್ಲಿ ಕಂಡರು. ಶಾಸಕರನ್ನು, ಮಂತ್ರಿಗಳನ್ನು ಗೋಕಾಕ ವರದಿಯ ಜಾರಿಗೆ ಒಪ್ಪಿಸುವುದೇ ಆ ಒತ್ತಾಯದ ಉದ್ದೇಶವಾಗಿದ್ದಿತ್ತು. ಬಿಸಿ ತಗಲದೆ ಬೆಣ್ಣೆ ಕರಗದು ಎನ್ನುವುದನ್ನು ಅರಿತಿದ್ದ ಕ್ರಿಯಾ ಸಮಿತಿಯವರು ಆ ಬಿಸಿಯನ್ನು ತಗಲಿಸಲು ಮುಂದಾಗಿದ್ದರು. ಮಂತ್ರಿಗಳಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮದ ಅಂಗವಾಗಿ, ಶಿಕ್ಷಣದ ಮಂತ್ರಿ ಜಿ.ಬಿ.ಶಂಕರರಾಯರು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿಯಲ್ಲಿ ಒಂದು ಕಾರ್ಯಕ್ರಮಕ್ಕೋಸುಗ ಬಂದಾಗ, ಅವರ ಮೇಲೆ ಘೇರಾವ್ ಹಾಕಲಾಯಿತು. ಕನ್ನಡದ ಬಗೆಗಿನ ಒತ್ತಡ ಏನಿದೆಯೆನ್ನುವುದನ್ನು ಅವರು ಪ್ರತ್ಯಕ್ಷ ಅನುಭವ ಮಾಡಿಕೊಂಡರು. ಮಂತ್ರಿಗಳು ಹಾಗೂ ಶಾಸಕರು ರಾಜ್ಯದಲ್ಲಿ ತಮ್ಮ ಮತಕ್ಷೇತ್ರಗಳಲ್ಲಿ ಮುಕ್ತ ರೀತಿಯಿಂದ ಸಂಚರಿಸುವುದು ದುಸ್ತರವೆನಿಸಿತು. ತಾವೆಲ್ಲಿ ಹೋದರೂ ಜನರು ತಮ್ಮ ಕೈ ಹಿಡಿದು ಕೇಳುತ್ತಾರೆ ಎನ್ನುವುದು ಮನವರಿಕೆಯಾಗಿ ಅವರು ತಮ್ಮ ಸಂಚಾರದ ಬಗೆಗೆ ಸಾರ್ವಜನಿಕರಿಗೆ ತಿಳಿಸದೆ ಸಂಚರಿಸತೊಡಗಿದರು. ಸಾರ್ವಜನಿಕವನ್ನು ಚುರುಕುಗೊಳಿಸಿ ಸರಕಾರವನ್ನು ಮಣಿಸುವ ಅನೇಕ ಬಾಣಗಳು ಕ್ರಿಯಾ ಸಮಿತಿಯ ಬತ್ತಳಿಕೆಯಲ್ಲಿ ಇದ್ದವು. ಸರಕಾರದ ಅನೇಕ ಸಮಿತಿ ಮಂಡಲಿ ಹಾಗೂ ಅಕಾಡಮಿಗಳಲ್ಲಿದ್ದ ಜನರು ರಾಜೀನಾಮೆ ಕೊಡಬೇಕೆನ್ನುವ ಕಾರ್ಯಕ್ರಮವನ್ನು ರೂಪಿಸ ಲಾಯಿತು. ಸರಕಾರವು ನಡೆಸಬೇಕೆಂದಿದ್ದ ವಿಶ್ವಮೇಳದ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಟ್ಟು, ಮುಖ್ಯಮಂತ್ರಿಗಳೂ, ಕನ್ನಡ ಮೇಳ ಸಮಿತಿಯ ಅಧ್ಯಕ್ಷರೂ ಆದ ಆರ್.ಗುಂಡೂರಾವ್ ಅವರಿಗೆ ಒಂದು ಕಾಗದ ಬರೆದೆ.

ಕನ್ನಡಕ್ಕೆ ಯಾವ ನೆಲೆ ಬೆಲೆ ಇಲ್ಲದಂತೆ ನಡೆದಿರುವ ನಮ್ಮ ಈಗಿನ ದಿನಗಳಲ್ಲಿ ಕನ್ನಡ ವಿಶ್ವಮೇಳ ನಡೆಸುವುದು ಮತ್ತು ಅದರಲ್ಲಿ ಭಾಗವಹಿಸುವುದು ಬಹುದೊಡ್ಡ ಪರಿಹಾಸ್ಯವೆಂಬಂತೆ ತೋರುತ್ತದೆ.

ಗೋಕಾಕ್ ವರದಿಯು ಕನ್ನಡಕ್ಕೆ ನಿಶ್ಚಿತವಾದ ಹಾಗೂ ಭದ್ರವಾದ ಆಧಾರವನ್ನು ಒದಗಿಸಿಕೊಡುತ್ತದೆ. ಅದನ್ನು ಇಡಿಯಾಗಿ ಅನುಷ್ಠಾನ ಗೊಳಿಸುವಲ್ಲಿ ಮೀನಮೇಷ ಎಣಿಸುತ್ತಿರುವ ಸರಕಾರದ ಅನುದಾನ ಮತ್ತು ಡೋಲಾಯಮಾನ ರೀತಿಯನ್ನು ಪ್ರತಿಭಟಿಸಿ ನಾನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷನೆಂಬ ಪದಬಲದಿಂದ ಪಡೆದಿರುವ ವಿಶ್ವಮೇಳದ ಸದಸ್ಯತ್ವಕ್ಕೆ ನನ್ನ ರಾಜೀನಾಮೆ ಸಲ್ಲಿಸಿದ್ದೇನೆ.

ನೀವು ಗೋಕಾಕ್ ವರದಿಯನ್ನು ಜಾರಿಯಲ್ಲಿ ತರುವ ಬಗೆಗೆ ನೀಡಿದ ನಿಮ್ಮ ಆಶ್ವಾಸನೆಯ ಮೇಲೆ ತಿರುಗಿ ಬಿದ್ದಿದ್ದೀರಿ. ನೀವು ವಿಶ್ವಮೇಳ ನಡೆಸುವ ಮೊದಲು ಈ ರಾಜ್ಯದಲ್ಲಿ ಕನ್ನಡವನ್ನು ಬದುಕಿಸಬೇಕು. ಏನೇ ಬರಲಿ, ಕನ್ನಡ ಇರಲಿ ಎನ್ನುವುದನ್ನು ನೀವು ಮಂತ್ರವಾಗಿ ತೆಗೆದುಕೊಂಡು ಗೋಕಾಕ್ ವರದಿಯನ್ನು ಸಮಗ್ರವಾಗಿ ಜಾರಿಗೊಳಿಸಿದರೆ ಇಂದಿನ ಹಾಗೂ ಬರಲಿರುವ ಪೀಳಿಗೆಗಳ ಕೃತಜ್ಞತೆಗೆ ಪಾತ್ರರಾಗುತ್ತೀರಿ. ಇಲ್ಲದಿದ್ದರೆ ನೀವು ಅವರ ನಿರಂತರ ಶಾಪಕ್ಕೆ ಗುರಿ ಆಗುತ್ತೀರಿ. ಕನ್ನಡ ಉಳಿಯದಿದ್ದರೆ ನೀವೂ, ನಾವೂ ಈ ರಾಜ್ಯವೂ ಬದುಕಿ ಉಳಿಯುವುದಿಲ್ಲ. ಇದು ಶತಃಸಿದ್ಧ. ಕಣ್ಣಿಗೆ ಕಾಣುವ ಈ ಅನಾಹುತ ನಿಮ್ಮನ್ನು ವಿವೇಕದ ಹಾದಿಗೆ ಹಚ್ಚಬೇಕು. ಗುಂಡೂರಾಯರು ಆಯತ ಸಮಯದಲ್ಲಿ ಕನ್ನಡಕ್ಕೆ ಶಾಶ್ವತ ಅನ್ಯಾಯ ಮಾಡಿದರು ಎನ್ನುವ ಅಪಖ್ಯಾತಿಯನ್ನು ಕಟ್ಟಿಕೊಳ್ಳಬೇಡಿ. ಸದುದ್ದೇಶದ ಈ ಸಲಹೆಯನ್ನು ನೀವು ನಿಮ್ಮ ಗಂಡಾಂತರಕ್ಕೋಸುಗವೇ ತಳ್ಳಿ ಹಾಕಬಹುದು. ರಾಜೀನಾಮೆ ಕೊಡುವ ಈ ಪೀಠಿಕೆ, ಪ್ರಕಾಂಡಸ್ವರೂಪ ತಳೆದು ಬೆಳೆಯುತ್ತ ಹೋಯಿತು. ಕ್ರಿಯಾ ಸಮಿತಿಯವರ ವ್ಯೆಹದಲ್ಲಿ ಏನೇನು ಚಮತ್ಕಾರಗಳಿವೆಯೋ ಎಂದು ಸರಕಾರವನ್ನು ಚಕಿತಗೊಳಿಸುವಂತೆ ಸಂಗತಿಗಳು ಸಂಭವಿಸತೊಡಗಿದವು. ರಾಜ್ಯದ ಸಂಗೀತ ಅಕಾಡಮಿಯ ಅಧ್ಯಕ್ಷರಾದ ಪದ್ಮಭೂಷಣ ಡಾ.ಗಂಗೂಬಾಯಿ ಹಾನಗಲ್ ತಮ್ಮ ಅಧ್ಯಕ್ಷ ಪದಕ್ಕೆ ರಾಜೀನಾಮೆ ನೀಡಿ ಸರಕಾರಕ್ಕೆ ಕಳಿಸಿಕೊಟ್ಟರು. ಅವರ ರಾಜೀನಾಮೆ ಸರಕಾರದ ಮೇಲೆ, ಸಾರ್ವಜನಿಕರ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡಿತು. ಇಂದು ಒಬ್ಬರು, ನಾಳೆ ಇನ್ನೊಬ್ಬರು, ನಾಡದ್ದು ಮತ್ತೊಬ್ಬರು ಎಂದು ರಾಜೀನಾಮೆಯ ಈ ಪತ್ರ ಒಂದು ಸರಪಳಿಯಂತೆ ಬೆಳೆಯುತ್ತ ಹೋಯಿತು.

ಆಂದೋಲನವನ್ನು ಜನತೆಯ ಮನೆಗೆ, ಮನಸ್ಸಿಗೆ ಮುಟ್ಟಿಸುವಲ್ಲಿ ಆರ್.ಸಿ.ಹಿರೇಮಠ, ರಾ.ಯ.ಧಾರವಾಡಕರ, ಬಸವರಾಜ ಕಟ್ಟಿಮನಿ, ಚೆನ್ನವೀರ ಕಣವಿ, ಚಂದ್ರಶೇಖರ ಪಾಟೀಲ, ರಾಮಜಾಧವ ಇವರೇ ಮೊದಲಾದವರು ಬಹು ಪ್ರಶಂಸನೀಯ ಕಾರ್ಯ ಮಾಡಿದರು. ಧಾರವಾಡದಲ್ಲಿ ಆಲೂರು ವೆಂಕಟರಾಯ ವೇದಿಕೆಯ ಮೇಲೆ ಪ್ರತಿನಿತ್ಯ ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬುವ ಏನಾದರೊಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಅರಮನೆಯ ಕಾರ್ಯದಲ್ಲಿ ಕನ್ನಡ ಇರಬೇಕೆಂದು ಒತ್ತಾಯಪಡಿಸಲು ಗುರುಮನೆಯವರೂ ಬಂದರು. ಅವರಲ್ಲಿ ಪ್ರಮುಖರಾದವರೆಂದರೆ ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಕನ್ನಡದ ನಿಷ್ಠೆಯಿಂದ ಅವರು ಕನ್ನಡದ ಗುರುಗಳೆನಿಸಿದರು. ಗೋಕಾಕ್ ವರದಿಯ ಹೋರಾಟಕ್ಕೆ ಅವರು ಉದ್ದಕ್ಕೂ ಬಹುದೊಡ್ಡ ಬೆಂಬಲವಾಗಿ ನಿಂತರು. ಬೆಂಗಳೂರಿನಲ್ಲಿ ಏಪ್ರಿಲ್ 8, 1982ರಲ್ಲಿ ಗೋಕಾಕ್ ವರದಿಯ ಅನುಷ್ಠಾನದ ಬಗೆಗೆ ಒಂದು ವಿಚಾರಗೋಷ್ಠಿ ನಡೆದಾಗ ಕನ್ನಡ ಕೇಂದ್ರ ಕ್ರಿಯಾ ಸಮಿತಿಯು ತನ್ನ ಹೋರಾಟವನ್ನು ಹುಲಿಯ ಬಿಲಕ್ಕೇ ಕೊಂಡೊಯ್ದಂತೆ, ರಾಜಧಾನಿಗೇ ತೆಗೆದುಕೊಂಡು ಹೋಗಿದ್ದಿತು. ಆ ಗೋಷ್ಠಿಯನ್ನು ಉದ್ಘಾಟಿಸುತ್ತ ನಾನು,

ಒಂದು ಜನಾಂಗವನ್ನು ಕೊಲ್ಲಬೇಕೆಂದವರು ಮೊದಲು ಅವರ ಭಾಷೆಯನ್ನು ಕೊಲ್ಲುತ್ತಾರೆ ಎನ್ನುತ್ತ, ಗೋಕಾಕ್ ವರದಿ ಅನುಷ್ಠಾನಕ್ಕೆ ಬರದಂತೆ ತಡೆಹಿಡಿಯ ಬೇಕೆನ್ನುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು ಅದನ್ನೇ ಮಾಡುತ್ತವೆ

ಎಂದು ತಿಳಿಸಿದೆ. ಮುಂದುವರೆದು,

ಕನ್ನಡಕ್ಕೋಸುಗ ಕನ್ನಡಿಗರು ಕರ್ನಾಟಕದಲ್ಲಿ ಉಪವಾಸ ಸತ್ಯಾಗ್ರಹ ಕೈಕೊಳ್ಳ ಬೇಕಾದ ಸ್ಥಿತಿಯನ್ನು ತಂದು ಕರ್ನಾಟಕ ಸರಕಾರವು ಕನ್ನಡಿಗರನ್ನು ಕ್ರೂರ ಪರಿಹಾಸ್ಯಕ್ಕೆ ಗುರಿಪಡಿಸಿದೆ. ಸರಕಾರದ ನೀತಿಯಿಂದ ಕನ್ನಡಿಗರ ಸಂಖ್ಯೆ ಈ ರಾಜ್ಯದಲ್ಲಿ ಸೊರಗುತ್ತ ನಡೆದಿದೆ. ಸರಕಾರವು ವಿವೇಚನೆಯಿಲ್ಲದ ತನ್ನ ಅವಿವೇಕದ ಧೋರಣೆಯನ್ನು ಹೀಗೆಯೇ ಮುಂದುವರಿಸಿಕೊಂಡು ಹೋದರೆ, ಈ ಶತಮಾನದ ಅಂತ್ಯಕ್ಕೆ ಅದು ಶೇಕಡಾ 50ಕ್ಕೆ ಬಂದು ನಿಲ್ಲುವ ಕಳವಳಕಾರಕ ಸ್ಥಿತಿ ಕಾಣಿಸಿಕೊಳ್ಳುತ್ತಿದೆ. ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಭಾಷಿಕರಾಗಿರುವ ಜನರು ಪಕ್ಕದ ರಾಜ್ಯಗಳಲ್ಲಿ ಬಹುಸಂಖ್ಯಾತರಾಗಿ ಸರಕಾರಗಳನ್ನೇ ನಡೆಸುತ್ತಿದ್ದಾರೆ. ರಾಜ್ಯದಲ್ಲಿರುವ ಅಲ್ಪ ಸಂಖ್ಯಾತರ ದಾಖಲೆಗಳಿಗೆ ಸರಕಾರವು ಅನುಮತಿ ಹಾಗೂ ಅನುದಾನ ನೀಡು ತ್ತದೆ. ಆದರೆ, ನೆರೆಯ ರಾಜ್ಯಗಳಲ್ಲಿ ಕನ್ನಡವನ್ನು ಕಸಕ್ಕಿಂತಲೂ ಕಡೆಯಾಗಿ ಕಾಣಲಾಗುತ್ತಿದೆ. ತಮ್ಮ ಸ್ವಾರ್ಥ ಸಾಧನೆಗೋಸುಗ ಎಫ್.ಎಂ.ಖಾನ್, ಎಂ.ಪಿ. ಮೊದಲಾದ ಅಲ್ಪಸಂಖ್ಯಾತ ಭಾಷಿಕರ ಧುರೀಣರು ಗೋಕಾಕ್ ವರದಿಯ ಬಗೆಗೆ ಮುಸ್ಲಿಂ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡತೊಡಗಿದ್ದಾರೆ. ಹಿರಿಯ ಸಾಹಿತಿಗಳು ಧಾರವಾಡದಲ್ಲಿ ಉಪವಾಸ ಕೈಕೊಂಡ ಸಂಗತಿಯನ್ನು ಉಲ್ಲೇಖಿಸಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಾಗೂ ಆದ್ಯ ರಂಗಾಚಾರ್ಯರು ತಮಗೆ ಉಪವಾಸದಲ್ಲಿ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ಅವರು ಉಪವಾಸ ಮಾಡುವುದು ಬೇಡ. ಕನ್ನಡಕ್ಕೆ ಆದ್ಯತೆ ತಂದು ಕೊಡುವುದಕ್ಕೋಸುಗ ಬೀದಿಗಿಳಿದು ಹೋರಾಡಲಿ. ಕನ್ನಡ ನೆಲದಲ್ಲಿ ಬೆಳೆದು, ಕನ್ನಡ ಓದುಗರನ್ನೇ ಪಡೆದು ಬಾಳಿ ಬದುಕಿರುವ, ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ಕನ್ನಡಕ್ಕೆ ಅನ್ಯಾಯವಾಗುವಂಥ ಲೇಖನಗಳನ್ನು ಪ್ರಕಟಿಸುತ್ತವೆ. ಈ ಪ್ರವೃತ್ತಿಯನ್ನೇ ಅವು ಹೀಗೆಯೇ ಮುಂದುವರಿಸಿಕೊಂಡು ಹೋದರೆ, ಆ ಪತ್ರಿಕೆಗಳನ್ನು ಕರ್ನಾಟಕದ ಜನರು ಬಹಿಷ್ಕರಿಸಬೇಕಾದೀತು.

ನಾನು ಆ ಪತ್ರಿಕೆಗಳ ವಿಚಾರ ಹೇಳಿದಾಗ ಪ್ರೇಕ್ಷಕರು ತಮ್ಮ ಬೆಂಬಲ ಸೂಚಿಸಿ ಕರತಾಡನ ಮಾಡಿದರು. ಗೋಕಾಕ್ ವರದಿಯ ಜಾರಿಗೆ ಒತ್ತಾಯಿಸಿ ಕರ್ನಾಟಕದ ಜನರು ಹಳ್ಳಿ ಪಟ್ಟಣಗಳಲ್ಲಿ ಏಪ್ರಿಲ್ 13, 1982ರಂದು ಸಭೆ ಸೇರಿಸಿ, ಮೆರವಣಿಗೆ ನಡೆಸಿ ಪ್ರತಿಭಟನೆ, ಮತ ಪ್ರದರ್ಶನ ನಡೆಸಬೇಕೆಂದು ಕನ್ನಡ ಕ್ರಿಯಾಸಮಿತಿ ಜನತೆಗೆ ಕರೆ ಕೊಟ್ಟಿದ್ದಿತು. ಈ ಸುದ್ದಿಯನ್ನು ‘ಕನ್ನಡಪ್ರಭ’ ಪ್ರಾಮುಖ್ಯತೆ ಕೊಟ್ಟು ಪ್ರಕಟಿಸಿದ್ದಿತು. ಆದರೆ ‘ಸಂಯುಕ್ತ ಕರ್ನಾಟಕ’ಕ್ಕೆ ಮಾತ್ರ ಅದು ಸುದ್ದಿ ಎನಿಸಲಿಲ್ಲ. ಒಂದು ಪತ್ರಿಕೆ ಸರಕಾರದ ಮುಖವಾಣಿ ಯಾದರೆ ಇದೇ ಆಗುತ್ತದೆ. ಅದು ಜನರನ್ನು ಬಿಟ್ಟು ಸರಕಾರವನ್ನು ಹಿಡಿದುಕೊಂಡರೆ ಅವಹೇಳನಕ್ಕೆ ಗುರಿ ಆಗುವುದು ತಪ್ಪುವುದಿಲ್ಲ.

ಗೋಕಾಕ್ ವರದಿಯ ಬಗೆಗೆ ಸರಕಾರದ ನಿರ್ಧಾರ ಕೈಕೊಳ್ಳದೆ ನಿಷ್ಕ್ರಿಯಗೊಂಡು ಸುಮ್ಮನೆ ಕುಳಿತಿರುವುದನ್ನು ಪ್ರತಿಭಟಿಸಿ, ರಾಜ್ಯದಾದ್ಯಂತ ಪ್ರತಿಭಟನೆ ಹಾಗೂ ಮತ ಪ್ರದರ್ಶನ ನಡೆದವು. ಅನಂತರ ಸರಕಾರವು ಏಪ್ರಿಲ್ 19, 1982 ನೆಯ ದಿನ ಒಂದು ನಿರ್ಣಯ ಕೈಕೊಂಡು ಜನರನ್ನು ಮರುಳುಗೊಳಿಸುವಂತೆ ರಾಜ್ಯದಲ್ಲಿ ಕನ್ನಡ ಪ್ರಥಮ ಭಾಷೆಯೆಂದು ಘೋಷಿಸಿತು. ಅದೇ ವೇಳೆಗೆ ಅದು ಇನ್ನುಳಿದ ಭಾಷೆಗಳೂ ಪ್ರಥಮ ಭಾಷೆಗಳೆಂದು ಹೇಳಿತು.

ಕನ್ನಡವು ಪ್ರಥಮ ಭಾಷೆಯೆಂದು ಘೋಷಿಸಿದ ಸಂಗತಿಯನ್ನು ಮಾತ್ರ ಕುವೆಂಪು ಅವರಿಗೆ ಹೇಳಿದರಲ್ಲದೆ, ಹತ್ತರ ಕೂಡ ಅದು ಹನ್ನೊಂದನೆಯದು ಎನ್ನುವುದನ್ನು ಮಾತ್ರ ಅವರಿಗೆ ತಿಳಿಸಲಿಲ್ಲ. ಸರಕಾರವು ಮುಖ್ಯವಾದುದನ್ನು ಮುಚ್ಚಿರಿಸಿ, ತಪ್ಪಾಗಿರುವುದನ್ನು ನಿಜವಾಗಿಯೆಂಬಂತೆ ತೋರಿಸಿಕೊಟ್ಟಿತು. ಸರಕಾರದ ಈ ತಂತ್ರವನ್ನು ಗಮನಿಸಿಲ್ಲದ ಕುವೆಂಪು, ಕನ್ನಡವು ಪ್ರಥಮ ಭಾಷೆ ಎನ್ನುವುದನ್ನು ಕೇಳಿದೊಡನೆಯೇ ಸರಕಾರದ ನೀತಿಯನ್ನು ಸಮರ್ಥಿಸಿ ಒಂದು ಹೇಳಿಕೆ ಕೊಟ್ಟರು.

ಇದು ನಮಗೆ ಧಾರವಾಡದಲ್ಲಿ ತಿಳಿದಾಗ, ನಾವು ಕನ್ನಡ ಕ್ರಿಯಾಸಮಿತಿಯ ಸಭೆಯನ್ನು ಸೇರಿಸಿದೆವು. ನಮ್ಮ ಸಮಿತಿ ಸರಕಾರ ಘೋಷಿಸಿದ ಭಾಷಾ ನೀತಿಯನ್ನು ನಖಶಿಖಾಂತವಾಗಿ ವಿರೋಧಿಸಿ ತನಗೆ ಅದು ಮಾನ್ಯವಿಲ್ಲ. ತಾನು ಅದನ್ನು ಒಪ್ಪುವುದಿಲ್ಲ ಎಂದು ಹೇಳಿ ಮೂಲ ಗೋಕಾಕ್ ವರದಿಯನ್ನು ಸರಕಾರವು ಸ್ವೀಕರಿಸಬೇಕೆಂದು ಒತ್ತಾಯಿಸಲು ಹೋರಾಟ ಮುಂದುವರಿಸುವುದಾಗಿ ಗೊತ್ತುವಳಿಯನ್ನು ಸ್ವೀಕರಿಸಿದೆವು.

ಕುವೆಂಪು ಅವರೇ ಸರಕಾರದ ನೀತಿಯನ್ನು ಒಪ್ಪಿರುವರು ಎಂದ ಮೇಲೆ ನಿಮ್ಮದೇನು ಎಂದು ಕ್ರಿಯಾ ಸಮಿತಿಯಲ್ಲಿದ್ದ ನಮ್ಮನ್ನು ಕೆಲವರು ಪ್ರಶ್ನಿಸಿದರು. ಪತ್ರಿಕೆಯವರು ನನ್ನನ್ನು ಕೇಳಿದಾಗ, ಪ್ರತಿಬಂಧಕಾಜ್ಞೆ ಮುರಿದು ನಾವು ಸೆರೆಮನೆಗೆ ಹೋಗುತ್ತೇವೆ

ಎಂದು ನಾನು ತಿಳಿಸಿದೆ. ಅದಕ್ಕೋಸುಗ ನಾವು 1982ರ ಏಪ್ರಿಲ್ 22ನೆೆಯ ದಿನವನ್ನು ಗೊತ್ತುಪಡಿಸಿದೆವು. ಆ ದಿನ ಬೆಳಿಗ್ಗೆ ನಾವು ಪ್ರತಿಬಂಧಕಾಜ್ಞೆಯನ್ನು ಮುರಿಯುವುದೆಂದು ತೀರ್ಮಾನವಾಗಿದ್ದಿತು. ಕರ್ನಾಟಕ ವಿದ್ಯಾವರ್ಧಕ ಸಂಘದ ಎದುರಿನಲ್ಲಿ ಅಂದು ಬೆಳಿಗ್ಗೆ ಭಾರೀ ಜನದಟ್ಟಣೆ ಸೇರಿದ್ದಿತು. ಶ್ರೀಗಳಾದ ಪಾಟೀಲ ಪುಟ್ಟಪ್ಪ, ಡಾ.ಆರ್.ಸಿ.ಹಿರೇಮಠ, ರಾ.ಯ.ಧಾರವಾಡಕರ, ಚೆನ್ನವೀರ ಕಣವಿ, ವೆಂಕಟೇಶ ಕುಲಕರ್ಣಿ, ಡಾ.ಚೆನ್ನಕ್ಕ ಎಲಿಗಾರ ಮೊದಲಾದವರು ಪ್ರತಿಬಂಧಕಾಜ್ಞೆ ಮುರಿದು ಬಂಧನಕ್ಕೆ ಒಳಗಾಗಬೇಕೆಂದು ಗೊತ್ತಾಗಿದ್ದಿತು.

‘ಗೋಕಾಕ್ ವರದಿ ಜಾರಿಗೆ ಬರಲಿ’, ‘ಏನೇ ಬರಲಿ, ಕನ್ನಡ ಇರಲಿ’, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ‘ಕರ್ನಾಟಕ ಮಾತೆಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗುತ್ತ ನಾವು ಬಂಧನಕ್ಕೆ ಒಳಗಾದೆವು. ನಮ್ಮನ್ನು ಬಂಧಿಸಿ ಕರೆದೊಯ್ಯಲು ಪೊಲೀಸರು ತಮ್ಮ ವಾಹನದಲ್ಲಿ ಹತ್ತಿಸಿ, ಕರೆದೊಯ್ಯುತ್ತಿದ್ದಂತೆ ನಾವು ರಸ್ತೆಯಲ್ಲಿ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತ ಹೊರಟೆವು. ನಾವೆಲ್ಲರೂ ಭಾರೀ ಹುಮ್ಮಸ್ಸಿನಲ್ಲಿ ಇದ್ದೆವು. ನಮ್ಮನ್ನು ಮೊದಲೇ ಗೊತ್ತಿದ್ದ ಒಂದು ಸ್ಥಳಕ್ಕೆ ಕರೆದೊಯ್ದರು. ನಾವು ಅಲ್ಲಿ ಇಳಿದ ಮೇಲೆ ಜಿಲ್ಲಾಧಿಕಾರಿ ವಿಠ್ಠಲ ರೈ ಮತ್ತು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಮುನಿಕೃಷ್ಣ ನಾವಿದ್ದಲ್ಲಿಗೆ ಬಂದು ನಮ್ಮ ಯೋಗಕ್ಷೇಮ ವಿಚಾರಿಸಿದರು. ಕೆಲವು ಡಿ.ಸಿ. ಮತ್ತು ಎಸ್.ಪಿ. ಎಷ್ಟು ಒಳ್ಳೆಯವರು ಇರುತ್ತಾರೆ ಎನ್ನುವುದು ಅವರನ್ನು ನೋಡಿದಾಗಲೇ ಗೊತ್ತಾಗುತ್ತದೆ. ಕನ್ನಡ ಹಾಗೂ ಕರ್ನಾಟಕಗಳ ಬಗ್ಗೆ ನಮಗಿಂತ ಹೆಚ್ಚಲ್ಲದಿದ್ದರೂ, ಅವರು ನಮ್ಮಷ್ಟೇ ಸ್ಪಂದಿಸುತ್ತಿದ್ದರು.

ನಮ್ಮಂಥ ಆಂದೋಲನಕಾರರು ಇದ್ದರೆ ತಮಗೇನೂ ತೊಂದರೆ ಇಲ್ಲವೆಂದು ಅವರು ನಮ್ಮೆದುರಿಗೆ ಹೇಳಿದರು. ಅವರು ನಮಗೆ ಅಲ್ಲಿಯೇ ಊಟ ಮಾಡಿಸಿ, ತಾಲೂಕು ಮ್ಯಾಜಿಸ್ಟ್ರೇಟರ ಕೋರ್ಟಿಗೆ ನಮ್ಮನ್ನು ಕಳಿಸಿಕೊಟ್ಟರು. ಆತಿಥ್ಯ ಒದಗಿಸಲು ನಿಮ್ಮಂಥವರು ಇದ್ದರೆ ನಾವು ಇಲ್ಲಿಯೇ ಇದ್ದು ಬಿಡುತ್ತೇವೆಂದು ಹೇಳಿ ಅವರೊಂದಿಗೆ ನಗೆಯಾಡಿದೆವು. ನಿಮ್ಮಂಥ ಬೆಲೆಯುಳ್ಳ ಜನರನ್ನು ಇಟ್ಟುಕೊಳ್ಳುವುದು ನಮಗೆ ಭಾರೀ ದುಬಾರಿ ಎನಿಸುತ್ತದೆಯೆಂದು ಅವರು ನಮಗೆ ಹೇಳಿ ನಮ್ಮೊಂದಿಗೆ ತಾವೂ ನಕ್ಕರು. ನಾವು ವಿಷಾದ ಸೂಚಿಸಿದರೆ ನಮ್ಮನ್ನು ಬಿಟ್ಟು ಬಿಡುವುದಾಗಿ ಮ್ಯಾಜಿಸ್ಟ್ರೇಟರು ನಮಗೆ ತಿಳಿಸಿದರು. ಆದರೆ, ನಾವು ವಿಷಾದ ಸೂಚಿಸಲು ಬಂದಿಲ್ಲವೆಂದು ಅವರೆದುರು ಹೇಳಿದಾಗ ಅವರು ಅನಿವಾರ್ಯವಾಗಿ ನಮಗೆ ಶಿಕ್ಷೆ ವಿಧಿಸಬೇಕಾಯಿತು.

ನಾಲ್ಕು ದಿನ ನಮಗೆ ರಾಜಾತಿಥ್ಯ, ಅರ್ಥಾತ್ ಗುಂಡೂರಾಯರ ಆತಿಥ್ಯ ಲಭಿಸಿತೆಂದು ಹೇಳಿ ನಾವು ಹೊರಟೇ ಬಿಟ್ಟೆವು. ಪೊಲೀಸ್ ವ್ಯಾನ್ ಮುಂದೆ ಸಾಗಿದಂತೆ ನಾವು ರಾಜ ಮಾರ್ಗದಲ್ಲಿ ‘ಗೋಕಾಕ್ ವರದಿ ಜಾರಿಗೆ ಬರಲಿ’, ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ‘ಕರ್ನಾಟಕ ಮಾತೆಗೆ ಜಯವಾಗಲಿ’ ‘ಹೋರಾಟ ಎಲ್ಲಿಯವರೆಗೆ, ಗೆಲ್ಲುವವರೆಗೆ’ ಎಂದು ಘೋಷಣೆ ಹಾಕುತ್ತ ನಾವು ಜಿಲ್ಲಾ ಸೆರೆಮನೆಯ ಬಾಗಿಲಿಗೆ ಬಂದು ಮುಟ್ಟಿದೆವು. ಅಲ್ಲಿ ನಮ್ಮ ತಪಶೀಲನ್ನೆಲ್ಲ ತೆಗೆದುಕೊಂಡು ಮೇಲಿನ ಅಧಿಕಾರಿಗಳು ನಮ್ಮನ್ನು ಒಂದು ವಿಶಾಲವಾದ ಬರಾಕಿಗೆ ಕರೆದುಕೊಂಡು ಹೋದರು. ನಿಮ್ಮಂಥ ಜನರನ್ನು ಇಲ್ಲಿ ಇರಿಸಿಕೊಳ್ಳುವುದು ನನ್ನ ಭಾಗ್ಯ ಎಂದು ಅವರು ನಮಗೆ ತಿಳಿಸಿದರು. ನಮ್ಮೆಲ್ಲರ ಮನಸ್ಸಿಗೆ ಆಹ್ಲಾದ ಉಂಟುಮಾಡುವ ಒಂದು ರಸಿಕರ ಕಂಪನಿ ನಮ್ಮದಾಗಿದ್ದಿತು. ಕಾವ್ಯ ಶಾಸ್ತ್ರ ವಿನೋದೇನ ಕಾಲೋಗಚ್ಛತಿ ಧೀಮತಾಂ, ಎನ್ನುವಂತೆ ನಮ್ಮಲ್ಲಿ ವಿನೋದದ ಎಲ್ಲ ಥಳಕುಗಳೂ ಇದ್ದವು. ನಮ್ಮಲ್ಲಿ ಕವಿಗಳು ಇದ್ದರು, ಕಥೆಗಾರರಿದ್ದರು, ಪಂಡಿತರಿದ್ದರು, ವಿನೋದಗಾರರಿದ್ದರು, ನ್ಯಾಯವಾದಿಗಳಿದ್ದರು, ಪತ್ರಿಕೋದ್ಯಮಿಗಳು ಇದ್ದರು, ಲೋಕಜ್ಞಾನ ಕುರಿತು ಚರ್ಚಿಸಲು ಅಲ್ಲಿ ಯಾವುದಕ್ಕೂ ಕೊರತೆ ಇರಲಿಲ್ಲ. ಅಲ್ಲಿ ನಮಗೆ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ.

ಆಳವಾದ ಚಿಂತನಕ್ಕೆ, ಆಲೋಚನೆಗೆ ಅಲ್ಲಿ ನಮಗೆ ಬಹಳಷ್ಟು ಅವಕಾಶ ಲಭಿಸಿತು. ಕನ್ನಡ ಹಾಗೂ ಕರ್ನಾಟಕಗಳ ಬಗ್ಗೆ ನಾವು ಆಳವಾಗಿ ಚರ್ಚೆ ಮಾಡಿದೆವು. ನಾವು ಎದುರಿಸಿದ ಪ್ರಶ್ನೆಯು ಎಲ್ಲ ಮುಖಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದೆವು. ನಾವು ಸೆಣಸಬೇಕಾದ ವ್ಯಕ್ತಿ ಶಕ್ತಿಗಳ ಗುಣಾವಗುಣಗಳನ್ನು ಚರ್ಚಿಸಿದೆವು. ನಾವು ಹೂಡಿದ ಹೋರಾಟದಲ್ಲಿ ಯಶಸ್ಸನ್ನು ಸಂಪಾದಿಸುವ ಬಗೆಯನ್ನು ಕುರಿತು ಯೋಚಿಸಿದೆವು. ಅಲ್ಲಿದ್ದ ಸಮಯದಲ್ಲಿ ನಾವು ಆತ್ಮಾವಲೋಕನ ಮಾಡಿದೆವು. ನಮ್ಮ ಹೋರಾಟಕ್ಕೆ ಆದವರನ್ನೂ, ಆಗದಿದ್ದವರನ್ನೂ, ಕೂಡಿಯೇ ನಾವು ನೆನೆದುಕೊಂಡೆವು. ಯಾವ ಪತ್ರಿಕೆ ಕನ್ನಡಕ್ಕೆ ಅನುಕೂಲ, ಯಾವ ಪತ್ರಿಕೆ ಅಲ್ಲ ಎನ್ನುವುದನ್ನು ನಾವು ನಮ್ಮೊಳಗೇ ಪೃಥಃಕ್ಕರಿಸಿದೆವು. ‘ಹಿಂದೂ’ ಪತ್ರಿಕೆ ನಮಗೆ ಬಹಳಷ್ಟು ಬೆಂಬಲ ನೀಡಿದುದನ್ನು ನಾವು ನೆನೆದೆವು.

ಧಾರವಾಡದಲ್ಲಿ ನಾವು ಸರದಿ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಎಷ್ಟೋ ಗೃಹಿಣಿಯರು ಸ್ವಯಂ ಸಂತೋಷದಿಂದ ಮುಂದೆ ಬಂದು ಉಪವಾಸ ಕುಳಿತುಕೊಳ್ಳಲು ನಮಗೆ ಅವಕಾಶ ಕೊಡಬೇಕೆಂದು ಕೇಳುತ್ತಿದ್ದುದನ್ನು ನಾವು ಮರೆಯುವುದಕ್ಕೆ ಸಾಧ್ಯವಿಲ್ಲ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಹುಡುಗರು, ಯುವಕರು ಎಲ್ಲರೂ ಆತುರರಾಗಿದ್ದರು. ಎಷ್ಟೋ ಜನ ವಕೀಲರು, ಶಾಲಾ ಶಿಕ್ಷಕರು, ಸರಕಾರಿ ನೌಕರರು, ವಾಣಿಜ್ಯ ಬಾಂಧವರೂ ಬಂದು ನಮಗೆ ತಮ್ಮ ಬೆಂಬಲ ಇರುವುದನ್ನು ಹೇಳಿ ಹೋಗುತ್ತಿದ್ದರು. ‘ನೀವು ಬಿಡಬೇಡಿ… ನಾವು ಇದ್ದೇವೆ’ ಎನ್ನುವ ಅವರ ಉತ್ಸಾಹದ ಮಾತು ಕನ್ನಡ ಹೋರಾಟವನ್ನು ಕೈಗೆತ್ತಿಕೊಂಡ ನಮಗೆಲ್ಲ ಸ್ಫೂರ್ತಿಯ ರಕ್ಷೆಯನ್ನು ಒದಗಿಸಿಕೊಟ್ಟಿದ್ದಿತು. ನಮ್ಮ ಮೇಲಿನ ಪ್ರೀತಿ, ಅಭಿಮಾನದಿಂದ ಹೊರಗಿನ ಎಷ್ಟೋ ಜನ ಪರಿಚಿತ ಹಾಗೂ ಅಪರಿಚಿತ ಸ್ನೇಹಿತರು ಸೆರೆಮನೆಯಲ್ಲಿದ್ದ ಸಮಯದುದ್ದಕ್ಕೂ ನಮಗೆ ಪ್ರೀತಿಯಿಂದ ಊಟ ಹಾಗೂ ತಿಂಡಿಗಳನ್ನು ಕಳಿಸಿಕೊಡುತ್ತಿದ್ದರು. ನಾವು ಸೆರೆಮನೆಯಲ್ಲಿರುವ ಭಾವನೆ ನಮಗೆ ಬರಲಿಲ್ಲ. ಎಲ್ಲರಿಗೂ ಉಣಬಡಿಸುವ ವ್ಯವಸ್ಥೆಯನ್ನು ವಕೀಲರಾದ ವೆಂಕಟೇಶ ಕುಲಕರ್ಣಿಯವರು ವಹಿಸಿಕೊಂಡಿದ್ದರು. ಅವರಲ್ಲಿ ಜನರನ್ನು ವಿನೋದಗೊಳಿಸುವ ನ್ಯಾಯಾಲಯದಲ್ಲಿ ನಡೆಯುವ ಪ್ರಸಂಗಗಳ ಬಹುದೊಡ್ಡ ಸರಕೇ ಇದ್ದಿತು. ಧಾರವಾಡ ಕರರು ಹಾರಿಸುತ್ತಿದ್ದ ವಿನೋದದ ಚಟಾಕಿಗಳನ್ನು ಯಾರೂ ಮರೆಯುವಂತಿಲ್ಲ. ಡಾ.ಹಿರೇಮಠರು ಪಾಂಡಿತ್ಯದಲ್ಲಿಯೂ ಹಾಸ್ಯ ಇದೆ ಎನ್ನುವುದನ್ನು ತೋರಿಸುತ್ತಿದ್ದರು. ಬಸವರಾಜ ಕಟ್ಟಿಮನಿ ಅವರ ಅನುಭವವೇನೂ ಸಣ್ಣದಲ್ಲ. ಚೆನ್ನವೀರ ಕಣವಿಯವರ ಕನ್ನಡ ಹೋರಾಟದ ಹಾಡುಗಳು ಅಲ್ಲಿ ಸೃಷ್ಟಿಗೊಂಡವು.

ಕನ್ನಡಕ್ಕೆ ಉಸಿರು ತುಂಬುವ ಹೋರಾಟವನ್ನು ಹೇಗೆ ಮುಂದುವರಿಸಬೇಕೆನ್ನುವ ಬಗ್ಗೆ ಚರ್ಚಿಸಿ ನಾವು ಕೆಲ ನಿರ್ಧಾರಕ್ಕೆ ಬಂದೆವು. ಆಂದೋಲನವನ್ನು ಇನ್ನೂ ಹೆಚ್ಚು ಚುರುಕುಗೊಳಿಸಬೇಕೆನ್ನುವುದೇ ನಮ್ಮ ಉದ್ದೇಶವಾಗಿದ್ದಿತು. ಸೆರಮನೆಗೆ ಹೋಗಿದ್ದರೂ ನಾವು ಪಿಕ್‌ನಿಕ್‌ಗೆ ಹೋದಂತೆ ಆಗಿದ್ದಿತು. ನಾವು ದಿನಗಳನ್ನು ಸಂತೋಷದಿಂದ ಕಳೆದ ನಮಗೆ ಅಲ್ಲಿ ಇದ್ದಂತೆಯೇ ಅನಿಸಲಿಲ್ಲ. ಅಲ್ಲಿ ನಾವು ಒಳಗೆ ಇದ್ದಾಗ, ಹೊರಗೆ ಗೋಕಾಕ್ ವರದಿಯನ್ನು ಅನುಷ್ಠಾನಗೊಳಿಸುವ ಆಂದೋಲನ ನಡೆದೇ ಇದ್ದಿತು. ಪ್ರತಿಭಟನೆ ಮಾಡುವವರೂ ಇದ್ದರು. ಪ್ರತಿಬಂಧಕಾಜ್ಞೆ ಯನ್ನು ಮುರಿಯುವವರೂ ಇದ್ದರು. ಬಂಧಿತರಾದ ಕೆಲವರನ್ನು ಬೆಳಗಾವಿಯ ಹಿಂಡಲಗ ಸೆರೆಮನೆಗೂ ಕರೆದೊಯ್ದರು. ಅಲ್ಲಿ ಹೋದವರಲ್ಲಿ ಲೇಖಕಿ ಶ್ರೀಮತಿ ಗೀತಾ ಕುಲಕರ್ಣಿ ಅವರೂ ಒಬ್ಬರು.

ನಾವು ಹೊರಗೆ ಬಂದ ಮೇಲೆ ಕನ್ನಡ ಆಂದೋಲನವನ್ನು ದ್ವಿಗುಣಿತ ಉತ್ಸಾಹದಿಂದ ಆರಂಭಿಸಿದೆವು. ನಾವು ಸೆರೆಮನೆಯೊಳಗೆ ಇದ್ದಾಗ ಚಂದ್ರಶೇಖರ ಪಾಟೀಲರು ರಾಜ್ಯವ್ಯಾಪಿ ಎಲ್ಲಾ ಘಟಕಗಳೊಂದಿಗೆ ಸಂಪರ್ಕ ಇರಿಸಿಕೊಂಡು ಸಂಘಟನೆಯ ಬಹುದೊಡ್ಡ ಕಾರ್ಯ ಮಾಡಿದ್ದರು. ಸರಿಯಾಗಿ ಉಪಯೋಗಿಸಿಕೊಂಡರೆ ಅವರಲ್ಲಿ ಉಪಯೋಗವಾಗುವ ವಸ್ತು ಬಹಳಷ್ಟು ಇದೆ. ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇದ್ದ ಕನ್ನಡ ಕೇಂದ್ರ ಕ್ರಿಯಾ ಸಮಿತಿಯ ಕಚೇರಿ ಕನ್ನಡ ಯುದ್ಧದ ವ್ಯೆಹ ರಚನೆಯ ಕೇಂದ್ರವೇ ಆಗಿದ್ದಿತು. ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನಂತರ ಜನರನ್ನು ಅತ್ಯಂತ ಉತ್ಸಾಹಗೊಳಿಸಿದ ಹೋರಾಟವು, ಗೋಕಾಕ್ ವರದಿಯ ಹೋರಾಟವೇ ಆಗಿದ್ದಿತು. ಉಪವಾಸ ಸತ್ಯಾಗ್ರಹಕ್ಕೆ ಬರುತ್ತೇವೆಂದು ಹೇಳುತ್ತಿದ್ದ ಜನರಿಗೂ ಕೊರತೆ ಇರಲಿಲ್ಲ. ಉಪವಾಸ ಕುಳಿತುಕೊಳ್ಳುವ ಜನರಿಗೂ ಕೊರತೆ ಇರಲಿಲ್ಲ. ಅವರನ್ನೆಲ್ಲ ಸ್ಫುರಣಗೊಳಿಸುವ ಶಕ್ತಿಯು ಕನ್ನಡವೇ ಆಗಿದ್ದಿತು. ಜನರಲ್ಲಿ ಆಳವಾಗಿ ಇಳಿದುಕೊಂಡು ಬಂದ ಜನಪರ ಹೋರಾಟವು ಜಯವನ್ನು ಕಾಣಲೇಬೇಕೆನ್ನುವ ಅದಮನೀಯ ಉತ್ಸಾಹವನ್ನು ತುಂಬಿಕೊಂಡಿದ್ದಿತು.

ರಾಜ್ಯದ ಬೇರೆ ಬೇರೆ ಭಾಗದ ಅನೇಕ ನಗರಗಳಲ್ಲಿ ನಮಗೆಲ್ಲ ಬೇಕಾದವರು ಕನ್ನಡದ ಹೋರಾಟಕ್ಕೆ ಬಹುದೊಡ್ಡ ಧ್ವನಿಯನ್ನು ಒದಗಿಸಿಕೊಟ್ಟಿದ್ದರು. ಅವರೆಲ್ಲರ ಉತ್ಸಾಹ ಬಿಸಿಯಾಗಿಯೇ ಉಳಿಯುವಂತೆ, ಧಾರವಾಡದ ಮೂಲೆಯಿಂದ ಆರಂಭಗೊಂಡ ಹೋರಾಟವನ್ನು ಒಂದು ಕುದಿಯಲ್ಲಿಯೇ ಇರಿಸಬೇಕಾದ ಅವಶ್ಯಕತೆ ಇದ್ದಿತು. ಆಗ ನಾವೆಲ್ಲ ಸೆರೆಮನೆಯಲ್ಲಿ ಕುಳಿತು ಯೋಚಿಸಿದ ಒಂದು ಉಪಾಯವನ್ನು ಕಾರ್ಯರೂಪಕ್ಕೆ ತರಬೇಕೆದು ಮುಂದಾದೆವು. ಅದೇ ವಿಚಾರ ಕುರಿತು ಅನೇಕ ಜನ ಸ್ನೇಹಿತರು ನಮಗೆ ಸಲಹೆ ಕೊಟ್ಟಿದ್ದರು. ಕನ್ನಡ ವರನಟ ಡಾ.ರಾಜಕುಮಾರರನ್ನು, ಈ ಆಂದೋಲನ ದಲ್ಲಿ ಸೇರುವಂತೆ ಏಕೆ ಕರೆಯಬಾರದು ಎಂದು ಅವರು ನಮ್ಮ ಮನಸ್ಸಿನಲ್ಲಿದ್ದ ವಿಚಾರವನ್ನೇ ಹೇಳಿದ್ದರು.

ಅದೇ ವೇಳೆಗೆ ಇನ್ನೂ ಕೆಲವರು, ಕನ್ನಡದ ದಿಗ್ಗಜಗಳಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು ಹಾಗೂ ಶಿವರಾಮ ಕಾರಂತ ಇವರಿಗೆ ವೈಯಕ್ತಿಕ ಕಾಗದ ಬರೆದು ಕನ್ನಡದ ಕೆಲಸಕ್ಕೆ ಅವರ ನೆರವನ್ನು ಕೋರಬಾರದೇಕೆಂದು ನನ್ನನ್ನು ಕೇಳಿದ್ದರು. ಅವರ ಸಲಹೆ ನನ್ನ ಮನಸ್ಸಿಗೆ ಹಿಡಿಸಿತು. ಕನ್ನಡದಲ್ಲಿ ಬೇಂದ್ರೆ, ಡಿವಿಜಿ ಹೋದ ಮೇಲೆ ಮಾಸ್ತಿ, ಕುವೆಂಪು ಹಾಗೂ ಕಾರಂತರಿಗಿಂತ ದೊಡ್ಡವರು ಯಾರಿದ್ದಾರೆ ಎಂದು ಅವರು ಕೇಳಿದ ಪ್ರಶ್ನೆ ಸಹಜವಾದುದೇ ಆಗಿದ್ದಿತು.

‘ಕನ್ನಡದ ಬಗ್ಗೆ ನೀವು ಸರಕಾರಕ್ಕೆ ಒಂದು ಮಾತು ಹೇಳಿದರೆ ಅದನ್ನು ತೆಗೆದು ಹಾಕುವವರು ಸರಕಾರದಲ್ಲಿ ಯಾರಿದ್ದಾರೆ’ ಎಂದು ಅವರನ್ನು ಕೇಳುವ ಒಂದು ಪತ್ರ ಬರೆಯಬೇಕೆನ್ನುವ ನಿರ್ಧಾರಕ್ಕೆ ನಾವು ಬಂದಿದ್ದೆವು. ಆ ರೀತಿ ಅವರಿಗೆ ಬರೆದೂ ಆಗಿದ್ದಿತು. ಅವರಿಗೆ ಪತ್ರ ಬರೆದರೂ ಕೂಡ ಏನೂ ಆಗಲಿಲ್ಲವೆಂದು ಹಳಹಳಿಪಟ್ಟುಕೊಂಡಿದ್ದೆವು. ಅವರಿಗೆ ಮರಳಿ ಬರೆಯಬೇಕೆನ್ನುವ ಸಲಹೆ ಬಂದಿತು. ದೊಡ್ಡವರಾದವರು ಯಾರೊಬ್ಬರಿಂದಲೂ ಹೇಳಿಸಿಕೊಂಡು ಮಾಡುವ ಕೆಲಸ ಇದಲ್ಲ ಎಂದು ನಮ್ಮೊಳಗೆ ನಡೆದ ಸಾಮೂಹಿಕ ಚರ್ಚೆ ತೀರ್ಮಾನ ಹೇಳಿದ್ದಿತು. ಯಾರು, ಏನು, ಎತ್ತ, ಹೇಗೆ ಎನ್ನುವುದನ್ನು ಈ ಹೋರಾಟ ತೋರಿಸಿಕೊಟ್ಟಿದ್ದಿತು. ಅವರ ಬಗೆಗೆ ನಮಗೆ ದ್ವೇಷವೇನೂ ಇರಲಿಲ್ಲ. ಆದರೆ ವಿಷಾದ ಮಾತ್ರ ಇದ್ದಿತು. ಅವರ ವರ್ತನೆಯ ವಿಚಾರವನ್ನು ಕೂಡ ನಮ್ಮೊಳಗೆ ವಿಮರ್ಶೆ ಮಾಡಿದೆವು. ಆಗ ದೂರದ ಅಮೇರಿಕೆಯಲ್ಲಿದ್ದ ದೇಜಗೌ ತಮ್ಮ ಬೆಂಬಲ ಸೂಚಿಸಿ ಕಾಗದ ಬರೆದರು. ಮಾಸ್ತಿ, ಕುವೆಂಪು, ಕಾರಂತರಿಂದ ಸರಕಾರಕ್ಕೆ ತಿಳಿಹೇಳುವ ಕೆಲಸ ನಡೆಯಬೇಕು. ಅವರೂ ನಮ್ಮ ಪರವಾಗಿ ನಿಲ್ಲಬೇಕು ಎಂದು ನಾವು ಬಹು ಬಲವಾಗಿ ಅಪೇಕ್ಷಿಸಿದ್ದೆವು. ಅವರನ್ನೆಲ್ಲ ನಾವು ಪೂಜಾ ಸ್ಥಾನದಲ್ಲಿ ಇರಿಸಿ ಪೂಜೆ ಸಲ್ಲಿಸುತ್ತಿದ್ದೆವು. ಅವರಿಗೆ ಬರೆದ ಪತ್ರ, ಆರ್.ಸಿ.ಹಿರೇಮಠ, ಬಸವರಾಜ ಕಟ್ಟೀಮನಿ ಹಾಗೂ ನನ್ನ ಹೆಸರಿನಲ್ಲಿ ಹೋಗಿದ್ದಿತು. ಆ ಪತ್ರವನ್ನು ನಾವು ಮತ್ತೆ ಮೆಲಕು ಹಾಕಿದೆವು.

