‘ಹಿಂದುಳಿದ ವರ್ಗ’ ಎಂದರೆ ಯಾವುದು? ಇದರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಲಕ್ಷಣಗಳಾವುವು? ಈ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಯಾವ ಕಾಲದಲ್ಲಿಯೂ ದೊರೆತಿಲ್ಲ. ಹಿಂದುಳಿದ ವರ್ಗಗಳು ಕುರಿತಂತೆ ಮಾಡುವ ವ್ಯಾಖ್ಯಾನ ಗೊಂದಲ ರಹಿತವಾಗಿಲ್ಲದೆ ಇರುವುದಕ್ಕೆ ಮುಖ್ಯ ಕಾರಣವೆಂದರೆ ಆ ವರ್ಗಗಳನ್ನು ಗುರುತಿಸುವ ಹಾಗೂ ವ್ಯಾಖ್ಯಾನಿಸುವ ಅಗತ್ಯ ಮತ್ತು ತುರ್ತು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವುದು. ಹಿಂದುಳಿದವರ್ಗ ಒಂದು ನಿಶ್ಚಲವಾದ, ನಿಶ್ಚಿತವಾದ ವರ್ಗವಲ್ಲ. ಅದೊಂದು ಸಾಪೇಕ್ಷವಾದ ಪರಿಕಲ್ಪನೆ. ಹಿಂದುಳಿದ ವರ್ಗಗಳನ್ನು ಗುರುತಿಸುವ ಸಮಸ್ಯೆ ಭಾರತದ ಜಾತಿ ಆಧಾರಿತ ಸಮಾಜಕ್ಕೆ ವಿಶಿಷ್ಟವಾದುದಾಗಿದೆ. ಶ್ರೇಣೀಕೃತ ತತ್ವದ ಆಧಾರದ ಮೇಲೆ ರಚಿಸಲ್ಪಟ್ಟಿರುವ ವಿವಿಧ ಜಾತಿ ಮತಗಳನ್ನು ಒಳಗೊಂಡ ಸಮಾಜದಲ್ಲಿ ಪ್ರತಿಯೊಂದು ಜಾತಿಯೂ ಮತ್ತೊಂದಕ್ಕೆ ಹೋಲಿಸಿದರೆ ಮುಂದುವರೆದ ಅಥವಾ ಹಿಂದುಳಿದ ಜಾತಿಯಾಗಿರುತ್ತದೆ. ಐತಿಹಾಸಿಕ ಕಾರಣಗಳಿಂದಾಗಿ ಕೆಲವು ಜಾತಿಗಳು ವಿಶೇಷ ಸವಲತ್ತುಗಳನ್ನು ಹೊಂದಿರುವ ಕಾರಣದಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಾಗಿ ಉಳಿದ ಜಾತಿ/ಕೋಮುಗಳಿಗಿಂತ ಮುಂದುವರೆದ ಜಾತಿಗಳು ಎನಿಸಿಕೊಂಡಿವೆ. ಉಳಿದ ಇತರೆ ಜಾತಿ/ಕೋಮುಗಳು ಹಿಂದುಳಿದವುಗಳಾಗಿವೆ. ಹಿಂದುಳಿದ ಜಾತಿಗಳೆಲ್ಲವನ್ನೂ ಒಟ್ಟಾಗಿ ‘ಇತರೆ ಹಿಂದುಳಿದ ವರ್ಗಗಳು’ ಎಂದು ಗುರುತಿಸಲಾಗಿದ್ದರೂ ಅವುಗಳಲ್ಲಿಯೆ ಪರಸ್ಪರ ಅಸಮಾನತೆ, ಮೇಲು ಕೀಳೂ ಎನ್ನು ಭಾವನೆಯನ್ನು ಕಾಣುತ್ತೇವೆ. ಇವುಗಳನ್ನು ಕೆಲವು ಹೆಚ್ಚು ಹಿಂದುಳಿದುವುಗಳು ಮತ್ತೆ ಕೆಲವು ಸ್ವಲ್ಪ ಕಡಿಮೆ ಹಿಂದುಳಿದವುಗಳಾಗಿವೆ. ಕೆಲವು ಜಾತಿಗಳು ಆರ್ಥಿಕ ಕಾರಣಗಳಿಂದ ಹಿಂದುಳಿದವುಗಳಾಗಿದ್ದರೆ, ಮತ್ತೆ ಕೆಲವು ಶೈಕ್ಷಣಿಕ, ಸಾಂಸ್ಕೃತಿಕ ಕಾರಣಗಳಿಂದ ಹಿಂದುಳಿದವುಗಳಾಗಿವೆ. ಎಲ್ಲ ದೃಷ್ಟಿಯಿಂದಲೂ ಅತ್ಯಂತ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳು ಎಂದು ಭಾರತದ ಸಂವಿಧಾನದಲ್ಲಿಯೆ ಗುರುತಿಸಲಾಗಿದೆ.

ಹಿಂದುಳಿದ ವರ್ಗಗಳನ್ನು ಗುರುತಿಸುವ ಸಮಸ್ಯೆ ಹುಟ್ಟಿಕೊಂಡಿದ್ದು ಪ್ರಜಾಪ್ರಭುತ್ವ ಮಾದರಿ ಸರ್ಕಾರದ ಹುಟ್ಟಿನೊಂದಿಗೆ. ಭಾರತದಲ್ಲಿ ಸ್ವಾತಂತ್ರ್ಯಾನಂತರ ಹಿಂದುಳಿದ ವರ್ಗಗಳ ಸಮಸ್ಯೆ ಹೆಚ್ಚು ಸ್ಪಷ್ಟವಾದ ರೂಪವನ್ನು ಪಡೆಯಿತು ಎಂದು ಹೇಳಬಹುದು. ಆದರೆ ಸ್ವಾತಂತ್ರ್ಯಪೂರ್ವದಲ್ಲಿಯೆ ಮೈಸೂರು ಸಂಸ್ಥಾನದಲ್ಲಿ ಪ್ರಜಾಪ್ರಭುತ್ವ ಮಾದರಿಯ ಜನಪ್ರತಿನಿಧಿ ಸರ್ಕಾರದ ಪ್ರಯೋಗದೊಂದಿಗೆ ಹಿಂದುಳಿದ ವರ್ಗಗಳನ್ನು ಗುರುತಿಸುವ ಸಮಸ್ಯೆಯೂ ಹುಟ್ಟಿಕೊಂಡಿದ್ದನ್ನು ನಾವು ಕಾಣಬಹುದು. ರಾಜಕೀಯ ಅಧಿಕಾರದ ಪಾಲುದಾರರನ್ನಾಗಿ ಜನರ ಪ್ರತಿನಿಧಿಯನ್ನು ಆರಿಸುವ ಪ್ರಯೋಗ ಮೈಸೂರು ಸಂಸ್ಥಾನದಲ್ಲಿ 19ನೆಯ ಶತಮಾನದ ಕೊನೆಯಿಂದಲೆ ಪ್ರಾರಂಭವಾಯಿತು(ಕೇವಲ ನಾಮಮಾತ್ರಕ್ಕೆ ಅವರು ಪ್ರತಿನಿಧಿಗಳಾಗಿದ್ದರು ಎನ್ನುವುದು ನಿಜವಾದರೂ ಇಲ್ಲಿ ಅದು ಅಷ್ಟು ಮುಖ್ಯವಲ್ಲ). ಹಾಗೆ ಪ್ರತಿನಿಧಿಗಳನ್ನು ಆರಿಸುವಾಗ ಶ್ರೇಣೀಕೃತ ಸಮಾಜದಲ್ಲಿ ಅದರ ಪ್ರಯೋಜನ ಪಡೆದಿದ್ದು, ಅದಕ್ಕಿಂತಲೂ ಹೆಚ್ಚಾಗಿ ಸರ್ಕಾರಿ ಸೇವೆಯಲ್ಲಿ ಅಧಿಕಾರಿಗಳಾಗಿ, ನೌಕರರಾಗಿ ನೇಮಕಗೊಳ್ಳುವ ಸವಲತ್ತು ಪಡೆದಿದ್ದು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ಮುಂದುವರೆದ ಜಾತಿಗಳಾದ ಬ್ರಾಹ್ಮಣರು. ಸರ್ಕಾರದ ಅಧಿಕಾರಿ ಹಾಗೂ ನೌಕರರಾಗಿ ನೇಮಕಗೊಳ್ಳುವುದು ಅಧಿಕಾರದ, ಪ್ರತಿಷ್ಠೆಯ ಸಂಕೇತವಾದದ್ದರಿಂದ ಇನ್ನುಳಿದ ಜಾತಿಗಳ ಜನರೂ ತಾವು ಅವುಗಳಿಂದ ವಂಚಿತರಾದೆವೆಂಬ ಭಾವನೆಯು ಬೆಳೆಯಿತು. ತಮಗೂ ಅಂತಹ ಅಧಿಕಾರ ಹಾಗೂ ಸವಲತ್ತುಗಳು ದೊರೆಯಬೇಕು ಎನ್ನುವ ಉದ್ದೇಶವನ್ನಿಟ್ಟುಕೊಂಡು ರಾಜಕೀಯವಾಗಿ ಉಳಿದ ಜಾತಿಗಳನ್ನು ಸಂಘಟಿಸುವ ಪ್ರಯತ್ನದ ಪರಿಣಾಮದಿಂದಾಗಿಯೆ ಹಿಂದುಳಿದ ವರ್ಗಗಳನ್ನು ಗುರುತಿಸುವ ಸಮಸ್ಯೆ ಹುಟ್ಟಿಕೊಂಡಿತು.