ನೀವು ಕನ್ನಡಕ್ಕೆ ಬಹು ಮಾನ್ಯತೆಯನ್ನು ತಂದುಕೊಟ್ಟಿರುವ ಆಚಾರ್ಯ ಪುರುಷರು. ನಿಮ್ಮೆದುರು ಈಗ ಕನ್ನಡಕ್ಕೆ ಬಂದೊದಗಿರುವ ಮಹಾವಿಪತ್ತನ್ನು ಪ್ರಸ್ತಾಪಿಸಿ, ನಿಮ್ಮಿಂದ ಮಾರ್ಗದರ್ಶನ ಹಾಗೂ ಪರಿಹಾರಗಳನ್ನು ಅಪೇಕ್ಷಿಸುವುದು ನಮ್ಮ ಕರ್ತವ್ಯವೆಂದು ನಾವು ಭಾವಿಸಿದ್ದೇವೆ. ನಾವು ಸಾಂಕೇತಿಕ ಉಪವಾಸ ಕೈಕೊಂಡು ಈ ಆಂದೋಲನ ಆರಂಭಿಸಿರುವುದು ಸುಲಭ ಜನಪ್ರಿಯತೆ ಸಂಪಾದಿಸಬೇಕೆನ್ನುವ ಉದ್ದೇಶದಿಂದ ಅಲ್ಲ ಜನರನ್ನು ದುರ್ಲಾಭ ಪಡೆವ ಉದ್ದೇಶದಿಂದ, ಇಲ್ಲವೆ ಜನರನ್ನು ಉದ್ರೇಕಗೊಳಿಸಬೇಕೆನ್ನುವ ಉದ್ದೇಶದಿಂದ ಅಲ್ಲ. ಕನ್ನಡಕ್ಕೋಸುಗ ಜನರ ಅಂತರಾತ್ಮವನ್ನು ಬಡಿದೆಬ್ಬಿಸಿ, ಈ ರಾಜ್ಯದಲ್ಲಿ ಅದಕ್ಕೆ ನ್ಯಾಯವಾಗಿ ಹಾಗೂ ಸ್ವಾಭಾವಿಕವಾಗಿ ಸಲ್ಲಬೇಕಾದ ಸ್ಥಾನವನ್ನು ತಂದುಕೊಡಲು ಸರಕಾರವನ್ನು ಒತ್ತಾಯಪಡಿಸಬೇಕೆನ್ನುವುದೇ ಈ ಸರದಿ ಉಪವಾಸದ ಉದ್ದೇಶ.

ಕರ್ನಾಟಕದಲ್ಲಿ ಕನ್ನಡಕ್ಕೋಸುಗ ಉಪವಾಸ ಕೈಕೊಂಡು ಆಂದೋಲನ ಹೂಡಬೇಕಾದ ಪರಿಸ್ಥಿತಿ ಬಂದಿರುವುದು ನಾವೆಲ್ಲರೂ ನಾಚಿಕೆಪಟ್ಟುಕೊಳ್ಳಬೇಕಾದ ಸಂಗತಿಯೇ ಆಗಿದೆ. ಇಂಥ ದುರ್ದೈವವನ್ನು ಭಾರತದ ಯಾವ ಭಾಷಾ ರಾಜ್ಯವೂ ಎದುರಿಸಿಲ್ಲ. ಭಾಷಾನ್ವಯ ತತ್ವದ ಆಧಾರದ ಮೇಲೆ ಕರ್ನಾಟಕ ರಾಜ್ಯವು ರೂಪಗೊಂಡಾಗಲೇ ರಾಜ್ಯದಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಬೇಕಾಗಿದ್ದಿತು. ಭಾಷೆಯ ಕಾರಣದಿಂದಲೇ ರಾಜ್ಯಗಳ ಪುನರ್ಘಟನೆ ಪಡೆಯಿತೆನ್ನುವುದು ಲೋಕವೇ ಬಲ್ಲ ಸಂಗತಿಯಾಗಿದೆ. ಆದರೆ, ರಾಜ್ಯ ನಿರ್ಮಾಣಗೊಂಡ 29 ವರ್ಷಗಳ ನಂತರವೂ ಈ ರಾಜ್ಯದಲ್ಲಿ ಕನ್ನಡ ಭಾಷೆಯ ಪ್ರಶ್ನೆಯು ಆತಂಕಪಡುವಂತೆ ಅನಿಶ್ಚಿತವಾಗಿಯೇ ಉಳಿದುಕೊಂಡಿದೆ. ಭಾರತದ ಯಾವ ರಾಜ್ಯದಲ್ಲಿಯೂ ಅಲ್ಲಿಯ ಭಾಷೆಯ ಪ್ರಶ್ನೆ ಈ ರೀತಿ ಅನಿಶ್ಚಿತವಾಗಿಲ್ಲ. ಕರ್ನಾಟಕದಲ್ಲಿ ಮಾತ್ರ, ಜನರನ್ನು ಸಾಕಿ ಸಲಹಿ ನೆಲಸಿದ ಮಾತೃಭಾಷೆಗೆ ಆ ಅವಹೇಳನ ಇದೆ.

ತನ್ನ ಭಾಷೆಗೆ ಯಾವ ಸ್ಥಾನ ಇರಬೇಕೆನ್ನುವುದು ಕರ್ನಾಟಕದಲ್ಲಿ ವಾದಗ್ರಸ್ತ ವಿಷಯವಾಗಿ ಪರಿಣಮಿಸಿದೆ. ಕರ್ನಾಟಕ ಸರಕಾರವು ತಾನೇ ನಿರ್ಮಿಸಿಕೊಂಡ ಬಲೆಯಲ್ಲಿ ತನ್ನನ್ನೂ ಸಿಗ ಹಾಕಿಕೊಂಡು ಕನ್ನಡವನ್ನೂ, ಕನ್ನಡ ಜನರನ್ನೂ ಪೀಕಲಾಟಕ್ಕೆ ಗುರಿಪಡಿಸಿದೆ. ಗೋಕಾಕ್ ಸಮಿತಿಯನ್ನು ನೇಮಿಸಿದ ಸರಕಾರವು ಈಗ ಆ ವರದಿಯ ಶಿಫಾರಸುಗಳನ್ನು ಜಾರಿಗೆ ತರಲು ಮೀನಮೇಷ ಎಣಿಸತೊಡಗಿದೆ. ಆ ವರದಿಯ ಬಗೆಗೆ ಅದು ಮರು ಆಲೋಚನೆ ನಡೆಸಿರುವುದು ಸರ್ವಥಾ ಸರಿಯಲ್ಲ. ಗೋಕಾಕ್ ಸಮಿತಿಯು ಬಹು ಉದಾರ ಮನೋಭಾವನೆ ಯಿಂದ ತನ್ನ ವರದಿಯನ್ನು ಸಿದ್ಧಪಡಿಸಿದೆ. ಬೇರೆ ರಾಜ್ಯಗಳಲ್ಲಿ ಕನ್ನಡಕ್ಕೆ ಬಹುದೊಡ್ಡ ಸೊನ್ನೆಯ ಸ್ಥಾನ ಇದ್ದರೂ ಕೂಡ, ಇಲ್ಲಿ ಮಾತ್ರ ಆ ರಾಜ್ಯಗಳ ಭಾಷೆಗಳಿಗೆ, ಅಲ್ಪಸಂಖ್ಯಾತರ ಓದಿಗೋಸುಗ ಬಹು ಉದಾರವಾದ ಅನುಕೂಲ ಹಾಗೂ ಅವಕಾಶ ಒದಗಿಸಿಕೊಡಲಾಗಿದೆ. ನೆರೆಯ ರಾಜ್ಯಗಳಲ್ಲಿ ಕನ್ನಡಕ್ಕೆ ನೀಡಿರುವ ಸ್ಥಾನವನ್ನೇ ಆ ರಾಜ್ಯದ ಭಾಷೆಗಳಿಗೆ ಇಲ್ಲಿ ಕೊಡಬೇಕೆಂದರೆ ಅವುಗಳಿಗೆ ಏನೂ ಸಿಕ್ಕಲಾರದು. ಯಾವುದೇ ಒಂದು ಭಾಷಾನ್ವಯ ರಾಜ್ಯದಲ್ಲಿ, ಅಲ್ಲಿಯ ನೆಲದ ಭಾಷೆ ಯಾವುದೋ ಅದಕ್ಕೆ ಪ್ರಥಮ ಸ್ಥಾನ ಇರುತ್ತದೆ. ಅದು ಭಾರತದಲ್ಲಿ, ಜಗತ್ತಿನ ಎಲ್ಲೆಡೆಯಲ್ಲಿಯೂ ಸ್ವೀಕೃತವಾದ ನೀತಿ ಬೇರೆ ಭಾಷೆಯ ಜನರು ತಮ್ಮ ಭಾಷೆಯಲ್ಲದ ಇನ್ನೊಂದು ರಾಜ್ಯದಲ್ಲಿ ಭಾಷಾ ಸರಿಸಮಾನತೆಯನ್ನು ಕೇಳುವುದಕ್ಕೆ ಆಗುವುದಿಲ್ಲ. ಅವರು ರಾಜ್ಯದ ಭಾಷೆಯ ಸಾರ್ವಭೌಮತ್ವವನ್ನು ಒಪಿಕೊಂಡು ತಮ್ಮ ಭಾಷೆಯನ್ನು ಕಲಿತುಕೊಳ್ಳುವುದು ಅನಿವಾರ್ಯ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು. ಅವರು ರಾಜ್ಯದ ಜನತೆಯ ಮುಖ್ಯ ಪ್ರವಾಹದೊಂದಿಗೆ ಕೂಡಿ ಹೋಗಲೇಬೇಕು. ಅವರು ಜನಪದದಿಂದ ಸಿಡಿದು ಪ್ರತ್ಯೇಕ ಇರುತ್ತೇವೆಂದು ಹೊರಟರೆ ಅದು ಆಗಲಾರದು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಪೂಜೆ ನಡೆಯಬೇಕಲ್ಲದೆ ಇನ್ನೊಂದು ಭಾಷೆಯ ಪೂಜೆ ನಡೆಯಲಾರದು.

ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಲ್ಲಿ ತಮಿಳು ಇರುವಂತೆ ಕರ್ನಾಟಕದಲ್ಲಿ ಕನ್ನಡ ಇರಬೇಕು. ಕರ್ನಾಟಕವು ಉಳಿದ ಭಾಷೆಗಳಿಗೆ ಬಹು ಉದಾರ ಅವಕಾಶವನ್ನು ಮಾಡಿ ಕೊಟ್ಟಿರುವಾಗಲೂ, ಅವು ತಮಗೆ ಕನ್ನಡದಷ್ಟೇ ಪ್ರಾಮುಖ್ಯತೆ ಇಲ್ಲಿ ಇರಬೇಕೆಂದು ಕೇಳುತ್ತಿರುವುದು ಅಪ್ರಾಕೃತಿಕವೂ, ಅಸಾಧ್ಯವೂ ಆದುದಾಗಿದೆ. ದುರ್ದೈವದಿಂದ ಈ ಪ್ರಶ್ನೆಯಲ್ಲಿ ರಾಜಕೀಯ ಬಂದು ಸೇರಿಕೊಂಡಿದೆ. ವೋಟಿನ ಮೇಲೆ ಕಣ್ಣಿರಿಸಿದ ರಾಜಕಾರಣಿಗೆ ತನ್ನ ರಾಜ್ಯದ ಭಾಷೆಗೆ ಏನು ಅನ್ಯಾಯ ಆಗುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಗೋಕಾಕ್ ವರದಿ”ಯ ಶಿಫಾರಸುಗಳಂತೆ ರಾಜ್ಯ ಸರಕಾರವು ನಡೆದುಕೊಳ್ಳದಿದ್ದರೆ, ಅದು ಕನ್ನಡಕ್ಕೆ ಮಹಾದ್ರೋಹ ಬಗೆಯುತ್ತದೆ. ಅದರ ಅನಿಷ್ಟ ಪರಿಣಾಮಗಳನ್ನು ಕನ್ನಡ ಪೀಳಿಗೆ ಪೀಳಿಗೆಗಳು ಅನುಭವಿಸಬೇಕಾಗುತ್ತದೆ.

ಕನ್ನಡದ ಆಚಾರ್ಯಪುರುಷರಾದ ನೀವು ಈ ನಾಡು ನುಡಿಗಳಿಗೋಸುಗ ನಿಮ್ಮ ಯಾವಜ್ಜೀವನವೂ ಶ್ರಮಿಸಿ, ಕನ್ನಡಿಗರೆಲ್ಲರನ್ನೂ ಉಪಕೃತರನ್ನಾಗಿ ಮಾಡಿದ್ದೀರಿ. ಕನ್ನಡದ ಮೇಲೆ ಭಾರೀ ಗಂಡಾಂತರ ಒದಗಿ ಬಂದಿರುವ ಈ ದುರ್ಭರ ಕಾಲದಲ್ಲಿ ಕರ್ನಾಟಕವು ನಿಮ್ಮಿಂದ ಕೊನೆಯ ಉಪಕಾರವನ್ನು ಬಯಸುತ್ತದೆ. ನೀವು ಮೂವರೂ ಕೊರಳೆತ್ತಿ, ಕೈಯೆತ್ತಿ, ದನಿಯೆತ್ತಿ ಹೇಳಿದರೆ ಅದನ್ನು ಮೀರಿ ನಡೆಯುವುದು ಇಲ್ಲಿಯ ಯಾವ ಸರಕಾರಕ್ಕೂ ಸಾಧ್ಯವಾಗಲಾರದು. ಕನ್ನಡ ಜನಕೋಟಿಯು ಈಗ ನಿಮ್ಮಲ್ಲಿ ಬಿದ್ದು ಬೇಡಿಕೊಳ್ಳುತ್ತದೆ. ಈ ಸಂಧಿಕಾಲದಲ್ಲಿ ನೀವು ಕನ್ನಡದ ಉಳಿವಿಗೋಸುಗ ಸರಕಾರದಲ್ಲಿ ಇರುವವರಿಗೆ ಬುದ್ದಿ ಹೇಳಬೇಕು. ನಿಮ್ಮ ಹಿಂದೆ ಕರ್ನಾಟಕದ ಸಮಗ್ರ ಜನಪದವೇ ಇದೆ. ಕನ್ನಡಕ್ಕೋಸುಗ ಇಂದು ನೀವು ಕೈ ಎತ್ತದಿದ್ದರೆ ಕನ್ನಡವು ಬದುಕಿ ಉಳಿಯುವುದಿಲ್ಲ. ಅದನ್ನು ಮರಳಿ ಬದುಕಿಸಿದ ಶ್ರೇಯಸ್ಸು ನಿಮ್ಮದೆನಿಸಬೇಕು.

ನಾವು ನಮ್ಮ ಅಂತಃಕರಣ ಹಾಗೂ ಅಭಿಮಾನ ತುಂಬಿ ಬರೆದ ಈ ಪತ್ರಕ್ಕೆ ಅವರಿಂದ ಪತ್ರ ಪ್ರತಿಕ್ರಿಯೆ ಬಂದು ಪರಿಣಾಮ ಉಂಟಾಗಬಹುದೆಂದು ನಾವು ಚಾತಕಪಕ್ಷಿಗಳಂತೆ ನಿರೀಕ್ಷಿಸಿದ್ದೆವು. ಆ ಪತ್ರ ಅವರಿಗೆ ಮುಟ್ಟಿತೋ ಇಲ್ಲವೋ ತಿಳಿಯಲಿಲ್ಲ. ಅಂಚೆಯವರ ಅನೌಚಿತ್ಯಗಳು ಅನೇಕ ಎನ್ನುವುದು ಎಲ್ಲರ ಅನುಭವಕ್ಕೆ ಬಂದ ಸಂಗತಿಯೇ ಆಗಿದೆ. ಮಾಸ್ತಿಯವರು, ಕಾರಂತರರು ಮಾರೋಲೆ ಬರೆದು ನಮ್ಮ ನಿಲುವನ್ನು ಸಮರ್ಥಿಸಿದರು. ನಮ್ಮ ಪತ್ರಕ್ಕೆ ಮಾಸ್ತಿಯವರಿಂದ ಉತ್ತರ ಬಂದ ಮೇಲೆ ಕಾರಂತರಿಂದ ಉತ್ತರ ಬಂದಿತು. ನಾವು ಅವರಿಗೆ ಬರೆದ ಪತ್ರವನ್ನು ಅನಂತರ ಪತ್ರಿಕೆಗಳಿಗೂ ಬಿಡುಗಡೆ ಮಾಡಿದೆವು.

ಭಾಷೆಯ ಬಗೆಗೆ ಕೆಲವರು ತಳೆದ ನಿಲುವು ನಮಗೆ ಮೊದಲಿನಿಂದಲೂ ಒಂದು ಒಗಟೇ ಎನಿಸಿದ್ದಿತು. ಭಾಷೆಯ ವಿಚಾರದಲ್ಲಿ ಒತ್ತಾಯ ಇರುವುದು ಸರಿಯಲ್ಲವೆಂದು ಅವರು ಪ್ರತಿಪಾದನೆ ಮಾಡಿಕೊಂಡು ಬಂದಿದ್ದಾರೆ. ಸೆರೆಮನೆಯಲ್ಲಿದ್ದಾಗ ಈ ವಿಷಯ ಕೂಡ ನಮ್ಮ ಚರ್ಚೆಯ ಒಂದು ವಿಷಯವೇ ಆಗಿದ್ದಿತು. ಕನ್ನಡ ಲೇಖಕನಿಗೆ ತನ್ನ ಭಾಷೆಯ ಬಗೆಗೆ ಬದ್ಧತೆ ಇರಬೇಕೆಂದು ನಮ್ಮೆಲ್ಲರ ಅಭಿಪ್ರಾಯ ಆಗಿದ್ದಿತು. ಕನ್ನಡ ಲೇಖಕನು ತಾನು ಕಂಡ ಜಗತ್ತನ್ನು ಕುರಿತು ತನ್ನ ಜನರಿಗೋಸುಗ ಬರೆಯುತ್ತಾನೆ. ಅವನು ಇಂಗ್ಲೀಷಿನಲ್ಲಿ ಬರೆಯುವುದಿಲ್ಲ. ಅವನು ಬರೆದುದನ್ನು ಇಂಗ್ಲಿಷರು ಓದುವುದಿಲ್ಲ. ಅದನ್ನು ಒದುವ ವರ್ಗ ಕರ್ನಾಟಕದಲ್ಲಿಯೇ ಇರುತ್ತದೆ. ಅವನಿಗೆ ಇಲ್ಲಿ ಕನ್ನಡ ಜನರೇ ಪುರಿಪುಷ್ಟಿಯನ್ನು ಒದಗಿಸಿಕೊಟ್ಟಿರುತ್ತಾರೆ. ಅವನು ಮಾಡಿದ ಕೆಲಸದ ಬಗೆಗೆ ಅವರೇ ಅವನಿಗೆ ಪ್ರಶಂಸೆ ತಂದುಕೊಟ್ಟಿರುತ್ತಾರೆ. ಅವನು ತನ್ನ ಪ್ರಾಮುಖ್ಯತೆಯನ್ನು ಈ ಜನರಿಂದಲೇ ಪಡೆದಿರುತ್ತಾನೆ.

ಹೀಗಿದ್ದೂ ಇಲ್ಲಿಯ ಲೇಖಕನು ಯಾವ ಭಾಷೆ ಆದರೇನು ಎನ್ನುವ ನಿಲುವು ತಳೆದು, ತನ್ನ ಭಾಷೆಯನ್ನು ಇನ್ನುಳಿದ ಭಾಷೆಗಳ ಜತೆಗೆ ನಿಲ್ಲಿಸುವುದು ಸರಿಯಲ್ಲ. ಬೇರೆ ಭಾಷೆಗಳ ಬಗೆಗೆ ಪ್ರೇಮ ಇರಲಿ, ಆದರೆ ತನ್ನ ಭಾಷೆಯ ಬಗೆಗೆ ಉದಾಸೀನ ಇರಬಾರದು. ಪ್ರತಿಯೊಬ್ಬನೂ ತನ್ನ ಸಂತೋಷಕ್ಕೋಸುಗ ಬರೆದರೂ, ಇನ್ನೊಬ್ಬರು ಅದನ್ನು ಓದಿ ಸಂತೋಷಪಡಬೇಕೆನ್ನುವ ಆಸೆ ಅಪೇಕ್ಷೆಗಳು ಬರೆದವನಲ್ಲಿ ಇರುತ್ತವೆ. ಭಾರತದ ಭಾಷೆಗಳು ಯಾವ ಪ್ರದೇಶದಲ್ಲಿ ಹೇಗೆ ಬೆಳೆಯಬೇಕೆನ್ನುವುದನ್ನು ಗೋಕಾಕರು ಹೇಳಿದ್ದರು. ಅವರು ಯಾವ ಭಾಷೆಯನ್ನೂ ಕೆಳಗೆ ಹಾಕಬೇಕೆನ್ನುವವರಲ್ಲ. ಆದರೆ ಪ್ರಾದೇಶಿಕ ಭಾಷೆಯ ಮಹತ್ವವನ್ನು ಹೆಚ್ಚಿಸಬೇಕೆನ್ನುವ ನೀತಿಯ ಪರವಾಗಿ ನಿಂತಿದ್ದರು.

ಈ ವಿಚಾರ ಮಾಡಿದವರಲ್ಲಿ ಆರ್.ಸಿ. ಹಿರೇಮಠ, ಬಸವರಾಜ ಕಟ್ಟೀಮನಿ, ರಾ.ಯ ಧಾರವಾಡಕರ, ಚೆನ್ನವೀರ ಕಣವಿ, ಯಾರೊಬ್ಬರೂ ಕಡಿಮೆ ಆದವರಲ್ಲ. ಹಿಂದೆ ನಿಂತು, ದೂರದಿಂದ ಎಲ್ಲವನ್ನೂ ಅವಲೋಕಿಸುವ ಅವಕಾಶ ನಮಗೆ ಲಭಿಸಿದ್ದಿತು. ಭಾಷಾ ಅಲ್ಪಸಂಖ್ಯಾತರನ್ನು ಒಂದು ಬೆದರು ಮಾಡಿಕೊಂಡು ಸರಕಾರದಲ್ಲಿ ಇದ್ದವರು ಅವರಿಗೆ ಬೆಂಬಲವಾಗಿ ನಿಂತು ನಮ್ಮನ್ನು ಹೆದರಿಸತೊಡಗಿದ್ದರು. ಕೂಡಿ ಹೋಗಬೇಕಾದ ಜನರ ನಡುವೆ ಅವರು ಕಂದಕಗಳನ್ನು ನಿರ್ಮಿಸಿ, ಅಗಲಿಸಿ ಇರಿಸುವ ಪ್ರಯತ್ನವನ್ನು ಕೈಕೊಂಡಿದ್ದರು. ಅವರು ಅತಿಥಿ ಸತ್ಕಾರದ ಮಾತೊಂದನ್ನೇ ಹೇಳುತ್ತಿದ್ದರು. ಮನೆಯ ಗತಿ ಏನಾಗಿದೆಯೆನ್ನುವುದನ್ನು ಮಾತ್ರ ಅವರು ಸಂಪೂರ್ಣ ಮರೆತು ನಡೆದಿದ್ದರು.

ಆ ಸಂದರ್ಭದಲ್ಲಿ ಶಿವರಾಮ ಕಾರಂತರ ಕಾಗದ ನನಗೆ ಬಂದಿತು. ಅವರು ಭಾಷೆಯ ಪ್ರಶ್ನೆಯ ಪದರುಗಳನ್ನೆಲ್ಲ ಬಿಡಿಸಿ ತೋರಿಸಿದ್ದರು. ಅವರ ಕಾಗದದ ಒಕ್ಕಣಿಕೆ ಇದು ನಿಮ್ಮ ನೇತೃತ್ವದ ಕನ್ನಡದ ವಿಚಾರ ತಿಳಿಯಿತು. ಆರ್.ಸಿ.ಹಿರೇಮಠರಿಂದಲೂ ಸತ್ಯಾಗ್ರಹ ವಿಚಾರ ತಿಳಿಯಿತು. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಹೀಗೆ ಇದೆ.

1. ಭಾರತದ ರಾಜ್ಯ ವಿಭಜನೆಯಾಗಿ ಪ್ರಾಂತಗಳ ನಿರ್ಮಾಣವಾದದ್ದೇ ಭಾಷಾವಾರು ದೃಷ್ಟಿಯಿಂದ. ಕರ್ನಾಟಕದ ಏಕೀಕರಣದ ಹೋರಾಟ ನಡೆದದ್ದು ಅದರ ಸಲುವಾಗಿಯೇ. ಆದುದರಿಂದ ನಮ್ಮ ಪ್ರಾಂತೀಯ ಭಾಷೆ ಕನ್ನಡ. ಅದಕ್ಕೆ ಪ್ರಥಮ ಸ್ಥಾನ ಸಲ್ಲುವುದರಲ್ಲಿ ಯಾವ ಅನೌಚಿತ್ಯವೂ ಇಲ್ಲ. ಪ್ರಜೆಗಳ ಮತ್ತು ಸರಕಾರದ ನಡುವಣ ವ್ಯವಹಾರ ಕನ್ನಡದಲ್ಲಿಯೇ ಆಗಬೇಕಾದದ್ದು ಸಹಜ.

2. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲೂ ಕನ್ನಡ ಪ್ರಥಮ ಭಾಷೆಯಾಗಿ ಉಳಿಯಬೇಕು. ಆದ್ದರಿಂದಲೇ ಉಚ್ಚ ಶಿಕ್ಷಣ ನಡೆದೀತು. ನಡೆಯಬೇಕು ಎನ್ನುವ ಅಭಿಪ್ರಾಯ ನನಗಿಲ್ಲ. ಪ್ರಾಥಮಿಕ ಶಿಕ್ಷಣ ಅದರಲ್ಲಿ ನಡೆಯಲೇಬೇಕು. ಕನ್ನಡ ಸಮನಾಗಿ ಬರುವ ಮುಂಚೆಯೇ ಎರಡನೆಯ ಭಾಷೆಯನ್ನು ದೂರಕೂಡದು. ಅನಂತರ ಐಚ್ಛಿಕ ಭಾಷೆಯಾಗಿ ಭಾಷೆಯನ್ನೂ ತೆಗೆದುಕೊಳ್ಳಲಿ, ಸರಕಾರಿ ನೌಕರಿ ಹಿಡಿಯಲು ಹಂಬಲಿಸುವವರು ಈ ಪ್ರಥಮ ಭಾಷೆಯ ಅರಿವನ್ನು ಪಡೆದವರೇ ಆಗಿರಬೇಕು.

3. ಲಿಂಕ್ ಲ್ಯಾಂಗ್ವೇಜ್ ಅಥವಾ ಸಹಕಾರ ಭಾಷೆ ಯಾವುದು ಎನ್ನುವ ಪ್ರಶ್ನೆ ಇನ್ನೊಂದು ಮುಖ್ಯ ವಿಷಯ. ಹಿಂದಿ ಬಗ್ಗೆ ದಾಕ್ಷಿಣಾತ್ಯರ ಸಮ್ಮತಿ ಇಲ್ಲ. ಅವರ ಸಮ್ಮತಿ ಸಿಗುವ ತನಕ ಸಂಪರ್ಕ ಭಾಷೆ, ಅಪೇಕ್ಷಿಸಿದವರಿಗೆ ಹಿಂದಿ ಆಗಬಹುದು. ಇಂಗ್ಲೀಷನ್ನು ತೊರೆಯುವಂತಿಲ್ಲ.

4. ಯಾವನೇ ವಿದ್ಯಾರ್ಥಿಗೆ ಪ್ರಾಂತೀಯ ಭಾಷೆಯನ್ನಲ್ಲದೆ ಸಂಸ್ಕೃತವನ್ನು ಅಥವಾ ಉರ್ದುವನ್ನು ಕಲಿಯುವುದಕ್ಕೆ ಪ್ರತಿ ಸ್ಕೂಲಲ್ಲೂ ಅವಕಾಶ ದೊರೆಯಬೇಕು. ಜಾಗತಿಕ ಭಾಷೆಯಾಗಿ ಈಗ ಇರುವ ಇಂಗ್ಲೀಷಿನ ಸ್ಥಾನವನ್ನು ಯಾವ ಭಾಷೆಯೂ ನಿರ್ಣಯಿಸುವ ಸ್ಥಿತಿಯಲ್ಲಿ ಖಂಡಿತಕ್ಕೂ ಇಲ್ಲ.

5. ಪರಪ್ರಾಂತೀಯ ನೌಕರರು, ಎಂದರೆ ಕರ್ನಾಟಕದಲ್ಲಿ ದೀರ್ಘಕಾಲ ನೆಲೆಸುವ ಸಾಧ್ಯತೆ ಇಲ್ಲದವರ ಸಲುವಾಗಿ ಹಿಂದಿ ಅಥವಾ ಇಂಗ್ಲೀಷಿನ ಪ್ರಾಥಮಿಕ ಶಿಕ್ಷಣ ಇರಬಹುದೇ ಹೊರತು ಪ್ರತಿ ಊರಲ್ಲೂ ಇಂಗ್ಲೀಷಿನ ಷೋಕಿಗಾಗಿ ಪ್ರಾಂತೀಯ ಭಾಷೆಯಾದ ಕನ್ನಡವನ್ನು ಬಿಟ್ಟು ಇಂಗ್ಲೀಷನ್ನು ಪ್ರಾಥಮಿಕ ಶಿಕ್ಷಣ ಭಾಷೆಯನ್ನಾಗಿ ಮಾಡಕೂಡದು.

“ರಾಜಕೀಯ ಮತ ಸಂಪಾದನೆಗಾಗಿ ಉರ್ದು ಭಾಷೆಗೆ ಪ್ರಥಮ ಸ್ಥಾನ ಕೊಟ್ಟಲ್ಲಿ ಇನ್ನೊಮ್ಮೆ ಭಾರತದ ವಿಭಜನೆಗೆ ನಾಂದಿ ಹಾಕಬೇಕಾದ ಅಪಾಯವನ್ನು ಇದಿರಿಸ ಬೇಕಾಗಿದ್ದೀತು. ಮೈನಾರಿಟೀ (ಅಲ್ಪ ಸಂಖ್ಯಾತರು) ಎಂಬುವರನ್ನು ಒಲಿಸುವ ನೆಪದಲ್ಲಿ ನಡೆಯುವ ರಾಜಕೀಯ ಪ್ರವೃತ್ತಿಯನ್ನು ಖಂಡಿಸಲೇ ಬೇಕು. ಕೊನೆಯಲ್ಲಿ ಹೇಳಬಹುದಾದ್ದೆಂದರೆ, ಘಟನಾಬದ್ಧ ಪ್ರಥಮ ಭಾಷೆ ಕರ್ನಾಟಕದಲ್ಲಿ ಕನ್ನಡ ಒಂದೇ. ಮಹಾರಾಷ್ಟ್ರದಲ್ಲಿ ಅದು ಮರಾಠಿ, ತಮಿಳುನಾಡಿನಲ್ಲಿ ತಮಿಳು, ಬಂಗಾಲದಲ್ಲಿ ಬಂಗಾಲಿ ಇತ್ಯಾದಿ.

ಕವಿ ಕುವೆಂಪು ಅವರಿಂದ ಬರಬೇಕೆಂದು ನಾವು ನಿರೀಕ್ಷಿಸುತ್ತಿದ್ದ ಪತ್ರ ಕೊನೆಗೊಮ್ಮೆ ಬಂದಿತು. ಅವರು ತಮ್ಮ ತೂಕ ಕಾಯ್ದುಕೊಂಡು ಬಹು ಎಚ್ಚರಿಕೆಯಿಂದ ಆಂದೋಲನಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಅವರ ಬಗೆಗೆ ಉಂಟಾಗಿದ್ದ ತಪ್ಪು ತಿಳುವಳಿಕೆ ನಿವಾರಣೆಗೊಂಡು ವಾತಾವರಣವನ್ನು ಅವರು ತಿಳಿಗೊಳಿಸಿದ್ದರು.

ಕರ್ನಾಟಕ ರಾಜ್ಯ ಸರಕಾರವು 19482ರಂದು ಕೈಕೊಂಡ ತೀರ್ಮಾನದಲ್ಲಿ ಕನ್ನಡವು ಎಲ್ಲರಿಗೂ ಕಡ್ಡಾಯ ಕಲಿಕೆಯ ಭಾಷೆ ಆಗುವುದನ್ನು ತಿಳಿದು ನಾನು ಅದನ್ನು ಸ್ವಾಗತಿಸಿದ್ದೆ. ಗೋಕಾಕ್ ಸಮಿತಿಯ ವರದಿಯನ್ನು ಸರಕಾರವು ಯಥಾವತ್ತಾಗಿ ಜಾರಿಗೆ ತಂದಿದ್ದರೆ ನನಗೆ ಹೆಚ್ಚಿನ ಸಂತೋಷವಾಗುತ್ತಿತ್ತು. ಗೋಕಾಕ್ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದರೆ ಅದರಿಂದ ಕರ್ನಾಟಕದ ಭಾಷಾ ಅಲ್ಪಸಂಖ್ಯಾತರಿಗೆ ಅನ್ಯಾಯವೇನೂ ಆಗುತ್ತಿರಲಿಲ್ಲ. ಅದು ಸಂವಿಧಾನಬಾಹಿರವೂ ಆಗುತ್ತಿರಲಿಲ್ಲ.

ಈ ಹಿನ್ನೆಲೆಯಲ್ಲಿ ಗೋಕಾಕ್ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಾಹಿತಿ, ಕಲಾವಿದರು ಮತ್ತಿತರ ಪ್ರಜ್ಞಾವಂತರು ನಡೆಸುತ್ತಿರುವ ಚಳುವಳಿಯ ಹಿಂದಿರುವ ಕಳಕಳಿಯನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ ಈ ಚಳುವಳಿ ಹಿಂಸೆಗೆ ತಿರುಗಲು ಆಸ್ಪದ ಕೊಡದಂತೆ, ವ್ಯವಸ್ಥಿತ ರೀತಿಯಲ್ಲಿ ಇರಬೇಕೆಂಬ ಬಗೆಗೆ ಕ್ರಿಯಾ ಸಮಿತಿಯವರು ಎಚ್ಚರಿಕೆ ವಹಿಸಬೇಕು.

ಸೆರೆಮನೆಯಲ್ಲಿದ್ದ ಆ ಸಮಯದಲ್ಲಿ ನಾವು ಜನರ ನಿಲುವು ಹಾಗೂ ಮನೋಭಾವನೆ ಗಳನ್ನು ಕುರಿತು ಚರ್ಚೆ ಮಾಡಿದೆವು. ಅನೇಕ ವಿಷಯಗಳ ಬಗೆಗೆ, ವಿಚಾರಗಳ ಬಗೆಗೆ, ವ್ಯಕ್ತಿಗಳ ಬಗೆಗೆ, ಚಿಂತನ ಮಂಥನ ನಡೆಸಿದೆವು. ಕರ್ನಾಟಕದ ಪ್ರಶ್ನೆಯ ಮೇಲೆ ಶಾಸನ ಸಭೆಯ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ದೊಡ್ಡಮೇಟಿ ಅಂದಾನಪ್ಪ ಅವರನ್ನು ನೆನೆದುಕೊಂಡೆವು. ಮಹಾರಾಷ್ಟ್ರದ ಪ್ರಶ್ನೆಯ ಮೇಲೆ ಸಿ.ಡಿ.ದೇಶಮುಖರು ಕೇಂದ್ರದ ಹಣಕಾಸು ಮಂತ್ರಿ ಪದಕ್ಕೆ ರಾಜೀನಾಮೆ ಕೊಟ್ಟುದುದನ್ನು ನಾವು ಸ್ಮರಿಸಿಕೊಂಡೆವು. ಕನ್ನಡಕ್ಕಾಗಿ ರಾಜೀನಾಮೆ ಕೊಡುವ ಮಂತ್ರಿಗಳನ್ನು ಈಗ ನಾವೆಲ್ಲಿ ಕಾಣಬೇಕು? ಅವರು ಕನ್ನಡವನ್ನು ಬಿಟ್ಟು ಗುಂಡೂರಾಯರನ್ನು ಹಿಡಿದುಕೊಂಡು ಕುಳಿತಿದ್ದರು.

ನಮ್ಮವರು ಸತ್ಯಾಗ್ರಹಕ್ಕೆ ಕುಳಿತಿದ್ದ ಆಲೂರು ವೆಂಕಟರಾಯ ವೇದಿಕೆಗೆ ದೇವರಾಜ ಅರಸರು ಬಂದು ಭೆಟ್ಟಿ ಕೊಟ್ಟು ಹೋದ ಸಂಗತಿಯು ಕೂಡ ನಮ್ಮ ಮಾತಿನಲ್ಲಿ ಬಂದು ಹೋಯಿತು. ಕ್ರಿಯಾ ಸಮಿತಿ ಹೂಡಿದ ಕನ್ನಡ ಆಂದೋಲನದ ಬಗೆಗೆ ತಮ್ಮ ಸಹಾನುಭೂತಿ ಇದೆಯೆಂದು ಅವರು ಹೇಳಿ ಹೋಗಿದ್ದರು. ಆದರೆ ಬೆಂಗಳೂರಿಗೆ ಹಿಂದಿರುಗಿದ ಮೇಲೆ ಅವರು ಗೋಕಾಕ್ ವರದಿಯ ಅನುಷ್ಠಾನಕ್ಕೋಸುಗ ಲೇಖಕರು ಮತ್ತು ಅಧ್ಯಾಪಕರು ಬೀದಿಗಿಳಿಯುವುದು ಸರಿಯಲ್ಲ ಎಂದು ತಮ್ಮ ವಿಚಾರ ವ್ಯಕ್ತಪಡಿಸಿದ್ದರು.

ನಿಶ್ಶಸ್ತ್ರೀಕರಣವನ್ನು ಒತ್ತಾಯಿಸಿ ಬರ್ಟ್ರಂಡ್ ರಸಲ್‌ರಂಥ ಮೇಧಾವಿಗಳ ಮೇಧಾವಿ ಎನಿಸಿದ ವ್ಯಕ್ತಿ ಬೀದಿಗಿಳಿದು ಮತ ಪ್ರದರ್ಶನ ನಡೆಸಿದರೆನ್ನುವ ಸಂಗತಿಯನ್ನು ಅರಸರು ಸೌಕರ್ಯಪೂರ್ವಕವಾಗಿ ಮರೆತು ಬಿಟ್ಟಿದುದು ನಮಗೆಲ್ಲ ಸೋಜಿಗವನ್ನು ಉಂಟು ಮಾಡಿದ್ದಿತು. ಲೇಖಕರು ಹಾಗೂ ಅಧ್ಯಾಪಕರು ಔಚಿತ್ಯ ಮೀರುವಂಥದನ್ನು ಮಾಡಿದ್ದರೆನ್ನುವುದನ್ನು ಅರಸರು ಹೇಳಬೇಕಾಗಿದ್ದಿತು. ಗೋಕಾಕ್ ವರದಿಯನ್ನು ಜಾರಿಗೆ ತಂದಿದ್ದರೆ ಮತ ಪ್ರದರ್ಶನ ಮಾಡಬೇಕಾದ ಅವಶ್ಯಕತೆ ಎಲ್ಲಿದ್ದಿತು?

ಸಂಗೀತ ಸರಸ್ವತಿ ಪದ್ಮಭೂಷಣ ಗಂಗೂಬಾಯಿ ಹಾನಗಲ್ಲರು ಕನ್ನಡ ಹಾಗೂ ಕರ್ನಾಟಕಗಳ ಅಭಿಮಾನಗಳ ಪುತ್ರಿಯಾಗಿ ನಡೆದುಕೊಂಡ ರೀತಿಯು ಸರ್ವತ್ರವೂ ಪ್ರಶಂಸೆಗೆ ಪಾತ್ರವಾದುದನ್ನು ನಾವು ನೆನೆದುಕೊಂಡೆವು. ತಾಯಿನುಡಿಗೆ ಬಂದೊದಗಿದ   ದುಃಸ್ಥಿತಿಯ ಬಗೆಗೆ ಅವರು ತೋರಿಸುವ ಪ್ರತಿಕ್ರಿಯೆಯು ಪ್ರತಿಯೊಬ್ಬ ಸ್ವಾಭಿಮಾನಿ ಕನ್ನಡಿಗರ ಹೃದಯದಲ್ಲಿ ಸ್ಪಂದಿಸಿತು. ಗೋಕಾಕ್ ವರದಿಯ ಅನುಷ್ಠಾನದ ಬಗೆಗೆ, ಮೀನಮೇಷ ಎಣಿಸುತ್ತಿರುವ ಸರಕಾರದ ಧೋರಣೆಯನ್ನು ಪ್ರತಿಭಟಿಸಿ ಅವರು ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷ ಪದವಿಗೆ ಕೊಟ್ಟ ರಾಜೀನಾಮೆಯು ಅನೇಕರನ್ನು ನಾಚಿಸುವಂತೆ ಮಾಡಿದ್ದಿತು.

 

ಗೋಕಾಕ್ ವರದಿ ಹಾಗೂ ಮುಸಲ್ಮಾನರು

ಗೋಕಾಕ್ ವರದಿಯ ಆಂದೋಲನ ಆರಂಭವಾದಾಗ ಆ ವರದಿಯನ್ನು ಓದದ ರಾಜಕಾರಣಿ ಮುಸಲ್ಮಾನರು ಅಮಾಯಕ ಸ್ವಭಾವದ ಮುಗ್ಧ ಮನಸ್ಸಿನ ಮುಸಲ್ಮಾನರ ಸೂಕ್ಷ್ಮ ಭಾವನೆಗಳ ಮೇಲೆ ಕೆಲಸ ಮಾಡಿ ಅವರನ್ನು ವಿನಾಕಾರಣ ಉದ್ರೇಕಗೊಳಿಸಿ ತಪ್ಪು ಹಾದಿಗೆ ಎಳೆದರು. ತಮ್ಮ ಅಸ್ತಿತ್ವವೇ ನಾಮನಿಶ್ಯೇಷವಾಗುವುದೆಂದು ಅವರು ಮುಸಲ್ಮಾನ ಜನರ ಮನಸ್ಸಿನಲ್ಲಿ ಇಲ್ಲದ ಭಯ ಸಂದೇಹಗಳನ್ನು ತುಂಬಿದರು. ಗೋಕಾಕ್ ಸಮಿತಿಯ ವರದಿಯು ಉರ್ದು ಶಾಲೆಗಳನ್ನು ಮುಚ್ಚಬೇಕೆನ್ನುವುದಿಲ್ಲ. ಆದರೆ ಅದು ಮುಸಲ್ಮಾನರನ್ನು ಕರ್ನಾಟಕದ ಜನಜೀವನದ ಪ್ರಮುಖ ಪ್ರವಾಹದೊಂದಿಗೆ ಕರೆದೊಯ್ಯಬೇಕೆನ್ನುತ್ತದೆ.

ಹಿಂದೆ ಮುಸಲ್ಮಾನರು ಇಂಗ್ಲೀಷ್ ಓದದೇ ಹಿಂದೆ ಬಿದ್ದರು. ಈಗ ಕನ್ನಡ ಓದದೇ ಹಿಂದೆ ಬಿದ್ದಿದ್ದಾರೆ. ಇದನ್ನು ತಪ್ಪಿಸಿ ಅವರನ್ನು ಮುಖ್ಯ ಪ್ರವಾಹದೊಂದಿಗೆ ಕರೆದೊಯ್ಯ ಬೇಕೆಂದು ಗೋಕಾಕರು ಅತ್ಯಂತ ಸಮರ್ಪಕವಾದ, ಬಹು ಆದರ್ಶಪ್ರಾಯವಾದ ವರದಿಯನ್ನು ಬರೆದಿದ್ದಾರೆ. ಆದರೆ ತಪ್ಪು ನಿರ್ದೇಶಿತರಾದ ಮುಸಲ್ಮಾನರು ಸಲ್ಲದ ಭಾಷೆಯನ್ನು ಬಳಸಿ, ಅಲ್ಲದ ಘೋಷಣೆಗಳನ್ನು ಕೂಗಿದರು. ಗೋಡೆಗಳ ಮೇಲೆ ಬರೆದರು. ಅದೇ ಬುದ್ದಿವಂತಿಕೆಯ ಕೆಲವರು ಜನರ ಸರಳತೆಯನ್ನು, ಮುಗ್ಧತೆಯನ್ನು ಹೇಗೆ ದುರುಪಯೋಗಪಡಿಸಿಕೊಳ್ಳ ಬಹುದು ಎನ್ನುವುದಕ್ಕೆ ಉರ್ದು ಪರವಾದ ಅವರ ಗೋಡೆಯ ಬರಹಗಳೇ ಸಾಕ್ಷಿ ಎನಿಸಿವೆ. ಈ ಕೆಲವರು ಮುಸಲ್ಮಾನ ನಾಯಕರು ಗೋಕಾಕ್ ವರದಿಯನ್ನು ಮುಂದೆ ಮಾಡಿಕೊಂಡು ಹೂಡಿದ ಆಂದೋಲನಕ್ಕೆ ಜಾತೀಯ ಸ್ವರೂಪ ಬರದಂತೆ ತಡೆಗಟ್ಟಬೇಕು ಮತ್ತು ಅನರ್ಥ ಸಂಭವಿಸುವ ಮೊದಲೇ ಗೋಕಾಕ್ ವರದಿಯನ್ನು ಜಾರಿಗೆ ತರುವಂತೆ ಸರಕಾರವನ್ನು ಒತ್ತಾಯಪಡಿಸಬೇಕು. ಈ ಕೆಲಸ ಸಾಧಿಸುವ ಉದ್ದೇಶದಿಂದಲೇ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕಾರ್ಯತತ್ಪರವಾಯಿತು.

ಗೋಡೆಯ ಬರಹಗಳ ಕೆಲ ಮಾದರಿಗಳು ಇಲ್ಲಿವೆ.

ಗೋಕಾಕದಲ್ಲಿ ಉರ್ದು ಶಾಲೆ ಮುಚ್ಚಿದ್ದಾರೆ

ಮುಸಲ್ಮಾನರಿಗೆ ತಮ್ಮದೇ ವರ್ದಿ (ಪೋಷಾಕು) ಇರುವಾಗ ಗೋಕಾಕ್ ವರ್ದಿ ಏಕೆ?

ಮುಸಲ್ಮಾನರು ಇನ್ನು ಮೇಲೆ ಉರ್ದು ಓದುವಂತಿಲ್ಲ

ಮುಸಲ್ಮಾನರು ಇನ್ನು ಮೇಲೆ ಕುರಾನ್ ಪಠಣ ಮಾಡುವಂತಿಲ್ಲ

ಹೀಗೆಯೇ ಇಂತಹ ನಿರಾಧಾರ ಸಂದೇಹಗಳನ್ನು ಮುಸಲ್ಮಾನರ ಮನಸ್ಸಿನಲ್ಲಿ ತುಂಬಿ ಅವರನ್ನು ಉದ್ರೇಕಗೊಳಿಸುವ ಪ್ರಯತ್ನಗಳು ಬಹುದೊಡ್ಡ ಪ್ರಮಾಣದಲ್ಲಿ ನಡೆದವು. ಜನರ ಭಾವನೆ ಕೆರಳಿಸುವುದಕ್ಕೆ ಧರ್ಮದಂಥ ಸ್ಫೋಟಕ ವಸ್ತು ಇನ್ನೊಂದಿಲ್ಲ. ತನ್ನ ಶುಭ್ರತೆಯನ್ನು ಕಳೆದುಕೊಂಡು ಪ್ರತಿಮೆಯನ್ನು ಮಸುಕುಗೊಳಿಸಿಕೊಂಡಿದ್ದ ಎಫ್.ಎಂ. ಖಾನರು, ತಾವು ಪ್ರಕಟಗೊಳ್ಳುವುದಕ್ಕೆ ಒಂದು ಹೊಸ ನೆಪ ಹುಡುಕುತ್ತಿದ್ದರು. ತಾನು ನೋಡದೆ ಇದ್ದ, ಓದದೇ ಇದ್ದ, ಗೋಕಾಕ್ ವರದಿ ಅವರಿಗೆ ಅನುಕೂಲ ಸಿಂಧುವಾಗಿ ಪರಿಣಮಿಸಿತು.

ಖಾನರು ಎಬ್ಬಿಸಿದ ಈ ಕೋಲಾಹಲ, ‘ನೀನು ಸತ್ತಂತೆ ಮಾಡು, ನಾನು ಅತ್ತಂತೆ ಮಾಡುತ್ತೇನೆ’ ಎನ್ನುವ ಜನರಿಗೆ ತುಂಬ ಅನುಕೂಲಕರ ಎನಿಸಿತು. ಮುಖ್ಯಮಂತ್ರಿಗೆ ಸಂಸ್ಕೃತವು ಪ್ರಥಮ ಭಾಷೆ ಆಗುವುದು ಬೇಕಾಗಿದ್ದಿತು. ಅದರ ಬಗ್ಗೆ ಅವರು ಉಡುಪಿಯಲ್ಲಿ ವಚನಬದ್ಧರಾಗಿ ಬಂದಿದ್ದರು. ಸಂಸ್ಕೃತವನ್ನು ಕೆಳಗಿಳಿಸುವ ಗೋಕಾಕ್ ವರದಿಯನ್ನು ಶೀತಲಪೆಟ್ಟಿಗೆಯಲ್ಲಿ ಇರಿಸಲು ಖಾನರು ಎಬ್ಬಿಸಿದ ಉರ್ದು ಪರವಾದ ಹೂಲಿಯು ಗುಂಡೂರಾಯರಿಗೆ ಒಂದು ಬಹುಸೂಕ್ತ ನೆಪವೆನಿಸಿತು. ಈ ರಾಜ್ಯದಲ್ಲಿ ಮರಾಠಿ, ತೆಲುಗು, ತಮಿಳು ಹಾಗೂ ಮಲಯಾಳಿ ಜನರು ಹೊರಗಿನವರೆನಿಸಿದಂತೆ ಇಲ್ಲಿಯ ಮುಸಲ್ಮಾನ ಬಾಂಧವರು ಹೊರಗಿನವರಲ್ಲ. ದೊಡ್ಡ ದೊಡ್ಡ ನಗರಗಳಲ್ಲಿರುವವರು ಉರ್ದು ಭಾಷೆಯನ್ನು ಉಪಯೋಗಿಸುತ್ತಾರೆ. ಆದರೆ, ಗ್ರಾಮಾಂತರ ಪ್ರದೇಶದ ಬಹುತೇಕ ಮುಸಲ್ಮಾನರಿಗೆ ಕನ್ನಡ ಬರುವಂತೆ, ಉರ್ದು ಬರುವುದಿಲ್ಲ. ಗಂಡಸರ ಹಾಗೂ ಹೆಂಗಸರ ಹೆಸರುಗಳು ಕೂಡ ಕನ್ನಡೀಕರಣಗೊಂಡಿವೆ. ಗಂಡಸರ ಹೆಸರಿನ ಮುಂದೆ ಅಪ್ಪ ಎಂದು ಹಚ್ಚುತ್ತಾರೆ, ಹೆಂಗಸರ ಹೆಸರಿನ ಮುಂದೆ ಅವ್ವ ಎಂದು ಜೋಡಿಸುತ್ತಾರೆ.

ಇದು ಹೀಗೇಕೆ ಎಂದು ಕಾರಣವನ್ನು ಹುಡುಕಲು ನಾವು ಬಹು ದೂರ ಹೋಗ ಬೇಕಾಗಿಲ್ಲ. ಈ ಮುಸಲ್ಮಾನರು ಹೊರಗಿನಿಂದ ಕರ್ನಾಟಕಕ್ಕೆ ಬಂದವರಲ್ಲ. ಅವರು ಇಲ್ಲಿಯವರೇ ಆಗಿದ್ದಾರೆ. ರಾಷ್ಟ್ರಕೂಟ ದೊರೆ ನೃಪತುಂಗನ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ. ತನ್ನ ಮುಸಲ್ಮಾನ ಪ್ರಜೆಗಳಿಗೋಸುಗ ನೃಪತುಂಗನು ಮಸೀದಿಯೊಂದನ್ನು ಕಟ್ಟಿಸಿದ ಎನ್ನುವ ಸಂಗತಿ ಈಗಾಗಲೇ ಇತಿಹಾಸವೆನಿಸಿದೆ. ಆ ಪರಂಪರೆ ಹೀಗೆಯೇ ಇತಿಹಾಸದುದ್ದಕ್ಕೂ ಮುಂದುವರಿದುಕೊಂಡು ಬಂದಿದೆ.

ಬಿಜಾಪುರದ ಆದಿಲ್‌ಶಾಹಿಗಳ ಕಾಲಕ್ಕೆ, ವಿಜಯನಗರ ದೊರೆಗಳ ಕಾಲಕ್ಕೆ, ಈ ರಾಜ್ಯಗಳಲ್ಲಿ ಹಿಂದೂ-ಮುಸಲ್ಮಾನ ಬಾಂಧವರಲ್ಲಿ ಭಾಷೆಯ ವಿಚಾರದಲ್ಲಿ ಯಾವುದೇ ಬಗೆಯ ವ್ಯತ್ಯಾಸಗಳೂ ಇರಲಿಲ್ಲ. ಹೈದರಾಲಿ ಹಾಗೂ ಟಿಪ್ಪು ಸುಲ್ತಾನರ ಕಾಲದಲ್ಲಿಯೂ ಇದು ಹರಿಗಡಿಯದೆ ನಡೆದುಕೊಂಡು ಹೋಯಿತು. ಹೈದರಾಲಿಯು ಓದು ಬರಹ ಬಲ್ಲವನಾಗಿ ಇರದಿದ್ದರೂ ಚುರುಕು ಬುದ್ದಿಯ ಭಾರೀ ಕುಶಾಗ್ರಮತಿಯಾಗಿದ್ದನು. ಅವನಿಗೆ ಆರು ಭಾಷೆಗಳು ಬರುತ್ತಿದ್ದವು. ಗುಪ್ತಚಾರರಿಂದ ರಹಸ್ಯಗಳನ್ನು ಕೇಳಿ ತಿಳಿಯುತ್ತಿರುವಾಗಲೇ ಅವನು ಅದೇ ಕಾಲಕ್ಕೆ ಇಬ್ಬರು ಲೇಖಕರಿಗೆ ಹೇಳಿ ಎರಡು ಪತ್ರಗಳನ್ನು ಬರೆಸುತ್ತಿದ್ದ. ತಾನು ಹೊರಡಿಸುವ ರಾಜಾಜ್ಞೆಗಳ ಮೇಲೆ ಅವನು ‘ಹೈ’ ಎಂಬ ಅಂಕಿತ ಇರಿಸುತ್ತಿದ್ದ. ಅವನು ಕಲಿತಿದ್ದ ಅಕ್ಷರ ಅದೊಂದೇ ಆಗಿದ್ದಿತು. ಅದು ಕನ್ನಡವಾಗಿದ್ದಿತು.