ಹಿಂದುಳಿದ ವರ್ಗಗಳ ಅರ್ಥ ನಿರೂಪಣೆ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆಯದಾಗಿರುತ್ತದೆ. ಅಲ್ಲದೆ ಒಂದೇ ಪ್ರಾಂತ್ಯದಲ್ಲಿ ಕಾಲ ಬದಲಾದಂತೆ ಹಿಂದುಳಿದ ವರ್ಗದ ಸ್ವರೂಪವೂ ಬದಲಾಗುತ್ತದೆ. ಬ್ರಾಹ್ಮಣರಲ್ಲದ ಎಲ್ಲ ಜಾತಿಗಳು; ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಪರಿಶಿಷ್ಟ ಜಾತಿಗಳಷ್ಟೆ ಹಿಂದುಳಿದವರು; ಬ್ರಾಹ್ಮಣರು ಮತ್ತು ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಬಲರಾದ ಜಾತಿಗಳನ್ನು ಹೊರತುಪಡಿಸಿ ಉಳಿದ ಇತರರೆಲ್ಲರೂ. ಹೀಗೆ ಹಿಂದುಳಿದ ವರ್ಗ ಎನ್ನುವುದು ವಿವಿಧ ರೀತಿಯಲ್ಲಿ ವ್ಯಾಖ್ಯಾನಕ್ಕೊಳಗಾಗಿದೆ. ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ವಿಶೇಷ ಸವಲತ್ತುಗಳನ್ನು ಕೊಡುವ ಉದ್ದೇಶದಿಂದ 15, 16 ಮತ್ತು 340ನೆಯ ವಿಧಿಯಲ್ಲಿ ಅದರ ಉಲ್ಲೇಖ ಬಂದಾಗ ಅದರ ಅರ್ಥ ನಿರೂಪಣೆಯ ಬಗೆಗೆ ಸಾಕಷ್ಟು ಗೊಂದಲ ಉಂಟಾಯಿತು. ಅಂತಿಮವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರು ನಾವು (ಹಿಂದುಳಿದ ವರ್ಗಗಳನ್ನು ವ್ಯಾಖ್ಯಾನಿಸುವ) ಕೆಲಸವನ್ನು ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ಬಿಟ್ಟಿದ್ದೇವೆ. ಸರಕಾರದ ಅಭಿಪ್ರಾಯದ ಪ್ರಕಾರ ಯಾವ ಸಮುದಾಯ ಹಿಂದುಳಿದಿದೆಯೊ ಅದೇ ಹಿಂದುಳಿದ ವರ್ಗ’ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕರಡು ಸಂವಿಧಾನ ಸಮಿತಿಯ ಸದಸ್ಯರಾದ ಟಿ.ಟಿ.ಕೃಷ್ಣಮಾಚಾರಿಯವರು ಇದರ ಉಲ್ಲೇಖ ಮುಂದೆ ವಕೀಲರುಗಳಿಗೆ ಸ್ವರ್ಗವಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಹಿಂದುಳಿದ ವರ್ಗಗಳ ಅರ್ಥ ನಿರೂಪಣೆಯಲ್ಲಿ ಉಂಟಾದ ಗೊಂದಲಕ್ಕೆ ಕಾರಣವನ್ನು ತಿಳಿದುಕೊಳ್ಳಬೇಕಾದರೆ ನಾವು ಅದರ ಉಗಮ ಮತ್ತು ಬೆಳೆದುಬಂದ ಇತಿಹಾಸವನ್ನು ಗಮನಿಸಬೇಕಾಗುತ್ತದೆ. ಈ ದೃಷ್ಟಿಯಿಂದ ಅತ್ಯಂತ ಪ್ರಶಸ್ತವಾದ ಇತಿಹಾಸವೆಂದರೆ ಮೈಸೂರು ಸಂಸ್ಥಾನದ ಇತಿಹಾಸ. ಏಕೆಂದರೆ ಮೊಟ್ಟಮೊದಲಿಗೆ ಹಿಂದುಳಿದ ವರ್ಗಗಳ ಸ್ಪಷ್ಟ ವ್ಯಾಖ್ಯಾನ ನೀಡಿದ ಕೀರ್ತಿ ಒಡೆಯರ ಆಳ್ವಿಕೆಯ ಮೈಸೂರು ಸಂಸ್ಥಾನಕ್ಕೆ ಸಲ್ಲುತ್ತದೆ.

ಭಾರತದಲ್ಲಿ ಪ್ರಥಮವಾಗಿ ‘ಪ್ರಜಾಪ್ರಭುತ್ವ ಮಾದರಿ ಸರ್ಕಾರ’ದ ಪ್ರಯೋಗ ನಡೆದಿದ್ದು ಮೈಸೂರು ಸಂಸ್ಥಾನದಲ್ಲಿ. ಇದರ ಪರಿಣಾಮದಿಂದಾಗಿ ‘ಪ್ರಜಾಪ್ರತಿನಿಧಿ ಸಭೆ’ ಎನ್ನುವ ಸಂಸ್ಥೆ ಉದಯವಾಯಿತು. ಇಲ್ಲಿ ಪ್ರಜಾಪ್ರತಿನಿಧಿಗಳು ಎಂದರೆ ವಿವಿಧ ಜಾತಿ/ಕೋಮುಗಳಿಗೆ ಸೇರಿದ ಜನರ ನಾಯಕರು. ಪ್ರಜಾಪ್ರತಿನಿಧಿಗಳಿಗೆ ವಿದ್ಯಾರ್ಹತೆ ಸಾಮಾಜಿಕವಾಗಿ ಉನ್ನತ ಸ್ಥಾನ ಹಾಗೂ ಆರ್ಥಿಕ ಅನುಕೂಲತೆ ಮೊದಲಾದ ಅರ್ಹತೆಗಳನ್ನು ನಿಗದಿಪಡಿಸಿದ್ದರಿಂದ ಎಲ್ಲ ಜಾತಿಗಳಿಗೂ ಪ್ರಜಾಪ್ರತಿನಿಧಿ ಸಭೆಯ ಸದಸ್ಯತ್ವ ಸಿಗುವಂತಿರಲಿಲ್ಲ. ಇಂತಹ ಪರಿಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯತ್ವವನ್ನು ಪಡದವರು ಸಹಜವಾಗಿಯೆ ಬ್ರಾಹ್ಮಣರು ಹಾಗು ಆರ್ಥಿಕವಾಗಿ ಮುಂದುವರೆದ, ನಗರೀಕರಣದ ಪ್ರಭಾವಕ್ಕೊಳಗಾದ ಪ್ರಬಲ ಜಾತಿ/ಕೋಮಿನವರು. ಹೊಸ ರಾಜಕೀಯ ವ್ಯವಸ್ಥೆಯಲ್ಲಿ ಬ್ರಾಹ್ಮಣರು ತಮ್ಮ ಪ್ರಭಾವವನ್ನು ಗಣನೀಯವಾಗಿ ಬೆಳೆಸಿಕೊಂಡರು. ಬೇರೆಲ್ಲ ಜಾತಿಗಳಿಗಿಂತ ಮೊದಲು ಪಾಶ್ಚಾತ್ತೀಕರಣಕ್ಕೊಳಗಾಗಿ ಆಧುನಿಕ ವಿದ್ಯಾಭ್ಯಾಸ ಮತ್ತು ಜೀವನೋಪಾಯಕ್ಕೆ ಸರಕಾರಿ ನೌಕರಿಯನ್ನು ಆರಿಸಿಕೊಂಡ ಇವರು ರಾಜಕೀಯ ಅಧಿಕಾರ ಹಾಗೂ ಪ್ರಭಾವವನ್ನು ಬೆಳೆಸಿಕೊಂಡರು. ಅತ್ಯಂತ ಅಲ್ಪಸಂಖ್ಯಾತರಾದ ಬ್ರಾಹ್ಮಣರು ಶೇಕಡ 90ಕ್ಕೂ ಹೆಚ್ಚು ಸರಕಾರಿ ಹುದ್ದೆಗಳನ್ನು ಪಡೆದುಕೊಂಡಿದ್ದು ಉಳಿದ ಜಾತಿಗಳಿಗೆ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಮುಂದುವರೆದ ಲಿಂಗಾಯತರು ಹಾಗೂ ಒಕ್ಕಲಿಗ ಜನಾಂಗ ಮತ್ತು ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಕಾಲದಲ್ಲಿ ಸಾಕಷ್ಟು ಉನ್ನತ ಹುದ್ದೆಗಳನ್ನು ಪಡೆದಿದ್ದ ಮುಸಲ್ಮಾನರಿಗೆ ಅಸಮಾಧಾನವನ್ನು ಉಂಟುಮಾಡಿತು. ಅದೇ ಸಮಯದಲ್ಲಿ ಮೈಸೂರಿನ ಅರಸರಿಗೂ ಬಹುಸಂಖ್ಯಾತ ಜನರನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಗತ್ಯವಾಗಿತ್ತು. ಮೈಸೂರು ಸಂಸ್ಥಾನದ ಆಡಳಿತ ಬ್ರಿಟಿಷರ ಪರೋಕ್ಷ ನಿಯಂತ್ರಣಕ್ಕೊಳಗಾಗಿದ್ದು, ಬ್ರಿಟಿಷರ ಪ್ರತಿನಿಧಿಗಳಾಗಿ ದಿವಾನರು ಮದ್ರಾಸಿನಿಂದ ನೇಮಕಗೊಳ್ಳುತ್ತಿದ್ದರು. ಈ ರೀತಿಯ ಪರೋಕ್ಷ ನಿಯಂತ್ರಣದಿಂದ ಮುಕ್ತಿ ಪಡೆದು ಸ್ವತಂತ್ರವಾಗಿ ಆಡಳಿತ ನಡೆಸುವ ಹಂಬಲ ಮೈಸೂರು ಸಂಸ್ಥಾನದ ಅರಸರಿಗಿತ್ತು.

ಮೈಸೂರು ಅರಸರ ಹಂಬಲವನ್ನು ಈಡೇರಿಸುವ ಬೆಳವಣಿಗೆಗಳು ಈ ಶತಮಾನದ ಆದಿಯಲ್ಲಿ ಸಂಸ್ಥಾನದ ರಾಜಕೀಯದಲ್ಲಿ ಕಾಣಿಸಿಕೊಂಡವು. ನೇಮಕಗೊಂಡ ದಿವಾನರೆಲ್ಲರೂ ಹೊರಗಿನವರಾಗಿದ್ದು, ಅದರಲ್ಲೂ ಬ್ರಾಹ್ಮಣರಾಗಿದ್ದರಿಂದ ಮೈಸೂರಿನವರನ್ನು ದಿವಾನರನ್ನಾಗಿ ನೇಮಕ ಮಾಡಿಕೊಳ್ಳಬೇಕೆಂಬ ಬೇಡಿಕೆ ಪ್ರಾರಂಭವಾಯಿತು. ಅದರ ಪರಿಣಾಮದಿಂದ ಮೊದಲನೇ ಮೈಸೂರಿನ ಬ್ರಾಹ್ಮಣರು ನಂತರ ಬ್ರಾಹ್ಮಣೇತರ ದಿವಾನರು ನೇಮಕಗೊಂಡರು. ಈ ಬೆಳವಣಿಗೆಯು ದಿವಾನರ ನೇಮಕಕ್ಕಷ್ಟೇ ಸೀಮಿತವಾಗಿರಲಿಲ್ಲ. ಸಂಸ್ಥಾನದ ಆಡಳಿತದಲ್ಲಿ ಬ್ರಾಹ್ಮಣರ ಪ್ರಾಬಲ್ಯದಿಂದ ಅಸಮಾಧಾನ ಗೊಂಡಿದ್ದ ಬ್ರಾಹ್ಮಣೇತರರು ಬ್ರಾಹ್ಮಣ ವಿರೋಧಿ ಚಳವಳಿಯನ್ನು ಮದ್ರಾಸಿನಿಂದ ಮೈಸೂರಿಗೆ ತಂದ ಕೀರ್ತಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ ಕೆ.ಸಿ.ರೆಡ್ಡಿಯವರಿಗೆ ಸಲ್ಲುತ್ತದೆ. ಲಿಂಗಾಯತ, ಒಕ್ಕಲಿಗ ಮತ್ತು ಮುಸ್ಲಿಂ ಮುಖಂಡರುಗಳನ್ನು ಒಟ್ಟುಗೂಡಿಸಿ ‘ಪ್ರಜಾಮಿತ್ರ ಮಂಡಳಿ’ ಎನ್ನುವ ಸಂಘಟನೆಯನ್ನು ಇವರು ಪ್ರಾರಂಭಿಸಿದರು. ಪ್ರಜಾಮಿತ್ರ ಮಂಡಳಿಯ ನಿಯೋಗವೊಂದು 1918ರಲ್ಲಿ ಮಹಾರಾಜರನ್ನು ಭೇಟಿಯಾಗಿ ಒಂದು ಮನವಿ ಪತ್ರ ಸಲ್ಲಿಸಿತು. ನಿಯೋಗದ ಸದಸ್ಯರು ತಮ್ಮನ್ನು ‘‘ಕೋಮುವಾದಿಗಳ ಗುಂಪು’’ ಎಂದು ಕರೆದುಕೊಂಡರು. ಅ ಸಂದರ್ಭದಲ್ಲಿ ‘ಕೋಮುವಾದಿ’ ಪದವು ನೇತ್ಯಾತ್ಮಕ ಅರ್ಥ ಪಡೆದುಕೊಂಡಿರಲಿಲ್ಲ. ‘ಹಿಂದುಳಿದ ಕೋಮುಗಳ ಪರವಾಗಿರುವವರು ಎನ್ನುವುದಷ್ಟೆ ಅದರ ಅರ್ಥವಾಗಿತ್ತು.’ ಮನವಿ ಪತ್ರವನ್ನು ಸ್ವೀಕರಿಸಿದ ಮಹಾರಾಜರು ಹಿಂದುಳಿದ ಜಾತಿ/ಪಂಗಡಗಳಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ಕೊಡಲು, ಯಾವ ಕ್ರಮವನ್ನು ಕೈಗೊಳ್ಳಬಹುದು ಹಾಗೂ ಅಂತಹ ಸವಲತ್ತಿಗೆ ಅರ್ಹರಾದ ವರ್ಗಗಳಾವುವು ಎಂದು ನಿರ್ಧರಿಸಲು ಸರ್.ವೆಲೆಸ್ಲಿ, ಸಿ.ಮಿಲ್ಲರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಿದರು. ಇದನ್ನು ಭಾರತದ ಪ್ರಪ್ರಥಮ ಹಿಂದುಳಿದ ವರ್ಗಗಳ ಆಯೋಗವೆಂದು ನಾವು ಕರೆಯಬಹುದು.

ಆಡಳಿತವನ್ನು ಹಿಂದುಳಿದ ಜಾತಿ/ಪಂಗಡಗಳಿಗೆ ಪ್ರಾತಿನಿಧ್ಯವನ್ನು ಹೆಚ್ಚಿಸಲು ಯಾವ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದು ಎನ್ನುವ ಬಗ್ಗೆ ಪರಿಶೀಲಿಸಿ ಶಿಫಾರಸ್ಸು ಮಾಡು ವುದು ಮಿಲ್ಲರ್ ಸಮಿತಿಯ ಮುಖ್ಯ ಕೆಲಸಗಳಲ್ಲೊಂದಾಗಿತ್ತು. 15 ಆಗಸ್ಟ್ 1919ರಲ್ಲಿ ಸಮಿತಿಯು ವರದಿಯನ್ನು ಸಲ್ಲಿಸಿತು. ಆ ವರದಿಯಲ್ಲಿ ಸರಕಾರಿ ನೌಕರಿ ಯಲ್ಲಿ ಸಾಕಷ್ಟು ಪ್ರಾತಿನಿಧ್ಯ ಹೊಂದಿರದ ಜಾತಿಗಳನ್ನು ಹಿಂದುಳಿದ ಜಾತಿಗಳು ಎಂದು ಪರಿಗಣಿಸಲಾಯಿತು. ಈ ಮಾನದಂಡದಂತೆ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳು ಹಿಂದುಳಿದ ಜಾತಿಗಳು ಎಂದು ಗುರುತಿಸಲ್ಪಟ್ಟವು. ಬ್ರಾಹ್ಮಣರ ಪ್ರಾಬಲ್ಯದ ವಿರುದ್ಧ ಬ್ರಾಹ್ಮಣೇತರ ಜಾತಿಗಳ ಹೋರಾಟವನ್ನು ಇತಿಹಾಸದಲ್ಲಿ ಬ್ರಾಹ್ಮಣೇತರ ಚಳವಳಿ ಎಂದು ಗುರುತಿಸಲಾಗಿದೆ. ಇಲ್ಲಿ ಹಿಂದುಳಿದಿರುವಿಕೆಯನ್ನು ನಿರ್ಧರಿಸುವಲ್ಲಿ ವೈಜ್ಞಾನಿಕ ಆಧಾರಗಳಿಗಿಂತ ರಾಜಕೀಯ ಒತ್ತಡದಷ್ಟೆ ಪ್ರಮುಖವಾಗಿದ್ದನ್ನು ನಾವು ಗಮನಿಸಬಹುದು. ಮಿಲ್ಲರ್ ವರದಿಯ ಶಿಫಾರಸ್ಸುಗಳನ್ನು ಒಪ್ಪಿದ ಮೈಸೂರು ಸರಕಾರವೇ 1921ರಂದು ಒಂದು ಆದೇಶವನ್ನು ಹೊರಡಿಸಿತು. ಆ ಆದೇಶದಲ್ಲಿ ಏಳು ವರ್ಷಗಳಲ್ಲಿ ಎಲ್ಲಾ ಇಲಾಖೆಗಳ ಪ್ರಮುಖ ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಕಛೇರಿಗಳಲ್ಲಿ ಹಿಂದುಳಿದ ಕೋಮುಗಳ ಸದಸ್ಯರ ಪ್ರಮಾಣ ವನ್ನು ತಿಳಿಸಲಾಗಿತ್ತು. ಹಿಂದುಳಿದ ಕೋಮುಗಳೆಂದರೆ ಯಾವುವು ಎನ್ನುವುದಕ್ಕೆ ಕಟ್ಟುನಿಟ್ಟಾದ ವ್ಯಾಖ್ಯಾನ ನೀಡುವ ಅಗತ್ಯ ಇಲ್ಲ ಎನ್ನುವುದು ಸರಕಾರದ ಅಭಿಪ್ರಾಯ ವಾಗಿತ್ತು. ಮೈಸೂರಿನ ಮಹಾರಾಜರಿಗೆ ಬ್ರಾಹ್ಮಣೇತರರ ಬೆಂಬಲ ಗಳಿಸಲು ಮಿಲ್ಲರ್ ವರದಿಯು ಒಂದು ಪ್ರಮುಖ ಸಾಧನವಾಗಿ ಪರಿಣಮಿಸಿತು. ಬ್ರಾಹ್ಮಣೇತರ ಜಾತಿಗಳನ್ನು ಹಿಂದುಳಿದ ವರ್ಗಗಳು ಎಂದು ಗುರುತಿಸಿದರೂ ಅವುಗಳಲ್ಲಿಯೆ ಆಂತರಿಕ ವೈರುಧ್ಯ ಮತ್ತು ಮಿಲ್ಲರ್ ವರದಿಯ ಶಿಫಾರಸ್ಸಿನ ಅನುಷ್ಠಾನದಿಂದ ಕೇವಲ ಕೆಲವೇ ಬಲಾಢ್ಯ ಜಾತಿಗಳಿಗೆ ಅನುಕೂಲವಾಗಿದ್ದನ್ನು ನಾವು ಕಾಣುತ್ತೇವೆ.

ಹಿಂದುಳಿದ ವರ್ಗಗಳ ಪ್ರಶ್ನೆ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ನೆನೆಗುದಿಗೆ ಬಿದ್ದಿತ್ತು. ಸ್ವಾತಂತ್ರ್ಯಾನಂತರ ಆ ಪ್ರಶ್ನೆ ಭಾರತದ ರಾಜಕೀಯದಲ್ಲಿ ಅದರಲ್ಲೂ ಮೈಸೂರು ಮತ್ತು ಮದ್ರಾಸಿನಲ್ಲಿ ಅತ್ಯಂತ ಪ್ರಮುಖವಾದ ಪ್ರಶ್ನೆಯಾಗಿ ಉದ್ಭವಿಸಿದ್ದನ್ನು ನಾವು ಕಾಣುತ್ತೇವೆ. ಬ್ರಾಹ್ಮಣೇತರ ಚಳವಳಿಯ ಹಿನ್ನೆಲೆ ಇದಕ್ಕೆ ಮುಖ್ಯ ಕಾರಣವಾಗಿತ್ತು. ಮೈಸೂರಿನಲ್ಲಿ ರಾಜ್ಯದ ಪುನರ್ವಿಂಗಡಣೆಯಾಗುವವರೆಗೆ ಅಂತಹ ಬದಲಾವಣೆಯನ್ನೇನೂ ನಾವು ಕಾಣುವುದಿಲ್ಲ. ಸಂವಿಧಾನದಲ್ಲಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಹಾಗೂ ಅವುಗಳಿಗೆ ವಿಶೇಷ ಸವಲತ್ತುಗಳನ್ನೇ ಒದಗಿಸುವ ಬಗ್ಗೆ ಉಲ್ಲೇಖಿತವಾಗಿದ್ದರೂ ಬ್ರಾಹ್ಮಣೇತರ ಜಾತಿಗಳಲ್ಲಿ ಪ್ರಬಲ ಕೋಮುಗಳಾದ ಲಿಂಗಾಯತರು ಹಾಗೂ ಒಕ್ಕಲಿಗರ ಪ್ರಾಬಲ್ಯದ ವಿರುದ್ಧ ಇತರ ಹಿಂದುಳಿದ ಜಾತಿಗಳು ಸಾಕಷ್ಟು ಕಾಲ ಸಂಘಟಿತರಾಗಿರಲಿಲ್ಲ. ಲಿಂಗಾಯತರು ಹಾಗೂ ಒಕ್ಕಲಿಗರು ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಪ್ರಬಲ ರಾಗಿದ್ದುದು ಮತ್ತು ಉಳಿದ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಪ್ರಬಲ ಕೋಮುಗಳ ದಬ್ಬಾಳಿಕೆ ಅಷ್ಟಾಗಿ ಕಂಡುಬರದಿದ್ದುದು, ಬಹುಶಃ ಹಿಂದುಳಿದ ಜಾತಿಗಳು ಒಂದಾಗಿ ಸಂಘಟನೆಯಾಗುವ ಅವಶ್ಯಕತೆ ಇಲ್ಲದಂತೆ ಮಾಡಿರಬಹುದು. ಆದರೆ ರಾಜ್ಯ ಪುನರ್ವಿಂಗಡಣೆಯಾದ ನಂತರ ಮದ್ರಾಸ್, ಹೈದರಾಬಾದ್, ಬಾಂಬೆ ಕರ್ನಾಟಕದ ಕೆಲವು ಭಾಗಗಳು ರಾಜ್ಯಕ್ಕೆ ಸೇರಿಸಲ್ಪಟ್ಟಿದ್ದರಿಂದ ಇಡೀ ರಾಜ್ಯಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸುವ ಅನಿವಾರ್ಯತೆ ಉಂಟಾಯಿತು. ಈ ಸಮಸ್ಯೆಯನ್ನು ಬಗೆಹರಿಸುವ ದೃಷ್ಟಿಯಿಂದ ಆಗಿನ ಮೈಸೂರು ಸರಕಾರ 1958ರಲ್ಲಿ ಒಂದು ಹೊಸ ಆಜ್ಞೆಯನ್ನು ಹೊರಡಿಸಿತು. ಆದರೆ ಈ ಆಜ್ಞೆ ಹಿಂದುಳಿದ ವರ್ಗಗಳನ್ನು ನಿರ್ಧರಿಸುವಲ್ಲಿ ಹೊಸತೇನನ್ನೂ ಹೇಳಲಿಲ್ಲ. ಬದಲಾಗಿ ಮಿಲ್ಲರ್ ವರದಿಯು ಅನುಸರಿಸಿದ ಮಾನದಂಡವನ್ನೆ ಆಧಾರವಾಗಿಟ್ಟುಕೊಂಡು ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿ/ಕೋಮುಗಳನ್ನು ಹಿಂದುಳಿದವುಗಳು ಎಂದು ತೀರ್ಮಾನಿಸಿತು. ಈ ಆಜ್ಞೆಯಂತೆ ಶೇಕಡಾ 57ರಷ್ಟು ಮೀಸಲಾತಿಯನ್ನು ಹಿಂದುಳಿದ ವರ್ಗಗಳಿಗೆ ನೀಡಲಾಯಿತು. ಈ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪರಿಶುದ್ಧ ಜಾತಿಗಳು ಸೇರಿರಲಿಲ್ಲ. ಆ ಜಾತಿಗಳಿಗೆ ಶೇಕಡ 18ರಷ್ಟು ಮೀಸಲಾತಿಯನ್ನು ಸಂವಿಧಾನದಲ್ಲೆ ನಿಗದಿಪಡಿಸಿದ್ದರಿಂದ ಆ ಜಾತಿಗಳನ್ನು ಹೊರತುಪಡಿಸಿ ಹಿಂದುಳಿದ ವರ್ಗಗಳನ್ನು ಗುರುತಿಸಲಾಯಿತು. ಈ ಆಜ್ಞೆಯನ್ನು ನ್ಯಾಯಾಲಯ ಕಾನೂನು ಬಾಹಿರವೆಂದು ಪರಿಗಣಿಸಿತು. ಅದೇ ಸಮಯದಲ್ಲಿ ಕೇಂದ್ರ ಸರಕಾರದ ನೀತಿಯು ಸಹ ಜಾತಿ ಆಧಾರದ ಮೇಲೆ ಹಿಂದುಳಿದ ವರ್ಗಗಳನ್ನು ನಿರ್ಧರಿಸುವುದಕ್ಕೆ ವ್ಯತಿರಿಕ್ತವಾಗಿತ್ತು.