ಟಿಪ್ಪು ಸುಲ್ತಾನ್ ತನ್ನ ಸರಕಾರದಲ್ಲಿ ಉಪಯೋಗಿಸುತ್ತಿದ್ದ ಭಾಷೆ ಕನ್ನಡವೇ ಆಗಿದ್ದಿತು. ಜನರೊಂದಿಗೆ ಅವನು ಕನ್ನಡದಲ್ಲಿಯೇ ವ್ಯವಹರಿಸುತ್ತಿದ್ದ. ಶೃಂಗೇರಿ ಶಾರದಾ ಪೀಠದ ಗುರುಗಳಿಗೆ ಅವನು ಬರೆದ ಕನ್ನಡದಲ್ಲಿರುವ ಮೂವತ್ತೆರಡು ಪತ್ರಗಳು ಸಿಕ್ಕಿವೆ. ಕರ್ನಾಟಕದಲ್ಲಿರುವ ಈ ಮುಸಲ್ಮಾನ ಬಾಂಧವರು ಇಲ್ಲಿಯ ಕನ್ನಡಿಗರಷ್ಟೇ ಕನ್ನಡಿಗರಾಗಿ ದ್ದಾರೆ. ತಾವು ಹೊರಗಿನವರೆನ್ನುವ ಭಾವನೆಯನ್ನು ಅವರು ತಂದುಕೊಳ್ಳುವುದು ಸರಿಯಲ್ಲ. ಎಂತಲೇ ಅವರು ಇನ್ನುಳಿದ ಭಾಷಾ ಅಲ್ಪಸಂಖ್ಯಾತರೊಂದಿಗೆ ಸಮಾನ ಪ್ರಶ್ನೆಮಾಡಿಕೊಂಡು ಕನ್ನಡದ ವಿರೋಧಿ ಪ್ರತಿರೋಧ ಭಾವನೆ ತಳೆದು ನಿಲ್ಲುವುದು ಎಷ್ಟು ಮಾತ್ರಕ್ಕೂ ಸೂಕ್ತವೆನಿಸಲಾರದು. ಕೇಂದ್ರ ಕನ್ನಡ ಕ್ರಿಯಾ ಸಮಿತಿಯು ಮುಸಲ್ಮಾನ ಬಾಂಧವರ ಮನಸ್ಸಿನ ಭಯ ಸಂದೇಹಗಳನ್ನು ನಿವಾರಣೆ ಮಾಡಲು ಒಂದು ವೇದಿಕೆಯನ್ನೇ ನಿರ್ಮಿಸಿತು. ಅವರು ಕನ್ನಡ ವಿರೋಧದ ಕೆಲ ಸ್ವಾರ್ಥಿ ಮುಸಲ್ಮಾನ ರಾಜಕಾರಣಿಗಳ ಮನೋಧರ್ಮವನ್ನು ಬಿಚ್ಚಿ ಬಯಲಿಗಿರಿಸಿದರು.

ಗೋಕಾಕ್ ವರದಿಯ ವಿರುದ್ಧ ಮುಸಲ್ಮಾನರನ್ನು ಎತ್ತಿ ಕಟ್ಟುವ ಈ ಸ್ವಾರ್ಥಿ ರಾಜಕಾರಣಿಗಳ ವಿಚಾರದಲ್ಲಿ ಸತ್ಯಾಂಶ ಏನಾದರೂ ಇದೆಯೋ ಹೇಗೆನ್ನುವುದನ್ನು ನೋಡೋಣ. ಗೋಕಾಕ್ ವರದಿಯು ಉರ್ದು ಶಾಲೆಗಳನ್ನು ಮುಚ್ಚಬೇಕೆಂದು ಹೇಳುವುದಿಲ್ಲ. ಉರ್ದು ಕಲಿಯುವ ವಿದ್ಯಾರ್ಥಿಯು ಏಳನೇ ತರಗತಿಯವರಿಗೆ ಉರ್ದು ಕಲಿಯಲು ಗೋಕಾಕ್ ವರದಿ ಅಡ್ಡಿ ಮಾಡುವುದಿಲ್ಲ. ಆದರೆ ಆ ವಿದ್ಯಾರ್ಥಿ ನಾಲ್ಕನೇ ತರಗತಿಯಿಂದ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಯಬೇಕೆಂದು ಅದು ಹೇಳುತ್ತದೆ. ಮುಂದೆ ಅವನು ಎಂಟನೇ ವರ್ಗಕ್ಕೆ ಹೋದ ಮೇಲೆ ದ್ವಿತೀಯ ಭಾಷೆಯೆಂದು ಉರ್ದು ಕಲಿಯುವುದಕ್ಕೆ ಆಕ್ಷೇಪಣೆ ಏನೂ ಇಲ್ಲ. ಆದರೆ ಪ್ರಥಮ ಭಾಷೆ ಮಾತ್ರ ಕನ್ನಡವೇ ಆಗಿರಬೇಕು. ಇದರಲ್ಲಿ ತಪ್ಪೇನಿದೆ? ಇದರಿಂದ ಉರ್ದು ಭಾಷೆಗೆ ಯಾವ ರೀತಿಯಿಂದ ಅನ್ಯಾಯವಾಗುತ್ತದೆ? ಇದನ್ನು ಎಷ್ಟು ಜನ ಮುಸಲ್ಮಾನ ಮುಖಂಡರು ವಿಚಾರ ಮಾಡಿದ್ದಾರೆ?

ಉರ್ದು ಭಾಷೆಯ ಬಗ್ಗೆ ಯಾರಿಗೂ ದ್ವೇಷ ಇಲ್ಲ. ಆದರೆ ಈಗ ಕರ್ನಾಟಕದಲ್ಲಿ ‘ಉರ್ದು ಬಚಾವ್ ಉರ್ದು ಉಳಿಸಿರಿ’ ಎಂದು ಹೊರಟಿರುವ ಮುಖಂಡರಲ್ಲಿ ಎಷ್ಟು ಜನರಿಗೆ ಉರ್ದು ಬರುತ್ತದೆ? ಉರ್ದು ಸಾಹಿತ್ಯದ ಬಗ್ಗೆ, ಗಜಲ್ ಹಾಗೂ ಶಾಹಿರಿಗಳ ಬಗ್ಗೆ, ಉರ್ದು ಸಾಹಿತಿಗಳ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ? ಹುಬ್ಬಳ್ಳಿಯ ಒಂದು ದೃಷ್ಟಾಂತವನ್ನು ಇಲ್ಲಿ ಹೇಳಬಹುದು. ಸುಮಾರು ಎರಡು ತಿಂಗಳ ಹಿಂದೆ ಉರ್ದು ಉಳಿಸಿರಿ ಎಂದು ಮುಖಂಡರು ಏಳೆಂಟು ಸಾವಿರ ಜನ ಮುಸಲ್ಮಾನರನ್ನು ಕೂಡಿಸಿದ್ದರು. ಅವರಲ್ಲಿ ನೂರಕ್ಕೆ ಒಬ್ಬನಂತೆ ನಿಜವಾದ ಉರ್ದು ಪ್ರೇಮಿ ಇದ್ದಿದ್ದರೆ ಇಲ್ಲಿಂದ ಹೊರಡುತ್ತಿದ್ದ ಉರ್ದು ದಿನಪತ್ರಿಕೆ ನಿಂತು ಹೋಗುತ್ತಿದ್ದಿಲ್ಲ.

ಕನ್ನಡವನ್ನು ಕಡೆಗಣಿಸಿದ್ದರಿಂದ ಕರ್ನಾಟಕದ ಬಹುಸಂಖ್ಯಾತ ಮುಸಲ್ಮಾನರ ಗತಿ ಏನಾಗಿದೆ ಎನ್ನುವುದನ್ನು ಯಾರೂ ವಿಚಾರ ಮಾಡಿಲ್ಲ. ಶ್ರೀಮಂತ ಮುಸಲ್ಮಾನರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಕಳಿಸುತ್ತಾರೆ. ಅಂತಹವರ ಸಂಖ್ಯೆ ಕೈಬೆರಳುಗಳ ಮೇಲೆ ಎಣಿಸುವಷ್ಟು ಮಾತ್ರ ಇದೆ. ಅಂದರೆ ನೂರಕ್ಕೆ ಒಂದರಂತೆಯೂ ಇಲ್ಲ. ಇನ್ನುಳಿದ ಮುಸಲ್ಮಾನರೆಲ್ಲರೂ ತಮ್ಮ ಮಕ್ಕಳನ್ನು ಉರ್ದು ಶಾಲೆಗಳಿಗೇ ಕಳಿಸುತ್ತಾರೆ. ಮೊದಲೇ ಬಡತನದಿಂದ ಬಳಲುವ ಅವರ ಮಕ್ಕಳು ಏಳನೇ ತರಗತಿಗೆ ಹೋಗುವುದರೊಳಗಾಗಿ ನೂರಕ್ಕೆ ತೊಂಬತ್ತರಷ್ಟು ಹುಡುಗರು ಶಾಲೆಯನ್ನು ಬಿಟ್ಟು ಮನೆಯಲ್ಲಿ ಬೀಡಿಕಟ್ಟಲು, ಬಸ್‌ಸ್ಟ್ಯಾಂಡ್‌ಗಳಲ್ಲಿ ಹಮಾಲಿ ಮಾಡಲು, ಗ್ಯಾರೇಜುಗಳಲ್ಲಿ ಮಶೀನ ಕಿತ್ತಲು, ಅವರಲ್ಲಿಯೇ ಸ್ವಲ್ಪ ದೊಡ್ಡವರು ಇದ್ದರೆ, ಅವರು ಟಾಂಗಾ ಹೊಡೆಯಲು ಪ್ರಯತ್ನಿಸುತ್ತಾರೆ. ಅಲ್ಲಿಗೆ ಅವರ ಜೀವನ ಸಾರ್ಥಕವಾದಂತಾಗುತ್ತದೆ. ಅದೇ ಅವರು ಕನ್ನಡವನ್ನು ಕಲಿತರೆ ಇವರು ಕನ್ನಡಿಗರೊಂದಿಗೆ ಪೈಪೋಟಿ ನಡೆಸಿ ಅವರ ಸರಿಸಮಾನರಾಗಿ ಬೆಳೆಯುವುದು ಬಾಳುವುದು ಅಸಾಧ್ಯವೇನಲ್ಲ. ಹಾಗೆ ಬೆಳೆದಿರುವ, ಬಾಳಿರುವ ಮುಸಲ್ಮಾನರಿಗೆ ಕರ್ನಾಟಕದಲ್ಲಿ ಕೊರತೆ ಇಲ್ಲ. ಇಂದು ಅವರು ಕನ್ನಡದ ಕಡೆಗೆ ಮನಸ್ಸು ಮಾಡಿದರೆ ಮುಸಲ್ಮಾನರನೇಕರನ್ನು ಹಿಂದೆ ಹಾಕುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ ಈ ಸ್ವಾರ್ಥಿ ಮುಖಂಡರು ಅವರಿಗೆ ಧರ್ಮದ ಹೆಸರಿನಲ್ಲಿ ಅಡ್ಡಕಾಲು ಹೊಡೆಯುತ್ತಾರೆ. ಅವರೆಲ್ಲರೂ ಬುದ್ದಿವಂತರಾದರೆ ತಮ್ಮ ಬೇಳೆ ಬೇಯುವುದಿಲ್ಲ. ತಾವು ಮುಖಂಡರಾಗಿ ಉಳಿಯುವುದಿಲ್ಲ ಎಂಬುದನ್ನು ಗಮನಿಸಿ ಅವರನ್ನೆಲ್ಲ ಅಜ್ಞಾನದ ಅಂಧಕಾರದಲ್ಲಿಯೇ ಇರಿಸಲು ಅವರು ಪ್ರಯತ್ನಿಸುತ್ತಿದ್ದಾರೆ.

ಕರ್ನಾಟಕದ ಮುಸಲ್ಮಾನರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಮಾಡಿದ್ದಾರೆ. ಕರ್ನಾಟಕದ ಸಾರ್ವಜನಿಕರಲ್ಲಿಯೂ ಕೂಡ ಅವರು ಬಹು ದೊಡ್ಡ ಹೆಸರೆನಿಸಿದ್ದಾರೆ. ಜಗಳೂರು ಮಹಮ್ಮದ ಇಮಾಮರಂಥ ಹೆಸರು ಹಾಗೂ ದಕ್ಷತೆಯನ್ನು ಗಳಿಸಿದ ಜನರು ರಾಜಕೀಯದಲ್ಲಿಯಾಗಲಿ, ಸಾಹಿತ್ಯ ಕ್ಷೇತ್ರದಲ್ಲಿಯಾಗಲಿ ಎಲ್ಲಿ ಸಿಕ್ಕುತ್ತಾರೆ? ‘ನೂರಜಹಾನ್’ ಎಂಬ ಕಾದಂಬರಿಯನ್ನು ಕೂಡ ಅವರು ಕನ್ನಡದಲ್ಲಿ ಬರೆದಿದ್ದರು.

ಮುಸಲ್ಮಾನ ಬಾಂಧವರಲ್ಲಿ ಜೆ. ಮಹಮ್ಮದ ಇಮಾಮರನ್ನು ನೆನೆಯುವಂತೆ ನೆನೆಯಬೇಕಾದ ಇನ್ನೂ ಕೆಲವರು ಇದ್ದಾರೆ. ಅವರಲ್ಲಿ ಧಾರವಾಡದ ಎ.ಎ. ಕಿತ್ತೂರ, ಹುಬ್ಬಳ್ಳಿಯ ಆರ್.ಎಚ್. ಗೂಡುವಾಲಾ, ಸಾಹೇಬರು ಗುಲಬರ್ಗಾದ ಮೊಹಮ್ಮದ ಅಲಿಯವರು, ಭಟ್ಕಳದ ಎಸ್. ಎಂ. ಯಾಹ್ಯಾ ಅವರು, ಬೆಂಗಳೂರಿನ ರೆಹಮಾನ್ ಖಾನ್‌ರು, ಹುಬ್ಬಳ್ಳಿಯ ಪ್ರೊ. ಸನದಿ ಅವರು, ಉಳ್ಳಾಲದ ಬಿ. ಎಂ. ಇದಿನಬ್ಬರು, ಮಂಗಳೂರಿನಲ್ಲಿ ಮಹಮ್ಮದ ಕಮಾಲ ಎಂಬ ಒಬ್ಬ ಅಪ್ರತಿಮ ಮುಸ್ಲಿಮರಿದ್ದರು. ಭಟ್ಕಳದವರೇ ಆದ ಎ.ಕೆ ಹಾಫೀಜಕಾ ಮುಂಬೈಗೆ ಹೋಗಿ ಅಲ್ಲಿ ಬಹುದೊಡ್ಡ ಹೆಸರು ಮಾಡಿಕೊಂಡು ಆ ನಗರದ ಮೇಯರ್ ಆಗಿದ್ದರು. ಅಲ್ಲಿಯ ಕರ್ನಾಟಕ ಸಂಘಕ್ಕೆ ಅವರೇ ಅಧ್ಯಕ್ಷರಾಗಿದ್ದರು. ಅಲ್ಲಿ ನಡೆಯುವ ಎಲ್ಲ ಕನ್ನಡ ಚಟುವಟಿಕೆಗಳಿಗೆ ಅವರು ಕೇಂದ್ರ ಎನಿಸಿದ್ದರು. ನಿಸಾರ್ ಅಹಮದ್, ಅಕ್ಬರ್ ಅಲಿ, ಬಿ.ಎ.ೊಸನದಿ ಮೊದಲಾದವರು ಕನ್ನಡದ ಮೂಲವನ್ನೇ ತಮ್ಮದಾಗಿಸಿಕೊಂಡು ಬಹುದೊಡ್ಡ ಅಭಿವ್ಯಕ್ತಿಯನ್ನು ಸಂಪಾದಿಸಿದ್ದಾರೆ. ಅವರ ಭಾವನೆಗಳು ಈ ನೆಲದಿಂದ, ಇಲ್ಲಿಯ ಜನರಿಂದ ಪ್ರಚೋದನೆಯನ್ನು ಪಡೆದಿವೆ. ಕನ್ನಡದ ಮನಸ್ಸು ಅವರ ಕವಿತೆಯಲ್ಲಿ ಪ್ರತಿಬಿಂಬಿತವಾಗಿದೆ. ನೂರಕ್ಕೆ ನೂರಾರು ಕನ್ನಡದವರೇ ಆದವರು, ಅಂತಹ ಕವಿತೆ ಬರೆಯಬಲ್ಲರು.

ಜಾನಪದದಲ್ಲಿ ಡಾ. ಕರೀಮಖಾನರು ಬಹುದೊಡ್ಡ ಹೆಸರೆನಿಸಿದ್ದಾರೆ. ಜಮಖಂಡಿಯ ಅಪ್ಪಾಲಾಲ ನದಾಫ್ ತಮ್ಮ ಕೃಷ್ಣ ಪಾರಿಜಾತದಿಂದ ಭಾರತದ ತುಂಬೆಲ್ಲ ಪ್ರಖ್ಯಾತ ರೆನಿಸಿದ್ದರು. ಸ್ವಾತಂತ್ರ್ಯ ಹೋರಾಟದ ಕಾಲಕ್ಕೆ ಕರೀಮಖಾನರು ಹಾಡುತ್ತಿದ್ದ ಲಾವಣಿಗಳು ಬಹಳಷ್ಟು ಜನರನ್ನು ಪ್ರಭಾವಿಸಿದ್ದವು. ನಾಟಕ ಕ್ಷೇತ್ರದಲ್ಲಿ ಮಹಮ್ಮದ ಪೀರರನ್ನು ಸರಿಗಟ್ಟುವ ನಟರು ತುಂಬ ಕಡಿಮೆ ಜನ ಇದ್ದರು. ಘಟಾನುಘಟಿಗಳಿದ್ದ ಆ ಕಾಲದಲ್ಲಿ ಅವರು ನಾಟಕ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರೆನಿಸಿದ್ದರು. ಅವರು ಬುದ್ಧನ ಪಾತ್ರ ಮಾಡುವುದನ್ನು ನೋಡಬೇಕು. ಅವರನ್ನು ನೋಡಿದರೆ ಬುದ್ಧನನ್ನೇ ನೋಡಿದಂತೆ ಆಗುತ್ತಿತ್ತು. ರಂಗಭೂಮಿಯ ನಟಿಯರಲ್ಲಿ ರೆಹಮಾನವ್ವ ಜುಬೇದಾಬಾಯಿ ಸವಣೂರ, ಸೋನೂಬಾಯಿ ದೊಡ್ಡಮನಿ, ಆಮೀರಜಾನ ಕರ್ನಾಟಕಿ ಗೊಹರಜಾನ ಈ ಪಟ್ಟಿಯನ್ನು ಹೀಗೆಯೇ ಉದ್ದಕ್ಕೂ ಬೆಳೆಸಿಕೊಂಡು ಹೋಗಬಹುದು. ಮುಸಲ್ಮಾನ ಬಾಂಧವರಲ್ಲಿ ಕರ್ನಾಟಕದ ಪರಿಣತಿ ಯಥೇಷ್ಟವಾಗಿ ತುಂಬಿಕೊಂಡಿದೆ. ಅವರು ಕನ್ನಡದ ಪ್ರವಾಹ ದಲ್ಲಿಯೇ ಇದ್ದು ಕನ್ನಡದಿಂದಲೇ ಪ್ರಭಾವಿತರಾಗಿದ್ದಾರೆ.

ಅವರು ಕನ್ನಡಿಗರಲ್ಲ, ಬೇರೆಯೇ ಆಗಿದ್ದಾರೆ ಎನ್ನುವುದನ್ನು ಮಾಡಿ ತೋರಿಸಲು ಹೊರಟಿರುವ ಸ್ವಾರ್ಥಿ ಮುಖಂಡರು ತಮ್ಮ ಮುಸಲ್ಮಾನರಿಗೆ ತಾವೇನು ಅನ್ಯಾಯ ಬಗೆಯುತ್ತಿರುವರೆನ್ನುವ ಅರಿವು ಇಲ್ಲದವರಾಗಿದ್ದಾರೆ. ಅವರು ಕನ್ನಡದವರೇ ಆಗಿರುವುದ ರಿಂದ ಇನ್ನುಳಿದ ಕನ್ನಡಿಗರೊಂದಿಗೆ ನಿಂತು, ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ಎದುರು ನಿಲ್ಲುವ ಇನ್ನುಳಿದ ಜನರನ್ನು ವಿರೋಧಿಸಬೇಕು. ಅದನ್ನು ಬಿಟ್ಟು ಅವರನ್ನು ಇನ್ನುಳಿದ ಭಾಷಾ ಅಲ್ಪಸಂಖ್ಯಾತರ ಜತೆಯಲ್ಲಿ ನಿಲ್ಲಿಸಿ ಕನ್ನಡ ಹಾಗೂ ಕರ್ನಾಟಕಗಳ ವಿರುದ್ಧ ಕೆಲಸ ಮಾಡಲು ಹಚ್ಚುವುದು ಈ ಮುಖಂಡರ ಮನೆ ಮುರುಕ ನೀತಿ ಆಗಿದೆ. ಮುಸಲ್ಮಾನರು ಇಲ್ಲಿಯವರೇ ಆಗಿರುವುದರಿಂದ ಅವರು ಕರ್ನಾಟಕವನ್ನು ತಮ್ಮದೆಂದೇ ಬಗೆಯಬೇಕು. ಅವರು ಮರಾಠಿಗರಂತೆ, ತೆಲುಗರಂತೆ, ತಮಿಳರಂತೆ, ಮಲಯಾಳಿಗಳಂತೆ ಇಲ್ಲಿಗೆ ಬಂದವರಲ್ಲ. ತಮ್ಮ ಕರ್ನಾಟಕದ ವಾರಸುದಾರಿಕೆಯನ್ನು ತಿಳಿಯದೇ ಅವರು ತಾವು ಹೊರಗಿನವರು ಎನ್ನುವಂತೆ ಇನ್ನುಳಿದ ಭಾಷಾ ಅಲ್ಪಸಂಖ್ಯಾತರೊಂದಿಗೆ ಸೇರಿಕೊಂಡು ಹುಯಿಲನ್ನು ಎಬ್ಬಿಸುವುದು ಅವರಿಗೆ ತಮ್ಮ ಪೂರ್ವಾಪರದ ಅರಿವು ಇಲ್ಲ ಎನ್ನುವುದನ್ನು ತೋರಿಸುತ್ತದೆ.

ಮುಸಲ್ಮಾನರ ಬಗೆಗೆ ನಿರ್ಮಿಸಲಾದ ತಪ್ಪು ತಿಳುವಳಿಕೆಯನ್ನು ನಿವಾರಣೆ ಮಾಡುವಲ್ಲಿ ಕೇಂದ್ರ ಕ್ರಿಯಾ ಸಮಿತಿಯು ಬಹಳೇ ಮಹತ್ವದ ಪಾತ್ರ ನಿರ್ವಹಿಸಿತು. ಧಾರವಾಡದಲ್ಲಿ ಹಾಗೂ ರಾಜ್ಯದ ಇನ್ನಿತರ ಸ್ಥಳಗಳಲ್ಲಿ ಸಾರ್ವಜನಿಕಕ್ಕೆ ತಿಳಿವಳಿಕೆ ಮಾಡಿಕೊಡುವ ಕೆಲಸವನ್ನು ಅದು ಬಹು ಬಗೆಯ ಶ್ರದ್ಧೆಯಿಂದ ಕೈಕೊಂಡು ತನ್ನ ಕಾರ್ಯದಲ್ಲಿ ಬಹುಮಟ್ಟಿನ ಯಶಸ್ಸನ್ನು ಸಂಪಾದಿಸಿತು. ಈ ಹಿಂದೆ ಉರ್ದು ಗಂಡಾಂತರದಲ್ಲಿ ಎಂದು ಕೂಗಿಕೊಳ್ಳುತ್ತ ಇದ್ದವರ ಬಾಯಿಂದ ಆನಂತರ ಧ್ವನಿಯೇ ಹೊರಡಲಿಲ್ಲ. ಮುಸಲ್ಮಾನರಿಗೆ ತಾವು ಮಾಡಿದ ತಪ್ಪಿನ ಅರಿವು ಅವರಿಗೆ ಆಗಿದ್ದಿತು.

ಗೋಕಾಕ್ ಚಳುವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ

ನಾಡಿನ ತುಂಬ ಬಿರುಗಾಳಿ ಬೀಸಿದಾಗ ನಾಡಿನ ಯಾವ ಭಾಗವೂ ಆದರಿಂದ ಪರಿಣಾಮಗೊಳ್ಳದೇ ಉಳಿಯಬಾರದು. ಗೋಕಾಕ್ ವರದಿಯ ಆಂದೋಲನವು ಸಮಗ್ರ ಕನ್ನಡ ನಾಡಿನ ತುಂಬೆಲ್ಲ ಬಿರುಗಾಳಿಯಂತೆ ಬೀಸಿದ್ದಿತು. ಜನರಲ್ಲಿ ಕನ್ನಡದ ಬಗೆಗೆ ಎಂತಹ ಉತ್ಕಟತೆ ಇದೆ ಎನ್ನುವುದು ಆಗ ವ್ಯಕ್ತಪಟ್ಟಿತು. ದಕ್ಷಿಣ ಕನ್ನಡ ಜಿಲ್ಲೆಯೊಂದು ಮಾತ್ರ ಇದರಿಂದ ಪ್ರಭಾವಿತಗೊಳ್ಳದೆ ಹೊರಗೇ ಉಳಿಯಿತು. ಕನ್ನಡದ ಎಲ್ಲ ಹೋರಾಟಗಳಲ್ಲಿಯೂ ಮುಂಚೂಣಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ ಪರಿಣಾಮ ಉಂಟುಮಾಡುವ ಈ ಹೋರಾಟದಿಂದ ಹಿಂದೆ ನಿಂತುದುದು ಸೋಜಿಗ ಪಟ್ಟುಕೊಳ್ಳುವ ಸಂಗತಿ ಆಗಿದೆ. ಅವರು ಅದೇಕೆ ಆ ರೀತಿ ಮಾಡಿದರೆನ್ನುವುದು ಯಾರೊಬ್ಬರಿಗೂ ಅರ್ಥ ಆಗಲಿಲ್ಲ. ಸಮಗ್ರ ಕನ್ನಡ ನಾಡನ್ನು ಹಿಡಿದು ಅಲುಗಿಸಿದ ಈ ಗೋಕಾಕ್ ವರದಿಯ ಹೋರಾಟದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯವರು ಸ್ಪಂದಿಸದೆ ಹಿಂದೆ ಉಳಿದರೆನ್ನುವುದು ಯಕ್ಷಪ್ರಶ್ನೆ ಎನಿಸಿದೆ.

1942ರಲ್ಲಿ ಮಹಾತ್ಮಾ ಗಾಂಧಿಯವರು ಬ್ರಿಟಿಷರ ವಿರುದ್ಧ ಭಾರತ ಬಿಟ್ಟು ತೊಲಗಿ ಎಂಬ ಆಂದೋಲನ ಆರಂಭಿಸಿದಾಗ ಪ್ರತಿಯೊಬ್ಬ ಭಾರತೀಯನೂ ತಾನೇ ಒಬ್ಬ ಮುಂದಾಳು ಆಗಿ ‘ಚಲೇ ಜಾವ್’ ಹೋರಾಟವನ್ನು ಮುಂದುವರಿಸಿಕೊಂಡು ಹೋಗ ಬೇಕೆಂದು ಅಪೇಕ್ಷಿಸಿದ್ದರು. ಈಗ ಕನ್ನಡ ಪರವಾದ ಗೋಕಾಕ್ ವರದಿಯ ಹೋರಾಟದಲ್ಲಿಯೂ ಕೂಡ ಇದೇ ರೀತಿ ಆಯಿತು. ಈ ಕೆಲಸದಲ್ಲಿ ಇಲ್ಲಿ, ಅಲ್ಲಿ, ಎಲ್ಲೆಲ್ಲಿಯೂ ಅನೇಕ ಜನ ಕನ್ನಡ ಮುಂದಾಳುಗಳು ಸೃಷ್ಟಿಗೊಂಡರು. ಯಾರಲ್ಲಿ ಯಾವ ಶಕ್ತಿ ಇದೆ ಎನ್ನುವುದು ಪ್ರಸಂಗ ಬಂದಾಗಲೇ ಗೊತ್ತಾಗುತ್ತದೆ. ಎಲ್ಲಾದರು ಇರು, ಎಂತಾದರು ಇರು, ನೀ ಎಂದೆಂದಿಗೂ ಕನ್ನಡವಾಗಿರು ಎಂದು ಕವಿ ತನ್ನಷ್ಟಕ್ಕೆ ತಾನೇ ಹಾಡುತ್ತಾನೆ. ಆದರೆ ಈ ಹಾಡು ಅವನ ಕಂಠ ದಾಟಿ ಬಂದ ಮೇಲೆ ಅನೇಕ ಕಂಠಗಳಲ್ಲಿ ಸೇರಿಕೊಂಡು ಜನರನ್ನು ಬಡಿದ್ದೆಬ್ಬಿಸಿ, ಸಾಂಸ್ಕೃತಿಕ ಕ್ರಾಂತಿಗೋಸುಗ ಅವರನ್ನು ಅಣಿಗೊಳಿಸುತ್ತದೆ. ಈ ಕನ್ನಡದ ಕೂಗು ಅಶರೀರವಾಣಿಯಂತೆ ದಾರಿಯಿಲ್ಲದ ಮೂರುಮನೆಯ ಹಳ್ಳಿಗೆ ಕೂಡ ಹರಿದುಹೋಯಿತು. ಕೊಳ್ಳಕ್ಕೆ ಅಪ್ಪಳಿಸಿದ ಧ್ವನಿ ಪ್ರತಿಧ್ವನಿಯನ್ನು ಉಂಟು ಮಾಡುವಂತೆ ಕನ್ನಡದ ಧ್ವನಿ ತರಂಗಗಳು ನಾಡಿನ ಗಿರಿಕಂದರಗಳಲ್ಲಿ, ಹಳ್ಳಿ ಪಟ್ಟಣ ಪ್ರದೇಶಗಳಲ್ಲಿ ಪ್ರತಿಧ್ವನಿಯನ್ನು ನಿರ್ಮಿಸಿದವು.

ಆ ಸೊಲ್ಲನ್ನು ಹಿಡಿದುಕೊಂಡ ಜನರು ತಮ್ಮಷ್ಟಕ್ಕೆ ತಾವೇ ಮುಂದಾಳುತನ ವಹಿಸಿಕೊಂಡು ಪ್ರತಿಯೊಂದು ಹಳ್ಳಿ, ಪಟ್ಟಣದಲ್ಲಿ ಕನ್ನಡದ ಆಂದೋಲನದ ವೇದಿಕೆಗಳನ್ನು ನಿರ್ಮಿಸಿಕೊಂಡರು. ಕೇಂದ್ರ ಕನ್ನಡ ಕ್ರಿಯಾ ಸಮಿತಿಯು ಧಾರವಾಡದಲ್ಲಿ ಆರಂಭಿಸಿದ ಕೆಲಸವು ನಾಡಿನ ಉದ್ದಗಲಗಳಲ್ಲೆಲ್ಲ ಪರಿಣಾಮವನ್ನು ತೋರಿಸಿಕೊಟ್ಟಿದ್ದಿತು. ಕೆಲವರು ಪತ್ರಿಕೆಯಲ್ಲಿ ಹೆಸರು ಬರಬೇಕೆಂದು ಏನಾದರೊಂದು ಕೆಲಸವನ್ನು ಮಾಡುತ್ತಿದ್ದರು. ಆದರೆ, ಕನ್ನಡ ಹೋರಾಟದಲ್ಲಿ ಆ ರೀತಿಯ ಪ್ರಚಾರಪ್ರಿಯತೆಗೆ ಒಳಗಾಗದಂಥ ಜನರು ಅನೇಕರಿದ್ದರು. ರಾಜ್ಯದ ಮೂಲೆಯ ಹಳ್ಳಿಗಳಲ್ಲಿ ನಿಂತು ಅವರು ಮಾಡುವ ಕೆಲಸವನ್ನು ಕುರಿತು ಯಾರೂ ಹೇಳಲಿಲ್ಲ. ಯಾವ ಪತ್ರಿಕೆಯೂ ಬರೆಯಲಿಲ್ಲ. ಆದರೆ ತಾವು ಮಾಡುವ ಕೆಲಸ ಕನ್ನಡ ತಾಯಿಗೆ ಮೆಚ್ಚುಗೆ ಆಗುವುದೆನ್ನುವ ತೃಪ್ತಿ ಆ ಅನೇಕ ಜನರಲ್ಲಿ ಇದ್ದಿತು.

ಯಾವ ಹಳ್ಳಿ ಪಟ್ಟಣದಲ್ಲಿ ಯಾರು ಸತ್ಯಾಗ್ರಹ ಮಾಡಿದರು, ಯಾರು ಬಂಧನಕ್ಕೆ ಒಳಗಾದರು ಎನ್ನುವ ಖಚಿತವಾದ ವಿವರಗಳನ್ನು ಯಾವ ಒಂದು ಪತ್ರಿಕೆಯೂ ಪ್ರಕಟಿಸಲಿಲ್ಲ. ಹಾಗೆಂದ ಮಾತ್ರಕ್ಕೆ ಅವರು ಆಂದೋಲನ ಮಾಡಿದ ಸುದ್ದಿಯೇನೂ ಸುಳ್ಳೆನಿಸಲಾರದು. ಸಮಗ್ರ ನಾಡನ್ನೇ ಆವರಿಸಿಕೊಂಡ ಆ ಆಂದೋಲನದಲ್ಲಿ ಶಿಸ್ತು, ಶಾಂತಿ ಸಂಯಮಗಳು ಅದು ಕೌತುಕವೆನಿಸುವ ಸಂಗತಿ ಎನಿಸಿದ್ದಿತು. ಬಹಳ ವ್ಯಾಪಕವಾದ ಪ್ರಮಾಣದಲ್ಲಿ ನಡೆದ ಆಂದೋಲನದಲ್ಲಿ ಅಹಿತಕರ ಘಟನೆಗಳು ಸಂಭವಿಸಲಿಲ್ಲ ಎನ್ನುವುದು ಆಂದೋಲನ ಮಾಡಿದವರ ತಲೆಯಲ್ಲಿ ಒಂದು ತುರಾಯಿ ಎನಿಸಿದ್ದಿತು. ಇಡಿಯ ನಾಡನ್ನೇ ಆವರಿಸಿಕೊಂಡ ಆ ಆಂದೋಲನದಲ್ಲಿ, ಹೆದ್ದಾರಿಗಳನ್ನು ಯಾರೂ ಎಲ್ಲಿಯೂ ಮುಚ್ಚಲಿಲ್ಲ. ಬಸ್ಸುಗಳನ್ನು ಸುಡುವುದಕ್ಕೆ ಮುಂದಾಗಲಿಲ್ಲ. ಬೀದಿ ದೀಪಗಳನ್ನು ಒಡೆಯುವುದಕ್ಕೆ ಯಾರೊಬ್ಬರೂ ತಮ್ಮ ಕೈಗಳಲ್ಲಿ ಕಲ್ಲು ತೆಗೆದುಕೊಳ್ಳಲಿಲ್ಲ. ನಾಗರಿಕ ಜೀವನಕ್ಕೆ ಯಾವುದೇ ರೀತಿಯಿಂದ ವ್ಯತ್ಯಯ ಉಂಟು ಮಾಡುವುದಕ್ಕೆ ಯಾರೊಬ್ಬರೂ ಮುಂದಾಗಲಿಲ್ಲ. ರಾಜ್ಯದ ಸಾವಿರಾರು ಕಡೆಗಳಲ್ಲಿ ಪ್ರತಿದಿನವೂ ಸವಿನಯ ಸತ್ಯಾಗ್ರಹ ನಡೆದ ವರದಿಗಳು ಬರುತ್ತಿದ್ದವು. ಕನ್ನಡವು, ತನ್ನ ಪಕ್ಷದ ಪ್ರತಿಪಾದನೆಗೋಸುಗ ಒಮ್ಮೆಲೆ ಅನಿರೀಕ್ಷಿತವಾಗಿ ಅನೇಕ ಜನ ಬಹು ಸಮರ್ಥ ವಕೀಲರನ್ನು ಪಡೆದುಕೊಂಡಿದ್ದಿತು. ‘ಮೂಕಂ ಕರೋತಿ ವಾಚಾಲಃ’ ಎಂಬಂತೆ ಕನ್ನಡದ ಬಗೆಗೆ ಪ್ರತಿಪಾದಿಸುವ ಬಾಯಿ ಆಗ ಪ್ರತಿಯೊಬ್ಬರಿಗೂ ಬಂದಂತಾಗಿದ್ದಿತು.

ಪ್ರತಿಬಂಧಕಾಜ್ಞೆಗಳನ್ನು ಮುರಿದು ಬಂಧನಕ್ಕೆ ಗುರಿ ಆಗುವುದು ಬಂದಾಗ ಜನತೆಯಲ್ಲಿ ತುಂಬಿಕೊಂಡಿದ್ದ ಆ ಅಮಿತೋತ್ಸಾಹವನ್ನು ನೋಡಬೇಕು. ಅವರಲ್ಲಿ ತುಂಬಿದ್ದ ಆ ಉತ್ಕಟತೆಯನ್ನು ನೋಡಿಯೇ ನಂಬಬೇಕು. ಜನರನ್ನು ತುಂಬಿ ಕರೆಯೊಯ್ಯುವುದಕ್ಕೆ ಪೊಲೀಸ್ ವ್ಯಾನುಗಳು ಸಾಲದೇ ಹೋದವು. ಅವರು ಆಗ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಪಡೆದುಕೊಂಡರು. ಪೊಲೀಸರು ಬಂಧಿಸಿದಂತೆ ಬಂಧನಕ್ಕೆ ಒಳಗಾಗಲು ಹೆಚ್ಚು ಜನರು ಮುಂದೆ ಬರುತ್ತಿದ್ದರು. ಕನ್ನಡದ ಬಗೆಗೆ ಅಭಿಮಾನ ಇರಿಸಿಕೊಂಡ ಜನರ ಭಾವನೆಗಳೊಂದಿಗೆ ಸ್ಪಂದಿಸುವ ಜನರು ಅಧಿಕಾರಿ ವರ್ಗದವರಲ್ಲಿ ಇದ್ದೇ ಇದ್ದರು.

ಆದರೆ ಕನ್ನಡಾಭಿಮಾನದ ಗಂಧ ಇಲ್ಲದೆ, ನಾಗರಿಕ ಸಂಸ್ಕಾರದ ಲವಲೇಶವೂ ಇಲ್ಲದ ಪಶು ಪ್ರವೃತ್ತಿಯ ಇನ್ನು ಬೇರೆ ಅಧಿಕಾರಿಗಳೂ ಕೂಡ ಇದ್ದರು. ಪ್ರತಿಭಟನೆ ವ್ಯಕ್ತಪಡಿಸುವ ಯುವಕರ ಮೇಲೆ ಅವರು ನಿರ್ದಯೆಯಿಂದ ಲಾಠಿ ಪ್ರಹಾರ ಮಾಡಿದರು. ಜನರ ಮೇಲೆ ಹೊಡೆತ ಹಾಕುವ ಅವರ ಲಾಠಿಯಾದರೂ ಮರುಗುತ್ತಿತ್ತು. ಆದರೆ ಲಾಠಿ ಹಿಡಿದುಕೊಂಡ ಅವರ ಹೃದಯದಲ್ಲಿ ಮಾತ್ರ ಅಂಥ ಯಾವ ಮರುಕ ಕಂಡು ಬರಲಿಲ್ಲ. ಆಗ ರಾಜ್ಯದ ಅನೇಕ ಕಡೆಗಳಲ್ಲಿ ಸಾವಿರಾರು ಜನ ಪೆಟ್ಟು ತಿಂದರು. ಅವರ ಸಂಖ್ಯೆ ಎಷ್ಟು ಎನ್ನುವ ಲೆಕ್ಕವನ್ನು ಇಟ್ಟವರು ಯಾರೂ ಇಲ್ಲ. ಕೆಲ ಕಡೆಗಳಲ್ಲಿ ಈ ಪೊಲೀಸರು ಎಲ್ಲ ರೀತಿ ರಿವಾಜುಗಳನ್ನೂ ಮುರಿದು ಮಿತಿಮೀರಿ ಹೋಗಿದ್ದರು. ಕನ್ನಡ ಪರಹೋರಾಟಗಾರರು ಯಾವುದೋ ಒಂದು ‘ಗಂಭೀರ ಗುನ್ಹೆ’ ಮಾಡಿದಂತೆ ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಅನೇಕ ಕಲಮುಗಳನ್ವಯ ಮೊಕದ್ದಮೆ ಹೂಡಿದ್ದರು. ಅಂತಹ ಮೊಕದ್ದಮೆಗೆ ಒಳಗಾದವರ ಸಂಖ್ಯೆ ಸಾವಿರಾರು ಇದ್ದಿತು.

ಶ್ರೀಕೃಷ್ಣನ ತಂದೆ ತಾಯಿಗಳನ್ನು ಹಿಂಸಿಸಿದ ಕಂಸನಂತೆ ಅವರು ವರ್ತಿಸಿದರು. ಸೆರೆಮನೆಯಲ್ಲಿಯೇ ಕೃಷ್ಣನ ಅವತಾರ ಆಗಿ ಕಂಸ ವಧೆಯೂ ಆಯಿತು ಎನ್ನುವುದನ್ನು  ನಮ್ಮ ಪುರಾಣ ಹೇಳುತ್ತದೆ. ಕನ್ನಡವೂ ಕೂಡ ಆ ರೀತಿಯ ಆಗ್ನಿಪರೀಕ್ಷೆಗೆ ಗುರಿ ಆಗಬೇಕಾಗಿ ಬಂದಿತು. ತಮ್ಮ ಭಾಷೆಗೋಸುಗ ಬಂಧನಕ್ಕೆ ಜನರು ಒಳಗಾಗುತ್ತಾರೆ. ಸೆರೆಮನೆಗೆ  ಹೋಗುತ್ತಾರೆ. ಲಾಠಿಯ ಪೆಟ್ಟನ್ನು ತಿನ್ನುತ್ತಾರೆ. ಅಧಿಕಾರ ಮದಾಂಧರಿಂದ ಅವಹೇಳನಕ್ಕೆ ಗುರಿ ಆಗುತ್ತಾರೆ. ಈ ತ್ಯಾಗ ಹೋರಾಟಗಳ ಕಥೆ ಕನ್ನಡನಾಡಿನ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆಯುವಷ್ಟು ರೋಮಾಂಚನಕಾರಿಯಾಗಿದೆ. ತಮ್ಮ ಭಾಷೆಗೋಸುಗ ಕನ್ನಡ ಜನರು ದೀಕ್ಷಾಬದ್ಧರಾದಂತೆ ಬಹುಶಃ ಜಗತ್ತಿನ ಯಾವ ಜನರೂ ಆಗಿರಲಾರರು. ಈ ಜನರು ಕನ್ನಡಕ್ಕೋಸುಗ ಬರಿದೆ ಶ್ರಮ ಪಡಲಿಲ್ಲ. ಅವರು ಅದರಲ್ಲಿ ತಮ್ಮ ಶ್ರದ್ಧೆಯನ್ನು ಇರಿಸಿಕೊಂಡಿದ್ದರು. ತಮ್ಮ ಜೀವನದ ಸರ್ವಸ್ವವನ್ನೂ ಅವರು ಅದರಲ್ಲಿ ತೊಡಗಿಸಿಕೊಂಡಿದ್ದರು. ತನು ಕನ್ನಡ, ಮನ ಕನ್ನಡ, ತಮ್ಮ ಉಸಿರು ಕನ್ನಡ ಎಂದು ಅವರು ತಿಳಿದುಕೊಂಡಿದ್ದರು. ಗೋಕಾಕ ವರದಿಯ ಸಂಬಂಧವಾಗಿ ಕರ್ನಾಟಕದಲ್ಲಿ ನಡೆದ ಆಂದೋಲನವು ಚರಿತ್ರಾರ್ಹವೆನಿಸಿತು. ಮಳೆ ಮುಗಿದರೂ ಮರದ ಹನಿ ನಿಲ್ಲಲಿಲ್ಲ ಎಂಬಂತೆ  ಗೋಕಾಕ್ ವರದಿಯ ಪರವಾದ ಆಂದೋಲನ ಮುಗಿದ ನಂತರವೂ ಕೂಡ ಮೊಕದ್ದಮೆಗಳಿಗೆ ಒಳಾದ ಜನರು ಕೋರ್ಟಿಗೆ ಎಡತಾಕುವುದು ತಪ್ಪಲಿಲ್ಲ.

ಕನ್ನಡಕ್ಕೋಸುಗ ನಡೆದ ಹೋರಾಟ ಮುಗಿಯಿತು.  ಆ ಜನರನ್ನು ಬಿಟ್ಟು ಬಿಡಬೇಕು ಎನ್ನುವ ಬುದ್ದಿ ಸರಕಾರದಲ್ಲಿರುವ ಮಂದಬುದ್ದಿಯ ಜನರಿಗೆ ಬರಲಿಲ್ಲ. ಹೀನಾಯವಾಗಿ ಅಪರಾಧಗಳನ್ನು ಮಾಡಿದವರ ಮೇಲಿನ ಮೊಕದ್ದಮೆಗಳನ್ನು ಮುಂದುವರಿಸಿಕೊಂಡು ಹೋಗುವಂತೆ, ಭಾಷಾಭಿಮಾನದ ಗಂಧ ಇಲ್ಲದಿರುವ ಸರಕಾರಿ ಶುಂಠರು ಕನ್ನಡ ಆಂದೋಲನಕಾರರ ಮೇಲಿನ ಮೊಕದ್ದಮೆಗಳನ್ನು ಹಾಗೆಯೇ ಮುಂದುವರಿಸಿಕೊಂಡು ಹೋದರು. ಒಂದು ಪ್ರಶ್ನೆ ಎತ್ತಿಕೊಂಡು ಹೋರಾಟಕ್ಕೆ ನಿಂತವರು ಅದರ ಕಷ್ಟ  ನಿಷ್ಠುರದ ಎಲ್ಲ ಪರಿಣಾಮಗಳನ್ನೂ ಸಹಿಸಿಕೊಂಡು ಹೋಗುತ್ತಾರೆ. ಆದರೆ ಅವರು  ಆ ರೀತಿ ಕಷ್ಟ ಹಾಗೂ ಅಸೌಕರ್ಯಗಳನ್ನು ಎದುರಿಸಿಕೊಂಡು ಹೋಗಲು ಸುಮ್ಮನೆ ಬಿಡುವವರು ತಮ್ಮಲ್ಲಿ ಮಾನವೀಯತೆಯ, ಸಂಸ್ಕೃತಿಯ ಅಭಾವ ಇದೆ ಎನ್ನುವುದನ್ನು ತೋರಿಸಿಕೊಳ್ಳುತ್ತಾರೆ. ಸರಕಾರದವರು ನಡೆದುಕೊಂಡ ರೀತಿಯ ಬಗೆಗೆ ಮೈಸೂರಿನಲ್ಲಿ ನಡೆದ ಒಂದು ಸಭೆ ನಮಗೆ ಹೆಚ್ಚು ತಿಳಿಸಿಕೊಡುತ್ತದೆ.

‘ನನಗೆ ಹೆಚ್ಚು ದಿನ ಬದುಕುವ ಆಸೆ ಇಲ್ಲ. ಕನ್ನಡವನ್ನು ಬದುಕಿಸುತ್ತೇವೆಂದು ವಚನ ಕೊಡಿ’ ಎಂದು ಕನ್ನಡದ ಹೆಸರಾಂತ ಕಾದಂಬರಿಕಾರ ತ.ರಾ.ಸು ಕಂಬನಿ ತುಂಬಿದ ಕಣ್ಣಿನಿಂದ ಮೈಸೂರಿನ ಪುರಭವನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಳಿದರು.

ನಾನು ಹುಟ್ಟಿ ಬೆಳೆದಂಥ ಚಿತ್ರದುರ್ಗದಲ್ಲಿ ಇಬ್ಬರು ಯುವಕರು ಪ್ರಾಣ ಕೊಟ್ಟಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆ ಎನಿಸಿದೆ. ಇದು ಕನ್ನಡಿಗರ ಕೊನೆಯ ಹೋರಾಟ ಎಂಬುದನ್ನು ಮರೆಯುವಂತಿಲ್ಲ. ಇದು ಕೇವಲ ಭಾಷೆಯ ಪ್ರಶ್ನೆ ಅಲ್ಲ. ಇದು ಹೊಟ್ಟೆ ಬಟ್ಟೆಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಇಂತಹ ಚಳವಳಿಯನ್ನು ಹತ್ತಿಕ್ಕಲು ಸರಕಾರದಲ್ಲಿರುವವರು ಪ್ರಯತ್ನಿಸಿದರೂ ಕನ್ನಡಿಗರಾದ ಪೊಲೀಸರು ಕೊಂಚ ಯೋಚಿಸಬೇಕು. ನಮ್ಮ ಹೋರಾಟವು ಮಕ್ಕಳ ಭವಿಷತ್ತಿಗೋಸುಗ ಇದೆ. ಇತಿಹಾಸವನ್ನು ಜ್ಞಾಪಿಸಿ ಕೊಳ್ಳಿರಿ. ಬ್ರಿಟಿಷರು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಪೊಲೀಸ್‌ದಳವನ್ನು ಉಪಯೋಗಿಸುತ್ತಿದ್ದರು. ಈಗಲೂ ಅದೇ ಪರಿಸ್ಥಿತಿ ಇರುವುದು ಶೋಚನೀಯ. ಆದ್ದರಿಂದ ನಿಮ್ಮ ಲಾಠಿಗಳನ್ನು ಎಲ್ಲಿ ಉಪಯೋಗಿಸಬೇಕೋ ಅಲ್ಲಿ ಉಪಯೋಗಿಸಿರಿ.

ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಉಪವಾಸ ಕುಳಿತವರನ್ನು ಕಂಡು ಮಾತನಾಡಿಸುವ ಸೌಜನ್ಯ ತೋರಿಸಿದರು. ಆದರೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ಆ ಯೋಗ್ಯತೆ ಇಲ್ಲ. ಪ್ರೊ. ರಂಗಣ್ಣ, ಪು.ತಿ.ನ. ಅವರಂಥ ವಯೋವೃದ್ಧರು ಉಪವಾಸ ಕುಳಿತರೆ ಅವರನ್ನು ವಿಚಾರಿಸಲು ಒಬ್ಬ ಅಧಿಕಾರಿಯೂ ಮುಂದೆ ಬರಲಿಲ್ಲ. ಅವರಲ್ಲಿ ಕನ್ನಡಕ್ಕಾಗಿ ಮಿಡಿಯುವ ಒಂದು ಹನಿ ರಕ್ತವೂ ಇಲ್ಲ. ಕುವೆಂಪು ಅವರಂಥ ವೃದ್ಧರು ಮತ್ತೆ ಬೀದಿಗೆ ಇಳಿಯದಂತೆ ಕನ್ನಡವನ್ನು ಕಾಪಾಡಿ ಎಂದು ನಿಮ್ಮನ್ನು ನಾನು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ಡಾ.ರಾಜಕುಮಾರ್ ಅವರ ಆಗಮನ

ಗೋಕಾಕ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ಕನ್ನಡ ಕೇಂದ್ರ ಕ್ರಿಯಾ ಸಮಿತಿ ಧಾರವಾಡದಿಂದ ಆರಂಭಿಸಿದ ರಾಜ್ಯವ್ಯಾಪಿ ಆಂದೋಲನಕ್ಕೆ ಬೆಂಬಲ ಸೂಚಿಸಿ ಕನ್ನಡದ ವರನಟ ಡಾ. ರಾಜಕುಮಾರರು ಹೇಳಿಕೆ ನೀಡಿದರು. ಅವರು ಮದ್ರಾಸಿನಿಂದ ನೀಡಿದ ಆ ಹೇಳಿಕೆ ಎಚ್ಚರಿಕೆಯ ಗಂಟೆ ಬಾರಿಸಿದಂತೆ ಕರ್ನಾಟಕದ ತುಂಬೆಲ್ಲ ಪ್ರತಿಧ್ವನಿ ಯನ್ನು ಉಂಟು ಮಾಡಿತು. ಕನ್ನಡ ಜನಪದ ಪ್ರೀತಿಯನ್ನು ಸೂರೆಗೊಂಡಿರುವ ನಟಸಾರ್ವಭೌಮ ಡಾ. ರಾಜಕುಮಾರ್ ಅವರಿಗೆ ಅಖಿಲ ಕರ್ನಾಟಕ ಕೇಂದ್ರ ಕ್ರಿಯಾ ಸಮಿತಿಯ ಪರವಾಗಿ ನಾನು  ಒಂದು ಪತ್ರ ಬರೆದು ಕನ್ನಡದ ಉಸಿರು ತುಂಬುವ ಈ ಆಂದೋಲನದಲ್ಲಿ ದುಮುಕಬೇಕೆಂದು ಆಮಂತ್ರಣ ನೀಡಿದೆ. ಅವರಿಗೆ ಬರೆದ ಪತ್ರದ ಪೂರ್ತಿ ಪಾಠ ಇದು.

ನಿಮ್ಮ ಕನ್ನಡ ಪ್ರೇಮ ಹಾಗೂ ಕರ್ನಾಟಕದ ಅಭಿಮಾನಗಳು ಲಕ್ಷೋಪಲಕ್ಷ ಕನ್ನಡಿಗರಿಗೆ ಸ್ಪೂರ್ತಿ ಉತ್ಸಾಹಗಳನ್ನು ಒದಗಿಸಿಕೊಟ್ಟಿವೆ. ನಮ್ಮ ಅದೂರ ದೃಷ್ಟಿಯ ಆಡಳಿಗಾರರು, ಕನ್ನಡ ಭಾಷೆಗೆ ತಂದೊಡ್ಡಿದ ಈ ದುರ್ಭರ ಪ್ರಸಂಗದಲ್ಲಿ ನೀವು ತೋರಿದ್ದ ಕನ್ನಡದ ಹುಮಸ್ಸು ಹಾಗೂ ಉತ್ಸಾಹಗಳು ಕರ್ನಾಟಕದ ಜನಪದದ ಮೈ ಮನಸ್ಸುಗಳನ್ನು ಪುಳಕಗೊಳಿಸಿವೆ. ಕನ್ನಡದ ಮಾನ ಕಾಯುವುದಕ್ಕಾಗಿ, ಪ್ರಾಣ ಉಳಿಸುವುದಕ್ಕಾಗಿ ಯಾವ ಬೆಲೆ ತೆತ್ತಲೂ ನೀವು ಸಿದ್ಧರೆನ್ನುವುದನ್ನು ಕೇಳಿ ಕನ್ನಡಿಗರು ರೋಮಾಂಚನಗೊಂಡಿದ್ದಾರೆ. ನಿಮ್ಮ ಹೇಳಿಕೆಯು ಕನ್ನಡ ಆಂದೋಲನಕ್ಕೆ ಸಾವಿರ ಲಕ್ಷ ಆನೆಗಳ ಬಲವನ್ನು ತಂದು ಕೊಟ್ಟಿದೆ. ನೀವು ಇತಿಹಾಸವೆನಿಸುವ ಕೆಲಸ ಮಾಡಿದ್ದೀರಿ. ನಿಜವಾಗಿಯೂ ನೀವು ಕನ್ನಡ ಭಾಷೆಯ ಹಾಗೂ ಕನ್ನಡ ನಾಡಿನ ಅಭಿಮಾನದ ರಾಜಕುಮಾರರಾಗಿದ್ದೀರಿ. ಕನ್ನಡ ಆಂದೋಲನಕ್ಕೆ ನೀವು ಒದಗಿಸಿಕೊಟ್ಟಿರುವ ಉತ್ಸಾಹದಾಯಕ ಚಾಲನೆಯನ್ನು ವರ್ಣಿಸಿ ಹೇಳುವುದಕ್ಕೆ ಸಾವಿರ ನಾಲಗೆಗಳಿಂದಲೂ ಸಾಧ್ಯವಿಲ್ಲ.