1958ರ ಮೀಸಲಾತಿ ಆಜ್ಞೆಯನ್ನು ತಳ್ಳಿ ಹಾಕಿದ ನಂತರ ಮೈಸೂರು ಸರಕಾರ 1959ರಲ್ಲಿ ಆ ಆಜ್ಞೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ಬ್ರಾಹ್ಮಣ ಜಾತಿಯ ಹಾಗೂ ಕಾಯಸ್ಥರನ್ನು ಹೊರತುಪಡಿಸಿ ಉಳಿದೆಲ್ಲರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಅಭಿಪ್ರಾಯಪಟ್ಟಿತು. ಈ ಆಜ್ಞೆಯೂ ನ್ಯಾಯಾಲಯದಲ್ಲಿ ಪ್ರಶ್ನಿತವಾಗಿ ಅದೇ ವರ್ಷ ಹೊರಡಿಸಲಾದ ಮತ್ತೊಂದು ಸರಕಾರಿ ಆಜ್ಞೆ ಇಡೀ ರಾಜ್ಯವನ್ನು 14 ಗುಂಪುಗಳಾಗಿ ವಿಂಗಡಿಸಿ ಪ್ರತಿ ಗುಂಪಿಗೂ ಪ್ರತ್ಯೇಕ ಮೀಸಲಾತಿಯನ್ನು ಜಾರಿಗೆ ತಂದಿತು. ಈ ಆಜ್ಞೆಯನ್ನು ನ್ಯಾಯಾಲಯ ತಿರಸ್ಕರಿಸಿದ್ದರಿಂದ ಸರಕಾರ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಲು ತೀರ್ಮಾನಿಸಿತು. ಆದರಂತೆ 1960ರಲ್ಲಿ ಡಾ. ನಾಗನಗೌಡರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು.

ನಾಗನಗೌಡ ಆಯೋಗವು ಜಾತಿ/ಕೋಮುಗಳ ಜನಸಂಖ್ಯೆಯನ್ನು ಗುರುತಿಸಿ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು 1959-60ರಲ್ಲಿ ಪ್ರೌಢಶಾಲೆಯ ಕೊನೆಯ ಮೂರು ವರ್ಷದ ತರಗತಿಗಳನ್ನು ಅಭ್ಯಾಸ ಮಾಡುತ್ತಿರುವ ಬೇರೆ ಬೇರೆ ಜಾತಿಗಳ ವಿದ್ಯಾರ್ಥಿಗಳ ಸರಾಸರಿಯನ್ನು ತೆಗೆದುಕೊಂಡು ಅದನ್ನು ರಾಜ್ಯದ ಒಟ್ಟು ಸರಾಸರಿಗೆ ಹೋಲಿಸಿ ರಾಜ್ಯ ಸರಾಸರಿಗಿಂತ ಕಡಿಮೆಯಿದ್ದ ಜಾತಿಗಳನ್ನು ಹಿಂದುಳಿದ ಜಾತಿಗಳು ಎಂದು ತೀರ್ಮಾನಿಸಿತು. ಹಾಗೆಯೇ ಸರಕಾರಿ ಹುದ್ದೆಯನ್ನು ಜಾತಿಗಳ ಪ್ರಾತಿನಿಧ್ಯವನ್ನು ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಮತ್ತೊಂದು ಮಾನದಂಡವನ್ನಾಗಿ ಉಪಯೋಗಿಸಿತು. ಅದರಂತೆ ನಾಲ್ಕನೇ ದರ್ಜೆಯ ನೌಕರರನ್ನು ಹೊರತುಪಡಿಸಿ ಸರಕಾರಿ ಹುದ್ದೆಗಳಲ್ಲಿ ಜಾತಿಗಳ ಪ್ರಾತಿನಿಧ್ಯವನ್ನು ಗಣನೆಗೆ ತೆಗೆದುಕೊಂಡು ಯಾವ ಯಾವ ಜಾತಿಗಳಿಗೆ ಸಾಕಷ್ಟು ಪ್ರಾತಿನಿಧ್ಯವಿಲ್ಲವೆಂದು ಪಟ್ಟಿ ಮಾಡಿತು. ಸಾಮಾಜಿಕವಾಗಿ ಬ್ರಾಹ್ಮಣ ಹಾಗೂ ಕ್ಷತ್ರಿಯರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳನ್ನು ಹಿಂದುಳಿದವುಗಳು ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಎಲ್ಲ ಮಾನದಂಡಗಳ ಆಧಾರದಂತೆ ನಾಗನಗೌಡ ಸಮಿತಿಯು ಬ್ರಾಹ್ಮಣರು ಹಾಗು ಲಿಂಗಾಯತರನ್ನು ಮುಂದುವರೆದ ಜಾತಿಗಳು ಎನ್ನುವ ತೀರ್ಮಾನಕ್ಕೆ ಬಂದಿತು. ಆದರೆ ರಾಜಕೀಯವಾಗಿ ಪ್ರಬಲರಾಗಿದ್ದ ಲಿಂಗಾಯತರನ್ನು ಎದುರುಹಾಕಿ ಕೊಳ್ಳಲಾರದ ಸ್ಥಿತಿಯಲ್ಲಿದ್ದ ಸರಕಾರವು ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿ ಆಜ್ಞೆಯನ್ನು ಹೊರಡಿಸಿತು. 1962ರ ಸರಕಾರಿ ಆಜ್ಞೆಯಂತೆ ಹಿಂದುಳಿದ ವರ್ಗಗಳಿಗೆ ಶೇಕಡ 28, ಅತಿ ಹಿಂದುಳಿದವರಿಗೆ ಶೇಕಡ 22 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಶೇಕಡ 03 ಮೀಸಲಾತಿಯನ್ನು ಜಾರಿಗೊಳಿಸಲಾಯಿತು. ಈ ಆಜ್ಞೆಯ ಸೌಲಭ್ಯವನ್ನು ಶೇಕಡ 28ರಷ್ಟು ಮಂದಿ ಪಡೆದರು.

1961 ಮತ್ತು 1962ರ ಸರಕಾರಿ ಆಜ್ಞೆಗಳನ್ನು ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಟ್ಟಿತು. ನ್ಯಾಯಾಲಯವು ಹಿಂದುಳಿದಿರುವಿಕೆಯ ನಿರ್ಧಾರಕ್ಕೆ ಜಾತಿ ಒಂದು ಕಾರಣವಾದರೂ ಅದೊಂದೇ ಆಧಾರದ ಮೇಲೆ ಹಿಂದುಳಿದಿರುವಿಕೆಯನ್ನು ನಿರ್ಧರಿಸಿರುವ ಸದರಿ ಸರಕಾರಿ ಆಜ್ಞೆ  ಅಸಿಂಧು ಎಂದು ತೀರ್ಪು ನೀಡಿ ಆಜ್ಞೆಯನ್ನು ಅನೂರ್ಜಿತಗೊಳಿಸಿತು. ನ್ಯಾಯಾಲಯದ ಈ ಮೊಕದ್ದಮೆ ಬಾಲಾಜಿ ಮೊಕದ್ದಮೆ ಎಂದೇ ಪ್ರಸಿದ್ಧವಾಗಿದ್ದು, ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಮೈಲಿಗಲ್ಲಾಗಿದೆ. ಬಾಲಾಜಿ ಮೊಕದ್ದಮೆಯ ತೀರ್ಪಿನ ನಂತರ ರಾಜ್ಯ ಸರಕಾರ 1963ರ ಸೆಪ್ಟೆಂಬರ್ 16ರಂದು ಹೊರಡಿಸಿದ ಮತ್ತೊಂದು ಆಜ್ಞೆಯಲ್ಲಿ ಆರ್ಥಿಕ ಮಾನದಂಡವನ್ನು ಬಳಸಿ ಹಿಂದುಳಿದ ವರ್ಗಗಳನ್ನು ಗುರುತಿಸುವ ಪ್ರಯತ್ನ ಮಾಡಿತು. ತಂದೆ ತಾಯಿಗಳು, ಪೋಷಕರ ವಾರ್ಷಿಕ ವರಮಾನ ರೂ.1200 ಅಥವಾ ಅದಕ್ಕಿಂತ ಕಡಿಮೆ ಇರುತ್ತದೋ ಮತ್ತು ಯಾವ ವ್ಯಕ್ತಿ

1. ಕೈ ಕೆಲಸಗಾರ

2. ಸ್ವಂತ ಸಾಗುವಳಿದಾರ

3. ಸಣ್ಣ ವ್ಯಾಪಾರಿ,

4. ಸರಕಾರದಲ್ಲಿ ಕೆಳದರ್ಜೆ ನೌಕರಿ ಹಾಗೂ

5. ದೈಹಿಕ ಶ್ರಮವನ್ನೊಳಗೊಂಡ ಇನ್ನಾವುದೇ ವೃತ್ತಿಯನ್ನಾಶ್ರಯಿಸಿರು ತ್ತಾನೋ ಅಂತಹ ವ್ಯಕ್ತಿ ಹಿಂದುಳಿದ ವರ್ಗಕ್ಕೆ ಸೇರಿರುತ್ತಾನೆ ಎಂದು ತೀರ್ಮಾನಿಸಲಾಯಿತು.

ಈ ಆಜ್ಞೆಯಂತೆ ಹಿಂದುಳಿದ ವರ್ಗಗಳಿಗೆ ಶೇಕಡಾ 48ರಷ್ಟು ಮೀಸಲಾತಿಯನ್ನು ಕೊಡಲಾಯಿತು. 1963ರಲ್ಲಿ ಜಾರಿಗೆ ಬಂದ ಈ ಸರಕಾರಿ ಆಜ್ಞೆಯು 1977ರವರೆಗೆ ಜಾರಿಯಲ್ಲಿತ್ತು. ಪ್ರಬಲ ಕೋಮಿನವರಿಗೂ ಅನುಕೂಲಕರವಾದ ಆಜ್ಞೆಯನ್ನು ಪ್ರಶ್ನಿಸಲು ಅಗತ್ಯವಾದ ರಾಜಕೀಯ ಸಂಘಟನೆ ಹಾಗೂ ಅದಕ್ಕೆ ಅನುಕೂಲಕರವಾದ ರಾಜಕೀಯ ವಾತಾವರಣ ಇತರೆ ಹಿಂದುಳಿದ ವರ್ಗಗಳಿಗೆ ಒದಗಿ ಬರಲು ಸುಮಾರು 10 ವರ್ಷಗಳಷ್ಟು ಕಾಲದವರೆಗೆ ಕಾಯಬೇಕಾಯಿತು. 1972ರಲ್ಲಿ ಅಧಿಕಾರಕ್ಕೆ ಬಂದ  ಡಿ.ೊದೇವರಾಜ ಅರಸು ಅವರ ಕಾಲದಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಹೊಸಯುಗವೊಂದು ಪ್ರಾರಂಭವಾಯಿತೆನ್ನಬಹುದು.

1956ರಿಂದ 1972ರವರೆಗೆ ಪ್ರಬಲ ಕೋಮುಗಳ, ಮುಖ್ಯವಾಗಿ ಲಿಂಗಾಯತರು ಹಾಗೂ ಒಕ್ಕಲಿಗರು, ರಾಜಕೀಯ ಪ್ರಾಬಲ್ಯ ಮುಂದುವರೆದಿದ್ದರ ಪರಿಣಾಮವಾಗಿ ಮೀಸಲಾತಿಯ ಬಹುಪಾಲು ಸೌಲಭ್ಯವನ್ನು ಈ ಕೋಮುಗಳಿಗೆ ಸೇರಿದ ವ್ಯಕ್ತಿಗಳೇ ಪಡೆದರು. ಇದು ಇತರ ಹಿಂದುಳಿದ ಜಾತಿಗಳವರ ಅಸಮಾಧಾನಕ್ಕೆ ಕಾರಣವಾಯಿತು. ಈ ಅಸಮಾಧಾನವನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಸಮರ್ಥವಾಗಿ ಬಳಸಿಕೊಂಡ ರಾಜಕೀಯ ನಾಯಕನೆಂದರೆ ಶ್ರೀ ದೇವರಾಜ ಅರಸು ಅವರು. ಪ್ರಬಲ ಕೋಮು/ಜಾತಿಗಳ ವಿರುದ್ಧ ಇತರ ಜಾತಿಗಳ ರಾಜಕೀಯ ಸಂಘಟನೆ ಮಾಡಲು ಅರಸು ಅವರು ಮೀಸಲಾತಿ ಯನ್ನು ಒಂದು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡರು. ಶ್ರೀ ನಾಗನಗೌಡ ಸಮಿತಿಯ ವರದಿಯಲ್ಲಿನ ಲೋಪದೋಷಗಳನ್ನು ಗಮನದಲ್ಲಿಟ್ಟುಕೊಂಡು ಹಿಂದುಳಿದ ವರ್ಗಗಳನ್ನು ಗುರುತಿಸಿ ಪಟ್ಟಿ ಮಾಡುವ ಹಾಗೂ ಹಿಂದುಳಿದಿರುವಿಕೆಯ ನಿವಾರಣೆಗೆ ಸರ್ಕಾರ ಅನುಸರಿಸಬಹುದಾದ ಮಾರ್ಗಗಳನ್ನು ಸೂಚಿಸಲು ಶ್ರೀಯುತ ಎಲ್.ಜಿ.ಹಾವನೂರು ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಪ್ರಥಮ ಹಿಂದುಳಿದ ವರ್ಗಗಳ ಆಯೋಗವನ್ನು 1972 ಆಗಸ್ಟ್ 8ರಂದು ರಚಿಸಲಾಯಿತು. ಹಾವನೂರು ಆಯೋಗದ ವರದಿಯ ಮುಖ್ಯಾಂಶಗಳೆಂದರೆ:

ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಜಾತಿಯೂ ಒಂದು ಮಾನದಂಡವಾಗಿರಬೇಕು, ಜಾತಿಯನ್ನು ಹೊರತುಪಡಿಸಿ ಹಿಂದುಳಿದಿರುವಿಕೆಯನ್ನು ನಿರ್ಧರಿ ಸಲು ಸಾಧ್ಯವಿಲ್ಲ ಎನ್ನುವ ನಿಲುವನ್ನು ಆ ಯೋಗವು ತೆಗೆದುಕೊಂಡಿತು. ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಪ್ರತಿಜಾತಿಯಲ್ಲೂ 1972ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಾಸಾದವರ ಸಂಖ್ಯೆಯನ್ನು ರಾಜ್ಯದ ಒಟ್ಟು ವಿದ್ಯಾರ್ಥಿಗಳಲ್ಲಿ ಸಾವಿರಕ್ಕೆ ಎಷ್ಟು ಜನ ಪಾಸಾಗಿದ್ದಾರೆ ಎನ್ನುವ ಸರಾಸರಿಯೊಡನೆ ಹೋಲಿಸಲಾಯಿತು. ರಾಜ್ಯದ ಸರಾಸರಿಗಿಂತ ಕಡಿಮೆ ಸರಾಸರಿ ಹೊಂದಿದ ಜಾತಿಗಳನ್ನು ಹಿಂದುಳಿದ ವರ್ಗಗಳ ಗುಂಪಿಗೆ ಸೇರಿಸಲಾಯಿತು. ಸಾಮಾಜಿಕ ಹಿಂದುಳಿದಿರುವಿಕೆಗೆ ಆಯೋಗವು ಕೊಟ್ಟ ಪ್ರಮುಖ ಕಾರಣಗಳೆಂದರೆ

1. ಪ್ರತ್ಯೇಕ ಸ್ಥಳಗಳಲ್ಲಿ ವಾಸಿಸುವುದು.

2. ಯಾವುದೇ ಥರದ ಆಸ್ತಿಯನ್ನು ಹೊಂದಲಾಗದ ಬಡತನ.

3. ಸಾಮಾಜಿಕವಾಗಿ ನಿಕೃಷ್ಟವಾದ, ಆರ್ಥಿಕವಾಗಿ ಲಾಭದಾಯಕವಲ್ಲದ ವೃತ್ತಿಗಳಲ್ಲಿ ನಿರತರಾಗಿರುವುದು.

4. ಉತ್ತಮ ಜಾತಿಯವರಿಂದ ಕೀಳಾಗಿ ಕಾಣಲ್ಪಟ್ಟವರು.

5. ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಸ್ಥಳಗಳಿಗೆ ಪ್ರವೇಶ ಪಡೆಯದ ತರುಣರು.

6. ಉತ್ತಮ ಜಾತಿಯವರೊಡನೆ ಸಹಭೋಜನ, ವಿವಾಹ ಮತ್ತೆ ಇತರ ಸಂಘ ಜೀವನದಿಂದ ಸಾಮಾಜಿಕ ನಿಷೇಧಕ್ಕೊಳಪಟ್ಟವರು.

7. ಶಿಕ್ಷಣಕ್ಕೆ ಉತ್ತೇಜನ ಇಲ್ಲದೆ ಇರುವ ಕಾರಣಕ್ಕಾಗಿ ಅನಕ್ಷರಸ್ಥರಾಗಿರುವವರು. ಸರಕಾರಿ ನೌಕರಿಯಲ್ಲಿ ಸಾಕಷ್ಟು ಪ್ರಾತಿನಿಧ್ಯವಿಲ್ಲದ ಜಾತಿಗಳನ್ನು ಹಿಂದುಳಿದ ವರ್ಗ ಗಳ ಪಟ್ಟಿಯಲ್ಲಿ ಸೇರಿಸಬೇಕೆಂದು ಆಯೋಗವು ಶಿಫಾರಸ್ಸು ಮಾಡಿತು.

ಆಯೋಗವು ತಾನು ಸಂಗ್ರಹಿಸಿದ ಅಂಕಿ ಅಂಶಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದೆಂದು ಸೂಚಿಸಿತು.

1. ಹಿಂದುಳಿದ ಸಮುದಾಯಗಳು

2. ಹಿಂದುಳಿದ ಬುಡಕಟ್ಟು

3. ಹಿಂದುಳಿದ ಜಾತಿಗಳು

1977 ಫೆಬ್ರವರಿಯಲ್ಲಿ ವರದಿಯ ಅನುಷ್ಠಾನಗೊಳಿಸುವ ಸರ್ಕಾರಿ ಆಜ್ಞೆಯಲ್ಲಿ ವರದಿಯ ಶಿಫಾರಸ್ಸಿಗೆ ಸಂಬಂಧಿಸಿದಂತೆ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಯಿತು. ಮೊದಲನೆಯದಾಗಿ, ಮುಸಲ್ಮಾನರನ್ನು ಹಿಂದುಳಿದ ಸಮುದಾಯಗಳ ಗುಂಪಿನಲ್ಲಿ ಸೇರಿಸಲಾಯಿತು. ಎರಡನೆಯದಾಗಿ, ವಾರ್ಷಿಕ ಆದಾಯದ ಮೇಲೆ ಹಿಂದುಳಿದ ವಿಶೇಷ ಗುಂಪುಗಳನ್ನು ರಚಿಸಲಾಯಿತು. ಸರ್ಕಾರದ ಹಿಂದುಳಿದ ವರ್ಗಗಳ ವರ್ಗೀಕರಣ ಈ ಕೆಳಗಿನಂತಿದೆ.