ಯಾವಾಗ ಕರೆ ಬಂದಾಗಲೂ ಕನ್ನಡದ ಕೆಲಸಕ್ಕೋಸುಗ ನೀವು ಸಿದ್ಧರೆನ್ನುವುದನ್ನು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿ ತುಂಬು ಹೃದಯದಿಂದ ಸ್ವಾಗತಿಸಿದೆ. ನಿಮ್ಮ ಹೇಳಿಕೆಯಿಂದ ಸ್ಫೂರ್ತಿಗೊಂಡ ಕ್ರಿಯಾ ಸಮಿತಿ ಕರ್ನಾಟಕದಲ್ಲಿ ಸಂಚಾರ ಕೈಕೊಳ್ಳಲು ನಿಮ್ಮನ್ನು ಕೇಳಿಕೊಂಡಿದೆ. ನೀವು ಸಾಧ್ಯ ಮಾಡಿಕೊಂಡು ಧಾರವಾಡಕ್ಕೆ ಬಂದರೆ ಅನುಕೂಲವಾಗುತ್ತದೆ. ಕನ್ನಡ ಆಂದೋಲನವನ್ನು ಕರ್ನಾಟಕ ವಿದ್ಯಾವರ್ಧಕ ಸಂಘ ಆರಂಭಿಸಿದೆ. ನಿಮ್ಮ ಪ್ರವಾಸ ಕಾರ್ಯಕ್ರಮ ಅಲ್ಲಿಂದಲೇ ಆರಂಭಗೊಳ್ಳಬೇಕೆಂದು ಕ್ರಿಯಾ ಸಮಿತಿಯ ಸರ್ವ ಸದಸ್ಯರ ಅಭಿಪ್ರಾಯವಾಗಿದೆ. ಯಾವುದಕ್ಕೂ ನಾವು ನಿಮ್ಮ ಒಪ್ಪಿಗೆಯ ನಿರೀಕ್ಷೆ ಯಲ್ಲಿದ್ದೇವೆ. ನಿಮಗೆ ಪುನಃ ನಮ್ಮ ಆಮಂತ್ರಣ, ಪುನಃ ನಮ್ಮ ವಂದನೆ.

ಡಾ. ರಾಜಕುಮಾರರು ಈ ಆಮಂತ್ರಣಕ್ಕೆ ತಕ್ಷಣವೆ ಸ್ಪಂದಿಸಿದರು. ಎರಡು ಮೂರು ಹಂತದ ಕಾರ್ಯಕ್ರಮವನ್ನು ರೂಪಿಸಲಾಯಿತು. ಪ್ರತಿಯೊಂದು ಊರಿನವರು ಡಾ. ರಾಜಕುಮಾರ್ ತಮ್ಮಲ್ಲಿಗೆ ಬರಬೇಕೆಂದು ಪ್ರೀತಿಯ ಆಗ್ರಹದೊಂದಿಗೆ ಮುಂದೆ ಬಂದರು. ಆದರೆ ಅವರೆಲ್ಲರ ಬೇಡಿಕೆಯನ್ನು ಈಡೇರಿಸುವುದು ಹೇಗೆ ಸಾಧ್ಯ? ರಾಜಕುಮಾರರು ಕೊಟ್ಟ ಸಮಯವನ್ನು ಹಂಚಿ ಹಾಕಿ ಒಂದು ಕಾರ್ಯಕ್ರಮ ರೂಪಿಸಬೇಕಾಗಿದ್ದಿತು. ಎಕ್ಸ್‌ಪ್ರೆಸ್ ರೈಲು ಕೇವಲ ಕೆಲವೇ ನಿಲ್ದಾಣದಲ್ಲಿ ನಿಲ್ಲುವುದಲ್ಲದೆ ಎಲ್ಲ ನಿಲ್ದಾಣಗಳಲ್ಲಿಯೂ ನಿಲ್ಲುವುದಿಲ್ಲ.

ಬೆಳಗಾವಿಯಿಂದ ಹಿಡಿದು ದಕ್ಷಿಣದ ಮೈಸೂರಿನವರೆಗೆ ಡಾ. ರಾಜಕುಮಾರ್ ಹಾಗೂ ಚಿತ್ರಕಲಾವಿದರ ಜಾಥಾ ರಾಜ್ಯದಲ್ಲಿ ಸಂಚರಿಸಿತು. ಬೆಂಗಳೂರಿನ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಸೇರಿದ್ದ ಭಾರೀ ಜನಸ್ತೋಮದೆದುರು ಡಾ. ರಾಜಕುಮಾರ್ ಮಾತನಾಡಿದರು. ಹೆತ್ತ ತಾಯಿಯ ನಂತರ ಎರಡನೆಯ ತಾಯಿ ಮಾತೃಭಾಷೆ ಕನ್ನಡ. ಈ ನಮ್ಮ ತಾಯಿಯನ್ನು ರಕ್ಷಿಸದಿದ್ದರೆ ನಾವೆಂಥ ಕನ್ನಡಿಗರು. ಕನ್ನಡವನ್ನು ರಾಜ್ಯಭಾಷೆಯನ್ನಾಗಿ ಮಾಡಲು ಗೋಕಾಕ್ ವರದಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು ಯಾವ ತ್ಯಾಗ ಬಲಿದಾನಕ್ಕೂ ನಾನು ಸಿದ್ಧ. ಆ ಭಾವನೆ ಎಲ್ಲ ಕನ್ನಡಿಗರ ಮೈಮನಗಳಲ್ಲಿ ತುಂಬಿ ಕೊಳ್ಳಬೇಕು. ಮಾತೃಭಾಷೆಗೆ ಪ್ರಥಮ ಸ್ಥಾನ ಈ ರಾಜ್ಯದಲ್ಲಿ ಇರಬೇಕೆಂದು ಕೇಳುವ ಹಕ್ಕು ಎಲ್ಲ ಕನ್ನಡಿಗರಿಗೆ ಇದೆ.

ನಮ್ಮದು ಯಾವ ರಾಜಕೀಯ ಇಲ್ಲದ ಆಂದೋಲನ. ನನ್ನನ್ನು ಇಷ್ಟು ಮೇಲಕ್ಕೆ ತಂದದ್ದೇ ತಾಯಿಭಾಷೆ. ಕನ್ನಡಿಗರು ‘ಕನ್ನಡ ಉಳಿಸಿ’ ಎಂದು ಕೂಗಬೇಕಾಯಿತಲ್ಲ ಎಂದು ನನಗೆ ವ್ಯಥೆಯಾಗಿದೆ. ಕನ್ನಡಿಗರು ವಿಶಾಲ ಭಾವನೆಯವರು ಎನ್ನುವ ಪ್ರತೀತಿ ಇದೆ. ಇಲ್ಲಿ ಎಲ್ಲ ಭಾಷೆಯ ಜನರೂ ಇದ್ದಾರೆ. ಆದರೆ ತಾಯಿನುಡಿಯನ್ನು ನಿಕೃಷ್ಟಗೊಳಿಸಿ ಬೇರೆಯವರನ್ನು ಬೆಳೆಸುವ ಪ್ರವೃತ್ತಿ ಸರಿಯಲ್ಲ. ಕನ್ನಡ ನೆಲದಲ್ಲಿ ಕನ್ನಡವೇ ಪ್ರಥಮ ಭಾಷೆ ಆಗಬೇಕು. ಹೆತ್ತತಾಯಿಯಷ್ಟೇ ಪ್ರಧಾನವಾದ ತಾಯಿಭಾಷೆಯನ್ನು ಉಳಿಸುವ ನಿರ್ಧಾರ ಪ್ರತಿಯೊಬ್ಬನ ರಕ್ತದ ಕಣದಲ್ಲಿ ಮೂಡಿಬರಬೇಕು. ನಮ್ಮ ಚಳವಳಿ ನಮಗಾಗಿ ಅಲ್ಲ. ಅದು ನಮ್ಮ ಮುಂದಿನ ಪೀಳಿಗೆಗಾಗಿ. ಅದೇ ಸಂದರ್ಭದಲ್ಲಿ ಅವರು ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾ ಸಮಿತಿಯನ್ನು, ಅವರ ನೇತೃತ್ವ ವಹಿಸಿರುವ ಕೆಚ್ಚೆದೆಯ ಕನ್ನಡಾಭಿಮಾನದ ಪಾಟೀಲ ಪುಟ್ಟಪ್ಪನವರನ್ನು ತುಂಬು ಹೃದಯದ ಮುಕ್ತಕಂಠದಿಂದ ಪ್ರಶಂಸಿದರು. ಕ್ರಿಯಾ ಸಮಿತಿಯು ತಮ್ಮನ್ನು ಕರೆಯದಿದ್ದರೆ ತಮ್ಮನ್ನು ಯಾರು ಕೇಳುತ್ತಿದ್ದರು ಎಂದು ಅವರು ತಮ್ಮ ಸಹಜ ವಿನಯದಿಂದ ಹೋದಲ್ಲಿ ಬಂದಲ್ಲಿ ಹೇಳಿದರು.

ಡಾ. ರಾಜಕುಮಾರರೊಂದಿಗೆ ಕರ್ನಾಟಕದ ಉದ್ದಗಲಗಳಲ್ಲೆಲ್ಲ ಸಂಚರಿಸಿದ ನಾನು, ಅವರು ಸಂಪಾದಿಸಿದ ಜನತೆಯ ಪ್ರೀತಿಯನ್ನು ಕಂಡು ವಿಸ್ಮಯಗೊಂಡೆ. ಅದನ್ನು ನೆನೆದಾಗ ನನಗೆ ಮಹಾಕವಿ ಆದಿ ಪಂಪನು ತನ್ನ ಆದಿ ಪುರಾಣದಲ್ಲಿ ನಿರೂಪಿಸಿದ ಒಂದು ಮನೋಜ್ಞವಾದ ಸನ್ನಿವೇಶ ನೆನಪಿಗೆ ಬಂದಿತು. ಅಲ್ಲಿ ನೀಲಾಂಜನೆಯು ರಂಗಸ್ಥಳದ ಮೇಲೆ ಹೇಗೆ ಬಂದಳು ಎನ್ನುವುದನ್ನು ಕುರಿತು ಬಹು ಚಿತ್ತಾಕರ್ಷಕವಾದ ವಿವರಣೆ ಇದೆ. ‘ಪೊಕ್ಕಳ್ ರಂಗ ಮಂಜುನಾಂತರಂಗಮಂ’ ಎಂದು ಪಂಪ ಹೇಳಿದ ಮಾತು ಅವರ್ಣನೀಯ. ಜನಾಂತರಂಗವನ್ನು ಹೊಕ್ಕವರು ಕ್ವಚಿತ್ತಾಗಿ ಸಿಕ್ಕುತ್ತಾರೆ. ಆದರೆ ನಟ ಸಾರ್ವಭೌಮ ಡಾ. ರಾಜಕುಮಾರರಂತೆ ಜನಾಂತರಂಗವನ್ನು ಹೊಕ್ಕವರು ಸಿಕ್ಕುವುದಿಲ್ಲ. ಅವರು ಕನ್ನಡಕ್ಕೋಸುಗ ಕೈಕೊಂಡ ಪ್ರವಾಸವು ಕನ್ನಡದ ರಾಜಸೂಯಯಾಗವೇ ಆಗಿದ್ದಿತು. ಅವರ ಜನಪ್ರಿಯತೆಯನ್ನು ನೋಡಬೇಕೆನ್ನುವವರು ಅದನ್ನು ಕಣ್ಣಾರೆಯೇ ಕಾಣಬೇಕು. ಎಲ್ಲ ವರ್ಗಗಳ, ಎಲ್ಲ ವಯಸ್ಸಿನ, ಎಲ್ಲ ಬಗೆಯ ಜನರನ್ನು ಅವರು ಹಿಡಿದುಕೊಂಡಂತೆ ಹಿಡಿದುಕೊಂಡವರಲ್ಲ. ಹೋದಲ್ಲಿ ಬಂದಲ್ಲಿ ಜನರನ್ನು ಅವರು ಸೂಜಿಗಲ್ಲಿನಂತೆ ಆಕರ್ಷಿಸುತ್ತಾರೆ. ಅವರ ಹೆಸರಿನಲ್ಲಿ ಏನೋ ಒಂದು ಅನಿರ್ವಚನೀಯ ಮೋಡಿ ಇದೆ. ಅವರಿಗೋಸುಗ ಜನರು ಸುಡುವ ಬಿಸಿಲನ್ನು ಲೆಕ್ಕಿಸದೆ ಗಂಟೆಗಟ್ಟಲೆ ಕಾಯ್ದು ನಿಂತಿರುತ್ತಾರೆ. ರಾಜಕುಮಾರರನ್ನು ನೋಡುವ ಜನರ ದೃಷ್ಟಿಯನ್ನು ವೀಕ್ಷಿಸಬೇಕು. ತಮಗಾದ ಆನಂದವನ್ನು ಅವರು ತಮ್ಮ ಮುಖದ ಮೇಲೆ ಸಂತೃಪ್ತಿ ಬರೆದುಕೊಂಡು ತೋರಿಸಿ ಕೊಟ್ಟಿರುತ್ತಾರೆ. ಸಂಪೂರ್ಣ ಸಂತೋಷದ ನಿಸ್ವಾರ್ಥದ ಸಂತೃಪ್ತಿಗೆ ಹೋಲಿಕೆ ಆಗುವಂಥದು ಯಾವುದೂ ಇಲ್ಲ. ಮುಗ್ಧ ಬಾಲಕರಿಂದ ಹಿಡಿದು ಮುಖದ ಮೇಲೆ ನಿರಿಗೆ ಮೂಡಿದ ಮುದುಕರವರೆಗೆ ಅವರು ಅಮಾಯಕ ಆಕರ್ಷಣೀಯ ವಸ್ತುವೆನಿಸಿದ್ದಾರೆ. ಜನತೆಯ ಥಳಥಳಿಸುವ ಪೂಜೆ ಪ್ರಶಂಸೆಗಳನ್ನು ಅವರು ಯಥೇಚ್ಚವಾಗಿ ಪಡೆದಿದ್ದರೂ ಆ ಹೊಗಳಿಕೆ ಅವರ ತಲೆಗೆ ಹೋಗಿಲ್ಲ. ಅವರಿನ್ನೂ ತಮ್ಮಲ್ಲಿ ಹಳ್ಳಿಯ ಹೈದನ ಮುಗ್ಧತೆಯನ್ನೇ ಇರಿಸಿ ಕೊಂಡಿ ದ್ದಾರೆ. ಅವರಂಥ ನಮ್ರರು, ನಿಗರ್ವಿಗಳು ಸಿಕ್ಕುವುದು ಕಷ್ಟ. ಕೀರ್ತಿ ಅವರನ್ನು ಕೆಡಿಸದೇ ಉಳಿಸಿದೆ.

ಅವರು ಜನತೆಯ ಮನಸ್ಸಿನಲ್ಲಿ ಇಳಿದು ಬಂದವರು. ಅವರ ಅನಿಸಿಕೆಗಳನ್ನು ತಿಳಿದು ಬಂದವರು. ಜನರೊಂದಿಗೆ ಅವರು ಸಂಪೂರ್ಣ ತಾದಾತ್ಮ್ಯ ಹೊಂದಿ ಅವಿನಾಭಾವ ಸಂಬಂಧ ಇರಿಸಿಕೊಂಡವರು. ಜನರ ಹೃದಯವು ಅವರಿಗೋಸುಗ ಮಿಡಿಯುವಂತೆ, ಅವರ ಹೃದಯವು ಜನರಿಗೋಸುಗ ಮಿಡಿಯುತ್ತದೆ. ಜನರೊಂದಿಗೆ  ಎಷ್ಟುಕಾಲ ಇದ್ದರೂ ಅವರಿಗೆ ಆಯಾಸ ಇಲ್ಲ, ಬೇಸರಿಕೆ ಇಲ್ಲ. ತಮಗೆ ಬೇಕಾದ ಎಲ್ಲ ಪರಿಪೋಷಣೆಯನ್ನು ಅವರು ಜನರಿಂದಲೇ ನೇರವಾಗಿ ಪಡೆದುಕೊಳ್ಳುತ್ತಿರುವಂತೆ ತೋರುತ್ತದೆ. ಜನರ ನೂಕು ನುಗ್ಗಲಿನಲ್ಲಿ ಸಿಕ್ಕು ಅವರು ಹಣ್ಣಾಗಿ ಹೋಗಿರುತ್ತಾರೆ. ಆದರೂ ಜನರ ಬಗೆಗೆ ಅವರಿಗೆ ತಿರಸ್ಕಾರವಿಲ್ಲ. ಕನ್ನಡವನ್ನು ಶಿಕ್ಷಣ ಮಾಧ್ಯಮವಾಗಿ ಮಾಡಬೇಕೆನ್ನುವ ಗೋಕಾಕ್ ವರದಿಯನ್ನು  ಅನುಷ್ಠಾನಗೊಳಿಸಲು ನಾಡಿನಲ್ಲಿ ನಡೆದ ಆಂದೋಲನಗೊಳಿಸಲು ನಾಡಿನಲ್ಲಿ ನಡೆದ ಆಂದೋಲನದ ಕರ್ಣಧಾರತ್ವ ಹೊತ್ತ ಕಾಲದಲ್ಲಿ ನಮಗೆ ಡಾ. ರಾಜಕುಮಾರರನ್ನು ಆಂದೋಲನದಲ್ಲಿ ತಂದರೆ ಅದಕ್ಕೆ ಸಾವಿರ ಆನೆಗಳ ಬಲ ಬರುವುದೆಂದು ಅನಿಸಿತು. ನಮಗೆ ಹಾಗೆ ಅನಿಸಿದುದಕ್ಕೆ ಒಂದು ಪ್ರಬಲ ಕಾರಣ ಇದ್ದಿತು. ಕನ್ನಡವನ್ನು ಕಡ್ಡಾಯಗೊಳಿಸಿ ಕರ್ನಾಟಕದೊಳಗಿನ ಎಲ್ಲ ಪ್ರಮುಖ ಭಾಷೆಗಳನ್ನು ಪ್ರಥಮ ಭಾಷೆಯನ್ನಾಗಿ ಮಾಡಬೇಕೆನ್ನುವ ಏಪ್ರಿಲ್ 19ರ ಸರಕಾರದ ನಿರ್ಣಯವನ್ನು ಕುವೆಂಪು ಅವರೇ ಆದಿಯಾಗಿ ಅನೇಕ ಮಹತ್ವದ ಜನರು ಒಪ್ಪಿಕೊಂಡಾ ಡಾ. ರಾಜಕುಮಾರರು ತಕ್ಷಣವೇ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸದೆ ಸರಕಾರಿ ಸೂತ್ರವನ್ನು ಅಭ್ಯಸಿಸಿ ತಿಳಿಯಲು ತಮಗೆ ಕಾಲಾವಕಾಶ ಬೇಕೆಂದು ಹೇಳಿದ್ದರು. ಅವರಿಂದ ಬಂದ ಈ ಮುತ್ಸದ್ದಿನದ ಪ್ರತಿಕ್ರಿಯೆ ಅವರ ಬಗೆಗೆ ನಮ್ಮ ಗೌರವವನ್ನು ಹೆಚ್ಚಿಸಿದ್ದಿತು. ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಕಾರ್ಯ ನಿರ್ವಾಹಕ ಅಧ್ಯಕ್ಷನಾಗಿ ಅವರಿಗೆ ಕಾಗದ ಬರೆದು ಕನ್ನಡ ಆಂದೋಲನದಲ್ಲಿ ಧುಮುಕಬೇಕೆಂದು ಕೇಳಿದಾಗ ಅವರಿಂದ ಬಹು ಘನವಾದ ಪ್ರತಿಕ್ರಿಯೆ ಬಂದಿತು.

1982ನೆಯ ಮೇ 19ರಂದು ಅವರ ಕನ್ನಡ ಜೈತ್ರಯಾತ್ರೆ ಆರಂಭಗೊಂಡಿತು. ಅವರೊಂದಿಗೆ ಸಂಚರಿಸಿದ ನಾನು ಆ ಚಮತ್ಕಾರವನ್ನು ಕಣ್ಣಾರೆ ಕಂಡಿದ್ದೇನೆ. ಹಿಂದೆ ಜನ, ಮುಂದೆ ಜನ, ಎಡಕ್ಕೆ ಜನ, ಬಲಕ್ಕೆ ಜನ, ಮಾಳಿಗೆಯ ಮೇಲೆ, ಮರದ ಮೇಲೆ, ಎಲ್ಲೆಲ್ಲಿಯೂ, ಹಿಂದೆಂದೂ ಯಾರೊಂದಿಗೂ ಕಾಣದಂಥ ಜನಸಾಗರವನ್ನು ನಾನು ಕಂಡೆ. ಅವರ ವಾಹನ ರಸ್ತೆಯಲ್ಲಿ ಹಾಯ್ದುಹೋದರೆ, ಜನರು ಅವರ ಅಂಗಿ ಮೈಗಳನ್ನು ಮುಟ್ಟಿ ನೋಡಬೇಕೆನ್ನುತ್ತಾರೆ. ಇಕ್ಕೆಲ್ಲಗಳಲ್ಲಿರುವ ಜನರು ತಮ್ಮ ಕೈಗಳಿಂದ ಅವರ ತೋಳುಗಳನ್ನು ಹಿಡಿದೆಳೆಯುತ್ತಾರೆ. ಅನೇಕ ಜನರ ಕೈಗಳನ್ನು ಮುಟ್ಟಿ ಅವರ ಶರ್ಟಿನ ಎರಡೂ ತೋಳುಗಳು ಹೊಲಸಾಗಿ ಹೋಗಿರುತ್ತವೆ. ಅದೆಲ್ಲವನ್ನು ಅವರು ಸಹಜ ಘನತೆಯಿಂದ ತೆಗೆದುಕೊಳ್ಳುತ್ತಾರೆ. ಹೊಲಸಾದ ಆ ತಮ್ಮ ಅಂಗಿಯ ಬಗೆಗೆ ಅವರು ಕೊಡುವ ವಿವರಣೆ ಇದು, ಈ ಅಂಗಿ ಎಷ್ಟೊಂದು ಪುಣ್ಯ ಮಾಡಿದೆ, ಎಷ್ಟೊಂದು ಸಾವಿರ ಜನರು ಇದನ್ನು ಪೂಜ್ಯ ಭಾವನೆಯಿಂದ ಮುಟ್ಟಿದ್ದಾರೆ. ಪ್ರೀತಿಯ ಶುಭ್ರತೆ ಹೆಚ್ಚಿನದು. ಅಂಗಿ ಕೊಳೆ ಆದದ್ದೇನೂ ದೊಡ್ಡದಲ್ಲ. ಅವರ ಈ ತಾತ್ವಿಕ ತೃಪ್ತಿ ಎಲ್ಲರಿಗೂ ಬರುವಂಥದಲ್ಲ.

ರಾಜಕುಮಾರರ ಸಂಚಾರದ ಉದ್ದಗಲಕ್ಕೂ ಸಂಸ್ಮರಣೀಯ ಸಂಗತಿಗಳು ಸಂಭವಿಸಿದವು. ಬಳ್ಳಾರಿಯಿಂದ ಹರಿಹರಕ್ಕೆ ಬರುವಾಗ ಹರಪನಹಳ್ಳಿಯ ಸಮೀಪದಲ್ಲಿ, ಅವರನ್ನು ತಮ್ಮ ಕಾವಲಿನಲ್ಲಿ ಕರೆದೊಯ್ಯಲು ಪೊಲೀಸ್ ಅಧಿಕಾರಿಗಳು ಬಂದಿದ್ದರು. ರಾಜಕುಮಾರರು ಆ ಹಾದಿಯಲ್ಲಿ ಬರುವರೆನ್ನುವ ಸುಳಿವು ಹತ್ತಿದ ಹಳ್ಳಿಯ ಕೆಲ ಹೆಂಗಸರು ಅವರ ಬಳಿಗೆ ಬಂದು, ನಮ್ಮ ಅಜ್ಜಿ ಹಣ್ಣು ಹಣ್ಣು ಮುದುಕಿ ರಾಜಕುಮಾರರನ್ನು ಕಾಣುವ ಭಾಗ್ಯ ತನಗೆ ಇಲ್ಲವೆಂದು ಇಷ್ಟೊತ್ತಿನವರೆಗೆ ಕಾದು ನಿರಾಸೆಗೊಂಡು ಎತ್ತಿನ ಗಾಡಿಯಲ್ಲಿ ತಿರುಗಿ ಹೋದಳು ಎಂದು ಹೇಳಿದರು. ಅದನ್ನು ಕೇಳಿ ರಾಜಕುಮಾರರ ಕಣ್ಣಿಗೆ ನೀರು ಬಂದಿತು. ಮನಸ್ಸಿಗೆ ಕಸಿವಿಸಿ ಎನಿಸಿತು. ಆ ಅಜ್ಜಿ ಎಲ್ಲಿ ಹೋದಳು ಎಂದು ಅವರು ಕಾತರಿಸಿ ಕೇಳಿದರು. ಆ ಹೆಂಗಸರು ಗಾಡಿ ಹೋದ ದಿಕ್ಕನ್ನು ತೋರಿಸಿದರು. ರಾಜಕುಮಾರರು ಒಡನೆಯೇ ಅಲ್ಲಿಗೆ, ತಮ್ಮ ಕಾರಿನಲ್ಲಿ ಆ ಅಜ್ಜಿಯನ್ನು ಹುಡುಕಿಕೊಂಡು ಹೋಗಿ, ಅಜ್ಜೀ, ರಾಜಕುಮಾರನೇ ನಿಮ್ಮನ್ನು ನೋಡಲು ಬಂದಿದ್ದಾನೆ. ಆಶೀರ್ವದಿಸು ಎಂದು ಕೇಳಿದರು. ನೂರುವರ್ಷ ಆಗಿರಬಹುದಾದ ಆ ಅಜ್ಜಿಯ ಹೃದಯ ಅರಳಿತು. ನಮ್ಮಪ್ಪ ನೀನು ಇನ್ನೂ ದೊಡ್ಡವನಾಗು, ನೂರು ಕಾಲ ಕೀರ್ತಿವಂತನಾಗಿ ಬಾಳು ಎಂದು ಆಕೆ ಅವರನ್ನು ಮೈದಡವುತ್ತ ಹರಸಿದಳು.

ಡಾ. ರಾಜಕುಮಾರರ ಬಗೆಗೆ ಆಕರ್ಷಣೆ ಇರುವುದು ಜನ ಸಾಮಾನ್ಯರಲ್ಲಿ ಮಾತ್ರವಲ್ಲ, ಅಧಿಕಾರಿ ವರ್ಗದವರಲ್ಲಿಯೂ ಇದೆ. ರಾಜಕುಮಾರರ ಜೈತ್ರಯಾತ್ರೆಯಲ್ಲಿ ಒಂದು ಕಡೆ ಪೋಲೀಸ್ ಅಧಿಕಾರಿಯೊಬ್ಬನು ಜನಜಂಗುಳಿಯಿಂದ ಅವರನ್ನು ಪಾರುಮಾಡಿ ತಂದನು. ರಾಜಕುಮಾರರು ಇನ್ನೇನು ಅಲ್ಲಿಂದ ಮುಂದಕ್ಕೆ ಹೋಗಬೇಕು. ಆಗ ಆ ಅಧಿಕಾರಿಯ ಬಾಯಿಂದ ಒಂದು ವಿಚಿತ್ರ ಬೇಡಿಕೆ ಬಂದಿತು. ಹಿಂದಿನ ಊರನ್ನು ದಾಟಿ ರಾಜಕುಮಾರರು ಆಗಲೇ ಮೂರು ಮೈಲು ದೂರ ಬಂದಿದ್ದರು. ಆ ಅಧಿಕಾರಿ ಅವರನ್ನು ಕೇಳಿದ ‘ಸರ್ ಇಲ್ಲಿ ನೋಡಿ, ನಿಮ್ಮನ್ನು ನೋಡಬೇಕೆಂದು ನನ್ನ ಹೆಂಡತಿಗೆ ತುಂಬಾ ಅಪೇಕ್ಷೆ.’ ನೀವು ಇಲ್ಲಿ ಸ್ವಲ್ಪ ನಿಂತು ಅವಳನ್ನು ನಾನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ. ಅವರ ಮಾತಿಗೆ ಏನು ಹೇಳಬೇಕೆನ್ನುವುದು ರಾಜಕುಮಾರರಿಗೆ ತೋಚಲಿಲ್ಲ. ರಾಜಕುಮಾರರ ಜತೆಯಲ್ಲಿ ಬೇರೆಯವರು ಬೇಡ ಎಂದು ಹೇಳಬೇಕೆನ್ನುವಷ್ಟರಲ್ಲಿಯೇ ಆ ಅಧಿಕಾರಿ ತನ್ನ ಜೀಪನ್ನು ಓಡಿಸಿಕೊಂಡು ಹೋಗಿದ್ದ. ಕನ್ನಡ ಜನರು ಊದುತ್ತಿರುವ ಶಂಖ ಸರಕಾರಕ್ಕೆ ಕೇಳಿಸುತ್ತಿಲ್ಲ ಎನ್ನುವುದು ಅನ್ವರ್ಥಕವೆನಿಸುವಂತೆ ಮೈಸೂರಿನಲ್ಲಿ ಡಾ. ರಾಜಕುಮಾರರ ಸಭೆ ನಟ ಎಂ.ಪಿ. ಶಂಕರರ ಶಂಖನಾದದೊಂದಿಗೆ ಆರಂಭಗೊಂಡಿತು. ಆಗಿನ ಕನ್ನಡ ಜಾಥಾದಲ್ಲಿ ಮೂರು ಸಂಸ್ಮರಣೀಯ ಘಟನೆಗಳು ಸಂಭವಿಸಿದವು. ಪ್ರಸಂಗ ಮೈಮೇಲೆ ಬಂದು ಎಂದೂ ಬಾಯಿ ತೆರೆಯದವರೂ ಕೂಡ ವಾಗ್ಮಿಗಳೆನಿಸುತ್ತಾರೆ. ದಾವಣಗೆರೆಯ ಸಂಘಟಕರು ಶ್ರೀಮತಿ ಪಾರ್ವತಮ್ಮ ರಾಜಕುಮಾರರು ಮಾತನಾಡ ಬೇಕೆಂದು ಆಗ್ರಹಪಡಿಸಿದರು. ಇದು ರಾಜಕುಮಾರರಿಗೆ ಗೊತ್ತಿರಲಿಲ್ಲ. ಶ್ರೀಮತಿ ಪಾರ್ವತಮ್ಮನವರ ಹೆಸರನ್ನು ಧ್ವನಿವರ್ಧಕದಲ್ಲಿ ಹೇಳಿದಾಗ ಮಾತನಾಡಲು ಅವರು ಎದ್ದು ಬಂದರು. ಆಗ ರಾಜಕುಮಾರರಿಗೆ ಭಾರೀ ವಿಸ್ಮಯ. ಎಲಾ ನೀನೂ ಮಾತನಾಡುತ್ತೀಯಾ ಎಂದು ಅಚ್ಚರಿ ವ್ಯಕ್ತಪಡಿಸಿದರು.

ನಟ ವಿಷ್ಣುವರ್ಧನರಿಗೆ ರಾಜಕುಮಾರರ ಬಗೆಗೆ ಸಣ್ಣಭಾವನೆ ಇದೆ ಎಂದು ಭಾವಿಸಿದರು. ಹುಚ್ಚರೆನಿಸುವ ಒಂದು ಪ್ರಸಂಗ ಮೈಸೂರಿನಲ್ಲಿ ನಡೆಯಿತು. ವಿಷ್ಣುವರ್ಧನ ರನ್ನು ಮಾತನಾಡಲು ಕರೆದಾಗ ಅವರು ಧ್ವನಿವರ್ಧಕದ ಕಡೆಗೆ ಹೋಗದೆ, ರಾಜಕುಮಾರರ ಬಳಿಗೆ ಹೋಗಿ ಅವರ ಪಾದ ತಮ್ಮ ಹಣೆ ಹಚ್ಚಿ ನಮಸ್ಕರಿಸಿದರು. ಕರ್ನಾಟಕದಲ್ಲಿ ನಮ್ಮ ತಾಯಿಯಾದ ಕನ್ನಡ ಭಾಷೆಯ ಬಗೆಗೆ ಬಿಟ್ಟು ಬಿಡುವ ಪರಿಸ್ಥಿತಿ ಬಂದಿದೆಯೆಂದು ಡಾ. ರಾಜಕುಮಾರರು ಹೇಳುವಾಗ ಅವರ ಕಂಠ ಕಟ್ಟಿ ಧ್ವನಿ ಗದ್ಗದಿತವಾಯಿತು. ಕಣ್ಣಂಚಿನಲ್ಲಿ ನೀರು ಕಾಣಿಸಿತು. ಆ ದೃಶ್ಯವನ್ನು ಕಂಡ ಅನೇಕರ ಕಣ್ಣಲ್ಲಿ ಅವರರಿಯದಂತೆ ಕಣ್ಣೀರು ಬಂದಿದ್ದವು. ಒಬ್ಬ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೂಡ ಕಣ್ಣೀರು ಒರೆಸಿಕೊಳ್ಳುತ್ತಿದ್ದುದು ನನಗೆ ಕಾಣಿಸಿತು. ಪೋಲಿಸರಾದರೇನಾಯಿತು ಅವರಿಗೇನು ಹೃದಯವಿಲ್ಲವೇ? ಕನ್ನಡದ ಬಗೆಗೆ ಕಾಳಜಿ ಇಲ್ಲವೇ? ನಟಸಾರ್ವಭೌಮ ಡಾ. ರಾಜಕುಮಾರ್ ಹಾಗೂ ಚಲನಚಿತ್ರ ಕಲಾವಿದರೊಂದಿಗೆ ನಾನು ಕೈಕೊಂಡ 13 ಜಲ್ಲೆಗಳ ದ್ವಿತೀಯ ಕನ್ನಡ ಜಾಗೃತಿ ಜಾಥಾ ನನ್ನ ಜೀವಮಾನದಲ್ಲಿ ಎಂದೆಂದಿಗೂ ಮರೆಯುವಂಥದಲ್ಲ. ಕೇಂದ್ರ ಕನ್ನಡ ಕ್ರಿಯಾ ಸಮಿತಿಯು ಏರ್ಪಡಿಸಿದ್ದ ಈ ಜಾಥಾ ಕರ್ನಾಟಕವನ್ನು ಪುನರಪಿ ಶೋಧಿಸುವ ಒಂದು ಅಪೂರ್ವ ಅವಿಸ್ಮರಣೀಯ ಯಾತ್ರೆಯಾಗಿಯೇ ಪರಿಣಮಿಸಿತು. ಜುಲೈ 1, 1982ರಂದು ಬೆಳಗ್ಗೆ ಬೆಂಗಳೂರು ಜಿಲ್ಲೆಯ ಹೊಸಕೋಟೆಯಿಂದ ಆರಂಭವಾದ ಈ ಜಾಗೃತಿ ಜಾಥಾ ಏಳನೆಯ ತಾರೀಕು ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಕೊನೆಗೊಂಡಿತು. ಎಲ್ಲಿ ಹೋದಲ್ಲಿ ಅಮಿತೋತ್ಸಾಹದ ಸಾವಿರಗಟ್ಟಲೆ ಜನರು ಏಳು ದಿನಗಳ ಈ ಕನ್ನಡ ಯಾತ್ರೆಯಲ್ಲಿ ದಾರಿಯುದ್ದಕ್ಕೂ ತುಂಬಿಕೊಂಡಿದ್ದರು. ಸಭೆಗಳು ನಡೆದ ಬಯಲಿನಲ್ಲಿ ನಾವು ಹಲವು ಲಕ್ಷ ಕನ್ನಡಿಗರನ್ನೇ ಕಂಡಿರಬೇಕು. ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಕನ್ನಡಿಗರನ್ನು ತಾವು ಹಿಂದೆಂದೂ ಕಂಡಿರಲಿಲ್ಲವೆಂದು ಡಾ. ರಾಜಕುಮಾರರು ತೆಗೆದ ಉದ್ಗಾರದಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ಜವಾಹರಲಾಲರು ಭಾರತವನ್ನು ಪುನರ್ ಶೋಧ ಮಾಡಿದಂತೆ ನಾವು ಕರ್ನಾಟಕವನ್ನು ಪುನರ್ ಶೋಧ ಮಾಡಿದೆವು. ಎಲ್ಲೆಡೆಯಲ್ಲಿಯೂ ನಮಗೆ ತಲೆಗಳು, ಮುಖಗಳು ಮಾತ್ರ ಕಾಣಿಸುತ್ತಿದ್ದವು.

ಆ ಮುಖಗಳಲ್ಲಿ ಹೊಸ ಬೆಳಕು ಮಿನುಗುತ್ತಿತ್ತು. ಹೊಸ ಉತ್ಸಾಹ ತುಳುಕುತ್ತಿತ್ತು. ಡಾ. ರಾಜಕುಮಾರರು ಲಕ್ಷೋಪಲಕ್ಷ ಜನರ ಹೃದಯದ ತಂತಿಯನ್ನೇ ಮೀಟಿದ್ದರು. ಕೌತುಕ, ಕುತೂಹಲ, ಆಶ್ಚರ್ಯ, ಉತ್ಸುಕತೆ, ಲವಲವಿಕೆ ಹಾಗೂ ನಿರೀಕ್ಷೆ ಆ ಮುಖಗಳಲ್ಲಿ ತಾನೇ ತಾನಾಗಿ ಕಾಣಿಸಿಕೊಂಡಿದ್ದವು. ಜೀವಮಾನದಲ್ಲಿ ನೋಡಬೇಕಾದ ಯಾವುದೋ ಒಂದು ವಸ್ತುವನ್ನು ನೋಡಿದ ಸಫಲತೆಯ ಹಿಗ್ಗು ಆ ಮುಖಗಳಲ್ಲಿ ಬೆರೆತಂತಿದ್ದಿತು. ಆ ಜನರ ಪ್ರೀತಿ ವಾತ್ಸಲ್ಯ ಅಂತಃಕರಣಗಳಿಗೆ ಸರಿಸಾಟಿಯಾಗುವಂಥದು ಯಾವುದೂ ಇಲ್ಲ. ರಾಜಕುಮಾರರ ಬಗೆಗೆ ಜನರಿಗಿದ್ದ ಆ ಪ್ರೀತಿ ಪೂಜೆ ಪ್ರಶಂಸೆಗಳು ಅಸದೃಶವೆಂದೇ ಹೇಳಬೇಕು. ವಿದ್ಯಾರ್ಥಿ ದೆಸೆಯ ಕಾಲದಿಂದಲೂ ಹಿಂದಿನ ಐವತ್ತು ವರ್ಷಗಳಿಂದ ನಾನು ಸಾರ್ವಜನಿಕರೊಂದಿಗೆ ಬೆಳೆದಿದ್ದೇನೆ. ಕಾಂಗ್ರೆಸ್ಸಿನೊಂದಿಗೆ ಆಗ ಬೆಳೆದು ಬಂದ ನಾನು ಮುಂದಾಳುಗಳ ದರ್ಶನಕ್ಕೆ ನೆರೆಯುತ್ತಿದ್ದ ಜನಸಂದಣಿಯನ್ನು ನೋಡಿದ್ದೇನೆ. ಜವಾಹರಲಾಲರು ಕರ್ನಾಟಕದಲ್ಲಿ ಸಂಚರಿಸಿದ ಕಾಲಕ್ಕೆ ಅವರನ್ನು ಕಾಣಲು ಜನರು ಮುಕುರುತ್ತಿದ್ದುದನ್ನು ನಾನು ಕಂಡಿದ್ದೇನೆ. ಆಗ ನಾನು ಕಂಡ ಜನಸಂದಣಿಗೂ, ಡಾ. ರಾಜಕುಮಾರರನ್ನು ನೋಡಲು ಬಂದ ಜನಸಂದಣಿಗೂ ಎಲ್ಲಿಯೂ ಹೋಲಿಕೆ ಇರಲಿಲ್ಲ. ಡಾ. ರಾಜಕುಮಾರರನ್ನು ನೋಡಲು ಸೇರಿದ್ದ ಜನಸಂದಣಿ ಖಂಡಿತವಾಗಿ ದೊಡ್ಡದೆಂದು ನಿಸ್ಸಂದೇಹವಾಗಿ ಹೇಳಬಹುದು. ಡಾ. ರಾಜಕುಮಾರರು ಆಕರ್ಷಿಸುವಂತೆ ದೊಡ್ಡ ಜನಸಂದಣಿಯನ್ನು ಆಕರ್ಷಿಸುವ ಗಂಡಸಾಗಲಿ, ಹೆಂಗಸಾಗಲಿ, ಇಂದು ಇಂಡಿಯಾ ದೇಶದ ರಾಜಕಾರಣಿಗಳಲ್ಲಿ ಯಾರೂ ಇಲ್ಲ. ಅವರಿಗೆ ಆಂಧ್ರದ ಎನ್.ಟಿ.ರಾಮರಾವ್, ಇಲ್ಲವೆ ತಮಿಳುನಾಡಿನ ಎಂ.ಜಿ.ಆರ್. ಮಾತ್ರ ಹೋಲಿಕೆ ಎನಿಸಬಹುದು. ರಾಜಕುಮಾರ್ ಒಂದು ಅಪೂರ್ವ ಘಟನೆ ಎನಿಸಿದ್ದರು. ಅವರಲ್ಲಿ ಯಾವುದೋ ಒಂದು ಅದ್ಭುತವಾದ ಮಹಾ ಪ್ರಾಕೃತಿಕ ಶಕ್ತಿ ಅಡಕವಾಗಿದೆ. ಜನರು ಯಾವುದೋ ಒಂದು ಅವರ್ಣನೀಯ ನಿರೀಕ್ಷೆಯಿಂದ ಅವರ ಕಡೆಗೆ ನೋಡುತ್ತಾರೆ. ಅವರು ಜನರ ಕಡೆಗೆ ದೃಷ್ಟಿ ಬೀರಿದರೆ, ಸಾವಿರಗಟ್ಟಲೇ ಜನರು ಉನ್ಮಾದಗೊಂಡವರಂತೆ ಹರ್ಷೋದ್ಗಾರ ಮಾಡುತ್ತಾರೆ. ಜನರಲ್ಲಿ ವೈವಿಧ್ಯ ಇದೆ. ಅವರ ಭಾಷೆಯಲ್ಲಿ ವೈಪರೀತ್ಯ ಇದೆ. ಆದರೆ ಅವರೆಲ್ಲರ ಭಾವನೆಗಳ ಹಿಂದಿರುವ ಮನಸ್ಸು ಮಾತ್ರ ಒಂದೇ, ಅವರಿಗೆ ಚಾಲನೆ ಒದಗಿಸಿಕೊಟ್ಟ ಮೂಲಸ್ಫೂರ್ತಿ ಒಂದೇ. ಜನರು ಡಾ. ರಾಜಕುಮಾರರ ಮೇಲೆ ಹೂ ಮಳೆಗರೆದು ದಣಿಯರು. ರಾಜಕುಮಾರರ ಕಾರಣದಿಂದ ಕನ್ನಡಕ್ಕೆ ಮಹಾಪೂರ ಬಂದುದನ್ನು ನಾನು ಕಣ್ಮುಂದೆ ಕಂಡೆ. ಗಗನ ಭೇದಿಸುವಂತೆ ಕನ್ನಡದ ಮೊಳಗು ಕರ್ನಾಟಕದ ತುಂಬೆಲ್ಲ ಮೊಳಗಿತು. ಕನ್ನಡ ಭುವನೇಶ್ವರಿಗೆ, ಕನ್ನಡ ರಾಜೇಶ್ವರಿಗೆ ಎಂದು ರಾಜಕುಮಾರರ ಬಾಯಿಂದ ಬರುತ್ತಿದ್ದ ಮಾತುಗಳನ್ನು ಕೇಳುವುದೇ ಒಂದು ಸೊಗಸು, ಸಾವಿರ ಸಾವಿರ ಕಂಠಗಳು ಆ ಘೋಷಣೆಯನ್ನು ಕೇಳಿ ಸ್ಪಂದಿಸುತ್ತಿದ್ದವು.

ಡಾ. ರಾಜಕುಮಾರರು ದಣಿವನ್ನೇ ಕಂಡರಿಯರು. ದಿನದ ಇಪ್ಪತ್ತು ನಾಲ್ಕು ಗಂಟೆಗಳಿಗೆ ಬದಲಾಗಿ ನಲವತ್ತೆಂಟು ಗಂಟೆಗಳು ಇದ್ದರೂ ಅವರಿಗೆ ಆ ದಿನ ಚಿಕ್ಕದೆನಿ ಸುತ್ತಿತ್ತು. ಅವರು ಯಾವಾಗಲೂ ತಾಜಾ ಆಗಿರುತ್ತಾರೆ. ಅವರ ಮುಖ ಮುದುಡಿದುದನ್ನು, ಅವರ ಮಂದಹಾಸ ಬಾಡಿದುದನ್ನು ಯಾರೂ ಕಂಡವರಿಲ್ಲ. ಸಣ್ಣವರಿರಲಿ, ದೊಡ್ಡವರಿರಲಿ, ಅವರು ಎಲ್ಲರೊಂದಿಗೂ ಒಂದೇ ವಿಧವಾದ ನಮ್ರತೆಯಿಂದ ಪ್ರೀತಿ ವಿಶ್ವಾಸಗಳಿಂದ ನಡೆದು ಕೊಳ್ಳುತ್ತಾರೆ. ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ನೇತೃತ್ವದ ಅವರ ಈ ಯಾತ್ರೆ ಹಿಂದಿನ ರಾಜ ಮಹಾರಾಜರು, ರಾಜಸೂಯ ಯಾಗವನ್ನು ಕೈಕೊಂಡ ಕಥೆಯನ್ನು ನೆನಪಿಗೆ ತಂದುಕೊಡುತ್ತದೆ. ಡಾ.ರಾಜಕುಮಾರರು ಕೊರಳು ಬಿಚ್ಚಿ ಬಿಟ್ಟ ಕನ್ನಡದ ಕುದುರೆಯನ್ನು  ತಡೆದು ನಿಲ್ಲಿಸುವವರು ಯಾರೂ ಇಲ್ಲವೆಂದು ನನಗೆ ಅನಿಸಿತು. ಆ ಕುದುರೆಯನ್ನು ತಡೆದು ನಿಲ್ಲಿಸಬೇಕೆನ್ನುವವರಿಗೆ ಬಹು ದೊಡ್ಡ ಧೈರ್ಯ ಬೇಕಾಗುತ್ತದೆ. ಕವಿ ರನ್ನನು ತನ್ನ ಕೃತಿ ಪರೀಕ್ಷೆ ಮಾಡುವವನಿಗೆ ಎಂಟು ಎದೆಗಳು ಇರುವುದು ಎಂದು ಕೇಳಿದ್ದ. ಡಾ. ರಾಜಕುಮಾರರು ಪಟ್ಟದ ಕುದುರೆಯನ್ನು ತಡೆಗಟ್ಟಬೇಕೆನ್ನುವವರಿಗೆ ಎಂಟಲ್ಲ, ಸಾವಿರ ಮೇಲೆ ಎಂಟು ಎದೆಗಳಿದ್ದರೆ ಸಾಕಾಗುವುದಿಲ್ಲ.

ಈ ಕನ್ನಡದ ಜಾತ್ರೆಯು ಡಾ.ರಾಜಕುಮಾರರು ಸಾಮಾನ್ಯ ವಸ್ತುವಿನಿಂದ ನಿರ್ಮಾಣಗೊಂಡವರಲ್ಲ ಎನ್ನುವುದನ್ನು ತೋರಿಸಿಕೊಟ್ಟಿತು. ಅವರು ಚಲನಚಿತ್ರ ನಟರಾಗಿ ಜನರನ್ನು ಆಕರ್ಷಿಸಿದ್ದಾರೆ. ಆದರೆ ಚಲನಚಿತ್ರ ನಟರ ಹವ್ಯಾಸಗಳೊಂದನ್ನೂ ಅವರು ಹೆಚ್ಚಿಕೊಂಡಿರಲಿಲ್ಲ. ರಾತ್ರಿ ಎಷ್ಟು ಹೊತ್ತಿಗೇ ಮಲಗಲಿ, ಬೆಳೆಗ್ಗೆ ಎದ್ದ ಮೇಲೆ ಅವರು ಒಂದು ಗಂಟೆಯ ಕಾಲ ಯೋಗಾಸನ ಹಾಕಲೇಬೇಕು. ಅವರ ಆರೋಗ್ಯ ಹಾಗೂ ಯೌವನಗಳ ರಹಸ್ಯ ಅದರಲ್ಲಿಯೇ ಇದೆ. ಅವರ ಮುಖದ ಮಿಂಚಿಗೆ, ದೇಹದ ಸಪೂರತೆಗೆ, ಲವಲವಿಕೆಗೆ ಬೇರೆ ಇನ್ನೇನೂ ಕಾರಣವಿಲ್ಲ. ಅವರು ಎಲ್ಲರೊಂದಿಗೂ ಮುಗ್ಧ ಮನಸ್ಸಿನಿಂದ ನಗುತ್ತಾರೆ, ಕಲೆಯುತ್ತಾರೆ. ಕನ್ನಡ ಯಾತ್ರೆಗೋಸುಗ ಲಗ್ಸುರಿ ಬಸ್ಸಿನಲ್ಲಿ ಅವರೊಂದಿಗೆ ಹೊರಟವರೆಲ್ಲರೂ ವಿಹಾರ ಯಾತ್ರೆಯ ರಸಾನುಭವ ಮಾಡಿಕೊಂಡರು. ಹೆಚ್ಚು ನೋಡಿದಷ್ಟೂ ಡಾ. ರಾಜಕುಮಾರರ ಬಗೆಗೆ ನಮ್ಮ ಮೆಚ್ಚುಗೆ ಹೇಳುತ್ತದೆ. ಅವರು ಮನುಷ್ಯರಲ್ಲಿಯೇ ನಮ್ಮ ನಡವಳಿಕೆಯಿಂದ ಹೆಚ್ಚಿನ ಮನುಷ್ಯರೆನಿಸಿದ್ದಾರೆ. ಅನೇಕ ಜನ ರಾಜಕುಮಾರರನ್ನು ನಾವು ಕಂಡಿದ್ದೇವೆ ಆದರೆ ಈ ರಾಜಕುಮಾರರು ಅವರೆಲ್ಲರಿಗಿಂತಲೂ ಮಿಗಿಲೆನಿಸಿದ್ದಾರೆ. ಜನರನ್ನು ಹಿಡಿದುಕೊಳ್ಳುವ ಯಾವುದೋ ಒಂದು ಅದ್ಭುತ ಅನಿರ್ವಚನೀಯ ರಾಸಾಯನ ಅವರಲ್ಲಿ ಇವೆ. ನಮ್ಮ ಈ ಕನ್ನಡ ಯಾತ್ರೆಯು ರಾಜಕುಮಾರರಲ್ಲಿೊ ಜನರ ಬಗೆಗಿರುವ ಅಂತಃಕರಣವನ್ನು ಅಪೂರ್ವ ರೀತಿಯಲ್ಲಿ ತೋರಿಸಿಕೊಟ್ಟಿತು. ಬಡವರ ಕಷ್ಟ ಕಂಡು ಅವರು ಮರುಗುತ್ತಾರೆ. ಅವರ ಮನ ಮಿಡಿಯುತ್ತದೆ. ಕುಷ್ಟಗಿಯಿಂದ ಕೊಪ್ಪಳಕ್ಕೆ ಹೋಗುವ ದಾರಿಯಲ್ಲಿ ಯಾರೋ ಕೈ ಮಾಡಿದಂತೆ  ರಾಜಕುಮಾರರಿಗೆ ಕಾಣಿಸಿತು. ಅವರು ಬಸ್ಸನ್ನು ನಿಲ್ಲಿಸುವಂತೆ ಹೇಳಿದರು. ಆಗ ಬಸ್ಸನ್ನು ಹಿಮ್ಮುಖವಾಗಿ ಓಡಿಸಿ ಆ ಜನರು ಇದ್ದಲ್ಲಿಗೆ ಅದನ್ನು ಒಯ್ದು ನಿಲ್ಲಿಸಲಾಯಿತು. ಆಗ ಅಲ್ಲಿದ್ದ ಜನರು, ತಮಗೆ ಕೆಲಸ ಇಲ್ಲದೆ ಕೂಲಿ ಇಲ್ಲದೆ ಕಂಗಾಲಾಗುವ ಸ್ಥಿತಿ ಬಂದಿರುವುದನ್ನು ಹೇಳಿಕೊಂಡರು. ಸರಕಾರದಿಂದ ತಮಗೆ ಪುರಸ್ಕಾರ ಸಿಕ್ಕುತ್ತಿಲ್ಲವೆಂದೂ ತಿಳಿಸಿ ತಮಗೆ ತಿನ್ನಲು ಏನೂ ಇಲ್ಲವೆಂದೂ, ತಾವು ಉಪವಾಸ ಇರುವುದಾಗಿಯೂ ಅವರು ಗೋಗರೆದರು. ಅವರ ಮಾತು ಕೇಳಿ ರಾಜಕುಮಾರರ ಹೃದಯ ಕರಗಿ ನೀರಾಯಿತು. ಪಾಪ, ಬಡತನ ಬಹಳೇ ಕೆಟ್ಟದ್ದು ಎಂದು ಅನ್ನುತ್ತ  ನಿಮಗೋಸುಗ ಏನೂ ಮಾಡುವ ಅಧಿಕಾರ ನನ್ನಲ್ಲಿ ಇಲ್ಲ ಎಂದು ಹೇಳಿ ಅವರು ನೀವು ಈಗ ಊಟ ಮಾಡಿ ಎಂದು ಇನ್ನೂರು ರೂಪಾಯಿಗಳನ್ನು ಅವರ ಕೈಗಿತ್ತರು. ಬಸ್ಸು ಮುಂದೆ ಚಲಿಸಿತು. ಈ ಬಡತನ ನಮ್ಮ ದೇಶದಿಂದ ಎಂದು ತೊಲಗುತ್ತದೋ ಎಂದು ಅವರು ಉದ್ಗಾರ ತೆಗೆದರು. ಕರ್ನಾಟಕದಲ್ಲಿ ಕನ್ನಡದ ಉಸಿರು ತುಂಬಿದರೆ ಜನರ ನಿಟ್ಟುಸಿರು ನಿವಾರಿಸಲು ಸಾಧ್ಯವಾಗುತ್ತದೆ ಎಂದು ನಾನು ಹೇಳಿದೆ.