1. ಹಿಂದುಳಿದ ಸಮುದಾಯಗಳು(16 ಜಾತಿಗಳು)

2. ಹಿಂದುಳಿದ ಜಾತಿಗಳು(129 ಜಾತಿಗಳು)

3. ಹಿಂದುಳಿದ ಬುಡಕಟ್ಟು(62 ಜಾತಿಗಳು)

4. ಹಿಂದುಳಿದ ವಿಶೇಷ ಗುಂಪುಗಳು(ವಾರ್ಷಿಕ ಆದಾಯ ರೂ.8000ಕ್ಕೂ ಕಡಿಮೆ ಇದ್ದ ಕುಟುಂಬಗಳು)

ದೇವರಾಜ ಅರಸು ಅವರ ಅವಧಿಯಲ್ಲಿ ಹಿಂದುಳಿದ ವರ್ಗಗಳ ಸಂಘಟನೆ ರಾಜಕೀಯವಾಗಿ ಬಹಳ ಪ್ರಬಲವಾಗಿ ಬೆಳೆಯಿತು. ಆದರೆ ಪ್ರಬಲ ಕೋಮುಗಳ ರಾಜಕೀಯ ಪ್ರಾಬಲ್ಯ ಗಣನೀಯವಾಗೇನು ಕಡಿಮೆಯಾಗಲಿಲ್ಲ. ಅರಸು ಅವರ ನಂತರ ಹಿಂದುಳಿದ ವರ್ಗಗಳ ಚಾಮರದಡಿಯಲ್ಲಿ ಬಂದ ಹಲವಾರು ಜಾತಿಗಳಲ್ಲಿ ಪರಸ್ಪರ ಭಿನ್ನಾಭಿಪ್ರಾಯ ಉಂಟಾಯಿತು. ಅಲ್ಲದೆ ಅವರ ನಂತರ ಈ ಎಲ್ಲ ಜಾತಿಗಳಿಗೂ ಒಪ್ಪಿಗೆಯಾಗುವ ಹಿಂದುಳಿದ ವರ್ಗಗಳ ನಾಯಕನಿರಲಿಲ್ಲ. ಅರಸು ಅವರು ಚುನಾವಣೆಯಲ್ಲಿ ಸೋತ ನಂತರ ಅಧಿಕಾರಕ್ಕೆ ಬಂದ ಗುಂಡೂರಾಯರ ಅಧಿಕಾರ ಅವಧಿಯಲ್ಲಿ ಹಿಂದುಳಿದ ವರ್ಗಗಳ ಅಸಮಾಧಾನಕ್ಕೊಳಗಾಗಿದ್ದ ಪ್ರಬಲ ಕೋಮುಗಳಿಂದ ಆಗಾಗ್ಗೆ ಒತ್ತಾಯ ಬರುತ್ತಿತ್ತು. 1979, 1980 ಮತ್ತು 1981ರಲ್ಲಿ ಹಾವನೂರು ವರದಿಯ ವೈಜ್ಞಾನಿಕತೆ ಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ‘ಕೆ.ಸಿ.ವಸಂತ ಕುಮಾರ್ ಎದುರು ಕರ್ನಾಟಕ ರಾಜ್ಯ’ ಮೊಕದ್ದಮೆಯಲ್ಲಿ ಕರ್ನಾಟಕ ರಾಜ್ಯ ಸರಕಾರವು ಹಾವನೂರು ವರದಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಮತ್ತು ವೈಜ್ಞಾನಿಕ ಆಧಾರದ ಮೇಲೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಯಾರಿಸುವ ಉದ್ದೇಶದಿಂದ ಎರಡನೆ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸುವ ನಿರ್ಧಾರವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು. ಅದರಂತೆ 18 ಏಪ್ರಿಲ್, 1983ರಂದು ಶ್ರೀ ಟಿ.ವೆಂಕಟಸ್ವಾಮಿಯವರ ನೇತೃತ್ವದಲ್ಲಿ ಒಂದು ಆಯೋಗವನ್ನು ರಚಿಸಲಾಯಿತು. ಅದು ಮುಂದೆ ವೆಂಕಟಸ್ವಾಮಿ ಆಯೋಗವೆಂದೇೊಪ್ರಸಿದ್ದಿ ಪಡೆಯಿತು. ಈ ಆಯೋಗದ ಕಾರ್ಯವ್ಯಾಪ್ತಿ ಈ ಕೆಳಗಿನಂತಿತ್ತು.

1. ಅದುವರೆಗೆ ಜಾರಿಯಲ್ಲಿದ್ದ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸುವುದು.

2. ರಾಜ್ಯದ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ವೈಜ್ಞಾನಿಕವಾಗಿ ಪರಿಶೀಲಿಸುವುದು.

3. ರಾಜ್ಯದ ಹಿಂದುಳಿದ ವರ್ಗಗಳ ಪಟ್ಟಿಯ ತಯಾರಿ ಮತ್ತು ವರ್ಗೀಕರಣ.

ವಿವಿಧ ಜಾತಿಗಳ ಸಾಮಾಜಿಕ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಅಂಕಿ ಅಂಶಗಳನ್ನು ಸಂಗ್ರಹಿಸಲು ಆಯೋಗವು ಬಹುದೊಡ್ಡ ಕ್ಷೇತ್ರ ಸಮೀಕ್ಷೆಯನ್ನು ಹಮ್ಮಿಕೊಂಡಿತು. 6,092,673 ಕುಟುಂಬಗಳನ್ನೊಳಗೊಂಡಂತೆ 3 ಕೋಟಿ 61 ಲಕ್ಷ ಜನರ ಬಗ್ಗೆ ಆಯೋಗವು ಅಂಕಿ ಅಂಶಗಳನ್ನು ಸಂಗ್ರಹಿಸಿತು. ಸಮೀಕ್ಷೆಯು ಸಂಗ್ರಹಿಸಿದ ಪ್ರಮುಖ ವಿವರಗಳೆಂದರೆ:

1. ಭೂ ಹಿಡುವಳಿಯ ವಿವರ

2. ಮನೆ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಇತ್ಯಾದಿ ವಿವರಗಳು

3. ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಸೇವೆ ಸಲ್ಲಿಸುತ್ತಿರುವವರ ವಿವರಗಳು

4. ಆದಾಯದ ವಿವರಗಳು ಇತ್ಯಾದಿ.

ಈ ಮೇಲಿನ ಎಲ್ಲ ವಿವರಗಳಿಗೂ ಸಂಬಂಧಿಸಿದಂತೆ ಜಾತಿವಾರು ಅಂಕಿ ಸಂಖ್ಯೆಗಳನ್ನು ಸಂಗ್ರಹಿಸಲಾಯಿತು. ಹಾವನೂರು ಆಯೋಗದಂತೆಯೇ ವೆಂಕಟಸ್ವಾಮಿ ಆಯೋಗವು ಸಹ ಜಾತಿಯನ್ನು ಹಿಂದುಳಿದಿರುವಿಕೆಯನ್ನು ನಿರ್ಧರಿಸುವ ಮಾನದಂಡವನ್ನಾಗಿ ಗುರುತಿಸಿತು. ‘‘ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಪಟ್ಟಿಯು ಅಂತಿಮವಾಗಿ ಜಾತಿ/ಕೋಮುಗಳ ಪಟ್ಟಿಯೇ ಆಗಿರುತ್ತದೆ’’ ಎಂದು ಆಯೋಗವು ಅಭಿಪ್ರಾಯ ವ್ಯಕ್ತಪಡಿಸುತ್ತದೆ.

ಆಯೋಗವು ಹಿಂದುಳಿದಿರುವಿಕೆಯನ್ನು ನಿರ್ಧರಿಸಲು 17 ಮಾರ್ಗಸೂಚಿಗಳನ್ನು  ಬಳಸಿತು. ಆ ಮಾರ್ಗಸೂಚಿಗಳಲ್ಲಿ 8 ಋಣಾತ್ಮಕ ಸೂಚಿಗಳನ್ನು ಜಾತಿಯ ಹಿಂದುಳಿದಿರುವಿಕೆ ಯನ್ನು ಗುರುತಿಸಲು, ಮತ್ತು 9 ಧನಾತ್ಮಕ ಮಾರ್ಗಸೂಚಿಗಳನ್ನು  ಮುಂದುವರೆದಿರುವ ಜಾತಿಗಳನ್ನು ಗುರುತಿಸಲು ಬಳಸಲಾಯಿತು. ಯಾವ ಜಾತಿಯು ಋಣಾತ್ಮಕ ಮಾರ್ಗ ಸೂಚಿಯ ಪಟ್ಟಿಯಲ್ಲಿ ಬಳಸಲಾಯಿತು, ಯಾವ ಜಾತಿಯು ಋಣಾತ್ಮಕ ಮಾರ್ಗಸೂಚಿಯ ಪಟ್ಟಿಯಲ್ಲಿ ಇರುವ ಅಂಶಗಳಿಗೆ ಸಂಬಂಧಿಸಿದಂತೆ ರಾಜ್ಯದ ಸರಾಸರಿಗಿಂತ ಹೆಚ್ಚಿದೆಯೋ ಹಾಗೂ ಧನಾತ್ಮಕ ಮಾರ್ಗಸೂಚಿಯಲ್ಲಿ ರಾಜ್ಯದ ಸರಾಸರಿಗಿಂತ ಕಡಿಮೆಯಿದೆಯೋ ಅದನ್ನು ಹಿಂದುಳಿದ ಜಾತಿಯೆಂದು ತೀರ್ಮಾನಿಸಲಾಯಿತು, ಹಿಂದುಳಿದ ವರ್ಗಗಳನ್ನು ‘ಎ’ ಮತ್ತು ‘ಬಿ’ ಗುಂಪುಗಳೆಂದು ವಿಂಗಡಿಸಿದ ಆಯೋಗವು ‘ಎ’ ಗುಂಪಿಗೆ ಶೇಕಡ 14 ಹಾಗೂ ‘ಬಿ’ ಗುಂಪಿಗೆ ಶೇಕಡ 13ರಷ್ಟು ಮೀಸಲಾತಿಯನ್ನು ಶೈಕ್ಷಣಿಕ ಕ್ಷೇತ್ರ ಹಾಗೂ ಸರಕಾರಿ ನೌಕರಿಯನ್ನು ನೀಡಬೇಕು ಎಂದು ಶಿಫಾರಸ್ಸು ಮಾಡಿತು.

ವೆಂಕಟಸ್ವಾಮಿ ಆಯೋಗವು ಹಿಂದುಳಿದ ವರ್ಗಗಳಿಗೆ ಶೇಕಡ 33ರಷ್ಟು ಮೀಸಲಾತಿ ಯನ್ನು ಶಿಫಾರಸ್ಸು ಮಾಡಿತು. ಈ ಆಯೋಗದ ವರದಿಯ ಮತ್ತೊಂದು ಮಹತ್ವದ ಅಂಶವೆಂದರೆ ಹಿಂದುಳಿದ ವಿಶೇಷ ಗುಂಪುಗಳನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದು ಹಾಕಿದ್ದು ಅಲ್ಲದೆ ಹಿಂದುಳಿದ ವರ್ಗಗಳಿಗೂ ಸಹ ರೂ. 15,000 ಆದಾಯ ಮಿತಿಯನ್ನು ವಿಧಿಸಬೇಕೆಂದು ಸೂಚಿಸಿತು.