ಆಗ ನಟ ಲೋಕೇಶ ಅಣ್ಣ ದೇಶದ ವ್ಯವಸ್ಥೆಯನ್ನು ಬದಲಿಸುವುದು ಯಾರಿಗೂ ಬೇಕಾಗಿಲ್ಲ. ಬಡತನ ಹಾಗೂ ಅಜ್ಞಾನಗಳು ದೇಶದಲ್ಲಿ ಇದ್ದಂತೆಯೇ ಇದ್ದರೆ ರಾಜಕಾರಣಿಗಳ ಬೇಳೆ ಬೇಯುತ್ತದೆ ಎಂದು ಹೇಳಿದರು. ಹಾಲು ಜೇನಿನಂಥ ಬಂಗಾರದ ತೂಕದ ಮನುಷ್ಯ ಡಾ. ರಾಜಕುಮಾರರು. ಸವದತ್ತಿಯಲ್ಲಿ ಅವರ ಕಾರ್ಯಕ್ರಮ ಸಂಜೆ ಆರು ಗಂಟೆಗೆ ಎಂದು ಗೊತ್ತಾಗಿದ್ದಿತು. ಆದರೆ ಜನರು ಅವರನ್ನು ಮಾರ್ಗದಲ್ಲಿ ತಡೆಯುತ್ತ ಅವರು ಅಲ್ಲಿಗೆ ಹೋಗಿ ತಲುಪಲು ರಾತ್ರಿ ಎರಡು ಗಂಟೆಯೇ ಆಯಿತು. ಜಾಥಾವನ್ನು ಸ್ವಾಗತಿಸಲು ಜನರು ಸವದತ್ತಿಯ ಹೊರವಲಯದಲ್ಲಿಯೇ ಕಾಯ್ದು ನಿಂತಿದ್ದರು. ಜನರು ತಮಗೋಸುಗ ಕಾಯ್ದುನಿಂತಿರುವರೆನ್ನುವ ಮಾತನ್ನು ಹೇಳಿದ ರಾಜಕುಮಾರರು ಮೂಕವಿಸ್ಮಿತರಾದರು ಎಂಟು ಗಂಟೆ ತಡವಾಗಿ ಬಂದ ತಮ್ಮನ್ನು ಜನರು ಶಪಿಸಬಹುದು, ಛೀ ಹಾಕಬಹುದು ಎಂದು ಅವರು ಅಂಜಿಕೊಂಡಿದ್ದರು. ಆದರೆ ಜನರೆಲ್ಲರೂ ಅವರನ್ನು ಪ್ರಚಂಡ ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ರಾಜಕುಮಾರರಿಗೆ ಆಗ ಕಂಠವೇ ತುಂಬಿ ಬಂದಿತು. ನಾನು ಏನು ಪುಣ್ಯ ಮಾಡಿರುವೆನೋ ಏನೋ, ಇಂಥ ಜನರ ಪ್ರೀತಿ ವಿಶ್ವಾಸಗಳನ್ನು ಸಂಪಾದಿಸಿಕೊಂಡಿದ್ದೇನೆ. ಪುನರ್ಜನ್ಮ ಎನ್ನುವುದೊಂದು ಇದ್ದರೆ, ದೇವರೆಂಬುವನು ಒಬ್ಬನಿದ್ದರೆ, ಅವನನ್ನು ನಾನು ಕೇಳುತ್ತೇನೆ. ನಾನು ಪುನಃ ಪುನಃ ಕರ್ನಾಟಕದಲ್ಲಿ, ಕನ್ನಡ ಜನರ ಮಧ್ಯದಲ್ಲಿ ಜನ್ಮವೆತ್ತಿ ಬರಬೇಕು. ಅವರು ಈ ಮಾತನ್ನು ಹೇಳಿದಾಗ, ಅವುಗಳನ್ನು ಕೇಳಿದ ಜನರು ತಮ್ಮ ಅಯಾಸವನ್ನೆಲ್ಲ ಮರೆತು ರಾಜಕುಮಾರರು ವ್ಯಕ್ತಪಡಿಸಿದ ಭಾವನೆಯಲ್ಲಿ ತಮ್ಮನ್ನೇ ಕಳೆದುಕೊಂಡವರಂತೆ ಮಂತ್ರ ಮುಗ್ಧರಾದರು. ಇಂಥ ಒಳ್ಳೆಯ ಜನರ ಮಧ್ಯದಲ್ಲಿ ಇರುವುದೇ ಪುಣ್ಯ ಎಂದು ಅವರ ಮಾತನ್ನು ಅವರು ತಮ್ಮ ಹೃದದಲ್ಲಿ ಬರೆದುಕೊಂಡಿದ್ದರು. ಈ ಕನ್ನಡ ಯಾತ್ರೆಯ ಉದ್ದಕ್ಕೂ ಡಾ. ರಾಜಕುಮಾರರು ನಗೆಯಲ್ಲಿ, ಹಾಸ್ಯದಲ್ಲಿ, ಹಾಲಿನಲ್ಲಿ ಸಕ್ಕರೆ ಬೆರೆತಂತೆ ಸಹಜವಾಗಿ ಬೆರೆತುಕೊಳ್ಳುತ್ತಿದ್ದರು. ಡಾ. ರಾಜಕುಮಾರರು ಕನ್ನಡದ ಬಹು ದೊಡ್ಡ ಆಸ್ತಿ, ಕರ್ನಾಟಕದ ಬಹುದೊಡ್ಡ ಶಕ್ತಿ ಎಂದು ಕರ್ನಾಟಕಕ್ಕೆ ಕರ್ನಾಟಕವೇ ಗುರುತಿಸಿಕೊಂಡಿತು. ಅವರನ್ನು ಉಪಯೋಗಿಸಿಕೊಂಡಂತೆ ಅವರ ಉಪಯೋಗ ಇನ್ನೂ ಹೆಚ್ಚುತ್ತದೆ. ಎಷ್ಟು ಕೊಟ್ಟರೂ, ಅವರಲ್ಲಿ ಕೊಡುವುದು ಇನ್ನೂ ಇದ್ದೇ ಇದೆ. ಸಾರ್ವಜನಿಕಕ್ಕೆ ಒಳ್ಳೆಯದನ್ನು ಮಾಡುವ ಅವರ ಸಾಮರ್ಥ್ಯ ಅಪರಿಮಿತವಾಗಿದೆ. ಅವರ ಸಹಾಯದಿಂದ ಕರ್ನಾಟಕಲ್ಲಿ ಕನ್ನಡದ ಝಂಝಾವಾತ ತುಂಬಿಕೊಂಡಿತು. ಕನ್ನಡದ ವಿಚಾರ ಮುಂದೊತ್ತಿಕೊಂಡು ಹೋಗುವುದನ್ನು ತಡೆದು ನಿಲ್ಲಿಸುವ ಶಕ್ತಿ ಎಂಥ ಸೈನ್ಯದಲ್ಲಿಯೂ ಇಲ್ಲವೆಂದು ನಾನು ಅಂದುಕೊಂಡೆ.

ಮಹತ್ವದ ದಿನ

ಗೋಕಾಕ್ ವರದಿಯನ್ನು ಸರಕಾರ ಸ್ವೀಕರಿಸಬೇಕೆಂದು ನಾವು ಹೂಡಿದ ಹೋರಾಟದಲ್ಲಿ ಜೂನ್ 2, 1982 ಒಂದು ಮಹತ್ವದ ದಿನ. ಅಂದು ಕನ್ನಡದ ಕೇಂದ್ರ ಕ್ರಿಯಾ ಸಮಿತಿ, ಸರಕಾರ ಕರೆದ ಸಭೆಗೆ ತನ್ನ ಸದಸ್ಯರು ಹೋಗಕೂಡದೆಂದು ಹೇಳಿ, ಸರಕಾರದ ಆಮಂತ್ರಣವನ್ನು ತಿರಸ್ಕರಿಸಿದ್ದಿತು. ಕೇಂದ್ರ ಕ್ರಿಯಾ ಸಮಿತಿ ಆ ರೀತಿ ನಿರ್ಣಯ ಕೈಕೊಳ್ಳುವುದಕ್ಕೆ ಕಾರಣಗಳಿದ್ದವು. ಸರಕಾರದವರು, ಗೋಕಾಕ್ ವರದಿಯ ಅನುಷ್ಠಾನದ ಬಗೆಗೆ ಒತ್ತಾಯಿಸಿ ಹೋರಾಟ ಮಾಡಿದವರನ್ನು ಪ್ರತ್ಯೇಕ ಭೆಟ್ಟಿಗೆ ಕರೆಯದೆ, ಹೋರಾಟ ಮಾಡದೇ ಇದ್ದವರನ್ನು ಕರೆದು ಜೂನ್ ನಾಲ್ಕನೆಯ ದಿನಾಂಕದ ಸಭೆಗೆ ಕ್ರಿಯಾ ಸಮಿತಿಯ ಕೆಲ ಸದಸ್ಯರು ಬರಬೇಕೆಂದು ಹೇಳಿ, ಅವರಿಗೆ ವೈಯಕ್ತಿಕ ಆಮಂತ್ರಣ ಸರಕಾರ ನೀಡಿದ್ದಿತು. ಆದರೆ ಕ್ರಿಯಾ ಸಮಿತಿಗೆ ಆಮಂತ್ರಣ ನೀಡಿರಲಿಲ್ಲ. ವೈಯಕ್ತಿಕ ಆಮಂತ್ರಣ ಕೊಟ್ಟರೆ ನಾವು ಬರುವುದಿಲ್ಲವೆಂದೂ, ಕ್ರಿಯಾ ಸಮಿತಿಯನ್ನು ಆಮಂತ್ರಿಸಿ ಪ್ರತ್ಯೇಕ ಭೆಟ್ಟಿಗೆ ಕರೆದರೆ ಮಾತ್ರ ನಾವು ಬರುವುದಾಗಿಯೂ ತಿಳಿಸಿ, ಆಮಂತ್ರಿತ ಸದಸ್ಯರು ನಾವು ಸರಕಾರಕ್ಕೆ ತಂತಿ ಕಳಿಸಿದೆವು. ಸರಕಾರ ಅದನ್ನು ಧಿಃಕ್ಕರಿಸಿ, ತಾನು ಪ್ರತ್ಯೇಕ ಭೆಟ್ಟಿ ಕೊಡುವುದಿಲ್ಲವೆಂದೂ, ಎಲ್ಲರೂ ಚರ್ಚೆಗೆ ಕರೆದ ಜೂನ್ ನಾಲ್ಕರ ಸಭೆಗೆ ಬರಬೇಕೆಂದೂ ಅದು ತಿಳಿಸಿದ್ದಿತು. ಆಗ ಕೇಂದ್ರ ಕ್ರಿಯಾ ಸಮಿತಿಗೆ ನಾಲ್ಕನೆಯ ತಾರೀಕು ನಡೆಯಲಿದ್ದ ಸಭೆಯನ್ನು ಬಹಿಷ್ಕರಿಸದೆ ಬೇರೆ ಗತ್ಯಂತರ ಇರಲಿಲ್ಲ. ಹೋರಾಟ ಮಾಡಿದ ನಾವು, ಹೋರಾಟ ವಿರೋಧಿಸಿದವರೊಂದಿಗೆ ಚರ್ಚೆಗೆ ಕುಳಿತುಕೊಳ್ಳುವುದು ಹೇಗೆಂದು ನಮಗೆ ವ್ಯಥೆ ಎನಿಸಿದ್ದಿತು. ಸರಕಾರ ಕರೆದ ಸಭೆಯನ್ನು ಕೇಂದ್ರ ಕ್ರಿಯಾ ಸಮಿತಿ ಬಹಿಷ್ಕರಿಸಿದ ಸುದ್ದಿ ಜೂನ್ ಮೂರರ ಪತ್ರಿಕೆಗಳಲ್ಲಿ ಭಾರೀ ಪ್ರಾಮುಖ್ಯತೆ ಪಡೆದು ಪ್ರಕಟಗೊಂಡಿದ್ದಿತು. ಸಂಧಾನದ ಎಲ್ಲ ಬಾಗಿಲುಗಳೂ ಮುಚ್ಚಿರುವಂಥ ಸ್ಥಿತಿಯಲ್ಲಿ ನಾವು ಬೆಂಗಳೂರಿಗೆ ಹೊರಟೆವು. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ 150 ಜನರು ಬೆಂಗಳೂರಿನ  ಹಾದಿ ಹಿಡಿದಿದ್ದರು. ಮೂರನೆಯ ತಾರೀಕು ಮಧ್ಯಾಹ್ನ ಮೂರು ಗಂಟೆಗೆ ಲಂಕೇಶ್ ಪತ್ರಿಕೆಯ ಕಚೇರಿಯಲ್ಲಿ ನಮ್ಮ ಸಭೆ ಸೇರಬೇಕೆಂದು ತೀರ್ಮಾನವಾಗಿದ್ದಿತು.

ಎರಡನೆಯೊತಾರೀಕು ರಾತ್ರಿ ರೈಲಿನಲ್ಲಿ ನನ್ನೊಂದಿಗೆ ಕ್ರಿಯಾ ಸಮಿತಿಯ ಉಪಾಧ್ಯಕ್ಷರೂ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳೂ, ನನ್ನ ಸ್ನೇಹಿತರೂ ಆದ ಡಾ.ಆರ್.ಸಿ.ಹಿರೇಮಠ ಇದ್ದರು. ನಾವಿಬ್ಬರೂ ಒಂದೇ ಕಂಪಾರ್ಟ್‌ಮೆಂಟಿನಲ್ಲಿ ಇದ್ದೆವು. ಕ್ರಿಯಾ ಸಮಿತಿಯ ಕಾರ್ಯವಾಹಕ ಅಧ್ಯಕ್ಷನಾದ ನನ್ನ ಮೇಲೆ ಒಮ್ಮೆಲೇ ಬಹುದೊಡ್ಡ ಭಾರ ಬಿದ್ದಂತಾಗಿದ್ದಿತು. ಪ್ರತ್ಯೇಕ ಭೆಟ್ಟಿಗೆ ಅವಕಾಶ ಇಲ್ಲ ಎನ್ನುವ ಸ್ಥಿತಿಯಲ್ಲಿ ನಾವು ಬೆಂಗಳೂರಿಗೆ ಹೊರಟಿದ್ದೆವು. ನನ್ನ ಮನಸ್ಸಿನಲ್ಲಿ ಭಾರೀ ತುಮುಲ ಎದ್ದಿದ್ದಿತು. ಸಂಧಾನದ ಎಲ್ಲ ಬಾಗಿಲುಗಳೂ ಮುಚ್ಚಿದಾಗ, ಆ ಮುಚ್ಚಿದ ಬಾಗಿಲುಗಳನ್ನು ತೆರೆದು ಸಂಧಾನ ಆರಂಭಿಸುವುದು ಹೇಗೆ? ನಮ್ಮ ಹೋರಾಟವನ್ನು ಯಶಸ್ಸಿಗೆ ಒಯ್ದು ಮುಟ್ಟಿಸುವುದು ಹೇಗೆ ಎನ್ನುವ ಚಿಂತೆ ನನ್ನ ಮನಸ್ಸನ್ನು ಆವರಿಸಿಕೊಂಡಿದ್ದಿತು. ನೆನೆಗುದಿಗೆ ಬಿದ್ದ ಈ ಪ್ರಶ್ನೆಗೆ ಪರಿಹಾರ ಕಂಡುಹಿಡಿಯುವ ಉಪಾಯ ಕುರಿತು ಆರ್.ಸಿ. ಹಿರೇಮಠ ಮತ್ತು ನಾನು ಬಹಳ ಹೊತ್ತು ಸಮಾಲೋಚನೆ ನಡೆಸಿದವು. ಆ ಸಂದರ್ಭದಲ್ಲಿ ನಾನು ಆರ್.ಸಿ.ಯವರಿಗೆ ಹೇಳಿದೆ-ಈ ಹೋರಾಟದಲ್ಲಿ ಭಾಗವಹಿಸಿದವರು ಹೆಚ್ಚಾಗಿ ಅಧ್ಯಾಪಕ ವರ್ಗದವರು. ಸರಕಾರದವರು ಅವರ ಮೇಲೆ ಕ್ರಮ ಕೈಕೊಳ್ಳಬಹುದೆನ್ನುವ ಸಂಗತಿಯೊಂದು ಪತ್ರಿಕೆಗಳಲ್ಲಿ ಬಂದಿದೆ. ಶಿಕ್ಷಣ ಮಂತ್ರಿಗಳು ಅದನ್ನು ಅಲ್ಲಗಳೆದಿದ್ದಾರೆ. ಆ ಮಾತು ಬೇರೆ. ಆದರೆ ಸರಕಾರದಲ್ಲಿ ಸಾಕಷ್ಟು ಜನ ಹುಚ್ಚರಿದ್ದಾರೆ.

ಸರಕಾರ ಹೀಗೆಯೇ ಮಾಡುತ್ತದೆಯೆಂದು ಹೇಳುವುದು ಯಾರೊಬ್ಬರಿಂದಲೂ ಸಾಧ್ಯವಿಲ್ಲ. ಸರಕಾರ ಒಂದು ಬಹು ವಿಚಿತ್ರ ಯಂತ್ರ. ಆಗುವುದಿಲ್ಲ ಎಂದು ಹೇಳಿರುವುದನ್ನು ಅದು ಮಾಡಿರುತ್ತದೆ. ಆಗುತ್ತದೆ ಎಂದು ಹೇಳಿದುದನ್ನು ಅದು ಮಾಡಿರುವುದಿಲ್ಲ.

ಸರಕಾರದವರೇನಾದರೂ ಸೇಡು ತೀರಿಸಿಕೊಳ್ಳುವ ಮನೋಭಾವನೆಗೆ ಬಿದ್ದು ಸುಗ್ರೀವಾಜ್ಞೆ ಹೊರಡಿಸಿ, ನೀವು ಮಾಡುತ್ತಿರುವುದು ನಿಮ್ಮ ಸೇವಾ ನಿಯಮಗಳಿಗೆ ವಿರುದ್ಧವಾಗಿದೆಯೆಂದು ಹೇಳಿ ಅವರ ಸೇವೆಯನ್ನು ತೊಡೆದು ಹಾಕಿದರೆ ಏನು ಗತಿ ಎಂದು ನಾನು ಒಳಗೇ ಹೆದರಿಕೊಂಡಿದ್ದೇನೆ. ಅವರನ್ನು ಕೆಲಸದಿಂದ ವಜಾ ಮಾಡಿದರೆ, ಆ ಅಧ್ಯಾಪಕರ ಹೆಂಡಿರೂ ಮಕ್ಕಳು ಕ್ರಿಯಾ ಸಮಿತಿಯ ಕಾರ್ಯವಾಹಕ ಅಧ್ಯಕ್ಷನಾದ ನಾನು ಅವರ ಬಾಯಿಗೆ ಮಣ್ಣು ಹಾಕಿದೆನೆಂದು ಶಪಿಸುತ್ತಾರೆ. ಒಂದು ವೇಳೆ ಸರಕಾರವು ಬೆಂಗಳೂರಿಗೆ ಹೋಗಿರುವ ನಮ್ಮನ್ನೆಲ್ಲ, 150 ಜನರನ್ನೂ ಹಿಡಿದು ತಮ್ಮ ವಶಕ್ಕೆ ತೆಗೆದುಕೊಂಡರೆ ಆಂದೋಲನ ನಡೆಸುವವರು ಯಾರು?

ನಮ್ಮ ಆಂದೋಲನದ ಶಕ್ತಿ ದೌರ್ಬಲ್ಯಗಳು ಏನೆನ್ನುವುದು ನನಗೆ ಗೊತ್ತಿತ್ತು. ಅದು ರಾಜಕೀಯದಿಂದ ದೂರ ಇದ್ದು ಶಾಂತಿಯುತವಾಗಿ ನಡೆದಷ್ಟೂ ಅದಕ್ಕೆ ಬಲ ಇರುತ್ತದೆ. ಒಮ್ಮೆ ಅದು ರಾಜಕೀಯಕ್ಕೆ ಇಳಿದು ಹಿಂಸೆಗೆ ತಿರುಗಿದರೆ ದುರ್ಬಲಗೊಳ್ಳುತ್ತದೆ.

ನಾಲ್ಕನೆಯ ತಾರೀಕಿನ ಮಾತುಕತೆಗಳಿಗೆ ಮುಂಚೆ ಏನಾದರೂ ಒಂದು ತ್ವರಿತ ಹಾದಿಯನ್ನು ಹುಡುಕಬೇಕೆಂದು ನಾನು ಒಳಗೇ ಲೆಕ್ಕ ಹಾಕತೊಡಗಿದ್ದೆ. ಕಾಂಗ್ರೆಸ್ಸಾಗಲಿ, ಮಹಾತ್ಮಾ ಗಾಂಧಿಯವರಾಗಲಿ, ರಾಷ್ಟ್ರೀಯ ಆಂದೋಲನ ಹೂಡಿದ ಸಂದರ್ಭ ಗಳಲ್ಲೆಲ್ಲ ಮಧ್ಯಸ್ಥಿಕೆಗೆ ದಾರಿ ಮಾಡಿಕೊಡಲು ಸಪ್ರು ಜಯಕರರಂಥವರು ಆಗ ಇದ್ದರು. ಈಗ ಈ ಕನ್ನಡದ ಕೆಲಸಕ್ಕೂ ಅಂಥ ಒಬ್ಬ ಮನುಷ್ಯ, ಸಪ್ರು ಜಯಕರ ಕೆಲಸ ಮಾಡುವುದಕ್ಕೆ ಸಿಕ್ಕಬಾರದೇಕೆ ಎಂದು ನಾನು ನನ್ನಷ್ಟಕ್ಕೇ ತರ್ಕಿಸಿದ್ದೆ. ನನ್ನ ಈ ಎಲ್ಲ ವಿವೇಚನೆಯಲ್ಲಿ ಹಿರೇಮಠರು ನನ್ನೊಂದಿಗೆ ಸಹಭಾಗಿಗಳಾಗಿದ್ದರು. ನಾನು ಅವರಿಗೆ ಹೇಳಿದೆ. ಹಿರೇಮಠರೇ, ಮಧ್ಯಾಹ್ನ ಮೂರು ಗಂಟೆಗೆ ನಮ್ಮ ಸಭೆ ಸೇರುತ್ತದೆ. ಅಲ್ಲಿಯವರೆಗೆ ನಮಗೆ ಬೇರೆ ಕೆಲಸವಿಲ್ಲ. ಅಷ್ಟರೊಳಗೆ ಏನಾದರೂ ಮಾಡುವುದು ಸಾಧ್ಯವೋ ಹೇಗೆನ್ನುವುದನ್ನು ನಮ್ಮ ಸ್ನೇಹಿತರನ್ನು ಬಿಟ್ಟು, ಆ ದಾರಿಯ ಶೋಧ ಮಾಡೋಣ.

ಅವರು ನನ್ನ ಮಾತನ್ನು ಸಮರ್ಥಿಸಿದ್ದರು. ನಾವು ರೈಲಿನಲ್ಲಿ ಮಧ್ಯದ ಬೋಗಿಯಲ್ಲಿ ಇದ್ದೆವು. ಅದರಿಂದ ನಾವು ಇನ್ನುಳಿದವರಿಗಿಂತ ಬೇಗನೆ ಹೊರಗೆ ಬರುವುದಕ್ಕೆ ಸಾಧ್ಯ ವಾಯಿತು. ಹೊರಗೆ ಬಂದೊಡನೆಯೇ ನಾವು ಒಂದು ಆಟೋರಿಕ್ಷಾ ಏರಿದೆವು. ನಮ್ಮ ಇನ್ನುಳಿದ ಸ್ನೇಹಿತರಿಗೆ ತಿಳಿದಿರಲಾರದು. ನಾವು ನೇರವಾಗಿ ರಾಜಮಹಲ್ ವಿಸ್ತರಣೆಯಲ್ಲಿದ್ದ ನನ್ನ ಅತ್ತೆಯ ಮನೆಗೆ ಹೋದೆವು. ಅಲ್ಲಿಗೆ ಹೋದವನೇ ನಾನು ಹಣಕಾಸಿನ ಮಂತ್ರಿ ವೀರಪ್ಪ ಮೊಯಿಲಿಯವರಿಗೆ ಫೋನ್ ಮಾಡಿದೆ. ಅವರೂ ಕೂಡ ನನ್ನನ್ನು ಕಾಣಲು ಉತ್ಸುಕರಾಗಿದ್ದರು. ದೂರವಾಣಿಯಲ್ಲಿ ನನ್ನ ಧ್ವನಿಯನ್ನು ಕೇಳಿದೊಡನೆಯೇ ಅವರು, ನಾನು ಇದೀಗ ಹುಬ್ಬಳ್ಳಿಗೆ ಫೋನ್ ಮಾಡಿದ್ದೆ ನೀವು ಬೆಂಗಳೂರಿಗೆ ಬಂದಿರುವುದು ತಿಳಿಯಿತು. ನಾನೂ ನೀವು ಕೂಡಿ ಮಾತನಾಡುವುದು ಅಗತ್ಯವಿದೆ. ನಾನು ಎಲ್ಲಿಗೆ ಬರಲಿ? ಯಾವಾಗ ಬರಲಿ? ಎಂದು ಕೇಳಿದರು.

ಆಗ ನಾನು ಅವರಿಗೆ ‘ನೀವೇನೂ ಬರುವುದು ಬೇಡ. ನಾನು ಮತ್ತು ಡಾ.ಆರ್.ಸಿ. ಹಿರೇಮಠ ನಿಮ್ಮಲ್ಲಿಗೇ ಬಂದು ಬಿಡುತ್ತೇವೆ’ ಎಂದು ತಿಳಿಸಿದೆ. ಮೊಯಿಲಿಯವರ ಮನೆಗೆ ಹೋಗಿ ನಾವು ಅವರೊಂದಿಗೆ ಒಂದು ಗಂಟೆಯ ಕಾಲ ಗೋಕಾಕ್ ಸಮಿತಿಯ ವರದಿಯ ಬಗೆಗೆ, ಅದರ ಪರವಾಗಿ ನಡೆದ ಆಂದೋಲನದ ಬಗೆಗೆ ಮಾತನಾಡಿದೆವು. ಜನತೆಯ ಸಂವೇದನೆಯನ್ನು ಇಷ್ಟೊಂದು ಉತ್ಕಟ ರೀತಿಯಿಂದ ವ್ಯಕ್ತಪಡಿಸಿದ ಇನ್ನೊಂದು ಹೋರಾಟ ಕರ್ನಾಟಕದಲ್ಲಿ ಇದುವರೆಗೆ ನಡೆದಿಲ್ಲವೆನ್ನುವ ಸಂಗತಿಯನ್ನು ನಾನು ಅವರಿಗೆ ತಿಳಿಸಿದೆ. ಅವರನ್ನು ನಮ್ಮ ವಾದಕ್ಕೆ ಒಪ್ಪಿಸಲು ನಾವು ಸಮರ್ಥರಾದೆವು. ಅವರು ನಮ್ಮ ವಾದಕ್ಕೆ ಒಪ್ಪಿದುದು ನಮಗೆ ಬಹು ದೊಡ್ಡ ಬಲವನ್ನು ತಂದುಕೊಟ್ಟಿತು. ಆದರೆ ಸರಕಾರದಲ್ಲಿ ಒಬ್ಬನನ್ನು ಒಪ್ಪಿಸಿದರೆ ಸರಕಾರವನ್ನೇ ಒಪ್ಪಿಸಿದಂತೆ ಆಗುವುದಿಲ್ಲ. ನಮ್ಮ ದಾರಿ ಇನ್ನೂ ಬಹಳ ದೂರ ಇದ್ದಿತು. ನಾವಿದ್ದ ಕತ್ತಲೆಯ ಕೊಳವೆಯ ತುದಿಯಲ್ಲಿ ನಮಗಿನ್ನೂ ಬೆಳಕು ಕಂಡಿರಲಿಲ್ಲ. ನಾವು ಕತ್ತಲೆಯಲ್ಲಿಯೇ ತಡಕಾಡುತ್ತಿದ್ದೆವು. ಅಷ್ಟರಲ್ಲಿ ಮೊಯಿಲಿಯವರು ಒಮ್ಮಿಂದೊಮ್ಮೆಲೇ, ‘ನಾನು ನಿಮ್ಮನ್ನು ಗುಂಡೂರಾಯರಿಗೆ ಭೆಟ್ಟಿ ಮಾಡಿಸುತ್ತೇನೆ. ಭೆಟ್ಟಿ ಆಗುತ್ತೀರಾ?’ ಎಂದು ಕೇಳಿದರು. ಏಕಾಕಿಯಾಗಿ ಬಂದ ಈ ಪ್ರಶ್ನೆಗೆ ನಾನು ಒಮ್ಮೆಲೇ ಏನು ಉತ್ತರ ಹೇಳಬೇಕು? ನಾನು ಒಂದು ಕ್ಷಣ ತಬ್ಬಿಬ್ಬಾದೆ. ಇಂಥ ಪ್ರಶ್ನೆ ಬಂದೀತೆಂದು ನಾನು ನಿರೀಕ್ಷಿಸಿರಲಿಲ್ಲ. ನಾನು ಆರ್.ಸಿ. ಅವರ ಕಡೆಗೆ ನೋಡಿದೆ. ಅವರೂ ಪ್ರತಿಕ್ರಿಯಿಸಲಿಲ್ಲ. ನಮ್ಮ ಕ್ರಿಯಾ ಸಮಿತಿಯ ಇನ್ನುಳಿದ ಸದಸ್ಯರು, ಆಂದೋಲನದಲ್ಲಿ ಭಾಗವಹಿಸಿದವರು ಏನೆಂದು ಕೊಳ್ಳುವರೋ ಎನ್ನುವ ಅಳುಕು ನನಗೆ.

“ಇವನು ಮುಖ್ಯಮಂತ್ರಿಗಳೊಂದಿಗೆ ಏನನ್ನೋ ನಡೆಸಿದ್ದಾನೆ” ಎಂದು ಅವರು ಆಲೋಚಿಸಿದರೆ ಹೇಗೆನ್ನುವ ಅನುಮಾನ ನನ್ನ ಮನಸ್ಸಿನಲ್ಲಿ ಮೂಡಿಕೊಂಡಿದ್ದಿತು. ಅನಂತರ ನಾನು, ಆದದ್ದಾಗಲಿ, ಗಂಡಾಂತರವನ್ನು ಹೊತ್ತುಕೊಂಡರಾಯಿತು ಎಂದು ಮನಸ್ಸನ್ನು ಗಟ್ಟಿಮಾಡಿಕೊಂಡೆ. ‘ಆಗಲಿ’ ಎಂದು ನಾನು ಮೊಯಿಲಿಯವರಿಗೆ ಹೇಳಿದೆ. ಗುಂಡೂರಾಯರೊಂದಿಗೆ ನಡೆಯುವ ಭೆಟ್ಟಿಯಲ್ಲಿ ಬಿಕ್ಕಟ್ಟು ನಿವಾರಣೆ ಆಗುವ ಯಶಸ್ಸಿನ ಹಾದಿ ಕಾಣಿಸಿದರೆ ಗಂಡಾಂತರವನ್ನು ಮೈಮೇಲೆ ಹಾಕಿಕೊಂಡದ್ದೂ ಸಾರ್ಥಕವಾಗಬಹುದೆಂದು ನಾನು ತರ್ಕಿಸಿದೆ. ಡಾ. ಹಿರೇಮಠರೂ ನನ್ನ ನಿಲುವನ್ನು ಒಪ್ಪಿದರು. ‘ನಾನು ಇದೀಗ ಬಂದೆ’ ಎಂದು ಮೊಯಿಲಿಯವರು ನಮ್ಮೆದುರು ಹೇಳಿ, ಒಳಗೆ ಹೋಗಿ ಎರಡು ನಿಮಿಷಗಳಲ್ಲಿ ನಮ್ಮ ಬಳಿಗೆ ಬಂದರು. ‘ಮುಖ್ಯಮಂತ್ರಿಗಳೊಂದಿಗೆ ನಿಮ್ಮ ಭೆಟ್ಟಿ ಈಗ ಸರಿಯಾಗಿ 11.45 ಕ್ಕೆ ಆಗಬೇಕೆಂದು ಗೊತ್ತಾಗಿದೆ. ಮುಖ್ಯಮಂತ್ರಿಗಳು ಸಮಯ ಕೊಟ್ಟಿದ್ದಾರೆ. ನೀವು ಅವರ ನಿವಾಸಕ್ಕೆ ತೆರಳುವ ಬಗೆಗೆ ಏರ್ಪಾಟು ಮಾಡುತ್ತೇನೆ’ ಎಂದು ಅವರು ನಮಗೆ ಹೇಳಿದರು. ನಮ್ಮನ್ನು ತಮ್ಮಲ್ಲಿಗೆ ಕರೆತರಲು ಗುಂಡೂರಾಯರು ಏರ್ಪಾಟು ಮಾಡಿದ್ದರು. ಇದೆಲ್ಲವನ್ನೂ ಯಾರಿಗೂ ತಿಳಿಸಬಾರದು, ಸಂಪೂರ್ಣವಾಗಿ ರಹಸ್ಯವಾಗಿ ಇಡಬೇಕು ಎಂದು ಮೊಯಿಲಿ ನಮಗೆ ತಿಳಿಸಿದ್ದರು. ಅವರೆದುರು ಮುಖ್ಯಮಂತ್ರಿಗಳು ಆ ರೀತಿ ತಿಳಿಸಿದ್ದರೆಂದು ತೋರುತ್ತದೆ. ‘ಈ ರಹಸ್ಯ ಕಾಪಾಡುವುದು ನಿಮಗಿಂತಲೂ ನಮಗೆ ಹೆಚ್ಚು ಅಗತ್ಯವಿದೆ’ ಎಂದು ನಾನು ಅವರಿಗೆ ತಿಳಿಸಿದೆ.

ಮೊಯಿಲಿಯವರು ಒಂದು ಸ್ಥಳಕ್ಕೆ ಹೋಗಲು ನಮಗೆ ಸೂಚನೆ ಕೊಟ್ಟರು. ನೀವು 11.30 ಗಂಟೆಗೆ ಸರಿಯಾಗಿ ಅಲ್ಲಿ ಇರಬೇಕು. ನಿಮ್ಮನ್ನು ಒಬ್ಬರು ಕಪ್ಪುಗಾಜು ಇರುವ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ನಮ್ಮನ್ನು ಕರೆದೊಯ್ಯಲು ಬಂದವರು ಕಾರ್ತಿಕೇಯನ್ ಆಗಿದ್ದರು. ಅವರು ಈ ಮುಂಚೆ ಧಾರವಾಡದಲ್ಲಿ ಎಸ್‌ಪಿ ಆಗಿದ್ದರು. ನಾವು ಯಾರಿಗೂ ಗೊತ್ತಾಗದಂತೆ ಆ ಕಾರಿನಲ್ಲಿ ಕುಳಿತು ಮುಖ್ಯಮಂತ್ರಿಗಳ ನಿವಾಸಕ್ಕೆ ಪಕ್ಕದ ಗೇಟಿನಿಂದ ಪ್ರವೇಶ ಮಾಡಿದೆವು. ಭೇಟ್ಟಿಗೇನೋ ಒಪ್ಪಿದ್ದಾಯಿತು. ಆದರೆ ನನ್ನ ಮನಸ್ಸಿನಲ್ಲಿ ಬಹುದೊಡ್ಡ ಅಲ್ಲೋಲ, ಕಲ್ಲೋಲ ಎದ್ದಿದ್ದಿತು. ನಾನು ಕಾರಿನಲ್ಲಿ ಕುಳಿತಾಗ ಭೆಟ್ಟಿ ಯಾವ ರೀತಿ ಆಗುವುದೋ ಎಂದು ನಾನು ನನ್ನೊಳಗೇ ದಿಗಿಲು ಪಟ್ಟುಕೊಂಡಿದ್ದೆ. ಯಾಕೆಂದರೆ ನಾನು ಗುಂಡೂರಾಯರ ಆಡಳಿತದ ಅತ್ಯುಗ್ರ ಟೀಕಾಕಾರನಾಗಿದ್ದೆ. ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಅವರನ್ನು ನಾನು ಅದೇ ಪ್ರಥಮ ಸಲ ಭೆಟ್ಟಿ ಆಗುತ್ತಿದ್ದುದು.

ನನ್ನ ಮನಸ್ಸಿನಲ್ಲಿ ಒಮ್ಮೆಲೇ ಅನೇಕ ಭಾವನೆಗಳು ನುಗ್ಗಿ ಬಂದವು. ಮೂರು ಕಾಗದಗಳನ್ನು ನಾನು ಈ ಹಿಂದೆ ಬರೆದಿದ್ದರೂ ಅವರು ನನಗೆ ಭೆಟ್ಟಿ ನೀಡಿರಲಿಲ್ಲ. ಆ ವಿಚಾರ ನನ್ನ ಮನಸ್ಸಿನಲ್ಲಿ ಕೊರೆಯುತ್ತಲೇ ಇದ್ದಿತು. ಆದರೆ ಕನ್ನಡಕ್ಕೆ ಅಗ್ರಮಾನ್ಯತೆ ತಂದುಕೊಡುವ ವಿಚಾರದಲ್ಲಿ ನಾನು ಯಾರೊಂದಿಗಾದರೂ ಚರ್ಚೆ ನಡೆಸಲು ಸಿದ್ಧನಾಗಿದ್ದೆ. ಗುಂಡೂರಾಯರನ್ನು ನಾನು ಭೆಟ್ಟಿಯಾದಾಗ ನನ್ನ ಮನಸ್ಸಿನ ಬೆದರಿಕೆಗಳು ನಿರಾಧಾರವಾದವುಗಳೆಂದು ನನಗೆ ಅನಿಸಿತು. ಅವರು ನನ್ನ ಹಾಗು ತಮ್ಮ ನಡುವೆ ಏನೂ ಆಗಿಲ್ಲವೆಂಬಂತೆ ಒಳ್ಳೆಯ ಮನೋಭಾವನೆಯಿಂದ ನಡೆದುಕೊಂಡರು. ಗೋಕಾಕ್ ವರದಿಯ ಬಗೆಗೆ, ಕನ್ನಡ ಜನರಿಗೆ ಅದರ ಬಗೆಗೆ ಇರುವ ಉತ್ಕಟ ಆಕಾಂಕ್ಷೆಗಳ ಬಗೆಗೆ, ಅವರೊಂದಿಗೆ ಮುಕ್ತ ಮನಸ್ಸಿನ ಚರ್ಚೆ ನಡೆಯಿತು. ನಾವು ಅವರೊಂದಿಗೆ ಒಂದು ಗಂಟೆಗೂ ಮೇಲ್ಪಟ್ಟು ಕಾಲ ಮಾತುಕತೆ ನಡೆಸಿದ್ದೆವು. ಆ ಮಾತುಕತೆಗಳಲ್ಲಿ ಹೆಚ್ಚಿನದೇನೂ ಆಗಲಿಲ್ಲ. ಒಬ್ಬರನ್ನೊಬ್ಬರು ಶೋಧಿಸುವ ರೀತಿಯಲ್ಲಿ ನಮ್ಮ ಮಾತುಕತೆ ನಡೆದವು. ಕುಸ್ತಿಯ ಕಣದಲ್ಲಿ ಜಟ್ಟಿಗಳು ಕೈ ಕೈ ಮುಟ್ಟಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ ರೀತಿಯಲ್ಲಿ ನಮ್ಮ ಮಾತುಕತೆ ನಡೆದಿದ್ದವು. ತಮ್ಮ ಐದು ಜನ ಮಂತ್ರಿಗಳೊಂದಿಗೆ, ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಲು ಅವರು ನಮಗೆ ತಿಳಿಸಿದರು. ಕನ್ನಡಕ್ಕೆ ಅಗ್ರಮಾನ್ಯತೆ ಇರುವ ಪ್ರಶ್ನೆ ಅದು. ಯಾವುದೇ ಸಂಧಾನಕ್ಕೆ ಒಳಪಡಬೇಕಾದ ವಿಷಯವೇ ಅಲ್ಲ ಎನ್ನುವುದನ್ನು ನಾವು ಅವರಿಗೆ ಸ್ಪಷ್ಟಪಡಿಸಿದೆವು. ಅವರು ನಮಗೆ ಐದು ಜನ ಮಂತ್ರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸುವ ವಿಚಾರವೊಂದನ್ನೇ ತಿಳಿಸಿದ್ದರೆ ನಮಗೆ ನಾಲ್ಕನೆಯ ತಾರೀಖಿನ ಸಭೆಯ ಬಾಗಿಲುಗಳು ಮುಚ್ಚಿಯೇ ಇರುತ್ತಿದ್ದವು. ಸ್ವಾಭಿಮಾನಿಗಳಾದ ನಾವು ಅಲ್ಲಿ ಹೆಜ್ಜೆ ಇರಿಸುವುದು ಸಾಧ್ಯವೇ ಇರಲಿಲ್ಲ.

ನಾವು ಮೇಲಕ್ಕೆ ಏಳುತ್ತಿದ್ದಂತೆಯೇ ಗುಂಡೂರಾಯರು, ‘ನಾವು ನೀವು ಹೇಗೂ ನಾಳೆಯ ಸಭೆಯಲ್ಲಿ ಭೆಟ್ಟಿಯಾಗುತ್ತೇವೆ’ ಎಂದು ಹೇಳುತ್ತಿದ್ದಂತೆ, ನಾನು ‘ನಮ್ಮ ನಿಮ್ಮ ಭೆಟ್ಟಿ ನಾಳೆ ಆಗುವುದಿಲ್ಲ. ನಮ್ಮ ಕೇಂದ್ರ ಕನ್ನಡ ಕ್ರಿಯಾ ಸಮಿತಿಗೆ ನೀವು ಪ್ರತ್ಯೇಕ ಭೆಟ್ಟಿ ಕೊಟ್ಟಿಲ್ಲ. ಆದ್ದರಿಂದ ನಾವು, ನೀವು ಕರೆದಿರುವ ನಾಳಿನ ಸಭೆಗೆ ಬರುವುದಿಲ್ಲ’ ಎಂದು ಹೇಳಿದೆ. ‘ನಮ್ಮನ್ನು ಮೊದಲು ಪ್ರತ್ಯೇಕವಾಗಿ ಕರೆದಿದ್ದರೆ ಬರುತ್ತಿದ್ದೆವು’ ಎಂದು ನಾನು ಅವರಿಗೆ ತಿಳಿಸಿದೆ.

‘ನಾಳೆ ನನಗೆ ಇಡೀ ದಿನ ತೆರಪಿಲ್ಲದಷ್ಟು ಕೆಲಸ’ ಎನ್ನುತ್ತ ಅವರು ಕೊಂಚವೂ ಆಲೋಚಿಸದಂತೆ ಮಾಡಿ, ‘ನಾಳೆ ಎಂಟು ಗಂಟೆಗೆ ಬರಲು ನಿಮಗೆ ಆದೀತೇ’ ಎಂದು ಕೇಳಿದರು. ನಮಗೆ ಅದಕ್ಕಿಂತಲೂ ಹೆಚ್ಚು ಸಂತೋಷದಾಯಕವಾದುದು ಬೇರೆ ಯಾವುದೂ ಇರಲಿಲ್ಲ. ನಾನು ತಕ್ಷಣವೇ ‘ಆಗಲಿ’ ಎಂದು ಒಪ್ಪಿಕೊಂಡೆ. ‘ಎಷ್ಟು ಜನ ಬರುತ್ತೀರಿ’ ಎಂದು ಅವರು ಕೇಳಿದರು. ಹತ್ತು ಜನ ಎನ್ನುವ ಮಾತು ನನ್ನ ಬಾಯಿಂದ ಥಟ್ಟನೆ ಬಂದಿತು. ಹಾಗಿದ್ದರೆ, ನೀವು ಬೆಳಗಿನ ಉಪಹಾರಕ್ಕೆ ಬನ್ನಿ. ಅಲ್ಲಿಯೇ ಮಾತನಾಡೋಣ ಎಂದು ಗುಂಡೂರಾಯರು ಹೇಳಿದರು. ಇದಾದ ಮೇಲೆ ನನ್ನ ಮನಸ್ಸಿಗೆ ಎಷ್ಟೋ ಹಗುರೆನಿಸಿತು. ‘ಇದು ಸಾಮಾನ್ಯ ಕೆಲಸವಲ್ಲ. ಬಹುದೊಡ್ಡ ಸಾಧನೆ’ ಎಂದು ಹಿರೇಮಠರು ಹರ್ಷತುಂಬಿದ ಹೃದಯದಿಂದ ನನಗೆ ಹೇಳಿದರು. ಬೆಟ್ಟದಂತೆ ನಮ್ಮ ಮೇಲೆ ಕವಿದುಕೊಂಡಿದ್ದ ನಿರಾಶೆ ಮಂಜಿನಂತೆ ಕರಗಿ ಹೋಗಿದ್ದಿತು. ‘ಮಂತ್ರಿ ಹಾಗೂ ಕಾರ್ಯದರ್ಶಿಗಳೊಂದಿಗೆ ಮಾತುಕತೆ ನಡೆಸಿರಿ. ಈ ವಿಚಾರ ಯಾರಿಗೂ ತಿಳಿಸಬೇಡಿ’ ಎಂದು ಗುಂಡೂರಾಯರು ನಮಗೆ ಪುನಃ ಜ್ಞಾಪಿಸಿದರು. ಅಂದು ಮಧ್ಯಾಹ್ನ ಮೂರು ಗಂಟೆಗೆ ನಮ್ಮ ಕಾರ್ಯಕರ್ತರ ಸಭೆಗೆ ನಾವು ಭಾರೀ ಲವಲವಿಕೆಯಿಂದ ಹೋದೆವು. ಅಲ್ಲಿ ಸೇರಿದ್ದ ನಮ್ಮ ಸ್ನೇಹಿತರು ಭಾರೀ ಉದ್ವೇಗದಿಂದ ಮಾತನಾಡುತ್ತಿದ್ದರು. ಮುಖ್ಯಮಂತ್ರಿಗಳಿಂದ ನಮಗೆ ಆಮಂತ್ರಣ ಬರಲಿಲ್ಲ. ಪ್ರತ್ಯೇಕ ಭೇಟಿಯನ್ನು ನಿರಾಕರಿಸಿದ್ದಾರೆ. ಪ್ರತ್ಯೇಕ ಆಮಂತ್ರಣ ಇಲ್ಲದೆ ನಾವು ಅಲ್ಲಿಗೆ ಹೋಗುವುದು ಸಾಧ್ಯವೇ ಇಲ್ಲ. ಈಗ ಹೋರಾಟವನ್ನು ಉಗ್ರಗೊಳಿಸದೆ ಬೇರೆ ಗತ್ಯಂತರವೇ ಇಲ್ಲ. ಉಗ್ರ ಹೋರಾಟ ಹೂಡಿದರೇನೇ ಸರಕಾರ ಕಣ್ಣು ತೆರೆಯುತ್ತದೆ. ಆಂದೋಲನವನ್ನು ಈಗ ಇನ್ನೂ ಹೆಚ್ಚು ಚುರುಕುಗೊಳಿಸಬೇಕು.

ಆಗ ನಾನು ಸರಕಾರದಿಂದ ಆಮಂತ್ರಣ ಬಂದಿದೆಯೆಂದು ಸಭೆಗೆ ತಿಳಿಸಿದಾಗ, ನಮ್ಮ ಸ್ನೇಹಿತರಿಗೆಲ್ಲ ಸೋಜಿಗವೆನಿಸಿತು. ಯಾಕೆಂದರೆ ಪ್ರತ್ಯೇಕ ಭೆಟ್ಟಿಯನ್ನು ಸರಕಾರವು ಹಿಂದಿನ ದಿನವಷ್ಟೇ ತಿರಸ್ಕರಿಸಿದ್ದಿತು. ಸರಕಾರವು ನಮ್ಮನ್ನು ಭೆಟ್ಟಿಗೆ ಕರೆದಿದೆ ಎನ್ನುವ ಮಾತು ಅವರಿಗೆ ನಂಬುಗೆ ಎನಿಸಲಿಲ್ಲ. ‘ಎಲ್ಲಿ ಬಂದಿದೆ? ಯಾವಾಗ ಬಂದಿದೆ? ಯಾರಿಂದ ಬಂದಿದೆ? ಎಂದು ಅವರು ನನ್ನನ್ನು ಕೇಳಿದರು. ‘ಹೇಗೆ ಬಂದಿದೆ, ಯಾವಾಗ ಬಂದಿದೆ’ ಎನ್ನುವುದೊಂದೂ ಈಗ ಅಗತ್ಯವಿಲ್ಲ. ನೀವು ನನ್ನನ್ನು ಮುಂದಾಳು ಮಾಡಿಕೊಂಡು ಮುಂದೆ ನಿಲ್ಲಿಸಿದ್ದೀರೆಂದ ಮೇಲೆ, ಆ ಆಮಂತ್ರಣ, ಅಧ್ಯಕ್ಷನಾದ ನನಗೆ ಬಂದಿದೆ ಎನ್ನುವುದನ್ನು ನಿಮಗೆ ತಿಳಿಸುತ್ತೇನೆ’ ಎನ್ನುತ್ತ ನಾನು, ಮುಖ್ಯಮಂತ್ರಿಗಳೊಂದಿಗೆ ನಮ್ಮ ಭೆಟ್ಟಿ ಬೆಳಿಗ್ಗೆ ಎಂಟು ಗಂಟೆಗೆ ಏರ್ಪಟ್ಟಿದೆ ಎಂದು ಹೇಳಿದೆ. ಆ ಮಾತು ಹೇಳುತ್ತಿದ್ದಂತೆಯೇ ಅವರೆಲ್ಲರೂ ನನ್ನ ಹೇಳಿಕೆಯನ್ನು, ಕರತಾಡನ ಗಳೊಂದಿಗೆ ಸ್ವಾಗತಿಸಿದರು. ಪ್ರತಿಕೂಲವೆನಿಸಿದ್ದ ಮನಸ್ಸಿಗೆ ಒಮ್ಮೆಲೇ ಅನುಕೂಲವಾಗಿ ಪರಿಣಮಿಸಿ ದುದನ್ನು ತಿಳಿದು ಅವರಿಗೆಲ್ಲ ಭಾರೀ ಸಂತೋಷವೆನಿಸಿದ್ದಿತು. ಬೆಳಗ್ಗೆ ಎಂಟು ಗಂಟೆಗೆ ಹತ್ತು ಜನರೊಂದಿಗೆ ಬರಲು ತಿಳಿಸಿದ್ದಾರೆ ಎಂದು ನಾನು ಹೇಳಿದೊಡನೆಯೇ ನಮ್ಮ ಸ್ನೇಹಿತರ ಹೃದಯ ಹಿಗ್ಗಿತು.

ಒಬ್ಬೊಬ್ಬರೂ ತಮತಮಗೆ ಬೇಕೆನಿಸಿದವರ ಹೆಸರನ್ನು ಹೇಳತೊಡಗಿದರು. ಆಗ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಜೀ. ನಾರಾಯಣರು ಎದ್ದು ನಿಂತು, ಸ್ವಾಮೀ, ಇಲ್ಲಿ ನಾವು 150 ಜನ ಇದ್ದೇವೆ. ಒಬ್ಬೊಬ್ಬರೂ ಒಂದೊಂದು ಹೆಸರು ಹೇಳಿದರೆ ಅದು ನಮ್ಮನ್ನು ಯಾವ ಗುರಿಗೂ ಮುಟ್ಟಿಸುವುದಿಲ್ಲ. ನೀವು ನಮ್ಮ ಅಧ್ಯಕ್ಷರು. ನಮಗೆ ನಿಮ್ಮಲ್ಲಿ ವಿಶ್ವಾಸ ಇದೆ. ನೀವು ಯಾರನ್ನಾದರೂ ಹತ್ತು ಜನರನ್ನು ಕರೆದುಕೊಂಡು ಹೋಗಿ ಎಂದು ಹೇಳಿದರು. ಸಭೆಯಲ್ಲಿದ್ದವರು ಕರತಾಡನದಿಂದ ತಮ್ಮ ಒಪ್ಪಿಗೆ ಸೂಚಿಸಿದರು.

ನಾನು ಆಗ ಸಭೆಯಲ್ಲಿಯೇ ಕೆಲ ಸ್ನೇಹಿತರೊಂದಿಗೆ ಸಮಾಲೋಚನೆ ಮಾಡಿ, ಹತ್ತು ಜನರ ಹೆಸರನ್ನು ಆಯ್ದು ಆ ಹೆಸರುಗಳನ್ನು  ಸಭೆಯಲ್ಲಿಯೇ ಪ್ರಕಟಿಸಿದೆ. ಡಾ. ಪಾಟೀಲ ಪುಟ್ಟಪ್ಪ ತನಗೆ ಬೇಕಾದ ಕೆಲವರನ್ನು ಕರೆದುಕೊಂಡು ಹೋಗಿದ್ದಾನೆನ್ನುವ ಆಕ್ಷೇಪಣೆ ಬರಬಾರದೆಂದು ನಾನು ಈ ರೀತಿ ಮಾಡಿದ್ದೆ. ಆಂದೋಲನಕಾರರ ಮನೋಭಾವನೆ ಒಮ್ಮೆಲೇ ಉದಾಸೀನದಿಂದ ಉಲ್ಲಾಸಕ್ಕೆ ತಿರುಗಿದ್ದಿತು. ದುರ್ಗಮದಾರಿಯಿಂದ ನಾವು ಒಮ್ಮೆಲೇ ರಾಜಮಾರ್ಗಕ್ಕೆ ಬಂದು ಹತ್ತಿದಂತೆ ಆಗಿದ್ದಿತು. ಅಷ್ಟರಲ್ಲಿ ಹೊತ್ತು ಸರಿದು ಸಂಜೆ ಮೆಲ್ಲನೆ ಇಳಿಯತೊಡಗಿದ್ದಿತು. ನಾಳೆ ಸಭೆಯ ನಂತರ ಇನ್ನುಳಿದ ವಿಚಾರ ಎಂದು ಹೇಳಿ, ಡಾ. ಹಿರೇಮಠರೂ ನಾನು ಅವರನ್ನು ಬೀಳ್ಕೊಟ್ಟು ಅಲ್ಲಿಂದ ಎದ್ದೆವು. ಅವರಲ್ಲಿ ಅನೇಕರಿಗೆ ದಿಗಿಲು, ನನ್ನ ಬಗೆಗೆ ಅದು ಹೊಸ ಅನುಭವ. ಎಲ್ಲರೊಟ್ಟಿಗೆ ಮಾತಿನಲ್ಲಿ ತೊಡಗಿಕೊಂಡಿರುವ ಈ ಮನುಷ್ಯ ಇಂದೇಕೆ ಹೀಗೆ ಎಂದು ಅವರು ಅನುಮಾನ ಪಟ್ಟುಕೊಂಡಿರಲೂ ಸಾಕು. ಆದರೆ ಕೆಲಸ ಸುಸೂತ್ರವಾಗಿ ಸಾಗಿ ಸುಗಮವಾದ ಹಾದಿಯನ್ನು ಕಂಡುಕೊಳ್ಳಲು ರಹಸ್ಯವನ್ನು ಕಾಯ್ದುಕೊಂಡು ಹೋಗುವುದು ತುಂಬ ಅಗತ್ಯವಾಗಿದ್ದಿತು. ಮಾತುಕತೆಗಳು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದ್ದವು.

ನಾವು ಯಾವ ಮಾತುಕತೆಯನ್ನು ಆಗಲಿ, ಯಾರೊಂದಿಗೆ ನಡೆಸಿದರೂ ಅದು ಕ್ರಿಯಾ ಸಮಿತಿಯವರು ನಮಗೆ ಹಾಕಕೊಟ್ಟ ಚೌಕಟ್ಟಿನಲ್ಲಿಯೇ ಇರಬೇಕಾಗಿದ್ದಿತು. ನಿಷ್ಣಾತ ವಕೀಲನು ತನ್ನ ಪಕ್ಷಕಾರನ ವಾದವನ್ನು ಮಂಡಿಸುವಂತೆ ನಾವು ನಮ್ಮ ನಿಲುವಿಗೆ ಅವರನ್ನು ಪರವರ್ತಿಸುವ ಕಾರ್ಯ ಕೈಕೊಂಡಿದ್ದೆವು. ಮೊಯಿಲಿಯವರ ಮನೆಗೆ ನಾವು ಹೋದಾಗ, ಅಲ್ಲಿ ಮೊಯಿಲಿ, ಲೋಕೋಪಯೋಗಿ ಮಂತ್ರಿ ಕಾಗೋಡು ತಿಮ್ಮಪ್ಪ, ಶಿಕ್ಷಣ ಮಂತ್ರಿ ಶಂಕರರಾವ್, ಸರಕಾರದ ಮುಖ್ಯ ಕಾರ್ಯದರ್ಶಿ ಎಂ. ವೆಂಕಟೇಶನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಅನಗೋಳ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ರವೀಂದ್ರ ಇದ್ದರು. ವೆಂಕಟೇಶನ್‌ರನ್ನು ನಾನು ರಾಜ್ಯ ಪುನರ್ಘಟನೆಯ ಪೂರ್ವದಿಂದಲೂ ಬಲ್ಲವನಾಗಿದ್ದೆ. ಅವರು ಮುಂಬೈ ರಾಜ್ಯದಿಂದ  ನೂತನವಾಗಿ ಬಂದವರು. ಅವರು ಬಹುದೊಡ್ಡ ಕನ್ನಡ ಅಭಿಮಾನಿಗಳು. ತೀ.ನಂ. ಶ್ರೀಯವರ ಶಿಷ್ಯರು. ಇನ್ನುಳಿದವರೊಂದಿಗೂ ನನ್ನ ಸಂಬಂಧ ನಿಕಟವಾಗಿದ್ದಿತು. ಮೊಯಿಲಿಯವರೊಂದಿಗೆ ನನಗೆ ಹೆಚ್ಚಿನ ಮೈತ್ರಿ ಇದ್ದಿತು. ಕಾಗೋಡು ತಿಮ್ಮಪ್ಪನವರನ್ನು ನಾನು ಗೋಪಾಲಗೌಡರ ಕಾಲದಿಂದಲೂ ಬಲ್ಲವನಾಗಿದ್ದೆ. ಗುಬ್ಬಿ ಶಂಕರರಾಯರಂತೂ ಆತ್ಮೀಯರೆನ್ನುವ ಸಲುಗೆಯಲ್ಲಿಯೇ ಬೆಳೆದವರು. ಮೂವರೊಂದಿಗೂ ನಾನು ಪ್ರತ್ಯೇಕವಾಗಿ ಹಾಗೂ ಒಟ್ಟಾಗಿ ಮಾತನಾಡುತ್ತಿದ್ದೆವು. ನಮ್ಮಲ್ಲಿ ಬಹಳಷ್ಟು ಅಭಿಪ್ರಾಯ … ಇರುವುದನ್ನು ಕಂಡುಕೊಂಡಿದ್ದೆ.

ಆ ಸಭೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯದರ್ಶಿ ಅನಗೋಳರದೇ ದೊಡ್ಡಬಾಯಿ. ಏಪ್ರಿಲ್ 19ರ ಸೂತ್ರವನ್ನು ಅವರೇ ನಿರೂಪಿಸಿದರೆಂದು ಹೇಳಲಾಗುತ್ತಿತ್ತು. ಅಲ್ಪಸಂಖ್ಯಾತರ ಪ್ರಶ್ನೆಯನ್ನೆತ್ತಿ ಅವರು ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಿದರು. ಅವರಿಗೆ ನಾನು ಸ್ಪಷ್ಟವಾಗಿ ಹೇಳಬೇಕಾಯಿತು. ‘ನೀವು ಬೀದಿಯಲ್ಲಿ ಹೋಗುವ ಜನರೊಂದಿಗೆ ಮಾತನಾಡಿದಂತೆ ನಮ್ಮೊಂದಿಗೆ ಮಾತನಾಡಬೇಡಿ. ಸಂವಿಧಾನದ ಆತಂಕದ … ನಮಗೆ ತೋರಿಸಬೇಕು. ಸಂವಿಧಾನದಲ್ಲಿ ನೀವು ಹೇಳುವ ಅಗತ್ಯವೇನೂ ಇಲ್ಲ. ನೀವು ಹೆದರಿಸುತ್ತಿರುವ ಆತಂಕ ಎಲ್ಲಿದೆ ತೋರಿಸಿರಿ. ಭಾಷಾ ಸಂಖ್ಯಾತರು ತಮ್ಮ ಪ್ರಾಥಮಿಕ ಶಾಲೆಯ ಕೊನೆಯ ಹಂತದವರೆಗೆ ತಮ್ಮ ಮಾತೃಭಾಷೆಯ ಮೂಲಕವೇ ಶಿಕ್ಷಣ ಪಡೆಯುವ ಹಕ್ಕುಳ್ಳವರಾಗಿದ್ದಾರೆಂದು ಸಂವಿಧಾನದ 351 ನೆಯ ಕಲಮಿನಲ್ಲಿ ಹೇಳಿದೆ. ಅದನ್ನೇನೂ ನಾವು ವಿರೋಧಿಸಿಲ್ಲವಲ್ಲ? ನಮ್ಮ ಮಂತ್ರಿಗಳ ಸ್ಥಿತಿ ಏನಾಗಿತ್ತೆಂದರೆ, ಅವರು ನಾನು ಹೇಳಿದಾಗ ಒಪ್ಪಿಕೊಳ್ಳು ತ್ತಿದ್ದರು. ಆನಗೋಳ ಏನಾದರೂ ಹೇಳಿದರೆ ಸುಮ್ಮನಾಗುತ್ತಿದ್ದರು. ಅವರು ಬಾಯಿ ತೆರೆದರೆ, ಆ ಮಂತ್ರಿಗಳಿಗೆ ಗರುಡನ ಗೆರೆ ತೋರಿಸಿದಂತೆ ಆಗುತ್ತಿತ್ತೊ ಏನೋ, ಯಾರು ಬಲ್ಲರು?

ಆಗ ನಾನು ಆ ಮಂತ್ರಿಗಳನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿ ಅವರ ಮರ್ಮಕ್ಕೆ ಹತ್ತುವಂಥ ಮಾತ್ತೊಂದನ್ನು ಕೇಳಿದೆ. ‘ಮಂತ್ರಿ ನೀವೋ? ಆನಗೋಳರೋ?  ನೀವು ನಿರ್ಣಯ ಕೈಕೊಳ್ಳಬೇಕು. ಅದನ್ನು ಅವರು ಅನುಷ್ಠಾನಕ್ಕೆ ತರಬೇಕು. ಈ ಮಾತಿನಿಂದ ಅವರ ಮನಸ್ಸಿನ ಮೇಲೆ ಪರಿಣಾಮವಾಯಿತು. ಅವರು ತಕ್ಷಣವೇ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ‘ಇಲ್ಲ, ನಾವೇ ನಿರ್ಣಯ ಕೈಕೊಳ್ಳುತ್ತೇವೆ’ ಎಂದರು. ನಮ್ಮ ಮಾತುಕತೆಗಳು ಮಧ್ಯರಾತ್ರಿ ಮಿಕ್ಕುವವರೆಗೂ ಮುಂದುವರಿದವು. ಗೋಕಾಕ್ ವರದಿಯ ಎಲ್ಲ ಮುಖಗಳನ್ನು ನಾವು ಚರ್ಚಿಸಿದ್ದೆವು. ಆ ಸಭೆ ಬಹಳಷ್ಟು ತಿಳಿವಳಿಕೆ ತಂದುಕೊಳ್ಳಲು ಸಹಾಯಕವೆನಿಸಿದ್ದಿತು. ನಾವು ಸಭೆಯಲ್ಲಿ ಏನು ಹೇಳಿದ್ದೆವು, ಹೇಗೆ ಹೇಳಿದೆವು ಎನ್ನುವುದು ಇಲ್ಲಿ ಪ್ರಸ್ತುತವಲ್ಲ. ಆದರೆ, ಕ್ರಿಯಾ ಸಮಿತಿಯು ವಹಿಸಿಕೊಟ್ಟ ಕೆಲಸವನ್ನು ನಾವು ನಿರ್ವಂಚನೆಯಿಂದ ನಿರ್ವಹಿಸಿದ್ದೆವು.

ಆ ಸಮಗ್ರ ಮಾತುಕತೆಗಳಲ್ಲಿ ಮೊಯಿಲಿಯವರು ಬಹು ಉಪಯುಕ್ತವಾದ ಪ್ರಯೋಜನಕಾರಿ ಪಾತ್ರ ಆಡಿದ್ದರೆನ್ನುವುದನ್ನು  ಮಾತ್ರ ನಾನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಅವರು ಅಂದು ನಮಗೆ ಸಿಕ್ಕದೇ ಹೋಗಿದ್ದರೆ ನಮ್ಮ ನಿಲುವನ್ನು ಸರಕಾರಕ್ಕೆ ತಿಳಿಸಿಕೊಡುವ ಸಂಧಿಯೇ ತಪ್ಪಿ ಹೋಗುತ್ತಿತ್ತು. ಕನ್ನಡ ಭಾಷೆಯು ಯಾರು ಯಾರಿಂದಲೋ ತನಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತದೆ. ಕನ್ನಡದ ಕೆಲಸ ಮಾಡಿಸುವುದಕ್ಕೆ ಮೌಯಿಲಿಯವರು ಬಹಳ ಉಪಯುಕ್ತ ಮಾಧ್ಯಮವೆನಿಸಿದರು. ಮರುದಿನ ಬೆಳಿಗ್ಗೆ ಎಂಟು ಗಂಟೆಗೆ, ಡಾ. ರಾಜಕುಮಾರ್ ಸಮೇತ ನಾವು ಹತ್ತು ಜನ ಮುಖ್ಯಮಂತ್ರಿ ಗುಂಡೂರಾಯರ ನಿವಾಸಕ್ಕೆ ತೆರಳಿದೆವು. ಮುಖ್ಯಮಂತ್ರಿಗಳು ತಮ್ಮ ಗೃಹ ಕಚೇರಿಯಾದ ಕೃಷ್ಣಾದಲ್ಲಿ ಈ ಉಪಾಹಾರ ಸಭೆ ಕರೆದಿದ್ದರು. ಮೊಯಿಲಿ, ಗುಬ್ಬಿ ಶಂಕರರಾವ್ ಮೊದಲಾದ ಮಂತ್ರಿಗಳೂ ಅಲ್ಲಿಗೆ ಬಂದಿದ್ದರು. ಸಭೆಯಲ್ಲಿ ಮೊದಲಿಗೆ ನಾನು ಗೋಕಾಕ್ ವರದಿಯನ್ನು ನಮ್ಮ ಆಂದೋಲನಕ್ಕೆ ಕಾರಣರಾದ ಸಂಗತಿಗಳನ್ನು ನಿವೇದಿಸಿ, ಅಲ್ಪಸಂಖ್ಯಾತರಿಗೆ ಯಾವ ರೀತಿಯಿಂದಲೂ ತೊಂದರೆ ಆಗದಿರುವ, ಕನ್ನಡಕ್ಕೆ ಪ್ರಾಧಾನ್ಯತೆ ತಂದುಕೊಡುವ ಗೋಕಾಕ್ ಭಾಷಾ ಸೂತ್ರವನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯ ಪಡಿಸಿದೆ. ನಾವು ಪ್ರತಿಪಾದಿಸುತ್ತಿದ್ದ 125, 100 ಹಾಗೂ 75 ಅಂಕಗಳು ಇರಬೇಕೆನ್ನುವ ತತ್ವವನ್ನು ಸರಕಾರ ಸ್ವೀಕರಿಸಬೇಕೆಂದೂ ಕೇಳಿೆ. 125 ಅಂಕಗಳು ಕನ್ನಡಕ್ಕೋಸುಗ ಕನ್ನಡ ರಾಜ್ಯದಲ್ಲಿ ಎಲ್ಲರಿಗೂ ಕಡ್ಡಾಯ ವೆನಿಸಬೇಕು. 100 ಅಂಕಗಳ ಇಂಗ್ಲೀಷು ಕನ್ನಡ ಮಾತೃಭಾಷೆ ಉಳ್ಳವರಿಗೆ, 100 ಅಂಕಗಳು ಕನ್ನಡೇತರರಿಗೆ ಅವರ ಮಾತೃಭಾಷೆಗೋಸುಗ, 75 ಅಂಕಗಳು ಕನ್ನಡಿಗರಿಗೆ ಸಂಸ್ಕೃತ ಹಿಂದಿಗೋಸುಗ, ಮಿಕ್ಕುಳಿದವರಿಗೆ ಇಂಗ್ಲೀಷಿಗೋಸುಗ, ಈ ರೀತಿ ಸೂತ್ರವನ್ನು ಒಪ್ಪಬೇಕೆಂದು ನಾವು ಕೇಳಿದ್ದೆವು.

ಉಪಾಹಾರ ತೆಗೆದುಕೊಳ್ಳುತ್ತ ಬೇರೆಯವರೂ ಮಾತನಾಡಿದರು. ಈ ಮಾತು ಕತೆಗಳಿಂದ ವಾತಾವರಣ ಬಹಳಷ್ಟು ತಿಳಿಯಾಯಿತು. ಆಗ ಗುಂಡೂರಾಯರು, ‘ಈಗ ನಾವೆಲ್ಲರೂ ವಿಧಾನಸೌಧದಲ್ಲಿಯ ಸಭೆಗೆ ಹೋಗೋಣ’ ಎಂದು ಹೇಳಿದರು. ಆ ಸಭೆಗೆ ಹೋಗುವುದಕ್ಕೆ ನಮ್ಮ ಅಭ್ಯಂತರವೇನೂ ಇರಲಿಲ್ಲ. ಸಂತೋಷದ ಮನೋಭಾವನೆಯಿಂದ ನಾವೆಲ್ಲರೂ ಹೊರಗೆ ಬಂದು, ನಮ್ಮನ್ನು ಕರೆದೊಯ್ಯುವ ಕಾರುಗಳಿಗೋಸುಗ ಕಾಯ್ದು ನಿಂತಿದ್ದೆವು. ಮುಖ್ಯಮಂತ್ರಿ ಗುಂಡುರಾಯರು ತಮ್ಮ ಕಾರನ್ನು ಏರುತ್ತಿದ್ದಂತೆ, ತಮ್ಮೊಂದಿಗೆ ಬರುವಂತೆ ನನ್ನನ್ನೂ ಕರೆದರು. ನಾನೂ ಅವರ ಕಾರಿನಲ್ಲಿ ಕುಳಿತೆ. ಕಾರು ಅವರ ನಿವಾಸದಿಂದ ವಿಧಾನಸೌಧದ ಕಡೆಗೆ ಚಲಿಸತೊಡಗಿತು. ಆಗ ಗುಂಡೂರಾಯರು, ಒಮ್ಮೆಲೇ ನನ್ನ ಕೈ ಹಿಡಿದು, ‘ನೀವು ಈ ಆಂದೋಲನ ಮುಗಿಸಬೇಕು’ ಎಂದು ಕೇಳಿದರು.

ನಾನು ಅವರಿಗೆ ಹೇಳಿದೆ- ಈ ಆಂದೋಲನವನ್ನು ಒಂದು ನಿಮಿಷ ಕೂಡ ಹೆಚ್ಚು ಮುಂದುವರಿಸಬೇಕೆನ್ನುವ ಇಷ್ಟ ನನಗೆ ಇಲ್ಲ. ಸಾಧ್ಯವಾದರೆ ಅದನ್ನು ನಾನು ಈಗ, ಈ ಕ್ಷಣವೇ ನಿಲ್ಲಿಸಬೇಕೆಂದಿದ್ದೇನೆ. ಆದರೆ, ಅದನ್ನು ನನ್ನೊಬ್ಬನಿಂದಲೇ ನಿಲ್ಲಿಸುವುದಕ್ಕೆ ಆಗುವುದಿಲ್ಲ. ಅದನ್ನು ನಿಲ್ಲಿಸಲು ನಿಮ್ಮ ಸಹಕಾರವೂ ಬೇಕು. ನೀವು ನಮ್ಮ ಬೇಡಿಕೆ ಒಪ್ಪಿದರೆ ಅದು ತಕ್ಷಣವೇ ನಿಲ್ಲುತ್ತದೆ. ನಮ್ಮ ಬೇಡಿಕೆಯಲ್ಲಿ ಸರಕಾರ ಒಪ್ಪದೇ ಇರುವಂಥದೇನೂ ಇಲ್ಲ. ಈ ಮಾತನ್ನು ಕೇಳಿದ ಗುಂಡೂರಾಯರು, ‘ಅಲ್ಪಸಂಖ್ಯಾತರ ಪ್ರಶ್ನೆ ನನ್ನನ್ನು ಕಾಡಿಸುತ್ತಿದೆ’ ಎಂದು ಹೇಳಿದರು. ಆಗ, ನಾನು ಗುಂಡೂರಾಯರಿಗೆ ಹೇಳುವ ಒಂದು ಮಾತು ತಕ್ಷಣವೇ ಹೊಳೆಯಿತು. ತಿಳಿಸಿದೆ: ‘ನೀವು ನಮ್ಮ ಸೂತ್ರಕ್ಕೆ ಒಪ್ಪಿಕೊಳ್ಳಿ. ನಿಮ್ಮನ್ನು ಸಮಾಧಾನ ಪಡಿಸುವ ಒಂದು ಪರಿಹಾರ ನನ್ನ ಬಳಿ ಇದೆ. ನಾವು ಗೋಕಾಕ್ ವರದಿ ಪರವಾಗಿ ಆಂದೋಲನ ಹೂಡಿದವರು. ನಾವು ಗೆಲ್ಲಬೇಕು. ನೀವು ಸರಕಾರ, ನೀವು ಸೋಲಬಾರದು. ಇಬ್ಬರಿಗೂ ಗೌರವ ತರುವಂಥ ಪರಿಹಾರವನ್ನು ನಾನು ಸೂಚಿಸುತ್ತೇನೆ. ನನ್ನ ಮಾತಿನಿಂದ ಗುಂಡೂರಾಯರಿಗೆ ಕುತೂಹಲವೆನಿಸಿತು. ಸೂಚಿಸುವ ಪರಿಹಾರ ಯಾವುದು ಎಂದು ಕೇಳಿದರು. ನಾನು ಮುಂಚಿತವಾಗಿ ಆಲೋಚಿಸಲಿಲ್ಲದ ಒಂದು ಪರಿಹಾರ ನಮಗೆ ಆಗ ತಟ್ಟನೆ ಹೊಳೆದಿದ್ದಿತು. ‘ಕನ್ನಡ 125 ಅಂಕ ಎನ್ನುವುದು ಭಾಷಾ ಅಲ್ಪಸಂಖ್ಯಾತರಿಗೆ ತೊಂದರೆಯಾಗುತ್ತದೆ. ನೀವು ಅವರಿಗೆ ಐದು ವರ್ಷಗಳವರೆಗೆ 15 ಕೃಪಾಂಕಗಳನ್ನು ಕೊಡಬೇಕೆಂದು ನಾನು ಹೇಳುತ್ತೇನೆ. ನಾನು ಐದು ವರ್ಷ ಎಂದು ಹೇಳಿದರೂ, ನೀವು ನಿಮ್ಮ ಔದಾರ್ಯದಿಂದ ಹತ್ತು ವರ್ಷಗಳ ಕಾಲ ಕೊಟ್ಟರೂ ನಮ್ಮ ಅಭ್ಯಂತರ ಇಲ್ಲ’

ಈ ಮಾತು ನನ್ನ ಬಾಯಿಂದ ಬರುತ್ತಲೂ, ಗುಂಡೂರಾಯರು ಒಮ್ಮೆಲೇ ಉತ್ಸಾಹಿತರಾಗಿ, ‘ನಮಗೆ ಪರಿಹಾರ ಸಿಕ್ಕಿತು’ ಎಂದು ಹೇಳಿ ನನ್ನ ಕೈ ಕುಲುಕಿದರು. ಅಷ್ಟರಲ್ಲಿ ವಿಧಾನಸೌಧದ ಪಶ್ಚಿಮದ ದ್ವಾರ ಬಂದಿತು. ‘ಇನ್ನೇನು ಮುಗಿಯಿತಲ್ಲ’ ಎನ್ನುತ್ತ ಗುಂಡೂರಾಯರು ಕಾರಿನಿಂದ ಇಳಿದರು. ದಾಟಬೇಕಾದ ಕೊನೆಯ ಆತಂಕವನ್ನು ದಾಟಿದ ಆನಂದದಿಂದ ನಾನು ವಿಧಾನಸೌಧದ ಲಿಫ್ಟ್ ಏರಿದಾಗ ಗೆಲುವಿನ ತುತ್ತ ತುದಿಗೇ ಹೋಗಿ ಮುಟ್ಟಿದ ಸಂತೋಷ ನನಗೆ ಆಗಿದ್ದಿತು. ಮೌಂಟ್ ಎವರೆಸ್ಟ್ ಶಿಖರ ಏರಿದವರಿಗಾದರೂ ಅಂಥ ಹರ್ಷ ಉಂಟಾಗಿರಬಹುದೆಂದು ನಾನು ಹೇಳಲಾರೆ. ನಾವು ಭಾಗವಹಿಸಬಾರದೆಂದು ತೀರ್ಮಾನಿಸಿದ್ದ ಆ ಸಭೆ ಸರ್ವಾರ್ಥದಲ್ಲಿ ಕೇಂದ್ರ ಕನ್ನಡ ಕ್ರಿಯಾ ಸಮಿತಿಯವರು ಕರೆದ ಸಭೆಯೇ ಆಗಿ ಪರಿಣಮಿಸಿತು. ಎಲ್ಲರ ಗಮನ ಅಂದು ನಮ್ಮ ಮೇಲೆಯೇ ಇದ್ದಿತು.

ನಾಟಕೀಯ ತಿರುವು

ಸಂಪೂರ್ಣ ಸೋತು ಹತಾಶೆಯ ಮನೋಭಾವನೆಯಿಂದ ಬೆಂಗಳೂರಿಗೆ ಹೋಗಿದ್ದ ನಾವು ಸಂಪೂರ್ಣ ಜಯ ಸಂಪಾದಿಸಿದ ಹರ್ಷೋನ್ಮಾದವನ್ನು ನಮ್ಮ ಹೃದಯದಲ್ಲಿ ತುಂಬಿಕೊಂಡು ಬೆಂಗಳೂರಿನಿಂದ ಹಿಂದಿರುಗಿದೆವು. ಘಟನೆಗಳಿಗೆ ನಾಟಕೀಯ ತಿರುವು ಬಂದು ಚಮತ್ಕಾರಿಕ ಬದಲಾವಣೆಗಳು ಕಾಣಿಸಿಕೊಂಡು, ದೃಶ್ಯಾವಳಿಗಳು ಸಂಪೂರ್ಣ ಪಲ್ಲಟಗೊಂಡುದುದು ನಮ್ಮಷ್ಟಕ್ಕೆ ನಮಗೇ ವಿಸ್ಮಯವನ್ನು ಉಂಟು ಮಾಡಿದ್ದಿತು. ಕನ್ನಡ ಪರವಾದ ಹೋರಾಟದಲ್ಲಿ ತೊಡಗಿದ್ದ ಕನ್ನಡ ಕೇಂದ್ರ ಕ್ರಿಯಾಸಮಿತಿಯ ಸದಸ್ಯರೆಲ್ಲರೂ ಹಿಂದಿನ ಒಂದೇ ಒಂದು ದಿನದ ಅವಧಿಯಲ್ಲಿ ಒಂದಂಗುಲ ಹೆಚ್ಚು ಬೆಳೆದಂತೆ ಭಾವನೆ ಮಾಡಿಕೊಂಡರು. ನಾವು ಹೋರಾಟ ಮಾಡುತ್ತಿದ್ದುದೆಲ್ಲವೂ ನಮ್ಮ ಕೈವಶವಾದ ನ್ಯಾಯೋಚಿತ ಉನ್ಮಾದ ನಮ್ಮ ತಲೆಯಲ್ಲಿ ತುಂಬಿಕೊಂಡಿದ್ದಿತು. ಮುಖ್ಯಮಂತ್ರಿ ಗುಂಡೂರಾಯರು, ನಾವು ಉಭಯತ್ರರೂ ಮಾತುಕತೆಯಾಡಿ, ಒಪ್ಪಿಕೊಂಡ ಸಭ್ಯಗೃಹಸ್ಥರ ಒಡಂಬಡಿಕೆಯಂತೆ, ‘ಆದಷ್ಟು ಬೇಗನೆ,’ ಅಂದರೆ ಆರೆಂಟು ದಿನಗಳಲ್ಲಿ ವಿಧಾನ ಸಭೆಯ ಮೂಲಕ, ನಮ್ಮ ಮಾತುಕತೆಗಳಿಗೆ ಶಾಸನದ ಸ್ವರೂಪ ಕೊಡುವರೆಂದು ನಾವು ನಿರೀಕ್ಷಿಸಿದ್ದೆವು.

ಸತ್ಯಾಗ್ರಹವನ್ನು ಸ್ಥಗಿತಗೊಳಿಸಿದ್ದುದರಿಂದ, ನಮಗೆ ಸರಕಾರಿ ಆಜ್ಞೆಯ ಮಾರ್ಗ ಪ್ರತೀಕ್ಷೆ ಮಾಡುವುದರ ವಿನಾ ಬೇರೆ ಯಾವ ಕೆಲಸವೂ ಇರಲಿಲ್ಲ. ಕುಸ್ತಿಯನ್ನು ಒಗೆದು ಬಂದ ವಿಜಯಮಲ್ಲನಂತೆ ನಾವು ನಿಶ್ಚಿಂತೆಯಿಂದ ವಿರಾಮವನ್ನು ಅನುಭವಿಸುತ್ತಿದ್ದೆವು. ದಿನಗಳು ಒಂದೊಂದೇ ಕಳೆದು ಹೋಗತೊಡಗಿದವು. ಮುಖ್ಯಮಂತ್ರಿಗಳು ನಮಗೆ ಮಾತುಕೊಟ್ಟು ಮನವರಿಕೆ ಮಾಡಿಕೊಟ್ಟಂತೆ ವಿಧಾನ ಸಭೆಯ ಅಧಿವೇಶನವನ್ನು ಕರೆಯಲಿಲ್ಲ. ನಮಗೆಲ್ಲ ಕಳವಳವೆನಿಸತೊಡಗಿತು. ಕನ್ನಡ ಹೋರಾಟಗಾರರ ಕಣ್ಣಿಗೆ ಮಣ್ಣೆರೆಚುವ ಪ್ರಯತ್ನವನ್ನು ಸರಕಾರ ಮಾಡಿತೆನ್ನುವ ಭಯ ಸಂದೇಹಗಳಿಂದ ಕೂಡಿದ ಟೀಕೆಗಳು ರಾಜ್ಯದ ಮೂಲೆ ಮೂಲೆಗಳಿಂದ ಬರತೊಡಗಿದವು. ಭಾಷಾ ಸಮಸ್ಯೆಗೆ ಸಂಬಂಧಿಸಿದಂತೆ ಎಂಟು ದಿನಗಳಲ್ಲಿ ಸರಕಾರಿ ಆಜ್ಞೆ ಹೊರಡಿಸಲಾಗುವುದೆನ್ನುವ ಮುಖ್ಯ ಮಂತ್ರಿಗಳ ಭರವಸೆ ಏನಾಯಿತು ಎಂದು ಕನ್ನಡದ ಆಸಕ್ತಿ ಉಳ್ಳವರೆಲ್ಲರೂ ಕಾತರಗೊಂಡು ಕೇಳತೊಡಗಿದರು. ಕೊಟ್ಟ ಮಾತಿಗೆ ಮುಖ್ಯಮಂತ್ರಿಗಳು ತಿರುಗಿ ಬೀಳುವುದು ಸರಿಯಲ್ಲ ವೆಂದೂ, ಅವರು ತಾವು ನೀಡಿದ ಭರವಸೆಗಳನ್ನು ನೆರವೇರಿಸಿಕೊಡಬೇಕೆಂದೂ ನಾನು ಕನ್ನಡ ಕೇಂದ್ರ ಕ್ರಿಯಾ ಸಮಿತಿಯ ಅನಿಸಿಕೆಗಳಿಗೆ ಬಹಿರಂಗ ಅಭಿವ್ಯಕ್ತಿ ಒದಗಿಸಿಕೊಟ್ಟೆ. ಆದರೆ, ಸರಕಾರಿ ಯಂತ್ರವು ಜನತೆಯ ಭಾವನೆಗಳ ಬಗೆಗೆ ಸಂಪೂರ್ಣ ನಿಶ್ಚೇಷ್ಟಿತ ವಾಗಿದೆಯೆನ್ನುವುದು ಸರಾರಿ ವಕ್ತಾರನ ಹೇಳಿಕೆಯಿಂದ ಸ್ಪಷ್ಟಪಟ್ಟಿತು. ನಮ್ಮೆಲ್ಲರ ಮೇಲಿನ ಉಸಿರು ಮೇಲೆ, ಕೆಳಗಿನ ಉಸಿರು ಕೆಳಗೆ ಆಗುವಂತೆ ಸರಕಾರದ ಹೇಳಿಕೆ ಬಂದಿತು. ಜೂನ್ ನಾಲ್ಕರ ಸಭೆಯಲ್ಲಿ ನಡೆದುದೆಲ್ಲವೂ ನಾಟಕ ಎಂಬಂತೆ, ಸರಕಾರಿ ವಕ್ತಾರನು ಕನ್ನಡ ಕ್ರಿಯಾ ಸಮಿತಿಯೊಂದಿಗೆ ಸರಕಾರವು ಯಾವುದೇ ಒಪ್ಪಂದ ಮಾಡಿಕೊಂಡಿಲ್ಲವೆಂದು ಹೇಳಿ, ಸಮಗ್ರ ಸಾರ್ವಜನಿಕವನ್ನೇ ದಿಗ್ಭ್ರಮೆಗೊಳಿಸಿದ್ದ ಸಾರ್ವಜನಿಕದ ಮೇಲೆ, ಸರಕಾರ ತನ್ನ ಮನಸ್ಸಿಗೆ ಬಂದಂತೆ ಸ್ವೇಚ್ಛೆಯಿಂದ ಸವಾರಿ ಮಾಡಿಕೊಂಡು ಹೋಗಬಹುದೆಂದು ಭಾವನೆ ಮಾಡಿಕೊಂಡಿರಬೇಕು. ಒಂದು ಹಸೀ ಸುಳ್ಳನ್ನು ಸೃಷ್ಟಿಸಿ ಹೇಳುವುದಕ್ಕೆ ಭಂಡ ಧೈರ್ಯ ಬೇಕಾಗುತ್ತದೆ. ನಡೆದುದನ್ನು ನಡೆದಿಲ್ಲವೆಂಬಂತೆ ಮಾಡಿ, ನಡೆಯಲಿಲ್ಲದುದನ್ನು ನಡೆದಂತೆ ಮಾಡಿ ತೋರಿಸುವುದು ನಾಚುಗೆಯ ಲವಲೇಶ ಇಲ್ಲದವರಿಂದ ಮಾತ್ರವೇ ಆಗಬಲ್ಲದು. ಸರಕಾರದ ವಕ್ತಾರನು ಮುಖ್ಯಮಂತ್ರಿಗಳೊಂದಿಗೆ ಹಾಗೂ ಇತರ ಮಂತ್ರಿಗಳೊಂದಿಗೆ, ನಾನು ಹಾಗೂ ಕ್ರಿಯಾ ಸಮಿತಿಯ ಇನ್ನಿತರ ಸದಸ್ಯರು ಜೂನ್ ನಾಲ್ಕರಂದು ವಿಧಾನ ಸೌಧದ ಸಭಾ ಭವನದಲ್ಲಿ ನಡೆಸಿದ ರಹಸ್ಯ ಹಾಗೂ ಮುಕ್ತ ಮಾತುಕತೆಗಳ ಬಗೆಗೆ ಉಲ್ಲೇಖಿಸದೇ ಇದ್ದುದು ಸೋಜಿಗದ ಸಂಗತಿ ಆಗಿದ್ದಿತು. ಅಕಾಡೆಮಿ ಹಾಗೂ ವಿಶ್ವಮೇಳಗಳಿಗೆ ರಾಜೀನಾಮೆ ಕೊಟ್ಟವರು, ಅವುಗಳನ್ನು ಹಿಂತೆಗೆದುಕೊಂಡು ಸರಕಾರದೊಂದಿಗೆ ಪುನಃ ಸಹಕರಿಸಬೆೀಕೆಂದು ಮುಖ್ಯಮಂತ್ರಿಗಳು ನಮ್ಮನ್ನು ಕೇಳಿದ್ದರು.

ನಾವು ಸರಕಾರದ ಸದುದ್ದೇಶ ಹಾಗೂ ಪ್ರಾಮಾಣಿಕತೆಗಳ ಬಗೆಗೆ ನೂರಕ್ಕೆ ನೂರರಷ್ಟು ವಿಶ್ವಾಸ ಇರಿಸಿದ್ದೆವು. ಮುಖ್ಯಮಂತ್ರಿಗಳು ತಮ್ಮ ಧಾರಾಳ ಭರವಸೆಗಳ ಮೂಲಕ ನಾವೆಲ್ಲರೂ ನಂಬುವಂತೆ ಮಾಡಿದ್ದರು. ಮುಖ್ಯಮಂತ್ರಿ ಆದವರೇ ಭರವಸೆ ನೀಡುತ್ತಾರೆಂದ ಮೇಲೆ, ಅವರ ಮಾತನ್ನು ಹೇಗೆ ನಂಬದೇ ಇರಲಿಕ್ಕಾಗುತ್ತದೆ? ಇನ್ನೊಬ್ಬ ಮನುಷ್ಯನು ತಾನು ಪ್ರಾಮಾಣಿಕನಲ್ಲ ಎನ್ನುವುದನ್ನು ತನ್ನ ಮಾತು ಹಾಗೂ ಕೃತಿಯಿಂದ ತೋರಿಸಿಕೊಡುವವರೆಗೂ ಅವನು ಪ್ರಾಮಾಣಿಕನೆಂದೇ ನಂಬುವುದು ಸಭ್ಯಗೃಹಸ್ಥನ ಲಕ್ಷಣ. ಮುಖ್ಯಮಂತ್ರಿ ಗುಂಡೂರಾಯರೊಂದಿಗೆ ಯಾವುದೇ ಬಗೆಯ ನಿರ್ಧಾರ ಆಗಿಲ್ಲ ವೆಂದು ಸರಕಾರಿ ವಕ್ತಾರನು ಜೂನ್ 15ರಂದು ಹೇಳಿಕೆ ನೀಡಿರುವುದು, ಕನ್ನಡಕ್ಕೋಸುಗ ಇನ್ನೂ ಬಲಿದಾನ ಮಾಡಬೇಕೆನ್ನುವುದು ಇರಬೇಕೆಂದು ತೋರುತ್ತದೆ. ಮುಖ್ಯಮಂತ್ರಿ ಆದವನೇ ತನ್ನ ಮಾತಿನ ಮೇಲೆ ತಿರುಗಿ ಬಿದ್ದರೆ ಜನರಿಗೆ ಯಾವ ಮೋಕ್ಷ ಇದೆ? ತಾಯಿಯ ಹಾಲು ನಂಜಾದರೆ, ಬೇಲಿಯೇ ಎದ್ದು ಹೊಲ ಮೇಯ್ದರೆ, ಧರಣಿಯೇ ಹತ್ತಿ ಉರಿದರೆ ರಕ್ಷಿಸುವವರು ಯಾರಿದ್ದಾರೆ? ಆಗ ನಾನು ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಪರವಾಗಿ ಒಂದು ಹೇಳಿಕೆ ನೀಡಿ,

ಕನ್ನಡಕ್ಕೋಸುಗ ಬಲಿದಾನ ಸಲ್ಲಿಸಬೇಕಾದ ದೈವ ನಿಯಾಮಕ ದಿನ ಈಗ ಕನ್ನಡಿಗರೆದುರು ಬಂದಿದೆ. ಅವರು ಈಗ ಕನ್ನಡದ ರಕ್ಷಣೆಗೋಸುಗ ತಮ್ಮ ಸರ್ವಸ್ವವನ್ನೂ ನೀಡಲು ಮುಂದಾಗಬೇಕು. ಇಲ್ಲದಿದ್ದರೆ ನಮ್ಮ ಕಣ್ಣೆದುರಿಗೇ ಕನ್ನಡದ ಕೊಲೆ ಆಗುತ್ತದೆ. ಕನ್ನಡದ ರಕ್ಷಣೆ ಈಗಲ್ಲದಿದ್ದರೆ ಇನ್ನೆಂದೂ ಆಗಲಾರದು.

‘ಸರಕಾರವು ಕನ್ನಡದ ಬಗೆಗೆ, ಗೋಕಾಕ್ ವರದಿಯ ಬಗೆಗೆ ಯಾವುದೇ ಒಡಂಬಡಿಕೆ ಮಾಡಿಕೊಂಡಿಲ್ಲವೆಂದು ಸರಕಾರದ ವಕ್ತಾರನು ಹೇಳಿದ ಮೇಲೆ, ಕನ್ನಡಿಗರಿಗೆಲ್ಲ ಕನ್ನಡದ ಹೋರಾಟ ಕೊನೆಗೊಂಡಿಲ್ಲ ಎನ್ನುವುದು ಮನವರಿಕೆ ಆಗಬೇಕು. ಅವನು ಹೇಳಿರುವುದು ಅಪ್ಪಟವಾದ ಹಸೀ ಸುಳ್ಳು. ಸರಕಾರವು ಸತ್ಯದ ಬಗೆಗೆ ಎಷ್ಟೊಂದು ಮಿತವ್ಯಯದ ಭಾವನೆ ಹೊಂದಿದೆ ಎನ್ನುವುದನ್ನು ಈ ಘಟನೆ ತೋರಿಸಿಕೊಡುತ್ತದೆ.

ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಮುಂದಾಳುಗಳು ಬೆಂಗಳೂರಿಗೆ ಮುಖ್ಯ ಮಂತ್ರಿಗಳೊಂದಿಗೆ ಮೋಜು ಮಾಡಲು ಇಲ್ಲವೆ ಹಲೋ ಹಲೋ  ಎಂದು ಅವರೊಂದಿಗೆ ಕುಶಲ ಸಂಭಾಷಣೆ ನಡೆಸಿ  ಬರಲು ಹೋಗಿರಲಿಲ್ಲ. ಅವರು ಅಲ್ಲಿ ಗೋಕಾಕ್ ವರದಿಯ ಅನುಷ್ಠಾನದ ಬಗೆಗೆ ಎರಡು ದಿನ, ಗಂಟೆಗಳ ಕಾಲ, ಅತ್ಯಂತ ಕಷ್ಟದ ಭಾರೀ ಪ್ರಯಾಸಕರವಾದ ಮಾತುಕತೆಗಳನ್ನು ನಡೆಸಿದರು. ಹಣಕಾಸು ಮಂತ್ರಿ ವೀರಪ್ಪ ಮೊಯಿಲಿ, ಲೋಕೋಪಯೋಗಿ ಮಂತ್ರಿ ಕಾಗೋಡು ತಿಮ್ಮಪ್ಪ, ಶಿಕ್ಷಣ ಮಂತ್ರಿ ಬಿ.ಜಿ. ಶಂಕರರಾವ್, ನಗರಾಭಿವೃದ್ದಿ ಮಂತ್ರಿ ಧರ್ಮಸಿಂಗ್ ಮೊದಲಾದವರೆಲ್ಲರೂ ಕ್ರಿಯಾ ಸಮಿತಿಯವರು ನಡೆದ ಮಾತುಕತೆಗಳಲ್ಲಿ ಸಹಬಾಗಿ ಆಗಿದ್ದರು. ಜೂನ್ ನಾಲ್ಕರ ಎಂಟು ಗಂಟೆಗಳ ಕಾಲದ ಸುದೀರ್ಘ ಚರ್ಚೆಯ ನಂತರ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಾಗ ಅಲ್ಲಿಯೇ ಇದ್ದ ಕ್ರಿಯಾ ಸಮಿತಿಯ ಅಧ್ಯಕ್ಷರು ತಮ್ಮ ಮಾತಿನಲ್ಲಿ ಒಡಂಬಡಿಕೆ ನಡೆದ ಬಗೆಗೆ ಯಾವ ವಿಚಾರವನ್ನೂ ಪ್ರಸ್ತಾಪಿಸಲಿಲ್ಲ ವೆಂದು ಸರಕಾರಿ ವಕ್ತಾರನು ಹೇಳಿರುವುದು, ಮುಖ್ಯಮಂತ್ರಿಗಳೊಂದಿಗೆ ನಡೆದ ಸಂಗತಿಗಳನ್ನು ತಿರುಚುವ ಪ್ರಯತ್ನವಾಗಿದೆ.

ಮಾತುಕತೆಗಳ ಬಗೆಗೆ ಮುಖ್ಯಮಂತ್ರಿಗಳೂ ಹಾಗೂ ನಾನೂ ತೃಪ್ತಿಯನ್ನು ವ್ಯಕ್ತಪಡಿಸಿದಾಗ, ಅಲ್ಲಿಯೇ ಇದ್ದ ‘ಕನ್ನಡ ಪ್ರಭ’ ವರದಿಗಾರರು, ‘ಕ್ರಿಯಾ ಸಮಿತಿಯು ಸರಕಾರವನ್ನು ಮಣಿಸಿತೋ, ಸರಕಾರವೇ ಕ್ರಿಯಾ ಸಮಿತಿಯನ್ನು ಮಣಿಸಿತೊ’ ಎಂದು ಕೇಳಿದಾಗ, ಮುಖ್ಯಮಂತ್ರಿ ಗುಂಡೂರಾಯರು, ‘ನಾವು ಪರಸ್ಪರರನ್ನು ತಿಳಿದುಕೊಂಡೆವು’ ಎಂದು ಹೇಳಿದರು. ಸರಕಾರದೊಂದಿಗೆ ಒಂದು ಒಡಂಬಡಿಕೆಯಾದಾಗ, ಸರಕಾರವೇ ಅದನ್ನು ಸೂಕ್ತ ಸಮಯದಲ್ಲಿ ಘೋಷಿಸಬೇಕೆನ್ನುವುದು ಸಹಜವಾದ ಸಂಪ್ರದಾಯವಾಗಿದೆ. ‘ಎಷ್ಟು ಬೇಗ ನಿಮ್ಮ ನಿರ್ಣಯ ಪ್ರಕಟವಾಗುತ್ತಿದೆ’ ಎಂದು ವರದಿಗಾರರು ಕೇಳಿದಾಗ, ‘ಆದಷ್ಟು ಶೀಘ್ರ’ ಎಂದು ಮುಖ್ಯಮಂತ್ರಿಗಳು ಹೇಳಿದ್ದರು.  ಇಷ್ಟೆಲ್ಲ ನಡೆದೂ ಕೂಡ ಏನೂ ನಡೆದಿಲ್ಲವೆಂದು ಹೇಳಬೇಕಾದರೆ, ಕನ್ನಡವನ್ನು ಬಹು ವ್ಯವಸ್ಥಿತ ರೀತಿಯಿಂದ ಕೊಲ್ಲಬೇಕೆನ್ನುವ ಪ್ರಯತ್ನ ವಿಧಾನಸೌಧದಲ್ಲಿ ನಡೆದಿರುವುದು ಸ್ಪಷ್ಟ. ಸರಕಾರದ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಕೈಯಲ್ಲಿ ಇರುವುದ ಕ್ಕಿಂತಲೂ, ಮುಖ್ಯಮಂತ್ರಿಗಳೇ ಕಾರ್ಯದರ್ಶಿಗಳ ಕೈಯಲ್ಲಿ ಇರುವಂತೆ ತೋರುತ್ತದೆ. ಈ ಸಮಗ್ರ ಭಾಷಾ ಪ್ರಶ್ನೆಯಲ್ಲಿ ಸರಕಾರದ ಕೆಲ ಜನ ಕಾರ್ಯದರ್ಶಿಗಳೇ ಖಳನಾಯಕ ಕೆಲಸ ಮಾಡಿದ್ದಾರೆ. ಕೆಲ ಜನ ಮಂತ್ರಿಗಳೂ ಇದರಲ್ಲಿ ಸೇರ್ಪಡೆ ಆಗಿದ್ದಾರೆ. ಅಂಥವರ ಕೈಯಲ್ಲಿ ಮುಖ್ಯಮಂತ್ರಿಗಳು ಸಿಕ್ಕು ಬಿದ್ದಿದ್ದಾರೆ. ಕನ್ನಡವನ್ನು ಮುಗಿಸಲು ಕನ್ನಡಿಗರ ಕತ್ತು ಹಿಸುಕಲು ವಿಧಾನ ಸೌಧದದಲ್ಲಿ ಯಾವಾಗಲೂ ಏನಾದರೂ ಒಳ ಕೀಟಲೆಗಳು ಇದ್ದೇ ಇರುತ್ತವೆ.

ಕನ್ನಡದ ಹೆಚ್ಚಿನ ವೈರಿಗಳು ವಿಧಾನಸೌಧದಲ್ಲಿ ಇರುವವರಲ್ಲದೆ ಹೊರಗೆ ಇಲ್ಲ. ಹೊರಗಿನಿಂದ ಬಂದ ಐಎಎಸ್ ಅಧಿಕಾರಿಗಳ ಚೆಲ್ಲಾಟ ಅಲ್ಲಿ ನಡೆದಿದೆ. ಅದು ತನ್ನದೇ ವಿಧಾನಸೌಧ ಎನ್ನುವ ಭಾವನೆ ಯಾವ ಕನ್ನಡಿಗನಿಗೂ ಇದುವರೆಗೂ ಆಗಿಲ್ಲ. ನಮ್ಮ ರಾಜ್ಯದಲ್ಲಿಯೇ ಕನ್ನಡ ಹಾಗೂ ಕನ್ನಡಿಗರ ಸ್ಥಿತಿ ಶೋಚನೀಯವಾಗಿದೆ. ಹಾಯಾಗಿ ಉಸಿರಾಡಬೇಕಾದ ಕನ್ನಡಿಗರಿಗೆ ತಮ್ಮ ಮನೆಯಲ್ಲಿ ಉಸಿರು ಕಟ್ಟುವ ಪರಿಸ್ಥಿತಿ ಬಂದೊದಗಿದೆ. ಕನ್ನಡಿಗರ ಪಾಲಿಗೆ ಇದು ಒಂದು ಬಹು ದೊಡ್ಡ ದುರಂತವೇ ಆಗಿದೆ. ಕನ್ನಡ ಜನರ ಬಗೆಗೆ ಪ್ರೀತಿಯಿಲ್ಲದಿರುವ, ಸೇರಿಕೆಯಿಲ್ಲದಿರುವ ತಮ್ಮ ಬೇರುಗಳನ್ನು ಈ ರಾಜ್ಯದ ಹೊರಗೆ ಪಡೆದಿರುವ ಸರಕಾರದ ಕಾರ್ಯದರ್ಶಿ ಸ್ಥಾನದಲ್ಲಿರುವ ಜನರು ಮಂತ್ರಿಗಳನ್ನು ಮುಖ್ಯಮಂತ್ರಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ. ಹೊತ್ತು ತಂದ ನಾಯಿ ಮೊಲವನ್ನು ಹಿಡಿಯಲಾರದು. ಸರಕಾರದ ಅನೇಕ ಜನ ಕಾರ್ಯದರ್ಶಿಗಳು ಕನ್ನಡದ ಹಿತಕ್ಕೆ ವ್ಯತಿರಿಕ್ತವಾಗಿ ವರ್ತಿಸುತ್ತ ಕನ್ನಡವನ್ನು ಬಹು ವ್ಯವಸ್ಥಿತವಾಗಿ ಮುಗಿಸತೊಡಗಿದ್ದಾರೆ. ಅದರ ಬಗೆಗೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ.

ಸರಕಾರದ ಒಳಗೆ ಇರುವ ಕಾರ್ಯದರ್ಶಿಗಳು, ಕನ್ನಡ ಹಾಗೂ ಕನ್ನಡ ಜನರ ವಿರುದ್ಧ ಹೋರಾಟ ಮಾಡಲು ಹೊರಗಿರುವ ಶಕ್ತಿಗಳಿಗೆ ಸಾಕಷ್ಟು ಗ್ರಾಸವನ್ನು ಒದಗಿಸಿ ಕೊಡು ತ್ತಿದ್ದಾರೆ. ಪ್ರತಿಯೊಂದಕ್ಕೂ ತಾಳುವ ಒಂದು ಸಹನೆಯ ಮಿತಿ ಇದೆ. ಕನ್ನಡಿಗರು ಆ ಮಿತಿಯನ್ನು ಮೀರುವಂತೆ ಸರಕಾರದಲ್ಲಿರುವವರೇ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ. ಕನ್ನಡಿಗರು ಇನ್ನು ಸುಮ್ಮನಿರುವುದು ಸಾಧ್ಯವಿಲ್ಲ. ತಮ್ಮ ಸಚಿವಾಲಯದಲ್ಲಿಯೇ ಕನ್ನಡದ ವಿರುದ್ಧ ನಡೆದಿರುವ ಪಂಚಮದಳದ ಚಟುವಟಿಕೆಗಳನ್ನು ಕನ್ನಡಿಗರು ಮೂಕ ಪ್ರೇಕ್ಷಕರಂತೆ ಸುಮ್ಮನೆ ನೋಡುತ್ತ ಕುಳಿತುಕೊಂಡಿರಲಾರರು. ಆಶ್ಚರ್ಯದ ಸಂಗತಿಯೆಂದರೆ, ಶಾಸನ ಸಭೆಯ ಅಧಿವೇಶನ ನಡೆದ ಈ ಸಭೆಯಲ್ಲಿ ಸರಕಾರದೊಂದಿಗೆ ಒಡಂಬಡಿಕೆ ಆಗಿದೆ ಎಂದು ಹೇಳಿ, ಕೇಂದ್ರ ಕ್ರಿಯಾ ಸಮಿತಿಯ ಅಧ್ಯಕ್ಷರು ಎತ್ತಿದ ಪ್ರಶ್ನೆಯನ್ನು ಸರಕಾರಿ ವಕ್ತಾರನು ತಳ್ಳಿ ಹಾಕಿ, ಅಂಥದು ಯಾವುದೂ ನಡೆದಿಲ್ಲವೆಂದು ಹೇಳಿ, ಸತ್ಯದ ಕತ್ತು ಹಿಸುಕುವ ಪ್ರಯತ್ನ ಮಾಡಿದ್ದಾನೆ. ಇದೆಲ್ಲವನ್ನೂ ಬಲ್ಲ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಇದರ ಬಗ್ಗೆ ವಿವರಣೆ ನೀಡಿ, ನಡೆದ ಸಂಗತಿಯನ್ನು ಸದನಕ್ಕೆ ತಿಳಿಸಬೇಕಾಗಿದ್ದಿತು. ರಾಜ್ಯದ ತುಂಬೆಲ್ಲ ಎರಡು ತಿಂಗಳಿಂದಲೂ ಕನ್ನಡದ ಬಗೆಗೆ ಕ್ಷೋಭೆ ಹಾಗೂ ಕೋಲಾಹಲಗಳು ನಡೆದಿದ್ದರೂ, ರಾಜ್ಯದಲ್ಲಿ ಏನೂ ನಡೆದಿಲ್ಲವೆಂಬಂತೆ, ಸರಕಾರವು ಜನರ ಭಾವನೆಗಳೊಂದಿಗೆ ಸ್ಪಂದಿಸದೇ ಇದ್ದುದು ವಿಷಾದ ಹಾಗೂ ವ್ಯಸನಪಡುವ ಸಂಗತಿ ಎನಿಸಿದ್ದಿತು.

ಕನ್ನಡ ಪರ ಹೋರಾಟಗಾರರೆಲ್ಲರೂ ತಳಮಳಗೊಂಡಿದ್ದರು. ರಾಜ್ಯಾದ್ಯಂತ ಕ್ರಿಯಾ ಸಮಿತಿಯ ಘಟಕಗಳು ಮುಂದಿನ ಕಾರ್ಯಕ್ರಮಕ್ಕೆ ನಿರ್ದೇಶನ ನೀಡಬೇಕೆಂದು ಕೇಳಿ ಕೇಂದ್ರ ಕ್ರಿಯಾ ಸಮಿತಿಗೆ ಬರೆಯತೊಡಗಿದವು. ಇದುವರೆಗೆ ಮಾಡಿದುದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತೆ ಆಯಿತೇ ಎಂದು ಪೀಡಿಸತೊಡಗಿದ್ದರು. “ಮುಂದೇನು ಮಾಡುತ್ತೀರಿ” ಎಂದು ಬೆಂಗಳೂರಿನಲ್ಲಿ ವರದಿಗಾರರು ನನ್ನನ್ನು ಕೇಳಿದರು.

ಸರಕಾರವು ನಮ್ಮೊಂದಿಗೆ ಮಾತುಕತೆ ನಡೆಸಿ ಒಪ್ಪಿಕೊಂಡಂತೆ, ಸರಕಾರದ ಬದಲಾದ ತೀರ್ಮಾನವನ್ನು ಜೂನ್ 20ರೊಳಗೆ ಪ್ರಕಟಿಸದೆ ಹೋದರೆ, ಗೋಕಾಕ್ ವರದಿಯ ಆಂದೋಲನವನ್ನು ಪುನಃ ಹೆಚ್ಚು ಉಗ್ರ ರೀತಿಯಿಂದ ಆರಂಭಿಸಲಾಗುವುದು. ಕನ್ನಡಕ್ಕೆ ಅಗ್ರ ಪ್ರಾಶಸ್ತ್ಯ ಇರಬೇಕೆಂದು ಸರಕಾರವು ನಮ್ಮೊಂದಿಗೆ ನಡೆಸಿದ ಮಾತುಕತೆಗಳಲ್ಲಿ ಒಪ್ಪಿಕೊಂಡು ಅದರ ವಿರುದ್ಧದಲ್ಲಿ ಯಾವುದೇ ಸಮಜಾಯಿಷಿಗೆ ಅವಕಾಶವೇ ಇಲ್ಲ.

ಎಂದು ನಾನು ಅವರಿಗೆ ತಿಳಿಸಿದೆ. ಜೂನ್ 20ರೊಳಗೆ ಅನುಕೂಲ ನಿರ್ಧಾರ ಪ್ರಕಟಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿ ಗುಂಡೂರಾಯರು ಇಂದು ಪುನರಪಿ ನನ್ನೆದುರು ದೃಢಪಡಿಸಿದರು. ತನ್ನ ನಿರ್ಧಾರ ಪ್ರಕಟಿಸಲು ಸರಕಾರ ನೀಡಿದ್ದ ಕಾಲದ ಗಡುವು ಮುಗಿದು ಹೋಗಿದೆ ಎನ್ನುವುದನ್ನು ನಾನು ಮುಖ್ಯಮಂತ್ರಿಗಳಿಗೆ ತಿಳಿಸಿದೆ. ಸರಕಾರದ ವಿಲಂಬವು ಕನ್ನಡ ಚಳವಳಿಗಾರರ ಮನಸ್ಸಿನಲ್ಲಿ ಇಲ್ಲದ ಭೀತಿ ಕಳವಳಗಳನ್ನು ನಿರ್ಮಿಸಿದೆಯೆಂದು ಅವರೆದುರು ಹೇಳಿ, “ಇನ್ನು ಹೆಚ್ಚು ದಿನ ತಡೆಯುವುದು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದೆ.ೊಸರಕಾರವು ಗೋಕಾಕ್ ವರದಿಯ ಅನುಷ್ಠಾನದಲ್ಲಿ ಸುಮ್ಮನೆ ಕುಳಿತಿರುವುದನ್ನು ಕಂಡು ಜನರು ಅಲ್ಲಸಲ್ಲದ ಊಹಾಪೋಹಗಳಲ್ಲಿ ತೊಡಗಿರುವರು ಎಂದು ನಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಸರಕಾರ ಹಾಗೂ ನಮ್ಮ ನಡುವೆ ಏನಾದರೂ ಗುಪ್ತ ಒಪ್ಪಂದವಾಗಿದೆಯೇ ಎಂದು ಜನರು ಕೇಳುವಂತೆ ಆಗಿದೆ. ಈ ಸಂದೇಹವನ್ನು ನಿವಾರಿಸುವುದು ಅಗತ್ಯ ಎನ್ನುವುದನ್ನೂ ನಾನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ.

ಮೀನ ಮೇಷ ಎಣಿಸುವ ಸರಕಾರದ ತಂತ್ರಗಾರಿಕೆಯನ್ನು ನಾವು ಇನ್ನು ಸರ್ವಥಾ ಸಹಿಸಲಾರೆವು. ಶಾಸಕರು ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳದೆ, ಕಣ್ಣಾಮುಚ್ಚಾಲೆ ಆಟಕ್ಕೆ ನಿಂತವರಂತೆ ವರ್ತಿಸತೊಡಗಿದ್ದಾರೆ. ಅವರ ವರ್ತನೆಗೆ ಕ್ರಿಯಾ ಸಮಿತಿಯು ಸೂಕ್ತ ಪ್ರತೀಕಾರವನ್ನು ಯೋಚಿಸುತ್ತದೆ. ಕ್ರಿಯಾ ಸಮಿತಿಯು ಚಳುವಳಿಯನ್ನು ತೀವ್ರಗೊಳಿಸಿ ಅವರ ಜೀವನ ದುರ್ಭರವಾಗುವಂತೆ ಮಾಡುತ್ತದೆ. ಈಗ ಪುನಃ ಅಲ್ಪಸಂಖ್ಯಾತ ಭಾಷೆಯ ಜನರ ಭೂತವನ್ನು ಎತ್ತಲಾಗಿದೆ. ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾದ ಸಂವಿಧಾನ ರಕ್ಷಣೆಯ ಬಗೆಗೆ ಉಂಟಾದ ಭೀತಿಯನ್ನು ಕುರಿತೂ ಕೂಡ, ಜೂನ್ ನಾಲ್ಕರ ಸಭೆಯಲ್ಲಿ ಸುದೀರ್ಘವಾಗಿ ಕೂಲಂಕಷವಾಗಿ ಚರ್ಚಿಸಲಾಗಿದೆ. ಕನ್ನಡವನ್ನು ಏಕೈಕ ಭಾಷೆಯೆಂದು ಪ್ರತಿಷ್ಠಾಪಿಸಿದರೆ, ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿಗೆ ಯಾವ ರೀತಿಯಿಂದಲೂ ಭಾದೆ ಬರಲಾರದೆನ್ನುವ ಅಭಿಪ್ರಾಯಕ್ಕೆ ಬರಲಾಗಿದೆ. ಭಾಷಾ ಅಲ್ಪಸಂಖ್ಯಾತರು ಮುಂದೆಯೂ ಕೂಡ ತಮ್ಮ ಮಕ್ಕಳಿಗೆ, ತಮ್ಮ ಮಾತೃಭಾಷೆಯ ಮೂಲಕವೇ ಶಿಕ್ಷಣ ಕೊಡಬೇಕೆನ್ನುವ ಭರವಸೆಗೆ ಎಂದಿಗೂ ಚ್ಯುತಿ ಇಲ್ಲ. ಕನ್ನಡಕ್ಕೆ 125 ಅಂಕಗಳು, ಇಂಗ್ಲೀಷನ್ನು ಒಳಗೊಂಡು ಇನ್ನುಳಿದ ಎಲ್ಲ ಮಾತೃಭಾಷೆಗಳಿಗೆ 100 ಅಂಕಗಳು ಹಾಗೂ ಇಂಗ್ಲೀಷ್ ಸಹಿತ ಇನ್ನಿತರ ಎಲ್ಲ ಮಾತೃಭಾಷೆಗಳಿಗೆ ಸಂಸ್ಕೃತ ಹಿಂದಿ, ಅರೇಬಿಕ್ ಹಾಗೂ ಮತ್ತಿತರ ಭಾಷೆಗಳಿಗೆ 75 ಅಂಕ ಇರಬೇಕೆಂದು ಒಪ್ಪಂದಕ್ಕೆ ಬರಲಾಗಿದ್ದಿತು. 125‑100‑75 ಅಂಕಗಳ ಸೂತ್ರವನ್ನು ಬದಲಿಸಬೇಕೆನ್ನುವ ಪಿತೂರಿ ಶಾಸಕ ವರ್ಗದಲ್ಲಿ ನಡೆಯತೊಡಗಿದ್ದಿತು. ಕನ್ನಡಕ್ಕೆ ಹೆಚ್ಚಾಯಿತು. ಹಿಂದಿ ಸಂಸ್ಕತಗಳಿಗೆ ಕಡಿಮೆ ಆಯಿತು ಎನ್ನುವ ಬೇಸೂರಿನ ಮಾತು ಕೇಳಿ ಬರತೊಡಗಿದವು. ಗೋಕಾಕ್ ಸಮಿತಿಯ ವರದಿಯೊಂದಿಗೆ ಶಾಸಕರು ಚಿನ್ನಾಟವಾಡುತ್ತಿರುವರೆಂದು ಕ್ರಿಯಾ ಸಮಿತಿಗೆ ಅನಿಸತೊಡಗಿತು. ಇದುವರೆಗೆ ನೂತುಕೊಂಡು ಬಂದುದನ್ನು ಅವರು ಹಂಜಿ ಮಾಡುತ್ತಿದ್ದಾರೆಂದು ಕ್ರಿಯಾ ಸಮಿತಿ ಆಕ್ರೋಶ ವ್ಯಕ್ತಪಡಿಸಿತು. ‘ಅವರು ಅದಕ್ಕೋಸುಗ ಬಹುದೊಡ್ಡ ಬೆಲೆ ತೆತ್ತ ಬೇಕಾಗುತ್ತದೆ’ ಎಂದು ಕ್ರಿಯಾ ಸಮಿತಿ ಅವರಿಗೆ ಎಚ್ಚರಿಕೆ ನೀಡಿತು. ಈ ಬಗೆಗೆ ನಾನು ಜೂನ್ 23ರಂದು ಪ್ರಕಟಣೆ ನೀಡಿ,

ಕೇಂದ್ರ ಕ್ರಿಯಾ ಸಮಿತಿಯು ಸೂಚಿಸಿದ ಸೂತ್ರವನ್ನು ಸರಕಾರ ಒಪ್ಪಲೇ ಬೇಕು. ಅದು ಕ್ರಿಯಾ ಸಮಿತಿಯ ಅತ್ಯಂತ ಕಡಿಮೆ ಬೇಡಿಕೆಯಾಗಿದೆ. ಆದರೆ ಈ ಕನಿಷ್ಠ ಬೇಡಿಕೆಯ ಬಗೆಗೆ ಶಾಸಕರೂ, ಸಚಿವರೂ, ಹೆಚ್ಚು ಕಡಿಮೆ ಮಾಡುವ ಆಟ ಹೂಡಿದರೆ ಅವರು ಖಂಡಿತವಾಗಿಯೂ ಗಂಡಾಂತರವನ್ನು ತಮ್ಮ ಮೈಮೇಲೆ ತಂದುಕೊಳ್ಳುತ್ತಾರೆ

ಎಂದು ತಿಳಿಸಿದೆ.

ಅವರೇನಾದರೂ ಅಂಕಗಳ ಬಗೆಗೆ ಕುಚೇಷ್ಠೆ ಮಾಡಿ, ಪರ್ಯಾಯ ಅಂಕಪಟ್ಟಿ ತಂದರೆ, ಅವರು ಕನ್ನಡ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ರಾಜಕೀಯ ಗ್ರಹಣಕ್ಕೆ ಗುರಿ ಆಗುತ್ತಾರೆ. ಚುನಾವಣೆಯ ಕಾಲಕ್ಕೆ ಅಂಥವರನ್ನು ಗುರುತಿಸಿ ಜನರು ಅವರನ್ನು ಮೂಲೆಗೆ ತಳ್ಳುತ್ತಾರೆ.

ಕನ್ನಡವೊಂದೇ ಏಕೈಕ ಪ್ರಥಮ ಭಾಷೆಯಾಗಿ 125 ಅಂಕಗಳನ್ನು ಪಡೆಯಲೇಬೇಕು. ಇದರ ಬಗೆಗೆ ಯಾವುದೇ ವಿಧದ ಚೌಕಾಸಿಗೂ ಅವಕಾಶವಿಲ್ಲ. ಅಂಕಗಳ ಹೊಂದಾಣಿಕೆಯ ಬಗೆಗೆ ಮಂತ್ರಿಗಳು, ಯಾವುದೇ ಕೋಷ್ಟಕವನ್ನು ಆಲೋಚಿಸಲಿ, ಅದು ಕನ್ನಡ ಕ್ರಿಯಾ ಸಮಿತಿಗೆ ಸಮ್ಮತವಲ್ಲ. ಮಂತ್ರಿಗಳು ಈ ಬಗೆಗೆ ಯಾವುದೇ ಹೊಂಚು ಹೂಡಿರಲಿ ಅದನ್ನು ಜನರು ಉಗ್ರವಾಗಿ ಪ್ರತಿಭಟಿಸುತ್ತಾರೆ. ಮುರಿದು ಹಾಕುತ್ತಾರೆ. ಸರಕಾರವೇನಾದರೂ ಗೋಕಾಕ್ ವರದಿಯನ್ನು ನಿಷ್ಕ್ರಿಯಗೊಳಿಸುವ ದುಸ್ಸಾಹಸ ಮಾಡಿದರೆ, ರಾಜ್ಯವು ಸತತವಾದ ಅಸಂತೃಪ್ತಿಯನ್ನು ಎದುರಿಸಬೇಕಾಗುತ್ತದೆ. ಜೂನ್ 24ರಂದು ವಿಧಾನಸಭೆಯು, ಗೋಕಾಕ್ ವರದಿಯ ಬಗೆಗೆ ನಿರ್ಣಯ ಕೈಕೊಳ್ಳುವುದೆಂದು ತಿಳಿದು ನಾನು 23ರಂದು ಬೆಂಗಳೂರಿಗೆ ಹೊರಟೆ. ಮಂತ್ರಿಗಳಾದ ವೀರಪ್ಪ ಮೊಯಿಲಿ, ಕಾಗೋಡು ತಿಮ್ಮಪ್ಪ, ಧರ್ಮಸಿಂಗ್, ಜಿ.ಬಿ.ಶಂಕರರಾವ್ ಮೊದಲಾದವರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ನನ್ನನ್ನು ಕಂಡೊಡನೆಯೇ ಅವರು “ನಿಮ್ಮ ದಾರಿಯನ್ನೇ ನಾವು ನೋಡುತ್ತಿದ್ದೆವು” ಎಂದು ನನಗೆ ಹೇಳಿದರು. ಅಂಕಗಳ ವಿಚಾರದಲ್ಲಿ ಮಂತ್ರಿಗಳು ಪರ್ಯಾಯ ಸೂತ್ರವನ್ನು ಹೊಂದಿದ್ದಾರೆನ್ನುವ ಸಂದೇಹ, ಅವರು ನನ್ನೆದುರು ಪ್ರಸ್ತಾಪಿಸಿದ ಮಾತಿನಿಂದ ದೃಢಪಟ್ಟಿತು. ‘ಕನ್ನಡಕ್ಕೆ ಇರುವ 125 ಅಂಕಗಳನ್ನು 110ಕ್ಕೆ ಇಳಿಸಬೇಕು ಎಂದು ಅವರು ನನಗೆ ತಿಳಿಸಿದರು. ಅವರು ಸೂಚಿಸಿದ ಸಂಗತಿಯನ್ನು ತಿಳಿದು ಅವರ ಮೇಲೆ ನಾನು ಸ್ಫೋಟಗೊಂಡಂತೆ ಹರಿ ಹಾಯ್ದೆ. ನೀವು ಈ ಮೊದಲೇ ಒಪ್ಪಿಕೊಂಡ ಈ ವಿಚಾರದ ಬಗೆಗೆ ಈ ರೀತಿ ಹೇಳುತ್ತೀರೆಂದ ಮೇಲೆ, ನೀವು ಮಾತಿನಲ್ಲಿ ಮಾತಿಲ್ಲದ ಜನ ಎನ್ನುವುದು ಸಿದ್ಧಪಡುತ್ತದೆ. ಜೂನ್ ನಾಲ್ಕರ ಸಭೆಯ ನಂತರ, ನಮ್ಮ ನಿಮ್ಮ ನಡುವೆ ನಡೆದ ಮಾತುಗಳನ್ನು ನಾನು ನಮ್ಮೆಲ್ಲ ಜನರಿಗೂ ತಿಳಿಸಿದ್ದೇನೆ. ಈಗ ಅದರಲ್ಲಿ ಹೆಚ್ಚು ಕಡಿಮೆ ಮಾಡುವುದು ಸಾಧ್ಯವಿಲ್ಲ. 125 ಎನ್ನುವುದು 100 ಅಲ್ಲ ನೂರಾ ಇಪ್ಪತ್ತು ನಾಲ್ಕೂವರೆ ಆಗುವುದೂ ಸಾಧ್ಯವಿಲ್ಲ. ನಾನು ನಮ್ಮ ಸೂಚನೆಯನ್ನು ಒಪ್ಪಲಾರೆ. ಗೋಕಾಕ್ ವರದಿಯನ್ನು ನಿಸ್ಸತ್ವಗೊಳಿಸಬೇಕೆನ್ನುವ ವಿಚಾರ ನಮಗೆ ಯಾರಿಗೂ ಸಹ್ಯವೆನಿಸಲಾರದು. ನೀವು, ನಿಮ್ಮ ಮಾತಿನ ಮೇಲೆ ತಿರುಗಿ ಬಿದ್ದರೆ, ನಾವು ಜನರ ಬಳಿಗೆ ಹೋಗುತ್ತೇವೆ. ನೀವು ನಂಬಿಗಸ್ಥ ಜನ ಅಲ್ಲವೆಂದು ಹೇಳುತ್ತೇವೆ. ನಿಮ್ಮೊಂದಿಗೆ ಮಾತುಕತೆ ಆಡುವುದರಿಂದ ಏನೂ ಪ್ರಯೋಜನ ಇಲ್ಲ. ಚಳವಳಿ ಹೂಡುವುದಕ್ಕೆ ನೀವೇ ಆಮಂತ್ರಣ ಕೊಡುತ್ತಿದ್ದೀರಿ. ನಾನು ಈ ಮಾತು ಹೇಳಿದ್ದಕ್ಕೆ ಅವರು ಹಾದಿಗೆ ಬಂದರು. “ಆಗಲಿ, ನೀವೇ ಹೇಳುವಂತೆ 125 ಅಂಕಗಳನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ನಮಗೆ ಇನ್ನೊಂದು ವಿಚಾರ ಇದೆ. 125- 100,75 ಅಂಕಗಳ ಈ ಸೂತ್ರದಲ್ಲಿ 75 ಇರುವುದನ್ನು 100 ಮಾಡಬೇಕು

ಎಂದು ಕೇಳಿದರು.

ಅವರು ಕೇಳಿದ ವಿಚಾರದಲ್ಲಿ ನ್ಯಾಯದ ಒಂದು ಪ್ರಶ್ನೆ ಇದ್ದಿತು. ಅದರ ಬಗೆಗೆ ನಾವು ಕ್ರಿಯಾ ಸಮಿತಿಯ ಸಭೆಯಲ್ಲಿ ಚರ್ಚಿಸಿದ್ದೇವಾದರೂ, ಈ ಚರ್ಚೆ ಎನ್ನುವುದು 100 ಆಗಬೇಕೆನ್ನುವ ಸೂಚನೆ ಬರುವುದೆನ್ನುವ ಸಂದೇಹ ನಮಗೆ ಇದ್ದೇ ಇದ್ದಿತು. ಯಾಕೆಂದರೆ ಅಲ್ಪಸಂಖ್ಯಾತ ಭಾಷೆಯವರಿಗೆ ಕನ್ನಡಕ್ಕೆ 125, ಅವರ ಮಾತೃಭಾಷೆಗೆ 100 ಅಂಕಗಳಾದರೆ, ಇಂಗ್ಲೀಷಿಗೆ 75 ಅಂಕಗಳು ಮಾತ್ರ ಆಗುತ್ತಿದ್ದವು. “ನಿಮ್ಮ ಹುಡುಗರಿಗೆ 100 ಏಕೆ, ನಮ್ಮ ಹುಡುಗರಿಗೆ 75 ಏಕೆ ಎನ್ನುವ ಪ್ರಶ್ನೆ ಭಾಷಾ ಅಲ್ಪಸಂಖ್ಯಾತರಿಂದ ಬರುವುದೆನ್ನುವ ಸಂದೇಹ ನಮಗೆ ಇದ್ದೇ ಇದ್ದಿತು.

ಆ ಭಾಷಾ ಅಲ್ಪಸಂಖ್ಯಾತರು ನಮಗೆ ಕೇಳುತ್ತಿದ್ದ ಪ್ರಶ್ನೆಯನ್ನು, ಈಗ ಮಂತ್ರಿಗಳೇ ಎತ್ತಿದ್ದರು. ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ ಕೂಡ ಇಂಗ್ಲೀಷಿಗೆ 100 ಅಂಕಗಳು ಇರಬೇಕೆಂದು ಒಪ್ಪಿಕೊಂಡರೆ, ಅದೇ ಅಂಕಣಗಳಲ್ಲಿ ಇರುವ ಸಂಸ್ಕೃತ, ಹಿಂದೀ ಮೊದಲಾದ ಭಾಷೆಗಳಿಗೆ ಕೂಡ 100 ಅಂಕಗಳು ಇರಬೇಕೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಮಂತ್ರಿಗಳೊಂದಿಗೆ ಕ್ರಿಯಾ ಸಮಿತಿಯ ಪರವಾಗಿ ಮಾತನಾಡಲು ಅಲ್ಲಿ ನಾನೊಬ್ಬನೇ ಇದ್ದೆ. ನಮ್ಮ ಸಹಚರರು ಬೇರೆ ಯಾರೊಬ್ಬರೂ ನನ್ನೊಂದಿಗೆ ಇರಲಿಲ್ಲ. ನಾನೊಬ್ಬನೇ ಕ್ರಿಯಾ ಸಮಿತಿಯ ಪರವಾಗಿ ಅವರು ಮುಂದೆ ಮಾಡಿದ ಸೂಚನೆಯನ್ನು ಒಪ್ಪುವುದು ಹೇಗೆ? ಗೋಕಾಕ್ ವರದಿಯ ಹೋರಾಟವನ್ನು ಪಾಟೀಲ ಪುಟ್ಟಪ್ಪ ತನ್ನ ಯಾವುದೋ ಸ್ವಾರ್ಥ ಸಾಧಿಸಲೋಸುಗ ಮಾಡಿಕೊಂಡ ಎನ್ನುವ ಆರೋಪ ಬರುವುದೂ ಸಾಧ್ಯವಿದ್ದಿತು. ಒಳಗೆ ವಿಧಾನಸಭೆಯ ಅಧಿವೇಶನ ಸೇರಿದ್ದಿತು. ಗೋಕಾಕ್ ವರದಿಯ ಬಗೆಗೆ ಸರಕಾರ ತೀರ್ಮಾನ ಕೈಕೊಳ್ಳುವುದಿದ್ದಿತು. ಅವರು ನನ್ನೆದುರು ಎತ್ತಿದ ಪ್ರಶ್ನೆಗೆ, ‘ನನ್ನ ತಂದೆಯನ್ನು ಕೇಳಿ ಬಂದು ಉತ್ತರ ಹೇಳುತ್ತೇನೆ’ ಎನ್ನುವುದಕ್ಕೆ ಆಗ ಸಮಯವಿರಲಿಲ್ಲ. ‘ಏನಾದರೂ ಹೇಳಲೇಬೇಕು. ಆದರೆ ಹೇಳುವಂತಿರಲಿಲ್ಲ. ಹೇಳದೆ ಇರಬೇಕೆಂದರೆ ಅದೂ ಆಗುವಂತಿರಲಿಲ್ಲ. ನಾನು ಏನಾದರೊಂದು ಹೇಳಲೇ ಬೇಕಿದ್ದಿತು. ಆಗ ನಾನೂ ಒಂದು ಉಪಾಯಗಾರಿಕೆ ಮಾಡಿದೆ. ನಾನು ಒಪ್ಪಿದರೂ, ಒಪ್ಪದಿದ್ದರೂ ಅವರು ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೂ ಕೂಡ ಇಂಗ್ಲೀಷಿಗೋಸುಗ 100 ಅಂಕಗಳನ್ನು ಕೊಡುವವರೇ ಇದ್ದರು. ಇದು ಜಾತ್ರೆಗೆ ಹೋಗಬೇಕೆಂದಿದ್ದ ಮಗನು ತನ್ನ ತಂದೆಗೆ ಪ್ರಶ್ನೆ ಹಾಕಿದಂತೆಯೇ ಆ ಮಂತ್ರಿಗಳ ಧೋರಣೆ ಇದ್ದಿತು. ‘ಅಪ್ಪ, ನಾನು ಜಾತ್ರೆಗೆ ಹೋಗಬೇಕೆಂದಿದ್ದೇನೆ, ನೀನು ಹೋಗು ಎಂದರೂ ಹೋಗುತ್ತೇನೆ, ಹೋಗಬೇಡ ಎಂದರೂ ಹೋಗುತ್ತೇನೆ. ನಾನು ಏನು ಮಾಡಲಿ ಹೇಳು” ಅಪ್ಪನ ಬಳಿ ಅದಕ್ಕೆ ಹೇಳುವುದೇನಿದೆ? ಮಂತ್ರಿಗಳು, ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ 100 ಅಂಕಗಳನ್ನು ಕೊಡಬೇಕೆನ್ನುವ ಸೂಚನೆಯನ್ನು ಮುಂದೆ ಮಾಡಿದಾಗ, ನನ್ನ ಸ್ಥಿತಿಯೂ ಕೂಡ ಆ ಅಪ್ಪನಂತೆಯೇ ಆಗಿದ್ದಿತು. ನಾನು ಆ ಮಂತ್ರಿಗಳಿಗೆ ಹೇಳಿದೆ,

ನೀವು, ನಿಮ್ಮ ಕುಟುಂಬದಲ್ಲಿ ಓದಿದ ಪ್ರಥಮ ತಲೆಮಾರಿನವರು. ನಿಮ್ಮ ತಂದೆ ಓದಲಿಲ್ಲ, ನಿಮ್ಮ ತಾತ ಓದಲಿಲ್ಲ. ನಿಮ್ಮ ಮಕ್ಕಳು ಮರಿ ಓದಲು ಶಾಲೆಗೆ ಹೋದಾಗ, ತಮ್ಮ ತಂದೆ ಮಂತ್ರಿಯಾಗಿದ್ದಾಗ, ತಮ್ಮ ತಲೆಯ ಮೇಲೆ 100 ಅಂಕಗಳ ಹಿಂದೀ ಸಂಸ್ಕೃತಗಳ ಚಪ್ಪಡೀ ಕಲ್ಲು ಎಳೆದರೆಂದು ನಿಮ್ಮನ್ನು ಶಪಿಸುತ್ತಾರೆ. ನೀವು ಹೇಳುತ್ತೀರೆಂದ ಮೇಲೆ 100 ಅಂಕಗಳ ಬದಲಾವಣೆಗೆ ನಾನು ಒಪ್ಪುತ್ತೇನೆ.

ಅವರೆದುರು ಈ ಮಾತನ್ನು ನಾನು ಆಡಿದೊಡನೆಯೇ ಅವರಿಗೆ ಭಾರೀ ಸಂತೋಷವೆನಿಸಿತು. ಸರಕಾರದವರು ಏನು ಮಾಡಿದ್ದರೆಂದರೆ ಎರಡು ಅಂಕಣಗಳಲ್ಲಿ ಎಲ್ಲ ಭಾಷೆಗಳನ್ನೂ ವಿಂಗಡಿಸಿದ್ದರು. ಎಲ್ಲರಿಗೂ ಸಾರ್ವತ್ರಿಕವಾಗಿ ಅನ್ವಯವಾಗುವ ಕನ್ನಡವನ್ನು ಅವರು ಒಂದು ಅಂಕಣದಲ್ಲಿ ಇರಿಸಿದ್ದರು. ಇನ್ನುಳಿದ ಎಲ್ಲ ಭಾಷೆಗಳನ್ನೂ ಒಟ್ಟಿಗೇ ಸೇರಿಸಿ ಅವುಗಳನ್ನು ಅವರು ಇನ್ನೊಂದು ಅಂಕಣದಲ್ಲಿ ಇರಿಸಿದ್ದರು. ಆ ಎರಡನೆಯ ಅಂಕಣದ ಬಗೆಗೆ ಸರಕಾರ ನೀಡಿದ ನಿರ್ದೇಶನ ಸ್ಪಷ್ಟವಿದ್ದಿತು. ಅವೆಲ್ಲ ಭಾಷೆಗಳಿಗೂ, ಒಂದೊಂದಕ್ಕೂ ನೂರು ಅಂಕಗಳು. ವಿದ್ಯಾರ್ಥಿಗಳು ತಮಗೆ ಬೇಕಾದ ಯಾವ ಎರಡು ಭಾಷೆಗಳನ್ನಾದರೂ ಆಯ್ಕೆ ಮಾಡಿಕೊಳ್ಳಬೇಕೆನ್ನುವ ಅವಕಾಶವನ್ನು ಅವರಿಗೆ ನೀಡಲಾಗಿದ್ದಿತು. ಮಂತ್ರಿಗಳು ಹೇಳಿದ 100 ಅಂಕಗಳ ಸೂಚನೆಯನ್ನು ನಾನು ಒಪ್ಪಿದ ಬಗೆಗೆ ಅವರು ಸಂತೋಷಗೊಂಡ ಸಂದರ್ಭವನ್ನು ಉಪಯೋಗಿಸಿಕೊಂಡು ಕಬ್ಬಿಣ ಬಿಸಿ ಇದ್ದಾಗಲೇ ಹೊಡೆತ ಹಾಕಬೇಕೆಂದು ನಾನು ಅವರಿಗೆ ಹೇಳಿದೆ,  ನೀವು ನನ್ನೆದುರು 100 ಅಂಕಗಳ ಸೂಚನೆ ಇರಿಸಿದಿರಿ. ನಾನು 75 ಅಂಕಗಳ ನಮ್ಮ ಮೂಲ ಪ್ರಸ್ತಾಪದ ಬಗೆಗೆ ಒತ್ತಾಯಪಡಿಸಲಿಲ್ಲ. ನಿಮ್ಮ ವಿಚಾರವನ್ನು ನಾನು ಒಪ್ಪಿಕೊಂಡಂತೆ ನನ್ನದೂ ಒಂದು ವಿಚಾರವನ್ನು ನೀವು ಒಪ್ಪಿಕೊಳ್ಳಬೇಕೆಂದು ನನ್ನ ಅಪೇಕ್ಷೆ.

ನಾನು ಅವರ ಸೂಚನೆಯನ್ನು ಒಪ್ಪಿದೆನೆನ್ನುವ ಸಂತೋಷದ ಭರದಲ್ಲಿ ಅವರು, ನಾನು ಏನು ಕೇಳಿದರೂ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇದ್ದಿತು. ನಾನು ಅವರನ್ನು ಕೇಳಿದೆ, ಎರಡನೆಯ ಅಂಕಣದಲ್ಲಿ ಅನೇಕ ಭಾಷೆಗಳನ್ನು ಒಟ್ಟುಗೂಡಿಸಿ ಹಾಕಿದ್ದೀರಿ. ಆ ಅನೇಕ ಭಾಷೆಗಳ ಜತೆಗೆ, ಆ ಅಂಕಣದಲ್ಲಿ ಇನ್ನೊಂದು ಭಾಷೆ ಸೇರಿಸುವುದಕ್ಕೆ ಏನು ತೊಂದರೆ ಇದೆ? ನನ್ನ ಈ ಪ್ರಶ್ನೆಯಿಂದ ಅವರ ಕುತೂಹಲ ಕೆರಳಿತು ಅವರಿಗೆ, ವಿಧಾನಸಭೆಯೊಳಗೆ ಹೋಗಿ ಮುಖ್ಯಮಂತ್ರಿಗಳಿಗೆ, ನಾವು ಒಪ್ಪಿಕೊಂಡ ಭಾಷಾಸೂತ್ರವನ್ನು ತಿಳಿಸುವುದು ಬೇಕಾಗಿದ್ದಿತು. ‘ಹೂಂ, ಬೇಗ ಹೇಳಿ’ ಎಂದು ಅವರು ನನ್ನನ್ನು ಕೇಳಿದರು. ಆ ಎರಡನೆಯ ಅಂಕಣದಲ್ಲಿ, ‘ಹೆಚ್ಚುವರಿ ಕನ್ನಡ ಎನ್ನುವುದೊಂದನ್ನು ಸೇರಿಸಬೇಕು’ ಎಂದು ನಾನು ಅವರಿಗೆ ತಿಳಿಸಿದೆ. ಅದಕ್ಕೇನಂತೆ? ಸೇರಿಸೋಣ ನೀವು 100 ಅಂಕಗಳಿಗೆ ಒಪ್ಪಿದಿರಲ್ಲ, ಸಂತೋಷ ಎಂದರು. ನನ್ನ ಸೂಚನೆಯಂತೆ ಆ ಅಂಕಣದಲ್ಲಿ ಅವರು ಹೆಚ್ಚುವರಿ ಕನ್ನಡವನ್ನು ಸೇರಿಸಿಯೂ ಬಿಟ್ಟರು. ವಿಧಾನಸಭೆ ಬದಲಾದ ಆ ಭಾಷಾಸೂತ್ರಕ್ಕೆ ತನ್ನ ಅಂಗೀಕಾರದ ಮುದ್ರೆ ನೀಡಿತು.

ವಿಧಾನಸಭೆಯ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಲು ಆ ಮಂತ್ರಿಗಳು ವಿಧಾನ ಸಭೆಯೊಳಕ್ಕೆ ಹೋದ ಮೇಲೆ ಡಾ.ಎಂ.ಚಿದಾನಂದಮೂರ್ತಿಯವರು ನನ್ನ ಬಳಿಗೆ ಬಂದರು. ನಮ್ಮವರು ಒಬ್ಬರಾದರೂ ಬಂದರಲ್ಲ ಎಂದುಕೊಂಡು ಅವರೆದುರು ನಾನು ಮಂತ್ರಿಗಳೊಂದಿಗೆ ನಡೆಸಿದ ಮಾತುಕತೆಯನ್ನು ಪ್ರಸ್ತಾಪಿಸಿದೆ.

ನಮ್ಮ ಭಾಷಾಸೂತ್ರ 12510075 ಇದ್ದುದು ಸರಿಯಷ್ಟೇ? ಆದರೆ, ನಮ್ಮ ಹುಡುಗರಿಗೆ 100 ಅಂಕಗಳ ಇಂಗ್ಲೀಷು, ಮಿಕ್ಕುಳಿದ ಭಾಷಾ ಅಲ್ಪಸಂಖ್ಯಾತರ ಮಕ್ಕಳಿಗೆ ಇಂಗ್ಲೀಷ್ ಬಗೆಗೆ 75 ಅಂಕಗಳು ಎನ್ನುವುದು ತಾರತಮ್ಯ ಎನಿಸುವುದೆನ್ನುವ ಆಕ್ಷೇಪಣೆ ಬಂದಿತು. ಅದು ನ್ಯಾಯವಾಗಿದೆ ಎಂದು ಮೇಲೆಯೇ ಕಾಣುತ್ತಿತ್ತು. ಅವರು ಆ 75ನ್ನು 100 ಮಾಡುವವರು ಇದ್ದರು. ಆಗ ನಾನು ಉಪಾಯ ಮಾಡಿ, ಭಾಷೆಗಳ ಗುಂಪಿನ ಅಂಕಣಕ್ಕೆ ಹೆಚ್ಚುವರಿ ಕನ್ನಡವನ್ನೂ ಸೇರಿಸುವಂತೆ ಹೇಳಿ, ಅದನ್ನು  ಸೇರಿಸುವುದರಲ್ಲಿ ಯಶಸ್ವಿಯೂ ಆದೆ.

ನಾನು ಈ ಮಾತನ್ನು ಹೇಳುತ್ತಲೂ ಚಿದಾನಂದಮೂರ್ತಿಯವರು, ನೀವು ಇದಕ್ಕೇಕೆ ಒಪ್ಪಿದ್ದಿರಿ? ಎಂದು ಕೇಳಿದರು. ಅವರು ನನ್ನನ್ನು ಅನಾಯಾಸವಾಗಿ ಪಡೆದ ಈ ಹೆಚ್ಚಿನ ಗೆಲುವಿಗೋಸುಗ ಅಭಿನಂದಿಸ ಬಹುದೆಂದು ಭಾವಿಸಿದ್ದೆ. ಆದರೆ ಅವರು ಸಂತೋಷ ವ್ಯಕ್ತಪಡಿಸಿರಲಿಲ್ಲ. ಆಗ ಒಪ್ಪಿಕೊಂಡಿರಿ ಎಂದು ನನ್ನನ್ನು ಕೇಳಿದ್ದ ನಾನು ಅವರಿಗೆ ಹೇಳಿದೆ- ‘ನೋಡಿ, ಚಿದಾನಂದಮೂರ್ತಿಗಳೇ, ಗೋಕಾಕರು ಹೇಳಿದ್ದುದು 150 ಅಂಕಗಳ ಕನ್ನಡ, ನಾವು ಕೇಳಿದ್ದುದು 125 ಅಂಕಗಳ ಕನ್ನಡ, ಈಗ ಪ್ರತ್ಯಕ್ಷದಲ್ಲಿ ನಾವು ಪಡೆದುದು 225 ಅಂಕಗಳ ಕನ್ನಡ ಓದುವವರಲ್ಲಿ ನೂರಕ್ಕೆ 95 ರಷ್ಟು ಜನರು ಇದೇ ರಾಜ್ಯದಲ್ಲಿ ಇಲ್ಲಿಯೇ ಇದ್ದು ತಮ್ಮ ಭವಿಷ್ಯಜ್ಜೀವನವನ್ನು ಕಳೆಯುತ್ತಾರೆ. ಯಾರಿಗೆ ರಾಜ್ಯದ ಹೊರಗೆ ಹೋಗಬೇಕಾಗಿರುವುದೊ ಅವರು ಹಿಂದಿ ಕಲಿಯುತ್ತಾರೆ. ಇಲ್ಲಿಯೇ ಇರಬೇಕೆನ್ನುವವರು ಮೂರು ಭಾಷೆಗಳ ಗೊಂದಲವಿಲ್ಲದೆ ಕನ್ನಡ ಇಂಗ್ಲೀಷುಗಳನ್ನು ಮಾತ್ರ ಓದಿಕೊಂಡು ಇರುತ್ತಾರೆ.

ನಾನು ಹೇಳಿದ ಮಾತು ಅವರ ಮನಸ್ಸಿಗೆ ಹಿಡಿಸಿತು, ಅವರಿಗೆ ಮನವರಿಕೆ ಆಯಿತು ಎಂದು ಆಗ ನನಗೆ ಅನಿಸಲಿಲ್ಲ. ಕ್ರಿಯಾ ಸಮಿತಿಯವರು ನನಗೆ ವಹಿಸಿಕೊಟ್ಟ ವಕಾಲತ್ತನ್ನು ನಾನು ಚೆನ್ನಾಗಿ ನಿರ್ವಹಿಸಿದೆನೆನ್ನುವ ಸಮಾಧಾನ ನನಗೆ ಇದ್ದಿತು. ಕನ್ನಡಕ್ಕೆ 125 ಅಂಕಗಳನ್ನು ತರಬೇಕೆಂದು ಅವರು ನನಗೆ ಹೇಳಿದ್ದರು. ಅದಕ್ಕೆ ಪ್ರತಿಯಾಗಿ ನಾನು 225 ಅಂಕಗಳನ್ನು ತಂದಿದ್ದೆ.

 

ಗೊತ್ತುವಳಿ ಸ್ವೀಕಾರ

ವಿಧಾನ ಮಂಡಲವು ಗೋಕಾಕ್ ವರದಿಯ ಶಿಫಾರಸುಗಳನ್ನು ಆಧರಿಸಿದ ಗೊತ್ತುವಳಿ ಯನ್ನು ಸ್ವೀಕಾರ ಮಾಡಿತು. ನಾವು ಹೂಡಿದ ಹೋರಾಟಕ್ಕೆ ವಿಜಯ ಲಭಿಸಿತು. ನಂಬಿದ ತತ್ವಕ್ಕೆ ದೃಢವಾಗಿ ನಿಂತು ಹೋರಾಟ ಮಾಡಿದರೆ ಯಶಸ್ಸು ಸಿಕ್ಕೇ ಸಿಕ್ಕುವುದೆನ್ನುವ ಮಾತು ಸಿದ್ಧಗೊಂಡಿತು. ಎಲ್ಲ ಭಾಷೆಗಳೂ ಪ್ರಥಮ ಭಾಷೆಗಳು, ಅವುಗಳ ಜತೆಗೆ ಕನ್ನಡವೂ ಪ್ರಥಮ ಭಾಷೆ ಎಂದು ಸರಕಾರವು ಘೋಷಿಸಿದಾಗ ನಾವು ಸಂತೋಷಗೊಂಡು ಸುಮ್ಮನಿದ್ದು ಬಿಟ್ಟಿದ್ದರೆ, ಕನ್ನಡವು ಈ ರಾಜ್ಯದಲ್ಲಿ ತನ್ನ ಪ್ರಾಮುಖ್ಯತೆ ಕಳೆದುಕೊಂಡು, ಹತ್ತರ ಕೂಡ ಹನ್ನೊಂದನೆಯ ಭಾಷೆಯಾಗಿ ಉಳಿದು ಬಿಡುತ್ತಿತ್ತು. ಅದಕ್ಕೆ ಸಿಂಹಾಸನದ ಸ್ಥಾನ ಇರುತ್ತಿರಲಿಲ್ಲ. ಏಕೈಕ ಪ್ರಥಮ ಭಾಷೆ ಎನ್ನುವ ಬಹುಮಾನಕ್ಕೆ ಅದು ಎರವಾಗುತ್ತಿತ್ತು. ಸರಕಾರವು ಒಂದು ಕರ್ಮಠ ಸಂಸ್ಥೆ. ಅದು ತಾನಾಗಿಯೇ ಏನನ್ನೂ ಕೊಡುವುದಿಲ್ಲ. ಕೊಡಲು ಮನಸ್ಸಿಲ್ಲದ ಸರಕಾರದ ಕೈಯಿಂದ ನಾವು ಕಿತ್ತುಕೊಳ್ಳ ಬೇಕಾಗುತ್ತದೆ. ಹೆದರುವವರನ್ನು ಕಂಡರೆ ಅದು ಅವರನ್ನು ಹೆದರಿಸುತ್ತದೆ. ಹೆದರಿಸುವವರನ್ನು ಕಂಡರೆ ಅದು ಅವರಿಗೆ ಹೆದರಿ ಹಿಂಜರಿಯುತ್ತದೆ. ಈಗ ಕನ್ನಡದ ವಿಷಯದಲ್ಲಿಯೂ ಆದುದು ಇದೇ. ತನ್ನದೇ ಆಗಬೇಕೆಂದು ಸರಕಾರ ನೋಡಿತು. ತನ್ನ ಮಾತು ನಡೆಯುವುದಿಲ್ಲವೆಂದಾಗ ಅದು ಜನರ ಮಾತಿಗೆ ಮಣಿಯಬೇಕಾಯಿತು. ಸರಕಾರ ಎನ್ನುವ ಈ ಸಂಸೆ್ಥಯಲ್ಲಿ ವಿಚಿತ್ರ ಸ್ವಭಾವಗಳು ಸೇರಿಕೊಂಡಿವೆ. ಅದು ಜನರೇ ಸ್ಥಾಪಿಸಿದ ಸಂಸ್ಥೆಯಾದರೂ, ಅದು ಕಾರ್ಯ ಮಾಡುತ್ತ ರೂಢಿಜನ್ಯವಾದ ಜಡತ್ವವನ್ನು  ತಂದುಕೊಂಡಿರುತ್ತದೆ. ಸರಕಾರವು ನಿಂತ ನೆಲದಿಂದ, ಜನರು ಅದಕ್ಕಿಂತ, ಮುಂದೆ ಬಹುದೂರ ಹೋಗಿರುತ್ತಾರೆ. ಅವರ ಆಶೋತ್ತರಗಳೊಂದಿಗೆ ಸ್ಪಂದಿಸುವ ಸರಕಾರ ಹಿಂದೆ ಉಳಿದಿರುತ್ತದೆ. ಕುಂಭಕರ್ಣನನ್ನು ಎಚ್ಚರಿಸುವ ಪ್ರಯತ್ನ ನಡೆದೇ ಇರುತ್ತದೆ. ಚುರುಕು ಮುಟ್ಟಿಸುವವರು ಬಂದಾಗಲೇ ಆ ಕುಂಭಕರ್ಣ ಎಚ್ಚರಗೊಳ್ಳುತ್ತಾನೆ. ಜಗತ್ತಿನಲ್ಲಿ ನಡೆದ ಪ್ರಗತಿಪರ ಹೋರಾಟಗಳನ್ನು ಗಮನಿಸಿದರೆ ಈ ಮಾತು ವೇದ್ಯವಾಗುತ್ತದೆ. ಅದು ಎಳೆಯುವವರು ಎಳೆದುಕೊಂಡು ಹೋದಷ್ಟು ದೂರ ಹೋಗುತ್ತದೆ. ಆ ಎಳೆತ ಸಡಿಲುಗೊಂಡರೆ ಅದರ ಗತಿಯೂ ಕೂಡ ಕಡಿಮೆ ಆಗುತ್ತದೆ. ಬಾರುಕೋಲು ಎತ್ತಿದಾಗಲೇ ನೇಗಿಲಿಗೆ ಹೂಡಿದ ಎತ್ತು ಮುಂದಕ್ಕೆ ಹೋಗುತ್ತದೆ. ಸರಕಾರವು, ತನ್ನನ್ನು ನಡೆಸುತ್ತಿರುವ ಜನರಂತೆ ಆಗಬೇಕು. ಆದರೆ ಅದು ಆಗುವುದಿಲ್ಲ. ಸ್ವಲ್ಪ ಕಾಲ ಆದಂತೆ ತೋರಿಸುತ್ತದೆ. ಆನಂತರ ಅದು ತನ್ನನ್ನು ನಡೆಸಲು ಬಂದವರನ್ನು ತನ್ನಂತೆಯೇ ಮಾಡಿಕೊಂಡು ಬಿಡುತ್ತದೆ. ಉರಿಯುವಂಥ ಆದರ್ಶವಾದ ಇಟ್ಟುಕೊಂಡು ಸರಕಾರ ನಡೆಸಲು ಬಂದ ಝಳಪಿಸುವ ಸಮಾಜವಾದಿಗಳನ್ನು ಕೂಡ ಅದು ತಣ್ಣಗೆ ಮಾಡಿ, ಅವರ ಕಳೆಯನ್ನು ಕಳೆದು, ಅವರನ್ನು ತನ್ನ ವ್ಯಸ್ಥೆಯ ಭಾಗವನ್ನಾಗಿ ಮಾಡಿಕೊಂಡಿರುವುದನ್ನು ಇತಿಹಾಸದ ಉದ್ದಕ್ಕೂ ನಾವು ಕಾಣುತ್ತ ಬಂದಿದ್ದೇವೆ. ಅವರು ಸರಕಾರಿ ಯಂತ್ರವನ್ನು ಬದಲಿಸುವುದಿಲ್ಲ. ಸರಕಾರಿ ಯಂತ್ರವೇ ಅವರನ್ನು ಬದಲಿಸಿರುತ್ತದೆ.

ಹೀಗಾಗಿ, ಚಲನೆ ಕಳೆದುಕೊಂಡ ಸರಕಾರಿ ಯಂತ್ರಕ್ಕೆ ಚಲನೆ ಒದಗಿಸಿಕೊಡಲು, ಹೊಸ ವಿಚಾರಗಳಿಂದ ಸನ್ನದ್ಧರಾದ ಜನರು ಹೊಸ ಹುಮ್ಮಸ್ಸಿನಿಂದ ಮುಂದೆ ಬರುತ್ತಾರೆ. ಅವರೊಂದಿಗೆ ಸರಕಾರ ಸ್ವಲ್ಪ ಕಾಲ ಮುಂದೆ ಓಡುತ್ತದೆ. ಅನಂತರ ಅದು ಮತ್ತೆ ತನ್ನ ಹಳೆಯ ಚಾಳಿಯನ್ನು ತಂದುಕೊಡುತ್ತದೆ. ಆ ಕಾರಣದಿಂದಲೇ ಮತ್ತೆ ಹೊಸ ಪ್ರಯತ್ನ, ಮತ್ತೆ ಹೊಸ ಹೋರಾಟ. ಇದು ಹೀಗೆಯೇ ನಿರಂತರವೂ ನಡೆದುಕೊಂಡು ಹೋಗುತ್ತದೆ.

ಸಾರ್ವಜನಿಕಕ್ಕೆ ಅನಿಸಿರುವ ಒಂದು ಸಂಗತಿಯ ಬಗೆಗೆ ಸರಕಾರಕ್ಕೆ ಅನಿಸಿರುವುದಿಲ್ಲ. ಅದು ತನ್ನಡೆಗೆ ಬರುವ ಪ್ರತಿಯೊಂದನ್ನೂ ತನ್ನಲ್ಲಿರುವ ಹಳೆಯ ಸೂತ್ರಕ್ಕೆ ಒರೆ ಹಚ್ಚಿ ನೋಡಬೇಕೆನ್ನುತ್ತದೆ. ಆಗ ಸಾರ್ವಜನಿಕದಲ್ಲಿಯ ಪ್ರಗತಿಶೀಲರು ಸರಕಾರಕ್ಕೆ ಇಷ್ಟೂ ಕೂಡ ತಿಳಿಯಬಾರದೇ ಎಂದುಕೊಂಡು ಅದಕ್ಕೆ ತಿಳಿಸಿಕೊಡುವ ಕೆಲಸವನ್ನು ಮಾಡುತ್ತಾರೆ. ಅದಕ್ಕೆ ತಿಳಿವಳಿಕೆ ಬರುವವರಿಗೆ ಅವರು ತಮ್ಮ ಕೆಲಸವನ್ನು ನಿಲ್ಲಿಸುವುದಿಲ್ಲ. ‘ಘ್ಛಿಈ್ಜ‘ಅ್ಜ ಮಾತಲ್ಲ, ತಿಳಿಸದೇ ತಿಳಿಯದು? ಎನ್ನುವ ತತ್ವಜ್ಞಾನಿಯ ಮಾತು ಇಲ್ಲಿ ನೆನಪಿಗೆ ಬರುತ್ತದೆ. ಜಡಸಂಸ್ಥೆಯಾದ ಸರಕಾರದಲ್ಲಿ ಪ್ರಗತಿಪರ ವಿಚಾರಗಳನ್ನು ಪ್ರತಿರೋಧಿಸುವ ಪ್ರತಿಬಂಧಕಗಳು ಅದರೊಳಗೇ ನಿರ್ಮಾಣಗೊಂಡಿರುತ್ತವೆ. ಅವುಗಳನ್ನು ನಿವಾರಿಸಿ ಪ್ರಗತಿ ಸಾಧಿಸುವ ಪ್ರಯತ್ನಗಳು ನಿರಂತರವೂ ನಡೆದಿರಬೇಕಾಗುತ್ತದೆ. ಅನೇಕ ಸಲ ಅದು ಮಾಡುತ್ತದೆ. ಆದರೆ ತಾನು ಏನು ಮಾಡುತ್ತಿರುವುದೆನ್ನುವುದು ಅದಕ್ಕೆ ತಿಳಿದಿರುವುದಿಲ್ಲ. ತಿಳಿಸಿಕೊಡುವ ಶತ ಪ್ರಯತ್ನ ಮಾಡಿದಾಗಲೇ ಅದಕ್ಕೆ ತಿಳಿಯುತ್ತದೆ.

ಕರ್ನಾಟಕ ಸರಕಾರವೂ ಕೂಡ ಎಲ್ಲ ಸರಕಾರಗಳಂತೆ ಒಂದು ಸರಕಾರವಾಗಿದೆ. ಸ್ವಂತದ ಆಸಕ್ತಿಗಳ ಬಗೆಗೆ ಅದಕ್ಕೆ ಕುರುಡುತನ ಇದ್ದೇ ಇರುತ್ತದೆ. ತನ್ನ ಭಾಷೆಯ ಬಗೆಗೆ ತಿಳಿವಳಿಕೆ ಇಲ್ಲದಿರುವುದೂ ಆ ಕುರುಡುತನಗಳಲ್ಲಿ ಒಂದು. ಅದರ ಅಂಧತ್ವ ನಿವಾರಣೆ ಮಾಡಲು ಜನಪರವಾದ ಆಂದೋಲನಗಳು ನಡೆಯುತ್ತವೆ. ಗೋಕಾಕ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ನಡೆದ ಹೋರಾಟವೂ ಕೂಡ ಸರಕಾರದ ಅಂಧತ್ವವನ್ನು ನಿವಾರಿಸುವ ಒಂದು ಪ್ರಯತ್ನವಾಗಿದೆ. ಈ ಆಂದೋಲನವು ಭಾಷೆಯ ಸೆಳೆತ ಏನಿದೆಯೆನ್ನುವ ಚುರುಕನ್ನು ಸರಕಾರಕ್ಕೆ ಮುಟ್ಟಿಸಿತು. ಭಾಷೆಯು ಜನರ ಜೀವಾಳಕ್ಕೆ ಹತ್ತಿದ ವಿಷಯವಾಗಿದೆ. ಭಾಷೆಯನ್ನು ಕಳೆದರೆ ಜನರ ಜೀವಾಳವನ್ನೇ ಕಳೆದಂತೆ ಆಗುತ್ತದೆ. ಆ ಜೀವಾಳವನ್ನು ಕಳೆದುಕೊಳ್ಳಲು ಸಿದ್ಧರಿಲ್ಲದ ಜನರು ಸರಕಾರದೊಂದಿಗೆ ಜಗಳ ಹೂಡಿದರು ಮತ್ತು ತಮ್ಮ ಜಗಳದಲ್ಲಿ ಅವರು ಜಯಶಾಲಿಗಳಾದರು. ಹತ್ತಿಬಿದ್ದು ಹೋರಾಟ ಮಾಡಿದರೆ ಯಶಸ್ಸು, ಕಟ್ಟಿಟ್ಟ ಬುತ್ತಿ ಎನ್ನುವುದು ಸಿದ್ಧಗೊಂಡಿತು. ನಟಸಾರ್ವಭೌಮ ಡಾ.ರಾಜಕುಮಾರ್ ಚಲನಚಿತ್ರ ಕಲಾವಿದರನ್ನು ಕರೆದುಕೊಂಡು ಬಂದು ಆಂದೋಲನಕ್ಕೆ ಅಪೂರ್ವ ಯಶಸ್ಸು ತಂದುಕೊಟ್ಟರು. ಕ್ರಿಯಾ ಸಮಿತಿಯು ಕ್ರಿಯಾಶೀಲ ಕೆಲಸ ಮಾಡಿ ಕನ್ನಡಕ್ಕೋಸುಗ ಹೋರಾಡಿದವರಿಗೆ ಹೊಸ ಕೋಡುಗಳನ್ನು ತಂದುಕೊಟ್ಟಿದ್ದಿತು. ಸರಕಾರವು ಕನ್ನಡಿಗರ ಬೇಡಿಕೆಗಳನ್ನು ನೆರವೇರಿಸಿ ಕೊಟ್ಟ ಬಗೆಗೆ ಕುವೆಂಪು ಅವರು ಸರಕಾರವನ್ನು ಅಭಿನಂಧಿಸಿದರು. ಯಾವುದೇ ಒತ್ತಡಗಳಿಗೆ ಮಣಿಯದೆ, ಕಷ್ಟನಿಷ್ಟುರಗಳಿಗೆ ಹೆದರದೆ ಆಂದೋಲನದಲ್ಲಿ ತೊಡಗಿ ಅದನ್ನು ಯಶಸ್ವಿಗೆ ಒಯ್ದು ಮುಟ್ಟಿಸಿದ ಜನರ ಮನಸ್ಸಿಗೆ ಕುವೆಂಪು ಮಾತಿನಿಂದ ವ್ಯಥೆ ಎನಿಸಿತು.