1986ರಲ್ಲಿ ಎರಡನೇ ಹಿಂದುಳಿದ ವರ್ಗಗಳ ಆಯೋಗವು ವರದಿಯಲ್ಲಿ ಸಲ್ಲಿಸಿದಾಗ ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬದಲಾವಣೆಯಾಗಿತ್ತು. ಗುಂಡೂರಾಯರ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಸೋತು ಮೊತ್ತ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವಾದ ಜನತಾಪಕ್ಷ ಶ್ರೀ ರಾಮಕೃಷ್ಣ ಹೆಗಡೆಯವರ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. ಹೆಚ್ಚು ಕಡಿಮೆ ಪ್ರಬಲ ಕೋಮುಗಳಾದ ಲಿಂಗಾಯತ ಹಾಗೂ ಒಕ್ಕಲಿಗರ ಬೆಂಬಲವನ್ನೇ ಅವಲಂಬಿಸಿದ್ದ ರಾಮಕೃಷ್ಣ ಹೆಗಡೆಯವರ ಸರ್ಕಾರ ಅತ್ತ ಹಿಂದುಳಿದ ವರ್ಗಗಳು ಇತ್ತ ಪ್ರಬಲ ಕೋಮುಗಳು ಹೀಗೆ ಎರಡೂ ಗುಂಪುಗಳಲ್ಲಿ ಯಾವ ಗುಂಪಿನ ಅಸಮಾಧಾನಕ್ಕೂ ಗುರಿಯಾಗದಂತೆ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದು, ಅಧಿಕಾರದಲ್ಲಿ ಮುಂದುವರೆಯುವುದಕ್ಕೆ ಅನಿವಾರ್ಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ವೆಂಕಟಸ್ವಾಮಿ ಆಯೋಗವು ತನ್ನ ವರದಿಯನ್ನು ಸಲ್ಲಿಸಿ ಒಕ್ಕಲಿಗರನ್ನು ಹಿಂದುಳಿದ ವರ್ಗಗಳ ಪಟ್ಟಿಯಿಂದ ತೆಗೆದುಹಾಕಬೇಕೆಂದು ಶಿಫಾರಸ್ಸು ಮಾಡಿದಾಗ ಅದನ್ನು ಯಥಾವತ್ತಾಗಿ ಒಪ್ಪುವುದು ರಾಜಕೀಯವಾಗಿ ಸಾಧುವೂ, ಸಾಧ್ಯವೂ ಆಗಿರಲಿಲ್ಲ. ಒಕ್ಕಲಿಗರು ರಾಜ್ಯಾದ್ಯಂತ ಆಯೋಗದ ವರದಿಯನ್ನು ಅನುಷ್ಠಾನಗೊಳಿಸುವುದರ ವಿರುದ್ಧ ಭಾರಿ ಚಳವಳಿಯನ್ನು ಪ್ರಾರಂಭಿಸಿದರು. ಹಾವನೂರು ವರದಿಯಲ್ಲಿ ತಮ್ಮನ್ನು ಹಿಂದುಳಿದ ವರ್ಗವೆಂದು ಗುರುತಿಸಿರುವುದರಿಂದ ಇದುವರೆಗಿನ ಸ್ಥಿತಿಯನ್ನೆ ಮುಂದುವರೆಸಿಕೊಂಡು ಬರಬೇಕೆಂಬುದು ಒಕ್ಕಲಿಗರ ವಾದವಾಗಿತ್ತು. ಬಹಳ ಮೊದಲಿನಿಂದಲೂ ಅಸಮಾಧಾನಕ್ಕೆ ಒಳಗಾಗಿದ್ದ ಲಿಂಗಾಯತ ಜನಾಂಗದವರಿಗೂ ಇದೊಂದು ಸದವಕಾಶವನ್ನು ಒದಗಿಸಿಕೊಟ್ಟಿತು. ಸರಕಾರ ಹಾವನೂರು ವರದಿ ಆಧರಸಿ ಮೀಸಲಾತಿಯನ್ನೂ ಸಹ ಅನೂರ್ಜಿತಗೊಳಿಸಬೇಕೆಂಬ ಬೇಡಿಕೆಯೊಂದಿಗೆ ಲಿಂಗಾಯತರು ಚಳವಳಿಯನ್ನು ಪ್ರಾರಂಭಿಸಿದರು. ಲಿಂಗಾಯತರು ಹಾಗೂ ಒಕ್ಕಲಿಗರ ಚಳವಳಿಯನ್ನು ಎದುರಿಸಿ ವೆಂಕಟಸ್ವಾಮಿ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಸರಕಾರದ ಮೇಲೆ ಒತ್ತಡ ತರುವಷ್ಟು ಹಿಂದುಳಿದ ವರ್ಗಗಳು ಸಂಘಟಿತವಾಗಿರಲಿಲ್ಲ. ಈ ಮೊದಲೇ ತಿಳಿಸಿದಂತೆ ಬಹುತೇಕ ಲಿಂಗಾಯತ ಹಾಗೂ ಒಕ್ಕಲಿಗ ಶಾಸಕರುಗಳ ಬೆಂಬಲವನ್ನೇ ಅವಲಂಬಿಸಿದ್ದ ಆಡಳಿತ ಪಕ್ಷವಾದ ಜನತಾ ಪಕ್ಷಕ್ಕೆ ವೆಂಕಟಸ್ವಾಮಿ ಹಾಗೂ ಈಗಾಗಲೇ ಜಾರಿಯಲ್ಲಿದ್ದ ಹಾವನೂರು ವರದಿ ಆಧಾರಿತ ಮೀಸಲಾತಿಯನ್ನು ತಿರಸ್ಕರಿಸದೆ ಬೇರೆ ದಾರಿಯಿರಲಿಲ್ಲ. ವೆಂಕಟಸ್ವಾಮಿ ಆಯೋಗವು ಸಂಗ್ರಹಿಸಿದ ಅಂಕಿ ಅಂಶಗಳು ವಾಸ್ತವವಲ್ಲ ಮತ್ತು ಸಂಗ್ರಹಿಸಲು ಅನುಸರಿಸಿದ ವಿಧಾನ ವೈಜ್ಞಾನಿಕವಾದುದಲ್ಲ ಎಂಬ ಕಾರಣವನ್ನೊಡ್ಡಿ ಶ್ರೀ ರಾಮಕೃಷ್ಣ ಹೆಗಡೆಯವರ ಸರಕಾರ ಅಕ್ಟೋಬರ್ 7, 1986ರಂದು ವೆಂಕಟಸ್ವಾಮಿ ಆಯೋಗದ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ತೆಗೆದುಕೊಂಡಿತು. ಮತ್ತೊಂದು ಹಿಂದುಳಿದ ವರ್ಗಗಳ ಆಯೋಗವನ್ನು ನೇಮಿಸುವ ನಿರ್ಧಾರವನ್ನು ತೆಗೆದುಕೊಂಡ ಸರಕಾರವು ತಾತ್ಕಾಲಿಕವಾಗಿ ಹೊಸ ಮೀಸಲಾತಿಯನ್ನು ಜಾರಿಗೆ ತರುವ ನಿರ್ಧಾರವನ್ನು ತೆಗೆದುಕೊಂಡಿತು. ಅದರಂತೆ ಮೂರು ವರ್ಷಗಳವರೆಗೆ ಅಂದರೆ ಮೂರನೇ ಹಿಂದುಳಿದ ಆಯೋಗವು ವರದಿಯನ್ನು ಸಲ್ಲಿಸುವವರೆಗೆ ಜಾರಿಯಲ್ಲಿರುವಂತೆ ಹೊಸ ಮೀಸಲಾತಿ ನೀತಿಯನ್ನು ರೂಪಿಸಲಾಯಿತು. ಸರಕಾರದ ಹೊಸ ಮೀಸಲಾತಿ ನೀತಿಯಂತೆ ಹಿಂದುಳಿದ ವರ್ಗಗಳನ್ನು ಎ ಬಿ ಸಿ ಡಿ ಇ ಎಂದು ಐದು ಗುಂಪುಗಳಾಗಿ ವಿಂಗಡಿಸಲಾಯಿತು. ಲಿಂಗಾಯತರು ಹಾಗೂ ಒಕ್ಕಲಿಗರು ಹೊಸ ನೀತಿಯ ಪ್ರಯೋಜನವನ್ನು ಪಡೆದರು. ರಾಜ್ಯದ ಶೇಕಡ 89ರಷ್ಟು ಜನರು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲ್ಪಟ್ಟರು.

ಕರ್ನಾಟಕದ ಮೂರನೆಯ ಹಿಂದುಳಿದ ವರ್ಗಗಳ ಆಯೋಗ ನೇಮಕವಾದದ್ದು 14, ಅಕ್ಟೋಬರ್ 1986ರಂದು. ನ್ಯಾಯಮೂರ್ತಿ ಚಿನ್ನಪ್ಪರೆಡ್ಡಿಯವರ ಅಧ್ಯಕ್ಷತೆಯಲ್ಲಿ ನೇಮಕಗೊಂಡ ಆಯೋಗವು ವರದಿಯನ್ನು ಸಲ್ಲಿಸಿದ್ದು 7, ಏಪ್ರಿಲ್ 1990ರಂದು. ವೆಂಕಟಸ್ವಾಮಿ ಆಯೋಗದಂತೆ ಚಿನ್ನಪ್ಪರೆಡ್ಡಿ ಆಯೋಗವೂ ಸಹ ಒಕ್ಕಲಿಗರನ್ನು ಹಿಂದುಳಿದ ವರ್ಗಗಳಿಗೆ ಸೇರಿದವರಲ್ಲ ಎಂದು ತೀರ್ಮಾನಿಸಿತು. ಚಿನ್ನಪ್ಪರೆಡ್ಡಿ ಆಯೋಗದ ವರದಿಯಲ್ಲಿ ಕಂಡುಬರುವ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.

1. ಹಿಂದುಳಿದ ವರ್ಗಗಳನ್ನು ಗುಂಪು I, II, III ಎಂದು ಮೂರು ವರ್ಗಗಳಾಗಿ ವಿಂಗಡಿಸುವುದು.

2. ವರ್ಗ Iರಲ್ಲಿ 52 ಜಾತಿಗಳು ಮತ್ತು ವರ್ಗ IIರಲ್ಲಿ 14 ಜಾತಿಗಳು.

3. ವರ್ಗ III ಜಾತಿ ಆಧಾರವಾಗಿರದೆ ವೃತ್ತಿ ಆಧಾರಿತವಾಗಿರುತ್ತದೆ.

4. ಮಿಸಲಾತಿಯ ಪ್ರಮಾಣ ವರ್ಗ Iಕ್ಕೆ ಶೇಕಡ 5 ವರ್ಗ IIಕ್ಕೆ ಶೇಕಡ 28 ಹಾಗೂ ವರ್ಗ IIIಕ್ಕೆ ಶೇಕಡ 5 ರಷ್ಟಿರಬೇಕು.

5. ಈ ಕೆಳಗಿನ ವ್ಯಕ್ತಿಗಳು ಹಿಂದುಳಿದ ವರ್ಗಗಳಾಗಿ ಸೇರಲು ಅರ್ಹರಲ್ಲ.