ಹೋರಾಟ ಮಾಡಿ ಯಶಸ್ಸನ್ನು ಸಂಪಾದಿಸಿದವರು ನಾವು, ಆದರೆ ಅಭಿನಂದನೆ ಅವರಿಗೆ ಎಂದು ಹೋರಾಟ ಮಾಡಿದವರ ಮನಸ್ಸಿಗೆ ಏನೋ ಒಂದು ಅಳುಕು. ಜನ ಇರುತ್ತಾರೆ, ಹೋಗುತ್ತಾರೆ ಸರಕಾರ ನಿರಂತರವೂ ಇರುವ ಸಂಸ್ಥೆ ಅದಕ್ಕೆ ಬುದ್ದಿ ಬಂದಿತಲ್ಲ ಎನ್ನುವುದು, ಕುವೆಂಪು ಅದನ್ನು ಅಭಿನಂದಿಸಿರುವುದಕ್ಕೆ ಕಾರಣವೆನಿಸಿರಬೇಕು. ಗುರಿ ಮುಟ್ಟುವುದಕ್ಕೆ ಕನ್ನಡದ ದಾರಿ ಇನ್ನೂ ದೂರ ಇದೆ. ಆದರೆ ಆ ದಾರಿಯಲ್ಲಿ ಒಂದು ಬಹುದೊಡ್ಡ ಮೈಲುಗಳನ್ನು ದಾಟಿ ಮುಂದಕ್ಕೆ ಬಂದಿದ್ದೇವೆನ್ನುವ ಉತ್ಸರ್ಗದ ಉನ್ಮೀಲಿತ ಭಾವನೆ ನಮ್ಮೆಲ್ಲರ ಮನಸ್ಸಿನಲ್ಲಿ ತುಂಬಿಕೊಂಡಿದ್ದಿತು. ನಮಗೆ ನುಡಿ ಕಲಿಸಿದ, ನಡೆ ಕಲಿಸಿದ ತಾಯಿನುಡಿಗೆ ನಮ್ಮಿಂದ ಕಿಂಚಿತ್ ಸಹಾಯ ಆಯಿತಲ್ಲ ಎನ್ನುವ ಸಂತೋಷ ಸಮಾಧಾನಗಳು ನಮ್ಮ ಮೈಮನಗಳನ್ನೆಲ್ಲ ಆವರಿಸಿಕೊಂಡಿದ್ದವು. ರಾಜ್ಯಾದ್ಯಂತ ಆ ಆಂದೋಲನದಲ್ಲಿ ದುಮುಕಿ ಪೊಲೀಸರಿಂದ ಬೆತ್ತಪ್ರಹಾರದ ರುಚಿಯನ್ನು ಕಂಡು, ನ್ಯಾಯಾಲಯದ ಮೊಕದ್ದಮೆಗಳನ್ನು ಎದುರಿಸುತ್ತಿರುವವರೆಲ್ಲರೂ ತಮ್ಮ ನೋವುಗಳನ್ನು ಮರೆತು, ತಮಗೆ ಸ್ವರ್ಗದ ಬಾಗಿಲು ಬಡಿಯುವುದಕ್ಕೆ ಇನ್ನೂ ಮೂರೇ ಬೆರಳು ಎಂಬಂತೆ ನಲಿದು ಕುಣಿದಾಡಿದರು. ನಾಡಿನ ತುಂಬೆಲ್ಲ ಸಭೆಗಳು ನಡೆದವು. ಜನರು ತಮ್ಮನ್ನು ತಾವೇ ಅಭಿನಂದಿಸಿ ಕೊಂಡರು. ನಾವು ಯಶಸ್ಸಿನ ಕಿರೀಟವನ್ನು ತಲೆಯಲ್ಲಿ ಇರಿಸಿಕೊಂಡು ವಿಜಯೋತ್ಸಾಹ ದಿಂದ ಧಾರವಾಡಕ್ಕೆ ಹಿಂದಿರುಗಿದೆವು. ಉನ್ಮೀಲಿತ ಭಾವನೆಯಿಂದ ನಾವು ಉತ್ಸಾಹಗೊಳ್ಳುವುದಕ್ಕೆ ಬಹು ಬಲವಾದ ಕಾರಣ ಇದ್ದಿತು. ನಿರುತ್ಸಾಹಗೊಳಿಸುವ ಸಂಗತಿಗಳು ನಮ್ಮ ಸುತ್ತಲೂ ನಿಬಿಡವಾಗಿ ಹೆಣೆದುಕೊಂಡಿದ್ದಾಗಲೂ ನಾವು ನಿರುತ್ಸಾಹ ಗೊಂಡಿರಲಿಲ್ಲ. ನಿಮ್ಮಿಂದೇನಾಗುತ್ತದೆಯೆಂದು ನಮ್ಮನ್ನು ಹೆದರಿಸುವ ಜನರು ಇದ್ದಾಗಲೂ ಕೂಡ ನಾವು ಹೆದರಲಿಲ್ಲ. ನಾವು ಕಂಡ ಸತ್ಯವೇ ನಿತ್ಯ ಎನ್ನುವ ಗೆಲಿಲಿಯೋನ ಮನೋಭಾವನೆ ನಮ್ಮಲ್ಲಿ ತುಂಬಿಕೊಂಡಿದ್ದಿತು.

ಭಾಷೆ ಸರಕಾರದ ಸುತ್ತ ತಿರುಗದೆ, ಭಾಷೆಯ ಸುತ್ತಲೂ ಸರಕಾರ ತಿರುಗ ಬೇಕೆನ್ನುವುದು ನಮ್ಮ ನಂಬುಗೆ ಆಗಿದ್ದಿತು. ಕನ್ನಡದ ಸಾರ್ವಭೌಮತ್ವದ ಬಗೆಗೆ ನಮ್ಮಲ್ಲಿ ಅದಮನೀಯ ವಿಶ್ವಾಸ ತುಂಬಿಕೊಂಡಿದ್ದಿತು. ಜನರ ಬಳಿಗೆ ಹೋಗಬೇಕೆನ್ನುವವರು ಜನರ ಭಾಷೆಯನ್ನು ಹಿಡಿದುಕೊಂಡು ಹೋಗಬೇಕು. ಜನರ ಭಾಷೆಯನ್ನು ಬಿಟ್ಟವರು ಯಾರೊಬ್ಬರೂ ಜನರ ಬಳಿಗೆ ಹೋಗುವುದು ಸಾಧ್ಯವೇ ಇಲ್ಲ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ ಎನ್ನುವುದು ನಮ್ಮ ಕರುಳಿಗೆ ಹತ್ತಿದ, ಅಂತಃಕರಣಕ್ಕೆ ಅಂಟಿಕೊಂಡ ಆತ್ಮೀಯ ವಿಷಯವೆನಿಸಿದ್ದಿತು. ಧಾರವಾಡಕ್ಕೆ ಹೋದ ಮೇಲೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ವಿಜಯೋತ್ಸವದ ಸಭೆ ನಡೆಯಿತು. ಬಹುದೊಡ್ಡ ಸಂದಣಿ ಅಲ್ಲಿ ಸೇರಿದ್ದಿತು. ಸಮಗ್ರ ಕರ್ನಾಟಕದ ಪ್ರಾಚೀನ ಅರ್ವಾಚಿನಗಳೆಲ್ಲವೂ ಅಲ್ಲಿ ಸಂಧಿಸಿದ್ದವು ಎಂದು ಹೇಳಿದರೆ ತಪ್ಪಾಗಲಾರದು. ಅಲ್ಲಿ ಈಗ ಇರುವವರೂ ಇದ್ದರು. ಚಿರಂತನವಾಗಿ ಇರುವವರೂ ಇದ್ದರು. ಕನ್ನಡವನ್ನು ಆ ಪ್ರಾಚೀನದಿಂದ ಹಿಡಿದು ಈ ಅರ್ವಾಚೀನದವರೆಗೆ ಕಟ್ಟಿ ಬೆಳೆಸಿ, ಅದಕ್ಕೆ ಪರಿಪುಷ್ಟಿ ಒದಗಿಸಿದ ಪುಣ್ಯ ಪುರುಷರೆಲ್ಲರೂ ಅಶರೀರರಾಗಿ ಅಲ್ಲಿಗೆ ಆಗಮಿಸಿ ಆ ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

ಮಹಾಚೇತನಗಳು ಸಮ್ಮಿಲನಗೊಂಡ ಆ ಸಭೆ ನಿಸ್ಸಂದೇಹವಾಗಿಯೂ ಅಭೂತ ಪೂರ್ವವೆನಿಸಿದ್ದಿತು. ಇಂಥ ವಿಜಯೋತ್ಸವದ ಸಮಾರಂಭಗಳು ದಿನ ದಿನವೂ ನಡೆಯುವುದಿಲ್ಲ. ಅವು ಅಪರೂಪಕ್ಕೆಂಬಂತೆ ಹಲವಾರು ತಲೆಮಾರುಗಳಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುತ್ತವೆ. ಅಂದಿನ ವಿಜಯೋತ್ಸವ ಸಮಾರಂಭಕ್ಕೆ ಐತಿಹಾಸಿಕ ಮಹತ್ವ ಏನಿದೆ ಎನ್ನುವುದನ್ನು ಕವಿ ಚೆನ್ನವೀರ ಕಣವಿಯವರು ಅದರ ಯಥಾರ್ಥ ಹಿನ್ನೆಲೆಯಲ್ಲಿ ಬಹು ಮಾರ್ಮಿಕವಾಗಿ ತಿಳಿಸಿಕೊಟ್ಟರು. ನೃಪತುಂಗನ ನಂತರ ಸಮಗ್ರ ನಾಡನ್ನು ಹಿಡಿದು ಅಲುಗಾಡಿಸಿದ ಮಹಾ ದೊಡ್ಡ ಕೆಲಸ ಇದೇ ಎಂದು ಹೇಳಿ, ಗೋಕಾಕ್ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ನಡೆಸಿದ ಹೋರಾಟವನ್ನು ಒಂದು ಎತ್ತರದ ವೇದಿಕೆಯ ಮೇಲೆ ಇರಿಸಿ ತೋರಿಸಿದರು. ಚೆನ್ನವೀರ ಕಣವಿಯವರ ಜತೆಗೆ ಆರ್.ಸಿ.ಹಿರೇಮಠ, ರಾ.ಯ.ಧಾರವಾಡಕರ, ಬಸವರಾಜ ಕಟ್ಟಿಮನಿ, ಚಂದ್ರಶೇಖರ ಪಾಟೀಲ, ಎಂ.ಎಂ.ಕಲಬುರ್ಗಿ, ಗೀತಾ ಕುಲಕರ್ಣಿ, ವ್ಹಿ.ಎಸ್.ಹಿರೇಗೌಡರ ಇವರೇ ಮೊದಲಾದ ಜನರು ಭಾರೀ ಅಂತಃಕರಣದಿಂದ ಮಾತನಾಡಿದರು. ನನ್ನ ಮೇಲೆ ಅವರು ಪ್ರಶಂಸೆಯ ಸುರಿಮಳೆಯನ್ನು ಸುರಿಸಿದಾಗ ನನ್ನ ಹೃದಯ ತೇವಗೊಂಡು, ನನ್ನ ಕಣ್ಣಲ್ಲಿ ನೀರು ಬಂದವು. ಅವರೆಲ್ಲರೂ ಸೇರಿ ಮಾಡಿದ ಕೆಲಸದ ಕಿರೀಟವನ್ನು ನನ್ನ ತಲೆಗೆ ತೊಡಿಸುತ್ತಾರಲ್ಲ ಎಂದು ನಾನು ಕಸಿವಿಸಿಪಟ್ಟುಕೊಂಡೆ. ಕನ್ನಡಿಗರ ತಾಯಿ ರಾಜರಾಜೇಶ್ವರಿ, ಭುವನೇಶ್ವರಿ ಮಾತೆ ತನ್ನ ಕೆಲಸಕ್ಕೋಸುಗ ನನ್ನನ್ನು ಉಪಯೋಗಿಸಿಕೊಂಡಳೆನ್ನುವುದು ನನ್ನ ಮಹಾಸುಕೃತವೆಂದು ನಾನು ಸಭೆಗೆ ತಿಳಿಸಿದೆ.

ಕೇಂದ್ರ ಕನ್ನಡ ಕ್ರಿಯಾ ಸಮಿತಿ ಹೂಡಿದ ಆಂದೋಲನದ ಹಿಂದೆ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೀರಕ್ಷೆ ಇದ್ದಿತು. ಇತಿಹಾಸ ಮಾಡಿದ ಆ ಸಂಸ್ಥೆ, ಇತಿಹಾಸವೆನಿಸುವ ಕೆಲಸವನ್ನು ನಮ್ಮಿಂದ ಮಾಡಿಸಿದ್ದಿತು. ಉಸ್ತಾದನು ಭಲೆ ಎಂದು ಬೆನ್ನು ಚಪ್ಪರಿಸಿ ಆಖಾಡಕ್ಕೆ ಕಳಿಸಿದ ಯುವಕ ಕುಸ್ತಿ ಒಗೆದು ಬರುತ್ತಾನೆ. ತಾಯಿ ಭುವನೇಶ್ವರಿ ನಮ್ಮ ಮೇಲೆ ಕೃಪೆ ಮಾಡಿದ್ದಳು. ಕರ್ನಾಟಕ ವಿದ್ಯಾವರ್ಧಕ ಸಂಘ ನಮ್ಮನ್ನು ಬೆನ್ನು ತಟ್ಟಿ ಕಳಿಸಿದ್ದಿತು. ನೃಪತುಂಗ ಪಂಪರಿಂದ ಹಿಡಿದು, ನಂದಳಿಕೆ ಕುವೆಂಪುರವರೆಗೆ, ಕನ್ನಡದ ಪುರುಷರೆಲ್ಲರ ಆಶೀರ್ವಾದ ನಮ್ಮ ಮೇಲೆ ಇದ್ದಿತು. ಎಲ್ಲಕ್ಕೂ ಮೇಲಾಗಿ ಶ್ರೀಸಾಮಾನ್ಯನ ಅಸಾಮಾನ್ಯ ಶಕ್ತಿ ನಮ್ಮಲ್ಲಿ ತುಂಬಿ ಕೊಂಡಿದ್ದಿತು. ಹುಲ್ಲುಕಡ್ಡಿಗೆ ಯಾವ ಬೆಲೆಯೂ ಇಲ್ಲದಿರಬಹುದು. ಆದರೆ ಅವುಗಳನ್ನೆಲ್ಲ ಸೇರಿಸಿ ಕಟ್ಟಿದಾಗ ರೂಪಾಂತರಗೊಂಡು, ಅವು ಒಂದು ದೊಡ್ಡ ಹೊರೆಯಾಗಿಯೇ ಪರಿವರ್ತನೆಗೊಳ್ಳುತ್ತವೆ. ರಾಜ್ಯಾದ್ಯಂತ ಸಹಸ್ರಾವಧಿ ಹುಡುಗರು, ಯುವಕರು, ಯುವತಿಯರು, ಪ್ರಬುದ್ಧರು ಒಂದೆ ಕಡೆ ನಿಂತು ಎಳೆದರೆನ್ನುವ ಕಾರಣದಿಂದಲೇ ಸರಕಾರವನ್ನು ಹಾದಿಗೆ ತರುವುದು ಸಾಧ್ಯವಾಯಿತು. ಅವರೆಲ್ಲರೂ ಹಿಂದೆ ನಿಂತು, ನನ್ನನ್ನು ಒಂದು ಮುಖ ಮಾಡಿಕೊಂಡು, ನನಗೆ ಬಾಯಿ ಒದಗಿಸಿಕೊಟ್ಟರೆನ್ನುವುದೇ, ನನಗೆ ಬಲವನ್ನು ತಂದುಕೊಟ್ಟು ನನ್ನಿಂದ ಕೆಲಸ ಮಾಡಿಸಿತು. ಕನ್ನಡ ಕ್ರಿಯಾ ಸಮಿತಿಯ ಒಳಗೆ ಹಾಗೂ ಹೊರಗೆ ಇದ್ದವರು ಯಾರೂ ನನಗಿಂತ ಕಡಿಮೆ ಆದವರಲ್ಲ. ನನ್ನಲ್ಲಿಲ್ಲದ ಯೋಗ್ಯತೆಗಳನ್ನು ಮೀರಿದವರೂ ಇದ್ದರು. ಅವರು ಹಿಂದೆ ನಿಂತು ನನ್ನನ್ನು ಮುಂದೆ ಮಾಡಿ ಕಳಿಸಿದ್ದರು. ಅವರ ಬಲ, ಯೋಗ್ಯತೆಗಳೆಲ್ಲವೂ ನನ್ನವೆಂದು ನಾನು ಬಗೆದರೆ ನಾನು ತುಂಬ ಸಣ್ಣವನಾಗುತ್ತೇನೆ. ಒಂದು ಕೆಲಸಕ್ಕೋಸುಗ ಅವರು ನನಗೆ ಕೊಟ್ಟ ಶಕ್ತಿಗಳು ನನ್ನವೆಂದೇ ನಾನು ಬಗೆದರೆ ನಾನು ಅಪಹಾಸ್ಯಕ್ಕೆ ಗುರಿ ಆಗುತ್ತೇನೆ. ತಮ್ಮಿಂದಲೇ ಆಗುವ ಕೆಲಸವನ್ನು ಅವರು ನನ್ನಿಂದ ಮಾಡಿಸಿ, ಬಹುಮಾನವನ್ನು ನನಗೆ ತಂದುಕೊಟ್ಟರು. ಆ ಬಹುಮಾನವೆಲ್ಲ ನನ್ನದೆನ್ನುವ ದಾಷ್ಟ್ಯ ನನಗೆ ಇಲ್ಲ. ಕನ್ನಡದ ಕೆಲಸಕ್ಕೆ ನಾನು ಉಪಯೋಗವಾದೆನಲ್ಲ ಎನ್ನುವ ಸಂತೋಷ ನನ್ನದಾಗಿದೆ. ಆ ಸ್ನೇಹಿತರೆಲ್ಲರೂ ಅಂದು ನನ್ನನ್ನು ಹೊಗಳಿ ಹೊನ್ನಶೂಲಕ್ಕೆ ಏರಿಸಿದಂತೆ ಮಾಡಿದರು. ಮೆಚ್ಚುಗೆಯ ಮಾತು ಅವರ ಬಾಯಿಂದ ಸಹಜವಾಗಿಯೇ ಬಂದಿದ್ದವು. ಆಂದೋಲನದ ಅವಧಿಯಲ್ಲಿ ನಿಷ್ಠುರದ ಪ್ರಸಂಗಗಳು ಬಂದಿದ್ದವು. ಕೆಲ ಪತ್ರಿಕೆ ಅನುದಾರದ ಮಾತುಗಳನ್ನು ಬರೆದಿದ್ದವು. ಅವುಗಳಿಗೆ ಕನ್ನಡದ ಹೋರಾಟದಲ್ಲಿ ನಾನು ಸಾಧಿಸುವ ಸ್ವಾರ್ಥವೇನೋ ಇರುವುದು ಕಂಡಿದ್ದಿತು. ತಮ್ಮ ಮೂಗಿನ ನೇರಕ್ಕೆ ನೋಡಿಕೊಳ್ಳುವ ಜನರು ಇದ್ದೇ ಇರುತ್ತಾರೆ. ಅವರ ಬಗೆಗೆ ಯಾರೊಬ್ಬರಿಂದಲೂ ಏನನ್ನೂ ಮಾಡುವುದಕ್ಕೆ ಆಗುವುದಿಲ್ಲ. ನಾಯಿ ಬೊಗಳುವುದೆಂದು ಐರಾವತ ಡೆದು ನಿಲ್ಲುವುದಿಲ್ಲ.

ಆದರೆ ಮನುಷ್ಯನಲ್ಲಿ ಅನಿಸಿಕೆ ಇರುತ್ತದೆ. ಅವನು ಒಂದು ಮರ ಅಲ್ಲ, ಒಂದು ಗೋಡೆ ಅಲ್ಲ, ಒಂದು ಬೆಟ್ಟ ಅಲ್ಲ. ಅವನ ಮೇಲೆ ಆಡುವ ಮಾತು, ಬರೆದ ಮಾತು ಪರಿಣಾಮ ಬೀರುತ್ತವೆ. ಅವುಗಳಿಂದ ನಾನು ನೊಂದುಕೊಂಡಿದ್ದೆ. ಆ ನೋವನ್ನು ಮಾಯಿಸುವ ಮುಲಾಮಿನಂತೆ ಅಂದು ನನ್ನ ಸ್ನೇಹಿತರು ಆಡಿದ ಮೆಚ್ಚುಗೆಯ ಮಾತು ನನ್ನ ಹೃದಯಕ್ಕೆ ಪರಿಹಾರದ ಕಣ್ಣೀರನ್ನು ತಂದಿದ್ದವು. ಹೆರಿಗೆಯ ನೋವನ್ನು ಅನುಭವಿಸುವ ತಾಯಿ, ಹೆರಿಗೆಯ ನಂತರ, ಮಗುವನ್ನು ನೋಡಿ ತನ್ನ ಹೆರಿಗೆಯ ನೋವನ್ನು ಮರೆಯುವಂತೆ ನನ್ನ ಸ್ಥಿತಿ ಆಗಿದ್ದಿತು. ಜೀವಮಾನದಲ್ಲಿ ಏನೋ ಒಂದು ದೊಡ್ಡ ಕೆಲಸ ಮಾಡುವ ಅವಕಾಶವನ್ನು ಒದಗಿಸಿಕೊಟ್ಟು, ಆ ಕೆಲಸವನ್ನು ನನ್ನಿಂದ ವಿಶ್ವಚೇತನ ಮಾಡಿಸಿತೆನ್ನುವ ವಿನೀತ ಭಾವನೆಯಿಂದ ನನ್ನ ಹೃದಯ ತುಂಬಿಕೊಂಡಿದ್ದಿತು. ಗದುಗಿನ ತೋಂಟದಾರ್ಯ ಮಠದಲ್ಲಿ ನಡೆದ ವಿಜಯೋತ್ಸವದ ಸಮಾರಂಭ ನನ್ನ ಮನಸ್ಸಿನಲ್ಲಿ ಸದಾಕಾಲವೂ ಹಚ್ಚ ಹಸಿರಾಗಿಯೇ ಉಳಿದಿರುತ್ತದೆ. ಉದ್ದಕ್ಕೂ ಕನ್ನಡ ಹೋರಾಟಗಾರರಿಗೆ ಸ್ಫೂರ್ತಿ ಪ್ರಚೋದನೆಗಳನ್ನು ಒದಗಿಸುತ್ತ, ಕ್ರಿಯಾ ಸಮಿತಿಯ ಸಭೆಗಳಲ್ಲಿ ಭಾಗವಹಿಸಿ, ಆಂದೋಲನ ನಿರತ ಜನರನ್ನು ಉತ್ಸಾಹಗೊಳಿಸುತ್ತ, ತಮ್ಮ ಮಿಂಚಿನ ಮಾತುಗಳಿಂದ ಹುಮ್ಮಸ್ಸನ್ನು ತುಂಬುತ್ತ ಸ್ವತಃ ಉಪವಾಸ ಸತ್ಯಾಗ್ರಹ ಕೈಕೊಂಡು ಸಾರ್ವಜನಿಕವೇ ಜುಂಮ್ಮೆನ್ನುವ ಪುಳಕವನ್ನು ಉಂಟು ಮಾಡಿದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳು, ಈ ವಿಜಯೋತ್ಸವದ ನಿಮಿತ್ತ ತಮ್ಮ ಮಠಕ್ಕೆ ದೀಪೋತ್ಸವ ಮಾಡಿಸಿದ್ದರು. ತಮ್ಮ ಸಂತೋಷವನ್ನು ಸಕಲರೊಂದಿಗೆ ಹಂಚಿಕೊಳ್ಳಲು ಅವರು ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಸದಸ್ಯರನ್ನೆಲ್ಲ ತಮ್ಮಮಠಕ್ಕೆ ಕರೆಸಿಕೊಂಡಿದ್ದರು. ಯುದ್ಧದಲ್ಲಿ ಗೆದ್ದು ಬಂದ ವೀರರನ್ನು ಸನ್ಮಾನಿಸುವಂಥ ವಾತಾವರಣವನ್ನು ಅವರು ಅಲ್ಲಿ ನಿರ್ಮಿಸಿದ್ದರು. ವಾದ್ಯ ಘೋಷಣೆಗಳೊಂದಿಗೆ ನಮ್ಮನ್ನೆಲ್ಲ ಅಲ್ಲಿ ಬರಮಾಡಿಕೊಂಡರು. ಅವರು ನನ್ನನ್ನೂ, ಕೇಂದ್ರ ಕ್ರಿಯಾ ಸಮಿತಿಯ ಜೀವಾಳವೆನಿಸಿದ ಆರ್.ಸಿ. ಹಿರೇಮಠ, ರಾ.ಯ.ಧಾರವಾಡಕರ, ಚೆನ್ನವೀರ ಕಣವಿ, ಗೀತಾ ಕುಲಕರ್ಣಿ, ಚಂದ್ರಶೇಖರ ಪಾಟೀಲರನ್ನು ಗೋಕಾಕ್ ಆಂದೋಲನದಲ್ಲಿ ಮಾಡಿದ ಕೆಲಸಕ್ಕೋಸುಗ ತಮ್ಮ ಹೃದಯವನ್ನು ಅಂತಃಕರಣದಿಂದ ಹಾಲಿನಲ್ಲಿ ಅದ್ದಿ ತಂದಿದ್ದರು. ಆಪ್ಯಾಯಮಾನದ ಅವರ ಮಾತು ನಮ್ಮಲ್ಲಿ ಹೊಸ ಶಕ್ತಿ, ಹುಮ್ಮಸ್ಸು ಹಾಗೂ ನಿರ್ಧಾರಗಳನ್ನು ಸ್ಫುರಣಗೊಳಿಸಿದ್ದಿತು.

ಗೋಕಾಕ ವರದಿಯ ಹೋರಾಟದಲ್ಲಿ ನಾವು ಸಂಪಾದಿಸಿದ ವಿಜಯವು ಕನ್ನಡದ ಹೋರಾಟದಲ್ಲಿ ಕೊನೆಯದಲ್ಲ ಎಂದು ನಾನು ತಿಳಿಸಿದ್ದೆ. ವಿಧಾನಸೌಧಕ್ಕೆ ನಾವು ಕನ್ನಡದ ತಾಯತ ಕಟ್ಟಬೇಕು. ಸರಕಾರಕ್ಕೆ ಕನ್ನಡದ ಬಗೆಗೆ ಬದ್ಧತೆ ಇಲ್ಲದಿದ್ದರೆ, ಸರಕಾರ ನಡೆಸುವವರು ತಮ್ಮನ್ನು ಕನ್ನಡದಲ್ಲಿ ಅದ್ದಿಕೊಳ್ಳದಿದ್ದರೆ, ಇಲ್ಲಿ ಕನ್ನಡ ಭಾಷೆಗಾಗಲಿ, ಕನ್ನಡ ನೆಲಕ್ಕಾಗಲಿ ರಕ್ಷಣೆ ಇಲ್ಲ. ಕನ್ನಡವು ದುರ್ಬಲಗೊಂಡರೆ ಕರ್ನಾಟಕವು ದುರ್ಬಲಗೊಳ್ಳುತ್ತದೆ. ಭಾಷೆ ಕಳೆದುಹೋಗದೆ, ಯಾವ ನಾಡೂ ಕಳೆದು ಹೋಗಲಾರದು. ಭಾಷೆಯನ್ನು ಕಳೆದುಕೊಳ್ಳುವುದಕ್ಕೋಸುಗ ನಾವು ಈ ನಾಡನ್ನು ಪಡೆದಿಲ್ಲ. ಕನ್ನಡ ವಿಜೃಂಭಿಸಿ, ಕರ್ನಾಟಕ ಸಮೃದ್ದಿಯನ್ನು ಪಡೆಯಬೇಕು. ಕನ್ನಡಿಗರು ತಮ್ಮ ಭಾಷೆಯನ್ನು ಅಪ್ಪಿಕೊಳ್ಳಬೇಕು. ಕನ್ನಡಿಗರಂತೆ, ಇಲ್ಲಿರುವ ಭಾಷಾ ಅಲ್ಪಸಂಖ್ಯಾತರೂ ಕನ್ನಡವನ್ನು ತಮ್ಮದೇ ಭಾಷೆ ಎಂಬಂತೆ ತಬ್ಬಿಕೊಳ್ಳಬೇಕು. ಕನ್ನಡವು ಕರ್ನಾಟಕದಲ್ಲಿರುವವರೆಲ್ಲರ ಭಾಷೆ ಎನಿಸಬೇಕು. ಬೇರೆ ರಾಜ್ಯದಿಂದ ಈ ಹಿಂದೆ ಬಂದವರೆಲ್ಲರಿಗೂ ಕರ್ನಾಟಕ ಆಶ್ರಯ ನೀಡಿದೆ. ಅವರೆಲ್ಲರೂ ಕನ್ನಡಿಗರೇ ಆಗಿದ್ದಾರೆ. ಈಗ ಬಂದವರೂ ಕೂಡ ಅದೇ ಪರಿವರ್ತನೆಗೆ ತಮ್ಮನ್ನು ಗುರಿಪಡಿಸಿಕೊಂಡು ಕನ್ನಡಿಗರೇ ಆಗಬೇಕು. “ಶಿಕ್ಷಣದಲ್ಲಿ, ಕಚೇರಿಯಲ್ಲಿ, ಉದ್ದಿಮೆಯಲ್ಲಿ, ಸಾರ್ವಜನಿಕದಲ್ಲಿ ಎಲ್ಲ ಕಡೆಗಳಲ್ಲಿ ಕನ್ನಡವು ಇರಬೇಕು. ಇದಕ್ಕೋಸುಗ ಕನ್ನಡಿಗರಲ್ಲಿ ನಿರಂತರ ಜಾಗೃತಿ ಇಲ್ಲದೇ ಹೋದರೆ, ಸ್ವಾತಂತ್ರ್ಯದಂತೆ, ನಮ್ಮ ನಾಡು ಹಾಗೂ ನುಡಿಗಳೂ ಕೂಡ ಕಳೆದು ಹೋಗಬಹುದೆನ್ನುವ ಭೀತಿ ಇದೆ. ಕನ್ನಡವು ಕರಗುತ್ತ ನಡೆದರೆ ನಮ್ಮ ನಾಡೂ ಕರಗುತ್ತದೆ. ಆ ಭೀತಿ ನಮ್ಮನ್ನು ಯಾವಾಗಲೂ ಹೆದರಿಸುತ್ತಲೇ ಇದೆ. ಭಾಷಾ ಅಲ್ಪಸಂಖ್ಯಾತರು ಈ ರಾಜ್ಯದಲ್ಲಿ ಪಂಚಮವೆನಿಸದೆ, ಈ ರಾಜ್ಯ ಶಕ್ತಿಯ ಚತುರ್ಥ ಅಂಗವೆನಿಸಿ ಬೆಳೆಯಬೇಕು. ಜಗದ್ಗುರು  ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡದ ವೈಭವವನ್ನು ಉಜ್ವಲ ಗೊಳ್ಳುವಂತೆ, ಪ್ರಜ್ವಲಗೊಳ್ಳುವಂತೆ ಮಾಡಬೇಕೆಂದು ಕರೆಕೊಟ್ಟರು. ಕನ್ನಡ ಹಾಗೂ ಕರ್ನಾಟಕಗಳ ಹಿತ ಸಂಬಂಧಗಳು ನೆರವೇರಬೇಕಾದರೆ ಕನ್ನಡಿಗರಲ್ಲಿ ಏಕತೆ ಉಳಿದು, ಗುರಿಯ ಕಲ್ಪನೆ ನಿಚ್ಚಳವಾಗಿದ್ದು, ಅದನ್ನು ಸಾಧಿಸುವ ನಿರಂತರ ಪ್ರಯತ್ನ ಹಾಗೂ ಛಲ ಇರಬೇಕು.

ಸರಕಾರವು ಕನ್ನಡವನ್ನು ಏಕೈಕ ಪ್ರಥಮ ಭಾಷೆಯೆಂದು ಒಪ್ಪಿಕೊಂಡಿರುವುದರಿಂದ ಬಹು ದೊಡ್ಡ ಕೆಲಸವಾಗಿದೆ. ಅದನ್ನು ಸಾಧಿಸಿದ ಸಂತೃಪ್ತಿಯಲ್ಲಿ, ನಾವು ಸಮಾಧಾನ ತಂದುಕೊಂಡು ವಿಸ್ಮೃತಿಯಲ್ಲಿ ಕಳೆದು ಹೋಗಬಾರದು. ಕನ್ನಡಪರ ಶಕ್ತಿಗಳೆಲ್ಲ ಸಮಾನ ಪ್ರಶ್ನೆ ಮಾಡಿಕೊಂಡು ಹೋರಾಡಿದರೆ ಅಪಯಶಸ್ಸು ಎನ್ನುವುದೇ ಇಲ್ಲ.ೊಈ ವಿಜಯೋತ್ಸವ ಸಮಾರಂಭ ಚಾಲುಕ್ಯರ ರಾಜಧಾನಿ ಬಾದಾಮಿಯವರೆಗೂ ಹೋಯಿತು. ಅಲ್ಲಿಯ ಜನರು ನನ್ನನ್ನು ಕರೆಸಿದಾಗ, ಹರ್ಷವರ್ಧನನನ್ನು ಸೋಲಿಸಿ, ಕರ್ನಾಟಕವನ್ನು ಉತ್ತರಾಪಥಕ್ಕೆ ವಿಸ್ತರಿಸಿದ ಪುಲಿಕೇಶಿಯ ಆಸ್ಥಾನಕ್ಕೆ ನಾನು, ಕನ್ನಡವು ಸಾಧಿಸಿದ ಗೆಲುವನ್ನು ವಿವರಿಸಿ ಹೇಳಲು ಹೋದಂತೆ ಆಗಿದ್ದಿತು. ಅಲ್ಲಿಯ ಸಭೆಗೆ ಕೂಡ ಕನ್ನಡದ ಜಗದ್ಗುರುಗಳೆನಿಸಿದ ಗದುಗಿನ ತೋಂಟದಾರ್ಯ ಮಹಾಸ್ವಾಮಿಗಳೇ ಆಗಮಿಸಿದ್ದರು. ಬಾದಾಮಿಗೆ ಹೋದಾಗ ಕಪ್ಪೆಯ ಅರೆಭಟ್ಟನ ನೆನಪಾಗಿ ಕನ್ನಡಿಗರ ಗುಣಧರ್ಮ ಏನಿರಬೇಕೆನ್ನುವುದನ್ನು ಅವನು ನಾಲ್ಕು ಸಾಲಿನ ಶಾಸನದಲ್ಲಿ ಮನೋಜ್ಞವಾಗಿ ನಿರೂಪಿಸಿದ್ದಾನೆ.

ಸಾಧುಂಗೆ ಸಾಧು

ಮಾಧುರ್ಯಂಗೆ ಮಾಧುರ್ಯಂ

ಭಾದಿಪ್ಪಕಲಿಗೆ ಕಲಿಯುಗ ವಿಪರೀತನ್

ಮಾಧವನೀತನ್ ಪೆರನಲ್ಲ

ಒಳ್ಳೆಯವರಿಗೆ ಒಳ್ಳೆಯವರಾಗಿ ಮಧುರ ಗುಣ ಉಳ್ಳವರೊಂದಿಗೆ ಮಧುರವಾಗಿ ವರ್ತಿಸುವವನು, ತೊಂದರೆ ಪಡಿಸುವ ದುಷ್ಟರಿಗೆ ದುಷ್ಟನಂತೆ ಕಾಣುವವನು. ಈ ಅಸಾಮಾನ್ಯನಾದ ಮಾಧವ ಆಗಿರುವನು. ಚಾಲುಕ್ಯ ಸಾಮ್ರಾಜ್ಯದ ಉಚ್ಚ್ರಾಯ ಕಲಾದಲ್ಲಿ ಚೀನಾ ಪರ್ಸಿಯಾಗಳಿಂದ ಜನರು ಅಲ್ಲಿಗೆ ಬಂದು ಹೋಗುತ್ತಿದ್ದುದನ್ನು ನೋಡುವಂಥ ಜನಪದ ಅದಾಗಿದೆ ಎನ್ನುವ ಕಾರಣದಿಂದಲೇ ವಿದೇಶದ ಜನರು ಅಲ್ಲಿಗೆ ಬಂದು ಹೋಗುತ್ತಿರುವ ಆಕರ್ಷಣೆಯನ್ನು ಅಲ್ಲಿ ಕಂಡಿದ್ದರು. ಈಗ ಕನ್ನಡ ಹಾಗೂ ಕನ್ನಡಿಗರ ಮೇಲ್ಮೆಯನ್ನು ಪಡೆದುಕೊಂಡ ಕರ್ನಾಟಕವು ಆ ಘನತೆಯನ್ನು ಪಡೆದು ಕೊಳ್ಳುತ್ತದೆ. ಆ ಕಾಲಕ್ಕೆ ಬಾದಾಮಿಯು ದೇಶದ ಉದ್ದಗಲಗಳ ತುಂಬೆಲ್ಲ ಕೂಡಿ ಕೊಂಡಿದ್ದಿತು. ಕರ್ನಾಟಕದ ಕೀರ್ತಿ ನೇಪಾಳ ಹಾಗೂ ಬಂಗಾಳಗಳಲ್ಲಿ ಪಸರಿಸಿಕೊಂಡಿದ್ದಿತು. ಪರಿಮಳ ಅದು ತನ್ನಷ್ಟಕ್ಕೇ ಇರುವುದಿಲ್ಲ. ಸುತ್ತಲೂ ತನ್ನ ಪರಿಮಳವನ್ನು ಬೀರುವ ಕನ್ನಡವು ಈಗ ಆ ಸುಗಂಧ ದ್ರವ್ಯದ ತನ್ನ ಪರಿಮಳವನ್ನು ಬೀರಬೇಕು. ಕರ್ನಾಟಕದ ಗತ ವೈಭವದ ಕಂಪು ನಮಗೆ ಇರಬೇಕು. ಆದರೆ ಹಳೆಯ ವೈಭವವನ್ನು ನೆನೆಯುತ್ತ ಕುಳಿತು ನಮ್ಮ ಇಂದು ನಾಳೆಗಳ ಸ್ಥಿತಿಯಿಂದ ಸುಧಾರಿಸುವುದಿಲ್ಲ. ಹಳೆಯ ನೆನಪು ನಮ್ಮನ್ನು ಹೆಚ್ಚಿನ ವೈಭವಕ್ಕೆ ಕರೆದೊಯ್ಯುವ ಪ್ರಚೋದನೆಯನ್ನು ನಮಗೆ ಒದಗಿಸಿಕೊಡಬೇಕು. ಪ್ರಾಚೀನತೆಯ ಸ್ಮರಣೆಯಿಂದ ನುಗೇನೂ ಪ್ರಯೋಜನವಿಲ್ಲ. ಅಪರಿಮಿತ ಸಾಧ್ಯತೆಗಳು ನಮ್ಮ ಈ ಕರ್ನಾಟಕದಲ್ಲಿ ಇವೆ. ಅದು ಕನ್ನಡ ಜನರಿಗೆ ತಿಳಿಯಬೇಕು. ಕರ್ನಾಟಕವು ಅವರಿಗೆ ಕುರುಡನ ಕೈಯಲ್ಲಿರುವ ವಜ್ರದಂತೆ ಆಗಬಾರದು. ವಜ್ರದ ಬೆಲೆ ಅದನ್ನು ಬಲ್ಲವರಿಗೇ ಗೊತ್ತು. ತಮ್ಮ ವಜ್ರಕ್ಕೆ ಹತ್ತಿರುವ ಕೊಳೆಯನ್ನು ತೆಗೆದು ಹಾಕಿ ಕನ್ನಡಿಗರು, ಅದನ್ನು ಥಳಥಳಿಸುವಂತೆ ಮಾಡಬೇಕು. ಕನ್ನಡಕ್ಕೆ ಇರುವ ಆತಂಕಗಳನ್ನು ನಿವಾರಣೆ ಮಾಡಿದರೆ, ಅದರ ಪ್ರಕಾಶ ನಿಚ್ಚಳವಾಗಿ ಬೆಳಗುತ್ತದೆ. ನಮಗೆ ಬಳುವಳಿಯಾಗಿ ಬಂದಿರುವ ಕನ್ನಡವನ್ನು ಉಳಿಸಿಕೊಂಡು, ಅದರ ಪ್ರಯೋಜನವನ್ನು ಹೆಚ್ಚಿಸಿಕೊಂಡು, ಅದನ್ನು ನಮ್ಮ ಮುಂದಿನ ಪೀಳಿಗೆಗೆ ನಾವು ಬಿಟ್ಟು ಹೋಗುವುದಿದೆ. ಭಾಷೆಯನ್ನು ಬದುಕಿಸುವವನು, ಬೆಳೆಸುವವನು, ಒಂದು ಜನಾಂಗದ ಅಭಿವ್ಯಕ್ತಿಗೆ ಬಹು ದೊಡ್ಡ ಬಾಯಿಯನ್ನು ಒದಗಿಸಿಕೊಡುತ್ತಾನೆ.

ಕರ್ನಾಟಕವೆಂಬ ಹೆಸರನ್ನು ಪಡೆದಿರುವ ಈ ಪ್ರದೇಶದಲ್ಲಿ ಕನ್ನಡದ ಉಸಿರು ಅಖಂಡವಾಗಿ ಇರುವಂತೆ ನಾವು ನೋಡಿಕೊಳ್ಳಬೇಕು. ಜಗತ್ತಿನಲ್ಲಿ ನಾವು ಎಲ್ಲಿಯೇ ಹೋದರೂ ಕರ್ನಾಟಕದವರೆಂದು ಹೇಳಬೇಕಾಗುತ್ತದೆ. ನಿಮ್ಮ ಭಾಷೆ ಯಾವುದೆಂದು ಯಾರಾದರೂ ಕೇಳಿದರೆ, ನಾವು ಅವರಿಗೆ ಕನ್ನಡ ಎಂದು ತಿಳಿಸಬೇಕಾಗುತ್ತದೆ. ನಾವು ಕನ್ನಡಿಗರೆನ್ನುವ ಹೆಸರನ್ನು ಉಳಿಸಿಕೊಂಡರೆ ನಾವು ಕನ್ನಡಿಗರೆನಿಸುತ್ತೇವೆ. ಕನ್ನಡತನವನ್ನು ನಾವು ಕಳೆದುಕೊಂಡರೆ ನಮಗೆ ಅಸ್ತಿತ್ವವೇ ಇರುವುದಿಲ್ಲ. ನಾವು ಹೇಳ ಹೆಸರಿಲ್ಲದ ಜನ ಎನಿಸಬಾರದೆಂದಿದ್ದರೆ ನಾವು ಕನ್ನಡವನ್ನು ಉಳಿಸಿಕೊಳ್ಳಬೇಕು. ಕನ್ನಡದವರಾಗಿ ಉಳಿಯಬೇಕು. ಭಾಷೆ ಕಳೆದುಕೊಂಡ ಜನರು ಯಾರೊಬ್ಬರೂ ಬದುಕಿಲ್ಲ. ರಾಜ್ಯದ ಸುತ್ತಲೂ ಅನೇಕ ಸಲ ಸಂಚರಿಸಿರುವ ನನಗೆ ಶ್ರೀಸಾಮಾನ್ಯರಲ್ಲಿ ಕನ್ನಡದ ಬಗೆಗೆ ಅಪಾರವಾದ ಸದಿಚ್ಛೆ, ಸದ್ಭಾವನೆ ತುಂಬಿಕೊಂಡಿರುವುದು ಕಂಡಿದೆ. ಆ ಕಾರಂಜಿಯ ಸೆಲೆಗಳಿಂದ ನಾವು ವಿಪುಲ ಪ್ರಯೋಜನಗಳನ್ನು ಪಡೆದುಕೊಳ್ಳುವುದು ಸಾಧ್ಯವಿದೆ. ಆ ಕಾರಂಜಿಗಳು ಕಲುಷಿತಗೊಳ್ಳದಂತೆ ನಾವು ನೋಡಿಕೊಳ್ಳಬೇಕು. ನಮ್ಮ ಮೂಲ ನೆಲೆಯೇ ಕೆಟ್ಟು ಹೋದರೆ ನಾವು ಮೂಲೆಗುಂಪಾಗಿ ಹೋಗುತ್ತೇವೆ. ನಾವು ಬೆಳೆದವರು ಯಾರೇ ಇದ್ದರೂ, ನಮ್ಮ ಶಕ್ತಿಯೆಲ್ಲವೂ ಕೆಳಗೆ ಇರುವ ನಿಶ್ಶಕ್ತ ಜನರಿಂದಲೇ ಬಂದಿದೆ. ನಾವು ಪಡೆದಿರುವ ಶಕ್ತಿಯಲ್ಲಿ ಒಂದಷ್ಟನ್ನು ಅವರಿಗೆ ಕೊಟ್ಟು ಅವರನ್ನೂ ಸಶಕ್ತರನ್ನಾಗಿ ಮಾಡಿ, ಅದರಿಂದ ಮರಳಿ ಶಕ್ತಿಯನ್ನು ಪಡೆಯುವುದಿದೆ.

ಕನ್ನಡ ಹಾಗೂ ಕರ್ನಾಟಕಗಳಿಗೆ ನಾವು ಶಕ್ತಿಯನ್ನು ಕೊಟ್ಟರೆ, ಕನ್ನಡ ಹಾಗೂ ಕರ್ನಾಟಕಗಳು ನಮಗೆ ಮರಳಿ ಆ ಶಕ್ತಿಯನ್ನು ಕೊಡುತ್ತವೆ. ಗೋಕಾಕ್ ವರದಿಯನ್ನು ಸರಕಾರ ಸ್ವೀಕರಿಸಿದ ಕೆಲ ದಿನಗಳ ನಂತರ ವಿ.ಕೃ.ಗೋಕಾಕರು ಒಂದು ದಿನ ಹುಬ್ಬಳ್ಳಿಗೆ ಬಂದರು. ಅವರು ಡಾ.ನರೇಗಲ್ಲರಲ್ಲಿ ಉಳಿದುಕೊಂಡಿದ್ದರು. ಮೊದಲಿನಿಂದಲೂ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ನಾನು ಅವರನ್ನು ಕಾಣಲು ಹೋದೆ. ಮುಖತಃ ಒಬ್ಬರನ್ನೊಬ್ಬರು ಕಂಡು ಮಾತನಾಡದೇ ಇದ್ದ ಕಾಲದಲ್ಲಿ ನಾವು ಪತ್ರ ಮುಖೇನ ಸ್ನೇಹಿತರಾಗಿದ್ದೆವು. ಅವರ ಬಗೆಗೆ ನನ್ನಲ್ಲಿ ಗೌರವ ಇದ್ದಿತು. ನನ್ನ ಬಗೆಗೆ ಅವರಲ್ಲಿ ಪ್ರೀತಿ ಇದ್ದಿತು. ನಾವು ಕೇಂದ್ರ ಕ್ರಿಯಾ ಸಮಿತಿಯ ವೂಲಕ ಗೋಕಾಕ್ ವರದಿಯು ಅನುಷ್ಠಾನದ ಬಗೆಗೆ ನಡೆಸಿದ ಹೋರಾಟವನ್ನು ಅವರು ಸಂಪೂರ್ಣ ಅವಲೋಕಿಸುತ್ತ ಬಂದಿದ್ದರು. ಅವರು ನನ್ನನ್ನು ಕಾಣುತ್ತಲೂ, ಮುಖದಲ್ಲಿ ವಿಶಾಲವಾದ ನಗೆಯನ್ನು ತುಳುಕಿಸುತ್ತ ಮುಂದೆ ಬಂದು, ನನ್ನನ್ನು ತಮ್ಮ ವಿಶಾಲವಾದ ಬಾಹುಗಳಿಂದ ಬಿಗಿಯಾಗಿ ತಬ್ಬಿಕೊಂಡು ಪುಟ್ಟಪ್ಪ ನಾನು ಹೇಳಿದ್ದೆ, ನೀವು ಮಾಡಿದಿರಿ (I said it, you did it) ಬಹಳ ದೊಡ್ಡ ಕೆಲಸ ನಿಮ್ಮಿಂದ ಆಯಿತು. ವಿ.ಕೃ. ಗೋಕಾಕರು ಆಡಿದ ಈ ಪ್ರಶಂಸೆಯ ಮಾತಿಗಿಂತಲೂ ನನಗೆ ಹೆಚ್ಚಿನ ಇನ್ನು ಬೇರೆ ಯಾವ ಬಹುಮಾನ ಬೇಕು? ನೀವು, ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳೂ ಬೆಳೆಯುವಂಥ ಸರ್ವ ಸಾಮಾನ್ಯ ಸೂತ್ರವನ್ನು ರೂಪಿಸಿದ್ದೀರಿ. ನಿಮ್ಮ ವರದಿ ಕರ್ನಾಟಕಕ್ಕೆ ಮಾತ್ರವಲ್ಲ. ಭಾರತದ ಬೇರೆ ಯಾವ ರಾಜ್ಯಕ್ಕೂ ಅನ್ವಯವಾಗಬಹುದು. ಎಲ್ಲೆಲ್ಲಿ ಕನ್ನಡ ಎಂದಿದೆಯೋ, ಅದನ್ನು ತೆಗೆದು, ಅದರ ಸ್ಥಳದಲ್ಲಿ ಆಯಾ ರಾಜ್ಯದ ಪ್ರಾದೇಶಿಕ ಭಾಷೆಯ ಹೆಸರನ್ನು ಸೇರಿಸಿದರೆ, ನಿಮ್ಮ ವರದಿಯು ಆ ರಾಜ್ಯಕ್ಕೆ ಸಂಬಂಧಿಸಿದ ವರದಿಯೆ ಆಗುತ್ತದೆ. ಹೌದು, ನೀವು ಅದನ್ನು ಸರಿಯಾಗಿ ಗ್ರಹಿಸಿದ್ದೀರಿ ಎಂದು ಗೋಕಾಕರು ನನ್ನೆದುರು ಹೇಳುತ್ತ, ಭಾಷಾ ಅಲ್ಪಸಂಖ್ಯಾತರು ಯಾವ ರಾಜ್ಯದಲ್ಲಿಯೇ ಇದ್ದರೂ ಅವರು ಆ ರಾಜ್ಯದ ಜನರೊಂದಿಗೆ ಅಲ್ಲಿಯ ಭಾಷೆಯೊಂದಿಗೆ ಬೆರೆತುಕೊಳ್ಳಬೇಕು. ಅವರು, ತಮ್ಮ ಭಾಷೆ ಯಾವುದೇ ಇದ್ದರೂ ಅದು ಬೆಳೆಯುವುದಕ್ಕೆ, ತಾವು ಅಲ್ಪಸಂಖ್ಯಾತರಾಗಿರುವ ರಾಜ್ಯದಲ್ಲಿ ಸ್ಥಳ ಇಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು. ಕನ್ನಡವು ಕರ್ನಾಟಕದಲ್ಲಿ ಬೆಳೆದೀತಲ್ಲದೆ, ಮಹಾರಾಷ್ಟ್ರದಲ್ಲಿ ಬೆಳೆಯಲಾಗದು. ಅದೇ ರೀತಿ ಮರಾಠಿಯು ಮಹಾರಾಷ್ಟ್ರದಲ್ಲಿ ಬೆಳೆದೀತಲ್ಲದೆ ಕರ್ನಾಟಕದಲ್ಲಿ ಬೆಳೆಯಲಾರದು. ಇಂಗ್ಲೀಷಿನ ಜ್ಞಾನ ಇರಬೇಕಾದರೆ ಇಂಗ್ಲೀಷನ್ನು ಕಲಿಯಬೇಕೆಂದು ಅದನ್ನು ಶಿಕ್ಷಣದ ಮಾಧ್ಯಮವನ್ನಾಗಿ ಮಾಡಿಕೊಳ್ಳಬೇಕು ಎಂದರ್ಥವಲ್ಲ. ಮಕ್ಕಳಿಗೆ ತಿಳಿಯುವ ಭಾಷೆಯಲ್ಲಿಯೇ ತಿಳಿಸಿಕೊಡಬೇಕು. ತಿಳಿಯಲಿಲ್ಲದ ಭಾಷೆಯಲ್ಲಿ ತಿಳಿಸಿದುದು ಅವರಿಗೆ ಸರಿಯಾಗಿ ತಿಳಿಯುವುದಿಲ್ಲ. ಭಾಷೆ ತಿಳಿದುಕೊಂಡ ಅನಂತರ ಜ್ಞಾನ ಪಡೆಯಬೇಕಾಗುತ್ತದೆ. ಆ ಕಾರಣದಿಂದಲೇ ಮಕ್ಕಳು ಇಂಗ್ಲೀಷಿನ ಮೂಲಕ ಕಲಿಸಬಾರದು. ಆದರೆ, ಇಂಗ್ಲೀಷನ್ನು ಅವರಿಗೆ ಒಂದು ಭಾಷೆಯಾಗಿ ಚೆನ್ನಾಗಿ ಕಲಿಸಬೇಕು. ಅವರ ಈ ವಿವರಣೆ ಇಂಗ್ಲೀಷ್ ಮೋಹಾಂಧರ ಕಣ್ಣೆದುರಿನ ಕತ್ತಲೆಯನ್ನು ಕಳೆಯಬೇಕು. ಗೋಕಾಕರನ್ನು ಬೀಳ್ಕೊಡುವಾಗ ಅವರು ನನಗೆ ಇನ್ನೂ ಒಂದು ಮಾತು ಹೇಳಿದರು. ಸರಕಾರವನ್ನು ಈಗ ನೀವು ಒಪ್ಪಿಸಿದ್ದೀರಿ. ಆದರೆ ನೀವು ಸರಕಾರವನ್ನು ಒಪ್ಪಿಸುವುದು ಇನ್ನೂ ಬಹಳಷ್ಟು ಇದೆ. ಕನ್ನಡಿಗರ ಉಸಿರು ತುಂಬುವುದು ಮುಗಿಯಿತೆಂದು ನೀವು ತಿಳಿಯಬಾರದು.