ಅ. ಸರಕಾರದ ಮೊದಲ ಹಾಗೂ ಎರಡನೇ ದರ್ಜೆ ಅಧಿಕಾರಿಗಳ ಮಕ್ಕಳು ಮತ್ತು ಆ ದರ್ಜೆಗಳಷ್ಟೇೊಸಂಬಳೊಪಡೆಯುವೊಖಾಸಗಿ ವಲಯದ ಅಧಿಕಾರಿಗಳ ಮಕ್ಕಳು.

ಆ. ವೈದ್ಯರು, ವಕೀಲರು, ಎಂಜಿನಿಯರುಗಳು ಮೊದಲಾದವರ ಮಕ್ಕಳು.

ಇ. ತಂದೆ, ತಾಯಿಗಳಿಬ್ಬರು ಪದವೀಧರರಾಗಿದ್ದಾರೆ.

ಈ. ಆದಾಯ ತೆರಿಗೆಯನ್ನು ಕೊಡುತ್ತಿರುವವರ ಮಕ್ಕಳು.

ಉ. ವಾಣಿಜ್ಯ ತೆರಿಗೆ ಪಾವತಿಸುವವರ ಮಕ್ಕಳು.

ಊ. 8 ಹೆಕ್ಟೇರ್ ಮತ್ತು ಅದಕ್ಕಿಂತ ಜಾಸ್ತಿ ಜಮೀನು ಹೊಂದಿರುವವರ ಮಕ್ಕಳು.

ಚಿನ್ನಪ್ಪರೆಡ್ಡಿ ಆಯೋಗವು ವರದಿ ಸಲ್ಲಿಸಿದಾಗ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷ. ಈ ಆಯೋಗದ ವರದಿಗೂ ವೆಂಕಟಸ್ವಾಮಿ ಆಯೋಗದ ವರದಿಗಾದ ಗತಿಯೇ ಆಯಿತು.

ವೀರೇಂದ್ರ ಪಾಟೀಲರು ಮುಖ್ಯಮುಂತ್ರಿಯಾಗಿದ್ದಾಗ ಚಿನ್ನಪ್ಪರೆಡ್ಡಿಯವರು ವರದಿಯನ್ನು ಸಲ್ಲಿಸಿದರು. ಪಾಟೀಲರು ಅಧಿಕಾರದಲ್ಲಿರುವವರೆಗೆ ವರದಿಯ ಬಗ್ಗೆ ಸರಕಾರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಅವರ ನಂತರ ಅಧಿಕಾರಕ್ಕೆ ಬಂದ ಬಂಗಾರಪ್ಪನವರೂ ಸಹ ಪ್ರಬಲ ಕೋಮುಗಳ ಶಾಸಕರ ಅಸಮಾಧಾನಕ್ಕೆ ಕಾರಣವಾಗಿರಬಹುದಾಗಿದ್ದ ವರದಿಯ ಅನುಷ್ಠಾನದ ನಿರ್ಧಾರವನ್ನು ಮುಂದೂಡುತ್ತಾ ಬಂದರು. ವರದಿಯಲ್ಲಿ ಲಿಂಗಾಯತರು ಹಾಗೂ ಒಕ್ಕಲಿಗರನ್ನು ಮುಂದುವರೆದ ಗುಂಪಿಗೆ ಸೇರಿಸಿದ್ದು ಮತ್ತು ಹಿಂದುಳಿದ ವರ್ಗಗಳಲ್ಲಿ ಆರ್ಥಿಕವಾಗಿ ಮುಂದುವರೆದವರಿಗೆ ಮೀಸಲಾತಿಯ ಸೌಲಭ್ಯ ನೀಡಬಾರದು ಎನ್ನುವ ಚಿನ್ನಪ್ಪರೆಡ್ಡಿ ವರದಿಯ ಶಿಫಾರಸ್ಸುಗಳು ಬಹಳ ವಿವಾದಕ್ಕೆ ಒಳಗಾದವು. ಶ್ರೀ ವೀರಪ್ಪ ಮೊಯ್ಲಿಯವರು ಮುಖ್ಯಮಂತ್ರಿಯಾದಾಗ ಮೂರನೇ ಹಿಂದುಳಿದ ವರ್ಗಗಳ ಆಯೋಗ ವರದಿಯ ಅನುಷ್ಠಾನದ ನಿರ್ಧಾರವನ್ನು ತೆಗೆದುಕೊಳ್ಳುವ ಹೇಳಿಕೆ ನೀಡಿದ ತಕ್ಷಣ ನಿರೀಕ್ಷಿಸಿದಂತೆ ಒಕ್ಕಲಿಗರಿಂದ ಭಾರಿ ಪ್ರತಿಭಟನೆ ಬಂದಿತು. ಮಾಜಿ ಪ್ರಧಾನಿ ದೇವೇಗೌಡರು ಬೆಂಗಳೂರಿನಲ್ಲಿ ಒಕ್ಕಲಿಗರ ಭಾರಿ ಸಮಾವೇಶವನ್ನೇರ್ಪಡಿಸಿ ವರದಿಯನ್ನು ಅನುಷ್ಠಾನಗೊಳಿಸದಂತೆ ಸರ್ಕಾರವನ್ನು ಒತ್ತಾಯಿಸಿದರು. ವೀರಪ್ಪ ಮೊಯ್ಲಿಯವರ ಸರ್ಕಾರ ಪ್ರಬಲ ಕೋಮುಗಳ ಒತ್ತಾಯಕ್ಕೆ ಮಣಿದು ಸುಮಾರು ಶೇಕಡ 70ರಷ್ಟು ಮೀಸಲಾತಿಯನ್ನು ಕೊಡುವ ಸರ್ಕಾರದ ಹೊಸ ನೀತಿಯನ್ನು ಪ್ರಕಟಗೊಳಿಸಿತು. ಆದರೆ ಈ ಸಮಯಕ್ಕಾಗಲೇ ಭಾರತದ ಸರ್ವೋಚ್ಚ ನ್ಯಾಯಾಲಯವು ಮೀಸಲಾತಿಯು ಶೇಕಡ 50ಕ್ಕಿಂತ ಹೆಚ್ಚಿರಬಾರದೆಂದು ತೀರ್ಪು ಕೊಟ್ಟಿದ್ದರಿಂದ ಅದಕ್ಕನುಗುಣವಾಗಿ ಶ್ರೀ ರಾಮಕೃಷ್ಣ ಹೆಗಡೆಯವರ ಸರ್ಕಾರದ ಮೀಸಲಾತಿ ನೀತಿಯನ್ನೇ ಶೇಕಡ 50ರ ಮಿತಿಗೆ ತಂದು ಜಾರಿಗೊಳಿಸಲಾಯಿತು.

ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಚಳವಳಿ ಹೀಗೆ ಕಾಲದಿಂದ ಕಾಲಕ್ಕೆ ಜಾತಿಗಳ ರಾಜಕೀಯ ಸಂಘಟನಾ ಸಾಮರ್ಥ್ಯ ಹಾಗೂ ರಾಜಕೀಯವಾಗಿ ಜಾತಿಗಳ ಧ್ರುವೀಕರಣವನ್ನ ವಲಂಬಿಸಿ ರೂಪು ಪಡೆದುಕೊಳ್ಳುತ್ತಿದೆ. ಈ ಚಳವಳಿ ಒಂದು ಸ್ಪಷ್ಟ ರೂಪ ಪಡೆದುಕೊಳ್ಳಲು ‘ಇತರೆ ಹಿಂದುಳಿದ ವರ್ಗ’ಗಳು ರಾಜಕೀಯವಾಗಿ ಒಂದು ಸುಸಂಬದ್ಧ ಗುಂಪಾಗಿ ಮಾರ್ಪಡಬೇಕಾಗುತ್ತದೆ.

ಪರಾಮರ್ಶನ ಗ್ರಂಥಗಳು

1. ಮಾರ್ಕ್ ಗಲಾಂತರ್,  1980. ಕಾಂಪೀಟಿಂಗ್ ಇನ್ಇಕ್ವಾಲಿಂಗೆಸ್: ಲಾ ಅಂಡ್ ಬ್ಯಾಕ್ ವರ್ಡ್ ಕ್ಲಾಸಸ್ ಇನ್ ಇಂಡಿಯಾ, ಆಕ್ಸ್ಫರ್ಡ್: ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್.

2. ಚಂದ್ರಶೇಖರ್ ಎಸ್., 1983. ಸಾಮಾಜಿಕ ಹಿನ್ನೆಲೆಯಲ್ಲಿ ಮೈಸೂರು ರಾಜಕೀಯ ಕೆಲವು ಒಳನೋಟಗಳು, ಬೆಂಗಳೂರು: ಕಿರಣ್ ಪ್ರಕಾಶನ,

3. ಲೀಲಾಧುಷ್ಕಿನ್, ದಿ ನಾನ್ ಬ್ರಾಹ್ಮಿನ್ ಮೂವ್ಮೆಂಟ್ ಇನ್ ಪ್ರಿನ್ಸ್ಲೀ, ಮೈಸೂರು (ಅಪ್ರಕಟಿತ ಸಂಶೋಧನ ಮಹಾಪ್ರಬಂಧ) ಬೆಂಗಳೂರು: ಐಸೆಕ್

4. ನಟರಾಜ್ ವಿ.ಕೆ., 1990. ‘‘ಬ್ಯಾಕ್ವರ್ಡ್ಕ್ಲಾಸಸ್ ಅಂಡ್ ಮೈನಾರಿಟೀಸ್ ಇನ್ ಕರ್ನಾಟಕ ಪಾಲಿಟಿಕ್ಸ್, ರಾಮಾಶ್ರಯ ರಾಯ್ ಮತ್ತು ರಿಚರ್ಡ್ ನಿಸನ್(ಸಂ) ಆಯಂಡ್ ಡಾಮಿನೆನ್ಸ್ ಇನ್ ಇಂಡಿಯನ್ ಪಾಲಿಟಿಕ್ಸ್, ಸಂ.3, ದೆಹಲಿ: ಸೇಜ್ ಪಬ್ಲಿಕೇಷನ್

5. ಜೇಮ್ಸ್ ಮನೋರ್, 1977. ಪೊಲಿಟಿಕಲ್ ಚೇಂಜ್ ಇನ್ ಎನ್ ಇಂಡಿಯನ್ ಸ್ಟೇಟ್, ಮೈಸೂರು 19171955, ದೆಹಲಿ: ಮನೋಹರ್ ಪಬ್ಲಿಕೇಷನ್ಸ್.

ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳು

1. ಮೈಸೂರು ಹಿಂದುಳಿದ ವರ್ಗಗಳ ಸಮಿತಿ ಅಂತಿಮ ವರದಿ, 1961. ಬೆಂಗಳೂರು: ಮೈಸೂರು ಸರಕಾರ,

2. ಕರ್ನಾಟಕ ಪ್ರಥಮ ಹಿಂದುಳಿದ ವರ್ಗಗಳ ಆಯೋಗದ (ಹಾವನೂರು) ವರದಿ, 1975. ಬೆಂಗಳೂರು:ೊಕರ್ನಾಟಕ ರಾಜ್ಯ ಸರಕಾರ

3. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ (ವೆಂಕಟಸ್ವಾಮಿ) ವರದಿ, 1986. ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ,

4. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ(ಚಿನ್ನಪ್ಪರೆಡ್ಡಿ) ವರದಿ, 1990. ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರ,